ಭೂಮಾನುಭೂತಿಗೂ ಮತ್ತು ಭವ್ಯತಾ ಅನುಭವಕ್ಕೂ ಇರುವ ಸಂಬಂಧವು ಭಾವನಕ್ಕೂ ಮತ್ತು ರಸಕ್ಕೂ ಇರುವ ಸಂಬಂಧವನ್ನು ಹೋಲುತ್ತದೆ. ಭಾವ ಒಂದು ಲೋಕವ್ಯಾಪಾರ; ರಸ ಅದರಿಂದ ಮುಂದುವರಿದ ಅಥವಾ ಮೇಲ್ವರಿದ ಲೋಕೋತ್ತರ ವ್ಯಾಪಾರ. ಆದ್ದರಿಂದ ಭಾವವನ್ನು ಲೌಕಿಕವೆಂದೂ ರಸವನ್ನು ಅಲೌಕಿಕವೆಂದೂ ಕರಿಯುತ್ತಾರೆ.

[1]

ಸಾಮಾನ್ಯವಾಗಿ ಭಾವವನ್ನು ಲೋಕದಲ್ಲಿಯೂ ರಸವನ್ನು ಕಾವ್ಯಕಲಾದಿ ರಂಗದಲ್ಲಿಯೂ ಅನುಭವಿಸುತ್ತೇವೆ. ಭಾವಕ್ಕೆ ಲೌಕಿಕಕ್ರಿಯಾಪೇಕ್ಷೆ ಇರುವುದರಿಂದಲೂ ಸ್ವಾರ್ಥ ಮತ್ತು ಅಹಂಕಾರಗಳಿಂದ ಕಲುಷಿತವಾಗಿರುವುದರಿಂದಲೂ ಅದರ ಸ್ಥಾನ ಕೆಳಮಟ್ಟದ್ದು; ಸಂಗದೂರವಾಗಿ ಸಾಕ್ಷಿಪ್ರಜ್ಞಾಧೀನವಾಗಿ, ಶಮತ್ವವನ್ನು ಪಡೆದು, ರಜೋಗುಣದಿಂದ ವಿಮುಕ್ತವಾಗಿ ಸತ್ವದಿಂದ ಕೂಡಿ ಆಸ್ವಾದ್ಯವಾಗುವುದರಿಂದ ರಸದ ಸ್ಥಾನ ಮೇಲುಮಟ್ಟದ್ದು. ಆದರೆ ಇಲ್ಲಿ ‘ಭೂಮಾನುಭೂತಿ’ ಮತ್ತು ‘ಭವ್ಯತೆ’ಗಳ ನಡುವೆ, ಕೀಳು ಮೇಲಿನ ಸ್ಥಾನ ಅದಲುಬದಲಾಗುತ್ತದೆ. ‘ಭೂಮಾನುಭೂತಿ’ ಲೋಕ ವ್ಯಾಪಾರವಾದುದರಿಂದ ಅದರ ಸ್ಥಾನ ಕೆಳಗೂ ‘ಭವ್ಯತೆ’ ಕಾವ್ಯ ಕಲಾರಂಗದ ಅನುಭವವಾದ್ದರಿಂದ ಅದರ ಸ್ಥಾನ ಮೇಲೂ ಆಗಬೇಕಿತ್ತು. ಆದರೆ ಹಾಗಾಗುವುದಿಲ್ಲ. ಲೋಕಾನುಭವಸ್ವರೂಪದ ‘ಭೂಮಾನುಭೂತಿಗೆ’ ಕಲಾನುಭವದ ಸ್ವರೂಪದ ‘ಭವ್ಯತೆ’ ಪ್ರತಿಬಿಂಬ ಸ್ಥಾನದಲ್ಲಿ ನಿಲ್ಲುತ್ತದೆ: ಲೋಕರಂಗದಲ್ಲಿ ನಿಜವಾದ ಧ್ಯಾನಸಮಾಧಿಯಲ್ಲಿರುವ ಸನ್ಯಾಸಿಗೆ ಸಲ್ಲುವ ಪೂಜಾಗೌರವ ಸ್ಥಾನ ನಾಟಕರಂಗದಲ್ಲಿ ಬರುವ ಆ ಪಾತ್ರಧಾರಿಗೆ ಸಲ್ಲುತ್ತದೆಯೆ? – ಇಲ್ಲ. ಏಕೆ?

ಇತರ ಭಾವ ಮತ್ತು ಇತರ ರಸಗಳಿಗಿರುವ ಸಂಬಂಧದಂತೆ ಶಮಕ್ಕೂ ಶಾಂತರಸಕ್ಕೂ ಸಂಬಂಧಕಲ್ಪನೆ ಮಾಡುತ್ತಾರೆ. ಆದರೆ ರತಿಭಾವಕ್ಕಿಂತ ಶೃಂಗಾರರಸ ಶೃಂಗಾರರಸ ಶ್ರೇಷ್ಠತರವಾದಂತೆ ಶಮಕ್ಕಿಂತ ಶಾಂತರಸ ಶ್ರೇಷ್ಠತರವಾಗುತ್ತದೆಯೆ? ಭಾವಗಳಿಗೆ ಶಮತ್ವದ ಸಂಸ್ಕಾರ ಒದಗುವುದರಿಂದಲೆ ರಸತ್ವವುಂಟಾಗುತ್ತದೆ. ಅಂದರೆ ಭಾವವನ್ನು ರಸವನ್ನಾಗಿ ಪರಿವರ್ತಿಸುವ ಸ್ಪರ್ಶಮಣಿಯೆ ಶಮ. ಅಂದರೆ ಶಮ ಇತರ ಭಾವಗಳಂತೆ ಭಾವವಲ್ಲ; ಅದು ಭಾವವನ್ನು ರಸಗೋಳಿಸುವ ಭಾವೋಪಶಮನ ಶಕ್ತಿ. ಶಮ ಕಲಾರಂಗದಲ್ಲಿ ಪ್ರತಿಬಿಂಬಿತವಾದಾಗ ಅದರ ಲೋಕರಂಗದ ಸ್ಥಿತಿಗಿಂತಲೂ ಮೇಲುಮಟ್ಟದ್ದಾಗುವುದಿಲ್ಲ. ಲೋಕರಂಗದಲ್ಲಿ ಸಿದ್ದವಾದ ನಿಜವಾದ ಶಾಂತಿ ಕಲಾರಂಗದ ಶಾಂತರಸಕ್ಕಿಂತಲೂ ಸರ್ವಥಾ ಮೇಲುಮಟ್ಟದ ಪುರುಷಾರ್ಥವಸ್ತು ಅಂತೆಯೆ ಲೋಕರಂಗದಲ್ಲಿ ಎಂದರೆ ಬದುಕಿನಲ್ಲಿ ಸ್ವಾನುಭವಕ್ಕೆ ಸಿದ್ಧಿಸುವ ಭೂಮವೂ ಪರಮಪುರಷಾರ್ಥವಸ್ತು. ಅದರ ಕಲಾಛಾಯೆ ಮೂಲಕ್ಕಿಂತಲೂ ಮೇಲಮಟ್ಟದ್ದಾಗಲಾರದು; ಆದರೂ, ಅಪೂರ್ವವಾಗಿ, ಅತ್ಯಂತ ಮಹೋನ್ನತ ದ್ರಷ್ಟಾರನಾದ ಮಹಾಕವಿಋಷಿಯ ಭೂಮಾನುಭೂತಿಯ ಕಲಾಭಿವ್ಯಕ್ತಿಯಿಂದ ಸಹೃದಯೋತ್ತಮನಲ್ಲಿ ಸ್ಫುರಿಸುವ ಭವ್ಯತಾ ಅನುಭವವೂ ಭೂಮಾನುಭೂತಿಯಾಗಿ ಪರಿಣಮಿಸಬಹುದೇನೊ?

ಆದರೆ ಇತರ ರಸಗಳಲ್ಲಿ ಇರುವಂತಲ್ಲದೆ ಶಾಂತರಸದಲ್ಲಿ ಮಾತ್ರ ಇರುವಂತೆ ಲೋಕಾನುಭವವಾದ ಭೂಮಾನುಭೂತಿಯ ಕಲಾಭಿವ್ಯಕ್ತಿಯಿಂದ ಸ್ಫುರಿಸುವ ಭವ್ಯತಾ ಅನುಭವದಲ್ಲಿಯೂ ಒಂದು ರಕ್ಷೆ ಇದ್ದೆ ಇರುತ್ತದೆ. ಬಹು ಸಂಖ್ಯೆಯ ಸಹೃದಯರಿಗೆ ಶೃಂಗಾರರಸಾನುಭವದಲ್ಲಿ ವೀಸ ಪಾಲೊ ಮೂರು ವೀಸ ಪಾಲೊ ಮುಕ್ಕಾಲುಮೂರು ವೀಸ ಪಾಲೊ ರತಿಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂದರೆ ಹಸಿಹಸಿ ರತಿಭಾವದ ಇರುವಿಕೆಯಿಂದ ಶೃಂಗಾರರಸಾನಭವ ಅವನತವಾಗುತ್ತದೆ. ಆದರೆ ಲೋಕಾನುಭವರೂಪದ ಶಮದ ಇರುವಿಕೆಯಿಂದ ಶಾಂತರಸಾನುಭವ ಅವನತವಾಗುವ ಬದಲು ಉನ್ತತವಾಗುತ್ತದೆ. ಶಮದ ಪ್ರಮಾಣ ಹೆಚ್ಚಿದಷ್ಟೂ ಶಾಂತರಸದ ನೈಜತೆ ಉನ್ನತತರವಾಗುತ್ತದೆ. ಹಾಗೆಯೆ ಕಾವ್ಯಕಲಾರಂಗದ ಭವ್ಯತಾ ಅನುಭವದಲ್ಲಿ ಲೋಕಾನುಭವರೂಪದ ಭೂಮಾನುಭೂತಿ ಅಂಶಿಕವಾಗಿಯಾದರೂ ಇದ್ದೆ ಇರುತ್ತದೆ. ಅದು ಇದ್ದಷ್ಟೂ ಭವ್ಯತಾ ಅನುಭವದ ಪರುಷಾರ್ಥಕತೆ ಉನ್ನತವಾಗುತ್ತದೆಯೆ ಹೊರತು ಅವನತವಾಗುವುದಿಲ್ಲ. ಆದ್ದರಿಂದಲೆ ಮಹಾಕವಿಯ ಮಹಾಕೃತಿಯಲ್ಲಿ ಭೂಮಾನುಭೂತಿ ಭವ್ಯತೆಯಾಗಿ ವಿಪುಲಪ್ರಮಾಣದಲ್ಲಿ ಮೈದೋರಿದರೆ, ಸಾಧಾರಣ ಕವಿಯ ಒಂದು ಸಾಧಾರಣ ಭಕ್ತಿಗೀತೆಯಲ್ಲಿಯೂ, ಹೃತ್‌ಪೂರ್ವಕತೆ ಭಾವತೀರತೆ ನೈಜತೆಗಳು ಇದ್ದ ಪಕ್ಷದಲ್ಲಿ, ಅಂಸಿಕವಾಗಿಯಾದರೂ ಭೂಮವು ಹೃದಯಸ್ಯಂದಿಯೆ ಆಗುತ್ತದೆ. ಅಂದರೆ ಕಲಾರಂಗದ ಭವ್ಯತಾ ಅನುಭವದಲ್ಲಿ ಭೂಮದ ಅನುಭೂತಿ ಒಂದಲ್ಲ ಒಂದು ಪ್ರಮಾಣದಲ್ಲಿ ಸಂಚರಿಸಿಯೆ ಇರುತ್ತದೆ.

ಭೂಮಾನುಭೂತಿ ತನ್ನ ಪರಮ ಪ್ರಮಾಣದಲ್ಲಿ ಅಭಿವ್ಯಕ್ತವಾಗಿರುವ ಒಂದು ನಿದರ್ಶನ ‘ನಾಸದೀಯ ಸೂಕ್ತ’ದಲ್ಲಿ ನಮಗೆ ದೊರೆಯುತ್ತದೆ. ಋಗ್‌ವೇದದ ಅನೇಕ ಸೂತ್ರಗಳಲ್ಲಿ, ಉಪನಿಷತ್ತಿನ ಮಹಾಮಂತ್ರಗಳಲ್ಲಿ ಸಹೃದಯನಾದವನಿಗೆ ತಾನು ಭವ್ಯತೆಯ ಸೀಮೆಯಲ್ಲಿಯೆ ಸಂಚರಿಸುತ್ತಿರುವುಂತೆ ತೋರುತ್ತದೆ. ಆದರೆ ‘ನಾಸದೀಯಸೂಕ್ತ’ಕ್ಕೆ ಹೆಗಲೆಣೆಯಾಗುವ ಯೋಗ್ಯತೆ ಮತ್ತೊಂದು ಕೃತಿಯನ್ನು ಪ್ರಪಂಚದ ಸಾಹಿತ್ಯದಲ್ಲಿಯೆ ಕಣ್ಣಿಟ್ಟು ಹೊಡುಕಿದರೂ ಕಾಣುತ್ತೇವಯೊ ಇಲ್ಲವೊ? ಅಷ್ಟೊಂದು ಭವ್ಯವಾಗಿದೆ ಆ ಅದ್ವಿತೀಯ ಸೂಕ್ಷ್ಮ.[2]

ನಾಸದಾಸೀನ್ನೋ ಸದಾಸೀತ್ತದಾನೀ
ನಾಸೀದ್ರಜೋ ನೋ ವ್ಯೋಮಾ ಪರೋ ಯತ್‌‌ |
ಕಿಮಾವರೀವಃ ಕುಹ ಕಸ್ಯ ಶರ್ಮನ್‌
ಆಮ್ಭಃ ಕಿಮಾಸೀದ್ಗಹನಂ ಗಭೀರಮ್ ||

ನ ಮೃತ್ಯುರಾಸೀದಮೃತಂ ನ ತರ್ಹಿ
ನ ರಾರ್ತ್ಯಾ ಅಹ್ನ ಆಸೀತ್‌ ಪ್ರಕೇತಃ |
ಅನೀದವಾತಂ ಸ್ವಧಯಾ ತದೇಕಮ್‌
ತಸ್ಮಾದ್ಧಾನ್ಯನ್ನ ಪರಃ ಕಿಂ ಚ ನಾಸ ||

ತಮ ಆಸೀತ್‌ ತಮಸಾ ಗೂಢಮಗ್ರೇ
sಪ್ರಕೇತಂ ಸಲಿಲಂ ಸರ್ವಮಾ ಇದಮ್‌ |
ತುಚ್ಛೇನಾಭ್ವಪಿಹಿತಂ ಯದಾಸೀತ್‌
ತಪಸಸ್ತನ್ಮಹಿನಾಜಾಯತೈಕಮ್‌ ||

ಕಾಮಸ್ತದಗ್ರೇ ಸಮವರ್ತತಾಧಿ
ಮನಸೋ ರೇತಃ ಪ್ರಥಮಂ ಯದಾಸೀತ್‌ |
ಸತೋ ಬಂಧುಮಸತಿ ನಿರವಿಂದನ್‌
ಹೃದಿ ಪ್ರತೀಷ್ಯಾ ಕವಯೋ ಮನೀಷಾ ||

ತಿರಶ್ಚೀನೋ ವಿತತೋ ರಶ್ಮರೇಷಾಮ್‌
ಅಧಃ ಸ್ವದಾಸೀದುಪರಿ ಸ್ವಿದಾಸೀತ್‌ |
ರೇತೋಧಾ ಅಸನ್‌ ಮಹಿಮಾನ ಆಸನ್‌
ಸ್ವಧಾ ಅವಸ್ತಾತ್‌ ಪ್ರಯತಿಃ ಪರಸ್ತಾತ್‌ ||

ಕೋ ಅದ್ಧಾ ವೇದ ಕ ಇಹ ಪ್ರವೋಚತ್‌
ಕುತ ಆಜಾತ ಕುತ ಇಯಂ ವಿಸೃಷ್ಟಿಃ |
ಅರ್ವಾಗ್ದೇವಾ ಅಸ್ಯ ವಿಸರ್ಜನೇನ
ಅಥಾ ಕೋ ವೇದ ಯತ ಆಬಭೂವ ||

ಇಯಂ ವಿಸೃಷ್ಟಿರ್ಯತ ಆಬಭೂವ
ಯದಿ ವಾ ದಧೇ ಯದಿ ವಾ ನ |
ಯೋ ಅಸ್ಯಾಧ್ಯಕ್ಷಃ ಪರಮೇ ವ್ಯೋಮನ್‌
ಸೋ ಅಙ್ಗ ವೇದ ಯದಿ ವಾ ನ ವೇದ ||

ಅಚಿಂತ್ಯವೂ ಅನಾದ್ಯನಂತವು ಆಗಿರುವ ‘ಅವ್ಯಕ್ತ’ವನ್ನೂ ಅದರಿಂದ ಸೃಷ್ಟಿಯಾದ ‘ವ್ಯಕ್ತ’ದ ಹೊಮ್ಮಿಕೆಯನ್ನೂ ಕುರಿತ ವಸ್ತುವನ್ನೊಳಗೊಂಡಿದೆ ಈ ಸೂಕ್ತ. ಆದರೆ ಬುದ್ಧಿಯ ಮೂಲಕವಾಗಿ ವಿಚಾರದ ಮಾರ್ಗದಿಂದ ಆ ಅವ್ಯಕ್ತವನ್ನರಿಯುವುದೆಂತು?[3]ಸಿದ್ದಿಯಿಂದ ಮಾತ್ರ ಅದು ಸ್ವಸಂವೇದ್ಯ; ಬುದ್ಧಿಗೆಂದೂ ಅಸಾಧ್ಯ. ಅದು ವರ್ಣಿಸುವುದು ಯೋಗಿಯ ಅತ್ಯಂತ ಗಭೀರವಾದ ಧ್ಯಾನದ ಅವಸ್ಥೆಯಲ್ಲಿ ಗೋಚರವಾಗುವ ಭೂಮದ ಅನುಭೂತಿಯನ್ನು. ಸೂಕ್ತದ ಒಂದೊಂದು ಪದವೂ ಪದಪುಂಜವೂ ಪಂಕ್ತಿಯೂ ಭವ್ಯತೆಯ ಸಮುದ್ರಸ್ನಾಯುಗಳಂತೆ ಉಕ್ಕೆದ್ದು ಚಿದಾಕಾಶ ಪ್ರವೇಶಮಾಡಿ ನಮ್ಮ ಚೈತನ್ಯವನ್ನೆ ಉಲ್ಲೋಲ ಕಲ್ಲೋಲಗೈದು ಭೋರ್ಗರೆಯುವಂತೆ ಅನುಭವವಾಗುತ್ತದೆ. ‘ನ ಮೃತ್ಯುರಾಸೀದಮೃತಂ ನ ತರ್ಹಿ’ ತಮ ಆಸೀತ್‌ ತಮಸಾ ಗೂಢಂ’ ಮೃತ್ಯುವಿಲ್ಲ, ಅಮೃತವಿಲ್ಲ, ಹಗಲಿಲ್ಲ, ಇರುಳಿಲ್ಲ. ಕತ್ತಲೆಯ ಗರ್ಭದಲ್ಲಿ ಕತ್ತಲೆ ಹುದುಗಿತ್ತು. ‘ಹೃದಿ ಪ್ರತೀಷ್ಯಾ ಕವಯೋ ಮನೀಷಾ’ ‘ಸ್ವಧಾ ಅವಸ್ತಾತ್‌ ಪ್ರಯತಿಃ ಪರಸ್ತಾತ್‌’ ‘ಯೋ ಅಸ್ಯಾಧ್ಯಕ್ಷಃ ಪರಮೇ ವ್ಯೋಮನ್‌ ಸೋ ಅಙ್ಗ ವೇದ ಯದಿ ವಾ ನ ವೇದ’ ಕೊನೆಯ ಎರಡು ಪಂಕ್ತಿಯಂತೊ ಭವ್ಯತೆಗೆ ಕಿರೀಟವಿಟ್ಟಂತಿದ್ದು, ನಮ್ಮ ಸಮಸ್ತ ಚೇತನವನ್ನೂ ಅಸೀಮಾಯಾತ್ರಿಯನ್ನಾಗಿ ಮಾಡುತ್ತದೆ “ಎತ್ತಣಿಂದಾದುದೀ ವಿಸೃಷ್ಟಿ? ಅವನಿಂದಲೆ ಬಂದುದೊ ಅಥವಾ ಅವನಿಂದಲ್ಲವೊ? ಯಾರು ಆ ಪರಮ ವ್ಯೋಮದ ಅಧ್ಯಕ್ಷನೊ ಅವನಿಗೆ ಮಾತ್ರವೆ ಅದು ಗೊತ್ತು: ಅಥವಾ ಅವನಿಗೂ ಅದು ತೊತ್ತಿಲ್ಲವೋ ಏನೋ?” ಆ ಪ್ರಶ್ನೆ ಉತ್ತರದ ಗರ್ಭದಲ್ಲಿಯೆ ಹುದುಗುತ್ತದೆ. ಆ ಪ್ರಶ್ನೆಯ ಛದ್ಮರೂಪವೆ ಎಲ್ಲೆಗಾಣದ ಉತ್ತರದ ಅನಂತತೆಯಲ್ಲಿ ವಿಲೀನವಾಗುತ್ತದೆ. ಆ ಸಂದೇಹವೂ ಬುದ್ಧಿ ಸಂದೇಹವಲ್ಲ. ಬುದ್ಧಿಯ ಅಸಾಮರ್ಥ್ಯದ ಸೂಚಕವಷ್ಟೆ. ಅದರ ಪೂರ್ಣವಿರಾಮ ಇರುವುದು ಅಚಿಂತ್ಯ ಸಿದ್ಧಿಯಲ್ಲಿ! ಸಂದೇಹಾರ್ಥಕವಾದ ಆ ಪ್ರಶ್ನೆ ಸಿದ್ಧಿಯ ವಾಹಕವಷ್ಟೆ!

‘ನಾಸದೀಯ ಸೂಕ್ತ’ದಲ್ಲಿ ನಾವು ಗಮನಿಸಬೇಕಾದ ಇನ್ನೊಂದು ವಿಶೇಷವಿದೆ. ಅದು ಕವನಗಳಲ್ಲಿ ಕವನೋತ್ತಮವಾಗಿದ್ದರೂ ಸಾಮನ್ಯವಾಗಿ ಕಾವ್ಯಾರ್ಹ ಸಾಮಗ್ರಿ ಎಂದು ಪರಿಗಣಿತವಾದ ಯಾವುದನ್ನೂ ಒಳಗೊಂಡಿಲ್ಲ. ಬುದ್ದಿಗೆ ಅಗಮ್ಯವಾದ ಸ್ಥಿತಿಯೆ ಅದರ ವಸ್ತುವಾಗಿದ್ದರೂ ಅದು ಬುದ್ಧಿ ಪ್ರಧಾನವಾದ ಚಿಂತನಾಶವನ್ನೆ ತನ್ನ ಮುಖ್ಯ ಸಾಮಗ್ರಿಯನ್ನಾಗಿಸಿಕೊಂಡಿದೆ. ಕಾವ್ಯದಲ್ಲಿ ಇರಲೇಬೇಕೆಂದು ವಿಮರ್ಶಕರು ಸಾಧಿಸುವ ಮಾನವವರ್ಗ ಸಹಜವಾದ ರ‍್ತ್ಯಾದಿ ಭಾವಾಂಶಗಳೆ ಅಲ್ಲಿ ಇಲ್ಲ. ಗಂಡು ಹೆಣ್ಣಿನ ಸಂಬಂಧದ ರತಿಭಾವ, ವಿಯೋಗ ಮರಣ ದಃಖ ಸಂಕಟಾದಿಗಳಿಂದ ಒದಗುವ ಶೋಕ, ವೈರ ಸ್ಪರ್ಧೆಗಳಿಂದ ಸಂಭವಿಸುವ ಕ್ರೋಧ, ಇತ್ಯಾದಿ ಬಹುಜನಸುಲಭವಾದ ಶೃಂಗಾರ ಕರುಣ ರೌದ್ರ ವೀರರಸಗಳಾವುವೂ ಅಲ್ಲಿ ಪ್ರೇಶಿಸುವುದಿಲ್ಲ. ಕಾವ್ಯಕ್ಕೆ ಅತ್ಯಂತ ಅನರ್ಹವೆಂದು ಅನೇಕ ವಿಮರ್ಶಕರು ಖಂಡಿಸುವ ತತ್ತ್ವಾಂಶವೆ ಸೂಕ್ತದ ಜೀವಾತುವಾಗಿದೆ. ಪ್ರಾಣಮಯದಾಚೆಯ ಮನೋಮಯ ಮಿಜ್ಞಾನಮಯಗಳೆ ಸೂಕ್ತದ ಮುಖ್ಯ ಕೋಶಗಳಾಗಿವೆ. ವೇದರ್ಷಿಯ ಮಹೊನ್ನತ ಸಿದ್ಧಿಯ ರಸವಿದ್ಯುತ್ತು ಆ ಸೂಕ್ತದ ತತ್ತ್ವಮಯ ಶರೀರವನ್ನು ಸರ್ವತ್ರ ವ್ಯಾಪಿಸಿ, ಅದನ್ನು ದಿವ್ಯೋಜ್ವಲ ಚಿನ್ಮಯವನ್ನಾಗಿ ಮಾಡದೆ ಇದ್ದಿದ್ದರೆ ಅದು ಬರಿಯ ನೀರಸ ತತ್ತ್ವಾಲೊಚನೆಗಳ ಒಣ ಕಟ್ಟಿಗೆಯ ಹೊರೆಯಾಗಿ ಪರಿಣಮಿಸುತ್ತಿತ್ತು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಭುವನದ ಭಾಗ್ಯದಿಂದಲೆಂಬಂತೆ ಬುದ್ಧಿ ಭಾವಗಳ ವಿದ್ಯದಾಲಿಂಗನದಿಂದ ಎಂತಹ ಅದ್ಭುತ ರಸಸಿದ್ದಿ ಮೈದೋರಬಹುದೆಂಬುದಕ್ಕೆ ‘ನಾಸದೀಯ ಸೂಕ್ತ’ ಒಂದು ದಿವ್ಯ ನಿದರ್ಶನವಾಗಿ, ವ್ಯೋಮಚುಂಬಿಯಾಗಿ, ಮರ್ತ್ಯದ ಅಮರತೆಗೆ ನಿತ್ಯಸಾಕ್ಷಿಯಾಗಿ ನಿಂತಿದೆ; ವೇದಶಿಖರ ವೇದಿಕಾಗ್ರದಲ್ಲಿ ಕಡೆದು ನಿಲ್ಲಿಸಿದ ಭೂಮಾನುಭೂತಿಯ ಮಹಾ ಗೊಮ್ಮಟ ಪ್ರತಿಮೆಯಂತೆ!

ವೇದೋಪನಿಷತ್ತುಗಳ ಸೂಕ್ತ ಮತ್ತು ಮಂತ್ರಗಳಲ್ಲಿ ಭವ್ಯತೆ ಮತ್ತೆ ಮತ್ತೆ ಮೈದೋರಿದರೆ ನಾವೇನೂ ಹೆಚ್ಚಾಗಿ ಅಚ್ಚರಿಗೊಳ್ಳಬೇಕಾಗಿಲ್ಲ. ಏಕೆಂದರೆ ಭುಮವೆ ಅಲ್ಲಿಯ ಅನುಭೂತಿಯ ಮತ್ತು ಜಿಜ್ಞಾಸೆಯ ಪ್ರಧಾನ ವಸ್ತು. ಕಾವ್ಯ ಮಹಾಕಾವ್ಯಗಳಲ್ಲಿಯಾದರೂ ಜೀವನ ಸಮಸ್ತವೂ ಅದರ ವೈವಿಧ್ಯ ವಿಸ್ತಾರಗಳೊಡನೆ ವಸ್ತುವಾತಗುತ್ತದೆ. ಅಲ್ಲಿ ತನ್ನ ಅಸಂಖ್ಯವಾದ ವಿವಿಧ ಸ್ತರ ವಿನ್ಯಾಸಗಳಲ್ಲಿ ಪ್ರಕಟವಾಗುವ ಸೌಂದರ್ಯಕ್ಕೇ ಪ್ರಾಧಾನ್ಯ. ಆ ಸೌಂದರ್ಯದ ಮಾಧ್ಯಮದಲ್ಲಿ ಭೂಮವು ಅಲ್ಲೊಮ್ಮೆ ಇಲ್ಲೊಮ್ಮೆ ವಿರಳವಾಗಿ ಮಾತ್ರ ಗೋಚರವಾಗಿ ಭವ್ಯತೆಯ ಅವಿರ್ಭಾವಕ್ಕೆ ಅವಕಾಶವೊದಗುತ್ತದೆ.

ಮಹಾಭಾರತ ರಾಮಾಯಣಗಳಲ್ಲಿ ಭವ್ಯತೆಗೆ ನಿದರ್ಶನವಾಗುವ ಹಲಕೆಲವು ಸಂನಿವೇಶಗಳನ್ನೂ ಪಾತ್ರಗಳನ್ನೂ ನಾವು ಎದುರುಗೊಳ್ಳುತ್ತೇವೆ. ಭಗವದ್ಗೀತೆಯಲ್ಲಿ ಬರುವ ವಿಶ್ವರೂಪದರ್ಶನವೂ ಸುಂದರ ಕಾಂಡದಲ್ಲಿ ಬರುವ ಸಮುದ್ರಲಂಘನ ಸಂನಿವೇಶದ ಆಂಜನೇಯನ ಪಾತ್ರವೂ ಭವ್ಯತೆಗೆ ಮಹೋತ್ತಮ ನಿದರ್ಶನಗಳಾಗಿವೆ.[4]ಹಾಗೆಯೆ ಪಂಪನ ಆದಿಪುರಾಣದಲ್ಲಿ ಬರುವ ತೀರ್ಥಂಕರ ಶಿಶುವಿನ ಜನ್ಮಾಭಿಷೇಕದ ವರ್ಣನೆಯಲ್ಲಿಯೂ, ತರುವಾಯ ಸಂಭವಿಸುವ ಸೌಧರ್ಮೇಂದ್ರನ ಆನಂದ ನೃತ್ಯದ ವರ್ಣನೆಯಲ್ಲಿಯೂ ಅಭಿವ್ಯಕ್ತವಾಗಿ, ರೋಮರೋಮಗಳಲ್ಲಿ ಭೂಮಾಸಂಚಾರವಾಗುವಂತೆ ಮಾಡುವ ಭವ್ಯತೆ ಸಹೃದಯನ ರಸಪ್ರಜ್ಞೆಗೆ ಬ್ರಾಹ್ಮೀಮಧು ಅವತರಿಸುವಂತೆ ಮಾಡುತ್ತದೆ.[5] ಭರತ ಬಾಹುಬಲಿಯರ ದ್ವಂದ್ವಯುದ್ದ ಪ್ರಸಂಗದಲ್ಲಿ, ವಿಜಯದ ಉತ್ತುಂಗ ಶೃಂಗದಲ್ಲಿಯೆ ಅಹಂಕಾರ ನಿರಸನದ, ವೈರಾಗ್ಯ ಸಿದ್ಧಿಯ ಮತ್ತು ಮಹಾತ್ಯಾಗದ ಗೆಲ್ಗಂಬ ಸ್ಥಾಪನೆಯಾಗುವ ಸ್ಥಾನದಲ್ಲಿ; ದಿಗ್ವಿಜಯಿ ಚಕ್ರವರ್ತಿಯೊರ್ವನ ಹೆಮ್ಮೆ ಎದುರಾಳಿಯ ಕಾಲ್ದುಳಿತಕ್ಕೆ ಸಿಕ್ಕಿ, ಪ್ರೇಕ್ಷಕ ಸಹಸ್ರರ ಕಣ್ಣೆದರೆ ಅವಮಾನಿತವಾದಂದು, ಆ ಅವಮಾನದ ಅಧೊಗತಿಯಿಂದಲೆ ಆಕಾಶಗಾಮಿಯಾಗಿ ತಲೆಯೆತ್ತಿದ ವಿನಯಗೌರವಗಳ ಅದ್ಭುತ ಜಯೋತ್ಸವದ ಸಂದರ್ಭದಲ್ಲಿ; ರಜೋಗುಣದ ಕ್ಷಾತ್ರತೇಜಸ್ಸು ಚಾತ್ತ್ವಿಕತೆಗೆ ಸಂಪೂರ್ಣವಾಗಿ ಶರಣಾಗತವಾಗಿ ತನ್ನನ್ನು ತಾನೆ ಸಮರ್ಪಿಸಿಕೊಂಡ ಸಂನಿವೇಶದಲ್ಲಿ ಬಾಹುಬಲಿ:

ನೆಲಸುಗೆ ನಿನ್ನ ವಕ್ಷದೊಳೆ ನಿಶ್ಚಳಮೀ ಭಟಖಡ್ಗಮಂಡಲೋ
ತ್ಪಲವನವಿಭ್ರಮಭ್ರಮರಿಯಪ್ಪ ಮನೋಹರಿ ರಾಜ್ಯಲಕ್ಷ್ಮಿ ಭೂ
ವಲಯಮನಯ್ಯನಿತ್ತುದುಮನಾಂ ನಿನಗಿತ್ತೆನಿದೇವುದಣ್ಣ ನೀ
ನೊಲಿದ ಲತಾಂಗಿಗಂ ಧರೆಗಮಾಟಿಸಿದಂದು ನೆಗೞ್ತೆ ಮಾಸದೇ?

ಎಂದು

ನಿಜಪಾದಾಂಬುರುಹಕ್ಕೆ ಪಾದ್ಯವಿಧಿಯಂ ನೇತ್ರಾಂಬುವಿಂ ಮಾಡುವ
ಗ್ರಜನತ್ಯುನ್ನತಮಪ್ಪ ಮಸ್ತಕದ ಮೇಗೋರಂತೆ ಪಾಯ್ವಾತ್ಮಬಾ
ಷ್ಪ ಜಳೌಘಂಗಳಿನೆಂದು ಬಾಹುಬಲಿ ತನ್ನಿಂದಂ ನಿಧೀಶಂಗೆ ವಂ
ಶಜ ರಾಜ್ಯಾಭಿಷವೋತ್ಸವಂ ನೆಗೞ್ದುದೆಂಬಾಶಂಕೆಯಂ ಮಾಡಿದಂ

ಎಂಬ ಪವಿತ್ರ ಕಾವ್ಯ ತೀರ್ಥೌಘಜಲಪಾತಾಭಿಷೇಕದ ಪುಣ್ಯಾಘಾತದಿಂದ ಸಹೃದಯ ಶಿರೋಂಬುಜ ಬಿತ್ತರಿಸಿ ತತ್ತರಿಸುವ ಸಂದರ್ಭದಲ್ಲಿ ಮತ್ತೊಮ್ಮೆ ಅನುಭವಕ್ಕೆ ಬರುತ್ತದೆ. ಸಾತ್ತ್ವಿಕ ಮಹಾಭವ್ಯತೆ!

ಭವ್ಯತೆಯ ಇನ್ನೊಂದು ನಿದರ್ಶನ ಜನ್ನಮಹಾಕವಿಯ ಯಶೋಧರ ಚರಿತ್ರೆಯಲ್ಲಿ ದೊರೆಯುತ್ತದೆ. ‘ಭೈರವನ ಜವನ ಮಾರಿಯ ಮೂರಿಯ ವೊಲ್‌’ನಿಂದ ಮಾರಿದತ್ತನು ‘ಲಲಿತಾಕಾರರ ಧಿರರ ಬಂದ ಕುಮಾರರ ರೂಪಿಂಗೆ ಠಕ್ಕುಗೊಂಡಂತಿರ್ದ’ ಸಂದರ್ಭದಲ್ಲಿ. ಅರಸನ ಕೆಲಬಲದವರು ‘ಪರಸಿರೆ ಪರಸಿರೆ ನೃಪೇಂದ್ರನಂ ನೀವ್‌!’ ಎಂದಾಗ ತಂಗಿ ಅಭಯಮತಿಯೊಡನೆ ಧೀರಪ್ರಶಾಂತವಾಗಿ ನಿಂತಿದ್ದ ಅಭಯರುಚಿ ಕುಮಾರನು ಇನಿತೂ ವಿಚಲಿತನಾಗದೆ ‘ನೃಪವರ, ನಿರ್ಮಲ ಧರ್ಮದಿಂದ ಪಾಲಿಸು ಧರೆಯಂ!’ ಎಂದು ಹರುಸುತ್ತಾನೆ. ಅಂತಹ ಸ್ಥೈರ್ಯ ಧೈರ್ಯ ಅವೈರ ಶಾಂತಚಿತ್ತತೆಗಳನ್ನು ಮೊತ್ತಮೊದಲು ಎದುರುಗೊಂಡ ಆ ಭಯಂಕರಕರ್ಮಿ ಮಾರಿದತ್ತನ ಹೃದಯದಲ್ಲಿಯೂ ‘ಭೂಮಾ’! ಸಂಚಾರವಗುತ್ತದೆ. ‘ಕಿಳೞ್ತಕರವಾಳ್ಗಮೆನಗಂ ಮಿೞ್ತುವಿನಂತಿರ್ದ ಮಾರಿಗಂ ಬೆದರದೆ ನಿಂದು , ಅೞ್ತೆಯನೆ ನುಡಿದ ಇವರ ನೆಗೞ್ತೆ ಕರಂ ಪಿರಿದು’! ಎಂಬ ಮೆಚ್ಚುಗೆಯ ಭಾವಮಯ ಚಿಂತನದ ಆಶ್ಚರ್ಯರೂಪವನ್ನು ತಳೆಯುತ್ತದೆ, ಆ ಭೂಮಾ ಸಂಚಾರದ ಪ್ರತಿಮೆ. ಆ ಭೂಮದ ಭೀಷಣತೆಗೆ ಅಳುಕಿ ಅಪ್ಪಳಿಸಲ್ಪಟ್ಟ ಮಾರಿದತ್ತನ ಸಮಸ್ತ ಚೈತನ್ಯವೂ ಕೈಮುಗಿದು ‘ಧೀರರಕಟ ಕುಮಾರರ್!’ ಎಂಬ ಉದ್ಗಾರವಾಗಿ ಹೊಮ್ಮುತ್ತದೆ. ಅವನ ಹೃದಯದ ಆ ಉದ್ಗಾರವೆ ಅವನ ಉದ್ಧಾರದ ಮಂತ್ರವಾಗಿ, ಅವನ ಆತ್ಮ ಊರ್ಧ್ವಮುಖ ಪ್ರವಾಸಕ್ಕೆ ದೀಕ್ಷೆಗಳ್ಳುತ್ತದೆ.

ಭೀಮ ದುರ್ಯೋಧನರ ಗದಾಯದ್ಧ ಸನ್ನಿವೇಶದಲ್ಲಿ, ಕರ್ಣಾವಸಾನ ಸನ್ನಿವೇಶದಲ್ಲಿ, ಭೀಷ್ಮಪಾತ್ರದಲ್ಲಿ, ಅರ್ಜುನ ಅಭಿಮನ್ಯುವಂತಹರ ವೀರ ಜೀವನ ಘಟ್ಟಗಳ ಪಂಪ ನಾರಣಪ್ಪರ ಮಹಾಕೃತಿಗಳಲ್ಲಿ, ರಜೋಗುಣ ಪ್ರಚುರವಾದ ಭವ್ಯತೆಯನ್ನು ನಾನಾ ಮುಖಗಳಲ್ಲಿ ಸಂಧಿಸುತ್ತೇವೆ. ಆಸುರೀ ಪಕ್ಷದ ವಿಧ್ವಂಸನದಲ್ಲಿ ಧೈವೀ ಪಕ್ಷದ ಉತ್ಕರ್ಷದ ಸಾತ್ತ್ವಿಕತೆ ಅಂತರ್ಗತವಾಗಿರುವುದಾದರೂ ಕೆಲವು ವೇಳೆ ಅಲ್ಲಿಯ ರಕ್ತಾರುಣ ಭವ್ಯತೆಯಲ್ಲಿ ಸಂಚರಿಸುವ ಭೂಮಾನುಭುತಿಯ ದಿವ್ಯತರ ವಿಭೂತಿ, ಗೋಚರಿಸದಿರಬಹುದು. ಆದರೆ ಪ್ರಾಕೃತವಾದ ಮಾನುಷ ಕಲಾಭಿರುಚಿಗೆ ಶ್ವೇತಭವ್ಯತೆಗಿಂತಲೂ ಅರುಣಭವ್ಯತೆಯೆ ಹೆಚ್ಚು ಗ್ರಾಹ್ಯವೂ ಆಸ್ವಾದವೂ ಆಗುತ್ತದೆ.[6]

ವಸ್ತು ಪ್ರಧಾನವಾದ ಅದರಲ್ಲಿಯೂ ಕಥಾ ವಸ್ತುಪ್ರಧಾನವಾದ ಕಾವ್ಯ ಮಹಾಕಾವ್ಯಗಳಲ್ಲಿ ಭವ್ಯತೆ ಅಲ್ಲಿ ಬರುವ ಪಾತ್ರಗಳಲ್ಲಿ ನಿಷ್ಠವಾಗಿ ಅಥವಾ ಸಂಭವಿಸುವ ಘಟನೆಗಳಿಂದ ಸೃಷ್ಟವಾಗಿ ಸಹೃದಯ ಪ್ರಜ್ಞೆಗೆ ಮೂಡುತ್ತದೆ. ಆದರೆ ಭಾವಪ್ರಧಾನವಾದ ಕವಿತೆಯಲ್ಲಿ ಅದರ ಹೊಮ್ಮಿಕೆ ಇನ್ನೂ ಹೆಚ್ಚು ನೇರವಾಗುತ್ತದೆ. ವಸ್ತುಕಾವ್ಯದಲ್ಲಿ ಭವ್ಯತಾಪ್ರಕಾಶನಕ್ಕಿರುವ ಪರೋಕ್ಷತೆಗೆ ಬದಲಾಗಿ ಭಾವಕಾವ್ಯದಲ್ಲಿ ಕವಿಯ ಸ್ವಾನುಭವದ ಅಪರೋಕ್ಷತೆಗೆ ಅಗ್ರಪಟ್ಟ ದೂರೆಯುತ್ತದೆ. ವಸ್ತುಕಾವ್ಯದಲ್ಲಿ ಅಭಿವ್ಯಕ್ತವಾಗುವ ಭವ್ಯತೆ ಕವಿಯ ನೇರವಾದ ಭೂಮಾನುಭೂತಿ ಆಗಬೇಕಾಗಿಲ್ಲ; ಅದು ಮುಖ್ಯವಾಗಿ ಪಾತ್ರದ ಭೂಮಾನುಭೂತಿ ಅಥವಾ ಪಾತ್ರಪಾತ್ರಗಳ ವ್ಯವಹಾರ ಚಿತ್ರಣದಿಂದ ಸಮುದ್ಭವಿಸುವ ಭೂಮನುಭೂತಿ. ಅಲ್ಲಿ ಕವಿಪ್ರಜ್ಞೆ ಆವಶ್ಯಕವಾದರೂ ನಿಮಿತ್ತಮಾತ್ರ; ಅದು ಭೂಮವು ಅವತರಿಸುವುದಕ್ಕೆ ಅರ್ಹತೆಯುಳ್ಳ ಒದಗೆ ಮಾತ್ರ.

ಕಾವ್ಯ ಮಹಾಕಾವ್ಯ ಪುರಾಣಾದಿಗಳು ವಸ್ತುಕಾವ್ಯಗಳಾಗಿ ಮೊದಲನೆಯ ಗುಂಪಿಗೆ ಸೇರುತ್ತವೆ. ವೇದೋಪನಿಷತ್ತುಗಳು ದ್ರಷ್ಟಾರರಾದ ಋಷಿಗಳ ಅನುಭೂತಿಯನ್ನೆ ಸೂಕ್ತ ಮತ್ತು ಮಂತ್ರರೂಪದಲ್ಲಿ ಒಳಗೊಂಡಿರುವುದರಿಂದ ಅವೆಲ್ಲ ಬಹುಮಟ್ಟಿಗೆ ಎರಡನೆಯ ಗುಂಪಿಗೆ ಸೇರಿದ ಭಾವಕವಿತೆಗಳಾಗುತ್ತವೆ. ಅಂತೆಯೆ ನಮ್ಮ ಸಂತಕವಿಗಳು, ವಚನಕರರು, ಅನುಭಾವಿಗಳು ತಮ್ಮ ಅಪೇಕ್ಷೆ, ಅಭೀಪ್ಸೆ, ಆದರ್ಶ, ಆಶಯ, ಅನುಭೂತಿಗಳನ್ನೆ ತಮ್ಮ ಹಾಡು ಗೀತೆ ಕವಿತೆಗಳಲ್ಲಿ ಹೇಳಿಕೊಂಡಿರುವುದರಿಂದ ಅವೆಲ್ಲ ಭಾವಕಾವ್ಯಗಳಾಗುತ್ತವೆ. ಅವುಗಳಲ್ಲಿ ಗೋಚರಿಸುವ ಭವ್ಯತೆಗೆ ಕವಿಯ ಅಪರೋಕ್ಷವಾದ ಭೂಮಾನುಭೂತಿಯೆ ನೇರವಾದ ಕಾರಣವಾಗುತ್ತದೆ. ಭಗವದ್ವಸ್ತುವೆ ಮೂಲಕಾರಣವೂ ಮುಖ್ಯ ಪ್ರಯೋಜನವೂ ಪ್ರಧಾನ ಪ್ರೇರಣೆಯೂ ಆಗಿರುವ ಭಕ್ತಿಗೀತಾಕೃತಿಗಳಲ್ಲಿ ಅಧ್ಯಾತ್ಮವೆ ಅದರ ಭಾವದ ಉಲ್ಲಾಸದಲ್ಲಿಯೊ ಅಥವಾ ಅಭಾವದ ಸಂಕಟದಲ್ಲಿಯೂ ಇರುವುದರಿಂದ ಭೂಮವು ಒಂದಲ್ಲ ಒಂದು ಮಟ್ಟದಲ್ಲಿ ಸಂಚರಿಸಿದರೂ ಕಲೆಯ ಮಟ್ಟದ ಭವ್ಯತೆಗೇರುವುದು ಅತಿವಿರಳ. ಏಕೆಂದರೆ ಭೂಮದ ಅನುಭೂತಿಯ ಸುಳಿವು ಇದ್ದ ಮಾತ್ರಕ್ಕೆ ಕಲೆಯ ಭೂಮಿಕೆಯಲ್ಲಿ ಭವ್ಯತೆ ತನಗೆ ತಾನು ಉಂಟಾಗುವುದಿಲ್ಲ. ಭೂಮದ ಅನುಭೂತಿ ತನ್ನ ವಿಭೂತಿಪ್ರಮಾಣದಲ್ಲಿ ಕಾವ್ಯಲೋಕದಲ್ಲಿ ಅಭಿವ್ಯಕ್ತವಾಗಬೇಕಾದರೆ ಅದು ಭವ್ಯತಾ ಅನುಭವನನ್ನು ಸಹೃದಯನಿಗೆ ನೀಡುವ ‘ಶಕ್ತಿ’ ಗೇರಬೇಕಾಗುತ್ತದೆ. ಆ ಶಕ್ತಿ ಚಿಂತನಾಂಶ ಕಲ್ಪನಾಂಶ ರೂಪಾಂಶಗಳ ಅತ್ಯುಚ್ಚ ಮಟ್ಟದ ನೆರವಿನಿಂದ ಮಾತ್ರ ಸಾಧ್ಯವಾಗುತ್ತದೆ. ಅಂದರೆ ಭೂಮದ ಅಭಿವ್ಯಕ್ತಿಗೆ ಸೌಂದರ್ಯಮಾಧ್ಯಮದ ಸರ್ವಶ್ರೇಷ್ಠ ಸೇವೆ ಸಲ್ಲಬೇಕಾಗುತ್ತದೆ. ಭವ್ಯತಾ ಅನುಭವ ಪ್ರಚೋದನೆಗೆ ಮಹಾಕವಿ, ಮಹಾಕಾವ್ಯ, ಮಹೋಪಮೆ, ಮಹಾಶೈಲಿ ಇವುಗಳ ಮಹತ್ತು ಸಹಕರಿಸದಿದ್ದರೆ ಭೂಮಾನುಭೂತಿ ತನಗೆ ತಾನೆ ಭವ್ಯತೆಗೇರಲು ಸಾಧ್ಯವಿಲ್ಲ, ಕಾವ್ಯಲೋಕದಲ್ಲಿ. ವೈನತೇಯನಾದರೂ ಅವನ ವೀರ್ಯಕ್ಕೆ ತಕ್ಕ ಪ್ರಮಾಣದ ರೆಕ್ಕೆಗಳಿಲ್ಲದಿದ್ದರೆ ಅವನ ಬಲಿಷ್ಠತೆ ಪ್ರಕಾಶಿಸುವುದೆಂತು, ವಿಯಲ್ಲೋಕದಲ್ಲಿ?

ಲೋಕಾನುಭವವಾದ ಭೂಮಾನುಭೂತಿ ಎಷ್ಟೆ ಹಿರಿದಾದರೂ ಕಲೆಯ ಲೋಕದಲ್ಲಿ ಅದು ಭವ್ಯತೆಯಾಗಿ ಅಭಿವ್ಯಕ್ತವಾಗದೆ ತನಗೆ ತಾನೆ ತನ್ನ ಹಿರಿತನವನ್ನು ಮೆರೆಯಲಾರದು. ಅದ್ದರಿಂದಲೆ ಎಂತಹ ಆಧ್ಯಾತ್ಮಕ ಸತ್ಯವಿರಲಿ, ಎಂತಹ ತೀವ್ರ ಭಕ್ತಿಭಾವವಿರಲಿ, ಎಂತಹ ಲೋಕಸಂಗ್ರಹಕಾರಕವಾದ ನೀತಿ ಪ್ರಚೋದಕ ಶಕ್ತಿಯಿರಲಿ, ಎಂತಹ ಕಂಬನಿಗರೆಯಿಸುವು ರಸಾವೇಶವಿರಲಿ, ವೇದಸೂಕ್ತವಾಗಲಿ ಉಪನಿಷನ್ಮಂತ್ರವಾಗಲಿ ಶತಗವಾಗಲಿ ವಚನವಾಗಲಿ ಭಕ್ತಿಗೀತೆಯಾಗಲಿ ದೇವರನಾಮವಾಗಲಿ ಕೀರ್ತನಿಯಾಗಲಿ ಸಾಹಿತ್ಯ ವಿಮರ್ಶಕನ ‘ಭವ್ಯತಾ’ ಅಗ್ನಿಪರೀಕ್ಷೆಯಲ್ಲಿ ಉತ್ತೀರ್ಣವಾಗದೆ ಭೂಮವು ಭವ್ಯವಾಗುವುದು ಸಾಧ್ಯವೇ ಇಲ್ಲ. ಅದೇನಾದರೂ ಸಾಧ್ಯವಾಗಿದ್ದ ಪಕ್ಷದಲ್ಲಿ, ನರದೌರ್ಬಲ್ಯವೆ ಮುಖ್ಯಕಾರಣವಾದರೂ ಭಕ್ತಿಪರವಶನಾಗಿದ್ದೇನೆಂಬ ಮಧುರ ಭ್ರಮೆಯಿಂದ ಕಣ್ಣೀರು ಕರೆಯುವ ಯಃಕಶ್ಚಿತ ದಾಸಮಹಾಶಯನ ಸಂಕೀರ್ತನೆಯೂ ಭವ್ಯವಾಗಿಬಿಡುತ್ತಿತ್ತು!

ಆದಕಾರಣವೆ ನಮ್ಮ ಭಾವಸಾಹಿತ್ಯದಲ್ಲಿ ಆಧ್ಯಾತ್ಮಿಕತೆ, ಭಕ್ತಿ, ತ್ಯಾಗ, ಶರಣಾಗತಿ, ಸಮರ್ಪಣೆ, ಪಶ್ಚಾತ್ತಾಪ, ಪಾಪಭೀತಿ, ಮೃತ್ಯುಭಯ, ಕ್ಷಮಾಯಾಚನೆ ಇತ್ಯಾದಿ ಭೂಮಾಸಂಬಂಧವಾದ ವಸ್ತುಭಾವಗಳಿಗೇನೂ ಕೊರತೆಯಿಲ್ಲವಾದರೂ ಭವ್ಯತೆಯ ಮಟ್ಟಕೇರುವ ಭೂಮಾನುಭೂತಿಯ ಅಭಿವ್ಯಕ್ತಿ ಅಪೂರ್ವವೆಂದೇ ಹೇಳಬೇಕಾಗುತ್ತದೆ. ಆಂಗ್ಲೇಯ ಭಾವಸಾಹಿತ್ಯದಲ್ಲಿ ಭೂಮಾಸಂಬಂಧವಾದ ವಸ್ತುಭಾವಗಳು ನಮ್ಮಲ್ಲಿರುವಷ್ಟು ವಿಫುಲವಾಗಿಲ್ಲವೆಂದೆ ಹೇಳಬಹುದಾದರೂ ಕಾವ್ಯಲೋಕದಲ್ಲಿ ಅಭಿವ್ಯಕ್ತಗೊಂಡಿರುವ ಭವ್ಯತೆ ಮಾತ್ರ ನಮ್ಮಲ್ಲಿರುವಷ್ಟು ವಿರಳವೂ ಅಪೂರ್ವವೂ ಆಗಿಲ್ಲ. ಆದರೂ ಅಲ್ಲಿಯ ಭಾವಕಾವ್ಯಕ್ಷೇತ್ರದ ವಿಸ್ತೀರ್ಣವನ್ನೆ ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಅಲ್ಲಿಯೂ ಭವ್ಯತೆಯ ಮಹೋನ್ನತಿಗೇರುವ ಕಾವ್ಯಭಾಗ ಅಲ್ಪವೆ.

ಭವ್ಯತಾ ತತ್ತ್ವವಿಚಾರವನ್ನು ಕಾವ್ಯಮೀಮಾಂಸೆಯ ದೃಷ್ಟಿಯಿಂದ ಗಹನವಾಗಿ ಅಲೋಚಿಸಿ ಉದ್ದಾಮ ಲೇಖನಗಳನ್ನು ಬರಿದಿರುವ ವಿಮರ್ಶಕವರೇಣ್ಯ ಎ.ಸಿ. ಬ್ರಾಡ್ಲೆಯವರು ಇಂಗ್ಲೀಷ್‌ ಕವಿಪಂಕ್ತಿಯಲ್ಲಿ ಮಿಲ್ಟನ್‌ ಮಹಾಕವಿಯ ತರುವಾಯ ಬಂದ ಕವಿಗಣದಲ್ಲಿ ‘ಭವ್ಯ’ ಪಟ್ಟಕ್ಕೆ ಅರ್ಹರಾದವರ ಹೆಸರನ್ನು ಹುಡುಕಹೊರಟು, ಒಂದು ಹೆಸರನ್ನು ಮಾತ್ರ ಆರಿಸಲು ಸಮರ್ಥರಾಗಿದ್ದಾರೆ. ಪ್ರಧಾನವಾಗಿ ವಸ್ತುಕಾವ್ಯಕವಿಯಾದ ಮಿಲ್ಟನ್‌ ಕವಿಗೆ ಭವ್ಯತೆಯಲ್ಲಿ ಸರಿದೂಗುವ ಕವಿ ಎಂದರೆ ಪ್ರಧಾನವಾಗಿ ಭಾವಕಾವ್ಯ ಕವಿಯಾದ ವರ್ಡ್ಸ್‌‌ವರ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.[7]

ಮಿಲ್ಟನ್ನಿನಂತೆ ಪ್ರಧಾನವಾಗಿ ಉದ್ದಾಮ ವಿಷಯಗಳನ್ನೆ ಆರಿಸಿಕೊಂಡು ವಸ್ತುಕಾವ್ಯಗಳನ್ನು ರಚಿಸದೆ ಅಲ್ಪವ್ಯಕ್ತಿಗಳ ಸಾಮಾನ್ಯ ಜೀವನದ ಸಾಧಾರಣ ವಿಷಯಗಳನ್ನೆ ಆರಿಸಿಕೊಂಡು ಪ್ರಧಾನವಾಗಿ ಭಾವಗೀತೆಯನ್ನೆ ನಿರ್ಮಿಸಿದ ವರ್ಡ್ಸ್‌‌ವರ್ತ ತನ್ನ ಅಪರೋಕ್ಷ ಭೂಮಾನುಭೂತಿಯಿಂದಲೆ ಭವ್ಯತೆಯನ್ನು ಸೃಷ್ಟಿಸಿದ್ದಾನೆ. ಅವನು ವಿಶೇಷವಾಗಿ ಪ್ರಯೋಗಿಸುವ ‘the visionary power’ ‘silence’ ‘solitude’ ‘immortality’ ‘infinite’ ‘eternal’ ‘sublimity’ ಮೊದಲಾದ ದರ್ಶನಧ್ವನಿಪೂರ್ಣವಾದ ಪದಗಳಲ್ಲಿ ತಾನು ‘ದರ್ಶನಕವಿ’ ಎಂಬುದನ್ನು ಮುಚ್ಚುಮರೆಮಾಡಿಲ್ಲ. ‘ಅಲ್ಪ’ದಲ್ಲಿ ‘ಭೂಮಾ’ದ ದರ್ಶನವೆ ವರ್ಡ್ಸ್‌‌ವರ್ತ ಕವಿಯನ್ನು ಅಲ್ಪತೆಯಿಂದ ಮಾರುಮಾಡಿ ಮಹೋನ್ನತಿಗೇರಿಸಿದೆ.[8]

ನಿಸರ್ಗದೃಶ್ಯಗಳಲ್ಲಿ, ಪ್ರಕೃತಿ ಸಾನ್ನಿಧ್ಯದಲ್ಲಿ, ನಿರ್ಜನಪ್ರದೇಶಗಳಲ್ಲಿ, ಪರ್ವತಾಗ್ರಗಳಲ್ಲಿ ಬಾನು ಬಂಡೆ ಬೆಟ್ಟ ಝರಿ ಗಿರಿ ಕಂದರ ಕಾಡುಗಳ ರುದ್ರರಮಣೀಯ ವಿಜನ ಏಕಾಂತದ ಸಾಹಚರ್ಯದಲ್ಲಿ ದರ್ಶನಕವಿಯಾದ ವರ್ಡ್ಸ್‌‌ವರ್ತಗೆ ಭೂಮದ ಅನುಭೂತಿ ಅನಿವಾರ್ಯವಾದ ಅನುಭವಾಗಿ ಪರಿಣಮಿಸಿತ್ತು. ಆತನ ಚೈತನ್ಯದ ಸ್ವತಃಸಿದ್ದವಾದ ಸ್ವಭಾವವೆ ಭೂಮಾಪರವಾಗಿದ್ದಂತೆ ತೋರುತ್ತದೆ.[9] ಆತನ ಸುಪ್ರಸಿದ್ದ ಮಹಾನುಭಾವಗೀತೆಗಳಲ್ಲಿಯೂ ಆತ್ಮಕಥನರೂಪದ ಸುದೀರ್ಘ ಮಹಾಕೃತಿಗಳಾದ Prelude ಮತ್ತು Excursion ಗಳಲ್ಲಿಯೂ ಭವ್ಯತೆಗೇರಿದ ಭೂಮಾನುಭೂತಿಯ ಪವಿತ್ರಪೂಜಾಸ್ಥಾನಗಳನ್ನು ಮತ್ತೆ ಮತ್ತೆ ಸಂದರ್ಶಿಸುತ್ತೇವೆ. ಆ ಕಾವ್ಯಲೋಕದಲ್ಲಿ ಯಾತ್ರಿಯಾಗುವ ಸಹೃದಯನು ಪುನಃ ಪುನಃ ಬ್ರಾಹ್ಮೀಪ್ರಜ್ಞೆಯ ಭವ್ಯಕ್ಷೇತ್ರಗಳನ್ನು ಪ್ರವೇಶಿಸಿ ಪುನೀತನಾಗುವ ಅನುಭವವನ್ನು ಪಡೆಯುವುದರಿಂದಲೆ ಬ್ರಾಡ್ಲೆಯ ಮಿಮರ್ಶೆ ತುತ್ತತುದಿಯಲ್ಲಿ – ‘For me, I confess, all this is far from being ‘mere poetry’ ಎಂಬ ಗೌರವಪೂರ್ಣವಾದ ವಿನಯೋಕ್ತಿಯಲ್ಲಿ ಕೈಮುಗಿದು ಹಣೆಮಣಿದು ನಮಸ್ಕರಿಸಿ ಬೀಳ್ಕೊಂಡಿದೆ.

ಒಮ್ಮೆ ವರ್ಡ್ಸ್‌‌ವರ್ತ ತನ್ನೊಬ್ಬ ಮಿತ್ರನೊಡನೆ ಒಂದು ಪರ್ವತ ಪ್ರದೇಶದಲ್ಲಿ ಸಂಚರಿಸುತ್ತಾ ಅದರ ಶಿಖರಸ್ಥಾನವನ್ನು ದಾಟಿ ಒಮದು ಅದ್ಭುತ ದರಿಕಂದರ ಸೀಮೆಯನ್ನು ದೃಷ್ಟಿಸಿದಾಗ[10]ತನಗಾದ ಭೂಮಾನುಭೂತಿಯನ್ನು ಭವ್ಯತೆಯ ಪರಾಕಾಷ್ಠೆಗೆ ನಿದರ್ಶನವೆಂಬಂತೆ ವರ್ಣಿಸಿದ್ದಾನೆ:

“Downwards we hurried fast,
And, with the half-shaped road which we had missed,
Entered a narrow chasm. The brook and road
Were fellow-travelers in this gloomy strait,
And with them did we journey several hours
At a slow pace. The immeasurable height
Of woods decaying, never to be decayed,
The stationary blasts of waterfalls,
And in the narrow rent at every turn
Winds thwarting winds, bewildered and folorn,
The torrents shooting from the clear blue sky,
The rocks that muttered close upon our ears,
Black drizzling crags that spake by the way-side
As if a voice were in them, the sick sight
And giddy prospect of the raving stream,
The unfettered clouds and region of the Heavens,
Tumult and peace, the darkness and the light–
Were all like working of one mind, the features
Of the same face, blossoms upon the tree;
Characters of the great Apocalypse,
The types and symbols of Eternity,
Of first, and last, and midst, and without end.

ತಾರುಣ್ಯದಲ್ಲಿ ತಾನು ಕೈಕೊಂಡ ಒಂದು ದೋಣಿಯ ಸಾಹಸದಲ್ಲಿ ತನಗೊದಗಿದ ಒಂದು ಅದ್ಬುತ ಅನುಭವವನ್ನು Prelude ನಲ್ಲಿ ಭವ್ಯವಾಗಿ ರೂಪಿಸದ್ದಾನೆ ವರ್ಡ್ಸ್‌‌ವರ್ತ. ಒಂದು ಪರ್ವತಪ್ರದೇಶದ ದೊಡ್ಡ ಸರೋವರದಲ್ಲಿ ಅಂಚಿಗೆ ಕಟ್ಟಿದ್ದ ದೋಣಿಯೊಂದನ್ನು ಕಳ್ಳತನದಿಂದ ಬಿಚ್ಚಿ, ಅದರಲ್ಲಿ ಕುಳಿತು, ಒಬ್ಬನೆ ಹುಟ್ಟು ಹಾಕುತ್ತಾ ಒಂಟಿಯಾಗಿ ಹೊರಡುತ್ತಾನೆ. ಹೋಗುತ್ತಾ ಹೊಗುತ್ತ ಬೈಗಾಗುತ್ತದೆ. ಬೈಗುಗಪ್ಪು ಮುಸುಗುತ್ತದೆ. ಆಗ ಸರೋವರದ ಒಂದು ದೂರ ತೀರದಲ್ಲೆ ಪಡುವಣ ಬಾನಿಗೆದರಾಗಿ ದಿಗಂತದಲ್ಲಿ ಮೇಲಕ್ಕೆದ್ದ ಒಂದು ಶಿಖರದ ಹೆಬ್ಬಂಡೆನೆತ್ತಿ ಮೊದಲು ಕಿರಿದಾಗಿ ಕಣ್ಣಿಗೆ ಬೀಳುತ್ತದೆ. ಅದರ ಕಡೆಗೆ ಇವನ ದೋಣಿ ಸಾಗಿದಂತೆಲ್ಲ ಅದರ ಆಕಾರ ಸಂಧ್ಯಾಕಾಶಕ್ಕೆದರಾಗಿ ಹಿಗ್ಗಿ ಹಿಗ್ಗಿ ಕರ್ರ್‌ಗೆ ಶಕುನಪೂರ್ಣವಾಗಿ ಬಳೆಬಳೆದು, ಕವಿಯುತ್ತಿದ್ದ ಸಂಜೆಗತ್ತಲ್ಲಿ, ತಾನು ಮಾಡಿದ ಕಳ್ಳತನದ ತಪ್ಪಿಗೆ ಶಿಕ್ಷಾರೂಪಿಯಾಗಿ ಅವಿರ್ಭವಿಸಿ, ಆಕ್ರಮಸಲೆಂದು, ಮೆಲ್ಲಮೆಲ್ಲನೆ ಆದರೂ ದೃಢ ನಿಶ್ಚಯತೆಯಿಂದ ಬಳಿಸಾರುತ್ತಿದ್ದ ಪ್ರಾಯಶ್ಚಿತ್ತಾತ್ಮಕವಾದ ಆಧ್ಯಾತ್ಮಿಕ ಧರ್ಮ ಭೀತಿಭೂತವೆಂಬಂತೆ[11]ಗಗನವನ್ನೆಲ್ಲ ವ್ಯಾಪಿಸಿ ಬದ್ದಭ್ರುಕಟಿಯಾಗಿ ಮೇಲ್ವಾಯುತ್ತದೆ. ಎದೆ ತಣ್ತು ಹೆದರಿ, ಬೇಗ ಬೇಗನೆ ದೋಣಿಯನ್ನು ಹಿಂತಿರುಗಿಸಿ ಕತ್ತಲಲ್ಲಿಯೆ ದಡ ಸೇರಿ, ಅದನ್ನು ಇದ್ದಲ್ಲಿಯೆ ಕಟ್ಟಿ, ಮರಳಿನಲ್ಲಿ ಮನುಷ್ಯ ಹೆಜ್ಜೆಯನ್ನು ಕಂಡ ರಾಬಿನ್‌ಸನ್‌ ಕ್ರೂಸೋವಿನಂತೆ, ಮನೆ ಸೇರುತ್ತಾನೆ. ಆದರೆ ಆ ಭೀತಿದ್ವಾರದಿಂದಲೆ ಅವನ ಚೇತನವನ್ನು ಪ್ರವೇಶಿಸಿದ ಯಾವುದೊ ಒಂದು ಅರ್ಥಹೀನ ಅಸ್ಪಷ್ಟ ನಿರಾಕಾರ ಭೂಮದ ಅನುಭೂತಿಯೊಂದು ಮೈಮೇಲೆ ಬಂದಂತಾಗಿ ಅವನನ್ನು ಅನೇಕ ದಿನಗಳವರೆಗೆ ಹಗಲಿರಳೂ ಹಿಡಿದುಬಿಡುತ್ತದೆ:

“… For many days, my brain
Worked with a dim and undetermined sense
Of unknown modes of being; o’er my thoughts
There hung a darkness, call it solitude
Or blank desertion. No familiar shapes
Remained, no pleasant images of trees,
Of sea or sky, no colours of green fields;
But huge and mighty forms, that do not live
Like living men, moved slowly through the mind
By day, and were a trouble to my dreams.”[12]


[1]      ‘ರಸಾನುಭವದ ಅಲೌಕಿಕತೆ’ ಎಂಬ ಲೇಖವನ್ನು ನೋಡಿ.

[2]       ‘ಗುರುವಿನೊಡನೆ ದೇವರಡಿಗೆ’ – ಕುವೆಂಪು ಅವರು ಭಾಷಾಂತರಿಸಿರುವ ಶ್ರೀಮತ್‌ ಸ್ವಾಮಿ ಶಿವಾನಂದರ (ಶ್ರೀ ರಾಮಕೃಷ್ಣರ ಅಂತರಂಗದ ಶಿಷ್ಯರಲ್ಲಿ ಒಬ್ಬರು) ಮಾತುಕತೆ – ಶ್ರೀ ರಾಮಕೃಷ್ಣಾಶ್ರಮ, ಮೈಸೂರು. ಸಂವಾದ ೧೯- ಪುಟ ೮೫ ನೋಡಿ.

[3]       ಯನ್ಮನಸಾ ನ ಮನುತೇ ಯೇನಹುರ್ಮನೋ ಮತಂ
ತದೇವ ಬ್ರಹ್ಮ ತ್ವಂ ವಿದ್ದಿ ನೇದಂ ಯದಿದಮುಪಾಸತೇ ||

[4]       ‘ಸಾಹಿತ್ಯದಲ್ಲಿ ಪ್ರತಿಮಾ’ ಎಂಬ ಪ್ರಬಂಧವನ್ನು ನೋಡಿ.

[5]       ‘ತಪೋನಂದನ’ದಲ್ಲಿರುವ ‘ಪಂಪನಲ್ಲಿ ಭವ್ಯತೆ’ ಎಂಬ ಪ್ರಬಂಧವನ್ನು ನೋಡಿ

[6]       ಕನ್ನಡದಲ್ಲಿ ಮಹಾಭಾರತವನ್ನು ವಸ್ತುವಾಗಿ ಪಡೆದಿರುವ ಇಬ್ಬರು ಮಹಾಕವಿಗಳ ಎರಡು ಮಹಾಕಾವ್ಯಗಳಲ್ಲಿಯೂ ಪಾತ್ರಗಳಲ್ಲಿ ಸನ್ನಿವೇಶಗಳಲ್ಲಿ ಭವ್ಯತೆ ಮೈದೋರಿರುವ ಅನೇಕ ನಿದರ್ಶನಗಳನ್ನು ನಾವು ಕಾಣುತೇವೆ. ವಸ್ತುವಿನ ಮಹತ್ತೂ ತಕ್ಕಮಟ್ಟಿಗೆ ಕಾರಣವಾದರೂ ಕವಿಯಲ್ಲಿ ‘ಭೂಮಾಪ್ರತಿಭೆ’ ಇಲ್ಲದಿದ್ದರೆ ಭವ್ಯತೆ ಸೃಷ್ಟಿಯಾಗುವುದಿಲ್ಲ. ಉದಾಹರಣೆಗೆ, ಮೂಲ ರಾಮಾಯಣದ ಕಥೆ, ಪಾತ್ರ ಮತ್ತು ಸನ್ನಿವೇಶಗಳಲ್ಲಿ ಭವ್ಯತಾಸೃಷ್ಟಿಗೆ ಯಥೇಚ್ಚವಾಗಿ ಅವಕಾಶವಿದ್ದರೂ ತೊರವೆ ರಾಮಾಯಣದಲ್ಲಿ ಕಣ್ಣಿಟ್ಟು ಹುಡುಕಿದರೂ ನಮಗೆ ಒಂದೂ ನಿದರ್ಶನ ದೊರೆಯುತ್ತದೆಯೊ ಇಲ್ಲವೋ? ಕೆಲವೊಮ್ಮೆ ಪ್ರತಿಭೆ ಬರಿಯ ಶ್ರಮ ತೆಗೆದುಕೊಳ್ಳುವ ಒಂದು ಸಾಮರ್ಥ್ಯವಾಗಿ ಪರಿಣಮಿಸುತ್ತದೆ; ಕಾವ್ಯ ಒಂದು ವೃತ್ತಿಪದ್ಧತಿಯಾಗುತ್ತದೆ; ಕವಿ ದುಡಿವ ಶಮಜೀವಿಯಾಗಿ ಬಿಡುತ್ತಾನೆ!

[7]       ‘Oxford Lectures on Poetry’: ‘Wordswroth is indisputably the most sublime of our poets since Milton’.

[8]       ‘Breathed immortality, revolving life,
And greatness still revolving; infinite.
There littleness was not; the least of things
Seemed infinite; and there his spirit shaped
Her prospects, nor did he believe, — he saw.

[9]       Imagination – here the Power so called
Through sad incompetence of human speech,
That awful Power rose from the mind’s abyss
Like an unfathered vapour that enwraps,
At once, some lonely traveler. I was lost;
Halted without an effort to break through;
But to my conscious soul I now can say —
’I recognize they glory’: in such strength
Of usurpation, when the light of sense
Goes out, but with a flash that has revealed
The invisible world, doth greatness make abode,
There harbours; whether we be young or old,
Our destiny, our being’s heart and home,
Is with infinitude, and only there;
With hope it is, hope that can never die,
Effort, and expectation, and desire,
And something evermore about to be.

[10]     Some of the greatest lines in English poetry. — BRADLEY
Oxford Lectures on Poetry Pp. 138.

[11]      When from behind that craggy steep till then
The horizon’s bound, a huge peak, black and huge,
As if with voluntary power instinct,
Upreared its head. I struck and struck again,
And growing still in stature the grim shape
Towered up between me and the starts, and still
For so it seemed, with purpose of its own
And measured motion like a living thing
Strode after me…”

[12]      ಕಾವ್ಯಪೂರ್ಣದಲ್ಲಿಯೂ ಭಾಗವಿಭಾಗಗಳಲ್ಲಿಯೂ ಕೊನೆಗೆ ಪಂಕ್ತಿ ಪಂಕ್ತಿಯಲ್ಲಿಯೂ ಭವ್ಯತೆಯನ್ನು ಮಿಡಿಯುವ ಆಧುನಿಕ ಮಹಾಕಾವ್ಯವೆಂದರೆ ಶ್ರೀ ಅರವಿಂದರ ‘ಸಾವಿತ್ರಿ’. ಅದರ ಸಮಗ್ರ ವಸ್ತುವೂ ಭೂಮಾನುಭೂತಿಯೆ ಆಗಿದೆ. ಅಲ್ಲಿ ವಸ್ತುತ್ವವೆ ಭಾವತ್ವವಾಗಿ ಪರಿವರ್ತನಗೊಂಡಿದೆ. ಭಾವಕ್ಕೂ ವಸ್ತುತ್ವ ಒದಗಿದೆ ಅದರ ಸಾಮಾನ್ಯ ಭೂಮಿಕೆಯ ಗಗನೋನ್ನತ. ಆದಿಯಿಂದ ಅಂತ್ಯದವರೆಗೂ ಪ್ರವಹಿಸುತ್ತದೆ ಅಲ್ಲಿ ದರ್ಶನಧ್ವನಿಯ ದೇವಗಂಗಾಸ್ರೋತೆ.