‘ಮೈತ್ರಿ ವಿಶ್ವವಿದ್ಯಾಲಯ’ದ ಆಮಂತ್ರಣದ ಮೇರೆಗೆ ೧೯೮೧ರ ಜೂನ್‌ತಿಂಗಳಲ್ಲಿ ನಾನು ರಶ್ಯದ ರಾಜಧಾನಿ ಮಾಸ್ಕೋ ನಗರಕ್ಕೆ ಹೋಗಿದ್ದೆ. ಸುಮಾರು ೩೫ ದಿನ ಮಾಸ್ಕೋ ಮತ್ತು ಸುತ್ತಲಿನ ಪ್ರದೇಶಗಳನ್ನು ಸಂಚರಿಸಿ ಲೆನಿನ್‌, ಮ್ಯಾಕ್ಸಿಂ ಗಾರ್ಕಿ, ಮಾಖ್ಕೊವ್ಹಸ್ಕಿ, ಟಾಲ್‌ಸ್ಟಾಯ್‌, ದೋಸ್ತೊವ್ಹಸ್ಕಿ ಮುಂತಾದವರ ಸ್ಥಳಗಳನ್ನು ಸಂದರ್ಶಿಸುವ ಅವಕಾಶ ಲಭ್ಯವಾಯಿತು. ರಶ್ಯದಲ್ಲಿ ಯಾವುದೇ ಮ್ಯೂಜಿಯಂ ಪ್ರವೇಶಿಸಬೇಕಾದರೆ ಮೊಟ್ಟಮೊದಲು ಪ್ರವೇಶದ್ವಾರದಲ್ಲಿ ನಮ್ಮ ಕಾಲ್ಮರಿ, ಬೂಟು, ಚಪ್ಪಲಿ ಏನಿದ್ದರೂ ಅವುಗಳನ್ನು ತೆಗೆದಿಟ್ಟು ಅಲ್ಲಿದ್ದ ಕಾಲುಚೀಲಗಳನ್ನು ಹಾಕಿಕೊಂಡು ಒಳಗೆ ಪ್ರವೇಶಿಸಬೇಕು. ಇದು ಅಲ್ಲಿಯ ವಾಡಿಕೆ. ನಾವು ನಮ್ಮಲ್ಲಿಯ ದೇವ-ದೇವತೆಯರ ಗುಡಿ, ಮಂದಿರಗಳನ್ನು ಪ್ರವೇಶಿಸುವುದನ್ನು ನೆನಪಿಗೆ ತರುತ್ತಿತ್ತು.

ಒಂದು ದಿನ ರಶ್ಯದ ಮಹಾಕವಿ ಅಲೆಕ್ಸಾಂಡರ್ ಪುಷ್ಕಿನ್ನನು ಅಲೆದಾಡಿದ್ದ ಸ್ಥಳಕ್ಕೆ ಹೋಗುವ ಪ್ರಸಂಗ ಪ್ರಾಪ್ತವಾಯಿತು. ಮಾಸ್ಕೊದಿಂದ ಲೆನಿನ್‌ಗ್ರಾಡ್‌ನಗರಕ್ಕೆ ಹೋಗುವ ದಾರಿಯಲ್ಲಿ ಸುಮಾರು ೮೦ ಮೈಲು ಕ್ರಮಿಸಿದರೆ ಎಡಭಾಗದಲ್ಲಿ ಒಂದು ನದಿ. ಆ ನದಿಯ ದಂಡೆಯ ಮೇಲೆ ಐತಿಹಾಸಿಕ ನಗರ ಕಾಲಿನಿನ್‌ಇದ್ದು ನಾವು ಅಲ್ಲಿಗೆ ಹೋಗಬೇಕಾಗಿತ್ತು. ಒಂದೆರಡು ದಿನ ಅಲ್ಲಿ ಇರಬೇಕಾಗಿ ಬಂದಿತ್ತು. ಜಾಗತಿಕ ರಶ್ಯನ್‌ಭಾಷಾ ಸಮ್ಮೇಳನಕ್ಕೆ ಬಂದ ಸುಮಾರು ಮೂವತ್ತು ವಿದ್ಯಾರ್ಥಿಗಳು ಮಾಸ್ಕೊದಿಂದ ಕಾಲಿನಿನ್‌ನಗರಕ್ಕೆ ವಿಶೇಷ ಬಸ್ಸಿನಲ್ಲಿ ಬಂದದ್ದಾಗಿತ್ತು. ನಮ್ಮ ಜೊತೆಗೆ ಇಬ್ಬರು ಲೇಡಿ ಪ್ರೊಫೆಸರರು ಬಂದಿದ್ದರು. ಕಾಲಿನಿನ್‌ನಗರದ ಹಾಸ್ಟೇಲಿನಲ್ಲಿ ಇಳಿದುಕೊಳ್ಳುವ ವ್ಯವಸ್ಥೆಯಾಗಿತ್ತು. ನನ್ನ ಜೊತೆಗೆ ಹೈದ್ರಾಬಾದ್‌, ಕಲ್ಕತ್ತಾ, ಮುಂಬಯಿ, ಗೋವಾ, ಮದ್ರಾಸಗಳಿಂದ ಬಂದಿದ್ದ ನಾಲ್ಕಾರು ವಿದ್ಯಾರ್ಥಿಗಳಿದ್ದರು. ವೋಲ್ಗಾ ನದಿಯ ದಂಡೆಯ ಮೇಲೊಂದು ‘ಹೊಟೇಲ್‌ರಶಿಯಾ’ಇದ್ದು ನಾವು ಊಟ, ಮಾಡಲೆಂದು ಅಲ್ಲಿಗೆ ಹೋಗಿದ್ದೆವು.

ಕಾಲಿನಿನ್‌ದಲ್ಲಿಯ ಗಾರ್ಕಿ ವಾಚನಾಲಯ ಹಾಗೂ ಪ್ರತಿಮೆ ನೋಡಿಕೊಂಡು ಪುಷ್ಕಿನ್‌ಅಲೆದಾಡಿದ್ದ ಮಹತ್ವದ ಸ್ಥಳ ವೋಲ್ಗಾ ನದಿ ದಂಡೆಗೆ ಹೋದೆವು. ಲೇಡಿ ಪ್ರೊಫೆಸರ್ ನಮಗೆಲ್ಲ ಪುಷ್ಕಿನ್‌ಕವಿ ಅಲೆದಾಡಿದ್ದ ಸ್ಥಳಗಳನ್ನು ತೋರಿಸಿ ಎಲ್ಲವನ್ನೂ ಪುಟ್ಟ ಭಾಷಣದ ಮೂಲಕ ವಿವರಿಸುತ್ತಿದ್ದರು. ಹಿಂತಿರುಗಿ ನೋಡಿರೆಂದಾಗ ನಾವು ಹಿಂತಿರುಗಿ ನೋಡಿದರೆ ನದಿಯ ದಂಡೆಯ ಮೇಲೊಂದು ಎದ್ದು ನಿಂತ ಬೃಹದಾಕಾರದ ಪ್ರತಿಮೆ ಇತ್ತು. ‘ಇದು ಅಫನಾಸಿ ನಿಕಿತಿನ್‌ಪ್ರತಿಮೆ’ ಇವನೊಬ್ಬ ಪ್ರವಾಸಿ. ಇವನು ಐದಾರು ವರ್ಷ ಪ್ರವಾಸ ಕಾಲದಲ್ಲಿದ್ದು ಇಂಡಿಯಾಕ್ಕೂ ಹೋಗಿದ್ದನೆಂದು ಹೇಳಿದರು. ಇಂಡಿಯಾಕ್ಕೆ ಎಂದಾಗ ನಾನು ಕುತೂಹಲದಿಂದ ಭವ್ಯ ಪ್ರತಿಮೆಯನ್ನು ವೀಕ್ಷಿಸಿದೆ. ಅಫನಾಸಿ ದೊಡ್ಡದಾದ ನಾವೆ ದೋಣಿಯೊಂದರಲ್ಲಿ ಎದ್ದು ನಿಂತು ನದಿಯಾಚೆಗೆ ದೂರ ದೂರದ ಜಗತ್ತನ್ನು ನೋಡುತ್ತಿದ್ದ. ಅವನ ಕಣ್ಣುಗಳಲ್ಲಿ ಜಗತ್ತು ತುಂಬಿಕೊಂಡಿತ್ತು. ಅದನ್ನು ದೂರ ದೂರ ನೋಡುತ್ತಲೇ ನಿಂತಿದ್ದ. ನಾನು ಆ ಪ್ರತಿಮೆಯ ಮೇಲೆ ಕೆತ್ತಿದ್ದ ವಿಷಯಗಳನ್ನು ಡೈರಿಯಲ್ಲಿ ಬರೆದಿಟ್ಟುಕೊಂಡೆ. ಇಂಡಿಯಾಕ್ಕೆ ಹೋದ ವಿಷಯವೂ ಅದರಲ್ಲಿ ಪ್ರಸ್ತಾಪವಾಗಿತ್ತು. ಮರುದಿನ ನಾವು ಮಾಸ್ಕೊ ನಗರಕ್ಕೆ ಮರಳಿದ್ದಾಯಿತು. ನಾನು ಮಾಸ್ಕೊ ವಿಶ್ವವಿದ್ಯಾಲಯದ ಹದಿನಾರು ಅಂತಸ್ತಿನ ಹಾಸ್ಟೇಲಿನಲ್ಲಿದ್ದೆ. ಆರನೆಯ ಅಂತಸ್ತಿನಲ್ಲಿ ನನಗೆ ರೂಮು ಸಿಕ್ಕಿತ್ತು. ಟಿ.ವಿ. ನೋಡುತ್ತಿದ್ದೆ. ಮೂರು ಸಮುದ್ರಗಳನ್ನು ದಾಟಿ ಹೋದ ಅಫನಾಸಿ ನಿಕಿತಿನ್‌ಎಂಬ ರಶ್ಯನ್‌ಸಾಕ್ಷಿಚಿತ್ರವನ್ನು ನೋಡಿದೆ. ಸುಮರು ಹತ್ತು ಹನ್ನೆರಡು ಮಿನಿಟುಗಳಷ್ಟು ಇತ್ತು ಆ ಸಾಕ್ಷಿಚಿತ್ರ. ಅಫನಾಸಿ ಕುರಿತ ಆ ಸಾಕ್ಷಿಚಿತ್ರ ನನ್ನ ಗಮನ ಸೆಳೆದಿತ್ತು. ಅತ್ಯಂತ ಪ್ರಯಾಸಪಟ್ಟು ಅವನು ಸಮುದ್ರಗಳನ್ನು ದಾಟುವ ದೃಶ್ಯಗಳನ್ನು ಕಂಡೆ.

ಅಫನಾಸಿ ನಿಕಿತಿನ್‌ಸುಮಾರು ಆರು ವರ್ಷಗಳ ವರೆಗೆ ವಿಶ್ವಪರ್ಯಟನ ಮಾಡಿದ ಸಾಹಸಿ. ಅಫನಾಸಿ ಭಾರತಕ್ಕೆ ಬಂದ ಪ್ರಪ್ರಥಮ ಪ್ರವಾಸಿ. ತ್ವೇರ್ತಸಾ ಮತ್ತು ತ್ಮಾಕಾ -ಸಣ್ಣ ನದಿಗಳೆರಡು ವೋಲ್ಗಾ ನದಿಯನ್ನು ಕೊಡುತ್ತವೆ. ಅಲ್ಲಿ ಕಾಲಿನಿನ್‌ನಗರವಿದೆ. ಇದಕ್ಕೆ ಮೊದಲಿದ್ದ ಹೆಸರು ತ್ವೇರ್. ಹತ್ತಿಪ್ಪತ್ತು ಜನ ಸ್ನೇಹಿತರೊಂದಿಗೆ, ಅಫನಾಸಿ ವಿಶ್ವಪರ್ಯಟನಕ್ಕೆ ಹೊರಟಿದ್ದ. ತ್ವೇರ್ ನಗರದ ವ್ಯಾಪಾರಿಗಳಲ್ಲಿ ಅವನೂ ಒಬ್ಬನಾಗಿದ್ದ. ಅಲ್ಲಿನ ವ್ಯಾಪಾರಿಗಳು ಅನ್ಯದೇಶಗಳಿಗೆ ಹೋಗಿ ವ್ಯಾಪಾರ ಮಾಡುತ್ತಿದ್ದರು. ಅಫನಾಸಿ ತ್ವೇರ್ ನಗರದಲ್ಲಿಯೇ ಹುಟ್ಟಿದ್ದ. ತ್ವೇರ್ ನಗರದ ಕೆಲವು ಪ್ರಮುಖ ವ್ಯಾಪಾರಿಗಳೊಂದಿಗೆ ಅವನು ವೋಲ್ಗಾ ನದಿಯಲ್ಲಿಂದ ಚಿಕ್ಕ ಹಡಗು ತೆಗೆದುಕೊಂಡು ಬೇರೆ ದೇಶಗಳಿಗೆ ವ್ಯಾಪಾರಕ್ಕೆಂದು ಹೊರಟ. ಅಫನಾಸಿ ಕ್ರಿಶ್ಚನ್‌ಧರ್ಮದ ತತ್ವಗಳಲ್ಲಿ ನಂಬಿಕೆಯಿರಿಸಿಕೊಂಡವನು. ಆಗಾಗ ಚರ್ಚಿಗೆ ಹೋಗಿ ಪಾದ್ರಿಗಳನ್ನು ಕಂಡುಬರುತ್ತಿದ್ದ. ಅವರ ಆಶೀರ್ವಾದ ಪಡೆದುಕೊಂಡು ಪ್ರವಾಸ ಕೈಗೊಂಡಿದ್ದ. ಮಿಖಾಯಿಲ್‌ಬೋರಿಸೋವಿಚ್‌ತ್ವೇರ್ ನಗರದ ಪ್ರಮುಖ ವ್ಯಕ್ತಿಯಾಗಿದ್ದ. ನಿಕಿತಿನ್‌ಪ್ರಮುಖ ಪಾದ್ರಿ, ಮೆಕಾರಿಯಸ್‌ಅವರನ್ನು ಭೆಟ್ಟಿಯಾಗಿ ಬಂದಿದ್ದ. ಹಸನ್ ಬೇಗ ಜೊತೆಯಲ್ಲಿ ಅಫನಾಸಿಯೂ ತನ್ನ ಪ್ರಯಾಣ ಸುಖಕರವಾಗಲಿ, ಕಷ್ಟಗಳು ಬಾರದಿರಲಿ ಎಂದು ಹಾರೈಸಿ, ಈಗಿನ ಕಾಲಿನಿನ್‌ಪಕ್ಕದಲ್ಲಿ ಹರಿಯುವ ವೋಲ್ಗಾ ನದಿಯಿಂದ ಜೊತೆಗಾರರೊಂದಿಗೆ ಹೊರಟಿದ್ದ ಪರದೇಶಗಳಲ್ಲಿಯ ವ್ಯಾಪಾರ ಸಂಬಂಧದಿಂದ ತನಗೆ ತುಂಬ ಲಾಭವಾಗಿ ತನ್ನ ವ್ಯಾಪಾರ ಬೆಳೆಯುವುದೆಂಬ ಇಚ್ಛೆ ಅವನಿಗಿತ್ತು. ಅಂಥ ವಿಶ್ವಾಸದಿಂದ ಹೊರಟಿದ್ದ ಅಫನಾಸಿ ಭಾರತಕ್ಕೆ ಬಂದ ಮುಟ್ಟಬೇಕಾದರೆ ಹಲವು ಬಗೆಯ ಕಷ್ಟ ನಷ್ಟಗಳನ್ನು ಅನುಭವಿಸಬೇಕಾಯಿತು.

ಅಫನಾಸಿ ಭಾರತ ಪ್ರವಾಸಕ್ಕೆಂದು ಬಂದವನಲ್ಲ. ತಾರ್ತರರು, ಕಡಲ್ಗಳ್ಳರು, ಎರಡು ಮೂರು ಸಲ ದಾಳಿ ಮಾಡಿ ಅವರ ಬಳಿಯಿದ್ದ ವಸ್ತುಗಳನ್ನೆಲ್ಲ ದೋಚಿಕೊಂಡೊಯ್ದಿದ್ದರು. ಅವನೊಂದಿಗೆ ಪ್ರಯಾಣ ಕೈಕೊಂಡಿದ್ದ ಕೆಲವರು ಮೃತರಾಗಿದ್ದರು. ಧೈರ್ಯವನ್ನು ಕಳೆದುಕೊಳ್ಳದೆ ಅಫನಾಸಿ ತನ್ನ ಪ್ರಯಾಣವನ್ನು ಮುಂದುವರೆಸಿದ್ದ. ಹೇಗೋ ಬದುಕುಳಿದ ಕೆಲವರು ರಶಿಯಾಕ್ಕೆ ಮರಳಿ ಹೊರಟು ಹೋಗಿದ್ದರು. ಅಪನಾಸಿಯೊಬ್ಬನೇ ಪರ್ಸಿಯಾ ದೇಶವನ್ನು ತಲುಪಿದ್ದ. ಇರಾಣ ದೇಶಕ್ಕೂ ಭೆಟ್ಟಿಯನ್ನಿತ್ತು. ಮುಂದುವರೆದಿದ್ದ. ಬಟ್ಟೆ, ಬರೆ, ವಸ್ತು ಒಡವೆ ಇತ್ಯಾದಿ ಅವನ ಬಳಿ ಏನೂ ಉಳಿದಿರಲಿಲ್ಲ. ಇರಾಣ, ಪರ್ಸಿಯಾಗಳಲ್ಲಿ ಅವನಿಗೆ ಬೇಕಾದದ್ದೇನೂ ದೊರೆಯಲಿಲ್ಲ. ಅವನಲು ಪರ್ಸಿಯಾ ದೇಶಕ್ಕೆ ಹೋದಾಗ ಭಾರತದಲ್ಲಿ ಕುದುರೆಗಳಿಗೆ ಭಾರೀ ಬೆಲೆಯಿರುವ ವಿಷಯ ಗೊತ್ತಾಯಿತು. ಅದನ್ನು ನಂಬಿಕೊಂಡು ಅವನು ಅಲ್ಲಿಯ ಎರಡು ಕುದುರೆಗಳನ್ನು ಕೊಂಡು, ಸಣ್ಣದೊಂದು ಡಬ್ಬಾ (ಹಡಗ) ಮಾಡಿಕೊಂಡು ಕೆಲವು ವಾರ ಸಮುದ್ರಯಾನ ಮಾಡಿ ಭಾರತಕ್ಕೆ ಹೊರಟಿದ್ದ. ಹೊರ್ಮುಜದಿಂದ ಹೊರಟು ಅರಬೀ ಸಮುದ್ರವನ್ನು ಕಂಡಿದ್ದ ಅಫನಾಸಿ ಕಾಸ್ವಿಯನ್‌ಸಮುದ್ರ, ಅರಬೀ ಸಮುದ್ರ, ಕಪ್ಪು ಸಮುದ್ರ ಹೀಗೆ ಮೂರು ಸಮುದ್ರಗಳನ್ನು ದಾಟಿ ಭಾರತಕ್ಕೆ ಬಂದು ತಲುಪಿದ್ದ. ಮೂರನೆಯ ಐವಾನನು ರಶಿಯಾ ದೇಶವನ್ನು ಆಳುತ್ತಿದ್ದ ಸಮಯದಲ್ಲಿ ಅಫನಾಸಿ ನಿಕಿತಿನ್‌೧೪೬೮ರಲ್ಲಿ ಭಾರತಕ್ಕೆ ಬಂದಿದ್ದ. ದಖ್ಖನ್‌ರಾಜ್ಯಗಳಲ್ಲಿ ಒಂದಾಗಿದ್ದ ಕರ್ನಾಟಕಕ್ಕೆ ಭೆಟ್ಟಿಯಿತ್ತಿದ್ದ. ಅವನು ಹೆಚ್ಚು ಕಾಲ ಕರ್ನಾಟಕ ರಾಜ್ಯದಲ್ಲಿಯೇ ಅಲೆದಾಡಿದ್ದ. ಒಂದೆರಡು ವರ್ಷ ಇರಾಣ, ಪರ್ಶಿಯಾ ದೇಶಗಳಲ್ಲಿ ಕಳೆದಿದ್ದ. ಸುಮಾರು ಮೂರು ವರ್ಷ ಕರ್ನಾಟಕದಲ್ಲಿಯೇ ಇದ್ದನೆಂದು ತಿಳಿದು ಬರುತ್ತದೆ. ಇವನೊಬ್ಬ ವ್ಯಾಪಾರದ ಉದ್ದೇಶವಿಟ್ಟು ಕೊಂಡು ಬಂದ ಪ್ರವಾಸಿಯಾಗಿದ್ದ, ರಶಿಯಾದ ಕೆಲವು ಜನ ವ್ಯಾಪಾರಿಗಳೊಂದಿಗೆ ಇವನೂ ಬಂದಿದ್ದ. ಹುಯೆನ್‌ತ್ಸ್ಯಾಂಗ್‌, ಮಾರ್ಕೊ ಪೋಲೊಗಳಂತೆ ಇವನು ಪ್ರವಾಸಿಯಾಗಿ ಬಂದವನಾಗಿರಲಿಲ್ಲ. ಪ್ರವಾಸಿಯ ದೃಷ್ಟಿಯಿಟ್ಟುಕೊಂಡು ಬಂದವನಾಗಿರದೆ ವ್ಯಾಪಾರಕ್ಕಾಗಿ ಬಂದಿದ್ದ ವ್ಯಾಪಾರವೇ ಅವನ ಮುಖ್ಯಗುರಿಯಾಗಿತ್ತು.

ಅಫನಾಸಿ ೧೪೭೨ರಲ್ಲಿ ರಶಿಯಾ ದೇಶಕ್ಕೆ ಮರಳಿದ್ದ. ಅವನು ತನಗೆ ತಿಳಿದಂತೆ ಪ್ರವಾಸ ಕಥನವನ್ನು ಬರೆದಿಟ್ಟು ತೀರಿಕೊಂಡಿದ್ದ, ಅವನು ತೀರಿಕೊಂಡ ಮೇಲೆ ಅವನು ಬರೆದಿಟ್ಟಿದ್ದ ಪ್ರವಾಸ ಕಥನ ‘ಹೋಝ್ದೋನಿಯಾ’ ಎಂದರೆ ಪ್ರಯಾಣ ‘ಜಾತ್ರೀ ಮೋರ್ಯ’ ಎಂದರೆ ಮೂರು ಸಮುದ್ರಗಳಾಚೆ ಅವನು ತನ್ನ ಪ್ರವಾಸ ಕಥನವನ್ನು ತಾನು ಕಂಡಂತೆ, ಕೇಳಿದಂತೆ ಸರಳವಾಗಿ ವಾಸ್ತವಿಕ ದೃಷ್ಟಿಯಿಂದ ಯಾವ ಮುಚ್ಚುಮರೆಯಿಲ್ಲದೆ ಖಂಡಿತವಾಗಿ ತನಗೆ ಅನಿಸಿದ್ದನ್ನು ಬರೆದಿದ. Voyage beyond three seas- ಎಂದು ಇಂಗ್ಲಿಷ್‌ಭಾಷೆಯಲ್ಲಿಯೂ ಅವನ ಪ್ರವಾಸ ಕಥನ ಪ್ರಕಟವಾಗಿದ್ದು ಅದನ್ನು ಮಾಸ್ಕೊದ ‘ರಾದುಗಾ’ ಪ್ರಕಾಶನ ಪ್ರಕಟಿಸಿದೆ. ಆ ಪುಸ್ತಕ ಸಾಕಷ್ಟು ಚಿತ್ರಗಳನ್ನು ಒಳಗೊಂಡಿದ್ದು, ಅದು ಅವನ ಕಥನದ ಮೇಲೆ ಬೆಳಕು ಚೆಲ್ಲುತ್ತದೆ. ಪುಸ್ತಕದ ವೈಶಿಷ್ಟ್ಯವೆಂದರೆ ಪ್ರತಿಪುಟದ ಕೆಳಗಡೆಗೆ ಸಂಬಂಧಪಟ್ಟ ವ್ಯಂಗ್ಯ ಚಿತ್ರಗಳಿವೆ. ಆ ಚಿತ್ರಗಳೂ ಅಫನಾಸಿಯ ಕಥನದಂತೆ ಮಹತ್ವದ್ದಾಗಿವೆ. ಸ್ವತಃ ಅಫನಾಸಿ ತಾನು ಕಣ್ಣಿಂದ ಕಂಡ ಜನರು, ಅವರ ಬಣ್ಣ, ಉಡುಪು-ತೊಡಪು, ಆಹಾರ ವಿಹಾರದ ವೈಶಿಷ್ಟ್ಯಗಳನ್ನು ಬಣ್ಣಿಸುತ್ತಾ ಹೋಗಿದ್ದಾನೆ. ಅಲ್ಲಿದ್ದ ಜಾತಿ, ಮತ, ಪಂಥ, ಧರ್ಮಗಳ ಕುರಿತು ನಿಷ್ಪಕ್ಷಪಾತ ದೃಷ್ಟಿಯಿಂದ ಹೇಳುತ್ತ ಹೋಗಿದ್ದಾನೆ. ಮಹತ್ವದ ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ವಿಷಯಗಳನ್ನು ದಾಖಲಿಸಿದ್ದಾನೆ. ಪುಸ್ತಕದ ಮೊದಲಿನ ಆರು ಪುಟಗಳಲ್ಲಿ ಅವನು ಮೂರು ಸಮುದ್ರಗಳನ್ನು ದಾಟಿ ಬಂದದ್ದನ್ನು ಪ್ರಯಾಣದ ಅವಧಿಯಲ್ಲಿ ತಾನು ಪಟ್ಟ ಕಷ್ಟ ನಷ್ಟಗಳನ್ನು ವಿವರಿಸಿದ್ದಾನೆ. ಆ ನಂತರದ ಇರಾಣ, ಪರ್ಶಿಯಾದೇಶಗಳ ಕುರಿತು ಹೇಳಿದ್ದಾನೆ. ಅವನು ಕಡಲ್ಗಳ್ಳರ ಕುರಿತು ಹೇಳಿದ್ದಾನೆ. ಧೈರ್ಯದಿಂದ ಅವರನ್ನು ಎದುರಿಸುತ್ತ ಹೊಡೆದಾಡಿದ್ದನ್ನು ಹೇಳಲು ಮರೆತಿಲ್ಲ. ಪುಸ್ತಕದ ಬಹಳಷ್ಟು ಪುಟಗಳು ಕರ್ನಾಟಕಕ್ಕಾಗಿಯೆ ಮೀಸಲಾಗಿವೆ. ಉತ್ತರ ಭಾರತಕ್ಕೆ ಹೋದ ವಿಷಯಗಳು ಎಲ್ಲಿಯೂ ಪ್ರಸ್ತಾಪವಾಗಿಲ್ಲ. ಆಗಿನ ವಿಜಯನಗರ ಸಾಮಾಜ್ಯ, ಬಹಮನೀ ರಾಜ್ಯಗಳ ಐತಿಹಾಸಿಕ ಸಾಂಸ್ಕೃತಿಕ ವಿಷಯಗಳ ಕುರಿತು ಬಣ್ಣಿಸಿದ್ದಾನೆ.

ಈಗಿನ ಕಾಲಿನಿನ್‌ ಎಂದು ಹೆಸರಾಗಿರುವ ಆಗಿನ ತ್ವೇರ‍ದಲ್ಲಿ ಹುಟ್ಟಿದ ಅಫನಾಸಿ ಕಾಲಿನಿನ್‌ಪಕ್ಕದಲ್ಲಿ ಹರಿಯುವ ಓಲ್ಗಾ ನದಿಯಿಂದ ದೋಣಿಯೊಂದರಲ್ಲಿ ಕುಳಿತು ಕ್ಯಾಸ್ಟಿಯನ್‌ಸಮುದ್ರವನ್ನು ದಾಟಿ ವ್ಯಾಪಾರಕ್ಕೆಂದು ಹೆಸರಾಗಿದ್ದ ಬೊಖಾರಾ ಬಂದರಕ್ಕೆ ಹೋಗಿದ್ದನು. ಬೊಖಾರಾ ಪೌರ್ವಾತ್ಯ ದೇಶಗಳಿಗೆ ಮಾರುಕಟ್ಟೆಯಂತೆ ಇತ್ತು. ಅಲ್ಲಿಂದ ಹಿಂದಿರುಗಿದ ಅಫನಾಸಿ ಪರ್ಸಿಯಾ ದೇಶದ ಹಲವು ಪ್ರದೇಶಗಳಿಗೆ ಭೆಟ್ಟಿಯಿತ್ತು. ಓರ್ಮಸ್‌ಬಂದರವನ್ನು ತಲುಪಿದ್ದ. ಅವನು ಅರಬೀ ಸಮುದ್ರವನ್ನು ಹಿಂದೂಸ್ತಾನ ಸಮುದ್ರವೆಂದು ಕರೆದಿದ್ದಾನೆ. ಈ ಹಿಂದೆ ಅವನು ತುರ್ಕಿಯ ಹತ್ತಿರ ಬಂದಾಗ ಅವನು ಹಡಗು ಒಡೆದು ಹೋಗಿತ್ತು. ಅದು ಅಲ್ಲಿ ಕೈತಕರ ದಾಳಿಗೆ ತುತ್ತಾಗಿತ್ತು. ಅಫನಾಸಿ ಈ ಸಂಗತಿಯನ್ನು ಕೈತಕರ ರಾಜಕುಮರನಿಗೆ ತಿಳಿಸಿದ್ದನು. ಖಲೀಲ್‌ಬೇಗ್‌ಅಫನಾಸಿಯ ವಿನಂತಿಯನ್ನು ಮನ್ನಿಸಿ ರಶ್ಯನ್‌ಹಡಗವನ್ನು ಬಿಡಿಸಲು ಸಹಾಯ ಮಾಡಿದ್ದ ಅಲ್ಲದೆ ಸರೆಯಾಳಾಗಿದ್ದ. ರಶ್ಯನ್ನರನ್ನು ಬಿಡಿಸಿದ್ದ ಅರೇಬಿಯಾದ ಮುಷ್ಕಾತ್‌ದಿಂದ ಸಮುದ್ರ ಮಾರ್ಗವಾಗಿ ಹೊರಟು ದೇಗಾ (ದೀವ್‌)ವನ್ನು ತಲುಪಿದ್ದ. ಗುಜರಾತ್‌ಮುಂಬಯಿಯ ದಕ್ಷಿಣಕ್ಕಿರುವ ಚೌಲ್‌ಬಂದರಕ್ಕೆ ಬಂದಿಳಿದಿದ್ದ. ಅಫನಾಸಿ ಡಬ್ಬಾ (ಚಿಕ್ಕ ಹಡಗ) ವೊಂದರಲ್ಲಿಯೇ ತನ್ನ ಪ್ರಮಾಣ ಬೆಳೆಸಿದ್ದ. ತಾನು ಇಂಡಿಯಾಕ್ಕೆ ಬಂದು ತಪ್ಪಿದೆನೆಂದು ಅಫನಾಸಿ ಹೇಳಿದ್ದಾನೆ.

ತಾನೇ ಮೂರು ಸಮುದ್ರಗಳಾದ ದರಬಂದ ಎಂದರೆ ಕ್ಯಾಸ್ಟಿಯನ್‌ಸಮುದ್ರ, ಇಂಡಿಯಾದ, ಅರಬೀ ಸಮುದ್ರ ಮತ್ತು ಕಟ್ಟು ಸಮುದ್ರಗಳನ್ನು ದಾಟಿ ಇಂಡಿಯಾ ತಲುಪಿದ್ದನ್ನು ತನ್ನ ಪುಸ್ತಕದಲ್ಲಿ ಬರೆದಿದ್ದಾನೆ. ತಾಣು ತ್ವೇರ್ ಚರ್ಚಿನಲ್ಲಿ ಏಸುಕ್ರಿಸ್ತನ ಪ್ರಾರ್ಥನೆ ಮಾಡಿ ತನ್ನ ಪ್ರಯಾಣ ಸುಖಕರವಾಗಲೆಂದು ಬೇಡಿಕೊಂಡು ಪ್ರಯಾಣವನ್ನು ಆರಂಭಿಸಿದ್ದನು. ವೋಲ್ಗಾ ನದಿಯ ಮೇಲಿಂದ ಬೊಖಾರಾಕ್ಕೆ ಬಂದದ್ದನ್ನು ಅಲ್ಲಿಂದ ಮುಂದಕ್ಕೆ ಪ್ರಯಾಣ ಮಾಡಿ, ಕ್ರಿಶ್ಚನ್ನರ ಈಸ್ಟರ್ ಹಬ್ಬ ನಾಲ್ಕು ದಿನ ಇರುವಾಗಲೇ ತಾನು ಪರ್ಶಿಯಾದ ಹೋರಮಜ್‌ಬಂದರ ತಲುಪಿದೆನೆಂದು ಹೇಳಿದ್ದಾನೆ. ತಾನು ಡಬ್ಬಾದಲ್ಲಿನ ಮುಖಾಂತರ ಪರ್ಶಿಯಾದಿಂದ ಒಂದು ಗಂಡು ಕುದುರೆ ಜುನಾರಕ್ಕೆ ತರುವಲ್ಲಿ ಸಫಲನಾದೆನೆಂದು ಹೇಳಿದ್ದಾನೆ.

ಜೂನ್‌ ತಿಂಗಳ ತ್ರಿನಿಟಿ ದಿನದಂದು ಜುನ್ನಾರ ತಲುಪಿದ್ದನು. ವಿಪರೀತ ಮಳೆ ಇದ್ದುದರಿಂದ ಎರಡು ತಿಂಗಳು ಅಲ್ಲಿ ಕಳೆದನು. ಎಲ್ಲೆಲ್ಲೂ ಧಾರಾಕಾರ ಸುರಿಯುವ ಮಳೆ ಕೆಸರು, ರಾಡಿ ತುಂಬಿತ್ತು. ಮಳೆಗಾಲದಲ್ಲಿ ಕೃಷಿಕರು ರೈತರು ಉತ್ತು ಬಿತ್ತುವುದರಲ್ಲಿ ತೊಡಗಿದ್ದರೆಂದು ಹೇಳಿದ್ದಾನೆ. ಅಲ್ಲಿಯ ಜನರು ಹಲವು ತರದ ಕಾಯಿಪಲ್ಲೆಗಳನ್ನು ಬೆಳೆಯುವರು. ಇಲ್ಲಿ ಕುದುರೆಗಳಿಲ್ಲ. ಎತ್ತು ಆಕಳುಗಳಿದ್ದು ರೈತರು ಅವುಗಳನ್ನು ದುಡಿಸುತ್ತಾರೆ. ಇಲ್ಲಿ ಎಮ್ಮೆ, ಕೋಣಗಳು ಸಾಕಷ್ಟು ಇದ್ದು ಅವುಗಳನ್ನು ದುಡಿಸುತ್ತಾರೆ. ಇಲ್ಲಿ ಎಮ್ಮೆ, ಕೋಣಗಳೂ ಸಾಕಷ್ಟು ಇದ್ದು ಅವುಗಳನ್ನು ದುಡಿಸುತ್ತಾರೆ. ಜುನ್ನಾರ ಎನ್ನುವುದು ಗುಡ್ಡದ ಮೇಲೆ ಕಟ್ಟಿದ ಊರಾಗಿದ್ದು ಗುಡ್ಡದ ತುದಿಯಲ್ಲಿ ದಾಟಿ ಹೋಗುವುದು ಬಹಳ ಕಷ್ಟಕರದ್ದಾಗಿದೆ. ಜುನ್ನಾರದಲ್ಲಿದ್ದ ಖಾನನ್ನು ಅವನ ಕುದುರೆಯನ್ನು ಕಸಿದು ಕೊಂಡದ್ದನ್ನು ಬರೆದಿದ್ದಾನೆ.

ಮುಂಬೈ ಪೂರ್ವದ ಜುನ್ನಾರ ಅಲ್ಲಿಂದ ಮಲಿಕ್‌ತುಜರನ ಅಧಿಕರಿ ಅಸದ್‌ಖಾನ್‌ಹಲವು ವರ್ಷಗಳಿಂದ ಅವನು ಹಿಂದೂಗಳೊಂದಿಗೆ ಯುದ್ಧ ಮಾಡಿದ್ದಾಗಿ ಇದ್ದ ಅಸದಖಾನ್‌ಹಲವು ವರ್ಷಗಳಿಂದ ಅವನು ಹಿಂದೂಗಳೊಂದಿಗೆ ಯುದ್ಧ ಮಾಡಿದ್ದಾಗಿ ಇದ್ದ ಅಸದಖಾನ್‌ಹಬ್ಬ ಬಂದಾಗ ಮೇಣೆಗಳಲ್ಲಿ ಸಾಗುತ್ತಿದ್ದ ಖೋರಾಸಾನ್‌ಅರೇಬಿಯಾದಿಂದ ಹಲವು ಮುಸಲ್ಮಾನರು ಬಂದು ಅಧಿಕಾರಿಗಳಾಗಿರುತ್ತಿದ್ದರು. ಮಳೆಗಾಲದ ಸಮಯದಲ್ಲಿ ಜುನಾರಕ್ಕೆ ಬಂದಿದ್ದ ಎಲ್ಲ ಕಡೆಗೂ ಮಳೆ, ಹಸಿರು ಮಣ್ಣು, ರಾಡಿ. ರ್ಮೂನಾಲ್ಕು ತಿಂಗಳು ಕಾಲ ಎಲ್ಲ ಕಡೆಗೂ ಭತ್ತ, ಗೋಧಿ, ಜೋಳ ಬಿತ್ತನೆಯನಲ್ಲಿ ವರ್ಣಿಸಿದ್ದಾನೆ. ತೆಂಗಿನಕಾಯಿಯಿಂದ ತಯಾರಿಸಿದ ಸೆರೆಯನ್ನು ಕುಡಿಯುತ್ತಿದ್ದರು. ಮುಸಲ್ಮಾನರು ಕುಡಿಯುತ್ತಿದ್ದರು. ಹಿಂದೂಗಳು ಕುಡಿಯುತ್ತಿರಲಿಲ್ಲ. ಮುಸಲ್ಮಾನರು ಮಾಂಸಾಹಾರಿಗಳು ಹಿಂದೂಗಳು ಸಸ್ಯಾಹಾರಿಗಳು ಅನ್ನ, ಕಿಚಡಿ, ಕುದಿಸಿ ತಿನ್ನುತ್ತಿದ್ದರು. ಅನ್ನದಲ್ಲಿ ಸಾಕಷ್ಟು ತುಪ್ಪ ಹಾಕುತ್ತಿದ್ದರು. ಮುಸಲ್ಮಾನರ ಕಣ್ಣಿಗೆ ಬೀಳದಂತೆ ಹಿಂದೂಗಳು ಅಡ್ಡ ಅರಿವೆ ಕಟ್ಟಿ ಊಟ ಮಾಡುತ್ತಿದ್ದರು. ಎಲ್ಲರೂ ಕೂಡಿ ಮಾಡುವ ಪದ್ಧತಿ ಇತ್ತು. ಬೀದರ ಕೋಟೆ ಕೊತ್ತಳಗಳು. ದೊಡ್ಡ ಪ್ರಮಾಣದವು ಆಗಿದ್ದವು. ಬೀದರ ವ್ಯಾಪಾರ ಕೇಂದ್ರದಂತೆ ವಿದ್ಯಾಕೇಂದ್ರವಾಗಿತ್ತು. ಮಹ್ಮದ್‌ಗವಾನ್‌ಅಲ್ಲಿ ಪ್ರಧಾನಿಯಾಗಿದ್ದು. ಕ್ರಿಶ್ಚನ್ನರು ಇಲ್ಲ ಹಿಂದೂಗಳು ಕಲ್ಲುಗಳನ್ನು ದೇವರುಗಳೆಂದು ಪೂಜಿಸುವರು. ಭಯಭಕ್ತಿಯಿಂದ ಪೂಜೆ ಮಾಡುತ್ತಿದ್ದರು. ಕಲ್ಲು ಕಂಚಿನ ಮೂರ್ತಿಗಳಿಗೆ ಕೈಮುಗಿಯುತ್ತಿದ್ದರು. ಒಂದಲ್ಲ ಹಲವು ದೇವರು ದೇವತೆಗಳು ಬೀದರನಲ್ಲಿದ್ದವು.

ಅಫನಾಸಿ ಬೀದರನಲ್ಲಿ ಸೇರುತ್ತಿದ್ದ ಸಂತೆಯ ಕುರಿತು ಬರೆದಿದ್ದಾನೆ. ಸಂತೆಯಲ್ಲಿ ಎತ್ತು, ಆಕಳುಗಳಂತೆ ಕುದುರೆಗಳ ವ್ಯಾಪಾರವೂ ನಡೆಯುತ್ತಿತ್ತೆಂದು ತಾನು ಪರ್ಶಿಯಾದಿಂದ ತಂದಿದ್ದ ಕುದುರೆಯನ್ನು ಅಲ್ಲಿಯೇ ಮಾರಿದನೆಂದು ಹೇಳಿದ್ದಾನೆ.

ಮುಸಲ್ಮಾನರ ಇಂಡಿಯಾದಲ್ಲಿ ಬೀದರ ಅತ್ಯಂತ ದೊಡ್ಡ ನಗರವಾಗಿದ್ದು. ಜನನಿಬಿಡವಾಗಿದೆ. ಬೀದರನ್ನು ಆಳುವ ಸುಲ್ತಾನನು ಅತ್ಯಂತ ಚಿಕ್ಕವಯಸ್ಸಿನವನು. ಅವನು ಸುಮಾರು ಇಪ್ಪತ್ತು ವರ್ಷದವನಿರಬೇಕು. ಅವನು ಅಲ್ಲಿಯ ಶ್ರೀಮಂತರ ಹಾಗೂ ಘೋರಾಸಾನಿ, ಸರದಾರರ ಹಿಡಿತದಲ್ಲಿರುತ್ತಾನೆ. ಖೋರಾಸಾನಿಗಳೇ ಈ ದೇಶವನ್ನು ಆಳುತ್ತಾರೆ. ಮಲಿಕ್‌ತುಜ್ಝರ್ ನೇ ಇಲ್ಲಿಯೇ ಖೋರಾಸಾನಿಗಳ ನಾಯಕನು. ಯುದ್ಧ ಮಾಡುವುದಕ್ಕಗಿ ಅವನ ಬಳಿ ಲಕ್ಷಾಂತರ ಸೈನ್ಯವಿರುತ್ತದೆ. ಸುಲ್ತಾನನು ಚಿಕ್ಕವನಾದರೂ ಅವನಿಗೆ ಬೇಟೆಯಾಡುವ ಗೀಳು ಇರುತ್ತದೆ. ಅವನು ತನ್ನೊಡನೆ ತಾಯಿ, ಹೆಂಡತಿ ಅಲ್ಲದೆ ಹಲವಾರು ಜನರನ್ನು ಕರೆದೊಯ್ಯುತ್ತಾನೆ. ಹತ್ತು ಸಾವಿರದಷ್ಟು ಅಶ್ವದಳ, ಐವತ್ತು ಸಾವಿರದಷ್ಟು ಕಾಲ್ದಳ, ಹಸ್ತಿದಳ ಇತ್ಯಾದಿ ಅವನನ್ನು ಹಿಂಬಾಲಿಸಿ ಹೊರಡುತ್ತವೆ. ಅವನ ಮುಂಭಾಗದಲ್ಲಿ ಕಹಳೆಯೂದುವವರು, ಕುದುರೆಗಳೂ ಅಲ್ಲದೆ ಹಲವು ನರ್ತಕರು, ಉಪಪತ್ನಿಯರೂ ಹೊರಡುತ್ತಾರೆ. ಸುಲ್ತಾನನ ಅರಮನೆ ಬಹುದೊಡ್ಡದಾಗಿದ್ದು, ಅದಕ್ಕೆ ಏಳು ಹೆಬ್ಬಾಗಿಲುಗಳಿದ್ದು, ಪ್ರತಿದ್ವಾರದಲ್ಲಿ ಹಲವು ಜನ ದ್ವಾರಪಾಲಕರಿರುತ್ತಾರೆಂದು ಅಫನಾಸಿ ಬಣ್ಣಿಸಿದ್ದಾನೆ.

ಕೆಲವರು ತಲೆಗೆ ಬಿಳಿಯ ಅರಿವೆ ಟಾವೆಲ್‌ಕಟ್ಟಿಕೊಳ್ಳುತ್ತಾರೆ. ಪುರುಷರು ಬಿಳಿಯ ಧೋತರಗಳನ್ನು ಉಡುತ್ತಾರೆ. ತಲೆಗೆ ಹಾಗೂ ಹೆಗಲಿಗೆ ಬಿಳಿಯ ಧೋತರದಂಥ ಬಟ್ಟೆ ಕಟ್ಟಿಕೊಂಡಿರುತ್ತಾರೆ. ಸೇವಕರಾದವರು ನಡಕ್ಕೆ ಧೋತ್ರ ಕಟ್ಟಿಕೊಳ್ಳುವುದಲ್ಲದೆ ಕೈಯಲ್ಲಿ ಢಾಲು, ಗುರಾಣಿ ಅಥವಾ ಖಡ್ಗಗಳನ್ನು ಹಿಡಿದಿರುತ್ತಾರೆ. ಇನ್ನು ಕೆಲವರು ಉದ್ದವಾದ ಭಲ್ಲೆ, ಭರ್ಚಿ ಬಿಲ್ಲು ಬಾಣಗಳನ್ನು ಹಿಡಿದುಕೊಂಡು ಮುನ್ನಡೆಯುತ್ತಾರೆ. ಬಹಳಷ್ಟು ಜನರು ಬರಿಗಾಲಿನಿಂದಲೇ ನಡೆಯುತ್ತಾರೆ. ಶಕ್ತಿವಂತರಾದವರು. ಆಯುಧಧಾರಿಗಳಾಗಿ ಮುಂದು ಮುಂದೆ ನಡೆಯುತ್ತಾರೆ. ಸ್ತ್ರೀಯರು ಬರಿಗೂದಲು ಬಾಚದೆ ಹಾಗೇ ಕಟ್ಟಿಕೊಂಡು ಬರಿಗಾಲಿನಿಂದ ನಡೆಯುತ್ತ ಚಿಕ್ಕಮಕ್ಕಳನ್ನು ಹೊತ್ತುಕೊಂಡು ನಡೆಯುತ್ತಾರೆ. ಆರೇಳು ವರ್ಷಗಳಾಗುವರೆಗೆ ಗಂಡು ಮಕ್ಕಳು ಹೆಣ್ಣು ಮಕ್ಕಳು ಬತ್ತಲೆಯಾಗಿಯೇ ತಿರುಗಾಡುತ್ತವೆ.

ಚೌಲ್‌ ಬಂದರದಿಂದ ಕೆಲವು ದಿನಗಳ ತರುವಾಯ ಮುಂಬಯಿಯ ಪೂರ್ವಕ್ಕಿರುವ ಜುನಾರ್ ನಗರಕ್ಕೆ ಹೋದದ್ದಾಯಿತು. ಅಲ್ಲಿ ಮಲಿಕ್‌ಅತ್‌ತುಜ್ವರನ ಕೈಕೆಳಗಿನ ಅಧಿಕಾರಿ ಅಸದ್‌ಖಾನನಿರುತ್ತಿದ್ದ. ಇಪ್ಪತ್ತು ವರ್ಷಗಳಿಂದ ಅವನು ಕಾಫಿರರೊಂದಿಗೆ ಹಿಂದೂಗಳೊಂದಿಗೆ ಯುದ್ಧ ಮಾಡುತ್ತಲೇ ಇದ್ದ. ಅನೇಕರು ಖಾನನ ದಾಳಿಗೆ ತುತ್ತಾಗುತ್ತಿದ್ದರು. ಅಸದ್‌ಖಾನ್‌ನು ಮನುಷ್ಯರು ಹೊತ್ತು ಕೊಂಡೊಯ್ಯುವ ಮೇಣೆಗಳಲ್ಲಿ ಕುಳಿತು ಸಾಗುತ್ತಿದ್ದ ಅವನ ಬಳಿ ಅತ್ಯುತ್ತಮ ಆನೆಗಳ ಹಾಗೂ ಕುದುರೆಗಳ ಪಡೆಯಿತ್ತು. ಅವನ ಜೊತೆಗೆ ಖೋರಾಸಾನ ಅಥವಾ ಅರೇಬಿಯಾದಿಂದ ಬಂದ ಅನೇಕ ಮುಸಲ್ಮಾನರಿದ್ದರು. ಅವರು ಯಾವಾಗಲೂ ಚಿಕ್ಕ ಹಡಗುಗಳಾದ ಡಬ್ಬಾಗಳಲ್ಲಿಯೇ ಸಮುದ್ರ ಪ್ರಯಾಣ ಮಾಡುತ್ತಿದ್ದರು. ಏಸುವಿನ ಕೃಪೆಯಿಂದ ತಾನು ಹೇಗೋ ಒಂದು ಕುದುರೆಯನ್ನು ತೆಗೆದುಕೊಂಡು ಭಾರತಕ್ಕೆ ಬಂದದ್ದಾಗಿತ್ತು. ಮುಂಬಯಿಯ ಪೂರ್ವಕ್ಕಿರುವ ಜುನಾರ್ ತಲುಪುವುದಕ್ಕೆ ತಾನು ಎಷ್ಟೋ ರೂಬಲ್‌ಖರ್ಚು ಮಾಡ ಬೇಕಾಗಿಬಂತು. ಜುನಾರದಲ್ಲಿ ತಾನು ಸುಮಾರು ಎರಡು ತಿಂಗಳ ಕಾಲಲ ಮಾತ್ರ ಇದ್ದದ್ದು. ಜುನಾರ್ ಒಂದು ವಿಶಿಷ್ಟವಾದ ನಗರವಾಗಿತ್ತು. ಒಂದೊಂದು ಕಡೆಗೆ ಅತ್ಯಂತ ಇಕ್ಕಟ್ಟಿನ ಪ್ರದೇಶದೊಳಗಿನಿಂದ ಹೋಗಬೇಕಾಗುತ್ತಿತ್ತು. ಮೂರು ನಾಲ್ಕು ತಿಂಗಳವರೆಗೆ ಎಲ್ಲ ಕಡೆಗೂ ಮಳೆಯಾಗಿ ಮಣ್ಣು, ರಾಡಿ ಸಾಮಾನ್ಯವಾಗಿ ಮುಂದೆ ನಡೆಯುವುದೇ ಕಷ್ಟವಾಗುತ್ತಿತ್ತು. ಎರಡು ತಿಂಗಳವರೆಗೆ ತಾನು ಅಲ್ಲಿದ್ದದ್ದು. ಮಳೆಗಾಲವಾದ್ದರಿಂದ ಎಲ್ಲ ಕಡೆಗೂ ಭತ್ತ, ಗೋಧಿ, ಜೋಳ ಇತ್ಯಾದಿ ಬೀಜ ಬಿತ್ತುವ, ಉತ್ತುವ ಕಾರ್ಯ ನಡೆಯುತ್ತಿತ್ತು. ಇತರ ಬೆಳೆಗಳನ್ನೂ ಬಿತ್ತುತ್ತಿದ್ದರು. ಅಲ್ಲಿ ತೆಂಗಿನಕಾಯಿಗಳಿಂದ ಕುಡಿಯುವ ಸೆರೆಯನ್ನು ತಯಾರಿಸುತ್ತಿದ್ದರು. ಖೋರಾಸಾನಿಗಳು ಎಂದರೆ ಮುಸಲ್ಮಾನರು ಮಾತ್ರ ಕುಡಿಯುತ್ತಿದ್ದರು. ಹಿಂದೂಗಳು ಸೆರೆಯನ್ನು ಸೇವಿಸುತ್ತಿರಲಿಲ್ಲ. ಜುನಾರದಿಂದ ಒಂದು ತಿಂಗಳು ಕಳೆದ ಮೇಲೆ ತಾನು ದೊಡ್ಡ ನಗರವಾದ ಬೀದರಕ್ಕೆ ಹೋದದ್ದಾಯಿತು. ಬೀದರ ದೊಡ್ಡ ನಗರ ಅಷ್ಟೇ ಅಲ್ಲದೆ ಅದು ಮುಸಲ್ಮಾನರ ಬಹುಮನೀ ರಾಜ್ಯದ ರಾಜಧಾನಿಯೂ ಅಗಿತ್ತು. ಅಲ್ಲಿಯ ಕೊಡೆ ಕೊತ್ತಳೆಗಳು ನೋಡುವ ಹಾಗಿದ್ದು ಮುಖ್ಯಮಂತ್ರಿ ಹಾಗೂ ಇನ್ನಿತರ ಮಂತ್ರಿ ಮುಖಂಡರೂ ಬೀದರದಲ್ಲಿ ಇರುತ್ತಿದ್ದರು. ಬೀದರ್ ವ್ಯಾಪಾರ ಕೇಂದ್ರವಾದಂತೆ ವಿದ್ಯಾಕೇಂದ್ರವೂ ಆಗಿತ್ತು. ಪ್ರಧಾನಿ ಮಹ್ಮದಗವಾನ್‌ಅಲ್ಲಿ ವಾಸವಾಗಿದ್ದನು.

ಅಲ್ಲಿ ಕ್ರಿಶ್ಚನ್‌ಧರ್ಮದವರು ಅಥವಾ ಮುಸಲ್ಮಾನರು ಇರದೆ ಕಲ್ಲು ದೇವ-ದೇವತೆಗಳನ್ನು ಪೂಜಿಸುವ ಜನರೇ ಹೆಚ್ಚಾಗಿದ್ದರು . ಅಲ್ಲಿಯ ಜನರಿಗೆ ಕ್ರಿಸ್ತನ ಬಗೆಗೆ ಕ್ರಿಶ್ಚನ್‌ಧರ್ಮದ ಬಗೆಗೆ ಏನೂ ಗೊತ್ತಿರಲಿಲ್ಲ. ಕ್ರಿಶ್ಚನನ್ನರ ಹಬ್ಬ ಹುಣ್ಣಿಮೆಗಳೂ ಗೊತ್ತಿರಲಿಲ್ಲ. ಅವರು ಪೂಜೆ ಪುನಸ್ಕಾರ ಮಾಡುತ್ತಿದ್ದ ದೇವ ದೇವತೆಯರು ಬೇರೆ ಬೇರೆಯಾಗಿದ್ದರು. ಕಲ್ಲು ಕಂಚಿನ ಮೂರ್ತಿಗಳನ್ನು ಮಾಡಿ ಅವುಗಳನ್ನು ಪೂಜಿಸಿ ಕೈಮುಗಿಯುತ್ತಿದ್ದರು.

ಜುನಾರದಿಂದ ಬೀದರ್ ಸುಮಾರು ನಲವತ್ತು ಹರದಾರಿಯಷ್ಟು ದೂರವಿದ್ದಿತು. ಬೀದರನಿಂದ ಕುಳಂಗೀರ ಒಂಭತ್ತು ಹರದಾರಿಯಷ್ಟು ದೂರವಿತ್ತು. ಬೀದರ್ ಬಹಳ ದೊಡ್ಡ ನಗರವಾಗಿತ್ತು. ಅಲ್ಲಿ ಕುದುರೆಗಳು ಅದಲ್ಲದೆ ಅನೇಕ ವಸ್ತುಗಳು, ವಿವಿಧ ಬಗೆಯ ಜೀನಸುಗಳು ಮಾರಾಟವಾಗುತ್ತಿದ್ದವು. ಬೀದರನ ಮಾರ್ಕೆಟ ಉದ್ದವಾಗಿ, ದೊಡ್ಡದಾಗಿತ್ತು. ಅಲ್ಲಿ ಜನರ ಎಂದರೆ ಜೀತದಾಳುಗಳ ಮಾರಾಟವೂ ಆಗುತ್ತಿತ್ತು. ಜನರ ಮಾರಾಟದ ಬಗ್ಗೆ ನಾನು ಕೇಳಿದಾಗ ಹಲವಾರು ವರ್ಷಗಳ ಹಿಂದೆ ಸತ್ಯವಂತನಾದ ಹರಿಶ್ಚಂದ್ರನ ಮಾರಾಟವಾಗಿತ್ತೆಂದು ಅಲ್ಲಿಯ ಜನರು ಆತನ ಕತೆಯನ್ನು ಹೇಳುತ್ತಾರೆ. ಹರಿಶ್ಚಂದ್ರನೆಂಬವನು ಹೆಂಡತಿ, ಮಗನನ್ನೂ ಮಾರಾಟಮಾಡಿ ತಾನೂ ಮಾರಲ್ಪಟ್ಟಿದ್ದನೆಂದು ಹೇಳುತ್ತಾರೆ. ಜನರ ಮಾರಾಟ ಸರಿ ಅಲ್ಲವೆಂದು ಹೇಳಿದರೆ ಅವರು ಆ ರಾಜನ ಕತೆಯನ್ನು ಹೇಳುತ್ತಿದ್ದರು. ದಿನಾಲೂ ಹಲವು ಬಗೆಯ ಕಾಯಿಪಲ್ಲೆಗಳು ಮಾರಾಟವಾಗುತ್ತಿದ್ದವು. ಅಲ್ಲಿ ಬಹಳಷ್ಟು ಪಲ್ಲೆ, ಗಡ್ಡೆ ಗೆಣಸುಗಳು ಇರುತ್ತಿದ್ದವು. ಆದರೆ ಅಲ್ಲಿ ರಶಿಯನ್ನರಿಗೆ ಬೇಕಾದ ಯಾವ ವಸ್ತುವೂ ದೊರೆಯುತ್ತಿರಲಿಲ್ಲ. ಬಹಮನೀ ರಾಜ್ಯವಿತ್ತು. ಆಳುವವರೆಲ್ಲರೂ, ಹಲವು ಅಧಿಕಾರಿಗಲು ಖೋರಾಸಾನ್‌ಅಥವಾ ಅರೇಬಿಯಾದಿಂದ ಬಂದು ಇಲ್ಲಿ ನೆಲೆಸುತ್ತಿದ್ದರು.

ಇಲ್ಲಿಯ ಹಿಂದೂಗಳನ್ನು ಅವರು ಯುದ್ಧಕ್ಕಾಗಿ ಬಳಸಿಕೊಳ್ಳುತ್ತಿದ್ದರು. ಖೋರಾಸಾನಿಗಳು ಕುದುರೆ ಹತ್ತಿ ಅಡ್ಡಾಡುತ್ತಿದ್ದರು. ಅವರ ಸೇವಕರು, ಮಾವುತರು ಆನೆಗಳನ್ನು ಹತ್ತಿ ಅವುಗಳ ಮೇಲೆ ಕೂತು ಹೋಗುತ್ತಿದ್ದರು . ಯುದ್ಧದ ಆನೆಗಳ ಬಾಯಿಗೆ ಹಲ್ಲಿಗೆ ಅತ್ತಿತ್ತ ಖಡ್ಗಗಳನ್ನು ಕಟ್ಟುತ್ತಿದ್ದರು. ಹಲವು ಜನರು ಅಂಬಾರಿಗಳ ಮೇಲೆ ಕೂತು ಹೋಗುತ್ತಿದ್ದರು. ಆನೆಯ ಮೇಲೆ ಕೂಡ್ರಲು ಕಟ್ಟಿದ ಸ್ಥಳಕ್ಕೆ ಅಂಬಾರಿಯೆಂದು ಕರೆಯುತ್ತಿದ್ದರು. ಕೋಟೆಯ ಹೊರಗೆ, ಒಳಗೆ, ಪ್ರವೇಶ ದ್ವಾರಗಳಲ್ಲಿ ಆಯುಧಧಾರಿಗಳು ನಿಂತಿರುತ್ತಿದ್ದರು.

ಆಳಂದದಲ್ಲಿ ಶೇಖ ಅಲ್ಲಾವುದ್ದೀನನ ಜಾತ್ರೆ ಹತ್ತು ದಿನಗಳವರೆಗೆ ವರ್ಷಕ್ಕೊಮ್ಮೆ ನಡೆಯುತ್ತಿತ್ತು. ಸುತ್ತಮುತ್ತಲಿನ ಹಲವಾರು ಸ್ಥಳಗಳಿಂದ ಜನರು ಜಾತ್ರೆಗೆ ಬಂದು ಹೋಗುತ್ತಿದ್ದರು. ಆಳಂದ ಬೀದರ್ ನಿಂದ ಸುಮಾರು ಹನ್ನೆರಡು ಹರದಾರಿ ದೂರದಲ್ಲಿತ್ತು. ಅಲ್ಲಿ ಕುದುರೆಗಳ ಮಾರಾಟವೂ ನಡೆಯುತ್ತಿತ್ತು.ಆಳಂದದಲ್ಲಿ ಒಂದು ಘಗ್ಗೂ ಎಂದರೆ ಒಂದು ಗೂಬೆಯಿದ್ದು ಅದು ಯಾರ ಮನೆಯ ಮೇಲೆ ಕೂಡ್ರುತ್ತದೆಯೋ ಆ ಮನೆಯಲ್ಲಿ ಯಾರಾದರೂ ಸಾಯುತ್ತಾರೆಂದು ಜನರು ನಂಬಿಕೊಂಡು ಅದಕ್ಕೆ ಹೆದರುತ್ತಿದ್ದರು. ಯಾರಾದರೂ ಅದನ್ನು ಕೊಲ್ಲಲ್ಲು ಪ್ರಯತ್ನಿಸಿದರೆ, ಅದು ಬೆಂಕಿಯನ್ನು ಕಾರುತ್ತದೆಂದು ಜನರು ಭಯಭೀತರಾಗುತ್ತಿದ್ದರು. ಕೆಲವು ಕಾಡು ಬೆಕ್ಕುಗಳು ರಾತ್ರಿಯಲ್ಲಿ ಅತ್ತಿತ್ತ ಅಡ್ಡಾಡುತ್ತವೆ. ಅವು ಗುಡ್ಡ ಬೆಟ್ಟಗಳ ಬಂಡೆಗಲ್ಲುಗಳಲ್ಲಿ ಕೊರಕಲುಗಳಲ್ಲಿ ವಾಸವಾಗಿರುತ್ತವೆ. ಮಂಗಗಳು ಅಡವಿಗಳಲ್ಲಿ ನಗರಗಳಲ್ಲಿ ಎಲ್ಲ ಕಡೆಗೂ ಗುಂಪು ಕಟ್ಟಿಕೊಂಡು ಅಡ್ಡಾಡುತ್ತವೆ. ಮಂಗಗಳ ಒಂದು ಸೈನ್ಯವೇ ಇದ್ದು, ಮಂಗಗಳಿಗೆ ಒಬ್ಬ ರಾಜನೂ ಇರುವನೆಂದು ಜನರು ನಂಬಿದ್ದಾರೆ. ಯಾರಾದರೂ ಮಂಗಗಳ ತೊಂದರೆ ಕೊಟ್ಟರೆ, ಹೊಡೆದರೆ ಅವು ಮಂಗಗಳ ರಾಜನಿಗೆ ತಕರಾರು ಕೊಟ್ಟರೆ ಮಂಗಗಳ ಸೈನ್ಯ ಬಂದು ಮುತ್ತಿಗೆ ಹಾಕಿ ತೊಂದರೆ ಕೊಟ್ಟವರನ್ನು ಕಾಡುತ್ತವೆ ಅಂಥವರನ್ನು ಕೊಲ್ಲಲೂ ಅವು ಹಿಂದು ಮುಂದೆ ನೋಡುವುದಿಲ್ಲ. ಮಂಗಗಳು ತಮ್ಮದೇ ಆದ ಭಾಷೆಯನ್ನು ಮಾತಾಡುತ್ತವೆಯಂತೆ. ಅವು ಆಡುವ ಭಾಷೆ ಜನರಿಗೆ ಅರ್ಥವಾಗುವುದಿಲ್ಲ. ಮಂಗಗಳ ಮರಿಗಳು ಸ್ವಚ್ಚಂದವಾಗಿ ಗಿಡದಿಂದ ಗಿಡಕ್ಕೆ ಹಾಗೂ ರಸ್ತೆಗಳ ಮೇಲೆ ಓಡಾಡುತ್ತವೆ, ಜಿಗಿದಾಡುತ್ತವೆ. ಇಲ್ಲಿ ವಸಂತಋತು ಆರಂಭವಾಗುವುದು ಪವಿತ್ರ ಮೇರಿ ಮಾತೆಯ ಹಬ್ಬದ ದಿನದಿಂದ ಎಂದರೆ ಅಕ್ಟೋಬರ್ ತಿಂಗಳಿನಿಂದ. ಇಲ್ಲಿ ವಸಂತಋತು ಬಂದರೆ ಸಂತೋಷದಿಂದ ಜನರು ಹಬ್ಬವನ್ನಾಗಿ ಆಚರಿಸುತ್ತಾರೆ.

ಬೀದರ್ ಮುಸಲ್ಮಾನರ, ಬಹಮನೀ ಅರಸರ ರಾಜಧಾನಿಯಾಗಿರುತ್ತದೆ. ಅದು ಅತೀ ದೊಡ್ಡ ಪಟ್ಟಣ. ಅಲ್ಲಿಯ ಸುಲ್ತಾನನು ಇಪ್ಪತ್ತು ವರ್ಷದ ತರುಣ ರಾಜಕುಮಾರನಾಗಿರುತ್ತಾನೆ. ಇನ್ನಿತರ ಹಲವು ಖೋರಾಸಾನಿಗಳು ವಿವಿಧ ಬಗೆಯ ಅಧಿಕಾರ ವಹಿಸಿಕೊಂಡಿರುತ್ತಾರೆ. ವಿವಿಧ ಮಂತ್ರಿ ಮುಖಂಡ ಸೇನಾಪತಿಗಳು ಅವರೇ ಆಗಿರುತ್ತಾರೆ. ಖೋರಾಸಾನ ಅರೇಬಿಯಾದ ರಾಜರು ಇದನ್ನು ಆಳುತ್ತಾರೆ. ಖೋರಾಸಾನಿಗಳು ಯುದ್ಧ ಮಾಡುವದರಲ್ಲಿ ತರಬೇತಿ ಪಡೆದವರಾಗಿದ್ದು, ಬೀದರ್ ನಲ್ಲಿ ಮಲ್ಲಿಕ್‌ಅತ್‌ತುಜ್ಜರ್ ಎಂದರೆ ಮಹಮ್ಮದ ಗವಾನನ್‌ದೇ ಕಾರುಭಾರ, ಅವನು ಬೀದರನಲ್ಲಿ ವರ್ಡಕರ ರಾಜನೆನ್ನಿಸಿ ಕೊಂಡಿರುತ್ತಾನೆ. ಅವನ ಕೈಯಲ್ಲಿ ಎರಡು ಲಕ್ಷದಷ್ಟು ಸೈನ್ಯವಿರುತ್ತದೆ. ಸುಲ್ತಾನನು ಯುದ್ಧಕ್ಕೆ ಹೊರಡುವಾಗ ಮೂರು ಲಕ್ಷದಷ್ಟು ಸೈನ್ಯ ಒಯ್ಯುತ್ತಾನೆ. ಬೀದರ್ ನಗರ ಅತ್ಯಂತ ಜನನಿಬಿಡವಾಗಿದ್ದು, ಅಲ್ಲಿಯ ಸಾಮಾನ್ಯ ಜನರು ಅತ್ಯಂತ ಬಡವರಾಗಿರುತ್ತಾರೆ. ಆದರೆ ಖೋರಾಸಾನಿ ಮುಸಲ್ಮಾನರು ಅತ್ಯಂತ ಶ್ರೀಮಂತರಾಗಿದ್ದು ವೈಭವದಿಂದ ಕಾಲ ಕಳೆಯುತ್ತಾರೆ. ಅವರು ಯಾವಾಗಲೂ ಐಷಾರಾಮದಲ್ಲಿರುತ್ತಾರೆ. ಬೇಟೆ ಮಾಡುವುದಕ್ಕೆಂದು ಸುಲ್ತಾನನು ಕಾಡಿಗೆ ಹೊರಟಾಗ ಅವನೊಂದಿಗೆ ಅವನ ತಾಯಿ, ಹೆಂಡತಿ ಮುಂತಾದವರೂ ಹೊರಡುತ್ತಾರೆ. ಹತ್ತು ಸಾವಿರ ಕುದುರೆ ಸವಾರರು, ೫೦ ಸಾವಿರದಷ್ಟು ಕಾಲಾಳುಗಳು ೨೦೦ರಷ್ಟು ಆನೆಗಳು ಆಯುಧಧಾರಿಗಳು ಹೊರಡುತ್ತಾರೆ. ಅಲ್ಲದೆ ೧೦೦ ಜನ ನರ್ತಕಿಯರು, ಹಾಗೂ ನೂರಾರು ಜನ ಸುಂದರ ತರುಣಿಯರೂ ಹೊರಡುತ್ತಾರೆ. ಸುಲ್ತಾನನಿರುವ ಅರಮನೆ ಬಹುದೊಡ್ಡದಾಗಿದ್ದು ಅದಕ್ಕೆ ಏಳು ಮಹಾದ್ವಾರಗಳಿರುತ್ತವೆ. ದ್ವಾರಗಳ ಬಳಿ ಸಶಸ್ತ್ರ ನೂರಾರು ಜನ ಕಾವಲುಗಾರರು ನಿಂತಿರುತ್ತಾರೆ. ಅರಮನೆಯ ಗೋಡೆಗಳು ಅನೇಕ ಚಿತ್ರಗಳಿಂದ ಬಣ್ಣ ಬಣ್ಣಗಳಿಂದ ಅಲಂಕೃತವಾಗಿವೆ. ಯಾರು ಬೇಕಾದವರು ಪರವಾನಗಿ ಇಲ್ಲವೆ ಅರಮನೆ ಪ್ರವೇಶಿಸುವ ಹಾಗಿಲ್ಲ. ಬರುಹೋಗುವವರು ಪರವಾನಗಿ ಪಡೆದುಕೊಂಡು ತಮ್ಮಹೆಸರು ಇತ್ಯಾದಿ ವಿವರ ನೀಡಿ ಒಳಗೆ ಪ್ರವೇಶಿಸಿಬಹುದು. ಅರಮನೆ ಅತ್ಯಂತ ಸುಂದರವಾಗಿದ್ದು ಅದನ್ನು ಕಲ್ಲಿನಲ್ಲಿಯೇ ಕಟ್ಟಲಾಗಿದೆ. ಅರಮನೆಯ ಕೆಲವು ಗೋಡೆಗಳಿಗೆ ಬಂಗಾರ ಬಣ್ಣದ ಚಿತ್ರಗಳನ್ನು ಬರೆಯಲಾಗಿದೆ. ಅರಮನೆಯ ಒಳಾಂಗಣ ತೀರ ಆಕರ್ಷಕವಾಗಿದೆ. ಹತ್ತುಸಾವಿರ ಜನರು ಆಯುಧಧಾರಿಗಳು ಅರಮನೆಯನ್ನು ಕೋಟೆಯನ್ನು ಕಾವಲು ಮಾಡುತ್ತಾರೆ. ಕೋಟೆ ಹಾಗೂ ಬೀದರ್ ನಗರದ ಸುತ್ತಲೂ ಇಡೀ ರಾತ್ರಿಗಸ್ತು ಹೊಡೆಯುತ್ತಾರೆ. ಅವರು ಕುದುರೆಗಳ ಮೇಲೆ ಕೂತು ಆಯುಧಧಾರಿಗಳಾಗಿರುತ್ತಾರೆ. ಕೈಯಲ್ಲಿ ಕಂದೀಲುಗಳನ್ನು ಹಿಡಿದು ಅಡ್ಡಾಡುತ್ತಾರೆ. ಅಫನಾಸಿ ತನ್ನ ಕುದುರೆಯನ್ನು ಬೀದರನಲ್ಲಿಯೆ ಮಾರಾಟ ಮಾಡಿದ. ಒಂದು ವರ್ಷದಿಂದ ಅದನ್ನು ತನ್ನ ಜೊತೆಗೆ ಕಾಪಾಡಿಕೊಂಡು ಬಂದಿದ್ದ. ಪರ್ಶಿಯಾದಿಂದ ತಂದ ಆ ಕುದುರೆಗೆ ಸಾಕಷ್ಟು ಬೆಲೆ ಬಂದಿತ್ತು. ಬೀದರನ ಬೀದಿಗಳಲ್ಲಿಯೇ ಒಮ್ಮೆಲೇ ಹದಿನಾಲ್ಕು ಫೂಟಿನಷ್ಟು ಉದ್ದವಾಗಿರುವ ಹಾವುಗಳು ಹರಿದಾಡುತ್ತಿರುತ್ತವೆ.

ತಾನು ಕುಳಂಗೀರದಿಂದ ಬೀದರ್ಗೆ ಬಂದು ಆ ಕುದುರೆಯನ್ನು ಮಾರಿದ್ದುಂಟು. ಬಹುದಿನಗಳ ಕಾಲ ಅಫನಾಸಿ ಬೀದರನಲ್ಲಿಯೆ ಇದ್ದ. ಅಲ್ಲಿದ್ದಾಗ ಅಫನಾಸಿಗೆ ಹಿಂದೂಗಳ ಪರಿಚಯ ವಾಯಿತು. ತಾನು ಮುಸಲ್ಮಾನನಾಗಿರದೆ ಕ್ರಿಶ್ಚನ್‌ಧರ್ಮದವನೆಂದು ಅವರಿಗೆ ಹೇಳಿದ. ತನ್ನ ಹೆಸರು ಖೋಜಾ ಯೂಸೂಫ್‌ಖೋರಾಸಾನಿ ಯಾಗಿರದೆ, ತಾನೊಬ್ಬ ರಶ್ಯಾದಿಂದ ಬಂದ ಪ್ರವಾಸಿ, ತನ್ನ ಹೆಸರು ಅಫನಾಸಿ ನಿಕಿತಿನ್‌ಎಂದು ಹೇಳಿದ. ಯಾರದೋ ಒತ್ತಾಯಕ್ಕೆ ತಾನು ಯೂಸುಫ್‌ನಾಗಿದ್ದೆನೆಂದು ಇದ್ದ ಸತ್ಯವನ್ನು ಹೇಳಿದ. ಹಿಂದೂಗಳು ಆತನು ಹೇಳಿದ್ದನ್ನು ನಂಬಿದರು. ಅವರಿಗೆ ಯಾವ ಸಂಶಯವೂ ಬರಲಿಲ್ಲ. ಅವರು ಊಟ ಮಾಡುವಾಗ, ತಿನ್ನುವಾಗ, ಕುಡಿಯುವಾಗ ವ್ಯಾಪಾರ ಮಾಡುವಾಗ, ಪ್ರಾರ್ಥನೆ ಮಾಡುವಾಗ ಅವರು ಏನನ್ನೂ ಮುಚ್ಚಿಡುತ್ತಿರಲಿಲ್ಲ. ತಮ್ಮ ಹೆಂಡತಿ ಮಕ್ಕಳಿಗೂ ಅವರು ಅಫನಾಸಿಯ ಬಗ್ಗೆ ಎಲ್ಲವನ್ನೂ ಹೇಳುತ್ತಿದ್ದರು. ಅಫನಾಸಿ ಅವರಿಗೆ ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದ ಅವನು ಒಬ್ಬನೇ ದೇವರು, ಸೃಷ್ಟಿಕರ್ತನನ್ನು ನಂಬುತ್ತೇನೆಂದು ಹೇಳಿದ. ಹಿಂದೂಸ್ತಾನದಲ್ಲಿ ಹಲವು ಬಗೆಯ ನಂಬಿಕೆಗಳಿದ್ದು ಅನೇಕರು ಭೂತ, ಪಿಶಾಚಿ, ಶಕ್ತಿಗಳನ್ನು ನಂಬಿ ಅವುಗಳಿಗೆ ಅಂಜಿ ನಡೆಯುವುದು ಅಫನಾಸಿಯ ಗಮನಕ್ಕೆ ಬಂತು. ಹಿಂದೂಗಳು ಅನ್ಯ ಜಾತಿಯವರನ್ನು ಮದುವೆಯಾಗುವುದಿಲ್ಲ. ಅವರಿಗೆ ತಮ್ಮ ಜಾತಿ ಕುಲಗೋತ್ರದವರೇ ಬೇಕು. ಅವರು ಅತ್ಯಂತ ಧಾರ್ಮಿಕರು. ತಮ್ಮ ನಂಬಿಕೆಗಳನ್ನು ಅವರು ಬಿಟ್ಟು ನಡೆಯುವುದಿಲ್ಲ. ಹಿಂದೂಗಳಲ್ಲಿ ಹಲವರು ಗೋಮಾಂಸ, ತತ್ತಿ ಹಾಗೂ ಮೀನುಗಳನ್ನು ತಿನ್ನುವುದಿಲ್ಲ. ಅವರೆಂದಿಗೂ ಎತ್ತು, ಆಕಳು, ಹಂದಿಗಳ ಮಾಂಸ ಮುಟ್ಟುವುದಿಲ್ಲ, ತಿನ್ನುವುದಿಲ್ಲ. ಎಲ್ಲರೂ ಶಾಖಾಹಾರಿಗಳಾಗಿದ್ದು, ಶಾಖಾಹಾರಿ ಭೋಜನವನ್ನು ಮಾಡುತ್ತಾರೆ. ಅಫನಾಸಿ ಬೀದರ್ ನಗರದಲ್ಲಿ ಸುಮಾರು ನಾಲ್ಕು ತಿಂಗಳಲು ಕಳೆದದ್ದಾಯಿತು. ಅಲ್ಲಿ ಹಿಂದೂಗಳ ಪರಿಚಯವಾದ್ದರಿಂದ ಅವರೊಂದಿಗೆ ಪರ್ವತ ಪ್ರದೇಶಕ್ಕೆ ಹೋಗಲು ಒಪ್ಪಿಕೊಂಡದ್ದಾಯಿತು.

ಹೈದ್ರಾಬಾದದಿಂದ ದಕ್ಷಿಣ ಪರ್ವತಕ್ಕೆ ೧೦೮ ಮೈಲಿ ದಾಟಿದರೆ ಅಲ್ಲಿರುವುದು ಪರ್ವತ ಪ್ರದೇಶ. ಅಲ್ಲಿ ಅನೇಕ ಮಂದಿರ,ಗುಡಿಗಳಿರುತ್ತವೆ. ಹಿಂದೂಗಳಿಗೆ ಅದೊಂದು ಮುಸಲ್ಮಾನರಿಗೆ ಮಕ್ಕಾ, ಮದೀನಾ, ಜೆರೋಸ್ಲೇಮ ಇದ್ದಂತೆ ಪವಿತ್ರ. ಅಲ್ಲಿ ಒಂದು ವಿಶಾಲವಾದ, ದೊಡ್ಡ ದೇವರಮೂರ್ತಿಯಿರುವ ಪ್ರದೇಶವಿದೆ. ಅದನ್ನೇ ಅಫನಾಸಿ ಭೂತಖಾನೆ ಯೆಂದು ಕರೆದಿರುವುದು. ಭೂತ ಎಂದು ಕರೆಯಲು ಕಾರಣವೇನೆಂದರೆ ರಶ್ಯನ್‌ಭಾಷೆಯಲ್ಲಿ ‘ದೇವರು’ ಪದಕ್ಕೆ’ ಬೋಖ್‌’ ಅದನ್ನೇ ಅವನು ‘ಬೋಟ್‌’ ಭೂತ ಎಂದು ಕರೆದಂತೆ ಕಾಣುತ್ತದೆ. ರಶ್ಯನ್‌ಭಾಷೆ ಗೊತ್ತಿಲ್ಲದವರು ಅದನ್ನು ಭೂತವೆಂದು ಭಾವಿಸುವುದು ಸರಿಯಲ್ಲ. ರಶ್ಯನ್‌ಭಾಷೆಯ ‘ಬೋಖ್‌ಬೋಹ್‌’ ಎಂಬುದರಿಂದ ಅವನು ಭೂತ’ ಎಂಬುದರಿಂದ ಅವನು ‘ಭೂತ’ವೆಂದು ಬಳಸಿದ್ದಾನೆ. ಇಂಗ್ಲಿಷ್‌ಬಲ್ಲವರಿಗೂ ಇದರ ಅರ್ಥ ಗೊತ್ತಾಗುವ ಹಾಗಿಲ್ಲ. ದೇವರ ಪ್ರತಿಮೆ ಇರುವ ಸ್ಥಳದಲ್ಲಿ ಐದು ದಿನಗಳವರೆಗೆ ಜಾತ್ರೆ ನಡೆಯುತ್ತದೆ.

ಅದು ತ್ವೇರ್-ಈಗಿನ ಕಾಲಿನಿನ್‌ನಗರದ ಅರ್ಧದಷ್ಟು ದೊಡ್ಡದಾಗಿರುತ್ತದೆ. ದೇವರ ಗುಡಿಯು ಕಲ್ಲಿನಿಂದ ಕಟ್ಟಲ್ಪಟ್ಟಿದ್ದು ದೇವರ ಹಲವು ರೀತಿಯ ಚಮತ್ಕಾರಗಳನ್ನು ಅಲ್ಲಯ ಕಲ್ಲುಗಳಲ್ಲಿ ಕೆತ್ತಲಾಗಿದೆ. ಅವು ಆ ದೇವರಿಗೆ ಸಂಬಂಧಪಟ್ಟ ಪ್ರಾಚೀನ-ಪ್ರಪ್ರಾಚೀನ ಕತೆಗಳೇ ಆಗಿವೆ. ಹನ್ನೆರಡು ಬಗೆಯ ಚಿತ್ರಗಳಿದ್ದು ಅವು ವಿವಿಧ ಆಕಾರಗಳನ್ನು ತಳೆದಿವೆ. ದೇವರು, ಮನುಷ್ಯಪ್ರಾಣಿ, ಪಕ್ಷಿಗಳ ಆಕಾರದಲ್ಲಿಯೂ ಕಾಣಿಸಿಕೊಳ್ಳಬಹುದು. ಮೊದಲನೆಯದಾಗಿ ಮನುಷ್ಯರೂಪದಲ್ಲಿ ಎರಡನೆಯದಾಗಿ, ಸೊಂಡಿಲು ಇರುವ ಆನೆಯಾಗಿ ಮೂರನೆಯದಾಗಿ ಮಂಗನ ರೂಪದಲ್ಲಿ ನಾಲ್ಕನೆಯದಾಗಿ ಭಯಾನಕ ಪ್ರಾಣಿಯ ರೂಪದಲ್ಲಿ ದೇವರು ಕಾಣಿಸಿಕೊಳ್ಳುವ ಹಲವು ಚಿತ್ರಗಳನ್ನು ಅಲ್ಲಿ ಕಲ್ಲಿನಲ್ಲಿ ಕೆತ್ತಲಾಗಿದೆ. ಭಕ್ತರಿಗೆ ಅವನು ಬಾಲವಿರುವ ಪ್ರಾಣಿಯ  ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಕಲ್ಲಿನಲ್ಲಿ ಅವನ ಉದ್ದನೆಯ ಬಾಲವೂ ಕೆತ್ತಲ್ಪಟ್ಟಿದೆ. ಅದು ಸುಮಾರು ಏಳು ಫೂಟಿನಷ್ಟು ಉದ್ದವಾಗಿರುತ್ತದೆ. ಹಿಂದೂಸ್ತಾನದ ಹಲವು ಭಾಗಗಳಿಂದ ಜನರು ಈ ದೇವರ ಗುಡಿಗೆ ಜಾತ್ರೆಯಂದು ಬರುತ್ತಾರೆ. ದೇವರ ವಿಭಿನ್ನ ಚಟುವಟಿಕೆ, ಚಮತ್ಕಾರಗಳನ್ನು ನೋಡುತ್ತಾರೆ. ಮುದುಕಿಯರೂ ಮತ್ತು ತರುಣಿಯರೂ ತಮ್ಮ ತಲೆಗೂದಲುಗಳನ್ನು ಬೋಳಿಸಿಕೊಳ್ಳುತ್ತಾರೆ. ಪುರುಷರ ತಮ್ಮ ತಲೆ ಮತ್ತು ದಾಡಿ ಬೋಳಿಸಿ ಕೊಳ್ಳುತ್ತಾರೆ. ಹತ್ತು ಸಾವಿರದಿಂದ ಒಂದು ಲಕ್ಷದವರೆಗೂ ಅಲ್ಲಿ ಜನರು ಸೇರುತ್ತಾರೆ.

ಕಾನ್‌ಸ್ವಾಂತಿನೋಪನಲ್ಲಿರುವ ಜಸ್ಟಿನಿಯನ್‌ದೊರೆಯಂತೆ ಇವನು ತನ್ನ ಬಲಗೈಯನ್ನು ಮೇಲಕ್ಕೆತ್ತಿ ಹಿಡಿದಿರುತ್ತಾನೆ. ಎಡಗೈಯಲ್ಲಿ ಅವನು ಆಯುಧ ಹಿಡಿದಂತೆ ಇವನ್ನೂ ಹಿಡಿದಿರುತ್ತಾನೆ. ಇವನು ಬಟ್ಟೆಯನ್ನುಟ್ಟಿರುವುದಿಲ್ಲ. ಇವನ ಮುಖ ಮಂಗನ ಹಾಗೆಯೇ ಇರುತ್ತದೆ. ಇನ್ನುಳಿದವುಗಳು ಪೂರ್ತಿ ಬೆತ್ತಲೆಯಾಗಿರುತ್ತವೆ. ಅವುಗಳ ಹೆಂಡಂದಿರೂ ಮಕ್ಕಳೂ ಬೆತ್ತಲೆಯಾಗಿಯೇ ಕೆತ್ತಲ್ಪಟ್ಟಿದ್ದಾರೆ. ಒಂದು ಕಪ್ಪಾದ ಕಲ್ಲಿನಲ್ಲಿ ಎತ್ತು ಇದ್ದು ಭಕ್ತರು ಅದಕ್ಕೆ ನಮಸ್ಕರಿಸಿ ಅದರ ಮುಖಕ್ಕೆ ಹಣೆಗೆ ಮುದ್ದುಕೊಟ್ಟು ಹೂವುಗಳನ್ನು ಸುರಿಯುತ್ತಾರೆ. ಒಳಗಿನ ದೇವರಿಗೂ ಹೂಗಳನ್ನು ಅರ್ಪಿಸುತ್ತಾರೆ.

ಇಂಡಿಯನ್ನರಲ್ಲಿ ಬೇಕಾದಷ್ಟು ಎತ್ತು, ಆಕಳು, ಕುರಿ, ಕೋಳಿ, ಹಂದಿಗಳಿದ್ದರೂ ಅವರು ಅವುಗಳನ್ನು ತಿನ್ನಲು ಉಪಯೋಗಿಸುವುದಿಲ್ಲ. ಅವರು ಇನ್ನಿತರರ ಹಾಗೆ ಮಾಂಸವನ್ನು ತಿನ್ನುವುದಿಲ್ಲ. ಅವರೆಲ್ಲರೂ ಶಾಖಾಹಾರಿಗಳಾಗಿದ್ದು ಗಡ್ಡೆ-ಗೆಣಸು-ಕಾಯಿಪಲ್ಲೆ ಇತ್ಯಾದಿ ತಿನ್ನುತ್ತಾರೆ. ಹಿಂದೂಗಳು ದಿನಕ್ಕೆ ಎರಡು ಸಲ ಊಟ ಮಾಡುತ್ತಾರೆ. ರಾತ್ರಿ ಹೊತ್ತು ಅವರು ಏನನ್ನೂ ತಿನ್ನುವುದಿಲ್ಲ ಹಾಗೂ ಸೆರೆಯನ್ನೂ ಕುಡಿಯುವುದಿಲ್ಲ. ಮುಸಲ್ಮಾನರು ಮಾತ್ರ ತಿನ್ನುವುದನ್ನು ಕುಡಿಯುವುದನ್ನು ಮಾಡುತ್ತಾರೆ. ಅವರು ಮುಸಲ್ಮಾನರಾಗಿದ್ದು ಪ್ರಾಣಿಗಳ ಮಾಂಸವನ್ನು ತಿನ್ನುತ್ತಾರೆ. ಸಾಕಷ್ಟು ಸೆರೆಯನ್ನೂ ಕುಡಿಯುತ್ತಾರೆ. ಅವರು ಮುಸಲ್ಮಾನರೊಡನೆ ಕೂಡಿ ಊಟ ಮಾಡುವುದಿಲ್ಲ. ಕುಡಿಯುವದೂ ಇಲ್ಲ, ಒಬ್ಬೊಬ್ಬರು ಬೇರೆ ಬೇರೆಯಾಗಿ ಕುಳಿತು ಊಟ ಮಾಡುವರು. ಅವರು ಹೆಂಡಂದಿರೊಂದಿಗೂ ಕೂಡಿ ಕುಳಿತು ಊಟ ಮಾಡುವದಿಲ್ಲ. ಅವರು ತಿನ್ನುವ ಆಹಾರ ಬಹಳ ಸಾಮಾನ್ಯವಾಗಿರುತ್ತದೆ. ಅವರು ಅನ್ನ ಎಂದರೆ ಕಿಚಡಿಯನ್ನು ತುಪ್ಪದೊಂದಿಗೆ ಉಣ್ಣುತ್ತಾರೆ. ವಿವಿಧ ಕಾಯಿಪಲ್ಲೆ ತಿನ್ನುತ್ತಾರೆ, ತುಪ್ಪ ಹಾಲಿನಲ್ಲಿ ಕುದಿಸಿ ಕಾಯಿಪಲ್ಲೆಗಳನ್ನು ತಯಾರಿಸುತ್ತಾರೆ. ಅವರು ಪ್ರತಿಯೊಂದನ್ನು ಬಲಗೈಯಿಂದಲೇ ತಿನ್ನುತ್ತಾರೆ, ಉಣ್ಣುತ್ತಾರೆ. ಅನ್ನ, ಆಹಾರವನ್ನು ಅವರೊಂದಿಗೂ ಎಡಗೈಯಿಂದ ಮುಟ್ಟುವುದಿಲ್ಲ. ಅವರು ಚಾಕು, ಚಮಚೆ ಹಾಗೂ ಫೋರ್ಕಗಳನ್ನು ಉಪಯೋಗಿಸುವುದಿಲ್ಲ. ಪ್ರಯಾಣದ ಸಮಯದಲ್ಲಿ ಅವರು ಅಡಿಗೆ ಮಾಡಲು ಅನ್ನ ಕುದಿಸಲು ಗಡಿಗೆಯನ್ನು ಒಯ್ಯುತ್ತಾರೆ. ಮುಸಲ್ಮಾನರ ಕಣ್ಣಿಗೆ ಬೀಳದಂತೆ ಅವುಗಳನ್ನು ಮುಚ್ಚಿ ಇಟ್ಟಿರುತ್ತಾರೆ. ಅಡಿಗೆ ಹಾಗೂ ಊಟ ಮಾಡುವದು ಅವರ ಕಣ್ಣಿಗೆ ಬೀಳದಂತೆ ಅಡ್ಡವಾಗಿ ಶಾಲು ಹಿಡಿದಿರುತ್ತಾರೆ.

ರಶ್ಯನ್‌ ಪದ್ಧತಿಯಂತೆ ಅವರು ಪೂರ್ವಾಭಿಮುಖವಾಗಿ ನಿಂತು ಪೂರ್ವದಿಕ್ಕನ್ನು ಸೂರ್ಯನನ್ನು ಪ್ರಾರ್ಥಿಸುತ್ತಾರೆ. ಯಾವಾಗಲೂ ಬೆಳಕನ್ನು ಕೊಡು ಎಂದು ಬೇಡಿಕೊಳ್ಳುತ್ತಾರೆ. ಎರಡೂ ಕೈಗಳನ್ನು ಮೇಲಕೆ ಎತ್ತಿ ಹಣೆಗೆ ಮುಟ್ಟಿಸಿಕೊಳ್ಳುತ್ತಾರೆ. ನೆಲದ ಕಡೆಗೆ ಕೆಳಗೆ ಮುಖಮಾಡಿ, ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ. ಈ ಪ್ರಕಾರ ಅವರು ದೇವರನ್ನು ಪ್ರಾರ್ಥಿಸುತ್ತಾರೆ. ಎಲ್ಲ ಹಿಂದೂಗಳು ಊಟಕ್ಕೆ ಕೂಡ್ರುವದಕ್ಕಿಂತ ಮೊದಲು ತಮ್ಮ ಕೈಕಾಲು ಮುಖ ತೊಳೆದುಕೊಳ್ಳುವುದು ವಾಡಿಕೆ. ಯಾರಾದರೂ ಮೃತರಾದರೆ ಅವರನ್ನು ಹೂಳುತ್ತಾರೆ ಇಲ್ಲವೆ ಸುಡುತ್ತಾರೆ. ಸತ್ತವರ ಬೂದಿಯನ್ನು ನೀರು ನದಿ ಬಾವಿಗಳಲ್ಲಿ ಚೆಲ್ಲುತ್ತಾರೆ. ಹಿಂದೂಗಳು ಧೋತರವನ್ನು ಉಟ್ಟುಕೊಳ್ಳುತ್ತಾರೆ. ಸ್ತ್ರೀಯರು ಕೊರಳಲ್ಲಿ ಮುತ್ತಿನ ಹಾರಗಳನ್ನು ಹಾಕಿಕೊಂಡಿರುತ್ತಾರೆ. ಕಿವಿಗಳಲ್ಲಿ ಬಂಗಾರದ ಆಭರಣ ಧರಿಸಿಕೊಂಡಿರುತ್ತಾರೆ. ಹಿಂದೂಗಳು ಎತ್ತುಗಳ ಕೊಂಬುಗಳಿಗೆ ಹಿತ್ತಾಳೆಯ ಅಣಸು ಹಾಕಿರುತ್ತಾರೆ. ಕೊರಳಲ್ಲಿ ಗಂಟೆಗಳನ್ನು ಕಟ್ಟಿರುತ್ತಾರೆ. ಎತ್ತನ್ನು ಅವರು ತಂದೆಯೆಂದೂ ಆಕಳನ್ನು ತಾಯಿಯೆಂದು ಕರೆಯುತ್ತಾರೆ ಹಾಗೂ ಅಷ್ಟೊಂದು ಪ್ರೀತಿಸುತ್ತಾರೆ. ಅವರು ಅವುಗಳ ಸಗಣಿಯನ್ನು ಒಣಗಿಸಿ ಕುಳ್ಳುಗಳನ್ನು ಮಾಡಿ ಸುಡಲು ಉಪಯೋಗಿಸುತ್ತಾರೆ. ರೊಟ್ಟಿ ಬೇಯಿಸಲು ಹಾಗೂ ಇನ್ನಿತರ ಅಡಿಗೆ ಮಾಡಲು ಉಪಯೋಗಿಸುತ್ತಾರೆ. ರವಿವಾರ ಮತ್ತು ಸೋಮವಾರದಂದು ಅವರು ಒಪ್ಪತ್ತು ಊಟ ಮಾಡುತ್ತಾರೆ. ಆಗಲೇ ಪರ್ವತ ಪ್ರದೇಶದಿಂದ ಅಫನಾಸಿ ಬೀದರಕ್ಕೆ ಬಂದದ್ದಾಗಿತ್ತು.

ಹಿಂದೂಗಳ ಹೆಂಡಂದಿರ ಹೆರಿಗೆಗಾಗಿ ಸೂಲಗಿತ್ತಿಯರು ಇರುತ್ತಿರಲಿಲ್ಲ. ಎಲ್ಲ ವ್ಯವಸ್ಥೆಯನ್ನು ಗಂಡಂದಿರು ಮಾಡುತ್ತಿದ್ದರು. ಗಂಡು ಮಗು ಹುಟ್ಟಿದರೆ ತಂದೆ ಅಜ್ಜನ ಹೆಸರನ್ನು ಹೆಣ್ಣು ಮಗು ಹುಟ್ಟಿದರೆ ತಾಯಿ ಇಲ್ಲವೆ ಅಜ್ಜಿಯ ಹೆಸರನ್ನು ಇಡುತ್ತಿದ್ದರು. ಇಲ್ಲಿದ್ದಾಗ ಅಫನಾಸಿ ಕ್ರೈಸ್ತ ಧರ್ಮದ ಹಬ್ಬ ಹುಣ್ಣಿಮೆಗಳನ್ನು ಮರೆತು ಬಿಟ್ಟಿದ್ದ. ಯಾವುದೂ ನೆನಪಿನಲ್ಲಿರುವುದಿಲ್ಲ. ಈಸ್ಟರ್, ಕ್ರಿಸ್‌ಮಸ್‌ಹಬ್ಬಗಳು, ಪವಿತ್ರ ಶುಕ್ರವಾರ ಇತ್ಯಾದಿ ಯಾವುದೂ ಗೊತ್ತಾಗುತ್ತಿರಲಿಲ್ಲ. ಕಡಲ್ಗಳ್ಳರು ಎಲ್ಲವನ್ನೂ ದೋಚಿಕೊಂಡು ಹೋದದ್ದರಿಂದ ಅಫನಾಸಿಯ ಬಳಿಯಿಂದ ಧಾರ್ಮಿಕ ಪುಸ್ತಕಗಳೂ ಉಳಿದಿರಲಿಲ್ಲ. ರಶ್ಯನ್‌ಪ್ರಾರ್ಥನಾ ಪುಸ್ತಕಗಳೂ ಉಳಿದಿರಲಿಲ್ಲ. ‘ಸೃಷ್ಟಿಕರ್ತನೆ, ದೇವರೆ ನನ್ನನ್ನು ಕ್ಷಮಿಸು,’ ಎಂದು ಅಫನಾಸಿ ಪ್ರಾರ್ಥಿಸಿಕೊಳ್ಳುತ್ತಿದ್ದ. ತನ್ನ ಶ್ರದ್ಧೆ, ಭಕ್ತಿ, ನಂಬಿಕೆಗೆ ಯಾವ ಪ್ರತಿಫಲ ದೊರೆಯದ್ದರಿಂದ ಅಫನಾಸಿ ಮರಳಿ ತನ್ನ ದೇಶ ರಶಿಯಾಕ್ಕೆ ಹೋಗುವುದನ್ನು ಆಲೋಚಿಸುತ್ತಿದ್ದ.

ಮುಸಲ್ಮಾನರೊಂದಿಗೆ ಅವನು ಉಪವಾಸ ವ್ರತವನ್ನು ಆಚರಿಸಿದ್ದ. ಮಾರ್ಚ ತಿಂಗಳು ಕಳೆಯಿತು. ಒಂದು ತಿಂಗಳಿಂದ ಅವನಿಗೆ ಮಾಂಸದ ಊಟ ದೊರೆತಿರಲಿಲ್ಲ. ಎಲ್ಲವನ್ನು ತ್ಯಜಿಸಿ ಉಪವಾಸವನ್ನು ಆಚರಿಸಿದ್ದಾಗಿತ್ತು. ಕರುಣಾಮಯಿ ಏಸು ತನ್ನನ್ನು ರಕ್ಷಿಸಲೆಂದು ಮೇಲಿಂದ ಮೇಲೆ ಪ್ರಾರ್ಥಿಸಿಕೊಳ್ಳುತ್ತಿದ್ದ. ಮುಂಬಯಿ, ದಾಬೋಲದಿಂದ ಮಲಬಾರದ ದಕ್ಷಿಣಕ್ಕೆ ಹೋದರೆ ಅಲ್ಲಿ ಕಾಲಿಕತ್‌ಬಂದರವಿದ್ದು ಅದು ಅತ್ಯಂತ ದೊಡ್ಡದಾಗಿತ್ತು. ಅಲ್ಲಿಂದ ಮಸಾಲೆ ಸಾಮಾನುಗಳು ಜಗತ್ತಿನ ಅನೇಕ ಕಡೆಗೆ ರಫ್ತು ಆಗುವದು ಅವನಿಗೆ ಗೊತ್ತಿತ್ತು. ಆದ್ರಕ್‌ಮತ್ತು ಇನ್ನಿತರ ಜೀನಸುಗಳು ಅಲ್ಲಿ ಅತ್ಯಂತ ಅಗ್ಗ ದರದಲ್ಲಿ ದೊರೆಯುತ್ತಿದ್ದವು.

ರಾಯಚೂರಿನಲ್ಲಿ ರತ್ನ, ವಜ್ರದ ಖನಿಜಗಳಿದ್ದು ಅವುಗಳನ್ನು ಅಗಿದು ತೆಗೆಯುತ್ತಿದ್ದರು. ಶುದ್ಧ ಮಾಡಿದ ರತ್ನಕ್ಕೆ ಹೆಚ್ಚಿನ ಬೆಲೆ ಬರುತ್ತಿತ್ತು. ಒಂದು ಪೋತ್ಕಾ ರತ್ನಕ್ಕೆ ಐದು ರೂಬಲ್‌ಬೆಲೆ ನಾಲ್ಕರಿಂದ ಆರು ಕಾನಿಗಳಷ್ಟು ಬೆಲೆಯ ರತ್ನಗಳೂ ಅಲ್ಲಿ ಮಾರಲ್ಪಡುತ್ತಿದ್ದವು. ಕಪ್ಪು ಬಣ್ಣ ಬಳಿದ ರತ್ನಗಳಿಗೆ ಹೆಚ್ಚಿನ ಬೆಲೆ ಬರುತ್ತಿತ್ತು.

ಮೆಲಿಕ್‌ಖಾನನು ಬೀದರ್ ದಿಂದ ೩೦ ಹರದಾರಿ ದೂರವಿದ್ದ ಸುಲ್ತಾನನ ಸೇವಕನಾಗಿದ್ದನು. ಶಬಾಯತ್‌ನಲ್ಲಿ ಜ್ಯೂಗಳು ಇರುತ್ತಾರೆಂದು ಮುಸಲ್ಮಾನರು ಸುಳ್ಳು ಹೇಳಿದ್ದರು. ಅಲ್ಲಿ ಯಾವ ಜ್ಯೂಗಳು ಇರದಿದ್ದುದು ಗೊತ್ತಾಯಿತು. ಅಲ್ಲಿ ಮುಸಲ್ಮಾನರ ಕರಾಮತ್ತು ಕ್ರಿಶ್ಚನ್ನರು ಇರುತ್ತಾರೆಂಬುದು ತಿಳಿದು ಬಂತು.

ಮುಸಲ್ಮಾನನಾಗಿದ್ದ ಮೆಲಿಕ್‌ಅಫನಾಸಿಯನ್ನು ಕ್ರಿಶ್ಚನ್‌ಧರ್ಮ ತ್ಯಜಿಸಿ ಮುಸಲ್ಮಾನನಾಗುವಂತೆ ಒತ್ತಾಯಿಸಿದ್ದ. ಆಗ ಅಫನಾಸಿ ಮಲಿಕ್‌ನಿಗೆ ಹೇಳಿದ್ದ. ‘ನೀವು ನಿಮ್ಮ ಧರ್ಮದ ಪ್ರಾರ್ಥನೆ ಮಾಡಿರಿ. ನಾನು ನಮ್ಮ ಧರ್ಮದ ಪ್ರಾರ್ಥನೆ ಮಾಡುವೆ. ನೀವು ನಿಮ್ಮ ಐದು ಪ್ರಾರ್ಥನೆ ಮಾಡಿರಿ. ನಾನು ನಮ್ಮ ಕ್ರಿಶ್ಚನ್‌ಧರ್ಮದಂತೆ ಮೂರು ಪ್ರಾರ್ಥನೆಗಳನ್ನು ಮಾಡುತ್ತೇನೆ’ ಎಂದು ನಾನೊಬ್ಬ ಆಗಂತುಕನು.ನೀವು ಅಲ್ಲಿ ನನ್ನನ್ನು ಒತ್ತಾಯಿಸಬೇಡಿರಿ. ಎಂದು ಮೆಲಿಕ್‌ನಿಗೆ ಹೇಳಿದ್ದ. ‘ನೀನು ಮುಸಲ್ಮಾನನಾಗಲು ಇಚ್ಛಿಸುವುದಿಲ್ಲ. ಆದರೆ ನಿನಗೆ ಕ್ರಿಶ್ಚನ್‌ಧರ್ಮವೂ ಸರಿಯಾಗಿ ಗೊತ್ತಿಲ್ಲವಲ್ಲ’ ಎಂದು ಮೆಲಿಕ್‌ಅಫನಾಸಿಗೆ ನುಡಿದಿದ್ದ. ಇದೆಲ್ಲವೂ ನನ್ನ ಪಾಪದ ಫಲ ನಾನೇಕೆ ಹೇಳಲಿ, ನಾನು ನನ್ನ ಮನಸ್ಸಿನಂತೆ ನಡೆಯುತ್ತೇನೆ. ನಾನು ಸತ್ಯದ ಹಾದಿಯನ್ನು ಬಿಡಲಾರೆ’ ಎಂದು ಧೈರ್ಯದಿಂದಲೇ ಹೇಳಿದ್ದ.ಮೆಲಿಕ್‌ಖಾನನಿಗೆ ಕರುಣಾಮಯಿ ಸೃಷ್ಟಿಕರ್ತನೇ ತನ್ನನ್ನು ಕಾಪಾಡಬೇಕೆಂದು ಬೇಡಿಕೊಂಡಿದ್ದ ಅವನು ಎಂದಿಗೂ ಒಳ್ಳೆಯದನ್ನೇ ವಿಚಾರಿಸುತ್ತ ಆಚರಿಸುತ್ತ ಬಂದವನು. ಎಂಥ ಸಂಕಟ ಪ್ರಾಪ್ತವಾದರೂ ಸೃಷ್ಟಿಕರ್ತನನ್ನು ಸ್ಮರಿಸದೆ ಬಿಟ್ಟಿರಿಲಿಲ್ಲವಾದ್ದರಿಂದ ಅಫನಾಸಿಗೆ ಅಂಥ ವಿಶ್ವಾಸ ಮೂಡಿತ್ತು. ಕ್ರಿಶ್ಚನ್‌ಧರ್ಮದ ಆಚಾರ, ವಿಚಾರ, ನಂಬಿಕೆ ಹಬ್ಬ ಹರಿದಿನ ಇತ್ಯಾದಿ ಯಾವುದೂ ನೆನಪಿಗೆ ಬಾರದಿದ್ದರೂ ಕ್ರಿಶ್ಚನ್‌ಧರ್ಮದಲ್ಲಿ ಅಫನಾಸಿಗೆ ಅಪಾರ ನಂಬಿಕೆಯಿತ್ತು. ‘ಇನ್ನು ಮುಂದೆ ಭವಿಷ್ಯತ್ತಿನಲ್ಲಿ ಏನಾಗುವುದೊ’ ಎಂದು ಕಳವಳವಿತ್ತಾದರೂ ಧರ್ಮದಲ್ಲಿ ಭದ್ರವಾದ ಶ್ರದ್ಧೆ ನಂಬಿಕೆ ಮಾತ್ರ ಇತ್ತು. ಮುಸಲ್ಮಾನರ ಆಳಿಕೆಯಲ್ಲಿದ್ದ ಅತಿ ದೊಡ್ಡ ನಗರವಾದ ಬೀದರದಲ್ಲಿ ಇದ್ದುಕೊಂಡು ಕ್ರಿಸ್ತನನ್ನು ತನ್ನನ್ನು ರಕ್ಷಿಸಬೇಕೆಂದು ಕೈಹಿಡಿದು ನಡೆಸಬೇಕೆಂದು ಮೇಲಿಂದ ಮೇಲೆ ಆಕಾಶದತ್ತ ನೋಡಿ ಪ್ರಾರ್ಥಿಸಿಕೊಳ್ಳುತ್ತಿದ್ದ.

ಮುಸಲ್ಮಾನರ ಬೈರಾಮ ಹಬ್ಬದಲ್ಲಿ ಸುಲ್ತಾನನು ಭವ್ಯ ಮೆರವಣಿಗೆಯಲ್ಲಿ ಹೊರಡುತ್ತಿದ್ದ. ಅವನೊಂದಿಗೆ ಇಪ್ಪತ್ತು ಮಂದಿ ವಜೀರರಿರುತ್ತಿದ್ದರು. ಉಕ್ಕಿನ ಕವಚ ಅಂಬಾರಿ ಹಾಕಿದ ಮುನ್ನೂರು ಆನೆಗಳು ಇರುತ್ತಿದ್ದವು. ಪ್ರತಿಯೊಂದು ಆನೆಯ ಆಚೀಚೆ ಆಯುಧ ಧಾರಿಗಳಿರುತ್ತಿದ್ದರು. ದೊಡ್ಡ ಆನೆಯೊಂದರ ಮೇಲೆ ಹನ್ನೆರಡು ಜನ ಕೂಡ್ರಬಹುದಾದ ವ್ಯವಸ್ಥೆ ಇರುತ್ತಿತ್ತು. ಪ್ರತಿಯೊಂದು ಆನೆಯ ಹಲ್ಲಿನ ಆಚೀಚೆ ಖಡ್ಗಗಳನ್ನು ಕಟ್ಟಿರುತ್ತಿದ್ದರು. ಎರಡೂ ಕಿವಿಗಳ ನಡುವೆ ಹಣೆಯ ಮೇಲೆ ಆಯುಧಧಾರಿ ಮಾವುತನೊಬ್ಬ ಕೂತಿರುತ್ತಿದ್ದ. ಅವನು ಉದ್ದನೆಯ ಉಕ್ಕಿನ ಸಲಾಕೆಯೊಂದನ್ನು ಕೈಯಲ್ಲಿ ಹಿಡಿದು ಕೊಂಡಿರುತ್ತಿದ್ದ. ಮೂರು ನೂರು ನರ್ತಕಿಯರು, ಮೂರು ನೂರು ಗುಲಾಮ ಯುವತಿಯರು, ಸಾವಿರ ಕುದುರೆಗಳು, ಡ್ರಮ್‌ಕಟ್ಟಿಕೊಂಡ ನೂರು ಒಂಟೆಗಳು ಕೂಡ ಮೆರವಣಿಗೆಯಲ್ಲಿ ಹೊರಡುತ್ತಿದ್ದವು. ಸುಲ್ತಾನನು ಆಕರ್ಷಕ ಉಡುಪನ್ನು ತೊಟ್ಟುಕೊಂಡು ತಲೆಗೆ ಟೋಪಿಯಂಥ ಹೆಲ್ಮೆಟ್ಟನ್ನು ಹಾಕಿಕೊಳ್ಳುತ್ತಿದ್ದ. ಸುಲ್ತಾನನಿಂದ ದೂರದಲ್ಲಿ ಸರಪಣಿ ಬಿಗಿದ ಆನೆ ಹಾಗೂ ಕುದುರೆಗಳು ಸಾವಕಾಶವಾಗಿ ಹೊರಡುತ್ತಿದ್ದವು. ಸುಲ್ತಾನನೊಂದಿಗೆ ಹಲವು ಜನ ಹಾಡುವವರು, ಕುಣಿಯುವವರೂ ಹೊರಡುತ್ತಿದ್ದರು. ಹಲವು ಜನರು ಕೈಯಲ್ಲಿ ಭರ್ಜಿ, ಬಿಲ್ಲು-ಬಾಣಗಳನ್ನು ಹಿಡಿದುಕೊಂಡು ಹೊರಡುತ್ತಿದ್ದರು.

ಎಲ್ಲ ಕುದುರೆಗಳ ಮೇಲೆ ಆಯುಧಧಾರಿಗಳು ಕುಳಿತಿರುತ್ತಾರೆ. ಸುಲ್ತಾನನೊಂದಿಗೆ ಅವನ ಸೋದರನೂ ಬಂಗಾರದ ಪಲ್ಲಕ್ಕಿಯಲ್ಲಿ ಹೊರಡುತ್ತಾನೆ. ಅವನೂ ವಜ್ರ ವೈಡೂರ್ಯದ ಆಭರಣಗಳನ್ನು ಧರಿಸಿ ವೈಭವದೊಂದಿಗೆ ಮುಂದುವರಿಯುತ್ತಾನೆ. ಬೀದರದಲ್ಲಿ ಮೂರು ದಿನಗಳವರೆಗೆ ಪೂರ್ಣಚಂದ್ರ ಕಾಣಿಸಿಕೊಳ್ಳುತ್ತಾನೆ. ಬೀದರದಲ್ಲಿ ಸಿಹಿ ಕಾಯಿಪಲ್ಲೆಗಳು ಸಿಗುವುದು ಕಡಿಮೆ. ಇಲ್ಲಿ ಹೊರ್ಮುಜದಲ್ಲಿರುವಷ್ಟು ಭಯಂಕರ ಬಿಸಿಲು ಇರುವದಿಲ್ಲ. ಹಿಂದೂಸ್ತಾನದ ಈ ಬೀದರ ಬಿಟ್ಟರೆ ಇನ್ನೆಲ್ಲಿಗೆ ಹೋಗಬೇಕೆಂಬುದು ಅಫನಾಸಿಗೆ ಸಮಸ್ಯೆಯಾಗಿತ್ತು. ಆ ಕುರಿತು ಅವನು ಗಂಭೀರವಾಗಿ ಆಲೋಚಿಸಿರಲಿಲ್ಲವೆಂದು ತೋರುತ್ತದೆ. ಯುದ್ಧ, ಕೊಲೆ, ಸುಲಿಗೆಗಳು ನಡೆಯುವುದು ಸಾಮಾನ್ಯವಾದದ್ದರಿಂದ ಖೊರಾಸಾನದ ಹೊರ್ಮುಜಕ್ಕೆ ಹೋಗಬೇಕೆಂಬ ಇಚ್ಛೆ ಇರಲಿಲ್ಲ. ಮಲಿಕ್‌ಆತ ತುಜ್ಜರ್ ಅಥವಾ ಮಹಮ್ಮದ ಗವಾನನು ಈಗಾಗಲೇ ಎರಡು ದೊಡ್ಡ ಪಟ್ಟಣಗಳನ್ನು ವಶಪಡಿಸಿಕೊಂಡಿದ್ದ ಅಲ್ಲಿದ್ದ ಧನ ಕನಕ ವಜ್ರ ವೈಡೂರ್ಯ, ರತ್ನಗಳನ್ನು ಸಮುದ್ರದ ಮುಖಾಂತರ ತನ್ನ ಖೋರಾಸನ್‌ದೇಶಕ್ಕೆ ಕಳಿಸುತ್ತಿದ್ದ. ಇಲ್ಲಿಯ ಹಲವು ರಾಜಕುಮಾರರನ್ನು ಸದೆಬಡಿದು ಅವನು ಬಲಾಢ್ಯನಾಗಿದ್ದ ಎರಡು ಲಕ್ಷದಷ್ಟು ಸೈನ್ಯ ಕಳಿಸಿ, ಮುತ್ತಿಗೆ ಹಾಕಿ ಎರಡು ವರ್ಷಗಳ ವರೆಗೆ ಯುದ್ಧ ನಡೆಸಿ ದೊಡ್ಡ ಪಟ್ಟಣವನ್ನು ವಶಪಡಿಸಿಕೊಂಡಿದ್ದ. ರಶಿಯಾದ ಸೇಂಟ ಪೀಟರ್ಸ್ ದಿನದಂದು ಮಲಿಕ್‌ ಅತ್‌ ತುಜ್ಜರ್ ತನ್ನ ಸೈನ್ಯದೊಂದಿಗೆ ಬೀದರ್ಗೆ ಬಂದಿದ್ದ. ಅವನನ್ನು ಸ್ವಾಗತಿಸಲು ಸುಲ್ತಾನನು ಹತ್ತು ಮಂದಿ ವಜೀರರನ್ನು ಕಳಿಸಿದ್ದ. ಪ್ರತಿಯೊಬ್ಬ ವಜೀರನೊಂದಿಗೆ ಹತ್ತು ಸಾವಿರ ಸೈನಿಕರಿದ್ದರು. ತುಜ್ಜರನಿನ್ನು ಹತ್ತು ಹರದಾರಿ ದೂರದಲ್ಲಿದ್ದ. ಮಲಿಕ್‌ಅತ್‌ತುಜ್ಜರನ ಮನೆಯಲ್ಲಿ ಅವನೊಂದಿಗೆ ಐದು ನೂರು ಜನ ಅಲ್ಲದೆ ವಜೀರರೂ ಊಟಕ್ಕೆ ಕೂಡ್ರುತ್ತಿದ್ದರು.

ಹಗಲು ರಾತ್ರಿ ಸುಮಾರು ಮೂರುಸಾವಿರದಷ್ಟು ಕುದುರೆಗಳು ಯಾವಾಗಲೂ ಸಿದ್ಧವಾಗಿಯೇ ಇರುತ್ತಿದ್ದವು. ಹಲವು ಜನ ಆಯುಧ ಧಾರಿಗಳು ಅವನ ಮನೆಯ ಸುತ್ತಲೂ ತಿರುಗುತ್ತ ಕಾವಲು ಮಾಡುತ್ತಿದ್ದರು.

ನಿಜಾಮ ಉಲ್‌ಬಲ್ಕ, ಮಲಿಕ್‌ಖಾನ್‌ಮತ್ತು ಫರಖದ್‌ಖಾನ್‌ರು ಸೇರಿ ಹಿಂದೂಗಳೊಡನೆ ಹೋರಾಡಿ ಮೂರು ದೊಡ್ಡ ಪಟ್ಟಣಗಳನ್ನು ಅಧೀನಪಡಿಸಿಕೊಂಡಿದ್ದರು. ಮಲಿಕ್‌ಅತ್‌ತುಜ್ಜರ್ ಮಹ್ಮದ್‌ಗವಾನನಿಗೆ ಅವರು ವಜ್ರ ವೈಡೂರ್ಯ, ಮುತ್ತು, ರತ್ನಗಳನ್ನು ಬೆಲೆಯುಳ್ಳ ವಸ್ತುಗಳನ್ನು ಕಾಣಿಕೆ ಕೊಡುತ್ತಿದ್ದರು. ಯಾವ ಅಮೂಲ್ಯ ವಸ್ತುಗಳನ್ನು ಮಾರಾಟ ಮಾಡದಂತೆ ವ್ಯವಸ್ಥೆ ಮಾಡಲಾಗಿತ್ತು. ಸುಲ್ತಾನನು ಸ್ವತಃ ಗುರುವಾರ ಮತ್ತು ಮಂಗಳವರ ಎರಡು ದಿನದಂದು ಮೂರು ಜನ ವಜೀರರೊಂದಿಗೆ ವಿಹಾರಕ್ಕಾಗಿ ಹೊರಡುತ್ತಿದ್ದ. ಅವನ ಸೋದರ ಸೋಮವಾರದಂದು ಮೊದಲೇ ಅಲ್ಲಿಗೆ ಹೋಗಿ ಬೀಡು ಬಿಟ್ಟಿರುತ್ತಿದ್ದ, ಎರಡು ಸಾವಿರದಷ್ಟು ಸ್ತ್ರೀಯರು ಕುದುರೆಗಳ ಮೇಲೆ ಅಥವಾ ಮೇಣೆಗಳಲ್ಲಿ ಕುಳಿತು ಹೋಗುತ್ತಿದ್ದರು. ಅವರೊಂದಿಗೆ ಹಲವಾರು ಕುದುರೆಗಳೂ, ವಜೀರರೂ, ಕಾಲಾಳುಗಳೂ, ಹೋಗಿರುತ್ತಿದ್ದರು. ಸ್ತ್ರೀಯರು ಕುಡಿಯುವ ನೀರು, ತೊಳೆಯುವ ನೀರು, ತೆಗೆದುಕೊಂಡು ಹೋಗುತ್ತಿದ್ದರು. ಶೇಖ್‌ಅಲ್ಲಾದ್ದೀನ್‌ಸ್ಮಾರಕಕ್ಕೆಂದು ಮಲಿಕ್‌ತುಜ್ಜರ್ ಬೀದರಕ್ಕೆ ಹೊರಡುತ್ತಿದ್ದ, ಅತ್ಯಂತ ವೈಭವೋಪೇತರಾಗಿ ಅಲ್ಲಿಗೆ ಹೊರಡುತ್ತಿದ್ದ.

ಅವನು ತನ್ನ ೫೦ ಸಾವಿರಸೈನ್ಯ, ಸುಲ್ತಾನನ ೫೦ಸಾವಿರ ಸೈನ್ಯದೊಂದಿಗೆ ವಿಜಯನಗರ ರಾಜರೊಂದಿಗೆ ಯುದ್ಧ ಮಾಡಲು ಮಹಮ್ಮದ್‌ಗವಾನ್‌ಹೊರಡುತ್ತಿದ್ದ. ವಿಜಯನಗರ ರಾಜನ ಬಳಿ ೩೦೦ ಆನೆಗಳು ೧ ಲಕ್ಷದಷ್ಟು ಸೈನ್ಯ ಮತ್ತು ೫೦ ಸಾವಿರ ಕುದುರೆಗಳಿದ್ದವು. ಸುಲ್ತಾನನು ವಿಜಯನಗರದ ರಾಜನಿಗಿಂತಲೂ ಒಂದು ಲಕ್ಷದಷ್ಟು ಹೆಚ್ಚಿನ ಸೈನ್ಯ ಒಯ್ದು ಯುದ್ಧದಲ್ಲಿ ಆತನನ್ನು ಹಣ್ಣು ಮಾಡಿದ್ದ, ಬಹಮನೀ ಅರಸರ ಮುಂದೆ ಅವನ ಆಟ ಸಾಗಲಿಲ್ಲ.

ಅಫನಾಸಿ ಒಂದು ರವಿವಾರ ದಿನ ರಶಿಯಾಕ್ಕೆ ಮರಳಿ ಹೋಗುವದನ್ನು ನಿಶ್ಚಯಿಸಿದ್ದ ಗುಲಬರ್ಗಾದಲ್ಲಿಯೇ ಉಪವಾಸ ಆಚರಿಸುವುದನ್ನು ಪೂರ್ತಿಗೊಳಿಸಿದ್ದ, ಉಲು ಬೈರಾಮ ಹಬ್ಬದ ಹದಿನೈದು ದಿನಗಳ ತರುವಾಯ ಸುಲ್ತಾನನು ಗುಲಬರ್ಗಾದಲ್ಲಿಯೇ ಮಲಿಕ್‌ಅತ್‌ತುಜ್ಜರನ್ನು ಕಂಡು ಆಗಲೇ ಅವರೊಂದು ಹಿಂದೂಗಳ ದೊಡ್ಡ ಪಟ್ಟಣವನ್ನು ವಶಪಡಿಸಿಕೊಂಡದ್ದಾಗಿತ್ತು. ಆ ಪಟ್ಟಣವನ್ನು ಗೆದ್ದುಕೊಂಡಾಗ ಸುಲ್ತಾನನಿಗೆ ಭಯಂಕರ ನಷ್ಟವೂ ಆಗಿತ್ತು. ಯುದ್ಧದಲ್ಲಿ ಅಸಂಖ್ಯ ಸೈನಿಕರು ಮೃತರಾಗಿದ್ದರಲ್ಲದೆ, ಅಪಾರ ಧನ ಕನಕ ನಾಶವಾಗಿತ್ತು. ವಿಜಯನಗರ ಅತ್ಯಂತ ದೊಡ್ಡದಾಗಿತ್ತು. ಗುಡ್ಡ ಬೆಟ್ಟ, ಹಾಗೂ ನದಿಗಳಿಂದ, ಕಾಡಿನಿಂದ ಆವೃತವಾಗಿತ್ತು. ಅಲ್ಲಿ ಒಳನುಗ್ಗುವದು ಅತ್ಯಂತ ಕಷ್ಟಕರವಾಗಿತ್ತು. ಒಂದು ಕಡೆಗೆ ಕಾಡು ಪ್ರದೇಶ ಆವರಿಸಿತ್ತು. ಇನ್ನೊಂದೆಡೆಗೆ ಕಂದರ ಪ್ರದೇಶವಿತ್ತು. ತಿಂಗಳುಗಟ್ಟಲೆ ಯುದ್ಧ ಮಾಡಿದ ಮುಸಲ್ಮಾನ ಸೈನಿಕರಿಗೆ ಕೂಳು ನೀರು ದೊರೆಯದೆ ಸಾಕುಬೇಕಾಗಿ ಹೋಗಿತ್ತು. ಯುದ್ಧದಲ್ಲಿ ಅಸಂಖ್ಯೆ ಜನ ಮಡಿದು ಹೋಗಿದ್ದರು. ೨೦ ಸಾವಿರದಷ್ಟು ಸೈನಿಕರು ಹಾಗೂ ೨೦ ಸಾವಿರದಷ್ಟು ತರುಣ-ತರುಣಿಯರು, ಮಕ್ಕಳು ಸೆರೆಯಾಳಾಗಿದ್ದರು. ಸೆರೆಯಾದವರನ್ನು ಮಾರಾಟ ಮಾಡಲಾಯಿತು. ಆದರೆ ಇವರಿಗೆ ಧನ-ಕನಕ-ಸಂಪತ್ತು ದೊರೆಯಲಿಲ್ಲ.

ಮುಂದೆ ಅಫನಾಸಿ ಗುಲಬರ್ಗಾದಿಂದ ಕುಳೂರಿಗೆ ಹೋದ ರಾಯಚೂರು ಪ್ರದೇಶದಲ್ಲಿ ಅದು ವಜ್ರದ ಖನಿಗೆ ಹೆಸರಾಗಿತ್ತು. ಜಗತ್ತಿನ ವಿವಿಧ ಕಡೆಗೆ ಅಲ್ಲಿಂದ ವಜ್ರ, ವೈಡೂರ್ಯ, ರತ್ನಗಳು ರಫ್ತಾಗುತ್ತಿದ್ದವು. ವಜ್ರ ವೈಡೂರ್ಯಗಳನ್ನು ಶುದ್ಧಗೊಳಿಸಲು ಕುಳೂರಿನಲ್ಲಿ ೩೦೦ ಜನ ಕೆಲಸಗಾರರಿದ್ದರು. ಅಫನಾಸಿ ಐದು ತಿಂಗಳವರಿಗೆ ಕುಳೂರಿನಲ್ಲಿಯೇ ಇದ್ದು ಅವನ್ನೆಲ್ಲ ನೋಡಿದ.

ಅಲ್ಲಿಂದ ಮುಂದೆ ದೊಡ್ಡ ವ್ಯಾಪಾರ ಕೇಂದ್ರವಾಗಿದ್ದ ಗೋವಳ ಕೊಂಡಕ್ಕೆ ಹೋದ, ಗುಲಬರ್ಗಾ ಶೇಖ ಅಲ್ಲಾದೀನ್‌ಅಲ್ಲಿಂದ ಸಮುದ್ರ ದಂಡೆಗೆ ಇದ್ದ ದೊಡ್ಡ ಬಂದರ ಸ್ಥಳ  ದಾಬೋಲಕ್ಕೆ ಹೋದ. ಧಾಬೋಲ್‌ದಲ್ಲಿ ಇಂಡಿಯಾದ ಹಾಗೆ ಇಥಿಯೋಪಿಯಾದ ಜನರಿದ್ದುದನ್ನು ನೋಡಿದ.

ಸರ್ವಶಕ್ತಿ ಸೃಷ್ಟಿಕರ್ತನನ್ನು, ಕ್ರಿಶ್ಚನ್‌ಧರ್ಮದಲ್ಲಿ ನಿಷ್ಠೆ, ನಂಬಿಕೆಯನ್ನಿಟ್ಟಿದ್ದ ಅಫನಾಸಿ ಅಲ್ಲಿಂದ ರಶಿಯಾ ದೇಶಕ್ಕೆ ಮರಳುವುದನ್ನು ನಿರ್ಧರಿಸಿ, ಎರಡು ಬಂಗಾರ ನಾಣ್ಯಗಳನ್ನು ತೆತ್ತು, ಚಿಕ್ಕ ಹಡಗ ಡಬ್ಬಾದಲ್ಲಿ ಕುಳಿತು ‘ಹೊರ್ಮುಜಕ್ಕೆ ಹೊರಟ’ ಮುಂದೆ ಅತ್ಯಂತ ಪ್ರಯಾಸದಿಂದ ಇಸ್ತಾಂಬೂಲ್‌ಅಥವಾ ಕಪ್ಪು ಸಮುದ್ರವನ್ನು ತಲುಪಿ, ಅಲ್ಲಿಂದ ರಶ್ಯಾದೇಶಕ್ಕೆ ಪ್ರಯಾಣ ಬೆಳೆಸಿದ.

 

ಅಕರ ಗ್ರಂಥಗಳು

Voyage beyond three seas.
Afanasi Nikitina by Stepan Apresyan Comgenr
by- Hozdeniya Aganasi Nikitina
Ja Three Morya
Illustrations by -Dmitri Bistri Hampi
by: Dr. S. Shettar
ಪ್ರವಾಸಿ ಇಕಂಡ ಇಂಡಿಯಾ -ಎಚ್‌.ಎಲ್‌. ನಾಗೇಗೌಡ ಸುಂದರ ಮಾಸ್ಕೊ ಸುಂದರ ರಸಿಯಾ ಎಚ್‌.ಎಸ್‌. ಹರಿಶಂಕರ

* * *