ಪಲ್ಲವ
ಉರಿವುರಿವ ಬಿಸಿಲೊಳಗೆ ಬಸವಳಿದು ಬೆಂಡಾಗಿ
ಹರಣದಾಸೆಯ ಹಾರದಿಪ್ಪಾದಿಮಯ್ಯಂಗೆ
ಕರುಣದಿಂದಿದಿರಾಗಿ ಬಂದು ನಿಜಮೂರ್ತಿಯಂ ತೋಱಿದಂ ಸೋಮೇಶನು

ಶ್ರೀಗಿರಿಜೆಯರಸ ಸೌರಾಷ್ಟ್ರಪತಿ ಸೋಮನಂ
ಬೇಗದಿಂ ತಂದು ಹುಲಿಗೆಱೆಯ ಜಿನನೊಡಲನಿ
ಬ್ಭಾಗಮಂ ಮಾಡುವೆಂ ದೂಷಕಂಗಾನಾಡಿದವಧಿಯಿಂ ಮುನ್ನಮೆಂದು
ಹೋಗೆ ವಿಂಧ್ಯಾರಣ್ಯ ಪಶ್ಚಿಮವನಧಿ ಮೇರೆ
ಯಾಗಿ ಗಗನಂ ಮುಟ್ಟ ಹಗಲಿರುಳ ಭೇದವಾ
ರ್ಗೇಗೈದೊಡಂ ತಿಳಿಯದೆನಿಸಿ ಕ್ರೂರ ಮೃಗಂಗಳಿಂ ಭಯಂಕರವಾದುದು       ೧

ಜಾಲವಾಲಂ ನೆಲ್ಲಿ ಕನ್ನೆಲ್ಲಿ ಕಡವೊಡವು
ಹಾಲೆಯಂಕೋಲೆ ದಿಂಡಂ ತಂಡಸರನರಳಿ
ಬೇಲವರುಟಾಳ ಹಲಸೆಲವ ಕಿಱಿಸಂದಿ ಚಂದನಕಕ್ಕೆ ಬಿಕ್ಕೆ ತರಿಯ
ಹೂಲಿ ಮಾಲಿನಿ ಬನ್ನಿ ಹೊನ್ನೆ ಸೊಗಡಗಿಲು ಕಿ
ತ್ತಾಲ ಹೆಜ್ಜಾಲ ಹೆದ್ದುಂಬರೌದುಂಬುರಂ
ಗಾಲಯವದೆನಿಸಿ ನಾನಾ ಭೂಜದೊಗ್ಗಿನಿಂ ಕಾನನಂ ಕಣ್ಗೆಸೆದುದು  ೨

ಮಿಕ್ಕ ಸರುವಿಂಗೆ ದರುವಿಂಗೆ ಹಳ್ಳಕ್ಕೆ ಕೊ
ಳ್ಳಕ್ಕೆ ಗಿಡುವಿಂಗೆ ಮಡುವಿಂಗೆ ಬೆಟ್ಟಕ್ಕೆ ಘ
ಟ್ಟಕ್ಕೆ ಕುತ್ತುಱು ಕೋಣೆಗಿಡು ಕುಱುಂಗಿಡಿದ ಮೆಳೆಮೆಳೆಗೆ ನಡುಗಾನಲಿಂಗೆ
ತೆಕ್ಕೆಗತ್ತಲೆ ಗತಿಕ್ರೂರತರ ನಾನಾ ಮೃ
ಗಕ್ಕೆ ನಾನಾಧ್ವನಿಗೆ ನಾನಾ ಭಯಂಕರ
ಕ್ಕಿಕ್ಕೆ ವನೆಯಾನೆಂದು ಬೊಬ್ಬಿಟ್ಟು ಪೇಳ್ವಂತೆ ಘೀಳಿಡುತ್ತುಲಿದುದಡವಿ      ೩

ಎರೆಯ ಗುಂಡಿಗೆ ಗಾಳೆ ಕೂಳಿಬಲೆಯುಱೆ ಮಸೆದು
ಸರಳಮೂಡಿಗೆ ತಡಿಕೆಗಳೆ ಬೀಸುಗಣ್ಣಿ ಹಿಡಿ
ಯೆರೆಳೆ ಬೆಳ್ಳಾರ್ಪಟಂ ಹಿಡಿನಾಯಿಗಳು ಹೆಗಲಸಾಳುವಂ ಬಂಡಿಯ ಹುಲಿ
ಸುರಗಿ ಹಾಡುವ ಸಿಂಗಿಹಿಡಿದ ಬಡಿಕೋಲಿಟ್ಟಿ
ಮರವಿಲುಗಳೆಕ್ಕೆವಡೆ ತೋಱೆತ್ತು ಗೂಂಡುಗಳ
ಪರಿಪರಿಯ ಹಕ್ಕಿವೆರಸಡವಿಗಂತಕರಂತೆ ನಡೆವಶಬರರ ಕಂಡನು      ೪

ಎರಳೆ ಸರಳಿಸಿ ಹೋದುದಿಲ್ಲಿ ಹಿಂಗಾಲೊದೆದು
ತೆರಳ್ದ ಮಣ್ಣಿದೆ ಸೊಕ್ಕಿದೆಕ್ಕಲಂಗಳು ಹೋದ
ವೆರಡು ಕಟವಾಯಿಂದೆ ಸುರಿದ ನೊರೆಯಿದ ಕರಡಿ ತಣಿದಾಡಿಹೋದುದಿಲ್ಲಿ
ನೆರೆದಿಱುಹೆಗಳ ಹೀರಲೊಡೆದದ ಹುತ್ತವಿದೆ ಹುಲಿ
ಮರೆಯನೆಳೆಯಿತ್ತಿಲ್ಲಿ ಬಿಸಿನೆತ್ತರಿದ್ದುದೆಂ
ದಿರದೆಱಗಿ ಹಜ್ಜೆಯಂ ನೋಡಿ ಬೆಂಬಳಿವಿಡಿದು ಹರಿವ ಶಬರರ ಕಂಡನು       ೫

ಹರೆದು ನಡೆ ಬಲೆಯ ಪಸರಿಸು ಹಜ್ಜೆಯಂ ನೋಡು
ಸರುಹಕಟ್ಟುಲುಹನಾಲಿಸು ಕುತ್ತುಱಂ ಸೋದಿ
ಸೆರೆಗೆದರು ಬೆಳ್ಳಾರ ಬಿಗಿ ತೋಹಿನೊಳು ನಿಲ್ಲುತಿಱಿಯಂಬುವಿಡಿ ನಾಯ್ಗಳ
ಕೊರಳ ಹಾಸದ ನೇಣಿ ಸಡಿಲಬಿಡು ಸನ್ನೆಗೈ
ಮರನೇಱು ಬೇಗ ಕುಳಿಯೊಳು ಕುನ್ನಿಯಂ ಹೊಗಿಸು
ಚರಿತವೆಂದೊಬ್ಬರೊಬ್ಬರ ನಾಡುವಬ್ಬರದ ಬೊಬ್ಬೆಯದ್ಭುತಮಾದುದು  ೬

ತೆರೆಯ ಸರಳಿಸುವೆರಳೆ ಬಲುನಾಯ ಬಾಯಿಂದೆ
ಮುರುಚಿಕೊಂಡೋಡುವ ಮೊಲಂ ತೋಹುಕಾಱರಂ
ಹರಿದೆಱಗಿ ಕೊಲುವ ಕೋಣಂ ಕುಳಿಗೆ ಬಾರದಳಲಿಸುವ ಕರಿನೆಱೆನಾಂಟಿದ
ಸರಳೊರಸಿ ಹೋಹ ಮರೆಹೊಕ್ಕ ಜಾಯಿಲನಕಿ
ಬ್ಬರಿಗೊಱೆವ ಹಂದಿ ಬಲೆಯಂ ಹುಗದ ಹಕ್ಕಿಯ
ಬ್ಬರವ ಕಂಡತಿ ನೊಂದು ಮೀಸೆಗಡಿದಾ ಬೇಡವಡೆಯೊಡೆಯನಿಂತೆಂದನು      ೭

ಎಡೆಗೊಡದು ಬೇಂಟೆ ದಿಗುಬಂಧನವ ಮಾಡು ಕಾ
ಡೊಡೆಯನಂ ನೋನು ಸೊಕ್ಕಿನ ಧೂಪಮಂ ಬೀಸು
ನಡೆಕೋಣನೆಲುವ ನಾಯ್ವೆಂ ಮರೆಯ ಮೂಳೆಯಂ ಮುಱಿವೆನಳಲಿಸುವೆರಳೆಯ
ಅಡಗನುಗಿವೆನು ಸೊಕ್ಕಿದೆಕ್ಕಲನ ರಕ್ತಮಂ
ಕುಡಿದೀಯರಣ್ಯವೆಲ್ಲಂ ತಣಿಯಬೇಕು ಬಿಡು
ಬಿಡೆನುತ್ತೆ ಸಾಳುವಂಗಳನಂತವಂ ಬಿಡಿಸಿದಂ ಟೊಪ್ಪಿಗೆಗಳನುಗಿದು  ೮

ಕಾಗೆ ನವಿಲಿಬ್ಬಾಯ ಗುಬ್ಬಿ ಪಾರಿವ ಕೊಂಚೆ
ಗೂಗೆ ಕುಕಿಲಿಱಿವ ಗಂಟೆಗ ಕಿಱುಬ ಗೊರವ ಗಿಳಿ
ಜಾಗರಿಗ ಹರಡೆ ಹಸುಬಂ ಪಿಸುಣ ಹೆಬ್ಬಕ್ಕಿ ಗಿಡುಗ ಹೊಱಸೋರೆ ಶಕುನಿ
ಮೂಗನುರಿಗಣ್ಣ ಚಾಳಕ್ಕಿ ಬೆಳ್ಳಕ್ಕಿಯಂ
ಜೂಗ ಹದ್ದೆಂಬಿವಂ ಸಾಳುವಂಗಳು ನೆಗೆದು
ತಾಗಿ ಹೊಡೆಹೊಡೆದಿಳೆಯಲಿಕ್ಕಿದೊಡೆ ಹಕ್ಕಿಗಳ ಮಳೆ ಕಱೆದುದಡವಿಯೊಳಗೆ            ೯

ಹಿಡಿ ನವಿಲನಿಱಿ ಹುಲಿಯನಟ್ಟು ಮರೆವಿಂಡ ದರಿ
ಗೆಡಹು ಕರಿಯನು ಱೊಪ್ಪವಿಡಿದ ಹಂದಿಗೆ ತಡವಿ
ಬಿಡು ನಾಯನೆಚ್ಚೆರಳೆಯಂ ಕಲ್ಲಲಿಕ್ಕು ಕೋಣನ ನೋಡು ಹೋಗಗುಡದೆ
ಹೊಡೆಯುಡುವ ಮಱೆವಿಡಿದು ಕುತ್ತು ಕೋಣನ ನೋಯ
ಲಿಡು ಮೊಲನ ಮರಚು ಸಿಂಹವ ಹಲವು ಬಲೆಗೆದಱಿ
ನಡೆಗೆಡಿಸು ಹಕ್ಕಿಗಳನೆಂಬ ಬೇಡರ ಬೊಬ್ಬೆಯಿಂದಡವಿ ಘೀಳಿಟ್ಟುದು         ೧೦

ನೆರೆದೊಡಟ್ಟುವ ಹೊಕ್ಕೊಡಂಡಿಸುವ ಮುರಿದೊಡೊಡ
ಮುರಿವ ಬೊಬ್ಬಿಟ್ಟೊಡುಬ್ಬೇಳ್ವ ಬೆರಸಿದ ನಾಯ
ನೆರಡುಕಡಿಗಳೆವ ಕವಿದಗೆಚ್ಚಂಬ ಟೊಣೇವಱೊಪ್ಪದೆ ಮಲಗಿದಾಡೆಗಡಿವ
ಹರಿದಿಟ್ಟೊಡಾದಿಗೊಂಡೊಳಪೊಕ್ಕು ತಿವಿದವನ
ಶಿರತನಕ್ಕೆತ್ತುವ ಮಗುಳ್ದಿಱಿದೊಡೊಳಹೊಯಿದು
ಕರುಳ ತೊಂಗಲನುಗಿವ ಸೊಕ್ಕಿದೆಕ್ಕಲನ ಬೇಂಟೆಗಳಲದುಭತವೆಸೆದುದು       ೧೧

ಇಡಿದ ಹುಲ್ಲೊಳಗೆ ಹುಲ್ಲೆಂಯ ನಟ್ಟೆ ಬಲೆ ಕಾಲ
ತೊಡಕಲೊದೆದೊದೆದು ಬಿಡುದೊಡೆ ಹಾಱಿ
ದೊಡೆ ಮುರಿಗೆಯೊಡೆದು ಬರಿಯಂ ಬಿಡಿದೆ ಹೊಡೆವ ದಡಿವಲೆಗೆ ನೊಂದೆಡೆಮೆಳೆಯ ಹೊಕ್ಕುನೇಣ
ಕಡಿವುತಿರೆ ಹುಲಿಯಿತ್ತ ಮುದಿಬೇಡನೈದಿ ಬಳಿ
ವಿಡಿದು ಮರೆಯೆಂದು ಬಗೆದೆಱಗಿ ನೋಡಲು ಕಂಡು
ಕಡು ಮುಳಿದು ಗರ್ಜಿಸಲು ಬಿಲ್ಲಬಿಸುಟೊಱಲುತ್ತಲೋಡಿದನ ದೇವೊಗಳ್ವೆನು         ೧೨

ಬಿಟ್ಟ ತಲೆಗಿಂಡು ಹಿಡಿದುಕಳೆದುಡಿಗೆ ಕಾಡಮುಳು
ನಟ್ಟು ಕುಂಟುವ ಕಾಲುಬೆನ್ನ ಬಿಗುಹಳಿದೆಳೆವ
ಮೊಟ್ಟೆಗೂಳೆಡಹಿ ಕೆಡೆದೊಡೆದ ಮೊಳಕಾಲ್ತೇಕುವಳ್ಳೆ ಗಳುವೆರಸೊಱಲುತೆ
ಕಟ್ಟೋಡಿಬಪ್ಪುದನು ಭಟರು ಕಂಡಿದಿರಡ್ಡ
ಗಟ್ಟಿ ಕೇಳಲು ಹು ಹು ಹು ಹುಲಿಯೆನುತೆ ಹೆದಱಿದನು
ತೊಟ್ಟನೆಲ್ಲಿರ್ದಪುದೊ ತೋಱೆಂದೊಡಾನಮ್ಮೆ ನೀವಱಸಿಕೊಳಿರೆಂದನು     ೧೩

ಕೆದಱುವೀಲಿಯ ಚಲ್ಲಣದ ಸೊಕ್ಕಿದೆಕ್ಕಲನ
ತಿದಿಯೆಕ್ಕುವಡದ ಗರುಡನ ಗರಿಯ ತಲೆವರೆಯ
ಮದಗಜದ ಮುತ್ತಿನೇಕಾವಳಿಯ ಹೊಂಮೃಗಾಜಿನದ ಱವಕೆಯ ದಂತದ
ಹದವಿಲ್ಲ ಬೆನ್ನ ಬತ್ತಳಿಕೆಗಳ ಕೆಲದ ಮಚ
ರದ ಗೊಂಡೆಯದಲೆಸೆವ ಜವ್ವನದ ಶಬರಿಯರು
ಪದೆದುಲಿದು ಕುಸಿದು ತೆಗೆದಣುಕೆದ್ದು ಹರಿವ ಹುಲ್ಲೆಗಳನೆಸೆವುದ ಕಂಡನು  ೧೪

ಕರಿಯಿಱಿದ ಕೋಣನೆಱಗಿದ ಪಂದಿ ಸೀಳ್ದ ಕೇ
ಸರಿ ಬಗಿದ ಹುಲಿಹೊಯಿದ ಕರಡಿ ಕಾರಿದ ಕಡವೆ
ಬರೆ ತುಳಿದ ಹರಿಣ ನೆಗೆದೊಡೆದ ಚಿತ್ರಕನುಗಿದ ಎಯ್ಯೆಚ್ಚ ಖಡ್ಗಿ ಹೊಯಿದ
ಮರೆಕುತ್ತಿದೇಱುಗಳ ವೇದನೆಗೆ ಬಾಯ್ವಿಟ್ಟು
ನರಳುತೊಱಲುವ ಕಿರಾತರನು ಮಲಗಿಸಿಕೊಂಡು
ಮರನ ತಣ್ಣೆಳಲ ತಂಪಿನೊಳು ಸಾಗಿಸುವ ಶಬರಿಯರ ನೋಡುತೆ ನಡೆದನು   ೧೫

ಓವಿ ಹೀಲಿಯನುಟ್ಟು ತಳಿರ ಮೇಲುದನುರಕೆ
ತೀವಿ ಗುಂಜಾಭರಣಮಂ ತೊಟ್ಟು ಕೇದಗೆಯ
ಹೂವಿನೆಸಳೋಲೆಯನು ತಿರುಪಿ ಸಿಲೆಯೊರಳಿಕ್ಕಿ ದಂತದೊನಕೆಗಳನಾಂತು
ಸೂವಿ ನಲ್ಲನೆ ಸುವ್ವಿ ಸುವ್ವಿ ಕಾನನ ವಿಜಯ
ಸೂವಿ ಬಲು ಬಿಲುಗಲಿಯೆ ಸುವ್ವಿ ಮೃಗಕುಲಮಥನ
ಸೂವಿಯೆಂದಲ್ಲಿಯ ಪುಳಿಂದಿಯರು ಹಾಡಿ ಚಳಿಸಿದರು ಬಿದಿರಕ್ಕಿಗಳನು       ೧೬

ಕುಱುಹುಗೊಂಡೊಂದೆರಡು ತೆಱನಲ್ಲ ನಾಲ್ಕೆರಡು
ತೆಱದ ಬೇಂಟೆಯೊಳಡವಿಯ ಪ್ರಾಣಿಮಾತ್ರದುಸು
ರಱತವೆನೆ ಹಗಲಿಂದೆ ಮೇಲೆ ನಾನಾ ಖಗಮೃಗಾವಳಿಯನಂತಧ್ವನಿ
ಹಱಿಯ ದನಿ ಮೂದಲಿಸಿ ಬೈವ ದನಿ ಕೂಗಿ ಬೊ
ಬ್ಬಿಱಿವ ದನಿಬಿಲ್ಲ ಜೇವೊಡೆವ ದನಿ ನಿಲಲು ಸೈ
ವೆಱಗಾಗಿ ವಿಶ್ವ ಬೇಂಟೆಯ ಭೀತಿಯಿಂ ಮೂಗುವಟ್ಟುದೆಂಬಂತಿರ್ದುದು      ೧೭

ಹೆಗಲ ಚಮರಿಯ ಕಟ್ಟುತೆಕ್ಕೆವೀಲಿಗಳ ದಂ
ಡಿಗೆಯಕ್ಕಲಂ ಹಸಿಯ ಮುತ್ತುಗಳ ಮೂಡೆ ಮೋ
ಳಿಗೆಯ ದಂತಂ ಕಯ್ಯ ಮೊಲ ಹಲವು ಹಕ್ಕಿಗಳ ಕಲ್ಲಿಗಳನಂತ ಮೃಗದ
ತೊಗಲ ಹೊಱೆಜೇನ ನಳಿಗೆಯ ಕಂಬಿ ಮಡಿದ ಹು
ಲ್ಲೆಗಳ ಬೆಕ್ಕಡಗುಗಳ ಹೆಡಗೆ ಹೆಬ್ಬುಲಿಯ ಬಂ
ಡಿಗಗಳೇಱಿದ ಕೋಣವೆರಸಿ ತಿರುಗಿದ ಬೇಡರಂ ಕಂಡು ಬೆಱಗಾದನು           ೧೮

ಮೃತ್ಯುವಗಿದುಳಿದಂತೆ ಬೇಡರಟ್ಟುಳಿಗಳೊಳು
ಕುತ್ತುಱೊಳಡಂಗಿರ್ದು ಬಳಿಕೆದ್ದು ತಂತಮ್ಮ
ಹೆತ್ತ ತಾಯ್ಗಳನಱಸುತತ್ತಲಿತ್ತಂ ಹರಿದು ಬಾಯ್ವಿಡುವೆ ಮೃಗಶಿಶುಗಳ
ಸುತ್ತಿ ಕಿಱುಮಱಿಗಾಣದಳಲಿ ಕೆಕ್ಕಳಿಸಿ ಕೊರ
ಳೆತ್ತಿ ಹೂಂಕರಿಸಿ ಗಿಡುಗಿಡುಗಳೊಳು ಹೊಕ್ಕು ಬಾಯ್
ಬತ್ತಲೊಱಲುತ್ತಿಪ್ಪ ಬಾಣತಿಮೃಗಕ್ಕೆ ಮಱುಗುತೆ ಬಂದನಾದಯ್ಯನು        ೧೯

ಕಡುಗಿ ಬರುತಿಪ್ಪಾದಿಮಯ್ಯನತಿ ನಿಷ್ಠೆಯಂ
ತುಡುಕಿ ನೋಡುವೆನೆಂದು ಮನದಂದು ಸೌರಾಷ್ಟ್ರ
ದೊಡೆಯ ಪಶುಪತಿ ಯತೀಶ್ವರನೆಂಬ ನಾಮಮಂ ತಳೆದು ಮುನಿವೃಂದಸಹಿತ
ನಡೆತಂದು ವಿಮಳಘೋರಾಕಾರ ಕಾನನದ
ನಡುವೆ ಸವೆ ಪರ್ಣಶಾಲೆಗಳನಂತವನೊಪ್ಪ
ವಿಡಿದು ರಾಜಿಪ ತಪೋವನದೊಳೊಪ್ಪಿದನವಿದ್ಯಾಬಳಾಹಕಮರುತನು       ೨೦

ಪ್ರೇಮದಿಂದಾದಯ್ಯನೈತಂದು ಪುಣ್ಯಾಭಿ
ರಾಮವೆನಿಸುವ ತಪೋವನದಿಂದೆ ಪೊಱಮಡುವ
ಹೋಮಧೂಮಕ್ಕೆ ಲಿಂಗಾರ್ಚನೆಯ ಜಯಜಯಧ್ವನಿಗೆ ಘಂಟಾನಾದಕೆ
ಕಾಮಿಸಿದ ಸುರಭಿ ಪರಿಮಳಕೆ ವಿಹಿತಶ್ರುತಿ
ಸ್ತೋಮಂಗಳುಚ್ಚರಣೆ ಪೌರಾಣರಭಸಕ್ಕೆ
ಶ್ರೀಮಹಾದೇವ ಹೋಸತಿದು ಮಹಾವಿಂಧ್ಯದೊಳಗೆನುತೆ ಪೊಗಳುತೆ ಬಂದನು          ೨೧

ನಾರಸೀರೆಯನೊಗೆವ ಜೆಡೆಯ ಸುಂಕಿಕ್ಕುವಾ
ದಾರಮಂ ಬಿಗಿವಕ್ಷಮಾಲೆಯಂ ಸರಗೈವ
ಪೌರಾಣಮಂ ಕಲಿವ ಮೌಂಜ ಮೇಖಲೆಗಳಂ ಮಾಡುವ ವಿಭೂತಿಯಿಡುವ
ಸಾರ ಶಾಸ್ತ್ರವನಱಿವ ಕೃಷ್ಣಾಜಿನದ ಕಡೆಗೆ
ದಾರವಿಕ್ಕುವ ಕಂದಮೂಲಫಲಮಂ ತಪ್ಪ
ಚಾರಮುನಿಪುತ್ರರ್ಗೆ ವಂದಿಸುತೆ ಬಂದಿದಿರೊಳೊಂದು ಕೊಳನಂ ಕಂಡನು       ೨೨

ಎಸೆವ ವಿಷವುಂಟಾಗಿಯೂ ವಿಷಂ ತಾನಿಲ್ಲ
ಹೊಸಕಮಲವುಂಟಾಗಿಯುಂ ಕಮಲವಿಲ್ಲ ನಿ
ಟ್ಟಿಸೆ ಕುಮುದವುಂಟಾಗಿಯುಂ ಕುಮುದವಿಲ್ಲಲ್ಲಿ ಪ್ರತಿಕೂಲವುಂಟಾಗಿಯುಂ
ಹೆಸರಿಡಲ್ ಪ್ರತಿಕೂಲವಿಲ್ಲಲ್ಲಿ ಕಡೆಗೆ ಸೋ
ದಿಸೆ ವಿಜಾತಿಗಳುಂಟೆನಲು ವಿಜಾತಿಗಳಿಲ್ಲ
ವಸುಧೆಗೆ ವಿಚಿತ್ರವೆಂದೊದೆರಡು ಗಳಿಗೆ ನೋಡಿದ ಕೊಳನನಾದಯ್ಯನು         ೨೩
ಬಿಸಕಾಂಡದಂತಿಪ್ಪ ಯತಿವೃತ್ತದಿಂ ಪೂರ್ಣ
ರಸಭಾವದಿಂದಲಂಕಾರದಿಂ ಸೋಪಾನ
ವಿಸರದೊಳು ಕೇವಣಂಗೊಳಿಸಿದ ಪದಾರ್ಥದಿಂ ಸಾರ್ದು ನೋಡಿದರ ಮನಕೆ
ಎಸೆವ ಪ್ರಸನ್ನ ಗಂಭೀರದಿಂ ನಲಿನಲಿದು
ದೆಸೆದೆಸೆಗಳಿಂ ಬಂದು ಪದವಿಡುವ ಕವಿಗಳಿಂ
ವಸುಧೆಗೆ ಮಹಾಕವಿಯ ತೆಱದೊಳಂತಲ್ಲಿಯ ಸರೋವರಂ ಕಣ್ಗೆಸೆದುದು    ೨೪

ಬಳಸಿದೆಳಲತೆಗೆ ತಂಪಿಂಗೆ ಕಂಪಿಂಗೆ ಕೆಂ
ದಳಿರಿಂಗೆ ಕರ್ಣಿಕೆಗೆಯೆಸೆವ ಪ್ರಸೂನಕ್ಕೆ
ಫಳಕೆ ತುಂಬಿಗೆ ಗಿಳಿಗೆ ಕೋಗಿಲೆಗೆ ಕುಣಿವ ನವಿಲಿಂಗೆ ಹಂಸನಿಕರಕ್ಕೆ
ಪುಳಿನಕ್ಕೆ ತಂಗಾಳಿಗೆಸೆವ ದೀಹದ ಮೃಗಾ
ವಳಿಗೆ ಬೆಱಗಾಗುತ್ತೆ ನಡೆ ತರುತ್ತರರೆ ಕ
ಣ್ಣಳವಿಯೊಳು ಕಂಡನಪ್ರತಿಮ ಯತಿರಾಯ ಪಶುಪತಿಶಿವನ ಸುಪ್ರಭೆಯನು  ೨೫

ಕಡುಹಿಮಂ ಕಡುವಿಸಿಲು ಕಡುಗಾಳಿಯಿಲ್ಲ ಮರ
ನಡಿಯ ನೆಳಲತ್ತಿತ್ತಲೊಲೆಯವನವರತ ಬೆಳೆ
ಯುಡುಗವೆಲ್ಲಾ ಭೂಜಲತೆಯೋಷಧಿಗಳು ಫಲವಿಡಿದೊಲೆದು ಜಡಿವುತಿಹವು
ಬಿಡದೆ ಹುಲಿ ಹುಲ್ಲೆ ಹರಿ ಕರಿ ವರಹ ಸೀಳ್ನಾಯ್ಗ
ಳೆಡೆಯ ಮುಂಗುರಿ ಮೂಸಕಂ ನವಿಲು ನಾಗಂಗ
ಳಡಿಸಿ ನಿಜವೈರಮಂ ಮಱೆದಿಪ್ಪವೆನೆ ಮುನಿಯ ಮಹಿಮೆಯಂ ಪೊಗಳ್ವರಾರು         ೨೬

ಈ ಮುನಿಯ ಚಾರಿತ್ರದೊಳು ಗಂಗೆ ಹುಟ್ಟದಿರ
ಳೀ ಮುನಿಯ ಶಾಂತಿಯೊಳು ಚಂದ್ರಮಂ ಜನಿಸದಿರ
ನೀ ಮುನಿಯ ವದನದಿ ದಯಾಗುಣದೆ ಸುರಕುಂಜ ಸುರಧೇನು ಪೊಣ್ಮದಿರವು
ಈ ಮುನಿಯ ನುಡಿಯ ಸವಿಯಿಂದಮೃತವೊಗೆಯದಿರ
ದೀ ಮುನಿಯ ಸುಳುವಿನೊಳು ತಂಗಾಳಿ ಬೆಳೆಯದಿರ
ದೀ ಮುನೀಂದ್ರಂ ಮುನಿಯವೇಷದೀಶ್ವರನಾಗದಿರನೆಂದು ನಡೆ ನೋಡುತ್ತೆ   ೨೭

ಸವಿದು ನೋಡುವ ನೋಡು ವೈಸಕಂಗದೊಳು ಪೊ
ಣ್ಮುವ ಪುಳಕವೊಸರ್ವ ಬೆಮರುಕ್ಕುವಾನಂದಾಶ್ರು
ಕವಿವ ತಂಪೇಳ್ವ ಪರಿಣಾಮವಂ ಕಂಡು ತನ್ನೊಳು ತಾನೆ ಬೆಱಗಾಗುತೆ
ಇವರ ಕಂಡೆನಗೀ ಸುಖಂ ಪುಟ್ಟಲೇಕಿವರು
ಶಿವನ ವಂಶಿಕರಾಗದಿರರು ನೋಡುವೆನಿದಱ
ವಿವರವನಿದಾವ ದೆಸೆಯಿಂದಾದುದೆಂಬುದಂ ನೆನೆದೊಯ್ಯನಡಿಯಿಟ್ಟನು       ೨೮

ತಿಳಿಗೊಳನ ಬಳಸಿ ನಳನಳಿಸಿ ಬೆಳೆದೆಳೆಮಾವು
ಗಳ ತಳದ ಮಲ್ಲಿಕಾಮಂಟಪದ ತಣ್ಣೆಳಲ
ತೆಳುಗಾಳಿಯೊಳು ಪುಟಂಬೆತ್ತ ಪುಳಿನ ಸ್ಥಳದ ಮೇಲಶೋಕೆಯ ತರುವಿನ
ತಳಿರ ತೊಂಗಲಗದ್ದುಗೆಯೊಳೋಲಗಂಗೊಟ್ಟು
ತಳೆದು ಹಿಂದೆಡಬಲದೊಳೊಪ್ಪಿ ಕುಳ್ಳಿರ್ದ ಮುನಿ
ಗಳ ಕೂಡೆ ನುಡಿವ ಪಶುಪತಿ ಯತೀಂದ್ರನನು ಕಂಡಂ ಧನ್ಯನಾದಯ್ಯನು       ೨೯

ನೀತಿ ಬಲಿದುದೊ ಶಾಂತಿ ರೂಪಾಯ್ತೊ ಸದ್ಗುಣ
ವ್ರಾತವೇ ಮುನಿಯಯ್ತೊ ಮುಕ್ತಿ ಜೆಡೆವೊತ್ತುದೋ
ಭೂತದಯೆ ವಲ್ಕಲವಸನವನಾಂತುದೊ ಪುಣ್ಯವೆಳಸಿ ಭಸಿತವನಿಟ್ಟುದೊ
ನೂತನಶ್ರುತ್ಯರ್ಥ ನುಡಿಗಲಿತುದೋ ಘನ
ಸ್ವಾತಂತ್ರ‍್ಯವೃತ್ತಿ ಬೋಧಿಸತೊಡಗಿತೋಯೆಂಬ
ಚಾತುರ್ಯದಿಂದಿರ್ದ ಪಶುಪತಿಯತೀಶಂಗೆ ನಮಿಸಿ ಹೊಗಳುತ್ತಿರ್ದನು         ೩೦

ಜ್ಞಾನವಾಚಾರವಾಗಮ ಧರ್ಮತತಿ ನುತ
ಧ್ಯಾನವಱಸುವ ಪುಣ್ಯವೆಳಗನೊಳಕೊಂಡು ನೀ
ರ್ವಾಣನತಿ ನಿರ್ಲೇಪ ನಿಶ್ಚಿಂತ ನಿರ್ಗುಣ ನಿರಾವರಣ ನಿತ್ಯತೃಪ್ತ
ಮೌನದಾಸನದ ಮುದ್ರೆಯ ಹಂಗು ಹೊದ್ದದ ಪ
ರಾನಂದಮೂರ್ತಿ ಶರಣೆನುತಲೆಱಗಿದನು ಸು
ಮ್ಮಾನದಿಂ ಕಣ್ಣಱಿಯದಿರ್ದೊಡಂ ಕರುಳಱಿಯದೇ ಎಂಬ ಗಾದೆಯಂತೆ     ೩೧

ಹಸಿದು ಬೆಂಡಾದೆ ನೀರ್ಗುಡಿಯಿತ್ತ ಬಾ ಬಂದ
ದೆಸೆಯಾವುದೂರಾವುದಾರ ಮಗನಾವ ಕುಲ
ಹೆಸರೇನು ದಟ್ಟಡವಿಗೊಬ್ಬನೇಂ ಕಾರಣಂ ಬಂದೆ ಹೇಳಯ್ಯ ಯೆನಲು
ಎಸೆವ ತೆಂಕಣನಾಡ ಹುಲಿಗೆಱೆಯೊಳಿಹೆನೆನ್ನ
ಹೆಸರಾದಿಮಯ್ಯ ಹರದರ ಮಗಂ ದೇಶಾಂತ್ರ
ವಶನಾಗಿ ಬರುತೆ ಬರುತಿಂತು ನಿಮ್ಮಂ ಕಂಡು ಬದುಕಿದೆಂ ನಾನೆಂದನು          ೩೨

ಈ ಸೌಕುಮಾರಾರ್ಯವೀ ರೂಹು ಸಂಪತ್ತು ಮ
ತ್ತೀ ಸರಸಮೂರ್ತಿಯೀಯಂಗ ಸೌಂದರವೃತ್ತಿ
ದೇಶಾಂತ್ರಿಗುಂಟೆ ಕಂಡೈ ಹುಸಿದೆಯೆನೆ ಹುಸಿದುದಿಲ್ಲ ನಾನಹುದೆಂದೆನೆ
ಲೇಸಾಯ್ತು ಹುಸಿಯದೊಡೆ ಸಾಕು ದಿನಕರನಂಬು
ರಾಶಿಗಿಳಿಯದ ಮುನ್ನವುಣ್ಣೇಳೆನುತ್ತಂ ಯ
ತೀಶನಾಡಿದೊಡುಣ್ಣೆನೆಂದೊಡೇಕುಣ್ಣೆ ಉಣ್ಣದ ಹದನ ಹೇಳೆಂದನು         ೩೩

ಮಿಕ್ಕು ಹಸಿವಿಲ್ಲದದುಕಾರಣದಿನೀಗಳೂ
ಟಕ್ಕೆ ತೆಱಹಿಲ್ಲೆನಲು ಹಸನಾಯ್ತು ಹೊಱಗೆ ಮೃಗ
ಹಕ್ಕೆಗೆಯಿದುವ ಹೊತ್ತು ಸಮನಿಸುತ್ತಿದೆ ಹುಸಿಯದೇಂ ಮಾಣೆ ಹೇಳೆಂದೆನೆ
ಸೊಕ್ಕಿರ್ದ ಹುಲಿಗೆಱೆಗೆ ಸೊಡ್ಡಳನನೊಯಿದಲ್ಲ
ದಿಕ್ಕೆನೊಡಲೊಳಗನ್ನರಸವನೆನೆ ಲೇಸು ಲೇ
ಸಕ್ಕಕ್ಕು ದಿನವೇಸಱವಧಿಯೆನೆ ದೇವ ಮೂವತ್ತು ದಿನದವಧಿಯೆನಲು          ೩೪

ತಿಂಗಳುತನಕ್ಕೆ ಬದುಕುವುದರಿದು ಬದುಕೆ ಮೇ
ಲಂಗವಿಸಲಡವಿಯ ಮೃಗಂ ಹೋಗಲಿಯವವ
ಱಂ ಗೆಲಿದು ಹೋಗೆ ನಿನ್ನಂ ಕಂಡ ಖಳರೊಂದಡಿಯನಿಡಲ್ಕೀಯರವರ
ಕಂಗೆ ಸಿಕ್ಕದೆ ಹೋದೊಡಂ ಮುಂದೆ ಸೋಮೇಶ
ಲಿಂಗನಳಲಿಸದೆ ಬಿಡನಿನಿತು ದಾವತಿಗೊಡಲ
ನೀಂ ಗುಱಿಯ ಮಾಡದುಣ್ಣೇಳೆಂದು ಮುನಿಪನಾದಯ್ಯನಂ ಪ್ರಾರ್ಥಿಸಿದನು೩೫

ದೀನನೈಶ್ವರ್ಯ ಕಾಮುಕನ ಸದ್ಗುಣ ಭಕ್ತಿ
ಹೀನನಕುಲಂ ಪ್ರೇತವನದ ಹೂಗಿಡುಗಳು ಮ
ಹಾನಗದ ಮೇಲೆ ಸೂಸುವ ಮಳೆ ವೃಥಾ ಹಿರಿಯರಂ ನಿಂದಿಸುವನ ಭಾಗ್ಯ
ಕಾನನದ ಸುರಭೂಜ ವನದಲೇ ಕೆಡುವಂತೆ
ನಾನಾ ನಿರೋಧದಿಂ ಬಱಿದೆ ಕೆಡುವೊಡಲಂ ಭ
ವಾನಿಯರಸಂಗಾಗಿ ಬಿಟ್ಟೊಡಾಂ ಬದುಕೆನೇ ಹೇಳು ಮುನಿನಾಥಯೆನಲು      ೩೬

ಬರೆ ಸತ್ತು ಕಾಂಬ ಸರ್ಗಕ್ಕಿರ್ದು ಕಾಣುತಿಹ
ನರಕವೇ ಲೇಸಲಗು ಕೂರಿತೆಂದೊಲೆಯೊಳಿ
ಟ್ಟುರುಹಿದೊಡೆ ಕರಗದೇ ನೀನೇಕರಣ್ಯವೇಕಳಿದೊಡಹ ಲಾಭವುಂಟೆ
ಮರುಳು ಮೊದಲಾಗಿ ತನ್ನೊಡಲಂ ಸುರಕ್ಷಿತದೊ
ಳಿರಿಸುವುದು ಪುಣ್ಯಜನ್ಮಂಬಡೆದ ತನುವನಾ
ದರಿಸದಳಿದಂದಿದಂ ಹಡೆಯಲಹುದೇ ಮೂರ್ಖ ಕೇಳೆಂದನಾ ಮುನಿಪನು       ೩೭

ಮಲದ ಬಗರಿಗೆ ಮೂತ್ರದೊಱತೆ ನಾನಾಹೀನ
ಜಲದ ಮಡು ಮಾಂಸದ ಬಣಂಬೆ ಹಡಿಕೆಯ ಹಗಂ
ಹೊಲಸಿನೋವರಿಯವಗುಣಂಗಳಾರವೆಯಖಿಳ ರೋಗಂಗಳಾಡುಂಬೊಲ
ಹಲವು ಹಗೆಗಳಿಗಿಟ್ಟ ಗುಱಿಯನಿತ್ಯದ ಮೊದಲ
ನೆಲೆಯನಿಪ್ಪೊಡಲನುತ್ತಮಸಮಯಕಿಕ್ಕುವುದು
ಗೆಲವು ಮದುವೆಯ ತುಪ್ಪಮಂ ಬಡಿಸಿ ಮೊಗವಱಿತವಂ ಮಾಡಿಕೊಂಬೆನೆನಲು          ೩೮

ನೀತಿಹೀನನೆ ಕೇಳು ನಿನ್ನ ದೇಹಂ ಸಪ್ತ
ಧಾತುವಿಂದಾದುದುಳಿದಧಿಕ ಮುನಿಗಳ ದೇಹ
ವೇತಱಿಂದಾದುದದಱಾದಿತೊಡಗಿಂತಿದನು ಕ್ಷಯವೆಂದು ಯೆನಲಱಿಯರೆ
ಆತುರದೊಳದನೆ ರಕ್ಷಿಸುವರಂತದುವಿಡಿದು
ಭೂತದಯೆಗೆಯ್ವರವರೇಂ ಮರುಳರೇ ಪ್ರಾಣ
ಭೀತಿಯಿಲ್ಲದ ಪಾಪಿ ಕೇಳೆಂದನಂದು ಯತಿವೇಷದಗಜಾರಮಣನು೩೯

ಮೃಡಮೂರ್ತಿ ನಾ ನಿಮ್ಮ ಕೂಡುತ್ತರಂಗಳಂ
ಕೊಡಲಮ್ಮೆನೊಡಲಂ ಸುರಕ್ಷಿತಂ ಮಾಡಲದು
ಕಡೆತನಕನಂತಕಾಲಂ ಸುಖದೊಳಿಹುದೆ ಕೇಳಿದನೊಯಿದು ಮಣಿಮಾಡದ
ಕಡೆಯ ನೆಲೆಯೊಳಗಿಟ್ಟುರಕ್ಷಿಸಿದೊಡಂ ಸಾವು
ಬಿಡದು ಕೆಡುವೀ ದೇಹವುಳ್ಳಲ್ಲಿ ಪುಣ್ಯಮಂ
ಪಡೆವುದೇ ಲೇಸು ನೀವಱಿಯಿರೇ ಯತಿ ಕೇಳಿದೆನ್ನ ಸಿದ್ಧಾಂತವೆನಲು          ೪೦

ಕರಮೂರ್ಖನೆಂದಱಿಯಲಾದುದೆಮ್ಮಂತಪ್ಪ
ಹಿರಿಯರಾಡಿದ ಮಾತನುಲ್ಲಂಘಿಸಿದೆಯಾಗಿ
ವರ ಭೂತದಯೆಯಿಲ್ಲ ನಿನಗೆಂಬುದಱಿಯಲಾದುದು ನಿನ್ನ ಮೇಲೆ ನಿನಗೆ
ಕರುಣವಿಲ್ಲಾಗಿ ಛಲಿಯೆಂದಱಿಯಲಾಯ್ತು ನೆಱೆ
ಪರರ ದೈವವ ಕೆಡಿಸದುಣ್ಣೆನೆಂಬಾಗಳೀ
ಪರಿಯಲೇ ಭಕ್ತನೆನಿಸಲು ಬಂದೆ ಶಿವನಾರು ನೀನಾರು ಹೋಗೆಂದನು            ೪೧

ಭ್ರಾಂತುಹೊದ್ದಿದ ಮುನಿಪ ಕೇಳಯ್ಯ ನೀನೆಂದ
ಶಾಂತಿ ಸತ್ಯಂ ಭೂತದಯೆ ನಿರರ್ಥಕವು ನಿ
ಶ್ಚಿಂತದಿಂದಂ ಶಿವನ ಭಕ್ತಿಯುಳ್ಳೊಡೆ ಕೊಡಲು ಸಾಲದೇ ಬೇಡಿದುದನು
ಇಂತಿದೇ ಘನವೆಂದು ಭಕ್ತನಾದೆನು ಧನವ
ನಂತವುಳ್ಳೊಡೆ ಹೆಱರನೋಲೈಸಲೇಕೆ ಕಾ
ಲಾಂತಕನ ಸಾಮರ್ಥ್ಯವಹ ದೀಪ್ತಿ ಲೌಕಿಕ ತಮಂಧಮಂ ಸಂಹರಿಪುದು          ೪೨

ಶಿವನ ನಿಜವೇಷಮಂ ಧರಿಸಿ ಕಾಮವನು ಕ್ರೋ
ಧವನು ಲೋಭವನು ಮೋಹವನು ಮದವನು ಮತ್ಸ
ರವನು ಬಿಟ್ಟಖಿಳಭೂತಂಗಳೊಳು ಪರಮಾಣುನೋವ ಸೈರಿಸಲಾಱದೆ
ಭುವನವಂದಿತರಪ್ಪ ಹಿರಿಯರೇಂ ಮರುಳರೇ
ಅವರಿಂದೆ ನಿನಗಾವ ಬುದ್ಧಿ ಪಿರಿದೆಂದು ಮುನಿ
ನಿವಹ ಕಂಪಿಸುತಿರಲು ಪಶುಪತಿಯತೀಂದ್ರಂನಾದಯ್ಯನಂ ಬೆಸಗೊಂಡನು     ೪೩

ಭುವನದೊಳು ಹುಟ್ಟುವಾಗೊಡನೆ ಹುಟ್ಟಿರ್ದ ದೇ
ಹವಿಕಾರಮಂ ಬಿಡುವೆನೆಂಬ ಸಾಮರ್ಥ್ಯವು
ಳ್ಳವರಿಲ್ಲ ಮೇಣಾದೊಡುತ್ತಮರೊಳಂತಲ್ಲವೇಕೆಂದು ಬೆಸಗೊಂಬೊಡೆ
ಶಿವಮಂತ್ರ ಶಿವಲಿಂಗ ಭಸಿತ ರುದ್ರಾಕ್ಷಿಯೆಂ
ಬಿವು ನೆಲಸಿನಿಂದೆಡೆಯೊಳವು ನಿಲ್ಲವೆಂಬುದಿದು
ಶಿವವಾಕ್ಯವಿನ್ನೆನ್ನ ಮನವ ನಿನ್ನೇಂ ತಟ್ಟಿ ನೋಡುವೆ ಯತೀಶಯೆನಲು       ೪೪

ನಿನ್ನ ಹಣೆಯೊಳು ಭಸಿತ ನಿನ್ನ ಬಾಯೊಳು ಮಂತ್ರ
ನಿನ್ನ ತೊಡಿಗೆಯೊಳು ರುದ್ರಾಕ್ಷಿಗಳಿರಲ್ಕೆ ನಿನ
ಗಿನ್ನೇಕೆ ಪರರ ದೈವವನಳಿದು ಶಿವನ ನಿಲಿಸಿಹೆನೆಂಬ ಕೃತ್ಯವೆನಲು
ಎನ್ನ ದೇಹಾಭಿಮಾನ ನಿಮಿತ್ತ ಮಾಡೆ ಬಳಿ
ಕೆನ್ನಿಂದೆ ನರಕಿಗಳು ಬೇಱಿಲ್ಲ ಧರಣಿಯೊಳ
ಗೆನ್ನಸಮಯಾಭಿಮಾನ ನಿಮಿತ್ತ ಮಾಡಿದೊಡೆ ದೋಷವೆನಗಿಲ್ಲೆಂದನು       ೪೫

ಮಾತಿನೊಳು ನೀತಿಯೊಳು ಬುದ್ಧಿಯೊಳು ಸಿದ್ಧಿಯೊಳು
ಚಾತುರ್ಯ್ಯದೊಳು ನಿದಾನವಿಚಾರದೊಳು ಗುಣ
ವ್ರಾತದೊಳು ನಿಷ್ಠೆಯೊಳು ಜೀವದ ಪರಿಚ್ಛೇದದೊಳು ವಿವರಮಂ ಕಾಣದೆ
ಆತುರಿಸಿ ಕಾಡುವೆನ್ನಂಡಲೆಗೆ ಕಂಟಣಿಸ
ದೀತನಲ್ಲದೆ ನಿಲುವರಾರೆಂದು ಹೊಗಳುತಿಹ
ಭೂತೇಶನಂ ಲಜ್ಜೆಗೆಡಿಸಿತ್ತು ಮೆಚ್ಚು ಮುನಿ ನಿಕರದೋಲಗದ ನಡುವೆ        ೪೬

ಕವಿವ ಮೆಚ್ಚಿನ ಕೂಡೆ ಗಂಗೆ ಮೊಳೆವೊಡೆ ಜಟಾ
ನಿವಹಮಂ ಕವಿವಿಂದು ಮೊಳೆವೊಡೆ ಮುಸುಂಕನಿ
ಕ್ಕುವ ಲಲಾಟಾಕ್ಷಿ ಮೊಳೆವೊಡೆ ಭಸಿತವಿಡುವೈದುಮುಖ ಮೊಳೆಯೆ ತಲೆವಾಗುವ
ವಿವಿಧ ಭುಜಲತೆ ಮೊಳೆವೊಡೊತ್ತಿ ತುಱುಗುವ ಮಂಡ
ನವಿತಾನ ಮೊಳೆಯ ಮಯ್ಯಂ ಹೊದೆದುಕೊಳುತಿರ್ಪ
ನೆವದಿಂದೆ ಮುಚ್ಚಿದಂ ಶಿವನಾದೊಡಂ ಠಕ್ಕು ಸತ್ಯದಿದಿರಲಿ ನಿಲ್ಲದು          ೪೭

ಇಂದೆನ್ನ ಬುದ್ಧಿಗಳು ಕೊಳ್ಳವಿಂತಿಲ್ಲಿಂದೆ
ಮುಂದಿವಂ ನಡೆವಾಗಳುಳ್ಳ ಸತ್ವಂಗಳಂ
ಕುಂದಿಸಿ ಕರಂ ಧಾತುಗೆಡಿಸಿ ತಂದುಣಲೀವೆನದನೊಲ್ಲದಿರಲೀತನ
ಹಿಂದುಗೊಂಡೇ ಹೋಹೆನಳುಪಿದೊಡೆ ಹೋಗೆ ನಾ
ನೆಂದು ನೆನೆವುತ್ತಿರಲು ರವಿ ಗಗನಮಂ ಸುತ್ತಿ
ಬಂದು ಬಳಲಿದ ಹಯವ ನೀರ್ಗುಡಿಸಲಿಳಿವಂತಿಳಿದನು ಪಡುವಣ ಕಡಲೊಳು            ೪೮

ದಿನಪನಿಳಿದವಸಾನದೊಳು ತಪೋವನದ ಯತಿ
ಜನವರ್ಘ್ಯವೆತ್ತಿ ಸಂಧ್ಯಾವಂದನಂ ಮಾಡು
ವನಿತಕ್ಕೆ ಮೆಱೆವಾದಿಮಯ್ಯನ ಯಶೋಲತೆಯ ಬೀಜವುದಯಿಸುವಂದದೆ
ವಿನುತಚಂದ್ರಂ ಪೂರ್ವದೆಸೆಯೊಳವತರಿಸಿಬೆಳ
ಗಿನ ಬೀಡು ನಡೆದು ದಿಗುಭಿತ್ತಿಯಂಧವಳಿಸಲು
ಸನಕಾದಿವಂದಿತಂ ಯತಿಯಾದ ಸೌರಾಷ್ಟ್ರದೊಡೆಯನೀಕ್ಷಿಸುತಿರ್ದನು          ೪೯

ಶಿವನ ಕಾಟಮುಮನಾದಯ್ಯನೇಕಾಗ್ರಚಿ
ತ್ತವನು ನೋಡುವೆನೆಂದು ಬಪ್ಪಂತೆ ಪೂರ್ವದಿಗು
ವಿವರಮಂ ಬಗೆದು ನೆನೆದೊಗೆದುದಯಗಿರಿಯ ಶಿಖರದ ಸುಖಾಸನದ ಮೇಲೆ
ಕವಿವ ಕಿರಣಂಗಳಂ ಮಡಲಿಱಿದು ಭಾನು ಮೂ
ಡುವ ಸಮಯದೊಳಗೆ ಮುನಿವೇಷಮಂ ತಳೆದಿರ್ದ
ಭವನ ಬೀಳ್ಕೊಂಡು ವನದಿಂದೆ ನಡೆಗೊಂಡನೊಲವಿಂ ಧೀರನಾದಯ್ಯನು      ೫೦

ಬಡಭೂತ ಹಿಡಿದ ಭವಿಯೊಳಗಾಗಿ ಹಸಿವು ನೀ
ರಡಿಕೆ ನಿದ್ರಾಲಸ್ಯ ಶೀತವಾತಪವೆಂಬ
ಗೊಡವೆಗಳನಱಿಯನೆನಲಾಭೂತವಂ ನಗುವ ಸದುಭಕ್ತನಾದಯ್ಯನು
ಮೃಡನ ತಪ್ಪಾವೇಶವಾವರಿಸಿತೆಂದಾಗ
ಳೆಡೆಯೊಳಿನ್ನೆಲ್ಲಿಯದು ಹಸಿವೆ ನೀರಡಿಕೆಯು
ಗ್ಘಡದ ಶ್ರಮಾದಿದೇಹವಿಕಾರವೆನೆ ನಡೆದನತಿ ಧೀರನಾದಯ್ಯನು   ೫೧

ವಿಷಗಳಂ ಮುನಿತನವನೀಡಾಡಿ ನೆರವಿಯಂ
ಬಿಸುಟು ಮಾಯಾವೇಷದಿಂ ಹಿಂದೆ ಹಿಂದೆ ಸಂ
ಧಿಸಿ ಬಿಡದೆ ಬಂದು ತಣಿವಂ ಸತ್ವಮಂ ಸಾಹಸವನು ಬಿಡದಾಕರ್ಷಿಸಿ
ಹಸಿವಂ ಪಿಪಾಸೆಯಂ ಶ್ರಮಮಂ ಬಳಲ್ಕೆಯು
ಬ್ಬಸದ ನಿಸ್ಸತ್ವಮಂ ತನುವಿನೊಳು ನೆಱೆತೀವಿ
ನಸುನಗುತೆ ಬರೆ ನಿಷ್ಠೆವಿಡಿದು ನಡೆದಂ ಧೀರನಾದಯ್ಯನಾದಯ್ಯನು           ೫೨

ಗಳಗಳನೆ ನಡೆವಾಗ ಬೀಸುದೋಳಿಂ ರಕ್ತ
ವಿಳಿದು ಬೆರಳ್ಗಳು ಬಾತು ಮಿಡಿದೊಡೆವುತಂ ಜ್ವಾಲೆ
ಬಳಸಿದುದರಾಗ್ನಿಯಿಂ ಕಾದುಬಪ್ಪುಸುರೊಳೆದೆಯಾಱಿ ರಸವಱತು ಬಾಯ
ಒಳಗು ಹುಣ್ಣಾದೊಡಂ ಬಿಸಿಯ ಹುಡಿಯಿಂದೆ ಹೊ
ಪ್ಪಳಿಸಿ ಪದತಳದೆ ರಕ್ತಂ ದಾರಿಯೊಳು ವ್ರಣದ
ಚಳೆಯಗುಡುವಂತೆ ನೆಱೆ ಸುರಿದೊಡಂ ಬಗೆಯದಾದಯ್ಯನೈತರುತಿರ್ದನು   ೫೩

ಬಿಸಿಲ ಬಿಸಿಯಿಂ ನೆತ್ತಿ ನೆಲನ ಬಿಸಿಯಿಂ ಪದಂ
ದೆಸೆದೆಸೆಯ ಕಾದೆಲರ ಬಿಸಿಯಿಂದೆ ಕಾಯವು
ಬ್ಬಸದ ಕ್ಷುದಾಗ್ನಿವಿಸಿಯಿಂದಾದ ನೀರಡಿಕೆಯುಗ್ರ ಬಿಸಿಯಿಂದೆ ಬಾಯಿ
ಅಸಿವೊಯಿಲ ತೆಱದಿಂದೆ ಬಿರಿದುರಿದು ಹೊತ್ತಿ ಹೊಗೆ
ದಸುಗೆ ತೆಗೆಬಗೆಯಾಗೆ ಡೆಂಡಣಿಸಿ ಕುಳ್ಳಿರ್ದು
ಮಸಗಿ ಕಯ್ಯೂಱಿ ನಡೆದಂ ಛಲಿಗಳರಸನೆನಿಪೆಮ್ಮಯ್ಯನಾದಯ್ಯನು          ೫೪

ಈಸೊಂದು ಸಂಕಟದ ಮೇಲೆ ಮತ್ತೇವೊಗಳ್ವೆ
ನಾ ಸಮಯ ಬೇಸಗೆಯ ಬಿಸಿಲುಗ್ರ ಕಠಿನದೊಂ
ದಾಸುರಂ ಮುನ್ನಾದುದಿಲ್ಲ ಕಂಡವರಿಲ್ಲ ಕೇಳ್ದು ಬಲ್ಲುವರುಮಿಲ್ಲ
ಓಸರಿಸದೊಳಗಿರ್ದ ಜಲಚರಚಯಕ್ಕೆ ವಾ
ರಾಸಿಯಿಟ್ಟೆಸರಂದವಾದುದಿದು ಕಾಲದ
ಭ್ಯಾಸವೆಂದೋಸರಿಸದಾದಿಮಯ್ಯನ ಮನವ ನೋಡಲೊದಗಿಸಿದ ಭವನು    ೫೫

ಸಂದು ಕಾಸಲು ಕರಗಿ ಕಬ್ಬುನಂ ಕಾಹೇಱು
ವಂದದಿಂ ರವಿ ತನ್ನ ಕಿರಣಕಿಚ್ಚಿಂ ಕಾಸೆ
ಬೆಂದು ಕತ್ತಲೆ ಕಾದು ಕರಗಿ ಕೆಂಗಲಿಸಿ ತಕ್ಕಲ್ಲದೊಡೆ ಬಡಬಿಸಿಲಲಿ
ನೊಂದು ನೆಲನುರಿದು ಜಲವಱತು ಹೊಱ ಕರುಕೆದ್ದು
ನಿಂದ ಮರನೆಲೆಗಳೆದು ಗಿರಿ ಸಿಡಿದು ಹಾಱಿ ಮೃಗ
ವೃಂದವಸುವರೆಯಾಗಿ ಹರಣಗಳೆಯಲ್ಕುಗ್ರವಾದಪುದೆ ಬಿಸಿಲ ಬೇಗೆ           ೫೬

ಪೊಡವಿಯಡಿಯಲಿ ಫಣಿಪನೆಂಬ ಕೊಳ್ಳಿಯನಡಸಿ
ಪೆಡೆವಣಿಗಳೆಂಬ ಕೆಂಡಂಗಳಿಂ ಮೀಱಿ ಪೊಱ
ಮಡುವ ಕಾಂತಿಗಳೆಂಬ ದಳ್ಳುರಿಗಳಿಂದೆ ಕಡುಗಾಸಿ ಪಾಪಿ ವಿಧಾತ್ರನು
ಬಿಡೆ ಚರಾಚರ ಮೊದಲು ಸರ್ವಜೀವಂಗಳಂ
ಸುಡಲೆಂದು ಮನದೊಳನುಗೈದನಕ್ಕಲದಿ
ರ್ದೊಡೆ ನಿಚ್ಚ ಮೂಡುವ ದಿವಾಕರಂಗಿನಿತುಗ್ರವೆಲ್ಲಿಯದು ನಾವಱಿಯಲು೫೭

ನೆಲಹೊತ್ತಿ ಹೊಗೆದ ಕಾವಲಿಗೆ ಸಿಲೆ ಬೆಂದು ಕಾ
ದೊಲೆಯ ಗುಂಡಿಂಗೆ ಕಿಱು ವರಳುಕ್ಕಿ ಕಿಡುಗಳಿಗೆ
ಸಲೆ ಮಳಲು ಹುರಿದ ಮಳಲಿಂಗೆಡೆಯ ಹುಡಿಯೊಡ್ಡಿದಾವಿಗೆಯ ಹೊಸಧೂಮಕೆ
ಎಲರಟ್ಟ ಮಡಕೆಯುಸುರಿಂಗೆ ಹೊಯಿಕ್ಕೆಯೆನಿಸಿ
ನೆಲಸಿದ ವಿಭೇದದಿಂದಿರಲದಱೊಳಾದಯ್ಯ
ನೆಲೆ ಸೋಮನಾಥ ಸೋಮಯ್ಯ ಸೋಮೇಶ ಸೊಡ್ಡಳ ಶರಣೆನುತೆ ನಡೆದನು            ೫೮

ಊಱಿ ನಡೆನಡೆದು ಕೈಗಳು ಸುಲಿದು ಮೊಳಕಾಲ್ಗ
ಳೇಱುವಟ್ಟಂ ತೊಡೆದು ತೆವಳಿ ಪಚ್ಚಳವೊಳಗು
ದೋಱಿ ಕೆಂಗಲಿಸಿ ನಡೆಯುಡುಗಿ ಚಲಿಯಿಸಲು ಪಾಯಂಗಾಣದುಱೆ ಡಗೆಯನು
ಹೇಱಿದೊಡಲತಿ ನೆಳಲನೆಳಸುತಿರೆ ಕೆಲದೊಳೈ
ದಾಱುಮಾರಳವಿಯೊಳು ಹಬ್ಬಿದೊಂದಾಲ ಮುಂ
ದೋಱೆ ಕಂಡೆಂತಕ್ಕೆ ತೆವಳಿಬಂದದಱ ನೆಳಲಂ ಸಾರ್ದನಾದಯ್ಯನು  ೫೯

ನಲಿದಾರವೆಯನಿಕ್ಕಿದನ ಕುಲಂ ಕೆಡದೆ ಸಲೆ
ನೆಲಸಿಪ್ಪುದಿಂತೆಂದು ಪೇಳ್ವಂತೆ ಹಬ್ಬಿ ಹರ
ಕಲಿಸಿತ್ತು ಹಲ ಕಾಲ ಬೀಳಲಾಗಿಯು ಬೀಳದೆಂತಕ್ಕೆ ಕೊಂಬು ಜಡಿದು
ನೆಲಕೆ ಬೀಳಲು ಬಿದ್ದುದಲ್ಲದೇನುಂ ನೋಯ
ದಲೆಯೆಂಬ ಜಾಣ್ಣುಡಿಗೆ ನೆಲೆಯಾಯ್ತು ಹಲವು ಬೀ
ಳಲು ಮೆಱೆದಿಹಾಲವತಿ ಲೀಲೆಯಿಂ ಮೂಲೋಕದಾಲಿಯಂ ಸೋಲಿಸಿದುದು            ೬೦

ಹಗೆಯೆನಗೆ ಮಳೆಗಾಲವದಱ ಬಲದಿಂದೆ ತಾ
ನೊಗೆದು ಕವಲಿಱಿದು ಬೆಳೆದೆನ್ನ ಕಿರಣಂಗಳಂ
ಹೊಗಲೀಯೆನೆಂಬುದೀ ಮರನುಳಿಯಲೀಯೆನಿದನೆಂದೆಂದು ಹಗಲೊಡೆಯನು
ಮಿಗೆ ಬಿಸಿಲವೆಂಕಿಯಿಂ ಸುಟ್ಟೊಡೆಲೆ ಬೆಂದು ಕೊ
ಳ್ಳಿಗಳ ಕೊನೆಯುರಿದಪ್ಪವೆನಲೆಲೆಗಳುದಿರ್ದ ಕೊಂ
ಬುಗಳ ಕಡೆವೊಂದೊಂದು ಕೆಂದಳಿರನುಗುಳಲೆಸೆದಿರ್ದುದಾ ಹೇರಾಲವು         ೬೧

ಆ ಮರನ ನೆಳಲುರಿಯ ನೆಳಲ ತೆಱನಾಗೆನಿ
ಷ್ಕಾಮಿಯೆನಿಪಾದಯ್ಯನಿನ್ನೀ ಶರೀರದ
ವ್ಯಾಮೋಹವೇಕೆಂದು ನಿರ್ವೇಗದಿಂದೆ ಸುಯ್‌ಸುಯಿದು ಹುಲಿಗೆಱೆಯೊಳೆನ್ನ
ಕಾಮಿನಿಯ ತಂದೆಗಿತ್ತವಧಿಯೇನಾಯ್ತೆನು
ತ್ತಾ ಮಹಿಮನೆಣಿಸಲಿಪ್ಪತ್ತೆಂಟು ದಿನವಾಯ್ತು
ಸೋಮನಾಥಂ ಸಿಕ್ಕನಿನ್ನೆಂದು ನಿಶ್ಚಯಿಸಿ ಬಳಿಕ ಹಮ್ಮದವೋದನು           ೬೨

ತನ್ನಿಂದೆ ತಾನೆ ಮತ್ತೆಚ್ಚತ್ತು ಕರಚರಣ
ದಿಂ ನಡೆದೊಡೇಂ ತೆವಳಿ ಪಚ್ಚಳಂ ಸುಲಿದೊಳಗೆ
ಬೆನ್ನ ನಿಟ್ಟಿಲುದೋಱುವಂತೆ ಬಾದಣವಾದ ಹುಣ್ಗೆ ಹೆಡ್ಡೈಸದೆದ್ದು
ಇನ್ನು ಕಿಱಿದುಂ ದಾರಿಯಂ ನಡೆವೆನೆಂದು ಮನ
ಮನ್ನೆಱೆಯೆ ಬಲಿದೆರಡಡಿಯ ನಡೆದು ಕೆಡೆ ಮೇ
ಲಿನ್ನೇನು ಗತಿಯೆಂದು ಹೊರಳ್ದುರುಳ್ದು ಹೋಗುತ್ತಲಿರ್ದನಂದಾದಯ್ಯನು            ೬೩

ಇಂತು ನಡೆದಿನ್ನೆಂದು ಸೌರಾಷ್ಟ್ರಮಂ ಪೊಕ್ಕು
ಕಂತುಮದಹಾರಿಸೋಮಯ್ಯನಂ ನುಡಿದವಧಿ
ಪಿಂತಾಗದೊಯ್ದು ಹುಲಿಗೆಱಿಯಲ್ಲಿ ಸುರಹೊನ್ನೆ ಬಸದಿಯೊಳಗಿಪ್ಪರುಹನ
ಹಂತವಂ ಮುಱಿದೊಡೆದು ನಿಲಿಸಿದಪೆನೆಂದಧಿಕ
ಚಿಂತೆಯಿಂದುರುಳೆ ತಱಿದೆಲುದೋಱಿ ಕಾಯಕಾ
ಲಾಂತಕಾ ಸೌರಾಷ್ಟ್ರಪತಿ ಸೋಮನಾಥ ಶರಣೆನುತಿರ್ದನಾದಯ್ಯನು           ೬೪

ಅಕ್ಕಟಾ ದಾರಿಯೊಳು ದಿನವೆಯ್ದೆ ಸವೆದುದಿ
ನ್ನುಕ್ಕಿ ನುಡಿವಾರುಹತರಿಗೆ ಜಿಹ್ವೆಯೊಮ್ಮೊಳ
ಕ್ಕಕ್ಕು ಮೂಲೋಕದೊಳಗಧಿಕ ಶೈವಕ್ಕೆ ಕಡು ಕುಂದನಾಂ ತಂದೆನೆಂದು
ತಕ್ಕುಗೆಟ್ಟೊಱಲಿ ಬಾಯಾಱಿ ಸೌರಾಷ್ಟ್ರಪತಿ
ಮುಕ್ಕಣ್ಣ ಸೋಮಯ್ಯ ಕರುಣದಿಂದಿದಿರಾಗಿ
ಬಕ್ಕೆ ನಾನಿನಿತು ನಿಷ್ಠನೆಯೆನುತ್ತಂ ಬಾಡಿ ಬಸವಳಿದನಾದಯ್ಯನು   ೬೫

ಮುಂದುಗೆಟ್ಟಱೆವುಗೆಟ್ಟಾಸತ್ತು ಬೇಸತ್ತು
ನೊಂದಚಳನಾಗಿ ಕಲುಮರನಾಗಿ ಮರುಳಾಗಿ
ಮಂದಮತಿಯಾಗಿ ದೇಸಿಗನಾಗಿ ಬೀದಿಗಱುವಾಗಿ ಮೊಗಮೋಟನಾಗಿ
ಎಂದುವರೆ ಕಾಡಿದಪೆ ತಂದೆ ನಾನಿತ್ತವಧಿ
ಬಂದುದೇಗುವೆನು ಕರುಣಿಸಿ ಬಾರ ಬಾರದೊಡೆ
ಬಂದು ಕೊಂದಾದೊಡಂ ಹೋಹುದೆನೆ ಮೀಱಿ ಹಂಬಲಿಸಿ ಹಲವಂ ನುಡಿದನು           ೬೬

ಗುರುದೇವರಾರೋಗಿಸದೆ ಹೋದ ಮರುಕವೊಂ
ದರುಹನೆದೆ ಬಿರಿಯೆ ಶಿವನಂ ನಿಲಿಸುವತಿ ತವಕ
ವೆರಡು ಪದುಮಾವತಿಯಗಲ್ಕೆಯುಮ್ಮಳ ಮೂಱು ಬಸವಳಿದ ಚಿಂತೆ ನಾಲ್ಕು
ನೆರವಿಲ್ಲದಳಲೈದು ಬಿಸಿಲ ಬೇಗೆಯ ಬೆಂಕಿ
ಯುರಿಯಾಱು ಕೊಟ್ಟವಧಿ ತೀರ್ದ ಸಂಕಟವೇಳು
ಹರನ ಕಾಣದ ಖಾತಿಯೆಂಟಾಗಲೆಂಟುಮುಖದಿಂದೆ ಧಾವತಿಗೊಂಡನು         ೬೭

ದಾನಿ ಸೌರಾಷ್ಟ್ರಪತಿ ಸೋಮಯ್ಯ ಕಾರುಣ್ಯ
ಹೀನನಾಗಿರ್ದಪೆಯಿದೇನಯ್ಯ ಪ್ರಾಣಾಭಿ
ಮಾನ ನಿನ್ನದು ನಿನ್ನ ಧ್ಯಾನದಿಂ ದಾರಿಯಂ ನಡೆನಡೆದು ದೆಸೆಗೆಡುವೊಡೆ
ಆನಿದ್ದೆನಿದ್ದೆನಂಜದಿರೆಂದು ಬಂದೆನ್ನ
ಹಾನಿಗೊಳಗಾಗಿಸದೆ ನಿಜಮೂರ್ತಿಯಂ ತೋರ್ಪು
ದೋ ನನ್ನ ತಂದೆ ಭಕ್ತರ ಬಂಧುವೆಂಬ ಬಿರಿದೇನಾದುದೆನುತಿರ್ದನು೬೮

ಅಯ್ಯೋ ಮಹಾದೇವ ಬಾಣಂಗೆ ಪದವಿಯಂ
ಕಯ್ಯ ಮೇಲಿತ್ತವನೆ ಕಣ್ಣಿತ್ತು ಕಾಳಿದಾ
ಸಯ್ಯನಂ ಮೆಱಿದವನೆ ಧರಣಿಯೆಲ್ಲಱಿಯ ಮೈಯಿತ್ತು ಮೈಯೂರನ
ಮೈಯ್ಯಾರ ಕೂಡಿದನೆಯೆನ್ನನೇಕೊಲ್ಲೆ ಹೇ
ಳಯ್ಯ ಯಿನ್ನೆಂದುತನಕಳಲಿಸುವೆ ನೀನೆಂದು
ಹುಯ್ಯಲಿಕ್ಕಿದನು ಸೌರಾಷ್ಟ್ರಪತಿಸೋಮನಾಥಂಗೋವನಾದಯ್ಯನು         ೬೯

ವರ ರಜತಗಿರಿಗೋಹಿಲನ ತನುವನುದ್ಭಟನ
ಪುರಮಂ ಹಲಾಯುಧಯ್ಯನ ನವಗ್ರಾಮಮಂ
ಗುರುಸಾಮವೇದಿಗಳ ಛತ್ತೀಸಪುರವನಗ್ಗದ ಮಳೆಯರಾಜನೆಂಬ
ಧರಣಿಪನ ನವಲಕ್ಷದೇಶಮಂ ಕೊಂಡೊಯಿದೆ
ಕರುಣಿ ನಾನುವುದಂ ಕೊಂಡಯ್ಯಹೇಳಿ ಕರ
ಕರಿಸಿದೆನೆ ನಿಜರೂಪ ತೋಱಿಂದೊಡಿಹಪಕ್ಷ ಪರಪಕ್ಷವೇಕೆಂದನು    ೭೦

ಸಾಯನೋಡುವ ಕರುಣಿ ಸೋಮಯ್ಯ ಬೇಡಿದರಿ
ಗೀಯದಳಲಿಪ ದಾನಿ ಸೋಮಯ್ಯ ನಂಬಿದರ
ನಾಯತಿಕೆಗೆಡಿಪ ದಾಕ್ಷಿಣ್ಯಪರ ಸೋಮಯ್ಯ ಕೈಯತ್ತಿ ಕರೆದು ಕರೆದು
ಬಾಯಾಱುತಿರೆ ಬಾರದತಿಸುಲಭ ಸೋಮಯ್ಯ
ಕಾಯುವಸುವರೆಯಾಗಿ ಹುಯ್ಯಲಿಡೆಮ್ಮೊಮ್ಮೆ ಕೇ
ಳ್ದೋಯೆಂದೊಡನ್ಯಾಯವೇ ತಂದೆ ತುಟಿ ಮಿಡುಕದಿರಲೇಕೆ ಹೇಳೆಂದನು      ೭೧

ವೇದಂ ಪುರಾಣ ಶಾಸ್ತ್ರಂ ಹರಿ ವಿರಿಂಚಿ ಸುರ
ರಾದಿಯಂತ್ಯವನಱಿಯರೆಂದೆಲ್ಲರುಂ ಪೇಳ್ವ
ಮಾದೇವನಂ ತಿಂಗಳಂದಿಂಗೆ ಸೌರಾಷ್ಟ್ರದಿಂದೆ ತಂದಪ್ಪೆನೆಂದು
ಆ ದುರುಳಸವಣಂಗೆ ನುಡಿದವಧಿ ತೀರ್ವ ಹದ
ನಾದುದುಳಿದೆರಡು ದಿನದೊಳಗೆಂತು ಮಾಳ್ಪೆನೆಂ
ದಾದಯ್ಯ ತನ್ನ ನನ್ನಿಯ ಬನ್ನದುದಯಮಂ ಕಂಡು ಕರ ಬೆಂಡಾದನು         ೭೨

ಹುಳಿಮಡಕೆಯೊಳು ನವಕ್ಷೀರ ಹೊಕ್ಕಂತಿತರ
ಜಳದೊಳುತ್ತಮಜೇನುತುಪ್ಪ ಹೊಕ್ಕಂತೆಲರು
ಸುಳಿವ ಬಯಲೊಳು ದೀಪ್ತಿ ಹೊಕ್ಕಂತೆ ದಳ್ಳುರಿಯೊಳಗೆ ಕುಸುಮ ಹೊಕ್ಕಂದದಿ
ಎಳಸಿ ದುರ್ಜನರೊಳಗೆ ಸಜ್ಜನರು ಹೊಕ್ಕು ಗುಣ
ವಳಿದು ಕೆಟ್ಟಂತೆನ್ನ ಪಾಪಿದೇಹದೊಳು ನಿ
ರ್ಮಳಭಾಷೆಯುಂ ಛಲಂ ಹೊಕ್ಕು ಕೆಟ್ಟುದು ಮಹಾದೇವ ಶಿವಧೋಯೆಂದನು          ೭೩

ಶಶಿಶೇಖರಾ ನಿನ್ನ ಕಡೆಗಣ್ಣ ಕಾರುಣ್ಯ
ರಸವಱತುದೇ ಕೃಪಾಗುಣ ಮುರುಟಿತೇ ದಯಾ
ವ್ಯಸನವರೆಯಾಯ್ತೆ ದಾಕ್ಷಿಣ್ಯವೇಂ ಬೀತುದೇ ಭಕ್ತಾನುಕಂಪಿಯೆಂಬ
ಹೆಸರು ಹೋದುದೆ ಭೂತದಯವಱತುದೇ ಜಗದೊ
ಳೆಸೆದಿಪ್ಪ ಸರ್ವಗತನೆಂಬ ಬಿರುದಂ ಬಿಸುಟೆ
ಹಸನಾಯ್ತು ನಿನ್ನ ನಂಬಿದರುಂಬರೆಂದೆನುತೆ ಬಾಯ್ವಿಟ್ಟನಾದಯ್ಯನು        ೭೪

ಬಿಡುವುದರಿದಲ್ಲೆನ್ನ ಜೀವಮಂ ಬಿಟ್ಟೆನಾ
ದೊಡೆನುಡಿದ ಭಾಷೆ ಸಲ್ಲದು ಸಲ್ಲದಿರಲೆನ್ನ
ಮಡದಿಯಯ್ಯಂ ನಗುವನೆನ್ನ ಸತಿ ಸೌರಾಷ್ಟ್ರಸೋಮಯ್ಯ ಬಂದಲ್ಲದೆ
ಒಡಲೊಳನ್ನವನಿಕ್ಕೆನೆಂದಿರ್ದಳಾ ಸತಿಯು
ಮೃಡನೆ ನಿನಗಿನಿತುಂ ವಿನೋದವಾಗಿರ್ದಪುದೆ
ನುಡಿಯದೇಕಿರ್ದಪೆ ಉಮಾದೇವ ಪೇಳೆನುತ್ತಾದಯ್ಯನಿಂತೆಂದನು   ೭೫

ನಡೆಯಲಾಱದೊಡೇನೊ ಕಯ್ಯೂಱಿ ನಡೆವೆನೆಂ
ಬೊಡೆ ದಾರಿ ದೂರವದಕೇನೆಂದೊಡಾನು ಹಲ
ವೆಡೆಗೆಯ್ದು ಹೋಹೆನೆಂದೊಡೆಕೊಟ್ಟವಧಿತೀರ್ದುದಿನ್ನೆಂತು ಮಾಳ್ಪೆನೆಂದು
ಕಡೆಗಿವಂ ಮಗುಳ್ದು ತನ್ನೂರ್ಗೆ ಪೋಗದೆ ಮಾಣ
ನೆಡೆಯೊಳಿನ್ನೆನ್ನ ರೂಪಂ ತೋಱಲೇಕೆಂದು
ಮೃಡನೆ ನೀನಡಗಿರ್ದೊಡಿಹೆಯಲ್ಲದೆನ್ನ ಛಲವಂ ಕೇಳು ಕೇಳೆಂದನು           ೭೬

ಕೊಟ್ಟವಧಿ ತೀರ್ದೊಡಂ ತನು ಸತ್ವಗೆಟ್ಟೊಡಂ
ಬಟ್ಟೆಹಿರಿದಾದೊಡಂ ಹುಲಿ ಕರಡಿಸಿಂಹವಱಿ
ಯಟ್ಟ ಗರ್ಜಿಸಿದೊಡಂ ಭೂತವೇ ತಾಳ ಶಾಕಿನಿಡಾಕಿನಿ ಗ್ರಹಕುಲಂ
ನಟ್ಟಿರುಳು ಬಂದಂಜಿಸಿದೊಡಂ ಮಹಾರೌದ್ರ
ದಟ್ಟಡವಿಯಂ ಹೋಹೆನಿಂದೆನ್ನ ಹರಣಮಂ
ಬಿಟ್ಟು ಸಿದ್ಧಂ ನಿನ್ನ ಮೇಲೆ ಸೋಮೇಶ ಕೇಳೆಂದನಂದಾದಯ್ಯನು  ೭೭

ಬಿಡದೊಱಲಿ ಬೆಂಡಾಗಿ ಮರನಂ ಮಲಂಗಿ ಕುಂ
ಬಿಡುವ ಶ್ರಮಕ್ಕೆ ಸೈರಿಸದೆ ಕಣ್ಮುಚ್ಚಿ ಮಿಡು
ಮಿಡುಕುತಿರಲೆದ್ದೆದ್ದು ತಂಗಾಳಿ ತೀಡೆಹಾಯೆಂದು ಹಾರೈಸಿ ತಣಿದು
ಕಡುರುಕ್ಷದೊಳಗಿದೆಲ್ಲಿಯದೆನುತ್ತೆದ್ದು ಮುರಿ
ದಡಿಸಿನೋಡುತ್ತಿರಲು ದೂರದಲಿ ವೃದ್ಧತ
ಮ್ಮಡಿಯ ರೂಪಿಂ ತೋಱಿದಂ ಕರುಣಿ ಸೌರಾಷ್ಟ್ರಪುರದರಸ ಸೋಮೇಶನು೭೮

ನರೆತ ಜೆಡೆ ತೂಗುದಲೆ ಹೊಱಹಲ್ಲು ಬಿದ್ದಧರ
ಕರದೂಱುಗೋಲು ಬಾಗಿದ ಬೆನ್ನು ಮಂದಗತಿ
ಕರವೊತಿಗೆ ಸರ‍್ವಾಂಗಭಸಿತದಾಧಾರರುದ್ರಾಕ್ಷಿಯುಪವೀತವೆರಸಿ
ಧರೆಗಧಿಕವೃದ್ಧಾಪ್ಯತೆಯನನುಕರಿಸಲೆಂದು
ಧರಿಸಿದನೊ ನುತಪುಣ್ಯ ಹಣ್ಣಾಯ್ತೊ ಹೇಳೆನಿಸಿ
ವರ ವೃದ್ಧವೇಷದೀಶ್ವರನಾದಿಮಯ್ಯನಿದ್ದಾಲದ ಮರಕೆ ನಡೆದನು           ೭೯

ದಂತವಿಲ್ಲುಣಿಸಿಲ್ಲದಾತಂಗಿದೇವುದೆಂ
ಬಂತುಡಿಗೆಯಿಲ್ಲಂ ದಿಗಂಬರಂಗೇವುದೆಂ
ಬಂತೆ ಘಮ್ಮನೆ ಕೇಳ್ವುದಿಲ್ಲ ವೇದಂ ಕೂಗೆ ಕೇಳ್ವುದಿಲ್ಲೆಂಬಂದದಿ
ಮುಂದೆ ನಡೆವಧಟಿಲ್ಲ ಪರಿಪೂರ್ಣತೆಯನು ಪೇ
ಳ್ವಂತೆ ತಲೆದೂಗುತಿಹುದಿರವಿದೆನಗೆಂದು ಪೇ
ಳ್ವಂತೆಯಷ್ಟಿಯಬಿಡಂ ಸಕಲ ತನ್ನಾಧಾರವೆಂದು ಪೇಳ್ವಂತೆಸೆದನು            ೮೦

ರಸೆಗೆ ಹೊಸತೆಂದೆನಿಸುವತಿವೃದ್ಧ ತಾಪಸಂ
ನಸಿದೊಯ್ಯನೊಯ್ಯನೈತಂದು ನೆಳಲಂ ಸಾರ್ದು
ಕುಸಿದ ಬೆನ್ನಂ ನಿವುಚಿಕೊಳುತೆ ಶಿವ ಶಿವ ಮಹಾದೇವಯೆನುತಂ ಕುಳ್ಳಿರೆ
ಹೊಸೆದು ಹುಡಿಗುಟ್ಟುತಿಹ ಹಸಿವು ನೀರಡಿಕೆಗಳು
ಮಸುಳಿಸಿ ಮಹಾಶ್ರಮಂ ಕೆಟ್ಟು ಶೈತ್ಯಂ ತನುವ
ಮುಸುಕಿ ಪರಿಣಾಮವಾರಿಸಿ ಸುಖಸಂತುಷ್ಟನಾದನಂತಾದಯ್ಯನು  ೮೧

ಕರವೃದ್ಧರಪ್ಪ ಮಾಹೇಶ್ವರರಿವರ್ಮಹಾ
ಪುರುಷರೆಲ್ಲಿಂದೆ ಬಿಜಯಂಗೈದರೋ ಕ್ರೂರ
ತರಮೃಗಾದಿಗಳ ಬಾಧೆಯ ಬಗೆಯದಿವರ ಕಂಡೆನಗೀ ಶರೀರಶ್ರಮಂ
ಪರಿಹರಿಸಿತೆನ್ನ ಜನ್ಮಂ ಸಫಲಮೀಶ್ವರಂ
ಕರೆದೊಡೋಯೆನ್ನ ತನ್ನಂ ತೋಱನಿಂದೆನ್ನ
ಹರಣಮಂ ಬಿಡುವ ಪದದೊಳು ಭಕ್ತನಂ ಕಂಡೆನೆಂದನಂದಾದಯ್ಯನು          ೮೨

ಶರಣೆಂದು ವಂದನಂಗೈದು ಪರಿಣಾಮವಾ
ವರಿಸಿ ಬಲವಾದಲ್ಲಿ ಹೋದಪೆಂ ಮತ್ತೆ ನಾ
ಲ್ಕೆರಡಡಿಯ ಸವೆದನಿತು ದಾರಿ ಸವೆಯಲಿ ಮತ್ತೆ ಮೇಲೆ ಸತ್ವಂಗೆಟ್ಟೊಡೆ
ಹೊರಳ್ದು ನಡೆದುರುಳ್ದು ಕಡೆಗೀ ಶರೀರಂ ಸವೆದು
ಮರಣಮಂ ಕಾಬಂದುತನಕ ನಡೆದಪೆನಿನ್ನು
ಹರನ ಕಾಬಾಸೆಯೇಕವಧಿ ತುಂಬಲುಬಂದುದೆನುತೆ ನಡೆಗೊಂಡನಂದು         ೮೩

ಬರುತಖಿಳ ಬಲ ಸಮೇತಂ ಸುಖಾಸನದೊಳೆ
ಯ್ತರೆ ಸವೆದ ದಿನವನೀ ದಾರಿಯಳವಿಯನಱಿಯ
ದಿರೆ ತಿಂಗಳಂದಿಂಗೆ ಸೋಮನಾಥನ ತಂದು ಜಿನನನೊಡೆದಪ್ಪೆನೆಂದು
ಕೆರಳೀ ಪ್ರತಿಜ್ಞೆ ಮಾಡಿದೆನೆನ್ನ ನಿಷ್ಠೆ ಸು
ಸ್ತಿರವಾದೊಡಭವನಿದಿರಂ ಬಾರದಿರನಿನ್ನು
ಹರಣಮಂ ಸೌರಾಷ್ಟ್ರಪುರದತ್ತ ಹೋಗುತ್ತ ಬಿಡುವೆನೆನುತಂ ನಡೆದನು        ೮೪

ನಿಲ್ಲು ಹೋಗದಿರಯ್ಯ ಶೀತಜಲವಂಬಲಿಯ
ನಲ್ಲವಂ ಮೊಸರೋಗರವ ತಂದೆನೆನಗೊಬ್ಬ
ರಿಲ್ಲದುಣಬಾರದತಿಹಸಿದು ಕಣ್ಣಲಿ ಹರಣವೀ ಹೋಯ್ತೆ ಬಪ್ಪಾಗಳು
ಎಲ್ಲಿಯುಂ ಭಕ್ತರಂ ಕಾಣದೆ ಬರುತ್ತೆನಿ
ನ್ನಲ್ಲಿಗೆಯ್ತಂದೆನಿದಕೋ ತಂದೆಯೆಂದೊಡಾ
ನೊಲ್ಲೆನೆಲೆಯಯ್ಯ ಮತ್ತೊಬ್ಬರಂ ಗಳಿಸಿಕೊಳ್ಳೆಂದೆನುತೆ ನಡೆಗೊಂಡನು     ೮೫

ದುಡುದುಡನೆ ದಾರಿಗಡ್ಡಂಬಂದು ಹಸ್ತಮಂ
ತುಡುಕಿ ಹಿಡಿದೇಕೊಲ್ಲೆ ತಂದೆ ಹೇಳೆನಲೊಲ್ಲೆ
ಬಿಡುಬಿಡೆನಗುಣಬಾರದೆಂದೊಡೇಕುಣಬಾರದೆಲೆ ಮರುಳು ಮಗನೆಯೆನಲು
ಮೃಡ ಸೋಮನಾಥನಂ ಕಂಡಬಳಿಕಲ್ಲದಿ
ನ್ನೆಡೆಯೊಳಳವಡದೆನಗೆ ನೇಮವಳಲಿಸದೆ ಬಿ
ಟ್ಟೊಡೆ ಸಾಕು ಹತ್ತು ಸೂಳುಣಲಿತ್ತವಂ ಕಾಡದೆಲೆ ದೇವ ಕೇಳೆಂದನು          ೮೬

ಮರುಳೆಯಿದಕೀಸು ಮಾತೇಕೆಮ್ಮಕಯ್ಯೊಳಿ
ದ್ದರೆ ಸೋಮನಾಥದೇವರು ನೇಮಮಾಡೆನು
ತ್ತೊರೆದೊಡೀ ಪರಿಯಲ್ಲ ಸೋಮನಾಥಂ ತನ್ನ ನಿಜಮೂರ್ತಿಯಂ ತೋಱಿಸಿ
ಕರುಣಿಸಿದೊಡಲ್ಲದಾನುಣ್ಣೆನೆನೆ ಹಸನಾಯ್ತು
ಕರುಣಿ ಕಾಣಿಸಿಕೊಳ್ಳದೇಕಿಪ್ಪನಿನ್ನು ಚೆ
ಚ್ಚರಗಾಣದೇಕಿಪ್ಪೆ ನೀನೆನುತ್ತಾ ಭಕ್ತನಾದಯ್ಯನಂ ನಕ್ಕನು          ೮೭

ನಗಲೇಕೆ ದೇವ ಮರಣಾಂತ್ಯದಿಂ ಮೇಲೆ ಮಾ
ತುಗಳುಂಟೆ ತನ್ನ ರೂಪಂ ಕಾಣಲೀಯದೊಡೆ
ಮಿಗೆ ಸಾಯಲೀಯನೇ ಬೆಂದ ಹುಣ್ಣ ಕಂಬಿಯಲಿ ಕೀಸಲೇಕೆಂದೆನೆ
ನಗಲೇಕೆ ದೇವ ಮರಣಾಂತ್ಯದಿಂ ಮೇಲೆ ಮಾ
ತುಗಳುಂಟೆ ತನ್ನ ರೂಪಂ ಕಾಣಲೀಯದಡೆ
ಮಿಗೆ ಸಾಯಲೀಯನೇ ಬೆಂದ ಹುಣ್ಣಂ ಕಂಬಿಯಲಿ ಕೀಸಲೇಕೆಂದೆನೆ  ೮೮

ಒಂದು ತಿಂಗಳ್ಗೆ ಸೌರಾಷ್ಟ್ರಪತಿ ಸೋಮನಂ
ತಂದಲ್ಲದುಣ್ಣೆನೆಂದತಿ ಭಾಷೆಯಂ ನುಡಿದು
ಬಂದುದಱಿನೊಲ್ಲೆನೆನೆಯಕ್ಕಕ್ಕು ಯೆನಿತುದಿನ ಪಿಂದಾದುವಧಿಯೊಳಗೆ
ಮುಂದೆ ದಿನವೆರಡುಳಿಯೆ ದಿವಸವಿಪ್ಪತ್ತೆಂಟು
ಸಂದುದೆಂದೆನೆ ಕೈಯಬೆರಳ ಮೂಗಿನಮೇಲೆ
ತಂದಿಟ್ಟು ಕೌತುಕಂಬಟ್ಟು ನುಡಿದಂ ಭಕ್ತನಾದಯ್ಯನಂ ನೋಡುತೆ೮೯

ತೀರಿತ್ತವಧಿಯೆರಡು ದಿನವುಳಿಯೆ ನೀ ಬಂದ
ದಾರಿಯರ್ಧಂ ಸವೆದಿನ್ನೆಂದು ನೀ ಹೋಗಿ
ಸೌರಾಷ್ಟ್ರದಿಂದೆ ಸೋಮಯ್ಯನಂ ತಪ್ಪೆಯುಂಡಿಲ್ಲಿಂದೆಮರಳೆಂದೆನೆ
ಆರಾಧ್ಯದೀಶ್ವರಾರ್ಚಕರೆಂದು ನುಡಿದುದುಂ
ಸೈರಿಸಿದೆನಿನ್ನು ಬಿಜಯಂಗೈವುದೆನಲು ಮದ
ನಾರಿ ಮನದೊಳು ಮೆಚ್ಚಿ ಕೆಚ್ಚು ಹೃದಯಂ ಮತ್ತೆ ನುಡಿದನಾದಯ್ಯನೊಡನೆ           ೯೦

ನೀಮಗುವು ಮುಂದಱಿಯ ಹೋದೊಡೇನಹುದಲ್ಲಿ
ಸೋಮಯ್ಯನಂ ಕಂಡು ಬಲ್ಲುದುಂಟೇಯೆಂದೊ
ಡಾಂ ಮುನ್ನ ಕಂಡಱಿಯೆನೆನಲಿನ್ನು ಕಂಡಱಿವುದಕ್ಕೆ ತೆಱನಾವುದೆನಲು
ಸೋಮನಾಥಾ ಸೊಡ್ಡಳಾ ಸೋಯಿಗಾ ಸೋಮ
ಸೋಮಯ್ಯಯೆಂದು ನಾನೊಱಲುತಿರೆ ಬಂದು ಕೇ
ಳ್ದಾ ಮಹಾ ಮೂರ್ತಿಯಂ ಕರುಣದಿಂ ತೋಱಿಸಿದೊಡಾಂ ಕಾಣಬಲ್ಲೆನೆನಲು           ೯೧

ಆದೊಡೀಕ್ಷಿಸು ಸೋಮನಾಥನೆಂಬಾತ ನಾ
ನಿದ್ದೆನೆನೆ ನಿಮ್ಮರೂಪೆಮ್ಮ ಪುರಮರ್ದನನ
ಹೋದ ಹೊಲಬಲ್ಲ ಹುಸಿಯದಿರೆಂದೊಡಾತಂಗದಾವುದೈ ಕುಱುಹೆಂದೆನೆ
ಆದ್ಯರುಂ ವೇದ್ಯರುಂ ಪೇಳ್ದುದನು ಕೇಳಿ ನಾ
ನಾದಿಮಧ್ಯಾಂತರಹಿತನ ರೂಪ ಬಲ್ಲೆನೆನ
ಲಾದಿಮಯ್ಯನ ಮನದೊಳಿರ್ದ ನಿಜಮೂರ್ತಿಯಂ ತೋಱಲುದ್ಯತನಾದನು   ೯೨

ಜೆಡೆಗಳೆಡೆಯೊಳು ಸುಳಿವ ಗಂಗೆ ಗಂಗಾನದಿಯ
ತಡಿಯ ಶಶಿ ಸಸಿವೆಳಗು ಕವಿದ ಹಣೆಗಣ್ಣು ಕ
ಣ್ಕುಡಿವೆಳಗಿನಿಂ ತೊಳಪ ಮುಖ ಮುಖದ ಕೆಲದ ಕುಂಡಲ ಕುಂಡಲದ ಕಾಂತಿಯ
ಕಡುಗಪ್ಪನುಗುಳ್ವ ವಿಷ ವಿಷಮಂ ಸವಿವ ರುಂಡ
ದೊಡಿಗೆ ತೊಡಿಗೆಗೆ ತಕ್ಕ ಪುಲಿದೊವಲು ತೊವಲ ನುಗಿ
ವಡೆವಾಯುಧಂಗಳಾಯುಧವಿಡಿದ ದಶಭುಜದ ನೀಱ ನಿಜಮಂ ತೋಱಲು   ೯೩

ಮೀಱಿ ಕಂಡಂ ಕಂಡು ತನುವಿನೊಳು ಪುಳಿಕಮಂ
ಹೇಱಿದಂ ಸಂತಸವ ನೇಱಿದಂ ಜನನಮಂ
ಮಾಱಿದಂ ಕಳೆಗಳಂ ಬೀಱಿದಂ ವಿಪುಳಡಗೆಯಾಱಿದಂ ಸಂಸಾರದಿಂ
ಜಱಿದಂ ನಿಷ್ಠೆಯಂ ತೋಱಿದಂ ಹಗೆಗಳಂ
ಕೇಱಿದಂ ಭಕ್ತಿಯಂ ಸಾಱಿದಂ ಚಿಂತೆಯಂ
ತೂಱಿದಂ ಶಿವನಡಿಗೆ ಮಾಱುಗೊಟ್ಟಂ ಮನವನಪ್ರತಿಮನಾದಯ್ಯನು        ೯೪

ಶರಣು ಹಿಮಕರಧಾರಿ ಶರಣು ಮನ್ಮಥ ವೈರಿ
ಶರಣು ವೇದಾತೀತ ಶರಣು ಶರಣ ಪ್ರೀತ
ಶರಣು ಗಿರಿಜಾನಾಥ ಶರಣು ವೃಷಭಾರೂಢ ಶರಣು ಲೋಕೈಕನಾಥ
ಶರಣು ಶಿವ ಶರಣು ಭವ ಶರಣು ಹರಶರಣು ಮೃಢ
ಶರಣು ಗತಿ ಶರಣು ಮತಿ ಶರಣಾಗೆನುತೆ ಕೆಡೆದು
ಹೊರಳಿವಿಡಿದಾನಂದ ಜಲದಿಂದೆ ತೊಳೆದನಘದೂರನಡಿದಾವರೆಯನು        ೯೫

ಒಗೆವಶ್ರುಜಲದ ಮಱೆಯೊಳು ನಯನವುಬ್ಬೆದ್ದು
ನೆಗೆವ ಪುಳಕದ ಮಱೆಯೊಳೊಡಲು ನಡುಕಂಗಳ ಮ
ಱೆಗಳೊಳು ಕರಂಸೋಮ ಸೋಮನಾಥಾಯೆಂಬ ತೊದಲುಗಳ ಮಱೆಯೊಳು ನುಡಿ
ಬಿಗಿದ ಪರವಶದ ಮಱೆಯೊಳು ಚಿತ್ತವಡಗಿ ನೆ
ಟ್ಟಗೆ ಕಾಣಬಾರದಿರೆ ಶಿವ ಮೆಚ್ಚಿ ತಲೆದಡವಿ
ಮಗನೆ ಕಾರ್ಯಂ ಮುಂದೆ ನಿಗರ ನಿನಗೆಂದು ಮೊಗವೆತ್ತಿ ಮಿಗೆ ಕುಳ್ಳಿರಿಸಿದ     ೯೬