ರಾಗ : ತಮ್ಮಿಚ್ಛಿ  ತಾಳ : ಝಂಪೆ

ಪಲ್ಲವ ||           ಸತ್ತ ಪ್ರಾಣಿಗಳ ಜೀವವ ಪಡೆಯುತಿರೆ ಜಗವು
ಚಿತ್ತಮುಟ್ಟೆಱಗುತ್ತಮಿರಲು ಸಿದ್ಧೇದ್ರಂಗೆ
ಉತ್ತಮಜ್ಞಾನಿಯಲ್ಲಮಪ್ರಭು ಬಂದನಾ ಸಿದ್ಧಕುಲತಿಲಕನೆಡೆಗೆ ||

ಸೃಷ್ಟಿಯೆಲ್ಲವನಾಳ್ವ ಸ್ಥಿರಪಟ್ಟವಂ ತನಗೆ
ಕಟ್ಟಲಿಕೆ ಶಿವಸಿದ್ಧರಾಮನಾಥನ ತರ
ಲ್ಕಟ್ಟಿದಂ ಕರ್ಣದೇವಂ ಸುಖಾಸನವನಾಳ್ಕುದುರೆಯಂ ಮಂತ್ರಿಯೊಡನೆ
ವಿಷ್ಟರವನೇಕ ಮಣಿಖಚಿತ ರಚಿತವ ಕಾಣ್ಕೆ
ಗೊಟ್ಟೆಱಗಿ ಬಿನ್ನವಿಸಿ ಬಾರದಿರ್ದಡೆ ಅಸುವ
ಬಿಟ್ಟು ಕಳೆವುದು ಬಱಿದೆ ಬಂದರೆನ್ನವರಲ್ಲ ಎಂದು ಕಳುಹಿದನಾಗಳು        ೧

ಬಂದ ಸಚಿವರು ಸಿದ್ಧ ಕೆಱಿಯ ಕೆಲಸದೊಳಿರ
ಲ್ಕಂದು ಮೆಯ್ಯಿಕ್ಕಿ ಕಾಣ್ಕೆಯನಿರಿಸೆ ಕಂಡಿದೇ
ನೆಂದಡವಧರಿಸುವುದು ದೇವ ಬಿಜ್ಜಳನ ತಮ್ಮಂ ಕರ್ಣದೇವ ತನಗೆ
ಎಂದೆಂದುಮಚಲ ಸಿಂಹಾಸನದೊಳಿರ್ಪುದಕೆ
ಇಂದುಧರಮೂರ್ತಿ ನಿಮಗೋಲೈಸಿದಂ ತಂದೆ
ಬಂದು ಪಟ್ಟವನು ಶ್ರೀ ಹಸ್ತದಿಂ ಕಟ್ಟಬೇಹುದಿದ ಚಿತ್ತೈಸೆಂದರು  ೨

ನಸುನಗುತ್ತೀ ಹೊನ್ನ ಪೀಠವೇಕೆಮಗಯ್ಯ
ಕಿಸುವೊನ್ನ ಹೆಗ್ಗೊಡನೊ ಮಲ್ಲಿಕಾರ್ಜುನನ ಬಾ
ಣಸ ಕೊಂದು ಚರುವಿಗೆಯೊ ಸಟ್ಟುಗವೊ ಎಮಗೆ ಗುದ್ದಲಿಯೊ ಹಾರೆಯೊ ಗೋರೆಯೋ
ವಸುವಿದೇಕೆಮಗೆ ತೆಗೆ ಪಟ್ಟಗಟ್ಟಿಸುವ ಜೋ
ಯಿಸನೊ ಭೂಪಾಳಿಗನೊ ಹಾರುವನೊ ಬಹುಮಂತ್ರ
ವಿಸರದಾಚಾರ‍್ಯನೋ ದೇಶಕ್ಕೆ ಮುಖ್ಯನೋ ನಾನೇನ ಬಲ್ಲೆನೆನಲು೩

ದೇವ ಸರ್ವಜ್ಞ ನೀನೇ ಸದಾಶಿವಮೂರ್ತಿ
ಗಾವ ಮಿಗಿಲುಂಟೆನಲು ಶಿವಶಿವೀ ಜೀವರಂ
ದೇವರಂ ಹೋಲಿಸುವರೇ ಅದಂತಿರಲಿ ದಾನವನುಂಡು ಮರಳಿ ಹೋಗಿ
ನೀವೆಲ್ಲರೆಂದೆನಲು ಅದನಾರು ಬಲ್ಲರೀ
ಜೀವವಂ ನಿಮಗೊಪ್ಪಿಸುವೆವೆಂದು ಅಲಗಕ್ಕೆ
ಹಾವ ಶಿಷ್ಟರ ನಿಲಿಸಿ ಮಲ್ಲಿಕಾರ್ಜುನ ಬಲ್ಲನೆನೆ ದಂಡಿಗೆಯನಾಂತರು        ೪

ಕನಕಮಣಿ ಖಚಿತ ಕಂಕಣಿಕೆಯ ಸುಖಾಸನದೊ
ಳನುಪಮಸ್ವಾತಂತ್ರ ಗುರುವ ಬಿಜಯಂಗೈಸಿ
ಮನಕೆ ಪರಿತೋಷ ಪುಟ್ಟಲು ವಜ್ರಪಂಜರದ ದಡ್ಡಿಯಡ್ಡಂ ಬಡೆಯಲು
ತನತನಗೆ ಬೇಳ್ಪನಿತು ಜತನವಂ ಮಾಡಿ ಪರಿ
ಜನ ಸುತ್ತ ಮುತ್ತಿ ಬೋವರಿಗೆ ಭೂಪನ ಅಗ್ರ
ಧನವಾದುದೆಂಬಂತೆ ಮನವೇಗದಿಂದ ಬಂದರು ರಾಜಧಾನಿಯೆಡೆಗೆ  ೫

ಮುಂದೆ ಚಾರರನಟ್ಟಿಯೀ ಬಂದರೆನಲಖಿಳ
ಬಿಂದದೊಳು ಮೆಱೆವ ಪಾತ್ರಗಳನುಪ್ಪರಿಗೆಯೊಳು
ನಿಂದಿರಿಸಿದರು ಹೊನ್ನ ರನ್ನ ತೋರಣವನು ಸಮಾರ್ಜನೆಯ ವೀಧಿಗಳನು
ಚೆಂದಂಬಡೆಯೆ ರಚಿಸಿ ಚಾತುರಂಗಂವೆರಸು
ಬಂದು ಭೂಪಂ ಕಾಣ್ಕೆಯಂ ಪಿಡಿದು ನೋಡುತಿರ
ಲಂದಣವದೇನೆಂಬೆ ಕಪಟವೇಷಿಯ ಹೃದಯದಂತೆ ನಿರ್ವಯಲಾದುದು        ೬

ಕಂಡಿದೇನೋ ಬಯಲು ಬಾಸಣದ ಆಸುರದ
ದಂಡಿಗೆಯ ಭಾರಕ್ಕೆ ಬೆವರುತ್ತ ಬೋವರತಿ
ಬೆಂಡಾದಿರಹುದಹುದು ಎಮ್ಮೊಡನೆ ಅಣಕವೇ ಈ ಪುರದ ರಚನೆ ಮಾಣ್ದು
ಭಂಡಿಕ್ಕಿ ನಗಬೇಹುದೆಂಬಭಿಪ್ರಾಯಮಂ
ಕಂಡೆನೊಳ್ಳಿಹ ಶಿಷ್ಟವಿಶ್ವಾಸಿ ಪರಿವಾರ
ಕೊಂಡು ಬಂದಿರಿ ಗುರುವನೆಂದು ಆಕ್ಷೇಪಿಸಲು ನಡುಗುತ್ತಲಿಂತೆಂದರು         ೭

ಬಿನ್ನಹಂ ಮಾಡಬೇಕಾಡಲಂಜುವೆವಿತ್ತ
ಬೆನ್ನೊಳಟ್ಟಿದ ತುರಗ ಪಾಯದಳವಱಿಯಲ್ಕೆ
ಬಿನ್ನವಿಸೆ ಕಾಣ್ಕೆಗೊಳ್ಳದೆ ಬಾರೆನೆನಲು ಸಿದ್ಧೇಂದ್ರನಾಗಳೆ ಕಂಪಗೊಳಲು
ಎನ್ನ ಪ್ರಾಣವನೊಪ್ಪಿಸುವೆವೆನುತ್ತಲಗಿಂಗೆ
ನಿನ್ನ ಕಾಲಾಣೆ ಹಾಯ್ದಡೆ ಬಲ್ಪಿನಿಂ ಬಿಡಿಸಿ
ಪನ್ನಗಾಭರಣ ಶ್ರೀ ಮಲ್ಲಿಕಾರ್ಜುನ ಬಲ್ಲನೆನಲು ದಂಡಿಗೆ ಚಾಚಿತು          ೮

ಹತ್ತಿರಿದ್ದರು ಅಂಗರಕ್ಷರುಂ ಲಾಳರುಂ
ಚಿತ್ತೈಸು ಸುಪ್ಪತಿಗೆಯೊಳು ಬಿಳಿದ ಪಚ್ಚಡಿಸಿ
ಮುತ್ತಿಯಾ ಪರಿಜನಂ ಬೆಱಗಾಗೆ ಸಿದ್ಧೇಂದ್ರನಂ ತಂದು ಬಿಜಯಗೈಸಿ
ಇತ್ತರದಿ ವಜ್ರಪಂಜರದ ದಟ್ಟಿಯ ಬಿಗಿದು
ಸುತ್ತ ಪರಿಜನವೈದೆ ಹರಿದು ಬರುತೆಲ್ಲಿಯಿಳು
ಹಿತ್ತಿಲ್ಲ ಹೊತ್ತ ಮೂವತ್ತು ಬೋವರು ಭಾರದಿಂದ ಬಳಲಿದರೆಂದರು        ೯

ಎನಲು ಬೆಱಗಾಗುತ ಕರ್ಣದೇವಂ ತನ್ನ
ಮನಕತಿ ಮಹಾವಿಸ್ಮಯಂ ಪುಟ್ಟಿ ತರಿಸುವುದ
ಕನುವಾವುದೆನಲು ಆತಂ ಕಂಬುಗೆಯ ಬಂಡಿಯೊಳು ಮಂದಸಂಗೊಟ್ಟಡೆ
ಘನಮಹಿಮನಂ ಪೊಗಿಸಿ ತಹೆನು ಶಿವನೇ ಬಲ್ಲ
ನನುಮಾನ ಬೇಡ ಕಳುಹೆನಲು ಆ ಪರಿಯಿಂದ
ಜನಪನಟ್ಟಲು ಬೇಗದಿಂದ ನಡೆತಂದು ಪುರದೊಳು ಗುರುಪದವ ಕಂಡರು     ೧೦

ದೇವ ನೀವೊಲಿದು ಬಂದಹೆಯೆಂದು ಹುಸಿವರೇ
ಜೀವಕ್ಕೆ ಕಡೆಯಾಯ್ತು ಕರ್ಣದೇವಂ ನಿಮ್ಮ
ನಾವಗಂ ಬಿಜಯಗಯೈಸಿಯೆ ತರಲ್ಕಟ್ಟಿದಂ ಬರಬೇಹುದೊಲ್ಲೆವೆನಲು
ಸಾವೆನೆಂದನುಗೆಯ್ಯೆ ಬೇಡ ಬೇಡವೂ ಅಣ್ಣ
ನಾವೇನ ಬಲ್ಲೆವೈ ಮಲ್ಲಿಕಾರ್ಜುನ ತನ್ನ
ಠಾವಿಂದ ತೆರಳುವಡೆಯೆನ್ನಿಚ್ಛೆಯೇನೆನಲು ತಂದ ಮಂದಸ ತೆಗೆದರು           ೧೧

ಮಗಮಗಿಪ ಕರ್ಪೂರ ಕಸ್ತುರಿಯ ಪರಿಮಳದ
ಸೊಗಸೆಸೆವ ಪೆಟ್ಟಿಗೆಯ ನಡುವೆ ಗದ್ದುಗೆಯಿಕ್ಕಿ
ಬಿಗಿಬಿಗಿದು ಸುತ್ತವೊತ್ತದ ಮಾಳ್ಕೆಯಿಂ ಹಂಸತೊಳದ ಮೃದುವ ಲೇಪಿಸಿ
ಮಿಗೆ ರಂಜಿಸುವ ಪರುಷ ಪುರುಷರೂಪಿನ ಲಿಂಗ
ಸೊಗಸು ಕರಡಗೆಯೊಳಿಡುವಂತಿಟ್ಟು ಬಳಿಕ ಮೂ
ಜಗ ಭರಿತನನುವಱಿಯದಲ್ಲಿರ್ದನೆಂದು ಮುದ್ರಿಸಿ ಹೂಡಿ ನಡೆಗೊಂಡರು    ೧೨

ಅತ್ತಲಾ ಬಂಡಿಯಂ ಬಳಸಿ ಪರಿಜನವೆಯ್ದೆ
ಎತ್ತು ತೆಗೆಯದೆ ನಿಲಲು ಮತ್ತೆ ನಾಲ್ಕೆರಡು ಬ
ಲ್ಲೆತ್ತುಗಳ ಹೂಡಿ ನಡೆಯಲ್ಕವುಂ ಬೆಂಡಾಗೆ ಮತ್ತೆ ಕೆಲವೆತ್ತ ಹೂಡಿ
ಅತ್ಯಂತ ಹರುಷದಿಂದರಮನೆಗೆ ಹೋಗಿ ನೋ
ಡುತ್ತಿರಲ್ಕಿತ್ತ ಸಿದ್ಧೇಂದ್ರ ಸೀಮೆಯನು ದಾಂ
ಟುತ್ತಲಾ ಮಲ್ಲಿನಾಥನ ಅವಸರದಲಿರಲ್ಕವರು ಬಳಿಕೇಗೈದರು    ೧೩

ಬಂಡಿಯನು ಚಾವಡಿಯ ಮುಂದಿರಿಸಿ ಬೀಯಗದ
ಕೊಂಡಿಯಂ ಕಳಚಿ ಸಲಗೆಯ ತೆಗೆದು ಕಾಳಸದ
ತಂಡ ತಂಡವ ಹಲಗೆಯಂ ಕೆಲಕ್ಕಿರಿಸಿ ಮುದ್ರೆಯ ನೋಡಿ ಬಿಗಿದ ನೇಣ
ಖಂಡಿಸಿ ಬಳಿಕ್ಕ ಮುಚ್ಚಳ ತೆಗೆದು ನೋಡಲಾ
ಖಂಡೇಂದುಧರನಿಂದಕಂ ಮಹಾಭಕ್ತಿಯಿಂ
ಕೊಂಡಾಡುತಿಹ ಧರ್ಮವೆಂತು ಬಯಲಾಗಿರ್ಪುದಂತು ಹಾಳಾಗಿರ್ದುದು        ೧೪

ಉಸುರಿಕ್ಕಲಱಿಯದತಿ ವಿಸ್ಮಯಂ ತನುಮನವ
ಮುಸುಕಿ ಮರವಟ್ಟು ನೃಪನಿರೆ ಕರಣಶಾಲೆಯೊಳು
ಪಶುಪತಿಯ ಪಟ್ಟವರ್ಧನ ಬಾಚರಸನು ಸೊಡ್ಡಳನ ಕರುಣದ ತರುಣನು
ನಸುನಗುತ ಬಂದಿದೇಂ ನಿರುಪಾಧಿಕ ಜ್ಯೋತಿ
ವಶವಹುದೆ ವಾಗ್ಜಾಲದಾ ಹಿರಿಯರೆಂದು ಭಾ
ವಿಸುವರೇ ಗುರುದೈವಶರಧಿಕರಿಗಳನು ಬಲುಹಿಂ ನಿಲಿಸಬಹುದೆಯೆನಲು      ೧೫

ಆದಡಾ ಗುರುವಚನದಂತೆಯಾ ರೂಪಿಗಾ
ಹಾದಿ ಹೊಯ್ದುವುದಲ್ಲದೆಮಗಹುದೆ ನೀವದಱ
ಭೇದವಂ ಬಲ್ಲಿರೆಲ್ಲವನು ಬಿನ್ನವಿಸಿ ಪಟ್ಟಾದೇಶ ನಿರ್ಧಾರವ
ಸೋದಿಸಿಂದೇ ಹೋಗಿ ನಾಳೆ ಬಹುದೆನಲವರು
ಮೇದಿನಿಯ ನಾಣ್ಣುಡಿಯ ವಾರಣಾಸಿಯ ಬಿಟ್ಟಿ
ವೋದರೆಂದೆಂಬುದೆನಗಾಯ್ತೆಂದು ಹರುಷ ಮಿಗಲಾ ಪುರಕ್ಕೈತಂದರು          ೧೬

ಚವುಕ ಮೆಱೆವಾಗ ಸಿದ್ಧೇಂದ್ರ ಮುಂದಿರುತ ಬರೆ
ತವಕಿಸುವ ಮನ ಬೆರಸಲನುಗೆಯ್ವ ಬುದ್ದಿ ಕೂ
ಡುವ ಚಿತ್ತ ಕಂಡಾ ಕೃತಾರ್ಥತೆಯಹಂಕರಣವೆಲ್ಲವೇಕೈಕವಾಗೆ
ಶಿವ ಶಿವ ಮಹಾಹರುಷ ವರುಷ ಕಂಗಳೊಳು ಅವ
ಯವದಿ ಪುಳಕಂ ಪೊಣ್ಮೆ ಗದುಗದದ ಕಂಪನದ
ನವಮೂರ್ತಿ ನೋಡುತ್ತ ಮೆಚ್ಚುತ್ತ ಶ್ರೀ ವಿಭೂತಿಯ ಕಾಣ್ಕೆಯಿತ್ತೆಱಗಲು   ೧೭

ಏಳೇಳೆನುತ್ತ ಶ್ರೀ ಹಸ್ತದಿಂ ನೆಗಪಿದಡೆ
ಭಾಳಾಕ್ಷ ಸೊಡ್ಡಳನು ಕರುಣಿಸಿದನೆಂದೆನುತ
ಲಾಳ ಪಡೆ ದೇವದಾನವ ಮಾನವರ್ಗೆ ದಡಿಗೊಂಡು ಸೊಡ್ಡಳನೆಂಬುದು
ಕೇಳುತಿರೆ ಉಂಡುಂಡು ಜಱೆವವಂ ಯೋಗಿಯೇ
ಬಾಲೆಯರ ಕಂಡೆಳಸುತಿರ್ಪ ಯೋಗಿಯ ಮೂಗ
ಬೀಳಲರಿವಂ ಶಿವಂ ಯೋಗಿಪಂಚಾನನಂ ಸೊಡ್ಡಳನು ಎನುತಿರ್ದನು            ೧೮

ಬೀಱದಿರು ಮರುಳೆ ಬಾಚಯ್ಯಯೆನುತಂ ಹರುಷ
ವೇಱುತ್ತ ನಡೆತಂದು ಯೋಗಮಜ್ಜನದನುವ
ತೋಱಿದಂ ನಿತ್ಯಪೂಜೆಯ ಪ್ರದಕ್ಷಿಣ ಸಮಾಧಿಯೊಳಿರ್ದ ಶಿವಗೋಷ್ಠಿಗೆ
ಬೇಱೊಂದು ನಿರ್ಜನಕ್ಕೊಯ್ದು ಅನುಭವ ಸುಖವ
ಹೇಱಿ ಅದಱೈಹಿಕಕ್ಕಾಱೆನೆನೆ ಸೊಡ್ಡಳಗೆ
ಬೇಱಾಗದಂತೆ ಸಲುವಂದಮಂ ಹೇಳೆ ಬಿನ್ನೈಸಿದಂ ನೃಪನೆಂದುದಂ  ೧೯

ಹರ ಮುನ್ನ ಹರಸಿ ಕಟ್ಟಿದ ಲಿಖಿತಪಟ್ಟಮಂ
ಪರಿಹರಿಸಿ ಮತ್ತೊಂದ ಮಾಡುವೀ ಸಾಮರ್ಥ್ಯ
ಹರಿಯಜರಿಗಾಗದೆನೆ ಸುರರ ನರರಳವೆ ಮಲ್ಲಯ್ಯನೇ ಬಲ್ಲನೆಂಬ
ಗುರುವಚನಮಂ ಕೊಂಡು ಮರಳಿಯವಗಱಿಪಿ ಬಾ
ಚರಸ ಸೊಡ್ಡಳಲಿಂಗದೊಳು ಸಂದನೆಂಬುದಂ
ನಿರುಪಮನು ಕಂಡು ಮತ್ತೊಂದು ವಚನವ ಹಾಡಿ ಸುಖಮಿರ್ಪ ಕಾಲದೊಳಗೆ            ೨೦

ಬೆಕ್ಕೊಂದು ಮಹಮನೆಯೊಳಿರ್ದು ಮಱಿಯಂ ಬೇಱೆ
ಯಿಕ್ಕೆಗೊಯ್ದೊಂದನಿರಿಸಿದ ಗುಡಿಲ ಬೇಗೆಯೊಳು
ಸಿಕ್ಕಿ ಸಾಯಲು ಹಿಂದೆ ಇರ್ದ ಮಱಿಯಱಚಿದಡೆ ಗುರು ಕೇಳ್ದು ಕರುಣ ಹುಟ್ಟಿ
ಎಕ್ಕವಿಂಡೊಬ್ಬನಿಂದವಱ ಶವಮಂ ತರಿಸಿ
ಸುಕ್ಕಿ ತನು ಮುರುಟಿದವಱೊಳು ದಾನಮಂ ಚೆಲ್ಲಿ
ಮಕ್ಕಳನಱಸುತೇಳೆ ಕರೆದಮೃತಕರದಿ ತಡವಲು ರೋಮ ಕೋಮಳಿಸಿತು      ೨೧

ಆಗಳದು ನಲಿದು ಮಱಿಗಳಿಗೆ ಮೊಲೆಗೊಡುತ ಸೊಗ
ಸಾಗಿರ್ಪುದಂ ಕಂಡು ಕೆಲರು ಸೋಜಿಗವೆನಲು
ಮೇಗಱಿವರಲ್ಲಿ ಇದು ಅರಿದೆ ಬ್ರಹ್ಮಾಂಡಂಗಳಾಗುಹೋಗಿನ ಜಾಣಿನ
ಸಾಗರಂಗೇನರಿದು ಎನುತಿರಲು ಗುರುಭೃತ್ಯ
ನಾಗಿರ್ಪ ಬೊಮ್ಮಿಸೆಟ್ಟಿಗೆ ಸಿದ್ಧನಾಜ್ಞೆಯಿಂ
ರಾಗಂ ಮಿಗಲು ಕಾಳಿಯಬ್ಬೆ ಸತಿಯಾಗಿ ಹತ್ತೆಂಟು ಮಕ್ಕಳ ಹಡೆದಳು          ೨೨

ಒಂದು ದಿನವವರ್ಗೆ ಪ್ರಸಾದ ಹಸುಗೆಯ ಬಾರಿ
ಬಂದಪ್ಪುದೆಂದು ಮಕ್ಕಳನು ಅಳಿಯಂದಿರಂ
ಹೆಂದದಿಂ ನಂಟರಿಷ್ಟರ ಬರಿಸಿ ಗೃಹಶೋಭೆಯಂ ಮಾಡಿಯನಿಬರೈದೆ
ಮಿಂದು ಮೈದೊಳೆದು ಸಿಂಗರಿಸುತಿರಲಂತವರ
ಹಿಂದೆ ಯಜಮಾನಿತಿಯೆನಿಪ್ಪ ಕಾಳವ್ವೆಯಂ
ಬಂದು ಕಾಳೋರಗಂ ಹಿಡಿಯೆ ಸತ್ತಳು ಮೀಸಿ ಕುಳ್ಳಿರಿಸಿ ಗೋಳಿಟ್ಟರು         ೨೩

ಆ ಸುದ್ದಿಯಂ ಕೇಳ್ದು ಬೊಮ್ಮಿಸೆಟ್ಟಿಯುಮಿನಿತು
ಕ್ಲೇಶ ದುಗುಡಂದಳೆಯೆ ಗುರುಪ್ರಸಾದಂಗೊಂಡ
ಡಾ ಸತಿಯ ಹೊಱಗೆ ದಾನವ ಕುಡಿಯಲೆಂಬ ವಿಶ್ವಾಸವಿರೆ ಸದ್ಧೇಂದ್ರನು
ಏಸು ಕೆಲಸವನಱಿಯದಂತೆ ಹೇಳ್ದಡೆ ಮಾಡಿ
ಬೇಸಱಿಕೆಯಳಲುದೋಱದ ಭಕ್ತಿಭಾವಮಂ
ಲೇಸೆಂದು ಮೆಚ್ಚಿ ರಾತ್ರಿಯಲಿ ಮಹಪಡಿಯ ಪರಿಯಾಣ ಪಾತ್ರೆಯನಿತ್ತನು   ೨೪

ಕಾಳವ್ವೆಯಂ ಕೂಡಿಕೊಂಡು ದಾನವ ಕುಡಿಯ
ಲೇಳು ಮಕ್ಕಳು ಹಸಿದವೆನುತ ಪ್ರಸಾದಮಂ
ಭಾಳಲೋಚನನ ಅವತಾರ ಕರುಣಿಸಲು ಹರುಷಂದಳೆದು ತರ್ಪಾಗಳು
ಗೋಳಿಡುತ್ತಿನ್ನಾರ್ಗೆ ತಂದೆ ತಂದೆಯೆ ಎಂದು
ಬಾಲೆಯರು ಬಾಯ್ವಿಡುವುದಂ ನಿಲಿಸಿ ನಿಂದು ಬೇ
ಗೇಳು ಗುರುಕರುಣ ಪ್ರಸಾದವಿದೆಯೆನೆ ನಿದ್ರೆತಿಳಿದೇಳುವಂತೆದ್ದಳು  ೨೫

ನಟ್ಟ ಗುಂಟವ ತೆಗೆದು ತಾನೆ ಬೀಸಾಡುತ್ತ
ಹೊಟ್ಟೆಯೆಂ ಹತ್ತಿ ಮೊಲೆಗಲವರುವವರ್ಕೂಡೆ
ಉಟ್ಟ ಹೊಸ ಸೀರೆ ಮುಡಿಸಿದ ದಂಡೆ ಗುರುಕರುಣದಿಂದ ಮಂಗಳವಾಗಲು
ಬಟ್ಟಿಹೊಡೆವಂತೊಱಲುವವರು ನಗುತಂ ನಲಿವು
ಹುಟ್ಟಿಯಾನಂದಮಯರಾಗೆಲ್ಲರುಂ ಪಂತಿ
ಗಟ್ಟಿ ಕುಳ್ಳಿರ್ದು ದಾನವ ಕುಡಿದು ಗುರುಪದವ ಹಾಡಿ ಹರಸುತ್ತಿರ್ದರು      ೨೬

ಇಂತು ಪುಣ್ಯಖ್ಯಾತಿಯಂ ಕೊಂಡು ವಚನವ ದಿ
ಗಂತದೊಳು ಹಾಡುತಿರೆ ಕೇಳಿ ನೋಡಲು ಬಂದ
ಕಾಂತೆಯೊಬ್ಬಳು ಜಂಗಮವ ಕೂಡಿಕೊಂಡು ಹಾಡುತ್ತಮಿರೆ ಗುರು ಮೆಚ್ಚುತ
ಸಂತತಂ ದಾನವಿತ್ತವರ ಸಲಹಲ್ಕೆ ನಿ
ಶ್ಚಿಂತರೇಲೇಶ್ವರದಿ ಮಠವ ಕಟ್ಟಿರಲವರ
ಸಂತೋಷಲತೆ ಫಲಿತವಪ್ಪಂತೆ ಆಕೆಗೊಬ್ಬಂ ಪುತ್ರನುದಯಿಸಿದನು  ೨೭

ಬಾಲಂಗೆ ಬಾರಸವ ಮಾಡಿ ತೊಟ್ಟಿಲೊಳಿಕ್ಕಿ
ಏಲೇಶನೆಂದು ನಾಮವ ಕೊಟ್ಟು ಕರೆಯುತ್ತ
ಲೀಲೆಯಿಂದೆಕ್ಕವಿಂಡಿಂಗೆ ಮುದ್ದಾಗಿ ಗುರುಪದವನೋಲೈಸಿ ಪಲವು
ಕಾಲವಿರುತಿರುತ ಚಿಣ್ಣಂಗೆ ಮದುವೆಯ ನೆನೆದು
ಬಾಲೆಯಂ ನೋಡಿ ಮಾಡುವೆನೆಂಬ ಹೊತ್ತು ಬಂ
ದಾಲಿಂಗಿಸಿತ್ತು ಆತನ ತನುವನುರಿಯಿಲ್ಲದುಷ್ಣವತಿ ತೃಷ್ಣೆ ಮಿಗಲು         ೨೮

ದಾಹ ಪಿರಿದಾಗೆ ನೀರಂ ಕುಡಿದು ಬಾಯಾಱಿ
ಕಾಹೊಳಂಗಡಗಿ ತಾಪದಳವಂ ಬಳಲುತ್ತ
ಬೇಹೈಸಿಯಂದುದಕಮಂ ಕುಡಿಯಲವರವ್ವೆ ಬೇಡಯ್ಯ ಕಳಲ ಕೊಳಲು
ದೇಹದುರಿ ತಗ್ಗುವುದೆನಲು ಕೊಂಡು ಬಾ ಎನುತ
ಹಾ ಹೋದೆನೆನುತ ಜೀವಂಗಳೆಯಲಂತವಳು
ಹಾ ಹಾಯೆನುತ್ತ ಗೋಳಿಟ್ಟು ನಾಲಗೆ ಕಿತ್ತುಕೊಳಲು ಹಿಡಿದರು ಜಡಿದರು   ೨೯

ಪುತ್ರ ಶೋಕಾಗ್ನಿ ಭುಗಿಲನೆ ನೆಗೆಯಲಳಲುರಿಗೆ
ಧಾತ್ರಿಯೊಳು ಕೆಡೆಯೆ ತಲೆಯೊಡೆಯಲಾಕೆಗೆ ನೋವು
ಮಾತ್ರವಿಲ್ಲದೆ ಜೀವಗಳೆಯುತ್ತಲೆಂತಕ್ಕೆ ಎಚ್ಚಱಲು ಸಂಕ್ರಾಂತಿಯ
ಜಾತ್ರೆಗೈತಂದ ಜನ ಕಂಡು ಶೋಕಿಸಿ ಕೆಲರು
ನೇತ್ರತ್ರಯನು ಮಲ್ಲಿಕಾರ್ಜುನನ ಮನೆಯಲಿಹ
ಸೂತ್ರಧಾರಕನು ಶ್ರೀಗುರು ಮಾಡಿದಂತಿರ್ದು ಪರಿಣಾಮಿಸೆನೆ ಹರಿದಳು         ೩೦

ಕೆಱೆಯಿಂದ ಮಲ್ಲಿಕಾರ್ಜುನನ ಮಂದಿರಕೆ ಜಗ
ದೆಱೆಯನೆನಿಸುವ ಸಿದ್ಧಪತಿ ಬರುತ್ತಿರೆ ಕಾಣು
ತೊಱಲಿ ಹಳಿಲನೆ ಬಿದ್ದು ಏಕೆಯೆನ್ನುವನಾಥೆಯನು ಕರುಣಿಸಿ ನೋಡದೆ
ಅಱೆ ಕಂಡೆ ತಂದೆ ಕಣ್ಣಿಂಗೆ ದಿಮ್ಮಿದನೆಯೆನೆ
ಬೆಱಗಾಗಿದೇನೆನಲು ತಾನೆಯೊಯ್ದೀಗ ಮ
ತ್ತಱಿಯದಂದಲೆನ್ನ ಬೆಸಗೊಂಡಪಂ ನೋಡಿರಯ್ಯ ಎನುತೊಱಲ್ದತ್ತಳು     ೩೧

ಏನನೊಯ್ದೆಂ ತಾಯೆ ಹೇಳೆನಲು ಎನ್ನಯ ನೀ
ಧಾನವಂ ಹೊನ್ನ ಪುತ್ತಳಿಯ ಮಾಣಿಕದೊಡವ
ನೀನೊಯ್ದೆಯೆನ್ನ ಕಂದನನೆನ್ನ ಕಣ್ಣೊಂದನೆನಲು ಬೆಱಗಾಗಿ ನೋಡಿ
ಏನ ಮಾಡುವೆನಕ್ಕಟಾ ಮಲ್ಲಿಕಾರ್ಜುನನು
ತಾನೊಲಿದಡೊಯ್ವನಲ್ಲದೊಡಿರಿಸುವವನಲ್ಲ
ನೀನು ಸೈರಿಸು ಬೇಗಮಾಡಿ ಕೇಳಿಕೆ ವಿಮಾನದಲೊಯ್ವುದೀಗವೆನಲು          ೩೨

ಅಕ್ಕಟಾ ಕರುಣವಿಲ್ಲಾ ತಂದೆ ಆದಡೀ
ಚಿಕ್ಕವಂ ಸೊಲ್ಲಿಗುಪ್ಪಂ ಸವೆಯಲುಣ್ಣನಾ
ಬೆಕ್ಕಿನಿಂ ಕಷ್ಟನೇ ಆದಿಲಿಂಗನ ಬಂಡಿಯೆತ್ತಿನಿಂದಿವ ಹೀನನೇ
ಮಕ್ಕಳಲ್ಲಾ ಹೇಳು ನಿನ್ನ ಪಾದವ ನೆನೆದು
ದಿಕ್ಕುದಿಕ್ಕಿನಲಿ ತೊಳಲುವ ದಿಶಾಚರಿಯ ನೀಂ
ಸಿಕ್ಕಿಸಿ ಬಳಿಕ್ಕಿಂತು ಗೋಣ ಕೊಯ್ವರೆ ಕಾಳಿಯಬ್ಬೆಗಸುವಿತ್ತೆಂದಳು೩೩

ಸೆಱೆಗೊಡ್ಡಿ ಬೇಡಿದೆಂ ಪುತ್ರದಾನವ ಕೊಟ್ಟು
ಮೆಱೆದುಕೊಳ್ಳಾ ಸಿದ್ಧ ಅಕ್ಕಟಾ ಕೀರ್ತಿಯನು
ಹಱೆಯ ಕುಟ್ಟುವೆನು ಜಗದೊಳಗೆಂದುವೊಱಲುತ್ತವಿರಲಿಕೆ ವಿಮಾನವತ್ತ
ಮೆಱೆಯುತ್ತ ಬರ್ಪುದಂ ಕಂಡು ಮೊರೆಯೋ ಹೊನ್ನ
ಮಱಿಯನುಂಬನ್ನ ಜವ ಮಾಣ್ಬುದೆಂದೊಡೆ ಮಾಣ್ದು
ಮುಱಿದು ಕೊಂಡೊಯ್ದೆ ದೇವಾ ಕಳಲ ಕುಡಿವನ್ನ ಸೈರಿಸುವುದೇನೆಂದಳು   ೩೪

ಬಟ್ಟಲೊಳು ಕಡೆದಿರ್ದ ಕಳಲ ಕುಡಿದಪೆನೆನುತ
ಬಿಟ್ಟನಸುವನು ಅಕ್ಕಟಾ ಅದಂ ಕುಡಿಯಲ್ಗೆ
ಹೊಟ್ಟೆಯಂ ಹೊಕ್ಕ ಬಳಿಕಾದೊಡಂ ಹೋಗಲೆಂದೆನಲು ತಾಯೆನೆ ತಂದಳು
ಸೃಷ್ಟಿಯ ಜನಂ ಕಾಣೆ ಕರೆದೊಡೋಯೆನೆ ನಲಿದು
ಕೊಟ್ಟಡದ ಕುಡಿದು ಉದಕವನು ಮುಕ್ಕುಳಿಸುತ್ತ
ಬಿಟ್ಟ ಪ್ರಾಣವನು ಮತ್ತಾಕೆ ಗೋಳಿಡೆ ಇನ್ನು ಎನ್ನ ವಶವಲ್ಲೆಂದನು          ೩೫

ನಾಡೆಲ್ಲ ಬಂದು ನೆರೆದಿರ್ದ ಜಾತ್ರೆಯ ಪರುಷೆ
ನೋಡಿ ಬೆಱಗಾಗಿಯಿಂತಪ್ಪ ಸಾಮರ್ಥ್ಯಮಂ
ರೂಢಿಯೊಳು ಮುನ್ನ ಕೇಳಿದರಿಲ್ಲ ಕಂಡರೆಂತೂ ಇಲ್ಲವೆನುತ ಹರೆದು
ನಾಡು ನಾಡೊಳಗೆಲ್ಲಿಯುಂ ಸಿದ್ಧಪತಿಯ ಕೊಂ
ಡಾಡುತ್ತ ರಾಯರಧಿಕಾರಿಗಳು ನಡೆತಂದು
ನೋಡುತ್ತ ಗುರುವಿಂಗೆ ಬೆಸಕೈದು ಬಾಳುತ್ತಮಿರಲು ಕೌತುಕ ನೆಗೆದುದು      ೩೬

ಎಲ್ಲಿಯಾದರು ಹಾವು ತಿಂದವರ ಬೇಗೆಯೊಳು
ಹುಲ್ಲಾಗಿ ಮುರುಟಿ ಸತ್ತವರ ವ್ಯಾಧಿಯೊಳಳಿದ
ರೆಲ್ಲರಂ ಹೊತ್ತು ಹೊತ್ತೈತಂದು ಮಹಮನೆಯ ಬಾಗಿಲೊಳು ಬಿಸುಟರೆನಲು
ಹುಲ್ಲ ಕಚ್ಚುವರ್ಗೆ ಕರುಣಂದೋಱಿ ಬಾಯಳಿದು
ಲಲ್ಲೆಗರೆವರಿಗೆ ಗುರು ಕರುಣಿಸುತ ಸುಮ್ಮನಿ
ಪ್ಪಲ್ಲಿ ಬಂದಂ ಲಿಂಗದೊಳಗೆ ನೆಱೆ ನೆಟ್ಟ ದೃಷ್ಟಿಯ ಧೀರನೆನಲಲ್ಲಮ     ೩೭

ಲಿಂಗದ ಮಹತ್ವ ಮನದಿಂ ತನುವ ವೇಧಿಸಲು
ಮಂಗಳವೆನಿಪ್ಪ ಬೆಳಗಳವಟ್ಟು ಭೌತಿಕಕೆ
ಹಂಗಿಗತನವನುಳಿದು ಸುಖದಿ ಮೆಱೆಯುತ್ತ ಸದ್ಯೋವರವ ನೀಡುವಂತೆ
ರಂಗರೀತಿಯಿನೆಸೆವ ವಚನದಿಂ ತ್ರೈಜಗವ
ಭಂಗಿಸುತ ಬಸವರಾಜನ ಜಾನಿಸುತ್ತೊಂದು
ಜಂಗಮಾಕಾರವಿಡಿದಿಹ ಮಹಾಂತನು ನೋಡ ಬಂದ ಸೊನ್ನಲಿಗೆ ಪುರಕೆ       ೩೮

ಕೆಱೆಯ ಕೆಲಸದಲಿ ಸಿದ್ಧೇಂದ್ರನಿರುತಿರೆ ಬಂದು
ಹಱೆವಿಲ್ಲವೆನುತ ಕರೆಯೋ ಒಡ್ಡರೆಱೆಯನಂ
ಕೊಱೆಕೂಲಿಗೊಂಡನೋ ನಾಳೆ ಮಿಕ್ಕುದನಗೆಯ ಬಾರದೇ ಎಂಬನ್ನೆಗಂ
ಅಱಿದನಾಗಳೆ ಜಗಜ್ಜನದ ಅಂತರ್ಯಾಮಿ
ಕುಱುಹುವಿಡಿದುಂ ಜಱೆವುದಂ ಕಂಡು ಅಲ್ಲಮಂ
ಗಱುಹಿಸುವೆ ಬಡವ ಮಡಗಿದ ಕಡವರದ ತೆಱೆದ ಮಕುಟದಮಱೆಯ ಲಿಂಗವ          ೩೯

ಎಂದು ನಸುನಗುತಲ್ಲಮನ ಸಮ್ಮುಖಕೆ ಬಂದು
ನಿಂದುತ್ತಮಾಂಗ ಮಧ್ಯದ ವಸ್ತ್ರಮಂ ಬೆರಳಿ
ನಿಂದಲೋಸರಿಸೆ ಕಮ್ಮುಗಿಲ ಸಂಧಿಯೊಲಿಂದುಕೋಟಿ ಪ್ರಭಾ ಪಟಲಮಂ
ಹಿಂದುಗಳೆದೆಸೆವ ಶೈತ್ಯ ಪ್ರಜ್ವಲಿತ ಕಾಂತಿ
ಯಿಂದೆಸೆವ ನಿರುಪಾಧಿಕ ಜ್ಯೋತಿಲಿಂಗವಿ
ಪ್ಪಂದಮಂ ಬಾಹ್ಯಕ್ರಿಯೆಯೊಳು ಬಳಕೆಯಂ ತೋಱಲಲ್ಲಮಂ ಮತ್ತೆಂದನು            ೪೦

ಲೋಹ ಸಂಗದಿ ಕಿಚ್ಚು ಬಡಿಹಡೆದುದೆಂಬಂತೆ
ದೇಹಸಂಗದೊಳಾತ್ಮನಾಯಸಂಬಡುವಂತೆ
ಬೇಹುದೊಂದಳವಟ್ಟ ಬಳಿಕ ಬಿಡಲಾಗದೆನೆ ನೆರೆಯವರಿಗತ್ತು ಕಣ್ಣು
ಹೋಹಂದ ನಿಮಗೆನಲು ದೊರಕಿದಾತಂ ಸವಿಯ
ಬೇಹುದೇ ಮತ್ತಾರ್ಗೆ ದೊರೆಕೊಳುವುಪಾಯಕ್ಕೆ
ಸೋಹೆಯಂ ಕೊಡಲಾಗದೇ ಜಗಜ್ಜನದ ಕೃಪೆಗೆಂದನಾ ಸಿದ್ಧೇಂದ್ರನು         ೪೧

ಜಡರ ನಡುವಿರಲವರ ಸಂಗದಿಂ ಕಾಯಗುಣ
ವಿಡಿದು ಬಳಲುವರೆನಲು ನಸುನಗುತ ಗಾಳಿಯಂ
ಹುಡಿ ಹಿಡಿವುದೇ ರಸನೆ ಹೆಡಸಹುದೆ ಆಲಿಯಂಜನವನೊಳಕೊಂಡಿರ್ಪುದೆ
ಪೊಡವಿಯೊಳು ಶಿವಯೋಗಿ ಸುಳಿದಡಂ ನೀರ ನಡು
ವಿಡಿದ ಕಂಜದ ತೆಱದಿ ಭಕ್ತಿಯುಕ್ತನು ಅಲ್ಲ
ಮೃಡಮೂರ್ತಿಗಗ್ರನೆಂದೆನುತ ಹಾಡಿದನು ಗುರುವಚನವಲ್ಲಮ ಮೆಚ್ಚಲು  ೪೨

ಲೋಕವೆಲ್ಲಂ ಬದುಕಲೆಂದು ನಾಗಾರ್ಜುನನ
ದೇಕೆ ಹೋಗಾಡಿದಂ ತಲೆಯನಾ ವ್ಯಾಳಿಬಳಿ
ಕೇಕಾದ ಬೆಳ್ಳಿ ಕೋರಾಂಟಕಂ ನೀರೊಳೇಕದ್ದನೆನಲಱಿದುದಿಲ್ಲ
ಏಕನದ್ವಿತೀಯನೆನಿಸುವ ಲಿಂಗವಂ ನಂಬ
ದಾ ಕಾರಣಂ ಕೆಟ್ಟರಲ್ಲದವರಳಿವರೇ
ಸಾಕಾರನಿಷ್ಠೆ ಭೂತಂಗಳೊಳಗನುಕಂಪೆ ತಾನೆ ಪರಬೊಮ್ಮವೆನಲು  ೪೩

ಆಗಲಹುದದಕೇನೊಡಂಬಟ್ಟೇನೀ ಯುಗಂ
ಬಾಗಿ ಬಲಿಗಾಲಿನುಗುಂಟವನೂಱಲ್ಕಂಜಿ
ಯೋಗಿಗಗಳು ಕದಳಿಯಂ ಮುನಿಗಳನಿಬರು ಮೇರು ಮಂದರ ಗುಹೋದರವನು
ಭೋಗಿಗಳು ಸರ್ಪಲೋಕಕ್ಕೆ ದಿವಿಜರು ದಿವಕೆ
ಸಾಗರದ ಕಟ್ಟೆಯಂ ಕಟ್ಟಿ ರಾಕ್ಷಸರು ಭಯ
ರಾಗಿರ್ಪರೆಂಬಾಗ ಮಾನವರ ನಡುವಿರಲು ಬೇಡ ಸಿದ್ಧೇಂದ್ರಯೆನಲು          ೪೪

ಅದನು ನಾ ಬಲ್ಲೆನೀ ಯುಗದ ಜೀವರ ಪುಣ್ಯ
ದೊದವಿಂಗೆ ಕೈಕೊಂಡ ಮೂರ್ತಿಯಿದು ಹುಸಿಯ ಮಾ
ಡಿದೆನಾದೊಡುಳಿದ ಮಾನವರ ಪರಿಯೈಸಲೇ ಅಲ್ಲಮಪ್ರಭುವೆಯೆನೆಲು
ಚದುರ ನಿನ್ನೀ ಸೃಷ್ಟಿಯೇ ಬೇಱೆ ಅದಕೆ ಮೆ
ಚ್ಚಿದೆನು ನೀನಿರ್ದುಮಿಲ್ಲೆಂಬ ಬಯಲಿನ ಭ್ರಮೆಯ
ಬೆದಱ ಬಿಸುಡೆಂದು ಶಿವಸುಖಗೋಷ್ಠಿಯಿಂದ ಕದಳಿಯ ಬಟ್ಟೆಗೊಂಡ ಪ್ರಭುವು         ೪೫

ಸಂತರನುಭವ ಸ್ವಾನುಭವವಾಗಿ ಮನದೊಳಗೆ
ಚಿಂತಿಸಿದ ಕೆಱೆಯ ಮಧ್ಯದ ಯೋಗಿನಾಥನ ಗೃ
ಹಾಂತರದೊಳೊಂದು ಗೊಪೆಯಂ ಮಾಡಿ ನಡುಗುಂಡಿನೊಳು ಬಾಗಿಲಂ ಮಾಡಿಸಿ
ಚಿಂತಿಸಲ್ಕರಿದೆನಿಪ ವಜ್ರದ ಕವಾಟದಿಂ
ಭ್ರಾಂತುಗೊಳಿಸುವೆ ಸರ್ವ ಜನವನಿಲ್ಲಿಹೆನೆಂದು
ಮುಂತಿನಂತೀ ಕ್ಷೇತ್ರದೊಳಗು ಹೊಱಗೆನ್ನದಂತಿರುತಿರ್ದು ತೋರ್ಪೆನೆಂದ      ೪೬

ಹತ್ತೈದು ದಿವಸಮಂ ಕಳೆದು ಶಿವಕೂಟಣಿಯೆ
ಇತ್ತ ಬಾಯೆನಲು ಹಾವಿನಾಳ ಕಲ್ಲಯ್ಯ
ನತ್ಯಂತ ಹರುಷಮಯನಾಗಿ ಪುಳಕಿತಗಾತ್ರ ಮೆಯ್ಯಿಕ್ಕಿ ಕೆಲಸಾರ್ದಡೆ
ಹತ್ತಿರ್ದವರ್ಗೆ ಬೆಸನವ ಕೊಟ್ಟು ಕಳುಪುತ್ತ
ನಿತ್ಯತೃಪ್ತನು ತಾನೆನಿಪ್ಪ ಗುರುವೇಕಾಂತ
ಚಿತ್ತನಾಗಿರ್ದು ಮತ್ತಾತಂಗೆ ಮನದಾಯತವ ಹೇಳಲನುವಾದನು   ೪೭

ಎಮ್ಮ ಮನವೊಂದಂ ನಿವಾತ ಗೊಪೆಯಂ ಸವೆಸಿ
ಸುಮ್ಮಾನದಿಂದ ಪದ್ಮಾಸನವ ಚಲಿಯಿಸದೆ
ಹಮ್ಮಮತೆಯಂ ಬಿಟ್ಟು ಆತ್ಮನ ವಿಚಾರದಿಂ ಪರಮಕಾಷ್ಠೆಯನೈದುವ
ನೆಮ್ಮಗೆಯ ನೆನೆನೆನೆದು ಪರಮ ಶಿವತತ್ವವನು
ಬೊಮ್ಮವೆಳಗಿನ ಬೆಳಗುವೆರಸಿ ಬೆಱಗಾಗದಿ
ಪ್ಪುಮ್ಮಹದಭೀಷ್ಟಮಂ ನಿನಗೆ ಹೇಳಿದೆವೆನಲು ದೇವ ಬಿನ್ನಪವೆಂದನು       ೪೮

ನಿತ್ಯತ್ವಮುತ್ತಮಾಂಗವ ಪಡೆದೆಂಬಂತೆ
ಸತ್ಯ ಸಮತೆಯ ಧರೆಗೆ ಪೇಳಲೆಳಸಿರ್ದಂತೆ
ಅತ್ಯಂತ ಭೂತದಯೆ ಅವಯವಂಬಡೆದುದೋ ಯೋಗಿಗಳ ಚಿತ್ತವೆಳಗು
ಪ್ರತ್ಯಕ್ಷ ಗುರುರೂಪ ಧರಿಸಿ ರಾಜಿಸಿ ಪರಮ
ತತ್ವವೆನಿಸಿಹ ನೀನು ನೆನವುದೇನೈ ಜಗದ
ಕತ್ತಲೆಯ ಕಳೆಯಲೆಂದವತರಿಸಿ ಬಂದೆ ನೀ ನಿನಗೆ ಪರವೇನೆಂದನು    ೪೯

ನೀನಱೆಯೆ ಮಲ್ಲಿಕಾರ್ಜುನನೊಬ್ಬನೇ ನಿತ್ಯ
ಜ್ಞಾನಮಯ ಸರ್ವಜ್ಞ ಷಡ್ಗುಣೈಶ್ವರ‍್ಯಂಗ
ಳೇನುವುಂ ಕೊಱತೆಯಿಲ್ಲದಲೆಸೆವನೆನದೆನ್ನ ನೀ ನಿಹಗೆ ಕೀರ್ತಿಸುವರೇ
ಭಾನುವಿನ ಮುಂದುಳಿದ ಬೆಳಗೆಸೆವುದೇ ಶಿವ
ಜ್ಞಾನ ನಿನಗುಂಟೆಂದು ಆಳೋಚಿಸಿದೊಡೆಮ
ಗೇನುವುಂ ತತ್ವ ನೆಮ್ಮುಗೆಯ ಹೇಳದೆ ಸ್ತೌತ್ಯಮಂ ಮಾಡಿ ಕಳೆದೆಯೆನಲು     ೫೦

ಧರೆಯಱಿಯುತಿರೆ ಕಪಿಲಸಿದ್ಧಮಲ್ಲೇಶ್ವರನ
ಹರಿವರಿಯ ನಾಮವಿದೆ ನಾ ಕೊಟ್ಟೆನೇ ತಂದೆ
ನಿರುಪಾಧಿಕ ಜ್ಯೋತಿಮಯ ನಿನ್ನ ಕಾಯಕ್ಕೆ ನೆಳಲಡಿಗೆ ಹಜ್ಜೆಯಿಲ್ಲ
ನರಲೋಕದನ್ನಪಾನದ ಹಂಗು ನಿನಗಿಲ್ಲ
ಸುರರಸುರಮಾನವರೊಳಿನ್ನು ಮುನ್ನೆಂದುಂಟೆ
ಪರಬೊಮ್ಮ ನೀ ನಿಮ್ಮ ನೆನೆವಾತನೇ ಬೊಮ್ಮಧಾರಿಯೆನುತಿಂತೆಂದನು        ೫೧

ಲೋಕದೊಳು ನರರಂ ಕೃತಾರ್ಥತೆಯ ಮಾಡಲೆಂ
ದಾಕಾರವಾದ ಶಿವಸಿದ್ಧಮೂರುತಿ ದೇವ
ಸಾಕಾರ ನಿಷ್ಕಳಾಕಾರ ವೇದಿಸಲು ಸರ್ವರಿಗೆ ಬೊಮ್ಮದ ಪೆರ್ಮೆಯ
ಬೇಕೆಂಬನಿತು ಸೂಱಿಯೇಂ ಸುಲಭವಾಗಿತ್ತೆ
ಏಕಕ್ಕಟಾ ಬಯಲಭ್ರಮೆಯನೆಲ್ಲರಿಗಿಕ್ಕ
ಬೇಕಾದಡಿಕ್ಕು ದೇವರು ಸ್ವತಂತ್ರರು ನಮೋನಮೊ ಎಂದು ಶುದ್ಧನೆನಲು     ೫೨

ಕಲ್ಲಯ್ಯನೆಂದೆ ಬಿನ್ನಹಕೆ ಉಮ್ಮಹದಿ ಕರ
ಪಲ್ಲವದಿ ಮೈದಡವಿ ಬೋಳೈಸಿ ನಿನ್ನಂತೆ
ಬಲ್ಲರಾರೂ ಇಲ್ಲ ಮನವ ವಂಚಿಸಬಹುದೆ ನಮಗಾಗದಿರವೆಂಬುದು
ಹೊಲ್ಲಹುದು ಕಲಿಕಾಲ ನರರು ಸುರರಸುರರಿಂ
ಬಲ್ಲಿದರು ಅದು ಕಾರಣಂ ಸಮಾಧಿಯ ಧರೆಗೆ
ಪಲ್ಲವಿಸಿ ಮಲ್ಲಿಕಾರ್ಜುನನ ಕ್ಷೇತ್ರದೊಳಿರ್ದು ಇರದಂತೆ ತೋರ್ಪೆನೆನಲು     ೫೩

ಅದನಾನೊಡಂಬಡಲ್ಕಾರ್ಪೆನೇ ದೇವ ಶ್ರೀ
ಪದವ ನೋಡಿದ ಕಣ್ಣು ಕೀರ್ತಿಸಿದ ಬಾಯಿ ಮಾ
ಣದೆ ನೆನೆವ ಮನ ನಿನ್ನ ಹಂಬಲಿಂ ಮತ್ತೊಂದಕೆಳಸದದಱಿಂದಲೆನಗೆ
ಹೃದುಗತಂ ನೀನು ನೆನವರ ಮನವೆ ಮನೆಯೆಂಬು
ದಿದು ನಿನ್ನ ವಚನಮಂ ನಂಬಿದೆನು ಗುರುವೆಯೆನೆ
ಯದನೆ ಮೆಚ್ಚುತ್ತಣ್ಣ ಬೊಮ್ಮಯ್ಯ ಕೇತಾರ ಗುರುಗಳಿಗೆ ನೇಮವಿತ್ತ        ೫೪

ಧರೆಯಱಿಯೆ ಕೆಱೆಯ ನಡುವಣ ಸಮಾಧಿಸ್ಥಳವ
ಪರಮ ಮಂಗಳವೆನಲು ಬೇಗ ಖನನವ ಮಾಡಿ
ತರವಿಡಿದು ಭಿತ್ತಿಯಂ ಕಂಬಂಗಳಂ ಮೇಲೆ ಕವಿಯ ಅಱೆಗಲ್ಲ ತರಿಸಿ
ಹಿರಿಯದೊಂದೆಮ್ಮೆಗುಂಡದೆ ಅದಱ ಬಾಗಿಲಂ
ವಿರಳವಾಗಿರಲೊಳಗೆ ತೋಡಿ ಕೀಲಿನ ಕಲ್ಲ
ಕರಚೆಲುವ ಕಾಳಸಗಳಲವಡಲು ಮಾಡಿ ಬೇಗದೊಳೆನೆ ಭಯಂಗೊಂಡರು      ೫೫

ದೇವ ಇದ್ದಿದ್ದಿದೇನೇನ ನೆನದಿರಿ ಇಲ್ಲಿ
ಯಾವುದಂ ಸ್ಥಳವಿಲ್ಲವೇನು ಘಾತಕವಾಯಿ
ತಾವ ಕಾರ‍್ಯದೊಳೀಗ ಗೊಪೆಗೆ ಬಿಜಯಂಗೆಯ್ವುದೇಕೆ ಬಿನ್ನಪವೆಂದೆನೆ
ನೀವಿದಕ್ಕಂಜಲೇಕಾನಿ ಮಹಾಕ್ಷೇತ್ರ
ದಾವಾಸದೊಳು ಸಮಾಧಿಯೊಳಚಲನಾಗಿರ
ಲ್ಕಾವಗಂ ಈ ಪುರದ ಮಹಿಮೆ ಮಂಗಳವಾಗಿ ಮೆಱೆಯುತಿರಬೇಹುದೆನಲು  ೫೬

ಎಕ್ಕವಿಂಡಂ ಕರೆದು ಮಲ್ಲಿಕಾರ್ಜುನನ ಬೋ
ನಕ್ಕೆ ಸತ್ರಕ್ಕೆ ಮಱೆಯದೆ ನಂಬಿ ಬೆಸಕೈದು
ಇಕ್ಕಿದಾ ಬೀಯದಿಂ ದಾನವನು ಉಂಡು ಕಲುಗೆಲಸ ಕೊಟ್ಟಿಗೆ ಕೆಱಿಯಲಿ
ಅಕ್ಕುಳಿಸದಲಸದಂಜುತ್ತ ಮಾಡಿದಡವರ್ಗೆ
ಸಿಕ್ಕುವುದು ಮುಕುತಿ ಕರತಳದಾಮಳಕವೆಂದು
ನಿಕ್ಕವಿಪ್ಪುದು ಸುಖವು ಮಾಡುವುದು ಕೂಡಿ ಲಿಂಗದೊಳಗೈಕ್ಯವ ಪಡೆವೊಡೆ೫೭

ಕರುವಾಗಿ ಹಾಡಿದೀ ಗೀತಮಂ ಬಲ್ಲೆವೆಂ
ಬರಿಗೀಗ ಯೋಗಮಜ್ಜನದನುವ ತೋಱುವುದು
ಉರವಣೆಯ ಬಿಟ್ಟು ಪರಿಣಾಮವಳವಟ್ಟು ನೆಟ್ಟನೆ ಶಿವನ ನಂಬಿರ್ಪುದು
ಪರಕ್ಷೇತ್ರದತ್ತಣಾಸೆಯನುಳಿದು ಇಲ್ಲಿರಲು
ಕರುಣಿಸುವ ಶ್ರೀ ಮಲ್ಲಿಕಾರ್ಜುನನು ನಿಮ್ಮ ನಾ
ಲ್ವರ ಕಂಬಳಿಯ ಬೆಂಬಳಿಯೊಳಿಪ್ಪೆ ಉಮ್ಮಳಿಸಬೇಡಂಜಬೇಡೆಂದನು          ೫೮

ಇಂದು ತಳಗೊಳಿಸಿದೀ ವೇದಿಕೆಯ ಕೊಂಡದೊಳು
ಮಂದರ ಗಿರಿಯ ಹೋಮವಂ ಮಾಡುವಂದಿಂಗೆ
ಹೊಂದಿದೀ ಸಿದ್ಧರೆನಿಸುವ ನಾಲ್ವರಂ ಎತ್ತಿ ಪರಿಚಾರಕರ ಮಾಡುವೆಂ
ಹೆಂದದ ಧರೆಯ ನೃಪರ ಗುಡ್ಡರಂ ಮಾಡಿ ಕೆಱೆ
ಯಿಂದೊಗೆದ ಬಿಳಿಯಾನೆಯಂ ಮಲ್ಲಿಕಾರ್ಜುನನ
ಮಂದಿರದಿ ಕಟ್ಟುವೆಂ ಸರ್ವಲಿಂಗವ ಪ್ರತಿಷ್ಠಿಸುವೆ ನಾ ಬಂದೆಂದನು೫೯

ನೆಟ್ಟನೆ ಮಹಾರಾಜಿಕಂ ದೈವಿಕಂಗಳಳ
ವಟ್ಟು ಲೋಕದೊಳು ನಾನಾ ಜೀವಜಾಲ ಪಡ
ಲಿಟ್ಟು ಮೆದೆಗೆಡೆದೊಡಂ ಧೃತಿಮಾಡಿ ಇಲ್ಲಿ ತಲ್ಲಣವಿಲ್ಲದೀ ಕ್ಷೇತ್ರವ
ಬಿಟ್ಟು ಹೋಗದಿರಿ ಕಲುಗೆಲಸಕ್ಕೆ ಜಾಱಿ ಮೃಡ
ನಿಷ್ಠೆಯಂ ನಂಬಿಕೊಂಡಿಹುದು ಮಲ್ಲಯ್ಯಂಗೆ
ಬಿಟ್ಟಿಯಂ ಮಱಿಱೆದೇ ಸರ್ವನೇಮವ ನಡಸಿ ಶಿವನಾಜ್ಞೆಯಿಂದೆಂದನು         ೬೦

ಈ ಪರಿಯಲೆಲ್ಲವಂ ಗುಡ್ಡರಿಗೆ ಆಜ್ಞಾನಿ
ರೂಪಮಂ ಕೊಟ್ಟು ಶ್ರೀಮಲ್ಲಿಕಾರ್ಜುನನಲ್ಲಿ
ಆ ಪೊತ್ತುವೀ ಪೊತ್ತುವೆನ್ನದೆಲ್ಲಾ ಕೆಲಸದಲ್ಲಿ ಸನ್ನಿಹಿತನಾಗಿ
ಶ್ರೀ ಪರಮಗುರು ಭರಿತನಾಗಿ ಸುಖಮಿರ್ಪ ಪಂ
ಪಾಪತಿ ವಿರೂಪಾಕ್ಷನಾಣೆ ಹುಸಿಯೆಂದೆಂಬ
ಪಾಪನಿಷ್ಠರಿಗೆ ಪ್ರತಿಯಿಲ್ಲ ಶಿರದಿಂ ಪಾಳದಿಂ ಗೆಲುವೆ ವಾದಿಸಿದಡೆ೬೧

ಕ್ಷಿತಿಯೊಳೆಲ್ಲಾ ಜನಂ ಕೇಳ್ದು ಸಿದ್ಧೇಂದ್ರನು
ನ್ನತಮಹಿಮೆಯೆಂಬ ಸುಧೆಯಂ ಸವಿದು ಬದುಕಲೆಂ
ದತಿ ಕೃತಾರ್ಥತೆಯಿಂದೆ ನಿರಪೇಕ್ಷೆಯಿಂದೆ ಶ್ರೀಗುರುಪದವ ಪೊಗಳ್ದಾತನು
ಚತುರ ಕವಿರಾಯ ಹಂಪೆಯ ಹರೀಶ್ವರನ ವರ
ಸುತನುಭಯಕವಿ ಕಮಲರವಿ ರಾಘವಾಂಕ ಪಂ
ಡಿತನೆನಲು ಕರುಣಿಸುಗೆ ಪರಮಾ ಮಾಹೇಶ್ವರರು ಅನ್ಯವಂ ಪೊಗಳನೆಂದು   ೬೨

ಗುರುಭಕ್ತರೆಲ್ಲ ಪುಳುಕಿಸಿ ಕೇಳ್ದರಾರವರು
ಪರಮ ಸುಖವಳವಟ್ಟು ದುರ್ನೀತಿ ಬಿಟ್ಟು ಶಂ
ಕರ ಭಕ್ತಿಯಳವಟ್ಟು ಧನ್ಯರಪ್ಪಂದದೀ ಕಾವ್ಯಮಂ ಪೇಳ್ದ ದೆಸೆಯಿಂ
ಧರೆಯೊಳು ಸುವೃಷ್ಟಿ ಸುಫಲಂ ಕ್ಷೇಮ ಧಾನ್ಯಮಂ
ಕರುಣಿಸುಗೆ ಸರ್ವ ಭೂಪಾಲರವನೀತಳವ
ಸ್ಥಿರವಾಗಿ ಪಾಲಿಸಲಿ ಶ್ರೀ ಗುರು ವಿರೂಪಾಕ್ಷನೊಲಿದು ಭಕ್ತರ ಸಲಹಲಿ        ೬೩