ರಾಗ : ತಮ್ಮಿಚ್ಛಿ  ತಾಳ : ಇಮ್ಮಡಿ ಝಂಪೆ

ಪಲ್ಲವ ||           ಧಾತ್ರೀ ತಳದ ಜೀವಿಗಳ ನರಕದಿಂ ತೆಗೆದು
ನೇತ್ರತ್ರಯಾಧಿಪಗೆ ತುಪ್ಪದಭಿಷೇಕಮಂ
ಕ್ಷೇತ್ರಪೂಜೆಯಲಿ ಮುದುವೇಗಳ ಮಾಡಿದ ಜಗದಗುರು ಸಿದ್ಧರಾಮಯ್ಯನು ||

ಮಲ್ಲಿಕಾರ್ಜುನನ ಮಹಮನೆಯ ಶೋಬನಕೆ ತಳು
ವಿಲ್ಲದೀ ವೈಶಾಖ ಪೌರ್ಣಮಿಗೆ ಬೇಗದಿಂ
ದೆಲ್ಲವಳಡಬೇಹುದಕ್ಕಿ ಕಣಿಕಂ ತುಪ್ಪ ಮೊದಲಾದ ಸಾಧನವನು
ಸಲ್ಲೀಲೆಯಿಂದೆ ಭರವಸವಾಗಲೆಂದು ಗುರು
ವಲ್ಲಭಂ ಬೆಸಸೆ ಕೈಕೊಂಡು ಗುಡ್ಡರು ಪೇಟೆ
ಯಲ್ಲಿಯ ಶ್ರೀಕರಣಮಂ ಕೂಡಿ ಕೊಟ್ಟಣಮನಿಕ್ಕಿಸಿದರೇವೊಗಳ್ವೆನು         ೧

ಕಾರಿ ಕಪ್ಪಂ ಹಂಡ ಹುಂಡ ಕೆಂದಂ ಬೆಳ್ಳಿ
ಹೋರಿಗಳುವೊಳಗಾದ ಹಿಂಡಿಂಗೆ ಮೊದಲಿಗರ
ದಾರಾರವರ್ಗೆ ಬೇಗದಲಿ ಬಹುದೆಂದು ಪ್ರಸಾದಮಂ ಕೊಟ್ಟು ಕಳುಹೆ
ದಾರಿ ದಾರಿಯೊಳು ನಾಲ್ಕೆರಡು ಯೋಜನಮುಟ್ಟ
ಬಾರಿಸುವ ಕೊಂಬು ಮದ್ದಳೆ ಘಂಟೆಯಂದುಗೆಯ
ಘೋರತರ ರಭಸದಲಿ ಕಡಲ ಕರೆಯೊಡೆದುದೆಂಬಂತೆ ಕವಿದೆಯ್ತಂದರು         ೨

ಅಲ್ಲಲ್ಲಿ ಬಂದ ಬಟ್ಟೆಗಳ ಕೇರಿಗಳ ಜನ
ರೆಲ್ಲರುಂ ಹರಿಹರಿದು ಹರದ ಹಾರುವರೆಯ್ದೆ
ನೆಲ್ಲು ರಾಜಾನ್ನ ಗೋದಿಯನು ಹೊತ್ತಡಕಿ ಕುಟ್ಟುತ್ತ ಬೀಸುತ್ತ ಕೂಡೆ
ಭುಲ್ಲವಿಸಿ ಸರವೆತ್ತಿ ಗುರುವ ಹಾಡುವ ಸೊಗಸಿ
ನಲ್ಲಿ ತಮ್ಮಂ ಮಱಿದು ಬಳಲಿಕೆಯ ತೆಱಿದು ತಳು
ವಿಲ್ಲೆನಿಸಿ ಅಕ್ಕಿ ಕಣಿಕವ ರಾಸಿ ಮಾಡಿದರು ಮಹಮನೆಯ ಉಗ್ರಾಣಕೆ          ೩

ಬೆಳ್ಳಿಹಿಂಡುಗಳಂಧ್ರ ದೇಶದಿಂ ಹೇಱಿ ಬಂ
ದೆಳ್ಳ ರಾಸಿಗಳ ತೆಲ್ಲಿಗರೊಯ್ದು ಗಾಣವಾ
ಡೊಳ್ಳಿತೆನಿಸಿದ ತೈಲ ಕುಂಭಕೋಟಿಗಳ ತಂದರು ಹಿಂಡಿ ಪಚಡಿಗಾಗಿ
ಬೆಳ್ಳಿಯರವುಡಿಯಂತಿರೆಸೆವ ಸೊಜ್ಜಿಗೆಗುಟ್ಟಿ
ಬಳ್ಳಿಯಲಿ ತಿಱಿಸೇವಗೆಯ ರಾಸಿಗಳ ಮಾಡಿ
ಹಳ್ಳಿಕಾರ್ತಿಯರಲ್ಲದರಸು ಮಕ್ಕಳು ಮಾಡಿದರು ಪರಡಿ ಸರವಳಿಗೆಯ       ೪

ಉಪ್ಪು ಸಾಸವೆಯ ಮಾಗಾಯ ಸೆಳ್ಳಂಬಟೆಯ
ಹಪ್ಪಳಂ ಕುಂಬಳದ ಸಂಗಡಗೆಯ ಸೇವಗೆಯೆ
ನಿಪ್ಪವಿಪು ಮೊದಲಾಗಿ ನೊರೆಸಂಡಗೆಯನು ಹುರಿಸಂಡಗೆಯ ಬಾಳಕವನು
ತಪ್ಪದೆಲ್ಲಾ ಸಾಧನವನು ಸಂವರಿಸಿ ತಂ
ದೊಪ್ಪಿಸಿದಡಪ್ರತಿಮ ಗುರುರಾಯ ಮೆಚ್ಚುತ್ತ
ಕಪ್ಪುರದ ವೀಳೆಯವ ಮಲ್ಲಿಕಾರ್ಜುನಗಿತ್ತು ಕೊಟ್ಟನು ಪ್ರಸಾದಗಳನು       ೫

ಜಗಲಿಗಳ ಜಾಗದಂಕುರವೊಯಿದ ಕುಂಭಗಳ
ಬಿಗಿದ ಬಿಂಗಾರಿಗಳ ಹಸುರ್ವಂದರವ ಮುಸುಕಿ
ನೆಗೆದ ಮೇಲ್ಕಟ್ಟುಗಳ ಸೂಯಾಣ ಪಂಚವರ್ಣದ ಚೂಳಿಕೆಗಳೊಪ್ಪಲು
ಜಗ ಪೊಗಳೆ ಪುಲ್ಲಿಯ ಕಥಾಯಿ ಕಡೆಗಟ್ಟಿಂದ
ಸೊಗಯಿಸಿದ ನೇತ್ರ ಸೂತ್ರಾವಳಿಗಳಿಂ ವಿವಾ
ಹ ಗೃಹವೆಸೆಯಿತ್ತು ಗಿರಿರಾಜಸುತೆಯೆಸೆವ ಕಲ್ಯಾಣಶಾಲೆಯ ತೆಱದೊಳು     ೬

ರತಿಯ ಕಾಮನ ಸರಸ್ವತಿಯ ಬ್ರಹ್ಮನ ಸಿರಿಯ
ಸತಿಯ ನಾರಾಯಣನ ಚಿತ್ರ ವೀಧಿಗಳಲ್ಲಿ
ಅತಿಶಯದುಮಾಮಹೇಶ್ವರರ ಸಹಚಿತ್ರ ಕಂಗತಿ ಚಿತ್ರಮಾಗಿ ತೋಱಿ
ಲತೆಗಳಂ ಪತ್ರಂಗಳಂ ಸರ್ವತೋಭದ್ರ
ತತಿಗಳಂ ಪುರುಷಮೃಗ ಪವನಸೂನುಗಳನಾ
ಯತವಾಗಿ ಬರೆಸಿದಂ ಗುರುರಾಯ ತನ್ನ ನಿಷ್ಕಾಮತೆಯ ಕೀರ್ತಿಯಂತೆ         ೭

ಸುಣ್ಣ ಸೊದೆಗಳ ಸಾರಣೆಯ ಕಾರಣೆಯ ಪಂಚ
ವಣ್ಣ ಭರಿತದ ರಂಗವಲ್ಲಿಗಳ ವೀಧಿಯೊಳು
ಹಣ್ಣಿರ್ದ ಮಕರತೋರಣ ರತ್ನಕಾಂಸ್ಯತೋರಣವೋರಣಂಗಳಾಗೆ
ಕಣ್ಣೆರಡರವರು ಈ ಪುರದ ರಚನೆಯ ನೋಡೆ
ಕಣ್ಣು ಸಾವಿರವಾದಡಹುದೆಂಬರಾಯಿಂದ್ರ
ಕಣ್ಣಸಂಖ್ಯಾತವಾದಡೆ ತಣಿಯಲಾರ್ಕುಮೇ ಎಂಬನಿನ್ನೇ ವೊಗಳ್ವೆನು         ೮

ಪಸುರ್ಮಡಿಯ ಬೆಳ್ಳಿಪಟ್ಟೆಯ ಚಿನ್ನದಾರ ಹೊಂ
ಬಿಸಿಲ ಚೀನಂ ಸಂಧ್ಯರಾಗ ಚೂಳಿಯ ಬಿಳಿದು
ಕುಸುಮಗರ್ಭಂ ಗರ್ಭಸುಖಿ ವಜ್ರಪಟ್ಟಮಂಜಿಷ್ಠ ಪಟ್ಟ ಕ್ರಮವನು
ಹೊಸ ದೇಸಿಕಾಱತನ ಮಿಗಲು ಗಳೆಗಳಲು ಜೋ
ಡಿಸಿ ಕಳಶ ಕನ್ನಡಿಯ ಗೊಂಡೆಯದ ಗುಡಿಯ ಸಂ
ಧಿಸಿದರಿದ್ದೆಸೆಯಲ್ಲಿಯಂಬರವನಂತವಂಬರದ ವರ್ಣದಲೊಪ್ಪಲು           ೯

ಚಿತ್ರತರ ನರಕದೊಳಗಾಳುತೇಳುವ ಪ್ರಾಣಿ
ಮಾತ್ರಮಂ ತೆಗೆದು ಪುಳುಗೊಂಡಮಂ ತೊಳೆವುದಕೆ
ನೇತ್ರತ್ರಯಂಗೆ ಸಾವಿರಸೊಲಿಗೆ ತುಪ್ಪದಿಂ ಸ್ನಾನಮಂ ಮಾಡಿಸಿದಪಂ
ಪುತ್ರರಿಗೆ ಮದುವೆ ಬೇಕಾದವರು ಕನ್ನಿಕೆಯ
ಗೋತ್ರಜರು ಸಹಿತಾಗಿ ಬಹುದು ಗುರು ಮಾಡುವೀ
ಕ್ಷೇತ್ರಪೂಜೆಯ ಜಾತ್ರೆಗೆಂದು ಸಾಱಿಸಲು ನೆರೆಯಿತ್ತು ಜನ ಜಗದಗಲಕೆ         ೧೦

ಅಂಗ ವಂಗ ಕಳಿಂಗ ಲಾಳಮಾಳವ ಚೋಳ
ಕೊಂಗು ಮಲಯಾಳ ಹೊಯಿಸಳ ತುಳವ ದ್ರಾವಿಡ ತೆ
ಲುಂಗ ದೇಶದ ಮಹಾರಾಷ್ಟ್ರ ಸೌರಾಷ್ಟ್ರ ಭಾಗದೊಳಿದಂ ಕೇಳ್ದು ನಲಿದು
ಜಂಗಮಂ ಬಂದುದೆತ್ತಿದ ವೃಷಧ್ವಜ ಮಿಳಿರೆ
ಸಂಗಡಿಸಿ ಕರಿತುರಗ ವಸ್ತ್ರಂಗಳಿಂ ಬಂದು
ಮಂಗಳಂಬೆತ್ತು ನಾನಾ ವಿಧದ ಚೆಂದವಿಡಿದಿರ್ದ ಪಸರಗಳೆಸೆದವು    ೧೧

ಎಲ್ಲಿ ನೋಡಿದೊಡೆ ಊರೂರು ಬಟ್ಟೆಗಳೊಳಗೆ
ಹುಲ್ಲಿಱುಹೆ ನುಸುಳಲೆಡೆಯಿಲ್ಲ ತುಪ್ಪದ ಕೊಡಂ
ನಿಲ್ಲದೆಯ್ತಂದುವಾ ಮಲ್ಲಿಕಾರ್ಜುನನ ಮಹಮನೆಯ ಉಗ್ರಾಣದೆಡೆಗೆ
ಎಲ್ಲವನುವಾಯ್ತೆಂದು ಬಂದು ಗುಡ್ಡರು ಸಿದ್ಧ
ವಲ್ಲಭಗೆ ಬಿನ್ನವಿಸೆ ಲೇಸಾಯ್ತು ನಾಳೆ ತಳು
ವಿಲ್ಲದೆ ಮಹಾನೂಲು ಮುಂತಾಗಿ ಮಾಡುವೆಂ ಕ್ಷೇತ್ರಪೂಜೆಯನೆಂದನು      ೧೨

ಹಱಿಯ ಹೊತ್ತಱಿ ಮಲ್ಲಿನಾಥನವಸರದಿಂದ
ಕೆಱಿಯ ಕೆಲಸವ ಮಾಡಿ ಅಳೆಯಂಬಕಳವನಾ
ಹೆಱಿಧರಂಗರ್ಪಿಸುತ್ತ ಮಧ್ಯಾಹ್ನದೊಳು ಛತ್ರಶಾಲೆಯಿಂ ಬೋನ ಬರಲು
ಕಱಿಕಂಠಗಿತ್ತು ಹೋಮವ ಮಾಡಿ ರುದ್ರರಿಂ
ತಱುವಾಯಿಗೊಂಡು ದಾನವ ನೆರಪಿ ತ್ರೈಲೋಕ್ಯ
ದೆಱಿಯ ಗುರು ಚೌಕದಿಂ ಯೋಗಮಜ್ಜನ ಹಿರಿಯ ಪಡಿ ಮಹಾ ಬೋನವಿತ್ತು          ೧೩

ಪರಿವಿಡಿಯ ಕೇಳಿ ಪ್ರಸಾದವಸುಗೆಯನಿತ್ತು
ಹರಮಲ್ಲಿಕಾರ್ಜುನಂಗಷ್ಟ ಪೂಜೆಯ ಕೊಟ್ಟು
ಪರಿಸೂತ್ರದೊಳಗಿರ್ದ ಬಾದುವೆಯ ಕಟ್ಟಿ ತನಗೊಡವರ್ಪ ಗುಡ್ಡರುಗಳ
ಇರಹೇಳ್ದು ಮಧ್ಯರಾತ್ರಿಯೊಳು ಕ್ಷೇತ್ರವನು ಬಲ
ವರುತ ಕೈಲಾಸಕ್ಕೆ ಹೋಗಿ ಶಿವಗೆಱಗಿ ಶ್ರೀ
ಗುರು ನಾಳೆ ವೈಶಾಖ ಪೌರ್ಣಮಿಯ ಪೂಜೆಗೆಂದಿರದೆ ಬಹ ಸಮಯದೊಳಗೆ೧೪

ಕೂಡೆ ಪೂರೈಸಿದವು ಶಂಖ ಶಿವಭವನದೊಳು
ನಾಡೆ ಮೊಳೆಗಿದವು ಪ್ರಹಾರಭೇರೀನಾದ
ಹಾಡುತಿರ್ದರು ಗುಡ್ಡರೊಲಿದು ಗುರುವಿನ ವಚನಮಂ ಶುದ್ಧ ಭೈರವಿಯಲಿ
ಬಾಡುತಿರೆ ಕುಮುದ ಕಮಲಿನಿಯಿನನ ಬರವಿಂಗೆ
ರಾಡೆ ಮುಖವರಳಿ ಕೆಂಬೆಳಗನೊಳಕೊಂಡಿರ್ಪ
ಮೂಡಗಡೆಯಿ ಮೂಡಿದಂ ದಿನಪನೀ ಕ್ಷೇತ್ರ ಪೂಜೆಯಂ ನೋಡುವಂತೆ         ೧೫

ಷಡು ಸಮಾರ್ಜನೆ ರಂಗವಲ್ಲಿ ತೋರಣ ಗುಡಿಯ
ಸಡಗರಂ ವೀಧಿ ವೀದಿಯೊಳು ಸಿಂಗರಿಸಲ್ಕೆ
ಮೃಡಮೂರ್ತಿ ಸಿದ್ಧಪತಿ ಮಲ್ಲಿನಾಥಂಗೆಸೆವ ಒಸಗೆಯವಸರವ ನಡಸಿ
ಗಡಣದಿಂ ಕೇಳಿಕೆಯ ವಾದ್ಯ ರವದೊಳು ಭಕ್ತ
ರೊಡನೆ ನಂದಿಯನೇಱಿ ಹಾಟಕೇಶ್ವರನು ಹೊಱ
ವಡಲು ಭಂಡಿಯಮೇಲೆ ನವನೂಲಿನಿಂಡೆ ಗಂಗಾ ತರಂಗಂ ಹೇಱಿತು           ೧೬

ಮಲ್ಲಿಕಾರ್ಜುನ ಮೊದಲು ನಾಲ್ಕು ದ್ವಾರಂಗಳಲಿ
ನಿಲ್ಲದೆಲ್ಲಾ ದೇವರಿಗೆ ನೂಲನಿಕ್ಕುತ್ತ
ಬಲ್ಲೆವೆಂಬಧಿಕರಾರೋ ಸಿದ್ಧಸಂಕೇತ ಹೊನ್ನು ಬೆಳ್ಳಿಯ ನಾಳದಿಂ
ಎಲ್ಲಿಯುಂ ಎಡೆವಿಡದೆ ಸೂತ್ರ ಸುತ್ತಲು ಸಿದ್ಧ
ವಲ್ಲಭಂ ಕ್ಷೇತ್ರಪೂಜೆಯ ಮಾಡಿಯಾಗಳೇ
ಭುಲ್ಲವಿಸುತೈತಂದು ಸ್ನಪನಕ್ಕೆ ಘೃತದ ಕೊಡನೆಲ್ಲವಂ ತರಿಸುತಿರಲು      ೧೭

ಧಾರೆಗಹಳೆಯ ಕೊಂಬು ಶಂಖಧ್ವನಿಗಳೊಳಗೆ
ಬಾರಿಸುವ ಭೇರಿ ಮುರಜಂ ಕರಡೆ ಕಂಸಾಳ
ಭೋರೆಂಬ ಜನದ ಕಳಕಳವುಘೇ ಚಾಂಗು ಬೊಲ್ಲೆಂಬ ಜಯಜಯ ರವದಲಿ
ವಾರಿಧಿಯ ಘೋಷಕ್ಕೆ ಪಡಿಯಾಗೆ ಗುರುವಾಜ್ಯ
ವಾರಾಶಿಯಂ ತರಿಸಿದನೊ ಲಿಂಗಸ್ನಪನಕ್ಕೆ
ಆರಱಿವರಲ್ಲದೊಡೆ ಈ ಲೋಕದೊಳಗಿಲ್ಲ ಈ ತುಪ್ಪವೆನುತಿರ್ದರು         ೧೮

ಸುರಪನೀ ಸಿದ್ಧೇಂದ್ರ ಬೆಸಸಲ್ಕೆ ಮೇಘದಿಂ
ಸುರಿದನೋ ಘೃತಕುಂಭ ಕೋಟಿಯನದಲ್ಲ ಮಾಣ್
ಸುರಭಿ ಬಂದಿರದಲೇ ಬಾಣಸುಗ್ರಾಣದೊಳಗಲ್ಲದಿನಿಸೊಂದು ತುಪ್ಪ
ನೆರೆದುದುಂಟೇ ಸರ್ವಸಾಧನಂ ಬಗೆವಡೀ
ಶರಧಿ ತಾನಿನಿತಾದ ತೆಱನೆಂದು ಜಗದ ಜನ
ಶಿರವನಲ್ಲಾಡಿ ಹೊಡವಂಟು ಹೊಗಳುತ್ತಿರ್ದುದೇನೆಂದು ಬಣ್ಣಿಸುವೆನು     ೧೯

ಮಿಸುಪ ಚೌಕದ ಹಟ್ಟಿಯಿಂದಾದಿಲಿಂಗತನ
ಕುಸುರು ನುಸುಳಲಿಕೆ ತೆಱಿಹಿಲ್ಲೆನಿಸಿ ತುಪ್ಪಮಂ
ಕುಸಿಯುತ್ತ ಹೊತ್ತಡಕುತಿರ್ದರು ಮಹಾಭಕ್ತರಾನಂದಮಯರಾಗುತ
ದೆಸೆದೆಸೆಯೊಳುಲಿವ ನಾನಾ ವಾದ್ಯರವದೊಳಗೆ
ಮಿಸುನಿಯಲ್ಲಿ ಕಟ್ಟಿರ್ದ ವೃಷಭ ವಾಲಜದಲ್ಲಿ
ಅಸಮಾಕ್ಷಲಿಂಗಕ್ಕೆ ಸಿದ್ಧನಾ ಸ್ನಪನಕ್ಕೆ ಸಂಕಲ್ಪ ಮಾಡಲೆಂದು      ೨೦

ದೇವ ದಾನವ ಮಾನವರು ಮುಖ್ಯವಹ ಸರ್ವ
ಜೀವಮಂ ನರಕದಿಂ ತೆಗದುದಕೆ ಘೃತಬಿಂದು
ಸಾವಿರ ಸೊಲಿಗೆಯಾಗಿ ಕೈಕೊಳ್ಳು ತಂದೆಯಿಂದಿನ ಮದುವೆಯೆನಿತಾದವಂ
ದೇವ ದೇವರೆ ನೀವೆ ಚಿತ್ತೈಸುವುದು ಎಂದು
ಭಾವಜಾಂತಕನೆನಿಪ ಶಿವಸಿದ್ಧರಾಮಯ್ಯ
ಪಾವನಕರಂಗಳಿಂ ಹೊಂಗೊಡನ ತುಂಬಿಯುಘೆಯುಘೆಯೆಂದು ಸುರಿಯುತಿರಲು        ೨೧

ಗಂಗಾಳ ಕೊಪ್ಪರಿಗೆಯೊಳು ಮೊಗೆದ ಘೃತಧಾರೆ
ಯಂಗಕೆ ಸುಖೋಷ್ಣವಂ ಪರಿಮಳವ ನಾಸಿಕಕೆ
ಕಂಗಳಿಗೆ ಚೆಲುವರಭಸವ ಕಿವಿಗೆ ಸೊಗಸೆಯೆಲ್ಲಾಜ್ಯಪ್ರವಾಹದಿಂದ
ಗಂಗಾನದಿಯ ಭಂಗವಡಗಿತಂದಾದಿ ಶಿವ
ಲಿಂಗ ಕವಕವಿಸಿ ನಗೆ ಜಿಹ್ವೆಗಿನಿಂದಾಗಲಾ
ಮಂಗಳವೆನಿಪ್ಪ ಮಹಮಜ್ಜನಂ ಶಿವನ ಪಂಚೇಂದ್ರಿಯಕೆ ಸೊಗಸಿರ್ದುದು     ೨೨

ಪಂಚಮಹಪಾತಕವುವುಪಪಾತಕಂ ಮಿತ್ರ
ವಂಚನಂ ಗೋಘ್ನತೆ ಕೃತಘ್ನತೆ ಬರೆದ ಸಿವುಡಿ
ಸಂಚಗೆಟ್ಟುದು ಕಲಿಮಲಕ್ಕೆ ನಿರುಹರಣ ಕಾರಣನಾದ ಸಿದ್ಧೇಂದ್ರನಿಂ
ಇಂಚೆವೋಯಿತ್ತು ನಮ್ಮಯ ತೇಜವಿನ್ನೇನು
ಲಂಚಗುಳಿಯಾದ ಶಿವ ಮೀಹವಡೆಯದರಂತೆ
ಮಿಂಚುಧಾರೆಯ ತುಪ್ಪವಿನಿತೆಱಿಯೆ ನರಕವಱಿಯಾಯ್ತೆಂದು ಜವ ಜಱಿದನು         ೨೩

ಮಂಡಳಿಕರುದ್ದಂಡ ನಾಯಕರು ಸಾಮಂತ
ದಿಂಡೆಯರು ಅಧಿಕಾರಿ ಸಜ್ಜನರು ರಾಯರುಂ
ಕಂಡುಗು ಕೊಳಗ ಬಳ್ಳ ಮಾನ ಸೊಲ್ಲಿಗೆಯಿನಿತು ಮೊದಲಾಗಿ ಸ್ನಪನಕೆಂದು
ಕೊಂಡುಬಂದವರ ಕುಲಕೋಟಿ ನರಕದೊಳಪ್ಪ
ದಂಡಣೆಯನುಳಿದು ವೈತರಣಿಯಂ ಕಳಿದು ದಿವ
ಮಂಡಳಕ್ಕೆಯ್ದೆಯಾ ನರಕ ಹಾಳಾಗಲೆಱಿದರು ಗವ್ಯಘೃತವನಂದು           ೨೪

ಆದಿಲಿಂಗಕ್ಕಮೃತ ಮಜ್ಜನವ ಗುರುವೆಱಿದು
ಆ ದಿನಂ ಮಾಡೆ ದಣ್ಣನೆ ದಣಿದು ಶಾಂತಮಯ
ವಾದತ್ತು ನೊಸಲ ಕಣ್ಣಲ್ಲದೊಡೆ ಇನಿತು ತುಪ್ಪವನೆಱಿಯೆ ಭುಗುಭುಗಿಸುತ
ಮೇದಿನಿಗೆ ಪ್ರಳಯವನೊಡರ್ಚುವುದು ಲಿಂಗಮುಖ
ವೇದಕೋಟಿಗಳಱಿಯದಪ್ರತಿಮ ಮೂರ್ತಿಯನು
ಸಾಧಿಸಿದ ಶಿವಸಿದ್ಧಗಾರು ಸರಿಯೆಂದು ಸಾಧುಗಳು ಶಾಂತರು ನುಡಿದರು      ೨೫

ಆದಿಲಿಂಗಕ್ಕೆ ಹರಿಯಜರುದ್ರರಿಂದ ಮು
ನ್ನಾದಲಿಂಗಕ್ಕಷ್ಟ ತನುಗಳಿಂ ಮುಂಚೆ ತಾ
ನಾದಲಿಂಗಕ್ಕಂಡ ಷಂಡ ಕೋಟಿಗಳನೊಳಕೊಂಡ ಮಹದಾಕಾಶದ
ಆದಿಲಿಂಗಕ್ಕೆ ವೇದದ ಬೋಧೆ ನಿಲುಕದ ಮ
ಹಾದಿಲಿಂಗಕ್ಕೆ ಸ್ನಪನಂ ಮಾಡಿ ಶಿವಸಿದ್ಧ
ಕಾದಗ್ಘವಣಿಯಟ್ಟಕಳಿ ಕರುಟು ಚಂದನಂಗಳನೊರಸಿ ಮಜ್ಜನವನು           ೨೬

ಹೊರೆದಗ್ಘವಣಿಯ ಮಜ್ಜನಕೆಱಿದು ಚಂದನಕೆ
ಪರಮಳಂ ತಂಪುಳ್ಳ ಪನ್ನೀರ ಕರ್ಪುರವ
ಬೆರಸಿ ಕಸ್ತೂರಿಯಿಂದುದ್ವರ್ತನಂ ಮಾಡಿ ಕರಿಯ ಮರುಗವನೆ ಸೂಡಿ
ಪರಿಪರಿಯ ನವರತ್ನದಾಭರಣ ಪೂಜೆಯಂ
ವಿರಚಿಸಿ ಸುಗಂಧ ಧೂಪಾರತಿಯನೆತ್ತಿ ಶಂ
ಕರ ಕರುಣಿಯಿರುಳು ತವಗದ ಮೇಲೆ ಜಂಗಮದೊಳಾರೋಗಿಸುದೆಂದನು      ೨೭

ಪೊಡವಿಯೊಳಗುಳ್ಳ ದುಷ್ಕರ್ಮಿಗಳನಂತಕಂ
ಹಿಡಿದು ಕಾಸಲು ಕೊಯ್ದು ಸುಡಲು ಕುಂಭಂಗಳೊಳ
ಗಿಡಿದಿಡಿದು ಕುದಿಸಲ್ಕೆ ಗುಣನಾಮ ಚಿತ್ತದಾಪತ್ತುವೀ ಸಿದ್ಧೇಂದ್ರನಿಂ
ಬಿಡುಗಡೆಯದಾಯ್ತು ಪುಳುಗೊಂಡ ತೊಳೆಯಿತ್ತು ಮುಂ
ದೊಡರಿಚದ ಮುನ್ನ ಶರಧಿಯೊಳಿಪ್ಪ ವಡಬಶಿಖಿ
ಯೊಡಗೂಡಿ ಸುಖದೊಳಿಹೆನೆನುತ ನರಕಾಗ್ನಿ ಪೋಪಂತಬುಧಿಗಿನನಿಳಿದನು    ೨೮

ಕೆಂಬೆಳಗಿನೊಳು ಮೊಳೆವ ಶಶಿಯ ಕಾಣುತ್ತಿನನ
ಬಿಂಬವೆಂದಾ ಚಕ್ರಚಯ ನಲಿಯೆ ಕಮಳವರ
ಳಂಬಡೆದ ವಿಕಳ ಹರುಷಕ್ಕೆ ನಸುನಗುವಂತಿರರೆಬಿರಿದು ಕುಮುದವರಳೆ
ಅಂಬರಕ್ಕೊಗೆವೆ ಹರಿಣಾಂಕನಂ ತಾರಾಕ
ದಂಬಮಂ ಕಾಣುತ್ತ ಕೋಕ ಪದ್ಮಿನಿ ಕಾಮ
ನಂಬುಗೂಡಾಗಿ ಮೊಗ ಕಂದಿತೆನೆ ವಿರಹಿಗಳ ಚಿತ್ತವಾರಂ ನಗಿಸದು   ೨೯

ಪುರದೊಳಗೆ ಸರ್ವ ಜೀವಾಳಿಗುಚಿತಾನ್ನಮಂ
ಪರಿಕಲ್ಪನಂ ಮಾಡಿ ನೆರೆದೀ ಚಕೋರಿ ಹಸಿ
ದಿರಲಾಗದೆಂದು ಸುರಪತಿ ಸೋಮನಂ ಕಳುಪಲೆನ್ನುತಾಜ್ಞಾಪಿಸಿದೊಡೆ
ಪರಮಾಮೃತವ ಸುಧಾಪಿಂಡದೊಳು ತೀವಿ ಕ
ಸ್ತುರಿಯಿಂದ ಮೇಲಕ್ಕರಕ್ಕೆ ಕುಱುಪಿಟ್ಟು ಶ್ರೀ
ಗುರುವಿನೆಡೆಗಟ್ಟಿದನೊ ಸಂಧ್ಯಾಂಗನೆಯ ಕೈಯೊಳೆಂಬಂತೆ ಶಶಿಯೆಸೆದನು     ೩೦

ಆಸುರದೊಳಲ್ಲಲ್ಲಿ ಶಿವಭವನದೊಳಗೆ ಸಂ
ಧ್ಯಾಸಮಯ ಭೇರಿ ಶಂಖಂ ವಾದ್ಯಕುಳ ನಾದ
ಸೂಸುತಿರ್ದವು ಹೊಱನಿವಾಳಿ ಮಂಗಳವುಘೆಯಲಿಡಿದಿಡಿದು ಚೆಲುವು ಮಿಗಲು
ಆ ಸಮಯದೊಳಗಾದಿ ಲಿಂಗದಿಂ ಚೌಕದ ನಿ
ವಾಸದೊಳು ಗುರು ಬಂದು ಸಿಂಹಾಸನದೊಳಿಹ ವಿ
ಳಾಸಮದನೇನೆಂಬೆನಮರಗಣ ಮಧ್ಯದೋಲಗದ ಶಿವನಂತಿರ್ದನು  ೩೧

ಹಾಡುತಿಹ ಗುರುನಿರೂಪಿತದ ವಚನಂಗಳಿಂ
ದಾಡುತಿಹ ಪೇರಣೆಯ ವೇಡಾಂಕ ಕೇಳಿಕೆಯ
ನೋಡುತಿಹ ಪೃಥ್ವಿಯ ಮಹಾಭಕ್ತ ಜನದ ಸಮ್ಮರ್ದನವ ಕೆಲವಿಂಗಿಸಿ
ಮಾಡುತಿಹ ಷಡುರಂಗವಲ್ಲಿಯಂ ಚೌಕಕ್ಕೆ
ಕೂಡುತಿಹ ಗುಡ್ಡರಿಂದರ್ಚಿಸಲು ಸಿಂಗರವ
ಸೂಡುತಿಹ ವಿಸ್ತರವನಾವ ಕವಿ ಬಣ್ಣಿಸುವ ದೇವ ಚಾರಿತ್ರವೆನಲು  ೩೨

ಉನ್ನತವೆನಿಪ್ಪ ಕೃತಪುಣ್ಯರಾಗಿಪ್ಪವರು
ತನ್ನ ಕುಲಕೋಟಿಯುದ್ಧಾರಕ್ಕುಪಾಯಂಗ
ಳನ್ನೆನೆದು ಕ್ಷೇತ್ರ ಪೂಜೆಯಲು ಚೌಕದ ವರಾರಾಧನೆಯ ಮಾಳ್ಪೆವೆಂದು
ಹೊನ್ನ ಕಟಕಂ ಮಕುಟ ವಸ್ತ್ರಾಭರಣ ಕಳಶ
ಕರ್ಣಕುಂಡಲ ಕೀರ್ತಿಮುಖವ ತೋಳೊಳು ತೊಡಿಸಿ
ಚೆನ್ನಾಗಿ ಪೂಜಿಸುವರಖಿಳ ರಾಯರು ಮಂಡಳಿಕರು ದಂಡಾಧೀಶರು            ೩೩

ಶಿವ ವಿಶ್ವತೋಮುಖನು ಎಂದು ಸೂಚಿಸುವಂತೆ
ಚವುಕದೊಳಗೆತ್ತನೋಡಿದಡತ್ತ ಮುಖವಾಗಿ
ಹವಣಿಸಿದ ದೀವಿಗೆಯ ನವನವ ನವೀನ ಗತಿಗಳ ವಾದ್ಯಕೇಳಿಕೆಯೊಳು
ತವತವಗುಘೇಯೆಂದು ನಮಿಸುವರ ಕುಲಕೋಟಿ
ದಿವಮಂಡಲವನಡರೆ ಲಾಕುಳೇಶ್ವರವಿಡಿದು
ಅವಿರಳಜ್ಞಾನ ಪ್ರಭಾಮಯನು ಸಿದ್ಧ ಮಲ್ಲಯ್ಯನಲ್ಲಿಗೆ ಬಂದನು೩೪

ಯೋಗಿಜನ ಹೃತ್ಕಮಲ ಕರ್ಣಿಕಾಸೀನಂಗೆ
ಯೋಗಮಜ್ಜನದಶಾಮೃತವನೊಲವಿಂ ಮಾಡಿ
ಭೋಗಿಕುಳ ಭೂಷಂಗೆ ಗಂಧವಕ್ಷತೆ ಪುಷ್ಪ ಪಟ್ಟಪದಕವನು ಸೂಡಿ
ರಾಗದಿಂ ಧೂಪಾರತಿಯ ನಿವೇದ್ಯವನಿತ್ತು
ಈಗಳೀ ತವಗದಾರಾಧನೆಯ ಕೈಕೊಳಲ್
ಬೇಗ ಬಹುದೆಂದು ಬಿನ್ನೈಸೆ ಸಿದ್ಧೇಂದ್ರನಾ ತವಗಕ್ಕೆ ನಡೆತಂದನು  ೩೫

ಇಂದಿನೀ ತವಗದಾರಾಧನೆಯ ಚೌಕದವ
ರೆಂದುವುಂ ತಪ್ಪದಿರೆ ವಂಶಕ್ಕಿದೇ ತೇಜ
ವೆಂದು ಬೆಸನಿತ್ತು ಶಿವಶಕ್ತಿ ಸಂಪುಟವಾಗಿ ದಿಕ್ಕುದಿಕ್ಕುಗಳೊಳಿರಿಸಿ
ಚಂದನಾಕ್ಷತ ಪುಷ್ಪ ಧೂಪ ದೀಪವನಿತ್ತು
ಮಂದೈಸಿ ಭೋರೆಂಬ ವಾದ್ಯಘನರವದೊಳಗೆ
ತಂದು ಹೊಸ ಪರಿಯಾಣ ಭರಿತವೆನೆ ಬಡಿಸುತಿಹ ಸಡಗರವನೇನೆಂಬೆನು       ೩೬

ಉಪಮೆಗೆ ಅತೀತನಾರೋಗಣೆಯ ಸಾಧನಕೆ
ಉಪಮೆಯಂ ಕೊಡಬಹುದೆ ರುಚಿಯ ಮನದೊಳು ತಾಳ್ದು
ವಪರಾಥಮಂತಿರ್ಕೆ ಪರಿಪರಿಯ ಭಕ್ಷ್ಯ ಪಾಯಸವನೋಗರ ತುಪ್ಪವ
ಅಪರಿಮಿತ ಸಕ್ಕರೆಯ ಮೋಲೋಗರಂಗಳಂ
ತೃಪುತಿಯನುಳಿದು ತಣಿಯದಾರೋಗಿಸುತ್ತಿರ್ದ
ಕಪಿಲಸಿದ್ಧೇಂದ್ರಮಲ್ಲಯ್ಯಲಿಂಗಂ ಜಂಗಮದ ಮುಖದೊಳೇವೊಗಳ್ವೆನು   ೩೭

ತಱಗು ಚಕ್ಕುಲಿ ಹೂಸಣಂಬ ಹೂರಿಗೆಗಳಂ
ಅಱಿಬೋನ ಫೇಣಿ ಗಾರಿಗೆ ಇಡ್ಡಲಿಗೆ ಅವುಗು
ತಿಱಿಸೇವಗೆಯನು ಸರವಳಿಗೆ ಪರಡಿಗೆಯ ನಖಮಿತ್ತೆಲ್ಲ ಲಡ್ಡುಗೆಯನು
ತುಱುವೆಮ್ಮೆ ಕಱಿದ ಹಾಲುಂಡೆ ಹೂರುಂಡೆಯನು
ತೆಱಹಿಲ್ಲೆನಿಸಿ ಗಡಣಿಸುತ್ತ ಗುಡ್ಡರುಗಳಿಗೆ
ಕಱಿಕಂಠನಾರೋಗಿಸಿದಡೆ ಇನಿದಾವರಸಿ ಗರಳ ಸುಧೆಯಂತಿರ್ದುದು೩೮

ಹೆಡಗೆ ಹೆಡಗೆಯಲಿ ಭಕ್ಷ್ಯಂಗಳಂ ತುಪ್ಪಮಂ
ಕೊಡ ಕೊಡಂಗಳೊಳಡಕಿ ತರಲು ತವಗದ ಮೇಲೆ
ಗಡಣಿಸುತ್ತಿರ್ದರಾ ಸಿದ್ಧೇಂದ್ರನಾಜ್ಞೆಯಲಿ ಆರೋಗಣೆಯ ಸಮಯದ
ಹೊಡೆವ ನಾನಾ ಭೇರಿಗಳ ವಾದ್ಯಸಂಕುಳದ
ಸಡಗರದ ಕೇಳಿಕೆಯ ನೋಡುತಿಹ ಭಕ್ತರೆಡೆ
ಯುಡುಗದುಘೆಯುಘೆಯೆಂಬ ಮಂಗಳವಂಗಳೊಳು ಮದುವೆಯ ಮನೆಯೊಳಿತ್ತಲು    ೩೯

ಲಿಂಗದ ಸಮಕ್ಷದೊಳು ಗುರುವಿನೊಕ್ಕುದನಿಕ್ಕಿ
ಮಂಗಳ ವಿವಾಹವನು ಮಾಳ್ಪೆವೆಂದವರೆಯ್ದೆ
ಸಿಂಗರಿಸಿ ಮದವಕ್ಕಳಿಗೆ ಬಾಸಿಗಂ ದಂಡೆ ವಸ್ತ್ರಾಭರಣದಿಂದ
ಕಂಗೆ ಕೌತುಕವೆನಲು ಆರತಿಗಳಂ ಬೆಳಗಿ
ಯಂಗನೆಯರಲ್ಲಲ್ಲಿ ಧವಳಮಂ ಪಾಡುತಿರೆ
ಜಂಗಮವ ತಣಿಪಿ ಶಿವಸಿದ್ಧ ವಿಘ್ನಹ ಲಗ್ನವೆಂದು ಓಂ ಪುಣ್ಯವೆನಲು         ೪೦

ಅಲ್ಲಲ್ಲಿ ಹಿಡಿದ ತೆರೆಗಳು ಸರಿಯಲವರವರು
ಚೆಲ್ಲಿದರು ಒಬ್ಬರೊಬ್ಬರಿಗೆ ಜೀರಗೆವೆರಸು
ಬೆಲ್ಲವಂ ಕೈಧಾರೆಯೆಱಿದು ಮೆಟ್ಟಕ್ಕಿಯಿಡೆ ತಂಡುಲಂ ಧೃತಮೂರ್ಧ್ನರು
ತೆಲ್ಲಯಿಸಿ ಮಂಗಳಾರತಿಯ ವನಿತೆಯರೆಲ್ಲ
ಭುಲ್ಲಯಿಸಿ ಹಾಡಿ ಹರಸುವ ಹೊತ್ತು ಮೆಱಿದು ಸಿರಿ
ವಲ್ಲಭಂ ಗೋಪಿಯರ್ಗೊಲಿದು ಪ್ರತ್ಯೇಕ ರೂಪಾಗಿ ನೆರೆದಂತಿರ್ದರು           ೪೧

ಇತ್ತಲಾರೋಗಿಸಿದವರ್ಗೆ ಕೈಘಟ್ಟಿಯಂ
ಕತ್ತುರಿಯ ಪನ್ನೀರ ಹದನ ಚಂದನವನೊರ
ಸುತ್ತ ಪುರುಷರು ಮಲ್ಲಿನಾಥನಂ ಪ್ರಕೃತಿಗಳು ವೃಷಭವದನವ ಮುಟ್ಟಲು
ಅತ್ಯಂತ ಹರುಷರಸದೊಳಗೆ ಅವಗಾಹನವಿ
ರುತ್ತ ಸಿದ್ಧೇಂದ್ರನು ವಿವಾಹಗೇಹವನು ನೋ
ಡುತ್ತ ಬರಬರಲಲ್ಲಿ ಮಂಗಳಾರತಿವಿಡಿದು ಧವಳಮಂ ಹಾಡುತಿರಲು         ೪೨

ಶಿವಶಕ್ತಿ ಸಂಪುಟದಸಂಖ್ಯಾತ ಮಿಥುನಮಂ
ಶಿವಮೂರ್ತಿ ಸಿದ್ಧಪತಿ ನೋಡುತ್ತ ಪಾಡುತ್ತ
ಶಿವಶಿವೋತ್ಸಾಹದೊಲು ಭೂಮವಿಡಿಸಿದನು ಬಣ್ಣಿಸಲೇನು ಬಾಯ ಬಱನು
ತವಿಲಾಗೆ ತಣಿಪಿ ಮಲ್ಲಯ್ಯನಲ್ಲಿಗೆ ಬಂದು
ಭವ ಶರ್ವ ಶಂಕರನೆ ಅವಧರಿಸು ಸರ್ವಜೀ
ವವ ನರಕದಿಂ ತೆಗೆದ ನೇಮಪೂಜೆಯನು ನೀನೇ ನೋಡಿ ಕೈಕೊಂಬುದು        ೪೩

ಆ ಸಮಯದೊಳಗೆ ಅರುಣೋದಯದ ಕೆಂಬೆಳಗು
ಲೇಸಾಗಿ ತುಡುಕಿತ್ತು ಚಂದ್ರಿಕೆಯ ಕುಮುದಿನಿಯ
ಘಾಸಿಮಾಡಿತ್ತು ತಾರಾಸತಿಯರಿನನ ಕರಘಾಸಿಯೊಳು ರೂಪಳಿದರು
ಈಸೊಂದು ಮಾನಹತಿಯಾಯ್ತೆಂದು ಶಶಿ ಕಂದಿ
ವಾಸಿಯಿಂ ವೈರಾಗ್ಯವೆಡೆಗೊಳಲು ಅಂಬರವ
ಬೀಸಾಡುವಂತೆ ನಭವಂ ಬಿಟ್ಟು ಅಪರವಾರಾಶಿಯೊಳು ಮೈಗರೆದನು          ೪೪

ಇತ್ತಲಾ ಪುರದ ಮಹಮನೆಯ ಬಾಗಿಲೊಳು ಮೊಳ
ಗಿತ್ತು ಪ್ರಹಾರ ಭೇರಿಯ ಶಂಖನಾದ ಪೊ
ಣ್ಮಿತ್ತು ಪ್ರಾತಃಕಾಲ ಪೂಜೆ ವಚನಾಧ್ಯಾಯ ಸ್ತೋತ್ರಪಠನಂಗಳಿಂದ
ಬಿತ್ತರಂಬಡೆದ ಶರಣಾಳಿ ಹಾಡುತ ನೆನೆವ
ಹೊತ್ತು ತ್ರೈಲೋಕ್ಯ ಜೀವಿಗಳ ಜ್ಞಾನಜ್ಯೋತಿ
ಯಿತ್ತಲುಂ ಪುಟ್ಟಿತೆಂಬಂತೆ ರವಿಯುದಲಾಚಲಾಗ್ರದೊಳು ಬೆಳಗುತಿರಲು     ೪೫

ನಿತ್ಯ ಪೂಜೆಯ ಮಾಡಿ ಗುರು ಬಂದು ನೋಡುತಿರೆ
ಭತ್ತವಂ ತವನಿಧಿಗೆ ಕವಿಲೆಯಂ ಕಱಿವೆಡೆಗೆ
ಎತ್ತುಗಳ ಬಣ್ಣಿಗೆಯ ಹಿಂಡಿಗೆಂದಖಿಳ ನೃಪರೋಲೈಸೆ ಪಾವುಡವನು
ಚಿತ್ತೈಸಿಯುಗ್ರಾಣದೆಡೆಗಟ್ಟಿ ಮದುವೆಯ ಚ
ತುರ್ಥಿಯಂ ಮಾಡಿ ಬಂಡಿಯೊಳು ಮದವಕ್ಕಳಂ
ಬಿತ್ತರಂಬಡೆದು ಹಾಡುತ್ತ ಮಹಮನೆಯಿಂದ ಆದಿಲಿಂಗಕೆ ತಂದನು೪೬

ಧರೆಯಱಿಯೆ ಸರ್ವ ಜೀವಾಳಿ ಹರುಷಂಬಡೆಯೆ
ಸುರರು ತುಷ್ಟಿಯನೆಯ್ದೆ ವಿಶ್ವತೋಮುಖನೆನಿಪ
ಹರಗೆ ಆಜ್ಯಸ್ನಪನ ಪೂಜೆ ತವಗಾರ್ಚನೆಯ ಜಂಗಮದ ತೃಪ್ತಿ ಮದುವೆ
ನೆರೆದವಂ ಲೇಸೆನಿಸಿ ಮಾಡಿ ತ್ರಿಲೋಕೈಕ
ಗುರುವೆನಿಪ ಸಿದ್ಧರಾಮಯ್ಯ ಬಾಯಿನವಿತ್ತು
ಪುರಜನಕೆ ಮದುವೆಯೌತಣವಿಕ್ಕಿ ಕ್ಷೇತ್ರಪೂಜೆಯ ಮೂಱುವರುಷಕೊಮ್ಮೆ   ೪೭

ಈ ಪರಿಯ ಕ್ಷೇತ್ರಪೂಜೆಯ ಮಾಡಿ ದಿನದಿನ
ವ್ಯಾಪಾರದೊಳು ಲಿಂಗಪೂಜೆ ಕೆಱಿಯೊಳು ಖನನ
ವಾಪೊತ್ತು ಕಲ್ಲ ಕೆಲಸಂ ಸತ್ರ ಹೋಮ ಚೌಕಂ ಪ್ರದಕ್ಷಿಣ ಸಮಾಧಿ
ಶ್ರೀ ಪಾರ್ವತೀಶನೋಲಗಕೈದಿ ಬಂದಖಿಳ
ವ್ಯಾಪಕಂ ಶಿವಸಿದ್ಧನನುದಿನಂ ನಡಸುತಿರೆ
ಭೂಪ ಬಿಜ್ಜಳನಳಿದ ವೀರ ಜಗದೇವನಿಂ ಸಿದ್ಧಸಂಕೇತದಂತೆ         ೪೮