೩೦. ರಸವದಲಂಕಾರ

ನವ-ವಿಧ-ರಸಂಗಳಂ ಮನಕೆ ವರೆ ನಿರೂಪಿಸುವ ವಚನವಿರಚನೆ ರಸವ- |

ತ್ಯ[1]ವಿ(=ಭಿ)ಧಾಳಂಕಾರಂ ಕುಱತು ವಿಕಲ್ಪಿಸಿ ತೋರ್ಪೆನದಱ ಲಕ್ಷ್ಯ-ಕ್ರಮಮಂ ||೧೮೮||

 

೧೮೫. “ಮನ್ಮಥನ ಬಾಣಗಳು ಹೂಗಳೆಂಬ ಮಾತು ಸುಳ್ಳು. ಅವು ನಿಜವಾಗಿ ಬೆಂಕಿಗಳು. ಕಳೆಗುಂದಿಸಿ ಅವು ಎದೆಯನ್ನು ಸುಡುವುವು; ತುಂಬಾ ಬಿಸಿಯಾದವು” ಎಂದು ವರ್ಣಿಸಿದರೆ ‘ಧರ್ಮಾಪೋಹ’ ಅಥವಾ ಸ್ವಭಾವದ ಅಪಹ್ನುತಿ. *ಹೋಲಿಸಿ-ದಂಡಿ, II -೩೦೫*.

೧೮೬. “ಮನ್ಮಥನ ಈ ಬಾಣಸಮೂಹವು ವೇಗದಿಂದ ಶರೀರವನ್ನು ಭೇದಿಸಿ ಕೊಂಡುಹೋದರೂ ಅದು ಹೋದ ದಾರಿಯನ್ನು ಗುರುತಿಸಲಾಗುವುದಿಲ್ಲ. ಆದ್ದರಿಂದ ಇದು ಬಾಣಸಮೂಹವೇ ಅಲ್ಲ” ಎನ್ನುವುದು ಕೂಡ ‘ಧರ್ಮಾಪೋಹ’ವೇ *ಮೇಲಿನ ಪದ್ಯದಲ್ಲಿ ಮನ್ಮಥನ ಬಾಣವನ್ನು ಹೂವಲ್ಲ, ಅಗ್ನಿಯೆಂದು ಹೇಳಿದರೆ, ಇಲ್ಲಿ ಬಾಣವೇ ಅಲ್ಲ ಎನ್ನಲು ಕಾರಣವನ್ನು ಹೇಳಿದೆ. *

೧೮೭. “ಇವು ಮನ್ಮಥನ ಐದು ಬಾಣಗಳಲ್ಲ, ಕೋಟಿ ಬಾಣಗಳು ! ಇಲ್ಲದಿದ್ದರೆ ಹೀಗೆ ಲೋಕದಲ್ಲೆಲ್ಲ ‘ಅಸಂಖ್ಯ’ ವಿರಹಿಗಣವನ್ನು ಇಷ್ಟೊಂದು ಪೀಡಿಸುತ್ತಿರಲಿಲ್ಲ” ಎಂದರೆ ‘ಗುಣಾಪೋಹ’. *ಇಲ್ಲಿ ಐದು ಎಂಬ ಸಂಖ್ಯೆಯನ್ನು ಅಲ್ಲಗಳೆದು ಕೋಟಿಯೆಂದು ಹೇಳಲಾಗಿರುವುದೇ ‘ಗುಣ’ದ ಅಪಹ್ನುತಿ. ವೈಶೇಷಿಕದರ್ಶನದಲ್ಲಿ ‘ಸಂಖ್ಯೆ’ಯೂ ೨೪ ‘ಗುಣ’ಗಳಲ್ಲಿ ಒಂದಾದ್ದರಿಂದ ಇದು ಗುಣಾಪಹ್ನುತಿ.*

೧೮೮. ನವವಿಧವಾದ ರಸಗಳನ್ನೂ ಹೃದಯಸ್ಪರ್ಶಿಯಾಗಿ ನಿರೂಪಿಸುವ ಕಾವ್ಯರಚನೆಯೇ ‘ರಸವತ್’ ಎಂಬ ಹೆಸರಿನ ಅಲಂಕಾರ. ಅದರ ಪ್ರಕಾರಗಳನ್ನು ಉದಾಹರಣೆಗಳಿಂದ ತೋರಿಸುವೆನು. *ಹೋಲಿಸಿ-ದಂಡಿ, II -೨೮೧*.

ವೀರಾದ್ಭುತ-ಕರುಣಾ-ಶೃಂಗಾರ-ಭಯಾನಕ-ಸರೌದ್ರ-ಬೀಭತ್ಸ-ಮಹಾ- |

ಸಾರತರ-ಹಾಸ್ಯ-ಶಾಂತಾಧಾರಂ ನವ-ವಿಧ-ವಿಕಲ್ಪಮಾ ರಸಮಾರ್ಗಂ ||೧೮೯||

i) ವೀರ

ರಾವಣನಂ ಕೊಂದು ಜಯಶ್ರೀ-ವಧುವಂ ತಾಳ್ಗಿ ಮುಯ್ವಿನೊಳ್ ವರ-ಸೀತಾ- |

ದೇವತೆಯಂ ತರ್ಪನ್ನೆಗಮೋವದೆ ಪುರುಷ-ವ್ರತೋಚಿತಂ ವೀರ-ರಸಂ ||೧೯೦||

ii) ಅದ್ಭುತ

ಜಲ-ನಿಧಿಯಂ ಪಾಯ್ದೊರ್ವನೆ ನಿಲಿಕಿ ದಶಾನನನ ಪೊೞಲನಾ ಲಂಕೆಯನಾ- |

ಕುಲಮಿಲ್ಲದಿಱದು ನಿಂದಂ ಕ[2]ಲಿಯಾದಂ ಬಗೆದು ನೋೞ್ಪೊ ಡದ್ಭುತಮಾದಂ ||೧೯೧||

೧೮೯. ‘ವೀರ’, ‘ಅದ್ಭುತ’, ‘ಕರುಣಾ’, ‘ಶೃಂಗಾರ’, ‘ಭಯಾನಕ’, ‘ರೌದ್ರ’, ‘ಭೀಭತ್ಸ’, ‘ಹಾಸ್ಯ’, ‘ಶಾಂತ’-ಎಂದು ರಸದ ಮಾರ್ಗವು ಒಂಬತ್ತು ಬಗೆಯನ್ನೊಳಗೊಳ್ಳುತ್ತದೆ. *ಭರತನನ್ನು ಅನುಸರಿಸಿ ದಂಡಿ ಎಂಟೇ ರಸಗಳನ್ನು ಹೇಳಿದ್ದರೂ ಈ ಗ್ರಂಥಕಾರನು ಒಂಬತ್ತನೆಯದಾಗಿ ಶಾಂತವನ್ನೂ ಕೂಡಿಸಿಕೊಂಡು ಹೇಳಿರುವುದು ಗಮನಾರ್ಹ. ಇವನ ಕಾಲಕ್ಕಾಗಲೇ ಭರತ ಗ್ರಂಥದಲ್ಲಿಯೂ ಶಾಂತದ ಪ್ರಕ್ಷೇಪವಾಗಿ ನವರಸಪ್ರಕ್ರಿಯೆ ಸಾರ್ವತ್ರಿಕವಿತ್ತೆಂದು ಭಾಸವಾಗುತ್ತದೆ. ಇಲ್ಲಿ ‘ಶೋಕ’ ಸ್ಥಾಯಿಭಾವವಾದ ‘ಕರುಣ’ ರಸದ ಬದಲು ದಯೆ ಅಥವಾ ಅನುಕಂಪೆ ಸ್ಥಾಯಿಭಾವವಾದ “ಕರುಣಾ” ರಸವನ್ನು ಹೇಳಿರುವುದನ್ನು ವಿಚಾರಮಾಡದೆ ಛಂದೋನಿರ್ಬಂಧಕ್ಕೆ ಆದುದೆಂದು ತಳ್ಳಿಹಾಕುವುದು ಸರಿಯಾಗದು.*

೧೯೦. ರಾವಣನನ್ನು ಕೊಂದು ಜಯಲಕ್ಷ್ಮಿಯನ್ನು ವರಿಸಿ ಉಡುಗೊರೆಯಾಗಿ ಸೀತಾದೇವಿಯನ್ನು ತರುವವರೆಗೂ ನಿಷ್ಠುರ ಮಹಾಪುರುಷವ್ರತದಲ್ಲಿದ್ದ ರಾಮನಲ್ಲಿ ‘ವೀರರಸ’ವಿದೆ. *‘ಪುರುಷವ್ರತ’ವೆಂದರೆ ನೈಷ್ಠಿಕ ಬ್ರಹ್ಮಚರ್ಯವ್ರತವೆಂಬರ್ಥವೊ ಉಂಟು; ಆದರೆ ಇಲ್ಲಿ ‘ವೀರವ್ರತ’, ‘ಪ್ರತಿಜ್ಞಾಪಾಲವ್ರತ’ ಎಂದಿಷ್ಟೇ ಅರ್ಥಮಾಡಿ ಕೊಂಡರೂ ಸಾಕು. ಇಲ್ಲಿ ಪ್ರಕಟವಾಗಿರುವ ಸ್ಥಾಯಿಭಾವ- ರಾಮನ ಉತ್ಸಾಹ.*

೧೯೧. ಸಮುದ್ರವನ್ನು ಹಾರಿ, ರಾವಣನ ರಾಜಧಾನಿಯಾದ ಲಂಕೆಯನ್ನು ನಿಲುಕಿಸಿ, ನಿರಾತಂಕವಾಗಿ ಹೋರಾಡಿ, ಕಲಿಯಾಗಿ ನಿಂತವನು (=ಹನುಮಂತನು) ಅದ್ಭುತರಸಕ್ಕೆ ಉತ್ತಮವಾದ ಲಕ್ಷ್ಯ. *ಇಲ್ಲಿ ಹನುಮಂತನ ಒಂದೊಂದು ಸಾಹಸವೂ ವಿಸ್ಮಯಾವಹವಾಗಿರುವುದರಿಂದ ರಸ ಅದ್ಭುತ.*

 

iii) ಕರುಣಾ

ಕರೆಕರೆದು ಮನೋಧೃತಿಯಂ ನೆರೆವಾಸೆಯೊಳಿರ್ದಳಲ್ಲದುೞದೊಡೆ ನಿನ್ನಾ |

ವಿರಹಾನಳನಾ[3] ತಾಪದೆ ಕರಗುಗುಮಿನ್ನಾಕೆಗಿನಿಸು ಕರುಣಿಸು ಮನದೊಳ್ ||೧೯೨||

iv) ಶೃಂಗಾರ

ಪುಳಕಿತ-ಕಪೋಳ-ಫಳಕಂ ವಿಳಸಿತ-ಮದಿರಾರುಣೇಕ್ಷಣಂ ಸ್ಫುರಿತೋಷ್ಠಂ |

ಕೆಳದೀ ನಿನ್ನ ಮುಖಂ ತಳಮಳಗೊಳಿಸುಗುಮಿಂತು ನಿಭೃತ-ಶೃಂಗಾರ-ರಸಂ ||೧೯೩||

v) ಭಯಾನಕ

ತಾಳ-ತರು-ವಿತತಿಯೊಳ್ ಬೇತಾಳಂಗಳ್ ಮೊಱೆದು ತೆಱೆದು ಬಾಯ್ಗಳನಾ ಪಾ- |

ತಾಳ-ಬಿಲಂಗಳವೋಲ್ ತಳ-ತಾಳ-ಲಯ-ಕ್ರಮದೆ ಕುಣಿಯೆ ಭಯ ಮಯನಾದೆಂ ||೧೯೪||

೧೯೨. ಹೇಗೋ ತನ್ನ ಮನಃಸ್ಥೈರ್ಯವನ್ನು ಕರೆದು ತಂದುಕೊಂಡು, ನಿನ್ನನ್ನು ಕೂಡುವ ಒಂದೇ ಆಸೆಯಿಂದ ಬದುಕಿದ್ದಳು. ಇಲ್ಲದೆ ಹೊಗಿದ್ದರೆ, ಅವಳು ನಿನ್ನ ವಿರಹತಾಪದಿಂದ ಕರಗಿಯೇ ಹೋಗುತ್ತಿದ್ದಳು. ಆಕೆಯಮೇಲೆ ನಿನ್ನ ಮನಸ್ಸಿನಲ್ಲಿನ ಸ್ವಲ್ಪವಾದರೂ ಕರುಣೆ ತೋರಿಸು. *ಈ ಲಕ್ಷ್ಯದಲ್ಲಿ ಪ್ರಕಟವಾಗಿರುವ ವಿಷಯ ವಿರಹತಪ್ತೆಯ ದೈನ್ಯವನ್ನು ಮನದಂದು ದಯೆದೋರಬೇಕೆಂದು ಆಕೆಯ ಕಡೆಯವರು ನಾಯಕನಿಗೆ ಮಾಡುವ ಅನುನಯವೇ ಹೊರತು ಯಾರೊಬ್ಬರ ಮರಣದಿಂದ ಉಂಟಾದ ಶೋಕಕ್ಕೂ ಇಲ್ಲಿ ಪ್ರಸಕ್ತಿಯಿಲ್ಲ. ಆದ್ದರಿಂದ ಇದು ‘ಕರುಣಾ’ರಸವೇ ಹೊರತು ಕರುಣರಸವಲ್ಲ. ಇಲ್ಲಿ ಉದ್ದೀಪ್ತ ಸ್ಥಾಯಿಭಾವ ದಯೆ ಅಥವಾ ಕನಿಕರವೇ ಹೊರತು ಪುತ್ರಶೋಕ ಮುಂತಾದ ಮರಣಜ ಶೋಕವಲ್ಲ.*

೧೯೩. “ಸಖಿಯೆ, ರೋಮಾಂಚಗೊಂಡ ಕಪೋಲಗಳಿಂದಲೂ, ಮಧುಪಾನದ ಮತ್ತಿನಿಂದ ಕೆಂಪಾದ ಕಣ್ಣುಗಳಿಂದಲೂ, ಅದಿರುತ್ತಿರುವ ತುಟಿಗಳಿಂದಲೂ ಚೆಲುವಾದ ನಿನ್ನ ಮುಖವು (ಯಾರನ್ನಾದರೂ” ತಳಮಳಗೊಳಿಸುವುದು” ಎಂಬುದು ಶೃಂಗಾರರಸ ಪೂರ್ಣವಾಗಿದೆ. *ಇಲ್ಲಿ ರತಿಯೆಂಬ ಸ್ಥಾಯಿಭಾವಕ್ಕೆ ಉದ್ದೀಪಕಗಳಾದ ಅನುಭಾವಗಳನ್ನು ನಾಯಿಕೆಯಲ್ಲಿ ವಿವರವಾಗಿ ವರ್ಣಿಸಲಾಗಿರುವುದರಿಂದ ಶೃಂಗಾರರಸ*.

೧೬೪. ತಾಳೆಯ ಮರಗಳ ತೋಪಿನಲ್ಲಿ ಬೇತಾಳಗಳು ಆರ್ಭಟಿಸುತ್ತ, ಪಾತಾಳದ ಬಿಲದಂತಹ ಬಾಯನ್ನು ಬಿಟ್ಟು, ಅಂಗೈಯ ತಾಳ, ಲಯಗಳಿಗೆ ಅನುಗುಣವಾಗಿ ಕುಣಿಯುತ್ತಿರಲು, ನಾನು (ಅದನ್ನು ಕಂಡು) ಭಯಗ್ರಸ್ತನಾದೆನು. *ಇಲ್ಲಿ ಭಯಾನಕವಾದ ವಿಭಾವಾದಿಗಳ ವರ್ಣನೆ ಬಂದಿರುವುದರಿಂದ ಭಯಾನಕರಸವಿದೆ.*

 

vi) ರೌದ್ರ

ಕೊಂದು ಜಟಾಯುವನಾತಂ ಮುಂದಿಟ್ಟಾ ಜನಕ-ಸುತೆಯನೊಯ್ದಂ ಮತ್ತಾ |

ಪಂದೆಯನಂತಕ-ಮುಖದೊಳ್ ತಂದಿಟ್ಟಂದಲ್ಲದುೞಗುಮೇ ರೌದ್ರರಸಂ ||೧೯೫||

vii) ಬೀಭತ್ಸ

ನವ-ವಿವರಾವೃತ-ಪೂ[4]ತಿ-ದ್ರವ-ತ್ವಗಾವೃತ-ವಿಮಿಶ್ರ-ಮಾಂಸೋಪಚಿತಮ- |

ಧ್ರುವಮಸುಚಿತ್ರ-ಭ್ರಮಿತ-ಕ್ರಿಮಿವಹಂ ಮೈ ಬಗೆವೊಡಿಂತು ಕಿಸುಗುಳಮಾದಂ ||೧೯೬||

viii)ಹಾಸ್ಯ

ಪರ-ಪುರುಷ-ಸೇವನಾ-ಕೃತ-ಸುರತ-ವಿಕಾರಂಗಳೆಲ್ಲಮಂ ನಿಜ-ಪತಿಯೊಳ್ ||

ನೆರೆದಾಗಳೆ ಮಱೆಯಲ್ ಬಗೆದಿರವದು ನಗಿಸಿತ್ತು ಪೀನಮಭಿಸಾರಿಕೆಯಾ ||೧೯೭||

೧೯೫. ‘ಜಟಾಯುವನ್ನು ಕೊಂದು, ಆ ಸೀತೆಯನ್ನು ಮುಂದೆತ್ತಿಕೊಂಡು ಅವನು ಒಯ್ದಿರುವನು. ಆ ಹೇಡಿಯನ್ನು ಮೃತ್ಯುಮುಖದಲ್ಲಿ ತಂದಿಟ್ಟಲ್ಲದೆ ಬಿಡುವೆನೇ?’ ಎನ್ನುವಾಗ ರೌದ್ರರಸ. *ಇಲ್ಲಿ ರಾಮನ ಕ್ರೋಧವೆಂಬ ಸ್ಥಾಯಿ ಉಕ್ಕೇರುತ್ತಿರುವ ವರ್ಣನೆಯಿರುವ ಕಾರಣ ಇದು ರೌದ್ರರಸ.*

೧೯೬. ಶರೀರವೆಂಬುದು ಒಂಬತ್ತು ದ್ವಾರಗಳಿಂದಲೂ, ಹೊಲಸು ನಾರುವ ದ್ರವಗಳಿಂದಲೂ ತುಂಬಿಕೊಂಡು, ಅನೇಕ ಮಾಂಸಮಿಶ್ರಣಗಳಿಗೆ ಚರ್ಮದ ಹೊದಿಕೆ ಮುಚ್ಚಿರುವಂತಹ, ಓಡಾಡುವ ಕ್ರಿಮಿಗಳಿರುವ, ಒಂದು ಅಸ್ಥಿರ ಅಸುಂದರ ಅತಿ ಹೇಯ ಪದಾರ್ಥ. *ಇಲ್ಲಿ ಶರೀರವನ್ನು ಜುಗುಪ್ಸಾವಹವಾಗಿ ವರ್ಣಿಸಲಾಗಿರುವುದರಿಂದ ‘ಬೀಭತ್ಸರಸ’*.

೧೯೭. ತಾನು ಪರಪುರಷನೊಡನೆ ನೆರೆದಾಗ ಉಂಟಾದ (ನಖಕ್ಷತ ಮುಂತಾದ) ಮೈಮೇಲಿನ ಗುರುತುಗಳನ್ನೆಲ್ಲ ಅಭಿಸಾರಿಕೆಯು ತನ್ನ ಗಂಡನೊಡನೆ ಕೂಡಿದಾಗ ಮರೆಮಾಡಲು ಮಾಡಿದ ಸನ್ನಾಹಗಳು ತುಂಬಾ ನಗಿಸುವಂತಿದ್ದವು. *ಇಲ್ಲಿ ಪರಪುರುಷನ ಸಂಗದಿಂದಾದ ನಖಕ್ಷತ, ದಂತಕ್ಷತ ಮುಂತಾದ ಸುರತಚಿಹ್ನೆಗಳನ್ನೆಲ್ಲ ಉಪಾಯಾಂತರದಿಂದ ಗಂಡನಿಗೆ ತಿಳಿಯದಂತೆ ಮುಚ್ಚಲು ಅಭಿಸಾರಿಕೆ ಮಾಡುತ್ತಿರುವ ಯತ್ನಗಳು ನಗಿಸುವಂತಿರುವುದರಿಂದ ‘ಹಾಸ್ಯರಸ’.*

 

ix) ಶಾಂತ

*ಮಿಗೆ ಗು*[5]ಣದೊಳ್ ಪರಿಚಿತಮುಂ ದ್ವಿಗುಣಮದೋರಂತೆ ಮಟ್ಟಮಿರ್ದುದುಮತ್ತಂ |

ವಿಗತ-ವಿಕಾರಾಕಾರಂ ಸೊಗಯಿಸುಗುಂ ನಿನ್ನ ರೂಪು ಶಾಂತಾಧಾರಂ ||೧೯೮||


[1] ಇಲ್ಲಿ ವ-ಬಗಳ ಅಭೇದ ವಿವಕ್ಷಿತ. ರಸವದ್ | ವಿವಿಧಾಳಂಕಾರಂ- ‘ಸೀ’.

[2] ಕಲಿಯಾವಂ ‘ಪಾ’. ಕಲಿಯಾಂ ‘ಮ’.

[3] ನಾಳಾಪದೆ ‘ಅ, ಬ’.

[4] ಇದು ‘ಸೀ’ ಸೂಚಿತಪಾಠ. ಪೂತ ‘ಪಾ, ಮ’.

[5] ದೊಳ್ ಪರಿಚಿತಮಂ ‘ಪಾ’, ಮೃಗಗಣದೊಳ್ ಪರಿಚಿತಮಂ ‘ಮ’, ಮಿಗೆ ರಣದೋಳ್ ಪರಿಚಿತಮಾ ‘ಸೀ’. ಇದಾವ ಪಾಠದಲ್ಲೂ ಅರ್ಥಕ್ಲೇಶ ತಪ್ಪದ ಕಾರಣ. ಇಲ್ಲಿ ಹೊಸದಾಗಿ ಪರಿಷ್ಕರಿಸಲಾಗಿದೆ.