ಪಲ್ಲವ
ಆತುರದೊಳಾದಯ್ಯನಿಚ್ಛೆಯಂ ಸಲಿಸಿ ವಿ
ಖ್ಯಾತಹುಲಿಗೆಱಿಯ ಸುರಹೊನ್ನೆಬಸದಿಯೊಳಿಪ್ಪ
ವೀತರಾಗನನೊಡೆದು ಮೂಡಿದಂ ದಿವ್ಯಮೂರ್ತಿ ವಿಳಾಸ ಸೋಮೇಶನು

ಶ್ರೀಯುಮಾಪತಿ ಶಿವವ್ರತಿ ಶರಣತತಿಹಿತೋ
ಪಾಯ ನಿರ್ಮಾಯ ಸಿತಕಾಯ ಸೌರಾಷ್ಟ್ರಪುರ
ರಾಯ ಸೋಮೇಶ ಪುರನಾಶ ನಿಜವೇಷಮಂ ತೋಱಲಂದಾದಯ್ಯನು
ಹಾಯೆಂದು ಹರುಷಮಂ ತಂದು ಸುಖದೊಳು ಸಂದು
ಜೀಯ ಶಶಿಧರ ದುರಿತಹರ ದಯಾಕರಯೆಂದು
ಕಾಯಮಂ ಮತ್ತೆ ಸಿರಿಚರಣದೊಳು ಕೆಡಹಿ ಸ್ತುತಿಸಿದನುಮಾವರ ಮೆಚ್ಚಲು೧

ಕೊಡುವೆನೀಗಳೆ ವರವನೊಲ್ದು ಬೇಡಯ್ಯಯೆಂ
ದೊಡೆ ಬೇಱೆವರವುಂಟೆ ನೀನೆನ್ನ ಕೂಡೆ ಬಳಿ
ವಿಡಿದು ನಡೆತಂದು ಸೊಕ್ಕಿರ್ದ ಹುಲಿಗೆಱಿಯ ಸುರಹೊನ್ನೆಯ ಮಹಾಬಸದಿಯ
ದಡಿಗ ಜಿನನಂ ನೆಱೆಯೆ ಹೋಳ್ದಾಂತ ಸವಣರಂ
ಹುಡಿಗುಟ್ಟ ನಂದಿಕೇಶನ ಮೇಲೆ ಮೂರ್ತಿಗೊಂ
ಡೊಡೆ ವರಂ ಬಂದುದೆನಲಾ ಪರಿಯಲೇಮಾಳ್ಪೆ ನಡೆ ಮುಂದೆ ಹೋಗೆಂದನು            ೨

ಅಕಟಕಟ ವಿಶ್ವಪತಿಗೆನ್ನಯ ಬಳಲ್ಕೆಯುಂ
ಪ್ರಕಟಮಾಗಿರದೆ ಮುಂದೆನ್ನನೊಬ್ಬವನನೇ
ತಕೆ ಕೃಪಾಕರ ಪೋಗವೇಳ್ದನೆನ್ನಯ ಮನಸ್ತಾಪಮಂ ಪೇಳ್ವೊಡೀಗ
ಸಕಳೇಶನಱಿಯದಿರನಾದೊಡಂ ಪೇಳ್ವೆನೆಂ
ದು ಕರಂಗಳಂ ಮುಗಿದು ದೇವ ದೇವೇಶ ಕೇಳ್
ಭಕುತವತ್ಸಲ ಕರುಣದಿಂದೆನ್ನ ಬಿನ್ನಪವನೆಂದನಂದಾದಯ್ಯನು    ೩

ತಡೆಯದಿಪ್ಪತ್ತೆಂಟುದಿನ ನಡೆದ ದಾರಿಯಂ
ಕಡೆಗುಳಿದ ದಿನವರೆಡಱಿಂ ಹೋಗಬಹುದೆಯೆಂ
ದೊಡೆ ಹೋಗಬಹುದದಕುಪಾಯಮಂ ಪೇಳ್ದಪೆಂ ನೀನೀ ಮಹಾವೃಕ್ಷದ
ಅಡಿಯೊಳೊಯ್ಯನೆ ವಿಶ್ರಮಿಸೆ ನಿನ್ನ ಹುಲಿಗೆಱೆಯ
ಬಡಗಣ ತಟಾಕದೇಱಿಯ ಮೇಲೆ ಬಿಡುವೆನೆಂ
ದೊಡೆ ದೇವ ಸೌರಾಷ್ಟ್ರಪತಿ ಸೋಮನಾಥ ಚಿತ್ತೈಸೆಂದನಾದಯ್ಯನು           ೪

ಹರಿಬ್ರಹ್ಮರುಂ ವಿವಾದದಿ ನಿಮ್ಮ ಚರಣಮಂ
ಸಿರಿಮುಡಿಯ ಕಾಣದುದನೆನಗೆ ತೋಱಿದೆ ಮುಂದೆ
ಸುರರಾಜಪದವಿಯಂ ಕೊಡುವೊಡೊಲ್ಲೆಂ ದೇವರೆನ್ನಯ ಪ್ರತಿಜ್ಞೆಗಾಗಿ
ಸುರಹೊನ್ನೆಬಸದಿಯರುಹನನೊಡೆದು ಮೂಡದೀ
ಪರಿಯೂರ್ಗೆ ಮುಂದೆ ನಾಂ ಮಿಗೆ ಹೋದೊಡೇನೆನ್ನ
ಶರಿರವೇತಕೆ ಬಾತೆ ನೀನೆಂದು ಬರ್ಪೆ ಬರ್ಪುದನಱುಪಬೇಕೆಂದನು     ೫

ತವೆ ಚೈತ್ರಶುದ್ಧಚಾತುರ್ದಶಿಯ ಸೋಮವಾ
ರವು ನಾಳೆ ಮಧ್ಯರಾತ್ರಿಯೊಳು ಬಂದಪ್ಪೆವೆನೆ
ಶಿವನೆ ನೀ ಬಂದುದಕ್ಕೆನಗೆ ಕುಱುಹಾವುದೆನಲುದಯ ಸಮಯದೊಳು ಬಂದ
ಸವಣರ್ಗೆ ಕದನ ತೆಱೆಯದುದೊಂದು ಹಲಕಾಲ
ನವೆವುತಲ್ಲಿರ್ದ ಹೆಳವಂಗೆ ಕಾಲ್ಕುರುಡಂಗೆ
ನವನಯನ ಬರಲೆರಡು ನಿನ್ನಿಂದೆ ಕದದೆಱೆದಪುದು ಮೂಱು ಕುಱುಹೆಂದನು೬

ಕುಱುಹು ಮೂಱಹುದಂಧಹೆಳವರಿಹ ಕಾರಣದ
ನಿಱುಗೆಯಂ ಪೇಳೆನಲು ಕಂದ ಕೇಳೆನ್ನ ಮುಂ
ತಿಱುವ ಭೃಂಗೀಶನಾಂಟ್ಯವ ನೋಡಲೆಳಸಿಯೆನಗಱಿಯದೆಯೆ ಬಂದಿರ್ದರು
ಮಱೆಯಾದ ಗಾಂಧರ್ವ ಚಿತ್ರರಥರೆಲವೊ ಹುಲಿ
ಗೆಱೆಯ ಬಸದಿಯೊಳಂಧಹೆಳವರಾಗಿರುತಿರುತೆ
ನೆಱೆ ವೀರಮಾಹೇಶಪದಕೆಱಗಿ ಕರುಣಿಸುವ ನಿಃಶಾಪವೇನೆಂದರು    ೭

ಸುರಹೊನ್ನೆ ಬಸದಿಯೆಂದಾದಪುದು ಹುಲಿಗೆಱೆಯ
ಪುರದೊಳಾ ಪುರದ ಹರದೂಷಕರನೊರಸಿ ಮ
ತ್ತರುಹನಂ ಬಿರಿಸಿ ಸೌರಾಷ್ಟ್ರ ಸೋಮೇಶನವತರಿಸುವುದರುದ್ಯೋಗದ
ಪರಮಕಾರಣಿಕನಾದಾದಿ ಗಣನಾಥನಿಂ
ನರರೂಪನಾದಯ್ಯವೆಸರಿನಿಂ ನಿಮ್ಮನಿ
ಬ್ಬರನು ಮುಟ್ಟಿದೊಡಾತಸಹಿತಲಾ ಕಜ್ಜಗೆಯಿರಾ ನಿಜದೊಳೆನೆ ನಲಿದರು   ೮

ಆಂತವರ್ನಿನಗೆ ಕಾಳಗಕೆ ನೆರವಾದಪರು
ಅಂತಿಸದಿರೆಂದು ತಲೆದಡವಿ ನಂಬುಗೆಯಿತ್ತು
ಸಂತೈಸುತಿರೆ ನಲಿವು ತಲೆಯೆತ್ತೆ ಹರರುಷವಂಗನಡರೆ ಮಱಹು ಮನವ
ಮುಂತುಗೆಡಿಸಲು ಹರವಸಂ ಮೀಱಲಾದಿಮ
ಯ್ಯಂ ತಾನಿದಿರಿದೆಂದಱಿಯದಿರುತಿರಲ್ಕಾದಿ
ನಂ ತೀರ್ದುದಂದಿನ ದಿನಂ ಬೇಗ ತೀರಬೇಕೆಂಬುದಂ ತೋಱುವಂತೆ   ೯

ಆಗಳಾದಯ್ಯನಂತಃಕರಣಮಂ ನೆಱೆಯೆ
ರಾಗಂ ಮುಸುಂಕುವಂತಿನನಸ್ತಮಾನದೊಳ್
ಭೂಗಗನಮಂ ಪಡುಗಡೆಯ ಸಂಜೆಗೆಂಪು ಮುಸುಕಲ್ಕಿತ್ತಲತಿ ಹರುಷದಿಂ
ಶ್ರೀ ಗೌರಿಪತಿ ತನ್ನೊಳಾತನೊತ್ತನ್ನ ನುಡಿ
ಯಾಗಿರ್ದುದೆಲ್ಲವಂ ಕನಸಿನೊಳ್ತೋಱಿ ಮೈ
ಜೋಗೇಱಿದಂತೆ ಸುಖದಾವೇಶ ಬಂದಂತೆ ಹರವಸಂಬೊಕ್ಕಿರ್ದನು  ೧೦

ಕವಿದ ರಾತ್ರಿಯೊಳೋವಿ ತೆಗೆದಪ್ಪಿಕೊಂಡಖಿಳ
ಭುವನಭರಿತೋದರಂ ಬೇಗದಿಂದೈದಿ ಬಂ
ದವರ ಹುಲಿಗೆಱೆಯ ಬಡಗಣ ತಟಾಕದ ವನದ ಮರದಡಿಯೊಳೊಯ್ಯನಿಳುಹಿ
ಕವಿಳಾಸಗಿರಿಯ ನೈದಿದನತ್ತಲಿತ್ತ ಮೂ
ಡುವ ರವಿಯ ಕಂಡೆದ್ದು ಮಿಗೆ ಸರಂಗೈವ ಪ
ಕ್ಷಿವಿತಾನದುಬ್ಬರಕ್ಕೆಚ್ಚತ್ತು ನಾಲ್ದೆಸೆಯನಾರೈದನಾದಯ್ಯನು     ೧೧

ಆರೈದು ಮುಂದಿರ್ದ ಸೌರಾಷ್ಟ್ರ ಸೋಮನುಮ
ನಾರುಮಂ ಕಾಣದೆ ಮನಂ ನೊಂದು ಮತಿಯುಡುಗಿ
ಕ್ರೂರಮೃಗದಿಂ ಭಯಂಕರಮೆನಿಸಿ ಪೆಚ್ಚಿರ್ದರಣ್ಯವಿಲ್ಲೀ ಬಯಲೊಳು
ವಾರಿನಿಧಿಸಮತಟಾಕಂ ವನಂ ಸರಸಿ ಮುಂ
ದೂರು ರಮಣೀಯವೆನಿಸಿರ್ದುದೆತ್ತಣಿನೆತ್ತ
ಸಾರಿದೆನೆನುತ್ತೆ ಹಲವಂ ಚಿಂತಿಸುತ್ತೆ ಬೆಱಗಾಗಿರ್ದನಾದಯ್ಯನು      ೧೨

ಇದು ಕಂಡುಬಲ್ಲ ಕೆಱೆಯಿದು ಕಂಡುಬಲ್ಲ ವನ
ವಿದು ಕಂಡುಬಲ್ಲ ಕೊಳವಿದು ಕಂಡುಬಲ್ಲಪುರ
ವಿದು ಕಂಡುಬಲ್ಲ ಕುಱುಹುಗಳಾಗಿ ತೋಱುತಿವೆಯಿಂತಿವೆಲ್ಲಿಯವೆನುತ್ತೆ
ಇದು ಶಿವನ ಮಾಟವಾಗದೆ ಮಾಣದಿದಱ ಸಂ
ಪದವುಳಿದ ನಗರಂಗಳೊಳಗಿಲ್ಲ ಮೇಣಾದೊ
ಡಿದು ನಮ್ಮ ಹುಲಿಗೆಱೆಯ ಪುರವಾಗದಿರದೆಂದು ನಿಂದು ನೋಡುತ್ತಿರ್ದನು೧೩

ಸಂದೇಹವಿಲ್ಲ ಹುಲಿಗೆಱೆ ತಪ್ಪದಪ್ಪುದಿದ
ಱಂದದ ಪುರಂ ಧಾರುಣಿಯೊಳಿಲ್ಲದಕ್ಕೆನ್ನ
ಮುಂದೆ ಹೋಗೆಂದು ನುಡಿದಂತೆ ತಂದಿರಿಸಿದಂ ಸೌರಾಷ್ಟ್ರ ಸೋಮಯ್ಯನು
ಇಂದಿನದಿನಂ ಮಧ್ಯರಾತ್ರಿಯನಿತಕ್ಕೆಯ್ದೆ
ಬಂದಪ್ಪನಿನ್ನಂಜಲೇಕೆಂದು ನಗರಿಯಂ
ಬಂದುಹೊಕ್ಕಂ ಮಹೋತ್ಸವದ ಹೆಚ್ಚುಗೆಯ ಹರುಷಾತುರದೊಳಾದಯ್ಯನು         ೧೪

ನೆಲೆಗೊಂಡ ನೇಹದಿಂದಂ ಬಿಡದೆ ನೋಳ್ಪಾಗ
ಹಲವು ಬಂಜೆಯರ ನಡುವಣ ಋತುಪ್ರಭೆಯಂತೆ
ಹಲವು ಬೀಡೆಯನಾಂತ ಮರನ ಮೈಯೊಳಗೆ ತಿಳಿದಂಕುರ ಸ್ಥಾನದಂತೆ
ಹಲವು ತಕ್ಕಿಲ ನಡುವೆ ಸವೆದ ಬೆಳಕೈಯಂತೆ
ಹಲವು ಬಸದಿಯ ನಡುವೆ ಸುರಹೊನ್ನೆ ಬಸದಿಯ
ಗ್ಗಲಿಸಿ ಮೆಱೆಯಲು ಕಂಡು ವಂದಿಸಿದನದಕೆ ಶಿವನುದಯಿಸುವ ತಾಣವೆಂದು            ೧೫

ಚಿತ್ತದುತ್ಸವದಿಂದಲಾದಿಮಯ್ಯಂ ತನ್ನ
ನಿತ್ಯನೇಮವ ಮಾಡುತಿರಲಿರಲು ನಗರದೊಳ
ಗಿತ್ತ ಸ್ವಪ್ನಂಗಳಂ ಕಂಡು ಬೆಱಗಾಗುತ್ತಲಿರೆ ವಾಮಭುಜ ಲೋಚನ
ಕೆತ್ತೆ ಕಂಡತಿ ಹೊಸತು ಹೊಸತಾರುದೆನ್ನ ಪತಿ
ಯಿತ್ತವಧಿ ತುಂಬಿತ್ತು ಬಾರದಿರನಿನ್ನೆಂದು
ಮತ್ತ ಗಜಗಮನೆ ಪದ್ಮಾವತಿದೇವಿ ನಿಶ್ಚಯಿಸಿದಳು ಮನದೊಳಂದು          ೧೬

ಸರಸಿಜಪ್ರಿಯನ ಬರವಂ ಚಕ್ರವಾಕ ಹಿಮ
ಕರನ ಬರವಂ ಚಕೋರಂ ಮಂದಮಾರುತನ
ಬರವನತಿಪಥಿಕಂ ವಸಂತಮಾಸದ ಬರವನೆಳೆದುಂಬಿ ಗಿಳಿ ಕೋಗಿಲೆ
ಎರಡುದೋಱದೆ ಬಯಸುವಂದದಿಂ ಬಿಡದೆನ್ನ
ಪುರುಷನಪ್ಪಾದಿಮಯ್ಯನ ಬರವ ಬಯಸುತಾ
ನಿರೆ ಬಪ್ಪ ಚಿಹ್ನಂಗಳಾದುವಿದಿರ್ಗೊಳ ಹೋಹನೆಂದು ಮನದೊಳು ನೆನದಳು            ೧೭

ಕಂಡು ನಂಟರು ನಲ್ಲರೈತಂದು ಕೇಳ್ನಿನ್ನ
ಗಂಡನಾ ಬಂದನೆನಲಣುಕೆದ್ದು ಸಂತಸದಿ
ಡಿಂಡಿಮದ ಕಹಳೆಗಳ ಪರಿಪರಿಯ ತೋರಣದ ಗುಡಿಯ ಹೊಸಹೀಲಿದಳೆಯ
ಮಂಡನಂಗಳ ಕಳಶ ಕನ್ನಡಿಯ ಬಾಯಿನದ
ಹಿಂಡೆದ್ದ ವನಿತೆಯರ ಸೌರಂಭಸಹಿತ ಮುಂ
ಕೊಂಡು ಭರದಿಂ ನಡೆದಳಿತ್ತ ಮನೆಯೊಳಗೆ ತಮ್ಮಯ್ಯ ಕೋಪವ ತಾಳಲು    ೧೮

ಮಿಸುಗುವ ವಸಂತಮಾಸದ ಬರವನೆಳೆಮಾವು
ಸಸಿಯ ಕಿರಣದ ಬರವನಂಬುನಿಧಿಯಂಕುರ
ಪ್ರಸರದ ಬರವನು ಮಱಿಗೋಗಿಲೆಗಳತುಳಪರಿಮಳದ ಬರವನು ಮಧುಕರ
ಹೊಸಫಳದ ಬರಪನರಗಿಳಿಗಳಿದಿರ್ಗೊಂಬಂತೆ
ಸಸಿವದನೆಯಿರುಸಹಿತ ಪದ್ಮಾವತಿದೇವಿ
ಒಸೆದಿದಿರುಗೊಂಡಳಾದಯ್ಯನಂ ಪರಸಮಯವನಧಿ ವಡಬಾನಳನನು          ೧೯

ಹರೆದ ಮುಡಿ ತೊಡಕಿದಳಕಂ ಬತ್ತಿ ಬಱತು ಬೆಳು
ಕರಸಿದಧರಂ ಗುಳಿದ ಕಣ್ ಬಾಡಿದಾನನಂ
ಕರಮಾಸಿದುಡಿಗೆ ಬಡವಾದೊಡಲುವೆರಸುಮಾನಿನಿ ಸುಭಗನಾದಯ್ಯನ
ಚರಣಕಮಲಕ್ಕೆಱಗಿ ನಡುಗುತ್ತೆ ನಾಚುತ್ತೆ
ಸಿರಿಮೊಗವ ನೋಡಲಾದಯ್ಯ ನಸುನಕ್ಕೊಡಾ
ತರುಣಿ ಹೆಚ್ಚುತ್ತೆ ಹಿಗ್ಗುತ್ತೆ ಸಂಭ್ರಮವೆರಸಿ ನಗರಿಯಂ ಪೊಗುತೆಂದಳು       ೨೦

ಆರುಚಿರಸೌರಂಭಮಂ ಕಂಡು ಪುರದೊಳಗ
ಣಾರುಹತರೆಲ್ಲರೆಯ್ತಂದು ಕಂಡಣಕಿಗರೆ
ದಾರಾದಿಮಯ್ಯನೇ ಹದುಳವೇ ನೀನೆಮ್ಮ ಬಸದಿಯೊಳಗಿರಲು ತಂದ
ಸೌರಾಷ್ಟ್ರದೊಡೆಯನೀ ಸತ್ತಿಗೆಯ ಹಿಡಿದವನೊ
ದಾರಿಗಾಳೆಯವನೋ ಮದ್ದಳಿಯಿ ನೋಯಿವರೊ
ಳಾರು ತೋಱಿವರಾದೊಡೆಮ್ಮ ಬಸದಿಯ ಬೆಂಬಲದೊಳಗೆ ಮುನ್ನುಂಟೆಂದರು         ೨೧

ಮುನ್ನ ನೀವರ್ಚಿಸುವ ಬಸದಿಯೊಳಗಿಪ್ಪಾತ
ನನ್ನೀಗ ತೋಱಲವನಿವರಿಂ ಕನಿಷ್ಠನೆನಿ
ಪನ್ನನಂ ಮಾಡಿದಪೆ ನಲವಱದಿರೆಂದೊಡಾ ಜೈನರೆಲ್ಲಂ ಕೋಪಿಸಿ
ತನ್ನ ಶಿವನಂ ತರುವಡಳವಡದೆ ತಾನೀಗ
ನನ್ನಿಯುಳ್ಳವನಂತೆ ನುಡಿವಿವನ ನಗರಿಯೆ
ಲ್ಲನ್ನಗಲುಬೇಕು ಬೂತಿಕ್ಕಿ ಕಟಕಿಯೊಳು ಗುಡಿಗಟ್ಟೆಂದು ಸಾಱಿಸಿದರು      ೨೨

ಪುರದ ಕೇರಿಯ ಕೇರಿ ಮನೆ ಮನೆಗಳೊಳು ಗುಡಿಯ
ಸರದೆಗೆದು ತಮ್ಮ ಬಸದಿಗಳೊಳತ್ಯಧಿಕವಹ
ಸುರಹೊನ್ನಬಸದಿಯಂ ಸಾರೈಸಿ ಹೂಸಿ ಹೊಸ ರಂಗವಲ್ಲಿಗಳನಿಕ್ಕಿ
ತರದಿ ತೋರಣವೆತ್ತಿ ಬೂತಿಕ್ಕಿ ನಗಲೆಂದು
ವಿರಚಿಸಿದುದಂತಾದಿಮಯ್ಯನ ಮನಕ್ಕತುಳ
ಹರುಷವಾಯ್ತೀಶ್ವರನ ಬರವಿಂಗಯತ್ನದಿಂದಾದ ಸಂಭ್ರಮವ ಕಂಡು         ೨೩

ಆರುಹತರೆಲ್ಲ ಬೂತಿಕ್ಕಿ ನಗುತಿರೆ ಕಂಡು
ನಾರಿಪದ್ಮಾವತಿಯು ಮನದೊಳೆನ್ನಯ ನಲ್ಲ
ಸೌರಾಷ್ಟ್ರಪತಿ ಸೋಮನಾಥ ಬಾರದೆ ಬಾರನುಕ್ಕಿ ನುಡಿವವರ ಕರುಳ
ತೋರಣಂಗಟ್ಟಿಸುವೆನೇಕೆ ನೆರೆದಪಿರೆಂದು
ವಾರಿರುಹವದನೆ ಸದನಕ್ಕೆಯ್ದಿ ಮಂಗಳಾ
ಚಾರವೆಸೆಯಲ್ಕೊಳಗೆ ಮಡದಿ ತನ್ನಯ ಪ್ರಾಣದೊಡೆಯನಂ ಕೊಂಡೊಯ್ದಳು         ೨೪

ನಿಳಯಮಂ ಪೊಕ್ಕು ಸಂತೋಷದಿಂ ಕುಳ್ಳಿರಲು
ಜಳಕ ದೇವಾರ್ಚನಕ್ಕೇಳೆಂದು ಸುದತಿವೆ
ಗ್ಗಳಿಸುತಿರೆ ಸೋಮನಾಥನ ಮೂರ್ತಿಯಂ ಕಂಡೊಡಲ್ಲದಾನೊಲ್ಲೆನೆನಲು
ತಿಳಿಯ ಪೇಳೆಂದು ಬಂದಪನೆಂದು ಕೇಳುತಿಹ
ಲಲನೆಗಾಡಿದನಿಂದಿನಿರುಳು ಮಧ್ಯದರಾತ್ರಿ
ಯೊಳಗೈದೆ ಬಂದಪಂ ಕೇಳು ಮಾನಿನಿಯೆನುತ್ತಿರೆ ದಿನಂ ಕಡೆಗಂಡುದು          ೨೫

ಇಂದಿರುಳು ಬಪ್ಪ ಪುರಮಥನನಂ ನೋಳ್ಪೊಡಾ
ನಂದದಿ ಶುಚಿರ್ಭೂತನಾಗಿ ಬಂದಪೆನೆನು
ತ್ತಂದು ಜಳಕಕ್ಕೆ ಮುಳುಗಿದನೊಯೆಸಿಪಂತೆ ರವಿ ಪಡುವಣಗಡಲೊಳಗಿಳಿಯೆ
ನಂದಿಕೇಶನನೇಱಿ ಸೌರಾಷ್ಟ್ರದರಸನೈ
ತಂದಸುದ್ದಿಯನಾದಿಮಯ್ಯಂಗೆ ಬೇಗದಿಂ
ಮುಂದೆ ಪರಿದಱುಪುವಂತೆರಳೆಯಂ ದೂವಾಳಿಸುತೆ ಚಂದ್ರಮಂ ಬಂದನು      ೨೬

ಗಳಗಳನೆ ರಾತ್ರಿ ಬಲಿಯನು ಸರ್ವಜೀವಿಗಳು
ನಿಳಯಮಂ ಪುಗೆ ದಂತಧಾವನಂಗೈದು ನಿ
ರ್ಮಳ ಕಾಯರಾಗಿ ನವಕುಸುಮಾನುಲೇಪನಾಭರಣ ಧವಳಾಂಬರವನು
ತಳೆದು ಭದ್ರದಮೇಲೆ ಪುಷ್ಪಾಂಜಳಿಯನಾಂತು
ಲಳಿತದಂಪತಿಗಳೀಶಂ ಬಪ್ಪ ಹೊತ್ತಪಾ
ರ್ದೆಳಸಿರ್ದರಿನನುದಯಮಂ ಬಯಸಿ ನಿಂದಿರ್ಪ ಚಕ್ರಮಿಥುನಂಗಳಂತೆ            ೨೭

ಓವಿ ನೋಡುತ್ತಿರಲನಂತಾರ್ಕ ತೇಜಪ್ರ
ಭಾವವಂ ನಗುವ ಬೆಳಗಿನ ನಡುವೆ ದೇವಾಧಿ
ದೇವ ದೇವರ ಗಂಡ ದೇವರಾದಿತ್ಯ ದೇವೇಶ ದೇವಪಿತಾಮಹ
ರಾವುಪ್ಪರಾವಧಾರಘತಿಮಿರ ದಿನಪ ಪಾ
ಯಾವಧಾರು ಪುರ ಜಲಧರ ಮರುತನೆಂಬ ಧ್ವನಿ
ತೀವಿದ ಮೃದಂಗ ಭೇರೀರವಂ ಬೆರಸಿ ಹುಟ್ಟಿತ್ತು ಗಗನಾಂಗಣದೊಳು         ೨೮

ಅತಿಸಂಭ್ರಮದ ರವಂ ಪೊಣ್ಮೆನಭದಲ್ಲಿ ದಂ
ಪತಿಗಳಾಲಿಸಿ ತಿಳಿದು ತಪ್ಪದಿದು ಸೌರಾಷ್ಟ್ರ
ಪತಿ ಸೋಮನಾಥ ಬಿಜಯಂಗೈವೆನೆಂದ ಹೊತ್ತಿದು ಬಂದನಿಂದುಮೌಳಿ
ಸಿತಗತನದಿಂ ಚುನ್ನವಾಡಿ ನಗುತಿಪ್ಪಾರು
ಹತರಿಗಾದುದು ಮಾರಿಯೆಂದು ಮನಸಂದು ಶಂ
ಕಿತಚಿತ್ತಾರಾರೈದು ನೋಡುತಿರೆ ಮೇರೆಯಿಲ್ಲದ ವಿಮಾನಂ ತೋಱಿತು      ೨೯

ಈ ಬಂದುದೆಮ್ಮ ಛಲವೀ ಬಂದುದೆಮ್ಮ ಗೆಲ
ವೀ ಬಂದುದೆಮ್ಮ ಬಲವೀ ಬಂದುದೆಮ್ಮ ನಲ
ವೀ ಬಂದುದೆಮ್ಮ ಗತಿಯೇ ಬಂದುದೆಮ್ಮ ಮತಿಯೀ ಬಂದುದೆಮ್ಮ ಭಾಷೆ
ಈ ಬಂದುದೀ ಬಂದು ದೆಲೆಲೆಲೆಲೆ ಕುಬುಕುಬುಬು
ನಾ ಬದುಕಿದೆಂ ಬದುಕಿದೆಂ ನೋಡು ನೋಡೆಂದು
ಕಾಬಳವಿಯೊಳು ಕೆಡೆದು ಪರವಶೀಭೂತರಾಗಿರ್ದರಾ ದಂಪತಿಗಳು  ೩೦

ಎರಡಿಲ್ಲದಚಳ ನಿಷ್ಠೆಯ ನಂಬುಗೆಯ ಭಕ್ತ
ರಿರವ ಕಂಡತಿಹರುಷದಿಂ ಮೆಚ್ಚಿ ಸೌರಾಷ್ಟ್ರ
ಪುರದೊಡೆಯ ಸೋಮಯ್ಯ ನಾನಿವರನಾದರಿಸುತಿರಲೇಕಿವರ್ಗೆ ನುಡಿದ
ಹಿರಿಯ ಸುರಹೊನ್ನೆಬಸದಿಯ ಜಿನನನೊಡೆದುದಿಸಿ
ಧರೆಗಿದಚ್ಚರಿಯೆನಿಸಿ ಭಕ್ತವತ್ಸಲನೆನಿಪ
ಬಿರಿದ ಪಾಲಿಸುವೆನೆಂದತಿ ಹರುಷದಿಂ ಬಂದು ನಂದಿಯಂ ದೂವಳಿಸುತೆ        ೩೧

ಹರವಸಕೆ ಸಂದಿರ್ದ ದಂಪತಿಗಳೆಚ್ಚತ್ತು
ಗಿರಿಜಾವರಂ ಬಂದನೆಂದಾರ್ದು ಹುಲಿಗೆಱೆಯ
ಪುರವ ಹೊಕ್ಕುವ ಕಂಡು ಸುರಹೊನ್ನೆ ಬಸದಿ ಶಿವಭವನವಾಯ್ತೆಂದು ನಲಿದು
ಹರುಷದಿಂದಂ ತಮ್ಮ ಮನೆಗೆ ನಡೆತಂದಲ್ಲಿ
ಹರಪದಾಬ್ಜದ ಷೋಡಶೋಪಚಾರದ ನೆಲೆಗೆ
ಪರುಟವಿಸುತಿರಲಿತ್ತ ಸುರಜಯಧ್ವಾನದಿಂ ಬರುತಿರ್ದ ಸೋಮೇಶನು         ೩೨

ಮುಂದೆ ಹರಿ ಹಿಂದಜಂ ಕೆಲಬಲದೊಳಗ್ಗದ
ಸ್ಕಂದ ಗಜವದನರೆತ್ತಂ ಸುತ್ತಮುತ್ತಿ ಗಣ
ವೃಂದ ಜಯ ಜಯ ಜಯ ಉಘೇ ಉಘೇ ಉಘೆ ಚಾಂಗು ಭಲಯೆಂದು ನಮಿಸುತಿರಲು

ನಂದಿವಾಹನವೆರಸಿ ನಡೆದು ಮುನ್ನಾದಯ್ಯ
ನೆಂದ ಹುಲಿಗೆಱೆಯ ಸುರಹೊನ್ನೆಬಸದಿಯೊಳು ಮುದ
ದಿಂದೆ ಹೊಕ್ಕಂ ದೇವಕುಲಶಿರೋಮಣಿ ಸೋಮನಾಥಮೂರ್ತಿವಿಳಾಸನು      ೩೩

ಒಳಹೊಕ್ಕು ರಂಗಮಧ್ಯದೊಳು ಶಾಕ್ವರಪತಿಯ
ಕೊಳಗೂಱುವಲ್ಲಿಂದ ಮುನ್ನ ಭಾಳಾಕ್ಷದುರಿ
ಮುಳಿದು ಕೋಣೆಯೊಳಿರ್ದ ದಡಿಗ ಜಿನಬಿಂಬಮಂ ಹೊಡೆಯೆ ಛಟಛಟಿಲನೊಡೆದು
ಛಿಳಿಛಿಳಿಲೆನಲು ಸಿಡಿದು ಛಟಛಟನೆ ಹಣೆಹಾಱಿ
ಫಳಫಳನುದುರ್ದು ಸೌಳನೆ ಬಿರಿದು ಕೆಲಬಲ
ಕ್ಕಿಳಿದೆರಡು ಭಾಗಂಗಳುಱೆದುಡುಹು ಧುಮ್ಮೆಂದು ಬಿದ್ದುದೇವಣ್ಣಿಸುವೆನು           ೩೪

ಕಡೆದ ಜಿನನೊಡಲೆರಡು ಕಡೆಯ ನಡುವಡಸಿ ಕಿಱು
ಜೆಡೆಯ ಸಸಿಕಳೆಯ ಸುರನದಿಯ ಭಾಳಾಂಬಕದ
ಕಡುಚೆಲುವ ಮುದ್ದು ಮೊಗದಹಿ ಕುಂಡಲದ ಡಮರು ಶೂಲ ಫಣಿಯಜಶಿರವನು
ಹಿಡಿದಚಾತುರ್ಭುಜದ ನಂದಿವಾಹನದ ಹೊಸ
ಮೃಡ ಸೋಮನಾಥಮೂರ್ತಿ ವಿಳಾಸನುದಯಿಸಿದ
ನೆಡೆಗೊಂಡು ಜಯ ಜಯ ರವಂ ಬೆರಸಿ ದುಂದುಭಿ ಮೃದಂಗನಾದಂ ಪೊಣ್ಮಲು         ೩೫

ಮುನಿದು ಕೆಲಬಲನನೋವದೆ ನೋಡೆ ವಾಣಿಭ
ದ್ರನು ಬಿರಿಯೆ ಜಕ್ಕಿಣಿಯಸೆಕ್ಕೆ ಬಿಟ್ಟುದು ಬೊಮ್ಮ
ಯನು ನುಚ್ಚು ನೂಱೌಗೆ ಕೆಟ್ಟ ಜ್ವಾಲಾಮಾಲಿನೀದೇವಿಯೆಂಬಾಕೆಯ
ತನು ಸಿಡಿದು ಚವ್ವೀಸ ತೀರ್ಥಕರ ಕಾಯ ಸಿ
ಕ್ಕನೆ ಸೀಳ್ದು ಪದುಮಾವತಿಯ ಕರಣವೊಡೆದು ಮಿ
ಕ್ಕಿನ ಜಿನಪ್ರತಿಮೆಗಳು ಹುಡಿಸಣ್ಣವಾದವುಗ್ರನ ನೋಟುದುರಿ ಹೊಯಿಲೊಳು           ೩೬

ಬಸದಿವೆಸರಂ ತೊಡೆದು ಶಿವನಿಳಯವೆನಿಸಿ ರಾ
ಜಿಸುವ ಸೋಮಯ್ಯಂಗೆ ಪೂರ್ವದಿಗ್ವನಿತೆ ತೋ
ಱಿಸುವ ಮಣಿಗನ್ನಡಿಯೊ ಪೇಳ್ಪುಣ್ಯಮೂರ್ತಿ ದರುಶನವೆಂಬುಣಿಸುವಡೆಯದೆ
ಹಸಿದ ಜೀವರಕಣ್ಣ ಪಾರಣೆಗೆ ಬೊಮ್ಮ ಮಲ
ಗಿಸಿದ ಮಿಸುನಿಯ ಹೊನ್ನ ಪರಿವಾಣವೋಯೆನಿಸಿ
ನಸುದೋಱುತುದಯಗಿರಿಯೊತ್ತಿನೊಳು ಬಿಸಜದ ಮನೋರಮಣನುದಯಿಸಿದನು      ೩೭

ಎಂದಿನಂತುದಯದೊಳು ಬಸದಿಯಂ ಪೂಜಿಸಲು
ಬಂದ ಪಂಡಿತನು ಕದದಗುಳಿಯಂ ತಾಳಕೋ
ಲಿಂದೆ ನೂಂಕಿದಡಲುಗದಿರಲು ತಲೆಮಟ್ಟು ಬಿಡೆ ನೂಂಕಿ ನೂಂಕಾಡಿ ಬಳಲಿ
ನೊಂದು ಹೆಸರುಳ್ಳಖಿಳ ಬಸದಿಬಸದಿಯ ಸವಣ
ವೃಂದಕ್ಕೆ ಹರಿಹರಿದು ಹೇಳಿದಂ ಕಡೆಗಿದೇ
ನೆಂದಱಿಯೆ ಸುರಹೊನ್ನೆ ಸದಿಯ ಕವಾಟದಗುಳಿಯ ತೆಗೆಯಬಾರದೆನಲು    ೩೮

ಅಕ್ಕಕ್ಕಿದೇನು ಚೋದ್ಯವೆನುತ್ತೆ ವಿಸ್ಮಯಂ
ಮಿಕ್ಕಾರುಹತರೆಲ್ಲ ಗುಜುಗುಜಿಸಿ ನಾವಿನ್ನಿ
ದಕ್ಕ ಮಾಡುವುದೇನೆನುತ್ತೆ ಮಂತಣಮಿರ್ದು ಚಿಂತೆಯೊಳು ಮೂಡಿ ಮುಳುಗಿ
ಚೆಕ್ಕನೆಲ್ಲರ ಕರೆಸು ಹಿರಿಯ ಗುರುಗಳ ಬರಿಸು
ತೆಕ್ಕಲೇತಕ್ಕಿನ್ನು ಬಂದುದಂ ಕಾಣ್ಬೆವೆಂ
ದುಕ್ಕಿ ನುಡಿದುದ್ಧತರು ಸುರಹೊನ್ನೆ ಬಸದಿಗಂದುರವಣಿಸಿ ಹರಿತಂದರು     ೩೯

ಉಂಡೆದಲೆಯೋತಿಗಳು ಬಱುವಾಯ ಬಳ್ಳುಗಳು
ಗುಂಡಿಗೆಯ ಚಂಡಿಗಳು ಲೋಚುಗಳ ನೀಚರೆಡೆ
ಗೊಂಡ ಕುಂಚದ ಹಂಚುಗಳು ಕೊಡೆಯ ದಡಿಗರಗ್ಗದ ಚರಿಗೆಗಳ ನರಿಗಳು
ಚೆಂಡಿಕೆಯ ಬಣಗುಗಳು ಬತ್ತಲೆಯ ಬಾಹಿರರು
ಕಂಡರ್ಗೆ ಕಾಕುಗಳು ತಟ್ಟುಗಳ ಘಟ್ಟೆಯರ
ಹಿಂಡು ನೆರೆದು ನಾಡ ಮಲಧಾರಿಗಳ ಮೊತ್ತ ಸುಲಿವಡೆದ ಮಲ್ಲರಂತೆ         ೪೦

ಮಿಂಚುದಲೆ ಬಿದ್ದ ಪುರ್ಬಿನ ಹಸನ್ಮುಖ ಕೈಯ
ಕುಂಚ ಗುಂಡಿಗೆಯ ಕಿನಿವಲ್ಲು ಬಾಗಿದ ಬೆನ್ನಿ
ನಿಂ ಚರಿಗೆಗೊಂಡು ಕೊಬ್ಬಿದ ಹೊಟ್ಟೆ ಬಸಿಗುಂಡೆ ತಟ್ಟು ಕಂಕುಳಲಿಱಿಕಿದ
ವಂಚಕರು ವೇದಬಾಹಿರರು ಮಲಧಾರಿ ಪ್ರ
ಪಂಚಿನಾಡಂಬರದ ಡೊಂಬುಗಳು ತಪಫಲಾ
ಯಿಂಚೆಯೋದವರು ನೆರೆದುದು ಸವಣನೆರವಿ ಕೊಡೆವಿಡಿದ ದಡಿಗರ ಗಡಣವು೪೧

ಬೆಳೆದ ಭಾರದ ಬಿದ್ದ ಮೊಲೆಯನೆಳಲುವ ತುಟಿಯ
ಬೆಳುಗಣ್ಣ ಜೋಲ್ವ ಕಿವಿಯುಸುರು ಮಸಗಿದ ಬಾಯ
ಒಳಗೆ ಸುಳಿವ ನೊರಜಂ ನೂಂಕಿ ಕೈ ಕುಂಚದಿಂ ಬೀಸಿ ಜೈನಾಗಮವನು
ತಿಳುಪುತ್ತೆ ತರ್ಕಿಸುತ್ತಾದರಿಸಿ ಮಂತಣಂ
ಗಳೊಳು ನುಡಿವುತ್ತೆ ಮುಸುಕಿಡುತೆ ತನ್ನಿಳಯಮ
ನ್ನೊಳಪುಗುವ ಕಾಂತೆಯರ ಹಂತಿಯೆಸೆಯಿತ್ತು ಬಸದಿಯ ಬಾಹೆ ಬಾಹೆಗಳೊಳು         ೪೨

ಕಂತಿಯರು ಪಂಡಿತರು ಗುಡ್ಡುಗಳು ತರತರದ
ನಂತ ಪೂಜಾಕಾರಿಗಳು ವ್ರತಾಶ್ರಿತರೆಯ್ದೆ
ಮಂತಣಂಗೊಂಡೊತ್ತಿದೊಡೆ ಮೀಱಿ ತಮತಮಗೆ ತಲೆಯ ತಾಟಿಸಿಕೊಂಡೊಡೆ
ಅಂತಿಂತು ಮಿಡುಕದಿಹ ಕದವ ಕಂಡಿದು ಮಿಸಿಕ
ದಂತಸ್ಥಮಂ ವಿಚಾರಿಸಬೇಹುದಿಂತಿದೇ
ಕಿಂತಾಯ್ತು ಹೇಳೆನುತ್ತಂದು ಕೆಲಬರು ಕೇಳ್ದರಲ್ಲಿ ಮಲಧಾರಿಗಳನು          ೪೩

ಏನಿದತಿಚೋದ್ಯವೀ ಬಸದಿಯಾದಂದಿಂದೆ
ತಾನೊಬ್ಬ ಕದದೆಱಿಯದೆಂದೆಂಬ ಮಾತಿಲ್ಲ
ಊನ ನಮ್ಮೂರು ಹತಕೆಂದು ಮನನೊಂದು ತಱಿಸಂದು ಕೋಪದಲಿ ಬೆಂದು
ಚೈನಸ್ಯ ವಿಸ್ಮಯೋ ನಾಸ್ತಿಯೆಂದಿರಬೇಡಿ
ದೇವಾನುಮೊಂದು ಕೃತ್ಯಂ ಪುಟ್ಟದಿರದಿದಂ
ಜ್ಞಾನದಿಂ ನೋಡಿ ಬೆಸಸೆಂದು ವಂದಿಸಿ ಕೇಳ್ದರಲ್ಲಿ ಮಲಧಾರಿಗಳನು           ೪೪

ಅವರು ಬಱಿಯಱಿವನೇಱಿಸಿಕೊಂಡು ನುಡಿದರೀ
ಕವಿದಿರುಳೊಳೇಕಾಂತವಾಗಿರ್ದು ಬೆದವೋದ
ಸವಣ ನಡುಹುಳ್ಳ ಕಂತಿಯನವಚಿಕೊಂಡೀಗ ನಾಚಿ ಹಡಿಗೆತ್ತಿರ್ದನೊ
ಶಿವನ ತಂದಪೆನೆಂದು ತರಲಾರದಿರ್ದ ಭಂ
ಗವ ಮುಚ್ಚಲೆಂದಾದಿಮಯ್ಯ ಕದವಿಕ್ಕಿಕೊಂ
ಡವಿತಿರುತಲಿರ್ದಪನೊ ತಡೆಯದೆ ವಿಚಾರಿಸಲು ಬೇಕೆಂದರಾ ಗುರುಗಳು       ೪೫

ಮೊದಲ ಮಾತಿನೊಳು ಕುಂದಾರುಹತ ಸಮಯಕೆಂ
ದದ ಮಱೆಸಿಯಾದಿಮಯ್ಯನೊಳು ಸಂದೆಗ ಹುಟ್ಟಿ
ಕದವನಿಕ್ಕಿಯೆಕೊಂಡುಯಿರ್ದೊಡಾತನನಿಲ್ಲಿಯೇ ಲಜ್ಜೆಗೆಡಿಪೆವೆಂದು
ಸದನದೊಳು ಮುನ್ನೋಳ್ಪೆವೆಂದು ಕೆಲಬರು ಹರಿದು
ಸದುಭಕ್ತನಂ ಕಂಡು ಮರಳಿ ಬಂದಿದು ಬಸದಿ
ಗದುಭತವೆನುತ್ತೆಂದು ನೆರೆದ ಮಂದಿಯ ನಡುವೆ ಗುರುಗಳೊಡನಿಂತೆಂದರು   ೪೬

ತನ್ನ ಮನೆಯೊಳಗೈದನಾದಿಮಯ್ಯಂ ಹೋದ
ನಿನ್ನಿರುಳೊಳಿದಱೊಳಾರುಂ ಕೆಡೆದರಿಲ್ಲೆನಲು
ಇನ್ನಾವ ಕಾರಣವೆನಿಪ್ಪುದ ವಿಚಾರಿಸೆನಲೇತಱ ವಿಚಾರವಿನ್ನು
ತನ್ನಿ ಗುದ್ದಲಿ ಹಾರೆ ಸಾರ ಗಾಣದ ಕಣಿಗ
ಳಿನ್ನುಳಿದ ದಬ್ಬುಕಂಗಳ ತೋರಕಲ್ಲುಗಳ
ನೆನ್ನುತಂ ನೆರಪಿದರು ಕದದೆಱಿಯಿಸುವ ಭರದೊಳಜ್ಞಾನ ಮಲಬದ್ಧರು       ೪೭

ಭಾರೈಸಿ ಹಾರೆವೊಂದಾಗಿ ತಿಲಘಾತಕರು
ಹಾರೆಯಿಂದೆತ್ತಿ ಕಣೆಯಿಂ ಮೀಂಟಿ ದಬ್ಬುಕದೊ
ಳೋರಂತೆ ಹೊಡೆಹೊಡೆದು ಬಲುಗಲ್ಲೊಳಿಟ್ಟಿಟ್ಟು ಮರನೊಳಿರಿದಿರಿದು ನೋಡಿ
ಕೂರಿತಪ್ಪುಳಿಗಳಿಂ ಸಂದಿ ಸಂದಿಗಳ ಕಡಿ
ದಾರಿನಿನ್ನಾಪೊತ್ತು ಮಾಡಬೇಕೆನಿಸಿದ ವಿ
ಚಾರವೆಲ್ಲವ ನೊಡರ್ಚಿದರು ಶಿವ ಶಿವ ಕದಂದೆಱಿವ ಭರವಿಂತಿರ್ದುದು       ೪೮

ಮುಳಿದು ಮುಂಕೊಂಡು ಬೊಬ್ಬಿಟ್ಟು ನೆಗಪುವ ಹಾರೆ
ಘಳಿಲನಿಕ್ಕಡಿಯಾಗಿ ಮುಱಿಯೆ ಮುಂಡಿಗೆ ನೆಕ್ಕು
ನೆಳಿಲನುಡಿಯಲು ಹೊಡೆದ ದಬ್ಬುಕದ ಹಣೆಗಣ್ಣು ಹೊಟಹೊಟೆಂದೊಡೆಯೆ ಕಡಿವ
ಉಳಿವ ಬಾಯ್ ಖಳಿಲೆಂದು ಸಿಡಿಯೆ ನೂಂಕುವ ಜನಂ
ಘಳಿಲೆಂದು ಬಿದ್ದು ಹರಣಂಗಳೆವುತಿರೆ ಕಂಡು
ತಿಳಿದರಿದು ಹಲಬರಿಂದಲ್ಲದೊಬ್ಬಿಬ್ಬರಿಂದಾಗದೆಂದರು ಗುರುಗಳು          ೪೯

ಚರಿತದಿಂ ಹರಿ ಹರಿದು ನೆರಪು ಪಟ್ಟಣದ ಪುರ
ಪುರ ವರಕೇರಿಗಳ ನಾಡುಗಳ ಬೀಡುಗಳ
ಅರಸರ ಸಮಸ್ತಾಗ್ರಹಾರದೂರೂರ ಹಳ್ಳಿಗಳ ಮನ್ನೆಯವಟ್ಟದ
ಹರದರುನ್ನತರುಮುಮ್ಮರಿದಂಡಮಂ ಕಬ್ಬಿ
ಲರನಖಿಳ ಸಾಲು ಮೂಲಿಗರನದಿದೆನ್ನದಿಹ
ಪರಿಜನವನೈದೆ ನೆರಹಿದರು ನೆರೆಯಿತ್ತು ಮಿಗೆ ಭೂಮಿ ಬೆಸಲಾದಂತಿರೆ          ೫೦

ಇಟ್ಟುದೇ ಬೊಟ್ಟು ಕಟ್ಟಿತೆ ಪಟ್ಟವೆಂದೆನಿಪ
ಸೆಟ್ಟಿಗಳನಂತಸಾವಿರ ಜೈನರಾ ಹಿರಿಯ
ಪಟ್ಟಣವನಾಳ್ವ ಚಂದ್ರಾದಿತ್ಯ ಜೈನ ನಾಡೆಲ್ಲ ನೆಱೆಜೈನರೆನಲು
ಬೊಟ್ಟೂಱಲನ್ಯರ್ಗೆ ಸಾಧ್ಯವಿಲ್ಲೆಂಬಾಗ
ನೆಟ್ಟನೈಸೀಸು ನೆರೆಯಿತ್ತೆನಲದೇಕಿನ್ನು
ನಟ್ಟನಡುಹಗಲೊಳಗೆ ನೆರೆಯಿತ್ತು ನೆರೆಯಿತ್ತು ಭೂಮಿ ಬೆಸಲಾದಂತಿರೆ        ೫೧

ನೆರೆದನಿತು ಮಂದಿಯಲ್ಲೊಮ್ಮೊಮ್ಮೆ ಬಂದು ಮೋ
ಹರಿಸಿ ಪಂಗಡವಾಗಿ ನೂಂಕಿ ಸಾಧನದಿನೊ
ತ್ತರಿಸಿ ಬೆಂಡಾಗಿ ಕದವಂತೆಱೆವುಪಾಯಮಂ ಕಾಣದತಿ ಚಿಂತೆವಡೆದು
ದೊರೆಗಳಾಗಿದ್ದನಿಬರಾಳೋಚನೆಯ ಮಾಡಿ
ಸುರಹೊನ್ನೆಯೀ ಬಸದಿ ರಾಜಪ್ರತಿಷ್ಟೆಯಿದ
ನರಸಂಗೆ ಹೇಳಿಸುವೆವೆಂದುಪಾಯದಿ ಹಿರಿಯಗುರುಗಳೊಡನಿಂತೆಂದರು        ೫೨

ಈ ಸುದ್ದಿಯಳಬಳಗಂಗಳನೆಲ್ಲವಂ ನಮ್ಮ
ದೇಶಾಧಿನಾಥ ಚಂದ್ರಾದಿತ್ಯಕಂಗೆ ವಿ
ಶ್ವಾಸವಪ್ಪಂತಱುಪಬೇಕಱುಪದಿರಲು ಮುಂದಾದಿಮಯ್ಯನ ಕುಹಕದಿ
ಲೇಸಕ್ಕು ಹೊಲ್ಲೆಯಕ್ಕದಱ ಮೇಲಾತನ ನಿ
ವಾಸದೊಳು ಬೆಟ್ಟವಂ ಕೈಯಿಕ್ಕಿ ಸೆಳೆದು ವಾ
ರಾಸಿಗಡುಕುವ ಕರಿಗಳುಂಟವಂ ತಂದೀಕದಕ್ಕೆ ಮೋಹಿಪೆವೆಂದರು    ೫೩

ಆ ನುಡಿಗೊಡಂಬಟ್ಟು ಹಿರಿಯ ಮಲಧಾರಿಗಳು
ಜೈನರವರಿವರೆನ್ನದೆಲ್ಲರುಂ ಬಹುದೆಂದು
ತಾ ನಮೋರುಹತಾಣ ಜಿನ ಜಿನಯೆನುತ್ತೆ ಮನದೊಳು ಕೌತುಕವನಾಳುತೆ
ಮೌದಿಂದಖಿಳ ಮುನಿಗಳ ನಡುವೆ ನಡೆದು ದು
ಮ್ಮಾನದಿಂದೈತಂದರರಮನೆಯ ಬಾಗಿಲಂ
ಭೂನಾಥನೊಳ್ಸಲುಗೆಯುಳ್ಳುದಱಿನೊಳಪೊಕ್ಕು ಸಪ್ತಕಕ್ಷಾಂತರದೊಳು     ೫೪

ಹಿರಿಯ ಮಲಧಾರಿಗಳು ಬಪ್ಪಾಗ ಮುಂದೆ ವೀ
ರರ ಮಕುಟವರ್ಧನರ ರಾಯರಾವುತರ ಬಿರು
ದರ ದಂಡನಾಯಕರ ಮನ್ನೆಯರ ಭಾಷೆಯಾಳ್ಗಳ ಚರರ ತೇಜಿಷ್ಠರ
ಕರಿ ಶಿಕ್ಷಕರ ನಡುವೆ ತಳ್ತ ಕೈದುಗಳ ಬಿ
ತ್ತರದ ಬೆಳಗಿನೊಳು ಚಂದ್ರಾದಿತ್ಯನಿರ್ದನು
ಪ್ಪರಿಗೆ ಜಡಿದಲ್ಲಾಡುವಂತೋಲಗಂಗೊಟ್ಟು ರಾಯರಕ್ಕಸ ಜೈನನು         ೫೫

ಬಂದ ಗುರುಗಳಿಗೆ ಕೈ ಮುಗಿದುಱಿ ನಮೋಸ್ತೆಂದು
ವಂದಿಸಲು ಧರ್ಮವೃದ್ಧಿಗಳು ಘನವಕ್ಕೆ ನಿನ
ಗೆಂದೊಡೇಂ ಬಂದಿರೆನೆ ನಿಮ್ಮ ಬಸದಿಗೆ ಸೋಮನಾಥನಂ ತರ್ಪೆನೆಂದು
ಹಿಂದೆ ಮೂದಲಿಸಿ ಹೋದಾದಿಮಯ್ಯಂ ನಿನ್ನೆ
ಬಂದನಿಂದೆಮ್ಮ ಬಸದಿಯ ಕದಂದೆಱಿಯದಾ
ವಂದದಿಂದೇಗೈವೆವೆಂದಱುಪಬಂದೆವೆನೆ ಕೋಪದಿಂದಿಂತೆಂದನು      ೫೬

ಕದವಲ್ಲ ಕದಸಹಿತ ಬಸದಿಯಂ ಮುಱಿಯಲಾ
ಪದಟ ಗಜವಿವೆಯವಱ ಕೈಯಿಂದೆ ತೆಗೆಸಿತೆಗೆ
ಯದೊಡೆ ಹೋಗದೊಡೆ ಮಲೆತೊಡೆ ಬಹೆಂ ನಿಮ್ಮ ಝಂಕಿಸಿ ನುಡಿದ ತೆಱದೊಳೆನ್ನ
ಇದಿರೊಳಾದಯ್ಯ ಗೀದಯ್ಯನೆಂಬಂತರ್ಕಿ
ಸಿದನಾದೊಡಂತಕನ ಪಟ್ಟಣದ ದಾರವ
ಟ್ಟದ ಕದಂದೆಗೆಯಿಸುವೆವನಾವನಾದೊಡಂಜದೆ ಹೋಗಿ ನೀವೆಂದನು          ೫೭

ಅಂಕದಾನೆಗಳನಾರೋಹಕರು ಜಡಿದು ಕೂ
ರಂಕುಶದೊಳೊತ್ತಿ ಭೈ ಭೈ ಭಲರೆ ಘೇಯೆಂದು
ನೂಂಕಿದೊಡೆ ಗಜರಿ ಘರ್ಜಿಸಿ ಸೆಳೆದೊಡೊತ್ತಿದೊಡೆ ಮಿಸುಕದಿಹ ಕದಕೆ ಮುಳಿದು
ಹೂಂಕರಿಸಿ ಸೊಂಡಿಲಂ ಸುತ್ತಿ ಹೆಱೆದೆಗೆದು ಕಡು
ಪಿಂ ಕಾಯ್ದು ಹೊಯ್ದು ಕೋಡಾಡಿಗಳು ಮುಱಿದು ಕ
ಣ್ಣಿಂ ಕರುಳು ಸೂಸಿ ಘೀಳಿಟ್ಟೊರಲಿ ಕೆಡೆದವಾನೆಗಳು ಕಂಡವರಳುಕಲು       ೫೮

ಕಡುಗೈದು ತೇಜಕ್ಕೆ ತಂದ ಪಟ್ಟಣದ ಗಜಂ
ಕೆಡೆದುದಲ್ಲಂದೆ ಕೆಡೆದೊಡಂ ಕದಂದೆಱಿಯದೆಂ
ಬೊಡೆ ಕದಂದೆಱಿಯದಿನ್ನೇನೆಂದು ನೃಪತಿಗಱುಪುವೆವಿಂದಿನ ಪರಾಭವ
ತೊಡೆವುದಕುಪಾಯಮಂ ಕಾಣಬೇಕಿಲ್ಲದಿ
ರ್ದೊಡೆರಾಜವೈರವತಿಭಾರವಾದಯ್ಯನಿ
ಟ್ಟಡುಗಿಚ್ಚಿದಾತನಂ ಭುಲ್ಲಯಿಸಿ ತಂದಲ್ಲದಾಗದೆಂಬುದನಱಿದರು         ೫೯

ಆತನಂ ಕರೆವುದಕ್ಕೇನುಪಾಯಂ ನಾವು
ಸೋತೆವೆನೆ ಬಂದಪಂ ಬಂದು ಪುಟವೆದ್ದು ಹರು
ಷಾತುರದಿ ಕದದೆಱಿದಪಂ ತೆಱೆದ ಬಳಿಕದಕೆ ತಕ್ಕುದಂ ನೋಡಿಕೊಂಬಂ
ಈ ತತುಕ್ಷಣವೆ ಕರೆಯೆಲೊಬ್ಬ ಹರಿದೆಮ್ಮ
ಮಾತು ಹುಸಿ ನೀನೆ ಗೆಲಿದಪನೆಂದು ಕರೆದಪರು
ಪ್ರೀತಿಯಿಂ ಸಮುದಾಯವೈದೆನೆರೆದೆಂದಾದಿಮಯ್ಯನಂ ಚರಕರೆದನು           ೬೦

ಆದೊಡತಿಲೇಸಾಯ್ತು ಸಾಕು ನಡೆಯೆಂದು ಪರ
ವಾದಿಕರಕಂಠೀರವಂ ದೂಷಕಧ್ವಾಂತ
ಭೇದನದಿವಾಕರಂ ಪರಸಮಯಸಂತಾನವಲ್ಲರಿ ವಿಹೃತಮದೇಭ
ಆದಯ್ಯ ನುಡಿದಂತೆ ಕಂಡನಾದಯ್ಯ ನೆಱೆ
ಹೋದೊಡವರಿತ್ತ ಬಾಯಿತ್ತ ಬಾಯೆಂದು ಕರೆ
ದಾದರಿಸೆ ನೆರವಿಯಂ ಬಗಿದೊಳಗೆ ಪೊಕ್ಕಾತ ನಡುವೆ ನಿಂದಿಂತೆಂದನು           ೬೧

ಮದನಹರಸೋಮಯ್ಯನೇನ ಬಂದಪನೆಂದು
ಹದಿರೊಳಣಕದೊಳು ಕಟಕಿಯೊಳು ಗುಡಿಯಂ ಕಟ್ಟಿ
ಸಿದ ಮಹಿಮರೇ ಜನಂ ನೊಂದು ದಬ್ಬುಕ ಮುಱಿದು ಹಾರೆ ಮುಂಡಿಗೆಗಳುಡಿದು
ಮದಗಜಂ ಕೆಡೆದವಲ್ಲಕದಂದೆಗೆಯದೆನ
ಲದನೆಂತು ತೆಗೆಸುವೆವು ನೀಕುಟಿಲವಂ ಮಾಡಿ
ಸಿದೊಡಿಲ್ಲ ಉಂಟೆಂಬ ಸಂವಾದ ಸಸಿಯಂಕುರಿಸಿ ನಿಮರ್ದುದೇವೊಗಳ್ವನೊ೬೨

ಕುಟಿಲ ಕ್ಷುದ್ರಾರಾಧನೆಯೊಳು ಸಾಧುತ್ವಮಂ
ನಟಿಸಿ ಸರ್ವಂ ಶೂನ್ಯವಾದವಂ ಮಾಡಿಸ
ಲ್ಕಟಮಟಂ ನಿಂದೆ ನಾಸ್ತಿಕ ಕಟಕಿಯಾಮಾತು ನಿಮ್ಮೊಳಳವಟ್ಟಪ್ಪವು
ದಿಟವನಲ್ಲದೆ ಭಕ್ತರಾಡರಾಡಿತ ಮಾಳ್ಪ
ಧಟಸತ್ವಸಾಮರ್ಥ್ಯರೆನಲಾದಿಮಯ್ಯನು
ಬ್ಬಟೆಯ ನಿಲಿಸಲದೊಂದುಪಾಯಮಂ ಕಂಡು ಸಮುದಾಯದವರಿಂತೆಂದರು            ೬೩

ಇಂತಿದು ಕುಟಿಲಮಲ್ಲದಿರ್ದೊಡೀ ಬಸದಿಯೊಳ
ನಂತ ದಿನವಿಪ್ಪ ಜಾತ್ಯಂಧಂಗೆ ಹೆಳವಂಗ
ಮಿಂತೀಗ ಕಣ್ಕಾಲ್ಗಳಂ ಕೊಟ್ಟೊಡಹುದೆಂದೊಡದನೆ ಕೈಕೊಂಡು ತಿರುಗಿ
ಪಿಂತೆ ತೋಱಿದ ಶಿವನ ಮೂರ್ತಿಯಂ ನೆನೆದು ಮ
ಯ್ಯಂ ತಡವೆ ಶೈವಸಮಯಕ್ಕೆರಡು ಕಣ್ಮೂಡು
ವಂತೆ ಶಿವಕೀರ್ತಿ ಹರಿದಾಡಲ್ಕೆ ಕಾಲ್ಮೂಡುವಂತೆ ಕಣ್ಕಾಲ್ ಬಂದವು           ೬೪

ಇದು ಮೂಡಿದಿನಿತು ಸಾಮರ್ಥ್ಯವುಳ್ಳವನೊಳಗೆ
ಮದನಾರಿ ಸೋಮಯ್ಯನಂ ತಂದು ನಿಲಿಸದಿರ
ಕದದೆಱೆದೊಡೇಂ ತೆಱೆಯದಿರ್ದೊಡೇನೆಂದಳ್ಕಿ ಕೆಲರು ಕೆಲಕೆಲಬರಿದಱ
ತುದಿಯನಾರೈದಿದಕೆ ತಕ್ಕುದಂ ಮಾಳ್ಪೆವಿ
ನ್ನಿದಿರಲಾದಯ್ಯನಂ ಕೆರಳಿಸಲ್ತಾನೆ ತೆಱೆ
ಸಿದಪಂ ಕವಾಟಮನೆನುತ್ತೊಂದು ಬುದ್ಧಿಯಂ ನೆನೆದವದಿರಿಂತೆಂದರು          ೬೫

ಇವ ಹಡೆವುದೇನಱಿದು ಮಂತ್ರತಂತ್ರಗಳೆ
ಮ್ಮವರಲ್ಲಿ ಹುಟ್ಟಿದವು ಕದವ ತೆಱೆಸಿದೊಡೆ ನೋ
ಡುವೆವು ಸಾಮರ್ಥ್ಯ ಸಂಪನ್ನ ದಳಬಳವನೆನಲದಕೆ ಮನಗೊಂಡು ತಿರುಗಿ
ಕವಿದೊತ್ತುವೊಡೆ ಧರಣಿಯೆತ್ತುವೊಡೆ ನೆಳಲು ನೂಂ
ಕುವೊಒಡಚಳವೊಡೆಗುಟ್ಟುವೊಡೆ ವಜ್ರವಾರ್ದು ಸೆಣ
ಸುವೊಡೆ ನಂಜಿನ ತವಗವೆನಿಪ ಕದದತ್ತ ಮುನ್‌ತಾಗಿ ನಿಂದಿಂತೆಂದನು           ೬೬

ಪರಸತಿಗೆ ಪರಧನಕೆ ಪರದೇವತೆಗೆ ಮನಂ
ಬೆರಸದಾನಿಹಡಿಲ್ಲಿ ನೀಂ ಮೂರ್ತಿಗೊಂಡುದೇ
ನಿರುತವಹಡಿನ್ನು ದಿನದಿನಕೆ ಶಿವಮಸಯವೂರ್ಜಿತವಪ್ಪೊಡೆನೆಗೆ ನೀನು
ಕರುಣಿ ಕದವಂ ತೆಱಿಯೆನುತ್ತೆ ಪುಷ್ಪಾಂಜಳಿಯ
ಹರಹಿ ಸಾಷ್ಟಾಂಗಪ್ರಣಮಿತ ತನುವಾಗಿ ಸ
ದ್ಗುರು ಸೋಮನಾಥ ಸೋಮಯ್ಯ ಸೋಮೇಶ ಚಿತ್ತೈಸೆಂದು ಕರೆವುತಿರಲು೬೭

ಶಿವನ ಮುಖವರಳ್ವಂತೆ ಮುಕುತಿವನಿತೆಯ ನೊಸಲ
ನವನಯನದೆರಡೆವೆಯ ಸಂಪುಟಂ ತೆಱಿವಂತೆ
ವಿವಿಧಕೀರ್ತ್ಯಂಗನೆಯನೀಶನಾದಯ್ಯಂಗೆ ಕೊಡುವೊಡೆಡೆಗಡಸಿಪಿಡಿದ
ಜವನಿಕೆಯ ಸೆಱಗು ಸರಿದಂತೆ ಘಳಿಘಳಿಲೆಂದು
ಜವಳಿಗದದೆಗೆಯೆ ಹೊಸತಾಗಿ ಕಣ್ಕಾಲ್ಮೂಡಿ
ದವರುವೆರಸಾದಯ್ಯನೊಳಹೊಕ್ಕ ಬಳಿಕೊಡನೆ ಚಾಚಿದವದೇವೊಗಳ್ವೆನೊ   ೬೮

ಹಾಡುವಾಡುವ ನಲಿವ ನರ್ತಿಸುವ ಪೂಜೆಯಂ
ಮಾಡುವಾರತಿಗೊಡುವ ಹೊಗಳ್ವ ಮುದ್ದಿಸುತೊಡಲ
ನೀಡಿರಿವನಂತವಾದ್ಯವನು ಮೊಳಗುವ ಜಯ ಜಯೆಂಬಖಿಳ ಸಂಭ್ರಮವನು
ನೋಡಿದಂ ದುರಿತಮಂ ತೀಡಿದಂ ಭವವನೀ
ಡಾಡಿದಂ ಮುಕುತಿಯೊಳ್ಕೂಡಿದಂ ಹರುಷಮಂ
ಮಾಡಿದಂ ಪುಣ್ಯಮಂ ಸೂಡಿದಂ ಹೊಗಳಲನುಗೈದನಂದಾದಯ್ಯನು          ೬೯

ಇದೆ ವೇದದರ್ಥವಿದೆ ಮುನಿಗಳ ಧ್ಯಾನದುಳಿ
ವಿದೆ ಭವಾನಿಯ ಮನದ ಬೆಳಗಿದೆ ಸಮಸ್ತ ಲೋ
ಕದ ಕಣ್ಣ ಪುಣ್ಯವಿದೆ ಬೇಳ್ಪ ಮುಕ್ತಿಯ ಮೂಲವಿದೆ ಭಕ್ತತತಿಯ ಭಾಗ್ಯ
ಇದೆ ಸಕಲಸೌಕುಮಾರ್ಯದ ಜನ್ಮಭೂಮಿಯಿದೆ
ಇದೆಯೆನ್ನ ಛಲದ ಭಾಷೆಗಳ ಸರ್ವಾಭಿಮಾ
ನದ ಬೀಜವಿದೆ ನೆನೆವ ಜನದ ಭವರೋಗಹರಿಮೂರ್ತಿಯೆಂದುಱಿಪೊಗಳ್ದನು            ೭೦

ಜಯ ಜನಾರ್ದನವಂದ್ಯ ಜಯ ಜಲಜಭವಪೂಜ್ಯ
ಜಯ ಜಂಭರಿಪುನಾಥ ಜಯಜಯ ಭವಾತೀತ
ಜಯ ಜಾತವೇದಾಕ್ಷ ಜಯಜಾಹ್ನವೀಮಕುಟ ಜಯ ಜರಾಮರಣದೂರ
ಜಯಜಯ ಜಿತಾನಂಗ ಜಯಜಯ ಜಗತ್ಪ್ರಾಣ
ಜಯಜಯ ಜಿನಾರಾತಿ ಜಯಜಯವುಮಾರಮಣ
ಜಯಯೆಂದು ಹೊಗಳುತ್ತ ಹೊಂಗುತ್ತೆ ಹಿಗ್ಗಿ ನೋಡಿದನು ನಿಜ ಮೂರುತಿಯನು      ೭೧

ತರುಣ ಶಶಿಯೆಂಬ ಸಸಿಬೆಳೆಯಲೆ ಮೊದಲಿಂಗೆ
ಸುರಿವಂತೆ ಮೆಱಿವ ಗಂಗಾಜಲಂ ಹೊಱಸೂಸಿ
ಹರಿಯದಂದದಿ ತುಱುಗಿ ಕಟ್ಟಿದೇಱಿಯ ತೆಱದೊಳೆಸೆಯಸುತ್ತಿದ ಜಡೆಗಳು
ಶರಣರ್ಗೆ ಕರುಣಿಸಲು ಭಸ್ಮದ ಭ್ರುಕುಟಿಯೊಳ
ಗಿರಿಸಿದ ಜ್ಯೋತಿಯೆನಿಪಸಮಾಕ್ಷ ಸೋಂಕಿನಿಂ
ವರಚಂದ್ರಕಳೆ ಬೆಮರ್ತಮೃತರಸವೆಂದೆನಿಸಿ ಮೆಱೆಯಿತ್ತು ಗಂಗಾಂಬುಧಿ       ೭೨

ನಿಯತವೇದತ್ರಯಂ ಕಾಲತ್ರಯಂ ತನು
ತ್ರಯ ಗುಣತ್ರಯ ಪದತ್ರಯ ಶಿಖಿತ್ರಯ ಜಗ
ತ್ರಯ ಸುಷುಪ್ತಿತ್ರಯಂ ಶಕ್ತಿತ್ರಯಂ ಮಹಾಪುರುಷತ್ರಯಾದಿಯಾದ
ಆಯುತತ್ರಯಂಗಳೆನಿಸುವವೆನ್ನ ಮುಖದೊಳೆ
ನ್ನಯ ಕಣ್ಣ ಸಂಜ್ಞೆಗಳೊಳಿಹವೆಂದು ತೋರ್ಪಂತೆ
ನಯನತ್ರಯಂ ವಿರಾಜಿಸಿದವಗಜಾಪತಿಯ ವದನಸರಸಿಜದೊಳಂದು           ೭೪

ಕೆಳಗುಭಯ ನಯನ ರವಿಶಶಿಬೆಳಗು ಮೇಲೆನಿ
ರ್ಮಳ ಭಾಳನಯನ ಶಿಖಿವೆಳಗು ಕೆಲಬಲದ ಕುಂ
ಡಳದ ಪಣಿಗಳ ಫಣಾಮಣಿವೆಳಗು ಸುತ್ತಿ ಕಟ್ಟಿದೊಡೆ ದೆಸೆಗೆಟ್ಟು ಸಿಲ್ಕಿ
ಬಳವಳಿದು ಬಡವಾಗಿ ಬಾಗಿ ಕದಪಿನ ಬಳಿಯೊ
ಳಿಳಿದಸಿದುಗೊಂಡು ಮೆಲ್ಲನೆ ನುಸುಳಿ ಹೋಗಲಿಹ
ತೆಳುಗತ್ತಲೆಯ ಮಱಿಗಳೊಯೆನಿಪ್ಪಂತೆಸೆದವೀಶನ ಭ್ರೂಲತೆಗಳು  ೭೫

ಸಕಲದೇವರಿಗಿಲ್ಲದಭಿಮಾನ ನಿತ್ಯ ಜೀ
ವಕಳೆ ನುತಚೆಲುವು ಸಲೆನಿಲೆ ತೊಲಗದಿರಲತಿ
ಪ್ರಕಟದಿಂದೆಸೆವ ಮೊಗಸಾಲೆಯೆಂದೆನಿಸಿ ಮೆಱಿಯಿತು ಶಂಕರನ ನಾಸಿಕ
ಸುಕರ ಮೌಕ್ತಿಕನಿಕರಮಂ ನವ ಪದುಮರಾಗ
ದ ಕರಂಡದಲಿ ತೀವಿದರೊಯೆಂದೆನಿಸಿ ಪುರಾಂ
ತಕನ ಮಿಸುಪಧರಪಲ್ಲವಯುಗಾಂಕಿತ ದಶನಮಂಡಲಂ ಕಣ್ಗೆಸೆದುದು        ೭೬

ನೆನೆವರಿಗೆ ಧರ್ಮಾರ್ಥಕಾಮ ಮೋಕ್ಷಂಗಳೆಂ
ದೆನಿಪ ನಾಲ್ಕುಂ ತೆಱದ ಫಲವೀವ ಕಲ್ಪತರು
ವಿನ ನಾಲ್ಕು ಶಾಖೆಗಳಿವೆಂಬಂತೆ ಮೆಱೆವಪುರಹರನ ಚಾತುರ್ಭಜದಲಿ
ಮುನಿವರರಱಿಯಲ್ಕೆ ಶೂಲವತ್ಯಂತ ದು
ರ್ಜನರ ಜೀವಾನಿಲನೀಂಟಲ್ಕೆ ಸರ್ಪ ಮು
ನ್ನಿನ ವಿವರಮಂ ಪೇಳ್ವ ಬೊಮ್ಮಸಿರ ದುರಿತ ವಿಘಟನಕೆ ಡಮರುಗವೆಸೆದವು೭೭

ಮಂಗಳಮಯಾಂಬಿಕಾನಯನವನಿತಾನಾಟ್ಯ
ರಂಗಸ್ಥಳವೊ ಹೇಳಿಂದೆಂದೆನಿಸಿ ಭೂರಿಯಭು
ಜಂಗಳೆಡೆದೆಱಹಿನೊಳು ಘನ ವಿಶಾಲೋರಸ್ಥಳಂ ವಿಭವದಿಂದೆಸೆದುದು
ಅಂಗದೊಳಗೊಗೆಯುತಾವರಿಸಿ ಪರ್ಬುಗೆವಡೆದ
ಭಂಗಿ ಸುಲಲಿತ ಸೌಕುಮಾರ್ಯ ಶರನಿಧಿಯೊಳು ಕ
ಡಂಗಿ ಹುಟ್ಟಿರ್ದ ನಿರ್ಮಳ ದಕ್ಷಿಣಾವರ್ತವೆನಿಸಿ ಮೆಱೆದುದು ನಾಭಿಯು       ೭೮

ಬೆಳೆವೆತ್ತ ಸಸಿಗೆ ಪರಿವೇಷವಾದಂತೆ ನಿ
ರ್ಮಳಕಾಯಮಧ್ಯಪ್ರದೇಶದೊಳು ಸರ್ಪಮೇ
ಖಳೆ ವಿರಾಜಿಸಿತು ಪುರುಷಾರ್ಥಮಂ ಪುಣ್ಯಗುಣದಿಂದೆ ಸಿಂಗರಿಸಿದಂತೆ
ತಳೆದ ಚಲ್ಲಣದ ಕೌಪೀನವೆಸೆದುದು ಸಮು
ಜ್ವಲ ತರುಣ ತರಣಿಕಿರಣಂ ನಾಡೆ ಕವಿದರುಣ
ಜಲವೆನಲ್ತೊಡರ ಮಾಣಿಕದ ಕೆಂಬೆಳಗು ಮುಸುಕಿದ ಪದಾಂಬುಜ ಮೆಱೆದವು            ೭೯

ಜಗದ ಪುಣ್ಯಕ್ಕೆ ಮೊಗವೊಗೆದುದೋ ಶಿವನ ಕೀ
ರ್ತಿಗೆ ಕೋಡು ಮೂಡಿದವೊ ಭಕ್ತರುತ್ಸವದ ಹೆ
ಚ್ಚುಗೆಗೆ ಕಿವಿಯುಧ್ಬವಿಸಿದವೊ ತಿಳಿದ ಬೆಳುದಿಂಗಳಿಂಗೆ ಕಾಲ್ಗಳು ಮೊಳೆತವೊ
ಬಗೆ ನಿಲುಕದತುಳಕೈವಲ್ಯ ಪರಿವೃತ ರಜತ
ನಗ ವೃಷಭನಾಯ್ತೊ ಹೇಳೆಂಬ ಸಂಶಯಕೆ ನಂ
ಬುಗೆಗೆಯ್ದ ಪುಂಗವನ ನುತದೇವಪುಂಗವಂ ನಲಿದೇಱಿ ಕಣ್ಗೆಸೆದನು           ೮೦

ಪ್ರಣವದಂದುಗೆ ವೇದದುರಗೆಜ್ಜೆ ದಯೆಯ ಕಿಂ
ಕಿಣಿದೊಡರು ಸತ್ಯದ ಖಲೀನ ಸಮತೆಯ ವಾಘೆ
ಯಣಿಮಾದಿ ಮೊಗಮುಟ್ಟು ಶಿವಕೀರ್ತಿ ಕನ್ನಡಿ ಮಹಾನಾದ ಕಿವಿಯ ಚಮರಿ
ಎಣೆಗೆಟ್ಟ ಭಕ್ತಿ ಮಲ್ಲಂ ಪಂಚವರ್ಣ ಹ
ಲ್ಲಣ ಕಾಂತಿಯೆಂಬ ಬಿಗಿ ವಿಪುಳವೈರಾಗ್ಯದಂ
ಕಣಿ ನಿತ್ಯವಕ್ಕರಿಕೆಯೆನೆ ಮುಕ್ತಿಮೂರ್ತಿಗೊಂಡಂತೆ ವೃಷಭಂ ಮೆಱೆದನು      ೮೧

ನಟ್ಟು ನೋಡಿದ ನೋಡಿದೊಡೆ ನೋಡಿದೆಡೆಯೊಳಾ
ದಿಟ್ಟಿ ಸಿಕ್ಕಿರಲಲ್ಲಿ ಯೆವೆಯಿಕ್ಕಲೀಯದಳ
ವಟ್ಟು ಬಹಿರಂಗಗಳೆಲ್ಲ ಪುಳಕಿತವಾಗೆ ಮಱೆದು ಮನದಲ್ಲಿ ತಣಿವು
ಹುಟ್ಟದೀಕ್ಷಿಸುತಾದಿಮಯ್ಯನಿರಲಿರಲು ಹೊಱ
ಗಿಟ್ಟಣಿಸಿ ನೆರೆದ ಪರವಾದಿಗಳು ಬಿಡದೆ ಬೊ
ಬ್ಬಿಟ್ಟು ಕರೆದರು ಕರೆದರೆಲೆಲೆ ಕೇಳಾದಯ್ಯ ಕದವ ತೆಱೆತೆಱೆಯೆಂದರು       ೮೨

ಹಸನಾದುದೆಮ್ಮ ಬಸದಿಯ ಕದವನ್ನಿಕ್ಕಿಕೊಂ
ಡುಸುರುದಿಹುದಾವುದರಿದೆಂದು ತಮತಮಗೆ ಧ
ಟ್ಟಿಸಿ ಕದಂದೆಱೆಯೆಮ್ಮೆ ದೇವರುಗಳೆಲ್ಲರಂ ನೋಡಬೇಕೆಂದು ಮೀಱಿ
ಮಸಗಿ ಕರೆವುತ್ತಿರಲು ತೋಱಿದತಪೆನೊಚ್ಚಿ ಸೈ
ರಿಸಿ ನೀವೆನಲು ನಿಲ್ಲೆವೀಗ ನೋಡಲು ಬೇಹು
ದಸಿತಗಳನಾಣೆ ತೋಱಿನಲೊಡನೆ ಕದದೆಱೆದು ತೋಱಲಂದನುಗೈದನು     ೮೩

ಇದು ಜಿನನ ಭಾಗಂಗಳಿದು ವಾಣಿಭದ್ರನೊಡ
ಕಿದು ಜಕ್ಕಿಣಿಯ ಸೆಕ್ಕೆಯಿದು ಬೊಮ್ಮಯನ ಚೂರ್ಣ
ವಿದು ಯಕ್ಷರೊಡಲ ಹುಡಿಯಿದು ನಿಡಿಯ ಚವ್ವೀಸ ತೀರ್ಥಕರ ಸಿಡಿದ ಕಾಯ
ಇದು ನೋಡಿ ಸರ್ವ ಬೊಂಬೆಗಳ ನುಗ್ಗುಗಳು ಕೊ
ಳ್ಳಿದು ನೋಡಿ ನಿಮ್ಮ ಕಣ್ದಣಿವಂತಿರೆಂದು ಚ
ಲ್ಲಿದೊಡವಂ ಕಂಡು ಬೊಬ್ಬಿಟ್ಟು ಕಂಬನಿಗಳಂ ತುಂಬಿದರು ಹಂಬಲಿಸುತೆ   ೮೪

ಚಲ್ಲಿದೊಡಕುಗಳ ಚೂರ್ಣಂಗಳಂ ಬಲುಸೆಕ್ಕೆ
ಯೆಲ್ಲವಂ ತಂದು ಸಂಧಿಸಿ ನೋಡಿ ತಪ್ಪದಂ
ತಿಲ್ಲಿಗಿಂತೀತನಂ ಬರಿಸಿ ಬಸದಿಯ ಹೊಗಿಸಿದವರಾರೆನುತ್ತೆಲ್ಲರು
ಹಲ್ಲುದಿಂದವುಡುಗಡಿದಿವನ ದೆಸೆವಲಿಗೊಟ್ಟೊ
ಡಿಲ್ಲಿ ಫಲವೇನೊ ಪರಸಮಯಮಂ ಬೆರಸಿದಂ
ಗೆಲ್ಲಿಯದು ನಿಷ್ಠೆ ಶ್ರಾವಕಸಮಯದೊಳಗೆ ಶೈವನ ನಿಲಿಸಲೇಕೆಂದರು         ೮೫

ಬೊಟ್ಟಿನೊಳು ಕೊಂಡನಿತು ಬೂದಿಯಂ ಮೆಯ್ಯಮೇ
ಲಿಟ್ಟಂಗೆ ದೇಶವಾಡುವ ಗಾದೆಯಂತೆ ಪೆ
ರ್ಬೆಟ್ಟದನಿತುಂ ಮರುಳು ಸಾರ್ವುದೆಂಬುದು ನಿರುತವಲ್ಲದೊಡೆ ಸುರಹೊನ್ನೆಯ
ಕಟ್ಟಧಿಕ ಜಿನನನಾ ಪರಿಕರವನೆಯ್ದೆ ಹುಡಿ
ಗುಟ್ಟುವನೆ ಇವನನಿನ್ನಾವುಪಾಯದಿ ಪಿಡಿದು
ತಟ್ಟ ಸೀಳುವೆವೆಂದು ನೆರೆದ ಶ್ರವಣನಿಕಾಯ ಕೆರಳಿ ಕಿಡಿಕಿಡಿಯೋದುದು        ೮೬

ಭರದಿ ತಿಂಗಳ್ಗೆ ಸೌರಾಷ್ಟ್ರಸೋಮನ ತಂದು
ಸುರಹೊನ್ನೆಯರುಹನಂ ಬಿರಿಸಿದಪೆನೆಂದುದದು
ದೊರಕದಾದಯ್ಯ ತಾನೇಬಸದಿಯಂ ಪೊಕ್ಕು ಪ್ರತಿಮೆಯೆಲ್ಲವನೊಡೆದನು
ಮರಳಿ ಕೆಲ ಕೆಲಬರೆಲ್ಲವನಾಡಿಯೇವೊಗಳ್ವೆ
ಹರನ ಭಾವಂ ಕದಂದೆಱೆದಾಗ ತೋಱಿತ್ತು
ನಿರುತವಾದಂದೇನ ಮಾಡುವೆನುತ್ತವತಿ ಭೀತರಾದರು ಮನದೊಳು            ೮೭

ಮರುಳು ಪಾರಿಸಶೆಟ್ಟಿ ಮಗಳಂ ಪಡೆದೊಡೆಬ್ಬ
ಗೊರವಂಗೆ ಕೊಡಲೇಕೆ ಕೊಟ್ಟೊಡಾ ಗೊರವನಂ
ಪುರದೊಳಿರಿಸಲದೇಕವಂ ತನ್ನ ಭಕ್ತರ್ಗೆ ಸವೆದ ಸಾಧನವ ತಂದು
ಚರಿಗೆಗಿಕ್ಕಲದೇಕೆಯಿಕ್ಕಿ ಸೋಮಯ್ಯನಂ
ಬರಿಸೆಂದು ಹೂಣಿಸಲದೇಕೀತ ಸುರಹೊನ್ನೆ
ಯರುಹನಂ ಬಿರಿಸಲೇಕಿದು ತಮ್ಮ ಕರ್ಮವೆಂದುದು ನೆರೆದ ಸಮುದಾಯವು  ೮೮

ಅತಿ ಮೂರ್ಖನಾದಯ್ಯನೊಡೆದೊಡೇಂ ಸೌರಾಷ್ಟ್ರ
ಪತಿ ಸೋಮನಾಥ ಮೂಡಿದೊಡೇನೊ ನಮ್ಮಾರು
ಹತಕೆ ಕುಂದಾದುದೀಯಪಮಾನ ತಾನದೆಂದಿಂಗೆ ಮರಳುವದೆನುತ್ತೆ
ವ್ರತಧಾರಿಗಳು ಬ್ರಹ್ಮಚಾರಿಗಳು ಶ್ರವಣಪಂ
ಡಿತರು ಪೂಜಾಕಾರಿಗಳು ಬಾಯ್ವಿಡುತ್ತಿನ್ನು
ಗತಿಯೇನು ಮಂಡಳಾಚಾರ್ಯ ರಾಜಗುರು ಮಲಧಾರಿ ಬೆಸಸೆನುತಿರ್ದರು     ೮೯

ಭೂತಳದೊಳಧಿಕತರವೆನಿಪ ವಿಖ್ಯಾತಿಯುತ
ವೀತರಾಗಂ ತಮಗೆ ಪತಿಯಾಗಿಯುಂ ಪ್ರಾಣ
ಭೂತನಾಗಿಯು ತಾನೆ ತನ್ನಳಿವ ತಮ್ಮ ಕಣ್ಣಾರೆ ಕಂಡಿಲ್ಲಿ ತಮಗೆ
ಏತಱಿರವಿನ್ನು ಧರಣಿಯೊಳೆಂದು ಸವಣಸಂ
ಜಾತವೆಲ್ಲಂ ಪರಿಚ್ಛೇದಿಸುತೆ ಕಲಿಯಾಗಿ
ಕೌತುಕದಿ ಕುತ್ತಿಕೊಂಡರು ಸಾವ ಭರದಿಂದೆ ಕಯ್ಯ ಕುಂಚದ ಕೊನೆಯಲಿ        ೯೦

ಹೊಡೆಹೊಡೆದುಕೊಂಡು ದುರ್ಮರಣದಿಂ ತಾವೆಲ್ಲ
ಮಡಿದಲ್ಲಿ ಫಲವೇನು ಒದವಿ ತಲೆಯೆತ್ತುವೀ
ಮೃಡಸಮಯಮಂ ಕೆಡಿಸಿ ಭಕ್ತರೆಲ್ಲರನು ಕೊಂದೀಗಳೊಗೆದೀ ಬಸದಿಯ
ನಡುವಿರ್ದ ದೇವರನಮಂಗಳಂ ಮಾಡದಿ
ರ್ದೊಡೆ ಮುಂದೆ ತಮಗೆ ಹೊಲ್ಲೆಂದು ಸವಣರು ಮೀಱಿ
ಕಡೆಗಹಿಂಸಾ ಪರಮಧರ್ಮವೆಂದೆಂಬ ನೀತಿಯ ಬೇರ್ಗೆ ಹುಳುವಾದರು         ೯೧

ಮೂಗು ಹೋದಾಬಳಿಕ ಮೂಕುತಿಯ ಮೇಲೇವು
ದೋಗಾಯಿತಸುವಳಿದ ಬಳಿಕೊಡಲು ಮೇಲೇವು
ದೋಗಾಯ್ತ ಕಂಪಳಿದ ಬಳಿಕ ಕುಸುಮಾವಳಿಯ ಮೇಲೇವುದೋಗಾಯಿತಂ
ಮೇಗೆ ಮುಕ್ತಿಯನೀವ ನಮ್ಮನಚ್ಚಿನ ವೀತ
ರಾಗ ಮಡಿಹಿದ ಬಳಿಕ ಸರ್ವಧರ್ಮದ ಮೇಗ
ಣೋಗಾಯ್ತುವಿನ್ನೇವುದರಸನಂ ಕೂಡಿಕದನವನೊಡರ್ಚುವೆವೆಂದರು          ೯೨

ಕರಿಯಿಂದೆ ಕದದೆಱೆಯದಿರಲು ಬಂದಪ್ಪೆನೆಂ
ಬರಸನಂ ಕದ ಗಜಂ ಮಡಿಯೆ ತನ್ನಯ ಬಸದಿ
ಯರುಹಂತನೊಡೆಯೆ ನಾವೆಲ್ಲರುಂ ಹಿರಿಯಗುರುಗಳನು ಮುಂದಿಟ್ಟು ನಡೆಯೆ
ಭರದಿ ನಮ್ಮೊಡಸಂದು ಹಿರಿಯ ಬಸದಿಗೆ ಬಂದು
ದುರುಳನಾದಯ್ಯನಂ ಹೆಡಗೈವೆರಸಿ ತಂದು
ಪರಿಭವಿಸದಿರನೆಂದು ನೆರೆದ ಸಮುದಾಯವಾ ಮಲಧಾರಿಗಳಿಗುಲಿದುದು      ೯೩

ನಡೆಯೆನಲನಂತ ತಂಡದ ಜೈನರೆಲ್ಲ ಪೊಱ
ಮಡೆಗಾಳುಮೇಳೆಂದು ಗೂಳೆಯಂಗೊಂಡು ಬರೆ
ನಡುವೆ ಮಲಧಾರಿಗಳು ಕೋಪದಿಂದುರಿಯನುಗುಳುತ್ತವತಿ ಸಂಭ್ರಮಿಸುತೆ
ಎಡೆಗೋಲು ಸಮಯಾ ಸಮಯವೆಂಬುದಿಲ್ಲದಾ
ಪೊಡವಿಪತಿಯರಮನೆಯ ಪೊಕ್ಕರಸನೋಲಗಕೆ
ಸಿಡಿಲು ಬಪ್ಪಂತೆ ಬಂದರ್ ಮುಂದಣವ ಶಕುನವೊಂದುವಂ ಬಗೆಗೊಳ್ಳದೆ    ೯೪

ಎಲ್ಲರೊಂದಾಗಿ ನಡೆತಂದು ಚಂದ್ರಾದಿತ್ಯ
ಬಲ್ಲಹನ ಕೂಡೆ ಗಜದಳಿವುಮೊದಲೆನೆ ಕದನ
ಪಲ್ಲವಿಸಿದಾಕ್ರಮವನಭಿಮಾನದಳಿವನಪಕೀರ್ತಿ ಹಬ್ಬಿದ ಹದನನು
ಮೆಲ್ಲಮೆಲ್ಲನೆ ಚಿತ್ತವಱಿದು ಬಿನ್ನೈಸೆ ಭೂ
ವಲ್ಲಭಂ ಸಿಡಿಗಂಡ ಮದದಾನೆ ಸೈರಣೆಯ
ನೊಲ್ಲದುರಣಿಸಿ ಕಡುಮುಳಿವಂತೆ ಘುಡಿಘುಡಿಸಿ ಘೂರ್ಮಿಸಿದನೇವೊಗಳ್ವೆನು          ೯೫

ಒಡಲು ಕುಂಬಿಡೆ ಕರಂ ನಡುಗೆ ಭುಜ ರೋಮವಿದಿ
ರಡರೆ ಪುರ್ಬಲುಗೆ ಮೊಗ ಕರ್ಬೊಗರನುಗುಳೆ ಕಣ್
ಕಿಡಿಗೆದಱಿ ನಿಟಲತಟವಾತಪಸ್ವೇದಬಿಂದುವ ಸುರಿಯೆ ಕಡಗಿ ಬೆಳೆದ
ನುಡಿ ಸಿಡಿಲ ಸಡಗರವನಿಳಿಸೆ ಮೀಸೆಯನಡ್ಡ
ಗಡಿದು ಖಡ್ಗವ ಜಡಿದು ತೊಡೆಯನಪ್ಪಳಿಸಿ ತಾ
ನಡರ್ದ ಗದ್ದುಗೆ ಹೊಗೆಯಲೆದ್ದು ಕೋಪಾಗ್ನಿ ರೂಪಾದಂತೆ ಘೂರ್ಮಿಸಿದನು          ೯೬

ಅರಸನಾ ಕಡುಗೋಪಮಂ ಕಂಡು ದಂಡನಾ
ಥರು ದೇವ ಚಿತ್ತೈಸಿ ಕೋಪವ ಮೊಗಕೆ
ತರಬೇಡಿ ಚಕ್ರೇಶ ನೀಂ ಮುನಿಯೆ ಛಪ್ಪನ್ನ ರಾಜರೊಳಗಿಪ್ಪನಾವಂ
ತರಳೇಕ್ಷಣಕ್ಕೆ ಕೆಂಪೊಗೆಯಲರಿರಾಯರಿಂ
ಬರಿಸಿ ಸಪ್ತಾಂಗಮನದಂ ಮಾಣ್ಗು ಬಡಗೊರವ
ಹರದಂಗಿದೇನೇವುದೆಂದು ಮಂತ್ರಿಗಳೆಂದೊಡಂದು ನೃಪನಿಂತೆಂದನು            ೯೭

ಬಡಗೊರವನಾದೊಡಾ ಸೌರಾಷ್ಟ್ರಸೋಮನಂ
ನುಡಿದಂತೆ ತಂದು ಸುರಹೊನ್ನೆ ಬಸದಿಯ ಜಿನನ
ನೊಡೆವನೆ ಕದಂದೆಱೆಯಲಾಱದಳಿದವು ಕರಿಗಳಿದ ತೆಱೆದು ಹೊಕ್ಕುಬಲ್ಪ
ಪಿಡಿವನೆ ಜಿನ ಪ್ರತುಮೆಯಲ್ಲವಂ ಮುಱಿದು ಹೊಱ
ಗಿಡುವನೇ ಶಿವಭಕ್ತಿಯೆಚ್ಚರಲು ಜೈನಮಂ
ಕೆಡೆಮೆಟ್ಟುವನೆಯಿವನ ಮುಱಿವಂದ ತನಗಹುದು ಪೆಱರ್ಗೆಯಳವಡದೆಂದನು           ೯೮

ಇದನುಪೇಕ್ಷಿಸಲು ತಮ್ಮಾರುಹತಕೆಲ್ಲ ಕುಂ
ದುದಯಿಪುದು ಹೇಳಿಕೆಯಲಾಗದಾನೇ ನಡೆದು
ಕದವಂ ತೆಱಿಸಿ ಕಾಳು ಕಾರ್ಯಮಂ ಕಂಡೆನಾದೊಡೆ ಬಳಿಕ್ಕದಕ್ಕೆ ತಕ್ಕ
ಹದನಮಾಡುವೆನೆನ್ನ ಪಟ್ಟದ ಗಜಂ ಮುಖ್ಯ
ಮದದಾನೆ ಮಡಿದವರುಹಪ್ರತಿಮೆಯೊಡೆದವೆಂ
ದೊದಱಿ ಕೋಪಾಟೋಪದಿಂ ಮೀಸೆಯಂ ಕಡಿದು ಖಡ್ಗವಂ ಜಡಿದೆಂದನು   ೯೯

ಸೊಕ್ಕಿದಾದಿಗನೆಂಬವವನನಂತಕನ ಬಾಣ
ಸಕ್ಕೆ ಕಳುಹುವೆನಿಳೆಯೊಳುಳ್ಳ ಭಕ್ತರ್ಗೆ ಬಿ
ದ್ದಿಕ್ಕುವೆಂ ಮಱೆದು ಬೂದಿಯನಾವನಿಟ್ಟವನ ನಿಜಭಾಳದಲ್ಲಿ ಬರೆದ
ಅಕ್ಕರವನಳಿಪೆನಿಂದೈತಂದ ದೇವರಿಗೆ
ತಕ್ಕುದಂ ಮಾಳ್ಪೆನೆಂದೇಳ್ವ ಭೂಭುಜನ ಮನ
ವಕ್ಕುಳಿಸಿ ದುಗುಡವಂ ತಳೆಯಲವಶಕುನಶತವಾಹೊತ್ತು ಕೈಮಿಕ್ಕವು          ೧೦೦

ಮೂಡಸೀತರು ಗದ್ದುಗೆಯ ಮೇಗೆ ಗೂಗೆಯೆ
ದ್ದಾಡಿದವು ಬಳ್ಳು ಕರೆದವು ಹಿಂದೆ ಹಲ್ಲಿ ಸರ
ಮಾಡಿದವು ವಾಮಭುಜಲೋಚನಂ ನಡುಗಿದವು ಮಣಿಮಾಡ ಜೇನ ನೊಣವ
ಸೂಡಿದವು ಖಡ್ಗ ಮುಱಿದವು ಹಗಲು ನಕ್ಷತ್ರ
ಮೂಡಿದವು ನೋಡು ನೋಡವಶಕುನ ಕಾಳಗಂ
ಬೇಡ ಹದುಳಿರಬೇಕುಯಿನ್ನೊಡೆದ ಬಸದಿಯೊಡೆಗೆಂದರಂದಾಸಚಿವರು        ೧೦೧

ಅರಸ ಕಾಳಗ ಬೇಡವಾದಯ್ಯನುನ್ನತಿಯ
ಚರಿತಮಂ ನಾವಱಿಯದಿರೆ ನೀವು ಪೇಳ್ದಿರಾ
ಕರಿಗಸದಳದ ಕದವ ತೆಱೆದರುಹನಂ ಮುಱಿದು ಜೈನಮಂ ಹರಿದಂದವ
ಗೊರವನೆಮ್ಮಳವಲ್ಲವವಶಕುನಕರಹೊಲ್ಲ
ಧುರದಲ್ಲಿ ಜಯವಿಲ್ಲ ಮನೆಯೊಳಿರಿ ಹದುಳೆಂದು
ನೆರೆದ ಮಂತ್ರಿಗಳಂದು ನೀತಿಯುಂ ಪೇಳಿದೊಡೆ ಭೂಪಾಲನಿಂತೆಂದನು          ೧೦೨

ಈ ತೀವ್ರವೆನಿಸುವವಶಕುನವಿಂತೀ ಮಹೋ
ತ್ಪಾತವಜಯವನನುಕರಿಸುತಿವೆ ನಿಮ್ಮ ಬಱಿ
ಮಾತಿನಲಿ ಹೋಹ ದೈವಿಕವಲ್ಲ ಕುಱುಹಿಟ್ಟು ಬಂದುದಿದು ತನ್ನ ಮೇಲೆ
ಭೀತಿಯೇಕೆನಗಪ್ಪುದೇಗೈದುವುಂ ತಪ್ಪ
ದಾತುರದಿ ಕಾದಿ ಸಮಯಾಚಾರಮಂ ಗೆಲಿಸಿ
ಭೂತಳಂ ಮೆಚ್ಚೆ ಕೀರ್ತಿಯನುಳುಹಿಕೊಂಬೆನಿನ್ನಡ್ಡೈಸಬೇಡೆಂದನು            ೧೦೩