ಈ ದಿನದಿಂದ ನನ್ನ ಸಂಚಾರಕ್ಕೆ ಒಂದು ಕಾರನ್ನು ಕೊಡಲಾಯಿತು. ನಾನು ವೊಲೋಜ ಈ ಕಾರಿನಲ್ಲಿ ಎಲ್ಲೆಲ್ಲೊ ಹೊರಟು, ಮಾಸ್ಕ್ವಾ ನದಿಯ ದಂಡೆಗುಂಟ ರಸ್ತೆಯಲ್ಲಿ ಹಾದು, ಸೇತುವೆಗಳನ್ನು ದಾಟಿ ‘ಲೇಖಕರ ಸಂಘ’ (Writers’ Union) ಕ್ಕೆ ಹೋದೆವು. ವೊಲೋಜ ಮೊದಲೆ ಮಾತನಾಡಿ ಗೊತ್ತು ಮಾಡಿದ ಕಾರ್ಯಕ್ರಮ ಇದು.

ಹನ್ನೊಂದು ಗಂಟೆಯ ವೇಳೆಗೆ ದೊಡ್ಡ ಪ್ರಾಕಾರವೊಂದನ್ನು ಪ್ರವೇಶಿಸಿದೆವು. ಅತ್ತ ಇತ್ತ ಮನೆಯೊಂದರ ಭಾಗಗಳು. ನಡುವೆ ಟಾಲ್‌ಸ್ಟಾಯ್‌ನ  ಗಂಭೀರಮುದ್ರೆಯ, ನೀಳವಾದ ಗಡ್ಡದ ಶಿಲಾಪ್ರತಿಮೆ. ಅದರ ಎಡಕ್ಕೆ ಪುಟ್ಟ ತೋಟವೊಂದನ್ನು ಹಾದು, ಒಂದು ಕೋಣೆಯೊಳಗಿನ ಮೆಟ್ಟಿಲುಗಳನ್ನೇರಿ, ಮಹಡಿಯ ಮೇಲಿನ ಕೋಣೆಯ ಬಾಗಿಲನ್ನು ತಟ್ಟಿದೆವು. ಬಾಗಿಲು ತೆರೆದಾಗ, ಈ Writers’ Union ನ, Foreign Commission  ನ, Indian Department ನ ಸಂಚಾಲಿಕ ಮೀರಾ ಸೊಲ್ಗಾನಿಕ್ ಸ್ವಾಗತಿಸಿದಳು. ತೆಳ್ಳನೆಯ, ನಗುಮುಖದ, ಸಿಗರೇಟಿನ ಹೊಗೆಯ ನಡುವಣ ಈ ಮುಖವನ್ನು ನಾನು ಎಲ್ಲೋ ಕಂಡ ನೆನಪಾಯಿತು. ಒಂದೆರಡು ನಿಮಿಷದಲ್ಲಿ ಮಬ್ಬು ಮಬ್ಬಾದ ನೆನಪು ನಿಚ್ಚಳವಾಯಿತು. ಕಳೆದ ಮಾರ್ಚಿ ತಿಂಗಳಲ್ಲಿ ದೆಹಲಿಯಲ್ಲಿ ‘ನ್ಯಾಷನಲ್ ಬುಕ್ ಟ್ರಸ್ಟ್’ ನವರು  ಏರ್ಪಡಿಸಿದ್ದ ರಾಷ್ಟ್ರೀಯ ಲೇಖಕರ ಶಿಬಿರ (National Writers Camp) ದಲ್ಲಿ ನಾನು ಈಕೆಯನ್ನು ಕಂಡಿದ್ದೆ. ನನ್ನನ್ನು ಆಗ ಅಲ್ಲಿ ಕಂಡ ನೆನಪು ಆಕೆಗೂ ಬಂತು. ರಷ್ಯದ ಇಬ್ಬರು ಲೇಖಕರೊಂದಿಗೆ ಈಕೆ ಆ ಶಿಬಿರದಲ್ಲಿ ಭಾಗವಹಿಸಿದ್ದಳು. ಈಕೆ ಅನೇಕ ಭಾಷೆಗಳಲ್ಲಿ  ಪ್ರವೀಣೆ. ಇಂಗ್ಲಿಷ್ ಭಾಷೆಯಲ್ಲಂತೂ ಲೀಲಾಜಾಲ ; ಎಷ್ಟೋ ಉರ್ದು ಕವಿತೆಗಳನ್ನು ಬಾಯಲ್ಲೇ ಹೇಳುತ್ತಾಳೆ.

ಕರೀ ಕಾಫಿ ಕುಡಿಯುತ್ತ. ಮೀರಾ ಸೊಲ್ಗಾನಿಕ್ ನಿರಂತರವಾಗಿ ಬಿಡುವ ಸಿಗರೇಟಿನ ಹೊಗೆಯ ನಡುವೆ ನಮ್ಮ ಸಂಭಾಷಣೆ ಸಾಗಿತ್ತು. ಈ Writers’ Union ಬಗ್ಗೆ ಅನೇಕ ಸಂಗತಿಗಳನ್ನು ಆಕೆ ತಿಳಿಸಿದಳು:

ಈ ಲೇಖಕರ ಸಂಘ ಡಾಸ್ಟೊವಸ್ಕಿಯಂಥ ಮಹಾಸಾಹಿತಿಗಳಿಂದ ಸ್ಥಾಪಿತವಾಯಿತು. ಈ ಸಂಘ ಇರುವ ಈ ಆವರಣ, ಟಾಲ್‌ಸ್ಟಾಯ್ ಬರೆದ ‘ವಾರ್ ಅಂಡ್ ಪೀಸ್’ ಮಹಾಕಾದಂಬರಿಯ ನಾಯಿಕೆ ನಟಾಷಳ ಮನೆ. ನಟಾಷ ಹೊರಗೆ ನೋಡುತ್ತ ನಿಲ್ಲುತ್ತಿದ್ದ ಕಿಟಕಿ ಆಚೆಯ ಪಕ್ಕದಲ್ಲಿದೆ.

ಈ ಲೇಖಕರ ಸಂಘ ಸರ್ಕಾರದ ಸಂಸ್ಥೆ ಅಲ್ಲ ; ಎಂದರೆ ಇದು ಸರ್ಕಾರದ ಸಹಾಯಧನದಿಂದ ಮೊದಲಾದದ್ದಲ್ಲ. ಲೇಖಕರೇ ಕೈಯಿಂದ ವಂತಿಗೆ ಹಾಕಿ ಷುರು ಮಾಡಿದ್ದು. ಈಗ ಇದರ ಕಾರ್ಯಬಾಹುಳ್ಯ ಹಾಗೂ ಆದಾಯ ಎಷ್ಟಾಗಿದೆಯೆಂದರೆ, ಸರ್ಕಾರಕ್ಕೆ ತೆರಿಗೆ ಕಟ್ಟುವಷ್ಟು. ಇಲ್ಲಿ ದಿನಾ ಸಂಜೆ ಲೇಖಕರು ಸೇರಿ ಪರಸ್ಪರ ಬರೆದದ್ದನ್ನು ಓದುವುದು, ಚರ್ಚಿಸುವುದು ಉಂಟು. ಈ ಸಂಘದ ಹಲವು ಶಾಖೆಗಳು ರಷ್ಯಾದ ಇತರ ಗಣರಾಜ್ಯಗಳಲ್ಲೂ ಇವೆ. ಈ ಸಂಘ ರಷ್ಯಾದ  ಅತ್ಯಂತ ದೊಡ್ಡ ಪ್ರಕಾಶನ ಸಂಸ್ಥೆಯೂ ಹೌದು. ಈ ಪ್ರಕಾಶನ ಸಂಸ್ಥೆ ಒಂದು ಸಲಕ್ಕೆ ಒಂದು ಪುಸ್ತಕದ ಮೂವತ್ತು ಸಾವಿರಕ್ಕೆ ಕಡಮೆಯಿಲ್ಲದ ಪ್ರತಿಗಳನ್ನು ಅಚ್ಚು ಹಾಕುತ್ತದೆ. ರಷ್ಯಾದ ಪ್ರತಿಯೊಂದು ಪ್ರಕಾಶನ ಸಂಸ್ಥೆಯಲ್ಲೂ ತಜ್ಞರ ಒಂದು ಪರಿಶೀಲನಾ ಮಂಡಲಿ ಇರುತ್ತದೆ. ತನ್ನ ಕೃತಿಯನ್ನು ಪ್ರಕಟಿಸಲು ಬಯಸುವ ಲೇಖಕ ತನ್ನ ಕೃತಿಯನ್ನು ಈ ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು. ಈ ಸಮಿತಿ ಕೃತಿಯನ್ನು ಅಂಗೀಕರಿಸಿದರೆ, ಸಂಸ್ಥೆ ಪ್ರಕಟನೆಗೆ ಎತ್ತಿಕೊಳ್ಳುತ್ತದೆ.

ಗದ್ಯ, ವಿಮರ್ಶೆ ಇತ್ಯಾದಿಗಳಾದರೆ ಒಂದು ‘ಫಾರಂ’ಗೆ, ಎಂದರೆ ಅಚ್ಚಾದ ಪ್ರತಿ ಹದಿನಾರು ಪುಟಕ್ಕೆ ಮುನ್ನೂರು ರೂಬಲ್‌ಗಳಂತೆ ಸಂಭಾವನೆಯನ್ನು ಕೊಡಲಾಗುವುದು; ಪದ್ಯದ ಪುಸ್ತಕವಾದರೆ, ಒಂದು ಪಂಕ್ತಿಗೆ ಒಂದು ರೂಬಲ್ ನಲವತ್ತು ಕೊಪೆಕ್‌ನಂತೆ ಸಂಭಾವನೆ. ಅತ್ಯಂತ ಮಹತ್ವದ ಲೇಖಕನಿಗೆ ಸಂಭಾವನೆ  ಇನ್ನೂ ಹೆಚ್ಚು. ಕವಿತೆಯ ಪುಸ್ತಕವಾದರೆ, ಒಂದು ಸಲಕ್ಕೆ ಹತ್ತು ಸಾವಿರ ಪ್ರತಿಗಳನ್ನು ಅಚ್ಚಿಡಲಾಗುತ್ತದೆ. ಮಕ್ಕಳ ಸಾಹಿತ್ಯ ಇಲ್ಲಿ ವಿಶೇಷ ರೂಪದ್ದು. ಗದ್ಯ ಕೃತಿಗಳಿಗೆ ಕೊಡುವ ಸಂಭಾವನೆಯ ದರವೇ ಇದಕ್ಕೂ. ಪುಸ್ತಕ ಪ್ರಕಟವಾದ ಕೂಡಲೆ ಲೇಖಕನಿಗೆ ಸಂಭಾವನೆ ಕೈ ಸೇರುತ್ತದೆ. ಒಂದು ಮುದ್ರಣದಿಂದ ಮತ್ತೊಂದು ಮುದ್ರಣಕ್ಕೆ ಅದೇ  ಕೃತಿಗೆ ಕೊಡುವ ಸಂಭಾವನೆಯ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ.

ಈ ಲೇಖಕರ ಸಂಘಕ್ಕೆ ಎಲ್ಲ ಸೃಜನಾತ್ಮಕ ಬರೆಹಗಾರರೂ ಸದಸ್ಯರಾಗ ಬಹುದು. ಪಠ್ಯಪುಸ್ತಕ ಲೇಖಕರಿಗೆ ಇಲ್ಲಿ ಪ್ರವೇಶವಿಲ್ಲ. ಈ ಸಂಘಕ್ಕೆ ಸದಸ್ಯತ್ವವನ್ನು ದೊರಕಿಸಿಕೊಳ್ಳುವುದೂ ಸುಲಭವಲ್ಲ. ಲೇಖಕ ತಾನು ನಿಜವಾಗಿಯೂ ಸೃಜನಾತ್ಮಕ ಸಾಮರ್ಥ್ಯ ಉಳ್ಳವನೆಂದು ಖಚಿತವಾಗಬೇಕು. ಇದನ್ನು ಕಂಡುಹಿಡಿಯಲು ಒಂದು ವಿಶೇಷ ಸಮಿತಿ ಇದೆ. ಅದು ಒಪ್ಪಿದರೆ ಈ ಸಂಘದ ಸದಸ್ಯತ್ವ . ಆಗಾಗ ಇಲ್ಲಿ ವಿಚಾರಗೋಷ್ಠಿಗಳೂ ಕವಿಸಮ್ಮೇಳನಗಳೂ ಏರ್ಪಡುತ್ತವಂತೆ.

ರಷ್ಯಾದಲ್ಲಿ ಕಾವ್ಯಕ್ಕೆಂದೇ ಮೀಸಲಾದ  ಪತ್ರಿಕೆಗಳು ಇಲ್ಲವಂತೆ. ದೈನಂದಿನ ಪತ್ರಿಕೆಯ ಭಾನುವಾರದ ಸಂಚಿಕೆಯಲ್ಲಿ ಕವನಗಳು ಸಾಮಾನ್ಯವಾಗಿ ಪ್ರಕಟವಾಗುವುದು. ಆದರೆ ಸಾಹಿತ್ಯ ವಿಮರ್ಶೆಗೆ ಮೀಸಲಾದ ಪತ್ರಿಕೆಗಳು ವಿಶೇಷವಾಗಿದೆ. ನೂರಕ್ಕೂ ಮಿಕ್ಕ ಪುಟಗಳುಳ್ಳ ಇಂತಹ ಪತ್ರಿಕೆಗಳ ಬೆಲೆ ಕೇವಲ ಅರವತ್ತು ಕೊಪೆಕ್.

ಇಷ್ಟು ಮಾತಾಡುವ ವೇಳೆಗೆ ರಷ್ಯನ್ ಭಾಷೆಯ ಸಮಕಾಲೀನ ಸಾಹಿತ್ಯದ ಹೆಸರಾಂತ ಕವಿ ರಾಬರ್ಟ್ ರೊಸ್ಡಸ್ಟವೆನ್‌ಸ್ಕಿ(Robert Rozhdest Vensky)ಅಕಸ್ಮಾತ್ ಅಲ್ಲಿಗೆ ಬಂದ. ಆತ ಒಲಿಂಪಿಕ್ಸ್ ನೋಡಲು ಮ್ಯೂನಿಚ್‌ಗೆ ಹೋಗಿದ್ದು, ಅದೇ ತಾನೇ ಬಂದನಂತೆ. ಆಜಾನುಬಾಹು; ದಪ್ಪ ತುಟಿ ; ಅಗಲ ಮುಖ ಕಪ್ಪುಕೂದಲು; ಅಗಲವಾದ ಕಂದುಬಣ್ಣದ ಕಣ್ಣುಗಳು. ನಾನು ಯಾರನ್ನಾದರೂ ಲೇಖಕರನ್ನು ಭೆಟ್ಟಿಯಾಗಬೇಕೆಂದುಕೊಂಡಿದ್ದೆ. ಅನಾಯಾಸವಾಗಿ ಒಬ್ಬ ಪ್ರಮುಖ ಕವಿಯನ್ನು ಕಂಡದ್ದಾಯಿತು. ಆತನಿಗೆ ಇಂಗ್ಲಿಷ್ ಬಾರದು. ಮೀರಾ ಸೊಲ್ಗಾನಿಕ್ ನಮ್ಮಿಬ್ಬರ ನಡುವಣ ದ್ವಿಭಾಷಿಯಾದಳು.

ನನ್ನ ಮೊದಲ ಪ್ರಶ್ನೆ : ‘ರಷ್ಯನ್ ಸಮಕಾಲೀನ ಕವಿಗಳು ಪರಂಪರೆಯ ಬಗ್ಗೆ ತೋರುವ ಪ್ರತಿಕ್ರಿಯೆ ಎಂಥದು ?’

ಆತ ಹೇಳಿದ : ‘ರಷ್ಯದಲ್ಲಿ ಕ್ರಾಂತಿಯಾಗಿದೆ ನಿಜ. ಆದರೆ ಕ್ರಾಂತಿಯ ಹೆಸರಿನಲ್ಲಿ ನಾವು ಪರಂಪರೆಯ ಒಳ್ಳೆಯ ಅಂಶಗಳನ್ನು ತಿರಸ್ಕರಿಸಿಲ್ಲ. ಎಳೆಯಂದಿನಿಂದ ಈ ದೇಶದ ಮಕ್ಕಳಿಗೆ, ನೀವು ಯಾವುದನ್ನು ಕ್ಲಾಸಿಕ್ ಎಂದು ಕರೆಯುತ್ತೀರೋ ಅಂಥ ಸಾಹಿತ್ಯದ ಹಿನ್ನೆಲೆಯನ್ನು, ಉದ್ದಕ್ಕೂ ಶಿಕ್ಷಣದ ಒಂದು ಅಂಗವಾಗಿ ಕೊಡಲಾಗುತ್ತದೆ. ಪರಂಪರೆಯ ಪರಿಚಯ ನಮಗೆ ಬೇಕಾದದ್ದು ನಾವು ಎಂಥ ಪರಿಸರದಲ್ಲಿ ಬೆಳೆದು ಬಂದಿದ್ದೇವೆ ಅನ್ನುವುದನ್ನು ತಿಳಿಯುವುದಕ್ಕೆ ;  ಪರಂಪರೆಯನ್ನು ನಾವು ಪುನರಾವರ್ತಿಸಬೇಕಾಗಿಲ್ಲ ; ಆದರೆ ಅದರ ಅರಿವಿಲ್ಲದೆ ಲೇಖಕ ನಿಜವಾದ ಲೇಖಕ ಹೇಗಾದಾನು ?’

ನನ್ನ ಮುಂದಿನ ಪ್ರಶ್ನೆ : ‘ನೀವು ಬೇರೆ ಬೇರೆಯ ಪ್ರಭಾವಗಳನ್ನು ಹೇಗೆ ಸ್ವೀಕರಿಸುತ್ತೀರಿ ?’

ಉತ್ತರ ಥಟ್ಟನೆ ಬಂತು : ‘ಪ್ರಭಾವಗಳೇನೋ ಇವೆ; ಆದರೆ ರೋಚಕವಾಗಿ ತೋರುವ ಯಾವ ಪ್ರಭಾವಗಳನ್ನೂ ನಾವು ಅನುಕರಿಸುವ ಜನವಲ್ಲ ; ಪ್ರಭಾವಗಳನ್ನು  ಆರಿಸಿಕೊಳ್ಳುತ್ತೇವೆ; ನಾವು ನಮ್ಮದೇ ಪರಿಸರದಲ್ಲಿ, ನಮ್ಮದೇ ರೀತಿಯಲ್ಲಿ ಬರೆಯುತ್ತೇವೆ’

“ಹಾಗಾದರೆ ನಿಮ್ಮಲ್ಲಿ ಎಲ್ಲಾ ಒಂದೇ ತರಹ ಬರೆಯುತ್ತಾರೆಯೆ ? ಸಾಹಿತ್ಯಕವಾದ ಬೇರೆ ಬೇರೆ ಚಳುವಳಿಗಳಿಲ್ಲವೇ ?’

‘ಒಂದೇ ತರಹ ಬರೆದರೆ, ಸಾಹಿತ್ಯ ಹೇಗಾದೀತು ? ಒಬ್ಬೊಬ್ಬನದು ಒಂದೊಂದು ರೀತಿ. ನಮ್ಮಲ್ಲೂ ಸಾಹಿತ್ಯಕ ಚಳುವಳಿಗಳಿವೆ. ಅವುಗಳಿಗೆ ಬೆಂಬಲವಾದ ವಿಮರ್ಶಕರೂ ಇದ್ದಾರೆ. ನಾನಂತೂ ನನಗೆ ಹೇಗನ್ನಿಸುತ್ತೊ ಹಾಗೇ ಬರೆಯುವುದು, ಚಳುವಳಿಗಳ ಹಾಗೂ ವಿಮರ್ಶಕರ ತಾಳಕ್ಕೆ ಕುಣಿದರೆ ಕಾವ್ಯ ಮುಗಿದ ಹಾಗೇ !’

‘ನಿಮ್ಮಲ್ಲಿ ಸಿಂಬಾಲಿಸಂ, ಇಮೇಜಿಸಂ ಇತ್ಯಾದಿ ನವ್ಯ ಮಾರ್ಗಗಳ ಪ್ರಭಾವ ಕಾಣಿಸಿಕೊಂಡಿದೆಯೆ; ಮುಕ್ತ ಛಂದೋ ರೂಪದಲ್ಲಿ ಪ್ರಯೋಗಗಳುಂಟೆ ? ಅಥವಾ ಪದ್ಯಬಂಧಗಳೇ ಪ್ರಧಾನವೇ ?’

‘ಉಂಟು,  ಇಮೇಜಿಸಂ ಇತ್ಯಾದಿಗಳೇನೋ ಉಂಟು. ಆದರೆ ಹೀಗೆ ಬರೆದರೇ ಕಾವ್ಯವಾಗುತ್ತದೆ ಎಂಬ ಹಠವೇನೂ ಇಲ್ಲ. ಕಾಲದ ಅಭಿವ್ಯಕ್ತಿಗಳಲ್ಲೂ ‘ಸಿಂಬಲ್ಸ್’, ‘ಇಮೇಜು’ ಗಳಿದ್ದೇ ಇವೆ. ಹಾಗೆ ನೋಡಿದರೆ ಇವೆಲ್ಲಾ ಹೊಸ ಹೆಸರುಗಳೇ – ಇತ್ತೀಚಿನ ವಿಮರ್ಶೆಯಲ್ಲಿ. ಅದನ್ನೇ ಒಂದು ಪಂಥವನ್ನಾಗಿ ಮಾಡಿಕೊಂಡರೆ, ಕಾವ್ಯ ಕೇವಲ ಒಗಟಾಗುತ್ತದೆ. . . . ನಮ್ಮಲ್ಲಿ ಪದ್ಯ ಬಂಧಗಳಲ್ಲಿ ಬರೆಯುವವರೂ ಇದ್ದಾರೆ, ಮುಕ್ತ ಛಂದಸ್ಸಿನಲ್ಲೂ ಬರೆಯುವವರಿದ್ದಾರೆ. ಜತೆಗೆ ‘ಸಾಂಗ್ಸ್’ ಕೂಡಾ ರಚಿತವಾಗುತ್ತವೆ.’

‘ನಿಮ್ಮ ದೇಶವನ್ನು ನೋಡಿದರೆ ಎಲ್ಲ ಸುಖವಾಗಿರುವಂತೆ ಕಾಣುತ್ತದೆ. ಸಮಸ್ಯೆಗಳೇ ಇಲ್ಲದೆ ಹೋಗುವ ಪರಿಸ್ಥಿತಿಯಲ್ಲಿ ಸಾಹಿತ್ಯ ಹೇಗೆ ನಿರ್ಮಾಣವಾದೀತು?’

ಈ ಪ್ರಶ್ನೆ ಆತನಿಗೆ ಅಷ್ಟೇನೂ ರುಚಿಸಿದಂತೆ ತೋರಲಿಲ್ಲ. ‘ಹಾಗೇನಿಲ್ಲ. ನಮಗೂ ನಮ್ಮದೇ ಆದ ಸಮಸ್ಯೆಗಳಿವೆ’ – ಎಂಬ ತೇಲಿಕೆಯ ಉತ್ತರಕೊಟ್ಟ.

‘ಹಾಗಾದರೆ ನಿಮ್ಮ ಕಾವ್ಯದ ವಸ್ತು ಏನು ? ಮಾರ್ಕ್ಸ್ – ಲೆನಿನ್‌ರ ತತ್ವಗಳನ್ನು, ದೇಶದ ಪ್ರಗತಿಯನ್ನು ಕುರಿತು ಪ್ರಶಂಸೆ ಮಾಡುವುದು ಮುಖ್ಯವಾಗಿರುತ್ತದೆ ಎಂದು ಕೇಳಿದ್ದೇನೆ, ನಿಜವೆ ?’

ಈ ಪ್ರಶ್ನೆ ಕೂಡಾ ಅವನಿಗೆ ಹಿಡಿಸಿದಂತೆ ತೋರಲಿಲ್ಲ. ‘ಮಾರ್ಕ್ಸ್ – ಲೆನಿನ್ ತತ್ವಗಳಿಗನುಸಾರವಾಗಿ ನಾವು ಸಾಧಿಸಿದ ಪ್ರಗತಿಯನ್ನು ಕುರಿತು ಬರೆದರೆ ತಪ್ಪೇನು; ಅದು ನಮ್ಮ ಬದುಕಿನ ಚಿತ್ರಣ ತಾನೆ ? ನೀವು ತಿಳಿದುಕೊಂಡಂತೆ ನಮ್ಮ ಸಾಹಿತ್ಯದ ವಸ್ತು ಅಷ್ಟೆ ಅಲ್ಲ. ಬೇರೆ ಬೇರೆಯದೂ ಉಂಟು. ನಮ್ಮ ಇತ್ತೀಚಿನ ಸಾಹಿತ್ಯದ ಪರಿಚಯ ಸರಿಯಾಗಿ ಆದರೆ ನಿಮಗೇ ನಿಜಸ್ಥಿತಿ ತಿಳಿದೀತು’ ಎಂದ.

ಇನ್ನು ಇಂಥವೇ ಪ್ರಶ್ನೆಗಳು ಎದ್ದಾವೆಂದು ಚತುರೆಯಾದ ಮೀರಾ ಸೊಲ್ಗಾನಿಕ್ ಹೇಳಿದಳು : ‘ಒಂದು ಕೆಲಸ ಮಾಡಿ. ಇದೇ ತಿಂಗಳ ಹದಿನೆಂಟರಂದು ಒಂದು ಕವಿ ಸಮ್ಮೇಳನ ನಡೆಯುತ್ತದೆ. ನಿಮಗೂ ನಾನು ಆಹ್ವಾನಿಸುತ್ತೇನೆ. ಬಂದು, ಕೂತು ಕೇಳಿ.’

ಇದರರ್ಥ ಇನ್ನು ಪ್ರಶ್ನೆಗಳನ್ನು ಕೇಳಿ ಪ್ರಯೋಜನವಿಲ್ಲ ಎಂದು. ‘ಆಯಿತು. ತುಂಬ ಸಂತೋಷ; ದಸ್ವಿದಾನಿಯಾ’ ಎಂದು ಕೈ ಕುಲುಕಿ ಕವಿ ಮೇಲೆದ್ದ. ನಾವೂ ‘ಸ್ಪಸೀಬ’ (ವಂದನೆಗಳು) ಎಂದು ಅಲ್ಲಿಂದ ಹೊರಟೆವು.

ಹೋಟೆಲಿಗೆ ಹಿಂತಿರುಗಿ, ಅಲ್ಲಿನ ಕೆಫೆಯಲ್ಲಿ ಊಟಕ್ಕೆಂದು ಕೂತದ್ದಾಯಿತು. ಕೂತ ಅರ್ಧ ಗಂಟೆಯ ಮೇಲೆ ಏನು ಬೇಕು ಎಂದು ವಿಚಾರಿಸುತ್ತಾರೆ ; ಅನಂತರ ಬಡಿಸಲು ಇನ್ನೊಂದು ಗಂಟೆ; ಬಿಲ್ ಬರುವುದಕ್ಕೆ ಇನ್ನರ್ಧ ಗಂಟೆ. ಒಂದು ಮಧ್ಯಾಹ್ನದ ಊಟ ಎಂದರೆ ಒಂದೂವರೆ ಅಥವಾ ಎರಡು ಗಂಟೆಗಳ ಸಮಯವನ್ನು ತೆಗೆದು ಇರಿಸಬೇಕು.

ನಾಲ್ಕೂವರೆಯನಂತರ, ಕಾರಿನಲ್ಲಿ ಇನ್‌ಸ್ಟಿಟ್ಯೂಟಿಗೆ ಹೊರಟೆವು. ಈ ಸಂಸ್ಥೆ ಇರುವುದು ಕ್ರೆಮ್ಲಿನ್ ಎದುರಿನ ರಸ್ತೆಯಲ್ಲಿ. ನಾವು ನಾಲ್ಕೂ ಐವತ್ತರ ವೇಳೆಗೆ ಹೋದೆವು. ಪ್ರೊ. ಆಕ್ಸಿನೋವ್ ಅವರು ಕಾದಿದ್ದರು. ಪ್ರೊಫೆಸರ್ ಅವರ ಕೊಠಡಿಯಲ್ಲಿ ಎರಡು ನಿಮಿಷ ಕೂತಿದ್ದೆ. ಅದೊಂದು ಸಾಮಾನ್ಯವಾದ ಕೊಠಡಿ ; ಒಂದು ಸಾಧಾರಣವಾದ ಮೇಜು ; ಅದರ ಮೇಲೊಂದು ಫೋನು, ಯಾರಾದರೂ ಕಾಣಲು ಬಂದರೆ ಕೂರಲು ಎರಡೇ ಕುರ್ಚಿ. ಒಂದೆರಡು ಮರದ ಬೀರಿನ ತುಂಬ ಪುಸ್ತಕಗಳು. ಇಲ್ಲಿನ ತರಗತಿಗಳಲ್ಲೂ ಅಷ್ಟೇ. ಸಾಧಾರಣವಾದ ಮೇಜಿನಾಕಾರದ ಡೆಸ್ಕುಗಳು. ಎಲ್ಲದರಲ್ಲೂ ಔಪಯೋಗಿಕ ದೃಷ್ಟಿ ಪ್ರಧಾನ.

ಐದು ಗಂಟೆಯ ವೇಳೆಗೆ ಒಂದು ಕೊಠಡಿಯೊಳಕ್ಕೆ ಕರೆದುಕೊಂಡು ಹೋದರು. ಅಲ್ಲಿ ಕಿಕ್ಕಿರಿದ ಪೇಕ್ಷಕರನ್ನು ನಿರೀಕ್ಷಿಸುವಂತಿರಲಿಲ್ಲ. ಆಸಕ್ತರಾದ ಕೆಲವು ಅಧ್ಯಾಪಕರು, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಸೇರಿದ್ದರು. ನನ್ನ ಉಪನ್ಯಾಸದ ವಿಷಯ ‘ಬಸವಣ್ಣನವರ ಸಾಮಾಜಿಕ ಧಾರ್ಮಿಕ ಕ್ರಾಂತಿ’, ಇಂಗ್ಲಿಷ್‌ನಲ್ಲಿ ಸಿದ್ಧಪಡಿಸಿ ತಂದ ಉಪನ್ಯಾಸ. ಬಸವಾದಿ ವಚನಕಾರರ ತತ್ವಗಳು, ಸಾಮಾಜಿಕ ಸುಧಾರಣೆಗಳು, ದೇವರು ಭಕ್ತಿ ಎಂಬ ಅಂಶಗಳನ್ನು ಹೊರತುಪಡಿಸಿದರೆ, ಕಮ್ಯೂನಿಸಂತೆ ತೀರಾ ಸಮೀಪವಾಗುವ ಕಾರಣ ಈ ಉಪನ್ಯಾಸ ಈ ಜನಕ್ಕೆ ಹಿಡಿಸುವುದೆಂದು ನಾನು ಭಾವಿಸಿ, ಈ ವಿಷಯವನ್ನಾರಿಸಿಕೊಂಡಿದ್ದೆ. ಸೇರಿದ್ದ ಎಲ್ಲರಿಗೂ ಇಂಗ್ಲಿಷ್ ತಿಳಿಯುತ್ತಿದ್ದ ಕಾರಣ, ನಲವತ್ತು ನಿಮಿಷ ನನ್ನ ಉಪನ್ಯಾಸವನ್ನು ಓದಿದೆ. ಆದರೆ, ಅವರು ಪ್ರತಿಕ್ರಿಯಾರೂಪದಲ್ಲಿ ಕೇಳಿದ ಪ್ರಶ್ನೆಗಳು ಮಾತ್ರ ವಿಲಕ್ಷಣವಾಗಿದ್ದವು. ‘ಬಸವಣ್ಣನವರು ಪ್ರತಿಪಾದಿಸಿದ ಧರ್ಮದ ಮೇಲೆ ಮುಸ್ಲಿಂ ಧರ್ಮದ ಪ್ರಭಾವವೇನಾದರೂ ಆಗಿದೆಯೆ?’ ಎಂಬುದು ಒಂದು ಪ್ರಶ್ನೆಯಾದರೆ, ‘ಕ್ರೈಸ್ತಧರ್ಮದ ಪ್ರಭಾವವೇನಾದರೂ ಆಗಿದೆಯೆ?’ ಎಂಬುದು ಇನ್ನೊಂದು ಪ್ರಶ್ನೆ.

ಈ ಜನಕ್ಕೆ ಏನನ್ನಾದರೂ ತಿಳಿಯಪಡಿಸುವುದೇ ಕಷ್ಟ. ಇಂಡಿಯಾ ಎಂದರೆ ಒಂದು ನಗರವೆಂದೋ ಊರೆಂದೋ ತಿಳಿಯುತ್ತಾರೆ. ಇಂಡಿಯಾ ಎಂದರೆ ಎಷ್ಟು ದೊಡ್ಡ ದೇಶ, ಹನ್ನೆರಡನೆ ಶತಮಾನವೆಂದರೆ ಯಾವ ಕಾಲ, ಆ ಕಾಲದಲ್ಲಿ ಕ್ರೈಸ್ತಧರ್ಮವಿತ್ತೆ, ಭಾರತದಲ್ಲಿ ಮುಸ್ಲಿಂಧರ್ಮ ಯಾವಾಗ ಯಾವ ಭಾಗದಲ್ಲಿ ಪ್ರಭಾವ ಬೀರಿತು – ಈ ವಿಷಯಗಳನ್ನು ತಿಳಿದುಕೊಳ್ಳದ ಆಥವಾ ತಿಳಿಯದ ಜನ ಹೀಗೆ ಪ್ರಶ್ನೆ ಕೇಳಿದ್ದು ಸಹಜವೇ.

ಪ್ರೊ. ಆಕ್ಸಿನೋವ್ ಅವರೇನೂ ತುಂಬಾ ಚೆನ್ನಾಗಿತ್ತು ಭಾಷಣ ಎಂದು ಉಪಚಾರದ ಮಾತನ್ನಾಡಿದರು. ಹಾಗೆಯೇ ‘ನಿಮ್ಮ ಕನ್ನಡ ಸಾಹಿತ್ಯದ ಮೇಲೆ ಲೆನಿನ್ ತತ್ವಗಳ ಪ್ರಭಾವ ಎಷ್ಟಾಗಿದೆ’ ಎಂಬ ಪ್ರಶ್ನೆಯನ್ನು ಅವರು ಕೇಳಲು ಮರೆಯಲಿಲ್ಲ. ‘ನೀವು ‘ಲೆನಿನ್ ಗ್ರಾಡ್’ಗೆ ಹೋಗುವ ಬಗ್ಗೆ ಸಂಬಂಧಪಟ್ಟವರೊಡನೆ  ಮಾತನಾಡುತ್ತಿದ್ದೇನೆ; ಆದರೆ ಟಾಲ್‌ಸ್ಟಾಯ್ ಅವರ ಊರಾದ ಯಾಸ್ನಾಯಾ ಪೋಲಾಯ್ನಾಕ್ಕಂತೂ ನಿಮ್ಮನ್ನು ಕಳುಹಿಸುವುದು ಖಚಿತ’ ಎಂದು ಭರವಸೆ ನೀಡಿದರು.