ಬೇವು ಕಚ್ಚಿದ ಬಾಯಿ ಬೆಲ್ಲದಂತಾಯಿತು

ಕಡಿತ ಹಾವು ಕಡಿತ ||ಪಲ್ಲ||

ಹುತ್ತದೊಳಗೆ ಹಾವು ಹುದುಗಿಸಿಕೊಂಡು ಕುಂತಿತ್ತ

ಸುತ್ತ ಮುತ್ತ ನೋಡಿ ಸುಳದಾಡುತ ಬಂತ ||1||

ಬಟ್ಟಲ ಹಿಡಿಕೊಂಡು ಬಾಲಿ ನಾ ಹೊಂಟಿದ್ದೆ

ನಟ್ಟ ನಡುದಾರ್ಯಾಗ ಸಪ್ಪಳಿಲ್ಲದೆ ಬಂತು ||2||

ಹಾಲು ಬಾನವನುಂಡು ಹಾಸಿಗಂಡು ಮಲಗಿದ್ದೆ

ಆಸೆಯಿಲ್ಲದ ಹಾವು ಘಾಸಿಯಿಂದಲೆ ಬಂತು ||3||

ದೇಶದೊಳಗನಮ್ಮ ವಾಸುಳ್ಳ ರಾಮಪೂರ

ಈಶ ಬಕ್ಕಪ್ಪಯ್ಯನ ಮೀಸಲುಳ್ಳ ಹಾವು ||4||

ಎಂಥ ಒಳ್ಳೇನವ್ವ ಎನ ಗಂಡ ಬಂಗಾರದಂಥವನು | |ಪಲ್ಲ||

ಮುಂಜಾನೆ ಏಳಂದಾನವ್ವ ಎನ ಗಂಡ ಗುಂಜಿಯ ಹಿಡಿಯಂದಾನೊ

ಗುಂಜಿ ಹಿಡಿಯದು ಬಿಟ್ಟು ಬ್ಯಾಸತ್ತು ನಾಕುಂತೆ

ಬೀಸಿ ಹಿಟ್ಟ ತುಂಬಿದನವ್ವ ||1||

ಮುಂಜಾನೆ ಏಳಂದಾನವ್ವ ಎನ ಗಂಡ ಹೆಂಡಿಯ ಬಳಿಯೆಂದಾನೊ

ಹೆಂಡಿರ ಬಳಿಯದು ಬಿಟ್ಟು ಬ್ಯಾಸತ್ತು ನಾ ಕುಂತೆ

ಆರಸಿ ಕುಳ್ಳ ಬಡದಾನವ್ವ ||2||

ಕಾರ್ಹುಣಿವಿ ಬಂತಂದಾನವ್ವ ಎನ ಗಂಡ ಕರಿಗಡಬ ಮಾಡಂದಾನೊ

ಕರಿಯ ಕಂಬಳಿ ಹುಡುಗ ಮನಿ ಹೊಕ್ಕು ಹೋದರ

ಕಾರ್ಹುಣಿವಿ ಖರ್ಚು ಹೊರಗಂದಾನವ್ವ ||3||

ಸರಕಾರ್ದ ಹೊಲ ಮಾಡಂದಾನವ್ವ ಎನಗಂಡ ಬಿರಾಡ ಬಂತಂದಾನೊ

ಬಿಳಿಯ ಹಚ್ಚಡದ ಹುಡುಗ ಮನಿ ಹೊಕ್ಕು ಹ್ವಾದರ

ಬಿರಾಡದ ಗಂಡು ಹೊರಗಂದಾನವ್ವ ||4||

ಸಣ್ಣ ಹಳ್ಳಿ ಬೂದಿಬಸವ ರಾಮಪೂರದ ಬಕ್ಕ

ತನ್ನೋಳು ತಾ ತಿಳಿದು ಕುಂತಲ್ಲೇ ಮಾಯವಾದ

ಭೀಮ ತೀರದಲಿ ನ್ಯಾಯಿಲ್ಲದೆ ಸಿಕ್ಕನವ್ವ ||5||

ಗಂಡಿದ್ದರ ಇಂಥವನಿರಬೇಕೊ

ಹೇಳಿದಂಗ್ಹ ಕೇಳತಿರಬೇಕೊ ||ಪಲ್ಲ||

ತವರ ಮನಿಗೆ ನಾ ಹೊಂಟಿರಬೇಕೊ

ಎತ್ತಿಗೆ ಜೀನ ಕಟ್ಟಿರಬೇಕೊ

ಎತ್ತಿನ ಮ್ಯಾಲ ನಾ ಕುಳಿತಿರಬೇಕೊ

ಕತ್ತೆಯ್ಹಂಗ ಗಂಡ ಬೆನ್ನತ್ತಿರಬೇಕೊ ||1||

ಕವಳಕ್ಕೆ ಬಾನ ಬುತ್ತಿ ಕಟ್ಟಿರಬೇಕೆ

ಹಾಲು ತುಪ್ಪ ಕಲಿಸಿರಬೇಕೊ

ತುತ್ತ ಮಾಡಿ ನಾ ಉಣತಿರಬೇಕೊ

ಬೆಕ್ಕಿನಂಗ ಕಣ್ಣು ಅವ ಬಿಡತಿರಬೇಕೊ ||2||

ಕೌದಿ ತಲೆದಿಂಬು ಇಟ್ಟಿರಬೇಕೊ

ಹಾಸಗಿ ಮ್ಯಾಲ ನಾ ಮಲಗಿರಬೇಕೊ

ಕಾಲದಸಿಲಿ ಗಂಡ ನಿಂತಿರಬೇಕೊ

ಕಾಲದಸಿಲಿ ಬಕ್ಕ ನಗುತಿರಬೇಕೊ ||3||

ಕಾಲ ನೊಯ್ತಾವ ಕಾಲೊತ್ತೊ ಗಂಡ

ಕಾಲ ನೊಯ್ತಾವ ||ಪಲ್ಲ||

ದೇಶ ದೇಶವ ತಿರುಗಿ ಬ್ಯಾಸತ್ತು ನಾ ಬಂದೆ

ತುಂಬಿದ ಚರಿಗಿಯ ತುಂಬಿಡೊ ಗಂಡ ||1||

ಅತ್ತಿ ಸತ್ತ ಮೂರ ದಿನಕ ಬತ್ತಿಯ ಮಾಡಿದ್ದೆ

ಕತ್ತಲ ಮನಿಯಾಗ ದೀಪ ಹಚ್ಚಿಡೊ ಗಂಡ ||2||

ಮೂರ ತಿಂಗಳ ನುಚ್ಚನಾ ಮೂಲ್ಯಾಗ ಇಟ್ಟಿದ್ದೆ

ನೀರ್ಹಾಕಿ ಸವಿ ಮಾಡಿ ಉಣ ಏಳ ಗಂಡ ||3||

ಮ್ಯಾಳಿಗಿ ಮನಿಯಾಗ ಹೋಳಿಗೆ ಮಾಡಿದ್ದೆ

ಮ್ಯಾಳಿಗಿ ತುಂಬಾ ಆರ್ಯಾಕೊ ಗಂಡ ||4||

ಚಪ್ಪರ ಮನಿಯಾಗ ಹಪ್ಪಳ ಸುಡುತ್ತಿದ್ದೆ

ಕಿಪ್ಪಡಿ ಮ್ಯಾಲ ಕಿಡಿ ಬಿತ್ತೊ ಗಂಡ ||5||

ಸಣ್ಣ ಹಳ್ಳಿ ಬೂದಿ ಬಸವ ರಾಮಪೂರದ ಬಕ್ಕ

ತಾನ್ಹೋಗಿ ಕಾಲ ಒತ್ತಿದನಕ್ಕ ||6||

ಎಂಥ ಗಂಡನವ್ವ ಎನಗ ಗಂಟ ಬಿದ್ದನವ್ವ

ಎಂಥ ಗಂಡ ನನ್ಗ ಗಂಟ ಬಿದ್ದ ಭಾಳ ತೊಂಟಗಾರವ್ವ ||ಪಲ್ಲ||

ಯಾರಿಗಿ ಅರಿದ್ಹಂಗ ನಾಲ್ಕು ಗಾರಿಗಿ ಬಚ್ಚಿಟ್ಟೆ

ನೀರಿಗಿ ಹೋಗಿ ಬರುವುದರೊಳಗೆ ಗಾರಿಗಿ ತಿಂದು ಮಲಗಿದನವ್ವ ||1||

ತವರ ಮನಿಗಿ ನಾ ಹೋಗಿ ತಾರಾಮಂಡಲ ಸೀರೆ ತಂದೆ

ಮಡಿ ಒಳಗೆ ಕಿಡಿಯ ಒಗದು ಸುಟ್ಟು ಸುಡದಂಗ ಮಾಡಿದನವ್ವ ||2||

ಆರಸೇರು ಹಾಲ ತಂದು ಮೊಸರ ಮಾಡಿ ಬಚ್ಚಿಟ್ಟೆ

ಹೊರಳಿ ನಾ ಬರುವುದರೊಳಗೆ ಮೊಸರು ಕುಡಿದು ಮಲಗಿದನವ್ವ ||3||

ತಿಂಗಳ ಬೆಣ್ಣೆ ಬಚ್ಚಿಟ್ಟು ತುಪ್ಪ ಕಾಸಿ ಮಗಿಯಲಿಟ್ಟೆ

ನಾಚಿಕಿಲ್ಲದ ಗಂಡ ಬಂದು ನಾಲಿಗಿ ಹಚ್ಚಿ ನೆಕ್ಕಿದನವ್ವ ||4||

ಹುಟ್ಟಿದ ಗ್ರಾಮ ಬಿಟ್ಟು ಪುಟ್ಟ ರಾಮಪೂರಕ ಬಂದು

ಬಕ್ಕಪ್ಪನ ಪಾದಕ ಹೊಂದಿ ಮುಕ್ತಿ ಪಡೆದೇನವ್ವ ||5||

ನಡಿ ತಂಗಿ ನಡಿ ತಂಗಿ ಹೋಗನು ಒಗಿಲಾಕ ||ಪಲ್ಲ||

ಹೊಳೆಯ ಆದವ್ವ ದೂರ ಮನ್ಯಾಗ ಇಲ್ಲವ್ವ ಯಾರ

ಒಗಿಲಾಕ ಹೋಗಬೇಕಂದ್ರ ಅಳತಾದ ಪಾರ ||1||

ಸೀರಿ ಅವ ಏಸ ದೋತರ ಅವ ಏಸ

ಕುಬಸ ಎಣಸರದಾಗ ಹೊತ್ತ ಉಳಿತ ತಾಸ ||2||

ಅಡಗಿಯ ಮಾಡೇನಂದ್ರ ಮನ್ಯಾಗ ಇಲ್ಲವ್ವ ಗಡಗಿ

ಅಡಗಿ ಮಾಡದಿದ್ರ ತರ್ತಾನವ್ವ ಬಡಗಿ ||3||

ರೊಟ್ಟಿ ಮಾಡೇನಂದ್ರ ಮನ್ಯಾಗ ಇಲ್ಲವ್ವ ಹಿಟ್ಟ

ರೊಟ್ಟಿ ಮಾಡದಿದ್ರ ಬೀಳ್ತಾವವ್ವ ಏಟ ||4||

ರಾಮಪೂರದ ಬಕ್ಕ ಭೀಮ ತೀರದಿ ಸಿಕ್ಕ

ತನ್ನೊಳು ತಾ ತಿಳಿದು ಕಿಲ ಕಿಲ ನಕ್ಕ ||5||

ಹ್ಯಾಂಗ ಮಾಡಲಿ ಅಕ್ಕ ಒಗತನ ಸಿಗಲಿಲ್ಲ ನನ ತಕ್ಕ ||ಪಲ್ಲ||

ಅತ್ತು ಅತ್ತು ನನಗ ಹತ್ತ್ಯಾದ ಬಿಕ್ಕ ಯಾರಿಗಿ ಹೇಳಲಿ ಅಕ್ಕ

ಯಾರಿಗಿ ಹೇಳಲಿ ಅಕ್ಕ ನನಗ ಖೋಡಿ ಗಂಡ ಸಿಕ್ಕ ||1||

ಕಾಗಿಕಿನ ಕರಿದ ಇದರ ಡೂಗ ಬೆನ್ನ ಬಿರಿದು

ಓಣೇನ ದನ ತಿಂದಾದ ಹಿರಿದು ಬಾರಕ್ಕ ಬಂದಿನಿ ಮೈನೆರೆದು ||2||

ಸುಂಬಳ ತುಟಿ ಜೊಲ್ಲ ಒರಿಸ್ಯಾದ ಗಲ್ಲೇಲ್ಲ

ಇದರದು ದೊಡ್ಡ ಹ್ಯಾಸಿ ಹಲ್ಲು ಇಂಥ ಗಂಡನ ಅರಿಲಿಲ್ಲ ||3||

ಕುಡ್ಡಗಣ್ಣಿನ ಮ್ಯಾಲ ಸುತ್ಯಾದ ರುಂಬಾಲ

ಬಲಗೈ ಮೊದಲಿಲ್ಲ ಇವನ ಎಡಗೈ ಚೊಂಚಾದ ||4||

ರಾಮಪೂರದ ಬಕ್ಕ ಭೀಮ ನದಿಯಲ್ಲಿ ಸಿಕ್ಕ

ತನ್ನೋಳು ತಾ ತಿಳಿದು ಕುಂತಲ್ಲೆ ನಸು ನಕ್ಕ || 5||

ಸಾಕಾಯಿತ್ತವ್ವ ಸಂಸಾರ

ಬೇಕಾಗಿಲ್ಲವ್ವ ಎನಗ ಪೂರ ||ಪಲ್ಲ||

ಅತ್ತೆಯ ಮನೆಯಲ್ಲಿ ರೊಟ್ಟಿ ಮಾಡುತ್ತಿದ್ದೆ

ಬುಟ್ಟಾಗ ಎರಡು ಮುಚ್ಚಿಟ್ಟಿದ್ದೇನತ್ತಿ

ಎಟ್ಟಿ ಗಂಡ ಬಂದು ಸಿಟ್ಟಿಲೆ ಹೊಡೆದರೆ

ರೊಟ್ಟಿ ಕದ್ದುದ್ದು ಕಳವೇನತ್ತಿ ||1||

ಅಡಿಗಿಯ ಮನೆಯಲ್ಲಿ ಕಡಬು ಕರಿಯತಿದ್ದೆ

ಗಡಿಗ್ಯಾಗ ಎರಡು ಮುಚ್ಚಿಟ್ಟಿದ್ದೇನತ್ತಿ

ಗಡಬಿಡಿ ಗಂಡ ಬಂದು ಬಡಗಿಲೆ ಹೊಡೆದರ

ಕಡಬು ಕದ್ದುದ್ದು ಕಳವೇನತ್ತಿ ||2||

ಮ್ಯಾಳಿಗಿ ಮನೆಯಲ್ಲಿ ಹೋಳಿಗಿ ಮಾಡುತ್ತಿದ್ದೆ

ಜೋಳಿಗ್ಯಾಗ ಎರಡು ಮುಚ್ಚಿಟ್ಟಿದ್ದೇನತ್ತಿ

ಬಾಳಗೇಡಿ ಗಂಡ ಬಂದು ಮೇಳಿಲೆ ಹೊಡೆದರ

ಹೋಳಿಗಿ ಕದ್ದುದ್ದು ಕಳವೇನತ್ತಿ ||3||

ಭೀಮ ತೀರದಲ್ಲಿರುವ ರಾಮಪೂರದ ಬಕ್ಕ

ಅಕಿನ ನೋಡಿ ಕಿಲಕಿಲನೆ ನಕ್ಕ

ನಾ ನೋಡಿದೆನವ್ವ ಪಕ್ಕ

ಎನಗ ಬಂದಿತವ್ವ ದುಃಖ ||4||

ಬಾರೆ ಬಾ ಮನಿಗೆ ಸಕ್ಕರಿ ಬೆಲ್ಲ

ನಡಿರೆ ನಮ್ಮ ಮನಿಗ್ಹೋಗಣ ||ಪಲ್ಲ||

ಹೋಳಿಗೆ ಉಂಡರೇನ ವೀಳೆ ಹಂಚಿದರೇನ

ವ್ಯಾಳೇಕ ಇಲ್ಲದ ಗಂಡ ಎಲ್ಲಿದ್ದರೇನ ||1||

ಕಿಚಡಿ ಉಂಡರೇನ ಹಚಡ ಹೊಚ್ಚಿದರೇನ

ಎಚ್ಚರಿಕಿಲ್ಲದ ಗಂಡ ಎಲ್ಲಿದ್ದರೇನ ||2||

ಹುಗ್ಗಿ ಉಂಡರೇನ ಜಗ್ಗಿ ಮಲಗಿದರೇನ

ಮಗ್ಗಲಕ ಇಲ್ಲದ ಗಂಡ ಎಲ್ಲಿದ್ದರೇನ ||3||

ಸಂಗಟ ಉಂಡರೇನ ಸಂಕಟ ಬಿಟ್ಟರೇನ

ಸಂಗಾತಿಲ್ಲದ ಗಂಡ ಎಲ್ಲಿದ್ದರೇನ ||4||

ಹಾಸಿಗಿ ಮಾಡಿದರೇನ ಬೀಸಿ ಮಲಗಿದರೇನ

ಭೋಗ ಇಲ್ಲದ ಗಂಡ ಎಲ್ಲಿದ್ದರೇನ ||5||

ರಾಮಪೂರದ ಬಕ್ಕ ಭೀಮ ನದಿಯಲ್ಲಿ ಸಿಕ್ಕ

ತನ್ನೋಳು ತಾ ತಿಳಿದು ಕಿಲಕಿಲನೆ ನಕ್ಕ ||6||

ಅಯ್ಯ ಎನ್ನ ಹಣೆಬರಹ | ಎಂಥ ಗಂಡ ದೊರೆತನವ್ವ

ಎಂಥಾತನೆಂಬುದು ನಾ ಅರಿಯೇನಮ್ಮ ||ಪಲ್ಲ||

ಬಾಯೆಂದು ಕರೀತಾನ | ಬಂದರ ಓಡುತಾನ

ಬಾರದಿದ್ರ ಹೊಡಿತಾನ | ಕುಣಿದಾಡಿ ಹೊರಸ ಮುರದಾನ ತಂಗಿ | |1||

ಅಡಕಲೆಲ್ಲ ಇಳವುತಾನ | ಮಡಕಿಯೆಲ್ಲ ದೇವುತಾನ

ಮನೆಯೆಲ್ಲ ಹುಡುಕಾಡಿ ಹುಟ್ಟ ಮುರದಾನ ತಂಗಿ ||2||

ಸುಣ್ಣ ಬಣ್ಣದ ಸೀರಿ ತಂದ | ಕಿಡಿಕಿ ಬಣ್ಣದ ಕುಬಸ ತಂದ

ಹಣಿಗೆ ಮೇಲಾದ ಕುಂಕುಮ ತಂದಾನ ತಂಗಿ ||3||

ಕಾಲಿಗೆ ಕಾಲಪಿಲ್ಲೆ ತಂದ | ಕಿವಿಗೆ ಲೋಲಕ ತಂದ

ಮೂಗಿಗೆ ಮೇಲಾದ ಮೂಗುತಿ ತಂದಾನ ತಂಗಿ ||4||

ಗಂಡಸರೊಳಗೆ ಗಂಡಸಲ್ಲ | ಗಂಡಸುತನ ಮೊದಲೇ ಇಲ್ಲ

ಮನ್ಯಾಗ ಮಲಗಂದ್ರೆ ಸುಮ್ಮನೆ ಮಲಗುವನಲ್ಲ ತಂಗಿ ||5||

ಸಣ್ಣ ಹಳ್ಳಿ ಬೂದಿಬಸವ | ರಾಮಪೂರದ ಬಕ್ಕ

ತನ್ನೋಳು ತಾ ಕುಂತಲ್ಲೆ ಮಾಯಾವಾದನಕ್ಕ | |6||

ಏಸುದಿನ ನೋಡಿದರು ಕೂಸಿನ್ಹಂಗ ಕಾಣತೀದಿ

ಮೀಸಿ ಬಂದಿಲ್ಲೇನೊ ಎಲೊ ಎಲೊ

ನಿನಗ ಗಡ್ಡ ಬಂದಿಲ್ಲೇನೊ ಎಲೊ ಎಲೊ ||ಪಲ್ಲ||

ತಂಗಳ ರೊಟ್ಟ್ಯಾಗ ಬೆಣ್ಣೆ ಹಚ್ಚಿ ಕೊಟ್ಟಾರ

ಮುಟ ಮುಟ ನುಂಗತೀದಿ ಎಲೊ ಎಲೊ ||1||

ಕತ್ತಲ ಮುನಿಯಾಗ ಕೈಹಿಡಿದು ಜಗ್ಗಿದರ

ದುಃಖ ದುಃಖಸಿ ಅಳತೀದಿ ಎಲೊ ಎಲೊ ||2||

ಹರೆಯದ ಕಾಲಕ ಎದಿ ಒತ್ತಿ ಬಂದರ

ಎದಿ ಭಾರ ಯಾರ ಹೊರಬೇಕು ಎಲೊ ಎಲೊ ||3||

ಸುಣ್ಣದ ಹರಳಿನ್ಹಂಗ ಸುಟ್ಟಿತು ಈ ದೇಹ

ಇನ್ನಾರಿಗಿ ಹೇಳಲಿ ಎಲೊ ಎಲೊ ||4||

ದೇಶದೊಳಗೆ ನಮ್ಮ ವಾಸುಳ್ಳ ರಾಮಪೂರ

ಈಶ ಬಕ್ಕಪ್ಪಯ್ಯಾ ಎಲೊ ಎಲೊ ||5||

ಯಾರಿಗಿ ಹೇಳಲೆವ್ವ ಎನ ದುಃಖ

ಗಂಡ ಸಿಗಲಿಲ್ಲ ತಕ್ಕ

ವರನುಳ್ಳ ಒಗತನ ಸಿಗಲಿಲ್ಲ ನೋಡಕ್ಕ

ನನಗೆ ಬಂದಿತ ದುಃಖ ||ಪಲ್ಲ||

ಆರು ಮೂರು ರೊಟ್ಟಿ ಹೊಡಿತಾನ ರಗಡ

ಕೆಲಸಕ ಬಲು ಮದಡ

ಬಾರಂತ ಕರೆದರೆ ಒಲ್ಲೆಂತಾನ ಹೆಬಡ

ಇವನಲ್ಲಿಲ್ಲವ ಗೌಡ ||1||

ನಿದ್ದಿ ಮಬ್ಬಿನ್ಯಾಗ ಬೆಳಸಿಕೊಂಡಾನ ಹೊಟ್ಟಿ

ತಲೆ ಕುಂಬಳ ಸೊಟ್ಟಿ

ಎಂಥ ಗಂಡಗ ಹಡದಾಳ ನಮ್ಮತ್ತಿ

ಹಗಲ ಹಾದರಗಿತ್ತಿ ||2||

ಭೀಮ ನದಿಯಲ್ಲಿರುವ ರಾಮಪೂರದ ಬಕ್ಕ

ಅವ ನನಗೆ ಒಂಟಿಲೆ ಸಿಕ್ಕ

ಬಾ ಅಂತ ಕರೆದರೆ ಒಲ್ಲೆಂತಾನ ಠಕ್ಕ

ಶಿವ ನೋಡಿ ನಕ್ಕ ||3||\

ಸುಮ್ಮನ ತಿನಬಾರದೇನ

ನಿನಗೋಣ ಮುರಿಲಿ ಗ್ವಾಡ್ಗಿ ಬಡ್ಲಿ ಸುಮ್ಮನ ತಿನಬಾರದೇನ ||ಪಲ್ಲ||

ಸುಮ್ಮನ ತಿನಂದರ ಗುಮ್ಮೆನಂತ ಮ್ಯಾಲ ಬರ್ತಿ

ಗುಮ್ಮೆಗಿಲ್ಲ ಒಮ್ಮನ ಜ್ವಾಳ ದಮ್ಮನ ಮಾತೊಂದಾಡುತೀದಿ ||1||

ಅರಸೇರು ಸಪ್ಪನುಚ್ಚು ಅಚ್ಚೇರು ನೌಟಕ ಮೆಣಸಿನಕಾಯಿ

ಮೀಸಿ ಮ್ಯಾಲ ಕೈ ಹಾಕಿ ಮುಟು ಮುಟು ನುಂಗುತೀದಿ | |2||

ಹಬ್ಬ ಬಂದಾದ ಎಂದು ಉಬ್ಬಿ ಉಬ್ಬಿ ಬೀಳಬ್ಯಾಡ

ಗೊಬ್ಬರದಂಥ ನವಣಿಬಾನ ಮೂರೆ ತುತ್ತ ಮಾಡತೀದಿ ||3||

ಅಕ್ಕಿ ಅನ್ನ ಬೇಡಿ ಬಿಕ್ಕ ಬಿಕ್ಕಿ ಸಾಯ್ತಿದಿ

ರೊಕ್ಕ ಕೊಟ್ರ ಸೊಕ್ಕಿನ ಮೂಳ ಅಕ್ಕಿ ಒಂದು ಸಿಗದಿಲ್ಲಂತಿ ||4||

ಸೀರಿ ತೊಗಂಬಾ ಅಂದ್ರ ವಾರಿ ವಾರಿ ಹೋಗುತೀದಿ

ಯಾರು ಇಲ್ದ ಕತ್ತಲ ಮನ್ಯಾಗ ಕೋರಿ ಹೊತ್ಕೊಂಡು ಕುಂದ್ರತೀದಿ ||5||

ಸಣ್ಣಹಳ್ಳಿ ಬೂದಿಬಸವ ರಾಮಪೂರದ ಬಕ್ಕ

ಕೈ ಹಿಡಿದು ಕರೆದು ತನ್ನೊಳಗೆ ತಾ ನಕ್ಕ ||6||

ಬಾರೆ ಬಾರೆ ಪುಟ್ಟ್ಯಾಗಿನ ರೊಟ್ಟಿ ತಾರೆ ತಾರೆ

ನಿನ್ನಕ್ಕನ ನೋಡು ಬಾರೆ ಬಾರೆ | ಪಲ್ಲ||

ಹೇಳಿದ ಮಾತ ಕೇಳವಲ್ಲಿ ಬ್ಯಾಳಿಗಿ ನೀರ ಹಾಕವಲ್ಲಿ

ಕಾಲಿಲೊದ್ರ ಕತ್ತೆ ಸೂಳೆ ಸುಳ್ಳೇ ಸುಳ್ಳೇ ಅಡ್ತೆವ್ವ ||1||

ಎಳ್ಳು ಬೆಲ್ಲ ಕದ್ದು ತಿಂದು ಉಸುರು ಬಿಟ್ರ ನಾರತಾದ

ಕೂಸಿನ ಕುಂಡಿ ತೊಳೆಯಲಿಲ್ಲ ಮಾಸಿದ ಅರಬಿ ಹಿಂಡ್ಲಿಲ್ಲವ್ವ ||2||

ಸಜ್ಜೆ ರೊಟ್ಟಿ ಚವಳಿಕಾಯಿ ಮೊನ್ನೆ ರಾತ್ರಿ ನೀನೆ ಉಂಡಿ

ಬೆಂಡಿಕಾಯಿ ನೀಡಲಿಲ್ಲ ಗಂಡನ ಬಿಟ್ಟ ಗಯ್ಯಾಳವ್ವ || 3||

ಕೊಬ್ರಿ ಬೆಲ್ಲ ಕದ್ದು ತಿಂದು ದುಬುಲಿ ದೆವ್ವ ಆಗಿದಿ ನೀನು

ಬಗಲಾಗ ಬಾರಂದ್ರ ಲಭ ಲಭ ಹೊಯ್ಕೊಂತೆವ್ವ ||4||

ಎರಕೊಂಡು ಕೆರಕೊಂಡು ಭಾಳ ಮುರಕ ಮಾಡೇನಂತಿ

ಬೆರಕಿ ರಂಡಿ ಬೆಡಗ ಬ್ಯಾರೆ ತಿರಕನ ಸೂಳೆವ್ವ ನೀನು ||5||

ಸಣ್ಣಹಳ್ಳಿ ಬೂದಿ ಬಸವ ರಾಮಪೂರದ ಬಕ್ಕ

ತನ್ನೊಳು ತಾ ತಿಳಿದು ಕುಂತಲ್ಲೇ ಮಾಯಾದ ||6||

ಕೋಲ ಕೋಲೆನ್ನಿರೆ ಸದ್ಗುರುವಿನ

ಕೀಲು ಮೇಲೆನ್ನಿರೆ ||ಪಲ್ಲ||

ಚುಕ್ಕೋಳಾಡುವ ಚಿಣಿಯ ಕೋಲು

ಮಜ್ಜಿಗೆ ಮಾಡುವ ಕಡಗೋಲು

ಕೋಲು ಕೋಲೆನ್ನಿರೆ ಸುದ್ಗುರುವಿನ

ಕೀಲು ಮೇಲೆನ್ನಿರೆ ||1||

ಹತ್ತಿ ಬಿತ್ತಿ ಬತ್ತಿ ಕಾಣೇ

ಜೋಳ ಬಿತ್ತಿ ಬಾನ ಕಾಣೇ

ಮನೆಯ ತುಂಬಾ ಮಕ್ಕಳ್ಹಡದು

ಗಂಡನ ಸುಖ ಮೊದಲೆ ಕಾಣೇ ||2||

ಅತ್ತೆ ಹೆಸರು ಹರಕಡ ಚಾಪಿ

ಮಾವನ ಹೆಸರು ಮಂಚದ ಕಾಲು

ಗಂಡನ ಹೆಸರು ಗುಂಡಾಗುಂಡಿ

ನನ್ನ ಹೆಸರು ಮುತ್ತಿನ ಚಂಡು ||3||

ಗಂಡ ದಂಡಿಗೆ ಹೋಗುವಾಗ

ಅರಗಿನ ಮುದ್ರಿಹಾಕಿ ಹ್ವಾದ

ಅರಗಿನ ಮುದ್ರಿ ಹಾರಿ ಹೊಡದು

ಆರು ಮಕ್ಕಳ ಹಡದೇನವ್ವ ||4||

ದನ ಕಾಯುವ ಅಣ್ಣಗಳಿರಾ

ಕುರಿ ಕಾಯುವ ತಮ್ಮಗಳಿರಾ

ಗಂಡ ದಂಡಿಲೆ ಬಂದರೆ

ಮಿಂಡನ ಕಟಿಗೊಂಡು ಹೋದಳೆನ್ನಿ ||5||

ಸಣ್ಣಹಳ್ಳಿ ಬೂದಿ ಬಸವ

ರಾಮಪೂರದ ಬಕ್ಕ

ತನ್ನೊಳಗೆ ತಾ ತಿಳಿದು

ಕಿಲಕಿಲ ನಕ್ಕ ||6||

ಆಸತ್ತು ಬ್ಯಾಸತ್ತು ನಾ ಕುಂತೆ ಹೊರಗಾಗಿ

ಯಾರೇನು ಬಲ್ಲರವ್ವ ಒಳಗಿನ ಮಹಿಮ ||ಪಲ್ಲ||

ಒಬ್ಬವನೆ ಕಟ್ಟಿದ್ದೆ ಒಬ್ಬವನ ಬಿಟ್ಟಿದ್ದೆ

ಒಬ್ಬವನ ಕೈ ಮಾಡಿ ಕರಿತಿದ್ದೆ ಮುದಡ

ಯಾವನ ಕಟ್ಟಿದ್ದೆ ಯಾವನ ಬಿಟ್ಟಿದ್ದೆ

ಯಾವನ ಕೈ ಮಾಡಿ ಕರೀತಿದ್ದೆ ಮುದಡಿ

ಆಕಳ ಕಟ್ಟಿದ್ದೆ ಕರುವಿನ ಬಿಟ್ಟಿದ್ದೆ

ಹಾಲಿಗೆ ಕೈ ಮಾಡಿ ಕರೀತಿದ್ದೆ ಮುದಡ ||1||

ಒಬ್ಬವನ ಕಾಸಿದ್ದೆ ಒಬ್ಬವನ ಹಾಕಿದ್ದೆ

ಒಬ್ಬವನ ಮುಚ್ಚಿ ಮಲಗಿದ್ದೆ ಮುದಡ

ಯಾವನ ಕಾಸಿದ್ದೆ ಯಾವನ ಹಾಕಿದ್ದೆ

ಯಾವನ ಮುಚ್ಚಿ ಮಲಗಿದ್ದೆ ಮುದಡಿ

ಹಾಲನ್ನು ಕಾಸಿದ್ದೆ ಹೆಪ್ಪವ ಹಾಕಿದ್ದೆ

ಮುಚ್ಚಳ ಮುಚ್ಚಿ ಮಲಗಿದ್ದೆ ಮುದಡ ||2||

ಒಬ್ಬವನ ಕುಂದ್ರಿಸಿದ್ದೆ ಒಬ್ಬವನ ನಿಂದ್ರಿಸಿದ್ದೆ

ಒಬ್ಬವನ ಹಿಡಿದು ಜಗ್ಗುತಿದ್ದೆ ಮುದಡ

ಯಾವನ ಕುಂದ್ರಿಸಿದ್ದೆ ಯಾವನ ನಿಂದ್ರಿಸಿದ್ದೆ

ಯಾವನ ಹಿಡಿದು ಜಗ್ಗುತಿದ್ದೆ ಮುದಡಿ

ಕಡಗೋಲು ಕುಂದ್ರಸಿದ್ದೆ ರೇವಗಿ ನಿಂದ್ರಿಸಿದ್ದೆ

ಹಗ್ಗವ ಹಿಡಿದು ಜಗ್ಗುತ್ತಿದ್ದೆ ಮುದಡ ||3||

ಒಬ್ಬವನಿಗೆ ಕಾಲು ಕೊಟ್ಟೆ ಒಬ್ಬವನಿಗೆ ಕೈ ಕೊಟ್ಟೆ

ಒಬ್ಬವಗ ತಲೆ ಕೊಟ್ಟು ಮಲಗಿದ್ದೆ ಮುದಡ

ಯಾವನಿಗೆ ಕಾಲು ಕೊಟ್ಟೆ ಯಾವನಿಗೆ ಕೈ ಕೊಟ್ಟೆ

ಯಾವನಿಗೆ ತಲೆಕೊಟ್ಟು ಮಲಗಿದ್ದೆ ಮುದಡಿ

ಕಂಚುಗಾರಗ ಕಾಲು ಕೊಟ್ಟೆ ಬಳಿಗಾರಗ ಕೈ ಕೊಟ್ಟೆ

ದಿಂಬಿಗಿ ತಲೆ ಕೊಟ್ಟು ಮಲಗಿದ್ದೆ ಮುದಡ | |4|

ಒಬ್ಬವನ ಒಳಗಿಟ್ಟೆ ಒಬ್ಬವನ ಹೊರಗಿಟ್ಟೆ

ಒಬ್ಬವನ ನೋಡಿ ನಗುತಿದ್ದೆ ಮುದಡ

ಯಾವನ ಒಳಗಿಟ್ಟೆ ಯಾವನ ಹೊರಗಿಟ್ಟೆ

ಯಾವನ ನೋಡಿ ನಗುತಿದ್ದೆ ಮುದಡಿ

ಕಾಡಿಗಿ ಒಳಗಿಟ್ಟೆ ಕುಂಕುಮ ಹೊರಗಿಟ್ಟೆ

ಕನ್ನಡಿ ನೋಡಿ ನಗುತ್ತಿದ್ದೆ ಮುದಡ ||5||

ಒಬ್ಬನದು ದೊಡ್ಡ ಕುಂಡಿ ಒಬ್ಬನದು ಸಣ್ಣ ಕುಂಡಿ

ಒಬ್ಬನದು ಕುಂಡಿ ಮೊದಲಿಲ್ಲ ಮುದಡ

ಯಾವನದು ದೊಡ್ಡ ಕುಂಡಿ ಯಾವನದು ಸಣ್ಣ ಕುಂಡಿ

ಯಾವನದು ಕುಂಡಿ ಮೊದಲಿಲ್ಲ ಮುದಡಿ

ಡಬ್ಬಣದು ದೊಡ್ಡ ಕುಂಡಿ ಸೂಜಿದು ಸಣ್ಣ ಕುಂಡಿ

ಖದರಿಗಿ ಕುಂಡಿ ಮೊದಲಿಲ್ಲ ಮುದಡ ||6|

ಒಬ್ಬವನ ದಬ್ಬಿದೆ ಒಬ್ಬವನ ನೂಕಿದೆ

ಒಬ್ಬವನ ಮುಚ್ಚಿ ಮಲಗಿದ್ದೆ ಮುದಡ

ಯಾವನ ದಬ್ಬಿದೆ ಯಾವನ ನೂಕಿದೆ

ಯಾವನ ಮುಚ್ಚಿ ಮಲಗಿದ್ದೆ ಮುದಡಿ

ಬಾಗಿಲ ದಬ್ಬಿದೆ ಕಿರುಗುಳಿ ನೂಕಿದೆ

ದೀಪಕ ಸೆರಗ ಹಾಕಿ ಮಲಗಿದ್ದೆ ಮುದಡ || 7||

ಒಬ್ಬರೆ ಹಾದರಗಿತ್ತಿ ಒಬ್ಬರೆ ಪಾತರಗಿತ್ತಿ

ಒಬ್ಬರೆ ಗರತಿ ಕೇಳಪ್ಪ ಮುದಡ

ಯಾವರೆ ಹಾದರಗಿತ್ತಿ ಯಾವರೆ ಪಾತರಗಿತ್ತಿ

ಯಾವರೆ ಗರತಿ ಹೇಳವ್ವ ಮುದಡಿ

ಬೇಸಿಗೆ ಹಾದರಗಿತ್ತಿ ಮಳೆಗಾಲ ಪಾತರಗಿತ್ತಿ

ಚಳಿಗಾಲ ಗರತಿ ಕೇಳಪ್ಪ ಮುದುಡ ||8||

ಸಣ್ಣ ಹಳ್ಳಿ ಬೂದಿಬಸವ ರಾಮಪೂರದ ಬಕ್ಕ

ತನ್ನೊಳು ತಾ ತಿಳಿದು ಕುಂತಲ್ಲೆ ಮಾಯಾದ

ಒಂದೇ ಭಾವದಿ ಕೇಳೆ ಸಂದಿ ಮನೆಯಕ್ಕ

ನೊಂದೇನೆ ಭಾಳ ಬೆಂದೇನೆ ||ಪಲ್ಲ||

ಎಂದು ತಾರದ ಗಂಡ ಇಂದು ಗೋದಿಯ ತಂದ

ಬೀಸಿ ಮಾಡಂದಾನ ಹೂರಣಗಡಬ

ಅತ್ತಿಗೆ ಆರಿಟ್ಟ ಮಾವಗ ಮೂರಿಟ್ಟೆ

ಹದ ಮಾಡಿ ಹೊಡೆದೇನ ಹದಿನಾರು ಕಡಬ ||1||

ದಡೆಯ ಬದನೆಕಾಯಿ ಭರತ ಕಾಣೇನಕ್ಕ

ನವ ಕಾಂಡೆಂಬ ಹದಿನಾರು ರೊಟ್ಟಿ ಕಲಿಸಿ

ಸಿಟ್ಟಿಲೆ ಸೇರೆಣ್ಣೆ ಬಟ್ಟಲೊಳಗೆ ಹಾಯ್ಕೊಂಡು

ಅಷ್ಟು ಉಂಡರು ಸಾವು ಬರಲಿಲ್ಲ್ಹೇಳಕ್ಕ ||2||

ಹತ್ತು ಗೋಧಿಯ ಕಡಬ ಹನ್ನೊಂದು ಬಾಳೆ ಹಣ್ಣು

ಹೆತ್ರ್ತುಪ್ಪ ಹಾಕಿ ಮೆತ್ತಗೆ ಕಲಿಸಿ

ಅತ್ತಿ ಮಾವ ಹಾರೆಂದು ಕತ್ತಲ ಮನೆಯೊಳು

ಕದ್ದುಂಡರೆ ಸಾವು ಬರಲಿಲ್ಲ್ಹೇಳಕ್ಕ ||3||

ಸಣ್ಣಕ್ಕಿ ಸವಿಬಾನ ಬೆಣ್ಣಿ ಕಾಸಿದ ತುಪ್ಪ

ಉಂಡ ಬಂದ ಅಣ್ಣದರೆ ಉಣ ಹೇಳಿದರಕ್ಕ

ಬಣ್ಣದ ಕೌದಿಯ ತಲೆ ದಿಂಬು ಇಟಕೊಂಡ

ಕಣ್ಣು ಮುಚ್ಚಿದರೂ ಸಾವು ಬರಲಿಲ್ಲ್ಹೇಳಕ್ಕ ||4||

ಬಾವಿ ದೂರಾದೆಂದು ಬಚ್ಚಲ ಕುಣಿಗ್ಹೋದೆ

ನೆರಮನೆ ಹುಚ್ಚಕ್ಕ ನೀ ಕೇಳಿರಕ್ಕ

ವಾಲಿಕಾರನ ಗೂಡ ಒನಪು ಮಾಡುತಲಿದ್ದೆ

ರಾಮಪೂರದ ಬಕ್ಕ ಹೌದೇಳಕ || 5||

ನಾ ದೊಡ್ಡ್ಯಾಗ ಬಡಿತಿದ್ದೆ ಕುಳ್ಳ

ನನ್ನ ಅರಿದಂಗ ಹೊಡೆದಲ್ಲೊ ಹಳ್ಳ ||ಪಲ್ಲ||

ನಾ ಗಂಡಗ ಒಯ್ಯುತ್ತಿದ್ದೆ ರೊಟ್ಟಿ

ನಡು ದಾರ್ಯಾಗ ಹಿಡಿದಲ್ಲೊ ರಟ್ಟಿ ||1||

ನಾ ಗಂಡಗ ಒಯ್ಯುತ್ತಿದ್ದೆ ಬಾನ

ನಡು ದಾರ್ಯಾಗ ಕಳದಲ್ಲೊ ಮಾನ ||2||

ನಾ ಗಂಡಗ ಒಯ್ಯುತ್ತಿದ್ದೆ ಬ್ಯಾಳಿ

ನಡು ದಾರ್ಯಾಗ ಕಡದಲ್ಲೊ ತಾಳಿ ||3||

ದೇಶದೊಳಗೈತಿ ರಾಮಾಪೂರ ವಾಸ

ಅಲ್ಲಿ ಇರುವನು ಬಕ್ಕಪ್ಪ ಖಾಸ | |4||

ಹಾದರ ಮಾಡಿದೆ ನಾ ಹೌದೆನ್ನುವಂತ

ಹಾದರ ಮಾಡಿದೆ ನಾ ||ಪಲ್ಲ||

ಹಾದರ ಮಾಡಿದೆ ಸಾಧು ಸತ್ಪುರುಷರಗಿ

ಸಾಧು ಸತ್ಪುರುಷರಗಿ ಸರಿ ಬಂದ ಮಾತವ್ವ ||1||

ಹಾದರ ಮಾಡಿದೆ ಹದಿನಾರ ಮಂದೀನ

ಅತ್ತಿ ಮಾವನ ಕದ್ದು ಮತ್ತೊಬ್ಬನ ಬಯಸಿದ್ದೆ ||2||

ಹಳ್ಳ ಕೊಳ್ಳವ ತಿರುಗಿ ಹೊಳ್ಳಾಡಿ ನಾ ಬಂದೆ

ಹಳ್ಳಿ ಊರಿಗೆ ಹೋಗಿ ಒಳ್ಳೆಕಿ ಎನಿಸಿಕೊಂಡೆ | |3||

ದೇಶದೊಳಗೆ ನಮ್ಮ ವಾಸುಳ್ಳ ರಾಮಾಪೂರ

ಈಶ ಬಕ್ಕಪ್ಪಯ್ಯನ ಮೀಸಲ ಮಗಳಾದೆ ||4||

ಹಾದರ ಮಾಡಿದರ ಹೌದೌದು ಎನಬೇಕ

ಸಾಧು ಜನರಿಗೆಲ್ಲ ಸರಿ ಬಂದಿರಬೇಕ ||ಪಲ್ಲ||

ಮಳ್ಳಿ ಮಳ್ಳೆರು ನಾವು ಕಲೆತಿರಬೇಕ

ಕಾರ್ ಕುಳ್ಳಿಗಿ ನಾವು ಹೋಗಿರಬೇಕ ||1||

ಕಳ್ಳಿ ಸಾಲಾಗ ನೆಂಟ ಕುಂತಿರಬೇಕ

ಕೈ ಮಾಡಿ ಎನ್ನನು ಕರೆತಿರಬೇಕ ||2||

ಹಿಂಡ ಮಂದ್ಯಾಗ ನಾ ಕುಂತಿರಬೇಕ

ಮಿಂಡ ಕೈ ಮಾಡಿ ಕರೆತಿರಬೇಕ | |3||

ಅವ್ವ ಅಕ್ಕನೆಂದು ಕರೆತಿರಬೇಕ

ಅವ ಬಂದು ಬೆಪ್ಪನಾಗಿ ನೋಡ್ತಿರಬೇಕ ||4||

ಸಣ್ಣಹಳ್ಳಿ ಬೂದಿಬಸವ ರಾಮಾಪೂರದ ಬಕ್ಕ

ಭೀಮಾ ನದಿಯಲಿ ಸಿಕ್ಕ ತನ್ನೊಳು ತಾ ನಗತಿರಬೇಕ ||5||

ಮನಸಿಜ ರೂಪ ಮುನದೇವ ಗೆಳದಿ

ನೆನಸಿದರ ಎದಿ ಭುಗಿಲಂತಾದವ್ವ

ಕನಸಿನೊಳಗೆ ಆತನ ಕಂಡಂಗ ಆಗುತಾದ

ಮನಸಿಗೆ ಜರ ಮರಿ ಆಗದವ್ವ | |ಪಲ್ಲ||

ಸೂರಗೊಂಡಾನೊ ಮನ ಸೂರಗೊಂಡಾನೊ ತನು

ಸೂರೆ ಗೊಂಡಾನೊ ಎಲ್ಲಾ ಚತುರನವ್ವ

ಅನುದಿನದಲ್ಲಿ ಬಂದು ನೆನಸಿ ಎನ್ನ

ಮನಸಿಗೆ ಬಡದಂಗ ಆಗ್ಯಾದವ್ವ ||1||

ಬಂಧು ಬಳಗಕ್ಕೆಲ್ಲ ಬ್ಯಾಸರಾದೆ

ಭಾಳ ಮಂದಿಗೆ ತಲೆ ಹೊರೆಯಾದೆನವ್ವ

ಅಂದರೇನು ಆಡಿದರೇನು

ಆತನಿಂದ ಹರ್ಲಿ ನಾ ಹೊತ್ತೆನವ್ವ ||2||

ಬಾಯಿ ಮಾತಿಲೆ ಬಲಿನೆ ಒಗಿಯತಾನ

ಬಾಯಾಗ ಹೊನ್ನ ಸುರಿಯಲೆವ್ವ

ಸಾಯಿತಿನಿ ಕೆರಿ ಬಾಂಯಿ ಬೀಳತೀನಿ

ಕಾಯದಾಶೆ ಇನ್ನಾರಿಗವ್ವ ||3||

ಒಂದೊಂದು ಮಾತುಗಳು ಅಂದಂದು ಆಡತಾನ

ಎಂದೆಂದಿಗೂ ಮರೆಯಲಾರೆನವ್ವ

ಹೆಣ್ಣಿನ ಉಸಿರು ಒಳ್ಳೆದೇನವ್ವ

ನನ್ನ ಕಣ್ಣೀರು ಅವನಿಗೆ ಹತ್ತಲೆವ್ವ ||4||

ದೇಶಕ ಅಧಿಕವಾದ ವಾಸುಳ್ಳ ರಾಮಪೂರ

ಖಾಸ ಬಕ್ಕಪ್ಪ ಹೇಳಿದನವ್ವ

ದ್ಯಾಸದೊಳು ಮರೆಲಾರೆ ಎಂದೆಂದು

ಈಶ ಬಂದು ಕೈ ಹಿಡಿದಾನವ್ವ ||5||

ಮಾಡಬಾರ್ದು ಮಾಡಬಾರ್ದು ಪಾರನ ಸಂಗ

ಎನ್ನ ಬಯಲಿಗಿ ಕೈ ಮಾಡಿ ಕರಿತವ್ವ ಮಂಗ ||ಪಲ್ಲ||

ತಲಿ ಮ್ಯಾಲ ಬಿಟ್ಟಾದ ಗೇಣುದ್ದ ಚುಂಗ

ಓಣಿ ಓಣಿ ತಿರುಗುತಾದ ಹುಚ್ಚ ಮಂಗನಂಗ

ಹಗಲಿರುಳು ಮಾಡ್ತಾನ ಸ್ತ್ರೀಯರ ಸಂಗ

ಮಾಡಬಾರ್ದು ಮಾಡಬಾರ್ದು ಪಾರನ ಸಂಗ ||1||

ನಾ ಹೋಗಿದೆನವ್ವ ಬಾಂವಿಯ ನೀರಿಗೆ

ಮುಂದ ಬಂದು ತರಿಬಿತವ್ವ ಹುಚ್ಚ ನನ್ನ ಬಾರಿಗೆ

ಹೊಳ್ಳಿ ನಿಂತು ಹೊಡೆದೆನವ್ವ ಒಂದೇಟು ಮಾರಿಗೆ

ಅತ್ತು ಕರೆದು ಸುಂಬಳ ಸೀತು ಒಗಿತವ್ವ ಸೀರಿಗೆ ||2||

ಕೆಂಜೋಳ ಬಿಳಿಜೋಳ ಸಣ್ಣಾಗಿ ಬೀಸಿ

ಅದರಾಗ ಹಾಕಿದನವ್ವ ಹಾಲು ಬೆಲ್ಲ ಕಲಿಸಿ

ಮುಂದ ಕುಂತು ಉಣಿಸಿದೆನವ್ವ ಮರದ್ತುಂಬ ದೋಸಿ

ರಾತ್ರ್ಯಾಗ ಮಾಡಿತವ್ವ ಹಾಸಿಗೆಲ್ಲ ಹೇಸಿ ||3||

ಅವ ಏನು ಧೀರನವ್ವ ಇವ ಬಲು ಪುಕ್ಕ

ಕುಳುಬಾನ ಸಂದ್ಯಾಗ ಸಿಕ್ಕಿದನವ್ವ ಠಕ್ಕ

ನಮ್ಮ ರಾಂಪೂರ ಬಕ್ಕಪ್ಪನ ಕೈಯಾಗ ಸಿಕ್ಕ

ತನ್ನೊಳಗ ತಾ ತಿಳಿದು ಕಿಲಕಿಲನೆ ನಕ್ಕ ||4||

ಏನು ಬೇಡುವಳಲ್ಲ ನಾನು

ಪಂಚೇರು ಬಂಗಾರ ತಾರೊ ನೀನು ||ಪಲ್ಲ||

ಗಿದ್ದನ ಅಕ್ಕಿ ತಾರೋ ಅದ್ದನ ಬ್ಯಾಳಿ ತಾರೊ

ಕೂಗುವ ಕೋಳಿ ತಾರೊ ಕೂಡಿ ಉಂಬನು ಬಾರೊ ||1||

ಗಿದ್ದನ ಅಕ್ಕಿ ತಾರೊ ಅದ್ದನ ಗೋದಿ ತಾರೊ

ಗಬ್ಬಿದ್ದ ಕುರಿ ತಾರೊ ಹಬ್ಬ ಮಾಡಿ ಉಂಬನು ಬಾರೊ ||2||

ಎಂಟ ಎತ್ತವ ಮಾರೊ ಗಂಟಿ ಸರಪಳಿ ಮಾರೊ

ಕೆಡದಂಥ ಸೀರೆ ತಾರೊ ಒಂದೇ ರಾತ್ರಿಯ ಬಾರೊ ||3||

ಆನೆ ಕುದರಿಯ ಮಾರೊ ಬಂಡಿ ಎತ್ತಗೋಳ ಮಾರೊ

ಹೆಂಡರ ಮಕ್ಕಳ ಮಾರೊ ಬಂದು ನಮ್ಮ ಮನೆ ಸೇರೊ ||4||

ಪರ ಊರ ಹೆಣ್ಣ ನಾನು ಹರಕೊಂಡು ತಿನ್ನಕಿನ

ಕಲಬುರಗಿ ಸಂತ್ಯಾಗ ಕಂಬಳಿ ಮಾರಕಿ ನಾನು ||5||

ರಾಮಪೂರದ ಬಕ್ಕ ನನಗೆ ಒಂಟಿಲೆ ಸಿಕ್ಕ

ನನ್ನ ನೋಡಿ ಅವ ನಕ್ಕ ನನಗ ಬಂದಿತೊ ದುಃಖ ||6||

ಮಾಡಬೇಕೊ ಮಾಡಬಾರ್ದೊ ಮುದುಕನ ಸಂಗ

ಬ್ಯಾಡಂದರ ಈಗ ಬಿಡತಾದ್ಹ್ಯಾಂಗ ||ಪಲ್ಲ||

ಕಾಲ ಮ್ಯಾಲ ಕಾ ಹಾಕಿದನವ್ವ ಮುದುಕನ ಕಾಲು ಅಗಳಿ ಕಟಿಗಿ

ಏನಂದಿ ನಿನ್ನವ್ವನ ಹಡಾ ಏನಂದಿ ನಿನ್ನಕ್ಕನಾ ಹಡಾ ||1|| ಕೈ ಮ್ಯಾಲ ಕೈ ಹಾಕಿದನವ್ವ ಮುದುಕನ ಕೈ ಕಳ್ಳಿ ಕಟಿಗಿ

ಏನಂದಿ ನಿನ್ನವ್ವನ ಹಡಾ ಏನಂದಿ ನಿನ್ನಕ್ಕನಾ ಹಡಾ ||2||

ಹೊಟ್ಟೆ ಮ್ಯಾಲ ಹೊಟ್ಟೆ ಹಾಕಿದನವ್ವ ಮುದುಕನ ಹೊಟ್ಟಿ ಅಳ್ಳಿ ದಿಂಡ

ಏನಂದಿ ನಿನ್ನವ್ವನ ಹಡಾ ಏನಂದಿ ನಿನ್ನಕ್ಕನಾ ಹಡಾ ||3||

ಬಾಯಿಗಿ ಬಾಯಿ ಹಚ್ಚಿದನವ್ವ ಮುದುಕನ ಬಾಯಿ ಮುಸ್ರಿ ಗಡಿಗಿ

ಏನಂದಿ ನಿನ್ನವ್ವನ ಹಡಾ ಏನಂದಿ ನಿನ್ನಕ್ಕ ಹಡಾ ||4||

ಸಣ್ಣಹಳ್ಳಿ ಬೂದಿಬಸವ ರಾಮಪುರದ ಬಕ್ಕ

ತನ್ನೊಳಗೆ ತಾ ತಿಳಿದು ಕಿಲಕಿಲನೆ ನಕ್ಕ ||5||

ನನ್ನ ಮೂರು ಟೆಂಕಿ ರೊಕ್ಕ ನಿನ್ನ ಮ್ಯಾಲ ಬಾಕಿ ಅದ

ನನ್ನ ರೊಕ್ಕ ನನಗೆ ಕೊಡ ನಮ್ಮವ್ವ ನೀನು ||ಪಲ್ಲ||

ರೊಕ್ಕ ಕೇಳೊ ಅಣ್ಣ ನೀನು ಸುಮ್ಮನ್ಯಾಕ ಕೇಳಲಿಲ್ಲ

ತೆಕ್ಕಿಗ್ಯಾಕ ಬಂದು ಬಿದ್ದಲ್ಲೋ ನಮ್ಮಪ್ಪ ನೀನು ||1||

ತಗ್ಗಿನೊಳು ನೀ ಇದ್ದಿ ತೆವರಿನೊಳು ನಾ ಇದ್ದೇ

ನಿದ್ದಿಗಣ್ಣಾಗ ಉರುಳಿ ಬಿದ್ದೆಲ್ಲ ನಮ್ಮವ್ವ ನೀನು ||2||

ಹೊಟ್ಟೆ ಕಡಿತ್ತೆಂದು ನಾನು ಕೊಟ್ಟಗಿಯೊಳು ಮಲಗಿದ್ದೆ

ಖೊಟಿ ್ಟಗುಣ ಮಾಡಿಬಿಟ್ಟೆಲ್ಲೋ ನಮ್ಮಪ್ಪ ನೀನು ||3||

ಖೊಟ್ಟಿ ಕೆಲ್ಸ ಮಾಡಿದ ಮಾತು ಮ್ಯಾಲಿನಾತ ತಾನೆ ಬಲ್ಲ

ನನ್ನ ರೊಕ್ಕ ನನಗೆ ಕೊಡ ನಮ್ಮವ್ವ ನೀನು ||4||

ಸಣ್ಣ ಹಳ್ಳಿ ಬೂದಿಬಸವ ರಾಮಪುರದ ಬಕ್ಕ

ತನ್ನೊಳು ತಾ ತಿಳಿದು ಕುಂತಲ್ಲೆ ನಕ್ಕ ||5||

ಮಂಗರಂಡಿಯ ಸಂಗ ಮಾಡಿ ದಿಂಗ ಬಡದು ನಾ ಕುಂತೆ

ಲಿಂಗದೊಳಗೆ ನನ್ನ ಮನಸು ಇರುತಾದೇನು ಹೇಳಯ್ಯ ||ಪಲ್ಲ||

ಸಾಕಿ ಬಾಕಿ ಬಳಕೊಂಡು ತಿಂದು ಬೋಕಿ ಅವನ ಕೈಯಲ್ಲಿ ಕೊಟ್ಟು

ಯಾಕ ಗೆಳೆಯ ಸೊರಗಿದೆಂದು ಕೇಳುತಾಳೇನು ಹೇಳಯ್ಯ ||1||

ಸೂಳಿಗಾಗಿ ಸೋತು ಕುಂತೆ ಮಡದಿಗಾಗಿ ಮರತು ಕುಂತೆ

ಮಡದಿಗ ಬರಾ ಅಂತಃಕರಣ ಬರುತಾದೇನು ಹೇಳಯ್ಯ ||2||

ಬಕ್ಕನ ಬಿದ್ದು ಹ್ವಾದ ಮ್ಯಾಲ ಬಾಯಾನ ಹಲ್ಲು ಮುರಿದ ಮ್ಯಾಲ

ತಿಕ್ಕಾಡಿದ ನೂಕ್ಯಾಡಿದ ಖೂನ ಇರುತದೇನು ಹೇಳಯ್ಯ ||3||

ದೇಶದೊಳಗೆ ಎನ್ನ ವಾಸುಳ್ಳ ರಾಮಪುರ

ಈಶ ಬಕ್ಕಪ್ಪನ ಮಗಳ ಅದೇನು ಹೇಳಯ್ಯ ||4||

ಮಲಿ ಬಂದ ಮ್ಯಾಲ ನೆಲ ನೋಡದೆ

ಮೂಗ ಹರ್ಕೊಂಡ್ಡೆವ್ವ

ಕಲಿ ಪ್ರಬಲಕ್ಕಾಗಿ ಕಂಡಂಗ ಕುಣಿದಾಡಿ

ಹಲ್ಲು ಮುರ್ಕೊಂಡ್ಡೆವ್ವ ||ಪಲ್ಲ||

ಎಂಟಕ ಸೂಳಿ ಇಸಕಂಟಕದಿಂದ

ಕಂಟೀಗಿ ಸಿಗಿಸಿ ಸೀರಿ ಹರ್ಕೊಂಡೆವ್ವ

ಕಾಕ ಗುಣದ ಬುದ್ಧಿ ಕಾಗಿ ಮಾರಿ ಹೆಣ್ಣು

ಕಾಲುಂಗುರ ಇಟಗೊಂಡ್ಡೆವ್ವ ||1||

ಒಡಕ ಬಾಯಿ ಸೂಳಿ ಮುದುಕನ ಮಾಡಿಕೊಂಡು

ಪದಕಿ ಹರ್ಕೊಂಡೆವ್ವ

ಮೂಕಗ ಹುಟ್ಟಿದ ಮೂರ ಮಕ್ಕಳ

ಮುಡಚಟ್ಟು ಮಾಡಿಕೊಂಡೆವ್ವ ||2||

ಸಾಕು ಬೇಕೆಂಬ ಅಕ್ಷರ ಓದಿ

ರಕ್ಷಣೆಗೆ ಹೋಗಿದೆನವ್ವ

ದೇಶಕ ವಾಸುಳ್ಳ ರಾಮಪುರ ಬಕ್ಕಪ್ಪನ

ಪಾದಕ ಹೊಂದಿದ್ದೆನವ್ವ ||3||

ಸಾಕವ್ವ ಸಾಕು ಸಾಕು ಈ ಸಂಸಾರ ಸುಡಲಿ

ಇನ್ಯಾರಿಗಿ ಬೇಕ ||ಪಲ್ಲ||

ತಳವಿಲ್ಲದೊಂದು ಕೊಡ ತೊಗಂಡೆ

ಮುದ್ರಿ ಬಾವಿ ನೀರಿಗಿ ಹ್ವಾದೆ

ಕಾಲು ಜಾರಿತವ್ವ ಕೊಡನೆ ಹೊಡಿತು

ನಡ ಮುರದು ನಡದಂಗಾಯ್ತು ||1||

ಎಂದಿಲ್ದೊಮ್ಮೆ ಸಂತಿಗಿ ಹ್ವಾದೆ

ಒಂಬತ್ತು ದಿನಸ ಒಮ್ಮೆ ತೊಗಂಡೆ

ತಲೆ ನಾನು ಎರಕೊಲಿಲ್ಲ

ಫಾಣೇಕ ಎಣ್ಣೆ ಇಲ್ಲದಂಗಾಯ್ತು ||2||

ಒಮ್ಮನ ಜ್ವಾಳ ಒಮ್ಮೆ ತೊಗಂಡೆ

ಬೀಸಕಲ್ಲಿಗಿ ಬೀಸಲಾಕ ಕುಂತೆ

ಗುಂಜಿ ಮುರಿದಿ ದವಡಿಗೆ ಬಡಿತು

ದವಡೇನ ಹಲ್ಲು ಉಳಿದಂಗಾಯ್ತು ||3||

ಸಣ್ಣಹಳ್ಳಿ ಬೂದಿಬಸವ ರಾಮಪುರದ ಬಕ್ಕ

ತನ್ನೊಳಗೆ ತಾ ತಿಳಿದು ಕುಂತಲ್ಲೆ ನಕ್ಕ ||4||

ಉದ್ದನ ಗಾಂಜಿ ಗಿಡ ವನವೇನಮ್ಮ

ಗಾಂಜಾ ಸೇದವನ ಬುದ್ಧಿ ನಿಜವೇನಮ್ಮ ||ಪಲ್ಲ||

ಕುಂಬಳ ಹೂವೇನ ಕುಂಬಾರತಿ ಮಾತೇನ

ಕುಂಬಿ ಮ್ಯಾಲ ನಿಂತು ನಗುವಳು ಹೆಂಗಸೇನಮ್ಮ ||1||

ಹಾಗಲ ಕಾಯೇನ ಹಾರುತಿ ಮಾತೇನ

ಹಣೆಮ್ಯಾಲ ಕುಂಕುಮ ಇಲ್ಲದೌಳು ಹೆಂಗಸೇನಮ್ಮ || 2||

ಒಡ್ಡತಿ ಮಾತೇನ ಗೊಡ್ಡೆಮ್ಮಿ ಹೈನೇನ

ಬಡ್ಡಿ ತಿಂಬವನ ಮಾತು ನಿಜವೇನಮ್ಮ ||3||

ರಾಮಪುರದ ಬಕ್ಕ ಭೀಮಾ ನದಿಯಲಿ ಸಿಕ್ಕ

ಅವ ಮಾಡಿದ ಪದ ನಿಜ ನೋಡಮ್ಮ ||4||

ಪುಂಡ ಲೋಕದಿಂದ ಕೇಳಿರಿ ಹೊಸ ಸುದ್ದಿ

ಗಂಡಸರೆಲ್ಲ ಬಸುರಾಗಿ ಸುವ್ವಿ ನಾರಿ ಬಾ ||ಪಲ್ಲ||

ಗಂಡಸರೆಲ್ಲ ಬಸುರಾಗಿ ತಮ್ಮ ತಮ್ಮ

ಹೆಂಡರಿಗೆಲ್ಲ ಮಲಿ ಕುಡಿಸಿ ||1||

ಪೋರಿ ನಾ ಇರಲಾಕೆ ಧೀರ ಕರೆಯಲು ಬಂದ

ಗೋಧಿಯ ಬೀಜ ಉಡಿಯಕ್ಕಿ ಸುವ್ವಿ ನಾರಿ ಬಾ ||2||

ಗೋಧಿಯ ಬೀಜ ಉಡಿಯಕ್ಕಿ ಹಾಯ್ಕೊಂಡು

ಹೋದ ಮಿಂಡರಿಗೆ ಶರಣೆಂದು ||3||

ಮಿಂಡಿ ನಾ ಇರಲಾಕೆ ಗಂಡ ಕರೆಯಲು ಬಂದ

ಪುಂಡಿಯ ಬೀಜ ಉಡಿಯಕ್ಕಿ ಸುವ್ವಿ ನಾರಿ ಬಾ ||4||

ಪುಂಡಿಯ ಬೀಜ ಉಡಿಯಕ್ಕಿ ಹಾಯ್ಕೊಂಡು

ಕಂಡ ಕಂಡೌರಿಗೆ ಶರಣೆಂದು ||5||

ಏ ನನ್ನ ಗಂಡನ ಏನಂತ ಕರೆಲವ್ವ

ಬಾರಪ್ಪ ಗಂಡ ಮಲಗೂನ ಸುವ್ವಿ ನಾರಿ ಬಾ ||6||

ಬಾರಪ್ಪ ಗಂಡ ಮಲಗೂನ ಮಂಚದ ಮ್ಯಾಲ

ಒಲ್ಲೇನ್ಹೊಗವ್ವ ಛಳಿ ಭಾಳ ||7||

ಮುದುಕಗ ಹುಟ್ಟೀತ ಮೂರ ಛಾಯದ ಕೂಸ

ಯಾರ ತೂಗಿದರ ಮಲಗದ ಸುವ್ವಿ ನಾರಿ ಬಾ ||8||

ಯಾರ ತೂಗಿದರ ಮಲಗದ ಈ ಕೂಸು

ಹರಳೇಲಿ ಬೇಡಿ ಅಳತಾದ ||9||

ಸಣ್ಣಹಳ್ಳಿ ಬೂದಿಬಸವ ರಾಮಪುರದ ಬಕ್ಕ

ತಾ ಬಂದು ಜೋಗಳಾಡಿ ಕೂಸ ಮಲಗಿಸಿ ನಕ್ಕ ||10||

ಬಾರೊ ಬಾ ಮನಿಗೆ ಪಂಥವ ಸಲ್ಲ

ನಡಿಯೊ ನಮ್ಮ ಮನಿಗ್ಹೋಗಣ || ಪಲ್ಲ||

ಅಡ್ಡ ಗೊಂಗಡಿ ಹೊದಿಯಬ್ಯಾಡ ರಂಡಿ ಮುಸಗ ಹಾಕಬ್ಯಾಡ

ಹೆಂಡ್ತಿ ಸತ್ತಳೆಂದು ನೀ ಓಣಿ ಓಣಿ ತಿರಗಬ್ಯಾಡ ||1||

ಕರಿಯ ಕಂಬಳಿ ಕೊಡುವೆ ಕಾಟಿ ರುಂಬಾಲ ಕೊಡುವೆ

ಮನೆತನಕ ಬಂದರ ಮಲಗ ಮಂಚವ ಕೊಡುವೆ ||2||

ರನ್ನದ ತೋಳ ಮ್ಯಾಲ ಸಣ್ಣದೊಂದು ಹುಣ್ಣು ಹುಟ್ಟಿ

ಹುಣ್ಣು ಮಾಯುವ ತನಕ ಹೆಣ್ಣಿ ಸಂಗ ಬ್ಯಾಡ ||3||

ಕಾಚುಂಡ ಕರಿಕಲ್ಲು ಸಣ್ಣುಂಡ ಸುಲದಹಲ್ಲು

ಎಣ್ಣೆ ಬೆಣ್ಣೆ ಉಂಡ ಕಾಯ ಮಣ್ಣು ಪಾಲಾಗಿ ಹೋಗುತಾದ ||4||

ಸಣ್ಣಹಳ್ಳಿ ಬೂದಿ ಬಸವ ರಾಮಪೂರದ ಬಕ್ಕ

ನ್ಯಾಯವಿಲ್ಲದೆ ಸಿಕ್ಕ ತನ್ನೋಳು ತಾ ನಕ್ಕ ||5||

ಹುಟ್ಟಬಾರದು ಹೆಣ್ಣು ಮಕ್ಕಳು ಈ ಜನ್ಮ ಸುಡಲಿ

ಕಷ್ಟ ಬರದಾನ ಭರಮದೇವರು ||ಪಲ್ಲ||

ಸಾಕಿ ಸಲುವಿ ಜತನ ಮಾಡಿ ಎಣ್ಣಿ ಬೆಣ್ಣಿ ಎರದೆನವ್ವ

ಹುಟ್ಟಿದ ಮನಿಗೆ ಎರವಾದೆ ಕೊಟ್ಟ ಮನಿಗೆ ಧಣಿಯಳಾದೆ ||1||

ದೂರದಿಂದಲಿ ಬಂದರಿಬ್ಬರೊ ಅವರಿಬ್ಬರು ಖೂನ ಇಲ್ಲದವರೊ

ಕರಿಯ ಕಂಬಳಿ ಗದ್ದಿಗ್ಹಾಸಿ ಬೆಳ್ಳಿ ಬಂಗಾರ ರೊಕ್ಕ ಎಣಿಸಿದರೊ ||2||

ಕುಂಕುಮ ಹಚ್ಚಿ ನೆಚ್ಚ ಮಾಡಿದರೊ ಅವರಿಬ್ಬರೂ ಊರು ಕೇರಿಲ್ಲದರೊ

ಆರುಮೂರು ಮಂದಿ ಕೂಡಿದರು ಹದಿನೆಂಟ ಮಂದಿ ಲಗ್ನ ಮಾಡಿದರೊ | |3||

ನಾರಿ ಕೈಯಲಿ ಕಂಕಣ ಕಟ್ಟಿ ಹಣಿಗೆ ಕುಂಕುಮ ದಂಡಿ ಧರಿಸಿ

ಅತ್ತಿ ಹೊಟ್ಟಿಲೆ ಅವರ ಇಬ್ಬರೊ ನಾವಿಬ್ಬರೂ ಹೊರಗಿನಿಂದ ಬಂದವರೊ ||4||

ನಡೆದು ನಡೆದು ಬೇಸರಾಯ್ತು ಕಟ್ಟಿದ ಬುತ್ತಿ ದಾರಿಗಾಯ್ತು

ಹೊತ್ತು ಮುಳುಗಿ ಕತ್ತಲಾಯ್ತು ಅತ್ತಿ ಮನಿಗೆ ಸೇರದಾಯ್ತು ||5||

ದೇಶದೊಳು ಅಧಿಕವಾದ ವಾಸುಳ್ಳ ರಾಮಪುರ

ಈಶ ಬಕ್ಕಪ್ಪಯ್ಯನ ಖಾಸ ಮಗಳಾಗಿ ಮನೆಯ ಸೇರ್ಯಾಳೊ ||6||

ಅಂಬಿಗರಣ್ಣ ಇದು ಒಮ್ಮೆ ಹೊಳೆಯ ದಾಟಿಸೊ ||ಪಲ್ಲ||

ಹೊಳೆಯ ದಾಟಿಸೊ ಎನಗ ಅಲ್ಲದವರ ಮಗಳಲ್ಲ ನಾನು

ಸುದ್ಧ ಶಿವಭಕ್ತಳ ಮಗಳಯ್ಯ ಅಂಬಿಗರಣ್ಣ || 1||

ಹರಗೋಲು ಹವಳದ ಹಾರ ನಿನಗೆ ಕೊಡುವೆ ಮುತ್ತಿನ ಸರ

ಹರಸಿ ಹೊಳೆಯ ದಾಟಿಸೊ ಅಂಬಿಗರಣ್ಣ ||2||

ಅಕ್ಕ ತಂಗಿದೇರು ಆರು ಮಂದಿ ನೆಗೆಣ್ಣಿಯರ ಏಳು ಮಂದಿ

ಅವರೊಳು ಚಲುವೆ ನಾನಯ್ಯ ಅಂಬಿಗರಣ್ಣ ||3||

ಎಳ್ಳು ಹಚ್ಚಿದ ಸಜ್ಜಿರೊಟ್ಟಿ ಎಣ್ಣ್ಣಿ ಬದನಿಕಾಯಿ

ಉಂಡು ಹೊಳೆಯ ದಾಟಿಸೊ ಅಂಬಿಗರಣ್ಣ ||4||

ದೇಶಕ ಅಧಿಕವಾದ ವಾಸುಳ್ಳ ರಾಮಪೂರ

ಈಶ ಬಕ್ಕಪ್ಪನ ಖಾಸ ಮಗಳಯ್ಯ ಅಂಬಿಗರಣ್ಣ ||5||

ಗಂಡನ ಮಾಡಿಕೊಂಡೆ ಮುಪ್ಪಾಗದಂಥ ಮುತ್ತೈದಿತನವ ಕಂಡೆ ||ಪಲ್ಲ||

ಗಂಡನಾಗದಕ್ಕಿಂತ ಮೊದಲೆ ಮಿಂಡಿಯಾಗಿ ತಿರುಗುತ್ತಿದ್ದೆ

ಭಾಳ ಸಣ್ಣಕ್ಕಿದ್ದೇನ ಏಸೊ ದಿನ ಅರಿಯದೆ ಮೈ ಮರ್ತೇನ

ಎಳಕ ಇರುವದರೊಳಗ ಗಂಡನ ಜುಳಕ ತಿಳದ್ರ ತಿಳದ್ಹೋಯ್ತು | |1||

ರಸ ಬಾಳಿ ಹಣ್ಣ ತೀಡಿದ ಉನ್ಮಣಿಯೊಳು ಹೊಗಸಿ ಬಾಗಿಲ ಮುಚ್ಚಿದ

ಒಳಗ ಬಂದು ಎನ್ನ ಗಂಡ ಎಳದ ಹಾಸಿಗಿ ಮ್ಯಾಲ ಕರದ

ಕರ್ಮ ಎಂಬ ಕೂಟ ಕೂಡಿಸಿ ನಿರ್ಮಲೆಂಬ ಬೀಜ ಬಿತ್ತಿದ ||2||

ಕರ್ಣ ಗರ್ಭವ ತುಂಬಿ ಓಂಕಾರವ ಹಡದಾಳ ಜಗದ ರಂಬಿ

ಪುತ್ರ ಹುಟ್ಯಾನೆಂಬ ಪ್ರೀತಿಗಿ ಗಗನಕ್ಕೆ ತೊಟ್ಟಿಲ ಕಟ್ಟಿ

ಅಚ್ಚ ಮುತ್ತೈದರು ಕೂಡಿ ಜಗದ ದೇವನ ಪಾಡಿ ||3||

ದೇಶದೊಳು ಅಧಿಕವಾದ ವಾಸುಳ್ಳ ರಾಮಪೂರ

ಈಶ ಬಕ್ಕಪ್ಪನ ಪಾದಕ ಹೊಂದಿದವನು | ||4||

ಸುವ್ವಿ ಸುವ್ವಕ್ಕ ನಾರಿ ಸುವ್ವಿ ಸುಜ್ಞಾನದ ಪೋರಿ

ದಾರಿ ಎಷ್ಟು ಹರದಾರಿ ಸುವ್ವಕ್ಕ ನಾರಿ ||ಪಲ್ಲ||

ಒಂಬತ್ತು ಬಾಗಿಲ ಮುಚ್ಚಿ ಒಳಗೆ ಜ್ಯೋತಿಯ ಹಚ್ಚಿ

ನಂಬಿಗಿಲ್ಲದೆ ಒಗತನ ಮಾಡಿದೆನೆ ||1||

ತನುವೆಂಬ ಕಣ್ಣಿನೊಳು ಮನವೆಂಬ ತೂಕವನ್ಹಾಕಿ

ಒನ ಒನದು ಒಬ್ಬವಳೆ ನೆನಸಿದನೆ ||2||

ಅಷ್ಟ ಧಾನ್ಯಗಳೆಲ್ಲ ಕಷ್ಟ ಕಡಿಗೆ ಹಚ್ಚಿ

ಕುಟ್ಟಿ ಕುಟ್ಟಿ ಕೊಚ್ಚುವ ಕಳದೇನೇ | |3||

ಅಷ್ಟ ಮದಗಳೆಲ್ಲ ಕಟ್ಟಿ ಕಡಿಗೆ ಹಚ್ಚಿ

ಲಟ್ಟನೆ ಬಾನವ ಮಾಡಿದನೆ ||4||

ಅಷ್ಟರೊಳು ಗಂಡ ಬಂದು ಅಟ್ಟ ಗಡಗಿಯ ಒಡೆದು

ಹುಟ್ಟ ಮುರಿದು ಗ್ವಾಡಿಗೆ ಒಗದಾನೆ || ||5||

ಎನ್ನ ಗುರು ಬೂದಿ ಬಸವ ರಾಮಪೂರದ ಬಕ್ಕ

ತನ್ನಂತೆ ಎನ್ನ ಮಾಡಿದಾನೆ || ||6||

ಹೆಂಡತಿ ನೋಡಣ್ಣ ಈಕಿ ನನ್ನ

ಹೆಂಡತಿ ನೋಡಣ್ಣ ||ಪಲ್ಲ||

ದಂಡನಿಲ್ಲದೆ ದಂಡ್ಹೋರಿ ಮ್ಯಾಲ ಕುಂತು

ಬಂಡು ಮಾಡುತ ಬಯಲಿಗೆ ಬರುವಳೊ ||1||

ಮೂರೂರ ಸಂತೆಯ ತಿರುಗುವಳೊ ಮೂರ ಕಾಸಿನವಳೊ

ಮಾರಿಯ ಮುಸುಕನು ತೆರೆಯವಳೊ ಮಿಸಕದೆ ಮಲಗುವಳೊ ||2||

ನೀತಿ ಇಲ್ಲದವಳೊ ನಿತ್ಯ ನೀರ ತರುವಳೊ

ಕುತ್ತಿಗಿ ಇಲ್ಲದವಳೊ ಕುಂತವರ ಖೂನ ಹೇಳುತಾಳೊ || 3||

ಏಳೆಂಟು ಸೀರಿ ಹಿಂದೆ ಉಡುತಾಳೊ ಮುಂದೆ ಬತ್ಲೆ ಹಾಳೊ

ನಾಳಿಗಿ ಬರುತಾಳೊ ನಾಚಿಕಿ ಇಲ್ಲದವಳೊ || 4||

ಸಣ್ಣಹಳ್ಳಿ ಬೂದಿಬಸವ ರಾಮಪೂರದ ಬಕ್ಕ

ಭೀಮ ತೀರದಿ ಸಿಕ್ಕ ಅವ ನೋಡಿ ಕಿಲಕಿಲನೆ ನಕ್ಕ ||5||

ಬೇಡಿಕೊಂಡೆನವ್ವ ಗುರುವೆ ಬಕ್ಕಪ್ಪನ

ಕೂಡಿಕೊಂಡೆನವ್ವ ||ಪಲ್ಲ||

ಉಟ್ಟಿದ್ದು ತೊಟ್ಟಿದ್ದು ಕಳೆಯಂದಾನ

ಬಿಳಿಯ ಪೀತಾಂಬರ ಎನಗುಡಿಸ್ಯಾನ

ಶಿವನಾಮ ಸದಾ ನುಡಿಯಂದಾನ ||1||

ಕುಂಕುಮ ವಿಭೂತಿ ಧರಿಸಿದಾನ

ಕೊರಳಾಗ ರುದ್ರಾಕ್ಷಿ ಹಾಕಿದಾನ

ಗುರು ಬೋಧವ ಎನಗ ಕೊಟ್ಟಿದಾನ ||2||

ಆದಿ ಅನಾದಿ ತಿಳಿಕೊಂಡೆ ನಾ

ಸಣ್ಣ ಹಳ್ಳಿ ಬೂದಿಬಸವನ ನಿತ್ಯ ನೆನದೇನ

ರಾಮಪೂರ ಬಕ್ಕಪ್ಪನ ಮಗಳಾದೇನ ||3||

ಗುರುವಿನ ಕೂಡಿದೇನ ಗೆಳದಿ ಅರಿವಿನ ಮನೆಯಲ್ಲಿ

ನೂರೆಂಟು ನಾಯಿ ಬೊಗಳಿದರೇನ ||ಪಲ್ಲ||

ಗೋದಿ ಬೀಸಿದೇನ ಗೆಳದಿ ಸಾಧುರ ಬಳಗಕ

ಸಾಧು ಸಜ್ಜನರ ಸಾವಾಸ ಮಾಡಿದೇನ ||1||

ಓಂ ನಾಮ ಕಲಿತಿದೇನ ಗೆಳದಿ ನಾನೆಂಬುದ ತಿಳಿದೇನ

ಜಾಣ ಶಿವನ ಖೂನವ ತಿಳಿದೇನ ||2||

ದೇಶವ ಮರದೇನ ಗೆಳದಿ ದೇವರ ಅರಿತೇನ

ದೇಹದ ಅರಿವು ತಿಳಿದೇನ ||3||

ನಿಂದೆನಾಡುವದೇನ ಗೆಳದಿ ಹಿಂದೆ ನೋಡುವೇನ

ಹಂದಿ ಜನ್ಮ ಅವರಿಗೇನ ||4||

ದೇಶದೊಳಗೆ ನಮ್ಮ ವಾಸುಳ್ಳ ರಾಮಪೂರ

ಈಶ ಬಕ್ಕಪ್ಪನ ಕೂಡಿದೇನ ||5||

ಅಡವಿಗೆ ಹೋಗಿದ್ದೇ ಸುವ್ವಾಲೆ ನಾ ಹಿಡಿ ಹುಲ್ಲ ತಂದಿದ್ದೆ ಸುವ್ವಾಲೆ

ಹಿಡಿ ಹುಲ್ಲ ತಂದಿದ್ದೆ ಸುವ್ವಾಲೆ ನಾ ಎಳಿಗರ ಸಲುಹಿದ್ದೆ || ಪಲ್ಲ||

ನಾಗಳ ಹಾಲಿಂದು ಸುವ್ವಾಲೆ ಅದು ಚಿತ್ರಖೋಡಿನ ಎಮ್ಮೆ ಸುವ್ವಾಲೆ

ಅಪ್ಪ ಕೊಟ್ರಬಸವ ಸುವ್ವಾಲೆ ಎಮ್ಮೆ ಚಕ್ಕನೆ ಎಬ್ಬಿಸೊ ಸುವ್ವಾಲೆ ||1||

ಒಕ್ಕಳ ಹಾಲಿಂದ ಸುವ್ವಾಲೆ ಅದು ಹಂದಿಗಾಲಿನ ಎಮ್ಮೆ ಸುವ್ವಾಲೆ

ತಂದೆ ಕೊಟ್ರಬಸವ ಸುವ್ವಾಲೆ ಎಮ್ಮೆ ಜಿಂದಾಗಿ ಎಬ್ಬಿಸೊ ಸುವ್ವಾಲೆ ||2||

ಹಸಿರ ನಾಗಬೆತ್ತ ಸುವ್ವಾಲೆ ಕೈಯಾಗ ದಶರಂಗ ವಿಭೂತಿ ಸುವ್ವಾಲೆ

ಅಪ್ಪ ಕೊಟ್ರಿ ಬಸವ ಸುವ್ವಾಲೆ ಎಮ್ಮೆ ಹಸನಾಗಿ ಎಬ್ಬಿಸೊ ಸುವ್ವಾಲೆ ||3||

ಬೆಳ್ಳಿನಾಗ ಬೆತ್ತ ಸುವ್ವಾಲೆ ಕೈಯಾಗ ಬೆಳ್ಳನ ವಿಭೂತಿ ಸುವ್ವಾಲೆ

ತಂದಿ ಕೊಟ್ರ ಬಸವ ಸುವ್ವಾಲೆ ಎಮ್ಮೆ ಚಂದಾಗಿ ಎಬ್ಬಿಸೊ ಸುವ್ವಾಲೆ ||4||

ಕಡಗಂದಿನ ಮಜ್ಜಿಗೆ ಸುವ್ವಾಲೆ ನಾ ಕಟದೇನ ಹೊತ್ತಿಗಿ ಸುವ್ವಾಲೆ

ಕಟದೇನ ಹೊತ್ತಿಗಿ ಸುವ್ವಾಲೆ ಕೊಡುವೇನ ಕೇರಿಯೊಳಗೆ ಸುವ್ವಾಲೆ ||5||

ಮಗನ ಮರಳಯ್ಯ ಸುವ್ವಾಲೆ ನಾ ಪಾದ ತೊಳದೇನ ಸುವ್ವಾಲೆ

ಒಲೆಯ ಪುಟ ಮಾಡಿ ಸುವ್ವಾಲೆ ಅಕ್ಕಿಯ ತೊಳಸೇನ ಸುವ್ವಾಲೆ ||6||

ಹಬ್ಬವ ಬಂದಾದ ಸುವ್ವಾಲೆ ಭಾಳ ಹಿಗ್ಗಿನಲಿ ಸಲಿಸುವೇನು ಸುವ್ವಾಲಿ

ಮುಗ್ಗ ತುಪ್ಪವ ಕಾಸಿ ಸುವ್ವಾಲೆ ಭಾಳ ಅಗ್ಗದಲಿ ಕೊಡುವೆನು ಸುವ್ವಾಲಿ || 7||

ಗುರು ಬೂದಿ ಬಸವ ಸುವ್ವಾಲೆ ರಾಮಪೂರದ ಬಕ್ಕ ಸುವ್ವಾಲೆ

ಏಳುತ ನೆನದೇನ ಸುವ್ವಾಲೆ ಬೀಳುತ ನೆನದೇನ ಸುವ್ವಾಲೆ ||8||

ಏಳುತ ನೆನದೇನ ಸುವ್ವಾಲೆ ಎಮ್ಮೆ ಚಿಕ್ಕನೆ ಎಬ್ಬಿಸಿದ ಸುವ್ವಾಲೆ |

ಬಿಸಿದು ಮಾಡಿ ಉಣಬೇಕರೊ ತಂಗಳದು ಮತ್ಯಾಕರೊ ||ಪಲ್ಲ||

ಆಂಬ್ರ ಕಾಸ ಆಯಿ ಅದ್ಕ ಹಾಕ ಮೆಣಸಿನಕಾಯಿ

ಮ್ಯಾಲ್ಹ್ಹಾಕೆ ಸುಂಠಿ ಖಾರ ಬಾಯಿ ತುಂಬ ಜೋರಾ ||1||

ಕುಂಬಾರ ಮನಿಯನ ಕಾಳಿ ನೀ ತಾಳಿಗಿ ಹಾಕೆ ಬ್ಯಾಳಿ

ಮ್ಯಾಲ್ಹಾಕೆ ಬೆಲ್ಲದ ಮುದ್ದಿ ಎಲ್ಲರ ಮನಿಯಾಗ ಸುದ್ದಿ ||2||

ಹೊತ್ತಲಕ ಹಾಕೆ ನುಗ್ಗು ನೀ ಯಾರ ಬುಡಕರ ಡೊಗ್ಗು

ನೀ ಡೊಗ್ಗಿದರ ಬಹು ಹಿಗ್ಗು ಎಲ್ಲರ ಕೈಯಾಗ ಬಗ್ಗು ||3||

ಗೌಡರ ಮನೆಯ ತಿಪ್ಪ ನಿನ್ನ ಮ್ಯಾಲೆ ದಪ್ಪ ದುಪ್ಪ

ನೀ ಕೇಳೇ ಗೌಡರ ತಿಪ್ಪ ನೀ ಯಾರಿಗಿ ಮಾಡಿದ ತಪ್ಪ ||4||

ಗಾಣಿಗರ ಮನೆಯನ ಸಿದ್ಧಿ ನೀ ಎಳ್ಳು ಬೆಲ್ಲ ಮೆದ್ದಿ

ಶಿವನಾಮ ತೊಗಂಡು ಗೆದ್ದಿ ಅವನ ಗೂಡ ನೀ ಇದ್ದಿ ||5||

ರಾಮಪೂರದ ಬಕ್ಕ ಭೀಮ ನದಿಯಲಿ ಸಿಕ್ಕ

ಕುಂತಲ್ಲೆ ಮಾಯಾಗಿ ಕೈ ಹೊಡದು ನಕ್ಕ ||6||

ಕಾಲ ಕಾಲ ಉತ್ಪತ್ತಿ ಮತ್ತೆಲ್ಲಿಗೆ ಬಂತೋ ಸಂಗಯ್ಯ | |ಪಲ್ಲ||

ಸಂಗಯ್ಯನಾಟ ಅಂಗಕ ಹೊಯ್ತು ಲಿಂಗಯ್ಯನಾಟ ಅಂಗೈಗೆ ಹೊಯ್ತು

ಅಂಗದನ ಲಿಂಗ ಹೋಗಿ ಗಂಗಿ ಸೇರದು ಬಂತೋ ||1||

ದೇಶ ಸಂಚಾರ ಮಾಡದ ಬಂತು ಕಾಶಿ ಯಾತ್ರೆ ಹೋಗದು ಬಂತು

ದೇಶದಾಗ ಇದ್ದ ಜನರು ದೇಶಾವರಿ ಆಗದ ಬಂತೊ ||2||

ಸಾಧುರೊಳಗೆ ಭೇದ ಹುಟ್ಟಿ ಭೇದದೊಳಗೆ ಬೋಧ ಹುಟ್ಟಿ

ಜಂಗಮನಲ್ಲಿ ಲಿಂಗ ಹುಟ್ಟಿ ಗುರುವಿನಲ್ಲಿ ಕರುಣ ಹುಟ್ಟಿ ||3||

ದೇಶದೊಳಗಿನ ಮಂದಿ ಘಾಸಿಕೋರರು ಉಳಿವರಲ್ಲ

ಉಳಿದವರು ತಿಳಿಯದ ಬಂತು ತಿಳಿದವರು ಅಳಿಯದು ಬಂತೋ | |4||

ದೇಶಕ್ಕೆ ಅಧಿಕವಾದ ವಾಸುಳ್ಳ ರಾಮಪೂರ

ಖಾಸ ಬಕ್ಕಪ್ಪ ಹೇಳಿದ ಮಾತು ಲೇಸಾಗಿ ಕಾಣದು ಬಂತೋ ||5||

ಓಂ ನಾಮ ಸದಾಶಿವನಃ ನೆನೆಯಬೇಕ ಗೆಳದಿ

ಬೀಸವ್ವ ಗೋಧಿ ||ಪಲ್ಲ||

ಬೀಸವ್ವ ಗೋಧಿ ಹಸನಾಗಿ ಹಾದಿ

ಹಾದಿಯೊಳಗ ಮೂರ ಬೀದಿ ಕಲತಾವ ಗೆಳದಿ

ಬೀಸವ್ವ ಗೋಧಿ ||1||

ಕೊಡದೋಳು ನೀರ ತುಂಬಿ ಮಾಡಿ ಇಟ್ಟಾಳ ಸಿಂಬಿ

ಕೊಡ ಬಿಟ್ಟು ನೀರು ವೈದಾಳ ಗೆಳದಿ

ಬೀಸವ್ವ ಗೋಧಿ ||2||

ಸುತ್ತ ಮುತ್ತ ಕಡಿ ನಟ್ಟ ನಡುವೆ ದೇವರ ಗುಡಿ

ಗುಡಿಯ ಮುಂದ ದೇವರ ಕೊಯ್ದಾರೆ ಗೆಳದಿ

ಬೀಸವ್ವ ಗೋಧಿ ||3||

ಕೊಯ್ದು ಮಾಡ್ಯಾರ ಅಡಿಗಿ ಅಡಿಗ್ಯಾಗ ಹಾಕ್ಯಾರ ಗಡಗಿ

ಅಡಗಿ ಬಿಟ್ಟು ಗಡಗಿನ ತಿಂದಾರ ಗೆಳದಿ

ಬೀಸವ್ವ ಗೋಧಿ || ||4||

ಊರ ಮುಂದ ಚಾವಡಿ ಚಾವಡ್ಯಾಗಾನ ಚಿಂತಾಮಣಿ

ನಂಬಿದವರಿಗೆ ಹಿಂಬಾಲಾಗಿ ಇರುತಾನ ಗೆಳದಿ

ಬೀಸವ್ವ ಗೋಧಿ || ||5||

ಸಣ್ಣಹಳ್ಳಿ ಬೂದಿಬಸವ ರಾಮಪೂರದ ಬಕ್ಕ

ತನ್ನೋಳು ತಾ ತಿಳಿದು ಮಾಯಾದ ಗೆಳದಿ

ಬೀಸವ್ವ ಗೋಧಿ || ||6||

ಅಯ್ಯೋ ನನ ಜೀವ ಮೈ ಎಲ್ಲಾ ನವ ಗಾಯ ||ಪಲ್ಲ||

ಗಾಯ ಕಟ್ಟುವರಿಲ್ಲ ಗಾಳಿ ಬೀಸುವರಿಲ್ಲ

ನ್ಯಾಯ ಹೇಳಿದನಮ್ಮ ಸಣ್ಣಹಳ್ಳಿ ಬೂದುಬಸವ ||1||

ಅಡಿಕ್ಯೋಟ ಆಳಕ ಹಿಡಿಕ್ಯೋಟ ಕೆಚ್ಚಲ

ಆಕಳು ಅಟ್ಟದ ಮ್ಯಾಲ ಕರು ಬೆಟ್ಟದ ಮ್ಯಾಲ

ಹಾಲ ಹಿಂಡಕಿ ಕೈ ಅಡ್ಡಗ್ವಾಡಿಯ ಮ್ಯಾಲ ||2||

ಹಾಲು ಹಿಂಡ ಕರಮಗಿ ಏಳು ರಂಜಣಗಿ

ಮೂರು ಮಳ ತ್ವಾಟಕ ಆರು ಮಳ ಕಾಯಾಗಿ

ಕಾಯಿ ಕೊಯ್ಯೆ ಕುಡಗೋಲು ಹದನಾರು ಮೊಳವಯ್ಯ ||3||

ಸಣ್ಣಹಳ್ಳಿ ಬೂದಿಬಸವ ರಾಮಪೂರದ ಬಕ

ತನ್ನೋಳು ತಾ ತಿಳಿದು ಕುಂತಲ್ಲೆ ಮಾಯಾದ ||4||

ಆಕಿನೆ ಇಲ್ದಂಗ ಆಯ್ತಪ್ಪ ಮತ್ತ

ಇಕಿ ಮ್ಯಾಲಿನ ಮನಸ ಹೊಯ್ತಪ್ಪ ||ಪಲ್ಲ||

ಗಾಳಿ ತುಂಬಿದ ತಿದಿ ಬಾಯ್ತಪ್ಪ

ತಾನಿದ್ದು ಇಲ್ಲದಂಗ ಆಯ್ತಪ್ಪ ||1||

ಷಂಡಗ ಹುಟ್ಟಿದ ಈ ಕೂಸಪ್ಪ

ಮಂಡಲ ಮುಟ್ಟಿತು ಅದರ ಮಾಸಪ್ಪ ||2||

ಕಂಡು ಕೇಳದ ಶಿವಲೀಲಪ್ಪ

ಭಂಡ ಜನರಿಗೆ ಇದು ತಿಳಿದಪ್ಪ || 3||

ಮೂಕ ಹೇಳಿದ ಮುಗಿಲು ಹರಿದಿ ತಂತಪ್ಪ

ಕುರುಡ ತೋರಿಸಿದ ಖರೆ ಅಂತಪ್ಪ ||4||

ರಾಮಪೂರದ ಯೋಗಿ ಬಕ್ಕಪ್ಪನಪ್ಪ

ಅವ ಹೇಳಿದ ಮಾತು ನಿಜವಂತಪ್ಪ ||5||

ಚಂಚಲ ಮನಸಿದು ಮುಂಚ್ಯಾಕ ಎಲ್ಲಿತ್ತು

ನನ್ನ ಚಕಮಕಿ ಚೀಲ

ನಿರಹಂಕಾರದೊಳಗೆ ಇತ್ತು ಗೋಲ

ಆಕಾರದೊಳಗೆ ಮಾಡಿಕೊ ಖ್ಯಾಲ ||ಪಲ್ಲ||

ಭಾವ ಎಂಬ ಗುರು ಬೋದಿನ ಮ್ಯಾಲ

ಹೊಲಿಸಿಟ್ಟಿನಿ ಚಕಮಕಿ ಚೀಲ

ಸದ್ಗುಣ ತತ್ವದ ಉಕ್ಕಿನ ಲಾಲ

ಎಲ್ಲಿ ಬಿಟ್ಟೊ ತಮ್ಮ ಚಕಮಕಿ ಚೀಲ ||1||

ಮಾಡ್ಯಾರೊ ತಂಗಿ ಚಕಮಕಿ ಚೀಲ

ಮುನ್ನೂರ ಅರವತ್ತು ಕರಿ ಎಳಿ ನೂಲ

ಅದರಾಗ ಸೇರ್ಯಾದೊ ಗಂಡೇಳಿ ನೂಲ

ಬ್ರಹ್ಮ ನೆಯ್ದನವ್ವ ರಾಟದ ಮ್ಯಾಲ ||2||

ಪಂಚ ತತ್ವ ಕೂಡಿ ಹೊಲಸಿದ ಚೀಲ

ನೂರು ವರ್ಷವಾಯಿತು ಚೀಲದ ಕೌಲ

ಯಮನರು ಬಂದು ಹಾಕ್ಯಾರ ಜಾಲ

ಹರಿದುಹೊಯ್ತು ತಂಗಿ ಚಕಮಕಿ ಚೀಲ ||3||

ದೇಶಕ್ಕೆ ಅಧಿಕವಾದ ರಾಮಪೂರ ಮಿಗಿಲ

ಬೂದಿ ಬಸವ ಬಕ್ಕಪ್ಪನ ಲೀಲ

ಕರುಣವಿರಲಿ ಸದಾ ಭಕ್ತರ ಮ್ಯಾಲ

ಚಕಮಕಿ ಚೀಲದ ಮೂಲ ತಾ ಬಲ್ಲ ||4||

ಹಳ್ಳದ ದಂಡಿಲಿ ಮೆಯ್ಯುವ ಮೂರು ಎಮ್ಮೆಗಳು

ಒಂದು ಗೊಡ್ಡ ಎರಡು ಈದೇ ಇಲ್ಲ

ಗೊಡ್ಡಿದ್ದ ಎಮ್ಮಿಗೆ ಬಂದಾರು ಮೂವರು ಕಳ್ಳರು

ಒಬ್ಬವ ಕುರುಡ ಇಬ್ಬರಿಗೆ ಕಣ್ಣೇ ಇಲ್ಲ ||ಪಲ್ಲ||

ಕಣ್ಣಿಲ್ಲದ ಕುರುಡರು ತಂದಾರ ಮೂರು ರುಪಾಯಿ

ಒಂದು ಖೊಟ್ಟಿ ಎರಡು ನಡೆಯೋದಿಲ್ಲ

ನಡಿಲಾರ್ದ ರುಪಾಯಿಗೆ ಬಂದಾರ ಮೂವರು ಕಳ್ಳರು

ಒಬ್ಬವ ಕುಂಟ ಇಬ್ಬರ ಕಾಲೇ ಇಲ್ಲ ||1||

ಕಾಲಿಲ್ದ ಕುಂಟರಿಗೆ ಹಿಡಿಲಾಕ ಹೋಗ್ಯಾರ ಮೂವರು

ಒಬ್ಬವ ಚೊಂಚ ಇಬ್ಬರ ಕೈ ಇಲ್ಲ

ಕೈ ಇಲ್ಲದ ನೆಂಟರಿಗೆ ಹೇಳಲಾಕ ಹೋಗ್ಯಾರ ಮೂವರು

ಒಬ್ಬವ ಮೂಕ ಇಬ್ಬರ ಮಾತೇ ಇಲ್ಲ ||2||

ಮಾತಿಲ್ದ ಮೂಕರಿಗೆ ಇದ್ದಾರ ಮೂವರು ಹೆಂಡರು

ಒಬ್ಬಕಿ ಸುಗುಡಿ ಇಬ್ಬರು ಹಡದೇ ಇಲ್ಲ

ಹಡಿಲಾರ‍್ದ ಸುಗುಡೇರು ತಂದಾರ ಮೂರು ಗಡಿಗಿ

ಒಂದು ಹಸಿದು ಎರಡು ಸುಟ್ಟೇ ಇಲ್ಲ ||3||

ಸುಡಲಾರ್ದ ಗಡಿಗ್ಯಾಗ ಮಾಡ್ಯಾರ ಮೂರು ಕಡುಬ

ಒಂದು ಹಸಿದು ಎರಡು ಕುದ್ದೇ ಇಲ್ಲ

ಕುದಿಲಾರ್ದ ಕಡಬಿಗೆ ಬಂದಾರ ಮೂವರು ಬೀಗರು

ಒಬ್ಬವ ಬೊಚ್ಚ ಇಬ್ಬರ ಹಲ್ಲೇ ಇಲ್ಲ ||4||

ಹಲ್ಲಿಲ್ದ ಬೊಚ್ಚರಗಿ ನೀಡ್ಯಾರ ಮೂರು ಕಡುಬು

ಒಬ್ಬವ ಸತ್ತ ಇಬ್ಬರು ಉಳಿದೇ ಇಲ್ಲ

ರಾಮಪೂರದ ಬಕ್ಕ ಹೇಳಿದ ಮೂರು ಮಾತುಗಳು

ಒಂದು ಸುಳ್ಳ ಎರಡು ನಿಜವೇ ಇಲ್ಲ ||5||

ಶರಣರ ಮನೆಯನ ದೆವ್ವ ಎನಗ ಬಡದೀತವ್ವ

ಎಷ್ಟು ತಾಳಲೆವ್ವ ನಾ ಯಾರಿಗಿ ಹೇಳಲವ್ವ | |ಪಲ್ಲ||

ಸ್ವಾಮಾರ ದಿವಸವ್ವ ಎನ್ನ ಕುತ್ತಿಗಿ ಒತ್ತಿತವ್ವ

ರಾತ್ರಿ ಹಗಲವ್ವ ಎನಗ ನಿದ್ದಿ ಬರಲಿಲ್ಲವ್ವ ||1||

ಯಂತ್ರ ಬರೆದು ಮಂತ್ರಿಸಿ ಕಟ್ಟಿದನವ್ವ ಇವ ಎಂಥ ಕಳ್ಳನವ್ವ

ಪಕ್ಕ ಇಲ್ದ ಹಕ್ಕಿ ಗಗನ್ಕ ಹಾರಿತವ್ವ ಕಣ್ಣಿಲೆ ಕಂಡೇನವ್ವ ||2||

ಭೂಮಿಯೆ ಭೂತಾಗಿ ಬೆನ್ನ ಹತ್ತಿತವ್ವ ನಾ ಮರತ ಕುಂತೇನವ್ವ

ಗಂಡನ ಮ್ಯಾಲ ನಂಬಿಗಿಡಲಿಲ್ಲವ್ವ ಸಾಂಬಶಿವ ಒಲಿಲಿಲ್ಲವ್ವ ||3||

ದೇಶಕ ಅಧಿಕವಾದ ಖಾಸ ರಾಮಪೂರ

ಈಶ ಬಕ್ಕಪ್ಪನ ನೆನೆದೆವ್ವ ಎನ್ನ ದೆವ್ವ ಹೋದಿತವ್ವ ||4||

ತೇರು ಸಾಗುತಾದಮ್ಮ ತಂಗಿ ನೋಡಲಕ ಹೋಗೋಣ ಬಾರೆ

ಪಂಚ ಮುಖದ ಪಗಡಿಯ ತೇರು ಹಂಚಿಕಿಲ್ಲದೆ ಸಾಗುತಾದ ||ಪಲ್ಲ||

ಅಂಗೈ ಎಂಬ ಅಚ್ಚವ ಮಾಡಿ ನಾಲ್ಕು ಗಾಳಿಗಳಾಗಿದ್ದಾವು ಜೋಡಿ

ಏಳು ಗೇಣಿನ ಮಂಟಪ ತೇರ ಬಂಟರೈವರು ಎಳದಾರು ಕೂಡಿ ||1||

ಗರ್ವ ಎಂಬ ಕಂಬವು ಜಡಿದು ನರಗಳೆಂಬ ಹಗ್ಗವು ಬಿಗಿದು

ಗರುವು ಮರುವು ಕೂಡಿಕೊಂಡು ಗರ್ದಿಲಿಂದೆ ಸಾಗುತಾದ ||2||

ನಾಲ್ಕು ಮಂದಿದೇರು ಕೂಡಿ ತೇರು ಎಳೆದು ಒಯ್ದಾರ ಹಾಡಿ

ಮಾಯವಾಯಿತು ಕಾಯಪೂರ ಮುರಿದು ಬಿತ್ತವ ಗಡ್ಡಿತೇರ ||3||

ಅಂಗಕ ಹೊಂದಿತು ಆತ್ಮದ ತೇರ ಶಂಭುಲಿಂಗ ಅಡಿಗ್ಯಾನ ಪೂರ

ಹೌದ ಅಲ್ಲೊ ಮಾಡಿ ವಿಚಾರ ರಾಮಪೂರದ ಬಕ್ಕ ಕವಿಗಾರ ||4||

ಇದು ಒಂದು ಮಾತು ಕೇಳೆ ಅಮ್ಮಮ್ಮ ಜಾಣೆ ||ಪಲ್ಲ||

ಅಂಗಳದಾಗ ಹುಟ್ಟುವದು ಅಂಗಳದಾಗ ಬೆಳೆಯುವದು

ಅಕ್ಕ ತಂಗೇರ್ನ ಬಯಲಿಗೆ ತರುವದು

ಕೋಳಿಯ ಮರಿಯಲ್ಲವೇ ||1||

ಹಾದ್ಯಾಗ ಹುಟ್ಟುವುದು ಹಾದ್ಯಾಗ ಬೆಳೆಯುವದು

ಹಾದ್ಯಾಗ ಹೋಗವನ ಸೆರಗ್ಹಿಡಿದು ಜಗ್ಗುವದು

ಉತ್ರಾಣಿ ಕಡ್ಡೆಲ್ಲವೇ ||2||

ಮಣ್ಣಾಗ ಹುಟ್ಟುವುದು ಮಣ್ಣಾಗ ಬೆಳೆಯುವದು

ಒಳ್ಳೆ ಮನುಜನ ಬಯಲಿಗೆ ತರುವದು

ಚೇಳಿನ ಮರಿಯಲ್ಲವೇ ||3||

ಹಸಿರ ರೇಶಿಮೆ ಸೀರೆ ಅರವತ್ತು ಮೊಳ ನೆಯ್ದು

ಗಂಡನಿಲ್ಲದೆ ಬಾಲೆ ಗರ್ಭಿಣಿ ಹ್ಯಾಂಗಾದಳು

ಬಾಳಿಯ ದಿಂಡಲ್ಲವೇ ||4||

ಸಣ್ಣಹಳ್ಳಿ ಬೂದಿಬಸವ ರಾಮಪೂರದ ಬಕ್ಕ

ತನ್ನೊಳು ತಾ ತಿಳಿದು ಕುಂತಲ್ಲೆ ಮಾಯಾದ

ಇದು ಒಂದು ಮಾತು ಕೇಳೇ ||5||

ಅಲಲಲಾ ಏನು ತಾರಿಪಾ ಈ ಬಯಲೊಳು

ಕಾಣಸುತಾದ ಅಪರೂಪ ||ಪಲ್ಲ||

ನೀಲಿ ಬಣ್ಣ ಕಪ್ಪು ಮ್ಯಾಲ ಹಸಿರು ಬಿಳುಪು

ಬಲ್ಲವರಿಗೆ ತಿಳಿದತಪ್ಪ ನನ್ನ ಕಡೇನ ತಪ್ಪ ||1||

ಒಣಕಿ ಪೆಟ್ಟು ಬೀಳುವುದಿಲ್ಲ ಸಣ್ಣಕ್ಕಿ ಥಳಸೊದಿಲ್ಲ

ಜಾಣತನ ಭಾಳಿಲ್ಲ ಕ್ವಾಣ ಸೊಳೇರಿಗಿ ತಿಳಿಯೊದಿಲ್ಲ ||2||

ಗಾಳಿ ಮಟ್ಟಿ ಕಟ್ಟುತಾರ ಮ್ಯಾಳಿ ಮ್ಯಾಲ ತುಳಸತಾರ

ತುಳಸಿ ರಾಶಿ ಮಾಡುತಾರ ಗಾಳಿ ಬಿಟ್ರ ತೂರುತಾರ ||3||

ಜಾಳಿಗ್ಯಾಗ ತುಂಬುತಾರ ಕೋಳಿ ಮ್ಯಾಲ ಹೇರುತಾರ

ಹೇಳಿಕೇಳಿ ಮಾರುತಾರ ತಾಳಿ ಕೋಟಿ ಬಾಜಾರದಾಗ ||4||

ಗಡಬಡ ಮಾಡುವದಲ್ಲ ಗಡಬಡ ಸಿಗುವುದಿಲ್ಲ

ಬಡಿದಾಟವಾದ ಮ್ಯಾಲ ಬೂದುಬಸವ ಬಕ್ಕನ್ನಿಲ್ಲ ||5||

ಶ್ರೀಗುರು ತಾರಕ ಬ್ರಹ್ಮನರಿದಾತ ನಿಜ ಭಕ್ತ

ಗುರುವಿನ ಗುರು ಪರಮ ಗುರುವಿನ

ಪಾದ ಯೋಗದೊಳು ನಿತ್ಯ ನಿಜ ಶರಣ ||ಪಲ್ಲ||

ಗುರುವಿನಾ ನೆನೆದರೆ ಹರಿಯುವುದು ತಾಮಸವು

ಅರವು ಆಚರಿಸಿ ತಿರಿದುಂಡ ಜಗದೊಳಗೆ

ಸಿರಿವಂತನಾದ ನಿಜ ಶರಣ ||1||

ಗುರುವೆಂದು ಭಾವಿಸಿ ನರನೆಂದು ಕಂಡರೆ

ಹರ ಕೃಪೆಯು ತಪ್ಪಿ ಭವದೊಳು ಹುಟ್ಟಿ

ತಿರುಗುವದೆ ಸತ್ಯ ನಿಜ ಶರಣ ||2||

ನೂರೊಂದು ವಿರಕ್ತರಾ ಪಾದುಕ ನಾನಯ್ಯ

ಪಾರಿಯ ತಿರುಗಿ ಪವಳ ಮಂಟಪ

ದ್ವಾರವ ಕಾಯ್ದಿಹ ನಿಜ ಶರಣ ||3||

ಗುರುದ್ವಾರ ಎಂಬುವದು ಅರುವಿನ ಆಲಯ

ಬ್ಯಾರಿಲ್ಲವಣ್ಣ ಬಸವಾದಿ ಪ್ರಮಥರು

ಸೊರೆಗೊಂಡಾರೊ ನಿಜ ಶರಣ || 4||

ಅತ್ತಿತ್ತ ತಿರುತಿರುಗಿ ಹೊತ್ತುಗಳಿಯಲಿ ಬೇಡ

ಚಿತ್ತ ಲಿಂಗದಲಿ ನಿಲಿಸಿದ ಮಹಿಮಂಗೆ

ಮತ್ತ್ಯಾಕೊ ಮೋಕ್ಷ ನಿಜ ಶರಣ ||5||

ಬೇವು ತಿಂದರೆ ಬಾಯಿ ಸ್ವಾದವು ತೋರುವದೆ

ದೇವಾಭಕ್ತಂಗೆ ಮುಕ್ತಿ ಕೊಡದಿದ್ದರೆ

ಸಾವು ಸಂಗಾಟವೊ ನಿಜ ಶರಣ ||6||

ಭಕ್ತರ ಬೋನವನುಂಡು ಚಕ್ಕಂದಾಡಲಿ ಬ್ಯಾಡ

ಭಕ್ತ-ದೇವರು ಇಬ್ಬರೊಂದಾಗಿ

ಮುಕ್ತಿ ಪಡೆಯಿರೊ ನಿಜ ಶರಣ ||7||

ದಾರಿ ತಪ್ಪಿದ ಮನುಜ ಸೇರಿದ ಸಂಜಿಗಿ

ಕಾರುಣ್ಯ ನಿಧಿಯ ಕರುಣ ತಪ್ಪಿದ ಬಳಿಕ

ಸೇರಿದನು ಭವಕೆ ನಿಜ ಶರಣ ||8||

ಬಲ್ಲೆನೆಂದು ಬಿಗಿದು ಬಿಲ್ಲನ್ಹಂಗಿರಬೇಡ

ಖುಲ್ಲರ ಕೂಡ್ಯಾಡಿ ಕೆಡಬ್ಯಾಡ ಹೊತ್ತಿಲ್ಲ

ವಲ್ಲಭನ ಒಲಿಸೊ ನಿಜ ಶರಣ ||9||

ಆಚಾರಿಲ್ಲದ ಗುರುವು ಆಚಾರಿಲ್ಲದ ಶಿಷ್ಯ

ಆಚಾರಿಲ್ಲದ ಆರಾದಾರಾಗಲಿ ಜಗದಲಿ

ನೀಚ ನಿಂದಕರೊ ನಿಜ ಶರಣ | |10||

ಬಡವರ ಕಂಡರೆ ಕಡು ನೋಯಿಸಿ ನುಡಿಬ್ಯಾಡ

ಬಡವರು ತಮ್ಮೊಳಗೆ ನೊಂದರೆ ನಿನಗೊಂದು

ಪಿಡುಗು ಬರುವುದು ನಿಜ ಶರಣ ||11||

ಭಾಗ್ಯಯುಳ್ಳವನೆಂದು ಭಾಳ ಮೆರಿಯಲಿಬೇಡ

ಭಾಗ್ಯವು ಹೋಗಿ ಬಡತನ ಬಂದರೆ

ಹಾಗೆ ನಗುವರೊ ನಿಜ ಶರಣ | |12||

ಹಿರಿತನ ಹಿಂದಾಗಿ ಕಿರಿತನ ಮುಂದಾಗಿ

ಅರುವು ಲಿಂಗದಲಿ ಆಚರಿಸಿದಾತಂಗೆ

ಮರೆಯಲ್ಲೆ ಮೋಕ್ಷ ನಿಜ ಶರಣ ||13||

ಆದವರ ಮರಿಬ್ಯಾಡ ಸಾಧುರ ಜರಿಬ್ಯಾಡ

ಬೋಧೆ ಗುರುವಿನದು ಬಿಡಬ್ಯಾಡ ಕೆಟ್ಟವರ

ಹಾದಿಗ್ಹೋಗದು ಬ್ಯಾಡ ನಿಜ ಶರಣ ||14||

ಅಂಗ ಗುಣದೊಳು ಸಿಲಿಕಿ ಭಂಗ ಪಡಲಿಬ್ಯಾಡ

ಅಂಗೈನ ಲಿಂಗ ಅನವರತ ಪೂಜಿಸೊ

ಗಂಗಾಧರ ನೀನೆ ನಿಜ ಶರಣ ||15||

ಶಿವಯೋಗ ಎಂಬುವದು ಪಾವನದ ಮಾರ್ಗವು

ಅವಧಾನ ಹಿಡಿದು ಆಚರಿಸಿದಾತಂಗೆ

ಭವನಾಸ್ತಿ ನೋಡ ನಿಜ ಶರಣ ||16||

ಆರು ಅಕ್ಷರದ ಅರಿವು ಆರಾರು ಬಲ್ಲರು

ಮೀರಿದ ಮನೆಯಲ್ಲಿ ಸೇರಿ ಮರಳಿತ್ತ

ಬಾರದೆ ಹೋದಾರು ನಿಜ ಶರಣ ||17||

ಲಿಂಗದ ನೆಲೆ ತಿಳಿದು ಜಂಗಮದ ಕಳೆ ಅರಿತು

ಸಂಗನ ಶರಣರ ಸಹಗೂಡಿದವರೆಲ್ಲ

ಲಿಂಗವಾದರೊ ನಿಜ ಶರಣ ||18||

ಕೈಲಾಸ ಎಂದೆಂದು ಬಯಸಿ ದಣಿಯಲಿಬೇಡಾ

ಕೈ ಬಾಯಿ ಕಚ್ಚಿ ಕಟ್ಟಿದ ಮಹಾತ್ಮನು

ಪ್ರಭುಲಿಂಗ ತಾನೆ ನಿಜ ಶರಣ ||19||

ಕಾಯಕವೆ ಕೈಲಾಸ ಬಾಯಿ ಬಾಗಿಲವಯ್ಯ

ನಯನ ರವಿಶಶಿಯೊಳಗಿರುವ ಆತ್ಮನು

ಪ್ರಭುರಾಯ ತಾನೆ ನಿಜ ಶರಣ ||20||

ತಾಳಿಕೆ ಎಂದೆಂಬ ಬಾಳಿಕೆ ಹಿಡಕೊಂಡು

ಕೀಳಾದವರನ್ನು ಕಚ್ಚದೆ ಮೆಚ್ಚದೆ

ಬಾಳ್ವೆಯ ಮಾಡೊ ನಿಜ ಶರಣ ||21||

ಒಳ ಹೊರಗೆ ಒಂದಾಗಿ ಬೆಳಗಿನೊಳ ಕೂಡಿ

ಹೊಳೆವ ಜ್ಯೋತಿಯ ಒಳಹೊಕ್ಕು ನೋಡಿದರೆ

ತಿಳಿಯ ಬೆಳಕ ನಿಜ ಶರಣ | ||22||

ಅಂಗಲಿಂಗವೆರಡು ಸಂಗಮವಾದುದೆ ಬೆಳಕು

ಜಂಗಮದ ಸುಳುವು ಸೂತ್ರವ ಹಿಡಿದರೆ

ಲಿಂಗದ ಬೆಳಕು ನಿಜ ಶರಣ ||23||

ಮನಹೀನ ಶಿಷ್ಯಂಗೆ ಘನದೀಕ್ಷೆ ಮಾಡೇನು

ಅನುವಿಲ್ಲದ ಹೊಲನ ಬಿತ್ತಿ ಬೆಳೆಯದೆ

ದಣಿದು ಹೋದಂತೆ ನಿಜಶರಣ ||24||

ತನ್ನ ಸುಖದುಃಖದಂತೆ ಅನ್ಯರನ ನೋಡಿದರೆ

ಹನ್ನೆರಡು ವರ್ಷ ಜಪತಪ ಯಾತಕ್ಕೆ

ಪನ್ನಂಗಧರ ತಾನೆ ನಿಜ ಶರಣ ||25||

ತುಪ್ಪದ ಕಂಪಿಗೆ ಇರುವೆ ತಪ್ಪದೆ ಬಂದಂತೆ

ಮುಪ್ಪರಯ್ಯ ಮನವಿಟ್ಟು ಪೂಜಿಸು

ತಪ್ಪದೆ ಕೈಲಾಸ ನಿಜ ಶರಣ ||26||

ಧಾನಧರ್ಮಗಳನು ಮಾಡಿದ ಫಲವೇನು

ದಾನವ ಕೊಟ್ಟು ದುರ್ವಾಕ್ಯ ನುಡಿದರೆ

ಹಾನಿಯಾಗುವುದು ನಿಜ ಶರಣ ||27||

ಬೊಕ್ಕನ ತ್ರಿವಧಿಯ ಅಕ್ಕರದಿಂದೋದಿದರೆ

ಬೇಕಾದ ಇಷ್ಟಾರ್ಥ ಜ್ಞಾನವು ಬರುವದು

ಜಕ್ಕನ ಜರಿಬ್ಯಾಡ ನಿಜ ಶರಣ ||28||

ನಿಂದೆಯ ಮಾಡಿದರೆ ಕುಂದೇನ ನಮಗಿಲ್ಲ

ಅಂದವರು ಕೆಟ್ಟವರು ಆನಂದಿಗಳು ನಮ್ಮ

ಬಂಧುಗಳಯ್ಯ ನಿಜ ಶರಣ ||29||

ಛಂದಸ್ಸು ನಿಘಂಟು ಒಂದು ನಾನರಿಯೇನು

ಚಂದ್ರಶೇಖರನು ಕರದಲ್ಲಿ ತಾ ನಿಂದು

ಪೇಳಿದಂತ್ಹೇಳಿದೆ ನಿಜ ಶರಣ ||30||

ಆದಿಪ್ರಾಸ ನುಡಿ ಶಬ್ದಗೊಡವೆ ನಮಗಿಲ್ಲಯ್ಯ

ಮೃಢರೂಪ ಬಸವನು ನುಡಿಸಿದರೆ ನುಡಿದೇನು

ಮೃಢ ಶರಣರ ಅರಿಕೆ ನಿಜ ಶರಣ ||31||

ರಾಮಪೂರದ ಬಕ್ಕನ ನಾಮ ತ್ರಿವಧಿ

ಪ್ರೇಮದಿಂ ಬರೆದು ಓದಿದರೆ ಕಡೆಯಲ್ಲಿ

ಸೋಮಧರನೊಲಿಮೆ ನಿಜ ಶರಣ ||32||

ಭಕ್ತಿಗೆ ಬಸವಣ್ಣ ಯುಕ್ತಿಗೆ ಪ್ರಭುದೇವ

ಮುಕ್ತಿಗೆ ಚನ್ನ ಬಸವಣ್ಣನೆ ಪ್ರಸಾದ

ಒಕ್ಕುಂದದ ಉಂಡೆ ನಿಜ ಶರಣ ||33||

ಬಸವನ ಪ್ರಸಾದ ನಾಡೆಲ್ಲ ತುಂಬ್ಯಾದ

ಆಸೆವಳಿತನಕ ಅಳವಡದು ಮನುಜರಿಗೆ

ಮೀಸಲು ತನುಬೇಕು ನಿಜ ಶರಣ ||34||

ಮೀಸಲು ತನುವಾದರೆ ಪಾಶವು ಹರಿವದು

ದಾಸಯ್ಯನವರು ಅನವರತ ಆಚರಿಸಿ

ಲೇಸನಾಗಿರ್ದರು ನಿಜ ಶರಣ ||35||

ಯೋಗಿಯಾದಾತನು ಬಾಗಿ ತಾಗಿರಬೇಕ

ಆಗಮ ತಿಳಿದು ಅರವು ಲಿಂಗದೊಳು

ಭೋಗ ಮಾಡುವದು ನಿಜ ಶರಣ ||36||

ಲಿಂಗಾನುಭವಿಗಳು ಹಿಂಗದೆ ಸ್ತುತಿ ಮಾಡಿ

ಜಂಗಮನ ಭಜಿಸಿ ವರಶೇಷಗಳನುಂಡು

ಸಂಗ ಸುಖಿಯಾದೆ ನಿಜ ಶರಣ ||37||

ಸಂಗನ ಬಸವಯ್ಯನ ಡಿಂಗರಿಗ ನಾನಯ್ಯ

ಮಂಗಳ ಮಾತಿನಿಂದೆ ಹೇಳಿದರೆ ಶರಣರು

ಸಂಗ್ರಹಿಸಿ ಕೊಳ್ಳೊ ನಿಜ ಶರಣ || 38||

ಮಾಯಾ ಲೀಲೆಯ ಮರುಳಾಟ |

ನರ ಜೀವಗಿದು ಅರಿಯದಾಟ ||ಪಲ್ಲ||

ಕತ್ತಲಲಿ ಕಂಬ |

ಕಳ್ಳಂತೆ ಕಾಂಬುದು

ಮಾಯಾ ಲೀಲೆಯ ಮರುಳಾಟ ||1||

ಕುರುಡನಿಗೆ ಆನೀ ಕಿವಿ |

ಮರದಂತೆ ಕಾಂಬುದು

ಮಾಯಾ ಲೀಲೆಯ ಮರುಳಾಟ ||2||

ವಿಷದ ಅಸನವೆಲ್ಲ |

ರುಚಿಯಾಗಿ ತೋರುವುದು

ಮಾಯಾ ಲೀಲೆಯ ಮರುಳಾಟ ||3||

ಅವನಿದ್ದು ನನ್ನಲ್ಲಿ |

ನಾನಾಗೆ ಕಾಣುವುದು

ಮಾಯಾ ಲೀಲೆಯ ಮಂಗಾಟ ||4||

ಕಲ್ಮಠದ ಗುರು ತಾನು ಕಣ್ಣೆದರು ಇರುತಿರಲು |

ಅತ್ತಿತ್ತ ಹುಡುಕಿಸುವುದು

ಮಾಯಾಲೀಲೆಯ ಮರುಳಾಟ ||5||

ಮಾಯಿಯ ಮರ್ಮವ ಅರಿತವರು ಹೇಳಿರಿ |

ತಿಳಿದೆನೆಂಬುದು ಬರಿ ಸುಳ್ಳಾಯ್ತು ||ಪಲ್ಲ||

ತಿಳಿದವರು ತಿಳಿದಷ್ಟು |

ತಿಳಿ ಹೇಳ ಹೊಂಟರ

ನಾಲೀಗಿ ಕೀಲು ಬಿದ್ದ್ಹೋಯ್ತು

ಡಿಗ್ಗಿ ಡಿಗ್ಗಿ ಮಾತುಗಳ ಆಡಿದರ

ಮಾತೀಗಿ ನೆಲಿಯು ಸಿಗದಾಯ್ತು ||1||

ನಾ ಮುಂದ ತಾ ಮುಂದ |

ಎಂದೆಂದು ನುಡಿದವರ

ಬಾಯೀಗಿ ಬಂಧನ

ಬಂದ್ಹೋಯ್ತೋ ತಮ್ಮಾ

ಮಾಯಿಯ ಮರ್ಮ ತಿಳಿದಾಯ್ತು ||2||

ಬೆಳಕೀಗಿ ಕತ್ತಲಿ |

ಕತ್ತಲ್ಯಾಗ ಕತ್ತಲಿ

ಕಪ್ಪ ಬಣ್ಣದ ಛಾಯಿ ಈ ಮಾಯಿ

ಕಲ್ಮಠದ ಗುರುವಿಗಿ ತಿಳಿದ್ಹೋಯ್ತು ||3||

ಎಂಟು ಮಕ್ಕಳ ತಾಯಿ |

ಕುಂಟ ಮಕ್ಕಳ ತಾಯಿ

ಬಾಯಿ ತೆರೆದು ಲೋಕೆಲ್ಲ ನುಂಗ್ಯಾಳಪ್ಪೋ ||ಪಲ್ಲ||

ಒಂದೇ ಒಂದಿದ್ದುದು |

ಎಂಟಾಗಿ ಮಾಡ್ಯಾಳು

ಚಂದಾದ ಚಂದ್ಯೆಲ್ಲ

ಕೆಡಸ್ಯಾಳಪ್ಪೋ ||1||

ಮೂರ ಮಕ್ಕಳ ಹಡ್ದು |

ಮೂಲೋಕ ನುಂಗ್ಯಾಳು

ಜಗದ ಜನಕ ಬ್ಯಾನಿ

ತರಸ್ಯಾಳಪ್ಪೊ ಆಕೀ ||2||

ಆರ ಮಕ್ಕಳ ಹಡ್ದು |

ಅಡವ್ಯಾಗ ಹೊಂಟಾಳು

ಕಾಡನಾಡೆನ್ನದೆ

ನಡದಾಳಪ್ಪೋ ಆಕೀ ||3||

ಸರಸೋತಿ ಇವಳಲ್ಲ |

ಮಾಲಕುಮಿ ಮೊದಲಲ್ಲ

ಕಲ್ಮಠದ ಗುರುವಿನ ಗುಲಾಮಪ್ಪೊ

ಎಂಟು ಮಕ್ಕಳ ತಾಯಿ ಇವಳೆಯಪ್ಪೋ ||4||

ಗುರು ಯಾರು ಗುರು ಯಾರು ತಿಳಕೊಳ್ಳೊ |

ನಿನ್ನೊಳಗ ನೀನು ಉಳಕೊಳ್ಳೋ ||ಪಲ್ಲ||

ಊರಿಗಿ ದಾರಿ ತೋರಿದಾತನು ಗುರುವು |

ಯಾರಿಗಿ ಯಾರೆಂದು ಹೇಳದಾತನು ಗುರು

ಮೀರಿದ್ದಕ್ಕ ಮೀರಾಸಾಬನೇ ಈ ಗುರು

ಮಾರಹರನ ಕೀಲ ತಿಳಿಸುವವನು ಗುರು ||1||

ಅಂಗದಲಿ ಸಂಗ ನಿಂತವನು ಗುರು |

ಲಿಂಗದ ನೆಲಿ ಕಲಿ ತಿಳಿಸಿದವ ಗುರು

ಭಂಗದಲಿ ರಂಗವನು ತುಂಬಿದವನು ಗುರು

ಶೃಂಗಾರ ಮೂರುತಿ ಶ್ರೀಗುರುವು ||2||

ಮೂರನ್ನು ಬಿಡಿಸಿದವ ಮಾಗುರು |

ಆರನ್ನು ಕೆಡಿಸಿದವ ಅರುವಿನ ಗುರು

ಏಳಕ್ಕ ಒಳಗೆ ಬರದಂತೆ ತಡೆದವನು

ಏಳ್ಗೆಯ ಬಯಸಿದವ ನಮ್ಮ ಗುರು | ||3||

ಅಜ್ಞಾನ ಹರಿದವನು ನಿಜ ಗುರುರಾಯ |

ಜ್ಞಾನದಾನಿ ನಮ್ಮ ಕಲ್ಮಠದ ಗುರುರಾಯ

ಮಾನವಂತನು ನಮ್ಮ ಶ್ರೀ ಗುರುರಾಯ

ಜ್ಞಾನವಂತನು ನಮ್ಮ ಗುರುರಾಯ ||4||

ಗುರು ಕೊಟ್ಟ ಶಿಕ್ಷ್ಯಾಕ |

ನಂದೇನು ದಕ್ಷಿಣ

ಧನವಲ್ಲ ನನ್ನ ದುರ್ಗುಣವ || ||ಪಲ್ಲ||

ದೇಹ ಗುಣದ ಭಾವ ಕಳೆದು |

ಕಾಳ ಕಾಳಿಕೆಯ ತೊಳೆದು

ಮುಸುರೀಯ ಭಾಂಡವ

ಪಾದ ತೀರ್ಥದ ಪಾತ್ರೆ ||1||

ಪಾತ್ರೆಯ ತೊಳೆದು ತಿಕ್ಕಿ |

ಅದರ ಮ್ಯಾಲಿನ ಜಂಗು ಹೆಕ್ಕಿ

ನನ್ನದೆಲ್ಲವ ಅವನಿಗಿಕ್ಕಿ

ಅರ್ಪಿತವ ಮಾಡಿದೆನು ಕೆಟ್ಟ ಗುಣಗಳನು ||2||

ಗುರುವಿತ್ತ ಗುರುತಿಗಿ |

ನಂದೇನು ದಕ್ಷಿಣ

ತನು ಅವಗ ಮನ ಅವಗ

ಅದರ ದುರ್ಗುಣಗಳೆಲ್ಲ ಅವಗ ದಕ್ಷಿಣ ||3||

ಕಲ್ಮಠದ ಗುರುದೇವ ಬಳಿ ಬಂದು ಕರೆದಾನು |

ಧನ ಬೇಡ ಬಂಗಾರ ಬೇಡೆಂದು ಒರೆದಾನು

ದುಷ್ಟಗುಣಗಳ ಭಿಕ್ಷೆ ನೀಡೆಂದು ಕೇಳ್ಯಾನು

ಅದ ಕೊಂಡು ನನಗೆತ್ತಿ ಮುದ್ದು ತಾ ಮಾಡ್ಯಾನು ||4||

ಎಲೆಲೆ ಮಳ್ಳ ಹುಚಗೊಟ್ಟಿ | ನೀ

ಇಡು ಗುರು ಪಾದಕ ಮನ ಘಟ್ಟಿ ||ಪಲ್ಲ||

ಗುರುವಿನ ಪಾದ ಬಿಡದೆ ನೀ ಹಿಡಿದು |

ನಡೆದು ನಡೆದು

ವರವ ಪಡೆದು

ಈ ಭವ ನೀಗೋ ಹುಚಗೊಟ್ಟಿ || ||1||

ಗುರುವಿನ ಪಾದ ಮೇಲಾದ |

ಸದ್ಗುರುವಿನ ಪಾದ ನಿಜ ಬೋಧ

ತಿಳಿದು ತಿಳಿದು ನೀ

ಅಳಿದು ಉಳಿದು ಬ್ಯಾಗೆ

ಈ ಭವ ನೀಗೋ ಹುಚಗೊಟ್ಟಿ ||2||

ಕಾಣೆನೆಂಬುದದು ಕಂಡಿಲ್ಲ |

ಗುರುವಿನ ಪಾದದ ನಿಜ ಸುಖ ಉಂಡಿಲ್ಲ

ಕಲ್ಮಠದ ಗುರು ನೀನಲ್ಲ

ಆ ಗುರುವಿನ ಹೊಂದಿ ಕಾಣಲ್ಲ ||3||

ಲಿಂಗದ ಕಲೆಯ ತಿಳಿಯದೆ |

ಅಂಗವೇ ಲಿಂಗ ಅಂದಿ ಹುಚ ಮಂಗ ||ಪಲ್ಲ||

ಅಂಗ ಲಿಂಗಾಗಲು |

ಲಿಂಗದ ನೆಲೆ ನೀ ತಿಳಿಬೇಕು

ಲಿಂಗವ ಪೂಜಿಸಿ ಗೆಲಿಬೇಕು ||1||

ಲಿಂಗವ ಪೂಜಿಸಿ |

ಲಿಂಗವ ನೀನಾಗು

ಅಂಗದ ಗುಣಗಳ ನೀ ನೀಗು | |2||

ಹಿಂಗುವುದು ಭವರೋಗ |

ನುಂಗುವುದು ಭವಕತಿ

ಲಿಂಗದ ಬೆಳಕಲಿ ನೀ ಕೂಡು ||3||

ಕಪ್ಪಾದ ಬಣ್ಣದ |

ಒಪ್ಪಾದ ಶಿವಲಿಂಗ

ಅಂಗೈಗೆ ತಂದು ನೀ ನೋಡು ||4||

ಕಂಗಳ ಬೆಳಕನು |

ಲಿಂಗದೊಳು ಕೂಡಿಸಿ

ಕಲ್ಮಠದ ಗುರುವಿನೊಳು ಕೂಡು ||5||

ಇಷ್ಟಾದ ರತುನವಿದು |

ಗುರು ಇಷ್ಟಪಟ್ಟು

ಕೊಟ್ಟಾದ ರತುನವಿದು ||ಪಲ್ಲ||

ಕೊಳ್ಳುತೀನಂದರ |

ಹಣಕ ಸಿಕ್ಕುವದಿಲ್ಲ

ಅಜಹರಿಸುರರೆಲ್ಲ ಪೂಜಿಸಲು ಬೇಕಪ್ಪ ||1||

ಭೋ ಭಾಗ್ಯ ಸಂಪತ್ತಿಗೆ |

ಅಧೀನವಾದ ಅತ್ಯಧಿಕ ರತನವಿದು

ಇರಲೆಪ್ಪ ಜತನ ಇದು ನಿನ್ನ ವತನ ||2||

ಸ್ಥೂಲ ದೇಹದ ಮ್ಯಾಲ ಲೋಲ್ಯಾಡತಾದಪ್ಪ |

ಧರಿಸಿ ನೋಡಲು ಜೀವಾ

ಹೊಳಿ ಹೊಳಿ ಹೊಳಿತಾದ

ಗುರು ಕೊಟ್ಟ ರತುನವಿದು ||3||

ಪರಕೆ ಪರತರವಾದ |

ಪರಮನವತಾರವಿದು

ಕಲ್ಮಠದ ಗುರು ಕೊಟ್ಟ

ಕರುಣೆಯ ರತುನವಿದು ||4||

ಬುದ್ದಿಗಧಿಕವಾದ ಭಾವ ಬರಿದಲ್ಲ |

ಅದರೊಳಗೆ ಶಿವ ಹಾನ ತಂಗೀ ||ಪಲ್ಲ||

ಸ್ಥೂಲ ದೇಹದ ಒಳಗ |

ಮನೆ ಮಾಡಿ ಕುಂತಾನ

ಭಾವ ಬರಿದಲ್ಲ ತಂಗೀ ||1||

ಕಣ್ಣೀಗಿ ಕಾಣಿಸದ |

ಮನಕೆ ವೇದ್ಯವಾದ

ಭಾವಕ್ಕೆ ಗಮ್ಯವು ಭಾವಸಿದ್ಧಿ ||2||

ಭಾವದ ಭಾಗ್ಯಕ್ಕ |

ಶಿವದ ಸತ್ವವ ತುಂಬಿ

ಭಾವವೇ ಅಭವನು ತಂಗೀ ||3||

ಭಾವದ ಭಾವಕ್ಕೆ ಶಿವದ ಭಾವಗೂಡಿ |

ಕಲ್ಮಠದ ಗುರುವೀನ ಗುರುಭಾವದೊಡಗೂಡಿ

ಭಾವವೆ ಭಾವಲಿಂಗ ತಂಗೀ || ||4||

ಭಾವ ಭರಿತ ಭಾಲ ಲಿಂಗವೋ |

ಅಕ್ಕವ್ವ ಕೇಳೇ ||ಪಲ್ಲ||

ಭಾವದ ಕಲ್ಲ ಕಟೆದು |

ಭಾವದೀಪ್ತಿಯ ಬೆಳಗಿನಲ್ಲಿ

ಭಾವ ದೀಪಕ ಭಾವಲಿಂಗ

ಭಕ್ತಿ ಭಾವದಿ ಭಜಿಸಿ ಅಕ್ಕ ||1||

ಭಾವದ ಪತ್ತರಿ ಸೋಸಿ |

ಭಾವದ ಪುಷ್ಪವ ಮುಡಿಸಿ

ಭಾವ ಭಕುತಿಯಿಂದ ಒಲಿದು

ಭಾವ ಲಿಂಗವ ಪೂಜಿಸಕ್ಕ ||2||

ಭಾವದ ಗಂಧವ ಪೂಸಿ |

ಭಾವದ ಕತ್ತುರಿ ಒರಿಸಿ

ಸುಭಾಷ ಭಾಷಿತ ಭಾವಲಿಂಗನ

ಭಾವ ತುಂಬಿ ಪೂಜಿಸಕ್ಕ ||3||

ಭಾವ ಭಾವದಿ ಬೆರೆಯುತಲಿ |

ಭಾವ ಇಲ್ಲದ ನಿರ್ಭಾವವು

ಕಲ್ಮಠದ ಗುರುವಿನಲ್ಲಿ

ಕಾಣದಾಯ್ತು ಭೇದ ಭಾವವು ||3||

ಭಗಭಗ ಬೆಂಕ್ಯಾಗ |

ಗಬ ಗಬ ಬೀಳುವ

ಪತಂಗ ನಾವಣ್ಣಾ ||ಪಲ್ಲ||

ಕೆಂಪಾಗಿ ಕಣ್ಣು ಕೊರೈಸುತಾದ |

ಬಂಗಾರ ಬಣ್ಣ ಮನ ಸೆಳಿತಾದ

ಭಗಭಗ ಬೆಂಕ್ಯಾಗ

ಗಬಗಬ ಬೀಳುವ ಪತಂಗ ನಾವಣ್ಣಾ ||1||

ಮೈಗೀ ಹತ್ತಿದ ಗರಮಿ |

ಅದು ನರಮ ನರಮ ನರಮ

ಆಗ ತಿಳಿಲಿಲ್ಲೋ ತಮ್ಮಾ, ಧಗಧಗ ಬೆಂಕ್ಯಾಗ

ಗಬಗಬ ಬೀಳುವ ಪತಂಗ ನಾವಣ್ಣಾ ||2||

ಕಲ್ಮಠದ ಗುರು ಬಂದಾಗ |

ಎದುರಿಸಿ ನಿಂದಾಗ

ಹತ್ತತೇನೋ ಖೂನಾ

ಉಳಿದಿತೇನೋ ಮಾನಾ ||3||

ಎಂಥಾ ಒಯ್ಯಾರದ ಹೆಣ್ಣು ನೀ |

ಜಗಕಾದಿ ಹುಣ್ಣು ||ಪಲ್ಲ||

ಕೈಯ್ಯ ತಿರುವಿದಿ |

ಕಣ್ಣು ತಿರುವಿದಿ

ಹುಬ್ಬು ತಿರುವಿದಿ ||1||

ಅಜವ ನಿಂತಿದಿ |

ಗಜವ ನಿಂತಿದಿ

ಗಜ ಬಜಿಸುತ ನೀ

ಗೆಜ್ಜೆ ಕಟ್ಟಿದಿ ||2||

ಕೈಯ್ಯವ ಬೀಸಿದಿ |

ಸೆರಗವ ಹಾಸಿದಿ

ಮೂಜಗಕ ನೀ

ಮೋಹ ಮಾಡಿದಿ ||3||

ನಿನ್ನ ಬೆನ್ನ ಹಿಂದ ಬಿದ್ದವರು ಭಾಳ |

ಕಳಿದುಕೊಂಡು ಆದರು ಮನಿ ಹಾಳ

ನೋಡಬಾರದು ಕಣ್ಣಿಂದ ಗೋಳ

ಬಿಲ್‍ಕುಲ್ ನೀ ಜನಕಾದಿ ಕಾಳ ||4||

ಕಲ್ಮಠದ ಗುರುವೀಗಿ ಕಂಡಿ |

ಉಳ್ಳವರಂಗ ಫಾಸೀ ಮಾಡೇನು ಅಂದಿ

ನಡಿಲಿಲ್ಲ ಅಲ್ಲಿ ನಿನ್ನಾಟ

ಬಯಲಾಯಿತಲ್ಲ ನಿನ್ನ ಮರೆವಿನ ಮಾಟ || ||5||

ಜಾಲಿ ಮುಳ್ಳು ಅಕ್ಕಾ ಜಾಲಿ ಮುಳ್ಳಾ ||ಪಲ್ಲ||

ಕಾಡ ಕತ್ತಲಿಯಲ್ಲಿ ನಾನು |

ಕಣ್ಣಗಾಣದೆ ಹೋಗುತ್ತಿದ್ದೆನು

ಕಂಟಿ ತಟ್ಟಿ ಕೆಳಗ ಬೀಳಲು

ಕಾಲಾಗ ನಟ್ಟಿತಕ್ಕ ಜಾಲಿ ಮುಳ್ಳ ||1||

ಕಾಲ ಬಾತು ಕೊಳತು ನಾತು |

ಕೀವ ರಕ್ತ ಸೋರುತಿತ್ತ

ಬಾಲ ಹುಳುಗೋಳು ಹೊರಗ ಸೂಸಿ

ಗಬ್ಬು ವಾಸನಿ ಹೊಡೆಯುತಿತ್ತ ||2||

ಮತ್ತ ಏರಿ ಪಿತ್ತ ಏರಿ |

ಮೈಯ್ಯ ಎಲ್ಲ ಉಂಡ ಹೋಯ್ತು

ಒಳಗ ಕಾಣದೆ ಹೊರಗ ಉಳಿದೆನು

ಕಲ್ಮಠದ ಗುರುವನು ಕಾಣದಾದೆನು ||3||

ಅಬಬಬ ಎಂಥಾ ಹಾಳ ಭಾಂವ್ಯೊ |

ತಮ್ಮಾ ಆರುದ್ದ ಆಳಿಗೂ ನೆಲುಕಾದೊ ||ಪಲ್ಲ||

ಹಗಲ ಹೊತ್ತಿನೊಳಗ ಕಂಡದ್ದೊ |

ತಮ್ಮಾ ಇದರ ಮ್ಯಾಲ ಕುಂತು ಉಂಡದ್ದೊ

ಅಗಲದ ಅಳತೆ ತಿಳಿಯದ್ದೊ

ತಮ್ಮಾ ಅಳಲಿ ಅಳಲಿ ಬೇಸತ್ತದ್ದೊ ||1||

ಬಲ್ಲಿದನೆಂದವರು ಬಿದ್ದಾರೋ |

ತಮ್ಮಾ! ಒಲ್ಲೆನೆಂದರೂ ಓಡಿ ಬಂದಾರೋ

ಬಂದು ಬಂದ ದೇವರೆಲ್ಲ ಒಳಗ ಬಿದ್ದಾರೋ

ತಮ್ಮಾ ಬಿರುಮಳಿ ಹೊಂಡದಂಗ ಬಳಲ್ಯಾರೋ ||2||

ಮ್ಯಾಲೇರಿ ಬರದಾಂಗ ಮುಳಗ್ಯಾರೋ |

ತಮ್ಮಾ ನೀರ ಕುಡದು ಢುಮಕಿ ಹೊಡದಾರೋ ||3||

ಕಲ್ಮಠದ ಗುರುವಿಗಿ ನೆನದಾರೋ |

ತಮ್ಮಾ ಕೂಗಿ ಕೂಗಿ ಅವರು ಕರಿತಾರೋ

‘ಮ್ಯಾಲೆತ್ತು ಮ್ಯಾಲೆತ್ತು’ ಅಂತಾರೋ

ತಮ್ಮಾ ಮಾಯಿಗಿ ಸಿಕ್ಕು ಸತ್ತಾರೋ ||4||

ಕಾಳ ಕತ್ತಲಿ ಒಳಗ |

ಮೇಳ ಇಲ್ಲದೆ ನಾನು ||

ತಿರುಗಿ-ತಿರುಗಿದೆನೊ ||ಪಲ್ಲ||

ಕಣ್ಣಿನ ಬೆಳಕೆಲ್ಲ ಕಳೆದುದು ಕತ್ತಲಿ |

ಕಾಣದೆ ತಿರುಗಿದೆನೋ

ಮರ ಮರ ಮರುಗಿದೆನೋ ||1||

ಸೂರ್ಯನ ಬೆಳಕಿಗಿ ಮೀರಿದಾ ಕತ್ತಲಿ |

ಚಂದ್ರನ ಬೆಳಕನು ನುಂಗಿದ ಕತ್ತಲಿ

ಕಾಣದೆ ತಿರುಗಿದೆನೋ

ತಿರುತಿರುಗಿ ಮರುಗಿದೆನೋ ||2||

ನನಗೆ ನೀ ಗುರುತಿಲ್ಲ |

ನಿನ್ನ ನಾ ಅರಿತಿಲ್ಲ

ಕಾಳ ಕತ್ತಲಿಯೆಲ್ಲ

ಕಲ್ಮಠದ ಗುರುಬಲ್ಲ ||3||

ಮೂರು ಗೇಣಿನ ಅರವಿ |

ಅರಿಯರು ಅದರ ಗೊಡವಿ ||ಪಲ್ಲ||

ಮೂರುಗೇಣಿನ ಅರವಿ |

ಮೂಲೋಕ ಮುಳಗ್ಯಾದ

ಮನು-ಮುನಿ-ಸುರಕೆಲ್ಲ

ಮೂಲ್ಯಾಗ ಒತ್ತ್ಯಾದ ||1||

ಮಾರುದ್ದ ಹಾರುವರ |

ಕಾಲೀಗಿ ತೊಡಕ್ಯಾದ

ಮೇಲುದ್ದ ಜಿಗದವರ

ಕಣ್ಣುಗಳ ಕಟ್ಟ್ಯಾದ ||2||

ಹರನ ಹುಲಿದೊಗಲಿನಂತೆ |

ಟೊಂಕಕ್ಕ ಸುತ್ತ್ಯಾದ

ಹರಿಯ ಹೆಗಲ ಮ್ಯಾಲ

ಹಾಯಾಗಿ ಮಲಗ್ಯಾದ ||3||

ಬೊಮ್ಮಗ ಭ್ರಮ ಹಿಡಿಸಿ |

ತೆಲಿ ಕಡಿಸಿ ಹಾಕ್ಯಾದ

ಇಂದರಗ ಮಂದಿರವ

ಬೆದರಿಸಿ ಬಿಡಸ್ಯಾದ ||4||

ಅರವಿಯ ಮಾಟ |

ತಿಳಿಲಿಲ್ಲ ಈಟ

ಕಲ್ಮಠದ ಗುರುವೀಗಿ

ಇದರಿಲ್ಲದ ಆಟ ||5||

ನಾಯಿ ಹೊಂಟಾದೋ | ಮನುಜಾ

ನಾಯಿ ಹೊಂಟಾದೋ ||ಪಲ್ಲ||

ಹಂಡ ಭಂಡ ಪುಂಡ ನಾಯಿ |

ಗಂಡು ಅಲ್ಲ ಹೆಣ್ಣು ನಾಯಿ

ರುಂಡ ಇಲ್ಲದ ಪರಚಂಡ ನಾಯಿ

ಖಂಡುಗ ಖಂಡುಗ ತಿನ್ನುವ ನಾಯಿ ||1||

ನಾನಾ ಅಂದವಗ ನಿಲಿಸಿದ ನಾಯಿ |

ನೀ ನೀ ಅಂದವಗ ಅಂಜುವ ನಾಯಿ

ಖೂನಿ ನಾಯಿ ಹೀನ ನಾಯಿ

ಬಾನಿನೊಳಗ ಬಯಲಾದ ನಾಯಿ ||2||

ನನಗ-ನಿನಗ ತಿಳಿಯದ ನಾಯಿ |

ಅವಗ-ಇವಗ ಕಾಣದ ನಾಯಿ

ಜಗದ ಬೆನ್ನ ಹಿಂದ ಬಿದ್ದಾದ ನಾಯಿ

ನಾಚಿಕಿ ಇಲ್ಲದ ಬಹು ರೂಪದ ನಾಯಿ ||3||

ನಾನಾ ಬಣ್ಣದ ನಾಜೂಕು ನಾಯಿ |

ನಾನೇ ಮ್ಯಾಲೆಂದು ಮರೆಯುವ ನಾಯಿ

ನಂಬಿಕೆ ಇಲ್ಲದ ಬಲು ಬೆರಕಿ ನಾಯಿ

ಕಲ್ಮಠದ ಗುರುವೀಗಿ ಗುರೆಂದ್ರ ನಾಯಿ ||4||

ಕಾಳ ನಿದ್ದೆಯ ಕಡಿದು ಕಳೆದೆನೊ |

ಕೇಳಪ್ಪ ಜಾಣಾ ||ಪಲ್ಲ||

ಮೂಡಣ ದಿಕ್ಕಿನಾಗ

ಸೂರ್ಯ ನೆತ್ತಿಗೇರಿದಾಗ

ಬಿಸಲ ಬೆಳಕ ಚೆಲ್ಲಿತ್ತು

ಕಾಳನಿದ್ದೆ ಮಂಜವಿತ್ತು ||1||

ಕಣ್ಣ ಬಿಟ್ಟು ಕಣ್ಣ ತೆರೆದ |

ಕಾಳ ನಿದ್ದಿ ಜಗ್ಗುತ್ತಿತ್ತು

ಗಪ್ಪನೆಂದು ಎದ್ದು ನಿಂತೆ

ಕಾಳನಿದ್ದೆ ಒದ್ದು ಎದ್ದೆ ||2||

ಕಾಳ ನಿದ್ದೆ ಗಾಢದಿಂದ |

ತೂಕಡಿಕಿ-ಆಕಡಿಕಿ

ನನ್ನ ನಾನು ಮರೆತು ಹೋಗಿದ್ದೆನು

ಕಲ್ಮಠದ ಗುರುವಿನಿಂದ ಎಚ್ಚರಾಗಿ ಕಣ್ಣು ತೆರೆದ ||3||

ನೀ ಎಂಥಾ ಬೆರಕಿ ಮಾಯಿ |

ಎಲ್ಲೆಂದರಲ್ಲಿ ನಿನ್ನ ಛಾಯಿ ||ಪಲ್ಲ||

ನಾ ನಿಂತಲ್ಲಿ ನೀನು ಬಂದರ |

ನಾ ಓಡಿದೆನು ಏ ಸುಂದರಿ

ಗುರುರಾಯ ಗಂಟು ಬಿದ್ದ

ಪರದೇಶಿ ನಿನಗ ಒದ್ದ ||1||

ನೆಳ್ಳಾಗಿ ನೀನು ಬೆನ್ನ ಬಿದ್ದರ |

ಬೆಳಕಾಗಿ ನಾನು ನಿಂತೀನಿ

ಆ ಥಳಕಿನಾಗ ಕಂಡ ನಿನ್ನನ್ನು

ದೂರ ಸಾಗಿಸಿ ಬಿಟ್ಟೆನು ಸಾಕಿನ್ನು | |2||

ನೀ ಎಂಥಾ ಎಂಥಾ ಬೆರಕಿ |

ನಾ ನಿನ್ನಕ್ಕಿಂತ ಬೆರಕಿ

ಕಲ್ಮಠದ ಗುರುವ

ನೀಡಿದ ನನಗ ವರವ ||3||

ಹುಟ್ಟಿ ಬಂದು ಹೊಟ್ಟು ತಿಂದರ |

ಏನು ಸಾರ್ಥಕ ಸಂಸಾರದಲಿ ||ಪಲ್ಲ||

ಹುಟ್ಟಿ ಬಂದೀನಂತಿ |

ಸಂಸಾರದ ಹರಲಿ ಹೊತ್ತಿ

ಬರಲಾದಿ ನೀ ಬರಲಾದಿ ||1||

ಹುಟ್ಟಿ ಬಂದೀನಂತ |

ಸಂಸಾರದ ಹೊಟ್ಟಿನಾಗ ಹೊರಳ್ಯಾಡುತ

ಬಡವಾದಿ ನೀ ಬಡವಾದಿ ||2||

ಹುಟ್ಟಿ ನೀ ಬಂದ ಬಳಿಕ |

ಕಲ್ಮಠದ ಗುರುವಿನ ಭಜಿಸದಿದ್ದರ

ಹುಟ್ಟಿ ನೀ ಬಂದುದಕ

ಏನು ಸಾರ್ಥಕ ||3||

ಜಂಗಮನ ಪೂಜಿಸುತ ನಿಜ |

ಜಂಗಮನಾಗಬೇಕಣ್ಣ ||ಪಲ್ಲ||

ಗಾಳಿಯಂತೆ ಎಲ್ಲೆಲ್ಲೂ ಹಬ್ಬಿ |

ನೀರಿನಂತೆ ಹರಿದು ಹರಿದು

ಚೇತನದ ಚೇತನವು

ಅಂಥ ಜಂಗಮನಾಗಬೇಕಣ್ಣ ||1||

ಜಗದ ಅಯ್ಯ ಜಗದ ಐಕ್ಯ |

ಜಗದ ಭರಿತ ಜಗದ ಚರಿತ

ಜಗದ ಜೀವಕ ಜ್ಞಾನಜ್ಯೋತಿ

ಅಂಥ ಜಂಗಮನಾಗಬೇಕಣ್ಣ ||2||

ಜಂಗಮನೆ ಜಗದಾಕಾರ |

ಜಂಗಮನೆ ಲಿಂಗದವತಾರ

ಕಲ್ಮಠದ ಗುರು ಜಂಗಮ ನಿಜಪೂರಾ

ಅಂಥ ಜಂಗಮನಾಗಬೇಕಣ್ಣ ||3||

ಜಂಗಮಾರ್ಚನೆ ನಡೆಯಿತಾದಣ್ಣಾ |

ಯಾವಾಗ ನೋಡಲು ||ಪಲ್ಲ||

ಕೆಟ್ಟ ಗುಣಗಳ ಸುಟ್ಟು |

ಮಾಡಣ್ಣ ನಿಜವಾದ ಭಸ್ಮವ

ಅದನೆ ಹಚ್ಚಿ ಪೂಜೆ ಮಾಡಣ್ಣ ||1||

ದುಷ್ಟ ವಿಷಯವ ಕುಟ್ಟಿ ಪುಡಿ ಮಾಡಿ |

ನಿಜವಾದ ಧೂಪವು

ಅದನೆ ಬೆಳಗಿ ಪೂಜೆ ಮಾಡಣ್ಣಾ ||2||

ಅಜ್ಞಾನಕೆ ಬೆಂಕಿ ಹಾಕಣ್ಣ |

ನೀ ಜ್ಞಾನಜ್ಯೋತಿ ಬೆಳಗಿ ಬೆಳಗುತ

ಪೂಜೆ ಮಾಡಣ್ಣ ||3||

ಜ್ಞಾನ ರೂಪಿ ಕಲ್ಮಠದ ಗುರುವರ |

ಮಾನ ನೀಡಿ ಪೊರೆವ ಎಲ್ಲರ

ಜಂಗಮಾರ್ಚನೆ ಮಾಡಿ ನೋಡಣ್ಣ ||4||

ಭಾಳ ಲೋಚನ ಭಕ್ತಗ |

ಭಾಳದಲೇನು ಸಿಂಗಾರ ||ಪಲ್ಲ||

ಕೈಗೆ ಕಡಗವು ಸಿಂಗಾರ |

ಕಂಠಕ್ಕೆ ಹಾರವು ಸಿಂಗಾರ

ಮೂಗಿಗೆ ಮುತ್ತು ಸಿಂಗಾರ

ಭಾಳ ಲೋಚನ ಭಕ್ತಗ

ಭಸ್ಮ ಸಿಂಗಾರ ||1||

ಮುಡಿಗೆ ಹೂವು ಸಿಂಗಾರ |

ಕಣ್ಣಿಗೆ ಕಾಡಿಗೆ ಸಿಂಗಾರ

ಕಿವಿಗೆ ಓಲೆ ಸಿಂಗಾರ

ಭಾಳ ಲೋಚನ ಭಕ್ತಗ

ವಿಭೂತಿ ಸಿಂಗಾರ ||2||

ದೇವಗೆ ಭಕ್ತ ಸಿಂಗಾರ |

ಗುರುವಿಗೆ ಶಿಷ್ಯ ಸಿಂಗಾರ

ಕಲ್ಮಠದ ಗುರುವಿಗೆ ಅಣವೀರನೆ ಸಿಂಗಾರ | ||3||

ವಿಭೂತಿ ಇಲ್ಲದವನ ಮುಖವು |

ಹಾಳು ದೇಗುಲಂತೆ ||ಪಲ್ಲ||

ಪಾಳು ದೇಗುಲದೊಳಗ

ದೇವರಿಲ್ಲ ಪೂಜೆಯಿಲ್ಲ

ವಿಭೂತಿ ಇಲ್ಲದಕ

ಮೊಗದಲ್ಲಿ ಚಂದಿಲ್ಲ ||1||

ಹಾಳು ದೇಗುಲದೊಳಗ |

ಭಕುತಿಲ್ಲ ಭಕುತರಿಲ್ಲ

ವಿಭೂತಿ ಇಲ್ಲದಕ

ನೊಸಲಲ್ಲಿ ಕಳೆಯಿಲ್ಲ ||2||

ಬೀಳು ದೇಗುಲದೊಳಗ |

ದೀಪಿಲ್ಲ ಬೆಳಕಿಲ್ಲ

ವಿಭೂತಿ ಇಲ್ಲದವಗ

ಕಲ್ಮಠದ ಗುರುವಿನೊಲವಿಲ್ಲ ||3||

ರುದ್ರನ ಕಣ್ಣಿಂದೊಗೆದ |

ರುದ್ರಾಕ್ಷಿ ಧಾರಣ ಮಾಡೊ ||ಪಲ್ಲ||

ರುದ್ರಾಕ್ಷಿ ಧಾರಣದಿ ಹೋಹುದು ಪಾಪವು

ರುದ್ರಾಕ್ಷಿಯಿಂದಲೆ ರುದ್ರನ ರೂಪವು ||1||

ರುದ್ರಾಕ್ಷಿ ಧರಿಸಿದ ಭದ್ರಮಹುದೆಮಗೆ |

ರುದ್ರಾಕ್ಷಿಯಿಂದಲಹುದು ಶುಭಮಂಗಳವು | |2||

ರುದ್ರನ ನೆನೆಯುತಲಿ ರುದ್ರಾಕ್ಷಿ ಧರಿಸಿದರ

ಭದ್ರವನೆ ಮಾಳ್ಪ ಭಾವ ಬರುವುದೆಮಗೆ ||3||

ರುದ್ರಾಕ್ಷಿ ರುದ್ರನಾಭರಣ ರುದ್ರಾಕ್ಷಿ ಮಂಗಳ ಕಿರಣ

ಕಲ್ಮಠದ ಗುರು ತಾನು ಧರಸ್ಯಾನ

ರುದ್ರನ ಪ್ರತಿರೂಪ ಎನಿಸ್ಯಾನ ||4||

ಪಾದಪೂಜೆ ಮಾಡಿ ಮುಕ್ತಾಗೊ |

ಗುರುವಿನ ಪಾದತೀರ್ಥ ಕೊಂಡು

ಮುಕ್ತಾಗೊ ||ಪಲ್ಲ||

ನರರ ಕಾಲಿನಂತಲ್ಲದು |

ಹರರೂಪಿ ಚರಪಾದ

ಹರಪಾದವ ತೊಳೆದು

ಪಾದತೀರ್ಥವ ಪಡೆಯೋ ||1||

ಪಾದಧೂಳಿ ಕಣದಲ್ಲಿ |

ವೇದಶಕ್ತಿ ಅಡಗಿಹುದು

ನಾದಲೋಲ ಶಿವನು ತಾನು

ಪಾದತೀರ್ಥದಲ್ಲೆ ಇಹನು ||2||

ಸಿದ್ದ ತೀರ್ಥ ಶುದ್ಧ ತೀರ್ಥ |

ಪಾದೋದಕ ಪ್ರಸಿದ್ಧ ತೀರ್ಥ

ಕಲ್ಮಠದ ಗುರುವಿನ ಪರಮ ಪಾವನ ಪಾದ ತೀರ್ಥ

ಕೊಂಡು ನೀನು ಪರಮನಾಗುತ ಬಾಳೋ | |3||

ಅಷ್ಟ ತೀರ್ಥಗಳು |

ಶ್ರೇಷ್ಠ ಪಾದದ ತೀರ್ಥವು ||ಪಲ್ಲ||

ನಾನ್ಯಾರು ನೀನ್ಯಾರು |

ಎಂಬ ಭೇದವ ಮರೆತು ನಿಂತು

ನಾನು ನೀನು ಒಂದೇ ಆಗಿ

ಸಂದುಗೊಂಡು ಕೊಳ್ವ ತೀರ್ಥವು ||1||

ಗುರು ಕರುಣೆಯು ಶಿಷ್ಯನೆಡೆಗೆ |

ಹರಿದು ಹರಿದು ಬರುತಲಿಹುದು

ಗುರುವಿಲ್ಲ-ಶಿಷ್ಯನಿಲ್ಲ

ಇಬ್ಬರೇಕಗೊಳಿಸಿದ ತೀರ್ಥವು ||2||

ಸ್ವರ್ಗದಮೃತಕೆ ಮಿಗಿಲು ಮಿಗಿಲು |

ಎಲ್ಲ ತೀರ್ಥಗಳಿಗೆ ಶ್ರೇಷ್ಠವು

ಕಲ್ಮಠದ ಗುರುವರ್ಯನ

ನಿರ್ಮಲದ ಪಾದತೀರ್ಥವು ||3||

ಕರಕರ ಕಿರಿಕಿರಿ ಸಂಸಾರ |

ಸುಖ ಕಾಣದಾದರದು ಭವಭಾರ ||ಪಲ್ಲ||

ಹೆಂಡತಿ ಮಕ್ಕಳ ಗೋಳಾಟ |

ಬಂಧುಬಾಂಧವರ ಹೋರಾಟ

ಅಣ್ಣ-ತಮ್ಮಗಳ ನೆಗೆದಾಟ

ಸುಖವಿಲ್ಲದೀ ಸಂಸಾರ ಭಾರ ||1||

ಹೊನ್ನಿನ ಆಶೀಗಿ ಹಣಿಕ್ಹಾಕಿ |

ಮಣ್ಣಿನ ಮೋಹಕ ಮನ ಸೋತಿ

ಹೆಣ್ಣಿನ ರೂಪಕ ಮರುಳಾದಿ

ನಿಜ ಸುಖ ಕಾಣದೆ ಹಾಳಾದಿ ||2||

ಎಲ್ಲ ಭಾರ ನಿನ್ನದೆನಬೇಡ |

ಅದು ನಡೆಸುವವನು ಬ್ಯಾರೆ ಹನ ನೋಡ

ಕಲ್ಮಠದ ಗುರು ಹನ ಸೂತ್ರಧಾರ

ಅವನೆ ಎಲ್ಲದಕ ಅಧಿಕಾರ ||3||

ಸಂಸಾರ ಎಂಬುದು ಲೊಳಲೊಟ್ಟಿ |

ಬಿಟ್ಟು ಹೊಂಡುತಾರೋ ತಮ್ಮಾ ಇದು ಗಟ್ಟಿ ||ಪಲ್ಲ||

ಸಂಸಾರ ನಂದು ಅಂತಿ |

ಸಂಸಾರ ನಿಂದು ಅಂತಿ

ಎಲ್ಲಾ ನಂದೇ ಅಂತಿ

ಯಮನೂರಿಗೆ ಹೊರಟಾಗ ಇಲ್ಲೆ ಬಿಡುತಿ | |1||

ಇದ್ದಾಗ ಎಟ್ಟು ವೈಭವದ ಮೋಜು |

ಮೃಷ್ಟಾನ್ನ ಉಂಡಷ್ಟು ಹೊಟ್ಟಿಯ ಬೊಜ್ಜು

ಮ್ಯಾಲಿನವ ಕರೆದಾಗ ಪ್ರಪಂಚ ತ್ಯಾಜ್ಯ

ಬಾಯಾಗ ಬಿತ್ತಲ್ಲೊ ಬರಿ ಮಣ್ಣ ಬೊಜ್ಜ್ಯಾ || 2||

ಇರುವಾಗ ಕೊಡಲಿಲ್ಲ |

ಇರುವಾಗ ಮಾಡಲಿಲ್ಲ

ಕಲ್ಮಠದ ಗುರುವಿನ ತಿಳಿಲಿಲ್ಲ

ಸತ್ತಾಗ ಸಂಸಾರ ಲೊಳಲೊಟ್ಟಿ ಎಲ್ಲ ||3||

ಭಾಳ ಜಪ್ಪೀಸಿ ನಡೀಬೇಕಾ ತಂಗಿ |

ಇದು ಕಾಲ ಜಾರುವ ಬಂಡಿ ||ಪಲ್ಲ||

ಹಾಸ-ಹಾವಸಿ ಹರಡ್ಯಾದ |

ಇಳಜಾರದ ಕಲ್ಲಾದ ತಂಗಿ

ಇದರ ಮ್ಯಾಲ ನೀ ನಡೆಬೇಕಾ

ಎಚ್ಚರ ತಪ್ಪಿದರ ಹೋದಿತು ಝೋಕಾ ||1||

ಎಂದಿಗೂ ಒಣಗಲದು |

ಹರಿತಾವ ನೀರಾ ಜೋರಾ

ಕೊಳಕು ರಾಡಿಯ ನೀರಾ ಕೂಡ್ಯಾವ ಪೂರಾ

ಜಪ್ಪೀಸಿ ನಡೀಬೇಕಾ ತಂಗಿ ||2||

ಕೆಳಗುಳ್ಳಿ ಬಿದ್ದರ ಹಿಡಿವರು ಯಾರಿಲ್ಲ |

ಎಡಕ-ಬಲಕಾದರ ಆಸರು ನೆಲಿಯಿಲ್ಲ

ಕಲ್ಮಠದ ಗುರುವಿನ ನೆಲಿ ತಿಳಿಲಿಲ್ಲ

ಈ ಬಂಡೀಯ ಸವಾಸ ಅಳಿಲಿಲ್ಲ ||3||

ಸಂಸಾರದಲಿ ಬಿದ್ದು ಸಂಸಾರ ಮಾಡುತಿ |

ಸಂಸಾರದ ನೆಲಿ ತಿಳೀಲಿಲ್ಲಾ ||ಪಲ್ಲ||

ಸಂಸಾರ ಎಂಬುದು ಅಡಿಗಿಯ ಕೆಲಸ |

ಹದ ಮಾಡಿ ಅಡಬೇಕಾ ತಂಗೀ

ಉಪ್ಪು-ಖಾರ-ಹುಳಿ ಎಲ್ಲ ರಸವ ಕೂಡಿ

ಸಸಾರ ಮಾಡಬೇಕಾ ತಂಗೀ ||1||

ಸಾರ ಸಂಸಾರದ ಸುಖವೇನು |

ದೂರ ಸಂಸಾರದ ದುಃಖವೇನು

ಎರಡರ ಅಂತರ ತಿಳಿದು ನೋಡಬೇಕಾ

ಸಂಸಾರದಲಿ ಬಲು ಜ್ವಾಕ್ಯಾಗಿ ಇರಬೇಕಾ ||2||

ಸಂಸಾರ ಹೊಳಿಯಾಗ ತೇಲುತ ಇರಬೇಕಾ |

ಮುಳುಗಿದರಾಯಿತು ದಫನಾ

ಕಮಲದ ಎಲಿಯಂಗ ಮ್ಯಾಲೆ ಇರಬೇಕಾ

ಕಲ್ಮಠದ ಗುರವೀಗಿ ಅರಿಬೇಕಾ ||3||

ಜೀವನಿಗೆ ದೇಹದ ಮನೆ |

ಈ ದೇಹದ ಮನಿ ನಿನಗ ಎಟ್ಟು ದಿನವೋ ಜೀವಾ

ಇದು ಒಂದು ದಿನ ಬೀಳತಾದೋ | ||ಪಲ್ಲ||

ಕಾಮದ-ಕ್ರೋಧದ ಮನೆಯೋ ಜೀವಾ |

ಮೋಹದ-ಮಾಯದ ಮನೆಯೋ ಜೀವಾ

ಹೀನ ವಾಸನೆಗಳ ಹೆಗ್ಗಣದ ಮನೆಯೋ

ದುರ್ಗುಣಗಳ ಇಲಿ ಕೆದರಿದ ಮನೆಯೋ ||1||

ಒಂಬತ್ತು ಬಾಗೀಲ ಇದಕೋ ಜೀವಾ |

ನೀನು ಯಾವ ಬಾಗೀಲದಿಂದ ಹೊಂಟಿ

ಒಳಗ ಕುಂತು ನೀ ನೋಡತಲಿರತಿ

ನೀ ಯಾರಿಗೀ ಕಾಣತಿ ಏ ಜೀವ ಗೆಳತಿ ||2||

ಯಾರೀಗಿ ಯಾರಿಲ್ಲ ಈ ಮನಿಯಾಗ |

ಯಾರೀಗಿ ಮೇಳಿಲ್ಲ ಮನಿಯಾಗ

ಇರುವ ತನಕ ಅವನದು ಇವನದು

ಮನಿ ಉರುಳಿ ಬಿದ್ದಾಗ ಕಲ್ಮಠದ ಗುರುವಿನದು || ||3||

ನಿನ ಹಿಂದ ಯಾರು ಬರತಾರೋ ಜೀವಾ |

ಹೊಂಟೆಲ್ಲೋ ಒಬ್ಬ ಒಂಟಿ ||ಪಲ್ಲ||

ಹೋರಾಡಿ ಗಳಿಸಿದ ಭೂಮಿಯು ಬರಲಿಲ್ಲ |

ಹಾರಾಡಿ ಗಳಿಸಿದ ಹಣವೇನು ಬರಲಿಲ್ಲ

ಕಟ್ಟಿದ ಕಟ್ಟೆಯ ಮನಿ ಏನೂ ಬರಲಿಲ್ಲ

ಕಟಿಬಿಟಿ ಜೀವಾ ಹೊಂಟೆಲ್ಲೊ ಒಂಟೀ ||1||

ಟೊಂಕಕ ಕಟ್ಟೀದ ಕೀಲಿ ಎಲ್ಲಿಟ್ಟಿ |

ವಸ್ತಾ-ವಡವಿ ಅಲ್ಲೆ ಬಿಟ್ಟಿ

ಜರತಾರಿ ಅರಿವಿ ಅಂಚೂಟಿ ಬರಲಿಲ್ಲ

ಎಲ್ಲವೂ ಬಿಟ್ಟು ಹೊಂಟಿಲ್ಲೋ ಜೀವಾ ||2||

ಪ್ರೀತಿಯ ಹೆಂಡತಿ ಬರಲಿಲ್ಲ ಹಿಂದ |

ಮಮತೆಯ ಮಕ್ಕಳು ಉಳದಾರ ಹಿಂದ

ಬಂಧು-ಬಾಂಧವರೆಲ್ಲ ನಿನಗಲ್ಲ ಜೀವಾ

ಕಲ್ಮಠದ ಗುರುವೊಬ್ಬ ನಿನಗಿರುವನೆಲ್ಲಾ ||3||

ನೋಡೋ ನೋಡೋ ನೋಡೋ |

ಓಡುತಾದೋ ಬಯಲ ಮಾಡೋ ||ಪಲ್ಲ||

ಕೆಳಗಿಂದ ಮ್ಯಾಗ್ಹೋಗಿ |

ಮ್ಯಾಲಿಂದ ಕೆಳಗಿಳಿದು

ಮಾಡಿನಂತಿದ್ದು ಮಡುವಾಯ್ತು

ನೀರಾಯ್ತು ನೀರಿನ ಗೂಡಾಯ್ತು ||1||

ನೆಲದ ಮ್ಯಾಲೆ ಬಿದ್ದ ನೀರ |

ಮ್ಯಾಲಿಂದ ಕೆಳಗ ಹರಿ ಪೂರಾ

ಗೊಳಗೊಳ ಗೊಳ ಧನಿ ಜೋರಾ

ಸೇರುತಾದ ಹರಿದ್ಹೋಗಿ ಸಾಗರಾ ||2||

ಎಲ್ಲಿಂದ ಬಂದಿರುವಿ ಜೀವ |

ಅಲ್ಲಿಯ ನೆಲಿ ತಿಳಿ ಜೀವ

ಅಲ್ಲಿಂದ ಬಂದರ ಅಲ್ಲಿಗೆ ಹೋಗಬೇಕು

ಕಲ್ಮಠದ ಗುರುವೀಗಿ ಕೇಳಾ ||3||

ಅರವಿಯ ತೊಳಿಬೇಕೋ ಜೀವಾ |

ಮ್ಯಾಲ ಹೊಲಸೆಟ್ಟು ಕುಂತಾದ ಹೇವಾ ||ಪಲ್ಲ||

ಅಂತಿಂಥ ಹಟಗಾರ |

ನೇಯ್ದ ಅರವಿಯಲ್ಲ

ಅಂತಿಂಥ ನೂಲಗಾರ

ನೂತ ಅರವಿಯಲ್ಲ ||1||

ಝಳಝಳ ಹೊರ ಒಳಗ |

ನೋಡಿ-ಮಾಡಿ-ಬಿಚ್ಚಿ

ತಿಕ್ಕಿ ತಿಕ್ಕಿ ಒಗಿಬೇಕಾ

ಮಡಿಯ ಮಾಡಿಡಲುಬೇಕೋ ಜೀವಾ ||2||

ಲೋಕದ ಒಡೆಯನು ಮಾಡಿದ ಅರವೀದು |

ಸ್ಥೂಲ-ಸೂಕ್ಷ್ಮ-ಕಾರಣ ದಾರವ ಸೇರಿಸಿದ್ದು

ಕಲ್ಮಠದ ಗುರುವು ಗುರುತಿಟ್ಟು ಹೆಣೆದದ್ದು

ಅರವಿಯ ತೊಳಿಯಪ್ಪ ಜೀವಾ ||3||

ಅನ್ನದ ಅಗಳು ದೇವರು ತಮ್ಮಾ |

ಅದರೊಳಗ ಅಡಗ್ಯಾನ ಬ್ರಹ್ಮ ||ಪಲ್ಲ||

ಶಿವನ ನೆನೆದು ಸವೆಯೋ ಸುಮ್ಮಾ |

ಅವನಿಂದ ಎಲ್ಲವೋ ತಮ್ಮಾ

ಕಾಳು ಕಾಳಿನಲ್ಲಿ ಕಾಲನ ಅಂಶವು

ತುಂಬಿ ತುಳುಕುತಾದ ತಮ್ಮಾ ||1||

ಪ್ರಸಾದದಿಂದೆ ಮಾಂಸವು |

ಪ್ರಸಾದದಿಂದೆ ಮಜ್ಜವು

ಪ್ರಸಾದದಿಂದೆ ಶುಕ್ಲ-ಶೋಣಿತವು

ಅನ್ನ ಪ್ರಸಾದದಿಂದ ಎಲ್ಲವೂ ತಮ್ಮಾ ||2||

ಅನ್ನದಿಂದೆ ಚೇತನವು |

ಅನ್ನದಿಂದೆ ಶಕುತಿ-ಮುಕುತಿ

ಅನ್ನದಿಂದೆ ಭಕುತಿ-ಭುಕುತಿ

ಅನ್ನದಿಂದೆ ಈ ಜಗವು ತಮ್ಮಾ ||3||

ಅನ್ನಬ್ರಹ್ಮ ಬಿಟ್ಟರ |

ಬೇರೆ ದೇವರು ಎಲ್ಲಿ ಹಾನೋ

ಅನ್ನವು ಉದರಕ ಬಿದ್ದಾಗ

ಕಲ್ಮಠದ ಗುರು ಕಾಣುತಾನೋ | |4||

ಭಕ್ತಿ ಇದ್ದರ ಭಾಗ್ಯಕ್ಕೇನು ಕಮ್ಮಾ |

ನಿನಗ ಒಲಿತಾನ ಬ್ರಹ್ಮಾ ||ಪಲ್ಲ||

ಸಿರಿಯಾಳನ ಭಕ್ತಿಗೆ ಶಿವ ಬಂದು ನಲಿದಾ |

ಗುಂಡಯ್ಯನ ಭಕ್ತಿಗೆ ಶಿವ ಬಂದು ಕುಣಿದಾ

ಭಕ್ತಿಗಾಗಿ ಶಿವನು ಬಾಣನ ಬಾಗಿಲ ಕಾಯ್ದಾ

ಭಕ್ತಿಯೇ ಮುಕ್ತಿಗೆ ಕಾರಣ ತಮ್ಮಾ ||1||

ಭಕ್ತಿಯಿಂದ ಗುರು ಧ್ಯಾನ ಮಾಡು |

ಭಕ್ತಿಯಿಂದ ಲಿಂಗ ಪೂಜೆಯ ಮಾಡು

ಭಕ್ತಿಯಿಂದ ಜಂಗಮ ಸೇವೆಯ ಮಾಡು

ಭಕ್ತಿಯೆ ಸರ್ವಕೆ ಕಾರಣ ಕಾಣಣ್ಣ ||2||

ಭಾಗ್ಯವಿಲ್ಲದ ಬಡವನಿಗೆ |

ಭಕ್ತಿಯ ಸಂಪತ್ತು ಇದ್ದರ ಸಾಕು

ಭಕ್ತಿಯೇ ಶಿವನ ಒಲುಮೆಗೆ ಬೇಕು

ಕಲ್ಮಠದ ಗುರುವಿಗಿ ಭಕ್ತಿನೇ ಪಾಕು ||3||

ಭಕ್ತಿ ಪೂಜೆಯು ದೊಡ್ಡದು |

ಶಕ್ತಿಯೊಳಗ ಅದಕ ಹಿರಿದಿಲ್ಲ ಜಾಣ ||ಪಲ್ಲ||

ಹತ್ತು ಕೆರೆಗಳ ನೀರ |

ಹೊತ್ತು ನೀ ತಂದೀದಿ

ಸುರುವೀದಿ ಸುರವೀದಿ ಲಿಂಗದ ಮ್ಯಾಲ

ಭಕ್ತಿ ಜಲವ ಸುರಿಯೋ ಜಾಣ ||1||

ನೀರಲ್ಲಿ ಕಲಕಲಿಸಿ ವಿಭೂತಿ ಬಳದೀದಿ |

ಕೊರಡೆಲ್ಲ ಸವೆಸಿ ಗಂಧವ ಹಚ್ಚೀದಿ

ಭಕ್ತಿಯ ವಿಭೂತಿ ಹಚ್ಚೋ

ಭಕ್ತಿಯ ಗಂಧವ ಹಚ್ಚೋ ಜಾಣ ||2||

ಭಕ್ತಿಯ ಪುಷ್ಟವು |

ಭಕ್ತಿಯ ಪತ್ತರಿ

ಭಕ್ತಿಯ ಧೂಪ-ದೀಪ

ಕಲ್ಮಠದ ಗುರುವಿಗೆ ಭಕ್ತಿಯ ಪೂಜೆ ಮಾಡೋ ||3||

ಪ್ರಸಾದಿಯ ಮನಸ್ಸದು ಪರಮ ಪ್ರಸನ್ನ |

ಅಡಗ್ಯಾನ ಅದರಾಗ ಶಿವನು ಸಂಪೂರ್ಣ ||ಪಲ್ಲ||

ದುಃಖವು ಬಂದೊದಗಿದರ |

ಕುಗ್ಗುವವನಲ್ಲವನು

ಸುಖದಲ್ಲಿ ಅವನು

ಹಿಗ್ಗುವನಲ್ಲವನು ||1||

ಲಾಭವು ಬಂದುದಾದರೆ |

ಕುಣಿದಾಡಲಿಲ್ಲವನು

ಹಾನಿಯು ಒದಗಿದರ

ಕೆಳ ಬೀಳಲಿಲ್ಲವನು ||2||

ತನ್ನವರು ಬಂದರ |

ತನ್ನವರು ಎನಲಿಲ್ಲ

ಬ್ಯಾರೆಯವರು ಬಂದರ

ಬ್ಯಾರೆಯವರೆನಲಿಲ್ಲ ||3|

ಪರಮ ಪ್ರಸಾದಿಯ ಭಾವವದು |

ಅಲ್ಲಯೆ ಪರಮತ್ವವಿರುವುದು

ಕಲ್ಮಠದ ಗುರುವಿಗೆ ತಿಳಿದಿರುವುದು

ಮನದ ಮೈಲಿಗೆ ಬಿಟ್ಟು ಹೋಗಿರುವುದು ||4

ಜೀವದ ಜೀವದ ಜೀವ ಆ ದೇವ |

ಪ್ರಾಣಕ ಪ್ರಾಣನೇ ಪ್ರಾಣಲಿಂಗ ||ಪಲ್ಲ||

ನಿನ್ನ ಪ್ರಾಣ ಲಿಂಗವೋ |

ನೀ ಪ್ರಾಣಲಿಂಗಿಯೋ

ತಿಳಿದು ನೋಡೋ ಅಪ್ಪಾ ||1||

ಲಿಂಗದಲಿ ಪ್ರಾಣ |

ಲಿಂಗ ಪ್ರಾಣಿ

ಪ್ರಾಣದಲಿ ಲಿಂಗವು

ಪ್ರಾಣಲಿಂಗಿ ||2||

ಪ್ರಾಣಕ್ಕೆ ಪ್ರಾಣ ಜೋಡಿಲ್ಲ |

ಪ್ರಾಣಕ್ಕೆ ಲಿಂಗದ ಜೋಡೋ

ಮನಕ್ಕೆ ಮನವು ಜೋಡಿಲ್ಲ

ಮನಕ್ಕೆ ಲಿಂಗದ ಜೋಡೋ ||3||

ತಿಳಿದು ಪೂಜಿಸು ಲಿಂಗವ |

ಅಳಿದು ಹೋಗುವುದು ಅಂಗವ

ಪ್ರಾಣವೂ ಲಿಂಗ ಲಿಂಗದಲಿ ಪ್ರಾಣ

ಕಲ್ಮಠದ ಗುರುವು ತಿಳಿಸಿದ ಜಾಣ ||4||

ಲೋಕದ ಕಣ್ಣೀಗಿ ಹುಚ್ಚಾಗಿ ಕಂಡು |

ಶಿವನ ಮೆಚ್ಚಿದವನು ಶರಣ ||ಪಲ್ಲ||

ತನ್ನದು ಅಳಿದವನು ಶರಣ |

ಪರಹಿತ ಬಯಸುವವನು ಶರಣ

ಸಕಲ ಜೀವರಲಿ ದೇವರ ಕಂಡು

ದೇವರು ಆದವ ಹರ ಶರಣ ||1||

ಬೈದವರಿಗೆ ಬಯ್ಯದವನು ಶರಣ |

ಜೀವರ ಸೇವಕ ಶಿವಶರಣ

ಬೈದವರಿಗೆಲ್ಲ ಬಳಿಗೆ ಕರೆಯುತ

ಪೊರೆದವನೆ ಪರಮಾನುಭಾವಿ ಶರಣ ||2||

ಮರಣನ ಗೆಲಿದವನು ಶರಣ |

ಜನನವ ಅಳಿದವನು ಶರಣ

ಮರಣ-ಜನನಗಳ ಮೀರಿ ನಿಂತವನು

ಕಲ್ಮಠದ ಗುರು ನಿಜ ಶರಣ ||3||

ಶರಣರ ಸಂಗವ ಮಾಡೊ |

ಹಾಲು-ಸಕ್ಕರಿ ಸವಿ ಅದು ನೋಡೋ ||ಪಲ್ಲ||

ಶರಣರ ಸಂಗವ ಮಾಡಿದರ |

ಹರಿವುದು ಘೋರ ದುರಿತವು

ಶರಣರ ಸಂಗ ಮಾಡಿದರ

ಪರಿಹಾರ ಎಲ್ಲ ಕಷ್ಟವು ||1||

ಶರಣರ ಸೇವಾ ಮಾಡಿದರ |

ದೊರಕುವುದು ಎಲ್ಲ ಸಂಪತ್ತು

ಶರಣರ ಸೇವಾ ಮಾಡಿದರ

ಧರೆಯೊಳು ಅವನೆ ಪರವಸ್ತು ||2||

ಶರಣರ ಪಾದದ ಧೂಳಿಯಾದರ |

ಅದಕ್ಕಿಂತ ಬ್ಯಾರೆ ಹಿರಿದಿಲ್ಲ

ಶರಣರ ಪಾದದ ಪಾದುಕೆ ಆದರ

ಕಲ್ಮಠದ ಗುರು ಅಲ್ಲಿಹನಲ್ಲ ||3||

ಶರಣರ ಪಾದಕ ಶರಣೆನ್ನಿರೊ ||ಪಲ್ಲ||

ತನಗಾಗಿ ಚಿಂತಿಸದ |

ಪರದುಃಖ ಅರಿತಿರುವ

ನಿಜ ಶರಣನಡಿಗೆ ಶರಣೆನ್ನಿರೋ ||1||

ಪರರ ದುಃಖವನ್ನೆಲ್ಲ |

ತನ್ನ ದುಃಖವುಯೆಂದು

ತಿಳಿದಂಥ ಶರಣನಡಿಗೆ ಶರಣೆನ್ನಿರೇ ||2||

ರೋಗ-ರುಜಿನ ಬಾಧೆಗಳ |

ಭಾರ ಸಂಸಾರ ಝಳ

ಹರಿದೊಗೆವ ಕಲ್ಮಠದ ಗುರುವಿಗೆ ಶರಣೆನ್ನಿರೋ ||3||

ಮಾನವ ಧರ್ಮವು |

ಮರೆಯಲು ಬಾರದದು

ಅದು ಬಲು ದೊಡ್ಡದು ಜಗದಲಿ ||ಪಲ್ಲ||

ನಿನ್ನಂತೆ ಪರರ ತಿಳಿದು |

ನಾ ನೀನೆಂಬ ಭೇದವ ಅಳಿದು

ಎಲ್ಲರೂ ಕೂಡಿ ಬಾಳುತಲಿ ಏಕಾಗಿ

ಇರಬೇಕು ಜಗದಲಿ ದೀಪದ ಬೆಳಕಾಗಿ ||1||

ಶಿವ ಕೊಟ್ಟ ಸಂಪತ್ತು ಈ ಭೂಮಿ |

ಎಲ್ಲವೂ ನನಗೆನಲು ಬೇಡ

ಸ್ವಾರ್ಥ ಹಪಹಪಿ ಬಿಡಬೇಕು

ಇದ್ದುದರೊಳಗ ಉಂಡು ನಗಬೇಕು ||2||

ನಾವೆಲ್ಲ ಆ ಶಿವನ ಮಕ್ಕಳಪ್ಪಾ |

ಅಣ್ಣ ತಮ್ಮರಾಗುವುದು ಸರಿ ತಿಳಿಯಪ್ಪಾ

ಕಲ್ಮಠದ ಗುರು ಹೀಂಗ ಹೇಳ್ಯಾನಪ್ಪ

ಇದು ಮರತರ ಮಾನವಗ ಕೇಡ ನೋಡಪ್ಪ ||3||

ಕುಲವು ಎಲ್ಲ್ಯಾದ್ಹೇಳೋ ತಮ್ಮಾ |

ನಿನ್ನ ಚೆಲುವದಾವುದು ಹೇಳೊ ತಮ್ಮಾ ||ಪಲ್ಲ||

ಕುಲ-ಛಲಕ ಹೋರಾಡಿ ಸತ್ತಿ |

ಕುಲಗೇಡಿಯಾಗಿ ನೀ ಅತ್ತಿ

ನೀ ಮ್ಯಾಲಿನವ ಅಂತ್ಹೇಳಿ ಕುಂತಿ

ಅವರು ಕೆಳಗಿನವರು ಬ್ಯಾರೇ ಅಂತಿ ||1||

ಅವನಂಗ ನೀನೂ ತಮ್ಮಾ |

ಇಬ್ಬರ ರಕ್ತ ಕೆಂಪಾದ ತಮ್ಮಾ

ಹೊರಗಿನ ಬಣ್ಣ ಬ್ಯಾರೆ ಇದ್ರೇನು

ಒಳಗಿನ ಆತ್ಮನು ಒಂದವನು ||2||

ಜಾತಿ-ಜಾತಿ ಅಂತ ಹೇತಿ |

ಮನುಷ್ಯಾರ ಮ್ಯಾಲಂತೂ ಇನಿತಿಲ್ಲ ಪ್ರೀತಿ

ಎಲ್ಲರೂ ಶಿವನಿಗೆ ಪ್ರೀತಿ

ಹೀಂಗ ಹೇಳ್ಯಾನ ಕಲ್ಮಠದ ಗುರು ಪ್ರಖ್ಯಾತಿ || 3||

ಸಿರಿವಂತಿಕೆ ಬಂದರ |

ಕುಣಿದಾಡುತಿ ಯಾಕೋ

ಸ್ಥಿರವಲ್ಲ ಅದು ತಿಳಿ ಮನುಜಾ ||ಪಲ್ಲ||

ಗ್ವಾಡೀ ಮ್ಯಾಲಿನ ಸುಣ್ಣಾ |

ನೀರ ಮ್ಯಾಲಿನ ಗುರುಳಿ

ಯಾವಾಗ ಏನೋ

ತಿಳಿಯದು ಮನುಜಾ ||1||

ಗಾಳೀಗಿಟ್ಟಾ ದೀಪಾ |

ಕಾಮನಬಿಲ್ಲಣ್ಣಾ

ಯಾವಾಗ ಹೋಗುವುದು

ತಿಳಿಯದೇ ಮನುಜಾ ||2||

ಸಿರಿವಂತಿಕೆ ಬಂದರ |

ಶಿವ ಕೊಟ್ಟ ದಾನ ಅನ್ನು

ಶಿವನಿಗೆ ಸಲಿಸುತ ಮನುಜಾ

ಕಲ್ಮಠದ ಗುರುವಿನ ನಂಬು

ನೀ ಮನುಜಾ ||3||

ದೇಹದ ಗುಣಗಳ ಒಳಗಾಗಿ ಆ |

ದೇಹವೇ ನಾನೆಂದು ನಂಬಿದೆ ಮನವೆ ||ಪಲ್ಲ||

ಭೂತ ಪಂಚಗಳ ದೇಹ |

ಅದು ಬಿದ್ದ ಮ್ಯಾಲ ನಿರ್ದೇಹ

ಭೂತ ಪಂಚಗಳ ತತ್ವ

ಅದರೊಳು ಕೂಡಿ ದೇಹ ಮಾಯ ||1||

ದೇಹದ ಅಂಗಿ ಆತ್ಮನಿಗ |

ಆತ್ಮದ ಅಂಗಿ ಪರಮಾತ್ಮಗ

ಆತನು ನೀನೋ ಮನವೆ ||2||

ಮೂರು ದಿನದ ಸಂತಿ |

ಮುಗಿಸಿ ದೇಹ ಹೊರಡುತಾದ

ಆತ್ಮದ ಅರುವ ಇರುವವಗ

ಕಲ್ಮಠದ ಗುರು ತೋರುತಾನವಗ ||3||

ದೇಹ ಕಾಣುತಾದ |

ದೇಹದ ರೂಪ ಕಾಣುತಾದ ||ಪಲ್ಲ||

ಕರಿದು-ಬಿಳಿದು |

ಕೆಂಪು-ಗಿಂಪು

ಇರುವದೆಲ್ಲವು ದೇಹದ ವರ್ಣವು ||1||

ನೇಟ-ಮಾಟ |

ಥಾಟ-ಥೀಟ

ಇರುವದೆಲ್ಲವೂ ದೇಹದ ನೋಟ ||2||

ಆತ್ಮಕೆ ಬಣ್ಣಿಲ್ಲ ಬಗೆದರೆ |

ನೋಡಲು ರೂಪಿಲ್ಲ

ಗಾಳಿಗೆ ಗಾಳಿ ಬಯಲೇ ಬಯಲು ||3||

ಕಲ್ಮಠದ ಗುರುವಿಗೆ ತಿಳಿತಲ್ಲ |

ಬಲ್ಲಭಾವದಲ್ಲಿ ಹೊಳಿತಲ್ಲ

ಆತ್ಮನು ಬಯಲು-ನಿರ್ಬಯಲೆಂಬುದು ||4||

ಚಿಂತಿ ನಿನಗಿಲ್ಲಾತ್ಮ |

ನಿಶ್ಚಿಂತಿ ಕಂಡ್ಯಾತ್ಮ ||ಪಲ್ಲ||

ಹುಟ್ಟಿಸಿದವ ಮ್ಯಾಲಿಲ್ಲ |

ನಿನ್ನೊಳಗೆ ಇಹನಲ್ಲ

ನಿನ್ನ ನೀ ಒಳಗರಿದು

ನಿಜ ಕಾಣು ಆತ್ಮ ||1||

ರಕ್ಷಿಪನು ಮ್ಯಾಲಿಲ್ಲ |

ನಿನ್ನೊಳಗೆ ಇಹನಲ್ಲ

ನಿನ್ನ ರೂಪವ ತಿಳಿದು

ಪರಮಾತ್ಮನ ಕಾಣು ||2||

ಅಲ್ಲಿಲ್ಲ-ಎಲ್ಲಿಲ್ಲ |

ನಿನ್ನಲ್ಲೆ ಹಾನಲ್ಲ

ನಿನ್ನ ನೀ ಅರಿತು ಬಿಡು

ಕಲ್ಮಠದ ಗುರುವನು ಕೂಡು ||3||

ಗರಗರ ಗಳ್ಯಾಗ |

ಗಿರಿಗಿರಿ ತಿರುಗಿದೇನು

ಗುರುರಾಯ ಬಂದು ಬಿಡಿಸಿದನು ||ಪಲ್ಲ||

ಏಸು ಜನುಮದ ಪೂಜೆ ಫಲ |

ನಾನು ತಿಳಿಯೆ ಗುರುನಾಥ

ನಿನ್ನ ಕರುಣೆ ಪಡೆದು ನಾ ನನ್ನ ತಿಳಿದೆನು ||1||

ಏಸು ಜನುಮದ ತಪವೋ |

ನಾನ್ಹೇಗೆ ಹೇಳಲಿ ?

ಕಲುಮಠದ ಗುರುದೇವ

ನಿ ಬಲ್ಲೆ ಎಲ್ಲವ ||2||

ಗುರುವಿನ ಸೇವಕ ಆದಾಂವಾ |

ಗುರುವಿನ ಸಮಾನ ಆಗು ನೀನು ||ಪಲ್ಲ||

ಗುರುವಿನ ಗುರುತ ಹಿಡಿದು |

ಗುರು ಬೋಧ ತೀರ್ಥವ ಕುಡಿದು

ಗುರು ಹೇಳಿದ ಮಂತ್ರವ ನುಡಿದು

ಗುರುವಿನ ಸಮಾನ ಆಗಲು ಬೇಕು ||1||

ಗುರು ತೋರಿದ ಹಾದೀ ನಡೆದು |

ಗುರು ಕರುಣವ ಜವದಲಿ ಪಡೆದು

ಗುರುತರ ಬದುಕಲಿ ದುಡಿದು

ಗುರುವಿನ ಸಮಾನ ಆಗಲು ಬೇಕು ||2||

ನಾನೇನು ಬಲ್ಲೆನು ಮರುಳ |

ಗುರುರಾಯ ತಿಳಿಸಿದ ಈ ತಿರುಳ

ಕಲ್ಮಠದ ಗುರುವಿನ ನುಡಿ ಭಾಳ ಸರಳ

ಶಿವ ರೂಪವಾಯಿತು ನನ್ನೆಲ್ಲ ಬಾಳಾ ||3||

ಗುರು ಮುಟ್ಟಿ ಗುರು ಆಗು |

ನೀ ಮಾಡು ನಿಜಗುರುವಿನ ಧ್ಯಾನ ||ಪಲ್ಲ||

ಗುರು ಸ್ಮರಣೆ ಮಾಡಿದರ ಅಜ್ಞಾನ ಹರಿವುದು |

ಗುರು ಸ್ಮರಣೆ ಮಾಡಿದರ ಆತಂಕ ಹರಿವುದು

ಗುರು ಸ್ಮರಣೆ ಮಾಡಿದರ ಅನುಮಾನವಿಲ್ಲ

ಗುರು ಸ್ಮರಣೆ ಮಾಡಿದರ ಅಡಚಣೆ ಇನ್ನಿಲ್ಲ ||1||

ಗುರುನಾಥ ಎಂದರ ಕತ್ತಲಿ ಕಡಿದ್ಹೋಯ್ತು |

ಗುರುನಾಥ ಎಂದರ ಆಪತ್ತು ಇಲ್ಲದಾಯ್ತು

ಗುರುನಾಥ ಎಂದರ ದುಃಖ ದುಗುಡಿಲ್ಲ

ಗುರುನಾಥ ಎಂದರ ಚಿಂತಿ ಇನಿತಿಲ್ಲ ||2||

ಗುರುವಿಗೆ ಮಣಿದರ ಮಣಿಮುಕುಟ ತಮ್ಮಾ |

ಗುರುವಿಗೆ ನೆನೆದರ ನೀನೆ ಅವನೊ ತಮ್ಮಾ

ಕಲ್ಮಠದ ಗುರು ಮುಟ್ಟಿ ಗುರುವಾದೆನಮ್ಮಾ

ಇದು ತಿಳಿದು ನೀವೆಲ್ಲ ಗುರುವಾಗಿರಿ ತಮ್ಮಾ ||3||

ಗುರುವಿನ ಮನಿ ಭಾಳ ದೂರಿಲ್ಲ |

ಗುರುತಿಟ್ಟ ನೀನದು ನೋಡಿಲ್ಲ ||ಪಲ್ಲ||

ದಿನ ಬೆಳಕು ಹರಿದಾಗ |

ಅವರಿವರ ಮನಿ ತಿರುಗಿ

ಕಾಲು ನೋವೆಂದು ಮರುಗಿ ಮರುಗಿ

ಗುರುಮನಿಗೆ ನೀ ಹೋಗದೆ ತಿರುಗಿ ||1||

ಹೊತ್ತರಳಿ ನಿಂತಾಗ |

ಹೊಡಮರಳಿ ನಾ ಹೊಂಟೆ

ಬಂಧು-ಬಾಂಧವರ ಮನಿ ತಿರುಗಿ

ಗುರುವಿನ ಮನೆಯ ಮರತೇನು ||2||

ಗುರುರಾಯ ಬಾಯೆಂದು |

ಕೈಬೀಸಿ ಕರೆದಾನು

ಗುರುತ್ಹಿಡಿದು ನಾನು ನೋಡಲಿಲ್ಲ

ಆದರೂ ಗುರು ಎನಗ ಬಿಡಲಿಲ್ಲ ||3||

ಗುರುವಿನ ಮನಿ ಭಾಳ ದೂರಿಲ್ಲ |

ಕಲ್ಮಠದ ಒಳಗ ಅವನು ಹಾನಲ್ಲ

ಕಲ್ಮಠದ ಗುರುವಿನ ನೆನಿ ಬಾಲ

ನೆನಿಯದೆ ನನಗ-ನಿನಗ ಗತಿಯಿಲ್ಲ ||4||

ಹ್ಯಾಂಗ ಮರೆಯಲಿ ಗುರುದೇವ |

ನೀ ಎನ್ನ ಜೀವ ||

ಹ್ಯಾಂಗ ಮರೆಯಲಿ ಗುರುದೇವ ||ಪಲ್ಲ||

ಮಾತು ಮಾತಿಗೆ ತಿದ್ದಿ ತೀಡಿದನು |

ಶ್ರೀಗುರುರಾಯ

ಹೊತ್ತು ಹೊತ್ತಿಗೆ ಮುದದಿ ನೋಡಿದನು ||1||

ಕರುಣೆಯಿಟ್ಟು ಕೈಯ್ಯ ಹಿಡಿದಾನೋ |

ಶ್ರೀಗುರುರಾಯ

ಮರೆಯದಾಂಗ ಮೋಹ ಮಾಡ್ಯಾನೋ ||2||

ಬಳಿಗ ಕರೆದು ಮಾತನಾಡ್ಯಾನೋ |

ಶ್ರೀಗುರುರಾಯ

ಕಿವಿಯಲ್ಲೊಂದು ಮಂತ್ರ ನುಡಿದಾನೋ ||3||

ಬೆಳಗಿನಲ್ಲಿ ಬೆಳಗು ತೋರ್ಯಾನೋ |

ಕಲ್ಮಠದ ಗುರುವು

ಬೆಳಗಿ ಎನಗೆ ಬೆಳಗು ಮಾಡ್ಯಾನೋ ||4||

ಗುರು ಕೊಟ್ಟ ಈ ಗುಪ್ತ ಧನ |

ಸಿರಿವಂತನಾದೆನು ಆ ದಿನಾ ||ಪಲ್ಲ||

ಹರಕ-ಮುರಕ |

ಮನೆಯ ತಿರುಕ

ಚಿಂದಿ-ಬಂದಿ

ಉಟ್ಟು ಕಡುಕ

ಮನ್ಯಾಗಿನ ಭಾಂಡಿ ಒಡಕ ತಡಕ ||1||

ಉಣುವದಕ್ಕಿಲ್ಲ-ಉಡಲಿಕ್ಕಿಲ್ಲ |

ಏನೇನೂ ಇಲ್ಲ

ಬಡವರ ಬಡವ

ಕಡು ಬಡವ-ಬಡವ ||2||

ಬಡತನದ ಬೆಂಕ್ಯಾಗ |

ಬೆಂದು ಬೆಂಡಾಗುತ

ಗುರುವಿನ ನೆನದೇನು ಮನದಾಗ

ಬಂದು ನಿಂತನು ಆ ಚಣದಾಗ ||3||

ಕೊಳ್ಳೆಂದು ಕೊಟ್ಟಾನು |

ಏಕಾಂತದಲಿ ಕರೆದು

ಸವೆಯದ ಸಂಪತ್ತು

ಕಲ್ಮಠದ ಗುರುವಿನ ದಯ ಎನ ಮೇಲಿತ್ತು ||4||

ಗುರು ಕೊಟ್ಟ ಗುರುತಿದು ಸಂಸ್ಕಾರ |

ಆಯಿತೆನಗೊಂದ ಸರಿಯಾದ ಆಕಾರ ||ಪಲ್ಲ||

ದೇಹಕ್ಕೆ ಅಂಗದಾ ಒಪ್ಪ |

ಬರೆದಾನೋ ಘನ ಗುರುವಪ್ಪ

ಅಂಗಕ್ಕ ಲಿಂಗದ ಲೇಪ

ಮಾಡ್ಯಾನೋ ಗುರು ರಾಯನಪ್ಪ ||1||

ಮಾಂಸದ ಮುದ್ದೀಗಿ ಮಂತ್ರದ ಮುದ್ರೆ |

ಲೇಸದಿ ಹಾಕಿದ ಗುರುದೇವ

ಮಂತ್ರದ ಪಿಂಡಕ್ಕ ಮಾದೇವನ ರೂಪ

ಲೇಸದಿ ತೋರಿಸಿದ ಗುರುದೇವ ||2||

ಅಂಗದ ಹಾದಿಯ ಹಂಗ್ಹರಸಿದ |

ಲಿಂಗದ ಹಾದಿಯ ಹಿಡಿಸಿದ

ಒಂದೆಂಬ ಮಂತ್ರವ ನುಡಿಸಿ

ಭವದ ಕತ್ತಲೆ ಎಲ್ಲ ಕೆಡಸಿ ||3||

ಕಲ್ಮಠದ ಗುರುವಿತ್ತ ಸಂಸ್ಕಾರ |

ನನಗಾಯ್ತು ಸುಂದರದ ಆಕಾರ

ತಿಳಿದೇನೋ ತಮ್ಮಾ ಇದರ ಸಾರಾ

ತಿಳಿಯದಾದರ ಕೇಳೋ ನೀ ಸಣ್ಣ ಪಾರ ||4||

ಭಾವಲಿಂಗಯ್ಯನಿಗೆ |

ಭಾವದೆಡೆಯ ಮಾಡಿ

ಭಾವಲಿಂಗನ ಸ್ತೋತ್ರವ ಹಾಡಿರೇ ||ಪಲ್ಲ||

ಭಾವ ದಣಿದು |

ಮನ ದಣಿದು

ಭಾವ ಕುಸುಮದಾ ಮಾಲೆ ಸೂಡಿ

ಭಾವಲಿಂಗನ ಸ್ತೋತ್ರವ ಹಾಡಿರೇ ||1||

ಭಾವ ದಣಿಯಲು ಬೇಕು |

ಭಾವ ತಣಿಯಲು ಬೇಕು

ಭಾವಲಿಂಗನ ಸ್ತುತಿಯ ಅನವರವು ನಡೆದು

ಭಾವಲಿಂಗನ ಸ್ತುತಿಯ ಹಾಡಿರೆ ||2||

ಭಾವದೊಳು ಭಾವ ಬೆರೆತು |

ನಿರ್ಭಾವದ ನೆಲೆಯೊಳು

ಭಾವಲಿಂಗನಿಗೆ ಭಾವದರ್ಪಣೆಯ

ಕಲ್ಮಠದ ಗುರುವ ನುತಿಸಿರೆ ||3||

ಪ್ರಾಣಲಿಂಗವ ಪೂಜಿಸೊ |

ನಿನ್ನೊಳು ಪ್ರಾಣಲಿಂಗವ ನೀ ಭಜಿಸೋ ||ಪಲ್ಲ||

ದುರಿತವ ಸುಟ್ಟ ಬೂದಿ |

ಅದನೆ ಪೂಸು ಲಿಂಗಕೆ

ಮನದ ಕಾಳಿಕೆ ಕಳೆದು ಪತ್ರಿಯ

ಅದನೇ ಏರಿಸು ಲಿಂಗಕೆ ||1||

ಪರಿಶುದ್ದ ಮನದ ಹೂ |

ಅದನೆ ಧರಿಸು ಲಿಂಗಕೆ

ನಿಷ್ಕಾಮ ಗಂಧವ

ತೇದು ಹಚ್ಚು ಲಿಂಗಕೆ ||2||

ಪ್ರಾಣದ ದೀಪವ ಬೆಳಗು |

ಶಕ್ತಿಯ ಎಣ್ಣೆಯ ಹಾಕು

ಏಕಾಗ್ರ ಮನದ ಬತ್ತಿ ಸೂಡು

ಕಲ್ಮಠದ ಗುರುವೆ ನೀ ಪ್ರಾಣವೆಂದು ||3||

ಭಿಕ್ಷಾಕ ಬಂದಾನ ಜಂಗಮ |

ಭಿಕ್ಷಾ ನೀಡಮ್ಮಾ ||ಪಲ್ಲ||

ಕಾಲಲ್ಲಿ ಜಂಗಮ ಕಟ್ಟಿ |

ಕೈಯಲ್ಲಿ ದಂಡ ಕೋಲ್ಹಿಡಿದು

ಹೆಗಲಿಗೆ ಅಕ್ಷಯದ ಜೋಳಿಗೆ ಹಾಕಿ

ಭಿಕ್ಷಾಕ ಬಂದಾನ ಜಂಗಮ ||1||

ಕಾಳು ಬೇಡನು ಕಡಿಯ ಬೇಡನು |

ಧಾನ್ಯ ಬೇಡನು ದವಸ ಬೇಡನು

ಕೀಳು ಮನದ ಹಿಟ್ಟು ನೀಡಮ್ಮಾ

ಭಿಕ್ಷಾಕ ಬಂದಾನ ಜಂಗಮ ||2||

ರಕ್ಷಕನು ನಮಗೆಲ್ಲಾ ಜಂಗಮ |

ತಂದು ನೀಡುತಾನ ನಮಗ ಜ್ಞಾನದ ಅನ್ನ

ಕಲ್ಮಠದ ಗುರು ಹಾನ ಜಂಗಮ

ಅವನು ಭಿಕ್ಷಾಕ ಬಂದು ನಿಂತಾನ ಅಮ್ಮಾ ||3||

ಜಂಗಮರ ಜರಿಬ್ಯಾಡ |

ಜಗದಲ್ಲಿ ಇದ್ದು ||ಪಲ್ಲ||

ಜಗದ ಜೀವಕ ಜೀವ ಜಂಗಮ |

ಜಗದ ರಕ್ಷಕನವನು ಜಂಗಮ

ಜಗದ ಜೀವರ ಸೇವ್ಯ ಜಂಗಮ

ಜಂಗಮರ ಜರಿಬ್ಯಾಡೋ ||1||

ಜಂಗಮದಲ್ಲೇ ಜಗವು ಅಡಗಿಹುವು |

ಜಂಗಮದಲ್ಲೇ ಜೀವರು ಸ್ಥಿತರಹರು

ಜಂಗಮವಿದ್ದಲ್ಲಿ ಶಿವ ಸುಖವಿಹುದು

ಜಂಗಮರ ಜರಿಬ್ಯಾಡೋ ||2||

ಜಂಗಮನು ಜಗದ ಉದ್ಧಾರಕನು |

ಜಂಗಮನು ಜಗದ ಪೂಜ್ಯನಾಗಿಹನು

ಕಲ್ಮಠದ ಗುರುವರ್ಯ ಜಂಗಮ ವರ್ಯನು

ಜಂಗಮರ ಜರಿಬ್ಯಾಡೋ ||3||

ಕರುಣ ರಸದ ಬಿಂದು |

ಶಿವನ ಕರುಣದ ಸಿಂಧು ||ಪಲ್ಲ||

ವರ ಚಿದ್ರಸವದು |

ಚಿದ್ರೂಪ ನೀಡುವದು

ಕರುಣೆಯ ಸಾರ ಸಾರಾಯ

ವರತೀರ್ಥವು ಕರುಣ ರಸವು ||1||

ಗುರು ಕರುಣೆಯುದ್ಭವವಾಗಿ |

ಹರನ ಕರುಣೆ ಕರಗಿಸಿಕೊಂಡು

ಲಿಂಗ ಕರುಣೆ ಸಕ್ಕರೆಯ ನುಂಗಿ

ಹರಿದು ಹರಿದು ಬರುತಲಿಹುದು ||2||

ಶಿಷ್ಯ ತಾನು ಸದಮಲ ಭಾವದಿ |

ಕಲ್ಮಠದ ಗುರುಮೂರ್ತಿಯ ಅರ್ಚಿಸಿ

ಪಾದವಿಡಿದು ಕರುಣೆ ಪಡೆದು

ಕರುಣ ರಸವ ಪಡೆದು ಕುಡಿದು || 3||

ಪ್ರಸಾದದರ್ಥವ ಕೇಳಿರಿ ಜನರೆ |

ಒರೆಯುವೆನದರ ಮರ್ಮವನು | |ಪಲ್ಲ||

‘ಪ್ರ’ ಎಂದರೆ ಪರತರ ತತ್ವವು |

‘ಸಾ’ ಎಂದರೆ ಗುರು ಸಾರಾಯವು

‘ದ’ ಎಂದರೆ ದಹತಿ ಜನ್ಮವು ||1||

ಪ್ರಸಾದ ಪರಶಿವನ ಒಲುಮೆ |

ಪ್ರಸಾದ ಪರಶಿವನ ಬಲಿಮೆ

ಪ್ರಸಾದ ಪರಾಶಕ್ತಿ ಸತ್ವವು ||2||

ಪ್ರಸಾದದಿಂದಲೇ ಪರದ ಸಿದ್ಧಿಯು |

ಪ್ರಸಾದದಿಂದಲೇ ಪರಮನ ಸಿದ್ಧಿಯು

ಪ್ರಸಾದದಿಂದಲೇ ಲೋಕ ಸಮೃದ್ಧೀಯು ||3||

ಅನ್ನ ಪ್ರಸಾದವು ಜೀವರಿಗೆ ಜೀವವು |

ಜ್ಞಾನ ಪ್ರಸಾದವು ಜೀವರಿಗೆ ಆತ್ಮವು

ಕಲ್ಮಠದ ಗುರುವಿನ ದಿವ್ಯ ಪ್ರಸಾದವದು ಭವರಹಿತ ಸಾಧಕವು || 4||

ಮನದೊಳಗ ಹೊಲಸ |

ಮ್ಯಾಲಿನ ಸೊಗಸ

ಬರೀ ವೇಷ-ನಾಟಕದ ನೋಟ ||ಪಲ್ಲ||

ಕಪಟ ಗುಣಗಳು |

ಹೊಟ್ಟೆಯಲ್ಲಿಟ್ಟುಕೊಂಡು

ಪಿಟಿ-ಪಿಟಿ ನುಡಿದರ ಏನುಂಟು ||1||

ಕಲ್ಮಷದ ತಂತ್ರಗಳು |

ಅನುದಿನವು ನಡೆಸುತ್ತ

ವಟ-ವಟಗುಟ್ಟಿದರ ಏನುಂಟು ||2||

ಮನದೊಳಗ ಒಬ್ಬರ |

ಮುಳುಗಿಸಲು ಬಗೆಯುತ್ತ

ಕಣ್ಣನು ಮುಚ್ಚಿದರೆಂಥದು ಧ್ಯಾನ ||3||

ಮನದೊಳಗನ್ಯರ ಮೋಸವ ಯೋಚಿಸಿ |

ಜಪಮಣಿ ಎಣಿಸಿದರದು

ಎಂಥದು ಮನನ |4||

ನುಡಿಯಲಿ ನುಡಿಯುತ |

ನಡೆಯಲಿ ತಪ್ಪಿದರ

ಕಲ್ಮಠದ ಗುರುವಿನಲಿ ಎಂಥದು ಸ್ಥಾನ |5||

ಬೆಲ್ಲದ ಅಚ್ಚಾಗಿ ಜಗದೊಳು ಇರಬೇಕು |

ಸವಿದು ನೋಡಿದರ ರುಚಿಯೆಲ್ಲ ||ಪಲ್ಲ||

ಖುಲ್ಲ ಮಾನವರೊಳಗ ಇರದಂಗ ಇರಬೇಕು |

ಬಲ್ಲ ಮಾನವರೊಳಗ ಬಲ್ಲಂಗ ಇರಬೇಕು

ಎಲ್ಲ-ಎಲ್ಲರಿಗು ಬೆಲ್ಲಾಗಿ ಇರಬೇಕು

ಶರಣ ಗಣದ ಎದರು ಬಿಲ್ಲಾಗಿ ಇರಬೇಕು ||1||

ತಲೆಯೆತ್ತಿ ನಡೆದರ ಅಹಂಕಾರ |

ಕೈಮುಗಿದು ನುಡಿದರ ಶಿವಸಾರ

ಶರಣರ ಅಡಿಗೆ ಶರಣಾಗಿರುತಲಿ

ಕರುಣವ ಪಡೆದರ ಅದು ಮ್ಯಾಲ ||2||

ಹಲ್ಲೊಳಗ ಇರಬ್ಯಾಡ ಜಗದೊಳಗ |

ಬೆಲ್ಲದಚ್ಚಾಗಿ ಇರು ನಾಲಿಗಿ ಮ್ಯಾಲ

ಕಲ್ಮಠದ ಗುರು ಹೀಂಗ ಹೇಳ್ಯಾನಲ್ಲ

ಇದು ತಿಳಿದು ನುಡಿಯಲು ಬೇಕು ಲೋಕೆಲ್ಲ ||3||

ಮನಸ್ಸಾದ ಚಂಚಲ |

ಅದು ಭಾಳ ಚಪಲ ||ಪಲ್ಲ||

ನೀ ಇಲ್ಲೆ ಇರುತಿ |

ನಿನಗೆಲ್ಲಿಯದು ಸುರತಿ

ನಿನಗಿಲ್ಲಿ ಬಿಟ್ಟು ಓಡುತಾದೋ

ನಿನ್ನಲ್ಲೆ ಇದ್ದಂಗ ಕಾಣುತಾದೋ ||1||

ನೋಡೇನಂತಿ ಅದಕ ಬಣ್ಣಿಲ್ಲ |

ಆಕಾರದ ರೂಪ ಅದಕ್ಕಿಲ್ಲ

ಹಿಡಿದೇನಂತಿ ಕೈಗೆ ಸಿಗುದಿಲ್ಲ

ಗಾಳಿಗಿ ಮುಂದಾಗಿ ಹರಿವುದಲ್ಲ ||2||

ಅದು ಭಾಳ ಚಪಲ |

ನಿನಗ ತಿಳಿಲಿಲ್ಲ ಕೀಲ

ಕಲ್ಮಠದ ಗುರು ತಿಳಿದ ಅದರ ಸೊಲ್ಲ

ಕೇಳಬೇಕಪ್ಪ ಅವಗ ಅದರ ಮೂಲ |3||

ಹೊಲೆ ಯಾವುದೋ ಹುಚ್ಚಾ |

ಹೊಲೆ ಯಾವುದೋ ||ಪಲ್ಲ||

ಬಾಯಲ್ಲಿ ತಾಯೆಂದು |

ಕಾಮಿಸಿದವ ಹೊಲೆಯ

ಕೈಯಿಟ್ಟು ಘಾತುಕವ

ಮಾಡಿದವ ಹೊಲೆಯ ||1||

ನಂಬಿದವರ ಗೋಣ |

ಕೊಯ್ದವನು ಹೊಲೆಯ

ಇಂಬಾಗಿ ಬಂದು

ಬೊಂಬಾದವನು ಹೊಲೆಯ ||2||

ಘಾಸಿ-ಮೋಸ-ಘಾಸಿ

ಮಾಡಿದವನು ಹೊಲೆಯ

ಹೀನ ಕಾರ್ಯವು ಬಿಡದೆ

ಕಲ್ಮಠದ ಗುರುವ ನಂಬದವನು ಹೊಲೆಯ ||3||

ಇವನು ಅನಾಚಾರಿ |

ಬಾಯಲ್ಲಿ ಸದಾಚಾರಿ ||ಪಲ್ಲ||

ಮುಂಬಾಗಿಲಿನಲಿ ಧರ್ಮದ ಧರ್ಮ |

ಹಿಂಬಾಗಿಲಿನಲಿ ಬರೆ ಕರ್ಮ

ಮುಂಬಾಗಿಲಿನಲಿ ದಾನ ದಾನ

ಹಿಂಬಾಗಿಲಿನಲಿ ದಾನವ್ವ ದಾನವ್ವ ||1||

ಮೂರ್ಹೊತ್ತು ಹೊರಗ ತೊಳಿತಾನ |

ಒಳಗ ಗಬ್ಬೆದ್ದು ನಾರುತಾನ

ಬಾಯಲ್ಲಿ ವೇದಾಂತ

ಮನದೊಳಗ ಕತ್ತರಿ ಘಾತ ||2||

ನಾಲಿಗಿ ನೋಡಿದರ ಬೆಲ್ಲದ ಅಚ್ಚು |

ಮನಸು ತೆರೆದು ನೋಡಿದರ ಬೆಂಕಿ ಕಿಚ್ಚು

ನುಡಿವುದು ಒಂದು ನಡೆವುದು ಒಂದು

ಕಲ್ಮಠದ ಗುರುವಿಗೆ ಹೊಂದು ನೊಂದು || 3||

ಉಪದೇಶ ಮಾಡುವರು |

ದೇಶೆಲ್ಲ ತುಂಬ್ಯಾರ

ಅವರೆಲ್ಲ ಹಿರಿಯರೇನಣ್ಣ ||ಪಲ್ಲ||

ನೀತಿ ನಡೀಬೇಕೆಂಬ ಉಪದೇಶ |

ಅನೀತಿ ಇವರ ನಿಜ ವೇಷ

ಪುರಾಣ ಹೇಳುತ

ಹೂರಣ ತಿಂತಾರ ಯಾರಿಗೆ ಬೇಕು ಉಪದೇಶ ||1||

ಧನ ಕೂಡಿ ಇಡಬ್ಯಾಡ್ರಿ ಅಂತಾರ |

ಧನದ ಗದ್ದಿಗಿ ಮ್ಯಾಲ ಕುಂತಾರ

ಶಾಸ್ತ್ರವ ಹೇಳುತ

ಬದನಿಕಾಯಿ ತಿಂದವರ ಉಪದೇಶ ಯಾರಿಗೆ ಬೇಕಣ್ಣಾ ||2||

ಉಪದೇಶಾ ಹೇಳ್ತಾರ ಗುಡ್ಡದಷ್ಟು |

ನಡವಳಿಕೆ ಅವರಲ್ಲಿ ಇಲ್ಲ ಎಳ್ಳಷ್ಟೂ

ಬೆಂಕಿ ಬೀಳಲಿ ಅವರಿಗೊಂದಿಷ್ಟು

ಕಲ್ಮಠದ ಗುರುವಿಗಿ ಸಿಟ್ಟು ಸಿಟ್ಟು || 3||

ಸತ್ಯದಲಿ ಹುದುಗಿಹನು ಶಿವನು |

ಸತ್ಯದ ಕಣ್ಣಿಂದ ಅವನನ್ನು ಕಾಣು ||ಪಲ್ಲ||

ಸತ್ಯವ ಮಾತಾಡು |

ಸತ್ಯದ ಹಾದಿ ಕೂಡು

ಸತ್ಯದಲಿ ಜೀವನ ಮಾಡು

ಅದರಲಿ ಶಿವನನು ಹುಡುಕು ||1||

ಸತ್ಯವು ಸುಂದರವು |

ಸತ್ಯವು ಬಂಧುರವು

ಸತ್ಯವೇ ಮನುಜನಿಗೆ ನಿಜದ ಶೀಲ

ಸತ್ಯವೇ ಮುಕ್ತಿಯ ನೆಲೆಯ ಕೀಲ ||2||

ಸತ್ಯದಲಿ ಶಿವನಪ್ಪ |

ಶಿವನು ಸತ್ಯ ಹಾನಪ್ಪ

ಕಲ್ಮಠದ ಗುರು ಹಾನ ಸತ್ಯ

ಇದ ತಿಳಿದರಾಗುತಿ ನಿತ್ಯ ||3||

ನಿಂದೆ ಆಡಲು ಬ್ಯಾಡ |

ಬಂದಾಗುವುದು ಬಾಯಿ

ನಿಂದೆ ಮಾಡಲು ಬ್ಯಾಡೋ ಮನುಜಾ ||ಪಲ್ಲ||

ಹಿಂದ ನಿಂದೆಯ ಮಾಡಿ |

ಮುಂದಣ ಜನ್ಮಕ ಹಂದ್ಯಾಗಿ ಹುಟ್ಟುವುದು

ಮುಂದ ನಿಂದೆಯ ಮಾಡಿ

ಇಂದಿನ ಜನ್ಮಕ ಹಂದ್ಯಾಗಿ ಬಾಳುವುದು ||1||

ನಿಂದೆ ಮಾಡುವ ಬಾಯಿ ಬಚ್ಚಲದ ಕುಣಿಯು |

ಬಾಯ ನಾಲಗೆ ಬಾಲ ಹುಳುವು

ಬಾಯೊಳಗಿನ ಹಲ್ಲೊಳು ಬಚ್ಚಲದ ಕಲ್ಲು

ನಿಂದೆ ಮಾಡಲು ಬ್ಯಾಡೋ ಮನುಜಾ ||2||

ನಿಂದೆಗಿಂತ ಹಿರಿದು ಪಾಪವಿಲ್ಲ ಜಗದಲಿ |

ನಿಂದೆಗಿಂತ ಕೆಟ್ಟ ಕರ್ಮವಿಲ್ಲ

ನಿಂದೆಗಿಂತ ಕೀಳಿಲ್ಲ ಜಗದಲಿ

ಕಲ್ಮಠದ ಗುರು ತಾನು ಮರೆಯಾಗತಾನ ||3

ಹಣದಕ್ಕಿಂತ ದೊಡ್ಡದಾವುದೋ ಮನುಜಾ |

ಹೆಣದಂತೆ ಆಗುತಾದ ಈ ಸಮಾಜಾ ||ಪಲ್ಲ||

ಹಣವಿದ್ದರ ಘಣ ಘಣ |

ಹಣವಿದ್ದರ ಮಣ ಮಣ

ಹಣವಿಲ್ಲದಿರೆ ಎಲ್ಲ ಭಣ ಭಣ ||1||

ಹಣವಿದ್ದರ ದೊಡ್ಡಪ್ಪ |

ಹಣವಿದ್ದರ ಹಡದಪ್ಪ

ಹಣವಿದ್ದರ ಅಪ್ಪನಪ್ಪ

ಹಣ ತೀರಿದಾಗ ಬಿದ್ದಾನೋ ಧೊಪ್ಪ ||2||

ಹಣದಿಂದ ಸುಗುಣ |

ಹಣದಿಂದ ಗಣ್ಯಗುಣ

ಹಣದಿಂದ ಎಲ್ಲ ಪುಣ್ಯ

ಹಣವಿಲ್ಲದಾದಾಗ ಒಣ ಒಣ ||3||

ಹಣಕ್ಕಿಂತ ಸುಗುಣ ದೊಡ್ಡದು ತಿಳಿ ಮನುಜಾ |

ಹಣದ ಮೋಹ ಬಿಡು ಗುಣದ ಮೋಹವ ತೊಡು

ಕಲ್ಮಠದ ಗುರುದೇವ ಹೀಂಗಂತ ಹೇಳ್ಯಾನ

ಬಲ್ಲವರು ತಿಳಿಕೊಳ್ಳಬೇಕು ಈ ಖೂನ ||4||

ಒಳ್ಳೆಯ ನುಡಿ ಆಡು ಮಳ್ಳಿ |

ಸುಳ್ಳ ಸುಳ್ಳಾಗಿ ನಾಲಿಗೆ ಹರಿದ್ಯಾಕ ಬಿಡುತಿ | |ಪಲ್ಲ||

ಎಲುವಿಲ್ಲದ ನಾಲಗಿ |

ಬಲ ಎಡಕ ತಿರುಗುತಾದ

ಖುಲ್ಲ್ಯಾಕ ಮಾತಾಡತಿ ಮಳ್ಳಿ ||1||

ನಾಲಿಗಿ ಚಪಲಕ ನುಡಿ ಸಲ್ಲ |

ಶಿವ ಮೆಚ್ಚುವದಕ ನುಡಿಬೇಕ

ಸುಳ್ಯಾಕ ಸೊಗಡ್ಯಾಕ ಆಡುತಿ ಮಳ್ಳಿ ||2||

ಒಳ್ಳೆಯ ನಾಲಿಗೆಗೆ ನಾಡೆಲ್ಲ ಒಲಿತಾದ |

ನಾಲಿಗೆ ತೊದಲಿದರ ಜನರೆಲ್ಲ ಬೈತಾರ

ಬೆಲ್ಲದ ನಾಲಿಗೆಗೆ ಬಹುಮಾನ

ಖುಲ್ಲ ನಾಲಿಗೆಗೆ ಅವಮಾನ ||3||

ಶಿವನ ನುಡಿ ಆಡಿದರ ಶಿವನಾದಿ ಜಗದಾಗ |

ಕಲ್ಮಠದ ಗುರುವಾದಿ ಜನರೊಳಗ

ಒಳಿತಾಗು-ಕಳತಾಗು

ಜನಮನಕೆ ಜೇನಾಗು ||4||

ದೀಪದ ಬೆಳಕೇನು ಬೆಳಕಲ್ಲ |

ನಿಜ ಜ್ಞಾನದ ಜ್ಯೋತಿ ಬೆಳಗಣ್ಣ ||ಪಲ್ಲ||

ಅರುವಿನ ಕಡ್ಡಿ ಕೊರೆದು |

ದೀಪ ಹಚ್ಚಣ್ಣಾ

ಮರವನ್ನು ಮರೆತು

ಅರಿಯೋ ಹುಚ್ಚಣ್ಣಾ ||1||

ಜ್ಞಾನದ ಬೆಳಕಿಗೆ |

ಭಕ್ತಿಯ ಎಣ್ಣಿ

ನಿಷ್ಟೆಯ ಬತ್ತಿಯು ಅದಕೆ

ನಂದಾದೀಪದಂತೆ ಕಾಯಬೇಕಣ್ಣಾ ||2||

ಅಂದದ ಮನೆಯಲ್ಲಿ ತುಂಬಿದ ಕತ್ತಲಿ |

ಜ್ಞಾನದ ದೀಪದ ಹೊತ್ತಿಸಿ ಕಳೆಯುತ

ಜ್ಞಾನದ ಮನದಿಂದ ಕಲ್ಮಠದ ಗುರುವೀನ

ಮೌನದಿಂದಲಿ ನೆನೆದು ಅವನೊಳಗ ಬೆರೆದು ||3||

ತಿಳಿ ತಿಳಿ ಅಂದರ ತಿಳಿವಲ್ದೋ ಯಪ್ಪಾ |

ತಿಳಿ ನೀರಿಗಿಂತ ನೀ ತಿಳಿಯಾಗಬೇಕೊ ||ಪಲ್ಲ||

ಒಳಗೊಂದು ಮುಚ್ಚಿಟ್ಟು |

ಹೊರಗೊಂದು ತೋರಿಸದೆ

ಹೊರಗ-ಒಳಗ ನೀ ಒಂದಾಗೋ ||1||

ಸತ್ಯವ ನುಡಿದು |

ನೀತಿಲಿ ನಡಿಯುತ

ತಿಳಿಯಾಗು ತಿಳಿಯಾಗು ತಿಳಿಯಾಗೋ ||2||

ತಿಳಿದೆನಂದರ ಅದು ತಿಳಿಲಿಲ್ಲ |

ಅಳಿದೆನಂದರ ಅದು ಅಳಿಲಿಲ್ಲ

ಕಲ್ಮಠದ ಗುರುವಿನ ಅರಿತರ ಸಾಕು

ಎಲ್ಲವೂ ತಿಳಿತಾದಯಪ್ಪಾ ||3||

ಎಷ್ಟು ಓಡುತಿ ನೀ ಓಡಪ್ಪ |

ಓಡಿ ಓಡಿ ನೀ ದಣದೆಪ್ಪ ||ಪಲ್ಲ||

ಕಾಲ ಸಡಿಲ ಬಿಟ್ಟಿ |

ಊಟ ಬೈಸಾಕಿ ಹೊಡದಿ

ಕಾಲಾಗ ಶಕ್ತಿ ಬಲ ಬಂತು ಅಂದಿ

ಓಟಾದ ಕಣದಾಗ ನೀ ಬಂದು ನಿಂತಿ ||1||

ಚಿಗರಿ ಓಡಿದಾಂಗ ನೀ ಓಡಿದಿ |

ಚಿಗರಿಯಂಗ ನೀ ಚಂಗನ ಜಿಗದಿ

ಎಲ್ಲರಿಗು ಹಿಂದ ನಾ ಹಾಕೇನಂದಿ

ನನ್ನ ಮುಂದ ಇನ್ನಾರು ಇಲ್ಲಿ ಇಲ್ಲಂದಿ ||2||

ನೀ ಫಾಜ್ಯಾ ಮುಟ್ಟಬೇಕಂತ ಹ್ವಾದಿ |

ದೈವ ನಿನಗಿಂತ ಮೊದಲ ಅಲ್ಲಿರಾದು ಕಂಡಿ

ಅದಕ ನೋಡಿ ನೀ ಹೌಹಾರಿ ಹ್ವಾದಿ

ಕಲ್ಮಠದ ಗುರು ಅದಕ ಕಳಸ್ಯಾನ ಮುದದಿ ||3||

ಮಾಡಿದ್ದು ಉಂಡನು ಮಾರಾಯ |

ಬಿತ್ತಿದ್ದು ಬೆಳೆದನು ಶಿವರಾಯ ||ಪಲ್ಲ||

ರೊಟ್ಟಿ ಮಾಡಿ ನಾವು |

ಹೊಳೀಗಿ ಬೇಡಿದರ

ಸಿಕ್ಕಿತೇನೋ ಮಾರಾಯ ||1||

ನೀರ ಕುಡಿದು ನಾವು |

ತುಪ್ಪದ ರುಚಿ ಬೇಡಿದರ

ದಕ್ಕಿತೇನೋ ಮಾರಾಯ ||2||

ಜ್ವಾಳಾ ಬಿತ್ತಿ ನಾವು |

ಗೋಧಿ ಬೆಳಿ ಅಂದರ

ಬೆಳಿದೀತೇನೋ ಶಿವರಾಯ ||3||

ಬೇವು ಬಿತ್ತಿ ನಾವು |

ಮಾವು ಬೆಳಿ ಅಂದರ

ಸಾಧ್ಯವೇನೋ ಶಿವರಾಯ ||4||

ಕಲ್ಮಠದ ಗುರುವಿಗಿ ಗುರುವೆ ಅನಬೇಕು |

ನರನವನಂದರ ಹೇಗೋ

ಇದರ ನೆಲಿ ತಿಳಿ ನೀ ಬ್ಯಾಗೋ ||5||

ಬಿಡು ಜೀವದ ಆಶಿ |

ತೊಡು ನೀ ನಿರಾಶಿ ||ಪಲ್ಲ||

ಆಶಿಯ ತಾಯಿಗೆ |

ಅಸಂಖ್ಯಾತ ಮಕ್ಕಳು

ಕೇಕೆ ಹಾಕಿ ಕೂಗತಾವ

ಕೂಗುತ ಕುಣಿದು ಚೀರತಾವ ||1||

ಗದ್ದಲದ ಸಂತ್ಯಾಗ |

ನಿನಗೆಲ್ಲಿದು ಏಕಾಂತ

ಆಶಿಯ ಗದ್ದಲ ಭಾಳ

ತಿಳಿಬೇಕ ಅದರ ಆಳ ||2||

ಒಂದ ಮುಗಿತಂದರ |

ಮತ್ತೊಂದು ಅದರ ಹಿಂದ

ಒಂದರ ಹಿಂದೊಂದು

ಮತ್ತೊಂದು ಮಗುದೊಂದು ||3||

ಬಿಡು ತಮ್ಮಾ ಮನದ ಆಶೀ |

ಕಲ್ಮಠದ ಗುರುವಿನಲಿ ಹೊಂದು ಸಂತೋಷಿ

ಆಶಿ ಬಿಟ್ಟರ ಈಶ ನೀನು

ಆಶಿ ಹಿಡಕೊಂಡು ದಾಸ ನೀನು ||4||

ಗಾಳಿಯು ಬಿಟ್ಟಾಗ |

ದೀಪ ಹೊಯ್ದಾಡುತಾದ |ಪಲ್ಲ||

ಹಚ್ಚಿಟ್ಟ ದೀಪಕ ನಿನ ಕೈಯ ಕಾಪ್ಯಾಕ |

ಮುಚ್ಚಿದ ಬಾಗಿಲ ಮತ್ತ್ಯಾಕ ತೆರದ್ಯಾಕ

ಗಾಳಿಯು ಒಳನುಗ್ಗಿ ದೀಪ ಹೊಯ್ದಾಡಿತು ||1||

ಎಣ್ಣೆ ಇರುವ ತನಕ ದೀಪಂತ ನೀ ಕುಂತಿ |

ಎಣ್ಣಿಯು ತುಂಬಿ ತುಳಕಿದರೇನು

ಗಾಳಿಯು ಬಿಟ್ಟಾದ ದೀಪ ಹೊಯ್ದಾಡತಾದ ||2||

ದೀಪ ಹಚ್ಚಿದವನು ನಾನಲ್ಲ-ನೀನಲ್ಲ |

ಯಾರು ಹೊತ್ತಿಸಿದರೇನೊ ಆ ಶಿವನೇ ಬಲ್ಲ

ಕಲ್ಮಠದ ಗುರುವಿಗೆ ಕೇಳು ತಿಳದಿತ್ತೆಲ್ಲ

ಸುಮ್ಮನ ಕುಂತರ ದೀಪ ಇನ್ನಿಲ್ಲ ||3||

ಯಾರಿಗಿ ಯಾರು ಅಂತಿ |

ನೀ ಯಾರಿಗಾಗದೆ ಕುಂತಿ ||ಪಲ್ಲ||

ಉಪಕಾರ ಬೇಕಂತಿ |

ಅಪಕಾರ ಮಾಡುತಿ

ಯಾರೀಗಿ ಯಾರು ಅಂತೀ

ನೀ ಯಾರಿಗಾಗದೆ ಕುಂತಿ ||1||

ಸಹಕಾರ ಬೇಕಂತಿ |

ವಿಕಾರ ಮಾಡುತಿ

ಯಾರಿಗಿ ಯಾರು ಅಂತಿ

ನೀ ಯಾರಿಗಾಗದೆ ಕುಂತಿ ||2||

ಲಾಭವು ಬೇಕಂತಿ |

ಹಾನಿ ನೀ ಮಾಡುತಿ

ಕಲ್ಮಠದ ಗುರು ಯಾರು ಅಂತಿ

ನೀ ಯಾರಿಗಾಗದೆ ಕುಂತಿ ||3||

ಬೆಲ್ಲದ ವ್ಯಾಪಾರ ಎನಗಾಯ್ತು |

ಬಲ್ಲಿದರಿಗಿದು ಭಲೆ ತಿಳಿದ್ಹೋಯ್ತು ||ಪಲ್ಲ||

ಸೋಳಾ ಮಣದ ಶೆಟ್ಟಿ |

ಚೌದಾ ಮಣವ ನೀ ಕೊಟ್ಟಿ

ಬದಿಯ ಜನರಿಗದು ತಿಳಿಲಿಲ್ಲ ಗಟ್ಟಿ

ಮುದದಿ ಕೊಟ್ಟ ಸರಿ ತೂಕ ಶಿವಶೆಟ್ಟಿ ||1||

ಕಣ್ಣಲ್ಲಿ ಬೆಳಕು ಕಂಡಿತ್ತು |

ಕುಣಿಯುತ ಮನಸು ನುಡಿದಿತ್ತು

ಅಣಿಯಾಗು ಅಣಿಯಾಗು ಅಂದಿತ್ತು

ಮಣಿಹಕ್ಕೆ ನನ್ನನ್ನು ಒಲಿಸಿತ್ತು ||2||

ಮೂರು ಗುಣಗಳ ಮುರಿದಾಯ್ತು |

ಆರು ಗುಣಗಳರಿ ಜರಿದಾಯ್ತು

ಹಿರಿದಾದ ಲಾಭವು ಎನಗಾಯ್ತು

ಕಲ್ಮಠದ ಗುರುವೀಗಿ ತಿಳಿದ್ಹೋಯ್ತು ||3||

ಶ್ರೀಗುರು ವರ ಸುಖ | ದಾಗರನಂಘ್ರೀಗ|

ಳೀಗೆ ಸಂತಸವನಖಿಳರಿಗೆ ||ಪಲ್ಲ||

ಹರನಡಿಗಳ ಬಂಧುರದೊಳಿಡಿಸಿ ಬಹು |

ದುರಿತ ದುರ್ಗಣಂಗಳ ಕೆಡಿಸಿ ||

ವರಮಂತ್ರಾಮೃತವೆರೆದು ಸತ್ಯಪಥ |

ಕಿರದಖಿಳರ ತಾ ತಿರುಗಿಸುವ ||1||

ಶರಣ ಸಂಗದೊಳಿರಿಸಿ ಶಮೆದಮೆಯ |

ನರುಪಿವಾದವಶ್ಯಗಳಳಿಸಿ ||

ಸಿರಿಸತಿಸುತರನು | ಮರಿಸಿ ಬೇಗದಲಿ |

ವಿರತಿಯೊಳಖಿಲರ ಬದುಕಿಸುವ ||2||

ಚಿತ್ತ ದೋಷ ಕಳಿ | ಸುತ್ತ ನಿಗಮದೊಲ |

ವಿತ್ತು ನಿಕೃತಿಯನು ಪರಿಹರಿಸಿ ||

ಉತ್ತುಂಗ ವಿಭವವೆತ್ತು ಮುದದಿ ಘನ

ವೃತ್ತಿಗಳಖಿಳರಿಗೊದಗಿಸುವ ||3||

ಮುಸುಗಿದ ಮರವೆಯ ನಶಿಸಿಯೇಕ ಮಾ |

ನಸವನು ಹೃದಯದಿ ಕರಿಗೊಳಿಸಿ ||

ವಸೆದಾತ್ಮಾರ್ಥವನು ಸುರಿ ಸಂಶಯವ|

ಪರಿಹರಿಸ್ಯಖಿಳರ ಪಾಲಿಸುವ ||4||

ಶಿವಜೀವೈಕ್ಯದ ವಿವರವ ತೋರಿಸಿ |

ಭವಮಾಲೆಯ ಬಿಡದಿಲ್ಲೆನಿಸಿ ||

ತವೆಶಂಕರನೆಂಬುವನಾಮವನಾಂ |

ತವನಿಯೊಳ ಖಳರ ಪೋಷಿಸುವ ||5||

ಶ್ರೀಗುರೂತ್ತಮ ಪಾಲಿಸೀಗೆನ್ನನು |

ಆಗಮಾಗೋಚರ ನಿರೋಗಿ ನೀನು ||ಪಲ್ಲ||

ಸಾಧಕ ಜನಾಂತರಸು | ಶೋಧಕ ವಿಶುದ್ಧಮತಿ |

ಭೋಧಕ ದುರೀಷಣ ನಿಷೇಧ ಕಸದಾ ||

ವ್ಯಾದಿಕಲುಷಪ್ರಕರ | ಬಾಧಕಮದಾಷ್ಟ ಕವಿ |

ರೋಧಕ ಮನೋಗತಿ ನಿರೋಧಕ ಭೂ ||1||

ಮಾನಾಷ್ಟಮೀರ್ದಮುನಿ | ಮಾನಸ ಮನೋಜ್ಞತರ |

ಮಾನಸ ಮರಾಳ ಬಹು ದೀನರಕ್ಷ ||

ಮಾನವಾಘ ಘನಪವಮಾನಪೂಜಿತಪದ ಸ |

ಮಾನರಹಿತಗಣಿತ ನವೀನಚರಿತ ||2||

ಕಾಮಕ್ರೋಧಾದಿರಿಪು | ಸ್ತೋಮವರ್ಜಿತ ಮುಕ್ತಿ |

ಧಾಮ ಭವಭೀಮ ನಿಸ್ಸೀಮ ಮಹಿಮ ||

ನೇಮಶಿಷ್ಯಾಂಬುನಿಧಿ | ಸೋಮದೇಶಿಕ ಸಾರ್ವ |

ಭೌಮಶಂಕರ ವಿಮಲ ನಾಮಾಂಕಿತ ||3||

ಪಾಹಿಮಾಂ ಪಾಹಿಮಾಂ ಪಾರ್ವತೀಶ

ರೋಹಿತಾಶ್ವಾಕ್ಷ ಭವರೋಗ ನಾಶ ||ಪಲ್ಲ||

ದುಷ್ಟ ಜನ ದರ್ಪಹರ ಶಿಷ್ಟ ಜನ ಪಾಲಕ ಸ

ದಿಷ್ಟ ಜನ ಸನ್ನುತ ವಿಶಿಷ್ಟ ಚರಿತ

ಅಷ್ಟದಿಗಧೀಶ ಸುರ ಶ್ರೇಷ್ಠಾದಿನತ ಪಾದ

ಸೃಷ್ಟಿ ನಾಯಕ ಮನೋಭೀಷ್ಟದಾತ ||1||

ದಂಡಧರಬಾಧಿತಮೃಕಂಡು ಸುತರಕ್ಷ ಪರಿ

ಪಾಂಡುರ ಶರೀರ ಬ್ರಹ್ಮಾಂಡ ಭರಿತ

ಪಂಡಿತ ಜನೌಘವರ ಪುಂಡರೀಕಾರ್ಕಭವ

ಖಂಡಿತ ಲಸದ್ಗುಣ ಸುಮಂಡಿತ ಸದಾ ||2||

ಸತ್ಯಮಯ ವಾಕ್ಯಶುಭ ಕೃತ್ಯ ಸಚ್ಛರಣ ಪದ

ಭೃತ್ಯ ನಿಗಮಾಗಮ ವಿನುತ್ಯ ಮಹಿಮ

ದೈತ್ಯಮದ ಮರ್ದನಾದಿತ್ಯ ಶತ ದೀಪ್ತಿಯುತ

ನಿತ್ಯ ಗುರು ಶಂಕರನೆಯತ್ಯಧಿಕ್ಯ ||3||

ಮಾಂಪಾಹಿ ಮಾಂಪಾಹಿ ಮುಪ್ಪುರ ಹರ |

ಪಂಪಾಪತಿ ಪ್ರಸುಖ ಸಂಪತ್ಕರ ||ಪಲ್ಲ||

ತಾಮರಸಲೋಚನ ಪಿತಾಮಹ ಸುಪೂಜ್ಯವಿತ |

ತಾಮಯವಿದೂರ ಸತತಾಮಲವೃತ ||

ತಾಮಸ ರಹಿತ ಜನನ ತಾ ಮರದೃಮವಿಲಸಿ |

ತಾಮದ ಗುಣಾಢ್ಯ ಸುತ್ರಾಮ ವಿನುತ ||1||

ಭಾವಜಾಂತಕಯತಿಸ | ಭಾವಲಯ ಮಂಡನಶು |

ಭಾವಹ ಮಹೇಶ ದುರ್ಭಾವ ಶೂನ್ಯ ||

ಪಾವನಚರಿತ್ರಸುರ | ಪಾವನ ತಪದ ಸತ್ಕೃ |

ಪಾವನಧಿ ವಿಶ್ವರೂಪಾವರ್ತಕ ||2||

ಸಾಮಜಾಸುರಹರರ | ಸಾಮರ ಪರಿಸ್ತುತ ಝ |

ಸಾಮಂದಯುತ ವೇದಸಾಮಲೋಲ ||

ಕಾಮಪಿತನತಪದಾ | ಕಾಮಶರಣ ಪ್ರಿಯನಿ |

ಕಾಮ ಶುಭಲೀಲ ಗುರುಶಂಕರೇಶ ||3||

ಹಿಮಗಿರೀಂದ್ರ ಸುತೆ | ಪಾಹಿಮಾಂ

ವಿಮಲತರ ಚರಿತೆ ದಯಾನ್ವಿತೆ ||ಪಲ್ಲ||

ಶಮಿಜನಾಳಿನುತೇ | ಮೃಗಪತೀ

ಗಮನೆರ ಮಾನಮಿತೆ ವಿರಾಜಿತೆ ||1||

ಉರಗ ಸಮವೇಣಿ | ತ್ರಿಭುವನೋ |

ದ್ಧರಣಿ ಶರ್ವಾಣಿಲ ಸದ್ ||2||

ಪರಮ ರುದ್ರಾಣಿ ಮಹಿಷ ಬಲ |

ಹರಿ ವಿಶಾಲ ನಯನಿ ವಿಚಕ್ಷಣಿ ||3||

ಪಂಕರುಹ ವದನಿ | ಗುರೂತ್ತಮ |

ಶಂಕರ ಸುರಮಣಿ ಸುಖಸದನಿ ||4||

ಶಾಂಕರೀ ಕರುಣಿ ನಿಖಿಲಮಹಿ |

ಮಾಂಕಿತೆ ಭವಾನಿ ಭಯ ಹರಿಣಿ ||5||

ಶ್ರೀ ಗೌರಿ ನೀ ಪಾಲಿಸೆನ್ನ ಭುವನೇಶ್ವರಿ |

ಯೋಗಿ ಹೃದಯವಸೆ ನಿಗ |

ಮಾಗಮನುತೆ ನಾ ಬಾಗಿ ನಮಿಪೆ ||ಪಲ್ಲ||

ಜನನ ಮರಣ ಜರೆಯನು ಗೆಲಿದ ಸುಧಾ |

ದಿನವಗಲದೆ ಸೇವಿಸದಜ ಹರಿಮುಖ ||

ರನು ಭಂಗಿಸಿದಾ | ಘನವಿಷ ಶಿವ ಸವಿ |

ದನು ನಿನ್ನಯ ಮಾಂಗಲ್ಯ ಬಲದಿ ||1||

ಉಸುರಲು ತನ್ನಗೆ | ಹೆಸರಿರದ ಭವನು |

ದೆಸೆಯಿಲ್ಲದೆ ವಾಸಿಸುತಿರಲಾತನ ||

ಹಸನ ಮುಖದಿಸಂತಸದಿಂ ಕೈವಿಡಿ |

ದೆಸವ ತ್ರಿಭುವನಕರಸನೆನಿಸಿದಿ ಶ್ರೀ ||2||

ನಿನಗರ್ಧಾಂಗವ | ಮನಸಿಜಹರನಿತ್ತನುಯೆಂದೊರವರು ||

ಬಿನುಗು ಕವಿಗಳೀಶನಿಗೆ ಮಂತ್ರಮಯ |

ದನುಪಮ ಮೂರ್ತಿಗಳ |

ನುಗೊಳಿಸುತ ಪೂಜ್ಯನ ಮಾಡಿದಿ ||3||

ಶರೀರದಿ ಬೂದೆಯ | ಧರಿಸಿ ಮನೆ ಮನೆಯ |

ತಿರುದುಣ್ಣುತ ಪರಿ ಕರದಿ ಸ್ಮಶಾನದಿ ||

ಮರುಳಗಳೊಳು ಸಂಚರಿಸಿದ ರುದ್ರನ |

ಪರಮ ಪಾವನ ಚರಿತನೆನಿಸಿದಿ ||4||

ಗುರುಶಂಕರನೊಳು | ಪರಿಕಿಸಲೇಂ ಶುಭ |

ಕರ ಮುಂಟೀತಗೇ ಸಿರಿ ಸಂಪದ ಘನ ||

ತರ ವಿದ್ಯಾ ಬಂಧುರ ಸಿದ್ಧಿಗಳನು |

ಸರಸದಿ ನೀನನುವರಿದಿತ್ತಿಯು 5

ಕರುಣಸೆನ್ನನು ಮುದದಿ | ಕಾತ್ಯಾಯನಿಯೆ ಸಂ |

ಸ್ಮರಿಸುವೆನ್ನನು ದಿನದಿ ||ಪಲ್ಲ||

ತ್ರಾಣಿಯೆ ಪನ್ನಗಾಭಸಮ ವೇಣಿಯೆ |

ಸಾರವರಾಭಯ ಪಾಣಿಯೆ | ಸುಂದರತರ ಶರ್ವಾಣಿಯೆ ||

ವಾಣಿಸೇವಿತೆ ಮೃಢಾಣಿಯೆ |

ಸದ್ಗುಣ ಶ್ರೇಣಿಯೆ ವರ ಕಲ್ಯಾಣಿಯೆ ವರದೆ ||1||

ಕಾಳಿಯೆ ಕ್ರೂರದಾನವರ ದಾಳಿಯೆ |

ಭಜಿಪಭಜಕರ ದಯಾಳಿಯೆ ಕರುಣವಾರಿಧಿ ಕರಾಳಿಯೆ ||

ಶೀಲೆ ಸುಗುಣ ಶುಭಲೀಲೆ ಸುಚರಿತವಿ |

ಶಾಲೆ ಲೋಕತ್ರಯ ಪಾಲಯೆ ಗಿರಿಜೆ ||2||

ಶಾಂಕರಿ ಶೋಭಿಪ ಶಾಂತೆ ಸುಖಂಕರಿ |

ಶರಣ ಜಣಕರ ಕಿಂಕರಿ ದುಷ್ಟ ಜನೌಘ ಭಯಂಕರಿ ||

ಶ್ರೀಂಕೀಲಕವಿ ದ್ಯಾಂಕಿತೆ ನಿರ್ಮಲೆ |

ಪಂಕಜಮುಖಿ ಗುರು ಶಂಕರ ಶಕ್ತಿ ||3||

ಪಾಲಿಪುದೈ ವರ ನೀಲಕಂಧರಯನ್ನ ಪಾಲಿಪುದೈ ||ಪಲ್ಲ||

ಕರಿ ಚರ್ಮಾಂಬರ ಪರತರ ಶ್ರೀಕರ |

ಸರಸಿಜ ಶರಹರ ಪರಮ ಸುಖ ನಿಕರ |1||

ವಾಸುಕಿ ಭೂಷಣ ವಾಸವ ಪೋಷಣ |

ಭಾಸುರತನು ಜಗದೀಶ ಭವನಾಶ ಮೃಢ || | |2||

ಸುರಮುನಿ ಸನ್ನುತ ಹರಿಯಜ ವಂದಿತ |

ಪುರಹರ ಶಂಕರ ಗುರುವರ ನಿರುತದಿ ||3||

ಈಶ ಪಾಲಿಸೆನ್ನ ಜಗದೀಶ ಪಾಲಿಸೆನ್ನ |

ಕ್ಲೇಶ ದೋಷ ನಾಶ ತ್ರೈಜಗದೀಶ ಪಾಲಿಸೆನ್ನ ||ಪಲ್ಲ||

ಚಂದಿರಧರಣ ಸುಂದರಚರಣ |

ಮಂದರಾದ್ರಿಮಂದಿರ ಜಗ ||1||

ವಾಸವವಿನುತ ಪೂಶರವಿಜಿತ |

ದಾಸ ಪರಿ ಪೋಷಣ ||2||

ಗಿರಿಜಾರಮಣ ಶರಣೋದ್ಧರಣ |

ವರಗುರು ಶಂಕರ ಜಗದೀಶ ||3||

ಪರಿಪಾಹಿಮಾಂ ಹಿಮಗಿರಿ ಜಾನನಾಬ್ಜಾರ್ಕ ||ಪಲ್ಲ||

ಮಂದರಾದ್ರಿ ಮಂದಿರ ಸಿತಿ ಕಂಧರ ಮುನಿ ವೃಂದನುತ |

ಸ್ಕಂದೇಭ ಮುಖಪಿತ ಇಂದುಧರ ಭವ ಬಂಧಹರ |

ಬೃಂದಾರಕ ಸಮುದಯೇಂದ್ರಾರ್ಚಿತಾಂಘ್ರಿಯುಗ ||1||

ಶೂಲಧೃತಕ ಪಾಲಕರ ವಿಶಾಲ ಮಹಿಮ |

ನೀಲಗಳ ಮೂಲೋಕ ಪಾವನ ಶೀಲಾನ್ವಿತ ವೃತ |

ಜಾಲಾನ್ವಿತ ಫಾಲಾಕ್ಷಿವಿಲಸಲ್ಲೀಲಾಗಣಿತ ಮೃಢ ||2||

ಮಾರದಹನ ಮೇರುಚಾಪ ಸಾರದಯಾ ಕಾರಮಹಾ |

ಘೋರಾಘ ಗಣ ಸಂಹಾರ ಶಿವ ವೃಷದೇರಭವ |

ಧೀರಾಶ್ರೀತ ಜನೋದ್ಧಾರ ಶಂಕರ ಗುರು ||3||

ಪಾಲಿಸೆನ್ನ ಶಶಿಭೂಷ ಶುಭಲೀಲ ಭಕುತ ಪರಿಪೋಷ

ಭಕುತ ಪರಿಪೋಷ ||ಪಲ್ಲ||

ನಿಟಿಲನೇತ್ರ ಸ್ಫಟಕಗಾತ್ರ ನಿಷ್ಕುಟಿಲ ಕುಜನ ಸಂಹಾರ |

ಧೂರ್ಜಟಿಲ ಸದ್ಗುಣವಿಹಾರ ಘಟಿತ ಮಹಿಮ ಫಣಿ |

ಕಟಿಬಂಧನ ಮೃಢ ||1||

ತ್ರಿಜಗನಾಥ ಸುಜನ ಪ್ರೀತ ಪುರ ವಿಜಿತ ಮೇರುಗಿರಿ ಚಾಪ |

ವಾರಿಜ ಶರಾರಿಭವಲೋಪ ಅಜಸುರನಮಿತ ನಿ |

ರಜಸು ರುಚಿರುಹರ | |2||

ಮರಣ ರಹಿತ ಕರುಣ ಭರಿತ ವಿಸ್ಫುರಣ ರೂಪ ಸುವಿಲಾಸ |

ಸಚ್ಚರಣ ನಿರುತ ಮೃದುಹಾಸ ಪರತರಗುರು |

ಶಂಕರ ಶಶಿಧರ ಶಿವ ||3||

ಈಶ ಮಹೇಶ ಉಮೇಷ ಪರಾತ್ಪರ |

ದೋಷವಿನಾಶ ಗಿರೀಶ ಜಯ ||

ಶೇಷವಿಭೂಷ ಭೂತೇಶ ತ್ರಿಣಯ |

ಮಂದಹಾಸ ಕೈಲಾಸ ನಿವಾಸ ಜಯ ||ಪಲ್ಲ||

ಕಾಲ ಸಂಹರವುಡುಮಾಲಮುಕುತಿ ನಿಜ |

ಮೂಲ ಮಹತ್ವ ವಿಶಾಲ ಜಯ ||

ಫಾಲನಯನಸುರ ಜಾಲಪೂಜಿತ ಪದ

ನೀಲಕಂಧರ ಶುಭ ಲೀಲ ಜಯ ||1||

ನಾರದ ಸನ್ನುತ ಮಾರದಹನ ಸಖ |

ವಾರಿಧಿ ದುರ್ಭವ ದೂರ ಜಯ |

ಗೌರವವಾದ ಶರೀರದಿಂ ಶೋಭಿಪ

ಸಾರಶಂಕರಗುರು ಧೀರ ಜಯ | |2||

ಚಂದದಿ ಸಲಹೆನ್ನ ಶಿವಾಧವ ಚಂದದಿ ಸಲಹೆನ್ನ |

ಚಂದದಿ ಸಲಹು ಬಾಲೇಂದುಶೇಖರ ಮುನಿ

ವೃಂದಪೂಜಿತ ಪದ ನಂದಿವಾಹನನೆ ನೀ ||ಪಲ್ಲ||

ವಸಿದು ರಾವಣನು ವಂದಿಸಲಿನ್ನೊರೊಂದು |

ಮಿಸುಪಕ್ಷಿಗಳ ನಿನ್ನ ಸಮಪಾದದಿ ಕಂಡು |

ಉಸುರಿಕ್ಕದೆ ಈಕ್ಷಿಸುತಂ ಇದು ಪೊಸತೆಂದಚ್ಚರಿಪಡುತಂ |

ವೆಸನದೊಳಿರುತಿರೆ ಸಸಿನದಿ ನೋಡುತ |

ಹಸನ ಮನದಿ ಗಹಗಹಿಸಿದ ದೇವನೆ ||1||

ಗಿರಿಜೆಯ ಉರು ಭಾಗ ನೆರೆ ನೋಡಲ್ಕಲ್ಲಿ |

ಶಿರಗಳೈವತ್ತುನಾಲ್ಕು ಮೆರವನೂರೆಂಟು ನಯನಾ |

ತುರದೊಳು ಷಣ್ಮುಖ ನೋಡಿ ಕಣ್ದೆರದಚ್ಚರದೊಳು ಕೂಡಿ |

ಇರುತಿರಲವನುರುತರ ಮುಗ್ಧತ್ವದ

ಪರಿಯರಿದು ನಗುವ ಪರಮೇಶ್ವರನೇ | ||2||

ಥಳಥಳಿಸುವ ಮಣಿಗಳ ಭಿತ್ತಿಯ ಮಂಜುಳ |

ಮಂಚದ ಮೇಲ್ಮಲಿಗಿ ಗಿರಿಜೆಯನು |

ಸೆಳೆದು ಬಿಡದೆ ರಮಿಸುತಿರಲ್ ನಿಚ್ಚಳ |

ಸುಖದಿಂ ಮೆರೆಯುತಿರಲ್ ತೊಳಪಾ ಭಿತ್ತಿಯ |

ನಿಲದೀಕ್ಷಿಸಿ ಸಲೆ ತಲೆ ಬಾಗಿಸಿ ನಗುತಿಹ ಶಂಕರನೆ | |3||

ಶರಣರ ಹೃದಯದ ಸರಸಿರುಹವೆ ಮಂದಿರ |

ಮೆನಿಸಿಹುದೈ ತವ ಪಾದ ವರಯೋಗಿಗಳಂತರ |

ಲಕ್ಷದಿ ಸುಖಕರಿಸಿ ತೋರುವದು ತವಪಾದ ||ಪಲ್ಲ||

ಖಳನು ಗಿರಿಯನೆತ್ತಲು ಭರಿದಿ ರಸಾ |

ತಲಕೊತ್ತಿಟ್ಟಿತು ತವಪಾದ ಜಲದೊಳು ಲಿಖಿಸಿದ |

ಮಲಚಕ್ರವು ಬಿಡದಳೆತು ಸುರನನು ತವ ||1||

ಹರಿಮೃಗ ರೂಪವ ಧರಿಸುತ್ತರಸಲು |

ದರಿಸಿಸದ್ಹೋಯಿತು ತವಪಾದ ಪರಿಭಾವಿಸೆ |

ಪಾತಾಳ ಸಪ್ತಕಿಳಿದುರೆ ರಂಜಿಸಿತೈ ತವಪಾದ ||2||

ಪದಪಿಲಿ ದನುಜನ ಎದೆಯ ಮೇಲೆ ಕುಣಿ |

ದುದು ಕಟ್ಟಳೆಯೊಳು ತವ ವಿಧವಿಧ ತಿರುಗುತ |

ವದವಿದ ಮುಪ್ಪುರ ಹೆದರದೆ ದಹಿಸಿತು ತವ ||3||

ಉರಿದ ಸರವಿಯಂತಿರಲಂಗಜನನು |

ಭರದೊಳು ತುಳಿದಿತು ತವ | ಧರೆಯಂಬ ರಥಾ |

ಗರವನಧೋಗತಿ | ಗಿರಿರತು ಗಡ ತವ ||4||

ಧರಣಿಯೊಳೊಪ್ಪುವ ಹರಕವಿವರರಿಂ ನೆರೆಬಣ್ಣಿ |

ಪುದೈ ತವ ಗಿರಿಜಾವರ ಪರತರ |

ನಿರುಪಮ ಶಿವ | ನಿರವಧಿ ನಿತ್ಯವು ತವ ||5||

ಉರಗದನುಜ ಕಿನ್ನರ ಮನು ಮುನಿಸುರ |

ನರರು ಭಜಿಸುವದು ತವ | ಸ್ಮರಿಪರಘ ಗಹನ |

ಗಿರಿಪವಿನುತ ಜನ | ಶರಧಿಸೀತಕರ ತವ ||6||

ಕನಕಾದ್ರಿ ನಿಲಯ ಜನನ ರಹಿತಧನ |

ದನ ಸಖನಿರವಯ ತವ | ವಿನಮಿತ ದಿವಿಜರ |

ಘನ ಮಕುಟದ | ಬೆಳಗಿನೊಳೊಡವಿಡಿದುದು ||7||

ಪ್ರಣವದ ನೆಲೆ ಮನುಗಣದ ನಿಧಿಲ |

ಸದ್ಗುಣ ಕುಲಜಲ ನಿಧಿ ತವ ಗಣತತಿಗಳ ಬೀಡಣಿ |

ಮಾದಿಗಳಣಿ | ತಣುವಿನ ತಾಣವು ತವ ||8||

ಕಾಮಿಸಿ ಪೂಜಿಸಿದಾ ಮಾನವರಿಗೆ |

ಕಾಮಧೇನು ವೈತವ ಪ್ರೇಮದಿ ಧ್ಯಾನಿಪ |

ನೇಮಕರಿಗೆ ಚಿಂತಾಮಣಿಯನಿಪುದು ತವ ||9||

ದುರಿತ ತಮದ ಭಾಸ್ಕರ ಭವ ರೋಗದ |

ಪರಮೌಷಧ ವೈತವ ಪರಮುಕ್ತಿಯ ಮಂದಿರ |

ಶುಭದಂ ಗಡಿಗುರು ಶಂಕರ ನಿನ್ನಯ ಪಾದ ||10||

ಗುರೂತ್ತಮ ಪಾಹಿಮಾಂ ಪದ

ಸರೋಜ ಸ್ಮರಿಪೆ ಭವರೋಗ ಭೇಷಜ ||ಪಲ್ಲ||

ಯಮಾದಿ ಪರಮಾಷ್ಟಮಾಂಗಯೋಗ |

ನಿಯಮಾನ್ವಿತ ಘನಮಹಿಮಾಕರ ಪೂಜಿತ |

ಶಮಾದಿ ಷಡ್ಗುಣ ಕ್ರಮಾವರ್ತನಿರುಪಮಾ |

ಶ್ರೀತಪಾಲ ನಮಾಮಿ ಸುಖಕರ ||1||

ಇಳಾಪಾವನೋಜ್ವಳಾಸ್ಯವಿಲಸತ್ಕಳಾಂಶಯುತ |

ನಿಚ್ಚಳಾಪ್ತ ಭಕ್ತಪ್ರೀಯ ಖಿಳಾರಿವರ |

ನಿರ್ಮಳಾಂತರಂಗಾತುಳಾನತ ಶರಣ |

ಕುಳಾಬ್ಧಿಚಂದಿರ ||2||

ನಿರಾಸಿಕಭಸಿತ ಧರಾಂಗ ದುಷ್ಕೃತ |

ಹರಾಖಿಲ ಸುಚರಿತ ರಾಜಯೋಗೀಂದ್ರ |

ವಿರಾಗಮತಿ ಪರತರಾನಂದ ಭಾಸ್ವರಾ

ಪ್ರತಿಮ ಶಂಕರಾರ್ಯಯತಿವರ ||3||

ಕರುಣಿಸೆನ್ನ ಗುರವರೇಣ್ಯನೆ ತವ ಸ್ಮರಣಿಗೈವೆ |

ಕರುಣಿಸೆನ್ನ ಗುರುವರೇಣ್ಯ ಕರುಣಸಾಗರೇಂದು |

ನಿನಗೆ ಕರವನೊಡ್ಡಿ ಬೇಡಿಕೊಂಬೆ ಕರಣ |

ವಿಜಯನೆನಿಸಿ ಸದಾ ||ಪಲ್ಲ||

ಮೂರು ಮಲಗಳಲ್ಲಿ ನೊಂದೆ |

ಮೂರು ತಾಪದೊಳಗೆ ಬೆಂದೆ |

ಮೂರು ಪದಗಳರ್ಥ ಮರೆದು |

ಮೂರು ಮಾಯಗಳೊಳು ಬೆಂದೆ ||1||

ನಾಲ್ಕು ಜಾತಿಯಲ್ಲಿ ಜನಿಸಿ |

ನಾಲ್ಕು ಸಾಧನವನು ತ್ಯಜಿಸಿ |

ನಾಲ್ಕು ಭಾವಗಳೊಳು ಬೆರೆದು |

ನಾಲ್ಕು ಮುಕ್ತಿ ಕಳೆದುಕೊಂಡೆ ||2||

ಪಂಚ ವಿಷಯದೊಳಗೆ ಮುಳಗಿ |

ಪಂಚ ಕ್ಲೇಶದಿಂದ ಕೊರಗಿ |

ಪಂಚಮಹಾ ಪಾತಕವ |

ಪ್ರಪಂಚದಲ್ಲಿ ಮಾಡಿ ಕೆಟ್ಟೆ ||3||

ಆರು ಶಮಾದಿಗಳನಳಿದು |

ಆರು ವರ್ಗದೊಳಗೆ ಸುಳಿದು |

ಆರು ಅಕ್ಷರಗಳ ಮರೆದು |

ಆರು ಭ್ರಮೆಗಳಿಂದ ತೊಳಲ್ದೆ ||4||

ಏಳವಸ್ಥಯೊಳಗೆ ಶಿಲ್ಕಿ |

ಯೇಳು ವೆಸನಗಳಿಗೆ ಬಳ್ಕಿ |

ಯೇಳು ಜ್ಞಾನ ಭೂಮಿಕೆ |

ಬಿಟ್ಟೇಳು ಜನ್ಮ ತಿರಿಗಿ ಬಂದೆ ||5||

ಅಷ್ಟ ಪುಷ್ಪಗಳನು ಬಿಟ್ಟು |

ಅಷ್ಟ ಮದಗಳನ್ನು ತೊಟ್ಟು |

ಅಷ್ಟ ಕಷ್ಟದಿಂದೆ ಕೂಡಿ |

ಅಷ್ಟ ನರಕ ಭಾಗಿಯಾದೆ ||6||

ದೋಷ ಕುಜ ಕುಠಾರ ಭಕ್ತ |

ಪೋಷ ಭಯ ವಿದೂರ ಸುಗುಣ |

ಭೂಷ ಜಗೋದ್ಧಾರ ಭಜಕ |

ತೋಷ ಶಂಕರಾರ್ಯ ನೀನೆ ||7||

ಪಾದಪೂಜೆಯ ಮಾಡುವೆ ಶ್ರೀಗುರು ನಿನ್ನ |

ಪಾದಪೂಜೆಯ ಮಾಡುವೆ ||

ಪಾದಪೂಜೆಯೆ ಸಾಧಕರ್ಗೆಯನಾದಿ |

ಮುಕ್ತಿಯ ಹಾದಿಯೆನುತಲಿ |

ವೇದವಾಕ್ಯವನೋದಿ ಮನದೊಳು |

ಭೇದವಳಿದಾಮೋದದಿಂದೆ ||ಪಲ್ಲ||

ಸಂದೇಹವನ್ನೂ ಬಿಟ್ಟು ನೀರೊಳಗೆ ನಾ ಮಿಂದು |

ಮಡಿಯನೇ ವುಟ್ಟು | ಒಂದೇ ಭಾವನೆಯನಿಟ್ಟು |

ನಿರ್ಮಲ ಜಲ ತಂದು ಮಜ್ಜನವ ಕೊಟ್ಟು |

ಚಂದನದ ಸದ್ಗಂಧ ಘನ ಮಕರಂದವಿಡಿದರ |

ವಿಂದ ಪತ್ರಿಗಳಿಂದು ಮೃದುವಹ ದ್ವಂದ್ವ ಚರಣ |

ಕ್ಕಂದದೊಳು ನಲುವಿಂದ ಧರಿಸುತ ||1||

ಕಾಪಟ್ಯ ಕಳಿಯುತಲಿ ಅಂಗದೊಳಿಹ |

ಚಾಪಲ್ಯಮಳಿಯುತಲಿ ಧೂಪಾಗ್ನಿ ಬೆರೆಸುತಲಿ |

ಸಮ್ಮುಖದೊಳು ದೀಪವನುರಿಸುತಲಿ |

ಶ್ರೀ ಪರಬ್ರಹ್ಮೋಪಮಾನ ಸ್ವರೂಪ ದುರಿತವಿ |

ಲೋಪಷಡೃಚಿಲೇಪ ನೈವೇದ್ಯೋಪಕರಿಸೆಂದೀ |

ಪರಿಯೊಳು ಸದಾ ಪದುಳದಿಂ ||2||

ಚರಿಪಮನವ ನಿಲ್ಲಿಸಿ ಸದುಕ್ತಿಯಿಂ |

ಸ್ಮರಿಸಿ ಭಕ್ತಿಯ ಸಲ್ಲಿಸಿ ನೆರೆ ಸದ್ಗತಿಗೆ ಭ್ರಮಿಸಿ

ಧ್ಯಾನಿಸಿ ಮತ್ತ ನಿರುತದೊಳಭಿ ನಮಿಸಿ

ಹರನಿಗಿಂ ಶ್ರೀಗುರು ವಧಿಕನೆಂದೊರವ ಶೃತಿಗನುಸರಿಸಿ

ಸಮ್ಮುದವೆರಸಿ ಬಿಡದಾಚರಿಸಿ ಮಹಿಮವ

ಸ್ಮರಿಸಿ ಗುರು ಶಂಕರನೆ ನಿನ್ನ ಪಾದ ಪೂಜೆಯ ಮಾಡುವೆ ||3||

ಬಾಲ ಶಶಿಧರ ವಿಶಾಲ ಮಹಿಮ ಮುನಿ |

ಜಾಲನುತನೆ ದೇವರ ದೇವ ||

ಶೂಲ ಪಾಣಿಫಣಿಮಾಲಭವರ ಹಿತ |

ಕಾಲಜಿತನೆ ದೇವರ ದೇವ ||ಪಲ್ಲ||

ಜನನಿ ಜನಕರೊಳು ಜನಿಸದೆ ರೂಪವ |

ಘನವೆತ್ತನೆ ದೇ ||

ಮನದ ಸಹಾಯವನಿನಿತಿರದೆಲ್ಲವ |

ನರಿತಿರುವನೆ ದೇ ||1||

ತಿರಿದುಣ್ಣತ ಬಂಧುರದಿ ಲೋಕಗಳ |

ಪರಿಪೂರೆವನೆ ದೇ ||

ಸರಸದಿ ನಿಗಮವನೊರದ ಸುಗತಿಯೊಳು |

ಮೆರದಿರುವನೆ ದೇ ||2||

ಮುನಿಗಳ ಮಾನಸವನಜಾಲಯದೊಳು |

ಬಿನದಿಸುವನೆ ದೇ ||

ಧನದನ ಗೆಳೆತನವನು ಗೈಯ್ಯುತ ನಿಧಿಯನು |

ಪೊರೆದನೆ ದೇ ||3||

ಬರೆದ ಚಕ್ರದೊಳಸುರನ ಮಸ್ತಕವ |

ತರಿದೊಗಿದನೆ ದೇ ||

ಸುರರ ಬಲುಹನಪಹರಿಸಿದ ವಿಷ |

ಕಂಧರದಿಟ್ಟನೆ ದೇ ||4||

ಸೇವಿಸದಾರನು ಸೇವೆಗೊಂಡುವರ |

ವೀವಮೃಢನೆ ದೇ ||

ಭಾವ ಜನಂಗವ ತೀವರ ದಹಿಸಿದು |

ಮಾವಡಿಯನೆ ದೇ ||5||

ದಕ್ಷನ ಯಾಗದೆ ದಕ್ಷದೊಳವನನು |

ಶಿಕ್ಷಿಸಿದನೆ ದೇ ||

ಲಕ್ಷಿತ ಬಾಲನ ಭಕ್ಷಿಸಲೋಸುಗ |

ಪೀಕ್ಷಿಸಿದನೆ ದೇ ||6||

ಮೋದದಿ ಯಿಪ್ಪತ್ತೈದು ಲೀಲೆಗಳ |

ಗೈದೆಸದನೆ ದೇ ||

ವೇದವಿದರಿಗುಂಟಾದ ಬಾಧೆಯನು

ಛೇದಿಸುವನೆ ದೇ ||7||

ಸುರಪ ಚತುರ್ಮುಖ ಹರಿಮುಖ್ಯ ಮಿತರಿ |

ಗೊರವಿತ್ತನೆ ದೇ ||

ಪರಿಭಾವಿಸಿ ಮುಂದರಿಯಲು ಗುರುಶಂಕರ

ನೋರ್ವನೆ ದೇ ||8||

ಶಿವ ಶಿವಯೆನುತಿರೆಲೋ ಹೇ ಮಾನವ |

ಶಿವ ಶಿವಯೆನುತಿರೆಲೋ ||

ಶಿವನೆಂದರೆ ನಿನ್ನ ಭವವಳಿಯುವದು |

ಮೇಣ್‍ವಿರಳ ಮೋಕ್ಷ ಸಂಭವಿಸುವದನುದಿನ || ||ಪಲ್ಲ||

ಹಿಂದಗಣಿತ ಭವದಿ ಮಾಡಿದ ಪಾಪ |

ಬೆಂದು ಪೋಪುದು ಭರದಿ |

ಚಂದದೊಳಮ್ಮೆ ನೀನಂದರೆ ಮುಕ್ತಾಂಗನೆ |

ಬಂದು ವರಿಸುತಾನಂದಿಸುವಳು ತಾ |

ಮಂದಿರವನು ಬಿಡುಬೇಡ |

ಗಿರಿ ಕಂದರದಲಿ ನಿಲಬೇಡ |

ಬಹು ಕಂದ ಮೂಲ ಸವಿಬೇಡ |

ಮಂದ ಬುದ್ಧಿಯಿಂದಂದಗೆಟ್ಟು |

ಭ್ರಮೆಯಿಂದ ದೇಹವನು ಕಂದಿಸಬೇಡ ||1||

ಸನಕದಧೀಚಿಯಗಸ್ತ್ಯ ಸೂತಶೌನಕ |

ರೆನಿಪರುಷಿಗಳು ನಿತ್ಯ ನೆನೆದಿದರಿಂ |

ಮುಕ್ತಿಯನು ಪಡಕೊಂಡರು ಮುನಿಸಾ

ನಂದಸೌಮಿನಿಸ್ವೇತ ಮುಖ್ಯರು |

ದಿನಕರಸುತನನ್ನೊದೆದರ್ ಮನಸಿನ |

ಬಲುಹವನುರೆ ಮುರಿದರ್ ಸಾಂಬನ |

ತಕ್ಷಣದೊಳೊಲಿಸಿದರ್ ಇನಿತೆಲ್ಲವನರಿದನು |

ಮನಮಿಲ್ಲದೆ ದಿನವಗಲದೆ ನೀನನುಪಮ ಭಕ್ತಿಲಿ | ||2||

ಪರಿಭವಾಂಬುಧಿಬೈತ್ರ ಜನ್ಮಾಂತರ |

ದುರಿತ ತಿಮಿರಮಿತ್ರ

ಮರವೆಯಂಬುವ ಮಹಾ ಗಿರಿಗೆ ವಜ್ರಾಯುಧ

ಪಿರಿದಾಶಯೆಂಬುವ ಹರಿಣಕೆ ಪೆರ್ಬುಲಿ

ಧರೆಯೊಳು ಶಿವಯೆಂಬೆರಡು ಅಕ್ಷರ

ಮುಚ್ಚರಿಸಲ್ಕೊರಡು ಅಂಕುರಿಪುದು

ಭಕ್ತಿಯ ಪರಡು ಉರಗಸರವಿ ವಿಷ

ಪರಮಾಮೃತವಹು ದರಿಸಖನಹಶಂಕರ ಗುರುಪಾಲಿಪ ||3||

ಶ್ರೀಮಹಾದೇವ | ಸುತ್ರಾಮನುತ ಚರಣ |

ಕಾಮ ಹರ ಕೈಲಾಸ | ಧಾಮ ನಿರ್ಮಣವು || ಪಲ್ಲ||

ನಿರುಪಮ ನಿರೀಹ ಹರ | ನಿರಘನಿರ್ಲೆಪ |

ನಿರಪಾಯ ನಿರವಯ ತ್ರಿಪುರಹರ ಪ್ರದೀಪ || 1|| \

ನಂದಿವಾಹನ ಭರ್ಗ | ಮಂದರ ನಿವಾಸ |

ಕಂದುಗಳ ವಿಭು ನಿಜಾ | ನಂದ ಮೃದುಹಾಸ ||2||

ವಾಗೀಶ ವಂದ್ಯ ನಿಗ | ಮಾಗಮವಿನುತ್ಯ |

ನಾಗಭೂಷಣ ಭವನಿರೋಗ ಶುಭ ಕೃತ್ಯ | |3||

ಪರಮ ಪರತರ ಶಾಂತ | ವರದ ಭವ ಭಂಗ |

ಕರುಣ ಸಾಗರ ಪೂಜ್ಯ | ಶರಣ ಜನ ಸಂಗ ||4||

ಶಿವ ಚಂದ್ರಧರ ಸದಾ | ಶಿವಭಕ್ತಲೋಲ |

ಭುವನೇಶ ಮೃಢಗೌರಿ | ಧವ ರುಂಡಮಾಲ ||5||

ಶೂಲಿ ಫಾಲಾಂಬಕ | ಕಪಾಲಿ ಸರ್ವಜ್ಞ |

ನೀಲಲೋಹಿತ ಮುಕ್ತಿ | ಮೂಲ ನಿರ್ವಿಘ್ನ ||6||

ವಿಶ್ವತೋ ಬಾಹುವರ | ವಿಶ್ವಾತ್ಮ ಸೋಮ |

ಶಾಶ್ವತ ಪಿನಾಕಿ ಜಗ | ದೀಶ್ವರ ನಿಕಾಮಾ ||7||

ಕಾಲಾರಿ ಕೂಟಸ್ಥ | ಹಾಲಾಹಲ ಧರ |

ಮೂಲೋಕಪಾಲ | ಸಲ್ಲಿಲ್ಲ ಸುಖ ವಿಕರ || 8||

ಧನದ ಸಖ ವೇದಾಂಗ | ಚಿನುಮಯ ಗಿರೀಶ |

ಅನಘ ಪಂಚಾಕ್ಷರ | ಸುಮುನಿನುತ ಮಹೇಶ ||9||

ವಾಮುದೇವಾ ಘೋರ | ಭೀಮ ಭಯ ದೂರ |

ಯೋಮ ಕೇಶಾ ಭವನಿ | ರಾಮಯ ಗಭೀರ ||10||

ಯತಿ ಹೃದಯ ನಿಲಯ ಪಶು | ಪತಿ ವಿಜಯ ರುದ್ರ |

ವಿತತ ಚಾರಿತ್ರ ಗಣ | ಪತಿ ಜನಕ ಭದ್ರ ||11||

ಗಿರಿಶ ಓಂಕಾರ | ತತ್ಪುರುಷ ಪ್ರಖ್ಯಾತ |

ಪರಮಾತ್ಮ ಪಂಚಮುಖ | ಪರಮಾರ್ಥ ಪ್ರೀತ ||12||

ತ್ರಿಣಯ ಸದ್ಯೋ ಜಾತ | ಗಣನಾಥ ಸಾಂಬ |

ಪ್ರಣುತ ಸನ್ಮಹಿಮ | ನಿರ್ಗುಣ ನಿರಾಲಂಬ ||13||

ದೇವದೇವಾಭಯನಿ | ರಾವರಣ ಧೀರ |

ಭಾವಪೂರಿತ ಭಕ್ತ | ಜೀವನೋದ್ಧಾರ ||14||

ಇಂತೆಸವ ಶಂಭುವಿನ | ನಂತನಾಮಗಳ

ಸಂತ ತೋದಯದೊಳುರೆ | ಪಠಿಸಲ್ಕೆ ವಿಮಳ ||15||

ವರಭೋಗ ಮೋಕ್ಷಪುಂ | ಕರುಣಿಸುವ ನೊಲಿದು

ಗುರುಶಂಕರೇಶ | ಸತ್ವರದಿ ಕೈವಿಡಿದು ||16||

ಶ್ರೀಮಹಾದೇವಿಯೆ ನಿ | ರಾಮಯೆಶಿವಾನಿ

ಸೋಮಧಾರಿಯೆ ಮುಕ್ತಿ | ಧಾಮೇ ಭವಾನಿ ||ಪಲ್ಲ||

ಓಂಕಾರಿಯೇ ದುರ್ಗಿ | ಶಾಂಕರಿಯೆ ಸುಮತೆ

ಶ್ರೀಂಕೀಲಕಾದಿ | ವಿದ್ಯಾಂಕಿತೆ ಸುಲಲಿತೆ ||1||

ಚಂಡೀಶ್ವರೀಯಮೃತೆ | ಚಂಡಕರಮೂರ್ತಿ

ಮಂಡಲತ್ರಯನಿಳಯೆ | ಚಂಡಿಕೆ ಸುಕೀರ್ತಿ ||2||

ವೇದಾಗಮಾತೀತೆ | ನಾದಮಯೆ ಗೌರೀ

ಅದಿಮಧ್ಯಾಂತ | ರಹಿತೇ ದಯಾಕಾರಿ ||3||

ಶರ್ವಾಣಿಯೇ ವಿಮಲೆ | ಗೀರ್ವಾಣವಿನುತೆ |

ಸರ್ವಮಂಗಳೆ ಕಮಲೆ | ಸರ್ವಸಿದ್ಧಿಯುತೆ ||4||

ಪರಮ ವೈಭವೆ ನಿರಾ | ವರಣೆ ಕೌಮಾರೀ |

ಶರಣ ಹಿತೆ ಮಹನೀಯೆ | ವಿರಜೆ ರಮೆ ಗೌರಿ ||5||

ಮನುವಂದೆ ಕುಟಿಲೆವರ | ಮುನಿಪೂಜ್ಯೆ ಪದ್ಮೆ |

ಚಿನುಮಯೆ ವರದೆ | ಮನೋನ್ಮನಿಯೆ ಸುಖಸದ್ಮೆ ||6||

ಮಾಯೆ ಮಾತಂಗಿ | ಗುಹ ತಾಯೆ ಸನ್ಮುಖಿಯೇ |

ಗಾಯತ್ರಿಯೇ ವಿಲಸಿ | ತಾಯ ತಾಂಬಕಿಯೆ | |7||

ಸಾವಿತ್ರಿಯೇ ಮಂತ್ರ | ದೇವತೆ ಮೃಢಾಣೀ |

ಭಾವಪೂರಿತ ಚತುರೆ | ಪಾವನೆ ಸುವಾಣಿ ||8||

ಅದ್ರಿಜಯೆ ಭಕ್ತ | ಕಲ್ಪದೃಮೆ ಭಗವತೀ |

ಭದ್ರಕಾಳಿಯೆ ಅಭಯ | ಮುದ್ರೆ ಹೈಮವತೀ || 9||

ಧರಣಿ ಧರ್ಮಾನಿಗತೆ | ಕರುಣಸಾಗರಿಯೆ |

ಮರಣ ಭವರಹಿತೆ | ಸಚ್ಚರಿತೆ ವೈಷ್ಣವಿಯೇ || 10||

ಸತ್ಯೆ ಭೈರವಿಯೆ ಶುಭ | ಕೃತ್ಯೆ ಕಲ್ಲ್ಯಾಣಿ

ನಿತ್ತೆ ನಿರ್ಮಲೆ | ಲೋಕಸ್ತುತ್ಯೆ ಮೃದುಪಾಣಿ ||11||

ದಕ್ಷಸಂಜಾತೆ | ಸಲ್ಲಕ್ಷಣಿಯೆ ಮಾನ್ಯೇ |

ಮೋಕ್ಷದಾಯಕಿ ದುಷ್ಟ | ಶಿಕ್ಷೇ ಸುರರನ್ನೆ ||12||

ಮೇನಕಾತ್ಮಜಯೆವರ | ಮೀನಾಕ್ಷಿ ಶಕ್ತೀ |

ಗಾನ ಪ್ರಿಯೆ ಆರ್ಯೇಘ | ನಾನಂದ ಯುಕ್ತಿ ||13||

ನಾರಾಯಣೀ ಸಹಜೆ | ಶಾರದೆಯ ಪೂರ್ಣೆ |

ಧೀರೆ ಚಾಮುಂಡೀಗಂ | ಭಿರೆಜಯ ಪೂರ್ಣಿ ||14||

ಐಂಕಲಾ ಮಾಲಿನಿಯೆ | ಸಂಕಟವಿದೂರೆ

ಹ್ರೀಂಕಾರಿ ಮಾತೃಕೆ ನಿ | ರಂಕುಶೌದಾರೆ ||15||

ಉಮೆಮೃಗಪವಾಹಿನಿಯೆ | ಶಮೆಶುಕಾಲಾಪೆ |

ದಮೆರಕ್ತದಂತಿಕೆ | ಮಹಿಮೆ ವಿಶ್ವರೂಪೆ ||16||

ಪೀತಾಂಬರೀ ತ್ರೀಜಗ | ಮಾತೆ ಕಾಮಾಕ್ಷೆ |

ಪಾತಕ ವಿನಾಶೆ | ಪ್ರಖ್ಯಾತೆ ರಕ್ತಾಕ್ಷಿ ||17||

ಪರಮೇಶ್ವರೀ ಮಹೇ | ಶ್ವರಿಯೆ ಸದುಹೃದಯೆ |

ಪರತರಾಂಬಿಕಿಯೆ | ಭಾಸುರ ಸುಪ್ರಮದೆಯೆ ||18||

ಇಂತಮಳ ಶಾಂಭವಿಯ | ನಂತ ನಾಮಗಳ |

ಸಂತತೋದಯದೆ | ಪಠಿಸಲ್ಕವರ್ಗೆ ವಿಮಳ ||19||

ನೆರೆ ಭೋಗ ಮೋಕ್ಷಮಂ | ಕರುಣಿಸುವಳೊಲಿದು |

ಗುರುಶಂಕರನ ರಾಣಿ | ಸ್ಥಿರದಿ ಕೈವಿಡಿದು | |20||

ಸುರವರ ನುತ ಜಯ ಪರಮೇಶ |

ಪರತರ ಗಿರಿ ವರ ಪುರನಾಶ ||ಪಲ್ಲ||

ಮಾಪಕೃತ ರೋಪಗಿರಿ | ಚಾಪಭವ ಲೋಪಸುಪ್ರ |

ತಾಪಜಿತ ಪಾಪಸುಕ | ಲಾಪವಿ ಲೋಪಸದೋಪ ಚರಿತ ||1||

ಕಾಲ ಕಾಲ ವ್ಯಾಲ ಮಾಲ | ಸೀಲಘನ ಲೀಲ ಮುನಿ |

ಜಾಲ ಪರಿಪಾಲಕರ | ಶೂಲ ದಯಾಲ ವಿಶಾಲ ಮಹಿಮಸುರ ||2||

ಗೌರವ ಶರೀರ ಗುಣ | ಹಾರ ಶಂಕರಾರ್ಯ ಮೃಢ ಮಾರಹರ |

ಸಾರಸಾರಿ ಧಾರಗಭೀರ ಕು | ಮಾರ ಜನಕ ಸುರವರನುತ ||3||

ಪಾಲಿಸನುದಿನ ಎನ್ನ ಪಾಲಿಸನುದಿನ |

ಶೂಲಪಾಣಿ ನೀಲಕಂಠ | ವ್ಯಾಲ ನಿಕರ ಮಾಲ ಸಾಂಬ ||ಪಲ್ಲ||

ಮಂದರಗಿರಿ ಮಂದಿರ | ಗೋವಿಂದ ವಿಧಿ ಪುರಂದರಾದ್ಯ |

ಮಂದ ಸುರಸನಂದ ಸನಕ | ವೃಂದನುತ ಪದೇಂದು ಮೌಳಿ ||1||

ಚಿತ್ರತರ ಚರಿತ್ರ ಘನವ | ಪವಿತ್ರಮಯ ಪುರತ್ರಯಹರ |

ಗೋತ್ರ ವೈರಿ ಪುತ್ರ ವಿಮಲ | ಪತ್ರದ ಶುಭ ಗಾತ್ರತ್ರಿಣಯ ||2||

ಸಂಕಟ ಕುಕಲಂಕ ಹರ | ನಿರಂಕುಶ ವೃತ ಸಂಕಲಿತ ಸು |

ಖಂಕರ ಗುರು ಶಂಕರ | ಮಹಿಮಾಂಕ ಭವ ಭಯಂಕರ ಶಿವ | 3||

ಮೃಢನೆ ಎನ್ನವಗುಣಗಳೆಣಿಸುವದೇಕೈ |

ನಿನ್ನೊಡಲೊಳವಗುಣಗಳಡಸಿಲ್ಲವೆ ಸಾಕೈ ||ಪಲ್ಲ||

ಹರಿಸುತನಂಗವ ನರ ನಿಮಿಷದಿ ನೀ |

ನುರಿದು ಬೂದಿಯನು ಮಾಡಿದಿ |

ವಿರಸದಿಂದೆ ತ್ರೈಪುರ ದಹಿಸಿದಿ |

ವಾಗ್ವರನ ಶಿವನರಿದಿ ಗಿರಿಧರನ ನಯನ ಕೀಳ್ದಿ |1||

ಖತಿಯಿಂ ತೆಂಕಲಪತಿಯಂ ಕೊಲ್ಲಿದಿ |

ಶೃತಿಗಳ ಶುನಕನ ಮಾಡಿದಿ |

ವ್ರತದಿಂ ದಕ್ಷನುಕ್ರತುಗೈಯ್ಯಲ್ಕದ |

ನತಿಗೆಡಿಸಿದಿ ಭರದಿ ಮುನಿ ಸತಿಯರ ಲಜ್ಜಿಸಿದಿ ||2||

ತಿಳಿದೆಳಸಿದ ನಿನ್ನೊಳಗಿಹ ದುರ್ಗುಣಗಳು |

ಹೇಳಲ್ಕವು ತೀರವು ತಿಳಿಯದೆಸಗಿದೆ |

ನ್ನೊಳಗಿಗಿಹ ದೋಷಗಳಳಿಯೊ

ಶಂಕರೇಶ ನಿರ್ಮಳ ಸುಚರಿತಕೋಶ 3||

ಪಾಲಿಸೆನ್ನನು ಪದುಳದಿಂ ಶ್ರೀ ಪಾರ್ವತೀಶ |

ಭವ ಮೂಲ ಕಂಟಕವನ್ನಳಿದು ತವ |

ಬಾಲನೆಂದಿಹ ಪರದಿ ನೀನೆ ||ಪಲ್ಲ||

ನರನ ರೂಪವ ಧರಿಸಿನಾ ನೀ ಧರೆಗೆ ಬಂದೆ |

ಪುಶಿ ಮರವೆಯೆಂಬುವ ರೋಗಪೀಡಿತನಾಗಿನೊಂದೆ |

ಈ ಬರಿಯ ಸಂಸ್ಕೃತಿಯಂಬ ವುರಿ ಮಧ್ಯದೊಳು ಬೆಂದೆ |

ಪರಿ ಪರಿಯ ವಿಷಯಂಗಳೆಂಬುವ ಗರಳ ಸರ್ಪಗಳೆನ್ನ ಕಚ್ಚ |

ಲ್ಕರಿವುಯಿಲ್ಲದೆ ತಮ್ಮ ಚರಣವ ಮರೆದು ಧರೆಯೊಳು ಮರುಳನಾದೆ || 1||

ನಾರಿಯರ ಸೌಂದರ್ಯ ರೂಪಗಳನ್ನು ನೋಡ್ದೆ |

ಮನ ಸೂರೆ ಮಾಡುತ ಕಣ್ಣನಿಂದಲಿಸನ್ನೆ ಮಾಡ್ದೆ |

ಗಿಳಿದೇರ ನಾಟಕೆ ಕರೆದು ರತಿಗೇಳಿಯೊಳು ಕೂಡ್ದೆ |

ಭೂರಿ ಭ್ರಾಂತಿಯು ಸೇರಿಶುೃತಿ ನುಡಿ ಮಿರಿ ಮದತಲಿ ಗೇರಿ ನೀತೆಯ |

ಮಾರಿ ತವನುತಿ ದೂರಿಜ್ಞಾನದ ದಾರಿಗಾಣದೆ ದೈನ್ಯದಿರುವೆ ||2||

ಕಾಡುತಿಹ ಕರ್ಮೇಂದ್ರಿಯಗಳಿಗೆ ಮನವಗೊಟ್ಟಿ |

ಈ ಖೋಡಿ ತನುವಿದು ನಾನೆಯಂದು ನಂಬಿ ಕೆಟ್ಟೆ |

ನಾ ಮಾಡಬಾರದ ಪಾಪಕೃತಿಗಳ ಮಾಡಿಬಿಟ್ಟೆ |

ಗಾಡಿಕೋರರ ಕೂಡಿ ಪರರನ್ನು ನೋಡಿ ನಿಂದೆಯನಾಡಿ ಕುಂದಿದೆ |

ನಾಡಿನೊಳು ಗುರು ಶಂಕರೇಶನ ಪಾಡಿ ಮುಕ್ತಿಯ ಬೇಡದಿರುವೆ | |3||

ಮಾಡಬಾರದ ಕೃತ್ಯ ಮಾಡಿ ಕೆಲಬರಿಗೆ |

ಬೇಡಿದ ವರವನಿತ್ತಿ ಜಗದೀಶ | ||ಪಲ್ಲ||

ಕೆರಗಾಲಿನಿಂದಂಗಕ್ಕಿರದೆ ವದಸಿಕೊಂಡಿ |

ಬಿರುಗಲ್ಗಳಿಡೆ ಪೆಟ್ಟು ತಾಳಿಕೊಂಡಿ |

ವರದನುವಿಂದೆ ಪೊಡಿಸಿಕೊಂಡಿ |

ಶರ್ತಾಗಿ ನೆರೆಬಾಗಿಲವನೆ ನೀ ಕಾದುಕೊಂಡಿ ||1||

ಚರನಾದಿ ನಟನಾದಿ ಪರಿಶಿಷ್ಯನಾದಿ ಮೇಣ್ |

ಸರಸದಿಂದಲಿ ಕುಂಟಿಣಿಗನಾದಿ ವರನಾದಿ |

ಸುತನಾದಿ ಪರಮಕೋಪದಿ ಬಹಿಷ್ಕರಿಸಲು |

ಕಡೆಗೆ ನೀ ಕುಲ ಭ್ರಷ್ಟನಾದಿ ||2||

ಇಂತಹ ಹೀನಮಾದಂತಹ ಕೃತ್ಯವ |

ನೆಂತು ಮಾಡಿದಿಯೊ ಮಾಡಿಸಿದರೆಂತು |

ಕಂತುಹರನೆ ಇದರಂತಸ್ತವರಿಯನೆ |

ನ್ನಂತವೆ ಪೊರೆ ಗುರುಶಂಕರ ದೇವ

ನಿನ್ನ ಮಹಿಮವ ನಾನಿನ್ನು ಪೇಳುವ ಶಕ್ತಿ |

ಎನ್ನೊಳಿಲ್ಲ ಭವ ನೀನೇ ಸಲಹು ||ಪಲ್ಲ||

ಕರಿದೊಗಲುಟ್ಟುನೀ ಪರಿಶುದ್ಧನೆನಿಸಿದಿ |

ಸ್ಮರನನು ಕೊಂದು ಸತ್ಕರುಣಿಯನಿಸಿದಿ |

ತರುಣಿಯನು ಕೂಡಿ ವಿರತನೆಂದೆನಿಸಿದಿ |

ತಿರಿದುಂಡು ಸಿರಿವಂತನೆನಿಸಿದಿ ದೇವ ||1||

ನಲಿದುಂಡು ಸ್ವಪಚನೋಳ್ಕುಲವಂತನೆನಿಸಿದೆ |

ಸಲೆರುಂಡ ಧರಿಸಿ ನಿರ್ಮಲನೆಂದೆನಿಸಿದಿ |

ಬಲು ಪೆಟ್ಟು ತಿಂದುರೆ ಕಲಿಯೆನೆಸಿದಿ ಮತ್ತ |

ಪಲಲವ ಬಯಸಿ ಪಾವನಾದಿ ದೇವ ||2||

ಚರನಾಗಿ ಮೂಲೋಕ ದೊರೆಯನಿಸಿದಿ ಬಿಟ್ಟಿ |

ಗೆರವಾಗಿ ಪೂಜ್ಯನೆನಿಸಿದಿ ಪ್ರೀತಿಯೊಳು |

ನೆರೆ ಭೂತ ಬಳಗದಿ ಪರಿ ಪರಿ ಕುಣಿದು |

ಸಚ್ಚರಿತನೆನಿಸಿದಿ ಶಂಕರ ಗುರುದೇವ ||3||

ಹೀನ ನಡತೆಗೆ ನೀನೊಲಿದ ಬಗೆ

ಯೇನು ನಾನರಿಯೇ ದೇವ ||ಪಲ್ಲ||

ಮಣಿಮಯಗಳಿರೆ ಮರೆದು ಭೀಕರ |

ಫಣಿಗಳನು ತಾಳ್ದಿ ದೇವ ||

ಗಣ ಸಮೋಹವ ಗಣಿಸದರ್ಥಿಲಿ |

ಕುಣಿದಿ ಭೂತಗಳೋಳ್ ದೇವ | |1||

ಜರದ ವಸನವ ಜರಿದು ಧರಿಸಿದಿ |

ಕರಿಯ ಚರ್ಮವನು ದೇವ ||

ಸುರ ಗಿರಿಯ ನೀಂ ತೊರೆದು |

ಮಸಣದಿ ವಿರಚಿಸಿದಿ ಮನೆಯ ದೇವ ||2||

ಘನ ಸುಗಂಧವ ಮುನಿದು ಬೊಳದಿಯು |

ಹೆಣದ ಬೂದಿಯನು ದೇವ ||

ಮುನಿಪ ಸುಧೆಯಿರೆ ಮನುಜ ಮಾಂಸಕೆ |

ಮನವ ನೀ ನಿತ್ತೀ ದೇವ ||3||

ವಾರಣಾದಿ ವಾಹನಗಳುಳಿ |

ದೇರಿದೆತ್ತನ್ನು ದೇವ ||

ಭೂರಿ ವಿಶ್ವಾಧಾರನೆನಿಸುತ

ದೂರಿ ತಿರಿದುಂಡಿ ದೇವ ||4||

ಬಿಡದ ಭೇದದ ನಡತಿಯನು |

ನೀ ನಡೆದು ತೋರಿಸಿದಿ ದೇವ ||

ಗಡಯೆನಗಿದನೆ ಕೊಡುತೆ ಪೊರೆ |

ಗುರುವಡಿಯ ಶಂಕರನೇ ದೇವ || 5||

ಕಾಲಹರನೆಯನ್ನ ಪಾಲಿಸದಿರುವದು |

ನಿನಗೆ ನಿನಗೆಯಿದು ನ್ಯಾಯವೆ |

ಕಾಲಕಾಲದಿ ಭವಜಾಲದಿ ಬಳುವೆ ||ಪಲ್ಲ||

ಮಾತೆಯ ಗರ್ಭದಿ ರೇತುರಕುತದಿಂ |

ನೂತನ ತನುವನು ನಾ ತಳೆಯುತ ಬಂದು |

ಭೂತಲದಲಿ ಬಹು ಪಾತಕದಲಿ ನೊಂದು |

ಭೂತದಯವು ತಪ್ಪಿ ಧಾತುಗುಂದಿದೆನೈ ||1||

ಗುರು ದೈವಾರ್ಥಕೆ ನೆರೆ ಸೋಲ್ದಿಳೆಯೊಳು |

ಪರದೋಷಣಿಗಳೋಳ್ಬೆರೆದಪವಾದಕೆ |

ಗುರಿಯಾಗುತ ಸತ್ಯವರಿಯದೆ ದುಃಖದಿ |

ಧರೆಯೊಳು ಪರಿಪರಿ ಕೊರಗಿ ಸೊರಗಿದೆನು ||2||

ವಿಷಯ ಸುಖವು ಮಹಾ ವಿಷವೆಂದರಿಯದೆ |

ವಿಷಮ ಸಂಸಾರದಿ ಮೃಷ ತನುವೆಂದು |

ಭಾವಿಸದೆ ಗುರೂತ್ತಮನ ಸಮಶಂಕರನ |

ಪೂಜಿಸದನುದಿನದುರ್ವೆಸನದಿ ಕೂಡಿದೆ ||3||

ಭವ ಬಾಧೆಯ ಬಿಡಿಸು ಭವ ಶಿವಶಂಭುವೆ

ಎನ್ನವಿವೇಕವಳಿದು ||ಪಲ್ಲ||

ಮರುತಗಳಂತಃಕರಣೇಂದ್ರಿಯಗಳು |

ಪರಿ ಪರಿ ವಿಷಯದ ಭ್ರಾಂತಿಗಳು |

ಮುರಿದೊತ್ತುತ ದಾಯಾದ್ಯರತೆರದಲಿ |

ಪಿರಿದೆನ್ನನು ಮರಮರ ಮರುಗುಸುವವು ||1||

ತನುವಿನ ಗುಣಗಣ ಮೆನಿಸುವಹ |

ಸುತೃಷಿನಿದ್ರೆ ನೋವುಗಳು ಎಡವಿಡದೆ |

ಶುನಕಂಗಳ ರೀತಿಯ ದೋರುವ ವೈ |

ಮನೆ ಪ್ರೀತಿಯು ಬಳ್ಳಿಯ ತೆರ ತೊಡರ್ದುದು ||2||

ಅರಿವರ್ಗವು ಬಂಧುರದಿಂ ಪಗೆಯಂ |

ತಿರಿದು ಕೊಲ್ಲತೈತರುತಿಹುದು |

ಸ್ಮರಕಾಲರು ಚೋರರ ತೆರ ಕ್ರೋಧದಿ |

ವರ ಮುಕ್ತಿಯ ಪಥಕಡ್ಡಾಗಿರುವರು ||3||

ನೆರೆ ತೆರೆ ಮೇಣ್ ಜರೆ ಮರಣಗಳೆನ್ನನು |

ಪಿರಿಯ ಪುಲಿಗಳಂತಡರುವವು

ಮರಹೆಂಬುವದೆನ್ನಯ ಜ್ಞಾನಾಕ್ಞಿಗೆ

ಭರದಿಂ ತಮದೊಲು ಮುಚ್ಚಿ ಮುಸುಗುವದು ||4||

ಮನವೆಂಬುವ ಕಪಿ ಮುನಿದಣಿಕಿಸುತಿಹು |

ದನುದಿನ ದಿನ್ನುಳಿದಿಹ ಬಾಧೆ

ಘನ ಮುಂಟವನೆಲ್ಲವನೇನೊರೆಯಲಿ

ಚಿನುಮಯ ಶ್ರೀಗುರು ಶಂಕರದೇವನೆ | ||5||

ಈಕ್ಷಿಸಬಾರದೇನು ಶಿವಾಧವ ಈಕ್ಷಿಸಬಾರದೇನು |

ಈಕ್ಷಿಸಬಾರದೇನಕ್ಷಯ ದಯದಿ |

ನಿನ್ನಕ್ಷಿ ಮೂರೆನ್ನನು ರಕ್ಷಿಸಲೀಗಳೆ ||ಪಲ್ಲ||

ಅಂಗಜನನು ಮುನ್ನ ನೀ ದಹಿಸಿರೆ |

ಪಿಂಗದೆ ಮಗುಳೆನ್ನ ಅಂಗದೊಳುದಯಿಸು |

ತಂಗನಾಮಣಿಯರಾಲಿಂಗನ ಶೌಖ್ಯದ |

ಸಂಗ ಕಿಚ್ಛಿಸುವಂತೆ ತುಂಗಶಕ್ತಿಯಿಂದೆಳೆದು |

ಮನ್ಮಂಗಲ ಗುಣಗಳ ಕಳೆದು |

ಭಂಗ ಕಡೆಗೊಳಿಪನಂಗನುರುಹಿ ಭಸಿ |

ತಂಗೊಳಿಸಿ ನೊಸಲದಿಂಗಳ ನೇತ್ರದಿ ||1||

ಬಿಡದಘದಿರುಳಿನಲಿ ದುರ್ನಡೆ ಘೂಕ |

ವೆಡೆವಿಡದೊದರುತಲಿ ತಡಿಯದೆನ್ನಯ ತಲೆ |

ಬಡಿದಪಜಯದಿಂ ದಡಿಗಡಿಗತಿ ಭಯ |

ಪಡಿಪುದು ಎದೆಯೆಂಬ ಜಡರುಹ ತಾಪುಗಿದಿಹುದು |

ಮತಿಯಡಗಿ ಶೂನ್ಯ ತೋರುವದು |

ಮೃಡ ಮಾರಾರಿಯೆ ಕಡು ಜವದಿರುಳನು |

ಕೆಡಿಸುತೀಗ ಬಲಭಾನು ನಯನದಿಂ ||2||

ಮರೆವಯಂಬುವ ತಮದಿ ಷಡ್ರಿಪುವೆಂಬ |

ದುರುಳ ಚೋರರು ಭರದಿ |

ಶರೀರದೊಳಿಹಯೆನ್ನ ಪರಮ ವಿವೇಕದ |

ವರ ರತನವನಪಹರಿಸಲೋಸುಗ |

ಸಂಚರಿಸುತ್ತತಿ ಶೋಧಿಪರು ಬಂಧುರದಿಂದೆ |

ತ್ನೈಸುವರು ಮರುಗುವೆನಿವರನ್ನಿರ |

ದೋಡಿಸಿ ಶಂಕರನೆ ಯಡದ |

ಹಿಮಕರ ದೃಗದಿಂ ನೀ ||3||

ಪಾಲಯಮಾಂ ಶಿವಶಂಕರಾಭವ |

ಪಾಲಯಮಾಂ ಸುಖ ||ಪಲ್ಲ||

ಪಾಲಯಮಾಂ ಸುಖಶಾಲ ಸುರಾರ್ಚಿತ

ಕಾಲ ವಿಜಿತ ಹರಿಮಾಲ ವಿರಾಜಿತ ||1||

ಅಂಬರಕೇಶ ದಿಗಂಬರ ನಾರದ |

ತುಂಬುರಸನ್ನುತ ಶಂಬರ ರಿಪುಹರ ||2||

ಮಂದರಗಿರಿ ನಿಜ ಮಂದಿರ ಭಾಸ್ವರ

ಚಂದಿರಧರ ಶರಭೇಂದ್ರ ಜಯಾನ್ವಿತ ||3||

ಶಂಭೋ ಸುಖಕರ ಲಂಬೋದರ ಪಿತ

ಅಂಬಾಪತಿ ಪೊರಿಯೈ ||ಪಲ್ಲ||

ಸುರವರ ನುತ ಪದ ಸರಸಿಜ ಸುರುಚಿರ

ಪರತರ ಶಂಕರ ಭೋ ||1

ಯತಿ ತತಿ ನುತ ಪಶುಪತಿ ಕ್ಷಿತಿರಥ ಸ್ಮರ

ಜಿತ ಮೃತಿಹತ ಮೃಢ ಭೋ ||2||

ಮನು ಮುನಿ ಸೇವಿತ ಘನ ಗುಣಗಣಯುತ

ಮಿನುಪ ಹರ ಶರಭ ಭೋ ||3||

ಶಂಭೋಮಾಂ ಪಾಹಿಮಾ ದಾಂಭೋಜ ಸ್ಮರಿಸುವೆ |

ದಂಭೋಳಿಧರ ನುತ ಸಂಭಾವ್ಯ ಸಮುದಿತ ||ಪಲ್ಲ||

ಕರುಣಾಬ್ಧಿ ಪರಶಿವ ಶರಣಾಳಿ ಪಾಲಕ |

ತರುಣೇಂದು ಚಿತದೃಗ ಶರಣೆಂಬೆ ಶಂಕರ ||1||

ಸಿದ್ಧಾಮರ ಮುನಿ ಮನೂದ್ಧಾರ ದುರಿತ |

ವಿರುದ್ಧಾವನಿರಥ ಸದುದ್ದಾಮ ಚರಿತನೆ ||2||

ಸ್ಯಾಮಾಂಗಸಖ ಕವಿ ಭೀಮಾಖ್ಯ ಸನ್ನುತ

ಸ್ವಾಮಿ ಶ್ರೀ ಶರಭ ಸುಪ್ರೇಮ ಸರ್ವೇಶನೆ ||3||

ವರದೇವ ನಿರಂಜನ ನಿರ್ವಯ ಶ್ರೀ |

ಕರ ಸನ್ನುತ ನಾಮ ಪರಾತ್ಪರನೆ |

ಸ್ಮರಿಪೇಂ ನಿಜಭಕ್ತಿಯೊಳಾಂ ಪೊರೆನೀಂ |

ಚಿರಕಾಲದಿ ಶ್ರೀಗುರು ಶಂಕರನೆ ||ಪಲ್ಲ||

ಭವದೊಳ್ಬಲು ಚಿಂತಿ ಪರಜ್ಞೆತೆಯಂ |

ಜವದೊಳ್ಕಳೆಯುತ್ತರು ಸಾಹಸದಿಂ |

ಶಿವಭಾವವ ಸುಸ್ಥಿರ ಮಾಗುವ ಪರಿ |

ತವೆ ಬೋಧಿಪ ಶ್ರೀಗುರು ||1||

ಸುರಧೇನಿರದಿಚ್ಛಿತ ಮಿತ್ತಪುದೈ |

ಸ್ಮರಿಸುತ್ತಲಿ ಭಕ್ತಿಲಿ ಬೇಡ್ದರಿಗೆ

ನರರಿಂಗೆ ಸುದರ್ಶನದಿಂ ಸುಖ |

ತ್ತಿರಿಸುತ್ತಿಹ ಶ್ರೀಗುರು ಶಂಕರನೆ | |2||

ಪರುಷ ಸ್ಪರಿಶಾಕ್ಷಣ ಲೋಹವು ತಾಂ |

ಸ್ವರಣಾಂಗ ಮದಾದೊಡೆನಸ್ಯವು ಈ |

ಧರಣೀ ಜನ ತಮ್ಮಯ ದರ್ಶನದಿಂ |

ಪರ ಮುಕ್ತರು ಶ್ರೀಗುರು ಶಂಕರನೆ ||3||

ಪಿತನಂ ಸುತಕಾಡಿದಡರ್ಥವ ತಾ

ಮಿತಿಯಿಂ ಕೊಡುತಾ ಸುತನಂ ಪೊರೆವಂ |

ಮಿತಿಯಿಲ್ಲದೆ ಯಾತ್ಮ ಸುಖಾರ್ಥವ

ನೀವುತೆ ರಕ್ಷಿಪಶ್ರೀ ||4||

ಶರಣಾಗತ ಪಾಲಕ ನಿರ್ವಯ ನಿ |

ರ್ಮರಣಾಮಲ ನಿಶ್ಚಲ ಶಾಂತಮನೋ |

ಹರ ನಿಷ್ಕಲ ಶಾಶ್ವತ ಪೂಜಿತ ಸ |

ತ್ಕರುಣಾ ಕರಶ್ರೀ ||5||

ಭುವನಾತ್ಮಕನಾವನು ಸಿದ್ಧಿಗೆ ಮಂ |

ತ್ರವ ನಾವನು ಸರ್ವಕೆ ಸಾಕ್ಷಿಕ ನಾ |

ದವನಾರವ ನೀನೆಯು ಸತ್ಯನು |

ದುರ್ಭವನಾಶಕ ಶ್ರೀ ||6||

ಕ್ಷಿತಿಯೋಳು ನಿಜ ಮಾತೆಯು ಪಾಲ್ಗೊಡಲಾ |

ಸುತಸಮ್ಮುದಗೊಂಬುವನೋರ್ವ ಖಿಳರ್ |

ಹಿತಗೊಳ್ವರು ನಿಮ್ಮಯ ಚಿತ್ಕರುಣಾ |

ಮೃತದಿಂ ಸಲೆಶ್ರೀ ||7||

ದಯದೊರದೆ ಜೀವಿಯ ಕೊಲ್ಲಲು ಪಾ |

ಪಿಯು ಯೆಂದೆನುತಿಪ್ಪರು ನೀನಿಳೆಯೋಳ್ |

ಕ್ಷಯಿಸುತ್ತಿರೆ ಜೀವದ ಭಾವವ ಚಿ |

ನ್ಮಯನೆಂಬರು ಶ್ರೀ ||8||

ಶೃತಿಯಂ ಪರಿಶೋಧಿಸಿ ನೋಡಲ್ಸ |

ನ್ಮತಿಯಿಂ ಘನನಿರ್ಗುಣ ನೀ ನಿರುತಾ |

ದ್ಭುತ ತೋರುವಿನೀ ಸಗುಣಾಂಶದಿ ಕೂ |

ಡುತೆ ಲೋಕಕೆ ಶ್ರೀ ||9||

ಭವರೋಗದ ಬಾಧೆಯ ಬಂಧನದಿಂ |

ಜವಗಟ್ಟೆಹ ಭಕ್ತರ ನೋಡುತೆ ನೀಂ |

ಶಿವ ಮಂತ್ರವ ಬೋಧಿಸಿ ಮೋಕ್ಷದ ಮಾ |

ರ್ಗವ ತೋರುವಶ್ರೀ ||10||

ಜಡ ಭಾವನೆಯನ್ನಳಿದರ್ಥಿಲಿ ತ |

ಮ್ಮಡಿದಾವರೆಗಳ್ಗೆರಗುತ್ತಿನಿ ಶಂ |

ಬಿಡದರ್ಚಿಪ ಭಕ್ತರ ಬಂಧನ ಮಂ |

ಕಡಿದೌಂಕಿಪಶ್ರೀ ||11||

ಘನ ಪಾಪ ತಮೌಘ ಪ್ರಬಾಕರ ಸ |

ನ್ಮುನಿ ಚೂತವಸಂತ ಶುಭಾಕರ ದು |

ರ್ಜನ ದೂರದಯಾರ್ಣವ ಚಂದಿರ ಪಾ |

ವನ ಮೂರುತಿಶ್ರೀ ||12||

ತವ ಬೋಧ ಸುಧಾಸಲೆ ಸ್ವೀಕರ ನುಂ |

ತವ ಪಾದ ಸುಪೂಜಕನಾಗಿರುವಂ |

ತವ ಸೇವಕ ಭೀಮನಿದನ್ನೊರೆದಂ |

ತವ ಸ್ತೋತ್ರವ ಶ್ರೀಗುರು ಶಂಕರನೆ ||13||

ಜಯ ನಿರ್ಗುಣ ಹೃನ್ಮಯನಿಸ್ಪೃಹನೆ |

ಜಯ ಮುಕ್ತಿಯ ಭಾಜನ ಪೂರಿತನೆ |

ಜಯ ಭೂತಲ ಪಾಲಕ ಸನ್ನುತನೆ |

ಜಯ ಮಂಗಲ ಶ್ರೀಗುರು ಶಂಕರನೆ ||14||

ಗಿಣಿಯೇ ಮುದ್ದು ಗಿಣಿಯೇ | ನೀ

ಕ್ಷಣವಗಲದೆ ವರ ತ್ರಿಣಯನ ಧ್ಯಾನಿಸು ||ಪಲ್ಲ||

ಪರಮೇಶ ತಪವನಾಂತಿರಲಾಗ ಶರ ವೆಚ್ಚ |

ಲುರಿದ ಮನ್ಮಥನನ್ನು ಜರಿದು ಬಿಟ್ಟು |

ಸರಸದಿ ಬಂದು ಭಾಸುರ ಗೌರಿಕಾಂತನ

ಸ್ಮರಿಸಿ ಸಂತೋಷದೊಳಿರು ನೀನು ನಿರುತದಿ ||1||

ಯತಿಯೋಗಿಗಳ ಮಹಾ ವೃತಗಳ ಕೆಡಿಸುವ |

ಮತಿಹೀನ ಮನಸಿಜನತಿ ಕ್ರಮಿಸಿ |

ನುತಿಪರಿಗನುದಿನ ಕ್ಷಿತಿಯೊಳಿಷ್ಟಾರ್ಥ |

ಗಳತಿಕರಿಸಿ ಯುವ ಸಿತಿಕಂಠನಡಿವಿಡಿ ||2||

ಗಂಡರನಗಲಿದ ಮಿಂಡೆಯರನು ಕೊಲ್ವ |

ಭಂಡ ಕಾಮನ ದೂರಿ ಭರದಿ ನೀನು |

ದಂಡಧರನ ಕುಟ್ಟಿ ದಿಂಡು ಗೆಡಹಿದಹಿ |

ರುಂಡಮಾಲನ ಕೂಡಿ ಕೊಂಡಿರು ಸೌಖ್ಯದಿ | |3||

ಅಂಗದೊಳುದಿಸಿಯನಂಗನೆಂದೆನಿಸಿದ |

ಮಂಗಳಾರ್ಯನ ಮಹಿಮಂಗಳನು |

ಸಿಂಗರದಿಂ ನುತಿ ಯಂಗಯ್ಯದೀಗಳೇ |

ಭಂಗ ರಹಿತ ಭಕ್ತ ಸಂಗ ಶಿವನ ಬೆರಿ ||4||

ಖಳರೋಳಗ್ಗಳನಾದ ನಳಿನ ಶರನ ಸಂಗ |

ಕೆಳಿಸಿ ನೀ ನಲಿಯಲು ಇಳೆಯೊಳಗೆ |

ಗಿಳಿಯೋದಿ ಕಡೆಗೆ ತಾ ಮಲವ ಭುಂಜಿಸಿತೆಂಬ |

ಕೊಲೆಗೆಡೆಯಾಗುವಿ ಗುರುಶಂಕರನ ಪೊಂದು ||5||

ನಿನ್ನ ಪ್ರಿಯ ವಸ್ತುಗಳನೊಲ್ಲೆನ ಭವ |

ಎನ್ನೊಳೊಂದುದಿಪುದದ ಕಾಶಿಸುವೇ ದೇವ ||ಪಲ್ಲ||

ಹರನೆ ನಿನ್ನಶನದಿಂ ಶರಿರ ಸುಡುವದು ನಿನ್ನ |

ಪರಮ ಭೂಷಣದಿಂದೆ ಶುಭಗಾಣದು

ವರ ನಿನ್ನ ವಸನದಿಂದರಿಯಲು ವಿಲಕ್ಷಣವು

ನೆರೆ ನಿನ್ನ ಗಂಧದಿಂ ಜನ ಮೆಚ್ಚರು ||1||

ಪುರಮರ್ದನನೆ ನಿನ್ನ ತುರಗದಿಂಗಮನೇಚ್ಛೆ |

ಪರಿಪೂರ್ತಿಸದು ನಿನ್ನ ನಿಲಯದಿಂದೆ |

ಪಿರಿದಮಂಗಳ ತೋರದಿರದು ನಿನ್ನಾಳ್ಗಳಿಂ |

ದುರುತರದ ಭಯಭೀತಿಗಳು ತೋರ್ಪವು ||2||

ನಿನ್ನಯ ಸಗುಣ ಸಿರಿಯನುನ್ನಿಸಲ್ಕದರಿಂದ |

ಲನ್ಯರಪಹಾಸ್ಯಕ್ಕೆ ಗುರಿಯಪ್ಪುದು |

ಇನ್ನಿವುಗಳೊಳದೊಂದ ನೆನ್ನಗೀಯದೆ

ಸದಾ ನಿನ್ನ ಭಕ್ತಿಯೆನಿತ್ತು ಪೊರೆ ಶಂಕರ ||3||

ಎನ್ನನು ಮರೆದುದು ನಿನ್ನ ನಿರ್ದಯಮಲ್ತೆ

ಮುನ್ನಿನ ಪಾಪಿಗಳನ್ನು ರಕ್ಷಿಸಿ ಶಂಭೋ ||ಪಲ್ಲ||

ಧರಣಿಯ ಜನರಿಂದೊರೆಯಲಸಾಧ್ಯಮಾ |

ದುರುತರ ಪಾಪಿಯಾಗಿರುವ ವಿರಳನಿಗೆ |

ಕರುಣಾ ಪಾಂಗದಿ ಭರದಿಂದೀಕ್ಷಿಸಿ |

ಹರಗಣಪದವೆಯ ಕರುಣಿಸಿದೊಲವಿಂ ||1||

ಬಿನುಗಿನಂತ್ಯಜೆಯೊಳು ತನಗುದಿಸಿದ ಸುತೆಯನು |

ಕೂಡುತ ಪಾಪಿಯನಿಸಿದ ಸುಕುಮಾರ |

ತನುಬಿಡಲವನನು ಮುನಿಯದೆ ಮೋಹದಿ |

ಮಿನಗುವ ನಿನ್ನ ಕಾಂಚನಪುರಕೊಯ್ದಿಯು ||2||

ಧರೆಯೊಳು ಮಾರನ ವಿರಹದಿ ಜಾರತ್ವ |

ವಿರಚರಿಸಿ ಶೂದ್ರನ ವರಿಸಿ ದ್ವಿಜತೆಗೆಟ್ಟು |

ಮರಳಿ ಚಾಂಡಲರೊಳಿರದುದಿಸಿದ ಪಾಪಿ |

ತರುಣಿ ಸೌಮಿನಿಗೊಲಿದುರೆ ಸುಖದಿರಿಸಿದಿ ||3||

ಭೂತಲದಲಿ ವಿಟ ಖ್ಯಾತನೆನಿಸಿ ಮಹಾ |

ಪಾತಕಿಯಾಗಿರ್ಪ ಸ್ವೇತನ ಪಿಡಿದತಿ |

ಘಾತಿಸಿತಿರಲು ಕಂಡಾತುರದೆ ಮನಕೊಂದು |

ಆತನ ಬಿಡಿಸಿ ಸಂಪ್ರೀತಿಲಿ ಸಲಹಿದಿ ||4||

ಅರಿಯಲು ಇವರಂತೆ ದುರಿತವನಾರ್ಜಿಸಿ |

ಮರದೊಮ್ಮೆ ನೆನಿಸಿದ ಪರಮ ಪಾತಕಿಯೆ ನಾ |

ಸ್ಮರಿಸುವೆ ನಿರುತ ಶಂಕರನೆ ಶರಣ ಮಮ

ಶರೀರವೆಂದೊರೆದುಕ್ತಿ ಸ್ಮರಣೆಗೆ ತರದೇ ನೀ || 5||

ವಿರಚಿಸಿದ ಪ್ರಶ್ನದುತ್ತರದ ವರ್ಣಗಳ ಮೂರರ |

ಮಧ್ಯದಕ್ಷರಗಳನ್ನೋದಲು |

ಧರೆಯೊಳಾವನ ನಾಮ ಬರುವದಾ ದೇವ ತಾ |

ಕರುಣದಿಂದೆಮ್ಮನುರೆ ಕಾಪಾಡಲಿ ||ಪಲ್ಲ||

ತರುಣಿಯರ ಕರ್ಣದಾಭರಣ ಮೇಣಂಧಕಗೆ |

ಕರೆವ ಪೆಸರೇನು ನೊಣಕೇನೆಂಬರು |

ಸರಸಿಜಾಹ್ವಯವೇನು ಹರನಾರಿಗಿರದೆ |

ಕಿಂಕರನಪ್ಪನಾ ದೇವನೆಮಗೆ ಸುಖ ಕೊಡಲಿ ||1||

ವೆಸನಕ್ಕೆ ನೀಚಂಗೆ ಪೆಸರಂಗಳೇನು |

ಸಂತಸದ ಪ್ರತಿನಾಮ ಮೇನೆಮನಿರುತಿಹ |

ದಿಶವಾವುದಂಘ್ರಿಗುಪಮಿಸುಪ ನಾಮಾವುದಾ |

ಅಸಮದೇವನು ಯಮ್ಮನೊಸೆದು ಪಾಲಿಸಲಿ ||2||

ಮದನ ಶರವಾವುದುರು ಸುದತಿ ಮುಡಿಗೇನೆಂಬರು |

ಉದಿತ ವಿಸ್ತಾರಕ್ಕೆ ಬಹು ಕಷ್ಟಕೆ ವದ |

ವಿದಾಹ್ವಯಗಳೇಂ ಸದಮಲ ನೃಪಾಖ್ಯಮೇಂ |

ಪದಪಿನಿಂದೆಮ್ಮನಾ ದೇವ ರಕ್ಷಿಸಲಿ ||3||

ಮಂಗಲ ಜಯಪುರ ಭಂಗ ಶರಣ ಸಂಗ |

ಉತ್ತುಂಗ ಕೃಪಾಂಗ ||ಪಲ್ಲ||

ಪಾಪ ಪರಿಲೋಪ ಭಸ್ಮ ಲೇಪಗಿರಿ ಚಾಪ |

ವಿಶ್ವ ವ್ಯಾಪಕ ಮುದೋಪಯುತ ತಾಪದೂರ |

ಮಾಪಕೃತ ರೊಪರಜನೀಪ ಸುಕ ಕಲಾಪ ಸದ |

ಯಾಪರ ಚಿದೃಪಲಸ ದೋಫ ಚರಿತ ||1||

ವ್ಯಾಲಗಣಮಾಲ ಶುಭು ಲೀಲಘನ ಸೀಲಸುರ |

ಶೈಲ ಸುವಿಶಾಲರುಚಿರಾಲಯ ಸದಾ |

ಬಾಲಶಶಿ ಮೌಳಿಕಕಪಾಲಧರ ಕಾಲಹರ |

ಶೂಲಧರ ನೀಲಗಳ ಫಾಲನಯನ ||2||

ಸಾರಸಶರಾರಿಭವ ದೂರಗುಣ ಹಾರವೃಷ |

ದೇರವರ ಗೌರವ ಶರೀರ ವಿಭವ |

ನಾರದಾದಿ ಚಾರುಮುನಿ ವಾರ ಹೃದಯಾರವಿಂದ

ಸಾರ ರವಿ ಧೀರ ಶಂಕರಾರ್ಯ ದೇಶಿಕ ||3||

ಅನುದಿನದಲಿ ಗುರು ಹರ ನಿನ್ನನು ನೆನಿ |

ಅನುಪಮ ಮೋಕ್ಷವು ನಿನಗಹುದಾಗಳೆ ||ಪಲ್ಲ||

ತನುವಿದೇನು ಎನ್ನನು ಪೊಂದಿಹುದೇಂ |

ಜನನ ಮರಣ ಸಂಕಟಮೇನರಿಯುವ |

ಅನುಭವಿಸುವ ಕೇಳುವ ಸೋಂಕುವ ಘಟ |

ದನುವೇ ನಾನಾರಸುಗಳಿವೆನೆಂದ ||1||

ಧರೆಯೊಳು ಹಿತದಿ ಜಾಗರಿದಿರ್ದೆನು ನಾ |

ನಿರುಳೊಳು ಪವಡಿಸಿ ಸ್ವಪ್ನದ |

ಚಿತ್ರಗಳರಿದವನುಳಿದು ಸಪ್ತಿಯ ಸುಖ ಸವಿದೆ |

ಚ್ಚರದೊಳು ನಿಜಮೆನುತೆಸಗಿದೆನೆಂದ ||2||

ಜನನಿಯ ಗರ್ಭದ ಮನೆಯೊಳು ಪೇಯದ |

ಘನ ಬಾಧೆಯನಾಂತುದಿಸಿದೆನಿಸುವಿರ್ಪ |

ದಿನಗಳೊಳ್ ಶಂಕರ ಗುರುವಿನೊಲಿಸಿ ಭವ |

ವನುಗೆಲಿವಡೆ ಧರ್ಮವೆ ನಿಜ ಗತಿಯೆಂದ ||3||

ಎಂದಿಗಾರ್ಜಿಸುವಿ ನಿರ್ಬಂಧವಾದ ನಿಜಮೋಕ್ಷವನ್ನು ||ಪಲ್ಲ||

ಮಲವಣುವಿರಲಲ್ಲಿ ನಿಲದೋಡುವಿ ಕೆಟ್ಟ |

ಹೊಲಸಿನ ದೇಹವನೊಲಿದಜ್ಞಾನದ ಬಲೆಗೆ ಬಿದ್ದಿ ||1||

ತನುವಿದು ಭೂತದಿಂ ಜನಿಸುತ ಜಡ ದೃಶ್ಯ

ಮೆನಿಸುತ ನಿದ್ರೆ ಕನಸಿನೊಳಿಲ್ಲದ ಘಟವನು ನಂಬಿದಿ ||2||

ಶರೀರವಂದಿದನಿತ್ತು ನೆರೆ ತಪವಾಂತು ಶಂಕರನೊಲಿ

ಸದೆ ಗಾತ್ರದುರು ಮೋಹದಿ ಮೈಮರೆದು ಬಿಟ್ಟೆ ||3||

ಲೋಕದೋಳು ವಿರತಿಯನುಳಿದು |

ನೀನೇಕೆ ವಿಷಯಕ್ಕೊಲಿದಿರುವಿ ಬಿಡು |

ಕಾಕ ಮನವೆ ಇದೇನು ನಡತಿಯು ಸಾಕು ಸಂತೈಸು ||ಪಲ್ಲ||

ಮೆರೆವ ಸವಿವಾಲಿರಲು ಪ್ರೀತಿಲಿ |

ಸುರೆಯ ಸೇವಿಸುವಂತೆ ಮಧುರಾ |

ನ್ನಿರಲು ಮಾಂಸವ ಭಕ್ಷಿಪಂತೌಷಧಿಯು ಸಿದ್ಧಿರಲು |

ಉರಿವ ವಿಷಗೊಂಡಂತೆ ವರಕತ್ತುರಿಯಿರಲು |

ಕೆಸರನು ಧರಿಸಿದಂತುರುತರಧ್ಯಾತ್ಮಾರ್ಥ |

ಮಿರೆಪುಶಿವಿಡಿದು ಬಾಳುವರೆ ||1||

ಸಾರಮಣಿಗಳನುಳಿದು ಗಾಜಿನ |

ಹಾರಕಂಠಕೆ ಹಾಕಿದಂತೆ ಸುಮೇರು |

ಗಿರಿಯನ್ನುಳಿದು ಕಿರಿಮೊರಡಿಯನು ಸೇರ್ದಂತೆ |

ಚಾರುನದಿಯಿರಲುಳಿದು ಬಚ್ಚಲ |

ನೀರಿನಲಿ ಮಿಂದಂತೆ ತತ್ವವಿ |

ಚಾರಮಿಲ್ಲದೆ ಜ್ಞಾನ ತೊರೆದಜ್ಞಾನಕೆಳಿಸುವರೆ ||2||

ತುರಗವನು ಬಿಟ್ಟಮಿತಮೋಹದಿ |

ಖರವ ಪಿಡಿದೇರ್ದಂಗೆ ಧರ್ಮದ |

ತುರುವನೊಲ್ಲದೆ ಬಿಟ್ಟು ಗಡ ಸೂಕರವನಾಳ್ದಂಗೆ |

ಮರುಳನೆಂಬರೆ ನೀನು ಗುರುಶಂ |

ಕರನ ಪೊಂದದೆ ಬಿಟ್ಟು ಲೌಕಿಕವೆರಸಿದೊಡೆ |

ಮರುಳರೊಳು ಮರುಳನೆನದೆ ಬಿಡರು ತಿಳಿಯೋ ||3||

ಹೊತ್ತುಗಳಿಯ ಬೇಡೆಲೊ ಮನುಜ ನೀ |

ಹೊತ್ತುಗಳಿಯ ಬೇಡೆಲೊ ಮನುಜ |

ಹೊತ್ತುಗಳಿಯ ಬೇಡೊತ್ತಿ ಪೇಳುವೆ ನಿನ್ನ

ಚಿತ್ತದಿಂದ ಬ್ರಹ್ಮನ ಗೊತ್ತು ಮಾಡದೆ ವ್ರಥಾ ||ಪಲ್ಲ||

ಧರೆಯನೆಲ್ಲ ಧೂಳಿಯಗೈಸೆ |

ಪರಮಾಣುಗಳಾಗುವವೈಸೆ |

ಅರಿಯಲಿನಿತು ದೇಹ |

ಧರಿಸಿದಿಯಗಣಿತ ಮರಳಿ ಜನ್ಮಿಸದಂಥ |

ಪರಿಯನು ಹುಡುಕದೆ ||1||

ಜರೆ ಬಡತನ ರುಜೆ ಭಯನಷ್ಟ |

ವಿರಸ ಶೋಕ ಯಾಚನೆ ಕಷ್ಟ |

ಮರಣ ವಿಷಯ ರತಿ |

ವಿರಹಗಳೆಲ್ಲವು ಪರಿದು ಪೋಗುತಿಹ

ತೆರವನು ತಿಳಿಯದೆ ||2||

ಹಲವು ದುಃಖಗಳ ಸಾಗರದಿ |

ಮುಳಿಗಿ ಮುಳಿಗಿ ಸಾಯುವಿ ಭರದಿ |

ಸಲೆ ಗುರು ಶಂಕರ |

ನೊಲಿಪ ಭಕ್ತಿಯಂ ಬೆಳಿಸಲು ನಿಜಸುಖ |

ನೆಲೆಯಂದರಿಯದೆ || ||3||

ಬಿತ್ತರಿಸುವೆ ನಿನಗಿನ್ನು ಪಿಂಡೋತತ್ತಿಯ ನಿಜ ಕಥೆಯನ್ನು

ಚಿತ್ತದೊಳೀದನರಿಯದೆ ಶಿವ ನಾನೆಂಬ

ಯುಕ್ತಿದೋರದು ಘನ ಮುಕ್ತಿ ದೊರೆಯದೆಲೊ ||ಪಲ್ಲ||

ಶರೀರ ತೊರೆದು ಜೀವಾತ್ಮ ತಾನು |

ಪರದೊಳು ಗಮಿಸುತ ಸೂಕ್ಷ್ಮ|

ಶರೀರವಿಡಿದು ಈ ಧರೆಯೊಳು ಕೃತಪುಣ್ಯ |

ದುರಿತದಿ ಸುಖ ದುಃಖವೆರಡನುಭವಿಸಿ |

ನೂಕಿಸಿಕೊಂಡು ಮರುತಾಗ್ನಿ ಮೇಘ ಗತಿವೆರಸಿ |

ವರ್ಷಿಸಿ ಸಶ್ಯಾಂಕುರುದೊಳು ಧಾನ್ಯಮೆಂದೆನಿಸಿ |

ಆ ಧಾನ್ಯವ ವರ ಪಿತ ಮಾತೆಯರಿರದುಣಲದು |

ರೇತು ರಕುತ ರೂಪದಿ ಬೆರೆವದು ಕೂಟದಿ ||1||

ದಿನವೊಂದಕೆನಿಪುದು ಕಲಲ ಎಂಟು |

ದಿನಕೆ ರಕುತ ಮತ್ತ ಪಲಲ ದಿನ ಚತುರ್ವಿಂಶತಿ |

ಗನುವಿನಿಂದೈಮೊಳೆ ಕೊನೆಗಾಣ್ದೊಂದು ತಿಂಗಳಿಗೆ |

ಶಿರಾಗ್ರವು ಜನಿಪುದೆರಡು ತಿಂಗಳಿಗೆ ಬಾಹು ದ್ವಯ |

ಮಿನುಪ ಮೂರು ತಿಂಗಳಿಗೆ ಪಾದಂಗಳು |

ಅನುವಾಗೆಸವವು ನಾಲ್ಕಕೆನ ವರಂ |

ಧ್ರನಿತರ ಮೇಲೈದಕೆ ಕುಕ್ಷೆಯು ತಿಳಿ ||2||

ಬೆರಳುಗಳಾರು ತಿಂಗಳಿಗೆ ಪೂರ್ಣ |

ಶರೀ ರವುಯೇಳು ತಿಂಗಳಿಗೆ |

ವರಚೈತನ್ಯವವೆರಸಿಯಂಟಕೆ ಪದ್ಮಾ |

ಸನದಿಂ ಕೂತುಕೊಳುವನು ವಿಣ್ಮೂತ್ರದಿ |

ಪರಿಪರಿ ಕಳವಳಿಸುವನು ಕಾಲನ ಮಹಾ |

ನರಕಮಿದೆಂದು ಯೋಜಿಪನು ಅನಿತರಲಿ |

ವರಸೂತಿಮರುತನಿರದಾರ್ಭಟಿಸಲು |

ಮರೆದೆಲ್ಲವನವತರಿಪನು ಭಗದಿಂ ||3||

ನೆಲದೊಳು ಬಂದು ಬೀಳುತಲಿ ಹೇಯ |

ಮಲಮೂತ್ರದೊಳು ಹೊರಳುತಲಿ |

ಮೊಲೆಯ ಕೀವೆನಿಪ ಪಾಲ್ಸಲೆ ಸವಿಯುತ ಬಾಲ್ಯ |

ಕಳೆದೆವ್ವನ ಕಾಲದೊಳೆ ಸ್ತ್ರೀಯಾದಿ ಮಹಾ |

ವಿಳಸಿತವಾದ ಭೋಗದೊಳು ಇದುನು ಮೀರಿ |

ಬಲಗತಪಾದ ಮುಪ್ಪಿನೊಳು ರೋಗಂಗಳಿಂ |

ಬಲುನೊಂದೈಮಲದೊಳ ಮುಳಿಗೇಳುತ |

ತೊಳಲುವಕ್ರಮದಿಂದಿಹಪರ ತಿರಗುತ ||4||

ಪರಿಪರಿ ಬಹು ವೇಷವನು |

ಓರ್ವ ಧರಿಸುತಲೆಂತು ನಟಿಪನು |

ಅರಿಯಲಿಂತಗಣಿತ ಶರೀರ ಧರಿಸಿ ಸೂಕ್ಷ್ಮ |

ಶರೀರವು ನಟಿಪುದು ದೃಢದಿ ಖಗವುತರು |

ತರುವ ನಾತ್ರೈಸಿದ ವಿಧದಿ ಈ ಲಿಂಗಾಂಗ |

ಗುರು ಶಂಕರನ ಸುದಯದಿ ತನ್ನಿರವ ತಾ |

ನರಿದಜಕಲ್ಪಾವಧಿಯ ಬಂಧವನು |

ಉರಿದು ಮೋಕ್ಷದಿಂ ಬ್ರಹ್ಮನಾಗುವನು ||5||

ಕೆಡುಬೇಡೊ ಮಾನವ ಕೆಡು ಬೇಡೆಲೋ |

ಒಡಲೊಳಗಿಹ ವರ ಮೃಢನನು ಮರೆದೀ

ಜಡ ಸಂಸಾರವ ಬಿಡದೆ ನಂಬಿ ||ಪಲ್ಲ||

ನಂದನ ಭಾರ್ಯಾ ಬಂಧುಗಳೆನ್ನವ |

ರೆಂದರೆ ನೀ ಮೃತಿ ಪೊಂದಲು ನಿನ್ನೊಡ |

ಹಿಂದೆ ಬಹರೆ ಧನ ತಂದೀವರೆ ಗಡ |

ಬಂದು ಯಮನ ಭಯದಿಂದುಳಿಪರೆ ||1||

ಇವರೆಲ್ಲರು ನಿನ್ನವರಾದರೆ ನೀ |

ನವನಿಯೊಳಿರುವನಕಿವರಿರುವರೆ ಪೇಳ್ |

ಭುವಿಯೊಳು ಬಳಿಕುದ್ಭವಿಸಲು ನಿನ್ನೊಡ |

ನವತರಿಪರೆ ಭವಭವದಿ ಬರಿದೆ ||2||

ತನುವಿದು ಕೋಲ್ಮಿಂಚಿನ ಪ್ರಭೆ ಸುತ ಹಿತ |

ವನಿತೆಯರರಿಮರ ದನ ಖಗ ವೃಂದವು

ನಿನಗಿದರಿಂದೆಳ್ಳನಿತು ಫಲಮೆ ಬಿಡು

ಘನ ಗುರು ಶಂಕರನನು ಪೊಂದೆಲೊ ||3||

ನಂಬಬೇಡೆಲೊ ಮೂಢ ಮಾನವನೆ |

ಕುಂಭಿನಿಯೊಳೀ ಮೃತ್ತಿಕೆ |

ಬೊಂಬೆಯಂತೆ ಮಿಸುಪಂಗವ |ಪಲ್ಲ||

ಭೂತ ಪಂಚಕದಿಂ ಭೂತಲದಲಿ ಪುಟ್ಟು |

ತೀತನು ತಾನೆಂದು ಪ್ರೀತಿಯಂತಾಳುತೆ |

ಖ್ಯಾತಿ ಪೊಂದಿ ಕಡೆಗಾತುರದಿಂ ಸತ್ತು |

ಬಾತು ಬೀಳಲ್ನಾಯನ್ನರಿಯಾತು ತಿನ್ನುತ್ತಿರ್ಪೀ |

ಪಾತಕದ ಜಡತನವನು ||1||

ನೂರು ಸಂವತ್ಸರ ಪೂರ ಬಾಳ್ವೆನೆಂದು ಹಾರೈಸಿ ತನ್ನನ್ನು |

ಸೇರಿರ್ಪರಾಶೆಯ |

ಪಾರು ಮಾಡದೆ ತಾ ಮೀರಿ ಮಧ್ಯದೊಳು |

ಬೇರೆಯಾಗುತ ಭೂಮಿಗೆ |

ಸೋರಿ ನಿಮಿಷಾರ್ಧದೊಳುರೆ |

ತೋರಿಯಳಿಯುವ ಕಾಯುವ ||2||

ಸತ್ತು ಹುಟ್ಟಿ ತಾನೆ ಸತ್ಯಮೆನ್ನುತ |

ಗುರೋತ್ತಮ ಶಂಕರನರ್ಥಿಯಿಂ ಧ್ಯಾನಿಸಿ |

ನಿತ್ಯನಾಗದಿಲ್ಲಿ ವಿತ್ತಾದಿ ಭೋಗಕ್ಕೆ |

ಚಿತ್ತವಿಟ್ಟಿಹ ಮತ್ತರ ಒತ್ತರದೊಳಿಹಪರ ಕೇಳಿ |

ಸುತ್ತ ನಸಿಸುವ ಗಾತ್ರವ ||3||

ನಂಬಿ ಕೆಡಲಿ ಬೇಡಮ್ಮ ತಂಗಿ ನಂಬಿ ಕೆಡಬೇಡಮ್ಮಾ |

ನಂಬಿ ಕೆಡಲಿ ಬೇಡೆಂಬುವೆ ಹೇಸಿಗೆ

ತುಂಬಿದ ತತ್ವದ ಬೊಂಬೆ ತನುವಿದನು ||ಪಲ್ಲ||

ಮಲ ಮೂತ್ರದ ಭಾಂಡ |

ರಕ್ತದ ಕುಳ ಕೀವಿನ ಕುಂಡ ಎಲುವಿನ ಪಂಜರ ||

ಪಲಲದ ಸೀಮೆಯು ಹೊಲಸಿನ |

ಬಚ್ಚಲ ಹುಳಗಳ ಹೊಂಡ ||1||

ಹಸಿದೊಗಲಿನ ಡೊಣಿಯ ನೆಣದಿಂ |

ಬಸಿದೊಸರುವ ಕುಣಿಯು ||

ಹಸಿವು ತೃಷೆಗಳಿಗಾಯಸ ಪಡುವದು ನರ |

ವಿಸರದಿ ಬಿಗಿ ಕಟ್ಟಿದ ಹಂದರವಿದು ||2||

ನೇತ್ರದೊಳಗೆ ಮಲವು ನೋಡಲು |

ಶ್ರೋತ್ರದೊಳಗೆ ಮಲವು ||

ಗಾತ್ರವು ಕರ್ಮದ ಪಾತ್ರವು ದುರಿತದ |

ಬೈತ್ರವು ಬಿಡದ ಪವಿತ್ರದ ನಿಲವು | ||3||

ರೇತು ರಕ್ತ ಬೆರದು ಈ ತನು |

ನೂತನಾಯ್ತು ಪಿರಿದು ||

ವಾತ ಪಿತ್ತ ಶ್ಲೇಷ್ಮಾತು ಕೊಂಡು ಬಹು |

ಸೂತಕಗಳಿಗಿದು ಭೂತಮೆನಿಸಿಹುದು ||4||

ಶರೀರದಾಶೆ ಮರೆದು ಗುರು ಶಂಕರನ |

ಪಾದವಿಡಿದು ಪರಿಪರಿಯಿಂ ನೀ ||

ಸ್ಮರಿಸಿ ಭವ ಮರಣ ಪರಿದು ಸುಖಿಸು |

ನಿಜ ಮುಕ್ತಿಯ ಪಡೆದು ||5||

ಸತಿ ಸುತರುಯೆನ್ನ ಸುಖಕತಿ ವೆಥಿಪರೆಂಬುವ |

ಮಮತೆ ನಿನ್ನೊಳಿಹುದವರೊಳಿಲ್ಲ ತಿಳಿಯೊ ||ಪಲ್ಲ||

ಮರಣ ನಿನಗೊದಗಲಾ ತರುಣಿ ನಿನ್ನನು ನೋಡಿ |

ಸರಸದಿಂ ಪೊರೆವ ಪತಿಪೋದನೀಗ ||

ಧರಣಿಯೊಳು ವಿಧವೆಯಾಗಿರಲೆಂತಕಟವೆಂದು |

ಮರ ಮರನೆ ಮರುಗುವಳು ತನ್ನ ಸುಖಕೆ ||1||

ಸುತನು ಬೇಗನೆ ನಿನ್ನ ಮೃತಕ ದೇಹವ ಕಂಡು

ಪಿತನೆ ನೀನೊಂದಾದರುಸುರದೀಗ ||

ಗತಿಸಿದರೆ ಮುಂದೆನಗೆ ಗತಿ ಯಾರೆನುತ |

ತಾ ಮಿತಿ ಮೀರಿ ದುಃಖಿಸುವ ತನ್ನ ಸುಖಕೆ ||2||

ವನಿತಾತ್ಮಜರ ಸುಖಕ್ಕೆನಿತು ನೀ ಬಳಲಿದರು |

ನಿನಗ ಸನಿರಯ ಬಾಧೆಗಳಲುತಿಹರೇ ||

ಅನಘ ಶ್ರೀಗುರು ಶಂಕರನ ಕೃಪೆಯ ಪಡೆದು

ನೀ ಘನ ಸುಖದಿ ಕೂಡ್ದು ಭವವೀಡ್ಯಾಡೆಲೊ ||3||

ಹೇಸಬಾರದೇನೊ ಎಲೊ ನೀ |

ಹೇಸಬಾರದೇನೋ ಹೇಸಬಾರದೇನ |

ಏಸು ಜನ್ಮರೆ ಮೋಸದಿ ತಿರುಗುವಿ ಹೇಸಿ ಮಾನವನೆ ||ಪಲ್ಲ||

ಪಡಿಯದ ಪದಮಿಲ್ಲ ಜಿಹ್ವದಿ ನುಡಿಯದ ನುಡಿಯಿಲ್ಲ |

ನಡಿಯದ ನಡೆಯಿಲ್ಲ ಬೇಡ್ದಡೆ ಕೊಡದ ದಾನಮಿಲ್ಲ |

ಬಿಡದೆ ಪೊಡವಿಯೊಳು ನಡೆದು ನೋಡ್ದ ಶಿವ |

ಗುಡಿಗಳುಳಿಯಲಿಲ್ಲ ಸಲ್ಲ ||1||

ಕೂಡದ ಕುಲಮಿಲ್ಲ ಕಣ್ಣಿಲಿ ನೋಡದ ಕ್ಷೇತ್ರಿಲ್ಲ |

ಆಡದಾಟಮಿಲ್ಲ ಕಾಯದಿ ಮಾಡದ ಪಾಪಿಲ್ಲ |

ನಾಡೊಳು ಧನವನು ಕೂಡಿಸಿ ಕದನವ |

ಮಾಡುವದುಳಿಲಿಲ್ಲ ಸಲ್ಲ ||2||

ಬೆರಿಯದ ಮರವಿಲ್ಲ ಅನುಭವಿಸಿರದ ವಿಷಯವಿಲ್ಲ |

ಜರಿಯದ ಜನರಿಲ್ಲ ನೀ ಮರೆತಿರುವ ನೇಮಮಿಲ್ಲ |

ಧರಣೆಯೊಳನುದಿನ ಸರಸದೊಳೋದುವ |

ವಿದ್ಯಗಳುಳಿಲಿಲ್ಲ ಸಲ್ಲ ||3||

ಬಿಡದ ಕರ್ಮಮಿಲ್ಲ ಸಾಧಿಸಿ ಪಡೆಯದ ಪದವಿಲ್ಲ |

ಪಿಡಿಯದ ವ್ರತಮಿಲ್ಲ ಜನಿಸುತ ಮಡಿಯದ ನೆಲಮಿಲ್ಲ |

ಮೃಡನ ಮೂರ್ತಿಯನ್ನೊಡೆಯನೆಂದು ಬಾಯ್ಬಿಡುವದು

ಉಳಿಯಲಿಲ್ಲ ಸಲ್ಲ ||4||

ಬರದ ಯೋನಿಯಿಲ್ಲ ನಿನ್ನನು ಇರಿಸದ ಮಸಣಿಲ್ಲ |

ಅರಿಯದ ತಂತ್ರಿಲ್ಲ ಬಿಡದಾಚರಿಸದ ಮಂತ್ರಿಲ್ಲ |

ಗುರು ಶಂಕರನಡಿ ಸ್ಮರಿಸಿ ನಿನ್ನ ನಿಜವರಿದು |

ಸುಖಿಸಲಿಲ್ಲ ಸಲ್ಲ ||5||

ಸ್ಥಿರವಲ್ಲೊ ಸ್ಥಿರವಲ್ಲೊ |

ಈ ಸಿರಿ ಸತಿ ಸುತ ಸ್ನೇಹಿತರು ಭೂಮಿಯೊಳು ||ಪಲ್ಲ||

ಹಸಿಯಿರಲಿಳೆಯೊಳು ಸಸಿ ವೃದ್ಧಿಸುವ ತೆರ |

ಮಿಸುಪ ಸುಕೃತಮಿರೆ ಸಿರಿಯಿರ್ಪುದು |

ನಸಿಸಲು ಹಿಂದೆಯಾರ್ಜಿಸಿದ ಪುಣ್ಯಾಂಶವು |

ಪುಸಿಯಾಗುವದು ಕಂಡ ಸಿರಿಸಂಪದವು ||1||

ವರ ಜಾತ್ರೆಯೊಳು ಜನ ನೆರೆದೊಂದೆರಡು ದಿನ |

ಇರದೆ ಬೈಲಾಗಿ ಸಂಚರಿಸುವಂತೆ |

ತರುಣಿ ತನಯ ಸಹೋದರರೆಲ್ಲ |

ಕಾಲ ಬಂದರೆ ನಿನ್ನಗೊರಿಯದೆ ಭರದಿ ಪೋಪುರು ||2||

ಪರಿಮಳವಿಹ ಸರಸಿರುಹಕ್ಕೆ ಭ್ರಮರಗಳೆರಗುವ |

ಪರಿಯಂತೆ ನಿನ್ನವರು ಸಿರಿಯಿರೆ|

ನಿನ್ನುಪಚರಿಪರು ಅದು ತೀರಿದರೆ |

ವೈರಿಯಂತೆ ನೋಡುವರು ನಿನ್ನನು ||3||

ನಿನಗತಿ ಹಿತಮಾದ ತನುವೆ ನಿನ್ನನು ಬಿಟ್ಟು |

ಕನಸಿನ ಪರಿ ಮಾಯವಾಗುವದು |

ನಿನಗನ್ಯಮಾಗಿಹ ತನಯ ಮುಖ್ಯಾಪ್ತರು |

ನಿನಗೆಂತು ಸಂಬಂಧವಾಗುವರೆಲೊ ||4||

ಸುರಚಾಪದಂತೆಯಸ್ಥಿರಮಾದ ಸಿರಿಯಾದಿ |

ಪರಿಕರದೊಳು ಮೈಮರಿಯದೇ ನೀನು |

ವರ ಗುರು ಶಂಕರನಿರವನರಿದು ಪಾದ |

ಸ್ಮರಣಿಯೊಳಗೆ ಹೊತ್ತುಗಳೆದು ಸುಖೀಸು ||5||

ತನು ತಳಮಳಿಸುವದೂ ಎನ್ನ |

ಜಡ ತನು ತಳಮಳಿಸುವದು ||

ತನು ತಳಮಳಿಸುವದನುದಿನ ಪರಿಭವ |

ದನುಚಿತಾ ಕಾರ್ಯಗಳನು ವಿಚಾರಿಸಲು ||ಪಲ್ಲ||

ದುರಿತ ಗುಣದಿ ಗಿಡಮರ ಕ್ರಿಮಿ ಕೀಟಕ |

ನೊರೆಜು ಪತಂಗಾದಿಗಳಾಗಿ ||

ಪರಿಪರಿ ಖಗಮೃಗಪಶುರೂಪಾಗುತ |

ಬರುತಿಹ ಬಾಧೆಯ ಭಯವ ಕೇಳುತಲಿ ||1||

ಭೂತವೈದು ರೂಪಾತಿ ಶೈಸಿ ಮೇಣ್ |

ಧಾತು ಸಪ್ತಕವು ತಂದೆಯೊಳು ||

ಮಾತೆಯ ಸೂತಕ ರಕ್ತ ರೂಪದಿಂ |

ಈ ತನುವಾಗುವ ಸಂಗತಿಯರಿದು ||2||

ತರಳ ತರುಣ ಮುಪ್ಪಿನ ರೂಪಾಗುತ್ತಿರದೆ |

ನರಕಿಯಾಗಿ ಈ ಕ್ರಮದೋಳ್ ||

ಚರಿಸಲಾರೆ ಶ್ರೀಗುರು ಶಂಕರನೀ |

ಪೊರೆಯನ್ನನು ಬಿನ್ನೈಪೆ ಭೀತಿಯೊಳು ||3||

ಜ್ಞಾನಾಂಶರಹಿತ ನೀನೆಲೊ ಜೀವನೆ |

ಜ್ಞಾನಿಯೆಂದು ಕೊಂಡಾಡುವರೆ ||ಪಲ್ಲ||

ಚೇತನ ರೂಪನೆ ಖ್ಯಾತಮಾಗಿ ಪುಸಿ |

ಭೂತದ ದೇಹವ ನೀನೆನುವಿ |

ಪೂತಮಾಗಿಹ ನಿಜಾತುಮನಿರ್ದತಿ |

ಸೂತಕ ವಿಧಿಯನು ಪಿಡಿದಿರುವಿ ||1||

ತೋರುವವಸ್ಥಾ ಮೂರನು ತಿಳಿಯುತ |

ಬೇರೆ ಸಾಕ್ಷಿ ನೀನಾಗಿರುವಿ |

ಸಾರ ಹೀನ ಸಂಸಾರದ ಸಂಕಟ |

ಕಾರದೆ ದುಃಖದಿ ಕೂಡಿರುವಿ ||2||

ಚಿತ್ತೊಂದದುವೆ ಗುರೋತ್ತಮ ಶಂಕರ |

ಸತ್ಯನೆಂದು ಶೃತಿರುವದೈ |

ಮತ್ತ ಷಡು ಭ್ರಮಾ ಪತ್ತಿಗೆ ಶಿಲ್ಕಿಯ |

ಸತ್ಯದಿ ಕೂಡಿದ ಬಗಿಯೇನೈ ||3||

ಮನುಜ ನೀನಾರಿಗಿಚ್ಛೈಸ ಬೇಡ |

ಮನ ನಯನ ಕರಗಳಿಂ ಸೋಂಕದಿರು ಮೂಢ ||ಪಲ್ಲ||

ತರುಣಿಯ ಲಲೀ ಕಳೇಬರದ ಲಾವಣ್ಯಕ್ಕೆ |

ನೆರೆ ಭ್ರಮಿಸಿ ಮನವನಲ್ಲಿಗೆ ಕಳಿಸಲು |

ವರ ಪಯೋಧರ ಮಧ್ಯದಿರುಕಿನೊಳ್ಳಸಿಲ್ಕಿ |

ಹಿಂದಿರುಗದಲ್ಲಿಯೆ ನಾಶ ಪೊಂದುವದರಿಂದ ||1||

ಪರಮ ಜವ್ವನದ ಗಂಹರದ ಮಧ್ಯದೊಳು ಮದ |

ಕರಿ ಸಿಂಹ ದುಷ್ಟ ಮೃಗ ಸೇರಿರ್ಪವು |

ಮರುಳ ನಿನ್ನಯ ನಯನ ಹರಿಣಗಳು ಚರಿಸಲಾ |

ಕರಿ ಸಿಂಹಗಳು ಕೊಂದು ಬಿಡುವವದರಿಂದ ||2||

ಕರಕಮಲದಿಂದವಳ ಶರೀರ ಸೊಂಕಲ್ಕಲ್ಲಿ |

ಚರಿಪ ಸ್ಮರ ನಿನ್ನ ಕರಕಮಲ ತನ್ನ |

ಶರಕೆ ಸೇರಿಸಿ ಕೊಳುವನರಿದೀಮನಾಕ್ಷಿತನು |

ಗುರು ಶಂಕರನೊಳಿರಿಸೆ ಸುಖ ದೊರೆವದು |

ಮಾನಿನಿಯರಿಗೆ ಮೋಹಿಸಿ ಕೆಡಬೇಡೊ |

ಏನಿಹುದವರೊಳು ಮಾನವ ನೋಡೊ ||ಪಲ್ಲ||

ಬೇಡಿದುದನು ಕೊಟ್ಟು ಕೂಡಿದ ಪುರುಷನ |

ನೋಡದನ್ಯನ ಸನ್ನೆ ಮಾಡಿ ಕರಿವರೊ ||1||

ಕಲೆಯ ಸ್ಥಲಗಳನು ತಿಳಿದು ರಮಿಸುವಂಥ |

ಚಲುವನಿರಲ್ಕವನಲಿ ಮನವಿಡರು ||2||

ಒಬ್ಬನೊಳಿರ್ದು ಮತೊಬ್ಬನ ಧ್ಯಾನಿಸುತೊ |

ಒಬ್ಬನ ನುಡಿಸುತಲೊಬ್ಬನಿಚ್ಛಿಪರು ||3||

ಲಲನೆಯರಣು ಸುಖಕೊಲಿದರೆ ಗಿರಿಯಷ್ಟು |

ನೆಲೆಗೊಳುವದು ಪಾಪ ತಿಳಿತಿಳಿ ಮನದಿ ||4||

ಸುದತಿಯರಂಗ ಸಂಗದ ಸುಖಕೊಲಿಯದೆ

ಸದಮಲ ಶಂಕರ ಪದವನು ಸ್ಮರಿಸೋ ||5||

ಮಾನಿನಿಯರಿಗೆ ಮೋಹಿಸಿ ಕೆಡಬೇಡೊ |

ಏನಿಹುದವರೊಳು ಮಾನವ ನೋಡೊ ||ಪಲ್ಲ||

ಬೇಡಿದುದನು ಕೊಟ್ಟು ಕೂಡಿದ ಪುರುಷನ |

ನೋಡದನ್ಯನ ಸನ್ನೆ ಮಾಡಿ ಕರಿವರೊ ||1||

ಕಲೆಯ ಸ್ಥಲಗಳನು ತಿಳಿದು ರಮಿಸುವಂಥ |

ಚಲುವನಿರಲ್ಕವನಲಿ ಮನವಿಡರು ||2||

ಒಬ್ಬನೊಳಿರ್ದು ಮತೊಬ್ಬನ ಧ್ಯಾನಿಸುತೊ |

ಒಬ್ಬನ ನುಡಿಸುತಲೊಬ್ಬನಿಚ್ಛಿಪರು ||3||

ಲಲನೆಯರಣು ಸುಖಕೊಲಿದರೆ ಗಿರಿಯಷ್ಟು |

ನೆಲೆಗೊಳುವದು ಪಾಪ ತಿಳಿತಿಳಿ ಮನದಿ ||4||

ಸುದತಿಯರಂಗ ಸಂಗದ ಸುಖಕೊಲಿಯದೆ

ಸದಮಲ ಶಂಕರ ಪದವನು ಸ್ಮರಿಸೋ ||5||

ಎಚ್ಚರಿರು ಕಂಡ್ಯಾ ಮನುಜಾ ಎಚ್ಚರಿರು ಕಂಡ್ಯಾ |

ತುಚ್ಛ ವಿಷಯಗಳಚ್ಚರದಿ |

ನಿನಗಿಚ್ಛೆ ಪುಟ್ಟಿಸಿ ಮುಚ್ಚಿ ಕೆಡಿಪವು ಪಲ್ಲ||

ಹರಿಣ ಶಬ್ದಕೆ ನೆರೆ ಭ್ರಮಿಸಿವಾ |

ಗುರಿಗೆ ಬೀಳುತೆ ಮರಣಗೊಳುವದು ||

ತರುಣಿಯಳ ನುಡಿಗಿರದಪೇಕ್ಷಿಸಲ್ |

ನರಕದೊಳು ನಿನ್ನಿರಿಸುವನು ಯಮ ||1||

ಸ್ಮರಿಸಿ ವಿಷಯಕೆ ಚರಿಸಿ ಬೇಗನೆ |

ಕರಿಯು ಬಂಧಕೆ ಗುರಿಯದಪ್ಪುದು ||

ಧರೆಯೊಳಬಲೆಯ ಶರೀರ ಸೋಂಕಲು

ಭರದಿ ಯಮ ನಿನ್ನುರಿಸಿ ಬಿಡುವನು ||2||

ಶಲಭ ದೀಪದ ಲಲಿತ ರೂಪ |

ಕ್ಕೊಲೊದೆರಗಿ ತಾ ಜ್ವಲಿಸಿ ಪೋಪುದು ||

ಲಲನೆಯಳ ತನು ಚಲುವ ರೂಪ |

ಕೊಲಿದೊಡೆ ಯಮ ನಿನ್ನಳೆದು ದಂಡಿಪ ||3||

ರಸ ರುಚಿಗೆ ಮೋಹಿಸುತೆ ಮಶ್ಚವು |

ಮಿಸುಕದಾಗಳೆ ನಸಿಸುವದು ಗಡ ||

ವಸೆದು ನಾರಿಯ ಮಿಸುಪ ಸುಧೆ |

ಸೇವಿಸಲು ನಿನ್ನನು ನಸಿಸುವನು ಯಮ ||4||

ಕಮಲ ಗಂಧವ ನಮಿತ ಪ್ರೇಮದಿ |

ಭ್ರಮಿಸಿ ಬೇಗನೆ ಭ್ರಮರ ಕೆಡುವದು ||

ರಮಣಿಯಂಗನ ವಿಮಲ ಗಂಧವ |

ಭ್ರಮಿಸೆ ನಿನ್ನನು ಯಮನು ಶಿಕ್ಷಿಪ ||5||

ಪೊಡವಿಯೊಳಗೊಂದೊಂದು ವಿಷಯದಿ |

ಮಡಿದವೈದೀ ಪ್ರಾಣಿಗಳು ತಿಳಿ ||

ಜಡ ಮನುಜ ನಿನಗೈದು ವಿಷಯವು |

ತೊಡರಿರಲು ನೀನುಳಿವದೆಂತೈ ||6||

ಬರಿಯ ಸಂಸ್ಕ್ರತಿ ಸ್ಥಿರಮಿದೆಂದರಿ |

ದರಿದು ವಿಷಯದಿ ಬೆರಿಯದನುದಿನ ||

ಪರಮ ಗುರು ಶಂಕರನ ಮನದೊಳು |

ಸ್ಮರಿಸಲಾತನು ಪೊರೆವನನುದಿನ ||7||

ಕಾಮವನು ಕಳಿಬೇಕು ಬಲ್ಲ ಯೋಗಿ ಆ |

ಕಾಮವಿರಲವನೆ ದುರ್ಭವದ ರೋಗಿ ||ಪಲ್ಲ||

ಶೃತಿಯ ವಿಧಿಗಳನು ಸನ್ನುತ ಜಪತಪಂಗಳನು |

ಅತಿಶೈಸಿ ತನಗೊದಗುತಿಹ ಸಿದ್ಧಿಗಳನು ||

ಕ್ಷಿತಿಯ ಪೂಜ್ಯತೆಯನು ವಿರತಿ ಭಾವವನು |

ಮೇಲೆ ಹಿತಮಾದ ವ್ರತಗಳನು ಕೆಡಿಸುವದರಿಂದ ||1||

ಹರನ ಭಕ್ತಿಯನು ಪಿರಿಯರ ಪ್ರೀತಿಯನು |

ಅರಿತವರ ಸಂಗವನು ರಾಜ ಮನ್ನಣೆಯನು ||

ಶರೀರ ಬಲವನು ಯೋಗ ದುರು ಸಾಧನವನು |

ತನ್ನಿರವನಿದು ಪರಿಹರಿಸಿ ಬಿಡುವದರಿಂದ ||2||

ತನಗೆ ಮುಂದಹ ದೇವಮುನಿ ಪ್ರಮಥ ಪಟ್ಟವನು |

ಚಿನುಮಯಾತ್ಮ ಗುರುಶಂಕರನೊಳೈಕ್ಯವನು |

ಇನಿತೆಲ್ಲ ಸಂಪದದ ಘನತೆಯನು ಕೆಡಸಿರಿಸಿ |

ಬಿನುಗರೊಳು ಬಿನುಗನೆಂದೆನಿಸುವದರಿಂದ ||3||

ಯಾತಕೆನ್ನ ನಿಂತು ನೀನು ಭೂತಲದೊಳು ಕಷ್ಟ ಕೊಡುವಿ |

ರೀತಿಯಲ್ಲ ಸಾಕು ಕೈಯ್ಯ ಮುಗುವೆನಾಶೆಯ ||ಪಲ್ಲ||

ಅರರೆ ನಿನ್ನ ನಂಬಿಸಿಲ್ಪಿಯರಿದು ದೇಶ ದೇಶ ಸುತ್ತಿ |

ಧರೆಯಗಳಿ ವನಸ್ಪತಿಗಳನರೆದು ರಸವನು |

ವಿರಚಿಸುತ್ತ ಧಾತುಗಳನು ವುರಿಸಿ ಮಸಣವಾಸನಾಗಿ |

ಮುರುಕು ಕಾಸು ದೊರೆಯಲಿಲ್ಲ ಮೀರಿದಾಶೆಯೆ ||1||

ಅವನಿಪತಿಗಳಲ್ಲಿ ಪೋಗಿ ಕವಿತೆಯನ್ನು ಪೇಳಿ ಶಾಸ್ತ್ರ |

ಶ್ರವಣಗೊಳಿಸುತೊಲಿಸಿ ಸಹೋದರರ ವಂಚಿಸಿ

ಹವಣವರಿಯದನೃತ ಮಾತಿಗವಧಿಯಿಲಲ್ಲದನ್ಯರೊಡನೆ

ತವೆ ವಿರೋಧ ಬೆಳಿಸಿ ಪಾಪಿಯಾದೆನಾಶೆಯ ||2||

ಧನಿಕರಲ್ಲಿ ದುರ್ಗುಣಂಗಳೆನಿತುಯಿರ್ದೊಡವನು ಬಿಟ್ಟು |

ಮನಕೆ ಬಂದ ತೆರದಿ ಸುಗುಣಗಳನೆವರ್ಣಿಸಿ |

ಜನಕೆ ಬೆದರಿಮೈಯ್ಯ ಮುದುಡಿ ಘನತೆಗೆಟ್ಟು ಬಾಯಿ ತೆರೆದು |

ಬಿನುಗರಲ್ಲಿ ಬಿನುಗನಾಗಿ ಕುಳಿತೆನಾಶೆಯೆ || 3||

ಹೊಲದಗೆಲಸ ಕೆಳಿಸುತೆನ್ನ ಕಳೆಯಗೆಡಿಸಿ ಜನ್ಮ ಗ್ರಾಮ |

ನಿಳಯಗಳನು ಬಿಡಿಸಿ ಕೀರ್ತಿಯನ್ನು ಮಾಜಿಸಿ |

ಇಳೆಯ ಭೋಗ ಕೆಡಿಸಿ ಪರಕೆ ತೊಲಗದಂತೆಗೈದು ಬಂಧು

ಬಳಗಕೆಲ್ಲ ಬೇಸರೆನಿಸಿ ಬಿಟ್ಟಿಯಾಶೆಯೆ ||4||

ಇಷ್ಟು ಪರಿಯೊಳೆನ್ನನಿಲ್ಲಿ ಕಷ್ಟವ ಬಿಳವಿತ್ತಿಹದಿ |

ಕನಿಷ್ಟನೆಂದೆನಿಸಿದರಿರಲಿ ಮುಂದೆ ಕೃಪೆಯೊಳು |

ಸೃಷ್ಟಿಗೊಡಿಯ ಶಂಕರ ಗುರು ಶ್ರೇಷ್ಟ ನಡಿಯೊಳಿರಿಸಿದರಿರು|

ಇಷ್ಟಮಿಲ್ಲದಿರಲು ಬಿಟ್ಟು ನಡಿವದಾಶೆಯ ||5||

ನೋಡಿ ಕೇಳಿ ಮಗುಳಿಯಾಶೆ |

ಮಾಡಿ ಭೋಗಪೂಗದೊಳಗೆ |

ಕೂಡಿ ವರ್ತಿಸುವರು ಮಹಾ ಮೂಢರಲ್ಲವೇ ||ಪಲ್ಲ||

ಪೊಡವಿಯೊಳಗೆ ಪ್ರೀತಿಯಿಂದ |

ಪಡೆದ ತಂದೆ ತಾಯಿ ತನ್ನ |

ಬಿಡದ ಮಿತ್ರರಗಲದಿರ್ಪ ಮಡದಿ ಮಕ್ಕಳು |

ಸಡಗರದ ಸಹೋದರರೆಸವಡೆದ ಶೂರರ ಮಿತಜಾಣ |

ರೊಡೆಯರೆಲ್ಲ ತಮ್ಮ ಮುಂದೆ|

ಮಡಿದು ಪೋಗುತಿರ್ಪುದಂ ||1||

ರಾಮ ರಾವಣಾಂಬರೀಷ |

ಭೀಮ ಪಾರ್ಥ ಧರ್ಮಜಾಭಿ |

ರಾಮ ಕರ್ಣ ಕೌರವ ನಳ ನಹುಷ ವಾಲಿಯು |

ಕಾಮ ಪರಶುರಾಮ ಮುಖ್ಯ |

ನೇಮವಿಲ್ಲದಪರಮಿತೋದ್ದಮ |

ಸಾಹಸಿಗಳು ಬಿಡದೆ ಮರಣವಾದ ಕಥೆಯನುಂ ||2||

ದೀಪಕೆರಗಿ ಮರಣ ಪೊಂದಿ |

ದಾಪತಂಗಗಳನು ನೋಡ್ದು |

ತಾಪಗೊಳದೆ ಮತ್ತ ಪುಳಗಳೆರಗುವಂದದಿ |

ರಾಪು ಮಾಡದಖಿಳ ವಿಭುಧ |

ರೀ ಪರಿಯರಿದಿಳೆಯ ಸುಖಕೆ |

ತೂಪರಿಯದೆ ಬಯಪುವರಿರ್ದೇಂ ಫಲ ಗುರುಶಂಕರ ||3||

ಯಾಕ ಧನಲೋಭ ಬಿಡು ಸಾಕು ಮನುಜ |

ನೀ ಕೆಡುವಿಯಿದರಿಂದೆ ಲೋಕದಿ ನಿಜ ||ಪಲ್ಲ||

ಇದನು ಕೂಡಿಸುವ ಕಾಲದಿ ಕಷ್ಟ ಕೂಡಿಸಿಡ |

ಲಿದನಾರುಶೆಳೆದೊಯ್ವರೆಂದೊಡಲೊಳು |

ಉದಯಿಸುವಕಷ್ಟಮಿಂತೊದಗುವವಿದರಕಾಂಕ್ಷೆ |

ಮೊದಲಳಿಯೆ ಸುಖದ ಸಂಪದವು ಪ್ರಾಪ್ತಿಪುದು ||1||

ಧನಕೆ ಕೆಲದಾಯಾದ್ಯರೆನಿಪರವರೊಳಗೆ |

ಧರ್ಮನು ಪಿರಿಯನವನನಿಂದಿಸಲಿಮಿಕ್ಕ |

ಅನುಜರಾದಹಿಚೋರ ಅನಲ ಮರುಳೆಂಬುವರು |

ಘನ ಕೋಪದಿಂದದನುನಸಿಸದಿರರು ||2||

ಬಿಡದೆ ಸತಿಸುತರ ಮುದವಿಡಿದವರ ರಕ್ಷಣೆಗೆ |

ದುಡಿದು ದುಡ್ಡನೆ ಕೂಡಿಸಿಡುತ ನೀನು |

ಕೊಡದೆ ದಾನವ ಕಡೆಗೆ ಮಡಿಯಲೆಮನಾಳುಗಳು |

ಪಿಡಿದೆಳೆಯಲಾಗ ಬಿಡಿಸುವರೆ ನಿನ್ನವರು ||3||

ಮಡದಿಯಳನನ್ಯರಿಗೆ ಕೊಡದೆ ಭೋಗಿಸದ ಸ್ತನ |

ವಿಡಿದೊತ್ತಿ ಹಿಗ್ಗುವ ನಪುಂಸಕನೊಲು |

ಕೊಡದೆ ದಾನವ ಪರರಿಗಿಡದೆ ನೀನುಣದೆ ಧನ |

ವಿಡಿದೆಣಿಸಿ ನೆಲದಿ ಹೂಳಿಡಲು ಫಲವೇನು ||4||

ಇದು ಮೋಸದಾಗು ದೋಷದ ಜನ್ಮಭೂಮಿ ವೆಸನದ |

ಪಯೋನಿಧಿ ನಿಷ್ಠರದ ಚಾವಡಿ |

ಇದು ನಿನಗೆ ನೀಚದುರ್ಮದ ಭರಿತ ಕಪಟ |

ಮೀರಿದ ಕುಟಿಲ ಕುತ್ಸಿತ ನೆನಿಸದೆ ಬಿಡದು ||5||

ಧನಲೋಭದಿಂ ಘನತಾಪ ಪಡುತಿರಲು |

ತನಯ ನಚಿಕೇತ ತಾ ದಾನಮಾಗಿ

ವಿನಯದಿಂ ಪೋಗಿಕಾಲನ ಸ್ಮರಿಸಿ ವರಪಡದು

ಜನಕ ಉದ್ದಾಲಕನ ದೋಷವಳಿಸಿದನು ||6||

ಮರಳಿ ಋಷಿ ಶ್ರಿಂಗಮುನಿ ವರನಿದೇ ಲೋಭದಿಂ |

ಪರಮ ತನ್ನಯ ತಪಸ್ಸಿನ ಕೀರ್ತಿಯಳಿದು

ಪರಿತಾಪವಡೆದ ನೀನರಿದಿದನು ಬಿಡಲು

ಶಂಕರ ಗುರುವರೇವಣ್ಯ ಕೈವಿಡಿದು ರಕ್ಷಿಪನು ||7||

ಮನಮೆಂಬುವ ಕಪಿಯನು ಬಂಧಿಸಿ ತವ |

ನೆನಹಿನೊಳಿರಿಸೈ ದೇವ ||ಪಲ್ಲ||

ತರುಣಿಯರೆಂಬುವ ಮಿರುಗುವವನದೊಳು |

ಪರಿಪರಿಯಲಿ ಸಂಚರಿಸುವದು |

ಕರಚರಣಾದ್ಯವಯವಗಳೆಂಬ ಘನ |

ತರ ಕೊಂಬೆಗಳಿಗೆ ಹಾರುತಲನುದಿನ |

ಮರುಳುಗೊಳಿಸಿಯನ್ನುರುಳುಗೆಡಿಸುವದು ||1||

ಗುರು ಮಂತ್ರದ ನಿಡು ಸರಪಿಣಿಯನದರ |

ಕೊರಳಿಗೆ ತಳ್ಕಿಸಿ ಪಿಡಿದಿರಲು |

ಉರವಣಿಸುತ ಪಲ್ಗರಿದಣಿಕಿಸುವದು |

ಇರದಿಚ್ಛಿತ ಸ್ಥಲಕೆನ್ನೆಳದೊಯ್ವದು |

ಬರಿ ವಿಷಗಳಿಗೆ ಮರುಳುಗೊಳಿಸುವದು | |2||

ಕುಣಿವುದೆ ಜನ್ಮದ ಗುಣವಾ ಕೋತಿಗೆ |

ಎಣಿಕೆಗೆ ಮೀರಿದ ಭುವಿಯಲ್ಲಿ |

ಕುಣಿಯದನೆನ್ನನು ಕುಣಿಸುತಲಿರುವದು |

ಕ್ಷಣಕ್ಷಣಕಗಣಿತ ಗುಣವನೆ ತೋರ್ಪುದು |

ದಣಿದೆನು ಗುರು ಶಂಕರ ಸಲಹೆನ್ನನು ||3||

ಮಾಯಿಗೆ ಮೋಹಿಸಬೇಡೊ ಆ |

ಮಾಯವ ಕಳೆವುಪಾಯವ ಮಾಡೋ ||ಪಲ್ಲ||

ರವಿಯಿಂದುದಿಸಿದ ಮೇಘವದು ಆ |

ರವಿಯ ರೂಪವನೆಲ್ಲ ಕವಿದುಕೊಂಡಿಹುದು |

ಭೂವನಕ್ಕೆ ಕಿರಣವ ಬಿಡದು ಇಲ್ಲಿ |

ರವಿಯೆಯಾತ್ಮನು ಮಾಯವೆ ಮೇಘವಹುದು ||1||

ಬೆಂಕಿಯಿಂದಾದ ಹೊಗೆಯದು ಆ |

ಬೆಂಕಿಯನೆಲ್ಲ ಮುಸುಂಕಿಕೊಂಡಿಹುದು |

ಅಂಕಿಸಲದು ತೋರಗೊಡದು ಇಲ್ಲಿ |

ಬೆಂಕಿಯಾತ್ಮವು ಮಾಯವೆ ಹೊಗೆಯಹುದು ||2||

ಸಿಂಗ ಮುಖದೊಳಿರ್ಪ ಪಲಲ ಪಕ್ಷಿ |

ಪಿಂಗದೆ ಕಸುಕೊಂಡು ನುಂಗಿದಂತಲಲ |

ಭಂಗಿಸು ಮಾಯವನಮಲ ಗುರು |

ಲಿಂಗ ಶಂಕರನರಿಯಲ್ಕೆ ಮುಕ್ತಿಯಲ ||3||

ವೇಷಾಡಂಬರ ಪೋಷಾಖ ತನುವಿನ |

ಪೋಷಣೆಯೊಳು ಕೆಡುಬೇಡೆಲೋ |

ಪೋಷಣೆಯೊಳು ಕೆಡುಬೇಡೆಲೋ ಶಶಿ

ಭೂಷನ ಸ್ಮರಣಿಯ ಮಾಡೆಲೋ ||ಪಲ್ಲ||

ಮರದೊಳು ಖಗವು ತಾನಿರುವಂತೊಡಲೊಳ |

ಗಿರುವಿನೀನದನರಿಬೇಕೆಲೋ ಮರ ಬೀಳಲು ಖಗ

ಮಿರದೋಡ್ದಂತೀ ಶರೀರವಳಿಯ ನೀಂ ಬೇರೆಲೊ | |1||

ದಾರವಿಡಿದ ಸೂತ್ರ ಧಾರನಿಂ ಪ್ರತಿಮೆ ಗಂ |

ಭೀರದಿಂ ಕುಣಿವಂತೀಗೆಲೋ ತೋರಾಂಗವು ನಿನ್ನಂ

ದಾರಾಜಿಪುದುನೀ ಸಾರಲಂತ್ಯದಿ ಸುಡುಗಾಡೆಲೋ || 2||

ಈತನು ನಾನೆಂದಾತುರ ವಿಡಿದಿಹ |

ರೀತಿಯನೆನ್ನಗೆ ಸಾರೆಲೊ ಭೂತದ ದೇಹವ

ಭೂತಲದೊಳು ಬಿಟ್ಟು ನೀ ತೆರಳುವ ಸ್ಥಲ ಬೇರೆಲೋ ||3||

ನೀನಲ್ಲದ ತನು ನಾನೆಂದರಿದ |

ಭಿಮಾನದಿ ಕೂಡುವರೇನೆಲೊ ಹಾನಿ ವೃದ್ಧಿಗೆ ಘಟ

ತಾನಹುದಿದನುಳಿದಾನಂದಮಯನು ನೀನೆಲೋ ||4||

ಹಮ್ಮಿನಿಂ ಘಟವನು ನೆಮ್ಮಿಸು ಜನ್ಮವ |

ಸುಮ್ಮನೆ ಕಳಿವದಿದೇಕೆಲೊ ಬೊಮ್ಮನೆ ನೀನೆಂ

ದೊಮ್ಮನದಿಂ ತಿಳಿದುಮ್ಮನಗೊಳುವದು ಸಾಕೆಲೊ ||5||

ದೇಹವೆ ನಾನೆಂದೂಹಿಸಿ ಮನದೊಳು |

ಮೋಹವಿಡಿದು ಕೆಡುಬೇಡೆಲೊ ನಾಹಮೆನದೆ ಬಹು

ಸಾಹಸದಿಂ ವರ ಸೋಹಂಭಾವದಿ ನೀ ಕೊಡೆಲೊ ||6||

ಭೂರಿ ಭ್ರಮೆಯನು ನಿವಾರಿಸಿ ಗುರು ಶಂಕ |

ರಾರ್ಯನ ಸೇವೆಯೋಳ್ಸೆರೆಲೊ ತಾರಕತ್ರಯದವಿ

ವಿಚಾರವರಿದು ಸಾಸೀರಾರರ ಸುಷಿರದಿ ತೊರೆಲೊ |7||

ಗುರುದೇವನ ಭಜಿಸೊ ಎಲೋ ನೀ |

ಗುರುದೇವನ ಭಜಿಸೋ

ಗುರುದೇವನ ಭಜಿಸಜಹರಿಸುರರಾ |

ಗುರುವಿನೊಲಿಸಿ ದೇವತ್ವ ಪಡಿದಿಹರು ||ಪಲ್ಲ||

ಗುರುನಾಮವೆ ಮಂತ್ರ ಗುರುಪದ |

ದಿರುವಧೂಳಿ ಭಸಿತ |

ಗುರುಪಾದಮೆ ಸಿದ್ದಿಯ ಜನನ ಸ್ಥಲ |

ಗುರು ನಿರೂಪಮೆ ಸಕಲ ಕಾರ್ಯಕೆ ಜಯ ||1||

ಗುರು ಕರವೇ ಪರುಷ ಗುರುವಿನ |

ದರಿಶನ ಸಿದ್ಧರಸ

ಗುರು ಭಜನಮೆ ಮಹದಿಷ್ಟ ಪೂಜಮಾ

ಗುರು ಕಟಾಕ್ಷ ಸುರಧೇನೆಂದರಿಯುತ ||2||

ಗುರು ಭಕ್ತಿಯೆ ಚಿಂತಾಮಣೀಯಿದು |

ದುರಿತ ಗ್ರಹದ ಯಂತ್ರ |

ವರಜ್ಞಾನಾರ್ಣವಕಿದು ಶಶಿಕಿರಣವು |

ಹರನ ಪದ ಸೌಧಕಿದು ಸೋಪಾನಾವು ||3||

ಇದು ಮುಕ್ತಿಗೆ ಮೂಲ ಭಕ್ತಿರಿ |

ಗಿದು ನಿಜ ಸುಖಲೀಲಾ |

ಇದು ಮಾಯಾ ತಿಮಿರೌಘಕೆ ದಿನಕರ |

ಮಿದು ಭವರೋಗಕ್ಕೌಷಧ ಸಾಧನ ||4||

ಗುರು ಸೇವೆಯೆ ತಪವು ಭಕ್ತಗೆ |

ಗುರು ಸ್ಮೃತಿಯೇ ಜಪವು |

ಗುರು ನಿಷ್ಠಾ ನಿಧಿಯೇ ನಿಧಾನ |

ಸದ್ಗುರು ಪದಾಬ್ಜ ಧ್ಯಾನಮೆ ಸಧ್ಯಾನವು ||5||

ಸತಿಯ ಸಂಗ ತೊರೆದು ಬಲುಸ |

ದ್ವ್ರತದಿ ವಿರತಿ ಪಿಡಿದು |

ಶತ ವರುಷ ತಪೋ ಕೃತಫಲ ನಿಮಿಷದಿ |

ಕ್ಷಿತಿಯೊಳು ಗುರು ಸನ್ನುತಿಯಿಂದಪ್ಪುದು ||6||

ಕಡಿವಡೆ ದುಷ್ಕೃತವ ಬೇಗದಿ |

ಸುಡುವಡೆ ಭವ ವನವ

ಪೊಡವಿಯೊಳಗೆ ನಿಜ ಪಿಡಿವಡೆ ಮುಕ್ತಿಯ

ಪಡಿವಡೆ ಗುರುವರನಡಿ ಭಕ್ತಿಯೆ ತಿಳಿ ||7||

ಗುರು ಭಕ್ತಿಯ ಬಿಟ್ಟು ಭುವನದಿ |

ಹರನೊಳು ರತಿಯಿಟ್ಟು ಸ್ಮರಿಸಲು ಮುಕ್ತಿಯ |

ದೊರೆಯದೆಂದು ಶೃತಿಯೊರಲುವ ನುಡಿಗಳ |

ನರಿದು ಭರದಿ ನೀ ||8||

ಭಕ್ತಿಯೊಂದರಲ್ಲಿ ಚತುರ್ವಿಧ |

ಭಕ್ತಿಯಾದವಿಲ್ಲಿ ಯುಕ್ತಿಲಿ ವನರಿದು |

ಭಕ್ತಿಯ ನಡಿಸಲು ಮುಕ್ತನ ಮಾಡುವ |

ಶಂಕರೇಶ ಗುರು ||9||

ಗುರುನಾಮವ ನುತಿಸೋ ಎಲೋ ನೀ |

ಗುರುನಾಮವ ನುತಿಸೊ |

ಗುರುನಾಮವ ನುತಿಸನುದಿನದಲಿ |

ಸದ್ಗುರುವಿನ ಗುಣಗಣಮೆಣಿಸದೆ ಭಕ್ತಿಲಿ ||ಪಲ್ಲ||

ನಿಂದಸ್ಥಲವೆ ಕ್ಷೇತ್ರ ಗುರುವರ |

ನಂದ ನುಡಿಯೆ ಮಂತ್ರ ಮಿಂದ ಜಲಮೆ ಮಕ |

ರಂದದ ತೀರ್ಥಮಿದೆಂದರಿದು ಮನಕೆ |

ತಂದು ತವಕದಿಂ ||1||

ನೋಡುತ ಕೆಲಬರಿಗೆ ಸವಿ ಮಾ |

ತಾಡುತ ಪಲಬರಿಗೆ ಬೇಡದಿರುವರಿಗೆ |

ರೂಢಿಯೊಳಗೆ ತಡಮಾಡದಿಷ್ಠ ಫಲ |

ಕೊಡುವ ದರ್ಶನದಿ ||2||

ಪಿಡಿದುದೆ ಘನ ಮತವು ಗುರುವರ |

ನಡೆದುದೆ ಸದ್ವ್ರತವು ಮೃಢ ಗುರು ಶಂಕರ |

ನಡಿವಿಡಿದಂತರ ನಡೆ ನುಡಿ ಕೆಡದೆಡೆ |

ವಿಡದೆ ಪೊಡವಿಯೊಳು ಗುರು ನಾಮವ ನುತಿಸೊ ||3||

ಪರಿಪಾಲಿಸನಭವ ಮಾನವ ನಿನ್ನ |

ಪರಿವಾಲಸನ ಭವ ಪರಿಪಾಲಿಸನು |

ಸತ್ಕರುಣದಿ ತಿಳಿತ್ರೈ ಕರಣದ ದೋಷಗಳಿರುತಿರೆ ನಿನ್ನನು| ||ಪಲ್ಲ||

ಪರ ವಧುವಿನ ಕೂಟ ಪರಾರ್ಥಾಪ |

ಹರಣ ಹಿಂಸದ ಬೇಟ ಧರೆಯೊಳ ಭಕ್ಷಸ್ವೀ |

ಕರಣಮೆಂಬೀ ನಾಲ್ಕು ದುರಿತಗಳೊಡಲೊಂದಿರುತಿರೆ ನಿನ್ನನು ||1||

ಅನುಚಿತ ನಿಷ್ಠುರತೆಯು ವೈಸೂನ್ಯವು |

ಬಿನುಗಿನ ಪುಸಿ ನುಡಿಯುಯೆನಿಪೀ ನಾಲ್ಕಾದ |

ಘನತರ ಪಾಪಗಳನುಗೊಂಡಿರಲು ವಚನದೊಳು ನಿನ್ನನು ||2||

ಜನರೊಲಿಯದ ಕಾರ್ಯ ಅನಿಷ್ಠ |

ಚಿಂತನೆ ಪರಧನ ಭಾರ್ಯರನುದಿನಾಕಾಂಕ್ಷಮಿಂ |

ತೆನಿಪೀ ನಾಲ್ಕ ಗಮನದೊಳಿರಲು ಶಂಕರ ಗುರು ನಿನ್ನನು

ಹಿಗ್ಗದಿರು ತಗ್ಗದಿರು ಸುಖ ದುಃಖಕೆ |

ವೆಗ್ಗಳದಿ ನೀನಿಂತರಿದ ಮೇಲೆ ಮರುಳೆ ||ಪಲ್ಲ||

ರೋಗಂಗಳೆಲ್ಲ ನೀನಾಗಿ ಬಯಸದೆಯಂತು |

ತಾಗಿ ತಳಮಳಿಪಂತೆ ಬಾಧಿಸುವವೊ |

ಭೋಗಂಗಳಿದರ ಪರಿಯಾಗಿ ಕಾಲಕ್ಕೆ |

ತಾವಾಗಮಿಸಿ ಸಂತೋಷಗೊಳಿಸುತಿಹವು ||1||

ಬರಲುಳ್ಳ ದುಃಖ ಬಂಧುರದೊಳನುಭವಿಸದೇ |

ಪೆರದಕ್ಕಿಲ್ಲ ಪರಿಹರಿದುಪಾಯ |

ವರ ರಾಮನಳಪಾಂಡವರು ಕಷ್ಟ ಪಟ್ಟದನು

ನೆರೆ ಶಾಸ್ತ್ರವನೆ ನೋಡಿ ನಿನ್ನೊಳರಿದು ||2||

ಪೊಡವಿಯೊಳು ಭವ ಮರಣ ಗಡಣೆಯೊಳಗಿನಿತಾದ |

ರೊಡೆತನವದಿಲ್ಲನಿನ್ನೊಳುತೋರ್ಪವು |

ಜಡ ದೇಹ ಪ್ರಾರಬ್ಧವಿಡಿದಂತಹುದು ಸುಮ್ಮ

ನಡಿವಿಡಿದು ಗುರು ಶಂಕರನ ಸ್ಮರಿಸುತಿರೆಲೊ ||3||

ಕಾಕು ಮನುಜನೆ ನಿನ್ನಗೇಕೊ ಗರ್ವ |

ಕಾಕು ಮನುಜನೆ ನಿನ್ನಗೇಕೊ ಗರ್ವ |

ಸಾಕು ನೀನೆನಿತರವ ಲೋಕದೊಳಗೆ ||ಪಲ್ಲ||

ಬಲದೊಳು ದಶಾನನನೆ ಕಲಿಯೊಳು ಧನಂಜಯನೆ |

ಕುಲದೊಳು ವಶಿಷ್ಟಮುನಿ ತಿಲಕನೇನು |

ಒಲುಮೆಯಲಿ ಭೃಗಮುನಿಯೆ ಛಲದಿ ದುರ್ಯೋಧನನೆ |

ನೆಲದಿ ಮನುಮಥನ ಸಮ ಚಲುವನೇನು || 1||

ಹಟದಿ ಪ್ರಲ್ಹಾದನೆ ಕಪಟದೊಳು ಶಕುನಿಯೆ |

ನಿಷ್ಕುಟಿಲದೊಳು ಭರತಭೂಪಾಲನೇನು |

ದಿಟಗೆಲಸದಲಿ ಧೃವನೆ ವಿಟತನದಿ ಕ್ಯಷ್ಣನೇ |

ಪಟು ಪರಾಕ್ರಮದಿ ಮಾಂಧಾತನೇನು ||2||

ಮೌನದಲಿ ಶುಕನೆ ಶಿವ ಧ್ಯಾನದಲಿ ವ್ಯಾಸನೇ |

ಗಾನದಲಿ ಬ್ರಹ್ಮಮಾನಸಪುತ್ರನೇನು |

ದಾನದಲಿ ಕರ್ಣನೆ ನಿಧಾನದಲಿ ಧರ್ಮಜನೆ |

ನೀನು ಸತ್ಯದಿ ಹರಿಶ್ಚಂದ್ರನೇನು ||3||

ಪಿತ್ರಾಜ್ಞಯಲಿ ಜನಕಪುತ್ರಿಯಳ ವಲ್ಲಭನೆ |

ಭ್ರಾತೃವತ್ಸಲದಿ ಸೌಮಿತ್ರಿಯೇನು |

ಧಾತೃತ್ವದಲಿ ಭೋಜ ಧಾತ್ರಿಪಾಲಕನೆ ಸುಪ |

ವಿತ್ರದೊಳು ಮಾರುತನ ಮಿತ್ರನೇನು ||4||

ಸ್ನೇಹದಿ ವಿಭೀಷಣನೆ ಸಾಹಸದೊಳನಿಲಜನೆ |

ಬಾಹು ವಿಕ್ರಮದಲ್ಲಿ ಬಾಣನೇನು |

ದೇಹವಾನೆಂಬ ಮರೆಮೋಹಕೀಡಾಗದು |

ಉತ್ಸಾಹದಿಂ ಗುರು ಶಂಕರನ ಭಜಿಸು ನೀನು ||5||

ವಿಧಿಯೆ ನಿನಗಿನ್ನಿದಿರಾರಿಳೆಯೊಳು |

ಅಧಿಕರನುರೆಯಳಲಿಸಿ ಬಳಲಿಸಿದಿ ||ಪಲ್ಲ||

ಜಡಜಾಕ್ಷನ ದಶಭವದೊಳು ಬರಿಸಿದಿ

ಜಡಜನಾಭನ ನಡುದಲೆಯ ಕಡಿಸಿದಿ |

ಜಡಜಾರಿಯ ದೇಹ ಕಳೆಯನು ಕೆಡಿಸಿದಿ |

ಜಡಜ ಶರನ ತನು ಬೂದಿಯೆನಿಸಿದೆ ||1||

ವಾಸವನಂಗದಿ ಯೋನಿಯನೆಸಗದಿ |

ವ್ಯಾಸಮುನೀಂದ್ರನ ತೋಳನಿಳಿಸಿದಿ ||

ಭಾಸುರ ಶುಕ್ರನ ನಯನಮೊಂದಳಿಸಿದಿ |

ಲೇಸಿನ ನಳನಶ್ವದೂತನೆನಿಸಿದಿ ||2||

ವರ ಹರಿಶ್ವಂದ್ರನ ಹೊಲೆಯನಾಳೆನಿಸಿದಿ |

ಧರಣಿಪ ರಾಮನ ವಿಪಿನಕೆಳಿಸಿದಿ ||

ಧರೆಯೊಳು ಪಾಂಡವರನು ತಿರಿದುಣಿಸಿದಿ |

ಮೆರವ ಶೃತಿಗಳನು ಶುನಕನಾಗಿಸಿದಿ ||3||

ದಿನಕರನನು ರಾಹುವಿನಿಂದಣಿಸಿದಿ |

ಮಿನುಪ ನಹುಷನಹಿಯಾಗಿ ಪರಿಸಿದಿ ||

ಮನಸಿಜಾಂತಕನನು ಮಸಣದೊಳಿರಿಸಿದಿ |

ಘನ ವಿಕ್ರಮ ಭೂವರನ ನೋಯಿಸಿದಿ ||4||

ಉರಗಪತಿಯ ಸುರಾಸುರರಿಂದೆ ಕಡಿಸಿದಿ |

ಕರಿಫಣಿ ಖಗಗಳ ಸೆರೆಯೊಳೊಂದಿಸಿದಿ |

ಪರಮ ಮಹಿಮರನೀ ಪರಿಯೊಳು ಕೆಡಸಿದಿ |

ಗುರು ಶಂಕರನ ಶಾಸನವ ನಡಿಸಿದಿ ||5||

ಪ್ರಾರಬ್ಧಕನುಸರಿಸಿ ಮತಿ ಪೋಪುದು |

ಮೀರಲಾರಳವಲ್ಲ ಭೋಗಿಸದೆ ಬಿಡದು ||ಪಲ್ಲ||

ಹರನು ವಿಧಿಯನ್ನು ಧಿಕ್ಕರಿಸಬೇಕಂದನೇ |

ಸುರರು ಯಜ್ಞಕೆ ಪೋಗಬೇಕಂದರೆ |

ಸ್ಮರನು ಶಂಕರಗೆ ಪೂಶರ ಬಿಡುವೆನಂದನೇ |

ಹರಿಯು ಭೃಗು ಸತಿಯ ಕೊಲುಬೇಕಂದನೇನು ||1||

ಅಸುರ ಗುರುದಾನಕಡ್ದಾಗಬೇಕಂದನೇ |

ಸಸಿಯ ತಾರೆಯನೊರಿಸಬೇಕಂದನೇ |

ಮಿಸುಪಹಲ್ಯೆಯನಿಂದ್ರ ಕೂಡಬೇಕಂದನೇ |

ಮಿಸುನಿ ಮೃಗ ರಾಮಪಿಡಿಬೇಕಂದನೇನು ||2||

ಸಲೆ ಹರಿಶ್ಚಂದ್ರ ಭೂಪಮುನಿಗೀವೆನಂದನೇ |

ನಳನು ದ್ಯೂತವನಾಡಬೇಕಂದನೇ |

ಬಲಭದ್ರ ಗೋವಧೆಯ ಮಾಡಬೇಕಂದನೇ |

ಖಳನವನಿಜೆಯನೊಯ್ಯಬೇಕಂದನೇನು ||3||

ತುರಗವನು ಶೂದ್ರೀಕನೇರಬೇಕಂದನೇ |

ಹರನ ವ್ಯಾಸನು ಜರಿಯಬೇಕಂದನೇ |

ಉರಗದಿ ಪರೀಕ್ಷತನು ಸಾಯಬೇಕಂದನೇ |

ವರಸಗರ ಯಾಗ ಮಾಡುವೆನಂದನೇನು | |4||

ಹಿರಿಯರಿಂತಿರದೆ ವಿಧಿಗೊಳಗಾಗಿ ದುಃಖವನು |

ನೆರೆ ಭೋಗಿಸಿದರು ನೀನೆನಿತರವನು |

ಗುರು ಶಂಕರನ ಪಾದಕೆರಗಿ ನಿನ್ನಿರ ನೀ |

ನರಿಯಲದು ಇದ್ದಿಲ್ಲದಂತಹುದು ಮರುಳೆ 5||

ಯಾತಕಿನಿತು ವೆಸನಪಡುತಿರುವಿ |

ಹೇ ಮಾನವೇಂದ್ರ |

ಯಾತಕಿನಿತು ವೆಸನ ಮಾಡಿ |

ಧಾತುಗೆಟ್ಟು ಬಾಯ ಬಿಡುವಿ |

ಭೂತನಾಥನಾದ ಶಿವನು |

ಭೂತಲದಲಿ ಪೊರೆವ ನಿನ್ನ ||ಪಲ್ಲ||

ಆರು ಪ್ರೀತಿಲಿ ಪೊರೆವರೆನಗಿಲ್ಲ |

ಹೀಗೆಂದು ಬರಿದೆ |

ಭೂರಿ ಭ್ರಾಂತಿಗೊಳುವದೊಳಿತಲ್ಲ |

ಮೂರುಲೋಕಂಗಳನು ಪಾಲಿಪ |

ಮಾರಹರ ಗೌರೀವರನು |

ನಿನ್ನೋರುವನ ಕೈ ಬಿಡುವನೆ |

ಗಭೀರದಿಂದನುದಿನದಿ ರಕ್ಷಿಪ ||1||

ಪಡೆದ ಮಕ್ಕಳ ಸಲಹಲೆಂತೆಂದು |

ವಳಗೊಳಗೆ ವ್ಯರ್ಥ |

ಮಿಡುಮಿಡುಕಿ ದುಃಖಿಸುವದೇಕಿಂದು |

ಒಡಲೊಳಗೆ ಸುತರಿದ್ದ ಕಾಲದಿ |

ಬಿಡದೆ ಸಲಹಿದ ದೇವದೇವನು |

ಪಿಡಿದು ಪ್ರೇಮದಿ ಪಾಲಿಸುವ ತಾ |

ಬಿಡುಬಿಡೆಲೊಹಂಕರಣ ಭಾವವ ||2||

ಸೃಷ್ಟಿಯೊಳಗಿರುತಿರ್ಪ ಪ್ರಾಣಿಗಳಂ |ಆವಾಗಲನ್ನವ |

ನಿಟ್ಟು ಸಾಕುವನೀಶನೇಯನುತಂ |

ನಿಷ್ಟೆಯಿಂ ನಂಬಿರಲು ಬುತ್ತಿಯ |

ಕಟ್ಟಿ ತಂದುಣಬಡಿಪನವರನು |

ಹುಟ್ಟಿಸಿದ ಹರನರಿಯನೇ ಭಯ |

ಬಿಟ್ಟು ಗುರು ಶಂಕರನ ಧ್ಯಾನಿಸು ||3||

ದಾನವನೆ ಮಾಡಿ ನೀ ದಾನಿಯೆನಿಸು |

ಮಾನವನೆ ಪುಣ್ಯದಭಿಮಾನವಿರಿಸು ||ಪಲ್ಲ||

ಕೊಟ್ಟದ್ದು ನಿನಗೆ ಬೈಚಿಟ್ಟದ್ದು ಪರರಿಂಗೆ |

ಕೊಟ್ಟು ನಾನಿಳೆಯೊಳಗೆ ಕೆಟ್ಟೆನೆಂದು |

ಬಿಟ್ಟಾಡದಿರು ಮುಂದೆ ಕಟ್ಟಿರ್ದಬುತ್ತಿ ತೆರ |

ಹೊಟ್ಟಿಗಾಗುವುದು ಕೈ ಮುಟ್ಟಿ ನೀನು ||1||

ದೇವನಿಂದವನಿಯೊಳಗೀವವನೆಯಧಿಕ ತಿಳಿ

ದೇವ ತನ್ನನು ನಂಬಿ ಸೇವಿಸುವರ |

ಭಾವವಂ ನೋಡಿ ತಾನೀವನೀವವನು |

ಮತ್ತಾವದನು ನೋಡದಲೆಯೀವನದರಿಂದ ||2||

ಹಿಂದೆ ನೀ ಕೊಟ್ಟದ್ದರಿಂದೆ ನಿನಗಿನಿತು ಸಿರಿ |

ಬಂದಿರ್ಪುದಿಗ ನೀ ಮರಳಿ ಕೊಡಲು |

ಮುಂದೆ ಬಹ ಜನ್ಮದಿಯ ಮಂದ ಸಂಪದವಡೆದು |

ಕುಂದು ಕೊರತೆಗಳಿಲ್ಲದಂದಗೊಳುವಿ ||3||

ಹಾಲು ನಿನ್ನಲ್ಲಿರ್ದ ಕಾಲದಲೆ ಹಬ್ಬವೆಂದೀ |

ಲೋಕದಲಿ ಯಥಾಶಕ್ತಿವಿಡಿದು ಕೇಳದಾರನು

ಧರ್ಮಪಾಲನೆಯ ಮಾಡಿದರೆ

ಮೇಲಾಸ್ವರ್ಗ ಸುಖ ಪ್ರಾಪ್ತಿಸುವದು ||4||

ಆಗ ಬಾ ಈಗ ಬಾ ಸಾಗಿ ಬಾ ಅತ್ತಿತ್ತ |

ಪೋಗಿ ಬಾರೆನ್ನದೇ ಪಾತ್ರವರಿದು |

ಆಗಲೇ ಕರೆದು ನಿಜವಾಗಿ ಧರ್ಮವ ಮಾಡೆ |

ಯೋಗಿ ನುತ ಗುರು ಶಂಕರೇಶ ಪಾಳಿಸುವ ||5||

ನಡಿರಿ ಬೇಂಟೆಯನಾಡುವ ಬಂಧುರದಿಂದೆ |

ನಡಿರಿ ಬೇಂಟೆಯನಾಡುವ ನಡಿರಿ |

ತನುವಿನ ಕಾಡಡವಿಯೊಳಿಹ ಮಾಯಾ |

ಕಡುಮೃಗಖಗಗಳ ಪೊಡೆದಿಡುತಲಿ ಬೇಗ ||ಪಲ್ಲ||

ಕುಟಿಲ ಗುಣಗಳೆಂಬ ಚೆಟುಲ ನರಿಗಳುಂಟು |

ಕಠಿಣ ವೃತ್ತಿಗಳೆಂಬ ಕರಿಗಳುಂಟು ಹಟ |

ಮೋಹವೆಂಬುವ ಕಟಪೆರ್ಬುಲಿಗಳುಂಟು |

ಸಟಿಯಂಬ ಮೊಲಗಳನಂತಮುಂಟು ||1||

ಅಷ್ಟಮದಗಳೆಂಬ ದುಷ್ಟ ಕೋಣಗಳುಂಟು

ಕಷ್ಟಮೆಂಬುವ ಕತ್ತೆಗರುಗಳುಂಟು |

ಭ್ರಷ್ಟತೆಯೆಂಬ ಪಾಪಿಷ್ಟಚಿರ್ಚುಗಳುಂಟ |

ನಿಷ್ಟವೆಂತೆಂಬ ಚಿಗರಿಗಳುಂಟು ||2||

ಕ್ಲೇಶಂಗಳೆಂಬ ಕಾಗಿಗಳುಂಟು ಮುಸುಗಿದ |

ವಾಸನೆಯಂಬ ಕೌಶಿಕಗಳುಂಟು |

ಪಾಶಾಷ್ಟವೆಂಬ ಬಕಗಳುಂಟು |

ನೆಲೆಯಾದ ದ್ವೇಷವೆಂಬಖಿಳ ಪದ್ದುಗಳುವುಂಟು ||3||

ಕೋಪವೆಂತೆಂಬಪರೂಪ ಸಿಂಹಗಳುಂಟು |

ತಾಪಂಗಳೆಂಬ ಕರಡಿಗಳುಂಟು |

ಪಾಪಗಳೆಂಬುವ ವರಹಗಳುಂಟು |

ಅತಿಕಾಪಟ್ಯವೆಂತೆಂಬ ವ್ರಕಗಳುಂಟು ||4||

ಹರಭಕ್ತಿಯೆಂತೆಂಬ ಬಂದೂಕವನು ಪಿಡಿ |

ದರಿವೆಂಬ ಮೆರವ ಮದ್ದನೆ ಜಡಿದು

ಗುರು ಶಂಕರನ ಕೃಪೆಯಂಬ ಗುಂಡನೆ ವತ್ತಿ

ಭರದಿಂದೆ ಬಡಿದು ಕೊಲ್ಲುವ ಬನ್ನಿರೋ ||5||

ತನುವೆಂಬ ಗದ್ದೆಯನನುವಿಂ ಹದಮಾಡಿ |

ಘನ ತತ್ವ ಬೆಳೆಯನ್ನು ಬೆಳೆದುಣ್ಣಿರೊ ||ಪಲ್ಲ||

ಹರ ಗುರು ಭಕ್ತಿಯೆಂಬೆರಡೆತ್ತುಗಳ ಹೂಡಿ |

ವಿರತಿಯಂಬುವ ನೇಗಲಿಯನೆ ಮಾಡಿ |

ಬರಿಯ ಭ್ರಮೆಯದೆಂಬ ಕರಿಕೆಯ ತೆಗೆದು |

ಭಾಸುರ ಸುವಿಚಾರೆಂಬು ಗೊಬ್ಬರಿಟ್ಟು ||1||

ವರ ಸಾಧನಗಳೆಂಬ ಮಡಿಗಳನೆಸಗಿ |

ಬಂಧುರ ಸತ್ಯವೆಂಬ ಕಾವಲಿಯಗೈದು |

ಮಿರಗುರುವ ಶೃತಿಯೆಂಬ ಕೆರೆಯ ನೀರನ್ನು |

ವಿಸ್ತರದ ಶ್ರವಣದಲಿ ತುಂಬಿಂ ಕಳಿಸುತಲಿ ||2||

ಗುರು ಮಂತ್ರವೆಂತೆಂಬ ಪರಮ ಬೀಜವ ಚಲ್ಲಿ |

ಅರಿವೆಂಬ ಪೈರವ ಬೆಳಿಸುತಲಿ |

ಸ್ಥಿರ ಮುಕ್ತಿ ಭತ್ತವ ಬೆಳೆದುಂಡು ಶಂಕರ |

ಗುರು ಕೃಪೆಯೊಳು ಭವ ಬರ ಗೆಲಿರೊ || 3||

ಎಂತಹುದೋ ಮುಕ್ತಿ ಎಂತಹುದೋ |

ಎಂತಹುದರಿವಿನಿಂದಿಂತುಲ ಸದ್ಗುಣ |

ಸಂತತಿಗೂಡಿರದಂತಹ ಮನುಜನಿಗೆಂತಹುದೊ ||ಪಲ್ಲ||

ಗುರುವರನಡಿ ಸೇವ ಸತ್ಪುರುಷರ |

ದರಿಶನ ಸದುಭಾವ ಕರಣ ವಿಜಯವೀಶ್ವರನರ್ಚನೆ ವಿದ್ಯಾ |

ಮೆರವ ವಿವೇಕ ಧರ್ಮ ವರ ಶಮೆದಮೆ ಸತ್ಯ |

ಪರಮಾರ್ಥದ ಸುಶ್ರವಣ ಜೀವರೊಳತ್ಯಂತಃಕರುಣ |

ಪರಿಸತಿಯ ಕಂಡೆರಗದಧಟು ಬಾಸುರ ಭಕ್ತಿಗಳಾ |

ಗರಮಮಿಲ್ಲದವನಿಗೆಂತುಹುದೊ ||1||

ಯತಿ ಜನರೊಳ ಪ್ರೀತಿ ನಿಖಿಳರೊಳು ಹಿತ ಬಯಸುವ ರೀತಿ |

ಶೃತಿಯಾಗಮ ಸಂತತಿಯೊಳು ಶ್ರದ್ಧೆಯು

ಕ್ಷಿತಿ ಮೊದಲಾದ ಸಂಸೃತಿಯೊಳ ಶಾಶ್ವಿತೆ

ನುತ ಸದುಗತಿಯೊಳು ಭ್ರಾಂತಿ ವಿಲಸಿತ ನಡೆನುಡಿ ಬಹು ಶಾಂತಿ

ಸತತ ವಿಧಿಗಳನು ಕೃತಿಸುವ ನೇಮ ಸ್ವ

ಮತ ನಿಷ್ಠೆಗಳ ಮಿಳಿತಮಿಲ್ಲದವನಿಗೆಂತಹುದೋ ||2||

ಅರಿತೆಮಿಗಳ ಧ್ಯಾನ ತೋರುವ ತನ್ನ |

ಶರಿರದೊಳುದಾಸೀನ ದುರಿತಕೆ ಭೀತಿ ಪೂ

ಶರಗಂಜದ ಧೃತಿ ವರ ಪುಣ್ಯವನಾ

ಚರಿಸುವ ಪದ್ದತಿ ಮರೆವೆಯಮಿರುದ ಯೋಗ

ಇಹ ಪರಭೋಗದೊಳು ವಿರಾಗ ಗುರು ಶಂಕರನಾ

ವರಿಸಿ ಕೀಟಮಧುಕರ ನ್ಯಾಯವನನು

ಸರಿಸದಿರುವವನಿಗೆಂತಹುದೋ ಮುಕ್ತಿ ||3||

ತ್ರಿವಿಧ ಕರಣದಲ್ಲಿಯಿಂತು ಸವಿಯದಂತೆ ಭಕ್ತಿ ಧವನ |

ಜವದೊಳಿತ್ತು ಸೇವೆಗೊಂಡು ಪಾಲಿಸೆನ್ನ ಶಂಕರ ||ಪಲ್ಲ||

ಆರಿಕೆ ಮನಸಿಗಿಲ್ಲದಾಲಿಯರಡವೆಂತು ತಮಗೆ ತಾವೆ |

ನಿರುತದಲ್ಲಿ ನಡೆಯುತಿರ್ಪ ರೀತಿಯಿಂದದಿ |

ಧರೆಯೊಳೆನ್ನ ಮನವದೆಲ್ಲಿ ಚರಿಸುತಿರ್ದೊಡಿರಲಿ ಸ್ಥೂಲ |

ಶರೀರ ನಿನ್ನ ಪೊಜೆ ಮಾಳ್ಪ ಕಾಯಕದ ಸುಭಕ್ತಿಯಂ ||1||

ಶರೀರಯೆತ್ನಗೈಯ್ಯದಿರ್ದೊಡೆರಡು ಶ್ವಾಸವೆಂತು ನಿರಂ |

ತರದಿ ತಮಗೆ ತಾವೆ ನಡೆದುಕೊಳ್ಳುವಂದದಿ |

ಶರೀರವಾ ವ್ಯವಸ್ಥೆಯಲ್ಲಿ ಬೆರೆದೊಡೇನು ಯನ್ನರಸನೆ |

ಪರಮ ನಿನ್ನ ಮಂತ್ರ ನುಡಿವ ವಾಚಕದ ಸುಭಕ್ತಿಯಂ || 2||

ಎರಡು ರೆಪ್ಪೆಯರಡು ಶ್ವಾಸ ಚರಿಸುತಿರಲು ಪ್ರಾಣವಾಯು |

ಮರಿಯದಂತೆ ನೈಜ ಕೃತ್ಯಮೆಸಗುವಂದದಿ |

ಶರೀರ ಜಿಹ್ವವೇನು ಮಾಡ್ದೊಡಿರಲಿ ಶಂಕರೇಶ ಯನ್ನ |

ಪರಿವ ಮನವು ನಿನ್ನ ಸ್ಮರಿಪ ಮಾನಸದ ಸುಭಕ್ತಿಯಂ ||3||

ಈವುದೆನಗೇ ಈಪುದೆನಗೆ ಬಿಡ |

ದಾವಾವ ಕಾಲದೊಳೀವರಗಳ ನೀವುದೆನಗೆ ಪಲ್ಲ||

ಮನಸಿಗೆ ನಿನ್ನ ನೆನೆವದನು ರಸನೆಯ |

ಕೊನೆಗೆ ನಿನ್ನಯ ಮಂತ್ರ ನುಡಿವುದನು |

ತನುವಿಗೆ ನಿನ್ನ ಸೇವಿಪುದನು ಕರ್ಣಕ್ಕೆ |

ಯನುದಿನ ದಶನಾದವನೆ ಕೇಳುವದ ನೀವುದೆನಗೆ ||1||

ಘನ ಬಿಂದುವನು ನೋಳ್ಪುದಕ್ಷಿಗೆ ತವ |

ಪೂಜೆಯನು ನಿರಂತರ ಮಾಳ್ಪುದನು ಕರಕೆ |

ವಿನಯದಿ ನಿನ್ನಡಿವನಜ ದ್ವಂದ್ವಂಗಳೀ |

ಗನುವಾಗಿ ನಮಿಸುವದನು ನಿಟಿಲಕೆ ||2||

ಧರೆಯೊಳು ತತ್ವಾನುಭವವನು ಸಂಸಾರ |

ಬರಿಯ ಭ್ರಮೆಯಿದೆಂಬ ಪ್ರಜ್ಞೆಯನು |

ಅರುವಿನೊಳಾನೆ ನೀನೆಂಬುವದನು ಪರ |

ತರ ಗುರು ಶಂಕರನೊಳು ಕೈವಲ್ಯನೀವುದೆನಗೆ ||3||

ಈಸು ಗುಣಗಳಿಂತು ಬೇಗದಿ |

ಕೈಲಾಸಪುರ ನಿವಾಸಯೆನಗೀಯನುದಿನದಿ |ಪಲ್ಲ||

ಎಡರಿನಲ್ಲಿ ಧೃತಿಯ ಸಿರಿಯ ಸಡಗರದಿ ವಿನಯವ ಮನದಿ |

ಪಿಡಿದ ನೇಮ ನಡಿಪ ಛಲವ ಮೃಢನ ಶರಣರಡಿಗಳಿಂಗೆ |

ಕೆಡೆದು ಸುಖಿಸುತಿರ್ಪ ಭೋಗವ |

ಬ್ರಹ್ಮದೊಳು ಲಕ್ಷವಡರಿಯಗಲದಿರ್ಪ ಯೋಗವ |

ಮಡದಿ ಪೊಡವಿ ಮನೆ ಧನಾದಿ ಗಢಣದೊಳು ವಿರಾಗವ ||1||

ಪರ ವಧುವಿನ ಸಂಗಕ್ಕೆಳಸ| ದಿರುವ ಕರಣ ವಿಜಯವ ಸಂ |

ತರುವಸೆದಹುದೆಂಬ ನಡೆಯ ಮೆರವ ಜವ್ವನದೊಳು |

ವಿಕೃತಿಗೆರಿಗಿ ಕೆಡದ ಮನ ನಿಧಾನವ ಬಿಡದಾವ ಕಾಲ |

ಹರನೆ ನಿನ್ನ ನಾಮ ಧ್ಯಾನವ ಮರವಿಂದಲಾದ |

ಬಂಧಪರಿವ ಸಹಜ ಜ್ಞಾನವ ||2||

ಪರರಿಗಿತ್ತು ಸುಖಿಪ ಮಹಾ ಸಿರಿಯ ಜೀವಿಸಿರುವ ತನಕ |

ಪರಮನರಿದು ಚರಿಸುವ ಸತ್ಪುರುಷರ |

ದರಿಶನವ ಪುಶಿಯ ನೊರೆದು ಬಾಳದಂಥ ವೃತ್ತಿಯ |

ಶಂಕರಗುರುವಿನ ಚರಣದಲ್ಲಿ ಪರಮ ಭಕ್ತಿಯ |

ಧರೆಯೊಳಂತ್ಯ ಕಾಲದಲ್ಲಿ ಸಾರತರ ಸುಮುಕ್ತಿಯ ||3||

ಕರುಣಿಸು ನೀನೆನ್ನ ಕರುಣ ಮೂರರ ದೋಷ |

ಪರಿದು ಪುಣ್ಯವನಿತ್ತು ಪುರಭಂಗ ಸುರಚಿರ ಕರುಣಾಂಗ |

ವರ ವೃಷಭ ತುರಂಗ ಬೇಗ ಕರುಣಿಸು ||ಪಲ್ಲ||

ಪರಸತಿ ರತಿ ದುರ್ಭಕ್ಷಣೆ ಜೀವ ಹಿಂಸಾದಿ |

ಶರೀರದಘಂಗಳ ಪರಿಹರಿಸಿ ಗುರು ಸೇವೆ ತವ ಪೂಜೆ |

ಪರ ಪೋಷಣಾದಿಯಾಚರಣೆಯನೊದಗಿಸು ಶಶಿಭೂಷ |

ಸುರನರೋರಗ ಪೋಷನಿರುಪಮ ನಿರ್ದೋಷ ಬೇಗ ಕರುಣಿಸು | |1||

ಅನುಚಿತ ಪುಶಿಪೈ ಸೂನ್ಯತೆ ಕಾರ್ಕಸ್ಯಾದಿಯಂ |

ದೆನಿಪ ವಚನದಘಗಳ ಕೆಡೆಸಿ ಘನ ವೇದಮನು ಜಪ |

ಸತ್ಯಭಾಷಣ ಮುಖ್ಯವನೆ ಸ್ಥಿರಗೊಳಿಸು ಭುವನ ಪಾಲ |

ಮನುಮುನಿ ನುತ ಲೋಲ ಕನಕಾದ್ರಿ ನಿಜಶಾಲ ಬೇಗ ಕರುಣಿಸು || 2||

ರಸೆಯೊಳು ಪರಧನ ಪರವನಿತೇಚ್ಛಾದಿ ಮುಸುಗಿದ ಮನದಘಗಳ |

ಕೆಡಿಸಿ ಮಿಸುಪ ಶಮೆ ದಮೆ ಶಂಕರ ನಿಷ್ಠೆ ಮುಖ್ಯವ |

ನೊಸೆದೆನ್ನಗೀಯೊ ವಿಮಲ ಭಾವ ಭಸಿತೋದ್ಧೊಳಿತ ದೇವ |

ಲಸಿತಗಜೆಯ ಜೀವ ಬೇಗ ಕರುಣಿಸು ||3||

ಎನಗಿದನೆ ಕರುಣಿಸಭವ |

ಘನಮುಕ್ತಿಯ ಸಾಧನವನನುದಿನದಿ ||ಪಲ್ಲ||

ಭುವನದೊಳದಿದೆಂಬುವ ತತ್ವಂಗಳ |

ತವೆ ಶೋಧಿಸಿ ಕಳೆದುಳಿದಿರುವ |

ಶಿವತತ್ವವೆ ನಿಶ್ಚಯನಾಹುದೆಂ |

ದವಿರತ ನಂಬಿರಲದೆ ಸುಜ್ಞಾನವು ||1||

ದೇಶ ಕಾಲ ಬಳಿಕಾಸುವಸ್ತುವಿ |

ನೊಳೋಸರಿಸದ ಪ್ರೀತಿಯು ತನ್ನೋಳ್ |

ಲೇಸೆನಿಪಾ ತೆರ ಗುರುದೈವತರಲಿ |

ಸೂಸುವಹಿತಮಿರುತಿರಲದೆ ಭಕ್ತಿಯು ||2||

ವನಿತಾದಿ ಸಕಲ ಬಿನಗು ವಿಷಯ ಸುಖ |

ಕಿನಿತಾದರು ಮನವನು ಕೊಡದೆ |

ಅನಘಾದ್ವಯ ಶಂಕರ ಗುರುವರನಂ |

ತನವರತಮಿರಲ್ಕದೆ ವೈರಾಗ್ಯವು ||3||

ವೃಷಭ ವಾಹನನೆ ದುರ್ವಿಷಯಗಳಳಿದುಸ |

ದ್ವಿಷಯಗಳನು ಪೌರುಷದಿಂದೀಯೊ ನೀ |

ಮಿಷವಗಲದೆನಗೆ ||ಪಲ್ಲ||

ತರುಣಿಯ ಸುಂದರ ಮುಖಮಂ |

ನೆರೆ ನೋಡ್ದಾಶ್ಚರಿ ಪಡುವಾ |

ವರ ನೇತ್ರಕೆ ಭಾಸುರ ಸತ್ಪುರುಷರ |

ದರಿಶನದಿಚ್ಛೆಯನಿರಿಸುತ ಕಾಯೊ ||1||

ಯುವತಿಯಳಾಡುವ ನುಡಿಯಂ |

ಜವದಿಂ ಕೇಳುವ ಕಿವಿಗೆ |

ಶಿವ ನಿನ್ನತ್ಯುತ್ಸವದಿಂದಲಿ|

ಪಾಡುವ ಶಬ್ದವನಿತ್ತವಿರತ ಕಾಯೊ ||2||

ಸುದತಿಯ ಮಾಂಸದ ತುಟಿಯಂ |

ಮುದದಿಂದಾಪೇಕ್ಷಿಸುವ ಮೃದರಸನೆಗೆ ತವ |

ಸದಮಲವಹ ಮಂತ್ರದ |

ಪರಮಾಮೃತ ವದಗಿಸಿ ಕಾಯೊ | |3||

ಪ್ರಮದೆಯ ಮೈಬೆಮರಿನ ಗಂ |

ಧಮನಾಘ್ರಾಣಿಪೆನೆಂದು ಭ್ರಮಿಸುವ ಘ್ರಾಣಕೆ |

ಕ್ಷಮೆಯಿಂ ತವಪದ ಕಮಲದ ಗಂಧವ |

ನಮರ್ದಿಸಿ ಕಾಯೊ | |4||

ವನಿತೆಯ ಸ್ಪರಿಶನ ಸುಖಮಂ |

ನೆನಿಸುತ ತಾನಾಶಿಸುವ |

ತನುವಿಗೆ ಶಂಕರ ಘನ ಗುರು ಸೇವೆಯ

ನನುಗ್ರಹಿಸುತ್ತನುದಿನದಲಿ ಕಾಯೊ ||5||

ದೇಶ ಕಾಲ ವಸ್ತು ಮೂರರಿಂದ ದುಷ್ಕೃತಗಳಳಿದು |

ಮೇಶ ಪೊರೆವನೀ ಕ್ರಮದಿಂದಂ ಈ ಶರೀರವಿಡಿದು |

ಮನುಜನೀಶನೆನಿಪ ಭಕ್ತಿಯಿಂ | |ಪಲ್ಲ||

ವಾರಣಸಿಯೊಳೋರ್ವ ವಿಪ್ರ ಜಾರತನದಿ ಸತಿಯಗೂಡಿ |

ಸಾರತರದ ತನ್ನ ಮತವ ದೂರಿ ಸುರೆಯ ಭಾಂಡದಲ್ಲಿ |

ಜಾರಿ ಬಿದ್ದು ಪ್ರಾಣವಳಿದನು ಸುರೇಶ್ವರನೆಂದೆಂಬ ಲಿಂಗವಾಗಿ |

ಮೆರೆದನು ಮಾರಹರನ ಪುರಕೆ ಪೋಗಿ ಭೂರಿಪದವ ಪಡೆದನು || 1||

ಕುಲ ವಿಹೀನಳಾದ ಓರ್ವ ಲಲನೆಗೊಲಿದು ತನಗುದಿಸಿದ |

ಚಲುವ ಸುತೆಯ ರಮಿಸಿ ದುರಿತ ಬಳಗದಿ ಸುಕುಮಾರನಿವನು |

ವಿಲಿಸಿತ ಶಿವರಾತ್ರಿ ಕಾಲದಿ ಶಿವಲಿಂಗವನು ನಲಿದು ನೋಡ್ದ ಪುಣ್ಯದ |

ಬಲದಿ ಮಲಹರನವನಿಗೆ ಗಣಪದ ನಿಲದೆ ಕೊಟ್ಟ ಕರುಣದಿ ||2||

ದುರುಳ ಪಾಪಿ ವ್ಯಾಧನೊರ್ವ ಮರಣ ಪೊಂದಿ ಬಿದ್ದಿರಲ್ಕೆ |

ಧರೆಯೊಳೊಂದು ಶುನಕ ಮಸಣದಿರುವ ಬೂದಿಯನ್ನು ತುಳಿದ |

ಚರಣವ ವನಫಾಲ ಭಾಗದಿ ಇಟ್ಟೈದಲಾಗ ಗುರುವರ ಶಂಕರನು ಪ್ರೇಮದಿ |

ದುರಿತ ಕೋಟಿಗಳನು ಪರಿದು ಪೊರೆದನವನುದಾರದಿ | |3||

ನಿರ್ಮಲ ಶಿವಭಕ್ತಿ ಪೇರ್ಮೆಯಿಂದಿರೆ ಕಾಲ |

ಕರ್ಮ ಮಾಯಗಳ ಜೈಸಲಿಬಹುದು ||ಪಲ್ಲ||

ಧರೆಯೊಳು ಪದಿನಾರು ವರುಷದಾಯುಷ್ಯದ |

ಪರಿಮಿತಿ ತೀರಿದ ಸಂಗತಿಯರಿದು ಮಾರ್ಕಂಡೇಯ |

ಕಳವಳವೆರಸಿ ಪರಮೇಶ್ವರನ ಪೂಜಿಸಿ |

ಧುರದೊಳೆ ಮನನು ಮುರಿದು ಜೈಸಿತ |

ಪರಮ ನಿತ್ಯತೆ ಪಡದನಾಗಿ ||1||

ನರಧರ್ಮದೊಳು ಮಾಡದಿರದ |

ಕೃತ್ಯಗಳನ್ನು ವಿರಚಿಸಿ ಪಾಪಿಯಾಗಿಹ ವಿದಳ |

ಮರಣ ಸಮಯದೊಳಿರದ ಹಾರಮೆನುತ್ತ ತನಗಹ |

ನರಕ ದುಃಖದ ಪರಿಭವಣೆಯನು

ವರಿಸದ ಭವನ ವೆರಸಿ ಮುಕ್ತಿಯ ಪಡದನಾಗಿ ||2||

ಪುಶಿಯಾದ ಮಾಯೆ ವಂದಿಸಲಾರೆ ನಿನಗೆಂದು |

ಉಸುರಿದ ನುಡಿಗೇಳಿ ಗಿರಿಜಾತೆಯು

ಅಸವಸೆಯೊಳೆನ್ನಂಶ ತಾರೆನೆ ಮಿಸುಕದಾಗಳೆ |

ಬಿಸುಟೆ ಭೃಂಗಿಯು ಅಸಮ ಶಂಕರನಿಂದೆ ಮೂರನೆ |

ಪೊಸ ಚರಣವನು ಪಡದನಾಗಿ ||3||

ಹರನ ಸದ್ಭಕ್ತಿಯೊಂದಿರಲವರಿಗೆ ಮಹಾ |

ದುರಿತ ಕಾರ್ಯಗಳೊಳ್ಳೆವಾಗಿ ತೋರುವವು || ಪಲ್ಲ||

ದ್ಯೂತದಿನಳಮಾಂಧಾತ ಧರ್ಮಜರೆಲ್ಲ |

ಸೋತು ರಾಜ್ಯವನು ದುಃಖದಿ ಕೂಡ್ದರಾ

ದ್ಯೂತನಾಡುತ ಮೂರ್ಖನಾ |

ನಾಥನು ಕೈಲಾಸ ಕಾತುರದಿಂ ಪೋದ |ಭೂತಲವರಿವಂತೆ ||1||

ಮೃಗ ಬೇಂಟೆಯನ್ನಾಡಿ ಜಗದೊಳು ಶ್ರೀರಾಮ |

ನಗಣಿತ ಕಷ್ಟಕ್ಕೆ ಗುರಿಯಾದಾನಾ |

ಮೃಗ ಬೇಂಟೆಯಿಂ ಕಣ್ಣಯ್ಯಗೆ ಶಂಕರನು ಮೆಚ್ಚಿ

ಮಿಗೆ ಹರುಷದಿ ಮುಕ್ತಿ ಕೊಡಲಿಲ್ಲವೇನು ||2||

ಹೊನ್ನು ಹೆಣ್ಣಿಗೆ ಭ್ರಾಂತಿಯನ್ನು ಗೈದಖಿಳ |

ಭೂಮಾನ್ಯ ರಾಜರು ದುಃಖಕೊಳಗಾದರಾ

ಹೊನ್ನು ಹೆಣ್ಣಿಗೆ ಮನವನ್ನಿತ್ತ ಶಿವನಂಬಿ

ಉನ್ನತ ಮುಕ್ತಿ ಪಡೆದ ಶರಭೇಶನಿಂ ||3||

ಶಂಭುವಿನೊಳುರೆ

ನಂಬಿಗಿರೆ ಸಾಕೈ ಪಿರಿದಂಬಲಮೇಕೈ |ಪಲ್ಲ||

ಮಾನವರಿಗೆ ಶಿವ ಧ್ಯಾನಮೆಂಬ ಮಡಿ

ತಾನಿರಲು ಜಲಧಿ ಸ್ನಾನಮದೇಕೈ ||1||

ಹರಸಖ್ಯಮೆನಿಪ ಸುರಧೇನಿರೆ ಗೋ

ಕರ್ಣಕೆ ನೀ ಸಂಚರಿಸುವದೇಕೈ ||2||

ಗುರು ಶರಭನ ಪದ ಸ್ಮರಣಮೆಂಬ ಧನ

ಮಿರೆ ಕಾಸಿಗೆ ನೀ ತೆರಳಿವದೇಕೈ ||3||

ನಂಬಿ ಭಜಿಸೋ ಮನುಜ ಶಂಕರನನು |

ನಂಬಿ ಭಜಿಸೋ ಮನುಜಾ |

ನಂಬಿ ಭಜಿಸಲಾ ಸಾಂಬಸದಾ ನಿ |

ನಗಿಂಬಾಗಿರುವನು ||ಪಲ್ಲ||

ಸಾರವೇ ಸಂಸಾರವಿದು ನಿಸ್ಸಾರವೆನಲವನಿಗೆ ಸುಖಾಸ್ಪದಪು

ಅನುದಿನ ಸಾಧನದೊಳ್ಕೂಡ್ಡನುಪಮ |

ದೇವನವಿದ್ಘನತರ ನಾಮಗಳನು ನೆನಿಯುವ |

ಭಾವನಮೊಂದಿರುತಿರೆ ಖಳಗಾಳೆನಿಪನು ||1||

ಗುರು ಪಾದಕ್ಕೆರಗಿ ಕರುಣವನು ಪಡೆದು |

ಹರನ ಪ್ರತಿರೂಪನೆಂದಿಳೆಯೊಳರಿದು |

ನರಾಧಮರಾರವರಾಶ್ರಯನಳಿದು |

ಸ್ಮರಿಸಲು ಸಂಪದದಿ2ರಿಸುವ ನಿರುತದಿ ||2||

ಯತಿ ತತಿಗಳ ಕೂಡಿ ಅತಿ ಹಿತದಿಂದೊಡನಾಡಿ |

ನುತಿಗೊಮ್ಮೆನ ಮಾಡಿ ನೋಡಿ ವೆಥಿಸುತ|

ನುತಿಸುತ ಶಾಸ್ತ್ರ ಸಮ್ಮತಿ ಸುತ ಕ್ಷಿತಿಯೊಳಗಿರಲಾ |

ಪಥ ನಾಮಕ ಪುರಿಪತಿ ಶರಭಮಾರ ಹಿತನನೆಗಳ್ವನೆ ||3||

ಪಾಳಿಸು ಶಿವ ಶಂಭೋಯನ್ನ ನೀಂ |

ಪಾಲಿಸು ಶಿವಶಂಭೋ ಪಾಲಿಸುನುತಿಯನು |

ಲಾಲಿಸು ಸುಖಕನು ಕೂಲಿಸು ಬೇಗನೆ |

ಶೂಲಿ ಸುಖಾಬ್ದಿಯೆ ||ಪಲ್ಲ||

ಪುರ ಪರಿಪಾಲಿಸುಪ ರಾಜನನು |

ಸ್ಮರಿಸಲ್ಕೆಲ ಹಣವ ಸರಸದಿಂದೆ ಕೊಡುವ |

ನಂಬಿಕೊಂಡಿರುವರನ್ನು ಪೊರೆವ

ಹರನೆ ನೀಂ ತ್ರಿಜಗಕರಸನಾಗಿ ಸಲೆ

ಸ್ಮರಿಸುವ ಬಾಲನ ಮರಿವದು ನ್ಯಾಯವೆ ||1||

ಕನಸಿನೊಳಗೆ ಬಂದು ಸುತನೆ ಈಯನುವನು ಮಾಡೆಂದು

ಘನ ಪದವಹುದೆಂದು ಪೇಳು ಪೇ

ಳೆನಗಭಯವನೊಂದು |

ಮುನಿನುತ ನಿನ್ನಯ ತನಯನನೀ ಪರಿ |

ಅನುಮನಗೊಳಿಪುದು ನಿನಗಿದು ಶ್ರೇಯವೆ ||2||

ಪೊರೆಯುವನೆಂದರೆದರಿದು ನಿರುತನಾ |

ಸ್ಮರಿಸುವೆನೈಪಿರಿದು ತರುಳನನ್ನು ಜರಿದು |

ಬರಿದೆನೀ ಮರುಗಿಸುವರೆ ಮರೆದು |

ಧರೆಯೊಳೆನ್ನನನ್ಯರ ಬಳಿಗೈಸಲು |

ವರಬುಧರಿದಕೊಪ್ಪರು ಶರಭೇಶನೆ |3||

ಮುಕ್ತಿ ದೊರೆಯದಣ್ಣ ಸುಮ್ಮನೆ |

ಮುಕ್ತಿ ದೊರೆಯದಣ್ಣ |

ಮುಕ್ತಿ ದೊರೆಯದು ವಿರಕ್ತಯಿಂದೆ ಸಲೆ |

ಸತ್ಯ ತಿಳಿದು ಗುರು ಭಕ್ತಿಯಿಲ್ಲದಿರೆ ||ಪಲ್ಲ||

ತನುಮನು ದಂಡಿಸಲಿ ಚರಿಸುವ |

ಮನವನು ನಿಲ್ಲಿಸಲಿ ಮನೆಯನುಳಿದು ಗಿರಿ |

ಕೊನೆಯೊಳೆ ತಪಿಸಲಿ ದಿನದೊಳೊಮ್ಮೆ ಗುರು |

ವಿನ ನೆನೆಯದವಗೆ ||1||

ಶೃತಿ ಶಾಸ್ತ್ರವ ಪಠಿಸಿಯರ್ಥವ |

ಹಿತಜನರಿಗೆ ತಿಳಿಸಿ ಯತಿಯನಿಸಲಿ ಬಹು |

ಚತುರನೆನಿಸಲಿ ಕ್ಷಿತಿಯೊಳು ಗುರು |

ಸನ್ನುತಿ ವಿರಹಿತನಿಗೆ ||2||

ಹರಿವ ವಾಯು ನಿಲಿಸಿ ಲಕ್ಷವ |

ಸರಸದಿಂದೆ ಬಲಿಸಿ ನೆರೆ ಸುಖಿಸಲಿ |

ಶ್ರೀಗುರು ಶಂಕರನೊಳು ಸ್ಥಿರ ಮನವಿಲ್ಲದ |

ಮರುಳ ಮತಿಗಳಿಗೆ ||3||

ಬಂದನು ಗುರು ಮನಿಗೆ ಸಂತೋಷದಿ |

ಬಂದನು ಗುರು ಮನಿಗೆ |

ಬಂದನು ಗುರು ಮನಿಗಿಂದುಯೆನ್ನಯ ಭವ

ಬಂಧವ ತರಿಯಬೇಕೆಂದತ್ಯಾತುರಿಂದೆ ||ಪಲ್ಲ||

ನಗುರೋರಧಿಕನೀತನು |

ತತ್ವಾರ್ಥದೊಳಗಣಿತ ಪ್ರಖ್ಯಾತನು

ಜಗದೊಳೆನ್ನಗೆ ಬಂದು ತಗಲುವ ದುರ್ವಿಷಯಗಳ

ಬೇರನು ಕೀಳ್ವ ಬಗೆಗಾಗಿ ಬಹು ಬೇಗ ||1||

ಭವರೋಗ ವೈದ್ಯಾನೀತ ಶೋಭಿಪ ವರ |

ಶಿವಯೋಗಿ ಸಚ್ಚರಿತ ಅವನಿಯೊಳೆನ್ನನು |

ಅವತುಕೊಂಡಿಹ ದುಷ್ಕರ್ಮವನು ಕಡೆದು |

ಶಾಸ್ತ್ರ ಶ್ರವಣಗೊಳಿಸಲಿಕ್ಕೆ ||2||

ಉಪಮಾನ ವರ್ಜಿತನು ಶಂಕರ ಗುರು

ತಪಸಿಯೆಂಬುವನೀತನು

ಕುಪಿತನಾದೆನ್ನಗೆ ಕೈಪೆಯಿಂದ ಕೈ ಪಿಡಿ

ದುಪದೇಶವಿತ್ತು ಪಾಲಿವುದಕ್ಕೆ ಪದುಳದಿ ||3||

ಸಂತೋಷವಾಯಿತು ಮನ ಸಂತೋಷವಾಯಿತು

ನಿರ್ದೋಷ ಗುರುವಿನ ಸುಭಾಷೆಗೇಳಿ ||ಪಲ್ಲ||

ನಾನಾ ಕ್ಷುಲ್ಲಕ ಯೋನಿಯೊಳಗೆ |

ಜನಿಸೀ ನರಜನ್ಮಕೆ ಬಂದೆನು |

ಅಜ್ಞಾನದುರಿಗೆ ಬಲು ಬೆಂದೆನು |

ದುಮ್ಮಾನದೊಳಗೆ ನಾ ನೊಂದೆನು |

ಯೇನು ಮುಂದರಿಯದಾನಿರುತಿರೆ ಶಿವ |

ಮಾನವ ರೂಪದಿ ತಾನಿಳಿಯಲು ಸಂತೋಷ ||1||

ಹೇಯವಾದ ಯೀ ಕಾಯವ ತಾಳುತ |

ಮಾಯದ ಸಂಸೃತಿ ನೋಡಿದೆ |

ಅನ್ಯಾಯ ಮಾರ್ಗದೊಳು ಕೂಡಿದೆ |

ಆಮ್ನಾಯಗಳನು ಪುಶಿ ಮಾಡಿದೆ |

ಸಾಯುವ ಪುಟ್ಟುವ ಪಾಯಗಳೆಂಬುವ |

ಆಯಸ ಕಳೆವವುಪಾಯ ಕಂಡು | |2||

ಮಾರನು ತನ್ನಯ ಕ್ರೂರ ಕಣೆಗಳ |

ನ್ನೂರಲ್ಕೆದೆಯೊಳು ಭರದಿ | ಮನ |

ಸೂರೆಗೊಂಡನಾ ಕ್ಷಣದಿ | ಸುವಿ |

ಚಾರ ಹಿಂಗಿತಂತರದಿ ನಾರಿಯಿಂ | ಪಡೆದ |

ಭೂರಿಪಾಪ ಸಂಹಾರ ಗುರು | ಶಂ

ಕರಾರ್ಯನೆಂದು ಸಂತೋಷವಾಯಿತು | ||3||

ಗುರು ದೇವಾ ನಾ ತಾಳಲೆಂತು |

ಗುರು ದೇವಾ ನಾ ತಾಳಲೆಂತು |

ಧರೆಯೊಳು ಭವ ಬಾಧೆ |

ಪಿರಿದೆನ್ನ ಬಳಲಿಸುವದೀಗ |ಪಲ್ಲ||

ಎಡರು ಬಂದೆನ್ನನು |

ಕಡೆಹಿ ದುಃಖಿಸುವದು |

ಮಡದಿ ಪೊಡವಿ ಮೋಹ |

ತೊಡೆರ್ದು ತೊಳಲಿಸುವದೀಗ ||1||

ಕರಣೇಂದ್ರಿಯಗಳೆನ್ನ |

ಶರೆಯೊಳಿಟ್ಟನುದಿನ |

ದುರಿತ ದುರಿಗೆನೂಕಿ |

ಪರಿತಾಪ ತೋರುತಿಹವು ||2||

ಮನವೆಂಬ ಕೋತಿಯು |

ದಿನಕ್ಕೊಂದು ಯೋಚಿಸಿ |

ಜನರಲಿ ಕುಣಿಸುತ |

ಘನ ಹಾಸ್ಯ ಮಾಳ್ಪುದೀಗ ||3||

ಆರು ವೈರಿಗಳೆನ್ನ |

ದಾರಿ ಬಂಧಿಸಿ ಮಕ್ಕ |

ಮಾರಿಗಳಂತೆವಳ |

ಸೇರಿ ವೇಧಿಸುವವಕಟ ||4||

ಮರಹೆಂಬುದು ಜ್ಞಾನ |

ದಿರವನು ಕೆಡಿಪುದು |

ಗುರು ಶಂಕರೇಂದ್ರ |

ದಯದಿಂದೇ ನೀ ಪಾಲಿಸೆನ್ನ ||5||

ಬೋಧಿಸೋ ಸಲೆ ಬೋಧಿಸೋ |

ವೇದಕ್ಕೆನಿಲ್ಕನಾದಿ ಶ್ರೀಗುರುವೆ ಸ |

ಮ್ಮೋದದಿಂ ಶಿವ ಜೀವ ಭೇದವ ಬಿಡಿಸಿ ನೀ ||ಪಲ್ಲ||

ಪುಟ್ಟುವದೀ ಕಾಯಮಿಹದಿ ವೇಷ |

ತೊಟ್ಟು ಸಂಚರಿಪುದು ಭರದಿ ತಾನೆ |

ಕೆಟ್ಟು ಪೋಪುದು ಕೆಲ ದಿನದಿ |

ಇಷ್ಟದಿಂದಲಿ ಲಾಲಿಸಿಷ್ಟೇತರಿಂದಾದು |

ದಷ್ಟೆನ್ನಗೀಗ ಸಂತುಷ್ಟದಿ ತಿಳಿಸಿ ನೀ ಬೋಧಿಸೋ ||1||

ಕರ ಕಾಲು ಕಟಿ ಗುಂಹ್ಯ ಗುದವು ಮೇಲೆ |

ಶಿರ ಕರ್ಣ ನೇತ್ರ ನಾಸಿಕವು ಮತ್ತ |

ಮುರ ಸ್ತನವಂಗುಲ ನಖವು |

ನರ ಕೇಶಗಳು ಕೂಡಿ ಶರೀರವಾಯ್ತೇತಕ್ಕೆ |

ಮರುಗುವೆನರಿಯದೆ ಸರಸದಿ |

ತಿಳಿಸಿ ನೀ ಬೋಧಿಸೋ ||2||

ಆರು ಚಕ್ರಗಳಿಹ ನೆಲೆಯ ಮಿತಿ |

ಮೀರಿದುನ್ಮನೆಯ ಸುನಿಳಯ ಸುಖ |

ಸಾರ ಬ್ರಹ್ಮನ ನಿಜ ಕಳೆಯ |

ಭೇರಿಮ್ಮದಂಗಾದಿ ಭೂರಿನಾದಗಳೆಲ್ಲಿ |

ದೀರ ಶ್ರೀಗುರು ಶಂಕರಾರ್ಯನೆ ತಿಳಿಸಿ ನೀ |

ಬೋಧಿಸೊ ಸಲೆ ಬೋಧಿಸೋ ||3||

ಹೊಕ್ಕೆನು ಮರೆ ಹೊಕ್ಕೆನು |

ಸಿಕ್ಕು ಸಂಸಾರದಿ ಬಿಕ್ಕಿ ಬಾಯ್ಬಿಟ್ಟು |

ನಾ ಚಕ್ಕನೆ ಗುರುವೆ ಪದಕ್ಕೆ |

ಬೀಳುತ ಮರೆ ಹೊಕ್ಕೆನು ||ಪಲ್ಲ||

ಖಗ ಮೃಗ ಪಶು ರೂಪ ತಾಳಿದೆ ಅಲ್ಲಿ |

ಅಗಣಿತ ಕಷ್ಟದೊಳ್ಕೂಡಿದೆ ಕಲಿ |

ಯುಗದಲ್ಲಿ ನರನಾಗಿ ಪುಟ್ಟದೆ |

ಬಗೆ ಬಗೆವದಗುವ ಮಿಗೆ ದುಃಖ ತಾಳದೆ |

ನಗುರೋರಧಿಕನೆಂದು |

ಜಗದೊಳರಿದು ಮರೆ ಹೊಕ್ಕನು ||1||

ನವ ಯವ್ವನದಿ ನೀತಿಗೆಟ್ಟೆನು ರೂಪ |

ಯುವತಿಯರಿಗೆ ಚಿತ್ತವಿಟ್ಟೆನು ಶೃತಿ |

ನಿವಹ ನುಡಿಯ ಮರೆದಿಟ್ಟೆನು ಭವ |

ಭವ ತಿರಗುವ ಭವಣೆಗೆ ಬೆದರುತ |

ಭವ ರೋಗ ವೈದ್ಯನೆಂಬುವದನರಿದು ||2||

ಮರೆ ಮೋಸದುರಿಯೊಳು ಸುಟ್ಟೆನು ಯತಿ |

ವರರ ದೂಷಿಸಿ ಮತಿಗೆಟ್ಟೆನು ಕೆಟ್ಟ |

ದುರಿತ ಕಾರ್ಯಕೆ ಮನಗೊಟ್ಟೆನು |

ಹರ ಮುನಿದರೆ ತಾನೆ ಗುರು ಕಾಯ್ವನೆಂಬ |

ಬಂಧುರ ನುಡಿ ಶಾಸ್ತ್ರದಿಂದರಿದು ಶಂಕರ ||3||

ಎಂತು ದೊರಕುವದೊ ನರರಿಗೆ |

ಯಂತು ದೊರಕುವದೋ ಇಂತು

ಲಿಂಗ ಪೂಜೆಯನೆಸಗುವದಿದ

ನಂತ ಜನ್ಮದ ಸುಪುಣ್ಯಮಿರದೆ ತಾನೆಂತು ||ಪಲ್ಲ||

ಘನ ಲಿಂಗದ ಕಳೆಯನು ಭಾವಿಸುವನು |

ದಿನದೊಳು ಹೃದ್ವನಜದಿ ನೆನೆವ

ಮಿನಗುವ ದ್ವಯಲೋಚನದಿಂದ ನೋಡುವ

ತನುವ ಚೋಮನಸಿಗಿಂ ಬಿಡುತಿಹ ಸುಖ ||1||

ಸರಸದಿ ಮಜ್ಜನವೆರವ ವಸನವನು |

ಧರಿಸುವ ಗಂಧಾಕ್ಷತೆಯಿಡುವ |

ಪರಿಪರಿಯಿಂ ಸಿಂಗರಿಸಿ ಧೂಪ |

ವಿತ್ತುರಿವ ಜೋತಿಯಾರತಿ ಬೆಳಗುವ ಸುಖ ||2||

ಸವಿ ರಸಗಳನೂಡುವವರ ತಾಂಬೂ |

ಲವ ನೀಡುವ ಛತ್ರವನಿಡಿವ ನವಚಾಮರ ವೆ |

ತ್ತುವ ಮುಕುರವ ಪಿಡಿಯುವ |

ಬೀಸಣಿಗೆಯ ಬೀಸುವ ಘನಸುಖ ||3||

ಕರಣ ಶುದ್ಧಿಯಿಂದಿರದೆ ಭಕ್ತಿ |

ಯಾಂತೆರಗುವ ತನುಪುಳಕವನಿಡಿದು |

ನೆರೆ ಪಾಡುವ ಮುಂಬರಿದು ನೇತ್ರದೊಳು |

ಪರಮಾನಂದಾಶೃಗಳು ಸುರಿವ ಸುಖ ||4||

ವಿಲಸಿತ ಪುಷ್ಪಾಂಜಲಿ ಗೆಯ್ಯುವ |

ನಿಚ್ಚಳದಿಂ ಬಗೆಬಗೆ ಬಣ್ಣಿಸುವ |

ಮಲಹರ ಶಂಕರ ಸಲೆ ಗುರುವೆನಿಸುವ |

ಇಳೆಯೊಳಿನಿತು ಲಿಂಗದ ಸಂಭ್ರಮ ಸುಖ ||5||

ಯಾತರ ಭಯ ಎನಗೆ ಇಳೆಯೊಳಿ |

ನೇತರ ಭಯವೆನಗೆ ಯಾತರ ಭಯ ಗುರು |

ನಾಥನಡಿವಿಡಿಯಲಾತನು ಮುಂದಿನ |

ಭೀತಿ ಕಳೆದನಿನ್ನೇತರ ||ಪಲ್ಲ||

ಮರಹೆಂಬುವ ತಮವು ಯನ್ನಾ |

ವರಿಸಿತ್ತನುದಿನವು ಗುರುವೆಂಬ ದಿವಾ |

ಕರನುದಯಿಸಲದು ಪರಿದು |

ತೋರದಂತಿರದೋಡಿತು ಇನ್ನೇತರ ||1||

ಪರಿಪರಿ ದುರ್ಗುಣದಿ ಕಾಯವು |

ಕರಿಗೊಂಡಿತ್ತಿಹದಿ ಗುರು ಕರ ಪರುಷವು

ಶಿರವನು ಸೋಂಕಲು ಪರಿಶುದ್ಧ |

ವದಾಯ್ತರ ನಿಮಿಷದಿಯಿನ್ನೇತರ ||2||

ಭೂತಲದೊಳು ಮುನ್ನ ಮಾಯಾ |

ಭೂತವು ಬಂದೆನ್ನನಾತುಕೊಂಡು ಬಹು

ಘಾತಿಸುತಿರೆ ಗುರುನಾಥನ ಮಂತ್ರಕೆ

ತಾ ತೊಲಗಿತುಯಿನ್ನೇತರ ||3||

ಗುರು ಶಂಕರ ಬೋಧಯಂಬುವ |

ಪರಮಾಮೃತ ಸ್ವಾದ ಧರಿಸಲು ಧರೆಯೊಳು

ಶರೀರಾದಿ ತ್ರಯ ದುರತವಡಗಿ ಸುಖ

ಪರನಾದೆನುಯಿನ್ನೇತರ ಭಯವೆನಗೆ ||4||

ಯೋಗಿಯ ಸಂಸಾರ ನೋಡಮ್ಮ |

ನಿನಗಾಗಿ ನಾ ಪೇಳುವೆ ಕೇಳಮ್ಮ ||ಪಲ್ಲ||

ಪರ ವಿದ್ಯೆಯಂಬ ಪ್ರಮದೆಯುಂಟು ಮತ್ತ |

ಪರಿತೋಷಮೆಂಬ ತನುಜನುಂಟು |

ವಿರತಿಯೆಂಬನುಕೂಲ ಚರನುಂಟು |

ಧರ್ಮಕರುಣಿಯೆಂಬಾ ಶ್ರೀತಜನರುಂಟು ||1||

ವಿಮಲ ಮಾನಸಮೆಂಬ ಮನೆಯುಂಟು ಒಳ್ಳೆ |

ಶಮೆ ಶಾಂತಿಯಂಬ ಸ್ನೇಹಿತರುಂಟು |

ದಮೆ ಧೃತಿಯೆಂಬ ಚಾಕರುಂಟು ಸತ್ಯ |

ಕ್ಷಮೆಯೆಂಬ ಪ್ರೋತ್ಸಾಹಿಸುವರುಂಟು ||2||

ಸುವಿವೇಕಮೆಂಬ ಜನಕನುಂಟು ರಾಜಿ |

ಸುವ ಶ್ರದ್ಧೆಯೆಂಬ ಜನನಿಯುಂಟು |

ತವೆ ಶಾಂತಿಯೆಂಬ ವಾಹನಮುಂಟು ಮಹಾ |

ಶಿವನೆಂಬ ಮನೆಯ ದೈವತಮುಂಟು ||3||

ಶ್ರುತಿಯಾಗಮಗಳೆಂಬ ಸಿರಿಯುಂಟು |

ವಿಲಸಿತ ಯೋಗಮೆಂಬ ಕ್ಷೇತ್ರಮದುಂಟು |

ನುತ ವಿಶ್ವಾಸೆಂಬುವಗ್ರಜನುಂಟು ಜಯ |

ಯುತ ಸುವಿಚಾರೆಂಬನುಜನುಂಟು ||4||

ಲಕ್ಷವೆಂದೆಂಬುವ ಹೊಲನುಂಟು |

ನಿಷ್ಟಕ್ಷಪಾತೆಂಬ ಕೃಷಿಕನುಂಟು |

ಅಕ್ಷಯ ಸುಖಮೆಂಬ ಬೆಳಸುಂಟು |

ವರ ಮೋಕ್ಷೈಕ ಶಂಕರ ಗುರುವುಂಟು ||5||

ಅನುದಿನ ಯೋಗ ಸಾಧನದೊಳಿರು ನಾಲ್ಕು |

ಜನರನು ತಿಳಿಸುವೆನಿದರಲ್ಲಿ ||ಪಲ್ಲ||

ಬಲಶೂನ್ಯನನುರಾಗಿಯಲಸು ಕಪಟಿ ಒಳ್ಳೆ

ಗೆಲಸ ವಿಹೀನನ್ಯವಶವರ್ತಿಯು |

ಸಲೆ ರೋಗಿ ಗೃಹ ಕೃತ್ಯ ನೆಲೆಯೋಳ್ರತನು ಇವ |

ನಿಳೆಯೊಳು ಮೃದುಯೋಗಿಯೆಂದೆನಿಸುವನು ||1||

ಸಮ ಭಾವಿ ಸುಖಿಕಾರ್ಯ ಸಮುದಾಯದೊಳು ಸಾಕ್ಷಿ |

ವಿಮಲಮತಿಯು ದೃಢತರ ದೇಹಿಯು |

ಸಮುದಿತ ಸುವಿವೇಕಿಯು ಮಿತಶಾಂತನು ಶಮೆ |

ದಮೆ ಭರಿತನುಯಿವ ಮಧ್ಯನೆನಿಪನು ||2||

ತವೆ ನೀತಿ ಧೈರ್ಯ ಸತ್ಯವಚನ ಶೌರ್ಯ ಗೌ |

ರವ ಸ್ಥಿರಚಿತ್ತ ಸುಧರ್ಮ ವಿವೇಕ |

ನವಯುಕ್ತಿ ವಿದ್ಯೆಯುತ್ಸವ ನಿರ್ಧಾರಣ ಗುಣ |

ನಿವಹಮಿರಲ್ಕಿವನತಿ ಮಾತ್ರನೆನಿಪ ||3||

ಇಹ ಪರಭೋಗವಿರಹಿತನು ಕರ್ಮನಿ |

ವಹ ದೂರನ ವಿಕಾರಿ ನಿರ್ಮಳನು |

ಬಹು ಶಾಸ್ತ್ರವಿದನುರುಸಹಸಿಯು ತತ್ವ |

ಸನ್ನಿಹಿತನುಯಿವನೀಗಲತಿ ಮಾತ್ರತರನು ||4||

ಇನಿಬರೊಲಿದು ಮಂತ್ರಲಯ ಹಟರಾಜಮೆಂ |

ದೆನಿಸುವ ನಾಲ್ಕನುಕ್ರಮವಿಡಿದು |

ಮನಟ್ಟಿಗೈದು ಚಿದ್ಘನ ಗುರುಶಂಕರೇ |

ಶನ ದಯದಿಂ ನಿಜ ಸುಖ ಪಡೆಯುವರು ||5||

ಯೋಗವನು ಮಾಡೋ ಎಲೋ ನೀ |

ಯೋಗವನು ಮಾಡೋ |

ಶ್ರೀಗುರು ಮುಖದಿಂದೀಗರಿದು ಪಂಚ

ಯೋಗ ರಚಿಸೆ ನಿನಗಾಗುವದು ಮುಕುತಿ ||ಪಲ್ಲ||

ಮಿರಿದ ವಂದೆರಡಾರೆಂಟಕ್ಕರ |

ದಾರಾಜಿಸುತಿಹ ಮಂತ್ರಗಳ |

ಸಾರಛಂದಗಳ ನಾರೈದೆಳಿಸು |

ತ್ತೋರಂತೆ ಜಪಿಸೆ ಮಂತ್ರ ಯೋಗವಿದು 1||||

ವರನಾದದಿ ಮೇಣ್ ಮಿರುಗುವ ಬಿಂದುವಿ |

ನುರು ತೇಜದೊಳಾಗಲಿಯೆಸುವ |

ವೆರಸುತ ಭೇದದಿ ಪೊರಬ್ರಾಂತಿಯನಳಿ |

ದಿರುತಿರೆ ಮನವಿದು ಲಯ ಯೋಗೆನಿಪುದು ||2||

ನಿಲದೆ ಪೋರಗೊಳಗೆ ಚಲಸುವ ಪ್ರಾಣಾ |

ನಿಲನಘ್ರಾಣದೊಳು ಕುಂಭಕದಿಂ |

ನಿಲಿಸುತಾರನೆಯ ನೆಲೆಯೊಳೆಸವ ಪ್ರಭೆ |

ಯೊಲಿದು ನಿರೀಕ್ಷಿಸಲಿದೆ ಹಟಯೋಗವು ||3||

ಪೊರಗೊಳಗಣ ಮೂದೆರ ಲಕ್ಷಗಳಿಂ |

ದುರಿದು ತತ್ವಗಳ ನಿಕರವನು ಚರಿಸುವ ಮಾನಸ |

ಕರಿಗೊಳಿಸುತಲೆಚ್ಚರ ಮರದಿರುತಿರೆ |

ರಾಜಯೋಗವಿದು ||4||

ಪರತರ ಗುರು ಶಂಕರನರ್ಚನೆಯಾ |

ದ್ಯುರುತರಮಾದೈದಿವುಗಳನು |

ಧರಣಿಯೊಳನುದಿನ ಸ್ಥಿರಮಾನಸದಿಂ |

ನೆರೆ ಸಾಧಿಸುತಿರಲಿದೆ ಶಿವಯೋಗವು ||5||

ನಿನ್ನೊಳಿಹ ಮಂತ್ರ ಜಪಿಸು |

ಯೋಗಿ ನಿನಗಿನ್ನನ್ಯ ಮಂತ್ರವ್ಯಾಕೊ ಸಾಕು ||ಪಲ್ಲ||

ಇಂದು ರವಿಮಾರ್ಗದೊಳಗೆ |

ಸವಿಸರ್ಗ ಬಿಂದು ಶಿವಶಕ್ತಿ ವರ್ಣವೆರಡು |

ಪೊಂದಿ ಚಲಿಸುತ್ತೆಲ್ಲರೋಳ್ ಬಿನದಿಸುವ |

ಕುಂದದಾತ್ಮ ಪ್ರಸಾದವಹುದು ||1||

ಮೂರೇಳು ಸಾಹಸ್ರದ ಮೇಲಾರು |

ನೂರು ಜಪದಿಂದಹ ಫಲವಹುದು |

ಪೂರ ದಿನಮೊಂದೊಂದಕೆ ಉದಯದೊಳು |

ಮೀರದಾ ಮಂತ್ರ ಜಪಿಸುತಿಹುದು ||2||

ಎರಡಕ್ಷರದ ಮನುವಿದು ಆ ಯೆರಡು |

ಚಿರದ ಸಂಗಮ ಸ್ಥಲದೊಳು ನಾದ |

ಹೊರಡುವದು ವಿಧವಿಧದೊಳು ಅರಿಯಲಿದೆ |

ಪರಮ ಪ್ರಣವ ಮಂತ್ರಪು ನಿಜವು ||3||

ಆರಬ್ಜದೆಸಳೆನಿಸಿದ ಐವತ್ತು |

ಸಾರಮಾತೃಕೆಯ ಮಂತ್ರವಹುದು |

ಭೂರಿ ಕರ್ಣಿಕೆಗಳಾಗಿ |

ತೋರುವನಕಾರಾದಿಯಹ ಮಂತ್ರವೇ ಮೂಲ ||4||

ಇನಿತಮಲಮಂತ್ರ ನಿಚಯ ವಾಚಕವಿವನು |

ಬೆರದ ಗುರುಶಂಕರ ವಾಚ್ಯ |

ಮನಸಿನಿಂದಿವುಗಳರಿದು ಜಪಿಸೆ ಪರ |

ತರ ಮುಕ್ತಿ ಸಿದ್ಧಯಹುದು ಸತ್ಯ || 5||

ಅರನಿಮಿಷಾದರು ಹರ ನಿನ್ನ ನೆನಹು ನಿಂ |

ದಿರಲು ಸುಮೋಕ್ಷ ದೊರೆಯದಿಹುದೇ ||ಪಲ್ಲ||

ಗಂಗಾದಿ ಮೂನದಿ ಸಂಗಮದೊಳು ಮಿಂದು |

ಭಂಗಗೊಡುವ ಮೂಮಲದೊಳಿದು |

ಪಿಂಗಿ ಮೂಗುಣವನುತ್ತುಂಗ |

ಪ್ರಕಾಶದೊಳಂಗವಿಸುವ ಮನಸನಿಲಾಕ್ಷಿಗಳು ಕೂಡಿ ||1||

ಅನಿಲನ ಗಮನದೊಡನೆ ಚರಸುವಡ್ವದಂದ್ವ |

ಮಿನಗುವಕ್ಷರಗಳ ಪೆಸರಳಿದ |

ಘನತಾಣದೊಳುಯೇಕಮೆನಿಪಕ್ಷರಿಯನಾದವನು |

ಕೇಳ್ವ ಸುಖದೊಳನ್ಯವ ಮರೆದು ||2||

ಹಾದಿನಾಲ್ಕರ ನಡುವೇದಿಕೆಯೊಳಗುರಿ |

ವಾದೀವಿಗೆಯೆ ತಾನೆಯಾಗಿರುವ |

ವೇದಾಗಮಾತೀತ ದೇದೀಪ್ಯ ಚಿನ್ಮಯ |

ನಾದ ಶ್ರೀಗುರು ಶಂಕರನೊಳೊಂದೆ ಭಾವದಿಂ ||3||

ನಿನ್ನೊಳಿಹ ತೀರ್ಥಕ್ಷೇತ್ರಗಳನರಿಯ |

ದಿನ್ನನ್ಯ ಬಯಪುದೇಕೊ ಮೂಢ ||ಪಲ್ಲ||

ಎಡದ ನಾಡಿಯೆ ಗಂಗೆಯು |

ಮೆರವ ಬಲಗಡೆಯ ನಾಡಿಯೆ ಯಮುನೆಯು |

ಮತ್ತಾ ನಡುನಾಡಿಯೆ ಸರಸ್ವತಿ ಇವು ಕೂಡಿ |

ದೆಡೆಯೇ ತ್ರಿಕೋಣ ನೋಡು ಮುದದಿ ||1||

ಶಿರಮೆಂಬುವದೆ ಶ್ರೀಗಿರಿ |

ಶ್ರೋತ್ರಂಗಳುರುತರದ ಗೋಕರ್ಣವು |

ಕುಚವೇ ಕುರುಕ್ಷೇತ್ರವುರಮೆವುಳುಮೆ |

ಕರಕಾಂಚಿ ವರ ಭೃಕುಟಿ ಮಧ್ಯಕಾಶಿ ಪುರವು || ||2||

ಒಳಗಿರ್ಪ ತೀರ್ಥಗಳಲಿ ಮಿಂದು ತ್ರೈ |

ಮಲದೊಳೆದು ಕ್ಷೇತ್ರಗಳನು ನೋಡಿ |

ನಿಲೆ ಶಂಕರೇಶನೆನಿಪ ಬಿಂದುತ್ರಯ |

ಸಲೆ ಲಿಂಗವೆಂದು ತಿಳಿದು ಭಜಿಸೋ || ||3||

ಎಂತು ಮುಕ್ತಿಯ ಪಡಕೊಳುವಿ ಮನವೆ |

ನಿಜವಂ ತಿಳಿಯದಿನ್ನೆಂತು ||ಪಲ್ಲ||

ನಾಡಿ ಬಳಗದೊಳುಜ್ವಲಿಸುತಿರುವ ಸುಷುಮ್ನದಂತರ |

ಗೂಡನತಿ ಭೇದಿಸುತೆ ರಂಜಿಸುವ |

ನಾಡೆ ಶೃಂಗಾಟಕದ ಪೀಠವ |

ನೋಡಿಯಡರ್ದೀರೈದು ವಿಧದಿಂ |

ಕೂಡೆ ಘೋಷಿಪ ಪ್ರಣವಧ್ವನಿ ಹಿತ |

ಗೂಡಿ ಕಿವಿಯಿಂ ಕೇಳದೇ ನೀನೆಂತು ||1||

ಆಲಿಗಳ ಕಾಲಾಟವನು ನಿಲಿಸಿ ಸಂಚರಿಪ ಮನವನು |

ಕೂಲಿನಿಂ ಮರುತನೊಳು ಮೈಳೈಸಿ |

ಮೇಲೆ ಸವನಾಸಾಗ್ರ ಬಯಲೊಳು |

ಬಾಲರವಿ ವಿದೃಮ ಕನಕದಂ |

ತೋಲೈಸಿ ರಾಜಿಸುವ ಬಿಂದುವ |

ಲೀಲೆಯಿಂ ಕಣ್ಣಾರೆ ಕಾಣದೆ | ||2||

ಸ್ಫುರಿಪ ಕರಣೇಂದ್ರಿಯಗಳಾನನದಿ |

ಪೊರ ಸೂಸಿ ಲೋಕವ ಮೆರವ ಚಂದ್ರನ |

ಜೋನ್ನವಾತುರದಿ ಉರುತರದೊಳಾಚ್ಛಾದಿಸುತ

ಶಂಕರ ಗುರುವೆ ತಾನಾದ ಕಳೆಯನು |

ಪರಿಪರಿಯ ಕಲ್ಪನೆಗಳಿಳಿಯುತ ಸರಸ ಭಾವದಿ |

ಭಾವಿಸದೆ ನೀನೆಂತು ಮುಕ್ತಿಯ ಪಡಕೊಳುವಿ ||3||

ಬೋಧಿಸಿದನು ಎನಗೆ ಶ್ರೀಗುರುವರ |

ಬೋಧಿಸಿದನು ಎನಗೆ ಬೋಧಿಸಿದನು |

ಯೋಗ ಸಾಧಿಸಿ ಶ್ವಾಸ ನಿರೋಧಿ ಬ್ರಹ್ಮವ |

ಶೋಧಿಸಿ ನೋಡೆಂದು ||ಪಲ್ಲ||

ಸಾರ ಕುಂಡಲಿಯಹಿಯ ಪೆಡೆಯನೆತ್ತಿ |

ಮೀರಿದೇಳನೆ ನೆಲೆಯ ಸೇರಿ ಮೆಲ್ಲನೆ ವಳ |

ತೂರಿ ಸ್ರವಿಸುತ ಭೂರಿಯಮೃತವನು |

ಪೀರಿ ನೀ ಸುಖಿಸೆಂದು ||1||

ಅಷ್ಟದಳದೊಳೆಸೆವ ಸರೋಜವ |

ಮೆಟ್ಟಿ ಚರಿಸುತಿರುವ ಶ್ರೇಷ್ಟ ಹಂಸನ |

ಸಂತುಷ್ಟದಿಂ ಜಾನಿಸಿ ನಿಷ್ಠಯಿಂ ಮನವನ |

ಲ್ಲಿಟ್ಟು ನೀ ನಲಿಯೆಂದು ||2||

ಚರಿಸುವ ರವಿ ಶಶಿಯ ನಡೆಗೆಡಿಸಿ |

ಮೆರವ ಸುಷುಮ್ನ ತುದಿಯ ಭರದೊಳಡರಿ ಭವ್ಯ |

ತರದ ಪಶ್ಚಿಮದಗ್ರ ಗಿರಿಯೊಳಿರುವ ಮುಕ್ತಿ |

ತರುಣಿಯನೊರಿಸೆಂದು ||3||

ವೇದದಂತ್ಯದ ಭಾಗದೊಳಗೆ ಗೌಪ್ಯ |

ಮಾದ ತತ್ವವನೀಗ ಮೋದದಿ ತಿಳಿದು ನೀ

ಹಾದಿ ನಾಲ್ಕರ ನಡುವೀದಿಯೊಳುಲಿವ

ಚಿನ್ನಾದವ ಕೇಳೆಂದು ||4||

ಸಲೆ ಗುರುಶಂಕರನು ಪೂರ್ಣಾನಂದ |

ಮಿಲಿತ ಸುಕವಿಕರನು ತಿಳಿದೆ ನಂಬಿರವದ

ನುಳಿದು ಯೆನ್ನೊಳು ನೀನು ಬಳಿಕೇನು ತೋರದೆ

ಮಿಳಿತೇಕವಾಗೆಂದು ||5||

ಧ್ಯಾನಿಸು ಯೋಗಿ ನೀ ಧ್ಯಾನ ಮುದ್ರೆಯನಾಂತು |

ನೂನಮಾಗಿಹ ನವಚಕ್ರಗಳ ||ಪಲ್ಲ||

ಮೂರು ಬಳಸಿನಿಂ ಭಕಾರದಿಂ |

ತ್ರೀಕೋಣಾಕಾರದ ಬ್ರಹ್ಮಚಕ್ರವದೆಂಬುದು |

ಸೇರಿರುವದು ಮೂಲಾಧಾರದೊಳಿಷ್ಟಾರ್ಥ |

ತೀರಿಸಿ ಪಾಲಿಪಾಧಾರ ಶಕ್ತಿಯನು || ||1||

ತವೆ ಸ್ವಾಧಿಷ್ಠಾನ ಸೌಜ್ಞವನಿಡಿದಿಹ |

ಕಮಲವು ತೋರ್ಪುದಲ್ಲಿ ಪ್ರಣವ ರೂಪದ |

ಶಿವನ ಉಡ್ಡ್ಯಾಣ ಪೀಠವದು ಮತ್ತಿದನುರೆ |

ಸವನಿಸಿ ಪಶ್ಚಿಮ ಮುಖನಾದ ಶಿವನನು ||2||

ಸಲೆ ನಾಭಿಯೆಡೆಯೊಳೈದೊಲಯದಿ ಮಿಂಚಿನು |

ಜ್ವಲದಿ ತೋರುವ ಮಣಿ ಪೂರಕದಿ |

ಇಳೆಯೊಳಿಚ್ಛಿತ ಸಿದ್ದಿಗಳನೊಲಿಸೀವ ನಿ

ರ್ಮಳವಾದ ಕುಂಡಲಿಯೆಂಬ ಶಕ್ತಿಯನು ||3||

ಹೃದಯ ಚಕ್ರವು ವರ ಕದಳಿಯ ಕುಸುಮದಂದದಿ |

ಕೆಳಮುಖವಾಗಿ ಬಿರಿದಿರುವ ಸದಲಮವಾದ ಬಾ |

ಹ್ಯದಯೆಂಟೆಸಳಿನ ಮಧ್ಯದ ನಾಲ್ಕುದಳದ |

ಜೋತಿರ್ಮಯ ಲಿಂಗವ ||4||

ವಿಮಲ ವಿಶುದ್ಧಿ ಚಕ್ರಮದೆಂಬ ಪೆಸರಿನ |

ಕಮಲದಿ ನಾಲ್ಕಂಗುಲದ ಮಿತಿಯ |

ಸಮನಿಸಿದಿಡೆ ಪಿಂಗಳೆಯ ಮಧ್ಯದಿಹ ನಿರು |

ಪಮ ಸುಖಿಯಾದ ಸುಷುಮ್ನೆ ಶಕ್ತಿಯನು | |5||

ರಸನೆಯ ಧೋದಂತ ವಿಸರದೂಧ್ರ್ವದಿ ಘಂಟಿ |

ಕಾಮೂಲ ರಾಜದಂತಕಗಳಿವು ವಸೆದೆರಡರ ಮಧ್ಯ |

ದೆಸವರಮನೆಚಕ್ರ ದಸಮಾಮೃತವನು ಸಂ |

ತಸದೀವ ಬಿಂದುವ ||6||

ಬಳಿಕ ಸುಷುಮ್ನೆಗೆ ನೆಲೆಯಾಗಿಮೆರದಿರ್ಪ |

ತೊಳಪೇಕನಾಳದ ಭೂಚಕ್ರವು ಇಳೆಯೊಳು |

ವಾಕ್ಸಿದ್ಧಿಗಳನೀವುದಾಗ ಮಂಜುಳ ಜ್ಞಾನ ನಯನ |

ಪ್ರಾಸಾದ ಜ್ಯೋತಿಯನು ||7||

ಪರಮ ಚಿದಾನಂದ ಪರಬ್ರಹ್ಮವೆನಿಪ ಭಾ |

ಸುರ ಬ್ರಹ್ಮ ರಂಧ್ರದ ತಾಣದೊಳು |

ಮೆರೆವ ನಿರ್ವಾಣಮೆಂಬುರುತರ ಪೆಸರಿನ |

ವರ ಮೋಕ್ಷವೀವ ಜಾಳಂಧರಪೀಠವ ||8||

ಕಳೆನಾದ ಬಿಂದು ಮಂಡಲ ತ್ರಯದಿಂದೊಡ |

ಮಿಳಿತ ಷೋಡಶ ಸ್ವರಾಕ್ಷರ ಚಕ್ರದಿ |

ಮಲಹರ ಶಂಕರನೈಕ್ಯವ ಮಾಳ್ಪ ನಿಶ್ಚಲ|

ಶೂನ್ಯರೂಪದೂಧ್ರ್ವಗೆಯ ಶಕ್ತಿಯನು ||9||

[/ದೇಶದೊಳ್ಮೇಲೆನಿಸಿ ತೋರ್ವ |

ಕಾಶೀಕ್ಷೇತ್ರಯೆನ್ನೊಳಿಹುದು |

ಕ್ಷೇಶ ಕಳೆದು ಯಾತ್ರಾ ಮಾಡಿದೆನು

ಅಹೋ ಶ್ರೀಶಂಕರೇಶ ನಾಶ ರಹಿತನಾಗಿನಿಂದೆನು |ಪಲ್ಲ||

ವಾರಣಸಿಯೆ ಮುಖ್ಯಮಾಗಿ |

ಮಿರಿದೆಂಟು ನಾಮವಿಡಿದು |

ತೋರುವ ಸುಸ್ಥಾನಗಳ ದಾಂಟಿ |

ಅಹೋ ಶ್ರೀ ಸಾರಿ ಪಂಚಕ್ರೋಶವ ಕಂಡೆನು ||1||

ಹರಿವ ಗಂಗೆಯ ಪಶ್ಚಿಮ ತಟದಿ |

ಹರುಷದಿಂದೆ ಮಿಂದು ನಾನು |

ಮಿರುಗುವನ್ನಪೂರ್ಣೆಯನು ನೋಡಿ | ಅಂ

ಮರಳಿ ಮಣೀಕರ್ಣಿಕೆಗೆ ಬಂದೆನು ||2||

ಕಾಲಭೈರವನಿಂದ ನಡೆವ |

ಲೀಲೆಗಳನು ಕಂಡು ಕಡೆಗೆ |

ಮೇಲು ಮಹಿಮದಖಿಳ ಲಿಂಗಗಳ | ಅಂ

ಸಾಲಿನೊಳ್ಸುಖಿಯಾಗಿ ಚರಿಸಿದೆನು ||3||

ತಾರಕೇಶ್ವರನೆಡೆಗೆ ಪೋಗಿ |

ಸಾರ ವಿಶ್ವೇಶ್ವರನ ಕಾಣಲ್ |

ತಾರಕ ಮಂತ್ರವದು ಸಿದ್ಧಿಸಿತು | ಅಂ

ತಾರಕಬ್ರಹ್ಮದೊಳು ಬೆರೆದನು | ||4||

fusion_toggle]

ದೇಶದೊಳ್ಮೇಲೆನಿಸಿ ತೋರ್ವ |

ಕಾಶೀಕ್ಷೇತ್ರಯೆನ್ನೊಳಿಹುದು |

ಕ್ಷೇಶ ಕಳೆದು ಯಾತ್ರಾ ಮಾಡಿದೆನು

ಅಹೋ ಶ್ರೀಶಂಕರೇಶ ನಾಶ ರಹಿತನಾಗಿನಿಂದೆನು |ಪಲ್ಲ||

ವಾರಣಸಿಯೆ ಮುಖ್ಯಮಾಗಿ |

ಮಿರಿದೆಂಟು ನಾಮವಿಡಿದು |

ತೋರುವ ಸುಸ್ಥಾನಗಳ ದಾಂಟಿ |

ಅಹೋ ಶ್ರೀ ಸಾರಿ ಪಂಚಕ್ರೋಶವ ಕಂಡೆನು ||1||

ಹರಿವ ಗಂಗೆಯ ಪಶ್ಚಿಮ ತಟದಿ |

ಹರುಷದಿಂದೆ ಮಿಂದು ನಾನು |

ಮಿರುಗುವನ್ನಪೂರ್ಣೆಯನು ನೋಡಿ | ಅಂ

ಮರಳಿ ಮಣೀಕರ್ಣಿಕೆಗೆ ಬಂದೆನು ||2||

ಕಾಲಭೈರವನಿಂದ ನಡೆವ |

ಲೀಲೆಗಳನು ಕಂಡು ಕಡೆಗೆ |

ಮೇಲು ಮಹಿಮದಖಿಳ ಲಿಂಗಗಳ | ಅಂ

ಸಾಲಿನೊಳ್ಸುಖಿಯಾಗಿ ಚರಿಸಿದೆನು ||3||

ತಾರಕೇಶ್ವರನೆಡೆಗೆ ಪೋಗಿ |

ಸಾರ ವಿಶ್ವೇಶ್ವರನ ಕಾಣಲ್ |

ತಾರಕ ಮಂತ್ರವದು ಸಿದ್ಧಿಸಿತು | ಅಂ

ತಾರಕಬ್ರಹ್ಮದೊಳು ಬೆರೆದನು | ||4||

ನಿನಗೆ ಸುಮೋಕ್ಷ ಗಮ್ಮನೆಯಾಗುವದು |

ನೀನನುದಿನದಿಂತು ಸಾಧನೆಗಳ ಕೃತಿಸೋ | |ಪಲ್ಲ||

ನಡು ನಾಡಿಯ ತುದಿಯಡರಿ ಚತುಃಪೀಠ |

ದೆಡೆಯೊಳು ನಿಂತು ಭೋರಿಡುವ ನಾದಗಳನು |

ತಡಿಯದೊಂದೊಂದೊಡವಿಡಿದು ನೀನಾಲಿಸು ||1||

ಆಲಿಮನ ಮರುತನೋಲೈಸುತ ಘ್ರಾಣ |

ದಾಲಸದಾಗಸದಾಲಯದೊಳು ಬಿಂದು |

ಜಾಲದುನ್ನತಿಯ ವಿಶಾಲದಿಂದೀಕ್ಷಿಸು ||2||

ಕರಣಂಗಳ ಬೆಳಗಿರದಿಂದ್ರಿಯಗಳೊ |

ಳ್ಪೊರ ಸೂಸುತ ಹಿಮಕರ ಜೊನ್ನದಿಶಂ |

ಕರಗುರುವಹ ಪರತರಕಳೆ ಭಾವಿಸು ||3||

ಕೋಳಿ ಕೂಗುವದು ಪ್ರಣವದ |

ಕೋಳಿ ಕೂಗುವದು |

ಮೇಲೆಸದಿಹ ಗಗನಾಲಯದೆಡೆಯೊಳು ||ಪಲ್ಲ||

ದಳ ನಾಲ್ಕಾದಿ ದ್ವಿದಳ ಕಡೆಯಾಗಿಹ |

ನಳಿನಗಳಾರರ ಸರಿಸದೊಳು |

ಸಲೆ ಪರಿಯುವ ನದಿಗಳ ಮೂರರೊಳು |

ಜ್ವಲಿಪ ಬಿಂದುವಿನ ಬಳಗದಿ ಬೆಳಗುತ ||1||

ಮರವೆಯೆಂಬ ತಮ ಮರುಗಿ ಸುರುಗಿ ತಾ |

ಕೊರಗಿ ಭರದೊಳೋಡುವದೀಗ

ಅರಿವೆಂಬುವ ಭಾಸ್ಕರನುದಯಿಸುವನು

ಮರಿಯದ ಭವನನು ಸ್ಮರಿಸಿರೆದ್ದೆನುತ ||2||

ಧ್ವನಿಗೇಳಿದ ಸಜ್ಜನರಿಗೆ ನಾನನು |

ದಿನ ಸಿದ್ಧಿಗಳೀವುತೆ ಮತ್ತಂ

ಮುನಿಗಳಿಗನುಪಮ ಘನ ಶಂಕರ ಗುರು

ವಿನ ತೋರಿಸಿ ಮುದವನುಗೊಳಿಪೆನೆನುತ ||3||

ಯೋಗಿ ಬಾರಿಸುವ ಹಾರ್ಮೋನಿಯ ನೋಡ್ಸಖಿ |

ರಾಗ ರಸವು ಸೊಗಸಾಗಿ ಬೀರುವದು ||ಪಲ್ಲ||

ತನುವೆಂಬ ಪೇಟಿಗಾಧಾರ ಪೋಷಶವು ಮೇಣ್ |

ಮಿನಗುವಷ್ಟಾದಶ ಮರ್ಮಸ್ಥಾನಗಳೆಂದೆನಿಪ ಮೂವತ್ತು |

ನಾಲ್ಕೆನುವ ಪಿಲ್ಲಟಗಳ ಮನಸಾದಿ ಚತುಃಕರಣವೆಂಬ ಕೈಬೆರಳಿನಿಂ ||1||

ಪದುಮಾಸನಮೆಂಬ ಕುರ್ಚಿಯ ಮೇಲ್ಕೂತು |

ಸದಮಲರೇಚಕ ಪೂರಕಮೆಂಬ ದ್ವಿ

ಪದ ದಿನಶಶಿಯಂಬ ಮರ್ಮಸ್ಥಲಗಳನು

ಪದಪಿ ನಿಂತುಳಿದು ಮೌನದಿ ತನ್ನೊಳು ತಾ ||2||

ಪರೆಪಶ್ಯರಂತಿ ವೈಖರಿ ಮಧ್ಯಮೆಯೆಂಬ |

ಮಿರಗುವ ಶ್ರೀಶಂಕರ ಗುರುವಿನ ಸ್ತುತಿ

ಪರಗೀತಗಳನು ಪರಮ ಚಿನ್ನಾದದಿ

ಪರಿಪರಿ ಕಿವಿಗಿನಿದಾಗಿ ಕೇಳಿಸುವಂತೆ ||3||

ಆಸನವನು ಕಲಿಸೊ ಯೋಗಿಯೆ ನಿತ್ಯ |

ಆಸನವನು ಕಲಿಸೊ ಸೂಸುವ ಮನ ನಯ |

ನಾಸುಗೂಡಿಸಿ ನಿನ್ನ ನಾಸಾಗ್ರದಲಿ ನಿಲ್ಲ |

ಲೀಶ ತಾ ತೋರುವ ||ಪಲ್ಲ||

ಎಡದಂಘ್ರಿ ಹಿಮ್ಮಡವ ಮೂಲಾಧಾರ |

ಕಿಡಿದೊತ್ತಿ ಬಲಪಾದವ ಬಿಡದೆತ್ತಿ ಮೇಢ್ರದಿ

ತಡಿಯದೆ ಮಡಗಿಸಿ ಒಡಲು ಸ್ಥಿರದೊಳಿರಲ್ಕಿದೆ ಸಿದ್ಧಾಸನ ತಿಳಿ ||1||

ತೊಡೆ ಕಿರುತೊಡೆ ಮಧ್ಯದಿ ತನ್ನಯವೆರಡಡಿಯ ತೂರಿಸಿ ಭರದಿ |

ಒಡಲು ಚಲಿಸದಂತೆ ತಡೆದವಯವಗಳ

ದೃಢತರದಿಂದಿರಲಿದೆ ಸ್ವಸ್ತಿಕಾಸನ ||2||

ಎಡದೊಡೆ ಮೇಲ್ಬಲದ ಮಡವ ಬಲ |

ದೊಡೆಯ ಮೇಲೆಡ ಪಾದದ ಮಡವ ಸೇರಸಿ ಮತ್ತ |

ಒಡಲು ಚಲಿಸದಂತೆ ಬಿಡದೆವಾಸಿಸಲಿದು ದೃಢ ಪದ್ಮಾಸನವರಿ ||3||

ಎಡಮಡ ಕೆಳ ಗೂರುತೆ ಬಲದ ಮಡ |

ಯೆಡದೊಡೆ ಮೇಲೇರುತೆ ಪೊಡವಿಯೊಳಗೆನೇರಿ |

ತ್ತೊಡಲಿಂದು ಕುಳ್ಳಿರೆ ನುಡಿವರಿದಕೆ ವೀರಾಸನಮೆಂದು ಮುನಿಗಳು ||4||

ತನಗಿಷ್ಟವಾಗಿರುವ ರೀತಿಲಿಯಾ |

ಸನವ ಬಲಿಸಿ ತನುವನನುವಾಗಿ ನಿಲಿಸಿ ಚಿ |

ದ್ಘನ ಗುರು ಶಂಕರನನು ಧ್ಯಾನಿಸುತ್ತಿರ್ಪುದಿದುವೆ ಸುಖಾಸನ || 5||

ಭಜಿಸು ಭಜಿಸು ಯೋಗಿ ಬಿಡದೆ ನೀ |

ಭಜಿಸು ಭಜಿಸು ಯೋಗಿ ಭಜಿಸಲು ನಿನ್ನಯ |

ಭವಮೆಂಬುವ ಘನ ರುಜೆಯನು ಕಳೆವ ನಿ |

ರಜಪರ ಹಂಸನ ||ಪಲ್ಲ||

ಚತುರದಳಗಳಿಂ ಚತುರಾಕ್ಷರದಿಂ |

ಸತತ ಪೀತವರ್ಣದಿ ಮೆರವ |

ವಿತತಾಧಾರೆಂಬುವ ಚಕ್ರಕ್ಕಧಿ |

ಪತಿ ಗಣಪತಿಯಭಿದಾನದ ಹಂಸನ ||1||

ಆರುದಳಗಳಿಂ ದಾರಕ್ಷರದಿಂ |

ಸಾರ ಸ್ವೇತ ಬಣ್ಣವನಿಡಿದು |

ತೋರುವ ಸ್ವಾಧಿಷ್ಠಾನಕ್ಕಧಿಪತಿ |

ಚಾರು ಚತುರ್ಮುಖ ಪೆಸರಿನ ಹಂಸನ ||2||

ಹತ್ತು ದಳದಿ ಮೇಣ್ ಹತ್ತಕ್ಷರದಿಂ |

ಮತ್ತ ರಕ್ತ ಬಣ್ಣವನಿಡಿದು |

ವೃತ್ತದಿಂದೆಸವ ಮಣಿಪೂರಕಕಧಿ |

ಕರ್ತ ವಿಷ್ಣುವಿನ ಪೆಸರಿನ ಹಂಸನ ||3||

ಪನ್ನೆರಡಕ್ಕರವನ್ನು ಧರಿಸುತಲಿ |

ಪನ್ನೆರಡು ದಳದಿ ರಂಜಿಸುವ |

ಚನ್ನೆಸವ ನೀಲ ಬಣ್ಣದನಾಹುತ |

ಸನ್ನಿತ ಪತಿ ರುದ್ರಾಹ್ವಯ ಹಂಸನ ||3||

ಷೋಡಶ ಪತ್ರದಿ ಷೋಡಶ ವರ್ಣದಿ |

ಕೂಡೆ ಸ್ಫಟಿಕ ಬಣ್ಣದಿ ಪೊಳೆವ |

ನಾಡೆ ವಿಶುದ್ಧಿಯದಕ್ಕಧಿದೈವತ |

ಗೂಢ ಈಶ್ವರನ ಪೆಸರಿನ ಹಂಸನ ||4||

ಎರಡು ದಳದಿ ಮೇಣೆರಡರಕ್ಷದಿಂ |

ವರ ಮಾಣಿಕ್ಯದ ವರ್ಣದಲಿ |

ಮೆರವಾಗ್ನೇಯವಿದಕ್ಕೆ ಕರ್ತ |

ಶ್ರೀಕರ ಸದಾಶಿವನ ಪೆಸರಿನ ಹಂಸನ ||5||

ಸಾಸಿರ ದಳದಿಂ ಸೂಸುವದನುದಿನ |

ಸಾಸಿರ ಶಶಿಸೂರ್ಯರ ಪ್ರಭೆಯಿಂ |

ಆ ಸರಸಿಜಕಧಿದೈವತನೆನಿಸುತ |

ವಾಸಗೈದ ಗುರು ಶಂಕರ ಹಂಸನ ||6||

ಎಂತು ಮರಿಯಲಿ ನಾ ನಿನ್ನೆಂತು |

ಮರಿಯಲಿ ಎನ್ನಂತರದೊಳಗೊಪ್ಪುವ ಶಿವನಂ |

ತೋರಿದ ಗುರುವರನನು ||ಪಲ್ಲ||

ವೇದಾಗಮ ಶಾಸ್ತ್ರಂಗಳ |

ನೋದಿದ ವಿಬುಧರಿಗಸದಳ |

ಮಾದ ಪರಬ್ರಹ್ಮವೆನೆ |

ನಗಾದರದಲಿ ತೋರಿದನಾ ||1||

ದಂಡಿಸಿ ತನು ತಾಪಸಿಗಳು |

ಕಂಡು ಸುಖಿ ಪರತತ್ವವ |

ನಂಡದೊಳಿಹುದನು |

ಬಿಡದುದ್ದಂಡತೆಯಲಿ ತೋರಿದನಾ ||2||

ಗುರು ಶಂಕರ ರೂಪದಿ ತಾ |

ನಿರದಾಗಮಿಸುತ್ತೆನ್ನಯ |

ಶರೀರದೊಳಿಹ ವಸ್ತುವ ತಾ |

ನರನಿಮಿಷದಿ ತೋರಿದನಾನೆಂತು ಮರಿಯಲಿ ||3||

ಈಶ ನೀನೇಳು ನಿನಗಿಹುದೆ ನಿದ್ರಿ |

ಪಾಶ ಮಲ ಮೋಹಗಳ ನಾಶ ನೀನಿರ್ದಿ |ಪಲ್ಲ||

ಪರನಾದವೆಂಬ ಭಾಸುರ ಕುಕ್ಕುಟವು ಉಚ್ಚ |

ಸ್ವರವೆತ್ತಿ ಕೂಗುತಿದೆ ಬಿಂದುವೆಂಬ |

ಮೆರವ ಪ್ರಾಚೀನದಘ ಗಿರಿಯು ಕೆಂಪಡರುತಿದೆ |

ಮರವೆಯೆಂಬುವ ತಮವದಂಜಿ ಪರಿಯುತಿದೆ ||1||

ಭರದಿ ಕುಂಡಲಿಯೆಂಬ ತರಣಿ ತಲೆದೋರುತಿದೆ |

ನೆರದುಲಿವುತಿವೆ ವಿಧಿಗಳೆಂಬ ಪಕ್ಷಿಗಳು |

ಇರದೆದೆಯದೆಂಬಬ್ಜ ಪರಿಮಳಿಸುತಿದೆ ಮನೋ |

ಪರಿ ವಿಕೃತಿ ತತಿಯೆಂಬ ಕುಮುದ ಕೊರಗುತಿದೆ ||2||

ಜನಿತ ಮಮಕಾರಂಗಳೆನುವ ತಸ್ಕರರ |

ಭಯವನುಗೆಡುತಿದೇ ಮದಗಳೆಂಬ ರಾಕ್ಷಸರ |

ಘನ ಸುಳುಹು ತೋರದಿದೆ ಬಿನಗು ಇಂದ್ರಿಯಗಳೆಂ |

ದೆನಿಸುವ ಚಕೋರಗಳು ಮುನಿಸಿಯೆಡಗುತಿವೆ ||3||

ಸಲೆ ಸುಕೃತವೆಂತೆಂಬ ಖಿಳ ಜನರುಚಿತ |

ಕರ್ಮಗಳನೆಸಗಲುದ್ಯುಕ್ತರಾಗುತಿಹರು |

ಬಲುದುರಿತವೆಂತೆಂಬ ಖಳ ಕೌಶಿಕಗಳೆಲ್ಲ |

ನಿಲದೋಡುತಿವೆ ತಮ್ಮಗೂಡಿಗಾಗೀಗ | ||4||

ಜಿನಗು ಸಂಸೃತಿಯೆಂಬ ಕನಸು ತಾನಳಿಯುತಿದೆ |

ಮಿನುಪ ಪ್ರಾರಬ್ಧವೆಂತೆಂಬ ವಿಷಯಗಳು |

ಅನುವಿನಿಂ ಮತಿದೃಗಕೆ ಕೊನೆಗಾಣುತಿವೆ ಕುಭಾ

ವನೆಗಳೆಂಬುವ ತಾರೆಗಳು ಮೈಗರಿತಿವೆ ||5||

ಮಿನಗುತಿಹ ಗಂಗಾಯಮುನೆಯೆಂಬ ಕೋಕಗಳು |

ಬಿನದಿಸುತ್ತಿವೆ ಹಮ್ಮಿನಿರವೆಂಬ ಶಶಿಯು

ಅನುಗೆಟ್ಟು ಮಾಜುತಿದೆ ಮನಸಾದಿ ಕರಣ ಮಿಗಿ

ಲೆನಿಪ ಮುದ್ರಿಗಳೆಂಬ ಭಜಕರೆರಗುವರು ||6||

ನುತ ಯೋಗವೆಂಬ ಶೋಭಿತ ಪೂಜೆದುಪಚಾರ |

ತತಿಗೊಡಲನಿತ್ತು ಚೌಕದ ಮಧ್ಯದೆಸೆವ

ಅತುಲ ಪೀಠದಿ ವಿಭವದತಿಶಯದಿ ಮೆರದಿರೆ

ಲಲಿತ ಲಕ್ಷಮೆಂಬ ನೃಪನೋಲಗಕೆ ಬರುವ ||7||

ಕವಿವ ದಶವಿಘ್ನಮೇಂಬುವ ವೈರಿಗಳು ಬಿಟ್ಟು |

ಜವದೊಳೋಡುವರು ಬಹು ಭಯವ ತಾಳುತಲಿ

ಹವಣಿಸಲ್ಬಾರದನು ಭವಿಯೆಂಬ ದೂತನೊಪ್ಪುವ

ಮಂತ್ರಮೆಂಬ ವಿಜ್ಞಾಪನೆಯ ಕೇಳಿ ||8||

ಈ ಸಮಯದಲ್ಲಿ ನೀ ಬೇಸರಿಯದೆನ್ನನು |

ಉಲ್ಲಾಸದಿಂ ನೋಡಿಯನುದಿನವು ನೀ ಬಿಡದೆ

ದಾಸ ನಿನಗಿನ್ನುಭವದಾಸರಿಲ್ಲೆಂದ ಭಯ

ಲೇಸಿನಿಂದಿತ್ತು ಗುರು ಶಂಕರನೆ ಸಲಹು ||9||

ಯೋಗಿಯೆನಿಸುತೆನ್ನನೀಗ ವಿಷಯ ಸುಖ |

ಭೋಗಿಯೆನಿಸದಿರು ಗುರುದೇವ |

ಯೋಗಿ ಸಹಜ ಭಾವ ಆಗಮನುತ ಜೀವ |

ಯೋಗಿಯೆನಿಸು ಯೋಗಿಯೆನಿಸು ||ಪಲ್ಲ||

ವರ ಶೃಂಗಾಟಕದೊಳು ಮೆರವ ಪ್ರಣವನಾದ |

ಸರಸದಿಂ ಬೋಧಿಸಿ ಧರೆಯಲ್ಲಿ ತರುಣಿಯ ಚಪಲೋಕ್ತಿ |

ಸ್ವರಕೆ ಕಿವಿಗೊಡದಂತೆ ಕರುಣಿಸು ಕಾಲಕರ್ಮ ವಿನಾಶ |

ವರ ಗುಣನಿಧಿ ಕೋಶ ಹರಪಂಚ ವಿಧ ಕ್ಲೇಶ ಯೋಗಿಯೆನಿಸು ||1||

ಚಲಿಸದಾಸನ ಬಂಧ ಸಲೆ ಮುದ್ರೆಗಳ ಮೊದ |

ಲಲಿ ಕ್ರಮವಾಗಿ ನಿಲಿಸಿ ಬೇರೆ ಲಲನೆ ಸಂಗಕ್ಕೆ ತನು |

ವಲಿದುಯೆರಗದಂತೆ ಸಲಹು ಘನದ ಜಂಝಾವಾತ |

ವಿಲಸಿತ ಸುಖದಾತ ಮಲಹರ ನಿರ್ಭೀತ ಯೋಗಿಯೆನಿಸು ||2||

ಮೂರು ಮಂಡಲದೊಳು ರಾರಾಜಿಸುವ ಖಂಡ |

ಸಾಪ್ರಭೆಯ ತೋರಿಸುತಲನ್ಯ ನಾರಿ ರೂಪಕೆ ಲಕ್ಷ |

ಸೇರದಂತೆತ್ನಿಸಿ ಕಾರುಣ್ಯದಿಂ ಪೊರಿ ಸಲ್ಲೀಲ |

ಚಾರು ಮುಕುತಿ ಮೂಲ ಭೂರಿ ಪಾವನಶೀಲ ಯೋಗಿಯೆನಿಸು ||3||

ನಡು ನಾಡಿಯಗ್ರದಯೆಡೆಯಮೃತವನು |

ಯೆನ್ನೊಡಲಿಗೆಯೊಲಿದೀಂಟಿಸುತ ಪೊರಗೆ |

ಜಡಜಾಕ್ಷಿಯಧರದ ಕಡು ಸುಧೆಗಾನನ |

ವಿಡದಂತೆ ರಕ್ಷಿಸು ಗಂಭೀರ ಜಡ ಸಂಸರಣ ದೂರ |

ಮೃಢ ಶರಣೋದ್ಧಾರ ಯೋಗಿಯೆನಿಸು ||4||

ನವ ಹೃದಯದ ಜಲ ಭವದಿ ಶೋಭಿಪ ಸುಗಂಧವ |

ನಾಸಿಕಕ್ಕೊದಗಿಸಿ ಬಳಿಕಂ ಯುವತಿಯುಸರಗಂಪಿ |

ಗವಸರ ಪಡದಂತೆ ಅವಿರತ ಕಾಯೊ ಶಂಕರಲಿಂಗ |

ಭವತಿಮಿರ ಪತಂಗ ತವೆ ಘನ ಮಹಿಮಾಂಗ ಯೋಗಿಯೆನಿಸು ||5||

ಬಂಧ ಮೂರ ಲಕ್ಷಣವರಿದೊಡೆತ್ತಿ |

ಬಂಧವಳಿದಹುದು ಮುಕ್ತಿ ತ್ವರಿತ ||ಪಲ್ಲ||

ಪವನಮಂ ತಡೆದು ನಿಲಿಸಿ ಅಪಾನ ಮೆಂ |

ಬುವ ಸೂರ್ಯ ಹೃದ್ವನಜದ ಪ್ರಾಣ |

ಪವನಮೆಂಬುವ ಶಶಿಯೊಳು ಕೂಡುತೆ ನಡುವಿನ |

ನರ ಬೆರೆಯೆ ಮೂಲ ಬಂಧ ||1||

ಸಲೆ ನಾಡಿ ಕಂದದೆಡೆಯ ವರ ನಾಭಿ |

ಕೆಳಭಾಗ ಮೇಲ್ಭಾಗವ ಬಿಡದೆ |

ಬಲ ಸಾಹಸದಿ ಬಂಧಿಸಿ ಪಿಡಿಯಲಿದೆ |

ತೊಳಪುಡ್ಯಾಣ ಬಂಧವಹುದು ||2||

ಕೊರಳನುರೆ ಸಂಕೋಚಿಸಿ ದಿಟ್ಟಿಗಳ |

ನಿರದೆದೆಯ ಭಾಗದಿರಿಸಿ ಜಾಲಂ

ಧರ ಬಂದಮಪ್ಪುದು ಇದೇ

ಸುಧೆಯ ಶಂಕರನ ಕೃಪಿಯಿಂದೀವುದು ಸತ್ಯ ||3||

ಯೋಗದಂಗಗಳು ಎಂಟಾಗಿರುವವು ನಿಗ |

ಮಾಗಮದಿಂ ತಿಳಿವುದೆ ಯೋಗ್ಯವು |ಪಲ್ಲ||

ಯಮವಹಿಂಸಾದಿ ದ್ವಿಪಂಚವು ಮತ್ತ

ನಿಯಮಯೆಂಬುವದೆ ತಪೋ ಮುಖದಶವು |

ವಿಮಲದಾಸನ ಸ್ವಸ್ತಿಕಾದಿಯಖಿಳವು |

ಉತ್ತಮ ರೇಚಕಾದಿ ಪ್ರಾಣಾಯಾಮವೇಳು ||1||

ಚರಿಸುವಿಂದ್ರಿಯಗಳಂ ತರಸೆಳೆವುದೆ ಪ್ರತ್ಯಾ |

ಹರಣವು ತಡಿವುದೆ ಧಾರಣವು |

ಹರನ ಚಿಂತಿಪುದೇ ವಿಸ್ತರ ಧ್ಯಾನ ಶಿವನೊಳು |

ಮರಳದ ಚಲವಾದ ಮನವೆ ಸಮಾಧಿ |3||

ಮೊದಲಿನ ನಾಲ್ಕು ಬಾಹ್ಯದವೆನಿಸುತ ಕಾಮ |

ಮದ ರೋಗವಘಗಳನಳಿಸುವದು |

ಒದವಿದಂತ ನಾಲ್ಕುಳಿದವವು ವಿಷಯಮೋ

ಹದ ಭ್ರಮೆಯಳಿಸಿ ಶಂಖರನೋಳ್ಸೇರಿಪವು| ||4||

ಶ್ರೇಷ್ಠವಾಗಿಹ ನಿರ್ಗುಣಾಷ್ಟಾಂಗ ಯೋಗದ ವಿ |

ಶಿಷ್ಟ ಕಲೆಯರಿದ ಯತಿಗಹುದು ಮುಕ್ತಿ ||ಪಲ್ಲ||

ಶರೀರ ಕರಣೇಂದ್ರಿಯ ವಿಸರದೊಳು ವಿರಾಗ |

ಜನಿಸಿರುವದೇ ಯಮ ಬ್ರಹ್ಮದೊಲವೆ ನಿಯಮ |

ನೆರೆ ವಿಷಯ ಭ್ರಮೆಯಳಿದುದಾಸನ ಪ್ರಪಂಚ ಪುಶಿ |

ಯರಿದು ಬಾಳುವದೆ ಪ್ರಾಣಾಯಾಮವು ||1||

ಮತಿಯನೊಳಸೆಳೇವಸುವೆ ವಿತತ ಪ್ರತ್ಯಾಹಾರ |

ನುತ ಜ್ಞಾನದಲ್ಲಿ ನಿಲಿಸುದೆ ಧಾರಣ |

ಅತಿಶುದ್ಧ ಚೈತನ್ಯ ತಾನೆಂಬುದೇ ಧ್ಯಾನ |

ಸತತ ಸ್ಥಿರಮಾದ ಬುದ್ಧಿಯೆ ಸಮಾಧಿ ||2||

ಸಲೆ ಪೇಳಿದಷ್ಟಾಂಗದೊಳು ಮೊದಲಿನೈದಂಗ |

ಬಲದೊಳರಿವರ್ಗ ಗೆಲಿದಿಹ ಮನವನು |

ಉಳಿದ ಅಂಗ ತ್ರಿವಿಧದಿಂ ತೊಳಪ ಗುರು ಶಂಕರನ |

ಗಲದಂತೆಸಗಲದೆ ಸುಯೋಗವಹುದು ||3||

ತೋರುವದು ಪರತತ್ವವು ತಕ್ಷಣದಿ |

ಈ ಮೂರು ಲಕ್ಷದಿ || ||ಪಲ್ಲ||

ಆರು ಚಕ್ರಗಳ ಸೇರಿ ಸುಷುಮ್ನೆಯ |

ಸಾರನಾಡಿಯಗ್ರವನಾಂತು |

ರಾರಾಜಿಸುತಿಹ ಭೂರಿ ತಟತ್ಪ್ರಭೆ |

ಯೋರಂತೆ ಮನಸಿನೊಳು ಪರಿಭಾವಿಸೆ ||1||

ವರ ನಾಸಾಗ್ರದಿ ಕರಿದು ಕೆಂಪು |

ಪಾಂಡುರ ಪೊಗೆ ಪೀತ ಸುವರ್ಣಗಳ |

ಮೆರವ ದಶಕ ಪನ್ನೆರಡಾರೆಂಟು |

ಚತುರ ಬೆರಳಿನ ಮಿತಿಯರಿದಿರಿಸೀಕ್ಷಿಸೆ ||2||

ಫಲವು ತಾರೆ ಶಿಖಿ ಜಲಜಾಹಿತರವಿ |

ಸಲೆ ರನ್ನಗಳ ಪ್ರಕಾಶವನು |

ಒಳವಿಡಿದನುಪಮ ಶಂಕರ ಗುರುಪದ |

ಮೊಲಿದನು ಸಂಧಾನಿಸುತಿರೆ ತೀವ್ರತಿ ||3||

ತಾರಕ ತ್ರಯದ ವಿಚಾರ ಮಾಡೊ |

ವಿಚಾರ ಮಾಡಲು ಭವ ದೂರು ನೋಡೋ ||ಪಲ್ಲ||

ಪಂಚಭೂತಗಳನು ಪಂಚೀಕರಿಸಿದಂಥ

ಪಂಚವಿಂಶತಿ ತತ್ವವರಿದವುಗಳನು |

ಪಂಚಲುಳಿದುದೆ ತಾನೆಂಬುದಿದುವೆ ಸಾಂಖ್ಯ |

ಮಿಂಚಿಡಿದಿಹ ಪೂರ್ವ ತಾರೆಯಿದು ||1||

ಇಳೆಯ ತಾಣದ ಯುಗದೊಳು ಅನಿಲಾಪ್ತನ |

ಸ್ಥಲ ದ್ವಂದ್ವದೊಳು ನಭ ನೆಲೆವೆರಡರೊಳು |

ಚಲನೆಗೈಯ್ಯದೆ ಷಡಂಗುಲಗಳನಪುಗಳೋಳ್ |

ಬಲಿದೀಕ್ಷಿಸುತ ಕೇಳಲಿದು ಮಧ್ಯತಾರೆ ||2||

ಪೊರ ವಿಷಯ ವೆಸನ ತೊರೆದೆವೆರೆದಕ್ಷಿ |

ಸ್ಫುರಿಸದ ನಿಲನಿಂದು ಕರಿಗೊಂಡು |

ಗುರು ಶಂಕರೇಶನೊಳಿರುವ ಮನವಿದನು |

ಅರಿಯಲಂತರ್ಮುದ್ರೆಯ ಮನಸ್ಕರ ತಾರೆ || 3||

ನೋಡೆ ರಮಣಿ ನೀ ನೋಡೆ ರಮಣಿ |

ನೋಡು ರಮಣಿ ಬ್ರಹ್ಮವ ನಡು |

ನಾಡಿಯ ತುದಿಗೇರಿ ಬಿಡದೆ ||ಪಲ್ಲ||

ಸರಸಿರು ಹಾಸನದೊಳು |

ಸುಸ್ಥಿರ ಕಾಯದಿ ವಾಸಿಸಿ |

ಸಂಚರಿಸುವ ಮನ ಪವನ ನೋಟ |

ವೆರಸಿ ಬಹಿರ್ಲಕ್ಷದಿಂದೆ ||1||

ಚಲಿಸುವ ದುಷ್ಟೇಂದ್ರಿಯಗಳ |

ಬಲವನೆಲ್ಲ ಮುರಿದುನ್ಮನಿ |

ನಿಲಯದಿನಿಂದಾಲಿಯನುರೆ |

ನಿಲಿಸಿ ಮಧ್ಯ ಲಕ್ಷದಿಂದೆ ||2||

ಮಂಡಲ ಮೂರರೊಳೊಪ್ಪುವ |

ಖಂಡ ಶಂಕರೇಶನು |

ನಿನ್ನಂಡದೊಳಿರುತಿಹುದನು ಮುದ |

ಗೊಂಡಂತರ್ಲಕ್ಷದಿಂದೆ ||3||

ನೋಡು ಯೋಗಿಯೆ ನೀ |

ನೋಡು ಯೋಗಿಯೆ ನೀ |

ಓಡುವ ರವಿ ಶಶಿಗಳನುರೆ |

ಕೂಡಿಸಿ ಚಲಿಸಿದೆ ಬ್ರಹ್ಮವ ||ಪಲ್ಲ||

ಎಳೆಮೌಕ್ತಿಕ ಮಣಿ ತಾರಾವಳಿ |

ವಿದೃಮಲತೆಯಂದದಿ|

ಸೆಳೆ ಮಿಂಚಿನ ಪರಿಯಲಿ |

ಮಂಜುಳ ರವಿಶಶಿಯಂತೆ ಸವದು ||1||

ತನುವಾನೆಂಬುವದೆಚ್ಚರವನು |

ಕಳೆದು ಸುಖಾಸನದಿಂ |

ಮನ ನಿಲ್ಲಿಸಿದಾ ಕ್ಷಣದೊಳು |

ಘನ ಬೆಳಗಿನೊಳುರೆ ಮೆರವದು || 2||

ಗುರು ಶಂಕರ ಬೋಧಿಸಿದಾ |

ಹರ ಮಂತ್ರವನುಸುರಲ್ಕಂ |

ತರ ತೇಜವೆ ಪೊರ ಭಾಗದಿ |

ಬಿಂದುವೆನಿಸಿ ಪ್ರಜ್ವಲಿಪುದು || ||3||

ಇನ್ನೆಲ್ಲಿ ಭವ ಬಂದನವು ಯೋಗೀಂದ್ರನೆ |

ಇನ್ನೆಲ್ಲಿ ಭವ ಬಂಧನವು |

ಇನ್ನೆಲ್ಲಿ ಭವ ಬಂಧ ಸನ್ನುತ ಶಿವನನು |

ತನ್ನೊಳರಿದು ಮಾಯೆಯನ್ನು ಮೀರಿದ ಮೇಲೆ ||ಪಲ್ಲ||

ವಾದವಾಸ್ಯಗಳ ಬಿಟ್ಟು ಬೇರೂರಿದ |

ಖೇದ ಭೇದಗಳ ಸುಟ್ಟು |

ಹಾದಿ ನಾಲ್ಕರ ನಡುವೀದಿಯನಾಂತು |

ವಿನೋದದಿ ದಶವಿಧ ನಾದಕೇಳಿದ ಮೇಲೆ ||1||

ಹರನಕ್ಷಿ ಭಸ್ಮವನು ಅಂಗಾಂಗದಿ |

ಧರಿಸಿ ಸುಮಂತ್ರವನು |

ಸ್ಮರಿಸುತ ತ್ರೀಕೂಟ ಗಿರಿಯನಡರಿ ಲಕ್ಷ |

ಸ್ಥಿರದಿ ಬಿಂದುವನು ಬಂಧುರದಿ ನೋಡಿದ ಮೇಲೆ ||2||

ಆಶ ಪಾಶಗಳ ನೀಗಿ ಮುಸುಗುತಿರ್ಪ |

ಕ್ಲೇಶ ಪಂಚಕವು ಪೋಗಿ ನಾಶ ರಹಿತ |

ಶಂಕರೇಶ ಚಿತ್ಕಲೆಯ ಪ್ರಕಾಶದಿ ತೋರಲ |

ಪ್ರವೇಶಿಸಿ ಬೆರದ ಮೇಲಿನ್ನೆಲ್ಲಿ ಭವ ಬಂಧವು ||3||

ತೋರದು ನಿಜಸುಖವು ಹೇ ಮಾನವ |

ತೋರದು ನಿಜಸುಖ ತಾರಕ ಬ್ರಹ್ಮವ |

ಆರೈದು ನೋಡಿತಾ ಸೇರದೆ ಸುಮ್ಮನೆ ||ಪಲ್ಲ||

ಆಲಿವೆಳಗನರ್ಕನ ತಡೆದು ಬ್ರಹ್ಮ ನಾಳದವರಸದನ |

ಲೀಲೆಯಿಂದೊಳ ಪೊಕ್ಕು ನೀಲ ತೋಯದಿ ನಿಂದು |

ಮೇಲೆಸೆಯುವನಾದ ವಾಲಿಸದಿದ್ದರೆ ||1||

ಆಸನವನು ಬಲಿಸಿ ವಿಷಯದೊಳು ಸೂಸುವ |

ಮನ ಮುರಿಸಿ ಬೇಸರಗೊಳ್ಳದೆ ವಾಸಿಸಿಯಾಲೆಯ |

ಅಭ್ಯಾಸದಿ ನಿಲ್ಲಿಸಿ ಲೇಸದಿ ನೋಡದೆ || ||2||

ದೇಹದ ಭ್ರಮೆಯಳಿದು ಮುನ್ನಿನ ಮಾಯಾ ಮೋಹದ |

ಗುಣವಳಿದು ಸೋಹಂಭಾವದಿ ಒಳ್ಳೆ ಸಾಹಸದೊಳು |

ಚೇತೋ ಗೇಹದಿ ಗುರು ಶಂಕರೇಶನ ತಿಳಿಯದೆ ||3||

ಮಾನಿನಿ ನೋಡು ಕಣ್ಣಾರೆ ಕಾಣುವದು ಬಿಂದು |

ನೀ ನೆನಿ ಮಂತ್ರ ಶಾಂಭವಿಯ ಕೋಣಿಯೊಳು ನಿಂದು ||ಪಲ್ಲ||

ಸ್ಥಿರ ಕಾಯಳಾಗಿ ಸುಖದಾಸನವನು ನೆರೆ |

ಬಲಿಸು ವೆವಹರಿಪ ನಿನ್ನ ದುಷ್ಟೇಂದ್ರಿಯಗಳನುರೆ |

ನಿಲಿಸು ಮನ ಪವನ ದೃಷ್ಟಿ ಮೂರ್ಬೆರಿಸು |

ಘ್ರಾಣ ತುದಿಗಿರಿಸು ವೇದಕನು ಸರಿಸು ||1||

ಎಳೆ ಮುತ್ತಿನಂತೆ ಪ್ರಜ್ವಲಿಪ ದೀಪದುರಿಯಂತೆ |

ಸೆಳೆ ಮಿಂಚಿನಂತೆ ನಳನಳಿಪ ಲತೆಗೆ ರಸದಂತೆ |

ಥಳಥಳಿಪ ಪೂರ್ಣ ಶಶಿಯಂತೆ |

ಮಿಸುಪ ರವಿಯಂತೆ ಪವಳ ಮಣಿಯಂತೆ ||2||

ಶರೀರದೊಳು ರಂಜಿಸುವ ಚಿತ್ಪ್ರಕಾಶವದು ಗಮಿಸಿ |

ಸತ್ವರದಿ ನೇತ್ರದಿಂ ಪೊರಭಾಗಕ್ಕವತರಿಸಿ |

ಗುರು ಶಂಕರೇಶ ತಾನೆನಿಸಿ |

ಪೊರಗೊಳಗೆ ನೆಲಿಸಿ ಘನ ಬೆಳಗುವೆರಸಿ ||3||

ಕಂಡೆ ಕಣ್ಣಿನಂಡದೊಳು ನಾನು |

ಪರತತ್ವವನ್ನು ಕಂಡೆ ಕಣ್ಣಿನಂಡದೊಳು ನಾನು |

ಕಂಡೆ ಕಣ್ಣಿನಂಡದೊಳ್ಮಾರ್ತಾಂಡ ಪವನಾಪ್ತಾಬ್ಜಮೆಂಬ |

ಮಂಡಲ ತ್ರಯ ಮಧ್ಯ ಸುಸ್ಥಲದಿ ಬಹು ಪುಣ್ಯ ಫಲದಿ ||ಪಲ್ಲ||

ಮೂರು ನದಿಗಳ ಸಂಗಮದಿ ಮಿಂದು |

ಸೊಗಸಾಗಿ ತೋರುವ |

ಮೂರು ಪರ್ವತದಗ್ರದೊಳು ನಿಂದು |

ಮೂರು ಲಿಂಗದಿ ಭಾವ ಬೆರೆದು |

ಮೂರು ಮೂರ್ತಿಗಳಿರವನರಿದು |

ಮೂರು ಪದಗಳ ಮೂಲ ಮಂದಿರದಿ ಬಹು ||1||

ಆರು ವೈರಿಯ ಎದೆಯ ಮೆಟ್ಟುತ್ತೆ |

ಮೇಲ್ವಾಯ್ದು ಬರುತಿಹ |

ಆರು ಭ್ರಮೆಗಳ ಮುರಿದು ಕಟ್ಟುತ್ತೆ |

ಆರು ಚಕ್ರವದಾಂಟೆ ಸಾಸೀರಾರ |

ಸಾರಸದೊಳಗೆ ಮೆರೆವ |

ಆರು ಅರಿಯದ ಸೂಕ್ಷ್ಮ ಬಾಗಿಲದಿ ಬಹು ||2||

ಮೂರು ಲಕ್ಷದ ಮರ್ಮವನು ನೋಡಿ |

ಸಾದನದಿ ಕೂಡಿ |

ಮೂರು ತಾರಕದಧ್ಯಯನ ಮಾಡಿ |

ಮೂರು ಮಲಗಳ ನಾಶಗೈದ |

ಧೀರ ಶ್ರೀಗುರು ಶಂಕರೇಶ |

ಸಾರ ಕರುಣದಿ ಬೋಧಿಸಿದ ಬಲದಿ |

ಬಹುಪುಣ್ಯ ಫಲದಿ ||3||

ಗುರು ವರೇಣ್ಯನೆ ತವ ಕರುಣದಿ ಧನ್ಯನಾದೆನೈ |

ಕರುಣಾಕರ ಶರಣೋದ್ಧರಣಾ ನಿಮ್ಮಯ |

ಸಚ್ಚರಣಾ ದೊರೆಯಲು ಬಹು ||ಪಲ್ಲ||

ಆರೆನಿಪ ಸುದ್ವಾರಗಳು ತಾರತಮ್ಯದಿಂದೆ |

ಬಂಧಿಸೆ ಭೂರಿಚಿಣಿ ಛಿಟಿಛಿಟಿ |

ಭೇರಿ ನಾದಂಗಳು ಸೇರಿ |

ಝೇಂಕರಿಸಲು ಧನ್ಯನಾದೆನೈ ||1||

ಸಾರ ಚಕ್ರದಾರಿ ಹಿಡಿದು |

ಮೂರು ನದಿಯ ಮೀರಿ ಭರದಲಿ |

ಏರಿ ಮುಂದಕೆ ನಾ ತೂರಲ್ಬಿಂದುಕಂಗೆ |

ತೋರಿ ಮಿಗೆ ಪೊಳಿಯಲು ||2||

ಸೂಸುವ ಮನ ಪವನ ದೃಷ್ಟಿ |

ಮೋಸವಿಲ್ಲದೊಂದು ಗೂಡಿಸೆ

ಸಾಸೀರಾರದಿ ತಾ ವಾಸಿಸಿದ ಶಂಕರ |

ಲೇಸಿನಿಂದೆಸೆಯಲು ಧನ್ಯನಾದೆನೈ ||3||

ಆಗದಯ್ಯಾ ಮುಕ್ತಿಯಾಗದಯ್ಯಾ |

ಶ್ರೀಗುರುವಿನ ಕೃಪೆಯಾಗದೆ ಸುಮ್ಮನೆ ||ಪಲ್ಲ||

ಅಷ್ಟ ಭೋಗವ ಬಿಟ್ಟು ಅಷ್ಟಮದವ ಸುಟ್ಟು |

ಅಷ್ಟದಳಾಬ್ಜದಿ ದೃಷ್ಟಿಯುನಿಲ್ಲದೆ ||1||

ಆರು ಭ್ರಮೆಯ ಮೀರಿ | ಆರರ ನೆಲೆಗೇರಿ |

ಆರು ಅರಿಯದ ಸೂಕ್ಷ್ಮ ದ್ವಾರವ ತೂರದೆ ||2||

ಮೂರು ವಾಸನೆಯಳಿದು ಮೂರು ನದಿಯೊಳು ಮಿನಿದು |

ಮೂರು ಮಂಡಲದೊಳು ಸೇರಿ ಸಂತೈಸದೆ|||| ||3||

ಹತ್ತು ಇಂದ್ರಿಯ ತಡೆದು ಹತ್ತು ವಾಯುಗಳ ಬಲಿದು |

ಹತ್ತ ವಿಧದ ನಾದ ಮೊತ್ತವ ಕೇಳದೆ || ||4||

ದ್ವಿತೀಯ ಭಾವವನೀಗಿ ದ್ವಿತಿಯ ದಳದಿ ಪೋಗಿ

ದ್ವಿತೀಯರ ಹಿತ ಶಂಕರೇಶನ ಕಾಣದೆ ಆಗದಯ್ಯಾ | |5||

ನೀ ನೋಡು ನಿನ್ನಯ ನಿಜ ಪೋಟುವ |

ತಡ ಮಾಡದಂತೇರುತ್ರೈಕೂಟವ ||ಪಲ್ಲ||

ದ್ವಾರವಾರನು ಮುಚ್ಚಿ ಸಾರ ಪಶ್ಚಿಮದಲ್ಲಿ |

ತೂರಿ ಬೇಗದಿ ವಳಸೇರಿ ಸಂತೋಷದಿಂದೆ ||1||

ಮೇಲೆಸದಿರುವ ಸುನೀಲ ತೋಯದ ಮಧ್ಯ |

ಮಾಲಯವನು ಪೊಕ್ಕು ಲೀಲೆಯಿಂದನುದಿನ ||2||

ಗಂಗೆ ಯಮುನೆಗಳ ಸಂಗಮ ಸ್ಥಾನದಿ |

ಮಂಗಲ ಸ್ಥಾನಗೈದು ಶೃಂಗಾಟಕದಿ ನಿಂದ ||3||

ಮೂಡಲದಿಂ ನಡು ನಾಡಿಯಗ್ರದ ಗುಪ್ತ |

ಗೂಡಿಗೆ ನಡೆದು ನೀ ಕೂಡಿದ ಹರುಷದಿ ||4||

ನೆರೆ ಲಕ್ಷಿಸಲು ಶಂಕರ ಗುರು ತೋರ್ಪನಿನ್ನಿರವಿದೆ |

ತಿಳಿ ಬೇರೆಯರಸದೆ ಸರಸದಿ ನೋಡು ನಿನ್ನಯ ||5||

ಕಣ್ಣ ಮುಂದೆ ಕಾಣಿಸುತ್ತದೆ |

ಪರತತ್ವ ತಾನೆ ಕಣ್ಣ ಮುಂದೆ ಕಾಣಿಸುತ್ತದೆ |

ಕಣ್ಣ ಮುಂದೆ ಕಾಣಿಸುತಿರಲಣ್ಣಗಳಿರಿದನ್ನು ಬಿಟ್ಟು |

ಮಣ್ಣು ಕಲ್ಗಳಲ್ಲಿ ಹುಡಿಕಿ ಬಣ್ಣಗೆಟ್ಟು ಪೋಪರೇಕೋ ||ಪಲ್ಲ||

ಕರಿದು ಬಿಳಿದು ಕೆಂಪು ಛಾಯದಿ |

ಬಹ್ವಂದಮಾಗಿ ತರಣಿ ಸೋಮಶಿಖಿಯ ನಾಮದಿ |

ಸ್ಫುರಿಪ ಮೂರು ಮಂಡಲದಂ |

ತರದಿ ಮೂಡಿ ತೋರ್ಪವಖಿಳ |

ಪರಿಯ ಬಿಂದುವಿನೊಳುದಿಸಿದ |

ಪರಮ ತೇಜ ನಿಕರದಲ್ಲಿ ||1||

ಚಲಿಸುತಿರ್ಪ ದಿಟ್ಟಯ ನಿಲಿಸಿ |

ಎಡೆವಿಡದೆ ನಡೆವ ಪೊಳೆವ ಮರುತನನ್ನು ಕುಂಭಿಸಿ |

ಇಳೆಯೊಳನ್ಯ ವಿಷಯ ವಿಕೃತಿ |

ಗೆಳಸದಿರ್ಪ ಮನಸಿನಿಂದೆ |

ಮಲವಿರಹಿತ ಮತಿಯಗೂಡಿ |

ನಿಲದೆ ನಿರೀಕ್ಷಿಸಲು ಬೇಗ ||2||

ಎಲ್ಲ ಲೋಕದೊಳ ಪೊರಗಿರುವ |

ನಾನಾತ್ವಗಳನು ನಿಲ್ಲದೆ ತಾ ನೋಡಿ ತಿಳಿಯುವ |

ಬಲ್ಲಿದ ಗುರು ಶಂಕರೇಶ |

ನುಲ್ಲಸಿತ ಸುವಸ್ತುವೆನಿಸುತೆಲ್ಲರ ಹೃದಯಾಬ್ಜ |

ಪೀಠದಲ್ಲಿಹುದುರೆ ಭಾವಿಸಿದೊಡೆ ಕಣ್ಣ ಮುಂದೆ ಕಾಣಿಸುತ್ತಿದೆ ||3||

ನೋಡು ನಿನ್ನೊಳು ನಡೆವ ನಾಟಕವ ನಿತ್ಯದಲಿ ನೀನೆ |

ನೋಡು ನಿನ್ನೊಳು ನಡೆವ ನಾಟಕವ |

ನೋಡು ನಿನ್ನೊಳು ನಡೆವ ನಾಟಕ |

ಕೀಡುತೋರ್ಪವೆ ಅನ್ಯನಾಟಕ |

ನೋಡಿ ಧನ ವ್ರಯ ಮಾಡಿ ವ್ಯಸನದಿ |

ಕೂಡಿ ಕೆಡುವದು ಖೋಡಿತನವಿದು ||ಪಲ್ಲ||

ಶರೀರವೆಂಬುದೆ ನಾಟಕಾಲಯ |

ಪುಚಿದ್ಬಯಲದೆಂಬುದೆ |

ಮೆರವ ರಂಗಸ್ಥಾನದಂಗಣವು |

ಮಿರಗುವಾಧಾರಾದಿ ಯಾರಾಗಿರುವ |

ಚಕ್ರಗಳೇ ಪರದೆಗಳು ತರತರದ ಮಂಡಲಗಳೇ |

ಚಿತ್ತರದ ಸೀನಾಗೆಸವ ವಕ್ಷಿಗೆ ||1||

ಎಣ್ಣೆಯಿಲ್ಲದ ಜೋತಿಯುರಿವವು |

ಕ್ಷಣಕ್ಷಣಕೆ ನಾನಾ ಬಣ್ಣದೋರ್ದು ಪರದೆಗಳಡಗುವವು

ಸಣ್ಣ ಪಡಿ ಉಡುಗಣದ ಪರಿಯೊಳು |

ಬಣ್ಣಿಗೆಯ ಬಗೆಬಗೆಯೊಳೊಪ್ಪುವ |

ತಣ್ಣಗಾದ ಎಲೇಕ್ಟರುಗಳತಿ |

ನುಣ್ಣಗೆಸವವು ಕಣ್ಣಿಗೀಗಳೆ ||2||

ಹೊಸತರದ ಹಾರ್ಮೊನಿಯ ಸುನಾದ |

ಫಾರ್ಟಕರು ಪಾಡುವ ಮಿಸುಪ ನಾದ |

ತಬಲದ ಮೇಲ್ನಾದ ಬೆಸುಗೆಯಿಂದಿನಿದಾಗಿ |

ಕೇಳುವದ ಸಮಗಾಯಕರೆನಗೆ ತೋರರು |

ಒಸೆದು ಮೇನೇಜೇರನೆಂದೆನ್ನಿಸಿದ |

ಶಂಕರನೋರ್ವ ತೋರ್ಪನು ||3||

ಯೋಗಿಗೆ ಶಿರ ಬಾಗಿ ನಮಿಪೆ ಭಕ್ತಿ |

ಯೋಗದಿಯನುದಿನದಿ |

ಪರಮ ಶಿವಯೋಗಿಗೆ ಯೋಗಿಗೆ ವಿಷಯ |

ವಿರಾಗಿಗೆ ಸಂಕೃತಿ ತ್ಯಾಗಿಗೆ ನಿರುತ ನಿರೋಗಿಗೆ ಪರಶಿವ ||ಪಲ್ಲ||

ಉಡು ವಲ್ಲಭನನು ಮಿಡುಕದನಾಮಿಕ |

ಕಿರಬೆರಳಿಂ ಬಲಿದು ರುಜು ಕಾಯದಿ ವಾಸಿಸಿ |

ದೃಢ ಮಾನಸದಿಂ ಬಿಡದಂಗುಷ್ಟದಿ |

ಜಡಜಾಪ್ತನ ತಡೆದು ಅಗ್ನಿಯೊಳು ಬೆರೆಸಿ ಪತ |

ವಿಡಿದು ಗಡನಡಿದು ವಾಸನೆಗಳ ಕಡೆದು |

ನಡು ನಾಡಿಯ ತುದಿಗಡರಿವದಾಗಸ |

ದೆಡೆಯೊಳಮೃತವನು ಕುಡಿದು ಸುಖಿಪ ಶಿವ ||1||

ಜಗದಿ ಬಂಧ ಲಕ್ಷಗಳೆಂಬವುಗಳ |

ಮೊಗವ ನಿರೀಕ್ಷಿಸದೆ ಮುದ್ರಾಸನಾದಿಗಳ |

ನೆಗಳುವ ಒಳ ಕರಣಗಳನು ನಿಲಿಸುವ |

ಹಗರಣ ಕಡಿಯಿಡದೆ ಪೂರ್ಣಾನುಭವದಿ |

ಮನ ಮುಗಿದು ನಿಜಬಗೆದು ಬರಿ ತಗಲುಗಳುಗಿದು |

ಸೊಗಸುವ ನಾದವು ಝಗಿಸುವ ಬಿಂದು |

ಕಳೆಗಳನು ಕಾಂಬುವ ಬಗೆ ಮರೆದಿಹ ಶಿವ ||2||

ಗುರು ಶಂಕರನೆಸಗಿರುವಧ್ಯಾತ್ಮದ |

ವರ ಬೋಧದ ಬಲದಿ ಅಜರಂಧ್ರದ ನೆಲೆಯೊಳು

ಪರಬ್ರಹ್ಮದ ಶುಭಕರ ಪ್ರಕಾಶ ಕಂಡುರುತರ |

ಸಂತಸದಿ ಕರಕಮಲ ಮುಗಿದು ಅಂತರದಿ |

ಬಂಧುರದಿ ಪೂಜಿಸುತಾದರದಿ |

ನಿರುತದಿ ಪರಿಪರಿ ಸ್ಮರಿಸು ಮುಕ್ತಿಯ |

ನೆರೆ ಯಾಚಿಸಿ ಹಿತಕರಮಾಗಿಹ ಶಿವ ||3||

ಇಷ್ಟಲಿಂಗವನ್ನು ಪೂಜಿಸೊ ಯೋಗೀಂದ್ರ ಬಿಡದೆ |

ಇಷ್ಟಲಿಂಗವನ್ನು ಪೂಜಿಸೋ ಇಷ್ಟಲಿಂಗವನ್ನು |

ಪೂಜಿಸಷ್ಟವಿಧಾರ್ಚನೆಯೊಳುಂ ವಿಶಿಷ್ಟ ಯೋಗಗಳಿಗೆ |

ಮಹಾ ಶ್ರೇಷ್ಠವಾದುದಿದೆ ಪರತರ ||ಪಲ್ಲ||

ಮೊದಲಿನ ಪುಣ್ಯದ ವಿಶೇಷದಿ ನಿನಗಾಗಿ ಈಗ |

ಸದಮಲ ಶಿವಲಿಂಗ ಬೇಗದಿ |

ಮುದವನಾಂತು ವದಗಿ ತಾ ಕರದವರ |

ಕಮಲದೊಳು ಕಾಣಿಸಿದುದು ಪ್ರಭೆ ವಿಡಿದು ವಿರಾಜಿ |

ಪುದು ಸುನೋಟಕಿದೆ ಪರತರ ||1||

ಮೆರವ ಮುನ್ನಿನಾಸನೆಂಬುದೆ |

ಬಿಂದ್ವಾಗಿ ಮೇಲಿನೆರಕ ಪೀಠನಾದವಾಗಿದೆ |

ಪರಮ ಗೋಮುಖವೆ ಕಳೆಯಾಗಿರದಾನಿಷ್ಕಳನೆ |

ಲಿಂಗದುರು ನಿಜವಾಗಿರಲದರೊಳು |

ಪರಿಶೋಭಿಪುದಿದೆ ಪರತರ ||2||

ಗಿರಿಯಗಲತೆಯೆನ್ನೊಳ ವಿಡಿದು ಪೊಳೆವಾ |

ದರ್ಶದ ಪರಿಯಾರಬ್ಧಗಳಿಂಬೊಡೆದು |

ಮಿರುಗುವ ಬೊಮ್ಮಕ್ಕನುದಿನ ಸರಸದೊಳಾ |

ಶ್ರಯವಾಗಿಹ ವರಶಕ್ತಿಯವೆರಸಿದ |

ಶಂಕರತಾನಾದಿದೆ ಪರತರ ||3||

ಪ್ರಾಣಲಿಂಗವನ್ನು ಪೂಜಿಸೊ ನಿರಂತರದೊಳು |

ಪ್ರಾಣಲಿಂಗವನ್ನು ಪೂಜಿಸೊ

ಪ್ರಾಣಲಿಂಗವನ್ನು ಪೂಜಿಸೂಣೆಗೊಳದೆ ನಿನ್ನೊಳಿರ್ಪ

ತಾಣ ಗುರುವಿನಿಂದ ತಿಳಿದು ಜಾಣನಾಗಿ ಕಂಡು ನಿರುತ ||ಪಲ್ಲ||

ವರ ವಿವೇಕ ಜಲವ ನೀಡುತೆ|

ಅಭಿಷೇಕಗೈದು ವಿರತಿ ಭಸ್ಮವನ್ನು ತೀಡುತೆ|

ಮೆರವ ಷಾಂತಸಾಂತಮಾದ

ನಿರಘ ಶೈವ ಶಕ್ತಿ ಬೀಜದೆರಕದಲ್ಲಿ ಝೇಂಕರಿಸುವ

ಪರಮ ನಾದವಾಲಿಸುತ್ತ ||1||

ಹರುಷವೆಂಬ ಪುಷ್ಪ ಧರಿಸುತೆ |

ಸುವಿಚಾರವೆಂಬ ಮಿರುಗುವಕ್ಷತಿಯನು ಇರಿಸುತೆ

ನಿರುತ ಮೂಲ ಮುಖ್ಯವಾರು

ತೆರದ ಚಕ್ರಶಕ್ತಿಯರೊಡ

ನಿರದೆ ನಿಖಿಲ ಪ್ರಭೆಯ ತೋರ್ಪ

ಪರಮ ಬಿಂದು ವೀಕ್ಷಿಸುತ್ತ ||2||

ಸಲೆ ವಿಚಾರ ಧೂಪವಿಕ್ಕುತೆ |

ಚಿದ್ಬಿಂದುವೆಂಬ ಜ್ವಲಿಪ ದೀಪವನ್ನು ಯತ್ತುತೆ

ಪೊಳವ ಗಾಜಿನೊಳಿಹ ದೀಪ

ಮೊಳಪೊರಗತಿ ಬೆಳಗುವಂತೆ

ನಿಲದೆ ನಿನ್ನೊಳೆಸದಿಹ ಚಿ

ತ್ಕಳೆಯೆ ಶಂಕರೇಶನೆಂದು ||3||

ಭಾವಲಿಂಗವ ಪರಿಭಾವಿಸೆಜಿಸು ಯೋಗಿ |

ಜೀವ ಶಿವರದ್ವೈತ ಭಾವನೆ ನೀಗಿ ||ಪಲ್ಲ||

ಧರಣೀಯೇ ಪೀಠ ಮೇಣ್ದಿಶೆಯೆ ಗೋಮುಖ ಪೂರ್ಣ |

ಭರಿತಮಾಗಿರುತಿರ್ಪ ಬಯಲೆ ಗೋಳಕವು

ಇರದೆಲ್ಲ ಲೋಕವನೊಳಕೊಂಡ ಲಿಂಗವ

ಅರಿವೆಂಬ ವರಕರ ಸರಸಿಜದಿರಿಸಿ ||1||

ನದಿಗಳ ನೀರಿನಿಂ ಮುದದಿ ಮಜ್ಜನಗೈದು

ಸದಮಲ ಶಶಿ ಭಾಸ್ಕರ ಪುಷ್ಪಂಗಳ

ಪದೆದು ಧರಿಸಿ ವನೌಷಧಿಗಳನೆಲ್ಲತೀ

ವಿದನೈವೇದ್ಯವನಯದಿಂದರ್ಪಿಸಿ ||2||

ಅರಿಯಲು ಇದರಂತರದೊಳಿರುವ ಶಂ

ಕರ ಗುರು ನಾನೆಂದು ನಿರುತದಿನಿನ್ನೊಳು

ಸ್ಮರಿಸುತ ಸೇವ್ಯ ಸೇವಕ ಭಾವಂಗಳ

ಪರಿದು ಸರ್ವಂಖಲ್ವಮೆಂಬ ಶೃತಿಯರಿದು ||3||

ಲಿಂಗಪೂಜೆ ಮಾಡೊ ಎಲೊ ಎಲೊ |

ಲಿಂಗಪೂಜೆ ಮಾಡೊ

ಲಿಂಗಪೂಜೆ ಮಾಡಂಗದೊಳನುದಿನ

ತುಂಗ ಸಾಧನೆಗಳಿಂ ಗಮ್ಮನೆ ನೀಂ ||ಪಲ್ಲ||

ಶಿವ ಸಕಲಾಧಾರೆಂಬುವದಾಸನ

ಶಿವ ಜಗಭರಿತೆಂಬುವದಾಹ್ವಾನ

ಶಿವ ಚಿನ್ಮಯನೆಂಬುವದೆ ಉಪಾದ್ಯವು

ಶಿವ ಕರುಣಾರ್ಣವನೆಂಬುವದಘ್ರ್ಯ ||1||

ಹರ ಸರ್ವೆಂಬುವದಾಚಮನೀಯ್ಯವು

ಹರ ಪಾವನನೆಂಬುವದಭೀಷೇಕ

ಹರ ಪರಿಪೂರ್ಣನದೆಂಬುದೆ ವಸ್ತ್ರವು

ಹರ ನಿತ್ಯನುಯೆಂಬುವದೆದೆ ಸೂತ್ರ ||2||

ಶಮೆಯೆಂಬುವದೆಯಲಂಕಾರವು

ನಿರುಪಮವಹ ಸದ್ಭಕ್ತಿಯದಕ್ಷತಿಯು

ದಮೆಯೆಂಬುದೆ ಲೇಪನ ನಿರ್ವಿಷಯವೆ

ವಿಮಲ ಧೂಪ ಚಿದ್ಬಿಂದುವೆ ದೀಪ ||3||

ಮತಿಯ ಭೇದ ನೈವೇದ್ಯವು ತ್ರೈಗುಣ |

ದತಿಶಯ ಪರಿಮಳ ತಾಂಬೂಲ

ಕ್ಷಿತಿಯೊಳು ಸೋಹಂಭಾವ ಪ್ರದಕ್ಷಿಣ

ವಿತತ ತತ್ವಮಿರ್ದುದೆ ವಂದನವು ||4||

ಪರತರ ಗುರು ಶಂಕರನೊಳೈಕ್ಯವನು |

ವೆರಸಿ ಸುಮ್ಮನಿರುತಿಪ್ಪುದೆ ಯೋಗ

ಅರುವಿನ ಕುರುಹಿಂ ಪರಮ ಸುಖದಿ

ನಿಬ್ಬೆರಗಾಗಿರುತಿಹುದೆ ವಿಸರ್ಜನವು ||5||

ಬೆರದೇಕಿಕರಿಸು ಯೋಗಿ

ಮೂಲಿಂಗದಿ ಬೆರದೇಕಿಕರಿಸು ಯೋಗಿ

ಬೆರದೇಕಿಕರಿಸು ಸ್ವೇತರ ಭಾವ ಪರಿಸು

ಸುಸ್ಥಿರ ನಂಬಿಗಿರಿಸು ಅಂತರದೊಳು ಸ್ಮರಿಸು ನೀ ||ಪಲ್ಲ||

ಅರಿವೆಂಬ ಪರಿಮಳವ ನಿರಂತರ

ಧರಿಸಿಕೊಂಡುರೆ ಮೆರವ ಸ್ಫುರಿಸಿದ ಹೃತ್ಸರ

ಸಿರುಹ ಕರ್ಣಿಕೆಯೊಳು ಪರಿಶೋಭಿಸುವ

ಪರತರಿಷ್ಟಲಿಂಗದಿ ||1||

ಗಂಗೆ ಮೇಣ್ ಯಮುನೆಗಳು ಒಂದಾಗಿರ್ಪ

ಸಂಗಮಸ್ಥಾನದೊಳು ಕಂಗೊಳಿಸುವ ಗಗ

ನಾಂಗಣದಿರುತಿಹ ತುಂಗತರದ ಪ್ರಾಣ

ಲಿಂಗದೊಡನೆ ನೀನು| ||2||

ಗುರು ವರಶಂಕರನು ಅನಾರತ

ಪರಮಾನಂದೊಳು ತಾನು ಚರಿಸುವ

ನಡುವಿನ ಮೆರವ ನಾಡಿಯ ಸುಮಂದಿರದಿ

ವಾಸಿಸಿದ ಬಾಸುರ ಭಾವಲಿಂಗದಿ ||3||

ಯೋಗಿಗಳಿಗೈದವಸ್ಥೆಗಳು ನೋಡೋ

ಬೇಗದಿಂದರಿದು ನಿಜಸುಖದಿ ಕೂಡೊ ||ಪಲ್ಲ||

ಇಳೆಯ ಪರಲೋಕ ಸುಖಗಳನುಳಿದು ತನಗೆ

ನಿರ್ಮಳ ಮೋಕ್ಷವೆಂತಪ್ಪುದೆಂದು ಸತತಂ

ಸಲೆ ಶೃತಿ ಗುರೂಕ್ತಿಗಳ ತಿಳಿದು ಶಮೆ ಸತ್ಯಾದಿ

ಬಲು ಸುಗುಣಗಳೊಳೆಚ್ಚರಿಹುದೆ ಜಾಗ್ರ ||1||

ಸುರಚಾಪ ಶರದಭ್ರ ಮರುಮರೀವೆಕೆಯಂತೆ

ನೆರೆ ಭ್ರಾಂತಿಯಿಂ ತೋರ್ಪ ಸಂಸರಣವು

ಬರಿ ಗಂಟೆದೆಂದುಮುಂ ಬರಿದಾತ್ಮನುಳುಮೆಯನೆ

ಪರಿಭಾವಿಸುತ್ತಿರಲ್ಕಿದೆ ಸ್ವಪ್ನವು ||2||

ಭೇದವಳಿದ ವಿರಳ ಸುಬೋಧವಳವಟ್ಟು

ಮತ್ತಾದ ಪ್ರಾರಬ್ಧ ಸುಖ ದುಃಖಂಗಳ

ಮೋದ ಖೇದವು ಬಂದ ಹೋದ ಹೊಲಬಿಲ್ಲ

ದಂತಾದೊಡೆ ಧರಾತಲದೊಳಿದೆ ಸುಷುಪ್ತಿ | |3||

ಪೊರಗಿರ್ಪ ಬರಿಗೊಡದ ಪರಿಯಂತೆ ಬಾಹ್ಯ

ವಂತರದ ಭಾವನೆಯ ಸಂಶಯವಿಲ್ಲದ

ಶರಧಿಯೊಳು ಮಗ್ನವಾಗಿರುವ ಘಟದಂತೆ

ಬಂಧುರದಿ ಪೂರ್ವತೆಯೊಳಿರಲಿದುವೆ ತೂರ್ಯ ||4||

ತನು ವಿಡಿದು ಮಿಕ್ಕಾವ ಮನಸಿನಭಿಮಾನವ

ವೆಳ್ಳನಿತು ತೋರದೆ ಶಂಕರೇಶ ನೆನಿಸಿ

ಬಿನಗುವಾದಿಗಳೆಲ್ಲ ಮನಕೆ ಬಂದಂತೆ ಶಾ

ಸನಗೊಳಿಸಿದಿರವೆ ತೂರ್ಯತೀತವು ||5||

ಧ್ಯಾನ ಮಾಡುವೆ ಗುರು ಧ್ಯಾನ ಮಾಡುವೆ

ಮಾನವಮಾನಗಳೆಲ್ಲ ಸಮಾನವೆಂದು ತಿಳಿಯುತ ಗುರು | |ಪಲ್ಲ||

ನಿಂದಿಸಿ ನುಡಿಯಲಿ ಎನ್ನನು ವಂದಿಸಿ ಸತ್ಕರಿಸಲಿ ಗಡ

ನಿಂದಾ ವಂದನೆಗಳು ಸಮವೆಂದಂತರ್ಮತಿಯಲಿ ಗುರು ||1||

ಯೋಗಿಯಂದು ಭಜಿಸಲಿ ಬಹು ರೋಗಿಯಂದು ತೆಜಿಸಲಿ ನಿಗ

ಮಾಗಮದೊಳು ವಿಧಿಸಿದ ಶಿವಯೋಗ ಮುದ್ರೆಯಿಂದಲಿ ಗುರು || 2||

ಪಾಡುತ ಸ್ಮರಿಸಲಿ ವಿಧವಿಧ ಕಾಡುತ ಜರಿಯಲಿ ಕೋಪದಿ

ನೋಡುತ ನಿಜ ಮುಕ್ತಿಯ ದಯಮಾಡಿದ ಶ್ರೀಶಂಕರನನು ||3||

ಆರು ತೆರದಿಂದೆಸವ ಗುರುಗಳಿಹರು

ಸಾರ ಸಂಭ್ರಮದಿ ಶೀಷ್ಯರನು ಪಾಲಿಪರು ||ಪಲ್ಲ||

ನರ ವಸೀಕರಣಾದಿ ಪರಿವಿಡಿದು ಸುಖ ದುಃಖ

ವೆರಡನೀವಾತನೆ ನಿಷೇಧಕ ಗುರು

ಪರಮ ಸಂಪದವಿಲ್ಲಿ ಪರಲೋಕದಲಿ ಸುಖವ

ಕರುಣದಿಂದೀವನೇ ಕಾಮ್ಯದ ಗುರು ||1||

ಭೇದ ಮತಿ ಬಿಡಿಸುತ ಕ್ಷಮಾದಿ ಸಾಧನ

ಗುಣಗಳಾದರದೊಳಿಡಿಸುವನೆ

ಸೂಚಕ ಗುರು ವೇದಾಂತದೊಳು ಗೌಪ್ಯವಾದ

ತತ್ವವನೆ ಸಮ್ಮೋದದಿಂ ತಿಳಿಸುವನೆ ವಾಚಕ ಗುರು ||2||

ಎರಡಾಗಿ ತೋರುತಿಹ ಪರಮ ಜೀವರನೈಕ್ಯ

ವೆರಸಿ ತೋರಿಸುವಾತ ತಾರಕ ಗುರು

ಪರತರಾನಂದ ಶಂಕರ ಗುರುವೆ ತಾನಾದ

ವರ ಮೋಕ್ಷ ಪಾಳಿಪನೆ ವಿರಹಿತ ಗುರು ||3||

ಬೋಧೆ ಯಾತಕೆ ಶ್ರೀಗುರು ಬೋಧೆ ಯಾತಕೆ

ವೇದಾಂತ ಶೃತಿಯೋದಿ ವಾದಿಪಗೆ ||ಪಲ್ಲ||

ಮಾನವ ಜನ್ಮದಿ ತಾನುದಿಸಿ ಶಿವನ

ಧ್ಯಾನಗೈದುವರ ಬೇಡದೆ

ಸದ್ದಾನ ಧರ್ಮಗಳ ಮಾಡದೆ

ಸುಜ್ಞಾನ ಮಾರ್ಗವನು ನೋಡದೆ

ಹೀನ ವಿಷಯದಭಿಮಾನವಿಡಿದು

ಮದ್ದಾನೆಯಂತೆ ಬಲು ಮೌನದೊಳಿರುವಗೆ ||1||

ಹರಚರಗುರು ಸಚ್ಛರಣರ ಕಂಡಡೆ

ಸರಸದಿಂದೆ ತಲೆವಾಗದೆ

ಸಂತರ ಸುದರ್ಶನಕೆ ಪೋಗದೆ

ದುಶ್ಚರಿತ ಗುಣಗಳನು ನೀಗದೆ

ಹರ ಯೋಗಿಗಳಂತರವರಿಯದ ಬಹು

ಜರಿದು ವರ್ತಿಸುವ ಮರುಳು ಮತಿಗಳಿಗೆ ||2||

ಧಾರಿಣಿಯೊಳೆ ಪರನಾರಿಯ ಸಂಗದಿ

ಸೇರಿ ಸ್ವಪತ್ನಿಯ ದೂಷಿಸಿ

ಅವಿಚಾರ ನಡೆಯೊಳು ಪ್ರವೇಶಿಸಿ

ಔದಾರ ಗುಣಗಳನು ನಾಶಿಸಿ

ಧೀರ ಗುರು ಶಂಕರೇಂದ್ರನ ಪದಪಂ

ಕೇರುಹ ಭಜಿಸದ ಕ್ರೂರ ಕುಹಕರಿಗೆ ||3||

ಎಂದಿಗಾಗದು ಮೋಕ್ಷವು ಎಂದಿಗಾಗದು

ಚಂದದಿ ವಿಧಿಗಳ ಪೊಂದದೆ ಸುಮ್ಮನೆ ||ಪಲ್ಲ||

ಜಗದಿ ಸತ್ಯ ಮಿಥ್ಯಗಳನು ತಿಳಿಯದೆ

ಮಿಗೆ ಭೋಗದ ಭ್ರಾಂತಿಯ ಬಿಡದೆ

ಸೊಗಸುವ ಷಟ್ಸಾಧನಗಳು ಬಯಲಿದೆ

ಬಗೆದು ವೇದ ನುಡಿಗಳ ಕೊಂಡಾಡದೆ ||1||

ಗುರುವರನಡಿದಾವರೆಯ ಸೇವೆಯನು

ಸ್ಥಿರಚಿತ್ತದಿ ಮಾಡದೆ ಜೀವ

ಪರಮರನೈಕ್ಯವ ನೆರೆಗಯ್ಯದೆ ಸಂ

ತರ ಸಂಗದ ಸಾಗರದೊಳು ಮುಳುಗದೆ ||2||

ನಾನು ನೀನೆನುವ ಭಾವಮನಳಿಯದೆ

ಹೀನ ನಡೆ ನುಡಿಯನಾಶಿಸದೆ

ಜ್ಞಾನ ಸೌಧ ಸೋಪಾನವ ಮೆಟ್ಟದೆ

ನಾನಾ ಕಲ್ಪನೆಗಳನೀಡಾಡದೆ ||3||

ತನುವಿನುಪಾಧಿಗಳನು ಬೇರಿಡದನು

ದಿನದೊಳು ಸದುಗತಿಗಿಚ್ಛಿಸದೆ

ಮಿನಗುವ ಸಂಸೃತಿ ಕನಸೆಂದರಿಯದೆ

ಮನವನು ಶಿವ ಮನುವಿನೊಳೊಡವೆರಿಯದೆ ||4||

ದ್ವೈತವಳಿದು ವಿಪರೀತ ಭಾವನೆಯ

ರೀತಿಗಳನು ಮರೆಮಾಚಿಸದೆ

ಸಾತಿಶಯ ಸುಖ ವಿದಾತನೆನಿಪ ಗುರು

ನಾಥ ಶಂಕರೇಶನು ನೀನಾಗದೆ || 5||

ಜ್ಞಾನ ವೈರಾಗ್ಯೋಪರತಿ ಮೂರು ಮುಕ್ತಿಗೆ

ನೂನ ಸಾಧನಗಳೆಂದೆನಿಸುವವು |ಪಲ್ಲ||

ಶ್ರವಣಾದಿಗಳೆ ಕಾರಣವು ಹಂಕೃತಿಗಳನು

ತವಿಸುವದೇ ರೂಪವು ಸಂಸೃತಿಯ

ತವೆ ಸಾಕ್ಷಿತ್ವವೆ ಕಾರ್ಯವಿವೆ ಮೂರು ಜ್ಞಾನಕ್ಕೆ

ಭುವಿಯೊಳು ನಿಜಮೆಂದೆಂಬುವರು ಬಲ್ಲರು ||1||

ವನಿತಾದಿ ದೋಷದ ದರ್ಶನವೆ ಕಾರಣವು

ಮತ್ತನುವಿನಿಂದವನುಳಿವುದೆ ರೂಪವು

ಮನವೆತ್ತಲೆರಗಿದಪ್ಪುದೆ ಕಾರ್ಯವಿವೆ ಮೂರು

ಘನ ವಿರತಿಗೆ ಸ್ಥಾನಮಾಗಿಹವು ||2|

ಯಮನಿಯಮಾದಿ ಯೋಗಮೆ ಕಾರಣವು ಸ್ಥಿರ

ವಿಮಲ ಚಿತ್ತವೆ ರೂಪು ಕರ್ಮಗಳ

ಭ್ರಮಿಸದಿಪ್ಪುದೆ ಕ್ಯಾರ ಕ್ರಮದಿಂದಲಿವೆ ಮೂರು

ಉತ್ತಮದು ಪರತಿಗೆ ಮೂಲಗಳಾಗೆಸವವು ||3||

ಅರಿವಿಲ್ಲದೆರಡಿರುತಿರೆ ಮುಕ್ತಿಯಾಗದು

ಉತ್ತರ ಲೋಕ ಗತಿ ಮಾತ್ರ ಪ್ರಾಪ್ತಿಪುದು

ವಿರತಿಯು ಪರತಿಗಳೆರಡಿರದರಿವೊಂದೆ

ಯಿರೆ ಮೋಕ್ಷವಹುದಾರಬ್ಧದ ಕರ್ಮ ಬಿಡದು ||4||

ವಿರತಿಗೆ ಸರ್ವವು ತೃಣಮೆಂಬುವದೆ ಕೊನೆ

ಪರ ಉಪರತಿಗೆ ಎಚ್ಚರಮಿಲ್ಲದೆ

ಧರೆಯೊಳಿಹುದೆ ಕೊನೆಯರಿವಿಗೆ ಶಂಕರ

ಗುರುವೆ ನಾನೆಂಬ ಬಂಧುರ ಬುದ್ಧಿ ಕೊನೆಯು ||5||

ಜ್ಞಾನವನೆ ದೃಢ ನೀನಂಬು ಮನುಜಾ

ಮಿಕ್ಕೇನು ಬಯಸದೆ ||ಪಲ್ಲ||

ಪರಿಪರಿ ಕರ್ಮದ ಶರಧಿಯೊಳಗೆ

ಬಿದ್ದೊರಳುತ ಜ್ಞಾನವ ಮರೆಮಾಜಿ

ನಿರುಪಮ ಮೋಕ್ಷವ ನೆರೆ ಭ್ರಾಂತಿಸಿದೊಡೆ

ದೊರೆಯದದೆಂದಿಗು ಬರಿದೆ ಕೊರಗಿದೀ ||1||

ನುತ ವೇದಾಗಮ ತತಿಯೊಳು ವಿಧಿಸಿದ

ವಿತತ ಯಾಗಯೋಗಾದಿಗಳು ಮತಿಯೊಳರಿವುದಿಸೆ

ಕ್ಷಿತಿಯೊಳು ಕೋಟೆಯೊಳು

ತಿಳಿಯೆಲೊಂದಂಶಕೆ ಸರಿಯಲ್ಲೀ ||2||

ತನುವನು ದಂಡಿಸಿ ಮನವನು ನಿಲ್ಲಿಸಿ

ಧನವ ನೀಗಿ ಮನೆಯನು ತೊರೆದು

ವನವಾಸಮದೇಕಿನಿತು ಜ್ಞಾನ ಸಂ

ಜನಿಸಲಘದ ಕುಲಮನು ಕೆಡಿಸುವದೀ ||3||

ಅರಿವೆಂಬುವದಿದೆ ಪರಮ ಮೋಕ್ಷ ಪಥ

ಮರಳಿ ಬೇರೆಯೊಂದಿಲ್ಲೆಂದು

ವರ ಶೃತಿನಾನ್ಯಃಪಂಥಮೆನುತ

ಸಾರಿರುವದದನೀನರಿದು ದಿನದೀ ||4||

ಪರತರ ಗುರು ಶಂಕರನ ಜ್ಞಾನವಂ

ತರದೊಳಳವಡಲು ಸ್ಥಿರಮಾಗಿ

ಪರಮಾನಂದದ ಪುರುಷವು ನಿನ್ನಗೆ

ದೊರೆವದು ಸತ್ಯವು ಬರಿ ಮಾತಲ್ಲೀ

ಜ್ಞಾನವನೆ ದೃಢ ನೀನಂಬು ಮನುಜ ||5||

ಅರಿವಿದೆ ಸತ್ಯವೆಂದರಿದು ವರ್ತಿಸು ಯೋಗಿ

ಭರದಿ ಮುನ್ನಿನ ಜಡ ಮತಿನೀಗಿ ಪಲ್ಲ||

ದುರಿತ ತಿಮಿರ ದಿನಕರ ಪರಿಭವ ಮೇಘ

ಬಿರುಗಾಳಿಯ ಜ್ಞಾನವನನ್ಹಿ

ಕರುಣ ಕಶ್ಮಲ ಗಿರಿವರ ವಜ್ರವನು ತಾಪ

ಕರಿ ಸಿಂಹ ಕ್ಲೇಶ ಕುಜ ಕುಠಾರ || 1||

ಪರಮ ಸುಖದದುಗ್ಧ ಶರಧಿ ಹಿಮಾಂಶು

ಭಾಸುರ ಕೈವಲ್ಯದ ಸಾರ ಸುರಭೂಜ

ಮೆರವ ಸಿದ್ಧಿಗಳ ಮಂದಿರವು ಸುಕೃತದುರು

ತರಮಾಗಿ ತೋರ್ಪರೋಹಣ ಶೈಲ ||2||

ಶೃತಿಯ ಸಂತತಿಯು ನಿರುತದೊಳರಸುವ

ಲಲಿತ ಯೋಗಿಗಳು ಹೃದ್ವನಜದಲ್ಲಿ

ಹಿತದಿ ಸ್ಮರಿಪ ಸುರಪತಿ ಮುಖ್ಯ

ದಿವಿಜರು ನುತಿಪ ಶಂಕರನಿರ್ಕೆ ಇದು ನೋಡು ||3||

ಸುಮ್ಮನೆ ಬಳಲ್ವರು ತಮ್ಮೊಳಗಿಹ

ಪರಬೊಮ್ಮವನರಿಯದೆ ಪೊರಗರಿಸಿ |ಪಲ್ಲ||

ಸಕಲ ತತ್ವಗಳನು ಯುಕುತಿಯಿಂ ತಿಳಿದನಾ

ತ್ಮಕವೆಂದು ನೇತಿಗಳೆದು ಒಳಗೆ

ಪ್ರಕಟದಿಂದಿವಕೆಯಧಿಕರಣವೆಂದಿನಿಪ

ಅಕಳಂಕ ಪರ ತತ್ವವದು ತಾವೆಂದರಿಯದೆ ||1||

ನಿರುತದಿ ನಡೆವ ಜಾಗರಣ ಕನಸು ಸುಪ್ತಿ

ಮಿರಗುವ ಮೂರವಸ್ಥೆಗಳಲ್ಲಿ ಶರೀರದಿ ಬೇರಾಗಿ

ಸ್ಫುರಿಪ ವಿಶ್ವಾದಿ ಜೀವರನಂಟ

ದಾನಂದವೇ ತಾವೆಂದರಿಯದೆ ||2||

ಸ್ವಗತಾದಿ ಮೂರು ಭೇದಗಳ ಭಾವನೆಯು

ತನ್ನಗೆಯಿನಿತಿಲ್ಲದೆಯನುದಿನದಿ

ಗಗನದಂತ ವಿರಳವಹ ಗುರು ಶಂಕರ

ನಗಲಿಕೆ ತಮಗಿಲ್ಲವೆಂದು ನಿಶ್ಚೈಸದೆ ||3||

ಉಳಿವದೇನೊಂದದುವೆ ನೀನಿರುವಿ

ಹೇ ಮಂದಮತಿಯೆ ಉಳಿವದೇನೊಂದದುವೆ ನೀನು

ಅಹುದಿಳೆಯೊಳಗೆ ನಾನಾತ್ವ ಕಲ್ಪನೆಗಳನುಳಿದು

ಬಹುವಾದ ತತ್ವಂಗಳನು ಶೋಧಿಸಿ ಕಳಿಯಲಾ ಕ್ಷಣ ||ಪಲ್ಲ||

ಹೃದಯ ಗ್ರಂಥಿಯ ಮೂಲವನ್ನಳಿದು

ಪ್ರಾಪ್ತಿಸದ ಮುಂದಿನ ಪದ ಫಲಗಳಾಶಯನು

ನೆರೆಗಳೆದು ಸದ ಸದದ ಭೇದವನರಿದು

ದುರ್ಮದ ಕುಟಿಲ ಮೋಹಾದಿ ಗುಣಗಳ

ಸದೆದು ನೀನದಿದೆಂಬ ಸಂಕಲ್ಪದ

ವಿಪಿನವನು ದಹಿಸಲಾಕ್ಷಣ ||1||

ಮುಂದೆ ನಿನಗಹ ಮುಕ್ತಿಯನು ಬಿಡದೆ ಲೌಕಿಕ

ವಿಷಯಾನಂದ ಕಾರ್ಯಕೆ ಚಿತ್ತವನು ಕೊಡದೆ

ಹಿಂದೆ ನಿನಗಾಗಿರ್ಪಖಿಳ ಭವ

ಬಂಧದೊಳಗಿನ್ನೊಮ್ಮೆ ಪೋಗದೆ

ಎಂದಿಗಳಿಯದ ನಿಜ ಸುಖದಿ ನೀ

ನಿಂದುವಂದರೊಳಡಗಲಾ ಕ್ಷಣ |2||

ಪೊರಗೊಳಗೆ ಎರಡೆಂಬುದನು ಬಿಟ್ಟು

ಇಹ ಪರಗಳೆಂಬುವ ಮರುಳ ಮಾತಿನ

ಮಮತೆ ಕಡಿದಿಟ್ಟು ಹಿರಿಕಿರಿಯರಿವರೆಂಬುದನು ಗಡ

ಮರೆದು ಮರವರಿವೆಯ ಶಿಖರದೊಳು

ನಿರುತ ನೆಲೆಯಾಗಿರುವ ಗುರು

ಶಂಕರನೊಳೈಕ್ಯವ ಪೊಂದಲಾ ಕ್ಷಣ ||3||

ನಿನ್ನಯ ನಿಜವಿದೆ ನಿನ್ನೊಳು ತಿಳಿ ತಿಳಿ

ಭಿನ್ನವಿಟ್ಟರಸಿ ನೀ ಬನ್ನಬಡುವರೆ ||ಪಲ್ಲ||

ಘನ ಬ್ರಹ್ಮಾಂಡೈಕ ರೂಪಿನ ಕಾರ್ಯಕೀಗ

ಸಾಧನವಹ ಕಾಲ ಕರ್ಮಾಣು ಪ್ರಕೃತಿಯು

ಮಿನಗುವ ವ್ಯವಹಾರ ವಿನಿತು ಜೀವರುಗಳಿವನು

ದಿನವಧಿಕರಣೆನಿಪ್ರಸದ್ರೂಪವೆ ||1||

ನೆರೆದ ವಿಕೃತಿಗಳನಿರದೆ ವಿಕ್ಷೇಪವ

ನೆರೆ ಕೃತಿಸುವ ಮಾಯಾವರಣದಿ ತನಗಾ

ವರಿಸದ ಜೀವೇಶ ಕೂಟಸ್ಥ ಬ್ರಹ್ಮಾದಿ

ಪರಿಪರಿ ನಾಮದಿಂ ಮೆರವ ಚಿದೃಪವೆ ||2||

ಭೂತ ವಿಷಯ ಬ್ರಹ್ಮ ವಾಸನೆಯಾದ ನಿ

ಜಾತುಮಸಮ್ಮಂಧಾದ್ವೈತಮ ವಿದ್ಯಾ

ಭೂತಲದೆಂಟಾದ ಲೌಕೀಕಾಧ್ಯಾತ್ಮಗಳ

ಜಾತಕೆ ನೆಲೆಯಾದ ಸ್ಥಿರ ಸುಖ ರೂಪವೆ ||3||

ಎರಡೆಂಬುದನ್ನು ತಾ ಮರೆದೊಂದಾಗಿರುತಿಹ

ನಿರುತ ಪ್ರಾಗಾದಿಯ ಭಾವ ನಾಲ್ಕನ್ನು

ವರಿಸದೆ ನಿತ್ಯ ನಿರ್ಮಲವಹ ತನ್ನ

ಭಾಸುರ ಬೆಳಗಿಲಿ ತೋರ್ಪ ಪರಜ್ಯೋತಿ ರೂಪವೆ | |4||

ಮೂರು ಪರಿಚ್ಛೀದ ಮೀರುತ ಬ್ರಹ್ಮಾಂಡಾ

ಪಾರಮಾಲಿಕೆಗೇಕ ಸೂತ್ರಮಾಗಿ

ತೋರುವ ಮೂಲ ಮಾಯಾ ರಮೆಯಳಿಗೆಯಾ

ಧಾರನಾಗಿಹ ಪರಿಪೂರ್ಣ ಶಂಕರನೆ ||5||

ಜ್ಞಾನಮಾರ್ಗದಲ್ಲಿ ನಿನ್ನ ನೀನೆ ತಿಳಿದು ನೋಡೆಲೊ ||ಪಲ್ಲ||

ನಾನು ನೀನುಯಂಬ ಭೇದ ಭಾವವಳಿಯಲು

ಸ್ವಾನುಭಾವದಿಂ ಬಹುತ್ವ ಕೂನ ಕಳಿಯಲು ||1||

ಮಿನಗುವ ಜಗ ಕನಸಿನಂತೆ ನಿನಗೆ ಘಟಿಸಲು

ಜನಿಭವವಿಲ್ಲೆಂಬ ಶೃತಿಯ ಮನದಿ ಪಠಿಸಲು ||2||

ಭೂತ ಪಂಚಕಾದಿ ತತ್ವ ಜಾತ ಪುಶಿಯಲು

ಪೂತ ಶಂಕರೋರ್ವ ಸತ್ಯನಾತನೊಳಗೆ ಬೆರೆಯಲು ||3||

ಭವ ನಿನಗಿಲ್ಲವು ಜೀವನೆ

ಸುವಿವೇಕಿಸಿ ನೋಡು ನೋಡು ಪಲ್ಲ||

ಕಳವಳಗಳ ಕಳೆಯುತ

ಹೃನ್ನಳಿನದಿ ಮತಿ ನಿಲಲಾ ಕ್ಷಣದಿ

ಸಲೆ ಬೆಳಗಿನ ಬಳಗದೊಳುರೆ

ಪೊಳೆಯುವ ಶಿವ ನೀನೆಯಿರುವಿ ||1||

ಶರೀರೇಂದ್ರಿಯ ಕರಣದ ಕೃತಿ

ನೆರೆ ಭೂತ ನಿಕರವನು ಬಿಟ್ಟು

ಸರಸದಿ ಮುಂದರಿದೀಕ್ಷಿಸೆ

ಪರ ತತ್ವವು ನೀನೆ ಇರುವಿ ||2||

ನಿರಘ ನಿರಾವರಣ ಪರಾ

ತ್ಪರನದ್ವಯ ನಿರವಯನೆಂದು

ವರ ಶೃತಿ ಸಾರಿರುವದರಿಂ

ಗುರು ಶಂಕರ ನೀನೆಯಿರುವಿ ||3||

ತಾನೆ ತನ್ನನರಿದಾನಂದಿಸುವ

ಮಹಾನುಭವಿಯ ಸುಖಕೆಣೆಯುಂಟೆ

ಜ್ಞಾನಾಮೃತವನು ಪಾನಮಾಡ್ದವಗೆ

ಹೀನ ಕರ್ಮದಭಿರುಚಿಯುಂಟೆ ||ಪಲ್ಲ||

ಸಲೆ ಸಂಕಲ್ಪಗಳಳಿದು ನಿಂದವಗೆ

ಕುಲದಭಿಮಾನವು ನಿಲಲುಂಟೆ

ವಿಲಸಿತ ಪೂರ್ಣತೆಯಳವಡಿಸಿದಗಿಳೆ

ಯೊಳು ವ್ರತ ನೇಮಗಳಿಲಲುಂಟೆ ||1||

ಹೊರಗೊಳಗೊಂದಾಗಿರುತಿರ್ಪನಿಗೆ

ಸ್ವ ಪರಮೆಂಬುವ ಭಿನ್ನತೆಯುಂಟೆ

ಪರಮನ ಮನದಿಂದರಿತಾಗೆ ವನ

ಗಿರಿಯೊಳು ತಪಿಸುವ ಭ್ರಮೆಯುಂಟೆ ||2||

ಶರೀರವ ಪರವೆಂದರಿದವನಿಗೆ ಭವ

ಮರಣದಂಜಿಕೆ ಬರಲುಂಟೆ

ಚರಿಸುವ ಮನಸಿಗೆ ನೆರೆ ಸಾಕ್ಷಿ

ಕನೆಂದರಿದಗಿತರ ವಾಸನೆಯುಂಟೆ ||3||

ಧ್ಯಾನ ಧ್ಯೇಯಗಳ ಖೂನವ ಮರೆದಗೆ

ಮೌನ ಸಮಾಧಿಯ ತಗಲುಂಟೆ

ನಾನಾತ್ವವಗಡ ಹಾನಿಗೈದವಗ

ನೂನ ಸಂಸರಣ ತಡೆಯುಂಟೆ ||4||

ವನಜ ಭವಾಂಡವ ಹಾನಿಗೈದವಗ

ಜನದಪವಾದದ ಹೆದರುಂಟೆ

ಘನ ಬ್ರಹ್ಮವೆ ತಾನೆನಸಿ ಮೈಮರೆದವನಿಗೆ

ವಿಧಿ ನಿಷೇಧಗಳುಂಟೆ ||5||

ದ್ವಂದ ರೋಗ ಕಳೆದೊಂದೆಂಬುವನಿಗೆ

ಕುಂದು ಕೊರತೆಗಳ ಭಯಮುಂಟೆ

ಬಂಧ ಹರ ಶಂಕರೇಂದ್ರ ಗುರುವೆ ತಾ

ನೆಂದರಿದಗೆ ಪೆರತಿನ್ನುಂಟೆ ||6||

ನಿನಗೆ ಸುಮೋಕ್ಷಯಂತಹುದು ನಿನ್ನ

ಮನದೊಳು ನಾನಾತ್ವ ಮನೆಯ ಮಾಡಿಹುದು ||ಪಲ್ಲ||

ಅರಿವರ್ಗವನು ಜೈಸಲಿಲ್ಲ ಮತ್ತ

ಸಿರಿ ಸತಿ ಸುತ ಭೂಮಿಗಳ ಬಿಡಲಿಲ್ಲ

ಹೊರಗೊಳಗೊಂದಾಗಲಿಲ್ಲ ಇಹ

ಪರ ಭೋಗದಾಪೇಕ್ಷ ಮರೆದಿರಲಿಲ್ಲ ||1||

ಬರಿ ಕರ್ಮಗಳನಳಿಲಿಲ್ಲ ನಿನ್ನ

ಶರೀರದ ಮೋಹ ವಿಸ್ಮರಣಾಗಲಿಲ್ಲ

ಸ್ಮರ ಕಾಲರನು ಗೆಲಿಲಿಲ್ಲ ಜೀವ

ಪರಮರೊಂದೆಂಬ ಎಚ್ಚರ ಬರಲಿಲ್ಲ ||2||

ಕಾಪಟ್ಯ ಗುಣ ಕಳಿಲಿಲ್ಲ ನಿನ್ನ

ಚಾಪಲ್ಯತನಗಳ ಲೋಪಿಸಲಿಲ್ಲ

ಸೋಪಾಧಿಕವ ಬಿಡಲಿಲ್ಲ ನಾಮ

ರೂಪಗಳಿಗೆ ಬೇಗ ಶಾಪಿಸಲಿಲ್ಲ ||3||

ಧ್ಯಾನ ಧ್ಯೇಯವ ತೊರಿಲಿಲ್ಲ ನಾಮ

ನೀನೆಂಬುದಳಿದು ನಿಧಾನಿಸಲಿಲ್ಲ

ಮಾನವೆಂಟನು ಮೀರಲಿಲ್ಲ ಒಳ್ಳೆ

ಜ್ಞಾನದಿ ನಿನ್ನನು ಜಾನಿಸಲಿಲ್ಲ ||4||

ಮರವೆಯ ತರಿದಿಡಲಿಲ್ಲ ಕುಲ

ದರಿಶನದಭಿಮಾನ ದೂರಾಗಲಿಲ್ಲ

ಗುರು ಶಂಕರಾನೆನ್ನಲಿಲ್ಲ ಘಾಳಿ

ಯೊರತುರಿಯುವ ಜ್ಯೋತಿ ಪರಿ ತೋರಲಿಲ್ಲ ||5||

ನಿನ್ನಗಿಂ ಬೇರಿನ್ನು ಶಿವನುಂಟೆ

ನಿರುಪಮ ಸುಜ್ಞಾನವೆ ||ಪಲ್ಲ||

ನಿರುತದಿ ವರ ಜಾಗರಣದವಸ್ಥೆ

ಯೊಳಿರದೊದಗುವ ಜಡ ಕಾರ್ಯಗಳ

ಪರಿಯ ವಿಶ್ವನೆಂಬುರು ನಾಮದಿ

ಭಾಸುರನೇತ್ರದಿ ನೀನರಿದು ಕೊಳುವಿ ಗಡ ||1||

ಅನುದಿನದೊಳು ಕನಸಿನೊಳುದಿಸುವ

ಕಲ್ಪನೆಗಳ ಮೂಲವನನುವಾಗಿ

ಘನತೈಜಸ ನೀನೆನಿಸುತ ಭರದೊಳು

ಮನವೆಂಬುವ ಸಾಧನದೊಳರಿವಿ ಗಡ ||2||

ನೆರೆ ನಿದ್ರೆಯೊಳಾವರಿಸಿದ ಮೂಲಾ

ವರಣ ವೃತ್ತಿ ಕರಣದಿ ನಿಂದು

ಮಿಗುವ ಪ್ರಾಜ್ಞ ಪೆಸರಿನಿಂ ಪರಸುಖ

ವರಿದು ಶಂಕರನೆ ನೀನಾಗುವಿ ಗಡ ||3||

ಏನಾಶ್ಚರ್ಯವೋ ಇದು ಏನಾಶ್ಚರ್ಯವೋ

ನೀನಿರೆ ಮೋಕ್ಷವು ತಾನಹುದಂತಿದು ||ಪಲ್ಲ||

ಉಳ್ಳ ವಿಷಯಗಳನೆಲ್ಲವನುವಿನಿಂ

ನಿಲ್ಲದೆ ವಿಧ ವಿಧದಲ್ಲಿ ಬಗೆಗೊಳುವಿ ||1||

ಒಂದರೊಳೊಂದಿರದಂದವಸ್ಥಗಳೊಂದದೆ

ಸಾಕ್ಷಿಕನೆಂದು ಶೋಭಿಸುವಿ ||2||

ಜಗದೊಳು ತನು ಭಿನ್ನಗಳಾಗಿರ್ದರವುಗಳ

ಬೆರಸಿ ಹಾನಿಗಳಿಲ್ಲದಿರುವಿ ||3||

ಭೂವಿಯೊಳು ದಿನ ಮಾಸವು ಮನ್ವವು

ಯೆಂಬುವ ಬಹು ಕಾಲದೊಳವತುಕೊಂಡಿರುವಿ ||4||

ವರ ದೃಗಮನಮೀಶ್ವರ ಬೊಮ್ಮಾಗಿಹ

ಗುರುಶಂಕರ ದೇವರ ನಿಜಮೆನಿಸಿದಿ ||5||

ಧನ್ಯನಾದೆನು ನಾ ಬಲು ಧನ್ಯನಾದೆನು

ಮುನ್ನಿನ ಜೀವದ ಭಾವವಳಿದು ಬಲು ||ಪಲ್ಲ||

ನೆರದ ಸಭಾ ಮಂದಿರದ ಜನರ

ಮುಂದುರಿಯುವ ಜ್ಯೋತಿಯ ಪರಿಯಂತೆ

ಕರಣೇಂದ್ರಿಯ ಪರಿ ಪರಿ ವಿಷಯಂಗಳ

ನೆರೆ ಸಾಕ್ಷಿಕ ನಾನೆಂದು ತಿಳಿದು ಬಲು ||1||

ಮನೆ ಗವಾಕ್ಷ ಗತದಿನ ಕಿರಣದಿ ಕರವನು

ಚಲಸೆ ರವಿಚಲಿಸಿತೆಂದು ಅನಿಸುವ ತೆರದೊಳು

ಜನನ ಮರಣ ಜೀವನಿಗೆ ತೋರ್ಪ

ವೆನಗಿಲ್ಲೆನ್ನುತ ಬಲು ||2||

ಬೆಳಗು ತಮಗಳನು ತಳೆದಾಗಸ ನಿ

ರ್ಮಳವಿಹ ಪರಿಮರವರಿವೆಗಳ

ಬಳಕೆಯೊಳಿರ್ದವುಗಳ ಬೆರಸದ

ಅವಿರಳ ಶಂಕರ ಗುರುನಾನೆಯಂದು

ಬಲು ಧನ್ಯನಾದೆನು ||3||

ಆಗದು ನಿಜ ಸುಖವು ಹೇ ಮನುಜ

ಕೂಗಿ ಪೇಳವೆ ನಿನಗೆ ಆಗದು ನಿಜ ಸುಖ

ಭೋಗಿಗಳಿಗಿಹದೋಳಿಗ ಬ್ರಹ್ಮವನುವಾಗಿ ತಿಳಿಯದಿರೆ |ಪಲ್ಲ||

ನಿಗಮಾಗಮಗಳ ನೋಡುತೆ

ಹಗಲಿರುಳಲಿ ನುತಿ ಮಾಡುತೆ

ಸೊಗದಿಲಿ ಗೀತಗಳಾಡುತೆ

ಸುಗುಣಗಳೊಳು ನೀಂ ಮಿಗೆ

ಶೋಭಿಸಲೇಂ ಜಗದೊಳು

ನಿನ್ನಯ ಬಗೆಯೊಂದರಿಯದೆ ||1||

ಕಪಟ ಗುಣಂಗಳನಳಿಯುತೆ

ಚಪಲತನವ ನೀ ತಳೆಯುತೆ

ಅಪರಮಿತ ಮಂತ್ರ ತಿಳಿಯುತೆ

ಜಪಮಾಡಿದರೇಂ ಗುಪಿತದಿ

ಗುರುವರನುಪದೇಶದ

ಸತ್ಕೃಪೆಯನು ಪಡಿಯದೆ ||2||

ಅಷ್ಟ ಸಿದ್ಧಿಗಳ ಪಡೆಯುತೆ

ಅಷ್ಟ ಮದಗಳನು ಕಡಿಯುತೆ

ಅಷ್ಟ ಕಷ್ಟಗಳ ತೊಡೆಯುತೆ

ಇಷ್ಟಮಹತ್ವದನೆಷ್ಟು ಮಾಡ್ದರೇಂ ಶ್ರೇಷ್ಟ

ಗುರು ಶಂಕರೇಶನ ತಿಳಿಯದೆ 3||

ಎನಿತು ಸುರಿದರು ತೀರದು ಎನಗಾದ

ಘನ ಸಂತಸದ ಬಗೆಯನು ಶಿವನೆ ||ಪಲ್ಲ||

ಪರಿಭವದ ಭಯಕೆ ಬೆದರಿ ಆರಿಂದ

ಪರಿಹರಮಿದಪ್ಪುದೆಂದು ಮನದಿ

ಕೊರಗಿ ಗುರುಪದವ ಪಿಡಿಯೆ ತದ್ಭಯವು

ಇರದೋಡಿ ತಾ ಕ್ಷಣದೊಳು ಶಿವನೆ ||1||

ಶರೀರವಾನೆಂದು ಮಾಯಾದುರುಮೋಹ

ಶರಧಿಯೊಳು ಬಿದ್ದು ಮರುಗೀ ಬಳಿಕಾ

ನರಿದು ಯೋಚಿಸಿ ನೋಡಲು ಆದನುಳಿದು

ಪರಮ ನಾನೆಂದೆನಿಸಿದೆ ಶಿವನೇ ||2||

ಧರೆಯೊಳಾನೆಂಬುವರ್ಥವೇನೆಂದು

ವರ ಶೃತಿಯ ಮತವನಿಡಿದು ಬೇಗದಿಂ

ಪರಕಿಸಲು ನೀನೇ ನಾನು ಆಗಿರುವೆ

ಮೆರವ ಶ್ರೀಗುರು ಶಂಕರ ಶಿವನೇ ||3||

ಮಿಥ್ಯಯಾದ ಘಟವೆ ನೀನು

ತಥ್ಯದಂತೆ ತೋರಿ ಬಿಡದ

ಪಥ್ಯ ಮಾರ್ಗಕ್ಕೆಳಸಿ

ಮೋಹಗೊಳಿಪುವುಚಿತವೆ ||ಪಲ್ಲ||

ಮೊಟ್ಟ ಮೊದಲು ಮೃತ್ತಿಕೆಯೊಳು

ದಿಟ್ಟಿವರಿದೊಡಿಲ್ಲ ನೀನು

ಪುಟ್ಟಿದ ಬಳಿಕೊಡೆದು ಧೂಳಿಯಾಗಲಿಲ್ಲವು

ಮೊಟ್ಟ ಮೊದಲು ಕಟ್ಟ ಕಡೆಯೊಳೆಷ್ಟು

ಶೋಧಗೈದರಿಲ್ಲ ನಟ್ಟನಡುವೆ

ನಿನ್ನಗಾವ ರೂಪು ನಿಜವದು ||1||

ನರರ ಮುಖದ ಬರಿಯ ನುಡಿಗಳ

ರವಿನಿಂದ ಕಣ್ಗೆ ಚಂದವೆರಸಿ ಕಲ್ಪಿತಾ

ಕೃತಿಯಂತಳೆದು ತವಕದಿ

ವರ ವಿವೇಕ ವಿರಹಿತರ್ಗೆ

ಪರತರಾರ್ಥವೆನೆಸಿ ತೋರ್ಪೆ

ಪರಿಕಿಸಲ್ಕೆಯೆಂದಿಗಿಲ್ಲ

ನಿನಗೆ ತೋರ್ಕೆಯು || 2||

ಇಲ್ಲೆನಿಸದೆ ಕಾಲ ಮೂರರಲ್ಲಿ

ತೋರದಡಗದಿರ್ಪ

ಸಲ್ಲಲಿತದಿ ತೋರ್ಪ ಮಣ್ಣೆಯಲ್ಲವೆ ನೀನು

ಉಳ್ಳ ಮಣ್ಣಿನಂತೆ ಈಗಳಿಲ್ಲಿ

ಶಂಕರರೇಶನಂದವೆಲ್ಲವಿಡಿದು

ತೋರ್ಪುದು ಜಗ ನಿನ್ನ ತೆರೆದೊಳು 3||

ನೀನಾರೆಂದಭಿದಾನವ ಕೇಳ್ದರೆ

ನಾನೇನೊರೆಯಲಿ ಕಮಲಮುಖಿ

ನಾನು ನನ್ನೊಳು ನಿಧಾನಿಸಿ ನೋಡಲು

ನಾನೆ ಸಚ್ಚಿದಾನಂದ ಸಖಿ ||ಪಲ್ಲ||

ನಿರವಧಿಕನು ನಾ ನಿರ್ಮಾಯನು ನಾ

ನಿರಸದ್ಯನು ನಾ ನಿರಘನು ನಾನೆ

ನಿರುತದಿ ಮಾಯೆಯ ಬೆರದಿರುವವ ನಾ

ಪರಿಪರಿ ರೂಪದೊಳಿರುವವ ನಾನೆ ||1||

ಜನನ ರಹಿತ ನಾ ಜಗದಿ ಭರಿತ ನಾ

ಮನುಮುನಿಯಾಗಿರುವವ ನಾನೆ

ಘನ ಚರಿತನು ನಾ ಮನ ಸಹಿತನು ನಾ

ವನ ಜೋದ್ಛವ ಹರಿಹರ ನಾನೆ ||2||

ಅರಿಯದವ ನಾನರಿದಿರ್ದವ ನಾ

ಶರೀರದೊಳಿಹ ಜೀವನು ನಾನೆ

ಗುರು ಶಂಕರನೊಳು ಬೆರದನುದಿನದೊಳು

ಮೆರೆಯುವ ಪರಿಪೂರ್ಣನು ನಾನೆ ||3||

ಫಲವು ಬಗೆಯಾಗಿ ಕಂಗೊಳಿಪ ವಿಶ್ವವನೆಲ್ಲ

ಪೊಳೆವ ಶಿವಮಯವೆಂದು ಸ್ಮರಿಸುವನೆ ಮುಕ್ತಾ |ಪಲ್ಲ||

ಸರಿಗಿ ಕಷ್ಮಾಣಿಯುಂಗರ ಕಂಕಣಗಳೆಲ್ಲ

ವರಿಯಲೊಂದೇ ಕನಕಮಿರ್ಪಂದದಿ

ಪೊರ ಕಲ್ಪನೆಯೊಳು ಪರಿಪರಿ ನಾಮರೂಪಿ

ನಿಂದಿರುವ ಜಗಮೆಲ್ಲಾತ್ಮವೊಂದೆಯೆಂದು ||1||

ತೊಲೆ ಬೋದು ತೋರಣದ ಚಲ ಕಂಭಮೆಲ್ಲ

ತಿಳಿಯಲು ಕಾಷ್ಟಮೊಂದೆಯಾಗಿರ್ಪ ತೆರದಿ

ಕುಲದೈವ ಜಾತಿ ಸಂಕುಲ ದರ್ಶನಗಳೆಲ್ಲ

ತೊಳಗುತಿಹ ಪರತತ್ವವೊಂದೆಯೆಂದು ||2||

ಝಗಿಪ ಬೊಂಬೆಯ ಪದಕರಗಳೆಲ್ಲ ಭಾವಿಸೆ

ಮತಿಗೆ ಮೃತ್ತಿಕೆಯದೊಂದೆ ತೋರುವಂತೆ

ಬಗೆಯಲ್ಕೆ ಜೀವೇಶ ಮಿಗುವ ಕೂಟಸ್ಥ

ಬ್ರಹ್ಮಗಳೆಲ್ಲ ಗುರು ಶಂಕರೋರ್ವನೆಂದು ||3||

ವರಮೋಕ್ಷ ನಿನಗೆಂತಹುದೊ ಶೃತಿ

ಗುರು ವಾಕ್ಯ ಸ್ವಾನುಭವ

ಸಮನ್ವಯಿಸದಿರ್ದರೆ ಮನುಜನೆ ||ಪಲ್ಲ||

ದರ್ಪಣವ ನೋಡಲ್ಕೆ ಮುಖ

ಮುಂದೊಪ್ಪಿ ತೋರ್ಪಾ ತೆರದಿ ನಿನ್ನೊಳ

ಗಿಪ್ಪ ಚಿಜ್ಜ್ಯೋತಿಯ ಸ್ವರೂಪವು

ತಪ್ಪದದು ತಾ ತೋರದಿರಲು ||1||

ತರುಣಿಯರ ನೋಟದ ಸುಮಾಸ್ತ್ರವು

ಭರದೆ ಎಳೆ ಜವ್ವನಿಗರೆದೆಯೊಳೆರಕ

ಗೊಂಡಂತನುದಿನದಿ ಗುರುವರೆದ

ನುಡಿಗಳು ನೆಲಸದಿರಲು ||2||

ಪಿರಿಯ ಪುಲಿ ನೋಡಿದ ಪಥಿಕನೆ

ಚ್ಚರವ ಮರೆದಂತೊಡೆಯ ಶಂಕರ

ನಿರವದಂ ತನ್ನನುಭವದಿ

ಸುಖವೆರಸಿ ಪರವಶನಾಗದಿರಲು ||3||

ಗುರು ಬೋಧೆಯ ನೀ ಪಡಿ ಗುರು

ವರೆದ ಮಂತ್ರವನು ನುಡಿ

ಗುರು ಬೋಧೆಯ ಪಡೆದರೆ

ನಿನ್ನಯ ಭವ ಮರಣಗಳಳಿವವು

ಬರಿ ಮಾತಲ್ಲಿದು ||ಪಲ್ಲ||

ಸತಿ ಸುತ ಹಿತಬಾಂಧವರು ನಯ

ಯುತರಾಗಿಹ ಸೇವಕರು

ಜತೆಯಾಗಿರ್ದೇಂ ಕ್ಷಿತಿಯಲಿ

ಬ್ರಹ್ಮವ ಮತಿಯೊಳರಿಯದಿರೆ

ಗತಿಯಾಗದು ಗಡ ||1||

ತುರಗ ವಾರಣ ತತಿಗಳು ಘನ

ಸಿರಿಸಂಪದ ಸೌಖ್ಯಗಳು

ನೆರೆ ನಿನ್ನೊಳು ಬಿಡದಿರಲೇಂ ನಿನ್ನಿರ

ವರಿಯದಿರೆ ಮುಕುತಿ

ದೊರಿಯದು ತಿಳಿ ಗಡ ||2||

ಬಲ ಸಾಹಸ ಚಲುವಿಕೆಯು

ಸತ್ಕುಲ ವಿದ್ಯೆಯು ಜಾಣ್ಣುಡಿಯು

ಸಲೆಯಿರ್ದೇಂ ನಿನ್ನೊಳು

ಶಂಕರನಿಹ ನೆಲೆಯರಿಯದೆ ಸುಖ

ಫಲಮಾಗದು ಗಡ ||3||

ತಿಳಿ ನಿನ್ನ ನಿಜವನೀಗಳೆ ಗುರು ಪದಕ್ಕೆರಗಿ

ಅಳಿವ ಕಾಯದ ಸುಖಕ್ಕೊಲಿದವಧಿ ಬೇಡೊ ||ಪಲ್ಲ||

ಹಿಂದೆ ಮಾಡಿದ ಪುಣ್ಯದಿಂದೆ ಮಾನವನ ಜನ್ಮ

ಬಂದಿರ್ಪುದೀಗ ನಿನ್ನರಿಯದಿರಲು

ಮುಂದಕೀ ಜನ್ಮವೆಂದೆಂದಿಗೊದಗದು ಮೂಢ

ಬಂಧವೇ ನಿನಗೆ ಮಂದಿರಮೆನಿಪುದದರಿಂ ||1||

ವರ ಸುಕೃತ ಶೇಷದಿಂ ಮರಳಿ ನರಜನ್ಮ

ಬಂದುರು ಬಹುದು ಗುರುನಾಥ ದೊರೆಯನಾಗ

ಗುರು ದೊರಕಿದರು ನಿನ್ನನರಿವ ಸುವಿವೇಕವಂ

ತರದಿ ಬಂದಪುದೊ ಬಾರದೊ ತಿಳಿಯದದರಿಂ ||2||

ಕರುಣ ಕಾಲನಿಗುಂಟೆ ಮರೆವೆ ಮೃತ್ಯುವಿಗುಂಟೆ

ಇರದೆಳೆವ ಯಮಭಟರಿಗವಧಿಯುಂಟೆ

ಬರೆದಿಟ್ಟ ಚಿತ್ರಗುಪ್ತರಿಗೆ ವಿಸ್ಮೃತಿಯುಂಟೆ

ಮರಣದವಧಿಯನೆ ಎಣೆಪರು ಸಕಲರದರಿಂ ||3||

ಇರುಳು ನೋಡಿದ ಭಾವಿ ಮರಳಿ ಹಗಲಿನೊಳು ತಾ

ನುರುಳಿ ಬಿದ್ದ ಅಸು ಬಿಟ್ಟ ಮೂರ್ಖನಂತೆ

ಬರಿಯ ಸಂಸೃತಿಯಿದೆಂದೊರವ ಶೃತಿಗೇಳ್ದು ಮೈ

ಮರದರಂತಕನ ಘನನಿರಯ ಬಿಡದದರಿಂ ||4||

ಧನವೆ ಬ್ರಹ್ಮವು ನಿನ್ನ ತನಯರೇ ವೇದಾಂತ

ವನಿತೆಯಾಲಿಂಗನವೆ ಮುಕ್ತಿಯಂದು

ಮನದೊಳುಬ್ಬಿದೊಡೆ ಬಂಧನಕೆ ಬೀಳುವಿ ಮತ್ತ

ಮನಘ ಗುರುಶಂಕರನು ಮುನಿಯದಿರನದರಿಂ ||5||

ದೇಶಿ ಕೇಂದ್ರ ಪರಿಪಾಲಿಪುದೊಲಿದು

ಶ್ರೀ ಶಿವ ಮೂರುತಿ ನೀನೆಂದರಿದು

ಅಶಯೊಳಾಂ ನುತಿಸುವೆ ಕೈಮುಗಿದು

ಕ್ಲೇಶ ಪಂಚಕವುಯೆನ್ನೊಳು ಬಲಿದು

ಪೌಶದಂತೆ ಸರ್ವಾಂಗಕೆ ಬಿಗಿದು

ಮೋಸಗೊಳಿಸಿ ಕಾಡುವವೈ ಪಿರಿದು ||ಪಲ್ಲ||

ಧರೆಯೊಳ ವಿದ್ಯಾ ಕ್ಲೇಶವು ತಾನು

ಮರೆಮಾಡಿತು ಬ್ರಹ್ಮನ ರೂಪವನು

ನೆರೆ ತೋರಿತು ಸಂಸೃತಿ ಬಂಧವನು

ಮರವೆಯೊಳಿರಿಸಿತು ಮಾಡುವದೇನು

ಪರಿಪರಿಯಿಂ ಕೊರಗಿಸಿತೆನ್ನನ್ನು

ಮರೆ ಹೊಕ್ಕೆನು ಪರಿಹರಿಸೈ ಇನ್ನು ||1||

ಎರಡನೆಯ ಸ್ಮಿತವೆಂಬುವ ಕ್ಲೇಶ

ಭರಿದಿಂದೆನ್ನೊಳು ಮಾಡ್ದು ಪ್ರವೇಶ

ಶರೀರದಿ ಕಲ್ಪಿಸಿತಾತ್ಮಾಧ್ಯಾಸ

ವರ ಶೃತಿ ಮೊತ್ತಕ್ಕಿಟ್ಟಿತು ಮೋಸ

ಪರಿಪರಿಯಿಂದೆಸಗಿತ್ತ ವಿಲಾಸ

ಪೊರೆಯುವರಿಲ್ದೆನಗಾಯ್ತಾಯಾಸ ||2||

ಮೂರನೆ ರಾಗ ಕ್ಲೇಶ ಮದುದಿಸಿ

ನಾರಿಯಾದಿ ಬಹು ಭೋಗವ ಬಯಸಿ

ಭೂರಿ ವಿಷಯ ಸುಖಗಳ ಸ್ವೀಕರಿಸಿ

ಪಾರಮಾರ್ಥ ಸುಖ ಸಂಪದ ಮರಿಸಿ

ದಾರೇಷಣ ಮುಖ್ಯ ತ್ರಯ ಸ್ಮರಿಸಿ

ಘೋರಿಪುದುಳಿಸುವರಿಲ್ಲಾದರಿಸಿ ||3||

ದ್ವೇಷಮೆಂಬ ನಾಲ್ಕನೆಯದು ಪುದಿದು |

ಆಶಾ ಭಂಗದಿ ಕೋಪವ ಬಲಿದು

ಘಾಶಿ ಮಾಡುವದು ಎನ್ನನು ಪಿಡಿದು

ಸೂಸುವ ಸದ್ಗತಿ ಸೂತ್ರವ ಕಡಿದು

ನಾಶನವಾಗುವ ತನುವಿಂಗೊಲಿದು

ಹೇಸದೆ ಬಳಲಿಸುವದು ಹಟವಿಡಿದು ||4||

ಶರೀರದೊಳೈದನೆಯಭಿನಿವೇಶ ತಾ |

ದೊರೆದ ವಿಷಯ ಸುಖಗಳ ಬಿಡದಿರುತ

ತರತರ ದುಃಖಕ್ಕೆಡೆ ಮಾಡುತ್ತ

ಕೊರಗಿಸುತಿಹುದೈ ತಳಮಳಿಸುತ್ತ

ಪರಿಹರಿಸುವರಿಲ್ಲೈದರ ಮೊತ್ತ

ಗುರು ಶಂಕರ ನೀ ಕೈವಿಡಿಯುತ್ತ ||5||

ಶಿವನೆ ತಾನೆಂದರ್ಚಿಸುವಗೆ ಕೈವಲ್ಲ್ಯವಾ

ಶಿವನನ್ಯನೆನುವಗಳಿಯುವದೆ ಭವಬಂಧ ||ಪಲ್ಲ||

ತನು ವಚೋಮನಮೆಂಬ ವಿನಿತರಿಂದೀಶ್ವರಾರ್ಚನೆ

ಯು ಮೂದೆರಮಾಗಿ ತೋರುತಿಹವಾ

ತನುವು ಭಜಿಪುದು ವಚನವಿನುತಿಗೈದವದು ಮತ್ತ

ಮನವು ಚಿಂತಿಪುದಿದರೊಳೊಂದಕೊಂದಧಿಕ ||1||

ತನುವಿನಿಂದತಿ ಸಿರಿ ವಚನದಿಂದೆ ಸುರದುರ್ಗ

ಮನಸಿನಿಂ ಸಾಯುಜ್ಯ ದೊರಕೊಳುವದಾ

ತನುವಿನಿಂ ವಚನದಿಂ ಮನಸಿನಿಂದರ್ಚಿಸಲು

ತನಗುಂಟಹುದಿ ಭುಕ್ತಿಪರದಿ ನಿಜ ಮುಕ್ತಿ ||2||

ಪರಮ ಮೋಕ್ಷಾರ್ಥಿ ಶಿವಪೂಜಾ ವಿಧಾನವನು

ಗುರು ಮುಖದೊಳರಿದು ತನ್ನೊಳು ನಿತ್ಯದಿ

ಮೆರದಿರ್ಪ ಸಚ್ಚಿದಾನಂದ ಶಿವನನ್ನು

ಸಂಸ್ಮರಿಸಿ ಮನದಿಂದರ್ಚಿಸುವದಿದತಿ ಯೋಗ್ಯಂ ||3||

ಮೆರವ ಮುಕ್ತಂಗನೆಯ ಕರವಿಡಿಯಬೇಕೆಂಬ

ವರ ಮುಮುಕ್ಷುಗಳು ಹೃದ್ವನಜದೊಳಗೆ

ಮಿರಗುವ ತಟಿತ್ಪಳಕು ತಾರೆ ಶಶಿಯಂತೆಸವ

ಹರನ ಕಂಡು ಶಿವೋಹಮೆಂದರ್ಚಿಸುವರು ||4||

ಬಿಂದು ನಾದಾಭ್ರಮನು ಭವನ ಮೂರ್ತೆಂಬಾರು

ಚಂದಮಾದಾತ್ಮದಾರಾಧನೆಯನರಿತು

ಅಂದಿಂದೆನದೆ ಗುರೂತ್ತಮ ಶಂಕರನ

ಮನಸಿದಿಂದರ್ಚನೆಯ ಮಾಳ್ಪುದನುದಿನದೊಳೊಲಿದು ||5||

ಎಂತು ಮುಕ್ತರಿವರಾಗುವರು ಬಿಡದಿಂತು

ಗುಣ ಗಣದೊಳಿರುವವರು ||ಪಲ್ಲ||

ಹಿತವಿದಹಿತವೆಂಬರಿವಂತೆ

ಸಂತತ ವಿಷಯದೊಳಭಿರತಿಯಂತೆ

ಶೃತಿಯೊಳು ನಿಜ ನಂಬಿಗೆಯಂತೆ ಗುರು

ಮತ ಮಾರ್ಗಕೆ ಮನಮಿಲ್ಲಂತೆ ||1||

ಅತಿಶಯ ತಮ್ಮೊಳು ಶಮೆಯಂತೆ

ಸಂಸೃತಿಯೊಳು ಪರಮ ಮರುಕವಂತೆ

ಕ್ಷಿತಿಯೊಳು ಸತ್ಕೃತಯುತರಂತೆ

ಸದುಗತಿಗೆ ನಿರಾಶಿಕ ಮತಿಯಂತೆ ||2||

ನಿರುಪಮಾದ್ವಯದ ನಡೆಯಂತೆ

ಕುಲದರಿಶನಾಶ್ರಮದೊಳೊಲವಂತೆ

ಪರಮ ಜೀವರೊಂದಹರಂತೆ ಪರಿ

ಪರಿ ಸಂಶಯ ತೋರುವದಂತೆ ||3||

ಗುರುವರನುಪದೇಶವರಿಯಲಿಹದೊಳು

ಮೂದೆರವಹುದಾಗ ಸಾಧಕರಲ್ಲಿ || ಪಲ್ಲ||

ಪರಮ ಹೀನನ ಗುಣವರಿಯದೆ ಕರಕರ

ದೊರೆದ ಬ್ರಹ್ಮದ ಬೋಧೆಯದು ನೋಡೆ

ಉರಿವ ಬೆಂಕಿಯೊಳು ಕಾದಿರುವ ಕರ್ಬುನದ

ಮೇಲೆರೆದ ನೀರಿನ ತೆರ ಬರಿದಹುದು ||1||

ಧರೆಯೊಳು ಸತ್ಕರ್ಮ ನಿರತ ನೆನಿಪ ಮಧ್ಯ

ತರನಿಗೆ ಪೇಳ್ದಾತ್ಮವರ ಬೋಧೆ

ಸರಿಸಿಜದೆಲೆಯೊಳಗುರುಳಿದ ಜಲದಂತೆ

ವರ ಮುಕ್ತಾಕೃತಿಯಾಗಿ ತೋರುವದು ||2||

ಮರಣ ಜನನ ಭಯದುರಿಗಂಜಿ ಮರೆ ಹೊಕ್ಕ

ವರ ವಿಶಿಷ್ಟನ ನೋಡಿ ಕೃಪೆಯಿಂದೆ

ವರೆದ ಶಂಕರ ಗುರುವರನ ಮಂತ್ರವು ಸಿಂಪಿ

ಬೆರದಂಬು ಮುತ್ತಾಗುವದು ಸಫಲ ||3||

ಎಂದಿಗಾಗದು ನಿಜ ಮುಕುತಿ ಎಂದಿಗಾಗದು

ಚಂದದಿ ಗುರು ಮುಖದಿಂದೆ ತಿಳಿದೊಡೇ

ನೆಂದಿನಂತೆ ಜೀವದ ಭಾವವಿರಲು ||ಪಲ್ಲ||

ಕಾಮಮುಖರಿಪು ಸ್ತೋಮವನೊದಿಯದೆ

ನಾಮರೂಪು ಪುಶಿಯಂದೆನದೆ

ಪ್ರೇಮಾಪ್ರೇಮದ ಸೊಲ್ಲಡಗದೆ ಬಹು

ನೇಮ ನಿತ್ಯಗಳ ಕಾಮವದಿರುತಿರೆ ||1||

ಕುಲಗೋತ್ರದ ಭ್ರಮೆಯಳಿಯದೆ ಕರ್ಮದ

ಬಲಿಯನು ಕತ್ತರಿಸದೆ ಜವದಿ

ಮಲ ಮೂರರನುರೆ ಗೆಲಿಯದೆ ಹಸು

ತೃಷೆಗಳಿಗೀಡಾಗಿಹ ಪರದೊಲವಿರುತಿರೆ ||2||

ಹೀನವಾದ ತನುವಾನೆಂದೆನುಭವಿ

ಮಾನವನ್ನು ಸಲೆಮಾಜಿಸದೆ

ಜ್ಞಾನಾಂಬುಧಿ ಶ್ರೀಗುರುವರ ಶಂಕರ

ತಾನಾಗಿರದಜ್ಞಾನದೊಳಿರುತಿರೆ ||3||

ಕುರುಬರೊ ನಾವು ಕುರುಬರೊ

ನಮ್ಮ ಕರಣೇಂದ್ರಿಯಗಳೆಂಬ ಕುರಿಗಳ ಕಾಯುವ ||ಪಲ್ಲ||

ವರ ಶೃತಿದಂಡವ ಕರದೊಳು ಪಿಡಿದು

ಸದ್ಗುರು ಕೃಪೆಯೆಂಬ ಕಂಬಳೆಯ ಪೊದ್ದು

ಪರಮ ವಿವೇಕೆಂಬ ಶುನಕನ ಸಾಕಿ

ಈಶ್ವರ ಭಕ್ತಿಯೆಂಬ ಕೊಳಲನೂದುತಿರುವಂಥ ||1||

ಸುವಿಚಾರವೆಂಬ ಮಾರ್ಗವ ಪತ್ತಿಕರ್ಮ

ವೆಂಬುವ ವನದೊಳು ಕುರಿಗಳನು ಬಿಟ್ಟು

ಶ್ರವಣವೆಂಬೊಡೆ ಹುಲ್ಲುತ್ಸವದಿಂದೆ ತಿನಿಸುತ

ತವೆ ಶಾಂತಿಯೆಂಬ ನೀರ್ಗುಡಿಸಿ ಸುಖಿಸುವಂಥ ||2||

ಅರಿ ವರ್ಗವೆಂಬ ಕೊಬ್ಬಿರುವ ತೋಳಗಳಿಗೆ

ವರ ನಾಯಿಯನ್ನು ಕಾವಲಿಯನಿಟ್ಟು

ಪರಿದಪ್ಪಿ ತಿರುಗುವ ಕುರಿಯನು ದಂಡದಿ

ಪರಿಪರಿ ಬಡಿದು ಎಚ್ಚರವಗೊಳಿಸುವಂಥ ||3||

ಮನನವೆಂಬುವ ಹಟ್ಟಿ ಮನೆಯೊಳು ಕುರಿಯ

ಹಿಂಡನು ಪೊಗಿಸುತ ನಿಧಿ ಧ್ಯಾಸವೆಂಬ

ಘನಬೇಲಿ ಬಾಗಿಲಿಗನುವಾಗಿ ನಿಲಿಸಿ

ಭಾವನ ತ್ರಯವೆಂಬ ಚೋರರ ಬರಗೊಡದಂಥ ||4||

ಸಲೆ ಜ್ಞಾನವೆಂಬುವ ಚಿಲಿಪಾಲ ಕರೆದು

ನಿರ್ಮಲವಾಗಿ ನಿತ್ಯದಿ ಸಲಿಸುತಲಿ

ಇಳೆಯೊಳಾನಂದೆಂಬ ಬಲು ಜಿಡ್ಡಿನಿಂ ಕೂಡಿ

ತೊಳಗುವ ಗುರುಶಂಕರನೊಳೈಕ್ಯ ಪಡೆವಂಥ ||5||

ವೇದವಾಕ್ಯ ಭೇದ ತ್ರಯದ ಹಾದಿ ಪೇಳುವೆ

ಮೇದಿನಿಯೊಳನಾದಿ ನುಡಿಗಳೋದಿವುಗಳನರಿಯಲೊ ||ಪಲ್ಲ||

ಪ್ರೇಮದಿಂ ಸಕಾಮ ಯಾಗ ಸ್ತೋಮಮಂ ಸದಾ

ನೇಮದಿಂದೆ ಮಾಳ್ಪುದೆಂಬುದೀ ಮಹಾ ವಿಧಿ ವಾಕ್ಯವು ||1||

ಇಳೆಯೊಳು ಸುರೆ ಫಲಲಗಳನು ವಲಿದು ನಿತ್ಯದಿ

ತಿಳಿಯದಿವನು ಸಲಿಸದಿರೆಂಬುದೆ ನಿಷೇಧ ವಾಕ್ಯವು || 2||

ಎರಡು ವಾಕ್ಯ ಮರೆದು ಶಂಕರೇಶ ಬ್ರಹ್ಮನಂ

ಸ್ಮರಿಪುದೇ ಸಿದ್ಧಾರ್ಥ ಬೋಧಕ ಪರಮ ಶ್ರೇಷ್ಠ ವಾಕ್ಯವು ||3||

ಆತ್ಮನ ಪ್ರತ್ಯಕ್ಷಕ್ಕಾತಂಕಗಳು ಮೂರು

ಆತುಕೊಂಡಿರುತಿಹವು ಆತುಕೊಂಡಿರುತಿಹವು

ನಾ ತಿಳಿಸುವೆನಿಲ್ಲಿ ಪ್ರೀತಿಲಿ ಕೇಳ್ ನಿನ್ನ

ರೀತಿಗೆ ಮೀರಿಹವು ||ಪಲ್ಲ||

ಗುರುವರನಡಿಗೆ ನೀನೆರಗಿ ಸದುಕ್ತಿಯ

ಸ್ಥಿರ ಭಕ್ತಿಯಿಂದೆ ಕೇಳಿದಡೇನು ನಿನ್ನಯ

ಮರವಿಯೊಳಾದ ಸ್ತ್ರೀಯರ ಸಂಗ ಸೌಖ್ಯವು

ಚಿರಕಾಲದಲಿ ನಿನ್ನ ಸ್ಮರಣೆಗೆ ತೋರುತ

ಪರಿಪರಿ ಮರುಗಿಪುದೊ ಇದು

ಪರಿಪರಿ ಮರುಗಿಪುದು ಪೇರಿದೇನು ಪೇಳಲಿ

ಅರಿ ನಿನ್ನೊಳಿದು ಭೂತ ಪ್ರತಿಬಂಧಮೆನಿಸುವದು ||1||

ಜಡಬುದ್ಧಿ ಜನ ಸಂಗ ಕುಟೆಲಾಟ ವಿಷಯಾಶ

ಬಿಡದೆ ನೀ ಸತ್ಪುರುಷರ ದೂಷಣೆಯ ಮಾಡಿ

ಅಡಿಗಡಿಗಾನೆಂಬ ಅಭಿಮಾನವಿರೆ ನಿನ್ನ

ತಡಿಯದೆ ಕೆಡಿಸುವದು ಇದು |

ತಡಿಯದೆ ಕೆಡಿಸುವದು ದೃಢಮನದಿಂ ತಿಳಿ

ಪೊಡವಿಯೊಳಿದು ವರ್ತಮಾನೆಂಬ ಪ್ರತಿಬಂಧವು ||2||

ಶೃತಿ ಸ್ಮೃತಿಗಳನೆಲ್ಲ ವಿತತಾರ್ಥವನೆ ಮಾಡಿ

ಸತತೋದಿದಡೇನು ಜನ್ಮಾಂತರವನಿಲ್ಲ ||

ದತಿಶಯ ಪ್ರಾರಬ್ಧ ತೀರದೆನ್ನುತ

ಶಂಕರೇಶನ ಮರಿಸುವದು ಶಂಕರೇಶನ ಮರಿಸುವದು

ಕ್ಷಿತಿಯೊಳು ನಿನ್ನ ಸುಮತಿಯಿಂದ

ತಿಳಿಯಿದು ಆಗಾಮಿ ಪ್ರತಿಬಂಧವು ||3||

ಸಾರುವೆ ನಾ ಸಾರುವೆ

ಮುಕ್ತಿಗೆ ವಿಘ್ನವು ಮೂರಿರುವವನಿಲ್ಲಿ ||ಪಲ್ಲ||

ನೀನೆ ಪರಬ್ರಹ್ಮನೆಂದು ನಿಶ್ಚೈಸಲು

ನ್ಯೂನಮಿಲ್ಲದೆ ಮುಕ್ತಿಯಹುದೆಂದು

ಗುರು ಪೇಳಿದಾ ನುಡಿ ಮರೆಯುತ

ನಾ ನರನೆಂಬುದ ಸಂಭಾವನೆಯು ತಿಳಿಯೋ ||1||

ಜಹದಜಹಲ್ಲಕ್ಷಣಗಳಿಂದೆ ಸಾಕ್ಷಿಯಾಗಿಹ

ತತ್ವಮಸ್ಯಾದಿ ವಾಕ್ಯಾರ್ಥ ನಿನ್ನೊಳು

ಗ್ರಹಿಸುತಲಾಂ ಬ್ರಹ್ಮನಹುದಲ್ಲೆಂಬುವದಿದು

ಸಂಶಯ ಭಾವನೆಯೋ ||2||

ಕ್ಷಿತಿಯೊಳಗಾಂ ಬ್ರಹ್ಮನಾದೆನೆಂಬುವ ನುಡಿ

ಶೃತಿಸ್ಮೃತಿ ಗುರುಶಂಕರೇಶನಿಂದರಿಯುತ

ಮತಿಗೆ ತಾರದೆ ಯೋಚಿಸುತ ಜೀವನೆಂಬುದೆ

ವಿಪರೀತ ಭಾವನೆಯೋ ||3||

ಗುರು ಸರ್ವೇಶ್ವರನು ಈತನ

ನರನೆಂಬನೆ ಖಳನು ||ಪಲ್ಲ||

ರೂಪು ನಾಮದಿಂದೆ ಎಸಗಿದ

ಪಾಪ ನಿಕರದಿಂದೆ ತಾಪದಿರಲವನು

ತಾ ಪದುಳದಿ ಗಡ ಲೋಪಿಸಿ ನೀ| ಚಿ

ದ್ರೂಪನೆಂದೊರೆದ ||1||

ಮರಣ ಜನನ ಭಯದಿ ಪರಿಪರಿ

ಮರುಗುತಿಹಲ್ಕಿಹದಿ ಕರುಣದಿ ಬಂದಾ

ಮರಣ ಜನನ ಭಯ ಪರಿದು ನೀನೆ ಭವ

ಹರನೆಂದುಸುರಿದ ||2||

ಶರೀರವೆ ನಾನೆಂದು ಕರ್ಮದ

ಸರಣಿಯೊಳಗೆ ನಿಂದು ಮರೆವೆಯೊಳಿರಲಾ

ಶರೀರವಲ್ಲ ನೀ ಪರಮನೆಂದು ತಾ

ನರುಪಿದ ಶಂಕರ ಗುರು ಸರ್ವೇಶ್ವರನು ||3||

ಯೋಗಿಂಗೆ ಕರ್ಮ ಕೋಟಲೆಗಳುಂಟೆ

ಮೇಗೆಸವ ಭಜನಾದಿಯಿಂ ಪುಣ್ಯಮುಂಟೆ | |ಪಲ್ಲ||

ಪೊಡವಿಪಗೆ ಕನಸಿನೊಳು ಬಡತನ ವದಗಲಾ

ಕಡು ದುಃಖವೆಚ್ಚರದೊಳಳಿವಂದದಿ

ಬಿಡದೆ ಸಂಸೃತಿ ವಿಕೃತಿವಿಡಿದು ತೋರಲ್ಕೆಯಿದು

ಜಡವೆಂದು ತಿಳಿದು ತತ್ವಾನುಭವದಿರುವ ||1||

ಧರೆಯಾದಿಯಗಣಿತಾ ವರಣ ವರ್ಜಿತ ಪರಮ

ಶರೀರಂಗಳೊಳು ಜೀವ ನೆನಿಸಿ ತನಗೆ

ಎರಡಾಗಿ ತೋರೆಯದು ಪರಿಕಿಸಲು ಪುಶಿ ನಿರಾ

ವರಣನೆ ನಾನೆಂದು ನಂಬಿಕೊಂಡಿರುವ ||2||

ರವಿಯೆಂತು ಕರ್ಮಕ್ಕೆ ತವೆ ಸಾಕ್ಷಿಯಾಗಿರ್ಪ

ನವನಿಯೊಳುಗಂತಿರ್ಪೆನರಿಯಲೆನಗೆ

ಭವ ಮರಣಮಿಲ್ಲ ಬಂಧವದಿಲ್ಲ ಶಂಕರ

ಗುರುವರ ನಾದವಿರಳನೆ ನಾನೆಂದು ನಡೆವ | |3||

ಜ್ಞಾನಿಯೆಂದೆನಲವ ಜ್ಞಾನಿಯೆ ಮಾತಿನಿಂ

ಜ್ಞಾನ ಚಿನ್ಹಗಳಿಂತಿರಲು ಜ್ಞಾನಿಯು ||ಪಲ್ಲ||

ಪರಮ ಹಿತವಹಿತಮೆಂಬರಿವಿಗೆ ವಿಷಯದಿ

ವಿರತಿಬೇಕಾ ವಿರತಿಗೆ ವಪ್ಪುವ

ಪರಮ ಶಮೆಯುಬೇಕು ಅರಿಯಲಾಶಮೆಗನ

ವರತ ಸುಮೋಕ್ಷದಿ ರತಿಯಿರಬೇಕು ||1||

ಪರಮ ಮೋಕ್ಷದೊಲಿಮೆಗೆ ಗುರು ಸೇವೆ ಬೇಕು

ಶ್ರೀಗುರು ಸೇವೆಗಾತ್ಮಾರ್ಥ ಶೃತಿ ಬೇಕು

ಪರಮಾರ್ಥ ವೇದಕ್ಕೆ ಶರೀರ ನೇತಿಯು ಬೇಕು

ಶರೀರ ನೇತಿಗೆ ನಾನಾರೆಂಬುದು ಬೇಕು ||2||

ಇಳೆಯೊಳಾನಾರೆಂಬ ನೆಲೆಗೆ ಸೋಹಂಭಾವ |

ಕಳೆಬೇಕು ಮತ್ತಾ ಸೋಹಂಭಾವಕೆ

ಸಲೆ ಸುಖಬೇಕು ನಿಶ್ಚಳ ಸುಖಮಿತ

ನಿರ್ಮಳ ಗುರು ಶಂಕರನಾಗಿರಬೇಕು ||3||

ಅವದೋಷದ ಫಲವಿದೆಂದೆನಲಿ ಈ ಜನರು

ನಡೆಯುವ ದಾವ ದೋಷದ ಫಲವಿದೆಂದನಲಿ ಆವ

ದೋಷದ ಫಲವಿದೆಂದಾಂ ಭಾವಿಸಲಿ ಮತ್ತಾವ

ರೀತಿಲಿ ಜೀವ ಶಿವರೊಂದೆನ್ನದರಿಯದೆ ಭಾವ

ಭೇದದಿ ಭ್ರಮಿಸಿ ಕೆಡುತಿಹರಾವ ದೋಷದ ಫಲ ||ಪಲ್ಲ||

ಅಂಡದೊಳು ಬ್ರಹ್ಮಾಂಡವನು ತಿಳಿದು ಬ್ರಹ್ಮಾಂಡವನು

ಪಿಂಡಾಡದೊಳು ಸಮಗಂಡು ಮನವೊಲಿದು ಮಂಡಲ

ತ್ರಯ ಮಧ್ಯ ರಂಜಿಪ ಖಂಡ ಶಿವನಂ ಗುರು

ಮುಖದಿ ತಿಳುಕೊಂಡು ಸುಖಿಸದೆ ಭಂಡತನದಲಿ

ಗುಂಡುಗಲ್ಲಿಗೆ ಮಂಡೆ ಬಾಗುವರಾವ ||1||

ಭೂರಿ ತತ್ವಗಳನ್ನು ಶೋಧಿಸದೆ

ತಮ್ಮೊಳಗೆ ನೆಲಸಿರ್ಪಾರು ವೈರಿಗಳನ್ನು

ಬಾಧಿಸದೆ ಪಾರಮಾರ್ಥವಿಚಾರ ಧೀರರ ಸಾರ

ಸಂಗದಿ ಸೇರಿ ಸೇವಿಸುತಾರು ನಾನೆಂದಾರಿಸದೆ

ಈ ಥೋರತನುವಾವೆಂದು ಪೇಳುವದಾವ ||2||

ನಾಡೆ ಗುರು ಶಂಕರನ ದರ್ಶಿಸದೆ ಸದ್ಭಕ್ತಿ ಭಾವದಿ

ಕೂಡಿ ಪಾದಾಬ್ಜಗಳ ಪೂಜಿಸದೆ ನೋಡಿ ಶೃತಿಯನು ಪಾಡಿ

ಭವವೀಡ್ಯಾಡದನುದಿನ ನಾಡಿನೊಳು ನಾಡಾಡಿಗರೊಳೊಡ

ನಾಡಿ ಸಂತತ ಖೋಡಿಸಂಸೃತಿಗೊಲಿದು

ಬಾಳುವರಾವದೋಷದ ಫಲವಿದೆಂದೆನಲಿ || 3||

ಬೇಡಿ ಕೊಳುವೆಯೆನ್ನ ನೋಡಿ ಸಲಹು ದೇವ

ಖೋಡಿ ಸಂಸೃತಿಯೊಳು ಕೂಡಿಸದಿರುಯೆಂದು ||ಪಲ್ಲ||

ಲೌಕೀಕ ವೈದೀಕಾನೇಕ ಕರ್ಮವ ಮುನ್ನ

ಜೋಕೆಯಿಂಗೈದು ವಿವೇಕಿಸಿದೆನು ನಿನ್ನ

ಸಾಕವುಗಳಿಗಿನ್ನು ನೂಕದಿರೆನ್ನನೆಂದು ||1||

ತನು ತ್ರಯಕ್ಕಂಟುವ ಘನ ರೋಗಗಳಿಂದೆ

ಜನಿಸುವ ದುಃಖವ ನೆನಿಸದಂತಿಳೆಯೊಳು

ಅನವರಿತದಿ ನಿನ್ನ ನೆನಹಿನೊಳಿರಿಸೆಂದು ||2||

ವರ ಪುಣ್ಯವ ಬಿಟ್ಟು ದುರಿತಗೈದುದರಿಂ

ಪರಿಪರಿ ಮುಸಗುವ ಉರುತರ ವ್ಯಸನಕೆ

ಗುರಿಯಿಹ ಪರಲೋಕ ಪರಿತಾಪ ಕಡಿಯೆಂದು ||3||

ಮನುಜನೆಯಾದಿ ಬ್ರಹ್ಮನೆ ಕಡೆಯಾಗಿರ್ಪ

ಘನತರದೊಳು ಸಂಜನಿಸುವ ನೂರ್ಮಡಿ

ಯನು ಮೀರಿದ ಸುಖವೆನಗೀವುದುಯೆಂದು ||4||

ಬೇರೆ ಬೇರಾಗಿರ್ಪ ಭೂರಿ ಗತಿಗಳಿಗೆ

ಸೇರಿಸದೆನ್ನನು ಸಾರ ಮೋಕ್ಷದ ನಿಜಾ

ಗಾರ ಶಂಕರ ಗುರು ಧೀರನೊಳ್ಬೆರಿಸೆಂದು | |5||

ಸಾರುವದೈ ಶೃತಿಯು ಉದ್ಘೋಷದಿ

ಸಾರುವದೈ ಶೃತಿಯು ಸಾರುವದೈ ಶೃತಿ

ಪಾರಮಾರ್ಥದ ಸುವಿಚಾರಮೊಂದಿರದಿರೆ

ತೋರದು ಸುಖಮೆಂದು ||ಪಲ್ಲ||

ಕಂದ ಮೂಲವ ಸೇವಿಸಿ ಗಂಗೆಯೊಳಗೆ

ಮಿಂದು ಬೂದಿಯ ಧರಿಸಿ ಒಂದೆ ಭಾವದಿ

ಮುದದಿಂದೆ ಜಪಿಸೆ ಭವ ಬಂಧವು

ನಿನ್ನಗಿದೆಂದಿಗು ಬಿಡದೆಂದು ||1||

ತತ್ವಮಸಿಯ ಮರೆದು ವಾಕ್ಯದೊಳಿಹ

ತತ್ವಾರ್ಥವನೆ ಜರಿದು ಸತ್ವರದಿಂ ಪರ

ತತ್ವವರಿಯದೆ ಬಹುತ್ವದೊಳಿರೆ ನಿಜ

ಮುಕ್ತಿ ದೊರೆಯದೆಂದು ||2||

ಭಿನ್ನ ಭಾವನೆ ಮಾಣದೆ ತನ್ನೊಳಗಿಹ

ಚಿನ್ಮಯನನು ಕಾಣದೆ ಮಣ್ಣಿನ ಮೂರ್ತಿಗಳನ್ನು

ಪೂಜಿಸಿ ನಿತ್ಯ ಸನ್ನುತಿಗೈದರು

ಜನ್ಮ ತಪ್ಪದುಯೆಂದು ||3||

ವಾದವಶ್ಯವ ಬಿಡದೆ ಜೀವೇಶ್ವರ

ಭೇದ ಬುದ್ಧಿಯು ಕೆಡದೆ ಮೇದಿನಿಯೊಳು ಮಹಾ

ವೇದಾಂತ ಶಾಸ್ತ್ರವನೋದಲು ಮುಕ್ತಿಯ

ಹಾದಿ ದೊರೆಯದೆಂದು ||4||

ಜ್ಞಾನಾಮೃತವ ಪೀರದೆ ಕರ್ಮದ ಸುವಿ

ಧಾನಗಳನು ಮೀರದೆ ನಾನು ನೀನೆಂಬಭಿಮಾನ

ಬಿಡದೆ ಬರಿ ಮೌನದಿಂದಿರೆ ಸುಖ

ಸ್ಥಾನ ಸಂಧಿಸದೆಂದು ||5||

ಸಾಧು ಸೇವೆಯ ಮಾಡದೆ ಬ್ರಹ್ಮದ ಪರಿ

ಶೋಧನೆಯೊಳು ಕೂಡದೆ ಈ ಧರೆಯೊಳು

ಗುರುಬೋಧೆಯಿಲ್ಲದೆ ತಪ ಸಾಧಿಸಿದರೂ

ಭವ ಬಾಧೆ ತೊಲಗದೆಂದು ||6||

ಮರೆ ಮೋಸಗಳನು ಬಿಟ್ಟು ವಿಚಾರಕ್ಕೆ

ಸ್ಥಿರ ಮನವನ್ನು ಕೊಟ್ಟು ತರಿದು ಸಂಕಲ್ಪ

ಶಂಕರ ಗುರುವರನೊಳು ಬೆರದಿಹ ನರನೇ

ಶಂಕರನೆ ನಿಜಮಿದೆಂದು ||7||

ಜಾತಿ ಸೂತಕವಿಡಿದೇತಕೆ ಬಳಲುವಿ

ಜಾತಿ ನಿಬಂಧದ ಮಾತಿಲ್ಲ ಜ್ಞಾನದಿ ||ಪಲ್ಲ||

ಆತುಮನರಿಯದ ಪಾತಕಿಗಳು ಕೂಡಿ

ಜಾತಿಯ ಸೂತ್ರದಿ ಬದ್ಧರಾಗಿಹರು

ಜಾತಿ ಕಲ್ಪನೆಯಳಿದಾತುಮನೊಳು ಬೆರೆ

ದಾತಗೆ ಜಾತಿಯ ಸೂತಮುಂಟೆ ||1||

ಪರ ಶಿವ ಬೀಜ ಸರ್ವರ ಯೋನಿಯೊಳು

ಪುಟ್ಟಿರುವದೆಂಬುವ ಮರ್ಮವರಿಯದನವರು

ಧರೆಯೊಳು ಕುಲ ಫಲವೆರಸಿ ಜ್ಞಾನಿಗಳನು

ಪುರುಡಿಸಿ ನರಕಕೆ ಹಿರಿಯರಾಗುವರು ||2||

ಶರೀರವು ಸರ್ವರಿಗರಿಯಲ್ಕೊಂದಾ

ಗಿರುವದು ಭಿನ್ನವಿಲ್ಲದ ಭೂತಗಳಿಂ

ಮೆರವಂಡಜ ಮುಖ್ಯ ಪರಿ ನಾಲ್ಕಾಗಿಹ

ವರ ಜಾತಿಯೊಳು ವಾಗ್ವರ ಸೃಜಿಸಿರಲು ||3||

ಜಾತಿ ವರ್ಣವು ಕುಲ ಗೋತ್ರಗಳೆಲ್ಲಬ್ಜ

ಜಾತನ ಸೃಷ್ಟಿಯಲ್ಲೇತರ ಛಲವು

ಭೂತಲ ಮನುಜರಿಂ ರೀತಿಯಿಲ್ಲದ ಕುಲ

ಜಾತಿಗಳಾಗಿ ಪ್ರಖ್ಯಾತಿ ತೋರಿದವು ||4||

ಕುಲ ಜಾತಿಯು ಗೋತ್ರಗಳು ಬಹುವಾದೊಡೆ

ಸಲೆ ಜ್ಞಾನದೊಳೈಕ್ಯ ಪೊಂದುವವೇಕೆ

ಕುಲ ಮತ ಬಹುವೆಂಬ ಬಲೆಗೆ ಬೀಳದೆ

ನಿಚ್ಚಲ ಶಂಕರ ಗುರು ಕುಲದೊಳು ವಾಸಿಸು ||5||

ಬಾಧೆಗೊಳಿಸುತಿಹುದೆ ಕರ್ಮವು ಬಾಧೆಗೊಳಿಸುತಿಹುದೆ

ಬಾಧೆಗೊಳಿಸುತಿಹುದೇ ಧರೆಯೊಳು ಗುರು

ಬೋಧೆಯಿಂದ ನಿರುಪಾಧಿಯಾದವನ ||ಪಲ್ಲ||

ಹೃದಯಾಕಾಶದೊಳನುದಿನದಿ

ಮೇಣುದಯಾಸ್ತಗಳಿಲ್ಲದೆ ಭರದಿ

ಸದಮಲವಹ ಚಿತ್ಪದ ಸೂರ್ಯನ ವಿಧ

ವಿಧದಿ ಕಂಡು ಸಮ್ಮುದಗೊಂಬುವನನು ||1||

ಬೆಳಗು ಕತ್ತಲೆಯು ಧರಿಸುತಲಿ |

ನಿರ್ಮಳವಾದಾಗಸದಂದದಲಿ

ಇಳೆಯೊಳಘ ಸುಕೃತಗಳನು ಬಿಡದೆ ತಾ

ತಳೆದು ಸದಾ ಮಂಜುಳನಾಗಿರ್ಪನ ||2||

ಜಲದೊಳು ಪುಟ್ಟಿದ ಕಮಲದೆಲಿ

ಯಾ ಜಲವನು ಸೋಂಕದ ರೀತಿಯಲಿ

ಮಲಿನ ಸಂಸೃತಿಯಿಳೊಲಿರ್ದೊಡದರ

ಬಲೆಗೆ ಬೀಳದುಜ್ವಲ ಬ್ರಹ್ಮಜ್ಞನ ||3||

ನಾನು ನನ್ನದದಿದೆನ್ನುವರು

ಅಭಿಮಾನದಿ ಕರ್ಮವ ಮಾಡುವರು

ತಾನು ತನ್ನ ನಿಜ ಖೂನವರಿದು

ಚಿಧ್ಯಾನದೊಳಿರ್ಪ ಮಹಾನುಭಾವನನು ||4||

ಗುರು ಕರಜಾತರೆನಿಸದವರ್ಗೆ ಬಿಡಲರಿಯದು

ಕರ್ಮವು ಧರೆಯೊಳಗೆ ಗುರು ಶಂಕರನಿಂದರಿದು

ಜೀವಪರ ಮರಭೇದವನಳಿದಿರುವ

ಯೋಗಿಯನು ಬಾಧೆಗೊಳಿಸುತಿಹೆದೇ

ಕರ್ಮ ಗುಣಗಳನು ಕಳಿ ನೀ |

ನಿರ್ಮಲ ಬ್ರಹ್ಮನ ತಿಳಿ

ದುರ್ಮದಗಳಿಗೆ ತವರ್ಮನೆಯನಿಸಿದ

ಚರ್ಮ ದೇಹವನು ಬರ್ಮನೆಂಬು ಪುಶಿ ||ಪಲ್ಲ||

ಪರಮಾತ್ಮನೆ ನೀನಾಗಿ ವಿಸ್ಮರಣದಿ |

ಸುಮತಿಯ ನೀಗಿ ಧರಣಿಯ ಮೂರ್ತಿಗೆ

ಶರಣೆನುತಲಿ ದ್ವಯ ಕರಗಳ

ಮುಗಿದಾಲ್ಪರಿದು ವರ್ತಿಸುವ ||1||

ಪಾರಮಾರ್ಥವನು ತೊರೆದು |

ಸಂಸಾರದಿ ನಿನ್ನನು ಮರೆದು

ನೀರೊಳು ಮುಳಿಗಿ ವಿಚಾರವಿಲ್ಲದೆ

ಶರೀರವ ಕಷ್ಟಕೆ ಸೇರಿಸಿ ನಡಗುವ ||2||

ನೇತ್ರಾನಂದಕ್ಕಾಗಿ ಸುಕ್ಷೇತ್ರಗಳಿಗೆ |

ನೀ ಪೋಗಿ ಧಾತ್ರಿಯೊಳನುದಿನ

ಯಾತ್ರೆಗೈದು ವ್ರತ ಸೂತ್ರವಿಡಿದು

ನಿನಗಾತ್ರ ಕೊರಗಿಸುವ ||3||

ಅಲ್ಲಿಹನ ಇಲ್ಲಿಲ್ಲೇನು ಶಿವ |

ನೆಲ್ಲಿ ನೋಡ್ದಡಲ್ಲಿ ಇಹನು

ಇಲ್ಲದಸ್ಥಲ ಮೊದಲಿಲ್ಲವು ತಿಳಿ

ನಿನ್ನಲ್ಲಿಹುದರಿಯದೆ ಕಲ್ಲಿಗೆ ನಮಿಸುವ ||4||

ಗುರು ಶಂಕರನಡಿ ವಿಡಿದು ಭಾಸುರ |

ನಿನ್ನಯ ನಿಜವರಿದು ಪರಶಿವ ನೀನೆಂದುರೆ

ನಿಶ್ಚೈಸದೆ ಪರಿಪರಿ ಕ್ರಿಯ್ಯದಿ

ಬೆರದು ಬಾಯ್ಬಿಡುವ ||5||

ಯೋಗಿ ವೇಷ ತಾಳಿಯೊಳಗೆ ಯೋಗವರಿಯದಖಿಳರೊಡನೆ

ಯೋಗಿಯಂದು ಪೇಳ್ದೊಡವನೆ ಭವದ ರೋಗಿಯು ||ಪಲ್ಲ||

ವರ ವಿವೇಕವೆಂಬ ವಸನ ಶರೀರ ಕುಟ್ಟು ಸದ್ವಿಚಾರ |

ಕುರುಹುಯೆಂಬ ಕಾವಿ ಲಾಂಛನವನು ಹೊದಿಯುತೆ

ಮರುಕವೆಂಬ ಮನೆಯ ಬಿಟ್ಟು ಮರವೆಯೆಂಬ ಮಡದಿಯಳನು

ಜರಿದು ಸುಖಿಸುತಿರುವ ಗೃಹಿಯು ಯೋಗಿಯಲ್ಲವೆ ||1||

ಪರಮ ಶಾಂತಿಯೆಂಬ ಭಸ್ಮ ಧರಿಸಿ ಸುಗುಣ ನಿಕರವೆಂಬ |

ಹರನ ನೇತ್ರಮಣಿಗಳ ಕಂಧರದಿ ತಳ್ಕಿಸಿ

ಗುರುವಿನ ಕೃಪೆಯೆಂಬ ದಂಡ ಕರದಿ ಪಿಡಿದ ಭೇದವೆಂಬ

ಕಂಥೆಯಿಂದ ಇರುವ ಗೃಹಿಯು ಯೋಗಿಯಲ್ಲವೆ ||2||

ಜ್ಞಾನವೆಂಬ ಭಿಕ್ಷದನ್ನ ಸಾನುರಾಗದಿಂದೆ ಸವಿದು |

ಮೌನವೆಂಬ ಜಲವನೀಂಟಿ ಶ್ರದ್ಧೆಯೆಂಬುವ

ಕಾನನದಿ ಶಿವೋಹಮೆಂಬ ಧ್ಯಾನದಲ್ಲಿ ಶಂಕರ ಗುರು

ತಾನೆಯಾಗಿ ತೋರ್ಪಗೃಹಿಯು ಯೋಗಿಯಲ್ಲವೆ ||3||

ಜೀವನ್ಮುಕ್ತರು ಜೀವಿಸುವರು ನಾ |

ನಾ ವರ್ತನದಿಂದಿಹದಲ್ಲಿ ಈ

ವಿಧದಿರುವನ ಡಾವಳಿರೀತೆಯ

ಭಾವೆ ನಿನಗೆ ಪೇಳುವೆನಿಲ್ಲಿ ||ಪಲ್ಲ||

ಪ್ರಾರಬ್ಧದ ಸಂಸ್ಕಾರದ ಫಲದಿಂ ತೀವ್ರ |

ಮಂದ ಮಧ್ಯಂ ಸುಪ್ತಂ ಈ

ರೀತಿಯೊಳು ಚತುರ್ವಿಧದೆತಿಗಳು

ಭೂರಿ ಸುಖದೊಳಿರುವರು ಮತ್ತಂ ||1||

ಮನಸಿನ ಧರ್ಮದ ಘನತೆಯೊಳನುದಿನ |

ಜನಿಪವು ನಡೆ ನಾಲ್ಕವರಲ್ಲಿ

ನಿನಗೊರೆವೆನು ಮಾನಿನಿಯಳೆ ಮನ್ನಿಸು

ಅನುಮಾನಿಸದಿರು ಮನದಲ್ಲಿ ||2||

ಒಂದನೇದು ವಿಕ್ಷಿಪ್ತವು ಕೇಳಿನ್ನೊಂದು |

ಗತಾಗತ ಮತ್ತೊಂದು

ಚಂದಮಾದ ಸಂಶ್ಲಿಷ್ಟವದರ

ಮೇಲೊಂದು ಸ್ವಲೀನವು ತಿಳಿಯಿಂದು ||3||

ಬರಿದೆ ವಿಷಯ ಸುಖ ಕಿರಿದಾಪೇಕ್ಷಿಸಿ |

ಧರೆಯೊಳು ಕಾಲ ತ್ರಯದಲ್ಲಿ

ಮರುಗಿ ತಮೋಗುಣದಿರುವ ವೃತ್ತಿ

ವಿಕ್ಷಪ್ತಮದೆನಿಪುದು ಶೃತಿಯಲ್ಲಿ | |4||

ಒಮ್ಮೆ ಭೋಗ ಮತ್ತೊಮ್ಮೆ ಯೋಗದೋಳ್ |

ಗಮ್ಮನೆ ಬಿಡದೆ ರಜೋಗುಣದಿ

ನೆಮ್ಮಿ ಕೂಡ್ದುಭಯ ವಮ್ಮರಿಯದ ವೃತ್ತಿಯೆ

ಗತಾಗತವು ತಿಳಿ ಮನದಿ ||5||

ಬೇರೆ ವಿಷಯದಲಿ ಸೇರದಾತ್ಮದ ವಿ |

ಚಾರದಲ್ಲಿ ನಿಶ್ಚಲಮಾಗಿ

ಸಾರಸತ್ವದ ಮನೋರತಿ ತೋರ್ಪುದು

ಮೀರಿದ ಸಂಶ್ಲಿಷ್ಟಮದಾಗಿ ||6||

ನಾನು ನೀನೆನುವದೇನು ತೋರದೆ ಚಿ |

ದಾನಂದದಿ ಸುಪ್ತನ ತೆರದಿ

ತಾನಿರುತಿಹುದೆ ಸ್ವಲೀನಮದೆನುವರು

ನೀನರಿ ಬಿಡದತ್ಯಾತುರದಿ ||7||

ಈ ತೆರೆದೊಳು ಗುಣ ವ್ರಾತಮಿಹ ಮನೋ |

ಜಾತ ವರ್ತನದೊಳಿರಲವರ್ಗೆ

ಖ್ಯಾತ ಜನಕನಂತೇತರ ಭಯ

ಗುರುನಾಥ ಶಂಕರನ ಕೂಡ್ದರಿಗೆ ||8||

ಯೋಗಿಗೀ ನಡೆ ನಿಶ್ಚಯಮೆಂದು ಪೇಳ್ವ ಶೃ |

ತ್ಯಾಗಮಗಳಿಲ್ಲ ನಿಂದಿಪುದೇಕೆ ಮರುಳೆ ||ಪಲ್ಲ||

ಯೋಗಿಯೆಲ್ಲಿರ್ದಡೇಂ ಯೋಗಿಯೆಂತಿರ್ದೊಡೇಂ |

ಯೋಗಿವರ ಮಾಡ್ದದನು ಮಾಡ್ದಡೇನು

ಯೋಗಿಗಿದರಿಂದೆ ಬಾಧಕವಿಲ್ಲ ವಿಷಯ ಸುಖ

ಭೋಗಿಗಳಿಗಿದರ ಬಾಧಕವು ತಾ ಬಿಡದು ||1||

ಪರಮ ಸುಜ್ಞಾನಾಗ್ನಿಯಿಂದಖಿಳ ಕರ್ಮಗಳ |

ನುರಿದು ಜಲಗತ ಕಮಲ ಪತ್ರದಂತೆ

ಸರಸದಿಂದಿಹದಿ ಸಂಸೃತಿಯೊಳಿರಲಾತಂಗೆ

ಬರಿಯ ಕರ್ಮಗಳ ಕೋಟಲೆಗಳಂಟುವವೇ || ||2||

ಪಾಪ ಪುಣ್ಯಂಗಳ ಶುಭಾಶುಭಾದಿಗಳ ಫಲ |

ತಾಪ ಸುಖ ಕೊಡುವವಾತ್ಮನ ತಿಳಿಯದವರ್ಗೆ

ಆ ಪರಮನವರಿದು ಭವಲೋಪುಗೈದಿಹ ಯೆತಿಗೆ

ಪಾಪಪುಣ್ಯಗಳು ನಿರ್ಲೇಪವಲ್ತೆ ||3||

ಯೋಗಿ ನಿಂದುದೆ ಕ್ಷೇತ್ರ ಯೋಗಿ ಮಿಂದುದೆ ತೀರ್ಥ |

ಯೋಗಿ ನುಡಿದುದೆ ಮಂತ್ರಮಾಗಿರ್ಪುದು

ಯೋಗಿ ಪಿಡಿದುದೆ ಮತವು ಯೋಗಿ ನಡೆದುದೆ ವ್ರತವು

ಯೋಗಿಗಿಂದಧಿಕ ದೈವತ ಬೇರೆಮುಂಟೆ ||4||

ವಂದಿಸಲು ಸತ್ಕರ್ಮ ನಿಂದಿಸಲು ದುಷ್ಕರ್ಮ |

ವಂದಿಸುತ ನಿಂದಿಸಲು ಮಿಶ್ರ ಕರ್ಮ

ಬಂದು ಕೂಡುವವದಕ್ಕಾತನೊಳು ಗುಣ ದೋಷ

ಮೊಂದೆಣಿಸದರ್ಚಿಪುದು ಭಕ್ತಿಯಿಂದೆ ||5||

ಕರಡಿಗೆಯೊಳಿರಿಸಿರ್ಪ ಕರ್ಪುರವ ಕಡೆಗೆ ತೆಗ |

ದಿರಿಸಿ ಪರಿಮಳವು ತಾ ಬಿಡದಿರ್ಪ ತೆರದಿ

ಅರಿಯಲ ಜ್ಞಾನ ಸುಜ್ಞಾನಿಯೊಳಗುಂಟೆನಿಪು

ದರರೆನಿರವದ್ಯನೊಳು ಪುಶಿಯಲ್ಲವೆ ||6||

ವರ ಯೋಗಿಯೊಳು ತೋರ್ಪ ಕರಣ ಧರ್ಮಾವಳಿ |

ಗಳುರಿದ ಚಣಕಾಂಕುರಿಸಿ ತೋರದಂತೆ

ಮರಳಿ ಭೂಮಂಡಲದಿ ಮುಂದಾತ ಜನ್ಮದ

ಅಂಕುರಕೆ ಗುರಿಯಲ್ಲೆಂಬುದಿದು ವೇದವಾಕ್ಯ ||7||

ಭುವನದೊಳು ಗರುಡ ಮಂತ್ರವ ಬಲ್ಲವನೊಳುರಗ ತವೆ |

ತನ್ನ ದುರ್ಗುಣವ ತೋರದಿರ್ಪಂತೆ

ಶಿವಯೋಗಿಯಲ್ಲಿ ಸಂಸೃತಿಯಿರಲ್ಕದರಿಂದೆ

ಭವಕೆ ಬೀಜವ ಮಾಳ್ಪ ಶಕ್ತಿಯುಂಟೆ ||8||

ಪರಬೊಮ್ಮನರಿದ ಬಂಧುರ ಯೋಗಿನ್ನಾವ |

ಪರಿಯ ಭವಭಯಗಳಿಲ್ಲೆಂಬುದಕ್ಕೆ

ವರವಜ್ಞಾತ್ವಾಮುಚ್ಯತೇ ಯೋಗಿಯೆಂಬ ಶೃತಿ

ಯರಿದು ಗುರು ಶಂಕರನ ಪೊಂದು ಬಿಡದೆ ||9||

ಗುರುವರ ನಿಮ್ಮ ಸತ್ಕರುಣದೊಳೆನ್ನರವರಿದು |

ನಾ ಪರಿಪೂರ್ಣ ಸುಖಿಯಾದೆ ||ಪಲ್ಲ||

ನಾಮ ರೂಪಾಂಗವೆ ಧಾಮವೆನ್ನದುಯೆಂದು |

ಪಾಮರನಾಗಿ ತಾಮಸದಿರಲು

ಪ್ರೇಮಾಸ್ತಿ ಭಾತಿಯೆಂಬೀ ಮೂರು ನಿನ್ನ

ಸುಧಾಮವೆಂದೊಲದು ಬೋಧಿಸಲಾಗಿ ||1||

ತನು ಕರ ಶ್ರೋತ್ರ ನಯನ ಮನಮೆಲ್ಲವು |

ನಿನಗೆ ವಿಷಯಗಳೆಂದೆನಿಸುವವು

ನಿನಗಿವು ಹಾನಿಯೆಂದನಲುಂಟೆವಕೆ ಸಾಕ್ಷಿ

ಕನೆ ನೀನೆಂದೊಸಿದು ತಿಳಿಸಲಾಗಿ ||2||

ಧರಣಿ ತಲದೊಳಯಸ್ಕಾಂತ ಶಿಲೆಯನು ತಾ |

ದರಿಸಿಸಿ ಸೂಜಿ ಚಲಿಸುವಂದದಿ

ಶರೀರಾದಿಗಳು ನಿನ್ನ ಪರಮ ಸನ್ನಿಧಿಯಿಂದೆ

ಪರಚೇಷ್ಟಿಸುವವೆಂದೊರಿಯಲಾಗಿ ||3||

ಪಳುಕದುಪಾಧಿಯ ಬಳಿಯೊಂದಿತದೃಪ |

ಸಲೆ ದೋರುವಲು ನೀನಖಿಳ ತತ್ವದ

ಕುಳವಾಗಿ ಪೊಳೆಯಲು ಬಳಿಕದು ನಿಜವೆ

ನಿರ್ಮಳನೆ ನೀನೆಂದು ಸೂಚಿಸಲಾಗಿ ||4||

ಅಸುವಿನೊಳಗೆ ಮಹಾದಸುವಿನ ಪದವಾಗಿ |

ಹಸನಾಗಿ ಶೋಭಿಪವ ಪರೋಕ್ಷ

ದೆಸಿಯೆನಿಸುವ ಶಂಕರೇಶನೋಳ್ಬೆರೆದು

ಸಂತಸದಿ ನೀನಿರುಯೆಂದರುಪಲಾಗಿ ||5||

ಎಂದಿರುವೆನೇನೋ ನಿಜ ಸುಖದೊಳೆಂದಿರುವೆನೇನೋ

ಬಹುದಂದುಗಗಳವಳಿದಂಡವಡೆದು ನಾ ||ಪಲ್ಲ||

ತರುಣಿ ತನಯರನುಜರ ನಂಟರ |

ಮಿತ್ರರ ಸಿರಿತನುವಾಭರಣಗಳ

ನಿರುತದಿ ಮೋಹಿಸಿ ತೊರೆಯದಿಹದರತಿ

ವಿರತಿಯೊಳಿದನುರೆ ಜರಿದು ಜಗದಿ ನಾನೆಂದಿರುವೆ ||1||

ಪಿರಿಯ ಭೋಗಮೆನಿಸಿರುವ ಸ್ವರ್ಗ ಸುಖ |

ಕಿರದೆಳಿಸುತ ಜೋತಿಷ್ಟೋಮ

ವರಯಜ್ಞಗಳನು ವಿರಚಿಸಿ ಬೇಡುವ

ವರಗಳ ಬಾಧೆಯ ಮರದಿಹದೊಳು ನಾನೆಂದಿರುವೆ ||2||

ದುರಿತಕರ್ಮ ತೊಂದರೆಯಿಲ್ಲದೆ ತ |

ತ್ಪರಿಹಾರಕಮಾಗಿರುತಿರುವ

ಪರಿವಿಡಿದೊಳ ಬಾಹಿರ ಪೂಜೆಯ

ಬಂಧುರದೊಳುಳಿದು ಶಂಕರನವೆರಸಿ ನಾನೆಂದಿರುವೆ ||3||

ಜ್ಞಾನಿಯೇ ಬ್ರಹ್ಮ ಲೋಕದಿ |

ಜ್ಞಾನಿಯೇ ಬ್ರಹ್ಮ

ಜ್ಞಾನದಿಂತಿವನ ತಾನೆ ತನ್ನೊಳರಿ

ದಾನಂದಾಬುಧಿಯಲ್ಲಿ ಮುಳುಗಿರುವ ||ಪಲ್ಲ||

ಮೂರು ದೇಹಗಳು ಮೂರು ಕರಣಗಳು |

ತೋರುವಿಂದ್ರಿಗಳೀರೈದು

ಬೇರೆಯೆಂದು ಸುವಿಚಾರದಿಂದೆ ಭವ

ಭಾರವಳಿದು ಗಂಭೀರದೊಳಿರುತಿಹ ||1||

ಕನಸಿನ ಪರಿ ಬಿಸಲ್ದೊರೆ ಪರಿಸುರಧನು |

ವಿನ ಪರಿಯೆಂತೀಜಗವೆಲ್ಲ

ಜನಿಸಿ ಸತ್ಯಮೆಂದೆನಿಸಿ ತೋರುವದಿ

ದೆನಗನ್ಯಮದಿಲ್ಲೆನುತ ಭೇದದಿಹ ||2||

ಹರುಷ ಶರಧಿ ಶಂಕರ ಗುರುವಿನೊಳೊಡ |

ವರೆದು ಲೌಕಿಕದ ವಾಸನೆಯ

ಪರಿದು ಕಲ್ಪನೆಯ ನೆರೆ ಸೂಸದೆ ಸು

ಸ್ಥಿರದಿಂ ಸಹಜವನರಿದು ಸುಖಿಸುತಿಹ ||3||

ಪರಮ ಜೀವನ್ಮುಕ್ತರ ಸಚ್ಚಾರಿತ್ರ |

ವರಿಯಲು ಮನಕೆಚ್ಚರ ||ಪಲ್ಲ||

ಧಾರಿಣಿಯೊಳೆ ಕೃಷ್ಣನು ಷೋಡಶ ದಶ |

ನೂರು ತರುಣಿಯರನು ಭೂರಿ ಪ್ರೇಮದಿ ಕೂಡಿ

ಜಾರತ್ವವನು ತೋರಿ ಧೀರ ಜಿತೇಂದ್ರಿಯಂ

ದಾರಾಜಿಸಿದ ತಾನು ||1||

ಜನಿಸುತ ಮುನಿ ಶುಕನು ದಿಗಂಬರ |

ನೆನಿಸಿ ವಿರತನಾದನು ಜನಕ ರಾಘವರೀರ್ವರನು

ಪಮ ರಾಜತ್ವವನು ಗೈದು ಕಡೆಗೆ

ಸನ್ಮುನಿಗಳೆನಿಸಿದರು ||2||

ಮೆರವ ವಶಿಷ್ಟ ತಾನು ಕರ್ಮದಿ ಕಡೆ |

ವರಿಗೆ ನಿರತನಾದನು ವರ ಪ್ರಹ್ಲಾದನು ಭಕ್ತಿ

ಪರನಾಗಿ ನಡೆದನು ಮರುತ ಸುತನು

ದೂತನಾಗಿ ಬಾಳಿದನು ||3||

ತ್ರೈಮೂರ್ತಿಗಳ ವರದಿ ತದಾಂಶದ |

ತ್ರೈಮೊಗದಿಂ ಬಾರದಿ ಸ್ವಾಮಿ ದತ್ತಾತ್ರೇಯನು

ನ್ಮತ್ತಾವಸ್ಥೆಯಿಂ ಭೂಮಿಯೊಳವ

ಧೂತನಾಗಿ ಬಾಳಿದನು ||4||

ಭರತ ವೃಷಭ ರಾವಣ ದೂರ್ವಾಸ ಸೌ |

ಭರಿ ಸ್ವೇತಕೇತು ಭಾಣ ಅರಿಯಲಿವರ ನಡೆ

ತರತರಮಾದರು ಪರಮೋಕ್ಷಮೊಂದಾಯ್ತು

ಗುರು ಶಂಕರನೆ ಬಲ್ಲ ||5||

ತನ್ನ ನಿಜವನೆಲ್ಲ ತಾನೆ ತನ್ನೊಳರಿದ ಪರಮ ಯೋಗಿಯನ್ನು

ಪೂಜಿಸುವ ಸುಭಕ್ತ ಧನ್ಯನವನು ಶಂಕರ ||ಪಲ್ಲ||

ನಾನೆ ದೇಹಮೆಂದು ಮೊದಲು ನಾನು ನನ್ನ ಮರೆತಿರಲ್ಕೆ |

ನೀನೆ ಬಂದು ಗುರುವೆನಿಸಿ ವಿಧಾನದಿಂದೆ ಬೋಧಿಸೇ

ನಾನು ನೀನುಯೆಂಬ ಭೇದಮೆನುಮಿಲ್ಲದಂತೆಯಾಗಿ

ನಾನೆ ನೀನೆಯಾದ ಮಹಾ ಜ್ಞಾನಮೂರ್ತಿ ಶಂಕರ ||1||

ಜನ್ಮವೊಂದೆಯನುಭವಿಂಗೆ ಜನ್ಮ ದ್ವಯಾಭ್ಯಾಸಿಗೆ ಮೂ |

ಜನ್ಮ ಮುಮುಕ್ಷುವಿಗೆ ನೂರು ಜನ್ಮದವಧಿ ಕರ್ಮಿಗೆ

ಜನ್ಮಮಿಲ್ಲ ಚರಮನಿಗೀ ಜನ್ಮದಲ್ಲಿ ತನ್ನ ತಿಳಿದ

ಜನ್ಮದೆತಿಯನುತಿಸಿದರ್ಗೆ ಜನ್ಮಮುಂಟೆ ಶಂಕರ ||2||

ನೀರಿನಲ್ಲಿ ಪುಟ್ಟ ಕಮಲ ನೀರಿನಲ್ಲಿ ನೆಲಸಿಕೊಂಡು |

ನೀರನಂಟೆ ಕೊಳದೆ ತಾನು ತೋರುತಿರ್ಪ ತೆರದೊಳು

ಸಾರ ಶೂನ್ಯಮಾಗಿಹ ಸಂಸಾರದೊಳಗೆ ಸೇರಿ ಲಸ

ತ್ಸಾರತರಸು ಮೋಕ್ಷಪೊಂದಿ ಭೂರಿ ಸುಖಿಪ ಶಂಕರ ||3||

ಭೂವಲದೊಳಮಿತ ಶೋಭೆ ತೀವಿತೋರ್ಪವನಕೆ ಮಹಾ |

ದಾವವಡಿಸಲಲ್ಲಿರುವ ಮೃಗಾವಳಿ ಬಿಟ್ಟೋಡ್ವವು

ಈ ವಿಧಿಯಿಂ ಯೋಗಿವರನೊಳಾವರಿಸಿದ ಕರ್ಮಗಳವು

ತಾವೇ ಪೋಗುತಿಹವು ಜ್ಞಾನ ಪಾವಕವಂ ಶಂಕರ ||4||

ಸಾಧುವಿನ ನೀರಿಕ್ಷಿಸುತ ಖಳಾಧಮರು ವಿಭೇದದಿಂದು |

ಪಾಧಿ ಯುಕ್ತನೆನಲುನರ್ಕ ವೀಧಿಗೆ ಗುರಿಯಪ್ಪರಾ

ಸಾಧುವಿಂಗೆ ಬೇರೆ ದೈವಮಿ ಧರೆಯೊಳಗಿಲ್ಲವೆಂದು

ಸಾಧಿಸುವ ವಿವೇಕಿಗೆ ಭವ ಬಾಧೆಯುಂಟೆ ಶಂಕರ ||5||

ತೋರ ಚೂತವೃಕ್ಷವ ಕಂಡೋರುವ ಫಲದಾಶಗದ |

ನ್ನೇರಲಗ್ರ ಕೊಂಬೆ ಮುರಿದು ಜಾರಿಯವನು ಬೇಗದಿ

ಧಾರಿಣಿಂಗೆ ಬೀಳ್ವ ಭ್ರಾಂತಿ ಬಾರದಿರ್ದೊಡುರುಳ್ದ ತೆರದಿ

ಧೀರೆಯೆತಿಗೆ ತಾನೆ ಮೋಕ್ಷ ತೋರುವದೈ ಶಂಕರ ||6||

ಮಿರುಗುವಗ್ನಿಯಲ್ಲಿ ಮರವದಿರಲುದಗ್ಧವಹುದು ಮತ್ತ |

ಮರದೊಳಗ್ನಿಯಿರಲದಕ್ಕೆವರಿಸದಿರ್ಪ ತೆರದೊಳು

ಪರಮ ಯೋಗಿಯಲ್ಲಿ ಸಂಸೃತಿರದುಹತಮಾಗದಿರದು

ಮರಳಿಯಾ ಪ್ರಪಂಚದೊಳೆತಿ ಸರಸದಿರುವ ಶಂಕರ ||7||

ಪಾಪ ಗಂಗೆಯಿಂದ ಮಹಾ ತಾಪ ಚಂದ್ರನಿಂದೆದರಿ |

ದ್ರೋಪ ಕಷ್ಟ ಸುರತರುವಿಂ ಲೋಪಮಾಗಿ ಪೋಪವಾ

ಪಾಪ ತಾಪ ದೈನ್ಯ ಮೂರು ತಾಪಿಸಿಯ ಸುದರ್ಶನದಿ ನಿ

ರೂಪಮಾಗಿ ಸುಖ ವಿಶೇಷ ವ್ಯಾಪಿಸುವದು ಶಂಕರ ||8||

ಯೋಗಿಯಲ್ಲಿ ಕರ್ಮಮಿಲ್ಲ ಯೋಗಿಯಲ್ಲಿ ದ್ವೈತಮಿಲ್ಲ |

ಯೋಗಿಯಲ್ಲಿ ಪುಣ್ಯ ಪಾಪ ಪೂಗ ಮುನ್ನಮಿಲ್ಲವು

ಯೋಗಿಯಲ್ಲಿ ವಿಧಿ ನಿಷೇಧದಾಗು ಹೋಗು ಯಾವುದಿಲ್ಲ

ಯೋಗಿಯಲ್ಲಿ ಜನನ ಮರಣ ರೋಗವಿಲ್ಲ ಶಂಕರ ||9||

ಯೋಗಿನಿಂದ ಸ್ಥಲವೆ ಕ್ಷೇತ್ರ ಯೋಗಿ ಮಿಂದ ಜಲವೆ ತೀರ್ಥ |

ಯೋಗಿ ನುಡಿದ ನುಡಿಯೆ ಮಂತ್ರಮಾಗಿ ತೋರುತಿರ್ಪವು

ಯೋಗಿ ಸರ್ವರಲ್ಲಿ ಪ್ರೀತ ಯೋಗಿ ಭುಕ್ತಿ ಮುಕ್ತಿದಾತ

ಯೋಗಿಯೆ ನೀನಾಗಿ ಸದಾ ಯೋಗದಿರುವಿ ಶಂಕರ ||10||

ಬೆಂಕಿಯಿಂದೆ ಕರ್ಪುರ ಸುಡಲಂಕಿತಕ್ಕೆ ಬೇಕೆನಲ್ಕ |

ಳಂಕಮಿಲ್ಲದಂತೆ ಶಿಷ್ಯ ಸಂಕುಲದಘ ಮೊತ್ತವ

ಪಂಕಜೋದ್ಭವಾಂಡದೊಳ್ಸುಖಂಕರವರ ಫೂಲ ಚಿಂತಿ

ಶಂಕರೇಶನರ್ಚಿಸಲ್ ನಿರಂಕವಹುದು ಶಂಕರ 11||

ಶತಕೋಟಿ ಕರ್ಮವ ಕೃತಿಸಿದಡೇಂ ಜನಿ |

ಮೃತಿತಪ್ಪದಪವರ್ಗ ಸಾಧಿಸದೊ ||ಪಲ್ಲ||

ಚಿತ್ತ ಶುದ್ಧಿಗೆ ಕರ್ಮ ಮೊತ್ತಮಲ್ಲದೆ ಇಲ್ಲಿ |

ತತ್ವ ಶುದ್ಧಿಗೆ ಕಾರಣಲ್ಲ ತಿಳಿ ಮತ್ತಮಾ ತತ್ವದ

ತ್ಯುತ್ತಮ ಸಿದ್ಧಿಸು ವೃತ್ತಿ ವಿಚಾರದಿಂ ಲಭಿಸುವದು ||1||

ಕರ್ಮದಿಂ ಡಾಭೀಕ ಧರ್ಮದಿಂ ಜನಿಮೃತಿ |

ನಿರ್ಮೂಲಮೆಂತಹುದಕಟಕಟ

ನಿರ್ಮಲ ಶೃತಿಯನ ಕರ್ಮಣಾಯೆಂಬುಕ್ತಿ

ಮರ್ಮವನರಿಯದೆ ಮೂಢರಾಗಿಹರು ||2||

ಯುಕ್ತಿ ಭಾಷ್ಯಗಳು ನಿರುಕ್ತಿ ಶಾಸ್ತ್ರದ ಮಹ |

ಶಕ್ತಿಯಮ್ನಾಯ ವೈದುಷ್ಯಮೆಲ್ಲ

ಭುಕ್ತಿಗಲ್ಲದೆ ಮತ್ತೆ ಮುಕ್ತಿಗದಲ್ಲ ವಿ

ರಕ್ತಿಯಿಂ ಗುರು ಶಂಕರನೊಳೊಡವೆರಿಯದೆ ||3||

ಜ್ಞಾನದಿಂ ಮೋಕ್ಷವು ತಾನಹುದಿದನುಳಿ |

ದೇನು ಮಾಡಿದಡೇನು ಬರಿಗಂಟು ||ಪಲ್ಲ||

ತನ್ನನು ಮರೆದದಕಿನ್ನಿಳೆಯೊಳು ನರ |

ಜನ್ಮ ಬಂದಿಹುದೀಗ ಭುವಿಯಲ್ಲಿ

ನಿನ್ನ ನೀನರಿದರೆ ಶೂನ್ಯವಹುದು ಜನ್ಮ

ಭಿನ್ನ ಭೇದಗಳಿರಲದು ತಪ್ಪದು ||1||

ವಿತ್ತ ಗೋವುಗಳ ವಿಪ್ರೋತ್ತಮರಿಗೆ ಧರ್ಮ |

ವಿತ್ತದರಿಂದ ಸ್ವರ್ಗಕ್ಕೆ ಪೋಗಿ |

ಉತ್ತಮ ಸುಖ ಸವಿಯುತ್ತ ಪುಣ್ಯವು ತೀರೆ

ಮತ್ತೆದುರ್ಭವಕೆ ನೀ ಗುರಿಯಾಗುವಿ ||2||

ಯೋಗಾದಿ ಬಲ್ಲಿದನಾಗಲಿ ವಿಷಯವ |

ತ್ಯಾಗ ಮಾಡದೆ ಮಹಾ ಭೋಗಿಯನಿಸಲಿ

ಭಾಗ ಲಕ್ಷಣೆಯಿಂದ ಬೇಗದಿ ಭೇದವ

ನೀಗಲು ಶಂಕರನಾಗಿ ರಂಜಿಪನು ||3||

ಇಲ್ಲ ಇಲ್ಲ ಮುಕ್ತಿಯಿಲ್ಲಯಿಲ್ಲ |

ಸಲ್ಲಲಿತ ಜ್ಞಾನದಿಂದಲ್ಲದಿನ್ನೇತರಿಂ ||ಪಲ್ಲ||

ಜಪವನೆಸಗಿದಡೇನು ತಪವನಡಿಸಿದಡೇನು |

ಉಪವಾಸದಿಂ ಶುಷ್ಕನಾದಡೇನು

ಗುಪಿತದಿಂ ಗುಡ್ಡ ಗಂಹರವ ಸೇರಿದಡೇನು

ಚಪಲತನದಿಂದೋದಿ ಕೇಳ್ದಡೇನು ||1||

ಹರಿವ ವಾಯುಗಳ ಬಂಧುರದಿ ಬಂಧಿಸಿದೊಡೇಂ |

ಸರಸದಿಂ ಲಕ್ಷ ನಿಲ್ಲಿಸಿದಡೇನು

ಚರಿಪ ಮನವನ್ನು ಹೃತ್ಸರಸಿಜದೊಳಿರಿಸಲೇಂ

ಧರಣಿಯೊಳು ಸಿದ್ಧಿಗಳ ತೋರ್ದಡೇನು ||2||

ಸಿದ್ಧಿ ತೋರ್ದಡೆ ಯೋಗ ಸಿದ್ಧಿಯಾಯ್ತದು ತೋರ |

ದಿದ್ದರಾ ಯೋಗ ನಿಷ್ಫಲವು ನೋಡು

ಸಿದ್ಧಿಯದು ಲೋಕ ಪ್ರಸಿದ್ಧಿಗಾಯ್ತದರಿಂದ

ಶುದ್ಧ ಮೋಕ್ಷವು ಶಂಕರೇಶನಿಂದಹುದೆ ||3||

ಭುವನದೊಳು ಕರ್ಮ ಬಿಡದವನಾರು ಬಿಟ್ಟು ನಡೆ |

ಯುವನಾರದರ ಮರ್ಮವನು ಪೇಳ್ವೆನು || ಪಲ್ಲ||

ಶರೀರವೇ ನಾನೆಂದು ಸ್ಥಿರವಾಗಿ ನಂಬಿಕೊಂಡಿರುವ |

ಮೂಢನೆ ಬಿಡದೆ ಮಾಳ್ಪ ಕರ್ಮ

ಶರೀರ ನಾನಲ್ಲಿದಕೆ ನಿರುತ ಸಾಕ್ಷಿಕನೆಂದು

ನೆರೆ ಬಲ್ಲ ಸುಮತಿಗಿನೆಲ್ಲಿ ಕರ್ಮ ||1||

ಪೊರೆವ ಪರಮಾತ್ಮ ಬೇರಿರುವನಾವನ ಕಿಂಕರನೆಂದು

ತಿಳಿದವನು ಮಾಳ್ಪ ಕರ್ಮ

ವರ ತತ್ವಮಸ್ಯರ್ಥ ಗುರುಮುಖದೊಳರಿದು ನಿಂದಿರುವ

ಸುವಿವೇಕಿಗಿನ್ನೆಲ್ಲಿ ಕರ್ಮ ||2||

ಮನುಜನಾ ವಿಪ್ರ ನಾನೆನುತ ಮಹದಭಿಮಾನ |

ಜನಿತಮಾಗಿದ್ದವನು ಮಾಳ್ಪ ಕರ್ಮ

ತನುವಿಡಿದು ಜಾತಿ ಸಂಜನಿಸಿಹುದು ನಾನಜಾ

ತನುಯೆಂದು ತಿಳಿದಗಿನ್ನೆಲ್ಲಿ ಕರ್ಮ ||3||

ನಾನು ದೀಕ್ಷಿತನು ಪೌರಾಣಿಕನು ಶಾಸ್ತ್ರಾವ |

ಧಾನಿಯೆಂದರಿದವನು ಮಾಳ್ಪ ಕರ್ಮ

ನಾನು ನೀನದಿದೆಂಬದೇನು ತೋರದೆ ಬ್ರಹ್ಮ

ತಾನೆಯಂದರಿದೆಗಿನ್ನೆಲ್ಲಿ ಕರ್ಮ ||4||

ಉತ್ತಮಾದ್ವೈತದಲಿ ಚಿತ್ತವಿಲ್ಲದ ಮದೋ |

ನ್ಮತ್ತನಾಗಿರುವವನು ಮಾಳ್ಪ ಕರ್ಮ

ಮತ್ತಮಾ ಗುರುಶಂಕರೋತ್ತುಂಗನಲಿ ಬೆರೆದು

ನಿತ್ಯನಾಗಿರ್ಪಗಿನ್ನೆಲ್ಲಿ ಕರ್ಮ ||5||

ಪರಿಪರಿ ಯೋಗದಿ ಕೊರಗುವದೇಂ ಬಿಡು |

ಪರಬ್ರಹ್ಮ ನಿಜ ನಿಷ್ಠೆಯೊಂದಿರಲಿ ||ಪಲ್ಲ||

ಭುವಿಯೊಳು ಪ್ರಾರಬ್ಧ ನೆವದಿಂ ಮನದೊಳುದಿ |

ಸುವ ದೋಷ ಗುಣಗಳೆಲ್ಲವು ನಿನಗೆ

ತವೆ ವಿಷಯಗಳು ಮೇಣವುಗಳನರಿಯುವ |

ರಿವೆಯೇ ನಾನಹುದೆಂಬ ಪ್ರಜ್ಞಯೆ ಯೋಗ | |1||

ಬರಿದಾದ ವಿಕೃತಿಗಳೊರಿಸದ ದ್ವಯ ನಿತ್ಯ |

ಪರಿಪೂರ್ಣ ಚಿನ್ಮಯ ನೀನೆಂದು

ನೆರೆ ನಂಬಿ ಮತಿಯನು ಮರಿಯದೆ ಸಂತತ

ಸರಸದಿಂದಿರೆ ಶೃತಿಮತದ ಸುಯೋಗ ||2||

ಕರಣೇಂದ್ರಿಯಗಳ ನಶ್ವರ ವಿಷಯಗಳ |

ಸಾಕ್ಷಿಕನೆಂಬ ಗುರು ಶಂಕರಾನೆಂಬುವ

ಪರಿಕಲನೆಯ ಬಿಟ್ಟು ಮರುತನಿಲ್ಲದ ಜ್ಯೋತಿ

ಪರಿಯಂತೆ ಸುಮ್ಮನಿಹುದೆ ನಿಜ ಯೋಗ ||3||

ಭೋಗದಿ ಕೂಡಿರಲೊಂದೆ ಸಂಸೃತಿ |

ತ್ಯಾಗವ ಮಾಡಿರಲೊಂದೆ

ಆಗಮ ಶೃತಿಗೊಶಮಾಗದ ಬ್ರಹ್ಮವ

ನೀಗತನ್ನೊಳರಿದಾ ಘನ ಯೋಗಿಯು ||ಪಲ್ಲ||

ಶರಣಾಗತ ಶಿಷ್ಯರಿಗುಪದೇಶಿಸಿ |

ಗುರುತನವಿಡಿದಿರಲೊಂದೆ

ಮರುಳನಂತೆ ಪರಿಚಯಲಿ ಬೂದೆಯ

ಧರಿಸಿ ಚರಿಸುತಿರಲೊಂದೆ ||1||

ತರುಣಿಯ ಮೋಹವ ಮರೆದು ಪೋಗಿ ಶ್ರೀ |

ಗಿರಿಯಲಿ ತಪಿಸಲದೊಂದೆ

ಮರುಕದಿಂದಲಾ ತರುಣಿಯೊಳನುದಿನ

ಸುರತ ಸುಖದೊಳಿರಲೊಂದೆ ||2||

ಧರಣಿಯೊಳೊಪ್ಪುವ ಧೊರೆಯೆಂದೆನಿಸುತ |

ಪರಮ ಸುಖದೊಳಿರಲೊಂದೆ

ತಿರುಕನಂತೆ ಸಂಚರಿಸುತ ಮನೆ ಮನೆ

ತಿರಿತಂದುಣ್ಣಲದೊಂದೆ ||3||

ಕುಲದಭಿಮಾನವ ಬಲಿಸಿ ಪೂಸರವ |

ನೊಲಿದು ಧರಿಸಿಕೊಳಲೊಂದೆ

ಅಲ್ಲದವನ ಕೂಡುತ ಎಲುವಿನ ಮಾಲೆಯ

ನಲಿದು ಹಾಕಿಕೊಳಲೊಂದೆ ||4||

ಬಲು ಮಾತಾಡುತೆ ಹುಲಿಯನೆಯೇರುತೆ |

ಬಲವನು ತೋರಲದೊಂದೆ

ನೆಲದೊಳು ಮೌನದಿ ಮಲಗುತ ಧೈರ್ಯ

ದೊಳಿಲಿಗೆಬಹುಬೆದರಲೊಂದೆ | |5||

ಬಿಡದೆಂ ಯೋಗವನು ನಡಿಸುತ ಸಿದ್ಧಿಯ |

ನಡಿಸಿ ತೋರಿಸಲದೊಂದೆ

ಅಡವಿಯೊಳನುದಿನ ಬಡಪಶುಗಳ ಪೊರೆ

ನಡಿಸಿತೋರಿಸಲದೊಂದೆ ||6||

ಮರಣದ ಕುರುಹುಗಳೊರೆದು ಕಾಸಿಯೊಳು |

ಶರೀರವ ತಾ ಬಿಡಲೊಂದೆ

ಗುರು ಶಂಕರನಡಿ ಸ್ಮರಿಸುತ ತನು ಪೊಲೆ

ಯರ ಮನೆಯೊಳು ಬಿಡಲೊಂದೆ ||7||

ಮಾನವ ಮಾಡಲದೊಂದೆ ಜನರಪ |

ಮಾನವ ಮಾಡಲದೊಂದೆ

ಈ ನರ ಜನ್ಮದಿ ತಾನು ತನ್ನ ತಿಳಿ

ದಾನಂದಿಸುವ ಮಹಾನುಭಾವನಿಗೆ ||ಪಲ್ಲ||

ಇಂದುಧರನ ಸಮನೆಂದು ಭಕುತಿಯಿಂ |

ವಂದಿಸಿ ಪೊಗಳಲದೊಂದೆ

ಮಂದ ಭಾಗ್ಯನಿವನೆಂದು ಕಿನಿಸಿನಿಂ

ನಿಂದಿಸಿ ನುಡಿಯಲದೊಂದೆ ||1||

ಮೌನಿಯಂದು ಸುಮ್ಮಾನದಿಂದೆ ತವ |

ಧ್ಯಾನವ ಮಾಡಲದೊಂದೆ

ಸ್ವಾನನಂತೆ ಬಹು ಹೀನನೆಂದು

ಸಂಧಾನಿಸಿ ನುಡಿಯಲದೊಂದೆ ||2||

ತೋಷದಿಂದೆ ಸಂಭಾಷಣವೆಸಗುತ |

ಭೂಷಣ ಮಾಡಲದೊಂದೆ

ದೋಷಿಯಂದು ಪರಿ ಪೋಷಣಗೈಯ್ಯದೆ

ದೂಷಣೆ ಮಾಡಲದೊಂದೆ ||3||

ಭೋಗ ತೊರೆದ ಶಿವ ಯೋಗಿಯೆಂದು ಶಿರ |

ಬಾಗಿ ಕರ ಮುಗಿಯಲೊಂದೆ

ಯೋಗಿಯಲ್ಲ ಭವ ರೋಗಿಯೆಂದು ಜನ

ಕೂಗಿ ಬೊಬ್ಬಿಡಲದೊಂದೆ ||4||

ಶ್ರೇಷ್ಠ ಕುಲಜನೆಂದಿಷ್ಟದಿಂ ಕರೆದು |

ಮೃಷ್ಟಾನ್ನವನಿಡಲೊಂದೆ

ಸೃಷ್ಟಿಯೊಳಗೆ ಕುಲ ಭ್ರಷ್ಟ ಪರವi

ಪಾಪಿಷ್ಟನೆಂದುಸುರಲೊಂದೆ ||5||

ಆತು ಮನರಿದ ಪುನೀತನೆಂದು ಸಂ |

ಪ್ರೀತಿಯ ಬೆಳಿಸಲದೊಂದೆ

ಭೂತಲದಲಿ ಬಲು ಪಾತಕನೆನ್ನುತ

ಮಾತನಾಡದಿರಲೊಂದೆ ||6||

ಅಂಕಿಸಿ ಶ್ರೀಗುರು ಶಂಕರನೆನ್ನುತ |

ಕಿಂಕರರಾಗಲದೊಂದೆ

ಶಂಕಾತಂಕ ಕಲಂಕಿತನೆನ್ನುತ

ಬಿಂಕದಿ ಬೊಗಳಲದೊಂದೆ ||7||

ಅಂತಿಹ ನಿಂತಿಹನೆಂತಿಹನೆಂದು ಬಾ |

ಹ್ಯಾಂತರದಲ್ಲಿ ನಿಂದಿಸ ಬೇಡೊ

ಅಂತರಾತ್ಮನವರಿದಂಥ ಮಹಂತನು

ಎಂತಿರ್ದೊಡಾತ ಮುಕ್ತನು ನೋಡೊ ||ಪಲ್ಲ||

ವಸನಾಶನದ ಬಹು ವೆಸನದೊಳಗೆ ಸೇರಿ |

ಕಸವಿಸಿಯೊಳು ಯೋಗಿಯಿರಲೇನು

ಕೆಸರೊಳುದಿಸಿ ಮತ್ತ ಕೆಸರ ಬಳಿಯದೆ ರಂ

ಜಿಸುವ ಕುಂಬಾರ ಕೀಟಕದಂತಿರುವನು ||1||

ನಾಡೆಲ್ಲ ಮನೆ ಮನೆ ಕಾಡು ಭಿಕ್ಷವ |

ಬೇಡುತ ಯೋಗಿ ತಾನಿರಲೇನು

ರೂಢಿಯೊಳ್ಕಾಷ್ಠವ ಕೂಡಿ ತನ್ನಂತೆ ತಾ

ಮಾಡಿಕೊಂಡೆಸವಗ್ನಿಯಂತೆ ವರ್ತಿಪನು ||2||

ಎಲ್ಲರೊಡನೆ ಕೂಡಿ ಎಲ್ಲರೊಡನೆಯಾಡಿ |

ಯಲ್ಲ ಕಾರ್ಯದಿ ಯೋಗಿಯಿರಲೇನು

ಹಲ್ಲಿನೊಡನೆ ಕೂಡಿ ಹಲ್ಲಿನೊಡನೆಯಾಡಿ

ಹಲ್ಲಿಗೆ ಶಿಲ್ಕದರಸನೆಯಂತಿಹನು ||3||

ನಾರಿ ಮಕ್ಕಳ ಭ್ರಾಂತಿ ಸೇರಿ ಯೋಗೀಂದ್ರ |

ಸಂಸಾರಿಯೆನಿಸಿಕೊಳತಿರಲೇನು

ನೀರೊಳುದ್ಭವಿಸಿಯಾ ನೀರೊಳು ವಾಸಿಸಿ

ನೀರನಂಟದಬ್ಜಪತ್ರದಂತಿಹನು ||4||

ಹರ ಧ್ಯಾನ ಮರೆದು ಶರೀರ ಸ್ನಾನ ತೊರೆದು |

ಹೀನರ ಬಳಗದಿ ಯೋಗಿಯಿರಲೇನು

ಮರವೆಯ ಕಳೆದು ತನ್ನಿರವನು ತಿಳಿದು

ಶಂಕರ ಗುರುವರನೆ ತಾನಾಗಿರುತಿಹನು ||5||

ಹರನೇ ನೀನಿದ್ದೆಂಬ ತತ್ವಮಸಿ ಮೆರವ ಸಾಮ ವೇದೋಕ್ತಿ

ನೆರೆ ಶಬ್ದಕ್ಕನುಸರಿಸಿ ಪೇಳಲಿಲ್ಲಿದರಿಂ ದೊರೆವದು ಮುಕ್ತಿ ||ಪಲ್ಲ||

ನರನ ಬಿಡದೆ ಸುರ ವರ ನೀನೆನ್ನುತ |

ಪರಿಯೊಳು ಬಣ್ಣಿಸಿದಂತೆ

ಪರಬೊಮ್ಮನೆ ನೀನೆಂಬುವ ನುಡಿ ಸ್ತುತಿ

ಪರವಲ್ಲವು ಬಿಡು ಚಿಂತೆ ||1||

ಪರಿಚಾರಕನನ್ನರಸನೆಂದು |

ಪ್ರೋತ್ಸಾಹಿಸಿ ನುಡಿದಾ ತೆರಿದಿ

ಪರಮಾತ್ಮನೆ ನೀನೆಂಬುದುಪಚರಿಸಿ

ಯೊರೆದುದಲ್ಲ ತಿಳಿ ಮುದದಿ ||2||

ಪ್ರತಿಮೆ ದೇವತಾ ಕೃತಿ ಸತ್ಯಮಿದೆಂ |

ದತಿ ಶೈಸಿದ ಪರಿಯೀಗ

ಕ್ಷಿತಿಯೊಳು ಪೂಜಿಪರತಿಗಾಗಿದು

ಸಮ್ಮತಿಸಲಿಲ್ಲ ಬಹುದೇಗ ||3||

ಪೊಡವಿಯೊಳೊಟುವಿಗೆ ಸುಡುವ ಬೆಂಕೆನುತ |

ನುಡಿದು ತೋರಿದಂತಿಲ್ಲಿ

ಮೃಡ ನೀನೆಂಬುವ ನುಡಿ ಹೋಲಿಕೆಗಿದು

ನುಡಿಯಲಿಲ್ಲ ಶೃತಿಯಲ್ಲಿ ||4||

ಮಡಿಕೆಯು ಮಣ್ಣಿಂದೊಡನೆ ನುಡಿದ ತೆರ |

ವಸ್ತುವೆ ನೀನೆಂದಿಹ

ಬಿಡದೆ ಕಾರ್ಯ ಕಾರಣಗಳ ತಿಳಿಸುತ

ನುಡಿಯಲಿಲ್ಲ ಬಂಧುರದಿ ||5||

ಕರಿಯ ನೈದಲೆಮಿದೆಂಬುವಂತೆ ಪರಿ |

ಪರಿಗುಣಿ ಗುಣತ್ವವನ್ನು

ಪರಮನೆ ನೀನೆಂದಿಳೆಯೊಳು ತತ್ಪದ

ವರೆದುದಲ್ಲ ಕೇಳಿನ್ನು ||6||

ಚಿನುಮಯ ಗುರು ಶಂಕರ ನೀನೆಂಬುದ |

ಕನುಮಾನದ ತೊಡಕಿಲ್ಲ

ಅನೇನ ಜೀವೇನಾತ್ಮಮೆಂಬ ಶೃತಿ

ನಿನಗೆ ಸಾಕ್ಷಿ ತಿಳಿಯಲ್ಲ ||7||

ಶ್ರೀಗುರುವರನಡಿಗೆ ನಾ ಬಾಗುವೆ |

ಬೇಗದಿ ಭವದ ರೋಗವ ಕಡಿದ ||ಪಲ್ಲ||

ಅಷ್ಟಾದಶ ಶತ ದಷ್ಟಾತ್ರಂಶತಿ |

ಶ್ರೇಷ್ಟ ರಾಕ್ಷಸ ಸಂವತ್ಸರದ

ಜೇಷ್ಟ ಶುದ್ಧಾಷ್ಟಮಿ ಭಾರ್ಗವಾರೆನಗೆ ಸಂ

ತುಷ್ಟದಿ ಶಿವಮನುವ ಬೋಧಿಸಿದ ||1||

ತಾರಕ ತ್ರಯದ ವಿಚಾರವನೆನಗೆ ಗಂ |

ಬೀರದಿಂ ತಿಳುಪೆನ್ನಂತರದಿ

ತಾರಕ ಬ್ರಹ್ಮವ ತೋರಿ ಬಹುತ್ವದ

ದಾರಿ ಬಿಡಿಸಿ ನಿಜದಿ ನಿಲ್ಲಿಸಿದ ||2||

ವರ ತತ್ವಮಸಿಯ ಪರಮಾರ್ಥವ ತಾ |

ನೆರೆ ಸೂಚಿಸಿ ಸಂಸೃತಿ ಭ್ರಮೆಯ

ಪರಿಹರಿಸುತ ಶಂಕರ ನಾಮದಿ

ಬಂದಿರದೆನಗಮೃತವನು ಪಾಲಿಸಿದ ||3||

ಶ್ರೀಮದಧ್ಯಾತ್ಮ ರಾಮಾಯಣಮಿದಂ |

ಪ್ರೇಮದಿಂ ಪಠಿಸೆ ನಿಜ ಮುಕ್ತಿ ಪ್ರದಂ ||ಪಲ್ಲ||

ವರ ಮೋಕ್ಷವೆಂತೆಂಬಯೋಧ್ಯಾನಗರದಲ್ಲಿ |

ಪರಬ್ರಹ್ಮನೆಂಬ ದಶರಥನಿರುವನು

ಪರಮ ಜ್ಞಾನೇಚ್ಛಾ ಕ್ರಿಯಾಯೆಂಬ ಸಲೆ

ಸುಮಿತ್ರೆ ಕೈಕಾ ಸತಿಯರಾತಗಿಹರು ||1||

ಅರಿವಿನ ಸುಶಕ್ತಿಯಹ ಕೌಸಲೆಗೆ ರಾಮ |

ಬಂಧುರದಿಚ್ಛೆಯೆಂಬುವ ಸುಮಿತ್ರಿಯಗಳಿಗೆ

ಪರಮ ವೈರಾಗ್ಯ ಭಕ್ತಿಗಳೆಂಬ ಲಕ್ಷ್ಮಣಸು

ಚರಿತ ಶತೃಘ್ನರುದಯಿಸಿದರಾಗ || 2||

ಕ್ಷಿತಿಯೊಳ ಶಕ್ತಿಯೆಂಬ ಕೈಕೆಗೆ ನಿಸ್ಪು ೃಹತೆ |

ಎಂಬ ಭರತ ತಾನವತರಿಸಿದ

ಹಿತದಾತ್ಮ ರಾಮನ ವ್ಯಕ್ತ ಬಾಲ್ಯದೊಳು

ಊರ್ಜಿತ ಸ್ವರೂಪ ವಿಚಾರ ಜ್ಞಾನ ಮರೆದ |3||

ಮರೆವೆಯಹ ಜೀವನೆ ತಾನೆಂಬ ಭ್ರಾಂತಿಯಿಂ |

ಶರೀರೇಂದ್ರಿಯಾದಿ ಸಂಸೃತಿಗೆ ಶಿಲ್ಕಿ

ಮಿರಗುವ ಶ್ರವಣವೆಂಬ ಗುರು ವಶಿಷ್ಟನ ಮುಖದಿ

ಪರಮಾರ್ಥದುಪದೇಶ ಪಡೆದ ಮುದದಿ ||4||

ಮಿನುಪ ವೈರಾಗ್ಯ ಲಕ್ಷ್ಮಣ ಸಹಿತನಾಗಿ ಗಡ |

ಮನನ ವಿಶ್ವಾಮಿತ್ರನೊಡನೆ ಹೊರಟು

ಘನತರದ ಷಟ್ಸಾಧನೆನಿಸುವ ಬಲಾತಿ

ಬಲ ಬಾಣವಿದ್ಯವ ಕಲಿತು ಧೀರನಾದ ||5||

ದುರಿತಕ್ಕೆ ಮಿಗಿಲಾದ ಪಂಚ ಪಾತಕವೆಂಬ |

ಗಿರಿಗಳೆಲ್ಲವದಾಂಟೆ ಜ್ಞಾನವೆಂಬ

ಶರದೊಳಾವರಣತಾಟಕಿಯ ತರಿದು ವಿಕಾರ

ನೆರೆದ ರಕ್ಕಸರ ಸಂಹಾರಗೈದ ||6||

ಇರದಿಚ್ಛೆಯೆಂಬ ಮಾರೀಚನಂ ಪಿಡಿದು ಸಾ |

ಗರಕೆ ನೂಕುತ ದುರಾಚಾರವೆಂಬ

ಉರುಸಿಲೆಯನೊದೆದು ಲಸದ್ ಆಚಾರವೆಂಬ

ಸುಂದರಿಯಹಲ್ಲೆಯಳನ್ನು ಮುದದಿ ಪೊರೆದ ||7||

ನಿಲದೆಯೇಕಾಂತ ಮಿಥಿಲಾನಗರ ಪೊಕ್ಕು |

ಸಲ್ಲಲಿತ ಶಾಂತಮದೆಂಬ ಜನಕ ನೃಪನ

ವಲಿದೀಕ್ಷಿಸುತಸೂಯಯೆಂಬ ಹರಧನು ಮುರಿದು

ಇಳೆಯೊಳಾನಂದ ಸೀತೆಯನೊರಿಸಿದ ||8||

ಮದದುವೆಂಬ ಪರಶುರಾಮನ ಗರ್ವ ಮುರಿದು |

ಮೋಕ್ಷದಯೋಧ್ಯಗೈದಾತ್ಮ ಸಾಮ್ರಾಜ್ಯದ

ಒದವಿ ಪಟ್ಟಕೆ ಸಿದ್ಧನಾಗಿರೆ ಕ್ರಿಯಾಶಕ್ತಿ

ಚದುರ ಕೈಕಾಕುಟೆಲ ಗುಣ ತಾಳ್ದಳು ||9||

ಅವಳು ತಂದೊಡ್ಡಿರುವ ಚಾಂಚಲ್ಯವೆಂಬ ವಿ |

ಘ್ನವುವದಗೆ ಬ್ರಹ್ಮ ದಶರಥನನಗಲಿ

ತವೆ ಮೋಕ್ಷವೆಂತೆಂಬಯೋಧ್ಯಾನಗರವನ್ನು

ತವಕದಿಂ ತನ್ನೊಳರಿದದನು ಬಿಟ್ಟ ||10||

ಆನಂದ ವೈರಾಗ್ಯ ಜಾನಕೀ ಲಕ್ಷ್ಮಣರ |

ತಾನೊರಿಸಿ ಬಹು ಬೇಗದಿಂದೆ ಹೊರಟು

ಮೌನಮಂ ತಾಳ್ದು ಚಿತ್ತಮದೆಂಬ ಮೆರವ ಸರ

ಯೂ ನದಿಯಿದಾಂಟೆ ಮತಿಗುಹನ ಕೂಡ್ದ ||11||

ಮಿನಗುತಿಹ ನಿಕ್ಷೇಪ ಘನ ವಿಪಿನ ಪೊಕ್ಕು ತಪ |

ವೆನಿಪ ಚಿತ್ರದ ಕೂಟದಲ್ಲಿ ನಿಂತು

ಅನುವಿನಿಂದಾಗಹಂಕಾರವೆಂಬುವವಿರಾ

ಧನ ನೋಡ್ದು ಕೋಪದಿಂ ಕಡಿದಿಟ್ಟನು ||12||

ಮನವೆಂಬ ಕಾಕಾಸುರನ ಪಿಡಿದು |

ಸಂಕಲ್ಪಕ್ಷಿ ಕಳೆಯುತ ನಿರ್ವಿಕಲ್ಪ ನೇತ್ರ

ಅನುಗ್ರಹಿಸಿ ವೀರ್ಯವೆಂತೆನುವಗಸ್ತ್ಯನ ಕಾಣ್ದು

ಘನ ಧೈರ್ಯವೆಂಬಸ್ತ್ರವನು ಪಡೆದನು ||13||

ಬೇಗದಿಂ ಕಾಮವೆಂಬುವ ಶೂರ್ಪಣಖಿಯ ಕಿವಿ |

ಮೂಗುಗಳ ಖಡ್ಗದಿಂ ಕತ್ತರಿಸುತ

ಆಗಾಮಿಕರ್ಮಂಗಳೆಂಬ ಖರ ದೂಷಣಾದಿಗಳ

ಶರದಿಂ ಕೊಂದು ಬಿಟ್ಟನಾಗ ||14||

ಮೀರಿದಿಚ್ಛೆಯದೆಂಬ ಮಾರೀಚನೊಂಚೆನಿಗೆ |

ವೈರಾಗ್ಯ ಲಕ್ಷ್ಮಣನ ಬಿಟ್ಟು ಪೋಗೆ

ಕ್ರೂರರಾಜಸವೆಂಬ ದಶಕಂಠ ರಕ್ಕಸನ

ಪಾರಡಂಭಮದೆಂಬ ಯೋಗಿಯಾದ ||15||

ದಾನವನು ಕಪಟದಿಂದಾನಂದವೆಂಬವರ |

ಜಾನಕಿಯ ಪಿಡಿದೆತ್ತಿಕೊಂಡು ಪೋಗೆ

ಕಾನನದೊಳಿಚ್ಛೆ ಮಾರೀಚನ ತರಿದು ರಾಮ

ನಾನಂದ ಸೀತೆಯನು ಕಾಣದಿರ್ದ ||16||

ಆ ರಾಮನಂತರ ವಿಚಾರವೆಂಬುವ |

ಚಿಂತೆಗೀಡಾಗಿ ವಿಕ್ಷೇಪವೆಂಬವ ನದಿ

ವೈರಾಗ್ಯ ಲಕ್ಷ್ಮಣನೊಡನೆ ಸ್ವೇಚ್ಛೆಯಾಗಿ

ಸಂಚಾರ ಮಾಡುತ ನಡೆದ ಯೋಚಿಸುತಲಿ ||17||

ಶಾಂತದಿಂ ಸುವಿವೇಕವೆಂಬುವ ಜಟಾಯುವಿನ |

ಪಂಥಮಂ ಕೇಳ್ದು ವಿಮಲತ್ವ ಗತಿಯ

ಸಂತಸದೊಳವಗಿತ್ತು ಚಿಂತೆಯೆಂಬ ಕ

ಬಂಧನನ್ನು ಶರೆ ಹಿಡಿದು ಸಂಹರಿಸಿ ಬಿಟ್ಟ || 18||

ಸಂತೋಷ ಶಬರಿಯಿಂದಂತರ ಮನೋವಿಕಾ |

ಸೆಂತೆಂಬ ಪೂಜೆ ಸ್ವೀಕರಿಸಿ ರಾಮಂ

ಸಂತತ ನಿಧಿ ಧ್ಯಾಸವೆಂತೆಂಬಧೀರ ಹನು

ಮಂತನೊಂದಿಗೆ ಪ್ರೀತಿಯನು ಬೆಳಸಿದ ||19||

ಏಳು ಬಂಧನಮೆಂಬ ತಾಳವೃಕ್ಷಗಳನ್ನು |

ಸೀಳಿ ಭಯವೆಂಬ ವಾಲಿಯನೆ ಕೊಲ್ಲಿ

ಮೇಲೆ ನಿರ್ಭಯಮೆಂಬ ಸುಗ್ರೀವ ಸಖ್ಯಮಂ

ಓಲೈಸಿ ಬೆಳೆಸಿದನು ಪ್ರೀತಿಯಿಂದೆ ||20||

ಘನ ನಿಧಿ ಧ್ಯಾಸದ ಪವನಜಗಾಜ್ಞಾಪಿಸಲ |

ವನು ಮೋಹವೆಂಬ ಸಾಗರವದಾಂಟೆ

ಕಿನಿಸಿನಿಂ ಲೋಭವೆಂಬುವ ಲಂಕಿಣಿಯ ಕೊಂದು

ವನದಿಯಾನಂದ ಸೀತೆಯನು ನೋಡ್ದ ||21||

ಇರದೆ ಸಂಕಲ್ಪವೆಂತೆಂಬಶೋಕದ ವನವ |

ಮುರಿದು ವಿಪರೀತವೆಂಬಿಂದ್ರಜಿತುವಂ

ನೆರೆ ತಿರಸ್ಕರಿಸಿ ರಾಜಸವೆಂಬ ರಾವಣಾ

ಸುರನ ಹಿಯ್ಯಾಳಿಸಿದ ಸತ್ವದಿಂದ ||22||

ಟಬಿಡದೆ ಮೌನಾಗ್ನಿಯಿಂ ಕಡು ದುಃಖವೆಂಬ

ಲಂಕಾನಗರ ಸುಟ್ಟು ಸನ್ಮೋಹಮೆಂಬ

ಜಡಧಿಯನು ದಾಂಟಿ ಬಹುದಿಡಗಿ

ನಿಂದಾತ್ಮನೆಂಬುವ ರಾಮನೆಡೆಗೆ ತಾನಾಗಮಿಸಿದ ||23||

ಆನಂದವೆಂತೆಂಬ ಜಾನಕಿಯ ವಾರ್ತೆ |

ಸುಮ್ಮಾನದಿ ನಿಧಿ ಧ್ಯಾಸ ಹನುಮ ಪೇಳೆ

ಭಾನು ಕುಲ ತಿಲಕನತಿ ಭರದಿ ನಿರ್ಭಯವೆಂಬ

ವಾನರೇಂದ್ರನ ನೋಡಿ ಹುರಿಗೊಳಿಸಿದ ||24||

ಬಲು ಶೌರ್ಯ ಸಾಹಸಗಳೆಂಬ ಕಪಿ ಸೈನ್ಯಮಂ |

ಬಲಿಸಿ ಮೋಹಾಂಬುಧಿಯ ಸೊಕ್ಕಡಗಿಸಿ

ಲಲಿತಾ ಚಲತೆಯ ಸೇತುವೆಯ ಬಂಧಿಸಿ ಮಹೋ

ಜ್ವಲ ಸತ್ವ ಗುಣ ವಿಭೀಷಣನ ಪೊರೆದ ||25||

ವಿಪರೀತಿ ಇಂದ್ರಜಿತುವೆಸೆದ ಸಂಶಯವೆಂಬ |

ಸುಪವಿತ್ರ ನಾಗಪಾಶಕ್ಕೆ ಶಿಲ್ಕಿ

ಚಪಲ ಸುವಿಚಾರ ಖಗಪತಿಯಿಂದೆ ಪಾರಾಗಿ

ವಿಪರೀತಿ ಇಂದ್ರಜಿತುವಿನ ಕೊಲಿಸಿದ ||26||

ಮುಂತೆ ತಾಮಸ ಕುಂಭಕರ್ಣನಂ ತರಿದು ವಿ |

ಭ್ರಾಂತಿ ಬಾಣಕ್ಕೆ ವೈರಾಗ್ಯವೆಂಬ

ಶಾಂತಿ ಲಕ್ಷ್ಮಣ ಮೂರ್ಛೆಯಿಂ ತಡಿಯದವನೀ ತಳಕ್ಕೆ

ತಾಂ ತತ್ಕಾಲದಲಿ ಬಿದ್ದನು ||27||

ಆತುಮನೆನಿಸುತಿರ್ಪ ಸೀತಾಪತಿಯು |

ನಿಧಿ ಧ್ಯಾಸ ಹನುಮಂತನಿಂ ನಿಷ್ಠೆಯಂಬ

ಪೂತ ಸಂಜೀವಗಿರಿಯಾತುರದಿ ತರಿಸಿ

ವೈರಾಗ್ಯ ಲಕ್ಷ್ಮಣನ ಎಚ್ಚರಗೊಳಿಸಿದ ||28||

ಇರುವ ಸಂಚಿತ ಕರ್ಮದುರು ಮೂಲ ಬಲವಸಂ |

ಹರಿಸಿ ಗಾಂಭೀರ್ಯ ಕೋದಂಡ ಪಿಡಿದು

ಪರಮ ಸುಜ್ಞಾನ ಶರದಿರದೆ ರಾಜಸ ಖಳನ

ತರಿದನು ದಶೇಂದ್ರಿಯಂಬುವ ತಲೆಗಳ ||29||

ಘನ ಪರೀಕ್ಷೆಯದೆಂಬ ಅನಲದೊಳಿ ಆನಂದ |

ಜನಕಸುತೆಯನು ಪೊಗಿಸಿ ನಿರ್ಭರದೊಳು

ಮನದ ಸಂಶಯವ ಬಿಟ್ಟನಿತರೊಳು ಪ್ರಾಣಿ

ಗ್ರಹಣ ಗೈದು ಬ್ರಹ್ಮ ದಶರಥನ ನೋಡ್ದ | |30||

ಸಲೆ ಸ್ವಯಂಜ್ಯೋತಿ ಮಂಜುಳ ಪುಷ್ಟಕವನೇರಿ |

ಲಲಿತ ಮೋಕ್ಷಮದೆಂಬಯೋಧ್ಯಗಿಳಿದು

ವಲಿದು ಶಂಕರನ ನೃಪಪಟ್ಟಮಂ ಪೊಂದಿ ನಿಶ್ಚಲ

ಬ್ರಹ್ಮ ದಶರಥನು ತಾನೆಯಾದ ||31||

ಕಾಂತ ಬಾರ ಹಾ |

ಅಹೋ ದೈವ ||ಪಲ್ಲ||

ಧೀರವರ ಶೂರರ ಭೀರ |

ಸಾರಿ ಮನೋಹರ ಸೇರದೆ ||1||

ನೋತಫಲ ತಾ ತೊಲಗದೆ |

ಮಾತನಾಯಶರಕೀಡಾದೆ ||2||

ಶಾತಪ್ರದೈನಿಲಯ ಪುರೇಂದ್ರ |

ನಾಥ ಚೆನ್ನವೀರನಿಲ್ಲದೆ ||3||

ಬಾರೊ ಮನಿಗೆ ನಿನ್ನ ಬೇಡಿಕೊಂಬೆ |

ಸವಿಗಾರ ಸುಗುಣ ಜಾಣ

ತಾರೊ ಮುದ್ದು ಸವಿಪಾಲ

ದುಟಿಗೆ ರಾಗಲಿರದೆನ್ನ ಪ್ರಾಣ ||ಪಲ್ಲ||

ಚಿಕ್ಕ ಹರೆಯದವಳುಕ್ಕುತಿರುವ ಕಳೆ |

ತಕ್ಕವಳೊ ನಲ್ಲ

ಕಕ್ಕಸಕುಚ ಕೂಗಲಿಕ್ಕಿಗಲ್ಲದೊಳ

ಗಿಕ್ಕು ಖೂನಹಲ್ಲ

ಮಿಕ್ಕವರಂದದಿ ನಕ್ಕು ನುಡಿದವಳ

ಠಕ್ಕು ಗುಣದವಳಲ್ಲ

ಸಕ್ಕರಿವಿಲ್ಲನ ಹಕ್ಕಿದಂಡು ಭೋ-

ರಿಕ್ಕುದೆನಗೆ ಝಲ್ಲ

ತೆಕ್ಕೆಯೊಳಗಭಿನಯದಪ್ಪಿಕೊಂಡು ಮು

ದ್ದಿಕ್ಕು ಬಾಯಿಗೆ ಬೆಲ್ಲ

ಲಕ್ಕುಮಿ ಮಗ ತಾನಿಕ್ಕಿದ ಬಾಣಕ

ದಕ್ಕದಿಸುವ ಬಲ್ಲ ||1||

ಪಲ್ಲವಧರ ಕರ ಹಲ್ಲು ತೆರೆದು ನಗಿ |

ಸೊಲ್ಲನಾಡೊ ಸುಗುಣ

ಕಲ್ಲು ಮನಸು ಕರುಗಲೊಲ್ಲದೇಕೆ ನ

ನ್ನಲ್ಲಿ ಇಡು ಕರುಣ

ಒಲ್ಲೆಂದವರ ಜಲ್ಲನೆ ಕರೆವ

ನಲ್ಲರುಂಟೊ ರಮಣ

ನಲ್ಲ ನಾನಿಮ್ಮಲ್ಲಿಗೆ ಬಂದರೆ

ಒಲ್ಲೆನೆಂಬುದು ತರಣ

ಖುಲ್ಲತನದಿ ನೀನಿಲ್ಲೆ ನಿಂತರೆ

ನಿಲ್ಲದೆನ್ನ ಹರಣ

ಬಲ್ಲ ಪ್ರೌಢನೆಂದುಲ್ಲಸದಿ ನಿ

ನ್ನಲ್ಲಿಟ್ಟೆನು ಸ್ಮರಣ ||2||

ವಾರೆನೋಟದೊಯ್ಯಾರಿ ಸೊಗಸು ಮಿಗೆ |

ಕೀರವಾಣಿ ನಾಣು

ಮಾರನ ಮಾವನು ಪೂರ್ವದಿಂದ ಗಗ

ನೇರಿ ಬಂದ ತಾನು ತ

ದ್ಧಾರುಣಿಗೈನೆಲೆಗಾರ ಗುರು ಚೆನ್ನ

ವೀರ ನಿಮ್ಮ ದಯಾನು

ಪಾರವಿದು ನಿಮ್ಮ

ಸಾರಿಗೆ ಬಂದವಳೆರಡಿಕ್ಕುವರೇನು ||3||

ನಿಲ್ಲೊ ನಿಲ್ಲೊ ನಿಲ್ಲೊ ನಮ್ಮನೆಗೆ ಬಾರೊ |

ಒಲ್ಲೆ ಒಲ್ಲೆನೆಂಬುದಲ್ಲ ಒಲಿದು ಸಾರೊ ||ಪಲ್ಲ||

ಮಿಕ್ಕ ಮಾನಿನಿಯರಂತಲ್ಲ ನೀ ನೋಡೊ | || 1||

ಮಧುರ ಮಾತುಗಳಿಂದ ವಿರಹ ತುಂಬಿಸುವೆ |

ಅಧರಾಮೃತವೆರೆದು ಚುಂಬಿಸುವೆ ||2||

ಪರಿಮಳ ಗಂಧ ಕಸ್ತೂರಿಯ ಪೂಸುವೆನೊ |

ಸೆರಗಿಲಿ ತಂಗಾಳಿ ಬೀಸುವೆನೊ ||3||

ನೀಟುಕಾರನ ನಿನ್ನ ಮರಿಲಾರೆನೊ |

ಮೀಟುಜವ್ವನ ಧರಿಸಲಾರೆನೊ || 4||

ಸುರುಚಿರೈನೆಲೆ ಚೆನ್ನವೀರೇಶ್ವರನೆ |

ಉಚಿತ ಚಿತ್ತವಿಹಾರ ಸುಖಕರನೆ ||5||

ಬಾರನೇನೆ ಭಾಮೆಯು ಬಳಿಗೆ |

ಬಾರನೇನೆ ಪ್ರಿಯ

ನಾರಿಮಣಿಯ ಬಳಿಗೆ ನೀರೆ

ತೋರುವ ಬಗೆಗಳಾರಿಗೆ ತಿಳಿಯನೆ ||ಪಲ್ಲ||

ಮೃಢನ ವೈರಿಯ ಬಲವಡರಿ ಬಾಹುದು ಕಂಡು |

ಮಡದಿ ತಾ ಬೆದರುತ ಕುಳಿತಳು

ಬಡನಡುವಿನ ಬಾಲೆ ನಡುನಡುಗುತ ತನ್ನ

ಬಡಬಾಸೆಯನೆ ಮುಚ್ಚಿಕೊಂಡಳು

ಒಡನೆ ಬೈತಲೆಯ ಸೋವ ಕೂದಲ ತೋರಿ

ಅಡಸಿ ಚಂಚಲನೇತ್ರ ತೆರೆದಳು

ಕಡು ನೊಂದು ಕರತಳ ನಡೆ ಚೂರ್ಣಕಚನಯನ

ನುಡಿಗಳು ತನಗಿಂದು ಪಗೆಯೆಂದು ಬಗೆವಳು ||1||

ವಾರಿಜಾನನೆ ತನ್ನ ತೋರಮುಡಿಯ ಬಿಚ್ಚಿ |

ಚೀರುತ ಜಡೆಗಟ್ಟಿಕೊಂಡಳು

ಚಾರು ಚಂಪಕ ಕುಸುಮವಾರೈದು ವಿರಚಿಸಿ

ಹಾರ ಕೊರಳಿಗೆ ಧರಿಸಿಕೊಂಡಳು

ಮೋರೆ ಬಾಗಿಸಿ ಸರ್ಪಾಕಾರದಿ ತನ್ನ ಕೈ

ತಾರಾಮಾರ್ಗಕೆ ತೋರುತಿರುವಳು

ಸಾರಂಗಕಿರಣ ಭೃಂಗಾರವ ಘನ ಮುಂದ

ಮಾರುತನುಪಟಳಕಾರದೆ ಕೆಡೆದಳು ||2||

ಕಲಹಂಸಗಾಮಿನೆ ಮಮ್ಮಲಮರುಗುತ ತನ್ನ |

ಮೊಲೆಯಂತೆ ಮನವಾಯಿತೆಂದಳು

ಸುಲಲಿತ ಸುರುಚಿರಮಳಗಾತ್ರೆ ತನ್ನ

ಕುಂತಲದಂತೆ ನುಡಿಯಾಯಿತೆಂದಳು

ಜಲರುಹನೇತ್ರ ಕೋಕಿಲಾಲಾಪೆ ಕಾಂತನ

ಒಲುಮೆ ಕಟಿಯತೆಂತಾಯಿತೆಂದಳು

ವಿಲಸಿತೈನಿಲಯ ಮಂಜುಲ ಚೆನ್ನವೀರೇಶ

ನೆಲಸದೆ ಲಲನೆಯೊಳುಲಿದು ಕಾಯದೆ ಕಾಂತೆ ||3||

ಬಾರದೇ ನಿಂತ

ಭಾಸುರ ಕಾಂತ ||ಪಲ್ಲ||

ಅತಿಮಧುರ ವಚೋಧುರ ಚದುರ ಪ್ರಭಾನಿತ್ವ |

ದುರರದನ ರಸಿಕೇಂದ್ರ

ಜೀತಮದನ ಸಾಧುಜನ ಸದನ ಸಮಂಚಿತ

ವದನ ನಿಪುಣ ಗುಣಸಾಂದ್ರ ||1||

ನವರೂಪ ಸರಸ ಸಲ್ಲಾಪ ಕಳಾ |

ಸುಕಲಾಪ ಮೋಹನಾಕಾರ

ಸುವಿಲಾಸ ಸುಕ್ಷಮದರಹಾಸ

ಭೋಗಪರಿಹಾಸ ಭಾವ ಸವಿಗಾರ ||2||

ಅಕಳಂಕ ಹೃದಯ ಶೋಭಾಂಕ |

ಸಾರ ನಿಶ್ಯಂಕ ಸರ್ವಜಗದಾರ್ಯ

ಸಕಳೇಶ ಸದೈನಿಲಯೇಶ

ಚೆನ್ನವೀರೇಶ ನಿರಘಜನಧುರ್ಯ ||3||

ಪ್ರಿಯತಮನು ದ್ರವಾಂಗಕೆ ಸೇರನೆ |

ಮಯಣನಾರಕೆ ನಾನಾರೆನೆ ||ಪಲ್ಲ||

ಸುಂದರ ಪ್ರಿಯನು ಸುರತಕ್ಕೆಳಸನೆ |

ಮಂದಿರದೊಳು ಪಳಚನೆ ||1||

ಇಂದಿರಾತ್ಮಜನು ವಿಶಿಖಗಳ ತೊಡುತೆ |

ಬಂದನೆನ್ನಮೇಲೆ ಬಿಡುತೆ ||2||

ವಿಭವೈನೆಲೆ ಚೆನ್ನವೀರನೀ |

ವೇಳೆಕೆ ಅಭಯವಿತ್ತರಿನ್ನು ಸಾಕೆ ||3||

ಕೇಳು ರಮಣನೆವೊಲಿದು ಕೌತುಕದ ನುಡಿಯ |

ಪೇಳಲಳವಲ್ಲ ಫಣಿಪತಿಗಾದಡೆನ್ನಳವೇ ||ಪಲ್ಲ||

ಪೊಂಬಾಳೆ ಮಧ್ಯದೊಳಂಬುಜವ ಮೂಡಿ ಮುಗ |

ಳಂ ಬಿರಿದು ಪಸರಿಸುತೆ ನವಯೆಸಳಿನೊಳು

ಅಂಬು ಭವಬಾಂಧವನ ಸತಸಹ ಚಂದ್ರಮನು

ಇಂಬುಗೊಂಡುದು ಕಂಡೆನೇನೆಂಬೆ ರಸಿಕ ||1||

ತಾರಕಾಣದಿ ಜಲವು ಮೇರುವಂ ಬಳಸಿ ಮಿಗೆ |

ಏರಿದುವು ಗಗನಮಂಡಲದೊಳಿಹ ಕೋಣಕೆ

ಆರಡಿಯ ಕುಲವು ಝೇಂಕಾರದಿಂ ಸಂಪಗೆಯ

ಕೋರಕವ ಮುತ್ತಿದುದು ಕಂಡನೆಲೆ ಕುಶಲ || 2||

ಶೀತಮಯನಾದ ಮಾರುತನುಷ್ಣಮಯನಾದ |

ಶಾಂತಕುಂಭದ ಲತೆಯು ಶಿಖಿಗೆ ಹಚ್ಚಿಹುದು

ಭೂತಳದೊಲೈನೆಲೆಯನಾಥ ಚೆನ್ನವೀರೇಶ

ನೀ ತಿಳಿದು ಬಂದು ಕಾಯ್ವುದು ನೇಹವೆರಸಿ ||3||

ಬಾರನೇ ಬಾಲೆ ಎನ್ನಲ್ಲಿಗೆ ಬಾರನೇ |

ಬಾರನೇ ತನ್ನ ಮುಖದೋರನೇ ರಸಿಕನು

ಸಾರಸುಂದರ ಸವಿಗಾನೆನ್ನಲ್ಲಿಗೆ ಬಾರನೇ ||ಪಲ್ಲ||

ಮಾನವಧನವನೊಪ್ಪಿಸಿದೆನು ಅಭಿ |

ಮಾನ ತನ್ನೊಳು ತಪ್ಪಿಸಿದೆನು ದಿವ್ಯ

ಮಾನಂದನನು ಸಮಾಧ್ಯಾನಸರೂಪನು ಪರ

ಮಾನಂದ ಸುಖಕೆ ಸುಮಾನದಿಂದಿಲ್ಲಿಗೆ ಬಾರನೇ ||1||

ರತಿಗಲಹದೊಳಳ್ಕಿದೆನೆ ಉಪ |

ರತಿಶ್ರಮದೊಳು ಬಳ್ಕಿದನೆ ನವ್ಯ

ರತಿದೇವಿಕಾಂತನ ರತಿಗತಿಯೊಳಗ

ರತಿಯ ಬಡಿಸಿ ಬಹುರತಿಯಿಟ್ಟೆನ್ನಲ್ಲಿಗೆ ಬಾರನೇ ||2||

ರಸದೈನಿಲಯೇಶ್ವರನೆ ಸಮ |

ರಸ ಚೆನ್ನವೀರೇಶ್ವರನೆ ಸಾ

ರಸನೇತ್ರೇ ಮನದ ವಿರಸವ ಬಿಟ್ಟು ಪ್ರೀತಿ

ರಸವ ಹೆಚ್ಚಿಸುತ ಸರಸತೆನ್ನಲ್ಲಿಗೆ ಬಾರನೇ || 3||

ಏ ಸುಗುಣೆ ಬರಲೊಲ್ಲೆನೆ ಮನೆಗೆ |

ಏನು ಮಾಡಿದೆನೆ ತನಗೆ

ಭಾಷೆ ಪಾಲಿಪ ಒಡನೆಯೆಂದು

ಬಹಳ ಪರಿಯಲಿ ನಂಬಿದೆನೆಂದು ||ಪಲ್ಲ||

ಆವ ಗುಣಗಳು ಕಂಡನೆನ್ನೊಳು |

ಆತನಿಗೆ ನೀ ಕೇಳೆಲೆ

ಜೀವಮುಳಿವುದು ಸಂಕಟವೆಂದು

ಜಾಣನಿಗೆ ನೀ ಪೇಳೆಲೆ

ಕಾವನಿಕ್ಕಿದ ಕಮಲಂಬಿಗೆ

ನಾ ಕಾತುರವೆಂದು ತಾಳಲೆ

ಏ ವನಿತೆ ಏನೆಂಬ ಸುದ್ದಿಯೆನಗೀ

ವೇಳೆಗೆ ತಂದು ಮುಟ್ಟಿಸಿ ಪೋಗೆಲೆ ||1||

ನಾರಿ ನೀನು ಪೋಗಿ ಕರೆದರೆ |

ನಲ್ಲನ ಮನಸಿಗೆ ಬಾರದೆ

ಮಿರಿಯೆನ್ನನು ಜರಿದರಾತಗೆ

ಮಿಗಿಲುಪಾಯವನು ತೋರದೆ ಯ

ಆರಾದಡೇನು ಸರಿಗರತೆರೆನ್ನ

ಅಂತರಿಸಿದರು ಸೇರದೆ

ವಾರಗಿಪುರುಷನು ಬಾರದೆ ಹೋದರೆ

ನೀರೆಯೆನ್ನ ಜೀವವಿಂದುಳಿಯದೆ ||2||

ಎಂದಿಗಗಲನುಯೆಂದು ಕಾಂತನೆರಳು |

ಎರವಿಲ್ಲದ ಕೂಡಿದೆನೆ

ಮಂದಮತಿಯಲಿ ತಿಳಿಯದೆ ನಾನು

ಮನವು ಸೂರೆ ಮಾಡಿದೆನೆ

ಸುಂದರನೆಯೆನ್ನಗಲದಿರೆಂದು

ಸೆರಗೊಡ್ಡಿ ಬೇಡಿದೆನೆ

ಚಂದದಿ ಐನೆಲೆ ಚೆನ್ನವೀರೇಶನು

ಎಂದಿಗೆ ಬಿಡದೆನ್ನ ಕರದೊಳು ಬೆರೆದನೆ ||3||

ನಾಥ ಬಾರನೆ ಸಾರೆ ಪ್ರಿಯೆ |

ನಾಥ ಬಾರನೆ ಸಾರೆ ಪ್ರಿಯೆ | ||ಪಲ್ಲ||

ಅತಿಹಿತಲೋಲನ ಚಲನ ಪೂರೈಸಿದೆ |

ಅತುಳಕಪಟಕಾರೆ ಪ್ರಿಯೆ ||1||

ಪರಿಪರಿಗೊಂಡು ರತಿಕಲಹದೊಳಾದೇನೆ |

ವಿರಹ ಸೈರಿಸಲಾರೆನೆ ಪ್ರಿಯೆ ||2||

ಲಸಿತೈನೆಲೆಗೃಹ ಚೆನ್ನವೀರಾರ್ಯನ |

ಒಲಿಸಿ ವಹಿಲನೆ ತೋರೆ ಪ್ರಿಯೆ |3||

ಜಾತಸುತೆ ನೀವಾರೆ ಸಖಿ ಒಯ್ಯಾರೆ |

ಬಾರೆ ಬಾರೆ ಒಯ್ಯಾರೆ

ನಗುನಗುತೆನ್ನನು ಪೆಗಲ್ ಬಗಲ್

ಪಿಡಿದಾಲಂಗಿಸಿ ತಾ ಹೋದನೆ ||ಪಲ್ಲ||

ಸಮತೆ ರತಿರಸಮಮತೆ ನಾ |

ಸಮರತಿಗೊಡುವೆನೆಂಬುತ

ಗಮಕ ವಿಹಾರಿ ಪ್ರಮುದಿತ ಲಹರಿ

ರಮಿಸದೆ ರಮಣ ಹೋದನೆ ||1||

ಚದುರೆ ಮೃದುನುಡಿಮಧುರ ನಾ |

ನೊದಗುವೆನು ಅಪರತಿಗೆನುತ

ವಿಧುನಿಭವದನೆ ಕದಿರುವರದನೆ

ಮದನಾಗಮದೊಳು ಹೋದನೆ ||2||

ವಿನಯ ಐನೆಲೆವನೆಯ ಚಿ |

ದ್ವನ ಗುರು ಚೆನ್ನವೀರೇಶನೆ

ಅನುಮನನಳಿಸಿ ತನುಗುಣ ತಿಳಿಸಿ

ಮನವಪಹರಿಸಿ ಹೋದನೆ ||3||

ಮನಸು ಮುರಿದನೇನೇ ಮನ್ನಾಥನೆ |

ತನುರಹಿತನಾತುರಕೆ ತಡ ಮಾಡಿದುದಕೆ ||ಪಲ್ಲ||

ಘನ ಮೋಹದಿಂದೆ ನೋಡುವ ಗಮ್ಮನೆ ಬರುವ |

ವಿನಯದಿ ಮುದ್ದು ಬೇಡುವ ವಿಶ್ವಾಸವಿಡುವ

ಅನುನಯಿಸೆನ್ನ ಕೊಡುವ ಅಭಯವ ಕೊಡುವ

ಅನುಕರಿಸಿಂತು ನೆರೆದು ಅಗಲಿದನಲ್ಲೆ ಸಖೀ ||1||

ಸಮರತಿಯನು ತೋರುವ ಸನ್ನಿಧಿಲಿರುವ |

ರಮಣೆವಿಲ್ಲವೆಂಬುವ ರಮಿಸಿ ಕರೆವ

ಮಮತೆಯೆನ್ನೊಳು ಬೀರುವ ಮನ್ನಿಸಿ ಬೆರೆವ

ಅಮಮಯೆಲ್ಲಿರುವನೋ ಹಾ ಆಡಲಿನ್ನೇನೆ ಸಖೀ ||2||

ಅಭೀನವೈನಿಲಯೇಶನೆ ಆತ್ಮೇಶನೆ |

ವಿಭುಚೆನ್ನವೀರೇಶನ ವಿಶ್ವೇಶನೆ

ಅಭಿಜನಮಾನಸೇಶನೆ ಅಖಿಲೇಶನೆ

ಶುಭರತಿಯೊಳಗಾಗಿ ಸುಳಿಯನ್ನೀನೆ ಸಖೀ ||3||

ಬೆಳಗ ಹರಿತೆ ಕಾಂತೆ ಬರಲಿಲ್ಲೆಂತೆ |

ಅಲಸಿದನಕಟಕಟ || ಪಲ್ಲ||

ಕುಕ್ಕುಟ ಕೂಗಿದವೆ ಪಕ್ಕಿಗಣುಲಿದವೆ |

ಚಕ್ಕನೆ ತಾ ಚಕ್ರವಾಕ ನಲಿದವೆ ||1||

ತಾರೆಗಳಡಗಿದವೆ ಆರಡಿ ಪಾರಿದವೆ |

ಭೋರನೆ ಸಾರಚಕೋರಿ ಬಾಡಿದವೆ| ||2||

ಸಾರೈನೆಲೆ ಚೆನ್ನವೀರೇಶ್ವರನೆನ್ನ |

ಈ ರಾತ್ರಿಲಿ ಮನೆಗೆ ಬಾರಲಿಲ್ಲಬಲೆ ||3||

ಬಂದೆನೇನೆ ತಾಂ ಬಂದನೇನೆ ತಾಂ |

ಕೋವಿದ ಹೋ ತಾಂ ಬಂದನೇನೆ ||ಪಲ್ಲ||

ತಾ ಮರ ಸಾಕ್ಷಿಯೆ ತಾ ಮರೆದಿರದೆ |

ಮಾಮಕ ಚೇತೋಲ್ಲಾಸಕ ||1||

ಮಾನಂದನನ ಸಮಾನ ಶೋಭಾಂಕ |

ಮಾನಿನಿಯೆನ್ನ ಸಮೋದಕ ||2||

ಚಿನ್ನಿಲಯೈನೆಲೆ ಚೆನ್ನವೀರಾರ್ಯ |

ಪ್ರೋನ್ನತ ಮಹಿಮಾ ವಾಸಕ ||3||

ಕಾಂತಾಮಣಿ ಕಾಮಪ್ರಸರಕಾನಾರೆನೆ |

ಸ್ವಾಂತಾಶ್ರಯಪ್ರಿಯ ಬಾರನೆ ||ಪಲ್ಲ||

ನಯನ ವಿಲಾಸಕೆ ಸೋತೆನೆ ಅಹ |

ನಯನ ವಿಲಾಸಕೆ ಸೋತೆನೆ ||ಅನು||

ಕಿಸಲಯ ಕೋಮಲ ಸನ್ನಿಭಪಾಣೆ |

ರಸಮಂಜುಲಮುಖ ತೋರನೆ ||1||

ಶಬಲಾರ್ಭಕವಿಲೋಚನೆ ಪ್ರಥುಲ |

ಕಬರಿ ಪ್ರಿಯತಮ ಸಾರನೆ ||2||

ಸ್ಪುರದೈನಿಲಯ ಶ್ರೀಚೆನ್ನವೀರೇಂದ್ರ |

ಕರುಣಾನಿಧಿ ಹಿತಕಾರನೆ ||3||

ತಾನೆ ಬಾರದೆ ಹೋದ ತರುಣಿ ಕೇಳೆಲೆ |

ನಾನು ಏನೆಂದು ನಮ್ಮಾತನೆ

ಮೀನಕೇತನತಾಪ ಮೀರಿ ತನ್ನೊಳಗಿಂದು

ಮಾನಿನಿ ತಂದು ಕೂಡಿಸೆ ಮಾತು ಮನ್ನಿಸೆ ||ಪಲ್ಲ||

ಕಬ್ಬು ಪೊಯ್ದು ಪೂಬಾಣವ |

ತಬ್ಬಿಬ್ಬುಗೊಂಡು ತಾಪ

ಹಬ್ಬಿ ಹವ್ವಳಿಸುತಲಿ

ಮಬ್ಬುಗೊಂಡಿತೆ ಪ್ರಾಣವ

ಬಿಬ್ಬೋಕದಿ ನೆರೆಹೊರೆಗುಬ್ಬಸ ಹಿಡಿಯಲೆಂತೆ

ಕಬ್ಬ ಕೋಮಲ ಪ್ರಾಯವ

ಹಬ್ಬಿಸೆನ್ನದಿ ಕಾಂತನೆಬ್ಬಿಸಿ ತಂದುಸುರಿ

ತಬ್ಬಿಸಿಯಿಂದಿಗೆ ತೋರಿಸಿ ಹರುಷದಿ ಬೆರೆಸಿ ||1||

ಪಲ್ಲವಾಧರಳೆ ಒಲ್ಲೆನೆಂದೆನ್ನ ಮೇಲೆ |

ಕಲ್ಲುಗೊಂಬುದುಚಿತವೆ

ಲಲ್ಲೆವಾತಲಿ ಎನ್ನನಲಗೆ ಬೋಧಿಸಿ

ಇಲ್ಲಿಗೆ ತಾರಲ್ಲೆ ಭಾವೆ

ಪುಲ್ಲಲೋಚನೆ ಕಾಂತನಿಲ್ಲದವಳ ಜನ್ಮ

ಸಲ್ಲದೇತರ ಬಾಳ್ವೆ

ಮಲ್ಲಿಗೆಬಾಣನ ಝಲ್ಲಿ ಕೆಟ್ಟದು ಎನಗೆ

ನಿಲ್ಲದೆ ತನ್ನಲೋಚನೆ ನೀಲಲೋಚನೆ ||2||

ಸರಸಕೋವಿದನಗಲಿ ಸರೋವರದೊಳು ಶಶಿಯ |

ಕಿರಣ ಕಾದಂತಾಯಿತೆ

ಸ್ಮರನತಾಪಕೆ ಎನ್ನ ಶರೀರ ಕೋಮಲ

ಕರಗಿ ಕಪ್ಪಾಗಿ ಹೋಯಿತೆ

ಭರಪ್ರಾಯದವಳು ಧರಿಸ್ಯಾಳ್ಹೇಗೆಂದು ತನಗೆ

ಅರಿವು ಇಲ್ಲದೆ ಹೋಯಿತೆ

ಪರಮ ಐನೆಲೆವಾಸ ಗುರು ಚೆನ್ನವೀರಜೀವ

ದೆರೆಯನೇತಕೆ ನಿಂತನೆ ಎರವಾದನೇನೆ ||3||

ಸುಮನಶರಕೆ ನಿಲ್ಲದಪ ಘನ ಹಾ ಸಖೀ |

ರಮಣನಿಲ್ಲದೆ ನಿಲ್ಲದೀ ಮನ ಹಾ ಸಖೀ | |ಪಲ್ಲ||

ನೂತನ ಪ್ರಿಯೆ ನುತಕಲಕಾಯೆ |

ನಾಥನಗಲಿ ಬಡವಾದೆ ಹಾ ಸಖೀ ||1||

ಮಧುಕರವಾಲೆ ಮಂಜುಲಬಾಲೆ |

ಮದನಾಭನ ಕರತಾರೆ ಹಾ ಸಖೀ ||2||

ಚೆಲುವೈನೆಲೆಯ ಚೆನ್ನವೀರಾರ್ಯ |

ಒಲಿದವಳೊಳು ಮುನಿಸೇನೆ ಹಾ ಸಖೀ || 3||

ಎನ್ನೊಳೇತರ ಮುನಿಸೊ ಕೋವಿದ ರನ್ನ |

ಮನ್ನಿಸಿ ಮಾತ ಲಾಲಿಸೊ ಕೋವಿದ ರನ್ನ ||ಪಲ್ಲ||

ತುಂಬಿದ ಜನ್ಮವು ನತಕಾಂತ |

ಚುಂಬಿಸೆನ್ನ ಬಿಂಬದುಟಿಯನು

ಕೊಂಬಲ್ಲಿ ನಿಂದಪೆಲ್ಲೊ ||1||

ಚತುರ ಚನ್ನಿಗನೆ ಬಾ ಮನ |

ಸೋತು ಕೂಡಿದವಳಿಗೆ

ಏತಕೆನ್ನೊಳಿಂಥ ಭೇದ ||2||

ತೋರಕುಚದ ನಾರೆ ನಾ ಸವಿ |

ಗಾರನೆಂದು ಕೂಡಿದವಳ

ಆರ ಮಾಡಿ ನೋಡುದೊಳ್ಳೆಯದೆ ||3||

ಮುದ್ದುಮುಖದ ಜಾಣ ಕೇಳೊ |

ಬುದ್ದವಾಗಿರುವಂಥ ಮನಸ್ಸು

ಕದ್ದು ನೀನು ಕಳವಳಿಕ್ಕುವರೆ ||4||

ಭೂವಳಿಯೊಳೈನೆಲೆನಿಲಯ |

ದೇವ ಚೆನ್ನವೀರೇಶಯೆನ್ನ

ಜೀವಭಾವ ಕಾಯ ನಿಮ್ಮದು ||5||

ಕಾಂತ ಮುನಿದಿ ಹೋಳಿಯಾಡುವುದಕೆ |

ಭರಿತ ಪಿಚಕಾರಿಯ ಬಿಡುವುದಕೆ

ಸೊರಗಿ ಸೋತೆ ಬಿಡುಬೇಡವೆಂದುದಕೆ ||ಪಲ್ಲ||

ಕಚಭರಕೋಕುಳಿ ಕರ ಮೆಚ್ಚದುದಕೆ |

ಉಚಿತವಲ್ಲೇಳು ಪ್ರಿಯ ಇಡುಕೆಂದುದಕೆ ||1||

ಪಟುತರದಿಂದ ಕೊಳವೆ ಪಿಡಿದ ಭರಕೆ |

ಕಠಿಣಕುಚಕೆ ಬಿಡುಬೇಡವೆಂಬುದದಕೆ ||2||

ಎಸೆವೈನೆಲೆ ಚೆನ್ನವೀರ ಬಿನದಕೆ |

ವಶವಾದೆನು ನಿನ್ನ ಬೇಡವೆಂದುದಕೆ ||3||

ಇಂದುಮುಖಿಯಳನಗಲಿ ರಮಣನೆ |

ಇನಿತು ಕಾಡುವುದುಚಿತವೆ

ಮಂದಗಮನೆಯ ಮನವನಪಹರ

ಮಾಡಿ ಮುನಿವುದು ವಿಹಿತವೆ ||ಪಲ್ಲ||

ಕಬ್ಬುವಿಲ್ಲನ ಕಣೆಗಳುಪಟಳ |

ನಿಬ್ಬರಳಿಯದೆ ಪೋಪಳೆ

ತಬ್ಬಿ ಮುಸುಕಿದ ತುಂಬೆ ಪಿಕಧ್ವನಿ

ಯಬ್ಬರಕೆ ನಿಲಲಾಪಳೆ ||1||

ಎರಳೆಗರುವನ ನೆರಳು ತಾಕಲು |

ತರುಣಿ ತಾಪದಿ ನಿಲ್ಲಳೆ

ಇರುಳೆ ತೀಡುವ ಮರುತ ಸೋಕಲು

ಶರೀರ ಧರಿಸಬಲ್ಲಳೆ || 2||

ಅಚ್ಚಮಲ್ಲಿಗೆ ಮಾಲೆ ಎದೆಯೊಳ |

ಗೆಚ್ಚ ಸೂಜಿಗಳೆಂಬಳೊ

ಹಚ್ಚಿರುವ ತಂಪೆಸೆವ ಗಂಧವು

ಕಿಚ್ಚು ಕಿಡಿಗಳೆಂಬಳೊ ||3||

ನೀಲಕಂಠಗೆ ರಾಹುರಾಮಗೆ |

ವ್ಯಾಲನಿಗೆ ತಾ ಬಯ್ವಳೊ

ಪೇಳಲಳವಲ್ಲಕಟ ಪಸ್ಮಾರ

ಜ್ವಾಲೆಗವಳತಿ ಸುಯ್ವಳೊ ||4||

ಸುಂದರೈನೆಲೆಧಾಮ ಚೆನ್ನವೀ |

ರೇಂದ್ರರಾಜಿತ ಸೋಮನೆ

ಇಂದವಳ ಹೃತ್ಕುಮುದವಲರಿಸು

ಬಂದು ಸುಖದಭಿರಾಮನೆ ||5||

ವಾರಿಜಮುಖಿ ಎನ್ನ ಕಾಂತ |

ಏಕೆ ಬಾರದೆ ನಿಂತ ||ಪಲ್ಲ||

ಸೊಕ್ಕುಜವ್ವನೆ ಎನ್ನತಕ್ಕಳೆನುತ |

ಸಕ್ಕರೆದುಟಿಯ ಚುಂಬಿಸುವ

ಸಾರಸುಖದಿ ನಂಬಿಸುವ ||1||

ವಾರೆನೋಟದ ಇಯ್ಯಾರೆ ಬಾರೆನುತ |

ತೋರಕುಚಕೆ ನಖನಿಡುವ

ತೊಲಗದೆ ರತಿಗೂಡುವ ||2||

ಸುಂದರ ಸುಗುಣ ಧುರಂದರೈನಿಲಯ |

ಮಂದಿರ ಚೆನ್ನವೀರೇಂದ್ರ

ಮಂಜುಲ ಸುಖಸಾಂದ್ರ ||3||

ನಿನ್ನೊರೆದರೆ ಪೇಳುವರೆ ದೂತೆ |

ಬಾಕ್ಷಿ ಆದೆನು ಮತ್ತೆ

ತಾಳೆ ನಿನಗೆ ಗರ್ವವಾದೇತೆ ||ಪಲ್ಲ||

ಕೋಟಿಚಂದ್ರನ ಪ್ರಭೆಯಕಾಂತನ |

ನೋಟ ಮಾತ್ರದಿ ಕಂಡು ಕಾಮಿಸಿ

ಪಾಠೀನಕ್ಷಿಯರು ಬಂದು ಕರೆಯಲು

ಕೂಟದಲಿ ತಾ ಕೂಡಿದೆನೆ ||1||

ಎಳೆಯ ಪ್ರಾಯದ ಕೊನಬುಗಾರನು |

ಸುಳಿದು ಸುಮ್ಮನೆ ಹೋಗೆ ಸತಿಯರು

ಕಳವರಿಸಿ ಕರೆದೊಯ್ದು ಮನೆಯೊಳು

ಒಲಿಸಿಕೊಂಡರೆ ಏನು ಮಾಡ್ವೆನೆ ||2||

ಹಲವು ದಿನದಿಂದೊಲಿದವಳು ನಾ |

ಹೊಳೆವ ಕಂಡರೆ ಮೆಚ್ಚಲಾಪನೆ

ಲಲನೆ ನನ್ನಂಗಲ್ಲೆ ಆ ಕರ

ಚೆಲುವನಿಗೆ ಮನ ಸೋಲದಿಹರೆ ||3||

ಸೆರಗು ನಿಲ್ಲದೆಂಬ ಪರಿಯ ಬಲ್ಲೆ |

ಪ್ರಕಮಿ ವಿರುಪ

ಏರುಜವ್ವನದವಳು ಕಂಡು

ಇನ್ಯಾಂಗೆ ನಾನೆ ಹೇಳೆ ||4||

ಲೋಲ ಐನೆಲೆಯಾಲಯನು ಕೃ |

ಪಾಲ ಗುರುಚೆನ್ನವೀರೇಶನ

ಲೀಲೆಯೊಳಗಾದವಳ ಪುಣ್ಯ ವಿ

ಶಾಲವೆ ನಿನಗೇಕೆ ತಿಳಿಯದೆ ||5||

ಪ್ರಿಯ ನಿನ್ನ ಧ್ಯಾನ ಮರೆದಿರವಲ್ಲಳೊ |

ನಯನುಡಿಯಳು ಮಾರಜ್ವರಕೆ ನಿಲ್ಲಳೊ ||ಪಲ್ಲ||

ಇರುಳೆರೆಯನ ಪೋಲ್ವ ಕಳೆ ಮೊಗದವಳೊ |

ಸರಳ ಬೈತಲೆ ಚೆಲ್ವ ಚಂದುಟಿಯವಳೊ

ತರಳಲೋಚನೆ ಬಹು ತರಹರಿಸುವಳೊ

ಸರಸ ಕೋವಿದ ನಿನ್ನ ಸ್ಮರಿಸುತಿರುವಳೊ ||1||

ಸುಲಲಿತ ಕಂಜಕೋರಕ ಕುಚದವಳೊ |

ಸೆಳೆನಡು ಮತ್ತಮಧುಕರ ಕಚದವಳೊ

ತಳಿರಡಿ ಸಾರಮಧುರವಚದವಳೊ

ಕಳವಳಿಸುತ ನಿನ್ನ ಬರವ ನೋಡುವಳೊ ||2||

ಕುಸುಮಾಯಧನುಪಟಳ ಪರಿಹರಿಸೊ |

ಬಸವಳಿದವಳ ಹರವಸ ತಿಳಿಸೊ

ಮಿಸುಪೈನೆಲೆ ಪುರವರನೆ ಬಂದೊಲಿಸೊ

ರಸಿಕ ಚನ್ನವೀರೇಂದ್ರ ರಮಿಸಿ ಪಾಲಿಸೊ ||3||

ಮರೆಯದಿರೊ ತಾರೇಶವದನ ಪ್ರಾಣ |

ದೆರೆಯ ನಿನ್ನನು ನಂಬಿದೆ

ಕಿರಿನಗೆ ಮೊಗನೆ ಬಿದುಬಂಧುರದಂತ

ಅರೆನೋಟದೆರೆದೆನ್ನ ನಿರೀಕ್ಷಿಸಿ ಮನ್ನಿಸಿ ||ಪಲ್ಲ||

ನಿಲಯದಿ ನಿಮ್ಮ ಪಾದಾಬ್ಜದಿ ನಿಬ್ಬೆರಗಿಲಿ |

ಮಲಗಿದೆ ನಾನು ಚಿಂತಿಸುತ

ಅಳಿಯರಸಂಚೆ ನವಿಲು ಕೋಕಿಲಗಳು

ಗಳವೆತ್ತಿ ಘನಸ್ವರ ಮಾಡುತ

ಗಿಳಿಮರುತನು ಪೆರ್ಬಲಗೂಡಿ ಬಂದೆನ

ಗಲರ ಶರದಿವೊಯ್ಯಲಳುಕಿದೆನೆಲೆ ಪ್ರಿಯ ||1|

ಸ್ಮರನ ತಾಪವು ಪರಿಹರಿಸಿ ಎನ್ನೊಳಗೆ |

ಸ್ತರಂದು ನಿಮ್ಮ ನೆನೆದೆನು

ಪೊರಿಯೊ ಬಂದು ಜೊನ್ನವು ಚಕೋರ ಮಂದ

ಮರುತನಗೂಡಿ ಬೇಗನೆ

ಶರಧಿನಂದನ ತನ್ನ ಕಿರಣದಿವೊಯ್ದರೆ

ತರಹರಿಸುತಲೆನ್ನ ಹರಣವಳಿಸಿದನಂದೆ ||2||

ಒಲಿದವಳೊಡನೆ ಇಂಥ ಛಲವ ಸಾಧಿಸುವುದು |

ಫಲವೆ ನಿನಗಿದುಚಿತವೆ ಸಲಿಗೆ

ಬಲಿದು ನೀಯೆನ್ನೊಳುಗೂಡಿ ಕಡೆಯಲಿ

ತೊಲಗುವರೆ ನಿಮಗುಚಿತವೆ

ಇಳಿಯೊಳಗೈನೆಲೆಯ ಚೆನ್ನವೀರೇಶ

ಹಲವು ಕಾಲದಿ ನಿಮ್ಮನೊಲಿದು ಕೂಡಿದವಳ ||3||

ಬಿಡಬೇಡ ಬೆರೆದವಳ ಕಾಡಬೇಡ |

ಬೇಡ ಹೋಗು ತಡಮಾಡದೆ ಸುಖರತಿ

ಗೀಡಾಗಿ ಒಡಗೂಡಿದವಳ

ಬಿಡುಬೇಡ ಬೆರೆದವಳ ಕಾಡಬೇಡ ||ಪಲ್ಲ||

ಅಕ್ಕರದಲಿ ನಿನ್ನ ತೆಕ್ಕೆಯೊಳಗಲದೆ |

ನಕ್ಕು ನೇಹದಿ ಮುದ್ದಿಕ್ಕುವವಳ ||1||

ಸಮರತಿಯೊಳು ಮೈಬೆಮರನೊರಸಿ ವಿ |

ಭ್ರಮಿಸಿಹ ಕ್ಷತಿಗೆ ಕ್ಷಮಿಸುವವಳ | |2||

ಪುಲ್ಲನಯನೆ ಕೆಸರ್ಮಲ್ಲಿಗೆಗೋಲನ |

ಝಲ್ಲಿಗೆ ದೈನ್ಯದಿ ಭುಲ್ಲವಿಸುವವಳ ||3||

ನೀಟುಕಾರ ನಿನ್ನ ಕೂಟದೊಳಗೆ ಸವಿ |

ನೋಟವೆರೆಸಿ ಕಣ್ಣು ಮಿಟುವವಳ ||4||

ಅಭಿನವೈನಿಲಯ ವಿಭು ಚೆನ್ನವೀರನೆ |

ಅಭಯವಿತ್ತು ನಿನ್ನ ಭೀತದೊಳಿರುವವಳ | |5||

ನಾರಿಮಣಿಯೇ ನಾಥ ಮನೆಗೆ |

ಬಾರದೆ ನಿಂತ ಸಖಿಯೇ

ವಾರಿಜಾಕ್ಷೆ ವದನವೆನಗೆ

ತೋರನೇಕಾಂತ ಸಖಿಯೇ ||ಪಲ್ಲ||

ಮಾನವ ಧನದ ತನಗೆ ಸೂರೆ |

ಮಾಡಿಕೊಟ್ಟೆನೆ ಸಖಿಯೇ

ಮಾನಿನೆ ಪ್ರಿಯನಂಘ್ರಿಯಲ್ಲಿ

ಮಾನಸನಿಟ್ಟೆನೆ ಸಖಿಯೇ ||1||

ಕುಟಿಲಗುರುಳೆ ಕೇಳೆ ನಾ ವ್ಯಾ |

ಕುಲದಿ ನೊಂದೆನೆ ಸಖಿಯೇ

ಕುಟಿಲ ಮಾರನಂಬಿನಿಂದೆ

ಕುಸಿದು ಬೆಂದೆನೆ ಸಖಿಯೇ ||2||

ಎರೆಯನಿಂತು ಎರವುಗೆಯ್ದು |

ದೇನು ಬಲ್ಲೆನೆ ಸಖಿಯೇ

ಮರುಳು ಮಾಡಿದ ನಲ್ಲನ

ಮರೆದು ನಿಲ್ಲೆನೆ ಸಖಿಯೇ ||3||

ಬೇಡಿಕೊಂಬೆ ಸೆರಗನೊಡ್ಡಿ |

ಬಂದುನೋಡೆನ್ನ ಸಖಿಯೇ

ಮಾಡಿದಪರಾಧೇನೆ ತನಗೆ

ಮುನಿಸುಬೇಡೆನ್ನ ಸಖಿಯೇ ||4||

ವರದೈನೆಲೆಯವರನು ಕರುಣ |

ವಿಟ್ಟರೆ ಸಾಕೆ ಸಖಿಯೇ

ಕರೆದು ಚೆನ್ನವೀರನಭಯ

ಕೊಟ್ಟರೆ ಸಾಕೆ ಸಖಿಯೇ ||5||

ಒಲ್ಲೆನೆಂಬುವುದೇನೆ ವಾರಿಜಾನನೆ |

ನಲ್ಲೆ ನೀ ಆತನಲ್ಲೆ ಮಿನಿಸು ಭಾಳೆ || ||ಪಲ್ಲ||

ವದನ ಸಂಯೋಗದೊಳು ವಂಚಿಸಿದನೆ |

ಪ್ರೇಮಲೋಕದನಾಲಿಂಗನದೊಳು ಕಪಟಿಯಾದೆನೆ

ತನ್ನ ಕದನಗಾಯದೊಳತಿ ರಾಗಿಯಾದೆನೆ

ಮದನಾಗಮದೊಳಾನೆ ಮನಸು ಮುಂದೆ| ||1||

ಕನ್ಯ ವಯಸಿನೊಳು ಕಾಡಿದವಳೆ |

ನಾನು ಮನ್ನಿಸಿದೆ ಎರವ ಮಾಡಿದವಳೆ

ತನ್ನನನ್ಯರೊಡನೆ ಕೊರಚಾಡಿದವಳೆ

ಇನ್ನೇನೆಂದುಸುರಲಿ ಇವನಗಲಿದ ಮೇಲೆ ||2||

ಸಾರೈನಿಲಯದೊಳು ಸ್ಮರಿಸಲಿಲ್ಲೆ |

ಚೆನ್ನವೀರೇಶನೊಳು ಮನವಿರಿಸಲಿಲ್ಲೆ

ಸುವಿಚಾರಬಾವದೊಳಾಚರಿಸಲಿಲ್ಲೆ

ಆರಯ್ದರೇನಿಲ್ಲೆ ಆತನ ಗುಣವ ಬಲ್ಲೆ ||3||

ತಾಳಲಾರೆನೆ ಪಾಲನ ಕಾಣದೆ |

ನೀಲವೇಣಿಯೆ ನಿಲ್ಲಲಾರೆ ತಾಳಲಾರೆಯೆಮ್ಮ

ಒಯ್ಯಾರಿ ಭಾವೆಯ ಎಮ್ಮ ಕಸ್ತೂರಿಗಂಧೆ ||ಪಲ್ಲ||

ಚಿಕ್ಕತನದಿ ನಾ ಸಿಕ್ಕದೆಳೆಯಳ |

ತೆಕ್ಕೆಯಗಲಿ ಎನಗಿಕ್ಕಿದ ಬರಹವು ||1||

ಕಾತರ ಹೆಚ್ಚಿತು ಪ್ರೀತಿಗೊಂಡು ಮನ |

ಸೋತು ನೊಂದೆ ಮದನಾತುರದಿಂದೆ ||2||

ಎಳೆ ಬೆಳೆದಿಂಗಳ ಗಿಳಿ ಅಳಿಕೋಗಿಲ |

ಗಳದ ಸ್ವರಕೆ ನಾನುಳಿಯಲಾರೆನೆ ||3||

ಮೊಗಲಿ ಮೊಗ್ಗೆ ಮೊಲೆ ಬಿಗಿದವೆ ಬಿರ್ರನೆ |

ತಿಗರಿಟ್ಟಗಂಧವು ನೆಗೆದು ಹೋಯಿತೆ ||4||

ಮಂದರಿಯದೆ ನಾನೊಂದುಗೂಡಿದೆನೆ |

ಬಂಧನ ಬಿಡಿಸೆನೆಂದು ಅರಿಯನೆ ||5||

ಕೆಟ್ಟ ಮನ್ಮಥನ ಅಟ್ಟುಳಿಗಾರೆನೆ |

ಕಟ್ಟುರಿಪಿನೊಳಿಟ್ಟು ಹೋದನೆ ||6||

ಚಿಂತೆ ಬಿಡದು ಮನ ಭ್ರಾಂತಿಯ ಹೋಗದೆ |

ಕಂತುವನಗಲಿ ನಾನೆಂದು ಜೀವಿಸಲೆ ||7||

ನಾಥನಗಲಿದ ಸುಡು ಏತರ ಜನ್ಮವ |

ಕಾತ ಫಲವು ಸಲಿಸುತವಾತನ ಬಿಟ್ಟು ||8||

ಧರೆಗೆ ಐನೆಲೆವಾಸ ಗುರುಚೆನ್ನವೀರೇಶ |

ಕರ ಸೂರೊಗೊಂಡವನ ಮರೆಯಲಾರೆನೆ | |9||

ನಾರಿಮಣಿಯೆ ಕರೆತಾರೆ ತಾಳಲಾರೆ ಮುಖ |

ತೋರಿ ತೋರದೆ ಹೋದ ಮುನಿದು ಒಯ್ಯಾರೆ ಪಲ್ಲ||

ಚತುರನಗಲಿದ ಕಾತರ ಹೆಚ್ಚಿತು |

ಏತರ ಮುನ್ನಿಸೆನ್ನ ಮೇಲೆ ಕೇಳೆ ಬಾಲೆ

ಮನಸೋರು ಕೂಡಿದೆ ಚಿಕ್ಕವಳೆ ಅನುಗಾಲೆ

ಹೋಗೆ ದೂತೆ ಕೊಡುವೆ ಕಂಠಮಾಲೆ ಉಟ್ಟಶಾಲೆ

ಮಾರನಾತುರದೊಳಗಾದೆ ಏನು ಹೇಳಲೇ ||1||

ಮಲ್ಲಿಗೆ ಮೊಗದ ಕೆಂಬೆರಲು ಕೆಂದುಟಿ ಜಾಣ |

ನೆಲ್ಲಿ ನಿಂತನೋ ಭಾಷೆ ಕೊಟ್ಟ ಮಾತು ಬಿಟ್ಟ

ಸೀತುಗೊಟ್ಟ ಕರಹಲ್ಲಿನ ಗಾಯಗಳಿಟ್ಟ ಬಹುದಿಟ್ಟ

ಎನ್ನಗಲ್ಲ ಪಿಡಿದು ಮುದ್ದುಕೊಟ್ಟ ಮನ ಮುಟ್ಟ

ಕಬ್ಬುಬಿಲ್ಲಿನಾತನೊಳೆನ್ನ ಸೆರೆ ಮಾಡಿ ಬಿಟ್ಟ ||2||

ಅರುವಿನಿಂದ ಮುಖಿಯಳೆ ಕರಚೆಲ್ವನೊಳು ನಾನು |

ಎರವು ಒಂದಿನ ಮಾಡಲಿಲ್ಲೆ ಕಾಡಲಿಲ್ಲೆ

ಎನ್ನ ಜರಿದು ಬಿಡುವುದು ಒಳ್ಳೆದಲ್ಲೆ ರತಿಯಲ್ಲೆ

ಹಗಲಿರುಳು ತನ್ನ ಮರೆಯಲಿಲ್ಲೆ ಮನದಲ್ಲೆ

ಸತ್ಯಗುರು ಚೆನ್ನವೀರನು ಐನೆಲೆವಾಸನಲ್ಲೆ ||3||

ಭಾಮಿನಿ ಬಾರೆ ಸುಜನಿ ಬಾರೆ |

ಸಖಿ ಸುಜನಿ ಬಾ ಕಾಂತೆ ಕಾಂತೆ

ಇವನ ತೋರೆ ಸಾರೆ ||ಪಲ್ಲ||

ಭಾಸುರಕಂಜಾಸ್ಯ ಬಾಲೆ ವಿಲಾಸೆ |

ಭೂಸುರಲಿಂಗಾರ್ಯೆ ಸಾರೆ ||1||

ಕಲಭೋಪಮಯಾನೆ ಕಲಕಲಧ್ವಾನೆ |

ಅಲಿಕುಲರವಕಾರೆ ಸಾರೆ ||2||

ಚೆನ್ನವೀರಾಚಾರ್ಯಚಣದೈನಿಲಯಾ |

ಮನ್ನಿಸಿ ಕರತಾರೆ ಸಾರೆ ||3||

ಕಾಮಿನಿ ಪ್ರೀತನ ಕರಿಯೆ ಕರಿಯೆ |

ರಜಮುಖಿ ಕರಿಯೆ ಕರಿಯೆ ವಿಸಜನಿಭನಯನೆ ಕಾಮಿನಿ ||ಪಲ್ಲ||

ನೂತನ ಪ್ರಿಯನೆ ಕಾತರಿಸುವನೆ |

ಏನೆ ಸಖಿ ಏತರ ಮುನಿಸು ನೀನರಿಯೆ ||1||

ಸರಸದಿ ಕೂಡೆ ವಿರಸವು ಬೇಡೆ |

ಹರಿಗೋದ್ರಕಿ ಹರುಷ ಕಲಹದೊಳು ನೆರಿಯೆ ||2||

ಸನ್ನುತೈನೆಲೆಯ ಚೆನ್ನವೀರಾರ್ಯ |

ಏನೆ ಸಖಿ ಮನ್ನಿಸಿ ಕರೆದು ನೀ ಬೆರಿಯೆ || 3||

ಮದನ ಸುಪ್ರೀತನ ಸಖಿ ತೋರೆ ನೀ |

ಮದನ ಸುಪ್ರೀತನ ತೋರೆ ||ಪಲ್ಲ||

ಜಾತಕ ಬಲ್ಲದೆ ಭೂತಲವಾರಿ |

ಯಾತಕೆ ಸುಖಕರ ಸುಂದರನಿಲ್ಲದೆ ||1||

ಜಲಜವನಲ್ಲದೆ ನಲಿವುದೆ ಹಂಸ |

ಅಲಿಕಚೆ ಮಮ್ಮಲ ಮರುಗುವ ಮನ ನಿಲ್ಲದೆ ||2||

ಶಶಿಕಾಂತ ಋಣಕೆ ಒಸರುವುದೇನೆ |

ವಿಶದೈನಿಲಯ ಸುಚೆನ್ನವೀರೇಶನ ||3||

ಮದನರೂಪನಗಲಿ ಎನ್ನ |

ಮನೆಗೆ ಬಾರನೆ ಸಖಿಯೇ

ಮುದದಿ ಮೋಹಿಸಿ ಬಂದು ತನ್ನ

ಮುಖವದೋರನೆ ಸಖಿಯೇ ||ಪಲ್ಲ||

ಮಾನವ ಧನವ ತನಗೆ ಸೂರೆ |

ಮಾಡಿಕೊಟ್ಟೆನೆ ಸಖಿಯೇ

ಮಾನಿನಿಯೇ ನಮ್ಮವರನೆಲ್ಲ

ಮರೆದು ಬಿಟ್ಟೆನೆ ಸಖಿಯೇ ||1||

ತೆಕ್ಕಗೊಪ್ಪುವಳೆಂದು ಮುಸುಕ |

ತೆರೆದೆನ್ನಪ್ಪುವನೆ ಸಖಿಯೇ

ಅಕ್ಕರದಿ ಪಿಡಿದಧರಾಮೃತವ

ನಡಸಿ ಚೀಪುವನೆ ಸಖಿಯೇ ||2||

ಭಾಮಿನಿಯೆ ಸಂಭೋಗಾಲಯಕೆ |

ಬಾಬಾ ಎಂಬುವನೆ ಸಖಿಯೇ

ಕೋಮಲಾಂಗಿ ಸವಿ ಮುದ್ದಿದು ನೀ

ಕೋ ಕೋ ಎಂಬುವನೆ ಸಖಿಯೇ ||3||

ಮಾರನಾಟದಿ ಮಸಗಿ ವಂಚನೆ |

ಮಾಡಿದಳವಲ್ಲೆ ಸಖಿಯೇ

ಆರಡಿಗಿಕ್ಕಿ ಎನ್ನಿಗರೊಳೇ

ನಾಡಿದವಳಲ್ಲೆ ಸಖಿಯೇ ||4||

ಓತೈನಿಲಯ ಚೆನ್ನವೀರೇಂದ್ರ |

ನೊಲಿದರೆ ಸಾಕೆ ಸಖಿಯೇ

ನಾಥನಾಂಘ್ರಿಯೊಳೆನ್ನ ಮನವು

ನಲಿದರೆ ಸಾಕೆ ಸಖಿಯೇ ||5||

ಏ ಬಾರೆ ಪ್ರಿಯನ ತೋರೆ |

ಏಣಾಕ್ಷಿ ಬೇಗನೆ ಸಾರೆ

ನಾ ಬೇಡಿಕೊಂಬುವೆ ನೀರೆ ||ಪಲ್ಲ||

ಮಧುರವಿಲ್ಲನ ಕೇಳಿಯೊಳತಿ ಚದುರ |

ಬಾರನೆ ಮಂಗಳದಿರ

ಪೋಪೋಗೆ ಪಲ್ಲವಾಧರೆ ||1||

ಒನಪ ಒಯ್ಯಾರ ಸರಸ ಸಲ್ಲಾಪ |

ಕಾಮಾಗಮಾಬ್ಧಿ ಕಲಾಪ

ತೊಲಗಿದನೆ ಪೆಚ್ಚಿತೆ ತಾಪ ||2||

ಈಶವಿನುತೈನೆಲೆ ಚನ್ನವೀರೇಶ |

ಎಂದೆಂದಿಗಗಲ ಮದೀಶ

ಇಂದೇಕೆ ತೊರೆದ ನಿವೇಶ ||3||

ಜಾಣೆ ಕರತಾರೆ ಆತನ ಪ್ರಾಣನಾಥನ |

ಕಾಣದೆ ನಾ ಜೀವಿಪುದೆಂತೆ

ಮಾಣದೆ ನೀ ತಂದು ಕೂಡಿಸೆ ಮುಂತೆ ||ಪಲ್ಲ||

ಚಿಕ್ಕ ಪ್ರಾಯದ ಕಾಂತನೆ ಚದುರೆ ನೀ ಕೇಳೆ |

ಸಕ್ಕರಿ ಸವಿ ಮಾತಿನ ಸುಂದರನೆ ಸರಸದಿ ಅವನೊಳು

ಸಿಕ್ಕಿದವಳಿಗೆ ಸರಿಯೇನೇ

ಕಕ್ಕಸ ಮೊಲೆಗುಗುರೊತ್ತುವೆನೆಂದ

ಚಕ್ಕನೆ ಚೆಂದುಟಿ ಸವಿದೋರೆಂದ

ಅಕ್ಕರ ಮಾತೇನದು ಹೇಳೆಂದ

ತಕ್ಕವಳೆನಗಹುದಹುದೆಂದ ||1||

ನಗುನಗುತಲಿ ಸೆರಗ ಪಿಡಿವನೆ ಆ ಕೋವಿದಯೆನ್ನ |

ಮಗಿದುರಬು ತಿದ್ದಿನೇವರಿಪನೆ ಒಯ್ಯಾರದಿ ನೋಡಿ

ಸುಗುಣೆ ನೀ ಸೈಸೈಯೆಂಬುವನೆ

ಬಿಗಿದಪ್ಪಿಕೊಂಬುವೆ ಬಾ ಬಾಯೆಂದು

ಸೊಗಸಿನ ಮುದ್ದಿದು ಕೋ ಕೋಯೆಂದು

ಮೊಗದೊಳು ಮೊಗಮಿಡು ತಾ ತಾಯೆಂದು

ಅಗಲಿರಲಾರೆನು ಪೋ ಪೋಗೆಂದು ||2||

ಕಲ್ಲೆದೆಯವನಲ್ಲೆಯನ್ನ ಪ್ರಿಯ ಮಲ್ಲಿಗೆ ಪೂಶರನ |

ಝಲ್ಲಿಗೆ ಗುರಿಮಾಡಿದನೆ ಕಾಯ ಶ್ರೀ ಚೆನ್ನವೀರೇಂದ್ರ

ಸಲ್ಲಲಿತೈನೆಲೆಯ ಪುರನಿಲಯ

ಒಲ್ಲೆನೆಂದರೆ ಉಪರತಿಗೂಡೆಂದ

ನಲ್ಲೆ ಪ್ರೇಮದ ಕಲಹವ ಮಾಡೆಂದ

ನಿಲ್ಲು ನಿನ್ನೊಳು ವ್ಯಾಕುಲವ ಬೇಡೆಂದ

ಎಲ್ಲಿದ್ದರೇನು ನಾ ನಿನಗೆ ಜೋಡೆಂದ ||3||

ಶರನಬಾಧೆಗಿನ್ನಾರೆ ಒಯ್ಯಾರೆ ||ಪಲ್ಲ||

ಶಾತೋದರಿ ಭರದೆ ಶಯನದೊ |

ಳೋತು ನೆರೆಯ ಬರಿದೆ ಜರಿದೆ

ನಾಥನೊಳೇನಿಲ್ಲೆ ನನ್ನೊಳೆ

ಕೈತವಗಳು ಭಾಳೆ ಕೇಳೆ

ಪ್ರೀತಾಕರನ ಘನಾತುರಕಾಗದ

ನೂತನಾಂಗವಿನ್ಯಾತಕೆ ಕಾತಂತಾಯಿತೆ

ನೀ ತಡೆಯದೆ ಬೆರಸೆ ತರುಣೀಮಣಿ ||1||

ಕಮಲಛತ್ರಗೊಳುತೆ ಕಾಮನು |

ಕಮಲಶರವ ತೊಡುತೆ ಬಡುತೆ

ಸುಮನೋಮಾರ್ಗದೊಳೆ ಸುಳಿದರೆ

ಸುಮನದವಳೆ ಪೇಳೆ

ಭ್ರಮರ ಕೀರ ಹಯ ಕುಮುದವನಪ್ರಿಯ

ಸಮುದಯ ಸಹಿತಾಕ್ರಾಮಿಸಿ ಮಸಗುತ

ರಮಣನಗಲಿದ ಪ್ರಮದಾವಳಿಗಾರ್ದಯರು

ವನೀಗಲೆ ಗಮಿಸೆ ಬೇಗನೆ ||2||

ಕಾಂತ ಮುನಿದ ಮೇಲೆ ಕಾಮಿಸಿ |

ಕಾಂತಿ ಅಡಗಿತಲ್ಲೆ ನಲ್ಲೆ

ಎಂತಿದಕುಸುರಬಲೆ ಅರಿಯೆನು

ನಿಂತನೇಕೊ ಅಲ್ಲೇ ಬಲ್ಲೇ

ಕಾಂತೈನೆಲೆಯ ನಿಶಾಂತ ಸದಾ ನಿ

ಶ್ಚಿಂತ ಚೆನ್ನವೀರೇಶ್ವರನಲಿ

ಸ್ವಾಂತನಂತರಿಸಿ ನಿಂತನಲ್ಲೆ ಬಳಿ

ಕಂತಕದೊಳಗೆನ್ನ ತವಕ ತಿಳಿಸೆ | |3||

ಏಕೆ ತಡದ ಕೇಳೆ ನೀ ಕರಿಸಿದನ್ಹೇಳೆ |

ಬೇಕಾಗದೆ ತನಗೆ ಎನ್ನ ಮನೆಗೆ ||ಪಲ್ಲ||

ಏಕೆ ಬಂದನು ತಿಳಿಯೆ ಸಖಿಯೇ ||ಅನು||

ಹಿರಿಯನೆಂಬೆನೆ ಬಾಣಾಸುರನ ಬಾಗಿಲ ಕಾಯ್ದು |

ದೊರೆಯನೆಂಬೆನೆ ತಲೆಡೋಗಿಯೊಳುಂಬುವನು || | |1||

ಹೇಸದೆ ಚನ್ನನೊಳು ಲೇಸಿಲಿ ಕೂಡುಂಡ |

ಕೂಸಿನ ಕೊಲ್ಲಿಸಿ ನಲಿನಲಿದುಂಡನು ||2||

ಸೂಳಿ ನಿಂಬಿಯ ಮನೆಗೆ ಹೇಳದೆ ಹೋದನೆ |

ಏಳುದಿನೆನ್ನ ಮನೆಬಾಗಿಲ ತೆರೆಸಿದ ||3||

ಕಮಲದೇವಿಗೊಲಿದು ಅಮಳಲಿಂಗವ ಕದ್ದು |

ಭ್ರಮಿಸಿ ಅವಳಯೆನ್ನ ಬಳಿಲಿ ತಂದಿರಿಸಿದ || 4||

ಕುಟ್ಟುವ ಒನಕೆಯ ಪೆಟ್ಟಿಗೆ ಹೆದರಿದನೆ |

ಹುಟ್ಟಿಲಿರಿಸಿಕೊಂಡ ಹೇಡಿಯೆನ್ನಲ್ಲಿಗೆ ||5||

ಪಾತರದವಳಿಗೆ ದೂತನಾದನೆ ಭೂಮಿ |

ನಾಥ ನಂಬೆಣ್ಣನಿಗೆ ಹಡಪಿಗನಾಗನು ||6||

ಕ್ರೂರದೈತ್ಯನಿಗೆ ಏರುಯೆತ್ತಿನ ಎನ್ನ |

ಸೇರಿ ಕೊಟ್ಟನೆ ಸಲುಹಲಾರದೆ ||7||

ತಾಂಬರೊಡವೆ ಕಾವಿಯೆಂಬರೆನಗೆ ದಾಸಿ |

ನಂಬಿಗಿಲಿದು ಹೊನ್ನ ಮಳೆಯನು ಸುರಿದನು ||8||

ಕ್ಷಿತಿಯೊಳೈನೆಲೆವಾಸಪತಿ ಚೆನ್ನವೀರೇಶ |

ಗತಿಯು ತಾನಲ್ಲದೆ ಹಿತರು ಇನ್ನ್ಯಾರೆ ||9||

ಏ ಹಿಮಕರಾನನೆ ಬಾರನೇ |

ಸುಹಿತಮನೋರಮ ಹಾ ಸಖೀ | |ಪಲ್ಲ||

ಸಾರಸಾರಿ ಶೀತಜಾತ ವೇದೇಷ್ವವಿಹಾರಿ |

ಕೀರ ಪರಭೃತ ಮದಮಧಕರ ಪರಿ

ವಾರಸಹಿತ ನಲಿನಲಿದು ಮಾರರಾಜನಿದೆ

ಬಂದ ಬಂದನೆ ಅಹಿಭೂಷಣಕಬರೀ ಹಾ ಸಖಿ

ಸಾರೆ ಸಾರೆ ತಂದು ತೋರೆ ಪ್ರಾಣೇಶನ ನೀರೆ ||1||

ಚೂತಜಾತಿ ಪಾರಿಜಾತ ನೀಲಾಬ್ಜಶೋಕ |

ಶಾತಕಲಂಬ ನೀರಘಾತಕ್ಕೆ ನಿಲ್ಲಲಾರೆ

ಶಾತೋದರಿ ತನುವೇಕೆ ಸೋತೆನಲ್ಲೆ ನಾ

ನೂತನಾಂಗಗೆ ಚಕಿತ ಮೃಗನಯನೆ ಹಾ ಸಖಿ

ನಾಥನಿಂಬೆ ಪಾರಿಜಾತದಿ ಬಯಲಿಗೆ ಬಂದೆ ||2||

ಸುಂದರಾಂಗೆ ಪ್ರಿಯ ಬಂದಪುದೆಂತೊ ಬಾಲೆ |

ಮಂದಸ್ಮಿತಮುಖ ಮಹಿತೈನೆಲೆಪುರ

ಮಂದಿರ ಚೆನ್ನವೀರೇಂದ್ರ ಬಂದು ನಿಂದು ಬಾ

ಳೆಂದು ಪೋದನೆ ಕಠಿಣಪಯೋಧರಿಯೆ ಹಾ ಸಖಿ

ಮಂದಗಮನೆ ಕಾಂತನಿಗೆ ಸೆರೆಗೊಟ್ಟೆನೆ ಧೇನೆ ||3||

ಒಲ್ಲನೇ ವನಿತೆ ನಿನ್ನಲ್ಲಿಗೆ ಒಲ್ಲನೇ |

ವನಜಾಸ್ಸೆ ನಿನ್ನಲ್ಲಿಗೆ ಒಲ್ಲನೇ

ಒಲ್ಲನೇ ಸಖಿ ನಿನ್ನ ವಲ್ಲಭನಿಲ್ಲಿ

ಖುಲ್ಲತನದಿ ರತಿಯಲ್ಲಿ ವಂಚಿಸಿದೆಂದು ಒಲ್ಲನೇ ||ಪಲ್ಲ||

ಕುಟಿಲ ಕುಂತಲಗಳ ತೀಡಿ ಬಹು |

ಕಠಿಣಕುಚಕೆ ಕೈಯ ನೀಡಿ ಒತ್ತಿ

ಪಟು ತೆಕ್ಕೆಯೊಳಗಿಕ್ಕೆ ತುಟಿಗೆ ತಾಂಬೂಲದ

ಗುಟುಕ ನೀಡಲು ಜರಿದು ಸೆಟಿದು ನಿಂತಳೆಂದು ||1||

ಚಪಲಾಕ್ಷಿ ಬಾ ಎಂದು ಕರೆದು ಪ್ರಿಯೆನು |

ವಿಪುಲ ಶಯ್ಯದೊಳಿಟ್ಟು ನೆರೆದು ನೋಡಿ

ಅಪಘನಗಳ ಸೋಂಕಿ ನಿಪುಣತ್ವ ತೋರೆನಲು

ಉಪರತಿಯೊಳು ಮುನಿದು ಕಪಟ ಮಾಡಿದಳೆಂದು || 2||

ಮಕರಕೇತನ ತಾಪದಿಂದೆ ನೊಂದು |

ನಿಕಟದಿ ನಿಂದೊಲವಿಂದೆ ವಿಟನು

ಸುಕಲಾಪ ಸಮರತಿ ಸುಖಭೋಗಕೆಳೆಯಲು

ಮುಖ ಸಂಯೋಗದಿ ತನ್ನ ಮುಖ ತಿರುವಿದಳೆಂದು ||3||

ಬಟ್ಟಜವ್ವನವೆಂದು ಬಗೆದು ಮುಸು |

ಕಿಟ್ಟ ಮುಂಜೆರಗವ ತೆಗೆದು ನಗುತೆ

ನೆಟ್ಟನೆ ಬಂಧಗಳಿಟ್ಟು ನೆರೆಯಲಿಕೆ

ಸಿಟ್ಟಿನಿಂದ ಬಯ್ದು ಬಿಟ್ಟು ಹೋದಳೆಂದು ||4||

ವರದೈನೆಲೆಯಮಂದಿರನು ನಿನ್ನ |

ವರ ಚೆನ್ನವೀರೇಶ್ವರನು ನಿ

ರ್ಭರ ಸತ್ಕಾರಗಳರಿದು ಮಾಡದ ನಿ

ಷ್ಠರ ಬುದ್ದಿಯಲಿ ತನ್ನ ಮರೆದಳೆಂದು ||5||

ಬಾರೆಲೆ ಸೀಮಂತಮಣಿಮಾನ್ಯೆ |

ಭಾವಕಿಗುಣರನ್ನೆ

ಆರಡಿ ಕುಂತಳೆ ಶುಕನುಡಿ ಕಂಠೀರವ ಮಧ್ಯ

ಜಂಭೀರವರ್ಣ ಮೈ

ವಾರಿಜಕುಟ್ಮಲ ಕುಚ ಗುಣ

ಗಂಭೀರೆ ಸಿಂಧೂರಚಾರೆ ಒಯ್ಯಾರೆ ||ಪಲ್ಲ||

ಅಂಗಜನ ಲಲಾಟದಿ ಪುಟ್ಟಿದ ತಾಪ |

ಆ ತೀವಿದ ಕಲಾಪ

ತಿಂಗಳ ಚಕೋರಕ ಕೋರಿಕಿವೋಪ

ಕಂಗೊಳಿಸುವ ಕನಕ ಪುತ್ಥಳಿ

ಬೊಂಬೆ ಕಮಲಪೂದುಂಬೆ

ಹೆಂಗಳ ಕುರಂಗಾಕ್ಷಿಯೆ ಅನಂಗನ ತಾಪವು

ಹಿಂಗಿಸು ಜಾಣೆ ||1||

ಏರಿತು ಮದನಾತುರವೆಂಬುದಿಂದೆ |

ಎರಕಾಯಿತುಯಿಂದೆ

ಮೀರಿತು ಹೂಕೃತ ವಿರಹದ ಜ್ವರದಿಂದೆ

ಮಿತಿಯಿಲ್ಲದೆ ನೊಂದೆ

ಭಾರತಹುಣ್ಣಿಮೆಯ ಚಂದ್ರಕಾಶಿ

ಕಂಡು ಸೈರಿಸಲಾರೆ

ನಾರಿ ನಿನ್ನ ಬೆಡಗು ಓರನೋಟ ಮೊನೆ

ಊರಿವದಕೆ ಮನಸೂರೆ ಹೋದೆನೆ ||2||

ಧಗಧಗಿಸುವ ತಾಪದಿಂದೆ ಬಸವಳಿದೆ |

ದಯಪುಟ್ಟದೆ ಕೆಳದೆ

ನಗಿಮೊಗಸಿರಿ ಕೋಮಲವಳಿದೆ

ನಸುಗುಂದಿದವಳಾದೆ

ಜಗಕೈನೆಲೆನಿಲಯ ಕರಪುರಧೀಶ

ಗುರು ಚೆನ್ನವೀರೇಶ

ಮಿಗೆ ಸುಲಲಿತಯುಗ ಚರಣಕೆ

ಕರ ಮುಗಿಯೆ ಬಗಿಯ ಮಾಡಿ ನಂಬಿಗಿಯ ||3||

ಮದನರೂಪಿನ ಮುದ್ದು |

ಚದುರನ್ಯಾತಕೆ ಬಾರ

ಹೃದಯ ಚಂಚಲದಿ ನಿಲ್ಲದು ಹ್ಯಾಂಗ ಸಖಿಯೇ |ಪಲ್ಲ||

ಭ್ರಮೆಯಗೊಂಡೆನೆ ಎನ್ನ |

ರಮಣನಗಲಿ ನಾನು

ಪ್ರಮದೆ ಬೇಗನೆ ಕರೆದು ತಾರೆ ಸಖಿಯೇ

ಭ್ರಮರ ಕುಂತಳೆ ಹಸ್ತಿ

ಗಮನೆ ಕಟೀರಕಟಿ

ಅಮಿತ ಗುಣನು ಬರುವನೇಳೆ ನಾಯಕಿಯೇ ||1||

ನಾಗರಿಕನಜಾತ |

ನೀಗೆ ನಾ ಮನ ಸೋತೆ

ಹೇಗೆ ಮಾಡಲೆ ನಾನು ಈಗ ಸಖಿಯೇ

ಹೋಗಿಯಾತಗ ಪೇಳಿ

ಭೋಗಮಂಟಪಕ್ಕನು

ರಾಗದಿ ತಂದು ಕೂಡಿಸುವೆ ನಾಯಕಿಯೇ ||2||

ಅಗರು ಕಸ್ತೂರಿ ಗಂಧ |

ತೆಗೆದು ಬಟ್ಟಲೊಳಿಟ್ಟು

ಬಗೆದೇನೆ ತಾ ಬಂದನೆಂದು ಸಖಿಯೇ

ನಗೆ ಮಾತಿನಲಿಂದವನ

ಬಿಗುವು ತಿಳಿಸಿ ನಾನು

ಸೊಗಸುಗಾರನ ಕರೆದು ತರುವೆ ನಾಯಕಿಯೇ ||3||

ಎಳೆಯ ಜವ್ವನದವಳು |

ಗಳಿಗೆ ಸೈರಿಸಲಾರೆ

ಸುಳುಹುದೋರದೆ ಹೋದ ಸುಗುಣ ಏ ಸಖಿಯೇ

ಬೆಳದಿಂಗಳನೆ ಕಂಡು

ಗೆಳತಿ ಚಕೋರನಂ

ತೆಳಸಿ ಬರುವನೇ ತಾನಾಗಿ ನಾಯಕಿಯೇ ||4||

ಕೋಗಿಲೆಗಳೇ ಭೃಂಗ

ರಾಗಗೆಯ್ಯಲು ಬಿದ್ದೆನೆ ನಾ ಭೂಮಿಗೆ ಏ ಸಖಿಯೇ |

ಸೋಗೆ ಮುಡಿಯಳೆ ನಿನ್ನ

ಭೋಗಕ್ಕೆ ವಿಟ ತಾನೆ

ಸಾಗಿ ಬರುವನೇ ಚಿಂತೆ ಬೇಡೆ ನಾಯಕಿಯೇ ||5||

ಕಳಸ ಕುಚಗಳಿಗೆ ನಖ |

ಗಳನೊತ್ತಿ ಮಧುರಕೆಂ

ದೆಳೆದುಟಿ ಸವಿವಾತ ಬರನೇ ಏ ಸಖಿಯೇ

ಕಳಹಂಸಗಮನೆ ನಿ

ನ್ನೊಳಾದಾತಗ ಪೇಳಿ

ತಳುವದೆ ನಾ ಕರೆತರುವೆ ನಾಯಕಿಯೇ ||6||

ಕುಟಿಲಕುಂತಯೆನ್ನ |

ವಿಟನೊಳೊಂದಿನ ನಾನು

ಸೆಟೆದವಳಲ್ಲೆ ನಿನ್ನಾಣೆಯೇ ಸಖಿಯೇ

ಕಟಿ ಸಣ್ಣ ಒಲಪಿನ

ಪಟುತರವೆಣ್ಣೆ ನಾ

ಸಟಿಯಲ್ಲೆ ತೋರ್ಪೆ ಸೈರಿಸೆ ನಾಯಕಿಯೇ ||7||

ಅಂಗನಿಯೆ ಶಶಿಬಿಂಬ |

ತಂಗಾಳಿ ತಂಪಿಗೆ

ತುಂಗಕುಚಗಳು ಬಿಗಿದಿವೆ ಏ ಸಖಿಯೇ

ಕಂಗಳ ಕರಚೆಲ್ವ

ನಂಗೀಕರಿಸಿ ನಾನು

ಸಂಗೊಲಿಸಿ ಕೂಡಿಸುವನೇ ನಾಯಕಿಯೇ ||8||

ಇನಿಯಳೆ ಕೇಳೆನ್ನ |

ಕೊನೆಗಣ್ಣು ಹಾರೋ ಸೂ

ಚನೆಯೇನು ಶುಭವೆ ಹೇಳಮ್ಮ ಏ ಸಖಿಯೇ

ಅನುಮಾನ ಬಿಡು ನಿನ್ನ

ಇನಿಯನಿಂದಿನ ರಾತ್ರಿ

ಗನುಕೂಲವಾಗೊ ಸೂಚನೆಯೆ ನಾಯಕಿಯೇ ||9||

ಎಲ್ಲರಂತಹ ಪುರುಷ |

ನಲ್ಲೆ ಆತನ ಮನಸು

ಎಲ್ಲಿ ಕೆಟ್ಟಿತೊ ತಿಳಿಯದೆ ಏ ಸಖಿಯೇ

ನಿಲ್ಲು ನಿಲ್ಲು ನಾಥ

ನಲ್ಲಿಗೇ ನಾಂ ಪೋಗಿ

ಭುಲೈಸಿಲ್ಲಗೆ ಕರೆತರುವೆ ನಾಯಕಿಯೇ ||10||

ಪಲ್ಲವಾಧರೆ ಕಬ್ಬು |

ಬಿಲ್ಲನೆಚ್ಚುವ ಶರಕೆ

ನಿಲ್ಲಲಾರೆನೆ ಬೇಗೆ ಪೋಗೆ ಏ ಸಖಿಯೇ

ಲಲ್ಲೆವಾತಿಲಿ ನಿನ್ನ

ನಲ್ಲನ ಭುಲೈಸಿ

ಇಲ್ಲಿಗೆ ನಾ ಕರೆದು ತರುವೆ ನಾಯಕಿಯೇ ||11||

ದೂತೆ ನಾನಾಗಿ ಮನ |

ಸೋತೆನಲ್ಲನೆ ಈಗ

ಲಾತನಿಂದಿದನಾಗಲಿಲ್ಲೆ ಏ ಸಖಿಯೇ

ಜಾತೆ ನಾಯಕಿ ನಿನ್ನೊ

ಳೋತು ಕೂಡಿಸುವೇನೆ

ಭೀತಿಗೊಳ್ಳಲಿ ಬೇಡೆ ಸುಗುಣೆ ನಾಯಕಿಯೇ ||12||

ಮಿಕ್ಕ ಮಾನಿನಿಯರೆಗೆ |

ಸಿಕ್ಕುವಾತನು ಅಲ್ಲೆ

ದಕ್ಕಿದವಳ ಪುಣ್ಯಕೆಣೆಯೇ ಏ ಸಖಿಯೇ

ಚಿಕ್ಕ ಪ್ರಾಯಳೆ ನಿನ್ನ

ತಕ್ಕ ಪ್ರಯನ ತಂದು

ತೆಕ್ಕೆಯೊಳಗೆ ಕೂಡಿಸುವೆನೆ ನಾಯಕಿಯೇ ||13||

ಮದನಪನ್ನೀಭ ಕುಂದ |

ರದನ ಕೋವಿದನಿಗೆ

ಬದಲು ಭವವು ಮಾಡಲಿಲ್ಲೆಯೇ ಸಖಿಯೇ

ಒದಗಿ ಕಾಂತನ ನಿನ್ನ

ಸದನಕ್ಕೆ ಕರೆತಂದು

ಮುದದಿ ಕೂಡಿಸುವೆ ಲಲಿತಾಂಗಿ ನಾಯಕಿಯೇ ||14||

ಪೊಡವಿಗೈನೆಲೆವಾಸ |

ಒಡೆಯ ಚೆನ್ನವೀರೇಶ

ಒಡಗೂಡಿ ಒಲಿಯಧಾಂಗ್ಹಾನೆ ಏ ಸಖಿಯೇ

ಕುಡುತೆಗಂಗಳೇ ಭಕ್ತ

ರೊಡಲೊಳು ತುಂಬಿಹನೆ

ಕಡಿಲಿನಿಂತಿಹನೆ ಜಡಮನಕೆ ನಾಯಕಿಯೇ | |15||

ಬಾರೊ ಪ್ರಿಯ ನಿನ್ನ ನೋಡದಿರಲಾರೆನೊ |

ನೋಡದಿರಲಾರೆನೊ ನಾ ಕಾಣದಿರಲಾರೆನೊ ||ಪಲ್ಲ||

ಕಾಂತನನಗಲಿ ನಾನೆಂತು ಜೀವಿಸಲೆ |

ನಾಥನಗಲಿದ ಮೇಲೆ ಸುಡು ಇದ್ಯಾತರ ಜಲ್ಮವ ||1||

ಮರುಳ ಮನ್ಮಥನ ಮಹಾ ಶರಗಳಿಗೆ ಈ ಕಾಯ |

ಗುರಿ ಮಾಡಿ ನಾ ನಿಲ್ಲಲಾರೆನೊ ||2||

ವನಿಕೆಯರ ಭಯವೆನಗಾವ ಘನ ಜಾತಕದಂತೆ |

ನಿನ್ನ ಬರವ ಹಾರೈಸುತಿರುವೆನೊ ||3||

ಧರೆಯೊಳು ಐನೆಲೆವಾಸ ಗುರುಚೆನ್ನವೀರೇಶ |

ಪ್ರಿಯ ಮರೆತರಘಳಿಗಿರಲಾರೆನೊ ||4||

ಮಾತನಾಡೆ ಮಾರನ ಕೈಗೊಂಬೆ |

ಮಾತನಾಡೆ ಮಾಣಿಕದ ಬೊಂಬೆ

ಪ್ರೀತಿ ಮಾಡೆ ಪ್ರಯನ ಸಂರಂಭೆ ||ಪಲ್ಲ||

ಚತುರ ಮತಿಯಳೆ ತಪಲಗಾತ್ರಿಯಳೆ |

ನೂತನ ಸೈಕತನಿತಂಬೆ ||1||

ಕಮಲಪಯೋಧರೆ ಕಠಿಣಪಯೋಧರೆ |

ರಮಣೆ ರಮ್ಯಗುಣ ಕದಂಬೆ ||2||

ಚಾರೈನಿಲಯನ ಚೆನ್ನವೀರಾರ್ಯನ |

ಸೇರಿ ಕ್ರೀಡಿಸಿ ನಂಬೆ ||3||

ಏನೆ ಸಖಿ ನಿನ್ನಂಗವೆಂತು ವರ್ಣಿಸಲೆ |

ಮೀನಾಂಕನುಪವನವೊ ಮಿಗೆ ನಿನ್ನಯಪಘನವೊ ||ಪಲ್ಲ||

ಅಡಿ ಪಲ್ಲವಂ ಪೊಳೆವ ತೊಡೆ ಬಾಳೆಗಿಡದೆಡೆ |

ನಡುಸಿಂಹ ನಡೆಹಂಸ ತಿಗವೆ ಗುಲ್ಲುಗಳು

ಕಡುಸೊಬಗಿನಂಗ ಲತೆ ಕರ ಚೂತದೆಳೆದಳಿರು

ಒಡಲ ಪೊಕ್ಕಳ ಪುತ್ತು ಬಡವಾಸೆ ಫಣಿರಮಣಿ ||1||

ಏರು ಜವ್ವನದ ಕಾಸಾರದೊಳು ಮುಖ ಕಮಲ |

ವಾರೆನೋಟಗಳ ಕುಮುದಗಳ ಮೇಲೆ

ಸೇರಿರುವ ಕುಂತಲಗಳಾರಡಿಯ ಬಳಗವತಿ

ತೋರುಕುಚ ಜಕ್ಕವಕ್ಕಿಗಳು ನೋಡಬಲೆ ||2||

ಮುಡಿ ನವಿಲು ಸ್ವರ ಪಿಕವು ನುಡಿ ಗಿಳಿಯು ಸಹವಾಗಿ |

ಒಡತೆ ಪರಿಶೋಭಿಸುವ ವನಲಕ್ಷ್ಮೀ ನೀನೆ

ಪೊಡವಿಯೊಳೈನೆಲೆಯ ಒಡೆಯ ಚೆನ್ನವೀರೇಂದ್ರ

ಬಿಡದೆ ನಿನ್ನಪಘನದ ವನಕೆ ಮಾಧವನೆ ||3||

ಗಮನ ಭಂಗಿ ಸಾರೆ |

ವಾರಿಜಾಸ್ತ್ರ ನಿಭಂಗ ಬಾರ

ಗಜಗಮನಭಂಗಿ ಸಾರೆ ||ಪಲ್ಲ||

ಮಾಲತಿಮಾಕಂದ ಲಸದರವಿಂದ |

ನೀಲೋತ್ಪಲಶೋಕೆ ಲಲಿತಮಾರ್ಗಣ

ಧೃತಕರಮಾರಂ ಆಲೋಕಿಸಿ ಪೊಡೆದಂ ||1||

ಕೀರ ಚಂಚರೀಕ ಕೋಕಿಲ ಪೃಥುಕ |

ಪಾರಾವತ ಪ್ರಮುಖ ಮಾರಭೂಪಸೇನ

ರವಕಾರೆ ಚಾರು ಪಯೋಧರೆಯೆ ||2||

ಶೋಭಿತೈನಿಲಯ ಚೆನ್ನವೀರಾರ್ಯ |

ಶೋಭನ ಸಚ್ಚರಿತಂ ಶಾಬಕ ಹರಿಣ

ವಿಲೋಚನೆ ಪೂರ್ಣಚಂದ್ರನಿ ಭಾನನೆ ಸುಮತೆ ||3||

ಬಾಲಕಿ ಪರಿ ಪರಿ ಸೋಜಿಗದಂದವ |

ಮಾಲಿಸಿ ನೋಡೆ ನೋಡೆ ಮಾನಿನಿ ಛಂದವ ||ಪಲ್ಲ||

ಒದವಿದ ಜವ್ವನೆ ನದಿಸೈಕತಶ್ರೋಣೆ |

ಮಧುಪ್ರಿಯ ಸಮಾಕುಂತಲ ಶರಚ್ಚಂದ್ರಮುಖಿ

ಬಿಂಬಾಧರೀ ಪರಿ ಸೋಜಿಗದಂದವ ||1||

ಮಂದಸ್ಮಿತರುಚಿ ಕಂದರದನ ಶುಚಿ

ಸುಂದರ ಕಂಜಕೋರಕ ಕುಜೇ ಶಬಲದೃಕಿ

ತನುಧಾರೀ ಪರಿ ಸೋಜಿಗದಂದವ ||2||

ಲಲಿತೈನೆಲೆವಾಸತುಳ ಚೆನ್ನವೀರೇಶ

ಸಲೆ ನೇರ ಪಾದಕೆ ಸುಖಮಯ ಸೈಪುಗಾರ್ತಿ

ಹಿತಕಾರೀ ಪರಿ ಸೋಜಿಗದಂದವ ||3||

ಮರೆದೆ ಆ ಕೋವಿದನ ಕೂಡಿರದೆ |

ನೀ ತೊಲಗದಿರೆಂದೊರೆದೆ

ಏಣಾಕ್ಷಿ ರತಿಸುಖ ತೋರದೆ

ಹರದೆ ಮರೆದೆ ನೀ ಮರೆದೆ ||ಪಲ್ಲ||

ಮದನ ಸಂತಾಪಕೆ ಬಾಡಿತು ವದನ |

ಮುನಿದಿಂದು ಆತನ ಸದನ

ಬಿಡುವರೆ ಕುಂದರದನ

ನಿನ್ನೊಳು ಕೂಡಿದನ ||1||

ಬಾಲೆ ಇಂದೀವರೆನೇತ್ರ ವಿಶಾಲೆ |

ಮದನಾಗಮದೊಳನುಕೂಲೆ

ಏ ರಂಭೆ ಮಧುಕರವಾಲೆ

ಆ ಕಾಂತನ ಲೀಲೆ ||2||

ಪ್ರಿಯನ ವಿನುತೈನೆಲೆ ನಗರಾಲಯನ |

ಶ್ರೀ ಚೆನ್ನವೀರಾಶ್ರಯನ

ಆನಂದ ತೇಜೋಮಯನ

ಏ ಚಂಚಲನಯನೆ ||3||

ಬೆರೆದವನೊಳು ಮುನಿ |

ದಿರುವರೇನೆ ನೀರೆ

ಅರೆಗಳಿಗಗಲದ ವರನೊಳು ಒಯ್ಯಾರೆ ||ಪಲ್ಲ||

ಬೆಲೆಗಾರ್ತಿಯರಂತೆ ಬೇಡಿ ಕಾಡುವರೆ |

ಬೆದರ ನೋಟದ ಭಾವ ಬೇರೆ ಮಾಡುವರೆ

ಮದನಕೇಳಿಯೊಳಗೆ ಮನವ ಮುರಿವರೆ| ||1||

ಕುಲಸತಿಯಾದ ಮೇಲೆ ಕೊರಚಾಡುವರೆ |

ಅರಸದ ಪ್ರಿಯನೊಳು ಅರಸಿ ನೋಡುವರೆ

ಸುಲಲಿತಾಲಿಂಗನದಿ ಸೋತು ಪಳಿವರೆ ||2||

ಪುವಿಮಲೈ ನಿಲಯನ ವಿನಯದಿಂದೊಲಿಸೆ |

ರಮಣ ಚೆನ್ನವೀರಾರ್ಯನಂ ಬಿಸಿಗಲಸೆ

ಸುಮತೆ ಮಹಾನಂದ ಸುಖದೊಳು ಫಲಿಸೆ ||3||

ಕೇಳೆ ಬಾಲೆ ಕಾಮಿನಿ ರನ್ನೆ |

ಆಳಿದಂಥ ಪ್ರಿಯನ ಕೂಡಿ

ಬಾಳುವೆಯ ಇಲ್ಲೆ ಕೇಳೆ ಬಾಲೆ ||ಪಲ್ಲ||

ಸಂತಿಯ ಸಂಗತಿ ನಿನ್ನ |

ಪಂಥಕ್ಯಾರು ಬರುವರಿಲ್ಲೆ

ಎಂತೆಂಥವರಿಗಿದ

ರಂತೆ ನೋಡೆ ಕೇಳೆ ಬಾಳೆ ||1||

ದಿಮ್ಮಿದರ ಶ್ರೇಯದೊಳ |

ಗೊಮ್ಮನದಿ ಕೂಡು ಕಂಡೆ

ಬ್ರಹ್ಮ ವಿಷ್ಣು ಪದವಿಗಿಂದ

ಲಿಮ್ಮಡಿಯೊಳೆ ಕೇಳೆ ಬಾಲೆ ||2||

ಹತ್ತು ಮಂದಿ ನಿನ್ನ ತಲೆಯ |

ನೆತ್ತಿ ಬಾಳೆ ಮಾಡಗೊಡರೆ

ಎತ್ತ ಮಿಸುಕದಂತೆ ಬಹಳ

ಜತ್ತನಿರೆ ಕೇಳೆ ಬಾಳೆ ||3||

ಎಂಟು ಕೋಣಗಳು ಬೆ |

ನ್ನಂಟಿಕೊಂಡು ತಿರುಗುತಾವೆ

ಗಂಟಲವ ಮುರಿದುಕೊಂಡು

ಒಂಟಿಲಿರೆ ಕೇಳೆ ಬಾಲೆ ||4||

ಹಿರಿಯ ಮನೆಯ ಬಳಸಗೊಡದ |

ದುರುಳು ಗುಣದ ಮುಡಿ ಅತ್ತೆಯ ಹಲ್ಲ

ಮುರಿದು ಹೊಕ್ಕ ಮೂರು ಮನೆಯ

ತೆರೆದು ನೋಡೆ ಕೇಳೆ ಬಾಲೆ ||5||

ಆಳಿದವರ ಅರಿಯದೆಷ್ಟು |

ಬಾಳಿದರೆ ಫಲವು ಇಲ್ಲೆ

ಗಾಳಿಗಿಟ್ಟ ದೀಪದಂತೆ

ಹೇಳಲೇನೆ ಕೇಳೆ ಬಾಲೆ ||6||

ಹಕ್ಕಿವೊಂದು ಕಂಡ ಕಡೆಗೆ |

ಪಕ್ಕವಿಲ್ಲದ ಹಾರಿ ನಿನ್ನ

ದಕ್ಕಗೊಡದು ಪಂಜರದೊ

ಳಿಕ್ಕು ಕಂಡೆ ಕೇಳೆ ಬಾಲೆ ||7||

ಅಷ್ಟ ಕೊಂಬೆಗಳಿಗೆ ತಾ |

ನಟ್ಟಿ ಹಾರುತಿರುವ ಪಿಕವ

ನಿಷ್ಟೆಯಿಂದೆ ಪೂರ್ವಕೊಮ್ಮಿ

ಗಿಟ್ಟಿರಮ್ಮ ಕೇಳೆ ಬಾಲೆ ||8||

ಬಂಧುಬಳಗ ಮನೆಯವರ |

ಕೊಂದು ಸುಟ್ಟು ನೀನೊಬ್ಬಳೆ

ನಿಂದ ಮೇಲೆ ತಿರುಗಿ ಬರುವ

ದೆಂದಿಗಿಲ್ಲೆ ಕೇಳೆ ಬಾಲೆ ||9||

ಆರು ಚಕ್ರವರ್ತಿಗಳ |

ಮೀರಿ ರಾಜ್ಯವಾಳುತಿರುವ

ಮೂರು ಪುರುವ ಹೊಕ್ಕು ರತ್ನ

ಸೂರೆ ಮಾಡಿ ಕೇಳೆ ಬಾಲೆ ||10||

ವರದೈನೆಲೆಯೊಳಧಾಮ |

ಗುರುವು ಚೆನ್ನವೀರೇಶನು

ಕರದೊಳು ವಾಸವಾದ ಮೇಲೆ

ಸ್ಥಿರವು ನೀನೆ ಕೇಳೆ ಬಾಲೆ ||11||

ಎಂತು ಬದುಕಿದೆ ನೀನು ಎಲೆ ರಾಜವದನೆ |

ಸಂತತಂ ವೈರಿಗಳು ಸಂಗಮಾಗಿರುತಿರಲು| ||ಪಲ್ಲ||

ರಾಕೇಂದು ಚಂದ್ರಿಕೆಯು ರಾತ್ರಿಯೊಳು ರಾಜಿಸಲು |

ಕೋಕಮಿಥುನಗಳೇನು ಕೊರಗದಿಹವೇನೆ

ಕೇಕಿಗಳುಕದೆ ಕಾಳುರಗ ಜೀವಿಪುದು

ಲೋಕದೊಳು ಬಹುಚೋದ್ಯಂ ಲೋಲಲೋಚನಿಯೆ ||1||

ಸುಮತೆ ಸಂಪಿಗೆ ಹುಳವು ಸಜ್ಜಕದ ಕೆಲಬಲದಿ |

ಭ್ರಮರ ಸಂದೋಹವತಿ ಬಲದಿ ತಿರುಗುವುದೆ

ಪ್ರಮದೆ ಗಿಳಿವಿಂಡುಗಳ ಪೊರೆಯಲ್ಲಿ ರಾಜಿಸುವ

ದಮಮ ಬಿಂಬಾಫಳವನಮರಿ ಮೃದುವಾಣಿ ||2||

ವನಿತೆ ಮೃಗಪತಿಯೊಡನೆ ವಾರಣದ ಚರಿಸುವುದೆ |

ವಿನುತೈನೆಲೆಯ ಚೆನ್ನವೀರೇಶನೊಲಿದು

ಅನುಕರಿಸಿ ಮಿಗೆ ನಿನ್ನ ಕಾಯ್ದನಲ್ಲದೆ ಜಗದೊ

ಳನಹಿತರ ಮಧ್ಯದೊಳುಳಿವುದಚ್ಚರಿಯೆ ||3||

ಜಾಣೆಯಾದೆ ವರಗೆ ಮೋಹಿನಿಯೆ |

ಜಾಣೆಯಾದೆ ಪ್ರಿಯಗೆ ಮೋಹಿನಿಯೆ

ರಸಾಲಕಾಂಡ ಸನ್ನಿಹಿತ ಸುಖಕರಗೆ

ಪ್ರಿಯಗೆ ಮೋಹಿನಿಯೆ ||ಪಲ್ಲ||

ಬಾಲಮರಾಳ ಸಮಾನಗಮನೆಯೆ |

ಲೋಲಾಕ್ಷಿ ಪರಮ ಮನೋರಮನಿಗೆ

ಪ್ರಿಯಗೆ ಮೋಹಿನಿಯೆ ||1||

ಕಲಿತಗಲಿತ ಸುಕುಟಿಲ ಕುಂತಲೆಯೆ |

ಕಲಕಂಠಿ ಸತತಮತೀವ ಸುಂದರಗೆ

ಪ್ರಿಯಗೆ ಮೋಹಿನಿಯೆ ||2||

ಸನ್ನುತೈನಿಲಯ ಚೆನ್ನವೀರೇಂದ್ರ |

ಪನ್ನಾಗನಂ ಭಜಿಸುತ ಕೋವಿದಗೆ

ಪ್ರಿಯಗೆ ಮೋಹಿನಿಯೇ ||3||

ಬಿಡುವರೆ ರಮಣೆ ಕಾಂತನ ಸ್ನೇಹ |

ಬಿಡುವರೆ ರಮಣೆ ನೀನಡೆಸಿ ಕೂಡಿದ ಬಳಿಕ

ಕಡುಚೆಲ್ವ ಪ್ರೌಢ ಜೊನ್ನೊಡಲಳಿಯನ ರೂಪ

ಗಡ ತರುಣಿ ತೋರ್ಮುಡಿಯೇ ಶೇಷನ ಪಡೆಯೆ

ಘನಮೃದು ಪೊಡೆಯೆ ಕೂರ್ಪನ ಮಡಿಯೆ

ಹಂಸನ ನಡಿಯೆ ಬೇಗನೆ ನಡಿಯೆ

ಸುಖಮಂ ಬಡಿಸುವಾತನ ||ಪಲ್ಲ||

ಖಗಕಿನ್ನು ಫಲಿಸು ಸ್ತ್ರೀಗಾಧಾರ ಸುಗುಣನೆ ಲಲನೆ |

ಜಗದೊಳು ಬುಧರು ಈ ಬಗೆಯೆಂದು ಪೇಳ್ವರೆ

ಮೃಗನೇತ್ರೆ ಈ ಮಾತು ನಗಿಯಲ್ಲೆ ನಿನ್ನಾಣೆ

ಬೊಗಸೆಗಂಗಳ ಪ್ರಾಣ ನಾಯಕ

ನಗಲುವಾಕೆ ಮಲ್ಲಿಗೆಯ ಬಾಣನ

ಬೇಗೆಯನಕಟಕಟಂತು ತಾಳುವೆ

ಸೊಗಸು ನಸುನಗೆಮೊಗದ ಪ್ರಿಯನ ||1||

ನೆರೆವೆರೆಯ ನಾಳೆ ಮೂಡಲು ನಿನ್ನ ಶರೀರಕ್ಕೆ ಕಾಳೆ |

ನೆರೆ ಪಾಡ್ಯದಿಂ ಶೀತಕರನು ಪೆಚ್ಚುತನಬಹನೆ

ಚರಣಾದಿ ಶಿರಸಾಂತ ವಿರಹ ಪುಟ್ಟುವುದಿನ್ನು

ಇರುಳೆ ಚರಿಪನ ನೆರಳು ಕೆಟ್ಟದು

ದುರುಳ ಕಾಮನ ತರಳಪೂವಿನ

ಸರಳ ಬಾಧೆಗೆ ನೆರಳ್ವುದುಚಿತವೆ

ಮರುಳೆ ಬೇಗನೆ ತೆರಳೆ ವರನ ||2||

ವಧು ಮಕುಟಮಣಿಯೆ ಶೋಭಿತಕಲಶ |

ವಿಧುಪೋಲ್ವಫಣಿಯೆ ಅಧಿಕಮಾದೈನೆಲೆಯ

ಸದನ ಚೆನ್ನವೀರನ ಪದಕಮಲಂ ಭಜಿಸಿ

ಪದುಳದೊಳಿರೆ ನಿತ್ಯಂ ಸುದತೆ ಸುಂದರೆ

ಪುದಿದಪ್ರಾಯಳೆ ಒದಗಿ ಪೋಗಿಲ್ಲೆ

ಚದುರೆ ಮೋಹದ ಹದನವರಿದುಪಚರಿಸಿ ಸುಖಜಲ

ನಿಧಿಯೊಳಾಳಲ್ಲೆ ಮಧುರವಾಣಿ ||3||

ಒಲ್ಲೆನೆಂಬುವರೆ ಏ ವನಿತೆ ನೀ |

ಒಲ್ಲೆನೆಂಬುವರೇನ ವಲ್ಲಭನೊಳು ನೀರೆ

ಸಲ್ಲಲಿತಾಂಗೆ ಇದು ಸಲ್ಲದು ಕಾಂತೆ ||ಪಲ್ಲ||

ಎಳೆಜವ್ವನದೊಳು ನೋಯ್ಸದೆ ನಿನ್ನ |

ನುಳುಹಿ ಕಾಯ್ದನೊಳು ಮುಳಿಸು ಸಾಕಲಸದೆ

ಸೆಳೆದಪ್ಪಿ ಸೆಳೆಮಂಚದೊಳು ಕೇಳಿರಸದೊಳು

ಮುಳುಗಿಸಿ ಜಲಜಾಕ್ಷಿ ||1||

ದಶಾವಸ್ಥೆ ಭರಕೆ ಏ ತರುಣೆ ನೀ |

ಬಸವಳಿದುದಕೆ ರಸಸುಖಕ್ಕೊದಗಿ ನಿ

ನ್ನಸುವ ರಕ್ಷಿಸಿದಂಥ ರಸಿಕನೊಳು

ಎರವನೆ ಕುಸುಮಗಂಧೆ ||2||

ತನುವಿಲ್ಲದವನ ತಂತ್ರದಿ ನೀನು |

ಬಿನದಿಸೆ ಲಲನಾ ಘನತರೈನೆಲೆಯ ನಿವಾ

ಸನ ಚೆನ್ನವೀರೇಶನನು ಕರೆಸಿದ ಮೇಲೆ

ಮುನಿವುದಲ್ಲವೇ ಪ್ರಮದೆ ||3||

ತೋಯಜಾನನೆ ಕೇಳೆ ಕಾಯಜನ ಗೆಲಿವೋ |

ಪಾಯ ಜಾನಿಸೇ ನಿನ್ನೊಳು

ಮಾಯವಲ್ಲಭ ಪನ್ನಸಾಯಕಗಳನೊಡ್ಡಿ

ಪ್ರಾಯನ್ವಿತರಿಗೆಲ್ಲಪಾಯ ಮಾಳ್ವನೆ ಸಖಿಯೇ ||ಪಲ್ಲ||

ಆತಪತ್ರಕೆ ನಿನ್ನ ನೂತನ ಕರವೆತ್ತೆ |

ಸೂತಗೆ ಹಿಣಿಲೆತ್ತಿ ಸಲೆ ತೋರಿಸೆ

ಏತನ್ವಿಭ್ರಮ ರಸಂಘಾತಕ್ಕೆ ಗ್ರೀವದೊ

ಳೆತಳೆದ ಕನಕಸೃಗು ನೀತೋರಿಸೆ ಸಖಿಯೇ ||1||

ಶುಕವಾಜಿಗಳಿಗೆ ಮುದ್ರಿಕೆ ವೈಢೂರ್ಯವ ತೋರೆ |

ಐಕಸಂಚಯಕೆನೀ ಮಸ್ತಕ ತೋರಿಸೆ

ಚಕಿತಾಕ್ಷೆ ಮಾರನಂಬಕಕಗ್ನಿ ರವಿ ಜೈವಾ

ತೃಕ ವೃಷ್ಟಿಮನುಗಳ ಪ್ರಕಟಿಸೆ ಹೇ ಸಖಿಯೇ ||2||

ಧ್ವಜಕೆ ಬತ ರುದ್ರಾಖ್ಯಂ ಭಜಿಸಿ ಬತ್ತಳಿಕೆಗೆ |

ಗಜಕೃತಿಧರನೆಂದುಗ್ಘಂಡಿಸಿ ಮಿಗೆ

ವೃಜಿನಾಂತಕೈನಿಲಯನಿಜ ಚೆನ್ನವೀರಾಖ್ಯಂ

ಪುಜಪಿಸಲಳುಕಿ ಚಿತ್ತಜ ನೋಡುವನೆ ಸಖಿಯೇ ||3||

ಭಾವಕಿಯೆ ನಿನ್ನ ಮಧ್ಯ ಬಡವಾದುದೇಕೆ |

ಆವಗಂ ನೋಡಿದಡೆ ಅತಿಕೃಶವನಾಂತಿಹುದೊ ||ಪಲ್ಲ||

ಮುನಿಗಳ ಸುವ್ರತಕೆ ಸಜ್ಜನರ ಸಾಧನಕೆ ತಾ |

ನನಹಿತದಿ ಕಾಡಿ ದುರ್ಜನನೆನಿಸಿ ಚರಿಪ

ಮನಸಿಜನ ಮಂದಿರವು ತನ್ನ ಪೊರೆಯೊಳಿಹುದೆಂದು

ಘನ ಚಿಂತೆಯಿಂದೆ ಬಡವಾಯ್ತೇನೆ ಸಖಿಯೇ ||1||

ವಿಷಧರನ ಸಾಕಾರದಂತೆ ಬಡಬಾಸೆ ರಾ |

ಜಿಸುವ ನಿಜ ರಂಧ್ರದಿಂ ಪಡೆದು ಯುಗಕುಚದೃಗಕೆ

ಅಸಮನಯನ ನೋಡುವ ನಾಭಿಯೆ ತನ್ನೊಳಿಹುದೆಂದು

ಕೃಶವಾದುದೇನೆ ಪೇಳು ಮುದದಳ ನಯನೇ ||2||

ಒಡಲೆರ್ದೆಯು ಕೊರಳು ಪೊಂಗೊಡಮೊಲೆಯು ಮೊಗ ತೋರ |

ಮುಡಿಯು ಮೊದಲಾದ ಭಾರವ ಹೊತ್ತು ಬಳಲಿ

ನಡೆಯಲಾರದೆ ಬಳ್ಕುತಿರಲನ್ಯರೊಳಗೆಣಿಸಿ

ನುಡಿದುದಕೆ ಕಡುನೊಂದು ಬಡವಾಯ್ತೆ ಪ್ರಮದೇ ||3||

ಮಕರಕೇತನ ರಣದ ಮುಂಭಾಗದೊಳಿಹ |

ನಖದಾಂಕುಶದ ಹತಿಗೆ ನಡುಗದೆ ಬೆಳೆದು

ಪ್ರಕಟಿಸುವ ಶ್ರೇಣಿಕುಚಗಳ ಧೈರ್ಯಮಂ ಕಂಡು

ವಿಕಳತೆಯೊಳೀ ಮಧ್ಯ ಬಡವಾಯಿತೇನೇ | |4||

ಕರಿವೈರಿ ಕಟಿಗೆ ಕಮವೆಂದು ಕವಿಗಳು ನುಡಿಯೆ |

ಕೊರಗಿ ಕೃಶವಾಯ್ತೆ ಹರಿಕೊಲುವದೆಂದಳುಕಿ

ಪರಿಶೋಭಿನೈನೆಲೆಯಪತಿ ಚೆನ್ನವೀರನ

ಸರಭಾನಾಮವ ಜಪಿಸುತಿರು ನಿನಗೆ ಭಯವಿಲ್ಲೇ ||5||

ಒಮ್ಮನದಿ ಮಧ್ಯವರ್ಣನ ಭಜಿಸೆ ಸಖಿಯೆ |

ಸುಮ್ಮನಿರದಿರು ನೀನು ಸೋಮನಿಭಮುಖಿಯೆ ||ಪಲ್ಲ||

ಕಣ್ಣಿಂದ ಕೇಳವನ ಪೆಸರವನ ಕೊಂದವನ |

ಕಣ್ಣು ಜಗಕಾಗದವನ ಕಾಯ ಸಂಭವನ

ಪೆಣ್ಣು ಸೆರೆಗೊಟ್ಟವನ ತನ್ನ ಮುಖಕೊಯ್ದವನ

ತಣ್ಣಗಿರುವನ ಪಗೆಯ ರೂಪನ ಹರನ ||1||

ಕಾಲಿಲ್ಲದವನ ಸಂಗತಿಲಿ ನಡೆತರುವವನ |

ಮೇಲಾದ ಬಲದಿ ಮೂರನೆ ಅಂಗದ

ಭೂಲೋಕವನಾಳುತಿಹ ಭೂಪತಿಯ ಪೆಸರಿನೊಳು

ಲೋಲ ಮುನಿಜನರು ಬಯಸುವ ಪದವನಿರಿಸಿ ||2||

ವಾಪಸಿಂಜಿನಿಕೇತು ಸೂತ ಶರಮಧ್ಯದೊಳು |

ವ್ಯಾಪಿಸಿರ್ದಕ್ಷರದ ನಾಂದಿಂದೆಸೆವ

ದೀಪಿತೈನಿಲಯಪುರಧೀಶ ಭಕ್ತರ ಪ್ರಿಯನ

ಏ ಪಂಕಜಾಕ್ಷೆ ಎಡೆವಿಡದೆ ನೀ ಭಜಿಸೆ ||3||

ಇಂಥ ಕಪಟವಿನ್ನಿದೇತಕೆ ಪ್ರಿಯ |

ಕಾಂತನೊಡನೆ ರತಿಕಾಂತನಾಗಮದಿ ಪ್ರಿಯೆ ||ಪಲ್ಲ||

ಗಾಢಾಲಿಂಗನದೊಳು ಗದರಿದೇನೆ ಪ್ರಿಯೆ |

ಮೂಢ ಮುಗ್ಧೆಯಳಂತೆ ಮುನಿವರೇನೆ ಪ್ರಿಯೆ

ಈಡಾಗಿರ್ದಾತನೊಳು ವಿರಸವೇನೆ ಪ್ರಿಯೆ

ಕೂಡಿದ ಮೇಲೆ ಮತ್ತೆ ಕೊರಚಾಡುವರೇನೆ ಪ್ರಿಯೆ ||1||

ಮುಖ ಸಂಯೋಗದೊಳು ನೀ ಮುಸುಕಿಡುವರೇ ಪ್ರಿಯೆ |

ನಖಕ್ಷತದೊಳು ಬಹು ನಿಟ್ಟಿಸುವರೇ ಪ್ರಿಯೆ

ಸುಖರತಿಯೊಳು ವಂಚಿಸುತಮಿರುವರೇ ಪ್ರಿಯೆ

ವಿಕಳಾವಸ್ಥೆಯೊಳಿಂತು ವಿರಚಿಸುವರೇ ಪ್ರಿಯೆ ||2||

ಕುಲಸತಿಯರಿಗಿದು ಕೊರತೆ ನೋಡೆ ಪ್ರಿಯೆ |

ಚಲಿಸದೆ ನಿನ್ನೊಳಿರ್ಪ ಛಲವು ಬೇಡೆ ಪ್ರಿಯೆ

ಅಲಸದೆ ಪೋಗಿ ಬಾವಮರೆದುವಾಡೆ ಪ್ರಿಯೆ

ವಿಲಸದೈ ನಿಲಯ ಚೆನ್ನವೀರನ ಕೂಡೆ ಪ್ರಯೆ |3||

ದರಹಸಿ ತಾನನೆ ಬಾರೆ |

ಸುಂದರನ ಸನ್ನಿಧಿಗೆ

ಹರಹಸಿ ತಾನನೆ ದರದೃಢೋಪಮಾನ

ದರಗಲಭಾಮಿನೆ ಬಾರೆ ಸುಂದರನ ಸನ್ನಿಧಿಗೆ ||ಪಲ್ಲ||

ಬಂಧುರ ರಸನಿಯೆ |

ಕುಂದದ ದಶನಿಯೆ

ಮಂದರ ಗಮನಿಯೆ

ಸುಂದರನ ಸನ್ನಿಧಿಗೆ ||1||

ಕಲಶ ಪಯೋಧರೆ |

ನಲಿನ ಪಯೋಧರೆ

ಕಲಕೀವಾಣಿಯ ಬಾರೆ

ಸುಂದರನ ಸನ್ನಿಧಿಗೆ ||2||

ವಿತತೈ ನಿಲಯನೆ |

ಪತಿ ಚೆನ್ನವೀರನೆ

ಗತಿಯೆಂದೊಲಿಸಲಿಕ್ಕೆ ಬಾರ

ಸುಂದರನ ಸನ್ನಿಧಿಗೆ| ||3||

ಸುಮ್ಮನೆ ಹೋಗು ಸೊಗಸು ಮಾಡಬ್ಯಾಡ |

ಸುಳಿದು ಬೀದಿಯೊಳಗೆ

ಗಮ್ಮಗಮ್ಮನೆ ಗಮಕಿಲಿ ಬರುತಿದಿ

ಏಕೆ ಎನ್ನ ಬಳಿಗೆ |ಪಲ್ಲ||

ಸಣ್ಣ ವಯದ ಸಂಪನ್ನ ಸೊಬಗಿನ |

ಕನ್ಯೆ ಹುಡುಗಿ ನೀನೆ

ಗಿಣ್ಣಿಲ ಕುಚ ನಡು ಸಣ್ಣ ಒಲವ ಮೋಹಿನೆ

ಹಂಸೆಗಮನೆ

ಹೆಣ್ಣು ನಿಂಬಿಯ ಬಣ್ಣ ಮೈಯೊಳಗ

ಸನ್ನೆ ಮಾಡುದೇನೆ

ನಿನ್ನ ಎರಡು ಮೊಲೆ ಸನ್ನಿಧಿಲಿರುವುದು

ಮನ್ನಾಥನ ಸದನೆ

ಚೆನ್ನಿಗರಾಯನ ಬಿನ್ನಪದವಳೆ

ಇನ್ನು ಹೋಗೆ ಲಲನೆ ||1||

ಕೋಟಿ ಹೆಣ್ಣುಗಳು ಸಾಟಿ ಬಾರರು |

ಮಾಟರೂಪ ಕೊಬ್ಬೆ

ನೀಟುಗಾತಿ ನಿನ್ನ ನೋಟದ ಪೆಟ್ಟಿಗೆ

ಚೂಡಿಯಾದೆ ಹೆಜ್ಜೆ

ದಾಟಿ ಹೋಗೆ ನಿನ್ನದಟು ಸುಡಲಿ ನೀ

ಮೀಟುಬೇಡ ಹುಬ್ಬೆ

ಬೂಟಕಾದೆ ನಿನ್ನಾಟವೊಲ್ಲ ಹೋಗೆ

ಏಟು ಮಾಡಿದಬ್ಬೆ

ಬೇಟಸಲ್ಲ ಬಹು ನೀಟಿಸುವ ಕಳೆ

ನಾಟಿದಲಿ ದಬ್ಬೆ

ಕಾಟಕಮನಾತನೇಟು ಪೊದೆ

ವನಿತೆ ಜನಕೆ ಮಬ್ಬೆ ||2||

ಏಕೆ ಬಲದ ಮೊಲೆ ಮ್ಯಾಕೆ ಸೆರಗವನು |

ಹಾಕಿ ತೆರಿವೆದೆಗೆ

ಸಾಕು ಸಾಕು ಕಣ್ಣ್ಯಾಕ ಹೊಡಿತಿ ಬಹು

ತಾಕುತಾವೆ ಎದೆಗೆ

ನೀಕರಿಸದಿರು ಚೆಲ್ವಕರ ಪ್ರಾಯವ

ಜೋಕಿ ನಡೆಯೊ ಮನಿಗೆ

ಬೇಕಾದರೆ ಹಿಡಿ ಶ್ರೀಕಂಠನ

ಏಕವಾಗಿ ಒಳಗೆ

ಶೇಖರ ಐನೆಲೆಶ್ರೀಕರ ಚೆನ್ನವೀರ

ನೀ ಕರುಣಿಸಿ ಬೇಗೆ

ಕಾಕ ಬುದ್ಧಿ ಬಿಡು ಪಾಕ ಮಾಡು ಮನ

ಸಾಕಾರಾದ ನಿನಗೆ ||3||

ನೀನೆ ಕಿನಿಸು ಮಾಡುವರೆ ಒಯ್ಯಾರೆ |

ಕಿನಿಸು ಮಾಡುವರೆ ||ಪಲ್ಲ||

ಜರುಚುವರೇನನಿತಿನಿತೆಂದು ನೀ |

ಕೊರತಾಡುವರೆ ಸಮರತಿಯೊಳು ನೀ

ಸರಸೋಕ್ತಿಗಳಿಂದನುಕರಿಸದೆ ನೀ

ಪರವರನ ಲೋಸರಿಸದೆ ||1||

ನೆರೆವಾತುರವ ನೆರೆ ತಿಳಿಯದೆ ನೀ |

ಮೆರೆವಧರವ ಚುಂಬನುಲ್ಲಾಸಕ್ಕೆ

ಕರೆವ ಭರವ ಪರಿಕಿಸದಾತನ

ಹರವಸಮಂ ಪರಿಹರಿಸದೆ ||2||

ವರದೈನೆಲೆಯ ಒಡೆಯ ಚೆನ್ನವೀರೇ |

ಶ್ವರನಲ್ಲದೆ ಮೇಣ್ ಪೆರತುಂಟೇನೆ

ದರಹಸಿತಾನನೆ ದಯ ಸಂಪಾದಿಸಿ

ಪರಮದ್ರವದೊಳಾದರೆಸದೆ ||3||

ಕಾಂತನಗಲಿದ ನಲ್ಲೆ ವಿರಹದೊಳಿವ |

ಳೆಂತು ಜೀವಪಳಿಲ್ಲೆ ಪರಗ್ರಾಮದೊಳಗವ

ನಿಂತನೇತಕೊ ಅಲ್ಲೆ ಇದು ತಿಳಿಯದಲ್ಲೆ

ಸ್ವಾಂತಭವನ ಜ್ವರ ಮುದಿಸೆ ನಿಶಾ

ಕಾಂತಮುಖಿ ಬಹು ಬಸವಳಿದು ಸೀ

ಮಂತಿನಿಯು ತಾ ಹಾ ಹಾಯೆನುತ ಲ

ತಾಂತ ಶರಕೆಡೆಯಾದಳಲ್ಲೆ ||ಪಲ್ಲ||

ಕಾಮಿನಿಯು ಕಾತುರಕೆ ಕಡು ಹವ್ವಳಿಸುತ ಸು |

ಶಾಮತಾಪದ ಭರಕೆ ಜೊಂಗುಳಿಗೊಳಿಸಲು ವಿ

ಶ್ರಾಮಮಾಗುವುದಕೆ ಕೆಳದಿಯರು ವನಕೆ ತಾಮರ ಸದೃಕ್

ಸಾಮಜಗತಿ ಸೋಮಮುಖಿ ಸದ್ರೋಮ ಶ್ರೇಣಿಯು

ರಾಮಣೀಯಕ ಬಿಂಬೋಷ್ಠೆ ಶುಕನುಡಿ

ಭಾಮಿನಿಯ ಕೊಂಡೊಯ್ವ ಸಮಯದಿ

ಕಾಮಸಖ ವರ್ಧಿಸಿದ ಕಿಂಶುಕ

ಮಾಮರಂ ಕೇತಕಿಯ ವನದಾ

ರಾಮದೊಳು ಗಜಕೀರ ಫಣಿಗಳ

ಸ್ತೋಮಮೀಹುದೆಂದವಳ ನಿಲಿಸಿದೆ ||1||

ವಿದಳಿತಂಬುಜನಯನ ಅರೆಮುಗಿದು ಪರಿತಾ |

ಪದ ಘನತೆಯಿಂ ಶಯನ ತೊಲತೊಲಗಿ ಪೊರಳುವ

ಸುದತಿಗುಪಚಾರದಯನ ಆರೈವುತಿರಲು

ಬೆದರದಿರೆ ಕುಳಿತವಳು ವದನಲೋಚನ ವಕ್ರಚಕ ಭ್ರೂ

ಮಧುರವಚ ಕರತಳಕೆ ಮುಗ್ಧೆಯು

ಹೃದಯದೊಳ್ಮಿಗೆ ಕರಕರಿಸುತಲಿ

ವಿಧುಕುಮುದಶರ ಮಧುಪ

ಹೆದೆ ಮೇಣ್ಮಧುರವಿಲ್ಗಳೆ ಮಿದುತಳಿರ್ಸಹ

ಮದನ ತಾನಟ್ಟಿದನೆನುತಲವ

ಳೊದರಿ ಮರೆದೊರಗುದಳು ಬಾಲೆ ||2||

ಶುಕ ಪಿಕವು ಸ್ವರಮಾಡೆ ರಾತ್ರಿಯೊಳು ಪಾವಕ |

ಸಖನು ತಂಪಿಲಿತೀಡೆ ಶೋಭಿತಲಿಂದ್ರ

ಕಕುಭದೊಳ್ ಶಶಿ ಮೂಡೆ ಇವಳಂಗ ಬಾಡೆ

ವಿಕಳಂದಿಂ ತನ್ನಕರವಾಯನ

ನಿಕರ ಫಣಿರಾಹುವಿಗೆ ಮುನಿದು ಸು

ಮುಖಿಯು ಪಳಿವಳು ದಶಾವಸ್ಥೆಯೊ

ಳಕಟಕವೊಂದುಳಿಯಿತಲ್ಲೆ ಸುಖಕರೈನಿಲಯಧಾಮನೋ

ತ್ಯುಕ ಗುರು ಚೆನ್ನವೀರೇಂದ್ರನು

ವಕಿಯ ಚೇತಳಿಗೆರೆಯಲಿಲ್ಲೆ ||3||

ಮೂಡಲಾಗದ ಮುನ್ನೆ ಬಂದೆ |

ಮುನಿಸು ನಿನ್ನೆದೇನೆ ಬಾಲೆ

ಕೂಡಲಿಲ್ಲವೋ ಕೂಡಿದ್ಯೋ

ಕುಟಿಲ ಭಾವ ತಿಳಿಯದ್ಹೇಳೆ ||ಪಲ್ಲ||

ಗಲ್ಲದ ಮಕರಪತ್ರ |

[ಮೆಲ್ಲನೆ] ಗಾಯವಾದುದಿಲ್ಲೆ

ಮುಡಿಯ ಮಲ್ಲಿಗೆಯ ಮಾಲೆ

ಬಾಡಿ ಮುಖವು ಕುಂದಲಿಲ್ಲೆ

ಪೊಳೆವ ಪಲ್ಲವಾಧರೆ ಬಿರಿದು

ತಿಲಕ ಪತನವಾಗಲಿಲ್ಲೆ ಬಾಲೆ ||1||

ಮೊಳೆ ಜವ್ವನೆಯೆ ಸ್ತನಗಳಲ್ಲಿ |

ತಳೆದ ಚಂದನುದುರಲಿಲ್ಲೆ

ಲಲಿತ ನೇತ್ರಾಂಜನಮಾನಂದ

ಜಲದಿ ತೊಳೆದು ಪೋದುದಿಲ್ಲೆ

ಅಳಿಕದೊಳ್ಕೊಂಕಿರುವ

ಕುರುಳವಲರದಿಹವಿದ್ದಲ್ಲೆ ಬಾಲೆ ||2||

ಕುಂಭಿನಿಯೊಳೈನೆಲೆಯಾಲಯ |

ಶಂಭುಗುರು ಚೆನ್ನವೀರೇಶ

ನೆಂಬ ಸೋಮನ ಬೆಳದಿಂಗಳಿಗೆ

ರಂಬೆ ಹೃತ್ಕುಮುದವಲರಲಿಲ್ಲೆ

ಅಂಬುಜಾಕ್ಷೇಂದ್ರಿಯ ಚಕೋರ

ಬೆಂಬಿಡದೆ ಕ್ರೀಡಿಸಲಿಲ್ಲೇನೆ ||3||

ಕೂಡಲಿಲ್ಲವೊ ಪ್ರಿಯೆ ಕೋವಿದನೊಡನೆ |

ಮೂಡಲದೊಳು ಬಂದಿಯೇ ||ಪಲ್ಲ||

ವದನದಿ ಒನಪಿಲ್ಲೆ ಅಧರವು ಬಿರಿಲಿಲ್ಲೆ |

ಕದಪಿಗೆ ಪಲ್ಗಾಯ ಪುದಿದೊಂದನಿಲ್ಲೆ ||1||

ಕಚಭರ ಸಡಲಿಲ್ಲೆ ಕುಚಗಳಿಗುಗುರಿಲ್ಲೆ |

ರುಚಿರಾಕ್ಷಿಗೆ ಕೆಂಪರಚನವೇರಿಲ್ಲೆ ||2||

ಸಾರೈನೆಲೆ ಚೆನ್ನವೀರಾಮೃತಕರನ |

ನಾರೆ ನಿನ್ನ ಮನಸ್ಚಕೋರ ಕ್ರೀಡೆಯೊಳು | |3||

ಸೋಮವದನೆ ನೋಡೆ ದಿವ್ಯ ಸುರುಚಿರಾಂಗನೆ |

ಪ್ರೇಮಕಲಹದಲಿ ನುಡಿದ ಪ್ರೌಢತನವನು ||ಪಲ್ಲ||

ನುತಶುಭಾಂಗ ಸರಸ ಸುಸ್ಮಿತಮುಖ ಪ್ರವೀಣ ಪ್ರಿಯನ |

ಸತಿ ಮನೋಜನಾಗಮದಲಿ ನೋಳ್ವ ಸಮಯದಿ

ಶತದಳೇಷ್ಟನಾತ್ಮಭವನ ಹಿತದಿ ಕಾಮಿಸಿರ್ಪ ಬಲೆಯ

ಪಿತನ ಪಿರಿಯಳಿನನುಜನ ಪಿತನವೊಲಿದು ನೆನೆದಳಂತೆ ||1||

ಸಾರಸಾಕ್ಷಿ ಕೀರವಾಣಿ ಮಾರ ರತಿ ವಿಲಾಸದಲಿ |

ಸಾರಪ್ರಿಯನಂಗವಪ್ಪಿಕೊಂಬ ಸಮಯದಿ

ಸಾರಸಾರಿತಾತನ ತನಯಾರಮಣನ ಸುತನ ಸತಿ ಕು

ಮಾರನೊಡನೆ ಕೂಡಿ ಮೆರೆವ ನಾರಿಪಿತನ ನೆನೆದಳಂತೆ ||2||

ಸದಮಲೈ ನಿಲಯ ಪುರಿಯ ಸದನ ಚೆನ್ನವೀರಣಾರ್ಯ |

ನಧರ ಪಿಡಿದು ಸುದತಿ ಮುದ್ದುಗೊಡುವ ಸಮಯದಿ

ಮುದಿರವೈರಿಯಾತ್ಮಜಾತನಧಿಪನಂಗನೆಯ ಜನನಿಯ

ಮುದದಿ ಶಿರದಿ ಧರಿಸಿದವನ ಚದುರೆ ನಲಿದು ನೆನೆದಳಂತೆ 3||

ಬಂದಳಲ್ಲೆ ಭಾವಕಿಯಳೆ |

ಬಂದಳು ಸಂಕೇತಮಂದಿರ

ದಿಂದೆ ಪೂರ್ಣೇಂದು ನಿಭಾನನೆ

ಸುಂದರನೊಳು ಕೂಡಿ ||ಪಲ್ಲ||

ದಶನದೀತಿಯಿಂದೆ ನಸುನಗುತಲಿ ತನ್ನ |

ನೊಸಲ ಕುಂತಲಗಳು ತಿದ್ದುತಲಿ

ಎಸೆವ ಮುಖದ ಕಾಂತಿರಸ ತುಳುಕುತಲುಟ್ಟ

ವಸನದ ತುದಿ ತುಟಿಯೊಳಿಡುತಲಿ

ಎಸಳುಗಣ್ಣೆವೆಗಳು ನಸುದೆರೆವುತ ಬಾಲೆ

ಬಸವಳಿದಂಗ ಝೋಂಪಿಸುತಲಿ

ಮಿಸುಪ ಬೈತಲಗಿರ್ದ ಕುಸುಮಗಳೆಸಳುದುರಿ

ಬಸರ್ವ ಬೆಮರಿಂದೆ ಶೋಭಿಸುತ ಮಂಜುಲಗಾತ್ರೆ ||1||

ಅಧರದೊಳೊರಿರ್ದ ರದನ ಗಾಯವು ತನ್ನ |

ವದನ ಬಾಗಿಸಿ ನೋಡಿಕೊಳುತಲಿ

ಎದೆಯೊಳೊತ್ತಿರುವ ನಖದ ಗಾಯ ನೋವಿಗೆ

ಚದುರಗೆ ಮನದೊಳು ಬಯ್ವುತಲಿ

ಮದನಾಗಮದಿ ಪ್ರೇಮ ಕದನದೊಳತಿ ಜಗು

ಳದನೀ ವಿಕಟಿಗೆ ಸೈರಿಸುತಲಿ

ಬೆದರಿದೆರಳೆಯಂತೆ ಸುದತೆ ನೋಡುತ ವಿಟರ

ಹೃದಯ ಝಲ್ಲೆಂಬಂತೆ ವಿದಳಿತಾಂಬುಜ ಪಾಣೆ ||2||

ಮಕರಪತ್ರಗಳ್ದು ಕರದಿಂದಡ ಹುತ್ತ |

ಚೆಕುರ ನುಣ್ಣಿಸಿಗಟ್ಟೆ ತಲೆವಾಗಿ

ಕುಚಸನ್ನಿಭ ಕುಚ ಚೂಚುಕದ ಮೇಲೆಸೆವ

ಕಂಚುಕದ ಗಂಟಿಕ್ಕಿ ಲಜ್ಜಿತಳಾಗಿ

ಪ್ರಕಟಿಸಿ ಪೊಳೆವ ಮೌಕ್ತಿಕಾ ಮಾಲೆ ಸರಿಸುತ್ತ

ಮಕರಂಕನಿಂದ ಪೂಜಿತಳಾಗಿ

ಸುಖಕರೈನೆಲೆ ಪುರಿಯ ನೀ ಕಾಯ್ಯ ಚೆನ್ನವೀರೇಂದ್ರ

ನಖಿಲ ಕ್ರೀಡೆಯೊಳೊಲಿದು ನಿಕಟದಿಂ ರತಿಯಂತೆ ||3||

ಬಂದರೆ ನೀ ಬಾರೆ ಬಾ ಆ ನಾಥನಲ್ಲಿಗೆ ನೀ |

ಬಂದರೆ ಬಾರೆ ಬಾ ಸಖಿಯೇ ||ಪಲ್ಲ||

ನೂತನಾಂಗಿಯೆ ಬಹು ರೀತಿಗಳುಸುರಲು |

ಮಾತು ಮನ್ನಿಸದೆ ವಿನೀತನಾದಾತನಲ್ಲಿಗೆ || ||1||

ಅರವಿಂದ ಬಾಣಕ್ಕೆ ಗುರಿಯಾದಳೆಂದು ನಾ |

ನೊರೆಯಲು ಕೇಳಿಯಾದರಿಸದಿರ್ದಾತನಲ್ಲಿಗೆ ||2||

ಶ್ರೀಕರೈನಿಲಯಪುರೋಕ ಚನ್ನವೀರೇಂದ್ರ |

ನಾಕಲಿತ ಸರ್ವಲೋಖ ಖ್ಯಾತನಲ್ಲಿಗೆ ||3||

ಸೊಕ್ಕುವಯಸಳೆ ನಿನಗೆ ಸೋಲದವರ್ಯಾರೆ |

ಬೆಕ್ಕಸದಿ ನಿನ್ನನೆ ಬಯಸುವರೆ ರಮಣೆ ||ಪಲ್ಲ||

ತಾರಕ ಮರ್ದನನು ನೀರಚರ ಕೇತನನು |

ವಾರಿಧರವಾಹನನು ಮೊದಲಾಗಿ ಬಂದು

ನಾರಿರನ್ನಳೆ ನಿನ್ನ ವಾರಿದುರುಬನೆ ಕಂಡು

ಸಾರಿ ತಮಗೆಮಗೆಂದು ನುಡಿವರೆಲೆ ರಮಣೆ ||1||

ಶರಧಿ ನಂದಿನಿಯು ಶಂಬರವೈರಿಸತಿಯು ಹಿಮ |

ಕರನ ನಿಜರಾಣಿ ಮೊದಲಾಗಿ ಬಂದು

ಸುರುಚಿರಾಂಗಿಯೆ ನಿನ್ನ ಮೆರೆವ ಮುಖ ಕಂಡು ಬಿ

ತ್ತರದಿ ತನಗೆನಗೆಂದು ನುಡಿವರೆಲೆ ರಮಣೆ ||2||

ಅಂಬುಭವಲೋಚನನು ಅಂಬುಜ ಸುಮಿತ್ರನು |

ಕುಂಭಜಾತರು ನಿನ್ನ ಕುಚಕೆ ವಾದಿಪರೆ

ಕುಂಭನಿಯೊಳೈನೆಲೆಯವಾಸ ಚೆನ್ನವೀರೇಶ

ನಂ ಬಿಡದೆ ಭಜಿಸಿದರೆ ಭಯವಿಲ್ಲೆ ರಮಣೆ | |3||

ಪರ್ವವನೆ ಮಾಡಿದಳೊ ಪದ್ಮನಯನೆ |

ಓರ್ವ ಶ್ರೀ ಭೋಗಲಿಂಗೇಶಗೌತಣ ಮೊಡರ್ಚಿ ||ಪಲ್ಲ||

ವನಿತೆಯು ಸುರಾಗದಕ್ಷತೆಯಿಟ್ಟು ವಿನುತ ಲೋ |

ಚನದಿಂದ ತನ್ನ ಮಂದಿರಕೆ ಕರೆದೊಯ್ದು

ಘನ ಸ್ನೇಹದಿಂ ಕಾಯಕಭ್ಯಂಗನವ ಮಾಡಿ

ಅನುಮೋದ ಭಾಷ್ಟೋದಕದಿ ಮಜ್ಜನವನೆರೆದು ||1||

ಸುದತಿ ತೊಡೆಯೆಂಬ ಪೀಠದ ಮೇಲೆ ಕುಳ್ಳಿರಿಸಿ |

ವದನ ಕನಕದ ಭಾಜನದಳು ಷಡುರಸಕೆ

ಅಧಿಕಮಾಗೆಸೆವ ಅಧರಾಮೃತವನೆಡೆ ಮಾಡಿ

ಚದುರೆ ಸ್ತನಕುಂಭ ಕೈಬಿತ್ತು ಕರ ತೊಳೆಸಿದಳು ||2||

ನಳಿನ ಮುಖಿ ಬಹುಮಾನದಿ ಸದ್ಗುಣ ಪೂ |

ಗಳನಿತ್ತು ಸಾಧು ವೃತ್ತಿಗಳಿಂದ ಪೊಳೆವ

ನಳಿತೋಳ್ಗಳೆಂಬ ವಸ್ತ್ರದ ಪೆಗಲಿನೊಳ್ಪೊದಿಸಿ

ಲಲನೆಯಾಲಿಂಗನಾಭರಣಗಳನೊಲಿದಿಡುತ ||3||

ಪರಮ ಸಂಭ್ರಮದ ಹೊರೆ ಹೊರಲಾರವದಳು ಮೈ |

ಮರೆದು ಸುಖದಾನಂದ ಶರಧಿಯೊಳು ಮುಳುಗಿ

ಕರಣ ಮನ ಭಾವಂಗಳುಡುಗಿ ನಿಬ್ಬೆರಗಾದ

ಳರರೆ ಕಾಂತನೊಳು ಮನಬೆರಸಿ ನಿರ್ಮಳವಾಗಿ ||4||

ಟಇಂತೆಸೆವ ಹಬ್ಬವನು ಮಾಡಿ ಮೆಚ್ಚಿಸಿರಲೇ |

ಕಾಂತ ಮದಭಂಜನನ ಕರುಣವನೆ ಪಡೆದು

ಸಂತತೈನೆಲೆಯ ಪುರಸದನ ಚೆನ್ನವೀರೇಂದ್ರ

ನಂತರಂಗದ ಬಯಕೆಗನುಕರಿಸುತಿಹೆ ಪ್ರೌಢೆ| | |5||

ಪ್ರಿಯ ಕುಲಪುಂಗವ ಹೊ|

ರತಿಸುಖ ರಸಮಾಯೆ ತ್ಯಜಿಸಿದ

ನೀರೆಸಂಗ ವಾಹಹಾಹ ಹಾಹಹಾಹ ||ಪಲ್ಲ||

ಶುಕ ವಾಹನನ ಪಂಚ ಶರಗಳ ಹತಿಗೆ |

ಚಕಿತಲೋಚನೇ ಗುರಿ

ಅಕಟಕಟಾಯಿತಂಗ ವಾಹಹಾಹ ಹಾಹಹಾಹ ||1||

ಪ್ರಕಟಿಸಿದರೆಯೇನು ಫಲವಿಲ್ಲೆ ಬಾಲೆ |

ಶಿಖಿನಖ ತನಗಿತ್ತೆ

ಸಖಿ ಜನರೊಳು ಭಂಗ ವಾಹಹಾಹ ಹಾಹಹಾಹ ||2||

ಬಾಲೆ ಕುರಂಗನೇತ್ರೇ ಬಿನದೈನೆಲೆಯ |

ಲೋಲ ಚೆನ್ನವೀರೇಂದ್ರ

ಪಾಳಿಸು ಕೃಪಾಂಗ ವಾಹಹಾಹ ಹಾಹಹಾಹ ||3||

ವಲ್ಲಭನೆ ಪೇಳಲಳವಲ್ಲ ಬಾ ನೀನೆ |

ಫುಲ್ಲನೇತ್ರಿಯ ಭಾವ ಬಲ್ಲ ಕೋವಿದನೆ ||ಪಲ್ಲ||

ಶರಧಿ ರಾಜನ ಸುತನು ಸರಸಿಜಾಪ್ತನ ಸುತನು |

ಸುರರು ಗುರುವಿನ ಸುತರು ಬಂದು ಮುತ್ತಿದರು

ಧರಣೀಶ ದಶರಥನ ಸುತನು ಸಿಂಹಿಕೆ ಸುತನು

ವರ ಕಾಶ್ಯಪನ ಸುತರು ಪಳಿಸಿಕೊಂಬುವರು ||1||

ಬೇವಿನ ನೆಲೆಗಳ ಕೆಳಗೆ ಬೆಳಗಿನಿಂದೊಪ್ಪುತಿಹ |

ಕಾವನಂಬಿನೊಳು ಕಂಕಣಗಳುದಿಸುತಲಿ

ಮಾವಿನ ತಳಿರ್ಗಳ ಮೇಲಿಳಿದು ರಾಜಿಸುವ

ತಾವರೆಯ ಸಖನ ಪಕ್ಷಿಗಳಿಗಡರಿದವು ||2||

ಭಿತ್ತಿ ಶಶಿ ತಿಥಿ ಶುಕ್ಲ ವೃತ್ತಕುಚವೆಂಬ ನುಡಿ |

ಉತ್ತರದಿ ಬರೆದಿಹಳು ಓದಿ ನೋಡರಸನೆ

ಚಿತ್ತಜಹರೈನಿಲಯ ಚೆನ್ನವೀರೇಶ್ವರನೆ

ಚಿತ್ತದೆ ತಿಳಿ ಭಾವಚಿತ್ರವೆಲೆ ಚದುರನೆ ||3||

ಬಿಡುಬೇಡ ಪಿಚಕಾರಿ ಪ್ರಿಯ |

ತುಡಿಕಿ ಓಕುಳಿಯಿಂದ ತೊಯ್ಸಿದಿ ಮೈಯ | |ಪಲ್ಲ||

ಕಳಸ ಕುಚಕೆ ಜೀರ್ಕೊಳವಿಲಿಂದೆ ಚದುರ |

ಬಳಲಿ ಕಣ್ಣಿಗೆ ಬವಳಿ ಬಂದಿತೆನಗೆ ||1||

ಮಲಯಜ ತೈಲ ಗುಲಾಲ ಕಸ್ತೂರಿ ಪರಿ |

ಮಳ ಹುಡಿಯೊಳಗೆ ಮೂರ್ಛೆಯಾದವಳಿಗೆ ||2||

ಬರಸೆಳೆದಪ್ಪಿ ಬಾಯ್ದೆರೆದು ಚುಂಬಿಸಿಯೆನ್ನ |

ಮರುಳುಗೊಳಿಸಿ ಹೀಗೆ ಮರಳಿ ಕಾಡುವರೆ || 3||

ಒಪ್ಪುವ ಜವ್ವನ ತಪ್ಪದೆ ನಿನಗೆ ನಾ |

ಕಪ್ಪಗೊಡುವೆನು ಕಂದರ್ಪ ಸನ್ನಿಭನೆ ||4||

ಸುಲಲಿತೈನೆಲೆ ನಿಲಯ ಚೆನ್ನವೀರೇಂದ್ರ |

ಸಲೆ ನೋಡೆ ಸಾಕು ಓಕುಳಿ ಪೊಯ್ದುದೆನಗೆ ||5||

ಏನೆಂದು ಪೇಳಲಿ ಎನ್ನಂಗಾವಸ್ಥೆಯ |

ಮಾನಿನಿಯರೆಲ್ಲರು ಮೊರೆ ಕೇಳಿರಮ್ಮ ||ಪಲ್ಲ||

ಕಡುದುರುಳ ಇವ ಎನ್ನ ಕದ್ದುಕೊಂಡೊಯ್ವಾಗ |

ಬಿಡಿಸಿಕೊಂಡರ ನಿಮಗ ಬಹುಪುಣ್ಯವಮ್ಮ ||1||

ಕಂಟಕ ಬಂದೆನ್ನ ಕಾಡೊಳಳಿಸಿತು ನಿಮ್ಮ |

ಹೊಟ್ಟೆಯ ಮಗಳು ಸೆರೆ ಕೊಡಬೇಡಿ ಎನ್ನ || 2||

ಪಡೆದ ವರನನಗಲಿ ಪಾಪಿ ಕೈಯಲಿ ಸಿಲ್ಕಿ |

ಅಡವಿ ಪಾಲಾದೆನು ಆಡಲೇನಮ್ಮ ||3||

ವಲ್ಲಭನಾಗಲಿ ವನವಾಸದೊಳಿರಿಸಿ |

ಖುಲ್ಲ ತಿತ್ತಿನ ಮಗನ ಕುಟಿಲವೇನಮ್ಮ ||4||

ಮುಂದ ಹುಟ್ಟಿದನಿವನಿಂದ ಮೋಸ ಮಾಡಿದ |

ಬಂಧನ ಬಹುವದು ಬಲ್ಲೆನೇನಮ್ಮ ||5||

ಹಿಂದೇಳು ಜನ್ಮದಲಿ ಹಿತದಿ ಮಾಡಿದ ಕರ್ಮ |

ಇಂದು ನನ್ನಯೆಡೆಗೆ ನೋಡಿತೇನಮ್ಮ ||6||

ಹಡದಂಥ ಗೌಡರ ಪಡೆದಂಥ ಕುಲಕರಣಿ |

ದಿಟವುಳ್ಳ ದೈವಾ ಸೆರೆಕೊಡಬೇಡಿರೆನ್ನ ||7||

ಕಡುದುರುಳ ಕಟುಕರೆ ಬಡ ಅಭಿಮಾನದವಳು |

ಹಿಡಿದು ಕೊಟ್ಟರೆ ನಿಮಗ ಮೃಢ ಮೆಚ್ಚನಣ್ಣಾ ||8||

ಸಾರದೈನೆಲೆ ಚೆನ್ನವೀರೇಶನು ಪೊರೆವ |

ಕಾಡಿನೊಳಗ ಬಂದು ಬೆರೆದಾನೇನಮ್ಮ ||9||

ಏರುವ ಜವ್ವನಿಯಳ ಬಿ |

ಟ್ಟೂರಿಗೆ ವಿಭು ಪೋಗಲಕ್ಷಿಯೊಳು ಕಂಕಣಗಳ್

ತೋರುವವೆನೆ ಬೆರಗಾಗುತೆ

ನೀರೆ ಅಡಕೊತ್ತಿನೊಳಡಕೆ ನಿಂದುದು ನೋಡೆ ||ಪಲ್ಲ||

ಕಚಕುಚಗಳ ಪಿಡಿದು ಮಧುರ |

ವಚನಗಳಾಡುತೆ ಬಿಗಿದಪ್ಪಿ ವದನದಡಹಿ

ಪ್ರಚುರಾಮೋದದೆ ರಮಿಸಲು

ರುಚಿರಾಂಗೆ ಅಡಕೊತ್ತಿನೊಳಡಕೆ ರೂಢಿಸಿತಲ್ಲೆ ||1||

ಕುಡುವಿಲ್ಲನ ಪಡಿಯ ವಿಟನು |

ಕಡು ತವಕದಿ ಬಂದು ರತಿಗೆ ಕರೆದಪ್ಪುತೆ ಮು

ದ್ದಿಡುತಂ ಮುಂಗುರಲ ತಿದ್ದ

ಲಡಕೊತ್ತಿನೊಳಡಕೆ ಸಿಕ್ಕಿತಂಗನೆ ನೋಡೆ ||2||

ಮುಡಿವಿಡಿದಾಲಿಂಗಿಸಿ ನಾಂ |

ನಡೆವೆನೆನೆ ಸಡಲಿ ಬೀಳೆ ನಾರಿಯ ಬಳೆಗಳ್

ನಡಿಯೆನೆನಲೊಡಿಯಲೀಕ್ಷಿಸಿ

ಅಡಕೊತ್ತಿನೊಳಡಕೆ ಸಿಲ್ಕಿತಬಲಾಮಣಿಯೆ ||3||

ಮಾವಿನ ತಳಿರ್ಗಳು ಬಿರಿದವು

ಬೇವಿನದಳವೆರಡು ಬಿಗಿದು ಬೆಮರ್ದುವು ನೋಡೆ

ಈವಾಳೆನೆ ಬಾಡಿದುದೆನ

ಲಾವಾಗಡಕೊತ್ತಿನೊಳಡಕೆ ಅಡಸಿತು ಸಖಿಯೇ ||4||

ಉಪಕಾರಿಕದೊಳಗಿರ್ದವ |

ಳುಪಕಂಠಕೆ ಬಂದು ರಮಣನುಪತಾಪಿಸುತಂ

ಉಪರತಿಗೆಳೆದೊಯ್ಯಲು ಕೇ

ಳುಪಲಸದಡಕೊತ್ತಿನೊಳಡಕೆ ಉಳಿದುದು ನೋಡೆ ||5||

ತಾರಾಪಥದೊಳು ಚಂದ್ರಮ |

ನೇರುತೆ ಬರಲೊಡನೆ ಮುಸುಕಿಯಲರಡಸಲ್ಕೆ

ವಾರಿಜಮುಖಿ ಜಾಂಗುಳಿಯಿಂ

ವಾರಿಸಿದಡಕೊತ್ತಿನೊಳಡಕೆ ಒಸೆದುದು ನೋಡೆ 6||

ಮುಖವನು ಮುದ್ದಿಗೆ ತಿರುಹಿದಿ |

ನಖಹತಿಯೊಳು ನಿಟ್ಟಿಸಿಬೈದು ನರಳಿದಿಯೆನುತೆ

ಲಿಖಿಸುತೆ ಪತ್ರವ ಕಳಹಲು

ಸಖಿ ಕೇಳಡಕೊತ್ತಿನೊಳಡಕೆ ಸಲೆ ಸಿಲ್ಕಿದುದೆ ||7||

ವಿನುತೈನೆಲೆಯ ಪುರೇಶ್ವರ |

ನನುಪಮ ಶ್ರೀ ಚೆನ್ನವೀರಣಾರ್ಯನು ಬಂದು

ನೆನೆನೆನೆದು ಬಾಡದಿರು ಬಾ

ಯೆನಲೀಯಡಕೊತ್ತಿನೊಳಡಕೆ ಇರ್ದುದು ನೋಡೆ ||8||

ಮಾರಬಲವು ವಿರಹ ಜನಕೆ ಸಾರಿತು |

ನೀರೆ ನಿನ್ನ ಮನಸು ಜೋಕೆ ಹಾಡಿತು ||ಪಲ್ಲ||

ಗಿಳಿಯ ರಥವನೇರಿಕೊಂಡು |

ಅಳಿಯ ಫೌಜು ಕೂಡಿಕೊಂಡು

ನಳಿನಶರನು ಬರಲು ಜ್ವಾಲೆಯೇರಿತು ||1||

ತುಂಬಿಹೆದೆಯ ಸುತ್ತಿ ಪೂವಿ |

ನಂಬುಗಳನು ಕರದೊಳೆತ್ತಿ

ಶಂಬರಾರಿ ಬಿಡಲು ತಾಪ ಮಿರಿತು ||2||

ಸುಲಲಿತೈನೆಲೆನಿಕಾಯ್ಯ |

ಸುಲಭ ಚೆನ್ನವೀರಣಾರ್ಯ

ಒಲಿದ ಮೇಲೆ ಮದನ ಭಯವು ತೀರಿತು | 3||

ಭಾವ ಸಂತರ್ಪಣ ಬಾಲೆ ಬಂದಿತು |

ಭಾವೆ ಚೂತವನವು ಕೊನರಿ ನಿಂದಿತು ||ಪಲ್ಲ||

ಮಂಜು ಮಲ್ಲಿಕಾದಿ ಕುಸುಮ |

ಮಂಜರಿಗಳ ಭಾರದಿಂದೆ

ಕುಂಜದೊಳಗೆ ನಿಬಿಡ ಛಾಯವಾಯಿತು | |1||

ಗೆಳೆಯ ಮದನಗೆಂದು ಚೂತ |

ತಳಿರು ಮಂಟಪಗಳು ರಚಿಸಿ

ನಳಿನಶರನ ದಳವು ಬಂದು ತೀವಿತು ||2||

ನೀರೆ ಐನೆಲೇಶ ಚೆನ್ನ |

ವೀರಣಾರ್ಯನ ಭಜಿಸುವ

ಸಾರಮತಿಯ ಜನಕೆ ಸೌಖ್ಯವಾಯಿತು ||3||

ಬಂದಿದೆ ಸಖಿಯೆ ಬಸವಂತನ ಹಬ್ಬ |

ಸುಂದರ ಪ್ರಿಯನು ಬಾರದೆ ಹೋದನೆ | ||ಪಲ್ಲ||

ಮಧುಪ್ರಿಯ ಮಾವಿನವನ ಕೊನರಿಸಿದ |

ಮದನ ಮಾರ್ಬಲವು ಕ್ರೀಡಿಸುವದ ||1||

ಕೆಳದೇರು ತಮತಮ ಪ್ರಿತಮರೊಡನೆ |

ಬಳಸಿ ಜೀರ್ಕೊಳವಿಲೋಕುಳಿ ಕೆಯ್ವರೆ ||2||

ಮಲಯಜ ಮೃಗಮದ ಘನಸಾರಕುಂಕುಮ |

ಕಲಸಿಟ್ಟೆ ಯಕ್ಷಕರ್ದಮ ಕಾಂತಗೆ ||3||

ತನುವೆಂಬ ಚೂತನಂದನಪಲ್ಲವಿಸಿತೆ |

ವಿನಯತಾನಕಟ ನಿಂತನೆ ಬಾರದೆ ||4||

ಅನುಪಮೈನೆಲೆ ಚೆನ್ನವೀರತಾರೇಶ |

ಮನಚಕೋರಕೆ ಪ್ರೀತಿ ಬಡಿಸಲಿಲ್ಲೆ ||5||

ಬಂತು ಬಸಂತ ವಿಲಾಸ ಮನೋರಮ |

ನಿಂತನಲ್ಲೆ ಸಖಿ ಬಾರದೆ ||ಪಲ್ಲ||

ಚೂತಜಾತಿ ವಿಚಕಿಲ ಬಕುಳೋತ್ಕರ |

ಪೂತಪುಷ್ಪಮಂಜರಿಯ ಸಹ ||1||

ಮಲಯಗಿರಿಯ ಪರಿಮಳ ಪೊತ್ತ ನಿಲಯ |

ಬಲದಿ ಝೋಂಪಿಸುತ ಮೆಲ್ಲನೆ ||2||

ಭಾಸುರೈನೆಲೆಯವಾಸ ಚೆನ್ನವೀ |

ರೇಶ ದಯಾನಿಧಿ ತಡೆದನೆ ||3||

ಹೋಳಿಯಾಡುವ ಬಾರೆ |

ಸುಂದರಾಂಗನ ಕೂಡ ಒಯ್ಯಾರೆ ||ಪಲ್ಲ||

ಹೇಮ ಸುರತ್ನಖಚಿತ ಪಿಚಕಾರಿ |

ಸಾಮಜಯಾನೆ ಸತ್ಪರದಿ ನೀ ತಾರೆ ||1||

ಕಾಶ್ಮೀರ ಚಂದನ ಕಲಸಿದೋಕುಳಿಯ |

ಸುಸ್ಮೇರಮುಖನೊಳೆಚ್ಚಾಡುವ ನೀರೆ ||2||

ಕಂಕಣ ಕರದೆ ಸೌರಭ ಸಮ್ಮಿಳಿತ |

ಕಂಕಣದೊಳು ಮುಳುಗಿಸುವ ಶೃಂಗಾರ | |3||

ಕೊನೆಯ ನೋಟೆಂಬ ಕೂರ್ಗಣಿಯೊಂದ ಪ್ರಿಯನ |

ಮನವಪಹರಿಸಿ ಮೆಚ್ಚಿಸುವ ಸುಸಾರೆ ||4||

ರುಚಿರೈನೆಲೆ ಚೆನ್ನವೀರೇಶನೊಲಿಸಿ |

ಉಚಿತಾಮೃತ ಸುಖ ಸೇರೆ ವಿಚಾರೆ ||5||

ನೋಡುವ ಬಾರೆ ಏ ಗೆಳದಿ |

ಶಿವನ ನೋಡುವ ಬಾರೆ ||ಪಲ್ಲ||

ನೋಡುವ ಬಾರೆ ನಮ್ಮ ನೋಟಗಳ ಹಬ್ಬವಿಂದು |

ಗಾಢದಿಂ ಪುರವ ಹೊಕ್ಕು ಗಮಕಿಲಿ ಬರುವ ಶಿವನ || ಅನು||

ಸಿಂಧು ಬಲ್ಲಾಳನಾಳ್ವ ಸ್ತ್ರೀಯಳ ಬೇಡುವುದಕೆ |

ಸುಂದರ ರೂಪ ತಾಳಿ ಸೊಗಿಸಿಲಿ ಬರುವ ಶಿವನ ||1||

ಕೋಟಿ ಮದನರ ಹಳಿವ ಕೊನಬುಗಾರ ತಾನಾಗಿ |

ಮೀಟು ಜವ್ವನಿಯೆ ಬಹಳ ಮಿನುಗುತೆ ಬರುವ ಮೃಢನ ||2||

ಹಾರಹೈಗಲಹಾಕಿ ಹಸ್ತ ಕಡಗಗಳಿಟ್ಟು |

ನೀರೆ ಚಿಮ್ಮುರಿಯ ಸುತ್ತಿ ಒನಪಿಲಿ ಬರುವ ಶಿವನೆ ||3||

ಪೂರ್ವದೊಳು ಮಾಡಿದ ಪುಣ್ಯದ ಫಲಗಳಿಂದೆ |

ಪಾರ್ವತಿವರನು ನಮ್ಮ ಪಟ್ಟಣದೊಳಗೆ ಬರುವ ಶಿವನ ||4||

ಗುರುತರೈನಿಲಯಪುರಿಯ ಗುರು ಚೆನ್ನವೀರೇಶ್ವರನು |

ವರ ಸಿಂಧುಕಟಕದೊಲು ಒಲವುತೆ ಬರುವ ಶಿವನ ||5||

ನೋಡಿದೆ ನೆನೆದು ಲಿಂಗಯ್ಯನ ನೋಡಿದೆ |

ನೋಡಿದೆ ಮನುಜ ಕೊಂಡಾಡಿ ವರಗಳನ್ನು

ಬೇಡಿ ಪ್ರೇಮದಿ ಪೂಜೆ ಮಾಡಿ ಮನವನಿಟ್ಟು| ||ಪಲ್ಲ||

ನಾಕದಿಂದತ್ತತ್ತ ಜಡೆಯೊ ನಾಗ |

ಲೋಕದಿಂದತ್ತತ್ತಲಡಿಯೊ ವಿಷ್ಣು

ಲೋಕೇಶ ಹರಿಯವಲೋಕನಕೆ ಮೀರಿ

ದಾಕಾರವನುಳ್ಳ ಶ್ರೀಕರಾಧ್ಯಕ್ಷನ ||1||

ನವಬ್ರಹ್ಮರಿಂದೆ ಪೂಜಿತನ ದಿವ್ಯ |

ನವಗ್ರಹದಿಂದೆ ರಾಜಿತನ ನಿತ್ಯ

ನವಖಂಡ ಪೃಥ್ವಿಯಾರ್ಣವ ಸಂಭರಿತನ

ನವಭೈರವ ಗಣಸ್ತವನ ಸಂಪ್ರೀತನ ||2||

ಸೂರ್ಯಾಗ್ನಿ ಚಂದ್ರಲೋಚನನ ಮಹಾ |

ವೀರಾತ್ಮ ವಿಘ್ನ ವಿಮೋಚನನ ದಿವ್ಯ

ದಾರ್ಯಮ ಕೋಟಿಭಧ್ಯುರ ಮಹಾ ಮಹಾ

ವೀರ್ಯ ಭುಜೋತ್ಕಟ ಶೌರ್ಯ ವಿಖ್ಯಾತನ ||3||

ನಕ್ಷತ್ರನಾಥಶೇಖರನ ಸರ್ವ |

ನಕ್ಷತ್ರ ಮಾಲಾಧರನ ನವ್ಯ

ಲಕ್ಷ್ಮೀಶ ವಿಧಿಯ ಸದೃಕ್ಷಾಯುಧಗಳ

ಯಕ್ಷರೂಪದಿ ಜಯಿಸಿ ದಕ್ಷಯಾನಂತನ| |4||

ನಾರಾಯಣಪೇಟೆ ನಿಲಯ |

ಸೂರಾತ್ಮಜ ಮದವಿಲಯ ವಿಶ್ವ

ಸಾರೈನಿಲಯಸಾರ ಶ್ರೀಗುರು ಚೆನ್ನ

ವೀರನೆನಿಸಿ ಕರ ಸೂರೆಗೊಂಡಾತನ ||5||

ಶ್ರೀಗುರುವಿನ ದಿವ್ಯ ಶ್ರೀಪಾದವ ಕಂಡೆ |

ವಾಗೀಶಚ್ಯುತ ಪುರಂದರ ವಂಧ್ಯನ ಕಂಡೆ || ಪಲ್ಲ||

ಯೋಗಿಭೂಷಣ ಸಾರ್ವಭೌಮನ ಕಂಡೆ |

ಯೋಗಿ ಹೃನ್ನಿಲಯ ಕರ್ಪೂರಯೋಗಿನ ಕಂಡೆ ||1||

ಭವ್ಯಮಂಗಲ ರೂಪ ಭಾಸುರನ ಕಂಡೆ |

ನವ್ಯ ಸೌಂದರ ರುದ್ರಾಣಿನಾಥನ ಕಂಡೆ ||2||

ದೇವಗಂಗಾಮಕುಟ ದೇವನ ಕಂಡೆ |

ಭಾವಜಾಹಿತ ಸರ್ವಜ್ಞ ಭಾವನ ಕಂಡೆ ||3||

ಸಾಮಚಾಜಿನಚಲ ಸಾರನ ಕಂಡೆ |

ಸೋಮರ್ಕಾನಲ ನೇತ್ರನ ಸೌಮ್ಯನ ಕಂಡೆ || 4||

ಕಾರುಣ್ಯಾಂಬುಧಿ ಕಾಲಕಾಲನ ಕಂಡೆ |

ಭೂರಿ ಕರ್ಮವಿನಾಶನ ಭೀಮನ ಕಂಡೆ ||5||

ನಿಗಮ ಘೋಟಕ ಸತ್ಯನಿತ್ಯನ ಕಂಡೆ |

ವಿಗತ ಪ್ರತ್ಯೂಹ ಪರಮ ವೀರನ ಕಂಡೆ ||6||

ವಿಲಸಿತೈನೆಲೆಪುರಿಯು ಈಶನ ಕಂಡೆ |

ಸುಲಭ ಶ್ರೀ ಚೆನ್ನವೀರಾಚಾರ್ಯನ ಕಂಡೆ ||7||

ಕಂಡೆನೊ ಹೈಮವತಿ ಪ್ರಿಯನ |

ಕಂಡೆ ಶೌರ್ಯನ ದಂಡಾಸುರಹರ

ಪುಂಡರೀಶಭವ ತುಂಡಪಹತನ ||ಪಲ್ಲ||

ಸಿಂಧೂತೂಣ ಮುಕುಂದಬಾಣ ಮಾರ |

ಮಂದಿರಧನು ಸುರಸಿಂಧು ಸಂಧೃತನ ||1||

ನೀಲಕಂಠನಾಭನ ಶೂಲಕರ |

ಫಾಲನೇತ್ರ ಗಣಜಾಲನಮಿತನ ||2||

ಕುಟಿಲಗ ಕಟಕ ವಿಘಟಜಿತ ದಿವಿಜ ಮ |

ಕುಟ ತಟಘಟಿತೋತ್ಕಟ ಸ್ಫುಟಕ್ರಮನ ||3||

ಶತಧೃತಿ ಶತಮುಖ ಶತದಳಾಕ್ಷನ |

ಪತಿಕ್ರುತಭೂಜ ಸಂತತಿ ಸನ್ನುತನ ||4||

ಸಾರನುತೈನೆಲೆಗಾರ ಧೀರ ಚೆನ್ನ |

ವೀರಣಾರ್ಯ ಕವಿವರ ಮಹಿತನ ||5||

ಬೇಡಲೇಂ ನಾನನುಪಮದಾತ |

ರೂಢಿಸಿಯೆನ್ನೊಳು ನೀನಿರುತಿರೆ ದೇವನಾಂ ಬೇಡಲೇಂ

ಶುಚಿ ದೇಹನೆ ಶುಚಿ ದೇಹ ಸುಹಿತನಾಂ ಬೇಡಲೇಂ || ಪಲ್ಲ||

ಹರಿಯ ಜನರಿಗೆ ಗೋಚರಿಸದ ಚರಣ |

ಸ್ಥಿರದಿಂ ಕರದೊಳಗಿರುತಿರೆ ದೇವನಾಂ ||1||

ಶ್ರುತಿ ಶಾಸ್ತ್ರಾಗಮ ನುತಿಗೆ ನಿಲುಕದ |

ಪ್ರತಿಮನೆ ಸುಲಭನಾಗಿರುತಿರೆ ದೇವನಾಂ | |2||

ಒಳಹೊರಗೆ ಪ್ರಜ್ವಲಿಸುತ ನೀನೆ- |

ನ್ನೊಳು ಸತತಂ ಬಿಡದಿರುತಿರೆ ದೇವನಾಂ || 3||

ಸನಕ ಸಾನಂದನ ಮುನಿಜನ ದೂರ |

ಅನುಕರಿಸೆನ್ನ ರಕ್ಷಿಸುತಿರೆ ದೇವನಾಂ ||4||

ಸ್ಫುರದೈನೆಲೆಪುರವರ ಚೆನ್ನವೀರೇ |

ಶ್ವರ ತವಪೂರ್ಣ ಕೃಪಮಿರುತಿರೆ ದೇವನಾಂ ||5||

ಸ್ಥಿರವಾಗುವುದಿನ್ನು ಎಂದಿಗೊ ದು

ಶ್ಚರಿತದಿ ಚರಿಸುವ ದುರುಳ ಮನವೆ ||ಪಲ್ಲ||

ಕುಲವಂತನೆಂದು ಮಾರ್ಮಲೆವುತೆ ಬಹು ನಿ

ರ್ಮಲ ಶೀಲವಂತನೆಂದುಸುರಿಕೊಂಬುವೆ

ನೆಲೆಗೆಟ್ಟು ತಿರುಗಿ ಅಕುಲಜರೈಶ್ವರ್ಯಕ್ಕೆ

ತಲೆದೂಗಿ ಬಯಸುವ ಹೊಲಸು ಮನವೆ | |1||

ಹಿಂಡು ಮಂದಿಯೊಳಿರ್ದ ಮಿಂಡಿವೆಣ್ಣುಗಳನು

ಕಂಡಾಕ್ಷಣಕೆ ತಾಯಿ ತಂಗಿಯೆಂಬುವೆ

ತಂಡವ ಬಿಟ್ಟು ಮುಂಕಡಿರ್ಪ ತರುಣಿಯ

ದುಂಡು ಮೊಲೆಗಳಿಗೆಳಸುವ ಚಂಡಿ ಮನವೆ ||2||

ಮಡದಿ ಮಕ್ಕಳು ಮನೆ ಒಡವೆ ವಸ್ತ್ರಗಳು ಬಂದ

ಒಡೆಯ ಜಂಗಮದ ಸೊಮ್ಮುಗಳೆಂಬೆ

ಒಡಲು ಹಸಿದು ಬೆಂಬಿಡದೆ ಬಂದಯ್ಯಗೆ

ಬಿಡುನುಡಿಯಾಡುವ ತುಡುಗು ಮನವೆ ||3||

ಕಳುವು ಹಾದರ ಮುಳಿಸು ಪಳಿಯುಮ್ಮಳಿಕೆಯು ಹಿಂಸೆ

ಗಳ ಮಾಡಬಾರದೆಂದೆಂಬೆ ಪರರಿಗೆ

ಮುಳು ಮುಳುಗಿಸುವ ಗುಣಗಳ ತಾಳ್ದು ಭವದೊಳು

ಮುಳು ಮುಳುಗೇಳುವ ಕೊಳಕು ಮನವೆ ||4||

ನಡೆನುಡಿವೊಂದಾಗಿ ನಡೆದಾದರೂ ಗಳನೆ

ಬಿಡದೆ ಜಾನಿಸಿಕೊಂಡಿರುತೆ ಬಳಿಕ

ದೃಢತರೈನೆಲೆ ಪುರದೊಡೆಯ ಚೆನ್ನವೀರೇಶ

ನಡಿಗಳ ಸೇವೆಯ ಪಡಿಯೊ ಮನವೆ ||5||

ಏನು ಸುಖ ಕಂಡಿ ಮನವೇ ದುರ್ಗುಣದಿ

ಹಾನಿಯಾದ ಅಕಟ ಜಗಕೆ ಬಂದು ||ಪಲ್ಲ||

ನಿತ್ಯಮಾಗಿಹ ವಸ್ತುವ ಸಾಧಿಸದೆ

ಮಿಥ್ಯ ಭೋಗಗಳಿಗೆಳಸಿ ಬಳಸಿ

ಸತ್ಯ ಮಾರ್ಗವ ಹಿಡಿಯದೆ ದೋಷ ದು

ಷ್ಕೃತ್ಯದೊಳು ಸಿಲುಕುತಳಲಿ ಬಳಲಿ ||1||

ನಾರಿಯರ ವಾರೆ ನೋಟವೆಂದೆಂಬ

ಕೂರಂಬಿಗಾತು ನಿಂದು ನೊಂದು

ಘೋರ ಭವಸಾಗರದೊಳು ಮುಳು ಮುಳುಗಿ

ಪಾರಾಗದಂತೆ ಮುರಗಿ ಸೊರಗಿ ||2||

ತನ್ನ ನಾಭಿಯ ಪರಿಮಳ ತಾ ತಿಳಿಯದೆ

ಮುನ್ನಳಿದ ಮೃಗದ ತೆರದಿ ಮರೆದಿ

ಸನ್ನುತೈನೆಲೆಯ ನಿಲಯ ಪರಮ ಗುರು

ಚೆನ್ನವೀರಾರ್ಯನರಿಯದೆ ಬರಿದೆ ||3||

ನಿನಗಿದು ಗುಣವೆ ನೀ ತಳಿ ಮನವೆ ||ಪಲ್ಲ||

ಕುಪಥವ ಮೆಚ್ವಿ ಕೊರಗಿದಿ ಘಟ್ಟಿ

ಸುಪಥವ ಬಿಟ್ಟಿ ಸುರತದಿ ಕೆಟ್ಟಿ ||1||

ತಾಪದೊಳುರಿದಿ ತತ್ವವ ತೊರೆದಿ

ಪಾಪದಿ ಬೆರೆದಿ ಪರಮನ ಮರೆದಿ ||2||

ಚೆನ್ನವೀರಾರ್ಯ ಬೆರೆದೈನೆಲೆಯ

ನಿನ್ನೊಳಗರಿಯ ನಿಖಿಲವ ಜರಿಯ ||3||

ಬರಿದೆ ನೀ ಬಹು ದಿನಗಳದಿ

ಅರಿದೆ ವ್ಯರ್ಥ ವ್ಯಾಕುಳದಿ ||ಪಲ್ಲ||

ಮೂರು ದಿನದ ಸಂಸಾರ ಕನಸಿನಾ

ಕಾರವೆಂಬುದು ನೀನು ತಿಳದಿ

ಸಾರ ಕೈವಲ್ಯದ ದಾರಿ ಹಿಡಿಯದೆ ಕಾಂ

ತಾರ ಮರವಿನೊಳು ಸುಳದಿ ||1||

ಲಲನೆ ಸುತರು ನಿನ್ನ ತೊಲಗಿzರೆಂದು ಬಹಳ

ಹಲುಬುತ ಶೋಕದಿಂದಳದಿ

ನೆಲದ ಮೇಲಿನ ಬಂಡೆ ತಲೆ ಮೇಲೆ ಹೊತ್ತಂತೆ

ಹಲವು ಚಿಂತೆಗಳನೆ ತಳದಿ ||2||

ನಿನ್ನೊಳಗಿನ ವಸ್ತು ಚೆನ್ನಾಗಿ ಬೆರೆದರೆ

ಇನ್ನುಳಿದುಪಟಳವಳಿದಿ

ಸನ್ನುತೈನಿಲಯ ಚೆನ್ನವೀರೇಂದ್ರನ

ಸನ್ನಳಿನಾರ್ಚಿಸೆ ಬೆಳದಿ ||3||

ಮೂರೆ ದಿನದ ಸಂಸಾರವೋ

ಮೂಢ ಕೇಳೊ ||ಪಲ್ಲ||

ಯಾರ ಭಾಗ್ಯವಿದು ಯಾರ ಮಂದಿರ

ಯಾರ ಬಂಧು ಬಳಗೇರು ಸುಂದರ

ನಾರಿ ಮಕ್ಕಳಿವರ್ಯಾರು ಅಸ್ಥಿರ

ನೀರ ಗುರುಳಿ ತಾನಿರುವ ಪ್ರಕಾರ ||1||

ಭೂಮಿ ಮೇಲೆ ಬಹು ವೇಷ ತಂದಿ

ಕಾಮಿಸಿ ನೀ ತಿರು ತಿರುಗಿ ಬಂದಿ

ತಾಮಸ ತಾಪತ್ರಯೊದೊಳು ನೊಂದಿ

ಸ್ವಾಮಿ ಮೆಚ್ಚಿದಂದಿಗೆ ನೀ ಬಂದಿ ||2||

ನಿನ್ನ ಹಡೆದವರಳಿವುವರಿಲ್ಲಿ

ನಿನ್ನ ಪುತ್ರರಳಿವುದು ನೀ ಬಲ್ಲಿ

ನನ್ನ ಪಾಡೇನೆಂದಾತ್ಮದಲ್ಲಿ

ನಿನ್ನೊಳಗೆ ನೀ ತಿಳಿಯಲೊಲ್ಲಿ | |3||

ಹಾನಿ ವೃದ್ಧಿ ಬಹು ಲಾಭಗಳೆಲ್ಲ

ಏನಾದರು ಬಾರದೆ ಬಿಡುವುಲ್ಲ

ಮಾನವನೆ ಚಿಂತಿಸುವುದಲ್ಲ

ನೀನಾಗಿ ಬಯಸಿದರೇನಿಲ್ಲ ||4||

ಪರಮೈ ನಿಲಯನ ಪ್ರಾರ್ಥನೆ ಮಾಡೊ

ಪರಿಭವ ಮೂಲವ ಕೀಳ್ದ ವಿಡಾಡೊ

ವರಗುರು ಚೆನ್ನವೀರೇಶ ನೋಡೊ

ಗುರುತುವಿಟ್ಟು ನಿಜ ಬ್ರಹ್ಮದಿ ಕೂಡೊ ||5||

ಶಿವಮಂತ್ರವ ಜಪಿಸೊ ಮಾನವ

ಭವಮಾಲೆಯ ಕ್ಷಯಿಸೊ ಮಾನವ ||ಪಲ್ಲ||

ತನು ನೆಚ್ಚಲಿ ಬೇಡೊ ಮಾನವ

ಘನ ಪಾಪದಗೂಡೊ ಮಾನವ

ಧನ ಸಂಪದ ಬಿಡೊ ಮಾನವ

ಕನಸಿನ ಪರಿ ನೋಡೊ ಮಾನವ ||1||

ರಸ ಸಂಸಾರ ಹುಸಿಯೊ ಮಾನವ

ಅಸಮಾತುರ ಬೆಸಿಯೊ ಮಾನವ

ವ್ಯಸನಾಂಕು ದಸಿಯೊ ಮನವ

ಮಿಸುಕಲೀಯವು ಸಸಿಯೊ ಮಾನವ ||2||

ಹಿಡಿ ಸಾಧುರ ಮಾರ್ಗವೊ ಮಾನವ

ಕಡಿ ಖಲ ಸಂಸರ್ಗವೊ ಮಾನವ

ತಡಿಯಿರಿ ಷಡ್ವರ್ಗವೊ ಮಾನವ

ಪಡಿ ನೀನಪವರ್ಗವೊ ಮಾನವ | |3||

ಕಳವಳ ಮಾಯ ಮರವೊ ಮಾನವ

ಕಳೆದುಳಿದರೆ ಸ್ಥಿರವೊ ಮಾನವ

ಉಳಿದಾರ್ಥಗಳೆರವೊ ಮಾನವ

ತಿಳಿಯಾನಂದದಿರವೊ ಮಾನವ ||4||

ವರದಯನೆಲೆವರನೆ ಮಾನವ

ಗುರು ಚೆನ್ನ ವೀರನೆ ಮಾನವ

ಕರಮನದೊಳು ತಾನೆ ಮಾನವ

ಬೆರೆದಿಹ ನೋಡೊ ಮಾನವ ||5||

ಸ್ಮರಿಸೊ ಶಿವಸಾಂಬನಾಮ ಮನದಿ ತಿಳಿದು ಸತತಂ

ಬೆರಿಸೊ ನಿಜಭಾವ ಸಾಧುಸಂಗದಲಿ ನಿರುತಂ ||ಪಲ್ಲ||

ಸತಿ ಸುತಾದಿ ಸೌಖ್ಯಭೋಗ ಸಟೆಯೆಂದೀಡಾಡೊ

ಅತುಳ ಮಹಾನಂದಪದದೊಳಂತರಿಸದೆ ಕೂಡೊ ||1||

ನಾಮ ರೂಪ ಕ್ರಿಯೆವಿದಂದು ನಚ್ಚಿ ಕೆಡಲಿ ಬೇಡೊ

ಕಾಮದ್ರವ್ಯ ಗಾಳಿಗಿಟ್ಟ ದೀಪದಂತೆ ನೋಡೊ ||2||

ಪೃಥುಲ ಸುಖಕರೈ ನಿಲಯನ ಧ್ಯಾನಪಥದೊಳಾಡೊ

ಪೃಥಿತ ಚೆನ್ನವೀರಣಾರ್ಯನೊಲಿಸಿ ವರವ ಬೇಡೊ ||3||

ಗುರು ಕರುಣವೇತ್ತರಿಗೆ ನರಗುರಿಗಳು ಸರಿ ಬಹರೆ

ಹರಕೃಪೆಯ ಪಡೆದವರಿಗೆ ಈ ಹುಸಿ ಜನರು ಸರಿ ಬಹರೆ ||ಪಲ್ಲ||

ಕಾಮನ ಬಾಣಕ್ಕಂಜದಾತ ನಿಜ ಮಹಿಮೋನ್ನತನವನೆ

ಆ ಮಹಾ ನಿಜ ಬ್ರಹ್ಮವೇತ್ತನು ಆಶೆಯೊಳು ಸಿಲ್ಕುವನೆ | |1||

ದಾನವರ ಭಯಕ್ಕಂಜಿ ಧರೆಯೊಳು ಧಾಮನಿಧಿ ಪ್ರಜ್ವಲಿಸನೆ

ಮಾನವರು ಪಳಿಗಂಜಿ ಸತ್ಕವಿ ಮಂಜುಲ ಕೃತಿ ರಚಿಸನೆ ||2||

ಕಮಲ ಮಿತ್ರನ ಕಿರಣದೆದುರಿಗೆ ಕತ್ತಲಡಸಿ ನಿಲಬಲ್ಲುದೆ

ಯಮನಿಗಳುಕದ ಮಹಿಮನೊಳು ಪಿಶಾಚಿ ತಾ ನಿಲಬಲ್ಲುದೆ ||3||

ಮೃಗಪತಿಯ ಇದಿರಿನೊಳು ಕರಿಗಳ ಮುಸುಕಿ ಧೈರ್ಯದಿ ನಿಲುವವೆ

ಖಗಪತಿಯ ಕಂಡಳುಕದೆ ಫಣಿಕುಲಗಳಡಸಿ ಗೆಲುವವೆ | |4||

ವಿಲಸಿತೈನೆಲವಾಸ ಚೆನ್ನ ವೀರೇಶನನರ್ಚಿಸಿದಾತನೆ

ಸುಲಭ ಪದವಿಗೆ ಸೇರಿ ನಿರುತಂ ಸಕಲರೊಳು ವಿಖ್ಯಾತನೆ ||5||

ನಿಷ್ಠರಿಗೆ ಬಹು ಕಷ್ಟವಾಯಿತು

ಕನಿಷ್ಟರಿಗೆ ಬಹು ಸುಖವಾಯಿತು | ಶಿವ

ಶಿಷ್ಯರಿಗೆ ವ್ಯಾಕುಲವಾಯಿತು ಬಹು

ದುಷ್ಟರಿಗೆ ಫಲವಾಯಿತು ಶಿವ ಶಿವ ||ಪಲ್ಲ||

ಆಚಾರವನುಳ್ಳವರಿಗೆ ವಿಘ್ನ

ವಧಿಕವಾಗಿ ಕಾಡುವದಾಯಿತು

ಆಚಾರವ ಬಿಟ್ಟವರಿಗೆ ಧರೆಯೊಳ

ಗೈಶ್ವರ್ಯ ತಾನಾಯಿತು ||1||

ಬುದ್ಧಿವಂತರಿಗೆ ಬುಧರಿಗೆ ಸುಖಸ

ಮೃದ್ಧಿಯಡಗಿ ರುಜವಡಿಸಿತು

ಬುದ್ಧಿಹೀನರಿಗೆ ಬಹು ಕೋಪಗಳಿಗೆ

ಭೂರಿ ಭಾಗ್ಯವಡಸಿತು ||2||

ಜಾರ ಚೋರರಿಗೆ ಜಾತಿ ಭ್ರಷ್ಟರಿಗೆ

ಜಯ ಸಂಪದವನು ಹೆಚ್ಚಿತು

ಸಾರ ಸುಜನರಿಗೆ ಸೌಮ್ಯಹೃದಯರಿಗೆ

ಸಂಕಟವನು ಹೆಚ್ಚಿತು ||3||

ಮದ್ಯಪಾನರಿಗೆ ಮಾಂಸಪ್ರಿಯರಿಗೆ

ಮಾನವ ಮಾಡುವದಾಯಿತು

ವಿದ್ಯಾವಂತರಿಗೆ ವಿಮಲಶಾಂತರಿಗೆ

ರಸವ ಮಾಡುವದಾಯಿತು ||4||

ಕಲಿಯ ಮಹಿಮವೊ ಕರ್ಮದ ಬಾರವೊ

ಖಲರ ದೈವವೊ ವೇದಿಸದೋ

ವಿಲಸದೈನಿಲಯವಿಭು ಗುರು ಚೆನ್ನ

ವೀರೇಶನ ಬಗೆ ಯಾವುದೋ |5||

[/fusion_toggle]

ನಿನ್ನೊಳು ನಿರ್ಮಳವಾಗಿ

ನೀನಿದು ತಿಳಿಯಣ್ಣ ||ಪಲ್ಲ||

ನೀನೆ ಕಿಂಕರನಾದರೆ ನಿನಗೆ

ನಿಖಿಳ ಜನರು ಕಿಂಕರರಣ್ಣ

ನೀನೆ ಗರ್ವಿಯಾಗಿದ್ದರೆ ಜಗದೊಳ

ನಿಖಿಳರು ಗರ್ವಿಗಳಣ್ಣ ||1||

ನಾನೆ ಬಲ್ಲಿದನೆಂದರೆ ನೀನು

ನಳಿನಜನ ಮಗನೇನಣ್ಣ

ನಾನೆಂದುಬ್ಬುವ ನರನಿಗೆ

ಯಮಪುರ ನಾಯಕ ನರಕವಣ್ಣ |2||

ತನ್ನೊಳು ಕಪಟವನಿರ್ದರೆ ಧರೆಯೊಳು

ತನಗೆಲ್ಲರು ಕಪಟಿಗಳಣ್ಣ

ತನ್ನೊಳು ಹಿತವನು ಬಳಸಿದರಿಯೊಳು

ತನಗೆಲ್ಲರು ಹಿತರಣ್ಣ | 3||

ಮೂರೆ ದಿವಸದ ಸಂತೆಯೆಂದು ನೀ

ಮುಖ್ಯ ವಿಚಾರಿಸಿ ನೋಡಣ್ಣ

ತೋರಿಯಡಗುವ ಲೋಕವನರಿದು

ತೊಳಲುವದಿನ್ಯಾಕಣ್ಣ | 4||

ಗುರುತರೈನೆಲೆಯ ಗುರು ಚೆನ್ನವೀರನ

ಗುರುವಿಡಿದು ನೀ ನಡಿಯಣ್ಣ

ಅರಿಯದೆ ಭವದೊಳಗಳಿದ ಜೀವಿಗ

ಳನಂತ ಕೋಟಿಗಳಣ್ಣ ||5||

ಬಾಗವಿಲ್ಲದವನು ಭವ್ಯವೆನಿಸನು

ಭಾವ ಜಾಂತಕನಂಘ್ರಿ ಭಜಿಸಿದರೇನು ||ಪಲ್ಲ||

ಆನೆ ಅರಣ್ಯದೊಳಗಡಸಿರದೇನು

ಶ್ವಾನ ಬೂದಿಯೊಳಗೆ ಶಯನಿಸಿರದೇನು

ಮೀನು ನೀರೊಳು ಮುಳಗಿ ಮಿಂದಿರದೇನು

ಧ್ಯಾನದಿಂ ಬಕವು ನದಿಯ ದಡದಲ್ಲಿರದೇನು ||1||

ಸೋಗೆ ನಿರ್ವಿಷಯದಿಂದೆ ಸಂಚರಿಸದೇನು

ತೂಗಿ ಬಾವುಲಿ ತಲೆ ತೆಳಗಿರದೇನು

ಗೂಗಿ ಕಣ್ಣುಗಳ ಮುಚ್ಚಿ ಗುಹದಲ್ಲಿರದೇನು

ಕೂಗಿ ಕಾಲಜ್ಞನಾಗಿ ಕೋಳಿಯಿರದೇನು ||2||

ಇಂತು ಜಂತುಗಳಿಳೆಯೊಳಿರ್ದು ಫಲವೇನು

ಅಂತರಂಗವು ಶುದ್ಧವಾದನಕ

ಸಂತತೈನಿಲಯದೊಳು ಸೇರಿಕೊಂಡಾತನು

ಶಾಂತ ಗುರುಚೆನ್ನವೀರೇಶನು ತಾನಾಗುವನು| ||3||

ಸುಜನರಿಂದೆ ಬಹುಸುಖವಲ್ಲದೆ ದುಃಖವಾಗಬಲ್ಲದೆ

ಕುಜನರಿಂದೆ ವ್ಯಾಕುಲವಲ್ಲದೆ ಸುಖವಾಗಬಲ್ಲದೆ ||ಪಲ್ಲ||

ಪರಿತೋಷದಿಂ ಪ್ರಜರ ಪಾಲಿಸುವನ ದೇಶವಗಲ ಬಲ್ಲುದೆ

ಪರಿಪೀಡಿಸಿ ನರರಪಾಲಿಸುವನ ದೇಶ ನೆಗೆಯಲು ಬಲ್ಲದೆ

ಪರಮ ಧರ್ಮಿಷ್ಟನ ಪಟ್ಟಣವನು ಕೆಟ್ಟು ಹೋಗಬಲ್ಲದೆ

ಪರಮ ದುಷ್ಟನಾಳ್ವ ಪಟ್ಟಣವನು ಪುಷ್ಟಿಯಾಗಬಲ್ಲದೆ ||1||

ಘನ ವಿಶಿಷ್ಟನಾಳ್ವ ಗ್ರಾಮವು ಕಷ್ಟದೊಳಿರಬಲ್ಲದೆ

ಘನ ಕನಿಷ್ಠನಾಳ್ವ ಗ್ರಾಮವು ತುಷ್ಟದೊಳಿರಬಲ್ಲದೆ

ಮನವುಳ್ಳವ ಮಾಳ್ವಮನೆತನವು ಕೂಡಿ ಒಡೆಯಬಲ್ಲದೆ

ಮನಹೀನನು ಮಾಳ್ವ ಮನೆತನವು ಕೂಡಿ ನಡೆಯಬಲ್ಲದೆ ||2||

ಹಸಿ ಕೊಡದಿಂ ಹೊಳೆಯ ಹಾಯ್ವೆನೆನಲು ಪಾರವಾಗಬಲ್ಲದೆ

ಹೊಸ ಮನೆಯೊಳು ಗೂಗಿ ಹೊಕ್ಕು ಕೂಗಲು ಜಯವಾಗಬಲ್ಲದೆ

ಮಸಗಿ ಸರ್ಪವು ಒಳಮನೆಯ ಸೇರಲು ಕ್ಷೇಮಾವಾಗಬಲ್ಲದೆ

ಸುಶಿರದ ಮೇಲೋತಿ ಸುಳಿದೇರಲು ಶುಭವಾಗಬಲ್ಲದೆ ||3||

ಕಂಚುರಗಿ ದಿವ್ಯಕನಕ ಕೆರೆಯಲೊಂದಾಗಬಲ್ಲದೆ

ಹಂಚು ಮಣ್ಣಿನೊಳು ಹರಹಿ ಕೂಡಿಸಲೊಂದಾಗಬಲ್ಲದೆ

ಮಿಂಚು ಮೋಡಿನೊಳು ಮಿರುಗಲು ಪೂರೈಸಿ ಹೊಳೆಯಬಲ್ಲದೆ

ಕೆಂಚು ಮಹಾಕಾಳಕೆರಗಲು ಕಪ್ಪಿನಿಂದುಳಿಯಬಲ್ಲದೆ |4||

ವಿದಿತ ಬ್ರಹ್ಮಜ್ಞಾನಿವಿದನಿಗೆ ಸೂತಕವಿರಲು ಬಲ್ಲದೆ

ಪದೆದ ಪರಮಹಂಸಫಲದಗೆ ಪಾತಕವಿರಲು ಬಲ್ಲದೆ

ಸದಮಲೈನೆಲೆಪುರಿಸದನಗೆ ಭವಮಾಲೆ ಇರಲು ಬಲ್ಲದೆ

ವಿಧಿಯಾಜ್ಞೆ ಗುರುಚೆನ್ನವೀರನ ಭಕ್ತಿಗೆ ಬರಲು ಬಲ್ಲದೆ ||5||

ದುರ್ಗುಣ ರಾಜನ ಧುರದೋಳು ಲೋಕವು ಬಾಳಬಲ್ಲದೆ

ನಿರ್ಗುಣಮಂತ್ರಿಯ ನಿಷ್ಠುರವನು ಜನ ತಾಳಬಲ್ಲದೆ ||ಪಲ್ಲ||

ಬೂಟಕನ ಬುದ್ಧಿ ಬುಧರ ಸದ್ಗೋಷ್ಠಿಗೆ ಹೆಚ್ಚಬಲ್ಲದೆ

ಚಾಟಕನ ಚಿತ್ತ ಚತುರ ಕವಿಗಳಿಗೆ ಮೆಚ್ಚುಬಲ್ಲದೆ

ಬೇಟಕನಾತ್ಮವು ಕೇಳಿವಿಲಾಸದೊಳಿರಲುಬಲ್ಲದೆ

ಕಾಟಕನರುಹವು ಕಾರುಣ್ಯಭಾವದಿ ಬರಲುಬಲ್ಲದೆ ||1||

ಕೊಲುವನ ಮನೆ ಹೊಕ್ಕ ಹೋತಿನ ಮರಿಯದು ತಿರುಗಬಲ್ಲದೆ

ಕಲಿಯ ಮರೆಯೊಳು ಹೊಕ್ಕ ಕಪಿಯ ಹೃದಯವು ಕೊರಗಬಲ್ಲದೆ

ಹುಲಿಯ ಗವಿಯೊಳು ಹೊಕ್ಕು ಹುಲ್ಲೆಯ ಮರಿಯದು ದಕ್ಕಬಲ್ಲದೆ

ಮಲೆಹೊರೆಯೊಳು ಹೊಕ್ಕ ಮರಿಯ ದೋತಕವು ಸಿಕ್ಕಬಲ್ಲದೆ ||2||

ಸೂಳಿ ಬಾಣತಿಯ ಸುತನಿಗೆ ಪರಿಣಾಮ ತಟ್ಟಬಲ್ಲದೆ

ವಾಳಿಹೆಣ್ಣನಾಳ್ವ ವರನಿಗೆ ಪ್ರೇಮ ಹುಟ್ಟಬಲ್ಲದೆ

ಚೇಳಿನಾಮರಿ ಪುಟ್ಟಿ ತೆರಳಿ ತಾಯಿಯಿಂದೆ ಬದುಕಬಲ್ಲದೆ

ಬಾಳಿ ಕೋಗಿಲಮರಿ ಬಳೆದು ಕಾಗಿಯಹಿಂಡು ಬದುಕಬಲ್ಲದೆ || 3||

ಬೆಲೆವೆಣ್ಣಿನ ಕೂಡ ಬೆರೆದಿರುವನ ಧನವಲರಬಲ್ಲದೆ

ಕೆಲೆವ ಹೆಣ್ಣಿನ ಬೋಗಕೆಳಸಿದವನು ಮಾನಮನರಬಲ್ಲದೆ

ಅಲೆವ ವೈರಿಯ ಮನೆಯ ಸೇರಿಸಿದರೆ ಹಿತವಾಗಬಲ್ಲದೆ

ಮಲೆವದಾಯಾಧ್ಯರ ಮೆಚ್ಚಿಸಿದರೆ ಮರ್ಮಹೋಗಬಲ್ಲದೆ ||4||

ಕಾಮಿನಿಯರ ನೋಡಿ ಕಾಮಿಸಿ ಯತಿಮನ ಕರಗಬಲ್ಲದೆ

ಸಾಮಾನ್ಯರನು ನೋಡಿ ಸತ್ಪುರುಷನ ಭಾವವೆರಗಬಲ್ಲದೆ

ಧಾಮೈನಿಯಲದಧಾಮ ಶುಭವು ಖಳಗೆ ಬೆರೆಯಬಲ್ಲದೆ

ಆ ಮಹಾಚೆನ್ನವೀರಹ್ವನಂಘ್ರಿ ಭವಿಗೆ ದೊರೆಯಬಲ್ಲದೆ ||5||

ವೇದವನೋದದ ವಿಪ್ರನು ಜಗದೊಳು ಕೆಡುವನಾವಗಂ

ಮೇದಿನಿಪತಿ ದುರ್ಮಂತ್ರಿಯ ದೆಸೆಯಿಂದೆ ಕೆಡುವನಾವಗಂ ||ಪಲ್ಲ||

ಆ ಮಹೈಶ್ವರ್ಯಮನಯದೆ ದೆಸೆಯಿಂದೆ ಕೆಡುವುದಾವಗಂ

ಶಾಮಚರಕರ್ಮ ಸಾಧಕನಂಗವು ಕೆಡುವುದಾವಗಂ

ಕಾಮಿನಿಯರ ಭೋಗ ಕಾಮಿಸಿದ ಯೋಗಿ ಕೆಡುವದಾವಗಂ

ಪ್ರೇಮದ ಲಾ¯ನ ಪ್ರಿಯದಿಂದೆ ಪುತ್ತನು ಕೆಡುವುನಾವಗಂ ||1||

ಆರಂಬವನು ನೋಡಿ ಅಡಸದಿದ್ದರೆ ಅದು ಕೆಡುವುದಾವಗಂ

ಸೇರದ ಧೂರ್ತನ ಸೇವೆಯಿಂ ಕುಲವನು ಕೆಡುವುದಾವಗಂ

ಸಾರಮಿತ್ರತ್ವಮಸ್ನೇಹದ ದೆಸೆಯಿಂದೆ ಕೆಡುವುದಾವಗಂ

ಪರವಿಲ್ಲದರ್ಥಮಪಾತ್ರ ದಾನದಿಂದೆ ಕೆಡುವುದಾವಗಂ || 2||

ಪಂಡಿತಕವಿಗಳ ಪಳಿವನಿಂದಕನು ಕೆಡುವುನಾವಗಂ

ಮಂಡಿತ ಮಾನ್ಯರ ಮಾನವ ಕೊಂಬವನು ಕೆಡುವನಾವಗಂ

ಚಂಡ ಕೋಪಿಯಾಗಿ ಚರಿಸುವ ಖಳನು ತಾ ಕೆಡುವನಾವಗಂ

ಭಂಡಿಗಿಕ್ಕಿ ಪರರ ಬಾಧಿಸುವಧಮನು ಕೆಡುವನಾವಗಂ ||3||

ಭೂರಮಣನ ಕೂಡೆ ಬಿಂಕದಿಂದಿರ್ದವನು ಕೆಡುವನಾವಗಂ

ಕ್ರೂರನ ಸಂಗದಿಂದ ಕೂಡಿ ನಡೆದವನು ಕೆಡುವನಾವಗಂ

ವಾರವಧುವಿನೊಳು ಒಲಿದು ಮಾನವನು ಕೆಡುವನಾವಗಂ

ಗಾರು ಮಾಡುತೆ ಬಹುಗರ್ವಿಯಾದವನು ಕೆಡುವನಾವಗಂ ||4||

ಬುಧರ ಬಿಟ್ಟು ದುರ್ಬೋಧೆಗಾದವನು ಕೆಡುವನಾವಗಂ

ಸದರ ಬಿಟ್ಟರಸನು ಸದನ ಸೇರಿದರೆ ಕೆಡುವನಾವಗಂ

ಸದಮತೈನಿಲಯಕೆ ಸೇರದವನು ತಾನು ಕೆಡುವನಾವಗಂ

ವಿದಿತ ಶ್ರೀ ಚೆನ್ನವೀರನ ಮರೆದವನು ಕೆಡುವನಾವಗಂ ||5||

ಬಹುಮಾನಗಳ ಕೊಂಡ ಬಾಳುವವನು ಜನಕೆ ಶೂಲವಲ್ಲವೆ

ಇಹಪರಗಳಿಗೆ ವಿರಹಿತನಾದವನು ಶೂಲವಲ್ಲವೆ ||ಪಲ್ಲ||

ಭೂವರನಿಗೆ ಕೆಟ್ಟ ಬುದ್ದಿ ಹೇಳುವವನು ಶೂಲವಲ್ಲವೆ

ಧಾವತಿಯರಿಯದ ಧಡ್ಡಮಗನು ಪಿತಗೆ ಶೂಲವಲ್ಲವೆ

ಚಾವಡಿಯೊಳು ಕುಳಿತು ಚ್ಯಾಡಿ ಹೇಳುವವನು ಶೂಲವಲ್ಲವೆ

ಸಾವಾಸವನೆ ಮಾಡಿ ಸಂಕಟವಿಕ್ಕುವವನು ಶೂ¯ವಲ್ಲವೆ ||1||

ಭಯವಡ ಸಿಟ್ಟು ಜನಕೆ ಬಾಧಿಸುವರಸನು ಶೂಲವಲ್ಲವೆ

ಜಯರಣದೊಳು ನಿಂದು ಜರುಗುವ ಕುದುರೆಯು ಶೂಲವಲ್ಲವೆ

ನಯಭಯಂಗಳ ಬಿಟ್ಟು ನಾಚದ ಸತಿಯಳು ಶೂಲವಲ್ಲವೆ

ವಯವಿರಲಿಕೆ ವರನವೊಲ್ಲದ ಮಗಳು ತಾ ಶೂಲವಲ್ಲವೆ ||2||

ಮರೆಮೋಸವನೆ ಮಾಡಿ ಮದ್ದಿಕ್ಕುವ ನಾರಿ ಶೂಲವಲ್ಲವೆ

ವರನವೊಲಿಸೊಕೊಂಡ ಜಾರಸ್ತ್ರೀ ಸತಿಗೆ ಶೂಲವಲ್ಲವೆ

ಪರರ ಕೆಡಸಿ ಬಾಳ್ವ ಪಾಪಾತ್ಮನು ಮಹಾಶೂಲವಲ್ಲವೆ

ಸುರತದೊಳಗೆ ಕಾಡಿ ಸುಖ ಬಡಿಸದ ಹೆಣ್ಣು ಶೂಲವಲ್ಲವೆ ||3||

ಕೊಳಕು ಮನವನುಳ್ಳ ಕೋಪಿಷ್ಠ ಶಿಷ್ಯನು ಶೂಲವಲ್ಲವೆ

ಅಳುಕಿ ಸೇವೆಯ ಮಾಡನಾಳು ಧಣಿಯರಿಗೆ ಶೂಲವಲ್ಲವೆ

ಎಳಕ ಹೆಣ್ಣಿಗೆ ಮುಪ್ಪಿನೆರಯನಿರ್ದರೆ ಕೆಟ್ಟ ಶೂಲವಲ್ಲವೆ

ಬಳುಕೆ ಅತ್ತೆಗೆ ಭಂಡುಗೆಲೆವ ಸೊಸೆ ಶೂಲವಲ್ಲವೆ ||4||

ಕುಲಗಳ ಕೆಡಿಸುವ ಕುಜನನು ಲೋಕಕ್ಕೆ ಶೂಲವಲ್ಲವೆ

ಬೆಲೆ ಹೆಣ್ಣಿನೊಳಗಾಗಿ ಬೆರಸುವವನು ತಾನು ಶೂಲವಲ್ಲವೆ

ವಿಲಸಿತೈ ನಿಲಯಕೆ ವಿರಸವಾದವನಿನ್ನು ಶೂಲವಲ್ಲವೆ

ಅಲಘು ಚೆನ್ನವೀರೇಶನರ್ಚಿದಧಮನು ಶೂಲವಲ್ಲವೆ || 5||

ಅನ್ಯಾಯದಿಂದಾಳುವರಸನ ರಾಜ್ಯವು ಬಾಳ್ವುದೆಂತು

ಮಾನ್ಯವಿಲ್ಲದವನಾಳಿಕೆಯೊಳು ಸುಜನ ಬಾಳ್ವುದೆಂತು ||ಪಲ್ಲ||

ಹೆತ್ತ ತಾಯಿಯೆ ಮಗನ ಹಿಸುಕುವೆನೆಂದರೆ ಬಾಳ್ವುದೆಂತು

ಬಿತ್ತಿದ ಹೊಲವನೆ ಬೇಲಿಯು ಮೆಯ್ದರೆ ಬಾಳ್ವುದೆಂತು

ಮುತ್ತಿದ ಮುನ್ನಿರು ಮೇರೆದಪ್ಪಿದರೆ ಬಾಳ್ವುದೆಂತು

ಬಿತ್ತರಾಗಸವನೆ ಬಿದ್ದರೆ ಜಗದೊಳ ಬಾಳ್ವುದೆಂತು ||1||

ನಿಟ್ಟಿಸಿದರೆ ಕಿಚ್ಚು ನಿಜವಾಗಿ ಸುಟ್ಟರೆ ಬಾಳ್ವುದೆಂತು

ಅಟ್ಟಡಿಗೆಯನೆಲ್ಲವತಿ ವಿಷವಾದರೆ ಬಾಳ್ವುದೆಂತು

ನೆಟ್ಟನೆ ನಿಂದಿರ್ದ ನೆಲವನಿಳಿದರಿನ್ನು ಬಾಳ್ವುದೆಂತು

ಮುಟ್ಟಿ ಬೀಸುವಗಾಳಿ ಮೂಡದೆ ನಿಂದರೆ ಮುಂದೆ ಬಾಳ್ವುದೆಂತು || 2||

ಜಲಧರ ನಂಜಿನ ಜಲವನು ಸುರಿಯಲು ಬಾಳ್ವುದೆಂತು

ನೆಲದೊಳು ಬೀಜವು ನಾಟದೆಯಿರ್ದರೆ ಮತ್ತೆ ಬಾಳ್ವುದೆಂತು

ಪುಲಿಗೆ ಧೈರ್ಯಪುಟ್ಟಿ ಪುರದೊಳ ಪೊಕ್ಕರೆ ಬಾಳ್ವುದೆಂತು

ಸಲೆ ಹಗಲೊಳು ಭೂತ ಸಂಚರಿಸಿದರಿನ್ನು ಬಾಳ್ವುದೆಂತು ||3||

ಕೊರಡಿರುಳೊಳು ವಾಯುಕೋಣೆಗೆ ಮೂಡಲು ಬಾಳ್ವುದೆಂತು

ಕರಡಿ ಮೋರಿಯ ಕೆಂಪುಕಡವರಿಯೊಳು ಬಾಳ್ವುದೆಂತು

ಉರುತಿಮಿಂಗಲವಿನ್ನು ಉದಧಿ ಬಿಟ್ಟಿರ್ದರೆ ಬಾಳ್ವುದೆಂತು

ಸುರುಚಿರ ಶಾಸ್ತ್ರನ ಸುಳಿವಿಲ್ಲದಿರೆ ಲೋಹ ಬಾಳ್ವುದೆಂತು ||4||

ಅಖಿಳ ನಿರ್ಗತಂಗಳಡಸಿರೀ ಲೋಕ ಬಾಳ್ವುದೆಂತು

ವಿಕಟ ಕಾಮನಬಿಲ್ಲುವಿಳಿದರೆ ಪ್ರಜರಿನ್ನು ಬಾಳ್ವುದೆಂತು

ಪ್ರಕಟಿತೈನಿಲಯಕೆ ಪರವಾಗಿರ್ದವರು ಬಾಳ್ವುದೆಂತು

ಅಕಳಂಕ ಚೆನ್ನವೀರಾರ್ಯನ ಪಳಿದವರು ಬಾಳ್ವುದೆಂತು ||5||

ಶಾಂತಿಯಿಲ್ಲದವನ ಶರಣತ್ವಮಿಳೆಯೊಳು ಶೋಭಿಸಿರ್ಪುದೆ

ಕಾಂತಿಯಿಲ್ಲದವನ ಕಾಯವು ಜನರೊಳು ಶೋಭಿಸಿರ್ಪುದೆ ||ಪಲ್ಲ||

ಅಕ್ಷರವಿಲ್ಲದವನಾನನ ಸಭೆಯೊಳು ಶೋಭಿಸಿರ್ಪುದೆ

ಸುಕ್ಷೇಮವಿಲ್ಲದ ಸುಜನನ ಮನೆಯನು ಶೋಭಿಸಿರ್ಪುದೆ

ಲಕ್ಷಣವಿಲ್ಲದ ಲಲನೆಯ ಭೋಗವು ಶೋಭಿಸಿರ್ಪುದೆ

ಪಕ್ಷವನಿಲ್ಲದ ಪರಿಣಯಕಾರ್ಯವು ಶೋಭಿಸಿರ್ಪುದೆ ||1||

ಹಗಲೊಳಿರ್ದ ಸಸಿಪ್ರಭೆಯನು ಜಗದೊಳು ಶೋಭಿಸಿರ್ಪುದೆ

ಹಗರಣಿಗನ ಮಾತು ಹಾಸ್ಯಕ್ಕಲ್ಲದೆ ಮತ್ತೆ ಶೋಭಿಸಿಪುದೆ

ಪೊಗರು ಜವ್ವನವನು ಪೋದ ಮೇಲೆ ಸತಿ ಶೋಭಿಸಿರ್ಪುದೆ

ಹಗೆಯ ಹಿತವನೆಚ್ಚಿ ಹಕ್ಕೆಯೊಳಿರಲದು ಶೋಭಿಸಿರ್ಪುದೆ ||2||

ತನು ಗುಣವಳಿಯದ ತಪಸಿಯ ವೃತವನು ಶೋಭಿಸಿರ್ಪುದೆ

ತನಗೆ ಪುಟ್ಟಿದ ಕೆಟ್ಟ ತನಯನಿಂದೆ ಕುಲವು ಶೋಭಿಸಿರ್ಪುದೆ

ಧನಲೋಭಿ ಮಾಡುವ ದಾನ ಮಾನ್ಯರೊಳು ಶೋಭಿಸಿರ್ಪುದೆ

ಜನಪಗೆ ದುರ್ಮಂತ್ರಿಜಾಲವಿರ್ದರೆ ರಾಜ್ಯ ಶೋಭಿಸಿರ್ಪುದೆ ||3||

ಕಮಲಗಳಿಲ್ಲದ ಕಾಸಾರಮವನಿಗೆ ಶೋಭಿಸಿರ್ಪುದೆ

ಸುಮನಗಳಿಲ್ಲದೆ ಸೊಂಪಿಲಿರುವ ಬನವು ಶೋಭಿಸಿರ್ಪುದೆ

ವಿಮತರಿರ್ದ ಗ್ರಾಮವು ವಿಸ್ತಾರವಾಗಿನ್ನು ಶೋಭಿಸಿರ್ಪುದೆ

ಕುಮತರಿರ್ದ ಕ್ಷೇತ್ರ ಕುಶಲರ ದೃಷ್ಟಿಗೆ ಶೋಭಿಸಿರ್ಪುದೆ ||4||

ದ್ರವ್ಯಾಧಿಪತಿಯ ಮುಂದೆ ಧಾನ್ಯದ ರಾಶಿಯ ಶೋಭಿಸಿರ್ಪುದೆ

ದಿವ್ಯಸೂರ್ಯನ ಮುಂದೆ ದಿವಿಜಾರಿಬಲವನು ಶೋಭಿಸಿರ್ಪುದೆ

ನವ್ಯ ಐನೆಲೆಪುರಿಯನಾಥನರಿಯದಾತ್ಮ ಶೋಭಿಸಿಪುದೆ

ಭವ್ಯ ಚೆನ್ನವೀರನ ಭಜಿಸಿದವನ ಜನ್ಮ ಶೋಭಿಸಿರ್ಪುದೆ ||5||

ನಿಷ್ಠೆಯಿಲ್ಲದವನ ನೆಲೆಯಗಿಂತ ಹೊಲ್ಲನೆರಿಯ ಲೇಸು

ನಷ್ಟ ಬುದ್ಧಿಯನುಳ್ಳ ನರನಿಗಿಂತ ವಾನರನೆ ಲೇಸು ||ಪಲ್ಲ||

ಅವಗುಣದರಸಿಯನಾಳುವುದಕಿಂತ ಅಡವಿ ಲೇಸು

ಸವಿ ಮಾತನಾಡದ ಸಖನಕಿಂತ ಹುಲ್ಲಸರವಿ ಲೇಸು

ವಿವರವಿಲ್ಲದವನ ವಿಶ್ವಾಸದಕಿಂತ ವಿಷವೆ ಲೇಸು

ತವಕಕ್ಕೊದಗದ ತರುಣಿಗಿಂತ ಶುಷ್ಕತರುವೆ ಲೇಸು ||1||

ತನಗೆರಹವ ಮನೆತನಕಿಂತಲಾಳುತನವೆ ಲೇಸು

ಧನವಿಲ್ಲದವನ ಸದನಕಿಂತ ಬಂಧನವೆ ಲೇಸು

ಅನಹಿತನಹ ಸಭೆಯಲ್ಲಿರುವುದರಿಂತಲಗ್ನಿ ಲೇಸು

ಸುನಯಾತ್ಮನಾಗದ ಸುತನಿಗಿಂತ ಮನೆಶುನಿಯೆ ಲೇಸು ||2||

ಗಾರುಡನ್ನಪನ ನಗರದಕಿಂತ ಸಾಗರವೆ ಲೇಸು

ಹೋರಾಟಕಿಕ್ಕುವ ಹೊಣೆಗಾರನಿಗಿಂತ ಹೊಳೆಯ ಲೇಸು

ದಾರುಣ ಗುಣದ ಅಪದ್ಧನಿಗಿಂತ ಖಡ್ಗಧಾರಿ ಲೇಸು

ಗಾರು ಮಾಡುವನ ಗರದಕಿಂತ ಸಂಗರವೆ ಲೇಸು ||3||

ಮದ್ಯಪಾನಕನ ಮನೆಕಿಂತ ಹುಲಿಯ ಮನೆಯೆ ಲೇಸು

ವಿದ್ಯವಿಲ್ಲದವನ ವಿಧಿಯಕಿಂತ ಬಾಲವಿಧಿಯೆ ಲೇಸು

ಉದ್ಯೋಗವಿಲ್ಲದ ಊರಕಿಂತ ಕಾಡಿನುರಿಯೆ ಲೇಸು

ಗುದ್ಯಾಡುವ ಕೆಟ್ಟ ಜ್ಞಾತಿಕಿಂತ ಹಾಳು ಗುಡಿಯೆ ಲೇಸು ||4||

ಭಿನ್ನ ಭಾವಕನೊಳು ಬೆರೆದಿರುವುದಕಿಂತ ಬಿಲವೆ ಲೇಸು

ಮನ್ನಣೆಯಿಲ್ಲದವನ ಮದುವೆಕಿಂತ ಹೆಮ್ಮರವೆ ಲೇಸು

ಸನ್ನುತೈ ನಿಲಯಕೆ ಸೇರದವನಿಗಿಂತ ಸಗಣೆ ಲೇಸು

ಚೆನ್ನವೀರ ನಿಮ್ಮ ಸ್ಮರಿಸದವನಿಗಿಂತ ಸಿದಿಯೆ ಲೇಸು ||5||

ಕಷ್ಟವಲ್ಲವೆ ಇದು ಬಹುತರ ಕಷ್ಟವಲ್ಲವೆ

ಸೃಷ್ಟಿಯೊಳು ಗುರುವಿನ ಭೃತ್ಯನಾಗಿರುವದಕ್ಕಿಂತ ಕಷ್ಟವಲ್ಲವೆ ||ಪಲ್ಲ||

ಸಪ್ತ ವ್ಯಸನಗಳಿಂದೆ ತಪ್ತನಾಗಿರುವುದು ಕಷ್ಟವಲ್ಲವೆ

ಗುಪ್ತ ಪಾತಕರ ಗೃಹದೊಳಗಿರುವುದು ಕಷ್ಟವಲ್ಲವೆ

ಸಪ್ತಹಾನಿಯವನ ಸಂಗದೊಳಗಿರುವುದು ಕಷ್ಟವಲ್ಲವೆ

ತಪ್ತಭೂಮಿಯೊಳು ತನುವೆರಸಿರುವುದು ಕಷ್ಟವಲ್ಲವೆ ||1||

ಅಪಹಾಸ್ಯದವನೊಡನೆ ಉಸಿರುವುದು ಕಷ್ಟವಲ್ಲವೆ

ಕೃಪಣರ ಸೇವೆಯು ಕೂಡಿ ಮಾಡುವದು ಕಷ್ಟವಲ್ಲವೆ

ಅಪರಾಧವನು ಮಾಡುವಧಮನೊಳಿರುವುದು ಕಷ್ಟವಲ್ಲವೆ

ನಿಪುಣನಲ್ಲದವನ ನೆರೆಯಲಿರುವುದು ಕಷ್ಟವಲ್ಲವೆ ||2||

ದೂಷಣವನು ಮಾಳ್ವ ದುಷ್ಟನೊಳಿರುವುದು ಕಷ್ಟವಲ್ಲವೆ

ಶೇಷನಿರುವ ಮನೆ ಸೇರಿಕೊಂಡಿರುವುದು ಕಷ್ಟವಲ್ಲವೆ

ಕ್ಲೇಶ ಬಡಿಸುವನ ಕೆಲದೊಳು ಬಾಳ್ವುದು ಕಷ್ಟವಲ್ಲವೆ

ಕೋಶವಿಲ್ಲದವನು ಕೋಟೆಯೊಳಿರುವದು ಕಷ್ಟವಲ್ಲವೆ ||3||

ಪತಿವೃತವಿಲ್ಲದ ಪತ್ನಿಯನಾಳ್ವುದು ಕಷ್ಟವಲ್ಲವೆ

ಮತಿಹೀನರಿಗೆ ಪುಣ್ಯ ಮಾರ್ಗವು ಪೇಳ್ವುದು ಕಷ್ಟವಲ್ಲವೆ

ಮಿತವ ಮೀರಿದವನ ಮಿತ್ರತ್ವವು ಭಾಳ ಕಷ್ಟವಲ್ಲವೆ

ಗತಿಗೆಟ್ಟ ನೀಚನ ಗಣದೊಳಗಿರುವುದು ಕಷ್ಟವಲ್ಲವೆ ||4||

ಅಭ್ರಮ ಧರ್ಮಗಳಿರಿಯದವನ ಹಿತ ಕಷ್ಟವಲ್ಲವೆ

ವಿಭ್ರಮವಿಲ್ಲದ ವಿಪರೀತನ ಬೋಧೆ ಕಷ್ಟವಲ್ಲವೆ

ಸುಭ್ರದೈನಿಲಯ ಸೇರದವನಿಗತಿ ಕಷ್ಟವಲ್ಲವೆ

ಪ್ರಭೃತಿ ಗುರುಚೆನ್ನವೀರನನರಿಯದವಗೆ ಕಷ್ಟವಲ್ಲವೆ ||5||

ನಿತ್ಯ ನಿರ್ಮಲ ಶಿವನ ನೆಚ್ಚಿರ್ದ ಸಲೆಮನವು

ಮೆರೆಯಬಲ್ಲುದೆ ತೊರೆದು ತಾನಿರಬಲ್ಲುದೆ || ಪಲ್ಲ||

ಆಚಾರವಿಲ್ಲದವನಂಗವು ಶುಚಿಯಾಗಿ ಇರಲುಬಲ್ಲದೆ

ನೀಚನ ನ್ಯಾಯವು ನಿರಘರ ಮನಸಿಗೆ ಬರಲುಬಲ್ಲದೆ

ವಾಚಾಳಕನ ದುಷ್ಟವಾಕ್ಯಗಳಿಗೆ ಜನ ಹೆಚ್ಚಬಲ್ಲದೆ

ನಾಚಿಕಿಲ್ಲದವನ ನಡತೆಗಳಿಗೆ ಲೋಕ ಮೆಚ್ಚಬಲ್ಲದೆ ||1||

ಆನೆಯೇರಿದ ಸಾಲವಾಳಾಗಿ ದುಡಿದರೆ ತೀರಬಲ್ಲದೆ

ಶ್ವಾನನುಂಬವನಿಗೈಶ್ವರ್ಯ ಬಂದರೆ ಬೆಲೆಯೇರಬಲ್ಲದೆ

ಸೂನೆಗಾರನ ಮನೆ ಸುಟ್ಟರೆ ಜನವೆದ್ದು ಮಿಡುಕಬಲ್ಲದೆ

ಬೇನೆ ಬಿದ್ದವನೆದ್ದು ಬೇಡಿದ್ದುಂಡರೆ ರೋಗವಿಡುಕಬಲ್ಲದೆ ||2||

ಜಾರಂಗನೆಗೆ ನರೆಜರೆಯ ಬಂದರೆ ಸುಮ್ಮನೆ ಹೋಗಬಲ್ಲದೆ

ಚೋರಗುತ್ತಮ ಗತಿ ಬೋಧಿಸಿದರೆ ಶಮನವಾಗಬಲ್ಲದೆ

ನೀರೊಳಗಣಕಲ್ಲು ನೆರೆ ನೆನೆದರೆ ತೆಳ್ಳಗಾಗಬಲ್ಲದೆ

ಕ್ಷೀರದೊಳಗಿಡಲು ಕೆಂಡದಿದ್ದಲಿ ಬೆಳ್ಳಗಾಗಬಲ್ಲದೆ ||3||

ಜನಕೆ ಬಂಧನವಿಟ್ಟು ಜನಪಗೆ ಸೌಭಾಗ್ಯ ಹೊಂದಬಲ್ಲದೆ

ಮನಕೆ ಸಡಿಲಬಿಟ್ಟು ಮಾನವನಿಗೆ ಮೋಕ್ಷ ಹೊಂದಬಲ್ಲದೆ

ತನುಗಣವಲಿಯದೆ ತತ್ವಮಾರ್ಗವನ್ನು ತಿಳಿಯಬಲ್ಲದೆ

ಅನುಮೋದವಿಲ್ಲದೆ ಎಳೆವೆಣ್ಣು ರತಿಯೊಳಗುಳಿಯಬಲ್ಲದೆ ||4||

ಜಿತರೇತನಿಗೆ ಸರ್ವಜಿತ ಮದನಾಸ್ತ್ರವು ಕೆಡಿಸಬಲ್ಲದೆ

ವೃತಯುತನಿಗೆ ಮೋಹವಾಸನ ಬಲೆಯೊಡ್ಡಿಯಡಸಬಲ್ಲದೆ

ಪ್ರಥಿತೈನಿಲಯಕೆ ಪ್ರತಿಯಾಗಿ ಪರಸ್ಥಲವೆಸೆಯಬಲ್ಲದೆ

ವಿತತ ಶ್ರೀಗುರು ಚೆನ್ನವೀರನಾಂಘ್ರಿಯು ಧೂರ್ತಗೆ ಪಸೆಯಬಲ್ಲದೆ || 5||

ಜಾತಿ ನಡತೆಗಳು ಜರಿದು ಬಿಟ್ಟವನನು ಕೂಡಬಾರದು

ನೀತಿವಂತನ ಕಂಡು ನಿಂದಿಸುವವನು ನೋಡಬಾರದು ||ಪಲ್ಲ||

ಪಾತಕಪಾತದೊಳಿರ್ದವನೊಡನೆ ಆಡಬಾರದು

ಮಾತರಿಯದ ಹುಚ್ಚ ಮನುಜನ ಸಂಗತಿ ಮಾಡಬಾರದು

ಭೀತಿ ದುಗುರ್ಣಗಳು ಬೀರುವ ಧೂರ್ತಗೆ ಬೇಡಬಾರದು

ಸೋತು ಪರರಮನೆ ಸೇರಿಕೊಂಡವನಿಗೆ ಕಾಡಬಾರದು ||1||

ಕೆಟ್ಟ ಗುಣದಿ ಪರರ ಕೆಡಿಸುವವನ ಮಾತು ಕೇಳಬಾರದು

ಹೊಟ್ಟೆ ಹುರುಕನ ಮನೆಹೊರೆಯೊಳು ಸುಖವನು ಹೇಳಬಾರದು

ಕೊಟ್ಟ ವೃತ್ತಿ ಗುಡಿ ಗೋಪುರ ಮಠಗಳು ಕೀಳಬಾರದು

ಪಟ್ಟು ಕುಡುಮನಾಳ್ವ ಪುರದೊಳು ಸುಜನರು ಬಾಳಬಾರದು ||2||

ವೃತ ನೇಮಗಳ ಮಾಳ್ವ ವರಯೋಗಿಗಳ ಕಂಡು ಹಳಿಯಬಾರದು

ಹಿತ ವಚನಾಚರಿಸುವ ಹಿರಿಯರ ಸ್ನೇಹವು ಕಳೆಯಬಾರದು

ಪತಿಭಕ್ತಿಯರ ಕಂಡು ಪರಮ ಮೋಹದಿ ಪಿಡಿದೆಳೆಯಬಾರದು

ಕೃತಕವ ಮಾಡುವ ಕ್ರೂರನ ಮನೆಯ ಮುಂದೆ ಸುಳಿಯಬಾರದು ||3||

ವಿಪುಲ ಪುಷ್ಟಫಲವಿರ್ದ ಮರಗಳ ಕಡಿಯಬಾರದು

ಕಪಟ ಕಲಹ ಕೂಟ ಕಂಡೆನೆಂದು ಸಾಕ್ಷಿ ನುಡಿಯಬಾರದು

ಅಪಕೀರ್ತಿವಂತನಾಶ್ರ್ಯೆಸಿಕೊಂಡಿನ್ನು ನಡೆಯಬಾರದು

ವಿಪರೀತ ಕರ್ಮಿಷ್ಟನಿರ್ದ ದೇಶದೊಳು ತಡಿಯಬಾರದು ||4||

ಮನ್ನಣೆಯಿಲ್ಲದೆ ಮಾನವನಿಕ್ಕಿಗೆ ಹೋಗಬಾರದು

ಚನ್ನ ತಾನರಿಯದೆ ತನುರಕ್ಷಗೆ ತಲೆ ಬಾಗಬಾರದು

ಸನ್ನುತೈನಿಲಯದ ಸಾಧುರಿಗನಹಿತನಾಗಬಾರದು

ಚೆನ್ನವೀರೇಶನ ಚರಣ ಸೇವೆಗಳ ನೀಗಬಾರದು ||5||

ವೃತವಿಲ್ಲದವನ ಭವನಕಿಂತ ಕ್ರೂರ ವನವೆ ಲೇಸು

ಮತವಿಲ್ಲದವನ ಸಮ್ಮತಕಿಂತ ಮೂಢಮತವೆ ಲೇಸು ||ಪಲ್ಲ||

ಬಲವಿಲ್ಲದನ ಪೆರ್ಬಲದಕಿಂತ ನಿರ್ಬಲವೆ ಲೇಸು

ಕುಲವಿಲ್ಲದವನ ಸಂಕುಲದಕಿಂತ ಲಾಕುಲವ ಲೇಸು

ಹೊಲ ಬರಿಯದವನ ಹೊಣೆಯಗಿಂತ ಹುಲ್ಲಹೊರೆಯೆ ಲೇಸು

ಹಲುಬರಿಯವನ ಹಕ್ಕಿಗಿಂತ ಹಾಲಾಹಲವೆ ಲೇಸು ||1||

ತನಗಹಿತವಾದ ತನುವಿಗಿಂತ ವನದ ತರುವೆ ಲೇಸು

ತನಗಕ್ಕದ ಭಾಗ್ಯತನಕಿಂತ ಬಡತನವೆ ಲೇಸು

ತನಗೆ ಹೊಂದಿರದ ವಚನದಕಿಂತ ಭೃತ್ಯತನವೆ ಲೇಸು

ತನಗಲ್ಲದ ಮನೆತನದಕಿಂತ ಭಿಕ್ಷುಕತನವೆ ಲೇಸು ||2||

ಜನಕನಿಗಾಗದ ತನುಜನಕಿಂತ ದಾಯದ ಜನವೆ ಲೇಸು

ಜನಕೆ ಪೀಡಿಸುವ ದುರ್ಜನರಕಿಂತ ಸಾಘಜನವೆ ಲೇಸು

ಘನಪುಣ್ಯವಿಲ್ಲದಪಘನಕಿಂತ ಗ್ರಾಮಘನವೆ ಲೇಸು

ಪುನಿತಕಾಗದ ಜನಪದಕಿಂತ ವನಪದವೆ ಲೇಸು ||3||

ಅಳಿವ ಕಾಲಕೆ ಬರುವ ಅರಸುತನದಕಿಂತ ಲಗ್ನಿ ಲೇಸು

ಎಳೆವೆಣ್ಣು ವೃದ್ಧೆಗೆ ಎಳಸಿರುವುದಕಿಂತ ವ್ಯಾಧಿ ಲೇಸು

ಬೆಳೆವೊಣಗಿದ ಮೇಲೆ ಬೀಳುವ ಮಳೆಕಿಂತ ಬೇಗೆ ಲೇಸು

ಚಳಿಯಡಗಿದ ಮೇಲೆ ಛದವ ಪೊಡೆವಕಿಂತ ಛಾಯೆ ಲೇಸು ||4||

ತೊರೆದು ಪತಿವೃತೆಯ ತೊಲಗುವ ಪತಿಗಿಂತ ತೃಣವೆ ಲೇಸು

ಜರೆದು ನುಡಿಯುವ ಸತಿಗಿಂತ ಮತಿಯುಳ್ಳ ಬೆಲೆವೆಣ್ಣೇ ಲೇಸು

ಪರಮೈನೆಲೆಪುರಿಯ ಪಳಿವ ನರನಿಗಿಂತ ಪಶುವೆ ಲೇಸು

ವರಚೆನ್ನವೀರನ ಪಾಲಿಸದ ಯತಿಗಿಂತ ವಟುವೆ ಲೇಸು ||5||

ಸಜ್ಜನ ಪುರುಷರ ಸಂಗದೊಳಿರುತಿರೆ ಸ್ವರ್ಗದ ಪಥವೇಕೆ

ಲಜ್ಜಾ ಹೀನರ ನೆರವಿಯೊಳಿರುತಿರೆ ಲಘುತನವಿನ್ನೇಕೆ ||ಪಲ್ಲ||

ದುರ್ಜನ ಮನುಜರ ಒಡಗೂಡಿರುತಿರೆ ದುಷ್ಟ ಮಾರಿ ಯಾಕೆ

ಪರ್ಜನ್ಯವು ತಾ ತಡದಿರೆ ಲೋಕಕೆ ಪ್ರಳಯವು ಇನ್ನೇಕೆ

ಊರ್ಜಿತ ಸತ್ಕವಿತಾಗುಣಮಿರುತಿರೆ ಉರ್ವಿಯಾಳುವುದೇಕೆ

ವರ್ಜಿಸಿ ಪಂಚೇಂದ್ರಿಯ ಗೆಲಿದಿರುತಿರೆ ವ್ರತನೇಮಗಳೇಕೆ ||1||

ದೂಷಕ ನರರ ಸಹವಾಸದೊಳಿರುತಿರೆ ದುಷ್ಕ್ರತ್ಯಗಳೇಕೆ

ಶೇಷಮನೆಯೊಳಗೆ ಸೇರಿಕೊಂಡಿರುತಿರೆ ಸಾವನು ದೂರೇಕೆ

ಓಸರಿಸದೆ ವೈರಾಗ್ಯದೊಳಿರೆ ವನವಾಸದಿ ತಪವೇಕೆ

ಆಸೆಯಳಿದು ನಿರ್ದೋಷಕನಾಗಿರೆ ಕಾಶಿಯಾತ್ರೆಯೇಕೆ | |2||

ಕಪಟಾತ್ಮರ ಕೂಡಿರುತಿರೆ ತನಗೆ ಕಂಟಕವಿನ್ನೇಕೆ

ರಿಪುಚಯದೊಳು ಹೊಂದಿರುತಿರೆ ದೇಹಕೆ ರೋಗಳಿನ್ನೇಕೆ

ವಿಪುಲೈನೆಲೆ ಚೆನ್ನವೀರೇಶ್ವರ ಕರವಶನಾದ ಬಳಿಕೆ

ಸುಪಥ ಚತುರ್ವಿಧಪದದೊಳು ಸಮನಿಪ ಸುಖಂಗಳಿನ್ನೇಕೆ ||3||

ಸೇನೆ ಶುನಕನಿಗೆ ಸೆಡೆದು ನಿಲ್ಲುವದೆ ಕೇಳು ಮಾನವ

ಆನೆ ತಾವರೆನೂಲಿಗಡಸಿ ನಿಲ್ಲುವುದೆ ಕೇಳು ಮಾನವ | |ಪಲ್ಲ||

ಹಸಿದಿರ್ದ ಮೃಗಪತಿ ಹಳೆಹುಲ್ಲಿಗೆಳಸುವುದೆ ಕೇಳು ಮಾನವ

ಕುಸಿದಿರ್ದ ಖಗಪತಿ ನೊಣಕ್ರಿಮಿಗೆಳಸುವುದೆ ಕೇಳು ಮಾನವ

ನಸಿವ ಚಾತಕಪಕ್ಷಿ ನದಿನೀರಿಗೆಳಸುವುದೆ ಕೇಳು ಮಾನವ

ಎಸೆವ ಹಂಸಪಕ್ಷಿ ಎಡೆಕುಂಟೆಗೆಳಸುವುದೆ ಕೇಳು ಮಾನವ ||1||

ರಸಿಕನಧಮನೊಳು ರತಿಯಿಟ್ಟು ನಡೆವನೆ ಕೇಳು ಮಾನವ

ಋಷಿವರ್ಯ ಸಾಲಂಬರೂಢಿಯೊಳಿರುವನೆ ಕೇಳು ಮಾನವ

ಅಸಮ ಭವ್ಯಾತ್ಮಕನಘಜೀವಿಗೊಲಿವನೆ ಕೇಳು ಮಾನವ

ಸುಸಮಯನ್ವಿತನು ಸುಖಿಲನ ಬೆರೆವನೆ ಕೇಳು ಮಾನವ ||2||

ವಿಷದೊಳಮೃತ ಕೂಡಿ ವಿಷವಾಗಬಲ್ಲದೆ ಕೇಳು ಮಾನವ

ಮೃಷನೊಳುತ್ತಮನಿರ್ದು ಮೃಷನಾಗಲ್ಲನೆ ಕೇಳು ಮಾನವ

ಅಸುಗತಿಯೊಳು ಜ್ಞಾನಿ ಆಸುತಿಯಾಗುವನೆ ಕೇಳು ಮಾನವ

ಪಿಸುಣನೊಳಿಹ ಸಾಧು ಪಿಸುಣನಾಗುವನೆ ಕೇಳು ಮಾನವ | ||3||

ಅಸುರರಟ್ಟುಳಿಗಂಜಿಯಭ್ರಮು ಪೋಗುವುದೆ ಕೇಳು ಮಾನವ

ವಸುಮತಿ ಕುಲಗಿರಿವೊಜ್ಜೆಗೆ ಬಾಗುವದೇ ಕೇಳು ಮಾನವ

ಕುಶನಧಿ ಸುರಪನ ಕುಲಿಶಕಳುಕುವುದೆ ಕೇಳು ಮಾನವ

ಉಶನನ ಮನವಲ್ಪ ವಿದ್ಯಗೆ ಬಳುಕುವುದೆ ಕೇಳು ಮಾನವ ||4||

ಅಧ್ಮಾತ್ಮರ ಬಳಿಯೊಳಪರಾಧಿ ಬಾಳ್ವನೆ ಕೇಳು ಮಾನವ

ವಿದ್ಯೇಶ್ವರರರ್ಥ ವಿಮತಿಯ ಕೇಳ್ವನೆ ಕೇಳು ಮಾನವ

ವಿದ್ಯೆದೈನೆಲೆಯನನು ವಿಶದಾತ್ಮ ಜರಿವನೆ ಕೇಳು ಮಾನವ

ಸಾಧ್ಯ ಚನ್ನವೀರನ ಸಾತ್ವಿಕ ಮರೆವನೆ ಕೇಳು ಮಾನವ || 5||

ಪ್ರಿಯ ವಚನಗಳುಳ್ಳ ಪ್ರೌಢನಲ್ಲಿ ಮಹಾದೈನ್ಯ ಮಿರ್ಪುದು

ವ್ಯಯವಿರಹಿತನಾದ ಯತಿರಾಜನಲ್ಲಿ ಮಹಾಮಾನ್ಯ ಮಿರ್ಪುದು | |ಪಲ್ಲ||

ವ್ರತದ ಪ್ರೀತಿಯನುಳ್ಳವನ ಮನದೊಳು ಡಂಭಕತ್ವಮಿರ್ಪುದು

ತತಶುದ್ಧನಾದಾತನ ಚಿತ್ತದೊಳು ಘನಕಪಟಮಿರ್ಪುದು

ಅತಿ ಲಜ್ಜೆಯುಳ್ಳ ನಮ್ರಾತ್ಮನಲ್ಲಿ ಜಡತನವನಿರ್ಪುದು

ವಿತತಶೌರ್ಯವನುಳ್ಳ ವೀರನಲ್ಲಿ ನಿಷ್ಕರುಣಮಿರ್ಪುದು ||1||

ಮಹನೀಯ ತೇಜಾಂಗ ಮಾನವನೊಳು ದುರ್ಮದವನಿರ್ಪುದು

ಬಹು ನುಡಿಗಾರನ ಬಳಿಯಲ್ಲಿ ವಾಚಾಳತ್ವಮಿರ್ಪುದು

ಸುಹಿತಗುಣವನುಳ್ಳ ಸುಜನನಲ್ಲಿ ದೀನತ್ವಮಿರ್ಪುದು

ವಿಹಿತಾಲಂಕಾರವಿರ್ದವನಲ್ಲಿ ಶಠತ್ವಮಿರ್ಪುದು ||2||

ಭಕ್ತಿಯುಳ್ಳವನ ಭಾವದಲ್ಲಿ ಸಂದೇಹಮಿರ್ಪುದು

ಸೂಕ್ತಿಯುಳ್ಳವನ ಸುಮತಿಯಲ್ಲಿ ಮೌನತ್ವಮಿರ್ಪುದು

ಶಕ್ತಿಯಿಲ್ಲದವನ ಸನ್ನಿಧಿಯಲ್ಲಿ ಸಜ್ಜನತ್ವಮಿರ್ಪುದು

ಯುಕ್ತಿಯಿಲ್ಲದವನೆಡೆಯೊಳು ನಡೆಯಲಾಸ್ಯಮಿರ್ಪುದು || 3||

ಅನುಶನ ವ್ರತವನಿರ್ದಾತನಲ್ಲಿ ಆಯಾಸಮಿರ್ಪುದು

ಅನುಘನಿರ್ದಾತನಲ್ಲಿ ಪರಮ ವಂಚನತ್ವಮಿರ್ಪುದು

ಅನುಪಮರೋಗಿಷ್ಟರಲ್ಲಿ ದೇವ ಭಕ್ತಿಭಾವಮಿರ್ಪುದು

ಅನುರಾಗದೊಡನೆಯಿರ್ದವನೊಳಧಿಕ ಚಂಚಲತ್ವಮಿರ್ಪುದು ||4||

ಅಕಳಂಕ ಋಜುಭಾವದಾತನಲ್ಲಿ ನಿರ್ಬುದ್ಧಿಯಿರ್ಪುದು

ಪ್ರಕಟಿಸಿರವ ಮಹಾಪ್ರಾಜ್ಞನಲ್ಲಿ ದುರ್ಭೀತಿಯಿರ್ಪುದು

ಸುಕರೈನೆಲಯೊಳು ಸೇರಿದಾತನಲ್ಲಿ ಸುಪಥಮಿರ್ಪುದು

ಅಕಳಂಕ ಚನ್ನವೀರಾರ್ಯನಂಘ್ರಿಯಲ್ಲಿ ಅಮೃತಮಿರ್ಪುದು ||5||

ವೇದವಿದರ ಕೂಡಿಕೊಂಡಿರ್ದವಗೆ ಮುಕ್ತಿಯೋಗವೇತಕೆ

ನಾದವಿದರ ಕೂಡಿಕೊಂಡಿರ್ದವಗೆ ಶಕ್ತಿಮಾರ್ಗವೇತಕೆ | ಪಲ್ಲ ||

ಸುಮತಿಗಳಿರುತಿರ್ದ ಸುಕ್ಷೇತ್ರದೊಳತಿಸುಂಟನೇತಕೆ

ಕುಮತಿಗಳೊಂದಾಗಿ ಕೂಡಿರ್ದ ಸಭೆಯೊಳು ಕುಶಲನೇತಕೆ

ಅಮಿತ ಗುಣಾಢ್ಯರಿರ್ದಾಲಯಾಂತರದೊಳಧಮನೇತಕೆ

ವಿಮತರ ಸಂದೋಹವಿರ್ದ ತಾಣದೊಳು ನಿಸದ ಮಾತನೇತಕೆ ||1||

ವಿತರಣಶಾಲಿಗಳಿಲ್ಲದೂರೊಳು ಸುಕವೀಂದ್ರನೇತಕೆ

ಜಿತರಣದೊಳು ಹೊಕ್ಕು ಜರುಗುವ ಧೀರರ ಜಾಲವೇತಕೆ

ವತನವಿಲ್ಲದೆ ಬಾಳುವವನ ಬಲವಿರೋಧ ವಚನವೇತಕೆ

ಗತಿಗೆಟ್ಟು ತಿರುಗುವ ಘನ ಕನಿಷ್ಟನ ಗರ್ವವೇತಕೆ ||2||

ವಿದ್ಯೆಯನರಿಯದ ವಿರಸ ಮಾನವನೊಳು ವಿನಯವೇತಕೆ

ವೇದ್ಯರಲ್ಲಿ ಚಿತ್ತವೆರಸದವನ ಸುವಿವೇಕವೇತಕೆ

ಅದ್ಯರ ವಾಕ್ಯಗಳನರಿದು ನಡೆಯದವನಾತ್ಮವೇತಕೆ

ಮದ್ಯಪಾನವನು ಮಾಡುವವನ ಬಹುಮಾನವೇತಕೆ ||3||

ದ್ರವ್ಯಮಿರ್ದವನಿಗಾದರಿಸಿ ಕೊಡುವ ಒಳ್ಳೆಯ ದಾನವೇತಕೆ

ದಿವ್ಯಾನ್ನವನುಂಡು ದಣಿದಾತನಿಗೆ ಓದುವವನೇತಕೆ

ಅವ್ಯಯಾಬ್ಧಿಯಲ್ಲಿ ಅಭಯವೊಡ್ಡಿ ಮಳೆಯಾದರೇತಕೆ

ನವ್ಯಕೂಪವನ್ನು ನದಿಯ ತೀರದಿ ತಾನಗಿದರೇತಕೆ ||4||

ಮನ್ನಣೆಯನರಿಯದ ಧರ್ಮವನರಿಯದ ಮನುಜನೇತಕೆ

ತನ್ನನುದ್ಧರಿಸಿದ ತಂದೆಯ ಜರಿದ ತನುಜನೇತಕೆ

ಸನ್ನುತೈ ನಿಲಯದ ಸಾರವ ತಿಳಿಯದೆ ಸದಯನೇತಕೆ

ಚನ್ನವೀರೇಂದ್ರನ ಚರಣದ ಭಜಿಸದ ಚಟುಲನೇತಕೆ ||5||

ಧನವ ಹೆಚ್ಚಿದ ಮೇಲೆ ದಾತನಾದರೆ ಅದು ಕೆಡಬಲ್ಲದೆ

ಅನಲ ಹೆಚ್ಚಿದ ಮೇಲೆ ಅಮೃತನಾದರೆ ಅದು ಸುಡಬಲ್ಲದೆ || ಪಲ್ಲ||

ಜ್ಯೋತಿಯಿರ್ದ ಮೇಲೆ ಜೊಮ್ಮಿಸಿ ಕತ್ತಲವಿರಬಲ್ಲದೆ

ಭೂತಿಯಿರ್ದ ಮೇಲೆ ಭೂತಗಣವನೇರಿ ಬರಬಲ್ಲದೆ

ಖ್ಯಾತಿಯಿಂದಿರ್ದ ಮೇಲೆ ಖೇಟಕರುಪಟಳವಲರಬಲ್ಲದೆ

ಯತಿಯಿರ್ದ ಮೇಲೆ ಇತರ ಭೋಗಕೆ ಮನ ಮಲರಬಲ್ಲದೆ ||1||

ಕೋತಿ ಹೊಕ್ಕ ಬನ ಕೊನರು ಕಾಯಿಗಳಿಂದೆ ಬಿಚ್ಚಬಲ್ಲದೆ

ಓತಿ ಹೊಕ್ಕ ಮನೆಯೊಳಗಿದ್ದ ಪರಸಿರಿ ಹೆಚ್ಚಬಲ್ಲದೆ

ಊತಿಯೊಳಗೆ ಹೊಕ್ಕ ಉದಕ ಜೀವಿಯ ಜಾಲವುಕ್ಕಬಲ್ಲದೆ

ದೂತಿ ಕೈಯೊಳು ಸಿಕ್ಕ ಧುರದ ಹೆಣ್ಣಿನ ಮಾನ ದಕ್ಕಬಲ್ಲದೆ ||2||

ಮಣ್ಣೆ ತಿಂಬುವ ಹಾವು ಮಸಗುತೆ ಹೆಡೆಯೆತ್ತಿಯಾಡಬಲ್ಲದೆ

ಅಣ್ಣಿವಾಲುಂಬುವ ಅಂಚೆ ಮರಿಯು ಬಕವ ಕೂಡಬಲ್ಲದೆ

ಕಣ್ಣಿರ್ದು ಘೂಕವು ಕರ್ಮಸಾಕ್ಷಿಯ ಬೆಳಗರಿಯಬಲ್ಲದೆ

ಹಣ್ಣಿರ್ದು ಜಾತಕ ಹರಿವ ನೀರಿಗೆ ಬಾಯಿದೆರೆಯಬಲ್ಲದೆ ||3||

ಕೋಡಗ ಮುಂದೆ ಕೊಬ್ಬರಿಕಾಯಿಯಿಡಲೊಡೆಯಬಲ್ಲದೆ

ಎಡಗದ ಮುಂದೆ ಎಡಯನಿಡಲು ರುಚಿ ಹಿಡಿಯಬಲ್ಲದೆ

ನಾಡಭಕ್ಷಿಪರ ಕೂಡ ಬಳಕೆಯಿರ್ದರೆ ಕುಲವೇರಬಲ್ಲದೆ

ಕೇಡು ಮಾಡುವವನ ಕೆಲದೊಳಿರ್ದರೆ ಕೀರ್ತಿ ಬೀರಬಲ್ಲದೆ ||4||

ಅಸಮಾನ ಭವ್ಯನಿಗಘ ಸಂತತಿ ವ್ಯಾಧೆ ತೊಡಕಬಲ್ಲದೆ

ಕುಸುಕುವ ಕುಜನಗೆ ಕುತುಕ ಬ್ರಹ್ಮಬೋಧೆ ತುಡುಕಬಲ್ಲದೆ

ಎಸೆವೈನಿಯನಿಗೆಡರಾದಡೇನು ತಗಲಬಲ್ಲದೆ

ವಿಶದಾತ್ಮನಿಗೆ ಚೆನ್ನವೀರೇಶನ ಮೋಕ್ಷವಗಲಬಲ್ಲದೆ ||5||

ಜ್ಞಾನ ಹೀನನೊಳು ಧ್ಯಾನ ಯೋಗ ವೃದ್ಧಿಯಾಗಬಲ್ಲದೆ

ಮಾನ ಹೀನನೊಳು ಮಹನೀಯ ಜಪ ಸಿದ್ಧಿಯಾಗಬಲ್ಲದೆ ||ಪಲ್ಲ||

ಮಲೆತವನಿಗೆ ನೀತಿ ಮಾರ್ಗವು ಶಾಶ್ವತವಾಗಬಲ್ಲದೆ

ಫಲನುಂಬವನಿಗೆ ಪರಮಾನ್ನವು ಹಿತವಾಗಬಲ್ಲದೆ

ಕಲುಷಾತ್ಮನಿಗೆ ವಿದ್ಯೆ ಕಲಿಸಿದರವನೊಳು ಬೆಳೆಯಬಲ್ಲದೆ

ಕೊಲುವ ಕರ್ಮಿಗೆ ದೀಕ್ಷೆ ಕೊಟ್ಟರವನೊಳಗುಳಿಯಬಲ್ಲದೆ ||1||

ಕಣ್ಣೊಲಿರ್ದ ಬೊಂಬೆ ಕರೆದರೆ ತಾ ಮಾತನಾಡಬಲ್ಲದೆ

ಎಣ್ಣೆಯೊಳಗೆ ನೀರೆರೆದು ಕಲಸಿದರೆ ಕೂಡಬಲ್ಲದೆ

ಬೆಣ್ಣೆ ಮುದ್ದಿಯ ಮೇಲೆ ಬಿಸಿನೀರು ಹೊಯ್ದರೆ ಬಲಿಯಬಲ್ಲುದೆ

ಸುಣ್ಣದೆಲೆಯಮೆದ್ದ ಸುಖಿಯೈಶ್ವರ್ಯವು ನಲಿಯಬಲ್ಲದೆ ||2||

ಬಿಸಿ ಬೂದಿ ಸಜಲಕ್ಕೆ ಬಿರುಸಿನಿಂದೊತ್ತಲು ಹತ್ತಬಲ್ಲದೆ

ಕೆಸರು ಭೂಮಿಯೊಳು ಕುಂಬಾರ ಹುಳುವಿಗೆ ಮೆತ್ತಬಲ್ಲದೆ

ರಸದೊಳಾಡಿ ಷಡುರಸರುಚಿ ಹುಚ್ಚ ಸೊಲ್ಲಬಲ್ಲದೆ

ರಸವನುಳ್ಳ ಪಾದರಸವು ಕೈಯೊಳು ನಿಲ್ಲಬಲ್ಲದೆ ||3||

ಕನ್ನಡಿಯೊಳು ದ್ರವ್ಯ ಕಂಡರೇನು ಕೈಗೆ ಸೇರಬಲ್ಲದೆ

ಮುನ್ನೀರ ಗುರುಳಿಯ ಮುಟ್ಟಿದರೆ ಮತ್ತೆ ತೋರಬಲ್ಲದೆ

ಉನ್ನಿ ಕೆಚ್ಚಲೊಳಗಿದ್ದರೆ ಹಾಲುಂಡು ಸೊಕ್ಕಬಲ್ಲದೆ

ಕುನ್ನಿ ತುಪ್ಪವನೆ ಕುಡಿದರೆ ಸವಿಯಾಗಿ ಅಕ್ಕಬಲ್ಲದೆ ||4||

ಜಲಜ ಪತ್ರದ ಮೇಲೆ ಜಲವು ಬೀಳಲದು ಹಿಡಿಯಬಲ್ಲದೆ

ಜಲದ ಮೇಲಕ್ಷರ ಜವದಿ ಬರೆಯಲದು ತಡೆಯಬಲ್ಲದೆ

ವಿಲಸಿತೈನಿಲಯವರಹಿತನಿಗೆ ಶಾಂತಿ ಬೆರೆಯಬಲ್ಲದೆ

ಅಲಘು ಚನ್ನವೀರನರಿಯದವರಿಗೆ ಶಕ್ತಿ ಮುಕ್ತಿ ದೊರೆಯಬಲ್ಲದೆ || 5||

ಛೀ ಛೀ ಹೆಡ್ಡ ನೀ ಎಂಥ ಶಿವಭಕ್ತ

ಕ್ರಿಯಾ ಬಾಹ್ಯ ದೈವಂಗಳಿಗೆರಗುವೆ ||ಪಲ್ಲ||

ಗಂಡನೆ ಶಿವಲಿಂಗವೆಂಬುತಾ ನೀನು

ಕಂಡ ದೈವಕೆ ಕಯ್ಯ ಮುಗಿವುತಾ

ಕೆಂಡದ ಗಡಿಗಿ ಮಂಡಿಯ ಮೇಲೆ ಹೊತ್ತು

ಕೊಂಡು ಬಾಯಿಗೆ ಬೀಗ ಹಾಕುವೆ ||1||

ಒಡೆಯ ಸದ್ಗುರುವಿತ್ತ ಲಿಂಗವು ನಿನ್ನ

ವಡಲ ಸಂಗವ ಹಿಂಗದಿರುತಿರ್ದು

ಮಡದಿ ಮಕ್ಕಳು ನೀನು ಸಹವಾಗಿ ಹೋಗಿ

ಗುಡಿಯ ದೈವಂಗೆರಗುವೆ ||2||

ಸತ್ಯ ಸದ್ಗುರುವಿತ್ತ ಲಿಂಗವ ನೀನು

ನಿತ್ಯ ಪೂಜಿಸಿ ಮುಕ್ತಿ ಪಡೆಯದೆ

ಎತ್ತು ಕುಂಟಲಿ ಭೃತ್ಯ ಸಹವಾಗಿ ಹೋಗಿ

ಕ್ಷೇತ್ರ ದೈವಂಗಳಿಗೆರಗುವೆ ||3||

ಕಟ್ಟಿದ ಲಿಂಗವನಡಿ ಮಾಡಿ ನೀನು

ನಟ್ಟ ಕಲ್ಲಿಗೆ ಹೋಗಿ ಬೀಳುವೆ

ನಟ್ಟಗಲ್ಲಿದು ನಿನ್ನ ದೈವವೆ ನಿನ್ನ

ಕೆಟ್ಟ ಕೇಡಿನ್ನೇನು ಹೇಳಾ ||4||

ಇಷ್ಟಲಿಂಗದ ಪೂಜೆ ಮಾಡುವೆ ನೀನು

ನಿಷ್ಠೆಯಿಂದಲಿ ಕೊಂಡಾಡುವೆ ನೀನು

ಅಷ್ಟವರ್ಣಂಗಳನರಸುವೆ ನೀನು ಜಾತಿ

ಭ್ರಷ್ಟ ದೈವಂಗಳ ಬೆರಸುವೆ ನೀನು ||5||

ಜಾಣ ಜಂಗಮದ ಪ್ರಸಾದವೆ ಮುಕ್ತಿ

ತಾಣವೆಂಬುದನರಿಯದೆ ಹೋಗಿ

ಕೋಣ ಮನುಜ ನಿನ್ನ ಕೈಯೊಡ್ಡಿ ಬೇಡಿ

ಕ್ಷೀಣ ದೈವಂಗಳೆಂಜಲ ತಿಂದೆ ||6||

ಸುನಿಗನ್ನಗಲ್ಪವ ಹಾಕಲು ನಿನ್ನ

ಮನಿಯ ರಾತ್ರಿಯೊಳೆಲ್ಲ ಕಾಯ್ದದು

ಸುನಿಗಿಂದ ಕನಿಕಷ್ಟ ದೈವಾದ ನಿನ್ನ

ಮನಿದೇವರೆಂದು ನೀ ಭಜಿಸುವ ||7||

ಧರೆಯ ಪಂಚಾಳರಿಂದ ತಾ ಪುಟ್ಟಿ

ಬರ ಭೂತಳದ ಮರದೊಳಗಿರ್ದು

ನರ ಮನುಜರ ಕಾಡಿ ಬೇಡುವ ದೈವ

ವರವ ಬೇಡಿದಡೇನು ಕೊಡುವನೆ ||8||

ವೀರಶೈವಾಚಾರ ಸದ್ಗುರು ಚೆನ್ನ

ವೀರನ ಕರುಣೆಯ ಪಡೆಯದೆ

ವೀರಣ್ಣ ಮಾರಣ್ಣ ಮೊದಲಾದ ಸಣ್ಣ

ಭೂರಿ ದೈವಂಗಳಿಗೆರಗುವೆ ||9||

ಶಿವನ ಮಹಿಮೆಯಿಂ ಜಗದೊಳು

ವಿವಿಧ ಜೀವಿಗಳನು ಮುನ್ನ

ಶಿವ ಪದವಿಯೊಳಿರ್ದುದನು ಕೇಳು ಮಾನವಾ ||ಪಲ್ಲ||

ತ್ರಿಪುರ ಹರನ ಮೇಲೆ ಬಂದು

ಕಪಿಯ ಬಿಲ್ವದಳಗಳುದಿರ್ಸಿ

ಶಪಿಸುವೆನೆಂಬ ಶಂಕರಿಯನು ಸಂತಯಿಸಿ ಶಿವಂ

ವಿಪುಲ ವೈಭವಂಗಳುಳ್ಳ

ನೃಪನ ಮಾಡಿ ಪುಟ್ಟಿಸುತ್ತೆ

ಸುಪಥ ಮೋಕ್ಷವಿತ್ತನೊಲಿದು ಕೇಳು ಮಾನವಾ ||1||

ಕೊಲುವೆನೆಂದು ನರನು ತೋರ

ಶಿಲೆಯನೆತ್ತಿ ಹೊಯ್ಯೆ ಶಿವನು

ನಿಲಯಮೆಂದು ಸುತ್ತಿ ಬಂದು ಬೀಳೆ ಸುನಕನು

ವಿಲಸಿತ ಪ್ರಮಥ ಗಣೇಂದ್ರ

ನಲಸದೆ ಪ್ರಸನ್ನನಾಗಿ-

ಯ ಲಘು ಮುಕ್ತಿಯನಿತ್ತನೊಲಿದು ಕೇಳು ಮಾನವಾ ||2||

ನೆಗೆದು ಹಂಸಯಬ್ಬ ಸಹಂ

ಗಗನಕಡರೆ ಬೇಡನಂಬು

ತೆಗೆದೆಸೆಯಲು ಮಡೆಯೆ ಪುಷ್ಪ ಲಿಂಗಕ್ಕೇರಲು

ನಗಸುತಾದಿನಾಥ ನುತ

ತ್ಖಗಗೆ ಕಿರಾತನಿಗೆ ಮೆಚ್ಚಿ

ಮಿಗೆ ಪದವಿಯನಿತ್ತನೊಲಿದು ಕೇಳು ಮಾನವಾ ||3||

ಕ್ರೂರ ಕೀಚಕಂ ವನದೊಳು

ದಾರು ಚರ್ಮದೊಳಗೆ ಪೊಕ್ಕು

ಸೇರಿಕೊಂಡು ಮೆಯ್ಕೆ ಷಡಾಕ್ಷರಗಳಾಗಲೂ

ಮಾರಹರನು ಮೆಚ್ಚಿ ಅದಕೆ

ಸಾರಗಣ ಪದವಿಯನಿತ್ತು

ಭೂರಿ ಮಹತ್ವದಿಂ ಕೇಳು ಮಾನವಾ ||4||

ಇಂತು ವಸುಮತಿಯೊಳನೇಕ

ಜಂತುಗಳು ಮಹೀಶನಿಂದೆ

ಆಂತರಿಸದೆ ಭಜಿಸಿ ಭವದ ಬಾಧೆಯಳಿದರು

ಸಂತತೈನೆಲೆಯ ಪುರಿಯ ನಿ

ಶಾಂತ ಚೆನ್ನವೀರನಡಿಗ

ಳಂತರಿಸದೆ ಭಜಿಇ ಮುಕ್ತನಾಗು ಮಾನವಾ ||5||