ಉದ್ದಂಡ-ಷಟ್ಟದ  ರಾಗ-ಮಾಳವಗೌಳ  ಹಮ್ಮೀರನಾಟ

ಪಲ್ಲವ
            ಮೃಡನೋಲಗದೊಳು ಮನ್ನಣೆವಡೆಯದೆ ದಕ್ಷಂ
ಕಡು ಮುಳಿಸಿಂ ಹರವಿರಹಿತ ಯಾಗವ ನಡೆಸಲು
ಘುಡು ಘುಡಿಸುತ ನಡೆತಂದು ದಧೀಚಿವ್ರತಿ ಶಪಿಸಿದನಮರರ ಮುನಿಗಳನು

ಪದ
ಶ್ರೀಪತಿ ವಾಣೀಪತಿ ಸುರಪತಿ ದಿನಪತಿ ತಾ
ರಾಪತಿ ಮೊದಲಾದ ಸಮಸ್ತಾಮರನತನೆನಿ
ಪಾ ಪಾದದ್ವಯನಕ್ಷಯನದ್ವಯನದ್ವಯನನುಪಮನತಿಶಯ ರೂಪಂ ಶಿವನು
ಕೋಪಾಟೋಪದ ದಕ್ಷಾಧ್ವರ ವಿಧ್ವಂಸಾ
ಳಾಪದೆ ವೀರೇಶನನುದ್ಭವಿಸಿದ ಗುರು ಪೊಂ
ಪಾಪುರದರಸ ವಿರೂಪಾಕ್ಷಂ ಕೂರ್ತೆಮಗೀಗಿಷ್ಟಾರ್ಥದ ಸಿದ್ಧಿಯನು            ೧

ನಿಡುಜಡೆಯಿಡುಕುಱಮಡಲೆಡೆಯೆಡೆಯೊಳು ಬಿಡದಡಿ
ಯಿಡುವೋಳ್ಗಡಲಿನ ತಡಿವಿಡಿದುಡುಗಡಣದ ಪತಿ
ಯೊಡಲೊಡಕಿನ ಕಡುಹಿಮವಡಿಗುಡಿದಿಡಿದಡಸಲು ಕುಡಿದುಱೆದಣ್ಣನೆ ದಣಿದು
ಘುಡು ಘುಡಿಸುತ ಕಡು ಕೋಪವದೆಡೆಗಿಡೆ ಶಾಂತಿಯ
ಮಡುವೆನಿಸಿದ ನಡುಗಣ್ಣಿನ ಕುಡಿವೆಳಗಿಂದೆಡೆ
ವಿಡದೊಪ್ಪುವ ನಗೆಮೊಗದೊಡೆಯಂ ಗುರು ಹಂಪೆಯ ಮೃಡನೆಮ್ಮಂ ರಕ್ಷಿಸಲಿ          ೨

ಅಕ್ಷಯನಕ್ಷರನಕ್ಷಿತ್ರಯನುಕ್ಷಧ್ವಜ
ರಂಕ್ಷಾಪಲಕ್ಷಣ ಲಕ್ಷಿತ ಕ್ಷೇಮದೆಕ್ಷ
ಣಕ್ಷುದ್ರಕ್ಷೀಣಾ ಕ್ಷೂರಕ್ಷಮ ನತಜನಪಕ್ಷಂ ಮೋಕ್ಷಪ್ರದನು
ದಕ್ಷಾ ಪಕ್ಷಾ ಸಖ ಶಿಕ್ಷಾ ದಕ್ಷಾ ನಿಜ
ಕುಕ್ಷಿಸ್ಥಲ ನಿಕ್ಷಿಪ್ತ ಬ್ರಹ್ಮಾಂಡಂ ನೆಱೆ
ರಕ್ಷಿಸುಗೆಮ್ಮಂ ಬಹಳ ವಿಪಕ್ಷ ಕ್ಷಯ ವಿಮಲಾಂಗಂ ವೀರೇಶ್ವರನು   ೩

ಪರಿಣಾಮದಕಣಿ ಶಾಂತಿಯನಿಧಿ ಭಕ್ತಿಯ ಸಾ
ಗರವೇಕೋ ನಿಷ್ಠೆಯ ಹರವರಿ ಸಾಮರ್ಥ್ಯದ
ಕರು ನೀತಿಯ ತಿರುಳು ದಯಾಕಾರಂ ಪುಣ್ಯದ ಪುಂಜಂ ಸತ್ಯದಸದನ
ಹರುಷದ ಮಡು ಸರ್ವಜ್ಞತ್ವದ ಶಾಸನ ಸು
ಸ್ಥಿರ ತ್ರಿವಿಧ ಸ್ಥಲ ಯುಕ್ತನುಮೆನಿಸಿ ಹಂಪೆಯ
ಹರಿದೇವರ ಕಾರುಣ್ಯ ಪ್ರಭೆ ಬೆಳಗುಗೆ ಬಿಡದೆಮ್ಮ ಮನೋಮಂದಿರವ         ೪

ಬಿಡೆ ಸಕಲಕ್ಕೆ ಬಲಂ ಬಗೆಗೆಂಟೊಡಲಾ ಎಂ
ಟೊಡಲಿಂಗೆ ಬಲಂ ರುದ್ರಂ ರುದ್ರಂಗೆ ಬಲಂ
ನಡುಗಣ್ಣಾ ನಡುಗಣ್ಣಿಂಗೆ ಬಲಂ ವೀರೇಶ್ವರನೆನಲತನ ಬಲದ
ಕಡುಪಂ ಬಣ್ಣಿಪೊಡುರಗೇಂದ್ರಂಗೆಣಿಸುವೆನೆಂ
ಬೊಡೆ ತರಣಿಗೆ ನೋಡುವಡಮರೇಂದ್ರಂಗರಿದೆನೆ
ಕಡೆಗಿನ್ನೆನ್ನಳವೇ ಶಿವಭಕ್ತರ ಕೃಪೆಯಿಂ ಬಲ್ಲಂದದಿ ಪೊಗಳುವೆನು  ೫

ನಾನಾರಸ ಭಾವಾರ್ಥಂ ಬಂಧಕಳಾ ಸಂ
ಧಾನಂ ಸಂಧಿ ಸಮಾಸ ವಿಭಕ್ತಿಗಳೆಸೆವಭಿ
ಧಾನವಲಂಕಾರ ಪ್ರಕರಣ ಯತಿ ಧಾತು ಕ್ರಿಯೆಕಾರಕ ನಿರ್ವಾಹ
ಸ್ಥಾನ ಪ್ರಕೃತಿ ಪ್ರತ್ಯಯ ಲಿಂಗತ್ರಯದೊಳ
ಗೇನೆಡಹಿದೊಡಂ ಪರರಣಕಿಸದಂತಾಲಿಪು
ದಾನಂದದೊಳೆಲ್ಲಾ ಶಿವಭಕ್ತರು ಕರುಣಿಸಿ ತಿರ್ದುವುದಾಂ ನಿಮ್ಮವನು         ೬

ಕಡುಗಲಿಸಿದ ಕದನದ ಕರ್ಕಶದನುಜನ ಬೆ
ನ್ನಡಿಯಂ ಬಗಿದೇಱಿಂ ದೊಸರುವ ಬಿಸಿ ನೆತ್ತರ
ಕಂಡಿದಡಗಂ ಕಾರಿದ ಕೊಬ್ಬಿದ ಮರುಳಾಟದ ಮಱಹಿಂ ಲೋಕಂಗಳನು
ಹುಡಿಗೆಯ್ಯುತ್ತಿಹ ನರಸಿಂಹನ ಹಣೆಯಕ್ಕರ
ತೊಡೆಧಾಡಿದ ವೀರನ ಲೀಲಾ ಕಥನವ ಪದ
ವಿಡುವೆನು ಚಿತ್ತೈಸುವುದಪ್ರತಿಮ ಶಿವಾರ್ಚಕರೆರಡಱಿಯದ ನಿಚ್ಚಟರು       ೭

ಕೃತಿನಾಮಂ ವೀರೇಶ್ವರ ಚರಿತವು ಬಗೆಗೀ
ಕೃತಿಪತಿಯೋರುಂಗಲ್ಲಿನ ವೀರಶ್ವರ ನೀ
ಕೃತಿಗೆ ಸಹಾಯರು ಲಿಂಗ ಸದರ್ಥರು ಕೃತಿಯಂ ತಾಂ ಬಣ್ಣಿಸಿ ಪೇಳ್ದವನು
ಯತಿಪತಿ ಹಂಪೆಯ ಹರಿದೇವರ ಕಾರುಣ್ಯದ
ಸುತ ಶಿವಕವಿ ಭೃತ್ಯಂ ಹಂಪೆಯ ರಾಘವ ಪಂ
ಡಿತನೆನಲೀ ಕೃತಿಯಂ ಮೆಚ್ಚದ ಸಜ್ಜನರಾರೀ ವಸುಧಾ ಚಕ್ರದೊಳು            ೮

ಕ್ಷಿತಿಯೊಳು ಶಿವಭಕ್ತರ್ಗೆ ಶಿವಂಗಾಂ ಮಾಱಿದ
ಮತಿಯೊಳು ಮಱೆದಜಗಿಜ ಹರಿಗಿರಿ ಸುರಪತಿ ಗಿರ
ಪತಿ ಮೊದಲೆನಿಸಿದ ದೇವರ್ಕಳೊಳೊಬ್ಬರನವನೀಶ್ವರರೊಳು ಭವಿಗಳನು
ತುತಿಸಿದೆನಾದೊಡೆ ಸಲೆ ಶಿವದೂಷಕನಾನೆಂ
ಬತಿ ಬಿರಿದಿನ ಶಿವಕವಿ ಹಂಪೆಯ ರಾಘವ ಪಂ
ಡಿತನೊದವಿದ ಮೀಸಲುಗವಿತೆಯ ಚಿತ್ತೈಸುವುದೆರಡಱಿಯದೆ ನಿಚ್ಚಟರು    ೯

ಪರಿಕಿಪೊಡೀ ಕೃತಿಗಾವುದು ಮೊದಲೆನೆ ಹಳಚುವ
ತೆರೆಯೊಳು ತಿರುಗುವ ಕರಿಮಕರಂಗಳ ಪುಚ್ಛೋ
ತ್ಕರ ಹತಿಯಿಂ ಚಲ್ಲಿದ ಮಣಿವೆಳಗಿಂ ಸಪ್ತ ದ್ವೀಪಂಗಳನಣಕಿಸುತ
ಶರನಿಧಿಯೊಪ್ಪುವುದಂತಾ ಶರನಿಧಿ ಪರಿವೃತ
ಧರೆಯೊಪ್ಪುವುದಂತಾ ಧರೆಯ ಶಿರೋಮಣಿಯನೆ
ಸುರಗಿರಿಯೊಪ್ಪುವುದಂತಾ ಸುರಗಿರಿಯುತ್ತರ ಭಾಗವನೇಂವಣ್ಣಿಪೆನು          ೧೦

ಶಶಿ ಬಿಂಬದ ತೊಟ್ಟಿಯೊ ಬೆಳುದಿಂಗಳ ಘಟ್ಟಿಯೊ
ಬಿಸಗೊರಲನ ಕೀರ್ತಿಲತಾಕಂದವೊ ಲೋಕ
ಪ್ರಸರದ ಕಂಗಳ ಮಂಗಳ ದೊಬ್ಬುಳಿಯೋ ಭಕ್ತರ ಪುಣ್ಯದು ಹೆಬ್ಬೆಳೆಯೊ
ಹೊಸರಾಶಿಯೊ ವಸುಧೆಯ ಸಂತಸವೋಯೆಂದಂ
ಕಿಸಿ ಮೆಱೆದುದು ಕೈಲಾಸಂ ಶರ್ವಾವಾಸಂ
ಲಸಿತಾಮರ ಕೋಶಂ ಮಾಯಾ ಸಂಕ್ಲೇಶಂ ಕುಧರಾಧೀಶಂ ಕಡೆಗೆ   ೧೧

ಗಗನವ ಬಗಿದೊಗೆದೆಲ್ಲಾ ಲೋಕಂಗಳ ನೆ
ತ್ತಿಗೆ ನಿಗುರುವ ಗಿರಿ ಮುಖ್ಯನ ಮಕುಟವೊ ಪೇಳೆನ
ಲಗಣಿತ ರವಿಶಶಿ ಬಿಂಬಂಗಳ ಬೆಳಗಂ ಬೀಱುತ್ತೆಸೆಯಿತ್ತಭವನ ಭವನ
ತೆಗೆ ಸಡಿಫಡ ಕುಡಬೇಡುಪಮಾನವನೆನಲೋ
ಲಗೆ ಶಾಲೆ ಸುವರ್ಣದ ನವಮಣಿಗಳ ಪರುಷದ
ಮೃಗಧರ ಕಾಂತದ ಚಿಂತಾರತ್ನದ ಭಿತ್ತಿಯೊಳೆಸೆಯಿತ್ತೇಂವಣ್ಣಿಪೆನು           ೧೨

ವಿನು ತಾವಾಸದ ನವಮಣಿಗಳ ಮಯ ಸಿಂಹಾ
ಸನದೊಳು ನೋಡುವ ಮಾತಾಡುವ ಕೈನೀಡುವ
ಸನುಮಾನಿಸಿ ಬಯಸಿತ ಸಲಿಸುತ್ತಿಹ ಕಲ್ಪದ್ರುಮವೋ ಯೆನಿಸುವ ಶಿವನು
ತನತನಗೋಲಗದೊಳು ನೆರೆದಿರ್ದೆಲ್ಲಾ ದೇ
ವ ನಿಕಾಯಂ ಹೊಗಳಲು ಮಂಗಳ ದರ್ಪಣದಂ
ತನುವರ್ತಿಸುತೊಪ್ಪಿದನಪ್ರತಿಮಂ ಸಕಲ ಚರಾಚರ ಜನ್ಮಸ್ಥಲನು  ೧೩

ನಡುಗಣ್ಣುರಿವಿಸಿಲಿಂ ಬಳಲುವ ಶಶಿಗಮೃತವ
ನಿಡುಕುವವೊಲ್ಬಳುಕುವ ಚಮರಿಯ ಪೊಸಸೀಗುರಿ
ಜಡಿಯಲು ಫಣಿಗಾಹುತಿಯಂ ಕೊಡುವಂತಿಕ್ಕುವ ವಿಜ್ಜನ ಮಾರುತ ತತಿಯ
ತೊಡಿಗೆಯ ನಾನಾ ದೇವರ ತಲೆಗಳು ನಾಚಲು
ಪಿಡಿದೆತ್ತಿದ ಮುಕುರಂಗಳ ಕಡುಮನ್ನಣೆಗಳ
ಮಡದಿಯರೊಪ್ಪಿದರು ವಸಂತನನುಪಚರಿಸುತ್ತಿಹ ವನದೇವಿಯರಂತೆ        ೧೪

ಎಡಬಲದೊಳು ಕೈಮುಗಿದಿಪ್ಪ ಹರಿಬ್ರಹ್ಮರ
ನಡುವಣ ಸಾಲೋಕ್ಯರ ನಿಕಟದ ಸಾಮೀಪ್ಯರ
ತೊಡೆಸೋಂಕಿನ ಸಾರೂಪ್ಯರ ಬೆರಸಿಹ ಸಾಯುಜ್ಯರ ಸುತ್ತಣ ಗಣಕುಲದ
ಕಡೆಗಂಗಳೊಳಾಡುವ ಸಿರಿಸರಸತಿಯರ ಸಾ
ಲ್ವಿಡಿದಿಹ ಸರ್ವಾಮರ ನಿಕರದ ಮುಂದೆ ತರಂ
ಬಿಡಿದಷ್ಟದಿಶಾಧಿಪರಂ ಬಳಸಿದ ಮನುಮುನಿತತಿಯಿಂ ಸಭೆಯೊಪ್ಪಿದುದು    ೧೫

ಸುತ್ತುಗವೊತ್ತಂ ಬದಿಮುತ್ತಿರ್ದ ಗಣಂಗಳ
ಮೊತ್ತದ ಮುಕುಟಂಗಳ ಕುತ್ತುಱಕಿತ್ತೆತ್ತಂ
ಹೊತ್ತು ತಳಿರ್ತಸಿಲತೆಗಳ ಕವಿದೆಡೆಗಿಡಿದಡಸಿದ ದೀಪಾವಳಿಯೆಸೆವ
ಭಿತ್ತಿಯ ಶಶಿಕಾಂತದ ಸತಿಯರ ತೊಡಿಗೆಯ ಸಂ
ಪತ್ತಿನ ಬೆಳತಿಗೆವೆಳಗಿನೊಳತಿ ಮಂಗಳಮಯ
ವೆತ್ತಿರ್ದಂ ಜಿತದೂಷಣನತಿ ಭೀಷಣ ನಘಶೋಷಣ ನಹಿ ಭೂಷಣನು          ೧೬

ಭಾರತಿ ನೀಡುವ ವೀಣಾರವಮಂ ತುಂಬುರ
ನಾರದರಾಣತಿಯಂ ನಂದಿ ಮಹಾಕಾಳರ
ಪೂರಾಯದ ಗತಿಯಂ ರಂಭೆಯ ಕೇಳಿಕೆಯಂ ಭೃಂಗೀಶನ ನರ್ತನಮಂ
ವಾರಿಜಪುತ್ರನ ವೇದವ ಚಂಡೇಶನ ಕೈ
ವಾರವನಾಲಿಸುತಾನಂದದೊಳಂದಖಿಳಾ
ಧಾರಂ ಭವದೂರಂ ಸುಖಸಾರಂ ಮಹಿಮಾಗಾರಂ ತಾಂ ಮೆಱೆದಿರಲು         ೧೭

ಏಳಂಬುಧಿ ಪರಿವೃತ ಭೂತಳದೊಳಗುಳ್ಳ ನೃ
ಪಾಲರನೆಲ್ಲರನವರಿವರೆನ್ನದೆ ನೆಱೆನಿ
ರ್ಮೂಲಂಗೆಯಿದಂತೆನ್ನೀ ನಿಜ ವಿಜಯ ಭುಜಾದಂಡವ ಮಂಡಿಸಿಮೆಱೆವಾ
ಬಾಳ ಬಲಾಡ್ಯತೆಯಂ ತೋಱಿಸಿ ನಾನಾಭುವ
ನಾಳಿಯ ದೇವರ ಕೈಯಭಿಷೇಕ ಪಯಃಕಣ
ಜಾಳದ ಜಯ ಸೇಸೆಯ ತೋಱುವೆನೆಂದನುಗೆಯ್ದಂ ದಕ್ಷ ಪಿತಾಮಹನು       ೧೮

ಸರಸಿಜಭವ ಸರಸಿಜಲೋಚನ ಸರಿಸಿಜರಿಪು
ಸರಸಿಜ ಮಿತ್ರಂ ಮೊದಲೆಂದಿನಿಪೆಲ್ಲಾ ದೇ
ವರ ಲೋಕಂಗಳ ಹೊಕ್ಕವರವರುಪಚರಿಸಿದ ಸನುಮಾನದ ವಂದನೆಯ
ಹರಕೆಯನಭಿಷೇಕವ ಸೇಸೆಯನುಡುಗೋಱೆಯಂ
ಭರವಸದಿಂ ಕೈಕೊಳುತಿನ್ನುಳಿದೆಲ್ಲಾ ಸುರ
ಪರಿವೃತ ಪರಮನನೆಱಗಿಸಿಕೊಂಬಾಸಕ್ತಿಯೊಳೆಯ್ದಿದನುಱದಾಸಭೆಗೆ            ೧೯

ತಾವರೆಗಣ್ಣಂ ಮೊದಲೆಲ್ಲಾ ಸುರರೆಱಗುವ
ದೇವರ ದೇವಂಗೈತಂದೆಱಗದೆ ಮುದದಿಂ
ತಾವೈವೇದ ಸ್ತುತಿಸುವನಂ ತುತಿಸದೆ ಮುನಿಗಳು ಚಿತ್ತದ ಕಂಗಳಲಿ
ಭಾವಿಸಿ ನೋಡುವನಂ ನೋಡದೆ ಕಡು ಮದದಿಂ
ಗಾವಿಲ ದಿಟ ಶಿವನಿಂ ವಂದಿಸಿಕೊಳಲೆಳಸಿದ
ನೇವೇಳ್ವೆಂ ಕೆಂಡದ ತೊಡಿಗೆಗೆ ಚಿತ್ತವನಿತ್ತರಗಿನ ಪುತ್ಥಳಿಯಂತೆ      ೨೦

ಘನ ತೂರ್ಯತ್ರಯಮಂ ಕೇಳುವ ಭರದಿಂ ದ
ಕ್ಷನನಭವಂ ಮನ್ನಿಸ ಮಱೆದನೆನಿಪ್ಪುದು ಪುಸಿ
ತನುವಿನ ರೋಮಂಗಳೊಳೊಂದೊಂದಱ ಮೇಲಲೊಂದೊಂದಂ ಮುಟ್ಟದೆ ಕಡೆಗೆ
ಬಿನದದಿ ಹರಿದಾಡುವ ಕೋಟಿ ಬ್ರಹ್ಮಾಂಡದ
ನೆನಪಿಲ್ಲೆನಲಂತವಱೊಳಗೊಂದಱ ಕಡೆಗೊಂ
ಟಿನ ಹಳ್ಳಿಯ ಹೊಳ್ಳುಗಳೊಂಬತ್ತಱೊಳೊಬ್ಬನನಿವನಂ ಬಲ್ಲನೆ ಶಿವನು   ೨೧

ಮರುಳಂ ಬಗೆಯದೊಡೇಂ ಬಗೆಯಳೆ ಮಗಳೆಂದಾ
ತರುಣಿಯನಾಲಿಸೆ ಪತಿಯಾದರಿಸದವರನಾ
ದರಿಪುದು ಸತಿಗತಿ ಹಿತವಲ್ಲೆಂದೊಲ್ಲದೆ ನಿಂದಳೆಯಂತಲ್ಲದೆ ಬೇಱೆ
ಧರಣೀಶನ ಮಕುಟದ ಕಳಶದ ಮುತ್ತಿಳಿದಾ
ದರಿಪುದೆ ತಾ ಮುಂ ಜನಿಸಿದ ಚಿಪ್ಪಂ ಕಂಡಂ
ತಿರೆ ನೊಂದಂ ನಿಂದಂ ಮಂದಿಯ ವಂದನೆಗೆಳಸುತೆ ಸಭೆಯಂ ನೋಡಿದನು      ೨೨

ಎಂತಹ ಪಾತಕವಂ ಮಾಡಿದನೋ ಮಾಡದೊ
ಡಿಂತೀ ಶಿವನುಂ ಶಿವೆಯುಂ ಮನ್ನಿಸರೇಕಾ
ವಂತಸ್ಥವನಱಿಯದೆ ನಮಿಸುವುದನುಚಿತವೆಂದೊಲ್ಲದೆ ಸಭೆ ಸುಮ್ಮನಿರೆ
ಚಿಂತಾಂಕುತಂ ತನುವಂ ತಟ್ಟುಚ್ಚಲು ಬಳಿ
ಕಂತಿಂತೆಂದುಪಮಿಸಬಾರದ ಸಂತಾಪದೆ
ಮುಂತಣ ಗೃಹ ಕಂತೆಯ್ತರುತಿರ್ದಂ ಕೋಪಾವೇಶದೆ ಮುಂದಱಿಯದನು     ೨೩

ಕಱೆ ಗಟ್ಟಿದ ಬಿಱುಗೋಪದ ಮಱಹಿಂದಂ ಮುಂ
ದಱಿಯದೆ ಪೊಱಮಟ್ಟೆನೆನುತ್ತಂ ತನ್ನಂತಾ
ಹುಱಿಗುಟ್ಟಿಕೊಳುತ್ತಂ ಪೊರದನಿಯಾದರೆ ಕಱೆಯರಲಾ ಎಂದೋ ಎನುತ
ಕಿಱಿದೆಡೆಯಂ ನಡೆವುತ ನಿಂದಿರುತಂ ಮೆಲ್ಲನೆ
ಕುಱ ಮೆಟ್ಟುತ್ತಂ ಬಪ್ಪವರಂ ಬಗೆವುತ್ತಂ
ನೆಱೆಸುಯ್ವುತ್ತಂ ಬೈವುತ್ತಂ ಜಿನಗುತ್ತಂ ನಡೆದಂ ಪಾಪಾತುರನು  ೨೪

ನಡೆತರಲಿತ್ತಂ ತನಗಿದಿರ್ವರಲನುಮಾಡಿದ
ಪಡೆಯ ಗಜವ್ರಜದುರವಣೆಯಂ ತುರಗಂಗಳ
ಗಡಣದ ಗರುವಿಕೆಯ ಪದಾತಿಯ ಪಸರದ ನಾನಾ ವಾದ್ಯಂ ಬೊಬ್ಬಿಡುವ
ಸಡಗರಮಂ ಬಿರಿದೆತ್ತುವ ಕಹಳೆಗಳಂ ದನಿ
ಗೊಡುವ ಮಹಾಭೇರಿಯ ಭೂರಿಸ್ವನಮಂ ಕಂ
ಡಿಡಿಕಿದನುಮ್ಮಳಮಂ ತುಡುಕಿದ ಗರ್ಭದ ಕೊರ್ಬಗೆಯಂ ಕೊಸಱೆದನು        ೨೫

ಪಱಪಱಿಸುವ ಭೂಪಾಲರನದಿದೆನ್ನದೆ ತ
ತ್ತಱದಱಿದಮರರ ನೆಱಗಿಸಿಕೊಂಡೆನ್ನಧಟಿನ
ಹಱವಡೆಗೀ ಬನ್ನಂ ಬಂದಿತೆ ಬೆಂದೆನ್ನಿರವೇಕೆಂಬ ಉಬ್ಬೆಗದಲಿ
ನೆಱೆ ಚೇತರಿಸಿದ ಚಿಂತಾ ಚಿತ್ರವೊ ಸಲೆ ಸೈ
ವೆಱಗಿನ ಸಾಕಾರವೊ ಕೋಪದ ಕಱುವಿನ ಕಂ
ದೆಱವೆಯೊಯೆಂಬಂತಿರೆ ಬಂದಂ ಪುರ ಹೊಕ್ಕಂ ನಿಂದಂ ನಿಜಭವನದೊಳು      ೨೬

ಜನ್ನವ ಮಾಡುವೆ ದೇವತ್ವವ ಕೆಡಿಸುವೆನುಱೆ
ಬನ್ನಂಬಡಿಸುವೆ ಶೂಲಿಯುತಾ ಮುನ್ನಿನವೋ
ಲುನ್ನತಿಯಿಂದಿರ್ದೊಡೆ ಕಡೆಗಿನ್ನೆನ್ನಟ್ಟೆಯ ಮೇಲಿರ್ದವನೆಂದೆನುತ
ತನ್ನಂ ಬರಿಸುವೆನೆನ್ನೋಲಗಕೋಲಗದೊಳು
ಮನ್ನಿಸದಿರ್ದಮರರ ತಲೆಗಡಿವೆಂಬಿಡೆ ಬಿಡೆ
ನಿನ್ನೆನುತಂ ಪಾತಕದಕ್ಷಂ ರೌರವ ಕುಕ್ಷಂ ತೊಡೆ[ವೊಡೆ] ವೊಯ್ದೆನಲು           ೨೭

ಕರೆ ಕರೆ ಮಂತ್ರಿ ವಿದಗ್ಧನನೆಂದಾಗಳೆ ತಾಂ
ಕರಸಿ ಸಮಸ್ತಾಳೋಚನೆಗೆಯ್ಯಲ್ಕೊದವಿದ
ಪರಿಭವಮಂ ತಗ್ಗಿಸಿ ರುದ್ರನ ಸರ್ವೇಶತ್ವಮನೆನಗಿತ್ತಾತಂಗೆ
ಪರಿಭವಮಂ ಕುಡಬಲ್ಲ ಮಹಾಯಾಗವನಾ
ಸುರದಿಂ ಮಾಡುವೆನದಕಾವುದು ಬೇಕೆನಲದ
ತರಿಸೇಳೆಳೆಂದಾತುರಿಸಿದಡಾತಂ ಬಳಿಕಿಂತೆಂದಂ ಪತಿಯೊಡನೆ           ೨೮

ಎಲ್ಲಾ ವಸ್ತುಗಳಂ ಪಡೆಯಲ್ ಬಲ್ಲುದು ಧರೆ
ಯಲ್ಲದೆ ಧರೆಯಂ ಪಡೆಯಲು ಬಲ್ಲ ಸುವಸ್ತುಗ
ಳಿಲ್ಲೆಂಬುದನಱಿಯಾ ಶಿವನೊಲಿದೊಡೆ ಯಾಗ ಸಹಸ್ರ ಫಲಮಂ ಕೊಡಲು
ಬಲ್ಲಂತಾನಲ್ಲದೆ ಶಿವಪದವಿಯನೀಯಲು
ಬಲ್ಲುದೆ ಯಾಗಂಗಳದೇಕೆಲ್ಲಿಯು ಸಲ್ಲದ
ಹೊಲ್ಲಹ ಕಾರ್ಯವನುದ್ಯೋಗಿಸಿದಪೆಯೆಂದಡೆ ಮುನಿದೆದ್ದಂ ಪಾತಕನು    ೨೯

ಮುನಿದು ವಶಿಷ್ಠಂ ಶಾಪಿಸಿದ ಮಹಾಭೂಪನ
ಜನಕನ ತಾನಟ್ಟಲು ಸಗ್ಗಂ ಬೊಗಿಸದ ಬೊ
ಮ್ಮನ ಕೂಡಣ ಮುನಿಸಿಂ ಕೌಸಿಕಮುನಿ ಸಕಲವ ಹುಟ್ಟಿಸನೇ ಹೋಮದಲಿ
ಘನ ಯಾಗದ ಮುಖದೊಳು ಪಡೆಯಲು ಬಾರದುದೆನ
ಗನುಕೊಳ್ಳದುದಾವುದು ಬೇಡನ್ನದೆ ನೀಂ ನೆ
ಟ್ಟನೆ ತೊಡಗುವ ಹದನಂ ನುಡಿ ಕೆಡೆನುಡಿದಡೆ ಕೆಡಹುವೆನೆಂದನು ಪಾತಕನು  ೩೦

ಕೊಂದಡೆ ಕೊಲು ಯಾಗಂ ಬೇಡ ಕರಂ ಬೇಕು ಬಿ
ಡೆಂದೆನೆಬಿಡದೊಡೆ ಅತಿ ಹೊಲ್ಲಂ ಕರ ಲೇಸೈ
ನಿಂದೆಗೆ ನೆಲೆಯಹುದಾಗಲಿ ಕೆಟ್ಟಪೆ ಕೆಡುವೆಂ ಮಾಣೆಂಮಾಣೆಂ ಹೋಗು
ನಂದನೆ ಮುನಿಯಳೆ ಮುನಿಯಲಿ ಬಱಿದೇತಕ್ಕೀ
ಸೊಂದಕ್ಕೆಡೆಯುಂಟೇ ಎನ್ನೊಡೆಯರೆ ಮನಸಿಗೆ
ಬಂದಂದದಿ ಮಾಡುವುದೆನೆ ಮಾಡದೆ ಬಿಟ್ಟಡೆ ನಗು ನೀನೆಂದಂ ಖಳನು         ೩೧

ಕೆಡೆಗೆ ಗಣಂಗಳು ಹುಗದೆಡೆಯಾವುದು ಯಾಗವ
ತೊಡಗುವಡೆನೆ ಕಾಶಿಗೆ ಪಡುವಲ ರಮ್ಯಾಶ್ರಮ
ದೆಡೆಯಣ ಕನಖಳದಲಿ ಮಾಡುವ ಷೋಡಶ ಋತ್ವಿಜರಾಱು ಮುನೀಶ್ವರರು
ನಡಸುವ ಪತಿಯಾವಂ ಕಮಲಾಕ್ಷಂ ಕಾಹಿನ
ಕಡುಗಲಿಗಳದಾರಷ್ಟದಿಶಾಧಿಪರೆಂದೆನೆ
ಮೃಡ ವಿರಹಿತಯಾಗಕ್ಕಡಿಯಿಡರೆದ್ದೆಱಗರು ಕೇಳೆಂದ ಚಮೂವರನು         ೩೨

ಇಂದಾನು ಕರೆದಡೆ ಬಾರದ ಮುನಿವರರಂ
ಕೊಂದಿಕ್ಕುವೆನೆನೆ ಕೊಂದಡೆ ಸಾವರು ತಪ್ಪಿಸಿ
ಬಂದಹರೆಂಬೀ ಮಾತಂ ಮಱೆಯೆನೆ ಬರಿಸುವುದಕ್ಕಾವುದು ಬುದ್ಧಿಯೆನೆ
ಇಂದುಧರನ ನಿಂದೆಯನಾಡದೆ ಚದುರಿಂ ಕರೆ
ತಂದಧ್ವರಮಂ ಮಾಡಿಸು ಬಲುಹಂ ತೋಱಿದ
ಡೆಂದುಂ ನಡೆಯದು ನಡೆಸುವೆಯಾದಡೆ ಮಂತ್ರವಿದೆನೆ ಕೈಕೊಂಡಂ ಖಳನು    ೩೩

ಉರಗೇಂದ್ರನ ಪದಮಂ ಭೂನಾಗಥಮಱಿ ಸುರ
ಗಿರಿಯ ಮಹತ್ವವ ಹುಲುಮೊರಡಿ ಸಮುದ್ರದ ಭಾ
ಸುತೆಯನಡವಿಯ ಕಿಱುಗೆಱೆ ಕಲ್ಪದ್ರುಮದವುದಾರಮನೊಣಗಿದ ತಾಱೆ
ಭರದಿಂ ಪಡೆಯಲು ಬಯಸುವವೋ ಅಪ್ರತಿಮನ
ಪರಮನ ಪರಮೇಶನ ಸರ್ವಜ್ಞತ್ವವನಾ
ದರದಿಂ ಪಡೆಯಲು ಮನದಂದಂ ಕರೆದಂ ಮಿಗೆ ಗಣಕರನಾಕ್ಷಣದಿಂದ            ೩೪

ಹರಿಯಲ್ಲಿಗೆ ವಾಣೀವರನಲ್ಲಿಗೆಯುಂ ದಿನ
ಕರನಲ್ಲಿಗೆ ದಿಗುದೀಶ್ವರರಲ್ಲಿಗೆ ಸರ್ವಾ
ಮರರಲ್ಲಿಗೆ ವಿದ್ಯಾಧರ ಕಿನ್ನರ ಖೇಚರರಲ್ಲಿಗೆ ನೆಱೆ ಮನ್ನಣೆಯ
ಗುರುಡೋರಗ ಗುಹ್ಯಕ ಗಂಧರ್ವ ಮರುದ್ಗಣ
ತುರಗಾನನ ಮನುಮುನಿ ಮುಖ್ಯರ್ಗದಿದೆನ್ನದೆ
ಬರೆದಟ್ಟಿದನಿಂದೇ ಬರಬೇಕೆಂದೋಲೆಗಳಂ ಕಡು ಪಾಪಾತುರನು    ೩೫

ತವ ತವಗದಿದೆನ್ನದೆ ಕಾಶಿಗೆ ಪಡುವಲು ತೋ
ಱುವ ರಮ್ಯಾಶ್ರಮದೆಡೆಯಣಕನ ಖಳವೆಂದೆನಿ
ಸುವ ಪುರದೊಳು ನೆರೆದೊಗ್ಗಿಂ ಜಗದಗಲದೊಳೋಲಗವಿತ್ತ ಸಭಾಜನಕೆ
ಶಿವ ಶಿವ ಅನುಮತಿ ಗೊಟ್ಟುದ್ದರಿಪುದಂ ಘನ ಯಾ
ಗವನೊಂದು ಮಾಡುವೆನೆಂದಾ ದಕ್ಷಂ ಬಿ
ನ್ನವಿಸೆ ಶಿವ ದ್ರೋಹೆಂದಱಿಯದೊಡಂಬಟ್ಟರು ತೊಟ್ಟರು ತಮ್ಮಳಿವಿಂಗೆ  ೩೬

ಪ್ರೇಮದಿ ಯಾಗಾಭಿಜ್ಞರ ಕರದತ್ಯಗ್ನಿ
ಷ್ಟೋಮಾದಿಷ್ಟೋಮದಿನತಿರಾತ್ರ ದಿನಪ್ತೋ
ರ್ಯಾಮಾದಾದ್ಯಂ ಪೋಡಶ ವಾಜಪೇಯಂಗಳೊಳಾವುದು ಲೇಸಾವುದನು
ಕಾಮಿಸಿ ತೊಡಗುವೆನೆಂದೆನಲವರತ್ಯಗ್ನಿ
ಷ್ಟೋಮವನೆನೆ ಯಜ್ಞದ್ರವ್ಯದ ತರವೇಳ್ದಾ
ಭೂಮಿಯ ಶೋಧಿಸಿ ಶಾಲಾವೇದಿಕೆ ಕುಂಡಂಗಳ ಮಾಡಿಸತೊಡಗಿದನು        ೩೭

ಘನ ಕುಂಡದ ಡಮರುಗ ವೇದಿಕೆಯಂ ತೆಂಕಲು
ಧನುನಿಭ ವರ್ತುಳ ಮೂಡಲು ಪಡವಲು ಬೌಕವ
ನನುವರ್ತಿಸುತೆ ಹವಿರ್ದಾನ ಸದಸ್ಯ ದೇವಯಜನಂ ಯೂಪಂ ಮೇಲೆ
ವಿನುತ ಪ್ರಾಗ್ವಾಸಂ ಮುನಿಪತ್ನಿ ಸದನವೆಂ
ದೆನಿಸುವ ಶಾಲಾಗರ್ಭಿತ ಶಾಲೆಯ ಕೈಗೈ
ದನು ಜನ್ನದ ಜನದಳುವಿನ ಗರೆವರಹದ ಸೆರೆವನೆಯನು ಕೈಗೆಯ್ವಂತೆ         ೩೮

ಹೊಸಮರ ಸುರಗಿ ಕಪಾಲ ಉಲೂಖ ಮೃಗಾಜಿನ
ಮಂಸಲಂ ಶೂರ್ಪದೃಮ ಸ್ರುಕ್ ಸ್ರುಮ ತಪನಿಗ್ರಹ
ಕುಶೆ ಸೋಮ ದ್ವಂದ್ವಾರುಣಿಯಾ ಮದನಿ ಮಹಾ ವಿರಣಿ ವಿಷಾಣಂ ಶಂಖಂ
ಚಷ ಕೂರ್ಪರವಾಸಂಧಿಗಳೆನಿಸುವ ಪರಿಕರ
ವಿಸರವನೊದವಿಸಿ ಕೋಟೀರ ಬೋಧಿತ ಯೂಪ
ವೆ ಸಮಿತನುಜ ಪಶುಶಸ್ತ್ರಂ ರಜ್ಜುಗಳಂ ತರಿಸಿದನಾತ್ಮದ್ರೋಹಕನಂ           ೩೯

ಹೋತೃ ಸದಸ್ಯ ಬ್ರಹ್ಮಾಧ್ವರ್ಯು ಮಹಾ ಪ್ರ
ಸ್ತೋತೃ ತ್ವಷ್ಟಾಗ್ನಿ ಧನುರ್ವಾಚ್ಯಂ ವಾಕು
ಸ್ತೋತೃ ಪ್ರತಿ ಹರ್ತೃ ಸುಮೈ ತ್ರಾವರುಣೋದ್ಗಾತ್ರಂ ನೇಷ್ಟಂ ನೇತೃವನು
ಹೋತೃಂ ಬ್ರಹ್ಮಾಂಶುಗಳೆನಿಸುವ ಹದಿನಾಱು
ಕ್ಕೋತಾಸನ ವಿತ್ತನು ಸಹಮರಣಾಸನ್ನ
ಪ್ರೀತನು ಯಜ್ಞದ ರಕ್ಷೆಗೆ ಕಾಹನು ಹೇಳಲು ಕರೆದನು ದಿಕ್ಪಾಲರನು  ೪೦

ಕುಂದದೆ ತಂತಮ್ಮೆಡೆಯಂ ತಾವೇ ರಕ್ಷಿಪು
ದೆಂದಷ್ಟ ದಿಶಾಧಿಪರಿಗೆ ಬೆಸನಂ ಕೊಟ್ಟು ಮು
ಕುಂದಂಗಗ್ರಾಸನವಿತ್ತೆಲ್ಲಾ ಮಾನ್ಯರ್ಗುಚಿತಾಸನವನು ಸಲಿಸಿ
ಸಂದ ಮಹಾದ್ರೋಹಿಯ ಮನೆಯಗ್ರದೆ ಕೊಂಬೆಸೆ
ವಂದದೆ ಕೈಯ್ಯೋಳ್ಕೋಡಂ ಬಂಧಿಸಿ ಮೃಗದೊವ
ಲಿಂದಾಚ್ಛಾದಿಸಿ ನವನೀತವನುದ್ವರ್ತಿಸಿದರು ಪಾಪಿಗೆ ಪಾತಕರು    ೪೧

ನೆನೆದುಲ್ಲೇಖನವಾದಾನಂ ಪಾತ್ರಾ ಸಾ
ಧನ ಸರ್ವದ್ರವ್ಯದ ಸಂಸ್ಕಾರಂ ಪರಿಷೇ
ಚನ ಪೂರ ಪರಿಸ್ತರಣಾದಿಯನೊದವಿಸಿ ಹೋಮ ಪ್ರಾರಂಭಕ್ಕಿನ್ನು
ಅನುಮತಿಯೇ ಮುನಿವರರೆಲ್ಲಂ ಬಂದರೆ ನೋ
ಡೆನಲು ದಧೀಚಿ ಮುನೀಶ್ವರರಿಲ್ಲೆಂದೆನೆ ಚರ
ನನಟ್ಟದಂ ಕರತಾ ಹೋಗೆಂದುಱೆ ಬೆಟ್ಟೇಱಿಯೆ ಮೃತ್ಯುವ ಕರೆದಂತೆ        ೪೨

ನಿಂದಿರದೆ ಚರಂ ಬಂದುಱೆ ಪಂಪಾಧೀಶನ
ಮುಂದಣ ತೀರ್ಥದ ತಡಿಯ ತಪೋವನದೊಳು ಮುನಿ
ವೃಂದದ ನಡುವಿರ್ದ ದಧೀಚಿಗೆ ದಕ್ಷಂ ಕಳುಹಿದ ಹದನಂ ಭಿನ್ನೈಸೆ
ಎಂದೋಯಿಂದೇ ಹೊತ್ತೀ ಹೊತ್ತಿಂದುಧರಂ
ಬಂದನೆಯವರಿವರಿನ್ನದೆ ಬಂದರೆನ್ನಲಡೆ
ತಂದಂ ಪುಳಕದ ಪೂರಾಯದ ತವಕದ ತವನಿಧಿ ಸುಖದ ಸುಧಾಮಯನು      ೪೩

ಗಡಣದ ವೇದಂಗಳ ಬಗೆ ಹೊಗದಜ ಹರಿಗಳ
ಸಡಗರ ಸಂಧಿಸದಪ್ರತಿಮನನಭವನನೆ
ನ್ನೊಡೆಯನನೀಕ್ಷಿಸುವೆಂ ಮೈಯಿಕ್ಕುವೆನುಕ್ಕುವೆನಪ್ಪುವೆನಡಿಗಳನೆನುತ
ನಿಡುಜಡೆಯಿಡುಕುಱನೆಡಗೈಯೊಳು ಸುತ್ತುತ್ತಳಿ
ವುಡೆದೊವಲಂ ಸಂತೈಸುತ ಭೂತಿಯನಂತಿಂ
ತಿಡುತಂ ನಡೆತಂದು ದಧೀಚಿ ವ್ರತಿ ಹೊಕ್ಕನು ಯಾಗಸಭಾ ಸದನವನು         ೪೪

ಕಡು ತವಕದೊಳಗ್ರಾಸನದೊಳು, ವೇದಂಗಳ
ನಡುನೆತ್ತಿಯೊಳೆಲ್ಲಾ ದೇವರ ಮಕುಟಂಗಳ
ಕುಡಿಯೊಳು ಮಂತ್ರಂಗಳ ಮಸ್ತಕದೊಳು ಕಾಣದೆ ವಱುಗುತ ಮಂದಿಗೆ ತಿರುಗಿ
ಜಡೆಗಳು ತಳಿತವರೊಳು ಕುಂಡಲವುಳ್ಳವರೊಳು
ತೊಡಿಗೆಗಳೆಸೆವವರೊಳು ಹೆಗ್ಗುಱುಹಿನ ಹೆಮ್ಮೆಗೆ
ಳೊಡೆಯನ ಕಾಣದೆ ಸುಟ್ಟುರುಹುವೆ ನಿಂತೀ ಯಾಗವನೆಂದಟವಟಿಸಿದನು     ೪೫

ಘುಡು ಘುಡಿಸುತ್ತೇನೋ ದಕ್ಷ ಪುರಾಂತಕನಾ
ವೆಡೆಯಲು ಪುರಾಂತಕನೆಂದಾರೀಯಧ್ವರ
ದೊಡೆಯನದೇತಕಿದ ರಕ್ಷಿಸಬೇಡಾ ಬೇಡನಲೇಂ ಕಾರಣ ಬೇಡ
ನುಡಿಯದಿರವನಿಲ್ಲಿಗೆ ಯೋಗ್ಯನೆಯಲ್ಲಲ್ಲಂ
ಬಿಡದೇಕಲ್ಲೆನೆಲೆಲುದೊಡುವನು ತೊಗಲುಡುವನು
ಸುಡುವನು ತಲೆವಿಡಿವನು ಪಡುವಂ ಪ್ರೇತೋರ್ವಿಯೊಳೆಂದನು ಮುಂದಱಿಯದನು    ೪೬

ಘನ ಮಂಗಳಮಯ ನಾವು ದನುಟ್ಟದೆ ಪಾವನ
ತನುವಿಂ ತೊಟ್ಟೆನ್ನೊಡೆಯನದೇನಂ ನೆಟ್ಟನೆ
ಸುಟ್ಟದದೇನಾವುದ ಪಿಡಿದಡದೇ ಸನ್ಮಾರ್ಗ ದೊಳೀಹರಿಯಜ ಸುರರು
ಮುನಿಕುಲವೆರ ಸೊಡನವ ರೊಕ್ಕುದನುಡಿತ್ತುದ
ನನುಭವಿಸಿ ಸಮಸ್ತರು ಮೊಲಿದಂತಾಗರೆ ಹೇ
ಳೆನಲೀ ಮಹಿಮೆಗಳೆನ್ನಳಿಯನೆನಿಸಲಾದವು ಕೇಳೆಂದನು ಪಾತಕನು   ೪೭

ಹರಿಯಜ ಸುರರಳಿವಂತಳಿಯಂ ನಿನ್ನೀಯ
ಧ್ವರವಳಿವಂತಳಿಯಂ ನೀನಳಿವಂತಳಿಯಂ
ಶರಣೆಂದರನಳಿಯಂ ಮಲತವರಳಿವವೊಲಳಿಯಂನೆಱೆ ನಿನ್ನಳಿಯನೆನೆ
ಅರೆವೆಣ್ಣ ಕುಲನನಾಥನನಾಮಿಕನವನೂ
ರ್ವರೆಯಱಿಯಲಬದ್ಧಂ ನಿರ್ಗುಣಿ ನಿರ್ದೈವಂ
ಸುರಹರನಾಥನ ನೆನೆಯದಿರೆನೆ ಮುನಿ ಕಡು ಕೋಪಿಸಿದನದೇಂ ವಣ್ಣಿಪೆನು     ೪೮
ಕಿಡಿಗೆದಱಲು ಕಣ್ಣುರಿಮಸಗಲು ಬಿಱುನುಡಿ ಹೊಗ
ರಿಡೆ  ಮೊಗ ನಡಗಲು ಕೈಯ್ಯಲುಗಲು ಪಂರ್ಬಡಿ ಕುಂ
ಬಿಡೆ ಕಾಲ್ಮಿಸುಪದರಂ ಸಿಡಿಯಲು ಪೂಸಿದ ಭಸಿತಂ ಧೂಮವನನುಕರಿಸಿ
ಹಿಡಿದ ಕಮಂಡಲ ಜಲ ಕುದಿಯಲು ರೋಮಂ ಕೌ
ಱಿಡೆ ಲಾಕುಳ ಹೊಗೆಯಲು ಭರ್ಗನ ಭಾಳಾಕ್ಷಂ
ಜಡೆವೊತ್ತಂ ತೊಡೆಯನ ನಿಂದಿಗೆ ಮುನಿ ಮುನಿದಿಂತೆಂದಂ ಸಭೆ ಕಂಪಿಸಲು     ೪೯

ಸುಡು ಸುಡು ಕಡು ಪಾತಕ ನಿಂದಕ ನಿನ್ನ ಶಿರಂ
ಹುಡಿಯಲಿ ಹೊರಳಲಿ ನಿನ್ನಧ್ವರಮಂ ತಡಿಗಡಿ
ಗೆಡೆಯಲಿ ಹರಿ ಹರಣವನೀಗಲಿ ಪೂಷನ ಹಲ್ಲುದುರಲಿ ಕಾಲನತೋಳು
ಕಡಿವಡೆಯಲಿ ಭಗನಯನಂ ನೋಯಲಿ ಬೊಮ್ಮನ
ಮಡದಿಯ ನಾಸಿಕವರೆಯಾಗಲಿ ದಿಗುಧೀಶರು
ಕಡು ಭಂಗಿತರಾಗಲಿ ಎಂದಿತ್ತನು ಶಾಪವ ದೂಷಕ ದಾವಾನಳನು    ೫೦

ಒಡೆಯನ ಕದ್ದುಣ ಬಂದಗ್ನಿಯ ನಾಲಗೆ ಕೊ
ಯ್ವಡೆಯಲಿ ಸುರರೆಲ್ಲಂ ಮಡಿಯಲಿ ಮಿಕ್ಕರು ಹುಲು
ವಿಡಿಯಲಿ ಮೇಲಱಿಯದೆ ನೆಱದಿರ್ದಷ್ಟಾಶೀತಿ ಸಹಸ್ರ ಮುನಿಸ್ತೋಮ
ಮೃಡನಡಿಗಳಿಗೆಡೆದೆಱಪಾಗಲಿ ವೇದಾರ್ಥದಿ
ನಡೆಯದೆ ನರಕಾಪೇಕ್ಷಿತರಾಗಲಿ ಹಿಡಿ ಹಿಡಿ
ಹಿಡಿ ಶಾಪವನೆಂದಿತ್ತು ದಧೀಚಿ ಮುನೀಶ್ವರ ಹೊಱವಡೆ ಸಭೆಗಜಬಜಿಸೆ       ೫೧

ನಿಂದೆಯ ಯಜ್ಞವಿದೆಂದಱಿಯೆವು ಶಿವ ಬಂದಪ
ನಿಂದಿರ್ದೆವು ನಾವೀ ಶಾಪವ ಹೊಱುವವರ
ಲ್ಲೆಂದೆನು ತಲಗಸ್ತ್ಯ ವಶಿಷ್ಠಂ ಭೃಗು ಗೌತಮ ದೇವಲ್ಯುಪಮನ್ಯುಗಳು
ನಿಂದಿರದೆದ್ದು ದಧೀಚಿ ಮುನಿಯ ಕೂಡೇಳಲು
ವೊಂದೊಂದಱ ಕೊಡೆಂಟೆಂ ಸಹಸ್ರಂಬರ
ಲಂದು ತೊಡಗಿ ಮೂವತ್ತಿರ್ಚ್ಛಾಸಿರವಾದುದು ಶಾಪಕ್ಕೊಳಗಾದವರು        ೫೨

ರಕ್ಕಿಸಿ ಹೀರಿದ ಕುಂಭಕ್ಕೆಣೆಯಾದುದು ಮುನಿ
ಹೊಕ್ಕಿರ್ದುಳಿದ ಸಭಾಜನವಿನ್ನೇಗುವೆವೆನೆ
ಕಕ್ಕುಲಿತೆಯ ಬಿಡಿ ಮುನ್ನವೆ ಬರಲಾಗದು ಬಂದಿನ್ನೋಡುವುದತಿ ಕಷ್ಟಂ
ತೆಕ್ಕನೆ ಹೋಮಂ ನಡೆವುದು ಲೇಸೆಂದಗ್ಗಿಸಿ
ಸಿಕ್ಕಿಸಿ ಕಡುಹಿತವನವೋಲ್ತೊಡಗಿಸಿ ನೆಱೆಬಿ
ದಿಕ್ಕುವೆನಿದಕೆಂದೆಯ್ದಿದನೀಶನ ಸಭೆಗತ್ತಲು ಮುನಿನಾರದನಂದು   ೫೩

ಕ್ರುತುವರರೆಲ್ಲಂ ಹೋದರು ವಿಘ್ನಪ್ರಾಯ
ಶ್ಚಿತಮಂ ಮಾಡು ಭಯಾರಣಿಯೊಳು ಮಥನಿಯ ಹೊಸ
ಘೃತಮಂ ತಾಪಿಸು ಯಕಾಪಾಶುದ್ಧಿಯನೊದವಿಸು ಹೋಮ ದ್ರವ್ಯವ ಬೆಳಗು
ನುತ ಗಾಯತ್ರಿಯನುಷ್ಟುಪ್ ತೃಷ್ಟುಪ್ ಜಗತೀ
ಯತಿ ಶಕ್ವರಿ ಯುಷ್ಣಿಕ್ ಪಙ್ತಿ ಶ್ರುತಿ ಮಂತ್ರಾ
ಹಂತಿಗೆ ಸ್ವಾಹಾ ಇಂಧನಮಂತಾಯೆಂದಮರ ರವಂ ಪೊರಪೊಣ್ಮಿದುದು      ೫೪

ಮಸೆ ಶಸ್ತ್ರವ ಪೂಜಿಸು ಯೂಪವ ನೇಣಂ ಬಂ
ಧಿಸುವಜಪಶು ಮೊರಕದವೊಲು ಗಂಟಲಮುಱಿಮ
ರ್ದಿಸು ಬಳಿಕುಪಚರಿಸಂಗಂಗಳಲರ್ಚಿಸಿ ಕೊಯಿ ಪಲಲವ ತೆಗೆಶೋಣಿತವ
ಬಸಿ ಸೇಲಿವಪೆಯವ ಕಾಸಾಹುತಿಯಂ ಕೊಡು ಮಿ
ಕ್ಕೆಸೆವ ಪ್ರೋಡಾಶ ಪ್ರಾಶನಮಂ ಮಾಡೆಂ
ಬಸರಂ ಹೊಲೆಗೇರಿಯೊಳೊಗೆವಂತಿರೆ ಈಶನ ಸಭೆಯೊಕ್ಕಂ ನಾರದನು          ೫೫

ಬಂದಗಜೇಶಂಗಘನಾಶಂಗಕ್ಲೇಶಂ
ಗಂದಾನಂದ ವ್ರಜದಿಂ ವಂದಿಸಿ ರಿಪಂ ತಮ
ವೃಂದ ವಿಮೋಚನ ವಚನಾರಚನ ಪ್ರಚಯದೆ ಕೀರ್ತಿಸಿ ಕೆಲಸಾರುತಿರೆ
ಇಂದುಧರಂ ಕಂಡೆಲ್ಲಿರ್ದೆಯೊ ದುಗುಡಾಂಬುಧಿ
ಮಂದರ ಸನ್ನಿಭ ನುಡಿ ನುಡಿ ಹತ್ತಿರೆ ಬಾ ಬಾ
ಎಂದೆಡೆ ದಕ್ಷಾಧ್ವರ ಸಾಕ್ಷಾದಡವಿಗೆ ಬಿತ್ತಿದ ಬೇಗೆಯ ಬೀಜವನು     ೫೬

ರಾಗದಿ ದಕ್ಷನ ಸಾರಿರ್ದೆನದೇಕೆಂದೆನೆ
ಯಾಗಕ್ಕೇತಱ ಯಾಗಂ ನಿಮ್ಮಂ ನಿಂದಿಪ
ಯಾಗಂ ತೊಡಗಿತ್ತೇ ತೊಡಗಿತ್ತೆಂದಿಂದಾವಾಗಂ ರವಿಯೊಗೆವಾಗಾ
ಮೇಗೆಲ್ಲರ್ ಬಂದರೆ ಬಂದರೆನಲ್ಕೆನ್ನವ
ರಾಗಿ ವಿರೋಧಿಸಿದವರುಂಟೇ ಉಂಟಾರ್ಶಿವ
ಯೋಗಿ ದಧೀಚಿ ಮಹಾಮುನಿಯೆನಲಿಕೆ ನಲಿದನು ಶಂಬರ ಸೂದನ ಜಿತನು    ೫೭

ತೆಕ್ಕನೆ ಹೇಳೆನ್ನವನೇಗೆಯ್ದೆನೆನಲ್ಕದೆ
ಸೊಕ್ಕಿದ ಕರಿ ಕೊಳನಂ ಹೊಕ್ಕಂತಾ ಸಭೆಯಂ
ಹೊಕ್ಕಗ್ರಾಸನದೊಳು ನಿಮ್ಮಂ ಕಾಣದೆ ಘುಡು ಘುಡಿಸುತ ಮಂದಿಗೆ ತಿರುಗಿ
ಚಕ್ರಧರಂ ಸಹಿತೆಲ್ಲರಿಗುಱೆ ಶಾಪದನಿ
ತ್ತರ್ಕೆಲ ಬರೆ ಹಿಂದೆ ವಶಿಷ್ಠಾದಿಗಳಱುವರು
ಸಿಕ್ಕದೆ ಹೊಱವಡಲುಳಿದವರೇ ನಡೆಸುತ್ತೈದರೆಯೆಂದನು ನಾರದನು           ೫೮

ಕಿನ್ನರಿಯರನಾಲಿಸಂತಂಬಿಕೆ ಕೇಳ್ದೆಲ್ಲಿಯ
ಜನ್ನದ ಮಾತೆಲ್ಲಿ ಯದೆಂದೆನಲಿಕೆ ಎನ್ನಂ
ಕಿನ್ನನ ಮಾಳ್ಪುದಱಿಂ ನಿಮ್ಮಯ್ಯಂ ತೊಡಗಿದನೆನೆ ಘುಡಿಘುಡಿಸುತ್ತೀಗ
ಬಿನ್ನಣದಿಂ ಬಿಡಿಸುವೆನೊಲ್ಲದಿರಲ್ಕೆಡಿಸುವೆ
ಬನ್ನಂ ಬಡಿಸುವೆ ಪಿಡಿಸುವೆ ನಿಮ್ಮಡಿಯಂ ಕಳು
ಪೆನ್ನುವನೆನೆ ಬೇಡವ ಮನ್ನಿಪನಲ್ಲೆಂದನು ಕನ್ನೆಗೆ ಪನ್ನಗಧರನು   ೫೯

ಶಿವನಿನಗಲ್ಲದ ಖಳನೊಳು ಮನ್ನಣೆಯಂ ಬಯ
ಸುವೆನೆ ಬಯಸಲು ಶಿವ ಸತಿಯೆನಾನೇಕೆನಲವ
ನವಿಚಾರವನೆಲ್ಲವನಱಿವೆಂ ಮೆಱೆವೆಂ ತೊಱೆವೆಂ ವಾಯದ ಪಿತವೆಸರ
ಭುವನೋದರ ಬೆಸಸೆನೆ ಹೈಹದುಳಂ ಹೋಗೆನೆ
ತವಕದಿ ವಂಡಿಸಿ ಬೀಳ್ಕೊಂಡೈತಹ ಲಲನಾ
ನಿವಹವನಾಲಿಸಿ ಪಾಲಿಸಿ ಪರಿದಡರ್ದಳು ಮಣೆಮಯ ಪುಷ್ಪಕ ಮಧ್ಯವನು   ೬೦

ಬಳಿಯೊಳು ಕಾಲ್ಗಾಪಿಂಗಭವಂ ಕಳುಪಿದ ಗಣ
ಕುಳ ಪದರಜ ತಿಮಿರವು ಪುಷ್ಪಕ ಗಗನವು ಮಂ
ಡಳಿಸಿದ ಸತಿಯರ ನಯನಂಗಳು ತಾರೆಗಳಂಬಿಕೆಯ ಮೊಗಂ ಶಿಶಿಬಿಂಬಂ
ತೆಳುನಗೆವೆಳಗಿನ ಬೆಳದಿಂಗಳು ಮಿಗೆ ತಾ ಮಂ
ಗಳವಾಗಲು ಭರದಿಂದೆಯಿತಂದಾಹಾ ನಿ
ರ್ಮಳನಿಧಿ ನಿಂದಿರ್ದಳು ಹಂಸಂ ಹಿಂಗಿದ ದಕ್ಷನ ಮುಖ ಕಮಲದ ಮುಂದೆ      ೬೧

ಪದಪಿಂದಂ ತನ್ನಂ ಕಾಣುತ ನೋಡದೆ ತಿರಿ
ಗಿದ ದಕ್ಷನ ಮುಖ ಶಿವಕಳೆ ಮಸುಳಿಸಿ ಶಶಿ ಹಿಂ
ಗಿದ ರಾತ್ರಿಯವೋಲಿನನುಳಿದಂಬರದಂತಿರಲೀ ಮುಳಿಸಿಂತೀ ಖಳನಾ
ಹದುಳಿರಲೀಯದು ದಿಟವಪಜಸವೆನ್ನಂತಾ
ಗದೆ ಮೇಣುತ್ತಮಿಕೆಯನಾಚರಿಸುವೆನೆಂದಳು
ಕದೆ ಕರೆವುತ ಸಮ್ಮುಖದೊಳು ನಿಲುತಿರ್ದಳು ನೋಡದೆ ಖಳ ತಿರುಗುತ್ತಿರಲು            ೬೨

ಗಿರಿಶನ ತೆಕ್ಕೆಯ ತೊಡವೆಲ್ಲಾ ದೆಸೆದೆಸೆಗಾ
ದರದಿಂ ಬರಬರಲಾದೆಸೆಯಂ ನೋಡದೆ ನಿ
ಷ್ಠುರ ದಕ್ಷಂ ಸಾಯಲು ಬಲ್ಲರದೇವಂ ಮುಖಮಂ ತಿರುಪುತ್ತಿಪ್ಪಾಗ
ಸುರಪತಿ ಕೇಳ್ಸಿಖಿ ಕೇಳೆಮ ಕೇಳೈರುತಿ ಕೇಳ್
ಶರಧಿಪ ಕೇಳ್ ಹರಿ ಕೇಳ್ ಧನದನೆ ಕೇಳ್ ಶಿವ ಕೇಳ್
ದುರುಳನೊಡಲಿನಿನ್ನಿರೆನಿರನೆಂದಱಪಲುತಿರುಗುವವೊಲ್ತಲೆ ತಿರುಗಿದುದು    ೬೩

ಬಗೆದಾವಱುಪದ ಕೇಳ್ದುಂ ಕರೆಯದೆ ಬಂದುಂ
ಮೊಗನೋಡದಿರಲ್ ಮೊಗದೊಳು ನಿಂದುಂ ಸಲುವು
ಬ್ಬೆಗಮಂ ನೋಡಿರೆ ನೋಡಿವರೊಳೀ ಸಭೆಯೊಳಗೆ ಶಶಿಚೂಡಂ ಸಲುವನೆನೆ
ತೆಗೆಯೆನ್ನಂ ಲೆಕ್ಕಿಸದಿರ್ದುಂ ಕಡಿಗಿನ್ನುಂ
ಮಗಳೇ ನಿನ್ನಾತಂ ಸರ್ವೇಶನೆ ಜಗದೊಳ್
ನಗಿಸದೆ ಬಿಟ್ಟಡೆ ದಕ್ಷನೆ ನಾನೆಂದತಿ ಘೂರ್ಮಿಸಿದನು ಕಡುಪಾತಕನು            ೬೪

ಸಡಿಫಡ ನೀ ಕರೆದೇಂ ಕರೆಯದೆ ಮಾಣ್ದೇಂ ಕ
ನ್ನಡಿ ಕುಂದುವುದೇ ಕುರುಡಂ ಕಾಣದಿರಲ್ ಕಾ
ಳ್ಗೆಡೆಯದಿರೆನೊಡೆಯಂ ನಿನ್ನಳವೇ ನಿನ್ನೀ ಜನ್ನದ ಕುನಿಗಳಳವೇ
ಕಡಗಾಲಂ ತುಡುಕದೊಡೀ ಕೆಡು ನುಡಿಗಳು ಪೊಱ
ಮಡುವವೆ ಆಡಿದ ನೀನುಂ ಆಡಿಸುವೆಲ್ಲಾ
ಜಡೆಯ ಜಡರು ಸಹ ಹಿಡಿ ಹಿಡಿ ಶಾಪವನೆಂದಿತ್ತಳು ಸುಟ್ಟುದ ಸುಡುವಂತೆ  ೬೫

ಶಾಪವ ಕಡುಗೋಪವನೆತ್ತಿತ್ತಾ ಪಾಪಿಗೆ
ಕೋಪಾಟೋಪಂ ಪಾಪಾವನೊದವಿಸಿತಂತಾ
ಪಾಪದ ಪರಿಪಾಕಂ ಬಲಿದೆನಗಿನ್ನಂತೇ ನಿಂತೇನೆಂದುರವಣಿಸಿ
ಶ್ರೀಪತಿಪತಿಯನು ವಾಣೀಪತಿಯನು ಪೌಲೋ
ಮೀಪತಿ ಪತಿಯನು ಕೇಳಲ್ಬಾರದವೋಲಂ
ತಾ ಪಾತಕ ನಿಂದಿಸಿ ನುಡಿದನು ಶಿವ ಶಿವ ಘುಡು ಘುಡಿಸುತ ಮಂತಣದೊಳಗೆ            ೬೬

ಹಿಂದೆಲ್ಲವ ಸೈರಿಸಿದೆಂ ಶಿವಶಿವ ಗುರುವಂ
ನಿಂದಿಸಿ ಪಿತನೆಂದೇಂ ಮಾತೆಂದೇನವರಿವ
ರೆಂದೇಂ ಸುಟ್ಟುರಹುವುದುತ್ತಮವೆಂದನು ಗೆಯ್ವುತ್ತಂತಿಂತೈಸಱಲಿ
ನಿಂದೆಯ ನುಡಿಗಳು ಕಿವಿಯಿಂದೊಗುವವೆ ನಿಂದಕೆ
ನಿಂದಾದೊಡಲು ಮನಳಿದಿವನಂಶವನೊಪ್ಪಿಸಿ
ಕುಂದಂ ನೀಗುವೆನಿಂದೆಂದನುವಾದಳು ತರುಣೇಂದುಧರನ ಸತಿಯಂದು         ೬೭

ಕಡೆಗೆ ಪತವ್ರತೆಯರ ಮನೆದೈವಂ ಬುರ್ಬುಗಿ
ಲಿಡಿತಿಹ ಕುಂಡವ ನಿಟ್ಟಿಸಿ ಬಿಸಿ ಮಸುಳಿಸಿ ಶಿಖಿ
ನಡುಗಲು ನಗುತೆಡಬಲನಂ ಬಲಿದಂತಃ ಕುಂಡಲಿಯೊಳ್ ಪ್ರಾಣವ ತೊಡಚಿ
ನಡುನೆತ್ತಿಯೊಳೆತ್ತಿದಡುರಿದೆದ್ದಾಱಿಧ್ವದ
ಕುಡಿವಾದಣದೊಳದಂ ಜ್ಯೋತಿಸಹಸ್ರ ಪ್ರಭೆ
ವಿಡಿದೊಗೆದೆಲ್ಲರ ಕಣ್ಗೆ ತಮಂಧಂಗೆದಱಲು ನೆಗೆದಳು ಗಗನಾಂಗಣಕೆ          ೬೮

ತನತನಗೆಲ್ಲುಱೆ ಕಂಗೆಟ್ಟೆವೆನೆನುತಂ ಝ
ಲ್ಲನೆ ಚಲ್ಲಿ ಬೆದರ್ತೋಡುವ ಮಂದಿಗೆ ಖಳನೇ
ಕನುವಱಿಯದೆ ಹೆದಱುವಿರಾನಿರಲಳಿಯನ ಸಂಗದಿ ಗುರುಲಘು ವಱಿಯದಳು
ಎನಗುತ್ತರವಿತ್ತುದಱಿಂದಾಕಸ್ಮಿಕದುರಿ
ತನುಗಡಿಸಿತ್ತೈಸಂಜದಿರೆನ ನಿಂದರಂ ಮೇ
ದಿನಿಗೆ ಶಿವದ್ರೋಹದ ವಿಧಿ ಹೋಗಲ್ ಬಿಡುವುದೆಯೆಂದರು ಹಠಗಣರಂದು  ೬೯

ಒದವಿದ ಕಾರ್ಯದ ಹದನಱಿಯದೆ ಸುತ್ತರ್ಗೆದ
ಬದಿಸುತ್ತಿರಲಿತ್ತಲ್ ನಿಜ ತನುವಿಂ ನಡದಾ
ರ್ತದಿ ಪದಕೆಱಗಿದ ಸುದತಿಗೆ ಮದನಾಂತಕ ನಿಂತೇಕಾಯಿತ್ತುಸುರೆನಲು
ಮದದಿಂದವ ನಿಮ್ಮಂ ನಿಂದಿಸೆ ಸೈರಿಸಲಾ
ಱದೆ ದೇಹವನುಳಿದಿಂತೆಯಿತಂದೆಂ ಕೇಳೆ
ನ್ನದ ಮುನ್ನಂ ಕೋಪಾಟೋಪವಧರಿಸಿದನದನಾವಂ ಬಣ್ಣಿಸಬಹುದು       ೭೦