ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ ಗಟ್ಟಿಗೊಳಿಸುವ ಹರಡುವ ಕಾಯಕವನ್ನು ಕಳೆದ ಹನ್ನೆರಡು ವರುಷಗಳಲ್ಲಿ ನೋಂಪಿಯಂತೆ ನಡೆಸಿಕೊಂಡು ಬಂದಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಒಂದು ಆಡುಂಬೊಲವಾಗಿ ಕಾರ್ಯ ನಿರ್ವಹಿಸಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳ ಆಚೆಗೆ ಅನೂಹ್ಯ ಲೋಕಗಳ ಕಡೆಗೆ ತನ್ನನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳು ಮೂಡಿಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ.

ಕರ್ನಾಟಕ ಸರ್ಕಾರವು ಪ್ರತಿವರ್ಷ ನವೆಂಬರ್ ತಿಂಗಳಿನಲ್ಲಿ ನಡೆಸುತ್ತಿರುವ ಹಂಪಿ ಉತ್ಸವದಲ್ಲಿ ಕನ್ನಡ ವಿಶ್ವವಿದ್ಯಾಲಯವನ್ನು ತನ್ನ ಸಾಂಸ್ಕೃತಿಕ ಶರೀರದ ಭಾಗವನ್ನಾಗಿಸಿ ಹಂಪಿಗೆ ಸಂಬಂಧಿಸಿದ ಸಾಹಿತ್ಯಿಕ ಕೃತಿಯೊಂದನ್ನು ಪ್ರಕಟಿಸುವ ಸತ್ಪರಂಪರೆಯಲ್ಲಿ ಈಗಾಗಲೆ ‘ಬೃಹದ್ದೇಶ’ ಮತ್ತು ‘ಹರಿಹರನ ರಗಳೆಗಳು’ ಕೃತಿಗಳು ಪ್ರಕಟವಾಗಿವೆ. ಈ ವರ್ಷದ ಹಂಪಿ ಉತ್ಸವದಲ್ಲಿ ಹಂಪೆಯ ಮಹತ್ವದ ಕವಿ ರಾಘವಾಂಕನ  ಸಮಗ್ರಕಾವ್ಯ ಸಂಪುಟ ಪ್ರಕಟವಾಗುತ್ತಿರುವುದು ಕನ್ನಡ ವಿಶ್ವವಿದ್ಯಾಲಯಕ್ಕೆ ಗೌರವದ ಸಂಗತಿ. ಈ ಪ್ರಕಟಣೆಗೆ ಅವಕಾಶ ಕಲ್ಪಿಸಿದ ಮತ್ತು ಸಂಪೂರ್ಣ ಆರ್ಥಿಕ ನೆರವನ್ನು ಒದಗಿಸಿದ ಕರ್ನಾಟಕ ಸರ್ಕಾರಕ್ಕೆ ಮತ್ತು ವಿಶೇಷವಾಗಿ ಹಂಪಿ ಉತ್ಸವ ಸಮಿತಿ ಅಧ್ಯಕ್ಷರೂ ಸಾಹಿತಿಗಳೂ ಸಂಸ್ಕೃತಿಪ್ರಿಯರೂ ಆಗಿರುವ ಸನ್ಮಾನ್ಯ ಸಚಿವ ಶ್ರೀ ಎಂ.ಪಿ. ಪ್ರಕಾಶ್ ಅವರಿಗೆ ವಿಶೇಷ ಕೃತಜ್ಞತೆಗಳು. ಈ ಪ್ರಕಟಣೆಗೆ ನೆರವು ದೊರೆಯಲು ಸಹಕರಿಸಿದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳಾದ ಶ್ರೀಮತಿ ಉಷಾ ಗಣೇಶ್ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರಾದ ಶ್ರೀ ಮುದ್ದುಮೋಹನ್ ಅವರಿಗೆ ವಂದನೆಗಳು.

ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ (ಸಂ. ಎನ್. ಬಸವಾರಾಧ್ಯ ಮತ್ತು ಎಸ್. ಬಸಪ್ಪ, ಪ್ರ. ಪ್ರಾಚ್ಯಕಾವ್ಯ ಪ್ರಕಾಶ ಮಂದಿರ, ಮೈಸೂರು ೯), ‘ಸಿದ್ಧರಾಮ ಚಾರಿತ್ರ’ (ಸಂ. ಡಾ. ಎನ್.ಬಿ. ನೇಗಿನಹಾಳ, ಪ್ರ. ವೀರಶೈವ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಡಂಬಳ-ಗದಗ), ‘ಸೋಮನಾಥ ಚಾರಿತ್ರ’ (ಸಂ. ಡಾ. ಆರ್.ಸಿ. ಹಿರೇಮಠ ಮತ್ತು ಡಾ. ಎಂ.ಎಸ್. ಸುಂಕಾಪುರ, ಪ್ರ. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ), ‘ವೀರೇಶ ಚರಿತೆ’ (ಸಂ. ಪ್ರೊ.ಎಸ್.ಎಸ್. ಹಿರೇಮಠ, ಪ್ರ. ಸಮತಾ ಪ್ರಕಾಶನ, ಹೊಸಪೇಟೆ) ಇವರ ಸಂಪಾದಿತ ಪಠ್ಯಗಳನ್ನು ಬಳಸಿಕೊಳ್ಳಲಾಗಿದೆ. ಆದರೆ ಈ ರಾಘವಾಂಕ ಕಾವ್ಯ ಸಂಪುಟವು ಜನಪ್ರಿಯ ಆವೃತ್ತಿಯಾಗಿರುವುದರಿಂದ ಇದರಲ್ಲಿ ಯಾವುದೇ ಪಾಠಾಂತರಗಳನ್ನು ಕೊಟ್ಟಿಲ್ಲ, ಮೂಲ ಪಠ್ಯಗಳ ಪ್ರಸ್ತಾವನೆಗಳನ್ನಾಗಲೀ ಟಿಪ್ಪಣಿಗಳನ್ನಾಗಲೀ ಬಳಸಿಕೊಂಡಿಲ್ಲ. ಈ ಮೂಲಪಠ್ಯಗಳನ್ನು ಸಂಪುಟದಲ್ಲಿ ಬಳಸಿಕೊಳ್ಳಲು ಅನುಮತಿಯಿತ್ತ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಖಾಜಾಪೀರ್, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಡಂಬಳ-ಗದಗದ ಶ್ರೀ ತೋಂಟದ ಸಿದ್ಧಲಿಂಗಮಹಾಸ್ವಾಮಿಗಳು, ಶ್ರೀ ಎನ್. ಬಸವಾರಾಧ್ಯ ಮತ್ತು ಪ್ರೊ.ಎಸ್.ಎಸ್. ಹಿರೇಮಠ ಇವರ ಸಹಕಾರಕ್ಕೆ ವಿಶೇಷ ವಂದನೆಗಳು.

ಈ ಗ್ರಂಥವನ್ನು ಅಚ್ಚುಕಟ್ಟಾಗಿ ಪ್ರಸಾರಾಂಗದ ವತಿಯಿಂದ ಅತಿ ಶೀಘ್ರಗತಿಯಲ್ಲಿ ಪ್ರಕಟಿಸಲು ವಿಶೇಷವಾಗಿ ಶ್ರಮಿಸಿದ ಪ್ರಸಾರಾಂಗದ ನಿರ್ದೇಶಕರಾದ ಡಾ.ಹಿ.ಚಿ. ಬೋರಲಿಂಗಯ್ಯ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಇವರ ಸಹಕಾರವನ್ನು ವಿಶೇಷವಾಗಿ ನೆನೆಯುತ್ತೇನೆ.

ಬಿ.ಎ. ವಿವೇಕ ರೈ
ಕುಲಪತಿ