ಪಲ್ಲವ
ಹರನ ಭವನವ ಸುತ್ತಿಮುತ್ತಿರ್ದ ಹಗೆಗಳಂ
ಧುರದೊಳಗೆ ಕರಿಖಂಡ ಮಾಡಿ ರಣಮಂ ಮಿಕ್ಕು
ಶರಣೆಂದು ಬಂದರಂ ಕಾಯ್ದು ಸೋಮೇಶನಂ ಕಂಡನಂದಾದಯ್ಯನು

ಶ್ರೀ ಸೋಮನಾಥನ ಕುಮಾರನಾದಯ್ಯ ನೆಸೆ
ವಾಸುರದ ಮಹಿಮೆ ಮನದೊಳ್ಳಾಂಟ ಬೇರ್ವರಿದು
ಕೇಸುರಿಯವೊಲು ದಳಂದಳ್ಳಿಱಿದು ಹೃದಯಮಂ ಸುಡಲೆಂದು ಕಂದಿ ನೊಂದು
ಶ್ವಾಸದುರಿಯಿಂದೆ ಬಂಬಲುಗಿಡಿಯ ಗಡಣ ಹೊಱ
ಸೂಸೆಮುಳಿಸಿಂ ಕದನದುದ್ಯೋಗದಲ್ಲಿ ಮ
ತ್ತಾ ಸಮಯದೊಳು ಮಂತ್ರಿಗಳು ಬೆಸಸಲವರೊಡನೆ ನಿಮ್ಮ ಹವಣಲ್ತೆಂದನು            ೧

ತೆಗೆವ ಕದವೇತಱಿಂ ತೆಗೆಯದಿರಲೊಬ್ಬನೇ
ತೆಗೆದುದಱಿನತುಳಬಲ ನವೆದರ್ಗೆ ಕಣ್ಕಾಲ
ಮಗುಳಿತ್ತನದಱಿಂದೆ ಸಾಮರ್ಥ್ಯವಂತನಾದಯ್ಯ ನಿಂತಾತನೊಡನೆ
ಹಗೆಗೊಂಡೊಡಂ ಗೆಲ್ದೊಡಂ ಸೋತೊಡಂ ಹಾನಿ
ಹೊಗದು ಹಣ್ಣಲಿ ಕರಿಗಳಾಳ್ಕೈದುಗೊಳಲಿ ಕುದು
ರೆಗಳು ಹಲ್ಲಣಿಸಲಿಂತೀಗ ನಿಸ್ಸಾಳಮಂ ಸೂಳೈಸ ಹೇಳೆಂದನು      ೨

ಅಕ್ಕಳಿಸೆ ಧರೆಯುಕ್ಕೆ ಜಲಧಿ ಹಗೆಗಳು ಗುಬ್ಬ
ವಿಕ್ಕೆ ಕುಂಬಿಡೆ ನಗನಿಕಾಯವೆಲ್ಲಂ ದೆಸೆಯ
ದಿಕ್ಕುಗಳ ಕರ್ಣ ಕೋಟರದೊಳಗೆ ಭೋಂಕಾರವವಡಸಿ ಬೀದವರಿಯೆ
ಎಕ್ಕಸರದಿಂದೆ ನೂಱಾಱು ನಿಸ್ಸಾಳಂಗ
ಳೊಕ್ಕಿಲಿಕ್ಕಲು ಮಹಾದೇವ ಗಗನಕ್ಕೆ ಸಾ
ಲಿಕ್ಕಿದ ಧಳಂಧಳಂ ಧಾವಳಂ ಧಳಲೆಂಬ ಧ್ವನಿಹಬ್ಬಿ ಹರಕಲಿಸಿತು   ೩

ತತ್ತ ಕಾಳಗದ ಸೂಚನೆಯ ಸನ್ನೆಗೆ ರಭಸ
ವೆತ್ತ ಭೇರೀರವವ ಕೇಳ್ದು ಶಿವಶಿವ ಭೂಮಿ
ಹೆತ್ತುದೋ ನಭವೀದುದೋ ದೆಸೆಗಳುಗುಳ್ದುವೋ ಭುವನವೇಂ ತಾನಾದುದೊ
ಬಿತ್ತರಿಸಲರಿದೆನಲು ನೆರೆಯಿತ್ತು ಫಣಿಪತಿಯ
ನೆತ್ತಿ ಕೊರಳೊಳು ಮುಳುಗಲಾದಿಕೂರ್ಮನ ಬೆನ್ನು
ಹತ್ತಿ ಬಸುಱೆಡೆಯ ಹೊಗೆ ಹಸ್ತ್ಯಶ್ವರಥಪದಾತಿಗಳು ಕಣ್ಗದ್ಭುತದಲಿ       ೪

ಸೇನೆ ನೆರೆಯಿತ್ತು ರಿಪುಕುಮುದ ಮಾರ್ತಾಂಡ ಪು
ಣ್ಯಾನೂನತಂಡ ಬಲಭರಿತದೋರ್ದಂಡ ಭೂ
ಮಾನಿನಿಯ ಗಂಡವಿಜಯಾಂಗನೆಯಮಿಂಡ ರಣರಂಗಮುಖಕಾಲದಂಡ
ದಾನಿ ಚಿತ್ತೈಸೆಂಬ ಭಟರ್ಗೆ ಹೊಸ ಪರಿಯಲಿನಿ
ಧಾನಮಂ ಕೊಟ್ಟು ಸಭೆಯಿಂದೆದ್ದು ನಡೆತಂದು
ನಾನಾ ವಿಧದ ಲಗ್ಗೆವಱೆಯ ಸೌರಂಭದಿಂ ಗರುಡಿಯಂ ಪೂಜಿಸಿದನು          ೫

ರಾಸಿಗೂಳಂ ಸುರಿದು ರಾಯರಾವುತರು ಸಹಿ
ತಾಸುರದೊಳುಂಡು ಕಂಕಣಕಟ್ಟಿದತಿಬಲರ
ಭಾಸೆಯಂ ಬರೆಸಿ ವೀಳೆಯವಿತ್ತು ಪುಣ್ಯಸತಿಯರು ಕೈನೆಗಪಿ ನೀಡುವ
ಸೂಸುವರಕೆಯನು ನಿಜಭುಜಪೂಜೆಯನು ವೀರ
ಸೇಸೆಯನು ವಿಜಯಾರತಿಯನು ಕೈಕೊಂಡು ಧರ
ಣೀಶ ಬಾಹಪ್ಪಳಿಸಿ ಬೊಬ್ಬೆಯಬ್ಬರದೊಳಗೆ ಹೊಱವಂಟನರಮನೆಯನು   ೬

ತಳಿತ ಬೆಳುಗೊಡೆಯ ತುಱುಗಿದ ಹೀಲಿದಳೆಯ ಮಂ
ಡಳಿಸಿದಣಕುಗಳ ತಂಪಿನಲೊಲೆವ ಚಾಮರಂ
ಗಳ ಸೀಗುರಿಗಳ ತಂಗಾಳಿಯಿಂ ಕೋಪಾಗ್ನಿ ಕೊಬ್ಬಿ ಕೊನೆವರಿವುತಿರಲು
ಬಳಿಯ ಪಾಯವಧಾರುಯೆನಲು ಗಜಮಸ್ತಕದೊ
ಳಳವಟ್ಟು ಕೈವೀಸೆ ಭೋರೆಂಬ ಲಗ್ಗೆವಱೆ
ಗಳ ಬೊಬ್ಬೆಯಬ್ಬರಂಗಳೊಳು ಚಂದ್ರಾದಿತ್ಯ ಮುತ್ತಿದ ಶಿವಾಲಯವನು     ೭

ದಾವಾಗ್ನಿಯಂ ಕೆಡಿಸಲೆಂದು ತಱಗೆಲೆ ಉರಿವ
ದೀವಿಗೆಯ ಕೆಡಿಸಲೆಂದು ಪತಂಗ ರವಿಯ ಪ್ರ
ಭಾವಮಂ ಕೆಡಿಸಲೆಂದು ತಮಂಧಬಱಸಿಡಿಲ ದರ್ಪಮಂ ಕೆಡಿಸಲೆಂದು
ಹಾವುಗಳು ಮುಳಿದು ಮುತ್ತುವ ಮಾಳ್ಕೆಯಿಂದವಾ
ದೇವ ಹುಲಿಗೆಱೆಯ ಸೋಮಯ್ಯಂಗೆ ಮುನಿದಧಮ
ಭೂವರನ ಸೇನೆ ಕೈಗೊಂಡು ಮೂವಳಿಸಿ ಮುತ್ತಿತ್ತಾ ಶಿವಾಲಯವನು          ೮

ಸುತ್ತಿಮುತ್ತಿದ ಬೊಬ್ಬೆಯಬ್ಬರದ ದನಿಗೇಳ್ದು
ಸತ್ತಂತೆ ಹಮ್ಮದಂಬೋಗುತಾದಯ್ಯನ ನಿ
ಮಿತ್ತವೀ ಶೂಲಿಯಂ ಸುಕುಮಾರನಂ ಸುಭಗನಂ ಸುಖದ ಸುಮ್ಮಾನಿಯಂ
ಇತ್ತಲೇನೆಂದು ತಂದೆನು ಪಾಪಿಯಾದೆನಿ
ನ್ನೆತ್ತಲೊಯ್ದಡಗಿಸುವೆನೆಂಬ ಮೋಹದ ಚಿಂತೆ
ಸುತ್ತಿ ದೇವರ ಮಹಿಮೆಯಂ ತನ್ನ ಸತ್ವಮಂ ಮಱೆದು ಮಱುಗಿದನಾಗಳು   ೯

ಮುಂದೈಸಿ ಬೆಳೆದ ಕಾಳ್ಗತ್ತಲೆಯ ಬಾರಿಗೇ
ನೆಂದು ಬಂದಂ ತರುಣರವಿಯೆಂದು ವಾರಿಜಂ
ನೊಂದವೇ ನಿಮ್ಮನುದ್ಧರಿಸಬಂದೀಶಂಗೆ ನೀವುಮ್ಮಳಿಸಲು ಮೇಲೆ
ಕುಂದಾರಿಗಹುದು ನೀವಂಜದಿರಿ ನಾವಿದಂ
ಕೊಂದು ಕೂಗಿಡಿಸಿದಪೆವಮ್ಮುವಡೆ ನೋಡುನೋ
ಡೆಂದೊಡನೆಯವರು ಮೂದಲಿಸೆ ಹೇವರಿಸಿ ಕೋಪವ ತಾಳ್ದನಾದಯ್ಯನು    ೧೦

ಮೊಳಗಿ ಮಾರ್ದನಿಗಾಣದರಿಗಳಾ ನಿಳಯವನು
ತಳಮೇಲುಮಾಡುವಂತಬ್ಬರಿಸೆ ಕೇಳ್ದು ಕರಿ
ಗಳ ದನಿಯನಾಲಿಸಿದ ಸಿಂಹದಂತತಿ ಮುಳಿದು ಮೂದಲಿಸಿ ಧರೆಯ ಮೇಲೆ
ಕಳವ ಮಾಱೊಡ್ಡಿನಿಂದೆಮಗೆ ನಿಸಿತಾಸಿಯಂ
ಫಳಕಮಂ ಕರುಣಿಸಿದೊಡೀ ಬಲವನಂತಕನ
ನಿಳಯದೊಳು ಹೊಗಬಡಿವೆವೆಂದುಮೇಶಂಗೆ ಭಾಷೆಯ ಕೊಟ್ಟರಾ ಮೂವರು           ೧೧

ಹೊರಳಿ ನಡೆದವುಡಿತಿಂಬಹಿಗಳಿಗೆ ಗಱಿಯನೊ
ಬ್ಬರ ಕಯ್ಯೊಳಿದ್ದೊಬ್ಬರಂ ಕೊಲುವ ಖಡ್ಗಕ್ಕೆ
ಹರಣಮಂ ಮೆಲ್ಲನೆ ತೆವಳಿಸುಡುವ ಕಿಚ್ಚಿಂಗೆ ಚರಣಮಂ ಕೊಡಲು ಹದುಳ
ಇರಬಲ್ಲವೇ ನಿರಾಯಧದೊಳರಿಗಂ ಗ ವಿಪ
ಬಿರುದರ್ಗೆ ನಿಸಿತಾಸಿಫಳಂಕಗಳೊಡನೆ ಭಾ
ಸುರವೀರಕಳೆ ಪರಾಕ್ರಮವನೀಶಂ ಕೊಟ್ಟನವನರಿಗಿನ್ನರಿದಾವುದು   ೧೨

ಮುಟ್ಟಸಾರಿದ್ದಾಲಿಸಲು ಕೇಳಿಸದ ರವಂ
ಗೆಟ್ಟುಸುರನಾದರಿಸಿ ಕೊಂಬುಕಹಳೆಯ ಮುಖದೊ
ಳಿಟ್ಟೂದಲದುಯೋಜನಂ ಭೇರಿಯಂತಿಕ್ಕೆ ನೆಱೆಸರ್ವಶಕ್ತಿಯಿಂದೆ
ಇಟ್ಟೊಡೊಮ್ಮಾರುಗಾಣಿಸದಂಬು ಬಿಲುವೆ ದೆಗೆ
ತೊಟ್ಟಸಲು ನೆನೆದನಿತು ಹರಿಯದೇ ಮಾನವರು
ನಿಟ್ಟೆಯಂ ಶಿವನ ಮೇಲಿಡಲಂತವರ್ಗೆ ಸಾಮರ್ಥ್ಯ ಸಂದಣಿಪುದರಿದೆ            ೧೩

ನುತಚೌಪಟಂ ಗೋಮುಖಂ ಮೇಘವಾದ್ಯಬೃಂ
ಹಿತಮೆ ಪಂಚಾಯಿತಮೆನಿಪ್ಪಯಿದು ನಿಱಿಗೆಗಾ
ಯತ ಮಂಡಿ ದೂವಾಡವೆಕ್ಕಸರವಿಸರವುಲ್ಲಾಸದುಸ್ಸರ ಚವ್ವಡಿ
ಗತಿಪಸರವಡ್ಡಾಯುವಂಕತಿಕೆ ಭಾವನೆ ಚ
ಕಿತವ ಪರಭಾಗ ಸಿಂಹಾನೀಕ ಚಟಿಯೆಂಬ
ಚತುರಠಾಣದ ತರಹರದೊಳು ಹಲಗೆಯ ಮಗ್ಗುಲೊಳು ಖಡ್ಗವಂ ಜಡಿದರು          ೧೪

ದಿಟಮಾರುತಂ ನಡೆವೊಡಡವೆನಿಪ ಮೂಱು ನಿ
ಚ್ಚಟವಿಡಿತದೊಳು ಗಜವಿಧಂ ವರಾಹವಿಧ ಕು
ಕ್ಕುಟವಿಧಂ ಮಂಕಡವಿಧಂಗಳೆಂದೆಂಬ ನಾಲ್ಕುಂ ತೆಱದ ಬಿನ್ನಣವನು
ನಟಿಸಿ ಚಾರಣಚೂರಣಾದಿ ಚಮ್ಮಟವನ್ನು
ಚ್ಛಟವ ಮೊನೆಯೊಳು ಕಡುಗ ಕಾರವಟ್ಟಂ ಚಂಕ
ತಟವದ್ದಳಂ ಪೋರಗಂಗಳೆಂಬಡ್ಡವೊಯಿಲಿಂ ನಿವಾರಿಸುತಿರ್ದರು  ೧೫

ಥಟಘಲಕು ಥಟಘಲಕು ಥಟಘಲಕು ಥಟಘಲಕು
ಥಟಘಲಕು ಥಟಘಲಕು ಘಲಕೆಂಬ ಭುಜ ಸಾಟ
ನಟಿಸಿ ಮೇಗೆತ್ತಿ ಕುಕ್ಕುಱಿಸಿ ನೆಲನಂ ಟೊಣೆದು ಹಲಗೆಯೊತ್ತಿನೊಳಸಿಯನು
ಲಟಲಟಿಸಲಿಕ್ಕೆ ವಾಮಾಂಗ ಕುಸಿಯಲು ಬಲದ
ಕಟಿ ನೆಗೆಯೆ ಮುಂಗಾಲ್ಗೆ ಮೈದೆಗೆದುನಿಂದ ನಿ
ಚ್ಚಟಗಲಿಗಳೋಸರಿಸದೀಶಂಗೆ ಭಾಷೆಯಂ ಸೂಸಿದರದೇವೊಗಳ್ವೆನು           ೧೬

ಹೊಱಗೆ ಕಿಕ್ಕಿಱಿಗಿಱಿದು ತುಱಿಗಿದರಿಗಳನು ಕುಱಿ
ದಱಿದು ತುಂಡಿಸಿ ಮಾರಿಮೃತ್ಯುಗಳ ಸವಿವಾಯ
ಬಱವನಾಱಿಸಿ ಭೂತವೇತಾಳರಂ ಕುಣಿಸಿ ರಣಧೀರರೆಂಬ ಹೆಸರ
ಹೊಱುವೆವೆನಲಿನಿತಱಿಂದೇನಪ್ಪುದೀಗ ಹುಲಿ
ಗೆಱೆಯ ನಡುವೆನಿತು ಬಸದಿಗಳುಂಟುವೆಲ್ಲವಂ
ನೆಱಿತೀರ್ಚಿಕಳೆಯಂದೊಡದು ನೀತಿಯಲ್ಲ ಚಿತ್ತೈಸು ಪುರಹರಯೆಂದನು     ೧೭

ವಿಷವಿರ್ದುದಾಗಿ ಸುಧೆ ಬಿಸಿಯಿರ್ದುದಾಗಿ ಹಿಮ
ಹಸಿವಿರ್ದುದಾಗಿ ರುಚಿತೃಷೆಯಿರ್ದುದಾಗಿ ಜಲ
ಹುಸಿಯಿರ್ದುದಾಗಿ ಸತ್ಯಂ ಸಾವ ಸುರರಿರ್ದರಾಗಿ ನಿಮ್ಮಯ ನಿತ್ಯತೆ
ಎಸೆದವಿಳೆಯೊಳಗಿವಿಲ್ಲದೊಡಾರು ಬಲ್ಲರೀ
ಬಸದಿಯಿಲ್ಲದೆ ಶಿವಾಲಯ ಮೆಱೆಯಲಱಿಯದೆಲೆ
ಶಶಿಮೌಳಿ ನೀ ಮಾಡಿದುದಕೆ ಶಾಸನವಿವರು ಹದುಳವಿರಬೇಕೆಂದನು            ೧೮

ಎಂದುತನಕೀ ಜಿನಮತಂ ಹದುಳವಿಹುದು ಕಡೆ
ಗಂದುತನಕಂ ಕದನ ಮಾಣದೆನಲದಕೇನೊ
ಮುಂದದಂ ಕೆಡಿಸಲು ಮಹೋಪಾಯವುಂಟೆಂದೊಡಾವುದದ ಹೇಳೆಂದೆನೆ
ಇಂದಿನ ದಿನಂ ಮೊದಲು ಮುಂದೆ ಕಾಳಗಕವರು
ಬಂದೊಡಾ ಬಂದನಿಬರಂ ಕಾದಿ ಕೆಡಿಸುವಂ
ತೊಂದು ವೃಷಭನನೆರಡು ಜಂಗಮವ ನೀಹೊತ್ತುಬೆಸಸಿ ಕರುಣಿಸುವುದೆನಲು೧೯

ಅದಕುಮಾವರನೊಡಂಬಟ್ಟು ವೃಷಭೇಶ್ವರನ
ವದನಮಂ ನೋಡಿ ನೀನಿಂದಿನ ದಿನ ಮೊದಲು
ತುದಿತನಕ ತತ್ತಾಗಿ ನಿನ್ನಂಶವಹುದೊಂದು ವೃಷಭವಂ ಕಳುಹಿ ಕಳುಹಿ
ಕದನಮಂಗೆಲಬೇಹುದೆನೆ ದೇವ ನೀವು ಬೆಸ
ಸಿದೊಡೊಲ್ಲೆನೆನಬಾರದೀ ಮಹಾಕ್ಷೇತ್ರದಲಿ
ಮುದದಲೆನಗೊಂದು ತೇಜವ ಸಲಿಸಿದೊಡೆ ಮಾಳ್ಪೆನೆನೆ ಹೇಳಿದಾವುದೆನಲು  ೨೦

ವರವಸ್ತು ಸಂಕಲ್ಪವಾಪೊತ್ತು ನೆನೆದೊಡನೆ
ದೊರಕಿದಾವೊತ್ತಯಿಸೆ ಸಲೆದೇವನಾನೆನ್ನ
ವರ ರೂಪಿನಿಂದಿಲ್ಲಿ ನಿನಗೆ ವಾಹನವಾಗಿ ಬಂದು ಬಂದುನುವರವನು
ಚರಿತದಿಂ ಗೆಲ್ದು ನೆಲೆಯಾಗಿರ್ಪೆನಿಂತಿದಱ
ಪರಿಸೂತ್ರದೊಳಗೈಸು ಲಿಂಗಪ್ರತಿಷ್ಠೆಯಂ
ವಿರಚಿಸಿಹರಾಯೆಡೆಯೊಳೆನ್ನ ರೂಪಂ ಪ್ರತಿಷ್ಠಿಸುವಂತೆ ಕರುಣಿಸಲು            ೨೧

ಅದನೊಡಂಬಟ್ಟಾವಕಾಲಮುಂ ನಿನ್ನ ವೇ
ಷದ ವೃಷಭನಿಂದು ಕಣ್ಣಂ ಕಾಲ ಹಡೆದಿರ್ದ
ರಿದಕೆ ಕಾಹಾಗಿ ಸಲೆ ತತ್ತಾಗ ಗೆಲುತೆ ಬರಲೆಂದು ಕರುಣಿಸುತಿಂದಿನ
ಕದನಮಂ ಗೆಲಬೇಹುದೇಳೆಂದು ಶೂಲಿ ಬೆಸ
ಸಿದೊಡಾಗ ನಂದಿಕೇಶಂ ವೃಷಭನಂ ತನ್ನ
ವದನದಿಂ ತೆಗೆದು ಪೊಱಮಡಿಸಿದಂ ಪುರಹರನ ತೊಡೆಮಡದ ಸುಕುಮಾರನು            ೨೨

ಪೊಱಮಟ್ಟು ನಿಂದು ಕೊರಳೆತ್ತಿ ಕುಸಿದುಬ್ಬಿ ಬಾ
ಯ್ದೆಱೆಯೆ ಧರೆ ಬಿರಿಯೆ ದೆಸೆಯುಬ್ಬಸಂಬಡೆವನಧಿ
ನೆಱಿಕುದಿಯೆ ಗಗನಮಾರ್ದನಿಗೊಡೆ ಚರಾಚರಂ ಹೆದರಿ ನಡನಡುಗೆ ನೆರೆದು
ಹೊಱಗಿರ್ದು ದೂಷಕರು ಝಲ್ಲೆಂದು ಕೆದಱೆಶಿವ
ಬೆಱಗಾಗೆ ಠಣಲೆಂದು ಮಲೆಯಿತ್ತು ಕೆಲೆಯಿತ್ತು
ನೆಱಿ ತೂಳಿ ಮುಕ್ತಿವನಿತೆಯ ತಾಳಿ ರಿಪು ತೂಳಗಾಳಿಯಭವನ ಗೂಳಿಯು      ೨೩

ಏಗೈದು ಈಸೊಂದು ದನಿಯುಳ್ಳ ಗೂಳಿ ದಿಟ
ವಾಗಿ ಹೊಱವಂಟೊಡಿದು ನೆಲನೆಲ್ಲ ತೆಱಹಿಲ್ಲ
ವೇಗೈಯದಡಿವಿಡಿದು ಬಲವ ಮೇಳೈಸಿಕೊಂಡನುವಾಗಿ ನಿಂದಿರ್ಪುದು
ತಾಗಿ ದೊಡೆ ಬಳಿಕನಾವಾದುದವರಾದುದ
ಕ್ಕೀಗಾಡಲೇಕೆಂದು ಹೆಱತೆಗೆದು ಕರದೊಳನು
ವಾಗಿ ಬಿಡದೊಡ್ಡನೊಡ್ಡಿದರು ಶಿವಶಿವ ಬಲದ ಬಹಳತೆಯನೇವೊಗಳ್ವೆನು  ೨೪

ನೀಲದೊಯ್ಯಾರ ಪಚ್ಚೆಯ ಪಙ್ತಿಪಾರಿವದ
ಸಾಲೊದವು ಕೆಂಗೆಟ್ಟಿ ನೋಳಿಪವಳದ ಪಸರ
ಕಾಳಿಕೆಯ ಮೇಳ ಶಂಖದ ಥಟ್ಟಿನೊತ್ತು ಹಳದಿಯ ಹಾದಿ ಹಲವಂದದ
ಮೇಲೆ ರನ್ನದವಟ್ಟಿ ಹೊನ್ನ ತಾರಕಿ ಗರುಡ
ಸೂಳ ಗಜಮುಖ ಶರಭ ಭೇರುಂಡ ಹುಲಿ ಹನುಮ
ಗೂಳಿ ತೊಲಗದ ಕಂಬ ಬಿರುದಿನಗ್ಗದ ಹರಿಗೆ ಹಬ್ಬಿದವು ಮುಮ್ಮೊಗದಲಿ    ೨೫

ಹಿಳಿಕು ಕವಲಂಬು ಬೋಳೆವಿದಿರೆಲೆಮಿಟ್ಟೆಯಾ
ಮೊಳೆತೊಡಕು ನಾರಾಚ ಕಣಿಗಿಲೆಲೆಸಿಲುಕುಬಳೆ
ತಳುಕ ಚೌದಾರೆದಸಿ ಬಿಸುಗದಿರುಸವಿವಾಯನೆಂಬ ನಾನಾಸರಳನು
ಸೆಳೆದು ನೀಡಡಿಯಿಟ್ಟು ಹೆದ್ದೊಡೆಗೆ ಕಿಬ್ಬೊಟ್ಟೆ
ಕೆಳೆಗೊಳಲು ಮೆಯ್ವಿಟ್ಟು ನಾರಿಯಂ ಕಿವಿಯ ಕಡೆ
ಗೆಳೆದು ಬಿಲುಗಲಿಗಳುಱೆತೆಗೆನೆಗೆದು ಸಬಳಿಗರು ಕೋಡುಗೈಯೊಳು ನಿಂದರು೨೬

ಖಡುಗ ತೋಮರ ಯಿಟ್ಟಿ ಬಟ್ಟೇಱು ಕೊಂತ ಕ
ಕ್ಕಡೆ ಸಬಳಸೆಲ್ಲೆಹಂ ಕೌಚಿನಕ ಸುರಗಿ ದಡಿ
ಬಡಿ ಕೋಲ್ವಿಗಂ ಪರಶು ಪಿಂಡಿವಾಳಂ ವಜ್ರಮುಷ್ಟಿ ಹತ್ತಳ ಮುದ್ಗರ
ಕಡಿತಲೆ ಕಠಾರಿ ಬಲಭದ್ರ ಚಕ್ರಂ ಮಡ್ಡು
ನಿಡುಸುರಗಿಶೂಲ ಕತ್ತಿಗೆಯೆಂಬ ಕೈದುವಂ
ಹಿಡಿದು ಕಾಲಾಳ್ಗಳೋವದೆ ನೆರೆದುದಮ್ಮಮ್ಮ ಭೂಮಿ ಬೆಸಲಾದಂತಿರೆ       ೨೭

ಹರಿಣನಂ ಹಳಿವ ಮಾರುತನನೇಳಿಸುವ ಹರಿ
ಸರಳನಿಳಿಕೆಯ್ವ ದೃಷ್ಟಿಗಳನಣಕಿಸುವ ಮನ
ದುರವಣೆಯನಲ್ಲೆಂಬ ನಿಗ್ಗಮದ ಲಾಗುಬೇಗಂಗಳ ಸಘಾಟಿಕೆಗಳ
ಸರಸನ್ನೆ ತೊಡೆಮಡಂ ಕಸೆಕಬ್ಬಿ ಕಡಿಯಾಣ
ಸರಸಮಂ ಸೈರಿಸದ ಚಳಬಳಿಕೆಗಳ ಚಾರು
ತುರಗಕುಲವನುವಾಗಿ ನಿಂದವೊಡ್ಡಿದ ಬಲದ ದೆಸೆದೆಸೆಯ ಬಾಹೆಗಳಲಿ        ೨೮

ಬವರಿದಿರುಗುವ ತಿರುಗಿ ನಡೆದ ನಡೆದೊಡಲುಬ್ಬಿ
ಢವರಿಸುವ ಢವರಿಸಿ ಕುಸಿವ ಕುಸದು ಢವರಿ ಬೀ
ಸುವ ಬೀಸಿ ಕೈವಿಡಿವ ಹಿಡಿದು ಸೇದುವ ಸೇದಿ ಕೆಡಹಿನೋಡುವ ನೋಡುತ
ಕವಿದು ಮೆಟ್ಟುವ ಮೆಟ್ಟ ಸೀಳ್ವ ಸೀಳ್ದಿಡುವಿಡು
ತ್ತವೆ ಹರಿವ ಹರಿದೆಱಗಿ ಕಾಂಬ ಕಂಡೊದೆವ ಕರಿ
ನಿವಹವತ್ಯಾಡಂಬರಂ ಮಿಕ್ಕು ಹಣ್ಣಿ ನಿಂದವು ಬಲದ ನಟ್ಟನಡುವೆ            ೨೯

ಬಲಿದ ಪಚ್ಚೆಯ ತಿವುರು ಬರೆದಲತೆ ಸಿಂಧುರದ
ತಿಲಕವೆಳರುವ ಘಂಟೆ ಕೋಡು ಹರಿಮುಖದ ಹೊಂ
ಬಳೆ ಪಟ್ಟು ನೂಲು ಬಲುವೊರಜೆ ಮೊಗಱಂಬ ಬರಿಕೈಯ ಪಟ್ಟೆಯ ಹೇಱಿದ
ಗುಳಬಿಗಿದ ರೆಂಚೆಯಂ ಮೊಗವರಿಗೆ ಕದಳಿಕೆಯ
ಗಳೆನಿಂದ ಸಬಳಿಗರು ಚೋದಸಂಕುಳ ಹೀಲಿ
ದಳೆ ಸುತ್ತಿದಾರೆಗಾಱರು ವೀರಗೌಡೆಗಳುವೆರಸಿ ನಿಂದವು ಕರಿಗಳು    ೩೦

ಥಳಥಳಿಪ ಶಸ್ತ್ರಾಸ್ತ್ರ ಸಂತತಿಯ ಬೆಳಗುಮೀ
ನ್ಗಳು ಗಜಘಟಾಫಳಕ ಕರಿ ಮಕರ ಕೈಗೈದ
ಬಿಳಿಯ ಚಮರಿಗಳು ನೊರೆ ತರತರಂ ಬಿಡಿದ ಥಟ್ಟುಗಳು ತೆರೆತೆರೆಯ ಬಳಗ
ಮೊಳಗುವ ಮಹಾಲಗ್ಗೆವಱೆಯ ನಾನಾಧ್ವಾನ
ಘುಳುಘುಳುಧ್ವನಿಗಳಾಗಿರಲು ರಿಪು ಬಲಜಲಧಿ
ಮುಳಿದಾದಿಮಯ್ಯನೆಂದೆಂಬ ವಡಬಾಗ್ನಿಯಂ ಮುತ್ತಬಂದಂತೆಸೆದುದು       ೩೧

ಚೆಂಬಕನ ಫಡ ಡಕ್ಕೆ ಪಟಹ ಮುರುಜಂ ವೀರ
ಬೊಂಬುಳಿಯ ಬೊಗ್ಗಿ ನೊಗ್ಗುಗಳ ನೆಱಿ ಕುಂಬಿಡುವ
ಕೊಂಬುಗಳ ರಣದಿತ್ತಿರಿಯ ಮೌರಿ ಹಲಹಲವು ರೀತಿರೀತಿಯ ಚಿನ್ನದ
ತಂಬಟದ ನಾನಾ ವಿಧದ ಕಹಳೆಗಳ ಮಹಾ
ಡಂಬರದ ಲಗ್ಗೆವಱೆಗಳ ರಭಸವಡಸಿ ಬೆಳೆ
ದಂಬರನಿಂಬುಗೊಳುತಿರಲು ನಿಸ್ಸಾಳಕುಳವಳ್ಳಿಱಿದುದದ್ಭುತದಲಿ            ೩೨

ಪೊಱಗೊಡ್ಡನೊಡ್ಡಿದರಿ ನೃಪಬಲವ ವೃಷಭೇಂದ್ರ
ನೆಱೆ ಕಂಡು ಕಡುಮುಳಿದು ಇನಿತುಮಂ ನಿಮಿಷಕ್ಕೆ
ಬಱಿಕೈವೆನೊಲ್ದು ಚಿತ್ತೈಸೆಂದು ನಿಷ್ಠುರಧ್ವಾನದಿಂ ಕೆಲೆದು ಮಲೆದು
ಕಱೆ ಕಂಠನಡಿಗೆಱಗಿ ಕದನದುದ್ಯೋಗಕ್ಕೆ
ಪೊಱೆಮಡಲ್ಕೆಂದಿರ್ದುದಾ ಸಮಯದಲ್ಲಿ ಗುಱಿ
ನೆಱೆದಿರ್ದುದಬ್ಬರಿಪ ಪರಸಮಯಿಗಳಿಗೆಲ್ಲ ನಿರ್ಭರವದೇ ವೊಗಳ್ವೆನು       ೩೩

ಘುಡು ಘುಡಿಸಿ ಗುಹೆಯಿಂದ ಹುಲಿಯಿಕ್ಕೆಯಿಂ ಸಿಂಹ
ವಡಿಸಿ ಗಂಹರದಿಂದೆ ಶರಭನುಱಿ ಕಾರ್ಮೇಘ
ಮಡೆಯಿಂದೆ ಬಱಸಿಡಿಲು ಪೊಱಮಡುವ ತೆಱದೊಳಾದಯ್ಯಸಹಿತಾ ನಿಳಯವ
ಹಡಿದೆಱೆದು ಕೆಲೆವುತ್ತ ಮಲೆವುತೊಲೆವುತ್ತ ಪೊಱ
ಮಡೆ ಕಂಡಿರದೆಯೆಲೆಲೆ ಗೂಳಿಯೀ ಬಂದುದೊ
ಗ್ಗೊಡೆಯದನುವಾಗೆಂಬ ಪರಬಲದ ಬೊಬ್ಬೆಯಬ್ಬರವನಾಲಿಸಿ ನೋಡಿತು  ೩೪

ಅಲುಗದಂಗಂನೆಗೆದ ಬಾಲಮಂಡಿಸಿದ ಕಿವಿ
ಯೊಲೆದು ಕೆಲಕೊತ್ತಿದ ಮೊಗಂ ನೀಡಿ ನಿರ್ಮಿದ ಬೆ
ನ್ನೆಲುಬೆ ಬಿಡುದುಬ್ಬಿ ಸುಱುಕಿಡುವ ನಾಸಿಕಪುಟದ ಕಬ್ಬೊಗರನುಗುಳ್ವ ಕೋಪ
ಬಲಿದು ಕೆಕ್ಕಳಿಸಿ ನೋಡುವ ಕಣ್ಗಳೆಡೆವಿಡದೆ
ನೆಲನ ಹೊಡೆವೆಡಗಾಲ್ವಿರಾಜಿಸಲು ಠಣಲೆಂದು
ಕೆಲೆದು ಕೆಂಗಲಿಸಿ ಕೈಗೊಂಡು ಕವಿದುದು ವೃಷಭನೇನೆಂಬೆನದಱೊಕ್ಕಿಲ       ೩೫

ಶಿವಶವ ಮಹಾದೇವ ಕೊಣಕಿಟ್ಟು ಹರಿಯಿತ್ತು
ಕವಿಯಿತ್ತು ಮುಳಿಯಿತ್ತು ತುಳಿಯಿತ್ತು ಮೆಟ್ಟಿತ್ತು
ಜವಗೆಡಿಸಿ ತಟ್ಟ ಮುಟ್ಟಿತ್ತು ಕುತ್ತಿತ್ತು ಕೋಡೆತ್ತಿ ಕೋಡಿನ ಕೊನೆಯಲಿ
ಡವರಿಸಿತು ಕುಸುಬಿತ್ತು ಕೆಡಹಿತ್ತು ಕೆಲಬಲ
ಕ್ಕವಚಟದೊಳಾದಿಗೊಂಡುಱುಬಿತ್ತು ಹೊಂದಲೆಯ
ತವಕಿಗಳನಸುವಳಿಯೆ ಹೊಸೆಯಿತ್ತು ಬಸವನಲ್ಲಿಂ ಬಳಿಕ್ಕೇವೊಗಳ್ವೆನು        ೩೬

ಕತ್ತಲೆಯ ಮೋಹರಕ್ಕಿನಕಿರಣ ಮೇಘಂಗ
ಳೊತ್ತೊತ್ತೆಗಗ್ರಾನಿಲಂ ಸೊಕ್ಕಿದಾನೆಗಳ
ಮೊತ್ತಕ್ಕೆ ಕಂಠೀರವಂ ಕಡಗಿ ಕವಿದು ದಾಳಿಕ್ಕುವಂತತುಳಕೋಪ
ವೆತ್ತಿದಾದಯ್ಯ ಹೊಸತಾಗಿ ಕಾಣ್ಕಾಲ್ಬಂದ
ಮತ್ತಿಬ್ಬರುಂ ಮೀಱಿ ಕೈಗೊಂಡೊಡಿರದೆ ಕೆದ
ಱಿತ್ತು ಝುಲ್ಲೆಂದೆಯ್ದೆ ಪರಬಲಂ ಬಳಿಕವರ ಭುಜಬಲವನೇವೊಗಳ್ವೆನು   ೩೭

ಹರಿಹರಿದು ಹಣೆಬಿರಿಯೆ ತಲೆ ಹಱಿಯೆ ಹಲುಸಿಡಿಯೆ
ಬರಿ ಮುಱಿಯೆ ಬಸುಱು ಬೊಗಹೆನೆ ಬೆನ್ನ ಬೀಡೆ ಬಿಡ
ಲುರ ಬಾದಣಂ ಬೋಗೆ ಬೆರಳುದುರೆ ಕೈಬೀಳೆ ಹೆಗಲು ಭೋಂಕೆಂದು ಜರಿಯೆ
ಕರುಳು ಕುಪ್ಪಳಿಸೆ ಕಾಲುಡಿಯೆ ಹೆದ್ದೊಡೆ ಕಡಿದು
ಘರಿಲೆಂದು ಸೆಕ್ಕೆವಿಡೆ ಮುಂಡ ದುಡುಹನೆ ಬೀಳೆ
ಧುರದೊಳಗೆ ಚಾರಿವರಿದಾಡ ಹೊಯ್ದರು ಹೊಯ್ದರಾ ಮೂವರೇವೊಗಳ್ವೆನು        ೩೮

ಹೊಕ್ಕು ಹೊಡೆದಾದಯ್ಯನಿಱಿವಾಗಲಲ್ಲಲ್ಲಿ
ಚಕ್ಕೆಂಬ ಚಟಿಲೆಂಬ ಸಱ್ಱೆಂಬ ಬೋಱೆಂಬ
ಬೊಕ್ಕೆಂಬ ಬೊಗಹೆಂಬ ಖಣಿಲೆಂಬ ಖಟಿಲೆಂಬ ಸೌಳೆಂಬ ಸಲಿವೊಯ್ಲಲಿ
ನೆಕ್ಕುನೆಱೆನಿಳಿ ನಿಟಿಲು ತಡದುಡುಹು ದುಮ್ಮುದಡ
ಡೊಕ್ಕ ಘರಿಘರಿ ಘೂರುಘುಮ್ಮೆಂಬ ನಿಷ್ಠುರ ರ
ವಕ್ಕೆ ನಿಲ್ಲದೆ ಚಲ್ಲಿ ಬೆಂಗೊಟ್ಟುವಧಮಬಲ ಜಗಕೆ ನಗೆಗೆಡೆಯಾಗಲು        ೩೯

ತಂಬಟದಲಿಱಿ ಬಿಲ್ಲಲಿಡು ಸಬಳವಂ ಬಾರಿ
ಸಂಬನೂದೊಟ್ಟೆಯಂ ನೆಗಹು ಹರಿಗೆಯ ಹೂಡು
ಬೊಂಬುಳಿಯಲಿಸು ಕಹಳೆಯಲ್ಲಿಕ್ಕು ಹರಿಗೆಗಳನೊಱೆಯುಚ್ಚು ಹೊತ್ತುಗೆಡದೆ
ಕೊಂಬನೇಱಲಗ ಹೊಡೆ ಚಮ್ಮಟಗೆಯಂ ಮರಚು
ಚೆಂಬಕನ ಹಲ್ಲಣಿಸು ಕರಿಗಳಂ ಹೊತ್ತುಕೊ
ಳ್ಳೆಂಬ ವಿಕಳಸ್ವರಂ ಹುಟ್ಟಿತ್ತು ಕೆಟ್ಟ ಪರಬಲದೊಳದನೇವೊಗಳ್ವೆನು        ೪೦

ಗೂಳಿಯೊಂದೆಸೆಯೊಳಾದಯ್ಯನೊಂದೆಸೆಯೊಳೆರ
ಡಾಳೊಂದು ದೆಸೆಯೊಳಱಿಯಟ್ಟಿ ಕೈಕೊಂಬ ಹೊ
ತ್ತಾಳೋಕಿಸುವ ಧೀರನಾವನೊಳಪೊಕ್ಕು ಕೆಡೆಕುತ್ತಿ ತಡೆಗೆಡಹುವಾಗ
ಗೂಳಿ ಸಾವಿರ ಗೂಳಿಯಾಗಿಯಱೆಯಟ್ಟುವೆರ
ಡಾಳು ಲಕ್ಕಾಳಾಗಿ ಮೀಱಿದೊಬ್ಬಾದಯ್ಯ
ನೇಳೆಂಟು ಲಕ್ಕಾದಿಮಯ್ಯಂಗಳಾಗಿ ತೋಱಿತ್ತು ಪರಬಲದ ಕಣ್ಗೆ  ೪೧

ಮುನ್ನ ಮೂದಲಿಸಿ ಪಾರಿಸಶೆಟ್ಟಿ ನುಡಿದನಿತು
ಮಂ ನೆಱೆಯ ಮಾಡದಿರ್ದೊಡೆಭಾಷೆ ಸಲ್ಲದಿ
ನ್ನುಂ ನಿರಾಯುಧರಾದೊಡಂದೂಷಕರ ಕೊಲುವುದೋಸರಿಸಲಾಗದೆಂದು
ತನ್ನ ಮನದೊಳು ಸೋಮನಾಥ ಬಂದರುಹನುಂ
ಭಿನ್ನವಾದಂ ಸವಣರೊಳು ಕೆಲಬರನ್ನಿಱಿದೊ
ಡೆನ್ನ ಪ್ರತಿಜ್ಞೆನೆಱೆ ಸಂದುದೆಂದಾಯ್ಯನಂದು ಮುನಿಸಂ ತಾಳ್ದನು   ೪೨

ನೇಮಿಯಂ ಕೆಡೆಕುತ್ತಿ ಮಲಧಾರಿಗಳನಿಱಿದು
ಹೇಮಚಂದ್ರನನೊರಸಿ ಮಾಘನಂದಿಯ ಕೊಂದು
ಶ್ರೀಮತಿಗಳಂ ಪಿಡಿದು ತ್ರೈವಿದ್ಯರಂ ತಂದು ತಾರುಕುಂಡೆಯ ಹಾಯಿಸಿ
ಭೂಮಿಗೊಱಗಿಸಿ ವರ್ಧಮಾನರಂ ಶ್ರುತಿಕೀರ್ತಿ
ನಾಮಮಂ ತೊಡೆದು ಪಾರಿಸ ಮಾವನೆಂದು ಕಾ
ಯ್ದಾ ಮೂಲಸಂಘವಾ ಪುಲಿಸಂಘವೆಂಬುಭಯಸಂಘಮಂ ಭಂಗಿಸಿದನು      ೪೩

ನಡೆಯಿತ್ತು ಸಮ್ಮುಖಕೆ ಸಕಳರ್ಷಿ ಸಂಕುಳಂ
ಮಡಿಯಿತ್ತು ಸುರಹೊನ್ನೆಬಸದಿಯರುಹಪ್ರತಿಮೆ
ಯುಡಿಯಿತ್ತು ಜೈನಸಮಯಂ ಭಂಗವಡೆಯಿತ್ತು ಸದ್ದೃಷ್ಟಿಯರಸನ ಬಲಂ
ಮಡಿಯಿತ್ತು ಪುರದೊಳಗೆ ಮರುಳಪಡೆ ರಕ್ತಮಂ
ಕುಡಿಯಿತ್ತು ಗೊರವನಾಡಿತ್ತೆ ಕಡೆ ಪರಿತನಕ
ನಡೆಯಿತ್ತು ತಾವೊಡಲುವಿಡಿದು ಫಲವೇನೆಂದು ನುಡಿಯಿತ್ತು ಪುರಜನವದು೪೪

ಹುಲಿಗೆಱೆಯ ನಗರ ಮುಮ್ಮರಿ ದಂಡಮಿಂಡಗು
ದ್ದಲಿ ಸಮಯ ಮಂತ್ರಿಸಾವಂತ ಪಟ್ಟಸ್ವಾಮಿ
ಗಳು ಛಲದ ನೆಲೆಯೆಂದೆನಿಪ್ಪ ತುಳಬಲ ಫಣಿಸ ಮಕ್ಕಳುಗಳಾದಿಯಾದ
ಹಲರು ಹದಿನೆಂಟು ಸಮಯವದೆಯ್ದೆ ಜೈನನಾ
ಹೊಳಲೆಲ್ಲ ತೊಡಗಿತ್ತು ಕಾಳಗವನೆಂದು ಮನ
ವಳಕದಾದಯ್ಯನಾಂತ ಧಟರಂ ಧುರದೊಳಗೆ ಮರುಳಿ ಗುಣಸಾಗಿಸಿದನು      ೪೫

ಅತಿ ಭಾಷೆಯಿಂ ಬಂದ ಚಾತುಬರ್ಲವದೆಯ್ದೆ
ಹತವಾದುದಖಿಳಮುನಿಗಳ ಮಡಿಹಿತಂ ಕಂಡು
ವ್ರತಧಾರಿಗಳು ಸಕಲ ಪುರಜನಂ ಸಮಯಪಕ್ಷಕ್ಕೆ ಕಾಳಗವ ಮಾಡಿ
ಸಿತಗನಾದಯ್ಯನಿಂ ಲಯವೈದಿತರಸ ನೀ
ನತಿಬಲನೊಳಾಂತು ಭಂಗಂಬಡೆಯಬೇಡೆಂದು
ಹಿತಮಂತ್ರಿಗಳು ಹಲವು ತೆಱದಿ ಬುದ್ಧಿಯ ಪೇಳಲತಿವಾದಿಯಿಂತೆಂದನು      ೪೬

ಬಸದಿಯಳಿದುದು ಸಕಲ ಸಾಮರ್ಥ್ಯಯುತರಪ್ಪ
ಋಷಿಕುಲಂ ಮಡಿಯಿತ್ತು ಚಾತುರ್ಬಲಂ ಸತ್ತು
ದಸುವಳಿದುದಖಿಳಪುರಜನ ಭಂಗ ಹಿಂಗದೆನ್ನನ್ವಯಕ್ಕೆಂದು ಮುಳಿದು
ದೆಸೆಗೆ ಬಲಿಗೊಡುವೆನಾದಯ್ಯನಂ ಮೇಣು ತ
ನ್ನಸುವಂ ಬಿಡುವೆನೆಂದು ತಱಿಸಂದು ಪಡೆಯ ನೆರ
ಹಿಸಿ ಮೇಳವಂ ಮಾಡಿ ಹಲವು ನಿಸ್ಸಾಳಮಂ ಸೂಳೈಸ ಹೇಳೆಂದನು೪೭

ಅರನೆಲೆಯೊಳಿರ್ದು ಚಂದ್ರಾದಿತ್ಯಭೂಪಾಲ
ನೆರಡು ದೆಸೆಯೊಳು ಗಜಾಶ್ವಾರೂಢರಪ್ಪ ಪಲ
ವರಸುಗಳನಾಪ್ತ ಬಲಮಂ ನೋಡಿ ನಾಡೆಯುಂ ಮುನಿಸಂ ಮೊಗಕ್ಕೆ ತಂದು
ಗೊರವನಂ ಹೆಡೆಗೈಯ ಕಟ್ಟಿ ಗೂಳಿಯ ಹೊಡೆದು
ತರಬೇಕೆನುತ್ತೈದೆ ಬೈದು ಮೂದಲಿಸುತ್ತೆ
ಪರಬಲಂ ಹುರಿಗೂಡಿ ಬರುತಿರಲ್ಕಂಡು ಖತಿಗೊಂಡನಂದಾದಯ್ಯನು         ೪೮

ಘೋಳೆಂದು ತೆರಳಿದ ಚತುರ್ಬಲಂ ಮತ್ತೆ ಭೂ
ಪಾಲನಾಜ್ಞೆಯೊಳು ತರಹರಿಸಿ ಭಯಮಂ ಬಿಟ್ಟು
ಕಾಲಾಗ್ನಿಯಂತೆ ಕವಿದೆ ಸುವಿಱಿವಿಡುವ ಪೊಡೆವ ಕೆಡೆ ಕುತ್ತಿವೊತ್ತೆತಿವಿವ
ಕಾಳಗದೊಳಾದಯ್ಯನೆಡದೆಸೆಯೊಳಗ್ಗದೆರ
ಡಾಳು ನಡೆಯಲು ಬಲದ ಬಾಹೆಯೊಳು ಸಿಡಿಲಂತೆ
ಗೂಳಿ ಬರೆ ಮೂಱು ಮೊನೆಯಿಂ ಪರಬಲಕ್ಕೆ ಕೈದೋಱಿದರದೇವೊಗಳ್ವೆನು  ೪೯

ಚೂಣಿ ಹೊಂತಲೆ ಕೋಡುಗೈಯ್ಯನುಂ ಮೈದೆಗೆದು
ಹೂಣಿಗರ ಮೂದಲಿಸಿಯಱಿಯಟ್ಟಿ ಕೊಲ್ವ ಬಿ
ನ್ನಾಣಂ ಕಂಡು ಭಯಗೊಂಡು ಚಾತುರ್ಬಲಂ ಭೀತಿಯಿಂದಳಿದುಳಿದುದು
ಕೇಣದಿಂ ಹರಣವುಳ್ಳೊಡೆ ಹಾಡಿಕೊಂಡುಂಬ
ಜಾಣುಗೆಟ್ಟಿಲ್ಲಿ ಸಾಯಲದೇಕೆನ್ನುತ್ತವಾ
ಕ್ಷೋಣೀಶನಪ್ಪ ಚಂದ್ರಾದಿತ್ಯಭೂಪನಂ ಬಿಟ್ಟು ದೆಸೆಗೆಟ್ಟೋಡಿತು೫೦

ಮುಟ್ಟ ಮೂದಲಿಸಿ ಬಪ್ಪರಸುಮೋಹರವ ಕಂ
ಡಟ್ಟಿ ಕವಿದಾದಯ್ಯನನಿಬರಂ ತವೆ ಕೊಂದೊ
ಡಟ್ಟೆಯಾಡುವ ಧುರದೊಳಿರಲಂಜಿ ಸಪ್ತಾಂಗವಳಿಯತೇಕಾಂಗವುಳಿಯೆ
ಹಿಟ್ಟಿನೊಳಗಕ್ಕಿ ಗಾಣದೊಳೆಳ್ಳುಳಿವ ತೆಱದಿ
ಪಟ್ಟದಧಿರಾಜ ಚಂದ್ರಾದಿತ್ಯಭೂಪಾಲ
ನಿಟ್ಟೋಟದಿಂ ಬಾಯಬಿಟ್ಟು ದೆಸೆಗೆಟ್ಟೋಡಿ ನಟ್ಟಡವಿಯಂ ಪೊಕ್ಕನು      ೫೧

ಹುತ್ತೇಱಿ ಹಲುಗಿರಿದು ಹುಲುಗಚ್ಚಿ ಹಸಗೆಟ್ಟು
ಸತ್ತಳಿದು ಬತ್ತಳಿಸಿ ಹಿರಿದು ಮಂಡೆಯ ಬಿಟ್ಟು
ವಿಸ್ತರಿಸಲಾಱದಿವರತಿಕರುಣಿಗಳು ಭಸಿತಮಂಪೂಸೆಕಾಯ್ವರೆಂದು
ಎತ್ತಿತಿಪ್ಪೆಯ ಬೇವುಟಂ ಪೂಸಿ ಬೇವುಟರ
ದತ್ತಿತ್ತ ಹರಿದಱಸಿ ಕಾಣದೆ ವಿಭೂತಿಯಂ
ಹೆತ್ತ ತಾಯ್ ಸಗಣಿಯೆಂದದನಿಟ್ಟು ಕೊಂಡರೊಡಲಾಸೆಯೇಂ ವಿಧಿಮಾಡದು           ೫೨

ತಟ್ಟ ಸಱ್ಱನೆ ಸೀಳಿ ಕಿಱಿದನದಱೊಳು ಕೌಪು
ಗಟ್ಟಿ ಗುಂಡಿಗೆಯನಾಧಾರಗುಂಡಿಗೆ ಮಾಡಿ
ಮೆಟ್ಟಿ ಕುಂಚವ ಮುಱಿದು ಹೀಲಿಯಂ ಬಿಸುಟು ಕಾವಂ ಲಾಕುಳವನು ಮಾಡಿ
ಮುಟ್ಟಿ ಸರ್ವಾಂಗದೊಳು ಭಸಿತಮಂ ಪೂಸಿ ಶಿವ
ದಿಟ್ಟು ಹರಹರ ನಮೋರ್ಹಂತಾಣವೆಂದೆರಡು
ಗೆಟ್ಟ ಭೀತಿಯ ಭಕ್ತ ಸವಣರಂ ನೋಡಿ ನಗುತಿರ್ದನಂದಾದಯ್ಯನು೫೩

ನಸನಗುತಲಿನ್ನು ಸಾಕೆಂದು ಕೊಲೆಗೈದು ಮಾ
ಮಸಕನವೆತ್ತಿದ ಮನದ ಗರುವ ಕೊಳುಗುಳದ ಕೊ
ಗ್ಗೆಸಱುಗಾಲಧಟ ಹೊಸಹೊಯಿಲರಾಯಂ ರಣ ಕ್ರೀಡೆಯೊಳಗಾಲಿಂಗಿಸೆ
ಒಸೆದು ಜಯವಧು ತೆಗೆದು ನಖರೇಖೆಯಂತೆಸೆವ
ಮಸೆಗಳ ಮನೋಜನಾದಯ್ಯನೈತರ್ಪಾಗ
ವಿಸಸನದ ವೀರಭೋಜನವಿರಳಮರುಳಪಡೆಯಿದ್ದುದೆ ನಲೇವೋಗಳ್ವೆನು    ೫೪

ಆಸುರದೊಳಾನೆದೊಗಲಂ ಬಿಚ್ಚಿ ಹರಕಲಿಸಿ
ಹಾಸಿ ಕಿಱಿದಾಗಿ ಕೊಬ್ಬಿದ ಕುಸುರಿಗಂಡದಿಂ
ರಾಸಿಗೂಳಂ ಸುರಿದು ತಲೆಯೋಡುಗಳಲಿ ತಿಳಿನೆತ್ತರಂ ಹಿಡಿದು ಹಿಳಿದು
ಸಾಸಿಗಳ ಕಣ್ಣಾಲಿಗಳ ಸೊಡರ ನೆತ್ತಿ ಸಂ
ತೋಷದಿಂ ಕಾಮಾಕ್ಷಿ ಚಾಮುಂಡಿಗಳಿಗೆಱಗಿ
ಮೀಸಲಂ ಸಲಿಸಿ ಚೌಕದ ಭೂತವೇತಾಳರುಂಡರೇ ವಣ್ಣಿಸುವೆನು   ೫೫

ಇಂದೀಗ ತಮ್ಮಳ್ಳೆ ಹೊಳ್ಳುವಾಱುಹಮಾದ
ವಿಂದೀಗ ತಮ್ಮ ಹೊಟ್ಟೆಯ ಹಸಿವು ನೆಱಿ ಹೋದ
ವಿಂದೀಗ ತಮ್ಮ ಬಾಯಿಗಳ ಬಱಹರಿದವೆಂದೆಡೆವಿಡದೆ ಬಿದ್ದಿಕ್ಕಿದ
ತಂದೆಯೆನಿಪಾದಿಮಯ್ಯನನೀಶನೋವಲಿಂ
ದೆಂದೊಲಿದು ಹರಸುವ ಮಹಾಭೂತ ವೇತಾಳ
ವೃಂದಮಂ ನೋಡುತ್ತೆ ನಸುನಗುತ್ತಂ ಬಂದನಲ್ಲಿ ಮುಂದೊಂದೆಡೆಯಲಿ     ೫೬

ಕರುಳಮಾಲೆಯನಿಕ್ಕಿ ಖಂಡದಿಂಡೆಯ ಮುಡಿದು
ಕರಿಯ ಹಸಿದೊವಲುಟ್ಟು ನೆತ್ತರಂ ಬೊಟ್ಟಿಟ್ಟು
ಅರಿದ ತಲೆಯಂ ಹಿಡಿದು ಕಡಿದ ಕೈಗಳನೆತ್ತಿ ಹಲವು ರಿಂಗಣಗುಣಿವವು
ಅರುಣಜಲದೋಕುಳಿಯನಾಡುವವು ಕೆಲಕೆಲವು
ಹರಿದು ಮೆದೆವೆಣನೇಱಿ ಧುಮ್ಮಿಕ್ಕುವವು ಕೆಲವು
ಹರುಷದಿಂದಾಯ್ಯ ಬಾಳ್ಗೆಂದು ಹರಸುವವು ಕೆಲವು ಮರುಳಾ ರಣದೊಳು   ೫೭

ಧುರದೊಳಗೆ ಕಾಮಾಕ್ಷಿ ಚಾಮುಂಡಿ ಕಂಕಾಳಿ
ಯರು ಭೂತಗಣಸಹಿತ ರುಧಿರದೋಕುಳಿಯನಾ
ಸುರದೊಳೊಲಿದಾಡುವಾಗಲು ಚೆಲ್ಲಿ ನೆನೆದು ಕೆಂಪಾದುದೋಯೆಂಬಂದದಂ
ಬರದ ಮೇಘಾಳಿ ಕೆಂಪಾದುದೊದವಿದ ಹಗಲು
ಹರೆದುದಾದಯ್ಯಂಗೆ ಕಾಳಗಕೆ ನೆರವಾಗಿ
ಮರಳಿ ಮನೆಹೊಕ್ಕಪನೊಯೆಂಬಂತೆ ಕೆಂಗಲಿಸುತಿನನಬ್ಧಿಯಂ ಹೊಕ್ಕನು      ೫೮

ಕುತ್ತಿ ಬಿಸುಡಲು ಬೆನ್ನೊಳಂಡಲಿಸಿ ಕೆಲರು ಕೋ
ಡೆತ್ತಿ ಢವರಿಸೆ ಜಡಿದು ಹೆನ್ನರಂ ಸಿಕ್ಕಿ ನೇ
ಲುತ್ತೆ ಕೆಲದಿಱಿದಿಱಿದು ನೆಗಪಲಿಱಿದಡಸಿ ಬರಲಡಗೆಡದು ಕೆಲಕೆಲಬರು
ತೊತ್ತಳಂದುಳಿದು ಹರಿವಾಗ ಕರುಳ್ಗಳು ಕಾಲ
ಸುತ್ತಿ ಕೊಳಗಿನ ಬಾಯೊಳೆಳಲುತ್ತೆ ಕೆಲಬರು ಬ
ರುತ್ತಿರಲು ಜವನ ಜಕ್ಕಂದೊಳಲಿಯಂದದಿಂ ಬಂದುದಾ ವೃಷಭೇಂದ್ರನು      ೫೯

ವಿಸಸನದ ವೈರಿನಿಚಯಪ್ರಣಾಲಿಪ್ತರಾ
ಗಸಮಗ್ರಸರ್ವಾಂಗದಲಿ ಖಂಡ ಮಂಡಿತಾ
ಸ್ಯಸಮಂತರೈತಂದು ಶಿವನಿಳಯಮಂ ಪೊಕ್ಕು ಪುರವೈರಿಗೆಱಗುವಾಗ
ಹಸಿದು ದನುಜರ ಪುರತ್ರಯವನಾಹುತಿಗೊಂಡು
ರಸೆ ಹೊಗಳುತಿರೆ ಮಗುಳ್ದು ಕಾಲಾಗ್ನಿರುದ್ರಂಗೆ
ಬೆಸನನೊಪ್ಪಿಸಬಹ ತ್ರೇತಾಗ್ನಿಯಂದಂದಿಂ ಮೆಱೆದರಂದಾ ಮೂವರು        ೬೦

ರಾಗದಿಂ ರಣವಿಜಯರೈತಂದು ಮೈಯಿಕ್ಕು
ವಾಗ ನಾಗಾಭರಣನತುಳಸಂತೋಷಮನ
ನಾಗಿ ಕರುಣವನವರ ಮೇಲೆ ತಾ ಹೊನಲ್ವರಿಸಿ ನಲಿದು ತಲೆದಡವಿ ನೋಡಿ
ಈ ಗೂಳಿಯೀಯಿಬ್ಬರೆಮ್ಮ ನಿಳಿಯದೊಳು ಕಾ
ಹಾಗಿ ಮಾಯಾರೂಪಿನಿಂದಿರ್ದು ಕದನವೆ
ದ್ದಾಗ ಮೈದೋಱಿ ಹಗೆಯಂ ಗೆಲುತೆ ಬರಲೆಂದು ನುಡಿದನಾದಯ್ಯನೊಡನೆ            ೬೧

ಕರುಣಿಸಿದ ಕೈದುವಿವೆ ಕೋದೇವೆಯೆನಲೆನ್ನ
ಪರಿಸೂತ್ರದಪರಭಾಗದೊಳಿರ್ದ ತೀರ್ಥದೊಳ
ಗಿರಿಸು ಹೋಗೆನಲಿದಂ ಹತ್ತಿರ್ದ ನರಮಾಂಸ ಮಜ್ಜೆ ಮಿದುಳೊರಸಿ ರುಧಿರ
ಬೆರಸಿದೊಡೆ ತೀರ್ಥವಪುನೀತತೆಯನೈದಿ ಹರ
ವರಿಯಸಾಮರ್ಥ್ಯ ಮಸುಳಿಸುವದಲೆಯೆನಲು ಕೇಳ್
ಮರುಳೆ ಮೂಜಗದ ದೋಷವನಳಿವುದಕ್ಕಿನಿತು ಭಾರವೇ ಹೋಗೆಂದನು       ೬೨

ನಿಸಿತಖಡ್ಗದ ಮೈಯ ರಕ್ತವದಱೊಳು ಸಂಗ್ರ
ಮಿಸೆ ಜಲಂ ದುರ್ವರ್ಣವಾಗೆ ಹೇಸಿಕೆಯ ಹು
ಟ್ಟಿಸಿದೊಡೆಲೆ ಸ್ನಾನಪಾನಂ ಮಾಡಲನುವಲ್ಲೆನಲು ಪುರಕ್ಕಿನ್ನು ಕದನ
ಮಸಗುವೊಡೆ ದಿಟ ಮಹಾ ಸಾವು ಕೇಡುಗಳು ಸಂ
ಧಿಸುವೊಡಿನ್ನುಂ ರಕ್ತವರ್ಣವಾದಪುದು ಸಂ
ತಸದೊಳಿರಿಸಂಜಬೇಡೆನೆ ಖಡ್ಗವಂ ತಂದು ಬಿಸುಟನಾ ತೀರ್ಥದೊಳಗೆ          ೬೩

ಧುರದೊಳಗನೇಕರಂ ಕೊಲಲು ತನ್ನೊಳ್ಬೆರೆದು
ಪರಿತರ್ಪರುಧಿರಮುಮನಾ ತೀರ್ಥದಿಂ ತೊಳೆವ
ಪರಿಯೋಯೆನಿಪ್ಪಂತೆ ಖಡ್ಗವಾ ತೀರ್ಥದೊಳ ಮುಳುಗಲದಕಂದು ತೊಡಗಿ
ಧರೆಯೊಳಗೆ ಖಡ್ಗತೀರ್ಥವೆನಿಪ್ಪ ನಾಮವ
ಚ್ಚರಿಯಾದುದಾಯ್ಯನೊಡನೆ ಬಂದವರಗಲ
ದಿರಲು ಬಾಹತ್ತರನಿಯೋಗಮಂ ಕೊಟ್ಟ ಸೋಮಯ್ಯನುತ್ಸಾಹದಿಂದ        ೬೪

ನೆರೆಯೂರ ನಾಡಗ್ರಹಾರದೊಳಗುಳ್ಳ ಶರ
ಣರು ಕೇಳ್ದು ಬಂದಾದಿಮಯ್ಯನಂ ಕಂಡು ಭ
ಕ್ತರ ನಿಧಿಯೆ ಶಿವಸಮಯ ಶರಧಿಗೆ ಶಶಾಂಕನಾದೆಯಲಾಯೆನುತ್ತೆ ಹೊಗಳೆ
ಧರೆಯಱಿಯ ಗಣಪರ್ವವಂ ನೆರೆದು ಮಾಡಿ ಭಾ
ಸುರಜಲಕ್ರೀಡೆಗಳನಾಡಿ ಕಂಗೆಸೆವದೇ
ವರದೇವನಂ ಬಿಟ್ಟು ಹೋಗಲಾಱದೆ ಪುರಂಗಳ ಮಾಡಿ ಸುಖಮಿರ್ದರು       ೬೫

ಹಗೆ ಹೋಯ್ತು ತನ್ನಱಕೆಯಾಯ್ತು ಸೋಮಯ್ಯ ತಂ
ದೆಗೆ ಮಾಣದಂಗರಂಗಂ ರಾಗಭೋಗಂಗ
ಳೊಗೆದವೆಲ್ಲಾ ಜನಂ ಭಕ್ತರಾಗಲು ತೊಡಗಿತಲ್ಲಿ ಶಿವಪುರವಾದವು
ಜಗದೊಳೆನ್ನಿಂದೆ ಕೃತಕೃತ್ಯರಿಲ್ಲೆಂಬ ನಂ
ಬುಗೆಯಿಂದೆ ತನ್ನ ಪದುಮಾವತೀದೇವಿಸಹಿ
ತಗಲದುತ್ಸವಿಸುತಿಪ್ಪಾದಿಮಯ್ಯನ ಜಸಂ ಸುಳಿಯ ತೊಡಗಿತ್ತಿಳೆಯೊಳು     ೬೬

ಅತ್ತ ಸೌರಾಷ್ಟ್ರದೊಳಗಾದಯ್ಯ ತಡೆದನೆಂ
ದತ್ಯುಮ್ಮಳಿಪ ಜನನಿ ಪಿತರಿದ್ದೆಡೆಗೆ ತನ್ನ
ಚಿತ್ತಕ್ಕೆಬಪ್ಪ ಮಾನಿಸರಂ ಸುಖಾಸನವ ಕಳುಹಿ ಸತಿ ತಂದೆ ತಾಯಿ
ಅತ್ತೆಮಾವಂದಿರೊಳಗಾದೆಲ್ಲರಂ ಬರಿಸಿ
ಚಿತ್ತಜಾರಿಯ ನಿಬಂಧಕ್ಕೆ ಹುಲಿಗೆಱೆಗೆ ದೊರೆ
ವೆತ್ತ ಮುಖ್ಯರ ಮಾಡಿ ನಡೆಸಿ ಹರುಷಂಬಡಿಸಿ ಸುಖಮಿರ್ದನಾದಯ್ಯನು      ೬೭

ವೀರಶತ್ರುಘ್ನನಾಗಿಯು ರಾಮನೊಪ್ಪುವ
ಕ್ರೂರನಾಗಿಯು ಖಳವಿಭೀಷಣಂ ಲೋಕಕ್ಕೆ
ಸಾರ ಸುಗ್ರೀವನಾಗಿಯು ರಾಜಿಪಂಗದಂ ಸಲೆ ಧರ್ಮರಾಜನಾಗಿ
ಚಾರುತರಸೋಮಧರ ನಿಳೆಯಱಿವುತಿರೆ ಕುಮುದ
ವೈರಿಯಾಗಿಯು ಕಳಾಧಾರಿಯತ್ಯಂತ ಗಂ
ಭೀರಗುಣಿಯಾದಯ್ಯನೆಂದು ಕೀರ್ತಿವಧು ಜಗದೊಳಗೆ ಡಂಗುರವೊಯ್ದಳು  ೬೮

ತಿಳಿಯಾದಿಮಯ್ಯ ಬಪ್ಪುದಕ್ಕೆ ಮುನ್ನಂದಿಬ್ಬ
ದಳದ ಮಾತಂಗಡಿಗೆ ನಿರಸವಾಗಿದೆ ವಾರ್ತೆ
ಗಳಯೆನಿಪ್ಪುದು ವನಕ್ಕಪಶಬ್ದ ಗೋಷ್ಠಿದ್ವಿಜಾತಿ ಸೇವ್ಯ ತಟಾಕಕೆ
ತಳೆದ ಸಿದ್ದಪದಂ ಪರಾಂಗನಾಸಂಗ ಯತಿ
ಗಳಿಗೆ ಕೃತಕಂಗಳಂಗನೆಯರಿಗೆ ನೆಲೆಯಾಗಿ
ಹಳಿಸಿಕೊಳುತಿರ್ದು ಮತ್ತಾ ಹೆಸರೆ ಲೇಸೆನಿಸಿದೆಂದುದಾ ಹುಲಿಗೆಱೆಯೊಳು    ೬೯

ಆದಯ್ಯನಾಂತ ಜಿನಸಮಯಮಂ ಹೂದಯ್ಯ
ನಾದಯ್ಯನೆಯ್ದೆ ಜನಿಯಿಸುವುದುಂ ಮಾದಯ್ಯ
ನಾದಯ್ಯನಖಿಳಗುರುವಾದಯ್ಯನಾದಯ್ಯ ನರಸಿರಂಗೋದಯ್ಯನು
ಆದಯ್ಯನಿಂದುಧರಸಮಯಮಂ ಕಾದಯ್ಯ
ನಾದಯ್ಯನಿಳೆಯಱಿಯೆ ಕಡೆಗೆ ಹರನಾದಯ್ಯ
ನಾದಯ್ಯ ನೋಡೆಂದುಕೀರ್ತಿಲತೆ ಮಡಲಿಱಿದು ಹಬ್ಬಿತ್ತು ದಿಗುತಟದೊಳು೭೦

ಮಾಳವನು ಕೇರಳನು ವಂಗನು ಕಳಿಂಗನು ವ
ರಾಳನು ಮತಂಗನು ಮಗಧನು ಘೂರ್ಜರನು ನೇ
ಪಾಳನು ತೆಲುಂಗ ಮಲೆಯಾಳ ಕೊಂಕಣನು ಕಾಶ್ಮೀರನಾ ಹೊಯ್ಸಳೆಯನು
ಚೋಳ ಪಾಂಡ್ಯಾದಿಗಳು ಪಟ್ಟ ಪದಕಂ ಮಕುಟ
ಜಾಳ ನಾನಾಪಟ್ಟಕರ್ಮನೇಳೆಯ ವರ್ಗ
ದೋಳಿ ಮುತ್ತಿನ ತಳೆ ಗಜಾದಿವಾಹನವ ಕಾಣಿಕೆಯ ಕಳುಹುತ್ತಿರ್ದರು          ೭೧

ಈ ವಿಭವವೀಭೋಗವೀಕೀರ್ತಿಯೀರಚನೆ
ಈ ವಿಳಾಸಂ ಸತ್ಯವೀ ಸಂಪದಂ ಗೀತ
ವೀ ವಾದ್ಯವೀ ನೃತ್ಯವೀ ಕ್ಷೇತ್ರವಾಸಿ ಜನವೀ ತಪೋಧನರೀ ಸುಖ
ಈ ವಿದ್ಯವೀ ಬಂದ ವಿನಿಯೋಗದಾಳಾಪ
ದೇವಪತಿ ಸೋಮಯ್ಯ ನಿನ್ನರಮನೆಯೊಳಲ್ಲ
ದೀ ವಸುಧೆಯೊಳಗಿಲ್ಲ ಬದುಕಿದೆಂ ಬದುಕಿದೆಂ ಕೇಳೆಂದನಾದಯ್ಯನು          ೭೨

ನಿನ್ನಯ ಮನೋರಥಂ ಸಂದುದೆಲೆ ಮಗನೆ ನೀ
ನಿನ್ನು ಕೈಲಾಸಕ್ಕೆ ಹೋಗೆನಲು ಶಿವ ಶಿವಯಿ
ದಂ ನುಡಿವರೇ ದೇವ ನೀನೊಲಿದು ನೆಲಸಿದೆಡೆಯೆನಗೆ ಕೈಲಾಸವಲ್ಲಾ
ಮುನ್ನ ನಿಮ್ಮಡಿಯ ಬಲದಿಂದಿನಿತು ಜಸವಡೆದೆ
ನಿನ್ನು ನಿಮ್ಮಡಿಯ ಬಲದೊಳು ಮಾಣದನವರತ
ನಿನ್ನನರ್ಚಿಸುತೆ ಭಜಿಸುತ್ತೆ ನೋಡುತ್ತೆ ಸುಖವಿಹೆನೆಂದನಾದಯ್ಯನು            ೭೩

ನೀನೆನ್ನ ಶೈವಾಭಿಮಾನಸಂಪತ್ತಿಂಗೆ
ನೀನೆನ್ನ ಸಮಯದ ಸಮುದ್ಧರಣತಾಗುಣಕೆ
ನೀನೆನ್ನ ಕೀರ್ತಿಪ್ರಭಾವಕ್ಕೆ ನೀನೆನ್ನ ಭಕ್ತಜನದಾನಂದಕೆ
ನಾನಱಿಯಲು ಸ್ತಂಭನಾದಯ್ಯ ಯಿದ ಕೇಳು
ಈ ನೆಲೆದೊಳೆಲ್ಲರಱಿವಂತೆನ್ನ ದಕ್ಷಿಣ
ಸ್ಥಾನದ ಸ್ತಂಭದೊಳಗಿರು ಸುಖದೊಳೆಂದೊಡೆ ಹಸಾದವೆಂದಾದಯ್ಯನು     ೭೪

ಅಣಿಯರದೆ ಕೈದಣಿಯೆ ಪೂಜೆಯಂ ಮಾಡಿ ಬಾ
ಯ್ದಣಿಯೆ ನಾನಾ ತೆಱದಿ ಪಾಡಿ ಕೊಂಡಾಡಿ ಕ
ಣ್ದಣಿವಂತೆ ನೋಡಿ ತೋಳ್ದಣಿವಂತಿರಪ್ಪಿ ತನು ದಣಿವಂತಿರೆಱಗಿ ಚರಣ
ದಣಿವಂತೆ ರಿಂಗಣಂಗುಣಿದು ಮಾಣದೆ ಮನಂ
ದಣಿವಂತೆ ಹಾರೈಸಿ ಹರುಷಂದಳೆದು ಚಿತ್ತ
ದಣಿವಂತೆ ಪಾದೋದಕ ಪ್ರಸಾದವ ಧರಿಸಿದಂ ಧನ್ಯನಾದಯ್ಯನು    ೭೫

ಈಸೊಡ್ಡಳಯ್ಯನುಪಧಾವಿಸುವುದಕ್ಕೆ ಸ
ನ್ಯಾಸ ತತಿಯಾದೊಡೇ ಹುತರಾದ ಸುಕ್ಷೇತ್ರ
ವಾಸಿಸಂಕುಳವಾದ ದೇವಪುತ್ರಿಕರಾದರಲ್ಲಿಯ ನಿಯೋಗಿಗಳಿಗೆ
ಬೇಸಱದೆ ಸಲೆ ಸಾಮ್ಯವಂತರಾದಗ್ಗದ ಗ
ಣೇಸರಂ ಕರೆದು ಹೇಳಿದ ನೀ ಮಹಾಕ್ಷೇತ್ರ
ದಾಸೆಯಂ ಬಿಡದಿರನ್ಯಕ್ಷೇತ್ರಮಂ ಬಯಸದಿರಿಯೆಂದನಾದಯ್ಯನು  ೭೬

ಕಡುಮೋಕ್ಷಮಂ ಪಡೆವರಾರವರು ತಮ್ಮೊಡಲ
ಬಿಡದಿರ್ದೊಡೀಯೆನೋರಂತೆನ್ನೊಳುಪವಾಸ
ವಿಡಿದು ನಡೆಯದೊಡೀಯೆನುಳ್ಳೊಡವೆಗಳನೆನ್ನೋಳೀಯದಿರ್ದೊಡೆಯೀಯೆನು
ಬಿಡದೆ ಕಾಲ್ಗಪ್ಪಡಂಗಟ್ಟಿ ಬಂದೆನ್ನನೋ
ಡದೋಡಿಯೆನೆನುತಿಹ ಕ್ಷೇತ್ರವೇ ತೊಲಗು ಸಡಿ
ಫಡ ಮಾನದಿರ್ದೆಡೆಯೊಳಿರ್ದು ನೆನೆಯಲು ಬೇಡಿತೀವ ಪುಲಿಕರಪುರವಿದು     ೭೭

ವ್ರತಿಗಳು ಜಿತೇಂದ್ರಿಯರು ಗುರುನಿಷ್ಠರತಿ ಭೂತ
ಹಿತರು ಧರ್ಮಿಷ್ಠರು ಶಿವಾರ್ಚಕರು ಶಾಂತ ಪಂ
ಡಿತರು ಸನ್ಮಾರ್ಗಿಗಳು ಸತ್ಯರೊಲವಿಂದೆ ತಮ್ಮೊಳಗೆ ಪುಗಲಂತವರ್ಗೆ
ವಿತತಮುಕ್ತಿಯನಿತ್ತು ಬಯಲು ಬಱಿಮಾತಿನು
ನ್ನತ ಮಹಿಮೆಗೆದಱುವಾ ಕ್ಷೇತ್ರವೆಸೆದಿಪ್ಪುವೀ
ಕ್ಷಿತಿಯೊಳಂತವರು ಮುನ್ನವೆ ಸಜೀವನ್ಮುಕ್ತರಂತವರಿಗರಿದಾವುದು೭೮

ಪ್ರಕಟಪಾತಕರು ನಿರ್ದೈವರತಿ ಧರ್ಮಗಂ
ಟಕರು ಭೂತದ್ರೋಹರಧಿಕಗುರುದೈವನಿಂ
ದಕರು ದುರ್ನೀತರಜ್ಞಾನಿಗಳು ಮಱೆದೊಮ್ಮೆ ತನ್ನೊಳಗೆ ಪೊಕ್ಕವರ್ಗೆ
ಸುಕರತರ ಧರ್ಮಾರ್ಥಕಾಮ ಮೋಕ್ಷವನು ತಂ
ದು ಕರತಳದಲ್ಲಿ ನೆಮ್ಮಿಸಿ ಕೊಡುವುದು ಮಹಾ ಪು
ಲಿಕರಪುರವಮಳಮೂರ್ತಿವಿಳಾಸಸೋಮನಾಥನ ಸಕಲ ಸುಖನಿಳಯವು        ೭೯

ಕಂಗೊಳಿಪ ತನ್ನ ಮೂರ್ತಿಯನು ಕಣ್ತೀವಿ ನೋ
ಳ್ಪಂಗೆ ಪೂಜಿಸುವಂಗೆ ಭೋಗದಂಗವ ಮಾಡು
ವಂಗೆ ತೇಜಾಭಿಮಾನವನಿತ್ತು ನಡೆಸುವಾತಂಗೆ ಕೀರ್ತಿಸುವವಂಗೆ
ಮಂಗಳೋತ್ಸವವನಖಿಳಾಯುವನನಂತ ಭೋ
ಗಂಗಳಂ ಚಲಿಯಿಸದೆ ಧರ್ಮಾರ್ಥಕಾಮ ಮೋ
ಕ್ಷಂಗಳಂ ಸಲಿಸು ನೀಂ ಸೋಮೇಶಯೆಂದಾದಿಮಯ್ಯನುದ್ಘೋಷಿಸಿದನು      ೮೦

ವಸುಧಾತಳಾಗ್ರದೊಳು ಸೋಮನಾಥನ ಕೀರ್ತಿ
ಪಸರಿಸಲಿ ಸರ್ವ ಭೋಗಂಗಳಳವಡಲಿ ಭ
ಕ್ತ ಸಮೂಹದ ಮನೋರಥಂ ಸಲಲಿ ಶೈವಸಮಾಯಾಚಾರ ದಿಕ್ತಟವನು
ಮುಸುಕಲಿ ಸಮಸ್ತಜೀವರು ಸುಖವನಾಂತು ಸಂ
ತಸವನೈದಲಿಯೆನುತ ತನ್ನರಸಿ ಪದುಮಾವ
ತಿ ಸಹಿತೊಳಪೊಕ್ಕನಂದಾದಯ್ಯ ಸೋಮನಾಥನ ಬಲದ ಕಂಬದೊಳಗೆ        ೮೧

ಸತತವೀ ಕೃತಿಯನೋದುವ ಕೇಳುವರ್ಗೆ ಸ
ನ್ನುತಸುಖಂ ಸಂಪದಂ ಹರುಷವರುಷಂ ನಿರೋ
ಗತೆ ನಿತ್ಯವಿಭವವಖಿಳಾನೂನ ಫಳಭರಿತವಹ ಮಹೋತ್ಸವ ಸಂತಸಂ
ಕ್ಷಿತಿಯ ಜನಮಂ ಸುತ್ತಿಮುತ್ತಿ ಮೂವಳಿಸಿ ಸಂ
ತತವಗಲದಿಪ್ಪಂತೆ ಕರುಣಿಸುಗೆ ಗಿರಿಜಾಧಿ
ಪತಿ ಸಹಜ ಸುಲಭಮೂರ್ತಿ ವಿಳಾಸ ಪುಲಿಕರಪುರಾಧೀಶ ಸೋಮೇಶನು       ೮೨

ನುತಕಾಯ ಜಿತಮಾಯ ಪುರಮಥನ ವರಕಥನ
ಧೃತಸೋಮ ಗತಕಾಮ ಚಿರಲಿಂಗ ವರಸಂಗ
ಶ್ರುತಿದೂರ ಮತಿಸಾರ ಗಿರಿಜೇಶ ಸ್ಮರನಾಶ ದುರಿತಹರ ಕರುಣಾಕರ
ಪ್ರತಿರಹಿತ ಗತಿನಿಹಿತ ಶರಣಚಯ ಭರಣಜಯ
ವಿತತಗಣ ಚತುರಗಣ ಸುರರಾಜ ವರ ತೇಜ
ಸಿತಿಗಳನೆ ಅತಿಬಳನೆ ಶರಣಾಗು ಗುರುಮೂರ್ತಿ ಪುಲಿಗೆಱೆಯ ಸೋಮೇಶ್ವರ೮೩