ರಾಗ : ಮಂಗಳ ಕಂಸ   ತಾಳ : ಝಂಪೆ

ಪಲ್ಲವ ||           ಭೂವಳಯದೊಳಗುಳ್ಳ ಸರ್ವ ಜೀವಾಳಿಗಳ
ಪಾವನಂ ಮಾಡಲೆಂದನುಗೆಯ್ದ ಶಿವಸಿದ್ಧ
ಜಾವಳನೆ ದೇವಕುಲಕರ್ತ ಮರ್ತ್ಯದೊಳುದಿಸಿದನು ಸುರರುಘೇಯೆನುತಿರೆ ||

ಶ್ರೀ ಮಹಾಗುರು ಬಲೋದಗ್ರ ವಿಗ್ರಹನಚಳ
ಸೋಮಧಾಮಾವೃತ ಜಟಾಪಟಲ ವೇಷನಾ
ಶಾಯಮ ಭಯಾತೀತ ನೂತನಾಂಗಂ ಮಂಗಳೋದಯ ದಯಾಭರಿತನು
ಪ್ರೇಮದಿಂದೆಮಗೆ ಭಕ್ತಿಯನೀಗೆ ಶಿವಸಿದ್ಧ
ರಾಮನಭಿರಾಮನುದ್ದಾಮ ಜಿತಕಾಮನತಿ
ಭೀಮ ಸುಖಧಾಮ ಮಾಯಾಮಥನಸಂಗ್ರಾಮ ಸೋಮಧರ ಸಲಹುಗೆಮ್ಮ  ೧

ಹಸಿಯದುಣ್ಣದ ಬೆಮರದೆವೆಯಿಕ್ಕದಾಗುಳಿಸ
ದುಸಿರಿಕ್ಕದನುಗೆಡದ ವಿಣ್ಮೂತ್ರಮಂ ವಿಸ
ರ್ಜಿಸದ ಕಾಮಿಸದ ಕೋಪಿಸದ ಕರ್ಮದ್ವಯಂ ರೂಪಿಸದ ನಿರ್ಮಾಯನು
ನೊಸಲ ಕಣ್ ನಿಜಮಕುಟ ಸಹಜಕುಂಡಲವೆಸೆವ
ರಸೆಯ ಶಂಕರನೆನಿಪ ಸಿದ್ಧರಾಮಯ್ಯನಂ
ತೊಸೆದು ತನ್ನಂ ಪೊಗಳ್ವ ಬೂತೀತನೆಂದೆನ್ನ ಮತಿಗೆ ಮಂಗಳವಾದನು        ೨

ಇವರೆನ್ನ ಸರ್ವಸಾಮರ್ಥ್ಯ ಶಾಸನರೂಪ
ರಿವರೆನ್ನ ಮಹಿಮಾಸುಧಾಪಾನ ಸಂತುಷ್ಟ
ರಿವರೆನ್ನ ಪುಣ್ಯಕೀರ್ತಿಪ್ರಭಾವನಧಿ ವರ್ಧನ ತುಹಿನಕರರೂಪರು
ಇವರೆನ್ನ ಸಮಯ ದಾ ಜ್ಞಾನಪಾಲನಾವಿಷ್ಟ
ರಿವರು ಲೋಕದ ದುರಿತ ಮಥನಕಥನೋದ್ಯೋಗ
ರಿವರೆಂದು ಸಂತಸದೊಳೆಕ್ಕವಿಂಡಂ ಸಲಹುಗಾ ಸಿದ್ಧಚಕ್ರೇಶನು      ೩

ವರಸುಧಾರೋಗಣೆಗೆ ಮಾಧುರದ ಹಂಗೇಕೆ
ತರಣಿಯೋಲಗಕೆ ಸೊಡರಂ ಪಿಡಿವ ತೊಡಕೇಕೆ
ಪರುಷದಾಭರಣಗೆಲಕ್ಕೆ ಮಿಸುನಿಯನಱಸಿ ತೊಳಲುವಾಯಸವೇತಕೆ
ನೆರೆದ ಸೊಗಸಿನ ಸುಗ್ಗಿ ರಸದ ಮಡು ಪುಣ್ಯದಾ
ಗರವೆನಿಪ ಸಿದ್ಧರಾಮನ ಕಥೆಗೆ ಕಾವ್ಯಮಂ
ವಿರಚಿಸುವಡಷ್ಟಾದಶಸ್ಥಲವ ಪೊಗಳಲೇಕಗ್ಗದ ಸಮರ್ಥ ಕವಿಗೆ   ೪

ಸಲ್ಲಲಿತವಹ ಪುಣ್ಯಕಾವ್ಯ ಕಥನದೊಳು ಮು
ನ್ನಿಲ್ಲದುದ ನುಡಿದುಳ್ಳುದಂ ಪೂಳ್ದು ಹುಲ್ಲುಹೊಲ
ನೆಲ್ಲವಂ ಪೊಗಳಿ ಸುಧೆಯೊಳಗೆ ನಂಜಿಡುವಂತೆ ಮೇಳವಿಸಿ ಪೇಳೆ ನಾನು
ಬಲ್ಲಂತೆ ಮರ್ತ್ಯಾನುಸಾರದಿಂ ಶಿವಸಿದ್ಧ
ವಲ್ಲಭನ ಮಹಿಮೆಯಂ ಸರ್ವರಱಿಯಲು ನಟ್ಟ
ಕಲ್ಲೆನಿಸದಿಳೆಯೊಳಗೆ ಸುಳಿವ ಶಾಸನವೆನಿಸಿ ಪೇಳ್ವೆನೀ ಸತ್ಕೃತಿಯನು           ೫

ಸಾದರಂ ಮಿಗೆ ಕಥಾನಾಯಕಂ ದುರ್ವ್ಯಸನಿ
ಯಾದೊಡಂ ನಿಷ್ಕಾಮನೆಂದೆಂದು ದುರ್ನೀತ
ನಾದೊಡಂ ನೀತಿವಿದನೆಂದಜ್ಞನಾದೊಡಂ ಸಲೆ ಶಿವಜ್ಞಾನಿಯೆಂದು
ಮೋದದಿಂ ಕವಿ ಕಾವ್ಯದೊಳ್ ಪೊಗಳಬೇಕೆಂಬ
ಹಾದಿಯಿಂ ಪೊಗಳ್ದಡೀಶ್ವರನಾಣೆ ಶಿವಸಿದ್ಧ
ರಾದಿತ್ಯ ಸಿದ್ಧರಾಮನ ಚರಿತ್ರವನೆಯ್ದೆ ಪೊಗಳಲಾನೆನಿತಱವನು    ೬

ಅರರೆ ತನುವೆರಸಿ ಮನವೆರಸಿ ನಂಟರುವೆರಸಿ
ಪುರವೆರಸಿ ನಾಡುಗಳ್ವೆರಸಿ ರಾಜ್ಯಂವೆರಸಿ
ಹರನನೆಯ್ದಿದ ಪುರಾತನರ ಕಥೆಗಳು ಪುರಾಣಂಗಳೊಳಗಲ್ಲದಿಲ್ಲ
ಧರೆಯಱಿಯಲಿಂತು ಸೊನ್ನಲಿಗೆಯಲಿ ನಡೆಯುತಿಹ
ಸಿರಿಯಾಗಿ ಸಾಮರ್ಥ್ಯ ರೀತಿ ಪೇಳುವೆ ಜಗದ
ಗುರು ಸಿದ್ಧರಾಮನಾಥಂ ಮನುಜನಲ್ಲ ಕಾರಣರುದ್ರನೆಂಬ ಬಗೆಯ           ೭

ಧರೆಗೆ ಸೊನ್ನಲಿಗೆಪುರ ಕೈಲಾಸವಾ ಜಗದ
ಗುರು ಸಿದ್ಧರಾಮನೀಶ್ವರನಲ್ಲಿ ಮೆಱಿವ ಗು
ಡ್ಡರು ಗಣೇಶ್ವರರಖಿಳ ಜನವಮರರವರ ಸತಿಯರು ರುದ್ರಕನ್ಯೆಕೆಯರು
ನೆರದ ಶಿವಭವನಂಗಳಷ್ಟಷಷ್ಠಿ ಕ್ಷೇತ್ರ
ನಿರುತವೆಂದೆತ್ತಿದೆನು ಕಯ್ಯನಿದನಲ್ಲೆಂಬ
ಪರವಾದಿಯಾರವನ ಶಿರದೊಳಿಳುಹುವೆನೆನ್ನ ವಾಮಪದ ಪಾದುಕೆಯನು     ೮

ನಾರು ಬೇರಂಜನಂ ಘ್ರಟಿಕೆ ಮೂಲಿಕೆ ಬಿಲ
ದ್ವಾರ ರಸಸಿದ್ಧಿ ಧಾತೂವಾದ ವಶ್ಯ ಕುಟಿ
ಲಾರಾಧನಂ ವಲಿತ ಪಲಿತನಾಶಂ ಕಾಲವಂಚನಾಭ್ಯಾಸಯೋಗಂ
ಮಾರಣಾದಿ ವಿಕರ್ಮ ಮಂತ್ರ ಯಂತ್ರಂ ತಂತ್ರ
ಸಾರ ಪರಕಾಯಪ್ರವೇಶಮಂ ಬಯಸುವ ವಿ
ಕಾರಿ ಸಿದ್ಧರು ಸರಿಯೆ ಸಿದ್ಧರಾಮಂಗೆ ಶಿವಸಿದ್ಧಕುಲಕಮಲರವಿಗೆ  ೯

ಉರಿಯೊಳಳಿದಂ ವ್ಯಾಳಿ ಕೆಱಿವೊಕ್ಕ ಕೋರಾಂಟ
ನಿರದೆ ಚಕ್ರಕ್ಕೆ ತಲೆಗೊಟ್ಟ ನಾಗಾರ್ಜುನಂ
ಪಿರಿಯ ಕೆಸಱೊಳಗಿದ್ದ ರತ್ನಘೋಷಂ ಸರಿಯೆ ಕೇಳೆಮ್ಮ ಸಿದ್ಧೇಂದ್ರಗೆ
ಉರಿಯ ಹಾಳಾಹಳದ ದಿವ್ಯಮಂ ಗೆಲಿದನಾ
ಕೆಱೆಯನಾದರಿಸಿ ಕಟ್ಟಿಸಿ ಧರಾಚಕ್ರದೊಳು
ಮೆಱೆದು ಗುಡ್ಡರ ಪಾಪಗೆಸಱ ತೊಳೆದಂ ಸಿದ್ಧರಾಮ ಪುಣ್ಯಾರಾಮನು      ೧೦

ಭಸಿತವೇ ಘುಟಿಕೆ ರುದ್ರಾಕ್ಷೆ ಮೂಲಿಕೆ ಸಿದ್ಧ
ರಸ ಮೂಲಮಂತ್ರ ನಿಜಹಸ್ತ ಮೂಷಿಕೆ ನಿಯಾ
ಮಿಸುವಾಜ್ಞೆಯಿಂಧನಂ ಜ್ಞಾನಾಗ್ನಿಯುಪದೇಶ ಕಣ್ಣಿಡುವುದಾಗಿ
ಹೊಸ ಪಾಪಗಂಧ ಕಾಳಿಕೆ ಕೆಡಲು ಭವಿಲೋಹ
ವಿಸರಮಂ ಕಳೆದಾ ಮಹಾಮಹೇಶ್ವರರೆನಿಪ
ಮಿಸುನಿಯಂ ಮಾಡಿ ರುದ್ರಂಗೆ ಮಾಱುವ ಸಿದ್ಧನಾ ಸಿದ್ಧರಾಮಯ್ಯನು       ೧೧

ಕೃತಿವೆಸರು ಶ್ರೀಸಿದ್ಧರಾಮ ಚಾರಿತ್ರವೀ
ಕೃತಿಗೊಡೆಯನಾ ಜಗದ ಗುರು ಸಿದ್ಧರಾಮನೀ
ಕೃತಿಯ ಪಾಲಕರು ಗುರುಭಕ್ತರೆನಿಪೆಕ್ಕವಿಂಡುಗಳಿದಂ ಪೇಳ್ದಾತನು
ಚತುರ ಕವಿರಾಯ ಹಂಪೆಯ ಹರೀಶ್ವರನ ವರ
ಸುತನುಭಯಕವಿ ಕಮಲರವಿ ರಾಘವಾಂಕ ಪಂ
ಡಿತನೆಂದಡೀ ಕಥಾರಸದ ಲಹರಿಯನು ಬಣ್ಣಿಸುವರಾರೀ ಧರೆಯೊಳು          ೧೨

ಹೇಳಲಾರಳವು ಗುರುಕಥನವಿಳೆಯಂ ಬಳಸಿ
ವೇಳಾತಟಂಗಳಿಂ ಶೈಲದಿಂ ಕಲ್ಲೋಲ
ಮಾಲೆಯಿಂ ಶೈವಾಳ ಗರ್ತದಾವರ್ತದಿಂ ತಿಮಿತಿಮಿಂಗಿಲ ಕಮಠದಿಂ
ವ್ಯಾಳ ಕರಿಮಕರ ನೀರ್ವಾನಿಸ ತರಂಗಕುಳ
ಜಾಳ ವಿದ್ರುಮರತ್ನ ಬುದ್ಬುದಾಫೇನಂಗ
ಳೋಳಿಯಿಂದೆಸೆವ ನೀರಾಕರಂ ಭೂಮಂಡಲಕ್ಕೆ ಪರಿವೇಷದಂತೆ      ೧೩

ಆ ರುಚಿರ ವನನಿಧಿಯೊಳಿಟ್ಟ ವಸುಮತಿಯೆಂಬ
ಚಾರು ನಾವೆಯ ಕೂವಕಂಬಮೆಂಬಂತೆಸೆವ
ಮೇರುವಿಂಗುತ್ತರಾಶೆಯೊಳು ಕಪ್ಪಳಿವಂತೆ ಲೇಸಾಗಿ ಕೀಸಿ ಕಡಿದ
ಸಾರ ಶಶಿಬಿಂಬದೊಟ್ಟಿಲ ತೆಗೆದು ತಿರುಳೆತ್ತಿ
ಕೋರೈಸಿ ಪುಟವಿಟ್ಟ ಪುಣ್ಯದೊಬ್ಬುಳಿಯೋ ಪೇ
ಳಾರಱಿವರೆಂಬಂತೆ ಮೆಱೆವ ಕೈಲಾಸನಗದೊಪ್ಪವನದೇವೊಗಳ್ವೆನು          ೧೪

ಗಿರಿಯ ಸಾನುಗಳಿಂದ ಪರಿವ ರಸದೊಜ್ಜರದ
ಪರಿಕಾಲ ನೀರುಂಡು ಬೆಳೆವ ಸುರಕುಜವನದ
ಹೊರೆಯ ಮರುಜೇವಣಿಯ ಮೆಳೆಯ ಮಱೆಯೊಳು ಮೇವ ಸುರಭಿವಿಂಡಿನ ತೆಕ್ಕೆಯ
ಪುರುಷದಱೆಗುಂಡು ಚಿಂತಾಮಣಿಯ ಮೊರಡಿಗಳ
ಪುರುಷಮೃಗದಿಕ್ಕೆ ಚಮರೀಮೃಗದ ತೋರ್ಕೆಗಳ
ವಿರಚಿಸಿತು ಕಿನ್ನರ ವಿಹಂಗ ಪನ್ನಗಕೋಟಿ ಬಳವೆತ್ತ ವನಚರದೊಳು            ೧೫

ಕಣೆಯಕಣೆಯದ ದಾರವಟ್ಟ ವಜ್ರದ ಕದದ
ಫಣಿಗಳಾಕಲ್ಪದಿಂದೆಸೆವ ರುದ್ರರ ಕಾಹ
ನೆಣಿಸಬಾರದ ವೃಷಭಕೇತನಂಗಳ ಅಟ್ಟಣೆಗಳ ಕೊತ್ತಳದೊತ್ತಿನ
ಮಣಿಗಳಸ ಕೋಂಟೆಗಳ ಘಳಿಯಾರ ಭದ್ರೆಗಳ
ಗಣನೆಗಳನಾರ್ ಬಲ್ಲರೈ ಹೊನ್ನರನ್ನ ಕೇ
ವಣದ ತೆನೆಗಳಲಿ ಮೆಱೆಯಿತು ತ್ರಿಣಯನಾವಾಸಪರ್ವತವಗುರ್ವಿಸುತಲಿ      ೧೬

ಆ ನಗೇಂದ್ರನ ಮಕುಟಮಣಿ ನಿಕರವೆಂಬಂತೆ
ಭಾನು ಶತಕೋಟಿಪ್ರಭಾಪಟಲದಿಂ ಮೆಱೆವ
ನಾನಾವಿತಾನ ನೂತನ ರಚನ ಕರ್ಮನಿರ್ಮಿತದ ನವನಿಳಯಂಗಳ್
ಏನನೆಂಬೆನು ನೆನೆವ ಮನಕೆ ಘನವೆನೆ ಕೀರ್ತಿ
ಪಾನಾಲಗೆಗೆ ನಿಘ್ರವೆನೆ ನಡುವೆ ಗಿರೀಶನ ಸ
ಭಾ ನವ್ಯಸದನವೆಸೆದುದು ಜಗದ ಚೋದ್ಯಮಂ ಕಡೆದು ಕರುವಿಟ್ಟಂದದಿ      ೧೭

ಆ ಸಭಾಸದನ ಮಧ್ಯದೊಳಿಟ್ಟ ರತ್ನಸಿಂ
ಹಾಸನದ ಮೇಲೆ ದರ್ಪಿಷ್ಠ ದರ್ಪಕಕರಿಮೃ
ಗೇಶನಗಜಾತೆವೆರಸೋಲಗಂಗೊಟ್ಟನಾಯೆಡವಂಕ ಬಲವಂಕದಿ
ಕೇಶವಾಂಬುಜ ಪುತ್ರರಿಂದ್ರಾಗ್ನಿ ಯಮನಿರುತಿ
ಪಾಶಧರರನಿಲವಿತ್ತಪನೀಶನೆಂಬ ದಿಗ
ಧೀಶರಿರ್ದುರು ಬಹಳ ಮನ್ನಣೆಯ ತೇಜಿಷ್ಠಗಣವಿರ್ದುದೇವೊಗಳ್ವೆನು       ೧೮

ಮೃಡನ ನಡುಗಣ್ಣೆನಿಸಿ ಹಿಡಿವ ಕೈದುಗಳೆನಿಸಿ
ಕುಡುವ ಕೈಯೆನಿಸಿ ನೆನೆವೊಡೆ ಮನಂ ತಾನೆನಿಸಿ
ಯೆಡಬಲದ ಗದ್ದುಗೆಯ ಹರಿಯಜರ ಲೆಕ್ಕಿಸದೆ ಶಿವನ ಹರಿವಿಷ್ಟರವನು
ಅಡಸಿ ಕುಳ್ಳಿರ್ದ ಸಾಲೋಕ್ಯ ಸಾಮೀಪ್ಯಂಗ
ಳೊಡೆತನದ ಸಾರೂಪ್ಯ ಸಾಯುಜ್ಯಪದವಡೆದ
ಕಡುಗಲಿ ಗಣೇಶ್ವರರ ಸಾಮರ್ಥ್ಯದಳವ ಬಣ್ಣಿಪಡೆ ಫಣಿಪತಿಗಾಗದು         ೧೯

ಏಳು ಕಡಲೊಡಲೆಡೆಯಲಡಗಿರ್ದ ಶೈಲಮಂ
ಹೋಳುವರು ವಡಬಶಿಖಿ ತಣ್ಣಿತೆನೆ ಕೋಪಮಂ
ತಾಳುವರು ಕಾಳೆಗದೊಳಿದಿರಾಗೆ ಕೀಳುವರು ಜವನ ಕೋಣನ ಕೋಡನು
ತಾಳಗುಟ್ಟುವರು ರವಿಶಶಿಗಳನಜಾಂಡಕುಳ
ಜಾಳಮಂ ಮಣಿಮಾಡಿ ಕೊರಲೊಳಿಕ್ಕುವ ಕದನ
ಕೋಳಾಹಳರು ಅಸಂಖ್ಯಾಗತಗಣ ನೆರೆದರಾ ಶೂಲಿಯೊಡ್ಡೋಲಗದೊಳು   ೨೦

ಅಜನನಲ್ಪಾಯುಷ್ಯನೆಂಬರಾತನ ಪಿತನ
ನಿಜರೂಪ ಬಿಡಿಸಿ ಹತ್ತವತಾರದೊಳ್ ಬರಿಸಿ
ಸೃಜಿಸಿ ಬೋಱೊಂದು ಸೃಷ್ಟಿಯನು ಶಕ್ರನ ಸಿರಿಯನೊರಸಿ ವಾರಿಧಿಯ ಕುಡಿದು
ಭಜಿಸಿ ಶಿವನಂ ಪಾಲ್ಗೆ ಕ್ಷೀರವಾರ್ಧಿಯ ಪಡೆದು
ಭುಜಗ ತಲ್ಪಂಗನುಗ್ರಹವಿತ್ತ ಸಾಮರ್ಥ್ಯ
ವ್ರಜಕೋಟಿಯಂತಳೆದಭವನ ಸಲುಗೆಯ ಮುನೀಶ್ವರಿರ್ದರಾ ಸಭೆಯೊಳು     ೨೧

ಭಾಳಾಕ್ಷದಿಂ ಪುದಿದ ಶಶಿಕಳಾ ಕಿರಣದಿಂ
ಶೂಲತ್ರಯಂಗಳಸಿಲತೆಗಳ ತಳರ್ಪಿನಿಂ
ವ್ಯಾಳಶಿರರತ್ನದೀಧಿತಿಕಾಯದುದ್ದೂಳ ಭಸಿತದುಜ್ವಳಕಾಂತಿಯಿಂ
ಮೇಳೈಸಿ ದಿವಿಜಮಕುಟದ ಮಣಿಗಳಾಕಲ್ಪ
ಜಾಳದಿಂದೆಸೆವ ಸುರರಂಗನೆಯರಕ್ಷಿಗಳೊ
ಳಾಳೋಕಿಸಲು ಬೆಳೆದ ಬೆಳಗು ಬಳಸಿರಲೆಸೆದನೀಶನಗಜೇಶನಂದು   ೨೨

ಸುರರ ಸಂದಣಿಯ ಕಿನ್ನರರ ದೊಂದುಳಿಯ ಖೇ
ಚರರ ವೊಟ್ಟಿಲ ಪನ್ನಗರ ಪಂಕ್ತಿಯಿಂ ಗರು
ಡರ ಗಡಣ ಯಕ್ಷರಾಕ್ಷಸರ ಕಳವಳವ ಜಡಿಯುತ್ತಿರ್ಪ ಪಡಿಹಾಱರಿಂ
ನೆರೆದು ಕೇಳಿಸುವ ತುಂಬುರ ರಂಭೆ ಭೃಂಗಿಯಂ
ಪರಿಕಿಸಿ ಪಸಾಯಮಂ ಪಾರುಖಾಣೆಯ ಕೊಡಲು
ನೆರೆದಿರ್ದ ಹರನ ಸಭೆ ಸುಖದ ಸೊಗಸಿನ ಜೊಮ್ಮುವಿಡಿದು ಮೆಱೆದಿರಲಲ್ಲಿಗೆ           ೨೩

ಗಾನದೊಳು ವಿದ್ಯದೊಳು ಪ್ರಾಯದೊಳು ಚೆಲುವಿನೊಳು
ಮಾನದೊಳು ಪದವಿಯೊಳು ಭೋಗದೊಳು ಶಿವಭಕ್ತಿ
ಯಾನಂದದೊಳು ಶಿವನ ಕರುಣದೊಳು ಪ್ರತಿಯಿಲ್ಲೆನಿಪ್ಪ ಪುಣ್ಯವನೆ ತಳೆದು
ಜ್ಞಾನಮಯರದ್ರಿಶಿರರೂರ್ಧ್ವಶಿರರೆನಿಸುವಭಿ
ಧಾನದಿಂದೆಸೆವ ಗಂಧರ್ವರಗಜೇಶನಾ
ಸ್ಥಾನಕ್ಕೆ ಬರುತಲವರಿದಿರಾಗಿ ಬಹ ಭೃಂಗಿಯು ಕಂಡು ನಸುನಕ್ಕರು           ೨೪

ಇಂದೆನ್ನನಱಿತಱಿಯದಂತೆ ನಕ್ಕುದಱ ದೆಸೆ
ಯಿಂದವಜ್ಞಾನಮಯವಪ್ಪ ನರಜನ್ಮದೊಳು
ಬಂದು ಭವಿಸತಿಪತಿಗಳಾಗಿ ನೀವೆಂದು ಮುನಿದಾತ ಶಾಪವನಿತ್ತಡೆ
ಮುಂದುಗೆಟ್ಟಱಿವುಗೆಟ್ಟಳುಕುತ್ತ ಬಳುಕುತ್ತ
ತಂದೆ ಕರುಣಿಸು ವಿಶಾಪವನೆಂದು ಬಾಯ್ವಿಡುವ
ಮಂದಮತಿಗಳಿಗೆ ದೊರಕದ ಲೇಸನೀಯಬೇಕೆಂದು ಮನದೊಳು ನೆನೆದನು     ೨೫

ಎವೆಯಿಕ್ಕದುಸಿರಿಕ್ಕದುಣ್ಣದ ಜಿತೇಂದ್ರಿಯ
ತ್ವವ ತಳೆದ ನಿರ್ಮಾಯನೆನಿಸುವ ಶಿವಜ್ಞಾನಿ
ನಿವಗೆ ಮಗನಾಗಿ ಪುಟ್ಟಲು ವಿಶಾಪವೆನಲ್ಕೆ ಗುಣವಿನಿಸನುಳ್ಳಾತನು
ಭುವನದೊಳಗಿಲ್ಲ ಮೇಣುಳ್ಳೊಡಿಂತಪ್ಪಾತ
ನೆವಗೆಂದು ಮಗನಪ್ಪನೆಂದಡದನಂಬಿಕಾ
ಧವನ ಕೇಳೆಂದು ಬಹ ಗಂಧರ್ವರಂ ಕಳುಪಿ ಹೋದನಾ ಭೃಂಗಿಶನು೨೬

ವಿಷಮತರ ಶಾಪರಾಹುಗ್ರಸ್ತರಾಗಿ ಮುಖ
ಶಶಿಮಂಡಲಂ ಕಂದಿ ಕಳೆಗುಂದಿ ಬಂದು ವಂ
ದಿಸುವ ಗಂಧರ್ವರಾಕಾರಮಂ ಕಂಡು ಕರೆದಂತಸ್ಥಮಂ ಕೇಳಲು
ವಸುಧೆಯೊಳು ಪೊಡಮಡಲು ದೇಗುಲಂ ಬಿರ್ದ ನುಡಿ
ಪಸರಿಸುವ ನಾಡ ಗಾದೆಯ ತೆಱದಿ ನಿಮ್ಮ ಸೇ
ವಿಸ ಬಂದ ನಮಗಾಯ್ತು ನರಕವಂಗಜದರ್ಪದಲ್ಲಣನೆ ಕೇಳೆಂದರು೨೭

ಆರಿಂದ ನರಕವಾದುದು ಭೃಂಗಿಯಿಂದದೇಂ
ಕಾರಣಂ ಕಂಡು ನಕ್ಕುದಱಿಂದವೇನೆಂದ
ಘೋರತರ ಭವಿಗಳಹ ನರರಾಗಿಯೆಂದ ಮೇಲೇಂ ವಿಶಾಪವ ಕೊಟ್ಟನು
ಕ್ರೂರನಲ್ಲದ ನಿತ್ಯತೃಪ್ತಂ ಜಿತೇಂದ್ರಿಯಂ
ಶೂರನೇಕೋನಿಷ್ಠನಕ್ಷಯಂ ಮಂಗಳಾ
ಕಾರ ಶಿವಯೋಗಿ ಮಗನೆನಿಸಿ ಪುಟ್ಟಲು ನಿಮಗೆ ನರಜನ್ಮ ಪೋಪುದೆಂದ        ೨೮

ಇಂತಪ್ಪ ಮಹಿಮನುಂಟೇ ಸುಕೃತಮುಳ್ಳೊಡೆ
ಮ್ಮಂತಪ್ಪ ಪಾಪಿಗಳಿಗೊಗೆವನೇ ತಂದೆಯೆನ
ಲಂತದಂ ಶಿವನ ಕೇಳೆಂದಡಿನ್ನೇಗೆಯ್ವೆವೆಂದು ದೈನ್ಯದಿ ನುಡಿಯಲು
ಕಂತುಮದಹರನವಂಗಭಯವಿತ್ತಾತನೆಂ
ದಂತೆಯಾಸಱನಳಿವೆನಖಿಳಮಂ ಹೊರೆವೆ ನಿ
ಮ್ಮಂ ತೆಗೆದು ತಪ್ಪೆನುಮ್ಮಳಿಸಬೇಡಂಜಬೇಡೆಂದು ನಂಬುಗೆ ಗೊಟ್ಟನು      ೨೯

ಧಾರಿಣಿಯೊಳಗೆ ಜನಿಸಿ ಹೋಗಿ ನೀವೆಂದಡಾ
ವೂರೊಳಗೆ ಸೊನ್ನಲಿಗೆಯೊಳಗೆಂದಡೆಮಗೆಂದು
ಕಾರುಣ್ಯನಿಧಿ ಜನಿಸುವೆಯೆನೆ ದೇಹವಿಕಾರ ವಿಷಯಂಗಳಱತ ಬಳಿಕ
ಪಾರದ ಸಮೀರದೊಳಜಾತನೆನಿಸುವ ಬಿರುದು
ತೀರದಂತೊಗೆದು ನಿಮ್ಮಂ ಕಾವೆನೆನಲು ಗಿರಿ
ಜಾರಮಣನಡಿಗೆಱಗಿ ಬೀಳ್ಕೊಂಡರತುಳಸಂಭವಕಾರಣೋದ್ಯೋಗರು         ೩೦

ನಡೆತಂದು ಧರೆಯೊಳು ವಿಶಾಲತೆಯೊಳತಿ ಪೆಸರ್
ವಡೆದಿರ್ಪ ಪುರಪಟ್ಟಣಗ್ರಾಮ ಸಂಕುಳದ
ನಡುವೆ ಕಿಱುವಳ್ಳಿಯಾಗಿಯು ಕಣ್ಗೆ ಮೆಱೆದು ಹೆಂಪಿನೊಳಿರ್ಪುದೆಂತೆಂದಡೆ
ಒಡಲೊಳತಿ ತೋರವೆತ್ತಿರ್ಪವಯವಂಗಳೊಳು
ನಡು ಸಣ್ಣನಾಗಿಯುಂ ಕಣ್ಣಿಗೆಸೆವಂತೊಪ್ಪ
ವಿಡಿದಿಹ ಸುವರ್ಣವಲ್ಲಿಯ ಪುರಕ್ಕೆಯ್ತಂದರಾ ಗರುವ ಗಂಧರ್ವರು           ೩೧

ಧರೆಯ ಕುಡಿಯರ ಕುಲಶಿರೋಮಣಿಗಳೆನಿಪ ಗೌ
ಡರ ಬಸಿಱೊಳೊಗೆ ದ ಸುಮುಹೂರ್ತದೊಳು ಕಱಲು ಕ
ಲ್ಮೊರಡಿ ಬೆಳೆಯಲು ತಂದೆ ಬಾಲಂಗೆ ಪೆಸರ ಮೊರಡಿಯ ಮುದ್ದನೆಂದಿಟ್ಟನು
ತರುಣಿಯಂ ತಂದೆ ಸುಗ್ಗವ್ವೆಯೆಂದಿಟ್ಟನಿ
ಬ್ಬರ ಮನೆಯೊಳಿಬ್ಬರತಿ ಗಳಗಳನೆ ನವವನಾಂ
ತರದ ಕೊಳನೊಳಗೆ ಮಱಿದುಂಬಿಯುಂ ಸಣ್ಣನನೆಯುಂ ಬೆಳೆವವೋಲ್ ಬೆಳೆದರು      ೩೨

ಘನ ವಿದ್ಯದೊಳು ವಿನಿಯ ಕುಲದೊಳಾಚಾರ ರೂ
ಪಿನೊಳು ಗುಣ ಭಕ್ತಿಯೊಳುಭಯ ಭಾಗ್ಯದೊಳು ದಾನ
ವಿನುತ ಸತ್ಯದೊಳು ಸಾಹಸ ತಪದೊಳಗೆ ಶಾಂತಿ ಕೂಡಿ ಧರೆಗೊಪ್ಪುವಂತೆ
ನೆನಹು ನಿಲುಕದ ಪುಣ್ಯಪುಂಜೆಯಹ ಸುಗ್ಗವ್ವೆ
ಗನುರೂಪನಪ್ಪ ಮೊರಡಿಯ ಮುದ್ದಗೌಡನೆಂ
ದೆನಿಪವಂ ಪತಿಯಾಗೆ ಸಮಕಾಳ ಸಂಪತ್ತಿನಿಂದಿರ್ದರೇವೊಗಳ್ವೆನು   ೩೩

ವನಿತೆಯೈದಾಱು ಸೂಲಂ ಗೆಲಿದಳುಱೆ ತನ್ನ
ತನುವಿನೈದಾಱವಗುಣಂಗಳಂ ಗೆಲಿದಂತೆ
ಜನನ ಮರಣದ ಸೂತಕಂ ಕೆಡುವ ತೆಱದಿ ಕೆಟ್ಟವು ಹೊಲೆಗಳಾ ದಿವಸಕೆ
ಮನದ ಶುದ್ಧತಿಕೆ ತಲೆದೋರ್ಪವೊಲು ನರೆ ಮೊಳೆತು
ದನುನಯದೊಳೀ ತೆಱದಲಾಕೆಯಿರುತಿರಲೊಂದು
ದಿನ ಬರುತ್ತಿರ್ದನಾವೂರತ್ತಲಪ್ರತಿಮಸಿದ್ಧಕುಲ ಚಕ್ರೇಶನು          ೩೪

ಹರುಷದಿಂದಲಗನಾಹುತಿಗೊಂಡು ದೇವ್ಯರೆ
ಲ್ಲರನಾಳಿಸುತ್ತ ಧ್ಯಾನದೊಳಿರ್ದು (?) ನೆಱಿ ಕೇಳ್ದು
ಹರಿತಂದು ನದಿಯ ನಡುವಣ ಸುರಿಗೆವಿಡಿದು ತೆಗೆದಾ ಮಾಸನೂರ ನೆರೆದ
ತರುಣಿಯರ ಹರಣಮಂ ಕಾಯ್ದೊಂದು ಭಿಕ್ಷದಿಂ
ಧರಣಿಪನ ಕಟಕವೆಲ್ಲವನೂಡಿದಪ್ರತಿಮ
ಗುರು ರೇವಣಾಚಾರ‍್ಯನಾವೂರ ಸೀಮೆಯೊಳು ದಂಡಿಗೆಯನೊಲಿದಿಳಿದನು     ೩೫

ಹಾವುಗೆಗಳಂ ಕಳೆದು ಮೆಯ್ಯಿಕ್ಕಿ ಪುಳಕಿಸುತೆ
ಭಾವಿಸುತೆ ಕಂಪಿಸುತ್ತಡಿ ನೆಲನ ತಾಗದಂ
ತೋವಿ ನಡೆನಡೆದು ನಿಂದಡಿಗಡಿಗೆ ನೆನೆದು ಹಾರೈಸಿ ಬೆಱಗಾಗುತಿರಲು
ದೇವ ನೀವಿನಿತುಂ ಕೃತಾರ್ಥತೆಯನೆಯ್ದುವುದಿ
ದಾವ ಕಾರಣವೀ ಪ್ರದೇಶಂಗಳೊಳು ಮಹಾ
ದೇವ ಗೃಹಮಿಲ್ಲಾರ‍್ಯರಿಲ್ಲ ತೀರ್ಥಂಗಳಿಲ್ಲೆಂದು ಕೇಳ್ದರು ಶಿಷ್ಯರು          ೩೬

ಉದಕವಿಲ್ಲದ ತೀರ್ಥ ನೆಲೆ ಶಿಲಾ ಲಿಂಗ
ಲ್ಲದ ಶಿವಂ ತನುಧರ್ಮ ಕರ್ಮ ಕಲ್ಮಷತೆಯಿ
ಲ್ಲದ ಹಿರಿಯನೆನಿಪ ಶಿವಸಿದ್ಧನೀ ಪುರದೊಳಗೆ ಜನಿಸಿದಪನಾತನಿಂದ
ಇದು ಲಿಂಗ ಬೀಡಾಗಿ ಸಿರಿಗೆ ಕರುವಾಗಿ ಪು
ಣ್ಯದ ಪುಂಜವಾಗಿ ಮುಕ್ತಿಕ್ಷೇತ್ರವಾಗಿ ಧ
ರ್ಮದ ದಾನಿಯಾಗಿ ಧರೆಯಱೆಯೆ ಮೆೞೆದಪ್ಪುದೀ ಸೊನ್ನಲಿಗೆ ಕೇಳೆಂದನು೩೭

ಎಂದುದಯವಾದಪ್ಪನಯ್ಯಯೆಂದೆನೆ ವರುಷ
ದಿಂದೊಳಗದಾವೂರೊಳೀವೂರೊಳಾರ ಬಸಿ
ಱಿಂದ ಮೊರಡಿಯ ಮುದ್ದಗೌಡನಂಗನೆಯ ಬಸಿಱಿಂದವರ್ಗಳೀ ವೂರೊಳು
ಇಂದಿರ್ಪರೇ ಇರ್ಪರೆಮಗೆ ತೋರ್ಪಿರೆ ತೋರ್ಪೆ
ವೆಂದಡಲ್ಲಿಗೆ ಪೋಗಬೇಕೆಂದ ನಿಜಶಿಷ್ಯ
ವೃಂದವೆರಸೆಯ್ತಂದು ಪೊಕ್ಕಂ ತ್ರಿಕಾಲೋಚಿತಜ್ಞಾನಿಯಾ ಪುರವನು            ೩೮

ಭರವಸದಿನೆಯ್ತರುತಿರಲ್ ತನ್ನ ಮಂದಿರದ
ಪಿರಿಯ ಬಾಗಿಲ ಮುಂದೆ ಶಿವಶಿವ ಮಹಾಕಲ್ಪ
ತರುವಿನಗೆಯೊಗೆಯಲನುವಾಗಿರ್ದ ವನದಂತೆ ಫಳವುದಯವಾಗಲಿರ್ದ
ಮರನಂತೆ ಕಂಪೊಗೆಯಲಿರ್ದ ಮುಗುಳಂತೆ ಸಿಂ
ಗರಿಸಿರ್ದ ಸುಗ್ಗವ್ವೆಯುದರಮಂ ಮುಟ್ಟಿ ಸಿ
ದ್ಧರ ದೇವನೆಱಗಿದಡೆ ಹೆದಱಿ ಕೇಳ್ದಳು ರಾಣಿ ಹೊಡವಂಟ ಕಾರಣವನು    ೩೯

ಎಂದುವುಂ ಸುಖದುಃಖವೆಂದಿಲ್ಲ ಶೀತೋಷ್ಣ
ವೆಂದಿಲ್ಲ ಹಗೆ ಕೆಳೆಗಳೆಂದಿಲ್ಲ ಪುರವಡವಿ
ಯೆಂದಿಲ್ಲ ಹಸಿವು ತಣಿವೆಂದಿಲ್ಲ ಹರುಷಂ ವಿಷಾದಂಗಳೆಂಬವಿಲ್ಲ
ನಿಂದೆ ನುತಿಯೆಂದಿಲ್ಲ ನಾರಿಪುರುಷವ್ರಾತ
ವೆಂದಿಲ್ಲ ದಿವರಾತ್ರೆಯೆಂದಿಲ್ಲ ಮೃದು ಕಠಿನ
ವೆಂದಿಲ್ಲದಪ್ರತಿಮ ಶಿವಯೋಗಯುತ ನಿಮಗೆ ಪುತ್ರನಾದಪನೆಂದನು           ೪೦

ಎನ್ನ ಹರೆಯಂ ಬಿಟ್ಟು ಜರೆವಟ್ಟು ಹೊಲೆಗೆಟ್ಟು
ಕೆನ್ನೆ ನರೆದೊಟ್ಟು ಶಿಥಿಲತ್ವಳವಟ್ಟು ನೆಱೆ
ಮುನ್ನಿನಂಗವಿಕಾರಮಂ ಬಿಟ್ಟು ಹೋಗಿ ಧಾತುಗಳು ಪಲ್ಲಟವಾದವು
ಇನ್ನು ನಾನೆತ್ತ ಮಗನಂ ಹಡೆವುದೆತ್ತಲಾ
ತಂ ನೆಱೆದು ಕುಲವಳಿದು ಯೋಗಿಯಹುದೆತ್ತ ಲೋ
ಕಂ ನಗುವ ಮಾತನಾಡದಿರಿ ಹುಟ್ಟುವಡೆ ಹುಟ್ಟನೆ ಹಿಂದೆ ಹೇಳೆಂದಳು        ೪೧

ಪುರುಷರೆಲ್ಲಂ ಕಂಡು ಕೂಡಲೆಳಸುವ ನಿನ್ನ
ಹರೆಯದೊಳು ಹೊಲೆಗೆ ನೆಲೆಯಪ್ಪ ಋತುಕಾಲದೊಳು
ಪರಮ ದಂಪತಿಗಳ ವಿಕಾರದನುಭವದ ಹೇಯದ ಶುಕ್ಲಶೋಣಿತದೊಳು
ಬೆರಸಿ ಜನಿಯಿಸಲಾರ್ಪನೇ ಮರುಳೆ ಜನಿಸಿಯುಂ
ಹಿರಿಯನೇ ಎಂದಡಿನ್ನೆಂದೊಗೆವನೆಂದಡೊಂ
ದೆರಡು ಮಾಸಕ್ಕೆಂದಡಾತನ ಚರಿತ್ರವೆಂತೆಂದು ಕೇಳ್ದಳು ಗುರುವನು            ೪೨

ಜಡನೆಂದು ಕೇಳನೆಂದಳನೆಂದು ನಗನೆಂದು
ನುಡಿಯನೆಂದುಣ್ಣನೆಂದುಸಿರಿಕ್ಕನೆಂದು ಧೃತಿ
ಗೆಡದಿರು ನಾಮವಂ ಶಿವಸಿದ್ಧರಾಮನೆಂದಿಡು ಮಱೆಯದೆ
ಮಡದಿಯರ ಮಾಣಿಕವೆ ಹೋಹೆನೇ ಎಂದೊಡಲ
ತಡವಿ ಬಲಗೊಂಡು ಪೊಡಮಟ್ಟು ಚಾಮಲದೇವಿ
ಯೊಡನಱಿದಿರಾ ಎಂದು ಕಾಣ್ಬುದೆಂದಾಡಿ ಪೋದಂ ಸಿದ್ಧರಾದಿತ್ಯನು        ೪೩

ಆನೆತ್ತಲಿನ್ನು ಮಗನಂ ಪಡೆವುದೆತ್ತಲ
ಜ್ಞಾನಿಗೆನಗೆತ್ತ ದಿವ್ಯಜ್ಞಾನಿಯೊಗೆವುದೆ
ತ್ತೀ ನೆಲದೊಳಂಗನೆಗೆ ಪುರುಷಸಂಗಂ ಸಮನಿಸದೆ ಗರ್ಭವಪ್ಪುದೆತ್ತ
ಏನಸಂಭಾವಿತನಾದೊಡಂ ವೃದ್ಧರನು
ಮಾನವಿಲ್ಲದೆ ನುಡಿವರೆಂದು ತನ್ನೊಡನಿರ್ದ
ಮಾನಿನಿಗೆ ನುಡಿದುದಾಸೀನದಿಂ ಮಱೆದಳ್ಯಾರನ ಪುಣ್ಯ ಸೂಚನೆಯನು       ೪೪

ಒಂದೆ ನುಡಿ ಸಾಕು ಹುಸಿಯಿಲ್ಲ ವೃದ್ಧರೊಳದೆಂ
ತೆಂದಡಱುವತ್ತು ತುಂಬಿದೊಡೆ ಮಱುಮಾತು ಬೇ
ಡೆಂದು ನಾಣ್ಣುಡಿಗಳುಂಟಱಿದೇಳುನೂರ್ವರುಷವಱಿಯದೇಳ್ನೂರು ವರುಷ
ಸಂದ ರೇವಣಸಿದ್ಧನಾಡಿ ತಪ್ಪುವನೆ ಆ
ವಂದದೊಳೆರಡು ಮೂಱು ತಿಂಗಳಂದಿಂಗೆ ತರು
ಣೇಂದುಮುಖಿಗಂಕುರಿಸಲನುವಾದ ಗರ್ಭವನದಾವ ಕವಿ ಬಣ್ಣಿಸುವನು       ೪೫

ಅತ್ತಲಭವಂ ನೆನೆದು ತನ್ನ ತನುವಂ ಸುತ್ತಿ
ಮುತ್ತಿ ಸೇವಿಸುತಿರ್ಪ ಸಮತೆಯಂ ಸತ್ವಮಂ
ನಿತ್ಯತ್ವಮಂ ತೃಪ್ತಿಯಂ ದಯೆಯನತುಳ ಭಕ್ತಿ ಜ್ಞಾನ ವೈರಾಗ್ಯಮಂ
ಎತ್ತಿ ಸದ್ಗುಣಶತವನಾಯ್ದುಕೊಂಡೊಂದು ಕಿಱು
ಪುತ್ತಳಿಯ ಮಾಡಿ ನಿಜಸಾಮರ್ಥ್ಯ ಸಂಕುಳವ
ನಿತ್ತು ತಂದಿರಿಸಿದಂ ಸುಗ್ಗವ್ವೆಯುದರದೊಳು ಸುರರು ಜಯಜೀಯಯೆನಲು            ೪೬

ಮದನಂಗೆ ಚಿಂತೆ ಮಾಯೆಗೆ ದುಗುಡವಂತಕಂ
ಗೆದೆಗುದಿಹವಾಶಾದಿ ವಿಷಯ ಷಡುವರ್ಗಕ್ಕೆ
ಹೆದಱು ದುಷ್ಕರ್ಮಕ್ಕೆ ನಡುಕವಜ್ಞಾನಕ್ಕೆ ತಲ್ಲಣಂ ತಲೆದೋಱಲು
ಸುದತಿ ಸುಗ್ಗವ್ವೆಗೊಗೆಯಿತ್ತು ನವಗರ್ಭ ಲೋ
ಕದ ಗರ್ಭದಂತಲ್ಲದನುಪಮಂ ಬೀಜವಿ
ಲ್ಲದೆ ಮೊಳೆತ ಸಸಿಯನಾವಂ ಬಲ್ಲನಾತನೀ ಗರ್ಭದನುವಂ ಬಲ್ಲನು         ೪೭

ಮಾಗಿಯಟ್ಟುಳಿಯಿಂದ ಬಱತ ವನವಂ ವಸಂ
ತಾಗಮಂ ಪುಗಲೊಡಂ ಮಂಗಳದ ಮನೆದೈವ
ವಾಗಿ ಮೆಱೆವಂತೆ ಜರೆಯಂಡಲೆಯೊಳೆಪ್ಪವಳಿದಂಗಸಮುದಾಯ ಶೋಭೆ
ಯೋಗಿಪತಿ ಗರ್ಭದೊಳ್ ಮೊಳೆಯ ಮುನ್ನಿನ ಗುಣಂ
ಪೋಗಿ ಹರೆಯದ ಚೆಲುವನೈವಡಿಸಿದಂತೆ ಚೆಲು
ವಾಗಿ ತೊಳತೊಳಗಲಾ ವನಿತೆಯೊಪ್ಪಿದಳಿಂದುವಂ ತಳೆದ ರಾತ್ರಿಯಂತೆ        ೪೮

ತುಂಗ ವಿಕ್ರಮ ಸಿದ್ಧರಾಮನರಿಷಡ್ವರ್ಗ
ಮಂ ಗೆಲಲು ನಡೆವಡಜನಿಟ್ಟ ಗೂಡಾರಮಾ
ಕಂಗೊಳಿಸಿತೆನೆ ತೆಳುವಸಿಱ್ ಪೆರ್ಚಿತಿಂದು ಮೊದಲಿಕ್ಕೆಯಿಂ ತಾಪತ್ರಯಂ
ಪಿಂಗಿದವೆನಲು ವಳಿತ್ರಯವಡಂಗಿದವು ಮೇ
ಗಂಗವಿಸಿ ಕವಿದ ಭವಱೌಟಳದ ಬಾವಿ ಘಾ
ತಂಗೆಟ್ಟು ಪೂಳ್ದಪುದೊ ಎಂಬಂತೆ ಗಂಭೀರನಾಭಿ ನೆಱೆ ಗುಣ್ಪಳಿದುದು       ೪೯

ಬಟ್ಟಮೊಲೆಯೊಪ್ಪಕ್ಕೆ ದಿಟ್ಟಿಯಕ್ಕೆನ್ನುತಜ
ನಿಟ್ಟ ಕಾಪಿನ ಕರಿಯ ಬೊಟ್ಟುಗಳೊ ಗರ್ಭದೊಳು
ಪುಟ್ಟುವ ಶಿವಜ್ಞಾನಿಗಂಜಿ ಪೊಱಮಟ್ಟೋಡಲೆಂದುರೋಜದ ಧಾರೆಯ
ಬಟ್ಟೆಗಾತಿರ್ದ ಮಾಯಾತಮವೊ ತಮ್ಮೊಳಳ
ವಟ್ಟು ತನಗೆಂದಿಟ್ಟ ಪಾಲನೀ ಶಿಶು ಮುಂದೆ
ಮುಟ್ಟನೆಂದುಮ್ಮಳಿಸಿ ಮುಖ ಕಂದಿದಂತೆ ಕುಚಚೂಚುಕಂ ಕಪ್ಪಾದವು        ೫೦

ಪಂಚಮುಖನೇಕ ಮುಖದಿಂದೊಗೆದನೀತ ಜಿತ
ಪಂಚಶರ ಪಂಚೇಂದ್ರಿಯಾಧೀನನಲ್ಲಲಾ
ಪಂಚವಾಯುಗಳ ಹಂಗುಗಳಿಲ್ಲ ಪಂಚಭೂತದಿನಾದ ಕಾಯವಲ್ಲ
ಪಂಚಮುದ್ರಾನ್ವಿತಂ ಪಂಚಾಕ್ಷರೀಪ್ರಿಯಂ
ಪಂಚವರ್ಣಂ ಬಗೆವೊಡೀ ಬಸಿಱ ಶಿಶುವೆಂದು
ವಂಚಿಸದೆ ಪೇಳ್ವಂತೆಯಯ್ದು ತಿಂಗಳಲಿ ನವಮಾಸ ಚಿಹ್ನಂ ಬಲಿದುದು      ೫೧

ಬಸಿಱೊಡನೆ ಬಾಸೆ ಬಲಕೊಲೆಯೆ ತೆಳುಗರುಳ ಕೂ
ಡುಸಿರು ಭಾರೈಸೆ ನಡೆಯೊಡನೆ ನುಡಿ ಬಾಡಲಿ
ರ್ದೆಸೆಯಳ್ಳೆಯೊಡನೆ ಕಣ್‌ಕುಳಿಯೆ ಮೊಲೆಗುಡಿಯೊಡನೆ ಕಕ್ಷಪುಟವಸಿತಮಾಗೆ
ಮಿಸುಪ ಮುಖದೊಡನೆ ತನುಕಾಂತಿ ನಳನಳಿಸೆ ಸಂ
ತಸದೊಡನೆ ಪುಣ್ಯಕಳೆ ನಿಮಿರೆ ವಕ್ಷಾಂಕಿತ
ಪ್ರಸವ ಸಮಯದ ಕೂಡೆ ಸುಮುಹೂರ್ತವನುವಾದವೈದು ತಿಂಗಳೊಳಬಲೆಗೆ            ೫೨

ಹರನ ಬಲಗಣ್ ಕೆತ್ತೆಯಂಬಿಕೆಯ ಕುಚಯುಗಂ
ತೊರೆದವಮರರು ಗುಡ್ಡರಾಗಲನುಗೆಯ್ದರು
ರ್ವರೆಗೆ ನಲಿವಾಯ್ತು ಸೊನ್ನಲಿಗೆ ಪುಳಕಿಸಿತು ಭಕ್ತಿಜ್ಞಾನ ವೈರಾಗ್ಯದ
ಭರಕೆ ಬಲವಾಯ್ತು ಸುಗ್ಗವ್ವೆ ಮುದ್ದಯ್ಯಗಳ
ನೆರೆದ ಕುಲಕೋಟಿ ಶಿವಲೋಕಕ್ಕೆ ನಡೆಗೊಂಡು
ದರಿವಿಜಯ ಶಿವಸಿದ್ಧರಾಮಯ್ಯನುದಯವಾಗಲು ಮನಂದಂದಾಗಳು        ೫೩

ಇಂದೊಗೆವ ತೇಜಿಷ್ಠ ಸಿದ್ಧಚಕ್ರೇಶ್ವರನ
ಮುಂದೆನ್ನ ತೇಜವೇನೆಂದು ಪೋಪಂತೆ ರವಿ
ಬಂದನಸ್ತಾಚಲಕ್ಕುದಯಕಾಲಕ್ಕೆ ಸುತ್ತಿದ ಕರಿಯ ತೆರೆಯೊ ಎನಿಸಿ
ಹಿಂದೆ ಕತ್ತಲೆ ಕವಿದು ತೆತ್ತಿಸಿದ ಮೇಲ್ಕಟ್ಟಿ
ದೆಂದೆನಿಸಿ ತಾರೆ ತಳಿತವು ಹಿಡಿದ ಹೆಜ್ಜೊಡರ
ನಿಂದುಬಿಂಬಂ ಪೋಲ್ತುದಾಹ ಸುಗ್ಗವೆಯ ಪುಣ್ಯವನೇನ ಬಣ್ಣಿಸುವೆನು      ೫೪

ನೇಲೆಯಂ ಹಿಡಿವ ಕಪ್ಪಡಮುಡುವ ನಿಂದಿರಲು
ಸಾಲದಳವಳಿವ ಬಾಯ್ವಿಡುವ ಸಂಕಟವಿಲ್ಲ
ಸೂಲಿಸುವ ಬಗ್ಗಿಸುವ ನೋಯಿಸುವ ನುಲಿವ ಮರ್ಮಸ್ಥಾನಮಂ ನಿಗುಚುವ
ಬಾಲೆಯರ ಹಂಗಿಲ್ಲ ಮೇಲೆ ನಾಣ್ಗೆಡುವ ನಿ
ಘ್ರಾಂಲಬಮಿಲ್ಲ ಮಧ್ಯಮರಾತ್ರಿ ಮೆಯ್ದೆಗೆದ
ಕಾಲ ಶಯನಸ್ಥಳದೊಳೆಂದಿನಂದದಿ ನಿದ್ರೆಗಟವಟಿಸುತಿರ್ಪಾಗಳು    ೫೫

ಕೆಲಬಲದೊಳಿದ್ದಿರ್ದು ದುಂದುಭಿಗಳೆಸೆಯೆ ಪೂ
ಮಳೆ ಸುರಿಯೆ ಜಯಜಯವುಘೇಯೆನುತ ತಮತಮಗೆ
ಫಳವಿಡಿದು ಮಂಗಳಾರತಿವಿಡಿದು ಸೇಸೆವಿಡಿದಮರ ಕಾಮಿನಿಯರೈದೆ
ಬಳಸಿ ಕಮಳದ ಮಧ್ಯದಿಂ ಹಂಸಶಿಶು ಮೇಘ
ದೊಳಗಿಂದ ತರಣಿಶಿಶುಯೊಗೆವಂತೆ ಸತಿಯ ನಿ
ರ್ಮಳ ಗರ್ಭದಿಂದುದಯವಾದನಾ ಮಹಮುಕುತಿ ಸತಿಯ ನಚ್ಚಿನ ನಲ್ಲನು  ೫೬

ಮಾಸಿಲ್ಲ ಮಲವಿಲ್ಲ ದುರ್ಗಂಧವಿಲ್ಲೊಡಲ
ಪೂಸಿದಧಮದ್ರವಂ ತಾನಿಲ್ಲ ತೊಳಗುವೆಳ
ನೇಸಱೋ ಎಂಬಂತೆ ಕಣ್ಗೆ ಮಂಗಳವಾದ ಕೈವಲ್ಯದಳವುಳಿಗನ
ಆ ಸತಿಯರೊಲಿದು ಬಲಗೊಂಡೆಱಗಿ ಪೊಗಳುತಿ
ರ್ಪಾ ಸಮಯದೊಳು ಶಿವನ ತೋಳ ತೊಡವಾನತರ
ಮೀಸಲ ಮನೋರಥವು ಸಿರಿಸರಸ್ವತಿವೆರಸಿ ಗಿರಿಜೆ ಬಿಜಯಂಗೈದಳು           ೫೭

ಸಕಲಲೋಕಂಗಳಂ ಹೆತ್ತ ಮುತ್ತೈದೆ ಬಾ
ಲಕತನದ ನಟನೆಯಂ ನೋಡಿ ದುಷ್ಕರ್ಮ ಬಾ
ಧಕನೆ ಬಾ ಲೀಲಾವತಾರ ಬಾ ಜಂಗಮಜ್ಯೋತಿ ಬಾಯೆಂದು ಗುಣವ
ಪ್ರಕಟಿಸುತ್ತೆತ್ತಿ ತೂಪಿಱಿದು ಕೊಂಡಾಡಿ ಮೋ
ಹಕೆ ಮೊಲೆಯನೂಡಿ ಬಾಯಿನವನೊಡನಿರ್ದರು
ದ್ರಕುಮಾರಿಯರ್ಗಿಕ್ಕಿ ತೊಟ್ಟಿಲೊಳು ಪಟ್ಟಿರಿಸಿ ಜೋಗುಳಂ ಪಾಡಿಸಿದಳು    ೫೮

ಹಸಿದು ಬಯಲಿಂಗಾಹುತಿಯನೀವ ಬಾಳ ಜೋ
ಸಸಿಯ ಕೊರಗಿಸಿ ರಸವ ಹಿಳಿದುಕೊಂಡಿಳೆಗೊಗುವ
ಹಸುಳೆ ಜೋ ಒಡಹುಟ್ಟಿದರನಗಲ್ವ ನಿರ್ಮೋಹಿ ಜೋ ಪರಾಂಗನೆಗೆ ಕೂರ್ತು
ಒಸೆದು ತಾಯಂ ತೊಱೆವ ಬೆಸನಿ ಜೋ ಸುಖಗೆಟ್ಟು
ಕುಸುಮಕ್ಕೆ ಕೋಪಿಸುವ ಸ್ಥಾಣುವಂ ಹೊರೆವ ನಿ
ಪ್ಪಸರ ಜೋ ಎಂದು ಕಟಕಿಯನಾಡಿ ಸೂಚಿಸಿದಳಾ ಬಯಲ ಬಾಲಕಂಗೆ        ೫೯

ಪ್ರೇಮದಿಂ ಸಿದ್ಧರಾಮಯ್ಯನೆಂದಾತಂಗೆ
ನಾಮವಂ ಕಟ್ಟಿಕೊಟ್ಟೆನ್ನ ಗಂಡನ ಸರ್ವ
ಸಾಮರ್ಥ್ಯವಳವಡಲಿ ನಿನಗೆಂದು ಹರಿಸಿ ಹಾರೈಸಿ ಪಟ್ಟಿರಿಸಿ ತಿರುಗಿ
ಹೈಮಮತಿ ಕೈಲಾಸಗಿರಿಗೆ ತೆರಳಿದಳಿತ್ತ
ಲಾ ಮಹೋತ್ಸವದ ಸಂಭ್ರಮದನಂತರ ಪುಣ್ಯ
ಧಾಮೆ ಸುಗ್ಗವ್ವೆ ಕಡುಸುಖದ ಸೊಗಸಿನ ಜೊಮ್ಮು ತಿಳಿದು ಮೈಮುರಿದೆದ್ದಳು       ೬೦