ರಾಗ : ಮಾಳವ ಗೌಳ  ತಾಳ : ಝುಂಪೆ

ಪಲ್ಲವ ||           ಗಿರಿಜೆ ನಡಸುವ ಯೋಗ ಮಜ್ಜನದ ಚೌಕಮಂ
ಪುರದೊಳಗೆ ಮಲ್ಲಿನಾಥಂಗೆ ನೇಮದಿ ನಡಸಿ
ಹರನಿಂ ವಿಷಪ್ರಸಾದವ ಮಾಡಿ ಎಕ್ಕವಿಂಡಿಗೆ ಕೊಟ್ಟ ಸಿದ್ಧೇಂದ್ರನು ||

ಒತ್ತರಿಸಿ ತವಕ ತನುವೆತ್ತಂದದಿಂ ವ್ಯಗ್ರಿ
ಸುತ್ತಂದು ನಂದಿ ನಡೆತಂದು ವಂದಿಸಿ ನಿಂದು
ಚಿತ್ತೈಸು ದೇವ ದೇವರು ನಿಮ್ಮ ಬಂದುದೇ ಹೊತ್ತಾಗಿ ಬರಹೇಳ್ದರು
ಮತ್ತೆಣಿಸದೇಳಬೇಕೆಂದು ಕೈನೀಡೆ ಮನ
ವಿತ್ತು ಲಿಂಗಕ್ಕೆಱಗಿ ಹಿಂದ ಸಂತೈಸಿ ಸಿ
ದ್ಧೋತ್ತಮಂ ಗಗನಕ್ಕೆ ನೆಗೆದು ರಜತಾಚಳಕೆ ಹೋದನಿಳೆ ಬೆಱಗಾಗಲು        ೧

ಸಂತಸದಿ ಬಪ್ಪಾಗಳೋಲಗಂ ಪರೆದು ತ
ನ್ನಂತರಂಗದೊಳಿರ್ದ ಸಕಲ ಲೋಕಂಗಳಂ
ಸಂತೈಸುತಿರ್ದಪನೊ ಬರ್ಪ ಸಿದ್ಧೇಶ್ವರನನಾವಾವ ಕೌತುಕದಲಿ
ಮುಂತೆ ಮೆಱೆವೆನೊ ಎಂದು ನೆನೆಯುತಿರ್ದಪನೋ ಮ
ಹಾಂತರ ಸಮಾಧಿಯಂ ಸವಿದಪನೊ ಕಡೆಗೆ ತ
ನ್ನಂ ತಾನೆ ನೋಡಿದಪನೋ ಎನಿಸಿ ಪರಮನೇಕಾಂತ ಸುಖದಿಂದಿರ್ದನು        ೨

ಕೆಲವು ಬಾಗಿಲುಗಳಂ ಕಳಿದು ಬರೆ ಮುಂದುಲಿವ
ಹಲವು ವಾದ್ಯದ ತಳಿತ ಝಲ್ಲರಿಯ ಪಲ್ಲವದ
ಲಲನೆಯರ ಕಳಸ ಕನ್ನಡಿಯ ದೆಸೆದೆಸೆಯ ಕೇಳಿಕೆಯ ಕನಕದ ಚೌಕದ
ಒಳಗೆ ನಳನಳಿಸುವೆಳದಳಿರ ಮುಕುರದ ಹೊನ್ನ
ಕಳಸಂಗಳಂ ತಳೆದ ರುದ್ರಕನ್ನಿಕೆಯರಿ
ಟ್ಟಳದ ಗೋಟುಗಳ ಸೀಗುರು ಚಮರ ರಚನೆಗಳು ಕಣ್ಗೆ ಮಂಗಳವಾದುದು  ೩

ಇಂಬಿನಿಂದಾ ಚೌಕ ಮೆಱೆಯುತಿರೆ ಕಂಡು ಜಗ
ದಂಬಿಕೆ ಪತಿವ್ರತಾನಿಧಿ ದಶಾಮೃತರಸ ಕ
ದಂಬ ಪೂರಿತ ಕಲಶ ನಾಲ್ಕನತಿ ಮುದದೊಳಾಕಾಶ ಗಂಗಾಜಲವನು
ತುಂಬಿರ್ದ ಕಳಸ ಹದಿಮೂಱನೊಳಗಿಟ್ಟು ಕನ
ಕಾಂಬುಜದ ಪೀಲಿ ವಿಲಸಿತ ತಮಂಧದ ಕಳಸ
ವೆಂಬುದೊಂದಂ ತಂದು ತಾನಿಳಿಪಿಕೊಂಡಿರಿಸಿ ಬೇಱೆ ಬೇಱರ್ಚಿಸಿದಳು          ೪

ಅತ್ಯಂತ ನಿತ್ಯದ ನಿಧಾನಕ್ಕೆ ನೆಱೆ ಸತ್ಯ
ಮುತ್ತೈದೆ ಯೋಗಮಜ್ಜನವನೊದಗಿಸಿ ಸುತ್ತಿ
ಮುತ್ತಿ ಪೂಜಿಸಿ ರಾಜಿಸಲ್ ತಣಿದು ಕಣ್ದೆಱೆದು ಕಂಡು ಸಿದ್ಧೇಶ್ವರನನು
ಎತ್ತಿ ಬಿಗಿದಪ್ಪಿ ತಲೆದಡಹಿ ತೂಪಿಱಿದೆನ್ನ
ತೆತ್ತಿಗನೆ ಸುಖದೊಳಿರ್ದಾ ಎಂದು ನಾಗಾಜಿ
ನೋತ್ತರೀಯಂ ಕೇಳ್ದಡಿರ್ದೆನೆನ್ನಂ ಬರಿಸಿತಕ್ಕೆ ಬೆಸನೇನೆಂದನು       ೫

ಇಂದಿನೀ ಯೋಗಮಜ್ಜನದಂತೆ ನೀ ಮನಂ
ದಂದನುದಿನಂ ಮಲ್ಲಿನಾಥಂಗೆ ಮಾಡಬೇ
ಕೆಂದು ತೋಱಲ್ ಕರಸಿದೆಂ ನಿನ್ನನಾನೆಂದು ಗಿರಿಜಾತೆ ತೊಡೆಗೆ ತೆಗೆದು
ಕಂದ ಕುಂದದೆ ನಡಸು ತಪ್ಪದಿದು ನಡೆಯುತಿರ
ಲೆಂದುವುಂ ಪುರಕೆ ಕೇಡಿಲ್ಲ ಕಂಡವರೆನ್ನ
ಮಂದಿರಕೆ ಬಹರೆಂದಡಿಂತಿದಂ ಮಾಳ್ಪ ಪರಿಯೆಂತೆಂದು ಬೆಸಗೊಂಡನು        ೬

ಕ್ಷೀರ ದಧಿ ಮಧು ಘೃತಂ ಸಿತ ನಾಗರಂ ಮರಿಚ
ಜೀರಕಂ ಲವಣವೆಲ್ಲಾ ದಶಾಮೃತಸಾರ
ಪೂರ ಕಳಸಂ ನಾಲ್ಕು ಕನಕ ಪುಷ್ಪಾನ್ವಿತ ತಮಂಧ ಕಳಸಂ ಪೀಲಿಯಿಂ
ಬಾರಗೆಯ್ದೊಂದಗ್ರ ಜಲಭರಿತಮಾಗೆ ಮಂ
ದಾರ ಮಂಜರಿವಿಡಿದ ಹದಿಮೂಱು ಕಳಸವಿಂ
ತೀರೊಂಬತಿನಉಳಿದ ವಿಭವವೀ ಪರಿಯಿಂದ ನೇಮದಿಂ ನಡಸೆಂದಳು           ೭

ಅಡಿಗಡಿಗೆ ಕೈಲಾಸಕೈತಂದು ಬೇಹುದಂ
ನುಡಿದು ಹೇಳುತ್ತ ಬಾಯೆಂದು ತೂಪಿಱಿದು ತಲೆ
ದಡವಿ ತಮ್ಮಿಬ್ಬರುಂ ಬೀಳ್ಕೊಡಲು ನಡೆತಂದು ತನ್ನ ಸೊನ್ನಲಿಗೆಯೊಳಗೆ
ಪೊಡವಿಗೆ ವಿಚಿತ್ರಮೆನೆ ಚೌಕಮಂ ಮೆಱೆಸಿಯಾ
ಕಡೆಗದಂತಿಂತೆಂದು ಪೊಗಳ್ವ ಬಡಕವಿಗಿವಿಯ
ನುಡಿ ಕೊಳ್ಳದೆಂದೆನಿಸಿ ಯೋಗಮಜ್ಜನವ ನಡಸುತ್ತಿರ್ದನಪ್ರತಿಮನು           ೮

ಇರುಳೊಂದು ದಿನವೆಂದಿನಂದದಿಂ ಬಲವರು
ತ್ತಿರೆ ಮುಂದೆ ಮೇರು ಗಜವದನರೂಪಿನಲಿ ಬಂ
ದಿರದಲೇ ಎಂಬಂತೆ ಗಗನವಂ ಬಗಿದು ನೆಗೆದೊಗೆವ ನವ್ಯಾಕೃತಿಯಲಿ
ನೆರೆಯ ಸೆಳ್ಳಿಗೆಯ ಬೊಬ್ಬುಲಿಯ ಬೆನಕಂ ನಿನ್ನ
ಪುರದೊಳಿರಲೆನಗೊಂದು ಠಾವ ಕೊಡು ಲೋಕೈಕ
ಗುರುವೆಯೆನೆ ನಿನ್ನನೊಳಕೊಂಬ ಠಾವಾವುದೆನೆ ಕಿಱಿಯ ರೂಪಂ ತಳೆದನು    ೯

ಇನ್ನು ನೀನಿರೆ ಠಾವ ನಿನಗಿತ್ತಡಿಂದೆಮಗೆ
ನಿನ್ನ ದೆಸೆಯಿಂದಪ್ಪುದೇನೆಂದಡೀ ಪುರ
ಕ್ಕನ್ಯಾಯಗಳನೆಡರು ಬಡತನವನೊದವಿಸದೆ ಎಕ್ಕವಿಂಡಭಿಮತವನು
ಉನ್ನತಿಕೆಯಿಂದೀವೆನೆನಲೆಮ್ಮ ಬೆನಕನಂ
ತನ್ನೂರ್ಗೆ ಕೊಂಡೊಯ್ದನೆಂದು ಬಂದವರೊಯ್ಯೆ
ಬನ್ನವಲ್ಲಾ ಎನಲವರ್ಗೆ ಹೋಹಾತನಲ್ಲೊಯ್ದಿರಿಸು ಸಾಕೆಂದನು            ೧೦

ಇದು ಸತ್ಯವಾದೊಡೇಳ್ ಬಾಯೆಂದು ನುಡಿದು ಕರೆ
ಯದ ಮುನ್ನ ಕೈವೊಕ್ಕ ಗಜಮುಖನನೊಯ್ದು ನೇ
ಹದಿ ಮಲ್ಲಿಕಾರ್ಜುನನ ಕೆಲದಱೆಯೊಳಿಳುಹೆ ಪುರಜನಕಿತ್ತ ಬೆನಕನಾಗೆ
ಮುದದೊಳೈದಾಱು ದಿನವಿರೆ ಕಂಡು ಸೆಳ್ಳಿಗೆಯ
ಕದನಿಗರು ಬಂದು ಬೇಡಿದೊಡೆ ಕೊಂಡೊಯ್ಯ ಹೇ
ಳಿದಡೆತ್ತುಗಳ ಕಟ್ಟಿ ತೆಗೆಯೆ ಗಿರಿಯಂದದಿಂ ಮಿಡುಕದಿರ್ದಂ ಬೆನಕನು           ೧೧

ಆವ ತೆಱದಿಂ ತೆಗೆದೊಡಂ ಬಾರದಿರೆ ಕಂಡು
ಹೇವರಿಸಿ ಸೆಳ್ಳಿಗೆಯ ವಿಭುಗಳೀ ಸಿದ್ಧನಂ
ನಾವು ಸೋಲಿಸಲಾಱದಿರ್ದಡೇನನ್ಯ ಶಕ್ತಿ ಪರಾಕ್ರಮಂ ಸಲುವುದು
ಬೋವರ್ಕಳಿಂದಿವರ ಮದವ ಮುಱಿಸುವೆವೆಂದು
ಆವೂರ ನೆರೆಹೊರೆಯ ಕಬ್ಬಿಲರನೊಡಗೂಡಿ
ನೀವು ನಿಮಗುಳ್ಳ ಲಿಂಗಪ್ರಸಾದವ ಬೇಡಿಯೆಂದು ಕಳುಹಿದರಧಮರು          ೧೨

ಕತ್ತಲೆಯ ತತ್ತಿಗಳ ಮೊತ್ತವೆನೆ ನೆರೆದೈದಿ
ಚಿತ್ತೈಸು ಲಿಂಗಪ್ರಸಾದವೆಮಗುಳ್ಳುದದ
ನೊತ್ತರಿಸಿ ತೇಜದಿಂ ಕೊಳ್ಳದಿನ್ನಾದೊಡಂ ಕೊಡಬೇಕು ದೇವಯೆನಲು
ಮತ್ತೆನಿಸದೀಯಬೇಕೇ ಬೇಕು ಬೇಹಡೀ
ಹೊತ್ತೇಕೆ ನಾಳೆ ಮಧ್ಯಾಹ್ನಕಿತ್ತಪೆನು ಕೈ
ಗುತ್ತಿಕೊಂಡುಂಡಾರು ಜೀವಿಸಿದವರ್ ಕೊಂಬುದೆಂದು ಕಳುಹಿದನವರನು      ೧೩

ಕಾಳಕೂಟಂ ವತ್ಸನಾಭಿಯಂ ಸಿಂಗಿಯಂ
ಹಾಲಾಹಲಂಗಳಂ ಕಬ್ಬುನದ ಕೋವಿಯೊಳು
ಮೇಳವಿಸಿ ಕಡುಗಾಸೆ ಕುದಿದು ಕಿಡಿಗುಟ್ಟಿ ಕೆಂಗಲಿಸಿ ಭುಗಿಲಿಡುವ ವಿಷವ
ಕೇಳಬಹುದೇ ಹೊಗಳ್ದ ಬಾಯುಳಿಯದೆನಲದಂ
ನೀಲಕಂಠಂಗೆ ಫಣಿಭೂಷಂಗೆ ರುದ್ರಂಗೆ
ಭಾಳನಯನಂಗೆ ಪೂಜಾವಸಾನದೊಳರ್ಪಿಸಿದನಿಳಾ ಮದನಹರನು   ೧೪

ತಂದು ಹೊಱಗಿಟ್ಟು ಕಬ್ಬಿಲರ ಕೈವಿಡಿದು ನೀ
ವೆಂದ ಪ್ರಾಸದವಿದೆ ಕೊಳ್ಳಿಯೆನಲವರು ಮ
ತ್ತೊಂದೆಂದು ಬಗೆದು ಬಾಯಂ ತೆಗೆಯೆ ಭುಗಿಲಿಡುವ ರೌದ್ರತೆಗೆ ಬಳಸಿ ಕವಿದು
ಮುಂದುಗೆಡಿಸುವ ಸೊಗಡ ಸೋಂಕಿಂಗೆ ಕರ್ಬೊಗೆಯೊ
ಳೊಂದಿದಿಡಿಗಪ್ಪಿಂಗೆ ಹೆದಱಿ ನಾವಮ್ಮೆವಿದ
ನಿಂದು ನೀವುಂಡೊಡೆಯರಾಗಿ ಪ್ರಸಾದದಾಸೆಯನೊಲ್ಲೆವಾವೆಂದರು           ೧೫

ಬಿಟ್ಟಿರಾ ಬಿಟ್ಟೆವಳುಪಿಲ್ಲವೇ ಇಲ್ಲೆನಲು
ಬಟ್ಟಲಿಂ ಮೊಗೆಮೊಗೆದು ಗುಡ್ಡರ್ಗೆ ಗುಡ್ಡರಿಂ
ಹುಟ್ಟಿದಬಳರ್ಗೆಯ್ದೆ ಕರೆದು ಕರೆದೆಱೆದನಂದಕ್ಲೇಶನವ್ಯಗ್ರನು
ನೆಟ್ಟನುಗ್ರಂ ತಾನೆ ಗರಳವಂ ಕೊರಳ ಹೊಱ
ಗಿಟ್ಟುಕೊಂಡಾ ಹೆಮ್ಮೆ ಬಿಮ್ಮುಗೆಡುತಿರೆ ಹಡೆದು
ಕೊಟ್ಟನೊಸೆದೆಕ್ಕವಿಂಡಿಂಗೆ ಪ್ರಸಾದಮಂ ಶಶಿ ರವಿಗಳಿರುವ ತನಕ    ೧೬

ನಿತ್ಯಪೂಜೆಯನು ಮಲ್ಲಯ್ಯಂಗೆ ಮಾಡಿ ನೋ
ಡುತ್ತ ತೋಟವನು ಕೆಱೆಯನು ಜಾವಗುತ್ತಗೆಯ
ನಿತ್ತು ತಾಂ ಹರುಷದಿಂ ಕವಿಲೆಗಳ ಕಱುವ ನೋಡುತ್ತ ಸತ್ರದ ಬೋನದಿಂ
ಭೃತ್ಯರಂ ಬಿಡದೆ ಚೌಕದ ಯೋಗಮಜ್ಜನದಿ
ಸತ್ಯಸನ್ನಿಹಿತಂಗೆ ಮಹಬೋನವೆತ್ತಿ ನಡು
ಗತ್ತಲೆಯೊಳಾ ಕ್ಷೇತ್ರಮಂ ಬಲವರುತ್ತ ಸಿದ್ಧೇಂದ್ರನೆಯ್ತಪ್ಪಾಗಳು೧೭

ತೋರಗಿವಿ ಕೆಂಗಣ್ಣು ಬಿಡುವಾಯಿ ನಿಡುದಾಡೆ
ಸೀಱುದಲೆ ಬಱತಂಗವಱತ ಮೊಲೆ ಸುಗಿದ ತೊಗ
ಲೇಱದೆಗೆದಳ್ಳೆ ದಿಗ್ವಸನವೆತ್ತಿದ ಕತ್ತಿಯೊಡ್ಡಿದ ಕಪಾಲವೆರಸು
ಮೀಱಿದುದಯದ ನಿಡಿಯ ಕಾಳರಕ್ಕಸಿ ಬರುತ
ನೀಱನಂ ಸುಕುಮಾರನಂ ಪುಷ್ಟನಂ ದೇಸೆ
ಕಾಱನಂ ನಿಶ್ಚಿಂತನಂ ಸಿದ್ಧರಾಮಯ್ಯನಂ ದೂರದಿಂ ಕಂಡಳು        ೧೮

ಈ ರುಚಿರ ಕೋಮಲ ಶರೀರನಂಗದ ರುಧಿರ
ವಾರಿಯಿನ್ನಾವ ರುಚಿಯೋ ಆಗ ಸವಿವೆನೋ
ತೀರಲೆಂದೆಳಸಿ ಲವಲವಿಸಿ ನಡೆದಂಜಿಸುವೆನಂಜಿದಡೆ ಹೊಡೆವೆನೆಂದು
ಸಾರಿ ನೋಡಿದಳೊದಱಿ ನೋಡಿದಳು ಬೊಬ್ಬೆಗೊ
ಟ್ಟಾರಿ ನೋಡಿದಳಾವ ತೆಱಿದಿ ನೋಡಿದಡೇಂ ವಿ
ಚಾರಿಸದೆ ಲೆಕ್ಕಿಸದೆ ಹೋಗುತಿರೆ ಕಂಡಿವಂ ಹೆದಱನೇಗುವೆನೆಂದಳು  ೧೯

ಎನ್ನ ಬಡದಾಡೆ ಕಿಡಿಗಣ್ಗಳುಕವಾತನ
ಲ್ಲಿನ್ನು ಕೀರ್ತಿಸಿ ಬೇಳ್ಪೆನೆಂದೆಲೆಲೆ ಧೈರ‍್ಯ ಸಂ
ಪನ್ನ ಭೂತಸ್ನೇಹ ಕರುಣಿ ದಾನವಿನೋದಿ ನಿಶ್ಯಂಕ ಮರಣರಹಿತ
ನನ್ನಿಯುಳ್ಳನೆ ಬಸುಱ ಬಱನ ಕಳೆಯೆಂದೆಂಬ
ಕನ್ನೆಯಂ ನೋಡಿ ನಸುನಗುತಾವುದಱಕೆಯೆನೆ
ನಿನ್ನ ದಿವ್ಯಾಂಗದೊಳಗಣ ರುಧಿರಸುಧೆಯನೆನಗೀಯಬೇಕೆಂದಳವಳು          ೨೦

ಒಡಲೊಳಾವೆಡೆಯ ರುಧಿರಕ್ಕೆ ಬಯಸಿದೆಯದಂ
ಕಡಿದು ಕುಡಿದುಕೊ ಎಂದಡೊಡನೆ ಕತ್ತಿಯನೆತ್ತಿ
ಹೊಡೆದು ನೋಡಿದಳೊತ್ತಿ ಕೀಸಿ ನೋಡಿದಳಡಸಿ ಕೊಱೆದು ನೋಡಿದಳು ನೋಡೆ
ಹೊಡೆಯೆ ವಜ್ರಂ ಹಱಿವುದೇ ಕೀಸೆ ನೆಳಲು ಹೊರೆ
ಬಿಡುವುದೇ ಕೊಱೆಯೆ ಬಯಲಾಸಱುವುದೇ ಕಂಡು
ನಡುಗಿ ಕಾಲ್ವಿಡಿದು ದೈನ್ಯಂದೋರ್ಪ ರಕ್ಕಸಿಗೆ ನಸುನಗುತ್ತಿಂತೆಂದನು         ೨೧

ಹೆದಱದುಸುರಾವೆಡೆಯ ರುಧಿರ ಬೇಕೆನಲು ನಿ
ನ್ನುದರದೊಳಗೆನ್ನ ಹೊಗಿಸಿದೊಡೆನಗೆ ಸೊಗಸಿದಂ
ಗದ ಸಾರಮಂ ಸವಿದು ಪೊಱಿಮಡುವೆನೆನಲೊಡಂಬಟ್ಟಖಿಳ ಜಗವನೊಳಗೆ
ಪುದಿದು ಪೊರೆವಂಗಿವಳು ಭಾರವೇ ಬಾಯ್ತೆಱಿದು
ಸುದತಿ ಬಾಯೆನೆ ಹೊಕ್ಕ ಕಾಳರಕ್ಕಸಿಯ ನುಂ
ಗಿದನೆನಗೆ ಲೋಭವಿಲ್ಲೆಂದು ಶಪಥದ ನಂಜಿನುರುಳಿಯಂ ನುಂಗುವಂತೆ        ೨೨

ಅಯ್ಯ ಕೇಳಯ್ಯ ನೀನೊಡ್ಡಿದೊಡ್ಡಿದ ಸಮಂ
ಮೆಯ್ಯನಿಱಿದಿಱಿದು ಕಿಱಿಕಿಱಿದಾಗಿ ಕಡಿದಡಂ
ಅಯ್ಯಯೆಂದಳುಕೆ ಹಿರಿಹಿರಿದಾಗಿ ನೆನೆವ ಕೇಳಯ್ಯ ಅಯ್ಯಯೆನುತ
ಕಯ್ಯ ಲಾಕುಳವನಂದಲುಗುತ್ತ ಹಾಡುತ್ತ
ಲೊಯ್ಯನೀ ಕಾಯವಿವಳಿಗೆ ಜೀವ ನಿಮಗೆಂದು
ಸಯ್ಯಮಿ ವ್ರತನಿರತ ಶ್ರೀ ಸಿದ್ಧರಾಮನಾಥಂ ಹಾಡಿದಂ ಗೀತವ      ೨೩

ಉದರದೊಳಗಿಳಿದಾರ್ತದಿಂ ನೋಡೆ ರೇತ ರ
ಕ್ತದಿನಾದ ತನುವಲ್ಲ ಸಪ್ತ ಧಾತುಗಳುಂಟೆ
ಹೃದಯದಲರ್ವಸೆಯ ಮೇಲೆಸೆವ ಚಿತ್ತಿನ ಸೊಡರ ಬೆಳಗಿನೊಳಗಾತ್ಮನಿರ್ದಂ
ಅದಱಿಂದ ಕೆಳಗೆ ಮುನ್ನಾರ್ತದಿಂದೇಕಚಿ
ತ್ತದೊಳೆ ಪುರಮಂ ಮಾಡಿದಾ ಭಾವ ಬಲಿದೊಳಗೆ
ಪುದಿದ ಶಿವನಿಳಯ ಕೋಟಿಗಳಿಂ ವಿರಾಜಿಸುತ್ತಿಪ್ಪ ಪುರಮಂ ಕಂಡಳು           ೨೪

ಅಲ್ಲಿಯುಂ ಕ್ಷೇತ್ರಮಂ ಬಲಗೊಂಬ ಶಿವಸಿದ್ಧ
ವಲ್ಲಭನ ಬಸುಱೊಳಗೆ ತೊಳಲುತಿಹ ತನ್ನನಂ
ತಲ್ಲಿ ಮುನ್ನಿನ ಪರಿಯನದಱೊಳಾ ಪರಿಯನೇಳೆಂಟು ಗಡಿತನಕ ಕಂಡು
ತಲ್ಲಣಿಸಿ ನಡುಗಿ ಹೊಱಮಡುವೆನೆಂದನೆ ಬಟ್ಟೆ
ಯಿಲ್ಲದಿರೆ ಸಿದ್ಧನಂ ಹೊಗಳಿದಡಧೋದ್ವಾರ
ದಲ್ಲಿ ಪೊಱಮಡಿಸಲ್ಕಧೋದೈತ್ಯೆಯೆಂಬ ಪೆಸರಾದುದಂತಾ ದನುಜೆಗೆ       ೨೫

ಅಱಿಯದೆಳಸಿದೆನೆಂದು ನಮಿಸಿದಸುರೆಯ ಬಸುಱ
ಬಱನಳಿಯೆ ತಣಿವಿತ್ತು ಮತ್ತೆ ಬಲಗೊಳ ಹೋಹ
ನೆಱೆ ವೀರಸಿದ್ಧರಾಮನ ಹಿಂದೆ ಹಿಂದೆ ಪುರಮಥನ ಸಲೆ ಕಂಡಿದೇನು
ಕಣುವಿನೊಡನೆಯ್ತಪ್ಪವೊಲ್ ಬಂದು ಕಂಡು ಚೆ
ಚ್ಚರದಿ ಕಲಿತನಕೆ ಬೆಱಗಾಗುತ್ತಿವಂಗೆನ್ನ
ಹರಿವರಿಯ ರೌದ್ರ ವೇಷವನು ತೋಱಿಸಿ ಮನದ ಬಲುಹ ನೋಡುವನೆಂದನು           ೨೬

ನೀಲಕಂಠಂ ರೂಹುದೋಱಿ ಸಿದ್ಧೇಶ್ವರನ
ನಾಲಿಂಗನಂಗೈದು ತಲೆದಡವಿ ಬಾರೆನ್ನ
ಸಾಲೋಕ್ಯದರಸ ನಿನಗೊಂದು ಹೊಸತಂ ತೋರ್ಪೆನೆಂದು ಕೈವಿಡಿದು ನೆಗೆದು
ಭೂಲೋಕದಿಂ ಭುವರ್ಲೋಕದಿಂ ಸ್ವರ್ಲೋಕ
ದಾಲಯ ಮಹಾಲೋಕ ಜನಲೋಕ ತಪಲೋಕ
ಮೇಲೆನಿಪ ಸತ್ಯಲೋಕಂ ವಿಷ್ಣುಲೋಕಂಗಳಂ ಕಳಿದು ಕೊಂಡೊಯ್ದನು      ೨೭

ಇದಕಂಜನೆಂದು ಶಿವಲೊಕದ ಗಯಾಪುರದ
ಸದನದೊಳು ಬೆದಱಿಸುವೆನೆಂದು ನೆನೆದಂ ಪಂಚ
ವದನ ದಶಲಪನ ಶತಮುಖ ಸಹಸ್ರಾಸ್ಯ ಲಕ್ಷಾನನಂ ಕೋಟಿವಕ್ತ್ರಂ
ಒದವಿ ಕೋಟಾಕೋಟಿ ತುಂಡಂಗಳೊಗೆದೊಗೆದು
ಪುದಿದು ಮೊಗದೊಳಗೆ ಮೊಗವಗೆವೊಯ್ದ ತೆಱದೊಳೊ
ಪ್ಪಿದುವು ಬೇಱವಱೊಳೊಂದೊಂದು ರಸವಾಗಿಯಭಿನಯಿಸಿದನು ಪುರಮಥನನು      ೨೮

ಹಲವು ದೆಸೆದೆಸೆಯೊಳಿಡಿದಿಡಿದ ವದನಂಗಳೊಳು
ಕೆಲವುಬ್ಬಿ ಬೊಬ್ಬಿಡುವ ಕೆಲವು ಮಾಣದೆ ನಗುವ
ಕೆಲವು ಗಜಱುವ ಕೆಲವು ಗರ್ಜಿಸುವ ಕೆಲವಗಿವ ಕೆಲವುರಿವ ಕೆಲವಾರುವ
ಕೆಲವು ಹಾಡುವ ಕೆಲವು ಹುಂಕರಿಸಿ ಕಣ್ದೆಱೆವ
ಕೆಲವು ಕರುಣಿಸುವ ಕೆಲವಾನಂದದಿಂದಿಪ್ಪ
ಕೆಲವು ನಿಜದಿಂದಿಪ್ಪ ನಾನಾ ರಸಂದಳೆದನತಿಭಯಂಕರ ರೂಪನು    ೨೯

ಮುಸುಕಿದುದ್ಭತಮುಖವಿಳಾಸಮಂ ಕಂಡು ಶಂ
ಕಿಸದೆ ಜಯಜಯವೆನುತ್ತಂ ಸಿದ್ಧನಿರಲು ಮಾ
ಮಸಕದಿಂ ಸಕಳಸ್ವರೂಪನಾಗಿರ್ದ ರುದ್ರಂ ನಿಷ್ಕಳಾಕಾರವ
ನೊಸೆದು ಕೈಕೊಂಡು ರವಿಯಿಲ್ಲ ಬಿಸಿಲುಂಟೆಂಬ
ದೆಸೆಯಂತೆ ನಿಷ್ಕ್ರಿಯಾತ್ಮಕ ನಿರ್ಮಳಂ ನಿರಾ
ವಸಥ ನಿರುಪಾಧಿಕ ಜ್ಯೋತಿರ್ಮಯಾಕಾರ ಶಿವಲಿಂಗವಾದನಂದು   ೩೦

ದೆಸೆದೆಸೆಯ ಪಸರಮಂ ಸಕಲಲೋಕಂಗಳಾ
ದಿ ಶಿಖಾಂತಮಂ ಕಳೆದು ಸರ್ವಗತವಾದ ಕಾಂ
ತಿ ಸಮೂಹ ಲಿಂಗಮಂ ನೋಡಲಮ್ಮದೆ ನಡುಗಿ ನಡುಗಲೇಕೆಂದು ನೆನೆದು
ಹೊಸತಾವುದಾವ ರೂಪಾದೊಡಾ ರೂಪಿನಿಂ
ದೊಸೆದು ಹಿಡಿವೆಂ ಶಿವನನೆಂದು ನಿಶ್ಚಯಿಸಿ ಶಂ
ಕಿಸದೆ ಲಿಂಗದ ಬೆಳಗಿನೊಳಗೆ ಬೆಳಗಾಗಿ ಹೊಗಲನುಗೈದನಪ್ರತಿಮನು           ೩೧

ಒಡಗೂಡಿ ಮಗನೆನ್ನೊಳಡಗಿ ಬೆರಸಲು ಮುಂದೆ
ನಡೆಯದೆನ್ನಯ ಲೀಲೆಯೆಂದಂಜಿ ಶಶಿಯ ಜಡೆ
ಮುಡಿಯ ಬಿಸಿಗಣ್ಣ ಫಣಿಕುಂಡಲಂಗಳ ಪಂಚವದನವೀರೈದು ಭುಜದ
ಒಡಲ ಭಸಿತದ ಕೊರಳ ಗರಳದ ಗಜಾಜಿನದ
ಹಿಡಿದ ಹಲವಾಯುಧಂಗಳ ಹರಿಣರಿಪುಚರ್ಮ
ದುಡಿಗೆ ಹರಿನಯನವೆರಸಿದ ಮೆಲ್ಲಡಿಯ ನಿಜದ ಮೂರ್ತಿಯಂ ತೋಱಿಸಿದನು         ೩೨

ಲೋಕದೊಳು ವೃಕ್ಷಬೀಜ ನ್ಯಾಯದಂತೆ ಬಿಡ
ದೇಕತ್ವದಾಕಾರದೊಳು ನಿರಾಕಾರಂ ನಿ
ರಾಕಾದೊಡಲೊಳಾಕಾರವಾಗಿರ್ದಖಿಳ ರೂಪುಗಳನಳಿದು ಕಳೆದು
ಆಕಾಶದಾದಿ ಬಯಲೊಳು ಲಿಂಗವಾಗಿರ್ಪ
ನೇಕಗುಣ ನಿನ್ನನವನಾರ್ ಬಲ್ಲರೆಂದು ಮಹಿ
ಮಾಕರಗೆ ಬಿನ್ನವಿಸೆ ಮೆಚ್ಚಿ ತೆಗೆದಪ್ಪಿ ಗಿರಿಜಾಧೀಶನಿಂತೆಂದನು      ೩೩

ಅಂಗವಿಸಿ ನಿನ್ನ ಸೊನ್ನಲಿಗೆಯೊಳು ನೀನಾದಿ
ಲಿಂಗವೆಸರಿಂದೆಮ್ಮನೀ ತೆಱದ ರೂಪಿನೊಳ
ಭಂಗ ಪ್ರತಿಷ್ಠಿಸಲು ಬೇಕೆಂಬ ಬೆಸನದಿಂ ತೋಱಿದೆಂದು ನಿಜರೂಪನು
ಹಿಂಗದಾ ಪುರದ ವಾಯುವ್ಯ ಯೋಜನದೊಳತಿ
ಕಂಗೆ ಮಂಗಳವಪ್ಪ ಲಿಂಗವಿದೆ ಬೇಗ ಬಿಜ
ಯಂಗೈಸಿ ತಂದು ಮಾಡೇಳು ಹೋಗೆಂದು ಬೀಳ್ಕೊಟ್ಟನಗಜಾ ರಮಣನು    ೩೪

ಮೇದಿನಿಗೆ ನಡೆತಂದು ಸೊನ್ನಲಿಗೆಯೊಳು ದುರಿತ
ಸೂದನಂ ಸಗುಣ ನಿರ್ಗುಣ ಸಂಗ ಸಂತುಷ್ಟ
ನಾದಿಲಿಂಗಾಲೋಕನಾಸಕ್ತಚಿತ್ತನಪ್ರತಿಮ ಶಿವ ಸಿದ್ಧರಾಮಂ
ಸಾದರಂ ಶ್ರೀ ಮಲ್ಲಿನಾಥ ಚರಣಾಂಬುಜಾ
ಮೋದ ಮಾನಸನಾಗುತಿರ್ಪ ಸಮಯದೊಳಿರುಳು
ತೀದು ರವಿ ಮೂಡಿದಂ ಜಗದಘಂ ತೀದು ಪುಣ್ಯೋದಯಂ ಸಮನಿಪಂತೆ      ೩೫

ತರಿಸು ಲಿಂಗದ ರಥಕೆ ವೃಷಭ ಸಂತತಿಗಳಂ
ಕರಸು ಶಿಲ್ಪಾಭಿಜ್ಞರಂ ಮಂಗಳದ್ರವ್ಯ
ಪರಿಕರವ ನೆರಪೆಂದು ಶಿವ ಸಿದ್ಧರಾಮಯ್ಯ ಚರಿತದಿಂ ತರಿಸಿ ನೆರಪಿ
ಉರಗೆಜ್ಜೆ ದಂಡೆ ಪೆಂಡಾರ ಬಾಸಿಗವನಾ
ದರದಿ ರುದ್ರಾಕ್ಷೆಯೊಳಲಂಕರಿಸಿ ಭಸಿತದಿಂ
ಹೊರೆದ ಹೊಸ ಹೋರಿಯೆತ್ತುಗಳನೊತ್ತಂಬದಿಂ ಹೂಡಿದಂ ಗಾಡಿವಡೆದು   ೩೬

ತಳಿತ ಬೆಳುಗೊಡೆಯ ತುಱುಗಿನ ಹೀಲಿದಳೆಯ ಮಂ
ಡಳಿಸಿದಣುಕುಗಳ ನೆಳಲೊಳು ನಡೆವ ಶತರಥಂ
ಗಳ ಮುಂದೆ ಮುಗ್ಧೆ ಮಧ್ಯಮೆ ವಿದಗ್ಧೆಯರು ತರದಿಂ ತಂಡದಿಂ ಸರಿಸದಿಂ
ತೊಳಪ ಕಳಸಂಗಳಂ ಪಿಡಿಯೆ ಚಂಬಕನ ಬೊಂ
ಬುಳಿಯ ಪದಡಕ್ಕೆ ಪಟಹಂಗಳಾವುಜ ಕರಡೆ
ಗಳ ತಾಳ ಕಂಸಾಳ ರವದೊಳಗೆ ನಡೆದನಪ್ರತಿಮನಚಳಿತ ಸಿದ್ಧನು    ೩೭

ಹೊಡೆವ ನಿಸ್ಸಾಳ ಕೋಟಿಗಳ ಬಿರುತೆತ್ತಿ ಬೊ
ಬ್ಬಿಡುವ ಕಹಳೆಗಳ ಪೂರೈಪ ಶಂಖಾವಳಿಯ
ಕಡುದಿನಿಯ ಕೊಂಬುಗಳ ಸೂಳೈಪ ತಮ್ಮಟಂಗಳ ತಳಿತ ಕೈಗುಡಿಗಳ
ಪಿಡಿದ ವೃಷಭಧ್ವಂಜಗಳ ಹಲವು ಕೇಳಿಕೆಯ
ಸಡಗರದ ಸಂಭ್ರಮದ ಸೌರಂಭದಿಂ ಮೀಱಿ
ನಡೆದನಪ್ರತಿಮಸಿದ್ಧಂ ಸಿದ್ಧರಾದಿತ್ಯ ಸಿದ್ಧಕುಲ ಚಕ್ರೇಶನು         ೩೮

ಪಸರಿಸಿದ ಹರುಷದಿಂ ಬರವರಲು ಶೂಲಿ ಸೂ
ಚಿಸಿದ ಕುಱುಹಂ ಕಂಡು ಮೆಯ್ಯಿಕ್ಕಿ ನಿಂದೆಲೆಲೆ
ವಸುಧೆ ವಸುಮತಿ ಚರಾಚರದ ಭರಭಾರಮಂ ಹೊತ್ತು ನಿತ್ತರಿಪ ಕರುಣಿ
ಒಸೆದಾದಿ ಲಿಂಗಮಂ ಬಸುಱೊಳಿಟ್ಟೋವಿ ಸಾ
ಗಿಸಿಕೊಂಡು ಸುಖದೊಳಿಹ ಸುಜನೆ ತೋಱವ್ವ ವಂ
ಚಿಸದೆ ಲಿಂಗಸ್ಥಳವನೆಂದು ಸಿದ್ಧರ ಬಲ್ಲಹಂ ಧರೆಗೆ ಕೈಮುಗಿದನು            ೩೯

ಮನಮೊಸೆದು ಧಮಾರ್ಥ ಕಾಮಮೋಕ್ಷಂಗಳೆಂ
ದೆನಿಪ ಕನ್ನಿಕೆಯರಂ ಸಿದ್ಧರಾಮವರಂಗೆ
ಘನ ಲಿಂಗವೀವ ಮದುವೆಗೆ ಹಿಡಿದ ಜವನಿಕೆಯ ಸೆಱಗು ತೆಱಹಪ್ಪಂದದಿಂ
ವಿನಯದಿಂದಾದಿಲಿಂಗದ ಸೆಜ್ಜೆಯರಳ್ವಂತೆ
ವಿನುತ ಧರೆ ಹಿಗ್ಗಿ ಸರಿದಿಂಬುಗೊಡೆ ಕಂಡನೊ
ಯ್ಯನೆ ಶಿಳಾಗರ್ಭದೊಳು ಹಿಂದೆ ಕಂಡಖಿಳ ಮುಖ ಕುಱುಹುಗಳು ಹೊಳೆಹೊಳೆಯಲು೪೦

ಧರಣಿಯಂ ಮೆಲ್ಲನೆ ಸಡಿಲ್ಚಿ ತೆಱಹಂ ಮಾಡಿ
ಹರುಷಜಲವಮೊಸರ್ವ ಕಣ್ಣಿಂ ನೋಡಿ ಪುಳಕವಾ
ವರಿಸುವೊಡಲಿಂದೆಱಗಿ ತೊದಳು ತುಂಬಿದ ನುಡಿಗಳಿಂ ಹೊಗಳಿ ನಡುಕವಡೆದ
ಕರಕಮಳದಿಂದ ನವ್ಯಕುಸುಮ ದಿವ್ಯಾಂಬರಾ
ಭರಣ ನಾನಾ ಯಕ್ಷಕರ್ದಮದಿನೊಪ್ಪೆ ಸಿಂ
ಗರಿಸಿ ಲಿಂಗವ ಮನೋರಥದೊಳಿಡುವಂತಿಟ್ಟನಾ ರಥ ಸುಖಾಸನದೊಳು      ೪೧

ಬಳವಱಿದು ಹರೆಯವಱಿದೆಣೆಯಱಿದು ಬಗೆಯೆತ್ತು
ಗಳನಾಯ್ದು ಹಲವು ತಲೆಯಾರ್ಗಳಂ ಹೂಡಿ ಬೆಂ
ಬಳಿಯಲನುವಱಿದು ನಡಸುವ ಭಟರನಿತ್ತು ಗಾಲಿಗಳದ್ದಡೆತ್ತಲೆಂದು
ಬಳಿವಿಡಿದು ಹಾರೆಗಳನಾಂತು ತಾಂ ಬಲ್ಲಿದ
ರ್ಬಳಸಿ ಖೋಯೆಂದು ಬೊಬ್ಬಿಟ್ಟಾರ್ದು ಹಱೆಗಳಂ
ಮೊಳಗಿ ನಡಸಲು ರಥಂ ನಡುಗದೆಂಬುದು ಮಾತು ಕಾರಣವನಾರ್ ಬಲ್ಲರು            ೪೨

ಮುಂದೆ ಸಿದ್ಧೇಶ್ವರಂ ನಡೆಯೆ ನಡೆವುದು ರಥಂ
ನಿಂದ ಠಾವಿನೊಳು ನಿಲುವುದು ದಿಟಂ ಹುಸಿಯೆಂಬೊ
ಡೊಂದು ದಿನವಾ ರಥಂ ಬಟ್ಟೆಯೊಳ್ ಬಪ್ಪ ಕಾಲದೊಳಿತ್ತ ದಿನಪನ ರಥಂ
ಬಂದು ಪಡುವಣ ಕಡಲೊಳಿಳಿಯೆ ಕಂಡಿರುಳಾದು
ದೆಂದಲ್ಲಿ ಬಿಡಿಸಿ ರವಿಯುದಯಿಸಿದ ಬಳಿಕವಾಂ
ಬಂದಲ್ಲದೆತ್ತುಗಳ ಹೂಡಬೇಡೆಂದು ಗುಡ್ಡರ್ಗೆ ಬೆಸನಂ ಕೊಟ್ಟನು            ೪೩

ಪುರಕೆ ನಡೆತಂದು ನೆಱೆ ಮಲ್ಲಿಕಾರ್ಜುನನನಾ
ದರದೊಳರ್ಚಿಸಿ ನಿತ್ಯನೇಮವಂ ಸಲಿಸಿ ಭಾ
ಸುರದ ರಾತ್ರಿಯ ಕಳೆದು ಬಳಿಕುದಯದವಸರದ ಪೂಜಾಸುಖಾತುರದೊಳು
ಇರಲಿತ್ತ ಗುಡ್ಡರೆತ್ತುಗಳ ಕೊರಳಂ ಹೂಡಿ
ಭರದೊಳಿದಿರಾಗಿ ಕೊಂಡೊಯ್ಯಲೆಂದುಲಿದು ಚ
ಪ್ಪರಿಸಿ ಹೊತ್ತೆತ್ತಿ ನೂಕಿಂದೊಡೆ ಮಿಡುಕದೆ ರಥಂ ಗಿರಿಯಂತೆ ನಿಲಸಿರ್ದುದು  ೪೪

ಭಂಡಿ ನಡೆಯದ ಹದನನಱಿಯದಂತಾಗಳು
ದ್ದಂಡ ಗುಡ್ಡರು ಹೊಡೆಯೆ ಬಿಡೆ ತೆಗೆದು ಮೂಗುಱಿ
ದಿಂಡುಗೆಡೆದೆತ್ತುಗಳು ದೇಹಮಂ ಬಿಟ್ಟು ಜೀವಂ ಮಲ್ಲಿನಾಥನೆಡೆಗೆ
ಹಿಂಡುಗೊಂಡಡುಗುತಿರೆ ನಿತ್ಯನೇಮದೊಳಿರ್ದು
ಕಂಡು ಸಿದ್ಧರ ದೇವನಾ ಜೀವವಂ ಹಿಡಿದು
ಕೊಂಡು ಜೀವನದ ಹೋಹ ಬಹ ಗೀತಮಂ ಬಿನ್ನಹಂ ಮಾಡಿ ನಡೆತಂದನು   ೪೫

ಮರಳಿ ಹರಣಂಗಳಂ ಹಿಡಿತಂದು ಕೆಡೆದಿರ್ದ
ಹಿರಿಯೆತ್ತುಗಳ ಶವಗಳೊಳಗಿಟ್ಟು ತಡವಿ ಚ
ಪ್ಪರಿಸೆ ಮೈಮುರಿದು ಕೊಣಕಿಟ್ಟೇಳೆ ಕಂಡು ಹರುಷಂದಳೆದು ಹೆಗಲ ಹೂಡಿ
ಗುರುವರೇಣ್ಯಂ ಸಕಲ ಚೇಷ್ಟಾಪರಂ ಚರಾ
ಚರ ಭರಿತನಖಿಳ ಸಾಮರ್ಥ್ಯಯುತ ಶಿವಕೀರ್ತಿ
ಶರಧಿಶಶಿ ರಾಮನಾಥಂ ಮುಂದೆ ನಡೆಯೆ ನಡೆದುದು ರಥಂ ಜಗ ಹೊಗಳಲು  ೪೬

ತಿಂಗಳಂ ಸಾಗರಕೆ ತಪ್ಪಂತೆ ಪುರದ ನಡು
ವಿಂಗೆ ರಥವಂ ತಂದು ಹಲಕೆಲವು ಶಿಲ್ಪ ಶಾ
ಸ್ತ್ರಂಗಳೊಳಭಿಜ್ಞರಂ ಕರಸಿ ಬೆಸನಂ ಕೊಟ್ಟು ಮುಂದಿಟ್ಟು ತೋಱಲವರು
ಕಂಗಳಾಲಿಗಳ ಮುಸುಕಿರ್ದೆವೆಯ ಬೆಸುಗೆಯಂ
ಪಿಂಗಿಸುವ ಮನವೆನಿಪ್ಪುಳಿಗಳಂ ಕೊಂಡಾದಿ
ಲಿಂಗದ ಮುಖಕ್ಕೆ ಮಱೆಯಾದ ಕತ್ತಳಿಕೆಯಂ ಕಳೆಯಲನುಗೈದರು೪೭

ಫಳದ ಮೇಲಣ ಸೊಪ್ಪು ತಿರುಳು ರಸಮಂ ತೆಗೆಯೆ
ಬಳಿಕೊಳಗೆ ಬೀಜ ಸ್ವಯಂಭುವಾಗಿಪ್ಪಂತೆ
ಬಳಸಿ ಲಿಂಗದ ಮುಖೆ ಕವಿದಡ್ಡವಾದ ಕತ್ತಳಿಕೆ ಹೊರೆತೆರೆಸೆರೆಗಳ
ಅಳವಟ್ಟ ಸೆಜ್ಜೆಗಳೆವಂತೆ ಪಿಂಗಿಸಿ ಕಳೆದು
ತೊಳಪ ಸ್ವಯಂಭುಲಿಂಗವ ಕಂಡರಾಗ ನಿ
ರ್ಮಳ ಲಿಂಗದೊಳು ಕಠಿನಮಂ ನುಡಿದವಂಗಾಗದಿಹುದೆ ನಾಯಕ ನರಕವು     ೪೮

ಸಂದ ಶಬ್ದಾರ್ಥದಂತರ್ಧನಾರೀಶತ್ವ
ದಿಂದೆಸೆವ ಸಹಜ ದಂಪತಿಗಳಂ ಬೇರ್ಪಡಿಸಿ
ದಂದತಿ ದ್ರೋಹವೆಂದು ಮಾಡಿದ ಸಯೋಗ ಲಿಂಗಕ್ಕೈದು ಮುಖವ ರಚಿಸಿ
ಅಂದವಱ ಮೇಲೆ ತರತರವಿಡಿದು ಬಳಸಿ ಮುಖ
ವೃಂದಮಂ ಸವೆದು ಬಳಿಕಂ ಬೇಱೆ ಬೇಱೆ ಮುದ
ದಿಂದಂ ಸಯೋಗಲಿಂಗವ ಸಾವಿರವನು ಒದವಿಸಿದನಚಳಿತ ಸಿದ್ಧನು೪೯

ಈ ಸರ್ವಲಿಂಗ ಪ್ರತಿಷ್ಠೆಯೊಳಗೆಸೆವ ನಾ
ನಾ ಶುದ್ಧ ನಾದವಾ ಹೋಮಧೂಮಂ ಸೋಂಕಿ
ದಾ ಸಕಲ ಜನದ ಪಾಪಂ ಪರೆದು ಪುಣ್ಯಮಯವಾಗಬೇಕೆಂದು ಚರರ
ದೇಶ ದೇಶಕ್ಕಟ್ಟಿ ಕರಸೆ ನೆರೆದುದು ಮೇಲೆ
ಸೂಸಿದಣು ಧರೆಗಾಣದೆನಲಪ್ಪುದೈ ಸಲ್ಲ
ದೀಸೈಸೆನಿಪ್ಪುದರಿದಾ ಪುರದ ಸುತ್ತಲರೆಗಾವುದಂತರದೆಡೆಯೊಳು   ೫೦

ರಸೆಯಱಿಯೆ ಕಾರಹುಣ್ಣುವೆಯ ಮುಂದಣ ಚತು
ರ್ದಶಿಯ ದಿನ ನಡುವಿರುಳು ಲಿಂಗಂಗಳಂ ಪ್ರತಿ
ಷ್ಠಿಸುವೆನೆಂದಲ್ಲಿಗೆ ತಥೋಚಿತ ದ್ರವ್ಯ ಪರಿಕರವನತಿ ಸಂಭ್ರಮದಲಿ
ಹೆಸರಿಡಲು ಬಾರದುಪಮಿಸಬಾರದೆನಿಸಿ ನೆರ
ಪಿಸಿ ನೆನೆದು ಲಿಂಗದಭಿಷೇಕದವಸರಕಮೃತ
ರಸವ ತರಬೇಕೆಂದು ನುಡಿದು ಪೊಱಮಡುವಾಗಲಿನನಸ್ತಗಿರಿಗಿಳಿದನು          ೫೧

ಅಳಿಯಿರಲು ಪೂವನಾ ಪೂವಿರಲು ಜಲವನಾ
ಜಲವಿರಲು ಕೊಳನನಾ ಕೊಳನಿರಲು ವನವನೊಸೆ
ದಳವಡಿಸಿದಜನಂತೆ ದೃಷ್ಟಮಹಿಮೆಗಳಿರಲು ಲಿಂಗವಂ ಲಿಂಗವಿರಲು
ಹೊಳೆವ ಪೀಠಮುಮನಾ ಪೀಠಮಿರಲಧಿಕತರ
ನಿಳಯಮಂ ಮಸುಮತಿಗೆ ಹೊಸತೆನಿಸಿ ಚೆಲುವಿಂಗೆ
ನೆಲೆಯೆನಿಸಿ ಮಂಗಳಕೆ ಮನೆದೈವವೆನಿಸಿ ರಚಿಸಿದನು ಸಿದ್ಧವರೇಣ್ಯನು          ೫೨

ನಾಡೆ ಮೊಳಗುವ ಬಹಳ ವಾದ್ಯತತಿಯೊಳಗೆ ಕುಣಿ
ದಾಡಿ ಹರಸುವ ಜನದ ಪುಣ್ಯರವದೊಳಗೆ ಕೈ
ನೀಡಿ ದಿವಿಜರು ಸುರಿಯೆ ಕವಿವ ಪೂಮಳೆಯೊಳಗೆ ತತ್ತ ಶುಭಲಗ್ನದೊಳಗೆ
ಕೂಡಿದನು ಶಿವಶಕ್ತಿಗಳನು ಶಿವಶಿವ ಮರಳಿ
ನೋಡಿ ಕೊಂಡಾಡಿ ಮುಂಡಾಡಿ ನೆಱೆ ಪಾಡಿ ತೂ
ಗಾಡಿದನು ಶಿರವನಾ ಲಿಂಗದ ಕಳಾವಿಳಾಸಕ್ಕೆ ಸಿದ್ಧರ ದೇವನು       ೫೩

ಮೌನದಿಂದೆಂತಕ್ಕೆ ಕಣ್ಮುಚ್ಚಿ ಮನದೊಳಗೆ
ಜಾನಿಸುತ್ತಾಹ್ವಾನಿಸುತ್ತರ್ಚಿಸುವ ತೊಡಕ
ನಾನಂದದಿಂ ನಿಲಿಸಿ ನಿಜಮೂರ್ತಿಯಂ ಧರೆಗೆ ತೋಱಿದೀ ಶಿವಲಿಂಗದ
ಆನನಂ ದಣಿಯೆ ಪಂಚಾಮೃತಂ ಮಾಡಬೇ
ಕೀ ನೆಲದೊಳುಳ್ಳ ಸಂಕಲ್ಪಾಮೃತದೊಳಪ್ಪು
ದೇನೊ ದಿವ್ಯಾಮೃತವನೀಶನಂ ಬೇಡುವೆಂ ತಂದು ಮಾಡುವೆನೆಂದನು         ೫೪

ಮಂಗಳರವಂಗಳಂ ಮಾಣಬೇಡುಲಿವ ವಾ
ದ್ಯಂಗಳಂ ನಿಲಿಸಬೇಡೋಲೈಸುತಿರ್ಪ ಪಾ
ತ್ರಂಗಳಂ ತಡೆಯಬೇಡುತ್ಸವದಿ ನೆರೆದಾಡುವೀ ಜನಂ ಪರೆಯಬೇಡ
ತಿಂಗಳೀಯೆಡೆಗೆ ಬಾರದ ಮುನ್ನ ಸುಧೆಯನೀ
ಲಿಂಗದವಸರಕೆಂದು ತಪ್ಪೆನೆಂದಂಗವಿಸಿ
ಹಿಂಗದೆ ಛಲವ ಹಿಡಿದು ನಡೆಗೊಂಡನಾಗಳಾ ಮೃಡನಿರ್ಪ ರಜತಗಿರಿಗೆ         ೫೫

ಅರಮನೆಗೆ ಬಂದು ಬಾಗಿಲುಗಳಂ ಕಳಿದು ಕಳಿ
ದುರವಣಿಪ ನಡೆಯೆಱಗಲನುಗೆಯ್ವ ತನು ಗಣೇ
ಶ್ವರರ ನೆರವಿಯ ಬಗಿದು ಶಿವನನಾರೈವ ಕಣು ಸುದೆಯನಿಂತೀಗಳೆನಗೆ
ಕರುಣಿಸೆಂದಾಡಲಟಮಟಿಪ ನಾಲಗೆವೆರಸು
ಹರಿತಂದು ಮೆಯ್ಯಿಕ್ಕಿದಚಳಿತನನೆತ್ತಿ ದೇ
ವರ ಬಲ್ಲಹಂ ತೊಡೆಗೆ ತೆಗೆದು ಬೋಳೈಸಿ ಕೇಳ್ದನು ಬಂದ ಕಾರಣವನು      ೫೬

ವಿಷಕಂಠ ವಿಸಮಾಕ್ಷ ವಿಷಮಾಸ್ತ್ರಹರ ವಿಷಮ
ವಿಷಧರಾಭರಣ ವಿಷಜಾಸನಕಪಾಲಧರ
ವಿಷರುಹಾಂಬಕನಯನಪಾದ ವಿಷಳ ವ್ಯಾಪ್ತ ನುತತರ ವಿಶಾಖಜನಕ
ವಿಷಧರಧರಾಧಿಪತಿ ವಿಷಧರಕಿರಣಮೌಳಿ
ವಿಷಯ ವಿಹ್ವಲದೂರ ವಿಶದಾಮೃತವನು ನಿ
ಸ್ತುಷನಾಗಿ ಕರುಣಿಸುವುದಾದಿಲಿಂಗಕ್ಕಭಿಷವಂ ಮಾಡಬೇಕೆಂದನು   ೫೭

ತನಯನಭಿಷೇಕಮಂ ಮಾಡುವಾರ್ತಕ್ಕೆ ಭ
ಕ್ತನಿಧಾನನತಿಸಂತಸಂಬಟ್ಟು ಕಂದ ಕೇ
ಳನುಪಮ ಸುಧಾರಸಂ ಪಾತಾಳ ತಳದೊಳದೆ ಕನಕಘಟದಿಂದ ನಿನ್ನ
ಮನೆಕೆ ಬಂದನಿತನೊಯಿ ಹೋಗೆಂದು ಬೆಸಸೆ ಪದ
ವನರುಹಕ್ಕೆಱಗಿ ಬೀಳ್ಕೊಂಡು ಸಂತೋಷಮಂ
ಡನನಿಳಿದು ಫಣಿಲೋಕಮಂ ಸಾರ್ದನಿತ್ತಲತ್ತಲು ರುದ್ರನೇಗೈದನು೫೮

ಎಳಸಿ ಸಿದ್ಧೇಶ್ವರನ ಕೂಡೆ ಹುಸಿ ಜಗಳಮಂ
ಬೆಳಸಬೇಕೆಂದು ಬೆಳಸುವೆನೆಂದು ಮನದೊಳು
ಮ್ಮಳಿಸುತೆನಗಂಜುವಂತೆನ್ನ ಭಕ್ತರ್ಗಂಜುವನೊ ಅಂಜದಿಹನೊ ಎಂದು
ತಿಳಿವೆನೆಂದೀಶ್ವರಂ ಮುಂದೆ ಹರಿದಮೃತಮಂ
ಕೊಳಬಂದವರ್ಗೆಮ್ಮ ಭಕ್ತರಾಣೆಯನಿಟ್ಟು
ಕಳುಹಿಯೆಂದರಲ್ಲಿ ಕಾವರ್ಗೆ ನುಡಿದಿತ್ತ ಬರಲತ್ತಲಾತಂ ಹೋದನು           ೫೯

ಘನ ಕಾಮಧೇನುಗಳು ಮೇವ ಕಲ್ಪದ್ರುಮದ
ವನದ ನಡುವಣ ಸಿದ್ಧರಸಕೂಪಕೂಲದೊ
ತ್ತಿನೊಳು ಪರುಷದ ಸಱಿಗಳಿಂ ವಿಶ್ವಕರ್ಮ ನಿರ್ಮಿಸಿದ ಹಿರಿಯರಮನೆಯೊಳು
ಕನಕಮಯ ಕೊಪ್ಪರಿಗೆಗಳೊಳು ಚಿಂತಾಮಣಿಯ
ಮಿನುಗೆಸೆವ ಮುಚ್ಚುಳುಗಳಿಕ್ಕಿ ಮುದ್ರಿಸಿ ರಾಜಿ
ಪನುಪಮಾಮೃತದೆಡೆಗೆ ಬಂದನಪ್ರತಿಮಸಿದ್ಧಂ ಸಿದ್ಧರಾದಿತ್ಯನು  ೬೦

ಕಿಡಿಗಣ್ಣ ಕೆಮ್ಮೀಸೆಗಳ ಕೆದಱುದಲೆಯ ಕಾ
ರೊಡಲ ಕೊಂಕಿದ ಕೋಱೆದಾಡೆಗಳ ರೋಮವಿದಿ
ರಡರ್ದ ಪೇರುರದ ಕೊಬ್ಬಿದ ಭುಜಂಗಳ ಪಿಡಿದ ಪೆರ್ಬಾಳ ನಿಡುವಲಗೆಯ
ತುಡುಕಿ ಗಗನವನಲೆವ ಮೌಳಿಗಳ ಚಲ್ಲಣದ
ಕುಡಿಯ ತೊಂಗಲ ಹಲವು ವಿಧದ ನಾಗಾಧ್ವಾನ
ವಿಡಿದ ಗರ್ಜನೆಯು ರಕ್ಕಸ ಭೂತವೇತಾಳರಮೃತಮಂ ಕಾದಿರ್ದರು೬೧

ಖಳರ ನಿಡಿಯೊಡಲದ್ಭುತಕ್ಕೆ ನಾನಾರೂಪು
ಗಳ ಭಯಂಕರಕೆ ಗರ್ಜನೆಗಳುಗ್ರಕ್ಕೆ ಸಂ
ಚಳಿಸದನೆ ಸಡಿಫಡಿಲ್ಲಿಲ್ಲ ಕರಿವಿಂಡ ಪೊಗುವಾ ಸಿಂಹಶಿಶುವಿನಂತೆ
ನಿಳಯಮಂ ಹೊಗೆ ಕಂಡು ಬೇಡ ಬೇಡೆಲೆ ಸಿದ್ಧ
ಕುಲತಿಲಕಯೆನಲು ಲೆಕ್ಕಿಸದಮೃತಮುದ್ರೆಯಂ
ಕಳೆಯುತಿರೆ ಕಳೆದೆಯಾದಡೆ ನಿನಗೆ ಶಿವಭಕ್ತರಾಣೆಯೆಂದಡೆ ನಿಂದನು೬೨

ಹರಭಕ್ತರಾಣೆಯಂ ಕೇಳ್ದು ಮತಿ ಮಾಸಿ ಭರ
ಕರಗಿ ಬಗೆ ಬಾಡಿ ಮುದವದಿರಿ ಕಾಲ್ಕುಂಬಿಕ್ಕಿ
ತಿರಿಗಿ ಲೋಕಂಗಳಂ ಕಳಿದೇಱಿ ಮೀಱಿ ನಡೆತಂದು ಕೈಲಾಸಪುರದ
ಹಿರಿಯ ಬಾಗಿಲ ದಾಂಟಿ ಸವೆದ ಸೈರಣೆಯ ಮಾ
ದುರವಣಿಪ ಸಲುಗೆ ಮುಕ್ಕಳಿಸೆ ಮುಚ್ಚಿದು ಮುನಿಸು
ವೆರಸು ಕದಡಿದ ಗಂಗೆಯಂತೆ ಬಂದಗಜಾಧಿಪತಿಯ ಸಭೆಯಂ ಹೊಕ್ಕನು       ೬೩

ನಗೆ ಸುಗಿದು ಕುಂಬಿಡುತ ಕೋಪದಿಂದ ಮೆಯ್ಯಿಕ್ಕೆ
ತೆಗೆದೆತ್ತಿ ತಲೆದಡವಿ ತೂಪಿಱಿದು ಮುಂಡಾಡಿ
ಬಿಗಿಯಪ್ಪಿ ತೊಡೆಗೆ ತೆಗೆದೋವಿ ಗಿರಿಜಾಮನೋರಾಮನಾ ರಾಮಯ್ಯನ
ಮಗನೆ ಮನದೊಳಗೆ ಮಾಜದೆ ಮಾತುಗೊಡು ಮೊಗದ
ದುಗುಡವೇನೇಕೆ ಮರಳಿದೆ ಹೋದ ಕಾರ‍್ಯದು
ಜ್ಜುಗವಾಯ್ತೆ ಹೇಳು ಹೇಳೆನ್ನಾಣೆ ಹೇಳಯ್ಯ ಹೇಳೆಂದು ಬೆಸಗೊಂಡನು     ೬೪

ಹುಸಿ ನುಸುಳು ನುಡಿಗಾಹು ಗನ್ನಗತಕಂಗಳಲಿ
ಕುಶಲನಲ್ಲದೊಡೆಲ್ಲರಂ ಕೊಂದು ಕಡೆಗೆ ವಂ
ದಿಸಿಕೊಂಬ ತಿರಿದು ಲೋಕಂಗಳಂ ಹೊರೆವ ವಿಷಪುಂಡುಳಿವ ಹೀನವೆಸರ
ಹಸಿಯ ತೊಗಲುಟ್ಟು ಶುದ್ಧಾಹ್ವಯನೆನಿಸುವ ಹೆಂ
ಗುಸಿಗೊಡಲೊಳರ್ಧಾಂಗವಿತ್ತು ಪುಣ್ಯಶರೀರ
ವೆಸರ ಧರಿಸಿರ್ಪ ನಿನ್ನಲ್ಲಿ ತಪ್ಪಂ ಸಾಧಿಸುವ ಧೀರನಾರೆಂದನು      ೬೫

ಏಗೈದೆ ನಾಂ ನೆಗಳ್ದ ತಪ್ಪಾವುದೆಂದೆನಲು
ಕೂಗಿ ಕರೆದೋಯೆಂಬನಂತಳಿಸಿ ತೊಟ್ಟಿಲಂ
ತೂಗುವವಳಂತೆನ್ನನಮೃತಕ್ಕೆ ಕಳುಹಿ ನಿನ್ನವರ ಮೇಲಾಣೆಯಿಡಿಸಿ
ಈಗಳುಪಚರಿಸಿದಪೆಯೆಂದಡಂತವರಾಣೆ
ಯೇಗುವುದು ನಿನ್ನನೆನೆ ಭಕ್ತರಾಣೆಯ ಮೀಱಿ
ಹೋಗಲೆಳಸಿದ ಹೊತ್ತು ನಿನ್ನಾಣೆಯಂ ಮೀಱಿದವನಲ್ಲವೇ ಎಂದನು        ೬೬

ತನ್ನ ಭಕ್ತರ ಮೇಲಣಾಣೆಯಂ ಪಾಲಿಸಿದ
ನನ್ನಿಕಾಱನನಭವನೆತ್ತಿ ತರ್ಕೈಸಿ ಕೇ
ಳಿನ್ನು ನಿನ್ನಾಣೆ ತೊಂಡಾಣೆ ಹೋಗೆಂದು ಕರುಣಿ ಕಳುಪಲ್ಕಿಳಿದು ಬಂದು
ಮುನ್ನಿನೆಡೆಗೈದಿ ರಕ್ಕರಸರ ಲೆಕ್ಕಿಸದೆ ಹೊ
ಕ್ಕುನ್ನತಾಮೃತದ ಘರ್ಘರ ಮುದ್ರೆಯಂ ಮುಱಿದು
ಹೊನ್ನಕಳಸದಲೋವಿ ತೀವಿಕೊಂಡಾ ವನದ ಕರಿಯ ಮರುಗವ ಕೊಂಡನು    ೬೭

ಹೃದಯದ ಕಳಂಕು ದೋಷಾಕರತೆ ನಷ್ಟಕಲೆ
ಮೊದಲಾದ ದುರ್ಗಣಂಗಳುವೆರಸು ಬಿಡದಳುಕ
ದುದಯವಪ್ಪಮೃತಕರನಂ ತನ್ನ ಸದ್ಗುಣದಿ ನಗುವೆನೆಂದುದಯವಪ್ಪ
ಸದಮಲಾಮೃತಕರನೊ ಎಂಬಂತೆ ಭೂತಳ
ಕ್ಕುದಯಿಸಿದನಮೃತಕರನಾಗಿ ಸಕಲರು ನಲಿಯೆ
ಪದೆದು ಕುವಲಯಲೋಕದಘತಿಮಿರವೋಡೆ ಕರಕಮಲಾಳಿ ಮುಗಿಯಲಂದು            ೬೮

ಚಾರು ಚಂದ್ರಿಕೆಯ ಬರವಂ ಪಾರ್ದು ನಿಂದಿಹ ಚ
ಕೋರ ಸಂಕುಳದಂತೆ ಬಪ್ಪ ಹೊತ್ತಂ ನೋಡು
ತಾರತಿಯ ಸೀಗುರಿಯ ಚಾಮರದ ಝಲ್ಲರಿಯ ಬಹಳ ಮಂಗಳವಾದ್ಯದ
ಸೌರಂಭದಿಂದಿರ್ಗೊಂಡರಂತಾ ಪುರದ
ವಾರನಾರಿಯರು ಸದ್ವೃತ್ತ ಭಕ್ತರು ನಯದೊ
ಳಾ ರಾಮನಾಥಂ ನುಡಿದಂತೆ ಗಂಡನಂ ವಂದಿಜನ ಬೃಂದಸಹಿತ      ೬೯

ನುಡಿದು ಹುಸಿದನೆ ಬಪ್ಪೆನೆಂದು ತಪ್ಪಿದನೆ ಸಡಿ
ಫಡ ಭಾನು ಪೋಪಾಗ ಪೋಗಿ ಸುಧೆಯಂ ಕೊಂಡು
ಕಡೆಗೆ ನಡುವಿರುಳು ಗಡಿಯೊತ್ತಿನೊಳು ಬಂದ ಭಾಪುರೆ ಸಿದ್ಧಪತಿಯೆ ಎಂದು
ಪೊಡವಿ ಬಣ್ಣಿಸಲಾದಿಲಿಂಗಾಂಘ್ರಿಯಂ ಕಂಡು
ಪೊಡಮಟ್ಟು ತಂದಮೃತ ಘಟಮನರ್ಚಿಸಿ ಹಿರಿಯ
ರೊಡೆಯನುಭಿಷೇಕಮಂ ಮಾಡಿದಂ ಬೊಬ್ಬಿಡುವ ಪಂಚಮಹ ಶಬ್ದದೊಳಗೆ            ೭೦

ಗಂಗೆ ನೆಲೆಗಿಡೆ ಜಡೆ ತರಂಗಿಸಲು ಮಸಗಿ ಮಱಿ
ದಿಂಗಳಲ್ಲಾಡೆ ಸೂಡಿದ ಶಿರೋಮಾಲೆ ಜೀ
ವಂಗೂಡೆ ನಾಡೆ ಹಣೆಗಣ್ ತಣಿಯೆ ಕೊರಳ ಹೊಸಗರಳವಿನಿದಾಗಿ ಕುಱುಪು
ಹಿಂಗಿ ವರ್ಣಂಗಳೊಂದೇ ವರ್ಣವಾಗೆ ಧವ
ಳಾಂಗವಿಮ್ಮಡಿ ಧವಳವಾಗೆ ಮೆಱೆವಾದಿಲಿಂ
ಗಂಗೆ ತುಂಗಾಭಿಷೇಕವನಲಂಕರಿಸಿದಂ ಸಿದ್ದಕುಲ ಚಕ್ರೇಶನು           ೭೧

ಶಿವನ ಮೆಯ್ಯೆಲ್ಲ ಮುಖವಾಗಿ ನಾಲಗೆಯಾಗಿ
ಸವಿಯೊಳವಗಾಹವಿರ್ದಂ ತಣಿದನೊಡನಖಿಳ
ಭುವನದ ಚರಾಚರಂಗಳು ತಣಿಯೆ ತೇಗಿದಂ ಸರ್ವದೊಳು ದನಿ ಪುಟ್ಟಲು
ಇವನೆಯ್ದೆ ಕಂಡು ಸಿದ್ಧರ ಬಲ್ಲಹಂ ತಣಿದು
ನವಸುಧಾ ಪಾದೋಕವನು ಗುಡ್ಡರ್ಗೆಱೆದು
ನಿವನಿವಗೆ ಕೊಂಬುದೆಂದಿತ್ತು ನಂದಿಯ ಹಿಂದೆ ಬಂದೋಲಗಂ ಗೊಟ್ಟನು      ೭೨

ಮರಣಮಂ ತೊಡೆವ ಪ್ರಸಾದಾಮೃತವನು ಕೊಂ
ಡಿರೆ ಕೊಂಡುದಿಲ್ಲೆಂದಡೇಕೆಂದು ಗುಡ್ಡರಂ
ಗುರು ಕೇಳ್ದಡಾವದಱ ಗೌರವದ ಶುದ್ಧತೆಯ ತುಹಿನತೆಯ ಸವಿಗಂಪಿನ
ಉರವಣೆಯ ಸೊಗಸಿಂಗೆ ಕಣ್ಮನಂ ದಣಿದು ಕೊ
ಕ್ಕರಿಸಿ ಕೊಳಲಱಿಯದಿರಿಸಿದೆವೆಂದಡಕಟ ಮೂ
ಢರಿರ ಸುಡುಸುಡು ಮುಂದೆ ಹೊಂದುವರ್ಗೇನಪ್ಪುದೆಂದು ನೊಂದನು ಮನದೊಳು     ೭೩

ಕರುಣಿಸುವುದೆಂದು ಕಾಲ್ವಿಡಿದೊಡಂ ಕುಡದೆ ತ
ತ್ಪುರ ತಟಾಕದ ಮಧ್ಯದೊಳು ಸುರಿದು ಲೋಕೈಕ
ಗುರು ನಮಿತಕಲ್ಪತರು ಸಾಮರ್ಥ್ಯಸಿಂಧು ಕಲಿಯುಗದ ಕಾರಣರುದ್ರನು
ಹರುಷದಿಂದಾಕೈಯಲಾ ಅಮೃತಲಿಂಗಮಂ
ಚರಿತದಿ ಪ್ರತಿಷ್ಠಿಸಿ ಮಹಾಪೂಜೆಯಂ ಮಾಡಿ
ಗುರುಸಿದ್ಧರಾಮಯ್ಯ ದಾನಧರ್ಮವ ಮಾಡಿದಂ ಸರ್ವಜನ ನಲಿಯಲು       ೭೪