ಯಾವ ರಾಗಕೊ ಏನೊ ನನ್ನೆದೆ ವೀಣೆ ಮಿಡಿಯುತ ನರಳಿದೆ.
ಬಯಸುತಿರುವಾ ರಾಗ ಹೊಮ್ಮದೆ ಬೇರೆ ನಾದಗಳೆದ್ದಿವೆ

ಉದಯ ಅಸ್ತಗಳೆದೆಯ ಆಳಕೆ ಮುಳುಗಿ ಹುಡುಕಿತು ರಾಗವ
ಬಿಸಿಲ ಬೇಗೆಗೆ ತಣಿಲ ತಂಪಿಗೆ ಧುಮುಕಿ ಶೋಧಿಸಿ ಬಳಲಿತು.
ಬೀಸಿಬಹ ಬಿರುಗಾಳಿಯಬ್ಬರದೆದೆಗೆ ತಂತಿಯ ಜೋಡಿಸಿ
ಅದರ ರಾಗವ ತನ್ನ ಎದೆಯಲಿ ಹಿಡಿಯಲೆಳಸುತ ಬಳಲಿತು.

ಮುಗಿಲ ತಾರೆಯ ರಜತನಂದನದಲ್ಲಿ ದನಿಯನು ಹುಡುಕಿತು.
ಸರ್ವ ಋತುಗಳ ಕೋಶಕೋಶಕೆ ನುಗ್ಗಿ ತೃಪ್ತಿಯನರಸಿತು.
ಏನು ಆದರು ದೊರೆಯದಾದುದು ಮನದ ಬಯಕೆಯ ರಾಗವು
ಬರಿಯ ವೇದನೆ ಎದೆಯ ತುಂಬಿದೆ, ಮೂಕವಾಗಿದೆ ಹೃದಯವು.

ಮತ್ತೆ ದಿನವೂ ಎಂದಿನಂತೆಯೆ ಮೂಕ ಗೀತೆಯ ಮಿಡಿದಿದೆ !
ಯಾವ ರಾಗವ ನುಡಿಸಿದರೆ ಜಗದೆಲ್ಲ ರಾಗವು ನಿಲುವುವೋ,
ಅಂಥ ರಾಗವನರಸಿ ತೊಳಲುತ ದಿನವು ತಪವನು ಗೈದಿದೆ
ಶೂನ್ಯ ನೀಲಾಕಾಶವಿಸ್ತರದೆದೆಗೆ ಮೊರೆಯನು ಹರಿಸಿದೆ.