ಪಲ್ಲವ
ಈಸು ಮುನಿವವನೆಮ್ಮ ಬಸದಿಯೊಳು ತನ್ನ ಸೋ
ಮೇಸನಂ ನಿಲಿಸದೇಕುಂಬನೆಂದಣಕಿಸುವ
ದೂಸಕರ ಮೂದಲೆಗೆ ತಂದು ಬಳಿಕುಂಬೆನೆನುತಂ ಹೋದನಾದಯ್ಯನು

ಚತುರ ಚಂದ್ರೋದಯದ ರಾತ್ರಿಯ ವಿಳಾಸದು
ನ್ನತಿಯ ಪದುಮಾವತಿಯ ಸಂಗದ ನಿದಾಘತೀ
ವ್ರತೆಯ ಕೇಳೀವನದ ಘನಪಥಿಕರೆನಿಪ ತಾಪಸ್ವಿಗಳ ದೇಹಾರದ
ಶ್ರುತಿಗತೀತಾನಂತನಾದಯ್ಯನ ಪ್ರಯಣ
ಗತಿಯ ಬೇಂಟೆಯ ತಪೋವನದ ನುತ ವರ್ಣನೋ
ಚಿತರಸದ ರಹಣಿಯನು ಚಿತ್ತೈಸಿ ಕೇಳುವುದು ಸದ್ಭಕ್ತ ಸಾಹಿತ್ಯರು  ೧

ಶ್ರೀಮೇದಿನೀವದನಮುಕುರ ಸೌರಾಷ್ಟ್ರಪತಿ
ಸೋಮನಾಥನ ಕುವರನಾದಯ್ಯನಾದಯ್ಯ
ನೀ ಮಹಾತೆಂಕನಾಡಿಂಗಿದುತ್ಕೃಷ್ಟವೆಂದೆನಿಪ ಪುಲಿಕರಪುರದೊಳು
ಸಾಮರ್ಥ್ಯಪುರುಷಹರದರ್ಪಲಬರುಂಟಿಲ್ಲಿ
ಕಾಮಿತ ವ್ಯವಹಾರ ಕ್ರಯ ವಿಕ್ರಯಸ್ಥಾನ
ನಾಮೆಲ್ಲರುಂ ಹೋಗಿ ನೋಡುವಂ ಬನ್ನಿಮೆನೆ ಹರುಷದಿಂ ಬರುತಿರ್ದನು    ೨

ಇತ್ತಲೂರೊಳಗೆ ಪದ್ಮಾವತಿಯ ವಾಮಭುಜ
ಕೆತ್ತೆ ಸುರಹೊನ್ನೆಬಸದಿಯ ದಡಿಗಜಿನ ನಡು
ನೆತ್ತಿಬಿರಿವಂತಾಗೆ ಸೌರಾಷ್ಟ್ರಸೋಮನಾಥಂ ಪಯಣಕುದ್ಯೋಗಿಸೆ
ಕತ್ತಲೆಯ ಮನೆಯೊಳಗೆ ಸೊಡರು ಕರಿವಿಂಡೊಳು ಮೃ
ಗೋತ್ತಮಂ ಪೊಗುವಂತೆ ನಗರಿಯಂ ಪೊಗುತಂದು
ಚಿತ್ತಜಬಳಾಹಕಶ್ವಸನ ಹೋಜೇಶಲಿಂಗವ ಕಂಡನಾದಯ್ಯನು       ೩

ಹರುಷದಿಂದಲ್ಲಿ ಬೀಡಾರಮಂ ಬಿಟ್ಟುಪುರ
ಹರನ ಶಂಕರನ ಶಶಿಧರನ ಶುಭಕರನನನ
ವರತ ಪೂಜಾಸುಖವನಪ್ಪಿ ಪಾದೋದಕವನಾಧರಿಸಿ ಧನ್ಯವಾಗಿ
ಪರಮಪ್ರಸಾದಸಂತುಷ್ಟತೆಯನೈದಿ ನಿಜ
ಪರಿಜನಂ ಬೆರಸಿ ಸುಖಗೋಷ್ಠಿಯಿಂದಿರಲು ಜೈ
ನರ ಭಾಗ್ಯ ಕಡೆಗಾಣ್ಬ ತೆಱದಿಂದೆ ಹಗಲು ಕಡೆಗಂಡುದೇವಣ್ಣಿಸುವೆನೊ       ೪

ಮೊಳೆವ ಸಂಧ್ಯಾಂಗನೆಗಬುಧಿ ನಿವಾಳಿಸಲೆಂದು
ತಳೆದ ಮಾಣಿಕದ ಪೆರ್ಜೊಡರೊ ದಿವರಾತ್ರಿಗಳ
ನಳೆದು ಹೊಲಮೇರೆಯೊಳು ನಡಲೆಂದು ವರುಣನಿರಿಸಿದ ಹವಳದೊಂದು ಸರಿಯೊ
ಬೆಳಗೆಂಬ ಲತೆಯೊಲೆದು ಕುಡಿವರಿದು ಕೆಂಪಡರ್ದ
ಕಳಿವಣ್ಣೊಪಡುವಣದಿಶಾಂಗನೆಯ ಮುಂದಲೆಯ
ತೊಳಪ ಚೂಡಾರತ್ನಮೋಯೆನಿಸಿ ಕಡೆವಗಲು ರವಿ ಕಣ್ಗೆ ಸೊಗಸಿರ್ದನು      ೫

ನಡೆಯುಡುಗಿ ಮುಪ್ಪಾಗಿ ಕಾಂತಿ ಮಸುಳಿಸಿ ತೇಜ
ವಡಗಿ ಹುಟ್ಟಿದ ಠಾವನಗಲಿ ಬೇಱೊಂದೆಸೆಯ
ಕಡೆಗೆ ಸಾರ್ವಂತಾದುದೀಗ ಹಿಂದೆನ್ನ ಹೆಸರೆಂದೊಡೋಡುವ ಕತ್ತಲೆ
ಹೊಡಕರಿಸಿ ಬರುತಿದೆನ್ನಾಳಿಕೆಗೆ ಸಸಿಯ ಮುಂ
ಗುಡಿದಾಳಿ ಬರುತಿದೆಯಿವಂ ಕಂಡು ಜೀವಿಪೆ
ನ್ನೊಡಲಾಸೆಯೇಕೆಂದು ಲಜ್ಜೆಯಿಂದಿಳಿವಂತೆ ಬಿದ್ದನಿನನಭ್ದಿಯೊಳಗೆ         ೬

ನೀರ ಬಿದ್ದಿನನಳಿದನಿಂದೆಂ ದುಹಗಲೆಂಬ
ನಾರಿ ಚಿಂತಿಸಿ ಕಂದಿದಳೊ ಗಾಳಿಯೆಂಬ ಸುಕು
ಮಾರನಂ ಪಡೆದು ಸಂಧ್ಯಾವನಿತೆ ಹೊಳೆಮೆಟ್ಟೆ ಹೊದೆದ ಕಾರ್ಗಂಬಳಿಯಿದೊ
ಸೂರಾಂಶವೆಂಬ ಕಿಚ್ಚಿಂಕಾಯ್ದು ಕೆಂಪಂಡರ್ದು
ಚಾರು ಬೆಳಗಾಱೆ ಕಪ್ಪಾಯ್ತೋ ಹೇಳೆಂಬ ವಿ
ಸ್ತಾರದಿಂ ಕಾಳಗತ್ತಲೆಯೆಂಬ ಲತೆ ಹಬ್ಬಿ ಪರಿಕಲಿಸಿ ಮಡಲಿಱಿದುದು          ೭

ಇದು ಪುರದ್ವಾರದಿಂ ಜನಿಸಿ ಪರ್ವಿದ ಪಾಪ
ದೊದವೊ ಕಮಳಿನಿಯಿನಿಯನಸ್ತಮಿಸಿದಳಲುರಿಯ
ಲೊದವಿ ಮುಂಗುಡಿವರಿದು ಗಗನಮಂ ತಳ್ಕಿಡಿದು ಬೆಂದ ಕಾರ್ಬೊಗೆಯೋಯೆನೆ
ಇದು ಕಡಲ ಕಡೆವೆಡೆಯೊಳಹಿರಾಜನುಗುಳ್ದ ವಿಷ
ಮದನಾರಿ ಮುಳಿದು ಪಿಡಿದೊರಸಿ ಬಿಡಲೊಡನೆ ಮಗು
ಳ್ದದು ಲೋಕಮಂ ನುಂಗಲೆಂದು ಪರ್ವಿದುದೊ ಪೇಳೆನೆ ರಾತ್ರಿ ಕಣ್ಗೆಸೆದುದು೮

ಪದವೂರೆ ಪೃಥ್ವಿಯುಂಟೆಂದು ತಲೆಯೆತ್ತಿ ತಾ
ಗದೊಡೆ ನಭದತ್ತಲೆಂದೆಂದು ಕೈಯೆತ್ತೆ ಸೋಂ
ಕದೊಡೆ ದೆಸೆಯುಂಟೆಂದು ದೂರದೊಳ್ನುಡಿಗೇಳ್ದು ನರಲೋಕವೆಂದು ನಂಬಿ
ಇದು ಪೂರ್ವಪಶ್ಚಿಮಂ ದಕ್ಷಿಣೋತ್ತರಗಳೆಂ
ಬುದ ವಿಧಾತ್ರನುಮಾದೊಡಱಿಯನೆಂದೆನಲು ಕವಿ
ದುದು ವಿಲಯಘೋರಾಂಧಕಾರವಖಿಳ ಜನಾಳಿಗತ ಭಯಂಕರವಾದುದು     ೯

ಮಿಕ್ಕು ಮಾಸುವ ಬೆಳಗು ಕೆಂಪಡರ್ದ ಮುಗಿಲು ತಲೆ
ಯಿಕ್ಕುವಬುಜಂ ನಗುವ ಕುಮುದ ನೆಲೆಗೆಡುವಬುಧಿ
ತೆಕ್ಕೆಯಿಂದಗಲ್ವ ಚಕ್ರಂ ಹೂವನಱಸುವಳಿವೊಂದೊಂದು ನೆಗೆವ ತಾರೆ
ಹಕ್ಕೆಗೈದುವ ಮೃಗಂ ಮೊರೆವ ಮರುತಂ ಕೊಟಾ
ರಕ್ಕೆ ಹಾಱುವ ಹಕ್ಕಿ ಬಿಲುವೊಯಿವ ಮದನ ನೂ
ಟಕ್ಕೆ ಬಯಸುವ ಚಕೋರಂ ನಲಿವ ಜಾಱಿಯರು ಸಂಜೆಯಲಿ ರಂಜಿಸಿದರು    ೧೦

ಮನಸಿಜನ ಬಡಿಕೋಲೊ ಶಿವ ಸೂಡಿದರ್ಧಚಂ
ದ್ರನ ಭಾಗವೋ ರಾಹು ತೋಡಿ ತಿಂದುಳಿದ ಮಿ
ಕ್ಕನಿತೋ ವಿಯೋಗಿಗಳು ವಿರಹವಾರ್ಧಿಯೊಳು ಕೆಡೆವಾಗಲುಱುಗಿರ್ದ ಕೋಲೊ
ಘನತಾರಾಕಾಶಕೇಶನ ಕೈಯ ಪಾತ್ರೆಯೋ
ವಿನುತ ಪಡುವಣದಿಶಾಂಗನೆಯ ಮುಂದಲೆಯ ಮು
ತ್ತಿನ ಹೆಱೆಯೊಯೆಂದರ್ಧಚಂದ್ರನಂ ಬಣ್ಣಿಸುವೊಡರಿದು ಕಾವ್ಯಂಗಳೊಳಗೆ   ೧೧

ಕುಸುಮಶರವಂ ಮದನ ಮಸೆವ ಪಳುಕಿನದೊಂದು
ಹೊಸಸಾಣೆಯೋ ಗಗನವನಿತೆಯಚ್ಚಾಡಲ್ಕೆ
ಪಸರಿಸಿದ ನಕ್ಷತ್ರಕ ವಡಿಕೆಗಳೆಡೆಯೊಳಿಳಿಪಿಟ್ಟ ರಜತದ ಹಲ್ಲೆಯೊ
ಒಸೆದು ರತಿ ನಿಟ್ಟಿಸುವ ಕನ್ನಡಿಯೋ ಮನುಮಥನ
ಮಿಸುಪ ಚಕ್ರವೋ ತಿಳಿದ ಬೆಳುದಿಂಗಳಂ ವಸುಧೆ
ಗೊಸೆದು ಖಚರರು ಸುರಿವ ಭಾಂಡವೋಯೆಂದೆನಿಸಿ ಮೂಡಿತ್ತು ಶಶಿಬಿಂಬವು೧೨

ಬೆಳೆದ ಕತ್ತಲೆಮುತ್ತು ಹಣಿತುದೋ ಕುಮುದಿನಿಯ
ಕೆಳೆಯ ಬಹಡಮಳ ಸಂಧ್ಯಾ ವನಿತೆ ಭುವನಮಂ
ಮಳಯಜದಿ ಧವಳಿಸಿದಳೋ ರೂಪನಡಗಿಸಿ ದಿವಾಕರನ ಕಿರಣಂಗಳು
ಜಳಜಮಂ ನೋಡಬಂದವೋ ಚಕೋರಿಗಳ ನಿ
ರ್ಮಳಹರುಷ ಬೆಳೆಯಿತೋಯೆಂದೆಂಬ ಸಂದೇಹ
ಕೊಳಗಾಗಿ ಚೌಪಟಂಬರಿದು ಪಸರಿಸಿತು ಬೆಳುದಿಂಗಳೆಲ್ಲಾ ಕಡೆಯೊಳು         ೧೩

ಕುಂದದಂದಂದಿಂಗೆ ಬಂದು ಕಾಡುವ ರಾಹು
ವಿಂದಿನೊಂದಿನವೆಯಿದಿಸಲ್ಬಾರದಂದದಿಂ
ದೊಂದುಪಾಯಂ ಮಾಳ್ಪೆನೆಂದು ವಿಧು ಬಿಂಬಕ್ಕೆ ನಡೆಗೋಂಟೆಯಿಕ್ಕಿಸಿದನೊ
ಸಂದ ಬೆಳುದಿಂಗಳೆಂಬಮೃತಾಂಬುನಿಧಿಯನಾ
ನಂದದಿಂದುತ್ತರಿಸಲೆಂದು ತಾನೊಲಿದೇಱಿ
ನಿಂದ ಹಱುಗೋಲ್ವಟ್ಟೆಯೆನಿಸಿ ಶಶಿ ಮಂಡಲದ ಪರಿವೇಷವೆಸೆದಿರ್ದುದು     ೧೪

ಹರೆವುತಿದೆ ತಿಮಿರ ಮೈ ಮುರಿವುತಿದೆ ಬೆಳುದಿಂಗ
ಳುರವಣಿಸುತಿದೆ ವನಧಿ ಗಗನಾಂಗಣದೊಳು ಶಶಿ
ಯೆರಳೆ ದುವ್ವಾಳಿಸುತ್ತಿದೆ ಬೀದಿ ಬೀದಿಯೋಳು ಬೆಳು ಮುಸುಕು ಮಸಗುತ್ತಿದೆ
ಬಿರಿವುತಿದೆ ಹೂಗಂಪುವೆರಸಿ ಬರುತಿದೆ ಮಂದ
ಮರುತ ಸರಗೈವುತಿವೆ ಕೋಗಿಲೆಗಳೀ ಹೊತ್ತು
ಪುರವ ನೋಡುವೆನೆಂದು ಹೊಱವಂಟನಾದಯ್ಯ ಹತ್ತೈದು ಸಖರು ಸಹಿತ    ೧೫

ತೋರಹಾರದ ಜಳವಟಗೆಯ ಪದಕದ ಬಾಹು
ಪೂರಯದ ತೊಳತೊಳಗುವೊಳು ಮಾಣಿಕದ ಕರ್ಣ
ಪೂರದ ಮಹಾಮುದ್ರಿಕೆಗಳ ಮಣಿಮಯಕಟಕ ಮೆಱೆವ ಸರ್ವಾಭರಣದ
ಸೌರಭ್ಯಚಂದನೋದ್ವರ್ತದಿಂ ವಕ್ಷದೊಳು
ಸಾರೈಸಿಯಚ್ಚ ಸಾದನು ತೀಡಿ ಬಳಿಕ ಕಿವಿ
ದಾರಿ ಮುಸುಕಿದ ಮೃಗಮದದ ಸೊಬಗನಡಿಯಿಟ್ಟನಪ್ರತಿಮನಾದಯ್ಯನು   ೧೬

ಇಟ್ಟ ಕತ್ತುರಿಯ ತಿಲಕದ ಕಪೋಲದೊಳು ಜವು
ಗಿಟ್ಟೊಸರುವಂತೊಟ್ಟಿಕೊಂಡ ಪುಣುಗಿನ ಕಂಪ
ನೊಟ್ಟೈಸಿ ತುಱುಬಿದ ಕದಂಬಕುಸುಮಕ್ಕೆಱಗಿ ಮಂಡಳಿಪ ಮಱಿದುಂಬಿಯ
ಉಟ್ಟ ಧವಳಾಂಬರದ ಹಡಪಿಗನ ಕೈಯಲಳ
ವಟ್ಟ ವೀಳೆಯದ ಚೆಲುವಾವರಿಸಿ ಮನುಮಥನ
ಕಟ್ಟಲಗಿನ ತೆಱದಿ ನಡೆದು ಪುರವೀಧಿಯೊಳು ಬರುತಿರ್ದನಾದಯ್ಯನು          ೧೭

ಪುರವ ನೋಡುವೆನೆಂದು ತನ್ನಾಪ್ತಸಖರಂಗ
ಳ್ವೆರಸಿ ಪೊಱಮಟ್ಟು ಜಾಣಿನ ಜನ್ಮಭೂಮಿ ಸಿಂ
ಗರದ ಮಡು ಮೋಹನದ ಬೀಡು ಸೊಬಗಿನ ಸೀಮೆ ವಿತತ ಚದುರಿನ ಚಾವಡಿ
ಹುರುಡಿನೆಡೆಯುಪಚಾರದಿಕ್ಕೆ ವೈಶಿಕದ ಹರ
ವರಿ ಹುಸಿಯ ಹಸರ ಕೃತಕದ ಕೇಱಿಯರ್ಥದಾ
ಗರವಳಿಪಿನಾವಾಸವೆಂದೆನಿಪ ಸೂಳೆಗೇಱಿಯ ಹೊಕ್ಕನಾದಯ್ಯನು  ೧೮

ಪಳುಕಿಂದೆ ನಯವಡೆದ ನೆಲೆಗಟ್ಟು ಶಶಿಕಾಂತ
ವಳವಟ್ಟ ಭಿತ್ತಿ ವಜ್ರದ ಕಂಬ ವಿದ್ರುಮದ
ತೊಲೆ ಪುಷ್ಪರಾಗದೊಪ್ಪುವ ಜಂತೆ ಮರಕತದ ಲೋವೆ ಮುತ್ತಿನ ಸೂಸಕ
ಪೊಳೆವ ಮಾಣಿಕದ ಕಳಶಂಗಳೋವರಿಯೊಳಗೆ
ಕಳಹಂಸಗಮನೆಯರ ಕುಚಕಳಶ ಮುಖಕಮಳ
ದೊಳುನುಡಿಯ ಚಳನಯನದೊಳು ಸುಳಿವ ಸೂಳೆಯರ ಕಂಡನಂದಾದಯ್ಯನು           ೧೯

ಇಡಿದ ಗಣಿಕೆಯರ ಹರ್ಮ್ಯಾವಳಿಯನೇವೊಗಳ್ವೆ
ಕಡುಚೆಲ್ವ ಪಳುಕಿನೊಳು ಹೊಳೆಹೊಳೆವ ಭಿತ್ತಿಗಳ
ನೆಡೆಗೆಡೆಗೆ ಪಚ್ಚಪವಳಂಗಳ ಸ್ತಂಭಗಳ ಶಶಿಕಾಂತಶಿಲೆಯ ತೊಲೆಯ
ಕಡೆದ ರೂಹಾರಗಳಲೀಕ್ಷಿಸಲು ತಮ್ಮ ಮನ
ವೆಡೆಗೊಂಡ ತೆಱದೊಳೊಪ್ಪಿಹ ಪಣಾಂಗನೆಯಿರಿ
ಪ್ಪಡಕಿಲುಪ್ಪರಿಗೆಗಳು ಸಪ್ತಾದ್ರಿಯೊಂದನೊಂದರ ಮೇಲೆ ನಿಂದಂತಿರೆ          ೨೦

ಓರಣದ ತೋರಣದ ಮೆಱೆವ ಮುತ್ತಿನ ಮತ್ತ
ವಾರಣದ ಸೌಭದ್ರ ಮಂಟಪದ ದೆಸೆಯ ಚೌ
ಭಾರದುಪ್ಪರಿಗೆಗಳ ತರತರದ ಜವನಿಕೆಯ ನೆಲೆಯ ಕರುಮಾಡಂಗಳ
ಚಾರುಭದ್ರಂಗಳ ಸುಧಾವೇದಿಕೆಗಳ ವಿ
ಸ್ತಾರದೆಡೆಗಿಱಿದ ಹೊಂಗಳಸದ ತೆರಳ್ಕೆಗಳ
ಕೇರಿಯೊಯ್ಯಾರಂ ಕುಬೇರನಳಕಾಪುರವನೇಳಿಸಿತದೇವೊಗಳ್ವೆನು    ೨೧

ಪುದಿದ ಕಣ್ಮುಸುಕಿದ ಮುಖೇಂದು ಮುಡಿಗಟ್ಟುಮುಸು
ಕಿದ ಬೆನ್ನ ತೆರಪು ಮೊಲೆಮುಸುಕಿದುರ ಬಾಸೆಮುಸು
ಕಿದ ನಡು ನಿತಂಬಮುಸುಕಿದ ವಿಪುಳಪೊಱವಾಱ ಮಂದಗತಿಮುಸುಕಿದ ಪದಂ
ಚದುರುಮುಸುಕಿದ ಮಾತು ಸೊಗಸುಮುಸುಕಿದ ಸರಂ
ಸದಮಳಾಭರಣಮುಸುಕಿದ ಮೈ ವಿಲಾಸಮುಸು
ಕಿದ ನಿಲವು ಮೋಹನಂ ಮುಸುಕಿದಾಕಾರವೆಸೆದಬಳೆಯರು ಕಣ್ಗೆಸೆದರು        ೨೨

ನೆಗೆದಳಕಮನ್ನೆತ್ತುವಂತೆ ಕೈಯೆತ್ತೆ ಬೆಮ
ರೊಗೆವ ಕಕ್ಷಂ ಕಂಪನೀವುತ್ತೆ ನೆಯ್ದಿಲೆಸ
ಳುಗಳಲಿಡುವಂತೆ ಮೆಲ್ಲನೆ ತಿರುಗಿ ನೋಡುತೆ ವಿಟರ ಕಣ್ಗೆ ಬಿದ್ದಿಕ್ಕುತೆ
ನೆಗೆದ ಬಿಗಿದುಬ್ಬಿ ಕೊಬ್ಬಿದ ಕುಚದ ಮೇಲ್ಸೀರೆ
ಜಗಳ್ದೊಡೊಯ್ಯನೆ ತೆಗೆವ ನೆವದೊಳದ ತೋಱಿ ನಸು
ನಗುತೆ ಮಾಯಾಪಾಶಮಂ ಬೀಱುತಿರ್ಪ ಸತಿಯರ ಭಾವಮಂ ಕಂಡನು         ೨೩

ಎಳಸಿ ಕೀಳಿಲೊಳು ಕೊಟ್ಟಿಗೆಯೊಳಂಗಡಿಯೊತ್ತು
ಗಳೊಳಾದಿಗೆಗಳೊಳೋವರಿಯೊಳೊದವಿದ ಹಿತ್ತಿ
ಲೊಳು ಮಱೆಗಳೊಳು ಮರದತಳವೋಣಿ ಕುಳಿತೆವರು ಕಲುಮುಳುಗಳೆಂದೆನ್ನದೆ
ಎಳೆಯ ನುಡಿ ನಸುಚುಂಬನಂ ಸೂಸದುಸುರು ಸೊ
ಪ್ಪುಳನುಳಿದ ಪಂತಿ ನಡದುಗುರು ಸಡಿಲಿಸದುಡಿಗೆ
ಗಳೊಳುಳ ನೆರೆನೆರೆದು ಕತ್ತಲೆ ಹರೆಯೆ ಹರಿವುತಿಹ ಜಾರಮಿಥುನವ ಕಂಡನು  ೨೪

ತಡವುತ್ತೆ ಹರೆದ ಮುಂದಲೆಯನುಬ್ಬಿದ ತುಟಿಯ
ಕುಡಿನಾಲಿಗೆಯೊಳಂಟುತುಸುರನೊಳದೆಗೆವುತೊಳು
ದೊಡೆಯ ನಖವೊಯಿಲ ಗಂದೆಯನೊರಸಿಕೊಳುತೆದೆಯ ಕಿಱುಬೆಮರನೂದಿಕೊಳುತೆ
ಮುಡಿದರಳನೊಗುತಣಲ ತಂಬುಲವನುಗುಳುತ್ತೆ
ನಿಡುಮುಸುಕನಿಡುತುರವಣಿಸಿ ನಡೆವುತಭಿಮುಖ
ಕ್ಕೆಡೆಗೈದು ನಿಲುತ್ತೆ ಹಿತ್ತಿಲಬಟ್ಟೆಯಿಂದೊಳಪುಗುವ ಜಾರೆಯರ ಕಂಡನು    ೨೫

ಅಳಿದ ಮುಡಿ ನೆಸುತಿಲಕ ಹರೆದಳಕ ತೊಱೆದ ತುಟಿ
ಎಳೆಗೆಂಪುವಿಡಿದ ಕಣ್ಣಾಲಿಗಳ್ ಬೆಮರ್ವಿಡಿದ
ಪುಳಕತತಿ ಹೊಯಿವಳ್ಳೆ ಬಿಗುಹುಗುಂದಿದ ಕುಚಂ ಬೆಳರ್ತಮುಖ ನಖಹತಿಯಲಿ
ಮೊಳೆತ ಬಾಸುಳು ಹೊಯಿವ ಹೂಮಾಲೆಗಳಗಂದೆ
ಅಳವುಗೆಟ್ಟದಟು ಸಾಗಿಸುವುಡಿಗೆಗಳುವೆರಸಿ
ತೆಳುಗಾಳಿಯಂ ಬಯಸಿ ಭದ್ರದೊಳು ಚರಿಸುವ ರತಾಂತಸತಿಯರ ಕಂಡನು     ೨೬

ಉಟ್ಟ ಧವಳಾಂಬರದ ಸುಲಿಪಲ್ಲ ಮೈಯೊಳಿಂ
ಪಿಟ್ಟ ಗಂಧದ ಮುಡಿದ ಮಲ್ಲಿಗೆಯ ನಗೆವೊಗದ
ತೊಟ್ಟ ಮುತ್ತಿನ ತೊಡಿಗೆಗಳ ಬೆಳಗು ದೆಸೆಯ ಪಸರಿಸಿಪರ್ಬಿ ಬೀದಿವರಿಯೆ
ದಟ್ಟಿಯಿಸಿ ಬೆಳುದಿಂಗಳಂತೆಸೆಯ ಬೆಳುಮುಗಿಲ
ಮೆಟ್ಟಿರ್ದ ಚಂದ್ರಕಳೆಯಂತೆಸೆವ ಭಾವವಳ
ವಟ್ಟು ಬಿಳಿಯುಪ್ಪರಿಗೆಯಗ್ರದೊಳು ನಿಂದೊರ್ವ ಸತಿ ಕಣ್ಗೆ ಸೊಗಯಿಸಿದಳು            ೨೭

ಮುಡಿಯ ಪರಿಮಳದೊಡನೆ ಮಱಿದುಂಬಿಗಳು ಪರಿದು
ನಡೆಯ ನಟನೆಗಳೊಡನೆ ಹಂಸೆಗಳು ಜಡಿಜಡಿದು
ನುಡಿಯ ಸೊಗಸುಗಳೊಡನೆ ಗಿಳಿಗಳೊಯ್ಯನೆ ಕುಣಿವ ಕುಚದೊಡನೆ ಕೋಕಂಗಳು
ಒಡಲ ಚೆಲುವಿಕೆಗಳೊಳು ನೋಟಕರ ದೃಷ್ಟಿಗಳು
ಬಿಡದೆ ಕೊಲ್ಲಣಿಗೆವರಿದೆಡೆಯಾಡುತಿರಲಿಂತು
ಮಡದಿಯರು ಚಿಟ್ಟುಮುಱಿಯಾಡುತೊಪ್ಪಿದರು ಮಾಳಿಗೆಯ ಭದ್ರದ ಬಯಲೊಳು೨೮

ತುಂಬಿ ತುಂಬಿಯನಟ್ಟುವಂತಳಕವಳಕವರ
ಲಂಬಂಬ ತೆವರುವಂತಕ್ಷಿಯಕ್ಷಿಗಳಿಂದು
ಬಿಂಬ ಬಿಂಬವ ತಗುಳುವಂತೆ ಮುಖಕಮಲ ಮುಖಕಮಲ ಲತೆ ಲತೆಯ ಕುಡಿಗೆ
ಲಂಬಿಪ ತೆಱದಿ ತೋಳ ತೋಳ್ಚಕ್ರ ಚಕ್ರವನು
ಬೆಂಬಿಡಿವವೊಲು ಕುಚಕೆಕುಚ ಹಂಸೆ ಹಂಸೆ ಗ
ಡ್ಡಂಬರಿವವೊಲು ಪದ ಪದಕೆ ಮೆಱೆಯೆ ಚಿಟ್ಟುಮುಱಿಯಾಡುತಿರ್ದರು ಸತಿಯರು  ೨೯

ನಿನ್ನ ಮುಖಕಮಲಕಮಲದೊಳೊಗೆದ ಕಮಲಮಂ
ನಿನ್ನಕ್ಷಿಕುವಲಯಂ ಕುವಲಯದ ಕುವಲಯವ
ನಿನ್ನ ರೂಪುಲತಾಂತ ಶರಲತಾಂತದೊಳು ಹುಟ್ಟಿದ ಲತಾಂತ ಶರಾಳಿಯ
ನಿನ್ನ ಕುಚಕುಂಭಕುಂಭಿಯ ಕುಂಭಯುಗಳಮಂ
ನಿನ್ನ ತನುಮಧ್ಯ ತನುಮಧ್ಯ ತನುವಂ ನಗುವು
ದಿನ್ನಾವುದುಪಮಾನವೆಂದು ನಗುವಂತೊರ್ವ ಜಾಣೆ ಮಗಳಂ ಪೊಗಳ್ದಳು    ೩೦

ಪಾಡಳೆಳೆಗೋಗಿಲೆಯ ದನಿ ಕೆಡುವುದೆಂದು ಮಾ
ತಾಡಳರಗಿಳಿಯ ಚಪಲತೆ ಕೆಡುವುದೆಂದು ನಡೆ
ದಾಡಳೆಳೆಹಂಸಗಳ ನಡೆವ ಗತಿ ಕೆಡುಗೆಂದು ಮುಸುಕುದೆಱೆದಂಗಣದೊಳು
ಆಡಳಿಂದುವಿನ ಸೊಬಗಳಿಗೆಂದು ಮುಡಿಯನ
ಲ್ಲಾಡಳೆಳೆನವಿಲ ಚೆಲುವಳಿಗೆಂದು ಕಣ್ದೆಱೆದು
ನೋಡಳುಳ್ಪಳದ ಸಿರಿ ಕೆಡುವುದೆಂದೆನ್ನ ಮಗಳೆಂದೊರ್ವ ಸತಿ ನುಡಿದಳು      ೩೧

ಅಳುಪಿ ನೋಡಿದೊಡೊಂದು ಚಿಂತಿಸಿದೊಡೆರಡು ಸು
ಯ್ಮೊಳೆಯೆ ಮೂಱು ಜ್ವರಂ ತೋಱಿದೊಡೆ ನಾಲ್ಕು ಬಿಗು
ಹಳಿಯಲೈದೂಟಮಂ ಬಿಡಲಾಱು ವಿಕಳವೆಡೆಗೊಳಲೇಳು ಕಡುಮೌನಮಂ
ತಳೆಯಲೆಂಟತಿ ಮೂರ್ಛೆಮೂಡಲೊಂಬತ್ತು ತನು
ವಳಿಯೆ ಹತ್ತಿವು ದಶಾವಸ್ಥೆಯಿವಱಂದಮಂ
ತಿಳಿಯೆ ಕೇಳೆಂದೊಬ್ಬ ಕಡುಜಾಣೆ ಹೇಳೆ ಬೋಳೈಸಿದಳು ಬಾಲಕಿಯನು       ೩೨

ಮುಡಿ ಜಡಿಯೆ ಕುಂತಳಂ ಕುಣಿಯೆ ಕಡೆಗಣ್‌ಪೊಳೆಯ
ನಡುನಳಿಯೆ ಕರ್ಣಪಾಲಿಕೆಯೊಲೆಯೆ ಹಾರ ಹೊಳೆ
ದೆಡೆಯಾಡೆ ಲಂಬಿಸುವ ಮೇಲುದಿನ ತೆಱಹಿನೊಳು ಮೊಲೆಗಳಲುಗಲು ಬಾಗಿದ
ಒಡಲು ಜೊಂಪಿಸೆ ತಪ್ಪು ತೆಡೆಮೆಟ್ಟುವಡಿಗಳೊಡ
ನೊಡನೆ ನೇವುರ ಝಣಂಝಣಕೆನಲು ವನಿತೆಯರ
ನಡುವೆ ಚಂಡಂ ಹೊಯ್ವುತಿರ್ದಳೊರ್ವಳು ಕಾಮನಂಕಮಾಲೆಯನೋದುತೆ  ೩೩

ಮಸಿಗಪ್ಪಡವನಡಸಿ ತುಱುಬಿಟ್ಟು ನರೆದಲೆಗೆ
ಮುಸುಕಿಟ್ಟು ಬಿದ್ದ ಪೆರ್ಮೊಲೆಗಳಿಗೆ ಱವಕೆಯಂ
ಸಸಿನೆ ಬಿಗಿದೆವೆಯುದಿರ್ದ ಕಣ್ಗೆ ಕಾಡಿಗೆಯೆಚ್ಚು ಸದೆಸೊಪ್ಪನಣಲೊಳಡಸಿ
ಮುಸುಡುಗಾಣದ ತೆಱದಿ ಹಿಂದೆ ಸೊಡರಿಟ್ಟು ನೆಱೆ
ನಸಿದ ರಾಗದಿ ಕೊಳೆತ ಹಾಡ ಬಗುಳುತ ಗಂಡು
ವೆಸರು ಸುಳಿಯಲು ಬಾರೊ ಎನ್ನಾಣೆಯೆಂಬ ಮುದುಪಾಱಿರ್ದಳೊಂದೆಸೆಯಲಿ         ೩೪

ಹೂವನರೆ ಚಂದನವ ಕೊಯ್ ಗಿಳಿಗಳಂ ಬೆಳಗು
ದೀವಿಗೆಯನೋದಿಸೋವರಿಗೆ ನೀರೆಱೆ ವನದ
ಮಾವ ಧವಳಿಸು ಹಸಿದ ಹಾಸಿಂಗೆ ಹಾಲನೆಱೆ ಹಂಸೆಯಂ ಪಚ್ಛವಡಿಸು
ತಾವರೆಯ ಹಣ್ಣತಾ ದ್ರಾಕ್ಷೆಯರಳಂ ನೀಡು
ಬಾವಿಯಂ ತೊಳೆಯೆಲೆಯ ಹೊಗದಿರೆಂದೊರ್ವ ರಾ
ಜೀವಮುಖಿ ವಲ್ಲಭನನಗಲ್ಲ ವಿಕಳತೆಯಿಂದೆ ನುಡಿದಳಬಲೆಯರ ಕೂಡೆ     ೩೫

ಅತಿ ಮುಗುದೆಯಪ್ಪೆನ್ನ ಮಗಳ ಕಾಮಜ್ವರೋ
ರ್ಜಿತ ತಾಪವಾಱದೊಡೆ ಕಾಮನಂ ನೋನುವೆಂ
ರತಿಯನರ್ಚಿಸುವೆ ಸಸಿಗರ್ಘ್ಯವೆತ್ತುವೆನು ಬೆಳುದಿಂಗಳಂ ಬೇಡಿಕೊಂಬೆ
ಲತೆಗೆ ನೀರೆಱೆವೆನೆಳೆಮಾವ ಬಲಗೊಂಬೆನು
ನ್ನತ ನವಿಲು ಗಿಳಿ ಕೋಗಿಲೆಗೆ ಕುಟುಕನೀವೆನೂ
ರ್ಜಿತ ವಸಂತದೊಳು ಕಾಮಚ್ಛತ್ರವಿಡುವೆನೆಂದಜ್ಜಿ ಹರಸುತ್ತಿರ್ದಳು           ೩೬

ಮುಡಿಯ ಭಾರಕ್ಕೆ ಕೊರಳೆಸೆವ ಕುಚಭಾರಕ್ಕೆ
ಬಡನಡು ನಿತಂಬಭರಭಾರಕ್ಕೆ ಬಟ್ಟನು
ಣ್ದೊಡೆ ಚೆಲುವನಾಂತವಯವದ ಸೌಕುಮಾರತೆಯ ಭಾರಕ್ಕೆ ಸರ್ವಾಂಗವು
ಬಿಡದೆ ಮುನ್ನವೆ ಬಳುಕುತಿವೆಯಿವಱ ಮೇಲಿವಳು
ತೊಡಿಗೆದೊಟ್ಟಳು ಕಳೆಯೆನಲ್ಕಳೆಯಳಿವ ಕಳೆಸು
ವೊಡೆ ಬುದ್ಧಿಯಾವುದೆಂದವರವ್ವೆ ಚಿಂತಿಸುತೆ ನೆನೆದುಪಾಯಂಗಂಡಳು       ೩೭

ಸಿಂಗರಿಸಿ ಹೊಱಗಿರದಿರೆಲೆ ಮಗಳೆ ನಿನ್ನ ಚೆ
ಲ್ವಿಂಗೆಳಸಿ ನೋಡಿದರೆ ಕಣ್ಣೀಱಿನಿಂದೆ ನಿ
ನ್ನಂಗಲತೆ ಬಡವಾದೊಡದನಱಿಯದವರಿವಳು ರೋಗಿಯೆಂದೇಳಿಸುವರು
ಕಂಗೊಳಿಪ ಶಶಿ ತನ್ನ ನಡುವಿರ್ದ ಚೆಲ್ವ ಹು
ತ್ತಿಂಗೆ ಫಣಿ ಬಂದೊಡದಕಂಜಿ ಕಂದಿಡೆ ಲೋ
ಕಂಗಳಱಿಯದೆ ಸರ್ಪದಷ್ಟವಾಯ್ತೆಂಬರೆನುತಂ ಬೋಧಿಸಿದಳೊಬ್ಬಳು        ೩೮

ನೆರೆದ ಮಿಂಡರೊಳಧಿಕರಱಿದೊಡಲನಿಕ್ಕಿ ಬೋ
ಸರಿಸಿ ಕೊಡುವೊತ್ತೆಯಂ ಕೊಳ್ಳದೆ ಸದರ್ಥೆಯಂ
ತಿರುವೊಲಿಸುವನ್ನಕೊಲಿದವಳಂತೆ ಮುನಿದು ಮುದ್ದಿಸಿ ಜಱಿದು ಕಾಲ್ವಿಡಿವುದು
ಹುರುಡಿಸುವುದಳುವುದೊಳಗಾದ ಹವಣಱಿದು ಗೋ
ಣ್ಮುರಿಗೊಂಡು ಹಣದಿಂಬುದೊಬ್ಬನೊಳಿರದಿರೆಂದು
ತರುವಲಿಗೆ ಮುದಿಸೂಳೆ ಕಲಿಸಿದಳು ಹುಲಿ ಮಱಿಗೆ ಬೇಂಟೆಯಂ ಕಲಿಸುವಂತೆ            ೩೯

ಉಟ್ಟ ನಿರಿ ದಾಂಟಿದೊಡೆ ಕಚ್ಚುವುದೆ ದೈವಮಂ
ಮುಟ್ಟದೊಡೆ ಬೆರಳು ಹತ್ತುವುದೆ ಬಳನೀರ್ಗುಡಿಯೆ
ಹೊಟ್ಟೆಯೊಡೆವುದೆ ನೆಲನ ಮಾರಪ್ಪೆ ನುಂಗುವುದೆ ತಾಯ ವಧಿಸಿದೆನೆಂದೊಡೆ
ನೆಟ್ಟನಾಂ ಸತ್ತವಳೆ ಸೋದರಕ್ಕೆಳಸಿ ಕ
ಣ್ಣಿಟ್ಟೆನೆನಲಿಟ್ಟವಳೆ ಸೂರುಳಿಸಿ ನೆರೆ ಬಾಯ
ಕಟ್ಟ ಹಣವಂ ಕೊಳಲು ಕಲಿವುದೆಂದೊಬ್ಬ ಕುಂಟಿಣಿ ಮಗಳ ಬೋಧಿಸಿದಳು  ೪೦

ಇಂಬುಳ್ಳನಾದನೆಂದೊಲಿದೆಯೆಲೆ ಮಗಳೆಯಾ
ಡಂಬರದ ಚದುರನವನೊಡವೆ ನಿರ್ಮಳ ಜಳಂ
ತುಂಬಿದ ತಟಾಕದೊಳು ಪೊಳೆವ ಮಣಿ ಬಿಳಿಲೊಳು ಬಿದ್ದ ಹಣ ಗೆಜ್ಜೆಯೊಳಗೆ
ಲಂಬಿಸುವ ಹರಳು ಕಲ್ಲಿಯ ನೆಲ್ಲಿಯಿನ್ನವನ
ನಂಬದಿರು ಕೂಡದಿರು ಬೇಡೆಂದೊಡೆನ್ನ ಮಾ
ತಂ ಬಗೆಯೆ ಕೈಕೊಳ್ಳೆ ಎಂದೊರ್ವ ಮುದಿಸೂಳೆ ತರುವಲಿಗೆ ಹಲುಮೊರೆದಳು            ೪೧

ನೋಡದಿರ್ದಪೆನೆಂಬೆ ಕಣ್ಣೋಡದಿರವು ಮಾ
ತಾಡದಿರ್ದಪೆನೆಂಬ ಬಾಯ್ಮಿಡುಕದಿರದು ನ
ಕ್ಕಾಡದಿರ್ದಪೆನೆಂಬ ಮುಸುಡು ನಗದಿರದು ಮೆಯ್ಯೊಡ್ಡಿ ಕುಳ್ಳಿರೆನೆಂಬೊಡೆ
ನಾಡೆ ತನು ಮೇಲ್ವಾಯದಿರದು ಸಂಚನೆದೋಱಿ
ಕೂಡೆನೆಂದೊಡೆ ಕಳೆಗಳುರವಣಿಸದಿರವೇನ
ಮಾಡುವೆಂ ಮುನಿಸು ನೆಲೆಗೊಳ್ಳುದವನಂ ಕಂಡಬಳಿಕೆಂದು ಸತಿ ನುಡಿದಳು    ೪೨

ತಂಗಿ ತಲೆವೀದಿಯಂ ತೊಡೆಯಡಿಗೆ ಮಾಡು ಚಳೆ
ಯಂಗೈದಲಂಕರಿಸಿ ಹೊಱಗಱಿವುದು ಭೋಗ
ಕಂಗವಿಸಿ ಹೊಗಲೊಳಗೆ ಹೊಗೆಮಾಡದಿರು ಬಳಿಕ್ಕವರು ಕಂಡಡೆ ನಗುವರು
ಸಂಗಕ್ಕೆ ಹಿರಿಯರಂ ಕರೆ ನೀರ ತಾ ಮೊಗಕೆ
ಹಿಂಗದಿರು ಹಣವ ಹಡೆ ಮಿಗೆ ಮೊಗಸಿ ಜಾತಿಗೊ
ಯ್ಕಂಗೆಳಸಿದಂತಿರೆಂದೆಳೆಯಳ್ಗೆ ಕಲಿಸಿದಳು ತೊತ್ತ ನುಡಿಸುವ ನೆವದಲಿ        ೪೩

ಜಗವಱಿಯೆ ತಾ ಕಳಂಕಂ ಕಳಾಹೀನ ಪಾ
ವಗಿದುಗಿದ ವಿಷವಕ್ತ್ರಿದೋಷಿ ಅಸ್ಥಿರ ಹಂದೆ
ಮೃಗದಿಕ್ಕೆಗಾಡು ಹುತ್ತಿಟ್ಟಡವಿ ಆಲಹಬ್ಬಿದ ಹಳುವ ಶ್ವೇತಾಂಗನು
ಮಿಗೆ ತನ್ನ ದೆಸೆಯೆಲ್ಲ ತಂಪಂಜದಿಂದೆನ್ನ
ಮೊಗಸಸಿಯ ಮುಂದೊಗೆದನೆಂದು ಕೋಪದಿ ಶಶಿಯ
ನೆಗೆದು ದಾಳಿಟ್ಟೊದೆವ ಮಾಳ್ಕೆಯಿಂದೊದೆದಳುಯ್ಯಲಮಣೆಯನೊರ್ವ ವನಿತೆ         ೪೪

ಗಡಣದುಪ್ಪರಿಗೆಗಳೊಳುಱೆ ನೆತ್ತ ಚದುರಂಗ
ಮಿಡಿವ ವೀಣೆಗಳನಭ್ಯಾಸಿಸುವ ಗಿಳಿಗಳಂ
ನುಡಿಯಿಸುವ ಕಾಮಶಾಸ್ತ್ರವನೋದುವತಿ ನೃತ್ಯ ಗೀತ ವಾದ್ಯವನು ಕಲಿವ
ಕಡೆಗೆ ವೇಶ್ಯಾವಿಡಂಬನವಱಿವ ಕಥೆಗೇಳ್ವ
ಬಿಡದೆ ಸಿಂಗರಿಸಿ ನಲ್ಲರೊಳು ಗೋಷ್ಠಿಯೊಳಿಪ್ಪ
ಮಡದಿಯರನೀಕ್ಷಿಸುತ್ತಾದಯ್ಯನೈತರುತ್ತಿರಲಿದಿರಲೇವೊಗಳ್ವೆನೊ೪೫

ಹಡಪದನುಲೇಪನದ ಕುಸುಮಮಾಲೆಗಳ ಕ
ನ್ನಡಿಯ ಸಿರಿಮುಡಿಯ ಪಡಿಸಣದ ಹಂತಿಯ ಹಲವು
ತೊಡಿಗೆಗಳ ಸೀಗುರಿಯ ಚಾಮರಂಗಳ ಹದಿರ ಹಾಡುವಾಡುವ ನಗಿಸುವ
ನುಡಿವ ಗಿಳಿಯೋದಿಸುವ ಹಂಸ ಮಿಥುನಂಗಳಂ
ನಡೆಯಿಸುವ ನವಿಲ್ಗಳಂ ಕುಣಿಯಿಸುವ ವನಿತೆಯರ
ನಡುವೆ ಪದ್ಮಾವತಿ ವಿರಾಜಿಸಿದಳಮಮ ಕಾಮನ ಕೈಯ ಸರಳಿನಂತೆ            ೪೬

ಎಸಳುಗಂಗಳ ಸೋರ್ಮುಡಿಯ ಹೊಳೆವ ಕದಪುಗಳ
ಅಸಿಯ ಸೆಳ್ಳುಗುರು ಸುಲಿಪಲ್ಲ ಬಿಂಬಾಧರದ
ನೊಸಲತಿಲಕದ ನಸುನಗೆಯ ವೃತ್ತಕುಚದ ಪಲ್ಲವಪದದ ಸುಳಿನಾಭಿಯ
ಶಶಿಮುಖದ ಎಳೆವಾಳೆದೊಡೆಯ ಪಟ್ಟದಗುರುಳ
ಪಸರಿಸಿದ ಪೀನಮಂಜುಳನಿತಂಬದ ಚೆಲ್ವು
ಮಿಸುಪ ಬಾಸೆಯ ಸಿಂಹಮಧ್ಯದ ಸುಭಗೆಯಿರ್ದಳೇವೊಗಳ್ವೆ ಪದ್ಮಾವತಿ     ೪೭

ಪದ್ಮಾವತಿಯ ನೊಸಲು ಪೆಱಿಯ ಪದ್ಮವ ಮುಖಂ
ಪದ್ಮದೆಸಳ್ಗಳನಕ್ಷಿಪದ್ಮರಾಗಮನಧರ
ಪದ್ಮಕುಟ್ಮಳವ ಕುಚಪದ್ಮನಾಳವ ಬಾಸೆ ಪದ್ಮಾಕರವನು ನಾಭಿ
ಪದ್ಮರುಚಿಯಂ ಹಸ್ತ ಪದ್ಮಗಂಧವನುಸುರು
ಪದ್ಮಮೈಯೊಳುರೂಪು ಪದ್ಮವನಿತೆಯ ಜಾಣ್ಮೆ
ಪದ್ಮರಜಮಂ ಕಾಂತಿ ಪೋಲ್ತು ಪದ್ಮಿನಿ ಜಾತಿಯೆನಿಸಿದಳು ಪದ್ಮಾವತಿ        ೪೮

ಹರೆಯವಂಕುರಿಸಿ ಚೆಲುವೆಲೆಯಿಟ್ಟು ಜವ್ವನಂ
ಹರಿದು ಕುಡಿವರಿದು ಸುಕುಮಾರತೆ ತಳಿರ್ತು ಸೊಬ
ಗರರೆ ಸರ್ವರ ಮನದ ದರ್ಪಮಂ ಪರ್ವಿ ಮುಗ್ಧಾಭಾವವಡಿಸಿ ತುಱುಗಿ
ಪಿರಿದು ಮುಗುಳೊತ್ತಿ ಹೊಸ ಜಾಣೊದವಿ ಹೂವಾಗಿ
ಪುರುಷನಪ್ಪಾದಿಮಯ್ಯನ ಕಣ್ಗೆ ವಿಪುಳಫಳ
ಭರವಾಗಲಿರ್ದ ಸುರಲತೆಯಂತೆ ಮೆಱೆದಳಬಲಾರತ್ನ ಪದ್ಮಾವತಿ  ೪೯

ತೆಳುಗಾಳಿಗೊಲೆವ ಮೇಲುದು ಗುಡಿ ಚಳಾಳಕಂ
ಗಳು ತೋರಣಂ ಕುಚಂ ಕಳಸ ಮುಖಮುಕುರ ಕರ
ತಳ ತಳಿರು ನಖ ಕುಸುಮ ತೊಡಿಗೆಗಳ ಮುತ್ತು ನನೆಯಕ್ಕಿ ಪುರ್ಬಿಕ್ಷುದಂಡಂ
ಬಳಸಿ ಮಡಿಗಂಪಿಂಗೆ ಮಂಡಳಿಸುವಳಿ ಹೀಲಿ
ದಳೆ ಕಂಕಣಂಗಳ ಝಣತ್ಮಾರ ವಾದ್ಯಸಂ
ಕುಳಮಾಗೆ ಬಪ್ಪಾದಿಮಯ್ಯನನಿದಿರ್ಗೊಳಲು ಬಂದಳೆಂಬಂತೆಸೆದಳು           ೫೦

ಕಡಗಿ ಕವಿದೆಡೆವಯಲೊಳುಭಯದೃಷ್ಟಿಗಳಡಸಿ
ಬಿಡೆ ಹಳಚಿ ತಳುಕಿಕ್ಕಿ ಸೆಳೆಯೆ ನೋಟದ ಬಳಿಯ
ಲೊಡಲು ನಡೆಯುಡುಗಿ ನಿಲುವಲ್ಲಿ ಪಲ್ಲವದ ತೋಮರದ ಕಮಲದ ಘಂಟೆಯ
ಪಿಡಿದ ತುಂಬಿಯ ನಾರಿಯಚ್ಚಕಬ್ಬಿನ ಬಿಲ್ಲ
ಬೆಡಗನಣುಕೆದ್ದಾರ್ದು ಕುಸಿದೆಱಗಿ ನೆಱೆ ತೆಗೆದು
ಕೆಡೆಯೆಚ್ಚನೊಂದು ಹೂಗಣೆಯೆರಡು ಮನವ ನಿಮ್ಮೈಗಂಡು ತೂಗಾಡಲು  ೫೧

ತೆಳುನೋಟದೊಳು ಕಡುಪು ಚತುರ ಚಾತುರ್ಯ ನುಡಿ
ಗಳೊಳು ತಡಬಡವೆಚ್ಚಱಳವಟ್ಟ ಕರಣಂಗ
ಳೊಳು ಮಱವೆ ಸಖಿಸಖರ ಮಾತುಗಳನಾಲಿಸುವ ಕಿವಿಗಳೊಳು ಮಂದಭಾವ
ತಿಳಿವ ಮನದೊಳು ಸಂಚಲತ್ವ ನಡೆಯೊಳು ನಿಲವು
ಬಳಸಿ ಕವಿದುಭಯರೊಳು ತೋಱೆ ಕಂಡವರವರ
ಕೆಳೆಯರೆಡೆಯಾಡಿ ಮಾತಾಡಿ ಕೂಡಿದರವರನೆಸೆವ ಸೆಜ್ಜೆಯ ಮನೆಯೊಳು     ೫೨

ಮನವಱಿದು ಭರವಱಿದು ಬಲವಱಿದು ಕಲೆಯಱಿದು
ನೆನಹಱಿದು ತವಿಲಱಿದು ತಣಿವಱಿದು ಜಾತಿಯಱಿ
ದನುವಿತ್ತು ಬೋಳೈಸಿ ಬುಚ್ಚೈಸಿ ಪಲ್ಲಟಸಿ ಬೆರಸಿ ಕಳೆಯಂದೋಱಿಸಿ
ಮುನಿದು ಬೋಸರಿಸಿ ಷೋಡಶ ಕಳಾಸ್ಥಾನ ಚುಂ
ಬನದ ನಾನಾಕರಣಗಳ ಕೌಶಲಂಗಳಿಂ
ದನುಭವಿಸುತಿರ್ದರಂದೆಲ್ಲರಂತೆನಲಮ್ಮೆನವರು ಜಗವಂದ್ಯರಾಗಿ   ೫೩

ತುದಿಗಾಣದರ್ತಿ ಹಿಂಗದ ಮೋಹ ಮಗ್ಗುಲಿ
ಕ್ಕದ ತವಕ ಬೆಸುಗೆಬಿಡದಪ್ಪು ಬೀಯದ ಮನಂ
ಪದೆದುರವಣಿಸದ ತಣಿವೈದಿಸದ ಸಮತೆ ಸಂಧಿಸಿ ಮುತ್ತಿ ಮೂವಳಿಸಲು
ಇದು ಗಳಿಗೆಯಿದು ಜಾವವಿದು ದಿವಸವಿದು ಪಕ್ಷ
ವಿದು ಮಾಸವೆಂದನಿಪ್ಪುದನಱಿಯದಮಮ ತಮ
ಗೊದವಿದ ಮಹಾಸುಖದೊಳೊಂದೆರಡು ತಿಂಗಳನುಭವಿಸುತಿರ್ದೊಂದು ದಿವಸ          ೫೪

ಕವಿದ ಮಱಹೆಚ್ಚರೊಳಡಂಗಿ ಕಟ್ಟರ್ತಿ ಉ
ಕ್ಕುವ ತನುವಿನೊಳ್ಮುಳುಗಿ ತವಕ ರಸಸಮತೆಯೊಳು
ತವಿಲಾಗಿ ಬೆಸುಗೆ ಬಿಡದಿರ್ದತೆಕ್ಕೆಯ ಬಿಗುಹು ಮೆಲ್ಲಮೆಲ್ಲನೆ ಜಾಱಿತು
ಸವಿನುಡಿಗಳಾರೈಕೆಗಳವಟ್ಟು ನಟ್ಟುನೋ
ಡುವ ದೃಷ್ಟಿಯೆವೆಯಿಕ್ಕೆ ಲಟಲಟಸುತಿರೆ ಚಿತ್ತ
ವಿವಳಾರ ಮಗಳಾವ ಕುಲವಾದ ಸಮಯವೆಂದಾರಯ್ಯಲನುಗೈದನು          ೫೫

ಶಶಿವದನೆ ನೀನಾರ ಮಗಳು ತಾಯ್ತಂದೆಗಳ
ಹೆಸರಾವುದಾವ ಕಾಯಕವಾವ ವರ್ಣವ
ರ್ಚಿಸುವ ದೇವತೆಯಾವುದೆನಿಬರೊಡಹುಟ್ಟಿದರು ಪೇಳೆನುತ್ತಾದಯ್ಯನು
ಬೆಸಗೊಂಡೊಡಿಳೆಗುಱುವ ಹರದನೆಮ್ಮಯ್ಯ ಪಾ
ರಿಸಶೆಟ್ಟಿಯೆಂದು ಪೆಸರೊಬ್ಬಳೇ ಮಗಳು ತಾ
ನೆಸೆವರುಹ ತಮ್ಮೊಡೆಯ ಜೈನಮತ ನಮ್ಮದೆಂದಾಡಿದಳು ಪದ್ಮಾವತಿ        ೫೬

ನರಕಕ್ಕೆ ನಾಚದೀ ದೇಹಮೋಹದಿ ಭವಿಯ
ಬೆರಸಿದೆನು ಭವಿಯಾದೊಡೇನೆಂಬೆನಿಂತಿವಳು
ಪರಸಮಯೆ ಸುಡು ಸುಡೆನ್ನಯ ಜೀವನವನೆಂದು ತನಗೆ ತಾನೇ ಹೇಸುತೆ
ಪಿರಿದು ದುರ್ವ್ಯಸನವೇ ಪೊತ್ತು ತನಗುಂಟೆಂದು
ವರ ಪರಮಭಕ್ತಿಯಳವಡದವಂಗೆಂಬುದಿದು
ಪರವಾಕ್ಯವಿನ್ನಿವಳ ಕೂಟವತಿ ಕಷ್ಟವೆಂಬುದನಱಿದನಾದಯ್ಯನು  ೫೭

ಒಂದೆರಡು ದಿವಸವಾ ನೆವವ ಹಿಂದಿಕ್ಕಿ ಸುಖ
ದಿಂದಿರುತ್ತೂರ್ಗೆ ಪೋದಪೆನೆಂದೊಡಾಕೆ ಕಡು
ನೊಂದು ಹವ್ವನೆ ಹಾಱಿ ಹಮ್ಮದಂಬೋಗಿ ಕರುಣದಿ ಕಾಲಮೇಲೆ ಕೆಡೆದು
ಕೊಂದು ಹೋಗಲ್ಲದೊಡೆ ಕೊಂಡುಹೋಗಿರಲಾಱೆ
ನೆಂದೊಡಿದು ಮುಂದೆ ತೊಡಕಹುದೆನಗೆ ನೀನು ತಾ
ಯ್ತಂದೆಯುಳ್ಳವಳು ನಿನ್ನಿಚ್ಛೆಯಲ್ಲಬಲೆ ಪೇಳೆಂದನಿಂತಾದಯ್ಯನು          ೫೮

ಕಡೆಗೆ ಬಂದುದು ಬರಲಿ ಮುನಿವವರು ಮುನಿಗೆ ಸ
ತ್ತೊಡೆ ಸಾವೆನಲ್ಲದೆಡೆಯೊಳು ಬಿಡೆಂ ಬಿಡೆನೆಂಬ
ಮಡದಿಯೊಡನೊಲಿದೆಂದನೊಂದಱಿಂದಹುದೊಂದಱಿಂದಾಗದೆಂತೆಂಬೊಡೆ
ಮೃಡಭಕ್ತೆಯಾಗೆಂದುದಂ ಮಾಳ್ಪೆನಾಗದಿ
ರ್ದೊಡೆವೊಲ್ಲೆನೆನೆ ಕಾಣವಾಗೆ ಬಾಯಂ ತೆಱೆದು
ಕಡಿವಾಣವಾದೊಡಾನೊಲ್ಲೆನೆನಬಹುದೆ ಕರುಣಂ ಮಾಡಿಸೇಳೆಂದಳು          ೫೯

ಪರಮ ವೈರಾಗ್ಯವಿದರಪ್ಪ ಶಿವಪೌರಾಣ
ಪರಿಚಿತ ಗಣಾಧೀಶರಪ್ಪ ಹೋಜೇಶ್ವರದ
ಹಿರಿಯ ಮೊದಲಾಚಾರ್ಯರಿಂ ದೀಕ್ಷೆಯಂ ಮಾಡಿಸಲ್ಪಡೆದು ಪದ್ಮಾವತಿ
ದುರಿತಮಂ ನೀಗಿ ಶೈವಕ್ಕೆ ತಲೆವಾಗಿ ದು
ಸ್ತರದೈವವಂ ತೊಱೆದು ಪೂರ್ವಗುಣಮಂ ಮಱೆದು
ನಿರುತ ಲಿಂಗಾರ್ಚನಂಗೆಯ್ವುತೊಂದೆರಡು ದಿನವಿರೆ ಕೇಳ್ದನವರಯ್ಯನು       ೬೦

ಹಂದೆಯಂ ಹಾವಡರ್ದಂತೆ ನಿರ್ಧನನ ಮನೆ
ಬೆಂದೂಡೆಂತಪ್ಪುದಂತಾಗಿ ಹವ್ವನೆ ಹಾಱಿ
ಹಿಂದೆ ನಮ್ಮನ್ವಯದಿ ಭಕ್ತರಾದವರಿಲ್ಲ ಭಕ್ತರಂ ನೆರೆದುದಿಲ್ಲ
ಕೊಂದಳೋ ಮಗಳು ಹದುಳಿರ್ದ ಜಿನಸಮಯಕ್ಕೆ
ಕುಂದ ತಂದಳು ನಿಂದೆಯೆಂದಳಿವುದೆಂದು ಕಡು
ನೊಂದು ಹರಿತಂದು ಹಲುದಿಂದು ನುಡಿದನು ಪಾಪಿ ಬಂದು ಪದ್ಮಾವತಿಯನು          ೬೧

ಮುಳಿಸುಳ್ಳ ಚೋರನಂಜನಸಿದ್ಧನವಗೆ ಮನೆ
ಯೊಳಗಣವರೆಚ್ಚರಿಕೆಯಿಂದಗುಳಿಗದ ತೆಗೆದೊ
ಡುಳಿವ ಧನವಾವುದೌ ತಮ್ಮತಲೆಯರಿವ ಹಗೆ ಭಕ್ತರೆಂಬುದು ನೀನು
ತಿಳಿದೊಡಂ ತಿಳಿಯದಾದಯ್ಯನೊಳು ಸ್ನೇಹಮಂ
ಬೆಳಸುವರೆ ಬೆಳಸಿತಲ್ಲದೆ ಭಕ್ತೆಯಪ್ಪರೇ
ಕುಲದ ಬೇರ್ಗಕಟ ಕುಡುಗೋಲ್ವಿಡಿದೆಯಾ ಎಂದು ಹಲುಮೊರೆದನವರಯ್ಯನು         ೬೨

ಶಿಲೆಗೆ ನೀರೆಱೆದು ಬೊಬ್ಬುಲಿಗೆ ಬೇಲಿಯನು ಕೆ
ತ್ತೊಲೆಗೆ ಹೂವಿತ್ತು ಹಂದಿಗೆ ಚಂದನವ ಹೂಸಿ
ಫಲವಾವುದೆಲೆ ಮರುಳೆ ನಿನ್ನ ವಂಶದೊಳಗಿಪ್ಪತ್ತೊಂದು ತಲೆಯೆನಿಸಿದ
ಕುಲವನುದ್ಧರಿಸಲಾನನುಗೈವುತಿರಲು ನೀ
ನಲಗುಗೊಂಡುಲಿದು ಹಲುಮೊರೆಯಲೇಕಿನ್ನು ನೀ
ಹಲವ ಗಳಹದಿರೆಂದು ತಂದೆಯಂ ಧಟ್ಟಿಸಿದಳೆಮ್ಮವ್ವೆ ಪದ್ಮಾವತಿ            ೬೩

ಬಿಡದಡುವ ಮಡಕೆಯುಂಬೊಡೆ ಕಱಿವ ಮೊಲೆ ಹಾಲ
ಕುಡಿವೊಡುಸುರೊಡಲಿಂಗೆ ಹಗೆಯಹಡೆ ಮನೆ ನುಂಗು ವೊಡೆ ಕೆಱೆ ಜಲವನೀಂಟುಪೊಡೆ ಬಯಲು
ಬಡಿವೊಡೋರಂತಿನ್ಯಾಯವೆಂದು
ಬಡಿದು ಶಿಕ್ಷಿಸಲು ಬಲ್ಲವರುಂಟೆ ಮಗಳೆ ಎ
ನ್ನೊಡಲೊಡವೆಗೊಡತಿಯಹ ನೀನೇ ಭಕ್ತರಿಗೆಕೂ
ರ್ತೆಡೆಗೊಟ್ಟು ಮತ್ತೆ ಕುಲವಳಿವರಿದನಾರ್ಗೆ ದೂಱುವೆನೆಂದ ನಾಕೆಯೊಡನೆ    ೬೪

ನಿನ್ನ ಕುಲವೆಲ್ಲವಂ ಕೆಡಿಸಲೆಳಲಸುವರಕಟ
ಮುನ್ನಿನಂತಿರೆನೆ ಕೇಡಿಂಗಲಸಿ ಶೈವಸಂ
ಪನ್ನೆಯಾದೆನು ಕೆಟ್ಟು ನುಡಿಯದಿರದೆಂತಕ್ಕೆ ಬಿಡದೆ ರಸಮುಂಡಲೋಹ
ಹೊನ್ನಾದ ಬಳಿಕ ಲೋಹದ ಸಂಗವುಂಟೆ ಬಳಿ
ಕಿನ್ನು ನೀನಾರು ನಾನಾರು ಸರ್ವಸ್ವವೆನ
ಗೆನ್ನಿನಿಯನಲ್ಲದಿಲ್ಲೆಂದು ನಿರ್ದಾಕ್ಷಿಣ್ಯದಿಂ ತಂದೆಯಂ ಜಱಿದಳು೬೫

ಹರಸಮಯಮಂ ಹೊಕ್ಕ ತೇಜಮೊಂದಧಿಕನಂ
ಬೆರಸಿ ಮಚ್ಚಿದ ದರ್ಪವೆರಡದಱ ಮೇಲಿವಳ
ಪರಿಭವಿಸಿ ನುಡಿದೆನಾದೊಡೆ ಬಿಟ್ಟು ಹೋದಪಳು ಹೋದೊಡೇನೆಂದೊಡಾನು
ಪರಿಣಾಮಿಪೊಡೆ ಮತ್ತೆ ಮಕ್ಕಳಿಲ್ಲಂ ತನ್ನ
ಹರಿದಂತೆ ಹರಿದು ಮನಬಂದಂತೆ ನಡೆದು ಸುಖ
ವಿರುತಿಪ್ಪುದೇ ಲಾಭವೆಂದು ಮನದೊಳು ನೆನೆದು ಮಗಳ ಕೂಡಿಂತೆಂದನು     ೬೬

ಹಿಂದೆ ಕುಲದೊಳಗಿಲ್ಲದಂದಮಂ ಮಾಡಬೇ
ಡೆಂದೆನಿದು ನಿನಗೆ ಮುನಿಸ ಹಡೆ ಬೇಡವ್ವ ಮನ
ಬಂದ ದೈವವನರ್ಚಿಸುತ್ತಾದೊಡಂ ಹದುಳವಿರು ಸಾಕು ನಿನ್ನ ದೆಸೆಯಿಂ
ಕುಂದಾದುದಕ್ಕೆ ನೀನಿನ್ನು ಮಾಡಲು ಬೇಹು
ದೊಂದೊಂಟು ಗಂಡನಂ ಬಿಟ್ಟು ಹದುಳೆಮ್ಮಿಚ್ಛೆ
ಯಿಂದಿರೆಳಸಿದ ತೊಡಿಗೆಗಳನೀವೆ ನೀಗಳೆನೆ ಕೋಪದಿಂ ಮಾರ್ಕೊಂಡಳು         ೬೭

ಕರಿಗೆ ಮದವಾ ಮದಕ್ಕಳಿಯಳಿಗೆ ಸರಸಿಜಂ
ಸರಸಿಜಕ್ಕುದಕಮುದಕಕೆ ಸರೋವರ ಸರೋ
ವರಕೆ ಬನವಾ ಬನಕೆ ಪುರವಾ ಪುರಕ್ಕತುಳ ದೇಶಮಂತಾದೇಶಕೆ
ಅರಸನರಸಂಗೆ ಸಿರಿ ಸಿರಿಗೆ ಜನವಾ ಜನಕೆ
ಹರುಷವೇ ತೊಡಿಗೆಯೆಂತವರಂತಿರೆನಗೆನ್ನ
ಪುರುಷನೇ ತೊಡಿಗೆನೀ ಕೊಡುವ ತೊಡಿಗೆಯನೊಯ್ದು ಸುಡು ಹೋಗು ಹೋಗೆಂದಳು           ೬೮

ಇಲ್ಲಿಂದ ಮೇಲೆ ನುಡಿದೊಡೆ ನಿನ್ನ ಮೇಲಾಣೆ
ಬಲ್ಲಂತೆ ಹದುಳಿಪ್ಪುದೆನಲಿನ್ನು ಮುನ್ನಿನಂ
ತಲ್ಲೆನ್ನ ವಲ್ಲಭನನಿಲ್ಲಿಗೊಡಗೊಂಡು ಬಂದೊರೊಳವರಿವರೆನ್ನದೆ
ಎಲ್ಲರಱಿವಂತೆನ್ನನಿತ್ತು ಸುಖದಿಂದಿರಿಸಿ
ದಲ್ಲದಿರೆನೆನಲು ಕೇಳ್ದಾ ಪರಿಯ ಮಾಡಿ ಮನ
ವೊಲ್ಲದ ಮನದೊಳಾದಿಮಯ್ಯನಂ ಮೋಹದಿಂ ಮುಂದಿಟ್ಟುಕೊಂಡಿರ್ದನು            ೬೯

ಎಳಸಿ ಸಿಂಹದ ಮಱಿಯ ಸಾಕುವಾನೆಗಳಂತೆ
ಬೆಳಗಿನಗೆಯಂ ಸಲಹುತಿಪ್ಪ ಕತ್ತಲೆಯಂತೆ
ಅಳವಲ್ಲದಿರ್ದುದದಕ್ಕಂತಿಂತೆನಲ್ಕಮ್ಮದೊಳಗೆ ಸಿಡಿಮಿಡಿಗೊಳುತ್ತೆ
ಕೆಳೆಗೊಂಡ ಪಗೆಯಂತೆ ಚಿತ್ತದೊಳು ಮುನಿಸು ನುಡಿ
ಯೊಳು ನಯವನಿಟ್ಟು ಮುಂದಿಟ್ಟು ಕೊಂಡಿರ್ದರ
ಗ್ಗಳಿಸಿ ಮನೆಯೊಳು ಮನೆಯವನಿತ್ತು ಬಿಡದಾದಿಮಯ್ಯನನತ್ತೆಮಾವಂದಿರು೭೦

ಪರಮಸುಖದಿಂದೆ ಪದ್ಮಾವತಿಯ ಕೂಡೆ ನಾ
ಲ್ಕೆರಡು ತಿಂಗಳು ಹದುಳವಾದಯ್ಯನಿರಲಿತ್ತ
ಪರಸಮಯಿಗಳ ಕುಲಕೆ ಸೆಕಳೆ ಬಪ್ಪಂತೆ ಬೇಸಗೆ ಮೊಳೆತು ತಲೆದೋಱಿತು
ತರುಗಳೆಲೆಯುದುರಿದವು ಕೆಱೆ ತೊಱೆಗಳಿಂಗಿದವು
ಧರೆ ಬೀಟೆಬಿರಿದುದು ಹೊಲಂ ಕರಿಕುವರಿಯಿತ್ತು
ಗಿರಿಸಿಡಿದು ಸೆಕ್ಕೆಹಾಱಿದವೆಂದೊಡಿನ್ನುಳಿದ ಜೀವರಂ ಕಂಡರಾರು  ೭೧

ಬಿಸಿಲ ಬೇಗೆಯ ಸೋಂಕಿನಿಂ ಕಾದ ನೆಲನ ಬಿಸಿ
ಯುಸುರ ಹೊಯಿಲಿಂ ಬಾಡಿ ಬಸವಳಿದ ಕುಸುಮಕುಲ
ಹೊಸೆದಂತೆ ಕೊರಗಿ ಸೈರಿಸದೆ ಬೆಮರ್ವನಿಯಂದಲಾದಯ್ಯನಾದಯ್ಯನು
ಬಸವಲ್ಲದಂಡಲೆವ ಜಳದ ದರ್ಪವನು ನಂ
ದಿಸಲು ನಿಜಸಖರು ಸಹಿತಾ ಜಲಕ್ರೀಡೆಗನು
ಮಿಸಿ ಪುರದ ಮೂಡಲು ವಿರಾಜಿಸುತ್ತಿಪ್ಪ ಕೇಳೀವನಕ್ಕೆಯಿತಂದನು            ೭೨

ಬೆಳೆವೆತ್ತ ಮದನನರಮನೆ ವಸಂತನ ಬೀಡು
ಎಳೆಲತೆಗಳಿಕ್ಕೆ ನಾನಾಭೂಜದಾಗರಂ
ತಳಿರ ತಾಣಂ ಕುಸುಮಕುಲದ ನೆಲೆ ಫಳನಿಳಯ ಕೋಕಿಲಂಗಳ ಚಾವಡಿ
ಅಳಿಗಳಾಡುಂಬೊಲಂ ಗಿಳಿಗಳೋದುವ ಮಠಂ
ಮಳ್‌ಯಾನಿಳನ ಜನ್ಮಭೂಮಿ ಪುಳಿನಾಕೀರ್ಣ
ಕೊಳನ ಹರವರಿ ನವಿಲ ನಂದನವೆನಿಪ್ಪ ಕೇಳೀವನಂ ಕಣ್ಗೆಸೆದುದು  ೭೩

ಮಿಸುಗುವಂಕುರ ಕೊನರು ಕೆಂದಳಿರು ಪಲ್ಲವಂ
ಪಸುರೆಲೆ ಚಮರ ಮುಗುಳು ನನೆ ಮೊಗ್ಗೆ ಕುಸುಮ ಬಿಡ
ದೆಸೆವ ಮಿಡಿಸಾಳಿಮದ ಬಲುಗಾಯಿ ದೋರೆವಣ್ಣೆಂಬಿವಂ ಪಿಡಿದೊಱಗುವ
ಹೊಸಮಾವು ಜಂಬು ನಿಂಬಂ ಕದಳಿ ಕುರವಕ ಪ
ನಸುದಾಡಿಮಂ ನಾರಿಕೇಳಮಂಬಟೆ ಪೂಗ
ವಸುಕೆ ಹೇರೀಳೆ ಕಿತ್ತೀಳೆ ಮಾದಲದಿಂದಲಾ ವನಂ ಕಣ್ಗೆಸೆದುದು     ೭೪

ವಿರಹಿಗಳ ಚಿತ್ತಮಂ ಸೀಳ್ವ ಕಾಮನ ಕಯ್ಯ
ಕರಗಸದ ಕಕ್ಕುಗಳೊ ಕಂತು ಪೊಡೆಯಲು ಮುನೀ
ಶ್ವರಕಠಿನಮನಕಾಂತು ಧಾರೆಗಳು ಮುಱಿದಲಗುಗಳ ಮುಕ್ಕುಗಳ ಬಳಗವೊ
ಪರಿಮಳದ ಮುಳುವೇಲಿಯೋಯೆನಿಸಿ ಕಂಟಕೋ
ತ್ಕರಭರಿತ ಕೇತಕಿಗಳೊಪ್ಪಿದವು ಹೊಱಗೆ ಶಂ
ಕರವಿರೋಧಿಯನು ನಡುವಿರಿಸಲಮ್ಮದೆ ವನಂ ಪೊಱಮಡಿಸಿತೆಂಬಂದದಿ      ೭೫

ಹಂಗಮಗುಚುವೆನೆಂದು ಭೂಮಿ ಕೈನೀಡಿ ಮೇ
ಘಂಗಳಿಗೆ ಕೊಡುವಮೃತಕಳಶಸಂಕುಳವೊ ಗಗ
ನಾಂಗಣದೊಳುಱೆ ಸುಳಿವ ವಿದ್ಯಾಧರಾಳಿಗೆ ವಸಂತನಿಟ್ಟಱವಟಿಗೆಯೊ
ಇಂಗಡಲ ಕಡೆವ ಕಡೆಯಿಂದ ಹುಟ್ಟಿದ ಪದಾ
ರ್ಥಂಗಳಂ ತಮತಮಗೆ ಕೊಂಡೊಯ್ವುತಿರೆ ಭೂಲ
ತಾಂಗಿ ತೆಗೆದೆತ್ತಿಟ್ಟ ರಸಕಳಶವೋಯೆನಿಸಿ ಚೆಂದೆಂಗದೆಸೆದಿರ್ದುದು   ೭೬

ಮಡಲಿಱಿದು ಹಬ್ಬಿ ಹರಕಲಿಸಿ ಬೆಳೆದೆಳೆಲತೆಗ
ಳಿಡುಕುಱಿಂ ತಳಿತು ಕೆದಱಿದ ಹೊದಱು ಕೊನೆಗೊಂಬು
ವಿಡಿದ ಭೂಜಂಗಳಿಂ ತುಱುಗಿದೆಲೆಮಱೆಯೊಳೊಲೆದಾಡುವ ತಮಾಲಂಗಳಿಂ
ಜಡಿವ ಹೊಡೆಯೊತ್ತಿನೊಳು ಬಾಗಿ ತೂಗುವಶೋಕೆ
ಯೆಡೆಗೆಡೆಗಿಡಿದ ತೆಂಗು ಕೌಂಗಿನೊತ್ತೊತ್ತೆಯಿಂ
ಹೊಡಕರಿಸಿ ಬೆಳೆದ ಕತ್ತಲೆಬೆಳಗ ಕನಸಿನೊಳುಕಾಣದಂತಾ ವನದೊಳು          ೭೭

ಹೊಸಬನದೊಳಿಪ್ಪಬಲೆಯರ ತೊಡಿಗೆವೆಳಗು ಹೊಂ
ಬಿಸಿಲಂತಿರಲ್ಕಂಡು ಕಮಲವರಳುವವವರ
ನಸುನಗೆಯ ಬೆಳಗು ಬೆಳುದಿಂಗಳಂತಿರೆ ಕಂಡು ಕುಮುದವರಳುವಲ್ಲದೆ
ಶಶಿರವಿಗಳೆಡೆಯಾಟವಿಲ್ಲವಾ ವನದಿ ಭಾ
ವಿಸಲು ರವಿ ಕಾಣದುದ ಕವಿ ಕಂಡನೆಂಬ ನುಡಿ
ಹುಸಿಯಲ್ಲ ಸುಕವಿ ಹಂಪೆಯ ರಾಘವಾಂಕನದಱಿರವ ಬಣ್ಣಿಸಿದನಾಗಿ       ೭೮

ಬಾಳೆಯಿಂ ಶೃಂಗರ ದಳಿಂಬದಿಂದಂ ಹಾಸ್ಯ
ಈಳೆ ಕೇತಕೆ ಭಯಂ ನಾರಾವಾಳದಿ ರೌದ್ರ
ವ್ಯಾಳಸಂಪಗೆ ವೀರ ತಾಳ ಮರದದ್ಭುತವು ರಸದಾಳಿಯಿಂ ಶಾಂತವು
ಸಾಳೆ ಭೀಭತ್ಸ ತಾಂಬೂಲದಿಂ ಕರುಣರಸ
ದಾಲ ನೀರಲ ಮಂಡವಾಲ ಮಾಮರಗಳಿಂ
ಸಾಲಪೂಗಿಡುಗಳಿಂದಾ ವನಂ ನವರಸಭರಿತಮಾಗಿ ಕಣ್ಗೆಸೆದುದು    ೭೯

ಗಿಳಿಗಳೋದುಗ್ಘಡಣೆ ಕೋಕಿಲರವ ಕಹಳೆ
ಫಳವಿಡಿದ ಪಲಸು ಮದ್ದಳಿಗ ಮೊರೆವಳಿಕುಲಂ
ಬಳಸಿ ತಾರೈಪ ಚಿಹಣಿಯರು ನೆಲಕೊಲೆವಶೋಕೆಯ ತಳಿರು ಹೊಸ ಜವನಿಕೆ
ಬೆಳುಮುಸುಕು ಕುಸುಮಲತೆಗಳು ಸತಿಯರುಲುಹುಗಳು
ತಳೆದ ಕೌಸಾಳ ಮರನೊಲಹು ತಲೆದೂಕ ನೆಱೆ
ಕಳಲ್ವ ಹಣ್ಣೆಲೆ ಮೆಚ್ಚಿನಲು ನವಿಲು ನರ್ತನಂಗೈವವಂತಾ ವನದೊಳು       ೮೦

ಗಿಳಿಗಳರಗಿಳಿ ನವಿಲು ಸೋಗೆನವಿಲಾ ಕೊಳಂ
ತಿಳಿಗೊಳಂ ತುಂಬಿ ಮಱಿದುಂಬಿ ಮಾವಿಮ್ಮಾವು
ಪುಳಿನ ಸೀತಳಪುಳಿನ ತೆಂಗು ಚೆಂದೆಂಗು ಕೇದಗೆಯೆಲ್ಲ ಹೊಂಗೇದಗೆ
ಸುಳಿವೆಲರು ತಂಬೆಲರು ಕೋಕಿಲಂ ಮತ್ತಕೋ
ಕಿಳಪಲಸು ಬಕ್ಕೆವಲಸೀಳೆ ಕಿತ್ತೀಳೆಯು
ತ್ಪಳವೆಲ್ಲ ನೀಲೋತ್ಪಳಂ ಹಂಸೆ ರಾಜಹಂಸೆಗಳೆಸೆದವಾ ವನದೊಳು          ೮೧

ಈ ವನಂ ಸತಿಯರಿಂ ನೋವನಂ ಕಾವನಿಂ
ಸಾವನಂ ವಿರಹದಿಂ ಬೇವನಂ ಸಂತವಿಸಿ
ಕಾವನಂ ವಿಗ್ರಹದಿ ಸೋವನಂ ಸುಖವನೊಸೆದೀವನಂ ನಗುವುದೊಲಿದು
ಈ ವನಂ ಶುಕಪಿಕದ ಜೀವನಂ ಪಥಿಕಜನ
ಪಾವನಂ ಸೌಖ್ಯ ಸಂಜೀವನವೆನುತ್ತಿರದೆ
ಕಾವನೆಣಿಸುವ ವನವ ಹೊಕ್ಕೀಕ್ಷಿಸುತೆ ತುಷ್ಟನಾದನಂತಾದಯ್ಯನು೮೨

ಬಳಸಿದ ಬಳಲ್ಕೆಯಂ ಶ್ರಮಮಂ ಪಿಪಾಸೆಯಂ
ತೊಳೆಯಲ್ಕೆ ಪರಿಣಾಮವಂ ತುಷ್ಟಿಯಂ ಸುಖವ
ಬೆಳೆಯಲ್ಕೆ ನೀರೆಱಿಯಲೆಂದು ಮನಸಂದು ನಡೆತಂದು ಪೊಗೊಳನಪೊಕ್ಕು
ನಳಿನದಳದಲಿ ತುಹಿನಜಲವನಾಂತಿಟ್ಟಾಡಿ
ಮುಳುಗಾಡಿ ತುಳುಕಾಡಿ ನೆಗೆದು ಮೊಗೆದೀಸಾಡಿ
ಹೊಳೆದಾಡಿ ತಣಿದು ತಡಿಯಂ ಹತ್ತಿದಂ ನಿಖಿಳಸುಖಿಯಾಗಿ ಸಖರುಸಹಿತ     ೮೩

ತಿಳಿಗೊಳನ ಬಳಸಿ ನಳನಳಿಸಿ ಬೆಳೆದೆಳೆಲತೆಯ
ತಳಿರ ತಣ್ಣೆಳಲ ಪುಳಿನಸ್ಥಳದ ಮೇಲೆ ಕೆಂ
ದಳಿರ ಹಸೆಗಳಲಿ ಕುಳ್ಳಿರ್ದು ನಾನಾ ನವ್ಯ ಫಳಕುಲವನಾರೋಗಿಸಿ
ಕುಳಿರ್ವ ಪರಿಮಳಜಲವನೀಂಟಿ ತಾಂಬೂಲಕರ
ತಳನಾಗಿ ನವ ನಳಿನದಳದಾಲವಟ್ಟಂಗ
ಳೊಳಗೆಲರನಾದರಿಸುತಾದಯ್ಯನುಚಿತ ರಚನಾಳಿಯಿಂದಿರ್ಪಾಗಳು  ೮೪

ನಡೆಯುಡುಗಿ ಮೊಗಕಂದಿ ಬಾಯ್ಬತ್ತಿ ಕಣ್ಗುಳಿದು
ನುಡಿಯಱತು ತನುಬಾಡಿ ಬಸುಱು ಬೆನ್ನಂ ಹತ್ತಿ
ದಡದಡಿಸಿ ಡೆಂಡಣಿಸಿ ತರಹರಿಸಿ ತಳ್ಳಂಕಗೊಳುತಡಿಯನಿಡಲಾಱದೆ
ಹಿಡಿದ ಕೋಲೂಱಿನಿಂದಲ್ಲಲ್ಲಿ ಸುಯಿಸುಯಿದು
ಮೃಢಭಕ್ತರೈವರು ತಟಾಕದೇಱಿಯ ಮೇಲೆ
ನಡೆತರಲು ದೂರದಿಂ ಕಂಡು ದಿಟ್ಟಿಸಿ ನಿಲುಕಿ ನೋಡಿದಂ ಕಣ್ಮುಚ್ಚದೆ         ೮೫

ನಡೆನೋಡಿ ನೋಡಿ ಕಂಗೆಟ್ಟು ಕಲುಮರನಾಗಿ
ನಡುಗಿ ಹರಣಂ ಹೊತ್ತಿ ಮನವುರಿದು ತನು ಬೆಂದು
ಮಿಡಿಮಿಡನೆ ಮಿಡುಕಿ ಸುಖಮಂ ಮಱೆದು ಕೈಯೆಲೆಯನೀಡಾಡಿ ಭೋಂಕನೆದ್ದು
ದುಡುದುಡನೆ ಹರಿದು ತೂಗಾಡುತ್ತ ಬಪ್ಪೊಡೆಯ
ರಡಿಗೆಱಗಿ ಕೈಗೊಟ್ಟು ಮೆಲ್ಲನೊಬ್ಬೊಬ್ಬರಂ
ನಡೆಸಿತಂದಾರವೆಯ ಕೊಡೆವರನ ತಡಿನೆಳಲ ತಂಪಿನೊಳು ಕುಳ್ಳಿರಿಸಿದ          ೮೬

ಕುಳಿರ್ವ ಪರಿಮಳಜಲವನಿತ್ತು ಪದಮಂ ತೊಳೆದು
ತಳಿರ ಮೆಲುವಾಸಿಕೆಯೊಳಿಟ್ಟೋವಿ ನವಕಮಲ
ದಳಿದಾಲವಟ್ಟದಿಂ ಬೀಸಿ ತಂಪಂ ಬೀಱಿ ಪಣ್‌ಫಲಾದಿಗಳನಿತ್ತು
ಬಳಸಿದ ಬಳಲ್ಕೆಯಂ ತೆವಱಿ ಪರಿಣಾಮವಂ
ಸಲಿಸಿ ಸುಖವಿರಿಸಿ ನೀವೀಗಾವ ದೇವತಾ
ಸ್ಥಲದಿಂದೆ ಬಂದಿರೆಂದಾ ತಪಸ್ವಿಗಳನೊಯ್ಯೆ ಕೇಳ್ದನಾದಯ್ಯನು  ೮೭

ಸೇತುವಿಂ ಬರುತೆ ಬರುತೆಡೆಯೂರ್ಗಳೊಳಗನ್ನ
ದಾತೃಗಳು ದೊರಕದೀರೈದುಪಾವಾಸದಿಂ
ಧಾತುಗೆಟ್ಟಱಿಯದೀ ವ್ಯಾಘ್ರಪುರಮಂ ಪೊಗಲು ವ್ಯಾಘ್ರಪುರಮಾದುದೆಮಗೆ
ಓತು ನುಡಿಸರು ನುಡಿಸದೇಂ ಹದುಳವಿರ್ದರೇ
ಬೂತುಗೆಡೆದೇಡಿಸಲ್ತೊಡಗಿದರದೇಂ ಬಱಿಯ
ಬೂತಾಟವೇ ನಗರಿಯಂ ಪೊಱಮಡಿಸಿದರೆಂದಾಡಿದರು ಮನದಳಲನು         ೮೮

ಕಡುಹಸಿದು ಹರಿದು ಕಲ್ಲಂ ಕವರಿದಂತೆ ನೀ
ರಡಸಿ ಬಱುಗೆಱೆಯ ಹೊಕ್ಕಂತೆ ಬೆಂಡಾಗಿ ಬೆಮ
ರಡಸಿ ಬೊಬ್ಬುಲಿಯ ನೆಳಲಂ ಸಾರಿದಂತಾಗಿ ಸುಯಿದು ತಳ್ಳಂಕಗೊಂಡು
ಮೃಡಭಕ್ತರಂ ಕಾಣದಾಸತ್ತು ಬೇಸತ್ತು
ಕಡೆಗೆ ನಿನ್ನಂ ಕಂಡು ಬದುಕಿದೆವು ಪರಿಣಾಮ
ವಡದೆವೀಶಂ ಕರುಣಿಸುತ್ತಿರಲಿ ನಿನಗೆಂದು ಹರಸಿ ಭಸಿತವನಿಟ್ಟರು  ೮೯

ನಾನಾನಿರೋಧದಿಂ ಬೆಂಡಾದಿರಿಂತೀಗ
ಬೋನಮಂ ಮಾಡಹೇಳಿ ಬಹೆನೊರ್ನಿಮಿಷಕಾ
ಲಾನಬೇಕೆಂದು ಬಿನ್ನೈಸಿ ನಿಜಸಖರನಿಬ್ಬರನವರ ಹತ್ತಿರಿರಿಸಿ
ಆನಂದದಿಂದೆ ಬಂದೊಳಪೊಕ್ಕು ತನ್ನ ಕಮ
ಲಾನನೆಯ ಕೈವಿಡಿದು ಸರ್ವಸಾಧನಮುಮಂ
ನೀನೇ ನಿಮಿರ್ಚು ಕಡುವೇಗದಿಂದೊಡೆಯರೈವರು ಹಸಿದು ಬಂದರೆನಲು       ೯೦

ಅಂಗನೆಯ ಸದ್ಗುಣವನೇನನೆಂಬೆಂ ಮಹಾ
ಲಿಂಗನೇ ಬಲ್ಲನಿಂತೀಗಳೊಡೆಯರನು ಬಿಜ
ಯಂಗೈಸಿ ತನ್ನ ಬೇಗದೊಳಿದಱ ಬೋನತನವೇನೆಂದು ವಲ್ಲಭಂಗೆ
ಕಂಗಳಿಂ ಸಸಿವೆಳಗನಳಕದಿಂದಳಿಯಂ ಕು
ಚಂಗಳಿಂ ಚಕ್ರಯುಗಮಂ ನಗುವ ತೆಱದಿ ನಗು
ತಂಗನೆ ಕಡಂಗಿ ಕಳುಹಲಿಕತ್ತ ನಡೆದನತಿ ಹರುಷದಿಂದಾದಯ್ಯನು    ೯೧

ನಂದನದೊಳಿಪ್ಪ ಹರಭಕ್ತರಂ ಕರತಪ್ಪೆ
ನೆಂದಾದಿಮಯ್ಯನತ್ಯಾನಂದದಿಂ ಪೋದ
ಹಿಂದೆ ಕೊಪಣದ ಕಡೆಯ ಘೋರ ಮಲಧಾರಿಗಳೆನಿಪ್ಪ ಹಲಬರು ಸವಣರು
ಬಂದು ಸುರಹೊನ್ನೆಯ ಮಹಾಬಸದಿಯರುಹಂಗೆ
ವಂದನಂಗೈದು ಚಾವಡಿಗೆಂದು ಬರೆ ಕಾಣು
ತಂದು ಪಾರಿಸಸೆಟ್ಟಿ ತಡೆದನವರೆಲ್ಲರಂ ತನ್ನ ನಿಳಯದ ಚರಿಗೆಗೆ   ೯೨

ಹತ್ತೈದು ಗಳಿಗೆಯಂ ಕಳೆದು ರಸಬಸಿವ ಸವಿ
ದುತ್ತುಗಳ ಲಂಪಟರು ಚರಿಗೆಯಂ ಮಾಡಲು ಬ
ರುತ್ತಿರಲು ಸೆಟ್ಟಿ ಕಂಡಿದಿರೆದ್ದು ಕಾಲ್ದೊಳೆದು ತನ್ನ ನಿಳಯಕ್ಕೆ ತಂದು
ಮೊತ್ತಗೊಳಿಸಲು ಮುನ್ನ ಕೈಕೊಂಡುಹೋದುದಿ
ಪ್ಪತ್ತು ಬಳಿಕುಂಬಹೊತ್ತಿಂಗೆ ಹರಿತಂದುದೈ
ವತ್ತಾಗೆ ಮನೆಯೊಡತಿ ಕಂಡು ಸಿಡಿಮಿಡಿಗೊಂಡು ಪತಿಯ ಕೂಡಿಂತೆಂದಳು     ೯೩

ಹವಣಿಂಗೆ ಚರಿಗೆಯಂ ಮಾಡಿದೆನಿದೀಸೊಂದು
ಕವಿದೊಡಿದಕಿನ್ನೆಲ್ಲಿ ತಪ್ಪೆನೆಂದಂಜಿ ನಡು
ಗುವ ಸತಿಗೆ ಪತಿಯೊಂದುಪಾಯವುಂಟೆಲೆ ಹೆದಱಬೇಡನಲದಾವುದೆನಲು
ತವೆ ತಂಗಿ ತಮ್ಮ ಗೊರವರ್ಗೆಂದು ಬೋನಮಂ
ಸವೆದಳದನೆತ್ತಿತಹೆವೆನೆ ಬಳಿಕ್ಕಾಗಲೀ
ಗವರು ಬಾರದ ಮುನ್ನ ತರಬೇಹುದೆಂದಿಬ್ಬರುಂ ಹೋದರಾಕೆಯೆಡೆಗೆ        ೯೪

ತಡೆಯದಿಂದೀಗ ನೀ ಸವೆದಿಟ್ಟ ಬೋನಮಂ
ಕೊಡು ಮಗಳೆ ಬೇಗವೆನಲೇತಕ್ಕೆ ಗುರುಗಳಿಗೆ
ಕೊಡೆನದೇತಕ್ಕೆ ಕೊಡೆ ಕೊಡಲಮ್ಮೆನಂತಾಗಿ ಕೊಡಲಮ್ಮದಿರಲೇತಕೆ
ಒಡೆಯರಾರೋಗಿಪುದು ಕೆಟ್ಟಪುದು ಸಾರುಕೆ
ಟ್ಟೊಡೆ ಕೆಡಲಿಕೆಟ್ಟೊಡೆನ್ನಿನಿಯ ಮುನಿದಪನು ಮುನಿ
ದೊಡೆ ಮುನಿಗೆ ನಾವಿರುವೆವೆನೆ ನಿಮ್ಮನೊಯ್ದು ಸುಡುಸುಡು ಹೋಗು ಹೋಗೆಂದಳು            ೯೫

ಆದೊಱಂ ಕೊಡಬೇಕು ಕೊಡೆನು ಕೊಡೆನಾಂ ಕೊಂಡು
ಹೋದಲ್ಲದಿರೆನೀಯೆನೆಂದು ಬಾಗಿಲೊಳಡ್ಡ
ವಾದ ಪದ್ಮಾವತಿಯನಿಂದು ಕಳೆಯಂ ರಾಹುಪಿಡಿವಂತೆ ತಂದೆ ಪಿಡಿದು
ಆದುದಾಗಲಿ ಕೊಂಡುನಡೆಯೆನಲು ತಾಯೊಳಗೆ
ಸೋದಿಸಿ ಸಮಸ್ತ ಬೋನನನೊಯಿದರಕಟ ಮರು
ಳಾದಿರಯ್ಯೋ ಬೇಡೆನುತ್ತೊಱಲಲಕ್ಕಿಯಂ ಕೊಡುವೆವೆನು ತೊಯಿದರಂದು  ೯೬

ಕೆಸಱ ಕೊಱತೆಗೆ ಕಸ್ತುರಿಯನೈದಿಸುವ ತೆಱದೆ
ಮಸಿಯ ಕೊಱತೆಗೆ ಮಾಣಿಕವನು ತಿಪ್ಪೆಯೊಳೊಗುವ
ಕಸದ ಕೊಱತೆಗೆ ಪಚ್ಚಕರ್ಪುರದ ರಜವನಂಬಿಲದ ಕೊಱತೆಗೆ ಸುಧೆಯನು
ಹುಸಿಯ ಕೊಱತೆಗೆ ಸತ್ಯವನು ಕೊಟ್ಟು ಕೆಡಿಸುವಂ
ತಸಿತಗಳನಣುಗರ್ಗೆ ಸವೆದ ಬೋನವ ತಮ್ಮ
ರಸಿಯರ್ಗೆ ಕೊಂಡೊಯಿದರೊಳಗೆ ಪದ್ಮಾವತಿ ಮಹಾನಿರೋಧಂಗೊಂಡಳು  ೯೭

ಕರ್ಪುರವನುರುಹಿ ಕಿಚ್ಚಂ ಕಾವನಂತೆ ಮಣಿ
ದರ್ಪಣವನೊಡೆಗುಟ್ಟಿ ಹಲ್ತೆಱೆದು ನೋಳ್ಪಂತೆ
ಕೂರ್ಪ ತಾಯಂ ಮಾಱಿ ತೊತ್ತ ಕೊಂಬಂತೆ ಕೀಲಿಂಗೆ ದೇಗುಲವಳಿವನ
ತಪ್ಪದಂತಖಿಳಮುಕ್ತಿಯ ತೋರ್ಪ ಶರಣರಿಗೆ
ಒಪ್ಪದಲಿ ಮಾಡಿದ ಮಹಾಬೋನವೆಲ್ಲವಂ
ನೇರ್ಪಟ್ಟ ತಮ್ಮ ಋಷಿಯರ್ಗೆ ಕೊಂಡೊಯಿದರೆಂದೆನುತೆ ಶಾಪಿಸುತಿರ್ದಳು   ೯೮

ನುತಪುಣ್ಯತನುವನೊಯಿದುಱೆ ದುರಿತವಹ್ನಿಗಾ
ಹುತಿಗೊಡುವ ದುಷ್ಕರ್ಮಿಯಂತೆ ಸುಕೃತಾನ್ನಸಂ
ತತಿಯ ನಧಮರಿಗಿಕ್ಕಲುಂಡು ತೆರಳಿದರು ಬಸದಿಗೆ ಸವಣರತ್ತಲಿತ್ತ
ಸಿತಿಗಳನ ಭಕ್ತರಂ ಕೊಂಡಾಡಿಮಯ್ಯನಾ
ಯತನಕ್ಕೆ ಬಂದೊಳಗೆ ಪೊಗುವಾಗ ಮುಂದೆ ನಿಜ
ಸತಿ ಕಣ್ಣನೀರಿಂದೆ ಪಿತನ ಪಾಪದ ಸಸಿಗೆ ತಳಿವಂತಿರಳುತಿರ್ದಳು      ೯೯

ಎತ್ತಣ ನಿರೋಧವಱುಪೆಂದೊಡಾನೀಗಳೊಲ
ವೆತ್ತು ಮಾಡಿದ ಮಹಾಬೋನವೆಲ್ಲವನೆನ್ನ
ಹೆತ್ತ ತಾಯ್ತಂದೆಗಳು ಬಲುಪಿಂದೆ ಮೂರ್ಖತನದಿಂದೆ ಕೊಂಡೊಯಿದರೆನಲು
ಕುತ್ತಿದಂತಾಗಿ ಬೆದಬೆದಬೆಂದು ಸುಯಿದು ಮಱು
ಗುತ್ತೊಡಲ ಹೊಸೆದುಕೊಳತಕ್ಕಟಾ ಪಾಪಿ ನೀಂ
ಸತ್ತಿರ್ದೆಯೋ ನಿಜನಿವಾಸಮಂ ಬಿಟ್ಟೆಲ್ಲಿ ಹೋಗಿರ್ದೆ ಹೇಳೆಂದನು  ೧೦೦

ಕೊಡೆನೆಂದೆ ಬಿಡೆನೆಂದೆನಲ್ಲೆಂದು ಹೊಲ್ಲೆಂದೆ
ನಡೆಯೆಂದೆ ಹೋಗೆಂದೆನೆನಲೆನ್ನ ಮಾತನೊಂ
ದಡಕೆಗೆಣಿಸದೆ ಬಂದು ಕೈವಿಡಿದನೆಮ್ಮಯ್ಯನೆಮ್ಮವ್ವೆಯೊಳಗೆ ಹೊಕ್ಕು
ಕೆಡುವಿರೊಯ್ಯದಿರೆಂದು ನಾನೊಱಲುತಿರಲಿರಲು
ಕಡೆಗಣಿಸಿ ಬೋನಮಂ ಕೊಂಡದಕ್ಕಕ್ಕಿಯಂ
ಕೊಡುವೆವೆಂದೆನುತ ಹರಿಸಲುಗೆಯಿಂದೊಯಿದರೆಂದಳುತೆ ಹೇಳಿದಳು ಪತಿಗೆ  ೧೦೧

ಇಂತಪ್ಪ ಸಲುಗೆಯಂ ಮಾಡಿದರುಂಟೆ ನಿಜ
ಕಾಂತೆಯೆರವುಂಟೆ ತಲೆಮುಯ್ಯುಂಟೆ ಸಾಕ್ಷಾತ
ಸಂತತಿಗಳಿಳೆಯೊಳಗೆ ಕಡನುಂಟೆ ಕಣ್ಣನಲಗಿಂದಿಱಿವ ಸರಸವುಂಟೆ
ಅಂತಕಾರಿಯ ಭಕ್ತರಾರೋಗಿಪುದು ಕೆಟ್ಟು
ದೆಂತು ಮಾಡುವೆನೆಂತು ಗೆಯ್ವೆನೆಂತೀಕ್ಷಿಸುವ
ನೆಂತೆಂದು ಚಿಂತಿಸುತೆ ಕೊಂತವೆದೆಯಲಿ ಮೂಡಿದಂತೆ ಸಂತಾಪಿಸಿದನು          ೧೦೨

ನೆನೆದನದಕೇನಾಯ್ತು ನೋಡುವಂ ಸರ್ವಸಾ
ಧನವನತಿ ಬೇಗ ಮಾಡೆನೆ ಬೇಡ ಬೇಡ ಸೂ
ರ್ಯನ ಹೋಕು ಸಾರೆ ರಾತ್ರಿಯೊಳು ಭೋಜನವಾಗದೆಂದು ತಾಪಸರು ನುಡಿಯೆ
ಎನಗೇಕೆ ಪಾಪಿಗೀ ಮಾಟ ಪಾತಕನ ಸಾ
ಧನ ನಿಮಗೆ ಸಲುವುದೆಯೆನುತ್ತಾರ್ತದಿಂ ತಪೋ
ಧನರ ತಣಿಪಲು ಬೇಗದಿಂ ಹರಿದನಾ ನವ್ಯಫಲ ವಿಕ್ರಯದ ಪಸರಕೆ  ೧೦೩

ಬಾಳೆ ಹೇರೀಳೆ ಕಿತ್ತೀಳೆ ಪಲಸಿಮ್ಮಾವು
ನಾಳಿಕೇರಂ ದಾಡಿಬಂ ನೇಱಿಲಾದಿಯ ಫ
ಳಾಳಿಗಳನಿಕ್ಷುದಂಡಂಗಳಂ ತಂದು ಸುಲಿಸುಲಿದು ಮೆಲಲಿತ್ತು ತಣಿಪಿ
ಬೋಳೈಸಿ ತುಱುಯೆಮ್ಮೆಯ ಕ್ಷೀರವಿತ್ತು ತಾಂ
ಬೂಲಮಂ ಕೊಟ್ಟೆನ್ನ ನಂಬಿ ಬಳಲಿದಿರಿ ಮುನಿ
ಸಾಳದಿರಿ ಸರ್ವಾಪರಾಧವೆನ್ನದು ಕರುಣಿಸುವುದೆಂದು ಮೈಯಿಕ್ಕಲು           ೧೦೪

ಹೋದರತ್ತಲು ಶರಣರಿತ್ತ ಜೈನರ ಪುಣ್ಯ
ತೀದುದೆಂದಿಳೆಗಱುಪುವಂದದಿಂ ಕಮಲಿನಿಯ
ಕಾದಲಂ ರಸೆಗಿಳಿದನವರಪಖ್ಯಾತಿ ಹಬ್ಬುವ ತೆಱದೆ ಕಾರ್ಗತ್ತಲೆ
ಬೀದಿವರಿದುದು ಕೋಪದಿಂ ನಿತ್ಯನೇಮವನ
ನಾದರದೊಳಂತಂತೆ ಮಾಡಿ ಮುಸುಕಿಟ್ಟೊಱಗು
ವಾದಯ್ಯನಂ ವನಿತೆಯಾರೋಗಿಸೇಳೆಂದೊಡಿನ್ನೊಲ್ಲೆ ಹೋಗೆಂದನು         ೧೦೫

ಕೆಟ್ಟ ಸಲುಗೆಯಲೊಯಿದಿರೆನ್ನಿನಿಯನೂಟಮಂ
ಬಿಟ್ಟನಿನ್ನೇಗೈವೆನೆಂದುಲಿದು ಹಲುದಿಂದು
ನಟ್ಟಿರುಳು ತಾಯ್ತಂದೆಗಳಿಗೆ ಕೈನೀಡಿ ಬಸುಱಂ ಹೊಸೆದುಕೊಂಬಬಲೆಯ
ದಟ್ಟೈಸುತೆದ್ದು ಮನೆಗೈದಿ ಮಂಚದಲಿ ಮುಸು
ಕಿಟ್ಟೊಱಗಿದಾದಿಮಯ್ಯನ ಹೊದ್ದಿ ಹೊಱೆದೊಡೆಯ
ತಟ್ಟ ಕರೆದೆಬ್ಬಿಸಿದನಾರೈಸಲೇಳೆಂದು ಸೆಟ್ಟಿ ಸತ್ಪುರುಷನಂತೆ       ೧೦೬

ಇನ್ನೇತಱೂಟವೇತಱ ಮೀಹವೇತಱಿರ
ವಿನ್ನೇಕೆ ಜೀವಿಸುವ ಕಕ್ಕುಲಿತೆಯಾಸೆಗಳು
ಪನ್ನಗಾಭರಣನಣುಗರು ಹಸಿದು ಬಸವಳಿದು ಬೆಂಡಾಗಿ ಹೋದರದಕೆ
ಎನ್ನ ನಾನಳಿಯಲಾಱದೊಡಿಂದಿನೂಟಮಂ
ಮನ್ನಿಸಿದೊಡೆನ್ನೊಡಲು ಕೆಡುವುದೇ ಹೇಳೆಂದು
ತನ್ನಳಲನೊಡೆದು ನುಡಿದಂ ಕಂಬನಿಗಳುಗಲು ಮನದೊಳಗೆ ಹಲುಮೊರೆವುತೆ            ೧೦೭

ಹಸಿದು ಭಕ್ತರು ಹೋದ ಮಱುಕವೋ ಬೋನಮಂ
ರಿಸಿಯರ್ಗೆ ಕೊಂಡೊಯಿದರೆಂದೆಮ್ಮಮೇಲಣ ಮು
ನಿಸು ನಿಮಿತ್ತವೊ ಭೋಜನವನೊಲ್ಲದಿಹ ಕಾರಣದ ಕಡೆಯ ಹದನಾವುದು
ಹುಸಿಯದುಳ್ಳುದನು ಹೇಳೆಮ್ಮಲ್ಲಿ ತಪ್ಪಾಗೆ
ಸಸಿನಿರುವೆವೆನಲಿನ್ನು ಹೇಳ್ದೊಡೇನಹುದೆಂದು
ಬಿಸುಗೋಪವಾವರಿಸುತಾದಯ್ಯನಿರಲು ಮತ್ತಲೆದಲೆದು ಬೆಸಗೊಂಡನು      ೧೦೮

ಸಸಿ ಕಂದಿದೊಡೆ ಸತ್ಯವಾದಿ ಹುಸಿದೊಡೆ ದಯಾ
ವ್ಯಸನಿ ಕೊಲುವೊಡೆ ಹೆತ್ತ ತಾಯ್ ಮುನಿವೊಡುಂಬಮೃತ
ವಿಷವಾದೊಡಂಜಬಹುದುಲಸಬಹುದಮ್ಮಳಿಸಬಹುದು ಸಜ್ಜನನಲ್ಲದೆ
ಮಸಿ ಕಂದಿತೆಂದನಾಮಿಕ ಹುಸಿದನೆಂದು ಕ
ಲ್ಲುಸುರಿಕ್ಕದೆಂದು ಕೋಪಿಸಬಹುದೆ ದುರ್ನೀತಿ
ಹುಸಿಯಸೂಯತೆ ನಿಮಗೆ ನಿಜ ನಿಮ್ಮೊಳಗೆ ಗುಣವನಱುಸುವರು ಮರುಳರೆಂದ          ೧೦೯

ಏನೇನನೆಂದು ನಿಂದಿಸಿ ನುಡಿದೊಡಂ ಕಡೆಗೆ
ನೀನೆಂದುದಲ್ಲೆಮ್ಮ ಮಗಳೆನಿಸಿದವಳದ
ಕ್ಕೇನಾದುದಕ್ಕೆ ತಕ್ಕುದನಾಡಬಲ್ಲೆನದನೀಗಾಡಿ ತೋಱಲೇಕೆ
ಆ ನಿಮಿತ್ತುಪವಾಸವಿದ್ದನೆಂದೆನಗೊಂದು
ಹಾನಿಯಂ ಹೊಱಿಸದುಣ್ಣೇಳೆಂದು ಲೋಕದಭಿ
ಮಾನಿಯಂದದೆ ಬೇಡಿಕೊಳುತಿರ್ದೊಡುಣ್ಣೆನುಣ್ಣೆನು ಹೋಗುಹೋಗೆಂದನು           ೧೧೦

ಮನ್ನಿಸಿದೊಡುಲಿದು ವೆಗ್ಗಳಿಸಿ ನುಡಿವವ ಮುನ್ನ
ತನ್ನ ದೇವರನು ತಂದೆಮ್ಮ ಹುಲಿಗೆಱೆಯ ಸುರ
ಹೊನ್ನೆಯ ಮಹಾಬಸದಿಯೊಳು ನಿಲಿಸಿ ಬಳಿಕಾನು ಮೊದಲಾದ ಜೈನ ಕುಲವ
ಬನ್ನಮಂಬಡಿಸಿ ಹಲಕೆಲಬರೊಕ್ಕಲನೊರಸ
ದನ್ನಬರ ಮಱೆದುಣ್ಣನತಿ ಮೂರ್ಖನೆಂದು ಸಿಡಿ
ಗನ್ನದೊಳು ಕಟಕಿಯೊಳು ಹದಿರೊಳಣಕದೊಳಾದಿಮಯ್ಯನಂ ನುಡಿದನವನು            ೧೧೧

ಲೇಸನಾಡಿದೆಯಿದಂ ಮಾಡದಿರಲೆನ್ನ ವಿ
ಶ್ವಾಸವೇವುದು ಶಿವನ ಬರವು ನಿನಗಿನಿತು ಸಂ
ತೋಷವಪ್ಪುದ ಕಂಡು ನಿನಗಳಿಯನೆನಿಸಿ ನೀನೆಂದುದಂ ತರಲಾಱದೆ
ಓ ಸರಿಸಿ ನಿಂದೊಡೆಮ್ಮವರು ನಗರೇ ಭಕ್ತಿ
ಹೇಸದೇ ತಂದಲ್ಲದುಣ್ಣೆನೆನಲಳವಡದ
ಬಾಸೆಗಳ ನೇಱಿಸಿಕೊಳುತ್ತಿರದಿರೆಂದಾದಿಮಯ್ಯನಂ ನುಡಿದನವನು೧೧೨

ಪರವನಿತೆಗಳಸು ಪರರರ್ಥಮಂ ಸೆಳೆದುಕೋ
ಪರದೈವಕೆಱಗು ಪರಸಮಯಂಗಳೊಳು ಬೆರಸು
ಪರರ ಜೀವಕ್ಕೆಮುನಿಯೆಂದೆನಗೆ ಹೇಳ್ದೊಡಾನಾಱೆನೆನಬಹುದಲ್ಲದೆ
ಹರನನಿಲ್ಲಿಗೆ ಬರಿಸು ಹರದೂಷಕರನೊರಸು
ಹರಮತವನುದ್ಧರಿಸು ಹರಸಮಯದೊಳು ಬೆರಸು
ಹರಪುರದೊಳವತರಿಸುಯೆಂದು ನೀನೆನಲೊಲ್ಲೆನೆನಬಹುದೆ ಹೇಳೆಂದನು      ೧೧೩

ಯುಕ್ತಿಗೆಟ್ಟಱಿವಿದಲ್ಲವೆ ಪೇಳರೂಪನವಿ
ಮುಕ್ತನರ್ವಾಚೀನನೆಂದು ಹೊಗಳ್ವಿರಿ ಮರ್ತ್ಯ
ಸಕ್ತನಂ ತಪ್ಪಂತೆ ತಹೆನೆನಲು ನಿನ್ನಿಚ್ಛೆಯೇ ಶಿವನು ಹೇಳೆಂದೆನೆ
ಭಕ್ತಾನುಕಂಪಿ ಭಕ್ತಾರ್ಥಿ ಭಕ್ತ ಪ್ರೇಮಿ
ಭಕ್ತವತ್ಸಲ ಭಕ್ತ ಸುಲಭ ಭಕ್ತರ ಬಂಧು
ಭಕ್ತ ದೇಹಿಕನೆಂಬ ಬಿರುದುಳ್ಳ ಶಿವನನಾಂತಹುದರಿದೆ ಹೇಳೆಂದನು  ೧೧೪

ಎಂದು ತಂದಪೆ ಹುಸಿಯದೇ ಹೇಳೆನಲು ತಿಂಗ
ಳಂದಿಂಗದಾವೂರ ದೇವರೆನೆ ಸೌರಾಷ್ಟ್ರ
ಮಂದಿರ ಸುಖಾಸೀನನಂ ತಹೆನು ತಾರದಿರೆ ಬಾರನೆಂದಣಿಕಿಸುತಿರೆ
ತಂದಲ್ಲದಿನ್ನುಣ್ಣೆನುಣ್ಣೆನಕ್ಕಕ್ಕು ನೀ
ನೆಂದಂತೆ ತರಲಾಱೆ ತಾರದಿರಲದಕೇನು
ಕುಂದಿಲ್ಲ ಮೇಲಿನ್ನು ಶಾಸ್ತಿಯೇನೆಂದೊಡೆಂದಂ ಧೀರನಾದಯ್ಯನು            ೧೧೫

ಗುರು ಮರ್ತ್ಯನೆಂಬವನು ಗುರುಧನವ ತಿಂಬವನು
ಗುರುಮತವ ಮೀಱುವನು ಗುರುಮಂಚವೇಱುವನು
ಗುರುವಾಕ್ಯವಾದಕನು ಗುರುಚರಿತಶೋಧಕನು ಗುರುವಂಗನಾಲಸ್ಯನು
ಪರವಸ್ತುಸಾಧಕನು ಪರಸತಿಯ ವೇಧಕನು
ಪರಸಮಯಬೋಧಕನು ಪರಜೀವಬಾಧಕನು
ಹರಿದಿಳಿವ ನರಕದೊಳಗಿಳಿವೆನೀಶ್ವರನಿಲ್ಲದಾಂ ಬಂದೆನಾದೊಡೆನಲು          ೧೧೬

ಬೇಕಾದೊಡುಣ್ಣು ಬೇಡದೊಡೆ ಮಾಣೀಶನಂ
ತಾ ಕಡೆಗೆ ತಾರದಿರು ನುಡಿಸಿ ನೋಡಿದೆನೈಸೆ
ಕಾಕನಂ ಮಚ್ಚಿ ಮರುಳಾದಳೀ ಮಗಳೆಂದು ತನ್ನೊಳಗೆ ತಾನೆ ಮಱುಗಿ
ಸಾಕಿನ್ನು ನಿನ್ನ ಕೂಡಣ ತರ್ಕವೆನುತ ಮಾ
ಯಾಕಾರಿ ಹೋಗೆ ಬೆಳಗಹ ಜಾವವಗೆ ಧೈ
ರ್ಯಾಕೀರ್ಣನಾದಯ್ಯನಂಗನೆಗೆ ಹೋಗಿಬಹೆನೇಯೆಂದು ಬೆಸಗೊಂಡನು       ೧೧೭

ಹೋಗಬೇಡೆನ್ನೆನತಿದೂರ ನೆರವಿಲ್ಲದಱ
ಮೇಗೆಯುಪವಾಸ ಬೇಸಗೆ ಬಿಸಿಲು ಘನ ನಿಮ್ಮ
ಸಾಗಿಸುವರಿಲ್ಲ ಶಿವ ನಿಷ್ಕರುಣಿ ನಿರ್ಮೋಹಿ ಮೇಲೆ ತನ್ನವರೆಂದೊಡೆ
ಕೂಗಿಡಿಸಿ ಕಾಡುವನದಕ್ಕೆ ತೆಕ್ಕದಿರಿ ತಲೆ
ವಾಗದಿರಿ ಸೋಮಯ್ಯ ಬಾರದೊಡೆ ಬಾರದಿರಿ
ಹೋಗಿಯೇ ಕಳೆ ಹಿಂದೆ ನಾನಿಪ್ಪ ಪರಿಯ ಕೇಳೆಂದಳಾ ಪದ್ಮಾವತಿ  ೧೧೮

ಎಂದು ಸೋಮಯ್ಯನಂ ಕೊಂಡು ನೀ ಬಪ್ಪೆ ಬ
ಪ್ಪಂದು ತನಕುಂಡೊಡೋಲೆಗಳ ತಿರುಪಿದೊಡೆಳಸಿ
ಮಿಂದೊಡುಟ್ಟಿರ್ದ ಮೈಲಿಗೆಗಳೆದೊಡೆಲಗಚ್ಚಿದೊಡೆ ತುಱುಬನಳಿದಿಟ್ಟೊಡೆ
ತಂದೆ ತಾಯ್ಗಳ ಕೂಡೆ ನುಡಿದೊಡೆ ಬಳಿಕ್ಕವೆ
ನ್ನಿಂದೆ ಖಳರುಂಟೆ ನಿನ್ನಂತಪ್ಪ ಪತಿಯ ನಾ
ನೆಂದುವುಂ ಕಾಣದಿರಲೆಂದಾಣೆಯಿಟ್ಟುಕೊಂಡಳು ಜಾಣೆ ಪದ್ಮಾವತಿ           ೧೧೯

ನಿಲಹಾಸವಿರದೆ ಸೋಮಯ್ಯನಂ ತಂದಿಲ್ಲಿ
ನಿಲಿಸು ದೂಷಕರ ಮೂದಲಿಸು ತತ್ತವರನೊಡೆ
ಗಲಸು ಶಿವಸಮಯವಂ ಗೆಲಿಸು ಭಕ್ತಿಯನಿಳೆಗೆ ಕಲಿಸು ಪುಣ್ಯಕ್ಕೆನ್ನನು
ಸಲಿಸು ಮುಕ್ತ್ಯಂಗನೆಯನೊಲಿಸು ಗಣವೃಂದದೊಳು
ನೆಲಸು ನಿಜಕೀರ್ತಿಯಂ ದಿಗ್‌ಭಿತ್ತಿತನಕ ಹರ
ಕಲಿಸೆಂದು ಹರಸಿ ಸೇಸೆಯನಿಕ್ಕಿದವಳು ತನ್ನ ವಲ್ಲಭನ ಸಿರಿಮುಡಿಯೊಳು    ೧೨೦

ಮೃಡನ ಕರುಣೋದಯವ ಬಿನ್ನೈಸುವಂದದಿಂ
ದಡಿಸಿದರುಣೋದಯದೊಳತ್ತೆ ಮಾವಂದಿರೆದೆ
ಹಡಿದೆಱೆಯೆ ಹಡಿದೆಱೆದು ಹಿರಿಯ ಬಸದಿಯ ಜಿನನ ಕಳೆಬಳಿಕ ನಿಲಲಮ್ಮದೆ
ನಡುಗಿ ಹುಲಿಗೆಱೆಯಿಂದ ಹೊಱವಡಲು ಹೊಱವಂಟು
ನಡೆಯೆ ನಡೆದಾದಯ್ಯನಖಿಳ ಪರಿವಾರ ಬಳಿ
ವಿಡಿದು ಬಳಲುತ್ತಳಲುತುಮ್ಮಳಿಸುತೆಯಿತರುತಲಿರಲವರಿಗಿಂತೆಂದನು        ೧೨೧

ಈತನಿನ್ನೇನ ತಂದಪನೆಂದು ಚಿತ್ತದಲಿ
ಧಾತುಗುಂದದಿರಿ ಮಱುಗದಿರಿ ಪದ್ಮಾವತಿಯ
ಮಾತ ಮೀಱದಿರಿ ನಾನೇಗೆಯಿದುವುಂ ಕೊಟ್ಟ ದಿನದವಧಿ ಪುಗದ ಮುನ್ನ
ಭೂತೇಶನಂ ತಂದು ನಿಮ್ಮಯ ಮನಕ್ಕೆ ಸಂ
ಪ್ರೀತಿಯಂ ಮಾಡುವೆಂ ಹೋಗಿ ಮನೆಗೆಂದು ದು
ರ್ನೀತಿದೂರಂ ಕಳುಪಲವರೆಲ್ಲ ಬಂದೊಡತಿಯಂ ಸಾರ್ದು ಕುಳ್ಳಿರ್ದರು       ೧೨೨

ಇಟ್ಟ ಮುಸುಕಿಳಿವ ಸುಯಿ ನಯನದೊಳು ಹೊಳೆಹೊಳೆದು
ಬಟ್ಟಾಡುವುದಕ ಗಲ್ಲವ ಹೊತ್ತ ಕೈ ಬಯಲ
ನಿಟ್ಟಿಸುವ ಬೆಱಗಿಂತು ಮಾಡಿತೇ ದೈವವೆಂಬುಮ್ಮಳಿಕೆ ಕಾಮನೊಡಲ
ಸುಟ್ಟಾತನಳಲಿಸದೆ ಬಹನೊ ಬಾರನೊಯೆಂದು
ನಟ್ಟು ಚಿಂತಿಸುವ ಚಿತ್ತದೊಳಾಗಳೋಲಗಂ
ಗೊಟ್ಟು ಪದ್ಮಾವತೀದೇವಿಯದ್ದಳು ದುಗುಡ ಸರದಿಯೊಳು ಮುಳುಗಾಡುತೆ          ೧೨೩

ನೆರೆದ ಮಾಗಿಯ ಕೋಗಿಲೆಯ ತೆಱದಿ ಮೌನಗೊಂ
ಡಿರುಳು ತಾವರೆಯಂತೆ ಮೊಗ ಕಂದಿ ಬೇಸಗೆಯ
ಮರನಂತೆ ತೊಡಿಗೆಗಳೆದುದಯದ ಚಕೋರಿಯಂತಾರೋಗಣೆಯನೊಲ್ಲದೆ
ಮರುತನಲ್ಲಾಡದೆಳೆಲತೆಯಂತುಸುರು ಮಿಡುಕ
ದಿರದೆ ಹುಳುಬಿಟ್ಟ ಹುಟ್ಟಿಯ ತೆಱದೊಳಿಂಪಾಱಿ
ತರುಣಿ ವಲ್ಲಭನ ಚಿಂತಾಲಗ್ನ ಭಗ್ನಮತಿಯಾಗಿರ್ದಳೇವೊಗಳ್ವೆನೊ          ೧೨೪

ಮಡದಿಯಿಂತಿರಲಿತ್ತಲಾದಯ್ಯನತಿಬೇಗ
ಮೃಡನ ತಪ್ಪಾವೇಶ ಮನನಾಗಿ ತೂರ್ಯಮನ
ವೆಡೆಗೊಂಡು ಬೆಳೆದೇಱಿಯಿದು ದಾರಿಯಿದು ಬೆಟ್ಟವಿದು ಘಟ್ಟವಿದು ಹೆಚ್ಚಿದ
ಅಡವಿಯಿದು ನಗರವಿದು ಹಳ್ಳವಿದು ಕೊಳ್ಳವಿದು
ಗಿಡುವಿದೊದವಿದ ಮರನಿದೆಂಬುದಱಿಯದೆ ದೈವ
ನಡೆಸಿದಂದದಿ ವಾಯುವೇಗದಿಂ ನಡೆದುಬಂದಾರಣ್ಯಮಂ ಹೊಕ್ಕನು           ೧೨೫