ರುದ್ರನ ಭಾಳಾಭೀಳಾನಳನಿಂ ವೀರಂ
ಭದ್ರನು ಜನಿಸಲು ಹರ ಬೆಸಸಲು ಸುರಸೇನೆ ಸ
ಮುದ್ರಕೆ ವಡಬಾನಳ ದಾಳಿಡುವವೊಲೈದಿದ ಭದ್ರಂಕಾಳಿಯವರನು

ಮನಸಿಜ ದಹನದ ಪುರವಿಘಟನದಂಧಾಸುರ
ಹನನದ ಯಮಮಥನದ ಗರಳಾಸುರ ವಿಧ್ವಂ
ಸನದಂದಿನ ಮುಳಿಸಿಂದಾದಂತುಕ್ಕುವ ಕುಂಭಿಕ್ಕುವ ಹೊತ್ತುವ ಹೊಗೆವ
ತನಿಗೋಪಾಲನ ಪಿಂಗದೆ ಗಂಡಂದವನೊಲಿ
ದನುಕರಿಸಿತ್ತಹಿತರು ಬಾಯ್ವಿಡೆ ಶಿವಶಿವ ಭೋಂ
ಕನೆ ಹಣೆಗಣ್ಣಿನ ಮುಗ್ಗಿಚ್ಚಿನ ಹಗ್ಗಿಯ ಮೊಗ್ಗರದೊಳು ಥಳಥಳಸಿದುದು  ೧

ಕಡೆಗಾಲದ ಕಿಚ್ಚಿನ ಮುಚ್ಚುಳದೆಗೆದೆಂದದೆ
ಘುಡಘುಡಿಸುವ ನಡುಗಣ್ಣೆವೆಯೊಡೆದಾ ತೊಂಗಲು
ಗಿಡಗೆದಱುತಲುಕ್ಕಿದದಳ್ಳುರಿ ಗಗನವ ತೀವಿದ ಬಿಱು ಬಿಸಿಲಿಂ ಕಾದು
ಜಡೆಯೊಳ ಗಂಗೆಯ ಮಡುವುಕ್ಕುತ್ತೆಸರಿಡೆ ಹೊಗ
ಲೆಡೆಗಾಣದೆ ಶಶಿ ಬೆವರಿಳಿದುಱೆ ಚುಯ್ಯನೆ ದನಿ
ಗೊಡುವ ಸುಧಾ ಬಿಂದುವಿನೊತ್ತುವಿಡಿದನೆಲೆಲೆಲೆ ವೀರ ಕುಲಾಧೀಶ್ವರನು   ೨

ಘಳುಘಳು ಘುಡುಘುಡು ಚುಯಿಚುಯಿ ದಿಟಿ ದಿಟಿ ದಿಮಿ ದಿಮಿ
ದಿಳಿದಿಳಿ ಧಗಧಗ ಭುಗಿಭುಗಿಲೆಂಬಬ್ಬರವಿ
ಟ್ಟಳಿಸಲು ಕಂಗೆಟ್ಟೆಲೆಲೆಲೆ ಜಯಜಯ ಕುಬುಬುಬುಬೆಂದು ಗಣೇಶ್ವರುಲಿಯೆ
ಜಲಧಿಗಳುಕ್ಕಲು ಕುಲಗಿರಿಗಳು ಕುಂಭಿಡೆ ಧರೆ
ಯಿಳಿಯಲು ನಭ ನಡುಗಲು ತಾರೆಗಳುದುರಲು ಶಶಿ
ಜಳಜಸಖರ್ತಿರುಗಲು ಜನ್ನದ ಜನ ಜರಿಯಲು ಲಂಘಿಸಿದನು ನಿಚ್ಚಟನು      ೩

ಕಡುಪಿಂ ಹಾಱಿದ ಭಾರಕ್ಕಿಳೆ ಬಿರಿದಹಿಪನ
ಹೆಡೆಮುಱಿದೊಡ್ಡಿದ ಕಮಠನ ಬೆನ್ನಿನ ಕರ್ಪರ
ವೊಡದಡಿಯಣ ಲೋಕಂಗಳು ಕದಡಿಳಿದಿಳಿಯಲು ಮೇಗಣ ಲೋಕಾವಳಿಯ
ನಡುವಣ ಬಾದಣಗೊಱೆಯಲು ಮಕುಟಂ ರುದ್ರನ
ಮುಡಿಗೂರ್ವರೆ ಹಿಡಿದೇಳ್ನೆಲೆಯ ಮಹಾಸತ್ತಿಗೆ
ಗಡಿಸಿದ ಕಾವೋಯೆಂಬಂತಿರೆ ಬೆಳದಧಟಿಂಗತಿ ಬೆಱಗಾದಂ ಶಿವನು   ೪

ಒಡಲೊಳಗುಳ್ಳ ಮಹಾ ಕೊಪಂಗಂಡಂದಂ
ಬಡೆದುರಿಗಣ್ಣಿಂ ಪೊಱಮಡಲುಳಿದತಿ ಶಾಂತಿಯ
ಮಡುವೆನಿಸುತ್ತಿರೆ ತಾನೇಕಱಿಯದೆ ಕೆರಳಿದನೇಕಿವ ಜನಿಸಿದನೆನುತ
ಮೃಡ ಬೆಱಗಾಗುತೆ ಹೋ ಹೋ ಸೈರಿಸು ಸೈರಿಸು
ಬಿಡು ಬಿಡು ಕೋಗವನುಡುಗುಡುಗತ್ಯುದಯವನೀ
ಬಡಲೋಕಂಗಳನೆಡೆಗೆಡಿಸದಿರೆನೆ ಕಂಗಳ ವಡುವಂತ ವತರಿಸಿದನು   ೫

ಸೊಡರ್ಗುಡಿವೆಳಗಿನ ಮೈವಣ್ಣಂ ನಿಡುಜಡೆ ಮುಡಿ
ನಡುನೆತ್ತಿಯ ಲಿಂಗಂ ಮಕುಟಂ ಫಣಿಕುಂಡಲ
ನಡುಗಣ್ಣುರಿಗೆದಱುವ ಪಂಚಮುಖಂ ನಿಡುದಾಡೆಗಳೆಸೆವ ಸಹಸ್ರಭುಜಂ
ಉಡಿಗೆಯ ಚಲ್ಲಣ ಕಿಗ್ಗಟ್ಟಸಿಯಾಯುಧ ಬೊ
ಬ್ಬಿಡುವ ಶಿರೋಮಲಾಭರಣಂಗಳ ಉರಗನ
ತೊಡುವಹಿತರ ಹಾಹೆಗಳಿಳಲುವ ವೀರೇಶನ ನಿಲವಾರಂ ನಡುಗಿಸದು          ೬

ಜವನೋಲಗ ಶಾಲೆಯ ಕೋಟೆಯ ತೆನೆಗಳುಮೆನಿ
ಸುವ ತಲೆನವಿರ ವ್ರಜದಿಂ ತನ್ನಂದದ ಭಟ
ನಿವಹಂ ನಂಜಿನ ಹುತ್ತಿಂದಂ ಕೆರಳುವ ದಂಷ್ಟ್ರೋರರ ಸಂಕುಳದಂತೆ
ಶಿವ ಶಿವ ಪೊಱಮಟ್ಟುದಸಂಖ್ಯಾತರು ಬಳಿವೆ
ತ್ತವರಿಂ ಪೊಱಮಟ್ಟುದು ಭೂತಗಣಂ ನೆಱೆ ಭೂ
ಭುವನವದೆಡೆಗಿಡೆ ಧಾಳಿಕ್ಕಿತ್ತಾಲಿಸಿತಗಜೇಶನ ಕಿವಿ ಝುಮ್ಮಿಡಲು  ೭

ಸಿಡಿಲೆಲುವಿನ ಬಿಂಬಂ ದಾವಾಗ್ನಿಯ ಕಿಡಿಗಳ
ಜಡಿಮೊಳೆ ವಡಬಾಗ್ನಿಯ ಜರ್ಮದೊಡೆಳೆ ನೇಸಱ
ಕಡುಹಿನ ತೊಡಹಂ ಕಾಲನ ಕಂಗಳ ಗುಬ್ಬೆಗಳ ಸುರರ ತಲೆಗಳ ಗೆಜ್ಜೆ
ಮಡಿಸಿದ ಶೇಷನ ಬಂದಿಗೆ ಮಾರಿಯ ಮಂಡೆಯ
ನಡು ಘಂಟೆಯ ಮೃತ್ಯುವಿನೊಳುನರ ಉರಿದೊಂಗ
ಲ್ಪಿಡಿದೊಣಗರುಳಿನ ಹಿಣಿಲಿನ ಚಮರದ ಹಲಗೆಯ ಕಡುಗಲಿ ಕಣ್ಗೊಪ್ಪಿದನು          ೮

ಬಳವತ್ಕಾಲನ ಕೋಪದ ಗುಂಡಂ ಪ್ರಳಯಾ
ನಳನಿಂ ಕಾಯಿಸಿ ರಾಹುವ ಕೇತುವ ಬಲದಿ
ಕ್ಕುಳದಿಂ ಪಿಡಿದಂಧಾಸುರನೆರ್ದೆಗೆಲ್ಲಲಿ ವಜ್ರದ ಚೆಮ್ಮಟಿಗೆಯ ನಿಗುಚಿ
ಕುಳಿಕನ ವಿಷದಿಂ ನೀರೂಡಿಸಿ ನೇಸಱ ಮಂ
ಡಳದಿಂ ಮಸೆದೆಳ ಮಿಂಚಿನ ಹೊಳಹಿಂ ತಳಪಿ
ಟ್ಟಳವಡೆ ರುದ್ರಂ ಮಾಡಿದ ಖಂಡೆಯದಧಟಿನ ಹಿಡಿತವನೇಂ ವಣ್ಣಿಪೆನು     ೯

ಘಲ ಘಲ ಘಲ ಥಟ ಥಟ ಘಂಘಂ ಘಲ ಘಲ ಎಂ
ಬುಲಿಹಿನ ಭುಜದಾಸ್ಫಾಲನೆಯಿಂ ದಿಗು ಭಿತ್ತಿಯ
ಹೊಲಿಗೆಯ ಹುರಿ ಹಱಿಯಲು ಕೈಯೆತ್ತಿದೊಡಾಗಸವೊಡೆದುದು ಜವನರಮನೆಯ
ತೊಲೆ ಮುಱಿಯಲು ನೆಲನಂ ಘಟ್ಟಿಸೆ ಕಮಠನ ಬೆ
ನ್ನೆಲು ನುಗ್ಗಲು ತಿರೀಪಿನ ಗಾಳಿಗೆ ದಿಗುನಾಥರು
ನೆಲೆದಪ್ಪಲು ಠಕ್ಕಿಸಿ ಭಾಷೆಯನವಧರಿಸವಧರಿಸೆಂದನು ಪಟುಭಟನು          ೧೦

ಧುರದೊಳು ಹೊಡೆದೊಗೆದೊಗೆದಿಱಿದಿಱಿದೆಳದೊಟ್ಟಿಸಿ
ಸುರಪತಿ ಸಿಖಿ ಯಮ ಖಲ ವರುಣಾನಿಲ ವಿತ್ತೇ
ಶರ ತಲೆಗೊಂಡಿಭ ಕುಱುಕೋಣಂ ನರನಗಳೆರಳೆ ತುರಂಗಂ ವಜ್ರವನು
ವರಶಕ್ತಿಯ ದಂಡದ ಕತ್ತಿಯ ಪಾಶಧ್ವಜ
ವರ ಖಡ್ಗವನೀಗಳೆ ತಪ್ಪೆಂ ನುಡಿನುಡಿದೇ
ವರ ಒಲ್ಲಹ ಬೆಸಸೆನುತಿರ್ದುನು ಭಾಷೆಯರಿಪುಮದಗಜ ಕಂಠೀರವನು        ೧೧

ಪೊಡವಿಯ ಬಗಿವೆನೊ ಫಣಿಪನನುಗಿವೆನೊ ಜಲಧಿಯ
ಕುಡಿವೆನೊ ವಡಬನ ಹಿಡಿವೆನೊ ಹರಿಕಮಲಜರನಂ
ಜಡಿವೆನೊ ಕುಲಗಿರಿಗಳ ಹಂಡಿಗೈವೆನೊ ನಾನಾ ಭುವನ ವ್ರಜದಡಕಿಲನು
ಕೆಡಹುವೆನೋ ಸುರಪುರಮಂ ಸುಡುವೆನೊ ಗಗನವ
ನೊಡೆವೆನೊ ಶಶಿರವಿಗಳ ಮಿಡಿವೆನೊ ತಾರಗೆಗಳ
ನಿಡುಕುವೆನೋ ಹೇಳೆನ್ನಾಣೆ ಬೆಸಸು ಬೆಸಸೆಂದು ನಮಿಸಿದನು ಪಟುಭಟನು   ೧೨

ಬಿಡು ಬಿಡು ಸೂರಳನಿಡಬೇಡೊಪ್ಪಿಡಿ ತೃಣಮಂ
ಸುಡುವಡೆ ತಱಿಯಂ ಹೊತ್ತಿಸುವರೆ ಜನ್ನದ ಜಡ
ರೆಡೆಗಟ್ಟುವೆವೆನೆ ಬೆಸಸದ ಮುನ್ನೀ ಪರಿಯಾಂ ಮುಱಿದಱಿಯದೆ ಬೆಸಸಿದಡೆ
ಗಡಣದ ದೇವರ ಹಣೆಯಕ್ಕರಮಂ ತೊಡೆಯದೆ
ಬಿಡುವಾ ಸೈರಿಸುವೊಡೆ ಕಳುಹುವೆನೀಸೊಂದ
ಕ್ಕೆಡೆಯಿಲ್ಲೆನೆ ದೇವರು ಬೆಸಸಿತ್ತೇ ಬೆಸನೆಂದನು ವೈರಿ ಭಯಂಕರನು            ೧೩

ಅಲ್ಲದ ಕೆಲಸವನೆನಗಿತ್ತಂ ಶಿವನೆಂದೆನ
ಲಿಲ್ಲಂ ನಿನಗಾನುವಿರಿಲ್ಲಲ್ಲದೆ ಜಲಧಿಗ
ಳೆಲ್ಲವನಾಪೋಶನವೆತ್ತುವ ಸತ್ತ್ವದ ವಿಷ್ಣು ಪ್ರಮುಖ ಸುರಾಧಿಪರು
ಅಲ್ಲಿಯ ಕಾಹಿಂಗೈದರೆ ನೀನಂತವರಂ
ಕೊಲ್ಲದೆ ಪಿಡತಂದೊಪ್ಪಿಪೆಯಾದಡೆ ವೀರರ
ಬಲ್ಲಹ ಹೋಗೆಂದಂ ಸತಿ ಪಿತೃ ಹದ್ಫಲ್ಲಂ ರತಿ ವಲ್ಲಭದಲ್ಲಣನಂ        ೧೪

ಒಡೆಯರು ಬೆಸಸಿದ ಕರುಣಕ್ಕೆ ಹಸಾದಂ ನಿ
ಮ್ಮಡಿಗಳು ಬೇಡನೆ ಕೊಲಬಹುದೇ ಯಾ ಜನ್ನದ
ಸುಡುಗುಱಿವಂಟರು ಹೋಮದ ಹುಗ್ಗಿಯ ತಿಂದೊಣ ದೈವತ್ವದಗರ ಹೊಡೆದು
ಕಡುಪಿಂದಾ ಮಂದಿಯ ಮುಂದತಿ ಲಳಿಯೆದ್ದತಿ
ದಿಡ ಗುಂಗುಟ್ಟುತ್ತಿರಲೆನ್ನವರುರವಣಿಸದೆ
ಬಿಡರಿದಕೆಂತಂಗಜ ಮರ್ದನ ಹೇಳೆಂದನು ವೀರ ಕುಲಾಧೀಶ್ವರನು   ೧೫

ಮಲೆತರೆ ಕೊಲು ಶರಣೆನೆ ಬಿಡು ದಕ್ಷಗೆ ತಕ್ಕುದ
ನಲಸದೆ ಮಾಡೆನೆ ನಾನದನಲ್ಲೆ ನೆನೆ ಕೇಳೈ
ಎಲೆ ದೇವ ಶಿಖಾಮಣಿಯೆನಲೆನ್ನಯ ಮಾಟವನಳುಕದೆ ನೋಡಲುತಕ್ಕಾ
ಬಲವಂತರ ಬೆಸನೆನೆ ಬೆಸಸುವ ಭರದಿಂ ಕೆಲ
ಬಲನಂ ಭಾವಿಸಿ ಪೋಪವರಂ ಬಗೆವನಿತ
ಕ್ಕೆಲೆಲೆಲೆ ಬೊಬ್ಬಿಡುತಬ್ಬರಿಸುತ್ತೊಬ್ಬಾಕಸ್ಮಿಕ ಸತಿ ತಲೆದೋಱಿದಳು       ೧೬

ಗಗನವನೆತ್ತುವ ಮೌಳಿಯ ವಹ್ನಿತ್ರಯಮಂ
ನಗುವುರಿಗಂಗಳ ನಂಜಿನ ಮಿಸುಪಂ ಬೀಱುವ
ಮೊಗವೊಗರಿನ ಕಾಲನ ಬೊಮ್ಮಾಸ್ತ್ರದ ಮುಱಿಗಳ ಮಱಿಯಿಪ ಕಿಱುದಾಡೆಗಳ
ಮಿಗೆ ನೀಲಾದ್ರಿಯನೈವಡಿಸಿದ ಉದಯದ ಪ
ರ್ಬುಗೆವಿಡಿದೊಡಲಿನ ಕಾರ್ಮೇಘದೊಳಾಡುವ ಮಿಂ
ಚುಗಳಂತುಗುಳುತ್ತಿಹ ಕಿಡಿಗಳ ಭದ್ರಂ ಕಾಳಿಯಂ ಕಣ್ಗೊಪ್ಪಿದಳಂದು          ೧೭

ಸದಮದದಿಂ ತನ್ನಯ ತುದಿಗಣ್ಣಿಂ ಪುಟ್ಟಿದ
ಚದುರಂಗಮೆಯಂದದಿನುದಿಸಿದ ಸುದತಿಗೆ ಸ
ನ್ಮುದದಿಂ ಮದುವೆಯನೊದವಿನೆ ವೀರದ ದಂಪತಿಗಳಿಗೆ ಗಣಂಗಳು ವೆರಸಿ
ಸದಮಳ ಸೇಸೆಯನುದಿತೋದಿತವರಕೆಯೊಳಿ
ಕ್ಕಿದ ಮದನಾರಿಯ ಪದಪದ್ಮಕ್ಕೆಱಗಿದನಾ
ರಿದ ಜಲಗೊಂಡಂ ಬೀಳ್ಕೊಂಡಂ ನಡೆಗೊಂಡಂ ಚಂಡಾಂಶು ಶತಪ್ರಭುನು      ೧೮

ನಾರದ ರಿಂಗಣಗುಣಿದಂ ನಲಿಯೆ ಮರುಳ್ಗಳು
ಮಾರಿಕರಂ ತನ್ನಯ ಬಸುಱ ಒಱಂ ಪೋಯ್ತೆಂ
ದಾರಿದರೆಲ್ಲಾ ಶಾಕಿನಿ ಡಾಕಿನಿಯರು ಚೌತವ ನಿರ್ದಳು ಮೃತ್ಯುಸತಿ
ದಾರಿಯ ಸವಱಿದನಂತಕನಿತ್ತಲು ಯಾಗಾ
ಗಾರದೊಳುತ್ಪಾತ ಶತಂ ನೆಗೆದವು ಶಿವ ಶಿವ
ವೀರ ಶಿಖಾಮಣಿ ದೇವ ಶಿಖಾಮಣಿಯಂ ಬೀಳ್ಕೊಂಡಡಿಗೆಱಗಿದನೆನಲು        ೧೯

ಹರುಷದೆ ಹರಸಿ ಹರಂ ಹೋಗೆನ್ನದ ಮುನ್ನಂ
ತಿರುಗಿ ಕರಂ ಕೈವೀಸಿ ಭುಜಂ ಬೊಯ್ದೊಡೆ ಸಾ
ಗರವುಕ್ಕಿದ ವಾರಿದ ಡಂಬರ ಜರಿಯಿತ್ತಳ್ಳಿಱಿದಡೆ ಧರೆ ಬಸವಳಿಯೆ
ಉರಗನ ಹೆಡೆಗಳು ಮಣಿದವು ಅಷ್ಟ ದಿಶಾಕರಿ
ತೆರಳಿದ ವೆಡೆವಟ್ಟೆಯ ಬೆಟ್ಟಂ ಹಿಟ್ಟಾದವು
ಚರಣದ ರಜದೊಳು ವಾರುಧಿ ಬತ್ತಿತು ವೀರನ ಸೇನೆಯನೇವಣ್ಣಿಪೆನು        ೨೦

ಕುಲ ಗಿರಿಗಳ ಕೈ ಗುಂಡುಗಳಾ ಬ್ರಹ್ಮಾಂಡಂ
ಗಳ ಹೊಡೆಸೆಂಡುಗಳ ದಿಶಾಕರಿಗಳ ದಂತಂ
ಗಳ ಪಿಲ್ಲಣಿಗೆಗಳು ಮಹಾಕಾಲನ ಕೋಣನ ಕೋಡಿನ ಹೊಸ ಬಡಿಗೆಗಳ
ಕುಳಿಕನ ಕಡ್ಡಣಿಗೆಯ ಶಶಿರವಿಗಳ ತಾಳಂ
ಗಳ ಧರೆಗಗನಂಗಳ ಪಲ್ಲಟಿಸುವ ಲೀಲೆಯ
ಬಳಯುತ ಗಣಕುಲ ನಡೆದುದು ವೀರೇಶನ ಕೆಲಬಲದೊಳು ಜಗದಗಲದೊಳು           ೨೧

ಜಗದಗಲದೊಳೆಯ್ದುವ ವೀರರ ಪದಹತಿಯಿಂ
ನೆಗೆದ ರಜವ್ರಜ ಪೂಜಿಸಿ ಗಗನವ ಹೊಗೆಯಲು
ಹಗಲಿನ ಹಣೆಯಕ್ಕರದೊಡೆದುದೊ ವೀರೇಶನ ನವಕೋಪಾನಳ ರಾಹು
ಖಗನಂ ಸರ್ವಗ್ರಾಸಂಗೊಂಡುದೊ ಎನಿಸುವ
ಬಿಗಿ ಗತ್ತಲೆಯನು ಸಬಳಂಗಳು ಬೆಳಗಲು ಸ
ತ್ತಿಗೆಗಳು ಕವಿಯಲು ಕಿತ್ತಸಿಗಳ ತಳಪಂ ಬೆಳಗಲು ಪಡೆ ಕಣ್ಗೊಪ್ಪಿದುದು     ೨೨

ತೊಲತೊಲಗೀ ಬಂದನೆ ಹರನುರಿಗಣ್ಣಮಗಂ
ತೊಲತೊಲಗೀ ಬಂದನೆ ದೂಷಕ ಗಜ ಸಿಂಹಂ
ತೊಲತೊಲಗೆಂದುಲಿಯುತ್ತಿಹ ಕಹಳಾನಾದಂ ದಸೆದಸೆ ಗೆಯ್ದಲು ಮುಂದೆ
ನಲಿನಲಿದುರ್ಬುದ ಕೋಟಿಗಳಂ ದಾಳಿಕ್ಕುವ
ಬಲವಂತರ ಸೇನಾ ಸಂಭ್ರಮಮಂ ಕಂಡ
ಗ್ಗಲಿಸುತ್ತಾರುತ್ತನುಮಾನಿಸಿದನು ಮತ್ತೊಂದಂ ಮನದೊಳು ನಾರದನು      ೨೩

ಮುನಿದೀ ಸೇನಾಸುಭಟರು ದಾಳಿಟ್ಟುಱೆ ಮಱ
ಹಿನೊಳಾ ಯಾಗದ ಕಾಹಿನ ಸುರರೆಲ್ಲರ ಕೊಂ
ದನಿತಱೊಳೆನ್ನಯ ಕಣ್ಣ ಬಱಂ ತೀರದು ಉಭಯ ಬಲಂ ಮುಂದಲೆವಿಡಿದು
ತನತನಗಿಱಿದಾಡುತ್ತಿರೆ ನೋಡುತ್ತಿಹನಲು
ವೆನೆಗಿಲ್ಲೆಂದನುಮಾನಿಸಿ ಹರಿತಂದೆಲೆ ಮ
ಣ್ಣಿನ ಹೋಮಂ ಕಾಳಗ ಕೇಳೆನಲೆಲ್ಲಿಯದೆಂದಂ ದಕ್ಷಪಿತಾಮಹನು            ೨೪

ವಸುಧಾತಳ ವೆಯ್ದದು ಸೇನಾ ಬಹಳತೆಗೆ
ಣ್ದೆಸೆಯಯ್ದದು ವೀರರ ಮಾರಿಯ ಭಾರಕ್ಕಾ
ಗಸವೆಯ್ದದು ತಳೆಗಳ ಬಳಗಕ್ಕಂಬುಧಿ ಜಲವೆಯ್ದದು ಪಡೆಯೊಡ್ಡಿಸಲು
ಬಿಸಗೊರಲನ ಬಿಸುಗಣ್ಣ ಮಗಂ ಬರುತೈದನೆ
ಹುಸಿದಡೆ ನಿನ್ನಯ ಪ್ರಾಣಕೆ ತಪ್ಪಿದನೆನೆ ಕೋ
ಪಿಸಿ ನಿಶಿ ಮುನಿದೇವುದು ನೇಸಱೊಳೆಂದಾಸ್ಫೋಟಿಸಿ ನೋಡಿದನಮರರನು  ೨೫

ನಡೆ ನಡೆ ಸುರಪತಿ ನಡೆ ನಡೆ ಶಿಖಿ ನಡೆನಡೆ ಯಮ
ನಡೆ ನಡೆ ಖಳ ನಡೆನಡೆ ಜಲಧಿಪ ನಡೆನಡೆ ಹರಿ
ನಡೆ ನಡೆ ಧನಪತಿ ನಡೆನಡೆ ದಿನಮಣಿ ನಡೆನಡೆ ಶಶಿಯಮರರು ಮೊದಲೆಲ್ಲಾ
ಸಡಿಫಡ ನಾನಱಿಯದ ಮೃಡಗಿಡನೇಯಾತನ
ಪಡೆಗಿಡೆ ಬರಬಹುದೇ ಬಂದರೆ ಹಣೆಯಕ್ಕರ
ತೊಡೆವೆನೆನುತ್ತಂ ತೊಡೆವೊಯ್ದುಡುಗದೆ ಪಡೆಯಂ ಹೊಡೆಯೆಂದನು ಪಾತಕನು        ೨೬

ಅಗ್ಗಿಸಿದೊಡೆ ದಿಟವೆಂದೆಗ್ಗಱಿಯದು ಸಗ್ಗದ
ಮೊಗ್ಗರು ನುಗ್ಗುಗರಂ ಬಗ್ಗಿಸಿ ಕರ ಟೊಕ್ಕಿಂ
ಮೊಗ್ಗರವಾದೊಡ್ಡಿನ ಹಗ್ಗಿಯ ಹುಗ್ಗಿಯ ಸುಗ್ಗಿಯ ಹಂಗಂ ಹದುಳಿಸಲು
ಮುಗ್ಗುವೆವೆಂದಗ್ಗದ ಲಗ್ಗೆಯ ಜನ ಭರದಿಂ
ಮುಗ್ಗದೆ ಮುಗ್ಗುಡಿವರಿದುರವಣಿಯಿಂ ತನತನ
ಗಗ್ಗದ ಒಯ್ಯಾರದಿ ಮೋಹರಿಸುವ ಭರದಿಂ ನೆರೆದುದು ಧರೆಯಗಲದಲಿ      ೨೭

ಕಾಲನ ಕೈಚಳಕವನೇಳಿಸಿ ತಿರುಗುವ ಮನ
ದಾಳಪಂ ಪಿಂತಿರೆ ಮುಂತೆಯ್ದುವ ಲುಳಿಯಿಂ
ಚೂಣಿಕೆ ಬೆವರಲ್ಕಮರರನಲುಗಿಸಿ ತೋಱುವ ಕಂಗೆ ಸಹಸ್ರಮುಮಾಗಿ
ಮೇಲೇಱುವ ಬಗೆಮಿಗೆ ತಿಗುರಿನ ಹೊಂಬಳೆಗಳ
ಭಾಳದ ಚಂದ್ರದ ಮೊಗರಂಬದ ಕೈದಾಳಿನ
ಕಾಲ್ಗಾಹಿನ ಱಂಚೆಯ ಹಮ್ಮಿದ ಕರಿಘಟೆ ನೆರೆದುದು ಅಮರರ ಬಲದೊಳಗೆ  ೨೮

ಕಡುಗೋಪದಿ ಬಿಟ್ಟಂಬಿಂಗೆಯ್ದುವ ದಿಟ್ಟಿಗೆ
ನಡೆವ ಮನಕ್ಕಿಮ್ಮಡಿ ಮೂವಡಿ ನಾಲ್ವಡಿ ಅಯಿ
ವಡಿ ಬಲದೊಳು ಭರದೊಳು ಬೀದಿಯ ಸರಿಸದೊಳತ್ಯನುಪಮ ಚಳಚಳಿಕೆಯೊಳು
ತೊಡಮಡಕಿಸಿ ಕಬ್ಬಿಸರಂ ಸನ್ನೆಗಳಾಟದ
ತೊಡಕಂ ಹೊದ್ದದೆಯೇಱುವ ಮನವಾಯು ವೇಗ
ಸಡಕದ ತುರಗಂಗಳು ನೆರೆದವು ದೆಸೆ ಬೆಸಲಾಯ್ತೆನಲಮರರ ಬಲದೊಳಗೆ      ೨೯

ತೀವಿದ ಶಾಸ್ತ್ರಾಸ್ತ್ರದ ದೊಣೆಗಳ ಹೞವಿಗೆಗಳ
ಧೂವಾಳಿಪ ತುರಗದ ಪಕ್ಕರಿಕೆಯ ಸೂತರು
ಜೀವದ ಜತನದ ವಜ್ರಾಂಗಿಯ ಸಲೆ ಬತ್ತೀಸಾಯುಧಗಳು ತುಂಬಿರಲು
ಭಾವಜಹರ ಸಮರದೊಳಿದಿರಾದರೆ ಜಯಿಸುವ
ದೇವ ಬಲಕೆ ತಲೆ ನಾಯಕರೆನಿಸುವ ಧನುವಿ
ದ್ಯಾ ವಾರುಧಿಯೆನಿಪವಱೇರಿದ ರಥ ಚಕ್ರದ ಚೀತ್ಕೃತಿಯಿಂದೆಯ್ದಿದರು      ೩೦

ಕಡಿತಲೆ ಕರಗಸ ಗತ್ತಿಗೆ ಕೊಂತಂ ಕಣೆ ಕ
ಕ್ಕಡ ಸೆಲ್ಲೆಹ ಬಲ್ಲೆಹ ಬಿಲ್ಲಲಗಂಬುಂದಸಿ
ದಡಿ ಬಡಿ ಬಿಟ್ಟೇಱಿಟ್ಟಿ ಸಬಳ ಚಕ್ರಂ ಪರಶು ಸುಂಡ್ಯಲಗು ಪೆರ್ಬಾಳು
ಖಡುಗಂ ಸೊನಗೆ ವಜ್ರಾಸನ ಹತ್ತಳ ಬಿಱಿ
ಬಡಿಗೆ ಕಠಾರಂ ಕೈಖೇಟಕ ಪಳಕಂಗಳ
ಪಿಡಿದಮರರ ಪಡೆ ನೆರೆದುದು ತಮತಮಗೇವೊಗಳ್ವೆಂ ಭೂಮಿಯೆ ಕಡೆಗಿಡಲು           ೩೧

ಕಡುಗುವ ಜವ ಚೂಣಿಯ ಮೊನೆಯೊಳು ಭಗ ಪೂಷರು
ನಡೆದಿದ್ದೆಸೆಗಳ ಬಾಹೆಯೊಳಾ ದಕ್ಷನ ಬಲ
ದೊಡೆಯರು ಕರ್ಣಿಕೆಯೊಳು ಸುರಪತಿ ಮುಖ್ಯಾಮರುಗಳು ನೆಲೆಯೊಳು ಬಳಿಕುಳಿದ
ಪಡೆಸಹಿತಬುಜೋದರ ಹೊಂತಲೆಯೊಳು ಮುಂದೊ
ಗೊಡೆಯದೆ ನಡೆದಿದಿರಾಗುತೆ ದಲದಿಂ ಬಲವಂ
ಬಿಡದೆ ಕರಂ ತಂತಮ್ಮಾಳಂ ಜೋಡಿಸಿ ಮೇಳೈಸಿದರೇವಣ್ಣಿಪೆನು    ೩೨

ಮುಂದೊಡ್ಡಿದ ಹರಿಗೆಯನೊತ್ತುವಿಡಿದ ಸಬಳದ
ದೊಂದುಳಿಯೊತ್ತಿನೊಳೊತ್ತರಿಸಿದ ಬಿಲುಗಾಱರ
ಹಿಂದಣ ಸರ್ವಪದಾತಿಯ ಬಳಸಿದ ತುರಗದ ಹೆಡೆಮೆಟ್ಟಿನ ಗಜಘಟೆಯ
ಸಂದಣಿಸಿದ ರಥತತಿ ಮೆಱೆಯಲು ಮೇಳೈಸಿದ
ಮಂದಿಯ ಮುಂದೊಲೆದಾಡುವ ಗೌವಳ ಗಟ್ಟಿಗೆ
ಯಿಂದೊಪ್ಪಿತ್ತಮರರ ಪಡೆ ಬಿಱುಗಾಳಿಯ ಮುಂದಣ ಮೇಘವಳಿಯಂತೆ     ೩೩

ಇಳೆಯೊಳಗೆಳನೇಸಱು ಮೊಡುಹತಡಕೊಂದೇ
ಕಳೆಯನುತೊದವಿದ ಕತ್ತಲೆಯೊತ್ತಿಯ ತತ್ತಿಯ
ಬಳದಂತಾದಕ್ಷನ ಬಲದೊಡೆಯರ ಕಂಡುಬಿಬೆನುತ ಮಹಾಬಲವಾಲೆ
ಇಳೆಹಿಳಿಯಲು ಜವ ಜರಿಯಲು ಸುರಪತಿಯೆದೆ ಬಿರಿ
ಯಲು ಸುರರುಸುರಿಕ್ಕಲು ಫಣಿ ಕಮಠರುಗಳು ಉ
ಮ್ಮಳಿಸಲು ಹರಿಬೊಮ್ಮರು ಕಂಬನಿದುಂಬಿದರೆಲೆಲೆಲೆ ಯೆಮಗಪಜಯವೆನುತ          ೩೪

ಹರಿಬಲವಂ ಕಂಡಳುಕುವ ಮದಕರಿ ವೋಲಂ
ತುರವಣಿಸುವ ಹರಿಯಂ ಘರವಟಿ ಕಂಡಾರಲು
ಹರಿಚಕ್ರವ ತಿರುಹಿಸಿ ತಿರುಗುವ ಮದದಿಂ ಕಾಣದೆ ಬೊಮ್ಮನ ತಲೆಗಿಟ್ಟ
ಶಿರವಲ್ಲೆನುತಿರೆ ಸುರಪತಿ ಮೊದಲಾದಮರರು
ಗರಳದಭಯಂ ಸುರರಸುರರ ಸುಡುವಂದಿಲ್ಲೀ
ವುರಿ ಹರ ಹರಯೆಂದೆನುತಂ ಪಡೆ ಬೆಹಱೋಡುತ್ತಿರೆ ಹರಿಯುರವಣಿಸಿದನು೩೫

ಕಂಡಿವೆರಲಿಂ ದಿಱ್ಱನೆ ತಿರುಗಿಸಿ ಚಕ್ರವ ತಾಂ
ಪಿಡಿದುಬುಬುಬೆನುತಿಡೆ ಕಿಡಿಗೆದಱುತೆ ಬರುತಿಹ
ಚಕ್ರವ ಕಡೆಗೆಸೆಯಲು ಕಡಿವಿಡಿದಾಕಾಶಕೆ ನೆಗಳ್ದೋವದೆ ಬಿದ್ದಾಗಾ
ಪಡೆಸಹಿತಬುಜೋಧರನಳಿವಿಂದಾಕಾಶ ದೊ
ಳಿಳಾಡಿದ ಮಹೋತ್ಪಾತದ ತುಂಡೆದ್ದು ನೆಲಕ್ಕುಱೆ
ಕೆಡೆಯಿತ್ತೆಂಬಂತಿರೆ ಕೆಡೆಯುತ ಹೇವರಿಸುತ್ತಂತಿಂತೆಂದಾಡಿದನು      ೩೬

ಕಡಿದೆನು ಅಳಿದೆನ ಉಳಿಂದೆನಿಸಱೊಳೆನ್ನಂ ಬಿಡು
ಬಿಡುವುದು ತಾಂ ಕೆಡುವುದು ವರಚಕ್ರವ ತೆಗೆಯೆನೆ
ಸಡಿಫಡ ನೋಡಾದೊಡೆ ನೋಡೆಂದತಿ ಭರದಿಂ ತಿರುಪಿ ಕರಂ ಕುಕಿಲಿಱಿದು
ಇಡಲೆಂದೆತ್ತಿದ ಕೈಯ್ಯಂ ಪಾಶಾಸ್ತ್ರದೆ ಜಗ
ದೊಡೆಯಂ ಬಂದಿಸಿ ಭೂತಳಕೆಲ್ಲಂ ನೆಱೆಮೊಱೆ
ಯಿಡುವಂತಿರೆ ಭೂತಗಣಂಗಳ್ ಕಂಡುಱಿ ಹುಱಿಗಟ್ಟಲು ಹೇವರಿಸಿದನು    ೩೭

ಕಡುಭಾಷೆಯನಿತ್ತಮರರ ಪಡ ನೆಱೆ ಕಾಣಲು
ಕೆಡೆ ಕೆಡೆಹುತೆ ಘಟ್ಟಿಸಿ ತಾಗಲು ಬಿಲ್ಲುಂ ಮಿಗೆ
ಹುಡಿಹುಡಿಯಪ್ಪಂತಿಟ್ಟರೆ ಚಕ್ರಂ ಮುಱಿದುದು ಮತ್ತಿಡಲನು ಮಾಡಿದಡೆ
ಮಿಡುಕಾಡದೆ ನಿಂದುದು ತೋಳಿನ್ನೆನಗಿನ್ನೇ
ನಡುಸುವುದೋ ತರಹರಿಸುವುದರಿದೆನು ತಿಳಿದಳಿ
ದಡಗಿದನೆರಳೆಯ ರೂಪಂ ಧರಿಸುತ್ತೋಡಿದನಂದೊಯ್ಯನೆ ಹೊಳಹೊಳದು  ೩೮

ಹದ್ದುದ್ದಕ್ಕೆದ್ದಡೆ ಕಂಡುಂ ನೆಗೆದದ ನೇ
ಱಿದ್ದವನೇಂ ಬಿದ್ದನೊ ಜನ್ನದೊಳದ್ದನೊ ನೆಱೆ
ಕದ್ದೋಡಿದನೋಯೆಂದಪ್ರತಿಮಂ ಕೆಲಬಲದವರಂ ಬೆಸಗೊಳುತಿರಲು
ಗೆದ್ದನೆ ನೋಡೇಣಾಕೃತಿಯಿಂದುಱೆ ಮಱೆಗಾ
ಹೊದ್ದಿದ್ದನಾ ಹೊದ್ದಿದನೇ ಹೋದನೆ ನೋಡೆನೆ
ಬಿದ್ದಿಕ್ಕುವನೆಂದಲಗಂಬಂ ತೊಟ್ಟೆಚ್ಚನು ಹರಕೋಪ ಸಮದ್ಭವನು          ೩೯

ಕೆಡೆಯೆಚ್ಚಡೆ ಕೊರಳಂ ಕಡೆಗಳೆಯಲು ದರ್ಪಂ
ಗೆಡದೋಡುವ ಕೃಷ್ಣಮೃಗಕೆ ಮತ್ತಂ ಕಣೆಯಂ
ತೊಡುವೈಸಕ್ಕೇಱಂಬಗಿದೊಗೆದೆಸೆವಬುಜದ ಶಂಖದ ಚಕ್ರದ ಗದೆಯ
ಕಡುಗಲಿ ಕೈವಾರಿಸುತೈತರೆ ಕಂಡುಗ್ರವ
ನುಡಿಗಿ ನೆಲಕ್ಕೊಲಿದೊಱೆದ ಬಿಲ್ಲಿನ ಕೊಪ್ಪಂ
ಪಿಡಿದಂಬಂ ತಿರುಹುತ್ತಂ ನಸುನಗುತಾರೈದನು ವೈರಿ ಭಯಂಕರನು            ೪೦

ಜಯರಿಪು ಕೋಳಾಹಳ ಜಯರಿಪು ಹಾಳಾಹಳ
ಜಯರಿಪು ಕುಲಭೀಷಣ ಜಯರಿಪು ಕುಲಶೋಷಣ
ಜಯರಿಪು ಕರಿಮೃಗಪತಿ ಜಯರಿಪು ಫಣಿಖಗಪತಿ ಜಯರಿಪು ಗಿರಿನಾಕಪತಿ
ಜಯಭವ ಭಾಳಾ ಭೀಳಾಂಬಕ ಶಿಖಿ ಸಂಭವ
ಜಯಜಯ ಶರಣಾಗತ ರಕ್ಷಾಮಣಿ ಜಯಜಯ
ಜಯವೆಂದಷ್ಟೋತ್ತರ ಶತನಾಮದಿ ಕೈವಾರಿಸಿದನು ರಿಪು ಮರ್ದನನ          ೪೧

ಎಸೆನಂಜದಿರನುಸರಿಸದೆನುಸುರದಿರೆಲೆರ
ಕ್ಕಸದಲ್ಲಣಯೆನೆ ದೇವರ ಕರಹತಿಗಾಱದೆ
ಹಸಗೆಟ್ಟೆನು ಹಂದೆ ಮೃಗಾಕಾರವಧರಿಸಿದೆ ನೀವೀ ಕೃಷ್ಣಾಜಿನವ
ಶಶಿಮೌಳಿಗೆ ಕೊಡಿ ಲಿಂಗಾರ್ಚನೆಯೆಡೆಗಳಿಗಾ
ಗಿಸಿ ಯಜ್ಞಾದಿ ಸುಕರ್ಮಂಗಳಿಗಹುದೆನೆ ಪಾ
ಲಿಸಿಯೆನೆ ಹೈಯೆಂದಾ ಚರ್ಮಮನಾಯುಧಮಂ ಕೊಂಡುಳಿದರನಱಸಿದನು   ೪೨

ಚೂಣೆಯ ಹೊಣಿಗರೆಲ್ಲರ ಕಡೆಗಾಣಿಸಿ ಹುಲಿ
ಗೋಣನ ತೂಣನ ತೋಳುಗಳಂ ನೆಱೆ ತುಂಡಿಸಿ
ಮಾಣದೆ ಪೂಷನ ಹಲ್ಲಂ ಘಲ್ಲಿಸಿ ಭಗನಂ ಕಣ್ಣೊಳು ಮಣ್ಣಂ ನೆರಪಿ
ಪ್ರಾಣದ ಭಯದಿಂದಂ ರಣಗತ್ತಲೆಯೊಳು ಕಂ
ಗಾಣದೆ ರೂಹಡಗಿಸಿ ಕದ್ದೋಡುವ ನಾಕದ
ನಾಣಿಲಿ ಶಕ್ರಾದಿಗಳಭಿಮಾನವ ಕೊಂಡಂ ತಿರಿಗಿದನದ್ವರದೆಡೆಗೆ       ೪೩

ಕಡುಪಿಂದೊಬ್ಬಂ ಹರಿತಂದೆಲೆ ಪಾತಕ ಸುಡು
ಸುಡು ಯಾಗಂ ಬೆಂದತ್ತಗ್ಗದ ಯಜ್ಞನ ಶಿರ
ಕಡಿಯಿತು ಕಾಲನ ತೋಳ್ಕೆಡೆಯಿತು ಪೂಷನ ಹಲ್ಲುಡಿಯಿತು ಭಗಲೋಚನವು
ಒಡೆಯಿತು ಸುರರೆಲ್ಲಂ ಮಡಿಯಿತು ಮಿಕ್ಕರು ಹುಲು
ಮಿಡಿಯಿತು ಯಿನ್ನೇನಾ ಬಂದನೆಯನುವಾಗೆಂ
ದಡೆ ಝಂಕಿಸಿ ಹೋಮಂ ನಡೆಯಲಿ ಬಂದಡೆ ಕೈದೋಱುವೆಯೆಂದನು ಖಳನು            ೪೪

ಹಿಡಿದಾಹುತಿಯಂ ತುತ್ತಿಡುವರು ಕೆಂಡಂಗಳ
ಮಡಕೆಯೊಳಗೆ ಬೇಳ್ಪರ್ ಶ್ರುಕ್ ಸ್ರುವಗಳನಾಹುತಿ
ಗೊಡುವರು ಮುನ್ನುಳಿದಜಪಶುವಂ ಮಱೆದಲ್ಲಿಯ ಗಡ್ಡದುಪಾದ್ಯರ ಕೊರಳ
ಉಡಿದು ಕೆಡಹಿ ಗಂಟಲನೊಡೆ ಮುರಿಯುತ್ತತಿ ಭಯ
ಹೊಡದಂತೊಂದೊಂದಂ ಮಾಡುತ್ತಿರೆ ಮೀಱಿದ
ರಡಸಿದರಾರಿದರೆಯ್ದಿದರುಱೆ ಕವಿದರು ಬೊಬ್ಬಿಟ್ಟರು ಮಖಶಾಲೆಯನು   ೪೫

ಕಡುಗಲಿ ವೀರೇಶಂ ಘುಡುಘುಡಿಸುತ ಪೊಕ್ಕಾ
ವೆಡೆ ನಿಂದಕನೆನುತೈತರೆ ಕಂಡಿದಿರೇಳಲು
ಕೆಡೆ ಕೆಡೆ ಪಾಪಿ ಶಿವದ್ರೋಹಿಯೆನುತ್ತೆಱಗಲು ತಲೆದುಟು ದುಟುದುಟುನುರುಳೆ
ದುಡುಹನೆ ಬೀಳಲು ಮುಂಡಂ ಬಾಯ್ಸವಿಗಾಟಿನೆ
ನಡೆತಂದಾಯೆಂದೆನಂತಂ ಕೊಂಡದ ಕೆಂಡದ
ನಡುವಂ ಬಗಿದಗ್ನಿಯ ನಾಲಗೆಯೇಳಂ ಕಿತ್ತನು ರಿಪುದಲ್ಲಣನಂದು೪೬

ನಿಲ್ಲದೆ ವಾಣಿಯ ನಾಸಿಕ ದೊಂಗಲನಿಳುಹುತ
ಲಲ್ಲಿಯ ಮುನಿಗಳ ಮೀಸೆಗೆ ಮಿಡುಗುರನಿಟ್ಟರು
ಹುಲ್ಲಂ ಕಚ್ಚಿಸಿದರು ಹೋಮವ ಹಿರಿಯರನೊರೆದರು ಕೊಂಡದ ಕೆಂಡವನು
ಚಲ್ಲಿದರೆಲ್ಲಾ ಸತಿಯರ ಸೆಱೆವಿಡಿದರು ಬಳಿ
ಕಲ್ಲೆಂಬವರಾರುರಿವರಿದಿದು ಹರಿದೆಲೆಯಂ
ಸೊಲ್ಲಿಸಿ ದಕ್ಷನ ಮಂಡೆಯನೊಡೆ ಸೆಂಡಾಡಿದರಾ ವೀರನ ಕಿಂಕರರು೪೭

ಮೃಡನೋಲಗಕೀ ದಕ್ಷನನೊಯ್ಯಲು ಬೇಕೊ
ಯ್ವೊಡೆ ಹೊಡೆದೀ ಶಿರವಂ ಹತ್ತಿಸಿಯೆತ್ತುವೆನೆಂ
ಬಡೆ ತಲೆಯಂ ಬಲ್ಲಿದರೊದೆಸೆಂಡಾಡಿದರಿದಕಿನ್ನೆಂತೋಯೆಂದೆನುತ
ಕೆಡದಿರ್ದಜ ಪಶುವಿನ ತಲೆಯಂ ಮುಂಡದ ಮೇ
ಲಿಡಿಸುತ ಜೀವವನುಂ ಕೊಟ್ಟಂ ತಾ ನಿಂದಕ
ನೊಡನೆಯ ಷೋಡಶ ಮುನಿಗಳು ಸಹ ಕೋಡಗಗಟ್ಟಂ ಕಟ್ಟಿಸಿ ತಿರಿಗಿದನು   ೪೮

ಖಲ ದಕ್ಷನ ಹೆಡಗುಡಿಯನು ದಿಗುಧೀಶರ ಮುಂ
ದಲೆಯನು ಮುನಿಗಳ ಗಡ್ಡಂಗಳನಮರರ ಹೆಡ
ತಲೆಯಂ ಯಜ್ಞನ ಕುಡಿಗೆಯ್ಯನು ಸತಿಯರ ಸೆಱೆಯಂ ಹಿಡಿದತಿ ನಡಸುತ್ತ
ಕುಲಿಶಂ ಚಕ್ರಂ ಮೊದಲಾಗಿರ್ದಯುಧಮಂ
ತಳೆದೈರಾವತವೆಂದೆನಿಸುವ ವಾಹನ ಸಂ
ಕುಳಮಂ ನಲಿದೇಱಿ ಗಣಂಗಳು ನಡೆದತಿ ಸಂಭ್ರಮವನದೇವಣ್ಣಿಪೆನಂ         ೪೯

ಕಡುಗಲಿಗಳ ಬೊಬ್ಬೆಯ ಮೊಳಗುವ ಗೆಲ್ಲವಱಿಯ
ಬಿಡದೊರಲುವ ಕಹಳೆಯ ಬೊಂಬುಳಿ ಕೊಂಬಿನ ಹೊಯಿ
ಲುಡುಗದ ಭೇರಿಯ ಘರ್ಜನೆಗಳ ಪಡೆಯೊಳು ಪುಟನೆಗೆದಾಡುವ ನಿಜದನಿಯ
ಎಡಬಲದೊಳು ಹಾಡುವ ಹರಸುವ ಹೊಗಳುವಪೊಡ
ವಡುವಾರತಿಯೆತ್ತುವ ನಾನಾ ವಾದ್ಯಂಗಳ
ಸಡಗರದಿಡುಕುಱ ನಡುವೆಸೆದಂ ಪೊಕ್ಕಂ ಕೈಲಾಸವನ ಚಳಿತ ವಚನಂ           ೫೦

ಅರರೇ ಮಝ ಭಾಪುರೆಯಪ್ರತಿಮ ಬಲಾಧಿಪ
ವುರೆ ಪಟುಭಟನಿಮ್ಮಿಂದೆಮ್ಮೀ ಹೊಟ್ಟೆಯ ಹೊಲೆ
ಹರದುದು ಬಸುಱ ಬಱಂ ಹೋದುದು ಬಯಕೆಗೆ ಬಿಡುಗಡೆಯಾಯ್ತಿಂದಿನಲೆಂದು
ಹರಸುವ ಮಾರಿಯ ಹೊಗಳುವ ಮೃತ್ಯುವನುಲಿದ
ಬ್ಬರಿಸುವ ಮರುಳ್ಗಳ ಹಾಡುವ ಶಾಕಿನಿ ಡಾಕಿನಿ
ಯರನಾಡುವ ಬೇತಾಳರನೀಕ್ಷಿಸಿ ನಗುತೈತಂದಂ ವೀರೇಶ್ವರನು      ೫೧

ಯುವತಿಯೆ ನೀ ಬಾರೌಯಿದಱೊಳು ದಕ್ಷನೆನಿ
ಪ್ಪವನಾರೌ ಹೋಗವನೆಲ್ಲಿಯದೀ ಕುಱಿ ಮೊಗ
ದವನಲ್ಲಹುದಹುದೀ ಕುಱಿ ಮೋಱೆಗೆ ಬೇಕ ಹಿಭೂಷಣ ನಿಂದೆಯ ಮಾತು
ಇವಗೇಕಿಂತಾದುದು ಖಳನಿದ ಕೇಳಿದುದಿ
ಲ್ಲವೆ ಹುಸಿ ನಿನ್ನಾಣೆ ಶಿರಂಗಡಿದಲ್ಲಿವನೀ
ಶವಗುಱಿಮೊಗವಿಟ್ಟಂ ವೀರೇಶ್ವರನೆನಿಪೀ ನುಡಿನೆಗೆದವು ಸತಿಯರೊಳು      ೫೨

ಈ ಬಂದನೆ ಶಿವದೂಷಕ ಗಜ ಕಂಠೀರವ
ನೀ ಬಂದನೆ ಶಿವದೂಷಕ ಗಿರಿವಜ್ರಾಯುಧ
ನೀ ಬಂದನೆ ಶಿವದೂಷಕ ಸಂಕುಳವನನಿಧಿ ಮದಿತ ಮಹಾಮಂದರನು
ಈ ಬಂದನೆ ಶಿವದೂಷಕ ತಿಮಿರ ದಿವಾಕರ
ನೀ ಬಂದನೆ ತೊಲತೊಲಗೆಂದುಲಿಯುತ್ತಿಹ ಕಹ
ಳಾ ಬಹಳ ರವಂ ಬೆರೆಸುತ್ತರಮನೆಯಂ ಹೊಕ್ಕನು ನುತ ವೀರೇಶ್ವರನು        ೫೩

ಕರೆದಲ್ಲದೆ ಬರಬೇಡಬಂಜಾಂಬಕ ಮುಖ್ಯಾ
ಪರರಿವರೆಂದು ಗಣಾಧಿಪರಿಗೆ ಬೆಸನಂ ಕೊ
ಟ್ಟಿರಿಸಿ ಸಮಂತರಮನೆಯೊಕ್ಕೊಡ್ಡೋಲಗದೊಳು ಕೈವಾರಿಸುತೈತಂದು
ಚರಣಂಗಳಿಗೆಱಗಿದ ವೀರೇಶನನಘ ಸಂ
ಹರ ತುತಿಸುತ್ತಿಪ್ಪನಿತಕ್ಕಾಗಳು ಕವಿದೊ
ತ್ತರಿಸಿದರುರವಣಿಸಿದರಪ್ರತಿಮನ ಮೇಳದ ಮನ್ನಣೆಯ ಮಹಾಭಟರು        ೫೪

ಘನಯಜ್ಞನ ಶಿರವಿದು ದಕ್ಷನ ತಲೆಯಿದು ಕಾ
ಲನ ತೋಳಿದು ಭಗಲೋಚನವಿದು ಪೂಷಾದಿ
ತ್ಯನ ಹಲ್ಲಿದು ವಾಣಿಯ ಮೂಗಿದು ಕೃಷ್ಣಾಜಿನವಿದು ಗದೆಯಿದು ಚಕ್ರವಿದು
ಅನಲನ ನಾಲಗೆಯಿವು ಸುರಪತಿ ಮುಖ್ಯರ ವಾ
ಹನಮಿವು ಕೇತನಮಿವು ಶಸ್ತ್ರಾವಳಿಯಿವು ಸ
ನ್ಮುನಿಗಳ ಸೃಕ್ ಸ್ರುವವಿವು ಚಿತ್ತೈಸೆಂದೊಪ್ಪಿಸಿದರು ವೀರನ ಕಿಂಕರರು        ೫೫

ಮುಂದಱಿಯದೆ ಶಿವನಿಮ್ಮಂ ನಿಂದಿಸಿ ಕುಱಿಮೊಗ
ವೆಂದಱಿಯಲು ಬರುತಿರೆ ಪಶುವಾಂ ಪಶುಪತಿ ನೀ
ನೆಂದು ಮಹಾದೈನ್ಯದಿ ದಕ್ಷಂ ಕೀರ್ತಿಸೆ ಮೆಲ್ಲನೆ ನಗುತಂ ಕೃಪೆಯಿಂದ
ಎಂದನು ಮನವೊಲಿದುಡಬೇಡೆನೆ ಕ್ರುತಫಲವ
ತಂದೆ ಕರುಣಿಸೆನಗೆನೆ ಶತಯಜ್ಞದ ಫಲವನು
ಇಂದುಧರಂ ಕೊಟ್ಟನು ಸುರರ್ಗಭಯವನೀವುತ ಕರುಣಾಕರ ಶಿವನಂದು       ೫೬

ಸಾಯದೆ ಬದುಕಿದ ರಜ ಹರಿ ಸುರ ಕುಲಸಹಿತ
ನ್ಯಾಯವ ನೀನೆಂದುಂ ಬಳಸದಿರೆಮ್ಮೆಲ್ಲಿಯು
ಪಾಯಂಕೊಳ್ಳದು ಹೆಮ್ಮೆಂದಱಿದೊಡೆ ವೀರಭದ್ರನು ರುದ್ರನುಮಿಂತಿವನಾ
ಘಾಯಕೆ ತರಹರಿಸಲು ಬಾರದೆನುತ ಹಂಪೆಯ
ರಾಯನವರ ಕಳುಹಿದ ಕೃಪೆಯಿಂದೆಂದೀ ಕವಿ
ರಾಯನ ವರಸುತ ರಾಘವದೇವನ ಬಿನ್ನಪ ಸದ್ಭಕ್ತರು ಲಾಲಿಪುದು            ೫೭