ಇದುವರೆಗೆ ಭೂಮಸ್ವರೂಪವನ್ನು ಸೂಕ್ಷ್ಮವಾಗಿ ನಿರೂಪಿಸಿ, ಅದರ ಅನುಭೂತಿಯ ಕೆಲವು ಪ್ರಕಾರಗಳ ಮತ್ತು ಅದರ ಪ್ರಕಾಶನದ ತರ ತಮಾಂತರಗಳ ಪರಿಚಯವನ್ನು ಸಂಕ್ಷೇಪವಾಗಿ ಮಾಡಿಕೊಟ್ಟಿದೆ. ಕೆಲವು ನಿದರ್ಶನಗಳಿಂದ ಕಲಾಭೂಮಿಕೆಯಲ್ಲಿ ಮೂಡುವ ಭವ್ಯತಾ ಅನುಭವಕ್ಕೆ ಉದಾಹರಣೆ ಕೊಟ್ಟಿದೆ. ನಿರ್ವಿಕಲ್ಪ ಸಮಾಧಿಸ್ಥ ಸಿದ್ಧಪುರುಷನ ಕೇವಲ ಬ್ರಹ್ಮಸಾಕ್ಷಾತ್ಕಾರದಿಂದ ಹಿಡಿದು ಸಾಮಾನ್ಯ ಪಶುಮಾನವನ ಹೃದಯದಲ್ಲಿ ಸಂಚರಿಸುವ, ಅದೃಶ್ಯಶಕ್ತಿಗಳ ಮತ್ತು ಅತೀಂದ್ರಯ ಚೇತನಗಳ ಪರವಾದ, ಭಯಭಕ್ತಿಯವರೆಗೆ ಭೂಮದ ಅನುಭೂತಿ ವ್ಯಾಪಿಸುತ್ತದೆ. ಎಲ್ಲಿ ಸೌಂದರ್ಯ ಮಾಧ್ಯಮದಲ್ಲಿ ಮತ್ತು ವಿಭೂತಿಮ್ರಮಾಣದಲ್ಲಿ ಆ ‘ಭೂಮ’ವು ಪ್ರಕಟವಾಗುತ್ತದೆಯೊ ಅಲ್ಲಿ ‘ಭವ್ಯತೆ’ ಮೂಡುತ್ತದೆ. ಭೂಮಾನುಭೂತಿ ಲೋಕಾನುಭವಸ್ವರೂಪದ್ದಾದರೆ ಭವ್ಯತೆ ಕಲಾನುಭವಸ್ವರೂಪದ್ದಾಗುತ್ತದೆ. ಭೂಮಾನುಭೂತಿ ಬಾವಾನುಭವಸ್ವರೂಪದ್ದು, ಭವ್ಯತೆ ರಸಾನುಭವ ಸ್ವರೂಪದ್ದು.

ಸಚ್ಚಿದಾನಂದ ಬ್ರಹ್ಮದ ಆನಂದಾಂಶವೆ ಲೋಕದಲ್ಲಿ ಸೌಂದರ್ಯಶಕ್ತಿಯಾಗಿಯೂ ನಮ್ಮ ಪ್ರಜ್ಞೆಯಲ್ಲಿ ಸೌಂದರ್ಯಾನುಭವ ಸಾಮರ್ಥ್ಯವಾಗಿಯೂ ಗೋಚರಿಸುತ್ತದೆಂದು ಒಪ್ಪಿಕೊಂಡರೆ ಭವ್ಯತೆ ಸೌಂದರ್ಯವಾಗಿ ವ್ಯಕ್ತಗೊಂಡಿರುವ ಆ ಆನಂದಾಂಶದ ಮೂಲಕವಾಗಿ ಮೈದೋರುವ ಬ್ರಹ್ಮದ ‘ಭೂಮಾ’ತ್ವದಿಂದ ಸಿದ್ದಿಸುತ್ತದೆ. ಎಂದರೆ, ಭೂಮದ ಅವತರಣವಿಲ್ಲದೆ ಸೌಂದರ್ಯದ ಉತ್ಕರ್ಷದಿಂದಲೆ ಭವ್ಯತೆ ಸಿದ್ಧಿಸುವುದಿಲ್ಲ, ಭವ್ಯತೆ ಸೌಂದರ್ಯದ ಒಂದು ವಿಶೇಷ ಪ್ರಕಾರ ಎನ್ನುವುದಕ್ಕಿಂತಲೂ ಸೌಂದರ್ಯದಲ್ಲಿ ಆವಿರ್ಭವಿಸುವ ಭೂಮದ ಒಂದು ವಿಶೇಷಪ್ರಕಾರ ಎನ್ನುವುದು ಹೆಚ್ಚಿನ ಸತ್ಯವಾಗುತ್ತದೆ. ಭವ್ಯತಾ ಆವರ್ಭಾವಕ್ಕೆ ಸೌಂದರ್ಯ ಒಂದು ಅನಿವಾರ್ಯವೂ ಆವಶ್ಯಕವೂ ಆದ ಮೂಲಭಿತ್ತಿಯಾಗಿರಲೇಬೇಕಾಗುತ್ತದೆ. ಸೌಂದರ್ಯದ ಚೌಕಟ್ಟಿನ ಹೊರಗೆ ನಿಲ್ಲುವ ಭೂಮದ ಅನುಭೂತಿ ಎಷ್ಟು ಮಹಿಮಾಸ್ಪದವಾದುದಾಗಿರಲಿ ಎಷ್ಟು ಪವಿತ್ರವಾದುದಾಗಿರಲಿ ಎಂತಹ ಪರಮಪುರಷಾರ್ಥ ಸಾಧಕವಾದುದಾಗಿರಲಿ ಅದು ಭವ್ಯತೆ ಆಗುವುದಿಲ್ಲ.

ಆದರೆ ಆ ಸಿದ್ದಾಂತಕ್ಕೆ ನಿದರ್ಶನಗಳು ದೊರೆಯುವುದು ಬಹು ಅಪೂರ್ವ, ಏಕೆಂದರೆ ಕಲಾಕಾವ್ಯಲೋಕಗಳಲ್ಲಿ ಮಾತ್ರವಲ್ಲದೆ ಲೋಕದಲ್ಲಿಯೂ ಭೂಮಾ ವಿಭೂತಿ ಮೈದೋರುವ ಎಡೆಗಳಲ್ಲೆಲ್ಲ ಸೌಂದರ್ಯವು ತನ್ನ ಮಹೋತ್ಕರ್ಷದ ಹಿನ್ನೆಲೆಯ ಕಾಣಿಕೆಯನ್ನು ಸಮರ್ಪಿಸಿಯೆ ಇರುತ್ತದೆ. ನಿಸರ್ಗದೃಶ್ಯಗಳಲ್ಲಿಯಂತೂ ಭೂಮಾವಿಭೂತಿ ಗೋಚರಿಸುವೆಡೆಗಳಲ್ಲಿ ಸೌಂದರ್ಯಭಿತ್ತಿ ಸ್ವತಃಸಿದ್ದವಾಗಿಯೆ ಇರುತ್ತದೆ. ಬಹುಶಃ ಮಾನವವ್ಯಾಪಾರಗಳಲ್ಲಿ ಭೂಮಾ ಸಿದ್ಧಿಯೆ ಮಾತ್ರ ಮುಖ್ಯ ಗುರಿಯಾಗಿರುವ ಮನುಷ್ಯಪ್ರಯತ್ನಗಳಲ್ಲಿ, ವೈರಾಗ್ಯ ಸಾಧನೆಯ ಕಠೋರತರ ಮಾರ್ಗಗಳಲ್ಲಿ ಹುಡುಕಿದರೆ ನಿದರ್ಶನಗಳು ದೊರೆಯಬಹುದೇನೊ?

ಆಂಗ್ಲೇಯ ವಿಮರ್ಶಕವರೇಣ್ಯ ಬ್ರಾಡ್ಲೆಯವರು ತಮ್ಮ ‘The Sublime’ ಎಂಬ ಪ್ರಬಂಧದಲ್ಲಿ ಭವ್ಯತೆಯನ್ನು ಕುರಿತು ಸ್ವರಸ ಸವಿಚಾರ ಜಿಜ್ಞಾಸೆ ನಡೆಸಿದ್ದಾರೆ. ಅಲ್ಲಿ ಅವರ ದೃಷ್ಟಿ ಭೂಮಾತತ್ವದ ಕಡೆಗೆ ಪ್ರತ್ಯೇಕವಾಗಿ ಹರಿದಿಲ್ಲ.

[1]  ಆದರೆ “ಅನಂತತೆ ತಾನು ಸ್ವೇಚ್ಛೆಯಿಂದ ವರಿಸುವ ಯಾವುದೆ ಪರಿಮಿತದಲ್ಲಿ ತನ್ನ ಪೂರ್ಣ ಸಾನ್ನಿಧ್ಯವನ್ನು ಅಭಿವ್ಯಕ್ತಗೊಳಿಸುವ ಪ್ರತಿಮಾ ವಿಧಾನವನ್ನೆ ‘ಸೌಂದರ್ಯ’ ಎಂದೂ, ಭವ್ಯತೆ ಅದರ ಅಪರಿಮಿತತ್ವದ ಪ್ರತಿಮೆ ಎಂದೂ ನಾವು ಹೇಳಬಹುದೆಂದು ತೋರುತ್ತದೆ; ಒಂದು ಅದರ ಅಂತರ್ಯಮಿತ್ವದ ಪ್ರತಿಮೆ; ಇನ್ನೊಂದು ಅದರ ಅತೀತತ್ವದ್ದು.” ಎಂದು ಅವರು ಪ್ರಬಂಧದ ತುದಿಯಲ್ಲಿ ಭೂಮಾತತ್ತ್ವನ್ನೇ ಸೂಚಿಸಿದ್ದಾರೆ.[2] ಅವರು ಮುಖ್ಯವಾಗಿ ಸೌಂದರ್ಯತತ್ತ್ವವನ್ನೇ ಆಶ್ರಯಿಸಿ ಭವ್ಯತಾ ಅನುಭವವನ್ನು ವಿವರಿಸಿದ್ದಾರೆ. ಅನೇಕ ಛಾಯಾಭೇದಗಳೂ ತರತರಮಸ್ತರಗಳೂ ರೀತಿಗಳೂ ಮುಖಗಳೂ ಹಾಸುಹೊಕ್ಕಾಗಿರುವ ಸೌಂದರ್ಯ ಸೀಮೆಯನ್ನು ಐದು ಸೋಪಾನಗಳನ್ನಾಗಿ ವಿಂಗಡಿಸಿ, ಶುದ್ಧ ಸೌಂದರ್ಯವಲಯವನ್ನು ಮಧ್ಯದಲ್ಲಿರಿಸಿದ್ದಾರೆ. ಭವ್ಯತೆಗೆ ಮೊದಲನೆಯ ಉತ್ತಂಗಸ್ಥಾನ ಕೊಟ್ಟಿದ್ದಾರೆ.[3]

ಭವ್ಯ, ಅದ್ಭುತ, ಸುಂದರ, ರಮ್ಯ, ಲಲಿತ-ಎಂದು ಭಾಷಾಂತರಿಸಲು ಒಪ್ಪಿಕೊಂಡು ನಾವು ಮುಂದುವರಿಯಬಹುದು. ಅಂತಹ ಒಪ್ಪಿಗೆಯ ಆವಶ್ಯಕತೆ ಏಕೆ ಎಂದರೆ, ಭಾರತೀಯ ಭಾಷೆಗಳಲ್ಲಿ ಮತ್ತು  ಆ ಭಾಷೆಗಳಿಗೆಲ್ಲ ಮಾತೃಸ್ಥಾನದಲ್ಲಿ ನಿಂತಿರುವ ಸಂಸ್ಕ್ರತದಲ್ಲಿ ಸೌಂದರ್ಯಾನಭವ ಮತ್ತು ಭೂಮಾನುಭೂತಿಯ ಅಸಂಖ್ಯ ಮುಖಗಳನ್ನು ಗುರುತಿಸಲು ನೂರಾರು ಪದಗಳು ಶೇಣಿಗೊಂಡು ನಿಂತಿವೆ.[4] ಅವುಗಳಲ್ಲಿ ಅನೇಕವನ್ನು ಪರ್ಯಾಯ ಪದಗಳನ್ನಾಗಿಯೂ ಬಳಸಿ ಬಳಸಿ, ಪರಸ್ಪರವಾಗಿ ಇರಬೇಕಾಗಿದ್ದ ವ್ಯತ್ತಾಸವೆಲ್ಲ ಸಮೆದೂ ಸಮೆದೂ, ಮುದ್ರೆ ಅಳಸಿಹೋದ ನಾಣ್ಯಗಳೆಂತೂ ಅಂತೆ, ಕಡಮೆ ಬೆಲೆಯದಕ್ಕೆ ಹೆಚ್ಚಿನ ಬೆಲೆಯದನ್ನೂ ಹೆಚ್ಚಿನ ಬೆಲೆಯದರ ಸ್ಥಾನದಲ್ಲಿ ಕಡಮೆ ಬೆಲೆಯದನ್ನೂ ಮನಸ್ಸು ಬಂದಂತೆ ಉಪಯೋಗಿಸುವ ಅಲಸಪ್ರವೃತ್ತಿ ಬೆಳೆದು ಬಂದಿದೆ. ಅಲ್ಲದೆ ಅದ್ಭುತಕ್ಕೆ ಬದಲು ಮಹತ್ತನ್ನೇಕೆ ಬಳಸಬಾರದು? ರಮ್ಯಕ್ಕೆ ಬದಲು ಚಾರು ಏಕಿರಬಾರದು? ಲಲಿತಕ್ಕೆ ಬದಲು ಲಾವಣ್ಯವಿರಬಹುದಲ್ಲಾ! ಕೋಮಲ ಏಕಾಗವಾರದು? ಮುದ್ದು, ಸೊಗಸು, ಚೆಲವು ಈ ಪದಗಳಲ್ಲಿರುವ ಅರ್ಥ Pretty ಎನ್ನುವುದಕ್ಕೆ ಹೆಚ್ಚಿನ ಸಾಮಿಪ್ಯದಲ್ಲಿಲ್ಲವೆ? ಇತ್ಯಾದಿ ಸಂದೇಹಗಳೂ ಸಮಸ್ಯೆಗಳೂ ವಾದ ವಿವಾದಗಳೂ ಮೂಡದಿರಲು ಈ ಒಪ್ಪಿಗೆ ಬೇಕಾಗುತ್ತದೆ. ಅವು ಮೂಡಲೆ ಬಾರದು ಎಂದಲ್ಲ; ವಿಚಾರದಾರಿ ವಾದದ ಸಂದಿಗ್ದತೆಯಲ್ಲಿ ಸಿಕ್ಕಿ ಗುರಿಗೆಡದಿರಲಿ ಎಂದು!

ಲಾಲಿತ್ಯ, ರಮ್ಯತೆ, ಸೌಂದರ್ಯ, ಅದ್ಭುತ್ಯ, ಭವ್ಯತೆ – ಈ ಐದನ್ನು ಸೌಂದರ್ಯದ ಪಂಚಾಂಗಗಳೆಂದಾಗಲಿ ‘ರಸ’ದ ಪಂಚಸ್ಥಿತಿಗಳೆಂದಾಗಲಿ ಭಾವಿಸಬಹುದು; – ಶೈಶವ, ಬಾಲ್ಯ, ತಾರುಣ್ಯ, ಯೌವನ, ಪರಿಣತಿ ಅಥವಾ ವೃದ್ಧಗಳಿರುವಂತೆ. (ಇಂಗ್ಲೀಷಿನಲ್ಲಿ ಸಣ್ಣಕ್ಷರದ b ಇರುವ beauty ಎನ್ನುವುದನ್ನು ದೊಡ್ಡಕ್ಷರದ B ಇರುವ Beauty ಎಂದು ಬರೆದು ಅದರ ಸರ್ವಗ್ರಾಸಿಯಾದ ವಿಶಾಲಾರ್ಥವನ್ನು ಸೂಚಿಸಿರುತ್ತಾರೆ. ನಾವು ದೊಡ್ಡಕ್ಷರದ Beauty ಎನ್ನುವುದನ್ನು ‘ರಸ’ ಎಂದು ಕರೆಯುವುದರಲ್ಲಿ ಔಚಿತ್ಯವಿದೆ.[5]ಲಾಲಿತ್ಯಕ್ಕೂ ರಮ್ಯತೆಗೂ ಹೆಚ್ಚು ಸಾದೃಶ್ಯವಿರುವುದನ್ನೂ ನಾವು ಗಮನಿಬಹುದು. ಸೌಂದರ್ಯ ನಡುವೆ ನಿಲ್ಲುತ್ತದೆ. ಆದರೆ ಒಮ್ಮೊಮ್ಮೆ ಲಾಲಿತ್ಯ ರಮ್ಯತೆಗಳ ಕಡೆ ತುಸು ಒಲೆಯಬಹುದು; ಒಮ್ಮೊಮ್ಮೆ ಅದ್ಭುತ ಭವ್ಯತೆಗಳ ಕಡೆಗೂ ವಾಲಬಹುದು. ಅಂದರೆ ಲಲಿತಸೌಂದರ್ಯ. ಸಾಧ್ಯವಾಗುವಂತೆ ಮಹತ್‌ಸೌಂದರ್ಯವೂ ಸಾಧ್ಯ. ಆದರೆ ಲಾಲಿತ್ಯಭವ್ಯತೆಗಳ ನಡುವೆ, ಅವರೆಡಕ್ಕೂ ರಸದ ಸೀಮೆಯ ನಂಟು ಇದ್ದರೂ, ಅಗಾಧವೂ ಅಪಾರವೂ ಆದ ಅಂತರವಿದೆ. ಎಷ್ಟರಮಟ್ಟಿಗೆಂದರೆ, ಅವರೆಡಕ್ಕೂ ಸಂಬಂಧವೆ ಇಲ್ಲವೆಂದು ತೋರುವಂತೆ; ಅಷ್ಟೇ ಅಲ್ಲ, ಪರಸ್ಪರ ವಿರೋಧಿಗಳಾಗಿಯೂ ಭಾಸವಾಗುವಂತೆ.

ಹಾಗಾದರೆ ಭವ್ಯತೆ ತನ್ನ ಯಾವ ಲಕ್ಷಣದಿಂದ ಲಾಲಿತ್ಯಕ್ಕೆ ಅಮೇಯ ದೂರವಾಗುತ್ತದೆ? ಲಾಲಿತ್ಯಕ್ಕಿಲ್ಲದ ಯಾವ ಗುಣ ಭವ್ಯತೆಯಲ್ಲಿ ಮೈದೋರುತ್ತದೆ? ಹಸುರಿನ ನಡುವೆ, ಕಿರುಬಂಡೆಗಳಲ್ಲಿ ಜಗುಳಿ, ಮೊರೆದು, ನೊರೆಗುಳ್ಳೆಗಳನ್ನು ಚಿಮ್ಮಿ ಹರಿಯುವ ತೊರೆಯ ರಮ್ಯತೆಗೂ ಕಡಿದಾದ ಭಯಂಕರ ಪ್ರಪಾತಕ್ಕೆ ಇಡಿಯ ಹೊಳೆಯೆ ದುಢುಮ್ಮನೆ ಭೋರ್ಗರೆದು ಧುಮುಕುವ ಜೋಗದ ಮಹಾಜಲಪಾತದ ಭವ್ಯತೆಗೂ ಇರುವ ಗುಣ ವ್ಯತ್ಯಾಸವೇನು?

ಎಲ್ಲಿ ಯಾವುದೆ ಗುಣದ ಪರಿಮಿತಿ ಅಥವಾ ಅಲ್ಪತೆ ತನ್ನ ವಿಸ್ತಾರ ಬಾಹುಳ್ಯದಿಂದ ವಿಭೂತಿಪ್ರಮಾಣಕ್ಕೇರಿ,[6] ಭೂಮವೂ ಆ ವಿಭೂತಿಪ್ರಮಾಣದಲ್ಲಿಯೆ ಆವಿರ್ಭಾವವಾಗಿ ನಮ್ಮ ಪ್ರಜ್ಞೆಯನ್ನು ಆಕ್ರಮಿಸುತ್ತದೆಯೊ ಅಲ್ಲೆಲ್ಲ ಭವ್ಯತೆ ಮೂಡುತ್ತದೆ. ವಿಸ್ತಾರ, ಬಾಹುಳ್ಯ, ಬೃಹತ್ತು, ಮಹತ್ತು, ಮಹಾಶಕ್ತಿ, ಮಹಾಮಹಿಮೆ, – ಅಂತರ್ಮುಖದ್ದಾಗಿರಬಹುದು; ಬಹಿರ್ಮುಖದ್ದಾಗಿರಬಹುದು; ಆಧ್ಯಾತ್ಮಿಕವಾಗಿರಬಹುದು; – ಇವು ಭವ್ಯತಾ ಅನುಭವವನ್ನು ಪ್ರಚೋದಿಸುವ ಭಿತ್ತಿಲಕ್ಷಣಗಳಾಗಿರುತ್ತವೆ. ಅಪಾರ, ಅಸೀಮ, ಅನಂತ, ಅಚಿಂತ್ಯ, ಅಪ್ರಮೇಯ ಇಂತಹ ನಿರ್ದಿಗಂತ ಮತ್ತು ನಿಶ್ಯಿಖರ ಧ್ವನಿಯ ವಿಶೇಷಣಗಳೆ ಭವ್ಯತಾ ಅನುಭವಕ್ಕೆ ನೆರವಾಗುವ ಗುಣಗಳನ್ನು ಸೂಚಿಸುತ್ತವೆ. ನಮ್ಮ ದೈನಂದಿನ ಸಾಮಾನ್ಯತೆಯ ಅಲ್ಪತೆಗೆ ಆಘಾತವೊದಗಿ, ನಮ್ಮ ಸ್ವಸ್ವರೂಪದ ಅನಂತತೆ ಆಹ್ವಾನಿತವಾಗಿ, ವಿಭೂತಿಪ್ರಮಾಣದಲ್ಲಿ ಭೂಮದ ಆವಾಹನೆಯಾಗುವುದೆ ಭವ್ಯತೆ.

ನಮ್ಮ ಧ್ಯಾನಕ್ಕೆ ಅಥವಾ ಪರಿಭಾವನೆಗೆ ವಿಷಯವಾಗುವ ಒಮದು ಹಿರಿಮೆ, ಒಂದು ಮಹಿಮೆ, ಒಂದು ಮಹತ್ತು ಬೃಹತ್‌ಪ್ರಮಾಣದಲ್ಲಿ ತೆಕ್ಕನೆ ನಮ್ಮನ್ನು ಸಂಧಿಸಿದಾಗ ಮೊದಲು ನಮ್ಮ ವ್ಯಕ್ತಿತ್ವವನ್ನು ಅಪ್ಪಳಿಸುತ್ತದೆ; ನಮ್ಮ ಅಹಂಕಾರ ತನ್ನ ಅಲ್ಪತೆಯನ್ನು ಅನುಭವಿಸಿ ತಿರೋಹಿತವಾಗುತ್ತದೆ; ನಮ್ಮ ಅಹಂಕಾರ ತನ್ನ ಅಲ್ಪತೆಯನ್ನು ಅನುಭವಿಸಿ ತಿರೋಹಿತವಾಗುತ್ತದೆ; ನಮ್ಮ ಗರ್ವಭಾವ ಅಥವಾ ಸ್ವಪ್ರತಿಷ್ಠೆ ಭಂಗಿತವಾಗಿ ಒಮ್ಮೊಮ್ಮೆ ಚೂರ್ಣೀಕೃತವನ್ನಾಗಲಿ ನಾವು ಕುನಿದು ಕುಗ್ಗಿ ಇಲ್ಲವಾಗುತ್ತೇವೆ. ಹಾಗಾಗುವಿಕೆ ಒಮ್ಮೊಮ್ಮೆ ಭಯದ ರೂಪವನ್ನಾಗಲಿ ವಿಸ್ಮಯದ ರೂಪವನ್ನಾಗಲಿ ತಾಳುತ್ತದೆ. ಎದುರಿಸುವಿಕೆಯನ್ನೆ ಒಂದಿನಿತೂ ಸಹಿಸದ, ಒಂದು ಬುದ್ಧಿಸ್ಪಷ್ಟವಲ್ಲದ ಭೀಷಣತೆ ಹಿಂಜರಿಯುತ್ತಿರುವ ನಮ್ಮ ವ್ಯಕ್ತಿತ್ವನ್ನು ಬೆನ್ನಟ್ಟಿ ನುಂಗಿ ನೊಣೆಯುತ್ತದೆ. ಆ ಭೀತಿಯ ಸ್ವರೂಪ ಸಾಧಾರಣ ಪ್ರಾಣಭಯಕ್ಕಿಂತ ಭಿನ್ನವಾಗಿರುತ್ತದೆ. ಅದು ತಂದೊಡ್ಡುವ ನಾಶದಲ್ಲಿ ಏನೋ ಒಂದು ಅಪೇಕ್ಷಣೀಯವಾದುದೂ ಆಪ್ಯಾಯಮಾನವಾದುದೂ ಇರುತ್ತದೆ. ನಮ್ಮ ಜೀವ ಅದರಿಂದೋಡುವಾಗಲೆ ಅದನ್ನಾಲಿಂಗಿಸುವ ಮರಣಾನಂದದ ಮೋಹದಿಂದ ಅದರ ಆಕ್ರಮಣಕ್ಕೆ ಒಳಗಾಗಲು ಬಯಸಿ, ಒಳಗೊಳಗೆ, ಬೇಕೆಂದೆ, ಅದಕ್ಕೆ ಸಿಕ್ಕಲಿ ಎಂದೆ, ಕಾಲು ಸೋಲುತ್ತದೆ, ನಡೆಗೆಡುತ್ತದೆ, ಬಿದ್ದು ಮೈ ಮರೆತು ಮೂರ್ಛೆ ಹೋಗುತ್ತದೆ. ಅವಶವಾಗುತ್ತದೆ, ಪರವಶವಾಗುತ್ತದೆ, ತನ್ನನಿತನ್ನೂ ತಾನೆ ಸಂಪೂರ್ಣವಾಗಿ ಸಮರ್ಪಿಸಿಕೊಂಡು ಶೂನ್ಯವಾಗುತ್ತದೆ; ಪೂರ್ಣ ಶರಣಾಗತಿಯ ಒಂದು ಮಹಾಕ್ರಿಯೆ ನಡೆದುಹೋಗುತ್ತದೆ. ಆಗ ಆ ಶೂನ್ಯವನ್ನು ತುಂಬುತ್ತದೆ, ಪೂರ್ಣ!

ನಮ್ನನ್ನು ಹೆದರಿಸುವ ಒಂದು ಭೀಷಣತೆ; ಆದರೂ ರಹಸ್ಯವಾಗಿ ಆಕರ್ಷಿಸುವ ಒಂದು ಸಂಮ್ಮೋಹಕತೆ. ನಮ್ಮನ್ನು ಶೂನ್ಯಗೈಯುವ ಭೀತಿ; ಆದರೂ ಆಸ್ವಾದ್ಯವಾಗಿ ಪೂರ್ಣಗೈಯುವ ಒಂದು ಪ್ರೀತಿ. ಒಂದು ರುದ್ರತೆ; ಒಂದು ರಮಣೀಯತೆ. ಅಲ್ಲಿಯ ಭಯ ಪಶುಭಯವಲ್ಲ. ಅದೊಂದು ದಿವ್ಯಭೀತಿ. ನಮ್ಮ ಅಲ್ಪತ್ವವನ್ನು ಒದ್ದು ತಳ್ಳುವಂತೆಯೆ ನಮ್ಮ ಮಹತ್ತ್ವವನ್ನು ಸೆಳೆದಪ್ಪುತ್ತದೆ. ತೈತ್ತರೀಯೋಪನಿಷತ್ತಿನ ಮಹರ್ಷಿ ‘ಭೀಷಾs ಸ್ವಾದ್ವಾತಃ ಪವತೇ | ಭೀಷೋದೇತಿ ಸೂರ್ಯಃ | ಭೀಷಾsಸ್ಮಾದಗ್ನಿ ಶ್ಚೇಂದರಶ್ಚ | ಮೃತ್ಯುರ್ಧಾವತಿ ಪಂಚಮ ಇತಿ |’ ಎಂದು ಯಾವ ‘ಭೀಷೆ’ ಯನ್ನು ವರ್ಣಿಸುತ್ತಾನೊ ಆ ಭಯ ಬರಿಯ ಪಶುಭಯವಲ್ಲ. ಕಠೋಪನಿಷತ್ತಿನಲ್ಲಿಯೂ ಸ್ವಲ್ಪ ಹೆಚ್ಚು ಕಡೆಮೆ ಅದೇ ಮಾತಿನಲ್ಲಿ ಆ ದಿವ್ಯಭಯದ ವರ್ಣನೆ ಬರುತ್ತದೆ: ‘ಭಯಾದಸ್ಯಾಗ್ನಿಸ್ತಪತಿ ಭಯಾತ್ತಪತಿ ಸೂರ್ಯಃ | ಭಯಾದಿಂದ್ರಶ್ಚ ವಾಯುಶ್ಚ ಮೃತ್ಯುರ್ಧಾವತಿ ಪಂಚಮಃ |’ ‘ಇದರ ಭಯದಿಮದ ಅಗ್ನಿ ಸುಡುತ್ತಾನೆ; ಸೂರ್ಯ ಪ್ರಕಾಶಿಸುತ್ತಾನೆ; ಇಂದ್ರ ಮತ್ತು ವಾಯು ತಮ್ಮ ಕರ್ತವ್ಯಪಾಲನೆ ಮಾಡುತ್ತಾರೆ; ಐದನೆಯವ ಯಮನೂ ಓಡುತ್ತಾನೆ.’ ‘ಯದದಿಂ ಕಿಂಚ ಜಗತ್‌ ಸರ್ವಂ ಪ್ರಾಣ ಏಜತಿ ನಿಃಸೃತಮ್‌ | ಮಹದ್ಬಯಂ ಯ ಏತದ್ವದುರಮೃತಾಸ್ತೇ ಭವಂತಿ ||’ – ಆ ಪರಬ್ರಹ್ಮ ಶಕ್ತಿಯಿಂದಲೆ ಈ ಜಗತ್ತೆಲ್ಲವೂ ಹೊರಹೊಮ್ಮಿ ಕಂಪಿಸುತ್ತದೆ. ಉದ್ಯತ ವಜ್ರದಂತಿರುವ, ಎಂದರೆ ಹೊಡೆಯಲು ಮೇಲೆತ್ತಿದ ವಜ್ರಾಯುಧದಂತಿರುವ ಇದು ಮಹದ್‌ಭಯ. ಇದನ್ನು ತಿಳಿದುಕೊಳ್ಳುವವರು ಅಮೃತರಾಗುತ್ತಾರೆ. – ಅದೇನೊ ಮಹದ್‌ಭಯ! ಆದರೆ ಅದನ್ನರಿಯುವರಿಗೆ ಅಮೃತ ಪ್ರಾಪ್ತಿ! ಭವ್ಯತಾ ಅನುಭವದಲ್ಲಿ ನಮ್ಮ ವ್ಯಕ್ತಿತ್ವವನ್ನು ಅಪ್ಪಳಿಸುವ ಮತ್ತು ನಮ್ಮ ಅಹಂಕಾರವನ್ನು ಕುನಿದು ಕುಗ್ಗಿಸಿ ಇಲ್ಲಗೈಯುವ ಭಯ ಸಾಮಾನ್ಯ ಪಶುಭಯವಲ್ಲ; ಅದು ಉಪನಿಷತ್‌ಕಾರರು ವರ್ಣಿಸುವ ಮಹದ್‌ ಭಯ, ‘ಭೀಷೆ’, ಶ್ರೀಮದ್‌ಭೀತಿ!

ಆ ‘ಮಹದ್‌ ಭಯ’ ನಮ್ಮ ಅಹಂಕಾರಕ್ಕೆ ಆಘಾತಕರವಾಗುತ್ತದೆ; ಕುಸಿದು ಕುಗ್ಗುವ ನಮ್ಮ ವ್ಯಕ್ತಿತ್ವವನ್ನು ಅಪ್ಪಳಿಸುತ್ತದೆ. ನಮ್ಮ ಚೇತನೆಯ ಸಂಪೂರ್ಣ ಶರಣಾಗತಿಯನ್ನು ಸಾಧಿಸುತ್ತದೆ; ನಮ್ಮನ್ನು ಇಲ್ಲಗೈಯುತ್ತದೆ; ಶೂನ್ಯತೆಗೆ ಬೀಸಿ ತೆಗೆದೊಗೆಯುತ್ತದೆ. ಅದು ನಿಷೇಧಾತ್ಮಕ ಪ್ರಯೋಜನ. ಆದರೆ ಅಷ್ಟಕ್ಕೇ ನಿಲ್ಲುವುದಿಲ್ಲ. ನಿಂತಿದ್ದರೆ ಅದು ಭವ್ಯತೆಗೇರುತಿದ್ದಿಲ್ಲ. ಆ ಶೂನ್ಯ ಸಂಪಾದನೆಯೇ ಪೂರ್ಣತಾ ಸಾಧನೆಯಾಗಿ ಭೂಮಾನುಭೂತಿಯ ಸಿದ್ಧಿಗೆ ಹಾದಿಯಾಗುತ್ತದೆ. ನಮ್ಮ ‘ಅಲ್ಪತಾ’ ಪ್ರಲಯದ ಒಡನೊಡನೆಯೆ ಭೂಮಾಕ್ರಮದ ಬ್ರಹ್ಮಲಾಭವೂ ಸ್ವತಃಸಂಭವಿಯಾಗುತ್ತದೆ.

ವಸ್ತು ಸಂನಿವೇಶಗಳ ಬೃಹತ್ತು ಮಹತ್ತುಗಳಿದ್ದ ಮಾತ್ರಕ್ಕೆ ಭವ್ಯತಾ ಅನುಭವ ತನಗೆ ತಾನೆ ಸಿದ್ಥವಾಗುವುದಿಲ್ಲ. ಸಹೃದಯ ಪ್ರಜ್ಞೆಯ ಚಿತ್ತ ಸಂವಾದ ಅದಕ್ಕೆ ಅತ್ಯಂತ ಆವಶ್ಯಕ. ಆ ಚಿತ್ತಸಂವಾದ ಅವನ ಬುದ್ಧಿ ಭಾವ ಸಂಸ್ಕಾರಗಳ ಫಲವಾಗಿರುತ್ತದೆ. ಅವನ ದರ್ಶನಪ್ರಜ್ಞೆಯನ್ನೂ ಅದು ಅವಲಂಬಿಸುತ್ತದೆ. ಭೂಮದ ಅನುಭೂತಿಯಾದರೊ ಅದರ ರೂಕ್ಷತರ ರೂಪಗಳಲ್ಲಿ ಮತ್ತು ಅಲ್ಪಸ್ವಲ್ಪ ಪ್ರಮಾಣದಲ್ಲಿ, ನಾಗರಿಕತೆ ಸಂಸ್ಕ್ರತಿಗಳ ವಲಯಕ್ಕೆ ಇನ್ನೂ ಪ್ರವೇಶಿಸದಿರುವ ಪಶುಮಾನವನಿಗೂ ಸಾಧ್ಯಾವಾಗಬಹುದು. ಆದರೆ ಭವ್ಯತಾ ಅನುಭವವಂತೂ ಬುದ್ಧಿ ಭಾವ ಸಂಸ್ಕಾರಜನ್ಯವಾದ ತತ್ತ್ವದೃಷ್ಟಿ ಮತ್ತು ಅಧ್ಯಾತ್ಮಪ್ರಜ್ಞೆಯಿಲ್ಲದವನಿಗೆ ಲಭಿಸುವುದಿಲ್ಲ. ಅಂತವನು ಲೌಕಿಕಭಾವ ರೂಪವಾದ ಶೋಕಭಯಾದಿಗಳಿಗೆ ವಶವಾಗುತ್ತಾನೆಯೆ ಹೊರತು ರಸರೂಪವಾದ ‘ಮಹದ್ ಭಯ’ಕ್ಕಾಗಲಿ ‘ಭೀಷೆ’ಗಾಗಲಿ ಪರವಶನಾಗುವುದಿಲ್ಲ. ಭವ್ಯತಾ ಅನುಭವಕ್ಕೆ ಆವಶ್ಯಕವಾಗಿರುವ ಮತ್ತು ಪರಸ್ಪರ ಪೂರಕವಾಗಿರುವ ಎರಡು ಪಕ್ಷಗಳಲ್ಲಿ ಒಂದನೆಯದಾದ ‘ವ್ಯಕ್ತಿಕ್ತ್ವಾಘಾತ’ ಆತನಿಗೆ ಸಂಭವಿಸಬಹುದೆ ವಿನಾ ಎರಡನೆಯದಾದ ‘ಬ್ರಹ್ಮಲಾಭ’ ಸಿದ್ಧಿಸುವುದಿಲ್ಲ.

ಲಕ್ಷ ನಕ್ಷತ್ರಖಚಿತವಾದ ಕಗ್ಗತ್ತಲೆಯ ರಾತ್ರಿಯಾಕಾಶದ ಸುವಿಸ್ತಾರ ವಲಯವನ್ನು ಅರಣ್ಯಮುದ್ರಿತವಾದ ನಿರ್ಜನ ನೀರವ ಮಹೋತ್ತುಂಗ ಶಿಖರದಲ್ಲಿ ಏಕಾಂಗಿಯಾಗಿ ನಿಂತು ದರ್ಶಿಸುವವಾತನ ಧ್ಯಾನಮನದಲ್ಲಿ ಭವ್ಯತಾ ಸಂಭೂತಿಗೆ ಬೇಕಾಗುವ ಸರ್ವವೂ ಸಜ್ಜಾಗಿರುತ್ತದೆ: ಮಹನ್ ಮೌನ, ಅದ್ಭುತವಿವಿಕ್ತತೆ, ಮಹದ್ ವಿಸ್ತೀರ್ಣ, ಅಗಣಿತಸಂಖ್ಯೆ, ಅಪಾರತೆ, ಅನಂತತೆ, ನಿಸ್ಸೀಮತೆ! ಆದರೆ ಆ ವ್ಯಕ್ತಿ ಕಾಡಿನಲ್ಲಿ ದಾರಿತಪ್ಪಿ ಅಲ್ಲಿಗೆ ಬಂದವನಾಗಿದ್ದರೆ? ಅವನು ದಿಗಿಲುಗೊಂಡಿದ್ದರೆ? ಹುಲಿಯದೊ ಹಾವಿನದೊ ಪಿಶಾಚಿಯದೊ ಅಪಾಯದ ಆಶಂಕೆಗೆ ಅವನೆದೆ ಡವಡವಿಸುತ್ತಿದ್ದರೆ? ಅವನಿಗೆ ಭವ್ಯತಾ ಅನುಭವ ಸಾಧ್ಯವೆ? ಹೆದರಿಕೆಯಿಂದ ವ್ಯಕ್ತಿತ್ವಕ್ಕೆ ಆಘಾತವೇನೊ ಒದಗಬಹುದು. ಅವನ ಅಹಂಕಾರ ಮುದುಗಿ ಕುಗ್ಗಬಹುದು. ಪರಿಣಾಮ? ಹೆಚ್ಚು ಎಂದರೆ ಭಯಮೂರ್ಛೆಗೆ ಸಲ್ಲಬಹುದು! ‘ಬ್ರಹ್ಮಲಾಭ’ವಂತೂ ಅವನಿಗೆ ಕನಸಿನ ಗಂಟೂ ಆಗುವಂತಿಲ್ಲ!

ಕಾಲ, ಆಕಾಶ, ಸಾಗರ, ಮಹಾರಣ್ಯಶ್ರೇಣಿ, ಮಹೋನ್ನತ ಪರ್ವತ ಪಂಕ್ತಿ, ತಿಮಿಂಗಿಲ, ಆನೆ, ಸಿಂಹ, ಘಟಸರ್ಪ ಮೊದಲಾದ ನೈಸರ್ಗಿಕ ವಸ್ತುಗಳಲ್ಲಿ ಮತ್ತು ಪ್ರಾಣಿಗಳಲ್ಲಿ ಮೈದೋರುವ ಮಹತ್ತಿಗೆ ಅವುಗಳ ಬೃಹತ್ತೆ ಕಾರಣವಾಗಿರುವಂತೆ ತೋರಿದರೂ ಭವ್ಯತಾ ಅನುಭವಕ್ಕೆ ಬಾಹ್ಯಕವಾದ ಬೃಹತ್ತು ಅನಿವಾರ್ಯವಾಗಿ ಆವಶ್ಯಕವಾದುದೇನಲ್ಲ. ವಸ್ತು ಅನಂತತೆಯ ಭಾವೋದಯಕ್ಕೆ ಕಾರಣವಾದರೆ ಸಾಕು. ತಾನೆ ಅಪಾರವಾಗಿರಬೇಕಾಗಿಲ್ಲ. ಕಪ್ಪು ಮುಸುಗುತ್ತಿರುವ ಬೈಗಿನಂಬರಕ್ಕೆದುರಾಗಿ ದಿಗಂತದ ದಿಬ್ಬದ ಮೇಲೆ ನಿಲ್ಲುವ ಯಾವನೇ ಒಬ್ಬ ಯಃಕಶ್ಚಿತ ಮನುಷ್ಯನ ಮಷೀಚಿತ್ರ, ಚಿತ್ತಸಂವಾದವಿರುವ ಪ್ರೇಕ್ಷಕನ ಪ್ರಜ್ಞೆಯಲ್ಲಿ ವಿಭೂತಿಸಂಚರಿಸುವಂತೆ ಮಾಡಿ, ಭವ್ಯತಾ ಅನುಭವವನ್ನು ಉಂಟುಮಾಡಬಹುದು. ಯಾವನೊ ಒಬ್ಬ ಯಃಕಶ್ಚಿತ ವ್ಯಕ್ತಿ ಭವ್ಯತೆಗೆ ಕಾರಣವಾಗಲಾರನು, ಬಹಿರ್ಮ್ಮಖಗಾತ್ರದಿಂದಾಗಲಿ, ಅಂತರ್ಮುಖ ಮಹಿಮೆಯಿಂದಾಗಲಿ. ಆದರೆ ಅನಂತವಾದ ಆಕಾಶಕ್ಕೆದುರಾಗಿ ನಿಂತ ಅನಾಮಧೇಯದ ಆ ವ್ಯಕ್ತಿ ತನ್ನ ಕ್ಷುದ್ರಕ್ಕೂ ಕ್ಷುದ್ರವಾದ ಮಹಾ ಅಲ್ಪತೆಯ ತಾರತಮ್ಯದಿಂದಲೆ ನೋಡುವಾತನ ಮನದಲ್ಲಿ ಅನಂತತಾಭಾವವನ್ನು ಮಿಡಿದು ಭವ್ಯವಾಗಿಬಿಡುತ್ತಾನೆ.

ಬ್ರಾಡ್ಲೆಯವರು ರಷ್ಯಾದ ಕವಿಯೊಬ್ಬನ ಒಂದು ವಚನಕವನದಲ್ಲಿ ಬರುವ ಪುಟ್ಟ ಗುಬ್ಬಚ್ಚಿಯೊಂದು ಭವ್ಯತೆಗೇರಿರುವ ನಿದರ್ಶನ ಕೊಟ್ಟಿದ್ದಾರೆ. ಆ ತಾಯಿಗುಬ್ಬಚ್ಚಿ ಮಳೆಗಾಳಿಗೆ ತೂರಾಡಿದ ಗೂಡಿನಿಂದ ಕೆಳಕ್ಕೆ ಬಿದ್ದಿದ್ದ ರೆಕ್ಕೆ ಬಲಿಯದ ತನ್ನ ಮರಿಯನ್ನು ಭಿಮಗಾತ್ರದ ಬೇಂಟೆನಾಯಿಯ ಉಗ್ರದಾಡೆಯಿಂದ ಸಂರಕ್ಷಿಸಲು ಸೆಣಸಿ ಹೋರಾಡಿ ಬಲಿಯಾದುದನ್ನು ಕಂಡ ಆ ನಾಯಿ ಕೂಡ ಏನೊ ಒಂದು ಅನಿರ್ವಚನೀಯ ಭೀಷೆಗೆ ಸಿಲುಕಿದಂತಾಗಿ, ಸೆಡೆತು, ಹಿಂಜರಿಯಿತಂತೆ! ಆ ಗುಬ್ಬಚ್ಚಿ ಭವ್ಯವಾಗಿರುವುದು ಅದರ ಬಹಿರ್ಗಾತ್ರದಿಂದಲ್ಲ; ಅದರ ಪ್ರೀತಿ, ವಾತ್ಸಲ್ಯ, ತನ್ನ ಪ್ರಾಣವನ್ನೆ ಲೆಕ್ಕಿಸದ ಅದರ ತ್ಯಾಗ, ತನಗಿಂತಲೂ ಬಹುಪಾಲು ದೊಡ್ದದಾಗಿದ್ದ ಆ ನಾಯಿಯನ್ನು ನಿರ್ಲಕ್ಷಿಸಿ ಸೆಣಸಿದ ಅದರ ಪುಟ್ಟ ಹೃದಯದ ಹೈಮಾಚಲ ಧೈರ್ಯ, ತನಗೊದಗುವ ಮೃತ್ಯುವನ್ನು ತೃಣಕ್ಕೆಣೆ ಕಡೆಗಣಿಸಿ ಮುನ್ನುಗ್ಗಿದ ಮಾತೃಪ್ರೇಮದ ಮಾಹಾ ಶಕ್ತಿ ಮತ್ತು ಸ್ಥೈರ್ಯ-ಇವೆಲ್ಲದರ ಆಂತರಿಕವಾದ ಅಂತರ್ ಮುಖವಾದ ಆಧ್ಯಾತ್ಮಿಕವಾದ ಮಹಾಮಹಿಮೆಯಿಂದ ಅದು ವಿಭೂತಿಯ ಮಟ್ಟಕ್ಕೇರಿ ಭವ್ಯವಾಗಿದೆ.

ಎಲ್ಲೆಲ್ಲಿ, ಬಾಹ್ಯಕವಾಗಿಯಾಗಲಿ, ಆಂತರಿಕವಾಗಿಯಾಗಲಿ, ಭೂಮವು ತನ್ನ ವಿಭೂತಿಪ್ರಮಾಣದಲ್ಲಿ ಸೌಂದರ್ಯಭೂಮಿಕೆಯನ್ನಾಶ್ರಯಿಸಿ ಇಂದ್ರಿಯಗಳನ್ನು ಅತಿಕ್ರಮಿಸುವಂತೆ ಅಭಿವ್ಯಕ್ತವಾಗುವುದೊ ಅಲ್ಲೆಲ್ಲ ಭವ್ಯತಾ ಅನುಭವಕ್ಕೆ ಅವಕಾಶವಿರುತ್ತದೆ. ವಿಸ್ಮಯ, ಆಶ್ಚರ್ಯ, ವ್ಯಕ್ತಿತ್ವಾಘಾತ, ಅಹಂಕಾರ ಪ್ರಲಯ, ಸಂಪೂರ್ಣ ಶರಣಾಗತಿ ಈ ತೆರನ ನೇತ್ಯಾತ್ಮಕ ಲಕ್ಷಣಗಳಿಂದ ಪ್ರಾರಂಭವಾಗಿ ಅಮೇಯತೆ, ಅನಂತತೆ, ಬ್ರಹ್ಮೈಕ್ಯತೆ, ಪರಿಪೂರ್ಣತೆ ಇಂತಹ ಇತ್ಯಾತ್ಮಕ ಭಾವಗಳಿಂದ ಜೀವಕ್ಕೆ ಶಿವತ್ವವನ್ನು ಕೃಪೆಗೈಯುವವರೆಗೂ ಅದರ ಉಗ್ರಾನುಗ್ರಹದ ಆಶೀರ್ವಾದವೇರುತ್ತದೆ.

ತತ್ಕಾಲದಲ್ಲಿ ಸ್ವಾರ್ಥತಾವಿಮುಕ್ತವೂ ಸಂಗದೂರವೂ ಆಗಿರುವ ದರ್ಶನ ಧ್ವನಿ[7] ಸಮರ್ಥವಾದ ಸಹೃದಯಪ್ರಜ್ಞೆ ಭವ್ಯತಾ ಆವರ್ಭಾವಕ್ಕೆ ಆವಶವ್ಯಕವೂ ಅನಿವಾರ್ಯವೂ ಆಗಿರುವ ಪೂರ್ವಭಿತ್ತಿ.


[1]       ಜರ್ಮನಿಯ ತತ್ತ್ವಶಾಸ್ತ್ರಿ ರುಡಾಲ್ಪ್‌ಓಟೊ (Rudolf Otto) ಅವರು ತಮ್ಮ ‘The idea of the Holy’ ಎಂಬ ಗ್ರಂಥದಲ್ಲಿ ಪ್ರತಿಪಾದಿಸಿರುವ ‘The Numinous’ ತತ್ತ್ವವು ಸ್ವಲ್ಪಮಟ್ಟಿಗೆ ಉಪನಿಷತ್ತಿನ ಈ ಭೂಮಾ ತತ್ತ್ವವನ್ನು ಅದರ ಅಪಾರಭೂಮಿಕೆಯಲ್ಲಿ ಮಾತ್ರ ಹೋಲುವಂತಿದೆ. ಅದರ ವಿಚಾರವಾಗಿ ಅವರು ಹೇಳುತ್ತಾರೆ: “This mental state is perfectly sui generis and irreducible to any other… It cannot be taught, it can only be evoked, awakened in mind… it is not conceptual… All that this new term can express is the note of self-abasement into nothingness before an overpowering, absolute might of some kind…’ ‘Self-abasement into nothing-ness’ ಎಂದು ಅವರು ಹೇಳಿದರೂ ಕೊನೆಯಲ್ಲಿ “The numinous is thus felt as objective and out-side the self” ಎನ್ನುತ್ತಾರೆ. ಭೂಮಾತತ್ತ್ವದ ಅಪರಾಭೂಮಿಕೆಯ ಕೆಳಗಣ ಅವಸ್ಥೆಗಳಿಗೆ ಮಾತ್ರ ಆ ವರ್ಣನೆ ಒಪ್ಪಬಹುದು. ಯತ್ರನಾನ್ಯತ್‌ ಪಶ್ಯತಿ ಇತ್ಯಾದಿ ಉಪನಿಷತ್ತಿನ ವರ್ಣನೆಯ ಭೂಮಾತತ್ತ್ವದ ಕೇವಲಸ್ಥಿತಿಗೆ ಅಥವಾ ಪರಾಭೂಮಿಕೆಗೆ ಅದು ಅತ್ಯಂತ ಸುದೂರವಾಗಿದೆ.

[2]       ‘Beauty’, then we may perhaps say, is the image of the total presence of the infinite within any limits it may choose to assume; sublimity the image of its boundlessness…; the one the image of its immanence; the other of its transcendence.

Oxford Lectures on Poetry

[3]       ‘Let us begin by placing side by side five terms which represent five of the many modes of beauty – sublime, grand, beautiful, graceful, pretty’.

Oxford Lectures on Poetry

[4]      ರುಂದ್ರ, ರುದ್ರ, ಭದ್ರ, ಚಾರು, ಮನೋಹರ, ಚೇತೋಹಾರಿ, ಆಹ್ಲಾದಕಾರಿ, ಭೀಷ್ಮ, ಭೀಕರ, ಭಯಂಕರ, ಶಂಕರ, ರಮಣೀಯ, ಕಮನೀಯ, ಸುಭಗ, ಲಸತ್, ಶೋಭಾ, ಸ್ನಿಗ್ದ, ಮಂಗಲ, ಬಂಧುರ, ಉಜ್ವಲ, ಸೊಗಸು, ಮುದ್ದು, ಚೆಲುವು, ಚೆನ್ನು, ಇನಿದು, ಸೊಂಪು, ವಲ್ಗು, ಆಶ್ಚರ್ಯ, ಕಾಂತಿ, ಮಧುರ, ಕೋಮಲ, ಶ್ರೀ, ಲಕ್ಷ್ಮಿ, ಇತ್ಯಾದಿ.

[5]       ‘ರಸೋ ವೈ ಸಃ’ ಎಂಬ ಪ್ರಬಂಧವನ್ನು ನೋಡಿ.

[6]      ‘ವಿಭೂತಿ ಪೂಜೆ’ ಒಂದು ಗ್ರಂಥದಲ್ಲಿ ‘ಕವಿಯಲ್ಲಿ ವಿಭೂತಿ’ ಎಂಬ ಪ್ರಬಂಧವನ್ನು ನೋಡಿ.

[7]       ‘ರಸೋ ವೈ ಸಃ’ ಎಂಬ ಪ್ರಬಂಧದಲ್ಲಿ ದರ್ಶನಧ್ವನಿ ವಿಚಾರದ ಸಂಕ್ಷಿಪ್ತ ವಿವರಣೆ ದೊರೆಯುತ್ತದೆ.