ನಮ್ಮ ಆಶೆ ಅಪೇಕ್ಷೆ ಭಾವನೆ ಇಚ್ಛೆ ಅಲೋಚನೆಗಳನ್ನು ಇತರರಿಗೆ ತಿಳಿಸಬೇಕೆಂದು ನಾವು ಮನಸ್ಸು ಮಾಡಿದಾಗ ಅವರಿಗೆ ಇಂದ್ರಿಯಗೋಚರವಾಗುವಂತಹ ಕೆಲವು ಸನ್ನೆ ಚಿಹ್ನೆಗಳನ್ನು ಉಪಯೋಗಿಸುತ್ತೇವೆ. ಆ ಪ್ರಯತ್ನದ ಫಲವಾಗಿ ಸಂಭವಿಸುತ್ತದೆ ಸಂಕೇತಗಳ ರಚನೆ. ಸಂಕೇತಗಳಲ್ಲಿ ಕೆಲವು ಸಹಜ ಮತ್ತು ಸರ್ವಮಾನವ ಸಾಧಾರಣ; ಉಳಿದವು ಕೃತಕ ವತ್ತು ಸಾಮಾನ್ಯವಾಗಿ ಹೇಳುವುದಾದರೆ, ಸಮಾಜೈಕ ಅಥವಾ ದೇಶೈಕ ಸಾಧಾರಣ. ಸಹಜಕ್ಕೆ ಉದಾಹರಣೆಗಾಗಿ: ಮಾನವ ವರ್ಗದಲ್ಲೆಲ್ಲ, ಭಾಷೆ ದೇಶ ಸಮಾಜಗಳ ಭೇದವಿಲ್ಲದೆ, ಬಾ ಎಂದು ಕರೆಯುವಾಗ ಕೈಯಿಂದ ಮಾಡುವ ಸನ್ನೆ; ಇದೆ ಅಥವಾ ಇಲ್ಲ, ಹೌದು ಅಥವಾ ಅಲ್ಲ ಎಂದು ಹೇಳಬೇಕಾದಾಗ ತಲೆಯನ್ನು ಮೇಲಕ್ಕೂ ಕೆಳಕ್ಕೂ ಅಥವಾ ಎಡಕ್ಕೂ ಬಲಕ್ಕೂ ಅಳ್ಳಾಡಿಸಿ ಮಾಡುವ ಸನ್ನೆ ಇತ್ಯಾದಿ. ಕೃತಕಕ್ಕೆ ಉದಾಹರಣೆಯಾಗಿ: ಭಾಷೆ, ಲಿಪಿ ಇತ್ಯಾದಿ. ಸಂಕೇತಗಳಲ್ಲಿ ಕೆಲವು ಕಿವಿಯಿಂದ ಕೇಳತಕ್ಕುವು – ಮಾತಿನಂತೆ, ಕೆಲವು ಕಣ್ಣಿಂದ ನೋಡತಕ್ಕವು – ಬರೆಹದಂತೆ. ಸಾಧಾರಣವಾಗಿ ಸಹಜ ಮತ್ತು ಕೃತಕ ಸಂಕೇತಗಳಿರುವ ವ್ಯತ್ಯಾಸವನ್ನು, ಮೊದಲನೆಯದನ್ನು ನೈಸರ್ಗಿಕ ಎಂದೂ ಎರಡನೆಯದನ್ನು ಬುದ್ಧಿಪೂರ್ವಕ ಎಂದೂ ವರ್ಣಿಸಬಹುದು.

ಸಾಹಿತ್ಯ ಬರೆಹಕ್ಕೆ ಇಳಿದ ಮೇಲಂತೂ ಸಂಪೂರ್ಣವಾಗಿ ಕೃತಕ ಸಂಕೇತಗಳ ಆಧಾರದಿದಂದಲೆ ಮೊದಲಾಗುತ್ತದೆ, ಅ, ಆ, ಇ, ಈ; a, b,c,d; ಕೂಡುವ, ಕಳೆಯುವ, ಗುಣಿಸುವ ಚಿಹ್ನೆಗಳು +, -, x, ಇವೆಲ್ಲವೂ ಮನುಷ್ಯ ಬುದ್ಧಿಪೂರ್ವಕವಾಗಿ ಕಲ್ಪಿಸಿರುವ ಸಂಕೇತಗಳೆ. ಈ ಸಂಕೇತಗಳು ಶಾಬ್ದಿಕ ಮತ್ತು ಚಾಕ್ಷುಷ ರೂಪಗಳಲ್ಲಿ ದೇಶದಿಂದ ದೇಶಕ್ಕೆ ಭಾಷೆಯಿಂದ ಭಾಷೆಗೆ ವ್ಯತ್ಯಸ್ತವಾಗುತ್ತವೆ. ಈ ಮೂಲಸಂಕೇತಗಳೆ ಸೇರಿ ಗುಂಪು ಗುಂಪಾಗಿ ಅರ್ಥಸಹಿತವಾಗಿ ಪದಗಳಾಗಿ ಭಾಷೆಗಳಾಗುತ್ತವೆ. ಭಾಷೆಯಿಂದ ಸಾಹಿತ್ಯ ಮೂಡುತ್ತದೆ.

ಜನಜೀವನವೂ ಮತ್ತು ಅದನ್ನು ಪ್ರತಿಬಿಂಬಿಸುವ,

[1] ನಿರೂಪಿಸುವ, ಹಾಗೂ ರೂಪಿಸುವ ಸಾಹಿತ್ಯವೂ ಅನುಭವದ ಆದಾನ ಪ್ರದಾನಾರ್ಥವಾಗಿ ಸಂಕೇತಗಳನ್ನು ಉಪಯೋಗಿಸುವಂತೆ ಪ್ರತೀಕಗಳನ್ನೂ ಬಳಸುತ್ತವೆ. ಪ್ರತೀಕವೆಂದರೆ ಒಂದು ರೀತಿಯಲ್ಲಿ ಮುಂದುವರಿಸಿದ ಸಂಕೇತ. ಆದರೆ ಸಂಕೇತ ಎಷ್ಟರಮಟ್ಟಿಗೆ ಬುದ್ಧಿಪೂರ್ವಕವಾಗಿರುತ್ತದೆಯೊ ಅದಕ್ಕಿಂತಲೂ ವಿಶೇಷ ಪ್ರಮಾಣದಲ್ಲಿ ಭಾವಮೂಲವಾಗಿರುತ್ತದೆ ಪ್ರತೀಕ. ಸಂಕೇತರಚನಾ ಸಂದರ್ಭದಲ್ಲಿ ಬುದ್ಧಿಯ ಕ್ರಿಯೆ ತೋರುವಂತೆಯೆ ಪ್ರತೀಕ ನಿರ್ಮಾಣ ಸಂಧರ್ಭದಲ್ಲಿಯೂ ಬುದ್ಧಿಯೆ ಶಿಲ್ಪಿಯಾದರೂ ಅದಕ್ಕೆ ಬೆಂಬಲವಾಗುವ ಪ್ರಚೋದನೆಯೂ ಅದರ ಹಂಬಲವಾಗಿರುವ ಆರಾಧನೆಯೂ ಭಾವಸ್ವರೂಪದ ಪ್ರಜ್ಞಾಶಕ್ತಿಗಳಾಗಿರುತ್ತವೆ. ಬುದ್ಧಿಮಯತೆ ಸಂಕೇತದ ಮುಖ್ಯ ಲಕ್ಷಣವಾದರೆ ಭಾವಮಯತೆ ಪ್ರತೀಕದ ಪ್ರಧಾನ ಲಕ್ಷಣ. ಒಂದೆರಡು ನಿದರ್ಶಗಳನ್ನು ತೆಗೆದುಕೊಂಡರೆ ವಿವರಣೆ ಸುಲಭಗ್ರಾಹ್ಯವಾಗುತ್ತದೆ. ಅಲ್ಲದೆ ಸಂಕೇತ ಮತ್ತು ಪ್ರತೀಕಗಳಿರುವ ನಿಕಟ ಬಾಂಧವ್ಯವೂ ಪರಸ್ಪರ ಭೇದವೂ ಪ್ರದರ್ಶಿತವಾಗುತ್ತದೆ. ಯಾವ ಚಿಹ್ನೆ ಎಲ್ಲಿ ಮತ್ತು ಏಕೆ ತನ್ನ ಸಂಕೇತತ್ವವನ್ನು ಉತ್ತರಿಸಿ ಪ್ರತೀಕತ್ವಕ್ಕೆ ಕಾಲಿಡುತ್ತದೆ ಎಂಬ ಜಿಜ್ಞಾಸೆ ಎರಡರ ಸ್ವರೂಪದ ಮೇಲೆಯೂ ಬೆಳಕು ಬೀರಲು ಸಹಾಯಕವಾಗುತ್ತದೆ.

ಶಿಲುಬೆ, ಲಿಂಗ, ಜನಿವಾರ, ಮಾಂಗಲ್ಯ, ಧ್ವಜ ಮೊದಲಾದವು ಸಂಕೇತಗಳಂತೆ ತೋರಿದರೂ ಅ, ಆ, ಇ, ಈ ಎಂಬ ಲಿಪಿಗಳಂತೆಯಾಗಲಿ + ಪ್ಲಸ್‌, – ಮೈನಸ್‌, x ಇಂಟು ಎಂಬ ಕೂಡುವ ಕಳೆಯುವ ಗುಣಿಸುವ ಚಿಹ್ನೆಗಳಂತಾಗಲಿ ಶುದ್ದ ಸಂಕೇತಗಳಲ್ಲ. ಸಂಕೇತಗಳಿಗಿಲ್ಲದ ಭಾವಮಯತೆ ಇದೆ ಎಂಬ ಒಂದೆ ಕಾರಣಕ್ಕಾಗಿ ಮಾತ್ರವಲ್ಲ; ಸಂಕೇತಗಳಿಗಿರುವ ಬುದ್ದಿಮೂಲವಾದ ನಿರ್ಭಾವವಾದ ಖಚಿತತೆಯಾಗಲಿ, ಲೆಕ್ಕಾಚಾರವಾದ ನಿಷ್ಕೃಷ್ಟತೆಯಾಗಲಿ, ನಿರ್ದಿಷ್ಟವೂ ಕ್ಲುಪ್ತ ಸೀಮಾಬದ್ದವೂ ಆಗಿರುವ ಅರ್ಥತ್ವವಾಗಲಿ ಅವಕ್ಕಿಲ್ಲದಿರುವುದನ್ನು ನಾವು ಗಮನಿಸುತ್ತೇವೆ. ಆದ್ದರಿಂದಲೆ ಅವು ಪ್ರತೀಕವರ್ಗಕ್ಕೆ ಸೇರುತ್ತವೆ.

ಪ್ರತಿಯೊಂದು ಪ್ರತೀಕಕ್ಕೂ ದಾರ್ಶನಿಕವಾದ ಅದರದರ ಭಿತ್ತಿಭೂಮಿಯೊಂದು ಇದ್ದೆ ಇರುತ್ತದೆ. ಸಂಕೇತಕ್ಕಿರುವಂತೆ ನಿಷ್ಕೃಷ್ಟ, ಸುಪರಿಮಿತ ಮತ್ತು ಸುಸ್ಪಷ್ಟವಾಗಿರುವ ಅರ್ಥಕ್ಕೆ ಬದಲಾಗಿ ಅರ್ಥಪರಿವೇಷವೊಂದು ಪ್ರತೀಕವನ್ನೆಲ್ಲ ಪರವೇಷ್ಟಿಸಿದಂತಿರುತ್ತದೆ; ಅಲ್ಲದೆ ಅದಕ್ಕೆ ಹೃದಯಪ್ರಾಯವಾಗಿ ಮತ್ತು ನಿತ್ಯಲಕ್ಷಣವಾಗಿ ಭಾವಕೋಶವೊಂದು ಶ್ವಾಸಕೋಶವೆಂಬಂತೆ ಸ್ಪಂದಿಸುತ್ತಿರುತ್ತದೆ. ಈ ಭಾವಮಯತೆ ಇರುವುದರಿಂದಲೆ ಸಾಹಿತ್ಯ ಪ್ರಪಂಚದಲ್ಲಿ ಪ್ರತೀಕಕ್ಕೆ ಒಂದು ವ್ಯಾಪಕವಾದ ಜೀವಂತ ಸ್ಥಾನ ದೊರೆಕೊಂಡಿದೆ. ರಾಜಕೀಯ ಮತ್ತು ಮತ ಪ್ರಪಂಚಗಳಲ್ಲಂತೂ ಅದೊಂದು ಶಕ್ತಿಯೂ ಶಕ್ತಿಪ್ರಣಾಳಿಕೆಯೂ ಆಗಿ ತನ್ನ ಪ್ರಬಲತೆಯನ್ನು ಸ್ಥಾಪಿಸಿಕೊಂಡಿದೆ: ಬರಿಯ ಅರಿವೆಯ ತುಂಡು ಕೆಲವು ಚಿಹ್ನೆಗಳನ್ನು ಧರಿಸಿ ಕೋಲಿನ ತುದಿಗೇರಿ ಧ್ವಜವಾಯಿತೆಂದರೆ ಕೋಟಿಕೋಟಿ ನಾಗರಿಕರ ಗೌರವ ನಮಸ್ಕಾರಗಳಿಗೆ ಭಾಜನವಾಗುತ್ತದೆ. ಅದು ಒಂದು ಜನಾಂಗದ ಮಾನಪ್ರತಿಷ್ಠೆಗಳಿಗೆ ಪ್ರತೀಕವಾಗುತ್ತದೆ. ಅದರ ಗೌರವ ರಕ್ಷಣೆಗಾಗಿ ಲಕ್ಷ ಲಕ್ಷ ಸೈನಿಕರು ಹತರಾಗಲು ಸಿದ್ಧರಾಗಿರುತ್ತಾರೆ! ಬರಿಯ ಒಂದು ಹೊಳೆಯುವ ಲೊಹದ ಬಿಲ್ಲೆ ಮಾನಿನಿಯ ಕಂಠದ ಮಾಂಗಲ್ಯವಾಯಿತೆಂದರೆ ಊಹೆಗೂ ನಿಲುಕದ ಧ್ಯೇಯವಸ್ತುವಾಗಿ, ಆರಾಧ್ಯವಾಗಿ, ಪತಿವ್ರತೆಯ ನಿಷ್ಠೆಯ ದೇವಮೂರ್ತಿಯಾಗಿ ಪೂಜ್ಯವಾಗುತ್ತದೆ. ಬರಿಯ ಒಂದು ಹತ್ತಿಯ ದಾರ ಕೆಲವು ಸಂಸ್ಕಾರಗಳಿಗೊಳಗಾಗಿ ಹೆಗಲಿಗೇರಿತೆಂದರೆ ಏನೇನಾಗಲು ಕಾರಣವಾಗುವುದಿಲ್ಲ? ಬರಿಯ ಒಂದು ಗುಂಡನೆಯ ಕಲ್ಲು ಗುರವಿನ ದೀಕ್ಷೆವೊತ್ತು ವಕ್ಷಸ್ಥವಾಯಿತೆಂದರೆ ಮಹಾತತ್ತ್ವಗಳ ಮಂದಿರವಾಗಿ ಜೀವಕ್ಕೆ ಶಿವತ್ವವನ್ನು ತಂದು ಕೊಡುವ ತಪಃಪೀಠವಾದರೂ ಆಗುತ್ತದೆ; ತಪ್ಪಿದರೆ ಮತಭ್ರಾಂತಿಯ ಭೂತಗಳನ್ನು ಕೆರಳಿಸಿ ಮಂಡೆಗಳನ್ನು ಚೆಂಡಾಡುವ ಚಂಡಿಕಾಶಕ್ತಿಯಾದರೂ ಆಗುತ್ತದೆ! ಅಡ್ಡಡ್ಡಲಾಗಿಟ್ಟಿರುವ ಬರಿಯ ಎರಡು ಮರದ ಮೋಪುಗಳು ಯೇಸುಕ್ರಿಸ್ತನ ಮರಣಸ್ತಂಭದ ಸಂಕೇತವಾಗಿ ಮೂಡಿ, ಎಂತೆಂತಹ ತ್ಯಾಗಗಳಿಗೆ ಪ್ರೇರಕವಾಗಿ, ಎಂತೆಂತಹ ಆದರ್ಶಗಳಿಗೆ ಆಗರವಾಗಿ, ಒಮ್ಮೊಮ್ಮೆ ಭಯಂಕರ ಅಕೃತ್ಯಗಳಿಗೂ ಪ್ರಮಾದವಶದಿಂದ ಕಾರಣವಾದರೂ, ಅದ್ಭುತ ಸೇವಾಸಂಸ್ಥೆಗಳಿಗೂ ದಲಿತ ದೀನೋದ್ದಾರದ ಕರ್ಮಗಳಿಗೂ ಉದ್ಬವಸ್ಥಾನವಾಗಿ ಲೋಕಪೂಜೆಯನ್ನು ಇಂದಿಗೂ ಸ್ವೀಕರಿಸುತ್ತಿಲ್ಲವೆ?

ರಾಜಕೀಯ, ಮತೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಪ್ರಚಲಿತವಾಗಿರುವ ಪ್ರತೀಕಗಳನ್ನು ಉಪಯೋಗಿಸಿಕೊಳ್ಳುವುದರ ಜೊತೆಗೆ ಸಾಹಿತ್ಯ ತನ್ನ ಕ್ಷೇತ್ರದಲ್ಲಿಯೆ ವಿಧವಿಧವಾದ ಅಸಂಖ್ಯಾತ ಪ್ರತೀಕಗಳನ್ನು ಸೃಷ್ಟಿಸಿಕೊಂಡು ರಸಮಯವಾದ ಸುಂದರ ಕಲಾಕೃತಿಗಳ ನಿರ್ಮಿತಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಹುಟ್ಟುವಾಗ ಕೇವಲ ಸಂಕೇತ ಮಾತ್ರಗಳಾಗಿದ್ದು, ಅಭಿಧಾವೃತ್ತಿಯಿಂದ ನಿಷ್ಕೃಷ್ಟ ಸುಸ್ಟಷ್ಟ ಪರಿಮಿತಾರ್ಥಗಳಷ್ಟನ್ನೆ ಕೊಡುತ್ತಿದ್ದ ಅನೇಕಾನೇಕ ಶಬ್ದಗಳೂ ಪದಗುಂಫನಗಳೂ ಕಾಲಾನುಕ್ರಮದಲ್ಲಿ ಕವಿಪ್ರತಿಭಾವಶವಾಗಿ ಕಾವ್ಯಸೌಂದರ್ಯದಿಂದ ದೀಪ್ತವಾಗಿ, ಭಾವಾಂಶ ಕಲ್ಪನಾಂಶ ಚಿಂತನಾಂಶಗಳ ದರ್ಶನ ಭಿತ್ತಿಯನ್ನೂ ಅರ್ಥಪರಿವೇಷವನ್ನೂ ಭಾವಕೋಶವನ್ನೂ ಪಡೆದು, ಉಪಮಾ ರೂಪಕಾದಿ ಅಲಂಕಾರಗಳಾಗಿ ಕವಿಸಮಯಾದಿಗಳಾಗಿ ಪರಿವರ್ತನೆಗೊಂಡು ಪ್ರತೀಕಸ್ವರೂಪಧಾರಣೆ ಮಾಡುತ್ತವೆ. ನಿಘಂಟುಗಳಲ್ಲಿ ನಿರ್ಜೀವವಾಗಿ ಕಲ್ಲಿನ ಗೊಂಬೆಗಳಂತೆ ಅಕಾರಾದಿಯ ಅನುಕೂಲ ಸೂತ್ರದ ಆಜ್ಞೆಗೆ ಅಧೀನವಾಗಿ ಕವಾಯತಿಗೆ ಒಳಗೊಂಡಂತಿರುವ ಶಬ್ದಶ್ರೇಣಿ ಕವಿಪ್ರತಿಭೆಯ ಭಾವವಿದ್ಯುತ್ತಿನ ಐಂದ್ರಜಾಲಕ್ಕೆ ಸಿಕ್ಕಿ ಜಾಗ್ರತವಾಗಿ ಚಿನ್ಮಯವಾಗುತ್ತವೆ. ಕಾವ್ಯೋಚಿತ ಸ್ಥಾನದಲ್ಲಿ ನಿಂತಾಗಲಂತೂ ಆ ಯಃಕಶ್ಚಿತವಾದಂತಿದ್ದ ಪದ ವಿಗ್ರಹಗಳಲ್ಲಿ ದೇವತಾಚೈತನ್ಯ ಸಂಚಾರವಾಗುತ್ತದೆ. ಆಗ ಅವು ಸರಸ್ವತಿಯ ಸಾಕ್ಷಾತ್‌ ಚರಣಚಿಹ್ನೆಗಳಾಗಿ ಪ್ರೋಜ್ವಲಿಸುತ್ತವೆ.

ಸಂಕೇತ ಮತ್ತು ಪ್ರತೀಕಗಳಂತೆಯೆ, ಆದರೆ ಅವಕ್ಕೆ ಮೀರಿದ ಪದವಿಯಲ್ಲಿ ಸಾಹಿತ್ಯ ಸಾಮ್ರಾಜ್ಯದ ಸಿಂಹಾಸನ ಸ್ಥಾನದಲ್ಲಿರುವ ಇನ್ನೊಂದು ವಿಧಾನವೆಂದರೆ ಪ್ರತಿಮಾ.[2]

‘ಪ್ರತೀಕ’ ‘ಸಂಕೇತ’ದ ಮುಂದುವರಿಕೆ ಅಥವಾ ವಿಸ್ತರಣೆಯಾಗಿರುವಂತೆ ‘ಪ್ರತಿಮೆ’ ‘ಪ್ರತೀಕ’ದ ಒಂದು ಲೋಕೋತ್ತರವಾದ ಆವಿರ್ಭೂತಿಯಾಗಿರುತ್ತದೆ. ಆದರೆ ‘ಪ್ರತಿಮೆ’ ‘ಸಂಕೇತ’ದಂತೆ ಜಾಗ್ರತ್‌ಬುದ್ದಿಯ ರಚನೆಯೂ ಅಲ್ಲ, ‘ಪ್ರತೀಕ’ದಂತೆ ಬುದ್ದಿಕ್ರಿಯೆಯಿಂದ ಸಂಭವಿಸುವ ರಚನೆಗೆ ಒದಗುವ ಭಾವಮಯತೆಯಿಂದಲೂ ಅದು ಸಿದ್ಧವಾಗುವುದಿಲ್ಲ. ವಾಸ್ತವ ಜಗತ್ತಿನಲ್ಲಾಗುವ ಸಹಜಸೃಷ್ಟಿಯಂತೆ ಕಲಾಜಗತ್ತಿನಲ್ಲಿ ಮೂಡುವ ಅದು ತನಗೆ ತಾನೆಂಬಂತೆ ಸಂಭವಿಸುವ ಒಂದು ‘ಸೃಜನೆ.’ ಜಡ, ಪ್ರಾಣ ಮತ್ತು ಮನಸ್ಸುಗಳನ್ನು ಅವುಗಳ ಸುಪ್ರಕಟ ಸ್ಥಿತಿಯಲ್ಲಿ ನಾವು ಸುಲಭವಾಗಿ ಗುರುತಿಸಬಹುದಾದರು, ಎಲ್ಲಿ ಜಡತ್ವ ಮುಗಿದು ಪ್ರಾಣತ್ವ ಪ್ರಾರಂಭವಾಗುತ್ತದೆ? ಎಲ್ಲಿ ಪ್ರಾಣತ್ವ ಪೂರೈಸಿ ಮನಸ್‌ತತ್ತ್ವ ಸ್ಪಂದಿಸತೊಡಗುತ್ತದೆ? ಎಂಬುದನ್ನು ಅವುಗಳ ಸಂಧಿಸ್ಥಾನಗಳಲ್ಲಿ ಬುದ್ಧಿಸ್ಪಷ್ಟ ಮಾಡಿಕೊಳ್ಳಲು ಹೇಗೆ ಕಷ್ಟವಾಗುತ್ತದೆಯೊ ಹಾಗೆಯೆ ಸಂಖೇತದಿಂದ ಪ್ರತೀಕ ಎಲ್ಲಿ ಪ್ರತ್ಯೇಕಗೊಳ್ಳುತ್ತದೆ? ಪ್ರತೀಕದಿಂದ ಮುಂಬರಿದು ಪ್ರತಿಮೆ ಎಲ್ಲಿ ತನ್ನ ಅಸ್ತಿತ್ವವನ್ನು ಪ್ರಕಟಿಸುತ್ತದೆ? ಎಂಬುದನ್ನು ಅವುಗಳ ಸಂಧಿಸ್ಥಾನಗಳಲ್ಲಿ ಖಚಿತವಾಗಿ ಗ್ರಹಿಸಲು ಕಷ್ಟವಾಗುತ್ತದೆ. ಆದರೆ ಅವು ಪೂರ್ಣ ವಿಕಾಸಗೊಂಡಾಗ, ತಮ್ಮ ಸುಪ್ರಕಟ ಸ್ಥಿತಿಯಲ್ಲಿ, ತಮ್ಮ ಸ್ವರೂಪ ಪರಿಚಯದ ಮೇಲೆ ಯಾವ ಸಂದಿಗ್ದತೆಯ ಪರದೆಯನ್ನೂ ಎಳೆದುಕೊಳ್ಳವುದಿಲ್ಲ. ಉತ್ತಮ ಸಹೃದಯನಿಗೆ ಮುಖ ಕಂಡೊಡನೆಯೆ ಹೃದಯ ಗೋಚರವಾಗುತ್ತದೆ.

ಒಂದು ಸಗಣಿ ಉಂಡೆಗೆ ಹತ್ತೆಂಟು ಹಸಿಯ ಗರುಕೆಯ ಹುಲ್ಲೆಸಲು ಸಿಕ್ಕಿಸಿ, ಒಂದು ಹಸಿಯ ಹಲಸಿನ ಎಲೆಯನ್ನು ಅದಕ್ಕೆ ಪೀಠಗೈದು, ತುಳಸಿ ಕಟ್ಟೆಯ ಮೇಲಿಟ್ಟು, ಅದಕ್ಕೆ ಹೂವು ಮುಡಿಸಿ, ಹಾಲು ಎರೆದು, ‘ಗಣಪತಿ’ ಎಂದು ಪೂಜೆಗೈದರೆ ಅದು ಪ್ರತೀಕಾರಾಧನೆಯಾಗುತ್ತದೆ. ಸೊಂಡಿಲು, ಆನೆಮೊಗ, ಕಿರೀಟ, ನಾಲ್ಕು ಕೈಗಳು, ಹಾವು ಸುತ್ತಿದ ದೊಡ್ಡ ಹೊಟ್ಟೆ ಇತ್ಯಾದಿಗಳೆಲ್ಲ ಇದ್ದು ಗಣೇಶ ವಿಗ್ರಹವಾದರೆ ಅದು ಪ್ರತಿಮಾರಾಧನೆಯಾಗು‌ತ್ತದೆ. ಪ್ರತೀಕ ಸಂಪ್ರದಾಯದಿಂದ ಸಂಪ್ರದಾಯಕ್ಕೆ ಸ್ವಲ್ಪ ಬದಲಾವಣೆ ಹೊಂದಬಹುದು, ಅಥವಾ ಆಯಾ ಸ್ಥಳದ ಅನುಕೂಲ ಅವಶ್ಯಕತೆಗಳಿಗನುಸಾರವಾಗಿ ರಚನಾ ಸಾಮಗ್ರಿಯಲ್ಲಿ ಭಿನ್ನತೆ ತೋರಬಹುದು. ಬಹುಶಃ ಒಂದೂರಿನ ಒಂದು ಮನೆತನದವರು ಗೋಮಯಕ್ಕೆ ದೂರ್ವಾಂಕುರಗಳನ್ನು ಸಿಕ್ಕಿಸಿದರೆ, ಇನ್ನೊಂದೂರಿನ ಇನ್ನೊಂದು ಮನೆತನದವರು ಮಣ್ಣುಂಡೆಗೆ ಒಂದು ಹೂವು ಸಿಕ್ಕಿಸಿ ‘ಗಣಪತಿ’ ಮಾಡಿಕೊಳ್ಳಬಹುದು. ಆದರೆ ‘ಪ್ರತಿಮೆ’ ಒಂದು ದರ್ಮದವರಿಗೆಲ್ಲಾ ಒಂದೇ ರೀತಿಯಲ್ಲಿ ಇರುತ್ತದೆ, ವಿವರಗಳಲ್ಲಿ ತುಸು ವ್ಯತ್ಯಾಸಗಳಿರಬಹುದಾದರು, ಏಕೆಂದರೆ ‘ಪ್ರತಿಮೆ’ ಯಾವ ಒಬ್ಬ ವ್ಯಕ್ತಿಯ ಒಂದು ಮನಸ್ಸಿನ ರಚನೆಯಲ್ಲ; ಅದು ಒಂದು ಧರ್ಮಕ್ಕೆ ಸೇರಿದ ಒಂದು ಜನಾಂಗದ ಸಮಷ್ಟಿಮನಸ್ಸಿನ ಸಾಮೂಹಿಕ ಸೃಜನೆ, ಉದ್ಭವರೂಪ ಸೃಷ್ಟಿ, ಅವಿಚಾರಕ ಆವಿರ್ಭೂತಿ. ಅದು ಅತೀತದ ಆವಶ್ಯಕವಾದ ಒತ್ತಡದಿಂದ ಅವಶವಾಗಿ ಮೈದೋರುವ ಸಂಭೂತಿ. ಅದರ ಹಿಂದೆ ಋತಚಿತ್ತಿನ ಸತ್ಯಸಂಕಲ್ಪವಿರುವುದರಿಂದ ಅದೊಂದು ನಿಗ್ರಹಾನುಗ್ರಹ ಸಮರ್ಥವಾದ ದೇವತಾ ವಿಭೂತಿ.[3]

ಪ್ರತಿಮೆಗಳಲ್ಲಿ ಅವುಗಳ ಸೃಷ್ಟಿವಿಧಾನಗಳನ್ನು ಗಮನಿಸಿದರೆ ಎರಡು ರೀತಿಯವು ಕಂಡುಬರುತ್ತವೆ. ಮೊದಲನೆಯದನ್ನು ಅವರೋಹಣ ಕ್ರಮದ್ದೆಂದೂ ಎರಡನೆಯದನ್ನು ಆರೋಹಣ ಕ್ರಮವೆಂದೂ ಕರೆಯಬಹುದು. ಅತೀತ ಲೋಕಗಳಲ್ಲಿಯ ಯಾವುದಾದರೂ ಶಕ್ತಿ ಅಥವಾ ದೇವತೆ ಇಂದ್ರಿಯ ಪ್ರಪಂಚದಲ್ಲಿ ಪ್ರಕಟವಾಗಬೇಕಾದರೆ ಅದು ಇಲ್ಲಿಯ ಕಾಲದೇಶ ನಾಮರೂಪಗಳ ಚೌಕಟ್ಟಿಗೆ ಇಳಿದು ಮೈದೋರುತ್ತದೆ. ಅದು ಯಾವ ಪ್ರಯತ್ನಪೂರ್ವಕವಾದ ಕೃತಕರಚನೆಯ ಫಲವೂ ಆಗಿರುವುದಿಲ್ಲ. ಅದು ಸಹಜ ಸಂಭವ. ಒಂದು ಉದ್ದೇಶ ಸಾಧನೆಗಾಗಿ ತನ್ನ ಇಚ್ಚಾಶಕ್ತಿಯಿಂದಲೆ ತನಗೆ ತಾನೆ ಆಗುವ ಅವತರಣ. ಅದು ಅವರೋಹಣ ಕ್ರಮದ್ದಾಗಿರುತ್ತದೆ. ಆರೋಹಣ ಕ್ರಮದಿಂದ ಸಿದ್ದವಾಗುವ ಇನ್ನೊಂದು ರೀತಿಯ ಪ್ರತಿಮೆ ಭಕ್ತಿಭಾವಮಯ ಪ್ರಚೋದನೆಯಿಂದ ಪ್ರೇರಿತವಾದರೂ ಭಾವದೀಪ್ತ ಬುದ್ಧಿಯ ನೆರವನ್ನು ಪಡೆದು ಪಜ್ಞಾಪೂರ್ವಕವಾಗಿಯೆ ರಚಿತವಾಗುತ್ತದೆ. ಹಾಗೆ ರಚಿತವಾಗುವ ಪ್ರತಿಮೆಯಲ್ಲಿ ಉಪಾಸಕನ ಶ್ರದ್ದೆಯ, ಭಕ್ತಿಯ ಮತ್ತು ಅಭೀಪ್ಸೆಯ ಮಹಿಮೆಯಿಂದ, ಕರೆಯಿಂದ, ಆಹ್ವಾನದಿಂದ ಪ್ರಾಣ ಪ್ರತಿಷ್ಟೆಯಾಗಿ ಅತೀತದ ದೇವತಾ ಶಕ್ತಿಯ ಆವಾಹನವಾಗುತ್ತದೆ. ಅಂತಹ ವಿಗ್ರಹವನ್ನು ‘ಜಾಗ್ರತ’ ಪ್ರತಿಮೆಯೆಂದು ಕರೆಯುತ್ತಾರೆ. ಮೊದಲನೆಯದರಲ್ಲಿ ತನ್ನ ವಿಗ್ರಹವನ್ನು ತಾನೆ ಮಾಡಿಕೊಳ್ಳುವ ಶಕ್ತಿ ಅವತರಿಸಿ ಪ್ರತಿಮೆಯಾಗಿ ಮೂಡುತ್ತದೆ; ಎರಡನೆಯದರಲ್ಲಿ ಮಾಡಿದ ಮಿಗ್ರಹಕ್ಕೆ ಶಕ್ತಿ ಅವತರಿಸಿ  ‘ಜಾಗ್ರತ’ವನ್ನಾಗಿಸುತ್ತದೆ. ಒಟ್ಟಿನ ಮೇಲೆ ತುದಿಯಲ್ಲಿ ಒದಗುವ ಫಲ ರೂಪದಲ್ಲಿ ಎರಡೂ ಒಂದೆ. ಅಂತಹ ಪ್ರತಿಮೆಗಳನ್ನು ‘ಅರ್ಚಾವತಾರ’ ಎಂದೂ ಕರೆಯುತ್ತಾರೆ. ಎಂದರೆ ಭಗವಂತನು ಲೋಕಾನುಗ್ರಹಕ್ಕಾಗಿ ಮತ್ತು ಲೋಕಸಂಗ್ರಹಕ್ಕಾಗಿ ಅನೇಕಾನೇಕ ಅವತಾರಗಳನ್ನು ಎತ್ತುವಂತೆ ಭಕ್ತನು ಪೂಜಿಸುವ ‘ವಿಗ್ರಹ’ದ ಅವತಾರವನ್ನೂ ಎತ್ತುತ್ತಾನೆ ಎಂದರ್ಥ.

ಇದುವರೆಗೆ ಸಂಕೇತ, ಪ್ರತೀಕ ಮತ್ತು ಪ್ರತಿಮಾ ಇವುಗಳ ಸ್ವರೂಪವನ್ನು ಆಗುವಿಕೆಯ ವಿಧಾನವನ್ನೂ ಸೂಕ್ಷ್ಮವಾಗಿ, ಸಂಕ್ಷೇಪವಾಗಿ, ಪೀಠಿಕಾಪ್ರಾಯವಾಗಿ ಪರಿಶೀಲಿಸಿದ್ದೇವೆ. ವಿವರಣೆ ಸುಲಭವೂ ಸುಗ್ರಾಹ್ಯವೂ ಆಗುವ ಸಲುವಾಗಿ ದೃಗ್ರೂಪದ ನಿಧರ್ಶನಗಳನ್ನು ಆಧ್ಯಾತ್ಮಿಕ ಮತ್ತು ಧಾರ್ಮಿಕ ಭೂಮಿಕೆಯಿಂದಲೆ ಹೆಚ್ಚಾಗಿ ಆರಿಸಿಕೊಂಡಿದೆ. ಇನ್ನು ಈ ಪ್ರಬಂಧದ ಪ್ರಕೃತ ವಿಷಯವಾಗಿರುವ ಸಾಹಿತ್ಯಕ್ಷೇತ್ರಕ್ಕೆ ಪ್ರವೇಶಿಸಿ ಅಲ್ಲಿ ಪ್ರಕಟಗೊಂಡಿರುವ ಪ್ರತಿಮಾ ವಿಧಾನವನ್ನೂ ಆ ಪ್ರತಿಮೆಗಳಲ್ಲಿ ಮೈದೋರಿರುವ ಸೌಂದರ್ಯ, ಶಕ್ತಿ ಮತ್ತು ದರ್ಶನಗಳನ್ನೂ ಸಮಾಲೋಚಿಸುತ್ತೇವೆ.

ಒಂದು ರೀತಿಯಲ್ಲಿ ನೋಡಿದರೆ ಸಾಹಿತ್ಯವೆಲ್ಲವೂ ಪ್ರಧಾನವಾಗಿ ಪ್ರತಿಮಾ ಕ್ಷೇತ್ರವೆ. ಶುದ್ಧ ಪ್ರತಿಕೃತಿ ಎಂಬುದು ಸಾಹಿತ್ಯದಲ್ಲಿ ಇಲ್ಲವೆ ಇಲ್ಲ. ಆದರೆ ಕೃತಿಕಾರನ ಸಂಕಲ್ಪವನ್ನು ಗಮನಿಸಿ, ಪ್ರತಿಕೃತಿಪ್ರಯತ್ನ ನಡೆದಿದ್ದರೆ, ಅದನ್ನು ಉಪಚಾರಕ್ಕಾಗಿ ಪ್ರತಿಕೃತಿ ಸಾಹಿತ್ಯ ಎಂದು ಕರೆಯುತ್ತೇವೆ. ಏಕೆಂದರೆ ಸಾಹಿತ್ಯದಲ್ಲಿ ಶುದ್ದ ಪ್ರತಿಕೃತಿಯ ಸೃಷ್ಟಿ ಅಸಾಧ್ಯವಾದುದಾದರೂ ಸಾಹಿತಿ ಅಂತಹ ಪ್ರತಿಕೃತಿಯ ಸೃಷ್ಟಿಗಾಗಿಯೆ ಸಂಕಲ್ಪಿಸಿ ರಚನೆಗೆ ತೊಡಗಿದ್ದರೂ, ಅವನ ಆ ದೃಷ್ಟಿಗಾಗಿ ಮಾತ್ರವೇ ಅವನ ಆ ಸೃಷ್ಟಿಯನ್ನು ಪ್ರತಿಕೃತಿ ವಿಧಾನದ್ದು ಎಂದು ಕರೆಯಲು ಒಪ್ಪಿಕೊಂಡಿದ್ದೇವೆ.[4]

ನಾಟಕ ಕಾದಂಬರಿಯಂತಹ ಸಾಹಿತ್ಯ ಪ್ರಭೇದಗಳಲ್ಲಿಯಾದರೂ ವಾಸ್ತವ ಜಗತ್ತಿನ ತದ್ರೂಪ ಚಿತ್ರಣದ ಪ್ರತಿಕೃತಿ ಪ್ರಯತ್ನವು ಸ್ವಲ್ಪವೆ ಸ್ವಲ್ಪವಾದರೂ ಸಫಲತೆಗೆ ಸಮೀಪವಾಗಿರುವುದನ್ನು ಸಂದರ್ಶಿಸುತ್ತೇವೆ. ಆದರೆ ಕಾವ್ಯ ಲೋಕದಲ್ಲಿ ಅದು ಅತ್ಯತಿ ಅಪೂರ್ವ; ಇಲ್ಲವೆ ಇಲ್ಲ ಎಂದರೂ ಅಸತ್ಯವಾಗುವುದಿಲ್ಲ. ಏಕೆಂದರೆ, ಸಮಸ್ತ ಕಾವ್ಯವೂ ಪ್ರತಿಮಾ ಪ್ರಪಂಚವೆ. ಒಂದಲ್ಲ ಒಂದು ತೆರದಿಂದ ಪ್ರತಿಮಾ ಪ್ರಪಂಚಕ್ಕೆ ಏರದೆ ಲೋಕಾನುಭವತ್ವಕ್ಕೆ ಲೋಕೋತ್ತರತ್ವ ದೊರೆಕೊಳ್ಳಲು ಸಾಧ್ಯವಿಲ್ಲ. ಲೋಕೋತ್ತರತ್ವವೆ ಕಾವ್ಯದ ಹೃದಯ ಸರ್ವಸ್ವ.

ಕಾವ್ಯದಲ್ಲಿ ಈ ಪ್ರತಿಮಾ ವಿಧಾನ ಬಹುರೂಪಿಯಾಗಿ ಸಂಚರಿಸುತ್ತದೆ:

ಇಡಿಯ ಕಾವ್ಯವೆ ಒಂದು ಮಹತ್ತಾದ ದರ್ಶನಧ್ವನಿಗೆ ಬೃಹತ್‌ ಪ್ರತಿಮೆಯಾಗಿ ಹೊರಹೊಮ್ಮಬಹುದು: ಡಾಂಟೆಯ ಮಹಾಕಾವ್ಯ ‘ಡಿವೈನ್‌ ಕಾಮೆಡಿ’ಯಂತೆ; ಅಥವಾ ಅದಕ್ಕಿಂತಲೂ ಹೆಚ್ಚು ಸಮರ್ಪಕವಾಗಿ ಮಹಾದ್ಬುತವಾಗಿ ಆವಿರ್ಭವಿಸಿರುವ ಆಧುನಿಕ ಮಹಾಕಾವ್ಯ ಶ್ರೀ ಅರವಿಂದರ ‘ಸಾವಿತ್ರಿ’ಯಂತೆ. ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ದಂತಹ ಕೃತಿ, ಸರ್ವಾಂಗೀಣವಾಗಿ ಅಲ್ಲದಿದ್ದರೂ ಅಂಶತಃ ಪ್ರಧಾನವಾಗಿ, ಅಂತಹ ಪ್ರತಿಮೆಯಂತೆ ವ್ಯಾಖ್ಯಾನಕ್ಕೊಳಗಾಗಬಹುದಾದ ಅರ್ಹತೆಪಡೆದಿದೆ.

ಇಡಿಯ ಕಾವ್ಯವಲ್ಲದಿದ್ದರೂ ಕಾವ್ಯದ ಅಂಗ ಅಥವಾ ಉಪಾಂಗಗಳಲ್ಲಿ ಪ್ರತಿಮಾವಿಧಾನ ಪ್ರಕಟವಾಗಬಹುದು.[5] ಅಥವಾ ಯಾವುದಾದರೊಂದು ಸನ್ನಿವೇಶ, ಒಂದು ಘಟನೆ, ಒಂದು ವರ ಇಲ್ಲವೆ ಶಾಪ ಇತ್ಯಾದಿ ರೂಪದಲ್ಲಿಯೂ ಪ್ರತಿಮೆ ಮೈದಾಳಬಹುದು.[6]ಒಂದು ವ್ಯಕ್ತಿಯ ಸಮಗ್ರ ಪಾತ್ರವೂ ಪ್ರತಿಮಾ ಪಾತ್ರವಾಗಿ ದರ್ಶನಧ್ವನಿಗೆ ವಾಹಕವಾಗುವುದೂ ಉಂಟು.[7] ಒಮ್ಮೊಮ್ಮೆ ಒಂದು ಉಪಮಾ, ಒಂದು ರೂಪಕ, ಒಂದು ಕವಿಸಮಯವೂ ಕೂಡ, ಪ್ರತಿಮೆಯಾಗಿ ದರ್ಶನಧ್ವನಿಯ ಕುಬೇರ ಶ್ರೀಗೆ ಬಾಗಿಲು ತೆರೆಯುವ ಕೀಲಿಕೈಯಾಗಿ ಪರಿಣಮಿಸಬಹುದು.

ವಿಶ್ವಸಾಹಿತ್ಯದಲ್ಲಿಯೆ ಹೆಗಲೆಣೆಯಿಲ್ಲದೆ ಅನ್ಯಾದೃಶವಾಗಿರುವ ಭಾರತೀಯ ಮಹಾಕಾವ್ಯಗಳಾದ ಮಹಾಭಾರತ ರಾಮಾಯಣಗಳಿಂದ ಒಂದೊಂದು ನಿದರ್ಶನ ತೆಗೆದುಕೊಂಡರೆ ನಮ್ಮ ಪರಿಶೀಲನೆ ಪ್ರತಿಮಾಸೃಜನೆಯ ಮಹೊನ್ನತ ಪರಾಕಾಷ್ಠೆಯಿಂದಲೆ ಪ್ರಾರಂಭವಾದ ಹಾಗಾಗುತ್ತದೆ. ಒಂದು: ಭಗವದ್ಗೀತೆಯಲ್ಲಿ ಬರುವ ವಿಶ್ವರೂಪದರ್ಶನ; ಮತ್ತೊಂದು: ಸುಂದರ ಕಾಂಡದಲ್ಲಿ ಬರುವ ಸಮುದ್ರ ಲಂಘನ ಸಂದರ್ಭ ಆಂಜನೇಯ.

ಭಗವದ್ಗೀತೆಯ ಅಗಣಿತ ವ್ಯಾಖ್ಯಾನಕಾರರಲ್ಲಿ ಕೆಲವರು ಅದು ವಾಸ್ತವವಾಗಿ ನಡೆದ ಒಂದು ಐತಿಹಾಸಹಿಕ ಘಟನೆಯ ಸಂದರ್ಭದಿಂದ ಮೂಡಿದುದು ಎಂಬಂತೆ ಭಾವಿಸಿದ್ದಾರೆ. ಮತ್ತೆ ಕೆಲವರು ಅದು ಮಾನವನ ಹೃದಯದಲ್ಲಿ ಹೋರಾಟ ನಡಸುವ ಆಸುರೀ ದೈವೀಶಕ್ತಿಗಳ ಘರ್ಷಣೆಗೂ ಅದರ ಶಮನ ಪರಿಹಾರಗಳಿಗೆ ಕಾರಣವಾಗುವ ಭಗವದ್‌ ವಿಭೂತಿಗೂ ಕವಿಮಹರ್ಷಿ ಒಡ್ಡಿರುವ ಒಂದು ಕಾವ್ಯರೂಪ ಪ್ರತೀಕ ಮಾತ್ರವೆಂದು ಭಾವಿಸಿ ತಮ್ಮ ವಿವರಣೆಯಲ್ಲಿ ಮುಂದುವರಿದಿದ್ದಾರೆ. ಆದರೆ ಇಲ್ಲಿ ಪ್ರತಿಪಾದಿತವಾಗುತ್ತಿರುವ ಪ್ರತಿಮಾದೃಷ್ಟಿಗೆ ಆ ಎರಡು ದೃಷ್ಟಿಗಳೂ ಪರಸ್ಪರ ವಿರೋಧಿಗಳಾಗದೆ ಒಂದೇ ನಾಣ್ಯದ ಇಕ್ಕೆಲಗಳಂತೆ ಅಥವಾ ಒಂದೇ ತ್ರಿಕೋನದ ಬಾಹುಗಳಂತೆ ಪರಸ್ಪರ ಪೂರಕಗಳಾಗುತ್ತವೆ. ಒಂದು ಬಟ್ಟೆಯ ಚೂರು ಬಾವುಟವಾಗಿ ಒಂದು ರಾಷ್ಟ್ರದ ಕ್ಷೇಮ ಸತ್ತ್ವ ಅಭೀಪ್ಸೆ ಧೈರ್ಯ ಸ್ಥೈರ್ಯ ಧರ್ಮ ಸಂಸ್ಕೃತಿ ಮತ್ತು ಅದೆಲ್ಲದರ ರಕ್ಷಣೆ ಇವಕ್ಕೆ ಪ್ರತೀಕವಾದಾಗ ಅದರ ಬಟ್ಟೆಯತನ ಅದರ ಬಾವುಟತ್ತವಕ್ಕೆ ಭಾದಕವಾಗುವುದಿಲ್ಲ; ಸಾಧಕವೆ ಆಗುತ್ತದೆ. ಅದು ಬಾವುಟವಾಗಿರುವುದಿರಂದ ಬಟ್ಟೆಯಲ್ಲ ಎನ್ನುವುದೂ, ಬಟ್ಟೆಯಾಗಿರುವುದರಿಂದ ಅದರ ಬಾವುಟತನ ದಿಟವಿಲ್ಲದ ಸಟೆ ಎನ್ನವುದೂ ಹಾಸ್ಯಾಸ್ಪದ ಮಾತ್ರವಲ್ಲದೆ ಮತಿಹೀನತೆಯೂ ಆಗುತ್ತದೆ. ಹಾಗೆಯೆ ಯಾವುದೊ ಒಂದು ಐತಿಹಾಸಿಕ ಸನ್ನಿವೇಶದಿಂದಲೆ ಉದ್ಬವಿಸಿ, ಮಹರ್ಷಿ ಕವಿಯ ದರ್ಶನ ದೀಪ್ತ ಪ್ರತಿಭಾವಶವಾಗಿ, ಶಕ್ತಿಸಂಚಾರವಾಗುವ “ಜಾಗ್ರತ ಮಹಾ ಪ್ರತಿಮೆ”ಯಾಗಿ, ಯಾವ ಐತಿಹಾಸಿಕ ಸಂಗತಿಯೂ ಸಾಧಿಸಲಾರದ ತ್ರಿಕಾಲಾತೀತವಾದ ನಿತ್ಯತ್ವದಿಂದ ಸಂಜೀವಿತವಾಗಿ ಸರ್ವಲೋಕ ಪೂಜ್ಯವಾಗಿದೆ ಶ್ರೀಮದ್‌ ಭಗವದ್‌ಗೀತೆ.

ಗೀತೆಯ ಪ್ರಾರಂಭವೆ ಅದರ ಪ್ರತಿಮಾಸ್ವರೂಪವನ್ನು ಧ್ವನಿಸುವ ಪ್ರತಿಮೆಯಂತಿದೆ. ಅದರ ಮೊತ್ತಮೊದಲ ಶ್ಲೋಕವೆ “ಧರ್ಮಕ್ಷೇತ್ರೇ ಕುರುಕ್ಷೇತ್ರೇ” ಎಂದೇ ಪ್ರಾರಂಭವಾಗುತ್ತದೆ. ಭಗವತ್‌ಗೀತೆಯ ಬೃಹತ್‌ ಪ್ರತಿಮಾ ವೇದಿಕೆ ಧರ್ಮಕ್ಷೇತ್ರವೂ ಹೌದು, ಕುರುಕ್ಷೇತ್ರವೂ ಹೌದು. ಅಲ್ಲಿ ನಡೆಯುವ ಮಹದ್‌ ವ್ಯಾಪಾರಗಳೆಲ್ಲ ದರ್ಶನ ಧ್ವನಿಯಿಂದ ಆಧ್ಯಾತ್ಮಿಕವನ್ನೂ ವಾಚ್ಯ ವ್ಯಾಪಾರದ ವರ್ಣನಾರೂಪದಿಂದ ಐತಿಹಾಸಿಕ ಲೌಕಿಕವನ್ನೂ ಸೂಚಿಸುತ್ತವೆ.

ಅಂತಹ ದರ್ಶನಧ್ವನಿಯಿಂದ ಆಧ್ಯಾತ್ಮದ ಪರಾಕಾಷ್ಠೆಯನ್ನು ಮೀಟಿ ಮೀರಿ ನಿಂತಿರುವ ಮಹೋನ್ನತ ಪ್ರತಿಮೆಯೆಂದರೆ ಗೀತೆಯ ಹನ್ನೊಂದನೆಯ ಅಧ್ಯಾಯದ ‘ವಿಶ್ವರೂಪದರ್ಶನ.’ ಅದು ಅತೀಂದ್ರಿಯ ಪ್ರತಿಮೆ; ಸೇಂದ್ರಿಯದ ರೂಪ ತರಂಗಗಳಿಂದ ಅತೀಂದ್ರಿಯ ಅಂಭೋಧಿಯನ್ನು ಸೃಷ್ಟಿಸಲೆಳಸುತ್ತಿರುವ ವಿಶ್ವರೂಪ ಪ್ರತಿಮೆ. ‘ಅತಿಮಾನಸ ಪ್ರತಿಮೆ’ ಎಂದೂ ಹೇಳಬಹುದು, ಅರ್ಥಹೀನವಾಗದ ಪಕ್ಷದಲ್ಲಿ.

ಏಕೆಂದರೆ ಪ್ರತಿಮೆ ಎಂದೊಡನೆ, ಸಾಧಾರಣವಾಗಿ, ಅದರ ಸಾಮಾನ್ಯವಾದ ಅರ್ಥದಲ್ಲಿ, ಒಂದು ‘ವಿಗ್ರಹ’ದ ಭಾವನೆ ಬರುತ್ತದೆ. ಅಂದರೆ ಕಣ್ಣು ಒಳಕೊಳ್ಳುವ ಒಂದು ಸಾಂಗೋಪಾಂಗ ಅಥವಾ ಸಾವಯವ ಭೌತ ವಸ್ತು. ಸಾಹಿತ್ಯದಲ್ಲಿ ಪ್ರತಿಮೆ ಒಂದು ಮುಷ್ಟಿಗ್ರಾಹ್ಯವಾದ ಸ್ತೂಲವಸ್ತುವಾಗಲಾರದು. ಆದರೆ ಎಷ್ಟೆ ಸೂಕ್ಷ್ಮವಾದರೂ ಮುಷ್ಟಿಗ್ರಾಹ್ಯವಲ್ಲದಿದ್ದರೂ ದೃಷ್ಟಿಗ್ರಾಹ್ಯವಾಗಿರುತ್ತದೆ. ಎಂದರೆ ಕಲ್ಪನಾಚಕ್ಷುವಿಗೆ ಪ್ರತ್ಯಕ್ಷವಾಗಿರುತ್ತದೆ. ಅದಕ್ಕೆ ಒಂದು ಆದಿ ಅಂತ ಇರುತ್ತದೆ; ಒಂದು ಪರಿಮಿತತ್ವವೂ ಇರುತ್ತದೆ.

ಆದರೆ ಸಾಹಿತ್ಯದಲ್ಲಿಯ ಪ್ರತಿಮೆ, ನಾವು ಅದಕ್ಕೆ ಕೊಟ್ಟಿರುವ ಅರ್ಥದಲ್ಲಿ, ನಾವು ನಿರ್ಣಯಿಸಿರುವ ಅದರ ಸ್ವರೂಪದ ಪ್ರಕಾರ, ಯಾವ ಒಂದು ಇಂದ್ರಿಯಕ್ಕೂ ಪರಿಮಿತವಾಗಿರಲೆ ಬೇಕಾಗಿಲ್ಲ. ಅಲ್ಲದೆ, ಒಂದೆ ಇಂದ್ರಿಯದ್ದಾದರೂ ಆಗಿರಬಹುದು. ಉದಾಹರಣೆಗಾಗಿ ಒಂದು ‘ಅಶರೀರವಾಣಿ’ ಯನ್ನು ಯಾವುದಕ್ಕಾದರೂ ಪ್ರಿತಿಮೆಯಾಗಿದೆ ಎಂದರೆ ಅದು ಚಾಕ್ಷುಷವಾಗಿರುವುದೆ ಇಲ್ಲ. ಶಾಬ್ದಿಕ ಮಾತ್ರವಾಗಿರುತ್ತದೆ. ಹಾಗೆಯೆ ಪ್ರತಿಮೆ ಯಾವ ಒಂದು ಇಂದ್ರಿಯದ್ದೂ ಆಗಿರದೆ ಬುದ್ದಿಗ್ರಾಹ್ಯಮಾತ್ರವಾಗಿಯೂ ಇರಬಹುದು. ‘ಯಮನ ಸೋಲು’ ನಾಟಕದಲ್ಲಿ ಸಾವಿತ್ರಿಗೆ ಯಮನು ವಾದದಲ್ಲಿ ಸೋತುದರಿಂದಲೆ ಸೋತು ಸತ್ಯವಂತನನ್ನು ಕಾಣಿಕೆ ಒಪ್ಪಿಸಿದಂತೆ ಮೇಲುನೋಟಕ್ಕೆ ತೋರುತ್ತದೆ. ಆದರೆ ಆ ‘ತರ್ಕದ ಸೋಲು’ ಒಂದು ‘ಪ್ರತಿಮೆ’ ಮಾತ್ರ. ಧ್ವನಿಗ್ರಾಹಿಯಾದ ಸಹೃದಯನಿಗೆ ಅದು ತೆಕ್ಕನೆ ಗೋಚರವಾಗುತ್ತದೆ. ವಿಶ್ವದ ಧರ್ಮಾಧಿಕಾರಿಯಾದ ಯಮನು ಎಷ್ಟೆ ಬುದ್ದಿವಂತೆಯಾಗಲಿ ಮರ್ತ್ಯಬಾಲಿಕೆಯೊರ್ವಳಿಗೆ ತರ್ಕವಾದದಲ್ಲಿ ಸೋಲುವನಿತು ಬೆಪ್ಪನೆಂದು ಯಾರಾದರೂ ಭಾವಿಸಿದರೆ ಅವನಿಗಿಂತ ಬೆಪ್ಪನಿಲ್ಲ ಎಂದು ಹೇಳಬೇಕಾಗುತ್ತದೆ. ಆ ತರ್ಕದ ಸೋಲಿನಲ್ಲಿ ಹುದುಗಿರುವ ಯಮನ ಜಾಣ್ಮೆ ಜಾಣ ಸಹೃದಯರಿಗೆ ಸ್ಫುರಿಸುತ್ತದೆ. ಮಾತಿನಲ್ಲಿ ತಾನು ಸಿಕ್ಕಿ ಬೀಳುವಂತೆ ಮಾಡಿಕೊಂಡು, ಸೋಲನ್ನೊಪ್ಪಿಕೊಂಡು, ಆ ಮಾತಿನ ಸೋಲಿನ ದೆಸೆಯಿಂದಲೆ ತಾನು ಸೋತು ಸತ್ಯವಂತನ ಜೀವವನ್ನು ಹಿಂದಕ್ಕೆ ಕೊಟ್ಟಂತೆ ತೋರಿಸಿಕೊಳ್ಳುವುದೆ ‘ನಿನ್ನ ತರ್ಕಕೆ ಸೋತೆ’ ಎಂಬ ಅಲ್ಲಿಯ ಪ್ರತಿಮೆ. ಈ ‘ವಾಕ್‌ ಪ್ರತಿಮೆ’ ತೇಲುನೋಟಕ್ಕೆ ಒಂದು ಮಾತಿನ ಸೋಲಾಗಿ ತೋರಿದರೂ ಅದು ಪ್ರೇಮದ ವಿಜಯಕ್ಕೆ ತತ್ತ್ವತಃ ಶರಣಾಗಿ ಸೋಲನ್ನೊಪ್ಪಿದ ಭಾವಸತ್ಯಕ್ಕೆ ಮೈವೆತ್ತ ‘ಪ್ರತಿಮೆ.’ ಶಾಬ್ದಿಕವಾದ ಹೊರರೂಪವಿದ್ದರೂ ಅದು ಶಾಬ್ದಿಕ ಮಾತ್ರವಲ್ಲ. ಚಾಕ್ಷುಷವಂತೂ ಅಲ್ಲವೆ ಅಲ್ಲ. ಆದು ಮಾನಸಿಕ ಮತ್ತು ಆಧ್ಯಾತ್ಮಿಕವಾದ ಪ್ರತಿಮೆಯಾಗುತ್ತದೆ.

ಗೀತೆಯ ‘ವಿಶ್ವರೂಪ ದರ್ಶನ’ದ ಪ್ರತಿಮೆ ಬುದ್ದಿಗ್ರಾಹ್ಯವೂ ಅತೀಂದ್ರಿಯವೂ ಆದ ಲಕ್ಷಣದಿಂದ ಕೂಡಿದೆ. ಲಕ್ಷಣದಿಂದ ಕೂಡಿದೆ ಎಂದ ಮಾತ್ರಕ್ಕೆ ಬುದ್ದಿಗ್ರಾಹ್ಯವಾಗಿ ಬಿಡುತ್ತದೆ ಎಂದರ್ಥವಲ್ಲ. ಬುದ್ದಿಗೆ ತಾನು ತತ್ತರಿಸಿ ಸೋತಿದ್ದೇನೆ ಎಂಬುದಷ್ಟೇ ವೇದ್ಯವಾದರು ಸಾರ್ಥಕವಾಗುವಷ್ಟರ ಮಟ್ಟಿಗೆ ಅದು ಅತಿಮಾನಸ ಮಟ್ಟದ ಪ್ರತಿಮೆಯಾಗಿದೆ. ಆದ್ದರಿಂದಲೆ ಅರ್ಜುನ ‘ಮನ್ಯಸೇ ಯದೆ ತಚ್ಛಕ್ಯಂ ಮಯಾ ದ್ರಷ್ಟುಂ’  ‘ನನ್ನಿಂದ ಅದನ್ನು ನೋಡಲು ಸಾಧ್ಯವೆಂದು ತಿಳಿಯುವೆಯಾದರೆ’ ಎಂದೆ ತನ್ನ ಪ್ರಾರ್ಥನೆಯನ್ನು ಮುಂದೊಡ್ಡುತ್ತಾನೆ.

ಆದರೆ ಆ ವಿಶ್ವರೂಪ ಮರ್ತ್ಯವೂ ಅಲ್ಲ, ಸೇಂದ್ರಿಯವೂ ಅಲ್ಲ. ಅದು ಸಾವಯುವ ಸುಸಂಗತ ಪ್ರತಿಮೆಯಾಗಿ ಮನುಷ್ಯದೃಷ್ಟಿ ಗೋಚರವಾಗಲು ಸಾಧ್ಯವೆ ಇಲ್ಲ. ನಮ್ಮ ಸರ್ವೋತ್ಕ್ರಷ್ಟವಾದ ಸರ್ವೋಚ್ಚ ಭಾಷೆಯೂ ಕೂಡ ನಮ್ಮ ಲೋಕಾನುಭವಜನ್ಯವಾಗಿ ಲೋಕಾನುಭವದಿಂದಲೆ ಬದ್ಧವಾಗಿರುವುದರಿಂದ ಆ ‘ಪ್ರತಿಮೆ’ ಯನ್ನು ಭಾಷೆಯ ಮೂಲಕ ಸೃಷ್ಟಿಸುವುದೂ ವರ್ಣಿಸುವುದು ಅಸಾಧ್ಯ! ಆದರೂ ಕವಿ ಆ ಅತಿಮಾನಸಾನುಭವಕ್ಕೆ ಮಾನಸಾನುಭವ ಸಂಕೇತವಾದ ಭಾಷೆಯನ್ನೆ ಉಪಯೋಗಿಸಬೇಕಾಗುತ್ತದೆ. ಆದ್ದರಿಂದಲೆ ವಿಶ್ವರೂಪ ದರ್ಶನದ ವಿರಾಟ್ ಪ್ರತಿಮೆ ಕಲ್ಲಿನಲ್ಲಿ ಕಡೆದಂತಿರದೆ ನೀರಿನಲ್ಲಿ ಕಂಡರಿಸಿದಂತೆ ರೂಪಾರೂಪಗಳ ಮಧ್ಯೆ ಸಂಚರಿಸುತ್ತಾ ಸಚಂಚಲ ಭಯಂಕರವಾಗಿದೆ. ಅಖಂಡ ಶಿಲಾಶೈಲದಲ್ಲಿ ಕಡೆದಂತಿರದೆ ಆಕಾಶದ ಅನಂತ ವಿಸ್ತೀರ್ಣದ ಬಯಲಚ್ಚಿನಲ್ಲಿ ಮಹಾಂಭೋಧಿಗಳನ್ನೆ ಎರಕ ಹೊಯ್ದಂತಿದೆ. ನರಚೇತನ ಅದನ್ನು ದರ್ಶಿಸಿ ಮರ್ತ್ಯ ಪ್ರಜ್ಞೆಯಲ್ಲಿ ಸಚೇತನವಾಗಿರಲಾರದು. ಅದು ಸುದುರ್ದರ್ಶಭವ್ಯವಾದುದು. ಅಲ್ಲಿ ನರನ ಚೇತನವನ್ನು ಅಪ್ಪಳಿಸುತ್ತದೆ ಭೂಮಾನಭೂತಿ! ಅಹಂಕಾರವನ್ನು ಅತಲಾಗ್ನಿ ಜಲದಲ್ಲಿ ಅದ್ದಿ ನಿರ್ನಾಮ ಮಾಡುತ್ತದೆ ಭವ್ಯತಾ ಅನುಭವ! ಆದ್ದರಿಂದಲೆ ಅರ್ಜುನನ ಚೇತನ, ಅದಕ್ಕೆ ಭಗವಂತನು ದಿವ್ಯಚಕ್ಷುಸ್ಸಿನ ದಿವ್ಯ ದೃಷ್ಟಿಯನ್ನು ದಯಪಾಲಿಸಿದ್ದರೂ, ಕೊನೆಯಲ್ಲಿ ಹೆದರಿ ಕೂಗಿಕೊಳ್ಳುತ್ತದೆ:

‘ಅದೃಷ್ಟಪೂರ್ವಂ ಹೃಷಿತೋsಸ್ಮಿ ದೃಷ್ಟ್ವಾ
ಭಯೇನ ಚ ಪ್ರವ್ಯಥಿತಂ ಮನೋ ಮೇ
ತದೇವ ಮೇ ದರ್ಶಯ ದೇವ ರೂಪಂ
ಪ್ರಸೀದ ದೇವೇಶ ಜಗನ್ನಿವಾಸ’!

‘ವಿಶ್ವರೂಪ ದರ್ಶನ’ದ ಪ್ರತಿಮೆ ಮಾನುಷದೃಷ್ಟಿಗಮ್ಯವಲ್ಲ. ‘ನಾನು ನೋಡಲು ಸಾಧ್ಯ ಎಂದು ನೀನು ತಿಳಿದಿರುವೆಯಾದರೆ’ ಎಂಬ ಅರ್ಜುನನ ಪ್ರಶ್ನಾರ್ಥಕ ಸಂದೇಹಕ್ಕೆ ಭಗವಂತನ ಉತ್ತರ ಇಂತಿದೆ:

‘ನ ತು ಮಾಂ ಶಕ್ಯಸೇ ದ್ರಷ್ಟುಮನೇನೈವ ಸ್ವಚಕ್ಷುಷಾ
ದಿವ್ಯಂ ದದಾಮಿ ತೇ ಚಕ್ಷುಃ ಪಶ್ಯ ಮೇ ಯೋಗಮೈಶ್ವರಂ’

‘ನಿನ್ನ ಕಣ್ಣುಗಳಿಂದ ನೋಡಲು ಸಾಧ್ಯವಲ್ಲ, ನನ್ನ ಕಣ್ಣುಗಳನ್ನು ನೀಡುತ್ತೇನೆ; ನೋಡು ನನ್ನ ಐಶ್ವರಯೋಗವನ್ನು’ ಎನ್ನುತ್ತಾನೆ. ನರನಿಗೆ ಸ್ವಚಕ್ಷುವಿಗೆ ಬದಲಾಗಿ ದಿವ್ಯಚಕ್ಷು ಮೂಡುತ್ತದೆ. ಮರ್ತ್ಯದೃಷ್ಟಿಗಲ್ಲ, ದಿವ್ಯದೃಷ್ಟಿ ಗೋಚರವಾಗುತ್ತದೆ. ಆ ಚಿನ್ಮಯ ಭವ್ಯ ಪ್ರತಿಮೆ!

ಮಾನುಷ ಊಹೆ ಆ ಪ್ರತಿಮೆಯನ್ನು ಸ್ಪಷ್ಟವಾಗಿ ಖಚಿತವಾಗಿ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಒಮ್ಮೊಮ್ಮೆ ತೆನ್ನಾಲಿ ರಾಮಕೃಷ್ಣನ ಚಿತ್ರ ಶಿಲ್ಪದಂತೆ ಕಾಲು ಈ ಗೋಡೆಯ ಮೇಲೆ, ಕಣ್ಣು ಇನ್ನೆಲ್ಲಿಯೊ ಎಂಬಂತಾಗುತ್ತದೆ! ಆ ಅಪ್ರಮೇಯನು ‘ದೀಪ್ತಾನಲಾರ್ಕ ದ್ಯುತಿ’ಯಿಂದ ಬೇರೆ ತೊಳಗುತ್ತಾನೆ. ಸಾಮಾನ್ಯ ದೀಪ್ತಿಯೆ ನಮ್ಮ ಕಣ್ಣನ್ನು ಕುರುಡುಗೈಯುತ್ತದೆ. ಇನ್ನು ಸಹಸ್ರ ಸೂರ್ಯರು ಒಮ್ಮೆಯೆ ಮೂಡಿದಂತಾದರೆ! ಜೊತೆಗೆ ಅನೇಕ ವಕ್ತ್ರ ನಯನಗಳನ್ನು ಸಮನ್ವಯಗೊಳಿಸಿಕೊಳ್ಳುವುದಾದರೂ ಎಂತು? ಸರ್ವಾಶ್ಚರ್ಯಮಯ! ವಿಶ್ವತೋಮುಖ! ಏಕಸ್ಥವನ್ನಾಗಿ ಜಗತ್‌ ಸರ್ವವನ್ನೂ ನೋಡುತ್ತದೆ ಅರ್ಜುನನ ದಿವ್ಯಚಕ್ಷುಃ ಪ್ರವಿಭಕ್ತಂ ಅನೇಕಧಾ! ಅನೇಕ ಬಾಹು, ಉದರ, ವಕ್ತ್ರ, ನೇತ್ರ! ನಾಂತಂ ನ ಮಧ್ಯಂ ನ ಪುನಸ್ತವಾದಿಂ! ದ್ಯುಲೋಕದಲ್ಲಿ, ಭೂಲೋಕದಲ್ಲಿ, ಅವುಗಳ ಮದ್ಯಾಂತರದಲ್ಲಿ, ಎಲ್ಲ ದಿಕ್ಕುಗಳಲ್ಲಿಯೂ ವ್ಯಾಪ್ತವಾದ ಆ ಅದ್ಭುತ ಉಗ್ರರೂಪಕ್ಕೆ ಲೋಕತ್ರಯವೂ ಗದಗದಿಸುತ್ತದೆ! ‘ದಿಶೋ ನ ಜಾನೆ ನಲಭೇ ಚ ಶರ್ಮ.’ ‘ದೃತಿಂ ನ ವಿಂದಾಮಿ ಶಮಂ ಚ ವಿಷ್ಣೋ.’ ಯಾರಿಗಾದರೂ ಅನಿಸೀತು ಈ ‘ವಿಶ್ವರೂಪ ದರ್ಶನ’ ಹೇಗೆ ತಾನೆ ಒಂದು ಪ್ರತಿಮೆಯಾದೀತು ಎಂದು. ಯಾವುದೊ ಒಂದು ಬೃಹಜ್ಜಟಿಲರುಂದ್ರ ಪ್ರತಿಮೆಯನ್ನು ಚೂರು ಚೂರಾಗಿ ಒಡೆದು ಆ ಚೂರುಗಳನ್ನೆಲ್ಲ ಕಣ್ಬೆದರೆ ಆಕಾಶಕ್ಕೆಸೆದು ಗಿರ್ರನೆ ಘೂರ್ಣಾಯಮಾನವಾಗಿ ತಿರುಗಿಸಿದಂತಾಗಿರುವ ಈ ‘ವಿಶ್ವರೂಪ ದರ್ಶನ’ವು ಅಪ್ರತಿಮವನ್ನು ಹಿಡಿಯಲೆಂದು ಋಷಿಕಲ್ಪನೆ ಎಸೆದು ಬೀಸಿದ ಒಂದು ಮಹಾದ್ಭುತ ಜಾಲೋಪಮ ಪ್ರತಿಮೆ; ಅಪ್ರತಿಮಕ್ಕೊಡ್ಡಿದ ಕಲಾಪ್ರತಿಮೆ; ಜಗತ್ತಿನ ಸಾಹಿತ್ಯದಲ್ಲಿಯೆ ಅಪ್ರತಿಮಪ್ರತಿಮೆ!

ಆ ಪ್ರತಿಮೆ ಸ್ಥಾವರವಲ್ಲ; ನಿರಂತರ ಜಂಗಮ, ಕಾಲಪ್ರವಾಹದಂತೆ ಆ ಸಜೀವ ಪ್ರತಿಮೆಯ ಬಾಯಿಗಳಲ್ಲಿ (ವಕ್ತ್ರಾಣಿ) ಕುರುಕ್ಷೇತ್ರದಲ್ಲಿದ್ದ ನರಲೋಕ ವೀರರೆಲ್ಲ ‘ಯಥಾ ನದೀನಾಂ ಬಹವೋಂsಬುವೇಗಾಃ ಸಮುದ್ರ ಮೇವಾಭಿಮುಖಾ ದ್ರವಂತಿ’ ಪ್ರವೇಶಿಸುತ್ತಿರುತ್ತಾರೆ, ಅಷ್ಟೆ ಅಲ್ಲ, ಹಿಂದು ಮುಂದು ಇಂದುಗಳೆಲ್ಲ ಅಲ್ಲಿ ಒಂದಾಗಿವೆ. ಕುರುಕ್ಷೇತ್ರದಲ್ಲಿ ಮುಂದೆ ಆಗಲಿರುವುದೂ ಅಲ್ಲಿ ಈಗಲೆ ಆಗುತ್ತಿರುವಂತೆ, ಅರ್ಜುನ ಕಾಣುತ್ತಾನೆ. ‘ಮಯೈವೈತೇ ನಿಹತಾಃ ಪೂರ್ವಮೇವ; ನಿಮಿತ್ತ ಮಾತ್ರಂ ಭವ ಸವ್ಯ ಸಾಚಿನ್‌.’ ತನ್ನಿಂದ ಆಗಲೆ ಹತರಾದವರನ್ನು ಅರ್ಜುನ ಜಯಿಸಬೇಕಂತೆ: ಮಯಾ ಹತಾಂಸ್ತ್ವಂ ಜಹಿ!

‘ಅದೃಷ್ಟ ಪೂರ್ವಂ ಹೃಷಿತೋsಸ್ಮಿ ದೃಷ್ಟ್ವಾ’ – ‘ಹಿಂದೆಂದೂ ನೋಡದಿದ್ದುದನ್ನು ನೋಡಿದ್ದೇನೆ ಹರ್ಷಿತನಾಗಿದ್ದೇನೆ.’ ಎಂದು ಹೇಳಿದರೂ ನರಚೇತನ ತರಹರಿಸುತ್ತದೆ ‘ಭಯೇನ ಚ ಪ್ರವ್ಯಥಿತಂ ಮನೋ ಮೇ’ ಎಂತೊರಲುತ್ತದೆ: ‘ತದೇವ ಮೇ ದರ್ಶಯ ದೇವ ರೂಪಂ’! ಆ ಅತಿಮಾನಸ ದರ್ಶನದಲ್ಲಿ ನರಚೇತನ ಮಾತ್ರವಾಗಿದ್ದ ನರನ ಚೇತನ ನಿಲ್ಲಲು ಸಾಧ್ಯವಿಲ್ಲ. ತಂಗಬಲ್ಲುದೆ ಹೊರತು ನೆಲಸಲಾರದು. ಅದಕ್ಕೆ ಭಗವತ್ ಕೃಪೆಯಿಂದ ಪ್ರವಾಸಿಯ ಯೋಗ್ಯತೆಯೇನೊ ದೊರೆತಿದೆ; ಆದರೆ ತನ್ನಿಂದಲೆ ಆಗಲೇಬೇಕಾದ ಪೂರ್ವಸಿದ್ಧತೆ ಪೂರೈಸಿಲ್ಲವಾದ್ದರಿಂದ ನಿವಾಸಿಯ ಅರ್ಹತೆಗೆ ಅದಿನ್ನೂ ಕಾಯಬೇಕಾಗಿದೆ; ಅಧಿಕಾರಿಯಾಗಬೇಕಾಗಿದೆ. ಆದ್ದರಿಂದಲೆ ಅದು ಆ ತಲೆತಿರುಗುವ ಮಹೋನ್ನತಿಯಿಂದ ತನಗೆ ನಿತ್ಯಪರಿಚಿತವಾಗಿರುವ ಈ ನಮ್ಮ ನಿಮ್ನಮರ್ತ್ಯಕ್ಕೆ ಇಳಿಯಲು ಹಾತೊರಿಯುತ್ತದೆ, ಏದುತ್ತದೆ.

‘ಕಿರೀಟಿನಂ ಗದಿನಂ ಚಕ್ರಹಸ್ತಮಿಚ್ಚಾಮಿ ತ್ವಾಂ ದ್ರಷ್ಟುಮಹಂ ತಥೈವ ||
ತೇನೈವ ರೂಪೇಣ ಚತುರ್ಭುಜೇನ ಸಹಸ್ರ ಬಾಹೋ ಭವ ವಿಶ್ವಮೂರ್ತೆ ||’

ಸಹಸ್ರಬಾಹು ಅಮೇಯಪ್ರತಿಮೆ. ಚತುರ್ಭುಜವಾದರೊ ನಮ್ಮ ಮಾನುಷವಾದ ಅಲ್ಪಕಲ್ಪನೆ ಅರ್ಥಮಾಡಿಕೊಳ್ಳಬಹುದಾದ ಮತ್ತು ಚೇತನೆ ಸಹಿಸಬಹುದಾದ ಪ್ರತಿಮೆ; ಮನಸ್ಸು ತಳ್ಳಂಕಗೊಳ್ಳದೆ ಯಾವುದನ್ನು ಪೂಜಿಸಿ ನೆಮ್ಮದಿಯಿಂದಿರಲು ಸಾಧ್ಯವೊ ಆ ಪ್ರತಿಮೆ. ಆದ್ದರಿಂದಲೆ ಭಗವಂತನು ಭಕ್ತನ ಈ ಸ್ವಾಭಾವಿಕವಾದ ಪುಕ್ಕಲೆಗೆ ಆಶ್ವಾಸನೆ ಕೊಡುತ್ತಾನೆ: “ಮಾ ತೇ ವ್ಯಥಾ, ಮಾ ಚ ವಿಮೂಢ ಭಾವೋ, ದೃಷ್ಟ್ವಾ ರೂಪಂ ಘೋರ ಮೀದೃಙ್ಮಮೇದಮ್‌ ವ್ಯಪೇತಭಿಃ ಪ್ರೀತಮನಾಃ ಪುನಸ್ತ್ವಂ ತದೇವ ಮೇ ರೂಪಮಿದಂ ಪ್ರಪಶ್ಯ!” – ‘ವಿಮೂಢಭಾವ ಬೇಡ; ಹೆದರಬೇಡ, ಈ ನನ್ನ ಘೋರರೂಪಕ್ಕೆ’ ಎಂದು ಸಂತೈಸಿ ‘ಭೂತ್ವಾ ಪುನಃ ಸೌಮ್ಯವಪುಃ’ ‘ಸ್ವಕಂ ರೂಪಂ ದರ್ಶಯಾಮಾಸ ಭೂಯಃ’ ಎಂದು ಸೌಮ್ಯವಪುವಾಗಿ ತನ್ನ ಮುನ್ನಿನ ರೂಪಕ್ಕೆ ಇಳಿಯುತ್ತಾನೆ. ಅರ್ಜುನನಿಗೆ ತನ್ನ ಮನುಷ್ಯತ್ವದ ತನ್ನತನವನ್ನು ಮತ್ತೆ ಪಡೆದಂತಾಗಿ ನಿಟ್ಟುಸಿರೆಳೆದು ಹೇಳುತ್ತಾನೆ: ‘ಇದಾನೀ ಮಸ್ಮಿ ಸಂವೃತ್ತಃ ಸಚೇತಾಃ ಪ್ರಕೃತಿಂ ಗತಃ’ ‘ಈಗ ನಾನು ಸಂವೃತ್ತನಾದೆ, ಸಚೇತನನಾದೆ, ಪ್ರಕೃತಿಗತನಾದೆ!’ ಎನ್ನುತ್ತಾನೆ, ‘ಬದುಕಿದೆ! ಗೆದ್ದೆ! ಉಳಿದೆ!’ ಎಂಬಂತೆ. ಇದುವರೆಗೆ ಅವನ ಪ್ರಜ್ಞೆ ಈ ಪ್ರಕೃತಿಗೆ ಅತೀತವಾದ ಅನುಭವದಲ್ಲಿ ಸಿಕ್ಕಿ ದಿಕ್ಕುಗೆಟ್ಟಂತಾಗಿತ್ತು. ಈಗ ಪ್ರಕೃತಿಗತವಾಗಿ ಸ್ವಸ್ಥವಾಗಿದೆ. ಅವನ ಚೇತನೆಗೆ ಒಂದು ರೀತಿಯಲ್ಲಿ ನಿವೃತ್ತ ಸ್ಥಿತಿ ಒದಗಿದಂತಿತ್ತು. ಇದುವರೆಗೆ ಅದು ‘ಅಚೇತ’ವಾದಂತಿತ್ತು. ಈಗ ಗಟ್ಟಿನೆಲದ ಮೇಲೆ ಕಾಲಿಟ್ಟಂತೆ ಕ್ರಿಯಾ ಸಾಮರ್ಥ್ಯವನ್ನೂ ಇಚ್ಛಾ ಪ್ರಜ್ಞೆಯನ್ನೂ ಮತ್ತೆ ಪಡೆದು ‘ಸಂವೃತ್ತ’ವೂ ‘ಸಚೇತ’ವೂ ಆಗಿದೆ.

ಅಪ್ರತಿಮವೆ ಪ್ರತಿಮಾ ರೂಪಧಾರಣ ಮಾಡಲು ಅವತರಿಸುತ್ತಿರುವಂತೆ ತೋರುವ ಈ ‘ವಿಶ್ವರೂಪ ದರ್ಶನ’ದ ವಿರಾಟ್‌ ಪ್ರತಿಮೆ ಒಂದು ವಾಙ್ಮಯ ಶರೀರಿಯಾಗಿರುವ ಆರ್ಚಾವತಾರದಂತಿದೆ. ಶತಶತಮಾನಗಳಿಂದಲೂ ಕೋಟ್ಯಂತರ ಸಹೃದಯರ, ಭಕ್ತರ, ಜಿಜ್ಞಾಸುಗಳ, ಆರ್ತರ, ಜ್ಞಾನಿಗಳ, ದಾರ್ಶನಿಕರ, ರಸಋಷಿಗಳ, ಕವಿಗಳ, ಸಿಧ್ಧರ, ಸಂತರಾದಿಯಾಗಿ ನಾನಾ ಜೀವರುಗಳ ಚಿಂತನೆಗೆ, ಪರಿಭಾವನೆಗೆ, ಆರಾಧನೆಗೆ, ಆಸ್ವಾದನೆಗೆ, ನಿಧಿಧ್ಯಾಸನಕ್ಕೆ, ಧ್ಯಾನಕ್ಕೆ, ತತ್ತ್ವಜಿಜ್ಞಾಸೆಗೆ ಪವಿತ್ರಪಾತ್ರವಾಗಿ, ಅತೀತವಾಗಿರುವ ಚಿತ್ತಪಸ್ಸಿನ ಅವರೋಹಣಕ್ಕೊಂದು ಪಾತ್ರವಾಗಿ, ಅದೊಂದು ಶಕ್ತಿಸ್ಥಾನವಾಗಿದೆ. ಅಂತಹ ಶಕ್ತಿಸ್ಪಂದನದಿಂದಲೆ ಸಾಹಿತ್ಯದಲ್ಲಿ ಬರುವ ನಿಜವಾದ ‘ಪ್ರತಿಮೆ’ಯನ್ನು ಪ್ರತಿಮಾತ್ವವನ್ನು ನಟಿಸುವ ‘ಪ್ರತೀಕ’ಗಳಿಂದ ನಾವು ಪ್ರತ್ಯೇಕಿಸಲು ಸಮರ್ಥರಾಗುತ್ತೇವೆ. ಈ ‘ವಿಶ್ವರೂಪ ದರ್ಶನ’ ಪ್ರತಿಮೆಯಲ್ಲಿರುವ ಶಕ್ತಿಪ್ರಮಾಣಕ್ಕೆ ಸಮನಾದ ಶಕ್ತಿಯ ಮತ್ತೊಂದು ಪ್ರತಿಮೆಯನ್ನು ನಾವು ಎದುರುಗೊಳ್ಳುವುದು ಅಸಂಭವನೀಯ. ಆದರೂ ಶಕ್ತಿ ಯಾವುದಾದರೊಂದು ಪ್ರಮಾಣದಲ್ಲಿ, ಅಲ್ಪಪ್ರಮಾಣದಲ್ಲಿಯಾದರೂ, ಸಂಚರಿಸದಿದ್ದರೆ ಯಾವ ಪ್ರತೀಕವೂ ಪ್ರತಿಮಾ ಪಟ್ಟಕ್ಕೆ ಅರ್ಹವಾಗುವುದಿಲ್ಲ. ಭಾವಶಕ್ತಿ ಸಂಚಾರವೆ ಪ್ರತಿಮಾ ಲಕ್ಷಣ.


[1]      ‘ಪ್ರತಿಬಿಂಬ’ ಎನವುದಕ್ಕಿಂತ ‘ಗತಿಬಿಂಬ’ ಎನ್ನುವುದು, ಚಲಿಸುತ್ತಿರುವ ಜೇವನದ ಪ್ರವಾಹ ಪ್ರಗತಿ ಸೂಚಕವಾದುದರಿಂದ ಹೆಚ್ಚು ಸಮರ್ಪಕ ಎಂದು ಒಂದು ವಾದ. ವಿಷಯವನ್ನು ಸ್ಪಷ್ಟಪಡಿಸುವುದಕ್ಕಾಗಿ ಆ ಮಾತನ್ನು ವಿವರಣಾತ್ಮಕವಾಗಿ ಉಪಯೋಗಿಸಬಹುದು. ಆದರೆ ‘ಜೀವನ’ದ ಲಕ್ಷಣವೆ ನಿರಂತರಗತಿ ಆಗಿರುವುದರಿಂದ ‘ಜೀವನದ ಪ್ರತಿಬಂಬ’ ಎಂಬುದರಲ್ಲಿಯೆ ರಸಾನುಭವ ‘ಗತಿ’ ಧ್ವನಿತವಾಗಿಯೆ ಇರುತ್ತದೆ.

[2]       ‘ತಪೋನಂದನ’ದಲ್ಲಿರುವ ‘ಪ್ರತಿಮಾ ಮತ್ತು ಪ್ರತಿಕೃತಿ’ ಎಂಬ ಪ್ರಬಂಧವನ್ನು ನೋಡಿ.

[3]       ಗೀತಾ – ಅಧ್ಯಾಯ ೭, ಶ್ಲೋಕ ೨೧, ೨೨.

[4]       ‘ತಪೋನಂದನ’ದಲ್ಲಿರುವ “ನಾಟಕ ಕಲೆಯಲ್ಲಿ ಪ್ರತಿಕೃತಿ ಮತ್ತು ಪ್ರತಿಮಾ ವಿಧಾನಗಳು” ಎಂಬ ಪ್ರಬಂಧ ನೋಡಿ.

[5]       ಅದೇ: “ಪಂಪನಲ್ಲಿ ಭವ್ಯತೆ” ನೋಡಿ.

[6]       ಅದೇ: “ಕಾವ್ಯವಿಮರ್ಶೆಯಲ್ಲಿ ಪೂರ್ಣ ದೃಷ್ಟಿ” ನೋಡಿ.

[7]       ಶಕ್ತಿಪ್ರವಾಹಕ್ಕೆ ಧ್ಯೇಯಪಾತ್ರವಾಗಿರುವ ಶ್ರೀರಾಮನ ಪಾತ್ರದಂತೆ.