ಪ್ರತಿಮಾ ವಿಧಾನವು ರೂಪಕ ಸಮುಚ್ಚಯವಾಗಿ ಪ್ರತೀಕವಾಗಿ ಮೈದೋರುವಂತೆ ಬಿಡಿ ಬಿಡಿಯ ರೂಪಕವಾಗಿಯೂ ಪ್ರಕಾಶಿತವಾಗುತ್ತದೆ. ಪ್ರತಿಮಾ ವಿಧಾನದ ಈ ರೂಪಕಾವತಾರವನ್ನು ಪ್ರಾಚೀನವಾದ ಭಾರತೀಯ ಕಾವ್ಯಮೀಮಾಸೆ ಅನೇಕ ಅಲಂಕಾರಳಲ್ಲಿ ಒಂದನ್ನಾಗಿ, ಪರಿಗಣಿಸಿ, ವಿಭಜಿಸಿ, ಪಟ್ಟಿಮಾಡಿ, ಕೆಲವು ಉದಾಹರಣೆಕೊಟ್ಟು, ಕೈಬಿಟ್ಟಿರುವಂತೆ ತೋರುತ್ತದೆ.

[1] ಉಪಮಾ ಅಲಂಕಾರದಿಂದ ಸಾದೃಶ್ಯಸೂಚಕ ಶಬ್ದವನ್ನು ಕಿತ್ತುಹಾಕಿದರೆ ಬರುವ ಲಬ್ದವೆ ರುಪಕಾಲಂಕಾರ ಎಂಬ ಲೆಕ್ಕಚಾರ ನಡೆದಂತಿದೆ. ಅಲಂಕಾರ ಶಾಸ್ತ್ರ ಹಾಗೆ ಮಾಡಿದ್ದರೂ ಪ್ರತಿಭಾಶಲಿಗಳಾದ ಕವಿಗಳೆಲ್ಲರೂ ತಮ್ಮ ಕೃತಿಗಳಲ್ಲಿ ರೂಪಕಾಲಂಕಾರಕ್ಕೆ ಅಗ್ರಪೂಜೆ ಸಲ್ಲಿಸಿಯೆ ಇದ್ದಾರೆ. ಏಕೆಂದರೆ ರೂಪಕ ಕಾವ್ಯದ ಜೀವನಾಳದಂತಿದೆ, ಉಪಮೆಯಂತೆಯೆ. ಆದರೆ ಉಪಮೆ ಸಾಧಿಸಲರಿಯದ ಮಹತ್ತು ರೂಪಕಕ್ಕೆ ಮಾತ್ರ ಸಾಧ್ಯ. ಕಾವ್ಯವೆಲ್ಲ ಪ್ರತಿಮಾ ಜಗತ್ತೆ ಆಗಿರುವುದರಿಂದ ಅಲ್ಲಿ ಅನಿವಾರ್ಯವಾಗಿ ರೂಪಕಕ್ಕೆ ಅಗ್ರಸ್ಥಾನ. ಕಾಲದಿಂದ ಕಾಲಕ್ಕೆ ಜನದಿಂದ ಜನಕ್ಕೆ ರುಚಿಯಿಂದ ರುಚಿಗೆ ಏನೆ ಬದಲಾವಣೆ ನಡೆಯಲಿ ಕಾವ್ಯಸಾಮ್ರಾಜ್ಯದಲ್ಲಿ ಪ್ರತಿಮಾವಿಧಾನದ ಒಂದು ಪಾದದಂತಿರುವ ರೂಪಕದ ಸ್ಥಾನಮಾನ ಅಧಿಕಾರಗಳಿಗೆ ಎಂದಿಗೂ ಕುಂದಿಲ್ಲ.[2] ಏಕೆಂದರೆ ಕಾವ್ಯದಲ್ಲಿ ರೂಪಕ ಕವಿಚೇತನದ ಶಕ್ತಿಮಾಪಕ.

ರೂಪಕ ಪ್ರತಿಮಾವಿಧಾನದ ಸರ್ವಲಕ್ಷಣಗಳಿಂದಲೂ ಸಂಪನ್ನವಾಗಿರುತ್ತದೆ. ಅದೊಂದು ಸೌಂದರ್ಯವಿಶೇಷ ಮಾತ್ರವಲ್ಲ, ಶಕ್ತಿವಿಶೇಷವೂ ಹೌದು. ಅದೊಂದು ಶಬ್ದಪ್ರಕಾರ ಮಾತ್ರವಲ್ಲ; ಅರ್ಥಪ್ರಕಾರ ಮಾತ್ರವಲ್ಲ; ಅನುಭವ ಪ್ರಕಾರವೂ ಆಗಿದೆ. ಅದು ರಸಶಕ್ತಿಯ ಸಂಚಾರಕ್ಕೆ ಪ್ರಣಾಳಿಕೆ ಮಾತ್ರವಾಗಿರದೆ ರಸಶಕ್ತಿಯ ಉದ್ಭವಕ್ಕೆ ಆಕರವೂ ಸ್ಥಾನವೂ ಆಗಿರುತ್ತದೆ. ಇದ್ದುದು ಯಾವುದನ್ನಾದರೂ ತೀಕ್ಷಣವಾಗಿ ಹೇಳುವುದಷ್ಟೆ ಅದರ ಕೆಲಸವಲ್ಲ; ಅದುವರಿಗೂ ಇಲ್ಲದಿದ್ದುದನ್ನು ಸೃಷ್ಟಿಸುವುದೂ ಅದರ ಕರ್ತವ್ಯ. ಎರಢು ಅನಿಲಗಳು ಸೇರಿ ಅವೆರಡರ ಗುಣಲಕ್ಷಣಗಳಿಗೆ ಸಂಪೂರ್ಣ ವಿಭಿನ್ನವಾದ ನೂತನವಾದ ಅನಿರೀಕ್ಷ್ಯವೂ ಅತರ್ಕ್ಯವೂ ಆದ ಹೊಚ್ಚ ಹೊಸ ಜಲರೂಪದ ನವೋನವ ವಸ್ತುವನ್ನು ಸೃಷ್ಟಿಸುವಂತೆ, ರೂಪಕ ತನ್ನ ಉತ್ತಮ ಅಭಿವ್ಯಕ್ತಿಯಲ್ಲಿ ನವೋನವ ಅನುಭುತಿಯನ್ನೆ ಸಹೃದಯ ಹೃದಯಕ್ಕೆ ದಳ್ಳುರಿಯಿರಿಯುತ್ತದೆ.[3] ಅಲ್ಲಿ ಉಕ್ತಿಪ್ರಕಾರವೆ ಅನುಭವ ಪ್ರಕಾರ. ಆಗ ಅದು ಅಲಂಕಾರವೂ ಅಲ್ಲ, ಚಮತ್ಕಾರವೂ ಅಲ್ಲ, ಅದೊಂದು ಅಪರೋಕ್ಷ ಸಾಕ್ಷತ್ತಾರ:

ಭೀಮನ ಗದಾಹತಿಗೆ ರಕ್ತಮಯ ದೇಹನಾಗಿ ಕೆಂಪಗೆ ಭೂಮಿಯ ಮೇಲೆ ಕೆಡೆದಿದ್ದ ದುರ್ಯೋಧನನ್ನು ‘ರುಧಿರದ ತಿಲಕನಾದನಲೈ ಧರಂಗನೆಗೆ’ ಎಂದು ಕವಿ ವರ್ಣಿಸಿದಾಗ; ಕುರುಕ್ಷೇತ್ರದ ಮಹಾರಣರಂಗದ ಶರಶಯ್ಯೆಯಲ್ಲಿ ಅಸ್ತಂಗತನಾಗಿ ಮಲಗಿದ್ದ ಭೀಷ್ಮನ ಮಹೋನ್ನತಿಯನ್ನು ‘ಪಡುವಣಶೈಲ ವಿಪುಲಸ್ತಂಭ ದೀಪಿಕೆಯಂತೆ ರವಿ ಮೆರೆದ’ ಎಂದು ಸಹೃದಯ ಹೃದಯಾಸ್ಫೋಟನಕರವಾಗಿ ಬಣ್ಣಿಸಿ ನಾರಣಪ್ಪ ನಮ್ಮನ್ನು ಭವ್ಯತೆಗೆ ಬೀಸಿ ತೆಗೆದೊಗೆದಾಗ; ಚಕ್ರವ್ಯೂಹ ಮಹೋಗ್ರ ಸಂಗ್ರಾಮದಲ್ಲಿ ಮಡಿದ ಅಭಿಮನ್ಯುವಿನ ಮರಣಾಶಂಕೆಯಿಂದ ಶೋಕ ಕ್ರೋಧ ಭೀಷಣವಾಗಿ ಪಾಳೆಯಕ್ಕೆ ಹಿಂತಿರುಗಿದ ಅರ್ಜುನನ ಪ್ರಳಯೋಗ್ರ ಭಯಂಕರತೆಯನ್ನು ವರ್ಣಿಸುವ ‘ಮೃತ್ಯು ಮರೆಹೊಕ್ಕಳು ಮಹೇಶ್ವರನ’ ಎಂಬ ಕವಿಯಗ್ಗಢಣೆಗೆ ದಿಗಿಲುಗೊಂಡಾಗ: ನಮ್ಮ ಚೇತನದಲ್ಲಿ ಸಂಭವಿಸುವ ರಸಾಗ್ನಿಕ್ರಿಯೆಗೆ ಬೇರಾವ ಹೆಸರು ತಾನೆ ಕೊಡುತ್ತೀರಿ? ಕೊಡಲು ಸಾಧ್ಯ? ಅದು ದಿಟವಾಗಿಯೂ ಒಂದು ಅಪರೋಕ್ಷಾನುಭುತಿಃ ರೂಪಕಾನುಭೂತಿಃ ವಿಭೂತಿ ಸಂಚಾರ ಸೇತು ರೂಪಿ ಮತ್ತು ಅಧಿದೇವತಾ ಆವಿರ್ಭೂತಿ ಸ್ವರೂಪಿ!

ನಮ್ಮ ರೂಪಕ ಪ್ರಪಂಚವೆಲ್ಲ ಮುಖ್ಯವಾಗಿ ಎರಡು ತೆರನಾದ ಪ್ರತಿಮಾ ವರ್ಗಗಳಿಂದ ಸಿದ್ದವಾಗುತ್ತದೆ. ಒಂದು ಪೌರಾಣಿಕ ಕಾಲ್ಪನಿಕ ಕ್ಷೇತ್ರದಿಂದ ತನ್ನ ಸಾಮಗ್ರಿಯನ್ನು ಸಂಪಾದಿಸಿದರೆ, ಇನ್ನೊಂದು ನಿಸರ್ಗ ಕ್ಷೇತ್ರದಿಂದ ಪುಷ್ಠಿ ಪಡಿಯುತ್ತದೆ. ಅದರ ಶ್ರೀಮಂತತೆಗೆ ಪೋಷಣೆ ನೀಡುವುದರಲ್ಲಿ ಇತರ ಕ್ಷೇತ್ರಗಳು ಗೌಣಸ್ಥಾನದಲ್ಲಿವೆ. ಇತ್ತೀಚೆಗೆ ವೈಜ್ಞಾನಿಕ ಕ್ಷೇತ್ರದಿಂದಲೂ ಅದರ ಸಂಪತ್‌ ಸಮುದ್ರಕ್ಕೆ ನದೀಪ್ರವಾಹಗಳು ಸಂಗಮವಾಗುತೊಡಗಿವೆ:

ಮೇರು, ಕೈಲಾಸ, ಕಲ್ಪತರು, ಸ್ಪರ್ಶವೇದಿ, ಕಾಮಧೇನು, ಐರಾವತಹ, ವಡಬ, ಸಪ್ತಸಾಗರ, ಕುಲಾದ್ರಿ, ಹರಚಾಪ, ಸುರಚಾಪ, ಇಕ್ಷುಚಾಪ, ಅಪ್ಸರಿ, ದಿಗ್ಗಜ, ದಿಕ್ಪಾಲ, ಆದಿಕೂರ್ಮ, ಆದಿಶೇಷ, ಮಂದರ, ವಾಸುಕಿ, ಅಮೃತ, ಕಾಲಕೂಟ, ಹರಜಟಾ, ಶಂಖ, ಚಕ್ರ ಗದಾ, ಇತ್ಯಾದಿ, ಇತ್ಯಾದಿ, ಇತ್ಯಾದಿ. ಆಕಾಶ, ಕಮಲ, ಚಂದ್ರ, ಸೂರ್ಯ, ಗಜ, ಹರಿಣ, ಸಿಂಹ, ಫಣಿ, ಸಮುದ್ರ, ಪರ್ವತ, ಪಲ್ಲವ, ರಂಭೆ, ಬಿಂಬ, ಶುಕ, ಪಿಕ, ಮಲಯಾನಿಲ, ಮಲಯಜ, ಚೂತ ಇತ್ಯಾದಿ, ಇತ್ಯಾದಿ, ಇತ್ಯಾದಿ.

ಕೆಲವು ರೂಪಕಗಳು ಕೇವಲ ಕಾವ್ಯಭಾಶಾ ಸಂಪ್ರದಾಯಗಳಾಗಿ ಪರಿಣಮಿಸಿರುವುದರಿಂದಲೂ, ಕವಿಯಾದ ಮೇಲೆ ಕವಿ ಪ್ರಯೋಗಿಸಿ ಕೆಲವು ತಮ್ಮ ಹೊಸತನವನ್ನೆ ಕಳೆದುಕೊಂಡಿರುವುದರಿಂದಲೂ, ಮತ್ತೆ ಕೆಲವು ‘ಕವಿ ಸಮಯ’ಗಳೆಂಬ ಹೆಸರಿಗೆ ಪಕ್ಕಾಗಿರುವುದರಿಂದಲೂ ಅವನ್ನೆಲ್ಲ ಮೃತರೂಪಕಗಳೆಂದು ಕರೆಯತೊಡಗಿದ್ದಾರೆ. ಆದ್ದರಿಂದ ಕವಿಯ ಪ್ರತಿಭೆಯ ನವ ನವೋನ್ಮೇಷನಕ್ಕೆ ಆ ಹಳೆಯ ರೂಪಕಗಳು ಸಾಕ್ಷಿಯಾಗಲಾರವೆಂದು ಈಚಿನವರು, ರಮಣೀಯತಾ ವಲಯಕ್ಕೆ ಸೇರಿದುವಲ್ಲ ಎಂದು ಹಿಂದೆ ಪರಿಗಣಿತವಾಗಿದ್ದ, ವಿವಿಧ ವಿಲಕ್ಷಣ ವಲಯಗಳಿಂದ ತಮ್ಮ ಹೊಸ ರೂಪಕ ಸೃಷ್ಟಿಗೆ ಸಾಮಗ್ರಿಯನ್ನು ಆಮದು ಮಾಡಿಕೊಳ್ಳಲಾರಂಭಿಸದ್ದಾರೆ. ಒಮ್ಮೊಮ್ಮೆ ಅತಿಪರಿಚಯದಿಂದ ಅವಜ್ಞವಾಗಿರುವ ರಮಣೀಯತೆಯ ಪ್ರಭಾವದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅವಸರದಲ್ಲಿ ಕುರೂಪದ, ವಿಕಾರದ, ಅಸಭ್ಯದ ಮತ್ತು ಅಶ್ಲೀಲದ ಕ್ಷೇತ್ರಗಳಿಗೂ, ಹೇಸಿಗೆ ಮೂಗು ಮುಖಗಳಿಗೂ ಹಾರುವಂತೆ ದುಡುಕಿ ಕಾಲಿಟ್ಟು, ಕಲ್ಪನಾ ಭಾಹುಗಳನ್ನು ಪ್ರಸರಿಸಿ ಕವಿಪ್ರತಿಭೆ ತನ್ನ ಅಸ್ತಿತ್ವನ್ನೂ ಸ್ವಾತಂತ್ರ್ಯವನ್ನೂ ನೂತನತೆಯನ್ನೂ ಸಾಧಿಸಲೂ ಸಂಸ್ಥಾಪಿಸಲೂ ಪ್ರಯತ್ನಿಸುತ್ತಿದೆ. ಉದ್ಯಾನದ ಸುಗಂಧ ಸಾಕಾಗಿ ಹೋಗಿ ಇಲಿ ಕೊಳೆತು ನಾರು ಚರಂಡಿಯನ್ನೂ ಮೂಸಲು ಹಿಂಜರಿಯುತ್ತಿಲ್ಲ!

ಅತ್ಯಂತ ಪ್ರಾಚೀನ ಕಾಲದ ನರಪಶುವನ್ನು ಮಾನವತ್ವಕ್ಕೂ ದೇವತ್ವಕ್ಕೂ ಕೊಂಡೊಯ್ದು, ಅದರ ಚೇತನೆ ತಮಸ್ಸಿನಿಂದ ಜ್ಯೋತಿಗೂ ಮೃತ್ಯುವಿಂದ ಅಮೃತಕ್ಕೂ ಏರುವಂತೆ ಕೈಹಿಡಿದು ನಡೆಸಿದ ವಾಗ್ದೇವಿಯ ಚರಣ ಚಿಹ್ನೆಗಳಂತೆ ಮಾನವ ಸಮಷ್ಟಿ ಪ್ರಜ್ಞಾಭೂಮಿಕೆಯಲ್ಲಿ ಅಂಕಿತವಾಗಿರುವ ಆ ಪೌರಾಣಿಕಾದಿ ಪ್ರತಿಮೆಗಳ ಕಾಲ ಪೂರೈಸಿತೆಂದೂ, ಅವು ನಮ್ಮ ವಿಕಾಸ ಪಥದಲ್ಲಿ ಮಾಡಬೇಕಾದ ಕೆಲಸವನ್ನೆಲ್ಲ ಮಾಡಿ ಮುಗಿಸಿ ಕೆಲಸಕ್ಕೆ ಬಾರದವಾಗಿವೆಯೆಂದೂ, ಆ ರೂಪಕಗಳೆಲ್ಲ ನಿರ್ಜೀವವಾಗಿರುವುದರಿಂದ ಅವು ಇನ್ನು ಮುಂದೆ ಭಾವವಾಹಕಗಳಾಗಿ ರಸಸಂಸಾರಕ್ಕೆ ಯೋಗ್ಯವಾಗಲಾರವೆಂದೂ ಅಧುನಿಕವಾದ ಒಂದು ಸಿದ್ದಾಂತ ಪ್ರತಿಪಾದಿಸುತ್ತದೆ.[4]

ಆ ವಾದ ನಿಜವಾಗಿದ್ದರೆ ಶಾಶ್ವತ ಕೃತಿಗಳೆಂದು ಕರಿಯಿಸಿಕೊಳ್ಳುವ ಹಳೆಯ ಕಾವ್ಯಗಳನ್ನು ಇಂದು ಯಾರೂ ಓದುವ ಗೋಜಿಗೆ ಹೋಗುತ್ತಿರಲಿಲ್ಲ. ಓದಿದ್ದರೂ ಅವುಗಳಿಂದ ಭಾವಪುಷ್ಟಿಯನ್ನಾಗಲಿ ರಸಾನುಭವವನ್ನಾಗಲಿ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ಆ ಹಳೆಯ ಶಾಶ್ವತ ಕೃತಿ ಅಥವಾ ಚಿರಕಾವ್ಯಗಳಂತೆಯೆ ಪೌರಾಣಿಕ ಪ್ರತಿಮಾಸಾಮಗ್ರಿಯನ್ನು ಬಳಸಿಕೊಂಡು ಒಂದಾನೊಂದು ಕಾಲದಲ್ಲಿ ಜೀವಂತವೂ ಜನಪ್ರಿಯವೂ ಆಗಿದ್ದ ಇತರ ಕಾವ್ಯಗಳು ಜನಮನದಿಂದ ಜುಗುಳ್ದು ಲಯವಾಗುತ್ತಲೂ ಇರಲ್ಲಿಲ್ಲ. ಪ್ರಪ್ರಾಚೀನ ಪೌರಾಣಿಕ ರೂಪಗಳಿಂದಲೆ ತಮ್ಮ ಮೈಕಟ್ಟಿಕೊಂಡಿರುವ ಅ ಕಾವ್ಯಗಳಲ್ಲಿ ಕೆಲವು ನಿತ್ಯ ನೂತನಾಗಿ ಇಂದಿಗೂ ಜನಪ್ರಿಯವಾಗಿವೆ. ಆದ್ದರಿಂದ ಪ್ರತಿಮೆಯ ಪೌರಾಣಿಕತೆಯನ್ನಾಗಲಿ ರೂಪಕದ ಪ್ರಾಚೀನತೆಯನ್ನಾಗಲಿ ಕಾವ್ಯದ ನಿಸ್ಸಾರತೆಗೆ ಸರ್ವಕಾರಣವನ್ನಾಗಿ ಒಡ್ಡುವುದರಲ್ಲಿ ಅರ್ಥವಿಲ್ಲ. ಮುಖ್ಯ ಕಾರಣವಿರುವುದು ಕವಿಶಕ್ತಿಯಲ್ಲಿ, ಕವಿಪ್ರತಿಭೆಯಲ್ಲಿ. ಕವಿಗೆ ಚಿತ್‌ತಪಸ್‌ ಶಕ್ತಿಯಿದ್ದು ಪ್ರತಿಭೆ ನವೋನವಾಗಿದ್ದರೆ ರೂಪಕ ಸಾಮಗ್ರಿ ಪ್ರಾಚೀನವೂ ಪೌರಾಣಿಕವೊ ನವೀನವೊ ನೈಸರ್ಗಿಕವೊ ವೈಜ್ಞಾನಿಕವೊ ಯವುದೆ ಆಗಿರಲಿ ಸ್ವತಃಸಿದ್ದವಾಗಿರುತ್ತದೆ ನಿತ್ಯನೂತನವಾದ ರಸಪ್ರತೀತಿ. ಕುಕವಿಯ ಕೈಯಲ್ಲಿ ಸಿಕ್ಕಿ ಮೃತರೂಪಕವೆಂದು ಅಪಖ್ಯಾತಿಗೊಳಗಾದ ರೂಪಕ ಪ್ರತಿಮೆಯೂ ಸತ್ಕವಿಯ ಅಮೃತಹಸ್ತ ಸ್ಪರ್ಶವಾದೊಡನೆ, ಸಾಧಕ ಭಕ್ತನ ಆವೇಶದ ಆವೇಗಕ್ಕೆ ಕಲ್ಲಿನ ವಿಗ್ರಹವೂ ಜಾಗ್ರನ್ಮೂರ್ತಿಯಾಗುವಂತೆ, ಭಾವಮಯ ದೇವತೆಯಾಗಿ ಉಜ್‌ಜ್ವಲ ಚೈತನ್ಯದಿಂದ ರಸದೇದೀಪ್ಯವಾಗುತ್ತದೆ!

ರೂಪಕವೂ ಪ್ರತಿಮಾವಿಧಾನದ ಒಂದು ಪ್ರಕಾರವೆ. ಪ್ರತಿಮಾ ಶಕ್ತಿ ಸಂಚಾರದಿಂದಲೆ ರೂಪಕದ ಸಾರ್ಥಕ್ಯ ಸಿದ್ದವಾಗುತ್ತದೆ. ಉತ್ತಮ ರೂಪಕದ ಆವಿರ್ಭಾವಕ್ಕೆ ಪ್ರಪ್ರಥಮ ಕಾರಣವಿರುವುದು ಕವಿಪ್ರತಿಭೆಯ ರಸಾನುಭವ ಶಕ್ತಿಯಲ್ಲಿ. ಆ ಶಕ್ತಿಯ ಅಭಿವ್ಯಕ್ತಿಗಾಗಿ ಉಕ್ಕಿ ಹೊಮ್ಮುತ್ತದೆ. ವ್ಯಂಗ್ಯವಾಪಾರದಿಂದ ಮಾತ್ರ ಅನುಭವಗೋಚರವಾಗುವ ಆ ಶಕ್ತಿ ರೂಪಕೋಕ್ತಿಯ ವಾಚ್ಯ ಮತ್ತು ಲಕ್ಷ್ಯಾರ್ಥಗಳಲ್ಲಿ ವ್ಯವಹರಿಸಿದರೂ ಅವುಗಳಿಂದಲೆ ಮುಗಿದು ಬಿಡುವುದಿಲ್ಲ. ಅನುಕ್ತವಾದ ವ್ಯಂಗ್ಯಾರ್ಥದಲ್ಲಿ ಮಿಂಚಿ, ವಾಚ್ಯ ಲಕ್ಷ್ಯಗಳೆರಡಕ್ಕೂ ಅನೂಹ್ಯವಾದ ಅತ್ಯಂತ ನೂತನವಾದ ಅರ್ಥಶಕ್ತಿಯಾಗಿ, ಸದ್ಯೋನಿರ್ಮಿತವಾಗುವ ಒಂದು ಚಿತ್ತಭಂಗಿಯ ಮೇಘಭಿತ್ತಿಯಲ್ಲಿ ಥಳ್ಳನೆ ಹೊಳೆಯುವ ಭಾವದ ಝಳಪಿಕೆಯಾಗಿ ಸಹೃದಯ ಹೃದಯ ಸಂಚಾರಿಯಾಗುತ್ತದೆ.[5] ಅಲ್ಲಿ ಶಕ್ತಿಯೆ ಮುಕ್ಯ ಮತ್ತು ಗಮ್ಯ. ಉಳಿದ ಅರ್ಥಗಳೇನಿದ್ದರೂ ನಿಮಿತ್ತಮಾತ್ರ. ಅಥವಾ ಗೌಣ ಅಥವಾ ಸಹಾಯಕ, ಅಥವಾ ಪೀಠಪ್ರಾಯ.

‘ಮೃತ್ಯು ಮರೆಹೊಕ್ಕಳು ಮಹೇಶ್ವರನ’ ಎಂಬ ಉಕ್ತಿ ಅಥವಾ ಭಣಿತಿ ನಾರಣಪ್ಪನ ಕವಿಪ್ರತಿಭೆ ತತ್ಸಮಯದಲ್ಲಿ ಯಾವ ಭಾವಭಂಗಿಯ ತೀವ್ರಾನುಭವದ ಅಭಿವ್ಯಕ್ತಿಗಾಗಿ ತಪಸ್ವಿಯಾಗಿದ್ದಿತೋ ಆ ಭಾವಭಂಗೀ ಶಕ್ತಿಯನ್ನು ನೇರವಾಗಿ ಸಹೃದಯ ಹೃದಯಕ್ಕೊಯ್ಯುವ ರೂಪಕ ಪ್ರತಿಮೆ. ಅದರ ಸಾರ್ಥಕತೆ ಇರುವುದು ಅದರ ಅರ್ಥದ ಆಚೆಯಲ್ಲಿ. ಅದೆಂತಹ ಭಯಂಕರ ಸನ್ನಿವೇಶ: ಅರ್ಜುನನ ಮಗ, ಶ್ರೀ ಕೃಷ್ಣನ ಅಳಿಯ, ಯುಧಿಷ್ಠಿರ ಭೀಮಾದಿಗಳ ಅಕ್ಕರೆಯ ಮೂರ್ತಿ, ಪಾಂಡವರ ಹೆಮ್ಮೆ, ಕೌರವರ ಭಯಗೌರವ, ಅಭಿಮನ್ಯು ಕುರುಕ್ಷೇತ್ರದಲ್ಲಿ ತೀರಿಹೋಗಿದ್ದಾನೆ. ಶ್ರೀ ಕೃಷ್ಣನ ಕಪಟೋಪಾಯದ ಅಶರೀರವಾಣಿಯಿಂದ ಅರ್ಜುನನಿಗೆ ಆ ಘೋರ ದುರಂತದ ಅರ್ಧ ಸುನಿಶ್ಚಿತ ಅರ್ಧ ಅನಿಶ್ಚಿತ ಎಂಬಂತಿದ್ದು ಹೃತ್‌ಪೀಡಕರವಾಗಿರುವ ಅರಿವೂ ಉಂಟಾಗಿದೆ. ಅವನು ಪಾಳೆಯವನ್ನು ಸಮೀಪಿಸಿದಂತೆಲ್ಲ ದಿಗಿಲು ಹೆಚ್ಚುತ್ತದೆ, ಅವನ ರೌದ್ರ, ಅವನ ಶೋಕ, ಅವನ ಭೀಷಣ ಸ್ಥಿತಿ; ಮುಂದೇನಾಗಿಬಿಡುತ್ತದೆಯೋ ಎಂಬ ಸಮಸ್ತ ಜಗತ್ತಿನ ಹೆದರಿಕೆ, ಅಶಂಕೆ; ಇತ್ಯಾದಿ, ಇತ್ಯಾದಿ. ಉಕ್ತಿಗಿರಲಿ ಆಲೋಚನೆಗೂ ಅತೀತವಾದ, ಏನನ್ನೆಲ್ಲ ಧ್ವನಿಸುತ್ತದೆ, ಆ ‘ಮೃತ್ಯು ಮರೆಹೊಕ್ಕಳು ಮಹೇಶ್ವರನ’ ಎಂಬ ರೂಪಕ ಪ್ರತಿಮೆ. ಯಾರ ಹೆಸರನ್ನು ಕೇಳಿದೊಡನೆ ಪ್ರಾಣಿಕೋಟಿಗಳೆಲ್ಲ ಗಡಗಡ ನಡುಗುತ್ತವೆಯೊ ಆ ಮೃತ್ಯುವೆ ಮರೆಹೊಕ್ಕಳಂತೆ! ಯಾರನ್ನು? ಸಾಕ್ಷಾತ್‌ ಮೃತ್ಯುಂಜನನ್ನು! ಮೃತ್ಯು ಓಡಿಹೋಗಿ ಮಹೇಶ್ವರನನ್ನು ಮರೆಹೋಗುವ ಪ್ರತಿಮೆ ಭಾವಸಮುದ್ರವನ್ನೆ ತನ್ನ ಶಕ್ತಿಶುಕ್ತಿಕೆಯಲ್ಲಿ ಗರ್ಭಯ್ಸಿಕೊಂಡಿರುವ ಅದ್ಭುತ ರೂಪಕವಾಗಿದೆ. ಬೇರೆ ಇನ್ನಾವ ಉಕ್ತಿಯಿಂದಲೂ ಅದರ ಆ ರುಂದ್ರಾಭಿವ್ಯಕ್ತಿ ಸಾಧ್ಯವಲ್ಲ. ಆ ಪ್ರತಿಮೆ ಅದರ ಅನಿವಾರ್ಯವಾದ, ಅಸದೃಶವಾದ, ಏಕೈಕವಾದ ಅಭಿವ್ಯಕ್ತಿಯಾಗಿದೆ. ಅಂತಹ ಅನಿವಾರ್ಯತೆ, ಅಂತಹ ಅಸದೃಶತೆ, ಅಂತಹ ಏಕೈಕತಾ ಭಾವ ಇವು ಉತ್ತಮ ರೂಪಕದ ಪ್ರಾಣಸ್ಪಂದನಗಾಳಗಿರುತ್ತವೆ.

ಉತ್ತಮ ರೂಪಕದ ಮಾತಿರಲಿ, ಕಾವ್ಯಪ್ರಪಂಚದಲ್ಲಿ ವಸ್ತುಭಾವಾಭಿವ್ಯಕ್ತಿಗೆ ನಿಘಂಟಿನ ಪದಗಳೆಷ್ಟು ಆವಶ್ಯಕವೊ ಅದಕ್ಕಿಂತೇನೂ ಕಡಿಮೆ ಆವಶ್ಯಕವಾಗಿಲ್ಲ, ಅತಿಪರಿಚಯದಿಂದ ಅವಜ್ಞವಾಗಿರುವ ರೂಪಕಗಳೂ ಕೂಡ. ಶಬ್ದಕೋಶದಲ್ಲಿರುವ ಹಳೆಯ ಪದಗಳನ್ನೆ ಉಪಯೋಗಿಸಿಕೊಂಡು ಒಬ್ಬೊಬ್ಬ ಹೊಸ ಕವಿಯೂ ಹೊಸಹೊಸ ರಸಸಾಮಗ್ರಿಯನ್ನು ಸೃಷ್ಟಸುತ್ತಾನೆ. ಮೃತಪದಗಳೆಂದು ಅವುಗಳನ್ನು ಬಿಟ್ಟರೆ ಕಾವ್ಯಸೃಷ್ಟಿಯನ್ನೆ ಕೈ ಬಿಡಬೇಕಾಗುತ್ತದೆ. ಆ ಪದಗಳನ್ನು ಹಿಂದಿನ ನೂರಾರು ಕವಿಗಳು ಪದೇ ಪದೇ ಉಪಯೋಗಿಸಿದ್ದರೂ ಅವುಗಳನ್ನೆ ನವ್ಯವಾಗಿ ಉಪಯೋಗಿಸಿ ನವ್ಯ ಕಾವ್ಯ ಸೃಷ್ಟಿ ಮಾಡುತ್ತಾನೆ, ಪ್ರತಿಭಾಶಾಲಿಯಾದ ಕವಿ. ಪದಗಳನ್ನು ಮೃತ ಪದಗಳೆಂದು ಕೈಬಿಟ್ಟರೆ ಹೇಗೊ ಹಾಗೆಯೆ ರೂಪಕಗಳನ್ನೆಲ್ಲ ಮೃತರೂಪಕಗಳೆಂದು ಕೈಬಿಟ್ಟರೆ ಕಾವ್ಯಶ್ರೀ ದರಿದ್ರೆಯಾಗುತ್ತಾಳೆ; ಇಲ್ಲವೆ ನೂತನ ಸಾಧನೆಗಾಗಿ ಆಕೆ ವಿಕಾರ ರೂಪಧಾರಣೆ ಮಾಡಬೇಕಾಗುತ್ತದೆ.

ಒಂದೊಂದು ಕವನವೂ ಅದರ ಅಂಗಾಂಗದಲ್ಲಿ ಎಂತೊ ಅಂತೆ ಅದರ ಸಮಗ್ರತೆಯಲ್ಲಿಯೂ ಒಂದು ಸಾಂಗೋಪಾಂಗವಾದ ಅಖಂಡ ಪ್ರತಿಮೆಯೆ ಆಗಿರುವುದರಿಂದ, ಆ ಪ್ರತಿಮಾಚೈತನ್ಯ ಪದಪದಗಳಲ್ಲಿಯೂ ಪ್ರವೇಶಿಸಿ, ಪದಪುಂಜ ಕಾವ್ಯಾದಿಗಳಲ್ಲಿ ಪ್ರವಹಿಸುತ್ತದೆ. ಆ ದೃಷ್ಟಿಯಲ್ಲಿ ಸಮೀಕ್ಷಿಸಿದರೆ ಉತ್ತಮ ಕವನದಲ್ಲಿ ಒಂದೊಂದು ಪದವೂ ರೂಪಕವೆ ಆಗಿರುತ್ತದೆ. ಉತ್ತಮ ಕಾವ್ಯದಲ್ಲಿ ಉಚಿತ ಸ್ಥಾನದಲ್ಲಿ ನಿಂತಾಗ ನಿಘಂಟುವಿನಲ್ಲಿ ಸಾಮಾನ್ಯವಾಗಿ ತೋರುವ ಪದಕ್ಕೂ ರೂಪಕತ್ವ ಉಂಟಾಗುತ್ತದೆ ಎಂದಮೇಲೆ, ಜಾತಿಯಲ್ಲಿ ರೂಪಕವೆ ಆಗಿರುವ ಪದಕ್ಕೆ ಆ ರಮಣೀಯತೆ ಇಲ್ಲವಾಗುತ್ತದೆಯೆ? ಹಾಗೇನಾದರೂ ಇಲ್ಲವಾಗಿ ತೋರಿದರೆ ಅದು ಕವಿಯ ಶಕ್ತಿ ಶೂನ್ಯತೆಯನ್ನೊ, ತಪ್ಪಿದರೆ ಸಹೃದಯನ ಸಾಮರ್ಥ್ಯರಿಕ್ತತೆಯನ್ನೊ, ಸೂಚಿಸುತ್ತದೆ ಅಷ್ಟೆ.

ಪ್ರತಿಮಾಶಕ್ತಿ ಸಂಚಾರವೆ ರೂಪಕದ ಜೀವನಾಡಿ. ದಿನ ಬಳಕೆಯ ಅನೇಕ ರೂಪಕಗಳಲ್ಲಿ ಆ ಜೀವನಾಡಿ ಮಿಡಿಯದಿರುವಂತೆ ಭಾಸವಾಗುವುದರಿಂದ ಅವನ್ನು ಮೃತರೂಪಕಗಳೆಂದು ಕರೆಯುತ್ತೇವೆ. ಆದರೆ ನಿಜವಾಗಿಯೂ ಮೃತವಾಗಿರುವುದು ಆ ರೂಪಕಗಳಲ್ಲ; ಅವುಗಳನ್ನು ಶಕ್ತಿಯುತವಾಗಿ ಬಳಸಲಾರದ ಕವಿ, ಅಥವಾ ಅವುಗಳಿಗೆ ಜೀವತುಂಬಲಾರದ ಸಹೃದಯ. ಏಕೆಂದರೆ ಅವೇ ಮೃತರೂಪಗಳು ಸಂಜೀವನೀಶಕ್ತಿ ಹರಿಯುವ ಲೇಖನಿಗೆ ತಾಕಿದಾಗ ಜೀವಂತವಾಗಿ, ಚೈತನ್ಯಮಯವಾಗಿ, ಸದ್ಯೋಜಾತವೆಂಬಂತೆ ನವೋನವವಾಗಿ ಅರಳಿ ನಿಮಿರುವುದನ್ನು ಕಾಣುತ್ತೇವೆ: ಸಮರ್ಥ ಸೇನಾನಿ ತನ್ನ ಎಚ್ಚರಿಕೆಯ ಆಜ್ಞೆಯನ್ನು ಉತ್ತಾಲಧ್ವನಿಯಿಂದ ಅಧಿಕಾರಯುತವಾಗಿ ಆಘೋಷಿಸಿದಾಗ ಕವಾತಿಗೆ ನಿಂತಿರುವ ಅಥವಾ ರಣಕ್ಕೇ ನುಗ್ಗುವ ಸೈನಿಕರ ಮೇಲಾಗುವ ಪರಿಣಾಮದಂತೆ!

ಬಳಸಿ ಬಳಸಿ, ಸವೆದೂ ಸವೆದೂ, ಚಲಾವಣೆಗೆ ಅತ್ಯಂತ ಅನರ್ಹವಾಗಿರುವ ನಾಣ್ಯದಂತೆ ಮೃತವೆಂದು ಪರಿಗಣಿತವಾಗಿರುವ ಒಂದು ರೂಪಕವನ್ನು ತೆಗೆದುಕೊಳ್ಳೋಣ: ಮುಖಚಂದ್ರ? ಪಾದಪದ್ಮ? ಕಮಲನೇತ್ರ? ನೂರಾರಿವೆ, ಯಾವುದನ್ನಾರಿಸಕೊಂಡರೂ ಒಂದೆ. ಸದ್ಯಕ್ಕೆ ಪಾದಪದ್ಮವೆ ಇರಲಿ! ‘ಮುಖಚಂದ್ರ’ ‘ಕಮಲನೇತ್ರ’ಗಳಲ್ಲಿ ಜೀವದಲ್ಲಿ ತಾರುಣ್ಯವಿರುವ ಕೆಲವರಿಗಾದರೂ, ತಮ್ಮ ಗೋಪ್ಯವಾದ ವೈಯಕ್ತಿಕ ಕಾರಣಗಳಿಗಾಗಿಯಾದರೂ, ಒಂದಿನಿತು ಭಾವಸಂಚಾರವಾದರೂ ಆದೀತೇನೊ! ಆದರೆ ‘ಪಾದಪದ್ಮ’ ಅಂತಹ ಅಪಕೀರ್ತಿಗೆ ದೂರವಾಗಿ ಭಾವದ ಮರುಭೂಮಿಗೇ ದಾಖಲಾದಂತಿದೆ. ಆಸ್ಪತ್ರೆಯಲ್ಲಿ ರೋಗಿಗಳ ವಾರ್ಡಿನಲ್ಲಿಯೂ ಅದಿರುವಂತಿಲ್ಲ; ಶವದ ಮನೆಗೇ ಹಾಕಿಬಿಟ್ಟಿದ್ದಾರೆ!

ಪಾದಪದ್ಮ, ಪದಕಮಲ, ಅಡಿದಾವರೆ, ಚರಣಾರವಿಂದ, ಅಂಘ್ರಿಪಯೋಜ ಇತ್ಯಾದಿ ಇತ್ಯಾದಿ ಸಾವಿರಾರು ರೂಪಗಳಲ್ಲಿ ಅದು ಬಳಕೆಯಲ್ಲಿದೆ. ಮಕ್ಕಳು ಬರಿಯುವ ಪತ್ರಗಳಿಂದ ಹಿಡಿದು ಮಹರ್ಷಿ ಮಾಡುವ ಪ್ರಾರ್ಥನೆಯವರೆಗೂ ಅದರ ವ್ಯಾಪ್ತಿ ವಿಸ್ತಾರವಾಗಿದೆ. ‘ತಂದೆಯವರ ಚರಣಾರವಿಂದಕ್ಕೆ’ ಎಂದು ಬಾಲಕ ಬರೆದರೆ, ‘ನಿನ್ನ ಪದಕಮಲದಲಿ’ ಎಂದು ಕವಿಯ ಪ್ರಾರ್ಥನೆ ಪ್ರಾರಂಭವಾಗುತ್ತದೆ. ಅಷ್ಟೆ ಅಲ್ಲ; ಭಗವಂತನನ್ನು ನಿರಾಕಾರನೆಂದು ಭಾವಿಸಿ ವಿಗ್ರಹಾರಾಧನೆಯನ್ನು ತಿರಸ್ಕರಿಸುವ ಉಪಾಸನಾ ವಿಧಾನಕ್ಕೆ ಸೇರಿದ ಕವಿಯೂ ‘ಮಣಿಯಲೆನ್ನ ಶಿರವು ನಿನ್ನ ಚರಣ ಧೂಳಿ ತಲದಲಿ’ ಎಂದು ತನ್ನ ಭಕ್ತಿ ದೈನ್ಯಗಳನ್ನು ನೆವೇದಿಸುತ್ತಾನೆ. ಎಂತಹ ಮಹೋಗ್ರ ವಿಗ್ರಹ ಭಂಜಕ ಮತವಾಗಲಿ ಈ ‘ಪಾದಪದ್ಮ’ದ ಪ್ರವೇಶದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.

ಸಾಧ್ಯವಾಗುವುದೂ ಇಲ್ಲ. ಏಕೆಂದರೆ ಆ ‘ಪಾದಪದ್ಮ’ದ ಅರ್ಥವಿರುವುದು ತತ್ತ್ವತಃ ಪಾದದಲ್ಲಿಯೂ ಅಲ್ಲ, ಪದ್ಮದಲ್ಲಿಯೂ ಅಲ್ಲ; ಯಾವ ಪಾದವಾಗಲಿ ಪದ್ಮವಾಗಿರುವುದು ಅಸಂಭವವಾದ್ದರಿಂದ ಪಾದಪದ್ಮದಲ್ಲಿಯೂ ಅಲ್ಲ. ಹಾಗಾದರೆ ಅದರ ಅರ್ಥ?

ಆ ರೂಪಕದ ಪ್ರತಿಮೆ ಯಾವ ಭಾವಸತ್ಯವನ್ನು ಪ್ರತಿಮಿಸುತ್ತದೆಯೊ ಆ ಅನುಭವಸತ್ಯದ ವಸ್ತುಸಂವಾದವಿರುವುದು ಒಂದು ಆತ್ಮಭಂಗಿಯಲ್ಲಿ; ಹೊರಗಣ ಯಾವ ವಸ್ತುಗಳಲ್ಲಿಯೂ ಅಲ್ಲ. ಭಕ್ತಿ, ವಿನಯ ದೈನ್ಯ, ನತಿ, ಶರಣಾಗತಿ, ಅಸಹಾಯಕತೆ, ಸಮರ್ಪಣೆ, ಶ್ರದ್ಧೆ ಮೊದಲಾದ ಭಾವ ಸಮುಚ್ಚಯದಿಂದ ಸಿದ್ದವಾಗುವ ಒಂದು ಭಂಗಿಯೆ ಅದರ ವ್ಯಂಗ್ಯ ವ್ಯಾಪಾರದಿಂದ ಸ್ಫುರಿಸುವ ‘ಅರ್ಥ’. ಆ ಅರ್ಥ ವಾಚ್ಯವ್ಯಾಪಾರಗಮ್ಯವಲ್ಲ. ಲಕ್ಷ್ಯಾರ್ಥವೂ ತೋರುಬೆರಳಾಗಿ ನಿ‌ಲ್ಲುತ್ತದೆಯೆ ಹೊರತು ಅದನ್ನು ಮುಟ್ಟಲಾರದು.

ಪಾದವು ಪದ್ಮದಂತೆ ಸುಂದರವಾಗಿ, ಸುವರ್ಣವಾಗಿದೆ, ಮಂಗಳವಾಗಿದೆ, ಪೂಜ್ಯವಾಗಿದೆ, ಮನೊಹರವಾಗಿದೆ, ಎಂದು ಪದ್ಮದ ಲಕ್ಷಣಗಳನ್ನು ಪಾದಕ್ಕೆ ಸಮನ್ವಯಿಸಬಹುದು. ಆದರೆ ಅದು ಸಾಲುವುದಿಲ್ಲ, ಏಕೆಂದರೆ ಪಾದವೆ ಇಲ್ಲದೆ, ಶರೀರವೆ ಅಲ್ಲದೆ, ಅಂಗಾಂಗಗಳಾವುದನ್ನೂ ಒಪ್ಪದ ನಿರಾಕಾರಕ್ಕೂ ಅದು ಅನ್ವಯವಾಗುತ್ತದೆ. ಆಗ ಪಾದ ಎಂಬ ಪದವೂ ರೂಪಕ ಪ್ರತಿಮೆಯಾಗಬೇಕಾಗುತ್ತದೆ. ಅಲ್ಲಿ ಪಾದ ಎಂದರೆ ಶರೀರದ ಅತ್ಯಂತ ಕೆಳಗಿರುವ ಕೀಳುಭಾಗ ಎಂದು ‘ಅರ್ಥ’ವಾಗುವುದಿಲ್ಲ. ಭಕ್ತನ ಅತ್ಯಂತ ದೀನತಾ ಅನುಭವದ ವಿನಯಭಂಗಿಗೆ ಸಂಕೇತ ಮಾತ್ರವಾಗುತ್ತದೆ. ಹೀಗೆ ಭಾವವನ್ನೂ ಭಂಗಿಯನ್ನೂ ನೇರವಾಗಿ ಸಹೃದಯ ವೇದ್ಯವನ್ನಾಗಿಮಾಡಲು ಈ ಪ್ರತಿಮಾ ವಿಧಾನದ ‘ಪಾದಪದ್ಮ’ ದಂತಹ ರೂಪಕಗಳು ನಿಘಂಟಿನ ಇತರ ಪದಗಳಂತೆಯೆ ಆವಶ್ಯಕವಾಗಿ, ಅನಿವಾರ್ಯವಾಗಿ, ಕಾವ್ಯಕ್ಕೆ ಬೇಕೆಬೇಕಾಗುತ್ತವೆ.

ರೂಪಕವಾಗಿ ಪ್ರಯೋಗವಾಗುವ ಅನೇಕ ಪ್ರತಿಮೆಗಳು ಬರಿಯ ಕೃತಕವಾದ ಕವಿಸಮಯಗಳಾಗಿರುತ್ತವೆ. ಆದರೆ ಬೀಜಗಣಿತ ಶಾಸ್ತ್ರಕ್ಕೆ ಅದರ ಮೂಲಸೂತ್ರಗಳು ಎಷ್ಟರಮಟ್ಟಿಗೆ ಆವಶ್ಯಕವೊ ಅಷ್ಟರಮಟ್ಟಿಗೇ ಆವಶ್ಯಕವಾಗಿರುತ್ತವೆ ಕವಿಸಮಯದ ಪ್ರತಿಮೆಗಳು. (a+b)×(a-b)=(a2-b2) ಎಂಬುದು ನಿಸರ್ಗದಲ್ಲಿ ಎಲ್ಲಿಯೂ ಕಾಣದ ಕೃತಕವಾಗಿರಬಹುದು. ಆದರೆ ಅದು ಗಣಿತದ ಒಂದು ಮೂಲಸತ್ಯವನ್ನು ಪ್ರತಿಮಿಸುವ ಒಂದು ಸಂಕೇತವಾಗಿದೆ. ಆ ಸಂಕೇತವೆ ಸತ್ಯವಲ್ಲ. ಆದರೆ ಆ ಗಣಿತಸತ್ಯದ ಪ್ರಕಟಣೆಗೆ ಆ ಸಂಕೇತ ಆವಶ್ಯಕವಾಗುತ್ತದೆ. ಹಾಗೆಯೆ ದಿಗ್ಗಜ, ಆದಿಶೇಶ, ಆದಿಕೂರ್ಮ ಎಂಬುವೆಲ್ಲ ಬರಿಯ ಪೌರಾಣಿಕ ಕಲ್ಪನೆ. ಆದರೆ ಆ ಪ್ರತೀಕಗಳು ಯಾವ ಶಕ್ತಿಗೆ ಪ್ರತಿಮೆಗಳಾಗಿ ಮೂಡಿವೆಯೊ ಆ ಶಕ್ತಿ ವೈಜ್ಞಾನಿಕಸತ್ಯವಾಗಿದೆ. ವಿಜ್ಞಾನ ಮುಂದುವರಿದಂತೆಲ್ಲ ಆ ಪ್ರತಿಮೆ ಬದಲಾಯಿಸಬಹುದು. ಒಮ್ಮೆ ಅದು ‘ಸೂರ್ಯಾಕರ್ಷಣಶಕ್ತಿ’ಯ ಪ್ರತಿಮಾ ರೂಪಧಾರಣೆ ಮಾಡಬಹುದು; ಮತ್ತೊಮ್ಮೆ ‘ಆಕಾಶವಂಕಿಮತೆ’ಯ ರೂಪದಲ್ಲಿ ಮತಿಗ್ರಾಹ್ಯವಾಗಬಹುದು. ಆ ಪ್ರತಿಮೆ ಕಾಲ ದೇಶ ಪಾತ್ರಾನುಗುಣವಾಗಿ ಬೇರೆಬೇರೆಯ ಯಾವ ರೂಪಧಾರಣ ಮಾಡಿದರೂ ಅದು ಪ್ರತಿಮಿಸುವ ಶಕ್ತಿ ನಿತ್ಯಸತ್ಯವಾಗಿರುತ್ತದೆ. ತಮ್ಮ ಪ್ರಾಚೀನತೆ ಮತ್ತು ಬಹು ಕವಿ ಕಲ್ಪನಾ ಪೋಷಣೆ ಇವುಗಳಿಂದ ಲೋಕಾತಿಶಯವೂ ರಮಣೀಯವೂ ಭಾವಕೋಶಾನ್ವಿತವೂ ಆಗಿರುವ ಆ ಹಳೆಯ ಪ್ರತಿಮೆಗಳನ್ನು ಕವಿಕರ್ಮರಮಣೀಯವಾಗಿ ಉಪಯೋಗಿಸುವುದರಲ್ಲಿ ತುಂಬ ಔಚಿತ್ಯವಿದೆ. ಅಷ್ಟೇ ಅಲ್ಲ ಬೀಜಗಣಿತದ ಮೂಲಸೂತ್ರಗಳಂತಿರುವ ಅವುಗಳನ್ನು ನಿರಾಕರಿಸಿದರೆ ಕಾವ್ಯ ತನ್ನ ಕೆಲವು ಅನುಭವಪ್ರಕಾರಗಳಿಗೆ ಅಭಿವ್ಯಕ್ತಿ ನೀಡಲು ಅಸಮರ್ಥವಾಗುತ್ತದೆಂದೆ ಹೇಳಬೇಕಾಗುತ್ತದೆ: ಅವುಗಳಷ್ಟೆ ಸಮರ್ಥವಾದ ಬೇರೆಯ ಪ್ರತಿಮೆಗಳನ್ನು ಅದು ಸೃಷ್ಟಿಸಿ ಸಹೃದಯ ಹೃದಯಾಹ್ಲಾದಕಾರಿಯಾಗಿ ಪ್ರಯೋಗಿಸಲು ಶಕ್ತವಾಗುವವರೆಗಾದರೂ.

ಕುಕವಿ ಉಪಯೋಗಿಸುವ ಶಬ್ದಕೋಶದ ಹಳೆಯ ಪದಗಳಿಂದ ಹೊಸತೇನೂ ಸೃಷ್ಟಿಯಾಗಲಿಲ್ಲ ಎಂದು ಆ ಪದಗಳನ್ನೆಲ್ಲ ತಿರಸ್ಕರಿಸುವುದು ಎಷ್ಟು ವಿವೇಕವೊ ಅಷ್ಟೆ ವಿವೇಕವಾಗುತ್ತದೆ, ಪ್ರತಿಭೆಯಿಲ್ಲದೆ ಪದ್ಯ ರಚಿಸುವ ಕವಿನಾಮಕನು ಉಪಯೋಗಿಸುವ ಹಳೆಯ ರೂಮಕಗಳಿಂದ ಯಾವ ನವೋನ್ಮೇಷವೂ ಇಲ್ಲದ ಸಪ್ಪೆ ಹಟ್ಟಿತೆಂದು ಆ ರೂಮಪಕಗಳನ್ನೆ ಅಲ್ಲಗಳೆಯುವುದು. ಪ್ರತಿಭೆಯ ತಟಿತ್ತು ಸೋಂಕಿದರೆ ಜಡವೂ ಚಿನ್ಮಯವಾಗುತ್ತದೆ. ಮಹಾಕವಿ ಪ್ರತಿಭೆಯ ಅಮೃತಸ್ಪರ್ಶ ದೊರೆಕೊಂಡೊಡನೆ ಹಳೆಯವೆಂದು, ಜಡವೆಂದು, ಸಮೆದ ನಾಣ್ಯವೆಂದು, ನಿರ್ಜೀವವೆಂದು, ನಿಷ್‌ಪ್ರಯೋಜಕವೆಂದು ಪರಿಗಣಿತವಾಗಿರುವ ‘ಮೃತರೂಪಕ’ಗಳೆಲ್ಲ ಆಂನೇಯನಂತೆ ಅಂಬರಗಾಮಿಯಾಗುತ್ತವೆ; ತ್ರಿವಿಕ್ರಮನಂತೆ ಭೋವ್ಯೋಮಗಳನ್ನೆ ಆಕ್ರಮಿಸುತ್ತವೆ; ಭೀಮ ದರ್ಯೋದನರ ಗದಾಯುದ್ಧದಂತೆ ರೋಮಾಚನಕಾರಿಯಾಗುತ್ತವೆ. ಬಡಕಲು ಒಡಲಿನಲ್ಲಿ ಜಗಜಟ್ಟಿಯ ಬಲ್ಮೆ ಸಂಚರಿಸಿ, ಶಕ್ತಿಸ್ನಾಯುಗಳು ಬೆಟ್ಟಬಂಡೆಗಳಂತೆ ಉಬ್ಬಿ, ಅಘಟನ ಘಟನ ಸಾಹಸಕ್ಕೆ ತೋಳ್ತೊಡೆ ತಟ್ಟಿ ಚಪ್ಪರಿಸುವಂತೆ ನೆಗೆದೆದ್ದು ನಿಲ್ಲುತ್ತವೆ, ವೀರಭಂಗಿಯಲ್ಲಿ: ಆಗ ಭೀಮನೂ ಬೆಚ್ಚುತ್ತಾನೆ!

‘ಆದಡಿನ್ನು ನಿರೀಕ್ಷಿಸು’ ಎನುತ, ನಿನಾದದಲಿ ನೆಲಬಿರಿಯೆ
ಬಾಲದ ಬೀದಿವರಿ ಬಾಸಣಿಸೆ ಘನ ನಕ್ಷತ್ರಮಂಡಲವ,
ಮೇದಿನಿಯ ಹೊರೆಗಾರರ್ ಅಳ್ಳೆದೆಯಾದರ್,
ಅಳುಕಿದುವದ್ರಿಗಳು,
ಸಪ್ತೋದಧಿಗಳಂಜಿದವೆನಲು ಹೆಚ್ಚಿದನು ಕಲಿ ಹನುಮ!
ಮೇರುವಿನ ತಪ್ಪಲಲಿ ಬೆಳೆದ ಬಲಾರಿಚಾಪವೊ?
ಮೇಣ್‌ ತ್ರಿವಿಕ್ರಮನಾರುಭಟೆಯಲಿ ಜಡಿದ ಜ್ಯೋತಿರ್ಗಣದ ಬಲುಮಿಳಿಯೊ?
ಚೂರಿಸುವ ಬಲುಬಾಲವೋ?
ಜಂಭಾರಿಭವನವನಳ್ಳಿರಿಯೆ
ತ್ರಿಪುರಾರಿಯೊಡ್ಡಿನ ಹೊಳಹಿನಲಿ ಹೊಳೆಹೊಳೆದನಾ ಹನುಮ!
ನೋಡಿದನು; ನಡುಗಿದನು; ಕಂಗಳ ಕೋಡಿಯಲಿ ನೀರೊರೆಯೆ,
ಹರುಷದ ರೂಢಿಯಲಿ ಜೊಮ್ಮೆದ್ದು, ಮನ ಡೆಂಡಣಿಸಿ ಭೀತಿಯಲಿ,
ಬಾಡುಮೋರೆಯನೆತ್ತಿ, ಕೈಗಳ ನೀಡಿ ಕಂಗಳ ಮುಚ್ಚಿ, ಮುರಳಿದು ನೋಡಿ,
ಶಿವಶಿವ ಎನುತ ಬೆಚ್ಚಿದನಡಿಗಡಿಗೆ ಭೀಮ![6]


[1]       ಕನ್ನಡಿ ಕೈಪಿಡಿ ಅಲಂಕಾರ ವಿಭಾಗವನ್ನು ನೋಡಬಹುದು. ಇಲ್ಲಿ ರೂಪಕ ಪದದ ಅರ್ಥ ಅದರ ವಿಶಲಾರ್ಥದಲ್ಲಿ ಉಪಯೋಗವಾಗಿದೆ.
An epithet, a metaphor, a simile may create an image; or an image may be presented to us in a phrase or passage on the face of it purely descriptive, but conveying to our imagination something more than the accurate reflection of an external reality. Every poetic image, therefore, is to some degree metaphorical:

— C. DAY LEWIS. ‘The poetic Image

[2]       Trends come and go, diction alters, metrical fashions change, even the elemental subject-matter may change almost out of recognition; but metaphor remains, the life-principal of poetry, the poet’s chief test and glory.

— C. DAY LEWIS. ‘The poetic Image

[3]       ‘A prayer, a master act, a king idea
Can link man’s strength to a transcendent Force.
Then miracle is made the common rule,
One mighty deed can change the course of things;
A lonely thought becomes omnipotent’.

— SAVITRI: SRI AUROBINDO Pp. 24

[4]       But today they are dead. They are dead because, having performed their evolutionary task, they were needed no more.

— C. DAY LEWIS

ಗ್ರೀಕರ ಪುರಾಣ ಮತ್ತು ಮತ ಇವುಗಳಿಂದ ಸಂಪೂರ್ಣ ವಿಭಿನ್ನವಾದ ಕ್ರೈಸ್ತ ಮತವನ್ನವಲಂಬಿಸಿದ ಜನಕ್ಕೆ ಇದು ಅನ್ವಯವಾಗುವಂತೆ ತನ್ನ ಮತ ತತ್ತ್ವಧರ್ಮಸಂಸ್ಕ್ರತಿಗಳ ಹೊಕ್ಕುಳ ಬಳ್ಳಿ ಅಖಂಡವಾಗಿದ್ದು ಅತ್ಯಂತ ಪ್ರಾಚೀನವನ್ನು ಅತ್ಯಂತ ನವೀನಕ್ಕೆ ಜೀವಂತವಾಗಿ ಬಂಧಿಸರುವ ಭಾರತೀಯ ಸಾಹಿತ್ಯಕ್ಕೆ ಅಷ್ಟರಮಟ್ಟಿಗೆ ಅನ್ವಯವಾಗುವುದಿಲ್ಲ.

[5]      ‘ದ್ರೌಪದಿಯ ಶ್ರೀಮುಡಿ’ಯಲ್ಲಿ ‘ಭಾಷೆ: ಲೋಕೋಪಯೋಗಿ ಮತ್ತು ಭಾವೋಪಯೋಗಿ’ ಎಂಬ ಲೇಖನವನ್ನು ನೋಡಿ.

[6]       ಗದಯಗಿನ ಭಾರತ; ಅರಣ್ಯಪರ್ವ: ಸಂಧಿ ೧೦ – ಪದ್ಯ ೩೬, ೩೭, ೩೮