ವಿಜ್ಞಾನದ ಒಂದು ಭಾಗವಾದ ರಸಾಯನ ವಿಜ್ಞಾನ ಇಂದು ಅತ್ಯಂತ ವಿಸ್ತಾರವಾಗಿ ಬೆಳೆದಿದೆ. ಇದರಲ್ಲಿ ಸಾವಯವ, ನಿರವಯವ ರಸಾಯನ ವಿಜ್ಞಾನಗಳಲ್ಲದೆ ಅನೇಕ ಹೊಸ ಶಾಖೆಗಳು, ಉದಾಹರಣೆಗೆ ಜೀವರಸಾಯನ ವಿಜ್ಞಾನ, ಪಾಲಿಮರ್ ವಿಜ್ಞಾನ ಮುಂತಾದವು ಹುಟ್ಟಿಕೊಂಡಿವೆ. ರಸಾಯನ ವಿಜ್ಞಾನ ಬೆಳೆಯಲು ಈ ವಿಜ್ಞಾನದ ಅತಿ ಸಾರ್ವತ್ರಿಕ ಆನ್ವಯಿಕತೆ ಮತ್ತು ಅಗತ್ಯತೆಗಳೇ ಕಾರಣ.  ರಸಾಯನ ವಿಜ್ಞಾನಕ್ಕೆ ನಮ್ಮ ಭಾರತೀಯ ವಿಜ್ಞಾನಿಗಳು ನೀಡಿದ ಕೊಡುಗೆಯೂ ಕಡಿಮೆಯೇನಲ್ಲ. ಅವರುಗಳ ಕಾಣಿಕೆಯನ್ನು ಸ್ಥೂಲವಾಗಿ ಅರಿತುಕೊಳ್ಳೋಣ.

1)    ಸುಶ್ರುತ

ಶಸ್ತ್ರಚಿಕಿತ್ಸಾರಂಗದಲ್ಲಿ ಈಚೆಗಿನ ಬೆಳವಣಿಗೆಯಾದ ‘ಸುರೂಪಿಕಾ ಶಸ್ತ್ರ ಚಿಕಿತ್ಸೆ’ ಅಂದರೆ ಪ್ಲಾಸ್ಟಿಕ್ ಸರ್ಜರಿಯನ್ನು ಎರಡೂವರೆ ಸಾವಿರ ವರ್ಷಗಳಿಗೂ ಹಿಂದೆ ಪ್ರಾರಂಭಿಸಿದ ಕೀರ್ತಿ ಭಾರತದ ಆಯುರ್ವೇದಾಚಾರ್ಯ ಸುಶ್ರುತನಿಗೆ ಸಲ್ಲಬೇಕು.

ಸುಶ್ರುತನು ಆಯುರ್ವೇದ ವಿಜ್ಞಾನದ ತತ್ವಗಳನ್ನೆಲ್ಲ ಕ್ರೋಡೀಕರಿಸಿ ರಚಿಸಿದ ‘ಸುಶ್ರುತ ಸಂಹಿತೆ’ ಇಂದಿಗೂ ಮಹತ್ವದ ಗ್ರಂಥವಾಗಿದೆ. ಇದರಲ್ಲಿ ಆತನು ಜರುಗಿಸುತ್ತಿದ್ದ ನೂರಾರು ಶಸ್ತ್ರಚಿಕಿತ್ಸೆಗಳು, ಬಳಸುತ್ತಿದ್ದ ಮದ್ದುಗಳು, 101 ಉಪಕರಣಗಳ ಸಚಿತ್ರ ವಿವರಣೆಗಳಿವೆ.

2)   ಚರಕ

ಪ್ರಾಚೀನ ಕಾಲದ ಭಾರತೀಯ ವೈದ್ಯ ಪದ್ಧತಿಯಲ್ಲಿ ಪ್ರಖ್ಯಾತಿ ಪಡೆದ ಚರಕ ಮಹರ್ಷಿ ಆಯುರ್ವೇದ ಪಿತಾಮಹ ಎಂದು ಕರೆಸಿಕೊಂಡಿದ್ದಾನೆ. ಚರಕ ಮಹರ್ಷಿಯು ಆಯುರ್ವೇದ ವಿಷಯಗಳನ್ನೊಳಗೊಂಡ ‘ಚರಕ ಸಂಹಿತೆ’ಯನ್ನು ರಚಿಸಿದನು ಈ ಗ್ರಂಥದಲ್ಲಿ 125 ಬಗೆಯ ಜ್ವರಗಳು, ಪಿತ್ತಕಾಮಾಲೆ, ಮಧುಮೇಹ, ಕ್ಷಯ, ಕುಷ್ಠರೋಗ, ಮೈಲಿ ಬೇನೆಯಂತಹ ನೂರಾರು ಕಾಯಿಲೆಗಳ ವಿವರಣೆಗಳನ್ನು ನೀಡಿದ್ದಾನೆ. ಸುಮಾರು 600 ಗಿಡಮೂಲಿಕೆಗಳು, ಪ್ರಾಣಿಜನ್ಯ ಮತ್ತು ಖನಿಜಮೂಲ ಔಷಧಗಳು ಇದರಲ್ಲಿ ನಮೂದಾಗಿವೆ.

3)   ಪ್ರಫುಲ್ಲಚಂದ್ರ ರೇ

1896ರಲ್ಲಿ ಪ್ರಫುಲ್ಲಚಂದ್ರ ರೇ ಅವರು ಮರ್ಕ್ಯುರಸ್ ನೈಟ್ರೈಟನ್ನು ಸ್ಫಟಿಕ ರೂಪದಲ್ಲಿ ತಯಾರಿಸಿ ಜಗತ್ತಿನ ವಿಜ್ಞಾನಿಗಳ ಗಮನವನ್ನು ಸೆಳೆದರು. ಅಲ್ಲದೆ ರೇ ಅವರು ಇತರ  ನೈಟ್ರೈಟುಗಳನ್ನು ಕುರಿತು ಸಂಶೋಧನೆ ನಡೆಸಿದರು. ಇಂಗ್ಲೆಂಡಿನ ರಸಾಯನ ವಿಜ್ಞಾನಿಗಳು ಇವರನ್ನು ‘ನೈಟ್ರೈಟುಗಳ ಪ್ರಭು’ ಎಂದೇ ಕರೆದರು.

1901ರಲ್ಲಿ ‘ಬೆಂಗಾಲ್ ಕೆಮಿಕಲ್ ಅಂಡ್ ಫಾರ್ಮಸ್ಯುಟಿಕಲ್ ವರ್ಕ್ಸ್’ ಎಂಬ ಕಂಪನಿಯನ್ನು ಸ್ಥಾಪಿಸಿದರು. ಅಪಾರ ದೇಶಪ್ರೇಮವಿದ್ದ ರೇ ಅವರು ರಸಾಯನ ವಿಜ್ಞಾನ ಕ್ಷೇತ್ರದಲ್ಲಿ ಪ್ರಾಚೀನ ಭಾರತೀಯರ ಸಾಧನೆಗಳ ಬಗ್ಗೆ ಅಧ್ಯಯನ ಕೈಗೊಂಡು ‘ಹಿಂದೂ ರಸಾಯನ ವಿಜ್ಞಾನದ ಇತಿಹಾಸ’ ಎಂಬ ಎರಡು ಸಂಪುಟಗಳ ಉದ್ಗ್ರಂಥವನ್ನು ಅವರು  ಪ್ರಕಟಿಸಿದರು. 1920 ರಲ್ಲಿ ಅವರನ್ನು ಇಂಡಿಯನ್ ಸೈನ್ಸ್ ಕಾಂಗ್ರೆಸ್ಸಿನ ಅಧ್ಯಕ್ಷರನ್ನಾಗಿ ಚುನಾಯಿಸಲಾಯಿತು. 1924 ರಲ್ಲಿ ಅವರು ಇಂಡಿಯನ್ ಕೆಮಿಕಲ್ ಸೊಸೈಟಿಯ ಅಧ್ಯಕ್ಷರಾದರು.

ಪ್ರಫುಲ್ಲಚಂದ್ರ ರೇ ಅವರು ಪ್ರತಿಭಾವಂತ ತರುಣ ರಸಾಯನ ಶಾಸ್ತ್ರಜ್ಞರ ತರಬೇತಿಗಾಗಿ ಸೌಲಭ್ಯಗಳನ್ನು ಸಂಘಟಿಸುವುದರ ಮೂಲಕ ಭಾರತಕ್ಕೆ ವಿಶ್ವ ರಸಾಯನ ವಿಜ್ಞಾನದ ಅತ್ಯುನ್ನತ ಸ್ಥಾನವನ್ನು ಕಲ್ಪಿಸಿಕೊಟ್ಟರು.

4)   ಸಿ.ವಿ.ರಾಮನ್

ಚಂದ್ರಶೇಖರ ವೆಂಕಟರಾಮನ್ ಅವರು ವಿವಿಧ ದ್ರವ್ಯ ಮಾಧ್ಯಮಗಳಲ್ಲಿ ಬೆಳಕಿನ ಚದರುವಿಕೆ ಹೇಗಾಗುತ್ತದೆ ಎಂದು ಕ್ರಮಬದ್ಧವಾಗಿ ನಡೆಸಿದ ಅನ್ವೇಷಣೆಗೆ 1930 ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು.

ರಾಸಾಯನಿಕ ಸಂಯುಕ್ತಗಳ ಅಣುರಚನೆ (molecular structure) ಯನ್ನು ಅರ್ಥಮಾಡಿಕೊಳ್ಳಲು ಅದು ಅತಿ ಮುಖ್ಯವೆಂಬುದು ಈಗ ತಿಳಿದಿದೆ.  ರಾಮನ್ ಪರಿಣಾಮವನ್ನು ಕಂಡುಹಿಡಿದ ಫಲವಾಗಿ ಒಂದು ದಶಕದ ಒಳಗೆ ಸುಮಾರು 2000 ರಾಸಾಯನಿಕ ಸಂಯುಕ್ತಗಳ ಆಂತರಿಕ ರಚನೆಗಳನ್ನು ಪತ್ತೆ ಹಚ್ಚಲು ನೆರವಾಯಿತು.

5)  ಡಾ. ಹರಗೋಬಿಂದ್ ಖೊರಾನ

ಭಾರತ ಸಂಜಾತ ಖೊರಾನ ಅಮೆರಿಕದಲ್ಲಿ ನೆಲೆಸಿದ ರಸಾಯನ ವಿಜ್ಞಾನಿ. ಇವರಂತೆಯೇ ಪ್ರತ್ಯೇಕವಾಗಿ ರಾಬರ್ಟ್ಸ್ ಮಾರ್ಷಲ್ ಮತ್ತು ನೀರೆನ್‌ಬರ್ಗ್ ಸಂಶೋಧನೆ ಮಾಡಿ ಡಿಎನ್‌ಎ ದಲ್ಲಿರುವ ಆನುವಂಶಿಕ ಸಂಕೇತವನ್ನು ಬಿಡಿಸಿದರು. ಈ ಆನುವಂಶಿಕ ಸಂಕೇತ ಭಾಷೆಯ (Genetic code) ರಹಸ್ಯವನ್ನು ಬಯಲು ಮಾಡಿದವರಲ್ಲಿ ಖೊರಾನ ಪ್ರಮುಖರು. ಪ್ರಪ್ರಥಮವಾಗಿ ಕೃತಕ ಜೀನನ್ನು ತಯಾರು ಮಾಡಿದ ಕೀರ್ತಿ ಇವರದು. ಪ್ರತಿಯೊಂದು ಡಿಎನ್‌ಎನಲ್ಲಿರುವ ಟ್ರಿಪ್ಲೆಟ್ ಸಂಕೇತ ಒಂದು ನಿರ್ದಿಷ್ಟ ಅಮೈನೋ ಆಮ್ಲವನ್ನು ಸೂಚಿಸಬಹುದೆಂಬುದನ್ನು ಖಚಿತಗೊಳಿಸಿದರು. ಇದು ಪ್ರೋಸಂಶ್ಲೇಷಣೆಯನ್ನು ವಿವರಿಸುತ್ತದೆ. 1968ರಲ್ಲಿ ನೊಬೆಲ್ ಪಾರಿತೋಷಕಕ್ಕೆ ಭಾಜನರಾದರು ಮತ್ತು ಭಾರತ ಸರ್ಕಾರದ ಪದ್ಮವಿಭೂಷಣ ಗೌರವವೂ ಇವರಿಗೆ ಸಂದಿದೆ.

6)  ಟಿ.ಆರ್. ಶೇಷಾದ್ರಿ

ಟಿ.ಆರ್. ಶೇಷಾದ್ರಿ ಅವರು ರಸಾಯನ ವಿಜ್ಞಾನ ಮತ್ತು ಸಸ್ಯ ವಿಜ್ಞಾನ ಎರಡೂ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿದ ವಿಜ್ಞಾನಿ. ಇವರು ಸಸ್ಯಗಳ ಬಣ್ಣಗಳನ್ನು ಕುರಿತು ಸಂಶೋಧನೆಗಳನ್ನು ನಡೆಸಿದರು. ಹೂಗಳಲ್ಲಿರುವ ಕೆಂಪು ಮತ್ತು ಹಳದಿ ಬಣ್ಣಗಳಿಗೆ ಕಾರಣವಾದ ರಾಸಾಯನಿಕಗಳನ್ನು ಗುರುತಿಸಿ, ಆಂಥೊಸಯನಿನ್‌ಗಳ ಬಗ್ಗೆ ವ್ಯಾಪಕ ಸಂಶೋಧನೆ ಕೈಗೊಂಡರು. ಸಸ್ಯಗಳಲ್ಲಿ ಕಂಡುಬರುವ ರಾಸಾಯನಿಕಗಳ ರಚನೆ, ಪಾತ್ರ ಮತ್ತು ವರ್ಗೀಕರಣಗಳಿಗೆ ಸಂಬಂಧ ಕಲ್ಪಿಸಲು ಇವರು ಪ್ರಯತ್ನಿಸಿದರು. 1960ರಲ್ಲಿ ಅವರು ಫೆಲೋ ಆಫ್ ದಿ ರಾಯಲ್ ಸೊಸೈಟಿ (FRS) ಆಗಿ ಚುನಾಯಿಸಲ್ಪಟ್ಟರು.

7)  ಯಲ್ಲಪ್ರಗಡ ಸುಬ್ಬರಾವ್

ಯಲ್ಲಪ್ರಗಡ ಸುಬ್ಬರಾವ್ ಅಮೆರಿಕಕ್ಕೆ ತೆರಳಿ ಅನೇಕ ಯಶಸ್ವಿ ಸಂಶೋಧನೆಗಳನ್ನು ಜರುಗಿಸಿದರು. ಸೈರಸ್ ಫಿಸ್ಕ್ ಎಂಬುವರ ಜೊತೆಗೂಡಿ ಅದುವರೆಗೆ ಬಿಡಿಸಲಾರದ ಕಗ್ಗಂಟಾಗಿದ್ದ ಸ್ನಾಯು-ಸಂಕುಚನ ಕ್ರಿಯಾಕಾರಣವನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾದರು. ಫಿಸ್ಕ್-ಸುಬ್ಬರಾವ್ ವಿಧಾನವೆಂದು ಹೆಸರಾದ ಈ ಸಂಶೋಧನೆಯಲ್ಲಿ ಫಾಸ್ಫೊ-ಕ್ರಿಯಾಟಿನಿನ್ ಪಾತ್ರ ಬೆಳಕಿಗೆ ಬಂದಿತು. ನೊಬೆಲ್ ಪುರಸ್ಕಾರ ಯೋಗ್ಯವೆಂದು ಪರಿಗಣಿಸಲಾದ ಈ ಸಂಶೋಧನೆ ಅವರಿಗೆ ಕೀರ್ತಿ ತಂದರೂ, ಪುರಸ್ಕಾರಗಳಿಂದ ಅವರು ವಂಚಿತರಾದರು. ಉಷ್ಣವಲಯದ ಭೇದಿ ಮತ್ತು ರಕ್ತಹೀನತೆಯ ಪರಿಹಾರಕ್ಕೆ ಫೋಲಿಕ್ ಆಮ್ಲ, ಆನೆಕಾಲು ರೋಗಕ್ಕೆ ‘ಹೆಟ್ರಾಜಾನ್’ ಗಳನ್ನು ಕಂಡು ಹಿಡಿದರು. ಅಲ್ಲದೆ ‘ಬಿ’ ಜೀವಸತ್ವದ ಗುಂಪಿನ ಬಹುಪಾಲು ಅಂಶಗಳನ್ನು ಅವರ ತಂಡದವರು ಬೆಳಕಿಗೆ ತಂದರು. ಅಲ್ಲದೆ ‘ಅರಿಯೋಮೈಸಿನ್’ ಎಂಬ ಜೀವಿನಿರೋಧಕವನ್ನು ತಯಾರಿಸಿದವರು ಇವರ ತಂಡವೇ. ಪ್ಲೇಗ್ ರೋಗ ಚಿಕಿತ್ಸೆಯಲ್ಲಿ ಬಳಸುವ ಟೆಟ್ರಸೈಕ್ಲಿನ್ ಅರಿಯೋಮೈಸಿನ್‌ನ ಇನ್ನೊಂದು ರೂಪ.

 

8)  ಜಗದೀಶ ಚಂದ್ರ ಬೋಸ್

‘ಸಸ್ಯ ವಿಜ್ಞಾನದ ಕವಿ’ ಎಂದೇ ಕರೆಯಲ್ಪಟ್ಟ ಜಗದೀಶ ಚಂದ್ರಬೋಸ್ ಅವರು ಸಸ್ಯಗಳ ವಿವಿಧ ಭಾಗಗಳನ್ನು ಕುರಿತಂತೆ, ಅವುಗಳ ಮೇಲೆ ವಿದ್ಯುತ್ತು, ಉಷ್ಣತೆ ಮತ್ತು ರಾಸಾಯನಿಕ ವಸ್ತುಗಳಂತಹ ಹಲವು ಉತ್ತೇಜನಕಾರಕ ದ್ರವ್ಯಗಳನ್ನು ಉಪಯೋಗಿಸಿ, ಸಸ್ಯದ ಆಯಾ ಭಾಗಗಳು ಹೇಗೆ ಉದ್ರೇಕಗೊಳ್ಳುವವು ಎಂಬುದನ್ನು ಹಲವಾರು ಪ್ರಯೋಗಗಳಿಂದ ತೋರಿಸಿ ಕೊಟ್ಟರು. ಸಸ್ಯಗಳಲ್ಲಿನ ಅತ್ಯಂತ ಸೂಕ್ಷ್ಮ ಚಲನ ವಲನಗಳನ್ನು ತೋರಿಸಲು ‘ಕ್ರೆಸೋಗ್ರಾಫ್’ ಎಂಬ ಉಪಕರಣವನ್ನು ತಯಾರಿಸಿದರು. 1923 ರಲ್ಲಿ ಪಲ್ಸೇಷನ್ ಸಿದ್ಧಾಂತವನ್ನು (Pulsation Theory) ಮಂಡಿಸಿದರು. ಹೀಗೆ ಅವರು ಸಸ್ಯಗಳು ಎಂತಹ ಜೀವಿಗಳೆಂಬುದನ್ನು ಅನೇಕ ಪ್ರಯೋಗಗಳಿಂದ ಎತ್ತಿ ತೋರಿಸಿದರು.

ಅನೇಕ ಲೋಹ ಮತ್ತು ಖನಿಜ ಪದಾರ್ಥಗಳು (ಕಬ್ಬಿಣ, ತವರ ಮುಂತಾದವು) ನಿರ್ಜೀವ ವಸ್ತುಗಳು.  ಆದರೆ ಅವು ಉಷ್ಣ, ವಿದ್ಯುತ್ತು, ರಾಸಾಯನಿಕ ವಸ್ತುಗಳಿಂದ ‘ಉದ್ರೇಕ’ಗೊಳ್ಳುತ್ತವೆ ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು.

 

9)  ಸಿ.ಕೆ. ಪಟೇಲ್

ಸಿ.ಕೆ. ಪಟೇಲ್, ಇವರು ಕಾರ್ಬನ್ ಡೈ ಆಕ್ಸೈಡ್ ಲೇಸರ್ ನಿರ್ಮಿಸಿ ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಖ್ಯಾತಿ ಗಳಿಸಿದರು. ಇದು ಭೂಮಿಯಲ್ಲಿ ದೂರದೆಡೆಗಳಿಗೆ ಸಂದೇಶ ಕಳಿಸಲು ಹಾಗೂ ವಾತಾವರಣ ಮಾಲಿನ್ಯವನ್ನು ಪತ್ತೆ ಹಚ್ಚಲು ಉಪಯುಕ್ತವಾಗಿದೆ.