ರಾಗ : ಮಾಳವ ಗೌಳ

ಪಲ್ಲವ ||           ಶಾಪಹತರಾದ ಗಂಧರ್ವರ್ಗೆ ನಿಜವಿತ್ತು
ಕೋಪದಿಂದ ಬಂದ ಮದನನ ಬಿಲ್ಲ ಬಿಸುಡುಸಿದ
ಭಾಪುರೇ ಶಿವಸಿದ್ಧರಾಮಯ್ಯ ಮರ್ತ್ಯದ ಮಹಾದೇವನಂ ನಂಬಿರೇ ||

ಮರಳಿ ವರಮಲ್ಲಿಕಾರ್ಜುನನೆಡೆಗೆ ನಡೆತಂದು
ತೊರೆವ ಕಣ್ಣಿಂದ ಕಂಪಿಸುವ ಕೈಯಿಂದವಂ
ಕುರಿಪ ಮೈಯಿಂದ ತೊದಳಿಸುವ ಬಾಯಿಂದ ಡೆಂಡಣಿಪ ಕಾಲಿಂದ ಮೆಱೆವ
ಕರುಣದಿಂದಂ ನೋಡಿ ಮುಟ್ಟಿ ಬಿಗಿಯಪ್ಪಿ ತುತಿ
ಗರೆದು ಕುಣಿದಾಡಿ ಜಾನಿಸಿ ಬಳಿಕ ಲೋಕೈಕ
ಗುರು ಸಿದ್ಧರಾಮನಾಥಂ ದಾನ ಧರ್ಮಮಂ ಮಾಡಲುದ್ಯೋಗಿಸಿದನು        ೧

ಇಂದೊಮ್ಮೆ ನೆರೆದೀ ಮನುಷ್ಯಮಾತ್ರಕ್ಕಿತ್ತೆ
ನೆಂದಡೇನಹುದಖಿಳ ಮುಖದ ಜೀವಾಳಿಗಳಿ
ಗೆಂದುವುಂ ತಪ್ಪದಂತೀವೆನೆಂದನುಗೈದು ಸತ್ರಮಂ ಪರಿಕಲ್ಪಿಸಿ
ಸಂದ ಪುರದೆಣ್ದೆಸೆಯೊಳೊಂದು ಯೋಜನದೊಳಿಹ
ಹೆಂದದಣು ಮೊದಲಿಱುಹೆ ಪಶುಪಕ್ಷಿಮೃಗವಾನೆ
ಯೆಂದವಕ್ಕಲಸದುಚಿತಾಹಾರಮಂ ಕಟ್ಟಿಕೊಟ್ಟನನುದಿನಂ ನಡೆಯಲು        ೨

ದೀನರಿವರುತ್ತಮರಪಾತ್ರ ಸತ್ಪಾತ್ರವೆಂ
ಬೀ ನೋಟಮಿಲ್ಲ ಸರ್ವರಿಗೆ ಭೂದಾನ ಗೋ
ದಾನ ಕನ್ಯಾದಾನ ವಸ್ತ್ರದಾನಂ ಮಹಿಷಿದಾನವಖಿಳಾನ್ನದಾನ
ನಾನಾ ಮಹಾದಾನವಂ ಮಾಡಿ ನೆಱೆ ತಣಿಪಿ
ಜ್ಞಾನನಿಧಿ ಸರ್ವದೇವರು ನವಗ್ರಹ ತಣಿಯೆ
ನೂನವಿಲ್ಲದೆ ಜಗಜ್ಜನದ ಕೃಪೆಗಾ ನಿತ್ಯಹೋಮಕುದ್ಯೋಗಿಸಿದನು           ೩

ಹೋಮಾಗ್ನಿ ಮಲ್ಲಿನಾಥನ ಹಣೆಯಜಸ್ರಾಗ್ನಿ
ಹೋಮೇಶ ಮಲ್ಲಿನಾಥಂ ಹೋಮ ನಿಷ್ಕಾಮ
ಹೋಮವಿದಕಗ್ನಿಯೇ ಸಂಸ್ಕಾರ ಮುಲ್ಲೇಖ ಸಾಧನಂ ದ್ರವ್ಯಸಿದ್ಧಿ
ರಾಮವೆನಿಸಲು ಸಿದ್ಧಮಂತ್ರದಿ ನವಗ್ರಹಂ
ಭೂಮಿಯೊಳಗುಳ್ಳ ದೇವರು ಭೂತವಾಹುತಿಯ
ನೇಮದಿಂ ನಿತ್ಯಹೋಮದೊಳಿಲ್ಲಿ ಕೊಳುತಿರ್ಪುದೆಂದಾಸನವನಿತ್ತನು           ೪

ಮೃಡಮಲ್ಲಿನಾಥಂಗೆ ನಿತ್ಯನೇಮಂಗಳಂ
ನಡೆಯಿಸುತ ಹೋಮಮಂ ಮಾಡಿ ಮಂತ್ರದಿ ರುದ್ರ
ರೊಡಗೂಡಿ ಜಂಗಮಾರ್ಚನೆಯಿಂದ ಸರ್ವಗುಣದೊಳು ಧರಾತಳದ ಮೇಲೆ
ಪಡಿಯಿಲ್ಲೆನಲು ಪುರವ ರಚಿಸಿ ಬಳಿಕೊಂದು ದಿನ
ನಡುವಿರುಳು ಕ್ಷೇತ್ರಮಂ ಬಲವರುತ್ತಂ ಮೂಡ
ಗಡೆಯಿಂದ ತ್ರಿಪುರಾಂತಕದಿ ಸಿದ್ಧನೈತರುತ್ತಿರೆ ಭಯಂಕರ ಮೊಳೆತುದು        ೫

ಕಾರೊಡಲು ದಾಡೆ ಮಣಿಮಕುಟ ಫಣಿಕುಂಡಲಂ
ತೋರಗಣು ಕೆಮ್ಮೀಸೆ ರುಂಡಾಭರಣ ಸರ್ಪ
ಹಾರ ಶೂಲಂ ಡಮರುವಸಿ ಫಳಕ ಕಿಗ್ಗಟ್ಟಿನೆಸೆವ ಬಾವುಲಿತೊಡಗರಿನ
ವೀರಭದ್ರಂ ಚಂಡಿ ಕೋಳಾಹಳಂ ಮೂಕ
ಭೈರವಂ ನಂದಿ ಮಾಕಾಳ ಮದಗಜವದನ
ವೀರಕರೆನಿಪ್ಪಾ ಗಣೇಶ್ವರರು ಸಂಭ್ರಮಂ ಮಿಗಲು ಗುರುವಂ ಕಂಡರು         ೬

ಕೆದಱುದಲೆ ಕೆಮ್ಮೀಸೆ ರುಂಡ ಮುಂಡಾಭರಣ
ವೊದವಿರ್ದ ವೃಶ್ಚಿಕದ ಮಾಲೆ ಪೇರುರದಲ್ಲಿ
ವಿದಿತವೆನೆ ಡಮರು ಶೂಲಂ ಖಡ್ಗವರಿದ ತಲೆ ದಿಗ್ವಸನ ಫಾದುಕೆಯಲಿ
ಅದಿರದೈತಂದುಂಚನುನ್ಮತ್ತಕ್ರೋಧ ಚಂ
ಡದುದಾರ ಸ್ಪಚ್ಛಂದ ಮೂಕರುರು ಭೈರವರು
ಸದಮಳಜ್ಞಾನಿ ಗುರುವಿಂಗೆಱಗಿ ಕೈಮುಗಿದು ನಿಂದಿರ್ದರೇವೊಗಳ್ವೆನು          ೭

ಹಸುರುಮೈ ಹಾವಿನಾಭರಣ ಬಿಡುಮಂಡೆ ಕೂ
ರಸಿ ಪಾನಪಾತ್ರೆ ಘಟಕುಚ ದಿಗಂಬರ ಹವಳ
ವೆಸೆವ ಹಾವುಗೆ ರುಂಡಮಾಲೆ ಗಜಗಮನ ಕೆಂಪಿನ ಪುಷ್ಪಸರವೊಪ್ಪುವಾ
ಹೊಸ ವಿಜಯೆ ಯಮದೂ ಟಿ ಮಕರಿ ಜಯೆ ಕಾಳರಾ
ಕ್ಷಸಿ ಪರಾಜಿತ ಷಷ್ಟಿಯಜಿತೆಯೆಂಬೆಂಟು ಹೆಸ
ರೆಸೆವ ದೇವಾಂಗನೆಯರೈತಂದು ಕಂಡರಪ್ರತಿಮ ಸಿದ್ಧೇಶ್ವರನನು   ೮

ನೀವಾರಿಗಿಲ್ಲಿಗೇಕೈ ತಂದಿರೆಂದಡಗ
ಜಾವರಂ ಕಳಿಪಿದಡದೇಕೆಂದಡೀವೂರ
ಕಾವ ಕೆಲಸಕ್ಕೆಂಟು ಭೈರವರನೆಂಟು ದೇವರನೆಂಟು ಗಣಮುಖ್ಯರ
ಆ ವೀರಗಣವೆಂಟಱೊಳಗೊಬ್ಬವಂ ನರರ
ಠಾವಿಂಗೆ ಹೋಗಲಾನೊಲ್ಲೆನೆಂದಡೆ ಮುನಿದು
ದೇವದೇವನು ದೈತ್ಯನಾಗೆಂದು ಶಾಪಮಂ ಕೊಟ್ಟನವಧರಿಸೆಂದರು೯

ಕವಿದುಂಚ ಭೈರವಂ ವಿಜಯೆ ವೀರೇಶನೆಂ
ಬಿವರ ಮೂಡಲು ಬೆನಕನಜಿತ ಘನ ಚಂಡಭೈ
ರವನನಾಗ್ನೇಯದೊಳು ಜಯೆ ನಂದಿ ಮಾಕಾಳನುನ್ಮತ್ತ ಭೈರವರನು
ಜವನ ದೆಸೆಯೊಳು ಮಕರಿ ಚಂಡಿಕಾ ಕ್ರೋಧ ಭೈ
ರವರ ನೈರುತಿಯೊಳು ಪರಾಜಿತೆಯನುದಿತ ಭೈ
ರವ ವೀರಕರನಿರಿಸಿದಂ ಪಡುವಲಪ್ರತಿಮ ಸಿದ್ಧಕುಲಚಕ್ರೇಶನು      ೧೦

ವೀರಕೋಳಾಹಳಂ ಷಷ್ಟಿ ನಿಶ್ವಚ್ಛಂದ
ಭೈರವರ ವಾಯುವ್ಯದೊಳುಮಶ್ರುವಂ ಮೂಕ
ಭೈರವಂ ಯಮದೂಟಿಯಂ ಬಡಗಲೀಶಾನ್ಯದೊಳು ಕಾಳ ರಾಕ್ಷಸಿಯನು
ರೌರವರನಾತ್ಮ ಭೈರವನನೀ ಕ್ಷೇತ್ರವನ
ಹೋರಾತ್ರೆ ಕಾವುದೆಂದಿರಿಸಿ ರಾತ್ರೆಯೊಳತಿ ಮ
ಹಾರುದ್ರ ಮಹಕಾಳಕಾದಿ ಶರಣೆಂದಡೀಶನ ದೆಸೆಯೊಳಿರಹೇಳ್ದನು  ೧೧

ಅಲ್ಲಿಂದ ಸಿದ್ಧನೈತರ್ಪನ್ನ ಲಕ್ಷ್ಮಿ ಬಂ
ದಿಲ್ಲಿಪ್ಪೆನೆನಗೆ ಠಾವಾವುದೆನೆ ನೀನೊಬ್ಬ
ರಲ್ಲಿಪ್ಪುದುಂಟೆ ಸಂಚಲೆ ಕೃತಕಿ ಪಿತೃಪುತ್ರವೈರದಾಯಿನಿ ನಿಷ್ಠುರೆ
ಬಲ್ಲತ್ತ ಹೋಗೆನಲಲ್ಲಿಂದ ಹೋದಡಘ
ಮಲ್ಲ ನಿನ್ನಾಣೆಯೆನೆ ಮಲ್ಲಿಕಾರ್ಜುನನ ಪದ
ದಲ್ಲಿದ್ದು ಕವಿಲೆಗಳನಾರೈದುಕೊಂಡಿರೆಂದಿತ್ತನಭಿನವರುದ್ರನು     ೧೨

ಶ್ರೀಮಲ್ಲಿನಾಥನ ಪದಾಂಬೋಜದಲ್ಲಿಗಾ
ರಾಮನಾಥಂ ಬಂದು ನಿಚ್ಚಲೆಂದಿನ ತೆಱದಿ
ನೇಮದಿಂ ಕ್ಷೇತ್ರ ಪ್ರದಕ್ಷಿಣಂ ಬಪ್ಪುದಂ ಕೈಮುಗಿದು ಬೇಡಿ ಪಡೆದು
ಪ್ರೇಮದಿಂ ಲಿಂಗಪೂಜಾ ಕೌಶಳಂ ಬೆತ್ತು
ಸಾಮರ್ಥ್ಯಭೂಷಣಂ ಶಾಂತಿಸಂಪನ್ನಂ ದ
ಯಾಮೇರು ಸುಖಸಂಕಥಾ ವಿನೋದದೊಳಿರಲು ಕೀರ್ತಿವಧುವೇಗೆಯ್ದಳು   ೧೩

ಹಿರಿದು ಭಕ್ತ್ಯಂಗನೆಯನುರದೊಳುಂ ಜಯಸತಿಯ
ವರಭುಜದೊಳು ದಯಾಸತಿಯ ಮುಖದೊಳತಿ ಶಾಂತಿ
ತರುಣಿಯಂ ಮನದೊಳೆಡೆವಿಡದಪ್ಪಿ ನೆರೆವುದಲ್ಲದೆ ಮತ್ತೆ ಪರನಾರಿಗೆ
ತೆಱವನಟ್ಟುವನಿವನ ಬೇಟದೊಳು ಕಣ್ಗಾಣ
ದಿರದೆ ಕೈವಿಡಿದೆನ್ನ ನೂಂಕಿ ಕಳೆದಂ ಮಹಾ
ಪುರುಷರಱಿದಿರಿ ಸಿದ್ಧರಾಮನೆಂದಾ ಕೀರ್ತಿವಧು ದೂಱಿದಳು ಜಗದೊಳು   ೧೪

ನಡೆಗೆ ಹಜ್ಜೆಗಳಿಲ್ಲ ತನುಗೆ ನೆಳಲಿಲ್ಲ ನೀ
ರ್ಗುಡಿಯನುಣ್ಣಂ ಮಱೆಯನಲಸನಾಗುಳಿಸನಾ
ವೆಡೆಯೊಳಂ ವಿಣ್ಮೂತ್ರಮಂ ವಿಸರ್ಜಿಸ ಬೆಮರನೆವೆಯಿಕ್ಕನುಸಿರಿಕ್ಕನು
ನುಡಿದುದೇ ಮಂತ್ರ ಹೆಸರಿಟ್ಟುದೇ ದೈವವಿ
ದ್ದೆಡೆ ಮಹಾಕ್ಷೇತ್ರ ಕಂಡವನೆ ಜೀವನ್ಮುಕ್ತ
ಹಿಡಿದುದೇ ಕಾರ‍್ಯ ಸಿದ್ಧೇಶ್ವರಂಗೆಂಬ ನುಡಿ ಪಸರಿಸಿತು ಮೂಜಗದೊಳು     ೧೫

ಆ ಕೀರ್ತಿಯಂ ಕೇಳ್ದು ತೀವ್ರದಿಂ ಬಂದೊಸೆದ
ನೇಕ ನೃಪರಾರಾಧಿಸಿದ ವಸ್ತುನಿಕರಮಂ
ಸ್ವೀಕರಿಸಿ ಜನನ ಮರಣಕ್ಕೆ ಸೆಡೆದೈಹಿಕ ಪ್ರೇಮವಂ ತೊಱೆದು ಬಂದು
ಲಾಕುಳಿ ದೆ ಮಕ್ಕಳಾದರ್ಗಭಯವಿತ್ತು ಮಹಿ
ಮಾಕರಂ ಸಿದ್ಧಪತಿಯುಂ ಜನಿಸಿತಕ್ಕೆ ಭೂ
ಲೋಕದ ಸಮಸ್ತ ಜೀವಾಳಿಗಪವರ್ಗಮಂ ತೋರ್ಪೆನೆಂದನುಗೆಯ್ದನು          ೧೬

ಮಱೆದೊಮ್ಮೆ ನೆನೆದು ನಿಟ್ಟಿಸಿ ಕೇಳ್ದು ಪೆಸರ್ಗೊಂಡು
ಹರವರಿಯ ನರಕಮಂ ನರರೈದೆ ಗೆಲುವುದಕೆ
ಗುಱಿಯಾದನೀ ಮಲ್ಲಿನಾಥನಿವು ದೊರೆಕೊಳ್ಳದಜ್ಞಾನಿ ಜನ್ಮವೆತ್ತು
ಹೊಱಗಿಪ್ಪ ಪಶುಪಕ್ಷಿ ಕ್ರಿಮಿಕೀಟಕಾವಳಿಗ
ಳಱತು ನೀರ್ಗುಡಿಯೆ ಭವವಳಿವಂತು ಕಟ್ಟುವೆಂ
ಕೆಱೆಯನಮರಾಪಗೆಯ ಮೈಮಱೆಯ ಮಾಂಗಲ್ಯಕೆಱೆಯನೆಂದನುಗೆಯ್ದನು           ೧೭

ಮಲ್ಲಿಕಾರ್ಜುನನ ಮಹಮಂದಿರಕ್ಕಾಗ್ನೇಯ
ದಲ್ಲಿ ಜಲಜನಿತಸೆಲೆಯಂ ನೋಡಿ ಕೆಱೆಯಗಲ
ವಿಲ್ಲಿತನಕೆಂದು ಸೀಮಾ ರೇಖೆಯಂ ಕಟ್ಟಿ ಸುಮುಹೂರ್ತವೆರಸಿ ಪಿಡಿದ
ಪಲ್ಲವದ ಕಳಶ ಕನ್ನಡಿಯ ಸತಿಯರ ತಳಿತ
ಝಲ್ಲರಿಯ ಬಹಳ ವಾದ್ಯದ ನಡುವೆ ನಡೆದು ಮುದ
ದಲ್ಲಿ ಬಾಯಿನವಿತ್ತುವಿದಿರ್ಗೊಂಡನಾಹಾ ತಟಾಕ ಖನನೋದ್ಯೋಗನು      ೧೮

ಜೀವರೆಲ್ಲರ ದುರಿತಕರಿಗಂಕುಶಂಗೊಂಬ
ಮಾವತಿಗನಂತೆ ಗುದ್ದಲಿಗೊಂಡನೊಡನೆ ನಾಲ್
ಸಾವಿರ ಸಮರ್ಥ ಗುಡ್ಡರು ಗುದ್ದಲಿಯನೆತ್ತಿಯಗೆಯ ತೊಡಗಿದರಲಸದೆ
ಏವೇಳ್ವೆನಾನತರ ಭವದ ಬೇರಗೆವಂತೆ
ತೀವಿ ಹೊಱಗೊಕ್ಕನಜ್ಞಾನತೆಯನೊಗೆವಂತೆ
ಭಾವಿಸಲು ಪೆಸರುವಡೆದಂ ಶೈವಕೀರ್ತಿಯಂ ಪಸರಿಸುವವೊಲು ಸಿದ್ಧನು      ೧೯

ಕುಂದದೀ ತೆಱದೊಳನುದಿನವಗೆಯುತಿರ್ಪಾಗ
ಳೊಂದು ದಿನ ನಡುವಗಲೊಳುರುಬಿಸಿಲೊಳಗಜೆವೆರ
ಸಿಂದುಧರನಾಕಾಶದೊಳು ಬರುತ ಕಂಡು ಕರುಣಂ ಹುಟ್ಟಿ ನಿಂದಾಗಳು
ಕಂದನೀಸೊಂದು ಕೆಲಸಕ್ಕಾಱನೆಲೆ ಗಂಗೆ
ಯಿಂದುಳ್ಳ ಪುಣ್ಯನದಿಗಳುವರೆಸಿ ಹೋಗಿ ಸಿ
ದ್ಧೇಂದ್ರನಿರಹೇಳ್ದೆಡೆಯೊಳಿರು ಹೋಗು ಬೇಗವೆಂದೊಸೆದು ಕಳುಹಿದನಾಗಳೆ            ೨೦

ಕ್ಷಿಪ್ರದಿಂ ಗಂಗೆ ಗೌತಮಿ ತುಂಗಭದ್ರೆ ವರ
ದೆ ಪ್ರಯಾಗೆ ಪಯೋಷ್ಣಿ ಕಾಳಿಂದಿ ನರ್ಮದೆ ಮ
ಲಪ್ರಹಾರಿಣಿ ಭೀಮರಥಿ ಸರಸ್ವತಿ ವರುಣೆಯಸಿ ಕುಮುದೆಯಾದಿಯಾದ
ಸುಪ್ರಸಿದ್ಧ ನದೀವ್ರಜಂ ತಮ್ಮ ನಿಜರೂಪಿ
ನಪ್ರಭೆಯೊಳೆಯ್ತಂದು ವಂದಿಸಿದರತುಳ ಘನ
ನಪ್ರಮೋದಂಗೆ ಸಿದ್ಧಂಗೆ ಸಿದ್ಧೇದ್ರಂಗೆ ಸಿದ್ಧಕುಲ ಕಮಲರವಿಗೆ     ೨೧

ಸುದತಿಯರು ನೀವಾರ್ ಧರಾತಳಾಗ್ರದ ಪುಣ್ಯ
ನದಿಗಳಾರಟ್ಟಿದರು ಶಿವನೇಕ ನಿಮ್ಮೀ ಪು
ರದೊಳಿರಲ್ಕೆಂದು ಸಿದ್ದೇಂದ್ರ ಕೇಳೆನಲು ತಾಯ್ಗಳಿರ ನೀವಿರಲು ತಕ್ಕ
ಸದಮಳ ಸ್ಥಾನವಿದಱೊಳಗಿಲ್ಲ ನಿಮ್ಮ ನಿಜ
ಸದನಕ್ಕೆ ಹದುಳ ಬಿಜಯಂಗೆಯ್ವುದೆನಲು ನೀ
ನುದಯಿಸಿದುದೇ ಮಹಾಕ್ಷೇತ್ರವಾವೆಯ್ತಂದ ಹದನನವಧರಿಸೆಂದರು           ೨೨

ಈ ಸಱಿಯನೀ ಬಿಸಿಲೊಳಯ್ಯ ನೀನೊಡೆದಗೆದು
ಸೂಸುವಾಯಾಸಮಂ ಬಿಡು ಸಾಕು ನಾವೀ ಪ್ರ
ದೇಶದೊಳು ಕೆಱೆಯಾಗಿ ತೊಱೆಯಾಗಿ ಡೊಣೆಯಾಗಿ ವಾಪಿ ಕೂಪಂಗಳಾಗಿ
ಈಶನಭಿಷವದಗ್ರಜಲಕೆ ಸಂದಿಪ್ಪೆವೆಂ
ದಾ ಸತಿಯರಾಡೆ ಶಿವಯೋಗಿಯ ಶರೀರಂ ವೃ
ಥಾ ಸವೆಯಲಾಗದನುಗೊಂಬನಿತು ಕಾಯಕಂ ನಡೆಯುತಿರಬೇಕೆಂದನು         ೨೩

ಎವಗೆ ಬೇಗಂ ಹೋಗಿ ಬೆಸಸಿದಱೊಳಿರಹೇಳ್ದು
ಶಿವನಟ್ಟಿದಂ ದಿಟವೆ ದಿಟವಾದಡೀ ಕೆಱೆಯೊ
ಳವನಿಯೊಳಗುಳ್ಳಷ್ಟಷಷ್ಟಿಗಳು ದಿವ್ಯನದಿಗಳು ದಿವ್ಯತೀರ್ಥಂಗಳು
ಅವಿವೆನ್ನದೆಲ್ಲವಂ ತಂದಿದಱೊಳಿರ್ಪುದೆನೆ
ಯವನೆಯ್ದೆ ತಂದೆವೆಂದೆನುತ ವನಿತೆಯರು ವೇ
ಷವನುಳಿದು ನೋಡ ನೋಡಲು ಪುಣ್ಯಜಲವಾಗಿನಿಂದರಾ ಕೆಱೆಯ ನಡುವೆ  ೨೪

ಬಿಡೆ ಕೇಳ್ದಡಘಹರಂ ನೆನೆಯೆ ಪುಣ್ಯೌಘ ನುಡಿ
ದಡೆ ಸರ್ವಸಿದ್ಧಿ ಕಂಡಡೆ ಜನನನಾಶ ಹೊಗ
ಳ್ದಡೆ ಸುರೇಂದ್ರತ್ವ ಸೋಂಕಿದಡೆ ಕಮಲಜಪದವಿ ಮಱೆದೊಮ್ಮೆ ಕುಡಿತಗೊಂಡು
ಕುಡಿದನಾದಡೆ ಮುಕ್ತಿಯವಗಾಹವಿರ್ದನಾ
ದಡೆ ಗಣೇಶತ್ವ ಸಾರ್ದಡೆ ಮಹಾರುದ್ರತ್ವ
ವೊಡನಹುದು ಸಿದ್ಧನೊದವಿಸಿದಷ್ಟಷಷ್ಟಿವೆರೆಸಿದ ಕೆಱೆಯ ನವಜಲದಲಿ    ೨೫

ಕೆಱೆಯ ಠಾವಭಿನವ ಶ್ರೀಶೈಲವಾ ಕೆಱೆಯ
ನೆಱೆಯುಗೆ ನ ನೆರಡನೆಯ ಶಿವ ಸಿದ್ಧರಾಮಯ್ಯ
ಕೆಱೆಯ ಜಲವಷ್ಟಷಷ್ಟಿಕ್ಷೇತ್ರ ತೀರ್ಥಕುಲವೆಂಬ ವಾರ್ತೆಯನು ಕೇಳ್ದು
ಉಱುವ ದೇಶದ ಕಡೆಯ ಮನ್ನೆಯರು ಭೂಭುಜರು
ಕುಱುಹಿನ ಭಟರು ದಂಡನಾಯಕರು ಪ್ರಭುಗಳುಂ
ಗರುವರಧಿಕಾರಿಗಳು ಬಂದು ಹೊತ್ತಡಕಿ ಹೊಱಸುಸುತಿಪ್ಪರು ಮಣ್ಣನು     ೨೬

ಮೃಡಮೂರ್ತಿ ಸಿದ್ಧಪತಿಯೊಂದು ದಿನವಾ ಕೆಱೆಯ
ನಡುವೊಪ್ಪುತಿಪ್ಪ ಜಾಲಿಯ ಕುಱುವವೆಂಬ ಗಿಡು
ದಡದಲ್ಲಿ ಪದ್ಮಾಸನಂ ಗೆಯ್ದು ಶಶಿ ರವಿಗಳಂ ಬಲಿದು ಕರಣಂಗಳ
ತೊಡಚಿ ಕುಂಡಲಿಗೊತ್ತಿ ಸುತ್ತಿರ್ದ ವಾಯುವಂ
ಹಿಡಿದು ಲಂಬಿಕೆಯಿಂ ಸುಷುಮ್ನೆಯೊಳು ಜ್ಯೋತಿಯಂ
ನಡಿಸಿ ಗಗನದ ಚಂದ್ರಕಳೆಯ ಬೆಮರಿಸುವ ಚಿಹ್ನದೊಳಿರ್ದನೇವೊಗಳ್ವೆನು     ೨೭

ಆ ಸೊಡರ ಸೆಕಳಿಗಾ ಚಂದ್ರನೊಳಗಿಪ್ಪೆರಳೆ
ಬೇಸತ್ತು ಬೆಂಬಿರ್ದು ಧರೆಗಿಳಿದು ಬಂದು ಸಿ
ದ್ಧೇಶನಂ ಭಜಿಸಿದಪುದೋ ಎನಿಪ್ಪಂದದಿಂದೊಂದೆರಳೆ ವಿಪಿನದಿಂದ
ಆ ಸಮಯದೊಳು ಹರಿದು ಬಂದು ಕೋಡಿಂದ ಸಿ
ದ್ದೇಶನಂಗವನೊರಸೆ ಭಾವದಚ್ಚಳಿದು ಬಗೆ
ಸೂಸಲು ಸಮಾಧಿ ಸಂಚಳಿಸಿ ಕಣ್ದೆಱೆಯುತಾಗಳು ಹಾಡಿದಂ ಗೀತವ          ೨೮

ಪರಮ ಸುಖದಿಂದಂ ನಿವಾತ ನಿಶ್ಚಿಂತನಾ
ಗಿರುತಿಪ್ಪೆನೋ ಹೇಳು ಹೇಳು ಅಯ್ಯಯ್ಯ ನೀ
ಗುರುವೆ ಶಿವನೇ ಎನ್ನ ಮಱೆದು ನಿಮ್ಮಂ ಕೂಡಿ ಪರಿಣಮಿಸಿಯೆಂದಿಪ್ಪೆನೊ
ಹರಿಣ ಬಂದಿಂತೆನ್ನ ಮೇಲುವಾಯ್ದಡೆ ಬಳಿಕ
ತರಹರಿಸಿ ನಾನೆಂತು ನಿಲುವೆ ಹೇಳೈ ತಂದೆ
ಹರ ಕಪಿಲಸಿದ್ಧಮಲ್ಲಯ್ಯಯ್ಯ ಎಂದು ಹಾಡಿದನು ನೋಳ್ಪಾಗಳಂದು      ೨೯

ತಿರುಗಿ ನೋಡದ ಮುನ್ನ ಮೃಗತನಂ ಹಾಱಿ ರತಿ
ವರನ ಸುಕುಮಾರತೆಯನೇಳಿಸುವ ರೂಪ ಸುಂ
ದರತೆಯಿಂ ಬಂದು ವಂದಿಸಿ ನಿಂದು ಕೈಮುಗಿದು ಸಕಲ ದೀಕ್ಷಾವತಾರಾ
ಗುರುವೆ ಪುಣ್ಯದ ಕರುವೆ ನುತ ಕಲ್ಪತರುವೆ ಎಂ
ದಿರದೆ ಕೀರ್ತಿಸುತಿರಲು ಕಂಡು ನೀನಾರಾವ
ಪುರವಾವ ದೇಶವೇಂ ಪೆಸರಾರ ಮಗನೆಂದು ಕೇಳ್ದನಚಳಿತ ಸಿದ್ಧನು            ೩೦

ವಿವಿಧ ವಿದ್ಯಾಧರಾವನಿಯ ಜಲಜಾತ ಖೇ
ಟವೆನಿಪ್ಪ ಪುರದಲಿಹ ಪುಣ್ಯ ಧನದನ ವನಿತೆ
ನವಕುಸುಮಗಂಧಿಯೆಂಬಬಲೆಗೊಗೆದೆಂ ಮೇಘಚೂಡನೆಂದೆನ್ನ ನಾಮಂ
ಶಿವನಿಪ್ಪ ಹೇಮಕೂಟದೊಳು ಕೈವಲ್ಯಮುನಿ
ಯವರಂಘ್ರಿಗಳನೆಡಹೆ ಮುನಿದಾತನೆನಗೆ ಶಾ
ಪವನು ಮೃಗವಾಗೆಂದು ಕೊಟ್ಟಡಾ ಶಾಪ ನಿಮ್ಮಿಂದೀಗ ಹೋಯ್ತೆಂದನು   ೩೧

ಅವಧರಿಸಿದೆನ್ನ ಪೂರ್ವಾಪರವಿದೆನ್ನ ಶಾ
ಪ ವಿಮೋಕ್ಷವಿದು ನಿಮ್ಮ ಮಹಿಮೆಯ ಮಹತ್ವವಿದು
ಶಿವಮೂರ್ತಿ ಸಿದ್ಧಪತಿ ವಡಬಮುಖವೆಂಬುದಿಂತೀ ಪಿರಿಯ ಸುರಿಗೆಯಿದನು
ನಿಮಗೀವ ಮನವಿದಂ ಕೊಂಡು ಕರುಣಿಸಬೇಹು
ದವಿನಾಶೆಯೆಂದಡೆಲೆ ಮರುಳೆ ಹೇಳೈ ಕೈದು
ವೆಮಗೇವುದಯ್ಯ ಕಟ್ಟಾಳ್ಗಳೋ ಕಲಿಗಳೋ ನಾವೆಂದನಪ್ರತಿಮನು            ೩೨

ಲಲನೆಯರ ನಯನಬಾಣಕ್ಕಳುಕದಿಪ್ಪವಂ
ಕಲಿ ಕೋಪಗಿಚ್ಚನೊತ್ತರಿಸುವಂ ಕಲಿ ಲೋಭ
ದಲಗಿಂಗೆ ತೆರಳದವ ಕಲಿ ಮೋಹಸಂಕಲೆಯ ಮುಱಿದು ಕೊಳಲಾಪಂ ಕಲಿ
ಬಲಿದ ಮದಮತ್ಸರಾರಣ್ಯದಲ್ಲಿ ತೊಳಲದಂ
ಕಲಿಯವಿದ್ಯಾರಿಪು ಬಲಕ್ಕೆ ಬೆಂಗೊಡದವಂ
ಕಲಿಯಿವೆಲ್ಲವನುಳ್ಳ ನೀವೆ ಕಲಿಯಲ್ಲದಿನ್ನಿಳೆಯೊಳಾರುಂಟೆಂದನು           ೩೩

ಕಡೆಗಿದು ನಿಮಿತ್ತವೀ ಸುರಿಗೆ ನಿನಗಲ್ಲದಿ
ನ್ನೆಡೆಯವರ್ಗೊಪ್ಪದಿದನನವರತ ಹಿಡಿಯಬೇ
ಕೊಡೆಯ ಯೆಂದಡಿಗೆಱಗಿ ಕೊಡೆಕೊಂಡು ಕರುಣವೆರಸಾತನಂ ಕಳುಹಿ ತಿರುಗಿ
ನಡೆತಂದು ಬಳಿಕದನಜಸ್ರಮಿಳುಹದೆ ಕೂರ್ತು
ಹಿಡಿಯುತಿರೆ ಕಂಡು ಹಗೆ ಕೆಳೆಗಳೋರಂತೆ ನಡ
ನಡುಗತೊಡಗಿದರಿದೇನಪ್ರತಿಮನಲಗನೇಂ ಕಾರಣಂ ಪಿಡಿದನೆಂದು  ೩೪

ಹರನ ನಾಸಿಕದ ಸವಿಯಂ ಸಲಹುವಂತೆ ಶಂ
ಕರನ ಸುಖಮಂ ಸಾಗಿಪಂತೆ ಮೆಱೆವಂಬಿಕಾ
ವರನ ಮಂಗಳವ ಮನ್ನಿಸುವಂತೆ ಭಕ್ತರಿಗೆ ಧರ್ಮಾರ್ಥಕಾಮವೆಂಬ
ವರಫಳವನೀವ ಬೆಳೆಯಂ ಬೆಳಸುವಂತೆ ಸುಂ
ದರವೆನಿಸಿ ತಾನೆ ಬಿತ್ತಿದ ಪುಷ್ಪವಾಟಿಗಾ
ದರದೊಳುದಕವನೆತ್ತಿ ಹೊರೆದು ಹೂದಿಱಿವ ಜಾಣ್ಮೆಯನದೇವಣ್ಣಿಸುವೆನು            ೩೫

ಕುಡಿ ಮುರುಟಿ ಬೆಳುಪಿಡದೆ ಬೆಳೆದ ಮೊಗ್ಗೆಗಳನೆಸ
ಳೊಡೆಯದಂತರೆ ಬಿರಿದ ಮುಗುಳ್ಗಳಂ ಮಿಗೆ ಚೆಲ್ವು
ಗೆಡದಂತೆ ಚಿಪ್ಪರಳದೊಳ್ಳಲರ್ಗಳಂ ತುಂಬಿ ಮೊಗವಿಟ್ಟು ಪರಿಮಳವನು
ಕುಡಿಯದ ಪರಾಗರಸ ತುಳುಕದಂತೆಳಗಾಳಿ
ಜಡಿಯದ ಬಿಸಿಲ್ ಪೊಯ್ಯದೊಪ್ಪವುಡುಗದ ಹೂವ
ನೆಡೆವಿಡದೆಯಱಸಿ ಕೊಯ್ದಂ ಸಿದ್ಧವಲ್ಲಭಂ ದೇವರಾಯನ ಪೂಜೆಗೆ          ೩೬

ಕುಸುಮದೊಪ್ಪಕ್ಕೆ ಮನದೊಳು ಪುಳಕಿಸುತ್ತ ಕಂ
ಪಿಸುವ ಕೈ ಕಮಳವೆಂದೆಱಗಿ ಪರಿಮರಿಗೊಂಬ
ಹಸುಳೆದುಂಬಿಯನೂಡಿ ಸಾಕುವಾಸಕ್ತಿಯಿಂ ಸಿದ್ಧಪತಿಯಿಪ್ಪಾಗಳು
ಹೊಸ ಯೋಗಿಯೊಬ್ಬನಾಕಸ್ಮಿತಂ ಬಂದು ನಿಂ
ದೊಸೆದಿಪ್ಪೆನೋ ಹೋಹೆನೋ ಎಂದು ಹಲವು ಸೂಳ್
ಬೆಸಗೊಳುತ್ತಿರಲು ಬೇಸತ್ತು ಹೋಗೆಂದನಾಗಳು ಸಿದ್ಧಕುಲತಿಲಕನು           ೩೭

ಹೋಗೆಂಬ ನುಡಿ ಹಿಂಚೆ ಮುಂಚಿ ಜೀವಂ ನೆಗೆದು
ತಾಗಿ ನಡುನೆತ್ತಿಯಂ ಬಗಿದು ಬಾದಣದೆಗೆದು
ಮೇಗಡರ್ದು ಗಗನಕ್ಕೆ ದಂಡಾಯಮಾನದುರಿಯಾಗಿ ನೆಗೆಯಲ್ಕೆ ಬಳಿಕ
ಯೋಗಿಯ ಶಬಂ ಬಯಲ ನೆಮ್ಮಿ ನಿಲೆ ಕಂಡು ಬೆಱ
ಗಾಗುತ್ತ ಮಲ್ಲಿಕಾರ್ಜುನನೆಡೆಗೆ ಬಂದು ನಾ
ನೇಗೆಯ್ವೆನೊಬ್ಬನಿಂದಿಂತಸುವನಳಿದನೆಂದಾಡಿದಂ ಸಿದ್ಧೇಂದ್ರನು   ೩೮

ಇದಕಂಜಬೇಡಾತನತಿಹಂಸನೆಂಬ ನಾ
ಮದ ಯತಿಯತಿ ಬ್ರಹ್ಮಚಾರಿ ವನಚರಿಯ ಕೂ
ಡಿದಡೆ ಗುರು ಮೈಳಾಕ ಮುನಿದೈದು ಭವದ ಶಾಪವನಿತ್ತು ಸಿದ್ಧೇಂದ್ರನಿಂ
ತುದಿಯೊಳು ವಿಶಾಪ ಹೋಗೆಂದೆನಲು ಬಂದು ಹೊಂ
ದಿದನು ಮೂಲಸ್ವಾಮಿಯೆಂದು ಹೆಸರೀಗಂ ಮುಂ
ದುದಿಸಿ ನಿನಗುತ್ತುಂಗಭದ್ರನೆಂಬತುಳ ಬಲ ಗುಡ್ಡನಾದಪನೆಂದನು  ೩೯

ಅಂತವಂ ಮುಂದೆ ನಾಗಾರ್ಜುನಂ ಸಹಿತೀಗ
ಪಿಂತೆ ಮಾಯದ ಬಲೆಯೊಳಳಿದವರು ಘನಸಿದ್ಧ
ರಂಗ ತೆಗೆದು ತಂದು ಮೇಲಿಳೆಯಱಿಯೆ ನಿನ್ನ ನಿಜದೊಳು ಬೆರಸಿ ಬೆಳಗಾದಪಂ
ಚಿಂತೆ ಬೇಡನ್ನಕಂ ಗೊಪೆಯೊಳಿರಿಸವನೆನೆ
ಸಂತಸದೊಳತಿ ವಿಭವವೆರಸೊಯ್ದು ಕೆಱೆಯ ಪರಿ
ಯಂತದೊಳು ನಿಕ್ಷೇಪಿಸಿದನತುಳಬಳ ಮದನಮದರದನಿ ಪಂಚಾಸ್ಯನು         ೪೦

ಹೊಸ ಪುಷ್ಪವಾಟಿಯಂ ಸಾಗಿಸುತ ಕೆಱೆಯನಗು
ಳಿಸುತ ಶಿವನಿಳಯಮಂ ಮಾಡಿಸುತ ಪುರವ ವಿರ
ಚಿಸುತ ಲಿಂಗಾರ್ಚನಂ ಗೈಯ್ಯುತ್ತ ಧರೆಗೆ ಕರುಣಿಸುತ ನೃಪರೋಲೈಸುತ
ವಸುಧೆ ಗೋವುಂ ರತ್ನದಾಭಾರಣಮಂ ಮಹಾ
ಹೊಸ ವಸ್ತುಗಳನು ಸ್ವೀಕರಿಸಿ ಕವಿಲೆಯ ಹಟ್ಟಿ
ಗೊಸೆದು ನಡೆತಂದು ಸಿದ್ಧೇಂದ್ರನೆಳಗಱುಗಳಂ ಬಿಡಿಸಿ ನಗುತಿಪ್ಪಾಗಳು        ೪೧

ಮರಳಿ ನೋಡುವ ಹೆದಱುಗಂಗಳಿಂ ಮೈಗಂಡ
ಸರಳ ಮೊನೆಯಿಂ ಸುರಿವ ರುಧಿರ ಡೆಂಡಣಿಪ ನಡೆ
ಹುರಿಯೊಡೆದ ರೋಮ ಹೊಯ್ವಳ್ಳೆ ನಾಲಗೆ ಬೀಳ್ವ ಬಾಯರಳ್ವ ನಾಸಾಪುಟಂ
ಸುರಿವ ಬೆಮರೆಳಲ್ವ ಕಿವಿವೆರಸು ಕಂಗೆಟ್ಟೊಂದು
ಹರಿಣನೆಯ್ತಂದೆಡೆಯ ಸಗಣಿಯೊಳಗೆಡಹಿ ತರ
ಹರಿಸಲಾಱದೆ ಮುಗ್ಗಿ ಬಿದ್ದುದಾ ಸಿದ್ಧರಾಮಂ ಕರುಣದಿಂ ನೋಡಲು       ೪೨

ನೋಡಿ ಶಿವ ಶಿವಯೆನುತ ತಾನೆ ಹರಿತಂದು ಕೈ
ನೀಡಿ ಕೋಡಂ ಪಿಡಿದು ನೆಗಪೆ ನೆಗಪಿಸಿಕೊಂಬ
ಕೋಡು ಕೈಯಾಗೆ ತನು ಪುಣ್ಯತನುವಾಗೆ ಶಿರ ಶಿರವಾಗಲಡೆಯನೊಡೆದು
ಮೋಡಮಂ ಬಗಿದೇಳ್ವ ಬಾಲಾರ್ಕನಂತೆ ಕ
ಣ್ಗಾಡಂಬರಂ ಮುಕ್ಕಿ ನಿಂದಿರ್ದು ಹಾಡಿ ಕುಣಿ
ದಾಡಿ ಕೀರ್ತಿಸುವ ಗಂಧರ್ವನಂ ಕಂಡು ನೀನಾರೆಂದನಪ್ರತಿಮನು      ೪೩

ವಿನುತ ಲೋಹಿತಕೇತುವೆಂಬ ವಿದ್ಯಾಧರಾ
ವನಿಪನ ಮಗಂ ಮಯೂರಕನು ನಾನೊಮ್ಮೆ ಪರಿ
ಜನವೆರಸಿ ಬೇಂಟೆಯಾಡುತ್ತ ಶತಶೃಂಗತಟ ವಿಪಿನದೊಳು ತೋಹುಗೊಂಡು
ಮುನಿದೊಂದು ಹರಿಣನಂ ತೀವಿ ತೆಗೆದೆಚ್ಚು ಪಿಂ
ದನೆ ಪರಿದಡದು ಹೋಗಿ ಕಂಗೆಟ್ಟು ವಿಶ್ವದ
ರ್ಶನನೆಂಬ ಯತಿಪತಿಯ ಮುಂದೆ ಬಿದ್ದಸುವಳಿದುದಯ್ಯ ಚಿತ್ರೈಸೆಂದನು      ೪೪

ಆ ವಿಶ್ವದರ್ಶನಂ ಕಂಡು ಮುನಿದೆಲ್ಲವೊ ನೀ
ನೇವೆರಳೆಯಾಗಿ ಕಡೆಗೀ ಪರಿಯೊಳೆಸುವಡೆದು
ಸಾವನೈದೆಂದು ಶಾಪವನಿತ್ತಡಾಂ ದೈನ್ಯದಿಂದ ಕೀರ್ತಿಸಲು ಮೆಚ್ಚಿ
ಭೂವಳಯದೊಳು ಸಿದ್ಧರಾಮನಭಿನವ ಮಹಾ
ದೇವನೊಗೆದಪನಾತ ಸೋಂಕಲು ವಿಶಾಪವೆಂ
ದಾ ವಿಮಳ ಮುನಿಯೆನಲು ಬಂದು ನಿಮ್ಮಿಂದ ನಿಜವಡೆದೆನವಧರಿಸೆಂದನು    ೪೫

ಆತನಂ ಬೀಳ್ಕೊಟ್ಟು ಕಳುಪಿ ನಡೆತಂದು ವಿ
ಖ್ಯಾತಿಯಿಂ ಸುಖದೊಳಿರುತಿಪ್ಪ ಸಿದ್ಧೇಶ್ವರನ
ಮಾತುಗೇಳದೆ ಮೀಱಿ ಕೇತಾರಮಂ ಕಾಣಲೆಂದಣ್ಣ ಬೊಮ್ಮಯ್ಯನು
ಓತು ನಡೆಗೊಂಡು ಕಂಗೆಟ್ಟು ಮಗುಳೆಯ್ತಂದು
ಭೀತಿಯಿಂದೆಱಗಿ ಕಿಂಕುರ್ವಾಣಮಂ ತೋಱಿ
ಧಾತುಗೆಡಬೇಡೆಂದು ಮಲ್ಲಿಕಾರ್ಜುನನ ಸುಖಸದನಕ್ಕೆ ಕೊಂಡೊಯ್ದನು     ೪೬

ತಂದು ಕಂಗಳನಿತ್ತು ನೆಱೆ ಮಲ್ಲಿಕಾರ್ಜುನನ
ಹಿಂದೆ ಮುಂದೆಡಬಲದೊಳುಳ್ಳ ದಿವ್ಯಕ್ಷೇತ್ರ
ವೃಂದದ ಮಹಾಲಿಂಗವೆಯ್ದೆ ನೆರೆದಿರೆ ತೋಱುತವಱೊಳಗೆ ಬೇಱೆ ಬೇಱೆ
ಒಂದನೊಂದೊಂದು ಪೆಸರಿಂ ಕರಸಿ ತಡೆಯದೋ
ಯೆಂದೆನಿಸಿ ಹೊಱಗಿನ್ನು ಬೇಱಧಿಕವುಂಟೆಂಬ
ಸಂದೇಹಮಂ ಬಿಡಿಸಿ ಸುಖಸಂಕಥಾವಿನೋದದೊಳಿರ್ದ ಸಿದ್ಧೇಂದ್ರನು          ೪೭

ಪುರದ ಜನವದಿದೆನ್ನದೆಲ್ಲರಿದ್ದಿದ್ದು ಹೇ
ವರಿಸಿ ಮೂಗಂ ಮುಚ್ಚಿಕೊಳಲೊಬ್ಬನೈದಿ ಬಂ
ದಿರದಷ್ಟಷಷ್ಟಿ ತೀರ್ಥವ ಮಿಂದು ಮಲ್ಲಿನಾಥನನಡರಿ ನೋಡಿ ನಮಿಸಿ
ಉರದ ಮೀನಂ ಹೊಲಸುನಾತಮಂ ನೀಗಿ ಹೊಸ
ಪರಿಮಳದ ಕರುವಾಗಿ ನಡೆತಂದು ಲೋಕೈಕ
ಗುರುವಿಂಗೆ ವಂದಿಸಲು ನೀನಾರಿದೆತ್ತಣವನೆಂದು ಬೆಸಗೊಂಡನಂದು            ೪೮

ಭಾವಿಸಲು ಗಂಧರ್ವ ಲೋಕದೊಳಗಣ ಸುಗಂ
ಧಾವತಿಯೆನಿಪ್ಪ ಪೆಂಪಿನ ಪಟ್ಟಣವನಾಳ್ವ
ಭೂವರಂ ಸೌಗಂಧಶೇಖರಂಗಂಗನೆ ಕಳಾವತಿಯೆನಿಪ್ಪ ವನಿತೆ
ಆ ವಿದಗ್ಧೆಯ ಗರ್ಭದಿಂದೊಗೆದೆನೆಲೆ ಪತಿತ
ಪಾವನನೆ ಕುಮುದಶೇಖರನು ನಾಂ ಸುಖಸಂಕ
ಥಾವಿನೋದದೊಳಿರ್ಪ ದಿನದೊಳೇವೊಗಳ್ವೆಂ ವಸಂತ ಸಮಯಂ ಬಂದುದು  ೪೯

ಬಳಸಿದ ವಸಂತಕಾಲದೊಳೆನ್ನ ಹೆತ್ತವನ
ಕೆಳೆಯಂ ಕುಬೇರನೆನ್ನಂ ಕರಸಿಕೊಂಡು ತ
ನ್ನಳಕಾಪುರದೊಳುತ್ಸವಂ ಬೆರಸು ಪರಿವಾರಸಹ ಜಲಕ್ರೀಡೆಗೆಂದು
ಗಿಳಿಯ ಕೋಗಿಲೆಯ ಹಂಸೆಯ ನವಿಲ ಪಾರಿವದ
ಕೊಳನ ಪುಳಿನಸ್ಥಳದ ಕಮಲ ಕೈರವ ವಿವಿಧ
ಫಳವೀವ ತರುಗಳ ಲತಾಗೃಹದ ಕೇಳೀವನಕೆ ಪೋದೆನವಧರಿಪುದು೫೦

ಅತಿರಮ್ಯವೆನಿಪ ವನದೊಳು ವಿಶ್ವಕರ್ಮ ನಿ
ರ್ಮಿತವಪ್ಪ ಕೃತಕ ಕಮಲಂ ಕೃತಕ ಕೈರವಂ
ಕೃತಕ ಜಲಚರ ಕೃತಕ ಹಂಸ ಕೋಕಂಗಳಂತಸ್ಥವಂ ಕಂಡಱಿವಡೆ
ಚತುರವದನಂಗಾಗದೆನಿಸುವ ಸರೋವರ
ಪ್ರತತಿಯೊಳಗೊಂದನೆನ್ನನುವಱಿಯಲೆಂದು ಧನ
ಪತಿ ಹೊಗಿಸಲಾನಱಿಯದದಱೊಳೆನ್ನಬಳೆವೆರಸಂಬು ಕೇಳಿಕೊಳಿರ್ದೆನು      ೫೧

ಉದಕದೊಳು ಹೊಳೆವ ಜಂತ್ರದ ಮೀನ ಕಂಡೆನ್ನ
ಸುದತಿ ಹೆದಱಿದಡಱಿಯದಾನೆಯ್ದಿ ಹೊಡೆದಡಂ
ತದಱ ಕೀಲ್ತಪ್ಪಿ ಗಗನಕ್ಕೆ ನೆಗೆದಾ ವನಪ್ರಾಂತದೊಳು ತಪದೊಳಿರ್ದ
ಸದಮಳ ಯತೀಂದ್ರನೆಂದೆನಿಪ ಕಪಿಲವ್ರತಿಪ
ನೆದೆಯ ಮೇಲಡಸಿ ಬೀಳಲು ಕಂಡು ಮುನಿದು ಕೋ
ಪದಲಿ ಶಾಪವನಿತ್ತನಯ್ಯ ಸಗರರ ಹಣೆಯ ಲಿಪಿಯನೊರಸಿದ ವೀರನು        ೫೨

ಹೆದಱದಿದನೆನ್ನೆದೆಯ ಮೇಲಾವನಿಟ್ಟನವ
ನೆದೆಯ ಮೇಲಿದು ಹತ್ತಲಿದಱ ದುರ್ಗಂಧವಂ
ಗದಲಿದಱ ಹೊಲಸು ತೀಡುತ್ತಿರಲಿಯೆಂದು ಶಾಪವನಿತ್ತನತ್ತಲಿತ್ತ
ಮುದದಿಂ ಜಲಕ್ರೀಡೆಯೊಳು ಪರಿಮಳ ಪ್ರವಾ
ಹದೊಳಿರ್ದ ಪರಿಜನಂ ಹೇಸೆ ದುರ್ಗಂಧವೆ
ನ್ನೆದೆಯ ಮೇಲಿಂದೇಳೆ ಕಂಡು ನಾಚುತ್ತ ಹೊಱವಂಟೆನಾನಾ ವನವನು         ೫೩

ಆ ಶಫರವೆತ್ತ ಹೋದತ್ತಲಾಂ ಹೋಹಾಗ
ಳಾಸುರದೊಳೆದ್ದ ದುರ್ಗಂಧಕ್ಕೆ ಮುನಿವರಂ
ಹೇಸುತೇನೋ ಮೀನ ನೀನಿಡಿಕಿದಾ ಎಂದಡಿಡಿಕಿದೆಂ ವಿಭುವೆಯೆಂದು
ಈ ಶಾಪವಿನ್ನೆಂದು ಹಿಂಗುವುದು ಕರುಣಿಸು ಮು
ನೀಶಯೆಂದೆನಲಷ್ಟಷಷ್ಟಿ ತೀರ್ಥವನು ಮಿಂ
ದಾ ಸರ್ವಲಿಂಗಂಗಳಂ ಕಂಡ ದಿನದೊಳು ವಿಶಾಪಮಾದಪುದೆಂದನು೫೪

ನಡೆದಷ್ಟಷಷ್ಟಿ ತೀರ್ಥಕ್ಷೇತ್ರ ಲಿಂಗಂಗ
ಳೆಡೆಗೆ ಪೋದಪೆನೆಂದಡೊಂದು ಲಂಕಾಪುರದ
ಕಡೆಯೊಳೊಂದಾಕಾಶದೊಳಗೊಂದು ಪಾತಾಳ ಕೆಲವು ಲಕ್ಷಸ್ಥಳದಲಿ
ಬಡವ ನಾನೆಂತು ಕಾಂಬೆಂ ತಂದೆ ನಿನ್ನನಱಿ
ದಿಡಿಕಿದೆನೆ ನಿನಗೆನ್ನ ಮೇಲಿನಿತು ಮುನಿಸೇಕೆ
ಮೃಡಮೂರ್ತಿಯೆಂದು ಕಾರ್ಪಣ್ಯದಿಂ ಕೈಮುಗಿದೆನಯ್ಯ ಚಿತ್ತೈಸೆಂದನು      ೫೫

ಧರೆಯೊಳುಳ್ಳಾ ಕ್ಷೇತ್ರತೀರ್ಥಲಿಂಗವನೆಯ್ದೆ
ನೆರಪಿದಂ ತನ್ನ ಸೊನ್ನಲಿಗೆಯೊಳು ಲೋಕೈಕ
ಗುರು ಸಿದ್ಧರಾಮನಲ್ಲಿಗೆ ಹೋಗಿ ತೀರ್ಥಮಂ ಮಿಂದು ಲಿಂಗವನು ಕಂಡು
ಪುರವ ಬಲಗೊಂಡು ಹೊಲಸಂ ನೀಗು ಹೋಗೆನಲು
ಹರಿದುಬಂದಾ ಪರಿಯ ಮಾಡೆ ನಿಜವಾಯ್ತೆಲೇ
ನರರೂಪ ರುದ್ರ ಎಂದಡಿಗೆಱಗಿ ಬೀಳ್ಕೊಂಡು ಹೋದನಾ ಗಂಧರ್ವನು         ೫೬

ಬೆಸಗೆಯ್ದು ವಂದಿಸಿದ ಕಂಡು ಪೆಸರ್ಗೊಂಡು ಕೇ
ಳ್ದ ಸಮಸ್ತ ನರರ ನರಕವನಳಿಯುತಪ್ರತಿಮ
ನಸಮಾಕ್ಷ ಸಿದ್ಧನಾನಂದದಿಂದಿರಲಿತ್ತಲತ್ತ ರಜತಾಚಲದಲಿ
ಶಶಿಕಲಾಮಂಡಿತ ಜಟಾಪಟಲನಖಿಲ ದೇ
ವ ಸಮೂಹವೆರಸೋಲಗಂಗೊಟ್ಟು ಬಹಳ ಸಂ
ತಸದೊಳಿರಲಲ್ಲಿಗೆಯ್ತರುತಿರ್ದನನಿಮಿತ್ತ ಕಲಹ ಕಾರಣರೂಪನು  ೫೭

ತನ್ನೊಡಲಲಿಪ್ಪ ಸರ್ವೇಂದ್ರಿಯಂ ಪರರಯು
ದ್ಧಂ ನಿಮಿತ್ತಕ್ಕಲ್ಲದಿಂತು ಚೇಷ್ಟಿಸದ ಮಹಿ
ಮಂ ನಡೆದು ಸೊಡರಂತೆ ಹೊಱವೇಷಮುಂ ದೋಷಮುಂ ಮೆಱಿವ ನಾರದಮುನಿ
ಪನ್ನಗಾಭಾರಣನಾಸ್ಥಾನಕ್ಕೆ ಬಂದು ತನು
ವಂ ನೀಡಿ ಮೆಯ್ಯಿಕ್ಕೆ ಕಂಡು ಹತ್ತಿರ ಕರೆದು
ಮನ್ನಿಸಿ ಮಹತ್ವದಿಂದೆಲ್ಲಿರ್ದು ಬಂದೆಯೆಂದಡೆ ಬಳಿಕ್ಕಿಂತೆಂದನು  ೫೮

ಗಿರಜೇಶ ಕೇಳೀಗಳುತ್ತಾರಕವ್ರತೀ
ಶ್ವರನ ಸಭೆಯೊಳು ನಿಮ್ಮ ಭಾಳಾಕ್ಷ ಮನ್ಮಥನ
ನುರುಪಿನ ಕಥಾಚಿತ್ರಮಂ ನಿರೂಪಿಸುತಿರಲು ಕೇಳ್ದು ಸೈರಿಸಲಾಱದೆ
ಸ್ಮರಕಳಾ ತಾಪಸಂ ನೀಲಪಟನೆಂಬವಂ
ಹರಿದು ಬಂದೆಮ್ಮ ರತಿನಾಥನಂ ಶೂಲಿ ಸಂ
ಹರಿಸಿದನೆನಿಪ್ಪ ನುಡಿ ಹುಸಿಯೆಂದು ಬವರಮಂ ಪಿಡಿದು ಬಳಿಕೆಂತೆದನು       ೫೯

ಕೊಸರಿ ನೀ ಹೊಗಳ್ವ ಹರನುಂ ಕೇಳುವೀ ಮುನಿ
ಪ್ರಸರಮುಂ ಕಡೆಗೆಮ್ಮ ಕಾಮಭೂಪನ ಕೆಯ್ಯ
ಕುಸುಮಬಾಣದ ಮೊನೆಗೆ ಹಾಹೆಯಹರೆಂದೊಡಿನ್ನುಳಿದ ಬಡ ದರ್ಶನರನು
ಹೆಸರಿಸದಿರೆಂದು ಧಟ್ಟಿಸುವುದಂ ಕೇಳ್ದು ಕೋ
ಪಿಸಿ ನಿಮಗೆ ದೂಱಬಂದೆಂ ಕಾಲಮಥನಯೆನೆ
ನಸುನಗುತ್ತಾಗಳಾ ಸಭೆಗೆಯವನಂ ಕರಸಿದನು ಮದನಗಿರಿಕುಲಿಶನು೬೦

ಹೊತ್ತ ಮದನನ ವೇಷವವಯವದೊಳತಿ ಚೆಲುವು
ವೆತ್ತ ರತಿಕಲಹ ಚಿಹ್ನಂ ಹಸಿಯ ಹರೆಯ ಕೈ
ತತ್ತಿಕ್ಕಿದೆಡದ ಕೋಮಳೆವೆರಸಿ ಬಂದು ವಂದಿಸಿ ನಿಂದು ನೀಲಪಟನು
ಚಿತ್ತಭವ ಗತಿಯೆನುತ ಕುಳ್ಳಿರಲು ಸಕಲದೇ
ವೋತ್ತಮಂ ಕಂಡಿದೇನೆಲವೊ ಕಾಮನನು ಉರು
ಹಿತ್ತು ಹುಸಿಯೆಂದು ಮುನಿಗಳಿಗೆಂದ ಕಂಡ ನೀನೆಂದು ಮೆಲ್ಲನೆ ನುಡಿದನು    ೬೧

ಅರೆವೆಣ್ಣನೀಶ ಪುತ್ರೀವರಂ ಬ್ರಹ್ಮನಾ
ಸುರದ ಜಾರಂ ಶಕ್ರ ಸತಿಯರೀರೆಂಟು ಸಾ
ಸಿರದ ಹರಳಿಗನು ಹರಿ ಮನು ಮುನಿಗಳಳುಪುತಿಹರಂತಾಗಲಂಗಜನನು
ಗಿರೀಶ ನೀನಾವ ಪರಿಯಿಂ ಸುಟ್ಟೆ ಬೆಂದವನು
ಮರಳಿ ಸರಳಿಂ ಜಗವನಾಡಿಸುವನೇ ಎಂದ
ಡುರಿದುದಿಲ್ಲಾದೊಡಾವೆಡೆಯೊಲಿರ್ದಪನವನ ಕರೆದೀಗ ತೋಱೆಂದನು      ೬೨

ಇನ್ನು ಹೊಱಗಱಿಸಿ ಕರೆತರಲೇಕೆ ಕರೆಯೆಂಬ
ನಿನ್ನ ಮನ ಮೊದಲಾಗಿ ಸರ್ವ ಜೀವರೊಳಿಪ್ಪ
ನೆನ್ನೊಡೆಯನವನನನ್ಯರ್ ಕರೆಯಲಱಿಯರೀಶ್ವರ ನೀನೆ ಕರೆವುದೆನಲು
ಉನ್ನತ ಸ್ವಾತಂತ್ರನಖಿಳ ಚಿತ್ತಜನನೊಲ
ವಿಂ ನೆನೆದು ಕರೆಯೆ ಮೋಹನಗುಣಂ ತಂಪು ಕಂ
ಪಂ ನೆಮ್ಮಿ ಮುಂದೆ ಬಂದೋಲಗವನಾಲಿಂಗಿಸಿತ್ತು ಬಳಿಕೇವೊಗಳ್ವೆನು         ೬೩

ನಳಿನ ಗುಣದಂಬರದ ಮಲ್ಲಗಂಟಾಮ್ರದೆಳ
ದಳಿರ ಕೈಪೊಡೆ ಪುಷ್ಪದುಡಿಗೆ ಮಕರಂದರಸ
ತಿಳಕ ಕೇತಕಿಯೆಸಳ ಕೂರಲಗು ದಾಸಣದ ಗೊಂಡೆಯಂ ನನೆಗಣೆಗಳಂ
ತಳೆದ ಸಂಪಗೆಯ ಬಿರಿಮುಗುಳ ಮೂಡಿಗೆ ತುಂಬಿ
ಗಳ ರವದ ನಾರಿ ಕಬ್ಬಿನ ಬಿಲ್ಲು ಕುಮುದ ಕು
ಟ್ಮಳದ ಕಿಂಕಿಣಿ ಕುಸುಮಮಂಜರಿಯ ತಲೆ ಚಮರವೆರಸಿ ಮನ್ಮಥನೆಸೆದನು    ೬೪

ಶಶಿ ಮೇಲೆ ಮಂದಮರುತಂ ಮುಂದೆ ರತಿಯೆಡದ
ದೆಸೆಯೊಳು ವಸಂತ ಬಲದೊಳು ಪಿಂತೆ ಸತಿಯಿರಿ
ಪ್ಪೆಸಕಮಂ ಸುಖದ ಸುಕಮಾರತೆಯ ಮಂಗಳಕೆ ಮನಸಂದು ಮುಳಿಸ ಮಱೆದು
ಕುಸುಮಶರ ನಿನ್ನ ಮೋಹನದ ಬೀಜದ ತಿರುಳ
ರಸವ ಬಲಿದೊಂದು ಹೆಣ್ಣಂ ಮಾಡಿ ಕೊಂಡೊಯ್ದು
ವಸುಧೆಯೊಳು ಸಿದ್ಧರಾಮನೊಳು ನೆರಪಿದೊಡೆಮ್ಮನೀಂ ಗೆಲಿದೆ ಹೋಗೆಂದನು         ೬೫

ಹಿಂದೆ ನಿಜಮಿಥುನವಹ ನಿಮ್ಮನೆಚ್ಚಡೆ ಕೋಪ
ದಿಂದುರುಪಿ ಕಳೆದೆ ಗಿರಿಸುತೆಯ ಕರುಣದಲ್ಲಿ ಹೆಸ
ರಿಂದುಳಿದೆನಿಂದಿನಾತಂ ಜಿತೇಂದ್ರಿಯನು ಬಾಲಬ್ರಹ್ಮಚಾರಿ ಪುರುಷಂ
ಒಂದುಳ್ಳ ಹೆಸರನೊರಸಿದಡೇಗುವೆಂ ತಂದೆ
ಯೆಂದಡಾತಂ ನಿನಗೆ ಮುಳಿವಾತನಲ್ಲ ಹೋ
ಗೆಂದು ಬೀಳ್ಕೊಡಲಂಗಸೂನು ತಿರುಗದ ಮುನ್ನ ಮುಂದೆ ಚೈತ್ರಂ ಪರಿದನು  ೬೬

ಹೊಸಮಾಗಿ ಮದವಾಱೆ ಮಾವಂಕುರಂದೋಱೆ
ಯಸುಗೆ ತಳಿರಂ ಬೀಱೆ ಲತೆ ನನೆಗಳಂ ಪೇಱಿ
ಕುಸುಮ ರಜಮಂ ತೂಱೆ ತುಂಬಿ ಸುತ್ತಂ ಪಾಱೆ ತಂಪಾಳಿ ತಂಪ ಬೀಱೆ
ಸಸಿಗೆ ಕಳೆಯೇಱೆ ಕೋಕಿಳರವಂ ಮೀಱೆ ಕಾ
ಮಶರಂಗಳೂಱೆ ವಿರಹಿಗಳ ಬಾಯಾಱೆ ಮಾ
ಮಸಕದಿಂ ಬಂದನು ವಸಂತನು ವಿಯೋಗಿ ಹೃತ್ಕುಂತನು ಸುಖಾಶ್ರಾಂತನು    ೬೭

ಉದಯಕಾಲದೊಳನುದಿನಂ ಬಪ್ಪ ತೆಱದಿ ಪು
ಷ್ಪದ ರತಿಯಲಾ ಸಿದ್ಧಕುಲ ತಿಲಕನೆಯ್ತಂದು
ಮುದದಿಂದ ನೋಳ್ಪಾಗ ನಿಜದೊಳೊಪ್ಪುವ ನಂದನಂ ಮೇಲೆ ಮಧುಮಾಸದ
ಮದವೇಱಿ ನಳನಳಿಸುತೆಂದಿನೋಪಾದಿಯ
ಲ್ಲದೆ ಕಣ್ಗೆ ಮಂಗಳಂಬೆತ್ತು ಜೌವನವಡರ್ದ
ಸುದತಿ ಮತ್ತೊಂದಂದವಾಗಿ ಮೋಹಿಸುವಂತೆ ಮೋಹನಂಬೆತ್ತಿರ್ದುದು        ೬೮

ಪರಮ ಮಂಗಳವಾಗಿ ಏಕಾಂತತರ ಮನೋ
ಹರವಾಗಿ ಮೆಱೆಯುತಿರೆ ಕಂಡಿದಱೊಳಾನೆನ್ನ
ಪುರುಷನೊಳು ಕೂಡಿ ಸುಖವಡೆವೆನೊಂದೊಸೆದು ಹೃತ್ಕಮಲದಲರ್ವಸೆಯ ಮೇಲೆ
ಉರುತರ ಜ್ಞಾನಪ್ರಭಾವದೀಪ್ತಿವೆಳಗಿನೊಳು
ನೆರೆವ ತವಕದ ಕಳಾಸುಖಮುಖದ ಪರವಶದ
ಪರಮಕಾಷ್ಠಯೊಳಚಲ ಸಿದ್ಧನಿರೆ ಕಂಡು ರತಿವಲ್ಲಭಂ ಭುಜವೊಯ್ದನು    ೬೯

ರತಿಯ ಸೊಬಗಂ ತನ್ನ ಮೋಹನವ ಚಂದ್ರನು
ನ್ನತಕಳೆಗಳಂ ವನದ ಮಂಗಳವ ಮಂದಮಾ
ರುತನ ಸೊಗಸಂ ನನೆಗಣೆಯ ಕೂರ್ಪಮಂ ಕೂಡಿಕೊಂಡು ಮೂಜಗದೊಳುಳ್ಳ
ಸತಿಯರ ಶಿರೋರತ್ನವೆಂಬ ಪೆಸರಿನ ಪೆಣ್ಣ
ಚತುರು ಮಿಗೆ ಮಾಡಿತಂದಪ್ರತಿಮ ಶಿವಸಿದ್ಧ
ಪತಿಯ ಮುಂದಿರಿಸಿ ತಾಂ ಪಿಂತೆ ಬಿಲುವೊಯ್ದು ನಿಂದನುವಾದನಂಗಭವನು  ೭೦

ಬಳಸಿದಳಿ ಗಿಳಿ ಸೋಗೆ ಕೋಗಿಲೆಗಳುಲಿಯೆ ಪೂ
ಗಳ ಕಂಪು ಕವಿಯೆ ಮಂದಾನಿಲಂ ತೀಡೆ ಶಶಿ
ಕಳೆಗಳಂ ಬೀಱೆ ಸತಿ ಮೋಹನಂಬೆತ್ತು ನಿಲೆ ಮನುಮಂಥಂ ನನೆಗಣೆಯನು
ಸೆಳೆದು ತೆಗೆದೊಂದೊಂದಱಿಂದೆಚ್ಚಡವು ಸಮು
ಜ್ವಳ ತಪಃಪ್ರಭೆಯನೊತ್ತರಿಸಲಾಱದೆ ಬೀಳೆ
ಮುಳಿದೈದು ಕೋಲನೊಂದೇ ಬಾರಿ ತೊಟ್ಟು ಕುಸಿದೆಱಗಿ ಕುಕಿಲಿಱಿದೆಚ್ಚನು೭೧

ನನೆಯಂಬು ರತಿಯಿಲ್ಲದನ ಪೂಜೆಯಂತೆ ಹೊಱ
ಗನೆ ತಾಗೆ ಬಗೆ ಬೆದಱಿ ಕಣ್ದೆಱಿದು ಮುಂದಿರ್ದ
ಘನಕುಚೆಯ ಪಿಂದಿರ್ದ ಕಾಮನಂ ಕಂಡು ಕೈಮುಗಿದು
ಮುನಿಯದೀ ಕಾಂತೆಗೇಕಾಂತಮಂ ಕೊಡು ವೈರಿ
ವನಜ ಶಶಿಯೆಂದಲ್ಲಿ ಲಲ್ಲೆಗರೆದಂ ಬಿಲ್ಲನೀಡಾಡಿ ಫುಲ್ಲಶರನು  ೭೨

ಸತಿಗೆ ಸತಿ ಸೋಲ್ತು ಕೂಡಿದ ಕಾಲಪುಂಟೆ ವಸು
ಮತಿಯೊಳೆನೆ ನಿನ್ನ ಸೋಲಿಸುವೆನೆಂದಂಬಿಕಾ
ಪತಿಗೆ ಭಾಷೆಯನಿತ್ತೆನೆನ್ನ ವಶವಲ್ಲ ನೀಂ ಕರುಣಿಸದೆ ಮೆಯ್ದೆಗೆದಡೆ
ಅತಿಭಂಗವೆನ್ನ ವೀರಕ್ಕೆ ಸಿದ್ಧೇಂದ್ರಯೆನೆ
ಧೃತಿಗುಂದಬೇಡ ನಿನ್ನೂಳಿಗವನಂಬಿಕಾ
ಪತಿಯನೈದಿಸುವೆನೆನುತಾತನಂ ಕಳುಪಿಗುರು ವಚನಮಂ ಹಾಡುತಿರಲು       ೭೩

ದೇವರಂ ಕೈವೀಸಲವರಿವರುಯೆಂಬ ಬಗೆ
ಯಾವುದುಂ ನಿನಗಿಲ್ಲ ನೆಲೆಗೊಳಲ್ಕೀಯದಂ
ತೋವೊ ಮೊನೆಗೊಳಿಸುವೆಯೊ ಸರ್ವಜನಮಂ ನಿನ್ನ ಹೂಗೋಲ ಹೂಡಿ ತೆಗೆದು
ಭಾವಜಾಂತಕಗೆ ನೆಟ್ಟನೆ ಕೊಟ್ಟ ಭಾಷೆಯೊಳ್
ಕಾವನು ಕಪಿಲಸಿದ್ಧಮಲ್ಲಯ್ಯ ಮನನೋಡ
ಲಾವನ ನೆಸೆಯ ಹೇಳಿದರವನನೆಸುವೆ ನಿನ್ನ ಮೇಲೆ ತಪ್ಪೇನೆಂದನು  ೭೪

ಹಿರಿದೆನಿಪ ಘೋರ ಸಂಸಾರದಾರಣ್ಯದೊಳು
ಹರವರಿಯ ಕಾಮನೆಂದೆಂಬ ಬೇಂಟೆಯ ಬೇಡ
ನುರವಣೆಯನನ್ಯಾಯ ಮಾಣಿಸೈ ಎಂಬ ಗೀತವ ಹಾಡಿ ಸುಖದೊಳಿರಲು
ಪುರದೊಳೆಡೆಗೆಯ್ದ ಮೊರಬದವಿಪ್ರ ಸಂಕುಳಂ
ನೆರೆದು ಬಂದೀ ಕೆಱೆಗೆ ಸಂಸ್ಕಾರ ಜಲಶುದ್ಧಿ
ದೊರಕದು ಚತುರ್ಥನಿದನಗೆದಾತನಿಂದಿನ ಸ್ನಾನವಿಧಿಗೆಂತೆಂದರು    ೭೫

ಅದಱೊಳೊಬ್ಬಂ ನಿಮ್ಮ ವಚನದಿಂ ಶುದ್ಧವಾ
ಗದದಾವುದಭಿಮಂತ್ರಿಸಿ ಸ್ನಾನಮಾಳ್ಪೆವೆನ
ಲಿದು ಮಂತ್ರವೆಂದು ಹೊಕ್ಕರು ಕೆಱೆಯನತಿ ಪುಣ್ಯತೀರ್ಥ ನದಿನದ ಸಂಕುಳಂ
ಅದಿದೆನ್ನದಾರ್ತದಿಂ ನಡೆದು ಬಂದಿಲ್ಲಿ ನೆಲ
ಸಿದ ಹದನನಱಿಯದಕಟಕಟ ತಾವಭಿಮಂತ್ರಿ
ಸಿದರಂದು ಬೂದಿಯಿಂದಾದಿತ್ಯ ಬಿಂಬಮಂ ಬೆಳಗಲೆಳಸುವ ತೆರದೊಳು        ೭೬

ಸ್ನಾನಪಾನಕ್ಕಿನ್ನನುಜ್ಞೆಯ ಅನುಜ್ಞೆಯೆಂ
ದಾ ನೆರವಿ ಮುಳುಗಿ ನಿಂದಿರದ ಮುನ್ನಂ ಕಾಗೆ
ತಾನೊಂದು ಬಂದೆಲ್ಲರಂ ಮುಟ್ಟಿ ಮುಟ್ಟಿ ಮುಳುಗಾಡಿಸಿತ್ತುದಯ ತೊಡಗಿ
ಭಾನು ಮುಳುಗಲು ಬಿಡದೆ ಕಾಡುತಿರೆ ಕಂಡವರಿ
ದೇನೀ ಮಹಾತೀರ್ಥನಿಂದೆಯಿಂದಲ್ಲಲೇ
ಈ ನಿಘ್ರವಾತನಂ ಬಲಗೊಂಬವೆಂದು ಸಿದ್ಧೇಂದ್ರನೆಡೆಗೆಯ್ತಂದರು  ೭೭

ಬರವಿಂಗೆ ಮುಂದೆ ಕಾಗೆಯ ಕಥನಮಂ ಹೇಳು
ತಿರೆ ಕಂಡು ನಮಿಸೆ ನೀವೆ ಬ್ರಾಹ್ಮಣರು ನಾವು ನಿ
ಷ್ಠುರ ಶೂದ್ರರೆಮಗೇಕೆ ವಂದಿಸುವಿರೆಂದಡಖಿಳಾಗಮೋಕ್ತ ಬ್ರಹ್ಮಮಂ
ಚರಿಸುತಿಹ ನೀವಲ್ಲದಾವೇತಱ ಬ್ರಹ್ಮ
ರರಿವಿಜಯಯೆಂದ ವಿಪ್ರರ ಮನದ ಶಂಕೆಯಂ
ಪರಿಹರಿಸಿ ಬಳಿಕೆಂದಿನಂದದಿಂ ಕ್ಷೇತ್ರಮಂ ಬಲವರುತ್ತಿಪ್ಪಾಗಳು      ೭೮