ಪಲ್ಲವ
ದೇವಸಭೆಯೊಳಗಿಂದುಧರನ ಬೆಸನಂ ಪಡೆದು
ಭೂವಳಯಕೆಸವ ಸೌರಾಷ್ಟ್ರದೊಳು ಜನಿಸಿ ಬೆಳೆ
ದಾವಗಂ ವ್ಯವಹಾರರೊಪಿಂದೆ ಹುಲಿಗೆಱೆಗೆ ನಡೆತಂದನಾದಯ್ಯನ

ಶ್ರೀಮದಗಜಾಹರುಷರತ್ನಾಕರೇಂದು ಗೌ
ರೀಮನೋವನವಸಂತಂ ಭವಾನೀವದನ
ತಾಮರಸದಿನಕರನುಮಾಕಲ್ಪಲತಿಕಾವೃತಪ್ರಬಲಸುರಭೂರುಹಂ
ಭೂಮಿಭೃತ್ತನಯಾಕ್ಷಿಕುಮುದನುತ ಚಂದ್ರಿಕಾ
ನಾಮನೆನ್ನಂ ಸಲಹುಗನುದಿನಂ ಹುಲಿಗೆಱೆಯ
ಸೋಮನಾಥಂ ಸೋಮಶೇಖರಂ ಸೋಮಂ ದಯಾಳುಮೂರ್ತಿವಿಳಾಸನು    ೧

ಶ್ರೀಮದುಜ್ವಲತರುಣಫಣಿದಾಮಸೋಮಯ್ಯ
ಭೀಮತರದುರಿತವಿಘಟನನಾಮ ಸೊಮಯ್ಯ
ಹೈಮವತಿಯಪ್ರೇಮನವಧಾಮಸೋಮಯ್ಯಧೃತಸೋಮ ಸೋಮಯ್ಯನೆ
ವ್ಯೋಮಗಂಗಾವೃತಜಟರಾಮ ಸೋಮಯ್ಯ
ರಾಮಣೀಯಕ ಸದ್ಗುಣಸ್ತೋಮ ಸೋಮಯ್ಯ
ಕೋಮಲಾಲಾಪಮಂ ಕರುಣಿಸೆನ್ನಯ ಮತಿಗೆ ಜಿತಕಾಮಸೋಮಯ್ಯನೆ       ೨

ಸೋಮ ಸೋಮವಿಭೂಷ ಸುರರಾಜರಾಜರಿಪು
ಭೀಮ ಭೀಮಪ್ರಥುಳಭುಜ ಶಮನಶಮನ ಜಿತ
ಕಾಮ ಕಾಮವಿದೂರ ಗುಣಗಾತ್ರಗಾತ್ರ ಪಿಂಗಳಜಟಾರಾಮ ರಾಮ
ನಾಮನಾಮಯ ಗರಳಧರಧರ ಸ್ಥಿರ ಪುಣ್ಯ
ಧಾಮಧಾಮ ಪ್ರಬಳಬಳವಂತ ಶ್ರುತಿಸಕ
ಸಾಮ ಸಾಮಸ್ತುತ್ಯ ಶರಣಾಗು ಗುರುಮೂರ್ತಿ ಪುಲಿಕರ ಪುರಾಧೀಶ್ವರಾ      ೩

ನುತಕಾಯ ಜಿತಮಾಯ ಪುರಮಥನ ವರಕಥನ
ಧೃತಸೋಮ ಗತಕಾಮಚರಲಿಂಗ ವರಸಂಗ
ಶ್ರುತಿದೂರ ಮತಿಸಾರ ಗಿರಿಜೇಶ ಸ್ಮರನಾಶ ದುರಿತಹರ ಕರುಣಾಕರಾ
ಪ್ರತಿರಹಿತ ನುತಿವಿಹಿತ ಶರಣಚಯಭರಣಜಯ
ವಿತತಗಣ ಚತುರಗುಣ ಸುರರಾಜ ವರತೇಜ
ಸಿತಿಗಳನೆಯತಿಬಳನೆ ಶರಣಾಗು ಗುರುಮೂರ್ತಿ ಪುಲಿಕರಪುರಾಧೀಶ್ವರಾ       ೪

ನಿರುಪಮ ನಿರಾಲಂಬ ನಿತ್ಯ ನಿರ್ಭಯ ನಿರಾ
ವರಣ ನಿರ್ಮಾಯ ನಿರ್ಮಳ ನಿರ್ವಿಕಲ್ಪನಿಜ
ನಿರಸೂಯ ನಿಶ್ಚಿಂತ ನಿರ್ಲೇಪ ನಿರ್ಗುಣ ನಿರಾಧಾರ ನಿತ್ಯತೃಪ್ತಾ
ನಿರವದ್ಯನಿರ್ಭಿನ್ನ ನಿರ್ದ್ವಂದ್ವನಿರ್ದೋಷ
ನಿರಪೇಕ್ಷ ನಿಷ್ಕಾಮನಿಷ್ಕಾಮ ನಿರಾವರಣ
ನಿರಜನಿರಹಂಕಾರನಿರವಯ ನಿರಾಸಕ್ತ ಪುರಹರನೆ ಸೋಮೇಶ್ವರಾ   ೫

ಶ್ರೀಯುಮಾವರನಿಂದುಧರನಭಯಕರನುಗ್ರ
ಮಾಯಾರಿ ಭಕ್ತಭಯಹಾರಿ ಗಂಗಾವಾರಿ
ವಾಯುಭುಗ್ಭೂಷನುತ್ತಮವೇಷನಘತಿಮಿರಪೂಷನತಿವಿಗತದೋಷ
ಸ್ವಾಯತಾಖಿಳಲೋಕದಾನತವ್ರಜಪುಣ್ಯ
ದಾಯಕಂ ಹರಿವಿರಿಂಚ್ಯಾದಿ ಪ್ರಮುಖದೇವ
ರಾಯ ಪಂಪಾವಿರೂಪಾಕ್ಷನೆಮಗೀಗೆ ಭಕ್ತಿಜ್ಞಾನವೈರಾಗ್ಯಮಂ        ೬

ಶ್ರೀವಿರೂಪಾಕ್ಷನೊಲು ನಿತ್ಯನಭಿನವಮಹಾ
ದೇವಂ ಜಿತೇಂದ್ರಿಯಂ ನಿಷ್ಕಾಮಿ ದೇಹಗುಣ
ವಾವರಿಸದತುಳನಿರ್ಲೇಪನಾರೂಢಲೌಕಿಕವಂಟದಪ್ರತಿಮನು
ಭೂವಂದಿತಂ ನಿತ್ಯತೃಪ್ತಂ ಸಮಸ್ತಮುಖ
ಜೀವಾನುಕಂಪಿಯೆಂದೆನಿಸಿ ರಾಜಿಪಸುಕೃತ
ಭಾವಿ ಹಂಪೆಯ ಶಂಕರಪ್ರಭು ಮದೀಯ ಮತಿಗೀಗೆಪ್ರಸನ್ನತೆಯನು            ೭

ಸಕಲಾಗಮನಾಚಾರ‍್ಯನಪ್ರತಿಮನನಸೂಯ
ನಕಳಂಕನುತ್ತಮನನಂತವೇದಾರ್ಥಸಾ
ಧಕನು ವಿದ್ಯಾತೀತನಾನಂದಮಯನು ಶಾಪಾನುಗ್ರಹ ಸಮರ್ಥನು
ಪ್ರಕಟಿತಯಶೋಮಯಂ ಗುಪ್ತಲಿಂಗಪ್ರೇಮಿ
ಸುಕವಿ ಹಂಪೆಯ ಮಾದಿರಾಜಸುಜ್ಞಾನದೀ
ಪಿಕೆ ಕವಿವಮಾಯಾತಮಂಧವಳಿಪಂತೆನ್ನ ಹೃದಯದೊಳು ಬೆಳಬೆಳಗುಗೆ      ೮

ಭವಿಭಕ್ತರೆಂದಿಲ್ಲ ಕೈಯಾನದುದು ತನ್ನ
ಯುವತಿಗಲ್ಲದೆ ಮನದೊಳೆಳಸದುದು ಕಾಯದಿ
ಚ್ಛೆವಿಡಿಯದುದನ್ಯನಿಂದೆಯನಾಡದಿಹುದು ಪರದೈವಮಂಬಗೆಯದಿಹುದು
ಶಿವಲಿಂಗಪೂಜೆಯನಜಸ್ರ ಹಿಂಗದುದುಕಾ
ಮವಿಕಾರವಾದಿ ಷಡುವರ್ಗವಱೆಯದುದು ನೇ
ಮವಿದೆಂದು ನಡೆವ ಹಂಪೆಯಮಹಾದೇವ ಗುರುರಾಯ ರಕ್ಷಿಸುಗೆಮ್ಮನು     ೯

ಆ ಮಹಾದೇವನುದರದೊಳು ಗುರುಭಕ್ತಿ ನಿ
ಷ್ಕಾಮವಱವಾಚಾರ ನೀತಿ ದಯೆ ಜಂಗಮ
ಪ್ರೇಮಶಮೆ ದಮೆ ಶಾಂತಿ ದಾಂತಿ ಚಾತುರ್ಯ ಸತ್ಯವುದಾರ‍್ಯವೇಕನಿಷ್ಠೆ
ಸಾಮರ್ಥ್ಯವೆಲ್ಲಾಕಲಾಪ್ರೌಢಿಸದ್ಗುಣ
ಸ್ತೋಮವೆಲ್ಲಂ ಕೂಡಿರೂಪಾದುದೆನಿಸುವಮ
ಹಾಮಹಿಮ ಹಂಪೆಯ ಹರೀಶ್ವರನ ಮೂರ್ತಿ ನೆಲಸಿರ್ಕೆನ್ನ ಚಿತ್ತದೊಳಗೆ      ೧೦

ಮನವಚನಕಾಯದೊಳಗೊಮ್ಮೆಯುಂ ಭಾಳಲೋ
ಚನನನಲ್ಲದೆ ಹೊಗಳದುದುಭಟಯ್ಯನ ಮಯೂ
ರನ ಕಾಳಿದಾಸನ ಹಲಾಯುಧನ ಕೇಶಿರಾಜನ ಮಲುಹಣನ ಬಾಣನ
ವಿನುತಭೋಜನ ಭಲ್ಲಟನ ಭಾರವಿಯ ಪದವ
ನೆನೆದು ಬಲಗೊಂಡು ತೊಡಗಿದೆನೀ ಮಹಾಕೃತಿಯ
ನೆನಗೆ ನೆರವಕ್ಕೆ ನಡಸುಗೆ ರಸಂಗೊಡುಗೆ ತಿದ್ದುಗೆ ಸುನಿರ್ವಿಘ್ನದಿಂದ            ೧೧

ರಸದೊಳರ್ಥದೊಳು ಭಾವದೊಳಲಂಕಾರದೊಳು
ಹೊಸರೀತಿಯೊಳು ಬಂಧದೊಳು ಲಕ್ಷಣದೊಳು ಪದ
ವಿಸರದೊಳು ಕಾವ್ಯದೊಳು ತಪ್ಪುಳ್ಳೊಡಿದಱೊಳಗೆ ಪರರುಕೈಯಿಕ್ಕದಂತೆ
ಸಸಿನೆಮಾಡುವುದು ತಿದ್ದುವುದು ಕೊಂಡಾಡಿಲಾ
ಲಿಸಿಕೇಳ್ವುದೆಲ್ಲಾ ಶಿವಾರ್ಚಕರು ನಾ ನಿಮ್ಮ
ಸಿಸುವೆನಗೆ ಕುಂದಿಲ್ಲದೇತಱೆಂದೆನಲೆನ್ನ ಭರಭಾರ ನಿಮ್ಮದಾಗಿ    ೧೨

ನೆರೆದು ನೆರೆದೀ ಕೃತಿಯೊಳುಳ್ಳ ಲೇಸುಗಳನಾ
ದರಿಸಿ ಬಳಿಕುಳ್ಳ ತಪ್ಪಂ ಹಿಡಿವುದೆಂಬ ನಿ
ಷ್ಠುರ ದುರ್ಜನರ್ಗೆ ವಂದಿಸುವೆನೆನ್ನಂ ಜನಂ ನಗಲಾಗದೇಕೆಂದೊಡೆ
ವರಮುಕುರಮಂ ತೊಡೆವರಾರಂಗಣವನುಬೋ
ಹರಿಪರಾರ್ಮಲಿನಾಂಬರವನೊಗೆವರಾರಿದಂ
ಪರಿಕಿಪಡೆಸುಜನರೆಂತಿರ್ದಡೀ ಕೃತಿಗವರು ಕುಂದಕಾಣಿಸಲಾಪರೆ      ೧೩

ನಡೆವರೆಡಹದೆ ಬಱುಬರೆಡಹುವರೆ ಕಾವ್ಯಮಂ
ನಡೆಸುವಾತಂ ರಸಾವೇಶ ಮರಹಾಲಸ್ಯ
ವೆಡೆಗೊಳಲು ತಪ್ಪುಗಲ್ಲದೆ ಕಾವ್ಯಕರ್ತೃ ತಾಂ ತಪ್ಪುವನೆ ಒಂದೆಡೆಯೊಳು
ಎಡೆವಾಯ್ದು ಬಂದ ತಪ್ಪಂ ಹಿಡಿದು ಸಾಧಿಸದೆ
ಕಡೆತನಕ ಬಂದ ಲೇಸಿಂಗೆ ತಲೆದೂಗೆ ತಲೆ
ಯೊಡೆವುದೇ ಬೇನೆಯಱಿಯದ ನೀರಸರನೇಕೆಪುಟ್ಟಿಸಿದನಬುಜಭವನು        ೧೪

ಬಗೆವೆರಸಿ ಸಂದಷ್ಟವಾದಡಱಿಯೆಂ ಪರೋ
ಕ್ತಿಗಳರ್ಥಮಂ ಕಳವುದಧಮತನ ವಱೆದಳುಪಿ
ತೆಗೆದೆನಾದೊಡೆ ಬಳಿಕ್ಕವರ ಮೈನೀರ್ಗೆ ಮುಡಿಯಿಂ ತೆಗೆದ ಪೂಮಾಲೆಗೆ
ಉಗುಳ್ದ ತಂಬುಲಕುಟ್ಟು ಕಳೆದ ಮೈಲಿಗೆಗೆ ಸವಿ
ದೊಗಡಿಸಿದ ಕೂಳ್ಗೆ ಕೈಯಾಂತವನು ಬೇಱೆ ಸಂ
ದಗೆವಿಲ್ಲೆನಿಪ್ಪಾ ಪ್ರತಿಜ್ಞೆ ಹಂಪೆಯ ರಾಘವಾಂಕ ನಿನಗಲ್ಲದಹುದೆ೧೫

ವ್ಯಾಕರಣಪರಿಣತನಲಂಕಾರಪರಿಚಿತನ
ನೇಕರಸನಿಪುಣನಭಿಧಾನಪ್ರವೀಣನೆ
ಲ್ಲಾಕಲಾಕುಶಲನೆನಿಪಾತಂ ಕವೀಶನವನಿದಿರೊಳೇನುವನಱಿಯದ
ಕಾಕುದುರ್ಬೋಧಕಂ ಕವಿಯೆನಿಸಿಕೊಂಡೊಡೆ ಮ
ಹಾಕುಂದೆ ಜಲಶಯನವಿಷ್ಣು ಹರಿಯೆನಿಸಿದೊಡೆ
ಭೇಕನುಂ ನೀರೊಳಗೆ ಹರಿಯೆನಿಸಿಕೊಂಡೊಡದ ಕೊಂದನೇ ಚಕ್ರಧರನು         ೧೬

ಮುಂತೆ ಸರಿಯಿಲ್ಲೆಂದು ಪೊಗಳ್ದವರು ಪೊಱಮಟ್ಟು
ಪಿಂತವನ ಕವಿತೆಯೇನೆಂದು ನಿಂದಿಸಿ ತಮ್ಮ
ತೊಂತಗವಿತೆಯ ತುಂಬನುರ್ಚಿ ನೆರೆದೂರುಗರ ನಡುವೆ ನಿಜ ನಿಳಯದೊಳಗೆ
ಮಂತಣಂಗೊಂಡು ಕಾಳ್ಗೆಡೆದೂಳ್ವ ಕವಿಯೆದೆಯ
ಕೊಂತ ಮೂಗಿನ ಕತ್ತಿಯದಟ ಕವಿನಿಕರ ಚೌ
ದಂತ ಹಂಪೆಯ ರಾಘವಾಂಕಪಂಡಿತನುಭಯಕವಿಶರಭಭೇರುಂಡನು            ೧೭

ಕೆಳೆತನದ ಬಂಧು ವಿಷಯದ ನಂಟುವೆಱಕೆಗಳ
ಬಲದೊಳಾಂ ಕವಿಯೆಂದು ಕವಿರಾಯನೆಂದುವೆ
ಗ್ಗಳಿಸಿ ಕಾಳ್ಗೆಡೆದಡಾಂ ಸೈರಿಸುವನಲ್ಲದಾನಂಟನೀಡಾಡಿ ಮಲೆತೂ
ಬಳಿಕ ನಾಂ ಕವಿಯೆಂದು ವೈಯಾಕರಣಿಯೆಂದು
ಗಳಹಿಧ್ವನಿಗೆಯ್ವದುಷ್ಕವಿಯ ಗರ್ವದ ಮೂಗ
ನಿಳುಹದಿರನುಭಯಕವಿಶರಭಭೇರುಂಡ ಹಂಪೆಯ ರಾಘವಂ ಸಭೆಯೊಳು      ೧೮

ಕವಿಯಧಿಕ ನಿರ್ದೊಡೇಂ ಕೇಳ್ವರಿಲ್ಲದೊಡೆ ಗಾ
ನವಿನೋದಿಯಿರ್ದೊಡೇಂ ಜಾಣರಿಲ್ಲದೊಡೆ ಜಾ
ತಿವಿದಗ್ಧೆಯಿರ್ದೊಡೇಂ ಸುವಿಟರಿಲ್ಲದೊಡೆ ಪೊಸಪೂಮಾಲೆಯಿರ್ದೊಡೇನು
ತೆವೆ ಮುಡಿವರಿಲ್ಲದೊಡೆನಾನಾಕಳಾನ್ವಿತರ
ನಿವಹಮಿರ್ದೇನಾ ಕಳಾ ಪ್ರೌಢರಿಲ್ಲದೊಡೆ
ಇವನೆಯ್ದೆ ಬಲ್ಲವನಪೂರ್ವ ಮೇಣುಳ್ಳೊಡವ ದೇವನಲ್ಲದೆ ಮನುಜನೆ    ೧೯

ರಸ ಜೀವಭಾವವೊಡಲರ್ಥವವಯವ ಶಬ್ದ
ವಿಸರವೊಳುನುಡಿಯಲಂಕಾರವೇ ತೊಡಿಗೆ ಲ
ಕ್ಷಸಮೂಹ ಲಕ್ಷಣಂ ವಿಮಳ ಪದ ವಿನ್ಯಾಸ ನಡೆ ರೀತಿ ಸುಕುಮಾರತೆ
ರಸಿಕರ ಮನಂ ಸುಳಿವ ಸುಖನಿಳಯವಾಗಿಪ್ಪ
ಹೊಸ ಕಾವ್ಯಕನ್ನಿಕೆಯನುಱಿ ಪಡೆದು ಹುಲಿಗೆಱೆಯ
ರಸಸೋಮನಾಥಂಗೆ ಕೊಟ್ಟ ಹಂಪೆಯ ರಾಘವಾಂಕನೇಂ ಕೃತಪುಣ್ಯನೊ      ೨೦

ಕೃತಿವೆಸರುಶ್ರೀಸೋಮನಾಥ ಚಾರಿತ್ರವೀ
ಕೃತಿಗೆ ಪತಿ ಸೋಮೇಶನಿದಕೆ ಕರ್ತರು ಭಕ್ತ
ತತಿಯಿದಂ ಪೇಳ್ದಾತ ಹಂಪೆಯ ಹರೀಶ್ವರನ ಸುತ ರಾಘವಾಂಕನೆನಲು
ಕ್ಷಿತಿಯೊಳಿನ್ನೀ ಕಾವ್ಯಮಂ ಮಹಾಕವಿಗಳೊಳು
ಚತುರರೊಳು ರಸಿಕರೊಳು ಬುಧರೊಳತ್ಯಧಿಕ ಪಂ
ಡಿತರೊಳಾರೋದರಾರ್ಕೇಳರಾ ರ್ಮೆಚ್ಚರೆಂದೊಡದನೇಪೊಗಳ್ವೆನಯ್ಯಾ      ೨೧

ಅಮರರುಂ ಮನುಗಳುಂ ಮುನಿಗಳುಂ ಕವಿಸಮೂ
ಹಮುಮತ್ಯತಿಷ್ಠದ್ದಶಾಂಗುಲಮೆನಿಪ್ಪ ಚಕಿ
ತಮಭಿದತ್ತೇ ಶ್ರುತಿರಪಿ ಪ್ರಕಟವೆನಿಸುವನನಾವೆಂತು ಪೊಗಳ್ವೆವೆಂದು
ತಮತಮಗೆ ಪೊಗಳಲಂಜುವರಂಜುತಿರ್ಕೆ ಬೆ
ಟ್ಟಮನಾನೆಯೇಱಲಾಱದೊಡಿಱುಹೆಯೇಱದೇ
ವಿಮಲಹುಲಿಗೆಱಿಯಸೋಮೇಶನಂ ಬಣ್ಣಿಸುವೆನೆನಗೆ ಕರುಣಿಸುವನಾಗಿ      ೨೨

ನುಡಿಲಕ್ಷಣಾರ್ಥರಸಭಾವಜ್ಞರೆನಿಪ ಉ
ಗ್ಗಡದ ಕವಿಗಳ ಕಾವ್ಯದಿದಿರಲೇಕೋತನ್ನ
ಜಡಮತಿಯೊಳೀಶನಂ ಬಣ್ಣಿಸುವನೆಂದೆನ್ನ ನಗಲಾಗದೇಕೆಂದೊಡೆ
ಬಡವರ ಮನೆಯ ಸೊಡರು ಕಂದುವುದೆ ಗುಡ್ಡಿಪಶು
ಬಿಡದೆ ಕಱಿದಾಹಾಲು ಕಹಿಯಹುದೆಯೆನ್ನ ಕೃತಿ
ಪೊಡವಿಯೊಳು ಸಲುವುದಿದಕೇಕೆ ಸಂಶಯವೆಲವೊ ನಂಬು ನೀಡಿದೆ ಕೈಯನು೨೩

ಇಳೆಯೊಳೊಂದೂರೊಳೆಂತಕ್ಕೆ ಪುಣ್ಯಾಧೀನ
ದೊಳು ಸಮಂತೊಬ್ಬಿಬ್ಬರಂ ಮೆಚ್ಚಿಸುವನಲ್ಲ
ತಿಳಿದು ಕೇಳದೊಡಱೆಯೆ ಕೇಳ್ದೆನ್ನ ಕಾವ್ಯಾರ್ಥಮಂಕಿವಿಯ ಸೆಱಗುಗಳಲಿ
ತಳೆದ ಕವಿಗಳ ಗಮಕಿಗಳ ವಾದಿಗಳ ವಾಗ್ಮಿ
ಗಳ ರಸಾವೇಷ್ಟಿಗಳ ತಲೆದೂಗಿಸುವೆನೆಂದೊ
ಡುಳಿದ ರಸಾವೇಷ್ಟಿಗಳ ತಲೆದೂಗಿಸುವೆನೆಂದೊ
ಡುಳಿದ ದುರ್ಜನರು ಮೆಚ್ಚದೊಡೆಂತೆನಲ್ಕದಕೆಕೇಳು ಮೇಲುತ್ತರವನು        ೨೪

ರೋಗಿ ಹಳಿದೊಡೆ ಹಾಲು ಹುಳಿಯಪ್ಪುದೇ ಹಗಲು
ಗೂಗೆ ಕಾಣದೊಡೆ ರವಿಕಂದುವನೆ ಕಂಗುರುಡ
ನೇಗೈದುವುಂ ಕಾಣದಿರೆ ಮುಕುರ ಕೆಡುವುದೇ ದುರ್ಜನರು ಮೆಚ್ಚದಿರಲು
ನಾಗಭೂಷಣನ ಕಾವ್ಯಂ ಕೆಡುವುದೇ ಮರುಳೆ
ಹೋಗಲಾ ಮಾತದೇಕಂತಿರಲಿ ಕಡೆತನಕ
ಮೇಗುತ್ತರೋತ್ತರವನೀವ ಭಾಷೆಗಳನವಧರಿಸುವುದು ಸಾಹಿತ್ಯರು೨೫

ನಾರದ ಕೈಯಿಂದೆ ಕಲಿಕಾಲದನುವ ಮದ
ನಾರಿ ಚಿತ್ತೈಸಿ ಗಣನಾಥನಂ ಕಳುಹಿದೊಡೆ
ಸೌರಾಷ್ಟ್ರದೊಳಗಾತನಾದಯ್ಯವೆಸರಿಂದ ಜನಿಸಿ ಹುಲಿಗೆಱೆಗೆ ಬಂದು
ವೈರಿಗಳ ಮೂದಲೆಗೆ ಹಿರಿಯ ಬಸದಿಯೊಳು ಶಶಿ
ಧಾರಿಸೋಮಯ್ಯನಂ ನಿಲಿಸಿ ತನ್ನಂ ಮುತ್ತಿ
ದಾರುಹತರಂಗೆಲಿದನೆಂಬುದು ಕಥಾಗರ್ಭವಿದ ಬೆಳಸಿ ಕೃತಿವೇಳ್ವೆನು            ೨೬

ಈ ಕಥೆಗೆ ಪೂರ್ವಪ್ರಸಂಗವೆಂತೆನಲು ಪು
ಣ್ಯಾಕಾರದಂತಿರ್ಪ ಸಕಲ ಲೋಕದ ಭಾಗ್ಯ
ವೇಕ ಕಾಲದೊಳು ಗೂಳೆಯದೆಗೆದ ತೆಱದೊಳೆಸೆವುದು ದೇವಲೋಕವದಕೆ
ನಾ ಕಾಣೆ ಪಡಿಯನದಱ ಶಿರೋರತುನವೆನಲ
ನೇಕ ವಿಧದಿಂದೊಪ್ಪುವಮರಾವತಿಯೊಳಱಿವು
ಸಾಕಾರವಾದಂತೆ ನಾರದಮುನೀಂದ್ರನೆಸೆದಿರ್ದನೇವಣ್ಣಿಸುವೆನು     ೨೭

ಎಸೆವ ಭಕ್ತಿಜ್ಞಾನವೈರಾಗ್ಯವೊಡಲಾಯ್ತೊ
ಮಸೆದು ಪುಟವಿಟ್ಟ ಪುಣ್ಯಂ ಪುರುಷನಾಯ್ತೊ ಶೋ
ಧಿಸಿದ ಬೆಳುದಿಂಗಳಂಗಂ ಬಡೆದುದೋ ಶಿವನ ಸೋಲಿಸುವ ರಾಗಂಗಳ
ರಸ ಬಲಿದು ಮುನಿಯಾಯ್ತೊ ಸರ್ವಸಾಮರ್ಥ್ಯಂಗ
ಳೊಸೆದು ಜೆಡೆವೊತ್ತುವೋ ಕೌತುಕವಿದೆನಲುರಾ
ಜಿಸುವ ನಾರಾದಮುನಿಯ ಚರಿತಮಂ ಬಣ್ಣಿಸುವೊಡೊಂದು ನಾಲಗೆ ನೆಱೆಯದು      ೨೮

ಮುಂತುಗೊಂಡೆಲ್ಲಿ ಜಗಳವ ಹತ್ತಿಸುವೆನೆಂದು
ಚಿಂತಿಸುವ ಮನ ಕೊಂಡೆಯಕ್ಕೆಳಸಿ ಗದಗದನೆ
ತಿಂತೆಮಸಗುವ ಬಾಯಿ ಪರರ ಕಾಳಗದ ಲಗ್ಗೆಯ ಕೇಳಲೆಳಸುವ ಕಿವಿ
ಸಂತಸುಖಮಿರ್ಪವರು ಕಾದಬೇಕೆಂದು ಕಿಸು
ಱಾಂತುಗುರಮಸೆವ ಕೈ ತಲೆಯೊತ್ತಿಕುತ್ತಿಹಲ
ರಂ ತಱಿವ ಸಮರಮಂ ನೋಡಲೆಳಸುವ ಕಣ್ಣುಸಿಂಗರಂ ನಾರದಂಗೆ            ೨೯

ಒದೆವ ಸುರಭಿಯ ತೆಱದಿ ಮುಳ್ಳುಳ್ಳ ಕಲ್ಪವೃ
ಕ್ಷದ ತೆಱದೆ ವರವೇಷದಿಂ ದುಶ್ಚರಿತ್ರಮಂ
ಹುದುಗೊಳಿಸಿ ನಡೆಸುವ ಮಹಾಪುರುಷನೊಂದು ದಿನವಲಸಿಕೆಯೊಳೊಕ್ಕಾಡುತೆ
ಕದನವಿಲ್ಲದೆ ಹೊತ್ತು ಹೋಗದಿದನೆಲ್ಲಿ ಬೆಳ
ಸಿದಪೆನೆಂದಮ್ಮುಳಿಸುತಿದ್ದಿದ್ದು ನೆನೆದೆದ್ದು
ಮದನಹರನೋಲಗಕೆ ಹೋಗಿ ನೋಡುವೆನೆಂದು ಪೊಱಮಟ್ಟ ನಿಜಗೃಹವನು           ೩೦

ಉರವಣಿಸಿ ಬರವರಲು ಹರನೋಲಗಂ ಹರೆದು
ಕರಿ ತಗರು ಕೋಣಂ ನರಂ ಮಕರವೆರಳೆ ಬಲು
ತುರಗ ವೃಷಭಂಗಳಂ ಬಿಗಿದೇಱಿ ಬೀಳ್ಕೊಂಡು ಬೀಡಿಂಗೆ ಮರಳಿ ಬರ್ಪ
ಸುರಪತಿಯನಗ್ನಿಯಂ ಶಮನನಂ ನಿರುತಿಯಂ
ವರುಣನಂ ಮರುತನಂ ಧನದನಂ ರುದ್ರನಂ
ಭರದೊಳೀಕ್ಷಿಸುತೆ ಪರಮನ ಸಮಯಮಂ ಕೇಳುತಂ ಮುನೀಶ್ವರ ನಡೆದನು   ೩೧

ನೆರೆನೆರೆದು ತರತರದೊಳೊತ್ತೊತ್ತೆಯಾಗಿ ಬಿ
ತ್ತರದೆ ಬರುತಿಪ್ಪ ಕಿಂಪುರುಷರಂ ಖಚರರಂ
ಗರುಡರಂ ಗಂಧರ್ವರಂ ಯಕ್ಷರಂ ಮಯೂರರನುರಗ ಸಂತಾನಮಂ
ಸುರರ ವಿದ್ಯಾಧರರನಖಿಳ ಸಿದ್ಧರ ಚರಾ
ಚರರನೀಕ್ಷಿಸುತೆ ಬೆಸಗೊಳುತೆ ನಡೆತಂದನೊ
ತ್ತರಿಸಿ ಮಂದಿಯನು ಬಗಿದುಕ್ಕಿ ಹರಿತಪ್ಪ ಕಡುಗಡಲನಿದಿರೇಱುವಂತೆ         ೩೨

ಹರಿಯಂ ವಿರಿಂಚಿಯಂ ಮನುಗಳಂ ಮುನಿಗಳಂ
ವರಗಣೇಶ್ವರರಂ ನವಗ್ರಹಂಗಳನಧಿಕ
ತರ ನವಬ್ರಹ್ಮರಂ ದ್ವಾದಶಾದಿತ್ಯರೇಕಾದಶ ಮಹಾರುದ್ರರಂ
ಸಿರಿ ಸರಸ್ವತಿ ರಂಭೆ ಮೊದಲಾದ ಸುರವನಿತೆ
ಯರ ನಂದಿ ಮಾಕಾಳರಂ ಚಂಡಕೀರ್ತಿಯಂ
ಹರುಷದಿಂ ನೋಡುತ್ತೆ ಬಂದೊಳಗೆ ಹೊಕ್ಕನೆಡೆಗೋಲಿಲ್ಲದಪ್ರತಿಮನು      ೩೩

ದಿಟ್ಟಿವಾರಿಯ ಮೇಳದಾಳೋಚನೆಗಳೊಳಳ
ವಟ್ಟು ಹತ್ತೈದು ಗಣನಾಥರ್ವೆರಸಿ ತನ್ನ
ಪಟ್ಟದಂಗನೆ ಸಹಿತ ಸುಖದ ಸುಗ್ಗಿಯ ಮೇಲೆ ಶೂಲಿ ಪರಿಣಾಮವಿರಲು
ಕಟ್ಟಿಗೆಯ ಕಲಿಗಳಾಜ್ಞೆಗಳು ಸಮಯಾಸಮಯ
ನಟ್ಟಿರುಳು ಹಗಲೆಂಬ ನೇಮವಿಲ್ಲದೆ ಭವನ
ಕಟ್ಟಿದಿರೊಳೈತಂದು ನಿಂದನಪ್ರತಿಮಮುನಿ ಸಲುಗೆಗಳ ಸಾವಂತನು            ೩೪

ಶಶಿಧರನು ತನ್ನ ನಚ್ಚಿನ ವಲ್ಲಭೆಯನು ಭಾ
ವಿಸುವ ನಿಟ್ಟಿಸುವ ತಕ್ಕಿಸುವ ಮುದ್ದಿಸುವ ಭೋ
ಗಿಸುವ ಲಾಲಿಸುವ ಪಾಲಿಸುವ ಪಾಟಿಸುವ ಪರಿಕಿಸುವ ನಗಿಸುವ ನುಡಿಸುವ
ಬೆಸನದೆಸಕಕ್ಕೆ ಪರವಶನಾಗಿ ಸುಖದೆಯೆ
ಣ್ದೆಸೆಗಾಣದಿರೆ ವೀಣೆಯಂ ಜಾಣಿನಿಂದೆ ಬಾ
ಜಿಸಿ ಸರಂದೋಱೆ ಕೈಮುಗಿದು ಶಿರದೊಳು ಹೊಱುವನಂ ತಿರುಗಿ ಹರಕಂಡನು          ೩೫

ದೇವ ಕುಪಿತಾಂಧಕಾಸುರಕಂದಕುದ್ದಾಲ
ದೇವ ಕರ್ಕಶಕಾಲ ತೂಲವಿಲಯೋಜ್ವಲನ
ದೇವ ಮದನಮದೇಭಬಿದುವಿದಳನ ಪ್ರಬಲಬಲವಂತ ಪಂಚಾನನ
ದೇವ ದಾನವಪುರತ್ರಯಗಹನದಹನ ಜಯ
ದೇವ ಜಯಜಯಯೆಂಬ ನಾರದಮುನೀಂದ್ರನಂ
ದೇವರಾಯಂ ದೇವರಾದಿತ್ಸನಿತ್ತಬಾಯಿತ್ತಬಾಯೆನುತಿರ್ದನು       ೩೬

ಇನಿತು ಮನ್ನಣೆಯ ಮೇಲಿಡುಗಿಚ್ಚನಿಕ್ಕಬೇ
ಕೆನುತೆ ದಿಟ ದೂರದಿಂ ಬಂದಂತೆ ಮೆಲ್ಲಮೆ
ಲ್ಲನೆ ತೊಡೆಯನೊತ್ತಿಕೊಳುತಡಿಯಿಟ್ಟು ಬಳಲ್ದಂತೆ ಬಸುಱುಬ್ಬಲುಸುರಿಕ್ಕುತೆ
ತನುಬೆಮರ್ದಂತೆ ಹಸ್ತದ ಕಮಂಡಲಜಲವ
ನನುವಾಗಿ ಪೂಸಿಕೊಂಡೆದೆಯನೂದಿಕೊಳುತ್ತೆ
ಮನದೊಳಗೆ ನೊಂದಂತೆ ಮೋಱೆಯಂ ಮುಱುಕಿಸುತೆ ಬಂದು ದೂರದೆ ನಿಂದನು        ೩೭

ಇತ್ತ ಬಾ ಬಳಲ್ದೆಯೆಲ್ಲಿಗೆ ಹೋದೆ ಹುಸಿಯದಿರು
ಚಿತ್ತದನುಮಾನ ಮೊಗದೊಳು ತೋಱುತಿದೆ ಮುಖಂ
ಕಿತ್ತಡವನಾಲಿಂಗಿಸುತ್ತಿದೆ ದಿಟಂ ಹೇಳು ಹೇಳೆಂದು ಹರ ನೇಮಿಸಿ
ಹತ್ತೆ ಕರೆದೋವಿ ಶಶಿಮೌಳಿ ನಾರದನ ಕೇ
ಳುತ್ತಿರಲು ಕೈಮುಗಿದು ನರಲೋಕದೊಳಗೆಲ್ಲ
ಸುತ್ತಿ ಬಳಲಿದೆನೆಂದು ನುಡಿದೊಡಲ್ಲಿಗೆ ಹೋದ ಕಾರಣವದೇನೆಂದನು        ೩೮

ಗುರುನಿಷ್ಠರಾರು ಲಿಂಗಾರೂಢರಾರು ಸ
ತ್ಪುರುಷರಾರನೃತವಂಟದರಾರುವತಿ ವಿಮ
ತ್ಸರರಾರು ಭೂತಹಿತರಾರು ಪರಸತಿ ತಾಯ ಸರಿಯೆಂದು ಕಾಣ್ಬರಾರು
ಕರುಣಿಗಳದಾರು ವಿದ್ಯಾನಿಚಯ ನಿಪುಣ ಗುಣ
ಪರಿಣತರದಾರು ದಾನಿಗಳಾರು ಧರ್ಮತ
ತ್ಪರರಾರು ಧರಣೀತಳಾಗ್ರದೊಳಗೆಂದು ನೋಡಲು ಹೋದೆ ನಾನೆಂದನು     ೩೯

ಉನ್ನತಾಶ್ಚರ್ಯಂಗಳೇನೇನ ಕಂಡೆಯೆನೆ
ನಿನ್ನ ನಚ್ಚಿನ ಋಷಿಯಗಸ್ತ್ಯನಾಶ್ರಮವಾತ
ತನ್ನ ಕೈಯಾರೆ ಪ್ರತಿಷ್ಠಿಸಿದಗಸ್ತ್ಯೇಶ್ವರಂ ರಾಮನನುಜನಂದು
ಚೆನ್ನಿಂ ಪ್ರತಿಷ್ಠಿಸಿದ ಲಕ್ಷ್ಮಣೇಶ್ವರವವಕೆ
ಮುನ್ನ ನಿನ್ನಂಶವಹರುದ್ರರ್ ಪ್ರತಿಷ್ಠಿಸಿದ
ಹನ್ನೊಂದು ತೀರ್ಥಮಂ ತಳೆದ ಪುಲಿಕರ ನಗರಿಯಂ ಕಂಡೆ ನಾನೆಂದನು         ೪೦

ಮೂಲೋಕದೊಳಗಿಲ್ಲ ಶಿವಶಿವಾ ಏವೊಗಳ್ವೆ
ನಾ ಲಿಂಗವಾ ತೀರ್ಥವಾ ಕ್ಷೇತ್ರವಾಸ್ಥಾನ
ವಾಲೋಕಿಪರ ಕಣ್ಣಪುಣ್ಯ ನೆನೆವರ ಮನೋಹರವಿಹರ ಸುಖದ ಸುಗ್ಗಿ
ಲೀಲೆಯಿಂ ಪೊಗಳ್ವರ ಬಾಯ್ ಬಸಂತವದೆನಿಸಿ
ಸೋಲವಿಲ್ಲದ ಮಹಿಮೆಯಿಂದೊಪ್ಪುತಿದೆಯೆನಲು
ನೀಲಕಂಧರನದಱ ಭೋಗದಾಗಂ ಪೂಜೆಯೋಜೆಯಂ ಬೆಸಗೊಂಡನು           ೪೧

ಅದಱ ಮಾತೆಲ್ಲಿಯದು ಹೊಗಲಂತಹ ಶಿವಾಲ
ಯದ ಬಾಗಿಲೆಂತಕ್ಕೆ ತೆಗೆವುದೇಯೆಂದು ಕೇ
ಳದೆ ಪೂಜೆಯಂ ಕೇಳ್ವರೇಯೆನಲು ತೆಗೆಯಲೀಯದರಾರು ಹೇಳೆಂದೆನೆ
ಪದೆದು ಜೈನರು ಹೆಚ್ಚಿ ಸೊಕ್ಕಿ ಕಂಗಾಣದತಿ
ಮದದಲಂತಾಕದವ ಕೆತ್ತು ಭೋಗವ ಕೆಡಿಸಿ
ಸದೆ ಸೊಪ್ಪನೊಟ್ಟಿ ತೀರ್ಥವ ಹೂಳಿ ದುರ್ನೀತಿಯಲಿ ನಡೆವುತಿಹರೆಂದನು    ೪೨

ಜ್ಞಾನವಿಲ್ಲಱಿವು ಹುಗದಾಚಾರವಡಿಯಿಡದು
ದಾನಧರ್ಮಂ ದೂರನೀತಿಯತ್ತತ್ತಲಭಿ
ಮಾನವಂ ಕಂಡರಾರ್ ಭೂತದಯೆಯೆಲ್ಲಿಯದು ಭಕ್ತಿಯೆದ್ದೆಱಗದಲ್ಲಿ
ದೀನರುಂ ದುಷ್ಟರುಂ ಧೂರ್ತರುಂ ನೆಱೆ ಪುಣ್ಯ
ಹೀನರುಂ ಭವಿಗಳುಂ ನೀಚರುಂ ಪಾತಕ
ಧ್ಯಾನರುಂ ನೆರೆದ ಹುಲಿಗೆಱೆ ಹುಲಿಯ ಗುಹೆಯಂತಿರದೆ ದೇವಕೇಳೆಂದೆನು    ೪೩

ಶಿವನೆಂಬ ದೈವವಿಲ್ಲೆಂಬರೆಲೆ ದೇವ ನಿ
ನ್ನ ವಿನೋದಸಾಮರ್ಥ್ಯಶಾಸನವೆನಿಪ್ಪ ವೇ
ದವನು ಹುಸಿಯೆಂಬರಜ್ಞಾನನಿರುಹರಣಪೌರಾಣಮಂ ಕಾಕೆಂಬರು
ವಿವಿಧ ಲೋಕಾನುಗ್ರಹಾರ್ಥಾಗಮಾದಿ ಶಾ
ಸ್ತ್ರವನೇಳಿಪರು ಪಾಪಹರವೆನಿಪ ಪುಣ್ಯನದಿ
ನಿವಹಮಂ ನಿಂದಿಸುವರಾ ಜೈನರೆಂದಾಡಿದನು ಬಾಯ ಬಱನುಡುಗಲು        ೪೪

ದೇವ ನಿಮ್ಮಗ್ರಪೂಜೆಗಳನೊಲಿದೀವ ಯಾ
ಗಾವಳಿಯನಲ್ಲೆಂಬರದುವಿಡಿದು ನಡೆವ ನಾ
ನಾ ವಿಪ್ರರೌಪಾಸನಾಗ್ನಿ ಹೋತ್ರಂ ದೇವ ಋಷಿ ಪಿತೃಸಮರ್ಪಿತವನು
ಸಾವಿತ್ರಿ ಗಾಯತ್ರಿ ಸಾರಸ್ವತಾದಿ ದೇ
ವ್ಯವಿಧೋಪವಸ್ಥೆ ಮೊದಲಾದನುಷ್ಠಾನವೆಂ
ತೀವುವವು ಬಯಲು ಬಯಲೆಂಬರಾ ಜೈನರೆಂದೆಂದನಾ ಯತಿರಾಯನು        ೪೫

ಅಂತದಂ ಕಂಡು ಕಂಗೆಟ್ಟು ಕಲುಮರನಾಗಿ
ಚಿಂತೆ ಮೊಳೆತಱಿವಱತು ಮನನೊಂದು ಮತಿಯುಡುಗಿ
ಸಂತಸಂಗುಂದಿ ಬರುತಿಂತು ಬಳಲಿದೆ ನಿಂತು ಬೆಂಡಾದೆನದಱ ದೆಸೆಯಿಂ
ಮುಂತಿನ್ನಿದಕ್ಕೆ ತಕ್ಕುದನು ನೀವೇ ಬಲ್ಲಿ
ರಂತಕಾಂತಕಯೆನಲು ಕುಪಿತನಾಗುತೆ ತಿರುಗಿ
ಪಿಂತೆ ನಿಂದಾದಿಗಣನಾಥನಂ ಕರೆದೆಲವೊ ಹೋಗು ನೀನಲ್ಲಿಗೆನಲು೪೬

ಕಾಲನೊಕ್ಕಿಲು ಕಾಮನೂಳಿಗ ಮಹಾರೋಗ
ಮಾಲೆಯೊತ್ತೊತ್ತೆ ಮಾರಿಯ ಮಸಕ ಮೃತ್ಯುವಿನ
ನಾಲಗೆಯ ಹೊಯಿಲು ಮಾಯಾಭಯವು ಕ್ಷುತ್ಪಿಪಾಸೆಗಳ ಹೂಳದ ಹೊಯ್ಯಲು
ಮೇಲೆ ಕೋಪದ ಕಚ್ಚು ಲೋಭದಂಡಲೆ ಮೋಹ
ಜ್ವಾಲೆ ಮದಮತ್ಸರದ ಬೇಗೆ ಘನವಾಗೆ ಕಲಿ
ಕಾಲಕ್ಕೆ ಕಂಟಣಿಸದಾ ನರರೊಳೆಂತು ಜನಿಸುವೆ ದೇವ ಕರುಣಿಸೆನಲು೪೭

ಕಲಿಕಾಲದುಗ್ರತ್ವ ನಿನ್ನ ಮಾಡುವುದೇನು
ಜಲಜ ಕೆಸಱೊಳು ಮೆಱೆವ ಹಾಲು ಗೋವುಗಳ ಕೆ
ಚ್ಚಲ ಮಾಂಸದೊಳು ಚಾರುಮಧು ನೊಣವಿನೊಳು ಸುಕಸ್ತೂರಿ-ಮೃಗತತಿಯೊಡಲೊಳು
ನೆಲದೊಳಿನ್ನು ವಿಶೇಷ ವಸ್ತುಗಳನಂತ ವೆ
ಗ್ಗಳಿಸಿ ಹುಟ್ಟಿದ ಹುಟ್ಟು ಕುಂದಾಯ್ತೆ ಹೇಳು ನಾ
ನೊಲವಿನಿಂ ಕಳುಹುತಿರೆ ನಿನಗೇಕೆ ಚಿಂತೆ ಸುಮ್ಮನೆ ಜನಿಸು ಹೋಗೆಂದನು      ೪೮

ಮೇದಿನಿಗೆ ಹೋಗೆಂದೆ ನಿನ್ನೊಡನೆ ನುಡಿದು ಸುಖಿ
ಯಾದ ಬಾಯಿಂದಾರ ನುಡಿಸುವೆಂ ನೋಡಿ ಸುಖಿ
ಯಾದ ಕಣ್ಣಿಂದಾರ ನೋಡುವೆಂ ಪುರಹರನೆ ನಿನ್ನನು ನಿಮಿಷವಗಲದೆ
ಆದಿತೊಡಗಿರ್ದಾದಿಗಣನಾಥನೆಂಬ ಹೆಸ
ರಾದೆನೊಂದೇ ದಿವಸವಗಲಿರಲ್ಬಲ್ಲೆನೆಯು
ಮಾದೇವಿಯರಸ ಹೇಳೆಂದು ಚರಣದ ಮೇಲೆ ಹೊಡೆಗೆಡೆದು ಬಿನ್ನೈಸಲು     ೪೯

ಹಲವು ಮಾತೇನೆಲವೊ ನಿನ್ನಿಮಿತ್ತಂ ಬಂದು
ಹುಲಿಗೆಱೆಯ ಬಸದಿಯೊಳು ನಿಂದು ನಿನೆನೆದುದಂ
ಸಲಿಸುವೆನೆನಲು ಲಿಂಗ ನುಡಿವುದೇ ನೋಡುವುದೆ ಬೇಡ ಬೇಡೀ ಹುಸಿಗಳು
ಗೆಲವೆನಲು ಜಂಗಮಾಕಾರದಿಂದಂ ಬಂದು
ನೆಲಸಿ ನಿನ್ನೊಡನೆ ಮಾತಾಡುವೆಂ ಬೇಡಿತಂ
ಸಲಿಸುವೆಂ ಸಲಹುವೆಂ ಚಿಂತಿಸದಿರೆಂದಾದಿಮಯ್ಯನಂ ಬೋಳೈಸಲು           ೫೦

ಒಸೆದು ಹರಿಯಜರು ಸೇವಿಸುವ ವೇದಾಳಿ ಕೀ
ರ್ತಿಸುವ ಮುನಿನಿಕರಂಗಳರ್ಚಿಸುವ ರಂಭೆ ಮೋ
ಹಿಸುವ ತುಂಬುರರು ಕೇಳಿಸುವ ಭೃಂಗೀಶ ನರ್ತಿಸುವ ನಾನಾಮುಖದಲಿ
ಮಸಗಿ ಗಣವೃಂದ ಲಾಲಿಸುವ ಸುರನಿಕರ ಭಾ
ವಿಸುವ ದೇವಿಯರು ಸಾಗಿಸುವ ಸುಖದೊಳಗೆ ಸಂ
ತಸದೊಳಿಹ ನಿನ್ನ ನಾನೆಂತು ಸಂತೈಸಿಕೊಂಡೆಲ್ಲಿಪ್ಪೆ ಹೇಳೆಂದನು   ೫೧

ಸುರಸಿಂಧುವಡಕುವಗ್ಗಣಿಯನಗ್ಗದ ಮಂದ
ಮರುತನಡಕುವ ಪರಿಮಳಪ್ರಸೂನವನು ಯ
ಕ್ಷರು ನೀಡುವನುಲೇಪನವನು ಧನದಂ ನೀಡುವಾಭರಣ ಸಂದೋಹಮಂ
ಧರಿಸಿ ಸುಖಮಿಪ್ಪ ನೀನೆನ್ನೊಡನೆ ಬಂದು ಸಾ
ದರದಿ ಕೊಡುವೊಕ್ಕುಡಿತೆಯಗ್ಗಣಿಯೊಳೊಂದು ಹಱಿ
ದರಳಿನೊಳು ತಣಿಯಲಾಪೈ ತಂದೆ ಹೇಳೆಂದೊಡೀಶನೊಲಿದಿಂತೆಂದನು        ೫೨

ಇನಿತಕ್ಕೆ ನೀನಂಜಲೇಕೆಲವೊ ನಾನೆನ್ನ
ಮನವಱಿವ ಋಷಿಯರಂ ಕ್ಷೇತ್ರವಾಸಿತನಕ್ಕೆ
ಮನುಗಳೊಳಗುತ್ತಮರ ನೆಸೆವ ಬೇಹಾರಕೆ ಗಣಾಧೀಶರೊಳು ಕೆಲಬರ
ಘನ ದೇವಪುತ್ರಿಕತನಕ್ಕತುಳಬಳ ಕುಮಾ
ರನ ಕುಮಾರಿಕೆಗೆ ಸತತಂ ಕುಬೇರನನು ನ
ಚ್ಚಿನ ಕೊಟಾರಿಕೆಗೆ ಪರುಟವಿಸಿಕೊಂಡಾಂ ಬರುತ್ತೊಡಗೊಂಡು ಬಹೆನೆಂದನು೫೩

ಅಸಿತವರುಣನನು ಮಜ್ಜನಕೆ ವಾಯುವನು ಸ
ತ್ಕುಸುಮಪ್ರತಾನಸೌರಂಭಕ್ಕೆ ರಂಭೆಯೂ
ರ್ವಸಿ ತಿಲೋತ್ತಮೆ ಮಂಜುಘೋಷೆ ಮೇನಕೆಯರೊಳಗಾದ ನಾನಾ ಸತಿಯರ
ಅಸಮ ಲಾಸ್ಯಕ್ಕೆ ತುಂಬುರನಾರದರನು ರಾ
ಗಸಮೂಹದಾಳಾಪಿಕೆಗೆ ನಂದಿ ಮಾಕಾಳ
ರೆಸೆವ ವಾದ್ಯ ವ್ಯಾಪ್ತಿಗಳವಡಿಸಿಕೊಂಡು ಬಂದಪೆನಂಜಬೇಡೆಂದನು೫೪

ಹರಿಯಜರನೆಲ್ಲಾ ಧುರಂಧರಿಕ್ಕೆಗೆ ಗಣೇ
ಶ್ವರ ರ ಬಾಹತ್ತರನಿಯೋಗಕ್ಕೆ ಬೆಸಸಿ ಪುಲಿ
ಕರನಗರಿ ಗಯೆಗೆ ಹೊಯಿಕೈ ಕಾಶಿಗೆಕ್ಕೆಕ್ಕೆ ಸೌರಾಷ್ಟ್ರಪುರದ ಕೂಡೆ
ಸರಿದೊರೆ ಶ್ರೀ ವಿರೂಪಾಕ್ಷದೋಪಾದಿಯಾ
ಗಿರೆ ಸಲಿಸಿ ಮೇದಿನಿಯೊಳತುಳ ಕೈಲಾಸವಾ
ಗಿರುತಿಹೆಂ ಬಲ್ಲಹಂ ಬಿಟ್ಟುದೇ ಕಟಕವಂಜದೆ ಹೋಗು ಹೋಗೆಂದನು       ೫೫

ನೀನಿನ್ನದೆಂದಿಂಗೆ ಬರ್ಪನ್ನೆಗಂ ಭಕ್ತಿ
ಹೀನಪುರದೊಳು ಪುಟ್ಟಿ ಬೆಳೆಯಲಾರ್ಪೆನೆ ಮದನ
ಮಾನಮರ್ದನು ಕರುಣಿಸೆಂದಾಡಿದಾತನ ಭಯಕ್ಕೆ ಮನದೊಳಗೆ ಮೆಚ್ಚಿ
ನಾನೊಲಿದು ನೆಲಸಿರ್ಪ ಸೌರಾಷ್ಟ್ರವೆಂಬ ಸು
ಸ್ಥಾನವುಂಟದಱೊಳಗೆ ಜನಿಸು ಹೋಗೆನೆ ಶಿವ
ಜ್ಞಾನಿಯೆನಿಪಾದಿಗಣನಾಥನಂತಕದರ್ಪದಲ್ಲಣನ ಬೀಳ್ಕೊಂಡನು   ೫೬

ಧರಣೀತಳಕ್ಕಾದಿಗಣನಾಥನೈತರು
ತ್ತಿರೆ ಮುಂದೆ ಮೆಱೆದುದತಿ ಕೌತುಕಂ ಕಡಲಿಡಲು
ನೆರೆವ ವೇದಂಗಳಿಗೆ ಶಾಸ್ತ್ರಕ್ಕೆ ಪೌರಾಣತತಿಗಾಗಮಪ್ರತತಿಗೆ
ಸಿರಿಗೆ ಸಂಪದಕೆ ಭಕ್ತಿಗೆ ಮುಕ್ತಿಗಾಚಾರ
ದುರವಣೆಗೆ ಶಮೆದಮೆಗೆ ಸತ್ಯಕ್ಕೆ ಶಾಂತಿಯು
ಬ್ಬರಕೆ ಪುಣ್ಯಕ್ಕೆ ಪುರುಷಾರ್ಥಕ್ಕೆ ನೆಲೆವೀಡಿದೆಂದೆನಿಸಿ ಸೌರಾಷ್ಟ್ರವು೫೭

ಅಣಿಯರದೊಳೆರೆದರ್ಗೆ ಮುಕ್ತಿಯಂ ಸುಕೃತಸಂ
ದಣಿಯಂ ಮನೋರಾಗಮಂ ಸೌಖ್ಯಮಂ ತತು
ಕ್ಷಣದೊಳೊಲಿದೀವ ಗುಣದಿಂದಿನ್ನು ಧರೆಯೊಳುಳಿದಿತರ ತೀರ್ಥಕ್ಷೇತ್ರದಿಂ
ಎಣಿಸುವಡೆ ದ್ವಿಗುಣತ್ರಿಗುಣಚತುರ್ಗುಣ ಪಂಚ
ಗುಣ ಷಡ್ಗುಣಂ ಸಪ್ತಗುಣವಷ್ಟಗುಣವು ನವ
ಗುಣದಶಗುಣಂ ಮಿಗಿಲು ಸೌರಾಷ್ಟ್ರವೆಂಬಾಗಳಿನ್ನದಂ ಪೊಗಳ್ವರಾರು        ೫೮

ಕಂಗೆ ಬೆಳತಿಗೆ ಬೆಳಗನನವರತವೀವ ಬೆಳು
ದಿಂಗಳ ನಡುವೆ ಪೂರ್ಣಶಶಿಯೊಪ್ಪುವಂದದಿಂ
ಮಂಗಳಾಕಾರ ಸೌರಾಷ್ಟ್ರದೊಳು ಸೋಮನಾಥಂ ಮೆಱೆವನಂತಲ್ಲಿಯಾ
ಸಿಂಗರದ ಪೂಜೆಗಳ ವಿವಿಧೋಪಚಾರಭೋ
ಗಂಗಳ ವಿಳಾಸಮಂ ಬಣ್ಣಿಸುವಡುರಗರಾ
ಜಂಗರಿದೆನಿಸಲೊಪ್ಪುವ ಶಿವಾಲಯದ ಹಿಂದಣವನಧಿಯನೇವೊಗಳ್ವೆನು      ೫೯

ಇಡುಕುದೆರೆಯಟ್ಟುದೆರೆಯಿಟ್ಟುದೆರೆ ತಟ್ಟುದೆರೆ
ಯಡಕಿಲುದೆರೆಗಳುಲಿದು ಹಳಚಲು ಮೊರಹು ಮೊರೆದು
ಕಡೆದು ಮಲ್ಲಗಡಲನೊಡೆಗೆಲಸಿ ಕುದಿದು ಮೊರೆದಡಸಿ ಗುಳುಗುಳಿಪ ಸುಳಿಯ
ಸಡಗರದ ಹೊಯ್ಲುಗಳ ಮುತ್ತು ಮಾಣಿಕ ಹವಳ
ಗಡಿ ತಿಮಿಂಗಲ ಮತ್ಸ್ಯಕಚ್ಛ ಕರಿ ಮಕರಂಗ
ಳಡಸಿ ತುಂಬಿದಹಗವೆನಿಸಿ ಮಹಿಮೆಯಿಂ ಮೆಱೆದುದರರೆ ಪಶ್ಚಿಮವನನಿಧಿ    ೬೦

ಬಡಬಾಗ್ನಿಯಂಡಲೆಗೆ ಮುನ್ನೊಬ್ಬ ಮುನಿ ಮೊಗೆದು
ಕುಡಿದ ಕೋಟಲೆಗಂಜಿ ಶಿವನ ಮಱೆಹೊಕ್ಕು ಹಿಂ
ದಡಗಿದಂತೆಸೆದಿರ್ದುದೊಮ್ಮೆ ಮತ್ತೊಮ್ಮೆ ಧರೆಯಱಿಯಲ್ಕೆ ತನ್ನೊಳುಳ್ಳ
ಜಡವೆಸರ ಸಾರತ್ವದಘತತಿಗಳೆಲ್ಲ ನೆಱೆ
ಕಡಲು ಲಿಂಗಾರ್ಚನಂ ಗೈವಂತೆ ಸೌರಾಷ್ಟ್ರ
ದೊಡೆಯನ ನಿವಾಸದೊತ್ತಿನೊಳಬ್ಧಿ ಮೆಱೆದುದಾ ಪೂಜೆಯೆಂತೆನೆ ಪೇಳ್ವೆನು            ೬೧

ತಡಿಗೆ ಧೀಂಕಿಡುವ ತೆರೆಯರ್ಘ್ಯಪಾದ್ಯಂ ಬೆಳಪು
ವಿಡಿದ ನೊರೆ ಕುಸುಮ ಮೊರಹಿನ ಹೊಯಿಲ ಹೋರಟೆಯ
ನಡುವೊಗೆಯ ಮಂಜು ಧೂಪಂ ಕಡಲ ಕದಡಿನೊಳು ನೆಗೆದ ಮಾಣಿಕವಾರತಿ
ಕಡುಗಿ ಘುಳಿ ಘುಳಿಲೆಂಬ ಧ್ವನಿ ಗೀತವಾದ್ಯ ಸಂ
ಗಡವಾಗಿ ಮೆಱೆವ ವನನಿಧಿ ಬಂದು ಸೌರಾಷ್ಟ್ರ
ದೊಡೆಯನಂ ಪೂಜಿಸುತ್ತಿರ್ದಪುದೊ ಪೇಳೆಂಬ ಬಗೆಯನನುಕರಿಸಿರ್ದುದು      ೬೨

ಆ ರುಚಿರ ಸೌರಾಷ್ಟ್ರಪುರದೊಳಗೆ ಧನದಿಂ ಕು
ಬೇರನೊಳು ಕುಲದಿಂ ದಿವಾಕರನೊಳೊಪ್ಪುವಾ
ಚಾರದಿಂ ಬ್ರಹ್ಮನೊಳು ಚಾರಿತ್ರದಿಂ ಗಂಗೆಯೊಳು ಸತ್ಕಲಾ ಪ್ರೌಢಿಯೆಂ
ಭಾರತಿಯೊಳೆಕ್ಕೆಕ್ಕೆ ಹೊಯಿಕ್ಕೆಯೆನಿಸಿ ಮದನ
ವೈರಿ ಸೋಮಯ್ಯನೇ ಪ್ರಾಣಲಿಂಗವೆನಲ್ಕೆ
ಪಾರದತ್ತನೆನಿಪ್ಪ ಸೆಟ್ಟಿಯಿಪ್ಪಂ ಪುಣ್ಯಲಾಭಕ್ಕೆ ಹರದಾಡುತೆ       ೬೩

ಆತನಂಗನೆ ಪುಣ್ಯವತಿಯೆಂಬ ವನಿತೆ ರೂ
ಪಾತಿಶಯದೊಳು ಪುರುಷಭಕ್ತಿಯೊಳು ಯುಕ್ತಿಯೊಳು
ನೀತಿಯೊಳು ಸರ್ವಾಭಿಮಾನದೊಳು ಸೌಭಾಗ್ಯದೊಳು ಶಂಕರಾರ್ಚನೆಯೊಳು
ಭೂತಳದೊಳಿನ್ನು ಸರಿಯಿಲ್ಲೆನಿಪ ಪುಣ್ಯವಿ
ಖ್ಯಾತಿಗೆ ತವರ್ಮನೆಯೆನಿಸಿ ಬಾಳುತಿರ್ದು ಸಂ
ಪ್ರೀತಿಯಿಂ ತನಯರ್ಕಳಂ ಬಯಸುತಿರ್ಪ ಚಾತುರ್ಯಮಂ ಪೊಗಳ್ವರಾರು     ೬೪

ಮೊಲೆಯುಂಬ ಮುದ್ದಿಸುವ ನಗುವ ಮೊಗನೋಡಿ ಕುಂ
ಡಲಗಳಲುಗಲು ಹರಿದುಬಂದಪ್ಪಿ ನಿಱಿವಿಡಿದು
ಗಿಲಿಬಿಲೆಂದೆಱಗಿ ನಡೆನೋಡಿ ದಾದಾಯೆಂದು ನೆಱೆ ಬೆಳೆದು ಮದುವೆಯಾಗಿ
ಅಲಸದೊದವಿಸಿದೀ ಧನಕ್ಕೊಡೆಯನಾಗಿ ಭುಜ
ಬಲವಂತನಾಗಿ ತಂದೆಯ ಸಂತಸದ ಸಿರಿಯ
ಸಲಹುವ ಕುಮಾರನಂ ಬಯಸಿ ಬಾಯೊಱೆವುತಿರ್ದಾವನಿತೆಯೊಂದಿವಸವು    ೬೫

ಬಿಡದೆ ಹಿರಿಯರ ತಲಹುವಿಡಿದೊದವಿಸಿರ್ದೊಡವೆ
ಗೊಡೆಯನಪ್ಪೊಬ್ಬ ಮಗನಂಪರಮನಂ ಬೇಡಿ
ಪಡೆವುದೇನೆಂದಡಾ ಸತಿಗೆ ಪತಿ ಕೆರಳಿ ಕೇಳೆಲೆ ಮರಳೆ ಕಾಣಿ ಗಾಡಿ
ಕಡವರವನಂಬಿಲದ ಹುಳಿಗಾಡಿಯಮೃತಮಂ
ಬಿಡುವರೆ ಸುತಂಗಾಡಿ ಪೂಜಿಸಿದ ಪುಣ್ಯಮಂ
ಕೆಡಿಸುವೆನೆ ಭಕ್ತಿ ಕೈಗೂಲಿಯೇ ಬೇಡುವವ ಭಕ್ತನೇಯೆನುತಿರ್ದನು  ೬೬

ಹಾಡಿ ಹಡೆದಾಡಿ ಹೋಗಾಡಿದಂ ಕಡೆಗೆಂಬ
ನಾಡನುಡಿಯಂತೆ ಸುತನಂ ಬೇಡಿ ನಾಂ ಹಿಂದೆ
ಮಾಡಿದ ಶಿವಾರ್ಚನೆಯ ಫಲವನಳಿವೆನೆಯದಂತಿರ್ಕೆ ಕೇಳಿನ್ನುಮೇಲೆ
ಬೇಡಿ ದಾನದಿ ಹಡೆದ ಪುತ್ರನುಂತನಗೆಂದು
ಕೂಡಿದ ಧನಂಕೆಡವುದದಕೆ ಪರಮಂ ನೀಗ
ಬೇಡಳುಪಿ ಬೇಡಿದಡೆಕೈಯ ಶಿಶುಸತ್ತು ಬಸುಱಿಳಿದ ಕಥೆಯಂತಪ್ಪುದು       ೬೭

ಪತಿಯಾಜ್ಞೆಗಂಜಿ ಸಂತತಿಯ ನೆನಹಂ ಪುಣ್ಯ
ವತಿ ಮಱೆದುನುತಭಕ್ತಿಯಿಂ ಪೂಜೆಯಂ ಧರ್ಮ
ತತಿಯನತಿಸಂತೋಷದಿಂಮಾಡಿಕೊಂಡಲಸದಿಪ್ಪಾಪುಣ್ಯದಂಪತಿಗಳ
ಮತಿಯ ನಿಷ್ಠೆಯ ನಿಮಿರ್ಕೆಗೆ ಮೆಚ್ಚಿ ಸಂತತಂ
ಕ್ಷಿತಿಯೊಳಗೆ ಪುಟ್ಟಲಿರ್ಪಾದಿಗಣನಾಥನಂ
ಸತಿಯುದರದೊಳಗಂದು ಮಡಗಿದು ಕರುಣದಿಂ ಸೌರಾಷ್ಟ್ರದರಸನು           ೬೮

ಜಗದ ಭರಭಾರಮಂ ಹೊತ್ತು ನಿತ್ತರಿಸಲೆಂ
ದೊಗೆವವನನೆಲ್ಲರೋಪಾದಿಯಿಂದಾ ವನಿತೆ
ಬಗೆದೆಂದಿನಂತೆ ನಡೆಯಲು ಬಸುಱಭಾರದಿಂ ಭೂಮಿಯೊಳಗದ್ದಕಾಲಂ
ತೆಗೆದೊಯ್ಯನಿಟ್ಟಡಿಗಡಿಗೆ ಮುಳುಗೆ ಮೆಲ್ಲಮೆ
ಲ್ಲಗೆ ಕಿತ್ತು ಕಿತ್ತಿರದೆ ನಡೆದಪಳೊ ಎಂಬಂತೆ
ಮೃಗವಿಲೋಚನೆಯ ನಡೆ ಮಾಂದ್ಯದೊಳು ಹಂಸೆಗಳ ಹುರುಡಿಸುವ ತೆರನಾದುದು    ೬೯

ಕಂತುವುಂ ಮಾಯೆಯುಂ ವಿಧಿಸಿದವಿಧಾತ್ರನುಂ
ಸಂತತಂ ಸೂತ್ರಿಸಿದ ದುಷ್ಕರ್ಮರೇಖೆಗಳ
ನಿಂತಳಿವಳಿನ್ನೀಕೆಯೆಂದು ಪೇಳ್ವಂದದೆವಳಿತ್ರಯಂ ಮೈದೆಗೆದವು
ಎಂತಧಿಕರಾದೊಡಂ ಪುತ್ರನುದಯಿಸನೆಂಬ
ಚಿಂತೆಯಿಂ ಬಡವಾದ ತೆಳುವಸುಱು ಸುತನಾದ
ಸಂತಸದಿ ಹೆಚ್ಚಿ ಪುಟವಾದುದಂ ಬಿನ್ನೈಸುವಂತೆ ಗರ್ಭಂನೂಂಕಿತು  ೭೦

ಒಳಗುದೋಱದ ನಾಭಿಯೆಂಬ ಹುತ್ತದಹೋರ
ಗುಳಿ ಗರ್ಭದಿಂ ಹೂಳ್ದಡೆಡೆಗೆಟ್ಟು ಕಾಳಾಹಿ
ತಳರ್ದು ಮೊಲೆವೆಟ್ಟಂಗಳಿಱುಬಿನೊಳು ಪೊಕ್ಕಪುದೊ ಎನೆಬಾಸೆದಳವೇಱಿತು
ಮುಳಿದು ಕತ್ತಲೆಯನರೆಗಚ್ಚಿ ಮುಗಿದಬುಜಕು
ಟ್ಮಳಯುಗಳದಂದದಿಂ ಮೆಱೆವ ವಿಮಳಕ್ಷೀರ
ಜಳಭರಿತ ಪೀನಕುಚಚೂಚುಕಂಕಪ್ಪನಾಲಿಂಗಿಸಿದವೇವೊಗಳ್ವೆನು    ೭೧

ಎದೆಯ ಸೆರೆಹಸುರೇಱಿತನು ಬೆಳರ್ಪೇಱಿ ತೋ
ಳ್ಮೊದಲು ಕಪ್ಪೇಱಿ ಕೊಂಕಿದ ಕುರುಳು ಕವಲೇಱಿ
ವದನರಸವೋಸರಿಸೆ ನಸುಮುಗಿದ ಕಣ್ಣಕಡೆ ಕಿಱುಬೇನೆಯಂ ಸೂಚಿಸೆ
ಒದವಿದುಸುರೊಳಗಣ ಬಳಲ್ಕೆಯಂ ತೋಱಿ ನುಡಿ
ಮೃದುವಾಗೆ ಮುಡಿ ಜಡಿದು ಬೆನ್ನಮೇಲೊಲೆಯಲಾ
ಸುದತಿಯಾಲಿಂಗಿಸಿದ ನವಮಾಸವಾಯ್ತು ಮೈವೆಚ್ಚೆ ಕೈವಿಡಿದ ಪತಿಗೆ         ೭೨

ಜನಕನುತ್ಸವಿಸೆ ಸಮುಹೂರ್ತವೊಲವೇಱಿಪರಿ
ಜನನಲಿಯೆ ವಸುಧೆ ತಣಿಯಲು ಶಿವಾಚಾರಲತೆ
ನನೆಯೊತ್ತೆ ಜೈನರೆದೆ ನಡುಗೆ ಹುಲಿಗೆಱೆಯ ಸುರಹೊನ್ನೆಯ ಮಹಾಬಸದಿಯ
ಜಿನನ ಹಣೆಛಟಛಟನೆ ಮಿಡಿಯೆ ಸೌರಾಷ್ಟ್ರದರ
ಸನು ನಂದಿಯಂ ತಳೆಯೆ ಪುಣ್ಯವತಿಯುದರದಿಂ
ಜನಿಸಿದಂ ಸುಕುಮಾರಶೇಖರನನಂಗನಲ್ಲದ ಕುಸುಮಕೋದಂಡನು            ೭೩

ಮಂಗಳಂ ಸಂದಣಿಸಿ ಕಣ್ಗೆಸೆಯೆ ಹುಟ್ಟದಬ
ಳಂಗಾಗಳೋತು ತಾತಂ ಪ್ರೀತಿಜಾತಕ
ರ್ಮಂಗಳಂ ಮಾಡಿ ನಾನಾ ದಾನಧರ್ಮದಿಂ ಸರ್ವರಂ ತಣಿಸುತಿರಲು
ಸಿಂಗರಿಸಿ ನಲಿವಬಲೆಯರ ನಡುವೆ ಮಾನಿನಿ ಕ
ಡಂಗಿ ಮೊಲೆಯೂಡಿ ಕಾಡಿಗೆವಚ್ಚಿ ನೋಳ್ಪೆನೆಂ
ದಂಗವಿಸೆ ಕಣ್ದೆಱೆಯದಳದ ಮೊಲೆಯುಣ್ಣದಿರುತಿರ್ದನಾ ಸುಕುಮಾರನು   ೭೪

ತಿಳಿದ ಹೊಸಬೆಳುದಿಂಗಳೊಳು ಮೋಡವೆದ್ದಂತೆ
ಬೆಳೆದ ಸುಗ್ಗಿಯ ಕೊಟಾರದೊಳು ಮಳೆ ಬಂದಂತೆ
ತಳುವಿ ಪುಣ್ಯಾಧೀನದಿಂದೆ ಕಾಲಾನುಕಾಲಕ್ಕೊಬ್ಬ ಮಗನ ಪಡೆದು
ದಳವೇಱಿದುತ್ಸವದ ಹೆಚ್ಚುಗೆಯ ಬೀಜಮಂ
ಬೆಳಸುವೈಸಲ್ಕೆಯಿಂತಾದ ನಿನ್ನಾವಾಗ
ಳೆಳಸಿ ಮೊಲೆಯುಂಬನೋ ಎಂದು ಹೊತ್ತಂ ಬಯಸುತಿರ್ದೊಂದು ದಿವಸದಿರುಳು        ೭೫

ತೆಗೆದು ತನುದೊಡೆದುಸುರನಾರೈದು ತೂಪಿಱಿದು
ಮೊಗದೊಳು ಮೊಗವನಿಟ್ಟು ಬಾಯ್ವಿಟ್ಟು ಸುಯಿದು ಮೆ
ಲ್ಲಗೆ ಬಸುಱೊಳಪ್ಪಿ ದಣಿವೈದಿಸದೆ ಮಱುಗಿ ಸಿಡಿಮಿಡಿಗೊಂಡು ಕಂಬನಿಗಳು
ಒಗುವ ಕಣ್ಣಿಂನೋಡಿ ತೊರೆದ ಸೆರೆ ಝುಮ್ಮೆಂದು
ಬಿಗಿದ ಮೊಲೆ ದೊಟ್ಟನೆಡೆವೆರಳಿಂದ ಹೊಸೆಹೊಸೆದು
ಮಗನತ್ತು ಕಣ್ದೆಱೆದು ಮೊಲೆಯುಂಬುದಂ ಪಾರ್ದು ಹಂಬಲಿಸಿದಳು ಜನನಿಯು        ೭೬

ಎಲೆ ಮಗನೆ ಮಗನೆ ನೀಂಗಳಗಳನೆ ಬೆಳೆದು ಭುಜ
ಬಲವಂತನಾಗಿ ಹರದರ ಶಿರೋಮಣಿಯಾಗಿ
ಕಲಿಯಾಗಿ ಗುಣಿಯಾಗಿ ಸಿರಿಗೆ ಸಿಂಗರವಾಗಿ ಶಿವಭಕ್ತಿ ಸುಲಭನಾಗಿ
ಕುಲತಿಲಕನಾಗಿ ತಂದೆಯ ಕೀರ್ತಿವಧುಗೆ ಬೆಂ
ಬಲವಾಗಿ ಬಾಳ್ವೆಯೆಂದಾಂ ನಲಿವುತಿರಲಿಂತು
ಮೊಲೆಯುಣ್ಣದಿರ್ದೊ ಡೆನಗೆಂತಂದಳುತ್ತೆ ಸಂತೈಸಿಕೊಂಡಿಂತೆಂದಳು           ೭೭

ಈ ಮಗಂಕಣ್ದೆಱೆದು ಮೊಲೆಯುಂಡಡೀವೂರ
ಸೋಮನಾಥಂಗೆ ಮೈಯಿಕ್ಕುವೆಂ ಸೇತುವಿನ
ರಾಮೇಶ್ವರನ ಕಾಬೆ ಪರ್ವತದ ಮಲ್ಲಿನಾಥಂಗುಪಾಹಾರವಿಡುವೆ
ಹೇಮಕೂಟದ ವಿರೂಪಾಕ್ಷಂಗೆ ತಪವಿಪ್ಪೆ
ನೇಮದಿಂ ಕಾಶೀಪತಿಗೆ ತೊಡಿಗೆದೊಡಿಸುವೆ ಮ
ಹಾಮಹೇಶ್ವರರಿಗರ್ಚನೆ ಗೈವೆನೆಂದಿರುಳುಹರಸಿಕೊಳುತಿರ್ದಳಂದು            ೭೮

ತರುಣಿ ತರುಣ ನನು ಕೈಯಿಂದೆಹಾಸಿನೊಳೊಯ್ಯ
ನಿರಿಸಿ ಕೆಲಬಲಕೊತ್ತನಿಕ್ಕಿ ಸೆಱಗಂ ಹೊದಿಸಿ
ಹರಸಿ ಭಸಿತವನಿಟ್ಟು ತೂಪಿಱಿದು ಕಾಹನೊಯ್ಯನೆ ಕಟ್ಟಿ ಮಗ್ಗುಲಿಕ್ಕಿ
ತೊರೆದ ಮೊಲೆಯಂ ಬಾಯೊಳೊಯ್ಯನಾನಿಸಿ ತನ್ನ
ಸಿರಿಮಂಚಮಂ ಸುತ್ತಿಮುತ್ತಿ ಕುಳ್ಳಿರ್ದು ಸತಿ
ಯರ ಕೂಡೆ ಮಾತಾಡುತಿರಲಿರಲು ತೆಳುನಿದ್ರೆ ಕವಿದುದೇ ವಣ್ಣಿಸುವೆನು       ೭೯

ಒಡಲು ಜೊಂಪಿಸಿ ಶಿರಂಭಾರೈಸಿ ನೆನಹಳಿದು
ನುಡಿವ ನುಡಿಗಳು ಮೆಲ್ಲವಾಗಿ ತೊದಳಿಸಿ ಹುಬ್ಬು
ಜಡಿಜಡಿದು ಕಣ್ಗಗಳರೆಮುಗಿದುಸುರು ಬಾಯಿಂದೆ ನಸು ಮೊರಹುವೆರಸಿಸೂಸಿ
ತೊಡೆ ತೋಳ್ ಭುಜಂಗಳೊಮ್ಮೊಮ್ಮೆ ಮಿಡುಕಾಡಲೈ
ದೆಡೆಯಿಂದ್ರಿಯವ್ಯಾಪ್ತಿ ಮನದೊಳಡಗಲು ಮನವ
ನೆಡೆಗೊಂಡ ನಿದ್ರೆಯೊಳು ಕನಸು ಕಂಡೆದ್ದು ಹೇಳ್ದರು ನೆರೆದ ಸಖಿಯರೊಡನೆ೮೦

ಅನವರತವೆಮ್ಮ ಮನೆಗಾರೈಸಬಹ ತಪೋ
ಧನರ ತೆಱದಿಂದೊರ್ವ ಗುರುದೇವನೈತಂದು
ವನಿತೆ ಕೇಳ್ತನಯನಂ ಮನುಜನೆಂದೆನುತಿರದಿರಿವನಾದಿಗಣನಾಥನು
ನಿನಗೋತು ಬಂದನೀತಂಗೆ ಶಿವಲಿಂಗದರು
ಶನವನೊದವಿಸಿ ಪ್ರಸಾದದ ಬೆಣ್ಣೆಗೊಡು ನಿನ್ನ
ನೆನೆದಱಿಕೆಯಹುದೆಂದು ಹರಸಿ ಭಸಿತವನಿಡುವುದಂ ಕಂಡೆ ನಾನೆಂದಳು         ೮೧

ಗುರುಗಳೆಂಬುದು ದೇವರವರೆಂದ ವರಗಣೇ
ಶ್ವರನೀತನಾ ಪೆಸರನಿಟ್ಟು ಲಿಂಗವ ತೋಱಿ
ಪರಮಪ್ರಸಾದಮಂ ಬಾಯ್ವೆಣ್ಣೆಯಿಕ್ಕೆ ಕಣ್ದೆಱೆದತ್ತು ಮೊಲೆಯುಂಡಪಂ
ಕರುಣಿಸಿದ ಭಸಿತವೈಶ್ವರ್ಯವಿಂತಿವನಧಿಕ
ತರನಾಗಿ ಬಾಳ್ವನಂಜದಿರು ಚಿಂತಿಸದಿರೆಂ
ದೊರೆದೊರೆದುಕನಸನಿದಿರ್ಗೊಂಡು ಬಣ್ಣಿಸಿ ಪೇಳ್ದರಂಗನೆಯರಾ ವನಿತೆಗೆ    ೮೨

ಮುಂದುವರಿದುತ್ಸವದ ಮೊಳೆ ನಗೆಯ ಘನಸುಖಾ
ನಂದಜಳವೊಸರ್ವ ಕಂಗಳ ಮಧುರವಚನವೆಸೆ
ವಿಂದುಮುಖಿ ಗಂಡನಂ ಕರೆದಿರುಳು ಕನಸ ನಾನಿಂತಿಂತು ಕಂಡೆನೆನಲು
ಇಂದು ಕಣ್ದೆಱೆದು ಮೊಲೆಯುಂಡಡಿಂತೀಗಳವ
ರೆಂದ ಪೆಸರಿಡುವೆನೆಂದೊಂದು ಶಿವಲಿಂಗಮಂ
ತಂದನೆರಡೆವೆಯೆಂಬ ಜವಳಿಗದವಿನ ಬೀಯಗದ ಕೈಯ ತರ್ಪಂತಿರೆ  ೮೩

ದಿನಪನಂ ಕಾಣುತ್ತೆ ಕಮಲವರಳ್ವೊಲು ಲಿಂಗ
ವನು ಕಾಣುತಾ ಬಾಲ ಕಣ್ದೆಱೆಯಲಿತ್ತ ಜನ
ಕನ ಹರುಷ ಕಣ್ದೆಱೆಯೆ ಬೆಳುದಿಂಗಳುದಯವ ಚಕೋರಿಯಾರೋಗಿಪಂತೆ
ವಿನುತಪ್ರಸಾದ ನವನೀತಮಂ ಸವಿದು ಮಾ
ನಿನಿ ತಣಿಯೆ ಫಳರಸವ ಗಿಳಿಯೀಂಟುವಂದದಿಂ
ತನುಜ ಮೊಲೆಯುಂಡನಾ ಬಂಧುವರ್ಗಂ ಹೆಚ್ಚಿತೇನ ತೂಗಾಡುತಿರಲು        ೮೪

ಕನಸು ದಿಟವಾದುದಿನ್ನನುಮಾನವಾವುದೆಂ
ದೆನುತಂದು ನಾಮಕರಣೋತ್ಸವೋದ್ಯೋಗ ಸಂ
ಜನಿತ ಸಂಭ್ರಮರಾಗಿ ಸೋಮನಾಥಂ ಬೆಸಸಿದಾದಿಗಣನಾಥನೆಂದು
ತನಯಂಗೆ ಪೆಸರಿಟ್ಟು ಸರ್ವಜನರಂ ತನ್ನ
ಮನವಾರೆ ತಣಿಪಿ ನಲಿದಿರಲಿರಲು ಹನ್ನೆರಡು
ದಿನದಂದು ಮಣಿದೊಟ್ಟಿಲಿಕ್ಕಿದರು ವನಿತೆಯರು ಬಾಲಕದಿವಾಕರಂಗೆ          ೮೫

ಬಾಗಿದೆಳೆಲತೆಯೊಳೊಂದೊಂದು ಮಿಡಿಗಾಯ್ವಿಡಿದ
ಪೂಗೊಂಚಲಂ ಜಿನುಗುವಳಿವೆರಸಿ ತಂಗಾಳಿ
ತೂಗುವಂತಬಲನಂ ತೊಟ್ಟಿಲೊಳು ಪಟ್ಟಿರಿಸಿ ವನಿತೆಯರು ತೂಗಿ ಬಳಿಕ
ಜೋಗುಳಂ ಪಾಡಿಯಾಡಿಸುವ ನೊರೆವಾಲೆಱೆವ
ಸಾಗಿಸುವ ಸಂತೈಸುವೆತ್ತಿಕೊಂಬೆಲ್ಲಾ ನಿ
ಯೋಗಕಾಂತೆಯರ ಕೈಯೊಳು ಬೆಳೆದನೊಲಿದು ಶಿಶುವಾದಯ್ಯನಾದಯ್ಯನು೮೬

ಅರಳೆಲೆಯ ಗರುವ ಮಾಗಾಯ ಮದದಾನೆ ತೆಳು
ಗುರುಳ ತಂಗಾಳಿ ಭಸಿತದ ಸಸಿ ತೊದಲ್ನುಡಿಯ
ತರುಣ ಹುಲಿಯುಗುರ ಹೂಗಣೆ ಕೊರಳ ರುದ್ರಾಕ್ಷೆಗಳ ಮುದ್ರಿಸಿದ ಪುಣ್ಯವೆ
ಕರತಳದ ಕಾಮ ಬಂಡಿಯ ನಂದಿ ಉಡೆವಣಿಗ
ಳರಸ ಗೆಜ್ಜೆಯ ಗುಣಿಯೆ ಬಾರಯ್ಯಯೆಂದವ್ವೆ
ಕರೆಯೆ ಪರಿತಂದಪ್ಪಿ ನಿಱಿವಿಡಿದು ನಿಂದಿರ್ಪ ಭಾವಮಂ ಪೊಗಳ್ವರಾರು       ೮೭

ಎರಡು ಚರಣಂ ಮೊದಲು ನಡುವೆ ನಡು ಸೀರೆಯಂ
ಬರವಿಡಿದು ಕೈ ಹರಿವ ಕುಡಿಗಳೆಸೆವೀರೈದು
ಬೆರಳಂಕುರಂಗಳರಳೆಲೆಗಳೆಲೆ ತೂಗಾಡುವಳಕವಳಿಗಳು ಕಿವಿಯಲಿ
ಕರಮೆಸೆವ ಮಾಗಾಯಿ ಫಳ ತೊದಲ್ನುಡಿಯೆ ನುಡಿ
ವರ ಗಿಳಿಗಳೊಸರ್ವ ಲೋಳಾಜಳಂ ರಸವಡರ್ದ
ತರುಣಿ ತರು ಫಲವೆರಸಿ ಬೆಳೆವೆಳೆಯ ಕಲ್ಪಲತೆಯಂತೆಸೆದನಾದಯ್ಯನು        ೮೮

ಮುಗಿಲು ಮುಸುಕಿದ ಚಂದ್ರಕಳೆಯಂತೆ ಕವಿದು ಕ
ರ್ಬೊಗೆ ಮುಸುಕಿದಗ್ನಿಯಂತುಱಿಮಂಜು ಮುಸುಕಿರ್ದ
ಗಗನಮಣಿಯಂತವನಿ ಮುಸುಕಿದ ನಿಧಾನದಂತಧಿಕತರ ಸಂಸಾರದ
ಸೊಗಸು ಮೂವಳಿಸಿ ಮುಸುಕಿದ ದೇಹಿಯಂತೆ ಮಾ
ಯೆಗೆ ವಶಂಗತನಾದನಂತೆ ಹೇಯಂಗಳಂ
ಬಗೆಯದಜ್ಞಾನಮಯವಪ್ಪ ಬಾಲ್ಯವ ನಟಿಸುತಿರ್ದನೇವಣ್ಣಿಸುವೆನು          ೮೯

ಹೇಳಲೇನಾದಯ್ಯನಂಗಲತೆಯಂ ಬಿಟ್ಟು
ಜಾಳಿಸುವ ಬಾಲ್ಯಮಂ ಕೆಡೆಮೆಟ್ಟಿ ಮನ್ಮಥನ
ಬಾಳಬಾಯ್ ಕೂರ್ಪೇಱುವಂದದಿಂದಧಟುಮಿಗೆ ಯೌವನಂ ಮೈದೋಱಿತು
ಮೇಳದಿಂದೊಂದೆರಡು ಮೂಱು ನಾಲ್ಕೈದಾಱು
ಏಳದೆಂಟೊಂಬತ್ತು ಹತ್ತು ಹನ್ನೊಂದು ವರು
ಷಾಳಾಪಮಂ ಕಳೆದು ಬೆಳೆವುತಿರ್ಪುದನು ಕಂಡವರಯ್ಯನಿಂತೆಂದನು  ೯೦

ನಡೆಯೊಳು ನಟನೆ ನೋಟದೊಳು ವಿಳಾಸಂ ಚೆಲ್ವ
ನುಡಿಯೊಳು ವಿದಗ್ಧತ್ವ ಕರಣದೊಳು ಚೆಲ್ವು ಮೆಱೆ
ವುಡಿಗೆಯೊಳು ರೀತಿ ಸಿಂಗರದೊಳು ಸುಜಾಣ್ಮೆನುತ ಮೂರ್ತಿಯೊಳ್ ಸುಕುಮಾರತೆ
ಒಡವೆಗಳೊಳಾರೈಕೆಯಭಿಮಾನದೊಳಗಾಸೆ
ಕಡು ಭೋಗದೊಳು ವಾಂಛೆ ಚಾರಿತ್ರದೊಳು ಭಾಗ್ಯ
ಬಿಡೆ ತೋಱುತಿರ್ದುದಾದಯ್ಯಂಗೆ ಮದುವೆಯಂ ಮಾಡಬೇಕೆಂದ ಪಿತನು     ೯೧

ಕಮನಕಲ್ಪದ್ರುಮಕೆ ಕಲ್ಪಲತೆಯಂ ಕೂಡಿ
ಪ ಮನೋಜಮಿತ್ರನಂತಾದಿಮಯ್ಯಂಗೆ ನೆಱೆ
ಸುಮೂಹೂರ್ತಸುದಿನಂ ಸುತಾರೆ ಸುಗ್ರಹ ಸುಕರಣಂ ಸುಯೋಗಂಗಳಲ್ಲಿ
ಸಮಕುಲಂ ಸಮರೂಪು ಸಮಬಲ ಸಮಪ್ರಾಯ
ಸಮರೀತಿ ಸಮಧಾತು ಸಮಶೀಲ ಸಮಗುಣಂ
ಸಮವಾದ ಕನ್ನೆಯಂ ಮದುವೆಯಂ ಮಾಡಿದರು ನೆಱಿ ಮಹೋತ್ಸಾಹದಿಂದೆ            ೯೨

ಹರದಿಕೆಯ ಹರಿಬಕ್ಕೆ ಮನ್ನಣೆಯ ಮೊದಲಿಂಗೆ
ಗರುವಿಕೆಯ ಗತಿಗೆ ಪಟ್ಟಣಸ್ವಾಮಿಕೆಯ ಪದಕೆ
ನೆರೆದು ಪಟ್ಟಂಗಟ್ಟಿ ಹಲರು ಕಾಣಿಕೆಗೊಟ್ಟು ಉಡಿಯಚೀಲಂಗಟ್ಟಿಸಿ
ಒರೆಯಾಣಿಕೇಣಿ ನೋಟಂ ತೂಕ ಬಡ್ಡಿಯಾ
ವರಿ ಉಭಯವಟ್ಟ ಹಿಡಿಹತಿ ಗನ್ನಗತಕ ಭಾ
ಸುರದ ರತ್ನಪರೀಕ್ಷೆಗಳೊಳು ಪರಿಣತನ ಮಾಡಿದನಯ್ಯನಾದಯ್ಯನ           ೯೩

ಸುರತರುವಿನಗೆಯಂತೆ ತರುಣಶಶಿಯಂತೆ ಬಂ
ಧುರಕುಸುಮಶರದಂತೆ ಬೆಳುದಿಂಗಳಂತೆ ತಂ
ಬೆರಲಂತೆ ನಳನಳಿಸಿ ಕಳೆಯೇಱಿ ಮೋಹಿಸಿ ನಯಂ ಬಡೆದು ರಂಜಿಸುತ್ತೆ
ಪುರಜನಂ ಹರಸಿ ಹಾರೈಸೆ ತಂದೆಯ ಸಕಲ
ಭರಭಾರಮಂ ತಳೆದು ಮನೆ ವಾರ್ತೆಗತಿಧುರಂ
ಧರನಾಗಿ ಸುಖದೊಳಾದಯ್ಯನಿರ್ದಂ ಸೋಮನಾಥನಂ ಪೂಜಿಸುತ್ತೆ೯೪

ಹತ್ತೈದುಕಾಲು ಹದುಳಿರುತಿರಲು ಶೂಲಿ ಬೆಸ
ನಿತ್ತ ದಿನದವಧಿ ಹತ್ತಿರೆ ಸಾರ್ವ ಪದದೊಳನಿ
ಮಿತ್ತ ಮನವೆತ್ತಿಕ್ಕಿ ವಿಪುಳತರಲಾಭಕ್ಕೆ ಮನವೆಳಸಿ ಹೇಱುಗಳಲಿ
ಮುತ್ತು ಮಾಣಿಕವರೆಸಿ ಹೋಹೆನಾಂತೆಂಕನಾ
ಡತ್ತ ಬಣಜಿಸಿ ಧನಂಬಡೆದು ಬಂದಪೆನೆಂದು
ಹೆತ್ತ ತಾಯ್ತಂದೆಗಳಿಗೊಂದುದಿನ ಹಗಲೊಳೇಕಾಂತದಿಂ ಬಿನ್ನೈಸಲು           ೯೫

ಕುರುಡ ಕಣ್ಬಡೆದಂತೆ ನವೆವ ಕಡುಬಡವ ಕಡ
ವರವ ಕಂಡಂತಱಸುವತಿರೋಗಿಗಮೃತಮಂ
ಧರಿಸಿದಂತೇತಕ್ಕೆ ಪಡೆದೆವೆಲೆ ಮಗನೆ ನಿನ್ನಂತಪ್ಪ ಸುಕುಮಾರನ
ಪರಿದೆಮಗೆ ಕಣ್ಣಾಗಿ ಗತಿಯಾಗಿಯೊಬ್ಬುಳ್ಳ
ತರುಣನಂ ನಿನ್ನನಗಲ್ದಿರಲಾಱಿನಾನಗಲ
ದಿರು ಹಡಹು ಬೇಡೆಂದು ನುಡಿವ ತಾಯಂ ಜಱಿದು ತಂದೆಯೊಡನಿಂತೆಂದನು            ೯೬

ಹಡೆದ ಹಲಬರು ಮಕ್ಕಳೊಳಗೊಬ್ಬನೆಂತಕ್ಕೆ
ಹಡಹಾಳಿಯಹುದರಿದು ಕೇಳ್ಮರುಳೆ ಪುಣ್ಯಕ್ಕೆ
ಪಡಿಯುಂಟೆಯೊಬ್ಬುಳ್ಳ ಮಗದುರುಳನಾಗಿ ಜಡನಾಗಿ ಧಾವತಿಗೊಳಿಸದೆ
ನಡೆದು ಹರದಾಡಿ ಗಳಿಸಿದಪೆನೆಂಬುದನು ನ
ಮ್ಮೊಡಲು ಹದುಳಿಪ್ಪಲ್ಲಿ ಕಂಡೆವಿದೆ ಸಾಕು ನೀ
ನೆಡೆವಾಯ್ದು ಪಯಣಮಂ ಕೆಡಿಸಬೇಡೆಂದು ವನಿತೆಯನು ಪತಿ ಬೋಳೈಸಲು            ೯೭

ಈಸು ವರುಷಕ್ಕೀಸು ತಿಂಗಳಿಂಗೀಸು ದಿನ
ಕೋಸರಿಸದೈತಪ್ಪುದೆಲೆ ಮಗನೆ ನಿನ್ನನು
ದ್ವೇಸಕ್ಕೆ ಕಳುಪಿದರುಂಟೆ ತನಯನನೆಂಬ ಸತಿಯ ನುಡಿ ಪತಿಯ ಮನವ
ಬಾಸಣಿಸಲೆಂದು ಬಂದಪೆ ಕಂದ ಹೇಳೆಂದು
ಬೋಸರಿಸಿ ತಂದೆ ಕೇಳಿದೊಡಿರದೆ ಹತ್ತೈದು
ಮಾಸಕ್ಕೆ ಬರ್ಪೆನುಮ್ಮ ಳಿಸಬೇಡೆಂದೊಡಾ ಮಾತೆಪಿತರಿಂತೆಂದರು  ೯೮

ಒಪ್ಪಿ ಕುರುಡನ ಕೈಯ ಕೋಲು ಹೆಳವನ ಬಂಡಿ
ತಪ್ಪದಲ್ಲಿರುತಿರಲ್ಕಲ್ಲದೊಂದಡಿಯಿಡ
ಲ್ಬಪ್ಪುದೇಯೆಂಬಂತಿರೆಲೆ ಮಗನೆ ಕೇಳು ನೀನೆಮಗಾಡಿದವಧಿಯ ದಿನಂ
ಬಪ್ಪಂದು ತನಕುಸುರುವಿಡಿದು ಬಟ್ಟೆಯ ನೋಡು
ತಿಪ್ಪೆವಾ ದಿನಕೆ ಬಾರದೊಡೆ ಧಾರುಣಿಯ ಮೇ
ಲಿಪ್ಪುದಿಲ್ಲಿದನಱಿದು ಬೇಗ ಬಾ ಬಾರದಿರು ಹೋಗು ಸುಖಿಯಾಗೆಂದರು   ೯೯

ಮಗನ ಹಡಪಕ್ಕೆ ಕಂಬಳಿಗೆ ದಂಡಿಗೆಗೆ ಕುದು
ರೆಗೆ ಕೊಡೆಗೆ ಲಿಂಗಪೂಜೆಗೆ ನೀಡುವುದಕೆ ಹಂ
ತಿಗೆ ಬಾಣಸಕ್ಕಂಗರಕ್ಷೆಗುಗ್ರಾಣಕ್ಕೆ ಮೇಳಕ್ಕೆ ಮಜ್ಜನಕ್ಕೆ
ಬಗೆದು ತಕ್ಕವಕೆ ತಕ್ಕವರ ಪರುಟವಿಸುತಂ
ಮಗನ ಭರಭಾರಕ್ಕೆ ಹತ್ತೈದು ಮೊದಲಸೆ
ಟ್ಟಿಗಳನಪ್ಪಯಿಸಿ ನಂಬುಗೆಗೊಂಡು ಭಂಡಮಂ ಸಲಿಸಿದನದೇವೊಗಳ್ವೆನು    ೧೦೦

ಈ ನಾಡೊಳೀ ಕಡೆಯೊಳೀ ದಿಶಾವರದೊಳಿಂ
ತೀ ನಗರನಗರಿಗಳೊಳೀ ರಾಜ್ಯವಿತತಿಗಳೊ
ಳೀ ನೆಲದೊಳಿಂತಿವು ಪ್ರೀಯವಿವು ಸಲುವವಿವು ಬೇಹವಿವು ಬೆಲೆಗೈವವು
ಆ ನಾಡಿಗಿಕ್ಕುವವಿಂದೆಱಿದು ಸಂವರಿಸಿ
ನಾನಾವಿಧದನೇಕ ಸಕಲ ವಸ್ತುಗಳ ರ
ತ್ನಾನೀಕ ಮೊದಲಾದನರ್ಘ್ಯಭಂಡವನು ಪರುಟವಿಸಿದರು ಹರುಷದಿಂದ       ೧೦೧

ಒಂದಧಿಕದಿನದೊಳುತ್ತಮ ಮುಹೂರ್ತದೊಳು ತಾ
ಯ್ತಂದೆಗಳಿಗೆಱಗಿ ತದನುಜ್ಞೆಯಂ ಪಡೆದು ಶಿವ
ಮಂದಿರಕ್ಕೈತಂದು ನೀನಿತ್ತ ಬೆಸನ ನಡೆಸಲು ನಿನ್ನ ಮಾತ ನಂಬಿ
ಮುಂದೀಗ ಹೋಗುತಿದ್ದೆನೆ ಹಿಂದೆ ಬೇಗ ಬಹು
ದೆಂದಿಂತು ಕಾರ್ಪಣ್ಯಮಂ ತೋಱಿ ಬೇಡಿಕೊಂ
ಬಂದಂದಿಂ ಸೋಮನಾಥಂಗೆಱಗಿ ಬೀಳ್ಕೊಂಡು ಹೋದನಂದಾದಯ್ಯನು      ೧೦೨

ತೀವಿದೂರೂರ್ಗಳೊಳು ನಗರನಗರಿಯೊಳರಸು
ಚಾವಡಿಯೊಳಗ್ರಹಾರಂಗಳೊಳು ಮನ್ನೆಯರ
ಠಾವಿನೊಳು ಪಟ್ಟಣಂಗಳೊಳುಱುವ ವಸ್ತುವಂ ವ್ಯವಹರಿಸುತೆಡೆಗೈವುತ
ಆವೆಡೆಯೊಳಾರಧಿಕರುತ್ತಮಕ್ಷೇತ್ರಂಗ
ಳಾವವು ವಿಶೇಷವೆಂದಲ್ಲಲ್ಲಿ ಹೊಕ್ಕು ಪರಿ
ಭಾವಿಸುತ್ತೆಯ್ದಿ ಚಂದ್ರಾದಿತ್ಯಚಕ್ರೇಶನಿಹ ಹುಲಿಗೆಱೆಗೆ ಬಂದನು   ೧೦೩

ತೆಂಕನಾಡೊಳಗಧಿಕ ಪಟ್ಟಣಂಗಳ ಹಲವ
ನಾಂ ಕಂಡೆನೆಲ್ಲಿಯಿಲ್ಲಿದು ಧರಾಂಗನೆಯ ಮುಖ
ಪಂಕೇಜದಂತತಿ ಮನೋಹರಾಕಾರವಿಂತಿದಱೊಳೇಂ ಸಮನಾವುದು
ಮುಂ ಕುಬೇರನ ರಾಜಧಾನಿಯಳಕಾಪುರ
ಕ್ಕಂ ಕೆಲರು ನಗರೇಷು ಕಾಂಚಿಯೆನಿಪಂತದ
ಕ್ಕಂ ಕರಂ ಚೆಲುವೆಂದು ಹುಲಿಗೆಱೆಯನಾದಯ್ಯ ನಿಂದು ನೋಡುತ್ತಿರ್ದನು   ೧೦೪

ನೆಗಳು ನೆಲೆಗಂಡಱಿಯವೆನಿಪಗಳುಗಳು ಮುಂದೆ
ಗಗನಮಂ ಮುಟ್ಟಿರ್ದ ಕೋಂಟೆ ಕೋಂಟೆಯ ಮೇಲೆ
ಹಗೆಯೆದೆಯ ಸೀಳ್ವ ಕರಗಸದಂತೆ ಮೆಱಿವ ತೆನೆ ತೆನೆಯೆಡೆಯೊಳುದ್ಯದ್ಧ್ವಜ
ಅಗಣಿತಧ್ವಜದೊಳೊಲೆವ ಪತಾಕೆಯಾಪತಾ
ಕೆಗಳತಣ್ಣೆಳಲೊಳಧ್ವಶ್ರಮಂ ಕಳೆವವಾ
ಖಗನಶ್ವರವೆಂದೊಡಿದರುನ್ನತಿಯ ಬಣ್ಣಿಸಲ್ಕರಿಂದೆಂದನಾದಯ್ಯನು         ೧೦೫

ಆ ಪುರಕ್ಕಧಿಕ ಚಂದ್ರಾದಿತ್ಯನೆಂದೆಂಬ
ಭೂಪಾಲಕಂ ಹರಿಶ್ಚಂದ್ರ ನಳ ಪುರು ಕುತ್ಸು
ನಾ ಪುರೂರವ ಸಗರ ಕಾರ್ತವೀರ್ಯರನೊಂದು ಮಾಡಿದಂದೊಳು ಸತ್ಯ
ಭಾಪೆಂದೆನಿಪ ಹಯಾರೂಢತ್ವ ನವನವಿಯ
ಚಾಪಾಗಮತ್ವ ಸೌಂದರತೆ ಬಹುಸಂತತಿ
ಶ್ರೀ ಪರಾಕ್ರಮವೆಸೆವ ಮಾನವಮನೋಜನಿನತೇಜದಿಂದೆಸೆರ್ದಿದನು೧೦೬

ಚತುರಂಗಬಲದ ಸಪ್ತಾಂಗರಾಜ್ಯದ ವೈರಿ
ಜಿತ ಭುಜಬಲದ ದಶದಿಶಾಂತ ಕೀರ್ತಿಯ ಸಮ
ಗ್ರತೆಯೊಳಾರುಂ ತನಗೆ ಸಮವಿಲ್ಲೆನಿಪ್ಪ ವಿಕ್ರಮಗುಣಾವಾಸನಾಗಿ
ಕ್ಷಿತಿಯ ಪಾಲಿಸುತ ಹುಲಿಗೆಱೆಯ ಚಾವಡಿಯನಾ
ಯತಮಾಡಿ ಹರುಷದಿಂದಿರುತಿರ್ಪನಲ್ಲಿ ಸಂ
ತತ ಚಾರುಮೂರ್ತಿ ಚಂದ್ರಾದಿತ್ಯನೃಪನಾರುಹತಸಮುದ್ಧರಣನಾಗಿ           ೧೦೭

ಹಲವು ದೇಶಂಗಳೌದಾರ್ಯಮಂ ಶೌರ್ಯಮಂ
ಚೆಲುವಂ ಪರಾಕ್ರಮಖ್ಯಾತಿಯಂ ನೀತಿಯಂ
ಸುಲಲಿತಾಚಾರಮಂ ವೀರಮಂ ತಂದೊಂದು ಮಾಡಿದಂದದಿ ರಂಜಿಪ
ಹುಲಿಗೆಱೆಯ ಜನತಿಂಥಿಣಿಯ ನೋಳ್ಪೆನನ್ನೆವರ
ಬಳಲಿಕೆಯ ಪರಿಹರಿಪೆನೆಂದು ಮನದಂದು ಶೀ
ತಳಜಲದ ನೆಳಲ ನುಣ್ಮುಳಲ ಸುಖಕೆಳಸಿ ಹೊಱವೊಳಲಿಗೈ ತರುತಿರ್ದನು    ೧೦೮

ಗಳಿತಶ್ರಮಂ ನಿರ್ಮಳಾಂಗಪ್ರತ್ಯಾಱೂಢ
ದಳಿತ ಪಿಂಛಾತಪತ್ರಂ ಮಣಿಗಣಾಕಲ್ಪ
ಲುಳಿತ ಚಾಮರ ಪರಿಮಿತಾಪ್ತಜನತಾವೃತಂ ಸಿತವಸನಕಲಿತ ಹಸ್ತಂ
ಲಳಿತ ಕೇಶಾಕೀರ್ಣಂ ದಿವ್ಯಪ್ರಸೂನ ಮಂ
ಜುಳಮುಖಸ್ಥಿತ ಪುಣ್ಯವಚನ ವಚಲಿತಧೈರ್ಯ
ದಳಿತ ತಾಂಬೂಲನಾದಯ್ಯ ಹುಲಿಗೆಱೆಯ ಹೊಱವಳಲ ಪೊಗುತಿರ್ಪಾಗಳು೧೦೯

ಇದು ಮಾಗಿಯನು ಹೆತ್ತ ತಾಯ್ಮನೆಯೊ ಮೇಣಲ್ಲ
ದಿದು ಶೀತಕರನಾಡಿ ಬೆಳೆದ ನಿಳಯವೊ ರಾಜಿ
ಪಿದು ವಸಂತನಘನಸುಕೃತಶಾಲೆಯೋ ಮಲಯ ಮಂದುಮಾರುತನ ಮಠವೊ
ಇದು ಮದನನರಳಂಬ ಮಡಲಿಱಿದು ಹೊದೆಗೈದ
ಸದನವೊಚಾರು ಶೈತ್ಯಂಗಳೊಗೆದೆಡೆಯೊ ಪೇ
ಳಿದು ಚಿತ್ರವೆಂದೆನಲ್ಕೆಸೆದುದಱವಟ್ಟಗೆ ಪಥಿಕಜನಶ್ರಮ ಹರವರಿ    ೧೧೦

ಬಿಳಿಯ ಕಬ್ಬಿನ ಜಂತೆಯೊತ್ತಿನೊಳು ಕೇತಕೀ
ದಳದ ತಗಡವಕೆ ಮುಡಿವಾಳದ ಹೊದಕೆ ಬಾಳ
ದೊಳುಭಿತ್ತಿ ಮರುಗದೆಡೆನೆರಕೆ ನಾನಾಪುಷ್ಪರಸದ ಮೇಲ್ಕಟ್ಟು ಬಿಗಿದ
ಮಳಯಜದ ಸಾರಣೆಯು ಪನ್ನೀರ ಸಿಂಪನಂ
ತಳಿರ ಹಾಸಿಕೆ ಕಮಳದಳದಲಾವಟ್ಟ ಹಿಮ
ಜಳ ಪೂರ್ಣ ಕುಂಭ ಹೊಂಬಾಳೆಗಳ ಚಾಮರಂ ಮೆಱಿದವಱವಟಿಗೆಯೊಳಗೆ   ೧೧೧

ಅಳಿಗಳಳಕಕೆ ನವಿಲ್ಮುಡಿಗೆ ಶಶಿ ವದನಕು
ತ್ಪಳ ಕಣ್ಗೆ ಬಿಂಬವಧರಕ್ಕೆ ಮಾಣಿಕ ದಶನ
ಕುಳಕೆ ಬೆಳುದಿಂಗಳು ನಗೆಗೆ ಕೋಕಿಲಂ ದನಿಗೆ ತಂಬೆಲರು ಸುಯಿಗೊಪ್ಪುವ
ಗಿಳಿನುಡಿಗೆ ಲತೆ ನಡುಗೆ ಚಕ್ರವಾಕಂ ಕುಚ
ಸ್ಥಳಕ್ಕೆ ಕೃತಕಾಚಳ ನಿತಂಬಕ್ಕೆ ತಳಿರು ಕರ
ತಳಕೆ ಹುರುಡಿಸುವ ರೂಪಂ ತಾಳ್ದ ವನಿತೆಯರು ಮೆಱೆದರಱವಟಗೆಯೊಳಗೆ            ೧೧೨

ನಡೆನೋಡಿ ನೋಡದಂದದಿ ಮುಗಿವ ಕಡೆಗಣ್ಣು
ಮುಡಿಯಿಡುವ ನೆವದಿ ಮೊಲೆಗೆಲನ ತೋಱಿಸಿ ಮೇಲು
ದಿಡುವ ಕೈಗಳು ನಿಱಿಯನಡಿಗಡಿಗೆ ಕಳೆದುಡುವ ನೆವದಿ ನಾಣ್ಮೆಱೆವ ಚದುರು
ನುಡಿಸಿದೊಡೆ ನಸುನಗುತೆ ಕೆಲದೆಗೆದ ಮುಖವ ನೀ
ರ್ಗುಡಿಯಲೆಱೆವುತ್ತೆ ಮೆಱಿದಸಿಗಲೆಯ ತುಟಿಗೆ ಹದ
ಗೊಡುವ ನಾಲಗೆಯ ಸುದತಿಯರೊಪ್ಪಿದರು ಪಾಂಥಜನಕಿಟ್ಟ ಬಲೆಗಳಂತೆ   ೧೧೩

ವಿಳಸಿತವೆನಿಪ್ಪ ಹೊಱವಳಲು ಪಾಂಥಾವಳಿಗೆ
ನೆರಳಲು ಜೀವೋನ್ಮುಖದ ತಳಲು ಶ್ರಮದ ಬೇರ
ಕಿಳಲು ಮನವಂ ಸೂಱೆಗೊಳಲು ಸಾಕೆಂದು ಹೊಗಳುತ್ತಲ್ಲಿಯಱವಟಗೆಯ
ಒಳಗಣಬಲೆಯರ ರೂಪಂ ಶೈತ್ಯಸೌರಭ್ಯ
ಜಳವನೀಕ್ಷಿಸಿ ಕೌತುಕಂಬಡುತೆ ಕುದುರೆಯಿಂ
ದಿಳಿಯಲಲ್ಲಿಯ ಸತಿಯರಾದರಿಸಿ ಕಾಲ್ದೊಳೆದು ಕೈಗೊಟ್ಟು ಕೊಂಡೊಯಿದರು       ೧೧೪

ತಳಿರ ಹಾಸಿನ ಮೇಲೆ ಕುಳ್ಳಿರ್ದು ಸುದತಿಯರ್
ತಳಿವ ಪನ್ನೀರ ಕುಂಚಿಗೆಯ ಬೀಸುವ ಕಮಲ
ದಳದಾಲವಟ್ಟದೆಲರಿಂಗೆ ಪೂಸುವ ಚೆಂದನದ ಶೈತ್ಯಸೌರಭ್ಯಕೆ
ಎಳಸಿ ಮೈಯೊಡ್ಡಿ ನೀಡುವ ನವ್ಯಫಳವನಿ
ರ್ಮಳಜಳವನಾದರಿಸಿ ಕೌತುಕವನಾಳುತ್ತೆ
ಕೆಳೆಯರಂ ಕಳುಹಿದನು ಪುರದೊಳಗೆ ಬೀಡಿಕೆಗೆ ಭಕ್ತರ ಮನೆಯನಱಸಲು       ೧೧೫

ಹಲವು ಹಂದಿಯೊಳೊಂದು ಗಜವನುಱೆಬೆಳೆದ ಬೊ
ಬ್ಬುಲಿಯಡವಿಯೊಳಗೊಂದು ಕಲ್ಪಕುಜವಂ ಹೀನ
ಜಲದೊಳಗೆ ಸಿದ್ಧರಸಮಂ ನೆರೆದ ಕಾವಲಿಗಳೊಳಗೊಂದು ಕನ್ನಡಿಯನು
ಅಲಸದಱಸುವ ಮರುಳರಂದದಿಂ ಪರಿಪರಿದು
ಹುಲಿಗೆಱೆಯ ಕೇರಿಕೇರಿಯ ಜೈನನಿಳಿಯದೊಳು
ತೊಳಲಿ ಭಕ್ತರ ಮನೆಯನಱಸಿ ಕಾಣದೆ ತಿರುಗಿ ಬಂದರಾದಯ್ಯನೆಡೆಗೆ           ೧೧೬

ಪುರಪುರಂಗಳೊಳವಱ ಕೇರಿ ಕೇರಿಗಳಲ್ಲಿ
ನೆರೆದ ಮನೆಮನೆಯೊಳಱಸಿದೆವು ಕೇಳಿದೆವು ಭ
ಕ್ತರ ಮನೆಗಳಿಲ್ಲಿಲ್ಲವೆನೆ ಶಿವಾಲಯವನದಱೊಳು ಕಂಡುದುಂಟೆಯೆನಲು
ಮೊರಡಿಗಳ ನಡುವೆ ಮಂದರ ಬಕಂಗಳ ನಡುವೆ
ಯರಹಂಸೆಯಿಪ್ಪಂತೆ ಬಸದಿ ಹಲವಱ ನಡುವೆ
ಪರಮ ಹೋಜೇಶ್ವರನಿರಲ್ಕಂಡೆವೆನಲದಕೆ ಪೋಗಲುದ್ಯೋಗಿಸಿದನು         ೧೧೭