ರಾಗ : ಮಾಳವ ಗೌಳ  ತಾಳ : ಝುಂಪೆ

ಪಲ್ಲವ ||           ದೇವ ಮಝ ಭಾಪು ಸಾಮರ್ಥ್ಯ ಸಾಗರವೆಂದು
ಭೂವಲಯವೈದೆ ಕೀರ್ತಿಸೆ ಮಲ್ಲಿಕಾರ್ಜುನನ
ನೋವಿ ಸಿರಿಗಿರಿವೆರಸಿ ಸೊನ್ನಲಿಗೆಯೊಳು ನಿಲಿಸಿದನು ಸಿದ್ಧಕುಲತಿಲಕನು ||

ಉದಯತಾಳಿನ ಮೋಹಿನೀ ಗಜದ ಶೈಲೋದ
ಕದ ವಜ್ರಲೇಪದ ಕುಮಾರಧಾರೆಗಳ ನೇ
ಱಿದ ನೆಲಹಿನಾಯುಧದ ಕುಳಿಯ ಘನ ನೆಳಲುಗತ್ತರಿಯ ಪಾಪಿಯ ಕೂಸಿನ
ಕುದಿವ ಕೂಪದ ಕಮ್ಮರಿಯ ಬಿಲಾಶ್ರಯದ ಮುಂ
ಡದ ಭೈರವನ ರಾಜಿಪಗ್ನಿ ಕುಂಡದ ಭಯಂ
ಪುದಿದ ಹೊಂಬಳಿದ ತಾಣಂಗಳಂ ತೋಱಿದಂ ಭೈರವಂ ಸಿದ್ಧಪತಿಗೆ            ೧

ನಡೆವ ಗಿಡುಗಳನು ಹಾಡುವ ಪಕ್ಷಿ ವೃಕ್ಷಮಂ
ನುಡಿವ ಮೆಳೆಗಳ ಕಥೆಯ ಕಮ್ಮರಿಯನುತ್ತರಂ
ಗೊಡುವ ಗುಹೆಗಳನು ಹಾಱುವ ಮೊರಡಿಗಳನೆದ್ದು ಹರಿದಿಡುವ ಹಾಸಱೆಗಳ
ಬಿಡದೆ ವಾಚಿಸುವ ಮರೆಯರ್ಥೈಸುವಾನೆಗಳ
ನೊಡನೆ ಸಭೆಯಾಗಿ ಕೇಳ್ವೆರಳೆಗಳನೆರಡನೆಯ
ಮೃಡ ಸಿದ್ಧರಾಮಂಗೆ ತೋಱುತ್ತ ನಡೆತಂದನಾ ದಿಗಂಬರವೀರನು೨

ಕರಿಯ ಹುಲಿಯಂ ಕೃಷ್ಣ ಹಂಸಂಗಳಂ ಬಿಳಿಯ
ಕರಡಿಯಂ ಶ್ವೇತಮಾತಂಗಂಗಳಂ ಕೆಂಪಿ
ನೆರಳೆಯಂ ರಕ್ತಸೂಕರ ತತಿಯನುರಿಯ ಬಣ್ಣವನುಗುಳ್ವ ಕೋಣಂಗಳಂ
ಗಿರಿಯ ಸರಿಯಿಱುಹೆಯನನಂತ ಹೆಡೆಗಳ ಹಾವ
ನೆರಡು ಮೊಗದಾವನೈಮೊಗದೊಟ್ಟೆಯಂ ಜಗದ
ಗುರು ಸಿದ್ಧರಾಮಂಗೆ ತೋಱುತ್ತ ನಡೆತಂದನಾ ದಿಗಂಬರವೀರನು  ೩

ಮೆಱಿವ ಸುರಕುಜದ ವನಮಂ ಕಲ್ಪಲತೆಯ ಕು
ತ್ತುಱನಮೃತ ರಸದ ಮಡುವಂ ಸಿದ್ಧರಸದ ಪೆ
ರ್ಗೆಱೆಯನಾಡುವ ಪುರುಷಮೃಗದ ಹಿಂಡಂ ಸುರಭಿಗಳ ನೆರವಿಯಂ ಪರುಷದ
ಸಱಿಯ ಮರುಜೇವಣಿಯ ಮಡಲ ದಿವಿಜರ ಬಾಯ್ಗ
ಳೊಱೆವ ಸುಧೆ ಚಿಂತಾಮಣಿಯ ಮೊರಡಿಯಂ ಹೊತ್ತು
ಹೊಱಗೆ ಹೊದಿಸಿದ ಪರಮಕಾಷ್ಠಯುತರಂ ತೋಱಿದಂ ವೃಶ್ಚಿಕಾರೂಢನ  ೪

ಹುಗದ ಮುನ್ನಂ ಕೊಱಿದು ಕಡಿಗಳಂ ಕಾಲನೋ
ಲಗಕಿಡುವ ಕದಳಿಯಂ ಹೊಕ್ಕು ಹೊಕ್ಕರನು ಮಾ
ರಿಗೆ ಭೋಜನಂಗೊಡುವ ಬಿಲ್ವವನದೊಳಗಾಡಿ ತಿರುಗಿ ಕೈಲಾಸಗಿರಿಗೆ
ನೆಗೆವ ಬಾಗಿಲನು ಮುಕುತಿಯ ಮುಚ್ಚುಳಂ ಸ್ವರ್ಗ
ದುಗಸೆಯಂ ರುದ್ರಲೋಕದ ಕೇರಿಗಳನು ಪ
ನ್ನಗಲೋಕದರಮನೆಗಳಂ ಕಾಂಬ ನೆಲೆಗಳಂ ಕಾಣುತ್ತೆ ನಡೆತಂದನು  ೫

ಹರಿ ಭಜಿಸಿ ಸುರಪನಾರಾಧಿಸಿ ವಿರಿಂಚಿಯುಪ
ಚರಿಸಿ ಮುನಿಗಳು ಸ್ಮರಿಸಿ ಮನುಗಳರ್ಚಿಸಿ ಮಹಾ
ಸುರರು ಮೆಚ್ಚಿಸಿ ರವಿಗಳೋಲೈಸಿ ಶಶಿ ನಮಿಸಿ ಹುತವಹಂ ಸಲೆ ಬೋಧಿಸಿ
ಗಿರಿಜೆ ಭಾವಿಸಿ ಸಿರಿ ಸರಸ್ವತಿಯರಾದರಿಸಿ
ಸುರರೈದೆ ಪೂಜಿಸಿ ಸಮಸ್ತ ಯಜ್ಞಂಯಜಿಸಿ
ನೆರೆದ ವೇದಂ ನುತಿಸಿ ಮುಕುತಿ ಜಾನಿಸಿ ವರಂಬಡೆದ ತಾಣಂ ಮೆಱೆದುವು      ೬

ಕರದ ಕಂಗಳ ಬೆನ್ನ ಬಾಯ ನೆತ್ತಿಯ ಬಸಿಱ
ಕೊರಲ ಯೋನಿಯ ಕಾಲ ಮೊಲೆಯ ಹೊಡೆಯ ಪೇ
ರುರದ ಬೇತಾಳರಂ ರೌದ್ರರಾಕ್ಷಸಿಯರಂ ನೆರೆದ ನಾನಾ ಸತಿಯರಂ
ಉರಿಯ ಹಳ್ಳವನು ಕೆಂಡದ ತೊಱೆಯನೆಸೆವ ಕ
ತ್ತರಿವಾಣಿಗಡಲ ವಿಷಕೂಪಂಗಳಂ ನಂಜಿ
ನೆರಳ ಮಾರಿಯ ಮನೆಯನಾ ಮೃತ್ಯುವಿನ ನೆಲೆಯನಾರಯ್ಯುತಂ ಬಂದನು   ೭

ತತ್ತ ಕತ್ತರಿವಾಣಿಯಂ ಪುಗುತ ವಿಷವನೀಂ
ಟುತ್ತುದಯತಾಳನೇಱುತ್ತ ಪಾಪಿಯ ಕೂಸ
ನೆತ್ತುತ್ತ ಮೋಹಿನೀಗಜವನಡರುತ್ತಾ ಕುಮಾರಧಾರೆಯನಾನುತ
ಸುತ್ತಣ ಬಿಲದ್ವಾರಮಂ ಪುಗುತ ಘನನೆಳಲು
ಗತ್ತರಿಯನೆಡಪುತ್ತ ವಜ್ರಲೇಪವನು ತುಡು
ಕುತ್ತ ನಡೆದಂ ಭಾಪು ಸಿದ್ಧಕುಲಪತಿಯೆಂದು ಭೈರವಂ ಕೈಮುಗಿದನು          ೮

ಕಿಡಿಯ ಕಡಲಂ ಹೊಗೆಯ ಹಗವಮಂ ದಳ್ಳುರಿಯ
ಮಡುಗಳಂ ಕೆಂಡದೊಱೆಯಂ ಪಾಯ್ದು ಮುಂದೆ ಜೀ
ರಿಡುವ ನಂಜಿನ ಮಂಜನುತ್ತರಿಸಿ ನಡೆದನಿನ್ನಾನುದಾವುದನುಸಿರುವೆಂ
ನುಡಿಸಿದೊಡೆ ನುಂಗುವವರಂ ನುಡಿಸಿ ಮುಟ್ಟಿದೊಡೆ
ಸುಡುವರಂ ಮುಟ್ಟಿ ನೋಡಿದಡೆ ಕಣ್ಗೆಡಿಪರಂ
ನಡೆ ನೋಡಿ ಸಿದ್ಧನಾಗಾರ್ಜುನಂ ತಲೆಗೊಟ್ಟ ತಾಣಮಂ ನಿಟ್ಟಿಸಿದನು         ೯

ಈ ಕಡೆಯೊಳೀ ಯೆಡೆಯೊಳೀ ಕುಱುಹನಾ ಕುಱುಹ
ನಾ ಕಡೆಯನೀಕ್ಷಿಸಿದನೆನಲೇನು ಪರ್ವತದ
ನಾಕು ಬಾಗಿಲ ನಡುವೆ ಮೆಱೆವ ನಾಲ್ವತ್ತೆಂಟು ಗಾವುದಂತರದೊಳುಳ್ಳ
ಆ ಕೌತುಕಂಗಳಂ ನೋಡುತ್ತ ಸರ್ವಮಹಿ
ಮಾಕರಂ ಸಿದ್ಧಪತಿ ನಡೆತಂದು ನಮಿಸಿದಡು
ಮಾಕಾಂತನೆತ್ತಿ ತೂಪಿಱಿದು ತಲೆದಡವುತ್ತ ತೊಡೆಯನೇಱಿಸಿ ಕೊಂಡನು     ೧೦

ಏನೇನನೂನ ಚೋದ್ಯಾವಳಿಗಳಂ ಕಂಡೆ
ನೀನೆಂದಡಾನೇನುವಂ ಕಾಣೆನೆಂದೆನಲ
ದೇನೆಂದು ಕಾಣೆಯೆನೆ ದೇವ ದಿವ್ಯಾಮೃತವನೊಸೆದುಂಡು ತಣಿದವಂಗೆ
ಜೇನುಱುವುದೇ ತಂದೆ ಹರಿಯಜರ ಬಗೆ ನಿಲುಕ
ದಾನಂದಮಯ ನಿನ್ನ ಕಂಡ ಹೊಸತಿಂಗೆ ಹೊಸ
ತೇನಾವುದಿನ್ನೆಂಬ ಮಾತಿಂಗೆ ಮೆಚ್ಚಿ ಗಿರಿಜಾಧೀಶನಿಂತೆಂದನು        ೧೧

ಕಂಗಸೆವ ನಾಲ್ಕು ಬಾಗಿಲ ಶಿವಾಲಯದ ಕಳ
ಸಂಗಳೇ ಕಳಸವಗಜಾತ ನಂದೀಶ್ವರಂ
ಭೃಂಗಿಯುಂ ವೀರೇಶರೆಸೆವ ಕಳಶಾಚಾರ‍್ಯರಾ ಮಲ್ಲಿನಾಥನೆಡೆಯ
ಲಿಂಗಾಲಯದ ಕಳಸ ಗುರುಕಳಸವಾ ಜಿತಾ
ನಂಗನೇ ಗುರುವಾಗಿ ಭರದೊಳಪ್ರತಿಮ ಸಿ
ದ್ಧಂಗನುಗ್ರಹವಿತ್ತನೊಸೆದು ಶೋಧಿಸಿದ ಪುಣ್ಯವನು ಪುಟವಿಟ್ಟಂತಿರೆ         ೧೨

ಉದಯವಪ್ಪಂದು ಕೂಡುತ್ತಮಾಂಗದಲಿ ಮೂ
ಡಿದ ಗೂಢಲಿಂಗಮಂ ತೋಱು ಪಂಚಾಕ್ಷರಿಯ
ಹೃದಯಮಂ ತಿಳಿಪಿ ನಿಜಭಕ್ತಿಯಂ ಗುರುಪೂಜೆಯಾಗಿ ಕೈಕೊಂಡು ಬಳಿಕ
ಮೊದಲ ನಾಮವನೆ ದೀಕ್ಷಾನಾಮವಿತ್ತು ಭೂ
ತದಯಾ ವಿಚಾರಮಂ ನೇಮಮಂ ಕೊಟ್ಟು ನೋ
ಡಿದಡೆ ಕನ್ನಡಿಗೆ ಕನ್ನಡಿದೋಱಿದಂತೆರಡನಳಿದೊಂದುವಿಡಿದಿರ್ದನು           ೧೩

ಎಲೆ ಸಿದ್ಧರಾಮಯ್ಯ ನಿನ್ನ ಮನದಱಕೆಯುಂ
ಫಲಿಸಿತೇ ಫಲಿಸಿದತ್ತಾದಡಿನ್ನೇಳ್ ನಿನ್ನ
ನೆಲೆಗೆ ಪೋಗೆಂದಡಾ ನುಡಿಕಾದ ಕಬ್ಬುನದ ಕೂರಂಬನುಱೆ ಕಿವಿಯಲಿ
ಸಲಿಸಿದಂತಾಗಿ ನೆನೆದಿದ್ದಿದ್ದಿದೇಕೆನ್ನ
ತೊಲಗಿಸಲ್ ಮನದಂದೆ ತಂದೆಯೆಂದೆನೆ ಹಿಂದೆ
ಮಲಮಲಂ ಮಱುಗುವರು ಮಾತೆಪಿತರೇಗೆಯ್ದೊಡಂ ಹೋಗಬೇಕೆಂದನು    ೧೪

ಎಂತಾದೊಡಂ ಹೊಗಳ್ದು ಹೋಗವೇಳ್ಕೆಂದಡಾ
ನೆಂತುವುಂ ಹೋಗೆನೆಂದೆನಲುಪಾಯದಲು ನಿ
ನ್ನಂ ತಗುಳಲೆಂದಾಡಿದೆನೆ ಧರೆಯ ಹಿತವನಾಚರಿಸಲಾಡಿದೆನಲ್ಲದೆ
ಮುಂತೆ ಧರೆಯುಂಡಡೇನೊಡಬಿದ್ದೊಡೇನೀಗ
ಕಂತುಹರ ನಿನ್ನನೆಂತಗಲಿ ಹೋಹೆಂ ತಂದೆ
ಪಿಂತೆ ಜೀವವನಿರಿಸಿ ತನು ಮುಂದೆ ಹೋದುದುಂಟೇ ದೇವ ಹೇಳೆಂದನು       ೧೫

ಕಂದ ಕೇಳ್ ಕಡೆಗೆನ್ನನಗಲಲಾಱದೆ ನೇಹ
ದಿಂದೈಸಲೇ ನುಡಿದೆಯಾ ನುಡಿಗೆ ತಕ್ಕಂತು
ಹಿಂದುಗೊಂಡೇ ಬಂದು ನೀಂ ಹಿಡಿದುದಂ ಹಿಡಿದು ಬಿಟ್ಟುದಂ ಬಿಟ್ಟು ಕಳೆದು
ನಿಂದಲ್ಲಿ ನಿಂದು ನಡೆದಡೆ ನಡೆದು ಕರೆದಡೋ
ಯೆಂದು ಬೇಡಿತನಿತ್ತು ಕೊಟ್ಟುದಂ ಕೊಂಡು ನೀ
ನೆಂದಂತೆ ಮಾಳ್ಪೆನುಮ್ಮಳಿಸಬೇಡಂಜಬೇಡೆಂದು ನಂಬುಗೆಯಿತ್ತನು೧೬

ಎಂತುವುಂ ಬಹುದುಳ್ಳಡತುಳ ಪುಣ್ಯಖ್ಯಾತಿ
ಯಂ ತಳೆದ ನಿನ್ನ ಪರ್ವತಕುಳ್ಳ ಸಾಮರ್ಥ್ಯ
ಮಂ ತೆಗೆದು ತಂದೆನ್ನ ಸೊನ್ನಲಿಗೆಯೆಂಬ ಕಿಱುವಳ್ಳಿಗಿತ್ತದಱ ನಡುವೆ
ಸಂತತಂ ನೆಲಸಿ ನೀನಿಪ್ಪಂತು ಬಾಯೆಂದ
ಡಂತಕಾಂತಕನದನೊಡಂಬಟ್ಟು ನೀನಿಂದು
ಮುಂತೆ ಹೋಗಾಂ ಪಿಂತೆ ಬಹೆನೆನಲು ಕೈಮುಗಿದು ಬಪ್ಪ ಕುಱುಹೇನೆಂದನು೧೭

ಮಂದೈಸಿ ಮಸಗಿ ಮುಸುಕಿದ ಮೋಡದಿಂ ಮಿಂ
ಚಿಂದ ಮೊಳಗಿಂದ ಸಿಡಿಲಿಂದ ನೆಱೆ ಬಿಱುಗಾಳಿ
ಯಿಂದೆದ್ದ ಕತ್ತಲೆಯೊಳೊಗೆದು ಮಂದಾರಡಿಯೊಳು ಲಿಂಗವಾಗಿರ್ದಪೆಂ
ಮುಂದೊಂದು ಲಿಂಗ ಪ್ರತಿಷ್ಠೆಗೈದನ್ನನಾ
ನಂದದಿಂದಾ ಲಿಂಗದುತ್ತಮಾಂಗದಲಿ ನಿಲಿ
ಸೆಂದಡೆಲೆ ಗಿರೀಶ ಲಿಂಗಕ್ಕೆ ಲಿಂಗಂ ಪೀಠವೇಕೆ ಕರುಣಿಪುದೆಂದನು     ೧೮

ಈ ಮಹಾಲಿಂಗಮಂ ಮೂರ್ತಿಗೊಳಿಸಿದ ಸಿದ್ಧ
ರಾಮಯ್ಯ ತನಗೆ ತಾನಾಧಾರವಯ್ಸಲ್ಲ
ದೀ ಮಹಿಯ ಮರ್ತ್ಯರಂತಲ್ಲೆಂದು ಮುಂದೆ ಜನವಱಿಯಬೇಕದು ಕಾರಣಂ
ಕ್ಷೇಮತರವಾಗಿ ಲಿಂಗದ ಮೇಲೆ ಲಿಂಗಮಂ
ಪ್ರೇಮದಿಂದಂ ಪ್ರತಿಷ್ಠಿಸು ಮಗನೆಯೆಂದಡೆಲೆ
ಸೋಮಾವತಂಸನೆ ಪ್ರತಿಷ್ಠೆಗಾಚಾರ‍್ಯರಾರಾದಪರು ಹೇಳೆಂದನು    ೧೯

ಸರಸಿಜಸುತಂ ಸ್ವಪುತ್ರೀವರಂ ವಾಯು ವಿಷ
ಧರನಿಕರಪೀತಾವಶೇಷನಿನನತ್ಯುಷ್ಣ
ಕರನಿಂದು ದೋಷಾಕರಂ ವಿಷ್ಣು ಪುಷ್ಪಾಕ್ಷನಗ್ನಿ ತಾಂ ಸರ್ವಭಕ್ಷ
ವರಮುನಿಗಳೆಲ್ಲ ಕುಸ್ಥಾನಜಾತರು ಮಹಾ
ಸುರಪನತಿ ಜಾರನಿಂತಿವರಾಗದಿಂದೆಮ್ಮ
ಸರಿ ಸರ್ವಧರ್ಮರೂಪಂ ವೃಷಭನಾಚಾರ‍್ಯನಾದಪಂ ಹೋಗೆಂದನು೨೦

ಆದಿ ವೃಷಭೇಂದ್ರನೇಂ ಕುಱುಹುವಿಡಿದಾಚಾರ‍್ಯ
ನಾದಪಂ ದೇವಯೆನೆ ನಿನ್ನೂರ ತುಱುವಿನೊಳು
ಭೂದೇವಿ ಯಿಂ ದಚ್ಚ ಬಱಡುಗವಿಲೆಯ ತೆಱದೊಳೈದಳಾ ಗರ್ಭದೊಳಗೆ
ಆ ದಿನದಲೇ ಮೂಡಿಯಾ ದಿನದಲೇ ಜನಿಸಿ
ಯಾ ದಿನದೊಳೇ ಯೌವನಂದಳೆದು ಬೆಳೆದು ಪ್ರ
ಮೋದದಲಿ ಬಂದಪ್ಪನಱಿತುಕೊಳ್ಳೆಂದನಗಜಾಹರ್ಷವನ ಚೈತ್ರನು           ೨೧

ಅಲ್ಲಿಂದ ಮೇಲೆನಗೆ ಕಜ್ಜವೇಂ ಕರುಣಿಸಘ
ದಲ್ಲಣನೆಯೆಂದಡೀ ಪರ್ವತದೊಳುಳ್ಳ ಲೇ
ಸಲ್ಲವೆಂ ನಿನ್ನ ಸೊನ್ನಲಿಗೆಯೊಳಲಂಕರಿಸು ಪುರವ ವಿರಚಿಸು ಧರೆಯೊಳು
ಪಲ್ಲವಿಸಿದಷ್ಟ ಷಷ್ಟಿಕ್ಷೇತ್ರ ಮೊದಲಾದ
ಸಲ್ಲಲಿತ ಲಿಂಗವೆನಿತುಂಟವಂ ನಿಲಿಸು ಬಳಿ
ಕಿಲ್ಲದುದನೆಮ್ಮ ಕೈಲಾಸಗಿರಿಗೆಡೆಯಾಗಿ ಬೇಡಿಕೋ ಹೋಗೆಂದನು            ೨೨

ಆವ ಧನದಿಂದ ಪುರವಂ ರಚಿಸುವೆಂ ತಂದೆ
ಭೂವಲಯದೊಳಗುಳ್ಳ ಸರ್ವಲಿಂಗಂಗಳಾ
ವಾವವಱ ನಾಮಮಂ ಬಲ್ಲೆನೆ ಪ್ರತಿಷ್ಠಿಸುವಡಂದಂದಿನವರಸವನು
ದೇವ ಬಿನ್ನಯ್ಸುವಡೆ ಭೂಚರಂ ಕೈಲಾಸ
ಕಾವಂದದಿಂ ಬಪ್ಪೆನೆಲೆ ರತೀಶ್ವರವಿಪಿನ
ದಾವ ನತಜೀವಯೆಂದಾ ಸಿದ್ಧಪತಿ ನುಡಿಯೆ ನಸುನಗುತ್ತಿಂತೆಂದನು            ೨೩

ಜಡ ಮನುಜನೇ ಮಗನೆ ನಿನ್ನ ಮಹಿಮೆಗಳ ಬಗೆ
ಗಡ ನೋಳ್ಪಡಿಂದ್ರಂಗೆ ಲೆಕ್ಕಿಪಡೆ ಸೂರ‍್ಯಂಗೆ
ಬಿಡೆ ಹೊಗಳ್ವುಡುರಗರಾಜಂಗರಿದು ತರುಬಲ್ಲುದೇ ತನ್ನ ಫಲರುಚಿಯನು
ಹಿಡಿದ ಕಲು ಪರುಷವೀಂಟಿದ ಜಲಂ ರಸವಾಡಿ
ದೆಡೆ ಮಹಾನಿಧಿ ಪೆಸರ್ಗೊಂಡುದೇ ದೈವ ನೀ
ನುಡಿದುದೇ ಮಂತ್ರವನುಗೈದುದೇ ಗಮನ ಹೆದಱದೆ ಮಾಡು ಹೋಗೆಂದನು೨೪

ನಿಲ್ಲದೆಯ್ತರ್ಪುದುಂಟೇ ದೇವ ಉಂಟು ಪುಸಿ
ಯಿಲ್ಲವೇ ಇಲ್ಲ ನಂಬುವೆನಯ್ಯ ನಂಬು ಮುಂ
ತೆಲ್ಲವಂ ಸಮಕಟ್ಟ ಹೋಹೆನೇ ಹೋಗೆನಲು ತಳುವದಿರು ತಂದೆಯೆಂದು
ಲಲ್ಲೆಗರೆದಡಿಗಡಿಗೆ ಹೇಳಿ ಕೈಮುಗಿದು ಬಸಿ
ಱಲ್ಲಿ ತಲೆಯಿಟ್ಟು ಕರುಣಂದೋಱಿ ಮೀಱಿ ಪದ
ಪಲ್ಲವಕ್ಕೆಱಗಿ ಬೀಳ್ಕೊಂಡನಂತಾಗಳೀಶ್ವರನ ಕರುಣದ ಕಂದನು   ೨೫

ತನ್ನನಲವತ್ತಱಸಿ ಕಂಡು ಕೊಡುಯ್ವ ತವ
ಕನ್ನಿಮಿತ್ತಂ ಬಪ್ಪ ಬೊಮ್ಮಯ್ಯನಂ ಕಂಡು
ಮನ್ನಿಸಿ ಮಹಾಕರುಣವಿತ್ತು ಭೈರವ ಶಬರನಾಗಿಯೊಡನೊಡನೆ ಬರಲು
ಉನ್ನತಾಂಬುಜವನಕೆ ದಿನಕರಂ ಬಪ್ಪಂತೆ
ಸೊನ್ನಲಿಗೆಗೊಲಿದು ಬಪ್ಪಾಗಳಿದಿರ್ಗೊಂಡರಾ
ಕನ್ನೆಯರು ಬಪ್ಪ ಚೈತ್ರವನಿದಿರ್ಗೊಂಬ ವನದೇವಿಯರ ನೆರವಿಯಂತೆ          ೨೬

ಅಂದು ತಮತಮಗೆ ಕಣ್ ಬಂದಂತೆ ಬಂದು ತಾ
ಯ್ತಂದೆಗಳು ಬಿಗಿದಪ್ಪಿಕೊಂಡೊಯ್ದು ಬಳಿಕ ಮನೆ
ಯಿಂದಗಲಲೀಯದೋವುತ್ತಿರ್ದರುಱೆ ಶರತ್ಕಾಲದ ಮುಗಿಲ ಮಱೆಯಲಿ
ಇಂದುವಂ ಗಗನಸತಿ ಸಲಹುವಂತಿರುತಮಿರೆ
ಹಿಂದೆ ಶಿವನಿತ್ತ ಕುಱುಹಿನ ದಿನದ ಬರವನಾ
ನಂದದಿಂ ಬಯಸುತಾ ಸಿದ್ಧನಿರ್ದಂ ಕೋಕನುದಯಮಂ ಬಯಸುವಂತೆ        ೨೭

ಎಳಸಿತ್ತು ಬಪ್ಪಂತೆ ಬಪ್ಪ ದಿನದೊಳು ಮಹಾ
ಬಳನಣ್ಣ ಬೊಮ್ಮಯ್ಯನೊಡನೆ ಬರೆ ನಡೆತಂದು
ನಳನಳಿಸಿ ತಳಿತು ಬೆಳೆದೆಳೆಯ ಮಂದಾರದಡಿಯಂ ಸಾರ್ದು ಮಂದಾರದ
ನೆಳಲ ಚಿಂತಾಮಣಿಯ ಚಿಣ್ಣನಂತಿಪ್ಪಾಗ
ಮುಳಿದು ಘುಳುಘುಳಿಸಿ ಭೂರಜದೊಡನೆ ಗಿಡುಮರಂ
ಗಳನಾಗಸಕ್ಕೆತ್ತಿ ಬೀಸಿತ್ತು ಗಾಳಿ ಸರ್ವಂ ಧರಾಮಯವಾಗಲು        ೨೮

ಗಗನವೆಡೆಗಿಡೆ ಮುಗಿಲು ನೆಗೆದವೆಡೆವಿಡದೆ ಭುಗಿ
ಭುಗಿಲು ಮಿಂಚಾಡಿದವು ಧರಣಿಯಂ ಹೊತ್ತ ಫಣಿ
ಸುಗಿದು ನಡನಡುಗೆ ಸಿಡಿಲಡಸಿ ಘುಡುಘುಡಿಸಿ ಮತ್ತವನಿಯಂ ಮಂದೈಸಿತು
ಹಗಲ ಹಣೆಯಕ್ಕರಂದೊಡೆದು ಇಡಿಗುಟ್ಟಿ ಕಾ
ಡಿಗೆಯೊಳಗೆ ಕಾರಿರುಳ ತಿರುಳ ರಸಮಂ ಕಲಸಿ
ಮೊಗೆದು ಬಳಿದಂತೆ ಬಳವೆತ್ತ ಕತ್ತಲೆ ಸಿದ್ಧರಾಮಂಗೆ ಬೆಳಗಾದುದು            ೨೯

ಮದನಮದಮರ್ದನನ ಬರವಿಂಗೆ ಕೂಡೆ ನೆಗ
ಪಿದ ತಳೆಗಳೆನಿಸಿರ್ದವಾ ಮೇಘವುಱಿ ಹೊತ್ತಿ
ಸಿದ ಹಲವು ಕೈದೀವಿಗೆಗಳೆನಿಸಿದವು ಕೂಡೆ ಹೊಳೆವ ಮಿಂಚುಗಳು ಮುಂದೆ
ಒದವಿ ಭೂರಜವನುಡುಗುವವನಂ ಗಾಳಿ ಪೋ
ಲ್ತುದು ನೆಲನನುಗ್ಗಡಿಪ ದನಿಯನಾ ಸಿಡಿಲು ನೆ ನ
ಸಿದುದು ಚಳೆಯಂಗೊಡುವವೋಲೆಸೆದುದಾ ಚಿಟುಕುವನಿ ಸಿದ್ಧಪತಿನಲಿಯಲು          ೩೦

ಘಳಿಲನಂತಾಗಳೆದ್ದುದು ಗಗನದೊಳಗೊಂದು
ಬೆಳಗು ಮೊಳೆಯಿತ್ತದಱ ಬಳಿವಿಡಿದು ಕಣ್ಗೆ ಮಂ
ಗಳವಪ್ಪ ಶೈತ್ಯಪ್ರಭಾಪಟಲದಿಂದ ನಾನಾ ದಿವ್ಯನಾದದಿಂದ
ಬಳಸಿ ಪುರುಷದ ಕರಂಡಗೆಯೊಳಣಿಮಾದಿ ಗುಣ
ಮಿಳಿತ ಸೆಜ್ಜೆಯೊಳಮಲ ಲಿಂಗವಿಳಿದಾ ಸಿದ್ಧ
ಕುಲತಿಲಕನಿರ್ದ ಮಂದಾರಗುಲ್ಮದ ತಳದ ಭೂಮಿಯೊಳು ಮೈದೋಱಲು   ೩೧

ತಳಿತ ಪುಳಕದ ಗುಡಿಗಳಿಂ ಮುಗಿದ ಕರಕಮಲ
ಕಳಶದಿಂದಾನಂದ ಜಲಬಿಂದು ಕುಸುಮದಿಂ
ಮೊಳೆವ ಗದುಗದದ ಹಱೆಯಿಂ ಮನೋರಾಗತಳಿರಿಂ ನಯನ ದೀವಿಗೆಗಳಿಂ
ಬಳವೆತ್ತ ಸಂತಸದ ಬೆಳುದಿಂಗಳೊಳಗೆ ನಿ
ರ್ಮಳ ದಿವ್ಯಲಿಂಗವನಿದಿರ್ಗೊಂಡು ಕೊಂಡು ನಿಜ
ನಿಲಯಕೈತಂದು ಘನ ಸುಖಸಂಕಥಾವಿನೋದದೊಳಿರ್ದ ಸಿದ್ಧೇಂದ್ರನು        ೩೨

ಆ ಲಿಂಗಮಂ ಮನೆಯೊಳಾರಾಧಿಸುತ್ತಾ ನಿ
ರಾಲಂಬನಿರಲೊಂದು ದಿವಸ ಮನೆದೈವವಹ
ಧೂಳಿಮಾಕಾಳನಂ ನೋಡಲೆಂದಾ ತಂದೆ ತಾಯ್ಗಳುದ್ಯೋಗಿಸಿದಡೆ
ಕೇಳಿ ಕಿಡಿಕಿಡಿಯಾಗಿ ಬೇಡಿತಂ ಕೊಡಬಲ್ಲ
ಶೂಲಿ ಬಂದಿರೆ ಬಗೆಯದಕಟಕಟ ಬೂದಿಯೊಳು
ಬೇಳುವಂತಧಮದೈವವ ಮಾಡಿದಪರೆಂದು ಹೊಱವಂಟ ನಿಜಗೃಹವನು     ೩೩

ಅತಿ ಜಡರೆನಿಪ್ಪ ಮಾನವರನಿನ್ನೇನೆಂಬೆ
ನತನುಹರನಿರಲನ್ಯ ದೈವಗಳ ನೋನುವಿರೆ
ಪತಿತರಿರ ನಿಮ್ಮ ಮನೆಯೊಳು ನಿಲುವನಲ್ಲೆಂದು ಲಿಂಗಮಂ ಧರಿಸಿ ಪಿಡಿದು
ಗತಿಗೆಟ್ಟು ಬೇಱಿನ್ನು ದೈವವೆಂದೆನ್ನದಿರಿ
ಧೃತಿಗೆಟ್ಟು ಬೇಱಿನ್ನು ದೈವವೆಂದೆನ್ನದಿರಿ
ಅತನುಹರ ಮಲ್ಲಿಕಾರ್ಜುನನೀವನೆಂದು ಹಾಡಿದನೊಂದು ಗುರು ವಚನವ   ೩೪

ಮುಂದಿಲ್ಲಿ ಮಲ್ಲಿಕಾರ್ಜುನನ ಗೃಹವಾದಪ್ಪು
ದೆಂದು ಪೇಳ್ವಂದದಿಂ ಹೊಱಗೆ ಮಠಮಂ ಕಟ್ಟಿ
ಹಿಂದುಗೊಂಡೆಯ್ದಿ ಬಂದಣ್ಣ ಬೊಮ್ಮಯ್ಯಂಗೆ ಕರುಣದಿಂ ದೀಕ್ಷೆಯಿತ್ತು
ಸಂದ ಹೂಗಿಡುಗಳಂ ಬಿತ್ತಿ ಸಲಹುತ್ತ ಮೇ
ಲೊಂದೆರಡು ತಿಂಗಳಂ ಸಿದ್ಧಕುಲತಿಲಕನಾ
ನಂದದಿಂದಿರಲಿತ್ತ ಚಿಂತೆ ಮೊಳೆಯಿತ್ತು ಶೂಲಿಗೆ ರಜತಪರ್ವತದಲಿ  ೩೫

ರಾಗದಿಂ ನಿನ್ನ ಸೊನ್ನಲಿಗೆಯಂ ಧರೆಯಱಿಯೆ
ಯೋಗರಮಣೀಯ ಸುಕ್ಷೇತ್ರಮಂ ಮಾಡುವೆಂ
ಹೋಗೆಂದು ಕಂದನಂ ಕಳುಹಿ ಪಲಕೆಲವು ದಿನವಾಯ್ತೆಂದು ನೆನೆದು ಹರನು
ಬೇಗದಿಂ ನಡೆದು ಬಂದಾವೂರೊಳುಱುವ ವಿಭು
ವಾಗಿಪ್ಪ ನನ್ನಪ್ಪನರಸಿ ಚಾಮಲದೇವಿ
ಗಾಗಳಂತೇ ಕನಸಿನೊಳು ಮನದ ಮೊನೆಯ ಮೇಲಿರ್ದು ಬಳಿಕಿಂತೆಂದನು        ೩೬

ಚಾಮವ್ವೆ ಮಗಳೆ ನಿನ್ನೂರೊಳೊಂದು ಕ್ರೋಶ
ಭೂಮಿಯಂ ಸಿದ್ಧರಾಮಂಗೆ ಕೊಡು ಕೊಟ್ಟಡಭಿ
ರಾಮದಿಂದೆಮಗೆ ಪುರಮಂ ರಚಿಸಿದಪನೇಳು ಬೇಗ ಮಾಡೆಂದು ಬೆಸಸಿ
ಸೋಮಧರನಡಗೆ ಮೈಮುರಿದೆದ್ದು ಕರೆದೊರ್ವ
ಕಾಮಿನಿಗೆ ಹಿಂದೆಮ್ಮ ಗುರು ರೇವಣಾರ‍್ಯನೆಂದ
ದಾ ಮಾತಿನಂತಿಂದು ಕನಸಿನೊಳು ಶಿವ ಪೇಳ್ದನೆಂದು ನುಡಿದಳು ಮುದದಲಿ  ೩೭

ಹರಹರ ಮಹಾದೇವ ಕನಸಲ್ಲ ನಡೆಯೆಂದು
ಹರುಷಜಲದಿಂ ಮಿಂದು ಮೊಳೆವ ಪುಳಕಂಗಳಾ
ಭರಣಮಂ ತೊಟ್ಟು ಸಂತಸದಣಿಂಬವನುಟ್ಟು ಮುಗಿದ ಕೈ ಹೊವ ಸೂಡಿ
ನೆರೆದ ಪರಿವಾರ ಸಹಿತೈತಂದು ಲೋಕೈಕ
ಗುರುವಿಂಗೆ ಮೈಯಿಕ್ಕಿ ನಿಂದಿರ್ದು ನಿಮ್ಮ ಶಿವ
ಪುರಕ್ಕೆ ತಕ್ಕನಿತು ಭೂಮಿಯನಿತ್ತೆನವಧರಿಪುದೆಂದು ಧಾರೆಯನೆಱೆದಳು       ೩೮

ಮುಂದೇನು ಬೇಕಾದೊಡಂ ಬೆಸಸು ಬೆಸಕೆಯ್ವೆ
ನೆಂದು ಪೊಡಮಟ್ಟಾಕೆ ಪೋಗೆ ಕಂಡಱಿಯದೀ
ಯಿಂದುಮುಖಿ ಕೊಟ್ಟಡಿಂತೀಯಯ್ಯ ಕೊಂಡನಿದ ಪುರವ ರಚಿಸುವೆನೆಂದಡೆ
ಹೆಂದದ ಧನಂ ಬೇಕು ಧನವಿಲ್ಲ ಲೋಕ ನಗು
ವಂದವಾಯ್ತೆಂದು ನುಡಿಯದೆ ಭ್ರಮಿಸಿ ಕಳೆಗುಂದಿ
ಮುಂದೆ ನಿಂದಣ್ಣ ಬೊಮ್ಮಯ್ಯನನುವಱಿದನಾ ಸಿದ್ಧಪತಿ ಮನದೊಳಂದು೩೯

ಎಸೆವ ಶಿವನಿಳಯಮಂ ಮಾಡುವಡೆ ನೆಲನ ಶೋ
ಧಿಸಬೇಹುದೀಯೆಡೆಯನಗೆಯೆನಲು ಮನದೊಳಗೆ
ನುಸಿಗೊಳುತುದಾಸೀನದಿಂ ಗುದ್ದಲಿಯನೆತ್ತಿ ಮೀಂಟುತ್ತೆ ಪೊಡೆಯೆ ಮುಂದೆ
ಹೊಸ ಹೊನ್ನ ಹಿರಿಯ ಕೊಪ್ಪರಿಗೆಯಂ ಕಂಡು ಶಂ
ಕಿಸುತ ನಿನ್ನವಱಿಯಲೆನ್ನಳವೆಯೆಂದು ಕೀ
ರ್ತಿಸುತೆಱಗಿದಣ್ಣ ಬೊಮ್ಮಯ್ಯಂಗೆ ನಸುನಗುತಲಪ್ರತಿಮನಿಂತೆಂದನು         ೪೦

ಶ್ರೀನಾರಿಯಂ ಧರೆಗೆ ಕೊಡುವ ಮಹಿಮಂ ತನಗೆ
ತಾನಧಮನೇ ಎಂದು ಶಿಲ್ಪಜ್ಞರಂ ಕರೆಸಿ
ನಾನಾ ನವೀನವೆನೆ ತನ್ನಿಚ್ಛೆಯಲಿ ಮಾಡಿಸಿದನೀಶ ನಿಲಯಂಗಳ
ಏನೆಂಬೆನೀ ಹಸ್ತವೀಯಳತೆಯಿಯಧಿ
ಷ್ಠಾನವೀ ರೇಖೆಯ ಖಂಡೆಯಂ ಕಡಿಗೆಯ
ತಾನವೀಯಾಯವೀ ಗೃಹವೆಂದು ಹೆಸರಿಡುವರಿಲ್ಲೆಂದು ಹಿಂದು ಮುಂದೆ    ೪೧

ಸಲೆ ಮಲ್ಲಿಕಾರ್ಜುನಂಗೊಂದು ನಾಲ್ದೆಸೆಯ ಬಾ
ಗಿಲಲಿರ್ಪ ದೇವರ್ಗೆ ನಾಲ್ಕಷ್ಟಮೂರ್ತಿಗ
ಳ್ಗಲಸದೆಂಟಾದಿಯೊಳು ಕಂಡ ನವಣೆಯ ಕೆಯ್ಯ ತಮ್ಮಡಿಯ ಹೆಸರಲೊಂದು
ನಲಿದು ಹರ ಕುಳ್ಳರ್ದ ಗೊಂಟಿಗೊಂದುರೆ ಸತ್ರ
ದಲ್ಲಿ ಮೆಱೆಯಲೊಂದನುಗ್ರಹವಿತ್ತ ಗುರುಮೂರ್ತಿ
ಯಲಿ ಬಳಿಕ್ಕೊಂದಿಂತು ಹದಿನೇಳು ಯೋಗ ಲಿಂಗಂಗಳಂ ನಿರ್ಮಿಸಿದನು         ೪೨

ಎಲ್ಲವಳವಟ್ಟುದೀ ಸಮಯದೊಳು ಗಿರಿಸುತೆಯ
ವಲ್ಲಭನ ವಾಹನಂ ಬಂದಡುತ್ಸವಕೆ ಪಡಿ
ಯಿಲ್ಲೆನುತ್ತಾವೂರ ತುಱುವಿನೊಳು ಸಿದ್ಧಪತಿ ನೋಡುತಿರೆ ಮುಂದೆಲ್ಲರು
ಬಲ್ಲ ಬಡ ಬಱಡುಗವಿಲೆಗೆಯಾಗಳೇ ಗರ್ಭ
ಪಲ್ಲವಿಸಿ ಬೆಳೆವೆತ್ತು ಬೆಸಲಾಯ್ದು ಸುರಭಿಗಳ
ನಲ್ಲನಂ ದುರಿತಗಜಮಲ್ಲನಂ ಹೊಗಳಲಳವಲ್ಲೆನಿಸಿಕೊಂಬವನನು           ೪೩

ಘನಮುಕ್ತಿ ಕಾಯ ದೇವಾಳಿ ರೋಮಾಳಿ ತೀ
ರ್ಥನಿಕಾಯ ಸುಳಿ ಪುಣ್ಯವವಯವ ಯುಗಂ ಚರಣ
ವಿನುತ ರುದ್ರಂ ಜೀವ ಸರ್ವಮಂತ್ರಂ ನಾದವಜಹರಿಗಳುಭಯಪಕ್ಷ
ಅನುಪಮ ಪ್ರಣವಮಂದುಗೆ ದಯೆಯೆ ತೊಡರು ಶ್ರುತಿ
ಧ್ವನಿಗಳುರಗೆಜ್ಜೆ ಸತ್ಯದ ಗಂಟೆ ಶಾಂತಿಮಂ
ಡನ ಭಕ್ತಿದಂಡೆ ಚಿತ್ತಿನ ನೊಸಲುಗನ್ನಡಿಯೊಳೆಸೆದನಾ ವೃಷಭೇಂದ್ರನು        ೪೪

ಆ ನಂದಿಕೇಶ್ವರನನಾ ಸಿದ್ಧರಾಮನ
ತ್ಯಾನಂದದಿಂ ಗುಡಿಯ ಕೆಲಸ ಕನ್ನಡಿಯ ವಾ
ದ್ಯಾನೀಕ ರವದಿಂದಿರ್ಗೊಂಡು ಬಂದೀಶನ ಗೃಹಾಂತರಾಳದೊಳು ಪೊಗಿಸಿ
ಸ್ವಾನುಭಾವದಿ ಪ್ರತಿಷ್ಠಾಪರಿಕರಂಗಳನ
ನೂನದಿಂ ನೆರಪಿ ಪುಣ್ಯಾಕಾರ ಲಿಂಗಕ್ಕೆ
ನಾನಾ ವಿಶೇಷ ಪೂಜೆಯನೊದವಿ ಪಿಡಿದು ಜಯಜಯತೆಂದು ನಿಂದಿರ್ದನು    ೪೫

ವಸುಧೆ ಪುಳಕಿಸೆ ಹಲವು ವಾದ್ಯಕುಲವುಲಿಯೆ ದೆಸೆ
ದೆಸೆಗಳಲಿ ಶಿವಹೋಮವುಣ್ಮೆ ಶರಣಾಳಿ ಸಂ
ತಸದಿಂದಲುಘೆಯೆಂದು ಕುಣಿಯೆ ಪೂಮಳೆವಿಡಿದು ದೇವರಂಬರದೊಳಾಡೆ
ಒಸೆದು ಪಿಡಿದಧರವೇ ಹಸ್ತವುಸಿರೇ ಮಂತ್ರ
ವಿಸರ ಲಾಲಾಜಲದಿನಭಿಷೇಕ ಫೇನವೇ
ಕುಸುಮವೆನೆ ನಿಲಿಸಿದಂ ಮುನ್ನಿನ ಸುಯೋಗ ಲಿಂಗದ ಶಿಖೆಯೊಳಾ ವೃಷಭನ೪೬

ಬಂದವರ್ಗಾನನನ್ಯಾಧಾರನೆಂದು ಪೇ
ಳ್ವಂದದಿಂ ಮೊದಲ ಲಿಂಗವೆ ಪೀಠವಾಗಿ ಮುದ
ದಿಂದೊಸೆದು ಮೂರ್ತಿಗೊಂಡಾಲಿಂಗದೊಳು ವೃಷಭನಡಗೆ ಕಂಡಾ ಸಿದ್ಧನು
ಹಿಂದೆ ಸವೆದಿರ್ದ ಹದಿನಾಱು ಲಿಂಗಸ್ಥಲವ
ನಿಂದೀಗಲೇಕ ಕಾಲದೊಳು ಪ್ರತಿಷ್ಠಿಸುವೆ
ನೆಂದು ಸಂಭ್ರಮದೊಳಗೆ ಸಂಭ್ರಮಂ ಬೆಳೆಯೆ ಪರಿಚಾರಕರಿಗಿಂತೆಂದನು         ೪೭

ನಿಲ್ಲದೆಲ್ಲಾಯೆಡೆಯೊಳೆಲ್ಲರನು ತಳು
ವಿಲ್ಲದಣಿಮಾಡಿಕೊಂಡಿರಿಯೆಂದು ಬೆಸನನಿ
ತ್ತಲ್ಲಲ್ಲಿಗಟ್ಟಿ ಚೆಚ್ಚರದೊಳಾಚಾರ‍್ಯರ ಶಿರೋರತ್ನ ಸಿದ್ಧನೈದಿ
ಅಲ್ಲಿ ಹದಿನಾಱು ಲಿಂಗವನೇಕ ಲಗ್ನದೊಳ
ಗೆಲ್ಲಂ ಪ್ರತಿಷ್ಠಿಸಿದನೊರ್ವನೇ ಮುನಿವರರ
ವಲ್ಲಭಂ ನೋಡಲೆಲ್ಲಿಯು ತಾನೆಯಾಗಿರ್ದನೇನೆಂದು ಬಣ್ಣಿಸುವೆನು         ೪೮

ಭಾಸುರ ಬ್ರಹ್ಮೇಶನೇಲೇಶ ಸಿದ್ಧೇಶ
ವಾಸುರ ತ್ರಿಪುರಾಂತಕೇಶನನುಜೇಶ ಕೊ
ಪ್ಪೇಶ ನಕ್ರೇಶ ನವಣೆಯ ತಮ್ಮಡೇಶನೆಂದೀಯೆಂಟು ಹೆಸರನಿಟ್ಟು
ಈಶನೆಂದೊಡಲೆನಿಸಿ ಮೆಱಿವ ಮಹಿ
ಮೇಶವಬಳೇಶ ಮಾಹೇಶನೇಹೇಶ ಸೂ
ಹೇಶ ತೇಜೇಶ ಸತ್ರಾಮೇಶನಾಹಿರೇಶ್ವರರೆಂದು ನಾಮಕರಣಂ ಗೆಯಿದನು     ೪೯