ಪ್ರತಿಮಾತೀತವಾದ ಅಪ್ರತಿಮವನ್ನೆ ಪ್ರತಿಮಿಸಲು ಸಾಹಸಮಾಡಿರುವ ಮಹರ್ಷಿಯ ಕವಿಪ್ರತಿಭೆ ಸೋತಂತೆ ತೋರಿ ಗೆದ್ದಿದೆ, ‘ವಿಶ್ವರೂಪ ದರ್ಶನ’ದ ವಿರಾಟ್‌ ಪ್ರತಿಮಾ ಸೃಜನೆಯಲ್ಲಿ. ಸೋಲುವುದರಿಂದಲೆ ವಿಜಯ ಸಾಧಿಸಿದೆ: ಏಕೆಂದರೆ ಅದೆಲ್ಲಿಯಾದರೂ ಸ್ವಷ್ಟವಾದ ಖಚಿತವಾದ ಪರಿಮಿತವಾದ ವಿಗ್ರಹವನ್ನು ರಚಿಸಿದ್ದರೆ ಅವಾಙ್ಮಾನಸವಾದ ಅನಿರ್ವಚನೀಯವನ್ನು ಅಲ್ಪಕ್ಕಿಳಿಸಿ ವಿಫಲವಾಗುತ್ತಿತ್ತು.

ಆದರೆ ವಾಲ್ಮೀಕಿ ರಾಮಯಾಣದ ಕಿಷ್ಕಿಂದಾ ಮತ್ತು ಸುಂದರ ಕಾಂಡಗಳ ಸಂಧಿಸ್ಥಾನದಲ್ಲಿ ಭೂಮವಾಗಿ ಕಂಡರಣೆಗೊಂಡಿರುವ ಸಾಗರ ಲಂಘನ ಸನ್ನಿವೇಶದ ಆಂಜನೇಯನ ಬೃಹತ್‌ಪ್ರತಿಮೆ ಭಗವದ್‌ಗೀತೆಯ ‘ವಿಶ್ವರೂಪ ದರ್ಶನ’ದಂತೆ ಅಚಿಂತ್ಯಾನಂತವಾಗಿಲ್ಲ; ಸಾಂತವಾಗಿದೆ; ವಿಸ್ತೃತೋನ್ನತ ಭಯಂಕ್ರವಾಗಿರುವುದಾದರೂ ರುದ್ರರಮ್ಯವಾಗಿ ತ್ರೈಲೋಕ್ಯಭವ್ಯವಾಗಿದೆ. ಅದು ಮಿಲ್ಟನ್‌ ಮಹಾಕವಿಯ ‘ಪ್ಯಾರಡೈಸ್‌ ಲಾಸ್ಟ್‌’ ಮಹಾಕಾವ್ಯದಲ್ಲಿ ಬರುವ ಸೇಟನ್‌ನ ಮಾರಕ ಪ್ರಲಯಾಕಾಶ ಲಂಘನ ಸನ್ನಿವೇಶದ ಅದ್ಭುತ ಚಿತ್ರದಂತೆ ಆಸುರೀಯವಾಗಿರದೆ ತನ್ನ ಉದ್ದೇಶದ ದಿವ್ಯತೆಯಿಂದ ಭವ್ಯತರವಾಗಿದೆ.

ಅಲ್ಲಿ ಸ್ಥಾನಮಾನಲಾಭದ ಅಹಂಕಾರದಿಂದ ಪ್ರೇರಿತನಾಗಿ ಅಸೂಯಾವಶನಾಗಿ ಭಗವಂತನೆಗೆ ವಿರುದ್ದವಾಗಿ ಸಂಚುಹೂಡಿ, ಹೋರಾಡಿ, ಸ್ವರ್ಗ ಮತ್ತು ಸ್ವರ್ಗಾಧಿಕಾರಿಗಳಿಂದ ಚ್ಯುತನಾಗಿ, ತನ್ನ ಸಹಚರರೊಡನೆ ಪಾತಾಳದ ಅಂಧಕಾರಾಗ್ನಿ ನರಕಕ್ಕೆ ಬಿದ್ದು, ದೇವರ ಮೇಲಣ ದ್ವೇಷದಿಂದಲೂ ಪ್ರತೀಕಾರೈಕ ಚಲದಿಂದಲೂ ಭಗವಂತನ ಒಂದು ಶುಭಸುಂದರ ಕೃತಿಗೆ ವಿಘ್ನವಾಗುವ ದೃಢವೈರ ಬುದ್ಧಿಯಿಂದ ನಾರಕಾಕಾಶದ ಉಲ್ಲಂಘನೆಗೆ ತೊಡಗುತ್ತಾನೆ ಸೇಟನ್‌. ಅವನು ಅಸತ್‌ ಶಕ್ತಿಯ ಪ್ರತಿಮೆ; ಅದಿವ್ಯವೂ ನಾರಕವೂ ದುರ್ಮನೋರಥದಿಂದ ತನ್ನ ಮುನ್ನಿನ ದೈವೀರೂಪವನ್ನು ಕಳೆದುಕೊಂಡು ವಿಕೃತವೂ ಪೈಶಾಚಿಕವೂ ಬೀಭತ್ಸ ಭಯಾನಕಾಶ್ರಿತವೂ ಆಗಿರುವ ವಿನಾಶಭಿಮುಖ ದುರ್ದಮ್ಯನಾರಕದೈತ್ಯತೆಯ ಪ್ರತಿರೂಪ. ಕ್ರೈಸ್ತಧರ್ಮದ ಪ್ರಕಾರ ಅವನು ಪಾಪದ ಪ್ರತೀಕ! ಆಂಜನೇಯನಾದರೂ ಭಗವದ್‌ಭಕ್ತಿಯ ಪ್ರತೀಕ; ಆಜನ್ಮ ಬ್ರಹ್ಮಚರ್ಯದ ಪ್ರತೀಕ; ಪುಣ್ಯದ ಪ್ರತೀಕ! ಸೇಟನ್ನಿನಂತೆ ಭಗವಂತನ ವಿರುದ್ದವಾಗಿ ವಿಧ್ವಂಸನ ಕಾರ್ಯದಲ್ಲಿ ತನ್ನ ಸಾಹಸವನ್ನು ಮೆರೆಯುತ್ತಿಲ್ಲ; ಭಗವಂತನ ಪರವಾಗಿ, ಅವತಾರವೆತ್ತಿರುವ ಭಗವಂತನ ಕಷ್ಟದಲ್ಲಿ ಭಾಗಿಯಾಗಿ ಘೋರವಿಪತ್ತಿಗೆ ಸಿಕ್ಕಿರುವ ಮಹಾಪತಿವ್ರತೆಯೊಬ್ಬಳನ್ನು ದುಷ್ಟದಾನವನಿಂದ ರಕ್ಷಿಸುವ ಸಲುವಾಗಿ ಸಾಗರ ಸಾಹಸಿಯಾಗುತ್ತಾನೆ. ಸೇಟನ್‌ ದೇವರ ಜೊತೆಯಲ್ಲಿದ್ದಾಗಲೂ ಅಮರ್ತ್ಯನೆ; ನರಕದಿಂದ ಹಾರಿದಾಗಲೂ ಅಮರ್ತ್ಯನೆ. ಪಾಪದಿಂದ ರೂಪಪರಿವರ್ತನೆಯಾಗಿ ಭೀಕರವಾಗುತ್ತಾನೆ ಅಷ್ಟೆ! ಆ ರೂಪಪರಿವರ್ತನೆ ಅವನ ಆಂತರ್ಯದ ಪರಿವರ್ತನೆಗೆ ಪ್ರತಿಮೆಯೊಡ್ಡಿದೆ.

[1] ಆ ಕುರೂಪಾಕೃತಿ ಅವನು ಅಪೇಕ್ಷಿಸಿದ್ದಲ್ಲ, ಇಚ್ಛಿಸಿದ್ದಲ್ಲ. ಅವನ ಆತ್ಮದ ವಿಕಾರವೆ ಅವನ ಆಕಾರ ನಿರ್ಣಯ ಮಾಡುತ್ತದೆ ಅವನ ಪಾಪವೆ ಅವನ ರೂಪವಾಗಿ ಪ್ರತಿಮಾಲಕ್ಷಣಕ್ಕೆ ಸಜೀವ ನಿದರ್ಶನವಾಗಿದೆ. ಆಂಜನೇಯನ ರೂಪ ಪರಿವರ್ತನೆ ಪಾಪದಿಂದ ಸಂಭವಿಸುವುದಿಲ್ಲ! ಪಾಪ ಸಾಧನೆಗೆ ಆದುದೂ ಅಲ್ಲ; ದೈವಕಾರ್ಯಕ್ಕಾಗಿ, ಪುಣ್ಯ ಸಾಧನೆಗಾಗಿ, ತನ್ನ ಯೋಗಶಕ್ತಿಯಿಂದ ತಾನೆ ನಿರ್ಣಯಿಸಿಕೊಂಡದ್ದು. ಅವನು ಕಿಷ್ಕಿಂಧೆಯಲ್ಲಿ ಹುಟ್ಟಿ ಮರ್ತ್ಯನೆ. ಆದರೆ ಯೋಗಿಯಾಗಿ ಅಷ್ಟಸಿದ್ಧಿ ಸಂಪನ್ನನಾಗಿದ್ದಾನೆ. ದೈವಕಾರ್ಯಕ್ಕಾಗಿ, ಲೋಕ ಸಂಗ್ರಹಕ್ಕಾಗಿ ತನ್ನ ಮರ್ತ್ಯತ್ವವನ್ನು ಮೀರಬಲ್ಲವನಾಗುತ್ತಾನೆ.[2] ಅಂತೂ, ನೀತಿ ಅನೀತಿ ಧರ್ಮಾಧರ್ಮ ಪಾಪ ಪುಣ್ಯ ಇತ್ಯಾದಿ ಸಾಹಿತ್ಯೇತರ ಮೌಲ್ಯಗಳನ್ನು ನಿರ್ಲಕ್ಷಿಸಿ. ನಮ್ಮ ಸದ್ಯದ ಮೀಮಾಂಸೆಗೆ ಪ್ರಕೃತವಾದ ಪ್ರತಿಮಾಸೃಜನೆಯ ಕಲಾಮೌಲ್ಯವೊಂದನ್ನೆ ಗಮನಿಸುವ ಔಚಿತ್ಯದೃಷ್ಟಿಯಲ್ಲಿ ಮಾತ್ರವೆ ನಮ್ಮ ಸಮಾಲೋಚನೆ ನಿಲ್ಲುವ ಪಕ್ಷದಲ್ಲಿ ಪ್ರಾಚ್ಯ ಮತ್ತು ಪಾಶ್ಚಾತ್ಯ ಕವಿಗಳಿಬ್ಬರ ಈ ಎರಡು ಬೃಹತ್ ಪ್ರತಿಮೆಗಳು ಸಮಭವ್ಯವಾಗಿ ಶೋಭಿಸುವುದರಲ್ಲಿ ಸಂದೇಹವಿಲ್ಲ.

ರಾಮಾಯಣ ಸಮಸ್ತ ಕಾವ್ಯವೂ ಒಂದು ಮಹತೋಮಹೀಯ ಪ್ರತಿಮೆಯಾಗುವುದಾದರೆ ಆಂಜನೇಯನ ಜೀವಮಾನದ ಸಮಗ್ರ ಚಿತ್ರವೂ ಅದರಲ್ಲಿ ಒಂದು ಮುಖ್ಯವಾದ ಅಂಗಪ್ರತಿಮೆಯಾಗುತ್ತದೆ. ಆಗ ಸಮುದ್ರ ಲಂಘನ ಸನ್ನಿವೇಶದ ಬೃಹದ್‌ರೂಪಿ ಆಂಜನೇಯನ ಚಿತ್ರವೂ ಅದರ, ಎಂದರೆ ಆ ಮಖ್ಯಾಂಗ ಪ್ರತಿಮೆಯ, ಹೃದಯಕೇಂದ್ರವೆಂಬಂತೆ ಒಂದು ಮಹತ್ತಾದ ಉಪಾಂಗ ಪ್ರತಿಮೆಯ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಆದರೆ ಇಲ್ಲಿ ಈ ಉಪಾಂಗ ಪ್ರತಿಮೆಯ ಆಂಜನೇಯ ಮಹಾಪಾತ್ರದ ಹೃದಯವೂ ಕೇಂದ್ರವೂ ಆಗಿರುವುದರಿಂದ ಈ ಮಹಾಪ್ರತಿಮೆಯೆ ಶಿರಃಸ್ಥಾನದಲ್ಲಿ ನಿಂತು ಉಳಿದೆಲ್ಲವುಗಳನ್ನೂ ಅಂಗೋಪಾಂಗ ಪ್ರತಿಮೆಗಳನ್ನಾಗಿ ನಡಿಯಿಸಿಕೊಳ್ಳುತ್ತದೆ. ಅವೆಲ್ಲವೂ ಇದಕ್ಕೆ ಮತ್ತು ಇದಕ್ಕಾಗಿ ಅವಯವ ಪ್ರತಿಮೆಗಳಾಗಿ ಪರಿಣಮಿಸಿ ಇದರ ವೈಭವಕ್ಕೆ ತಮ್ಮತನದ ಕಾಣಿಕೆಯನ್ನೆಲ್ಲ ಸಮರ್ಪಿಸುತ್ತವೆ.

ಆದ್ದರಿಂದಲೇ ನಾವು ಇಂತಹ ಪೌರಾಣಿಕ ಮಹಾಪಾತ್ರಗಳನ್ನು ಸಾಮಾಜಿಕ ಮತ್ತು ಐತಿಹಾಸಿಕ ಕಾದಂಬರಿಯ ಅಥವಾ ಸಾಮಾಜಿಕ ನಾಟಕದ ಪಾತ್ರಗಳನ್ನು ಪರಿಶೀಲಿಸುವಂತೆ ಪ್ರತಿಕೃತಿದೃಷ್ಟಿಯಿಂದ ವಿಮರ್ಶಿಸಲು ಹೊರಟರೆ ಅವಿವೇಕವಾಗುತ್ತದೆ. ಅಂತಹ ಪಾತ್ರಗಳಲ್ಲಿ ಪ್ರವಹಿಸುವ ಚೇನತನಗಳು ಈ ಭೂಮಿಯಲ್ಲಿ ಜನ್ಮವೆತ್ತಿ, ಮಾನುಷ ಮರ್ತ್ಯದ ಎಲ್ಲ ಲಕ್ಷಣಗಳ ಆಲವಾಲಗಳಲ್ಲಿ, ಹರಿದು, ಪಾರ್ಥಿವ ಲೀಲಾರೂಪಗಳಿಂದ ಸಮನ್ವಿತವಾದರೂ ಅವುಗಳ ಮೂಲ ಊರ್ಧ್ವಲೋಕಗಳಲ್ಲಿರತ್ತದೆ; ಅವುಗಳ ಚೂಲವೂ ಜನ್ಮಾಂತರಗಳ ಅಗೋಚರ ಭೂಮಿಕೆಗಳಲ್ಲಿ ಕಣ್ಮರೆಯಾಗುತ್ತದೆ; ಈ ಲೀಲಾಲೋಕದಲ್ಲಿ ಅವುಗಳ ಜನ್ಮಧಾರಣೆಯ ಉದ್ದೇಶ ಪ್ರಯೋಜನಗಳು ಮರ್ತ್ಯ ಜೀವನದ ದಿಗಂತವಲಯವಷ್ಟರಿಂದಲೆ ಪರಿವೇಷ್ಟಿತವಾಗಿರದೆ ಆಚೆಯಾಚೆಗೂ ಪ್ರಸರಿಸಿ ಕಣ್ಮರೆಯಾಗುತ್ತವೆ. ಆದ್ದರಿಂದಲೆ ಅವುಗಳನ್ನು ಪ್ರತಿಮಾದೃಷ್ಟಿಯಿಂದಲೆ ಸಮಾಲೋಚಿಸಿ, ಅವು ದಾನ ಮಾಡುವ ದರ್ಶನಧ್ವನಿಯಿಂದ ದೀಪ್ತರಾಗಿ, ರಸಪ್ರಯೋಜನದಿಂದ ಧನ್ಯರಾಗುವುದೊಂದೆ ನಮಗಿರುವ ಮಾರ್ಗ. ಸಮಷ್ಟಿ ಪ್ರಜ್ಞೆಯ ಪ್ರತಿನಿಧಿಯಾದ ಕವಿದ್ರಷ್ಟಾರನ ಋಷಿ ಪ್ರತಿಭೆಯ ಪ್ರಾರ್ಥನೆಗೊ ಅಭೀಪ್ಸೆಗೊ ಅಪೇಕ್ಷೆಗೊ, ಆಶೀರ್ವಾದ ಮಾಡುವ ರೀತಿಯಲ್ಲಿ ವಶವಾಗಿ, ಕಾವ್ಯಸತ್ತೆಯ ಪ್ರತಿಮಾರೂಪದಿಂದ ಆವಿರ್ಭವಿಸಿ ಅಭಿವ್ಯಕ್ತವಾಗುವ ಊರ್ಧ್ವಲೋಕಗಳ ಶಕ್ತಿ-ವ್ಯಕ್ತಿ-ಚೇತನಗಳ ಸ್ವರೂಪವನ್ನೂ ಐಶ್ವರ್ಯವನ್ನೂ ಸಾಕ್ಷಾತ್ಕರಿಸಿಕೊಳ್ಳಬೇಕಾದರೆ ಸಹೃದಯನ ವಿಮರ್ಶೆ ಪ್ರತಿಮಾ ವಿಧಾನವನ್ನೆ ಆಶ್ರಯಿಸುವುದು ಅವಶ್ಯಕವಾಗುತ್ತದೆ.

ಜನರು ಮೆಚ್ಚಿ, ತಮ್ಮ ನಾಯಕನನ್ನು ಆರಿಸಿ, ಆತನ ಗುಣಪ್ರಶಂಸೆ ಮಾಡಿದಾಗ ಆ ಸ್ತುತಿ, ಸಾಮಾನ್ಯವೆಂಬಂತೆ ತೋರುತ್ತಿದ್ದು ಆತನ ಆಂತರ್ಯದಲ್ಲಿ ಅದುವರೆಗೂ ನಿಗೂಢವಾಗಿದ್ದ, ಸತ್ತ್ವಸಮಸ್ತವನ್ನೂ ಹೊರಗೆಳೆಯುತ್ತದೆ. ಅಣುವಾಗಿ ತೋರುತ್ತಿದ್ದವನು ವಿಭುವಾಗಿ ವಿಜೃಂಭಿಸುತ್ತಾನೆ. ಯಾವ ಮಹತ್ಕಾರ್ಯಕ್ಕಾಗಿ ಜನರು ಅವನನ್ನು ಆಶ್ರಯಿಸುತ್ತಾರೆಯೊ ಅದರ ಸಿದ್ದಿಗಾಗಿ ಬೇಕಾಗುವ ಕೆಚ್ಚು ಧೈರ್ಯ ಸಾಹಸ ಬಲ ದಾರ್ಢ್ಯ ದುರ್ದಮ್ಯತೆ ಎಲ್ಲವೂ ಭೀಮಾವೇಶದಿಂದ ಪ್ರಕಟವಾಗುತ್ತವೆ. ಸಂಪಾತಿಯಿಂದ ಸೀತಾದೇವಿಯ ಮಿಷಯವರಿತು ಸಭೆ ಸೇರಿದ ವಾನರರು ತಮಗೂ ಲಂಕೆಗೂ ನಡುವೆ ಇರುವ ಸಮುದ್ರರೂಪದ ವಿಘ್ನವನ್ನು ದಾಟಲು ಸಮರ್ಥನನ್ನು ಕಾಣದೆ ವಿಷಣ್ಣರಾಗಿ ಪರಿತಪಿಸುತ್ತಿರಲು, ಅನುಭವಿಯೂ ವೃದ್ಧನೂ ಆದ ಜಾಂಬವನು ದೂರ ಮಾತಿಲ್ಲದೆ ಸುಮ್ಮನೆ ಪ್ರತ್ಯೇಕವಾಗಿ ಕುಳಿತಿದ್ದ ಆಂಜನೇಯನನ್ನು ಕಪಿಸಮಿತಿಯ ಪರವಾಗಿ ಆ ಸರ್ವಸಂಘದ ಪ್ರಜ್ಞೆಯ ಮತ್ತು ಆಕಾಂಕ್ಷೆಯ ಪ್ರತಿನಿಧಿಯಾಗಿ, ಪ್ರಚೋದಿಸಿ, ಪ್ರಾರ್ಥಿಸಿ ಆತನ ಸುರುಳಿ ಸುತ್ತಿದ್ದ ಸುಪ್ತಚೇತನದ ಶಕ್ತಿಯನ್ನೆಲ್ಲ ಜಾಗ್ರತಗೊಳಿಸಿ ‘ಬಲಸಂಧುಕ್ಷಣ’ ಗೈಯ್ಯುತ್ತಾನೆ. ಆಂಜನೇಯನ ಅಮರ್ತ್ಯವೂ ಊರ್ಧ್ವಸ್ಥಿತವೂ ಆದ ದೇವಮೂಲವನ್ನು ಜ್ಞಾಪಕಕ್ಕೆ ತಂದುಕೊಡುತ್ತಾನೆ. ಕೇಸರಿ ಎಂಬ ಹೆಸರಿನ ವಾನರನ ಹೆಂಡತಿ ಅಂಜನೆ ಎಂಬುವಳ ಮಗನಾದರೂ ಅವನು ವಾಯುದೇವನ ಪ್ರಸಾದದಿಂದ ಸಂಭವಿಸಿದವನೆಂದೂ ಆದ್ದರಿಂದ ಆ ದೇವತಾ ಶಕ್ತಿ ಲಕ್ಷಣಗಳಿಂದ ಸಮನ್ವಿತನಾಗಿರುವನೆಂದೂ ತಿಳಿಸುತ್ತಾನೆ.[3]

ಇಂತು ‘ಬಲಸಂಧುಕ್ಷ್ಯಮಾಣ’ನಾದ ಆಂಜನೇಯನು ಸ್ತುತಿಗೆ ಹಿಗ್ಗಿದನೆಂಬಂತೆ ವರ್ಧಿಸಿದನು. (ಸಂಸ್ತೂಯಮಾನೋ ವ್ಯವರ್ಧತ.) ತೇಜಸ್ಸು ತುಂಬಿದಂತಾಗಿ ಅವನ ರೂಪ ಮಹೋನ್ನತಿಗೇರಿತು. (ತೇಜಸಾಪೂರ್ಯ ಮಾಣಸ್ಯ ರೂಪಮಾಸೀದನುತ್ತಮಮ್‌.) ತನ್ನ ಬೃಹತ್ತು ಮಹತ್ತುಗಳ ಅರಿವು ಯಾವ ಪ್ರಮಾಣದಲ್ಲಿ ಅವನಿಗುಂಟಾಯಿತೆಂದರೆ ‘ಪೃಥಿವಿಯನ್ನೆ ಪುಡಿಮಾಡುತ್ತೇನೆ; ಸಾಗರಗಳನ್ನೆ ಕ್ಷೋಭಗೊಳಿಸುತ್ತೇನೆ; ಪರ್ವತಗಳನ್ನೆ ನಡುಗಿಸುತ್ತೇನೆ.’ ಎಂಬ ವಾಕ್ಯಪ್ರತಿಮೆಗಳಿಂದ ತನಗುಂಟಾದ ಮಹಾಬಲಾನುಭವದ ಭಾವಸತ್ಯವನ್ನೂ ಕಾವ್ಯಸತ್ಯವನ್ನೂ ತನ್ನನ್ನು ನೆಮ್ಮಿರುವ ವಾನರ ಮಿತ್ರರಿಗೆ ಹೃದಯವೇದ್ಯವಾಗುವಂತೆ ಮಾಡುತ್ತಾನೆ. ಅವನು ಹಾಗೆ ಪ್ರತಿಮೆಯ ಮೇಲೆ ಪ್ರತಿಮೆಯನ್ನೊಡ್ಡದೆ ‘ನನಗೆ ಮಹಾಬಲವುಂಟಾಗಿದೆ’ ಎಂದು ಎಷ್ಟು ಎಷ್ಟು ಸಾರಿ ಒತ್ತಿ ಒತ್ತಿ ಕೂಗಿಕೊಂಡಿದ್ದರೂ ಅದು ಸಾರ್ಥಕವಾಗುತ್ತಿರಲ್ಲಿಲ್ಲ; ಅವನ ಅಂತಃಸ್ಪೂರ್ತ ಸಾಮರ್ಥ್ಯಕ್ಕೆ ಸಾಕ್ಷಿ ಹೇಳಲು ಹೋಗಿ ವಿಫಲವಾಗುತ್ತಿತ್ತು. ಹಾಗೆಯೆ ಕವಿಪ್ರತಿಭೆ ‘ಆಂಜನೇಯನಿಗೆ ತುಂಬ ಶಕ್ತಿ ಬಂದಿತು; ಧೈರ್ಯವುಂಟಾಯಿತು; ಸಾಹಸಮಾಡುವ ಕೆಚ್ಚು ಮೂಡಿತು.’ ಎಂದು ಮೊದಲಾಗಿ ಪ್ರತಿಕೃತಿಯ ವಿಧಾನದಲ್ಲಿ ಎಷ್ಟು ವರ್ಣಿಸಿದ್ದರೂ ‘ಸಂಸ್ತೂಯಮಾನೋ ವ್ಯವರ್ಧತ. ತೇಜಸಾಪೂರ್ಯ ಮಾಣಸ್ಯ ರೂಪಮಾಸೀದನುತ್ತಮಮ್‌.’ ಎಂದು ಪ್ರಾರಂಭ ಮಾಡಿ ಆಂಜನೇಯನ ರುದ್ರಭಯಂಕರವಾದ ಪರ್ವತಾಕಾಶ ಸ್ಪರ್ಧಿಯಾದ ವಿರಾಡ್‌ಗಾತ್ರವನ್ನು ನಮ್ಮ ಕಲ್ಪನಾಚಕ್ಷುವಿನ ಮುಂದೆ ನಿಲ್ಲಿಸದೆಹೋಗಿದ್ದರೆ ಸತ್ಯಸ್ಯ ಸತ್ಯವಾದ ಆಂಜನೇಯತ್ವದ ಕಾವ್ಯಸತ್ಯವಾಗಲಿ ಭಾವಸತ್ಯವಾಗಲಿ ಸಹೃದಯ ಹೃದ್ಗೋಚರವಾಗುತ್ತಿರಲಿಲ್ಲ. ಕವಿಯ ವರ್ಣನೆ ಸತ್ತು, ಸೋತು, ಸುಳ್ಳಿಗಿಂತಲೂ ಹೇಯವಾದ ಪ್ರತಿಕೃತಿಸತ್ಯದ ಹೆಣವನ್ನು ನಮ್ಮ ಹೊರಗಣ್ಣಿನ ಮುಂದೆಸೆಯುತ್ತಿತ್ತಷ್ಟೆ![4]

ಕವಿಯ ವ್ಯಕ್ತಿಪ್ರತಿಭೆ ತನ್ನ ವ್ಯಷ್ಟಿಪ್ರಜ್ಞೆಯ ಆಳದಿಂದ ರೂಪಕಗಳನ್ನು ಕಡೆದೇಳಿಸುವಂತೆ ಒಂದು ಸಂಸ್ಕೃತಿಗೆ ಸೇರಿದ ಜನಸಮಷ್ಟಿಯ ಸಮುದ್ರಪ್ರಜ್ಞೆಯ ಆಳದಿಂದ ಅದರ ಮಂದರಪ್ರತಿಭೆ ತನ್ನ ಆಶಯ ಅಭೀಪ್ಸೆ ಆದರ್ಶದ ಅನುಭವಕೋಟಿಯ ಅಭಿವ್ಯಕ್ತಿಗಾಗಿ ಕಥಾರೂಪದ ಮಹಾಪ್ರತಿಮೆಗಳನ್ನು ಕಡೆದೆಬ್ಬಿಸುತ್ತದೆ. ಅಂತಹ ಒಂದು ಅದ್ಬುತ ಉಪಾ ಖ್ಯಾನಪ್ರತಿಮೆ ಹರಿಸ್ಚಂದ್ರನ ಕಥೆಯಲ್ಲಿ ಮೈಗೊಂಡಿದೆ. ದೃಶ್ಯನಿರೂಪಣೆಯ ಮತ್ತು ಸಂವಾದ ಚಾತುರ್ಯದ ನಾಟಕೀಯತೆಯಲ್ಲಿ ನಿಪುಣನಾದ ವರಕವಿ ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ ಸಮಗ್ರವೂ ‘ಅಪೃಥಗ್‌ ಯತ್ನ ನಿರ್ವರ್ತಿತ’ವಾಗಿಯೆ ಪ್ರತಿಮಾವಿಧಾನಕ್ಕು ದರ್ಶನಧ್ವನಿಗೂ ಉತ್ತಮ ನಿದರ್ಶನವಾಗಿದೆ. ಮರ್ತ್ಯಭೂಮಿಕೆಯಲ್ಲಿ ಪರಿಣಾಮಗೊಂಡು ಪರಮಸಿದ್ಧಿಯ ಕಡೆಗೆ ಚಲಿಸುವ ಹರಿಶ್ಚಂದ್ರನ ಸತ್ಯಚೇತನದ ವಿಕಾಸದ ಸಲುವಾಗಿ ಊರ್ಧ್ವಲೋಕದ ಅಮರ್ತ್ಯ ಶಕ್ತಿಗಳ ಸಂಕಲ್ಪಕ್ಕೂ ವ್ಯೂಹಕ್ಕೂ ಪ್ರತೀಕ ಸ್ವರೂಪವಾಗಿರುವ ಇಂದ್ರನ ಆಸ್ಥಾನದಲ್ಲಿ ಸಂಭವಿಸುವ ವಸಿಷ್ಠ ವಿಶ್ವಾಮಿತ್ರರ ವಾಗ್ಯುದ್ಧದಿಂದ ಹಿಡಿದು ಸರ್ವಾಹಂಕಾರದ ಸಮೂಲ ವಿನಾಶಕ್ಕೆ ಪ್ರತೀಕದಂತಿರುವ ಸ್ಮಶಾನದಲ್ಲಿ ಸಂಭವಿಸುವ ಈಶ್ವರ ಸಾಕ್ಷಾತ್ಕಾರ ಘಟನೆಯವರೆಗೂ ಆ ಕಥಾಪ್ರತಿಮೆ ಹೆಜ್ಜೆಹೆಜ್ಚೆಗೂ ವಿವರ ವಿವರದಲ್ಲಿಯೂ ಅಲೋಚಿಸಿ ಕಟ್ಟಿದ ಕೃತಕ ರಚನೆಯೊ ಎನ್ನುವಷ್ಟರಮಟ್ಟಿಗೆ ಆಶ್ಚರ್ಯಕರವಾಗಿ ದರ್ಶನ ಧ್ವನಿಯನ್ನು ಮಿಡಿಯುತ್ತಾ ಮುಂಬರಿಯುತ್ತದೆ.

ಅಹಂಕಾರ ಇರುವವರೆಗೂ ಮನುಸ್ಯನಿಗೆ ‘ಸ್ವಾತಂತ್ರ್ಯಭಾವ’ದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಆದರೆ ಪಾರಮಾರ್ಥಿಕವಾಗಿ ಅವನು ಸ್ವತಂತ್ರನಲ್ಲ. ‘ಸ್ವಾತಂತ್ರ್ಯಭಾವ’ವಿದ್ದ ಮಾತ್ರಕ್ಕೆ ಅವನು ಸ್ವತಂತ್ರನಾಗುವುದಿಲ್ಲ. ‘ಈಶ್ವರ ಸರ್ವಭೂತಗಳ ಹೃದಯದಲ್ಲಿಯೂ ಇದ್ದು ಅವನ್ನು ಯಂತ್ರಚಾಲಕನಂತೆ ನಡೆಯಿಸುತ್ತಾನೆ.’ ಎಂದು ‘ಬುದ್ಧಿ’ ಹೇಳಿದರೂ ಅದು ‘ಸಿದ್ಧಿ’ಯಾಗುವುದಿಲ್ಲ. ಆ ಸಿದ್ಧಿ ಅಹಂಕಾರದ ಸಂಪೂರ್ಣ ನಿರಸನದಿಂದಲೆ ಸಾಧ್ಯ. ಎಲ್ಲಿಯವರೆಗೂ ಜೀವಕ್ಕೆ ‘ಸ್ವಾತಂತ್ರ್ಯಭಾವ’ವಿರುತ್ತದೆಯೊ ಅಲ್ಲಿಯವರೆಗೆ ಕರ್ಮ, ಕರ್ಮಫಲ, ಕರ್ತವ್ಯ, ಧರ್ಮಾಧರ್ಮಾದಿ ಹೊಣೆಗಾರಿಕೆಯೂ ಇದ್ದೆ ತೀರುತ್ತದೆ. ‘ಸ್ವಾತಂತ್ರ್ಯಭಾವ’ವಿರುವ ಜೀವ ತಾನೇ ಎಲ್ಲವನ್ನೂ ನಿರ್ವಹಿಸುತ್ತಿದ್ದೇನೆ ಎಂದು ತಿಳಿದರೂ ಅದು ಊರ್ಧ್ವಶಕ್ತಿಗಳ ಸಂಕಲ್ಪ ವ್ಯೂಹಗಳಿಗೆ ಒಳಗಾಗಿಯೆ ಅಸ್ವತಂತ್ರವಾಗಿಯೆ ಚಲಿಸುತ್ತದೆ ಎಂಬುದಕ್ಕೆ ಇಂದ್ರನ ಆಸ್ಥಾನವೂ ಅಲ್ಲಿ ನಡೆಯುವ ವಸಿಷ್ಠ ವಿಶ್ವಾಮಿತ್ರರ ಸ್ಪರ್ಧಾ ಸಂವಾದವೂ ಪ್ರತಿಮೆಯಾಗಿದೆ.

ಜೀವಕ್ಕೆ ಕಷ್ಟಬರದಿದ್ದರೆ ಅದು ತನ್ನ ಜಡತ್ವದಲ್ಲಿಯೆ ಸುಖವಾಗಿ ತಂಗಿಬಿಡುತ್ತದೆ. ಅದು ಮುಂದುವರಿಯಬೇಕಾದರೆ ಕಷ್ಟರೂಪದ ಪ್ರೇರಣೆ ಆವಶ್ಯಕ. ಅದು ದುಃಖ ನಿವಾರಣೆಗಾಗಿ ಮಾಡುವ ಪ್ರಯತ್ನವೆ ಅದನ್ನು ಊರ್ಧ್ವಪಥದಲ್ಲಿ ಕೊಂಡೊಯ್ಯುತ್ತದೆ. ಆದರೆ ಕಷ್ಟಕೊಡುವ ಶಕ್ತಿ ಮಾತ್ರವಿದ್ದು ಕಷ್ಟನಿವಾರಣೆಮಾಡುವ ಶಕ್ತಿ ಇರದಿದ್ದರೆ ಕಂಗೆಟ್ಟ ಜೀವ ವಿನಷ್ಟವಾಗುತ್ತದೆಯೆ ಹೊರತು ಉದ್ದಾರವಾಗಲರಿಯದು. ಅಂದರೆ ವಿಘ್ನಗಳನ್ನು ತಂದೊಡ್ಡಿ ಕಷ್ಟ ಕೊಡುವ ವಿಶ್ವಾಮಿತ್ರಶಕ್ತಿ ನಮ್ಮ ಪುರೋಗಮನಕ್ಕೆ ಎಷ್ಟು ಆವಶ್ಯಕವೊ ಆ ಕಷ್ಟಗಳನ್ನು ಪರಿಹರಿಸಿ ಧೈರ್ಯವಿತ್ತು ಆಶೀರ್ವದಿಸುವ ವಸಿಷ್ಠಶಕ್ತಿಯೂ ಅಷ್ಟೆ ಆವಶ್ಯಕ. ಕಷ್ಟಕೊಡುವ ವಿಶ್ವಾಮಿತ್ರಶಕ್ತಿಯೆ, ಆ ಕಷ್ಟ ಅದನ್ನು ಹೊರುವ ಜೀವಕ್ಕೆ ಅತಿ ದಸ್ಸಾಧ್ಯವಾಗಿ ದಾಟಲಸದಳವಾಗಿ ಪರಿಣಮಿಸದಂತೆ, ನೆರವನ್ನೂ ನೀಡುತ್ತದೆ. ಏಕೆಂದರೆ ಅದರ ಉದ್ದೇಶ ವಿನಾಶವಲ್ಲ, ವಿಕಾಸ. ಸಾಲದ ವಸೂಲಿಗೆ ನಕ್ಷತ್ರಕನನ್ನು ಛೂಬಿಟ್ಟ ವಿಶ್ವಾಮಿತ್ರನೆ ಸಾಲ ತೀರಿಸಲು ಆವಶ್ಯಕವಾದ ಹೊನ್ನನ್ನೂ ಕೊಟ್ಟು ಹರಿಶ್ಚಂದ್ರನನ್ನು ಕೊಂಡುಕೊಂಡು, ಅವನು ವಚನಭ್ರಷ್ಟನಾಗಿಯೆ ಬಿಡದಂತೆ ನೋಡಿಕೊಳ್ಳುವ ಭಾರವನ್ನೂ ವಹಿಸುತ್ತಾನೆ. ಆದಿಯಲ್ಲಿ ಈ ಎರಡು ಶಕ್ತಿಗಳೂ ವಸಿಷ್ಠ ವಿಶ್ವಾಮಿತ್ರರಂತೆ ಮಿತ್ರಶತ್ರು ಸಂಬಂಧದಲ್ಲಿ ಪರಸ್ಪರ ವಿರುದ್ಧ ವರ್ತಿಸುವಂತೆ ಭಾಸವಾದರೂ ತುದಿಯ ಸಿದ್ಧಿಸ್ಥಾನದಲ್ಲಿ ಅವರೆಡೂ ನಮ್ಮ ಪರಮಕಲ್ಯಾಣಕ್ಕೆ ಹೃದಯಶ್ವಾಸಕೋಶಗಳಾಗಿ ಪರಸ್ಪರಪೂರಕವಾಗಿ ನಿಂತು ಕೆಲಸಮಾಡುವುದನ್ನು ಕಾಣುತ್ತೇವೆ.[5]

ಮೂಲವಿದ್ಯೆಯಲ್ಲಿರುವ ಜೀವಕ್ಕೆ ಅಹಂಕಾರದ ಸಂಪೂರ್ಣವಿನಾಶನವಾದ ಹೊರತು ಅವಿದ್ಯೆಯ ನಿರಸನವಾಗುವುದಿಲ್ಲ. ಪ್ರಚ್ಛನ್ನವಾಗಿಯೂ ಪ್ರಕಟವಾಗಿಯೂ ಅಹಂಕಾರ ನಾನಾರೂಪಗಳಲ್ಲಿ ವ್ಯವಹರಿಸುತ್ತದೆ. ನಾನು ರಾಜ, ನಾನು ಶ್ರೀಮಂತ, ನಾನು ಸತ್ಕುಲಪ್ರಸೂತ, ನಾನು ಧರ್ಮಿಷ್ಠ, ನಾನು ಸತ್ಯವಂತ ಇತ್ಯಾದಿಯಾಗಿ ಬಿಳಲು ಬೇರು ಜಟಿಲವಾಗಿರುತ್ತದೆ. ಬಿಳಲು, ಪ್ರಕಟ, ಬೇರು ಪ್ರಚ್ಛನ್ನ! ಹರಿಶ್ಚಂದ್ರನು ಜಾತಿ, ಮತ, ಕುಲ, ದೇಶ, ಐಶ್ವರ್ಯ, ಅಧಿಕಾರ, ರೂಪ, ಇಷ್ಟ ಮಿತ್ರ ಪುತ್ರ ಕಳತ್ರಾದಿ ಮದ ಮಮತಾ ಮಮಕಾರಗಳಿಂದೆಲ್ಲ ಒಂದಾದಮೇಲೊಂದರಂತೆ ಬಿಡುಗಡೆ ಹೊಂದುತ್ತಾನೆ. ಹೀಗೆ ಒಂದರ ಮೇಲೊಂದು ಸಿಪ್ಪೆಸುಲಿದಂತೆ ಮಾಯೆಯ ಆವರಣಗಳೆಲ್ಲ ಕಳಚಿಬಿದ್ದು ಸಂಪೂರ್ಣ ನಿರಾವರಣ ಸ್ಥಿತಿಗೆ ಏರಿದ ಶುದ್ಧಾತ್ಮಕ್ಕೆ ಈಶ್ಚರಸಾಕ್ಷಾತ್ಕಾರವಾಗುತ್ತದೆ: ಅಹಂಕಾರದ ಮಾಯೆಗೆ ಪ್ರತೀಕಸ್ವರೂಪವಾಗಿರುವ ಚಂದ್ರಮತಿಯ ಕೊರಳಿಗೆ ವೈರಾಗ್ಯದ ಉತ್ತುಂಗ ಶಿಖರದಲ್ಲಿ ನಿಲ್ಲುವ ಜೀವಕ್ಕೆ ಪ್ರತೀಕವಾಗಿರುವ ಹರಿಶ್ಚಂದ್ರನ ವಿವೇಕಖಡ್ಗ ಎಲ್ಲಿ ಸಂಧಿಸುತ್ತದೆಯೊ ಆ ‘ಮಾಯಾಹನನ’ ಸ್ಥಾನದಲ್ಲಿಯೆ ಈಶ್ವರ ಸಾಕ್ಷಾತ್ಕಾರವಾಗುತ್ತದೆ. ‘ಹೊಡೆದ ಕಡುಗದ ಬಾಯ ಕಡೆಯ ಹೊಡೆಗಳ ನಾಂತು ಮಡದಿಯೆಡೆಗೊರಳ ನಡುವಡಸಿ ಮೂಡಿದನು…. ಕಾಶೀರಮಣ ವಿಸ್ವನಾಥಂ’ ಎಂಬುದು ಕವಿಯ ವರ್ಣನೆ. ‘ಪುತ್ರನಳಿವು ಜನ್ಮನಿಕಾಯದಳಿವು; ಅಂಗವಾಹನನ ಮಾಯಾಹನನ; ಅಂಜಬೇಡ.’ ಎಂದು ಪಾರ್ವತೀ ಪತಿಯೆ ಹರಿಶ್ಚಂದ್ರನಿಗೆ ನೀಡುವ ಸಂತೈಕೆಯಲ್ಲಿ ನಮ್ಮ ಕೈಗೆ ಪ್ರತಿಮಾ ವಿಧಾನದ ದರ್ಶನಧ್ವನಿಗೆ ಬೇಕಾಗುವ ಬೀಗದ ಕೈಯನ್ನೂ ನೀಡಿದ್ದಾನೆ.

ಹರಿಶ್ಚಂದ್ರೋಪಾಖ್ಯಾನದಂತೆಯೆ ನಮ್ಮ ಪುರಾಣಗಳ ಅನಂತ ವಿಸ್ತೀರ್ಣದಲ್ಲಿ ಅರ್ಥಗರ್ಭಿತವಾದ ಅದ್ಭುತ ಕಥೋಪಕಥನ ಪ್ರತಿಮೆಗಳು ಅಸಂಖ್ಯವಾಗಿವೆ. ಅವುಗಳಲ್ಲಿ ಅನೇಕವು ನಮ್ಮ ಜನರ ಜೀವನದಲ್ಲಿ, ಸಂಸ್ಕ್ರತಿಯಲ್ಲಿ, ಭಾಷೆಯಲ್ಲಿ ಎಷ್ಟರಮಟ್ಟಿಗೆ ಬೆರೆತಿವೆ ಎಂದರೆ ಆಡುವ ಮಾತಿನಲ್ಲಿಯೂ ಸಾಹಿತ್ಯದ ಭಾಷೆಯಲ್ಲಿಯೂ ದೃಷ್ಟಾಂತಗಳಾಗಿಯೊ ಗಾದೆಗಳಾಗಿಯೊ ಉಪಮೆಗಳಾಗಿಯೊ ರೂಪಕಗಳಾಗಿಯೊ ಬಟ್ಟಿಯಿಳಿದು ಗಟ್ಟಿಗೊಂಡಂತೆ ಹಾಸುಹೊಕ್ಕಾಗಿ ಸೇರಿಹೋಗಿವೆ. ದೇವಾಸುರರ ಅಮೃತ ಮಂಥನದ ಕಥಾಪ್ರತಿಮೆ, ಭಗೀರಥ ಪ್ರಯತ್ನದ ಗಂಗಾವತರಣದ ಕಥಾಪ್ರತಿಮೆ, ಬಲಿಚಕ್ರವರ್ತಿಯ ತಲೆಮೆಟ್ಟಿ ಪಾತಾಳಕಟ್ಟಿದ ವಾಮನ ತ್ರಿವಿಕ್ರಮ ಕಥಾಪ್ರತಿಮೆ, ಹರನು ಮನ್ಮಥನನ್ನು ಸುಟ್ಟರೂ ಗಿರಿಜೆಯನ್ನು ಕೈಹಿಡಿದ ಕಥಾಪ್ರತಿಮೆ, ವಿಶ್ವಾಮಿತ್ರ ತ್ರಿಶಂಕು ಕಥಾಪ್ರತಿಮೆ, ಭಸ್ಮಾಸುರ ಮೋಹಿನೀ ಕಥಾಪ್ರತಿಮೆ ಇತ್ಯಾದಿ ಇತ್ಯಾದಿ ಪ್ರಧಾನ ಪ್ರತಿಮೆಗಳೂ ಮಂದರಗಿರಿ, ವಾಸುಕಿ, ಹಾಲಾಹಲ, ಹಣೆಗಣ್ಣು, ತ್ರಿವಿಕ್ರಮಪಾದ, ಮೋಹಿನಿ ಇಂತಹ ಸಾವಿರಾರು ಅಂಗೋಪಾಂಗ ಪ್ರತಿಮೆಗಳೂ ವಿಪುಲ ಸಂಖ್ಯೆಯಲ್ಲಿ ನಮ್ಮ ಮಾತು, ಮತ, ಸಂಸ್ಕೃತಿ, ಸಾಹಿತ್ಯ , ಕಾವ್ಯ, ಕಲೆಗಳಲ್ಲಿ ಭಾವನೆಯ, ಚಿಂತನೆಯ, ಆಲೋಚನೆಯ, ಅನುಭವದ ರಕ್ತನಾಳಗಳಂತೆ, ಸ್ನಾಯುಗಳಂತೆ, ನರಗಳಂತೆ ಅವಯವೈಕ್ಯವಾಗಿವೆ. ಕಾವ್ಯ ಭಾಷೆಯಲ್ಲಂತೂ ಉಪಮಾರೂಪಕ ದೃಷ್ಟಾಂತಾದಿ ಅಲಂಕಾರಗಳಲ್ಲಿ ಸಹೃದಯನ ಭಾವಕೋಶವನ್ನು ಮಿಡಿದು ವಸ್ತುಧ್ವನಿಯ ಸ್ಫುರಣದಿಂದ ರಾಸಾನುಭವವುಂಟಾಗುವಂತೆ ಮಾಡುವ ಕರ್ತವ್ಯಭಾರ ಅವಕ್ಕೆ ಮೀಸಲಾಗಿರುವಂತಿದೆ. ಜನಸಾಮಾನ್ಯರ ಸಮಷ್ಟಿಪ್ರಜ್ಞೆಯಲ್ಲಿ ಅವು ಸ್ವತಃಸಿದ್ಧವಾಗಿಯೆ ಭಾವಮಯತೆ ವೆತ್ತಿರುವುದರಿಂದ ಅವುಗಳನ್ನು ಪ್ರಯೋಗಿಸುವ ತೃತೀಯ ವರ್ಗದ ಕವಿಯೂ ರಸವ್ಯಂಜನ ಕಾರ್ಯದಲ್ಲಿ ಸಿದ್ದಹಸ್ತನಾದನೆಂದು ಭ್ರಮಿಸುವುದಕ್ಕೂ ಸಾಧ್ಯವಾಗಿದೆ!

“…ಸುರಾಸುರರಬುಧಿಯಂ ಮಥಿಸುವಂದು ಹೊಸವಿಷದ ಹೊಗೆ ಹೊಯ್ದು ಕಗ್ಗನೆ ಕಂದಿ ಜಲದೇವಿಯರು ಮನದಲ್ಲಿ ನೊಂದು ಮಾನಿಸರಾದರೋ…”- ಹ.ಕಾ. ಸಂಗ್ರಹ ೪-೨೭.

“ಕಾಳಕೂಟದ ಬಹಳ ದಾಳಿಗೆ ಶೂಲಿಯೊಡ್ಡೈಸುವವೋಲವನೀ ಪಾಲಕನ ಹಿಂದಿಕ್ಕಿ ತಡೆದನು ಕಳಶಜನ ರಥವ…” – ದ್ರೋಣಪರ್ವ ೧.೬೪.

“ತಾರಕನ ಥಟ್ಟಿನಲಿ ಹರನ ಕುಮಾರ ಹೊಕ್ಕಂದದಲಿ, ವೃತ್ರನ ತಾರಕಾಕ್ಷನ ಜೋಡಿಯನು ಜಂಬಾರಿ ತರಿವಂತೆ” – ಕರ್ಣಪರ್ವ. ೧೧-೧೩.

“ಒದೆವ ಮಂದರವನು ತರಂಗದಲುದಧಿ ಹೊಯ್ವಂದದಲಿ ಹೊಕ್ಕವು ಕುದುರೆ ತೂಳಿದವಾನೆ ಕವಿದರು ರಥಿಕರೊಳಬಿದ್ದು.” –

“ಇದು ಭಗೀರಥ ರಥವ ಬೆಂಕೊಂಡು ಪರಿವ ಸುರನದಿಯ ಪ್ರವಾಹ ಮೆನಲ್, ಆ ನೃಪನ ವರವರೂಥದ ಪಿಂತೆ ಬಹು ವಾದ್ಯರಭಸದಿಂದೆ ಎಡೆವರಿಯದೆ ಐತಪ್ಪ ಚತುರಂಗದ ಪದಹತಿಗೆ ಧರೆ ನಡುಗುತಿರೆ, ಜಹ್ನು ಮುನಿಪನಂತೆ ಅದರ ಸಂಭ್ರಮಕೆ ಸೈರಿಸದೆ ಅಂತರಂಗದೊಳ್ ಕುದಿಯುತಿರ್ದಂ ಕರ್ಣಸುತನ್” – ಜೈಮಿನಿ ಭಾರತ ೪-೨೮.

“ಕಟ್ಟುಗ್ರ ಕೋಪದಿಂ ಮುಳಿದಂದು ರಾಘವಂ ತೊಟ್ಟ ಬಾಣದ ಮೊನೆಯ ದಳ್ಳುರಿಯ ಜಳಕೆ ಕಂಗೆಟ್ಟು ಸಿಡಿಮಿಡಿಗೊಂಡ ಸಾಗರದ ಜೀವಾಳಿಯಂತೆ, ಪಾಂಡವನ ಸೇನೆ ಅಟ್ಟಿಸುಡುವ ಅನಲಧೂಮಜ್ವಾಲೆಗೆ ಒಡನೆ ಗೋಳೆಟ್ಟು…” ಜೈಮಿನಿಭಾರತ ೮-೪೦.

“ಶ್ರೀಯನ್ ಅರಾತಿಸಾಧನ ಪಯೋನಿಧಿಯೊಳ್ ಪಡೆದುಂ, ಥರಿತ್ರಿಯಂ ಜೀಯೆನೆ ಬೇಡಿಕೊಳ್ಳದೆ ವಿರೋಧಿನರೇದ್ರರನ್ ಒತ್ತಿಕೊಂಡುಂ… ಉದಾತ್ತ ನಾರಾಯಣನಾದ ದೇವನ್” – ಪಂಪಭಾರತ ೧-೧.

“ಮುಳಿಸು ಲಲಾಟ ನೇತ್ರಶಿಖಿ -… ಉಜ್ಜಳ ಜಸಮ್ ಅಂಗ ಸಂಗತ ಲಸದ್‌ಭಸಿತಂ…” – ಪಂಪಭಾರತ ೧-೨.

“ಸುರಸಿಂಧು ಪ್ರಿಯಪುತ್ರ ಕೇಳ್, ಕಳಸಜಾ ನೀಂ ಕೇಳ್, ಕೃಪಾ ಕೇಳ, ಮಂದರದಿಂದಂಬುಧಿಯಂ ಕಲಂಕಿದಸುರಪ್ರಧ್ವಂಸಿವೋಲ್ ಬಾಹು ಮಂದರದಿಂ ವೈರಿಬಲಾಬ್ಧಿ ಘೂರ್ಣಿಸೆ ಬಿಗುರ್ತೀ ಕೌರವರ್ ಕೂಡೆ ನೂರ್ವರುಮಂ ಕೊಲ್ವೆನಿದೆನ್ನ ಪೂಣೈ ನುಡಿದೆಂ ನಿಮ್ಮಿ ಸಭಾಮಧ್ಯದೊಳ್…” – ಪಂಪಭಾರತ ೭-೧೫.

“ಪೊಸೆದೊಡೆ ಪಾಲ್ಗಡಲಂ ಮಗುಳ್ದಸುರರ್, ಪೊಸೆದಲ್ಲಿ ಕಾಳಕೂಟಾಂಕುರಂ ಅಂದು ಅಸದಲಮೊಗೆದಂತೆ ಒಗೆದುವು ಬಸಿರಿಂ ನೂರೊಂದು ಪಿಂಡ ಮರುಣಾಕೀರ್ಣಂ” – ಪಂಪಭಾರತ ೧-೧೩೦.

“ಆಗಳ್ ವೃಕೋದರಂ ತನ್ನ ತಳೋದರಿಯ ಮುಖಮಂ ನೋಡಿ, ನಿನ್ನೆನ್ನ ಪ್ರತಿಜ್ಞೆಯಂ ನೆಱಪುವಂ ಬಾ,ಎಂದು ಕೆಲದೊಳ್ ಕುಳ್ಳಿರಿಸಿ, ದೃಡ ಕಠಿನ ಹೃದಯನಪ್ಪ ಹಿರಣ್ಯಾಕ್ಷನುರಮಂ ಪೋೞ್ವ ನಾರಸಿಂಗನಂತೆ -” ಪಂಪಭಾರತ ೧೨-೧೫೨ ವಚನ.

“ಭೀಮ ಭುಜಮಂದರ ಘಟ್ಟನೆಯಿಂದಂ ಅಲ್ಲಿ ತೊಟ್ಟನೆ ಕೊಳೆ ಕಾಳ ಕೂಟಮೊಗೆವಂತೊಗೆದಂ ಫಣಿರಾಜಕೇತನಂ.” – ಪಂಪ ಭಾರತ ೧೩-೮೨.

“ಸುತ್ತಿದುರಗನ ಮಂದರಾಚಲ ಕಿತ್ತು ಬೀಳ್ವಂದದಲಿ ಬರಿಕೈ ಸುತ್ತಿ ಮಗ್ಗುಲನೂರಿ ಕೆಡೆದುದು ಸುಪ್ರತೀಕಗಜ” – ದ್ರೋಣಪರ್ವ ೩-೭೫.

“ಫಲುಗುಣ, ಸುಪ್ರತೀಕದ ಖುರಪುಟವ ನೋಡಿತ್ತಲ್, ಅಗ್ಗದ ಪರಶುರಾಮನ ಖಾತಿಗಂಬುಧಿ ನೆಲನ ಬಿಡುವಂತೆ ತೆರಳುತಿವೆ ನಮ್ಮವರು” – ದ್ರೋಣಪರ್ವ ೩-೪೪.

“ಎಳೆ ಮುಂ ದೈತ್ಯನ ಕೆಯ್ಗೆ ಪೋಗೆ ತರಲೆಂದೀ ಚಕ್ರಿ ಮುನ್ನಂ ರಸಾ
ತಳಮಂ ಪೊಕ್ಕುದುಮೀ ಮಹೋಗ್ರ ರಣದೊಳ್ ನಿಮ್ಮೊಂದು ಕೆಯ್ವಿೞ್ದ ಭೂ
ತಳಮಂ ಮತ್ತೆ ತರಲ್ ವಿಶುದ್ಧ ನಿಯಮ ಪ್ರಾರಂಭದಿಂದಾನುಮಿ ಕೊಳನಂ
ಪೊಕ್ಕುದುಮಾವ ದೋಷಮೆನಗಿಂ ಮಾಱೂಂಪರಾರ್ ತೋಱೆರೇ.
– ಪಂಪಭಾರತ ೧೩-೮೪

“ಅಂತು ವಜ್ರಿಯ ವಜ್ರಿಹತಿಗಳ್ಕಿ ಕುಲಗಿರಿ ಜಳಧಿಯಂ ಪುಗುವಂತೆ ದುರ್ಯೋಧನನ್ ಕೊಳನಂ ಪೊಕ್ಕಿರ್ದನ್.”  – ಪಂಪಭಾರತ ೧೩-೭೪ರ ವಚನ.

“ಎಳೆಯಂ ವಿಕ್ರಮದಿಂ ತರಲ್ ಮಹಿಧರಂ ಮುನ್ ಪಂದಿಯಾದಂತೆ ಪೋ
ದೆಳೆಯಂದಾಯಿಗರಂ ಪಡಲ್ವಡಿಸಿ ಕೊಂಡಾಳಲ್ಯಮಾದೇವದಿಂ
ಮುಳಿಸಿಂ ರಂಭೆಯ ಕೊಟ್ಟ ಶಾಪಮನದಂ ನೀಗಲ್ಕಮಾಗಳ್ ಬೃಹಂ ದಳೆಯಾದಂ
ನರನಾತ್ಮಕಾರ್ಯವಶದಿಂ ಶುದ್ಧಾಂತದೊಳ್ ಮತ್ಸ್ಯನಾ
– ಪಂಪಭಾರತ ೮-೫೫[6]

ಆದರೆ ಒಂದು ಎಚ್ಚರಿಕೆ:

ಪ್ರತಿಮಾವಿಧಾನ ಮತ್ತು ದರ್ಶನದ್ವನಿಯ ಈ ಸಿದ್ದಾಂತವು ವಿವೇಕದ ಎಲ್ಲೆಯ ಒಳಗೆ, ಕಲ್ಪನಾಪ್ರತಿಭೆಯ ಮತ್ತು ರಸಪ್ರಜ್ಞೆಯ ಅಧೀನದಲ್ಲಿ, ಮಾಂತ್ರಿಕವಾಗಿ ಪ್ರಯೋಗವಾದರೆ ಅದರಿಂದ ಉತ್ತಮ ಫಲ ಲಭಿಸುವುದರಲ್ಲಿ ಸಂದೇಹವಿಲ್ಲ. ಪುರಾಣಗಳ ಐತಿಹಾಸಿಕಾಂಶದಲ್ಲಿ ಶ್ರದ್ದೆ ಶಿಥಿಲವಾಗುತ್ತಿರುವ ವಿಚಾರದೃಷ್ಟಿಯ ಮತ್ತು ವೈಜ್ಞಾನಿಕಬುದ್ಧಿಯ ಅನೇಕರಲ್ಲಿ, ಮೌಡ್ಯವಶರಾಗದೆಯೂ ಪ್ರಾಚೀನ ಕವಿಸೃಷ್ಟಿಯ ಭಾವಪುಷ್ಟಿ, ಬುದ್ದಿಪುಷ್ಟಿ ಮತ್ತು ರಸಾನುಭವಗಳಿಂದ ಅವರು ವಂಚಿತರಾಗದಂತೆ ಮಾಡಿ, ಜ್ಞಾನಮಯವಾದ ಅಮುಢ ಶ್ರದ್ಧೆಯ ನವ್ಯ ಪುನರುತ್ಥಾನಕ್ಕೆ ನೆರವಾಗುತ್ತದೆ. ಆದರೆ ವಿವೇಕವಿಲ್ಲದ ಅತಿರೇಕಕ್ಕೆ ಸಿಕ್ಕಿ ಯಾಂತ್ರಿಕವಾಗಿ ಪ್ರಯೋಗವಾದರೆ ಅತ್ಯಂತ ವಿಕಾರವಾದ ವಿಮರ್ಶನಾಮಕ ಕ್ಲೇಶಕ್ಕೆ ಗುರಿಯಾಗಬೇಕಾಗುತ್ತದೆ. ಯಾರೊ ಒಬ್ಬರು, ವಿದ್ವಾಂಸಶ್ರದ್ಧಾಲು, ‘ರಾಮಾಯಣದ ಅಂಥರಾರ್ಥ’ ಎಂಬ ಬೃಹದ್‌ ಗ್ರಂಥವನ್ನು ಬರೆದಿದ್ದರೆಂದು ಮಿತ್ರರು ಹೇಳುತ್ತಿದ್ದರು. ಮೋಟಾರು ಕಾರಿನ ಎಂಜಿನ್ನಿನ ಸಾವಿರಾರು ಭಾಗವಿಭಾಗ ಪ್ರಭಾಗಗಳನ್ನೆಲ್ಲ ಬಿಚ್ಚಿ ಬಿಚ್ಚಿ ಕಳಚಿ ಕಳಚಿ, ನಟ್ಟು ಬೋಲ್ಟು ಕೀಲು ಮೊಳೆ ಕೊಳವೆ ತಂತಿ ಗಾಜು ಎಲ್ಲವನ್ನೂ ಚಿಲ್ಲಾಪಿಲ್ಲಿ ಹಾಕಿ, ಪ್ರಯಾಣಿಕ ಮಾತ್ರನಾದ ಪೇಕ್ಷಕ ಅಪ್ರವೀಣನಿಗೆ ದಿಗ್‌ಭ್ರಾಂತಿ ಹಿಡಿಯುವಂತೆ ತನ್ನ ಯಂತ್ರವಿದ್ವತ್ತನ್ನು ಪ್ರದರ್ಶಿಸುವ ಡ್ರೈವರಿನೋಪಾದಿಯಲ್ಲಿ ಅವರು ರಾಮಾಯಣದ ಅಂಗೋಪಾಂಗಗಳಿಗೂ ನರನರಗಳಿಗೂ ಮಾಂಸಖಂಡ ರಕ್ತನಾಳಗಳಿಗೂ ಆಸ್ಥಿಕೋಟಿಗಳಿಗೂ ಕೊನೆಗೆ ರೋಮಗಳಿಗೂ ಶಸ್ತ್ರ ಚಿಕಿತ್ಸೆಮಾಡಿ ಯೋಗಶಾಸ್ತ್ರದ ತಾತ್ತ್ವಿಕವಾದ ಪರಿಭಾಷೆಯಿಂದ ಅಂತರಾರ್ಥಮಯವಾದ ವ್ಯಾಖ್ಯಾನ ಕೋಟೆಯನ್ನೆ ಕಟ್ಟಿದ್ದರಂತೆ! ಮೂಲಾಧಾರದಿಂದ ಹಿಡಿದು ಸಹಸ್ರಾರದವರೆಗಿರುವ ಚಕ್ರಗಳೆಲ್ಲ ರಾಮಾಯಣದ ಮಹಾಪಾತ್ರಗಳಾಗಿ ಪರಿವರ್ತನಗೊಂಡಿದ್ದುವಂತೆ! ಸೀತಾರಾಮ ಲಕ್ಷ್ಮಣರಂತೂ ಇಡಾ ಸುಷುಮ್ನಾ ಪಿಂಗಲಾ ನಾಡಿಗಳಾಗಿ ಅಂತರಾರ್ಥದ ಮಹಾಪೂರವನ್ನೆ ಪ್ರವಹಿಸುವ ದೊಡ್ಡ ಕಾಲುವೆಗಳಾಗಿ ಪರಿಣಮಿಸಿದ್ದರಂತೆ!

ಹಾಗಾಗಬಾರದು!

ಮಹೋಪಮೆಯಲ್ಲಿ ಹೇಗೆ ಪರಿಣಾಮ ರಮಣೀಯತೆಯ ಸಾದೃಶ್ಯ ಶ್ರೀಯೆ ಪ್ರಧಾನಫಲವಾಗಿ, ಆ ಬೆಳಕುಬಿಸುಪನ್ನು ಪಡೆಯುವುದಕ್ಕಾಗಿ ಉಪಯೋಗಿಸುವ ಇತರ ಇಂಧನ ರೂಪವಾದ ವಿವರಗಳೆಲ್ಲ ಗೌಣ ಅಥವಾ ತಿರಸ್ಕೃತವಾಗುತ್ತವೆಯೊ ಹಾಗೆಯೆ ಪ್ರತಿಮಾವಿಧಾನದಲ್ಲಿಯೂ ಪ್ರತಿಮೆಯ ಅಂಗಾಂಗ ವಿವರಗಳೆಲ್ಲ ಅಮುಖ್ಯವಾಗಿ ಕವಿವಿವಕ್ಷಿತವಾದ ದರ್ಶನಧ್ವನಿಯೆ ಸಹೃದಯ ಗಮನಕ್ಕೆ ಗಂತವ್ಯವಾದ ಪರಮ ಪ್ರಯೋಜನವಾಗುತ್ತದೆ.[7] ಅಲ್ಲದೆ ಎಲ್ಲ ಪ್ರತಿಮೆಗಳಲ್ಲಿಯೂ ದರ್ಶನಧ್ವನಿಯನ್ನು ಅರಸುವುದೂ ಅತಿಯಾದೀತು. ಪ್ರತಿಮೆಗಳಂತೆ ತೋರುವ ಅನೇಕ ಚಿತ್ರಗಳು ಕಲ್ಪನೆಯ ಅಥವಾ ಲಘುಕಲ್ಪನೆಯ ಕಟ್ಟಣೆಗಳಾಗಿರುವುದೂ ಉಂಟು. ಕವಿಶಕ್ತಿ ಸಂಚರಿಸದೆ ಬರಿಯ ಪಂಡಿತಯುಕ್ತಿ ಕಟ್ಟಿದ ಅವು ‘ಹುಟ್ಟಿದ’ ಪ್ರತಿಮೆಗಳಾಗಿರದೆ ‘ಕಟ್ಟಿದ’ ಪ್ರತೀಕಗಳಾಗಿರುತ್ತವೆ.

ಪ್ರತಿಮಗಳನ್ನೆಂತೂ ಅಂತೆ ಸಾಹಿತ್ಯವು ಪ್ರತೀಕವನ್ನೂ ಪರಿಣಾಮಕರವಾಗಿ ಪ್ರಯೋಗಿಸುತ್ತದೆ. ಒಮ್ಮೊಮ್ಮೆ ಚಿತ್ರವು ಪ್ರತಿಮಾ ಪ್ರತೀಕಗಳ ನಡುವೆ ಉಯ್ಯಾಲೆಯಾಡುವಂತೆಯೂ ತೋರುತ್ತದೆ. ‘ಹರಿಶ್ಚಂದ್ರ ಕಾವ್ಯ’ದಲ್ಲಿ ರಾಘವಾಂಕನು ಹರಿಶ್ಚಂದ್ರನಿಗಾದ ಒಂದು ಕನಸನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾನೆ: ಹಂದಿಯನ್ನು ಬೇಟೆಯಾಡಿದ ಆಸರದಿಂದಲೂ ಗುರುವಾಜ್ಞೆಯನ್ನು ಮೀರಿ ವಿಶ್ವಾಮಿತ್ರನಾಶ್ರಮವನ್ನು ಪ್ರವೇಶಿಸಿದೆನಲ್ಲಾ ಎಂಬ ಚಿಂತೆಯಿಂದಲೂ ರಾಜನು ‘ನಿಜಸತಿಯ ತೋರದೊಡೆಗಳ ಮೇಲೆ ಲಲಿತ ಮಣಿ ಮಕುಟ ಮಂಡಿತ ಮಸ್ತಕವನಿಕ್ಕಿ’ ನಿದ್ರಿಸುತ್ತಿದ್ದಾಗ ‘ನಾನಾದಃಖಯುತ ವಪ್ಪುದೊಂದು ಕನಸಂ ಕಂಡು ನೊಂದು ಬೆದರಿದಂತೆ ಭೋಂಕೆನಲೆದ್ದು ಬೆಬ್ಬಳಿಸಿ ನಾಲ್ದೆಸೆಯನಾರಯ್ದನು.’ ಚಂದ್ರಮತಿ ‘ಬಿರುದಂಕ ಮಲ್ಲ ನೀ ನಡುಗಲೇತಕ್ಕೆ?’ ಎಂದು ಕೇಳಲು ದೊರೆ ‘ಕನಸಂ ಕಂಡೆನ್‌ ಆ ಕನಸು ನಿರುತವೆಂದೇ ಕಣ್ಣ ತೆರೆದೆ’ ಎಂದು ಕನಸನ್ನು ಬಣ್ಣಿಸಿ, ಅದರ ಅಂತಸ್ಥವೇನಿರಬಹುದು ಎಂದು ರಾಣಿಯನ್ನು ಕೇಳುತ್ತಾನೆ. ಅದಕ್ಕೆ ಅವಳು ‘ಬಗೆವಡೀ ಕನಸು ಗುರುವಾಜ್ಞೆಯಂ ಮೀರಿತಕ್ಕೆ ಒಗೆವ ಕೇಡಿಂಗೆ ಸೂಚನೆ. ಮುನಿಯ ಬೇಡ, ಮಂತ್ರಿಗೆ ಮಗಂಗೆ ಎನಗೆ ರಾಜ್ಯಕ್ಕೆ ಚತುರಂಗ ಸೇನೆಗೆ… ನಿನ್ನ ಹರಣಕ್ಕೆ ಕೇಡು ಬಂದರೆ ಬರಲಿ… ಸತ್ಯವಂ ಬಿಟ್ಟು ಕೆಡದಿರ್, ಅವನೇಶ ಕೈಮುಗಿದು ಬೇಡಿದೆನ್‌’ ಎನ್ನುತ್ತಾಳೆ.[8]

ಕನಸು ಯಾವಾಗಲೂ ಪ್ರತಿಮಾಲಕ್ಷಣದಿಂದ ಕೋಡಿಯೆ ಇರುತ್ತದೆ. ಅದನ್ನು ಕಟ್ಟುವುದು ಜಾಗ್ರತ್‌ ಸತ್ತೆಯ ಬುದ್ಧಿಯಲ್ಲ. ಅದು ತನಗೆ ನಾನೆ ಅಪ್ರಯತ್ನವಾಗಿ ಎಂಬಂತೆ ಸುಪ್ತಚಿತ್ತದಿಂದ ಮೂಡುತ್ತದೆ.[9] ಆದ್ದರಿಂದ ಹರಿಶ್ಚಂದ್ರನ ಸ್ವಪ್ನವಾಗಿ ಮೂಡಿರುವ ಅದು ‘ಪ್ರತಿಮೆ’ಯೆ ಆಗಿರಬೇಕು. ಚಂದ್ರಮತಿ ಹೇಳುವಂತೆ ಅದು ಮುಂಬರುವ ಕೇಡಿಂಗೆ ಸೂಚನೆಯಾಗಿದೆ. ಅಥವಾ ಗುರುವಾಜ್ಞೆಗೆಟ್ಟೆನಲ್ಲಾ! ಎಲ್ಲಿಗೆ ಹೋಗವಾರದಿತ್ತೋ ಅಲ್ಲಿಗೇ, ಕೌಶಿಕನ ಆಶ್ರಮಕ್ಕೆ, ಬಂದುಬಟ್ಟೆನಲ್ಲಾ! ಇನ್ನೇನೇನಾಗುತ್ತದೆಯೊ? ಎಂಬೆಲ್ಲ ಚಿಂತೆ ಭಯ ಆಶಂಕೆಗಳು ಹರಿಶ್ಚಂದ್ರನ ಅಂತಶ್ಚಿತ್ತದಲ್ಲಿ ಹೂಡಿದ ಹೋರಾಟಕ್ಕೆ ನಿದ್ರಾ ಸಮುದ್ರಶಿಲ್ಲಿ ಕಡೆದೆಬ್ಬಿಸಿ ಕೆತ್ತಿದ ಚಿತ್ರಗಳಾಗಿಯೂ ಇರಬಹುದಾಗಿತ್ತು. ಆದರೆ ಪೂರ್ಣಕೃತಿಯ ಪರಿಚಯದಿಂದ ಕಾವ್ಯ ಭೂಮಿಕೆಯ ಪೂರ್ಣದೃಷ್ಟಿಯನ್ನು ಪಡೆದು, ಕಾವ್ಯದ ಮಟ್ಟಿಗೆ ತ್ರಿಕಾಲಜ್ಞಾನ ದ್ರಷ್ಟಾರ ಸ್ಥಾನದಲ್ಲಿರುವ ನಮಗೆ ಚಂದ್ರಮತಿಯ ವ್ಯಾಖ್ಯಾನವೆ ಬೀಗಕ್ಕೆ ತಯಾರುಮಾಡಿದ ಸರಿಯಾದ ಬೀಗದಕೈಯಾಗಿ ತೋರುತ್ತದೆ. ಅದು ಅಷ್ಟು ಅಚ್ಚುಕಟ್ಟಾಗಿರುವುದರಿಂದಲೆ, ಸಾಮಾನ್ಯವಾಗಿ ಕನಸುಗಳಲ್ಲಿ ತೋರುವ ಗಡಿಬಿಡಿ ಅನನ್ವಯತೆ ಅತರ್ಕ್ಯತೆ ಅನಿರೀಕ್ಷತೆ ಅಸ್ಪಷ್ಟತೆ ಇತ್ಯಾದಿಗಳಿಂದ ದೂರವಾಗಿರುವುದರೆಂದಲೆ, ನಮಗೆ ಅದು ಹರಿಶ್ಚಂದ್ರನು ನಿಜವಾಗಿ ಕಂಡ ಕನಸೋ ಅಥವಾ ಹರಿಶ್ಷಂದ್ರನ ಅಂತಶ್ಚಿತ್ತದ ಪ್ರಾತಿನಿಧ್ಯವನ್ನು ವಹಿಸಿಕೊಂಡು ಕವಿ ರಾಘವಾಂಕನು ಬುದ್ಧಿಪೂರ್ವಕವಾಗಿಯೆ ಕಟ್ಟಿ ಜೋಡಿಸಿದುದೋ ಎಂಬ ಸಂದೇಹವುಂಟಾಗಲು ಅವಕಾಶವೀಯುತ್ತದೆ. ಆದಕಾರಣವೆ ಅದು ಕನಸಾದರೂ ಅದನ್ನು ನಾವು ಪ್ರತಿಮಾಸ್ಥಾನದಲ್ಲಿಡದೆ ಪ್ರತೀಕಸ್ಥಾನಕ್ಕೆ ವರ್ಗಾಯಿಸಬೇಕಾಗುತ್ತದೆ.

ಇಡಿಯ ಆ ಸ್ವಪ್ನಪ್ರತೀಕವೆ ಒಂದು ವಿಸ್ತೃತ ಸಾವಯವ ರೂಪಕದಂತಿದೆ. ಮುನಿ, ಓಲಗಸಾಲೆ, ಮಣಿಮಂಟಪದ ಕಂಭಪಂಕ್ತಿ, ಅವನ್ನು ತಡೆಗಡಿಯುವಿಕೆ, ಹೊಂಗಳಸಗಳು, ಅವುಗಳನ್ನು ಒಡೆಬಡಿಯುವಿಕೆ, ನೆರೆದ ಸಭೆ, ಹರಿಶ್ಚಂದ್ರನನ್ನು ಕೆಳೆಗೆಳೆಯುವಿಕೆ, ಸಿಂಹಾಸನ, ಅದನ್ನು ಕಿತ್ತೊಯ್ಯವುದು, ದೊರೆಯ ಎದೆಯನ್ನೇರಿದ ಕಾಗೆ, ಅದರ ಕಾ ಕಾ ಅಪಶಕುನಧ್ವನಿ, ಕೊನೆಯಲ್ಲಿ ತೆಕ್ಕನೆ ದೃಶ್ಯ ಪರಿವರ್ತನೆಯಾಗಿ ತೋರುವ ಗಿರಿ, ಅದರ ಶಿಖರ, ಅಲ್ಲಿ ಎಸೆಯುವ ಮಣಿಗೃಹ, ಅದಕ್ಕೆ ಹರಿಶ್ಚಂದ್ರನ ಪ್ರವೇಶ – ಇವು ಒಂದೊಂದೂ ಮುಂದೆ ನಡಿಯಲಿರುವ ಹರಿಶ್ಚಂದ್ರನ ಜೀವನ ಘಟನೆಗಳಿಗೆ ಚತುರಶಿಲ್ಲಿ ಕೆತ್ತಿ ಒಡ್ಡಿದ ರೂಪಕ ಸಂಕೇತಗಳಾಗಿವೆ. ಅಂತಹ ರೂಪಕ ಸಂಕೇತಗಳ ಅಚ್ಚುಕಟ್ಟಾದ ಜೋಡಣೆಯಿಂದ ಹರಿಶ್ಚಂದ್ರನ ಸ್ವಪ್ನ ಸಿದ್ಧವಾದಂತಿದೆ. ಸಫಲ ಪ್ರತೀಕ ನಿರ್ಮಾಣದ ಉತ್ತಮ ಚಾತುರ್ಯಕ್ಕೆ ಇದೊಂದು ನಿದರ್ಶನವಾಗಬಹುದಾಗಿತ್ತು. ಆದರೆ ಮುಚ್ಚುಮರೆ ಸಾಲದ ಅದರ ರೂಪಕಾವಯಗಳ ಅರ್ಥನಗ್ನತೆಯ ವಾದವಯತ್ವದಿಂದಲೆ ಅದರ ಉತ್ತಮತೆಗೆ ತುಸು ಚ್ಯುತಿ ಒದಗಿದೆ. ಆ ಕನಸಿನ ಪುರ್ವಾರ್ಧವೆಲ್ಲ ವಿಶೇಷವಾಗಿ ವಾಚ್ಯಾರ್ಥ ಪ್ರಧಾನವಾಗಿದೆ. ಉತ್ತಾರಾರ್ಧದ ಬಹುಭಾಗದಲ್ಲಿ ಲಕ್ಷ್ಯಾರ್ಥವೆ ವ್ಯವಹರಿಸುತ್ತದೆ. ತುದಿಯಲ್ಲಿ ಮಾತ್ರ ವ್ಯಂಗ್ಯಾರ್ಥದ ಹೊಳಪು ನಸುಮಿಂಚಿದಂತೆದೆ. ತನ್ನ ಬದುಕಿನಲ್ಲಿ ಇನ್ನೂ ನಡೆಯದಿರುವ ಸಂಗತಿಗಳಿಗೆ ಕನಸು ಒಡ್ಡಿದ ಪ್ರತಿಮೆಗಳ ವಿಚಾರದಲ್ಲಿ ಹರಿಶ್ಚಂದ್ರನಿಗೆ ಅಜ್ಞಾನವಿರುವುದರಿಂದ ಅವನು ‘ಇದರಂತಸ್ಥವೇನು?’ ಎಂದು ತನ್ನ ಹೆಂಡತಿಯನ್ನು ಪ್ರಶ್ನಿಸಿದುದು ಸ್ವಾಭಾವಿಕವಾದರೂ ನಮಗೆ ಆ ರೂಪಕಗಳ ಪಾರದರ್ಶಕತೆಯ ದೆಸೆಯಿಂದ ಇಂಗಿತವಾಗಿ ಅವ್ಯಕ್ತವಾಗಿ ಎಲೆಮರಿಯಲ್ಲಿ ಅಡಗಿದಂತಿರಬೇಕಾಗಿದ್ದ ಆ ಸತ್ಯಗಳು, ಬಹಿರಂಗವಾದಂತಾಗಿ, ಅತೀವ ಸುಸ್ಪಷ್ಟ ಸುವ್ಯಕ್ತವಾಗಿ ಧ್ವನಿವ್ಯಾಪಾರಕ್ಕೆ ಕುಂದುಂಟಾಗಿದೆ,


[1]       “ನಾಟಕ ಕಲೆಯಲ್ಲಿ ಪ್ರತಿಕೃತಿ ಮತ್ತು ಪ್ರತಿಮಾವಿಧಾನಗಳು” -‘ತಪೋನಂದನ’ ನೋಡಿ. “ಇದಾವ ನ್ಯಾಯ?” – ‘ದ್ರೌಪದಿಯ ಶ್ರೀಮುಡಿ’ ನೋಡಿ.

[2]       ವಾನರರಲ್ಲಿ ಅನೇಕರು ರಾಮಾವತಾರವೆತ್ತುವ ಭಗವಂತನಿಗೆ ಸಹಾಯಮಾದುವುದಕ್ಕಾಗಿಯೆ ಕಿಷ್ಕಿಂಧೆಯಲ್ಲಿ ಜನ್ಮಧಾರಣೆ ಮಾಡಿದ್ದಾರೆ. ಆಜನೇಯನನ್ನು ಸಮುದ್ರ ಸಾಹಸಕ್ಕೆ ಪ್ರಚೋದಿಸುವಾಗ ಜಾಂಬವನು ಅವನು ವಾಯುದೇವನಿಂದ ಅಂಜನೆಗೆ ಸಂಭವಿಸಿದವನೆಂದು ತಿಳಿಸುತ್ತಾನೆ, ಅಂಜನೆಯ ಮರ್ತ್ಯದ ಗಂಡ ಕೇಸರಿ ಎಂಬ ವಾನರನಾಗಿದ್ದರೂ. ‘ತಪೋನಂದನದಲ್ಲಿ’ “ಪ್ರತಿಮಾ ಮತ್ತು ಪ್ರತಿಕೃತಿ” ನೋಡಿ.

[3]       “ಅನೇಕ ಶತ ಸಾಹಸ್ರೀಂ ವಿಷಣ್ಣಾಂ ಹರಿವಾಹಿನೀಂ
ಜಾಂಬವಾನ್‌ ಸಮುದೀಕ್ಷ್ಯೈವಂ ಹನುಮಂತಮಥಾಬ್ರವೀತ್‌:
‘ವೀರ ವಾನರಲೋಕಸ್ಯ ಸರ್ವಶಾಸ್ತ್ರ ವಿಶಾರದ
ತೂಷ್ಣೀಮೇಕಾಂತಮಾಶ್ರಿತ್ಯ ಹನುಮನ್‌ ಕಿಂ ನ ಜಲ್ಪಸಿ?…”
“ನ ತ್ವಾಂ ಹಿಂಸಾಮಿ ಸುಶ್ರೋಣಿ ಮಾ ಭೂತ್ತೇ ಸುಭಗೇ ಭಯಮ್‌
ಮಾರುತೋsಸ್ಮಿ ಗತೋ ಯತ್ತ್ವಾಂ ಪರಿಷ್ವಜ್ಯ ಯಶಸ್ವಿನೀಮ್‌
ವೀರ್ಯವಾನ್‌ ಬುದ್ದಿಸಂಪನ್ನಸ್ತವ ಪುತ್ರೋ ಭವಿಷ್ಯತಿ

ಮಾರುತೋsಸ್ಮಿ ಗತೋ ಯತ್ತ್ವಾಂ ಪರಿಷ್ವಜ್ಯ ಯಶಸ್ವಿನೀಮ್‌
ಮಾರುತೋsಸ್ಮಿ ಗತೋ ಯತ್ತ್ವಾಂ ಪರಿಷ್ವಜ್ಯ ಯಶಸ್ವಿನೀಮ್‌
ವೀರ್ಯವಾನ್‌ ಬುದ್ದಿಸಂಪನ್ನಸ್ತವ ಪುತ್ರೋ ಭವಿಷ್ಯತಿ
ಮಹಾಸತ್ತ್ವೋ ಮಹಾತೇಜಾ ಮಹಾಬಲ ಪರಾಕ್ರಮಃ
ಲಂಘನೇ ಪ್ಲವನೇ ಚೈವ ಭವಿಷ್ಯತಿ ಮಯಾ ಸಮಃ…”
“ಉತ್ತಿಷ್ಠ ಹರಿಶಾರ್ದೂಲ ಲಂಘಯಸ್ವ ಮಹಾರ್ಣವಮ್‌
ಪರಾ ಹಿ ಸರ್ವಭೂತಾನಾಂ ಹನುಮನ್‌ ಯಾ ಗತಿಸ್ತವ
ವಿಷಣ್ಣಾ ಹರಯಃ ಸರ್ವೇ ಹನುಮನ್‌ ಕಿಮುಪೇಕ್ಷಸೇ
ವಿಕ್ರಮಸ್ವ ಮಹಾವೇಗೋ ವಿಷ್ಣುಸ್ತ್ರೀನ್‌ ವಿಕ್ರಮಾನಿವ…”
ತತಸ್ತು ವೈ ಜಾಂಬವತಾ ಪ್ರಚೋದಿತಃ ಪ್ರತೀತವೇಗಃ ಪವನಾತ್ಮಜಃ ಕಪಿಃ
ಪ್ರಹರ್ಷಯಂಸ್ತಾಂ ಹರಿ ವೀರವಾಹಿನೀಂ ಚಕಾರ ರೂಪಂ ಮಹದಾತ್ಮನಸ್ತದಾ

— ಕಿಷ್ಕಿಂಧಾ: ೬೬ನೆಯ ಸರ್ಗ.

[4]       ‘ತಪೋನಂದನ’ದಲ್ಲಿ “ಪ್ರತಿಮಾ ಮತ್ತು ಪ್ರತಿಕೃತಿ” ನೋಡಿ.

ಇದರ ಪ್ರತಿಮಾವಿಧಾನದ ಮತ್ತು ಧರ್ಶನಧ್ವನಿಯ ಪೂರ್ಣ ವಿಕಾಸವನ್ನು :ಶ್ರೀ ರಾಮಾಯಣ ದರ್ಶನಂ” ಮಹಾಕಾವ್ಯದಲ್ಲಿ ಕಾಣಬಹುದು.

[5]       ಕುಡಿದೌಷಧಂ ಬಾಯ್ಗೆ ನಿಗ್ರಹಂ ಮಾಡಿ ತಾ
ಳ್ದೊಡಲಿಂಗೆ ಸುಖವನೀವಂತೆ ಲೋಕದ ಕಣ್ಗೆ
ಕಡುಮುಳಿದರಂತೆ ತೋಱಿಸಿ ಸತ್ಯಶುದ್ಧವಪನ್ನೆಗಂ ಕಾಡಿ ನೋಡಿ |
ಕಡೆಯೊಳು ಹರಿಶ್ಚಂದ್ರರಾಯಂಗೆ ಗಣವೆರಸಿ
ಮೃಡನನೆಳೆತಂದಿತ್ತು ಕೀರ್ತಿಯಂ ಮೂಜಗದ
ಕಡೆಗೆ ಹರಹಿದ ಮುನಿವರೇಣ್ಯ ವಿಶ್ವಾಮಿತ್ರ ಬಂದನು ವಸಿಷ್ಠ ಸಹಿತ |

[6]       ರೂಪಕರೀತಿಯಲ್ಲಿ ಚರಿಸುವ ಪೌರಾಣಿಕ ಪ್ರತಿಮೆಗಳ ಸಾರ್ಥಕ ಸಮರ್ಪಕ ಹಾಗೂ ರಸಮಯ ಪ್ರಯೋಗ ಆಧುನಿಕ ಕಾವ್ಯದಲ್ಲಿ ನವೋನ್ಮೇಷಕಾರಿಯಾಗಿ ನಡೆದಿರುವುದನ್ನು ಕಾಣಬಹುದು:

೧.    “ದುಃಖಹಿರಣ್ಯನ ಸಖನಖಕೃಪೆಯಿಂ
ಸೀಳ್ವ ನೃಸಿಂಹನ ಮುಖದ ದಯಾ!”

೨.    “ತುಳಿ! ತುಳಿ! ಹತ್ತಿ ತುಳಿ!
ಮತ್ತೆ ತುಳಿ, ಒತ್ತಿ ತುಳಿ!
…………………………..
ಹೆಡೆಹೆಡೆಗಳನೆಡೆಬಿಡದೆಯೆ
ಕಾಳೀಯನ ತುಳಿದಂದದಿ
ಗೋವಿಂದನ ಚರಣ
ತನ್ನನಿತೂ ವಿಷವಮನದಿ
ನನ್ನಂತಃಕರಣ
ಮಮತಾಫಣಿ ಲಯಹೊಂದುತೆ
ಬರಲಮೃತದ ಮರಣ!”
‘ಅಗ್ನಿಹಂಸ’
– ‘ಅಗ್ನಿಹಂಸ’

೩.    “ರಸಕ್ಷೀರ ಶರಧಿಯಲ್ಲಿ ನಿನ್ನ ದಿವ್ಯಹಸ್ತ
ಕಡೆಯುತಿರಲು ಮೂಡಿತೊಂದು ಮೇರುಸದೃಶ ಹುತ್ತಃ
ಸುಪ್ತ ಫಣಿಯ ಗುಪ್ತರೋಷವಾಗುವಂತೆ ತಪ್ತ
ಸುರುಳಿ ಬಿಚ್ಚುತಿತ್ತು ಅಲ್ಲಿ ಆದಿಕವಿಯ ಚಿತ್ತ!”
…………………………………………
“ಏನದ್ಭುತ, ಏನ್ ಸಾಹಸ, ಕೃತಿಲೋಕಾಕರ್ಷಣಃ
ಶತಚಿಂತನ ರಸಭಾವನ ರೋಮಾಂಚನ ಘರ್ಷಣ!
ಕ್ಷೀರಾಬ್ಧಿಯ ದೇವಾಸುರ ಫಣಿಮಂಥನ ಮಂದರ,
ಐರಾವತ ಉಚ್ಚೈಃಶ್ರವ ಅಮೃತ ಲಕ್ಷ್ಮಿ ಬಂಧುರ,
ಹಾಲಾಹಲ ವಿಷಘೋರವನೀಂಟುವ ಶಿವ ಸುಂದರಃ”
– ‘ಇಕ್ಷುಗಂಗೋತ್ರಿ’

[7]       ‘ತಪೋನಂದನ’ದಲ್ಲಿ ‘ಮಹೋಪಮೆ’ ಎಂಬ ಪ್ರಬಂಧ ನೋಡಿ.

[8]       ಘುಡುಘುಡಿಸುತೊಬ್ಬ ಮುನಿ ಬಂದು ನಾನೋಲಗಂ
ಗೊಡುವ ಮಣಿಮಂಟಪದ ಕಂಭವೆಲ್ಲವನು ತಡೆ
ಗಡಿದು ಹೊಂಗಳಸಂಗಳಂ ಮಾಣದೊಡಬಡಿದು ನೆರೆದ ಸಭೆಯೊಳಗೆನ್ನನು |
ಕೆಡಹಿ ಸಿಂಹಾಸನವನೊಯ್ವಾಗಳನ್ನೆದೆಯ
ನಡರ್ದೊಂದು ಕಾಗೆ ಕರದುದು ಬಳಿಕ್ಕಾಂ ಗಿರಿಯ
ನಡರ್ದು ಶಿಖರದೊಳೆಸೆವ ಮಣಿಗೃಹಂಬೊಕ್ಕನಿದಱಂತಸ್ಥವೇನೆಂದನು ||

[9]       ‘ತಪೋನಂದನ’ದಲ್ಲಿ ಪ್ರತಿಮಾ ಮತ್ತು ಪ್ರತಿಕೃತಿ’ ನೊಡಿ.