ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹಂಪೆಯನ್ನು ಶಕ್ತಿ ಕೇಂದ್ರವನ್ನಾಗಿ ಮಾಡಿಕೊಂಡು ಕಾವ್ಯ ರಚಿಸಿದ ಇಬ್ಬರು ಮಹತ್ವದ ಶ್ರೇಷ್ಠ ಕವಿಗಳು ಹರಿಹರ ಮತ್ತು ರಾಘವಾಂಕರು. ಹಂಪೆ ಹರಿಹರದೇವರ ವರಸುತನೆಂದು ತನ್ನನ್ನು ಕರೆದುಕೊಂಡ ಕವಿ ರಾಘವಾಂಕ ಕನ್ನಡದಲ್ಲಿ ಷಟ್ಪದಿ ಕಾವ್ಯದ ನಾಲ್ಕು ಬೃಹತ್ ಗೋಪುರಗಳನ್ನು ನಿರ್ಮಾಣ ಮಾಡಿದ ವರಕವಿ. ೧೨ನೆಯ ಶತಮಾನದ ಅಂತ್ಯ ಮತ್ತು ೧೩ನೆಯ ಶತಮಾನದ ಆದಿಯಲ್ಲಿ ಕ್ರಿಯಾಶೀಲನಾಗಿದ್ದ ಕವಿ ರಾಘವಾಂಕ ಪಂಪಾವಿರೂಪಾಕ್ಷನ ಪರಮ ಭಕ್ತ. ಮಹಾಕವಿ ಹರಿಹರನ ಸೋದರಳಿಯ ಮತ್ತು ಪರಮ ಶಿಷ್ಯನಾದ ರಾಘವಾಂಕನ ಗುರುಪರಂಪರೆಯಲ್ಲಿ ಹಂಪೆಯ ಶಂಕರಪ್ರಭು, ಹಂಪೆಯ ಮಾದಿರಾಜ, ಹಂಪೆಯ ಮಹಾದೇವ ಭಟ್ಟ ಮತ್ತು ಹಂಪೆಯ ಹರೀಶ್ವರ ಪ್ರಮುಖರು. ರಾಘವಾಂಕನಿಗೆ ಉಭಯಕವಿ ಶರಭಭೇರುಂಡ, ಉಭಯಕವಿ ಕಮಲರವಿ, ಅದಟಕವಿ ನಿಕರಚೌದಂತ ಎನ್ನುವ ಬಿರುದುಗಳಿದ್ದು ರಾಘವಾಂಕನ ಉಪಲಬ್ಧ ಕೃತಿಗಳು ಹರಿಶ್ಚಂದ್ರಕಾವ್ಯ, ಸಿದ್ಧರಾಮ ಚಾರಿತ್ರ, ಸೋಮನಾಥ ಚಾರಿತ್ರ ಮತ್ತು ವೀರೇಶ ಚರಿತೆ. ರಾಘವಾಂಕನಿಂದ ರಚಿತವಾದವು ಎನ್ನಲಾದ ‘ಶರಭಚಾರಿತ್ರ’ ಮತ್ತು ‘ಹರಿಹರ ಮಹತ್ವ’ ಎನ್ನುವ ಕೃತಿಗಳು ಉಪಲಬ್ಧವಾಗಿಲ್ಲ. ರಾಘವಾಂಕನನ್ನು ಕುರಿತು ಸಿದ್ಧನಂಜೇಶ ಕವಿಯು ‘ರಾಘವಾಂಕ ಚರಿತೆ’ ಎನ್ನುವ ಕಾವ್ಯವನ್ನು ರಚಿಸಿದ್ದಾನೆ. ಇದರಲ್ಲಿ ರಾಘವಾಂಕನಿಗೆ ಸಂಬಂಧಿಸಿದ ಅನೇಕ ಐತಿಹ್ಯಗಳು, ಕಥನಗಳು ಕಾಣಿಸಿಕೊಂಡಿವೆ. ಜನ ಬದುಕಲೆಂದು ಕಾವ್ಯ ಬರೆದಿರುವ ರಾಘವಾಂಕನ ಕಾವ್ಯದ ದೃಷ್ಟಿ ಮತ್ತು ಸೃಷ್ಟಿ ಜೀವನಪರವಾದುದು ಮತ್ತು ಜೀವಪರವಾದುದು.

ವಾರ್ಧಕ ಷಟ್ಪದಿಯನ್ನು ತನ್ನ ಕಾವ್ಯದ ಮಾಧ್ಯಮವನ್ನಾಗಿಸಿಕೊಂಡ ಕವಿ ರಾಘವಾಂಕ ನಡುಗನ್ನಡ ಕಥನಕಾವ್ಯ ಪರಂಪರೆಗೆ ಹೊಸ ಆಯಾಮವೊಂದನ್ನು ತಂದುಕೊಟ್ಟಿದ್ದಾನೆ. ಐದು ಮಾತ್ರೆಯ ಗಣಗಳ ಲಲಿತ ಲಯದಲ್ಲಿ ಕಥನದ ಹರಹನ್ನು ಬಿತ್ತರಿಸುತ್ತಾ ಹೋಗುವ ಶೈಲಿ ರಾಘವಾಂಕನ ಕಾವ್ಯದ ಅನನ್ಯ ಶಕ್ತಿ. ಅಲಂಕಾರಗಳ ಬಳಕೆ, ಶಬ್ದಚಿತ್ರಗಳ ನಿರ್ಮಾಣ, ನಾಟಕೀಯ ಸಂಭಾಷಣೆಗಳ ಪ್ರಯೋಗ, ಅನನ್ಯ ನುಡಿಗಟ್ಟುಗಳ ಸೃಷ್ಟಿ. ಹೀಗೆ ಒಬ್ಬ ಒಳ್ಳೆಯ ಕಥನಕಾರನ ಎಲ್ಲ ಗುಣಗಳನ್ನು ರಾಘವಾಂಕ ತನ್ನ ಕಾವ್ಯಗಳ ಮೂಲಕ ಅನಾವರಣ ಮಾಡುತ್ತಾನೆ. ರಾಘವಾಂಕನನ್ನು ಕುರಿತ ಅನೇಕ ಐತಿಹ್ಯಗಳು ಆತನ ಜನಪ್ರಿಯತೆಯನ್ನು, ಆತನ ಸ್ವತಂತ್ರ ವ್ಯಕ್ತಿತ್ವವನ್ನು, ಆತನ ಮಾಹೇಶ್ವರ ನಿಷ್ಠೆಯನ್ನು ಪ್ರಕಟಿಸುತ್ತವೆ. ನಡುಗನ್ನಡದ ಭಾಷೆಯನ್ನು ಕಥನಕಾವ್ಯಕ್ಕೆ ಅಣಿಗೊಳಿಸಿ ಯಶಸ್ವಿಯಾದವನು ಕವಿ ರಾಘವಾಂಕ.

ರಾಘವಾಂಕನ ನಾಲ್ಕು ಕಾವ್ಯಗಳು ವಸ್ತು ಮತ್ತು ಅಭಿವ್ಯಕ್ತಿಯ ದೃಷ್ಟಿಯಿಂದ ನಾಲ್ಕು ಭಿನ್ನ ನೆಲೆಗಳನ್ನು ಹೊಂದಿವೆ. ಅವನ ಜನಪ್ರಿಯ ಕೃತಿ ‘ಹರಿಶ್ಚಂದ್ರ ಕಾವ್ಯ’ವು ಸತ್ಯದ ಸಾಧನೆ ಮತ್ತು ಸಾಕ್ಷಾತ್ಕಾರವನ್ನು ಕಥನವನ್ನಾಗಿಸಿದ ಒಂದು ವಿಶಿಷ್ಟ ಕೃತಿ.

ಶ್ರೀಪತಿಗೆ ಸೊಬಗನುಡುಪತಿಗೆ ಶಾಂತಿಯನು ವಾ
ಣೀಪತಿಗೆ ಚಾತುರ್ಯಮಂ ದಿವಸ್ಪತಿಗೆ ಪ್ರ
ತಾಪಂ ಸುರಪತಿಗೆ ಭೋಗಮಂ ರತಿಪತಿಗೆ ಮೂಲೋಕವಾವರಿಸುವ
ರೂಪಂ ಸರಿತ್ಪತಿಗೆ ಗಂಭೀರತೆಯನ್ನು ಸ್ವಾ
ಹಾಪತಿಗೆ ತೇಜಮಂ ಕೊಟ್ಟ ಗುರುಮೂರ್ತಿ ಪಂ
ಪಾಪತಿ ವಿರೂಪಾಕ್ಷನೆಮಗಿಷ್ಟಸಿದ್ಧಿಯಂ ಮಾಳ್ಕೆ ಸಂತೋಷದಿಂದ

ಪದಗಳ ಸೊಗಸು, ಅರ್ಥಸೃಷ್ಟಿ, ಉತ್ಸಾಹಭಾವಗಳು ಮುಪ್ಪುರಿಗೊಂಡಿರುವ ಇಂತಹ ಅನೇಕ ಪದ್ಯಗಳು ರಾಘವಾಂಕನ ಕಾವ್ಯದ ಆಕರ್ಷಣೆಗಳು. ತನ್ನದೇ ಕಾವ್ಯಕೃತಿಯಲ್ಲಿ ಅವನು ಹೇಳಿಕೊಳ್ಳುವ ಈ ಪದ್ಯಗಳು ಆತನ ಕಾವ್ಯದ ವಸ್ತು ಮತ್ತು ಉದ್ದೇಶಗಳೆರಡನ್ನೂ ಜೊತೆಜೊತೆಗೇ ಸಾರಿ ಹೇಳುತ್ತವೆ.

ಕೃತಿಗೆ ನಾಮಂ ಹರಿಶ್ಚಂದ್ರ ಚಾರಿತ್ರವೀ
ಕೃತಿಗೊಡೆಯನಮಳ ಪಂಪಾವಿರೂಪಾಕ್ಷನೀ
ಕೃತಿಗೆ ಪಾಲಕರು ಲೋಕದ ಭಕ್ತ ಜನರಿದಂ ಪೇಳ್ದಾತನಾರೆಂದೊಡೆ
ಚತುರ ಕವಿರಾಯ ಹಂಪೆಯ ಹರೀಶ್ವರನ ವರ
ಸುತನುಭಯಕವಿ ಕಮಲರವಿ ರಾಘವಾಂಕ ಪಂ
ಡಿತನೆಂದೊಡೀ ಕಥಾರಸದ ಲಹರಿಯನು ಬಣ್ಣಿಸದರಾರೀ ಜಗದೊಳು

ವಸುಧಾಧಿಪತಿ ಹರಿಶ್ಚಂದ್ರ ಘನಸತ್ಯನೆಂ
ದೊಸೆದು ವಾಸಿಷ್ಠನಿಂದ್ರಂಗೆನಲು ಕೌಶಿಕಂ
ಹುಸಿಮಾಳ್ಪೆನೆಂದು ಭಾಷೆಯೆನಿತ್ತು ಧರೆಗೆ ಬಂದವನಿಪನ ಸತಿಪುತ್ರರ
ಅಸುವಂತ್ಯವೆನೆ ನಿಗ್ರಹಂಮಾಡಿಯೊಪ್ಪದಿರೆ
ಶಶಿಮೌಳಿ ಶ್ರೀ ವಿಶ್ವನಾಥ ಭೂಪಂಗೆ ಕರು
ಣಿಸಿ ಸಕಲ ಸಾಮ್ರಾಜ್ಯವಿತ್ತಾತನಂ ಮೆಱೆದ ಕೃತಿ ಪುಣ್ಯದಾಕೃತಿಯಿದು

‘ಸತ್ಯವೆಂಬುದೆ ಹರನು, ಹರನೆಂಬುದೆ ಸತ್ಯ’ ಎನ್ನುವ ಸಾರ್ವತ್ರಿಕ ಮೌಲ್ಯವನ್ನು ಕಾವ್ಯದ ಪ್ರಧಾನ ಭಿತ್ತಿಯನ್ನಾಗಿಸಿಕೊಂಡು ಮತಧರ್ಮದ ಮಿತಿಯನ್ನು ಮೀರಿ ನಿರ್ಮಾಣಗೊಂಡ ಕನ್ನಡದ ಮೊದಲ ಸಾಹಿತ್ಯ ಕೃತಿ ‘ಹರಿಶ್ಚಂದ್ರ ಚಾರಿತ್ರ’. ಪಂಡಿತರ ಮತ್ತು ಪಾಮರರಿಂದ ಸಮಾನ ಮೆಚ್ಚುಗೆಯನ್ನು ಪಡೆದ ಈ ಕಾವ್ಯ ಕನ್ನಡ ಜನಮಾನಸದಲ್ಲಿ ಕಥನ ಪರಂಪರೆಯಲ್ಲಿ ಮತ್ತು ರಂಗಭೂಮಿ ಪರಂಪರೆಯಲ್ಲಿ ಆಳವಾಗಿ ಬೇರೂರಿದೆ. ಆಧುನಿಕ ಕಾಲದಲ್ಲೂ ಸತ್ಯದ ಪರಿಕಲ್ಪನೆಯನ್ನು ಮತ್ತೆಮತ್ತೆ ಹೊಸ ಅರ್ಥಗಳಲ್ಲಿ ನೋಟಗಳಲ್ಲಿ ಪರಿಭಾವಿಸಲು ಅನುವು ಮಾಡಿಕೊಡುವ ಕೃತಿ ಈ ಕಾವ್ಯ.

ಹನ್ನೆರಡನೆಯ ಶತಮಾನದ ಪ್ರಸಿದ್ಧ ವಚನಕಾರನೂ ಕರ್ಮಯೋಗಿಯೂ ಆದ ಸಿದ್ಧರಾಮನ ಚರಿತ್ರೆಯು ಒಂದು ಪುರಾಣಕಾವ್ಯವಾಗಿ ವಿಶಿಷ್ಟ ಜೀವನದ ದರ್ಶನದಿಂದ ಕೂಡಿಕೊಂಡಿದೆ. ಸಿದ್ಧರಾಮನ ಜನನ, ಬಾಲ್ಯ, ಸಾಧನೆ, ಸಿದ್ಧಿ ಒಂದು ಸಾಹಸ ಕಥನವಾಗಿ ಈ ಕಾವ್ಯ ರೂಪು ತಳೆದಿದೆ. ಕಥೆ ಉಪಕಥೆಗಳಿಂದ ತುಂಬಿಕೊಂಡಿರುವ ‘ಸಿದ್ಧರಾಮ ಚಾರಿತ್ರ’ ಕಾಯಕವೆ ಕೈಲಾಸ ಎನ್ನುವ ಆದರ್ಶ ಹೊಂದಿದ ಸಿದ್ಧರಾಮಯೋಗಿಯ ಜೀವನ ಕಥನ. ‘ಸಾಕಾರ ನಿಷ್ಠೆ ಭೂತಂಗಳೊಳು ಅನುಕಂಪೆ’ ಎನ್ನುವ ಸಿದ್ಧರಾಮನ ಜೀವನ ಧ್ಯೇಯ ಎಲ್ಲ ಕಾಲಕ್ಕೂ ಪ್ರಸ್ತುತವಾದುದು.

ರಾಘವಾಂಕನ ‘ಸೋಮನಾಥ ಚಾರಿತ್ರ’ ಹರಿಹರನ ಆದಯ್ಯನ ರಗಳೆಯಿಂದ ಪ್ರೇರಣೆಗೊಂಡು ಬೃಹತ್ತಾಗಿ ಒಂದು ಕಾವ್ಯದ ಆಕಾರವನ್ನು ತಾಳಿದೆ. ಪಂಪಾವಿರೂಪಾಕ್ಷನ ಸ್ತುತಿಯ ಸಹಿತ ಆರಂಭವಾಗುವ ಈ ಕಾವ್ಯದಲ್ಲಿ ಮತಧರ್ಮಗಳ ಸಂಘರ್ಷದ ಪ್ರಸ್ತಾವ ಬಂದರೂ ಅದು ಪ್ರಧಾನವಾಗಿ ಆದಯ್ಯನ ವ್ಯಕ್ತಿತ್ವ ಮತ್ತು ವೀರನಿಷ್ಠೆಯನ್ನು ಸಾರುವ ಕೃತಿ. ಆದಯ್ಯ ಪದ್ಮಾವತಿಯರ ಆದರ್ಶ ದಾಂಪತ್ಯದಂತಹ ಅನೇಕ ವರ್ಣನೆಗಳು ಈ ಕಾವ್ಯದ ಸೊಗಸನ್ನು ಹೆಚ್ಚಿಸಿವೆ. ಭೂಲೋಕಕ್ಕೆ ಬರಲು ಒಲ್ಲೆನು ಎಂದ ಆದಿನಾಥನು ಕೊನೆಗೆ ಕೈಲಾಸವನ್ನೆ ನಿರಾಕರಿಸುತ್ತ ಮರ್ತ್ಯಲೋಕದ ಮಹತ್ವವನ್ನು ಸಾರುವುದನ್ನು ಈ ರೀತಿ ಕವಿ ವರ್ಣಿಸುತ್ತಾನೆ:

ನಿನ್ನಯ ಮನೋರಥಂ ಸಂದುದೆಲೆ ಮಗನೆ ನೀ
ನಿನ್ನು ಕೈಲಾಸಕ್ಕೆ ಹೋಗೆನಲು ಶಿವಶಿವಯಿ
ದಂ ನುಡಿವರೇ ದೇವ, ನೀನೊಲಿದು ನೆಲಸಿದೆಡೆಯೆನಗೆ ಕೈಲಾಸವಲ್ಲಾ
ಮುನ್ನ ನಿಮ್ಮಡಿಯ ಬಲದಿಂದಿನಿತು ಜಸವಡೆದೆ
ನಿನ್ನು ನಿಮ್ಮಡಿಯ ಬಲದೊಳು ಮಾಣದನವರತ
ನಿನ್ನನರ್ಚಿಸುತೆ ಭಜಿಸುತ್ತೆ ನೋಡುತ್ತೆ ಸುಖವಿಹನೆಂದನಾದಯ್ಯನು

ರಾಘವಾಂಕನ ಶೈಲಿಯ ಮುಖ್ಯ ಗುಣಗಳಾದ ನಾಟಕೀಯತೆ, ದೇಸಿಗುಣ, ಅಲಂಕಾರಗಳ ಸಮುಚಿತ ಬಳಕೆ, ಕಥನ ಶಕ್ತಿ ‘ಸೋಮನಾಥ ಚಾರಿತ್ರ’ ಕಾವ್ಯದಲ್ಲಿ ವಿಶೇಷವಾಗಿ ಮೇಳೈಸಿವೆ.

ವಸ್ತು, ಶೈಲಿ, ಧೋರಣೆಗಳ ದೃಷ್ಟಿಯಿಂದ ರಾಘವಾಂಕನ ಒಂದು ವಿಶಿಷ್ಟ ಕಾವ್ಯ ‘ವೀರೇಶ ಚರಿತೆ’. ಈ ಕಾವ್ಯದ ಛಂದಸ್ಸನ್ನು ಉದ್ದಂಡ ಷಟ್ಪದಿಯೆಂದು ವಿದ್ವಾಂಸರು ಗುರುತಿಸಿದ್ದಾರೆ. ವೀರಭದ್ರನು ದಕ್ಷಬ್ರಹ್ಮ ಯಜ್ಞವನ್ನು ಧ್ವಂಸಮಾಡಿದ ಕತೆ ಈ ಕಾವ್ಯದ ವಸ್ತು. ವೀರರಸ ಇದರ ಪ್ರಧಾನ ಭಿತ್ತಿ. ವೀರರಸದೊಡನೆ ರೌದ್ರರಸದ ಮಿಶ್ರಣವುಳ್ಳ ‘ವೀರೇಶ ಚರಿತೆ’ಯಲ್ಲಿ ನಾಟಕೀಯ ಸನ್ನಿವೇಶಗಳು, ವಿಶಿಷ್ಟ ಅಲಂಕಾರಗಳು, ಅಪೂರ್ವ ನುಡಿಗಟ್ಟುಗಳ ಬಳಕೆ ಕಾಣಿಸುತ್ತದೆ. ಅನೇಕ ಸಮಕಾಲೀನ ಅಂಶಗಳ ಸೂಚನೆಯಿರುವ ‘ವೀರೇಶ ಚರಿತೆ’ಯಲ್ಲಿ ಉತ್ಸಾಹ, ಮಾಹೇಶ್ವರನಿಷ್ಠೆ, ಸವಾಲಿನ ಮನೋಭಾವ ಹೆಚ್ಚಾಗಿದೆ. ಸದಾ ಪ್ರಯೋಗಶೀಲನಾದ ಕವಿ ರಾಘವಾಂಕ ಈ ಕಾವ್ಯದಲ್ಲಿ ಭಾಷೆ, ಛಂದಸ್ಸು, ವಸ್ತು, ಧೋರಣೆಗಳ ದೃಷ್ಟಿಯಿಂದ ಹೊಸ ಪ್ರಯೋಗಗಳನ್ನು ಮಾಡಿದ್ದಾನೆ. ಕನ್ನಡ ಜಾನಪದ ಜಗತ್ತಿನಲ್ಲಿ ವೀರಭದ್ರ ಆರಾಧನೆ, ಆಚರಣೆಗಳು ಜನಪ್ರಿಯವಾಗಿವೆ. ಅಂತಹ ಜಾನಪದ ಲೋಕದೊಂದಿಗೆ ನಿರಂತರ ಒಡನಾಡಿಯಾಗಿದ್ದ ರಾಘವಾಂಕನ ‘ವೀರೇಶ ಚರಿತೆ’ ಜನಪದ ರಂಗಭೂಮಿಗೆ ಅಳವಡುವ ಕಾವ್ಯ.

ರಾಘವಾಂಕನ ಈ ನಾಲ್ಕೂ ಕಾವ್ಯಗಳು ಕನ್ನಡ ಕಥನ ಕಾವ್ಯಪರಂಪರೆಯ ವಿಶಿಷ್ಟ ಮಾರ್ಗಗಳನ್ನು ನಿರ್ಮಾಣ ಮಾಡಿವೆ. ಪೂರ್ವ ಪರಂಪರೆಯ ಕೃತಿಗಳು ಮತ್ತು ಜನಪದ ಪರಂಪರೆಯ ರಚನೆಗಳು ಇವನ್ನು ಗಮನಿಸಿಕೊಂಡೇ ಜನಸಮ್ಮುಖ ಕವಿಯಾದ ರಾಘವಾಂಕ ಸಮಕಾಲೀನ ಬದುಕಿಗೆ ಸ್ಪಂದಿಸುತ್ತಲೇ ಅನೇಕ ಸಾರ್ವಕಾಲಿಕ ಮೌಲ್ಯಗಳ ಕಡೆಗೆ ಜನರ ಮನಸ್ಸನ್ನು ಒಯ್ಯುವ ಕಾಯಕವನ್ನು ಈ ಕಾವ್ಯಗಳ ಮೂಲಕ ಮಾಡಿದ್ದಾನೆ. ಹಂಪೆ ಅವನ ಕಾವ್ಯದ ನೆಲೆ ಮತ್ತು ಸೆಲೆ. ಹಂಪೆಯ ಇಡೀ ಪರಿಸರವನ್ನು ತನ್ನ ಕಾವ್ಯದ ಪರಿಸರವನ್ನಾಗಿ ರೂಪಿಸುತ್ತಲೇ ಜನಪರವಾಗಿ ಕಾವ್ಯ ರಚನೆ ಮಾಡಿದ ರಾಘವಾಂಕನ ವಸ್ತುಗಳ ಆಯ್ಕೆ, ಛಂದಸ್ಸಿನ ಆಯ್ಕೆ, ಭಾಷೆಯ ಆಯ್ಕೆ, ಮೌಲ್ಯಗಳ ಆಯ್ಕೆ ಬಹಳ ಅಪೂರ್ವವಾದುದು, ಮಹತ್ವಪೂರ್ಣವಾದುದು ಮತ್ತು ನಮ್ಮ ಆಧುನಿಕ ಸಂದರ್ಭದಲ್ಲಿ ನಿರಂತರ ಮನನ ಮಾಡಲು ಅರ್ಹವಾದುದು.

‘ಹೊಱಗಿಪ್ಪ ಪಶುಪಕ್ಷಿ ಕ್ರಿಮಿಕೀಟಕಾವಳಿಗಳಱತು ನೀರ್ಗುಡಿಯೆ ಭವವಳಿವಂತು ಕಟ್ಟುವೆಂ ಕೆಱೆಯನು’ ಎನ್ನುವ ಸಿದ್ಧರಾಮನ ಮಾತು ಎಂದೆಂದಿಗೂ ನಮ್ಮ ಬದುಕಿನ ಆದರ್ಶವಾಗಿರಬೇಕು.

ಬಿ.ಎ. ವಿವೇಕ ರೈ
ಕುಲಪತಿ