ವಿಶ್ವದಲ್ಲಿ ರಾಂಬೂಟಾನ್ ಕೃಷಿ

ರಾಂಬೂಟಾನ್‌ ಒಂದು ರುಚಿಕರ ಹಣ್ಣು. ಇದರ ಮೂಲ ಮಲೇಷ್ಯಾ. ಇದರ ಕೃಷಿ ಮಲಯ ದ್ವೀಪಸ್ತೋಮಕ ಮತ್ತು ದಕ್ಷಿಣ ಪೂರ್ವ ಏಷ್ಯಾದ ರಾಷ್ಟ್ರಗಳಲ್ಲಿ ಕಂಡು ಬರುತ್ತಿದೆ. ಅರಬ್‌ ವರ್ತಕರು ಈ ಹಣ್ಣನ್ನು ಜಂಜಿಬಾರ್ ಮತ್ತು ಪೆಂಬಾಗಳಿಗೆ ಪರಿಚಯಿಸಿದ್ದರು. ಆರಂಭದ ಹಂತದಲ್ಲಿ ಇದರ ಕೃಷಿ ಇಂಡೋನೇಷಿಯಾ, ಥೈಲಾಂಡ್‌, ಕೊಲಂಬಿಯಾ ಇಕ್ವೆಡೊರ್, ಹಾಂಡರಾಸ್‌, ಕೊಸ್ಟಾರಿಕಾ, ಟ್ರಿನಿಡಾಡ್‌ ಮತ್ತು ಕ್ಯೂಬಾಗಳಲ್ಲಿ ಕಂಡು ಬಂತು. ಕಳೆದ ಶತಮಾನದ ಆದಿಭಾಗದಲ್ಲಿ ಇದರ ಕೃಷಿ ಅತ್ಯಂತ ಕಡಿಮೆ ವಿಸ್ತೀರ್ಣದಲ್ಲಿತ್ತು. ಆದರೆ ೧೯೫೦ ರ ಬಳಿಕ ಈ ಹಣ್ಣಿಗೆ ಬೇಡಿಕೆ ಹೆಚ್ಚುತ್ತಾ ಹೋದುದರಿಂದ ಇದರ ವ್ಯವಸ್ಥಿತ ಕೃಷಿ ಬೇರೆ ಬೇರೆ ರಾಷ್ಟ್ರಗಳಿಗೆ ವಿಸ್ತರಿಸಿತು.

ಭಾರತಕ್ಕೆ ಇದು ಹೇಗೆ ಬಂತು ಎಂಬ ಬಗ್ಗೆ ಯಾವುದೇ ದಾಖಲೆಗಳಿಲ್ಲ.  ನಮ್ಮಲ್ಲಿಂದು ರಾಂಬೂಟಾನ್‌ನ ಕೃಷಿಯನ್ನು ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಕೆಲವೆಡೆ ಕೈಗೊಳ್ಳುತ್ತಿದ್ದು, ಇದೇನಿದ್ದರೂ ವಾಣಿಜ್ಯ ರೀತಿಯದ್ದಲ್ಲ. ಪ್ರಕೃತ ವಿಶ್ವದಲ್ಲಿ ಇದರ ವ್ಯವಸಾಯವನ್ನು ಮಲೇಷ್ಯಾ, ಥೈಲ್ಯಾಂಡ್‌, ದಕ್ಷಿಣ ವಿಯೆಟ್ನಾಂ, ಇಂಡೋನೇಷಿಯಾ,  ಫಿಲಿಫೈನ್ಸ್‌, ಭಾರತ ಮತ್ತು ಶ್ರೀಲಂಕಾಗಳಲ್ಲಿ ಕೈಗೊಳ್ಳಲಾಗುತ್ತಿದೆ. ಮಲೇಷ್ಯಾದಲ್ಲಿ ರಾಂಬೂಟಾನ್‌ನ ಕೃಷಿ ದೇಶವ್ಯಾಪಿಯಾಗಿದ್ದರೂ ಇದರ ವಿಸ್ತೀರ್ಣ ಪೆರಾಕ್‌, ಪಹಾಂಗ್‌, ಕೇದ, ಕೆಲಂಟನ್‌, ಜೋಹರ್ ಮತ್ತು ಚಿರೆಂಗ್ಗಾನ್‌ ರಾಜ್ಯಗಳಲ್ಲಿ ಅಧಿಕ ಪ್ರಮಾಣದ್ದಾಗಿದೆ.

* * *

ಸಸ್ಯ ಪರಿಚಯ

ರಾಂಬೂಟಾನ್‌ ಎಂಬ ಹೆಸರು ಮಲಯ ಭಾಷೆಯಿಂದ ಬಂತು. ಮಲಯ ಭಾಷೆಯಲ್ಲಿ ‘ರಾಂಬೂಟ್‌’ ಎಂದರೆ ರೋಮ. ರಾಂಬೂಟಾನ್‌ ಹಣ್ಣಿನ ಸಿಪ್ಪೆಯ ಮೇಲ್ಭಾಗದಲ್ಲಿ ರೋಮ ಯಾ ಕೂದಲು ಇರುವುದರಿಂದ ಇದಕ್ಕೆ ಈ ಹೆಸರು ಬಂತು. ನೆಫಲಿಯಂ ಲ್ಯಾಪ್ಟೇಸಿಯಂ ಲಿನ್‌’ ಎಂಬ ಸಸ್ಯನಾಮವಳ್ಳ ರಾಂಬೂಟಾನ್‌ ‘ಸ್ಯಾಪಿಂಡೇಸಿ’ ಕುಟುಂಬಕ್ಕೆ ಸೇರಿದ ಸದಾ ಹಸಿರಾಗಿರುವ ಸಸ್ಯ.

ರಾಂಬೂಟಾನ್‌ ಮರ ಪೊದೆಯಾಗಿ ಬೆಳೆಯುವುದು. ಇದು ಪೂರ್ಣ ಬೆಳೆದಾಗ ಸುಮಾರು ೧೫ ರಿಂದ ೨೫ ಮೀ ಎತ್ತರವಿರುತ್ತದೆ. ಇದರ ಪ್ರಧಾನ ಕಾಂಡ ನೇರವಾಗಿದ್ದು ಸುಮಾರು ೧೫ ರಿಂದ ೨೫ ಮೀ ಎತ್ತರವಿರುತ್ತದೆ. ಇದರ ಪ್ರಧಾನ ಕಾಂಡ ನೇರವಾಗಿದ್ದು ಸುಮಾರು ೬೦ ಸೆಂ.ಮೀ. ನಷ್ಟು ವ್ಯಾಪಿಸಿರುತ್ತದೆ.  ಇದರ ತೊಗಟೆ ಕಂದು ಮಿಶ್ರಿತ ಬೂದು ಬಣ್ಣದಾಗಿದೆ. ಸದಾ ಹಸಿರಾಗಿರುವ ಇದರ ಎಲೆಗಳು ೭ ರಿಮದ ೩೦ ಸೆಂ.ಮೀ ಉದ್ದ ಹಾಗು ೩ ರಿಂದ ೧೦ ಸೆಂ.ಮೀ ಅಗಲವಿರುತ್ತದೆ. ಇದರ ಬಿಡಿ ಎಲೆಗಳಲ್ಲಿ ತಲಾ ೬ ಜೊತೆ ಸಣ್ಣ ಎಲೆಗಳಿದ್ದು ಇವು ಹಿಡಿದಿಟ್ಟುಕೊಂಡಂತೆ ಕಾಣುವುವು.

ರಾಂಬೂಟಾನ್‌ನ ಗಿಡದಲ್ಲಿ ಹೂವುಗಳು ರೆಂಬೆಗಳ ತುದಿಭಾಗ ಹಾಗೂ ಎಲೆತೊಟ್ಟಿನ ಕಂಕುಳಲ್ಲಿ ಗೊಂಚಲುಗಳಾಗಿ ಬಿಡುತ್ತವೆ. ಇದರ ಬಿಡಿ ಹೂವಿನ ಗಾತ್ರ ಸಣ್ಣದು. ಹೂವಿನ ಬಣ್ಣ ಬಿಳಿ ಇಲ್ಲವೆ ಹಸಿರು ಬಿಳಯದ್ದಾಗಿದೆ. ಈ ಹೂವು ಅರಳಿದಾಗ ಸುಮಾರು ನಾಲ್ಕು ಮಿ.ಮೀ ಅಡ್ಡಗಲದ್ದಾಗಿರುತ್ತದೆ. ಇದರ ಹೂಗಳಲ್ಲಿ ಮೂರು ವಿಧಗಳಿದ್ದು, ಒಂದನೆಯದ್ದು ಗಂಡು, ಎರಡನೆಯದ್ದು ದ್ವಿಲಿಂಗಿಯಾಗಿ ಕಾರ್ಯನಿರ್ವಹಿಸುವ ಗಂಡು ಮತ್ತು ಮೂರನೆಯದ್ದು  ದ್ವಿಲಿಂಗಿಯಾಗಿ ಕಾರ್ಯನಿರ್ವಹಿಸುವ ಹೆಣ್ಣು.

ರಾಂಬೂಟಾನ್‌ ಹಣ್ಣು ಅಂಡಾಕಾರ ಇಲ್ಲವೆ ಗೋಲಾಕಾರದ್ದಾಗಿದೆ. ಇದರ ಬಣ್ಣ ಹಸಿರು ಕೆಂಪು ಇಲ್ಲವೆ ಹೊಳಪಿನಿಂದ ಕೂಡಿದ ಹಳದಿ, ಕೆಂಪು, ಕಿತ್ತಳೆ ಕೆಂಪು ಆಗಿದೆ. ಈ ಹಣ್ಣು ೩.೪ ರಿಂದ ೮ ಸೆಂ.ಮೀ ಉದ್ದ ಮತ್ತು ೨ ರಿಂದ ೫ ಸೆಂ.ಮೀ ದಪ್ಪದ್ದಾಗಿದೆ. ಹಣ್ಣಿನ ಮೈಮೇಲೆಲ್ಲಾ ಒಂದರಿಂದ ಒಂದೂವರೆ ಸೆ.ಮೀ ಉದ್ದದ ಕೂದಲುಗಳಿವೆ. ಇದು ಸಾಮಾನ್ಯವಾಗಿ ರೇಶ್ಮೆ ಗೂಡಿನಷ್ಟು ದಪ್ಪವಿದ್ದು, ಸಿಪ್ಪೆ ತೆಳ್ಳಗಾಗಿ ಸುಲಭವಾಗಿ ಬಿಡಿಸುವಂತದ್ದಾಗಿದೆ. ಇದರ ಸಿಪ್ಪೆ ಸುಲಿದಾಗ ಒಳಗೆ ತಿರುಳು ಕಾಣ ಸಿಗುವುದು. ಈ ತಿರುಳಲು ಪಾರದಶ್ಕವಾಗಿದ್ದು ಹೆಚ್ಚಿನ ರಸದಿಂದ ಕೂಡಿರುತ್ತದೆ. ಇರ ತಿರುಳಿನ ಬಣ್ಣ ಬಿಳಿ ಅಥವಾ ಗುಲಾಬಿ ಕೆಂಪು. ಬೀಜವನ್ನಾರಿಸಿದ ತಿರುಳು ಸುಮಾರು ೦.೪ ರಿಂದ ೦.೮ ಸೆಂ.ಮೀ ದಪ್ಪವಾಗಿದೆ. ಇದರ ಬೀಜ ಹೆಚ್ಚು ಕಡಿಮೆ ಚಪ್ಪಟೆಯಾಗಿದ್ದು ಇದು ೨ .೫ ರಿಂದ ೩.೪ ಸೆಂ.ಮೀ ಉದ್ದ ಮತ್ತು ೧ ರಿಂದ ೧.೫ ಸೆಂ.ಮೀ ಅಗಲವಿದೆ . ರಾಂಬೂಟಾನ್‌ ಹಣ್ಣಿನ ತಿರುಳು ತಿನ್ನಲು ರುಚಿಯುಳ್ಳದ್ದಾಗಿದ್ದು, ರುಚಿಯಲ್ಲಿ ಸಿಹಿ ಮತ್ತು ಹುಳಿಗಳ ಮಿಶ್ರಣವಿದೆ. ಕೆಲವೊಮ್ಮೆ ಒಂದು ಹಣ್ಣಿನ ತೂಕ ಸುಮರು ೮೦ ಗ್ರಾಂಗಳಾಗುವುದೂ ಇದೆ.

* * *

ಕೃಷಿ ವಿಧಾನ

ಮಣ್ಣು ಮತ್ತು  ಹವಾಗುಣ

ರಾಂಬೂಟಾನ್‌ನ ಕೃಷಿಗೆ ಫಲವತ್ತಾದ ಮಣ್ಣು ಅಗತ್ಯ. ಭೂಮಿಯಲ್ಲಿರುವ ಆಳವಾದ ಮರುಳು ಮಿಶ್ರಿತ ಗೋಡು ಇಲ್ಲವೆ ಜೇಡಿ ಮಿಶ್ರಿತ ಮಣ್ಣು ಆಗಿದ್ದಲ್ಲಿ ಉತ್ತಮ . ಸಾವಯವ ಮಿಶ್ರಿತ ಮಣ್ಣು ಇದರ ಕೃಷಿಗೆ ಯೋಗ್ಯ. ನೀರು ನಿಲ್ಲದೆ ಬಸಿದು ಹೋಗುವ ವ್ಯವಸ್ಥೆ ಇಲ್ಲಿನ ಅಗತ್ಯಗಳಲ್ಲೊಂದಾಗಿದೆ.

ಈ ಬೆಳೆಗೆ ಉಷ್ಣವಲಯ ಮತ್ತು ತೇವಾಂಶವುಳ್ಳ ಪ್ರದೇಶ ಸೂಕ್ತವಾಗಿದೆ. ಸುಖೋಷ್ಣ ಹವೆ ಇದರ ಬೆಳವಣಿಗೆ ಮತ್ತು ಅಧಿಕ ಇಳುವರಿಗೆ ಪೂರಕವಾಗಿದೆ. ಸಮುದ್ರ ಮಟ್ಟದಿಮದ ಸುಮಾರು ೫೦೦ ರಿಂದ ೬೦೦ ಮೀ ಎತ್ತರದವರೆಗೆ ಬೆಳೆಯಬಲ್ಲ ರಾಂಬೂಟಾನ್‌ಗೆ ವಾರ್ಷಿಕವಾಗಿ ಕನಿಷ್ಠ ೨೫೦ ರಿಂದ ೩೦೦ ಸೆ. ಮೀ.ನಷ್ಟು ಸಮನಾಗಿ ಹಂಚಿಕೆಯಾದ ಮಳೆ ಉಪಯುಕ್ತ . ಇದರೊಂದಿಗೆ ಮೂರು ತಿಂಗಳುಗಳಿಗಿಂತ ಜಾಸ್ತಿ ಒಣ ವಾತಾವರಣ ಇರಬಾರದು. ಈ ಮರ ಹೂ ಬಿಟ್ಟು ಕಾಯಿ ಕೊಡುವಾಗ ಬಲವಾದ ಗಾಳಿ ಬೀಸಬಾರದು.

ತಳಿಗಳು

ರಾಂಬೂಟಾನ್‌ನಲ್ಲಿ ನಾನಾ ರೀತಿಯ ತಳಿಗಳಿವೆ. ಈ ತಳಿಗಳು ಬಣ್ಣ, ಗಾತ್ರ, ಮತ್ತು ಬೆಳೆಯುವ ಪ್ರದೇಶಕ್ಕನುಗುಣವಾಗಿದೆ . ಮಲೇಷ್ಯಾದಲ್ಲಿ ಚೂಯಿಲ್ಯಿಂಗ್‌, ಪೆಂಗ್‌ ಥಿಂಗ್‌  ಬೀ, ಯಾಥೋವ್‌, ಅಜಿಮತ್‌, ಅಯರ್ ಮಾಸ್‌ ತಳಿಗಳು ಮುಖ್ಯವಾಗಿದ್ದು, ಇಂಡೋನೇಷ್ಯಾದಲ್ಲಿ ಸ್ಯೆಲೆಂಗ್‌ಕೆಂಗ್‌, ಸೆಮೆಟ್‌ ಜಾನ್‌ , ಲೆಬಕ್‌ ಬೂಲೂಸ್‌, ಸೆನ್‌ ಜೋಂಜ್‌, ಮುಂತಾದವುಗಳಿವೆ.  ಫಿಲಿಫೈನ್ಸ್‌ನಲ್ಲಿ ಕ್ವೀನ್‌ ಜೈದಾ, ಬೇಬಿ ಇಲ್ಯೂಇ, ಪ್ರಿನ್‌ಸೆಸ್‌ ಕಾರೋಲೈನ್‌, ಕ್ವಿಜಾನ್, ರೋಕ್ಸಾಸ್‌, ಜ್ವಾಮೋರಾ, ವಿಕ್ಟೋರಿಯಾ ಮುಂತಾದ ೨೧ ತಳಿಗಳು ಪ್ರಸಿದ್ಧವಾಗಿದೆ. ಒಟ್ಟಾರೆಯಾಗಿ ವಿಶ್ವದಲ್ಲಿಂದು ಶಿಫಾರಸ್ಸಾಗಿರುವ ತಳಿಗಳಲ್ಲಿ ಮುಖ್ಯವಾದವುಗಳೆಂದರೆ R 134 (ಚಾಯಿ ತಾ), R 156 (ಚೆಂಗ್‌) R 134, R 156 (ಮೌರ್ ಗಡಿಂಗ್‌), R 191 ಅನಕ್‌ ಸೆಕೊಲ್), R 193 (ಡೆಲಿ ಬಾಲಿಂಗ್‌), R 162 (ಓಡಿಯೋಕ್‌), R 170(ಡೆಲಿಚೆಂಗ್‌) ಗಳಾಗಿವೆ. ಭಾರತದಲ್ಲಿ ಕೆಂಪು ಮತ್ತು ಹಳದಿ ಹಣ್ಣಿನ ತಳಿಗಳು ಮುಖ್ಯವಾಗಿ ಕಾಣ ಸಿಗುತ್ತವೆ.

ಸಸ್ಯಾಭಿವೃದ್ಧಿ

ರಾಂಬೂಟಾನ್‌ ಸಸ್ಯವನ್ನು ಬೀಜದಿಂದ ಇಲ್ಲವೆ ಕಸಿ ವಿಧಾನದಿಂದ ಗಳಿಸಿಕೊಳ್ಳಬಹುದು. ನಮ್ಮಲ್ಲಿ ಕಸಿ ವಿಧಾನದಿಂದ ಸಸ್ಯಾಭಿವೃದ್ಧಿಯನ್ನು ಹೆಚ್ಚಾಗಿ ಮಾಡುವುದು ರೂಢಿಯಾಗಿದೆ. ಬೀಜ ಬಿತ್ತಿ ಬೆಳೆದ ಮರಗಳು ಅದರ ಮೂಲದಂತಿರುವುದಿಲ್ಲ.

ಬೀಜ ಪದ್ಧತಿಯಲ್ಲಿ ಸಸ್ಯಾಭಿವೃದ್ಧಿ ಮಾಡುವಾಗ ಮರದಲ್ಲಿ ಬಲಿತು ಪಕ್ವಗೊಂಡ ದೊಡ್ಡ ಗಾತ್ರದ ಹಣ್ಣುಗಳನ್ನು ಆಯ್ಕೆ ಮಾಡಿ,  ಸಿಪ್ಪೆ ತೆಗೆದು ತಿರುಳನ್ನು ಬೇರ್ಪಡಿಸಿ ನೀರಿನಲ್ಲಿ ತೊಳೆಯಬೇಕು . ಬಳಿಕ ಅವನ್ನು ನೆರಳಲ್ಲಿ ಒಣಗಿಸಿ ಬಿತ್ತನೆ ಮಾಡಬೇಕು. ಹಣ್ಣುಗಳಿಂದ ಬೇರ್ಪಡಿಸಿದ ಬೀಜವನ್ನು ಎರಡು ದಿನಗಳ ಬಳಿಕ ಬಿತ್ತಿದಲ್ಲಿ ಪ್ರತಿಫಲ ಪೂರಕವಾಗಿರುವುದು. ಬೀಜವನ್ನು ಎತ್ತರದ ಮಣ್ಣಿನ ದಿಣ್ಣೆ ಯಾ ಪ್ಲಾಸ್ಟಿಕ್‌ ಚೀಲಗಳಲ್ಲಿ ಸಮ ಪ್ರಮಾಣದ ಹಟ್ಟಿಗೊಬ್ಬರ ಮತ್ತು ಮೇಲ್ಮಣ್ಣು ತುಂಬಿಸಿ ಬಿತ್ತಬಹುದು. ಚೀಲಗಳಲ್ಲಿ ಅಧಿಕ ನೀರು ಹೊರ ಹೋಗಲು ರಂಧ್ರಗಳು ಇರಲೇಬೇಕು. ಅಕ್ಟೋಬರ್ ತಿಂಗಳು ಬಿತ್ತನೆಗೆ ಸೂಕ್ತ ಕಾಲ. ಬೀಜವನ್ನು ೪ ರ ಇಂದ ೫ ಸೆ.ಮೀ ಆಳಕ್ಕೆ ಬಿತ್ತಿ ಅಗತ್ಯಕ್ಕನುಗುಣವಾಗಿ ನೀರುಣಿಸುತ್ತಿದ್ದಲ್ಲಿ ೧೫ ದಿನಗಳೊಳಗೆ ಮೊಳಕೆ ಬರುವುದು. ಸಸ್ಯಕ್ಕೆ ಸುಮಾರು ೪೫ ರಿಂದ ೬೦ ದಿನಗಳಾದಾಗ ಅದು ಸುಮಾರು ೨೦ ರಿಂದ ೩೦ ಸೆ.ಮೀ ಎತ್ತರಕ್ಕೇರಿದಾಗ ಜಾಗರೂಕತೆಯಿಂದ ತಳಭಾಗದ ಮಣ್ಣು ಸಹಿತ ಕಿತ್ತು ನಾಟಿ ಮಾಡುವುದು ಸೂಕ್ತ.

ಕಸಿವಿಧಾನದಲ್ಲಿ ಬೇರು ಸಸಿ ಮತ್ತು ಕಸಿಕೊಂಬೆ ಒಂದೇ ಗಾತ್ರವಿರಬೇಕು. ಕಸಿವಿಧಾನಕ್ಕೆ ಜೂನ್‌ಜುಲೈ ತಿಂಗಳು ಸೂಕ್ತ. ಕಸಿ ಮಾಡಿದ ೪೫ ದಿನಗಳೊಳಗೆ ಬೇರು ಸಸಿ ಮತ್ತು ಕಸಿ ಕೊಂಬೆ ಬೆಸೆದು ಒಂದಾಗುವುದು.  ಇದಾದ ಎರಡು ತಿಂಗಳಲ್ಲಿ ಅದನ್ನು ತಾಯಿಮರದಿಂದ ಬೇರ್ಪಡಿಸಿ ನೆರಳಲ್ಲಿಟ್ಟು ಹದವರಿತ ನೀರುಣಿಸಬೇಕು. ಜುಲೈ ತಿಂಗಳಲ್ಲಿ ನಾಟಿಗೆ ಇದು ಸಜ್ಜಾಗುವುದು.

ಕಣ್ಣು ಕೂಡಿಸಿ ಕಸಿ ಮಾಡುವ ವಿಧಾನದಲ್ಲಿ ತೇಪೆ ಪದ್ಧತಿ ಉತ್ತಮ. ಕಸಿಮೊಗ್ಗು ಕನಿಷ್ಟ ಎಂಟು ತಿಂಗಳಿನದ್ದಾಗಿರುವುದು ಸೂಕ್ತ. ಕಸಿ ಮಾಡುವ ೧೫ ದಿನಗಳ ಮುಂಚೆ ಎಲೆಗಳನ್ನು ಒಂದರಿಂದ ಎರಡು ಸೆ.ಮೀ . ತೊಟ್ಟು ಉಳಿಸಿಕೊಂಡು ಸವರಬೇಕು.

ಗೂಟಿ ಪದ್ಧತಿಯಲ್ಲಿ ಸಸ್ಯಾಭಿವೃದ್ಧಿ ಮಾಡುವುದಿದ್ದಲ್ಲಿ ಇದರ ರೆಂಬೆಗಳು ಬಲಿತಿದ್ದು, ಪೆನ್ಸಿಲ್‌ ಗಾತ್ರದ್ದಾಗಿರಬೇಕು . ಈ ರೆಂಬೆಗಳಲ್ಲಿ ಸಾಕಷ್ಟು ಎಲೆಗಳಿರಬೇಕು. ಇಲ್ಲಿರುವ ನಯವಾದ ಭಾಗದಲ್ಲಿ ಒಂದರಿಂದ ಎರಡು ಸೆ.ಮೀ. ಅಗಲದ ತೊಗಟೆಯನ್ನು ಉಂಗುರಾಕಾರದಲ್ಲಿ ತೆಗೆದು, ನೀರಲ್ಲಿ ಅದ್ದಿದ ಸ್ಪಾಗ್ನಂಮಾಸ್‌ ಯಾ ವರ್ಮಿಕ್ಯುಲೈಟ್‌ ಮಾಧ್ಯಮವನ್ನು ಹೊದಿಸಿ, ಪ್ಲಾಸ್ಟಿಕ್‌ ಹಾಳೆಯನ್ನು ಎರಡೂ ತುದಿಗಳಿಗೆ ಬಿಗಿದು ಕಟ್ಟಬೇಕು. ಪರಿಣಾಮವಾಗಿ ೪೫ ದಿನಗಳೊಳಗೆ ಮೇಲ್ತುಟಿಯಲ್ಲಿ ಬೇರು ಬರುವುದು. ಎರಡು ತಿಂಗಳ ಬಳಿಕ ಇದನ್ನು ತಾಯಿ ಮರದಿಂದ ಬೇರ್ಪಡಿಸಿ ಪ್ಲಾಸ್ಟಿಕನ್ನು ತೆಗೆದು ನಾಟಿ ಮಾಡುವುದು ಸೂಕ್ತ. ಗೂಟಿಕಟ್ಟಲು ಸೂಕ್ತ. ಸಮಯ ಜೂನ್‌ ಯಾ ಜುಲೈ ತಿಂಗಳುಗಳು. ಹೆಚ್ಚಿನ ಸಂಖ್ಯೆಯ ಬೇರು ಬರಬೇಕಿದ್ದಲ್ಲಿ ಅಗತ್ಯಬಿದ್ದಲ್ಲಿ ಪ್ರಮಾಣದ ಇಂಡೋಬ್ಯುಟೈರಿಕ್‌ ಆಮ್ಲ ಅಥವಾ ಇನ್ನಾವುದೇ ಚೋದಕ ಪದಾರ್ಥವನ್ನು ತೊಗಟೆಯ ಮೇಲ್ತುಟಿಕೆಗೆ ಬಳಿಯಬೇಕು.

ಸಸ್ಯಾಭಿವೃದ್ಧಿಗಾಗಿ ರೆಂಬೆಗಳನ್ನು ನೆಲದಲ್ಲಿ ಊರಿ ಬೇರು ಬರಿಸುವ ಪದ್ಧತಿಯೂ ಇದೆ . ಇಲ್ಲಿ ಉದ್ದದ ರೆಂಬೆಗಳನ್ನು ಹಸಿ ಮಣ್ಣಿನಲ್ಲಿ ತಳಭಾಗದ ತೊಗಟೆ ಮತ್ತು ಕಟ್ಟಿಗೆಯ ನಾಲಿಗೆಯನ್ನು ಎಬ್ಬಿಸಿ ಊರಬೇಕು. ಇದಕ್ಕೆ ಅಗತ್ಯಕ್ಕನುಗುಣವಾಗಿ ನೀರುಣಿಸಿದಲ್ಲಿ ೯೦ ದಿನಗಳೊಳಗೆ ಬೇರು ಮೂಡುವುದು.

ನಾಟಿ ವಿಧಾನ

ಕೃಷಿ ಭೂಮಿಯನ್ನು ಒಂದೆರಡು ಬಾರಿ ಉಳುಮೆ ಮಾಡಿ ಸಮತಟ್ಟು ಮಾಡಿದ ಬಳಿಕ ೧೦ ಮೀ. x 10 ಮೀ. ಅಂತರದಲ್ಲಿ ೦.೬ ಮೀ. x 0.6 ಮೀ. x ೦. ೬ ಮೀ. ಗಾತ್ರದ ಗುಂಡಿಗಳಲ್ಲಿ ನಾಟಿ ಮಾಡುವುದು ಉತ್ತಮ. ನಾಟಿ ಮಾಡುವುದಕ್ಕಿಂತ ಮೊದಲು ಈ ಗುಂಡಿಗಳಿಗೆ ಸಮ ಪ್ರಮಾಣದ ಹಟ್ಟಿ ಗೊಬ್ಬರ ಮತ್ತು ಮೇಲ್ಮಣ್ಣುಗಳನ್ನು ತುಂಬಿಸಿ ಮಳೆಗೆ ತೊಯ್ಯುವಂತೆ ಮಾಡಬೇಕು. ಈ ಸಾಲ ಮತ್ತು ಗುಂಡಿಗಳನ್ನು ಮೇ ತಿಂಗಳೊಳಗೆ ತೆಗೆದು ಬಳಿಕ ಮಳೆಗೆ ಇವನ್ನು ಒಡ್ಡುವುದು ಸೂಕ್ತ. ಮಳೆಗಾಲ ಆರಂಭವಾಗಿ ಒಂದೆರಡು ಮಳೆ ಬಿದ್ದ ಬಳಿಕ ಗಿಡಗಳನ್ನು ಮಣ್ಣು ಸಹಿತ ನಾಟಿ ಮಾಡಬೇಕು. ಈ ಗಿಡಗಳು ಗಾಳಿಗೆ ಅಲುಗಾಡದಂತಿರಲು ಆದರೆ ಕೋಲು ಇದಕ್ಕೆ ಕಟ್ಟಬೇಕು. ಕೆಲವೊಮ್ಮೆ ಗಿಡದ ತಳಭಾಗಕ್ಕೆ ಗೆದ್ದಲಿನ ಬಾಧೆ ಬರುವುದರಿಂದ ಪ್ರತಿ ಗುಂಡಿಗೆ ಸುಮಾರು ೧೦ ಗ್ರಾಂ ನಷ್ಟು ಹೆಪ್ಪಾಕ್ಲೋರ್ ಪುಡಿ ಉದುರಿಸಬೇಕು. ಗಿಡಗಳಲಿಗೆ ಹದವರಿತ ನೀರು ಆರಂಭದ ಹಂತದಲ್ಲಿ ಅತ್ಯಗತ್ಯ.

ನೀರಾವರಿ ಮತ್ತು ಗೊಬ್ಬರ

ರಾಂಬೂಟಾನ್‌ ವ್ಯವಸಾಯದಲ್ಲಿ ಮಣ್ಣು ಯಾವತ್ತೂ ಹಸಿಯಾಗಿರಲೇಬೇಕು. ಅಗತ್ಯಕ್ಕನುಗುಣವಾಗಿ ನೀರುಣಿಸುತ್ತಿರುವುದು, (ಮಳೆಯಿಲ್ಲದಿದ್ದಾಗ ಕನಿಷ್ಟ ನಾಲ್ಕು ದಿನಗಳಿಗೊಮ್ಮೆ) ಆಗಲೇಬೇಕು. ಇದರೊಂದಿಗೆ ನೀರು ಇಂಗುತ್ತಿರಬೇಕು. ಸಸ್ಯದ ಬೆಳವಣಿಗೆಗೆ ಕಾಲಕ್ಕನುಗುಣವಗಿ ಗೊಬ್ಬರ ಕೊಡುತ್ತಿರಬೇಕು. ಮೊದಲ ಮೂರು ವರ್ಷಗಳಲ್ಲಿ ನೈಟ್ರೋಜನ್‌, ಪಾಸ್ಪೆಟ್‌, ಪೊಟ್ಯಾಷ್‌ ಮತ್ತು ಮ್ಯಾಗ್ನೇಷಿಯಂಗಳ ಮಿಶ್ರಣ ೧೫:೧೫:೬:೪ ರ ಪ್ರಮಾಣದಲ್ಲಿ ಕೊಡಬೇಕು. ನಾಲ್ಕನೇ ವರ್ಷದ ಬಳಿಕ ಇದು ೧೨:೧೨:೧೭:೨ ರಷ್ಟಾಗಿರಬೇಕಲು. ಗೊಬ್ಬರ ಹಾಕುವ ಕಾಲದಲ್ಲಿ ಮಣ್ಣು ನೀರಿನಂಶದಿಂದ ಕೂಡಿರಬೇಕು. ವರ್ಷಕ್ಕೊಮ್ಮೆ ಸುಮಾರು ೨೦ ರಿಂದ ೩೦ ಕಿ. ಗ್ರಾಂ ಹಟ್ಟಿ ಗೊಬ್ಬರ ಯಾ ಹಸಿರು ಗೊಬ್ಬರ ಕೊಟ್ಟಲ್ಲಿ ಬೆಳವಣಿಗೆಗೆ ಪೂರಕವಾಗುವುದು.  ಇದರೊಂದಿಗೆ ಸಾಲುಗಳ ಮತ್ತು ಸಸಿಗಳ ಅಂತರದಲ್ಲಿ ಬರುವ ಕಳೆಯನ್ನು ಆಗಾಗ್ಗೆ ಕಿತ್ತು ಹಾಕಿ ಮಣ್ಣನ್ನು ಸಡಿಲಿಸುತ್ತಿರಬೇಕು.

ಅಂತರ ಬೆಳೆಯಾಗಿ ರಾಂಬೂಟಾನ್

ಅಡಿಕೆ, ತೆಂಗು ಮುಂತಾದ ವಾಣಿಜ್ಯ ಕೃಷಿಯಲ್ಲಿ ಇದನ್ನು ಅಂತರಬೆಳೆಯಾಗಿ ಬೆಳೆಸಲು ಸಾಧ್ಯ. ಈ ತೋಟಗಳ  ಅಂಚಿನಲ್ಲಿ ಇದರ ಕೃಷಿಯನ್ನು ಕೈಗೊಳ್ಳಲೂಬಹುದು. ಕೇವಲ ರಾಂಬೂಟಾನೊಂದನ್ನೆ ವ್ಯವಸಾಯ ಮಾಡುವುದಿದ್ದಲ್ಲಿ ಅಲ್ಪಾವಧಿಯ ತರಕಾರಿ ಕೃಷಿ ಮಾಡಬಹುದು.

ಸವರುವಿಕೆ

ಗಿಡ ತಳಮಟ್ಟದಿಂದ ಒಂದು ಮೀಟರ್ ಎತ್ತರದ ತನಕ ನಯವಾಗಿರಬೇಕು. ಗಿಡದಲ್ಲಿ ಮೂರರಿಂದ ನಾಲ್ಕು ರೆಂಬೆಗಳನ್ನು ಬೆಳೆಯಲು ಬಿಟ್ಟು ಸುಳಿಯನ್ನು ಚಿವುಟಿಹಾಕಬೇಕು. ಬೇರು ಸಸಿಯ ಕಸಿಗಂಟಿನ ಕೆಳಗಿನ ಚಿವುರುಗಳನ್ನು ಚಿವುಟಿ ಹಾಕುತ್ತಿರಬೇಕು.

ಕೀಟ ಬಾಧೆ ಮತ್ತು ರೋಗಗಳು

ಇದನ್ನಿಂದು ವ್ಯವಸಾಯ ಮಾಡುತ್ತಿರುವ ರಾಷ್ಟ್ರಗಳಲ್ಲಿ ಸುಮಾರು ೧೧೮ ವಿಧದ ಕೀಟಗಳ ಬಾಧೆಯಿದೆಯೆಂದು ಹೇಳುತ್ತಿದ್ದು, ಇವುಗಳಲ್ಲಿ ೧೭ನ್ನು  ಈಗಾಗಲೇ ಗುರುತಿಸಲಾಗಿದೆ. ಕೀಟಗಳಲ್ಲಿ ಬೂಷ್ಟು, ತಿಗಣೆ, ಕಾಂಡ ಕೊರೆಯುವ ಹುಳ, ಎಳತು ಎಲೆ ತಿನ್ನುವ ಕಂಬಳಿ ಹುಳ, ಹಣ್ಣಿನ ನೊಣ ಇತ್ಯಾದಿಗಳು ಪ್ರಮುಖವಾಗಿವೆ. ಇವುಗಳ ಹತೋಟಿಗೆ ೧೦೦ ಲೀ. ನೀರಿಗೆ, ೨೦೦ ಮಿ.ಲೀ. ಮಾನೋಕೋಟೋಫಾಸ್‌ ಅಥವಾ ಇನ್ನಾವುದೇ ಕೀಟನಾಶಕ ಬೆರೆಸಿ ೨ ಬಾರಿ ಸಿಂಪಡಿಸಬಹುದಾಗಿದೆ.

ಈ ಸಸ್ಯಕ್ಕೆ ಬರುವ ರೋಗಗಳ ಸಂಖ್ಯೆ ಇತರ ಹಣ್ಣುಗಳ ಗಿಡಗಳಿಗೆ ಹೋಲಿಸಿದಾಗ ಕಡಿಮೆ. ಇಲ್ಲಿ ಹೆಸರಿಸಬಹುದಾದ ಮುಖ್ಯ ರೋಗವೆಂದರೆ ಬೂದಿ ರೋಗ. ಇದೊಂದು ಶಿಲೀಂಧ್ರ ರೋಗ. ಇದರಿಂದಾಗಿ ಹಣ್ಣುಗಳು ಉದುರುವುವು. ಇದರ ಹತೋಟಿಗಾಗಿ ಎಳತು ಕಾಯಿಗಳಿಗೆ, ರೋಗದ ಸೂಚನೆ ಕಂಡಾಗ ಸೂಕ್ತ ಪ್ರಮಾಣದ ನೀರಿನಲ್ಲಿ ಕರಗುವ ಗಂಧಕವನ್ನು ಹಾಕಿ ಸಿಂಪಡಿಸಬೇಕು. ರಾಂಬೂಟಾನ್‌ಗೆ ಬರುವ ಇನ್ನೊಂದು ರೋಗ ಕಾಂಡಕೊಳೆ ರೋಗ. ಇದರಿಂದಾಗಿ ಮರದಲ್ಲಿ ರಂಧ್ರಗಳಾಗುವುದು. ಇದರ ಹತೋಟಿಗೆ ಗಾಳಿ ಸರಾಗವಾಗಿ ಹಾದು ಹೋಗುವ ವ್ಯವಸ್ಥೆ ಅತ್ಯಗತ್ಯ. ಕಪ್ಪು ಬೂಷ್ಟು ಸಾಮಾನ್ಯವಾಗಿ ಕೀಟಗಳಿಂದ ಬರುವ ರೋಗವಾಗಿದ್ದು, ಇದು ಹೆಚ್ಚಾಗಿ ಗಾಳಿ ಮೂಲಕ ಬರಲು ಸಾಧ್ಯ. ಈ ರೋಗದಿಂದಾಗಿ ಎಲೆ ಮತ್ತು ಹಣ್ಣುಗಳ ಮೇಲೆ ಕಪ್ಪು ಬೂಷ್ಟು ಕಂಡು ಬರುವುದು. ಇದರ ಹತೋಟಿಗಾಗಿ ಕಾಪರ್ ಓಕ್ಸಿಕ್ಲೋರೈಡ್‌ ಅಥವಾ ಇನ್ನಾವುದೇ ಶಿಲೀಂಧ್ರನಾಶಕಗಳನ್ನು ಬಳಸಬಹುದು.

ರಾಂಬೂಟಾನ್ ಹೂವು ಮತ್ತು ಕಾಯಿ

ಬೀಜದಿಂದ ತಯಾರಿಸಿದ ಸಸ್ಯಗಳು ಸಾಮಾನ್ಯವಾಗಿ ನಾಟಿ ಮಾಡಿದ ನಾಲ್ಕು ವರ್ಷಗಳ ಬಳಿಕ ಮತ್ತು ನಿರ್ಲಿಂಗ ಪದ್ಧತಿಯ ಗಿಡವಾದಲ್ಲಿ ನಾಟಿ ಮಾಡಿದ ಮೂರು ವರ್ಷಗಳ ನಂತರ ವರ್ಷಕ್ಕೆರಡು ಬಾರಿ ಹೂ ಬಿಟ್ಟು ಕಾಯಿ ಕೊಡುವುದು. ಇಲ್ಲಿ ಒಂದು ದೊಡ್ಡ ಕೊಯ್ಲು ಇನ್ನೊಂದು ಸಣ್ನದಾಗಿರುವುದು. ಸಾಮಾನ್ಯವಾಗಿ ಮಾರ್ಚಿನಿಂದ ಮೇ ಮತ್ತು ಅಗೋಸ್ತುನಿಂದ ಅಕ್ಟೋಬರ್ ನೊಳಗೆ ಎರಡು ಬಾರಿ ಹೂ ಬಿಡುವುದು ವಾಡಿಕೆ.

* * *

ಕೊಯ್ಲು ಮತ್ತು ಉತ್ಪಾದಕತೆ

ರಾಂಬೂಟಾನ್‌ ಗಿಡವು ಹೂ ಬಿಟ್ಟು ೧೫ ರಿಂದ ೧೮ ವಾರಗಳೊಳಗೆ ಮಾಗಿದ ಹಣ್ಣನ್ನು ಕೊಡುವುದು. ಇದರ ಮುಖ್ಯ ಕೊಯ್ಲು ಜುಲೈನಿಂದ ನವಂಬರ್ ಆಗಿದ್ದು, ಉಪಕೊಯ್ಲು ಮಾರ್ಚಿನಿಂದ ಜುಲೈ ತಿಂಗಳುಗಳಲ್ಲಾಗುವುದು. ಕೊಯ್ಲುನ ಸಮಯ, ಹವಾಗುಣ, ಪ್ರದೇಶಕ್ಕನಗುಣವಾಗಿ ನಾಲ್ಕರಿಂದ ಆರು ವಾರಗಳ ವ್ಯತ್ಯಾಸಕ್ಕೊಳಗಾಗುವುದು. ಇಡೀ ಗೊಂಚಲಿನಿಂದ ಹೆಚ್ಚಿನ ಹಣ್ಣುಗಳು ಹಳದಿ ಯಾ ಕೆಂಪು ಬಣ್ಣಕ್ಕೆ ತಿರುಗಿದಾಗ ಕೊಯ್ಲು ಮಾಡುವುದು ಸೂಕ್ತ.

ರಾಂಬೂಟಾನ್‌ನ ಗೊಂಚಲೊಂದರಲ್ಲಿ ೪೦ ರಿಂದ ೬೦ ಹಣ್ಣುಗಳು ಕಂಡುಬರುವುವು. ಹೀಗಿದ್ದರೂ ಸಾಮಾನ್ಯವಾಗಿ ಒಂದು ಗೊಂಚಲಲ್ಲಿ ೧೨ ರಿಂದ ೧೩ ಹಣ್ಣುಗಳಿರುವವು. ಹಣ್ಣೊಂದರ ತೂಕ ೨೭ ರಿಂದ ೮೦ ಗ್ರಾಂಗಳಷ್ಟಾಗಿದ್ದು ಇದು ತಳಿ ಮತ್ತು ಕಾಲಕ್ಕೆ ಅನುಗುಣವಾಗಿರುತ್ತದೆ. ಸಾಮಾನ್ಯವಾಗಿ ಮರವೊಂದರ ಸರಾಸರಿ ಉತ್ಪಾದಕತೆ ಸುಮಾರು ೬೦ ರಿಂದ ೮೦ ಕಿ. ಗ್ರಾಂ ಗಳಷ್ಟಾಗಿದೆ. ಈ ಹಣ್ಣನ್ನು ಉತ್ಪಾದಿಸುವ ವಿದೇಶಿ ರಾಷ್ಟ್ರಗಳಲ್ಲಿ ಆರಂಭದ ಕೊಯ್ಲುನಲ್ಲಿ ಹೆಕ್ಟೇರೊಂದರ ಒಂದರಿಂದ ಎರಡು ಟನ್‌ ಮತ್ತು ಆ ಬಳಿಕ ಸುಮರು ೨೦ ಟನ್‌ ಇಳುವರಿ ದೊರಕುತ್ತಿದೆ. ಒಂದು ಅಂದಾಜಿನ ಪ್ರಕಾರ ಮರವೊಂದು ವಾರ್ಷಿಕವಾಗಿ ಸರಾಸರಿ ೫೦೦೦ ದಿಂದ ೬೦೦೦ ಹಣ್ಣುಗಳನ್ನು ಕೊಡುವುದು.

ರಾಂಬೂಟಾನ್‌ ಹಣ್ಣನ್ನು ಕೊಯ್ಲು ಮಾಡಲು ಮುಂಜಾನೆ ಇಲ್ಲವೆ ಸಂಜೆ ವೇಳೆ ಸೂಕ್ತ ಸಮಯ. ಸಾಮಾನ್ಯವಾಗಿ ರಾಂಬೂಟಾನ್‌ನ ಕೊಯ್ಲಿನ ಅವಧಿ ೩೫ ರಿಂದ ೫೦ ದಿನಗಳವರೆಗೆ ವಿಸ್ತರಿಸಿರುತ್ತದೆ, ಅಲ್ಲದೆ ಗೊಂಚಲಿನಲ್ಲಿರುವ ಎಲ್ಲಾ ಕಾಯಿಗಳು ಒಮ್ಮೆಲೆ ಹಣ್ಣಾಗುವುದಿಲ್ಲ. ಈ ನಿಟ್ಟಿನಲ್ಲಿ ಎರಡರಿಂದ ಏಳು ದಿನಗಳ ಅಂತರದಲ್ಲಿ ಕೊಯ್ಲು ಮಾಡುವುದು ಸೂಕ್ತ. ಕೊಯ್ಲಿನ ಸಂದರ್ಭದಲ್ಲಿ ಹಣ್ಣು ಕೆಳಕ್ಕೆ ಬೀಳದಂತೆ ಜಾಗರೂಕತೆ ವಹಿಸುವುದು ಮಾರಾಟ ದೃಷ್ಟಿಯಿಂದ ಒಳ್ಳೆಯದು.

ರಾಂಬೂಟಾನ್‌ ಮರ ಸಾಮಾನ್ಯವಾಗಿ ೨೦ ವರ್ಷಗಳ ತನಕ ಬದುಕಬಹುದಾಗಿದ್ದು, ಇದು ೩೦ ವರ್ಷಗಳ ತನಕ ವಿಸ್ತರಿಸಲೂ ಸಾಧ್ಯ. ಇದರ ಆಯುಸ್ಸು ಕೃಷಿ ಪ್ರದೇಶ, ಹವೆ ಮುಂತಾದವುಗಳನ್ನು ಅವಲಂಬಿಸಿದೆ.

* * *

ಕೊಯ್ಲೋತ್ತರ ತಂತ್ರಜ್ಞಾನ

ಪ್ಯಾಕ್ಮಾಡುವುದು

ಮಾರಾಟಕ್ಕಾಗಿರುವ ಹಣ್ಣುಗಳನ್ನು ಆರಂಭದಲ್ಲಿ ನೀರಿನಲ್ಲಿ ಸ್ವಚ್ಛಗೊಳಿಸಬೇಕು. ಬಳಿಕ ಅವನ್ನು ವರ್ಗೀಕರಿಸಬೇಕು. ಶೀತಲೀಕರಣ ವ್ಯವಸ್ಥೆಯಿದ್ದಲ್ಲಿ ಹಣ್ಣುಗಳನ್ನು ಪ್ಯಾಕ್‌ ಮಾಡುವ ಮೊದಲು ೧೩ಡಿಗ್ರಿ ಸೆಂ.ಗ್ರೇಡ್‌ ಉಷ್ಣಾಂಶದಲ್ಲಿ ಶೇಖರಿಸಿಡಬೇಕು. ರಫ್ತುನ ಉದ್ದೇಶವಿದ್ದಲ್ಲಿ ವಿದೇಶಿ ಮಾರುಕಟ್ಟೆಯ ಬೇಡಿಕೆಗನುಗುಣವಾದ ಗಾತ್ರದ ವರ್ಗೀಕರಣವಾಗಬೇಕು. ಮಾರಾಟಕ್ಕಿರುವ ಹಣ್ಣುಗಳನ್ನು ೨೨ x ೩೧ x ೯ ಸೆ.ಮೀ.ನ ಕಾರ್ಡ್‌ಬೋರ್ಡ್ ಪೆಟ್ಟಿಗೆಯಲ್ಲಿ ಏಕರೂಪದ ಸಾಲುಗಳಲ್ಲಿ ಒಂದೇ ಗಾತ್ರ , ಬಣ್ಣ ಮತ್ತು ಮಾಗಿದವುಗಳನ್ನು ಬಿಡಿಬಿಡಿಯಗಿ ಪ್ಯಾಕ್‌ ಮಾಡಬೇಕು.

ರಫ್ತಿಗಾಗಿರುವ ಗುಣಮಟ್ಟ

ವಿದೇಶಿ ಮಾರುಕಟ್ಟೆಯಲ್ಲಿ ತಾಜಾತನದ ರಾಂಬೂಟಾನ್‌ ಹಣ್ಣಿಗೆ ಆದ್ಯತೆಯಿದೆ. ಇದರೊಂದಿಗೆ ಒಂದೇ ಗಾತ್ರದ, ಕೆಂಪು ಬಣ್ಣದ, ಕನಿಷ್ಟ ೩೦ ಗ್ರಾಂ ತೂಕವುಳ್ಳ ಒಂದು ಇಂಚು ಸುತ್ತಳತೆಯ, ಯಾವುದೇ ಕೀಟಬಾಧೆಗೊಳಗಾಗದ, ರೋಗರಹಿತ, ಹೆಚ್ಚಿನ ತಿರುಳುಳ್ಳ, ರುಚಿಕರವಾದ ಹಣ್ಣಿಗೆ ಬೇಡಿಕೆಯಿದೆ. ರಫ್ತು ಮಾಡುವ ಹಣ್ಣುಗಳ ಗೊಂಚಲುಗಳಲ್ಲಿ ಕಾಂಡವು ಇರಬೇಕು.

ಸಾಗಣೆ ಮತ್ತು ಶೇಖರಣೆ

ರಫ್ತು ಮಾಡುವ ಹಣ್ಣುಗಳನ್ನು ವಿಮಾನ ಸಾರಿಗೆ ಮೂಲಕ ಕೊಯ್ಲಿನ ಒಂದು ದಿನದೊಳಗೆ ಮಾರುಕಟ್ಟೆಗೆ ಪೂರೈಸಬೇಕು. ಈ ಹಣ್ಣನ್ನು ಶೀತಲೀಕರಣ ವ್ಯವಸ್ಥೆಯಡಿಯಲ್ಲಿ ೬ ದಿನಗಳ ತನಕ ಶೇಖರಿಸಿಡಲು ಸಾಧ್ಯ. ಉಷ್ಣಾಂಶದಲ್ಲಿ ಏರು ಪೇರಾದಲ್ಲಿ ಗುಣಮಟ್ಟ ಕುಸಿಯಲು ಸಾಧ್ಯ. ಇದರೊಂದಿಗೆ ಶೇಖರಣೆ ಸಮಯ ಹೆಚ್ಚಾದಂತೆ ತೂಕದಲ್ಲೂ ಕುಸಿತ ಕಂಡು ಬರುವುದು.

ಪ್ಯಾಕಿಂಗ್‌, ಸಾಗಣೆ, ಶೇಖರಣೆ ಮುಂತಾದ ಕಾರ್ಯಗಳಲ್ಲಿ ಹಣ್ಣುಗಳಿಗೆ ಪೆಟ್ಟಾಗುವ ಸಾಧ್ಯತೆಯಿದ್ದು, ಈ ಬಗ್ಗೆ ಮುಂಜಾಗರೂಕತೆಯನ್ನು ವಹಿಸುವುದು ಸೂಕ್ತ. ಪೆಟ್ಟಾದ ಹಣ್ಣುಗಳಿಗೆ ರೋಗ ಬರಲು ಸಾಧ್ಯ. ಇದಕ್ಕಾಗಿ ಸೂಕ್ತ ನಿರ್ವಹಣೆ ಇಲ್ಲಿನ ಅಗತ್ಯಗಳಲ್ಲೊಂದು.

* * *

ಉಪಯೋಗಗಳು

ರಾಂಬೂಟಾನ್

  • ವಿಶಿಷ್ಟ ರುಚಿಯುಳ್ಳ ಹಣ್ಣು.
  • ಶೀಘ್ರ ಪ್ರತಿಫಲ ಕೊಡಬಲ್ಲುದು.
  • ಯೋಗ್ಯ ಉಪಬೆಳೆಯಾಗಬಹುದು.
  • ಈ ಹಣ್ಣಿನ ಬಗ್ಗೆ ನಮ್ಮಲ್ಲಿ ಪ್ರಚಾರವಿನ್ನೂ ಆಗಿಲ್ಲ.
  • ಹಣ್ಣಿನಲ್ಲಿ ಔಷಧೀಯ ಗುಣಗಳಿವೆ.
  • ವಿದೇಶ ಮಾರುಕಟ್ಟೆಯಲ್ಲಿ ಮತ್ತು ಆಂತರಿಕವಾಗಿ ಪ್ರವಾಸಿ ಕೇಂದ್ರಗಳಲ್ಲಿ ಹೆಚ್ಚಿನ ಬೇಡಿಕೆ ಇದೆ.
  • ಕೃಷಿಗೆ ಆಸಕ್ತಿ ಮುಖ್ಯ.

ರಾಂಬೂಟಾನ್‌ನ ಹಣ್ಣುಗಳು ಬಲು ಸ್ವಾದಯುಕ್ತ. ಈ ಹಣ್ಣಿನ ಸಿಪ್ಪೆ ಬಿಡಿಸಿದಾಗ ಅದರೊಳಗಿರುವ ತಿರುಳು ತಿನ್ನಲು ರುಚಿಕರ. ಬೀಜದ ಮೇಲಿರುವ ಈ ತಿರುಳು ಹೆಚ್ಚಿನ ಪ್ರಮಾಣದ ಶರ್ಕರ ಪಿಷ್ಟ, ಖನಿಜಾಂಶ ಹಾಗೂ ‘ಸಿ’ ಜೀವ ಸತ್ವವನ್ನು ಹೊಂದಿರುತ್ತದೆ. ಹಣ್ಣನ್ನು ಸಂಸ್ಕರಿಸಿ ಶೇಖರಣೆ ಮಾಡಲು ಸಾಧ್ಯ. ಇದರೊಂದಿಗೆ ಜಾಮ್‌, ಜೆಲ್ಲಿ ಉತ್ಪನ್ನಗಳ ತಯಾರಿಯೂ ಆಗುತ್ತದೆ. ಇದರ ಬೀಜವನ್ನು ತಿನ್ನುವ ಪದ್ಧತಿಯಿದೆ. ಒಂದು ಹಣ್ಣಿನಲ್ಲಿ ಶೇಕಡಾ ೫೯ ಕ್ಯಾಲೋರಿ ಆಹಾರಾಂಶವಿದೆ.

ಈ ಹಣ್ಣನ್ನು ಒಗರು ಪದಾರ್ಥವನ್ನಾಗಿ ಬಳಸುವ ಪದ್ಧತಿ ಕಾಂಬೋಡಿಯಾದಲ್ಲಿದೆ. ಹಣ್ಣಿನ ತಿರುಳಿನ ಉಪಯೋಗದಿಂದ ಹೊಟ್ಟೆಯಲ್ಲಿರುವ ಜಂತು ಹುಳಗಳು ನಾಶವಾಗುವುವು. ತಲೆನೋವು ಯಾ ತಲೆಸಿಡಿತದ ನಿವಾರಣೆಗೆ ಹಣ್ಣನ್ನು ನುಣ್ಣಗೆ ಅರೆದು ಪಟ್ಟಿ ಹಾಕುವ ಪದ್ಧತಿಯಿದೆ. ಹಣ್ಣುಗಳನ್ನು ಬೇಯಿಸಿ ತಯಾರಿಸಿದ ಕಷಾಯದಿಂದ ಅತಿಸಾರ ಮತ್ತು ಜ್ವರಗಳ ನಿವಾರಣೆ ಸಾಧ್ಯ. ಹಣ್ಣುಗಳ ಬೀಜಗಳಿಂದ ತೆಗೆದ ಎಣ್ಣೆ ಅಡುಗೆಗೆ ಉಪಯುಕ್ತ. ಅಲ್ಲದೆ ಇದನ್ನು ಸಾಬೂನು, ಮೊಂಬತ್ತಿಗಳ ತಯಾರಿಯಲ್ಲೂ ಉಪಯೋಗಿಸಲಾಗುತ್ತದೆ.

೧೦೦ ಗ್ರಾಂ ತಿರುಳಿನಲ್ಲಿರುವ ಪೋಷಕಾಂಶಗಳು

ತೇವಾಂಶ ೮೨.೦೩ ಗ್ರಾಂ ನಾರು ೦೦.೨೪ ಗ್ರಾಂ
ಪ್ರೋಟೀನ್‌ ೦೦.೪೬ ಗ್ರಾಂ ಖನಿಜಾಂಶ ೦೦.೯೧ ಗ್ರಾಂ
ಶರ್ಕರಪಿಷ್ಟ ೧೬.೦೨ ಗ್ರಾಂ ಸುಣ್ಣ ೧೦.೦೬ ಮಿ.ಗ್ರಾಂ
ಸಕ್ಕರೆ ೦೫.೦೮ ಗ್ರಾಂ ರಂಜಕ ೧೨.೦೯ ಮಿ. ಗ್ರಾಂ
ಅಪಕರ್ಷಕ ಸಕ್ಕರೆ ೦೨.೦೯ ಗ್ರಾಂ ‘ಸಿ’ ಜೀವಸತ್ವ ೩೦.೦೦ ಮಿ.ಗ್ರಾಂ

* * *

ಮಾರುಕಟ್ಟೆ

ಭಾರತದಲ್ಲಿ ರಾಂಬೂಟಾನ್‌ ಹಣ್ಣಿಗೆ ದೊಡ್ಡ ಪಟ್ಟಣಗಳಲ್ಲಿ ಮಾತ್ರ ಬೇಡಿಕೆಯಿದೆ. ಈ ಹಣ್ಣಿನ ಪರಿಚಯ ನಮ್ಮಲ್ಲಿ ಅನೇಕರಿಗೆ ಇನ್ನೂ ಆಗಿಲ್ಲ. ಪಟ್ಟಣ ಪ್ರದೇಶದ ಮಾರುಕಟ್ಟೆಗಳಲ್ಲಿ ಅಪರೂಪಕ್ಕೆ ಇದು ಕಾಣ ಸಿಗುವುದು. ನಮ್ಮಲ್ಲಿ ಇದರ ಕೃಷಿಯಿನ್ನೂ ಬಾಲ್ಯಾವಸ್ಥೆಯಲ್ಲಿರುವುದರಿಂದ ಇದು ಮಾರುಕಟ್ಟೆಯಲ್ಲಿ ವಿಜೃಂಭಿಸುತ್ತಿಲ್ಲ.

ರಾಂಬೂಟಾನ್‌ಗೆ ಅಮೇರಿಕಾ, ಆಸ್ಟ್ರೇಲಿಯಾ, ಅರಬ್‌ ಮುಂತಾದ ರಾಷ್ಟ್ರಗಳಲ್ಲಿ ಬೇಡಿಕೆಯಿದೆ. ಪ್ರಕೃತ ವಿಶ್ವದ ಒಟ್ಟು ಉತ್ಪಾದನೆಯ ಬಹುಪಾಲು ಉತ್ಪಾದನಾ ರಾಷ್ಟ್ರಗಳಲ್ಲಿಯೆ ಬಳಕೆಯಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಇದಕ್ಕೆ ಬೇಡಿಕೆ ಹೆಚ್ಚುತ್ತಿರುವುದರಿಂದ ಆಸ್ಟ್ರೇಲಿಯಾ, ಹವಾಯಿ, ಥೈಲ್ಯಾಂಡ್‌, ಮಲೇಶಿಯಾಗಳಲ್ಲಿ ಉತ್ಪಾದನೆಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ವಿಶ್ವ ಮಾರುಕಟ್ಟೆಯಲ್ಲಿ ನವಂಬರಿನಿಂದ ಜನವರಿ ತನಕ ಈ ಹಣ್ಣಿಗೆ ಅತ್ಯಧಿಕ ಧಾರಣೆ ದೊರಕುತ್ತದೆ. ಈ ಸಮಯದಲ್ಲಿ ವಿಶ್ವ ಮಾರುಕಟ್ಟೆಯಲ್ಲಿ ಇದರ ಸರಾಸರಿ ಬೆಲೆ ಕಿ.ಗ್ರಾಂ ಒಂದರ ೭ ರಿಂದ ೧೬ ಅಮೇರಿಕಾ ಡಾಲರ್ ಗಳಾಗಿರುತ್ತದೆ. (ರೂ. ೩೫೦ ರಿಂದ ೮೦೦) ಈ ಬೆಲೆಯನ್ನು ಗಮನದಲ್ಲಿರಿಸಿ ಹವಾಯಿಯಲ್ಲಿ ಕಸಿ ಕಟ್ಟಿದ ರಾಂಬೂಟಾನ್‌ ಗಿಡವೊಂದಕ್ಕೆ ಅಮೇರಿಕಾದ ೪೫ ಡಾಲರ್ ಗಳಷ್ಟು ಬೆಲೆಯಿದೆ.

ಭಾರತದಲ್ಲಿ ಈ ಹಣ್ಣಿನ ಕೃಷಿಗೆ ವಿಪುಲ ಅವಕಾಶಗಳಿದ್ದು, ಇದೊಂದು ಯೋಗ್ಯ ಉಪಬೆಳೆಯಾಗಿ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಹೊರ ಹೊಮ್ಮುಬಹುದು. ಇದರ ಹಣ್ಣುಗಳು ಕೊಯ್ಲಿಗೆ ಬರುವ ಸಮಯದಲ್ಲಿ ನಮ್ಮಲ್ಲಿ ನಾನಾ ರೀತಿಯ ಹಬ್ಬ ಹರಿದಿನಗಳ ಆಚರಣೆಯಿರುವುದರಿಂದ ಹೆಚ್ಚಿನ ಬೇಡಿಕೆಗೆ ಅವಕಾಶಗಳಿವೆ. ಇದರೊಂದಿಗೆ ಯೋಗ್ಯ ರಫ್ತು ವ್ಯವಸ್ಥೆಗಳು ನಮ್ಮಲ್ಲಾದಲ್ಲಿ ವಿದೇಶಿ ಮಾರುಕಟ್ಟೆಗೂ ಇದನ್ನು ವಿಸ್ತರಿಸಬಹುದು. ಹಣ್ಣುಗಳು ನಮ್ಮ ಆರೋಗ್ಯಕ್ಕೆ ಪೂರಕವಾದುದರಿಂದ ಈ ಹಣ್ಣನ್ನೂ ನಮ್ಮ ಅಗತ್ಯಕ್ಕನುಗುಣವಾಗಿ ಬೆಳೆಸಿದಲ್ಲಿ ಆರೋಗ್ಯವರ್ಧನೆಯೂ ಆಗಬಹುದು. ಒಟ್ಟಾರೆಯಾಗಿ ರಾಂಬೂಟಾನ್‌ ನಮ್ಮೆಲ್ಲರಿಗೆ ಹೊಸತು, ಆದರೆ ಇದರ ಕೃಷಿ ನಮ್ಮಲ್ಲಿ ಸಾಧ್ಯ. ಈ ನಿಟ್ಟಿನಲ್ಲಿ ಇದರ ಉತ್ಪಾದನೆ ಮತ್ತು ಮಾರುಕಟ್ಟೆ ವಿಚಾರಗಳ ಬಗ್ಗೆ ನಮ್ಮಲ್ಲಿ ಚಿಂತನೆಗಳು ಮತ್ತು ವಿಮರ್ಶೆಗಳಾಗಬೇಕು. ಇದಕ್ಕಾಗಿ ಸರಕಾರದ ಸಂಸ್ಥೆಗಳು ಪೂರಕ ವಾತಾವರಣವನ್ನು ಸೃಷ್ಟಿಸಬೇಕು.

* * * 

ಕೃಷಿ ಮಾಹಿತಿಗಾಗಿ:
ಪಳ್ಳಿ ಶ್ರೀ ಶ್ರೀನಿವಾಸ ಹೆಗ್ಡೆ
ಖಜಾನೆ ಫಾರ್ಮ್, ಅಂಚೆ: ಎಳ್ಳಾರೆ, ಪೆರ್ಡೂರು, ಕಾರ್ಕಳ, ಉಡುಪಿ, ದೂ: ೦೮೨೦-೨೫೪೩೨೬೦, ೨೫೪೨೩೫೫

ಡೇಡಿಯಾಪು ಆಗ್ರೋ ಸೇಲ್ಸ್,
ಪುತ್ತೂರು, ದ.ಕ.-೫೭೪೨೦೧, ದೂ: ೦೮೨೫೧-೨೩೨೭೨೮

* * *