ಆನಂದೋ ಬ್ರಹ್ಮೇತಿ ವ್ಯಜಾನಾತ್ |

ಆನಂದಾದ್ದ್ಯೇವ ಖಲ್ವಿಮಾನಿ ಭೂತಾನಿ ಜಾಯಂತೇ |
ಆನಂದೇನ ಜಾತಾನಿ ಜೀವಂತಿ |
ಆನಂದಂ ಪ್ರಯಂತ್ಯಭಿಸಂವಿಶಂತಿ |
– ತ್ಯೆತ್ತೀರಿಯ.

ಯದ್ಯದ್ ವಿಭೂತಿಮತ್ ಸತ್ತ್ವಂ ಶ್ರೀಮದೂರ್ಜಿತಮೇವ ವಾ |
ತತ್ತದೇವಾವಗಚ್ಫ ತ್ವಂ ಮಮ ತೇಜೋಂಶ ಸಂಭವಮ್ ||
– ಭಗವದ್ ಗೀತೆ.

ಯೋ ವೈ ಭೂಮಾ ತತ್ ಸುಖಂ ನಾಲ್ಪೇ ಸುಖಮಸ್ತಿ |
ಭೂಮೈವ ಸುಖಂ ||
– ಛಾಂದೋಗ್ಯ.

ಯಾವುದು ಭೂಮವೋ ಅದೇ ಸುಖ; ಅಲ್ಪದಲ್ಲಿ ಸುಖವಿಲ್ಲ; ಭೂಮವೂಂದೇ ನಿಜವಾದ ಸುಖ: ಎಂದು ಉಪದೇಶಮಾಡಿದ ಋಷಿಗುರುವಿಗೆ ಶಿಷ್ಯ ‘ಭೂಮಾ ಎಂದರೇನು’ ಎಂದು ಪ್ರಶ್ನೆಹಾಕಿ ಅದರ ಜಿಜ್ಞಾಸೆಗೆ ತೊಡಗುತ್ತಾನೆ.

“ಯತ್ರ ನಾನ್ಯತ್ ಪಶ್ಯತಿ,ನಾನ್ಯತ್ ಶ್ರುಣೋತಿ,ನಾನ್ಯತ್ ವಿಜಾನಾತಿ, ಸ ಭೂಮಾ. ಯತ್ರ ಅನ್ಯತ್ ಪಶ್ಯತಿ, ಅನ್ಯತ್ ಶ್ರುಣೋತಿ, ಅನ್ಯತ್ ವಿಜಾತಿ, ತದಲ್ಪಂ. ಯೋ ವೈ ಭೂಮಾ ತದಮೃತಂ.ಯದಲ್ಪಂ ತನ್‌ಮರ್ತ್ಯಂ.”

ಎಲ್ಲಿ ಇನ್ನೋಂದು ಕಾಣುವುದಿಲ್ಲ, ಇನ್ನೊಂದು ಕೇಳುವುದಿಲ್ಲ, ಇನ್ನೊಂದು ಅರಿವಿಗೆ ಬರುವುದಿಲ್ಲ, ಅದು ಭೂಮಾ.ಎಲ್ಲಿ ಇನ್ನೊಂದು ಕಾಣುತ್ತದೆ, ಇನ್ನೊಂದು ಕೇಳುತ್ತದೆ, ಇನ್ನೊಂದು ಅರಿವಿಗೆ ಬರುತ್ತದೆ. ಅದು ಅಲ್ಪ. ಯಾವುದು ಭೂಮವೋ ಅದು ಅಮೃತ.

ಯಾವುದು ಅಲ್ಪವೊ ಅದು ಮರ್ತ್ಯ.”

ಗುರುವಿನ ಉತ್ತರಕ್ಕೆ ಶಿಷ್ಯನ ಪ್ರಶ್ನೆ: ಆ ಭೂಮಾ ಯಾವುದರಲ್ಲಿ  ‘ಪ್ರತಿಷ್ಟಿತ’ ವಾಗಿದೆ?

[1]

ಅದಕ್ಕೆ ಗುರುವಿನ ಉತ್ತರ ಸಿದ್ಧಾಂತವಾಗಿ ಹೊಮ್ಮಿದಂತೆ ತೋರಿ ಸಂದೇಹದಲ್ಲಿ ಎಂಬಂತೆ ಕೊನೆಗೊಂಡಿದೆ: “ತನ್ನ ಮಹಿಮೆಯಲ್ಲಿ! ಅಥವಾ ಮಹಿಮೆಯಲ್ಲಿಯೂ ಅಲ್ಲವೇನೊ?”[2]

ಇಲ್ಲಿ ‘ಭೂಮ ಎಂದರೆ  ಏನು?’ ಎಂದು ವಿವರಿಸಲು ಹೊರಟ ಋಷಿ ಅದು ಏನಲ್ಲ ಎಂದು ಮಾತ್ರ ಸೂಚಿಸಲು ಸಮರ್ಥನಾಗಿದ್ದಾನೆ, ಆಲೋಚನೆಯ ದೃಷಿಯಿಂದ. ಅದರೆ ಅನುಭೂತಿಯ ದೃಷಿಯಿಂದ ಅದರ ಸ್ವರೂಪವನ್ನು ಸುಖ ಎಂದು ವರ್ಣಿಸಿದ್ದಾನೆ. ಅದು ಯಾವುದರಲ್ಲಿ ‘ಪ್ರತಿಷ್ಟಿತ’ವಾಗಿದೆ ಎಂದರೆ ‘ತನ್ನ ಮಹಿಮೆಯಲ್ಲಿ’ ಎಂದವನು ಒಡನೆಯೆ ಅದನ್ನು ತಿದ್ದಿಕೊಳ್ಳಲೊ ಎಂಬಂತೆ ‘ತನ್ನ ಮಹಿಮೆಯಲ್ಲಿಯೂ ಅಲ್ಲವೊ ಏನೋ!’ ಎಂದು ಆ ವಿಚಾರ ಮಾನಸಗಮ್ಯವಲ್ಲ ಎಂಬುದನ್ನು ಧ್ವನಿಪೂರ್ವಕವಾಗಿ ನಿರ್ದೇಶಿಸಿದ್ದಾನೆ. ಆ ಸಂದೇಹದ ಅಥವಾ ‘ಅಲ್ಲಯಿಕೆ’ಯ ಅರ್ಥ ಸಂದೇಹವೂ ಅಲ್ಲ, ಅಲ್ಲ ಎಂಬರ್ಥವೂ ಅಲ್ಲ. ಅದು ಅನಿರ್ವಚನೀಯ,ಅವಾಙ್ಮಾನಸಗೋಚರ ಎಂಬುದನ್ನು ವ್ಯಂಜನಾವೃತ್ತಿಯಿಂದ ಸೂಚಿಸುವ ನಿಷೇಧಾರ್ಥವಲ್ಲದ ಒಂದು ವಿಧಾನ.[3]

ಎಲ್ಲಿ ‘ಅನ್ಯ’ ಎಂಬುದು ಇರುತ್ತದೆಯೊ, ಮನಸ್ಸಿಗೆ ಬರುತ್ತದೆಯೊ, ಅದೆಲ್ಲ ಅಲ್ಪ, ಮರ್ತ್ಯ, ಅಸುಖ. ಅನ್ಯವಲ್ಲದ್ದು, ಅನ್ಯವಿಲ್ಲದ್ದು ಯಾವ ಅನುಭವವೊ ಅದು ಭೂಮಾ, ಅಮೃತ, ಸುಖ. ಯಾವುದನ್ನು ಭೂಮಾ ಎಂದು ಕರೆಯುತ್ತೇವೆಯೊ ಅದು ಎಲ್ಲದಕ್ಕೂ ಅತ್ಯಂತ ಮೂಲಾಧಾರವಾದದ್ದು.

ಈ ಭೂಮವನ್ನು ಸಚ್ಚಿದಾನಂದ ಬ್ರಹ್ಮಕ್ಕೆ ಹೋಲಿಸಬಹುದಾದರೂ ಅದು ಸತ್ ಚಿತ್ ಆನಂದಗಳಿಗೂ ಪೂರ್ವಭಿತ್ತಿಯೆಂಬಂತಿರುತ್ತದೆ. ಸರ್ವಾನುಭವಗಳಿಗೂ ಸರ್ವಸಮಾನವಾಗಿರುವ ‘ಅಸರ್ವ’ವಾಗುತದೆ. ಸರ್ವದಲ್ಲಿದ್ದೂ ಸರ್ವಕ್ಕೂ ಸಮವಾದ ಅಂಶವಾಗಿ ಏಕೈಕವಾಗಿರುತ್ತದೆ.ಎಲ್ಲ ಲಕ್ಷಣಗಳನ್ನೂ ಹೊಮ್ಮಿಸುವ ಅದು ಎಲ್ಲಕ್ಕೂ ಅತೀತ.

ಆದರೂ ಅಂತರ್ಯಾಮಿ.ಆದ್ದರಿಂದಲೆ ಈ ಲೋಕರೂಪದ ‘ಅಲ್ಪ’ದಲ್ಲಿಯೂ ಆ ‘ಭೂಮ’ದ ಅನುಭೂತಿ ಸಾಧ್ಯವಾಗುತ್ತದೆ. ನಾನಾ ರೂಪಗಳಲ್ಲಿ ನಾನಾ ಪ್ರಕಾರಗಳಲ್ಲಿ ನಾನಾ ಅಂತರಗಳಲ್ಲಿ ಅದು ಅನುಭವಕ್ಕೆ ಮಿಂಚುತ್ತದೆ, ಮಿಣುಕುತ್ತದೆ; ಹೊಳೆದಳಿಯುತ್ತದೆ; ಇಣುಕಿ ಮರೆಯಾಗುತ್ತದೆ.

ಬಹುಶಃ ಅದಕ್ಕೆ ಪಕ್ಷಪಾತವಿಲ್ಲ. ನೀತಿ ಅನೀತಿ, ಒಳ್ಳೆಯದು ಕೆಟ್ಟದು, ಮಂಗಳ ಅಮಂಗಳ, ಶಿವ ಅಶಿವ ಎಂಬ ಮಾನವ ನಿರ್ಮಿತ ಶಿಷ್ಟಾಶಿಷ್ಟ ವಲಯ ಭೇದವಿಲ್ಲದೆ ಎಲ್ಲಿ ಬೇಕಾದರೂ ಅಲ್ಲಿ ಅದನ್ನು ಪಡೆಯಲು ಅರ್ಹವಾದ ಪ್ರಜ್ಞೆಗೆ, ಅದರ ಸಕೃದ್ದರ್ಶನವಾಗುತ್ತದೆ.

ಆಫ್ರಿಕದ ಕಾಡುಮನುಷ್ಯನ ತಾಮಾಸ ರಕ್ತಭಯಂಕರವಾದ ದೆವ್ವಂಗುಣಿತದಲ್ಲಿ ಎಂತೊ ಅಂತೆ ಐರೋಪ್ಯನ ನಾಗರಿಕ ಚರ್ಚಿನ ನವುರಾದ ಆರಾಧನೆಯಲ್ಲಿಯೂ ಅದು ಮೈದೋರುತ್ತದೆ. ಶಾಕ್ತ ತಾಂತ್ರಿಕನ ಕರಾಳ ಬಲಿಪೂಜೆಯಲ್ಲೆಂತೊ ಅಂತೆ ವೈಷ್ಣವನ ಪುಷ್ಪ

ಕೋಮಲ ಗಂಧಮಯ ಪೂಜೆಯಲ್ಲಿಯೂ ಅದು ಅನುಭವಕ್ಕೆ ಬರುತ್ತದೆ. ಎಲ್ಲ ಮತಗಳ ಮತ್ತು ಮತೀಯಾನುಭವಗಳ ಮೂಲದಲ್ಲಿ ‘ಸಮೋಹಂ ಸರ್ವಭೂತೇಷು’ ಎಂಬಂತೆ ಈ ಭೂಮಾನುಭೂತಿ ಅನಿವಾರ್ಯವಾದ ಆದ್ಯಂಶವಾಗಿರುತ್ತದೆ. ಅದು ದೇವರು; ಸತ್ಯ, ಧರ್ಮ, ಪಾಪ, ಪುಣ್ಯ ಮೊದಲಾದ ಮೂಲಸ್ವರೂಪದ ಮೂಕಭಾವಗಳು ಮೂಡುವ ಮುನ್ನವೆ, ಮಾನವನ ಮನಸ್ಸಿನಲ್ಲಿ ಅವಿನ್ನೂ ಚಿಂತನಸ್ಪಷ್ಟವಾಗುವ ಮುನ್ನವೆ ಇದ್ದು,ಅದ್ಭುತರಸ ಮೂಲವಾದ ಆಶ್ಚರ್ಯನುಭವದಲ್ಲಿ ಹೃದ್ಗೋಚರವಾಗುತ್ತದೆ.[4]

ವಿಶೇಷ ವ್ಯಕ್ತಿಗಳಲ್ಲಿ ವಿಶಿಷ್ಟ ಸನ್ನಿವೇಶಗಳಲ್ಲಿ ಮರ್ತ್ಯಪ್ರಜ್ಞೆ ಪ್ರಲಯವಾಗುವಂತಹ ಮಟ್ಟದಲ್ಲಿ ಅದು ಆವಿರ್ಭೂತವಾದಾಗ ಭೂಮವು ಲೋಕದ ಗಮನಕ್ಕೆ ಬಂದು ಸುಪ್ರಸಿದ್ಧವಾಗಿ ಪೂಜ್ಯವಾಗುತ್ತದೆ. ಶಕ್ತಿ, ಜ್ಯೋತಿ, ತೇಜಸ್ಸು ಅಂತಹ ಪೂರ್ಣಪ್ರಮಾಣದಲ್ಲಿ ಪ್ರಕಟವಾಗುವಾಗ ಆ ‘ಭಗವತ್ತು’ ವಿಭೂತಿ[5] ಎಂಬ ಹೆಸರಿನಿಂದ ಪ್ರಖ್ಯಾತವಾಗುತ್ತದೆ. ಆದರೆ ಭೂಮವು ಅದರ ವಿಶಿಷ್ಟ ಸ್ಥಿತಿಯಲ್ಲಿಯೆ, ವಿಭೂತಿರೂಪದಲ್ಲಿಯೆ, ಮಾತ್ರ ಅನುಭೂತವಾಗುತ್ತದೆಂದು ಭಾವಿಸಿದರೆ ತಪ್ಪಾಗುತ್ತದೆ.ಅದು ಅತ್ಯಂತ ಸಾಮಾನ್ಯನ ದೈನಂದಿನ ಸಾಧಾರಣ ಭಯ ಭಕ್ತಿ ಗೌರವ ಪವಿತ್ರತಾಭಾವಗಳಲ್ಲಿಯೂ ಇಣುಕಿ ಮಿಣುಕುತ್ತದೆ.ಅದರ ಆ ಅಲ್ಪ ಪ್ರಮಾಣದಲ್ಲಿ ಭೂಮವು ನಮ್ಮನ್ನು ದಿಗ್ ಭ್ರಮೆಗೊಳಿಸದಿರಬಹುದು; ನಮ್ಮ ಭಾವವನ್ನು ವಿಸ್ಮಯದ ಮಟ್ಟಕ್ಕೆ ಏರಿಸದಿರಬಹುದು; ನಮ್ಮ ಅಹಂಕಾರವನ್ನು ಅಪ್ಪಳಿಸಿ, ಅದನ್ನು ವಿರಾಟ್ ಶೂನ್ಯತೆಗದ್ದಿ, ತನ್ನ ಭಗವದ್ ವಿಭೂತಿಯಿಂದ ನಮ್ಮನ್ನು ಆಕ್ರಮಿಸಿ ನಮ್ಮ  ಭಯ ಭಕ್ತಿ ಪೂಜೆ ಗೌರವಗಳನ್ನು ಸೂರೆಗೊಳ್ಳದಿರಬಹುದು. ಆದರೂ ಅತ್ಯಂತ ಯಃಕಶ್ಚಿತನ ಉಪಾಸನೆಯ ಅಜ್ಞಾತವಾದ ಅತಿ ಸಾಮಾನ್ಯ ಸಂದರ್ಭಲ್ಲಿಯೂ ಈ ಭೂಮದ ಅನುಭೂತಿ ಆ ಅಲ್ಪದ ಹಿನ್ನೆಲೆಯಲ್ಲಿ ಮಿಂಚಿಯೆ ಮಿಂಚುತ್ತದೆ.[6] ಶ್ರೀರಾಮಕೃಷ್ಣರಂತಹರ ಸಮಾಧಿಸ್ಥಿತಿಯಲ್ಲಿ ಅದು ತನ್ನ ವಿಶೇಷ ಪ್ರಮಾಣದಲ್ಲಿ ಅಥವಾ ತನ್ನ ಪೂರ್ಣತೆಯಲ್ಲಿ ಪ್ರಕಟವಾಗಿ, ಲೋಕಲೋಚನಗಳನ್ನು ಸೆಳೆದು, ಜಗದ್  ವಿಸ್ಮಯಕರವಾಗಿ, ಪೂಜಿತವಾಗುತ್ತದೆ. ಆದರೆ ಪ್ರತಿಯೊಬ್ಬ ಮಾನವ ಚೇತನ ತನ್ನ ಪೂಜಾಚಿತ್ತಭಂಗಿಯಲ್ಲಿ ಭಕ್ತಿರಸನೆಯಿಂದ ಆಸ್ವಾದಿಸುವ ರಸವೂ ಈಷತ್ ಪ್ರಮಾಣದಲ್ಲಿ ಹೃದಯ ಸ್ಪಂದಿಯಾಗುವ ಆ ಭೂಮವೆ ಅಗಿರುತ್ತದೆ.

ಇದುವರೆಗೆ ನಾವು ಪ್ರಸ್ತಾಪಿಸುತ್ತಿದ್ದ ಭೂಮಾನುಭೂತಿ ಮತಕ್ಕೂ, ಧರ್ಮಕ್ಕೂ, ಮತ್ತು ಅವೆರಡೂ ಇನ್ನೂ ಬುದ್ಧಿಸ್ಪಷ್ಟವಾಗುವುದಕ್ಕೆ ಮುನ್ನಿನ ಪ್ರಪ್ರಾಗವಸ್ಥೆಯಲ್ಲಿ ಭಾವಗೋಚರವಾಗುತ್ತಿದ್ದ ಅದರ ಸ್ವರೂಪಕ್ಕೂ ಹೆಚ್ಚಾಗಿ ಅನ್ವಯವಾಗುತ್ತದೆ.

ಆದರೆ ನಮ್ಮ  ಈ ಪ್ರಕೃತ ಲೇಖನಕ್ಕೆ ಮುಖ್ಯವಾಗಿ ಪ್ರಸ್ತುತವಾದುದೆಂದರೆ: ಸೌಂದರ್ಯನುಭವದ ಮಟ್ಟದಲ್ಲಿ ಅಥವಾ ರಸಾನುಭವದ ಚೌಕಟ್ಟಿನಲ್ಲಿ ಅಥವಾ ಕಲಾ ಭೂಮಿಕೆಯಲ್ಲಿ ಸಹೃದಯಪ್ರಜ್ಞೆಗೆ ಅಭಿವ್ಯಕ್ತವಾಗುವ ಭೂಮಾನುಭೂತಿ.

ಯಾವ ಭೂಮವು ತ್ರಿತ್ವಮುಖವಾಗಿ ಸತ್ ಚಿತ್ ಆನಂದವಾಯಿತೊ ಆ ಆನಂದದಿಂದಲೆ ಸಮಸ್ತ ಸೃಷ್ಟಿಯೂ ಹೊಮ್ಮುತ್ತದೆಂದೂ, ಆ ಆನಂದದಲ್ಲಿಯೆ ಬಾಳುತ್ತಲಿರುವುದೆಂದೂ, ಆ ಆನಂದ ಕಡೆಗೆ ಸಾಗುತ್ತಿದೆಯೆಂದೂ, ಆ ಆನಂದವನ್ನೆ  ಪ್ರವೇಶಿಸಿ ವಿಲಯನಹೊಂದುತ್ತದೆಯೆಂದೂ ಋಷಿಯ ದರ್ಶನ ಸಾರುತ್ತದೆ. ಅಲ್ಲಿ ಅನ್ನ, ಪ್ರಾಣ, ಮನಸ್ಸು, ವಿಜ್ಞಾನಗಳಲ್ಲಿ ಒಂದೊಂದನ್ನೂ ಕ್ರಮವಾಗಿ ‘ಬ್ರಹ್ಮವೆಂದು ತಿಳಿ’ಎಂದು ಹೇಳಿದಂತೆಯೆ ತುತ್ತತುದಿಯಲ್ಲಿ ಆನಂದವನ್ನೂ ಬ್ರಹ್ಮವೆಂದೆ ತಿಳಿ ಎಂದು ಉಪನಿಷತ್ತು ಬೋಧಿಸಿದೆ.[7]ಆ ಭೂಮದ ಈ ಆನಂದಮುಖವೆ ಸೃಷ್ಟಿಯಲ್ಲಿ ಸೌಂದರ್ಯವಾಗಿ ಕವಿ ಸಹೃದಯ ಚೇತನಕ್ಕೆ ರಸಾನುಭೂತಿಯಾಗಿ ಪರಿಣಮಿಸಿ ಪ್ರಜ್ಞಾಗೋಚರವಾಗುತ್ತದೆ. ಆದ್ದರಿಂದಲೆ ಕಾವ್ಯಮಿಮಾಂಸೆಯಲ್ಲಿ ವಿಶೇಷವಾಗಿಪ್ರಚುರವಾಗಿರುವ ‘ರಸ’ಎಂಬ ಪದದ ವ್ಯಾಪ್ತಿ ಕವಿಯ ಸೌಂದರ್ಯನುಭದಿಂದ ಮೊದಲಾಗಿ  ಋಷಿಯ ಸಕಾತ್ಕಾರದ ಬ್ರಹ್ಮ ಸ್ವರೂಪದವರೆಗೂ ಏರಿರುವಂತೆ ತೋರುತ್ತದೆ.[8]

ಸೌಂದರ್ಯವು ಲೋಕದಲ್ಲಿಯೂ ಅನುಭವಕ್ಕೆ ಬರುತ್ತದೆ; ಕಾವ್ಯಕಲಾದಿಗಳಲ್ಲಿಯೂ ಅನುಭವಕ್ಕೆ ಬರುತ್ತದೆ. ಅರಣ್ಯಮಯ ಪರ್ವತಶ್ರೇಣಿ, ಸೂರ್ಯೋದಯದ ಸ್ವರ್ಣಶ್ರೀಯಲ್ಲಿ ಮನೋಹರ ಮೇಘಚಿತ್ರಗಳಿಂದ ಶೋಭಿಸುವ ದಿಗಂತಾಕಾಶ, ತಿಂಗಳಬೆಳಕಿನ ಮಂಜುಮಾಯೆಯಲ್ಲಿ ಅಂಚುಕಟ್ಟಿದಂತಿರುವ ಕಾಡಿನ ನಡುವೆ ಹರಿಯುವ ಹೊಳೆಯ ಬಿಳಿಮಳಲ ದಿಣ್ಣೆಗಳ ಶೋಭೆ, ವಸಂತೋದಯಲ್ಲಿ ಹೂತುಂಬಿ ಲಕ್ಷ ಲಕ್ಷ ಮಧುಕರ ಝೇಕಾರದಿಂದ ಮನಂಗೊಳಿಸುವ ವೃಕ್ಷ್‌ರಾಜಿ, ಇತ್ಯಾದಿ ಇತ್ಯಾದಿಗಳನ್ನು ನೋಡಿ, ಕಂಡು, ಸವಿದಾಗ ಅನುಭವವಾಗುತ್ತದೆ ಆ ಸೌಂದರ್ಯ.![9] ಹಾಗೆಯೆ ನಿಸರ್ಗ ವ್ಯಾಪಾರವನ್ನಾಗಲಿ ಮಾನವನ ಬಹುಮುಖ ಜೀವನ್ನವನಾಗಲಿ ಕಲಾಪ್ರತಿಭೆ ನಿರ್ಮಿಸಿದಾಗಲೂ ಅದನ್ನು ಸವಿಯುವ ನಮ್ಮ ಅನುಭವವನ್ನು ಸೌಂದರ್ಯಾನುಭವ ಅಥವಾ ರಸಾನುಭವ ಎಂದು ಕರೆಯುತ್ತೇವೆ.

ಈ ಸೌಂದರ್ಯಮಾಧ್ಯಮದಲ್ಲಿ ಸತ್ಯ ಪ್ರಕಟವಾಗುತ್ತದೆ; ಶಿವ ಪ್ರಕಟವಾಗುತ್ತದೆ; ಹಾಗೆಯೆ ಭುಮವೂ ಪ್ರಕಟವಾಗುತ್ತದೆ ಸೌಂದರ್ಯಮಾಧ್ಯಮದಲ್ಲಿ ಅಲ್ಲದೆ ಬುದ್ಧಿಪ್ರಧಾನವಾದ ರೀತಿಯಲ್ಲಿ ಸತ್ಯ ಪ್ರಟವಾಗುವುದನ್ನು ನಾವು ವಿಜ್ಞಾನಶಸ್ತ್ರ ಎಂದು ಕರೆಯುತ್ತೇವೆ ಶಿವ ಪ್ರಕಟವಾಗುವುದನ್ನು ನೀತಿಶಾಸ್ತ್ರ ಮಾನವಶಾಸ್ತ್ರ ಇತಿಹಾಸ ಸಮಾಜಶಾಸ್ತ್ರ ಎಂದೆಲ್ಲ ಕರೆಯುತ್ತೇವೆ. ಭಾವಾಂಶ, ಚಿಂತನಾಂಶ, ಕಲ್ಪನಾಂಶ, ರೂಪಾಂಶ ಎಂಬ ಸಾಹಿತ್ಯದ ಮೂಲತತ್ತ್ವಗಳಲ್ಲಿ ಚಿಂತನಾಂಶದ ಸಾಮಗ್ರಿ ಒದಗುವುದು ಬುದ್ಧಿಪ್ರಧಾನವಾಗಿರುವ ಆ ಶಾಸ್ತ್ರವಸ್ತುಗಳಿಂದಲೆ.

ಸತ್ಯವೂ ಶಿವವೂ ಸೌಂದರ್ಯದ ಮೂಲಕವೇ ನಮ್ಮ ಅನುಭವಕ್ಕೆ ಬರಬೇಕು ಎಂದೇನೂ ನಿಯತಿಯಿಲ್ಲ. ಸತ್ಯಕ್ಕೆ ಶಿವಕ್ಕೆ ಸೌಂದರ್ಯವಲ್ಲದ ಬೇರೆ ದಾರಿಗಳೂ ಇವೆ. ಹಾಗೆಯೆ ಭೂಮವೂ ಸೌಂದರ್ಯದ ಮಾಧ್ಯಮದಲ್ಲಿಯೇ ನಮಗೆ ಗೋಚರವಾಗಬೇಕು ಎಂದೇನು ನಿಯತಿಯಿಲ್ಲ. ಭೂಮಕ್ಕೆ ಸೌದರ್ಯವಲ್ಲದ ಬೇರೆ ದಾರಿಗಳಿವೆ. ಪ್ರಪಂಚದ ವಿವಿಧ ಮತಗಳೂ ವಿವಿಧ ಯೋಗ ಮಾರ್ಗಗಳೂ ತಮ್ಮ ತಮ್ಮ ಸಾಧಕರನ್ನು ಸತ್ಯದ ನೆಲೆಗೂ ಶಿವದ ನೆಲೆಗೂ ಭೂಮಕ್ಕೂ ಕೊಂಡೊಯ್ದಿವೆ ಎಂಬುದಕ್ಕೆ ಅನೇಕ ನಿದರ್ಶನಗಳಿವೆ.

ಭೂಮದ ಸಾಕ್ಷಾತ್ಕಾರಕ್ಕೆ ಸೌಂದರ್ಯದ್ದಲ್ಲದ ಬೇರೆ ಪ್ರಕಾರಗಳಿದ್ದರೂ ಅವು ಯಾವುವೂ ಸೌಂದರ್ಯದಂತೆ ಸಾಮನ್ಯ ಜನ ಸುಲಭವೂ ಅಲ್ಲ. ಬಹು ಜನಪ್ರಿಯವೂ ಅಲ್ಲ, ಸರ್ವಾಸ್ವಾದನೀಯವು ಅಲ್ಲ. ಸೌದರ್ಯದ ದಾರಿ ಶುದ್ಧ ಸತ್ಯದ ಮತ್ತು ಶ್ವೇತ ಶಿವದ ತಪಃಪಥದಂತೆ ಕಠೋರವಾದುದಲ್ಲ. ಅಪೂರ್ವ ಮಾನವಚೇತನಗಳಿಗೆ ಮಾತ್ರ ಆ ‘ಕ್ಷುರುಸ್ಯಧಾರಾನಿಶಿತ’ವಾದ ‘ದುರತ್ಯಯ’ವಾದ ‘ದುರ್ಗ’ವಾದ ಪಥಗಳಿಗೆ ಪ್ರವೇಶವಿರುತ್ತದೆ. ಸಿದ್ಧಿಯ ಪ್ರಯೋಜನದ ದೃಷ್ಟಿಯಿಂದ ಉಳಿದ ದಾರಿಗಳಿಗೆ ಒಂದಿನಿತೂ ಕೀಳಲ್ಲವಾದರೂ ರಸಲೊಲುಪವೂ ಸುಖಪ್ರಿಯವೂ ಆದ ನರಚೇತನಕ್ಕೆ ಸೌಂದರ್ಯದ ದಾರಿಯೆ ಅತ್ಯಂತ ಮಧುರವೂ ಆಹ್ಲಾದಕರವೂ ಆಕರ್ಷಣೀಯವೂ ಆಗಿ ಪರಿಣಿಮಿಸಿದೆ.

ಪ್ರಾಚೀನ ಮನುಷ್ಯ ತನ್ನ ಪ್ರಥಮಪ್ರಜ್ಞೆಯ ಕಣ್ಣು ತೆರೆದಂದು, ಬುದ್ಧಿ ಇನ್ನೂ ತನ್ನ ಅವ್ಯಕ್ತ ದಶೆಯಲ್ಲಿರುವಂದು, ಸತ್ಯ ಶಿವ ಮೊದಲಾದ ತತ್ತ್ವವಗಳ ಚಿಂತನೆ ಇನ್ನೂ ಅಗೊಚರ ಬೀಜಭೂಮಿಕೆಯಲ್ಲಿರುವ ಕಾಲದಲ್ಲಿ ಅಪರಿಚಿತವೂ ಅದ್ಭುತವೂ ಭೀಕರವೂ ಆದ ಭೀಮರಮ್ಯ ನಿಸರ್ಗದ ದೃಶ್ಯಗಳನ್ನೂ ವಸ್ತುಗಳನ್ನೂ ವ್ಯಾಪಾರಗಳನ್ನೂ ಸಂಧಿಸಿದಂದು ಈ ಭೂಮದ ಪ್ರಥಮ ಪರಿಚಯಕ್ಕೆ ಪೀಠಿಕೆಯಾಗುತ್ತದೆ.

ಅರುಣೋದಯದ ಆಕಾಶದಲ್ಲಿ ಹೊಗೆಂಪಿನ ಹೊಳೆ ಹರಿದು, ಮುಗಿಲ ಲೋಕ ಮನೋಹರವಾಗಲು, ಆ ಚೆಲುವನ್ನು ನೋಡಿ ಅಚ್ಚರಿಯ ಆನಂದದಲ್ಲಿ ನಲಿಯುತ್ತಾನೆ. ತುಸುಹೊತ್ತಿನಲ್ಲಿಯೆ ಮರಗಿಡಗಳ ಹಸುರ ನಡುವಣಿಂದ ಹಕ್ಕಿಗಳ ನೂರಾರು ಇಂಚರ ಕಿವಿಗೆ ಸವಿಹೋಗಿಸಿದಾಗ ಆ ಇಂಪಿಗೆ ಬಗೆ ಸೋತು ಕುಣಿಯುತ್ತಾನೆ. ಬಣ್ಣಬಣ್ಣದ ಹೂವುಗಳ ಕಣ್ಣೊಗಕೆ ಬೆರಗಾಗಿ ಒಲಿಯುತ್ತಾನೆ. ಜನ್ಮವೆತ್ತ ಜೀವದ ಸುಖವು ಜೀವನದ ಸೌಂದರ್ಯಾನುಭವವಾಗಿ, ಆಲೋಚನೆಯ ರೂಪದಲ್ಲಿ ಬುದ್ದಿಗೋಚರವಾಗದಿದ್ದರೂ, ಹೃತ್‌ಸಂವೇದ್ಯವಾಗುತ್ತದೆ.

ಆದರೆ ಹಗಲು ಮುಗಿದು ಇರುಳಾಗುತ್ತದೆ. ಹಗಲೆಲ್ಲ ಅರಳಿದ ನಲಿದ ಆ ಪ್ರಾಚೀನ ಶಿಶುಮಾನವನ ಚೇತನ ಆ ಪ್ರಥಮ ರಾತ್ರಿಯ ಮುಂದೆ ತತ್ತರಿಸುತ್ತದೆ. ಅದರ ಮಹಾಶೂನ್ಯತೆ ಅವನನ್ನು ಸೇದಿ ಎಳೆದು ಇಲ್ಲಗೈವಂತೆ ತೋರುತ್ತದೆ. ಎಲ್ಲವನ್ನೂ ನೊಣೆದು ನುಂಗಿದಂತೆ ಅಳಿಸಿಬಿಡುವ ಅದರ ಕಗ್ಗತ್ತಲೆಗೆ ಭೀತಿಯಿಂದ ಸೆಡೆತು, ಯಾವುದಾದರೂ ಪೊಟರೆಯಲ್ಲಿಯೊ ಗವಿಯಲ್ಲಿಯೋ ಅವಿತುಕೊಂಡು ತನ್ನನ್ನು ತಾನೆ ಕಾಪಾಡಿಕೊಳ್ಳಲೆಳುಸುತ್ತಾನೆ. ಅದರ ಮೌನಕ್ಕೆ, ಶಬ್ದಶೂನ್ಯತಾ ಭೀಷಣತೆಗೆ, ಅವನಿಗೆ ಉಸಿರುಕಟ್ಟಿದಂತಾಗುತ್ತದೆ. ಹಗಲು ಅಷ್ಟೇನೂ ಭೀಕರವಾಗಿ ತೋರದ ಹೆಬ್ಬಂಡೆ ಎನೋ ಆಕಾರ ಪಡೆಯುತ್ತದೆ. ಏನೋ ಶಕುನಪೂರ್ಣವಾಗುತ್ತದೆ. ಅವನಿಗಾಗುವ ಆ ಭಯಕ್ಕೆ ಕಾರಣವಿಲ್ಲದಿರಬಹುದು. ಹುಲಿಯೊ ಹಾವೊ ಇದಿರು ಬಂದಾಗ ಅಥವಾ ಬರಬಹುದು ಎಂದು ಊಹಿಸಿದಾಗ ಉಂಟಾಗುವ ಹೆದರಿಕೆಯಂತಲ್ಲ ಆ ಭೀತಿ. ಹಾಗೆ ಸಕಾರಣವಾಗಿದ್ದರೆ ಆ ಬಲಿಷ್ಠನಾದ ಒರಟು ಮಾನವನ ಪ್ರತಿಕ್ರಿಯಿ ಹೆದರಿಕೆಯಲ್ಲದೆ ಬೇರೆಯಾದರೂ ಆಗಬಹುದಿತ್ತೇನೋ! ಆದರೆ ಅದು ನಿಷ್ಕಾರಣಭೀತಿ. ಅದಕ್ಕೆ ರೂಪವಿಲ್ಲ, ಆಕಾರವಿಲ್ಲ; ಗೊತ್ತು, ಗುರಿ, ದಿಕ್ಕು, ದೆಸೆ ಎನೊಂದೂ ಇಲ್ಲ. ಆದರೆ ಹೃದಯಕಂಪನಕಾರಿಯಾಗಿ ದೇಹವನ್ನೆಲ್ಲ ವ್ಯಾಪಿಸುತ್ತದೆ. ಅದು ದೈಹಿಕವೂ ಅಲ್ಲ; ಮಾನಿಸಿಕವೂ ಅಲ್ಲ; ಅವನಿಗೆ ಚಿಂತನೆ ಸಾಧ್ಯವಾಗಿದ್ದರೆ, ಅದರ ಸ್ವರೂಪವನ್ನು ಅಪ್ರಾಕೃತವೆಂದು ಗುರುತಿಸುತ್ತಿದ್ದನಲ್ಲವೆ? ಆ ‘ಅಪ್ರಾಕೃತ’ದ ಅನುಭವದಲ್ಲಿಯೆ ಭೂಮಾನುಭೂತಿಯ ಪ್ರಥಮ ಸ್ಪಂದನ ಪ್ರಾರಂಭವಾಗುತ್ತದೆ.

ಪ್ರಾಚೀನ ಮಾನವ ಎಂಬ ಪದದಲ್ಲಿ ಪ್ರಾಚೀನ ಎಂಬುದರ ಅರ್ಥ ಕಾಲ ನಿರ್ದೇಶಕವಾದರೂ ಬರಿಯ ಕಾಲಕ್ಕೆ ಮಾತ್ರ ಅನ್ವಯವಾಗಿ ನಿಂತುಬಿಡುವುದಿಲ್ಲ. ಸಮಕಾಲೀನನಾದ ಅತ್ಯಂತ ಅರ್ವಾಚೀನ ಮಾನವನಲ್ಲಿಯೂ ಆ ‘ಪ್ರಚೀನತ್ವ’ ಇದ್ದೆ ಇರುತ್ತದೆ.[10]  ಅದು ಅವನ ಚೇತನೆಯ ಭದ್ರಭಿತ್ತಿಯಾಗಿರುತ್ತದೆ. ಅದು ಅವನ ಪ್ರಾಕ್‌ ಜನ್ಮ ಸಂಸ್ಕಾರಗಳ ತವರುಮನೆ. ಅವನ ಪಾತಾಳಪ್ರಜ್ಞೆಯ ನೆಲೆವೀಡು. ಆದ್ದರಿಮದಲೆ ಅಂದಿನ ಪ್ರಾಚೀನನಂತೆಯೆ ಇಂದಿನ ನವೀನನೂ ಆ ಭೂಮವನ್ನು ಅನುಭವಿಸಲು ಅಭ್ಯಾಸ ಪ್ರಯತ್ನ ಗಳೊಂದೂ ಇಲ್ಲದೆಯೆ ಸಮರ್ಥನಾಗುತ್ತಾನೆ.

ಆ ಅನುಭವ ನಾನಾ ನಾಮರೂಪಗಳನ್ನು ದಾರಣೆ ಮಾಡುತ್ತದೆ. ಒಬ್ಬನೆ ನಿರ್ಜನ ಪ್ರದೇಶದ ಪಾಳುಮನೆಯಲ್ಲಿ ಮಲಗಬೇಕಾಗಿ ಬಂದಾಗ ನಟ್ಟಿರುಳು ಎಚ್ಚರವಾಗಿ ನರನರಗಳಲ್ಲಿ ಚಳಿ ಸಂಚರಿಸುತ್ತದೆ. ಏನೋ ಕಾಣಿಸಿದಂತಾಗುತ್ತದೆ; ಏನೋ ಕೇಳಿಸಿದಂತಾಗುತ್ತದೆ; ಯಾರೋ ನಡೆದಾಡಿದಂತೆ ಸದ್ದು; ಹಿಂದುಗಡೆಯಿಂದ ಮುಟ್ಟಿದಂತೆ! ಅದಕ್ಕೊಂದು ನಾಮರೂಪ ಸಿದ್ಧವಾಗಿ ದೆವ್ವದ ಕತೆ ಹುಟ್ಟುತ್ತದೆ.

ಹಳ್ಳಿಯ ಹೊರಗಡೆ ಒಂದು ಹೆಮ್ಮರವಿರುತ್ತದೆ. ಅದರ ಗಾತ್ರವೊ ಏಳೆಂಟು ಜನರು ತಬ್ಬಿದರೂ ಸಾಲದು. ಎತ್ತರವೊ ಕೊರಳು ಸೋತು ಕಣ್ಣು ದಣಿಯುವಷ್ಟು. ಅದರ ಒಂದೊಂದು ಕೊಂಬೆಯೂ ಬಲ್ಮರದಂತೆ ಕೈಚಾಚಿರುತ್ತದೆ. ಎಲೆ ದಟ್ಟವಾಗಿ ಬೆಳೆದು ಮರ ಕತ್ತಲೆಯ ಗೂಡಾರದಂತಿರುತ್ತದೆ. ಅದನ್ನು ನೋಡಿದರೆ ಏನೋ ದೊಡ್ಡದನ್ನು ಕಂಡಂತಾಗುತ್ತದೆ. ಅದರ ಆ ರಹಸ್ಯಮಯ ಮೌನದಲ್ಲಿ ಏನೋ ಗೌರವಾಸ್ಪದವಾದದು ನೆಲಸಿರುವಂತೆ ಭಾಸವಾಗುತ್ತದೆ. ಅದರ ಆ ಬೃಹತ್ತನ್ನು ಕಂಡೊಡನೆ ನಮ್ಮ ಅಲ್ಪತೆ ಅಪ್ಪಳಿಸಿದಂತಾಗಿ ಗಮನಕ್ಕೂ ಬರುತ್ತದೆ. ನಾವರಿಯಲಾರದ ಏನೊ ಮಹತ್ತು ಅದರಲ್ಲಿ ಸ್ಫುರಿಸಿ ನಮನ್ನು ಪುಲಕಿತರನ್ನಾಗಿ ಮಾಡುತ್ತದೆ. ಆ ಪುಲಕದಲ್ಲಿ ಗೌರವದಂತೆಯೆ ಭೀತಿಯೂ ಸಂಚರಿಸುತ್ತದೆ ಕೈಮುಗಿಯುವಂತಾಗುತ್ತದೆ; ಅಡ್ಡಬೀಳುವಂತಾಗುತ್ತದೆ; ಕ್ಷಮೆ ಬೇಡುವಂತಾಗುತ್ತದೆ; ಪ್ರಾರ್ಥಿಸಬೇಕು ಎನ್ನಿಸುತ್ತದೆ. ವೃಕ್ಷದೇವತೆ ಅವತರಿಸುತ್ತದೆ ಮರದಲ್ಲಿ ಭೈರವನ ಆವಾಹನೆಯಾಗುತ್ತದೆ; ಗ್ರಾಮಮಾರಿಕಾ ಶಕ್ತಿಯ ಆವಾಸವೂ ಆದೀತು!

ಯಾರಾದರೂ ಅಪ್ಪತಪ್ಪಿ ಮರದ ಬುಡದಲ್ಲಿ ಮೈಲಿಗೆ ಮಾಡಿದರೆ ಬಂತು ಪ್ರತೀಕಾರ; ತಪ್ಪುಕಾಣಿಕೆ ಕಟ್ಟದಿದ್ದರೆ ಮುಗಿಯಿತು ಗತಿ. ಯಾವನಾದರೂ ಆಧುನಿಕ ವಿಜ್ಞಾನ ದೃಷ್ಟಿಯ ವಿಚಾರವಾದಿ ಅದರಲ್ಲಿ ಮರತನವನ್ನೇ ಮಾತ್ರ ಕಂಡು, ಹಳ್ಳಿಯ ಸಾವಿರ ಹೃದಯಗಳ ಭೂಮಾನುಭೂತಿಯನ್ನು ಧಿಕ್ಕರಿಸಿ, ಅದನ್ನು ಕಡಿದನೋ, ಬಂತು ಕೇಡು! ಅವನಿಗಲ್ಲದಿರಬಹುದು; ಆ ಹಳ್ಳಿಗೇ! ಈ ಮನೆಯಲ್ಲಿ ರಕ್ತ ಕಾರಿಕೊಂಡು ಮಗು ಸತ್ತಿತು. ಆ ಮನೆಯಲ್ಲಿ ಇದ್ದಕ್ಕಿದ್ದಂತೆ ಎಲ್ಲರೂ ಏನೋ ಆಗಿ ಮೃತಪಟ್ಟರು. ಆ ಅಜ್ಜನಿಗೆ ಏನೋ ಕಾಣಿಸಿಕೊಂಡು ಹೇಳಿ ಹೋಯಿತಂತೆ! ಸರಿ, ಹಳ್ಳಿಯೆ ಖಾಲಿ![11] ಭೂಮದ ಅನುಭೂತಿ ಬರಿಯ ವೈಯಕ್ತಿಕ ಭಾವದ ಅನುಭವ ಮಾತ್ರವಲ್ಲ; ಅದು ವಸ್ತು; ಅದು ಶಕ್ತಿ; ನಿಗ್ರಹಾನುಗ್ರಹ ಸಮರ್ಥವಾದ ಚೈತನ್ಯವೂ ಆಗುತ್ತದೆ.

ಭೂಮದ ಇಂತಹ ಅನುಭೂತಿ ಕೋಟ್ಯಂತರ ಜನರ ಹೃದಯದಲ್ಲಿ, ಕೋಟ್ಯಂತರ ಸನ್ನಿವೇಶಗಲ್ಲಿ ದಿನದಿನವೂ ಸಂಚರಿಸುತ್ತಿರುತ್ತದೆ. ದಿನದಿನದ ಸಂಗತಿಯಾಗಿ ಅದು ವಿಶೇಷದಂತೆ ತೋರದೆ ಸಾಮಾನ್ಯತೆಯಲ್ಲಿ ಹುದುಗಿಕೊಂಡಿದೆ. ಈ ಸಾಮಾನ್ಯತೆಯಲ್ಲಿಯೂ ಅದನ್ನು ಗುರುತಿಸುವ ಸಾಮರ್ಥ್ಯ ಕೆಲವು ವಿಶೇಷ ವ್ಯಕ್ತಗಳಿಗೆ ಮಾತ್ರ ಇರತ್ತದೆ. ಧ್ಯಾನಮಯ ಜೀವನದ ಋಷಿಪ್ರಜ್ಞೆಗೂ ಭಾವಯಿತ್ರೀ ಪ್ರತಿಭೆಯ ಕವಿಪ್ರಜ್ಞೆಗೂ ಆ ಭೂಮಾನುಭೂತಿ ಅದರ ಸಾಧಾರಣ ಸ್ಥಿತಿಯಲ್ಲಿಯೂ ಸುಗೋಚರವಾಗುತ್ತದೆ.[12]

ಭೂಮಾನುಭೂತಿ ತನ್ನ ಸಾಧಾರಣ ಪ್ರಕಾಶನದಲ್ಲಿ ನಮ್ಮ ಗಮನಕ್ಕೆ ಬೀಳದಿದ್ದರೂ ಅದು ವಿಶೇಷ ಪ್ರಮಾಣದಲ್ಲಿ ವಿಭೂತಿಯ ಮಟ್ಟಕ್ಕೇರಿ ಮೈದೋರಿದಾಗ ಲೋಕಲೋಚನಗಳನ್ನೆ ಸೆಳೆಯುತ್ತದೆ. ಜಗತ್ತಿನ ನಾನಾ ದೇಶಗಳ ಮತಗಳ ಸುಪ್ರಸಿದ್ಧ ಅಧ್ಯಾತ್ಮ ಜೀವಿಗಳ ಚರಿತ್ರೆಯಲ್ಲಿ, ಯೋಗಿ, ಭಕ್ತ, ಸಾಧಕ, ಸಿದ್ಧ, ಋಷಿ, ಸಂತ, ಕವಿ ಮೊದಲಾದ ಅಂತರ್ಮುಖ ಮತ್ತು ಊರ್ದ್ವಮುಖ ಸಾಹಸಗಳಲ್ಲಿ ಮುಂಬರಿದವರ ಬದುಕಿನ ಘಟನೆಗಳಲ್ಲಿ ಭೂಮವು ತನ್ನ ವಿಭೂತಿಪ್ರಮಾಣದಲ್ಲಿ ಪ್ರಕಾಶಿತವಾಗಿರುವುದನ್ನು ನಾವು ಕಾಣುತ್ತೇವೆ. ಅಲ್ಲೆಲ್ಲ ಆ ಭೂಮಾನುಭೂತಿ ಕೀರ್ತಿವೆತ್ತು, ಪ್ರಶಂಸಿತವಾಗಿ, ವಿಸ್ಮಯಕ್ಕೂ ಗೌರವಕ್ಕೂ ಭಾಜನವಾಗಿ, ಬಹುಜನ ಪೂಚಿತವಾಗಿದೆ.[13]

ಲೋಕಕ್ಕೆ ಸುಪರಿಚಿತವಾಗಿರುವ ಶ್ರೀ ರಾಮಕೃಷ್ಣ ಪರಹಂಸರ ಜೀವನದಲ್ಲಿ ಈ ಭೂಮದ ನಾನಾ ರೀತಿಯ, ನಾನಾ ಅಂತರದ ಮತ್ತು ನಾನಾ ಭೂಮಿಕೆಯ ಅನುಭೂತಿಯ ಘಟನೆಗಳು ಪಂಕ್ತಿ ಪಂಕ್ತಿಯಾಗಿ ನಿಂತಿವೆ. ಅವರ ಜೀವನದ ಉತ್ತರಾರ್ಧವಂತೂ ನಿರಂತರವೂ ಆಕ್ರಮಣಶೀಲವಾದ ಆ ಭೂಮದ ಆವರ್ತಗರ್ತದ ಸುಳಿ ಸೆಳೆವುಗಳಿಂದ, ಲೋಕ ಕಲ್ಯಾಣ ಕಾರ್ಯಾರ್ಥವಾಗಿ, ಪಾರಾಗುವ ಪ್ರಯತ್ನ ಪರಂಪರೆಯಂತೆ ಆಶ್ಚರ್ಯವಹವಾಗಿದೆ. ಇತರರ ಸಾಧನೆ ಭೂಮವನ್ನು ಪಡಿಯುವುದಕ್ಕಾಗಿಯೆ ನಡೆದರೆ ಅವರದು ಆ ಭೂಮದಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೆ ಎಂಬಂತೆ ತೋರುತ್ತದೆ! ಆ ಭೂಮಾನುಭೂತಿಯ ಸ್ಥಿತಿಗೆ ಯೋಗಶಾಸ್ತ್ರದ ಪರಿಭಾಷೆ ‘ಸಮಾಧಿ.’

ಭಾವಸಮಾಧಿಯ, ಸವಿಸಕಲ್ಪಸಮಾಧಿಯ ಮತ್ತು ನಿರ್ವಿಕಲ್ಪ ಸಮಾಧಿಯ ಮೂರು ನಿದರ್ಶನಗಳನ್ನು ಇಲ್ಲಿ ಸೂಚಿಸಬಹುದು.[14]

ಅವರ ಜೀವನದಲ್ಲಿ ಅವರಿಗೊದಗಿದ ಮೊತ್ತಮೊದಲನೆಯ ವಿಭೂತಿ ಸ್ವರೂಪದ ಭಾವಸಮಾಧಿ ನಿಸರ್ಗಸೌಂದರ್ಯದಿಂದ ಪ್ರೇರಿತವಾದದ್ದು. ಎರಡನೆಯದು ಸವಿಕಲ್ಪಸಮಾಧಿ; ಅದು ಒದಗಿದುದು ದಕ್ಷಿಣೇಶ್ವರದ ಭವತಾರಿಣಿಯ ಸಾನ್ನಿಧ್ಯದಲ್ಲಿ. ಜಗನ್ನಾತೆಯ ದರ್ಶನಕ್ಕಾಗಿ ನಿತಾಂತ ವ್ಯಾಕುಲತೆಯಿಂದ ಹಾತೊರೆದರೂ ಆಕೆ ಮೈದೋರದಿರಲು, ಹೃದಯದ ಅಸಹನೀಯ ಯಾತನೆಯನ್ನು ಸಹಿಸಲಾರದೆ ಗರ್ಭಗುಡಿಯಲ್ಲಿದ್ದ ದೇವಿಯ ಖಡ್ಗವನ್ನು ತುಡುಕುವ ಸಂದರ್ಭದಲ್ಲಿ. ಮೂರನೆಯದು ನಿರ್ವಿಕಲ್ಪ ಸಮಾಧಿ. ಅದ್ವೈತಗುರು ತೋತಾಪುರಿಯ ಸಮ್ಮುಖದಲ್ಲಿ, ಸನ್ಯಾಸ ಸ್ವೀಕಾರಮಾಡಿ ದೀಕ್ಷೆ ತೆಗೆದುಕೊಂಡ ಸಂದರ್ಭದಲ್ಲಿ. “ನಾಮರೂಪ ಜಗತ್ತು ಶೂನ್ಯವಾಗುತ್ತದೆ. ಕ್ಷುದ್ರ ಅಹಂಕಾರವು ಮಹಾಬ್ರಹ್ಮಚೈತನ್ಯದಲ್ಲಿ ವಿಲೀನವಾಗುತ್ತದೆ. ಸಚ್ಚಿದಾನಂದವಾದ ಕೇವಲ ಬ್ರಹ್ಮದಲ್ಲಿ ನೀನು ಅದ್ವಯವಾಗುವೆ. ತತ್ತ ತ್ವಮ್‌ ಅಸಿ! ತತ್‌ ತ್ವಮಸಿ! ತತ್ತ್ವಮಸಿ!”[15] ಎಂದು ಸಿದ್ಧಗುರುವಿನ ಶಕ್ತಿಪೂರ್ಣ ಮಂತ್ರವಾಣಿ ಭೂಮದ ಧುಮ್ಮಿಕ್ಕಿಗೆ ಮಹಾಜಲಪಾತ ರಚನೆ ಮಾಡಿದಂದು.

ಎರಡನೆಯ ಮತ್ತು ಮೂರನೆಯ ಸವಿಕಲ್ಪ ಮತ್ತು ನಿರ್ವಿಕಲ್ಪ ಸಮಾಧಿಗಳಿಗಿಂತಲೂ ನಮ್ಮ ಈ ಲೇಖನಕ್ಕೆ ಹೆಚ್ಚು ಪ್ರಕೃತವಾದದ್ದು ಹೊದಲನೆಯಸಲದ ಭಾವಸಮಾಧಿ. ಎರಡನೆಯ ಮತ್ತು ಮೂರನೆಯ ಸಂದರ್ಭಗಳಲ್ಲಿ ವ್ಯಕ್ತಿಯ ಅಭೀಪ್ಸೆ, ಇಚ್ಛೆ ಮತ್ತು ಬುದ್ದಿಗಳು ಮನಃಪೂರ್ವಕವಾಗಿಯೆ ಯಾವುದೊ ಒಂದು ಅನುಭೂತಿಗಾಗಿ ಪ್ರಯತ್ನಿಸುವುದನ್ನು, ಸಾಧನನಿರತವಾಗಿರುವುದನ್ನು ಕಾಣುತ್ತೇವೆ. ಮೊದಲನೆಯದಾದರೋ ಒಂದು ವಿಶೇಷವಾದ ಸೌಂದರ್ಯದ ಸಂನಿವೇಶದಲ್ಲಿ ಭೂಮವು ತನಗೆ ತಾನೆಂಬಂತೆ ಚೇತನವನ್ನು ಸೀಳಿ ಹೊಕ್ಕು, ಪ್ರಜ್ಞೆಗೂ ಆಘಾತವೊದಗಿದಂತಾಗಿ ತತ್ತರಿಸಿ ಬೀಳುವುದನ್ನು ಸಂದರ್ಶೀಸುತ್ತೇವೆ. ಲೋಕರಂಗದಲ್ಲಿ ಇಂತಹ ವಿಭೂತಿಪ್ರಮಾಣದ ಮಹೋನ್ನತ ನಿಸರ್ಗ ಸೌಂದರ್ಯದ ಸಾನ್ನಿಧ್ಯದಲ್ಲಿ, ಪರಮಹಂಸರಂತಹ ದಿವ್ಯಾತ್ಮರ ಮಾತಿರಲಿ ಅದಕ್ಕಿಂತಲೂ ಬಹು ಕೆಳಮಟ್ಟದ ಸಾಮಾನ್ಯರಿಗೂ ಭೂಮಾನುಭೂತಿಯ ತಟಿತ್ತಾಡನವಾಗುವ ನಿದರ್ಶನಗಳನ್ನು ತತ್ತ್ವಶಾಸ್ತ್ರ, ಮನಶ್ಯಾಸ್ತ್ರ, ಮತಶಾಸ್ತ್ರ, ಕಾವ್ಯಸಾಹಿತ್ಯಾದಿಗಳಲ್ಲಿ ಯಥೇಚ್ಛವಾಗಿ ಎದರುಗೊಳ್ಳುತ್ತೇವೆ.[16]

“ನಿಮ್ಮಲ್ಲಿ ಅನೇಕರಿಗೆ ನೆನಪಿರಬಹುದು, ನಮ್ಮ ತಾರುಣ್ಯಕಾಲದಲ್ಲಿ ಓದಿದ ಕೆಲವು ಕವನಭಾಗಗಳಲ್ಲಿ, ಯಾವುದೊ ಒಂದು ಅತೀಂದ್ರಿಯ ಪ್ರಭಾವಕ್ಕೆ ಒಳಗಾದಂತಾಗಿ, ಅವಿಚಾರ ರಮಣೀಯತಾ ದ್ವಾರದಿಂದ ಮನಃಪ್ರವೇಶ ಮಾಡಿ ಮೈನವಿರೇಳಿಸಿದ ಆ ಅನಿರ್ವಚನೀಯ ರಸಾನುಭೂತಿ. ಬಹುಶಃ ಈಗ ನಮಗೆ ಆ ಪದಪಂಕ್ತಿಗಳು ಸವೆದುಹೋಗಿ ಕಾಂತಿಮಂದವಾದ ಅಲಂಕಾರಗಳಂತಿರಬಹುದು; ಆದರೆ ಸಂಗೀತವಾಗಲಿ ಭಾವಗೀತವಾಗಲಿ ಎಷ್ಟರಮಟ್ಟಿಗೆ ಆ ಅಸ್ಪಷ್ಟ ಅನಿರ್ವಚನೀಯ ಅತೀಂದ್ರಿಯ ಸೀಮೆಯ ರಹಸ್ಯಮಯ ಆಹ್ವಾನವನ್ನು ನಮ್ಮ ಪ್ರಜ್ಞೆಗೆ ತರಲು ಸಮರ್ಥವಾಗುತ್ತದೆಯೊ ಅಷ್ಟರಮಟ್ಟಿಗೆ ಅವು ಜೀವಂತವೂ ಧ್ವನಿಪೂರ್ವಕವೂ ಆಗಿರುತ್ತವೆ. ಆ ಆಧ್ಯಾತ್ಮಿಕ ಅನುಭೂತಿಗೆ ನಾವು ಜಾಗ್ರತರಾಗಿರುವವರೆಗೆ ಬದುಕು ರಸಮಯವಾಗುತ್ತದೆ; ಅಂತಹ ಹೃದಯ ಸಂವಾದವನ್ನು ಕಳೆದುಕೊಂಡೆವೂ, ಬದುಕು ಮೃತಪ್ರಾಯವಾಗುತ್ತದೆ.”[17]


*       ‘ತಪೋನಂದನ’ದಲ್ಲಿರುವ ‘ಪಂಪನಲ್ಲಿ ಭವ್ಯತೆ’ಎಂಬ ಲೇಖನದ ಅಧ್ಯಯನವು ಸಹೃದಯನ ಬುದ್ದಿಸಂಸ್ಕಾರದ ಪೂರ್ವಭಿತ್ತಿಯಾಗಿದೆಯೆಂಬ ಭಾವನೆಯ ಮೇಲೆ ಈ ಮೀಮಾಂಸೆ ಮುಂದುವರಿಯುತ್ತದೆ.

[1]       ಸ ಭಗವಃ ಕಸ್ಮಿನ್ ಪ್ರತಿಷ್ಟಿತ?

[2]       ಸ್ವೇ ಮಹಿಮ್ಮಿ ಯದಿ ವಾ ನ ಮಹಿಮ್ನಿ!

[3]      ಯೋ ಅಸ್ಯಾಧ್ಯಕ್ಷಃ ಪರಮೇ ವ್ಯೋಮನ್
ಸೋ ಆಙ್ಗ ವೇದ ಯದಿ ವಾ ನ ವೇದ |
– ನಾಸದೀಯ ಸೂಕ್ತ

[4]       Even on the lowest level of religious development the essential characteristic is therefore to be sought elsewhere than in appearance of ‘spirit’ representation. It lies rather in a peculiar ‘moment’ of consciousness, to wit, the stupor before something ‘wholly other’, whether such an other be named ‘spirit’ or ‘daemon’ or ‘deva’ or be left without a name. Nor does it make any difference in this respect whether, to interpret and preserve their apprehension of this ‘other’, men coin original imagery of their own or adapt imaginations drawn from the world of legend, the fabrications of fancy apart from and prior to any strings of daemonic dread.

–‘The Idea of the Holy’ by RUDOLF OTTO.

[5]      ‘ವಿಭೂತಿ ಪೂಜೆ’ಯಲ್ಲಿ ‘ಕವಿಯಲ್ಲಿ ವಿಭೂತಿ’ಎಂಬ ಪ್ರಬಂಧವನ್ನು ನೋಡಿ.

[6]       Some modern students of religion… have been mislead by their interest in the experiences of exceptional into a distorted account of religion as a whole… Mystical experience is surely after all something exceptional. Religion is something wider than mysticism. Yet sometimes one gets the impression that the non-mystic is only rather grudgingly and half-heartedly admitted to have any first-hand genuine religious experience at all. The abnormal is often the more interesting, the more fascinating study, but it ought not on that account to be allowed to usurp the place of the normal.

–Translator’s preface to ‘The Idea of the Holy‘.

[7]       ತೈತ್ತಿರೀಯೋಪನಿಷತ್:ಭೃಗುವಲ್ಲೀ-ಅನುವಾಕ II-III-IV-V-VI.

[8]       ‘ರಸೋ ವೈ ಸಃ ಎಂಬ ಮುಂದಿನ ಪ್ರಬಂಧವನ್ನು ನೋಡಿ.

[9]       ಇಲ್ಲಿ ಕೊಟ್ಟಿರುವ ನಿದರ್ಶನಗಳೆಲ್ಲ ಪ್ರಕೃತಿ ಸೌಂದರ್ಯಕ್ಕೆ ಮಾತ್ರ ಸಂಬಂದಪಟ್ಟಿವೆ. ಏಕೆಂದರೆ ನಿಸರ್ಗ ದೃಶ್ಯಗಳನ್ನು ಸಂಗದೂರವಾಗಿ ಸವಿಯಲು ಸಾಧ್ಯವಾಗುವಂತೆ ಮಾನವ ವ್ಯಾಪಾರಗಳನ್ನು ಸವಿಯಲು ಸಾಮಾನ್ಯ ಮಾನವರಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ, ಆ ಲೋಕಾನುಭವ ರಸಾನುಭವದ ಮಟ್ಟಕ್ಕೆ ಏರಬೇಕಾದರೆ ಕಾವ್ಯಕಲಾದಿ ಪ್ರಪಂಚಕ್ಕೆ ಹೋಗಬೇಕಾಗುತ್ತದೆ. ಮುಂದೆ ಇರುವ ‘ರಸೋ ವೈ ಸಃ’ ಪ್ರಬಂಧದಲ್ಲಿ ವಾಚಕರಿಗೆ ಇದರ ಜಿಜ್ಞಾಸೆ ದೊರಿಯುತ್ತದೆ.

[10]     Every civilized human being, whatever his conscious development, is still an archaic man at the deeper level of his psyche. Just as the human body connects us with the mammals and displays numerous relics of earlier evolutionary stages going back even to the reptilian age, so the human psyche is likewise a product of evolution which, when followed up to its origins, shows countless archaic traits:

–‘Archaic Man’, ‘Modern Man in search of a Soul’ by C.G. JUNG.

[11]      ಈ ಸಂಗತಿ ನಡೆದ ಒಂದು ಘಟನೆಯಲ್ಲಿಯೂ ಆಧಾರ ಪಡೆದಿದೆ, ಮನಶ್ಯಾಸ್ತ್ರದಲ್ಲಿ ಮಾತ್ರವಲ್ಲ.

[12]     ಆದ್ದರಿಂದಲೆ ಲೋಕದಲ್ಲಿ ಭೂಮಾನುಭೂತಿಯನ್ನು ಗುರುತಿಸಲೂ ಪಡೆಯಲೂ ಆಗದ ಸಾಮಾನ್ಯ ಸಹೃದಯನಿಗೆ ಕಾವ್ಯಕಲಾಸೀಮೆಯಲ್ಲಿ ಅದನ್ನು ಭವ್ಯತಾ ಅನುಭವದ ರೂಪದಲ್ಲಿ ಪಡೆಯಲು ಸುಲಭವಾಗುತ್ತದೆ.

[13]     ವಾಚಕರು “The Varieties of Religious Experience” ಎಂಬ ವಿಲಿಯಂ ಜೇಮ್ಸ್‌ ಅವರ ಗ್ರಂಥಲದಲ್ಲಿ ನಾನಾ ವಿಧವಾದ ಬೇರೆ ಬೇರೆ ಭೂಮಿಕೆಯ ನಿದರ್ಶನಗಳನ್ನು ಕಾಣಬಹುದು.

[14]      ಕುವೆಂಪು ಅವರ ‘ಶ್ರೀ ರಾಮಕೃಷ್ಣ ಪರಮಹಂಸ’ ೧೯೫೯ರ ಮೈಸೂರು ವಿಶ್ವವಿದ್ಯಾನಿಲಯದ ಪ್ರಕಟಣೆ – ಪುಟ ೨೨, ೫೧, ೮೭ ನೋಡಿ.

[15]     ನ ತತ್ರ ಚಕ್ಷರ್ಗಚ್ಛತಿ ನ ವಾಗ್ಗಚ್ಛತಿ ನೋ ಮನ:
ನವಿದ್ಮೋ ನ ವಿಜಾನೀಮೋ ಯಥೈತದನುಶಿಷ್ಯಾತ್‌ ||          ಕೇನೋಪನಿಷತ್‌.

“ಅಲ್ಲಿಗೆ ಕಣ್ಣು ಹೋಗುವುದಿಲ್ಲ, ವಾಕ್ಕು ಹೋಗುವುದಿಲ್ಲ, ಮನಸ್ಸು ಹೋಗುವುದಿಲ್ಲ, ನಾವು ಅರಿಯೆವು; ಹೇಗೆ ತಿಳಿಸಿಕೊಡಬೇಕೋ ಅದನ್ನೂ ಅರಿಯೆವು”

[16]      ಆಧ್ಯಾತ್ಮಿಕ ಸಾಮರ್ಥ್ಯವುಳ್ಳ ಸಿಧಪುರಷನು ತನ್ನ ಇಚ್ಛಾಮಾತ್ರದಿಂದಲೊ ಸ್ಪರ್ಶಮಾತ್ರದಿಂದಲೊ ಭೂಮಾನುಭೂತಿಯನ್ನು ಇನ್ನೊಬ್ಬನ ಚೇತನದಲ್ಲಿ ಪ್ರಚೋದಿಸಬಲ್ಲನೆಂಬುದಕ್ಕೆ ಶ್ರೀ ರಾಮಕೃಷ್ಣರು ನರೇಂದ್ರನೆಗೆ ನೀಡಿದ ಆತ್ಮಾನುಭವಗಳೆ ಸಾಕ್ಷಿಗಲಾಗಿವೆ. (ಮೈಸೂರು ಶ್ರೀ ರಾಮಕೃಷ್ಣಾಶ್ರಮ ಪ್ರಕಟಿಸಿರುವ ಕುವೆಂಪು ಅವರ ‘ಸ್ವಾಮಿ ವಿವೇಕಾನಂದ’ನೋಡಿ) ಕವಿ ತನ್ನ ವಾಙ್ಮಂತ್ರಶಕ್ತಿಯಿಂದ ಸಹೃದಯನಲ್ಲಿ ‘ಭವ್ಯತಾ’ ಅನುಭವವನ್ನು ಪ್ರಚೋದಿಸುವುದೂ, ತತ್‌ಸಮವಲ್ಲದಿದ್ದರೂ, ತತ್‌ಸದೃಶವಾಗುತ್ತದೆಯಷ್ಟೆ.

[17]     ‘The Varieties of Religious Experiance’

— WILLIAM JAMES.