ಸೌಂದರ್ಯಾನುಭವ ಅಥವಾ ರಸಾನುಭವವನ್ನು ಅಲೌಕಿಕ ಎಂದು ವರ್ಣಿಸುವುದರಲ್ಲಿ ಏನು ಔಚಿತ್ಯವಿದೆ? ಅಲೌಕಿಕ ಎನ್ನವುದಕ್ಕೆ ಆ ಸಂದರ್ಭದಲ್ಲಿ ಅರ್ಥವೇನು? ಆ ಅರ್ಥದ ಪರಿಮಿತಿ ಏನು? ವ್ಯಾಪ್ತಿ ಏನು? ಆ ರಸಾನುಭವಕ್ಕೂ ಲೋಕಾನುಭವಕ್ಕೂ ಏನಾದರೂ ಸಂಬಂಧವಿದೆಯ? ರಸಾನುಭವ ಸಂಪೂರ್ಣವಾಗಿ ಲೋಕದೂರವಾದುದೇ? ಲೋಕಾನುಭವದ ಮೇಲೆ ಅದರ ಪ್ರಭಾವದ ಪರಿಣಾಮವೇನಾದರೂ ಆಗುತ್ತದೆಯೇ ಇಲ್ಲವೇ? ಈ ಪ್ರಶ್ನೆಗಳೆಗೆಲ್ಲ ನಾವು ಕೊಡುವ ಉತ್ತರಗಳು ರಸಸ್ವರೂಪದ ನಿರ್ಣಯದ ಮೇಲೆ ಬಹುಮಟ್ಟಿಗೆ ನಿಲ್ಲುತ್ತವೆ.

ಯಾವ ಅನುಭವವನ್ನು ಪ್ರಾಚೀನ ಕಾವ್ಯಮೀಮಾಂಸಕರು ಸೌಂದರ್ಯ ಎಂಬ ಹೆಸರಿನಿಂದ ಗುರುತಿಸಿದರೊ ಅದನ್ನೆ ನವೀನರು ರಸ ಎಂಬ ಸಂಕೇತದಿಂದ ಕರದಿದ್ದಾರೆ. ಸೌಂದರ್ಯಾನುಭವ ಎಂದು ಸಹೃದಯರು ಗುರುತಿಸುವ ಪ್ರಜ್ಞಾವಸ್ಥೆಯನ್ನು ಶಾಸ್ತ್ರೀಯವಾಗಿ ಪರ್ಯಾಲೋಚಿಸಲು ಹೊರಟ ಕಾವ್ಯಮೀಮಾಂಸಕರು ಶಾಸ್ತ್ರಭಾಷೆಯ ಪ್ರಕ್ರಿಯಾ ಸೌಕರ್ಯಕ್ಕಾಗಿ ‘ಅಲಂಕಾರ’ ಎಂದು ಕರೆದರು. ಸೌಂದರ್ಯವೆ ಅಲಂಕಾರ; ಅನುಭವದ ಮತ್ತು ಅದನ್ನು ಅಭಿವ್ಯಕ್ತಗೊಳಿಸುವ ಉಕ್ತಿಯ ಸೌಂದರ್ಯಾಂಶದಿಂದಲೆ ಕಾವ್ಯತ್ವ ಉಂಟಾಗುತ್ತದೆ ಎಂದರು.

[1] ಆ ಸೌಂದರ್ಯಾಂಶವನ್ನು ಚಾರುತ್ವ, ರಮಣೀಯತೆ, ವಕ್ರತೆ, ಆಹ್ಲಾದ, ಆನಂದ ಎಂದು ನಾನಾ ಪದಗಳಿಂದ ನಿರ್ದೇಶಿಸಿದ್ದಾರೆ.

ಪ್ರಾಚೀನರಲ್ಲಿ ಸೌಂದರ್ಯ ಎಂಬ ಪದದ ಅರ್ಥವ್ಯಾಪ್ತಿ ಮಿಶಾಲವಾಗಿತ್ತು; ಚಾರುತ್ವ ರಮಣೀಯತೆ, ವಕ್ರತೆ, ಆಹ್ಲಾದ, ಆನಂದ ಮೊದಲಾದ ಪದಗಳಿಂದ ಸೂಚಿತವಾಗುವ ಅನುಭವ ವಿಶೇಷಗಳೆಲ್ಲವನ್ನೂ ಆದು ಒಳಕೊಳ್ಳುವಂತಿತ್ತು. ಆ ಅರ್ಥದಲ್ಲಿಯೆ ಸೌಂದರ್ಯಾನುಭವವಿಲ್ಲದೆ ಕಾವ್ಯವಿಲ್ಲ ಎಂದದ್ದು. ಕವಿಯ ಸೌಂದರ್ಯಾನುಭೂತಿಯೆ ಕಾವ್ಯಸಾಮಗ್ರಿ; ಆದ್ದರಿಂದ ಕಾವ್ಯವೆಲ್ಲ ಸೌಂದರ್ಯಾನುಭವ ಎಂದರು. ಸೌದರ್ಯ ಎಂಬ ಪದಕ್ಕೆ ಶಾಸ್ತ್ರದ ಪರಿಭಾಷೆ ‘ಅಲಂಕಾರ’ ಎಂದಿದ್ದುದರಿಂದ ಅಲಂಕಾರವಿಲ್ಲದೆ ಕಾವ್ಯವಿಲ್ಲ ಎಂದರು; ಕಾವ್ಯವೆಲ್ಲ ಅಲಂಕಾರದಿಂದಲೆ ಗ್ರಾಹ್ಯವಾಗುತ್ತದೆ ಎಂದರು. ಅಂದರೆ ಯಾವುದು ಲೋಕವಾರ್ತೆ ಮಾತ್ರವಾಗಿ ಉಳಿಯುತ್ತಿತ್ತೊ ಆ ಅನುಭವ ಕವಿಪ್ರತಿಭಾವಶವಾಗಿ ಸೌಂದರ್ಯಾನುಭೂತಿಯಾಗಿ ಕಾವ್ಯಾರ್ಹ ಸಾಮಗ್ರಿಯಾಗಿ ಅಭಿವ್ಯಕ್ತಿಪಡಿಯುತ್ತದೆ. ಆ ಸೌಂದರ್ಯಾನುಭೂತಿಯೆ ಕಾವ್ಯದ ಮೂಲಾಲಂಕಾರ; ಕಾವ್ಯಮೂಲಾಲಂಕಾರ. ಅದು ಕೃತಿಯಾಗಿ ಅಭಿವ್ಯಕ್ತಿಗೊಳ್ಳುವಾಗ ಆ ಮೂಲಾಲಂಕಾರವೇ ನಾನಾತ್ವನ್ನು ಪಡೆದು, ನಾನಾಲಂಕಾರಗಳಾಗುತ್ತವೆ. ಆ ಮೂಲಾಲಂಕಾರವು (ಎಂದರೆ ಸೌಂದರ್ಯಾನುಭೂತಿ) ಭಾವಾಂಶದಲ್ಲಿ ಪ್ರವಹಿಸಿ ಸಹೃದಯನ ರಸಾನುಭವಕ್ಕೆ ಕಾರಣವಾಗುತ್ತದೆ; ಚಿಂತನಾಂಶದಲ್ಲಿ ಪ್ರವಹಿಸಿ ದರ್ಶನಾಂಶವಾದ ವಸ್ತುಧ್ವನಿಗೆ ಮಾರ್ಗವಾಗುತ್ತದೆ; ಕಥನಕಲೆ, ಪ್ರತಿಮಾಸೃಷ್ಟಿ, ಸನ್ನಿವೇಶ ರಚನೆ ಇತ್ಯಾದಿ ಕಲ್ಪನಾಂಶದಲ್ಲಿ ಪ್ರವಹಿಸಿ ಚಾರತ್ವದಾಯಿಯಾದ ಕಾರಯಿತ್ರೀ ಪ್ರತಿಭೆಯ ಅಂಗವಾಗುತ್ತದೆ; ಭಾಷಾರೂಪಾಂಶದಲ್ಲಿ ಪ್ರವಹಿಸಿ[2] ರೀತಿಯ, ಮಾರ್ಗದ, ಶೈಲಿಯ ಮನೋಹರತೆಯಲ್ಲಿ ಪರಿಣಾಮಗೊಳ್ಳುತ್ತದೆ.

ಅನುಭವದ ಸೌಂದರ್ಯಾಂಶವನ್ನು ನಿರ್ದೇಶಿಸುವುದಕ್ಕೆ ಶಾಸ್ತ್ರೀಯ ಪರಿಭಾಷೆಯಾಗಿ ಮೊದಮೊದಲು ಉಪಯುಕ್ತವಾದ ‘ಅಲಂಕಾರ’ ಎಂಬ ಪದವು ಬರುಬರುತ್ತಾ ಮೂಲಾರ್ಥದ ನಂಪತ್ತನ್ನು ಸಂಕುಚಿತವನ್ನಾಗಿ ಮಾಡಿಕೊಂಡು, ಕಡೆಕಡೆಗೆ ಅದನ್ನು ಕಳೆದುಕೊಳ್ಳುವವರೆಗೂ ಹೋಗಿ ಪತಿತವಾಗಿ ಬಿಟ್ಟಿತು. ಕವಿಯ ಅನುಭವದ ಆ ಮೂಲಾಲಂಕಾರದಿಂದ ನಾನಾಲಂಕಾರಗಳು ಹೊಮ್ಮುತ್ತವೆ. ಆ ಮೂಲಾಲಂಕಾರದ ಮೈದೋರಿಕೆಗೆ ನಾನಾಲಂಕಾರಗಳು ಪ್ರಣಾಳಿಗೆಗಳಾಗುತ್ತವೆ; ಹುಲಿಗೆ ಬಣ್ಣಗಳಂತೆ. ನವಿಲಿಗೆ ಗರಿಯ ಕಣ್ಣುಗಳಂತೆ; ಸಹಜವಾಗಿ, ಅಕೃತಕವಾಗಿ, ಬಾಹ್ಯಪ್ರಯತ್ನ ರಹಿತವಾಗಿ, ಅಂತಶ್ಯಕ್ತಿಯ ಆವಿರ್ಭಾವರೂಪಕವಾಗಿ: ಎಂಬುದನ್ನು ಮರೆತು ಕಡೆಗಣಿಸಿ ಯಾವಾಗ ಅಲಂಕಾರವನ್ನು ಒಡವೆಗೆ ಹೋಲಿಸಿದರೊ ಅಲ್ಲಿಂದ ಮೊದಲಾಯಿತು ಅದರ ಪತನಕ್ಕೆ. ಕಾವ್ಯಕ್ಕೆ ಆತ್ಮಪ್ರಾಯವಾಗಿರಬೇಕಾಗಿದ್ದ ಅಲಂಕಾರವನ್ನು ಶರೀರಪ್ರಾಯವಾಗಿ ಮಾಡುವುದಂತಿರಲಿ, ಬೇಕಾದಾಗ ತೊಟ್ಟುಕೊಳ್ಳುವ ಬೇಡವಾದಾಗ ಕಳಚಿಬಿಡುವ ಆಭರಣಪ್ರಾಯವನ್ನಾಗಿ ಮಾಡಿದರು. ಆಗ ತರುವಾಯ ಬಂದ ಕಾವ್ಯಮೀಮಾಂಸಕರು ಕಾವ್ಯದ ಆತ್ಮವನ್ನು ಅನಿವಾರ್ಯವಾಗಿ ಅವಶ್ಯವಾಗಿ ಬೇರೆಯದರಲ್ಲಿ ಹುಡುಕಲು ತೊಡಗಲೇ ಬೇಕಾಯಿತು. ರೀತಿಯೆ ಕಾವ್ಯದ ಆತ್ಮ; ರಸವೆ ಕಾವ್ಯದ ಆತ್ಮ; ಧ್ವನಿಯೆ ಕಾವ್ಯದ ಆತ್ಮ ಎಂದೆಲ್ಲ ಸಿದ್ಧಾಂತಗಳು ಒಂದಾದ ಮೇಲೆ ಒಂದು ಪ್ರತಿಪಾದಿತವಾದವು. ಅಲಂಕಾರ ಸಿದ್ಧಾಂತಕ್ಕೆ ಒದಗಿತು ಅತ್ಯಂತವಾದ ಅಪಖ್ಯಾತಿ.

ರಸಕ್ಕೂ ಅಲಂಕಾರಗಳಲ್ಲಿಯೆ ಒಂದು ಸ್ಥಾನವನ್ನು ಕಲ್ಪಿಸಿಕೊಟ್ಟಿದ್ದ ಪ್ರಾಚೀನರಿಗೆ ರಸಾನುಭವವಿಲ್ಲದ ಅಥವಾ ಅದರ ಅನರ್ಘ್ಯ ಸ್ಥಾನವನ್ನೂ ಬೆಲೆಯನ್ನೂ ಅರಿಯದ ಅರಸಿಕರ ಪಟ್ಟವೂ ಲಭಿಸಿತು! ಅಲಂಕಾರಗಳ ಆಸ್ಥಾನದ ಒಂದು ಅಜ್ಞಾತಮೂಲೆಯಲ್ಲಿ ಮಣೆಹಾಕುವುದೇ ರಸಕ್ಕೆ?

ಪ್ರಾಚೀನರ ದೃಷ್ಟಿಯಲ್ಲಿ ಸೌಂದರ್ಯಾನುಭವವೆ ಸರ್ವಗ್ರಾಸಿಯಾಗಿತ್ತು. ಆ ದೃಷ್ಟಿ ರಸಾನುಭವನ್ನು ತಿರಸ್ಕರಿಸಿರಲಿಲ್ಲ. ಅದನ್ನು ಒಳಕೊಂಡಿತ್ತು, ಆಗ, ಭರತನ ಪ್ರಕಾರ, ‘ರಸ’ ಎಂಬ ಪದಕ್ಕೆ ಎಷ್ಟು ಅರ್ಥವ್ಯಾಪ್ತಿಯಿತ್ತೊ ಅಷ್ಟನ್ನೆ ಗ್ರಹಿಸಿ, ಅದಕ್ಕೆ ತಕ್ಕ ಸ್ಥಾನವನ್ನೆ ಕೊಟ್ಟಿದ್ದರು. ಅಂದರೆ ಮೂಲಾಲಂಕಾರದ ಪ್ರವಾಹಕ್ಕೆ ಪ್ರಣಾಳಿಕಾಸದೃಶಗಳಾದ ಅಲಂಕಾರಗಳಲ್ಲಿ ರಸವೂ ಒಂದಾಗಿತ್ತು.

ಮನುಷ್ಯನ ಚಿತ್ತವೃತ್ತಿಗಳಾದ ಸ್ಥಾಯಿಭಾವಗಳು ನಾಟಕರಂಗದಲ್ಲಿ ವಿಭಾವ ಅನುಭಾವಾದಿಗಳಿಂದ ಪ್ರದರ್ಶಿತವಾದಾಗ ಪ್ರೇಕ್ಷಕರಲ್ಲಿ ರಸನಿಷ್ಪತ್ತಿಯಾಗುತ್ತದೆ ಎಂದು ಒಪ್ಪಿಕೊಂಡ ದೃಷ್ಟಿಗೆ ಸ್ಥಾಯಿಭಾವಗಳು ಕಾರಣಸ್ಥಾನದಲ್ಲಿಯೂ ಅವುಗಳಿಂದ ನಿಷ್ಪತ್ತಿಯಾಗುವ ರಸಗಳು ಕಾರ್ಯಸ್ತಾನದಲ್ಲಿಯೂ ನಿಲ್ಲುತ್ತವೆ. ಆದರೆ ಕಾವ್ಯಲೋಕದಲ್ಲಿ ಮನುಷ್ಯತ್ವದ ಸ್ಥಾಯಿಭಾವ ವ್ಯಾಪಾರಗಳು ಮಾತ್ರವೆ ವರ್ಣಿತವಾಗಿರುವುದಿಲ್ಲ. ನಿಸರ್ಗದ ಇತರ ದೃಶ್ಯಗಳೂ ವ್ಯಾಪಾರಗಳೂ ವರ್ಣಿತವಾಗಿರುತ್ತವೆ. ಅವುಗಳಿಂದ ಉಂಟಾಗುವ ಆಹ್ಲಾದವನ್ನು ಯಾವ ಪದದಿಂದ ಸೂಚಿಸಬೇಕು? ಅದನ್ನು ಅಂದಿನ ಅರ್ಥದಲ್ಲಿ ರಸಾನುಭವವೆಂದು ಕರೆಯುವುದು ತಪ್ಪಾಗುತ್ತದೆ. ಏಕೆಂದರೆ ‘ರಸ’ ಸ್ಥಾಯಿಭಾವದಿಂದಲೆ ನಿಷ್ಪನ್ನ. ನಿಸರ್ಗದ ಇತರ ಅನೇಕ ವ್ಯಾಪಾರ ವರ್ಣನೆಗಳಿಂದ ಉಂಟಾಗುವುದು ಸೌಂದರ್ಯಾನುಭವವಾದೀತೆ ಹೊರತು ರಸಾನುಭವವಾಗಲಾರದು. ಸ್ಥಾಯಿಭಾವದಿಂದ ನಿಷ್ಪನ್ನವಾಗುವ ರಸಾನುಭವವೂ ಆಹ್ಲಾದಕಾರಿಯೆ, ಅರಣ್ಯ ಪರ್ವತ ಪಕ್ಷಿ ಜಲಪಾತಾದಿ ವರ್ಣನೆಗಳಿಂದುಂಟಾಗುವ ಆಹ್ಲಾದದಂತೆಯೆ. ಮನುಷ್ಯನ ಸ್ಥಾಯಿಭಾವ ವ್ಯಾಪಾರ ಮತ್ತು ನಿಸರ್ಗದ ರಮಣೀಯ ವ್ಯಾಪಾರ ಎರಡರ ಆಹ್ಲಾದವನ್ನೂ ಸೌಂದರ್ಯಾನುಭವ ಎಂಬ ಶಬ್ದ ಒಳಕೊಳ್ಳುತ್ತದೆ. ಆದ್ದರಿಂದಲೆ ಸೌಂದರ್ಯಾನುಭವವು ರಸಾನುಭವವನ್ನು ತನ್ನೊಂದು ಅಂಗವಾಗಿ ಸ್ವೀಕರಿಸುತ್ತದೆ. ಸೌಂದರ್ಯವನ್ನೆ ಅಲಂಕಾರ ಎಂಬ ಪರಿಭಾಷೆಯಿಂದ ಕರೆದ ಕಾವ್ಯಮೀಮಾಂಸಕರು ರಸಾನುಭವವನ್ನು ಆ ಅಲಂಕಾರದ ಒಂದಂಗವನ್ನಾಗಿ ಪರಿಗಣಿಸಿದುದು ಅತ್ಯಂತ ತರ್ಕಬದ್ಧವಾಗಿದೆ. ಆದ್ದರಿಂದಲೆ ರಸಾನುಭವವು ರಸವದಲಂಕಾರ ಎಂಬ ಹೆಸರಿನಿಂದ ಅಲಂಕಾರಗಳಲ್ಲಿ ಮಧ್ಯ ಪ್ರವೇಶ ಪಡೆದಿತ್ತು.

ಆದರೆ ಎಂದು ಅಲಂಕಾರ ಮೂಲತತ್ತ್ವವು ಕಾವ್ಯದಲ್ಲಿ ತನಗಿದ್ದ ಅತ್ಯಂತ ಅಂತರಂಗಿಕವಾದ ಆತ್ಮಸ್ಥಾನವನ್ನು ಕಳೆದುಕೊಂಡು ಆಭರಣ ರೂಪ ಮಾತ್ರವಾದ ಬಹಿರಂಗದ ಕೃತಕಸ್ಥಾನಕ್ಕಿಳಿಯಿತೊ ಆಗ ಇತರ ಸಿದ್ಧಾಂತಗಳಿಗೆ ಆ ಆತ್ಮಸ್ಥಾನವನ್ನು ಆಕ್ರಮಿಸಲು ಅವಕಾಶ ದೊರೆಯಿತು. ಅಲಂಕಾರಗಳಲ್ಲಿ ಒಂದೆಂದು ಪರಿಗಣಿತವಾಗಿದ್ದ ರಸ ಶಬ್ದಕ್ಕೆ ಅರ್ಥವ್ಯಾಪ್ತಿ ವಿಸ್ತಾರವಾಗುತ್ತಾ ಹೋಗಿ, ಸರ್ವ ರಮಣೀಯತೆಯ ಸರ್ವ ಆಹ್ಲಾದದ ಗಂತವ್ಯಸ್ಥಾನವೂ ಪ್ರಭವಸ್ಥಾನವೂ ಆಗಿ ಸೌಂದರ್ಯಾನುಭವದ ಸರ್ವೋಚ್ಚ ಮಾತೃಸ್ಥಾನದಲ್ಲಿರುವ ಬ್ರಹ್ಮಾನಂದಕ್ಕೂ ಸೋದರ ಸ್ಥಾನದಲ್ಲಿ ನಿಲ್ಲುವವರೆಗೂ ಹೋಯಿತು.

ರಸಾನುಭವದ ಸ್ವರೂಪ ಲಕ್ಷಣಾದಿಗಳನ್ನು ಜಿಜ್ಞಾಸಿಸುವಾಗ ‘ಲೋಕೋತ್ತರ’ ‘ಲೋಕಾತಿಶಯ’ ‘ಲೋಕಾತಿಕ್ರಾಂತ’ ಮೊದಲಾದ ಪದಗಳನ್ನು ಎದುರುಗೊಳ್ಳುತ್ತೇವೆ. ಅದು ಲೌಕಿಕವಾದ ಸುಖದುಃಖಾದಿ ಅನುಭವಗಳಿಂದ ವಿಲಕ್ಷಣವಾದ ‘ಅನುಭವ’ ಎಂದು ಅದನ್ನು ‘ಅಲೌಕಿಕ’ ಎಂದೂ ಕರೆದಿದ್ದಾರೆ.

ರಸ ಏಕೆ ಅಲೌಕಿಕ? ಅಲೌಕಿಕ ಎಂದರೆ ಏನರ್ಥ? ಲೋಕಾನುಭವದಿಂದ ಭೇರೆ ಎಂದು ಭಾವಿತವಾಗಿರುವ ಅದರ ವಿಲಕ್ಷಣತೆ ಎಂಥಾದ್ದು? ಎಷ್ಟರ ಮಟ್ಟಿನದು?

ಲೋಕಜೀವನದಲ್ಲಿ ನಾವು ಭಾವಗಳನ್ನು ಅನುಭವಿಸುತ್ತೇವೆ, ರತಿ ಕ್ರೋಧ ಶೋಕ ಇತ್ಯಾದಿ. ಈ ಒಂದೊಂದೂ ತನ್ನ ಪ್ರತಿಕ್ರಿಯೆಗೆ ಕಾರಣವಾಗುತ್ತದೆ. ಅಂದರೆ ಆ ಪ್ರತಿಕ್ರಿಯೆ ಸಂಪೂರ್ಣವಾಗಿ ಲೋಕೋಪಯೋಗಿಯಾಗಿರುತ್ತದೆ. ಕೋಪ ಬಂದಾಗ ಅದರ ಪ್ರತಿಕ್ರಿಯೆ ಅಯಾ ವ್ಯಕ್ತಿಯ ಸಂಸ್ಕಾರಕ್ಕನುಗುಣವಾಗಿ ಆಯಾ ಸನ್ನಿವೇಶ ಸಂದರ್ಭೋಚಿತವಾಗಿ ಬಯ್ಯವುದರಲ್ಲಿಯೊ ಹೊಡಿಯುವುದರಲ್ಲಿಯೊ ಕೊಲ್ಲುವುದರಲ್ಲಿಯೊ ಪ್ರಕಟವಾಗುತ್ತದೆ. ಅದನ್ನು ನೋಡುವ ವ್ಯಕ್ತಿಗಳೂ ಅದರಲ್ಲಿ ಲೌಕಿಕವಾಗಿಯೆ ಭಾವ ಮತ್ತು ಕ್ರಿಯಾದಿಗಳಲ್ಲಿ ಪಾಲುಗೊಳ್ಳುತ್ತಾರೆ. ಆದರೆ ಕಾವ್ಯ ನಾಟಕಾದಿ ಕಲಾಭೂಮಿಕೆಗಳಲ್ಲಿ ಆ ಲೋಕಜೀವನದ ಭಾವಗಳು ವರ್ಣನೆಯ ಮೂಲಕವಾಗಲಿ ಅಭಿನಯದ ರೂಪದಲ್ಲಾಗಲಿ ಪ್ರದರ್ಶಿತವಾದಾಗ ಸಹೃದಯ ಪ್ರೇಕ್ಷಕರಿಗೆ ಉಂಟಾಗುವ ಅನುಭವ ಲೋಕಾನುಭವದಂತಿರುವುದಿಲ್ಲ; ಲೋಕೋಪಯೋಗಿಯಾಗಿಯೂ ಇರುವುದಿಲ್ಲ. ಅಷ್ಟೇ ಅಲ್ಲ. ಜಗಳವಾಡುವಂತೆ ರಂಗಭೂಮಿಯ ಮೇಲೆ ಕಾಣುವವರಲ್ಲಿಯೂ ಕೋಪವಿರುವುದಿಲ್ಲ. ಕೋಪಭಾವದ ಕಲಾರೂವ ಮಾತ್ರ ಕಾಣಿಸುತ್ತದೆ. ಅಂದರೆ ಕ್ರೋಧ ಎಂಬ ಲೌಕಿಕವಾದ ಸ್ಥಾಯಿಭಾವದ ‘ವಿಭಾವ’ ಮಾತ್ರ ‘ಅನುಭಾವ’ದಿಂದ ಪ್ರದರ್ಶಿತವಾಗುತ್ತದೆ. ಲೌಕಿಕವಲ್ಲದ ಕೋಪ ಪ್ರೇಕ್ಷಕರಿಂದ ಲೌಕಿಕವಾದ ಯಾವ ಪ್ರತಿಕ್ರಿಯೆಯನ್ನು ನಿರೀಕ್ಷಿಸುವುದಿಲ್ಲ. ಅದು ಲೋಕೋಪಯೋಗಿಯಾದುದಲ್ಲ; ಭಾವೋಪಯೋಗಿಯಾದದ್ದು. ಅಂದರೆ ರಂಗಭೂವಿಯ ಮೇಲೆ ತೋರುವ ಕೋಪದ ಭಾವಕ್ಕೆ ಪ್ರೇಕ್ಷಕವರ್ಗದ ಪ್ರತಿಕ್ರಿಯೆ ಕ್ರಿಯಾರೂಪದ್ದಾಗಿರದೆ ಭಾವರೂಪದ್ದು ಮಾತ್ರ ಆಗಿರುತ್ತದೆ. ಆದರೆ ಆ ಭಾವವೂ ಲೋಕಜೀವನದ ಭಾವದಂತಿರಲು ಸಾಧ್ಯವಿಲ್ಲ ಅಂದರೆ ಪ್ರೇಕ್ಷಕನ ಭಾವರೂಪ ಪ್ರತಿಕ್ರಿಯೆಯ ಸ್ವರೂಪವೂ ಲೋಕಜೀವನದ ಭಾವಸ್ವರೂಪಕ್ಕಿಂತ ಬೇರೆಯ ತರಹದ್ದಾಗಿರುತ್ತದೆ. ಸಹೃದಯನ ಸಾಕ್ಷೀಪ್ರಜ್ಞೆಯಲ್ಲಿ ಅದು ತನ್ನ ಲೌಕಿಕ ಕಟುತ್ವವನ್ನೆಲ್ಲ ಕಳೆದುಕೊಂಡಂತಿರುತ್ತದೆ. ಸಂಪೂರ್ಣ ನಿಸ್ಸಂಗವಾಗಿರದಿದ್ದರೂ ಸಂಗದೂರವಾಗಿರುತ್ತದೆ. ಲೋಕಜೀವನದ ಭಾವ ವ್ಯಾಪಾರಗಳಿಂದ ಹೊಮ್ಮುವ ಸುಖ ದುಃಖ ರೂಪದ ಉದ್ರೇಕ ತೀಕ್ಷ್ಣತೆ ಹೊರೆಹೊಣೆಗಳಿಂದ ಬಿಡುಗಡೆ ಹೊಂದಿರುತ್ತದೆ. ಧ್ಯಾನಜಿಹ್ವೆಯಲ್ಲಿ ಚರ್ವಿತವಾಗಿ ಶಮತ್ವವನ್ನು ಪಡೆದು ಪ್ರಶಾಂತವಾಗಿರುತ್ತದೆ. ಲೋಕಾನುಭವದಲ್ಲಿ ಉದ್ವೇಗಕ್ಕೂ ಉದ್ವಿಗ್ನಕ್ರಿಯೆಗೂ ಎಡೆಗೊಡುವ ಭಾವಾನುಭವವು ಇಲ್ಲಿ ಸಾಕ್ಷೀಪ್ರಜ್ಞಾರಸನೆಯ ಮೇಲೆ ಅನುದ್ವಿಗ್ನಪ್ರಾಯವಾಗಿ, ಕ್ರಿಯಾನಿರಪೇಕ್ಷವಾಗಿ ಆಸ್ವಾದನೆಯ ಸವಿ ಸ್ಥಿತಿಯಲ್ಲಿ ಮಾತ್ರ ಇರುವಂತೆ ಭಾಸವಾಗುತ್ತದೆ. ಒಟ್ಟಿನಲ್ಲಿ ಲೌಕಿಕವಾದ ಕ್ರೋಧಭಾವಕ್ಕೂ ಸಹೃದಯನ ಈ ಅನುಭವಕ್ಕೂ ಬಹು ದೂರಾಂತರವಿರುತ್ತದೆ. ಆ ಅಂತರ ಬರಿಯ ರೂಪದ್ದಾಗಿರದೆ ಸ್ವರೂಪದಲ್ಲಿಯೆ ಭಿನ್ನವಾದಂತೆ ತೋರುತ್ತದೆ. ಅಂತಹ ವಿಚಿತ್ರವಾದ ಕಲಾನುಭವಕ್ಕೆ ರಸಾನುಭವ ಎಂದ ಹೆಸರಿಟ್ಟಿದ್ದಾರೆ. ಆದಕಾರಣವೆ ಆ ಅನುಭವವನ್ನು ಅಲೌಕಿಕ ಎಂದು ವರ್ಣಿಸಿದ್ದಾರೆ. ‘ರಸ’ ಈ ಅರ್ಥದಲ್ಲಿ ಅಲೌಕಿಕ.

‘ಲೋಕೋತ್ತರ’ ಲೋಕಾತಿಶಯ’ ‘ಲೋಕಾತಿಕ್ರಾಂತ’ ಮೊದಲಾದ ಮಾತುಗಳೂ ಈ ಅನುಭವವನ್ನೆ ಅದರ ವಿಶೇಷಸ್ತರಗಳನ್ನು ಗಮನಿಸಿ ನಿರ್ದೇಶಿಸುತ್ತವೆ. ಲೋಕಕ್ಕೆ ಎಂದರೆ ಲೋಕಾನುಭವಕ್ಕೆ, ಉತ್ತರವಾದದ್ದು ಎಂದರೆ ಅದರ ತರುವಾಯ ಬಂದದ್ದು, ಅಥವಾ ಅದಕ್ಕೆ ಮೇಲೆ ಏರಿ ನಿಂತಿರುವುದು ಎಂದರ್ಥ. ಅತಿಶಯ ಮತ್ತು ಅತಿಕ್ರಾಂತ ಎಂಬ ಪದಗಳೂ ಅಂತಹ ವಿಲಕ್ಷಣಾನುಭವದ ತರ – ತಮ ಭಾವಗಳನ್ನು ಸೂಚಿಸುತ್ತವೆ. ವರ್ಡ್ಸವರ್ತ ಹೇಳಿರುವ ‘Emotion recollected in tranquility’ ‘ಶಾಂತಮನಸ್ಸು ಜ್ಞಾಪಿಸಿಕೊಳ್ಳುವ ಭಾವ’ ಎಂಬ ಕಾವ್ಯಾನುಭವದ ವಿವರಣೆಯೂ ಮೇಲೆ ಹೇಳಿದ ಲೋಕಾನುಭವದ ಅನಂತರ ಅದರ ಪರಿಭಾವನೆಯಿಂದ ಒದಗುವ ಧ್ಯಾನಾನುಭವದ ಸ್ವರೂಪವನ್ನೆ ತಿಳಿಸುತ್ತದೆ. ಅಂತೂ ರಸಾನುಭವವು ಲೋಕಾನುಭವದ ಅನಂತರದ್ದು; ಅದಕ್ಕಿಂತಲೂ ಮೇಲುಮಟ್ಟದ್ದು; ಆದರ್ಶದಲ್ಲಿ ಅದಕ್ಕಿಂತಲೂ ಉನ್ನತವಾಗಿ ಅತಿಕ್ರಾಂತವಾದದ್ದು; ಅದು ಅಲೌಕಿಕ.

ಒಂದು ಅರ್ಥದಲ್ಲಿ ಒಂದು ಉದ್ದೇಶಕ್ಕಾಗಿ ಸ್ಪಷ್ಟವಾದ ಪರಿಭಾಷೆ ಪ್ರಯೋಗದಲ್ಲಿ ಬರುಬರುತ್ತಾ ಅತಿ ಸಂಕುಚಿತವಾಗಿಯೊ ಅತಿ ಮಿಶಾಲವಾಗಿಯೊ ಆ ಅರ್ಥ ಉದ್ದೇಶಗಳನ್ನು ವಿಕಾರಗೊಳಿಸುವುದೂ ಉಂಟು. ‘ಅಲಂಕಾರ’ ಎಂಬ ಪದಕ್ಕೆ ಭಾರತೀಯ ಕಾವ್ಯಮೀಮಾಂಸೆಯಲ್ಲಿ ಅಂತಹ ಅಪಗತಿ ಒದಗಿದುದನ್ನು ಈ ಪ್ರಬಂಧದ ಪ್ರಾರಂಭದಲ್ಲಿ ಪ್ರಾಸಂಗಿಕವಾಗಿ ಪ್ರಾಸ್ತಾವಿಸಿದ್ದೇವೆ. ಅದರಂತೆಯೆ, ಆದರೆ ಇನ್ನೊಂದು ರೀತಿಯಲ್ಲಿ, ರಸ ಸ್ವರೂಪವನ್ನು ಕುರಿತ ‘ಅಲೌಕಿಕ’ ಎಂಬ ಪದಕ್ಕೂ ಒಂದು ಅತಿ ಉದ್ದಾರದ ಅವನತಿ ಒದಗಿದಂತಿದೆ.

ಕಲೆಯ ಅಂತರಿಕ್ಷಕ್ಕೆ ಚಿಮ್ಮಿ ಹಾರುವ ಮುನ್ನ ಲೋಕಾನುಭವದಲ್ಲಿ ಅವಶ್ಯವಾಗಿ ಕಾಲೂರಿದ್ದರೂ ರೆಕ್ಕೆಗೆದರಿ ಹಾರಾಡತೊಡಗಿದ ಮೇಲೆ ಅದು ಲೋಕೋತ್ತರವಾಗುವುದರಿಂದ ರಸಾನುಭವವನ್ನು  ‘ಅಲೌಕಿಕ’ ಎಂದು ಕರೆದರಷ್ಟೆ. ಅದಕ್ಕೂ ನೆಲಕ್ಕೂ ಸಂಬಂಧ ತಪ್ಪಿದಂತಾದುದನ್ನು ಕಂಡು ಸರ್ವಕಾಲಕ್ಕೂ ಸಂಬಂಧ ತಪ್ಪಿಹೋಯಿತೆಂದೆ ಅರ್ಥಬರುವಂತೆ ಆ ಪದವನ್ನು ಬಳಸತೊಡಗಿದರು. ಸಾಮಾನ್ಯ ಪಕ್ಷಿಯ ಮಾತಿರಲಿ, ಎಂತಹ ವೈನತೇಯನೆ ಆಗಲಿ ಎಷ್ಟು ಮಹೋನ್ನತಿಯ ವ್ಯೋಮಾಂತರವನ್ನು ಸಂಚರಿಸಿದರೂ ಮತ್ತೆ ಭೂಮಿಸ್ಪರ್ಶಮಾಡಿದಲ್ಲದೆ ಅದರ ಬದುಕು ಸಾಗುವುದಿಲ್ಲ. ಹಾಗೆಯೆ ಅಲೌಕಿಕ ಎನ್ನಿಸಿಕೊಳ್ಳುವ ರಸಾನುಭವವೂ ಮಳೆಯ ಮೇಘದಂತೆ ಲೋಕಜೀವನದಿಂದಲೆ ಮೇಲೇರಿ ಮುಗಿಲಾಗಿ ಗಗನದಲ್ಲಿ ಸಂಚರಿಸಿ ಮತ್ತೆ ಮತ್ತೆ ಮಳೆಯ ರೂಪದಲ್ಲಿ ಲೋಕಸ್ಪರ್ಶಮಾಡಿ ಜೀವನವನ್ನು ಆರ್ದ್ರಗೊಳಿಸುತ್ತದೆ. ಹಾಗೆ ಮಾಡದೆ ಅದು ಆಕಾಶಕ್ಕೇರಿ ಅತ್ತಲೆ ಅಗೋಚರವಾಗುವ ಪಕ್ಷದಲ್ಲಿ ಮರ್ತ್ಯಜೀವನ ದೃಷ್ಟಿಯಿಂದ ಅದು ಅಸಾರ್ಥಕ ಮತ್ತು ಅಪ್ರಯೋಜಕವಾಗುತ್ತದೆ. ಪಾಶ್ಚಾತ್ಯರಲ್ಲಿ ಕೆಲವರಂತೂ ಅದನ್ನು ಒಪ್ಪಿಕೊಂಡು ‘All art is useless’ ‘ಎಲ್ಲ ಕಲೆಯೂ ಅಪ್ರಯೋಜಕ’ ಎನ್ನುವವರೆಗೂ ಹೊಗಿದ್ದಾರೆ, ಆಂಶಿಕ ಸತ್ಯದ ಸಿದ್ಧಾಂತ ಮೂಢವಾತಕ್ಕೆ ಅಥವಾ ಚಕ್ರವಾತಕ್ಕೆ ಸಿಕ್ಕಿ ದಿಕ್ಕುಗೆಟ್ಟಂತೆ!

ಭಾವೋಪಯೋಗವೆ ಪ್ರಪ್ರಧಾನವಾಗಿರುವ ಕಲೆಯಿಂದ ಯಾವ ನೇರವಾದ ಲೋಕೋಪಯೋಗವನ್ನು ನಾವು ನಿರೀಕ್ಷಿಸಬಾರದು; ಏಕೆಂದರೆ ಅನ್ಯಪ್ರಯೋಜನವನ್ನು ಪೂರ್ವಭಾವಿಯಾಗಿಯೆ ಮನಸ್ಸಿನಲ್ಲಿಟ್ಟುಕೊಂಡರೆ ಆ ನಿರೀಕ್ಷಿತ ಪ್ರಯೋಜನ ಕೈಗೂಡದಿದ್ದರೆ ಆ ಕಲೆಯ ಆಸ್ವಾದನೆಗೆ ಸಂಪೂರ್ಣ ಭಂಗಬರುವ ಸಂಭವವುಂಟು. ಹಾಗೆಯೆ ಆ ನಿರೀಕ್ಷಿತ ಪ್ರಯೋಜನ ಸಿದ್ಧಿಯಾಯಿತೆಂದು ಕಲೆಯಲ್ಲದ, ಅಥವಾ ಅತಿ ಸಾಧಾರಣ ಮಟ್ಟದ, ಕೃತಿಯನ್ನೂ ಸ್ವಾರ್ಥ ತೃಪ್ತಿಯಾದ ಸಂತೊಷದಲ್ಲಿ ಅತ್ಯತ್ತಮ ಕಾವ್ಯವೆಂದು ಪ್ರಶಂಸಿಸುವ ಸಂಭವವೂ ಉಂಟು. ಆದ್ದರಿಂದ ಸಹೃದಯನಾದವನು ಯಾವ ವಿಧವಾದ ಲೌಕಿಕವಾದ ಅನ್ಯಪ್ರಯೋಜನಗಳನ್ನೂ ಅಪೇಕ್ಷಿಸದೆ ಕಲೆಯನ್ನು ಆಸ್ವಾದಿಸಬೇಕು ಎಂಬ ಆಂಶಿಕ ಸತ್ಯವನ್ನು ಸೂಚಿಸಲೆಂದೆ ‘ಎಲ್ಲ ಕಲೆಯೂ ಅಪ್ರಯೋಜಕ!’ ಎಂಬ ಸೂತ್ರವನ್ನು, ಬಹುಶಃ ಉಕ್ತಿಗೆ ಉಗ್ರರೂಪ ಕೊಡವುದರಿಂದೊದಗುವ ಪ್ರಕಟಣಾ ಪ್ರಯೋಜನವನ್ನು ಗಮನಿಸಿ, ಸ್ವಲ್ಪ ಕಟುವಾಗಿಯ ಪ್ರತಿಪಾದಿಸಿದರೆಂದು ತೋರುತ್ತದೆ. ಉದ್ದೇಶ ಏನೆ ಆಗಿರಲಿ ಪರಿಣಾಮವಂತೂ ಅನರ್ಥಕಾರಿಯಾದ ‘ಕಲೆಗಾಗಿ ಕಲೆ’ಯಲ್ಲಿ ಕೊನೆಗೊಂಡಿತು.

ಭಾರತೀಯ ಕಾವ್ಯಮೀಮಾಂಸೆಯೂ ಕವಿಕರ್ಮದ ಗುರಿ ಸಹೃದಯ ರಸಾನುಭವ ಎಂದು ಸಾರಿದೆ. ಸಹೃದಯ ರಸಾನುಭವದಲ್ಲಿ ಕಾವ್ಯ ತನ್ನ ಸಾರ್ಥಕತೆಯನ್ನು ಪಡಯುತ್ತದ. ಪಾಶ್ಚಾತ್ಯರು ‘ಈಸ್ತೆಟಿಕ್‌ ಎಕ್ಷಪೀರಿಯನ್ಸ್‌’ ಎಂದು ಕರೆಯುವುದನ್ನೆ ನಮ್ಮವರು ಸೌಂದರ್ಯಾನುಭವ ಅಥವಾ ರಸಾನುಭವ ಎಂದು ಕರೆದಿದ್ದಾರೆ. ಕಾವ್ಯದ ವಲಯದಲ್ಲಿ ರಸಾನುಭವಕ್ಕೆ ಪರಮಗಣ್ಯಸ್ಥಾನವನ್ನೂ ಕೊಟ್ಟಿದ್ದಾರೆ. ಅದನ್ನು ಸಕಲ ಪ್ರಯೋಜನಗಳಿಗೂ ಮೌಲಿಭೂತವಾದ ಪ್ರಯೋಜನ[3] ಎಂದಿದ್ದಾರೆ. ಆದರೆ ಅನ್ಯ ಪ್ರಯೋಜನಗಳ ಅನಪೇಕ್ಷತೆಯನ್ನಾಗಲಿ ತಿರಸ್ಕಾರವನ್ನಾಗಲಿ ಸಿದ್ಧಾಂತ ರೂಪಕ್ಕೆ ತಿರುಗಿಸಿದಂತೆ ಕಾಣುವುದಿಲ್ಲ. ಧರ್ಮ ಅರ್ಥ ಕಾಮ ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳೂ ಕಾವ್ಯದಿಂದ ಸಾಧಿತವಾಗುತ್ತವೆ. ಕಾವ್ಯ ಪ್ರಯೋಜನಗಳನ್ನು ಹೇಳುವಾಗಲೂ ಕಾವ್ಯಮೌಲ್ಯಕ್ಕೆ ಅಷ್ಟೇನೂ ಸಂಬಂಧಿಸಿಲ್ಲದ ಕೀರ್ತಿ, ಸಂಪತ್ತು, ವ್ಯವಹಾರಜ್ಞಾನಗಳೊಡನೆ ಕಾವ್ಯ ಮೌಲ್ಯ ನಿರ್ಣಯಕ್ಕೆ ಆವಶ್ಯಕವೆನಿಸುವ ಶಿವೇತರಕ್ಷತಿ, ಸದ್ಯಃಪರವಾದ ನಿರ್ವೃತಿ, ಕಾಂತಸಂಮಿತವಾದ ಉಪದೇಶ ಇವುಗಳನ್ನೂ ಸೇರಿಸಿದ್ದಾರೆ.[4] ರಸಾನುಭವವನ್ನು ಕಿರೀಟಪ್ರಾಯವೆಂದು ಕರೆದಿದ್ದರೂ ಅದರಿಂದೊದಗುವ ಆನಂದವನ್ನು ವಿಗಲಿತ ವೇದ್ಯಾಂತರ ಎಂದು ವರ್ಣಿಸಿದ್ದರೂ ಆ ಕಾವ್ಯ ಕಾವ್ಯಮೀಮಾಂಸಕರ ಉದ್ದೇಶ ಆ ಅನುಭವದ ಆಧ್ಯಾತ್ಮಿಕವಾದ ಸತ್ಯಾಸತ್ಯ ನಿರ್ಣಯದ ಗೋಜಿಗೆ ಹೋದಂತಿಲ್ಲ. ಬಹುಶಃ ಆಧ್ಯಾತ್ಮದಲ್ಲಿಯೂ ಯೋಗದಲ್ಲಿಯೂ ಮುಂದುವರಿದಿದ್ದ ಅಥವಾ ಮುಂದುವರಿದಿದ್ದವರ ಸಾನ್ನಿಧ್ಯಲಾಭ ಪಡೆದಿದ್ದ ಅವರಿಗೆ ಆ ಅನುಭವದ ಅಸತ್ಯತೆಯ ಪ್ರಶ್ನೆ ಉದ್ಭವಿಸುವ ಸಂಭವವೆ ಇರಲಲ್ಲಿವೇನೋ!

ಆದರೆ ಆಧುನಿಕವಾದ ನಮ್ಮ ಸಾಹಿತ್ಯಸೃಷ್ಟಿಗೆ ಪಾಶ್ಚಾತ್ಯ ಸಾಹಿತ್ಯದ ಪ್ರಭಾವವೆಂತೂ ಅಂತೆ ಆಧುನಿಕವಾದ ನಮ್ಮ ಕಾವ್ಯಮೀಮಾಂಸೆಗೂ ಸಾಹಿತ್ಯವಿಮರ್ಶೆಗೂ ಪಾಶ್ಚಾತ್ಯ ಸಾಹಿತ್ಯವಿಮರ್ಶೆಯ ಮತ್ತು ಕಾವ್ಯಮೀಮಾಂಸೆಯ ಪ್ರಭಾವ ಅನಿವಾರ್ಯವಾಗಿ ಒದಗಿ, ಹಿಂದೆ ಆಸಂಶಯಾತ್ಮಕವಾಗಿದ್ದ ನಮ್ಮ ಶ್ರದ್ಧೆಗಳೆನ್ನೆಲ್ಲಾ ಅಲುಗಿಸುತ್ತಿವೆಯಾದ್ದರಿಂದ, ಹೆಡೆಯೆತ್ತಿರುವ ಹೊಸ ಪ್ರಶ್ನೆಗಳಿಗೆ ಧೀರವಾಗಿ ಸ್ವಾಗತ ನೀಡಬೇಕಾಗಿದೆ. ಹಾಗೆ ಮಾಡದೆ ಉಷ್ಟ್ರಪಕ್ಷಿಯ ಕುರುಡು ನೀತಿಯನ್ನನುಸರಿಸಿದರೆ ಪ್ರಾಚೀನತೆಯ ಪರವಾದ ಅಂಧಶ್ರದ್ಧೆಯಲ್ಲಿ, ತಪ್ಪಿದರೆ, ವಿನಾಶಕಾರಕವಾದ ಸಂಶಯಾತ್ಮಕತೆಯಲ್ಲಿ, ಉಳಿಯಬೇಕಾಗುತ್ತದೆ. ಎರಡೂ ಅನಾವಶ್ಯಕವಾಗುವಂತೆ ನಮ್ಮ ಸಹೃದಯ ವರ್ಗಕ್ಕೆ ಬುದ್ಧಿಪೂರ್ವಕವೂ ಹೃದಯತೃಪ್ತಿಕರವೂ ವಿಚಾರಸಮ್ಮತವೂ ಆಗಿರುವ ರಸಾನುಭವದ ಸತ್ಯಸ್ವರೂಪ ಮೀಮಾಂಸೆಯನ್ನೊದಗಿಸದರೆ ನಮ್ಮ ಪ್ರಾಚೀನ ಸಾಹಿತ್ಯದ ಕಲ್ಯಾಣಕರವೂ ಆಹ್ಲಾದಕರವೂ ಆಗಿರುವ ಶಕ್ತಿ ನಮ್ಮ ಜನತೆಯ ಆತ್ಮಶ್ರೀಗೆ ಅಮೃತವಾಗಿ ಒದಗುತ್ತದೆ; ಮತ್ತು ಮುಂಬರುವ ಸಾಹಿತ್ಯಸೃಷ್ಟಿ ಅಜೀರ್ಣ ಅಥವಾ ಅರ್ಧ ಜೀರ್ಣವಾದ ಅಪೂರ್ಣದೃಷ್ಟಿಯ ಪಂಗುತತ್ವಗಳ ಮೇಲೆ ಒಲೆಯುವ ಸಿದ್ಧಾಂತಗಳನ್ನಾಶ್ರಯಿಸಿ ನಿಸ್ಸತ್ವವಾಗುವುದೂ ತಪ್ಪುತ್ತದೆ.

‘ಕಲೆಗಾಗಿ ಕಲೆ’ ‘ಕವಿತೆಗಾಗಿ ಕವಿತೆ’ ‘ರಸಕ್ಕಾಗಿ ರಸ’ ಎಂಬ ಸಿದ್ಧಾಂತಗಳಿಂದ ಮಾನವ ಸಂಸ್ಕೃತಿಗೂ ಸಾಮಾಜಿಕ ಜೀವನಕ್ಕೂ ಎಂತಹ ಹಾನಿ ತಟ್ಟಬಲ್ಲದು ಎಂಬುದನ್ನು ಆ ಹಾನಿಗೆ ತುತ್ತಾದವರನ್ನು ಕಂಡಲ್ಲದೆ ನಮಗೆ ತಿಳಿಯುವುದಿಲ್ಲ. ರಸಾನುಭವವನ್ನು ಅನ್ಯಪ್ರಯೋಜನಗಳ ಸೋಂಕಿನಿಂದ ಪಾರುಮಾಡಿ ರಸಶುದ್ಧಿಯನ್ನು ಕಾಪಾಡಲು ಹೊರಟವರು ಅದನ್ನು ‘ಅಪ್ರಯೋಜಕ’ವನ್ನಾಗಿ ಮಾಡಿ, ಅದರಲ್ಲಿ ಇದುವರೆಗೂ ನಮಗಿದ್ದ ಗುರುತರವಾದ ಶ್ರದ್ಧಾಶಕ್ತಿಯನ್ನು ಒಂದು ಮಧುರ ಮಿಥ್ಯೆಯ ಲಘುತರ ಸ್ವಾರಸ್ಯಮಾತ್ರವನ್ನಾಗಿ ಪರಿವರ್ತಿಸಿ, ಅದರ ಸತ್ಯತೆಯನ್ನೂ ಆಧ್ಯಾತ್ಮಿಕತೆಯನ್ನೂ ಚೇತನೆಯನ್ನೂ ಊರ್ಧ್ವಮುಖವಾಗಿಸುವ ಅದರ ದರ್ಶನ ಜ್ಯೋತಿಯನ್ನೂ ತಿರಸ್ಕರಿಸಿ, ಬುದ್ದಿಯಿರುವ ಸಹೃದಯರೆನ್ನೆಲ್ಲ ಕಾವ್ಯವಿಮುಕರನ್ನಾಗಿ ಮಾಡುವ ಕಾರ್ಯದಲ್ಲಿ ಯಶಸ್ವಿಗಳಾಗುತ್ತಿದ್ದಾರೆ.

ಕಾವ್ಯಾನುಭವದಿಂದ ವಂಚಿತವಾದರೆ ಜನಜೀವನ ಶುಷ್ಕವಾಗಿ ಮೃತಪ್ರಾಯವಾಗುತ್ತದೆ[5] ಎಂದು ಕಂಡುಕೊಂಡವರು ಕಾವ್ಯಾನುಭವದಲ್ಲಿರುವ ಜೀವನ ಪೋಷಕಾಂಶವನ್ನೆ ತೆಗೆದುಹಾಕುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಅವರ ವ್ಯೆಜ್ಞಾನಿಕ ವಿಚಾರದ ಸೋಸಣಿಗೆ ತಾನು ಶುದ್ದಿಗೊಳಿಸಲೆಳಸುತ್ತಿರುವ ಸೋಮರಸದ ಜೀವನಶಕ್ತಿಸತ್ವವನ್ನೆ ಹೀರಿಕೊಂಡು ಬರಿಯ ಸಿಹಿಸಿಹಿ ನೀರನ್ನೆ ನಮಗೆ ದಯಪಾಲಿಸಲು ಹಂಚಿಕೆ ಹೂಡಿದಂತಿದೆ. ನಂಬಿ ಕುಡಿಯುವವರ ಗತಿ? ಹಿಂದಿನಂತೆಯೆ ಸಿಹಿದ್ರವವನ್ನೇನೊ ಕುಡಿಯುತ್ತಿರುತ್ತಾರೆ; ಆದರೆ ನಾಲಗೆಯ ರುಚಿ ತೃಪ್ತವಾದರೂ ಪುಷ್ಟಿಕರ ಸತ್ವಾಂಶದ ಅಭಾವದಿಂದಲೊ ಅಥವಾ ಪುಷ್ಟಿವಿನಾಶಕರವಾದರೂ ರುಚಿವರ್ಧನಕ್ಕಾಗಿ ತುಂಬುವ ಅಶ್ರೇಯಸ್ಕರಾಂಶದ ಪ್ರಭಾವದಿಂದಲೊ ಶರೀರವೆಲ್ಲ ಕೃಶವಾಗಿ ರೋಗರುಜಿನಗಳಿಗೆ ಸುಲಭವಶವಾಗಿ ವಿನಾಶದತ್ತ ಸಾಗುತ್ತದೆ.

ರಸಾನುಭವಕ್ಕೆ ರಸಾನುಭವವೆ ಗುರಿ; ಅದಕ್ಕದೇ ಪರಮಪ್ರಯೋಜನ; ಅದರಿಂದ ನೀತಿಬೋಧೆಯನ್ನಾಗಲಿ ಧಾರ್ಮಿಕೋನ್ನತಿಯನ್ನಾಗಲಿ ಆಧ್ಯಾತ್ಮಿಕ ವಿಕಾಸವನ್ನಾಗಲಿ ಸಾಮಾಜಿಕ ಕ್ಷೇಮವನ್ನಾಗಲಿ ರಾಜಕೀಯೋತ್ಕರ್ಷನ್ನಾಗಲಿ ಅಪೇಕ್ಷಿಸುವುದು ಕಾವ್ಯಮೌಲ್ಯಕ್ಕೆ ‘ಅನ್ಯ’; ಮತ್ತು ಅನ್ಯಾಯ. ಈ ಅನ್ಯೋದ್ದೇಶಗಳಿಂದ ಸೃಷ್ಟವಾದ ಕೃತಿ ಶುದ್ಧಸಾಹಿತ್ಯವಲ್ಲ; ಸಾಹಿತ್ಯದ ರೂಪವನ್ನು ಉಪಯೋಗಿಸಿಕೊಂಡು ಅನ್ಯೋದ್ದೇಶಗಳನ್ನು ಸಾಧಿಸುವ ಉಪಾಯಯಂತ್ರ. ಶುದ್ಧಸಾಹಿತ್ಯಕ್ಕೆ ರಸಾನುಭವವಲ್ಲದ ಬೇರೆ ಉದ್ದೇಶಗಳಿರಬಾರದು. ಕಾವ್ಯಕ್ಕಾಗಿಯೆ ಕಾವ್ಯ. ಕಲೆಗಾಗಿಯೆ ಕಲೆ.

ಕಾವ್ಯದ ವಲಯದಲ್ಲಿ ಸಹೃದಯ ರಸಾನುಭವವೆ ಮುಖ್ಯ ಲಕ್ಷ್ಯ; ಆ ಭೂಮಿಕೆಯಷ್ಟರಲ್ಲಿ ರಸವೆ ಸಕಲ ಪ್ರಯೋಜನ ಮೌಲಿಭೂತವಾದದ್ದು: ಎಂಬ ವಾದದಲ್ಲಿ ಸತ್ಯಾಂಶವಿಲ್ಲದಿಲ್ಲ. ನಾಟಕವನ್ನು ನೋಡುತ್ತಿರುವ ಸಹೃದಯ ಪ್ರೇಕ್ಷಕನಿಗೆ ರಸಾನುಭೂತಿಯ ಪರಮ ಪ್ರಯೋಜನವಾದರೂ ಅದನ್ನು ನೋಡಿಕೊಂಡು ಹೊರಗೆ ಬರುವ ಅವನು ಲೋಕಸಂಸಾರದ ಒಬ್ಬ ವ್ಯಕ್ತಿ. ಆ ವ್ಯಕ್ತಿ ನಾಟಕಕ್ಕೆ ಬರುವ ಪೂರ್ವದಲ್ಲಿಯೂ ಇರುತ್ತಾನೆ; ನಾಟಕ ಮುಗಿದಮೇಲೆಯೂ ಇರುತ್ತಾನೆ. ರಸಾನುಭವ ಪಡೆದಮೇಲೆ ಅವನು ಅಂತರ್ಧಾನವಾಗುವ ಪಕ್ಷದಲ್ಲಿ ರಸಾನುಭವದ ಪರಮಪ್ರಯೊಜನ ಸಿದ್ದಾಂತದ ವಿಷಯದಲ್ಲಿ ಲೋಕವ್ಯಕ್ತಿಗಳಾಗಿರುವ ನಾವು ಪ್ರವೇಶಿಸುವ ಕಾರಣವಿರುತ್ತಿರಲಿಲ್ಲ. ಆದರೆ ಆ ಸಹೃದಯ ಪ್ರೇಕ್ಷಕವ್ಯಕ್ತಿ ನಾಟಕದಿಂದೊದಗುವ ರಸಾನುಭವದಿಂದ ಪ್ರಭಾವಿತನಾಗಿ ಲೋಕಜೀವನದಲ್ಲಿ ಕ್ರಿಯೆಗೆ ತೊಡಗುತ್ತಾನೆ. ಆ ರಸಾನುಭವದ ಸಂಸ್ಕಾರದ ಪರಿಣಾಮ ಲೋಕದ ಇತರ ವ್ಯಕ್ತಿಗಳ ಸಂತೋಷಕ್ಕೊ, ದುಖಃಕ್ಕೊ, ಏಳಿಗೆಗೊ, ಅವನತಿಗೊ, ಪಾಪಕ್ಕೊ, ಪುಣ್ಯಕ್ಕೊ, ಘರ್ಷಣೆಗೊ, ಸ್ವಾಂತನಕ್ಕೊ ಕಾರಣವಾಗಿಯೆ ಆಗುತ್ತದೆ. ಆದ್ದರಿಂದಲೆ ಕಾವ್ಯ ಅಥವಾ ಕಲೆ ಏನನ್ನಾದರೂ ಮಾಡಲಿ ಬಿಡಲಿ ಎಂದು ಲೋಕ ತಟಸ್ಥವಾಗಿರಲು ಸಾಧ್ಯವಾಗುವುದಿಲ್ಲ. ತನ್ನ ಶ್ರೇಯಸ್ಸಿಗಾಗಿ ಅದು ಆ ರಸಾನುಭವ ಪ್ರಯೋಜನವನ್ನು ಬದುಕಿನ ಶಾಶ್ವತ ಪುರಷಾರ್ಥಗಳ ಮಹತ್ತರ ಪ್ರಯೋಜನಕ್ಕೆ ಅಧೀನಗೊಳಿಸಬೇಕಾಗುತ್ತದೆ. ತನ್ನ ಕ್ಷೇತ್ರದಲ್ಲಿ ಪರಮಪ್ರಯೋಜನವೆಂದು ಮಾನ್ಯವಾಗಿದ್ದರೂ ಪೂರ್ಣ ಜೀವನದ ವಿಶಾಲತರ ಕ್ಷೇತ್ರದ ಪರಮಗಂತವ್ಯಸ್ಥಾನವಾದ ಪೂರ್ಣತಾಧ್ಯೇಯದ ಒರೆಗಲ್ಲಿನಲ್ಲಿ ಅದು ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ರಸದ ಮೌಲ್ಯನಿರ್ಣಯದಲ್ಲಿ ಪುರಷಾರ್ಥಗಳೆಲ್ಲ ಅವಯವಗಳಾಗಿವೆ, ಅಂತರ್ಗತವಾಗಿವೆ. ಆ ಪುರುಷಾರ್ಥಗಳನ್ನುಳಿದು ಅದನ್ನು ಪರಿಭಾವಿಸಿದರೆ ಅದು ಶೂನ್ಯವಾಗಿಬಿಡುತ್ತದೆ: ಪರಿಭಾವಿಸುವುದಕ್ಕೂ ಅಲ್ಲೇನೂ ಇರುವುದಿಲ್ಲ.

ರಸಾನುಭವ ಅಲೌಕಿಕ ಎಂದರೆ ಲೋಕದ ಸಂಬಂಧವನ್ನೆಲ್ಲ ಕಡಿದುಕೊಂಡುಬಿಟ್ಟದ್ದು ಎಂದರ್ಥವಲ್ಲ. ಲೋಕೋತ್ತರವಾದದ್ದು ಎಂದಷ್ಟೆ ಅರ್ಥ. ಸಂಪೂರ್ಣವಾಗಿ ಲೋಕದಿಂದ ಬೇರೆಯಾಗಿದ್ದಾಗಿರಲು ಸಾಧ್ಯವೆ ಇಲ್ಲ. ಕವಿ ಮನುಷ್ಯನಾಗಿ ಲೋಕದ ಮತ್ತು ಸಮಾಜದ ಒಂದು ಅಂಶವಾಗಿದ್ದಾನೆ; ಅವನ ಕೃತಿಯೂ, ಅದೆಷ್ಟೆ ನಿಯತಿಕೃತ ನಿಯಮರಹಿತದಂತೆ ತೋರಲಿ, ಲೋಕದ ಒಂದಂಶವೆ. ಈ ಮಾತು ಸಹೃದಯನಿಗೂ ಸಂಪೂರ್ಣವಾಗಿ ಅನ್ವಿತ. ಮಾನವ ವ್ಯಾಪಾರಗಳೆಲ್ಲ, ಕಲೆಯದ್ದಾಗಲಿ ಕಾವ್ಯದ್ದಾಗಲಿ ಲೋಕದ್ದಾಗಲಿ, ಪರಸ್ಪರೋಪಜೀವಿಗಳೆ; ಒಂದರ ಪ್ರಭಾವ ಮತ್ತೊಂದರ ಮೇಲೆ ಬಿದ್ದೆ ತೀರುತ್ತದೆ; ಒಂದರ ಪರಿಣಾಮ ಮತ್ತೊಂದರ ಪರಿಣಾಮವನ್ನು ನಿರ್ಣಯಿಸುತ್ತದೆ. ನಮ್ಮ ಅಲೋಚನೆಯ ಸೌಕರ್ಯಕ್ಕಾಗಿ ಮಾಡಿಕೊಳ್ಳುವ ವಿಭಜನೆಯನ್ನು ವಸ್ತುವಿಗೂ ವರ್ಗಾಯಿಸಿದರೆ ಅಸತ್ಯವಾಗುವುದರ ಜೊತೆಗೆ ಅನಾಹುತವೂ ಆಗುತ್ತದೆ.

ಸಕಲಪ್ರಯೋಜನ ಮೌಲಿಭೂತವೆಂದು ವರ್ಣಿಸಿ ರಸದ ಸ್ಥಾನವನ್ನು ನಿರ್ಣಯಿಸಿದ ಭಾರತೀಯ ಕಾವ್ಯಮೀಮಾಂಸೆ ಅದರ ಸ್ವರೂಪವನ್ನು ವಿಗಲಿತ ವೇದ್ಯಾಂತರವಾದ ಆನಂದವೆಂದು ನಿರೂಪಿಸಿದೆ. ಎಂದರೆ, ರಸವನ್ನು ಅನುಭವಿಸುವ ಆ ಚರ್ವಣ ಮುಹೂರ್ತದಲ್ಲಿ ಆ ಆಸ್ವಾದನೆಯ ಆನಂದವೊಂದನ್ನಲ್ಲದೆ ಅದಕ್ಕೆ ಕಾರಕ ವಾಹಕಾದಿಗಳಾದ ಬೇರಾವುದನ್ನೂ ಗಮನಿಸುವುದಿಲ್ಲ ಎಂಬುದು ತಾತ್ಪರ್ಯ. ಇದು ಆದರ್ಶ ಸಹೃದಯನ ಆದರ್ಶಪ್ರಾಯವಾದ ರಸಾನುಭೂತಿಯ ಆದರ್ಶ ಲಕ್ಷಣ ನಿರೂಪಣೆ. ಇದು ಕಬ್ಬೊ ಬೆಲ್ಲವೊ ಜೇನೊ ಸಕ್ಕರೆಯೊ ಮಾವೊ ಹಲಸೊ ಯಾವುದನ್ನು ತಿಂದರೂ ನಮ್ಮ ಪ್ರಜ್ಞೆ ಆ ಸವಿಯೊಂದನ್ನೆ ತನ್ಮಯವಾಗಿ ಅನುಭವಿಸಿ, ಆ ಸವಿ ಯಾವುದರಿಂದ ಬಂದಿತು ಎಂಬುದನ್ನು ಸಂಪೂರ್ಣವಾಗಿ ವಿಸರ್ಜಿಸುವ ಒಂದು ರೀತಿಯ ಸಮಾಧಿಸ್ಥಿತಿ! ಇಂತಹ ಆದರ್ಶಸಮಾಧಿಸ್ಥಿತಿಯನ್ನು ಬ್ರಹ್ಮಾಸ್ವಾದ ಸೋದರ ಎಂದು ಕರೆದರೆ ಆಕ್ಷೇಪಿಸಬಾರದೆಂದು ತೊರುತ್ತದೆ. ಆದರೆ ನೂರಾರು ವಿವಿಧ ಸಂಸ್ಕಾರದ ಸಹೃದಯರ ನೂರಾರು ತರಹದ ಕಲೆ ಕಾವ್ಯ ನಾಟಕಗಳ ತರತಮದ ರಸಾನುಭವಗಳನ್ನೆಲ್ಲ ಒಂದೇ ರಸಾನುಭವವೆಂದು ಹೇಳಲಾದೀತೆ? ಎಲ್ಲ ಕವಿಕೃತಿಗಳೂ ಒಂದೆ ಮಟ್ಟದವೆ? ಎಲ್ಲ ರಸಾನುಭವ ಒಂದೆ ರೀತಿಯದೆ? ಕಾರ್ಖಾನೆಯ ಅವಿವಾಹಿತ ಕೂಲಿ, ಅಥವಾ ವಿಶ್ವವಿದ್ಯಾನಿಲಯದಲ್ಲಿದ್ದರೂ ಲೈಂಗಿಕಾತೃಪ್ತನಾದ ವಿದ್ಯಾರ್ಥಿ ಅಥವಾ ಅಧ್ಯಾಪಕ, ಇವರು ಸಿನಿಮಾ ನೋಡುವಾಗ ಅನುಭವಿಸುವುದು ಶೃಂಗಾರರಸವನ್ನೊ ಹಚ್ಚ ಹಸಿಯ ರತಿಭಾವವನ್ನೊ? ಅದಕ್ಕಿಂತಲೂ ಸ್ವಲ್ಪ ಮೇಲುಮಟ್ಟದ ಉತ್ತಮರಾದ ಪ್ರೇಕ್ಷಕರಲ್ಲಿಯೂ, ರಸವನ್ನಲ್ಲದೆ ಬರಿಯ ಸ್ಥಾಯಿಭಾವವನ್ನೆ ಸವಿಯುವವರಂತೆ, ಶೇಕಡ ತೊಂಬತ್ತರಷ್ಟು ಸ್ಥಾಯಿಭಾವ ಮಿಶ್ರಿತ ರಸವನ್ನು ಸವಿಯುವರೆಷ್ಟು ಮಂದಿ! ಶೇಕಡ ಐವತ್ತು ನಾಲ್ವತ್ತು ಮೂವತ್ತು ಇಪ್ಪತ್ತು ಹತ್ತು ಐದರಷ್ಟು ಸ್ಥಾಯಿಭಾವ ಮಿಶ್ರಿತವಾದ ರಸಾನುಭವ ಪಡೆಯವವರೆಷ್ಟು ಮಂದಿ! ಆದ್ದರಿಂದ ಕವಿಗಳನ್ನಾಗಲಿ ರಸವನ್ನಾಗಲಿ ಕಾವ್ಯ ಕಲಾ ಕೃತಿಗಳನ್ನಾಗಲಿ ಸಹೃದಯ ಪ್ರೇಕ್ಷಕ ವಾಚಕರನ್ನಾಗಲಿ ಒಂದೆ ಎನ್ನುವ ರೀತಿಯಲ್ಲಿ ಮೀಮಾಂಸೆಗೆ ಹೊರಡುವುದರಿಂದ ಸತ್ಯದರ್ಶನವಾಗುವುದಿಲ್ಲ.

ಭಾರತೀಯ ಕಾವ್ಯ ಮೀಮಾಂಸಕರು ರಸವನ್ನು ನಾನಾ ಪದಾರ್ಥಗಳ ಮಿಶ್ರಣದಿಂದ ಮಾಡಿದ ಪಾನಕದ ರುಚಿಗೆ ಹೋಲಿಸಿದ್ದಾರೆ. ಅವರ ಅಭಿಪ್ರಾದಲ್ಲಿ ಅದೊಂದು ಜನ್ಯ.[6] ಅನೇಕ ಸಾಮಗ್ರಿಗಳು ಸೇರಿ ಆ ರುಚಿಯನ್ನು ಹುಟ್ಟಿಸುತ್ತವೆ. ಆ ರುಚಿಯಲ್ಲಿ ಆ ಭಿನ್ನ ಸಾಮಗ್ರಿಗಳ ರುಚಿಗಳೆಲ್ಲ ಸಂಯೋಗವಾಗಿ ಆ ಯಾವುದೊಂದು ಸಾಮಗ್ರಿಯ ರುಚಿಯೂ ಅಲ್ಲದ ಒಂದು ವಿಶಿಷ್ಟವಾದ ಐಕ್ಯತಾರುಚಿ ಉದ್ಭವಿಸುತ್ತದೆ. ಆದರೆ ಸ್ವಾದದ ಅಥವಾ ರುಚಿಯ ಪ್ರಯೋಜನವನ್ನು ಉಂತಿಟ್ಟು ಪುಷ್ಟಿಪ್ರಯೋಜನವನ್ನು ಮಾತ್ರ ಗಮನಿಸಿದರೆ ಆರೋಗ್ಯಾಕಾಂಕ್ಷಿಗಳಾದ ನಾವು ಆ ವಿವಿಧಸಾಮಗ್ರಿಗಳ ಗುಣಾವಗುಣಗಳನ್ನು ನಿರ್ಲಕ್ಷಿಸಲಾಗುವುದಿಲ್ಲ.

ಸೌಂದರ್ಯಾನುಭವ ಅಥವಾ ರಸಾನುಭವವು ಕಾವ್ಯ ಕಲಾಭೂಮಿಗೆ ಮಾತ್ರ ಪರಿಮಿತವಾಗಿದ್ದಿದ್ದರೆ, ಅದರ ಪ್ರಭಾವ ಪರಿಣಾಮಗಳು ಲೋಕದ ವಿಶಾಲ ಜೀವನಕ್ಕೆ ವ್ಯಾಪಿಸದ್ದಿದ್ದರೆ ಅದರ ರುಚಿಪ್ರಯೋಜನವಷ್ಟರಿಂದಲೆ ತೃಪ್ತರಾಗಿ ಸುಮ್ಮನಿರಬಹುದಾಗಿತ್ತು. ಆದರೆ ಸಾಮಾಜಿಕನ ಯಾವ ಅನುಭವವೂ ತನ್ನ ಪರಿಧಿಯಲ್ಲಿಯೆ ಪರ್ಯವಸಾನವಾಗುವುದಿಲ್ಲ. ಅದು ಸಮಾಜವನ್ನೆಲ್ಲ ವ್ಯಾಪಿಸುತ್ತದೆ: ಬದುಕನ್ನು ರೂಪಿಸುತ್ತದೆ. ಆದ್ದರಿಂದ ರಸಾನುಭವಕ್ಕೆ ಕಾರಣವಾಗುವ ಬೇರೆ ಬೇರೆ ಸಾಮಗ್ರಿಗಳ ಕ್ಷೇಮಂಕರ ಅಥವಾ ಅಕ್ಷೇಮಂಕರ ಗುಣಾವಗುಣಗಳನ್ನು ನಾವು ಪರಿಶೀಲಿಸಿ ಮಂಡನ ಖಂಡನಗಳಲ್ಲಿ ತೊಡಗಬೇಕಾಗುತ್ತದೆ. ‘ಕಲೆಗಾಗಿ ಕಲೆ’ಯನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕಾಗುತ್ತದೆ. ರಸ ಅಲೌಕಿಕ ಎಂದ ಮಾತ್ರಕ್ಕೆ ಅದರ ಲೋಕೋತ್ತರತ್ವ ಅದರ ಲೋಕವ್ಯಾಪಾರತ್ವವನ್ನು ತಿರಸ್ಕರಿಸುವುದಿಲ್ಲ. ತನಗೊದಗಿದ ವಿಶೇಷಣದ ಆಧಾರದ ಮೇಲೆ ತನ್ನ ಲೌಕಿಕವಾದ ಜವಾಬುದಾರಿಯಿಂದ ತಪ್ಪಿಸಿಕೊಳ್ಳಲು ಅದಕ್ಕೆ ಅಧಿಕಾರವಿಲ್ಲ.

ಅಲ್ಲದೆ ರಸಾನುಭವ ನೇರವಾಗಿ ಲೋಕವ್ಯಾಪಾರವೂ ಆಗಬಲ್ಲದು. ಸೌಂದರ್ಯಾನುಭವ ಕಲಾಕಾವ್ಯಾದಿಗಳಿಗೆ ಮಾತ್ರ ಸೀಮಾಬದ್ದವಾಗಿಲ್ಲ ಎಂಬುದೂ ಅನುಭವವೇದ್ಯ. ಚೇತೋಹಾರಿಯಾದ ಪರ್ವತಾರಣ್ಯ ನಿಸರ್ಗ ದೃಶ್ಯವನ್ನೊ ಸೂರ್ಯಾಸ್ತವನ್ನೊ ಚಂದ್ರೋದಯವನ್ನೊ ಸಮುದ್ರವನ್ನೊ ಆಕಾಶದ ಮೇಘಪಂಕ್ತಿಗಳನ್ನೊ ಯಾವ ಲೌಕಿಕಪ್ರಯೋಜನದ ಆಶೆ ಭಯ ಆಶಂಕೆಗಳ ಗೊಂದಲವೂ ಇಲ್ಲದೆ ಸಂಗದೂರವೆಂಬಂತಿರುವ ಧ್ಯಾನಮಯ ಪ್ರಜ್ಞೆಯಿಂದ ಕವಿಹೃದಯವುಳ್ಳವರು ಯಾರೆ ಆಗಲಿ ವೀಕ್ಷಿಸುತ್ತಿರುವಾಗ ದೊರೆಕೊಳ್ಳುವ ಸೌಂದರ್ಯಾನುಭದ ಆನಂದವು ರಸಾನುಭವಕ್ಕಿಂತ ಯಾವ ವಿಧದಲ್ಲಿಯೂ ಭಿನ್ನವಾದುದಲ್ಲ. ಇನ್ನೂ ಸ್ವಲ್ಪ ಮೇಲೇರಿ ಹೇಳುವುದಾದರೆ, ಅಹಂಕಾರದ ಸಂಪೂರ್ಣ ನಿರಸನದಿಂದ ಸಹಜ ಸಾಕ್ಷಿ ಪ್ರಜ್ಞೆಯಲ್ಲಿ ಆರೂಢನಾಗುವ ಯೋಗಿಗೆ ಸಮಸ್ತಲೋಕವ್ಯಾಪಾರವೂ, ನಿಸರ್ಗದ್ದಾಗಲಿ ಮನುಷ್ಯನದ್ದಾಗಲಿ, ಸುಖದಃಖ ಕಷ್ಟಕ್ಲೇಶ ಜಯಾಪಜಯ ಶೋಕಸಂಕಟಾದಿಯಾಗಿ ಸರ್ವಾನುಭವವೂ ರಸಾನುಭವವೆ ಆಗಿರುತ್ತದೆ. ಅಂತಹ ಆನಂದ ಸಾಕ್ಷಾತ್ಕಾರದ ಅನುಭವಕ್ಕೆ “ರಸೋ ವೈ ಸಃ” ಎಂಬ ಉಪನಿಷತ್ತಿನ ಋಷಿಯ ಸಚ್ಚಿದಾನಂದ ಬ್ರಹ್ಮಸ್ವರೂಪದ ವ್ಯಾಖ್ಯೆ ಸರ್ವಥಾ ಸರ್ವಭಾವೇನ ಒಪ್ಪುತ್ತದಲ್ಲವೆ?[7]


[1]       ಸೌಂದರ್ಯಮಲಂಕಾರಃ – ಕಾವ್ಯಂ ಗ್ರಾಹ್ಯಮಲಂಕಾರಾತ್‌.

[2]       ಇದು ಸಾಹಿತ್ಯಕ್ಕೆ ಮಾತ್ರ ಅನ್ವಯವಾಗುತ್ತದೆ; ಇತರ ಕಲೆಗಳಲ್ಲಾದರೆ ಅಭಿವ್ಯಕ್ತಿಯ ರೂಪಾಂಶವು ನಾದ, ವರ್ಣ, ಚಲನಾದಿಗಳಲ್ಲಿ ವ್ಯವಹರಿಸುತ್ತದೆ.

[3]      “ಸಕಲ ಪ್ರಯೋಜನ ಮೌಲಿಭೂತಂ ಸಮನಂತರಮೇವ ರಸಾಸ್ವಾದನ ಸಮುದ್ಭೂತಂ ವಿಗಲಿತ ವೇದ್ಯಾಂತರಂ ಆನಂದಂ.”

[4]      ಕಾವ್ಯಂ ಯಶಸೇ ಅರ್ಥಕೃತೇ ವ್ಯವಹಾರವಿದೇ ಶಿವೇತರಕ್ಷತಯೇ |
ಸದ್ಯಃಪರ ನಿವೃತಯೇ ಕಾಂತಸಂಮಿತತಯೋಪದೇಶಯುಜೇ ||

[5]       Nor is art a thing which had its function in the youth of the world, but with the development of Science becomes obsolete. It may very possibly decline and even disappear, but if it does a biological calamity of the first order will have occurred.

— I.A. Richards.

[6]      ಸಾಂಖ್ಯ ಮತ್ತು ವೇದಾಂತ ದರ್ಶನ ಪಕ್ಷಪಾತಿಗಳಾದ ಕಾವ್ಯ ಮೀಮಾಂಸಕರು ರಸಾನಂದವು ಯಾವುದರ ಕಾರ್ಯವಲ್ಲವೆಂದೂ ತನಗೆ ತಾನೆ ಇರುವುದನ್ನು ಮುಚ್ಚಿರುವ ಆವರಣವನ್ನು ತೆಗೆದು ಹಾಕುವುದರಿಂದ ಅನುಭವ ಗೋಚರವಾಗುವ ಮೂಲತತ್ತ್ವವೆಂದೂ “ರಸೋ ವೈ ಸಃ” ಎಂದೂ ವಾದಿಸಿದ್ದಾರೆ: ‘ವೀತವಿಘ್ನ ಪ್ರತೀತಿ,’ ‘ಭಗ್ನಾವರಣಚಿತ್‌,’ ಎಂಬಂತಹ ಮಾತುಗಳಲ್ಲಿ ಧ್ವನಿತವಾಗುವ ಆ ತತ್ತ್ವದ ಜಿಜ್ಞಾಸೆ ಸದ್ಯದ ಈ ಪ್ರಬಂಧದ ಉದ್ದೇಶಕ್ಕೆ ಅಪ್ರಕೃತ.

[7]       ‘ರಸೋ ವೈ ಸಃ’ ಎಂಬ ಕಾವ್ಯ ಮೀಮಾಂಸೆಯ ಪ್ರಬಂಧದಲ್ಲಿ ಇದರ ವಿಸ್ತೃತ ವಿವೇಚನೆ ದೊರೆಯತ್ತದೆ.