ರಾಗ : ಮಾಳವ ಗೌಳ

ಪಲ್ಲವ ||           ಭೂಮಿಯ ಚರಾಚರವನುದ್ಧರಿಸಿ ಪಲಕೆಲವು
ಸಾಮರ್ಥ್ಯಮಂ ತೋರ್ಪನೆಂದು ಭರದಲಿ ಸಿದ್ಧ
ರಾಮಯ್ಯನಾಗಿ ಸೊನ್ನಲಿಗೆಯೊಳಗುದಯವಾದಂ ಶಶಿಕಳಾಜೂಟನು ||

ಆನಿನ್ನೆಗಂ ಕಂಡ ಸಂಭ್ರಮಂ ಕಡೆಗೆ ಕನ
ಸೋ ನಿರುತವೋ ನಿದ್ದೆಗೈದೆನೋ ಇಲ್ಲವೊ ಇ
ದೇನೆಂದು ನೋಡಿ ಬೆಱಗಾಗುತ್ತ ಸೊಡರ್ಗಳಿವೆ ಪೂಗಳಿವೆಯೆಂದು ತನಗೆ
ತಾನೆ ಬಸಿಱಂ ತಡವಿ ಹೆದಱಿ ಮಗ್ಗುಲ ಮಱೆಯೊ
ಳಾನಂದದಿಂದಿರ್ದ ಕಂದನಂ ಕಂಡತಿ
ಧ್ವಾನದಿಂದೆಬ್ಬಿಸಿದಳಬ್ಬರಿಸಿ ಗಂಡನಂ ಮನೆಯೊಳೊಱಿಗಿರ್ದವರನು          ೧

ನೆರೆಹೊರೆಯ ಮುಮ್ಮನೆಯ ಹೆಮ್ಮಕ್ಕಳಂ ಬೇಗ
ಕರೆ ತೋಱಬೇಕು ಬೆಸಲಾದೆನೆನೆ ಹರಿಹರಿದು
ಕರೆದರಾವಾಗಳಿಂತೀಗಳೇನದು ಗಂಡು ಇರ್ಪುದೇ ಇದೆಯೆಂದೊಡೆ
ಅರಿದೈದು ತಿಂಗಳೊಳಗೆಂದೆನುತ ತಮತಮಗೆ
ನೆರೆದು ಬೆಚ್ಚಂಬಿಲವ ಕುಡುಗೋಲ ಕಪ್ಪಡವ
ನರಳೆಯಂ ತೈಲವಂ ತಾ ಬೇಗಲೆನುತಲಾತನ ಹೊದಿಕೆಯಂ ತೆಗೆದರು           ೨

ಮುಸುಕು ಸರಿಯಲು ಮೋಡವೋಡಿದಿನಬಿಂಬದಂ
ತೆಸೆವ ಮೆಯ್ವೆಳಗೆದ್ದು ಬೀದಿವರಿದೊಳಗೆ ಧವ
ಳಿಸೆ ಸೊಡರ್ಗಳೆಯ್ದ ಮಸುಳಿಸಿ ಮಬ್ಬಳಿ ಯೆ ದಂತವೆಸದ ಪುತ್ತಳಿಯೊ ಅಲ್ಲ
ಶಶಿಕಾಂತದ ಪ್ರತಿಮೆ ಬೇಡ ಬೆಳ್ಳಿಯ ಬೊಂಬೆ
ಹುಸಿ ಶಂಖಸಾಲಭಂಜಿಕೆಯಲ್ಲ ಮೌಕ್ತಿಕದ
ಶಿಶುವೆಂದು ಮುಟ್ಟಿ ಮೃದುವಂ ಕಂಡು ಮನುಜನಹನೆಂದು ಭಾವಿಸಿ ಬಗೆದರು          ೩

ನೊಸಲ ಬಿಸಿಗಣ್ಣನೇಱೆಂದು ಶಿಲಿಂಗಮಂ
ಮುಸುಕಿ ಬೆಳೆದುತ್ತಮಾಂಗವನು ಬಾ (ವೆಂ)ದು ದಿ
ಟ್ಟಿಸಿ ನೋಡದೆವೆಯಿಕ್ಕದಿಹ ಕಣ್ಣ ದಕ್ಕಾಲಿಯೆಂದು ನಿರ್ಮಲ ದೇಹಮಂ
ರಸವಱತು ಬೆಳೆದಂಗವೆಂದು ದುಃಖಗಳಡಗಿ
ದುಸಿರನಾರೈದು ನಿರ್ಜೀವನೆಂದೆಂದು ಶಂ
ಕಿಸಿ ನೋಡಲಮ್ಮದೊಯ್ಯನೆ ದೂರದಿಂದೆ ದೀವಿಗೆವಿಡಿದು ದಿಟ್ಟಿಸಿದರು      ೪

ಉಸಿರಿಲ್ಲ ಕರಣಂಗಳಲುಗುತಿವೆ ಎವೆ ಮಱೆದು
ಮಿಸುಕವಾರೈದು ಕಣು ನೋಡುತಿವೆ ಎಳದು ಬಾಯ್
ನಸುನಗುತ್ತಿದೆ ತೇಂಕುದಾಣಂಗಳಲುಗುವಂಗಂಗಳತಿ ಬಿಸಿವೆತ್ತಿವೆ
ಒಸೆದಿರಿಸಬಾರದಿರಿಸದೆ ತೆಗೆಯ ಬಾರದೀ
ಹಸುಳೆಯಂದಂ ಹೊಸತು ವಸುಧೆಯೊಳಗೆಂದು ಶಂ
ಕಿಸುತವಂತಾ ಸತಿಯರಾತನಂ ಹೆತ್ತೆನೆಂಬಬ್ಬೆಯೊಡನಿಂತೆಂದರು      ೫

ಸುದತಿ ಗರ್ಭಕ್ಕೆ ಮುನ್ನೇನಕ್ಕೆ ನಿಘ್ರಹು
ಟ್ಟದಲೆ ಇಂದೆಂತು ಬೆಸಲಾದೆ ಹೇಳೆಂದೆಂದು
ಮುದುಗಣ್ಗಳೆ ನಲಮರಿಯರ್ ವೆರಸಿ ಹೂಮಳೆಯ ದುಂದುಭಿಯ ಧ್ವನಿಗಳೊಳಗೆ
ಮದನಹರನರಸಿ ಬಿಜಯಂಗೈದು ಹರಸಿ ಮೋ
ಹದೊಳೀತನಂ ತಮ್ಮ ದೇವನೆಂದೋವಿ ಪ್ರೇ
ಮದಿ ಸಿದ್ಧರಾಮಯ್ಯನೆಂದು ಹೆಸರಿಟ್ಟಾಡಿ ಹಾಡಿ ಹರಸಿದಳೆಂದಳು           ೬

ಇಂತೀಗಲವರತ್ತ ಹೋದರಾನಿತ್ತ ಕ
ಣ್ಣಂ ತೆಱೆದು ಕರಸಿದೆಂ ನಿಮ್ಮನೆಂದೆನಲಂಗ
ಜಾಂತಕನ ಸತಿಯೇಕೆ ನೀನೇಕೆ ಬಳಿಱಿಳಿವ ಸಂಕಟವ ಬಲು ಬೇನೆಯ
ಭ್ರಾಂತಿನಿಂ ಮೈಮಱೆದು ಕಂಡ ಕನಸೈಸೆ ಮರು
ಳಂತೆ ನುಡಿಯದಿರೆಂದಡದನೊಡಂಬಟ್ಟಳಾ
ಕಾಂತೆಯೆಂಬಾಗಳಧಮರ ಬೋಧೆಯಿಂದಾರ ಲೇಸು ಬೀಸರವಾಗದು           ೭

ಅಂಬಿಕಾಪತಿ ಲೋಕಮಂ ಸಾಕಲೊಗೆದನೆಂ
ದೆಂಬುದಂ ತನ್ನ ದಶಶತ ಕರದಿ ಗಗನವೆಂ
ದೆಂಬ ಜಾಗಟೆಯಿಂದ ಧರೆಗೆ ಡಂಗುರವೊಯ್ಯಲೆಂದಂದು ನಿಂದಿರ್ದನೋ
ಎಂಬಂತೆ ರವಿಯುದಯಗಿರಿಗೆ ಬಂದಂ ಜನ ಕ
ದಂಬವಾ ಪೂಮಳೆಗೆ ಜನನಕ್ಕೆ ಶಿಶುಗೆ ಚೋ
ದ್ಯಂಬಟ್ಟರಲ್ಲಲಿ ತನತನಗೆ ಹರಿಹರಿದು ನೆರೆದೆರೆದು ನುಡಿನುಡಿದರು         ೮

ಓತು ತಾತಂ ಜಾತಸೂತಕಾತೀತಂಗೆ
ಜಾತಕರ್ಮವನೊದವಿ ಸಿದ್ಧರಾಮಯ್ಯನೆಂ
ದಾತಂಗೆ ಗಿರಿಜಾತೆ ಕೊಟ್ಟ ಹೆಸರಂ ಬಿಟ್ಟು ಧೂಳಿಮಾಕಾಳನೆಂದು
ನೀತಿಗೆಡೆ ಕುಲದೈವವೆಸರಿಂದ ಕರೆದು ದು
ರ್ನೀತರೆಲ್ಲಾ ಮಕ್ಕಳಂದವಲ್ಲೆಂದು ಮಿಗೆ
ಧಾತುಗೆಟ್ಟುಮ್ಮಳಿಸುತಿರ್ದರಂದಂದಿಂಗೆ ನೋಡಿ ಮನದೊಳು ಮಱುಗುತ   ೯

ಘನ ನಿತ್ಯತೃಪ್ತನಂ ಮೊಲೆಯುಣ್ಣನೆಂದನಿಮಿ
ಷನ ನಿದ್ರೆಗೈಯನೆಂದಕ್ಲೇಶನಳನೆಂದು
ಘನ ಮೌನಿ ನುಡಿಯನೆಂದಮಳ ಲಿಂಗಪ್ರಾಣಿಯುಸಿರನೆಂದಶರೀರಿಗೆ
ತನುಧರ್ಮವಿಲ್ಲೆಂದು ಸಕಲಭೂತದೊಳನ
ನ್ಯನನು ನಗನೆಂದು ಚಿಣ್ಣಂ ನಡೆಯಲಱಿಯನೆಂ
ದನುಪಮಾರ್ಯಂ ಬಾಲಲೀಲೆಯಂ ನಟಿಸನೆಂದಳುವರಾ ಮಾತೆಪಿತರು        ೧೦

ಎಳಸಿ ತನಯಂ ಹುಟ್ಟೆ ಹುಟ್ಟಿತ್ತು ಸಂಪದಂ
ಬೆಳೆಯ ತೊಡಗಿದೊಡೆ ಧರೆ ಬೆಳೆಯತೊಡಗಿತ್ತೊಚ್ಚಿ
ಸುಳಿಯ ತೊಡಗಲು ಸುಳಿಯ ತೊಡಗಿತ್ತು ತಾಯ್ತಂದೆಗಳ ಕೀರ್ತಿ ದಿಕ್ಕಟದಲಿ
ಗಳಿಗೆ ಜಾವಂ ದಿನಂ ಪಕ್ಷ ಮಾಸಾಬ್ದ ತತಿ
ಗಳ ಹಂಗು ಹೊದ್ದದೊಂದೆರಡು ಸಂವತ್ಸರಂ
ಗಳಲೆ ಹತ್ತೈದು ವರುಷದ ಹರೆಯವಂ ತಳೆದನನುಪಮಸ್ವಾತಂತ್ರನು          ೧೧

ಧೂಳಯ್ಯನೆಂದು ಕಿವಿಯಲಿ ಕೂಗಿ ಕರೆದಡಂ
ಕೇಳದಂತಿಪ್ಪನೆಲೆ ಸಿದ್ಧರಾಮಯ್ಯ ಎಂ
ದಾಳೋಕಿಸದ ಮುನ್ನ ತಿರುಗಿನೋಳ್ಪಂ ನಡಸಿತಂದು ಶಿವನಿಳಯದೊಳಗೆ
ಲೀಲೆಯಿಂ ಕುಣಿಸೆ ಕುಣಿವಂ ನುಡಿಯ ಬಲ್ವಾತ
ನಾಲಿಸಲು ನುಡಿವನೋವಿದರೆಂದು ಹಾರೈಸ
ನೇಳಿಸಲು ಮುನಿಯನೊಳಗಱಿವರ್ಗೆ ನಾಚುತ್ತ ಜಗಕೆ ಮರುಳಂತಿರ್ದನು       ೧೨

ಗೃಹದೊಳಗೆ ಮರುಳಂತೆ ಜಡನಾಗಿ ಮೂಗುವ
ಟ್ಟಿಹುದಱಿಂದಂ ಕಱುಗಳಂ ಕಾಯಹೊಡೆದೊಡಾ
ಗಹನದೊಳು ಬಿಱುಬಿಸಿಲ ಗಾಳಿಯಂ ಹಸಿದು ಮಱೆದುಣ್ಣನೇ ನೀರ್ಗುಡಿಯನೇ
ಇಹಗೊಮ್ಮೆ ನೋಳ್ಪೆನೆಂದಾ ಮುದ್ದಗೌಡನೆ
ದ್ದಹಿಮಕರನುದಯದೊಳು ಕಱುಗಳಂ ಬಿಟ್ಟು ಚೆಲು
ವಹ ಕಲಸುಗೂಳ್ ಕಟ್ಟಿಕೊಟ್ಟು ಸಿದ್ಧೇಶ್ವರನ ಬೆಂಬಳಿಯಲೈತಂದನು      ೧೩

ಒಡನೆ ಕಱುಗಾವ ಮಕ್ಕಳುಗಳಂ ಕರೆದು ಕೈ
ವಿಡಿದೆಮ್ಮ ತಮ್ಮನಂ ಕೂಡಿಕೊಂಡೊಯ್ತಂದು
ಕೊಡಿ ತಂದೆಗಳಿರ ಎಂದಪ್ಪಯಿಸಿದಂ ಧರೆಯ ರಕ್ಷೆಗೆಂದೊಗೆದವನನು
ಬಿಡದಿವರ ಸಂಗಡದೊಳೀ ಕಱುಗಳೋಡದಂ
ತೊಡನೆ ಬಳಿವಳಿಯಲಿದ್ದೆಲ್ಲರೋಪಾದಿಯಿಂ
ನಡೆವುದೆಲೆ ಮಗನೆ ಎಂದಪ್ಪಿ ತಲೆದಡವುತ್ತ ಹೋದನಾ ಮುದ್ದಯ್ಯನು      ೧೪

ನೆಲೆವೊಕ್ಕನಂತಾತನತ್ತಲಿತ್ತಂ ಸಿದ್ಧ
ತಿಲಕನುಱೆ ತನಗೆ ಪಿತನೆಂಬ ಮುದ್ದಯ್ಯಂಗೆ
ಕುಲದೈವವೆಂದೆನಿಪ ಧೂಳಿಮಾಕಾಳಂಗೆ ಕಱುಗಾವ ಬೆಸನನಿತ್ತು
ತೊಲಗದೊಡನಾಡಿಗಳುವೆರಸಿ ನಡೆಯಲು ಮುಂದೆ
ಪಲವು ಮಾಮರದಡಿಯ ಮಲ್ಲಿಕಾಮಂಟಪದ
ತಳದ ತಣ್ಣೆಳಲ ತಿಳಿಗೊಳನ ಪುಳಿನಸ್ಥಳದಿ ದಿವ್ಯಲಿಂಗಂ ಮೆಱೆದುದು         ೧೫

ಅಲ್ಲಿವರ್ಪರ್ ಕಂಡು ಮಕ್ಕಳಾವಱಿಯೆ ಮು
ನ್ನಿಲ್ಲಿ ಮಾಮರನಿಲ್ಲ ಕೊಳನಿಲ್ಲ ಶಿವಲಿಂಗ
ವಿಲ್ಲೆಂದು ಬೆಱಗಾಗುತಿರೆ ಸಿದ್ಧಬಾನು ಪರಿಪರಿಯ ಹೂಪತ್ರೆಗೊಯ್ದು
ಸಲ್ಲಲಿತ ಶಿವಲಿಂಗ ಪೂಜೆಯಂ ಮಾಡಿ ತ
ನ್ನಲ್ಲಿರ್ದ ಕಟ್ಟೋಗರವನಾಹ ರಂಗೊಟ್ಟು
ಸೊಲ್ಲಿಸಲು ಬಾರದಾನಂದದಿಂದಾಡಿ ಪಾಡಿದನು ನಡುವಗಲತನಕ೧೬

ಜನನಿಯುಪಚಾರಕ್ಕೆ ಕಟ್ಟಿದೊಕ್ಕೈ ತುಂಬಿ
ದನಿತೋಗರವನೊಡನೆ ಕಱುಗಾವ ಮಕ್ಕಳುಗ
ಳನಿಬರ್ಗೆ ದಣಿಯುಣಲಿಕ್ಕಿ ತಣಿದಲ್ಲಿ ಪಲ್ಲವಿಸಿ ಫಲಭರಿತವಾದ
ವಿನುತ ಪರಿಣಾಮ ಪ್ರಸಾದಮಂ ತಾ ಧರಿಸಿ
ನೆನಹು ನಿಲುಕದ ಸುಖದ ಸುಗ್ಗಿಯಂ ಸವಿದನೀ
ಶನ ಕುಮಾರಂ ಪುಣ್ಯಪೂರನಘದೂರನತಿಧೀರನಮಳಾಕಾರನು      ೧೭

ಬಳಿಕವಾ ಲಿಂಗಮಂ ಬೀಳ್ಕೊಂಡು ತಿರುಗಿ ಕಱು
ಗಳ ಹಿಂಡುಗೊಂಡು ಬರುತಿರಲಿತ್ತ ಮುದ್ದಯ್ಯ
ನೊಳಗೊಳಗೆ ಹಲವನೆಣಿಸುತ್ತೆನ್ನ ಮರುಳುಮಗನೇನಾದನೋ ಎನುತ್ತ
ಬಳವಳಿದು ದೂರಿಸುತ್ತಿದಿರಾಗಿ ಬರುತ ಮ
ಕ್ಕಳ ನಡುವೆ ಬಪ್ಪ ಸಿದ್ಧೇಶ್ವರನನತಿದೂರ
ದೊಳು ಕಂಡು ಶಶಿಯ ಬರವಂ ಕಂಡು ದೇಸಿಗ ಚಕೋರನಂತಾದನಂದು        ೧೮

ಬಂದು ತೆಗೆದಪ್ಪಿ ತಲೆದಡವಿ ಮುಂಡಾಡಿ ಬಿಸಿ
ಲಿಂದ ಬೆಂಡಾಗಿ ಹಸಿದಳವಳಿದು ನಡೆದು ಕಾಲ್
ನೊಂದವೇ ಕಂದಯೆಂದೆತ್ತಿ ನಡೆದೈತಂದನೀಶನಂ ಹೊತ್ತು ನಡೆವ
ನಂದಿಶನೋ ಎನಿಪ್ಪಂತೆ ಮನೆವೊಕ್ಕು ಮುದ
ದಿಂದೋವಿ ಭಾವಿಸುತ್ತಿರ್ದರೆಂಬಾಗಳೀ
ತಂದೆತಾಯ್ಗಳ ಪುಣ್ಯದೊಂದು ಸಂಪದವ ನಾ ನೇನೆಂದು ಬಣ್ಣಿಸುವೆನು      ೧೯

ಮಱೆಯದೀ ತೆಱದೊಳಂದಂದಿಂಗೆ ಕಱುಗಾವ
ತೆಱದಿ ಲಿಂಗಾರ್ಚನಾ ಸುಖವಡೆ ಯು ತಂ ಹಾಲ
ಮಱೆಯ ಘೃತದಂತೆ ಮಾತಿನ ಮಱೆಯ ಸತ್ಯದಂತೊಡಲ ಮಱೆಯಾತ್ಮನಂತೆ
ಉಱುವ ಸಮತೆಯ ಮಱೆಯ ಪುಣ್ಯದಂದದಿ ಮರನ
ಮಱೆಯಗ್ನಿಯಂತೆ ಪುಷ್ಪದ ಮಱೆಯ ಫಲದಂತೆ
ಮೆಱೆವ ಬಾಲ್ಯದ ಮಱೆಯ ಪರಬೊಮ್ಮವಾಗಿ ಮೆಱೆಯುತ್ತಿರ್ದನಪ್ರತಿಮನು         ೨೦

ಅಡಿಯಿಟ್ಟ ಧರೆ ಮಹಾಕ್ಷೇತ್ರವಱಿಯದೆ ಹೊಕ್ಕ
ಮಡು ದಿವ್ಯತೀರ್ಥ ತುಡುಕಿದ ಜಲಂ ಸಿದ್ಧಾಂಬು
ನುಡಿದ ನುಡಿಗಳು ಮೂಲಮಂತ್ರವಾಡುತ್ತ ಮಂಡೆಯಲಿ ಕೈಯಿಟ್ಟಾತನು
ಕಡೆಗೆ ಜೀವನ್ಮುಕ್ತಜ್ಞಾನದಿಂ ಸೋಂಕು
ವಡೆದಾತ ಸುರನಿತ್ತುದೇ ನಿಧಿ ನಿರೀಕ್ಷಿಸಿತೆ
ಪೊಡವಿಪಾವನವಮಮ ಸಿದ್ಧರಾಮಂ ಪುಣ್ಯನಾಮನಭಿನವ ಸೋಮನು      ೨೧

ಉದಯಾದ್ರಿಯಂ ಮೆಱೆಯಲೆಂದು ಹುಟ್ಟಿದ ಸೂರ್ಯ
ನುದಯಪರ್ವತದ ಮಗನೇ ಧರೆಯನುದ್ಧರಿಸ
ಲುದಯಿಸಿದ ದಿವ್ಯಲಿಂಗಂ ಧರೆಯ ಪುತ್ರನೇ ಘೋರತದಿಂದೊಲಿಸಿದ
ಸುದತಿ ಸುಗ್ಗವ್ವೆ ಮುದ್ದಯ್ಯನಂ ಮೆಱೆದು ಲೋ
ಕದ ಪಾಪಮಂ ಕಳೆಯಲುದಯಿಸಿದ ರುದ್ರನೆ
ನ್ನದೆ ಸಿದ್ಧರಾಮ ಯೋನಿಜನೆಂದವಂಗಾಗದಿಹುದೆ ನಾಯಕ ನರಕವು           ೨೨

ಒಂದು ದಿನವೆಂದಿನಂದದಿ ಕಱುಗಳಂ ಹೊಡೆದು
ತಂದು ನಳನಳಿಸಿ ಕೋಮಳತೆಯಿಂ ಕೊಬ್ಬಿ ನಲ
ವಿಂದೆ ಮಡಲಿಱಿದಡಸಿ ಬೆಳೆದು ಭಾರೈಸಿ ತನ್ನಂ ಹೊತ್ತ ಭೂವನಿತೆಗೆ
ವಂದಿಸುವ ತೆಱದಿಂದ ಬಾಗಿ ಬಳುಕುವ ತೆನೆಗ
ಳಿಂದೆಸೆವ ತಮ್ಮ ನವಣೆಯ ಕೆಯ್ಯ ಬಳಿಯೊಳಾ
ನಂದದಿಂದಿರ್ಪ ಸಿದ್ಧೇಂದ್ರನಂ ಮೆಱೆಯಲನುಗೆಯ್ದನಗಜಾರಮಣನು        ೨೩

ಭುವನದೊಳು ಹರವರಿಯ ಕುಱುಹುಳ್ಳ ತನ್ನ ವೇ
ಷವನು ಜಂಗಮರೂಪಿನೊಳು ಮಡಗಿ ನಡೆತಂದು
ಶಿವಮಸ್ತು ನಿತ್ಯನಾಗೆಂದು ಭಸಿತವನಿತ್ತು ಕೆಲಸಾರ್ದು ನಿಂದಿರ್ದೊಡೆ
ರವಿ ಮುಗಿಲ ಮಱೆಗೊಂಡೊಡಂ ಬೆಳಗು ಲೋಕಮಂ
ಧವಳಿಸುವ ತೆಱದಿ ನಿಜಮಂ ಮಾಜಿ ಕೃತಕದೊಳ
ಗವಿದೊಡಂ ಹಳಹಳನೆ ಹೊಳೆಹೊಳೆದು ದೇವಕಳೆ ಮನಕೆ ಮಂಗಳವಿತ್ತುದು  ೨೪

ನ್ಯಾಯದಿಂ ಕಣ್ಣಱಿಯದಿರ್ದೊಡಂ ಕರುಳಱಿಯ
ವೇಯಾಗಳಂತಲ್ಲಿ ಕಾಣುಹ ತಡಂ ನೆನೆದು
ಘೇಯೆಂದು ಮೆಯ್ಯಕ್ಕಿ ಕುಣಿದು ಕುಕಿಲಿಱಿದಾಡಿ ಹಾಡಿ ಪದರಜದಿ ಹೊರಳಿ
ಕಾಯದಿಂ ಕರಣದಿಂ ಚರಣಂಗಳಂ ಮುಸುಕಿ
ಹಾಯೆಂದು ಹಾರೈಸಿಯತಿತುಷ್ಟಿಯಿಂ ದೇವ
ರಾಯನೀಕ್ಷಿಸಿ ಮೆಚ್ಚಿ ಮುಚ್ಚಲಱಿಯದೆ ನಿಜವ ತೋಱಿಲುದ್ಯೋಗಿಸಿದನು            ೨೫

ಜಡೆಯ ಮಕುಟದ ಶಶಿಯ ಸುರನದಿಯ ಕುಂಡಲದ
ನಡುಗಣ್ಣ ಪಂಚಾಸ್ಯದೀರೈದು ಭುಜದ ಕೊರ
ಲೆಡೆಯ ಗರಳದ ತಳೆದ ಭಸಿತದಹಿಭೂಷಣದ ಹೊದೆದ ಹೊಸ ಗಜಚರ್ಮದ
ಹಿಡಿದ ಡಮರುಗ ಶೂಲ ಫಲಕ ಧನು ಸರ್ಪನುಂ
ಖಡುಗ ಶಿಖಿಪರಶು ಮೃಗಪುಲಿದೊವಲು ಸುತ್ತಿ ಬಿಗಿ
ದುಡಿಯ ಹರಿನಯನವೆರಸಿದ ಮೆಲ್ಲಡಿಯ ನಿಜದ ಮೂರ್ತಿಯಂ ತೋಱಿಸಿದನು       ೨೬

ಘನಮೇಘಮಂ ಕಂಡ ನವಿಲಂತೆ ದೇವರಾ
ಯನ ನಿಜಕೆ ಬೆಱಗಾಗುತುಸಿರಲಮ್ಮದ ಸುಖವ
ನನುಭವಿಸಿ ತಳಿರೆತ್ತ ಬಿಸಿಲೆತ್ತ ಹಂಸಶಿಶುವೆತ್ತ ಕಲುಮೊರಡಿಯೆತ್ತ
ನೆನಹು ನಿಲುಕದ ಸಹಜ ಸುಕುಮಾರ ನೀನೆತ್ತ
ಲನಿಮಿತ್ತವೀಯೆಡೆಗೆ ಬರವೆತ್ತ ನೀನಾರು
ಮನೆಯೆಲ್ಲಿ ಹೆಸರಾವುದಾವ ನಾಡವನೆಂದು ಕೇಳ್ದನಗಜೇಶ್ವರನನು           ೨೭

ಪತತಿ ಪಾವನ ಪರ್ವತಾಶ್ರಮದಲಿಪ್ಪೆನು
ನ್ನತ ಮಲ್ಲಿನಾಥನೆಂದೆನ್ನ ನಾಮಂ ನಿನ್ನ
ನತಿ ನೇಹದಿಂ ನೋಡಿ ಹಂಜಕ್ಕಿಯಂ ಬೇಡಿ ಮೆಲಬಂದೆನೆಂದು ನುಡಿಯೆ
ಅತುಳಬಳ ಹರುಷವನು ತಳೆದು ಕೆಯ್ಯೊಳು ತನ್ನ
ಮತಿಗೆ ಮಂಗಳವಪ್ಪ ತೆನೆಯನಱಸಿದನು ಸುರ
ಪತಿ ಸುರಭಿಗಿಕ್ಕಲೆಂದಮೃತ ಫಲಮಂ ಕಲ್ಪತರುವನದೊಳಱಸುವಂತೆ         ೨೮

ನಸಿದು ಬೆಳೆಯದೆ ಕೊಬ್ಬಿ ದೊಡ್ಡಿತಹ ತೆನೆಗಳೊಳು
ನಸುಗೆಂಪಿನಿಂ ಬೀಗಿ ಬಾಗಿ ತೂಗುವ ಚೆಲುವ
ಹೊಸಹಾಲ ಹನಿಗಳಡಸಿದ ತೆಱದ ತೆನೆಗಳಂ ತಿಱಿತಿಱಿದು ತಂದು ತಂದು
ಒಸೆದೊಸೆದು ಹೊಸೆ ಹೊಸೆದು ರಸವುಳ್ಳ ಹಸುರುಳ್ಳ
ಬಿಸಿಯುಳ್ಳ ಹಸಿಯ ಕೆಂಪುಳ್ಳವಲನಿತ್ತು ಬೋ
ಧಿಸಿದನುರೆ ಕಲ್ಪಭೂಜವನು ಚಿಂತಾಮಣಿಯ ಚಿಣ್ಣನುಪಚರಿಸುವಂತೆ        ೨೯

ದೇವಪತಿ ದೇವಾಧಿದೇವ ದೇವರ ಗಂಡ
ದೇವ ನೆಱೆ ತಣಿದು ತಲೆಯೆತ್ತುವನ್ನಂ ಸವಿದು
ಕಾವುದೆನ್ನಂ ತಂದೆಯೆಂದು ಬಂದಡಿಗಡಿಗೆ ಪೊಡಮಟ್ಟು ನೀಡಿ ನೀಡಿ
ಭಾವಿಸುವ ಸುತನ ಕಡುಮೋಹಮಂ ಮದನವನ
ದಾವನೀಕ್ಷಿಸಲಾಱದಾತನಂ ನಾನಿಪ್ಪ
ಠಾವಿಂಗೆ ಬರಿಸುವುದಕಾವುದೋ ಬುದ್ಧಿಯೆಂದಱಸಿ ಕಂಡಿಂತೆಂದನು            ೩೦

ಎಳ ಅವಲಿನಿಂ ತಣಿದೆನಳೆಯಂಬಕಳಕೆ ಮನ
ವೆಳಸಿತ್ತು ನನಗೆಂದು ತಂದುದುಂಟೇ ಇಲ್ಲ
ನಿಳಯದಿಂ ತಂದಪ್ಪಾ ತಪ್ಪೆನೆನೆ ತಾ ಪೋಪೆನೇ ಪೋಗು ಬೇಗವೆನಲು
ಹುಲಿಯುಂಟು ಕರಡಿಯುಂಟಮ್ಮಾವು ಉಂಟಿಲ್ಲ
ಖಳ ಮೂರ್ಖ ಚೋರರುಂಟೆಂತಿರಿಸಿ ಪೋಪೆನೆಂ
ದಳವಳಿಯುತಿರೆಲೆನ್ನ ದೆಸೆಗಂಜಬೇಡ ಹೋಗೆಂದನಡಗುವ ಭರದೊಳು       ೩೧

ಇರಲಾಱದಗಲಲಾಱದೆ ಸಂಕಟಂಗೊಂಡು
ಹಿರಿಯ ಮೆಳೆಯಡಿಯಲ್ಲಿ ಹೊದಕೆಯಂ ಹಾಸಿ ಕು
ಳ್ಳಿರಿಸಿ ವಂದಿಸಿ ಪೋಗಿ ಪೋಗಲಾಱದೆ ತಿರುಗಿ ಬಂದೋವಿ ಬಲ್ಪಿನಿಂದ
ತಿರುಗಿ ನೋಡುತ್ತ ಬಾಡುತ್ತ ಕಣ್ಮಱೆಯಾಗೆ
ಮರಳಿ ನೋಡುತ್ತ ಮೆಳೆ ಮಱೆಯಾಗೆ ಮಱುಗುತ್ತ
ಹರಿದು ಮನೆವೊಕ್ಕು ಜನನಿಯನಪ್ಪಿ ಬೇಡಿದಂ ಭುಲ್ಲವಿಸಿ ಲಲ್ಲೆಗಱೆದು   ೩೨

ಹಿಂದೆ ಕರೆದಡೆ ಬಾರ ನುಡಸೆ ನುಡಿಯಂ ಕೊಟ್ಟ
ಡೊಂದುವಂ ಕೊಳ್ಳನಿಕ್ಕಿದಡುಣ್ಣನಿಂದು ತ
ನ್ನಿಂದ ತಾಂ ಬೇಡಿದಂ ಮಗನೆಂದು ಸಡಗರಿಸಿ ಕಡೆದ ತಾರೆಳಗ ತಿರುಳ
ಚಂದದೋಗರದೊಳಗೆ ಚಂದ್ರಿಕೆಯ ಹೊಸ ಹಳುಕಿ
ನಂದದೆಮ್ಮೆಯ ಮೊಸರು ನೆಲ್ಲಿ ಮಾವ್ ಮೆಣಸುಗರೆ
ಯೆಂದಿವೆಲ್ಲವನಿರಿಸಿ ಕಟ್ಟಿಕೊಟ್ಟಳು ಕಂದ ಕೋ ಎಂದು ಸಂತಸದೊಳು       ೩೩

ನಿಂದಿರದೆ ಬಪ್ಪಾಗಳೆಡದ ಭಾಗಂ ಕೆತ್ತೆ
ಬೆಂದೆನೆನ್ನಯ ತಂದೆ ಹುಲಿ ಕರಡಿಗಳು ಕಚ್ಚೆ
ನೊಂದನೋ ಹಸಿದು ಬೆಂಡಾದನೋ ಹೋದನೋ ಏನಾದನೋ ಎನುತ್ತ
ಒಂದೊಂದನೆಣಿಸುತ್ತ ಬಂದು ನೋಳ್ಪಾಗಳ
ಲ್ಲಿಂದ ಮುನ್ನವೆ ಶಿವಂ ಹೋಗೆ ಕುಳ್ಳಿರ್ದ ಮೆಳೆ
ಇಂದು ತೊಲಗಿದ ರಾತ್ರೆಯಂತೊಪ್ಪವಳಿದಿರಲು ಕಂಡನಾ ಸಿದ್ಧೇಂದ್ರನು      ೩೪

ಬಹ ತವಕದಿಂ ಹೊಲಬುಗೆಡೆನಲೇ ನಮ್ಮ ಕೆ
ಯ್ಯಹುದೊ ಅಲ್ಲವೊ ಎನುತ್ತಂ ಸುತ್ತಲಂ ನೋಡಿ
ಸಹಸಿಗನ ಹಾವುಗೆಯ ಹೆಜ್ಜೆಯಿವೆನಿಂದಿರ್ದನಿಲ್ಲಿ ಕುಳ್ಳಿರ್ದನಿಲ್ಲಿ
ಬಹಳವೆಳಗಿನ ಕಮಂಡುಲುವನಿಳುಹಿದನಿಲ್ಲಿ
ಕುಹಕದಿಂ ಹಂಜಕ್ಕಿಯಂ ಸವಿದನಿಲ್ಲಿ ಬಳಿ
ಕೈಹಗಡಗಿ ಹೋದನೋ ತಾನೆ ಬಲ್ಲಂ ಕುಱುಹು ತಪ್ಪದೆನುತಾರೈದನು     ೩೫

ಬೆಳೆಗೆಯ್ಯ ಹೊದಱಿನೊಳು ಮುನ್ನಾಡಿದೆಡೆಗಳೊಳು
ತಳಿತ ಮರನಡಿಗಳೊಳಗೆಳ ಲತೆಯ ತಂಪಿನೊಳು
ತಿಳಿಗೊಳನ ತೀರದೊಳು ದೇವಭವನದೊಳು ಕೆಱೆಯೊಳು ಪುಷ್ಪ ವಾಟಗಳೊಳು
ಗುಳಿಗಳೊಳು ಗಡ್ಡೆಗಳ ಮಱಿಯೊಳೆಡೆಯಾಡುವವ
ರೊಳು ಮೇವ ತುಱುವಿಂಡಿನೊಳು ದಾರಿಯೊಳು ಸುತ್ತಿ
ಸುಳಿದಱಸಿದಂ ಸಿದ್ಧರಾಮನಾ ಪರ್ವತಾಗ್ರಣಿ ಮಲ್ಲಿಕಾರ್ಜುನನನು            ೩೬

ಬನ್ನವೆತ್ತಿದರಂತೆ ಮಱುಗಿ ಕಾಣದ ಕೋಪ
ದಿಂ ನಿನ್ನನಗಲಿದೆನೆನುತ್ತೋಗರವ ಕೆದಱಿ
ಕೆನ್ನೆಯಲಿ ಕೈಯಿಟ್ಟು ತಲೆಯೆತಿ ಬಿರಿಬಿರಿದು ಬಿಕ್ಕಿ ಬಾಯ್ವಿಟ್ಟೊಱಲುತ
ಚೆನ್ನಮಲ್ಲಯ್ಯ ಮಲ್ಲಯ್ಯ ಬಾ ಬಾ ಕಾಡ
ದೆನ್ನ ಮಲ್ಲಯ್ಯ ಎನ್ನಯ್ಯ ಮಲ್ಲಯ್ಯ ಓ
ಎನ್ನ ಮಲ್ಲಯ್ಯ ಬಾ ಎಂದೊಱಲಿ ಕರೆದು ಕರೆದತ್ತನಾ ಸಿದ್ಧೇಂದ್ರನು         ೩೭

ಹರಿಹರಿದು ಕರೆದು ಕರೆದತ್ತತ್ತು ಧಾತುಗೆ
ಟ್ಟುರಿವರಿವ ಬಿಸಿಲೊಳಗೆ ಕಾದ ಬಟ್ಟೆಯ ಹುಡಿಯ
ಹರಳೊಳಗೆ ಬಿದ್ದು ಮಲ್ಲಯ್ಯ ಮಲ್ಲಯ್ಯ ಎನುತಿಪ್ಪಾಗಳಿತ್ತ ಪಿಡಿದ
ಪರಿಪರಿಯ ಸತ್ತಿಗೆಯ ಸಂದಮಿಸುವಂದಣದ
ತರತರದ ತುರಗದೆತ್ತುಗಳ ಮೊತ್ತ ಮುಂದೆ
ನೆರೆದ ವೃಷಭಧ್ವಜದ ಗಾಢದಿಂ ಶ್ರೀಪರ್ವತದ ಪರುಷೆ ಬರುತಿರ್ದುದು        ೩೮

ಕಡಗಿ ಕಾಮನ ಹೆಸರನಡಗಿಸಲು ಧಾಳಿಡುವ
ಪಡೆಯೊ ಕಾಲನ ಕಟಕಮಂ ಸೂಱೆಗೊಳಲೆತ್ತಿ
ನಡೆವ ಸೇನೆಯೊ ಕವಿದವಿದ್ಯಾಮದೋತ್ಪಾಟನಕ್ಕೆ ಹರಿಯಿಡುವ ಬಲವೋ
ತೊಡರ್ವನಿನ್ನಾವನರಿಷಡ್ವರ್ಗ ತತಿಗೆ ಬೆಂ
ಬಡಿಗೆ ಸಪ್ತವ್ಯಸನದೆದೆಗೊಡ್ಡಿದಲಗೆಂದು
ಜಡಿವ ಕಹಳಾರವಂಗಳ ರಭಸದಿಂ ಪರ್ವತದ ಪರುಷೆ ಬರುತಿರ್ದುದು           ೩೯

ಹಿರಿಯರು ವಿಮಾಯರು ವಿಮತ್ಸರರು ಸಾಧುಗಳು
ಕರುಣಿಗಳು ಶಾಂತರು ದಯಾನಿಧಿಗಳಾನಂದ
ಭರಿತರುತ್ತಮ ದಾನಿಗಳು ಮಾನಿಗಳು ಮೌನಿಗಳು ಭೋಗಿಗಳು ಶುಚಿಗಳು
ನಿರಪೇಕ್ಷರಮಳರೇಕೋನಿಷ್ಠರುತ್ತಮರು
ಗರುವರು ನಿರಾಲಂಬಚಲಿತರು ನಿಸ್ಪೃಹರು
ನಿರುತನಿರ್ಬಾಧಕರು ಸತ್ಯರಾ ಪರುಷೆಯೊಳಸಂಖ್ಯಾತರೆಯ್ತಂದರು೪೦

ಕಂಗೆ ಮಂಗಳವಪ್ಪ ಪರಿಪರಿಯ ಶಿವಲಾಂಭ
ನಂಗಳಿಂದುಬ್ಬಟೆಯ ಭಾಷೆಯಿಂ ವಿವಿಧ ನೇ
ಮಂಗಳಿಂ ಬಹಳ ಭಕ್ತಿಜ್ಞಾನವೈರಾಗ್ಯದಿಂ ಬಲಿದ ತನುಗಳಾದ
ಜಂಗಮರಿನೆಸೆಯುತ್ತ ಬಹ ಪುರುಷೆಯೊಳಗೆ ಮಾ
ತಂಗ ಮೊದಲಿಱುಹೆ ಕಡೆಯೆನೆ ನೋಯಿಸದ ದಯಾ
ಸಂಗಿಗಳು ಬರುತ ಕಂಡರು ಬಟ್ಟೆಯೊಳ್ ಬಿದ್ದು ಬಾಯ್ವಿಡುವ ಬಾಲಕನನು            ೪೧

ಹಿಡಿದೆತ್ತಿ ಕುಳ್ಳಿರಿಸಿ ನೆಳಲೊಳಗೆ ಬೀಸಿ ಮೈ
ದೊಡೆದು ಬಾಯಳಿದಾರನಱಸಿದಪೆಯೆಂದಡೆ
ನ್ನೊಡೆಯನನದೆಲ್ಲಿಹನು ಪರ್ವತದಲೇ ಪೆಸರು ಮಲ್ಲಿಕಾರ್ಜುನನೆಂಬುದು
ಕಡೆಗವರ ಕಾಣಬೇಕೇ ಬೇಕು ಬೇಹಡೆ
ಮ್ಮೊಡನೆ ಬಾ ತೋರ್ಪೆವೆನೆ ಹೈ ಬಂದಪೆಂ ತೋಱಿ
ಕೊಡರಿಯ್ಯ ಎಂದು ಪೊಡಮಟ್ಟು ನಂಬುಗೆಗೊಂಡು ಹೋದನಾ ಪರುಷೆಯೊಡನೆ      ೪೨

ಅತ್ತಲಾತಂ ಪರುಷೆಯೊಡನೊಡನೆ ನಡೆಯೆ ಹಿಂ
ದಿತ್ತಲೂರೊಳಗೆಂದಿನಂತೆ ಕಱುಗಳು ಬಪ್ಪ
ಹೊತ್ತಾಗೆ ಸುಗ್ಗವ್ವೆ ಮಗನ ಬರವಂ ಪಾರ್ದು ಹೊಱಗೆ ಬಾಗಿಲ ಹುದಿಯನು
ಹತ್ತಿ ನಿಂದಿರ್ದು ಬಪ್ಪವರನಡಿಗಡಿಗೆ ಕೇ
ಳುತ್ತ ನೋಡುತ್ತ ನೆನೆಯುತ್ತ ಸುಯ್ಯುತ್ತ ಮಱು
ಗುತ್ತಮಿರಲಾ ಸತಿಯ ಹರುಷವಸ್ತಮಿಸುವಂತಿನನಸ್ತಗಿರಿಗಿಳಿದನು  ೪೩

ಕಡುಚಿಂತೆ ಮೊಳೆವಂತೆ ರಜನಿ ಹೊಳೆವಾಗ ಪತಿ
ಹಿಡಿಹಡೆಯ ಬಪ್ಪ ಪಡೆಯಂತೆ ಕಱುಗಳು ಹಾದಿ
ಯೆಡೆವರಿದು ತಮಗೆ ತಾವೇ ಬಪ್ಪುದಂ ಕಂಡು ಬಳಿಕ ಸೈರಿಸಲಾಱದೆ
ಮಡದಿಯವರವರ ಮನೆಮನೆಗಳಿಗೆ ಹೋಗಿ ಮಗ
ನೊಡನಾಡಿಗಳಿಗೆನ್ನ ಮಗನೇಕೆ ಬಾರನೆಂ
ದೊಡೆ ಬೇಱೆ ಹೋದನಿಂದೆಮ್ಮೊಡನೆ ಬಾರನಾವಱಿಯೆವೆಂದವರೆಂದರು     ೪೪

ಕೆಟ್ಟೆನಿನ್ನೇವೆನೆನ್ನಣುಗನಡವಿಯೊಳು ಹೊಲ
ಗೆಟ್ಟನೋ ಸರ್ಪನಗಿಯಿತ್ತೊ ಪೆರ್ಬುಲಿಗೆ ಮೈ
ಗೊಟ್ಟನೊ ಮರನೇಱಿ ಬಿದ್ದನೋ ನೀರೊಳದ್ದನೊ ನಂಜು ಮುಳ್ಳಡಿಯನು
ನಟ್ಟು ನಡೆಗೆಟ್ಟನೋ ಗರಗಿರಂ ಹೊಡೆದವೋ
ಬಟ್ಟೆಯೊಳು ಕಳ್ಳರಿಂ ಹಿಡಿವಡೆದನೋ ಹುಯ್ಯ
ಲಿಟ್ಟಾರ್ಗಿದಂ ಪೇಳ್ವೆನೆಮ್ಮವರ್ ತಳುವಿದರೆನುತ್ತೂರ ಹೊಱವಂಟಳು       ೪೫

ಮುಂದೇನು ಸುಳಿದೊಡಂ ಸಿದ್ಧರಾಮಾ ಎಂದು
ಹಿಂದೆ ಹುಲು ಗಿಱಕೆನಲು ಸಿದ್ಧರಾಮಾ ಎಂದು
ಅಂದು ಮಾದಾರಿಯೊಳು ಬಪ್ಪರಂ ಸಿದ್ಧರಾಮಾ ಎಂದು ಕರೆದು ಕರೆದು
ನಿಂದಿರದೆ ಹರಿದು ತಡವರಿಸಿ ಕಾಣದೆ ಮನಂ
ನೊಂದು ಹಲುಬುತ್ತವಿರಲಳುವ ಸತಿಯಾವಳೋ
ಎಂದು ಕೇಳತ್ತ ಕೆಯ್ಯತ್ತ ಕೆಲಸಂ ತೀರ್ದು ಬಂದರಾ ತಮ್ಮವರ್ಗಳು  ೪೬

ಮತ್ತಾವಳಱಿಮರುಳನಂ ಹೆತ್ತ ಕಡು ಪಾತ
ಗಿತ್ತಿಯಾನೆಂದಡೇನಾದನಿನ್ನುಂ ಬಾರ
ನತ್ತ ಕಱು ಬಂದವೆನಲಾಕೆವೆರಸವರೆಲ್ಲ ಹರಿದು ಬಂದಱಸುತಿರಲು
ಕತ್ತಲೆಯ ಕಾಹೊನಲನೀಸಾಡುವಂತೆ ತಡ
ವುತ್ತ ನೋಡುತ್ತ ಹರಿಯುತ್ತ ಹಳವಿಸುತ ಬಾಯ್
ಬತ್ತಲೊಱಲುತ್ತ ತಮತಮಗೆ ಕರೆದರು ಕರೆದರೇನೆಂಬೆನಚ್ಚರಿಯನು           ೪೭

ಒಬ್ಬನೆಲೆ ಸಿದ್ಧರಾಮಾ ಎಂದು ಹಿಂದೆ ಮ
ತ್ತೊಬ್ಬನೆಲೆ ಧೂಳಿಮಾಕಾಳನೇ ಎಂದು ಮ
ತ್ತೊಬ್ಬನೆಲೆ ತಮ್ಮ ಮರುಳುಮಗನೇ ಎಂದು ಮತ್ತೊಬ್ಬನೆಲೆ ತಮ್ಮ ಎನುತ
ಮಬ್ಬಿನೊಳು ಮೆಳೆಗಳೊಳು ಕುಳಿಗಳೊಳು ಕಲುಗಳೊಳ
ಗಬ್ಬಿಯೊಳು ಬೆಳೆಗೆಯ್ಯ ಸಂದಿಯೊಳು ಗೊಂದಿಯೊಳು
ಗಬ್ಬರಿಸಿ ತಮತಮಗೆ ಚೀಱಿ ಕರೆದರು ಕರೆದರೇನೆಂಬೆನದ್ಭುತವನು೪೮

ಗಿರಿಶನರ್ಧಾಂಗಿ ಕೊಂಡಾಡಿದೆನ್ನಂ ನಿರಾ
ಕರಿಸಿ ಕಱುಗಾಯಲಟ್ಟಿದರೆಂದು ಮುನಿದೆಯೋ
ಗುರು ಸಿದ್ಧ ರೇವಣಾರ‍್ಯಂ ಬಂದು ನಮಿಸಿ ಸೂಚಿಸಿದ ತೆಱದಿಂ ಕಾಣದೆ
ಮರುಳೆಂದು ಬಗೆದರೆಂದಡಗಿದೆಯೊ ಈ ನಾಡ
ನರಕಿಗಳ ಸಂಗವೆನಗೇಕೆಂದು ಹೋದೆಯೋ
ಕರೆದಡೇಕೋಯೆನ್ನೆ ಸಿದ್ಧರಾಮಾ ಎಂದು ನುಡಿದಾಕೆ ಶೋಕಿಸಿದಳು            ೪೯

ಎಂತು ಮಱೆವೆನೊ ಬೆಣ್ಣೆಯಿಕ್ಕಿ ಮೊಲೆಯೂಡಿ ಮೈ
ಯಂ ತೊಳೆದುವುಣಲಿಕ್ಕಿ ಸಾಕಿ ಲೋಕದ ಬಾಲ
ರಂತಿರ್ದು ಕಳೆಯೆ ಸೈರಿಸುವೆನೆಲಲ್ಲದೀ ಬಯಲು ಬಲಿದಾಕಾರವಾ
ದಂತಿಹ ಮಹಾಂತ ನೀನೆಂತಡಂಗಿದೆ ಜನನ
ದಂತಸ್ಥವಱಿಯದವರೀ ವೃದ್ಧರಿಗೆ ಈತ
ನೆಂತು ಮಗನಾದನೆಂದೆಲ್ಲರುಂ ನಗಲು ನೋಂತೆನೆ ಸಿದ್ಧಯೆಂದತ್ತಳು          ೫೦

ಆ ನಿಘ್ರವಂ ನೋಡಲಾಱದೀಶ್ವರನೊಬ್ಬ
ಮಾನವನ ರೂಪಿನಿಂ ಬಂದಿದಾರ್ಗಳುವೆಯೆಲೆ
ಮಾನಿನಿಯೆ ಎನಲೆನ್ನ ತನಯಂಗದೇಕೆ ಹೊಲಗೆಟ್ಟನೆಂದೆಂದೀಗಳು
ಕೂನವೇಂ ಕೂಸುವರಿಯದ ಜಾಡ್ಯನತಿ ಕೆಂಚ
ನೇನಕ್ಕೆ ಶಿವಮರುಳನಲ್ಲಲೇ ಅಹನಾದ
ಡಾನಿಂದು ಕಂಡೆನಾ ಹೋಗುತೈದನೆ ಪರ್ವತದ ಪರುಷೆಯೊಳಗೆಂದನು         ೫೧

ಬಱಿಯ ಮಾತಲ್ಲವೇ ಅಲ್ಲ ದಿಟವೇ ದಿಟಂ
ಕುಱುಹುಂಟೆ ಉಂಟಾವುದುಬ್ಬಿದ ಶಿರಂ ಕೆಂಚ
ನಱಿಮರುಳ ಮೌನಿ ಸ್ವತಂತ್ರನೆನಲೆಮ್ಮಾತನಹನಾದಡಿನ್ನಲಸದೆ
ಒಱಲಬೇಡೆಂದು ಸಂತೈಸುತಿಪ್ಪಾಗ ನೇ
ಸಱು ಮೂಡೆ ಕಂಡು ನೀನುಮ್ಮಳಿಸಬೇಡ ನಾ
ನಱಿಸಿ ತಹೆನೆಂದವರ ಹೆಮ್ಮಗಂ ಬೊಮ್ಮಯ್ಯನಾಗಳಂತೇ ಹೋದನು        ೫೨

ಅಲ್ಲಲ್ಲಿ ನೋಡುತವರವರ ಕೇಳುತ್ತ ನೆರ
ವಿಲ್ಲದಿರೆ ನಿಲುತ ಕೂಡಿದೊಡಾಗ ನಡೆಯುತ್ತ
ಮೆಲ್ಲನೀತಂ ಬರಲು ಮುಂದೆ ಮುಂಚಿದ ಪರುಷೆಯೊಡನೊಡನೆ ದಾರಿಯೊಳಗೆ
ಮಲ್ಲಯ್ಯ ಮಲ್ಲಯ್ಯಯೆಂದು ಕರೆಯುತ್ತ ಬಿ
ಟ್ಟಲ್ಲಿ ಬಿಡದೆಯ್ದಿ ಕಾಂಬಾತುರದ ತವಕದಿಂ
ಪಲ್ಲವಿಸಿ ಪರ್ವತವನೇಱಿದಂ ಸಿದ್ಧರಾಮಂ ದುರಿತ ಗಜಭೀಮನು            ೫೩

ಅಟ್ಟಡವಿಯೆನದೂರೆನ್ನದೆಡೆಯೊಳು ಬಪ್ಪ
ಬಟ್ಟೆಯೆನ್ನದೆ ಹಗಲಿರುಳದೆನ್ನದೇ ನಿನ್ನ
ಹುಟ್ಟಿದೂರ್ ಮೊದಲಿಲ್ಲಿ ತನಕೊಱಲಿ ಕರೆದು ಕರೆದಲವತ್ತು ಹಂಬಲಿಸುತ
ಬೆಟ್ಟದೊಳು ಘಟ್ಟದೊಳು ಸರುವಿನೊಳು ದರುವಿನೊಳು
ಕೆಟ್ಟ ಸಂದಿಯೊಳು ಗೊಂದಿಯೊಳಱಸಿ ಬಳಲಿ ಮನ
ನಟ್ಟು ಕಣ್ ಧಣಿವನ್ನ ನೋಡು ಬಾ ತಂದೆಯೆಂದೊಯ್ದರಾ ಶಿವನಿಳಯಕೆ   ೫೪

ಎಲ್ಲಿರ್ದಪಂ ತೋಱಿರಯ್ಯ ದಮ್ಮಯ್ಯ ತಳು
ವಿಲ್ಲಲೇ ಇಲ್ಲೀಗ ಕಂಡೆನಾದಡೆ ಚರಣ
ದಲ್ಲಿ ದೊಪ್ಪನೆ ಬಿದ್ದು ಬಿಗಿದು ತರ್ಕೈಸಿ ಬಸಿಱಂ ಬಗಿದು ಹೊಕ್ಕು ಬೆರಸಿ
ತಲ್ಲೀಯವಪ್ಪೆನೆಂದಲವರುವ ಕರಣಂಗ
ಳೆಲ್ಲವಂ ಕಣ್ಣಬಾಗಿಲೊಳಿಟ್ಟು ಕೊಂಡೆಯ್ದಿ
ಮಲ್ಲಯ್ಯ ಮಲ್ಲಯ್ಯಯೆನೆ ಮಂದಿಯಂ ಬಗಿದು ಲಿಂಗವಂ ತೋಱಿಸಿದರು            ೫೫

ಹಿಂದೆ ಕಂಡಾ ಮೂರ್ತಿಯೆಂದು ಬಗೆದತ್ಯಾರ್ತ
ದಿಂದ ನಡೆ ನೋಡಿ ಲಿಂಗಾಕಾರಮಂ ಕಂಡು
ನೊಂದಡವಿಯೊಳಗೆ ಹೊಲಗೆಟ್ಟವ್ವೆಗೆತ್ತನ್ಯಳಂ ಕಂಡ ಶಿಶುವ ಪೋಲ್ತು
ತಂದೆ ಬಾ ತೋಱಿದಪೆವೆಂದಡಱಿಯದೆ ನಂಬಿ
ಬಂದು ಕೆಟ್ಟೆಂ ಕೆಟ್ಟೆನೆಂದು ಮಂದಿಗೆ ಮಱುಗು
ತಂದು ಮಲ್ಲಯ್ಯ ಮಲ್ಲಯ್ಯಯೆನುತಲಿ ಸಿದ್ಧರಾಮಯ್ಯ ಚಿಂತಿಸಿದನು    ೫೬

ಬಱಿದೇಕೆ ಬಾಯ್ಬಿಡುವೆ ತಮ್ಮ ಬೇಡೀ ಲೋಕ
ವಱಿಯುತಿರೆ ಮಲ್ಲಿಕಾರ್ಜುನನೀತನೆಂದೊಡಾ
ನಱಿಯೆನೇ ಸಾರೀತನಲ್ಲೆನಲು ನೀನಱಿವ ಕುಱುಹಾವುದೆನೆ ಮುಡಿಯೊಳು
ಹೆಱೆಯುಂಟು ತೊಱೆಯುಂಟು ಜಡೆಯುಂಟು ಕೊರಳೆಡೆಯ
ಕಱೆಯುಂಟು ಪಂಚಮುಖವುಂಟು ದಶಭುಜವುಂಟು
ಕಿಱಿಯ ಫಣಿದೊಡವುಂಟು ನೊಸಲ ಕಣ್ಣುಂಟಾತನಂ ತೋಱಿಕೊಡಿಯೆಂದನು         ೫೭

ಆತನಂ ತೋಱಲಾವಱಯೆವಳಬೇಡೆಂದ
ಡೇತೆಱದೊಳಂ ಮಾಣದಿರ್ದೊಡಾಸತ್ತು ಬಿ
ಟ್ಟೈತಂದರಿತ್ತಲಿವನೆಂತುಮಱಸುತ್ತಾಗಳಳಲುರಿಯ ವಿರಹದಿಂದ
ಭೀತಿ ಬೀತಾಱೇಳವಸ್ಥೆ ತಲೆದೋಱೆ ಕಾ
ಬಾತುರದೊಳೆದ್ದು ಹೊಱವಂಟು ಬಳಿಕಾನಾವ
ಗೋತೆನಾರ್ಗೆಲ್ಲಿರ್ದೆನೇನಾದೆನೆಂದಱಿಯದಱಸಿದನದೇವೊಗಳ್ವೆನು            ೫೮

ಗಿಡುಗಳೊಳು ಹೊಕ್ಕು ಮಲ್ಲಯ್ಯ ಮಲ್ಲಯ್ಯ ಕ
ಮ್ಮಡುಗಳೊಳು ಹೊಕ್ಕು ಮಲ್ಲಯ್ಯ ಮಲ್ಲಯ್ಯ ಪೇ
ರಡವಿಯೊಳು ಹೊಕ್ಕು ಮಲ್ಲಯ್ಯ ಮಲ್ಲಯ್ಯ ಮಾರ್ದನಿಗೊಡುವ ಗುಹೆ ಗುಹೆಗಳ
ನಡುವೆ ಹೊಕ್ಕಯ್ಯ ಮಲ್ಲಯ್ಯ ಮಲ್ಲಯ್ಯ ಹೊದ
ಱಿಡೆಯ ಹೊಕ್ಕಯ್ಯ ಮಲ್ಲಯ್ಯ ಮಲ್ಲಯ್ಯ ಬಾ
ತಡೆಯದೋಯೆನ್ನುವ ಮಲ್ಲಯ್ಯ ಮಲ್ಲಯ್ಯಯೆಂದೊದಱಿ ಕರೆದಂ ಕರೆದನು       ೫೯

ಆವೆಡೆಯೊಳಿರ್ಪೆಯೋ ಮಲ್ಲಯ್ಯ ನೀನಿರ್ಪ
ಠಾವಿದೆಂದಱಿಪಿಯಡಗುವರೆ ಎಲೆ ಮಲ್ಲಯ್ಯ
ಗಾವಿಲನು ಮರುಳನಿವನತ್ತಡೇನೆಂದೇಳಿಲವ ಮಾಡದಿರು ಬಲ್ಲಡೆ
ಆವುದುಂ ಗತಿಯಿಲ್ಲದಭಿಮಾನಿ ಸಜ್ಜನರು
ಆವವಸ್ಥೆಯನೈದಲದು ನಿನ್ನ ತಾಗುವುದು
ಸಾವನ್ನ ಶ್ರವ ಬೇಡ ನಿಜರೂಪ ತೋಱೆಂದು ಒದಱಿ ಕರೆದಂ ಕರೆದನು        ೬೦

ಗಂಗೆಯನು ತಳೆದನಾವೆಡೆಯೊಳಿರ್ದಪನೊ ಮಱಿ
ದಿಂಗಳನು ಮುಡಿದನೆಲ್ಲಿರ್ದಪನೊ ಹೊಳೆವ ಫಣಿ
ಪಂಗಳನು ತೊಟ್ಟವನು ಎತ್ತ ಹೋದಂ ಎತ್ತನೇಱಿರ್ದನೇನಾದಪಂ
ಅಂಗನೆಯನೆಡದ ದೇಹದೊಳು ಮಡಗಿಟ್ಟವನ
ಕಂಗಳಿಂಗಳದಿಂದ ಪುರದ ನೆಱೆ ಸುಟ್ಟವನ
ನಂಗಭಸಿತನ ಕಂಡಿರೇನಯ್ಯ ಅಯ್ಯ ಎಂದವರವರ್ಗೆ ಬಾಯ್ವಿಟ್ಟನು           ೬೧

ಹೀನ ಮಾನವರನೀ ಬೇಡರಂ ಚಂಚರಂ
ಕಾನನದ ವೃಕ್ಷಲತೆ ಗುಲ್ಮಮೃಗ ಪಕ್ಷಿಯಂ
ವಾನರಂ ಕಿನ್ನರ ವಿಹಂಗ ಮೊದಲಾದ ನಾನಾ ಜೀವ ಜಾಳಂಗಳಂ
ಏನೆಂದು ಅಯ್ಯಯ್ಯಯೆಂದು ಬಾಯ್ಬಿಟ್ಟೆಂದ
ಡೇನಪ್ಪುದೆಂದು ಕಪಟದಿ ಶಿವಂ ಕೋಪಿಸಲು
ನಾನಾಱೆನಯ್ಯಯೆನಲಾಱೆ ಜಗಭರಿತ ತೇಜೋರೂಪ ಶಿವಯೆಂದನು         ೬೨

ಕರದಡೇಕೋಯೆನ್ನೆ ಮಲ್ಲಯ್ಯ ಬೆಂಬತ್ತಿ
ಹರಿದಡೇಕೋಯೆನ್ನೆ ಮಲ್ಲಯ್ಯ ಕಡುಬಿಸಿಲ
ಉರಿಗೆ ನೆಲಕಾಯ್ದ ಹುಡಿಯೊಳಗೆ ಹೊರಳಿದು ಮಿಡುಕೆ ಕರುಣವಿನಿತಿಲ್ಲ ನಿನಗೆ
ಮರುಳಂಗನಾಥಂಗನನ್ಯಗತಿಕಂಗಿನ್ನು
ಕರುಣಿಸೋ ಎಂಬ ಪ್ರಲಾಪಕ್ಕೆ ಸೈರಿಸದೆ
ತರುಗಲ್ಮಲತೆಗಳೆದ್ದಳುತಿರ್ದವಂಬರದ ಕಂಬನಿಯ ಕೂಡೆ ಕೊಡೆ    ೬೩

ಕರೆಕರೆದು ಗಹ್ವರದ ಮಾರ್ದನಿಗಳಂ ಕೇಳ್ದು
ಗಿರಿಶನೋಯೆಂದನೆಂದೆಯ್ದೆ ಕಣ್ಮುಚ್ಚಿ ಹೃ
ತ್ಸರಸಿಜದೊಳಿರ್ದ ರೂಪಂ ಕಂಡು ಕಣ್ದೆಱಿದು ನೋಡಿ ಕಾಣದೆ ಮಱುಗುತ
ಭರವಸದಿ ನಡೆಯುಡುಗಿ ಬಿಱು ಬಿಸಿಲೊಳಲ್ಲಲ್ಲಿ
ಹರಿಹರಿದು ಬಗಿಬಗಿದು ನೊಂದು ಪರಿಪರಿಯ ಕ
ಮ್ಮರಿಗಳೊಳು ನೋಡುತ್ತಾ ಬಾಡುತ್ತ ನೆಱೆ ರುದ್ರಗಮ್ಮರಿಗೆ ನಡೆತಂದನು  ೬೪

ಘನ ಸತ್ಯಮಯನಪ್ಪ ನೀಂ ಪರ್ವತದಲಿಪ್ಪೆ
ನೆನೆ ನಿನ್ನ ಕಾಣಲೆಂದಾನಿಲ್ಲಿಗೈತಂದೊ
ಡನಿಮಿತ್ತ ಮುನಿದನಂತಡಗುವರೆ ಹಿಂದೆಕೆಯ್ಯೊಳಗೆ ತೋಱಿದ ನಿಜವನು
ಎನಗೀಗ ತೋಱುವುದು ಲೇಸ ಸಾಱಿದೆನು ದು
ರ್ಜನವಲಳಿಯಲಿನ್ನೊಮ್ಮೆ ಕರೆವೆನಲ್ಲಿಂ ಮೇಲೆ
ತನುವನೀ ಕಮ್ಮರಿಗೆ ಕುಡುವೆನೆಂದಾಡುತಿರೆ ಪರವಶಂ ಕೈಮಿಕ್ಕುದು            ೬೫

ಹೆಱೆಸೂಡಿದನ ಹಿಂದೆ ಕಂಡ ಮೂರ್ತಿಯ ಭಾವ
ವೆಱಗಿದಂತಾಗಿ ಚಿತ್ತದೊಳಗಚ್ಚೊತ್ತಿದಂ
ತಱಿದ ಸೊಗಸಿನ ಸೊಕ್ಕು ಮಿಕ್ಕು ಹೊಱಗಂ ಮಱೆದು ಸೈವೆಱಗುವಟ್ಟು ಹಿರಿಯ
ಸಱಿಯಲ್ಲಿ ನಿಂದೂರ್ಧ್ವಬಾಹುವಾಗಿಯೆ ಬಾಯ
ತೆಱೆದು ವಾಯುವೆ ಭಕ್ಷ್ಯವಾದಂದು ತಲೆಯಿಟ್ಟು
ಬಿಱುವಿಸಿಲನಾಂತಿರಲು ಕಂಡು ಸೈರಿಸದೆ ಬಳಿಕೆಚ್ಚಱಿಸುತಿಂತೆಂದನು           ೬೬

ಕಡುಮೋಹವಱಿಯಾಲಾನಡಗಿದಡೆ ಭಾಷೆಯಂ
ಪಿಡಿದನೇಗುವೆನಿವಂ ಕರೆದ ಬಾಯಿಂದೆ ಪೊಱ
ಮಡುವೆನೋ ಕರೆದಡೋಯೆಂಬೆನೋ ಕರೆದ ದೆಸೆಯಿಂದೆದ್ದು ಹರಿತಪ್ಪೆನೊ
ಪೊಡವಿಯಂ ಬಗಿದೇಳ್ವೆನೋ ಮೀಱಿ ಗಗನದಿಂ
ದೊಡಬೀಳ್ವೆನೋ ಬೀಳ್ವ ಕಮ್ಮರಿಯ ದರಿ ಗುಣ್ಪು
ಗೆಡೆ ಪೂಳ್ದು ಬೆಳೆವೆನೋ ಎಂದು ಶಿವನನುಗೆಯ್ಯುತಿರ್ದನತಿ ತವಕದಿಂದ       ೬೭

ಕೊರಳೆತ್ತಿ ಕೈಮುಗಿದು ನೆಗಪಿ ಕಣ್ಣಂ ಮುಚ್ಚಿ
ಕರುಣಾಬ್ದಿ ಮಲ್ಲಿನಾಥಾ ಎಂದಡೋ ಕಂದ
ಕರೆದು ಬಳಲಿದೆಯೆನುತ್ತೆತ್ತಿ ತರ್ಕೈಸಿ ತಲೆದಡವಿ ಮುಂಡಾಡಿ ನೋಡಿ
ತರುಣೇಂದು ಸುರನದಿ ಜಟಾಮಕುಟವ ಸಮಾಕ್ಷ
ವುರಗಕುಂಡಲವೈದು ವದನವೀರೈದು ತೋಳ್
ಗರಳಗಳವಿಭಚರ್ಮವೆಡದ ಗಿರಿಸುತೆವೆರಸಿ ತೋಱಿದಂ ನಿಜರೂಪನು          ೬೮

ವರಮೂರ್ತಿಯಂ ಕಂಡು ಹಿಗ್ಗಿ ಹಾರೈಸಿ ಸೈ
ತಿರಿಸಲಱಿಯದೆ ಕುಣಿದು ಕುಕಿಲಿಱದು ಕುಂಬಿಕ್ಕಿ
ಚರಣದಲ್ಲಿ ಬಿದ್ದ ಬಾಲಕನ ತೊದಳಂತುವಂ ಕೈಯ ಕಂಪನದ ಕಡುಹಂ
ಸುರಿವ ಸುಖಜಲದ ಹೊನಲಂ ಸ್ವೇದದೊಱಿತೆಯಂ
ಪರವಸದ ಮಱವೆಯಂ ಗದುಗದದ ಭಾರಮಂ
ನೆರೆದ ಪುಳಕದ ಘಟ್ಟಿಯಂ ಕಂಡು ಬೆಱಗಾದರಾ ಪುಣ್ಯದಂಪತಿಗಳು            ೬೯

ಎಳಸಿ ಮೊಗವೆತ್ತಿ ತರ್ಕೈಸಿ ಸೋಗಿಲೊಳಡ್ಡ
ವಿಳುಹಿ ಮೋಹದಿ ತೊರೆದ ತನ್ನ ತೊಳಗುವ ಕುಚಂ
ಗಳ ಸುಧಾರಸವನೆಡೆವಿಡದೂಡಿ ಮೈದಡವಿ ಮುಂಡಾಡಿ ಪರಸೆ ಗಿರಿಜೆ
ಬಳಿಕಲೀಶಂ ವಜ್ರಕುಂಡಲವನಿಕ್ಕಿ ನಿ
ರ್ಮಳ ತನುವನಧಮರೀಕ್ಷಿಸಲಾಗದೆಂದು ತಾಂ
ತಳೆದ ನಾಗಾಜಿನಕ್ಕೊಗೆದ ಕಂಥೆಯನಿತ್ತನಪ್ರತಿಮ ಬಾಲಕಂಗೆ         ೭೦

ಸ್ವೀಕರಿಸಿ ಸರ್ವಸಿದ್ಧಿಗೆ ತವರ್ಮನೆಯೆನಿಪ
ಲಾಕುಳವನಿತ್ತೆತ್ತಿ ತೊಡೆಗೆ ತೆಗೆದಗಜೆ ನೋ
ಡೀ ಕುಮಾರಕನ ಭಕ್ತಿಜ್ಞಾನವೈರಾಗ್ಯಕೆಣೆಯಪ್ಪ ವೇಷವಾಯ್ತು
ಈ ಕೈಯಲಿವನ ಕಲಿತನವನಾರೈವೆನೆಂ
ದಾ ಕಾಲಭೈರವನನಾಗಳೇ ಕರೆಸಿದನು
ನಾಕಿಗಳ ನಾಯಕರ ಮೌಳಿಗಳ ಮಣಿವೆಳಗು ಹೊಳೆವ ಪದಪಂಕೇಜನು          ೭೧

ಸುತ್ತಿ ತಂದೀತಂಗೆ ನಮ್ಮ ಪರ್ವತದ ನಾ
ಲ್ವತ್ತೆಂಟು ಗಾವುದದೊಳುಳ್ಳ ಲೇಸುಗಳೇಸ
ನಿತ್ತೆಲ್ಲವಂ ತೋಱಿ ತಾಯೆಂದು ಬೆಸನನಿತ್ತತಿ ಕರುಣದಿಂ ಹೇಳಲು
ಉತ್ತಮದ ಮೇರುವಿನ ಕೂಡೆ ಪರುಷದ ಮಱಿ ನ
ಗುತ್ತಾಡಹೋಹಂತೆ ಭೈರವನ ಸಂಗಡದೊ
ಳಾತ್ತಬಳ ಚಿತ್ತಭವ ಮತ್ತಗಜ ಕಂಠೀರವಂ ಸಿದ್ಧಪತಿ ಹೋದನು   ೭೨