ರಾಗ : ತಮ್ಮಿಚ್ಛಿ  ತಾಳ : ಇಮ್ಮಡಿ ಝಂಪೆ

ಪಲ್ಲವ ||           ದೇಶವೆಲ್ಲಱಿಯೆ ಶಿರದಿಂ ಪಾಳಮಂಗೆಲಿದು
ರೋಷದಿಂ ಬಂದ ಖರ್ಪರನ ಕೃಪೆಯಿಂದೆತ್ತಿ
ತಾ ಸುರಿಗೆಯಿಂ ಸಿಡಿಲನಿಱಿದುಘೆಯ ಕಾಳನಂ ಸಲಹಿದಂ ಸಿದ್ಧೇಂದ್ರನು ||

ಹಸಿವಿಲ್ಲದಿಪ್ಪ ತಣಿವೆವೆಯಿಕ್ಕದಿಹ ಕಂಗ
ಳುಸುರಿಕ್ಕದಿಹ ಜೀವ ಹೆಜ್ಜೆಯಿಲ್ಲದ ಪದಂ
ಬೆಸನವಿಲ್ಲದ ಗಂಡುರೂಹು ನೆಳಲಿಲ್ಲದಿಹ ತನು ಚಲನವಿಲ್ಲದ ಮನಂ
ಹುಸಿಯಿಲ್ಲದಿಹ ಮಾತು ಬಯಕೆಯಿಲ್ಲದ ಚಿತ್ತ
ವೆಸೆವ ಶಿವಸಿದ್ಧರಾಮಂ ಸುಖದೊಳಿರಿಲಿನ್ನು
ವಸುಧೆ ಮೆಚ್ಚಲು ಮಾಳ್ಪ ಸಾಮರ್ಥ್ಯ ಸಂಭ್ರಮವನಾಲಿಪುದು ಸರ್ವಜ್ಞರು   ೧

ಬಿನದದಿಂ ಕೇತಾರಗುರುಗಳುಂ ಸಂದ ಹಾ
ವಿನಹಾಳ ಕಲ್ಲಿದೇವಂಗಳುಂ ಬಂದೊಂದು
ದಿನವಿರುಳು ಹೊತ್ತುಹೋಗದೆ ಕುಳ್ಳಿರ್ದ ಮಂಠೆಯದ ಮಂದಿಯೊಳಗೆ
ಘನನಿನದಿಂದುಲಿವ ಲಿಂಗಭೋಗದ ವಾದ್ಯ
ದನುವನಾಲಿಸಿ ಭಾಪು ಶಿವಸಿದ್ಧಪತಿಯೆಂದು
ಮನವುಕ್ಕಿ ಸುಜನನೊರ್ವಂ ಪೊಗಳ್ದಡೇಕೆ ಪೊಗಳ್ದಪೆಯೆಂದನೊರ್ವಧಮನು            ೨

ನಾವಱಿಯೆ ಸೊನ್ನಲಿಗೆಯೆಂಬ ಕಿಱುವಳ್ಳಿಯಿದು
ಗಾವದಿಗಳಿಕ್ಕೆ ದಾರಿದ್ರ‍್ಯದಾಗರವಿದಱೊ
ಳೇವೊಗಳ್ವೆನೊರ್ವ ಶಿವಸಿದ್ಧರಾಮಂ ಪುಟ್ಟೆ ಕಣ್ಗೆ ಮಂಗಳವಾದುದು
ಭಾವಿಸಲು ಸಿರಿಗೆ ಸಿಂಗರವಾಯ್ತು ಸರ್ವ ವಿ
ದ್ಯಾವಾಸವಾಯ್ತು ಶಿವಲಿಂಗ ಬೀಡಾದುದಿದ
ನಾವವಂ ಸೈರಿಸದೆ ನಿಂದಿಸಿದವಂಗಾಗದಿಹುದೆ ನಾಯಕನರಕವು      ೩

ಧನವುಳ್ಳ ಮಾನವಂ ಮಾಡಿದೊಡೆ ರಚನೆಯಲಿ
ಘನವಾಗಲಪ್ಪುದಲ್ಲದೆ ಮಹಿಮೆಗಳೊಳು ನೆ
ಟ್ಟನೆ ಕಾಶಿಗೆಣೆಯಹುದೆ ಗಯೆಗೆ ಹೊಯ್‌ಕೈಯಹುದೆ ಪರ್ವತಕೆ ಸರಿಯಪ್ಪುದೇ
ಘನ ಹೇಮಕೂಟಕ್ಕೆ ಮಿಗಿಲಹುದೆಯವಕೆ ಹೋ
ಹನಿತು ಸಜ್ಜನರಿದಕೆ ಬಪ್ಪರೇ ಎನೆ ಕೇಳ್ದು
ಮನನೊಂದು ಬಳಿಕಲ್ಲಿ ನಿಲಲೊಲ್ಲದತಿ ವೇಗದಿಂ ಹರಿದು ಗುರುವಿನೆಡೆಗೆ    ೪

ಬಂದು ವಂದಿಸಿ ದೇವ ಚಿತ್ತೈಸು ನೆರೆದ ಕಾ
ಳ್ಮಂದಿಯಿಂದಿಂತೆಂದುದೆಂದಾದ ವೃತ್ತಾಂತ
ದಂದಮಂ ಪೇಳ್ದಡೆಂಬವರ ಮಾಣಿಸಲಹುದೆಯೆನಲುದಾಸೀನ ಬೇಡ
ಮುಂದೊಬ್ಬರಾಡದಂತಿಳೆಯ ದಿವ್ಯಕ್ಷೇತ್ರ
ದಿಂದ ಮಿಗಿಲೆನಿಸುವಂತಖಿಳ ಜನ ನಂಬುವಂ
ತೊಂದು ಸಾಮರ್ಥ್ಯಮಂ ತೋಱಿ ಕರುಣಿಪುದೆಂದು ಕಾಲ್ವಿಡಿದರಾಯಿಬ್ಬರು            ೫

ಇನಿತರ್ತಿ ನಿಮಗೆ ಬೇಕಾದಡೀ ಧರೆಯ ಮೇ
ಲೆನಿತು ದಿವ್ಯಕ್ಷೇತ್ರವುಂಟನಿತಱಿಂದವಿಂ
ದಿನ ಕಿಱಿಯ ಸೊನ್ನಲಿಗೆ ಘನವೆನಿಸಿ ದೃಷ್ಟಮಂ ದಿವ್ಯಮಂಶಿರದಿಗೆಲಿದು
ಜನದ ಸಂದೇಹಮಂ ಕಳೆದು ವಿಶ್ವಾಸವಾ
ಯ್ತೆನಿಸಿ ಮುಂದೀ ಲೋಕದವರೈದೆ ಕಾಣಬಹ
ಮನವ ಮಾಡುವೆನೆಂದು ಭಾಷೆಗೊಟ್ಟಂ ಹುಸಿಯ ಹೆಸರನಱಿಯದ ವೀರನು            ೬

ನೆರೆಹೊರೆಯ ಹಳ್ಳಿಗಳ ಹಿರಿಯೂರ ಪಟ್ಟಣದ
ಪುರದಗ್ರಹಾರದ ಸಮಸ್ತ ಭಕ್ತರನು ಹಿರಿ
ಯರನಜ್ಞ ತಜ್ಞರಂ ಶೂನ್ಯಹೃದಯರನನ್ಯ ಸಮಯದೊಳಗಾದೆಲ್ಲರಂ
ಕರಸೆ ದೆಸೆ ಬೆಸಲಾಯಿತೆನಲು ಲಿಂಗದ ಮುಂದೆ
ನೆರೆದ ಸಭೆ ನಡನಡುಗೆ ಪಂಚಲೋಹದ ಗುಂಡ
ನರರೆ ತಿದಿ ಮಸಿಯಿಕ್ಕುಳಂ ತರಿಸಿ ಭಾಷೆಯಂ ಬರೆಸಿದನದೇವೊಗಳ್ವೆನು        ೭

ನುಡಿಯನುಳಿದಾಲಿಪುದು ನಾನೀವ ಭಾಷೆಗಳ
ಗಡಿಯನೀಯೆಕ್ಕವಿಂಡಂ ಪೊಕ್ಕು ನಿರೋಮಂ
ಪಡೆದು ತಂತಮ್ಮ ಬೇಪಾರದೊಳು ಸವಿಸವಿದು ಸಂದು ಮೈಮಱಿದಿರ್ದೊಡಂ
ಕಡೆಗೆ ಕೈಲಾಸವಹುದೀ ಭಾಷೆ ಹುಸಿದೊಡೆ
ನ್ನೆಡಗೈಯ ನಡುತಳವು ಸುಡುವುದೀ ಗುಂಡು ಬಿಡೆ
ಸುಡದಿರಲ್ಕಿನ್ನಾದೊಡಂ ನಂಬಿರೇ ಕಪಿಲಸಿದ್ಧಮಲ್ಲೇಶ್ವರನನು   ೮

ರೂಪುಳ್ಳದಾವ ಜೀವಿಗಳಾದೊಡಂ ಹಲವು
ಪಾಪಮಂ ಮಾಡಿ ಕುಷ್ಠಾಗಿ ಬಂದಭಿನವ
ಶ್ರೀಪರ್ವತದ ನಾಲ್ಕು ಬಾಗಿಲೊಳಗಳಿಯೆ ಸಾಲಿಗನು ಸಾಲವನು ತಿರ್ದಿ
ಪೋಪಂತೆ ಪಾಪಕ್ಕೆ ನಿರ್ಣಯಂಗಂಡು ನೆಱೆ
ಪೋಪನಾ ಜೀವನೀ ಭಾಷೆ ಹುಸಿದೊಡೆ ಸುಡುವು
ದೀ ಪಿರಿಯ ಬೆರಳು ಸುಡದಿರಲು ಕಂಡಿನ್ನು ನಂಬಿರೆ ಮಲ್ಲಿಕಾರ್ಜುನನನು    ೯

ಧರೆಯೊಳುಳಿದ ಕ್ಷೇತ್ರಲಿಂಗಕ್ಕೆ ಹತ್ತು ಸಾ
ಸಿರಗಡಿಗೆ ಗೋಟನಿತು ಹಾಗಂಗಳಂ ಕೊಟ್ಟ
ಹಿರಿಯ ಫಲದಿಂದಿದಱೊಳೊಂದು ಲಿಂಗಕ್ಕೆ ಸಾಸಿರಗಡಿಗೆಯಾ ಹಾಗಮಂ
ಹರುಷದಿಂದಿತ್ತ ಫಲವಧಿಕವಿದು ಹುಸಿಯಾಗೆ
ಹಿರಿಯ ಬೆರೆಳೊತ್ತಿನ ಬೆರಳ್ ಬೇವುದಿದು ಬೇಯ
ದಿರಲು ಕಂಡಾದೊಡಂ ನೆಱಿ ನಂಬಿರೇ ಕಪಿಲಸಿದ್ಧಮಲ್ಲೇಶ್ವರನನು           ೧೦

ಭರದೊಳೀ ಪುರದೊಳಱುವತ್ತೆಂಟಕನ್ನವಂ
ಕರೆದಿಕ್ಕಿದಾ ಫಲಂ ಬೇಱಿ ಹೊಱಗಾಱು ಸಾ
ಸಿರದೆಂಟುನೂಱಿಕಿಕ್ಕಿದ ಫಲದಿನಧಿಕವಹುದೀ ಮಾತು ಹುಸಿದಡೆನ್ನ
ಕರದ ನಡುವಣ ಬೆರಳ ಸುಡುವುದೀ ಗುಂಡು ಸುಡ
ದಿರಲು ಕಂಡಾದೊಡಂ ನಂಬಿರೇ ಸಕಲ ದೇ
ವರ ದೇವನಂ ಕಪಿಲಸಿದ್ಧಮಲ್ಲೇಶ್ವರನನೆಂದು ಭಾಷೆಯನಿತ್ತನು  ೧೧

ಮಿಕ್ಕ ದೇವರ ಮನೆಯ ಭತ್ತಮಂ ಕೊಟ್ಟಣ
ಕ್ಕಿಕ್ಕ ಬರುತಿರೆ ದೂರದಿಂ ಕಂಡು ಹರಿದು ಮೈ
ಯಿಕ್ಕಿ ಮೇಲುದ ಹಾಸಿಕೊಂಡೊಯ್ದು ಪಾಕವಂ ಮಾಡಿ ತಂದೊಲಿದಿತ್ತೊಡೆ
ಅಕ್ಕಱಿಂ ಹೊಱಗೆ ನೂಱಕ್ಕಿಕ್ಕಿದನಿತು ಫಲ
ವಕ್ಕಾಗದಿರಲು ದರ್ಭೆಯ ಬೆರಳು ಬೇವುದು ದಿ
ಟಕ್ಕೆ ಬೇಯದಿರೆ ಕಂಡಿನ್ನು ನಂಬಿರೆ ಕಪಿಲಸಿದ್ಧಮಲ್ಲೇಶ್ವರನನು  ೧೨

ಸುತ್ತಲದಿದೆನ್ನದೆಲ್ಲರ್ಗೆ ಕೊಟ್ಟಣವನಿ
ಕ್ಕುತ್ತ ಬರಲೊರ್ವಳಾನಾಱಿನೆಂದುಲಿದು ತಲೆ
ಯೊತ್ತಿ ದೇವರ ರಾಜತೇಜದಿಂ ಮೀಱಿ ನಡುಮನೆಯೊಳಗೆ ಸುರಿದು ಬರಲು
ಎತ್ತಲುಂ ಕಳೆಯಲಾಱದೆ ಪಾಕಮಾಡಿ ತಂ
ದಿತ್ತಡಿದಱಿಂ ಹೊಱಗೆ ಹತ್ತಕಿಕ್ಕಿದ ಫಲವ
ನಿತ್ತುಹುಸಿದೊಡೆ ಕಿಱುಗುಣಿಕೆ ಸುಡುಗು ಸುಡದಿರಲು ನಂಬಿ ಮಲ್ಲೇಶ್ವರನನು         ೧೩

ಹರಯೋಗಮಂ ಮಾಡುವಂ ಸ್ಥೂಲ ಸೂಕ್ಷ್ಮದೊಳು
ಭರಿತನಾಗಿಹ ಶಿವನನಿಬ್ಬಟ್ಟೆಯಂ ಕಟ್ಟಿ
ಹರುಷದಿಂ ಧ್ಯಾನಿಸುತ್ತಿಪ್ಪಾತನೈಕ್ಯಮಂ ಕೂಡಿ ಶಿವ ತಾನಪ್ಪನು
ನಿರುತವಿಂತೀ ಭಾಷೆ ಹುಸಿದೊಂಡಿಂತೀ ಬಲದ
ಕರದ ನಡುವಣ ಬೆರಳ ಸುಡುವುದೀ ಗುಂಡು ಸುಡ
ದಿರಲು ಕಂಡಿನ್ನಾದೊಡಂ ನಂಬಿರೇ ಕಪಿಲಸಿದ್ಧಮಲ್ಲೇಶ್ವರನನು  ೧೪

ಸಿಕ್ಕದೀ ಯೋಗಕ್ಕೆ ಬಱಿದೆ ಧಾವತಿಗೊಳ್ಳ
ದೆಕ್ಕವಿಂಡಂ ಹೊಕ್ಕು ಹೊಕ್ಕ ಮನ ತಮ್ಮ ಕಾ
ರ್ಯಕ್ಕೆ ಸೂಸದೆ ಶಿವನ ಭಾವದಿಂ ನಿರ್ಣಯಂ ಕೊಡುವುದಿಲ್ಲಾ ದೇವನ
ತಕ್ಕ ಕೆಲಸದ ಭಾವದಿಂದಿರಲು ಭಾವ ವೈ
ಕ್ಯಕ್ಕೆ ತಹುದೀ ಭಾಷೆ ಹುಸಿಯಾಗೆ ಹೆಬ್ಬೆಟ್ಟು
ಮಿಕ್ಕು ಬೇವುದು ಬೇಯದಿರಲು ನಂಬಿರೆ ಕಪಿಲಸಿದ್ಧಮಲ್ಲೇಶ್ವರನನು       ೧೫

ಮೆಱೆವೆಕ್ಕವಿಂಡಿನೊಳಗಣ ಗಂಡ ಹೆಂಡಿರುಗ
ಳುಱೆ ತಮ್ಮ ಹಸುಳೆಗಳಿಗುಂಟೆ ಪಾಲ್ ಬೆಣ್ಣೆಗಳ
ನೆಱೆವುದಿಲ್ಲದೊಡೆ ಮಾಣ್ಬುದು ಬದುಕಲೊಂದೊಳ್ಳಿತಳಿದೊಡೆರಡೊಳ್ಳಿತೆಂದು
ಮಱೆಯದೀ ದೇವನ ಶ್ರೀಪದವ ಬಲುವಿಡಿದು
ತೊಱೆಯದವರೀ ದೇವನಂ ಕೂಡುವರ್ ಪುಸಿಯೆ
ನೆಱೆ ಸುಡುಗು ಸುಟ್ಟುಂಬೆರಲ್ ಸುಡದಿರಲ್ ನಂಬಿ ಸಿದ್ಧಮಲ್ಲೇಶ್ವರನನು            ೧೬

ಬೆರೆಯದೀ ಯೆಕ್ಕವಿಂಡಿನವೊಳಗೆ ಸ್ತ್ರೀ ಪುತ್ರ
ರಿರಲಾಱೆವೆಂದಡವರಂ ಬಿಟ್ಟು ಹದುಳಿರ್ದ
ಪುರುಷನುಂ ಮಲ್ಲಿನಾಥನ ಕೂಡುವಂ ಕೂಡದಿರೆ ನಡುವೆರಳ್ ಬೇಯಲಿ
ಪುರುಷನೊಲ್ಲದೊಡಿರ್ದ ಸತಿ ಸುತರು ಮುಕ್ತರ
ಪ್ಪರು ಹುಸಿಯೆ ದರ್ಭೆಯ ಬೆರಳ್ ಸುಡಲಿ ಮಾತೆ ಪಿತ
ರರಿಯಾಗಲಿರ್ದ ಮಕ್ಕಳು ಮುಕ್ತರಹರಾಗದೊಡೆ ಕಿಱುಗುಣಿಕೆ ಸುಡುವುದು   ೧೭

ಹೀಂಗದೀ ಸಕಳ ಲಿಂಗಕ್ಕೆ ಬೆಸಕೆಯ್ದ ಮ
ರ್ತ್ಯಂಗಪ್ಪುದೈಕ್ಯ ಪದವಾಗದಿರುತಿರೆ ಬಲದ
ಮುಂಗಯ್ಯ ತಳ ಸುಡುವುದಾದಿಲಿಂಗದ ಪ್ರತಿಷ್ಠೆಯ ಹೋಮವಂ ನೋಡಿದ
ಜಂಗಮಂ ಸ್ವರ್ಗಮಂ ಪಡೆದವರಲ್ಲದೊಡೆಡದ
ಮುಂಗಯ್ಯ ತಳ ಸುಡುಗು ಸುಡದಿರಲು ನಂಬಿರೇ
ಲಿಂಗಮಲ್ಲೇಶ್ವರನನಿನ್ನು ತಾ ಗುಂಡನೆಂದೊಡ್ಡಿದಂ ಕರತಳವನು೧೮

ಹಲವು ತಿದಿಗಳಲೂದಿ ಲೇಸಾಗಿ ಕಾಸಿ ಕೆಂ
ಗಲಿಪ ಕಿಡಿಗಳನುಗುಳ್ವ ಪಂಚಲೋಹದ ಗುಂಡ
ನೆಲೆಲೆ ಕಕ್ಕಸದ ಕಮ್ಮಱರು ನಿಡಿದಿಕ್ಕುಳುಗಳಿಂದವಚಿ ಪಿಡಿದು ತಂದು
ಕಲಿಕಾಲರುದ್ರನೆನಿಸುವ ಸಿದ್ಧರಾಮನಂ
ಜಲಿಯಲಿಟ್ಟರು ರಾಹುಕೇತುಗಳ ಬಲುಗೋಪ
ದೊಳು ಕಚ್ಚಿ ನೆಗೆದರ್ಕಮಂಡಳವನಸ್ತಗಿರಿಮಸ್ತಕದೊಳಿರಿಸುವಂತೆ   ೧೯

ಪೊಡವಿಯಂ ಸುಡುವ ಗರಳಾಗ್ನಿಯಂ ತುಡುಕಿ ತೊಡೆ
ವೆಡೆಯನಱಸುವ ಮೃಡನೊ ಕಡಲನೀಂಟಲು ಕಯ್ಯ
ನಡುವುಳಿದ ವಡಬನಂ ಪಿಡಿದಗಸ್ತ್ಯನೊ ಶಿವನ ನಿಂದಿಸಿದ ದೇವೇಂದ್ರನ
ಇಡಲೆಂದು ಮಂತ್ರಾಗ್ನಿವಿಡಿದ ಉಪಮನ್ಯು ಸುರ
ರೊಡೆಯನೈಶ್ವರ‍್ಯಮಂ ಮೊಗೆದ ದುರ್ವಾಸನೋ
ನುಡಿಯಲರಿದೆನಿಸಿ ದಿವ್ಯದ ಗುಂಡನಿರ್ಕೈಯೊಳಾಂತನಚಳಿತ ಸಿದ್ಧನು          ೨೦

ತಮತಮಗೆ ನಡನಡುಗಿ ಸಾಕಿಳಿಹು ಸಮಯದಾ
ಶ್ರಮ ಸತ್ಯ ಶುಚಿ ಶೂರ ಸಹಜಯೆಂದೆಲ್ಲರಾ
ಕ್ರಮಿಸೆ ಹೋ ಆನಿತ್ತ ಭಾಷೆಗಳು ಸಂದುವೇ ಎಂದು ತನ್ನಯ ಶಾಂತಿಯ
ಹಿಮದೊಳಾಱುವ ಗುಂಡನಿಡಿಕಿದನು ಭಾವಿಸದೆ
ಭ್ರಮಿತ ತಾರೆಯನು ನಭವಿಡಿಕಿತೆಂತೆಂಬುದಾ
ಕ್ರಮವೀಶನಡಿಗರುಣ ಕಮಲ ಪುಷ್ಪಾಂಜಲಿಯನಿತ್ತನೋ ಎಂಬಂತಿರೆ           ೨೧

ಗುಂಡು ಬಿದ್ದೊಡೆ ಹೊತ್ತಿ ಹೊಗೆದು ದಳ್ಳುರಿ ಮಸಗೆ
ಕಂಡು ಮಝ ಭಾಪು ಭಾಪಪ್ರತಿಮ ನುಡಿದಂತೆ
ಗಂಡ ಭೂಲೋಕ ಭಾಳಾಕ್ಷ ಮಹಿಮಾಶರಧಿಯೆಂದೆಂದು ಮಂದಿಯೈದೆ
ಕೊಂಡಾಡುತಿರೆ ಕೇಳ್ದು ನಡುಗಿ ತಲ್ಲಣಿಸಿ ಭಯ
ಗೊಂಡು ದೂಷಣೆ ಪಥ್ಯವಾದಲ್ಲದೀಶನೊಳ
ಕೊಂಡಿಪ್ಪನಲ್ಲೆನ್ನನಿನ್ನು ಹೊಗಳದಿರಿಯೆಂದಾ ಸಭೆಗೆ ಕೈಮುಗಿದನು         ೨೨

ಒತ್ತರಿಸಿ ಕಾದಿ ಸೋತೋಡೆ ಕಲಿ ಸೂಱೆವೋ
ದತ್ತು ತಣಿವಿಂಗೆ ತನು ದಯೆಗೆ ಮನ ಧರ್ಮಕ್ಕೆ
ವಿತ್ತ ನೀತಿಗೆ ಚರಿತ್ರಂ ಸಮತೆಗಱಿವು ಸಾಮರ್ಥ್ಯಕ್ಕೆ ಸತ್ವವೆಸೆವ
ಸತ್ಯಕ್ಕೆ ನುಡಿ ಕೃಪೆಗೆ ವದನ ಭಕ್ತಿಗೆ ಭಾವ
ವಿತ್ತ ನಂಬಿರ್ದ ಮಾಯಾದಿ ದೇಹವಿಕಾರ
ಸತ್ತು ಕೆಟ್ಟಳಿದವಂದಿಂದಿತ್ತ ಸಿದ್ಧರಾಮಂ ಜಗಕೆ ಹೊಱಗಾದನು    ೨೩

ವಿವಿಧ ಸತ್ಯಂ ಮಾಯೆಗತಿಹುಸಿಕ ಕರುಣಿ ಪಾ
ಪವ ಕೊಲುವ ಶಾಂತನರಿಷಡುವರ್ಗವೆನೆ ಮುನಿವ
ನವನಿಯೊಳು ದಾನಿ ಧರ್ಮದ ಲೋಭಿ ನಿಸ್ಟ್ರಹಂ ಭಕ್ತಾರ್ತಿ ಲೋಕವಱಿಯೆ
ಅವಿಮತ್ಸರಂಪರರ ಸಮಯಮಂ ಗೆಲುವನೊ
ಪ್ಪುವ ಜಿತೇಂದ್ರಿಯ ಮುಕ್ತಿಸತಿಸಂಗಲಂಪಟಂ
ಶಿವಸಿದ್ಧರಾಮನೆಂದೊಳಗೆ ಬಲ್ಲವರು ವಂದಿಸಿ ತುಷ್ಟರಾಗುತಿಹರು          ೨೪

ಹುಸಿಯಿಲ್ಲ ಹುರುಡಿಲ್ಲ ಹಳಿವಿಲ್ಲ ಹಗೆಯಿಲ್ಲ
ಹಸಿವಿಲ್ಲ ಹಜ್ಜೆಯಿಲ್ಲಳುಪಿಲ್ಲ ಮುಳಿಸಿಲ್ಲ
ತೃಷೆಯಿಲ್ಲ ಮದವಿಲ್ಲ ಮಱಹಿಲ್ಲ ಕಱೆಯಿಲ್ಲ ಕುಂದಿಲ್ಲ ನಿಂದೆಯಿಲ್ಲ
ಬೆಸನವಿಲ್ಲಾರ್ತವಿಲ್ಲಾಸೆಯಿಲ್ಲ ಪಳಿವಿ
ಲ್ಲುಸಿರಿಡುವುದಿಲ್ಲ ಮತ್ಸರವಿಲ್ಲ ನೆರವಿಲ್ಲ
ವಸುಧೆಯೊಳು ಸಿದ್ಧರಾಮಂಗೆಂಬ ಕೀರ್ತಿ ಪಸರಿಸಿತು ಮೂಲೋಕದೊಳಗೆ    ೨೫

ಪಸರಿಸಿದ ಪುಣ್ಯವಾರ್ತೆಯ ಕೇಳ್ದು ಮುಳಿದು ಹುರು
ಡಿಸಿ ಕುಟಿಲ ವಿದ್ಯಾಸಮುದ್ರನೆಂದೆಂಬ ಬಿರು
ದೆಸೆವ ಖರ್ಪರನೆಂಬ ಜೋಗಿ ಶಿವಸಿದ್ಧರಾಮನ ಸರ್ವ ಸಾಮರ್ಥ್ಯದ
ಹೆಸರ ಧಟ್ಟಿಸುವೆ ವಾದಿಸುವೆ ಸೋಲಿಸುವೆನೆಂ
ದೊಸೆದು ಹದಿನೆಂಟು ಪೀಠದ ದಿವ್ಯ ಜೋಗಿಣಿಯ
ವಿಸರವೆರಸೈತಂದನಾನೆವಿಂಡಱಸಿ ಸಿಂಹದ ಗುಹೆಗೆ ಬಪ್ಪಂದಡಿ      ೨೬

ಹಿಡಿದ ಚಕ್ರದ ಗುಜುಱುದಲೆಯ ಶಂಖದ ಮಣಿಯ
ತೊಡಿಗೆಗಳ ತಿರಿವ ಸೋರೆಯ ಹೂಸಿದಿಟ್ಟಗೆಯ
ಹುಡಿಯ ಕೆಂಗಣ್ಣ ನಿಡಿಯೊಡಲ ಬಾದಣ ಗಿವಿಯ ಪಂಚ ರನ್ನದ ಕಂಥೆಯ
ಕುಡಿದ ಜೊಮ್ಮಿನ ಕೆಟ್ಟನುಡಿಯ ನಾನಾ ಜೋಗಿ
ವಡೆವೆರಸು ಖರ್ಪರಂ ಶಿವಸಿದ್ಧರಾಮಯ್ಯ
ನೆಡೆಗೆ ಬಂದಂ ಬಂದನುರಿವಗ್ನಿಯೆಡೆಗೆ ತಱಗೆಲೆ ಮುನಿದು ಬಪ್ಪಂದದಿ         ೨೭

ಅಣಿಯರದೊಳಿತ್ತಲೆಂದಿನ ತೆಱದಿ ಶಿವನ ಮೇ
ಲಣ ಭಕ್ತಿಯಿಂ ಸಕಳ ಭೂತಸಂಕುಳದ ಮೇ
ಲಣ ಕರುಣದಿಂ ಮುಕ್ತಿಸತಿಯ ಮೇಲಣ ಮೋಹದಿಂದ ಮಂತ್ರದ ಮೇಲಣ
ಗಣಿಸುವಾದರಣೆಯಿಂದೊದವಿದಗ್ನಿಗಳ ಮೇ
ಲಣ ವಿಪುಳ ವಿಶ್ವಾಸದಿಂ ಸಿದ್ಧಿಕುಲ ಶಿರೋ
ಮಣಿ ಮಾಡುತಿಹ ನಿತ್ಯಹೋಮಮಂ ಕಂಡು ಕೆಡಿಸಲ್ ಬಗೆದನಾ ದುರುಳನು೨೮

ಮುಟ್ಟಿ ಮಂತ್ರಾಕ್ಷತೆಯೊಳಗ್ನಿಕುಂಡವನು ಮುಳಿ
ದಿಟ್ಟಡೆ ನಿದಾಘವನಮೋಘ ಕಾರ್ಗಾಲವದ
ರಟ್ಟಿ ತಾಗುವ ತೆಱದಿ ತಾಗಲುರಿ ಕರಗಿ ಕಿಡಿಯುಡುಗಿ ಹೊಗೆ ಸುಗಿದು ಕೆಂಡ
ಕೆಟ್ಟು ಮಡುವಿಟ್ಟುಕ್ಕಿ ಹೊಱಸೂಸುವುದಕದೊಳು
ಕೊಟ್ಟಾಹುತಿಗಳು ತೇಂಕಾಡುತಿರೆ ರಿಪುಬಳ ಘ
ರಟ್ಟ ಶಿವಸಿದ್ಧರಾಮಂ ಮನದೊಳಱಿದನಧಮನ ಕುಟಿಲ ಕಾಯಕವನು      ೨೯

ಜಲಜಸಖಕುಲಜನಂದಿದಿರಾದ ಜಲರಾಶಿ
ಗಲಗಂಬನುಗಿದಂತೆ ಕೊಂಡಕ್ಕೆ ಸಿದ್ಧಕುಲ
ತಿಲಕನೊಯ್ಯನೆ ಲಾಕುಳಗೊಂಡು ಪುರಮಥನನಂತೆ ಹಣೆಗಣ್ಣ ಬೆಳಗ
ಹೊಲಿಗೆಯಂ ಬಿಡಲುದವಕವಱತಗ್ನಿಯೈದೆ ಗಜ
ಗಲಿಸಿ ಭುಗಿಲಿಟ್ಟು ದಳ್ಳುರಿ ಬಳ್ಳಿವರಿದು ಹರಿ
ದೆಲೆಲೆ ಸುಟ್ಟುದು ಸುಟ್ಟುದಾ ಜೋಗಿಯಂ ಜೋಗಿಯೊಡನಿರ್ದ ಪರಿಜನವನು          ೩೦

ಇಟ್ಟಣಿಸಿ ಜೋಗಿವಡೆಯಂ ಸುಟ್ಟು ಮೀಱಿ ಧಾ
ಳಿಟ್ಟು ಅಟ್ಟಳೆನಾಡ ಕೋವೂರನೈದಿ ಭುಗಿ
ಲಿಟ್ಟು ಉರಿ ಹಬ್ಬುತಿರಲಾವೂರ ಕಡೆ ಕೆಡೆದ ಜೋಗಿವಡೆ ಮೊದಲೆಡೆಯಣ
ದಟ್ಟೈಸಿದುರಿಯ ಹೊಯ್ಲಿಂಗಾಱದಕಟ ಬಾ
ಯ್ವಿಟ್ಟು ಪಶುಮೃಗಪಕ್ಷಿ ನೆರೆದೊಱಲುತಿರೆ ಕರುಣ
ಹುಟ್ಟಿ ಕಣ್ದೆಱಿದು ಕಂಡಂ ಬೇಗೆ ಹೊಡೆದಡವಿಯಂತಿರ್ದ ಜೋಗಿಗಳನು     ೩೧

ಭೂಮಿಯ ಚರಾಚರಕ್ಕೊಲಿದು ಮಾಡುವ ಶಾಂತಿ
ಹೋಮವೇಕೀ ಪ್ರಾಣಿವಧೆಯೇಕೆ ಮತ್ತೆ ನಿ
ರ್ಧೂಮಧಾಮಾಕಾರವಾಗಿ ನಿಷ್ಕಾರಣಂ ಕೋವೂರ ಬೇವುದೇಕೆ
ಸಾಮರ್ಥ್ಯ ಹಸನಾಯ್ತು ಭೂತದಯೆ ಲೇಸಾಯ್ತು
ಸೋಮಧರನೊಲವು ಫಲವಾಯ್ತೆಂದು ಶಿವಸಿದ್ಧ
ರಾಮನಾಥಂ ನೊಂದು ಕರುಣದಿಂ ನೋಡಲೆದ್ದಂ ಜೋಗಿವಡೆಯೊಡೆಯನಂ೩೨

ಸರಸ ಸುಂದರ ಸೊಬಗ ಸಿದ್ಧರಾಮಯ್ಯ ಸು
ಸ್ಥಿರ ಶುದ್ಧ ಶುಚಿ ಶೂರ ಸಿದ್ಧರಾಮಯ್ಯ ಶಂ
ಕರಸದೃಶ ಸಹಜಸಾಮರ್ಥ್ಯಸಾಗರ ಸಿದ್ಧರಾಮಯ್ಯನ ರಾಮನಾಥ
ಶರಣಸಂಕುಳಸುರದ್ರುಮ ಸಿದ್ಧರಾಮಯ್ಯ
ಶರಣಾಗು ಗುರುಸಿದ್ಧರಾಮಯ್ಯ ರಾಮಯೆಂ
ದೆಱಗಿ ಕೈಮುಗಿದು ಕಾರ್ಪಣ್ಯ ಮುಖನಾಗಿರ್ದ ಖರ್ಪರನನೀಕ್ಷಿಸಿದನು          ೩೩

ಏಕಾರಣಂ ಬಂದೆಯಿಲ್ಲಿಗೆಲ್ಲಿಯ ಕಿಚ್ಚಿ
ದಾಕಸ್ಮಿಕಂ ನೆಗೆದು ಸುಟ್ಟುದಕಟಕಟ ನೊಂ
ದಾ ಕುಟಿಲ ವಿದ್ಯಾಸಮುದ್ರನೆಂಬವನು ನೀನೇ ನಿನ್ನ ಪರಿಜನವನು
ಏಕೆತ್ತೆಯೆನೆ ಬೆಂದ ಹುಣ್ಣ ಕಂಬಿಯನಿಕ್ಕಿ
ನೂಕಿ ಕೀಸದಿರಖಿಳಖೂಳನೊಳು ದುರುಳನವಿ
ವೇಕಿಯೊಳು ಲೇಸನಱಸದೆ ಸಿದ್ಧಪತಿ ಕರುಣಿಸೆನಗೆಂದು ಬಾಯ್ವಿಟ್ಟನು       ೩೪

ಕರುಣಾವಲೋಕನದಿ ಸಿದ್ಧ ಹರಣಂಗಳಂ
ಕರುವೊಯ್ದು ಜೋಗಿವಡೆಗಭಯವಿತ್ತತಿ ಕರಿಕು
ವರಿದ ಕೋವೂರನೂರಂ ಮಾಡಿ ಕೃಪೆವೆರಸಿ ಹಾಡಿ ಹೋಮವನು ಮಾಡಿ
ಎರಡನೆಯ ರುದ್ರನಭಿನವ ಪಿತಾಮಹನು ಸು
ಸ್ಥಿರಕರ ಶ್ರೀವರಂ ಸಕಳ ಸಾಮರ್ಥ್ಯದಾ
ಕರ ಸಿದ್ಧರಾಮನಾಥಂ ಶೈವಸಾಮ್ರಾಜ್ಯ ಸುಖದೊಳಿರಲೇವೊಗಳ್ವೆನು        ೩೫

ಇವನೋಡೆ ನವಿಲಾಡೆ ವಿರಹಿಗಳು ಕೂಡೆ ಭೂ
ಜನ ಹಾಡೆ ತೃಣಮೂಡೆ ಹಂಸೆಗಳು ಬಾಡೆ ಕಡ
ವಿನ ಸೊವಡು ತೀಡೆ ಚಾದಗೆ ನೋಡೆ ಘನವಾಡೆ ಧರೆಗಂಬು ನೀಡೆ ಸಿಡಿಲು
ದನಿ ಮಾಡೆ ಧರೆ ಕೂಡೆ ಬೆಳೆಗಳಂ ಸೂಡೆ ನೆಲೆ
ಯನು ನದಿಗಳೀಡಾಡೆ ಬರ್ಪ ಕಾರ್ಗಾಲವೊ
ಯ್ಯನೆ ಮೊಳೆತು ದನಿದೋಱಿ ಮೀಱಿ ಮೊಳಗಂ ಹೇಱಿತೋಱಿತ್ತು ದುರ್ದಿನವನು    ೩೬

ಅಳಿಯ ಕಪ್ಪನು ನೀಲಮೇಘದಸಿತವನು ಕ
ಜ್ಜಳದ ಕಱಿಯನು ಕರಿದ ಕತ್ತುರಿಯ ಕರಿದ ಕೋ
ಕಿಳನ ಮಳಿನವ ಹರಿಯ ಕಾಳಿಮೆಯ ವಿಷದ ಕರ್ಬುರವ ನೀಲದ ನೀಲವ
ಎಳೆದುಕೊಂಡೊಡಗೂಡಿ ತುಳಿದು ಹಿಳಿದಬುಜಜಂ
ಬೆಳಗು ಮುಳುಗಲು ಬಳಿದನೋ ಬಯಲನೆಂದೆನಿಸಿ
ದಳವೇಱಿತೊತ್ತರಿಸಿ ಮೋಡಗತ್ತಲೆ ಗಾಳಿ ಹನಿ ಮಿಂಚು ಮೊಳಗು ಸಹಿತ      ೩೭

ಒಂದು ದಿನವಿರುಳೊಳಾ ಮಳೆಯೊಳು ಚಲಿಸದೆಂದಿ
ನಂದದಿಂ ಕ್ಷೇತ್ರಮಂ ಬಲಗೊಳತ್ತಂ ಲಿಂಗ
ವೃಂದಮಂ ನೋಡುತ್ತ ಸಂತೋಷದಿಂ ಬರುತ್ತಿರಲು ಸಿದ್ಧರ ದೇವನು
ಹಿಂದೆ ನಾನಾ ಜೀವ ಜಾಳಂಗಳಂ ಕೊಂದ
ಕುಂದನೀ ತಂದೆಯ ಪದಕ್ಕೆಱಗಿ ಕಳೆವೆ ನಾ
ನೆಂದು ಛಿಟಿಛಿಟಿಲೆನುತ್ತಡಸಿ ಕಿಡಿಗೆಱುತ್ತ ಬೆದಱದೆಱಗಿತ್ತು ಸಿಡಿಲು  ೩೮

ಮುನಿದೆಱಗಿತೆಂದು ಬಗೆದೆಲ್ಲರಂ ಕೊಲುವ ನೀ
ಚನನಿರಿಸಲೇಕೆಂದು ಪಿಡಿದಲಗಿನಿಂ ತಿವಿಯೆ
ಮೊನೆಯಲ್ಲಿ ಸಿಡಿಲು ಸಿಲುಕಿರಲು ಕರ್ಗತ್ತಲೆಯೊಳೆಡೆಯಾಡುತೆಡಹದಂತೆ
ತನಗೆ ತಾಂ ದೀವಟಿಗನಾದನೋ ಗಿರಿಯೋಡಿ
ವನಧಿಯಂ ಹುಗಹುಗಲು ತಿವಿಯೆ ಕೈತಪ್ಪಿ ವಡ
ಬನನಿಱಿದು ನೆಗಹಿದಮರೇಂದ್ರನೋ ಎಂದೆನಿಸಿ ಮೆಱಿದನಚಳಿತ ಸಿದ್ಧನು    ೩೯

ಉಗ್ರಸರ್ಪನ ಫಣಾಮಣಿಯಂತೆ ಕೂರಲಗಿ
ನಗ್ರದೊಳು ತೊಡರ್ದ ಸಿಡಿಲೆಲೆ ಮಹಾದೇವ ಗರ
ಳಗ್ರೀವ ಶಿವ ಶರಣೆನುತ್ತಿರಲು ಕೇಳ್ದು ಸೈರಿಸಲಾಱದಹಿಕಟಕನು
ವ್ಯಗ್ರದಿಂ ನಿಜವೆರಸಿ ಬಂದಿದೇನೈ ದಯಸ
ಮಗ್ರ ಭೂತಸ್ನೇಹ ನೀನಳುಕದೀ ಸಿಡಿಲ
ವಿಗ್ರಹಂ ನೋಯಲಿಱಿವರೆ ಮಡಕೆಯುಣಕಲಿತಡಾರು ಜೀವಿಪರೆಂದನು       ೪೦

ಬಂದು ಬಂದೆಲ್ಲರಂ ಕೊಲುವುದಂ ಕೊಂದಡೇ
ನೆಂದಿಱಿದೆನೆನಲೆಲ್ಲರಂ ಕೊಲುವ ಗರಳಮಂ
ಕೊಂದೆನೇ ಕೊರಳೊಲಿರಿಸಿದೆನಲ್ಲದೆನಲಱಿಯದಿಱಿದೆನೆಂದಡಿಗೆಱಗಲು
ಸಂದ ನಿಷ್ಕಂಟಕಂ ನಿರ್ಭಯಂ ನಿಶ್ಚಿಂತ
ನೆಂದೆನಿಪ ನಿನಗೆ ಕೂರಲಗೇವುದೆಂದು ತರು
ಣೇಂದುಧರನಾ ಸಿದ್ಧಪತಿಯೊಡನೆ ನುಡಿದು ನಡೆದಡಗಿದಂ ಲಿಂಗದೊಳಗೆ     ೪೧

ಬೆಂದ ಮಳೆ ಬರಲೇಕೆ ಸಿಡಿಲೆಱಗಲೇಕಲಗಿ
ನಿಂದಿಱಿಯಲೇಕದೀಶನನಱುಹಲೇಕೆ ಮುದ
ದಿಂದ ಭಕ್ತರ ಹೃದಯ ಕಮಲದೆಸಳ್ಗಳ ಹಸೆಯಮೇಲೆ ಚಿತ್ತಿನ ಸೊಡರಿನ
ಹೆಂದವೆಳಗಿನೊಳು ನಿಜತರುಣಿಯಂ ಕೂಡುವಾ
ನಂದಮಂ ತೊಱಿದು ಸುಖಿ ಸುಕುಮಾರನೆಂದೆನಿಸು
ವಿಂದುಧರನೀ ಮಳೆಯೊಳೀ ಚಳಿಯೊಳೆಯ್ತಂದನೆಂದು ನೊಂದನು ಮನದಲಿ   ೪೨

ಎನಗೆ ನಿಗ್ರಹವ ಸಿಡಿಲಿಂಗೇಱನೀಶ್ವರನ
ಮನಕಮರ್ಷವನಿತ್ತುದಿಂತಿದೆಂದೊಯ್ದು ಕಡು
ಮುನಿದು ಕೂರಲಗ ಭಂಡಾರಿಸಿ ಸಮಂತೆಂದಿನಂತೆ ಪ್ರದಕ್ಷಿಣವನು
ನೆನೆದು ಬರುತಿರ್ಪ ಸಿದ್ಧನ ಪದಾಬ್ಜದಮೇಲೆ
ತೊನೆವ ಬಾಲಂ ಕುಸಿದ ತಲೆ ಮುಗಿದ ಕಿವಿ ಸುಗಿದ
ತನು ದೈನ್ಯವಿಡಿದ ಕಿಱುದನಿವೆರಸು ಬಂದೊಂದು ಕೃಷ್ಣಶುನಕಂ ಬಿರ್ದುದು  ೪೩

ಕರುಣಿಯನಘನೆ ನನ್ನ ಸಲಹೆಂದು ಬಿದ್ದ ಕಾ
ರಿರುಳ ತಿರುಳೋ ಅಭಯಮಂ ಬೇಡುವಜ್ಞಾನ
ದುರುಳಿಯೋ ಮಱಿದೆಱಗಿದಪರಾಧದುಬ್ಬೆಗದಿ ತಾಂ ನೊಂದು ಕಂದಿ ಬಂದು
ಕರುಣಿಸೆನಗೆಂದು ಕಾಲ್ವಿಡಿವ ಸಿಡಿಲೋ ಎಂಬ
ಪರಿಯಲಿಹ ಶುನಕನಿರವಂ ಕಂಡು ಲೋಕೈಕ
ಗುರು ರಾಮನಾಥನತಿಬೆಱಗಾಗುತಿಹ ಸಮಯದೊಳು ರಾತ್ರಿ ಕಡೆಗಂಡುದು   ೪೪

ಬೆಳಗು ಹಳಹಳನೆ ಮೊಳೆತುದು ತಿಮಿರವಳವಳಿದು
ದೊಳಗೊಳಗಳಲ್ದುವು ಚಕೋರಿಗಳು ವಿರಹ ವಿ
ಹ್ವಳವಾಱಿದವು ಚಕ್ರವಾಕವೊಱಗಿದವು ನೈದಿಲು ಕಮಲ ಕಣ್ದೆಱಿದವು
ಅಳಿಯ ಸೆಱಿ ಬಿಟ್ಟುದು ಧರಾಜನದ ಕಣ್ಣ ಬಱ
ತಿಳಿದವು ಸರೋಧಿ ಮೈದೆಗೆದುದುದಯಾಚಳದ
ಹೊಳೆವ ಮಕುಟಾಗ್ರ ಮಣಿಯೋ ಎನಿಸಿ ಗಗನಮಣಿ ಕಿರಣಮಂ ಪಸರಿಸಿದನು೪೫

ಪೂರೈಪ ಶಂಖಸಂಕುಳ ರವಂ ಪೊಡೆವ ಭೇ
ರೀ ರವಂ ಶುದ್ಧರಾಗಂ ಗೀತರವ ಕಾಹ
ಳಾ ರವಂ ವಿವಿಧ ವಾದ್ಯಂಗಳ ರವಂ ಮಜ್ಜನೋಚಿತದ ಘಂಟಾರವಂ
ಗೌರೀಶ ದೇವಕುಲಚಕ್ರೇಶ ಚಿತ್ತಾವ
ಧಾರು ಜಯಜಯವುಘೇ ಚಾಂಗು ಬೊಲ್ಲೆಂಬ ಗಂ
ಭೀರರವವೆರಸು ಮಂಗಳಮಯಂ ಜೀವಿಗಳಭೀಷ್ಟಮಂ ಕೊಡುತಿರ್ದುದು     ೪೬

ಆಗ ಸಿದ್ಧೇಶ್ವರಂ ತನ್ನ ಪದಪಂಕಜದ
ಮೇಗೆ ಹೊರಳುವ ಸಾರಮೇಯನಿರವಿಂಗೆ ಬೆಱ
ಗಾಗಿ ನುಡಿಸಿದೊಡೆ ನುಡಿಗೊಡಲಱಿಯದೇಳೆಂದಡೇಳದೊಯ್ಯನೆ ನೂಂಕಲು
ಹೋಗದತಿ ಮೂರ್ಖತೆಯ ಮಾಡುವಡೆ ಕಾರುಣ್ಯ
ಸಾಗರಂ ತಾನಾಗಿ ನೂಕಲರಿದಿನ್ನಿದ
ಕ್ಕೇಗೈವೆನಿಂದೆನುತ್ತಿರಲೆಂದಿನಂತೆ ಪೊಡವಡಲು ಬಂದರು ಗುಡ್ಡುರು          ೪೭

ಪೊಡಮಡುವಡಡಿಯನೆಡೆಗೊಡದೆ ಕೆಡೆದೊಡಲಿಂಗೆ
ಮಡಿದು ಮುಸುಕಿರೆ ಕಂಡಿದೇನೀದೇನೆರಡನೆಯ
ಮೃಡ ಜಗದ ಗುರುವೆ ಸಿದ್ಧೇಂದ್ರ ಭೂತಸ್ನೇಹಿ ಕರುಣಿ ಲೀಲಾವಿಗ್ರಹ
ನುಡಿ ಹೇಳಿದಾರಿದೆಲ್ಲಿಯದೇಕೆ ಬಂದುದಾ
ವೆಡೆಗೆ ಹೋದಪುದೆಂದು ಕೇಳ್ದಡಂತದಱಾದಿ
ತೊಡಗಿ ಹೇಳಲು ತೊಡಗಿದಂ ತ್ರಿಕಾಲಜ್ಞಾನಿ ನೆಱಿ ಚರಾಚರಭರಿತನು           ೪೮

ನೆರದ ಪುಣ್ಯದ ರಾಶಿಯೋ ಎನಿಪ ಕೈಲಾಸ
ಗಿರಿಯ ಹರವರಿಯ ಹಿರಿಯರಮನೆಯೊಳೋರಣಂ
ತರ ಸರಿಸ ಸಾಲ್ ಪಂತಿವೆತ್ತು ಕುಳ್ಳಿರ್ದು ಹರಿಯಜಶಕ್ರಮುಖ್ಯರಾದ
ಸುರರ ಕಿನ್ನರರ ಖೇಚರರ ಗರುಡರ ಮಯೂ
ರರ ಗಣೇಶ್ವರರ ಮಧ್ಯಾಸನದೊಳಂಬಿಕಾ
ವರನಧಟ ಮದನಮದರದನಿ ಬಿದುವಿದಳನ ಮೃಗೇಶನೋಲಗವಿತ್ತನು        ೪೯

ಆ ಸಭೆಗೆ ರೂಪಾಕಮಂ ತೇಜಭಾನು ವಿ
ದ್ಯಾಸರಸ್ವತಿ ಕಳಾತುಹಿನಕಿರಣಂ ಭೋಗ
ವಾಸವನೆನಿಪ್ಪ ಗಂಧರ್ವನೊರ್ವಂ ಸಿರಿಯ ಸಂದಣಿಯೊಳೆಂದಿನಂತೆ
ದೇಸೆವಡೆದೈತಂದು ರುದ್ರಂಗೆ ಮೆಯಿಕ್ಕು
ವಾಸೆಯುತ್ಸವದಿ ತವಕದಿ ಭರದೊಳುರವಣಿಸಿ
ಹಾಸಿ ಹರಹಿದನು ನಿಜತನುವ ಶಿವನಂಘ್ರಿಯ ಸರೋಜಕೆಡಬಲನಱಿಯದೆ    ೫೦

ವಂದಿಸಿ ಮಹಾಹರುಷ ವರುಷದಿಂ ನನೆದೇಳ
ಲೆಂದಾಗಲನುಗೈಯುತಿರೆ ತನ್ನ ಕಾಲ್ ತಾಗಿ
ಹಿಂದಿರ್ದಘೋರಮುಖದಿಂದೊಗೆದೆ ಉಗ್ರಮುಖನೆಂದೆಂಬ ಗಣನಾಥನು
ನೊಂದು ಘೂರ್ಮಿಸುತೆಲವೊ ಗರ್ವವಿಡಿದಜ್ಞಾನ
ದಿಂದೊದೆದೆಯಾಗಿ ಕೃಷ್ಣಶ್ವಾನನಾಗು ಹೋ
ಗೆಂದು ಶಾಪವನಿತ್ತು ಪೋದನುರವಣಿಸಿ ಕೋಪಾಟೋಪ ಭರಭರಿತನು        ೫೧

ಮತಿ ಮಾಸಿ ಮುದ ಸೂಸಿ ಕಳೆಯೋಡಿ ಕಣು ಬಾಡಿ
ಧೃತಿಗೆಟ್ಟು ಮರವಟ್ಟು ಗತಿಗುಂದಿ ಮುಖ ಕಂದಿ
ಶಿತಿಕಂಠನಾಥ ನುಡಿ ಬಿಡಹೋಗಿ ಗಂಟಿಕ್ಕಿಕೊಂಡ ತೆಱನಾದುದೆನಗೆ
ಕ್ಷಿತಿಯೊಳಮೃತವನುಣಲು ರುಜೆ ಮೂಡಿದಂದದಿಂ
ನತನಾಗಬಂದು ನರಕಂಬಡೆದೆನತ್ಯಂತ
ಜಿತದುರಿತ ನಿನ್ನ ಕಂಡೆನಗಿದೆಂಬಾಗಳುಳಿದವರ್ಗೆ ಇನ್ನೇನೆಂದನು     ೫೨

ವಸುಧೆ ಹೇಸುವ ಜನನವಾದುದಿಂದೆಂದು ದೂ
ರಿಸದಿರೆಂದೆನಲು ದೂರಿಸಿದೆವೇನಿನ್ನಾವ
ದೆಸೆಯಿಂ ವಿಶಾಪವಹುದಂಬಿಕಾವರ ಕರುಣಿಸೆಂದು ಗಂಧರ್ವ ವೀರ
ಬೆಸಗೊಂಡೊಡೆನ್ನ ಜನ್ಮಕ್ಷೇತ್ರ ಕೈವಲ್ಯ
ದಸು ಪುಣ್ಯದಿಕ್ಕೆಯೆಂದೆನಿಪ ಸೊನ್ನಲಿಗೆಯೊಳ
ಗೊಸೆದು ಲಿಂಗಪ್ರಸಾದವನು ಕೊಂಡಡೆ ವಿಶಾಪಂ ನಿನಗೆ ಪೋಗೆಂದನು          ೫೩

ಇದು ಪೂರ್ವದೋಷವಿದಱಿಂದಾದ ಜನ್ಮವಿಂ
ತಿದು ಶಿವನ ಬೆಸನ ಬರವಿದು ನಿಮಿತ್ತಂ ಬಗೆವ
ಡಿದು ಕಾರಣಿಕವಿದು ಶುದ್ಧವಿದು ಶುಚಿಯಿದು ಬಹಿಷ್ಠವೇಷದ ನಿಜದಲಿ
ಸದುಹೃದಯದಲ್ಲಿರ್ದು ಮಲ್ಲಿಕಾರ್ಜುನನ ಧೂ
ಪದ ಮಹಾರೋಗಣೆಯ ಹೊತ್ತಿನೊಳುಘೇಯೆಂದು
ಮುದದೊಳೆಂದಪುದಾಗಿ ಹೆಸರುಘೇಕಾಳನೆಂದಂ ಸಿದ್ಧರಾದಿತ್ಯನು  ೫೪

ನಿಲ್ಲದಡಿಗಡಿಗೆ ದೇವರ ದಾನವಿತ್ತು ಮಱ
ಹಿಲ್ಲದಾದರಿಸುವುದು ಹೊರೆವುದೆಂದಾ ಗುಡ್ಡ
ರೆಲ್ಲರ್ಗೆ ಬೆಸನನಿತ್ತಱಿವಿಂಗೆ ಬೆಱಿಗಾಗಿ ಹೊಂಗಿ ಹೊಗಳುವ ಹಿರಿಯರ
ಸೊಲ್ಲಿಂಗೆ ತಲ್ಲಣಿಸಿ ನಾಚುತ್ತ ನಡೆತಂದು
ಮಲ್ಲಿಕಾರ್ಜುನನ ಪೂಜೆಯನೊದವಿ ಯೋಗಿಗಳ
ಬಲ್ಲಹಂ ಸಿದ್ಧಪತಿ ಶೈವಸಾಮ್ರಾಜ್ಯ ಸುಖದಿಂದಿರಲು ಕೆಲವು ದಿನಕೆ          ೫೫

ಬಂದು ದೇವರ ದಾನವಂ ಕೊಂಡು ಗುರುಪದದ
ಮುಂದೆಯೋಲೈಸಿ ಧೂಪಾರತಿಯೊಳುಘೆವುಘೇ
ಯೆಂದದು ಕೃತಾರ್ಥತೆಯನ್ನೆದಲು ವಿಶಾಪವಡೆದಂದು ಗಂಧರ್ವ ಹೋಗಿ
ಪಿಂದಿರ್ದುಘೇಕಾಳವೆಸರ ಶುನಕನ ಶವವ
ಹೆಂದದ ಮಹಾವಿಭವವೆರಸು ಗೊಪೆಯೊಳಗಿಕ್ಕಿ
ಎಂದಿನಂದದಿ ಸಿದ್ಧಪತಿ ಶೈವಯೋಗ ಸುಖದಿಂದಿರ್ದನೇವೊಗಳ್ವೆನು           ೫೬

ಬಡತನಂ ಹೆಚ್ಚಿ ಸಾಲಂ ಹತ್ತಿ ದಾಯಾದ
ರೊಡವೆಯಿಲ್ಲವನಿಱಿಕಿಕೊಂಡರವರುರವಣಿಸಿ
ಹಿಡಿಹಿಡಿಯೆ ಮೀಱಿ ಮುಂಗೈಯ ಬಲುಹಿಂ ಕದ್ದು ಸೊನ್ನಲಿಗೆಗೋಡಿಬಂದು
ಅಡಿಗಿ ಬಿಲ್ಲೇಶ ಬೊಮ್ಮಯ್ಯನೆಂಬಂ ರೂಪ
ಮಡಗಿ ಶಿವಸಿದ್ಧಪತಿಯಂ ಕಂಡು ಕರುಣವಂ
ಪಡೆದೆಕ್ಕವಿಂಡಿಂಗೆ ಸಲುವ ವೇಷವನಾಂತು ಗುಡ್ಡನಾಗಿರುತಿರ್ದನು೫೭

ನುಡಿಯ ನಯಮಂ ವೇಷದೊಪ್ಪಮಂ ತೋಱಿ ತ
ನ್ನೊಡಲೊಳನ್ಯಾಯಶತಮಂ ಮಡಗಿಕೊಂಡು ನೆಱಿ
ತೊಡೆದು ಹುಲುಹೊರೆದು ಮುಚ್ಚಿದ ವಿಷದ ಮಡಕೆಯಂದದಿಹೊಱಗೆಮೆಱಿಯುತಿರಲು
ಒಡವೆ ಹೋದಳಲಿಗರು ನಿಲಲಾಱದಾತನೀ
ಯೆಡೆಯೊಳೀ ಪರಿಯೂಳಿರ್ದಪನೆಂದು ಕೇಳ್ದು ಘುಡು
ಘುಡಿಸಿ ನಡೆತಂದರೈತಂದು ಕಂಡರು ಕಂಡು ಪಿಡಿದರಾ ಪುರದ ನಡುವೆ         ೫೮

ನೆವೊಡ್ಡಿ ನೀಂ ಕದ್ದುಕೊಂಡುಬಂದೆಮ್ಮ ವ
ಸ್ತುವ ಕೊಡೆಂದೇಕಾಂತದೊಳ್ ನುಡಿದಡೆನ್ನ ವ
ಸ್ತುವನು ನಾಂ ತಂದೆನಲ್ಲದೆ ನಿಮ್ಮ ವಸ್ತುವಂ ತಂದೆನೇ ಎಂದಂಜದೆ
ಭವಿಗಳಿಂದೆಕ್ಕವಿಂಡಿಂಗುಱುವ ಗುಡ್ಡನಹ
ಶಿವಭಕ್ತನಹ ಸದಾಚಾರಿಯಪ್ಪೆನ್ನ ಮೇ
ಲವಿಚಾರದಿಂ ಕಳವನಿಟ್ಟರೆಂದಾಕ್ರೋಶದಿಂ ಜಱಿದು ಜಂಕಿಸಿದನು   ೫೯

ಇಲ್ಲಿ ಬಾಯಾಲಿದಲ್ಲದೆ ಹೋಗದೆಂದು ನೆನೆ
ದಿಲ್ಲದನ್ಯಾಯಮಂ ಎನ್ನಮೇಲಿಟ್ಟ ನಿ
ಮ್ಮೆಲ್ಲರಂ ಕೊಲುವೆನೆನ್ನೊಡಲ ನಿಮಗೊಪ್ಪಿಸುವೆನೆಂದು ದಿಟ ಶುದ್ಧನಂತೆ
ಕಲ್ಲ ಹಾಯ್ವಂತಿಱುದುಕೊಂಬಂತೆ ಸಂಭ್ರಮಿಸು
ತಲ್ಲಲ್ಲಿ ಹೋಹರಂ ಕರೆಕರೆದು ದೂಱುತಿಹ
ಘಲ್ಲಣೆಗೆ ತಲ್ಲಣಿಸಿ ಬಿಡ ಹೋಗಿ ಗಂಟಿಕ್ಕಿದಂತಾದಾರ ಬಡವರು೬೦

ಇನಿತುಗ್ರವೇಕೆ ಬೊಮ್ಮಯ್ಯ ನೀನೊಲಿದು ಕೊ
ಟ್ಟನಿತೆ ಸಾಕೆನಲು ಕೊಡುವಂತಾಗಿ ಮುನ್ನ ಕೊಂ
ಡೆನೆ ದಾನವಾಗಿ ಕೊಡು ಕೊಡುವಡೆನ್ನರ್ಥವಲ್ಲಲ್ಲದೊಡೆ ಬಳಿಕಾರದು
ಧನವೆಲ್ಲ ಮಲ್ಲಿಕಾರ್ಜುನನ ಧರ್ಮವ್ಯಯದ
ದೆನೆ ಧರ್ಮದೊಳಗೆಮ್ಮ ಭಾಗೆಯರ್ಥದಲಿ ಬೆಳೆ
ವನಿತು ಧರ್ಮವನಾದೊಡಂ ಕರುಣಿಸೆಮಗೆ ಕೈಮುಗಿದು ಬೇಡಿದೆವೆಂದರು     ೬೧

ಒಡಲಿಲ್ಲದುಸುರುಂಟೆ ನಿಮಗೆನ್ನ ಮೇಲೆ ಬ
ಪ್ಪೊಡವೆಯಿಲ್ಲೆನೆ ಧರ್ಮವುಂಟೆ ಕೆಡುವೊಂಡವೆಯಂ
ಕೊಡೆ ಕಂಡು ಕೆಡದ ಧರ್ಮದ ಕೊಡುವೆನೇ ಎನಲು ಕರುಣಹುಟ್ಟಿದ ದಿನದಲಿ
ಕೊಡು ಕೊಡದೆ ಮಾಣಿನ್ನು ಹೋಹೆವೇ ಎನಲೆನ್ನ
ಬಡವನಭಿಮಾನವಂ ಕೊಂಡು ಪೋದಪಿರೆನಲು
ಬಿಡುವೆನೇ ಹೋದಿರಾದಡೆ ಭಕ್ತರಾಣೆಯೆಂದಿಟ್ಟ ತಡೆಯಂ ಮೂರ್ಖನು      ೬೨

ನಾವಂಜಿ ಬಿಟ್ಟಡಂ ತಾಂ ಬಿಡಂ ಕಂಡ ನಾ
ವೀವೂರೊಳೈದೆ ಮೊರೆಯಿಡುವೆವೆಂದಾ ಸಾಧು
ಜೀವಿಗಳು ಹುಲುವಿಡಿದು ಮೊರೆಯಿಟ್ಟಡಾ ಧ್ವನಿಯ ಕೇಳ್ದು ಸಿದ್ಧವರೇಣ್ಯನು
ಆವ ಪಾಪಿಷ್ಠನೂಳಿಗವೊ ನಮ್ಮೂರೊಳೆಂ
ದೂವಿಲ್ಲ ಕರೆಯೆನಲು ಕರೆದುತಂದರು ಕವಿದ
ಗಾವಳಿಯ ಗಜಬಜದ ಮೊರೆಕಾಱರಂ ಮೊರೆಗೆ ಗುಱಿಯಾದ ಪಾತಕನನು      ೬೩

ಹಲವುಪಾಸಂ ಪತ್ತಿ ಬಱತ ಬಸುಱಱತ ಬಾಯ್
ಕುಳಿದ ಕಣ್ಣಿಳಿವ ಕಂಬನಿ ಹಿಡಿದ ಹುಲು ದರ್ಪ
ವಳಿದ ನಡೆ ನಡುಗುವೆದೆವೆರಸು ಮೊರೆಯಿಡುವವರಿಗಭಯವಿತ್ತೋವಿ ನಿಲಿಸಿ
ತಿಳಿಯ ಹೇಳೆನಲೀತ ಕದ್ದುತಂದೆಮ್ಮರ್ಥ
ದೊಳಗೆಮ್ಮ ಭಾಗೆಯಂ ಕೊಡು ಕೊಡದೊಡದಱ ಬೆಂ
ಬಳಿಯ ಧರ್ಮವನಾದೊಡಂ ಕೊಡೆಂದೆನೆ ಕೊಡಂ ದೇವ ಚಿತ್ತೈಸೆಂದರು        ೬೪

ಧನದಾಸೆಯಂ ಬಿಟ್ಟೆವಾವು ಹದುಳದೊಳೆಮ್ಮ
ಮನೆಮುಖವ ಕಾಂಬಂತೆ ಕಳುಹಿಕೊಡು ಕರುಣಿ ಸಿ
ದ್ಧನಿಧಾನಯೆಂದು ಬಾಯ್ವಿಟ್ಟಡೆಲೆ ಬೊಮ್ಮಯ್ಯ ನಿನ್ನ ಮೇಲಿವರ ದೆಸೆಯ
ಎನಿತರ್ಥವುಂಟೆಲ್ಲವಂ ಕೊಡೆಂದೆನಲು ಕೊಡೆ
ನೆನಗಿದಂ ನೀವಾಡಬೇಡೆಂದೊಡೆಮ್ಮಾಜ್ಞೆ
ಯನು ಮೀಱಿದಾ ಎನಲಿದೊಂದಕ್ಕೆ ಮೀಱಿದಾತಂ ಕೊಡುವನಲ್ಲೆಂದನು    ೬೫

ಇವ ಮೂರ್ಖನೆಮ್ಮಿಂದ ತಿದ್ದದಾರಿಂದಪ್ಪು
ದವರ ಮುಂದಾಡಿಕೊಳಿ ಹೋಗಿ ತಲ್ಲಣಿಸದಿರಿ
ಜವಗುಂದದಿರಿ ಇದಕ್ಕಾವಿದೇವೆಂಬ ಗುರುವಾಕ್ಯವಿಡಿದಾ ಖಳನನು
ಅವರು ಕೊಂಡಾವಾವ ಧರ್ಮಾಧಿಕರಣವುಂ
ಟವಕೆಯ್ದಿ ಹೋಗೆ ಕಾಣುತ್ತ ಗುರುವಾಜ್ಞೆಗೆ
ಟ್ಟವನ ನೋಡುವರಲ್ಲವಾವೆಂದು ಕಣ್ಮುಚ್ಚಿಕೊಂಡು ನೂಕಿಸಿ ಕಳೆದರು     ೬೬

ಅವರ ಸುಡುನುಡಿಗೆಲ್ಲ ನಾಚಿ ಹೇವರಿಸಿ ಜ
ನ್ಮವ ಸುಡು ಸುಡೆಂದು ಮನನೊಂದು ನಡೆತಂದೊಂದು
ಶಿವನಿಳಯಮಂ ಪೊಕ್ಕು ಭಿತ್ತಿಯಂ ನೆಮ್ಮಿ ಕೂರಲಗನುಗಿದರವರಿಸದೆ
ತಿವಿದುಕೊಂಡಂ ಕೊಂಡನೇಳೆಂಟು ಹತ್ತು ಘಾ
ಯವನೊಡನೆಯವರಂಜಿ ಬೇಡವೇಡೆನಲು ಜೀ
ವವನುಳಿದಧೋಗತಿಗೆ ಹೋದನೆನೆ ಗುರುವಾಜ್ಞೆಗೆಡಲದೇ ವಿಧಿಯಾಗದು      ೬೭

ಪ್ರತಿವಾದಿಗಳು ನಡುಗಿ ಬಾಯ್ಬಿಡುವ ಬಂದು ದು
ರ್ಮತಿ ಮೂರ್ಖ ಬೊಮ್ಮಯ್ಯನಿಱಿದುಕೊಂಡಿಂದಿಂತು
ಹತವಾದ ನಮಗೇನು ಗತಿಯೆಂದಡಂಜಬೇಡೆಂದವರ ಧನವೆಲ್ಲವ
ಅತಿ ಕರುಣದಿಂ ಕೊಟ್ಟು ಕಳುಹಿ ಘನಪಾಪವೂ
ರಿತನನೆಳೆದಗಳೊಳೀಡಾಡೆಂದು ಬೆಸಸಿ ಜಿತ
ರತಿನಾಥನಪ್ರತಿಮನತುಳಬಳ ಸಿದ್ಧರಾಮಂ ಸುಖದೊಳಿರುತಿರ್ದನು            ೬೮

ಉತ್ತಮರನೋವುತ್ತ ಪೊದ್ದಿದವರಘವನಳಿ
ಯುತ್ತ ಕೆಱಿಯಂ ತೋಡಿಸುತ್ತ ಹೋಮವನು ನಡೆ
ಸುತ್ತ ಕವಿಲೆಗಳ ಹಿಂಡಂ ರಕ್ಷಿಸುತ್ತ ಕೈಲಾಸಗಿರಿಗೆಡೆಯಾಡುತ
ನಿತ್ಯನೇಮವನು ನಡಸುತ್ತ ಧರ್ಮಂಗಳಿಗೆ
ಚಿತ್ತವೀಯುತ್ತಖಿಳ ಸಾಮರ್ಥ್ಯವಂ ತೋಱಿ
ಸುತ್ತ ಗುರುರಾಯನತಿ ಸುಖಸಂಕಥಾ ವಿನೋದದೊಳಿರುತೊಂದು ದಿನವು     ೬೯

ಎಂದಿನಂತುದಯದೊಳು ಕೈಲಾಸಗಿರಿಗೆ ತರು
ಣೇಂದುಧರನೆಡೆಗೆ ಸಿದ್ಧೇಂದ್ರನೈತರ್ಪಾಗ
ಮುಂದೈಸಿ ತಳಿತ ತಳೆಗಳ ತಂಪಿನೊಳು ಝೂಡಿಸುವ ಚಮರ ಸೀಗುರಿಗಳ
ಸಂದಣಿಸಿ ಹಾಡುವಾಡುವ ನುಡಿವ ಕೀರ್ತಿಸುವ
ವಂದಿಗಳ ವನಿತೆಯರ ವಾಹನದ ಪರಿಜನದ
ಸಂದಣಿಯೊಳಿದಿರಾಗಿ ಬರುತಿರ್ದನೊರ್ವ ಗಂಧರ್ವ ಗಗನಾಂಗಣದೊಳು        ೭೦

ದೂರದಿಂ ಕಂಡುನ್ನತಾಸನವನಿಳಿದು ಮನ
ವಾರೆ ಮೆಯ್ಯಿಕ್ಕುತಿರೆ ಬೇಡ ಸುಕುಮಾರ ನೀ
ನಾರಾವಲೋಕದರಸೆಮಗೇಕೆ ವಂದಿಸಿದೆಯೆಂದು ಸಿದ್ಧಂ ಕೇಳಲು
ಚಾರು ಗಂಧರ್ವನಾ ಪುರದೊಳು ಗಣೇಶ್ವರನ
ವೈರದೊಳುಘೇಕಾಳನಾಗಿರ್ದು ನೆಱಿ ನಿಮ್ಮ
ಕಾರುಣ್ಯದಿಂ ವಿಶಾಪಂಬಡೆದೆನೆಂದು ಬೆನ್ನೈಸಿ ಮತ್ತಿಂತೆಂದನು       ೭೧

ಎನಗೆ ನಿಜವಾಯ್ತಿನ್ನು ನರಕವಡೆದಿರ್ದೆನ್ನ
ತನಯನಂ ನಿಮಗೆ ಬಿನ್ನವಿಸಿ ತೆಗಸಿದಪೆನೆಂ
ದನುಗೈದು ತಾನುಂಡು ತನ್ನ ಗುಡ್ಡಂಗೆ ಹಾಳೆಯನಾಂತನೆನಿಸುಗೆಂದು
ನೆನೆದೆನ್ನ ಶಾಪವಂ ಕಳೆದ ದಾನವನೊಂದು
ಕನಕ ಕಳಸದಲಿ ಕೊಂಡೊಯ್ದಧೋಗತಿಯಲಿ
ರ್ದನನೆತ್ತಿ ತರುತಂದುವೊಂದು ಹೊಸತಂ ಕಂಡೆನಯ್ಯ ಚಿತ್ತೈಸೆಂದನು          ೭೨

ಬಿಡೆ ನಿಮ್ಮ ಗುಡ್ಡ ಬಿಲ್ಲೇಶಬೊಮ್ಮಯ್ಯನೆಡೆ
ವಿಡದೆ ನರಕದೊಳದ್ದು ಕಡಿವ ಕಾಸುವ ಕೊಯ್ವ
ಸುಡುವ ದಂಡಣೆಗಾಱದೆಲೆ ಸಿದ್ಧರಾಮಯ್ಯ ರಾಮಯ್ಯ ರಾಮಯೆಂದು
ಅಡಿಗಡಿಗೆ ನೆನೆಯುತಿರ್ದಪನವನನಲ್ಲಿಂದ
ಬಿಡಿಸಿ ತರಬೇಕೀ ಮಹಾವೇಷವೀ ನಾಮ
ವಿಡಿದು ಮತ್ತೀ ನರಕವೇಕಾದುದೆನಗಿದಂ ತಿಳುಹಿಕೊಡಬೇಕೆಂದನು  ೭೩

ತೊಡೆಯ ಹೊಡೆದಡೆ ಬಪ್ಪ ನಿದ್ರೆ ತೀವಿಹುದು ಮಾ
ಣ್ದೆಡೆಗೆಯ್ದು ತಿವಿಯೆ ಕೆಡುವಂತೆ ಶಿವನಂ ನೆನೆಯು
ತೆಡೆಯೊಳನ್ಯಾಯಮಂ ಮಾಡಿ ಮತ್ತಂ ನೆನೆಯುತಿರ್ದೊಡಾ ಶಿವನ ನಾಮಂ
ಹುಡುಕುನೀರದ್ದದಿಹುದೇ ಮಗನೆಯೆನೆ ದೇವ
ಸೊಡರನಾವಾಗ ಪೊತ್ತಿಸಿದೊಡಂ ತಿಮಿರಮಂ
ಕೆಡಿಸದೇ ನಾಮಕ್ಕೆ ಮಲೆವ ನರಕಗಳುಂಟೆ ತಂದೆ ನೀ ಹೇಳೆಂದನು    ೭೪

ದುರುಳನವನಿರ್ದಪಂ ತೆಗೆಯಲೇಕೆನೆ ಜಗದ
ಗುರುವೆ ವತ್ಸನ ಗುಣವ ನೋಡಿತೇ ಧೇನು ಸುರು
ಚಿರಪಯಃಪಾನಮಂ ಕೊಡುವಳೆಂದಾಡಿದಾ ಗಂಧರ್ವವೆರಸು ನಡೆದು
ಹರನೋಲಗವನೆಯ್ದಿ ಮೆಯ್ಯಿಕ್ಕಿ ನಿಂದು ಪುರ
ಹರ ಕೃಪಾಕರ ಶಿವಾವರ ಸುಖಂಕರ ಮಹೇ
ಶ್ವರ ಸುರಾಸುರ ನಮಿತ ಚರಣ ಶರಣೆಂದು ಹೊಗಳ್ದನು ಸಿದ್ಧಕುಲ ತಿಲಕನು           ೭೫

ಬಸುಱೊಳಗೆ ಮೊಳೆತ ಗರ್ಭವನು ತದ್ವದನ ಸೂ
ಚಿಸುವಂತೆ ಮನದ ಕಾರ‍್ಯವನು ತದ್ವದನ ಸೂ
ಚಿಸುತಿದೆಯಿದೇನು ಹೇಳೇಳೆಂದು ಹಿಡಿದೆತ್ತಿ ತರ್ಕೈಸಿ ತೊಡೆಗೆ ತೆಗೆದು
ಬೆಸಗೊಳಲು ದೇವ ದೇವರ ಗುಡ್ಡನಜ್ಞಾನ
ವಶದಿ ನರಕಂಬಡೆದನೆಂದೀತನಿಂ ಕೇಳ್ದೆ
ನಸುಗತಿಯನಳಿದೆತ್ತುವುದಕೆ ನೇಮವನೀಯಬೇಕೆಂದನಪ್ರತಿಮನು   ೭೬

ಗುಣಿಯೆ ಸೈಪಿನ ಕಣಿಯೆ ಶಿವಸಿದ್ಧಕುಲಶಿರೋ
ಮಣಿಯೆ ಭಕ್ತರ ಋಣಿಯೆ ಸಾಮರ್ಥ್ಯ ದಯದ ಸಂ
ದಣಿಯೆ ಇದಕೆನ್ನ ಕೇಳ್ವರೆ ನರಕದಿಂದವನನೆತ್ತು ಹೋಗೀಗಳೆಂದು
ಫಣಿಕಂಕಣಂ ಬೆಸಸೆ ತಿರುಗಿ ಮೇರುವಿನ ತೆಂ
ಕಣ ದೆಸೆಯೊಳಿಹ ಯಮನ ಸಂಯಮಿನಿಯೆಂಬ ಪ
ಟ್ಟಣದತ್ತ ನಡೆದನುಬ್ಬೆದ್ದ ಕತ್ತಲೆಯೊತ್ತಿ ನಡೆವ ಭಾನುವಿನಂದದಿ            ೭೭

ಆ ಪುರದ ಬಟ್ಟೆಯೆನಿತಗಲದೊಳು ಪಾಪಿಗಳು
ಪೋಪಾಗ ಮುಳು ಕಲ್ಲು ಮೊಳೆ ಹುಲ್ಲು ನಡೆ ರಕ್ತ
ಪೋಪವರನಾ ಪರಿಯಲೆಳೆಯುತ್ತ ಉರಿಬಿಸಿಲು ಹೊಡೆಯ ಡಗೆ ಸುತ್ತಿ ದೇಹ
ತಾಪಿಸುವ ಕರ್ಮಿಗಳು ಕ್ಷುತ್ಪಿಪಾಸೆಗಳಿಂದ
ಜೀಪನಿತು ದುಃಖದಿಂ ಬಳಲುವರ ನೋಡುತಿ
ರ್ಪಾ ಪೊತ್ತು ಸುಕೃತ ಜೀವಿಗಳಿಗಾ ಧರ್ಮದೂತರು ಕೊಂಡು ಬರುತಿರ್ದರು  ೭೮

ಹಸಿದೆಡೆಯೊಳಮೃತಾನ್ನಮಂ ಬಿಸಿಲ್ಗೆ ಕೊಡೆಯನತಿ
ತೃಷೆಗೆ ಶೈತ್ಯೋದಕವ ನಡೆವೆಡೆಗೆ ಪಾದುಕೆಯ
ಮಿಸುಪ ಹಳಿಕರ್ಪುರದ ವೀಳೆಯವ ವಾಹನಂಗಳನಾಂತು ಕೊಂಡೊಯ್ಯುತ
ಬೆಸಗೊಂಡು ಶೀತವಾತೋಷ್ಣಕುಪಚಾರಮಂ
ವಶವರ್ತಿಯಾಗಿ ಮಾಡುವರಿಗಾವೇಂ ಹಗೆಯೆ
ವಶವಹುದೆ ನಮಗೆನಲು ಮುನ್ನ ಮಾಡದೆ ಬಂದು ಬಯಸಲೆಲ್ಲಿಯದೆಂಬರು           ೭೯

ಆವಾವ ಧರ್ಮಪುರುಷರಿಗೆ ಆ ಕಾಲ ತಾ
ನಾವ ರೂಪಾಗಿರ್ಪನೆಂದೆನಲು ಪಾಪಿಗಳ
ಜೀವಮಂ ಕೊಂಬ ಯಮನಾಗಿಯೆ ಭಯಂಕರಕಾರಮಂ ತಾಳ್ದಿರ್ಪನು
ದೇವದ್ವಿಜಾದಿ ಪೂಜಾತತ್ಪರರಿಗಾವ
ಭಾವವದಱೊಳು ತಾಳ್ದು ರೂಪಾಗಿ ಧರ್ಮನಂ
ತಾ ವಿನಯ ಮೃದುಮಧುರ ವಾಕ್ಯದಿಂದಿರುವ ಗುರುವಂ ಕಾಣುತಿದಿರೆದ್ದನು            ೮೦

ಹಿಂದೊಬ್ಬ ಸಾನಂದನೆಂಬ ಶಿವಯೋಗಿಯಿಂ
ದಂದೊಮ್ಮೆ ನರಕವರೆಯಾಯ್ತು ಮತ್ತಿಂದೀತ
ನಿಂದ ನೆಱಿ ಹಾಳಾಗದಿರದೆಂದು ನಡುಗುತಿದಿರೆದ್ದು ಪರಿವಾರವೆರಸು
ಬಂದು ಕಾಲಂ ಕಾಲಮೇಲೆ ಬಿದ್ದೆದ್ದು ಭಯ
ದಿಂದ ಕೈಗೊಟ್ಟು ಸಿದ್ಧೇಂದ್ರನಂ ತಪ್ಪಾಗ
ಮುಂದೆ ನಾನಾ ಭಯಂಕರದೊಳಿಹ ನರಕವನದಾವ ಕವಿ ಬಣ್ಣಿಸುವನು        ೮೧

ಪರನಿಂದೆ ವಿಶ್ವಾಸಘಾತಕ ಸುರಾಪಾನ
ಗರುತಲ್ಪಕಂ ಪ್ರಾಣಿವಧೆ ಸುವರ್ಣಸ್ತೇಯ
ಪರದಾರ ಗೋಹತ್ಯ ಮಿತ್ರವಂಚನಮಗಮ್ಯಾಗಮನ ನೀಚ ಸಂಗ
ನಿರಪವಾದವಭಕ್ಷ್ಯ ಭಕ್ಷಣಂಗಳು ದುರಾ
ಚರಣೆ ನಿರ್ದೈವತೆ ಕೃತಘ್ನತೆ ಬ್ರಹ್ಮವಧೆ
ಹರಭಕ್ತವೈರ ಮಾಹೇಶ್ವರ ಪ್ರಹಸನದ ನರಕದಂಡನೆಯೆಸೆದುದು  ೮೨

ಅಱಿದಱಿದು ಪಾಪಮಂ ಮಾಡಿದಧಮರನು ಕೆಡೆ
ಇಱಿಸು ಹೊಡೆ ಕಡಿ ಕೆತ್ತು ಕೀಸು ಕೊಱಿ ಕೆರೆ ಕುಸುರಿ
ದಱಿ ಕಾಸು ಚುಚ್ಚು ಸುಡು ಹಿಂಡಿ ಹಿಳಿ ಹಿಕ್ಕು ಹರಹೆಂದೆಂಬ ಘಲ್ಲಣೆಗಳ
ಮಱುಗಿ ಮೊರೆಯಿಡುವ ಕಿಂಕುರ್ವಾಣ ವನಚದಿಂ
ದೊಱಲಿ ಬಾಯ್ವಿಡುವ ನರಳುವ ಚೀಱಿ ಮಾಣದಸು
ವಱಿಯಪ್ಪ ನರಕಿಗಳ ನಾನಾ ರವಂಗಳಿಂ ನರಕವದ್ಭುತವಾದುದು  ೮೩

ಕೊಂಕು ಸರಳಿಂ ಹೊಸೆವ ಚಕ್ರದಿಂದಿಡುವ ಕುರು
ಪಿಂ ಕೆರೆವ ಕಾದಂಬಿನಿಂದೆಸುವ ಹೆಗ್ಗೊಂಚಿ
ಯಿಂ ಕೊಯ್ವ ಕೊಡಲಿಯಂ ತಱಿವ ಖಡ್ಗದಿ ಹೊಡೆವ ಹೇರೀಟಿಯಿಂದಿಱುಬುವ
ಅಂಕುಶದೊಳೆತ್ತುವಲಗಿಂದಿಱಿವ ಕತ್ತರಿಗ
ಳಿಂ ಕತ್ತರಿಸುವ ಬಾಚಿಯೊಳು ಕೆತ್ತುವ ಕತ್ತಿ
ಯಿಂ ಕಡಿವ ಕರಗಸದಿ ಕೊಱಿವ ರೌರವದ ನರಕಂ ಭಯಂಕರವಾದುದು        ೮೪

ಸೆಳೆವ ಸೇದುವ ಬೀಸುವೊಗೆವ ಕುಸುಕುವ ಹಿಂಡಿ
ಹಿಳಿವ ಕೆಡಹುವ ಹೊರಜಿಹೊಸೆವ ತಿರುಹುವ ಮುರುಹು
ವೆಳೆವ ನೇರುವ ತೆಗೆವ ತೇವ ಕಾಸುವ ಕೆರೆವ ಸುಡುವ ಸಂಧಿಸಿ ಚುಚ್ಚುವ
ಕುಳಿಯೊಳಿಕ್ಕುವ ಮುದುಡಿ ಮುಚ್ಚಿ ಮುಗ್ಗುವ ಮುಳಿವ
ಬಳೆಗಳೆವ ಹೋಳ್ವ ಸೀಳ್ವಾಱಿಸುವ ನೆಱಿಸುಲಿವ
ಖಳರ ಕಳಕಳದ ಕೋಳಾಹಳದೊಳಾ ರೌರವಂ ಭಯಂಕರವಾದುದು            ೮೫

ಕಾಹೇಱಿ ಕೆಂಗಲಿಪ ಕರ್ಬೊನ್ನ ಪುತ್ತಳಿಯ
ನೇಹಿದಿಂ ನಿನ್ನ ಮನದೋಪಳೆಂದಪ್ಪಿಸುವ
ರಾಹ ಎಂದಳುಕಿದಡೆ ಮುನ್ನ ಪರಸತಿ ಪುರುಷರಿಹಗೆಂದು ಕಾಣ್ಬುದೇನು
ಲೋಹರಸಮಂ ಕಾಸಿ ಮದ್ಯವಿದೆಯೆಂದೆಱಿಯೆ
ದೇಹಮಂ ಸುಡುತೊಳಗನಿಳಿಯೆ ಚೀಱಿದೊಡೆ ಸುಖ
ಬೇಹುದುಂ ಮಾಂಸಕ್ಕೆ ಕಾದ ಕಗ್ಗಲ್ಲ ಫಲವೆಂದವಂ ತಂದೀವರು  ೮೬

ಪರರ ಧನವಂ ರಾಜಚೋರ ಕೃತ್ಯದಿ ಕೊಂಡು
ಪರಿಪರಿಯ ವಸ್ತ್ರವಾಭರಣ ವಾಹನವನಾ
ಧರಿಸಿ ಸುಖಿಸಿದ ಸುಖಿಯ ಕಂಡು ಮಿಗೆಯುಡಿಸುವರು ತೊಡಿಸುವರು ಮುಡಿಯಿಸುವರು
ಹಿರಿದಪ್ಪ ಉರಿಯ ನಾಲಗೆಯ ವಸ್ತ್ರವ ಕಾದ
ಸರಪಳಿಯ ಕಟಕ ಮುದ್ರಿಕೆ ಮಂಡನಂಗಳಂ
ಬಿರಿಮುಗುಳ್ಗಳುಳ್ಳರಲ್ಗಳೆಂದು ಕೆಂಡವ ಮುಡಿಸುವರು ಲೋಗರೊಡವೆಯೆನುತ      ೮೭

ಪರಿಪರಿಯ ರೌರವಂಗಳ ನೋಡಿ ನೋಡಿ ಕೊ
ಕ್ಕರಿಸುತ್ತ ಬರವರಲು ಮುಂದೆ ನಾಯಕನರಕ
ದುರವಣೆಯ ದಂಡನೆಯನನುಭವಿಸಿ ಕಾದುಕ್ಕುವಧಮ ರಸಕೂಪದೊಳಗೆ
ಗುರುಸಿದ್ಧರಾಮಯ್ಯ ವರಸಿದ್ಧರಾಮಯ್ಯ
ಕರುಣಸೆಂದೊಱಲುತಡಿಗಡಿಗಾಳುತೇಳುತ್ತ
ಇರದೆ ತಲೆಯೆತ್ತಿ ಕಂಡಂ ಜಗದ ಗುರುವನಾ ಬಿಲ್ಲೇಶ ಬೊಮ್ಮಯ್ಯನು       ೮೮

ದುರುಳತನದಿಂ ದೇವರಾಜ್ಞೆಯಂ ಮೀಱಿದು
ಸ್ತರನರಕದೊಳು ನವೆದೆನಿನ್ನಾಱಿನಖಿಳೈಕ
ಗುರುವೆ ಪುಣ್ಯದ ಕರುವೆ ಭಕ್ತಸುರತರುವೆ ಎಂದತಿದೈನ್ಯದಿಂದೊಱಲಲು
ಕರಣಂ ಕಲಂಕಿ ಮತಿ ಮಾಸಿ ಮುದವದಿರಿ ಹಿರಿ
ಯರ ಬಲ್ಲಹಂ ಧೈರ‍್ಯಮೇರು ಕರುಣಾಬ್ಧಿ ನೆನೆ
ವರ ನಿಧಾನಂ ಮಗನೆ ಬಾರೆಂದು ನೀಡಿದಂ ನಿಜಕರದ ಲಾಕುಳವನು  ೮೯

ವಿನುತ ಲಾಕುಳವನಾ ಬೊಮ್ಮಯ್ಯ ಪಿಡಿದೊಡಾ
ತನ ಕಾಲ ಪಿಡಿದವನ ಕಾಲನೊಬ್ಬಾತನಾ
ತನ ಕಾಲ ಪಿಡಿದವನ ಕಾಲನದಿದೆನ್ನದೆಲ್ಲಾ ನರಕಿಗಳು ತಪ್ಪದೆ
ತನತನಗೆ ಪಿಡಿದು ತುಱುಗಿದ ನರಕ ಮಾಲೆಯಂ
ವಿನಯದಿಂದೆತ್ತಿ ಮೆಱಿದಂ ನರರ ಭವಮಾಲೆ
ಯನು ತುಡುಕಿ ನೆಗಪಿ ರುದ್ರಂಗೆ ಮಾಱುವ ಮಾಲೆಗಾಱನೆಂಬಂತಾಗಳು        ೯೦

ಭರವಸದಿ ತೆಗೆಯುತ್ತ ನೆನೆದು ಶಂಕಿಸಿ ತೆಗೆಯ
ಲರಿದೆನುತ್ತಿಳುಹಲನುಗೈಯುತಿರೆ ಕಂಡಿದೇಂ
ಮರಳಿ ಬಿಡದೆಲೆಲೆ ತೆಗೆ ತಂದೆ ಕಾಲ್ ಪಿಡಿದು ನೋಯುತ್ತಲಿವೆ ಕೈ ಬಿಡುತಿವೆ
ತರಣಿ ಮೂಡಲು ತಿಮಿರವೇ ಅಯ್ಯ ದಮ್ಮಯ್ಯ
ತರಹರಿಸಲಾಱದೀ ಬಿದ್ದೆವಯ್ಯೋ ದಯಾ
ಶರಧಿ ಶಿವಧೋ ಕರುಣಿಸೆಂದು ನರಕದ ನರರ ಮಾಲೆ ನೆಱಿ ಮೊರೆಯಿಟ್ಟುದು            ೯೧

ನಸುನಗೆಯ ಸಿರಿಮೊಗದ ಕಾರುಣ್ಯ ಲೋಚನದ
ವಸುಮತಿಯ ಶಶಿಮೌಳಿ ಸಿದ್ಧರಾಮಂ ದಯಾ
ರಸ ಚಿತ್ತನಭಯಹಸ್ತವನೆತ್ತಿ ಹೆದಱಬೇಡೊಬ್ಬನಂ ತೆಗೆಯ ಬಂದು
ಆಸುಗತಿಯ ಜೀವರೆಲ್ಲರನತ್ತಿದೊಡೆ ವಿಷಮ
ವಿಷಕಂಠನೇನೆಂಬನೆಂದಱಿಯೆನಿದ ಬಿನ್ನ
ವಿಸಿ ಬಂದು ತೆಗೆವೆನೆಂದಾಡಿ ನಡೆದಂ ರಜತಗಿರಿಗೆ ಸಿದ್ಧರ ದೇವನು  ೯೨

ಬಂದು ಕಂದರ್ಪದರ್ಪಾಂಬೋಧಿ ಪರಿಮಥನ
ಮಂದರಾಕಾರನಂ ಕಂಡು ವಂದಿಸಿ ತೊಲಗಿ
ನಿಂದೊಡೇಂ ಕಂದ ನೀನೆಂದಂತೆ ಗುಡ್ಡನಂ ನರಕದಿಂ ತೆಗೆದು ತಂದಾ
ಎಂದಡಾ ನರಕದೊಳಗುಳ್ಳ ನರಕಿಗಳೆಮ್ಮ
ನಿಂದೊಡನೆ ತೆಗೆಯಬೇಕೆಂದು ಶಿವದಿಡೆ ಮನಂ
ನೊಂದೆತ್ತುವಾರ್ತದಿಂ ಬಂದೆನನುಮತಿಗೊಡುವುದೆಂದನಚಳಿತ ಸಿದ್ಧನು       ೯೩

ಹಿಂದೆ ಸಂಚಿತ ಕರ್ಮವಿಲ್ಲದಿರ್ದೊಡೆ ದೋಷ
ವೃಂದಮಂ ಮಾಡಿದಾ ದೋಷವಿಲ್ಲದೆ ನರಕ
ದಂದುಗದೊಳಿಕ್ಕದಾ ನರಕದಿಂ ಶುದ್ಧರಾದಲ್ಲದೇಳಲ್ ಬಾರದು
ಇಂದು ನರಕಿಗಳೆಲ್ಲರಂ ನೀನು ತೆಗೆವಡೆಮ
ಗೊಂದು ಲಂಚವನೀಯಬೇಕೆಂದು ಶರಣಕುಮು
ದೇಂದು ಲೀಲಾಲೋಭದಿಂ ನುಡಿದಡೇನು ಬೇಕೆಂದನಚಳಿತ ಸಿದ್ಧನು           ೯೪

ಮೇದಿನಿಯೊಳಾದಿಲಿಂಗಕ್ಕೆ ನತದುರಿತನಿ
ರ್ಭೇದಿ ಲಿಂಗಕ್ಕೆ ಲೋಕದ ಯಂತ್ರವಿದ್ಯಾ ವಿ
ನೋದಿ ಲಿಂಗಕ್ಕೆ ಹನ್ನೆರಡು ಸಾವಿರ ಸೊಲಿಗೆ ತುಪ್ಪವಂ ನೆರಪಿ ತಂದು
ಆದರದೊಳಭಿಷೇಕವಂ ಮಾಡಿ ನಿರ್ಧನಿಕ
ರಾದರ್ಗೆ ಮದುವೆ ಸಾವಿರವನೊಂದೇ ಲಗ್ನ
ದಾದಿಯೊಳು ಮಾಡಿದೊಡೆ ತೆಗೆವುದಿವಱಿಂದಲ್ಲದವರಘಂ ಕೆಡದೆಂದನು     ೯೫

ದೊರಕಿಸುವೆನೆಂದಡಿಳೆಯೆತ್ತ ಹನ್ನೆರಡು ಸಾ
ವಿರ ಸೊಲಿಗೆ ಘೃತವೆತ್ತಲೊಂದೆ ಲಗ್ನದೊಳು ಸಾ
ವಿರ ಮದುವೆಯತ್ತ ಮಾಡಿದರುಂಟೆ ಮಾಡಿಸಿಕೊಳಲ್ ಬಯಸಿದಧಿಕರುಂಟೆ
ಭರದೊಳೊಂದಂ ಕೋಟಿಮಡಿಯಾಗಿ ಕೋಟಿಗಳ
ನೊರಸಿಯೊಂದಾಗದಂತಾಗಿಸುವ ಮಹಿಮೆ ದೇ
ವರಿಗೆ ನಿಜ ಮಾಡಿ ಮಾಡಿಸಿಕೊಂಬವಂ ನೀನೆ ನಾನೆನಿತಱವನೆಂದನು೯೬

ಎಂದ ಮಾತಿಂಗಿಂದುಜೂಟನತ್ಯಾನಂದ
ಸಂದೋಹದಿಂದಪ್ಪಿ ಕಂದನೇ ಕೋಯೆಂದು
ನಂದಿಕೇಶವನ ಕನಕರುಚಿರಚಿತ ವಾಳರೋಮದೊಳಗೊಪ್ಪಿಡಿಯ ನುಗಿದು
ಸಂದ ವಜ್ರದ ಕಟ್ಟನಿಕ್ಕಿ ಕೊಟ್ಟಿದನಾದಿ
ಲಿಂಗದ ಶಿಖೆಯಲಿಟ್ಟು ತುಪ್ಪದಭಿಷವ ಮಾಡ
ಲೊಂದೊಂದು ಬಿಂದು ಸಾವಿರ ಸೊಲಿಗೆಯಾಗಿ ಕೈಕೊಂಬೆನೆಂದನು ರುದ್ರನು  ೯೭

ಕಡೆಗೆ ದೊರಕೊಂಡೈಸು ಮದುವೆಯಂ ನೀ ಮಾಡಿ
ದೊಡೆ ಕೋಟಿಮಡಿಯಾಗಿ ಕೈಕೊಂಬೆನೆನ್ನ ತೊಡೆ
ಮಡದ ಮದಕರಿಯೆ ಭಕ್ತರ ಸಿರಿಯೆ ದುರಿತಗಜ ಹರಿಯೆ ಸಮಾರ್ಥ್ಯಗಿರಿಯೆ
ನುಡಿದವರನೆತ್ತುವುದು ಗುಡ್ಡರಾದಪರು ನಡೆ
ನಡೆಯೆಂದು ಶೂಲಿ ಕಳುಪಲು ಬಂದನೆರಡನೆಯ
ಮೃಡ ಸಿದ್ಧರಾಮನಖಿಳಕಳಾಭಿರಾಮನಸ್ಖಲಿತ ಪುಣ್ಯಾರಾಮನು  ೯೮

ಆ ಮಹಾನರಕ ತೀರದೊಳಂದು ಶಿವಸಿದ್ದ
ರಾಮನಾಥಂ ನಿಂದು ಕೊರಳೆತ್ತಿ ಕಣ್ಮುಚ್ಚಿ
ಕೈಮುಗಿದು ಪುಳಕಿಸುತ ಹಿಗ್ಗಿ ಹಾರೈಸಿಯುಚ್ಚರಿಸಲೆಂದಗಜೇಶನ
ನಾಮಮಂ ಮಂಗಳಸ್ತೋಮಮಂ ಭಕ್ತರ
ಪ್ರೇಮಮಂ ಪುಣ್ಯಾಭಿರಾಮಮಂ ನೆನೆವರ
ಕ್ಷೇಮಮಂ ಸುಕೃತ ವಿಶ್ರಾಮವೆಂದೆನಿಪ ಪಂಚಾಕ್ಷರಿಯನನುಗೈದನು            ೯೯

ಹರ ಮಹಾದೇವ ಶಂಕರ ಮಹಾದೇವ ಪುರ
ಹರ ಮಹಾದೇವ ಸದ್ಗುರು ಮಹಾದೇವ ಸು
ಸ್ಥಿರ ಮಹಾದೇವ ಶಶಿಧರ ಮಹಾದೇವ ಲೋಕೈಕ ದೇವಾಧಿದೇವ
ಹರಹರ ನಮಃಶಿವಾಯೆಂದೂರ್ಧ್ವರವದೊಳು
ಚ್ಚರಿಸೆ ನಾಮಂ ಹರಿದು ನರಕಿಗಳನುದ್ಧರಿಸಿ
ಹೊಱವಂಡಿಸಲು ಕಂಡು ಹೊಱವಂಟುದಖಿಳ ನಾನಾ ಜೀವಜಾಲಂಗಳು       ೧೦೦

ಪರಿಪರಿಯ ದಂಡನೆಗಳುಳ್ಳಧೋಗತಿಯನು
ತ್ತರಿಸಿದೆವು ನಿನ್ನಿಂದ ತಂದೆ ಭರದಿಂದ ಪುರ
ಹರಬಂದಿಕಾಱ ಕೈವಲ್ಯದಳವುಳಕಾಱ ಶುಭಸುಕೃತಸೂಱಿಕಾಱ
ನರಕಮದಮಥನ ಮಾಯಾದಿಶಾಪಟ್ಟ ರತಿ
ವರ ದರ್ಪದಳನ ಸದ್ಗುರು ಸಿದ್ಧರಾಮಯ್ಯ
ಕರುಣಿ ಕೈಕೊಂಡಿನ್ನು ಜನನ ಮರಣಕ್ಕೆ ನೂಂಕದೆ ಸಲಹು ಸಲಹೆಂದರು       ೧೦೧

ಮೊದಲಲೇ ಜನನ ಮರಣಕ್ಕಾಱಿವೆಂದಡಾ
ಗದು ವಸುಧೆಯೊಳಗೆ ನೀವೆಲ್ಲರುಂ ಹುಟ್ಟಿ ಬೇ
ಗದಿ ಬಂದಡುಪದೇಶವಿತ್ತು ಗುಡ್ಡರ ಮಾಡಿ ಪುಣ್ಯಪಥಮಂ ತೋಱಿವೆಂ
ಅದಱಿಂದ ಜನನ ಮರಣವನು ಮಾಣಿಸಿ ಮುಕ್ತಿ
ಪದವನೀವೆಂ ಹೋಗಿ ಬೇಗವೆಂದಾ ಸತ್ಯ
ಸದನ ವರವದನ ಜಿತಮದನ ಬೀಳ್ಕೊಟ್ಟ ಬೊಮಯ್ಯನೊಳಗಾದವರನು    ೧೦೨