ಸೂಚನೆ
ಪತಿಯಾಜ್ಞೆಗಂಜಿ ನಿಜಸುತನ ಸುಡಲಮ್ಮದಾ
ಸತಿ ಹೋಗುತಿರಲು ರಕ್ಕಸಿಯೆಂದು ಪಿಡಿದು ಭೂ
ಪತಿಯ ಕೈಯಲಿ ಕೊಡಲು ಹೊಡೆದ ದೃಢಕಾ ವಿಶ್ವಪತಿ ನಿಜವ ತೋಱಿಸಿದನು

ಚೋರರಳಪೊಕ್ಕು ಮಿಕ್ಕಾ ಪುರದ ಭೂಪನ ಕು
ಮಾರನಂ ಕದ್ದು ಕೊಂಡೊಯ್ದು ಗೊಂದಿಯೊಳಲಂ
ಕಾರಮಂ ಕೊಂಬ ಭರದಿಂ ಕೊರಳನರಿಯಲಾ ಶಿಶುವೊಱಲಲಾ ದನಿಯನು
ದೂರದಿಂ ಕೇಳ್ದೆನ್ನ ಮಗನಾಗದಿರನೆನು
ತ್ತಾರೋ ನಿರೋಧಿಸುವರೆಂದೋಜೆ ಹುಟ್ಟದವಿ
ಚಾರದಿಂ ಹರಿದಳೆಂಬಾಗಳತಿದುಃಖಿಗುಂಟೇ ಬುದ್ಧಿ ಜಗವಱಿಯಲು           ೧

ಸಾರಿ ಬರೆ ಬಿಟ್ಟೋಡಿ ಹೋದ ಚೋರರ ಖಡ್ಗ
ಧಾರೆಯಿಂ ಬಸವಳಿದ ಹಸುಳೆಯಂ ತನ್ನಯ ಕು
ಮಾರನೆಂದೇ ಬಗೆದು ಕರೆಕರೆದು ತಲೆದಡವಿ ತಡವರಿಸಿ ಮೆಯ್ಗುಱುಹನು
ಹಾರುತಿರೆ ಬಾರಿಸುವ ಬೊಂಬುಳಿಯ ಕೊಂಬುಗಳ
ಭೇರಿಗಳ ಬೊಬ್ಬೆಗಳ ಕಳಕಳದೊಳಱಸಿ ಬಂ
ದಾರುತ್ತ ಹರಿತಂದು ಹಿರಿಯಹುಯ್ಯಲ ಭಟರು ಕಂಡು ಹಿಡಿದರು ಸತಿಯನು            ೨

ಎಲೆಲೆ ರಕ್ಕಸಿಯಾಗದಿರಳಿವಳು ನಾವಿಲ್ಲಿ
ಕೊಲಬೇಡ ಸನ್ಯಂಗೆವೆರಸಿ ಕೊಂಡೊಯ್ದು ಭೂ
ತಲಪತಿಗೆ ಕೊಡುವೆವೆಂದಸುವಳಿದ ಹಸುಳೆಯಂ ಹೊಱಿಸಲಾಗೊಸರ್ವ ರಕುತ
ತಲೆಯಿಂದ ಸುರಿದುಟ್ಟ ಸೀರೆ ತೊಪ್ಪನೆ ತೋಯೆ
ಲಲನೆಯಂ ಕಿತ್ತಲಗುಗಳ ನಡುವೆ ಹೆಡಗೈಯ
ಬಲಿದ ನೇಣಂ ಪಿಡಿದು ಬಡಿಬಡಿದು ನಡಸಿ ತಂದರು ರಾಜಬೀದಿಯೊಳಗೆ       ೩

ಎನ್ನನಿವರಾಡಿಸಿದಡೇನನಾಡುವೆನೆಂದು
ತನ್ನ ಮನದೊಳಗೆ ತಾಂ ನೆನೆದು ನಿಶ್ಚಯಿಸಿದಳು
ಮುನ್ನೀಗಳಾವಾವ ದುಃಖವುಂಟವನೆಯ್ದೆ ಕಂಡೆನುಂಡೆನು ತಣಿದೆನು
ಇನ್ನೇನ ಕಾಣಲಿರ್ದಪೆನರಸ ಕೇಳಿದೊಡೆ
ನಿನ್ನ ಮಗನಂ ಕೊಂದ ಪಾಪಿಯಾನೆಂದಾಡಿ
ಸನ್ಯಂಗದಿಂ ಸಾವೆನೆನುತ ಬರಲೋಲಗದ ಗಜಬಜವನೇವೊಗಳ್ವೆನು            ೪

ಅಲ್ಲಿ ನೋಡಿಲ್ಲಿ ನೋಡತ್ತ ಹರಿಯಿತ್ತ ಹರಿ
ಹಲ್ಲಣಿಸು ತುರಗಮಂ ಕೈದುಗೊಳ್ಳೂರಮನೆ
ಯೆಲ್ಲವಂ ಸೋದಿಸುವುದೂರ ದಾರಿಗಳಲ್ಲಿ ಕಂಡಿರಾದಡೆ ಕಳ್ಳರ
ಕೊಲ್ಲು ತಿವಿ ತಿದಯನುಗಿಯೆಂಬ ಕಳಕಳರವದ
ಘಲ್ಲಣೆಯ ಭಟರ ತಿಂತಿಣಿಯೊಳುಪ್ಪರಿಗೆ ಜಡಿ
ದಲ್ಲಾಡುವಂತೋಲಗಂಗೊಟ್ಟು ಕೋಪಾಗ್ನಿರೂಪಾದ ಭೂಪನಿರಲು        ೫

ಹಸುಳೆಯಂ ಕದ್ದುಕೊಂಡೊಯ್ದು ನೋಯಿಸಿದ ರ
ಕ್ಕಸಿಯ ಹಿಡಿತಂದೆವವಧರಿನೆಸೆನಲು ಕಂಡು ಶಂ
ಕಿಸುತ ನೀನಾರೆತ್ತಣವಳೇಕೆ ಕೊಂದೆ ಸುಕುಮಾರಕನನೆಂದರಸನು
ಬೆಸಗೊಳಲು ದನುಜೆಯಲ್ಲಾಂ ಮನುಜೆಯಾನರ್ಥ
ವಿಷಯದಾಪೇಕ್ಷೆಯಿಂ ಕೊಂಡೊಯ್ದು ಕೊಂದೆನೀ
ಶಿಶುವ ನೀನೊಲಿದಂತೆ ಮಾಡೆನ್ನನೆಂದಳಾ ರಾಣಿ ವಸುಧಾಧಿಪತಿಗೆ  ೬

ಹೆದಱದಿರು ತೆಕ್ಕದಿರು ಅಂಜದಿರು ಲೋಗರಿ
ಟ್ಟುದೊ ನಿನ್ನ ಕೃತಕವೋ ಹೇಳು ಧರ್ಮಾಧಿಕರ
ಣದವರಂ ಕರಸುವೆಂ ನುಡಿಸುವೆಂ ಕಾವೆನೆಂದವನಿಪಂ ಬೆಸಗೊಂಡಡೆ
ಇದಕಿನ್ನು ಧರ್ಮಾಧಿಕರಣವೇಗುವುದು ಕೊಂ
ದುದು ದಿಟಂ ಸತ್ತ ಶಿಶು ಕೈಯಲಿದೆಯಿದಕೆ ತ
ಕ್ಕುದನೀಗ ಕಾಬುದೆಂದಾಡಿದಳು ಜೀವದಾಸೆಯನೇನುವಂ ಹಾರದೆ  ೭

ಕೊಂದೆ ಕೊಂದೆಂ ಕೊಂದೆನೆಂದು ತನ್ನಿಂದ ತಾ
ನೆಂದಡಿನ್ನೇಕೆ ಲೋಕದ ಮಾತು ಕೊಂದರಂ
ಕೊಂದು ಕಳೆವುದೆ ಧರ್ಮ ಜಗವರ್ತಿಯಂ ಹೊತ್ತಿಸೆಳೆಹೂಟೆಯಂ ಹೂಡಿಸು
ಸಂದುಸಂದಂ ಕಡಿಸು ಕಿವಿಮೂಗನರಿ ಸಬಳ
ದಿಂದ ತಿವಿಯೆಂದೊಬ್ಬರೊಂದೊಂದನೆಂದುದಾ
ಮಂದಿ ತನತನಗೆ ನುಡಿಯುತ್ತಿರಲು ವೀರಬಾಹುಕನ ಕರಸಿದನರಸನು           ೮

ಭೂನುತ ಕುಮಾರನಂ ದಹಿಸಿ ದೂವೆಯ ಕೆಲದೊ
ಳೀ ನರಕಿ ವನಿತೆಯನನಾಮಿಕನ ಕಯ್ಯೊಳನು
ಮಾನವಿಲ್ಲದೆ ಕೊಲಿಸು ಹೋಗೆಂದು ವೀರಬಾಹುಕನ ಕೈಯಲಿ ಕಳುಹಲು
ಏನೆಂದುದಂ ಮಾಳ್ಪೆನೆಂದು ಸುಡುಗಾಡನ
ತ್ಯಾನಂದದಿಂ ಕಾವ ಚಂದುಗನ ಕಯ್ಯೊಳೀ
ಹೀನವನಿತೆಯ ಕೊಲಿಸುವೆಂ ಬೇಗ ಕರೆಯೆನಲ್ಕರರೆ ಭೂಪಂ ಬಂದನು          ೯

ವಸುಧಾಧಿಪತಿಯ ನೇಹದ ಮಗನ ಕೊಂದ ರ
ಕ್ಕಸಿಯಿವಳನಾ ರುದ್ರಭೂಮಿಯೊಳಗೆಯ್ದೆ ತ
ಪ್ಪಿಸದೆ ಕೊರಳಂ ಕೊಱೆದು ಬಿಸುಡೆಂದು ಬೆಸನ ಕೊಡಲಡಸಿ ಮುಂದಲೆಯಪಿಡಿದು
ಕುಸುಕಿ ಕಡೆಮೆಟ್ಟಿ ಕೈಗಳ ಸೇದಿಬೆಂಗೆ ಬಾ
ಗಿಸಿ ಬಿಗಿದು ಹೆಡಗಯ್ಯನೇಣಿಂದ ಹೊಡೆದು ದ
ಟ್ಟಿಸಿ ಪಾಪಿ ಹೊಲತಿ ನಡೆನಡೆಯೆಂದು ನಡೆಸಿ ತಂದಂ ತನ್ನ ತವಗದೆಡೆಗೆ       ೧೦

ಇಂದೆನ್ನ ಕುಲಜನೆನಿಸುವ ಹರಿಶ್ಚಂದ್ರನಂ
ಹೆಂದದ ಚತುರ್ದಶಜಗಂಗಳಱಿವಂತು ತರು
ಣೇಂದುಧರನಹ ವಿಶ್ವಪತಿ ಮೆಱೆವ ಸಂಭ್ರಮದ ಸಡಗರವ ನೋಳ್ಪೆನೆಂದು
ಕುಂದದುದ್ದವನೇಱಿ ನಿಂದಿಪ್ಪನೋ ಎನಿ
ಪ್ಪಂದದಿಂದುದಯಗಿರಿಶಿಖರಕ್ಕೆ ರಾಗದಿಂ
ಬಂದನಂಬುಜಮಿತ್ರನೆಂದೆನಿಪನಪವಿತ್ರತಿಮಿರಪಟಲಾಮಿತ್ರನು       ೧೧

ಹೆಡಗಯ್ಯ ಬಿಗಿದ ನೇಣಂ ಕೊಯ್ದು ಬಿಸುಟು ನಿಡು
ದಡದಲ್ಲಿ ಮೂಡ ಮುಂತಾಗಿ ಕುಳ್ಳಿರಿಸಿ ಹಿಂ
ದಡದಲ್ಲಿ ಕುಸಿದು ನೀಡಡಿಯಿಟ್ಟು ನಿಂದು ಖಡ್ಗವ ಸೆಳೆದು ಜಡಿದು ನೋಡಿ
ಹೆಡತಲೆಗೆ ಮೋಹಿ ಕೆಯ್ಯೆತ್ತಿ ಕಂಧರ ಹಱಿಯೆ
ಹೊಡೆಯಲನುವಾದೆನನುವಾದೆನನುವಾಗಾಗು
ಮಡದಿ ನೆನೆ ದೈವವನು ಬಿಡದೆನ್ನೊಡೆಯನಂ ಹರಸು ಹರಸೆಂದನು            ೧೨

ಆ ಹೊಯ್ದನಾಹೊಯ್ದನೆಲೆಲೆ ಶಿವಶಿವ ಅಷ್ಟ
ದೇಹಿ ನೀನೇ ಶರಣು ರಕ್ಷಿಸಬಲೆಯನು ದು
ರ್ಮೋಹಿ ವಿಶ್ವಾಮಿತ್ರ ಪಾಪಿ ಇನ್ನಾದೊಡಂ ಸತಿಯ ಕೊಲೆಯಂ ನಿಲಿಸಲು
ಹೋಹುದೇನೆಂದೋವಿ ಬೇಡಿಕೊಳುತುಂ ಸುರ
ವ್ಯೂಹಮಂಬರದಲ್ಲಿ ಹೂಮಳೆಗಳಂ ಹಿಡಿದು
ಮೋಹರಂಬೆತ್ತು ನೋಡುತ್ತಿರಲು ನಾರಿ ಹರಕೆಗಳನವಧರಿಸೆಂದಳು ೧೩

ಬಲಿದ ಪದ್ಮಾಸನಂ ಮುಗಿದಕ್ಷಿ ಮುಚ್ಚಿದಂ
ಜಲಿವೆರಸಿ ಗುರುವಸಿಷ್ಠಂಗೆಱಗಿ ಶಿವನ ನಿ
ರ್ಮಲರೂಪ ನೆನೆದು ಮೇಲಂ ತಿರುಗಿ ನೋಡಿ ಭೂಚಂದ್ರಾರ್ಕತಾರಂಬರಂ
ಕಲಿ ಹರಿಶ್ಚಂದ್ರರಾಯಂ ಸತ್ಯವೆರಸಿ ಬಾ
ಳಲಿ ಮಗಂ ಮುಕ್ತನಾಗಲಿ ಮಂತ್ರಿ ನೆನೆದುದಾ
ಗಲಿ ರಾಜ್ಯದೊಡೆಯ ವಿಶ್ವಾಮಿತ್ರ ನಿತ್ಯನಾಗಲಿ ಹರಕೆ ಹೊಡೆಯೆಂದಳು      ೧೪

ಹರಕೆಯಂ ಕೇಳಿ ಹವ್ವನೆ ಹಾಱಿ ಬೆಱಗಾಗಿ
ಮರವಟ್ಟು ನಿಂದು ಭಾಪುರೆ ವಿಧಿಯ ಮುಳಿಸೆ ಹೋ
ದಿರುಳೆನ್ನ ಸುತನ ದುರ್ಮರಣಮಂ ತೋಱಿ ಕಯ್ಯೊಡನೆ ಮತ್ತೀಗಳೆನ್ನ
ವರಸತಿಯ ತಲೆಯನಾನೆನ್ನ ಕಯ್ಯಾರ ಪಿಡಿ
ದರಿವಂತೆ ಮಾಡಿದೆಯಿದಕ್ಕೆ ನಾನಿನಿತು ಹೇ
ವರಿಸುವವನಲ್ಲ ಪತಿಯಾಜ್ಞೆಯುಳಿದಡೆ ಸಾಕೆನುತ್ತ ಕೊಲಲನುವಾದನು      ೧೫

ಮನದ ಶಂಕೆಯನುಳಿದು ಹೊಡೆಯಲನುವಾದ ಭೂ
ಪನ ಭಾವಮಂ ಕಂಡು ಹೊಡೆಯಬೇಡೆನ್ನ ನಂ
ದನೆಯರಂ ಮದುವೆಯಾದಡೆ ಸತ್ತಮಗನನೆತ್ತುವೆನಿವಳ ತಲೆಗಾವೆನು
ವಿನಯದಿಂದ ಕೊಂಡ ಧನಮಂ ಕೊಟ್ಟು ನಿನ್ನ ಬಂ
ಧನಮೋಕ್ಷಮಂ ಮಾಡಿ ರಾಜ್ಯಮಂ ಪೊಗಿಸಿ ಮು
ನ್ನಿನ ಪರಿಯಲಿರಿಸುವೆಂ ಕೇಳೆಂದನಂಬರದೊಳಿರ್ದು ವಿಶ್ವಾಮಿತ್ರನು            ೧೬

ತಿರುಗಿ ಮೇಲಂ ನೋಡಿ ಕಂಡಿದೇಂ ಮುನಿ ನಿಮ್ಮ
ಹಿರಿಯತನಕೀ ಮಾತು ಯೋಗ್ಯವೇ ಕೇಳೆನ್ನ
ಸಿರಿ ಪೋದಡೇನು ರಾಜ್ಯಂ ಪೋದಡೇನು ನಾನಾರ ಸಾರಿದಡೇನು
ವರಪುತ್ರನಸುವಳಿದು ಪೋದಡೇಂ ನಾನೆನ್ನ
ತರುಣಿಯಂ ಕೊಂದಡೇಂ ಕುಂದೆ ಸತ್ಯವನು ಬಿ
ಟ್ಟಿರನೆನಿಸಿದಡೆ ಸಾಕು ಎಂದೆತ್ತಿ ಹಿಡಿದ ಖಡ್ಗವ ಜಡಿಯುತಿಂತೆಂದನು          ೧೭

ಎನ್ನ ದುಷ್ಕರ್ಮವಶದಿಂದಾದ ಕರ್ಮವೆಂ
ದಿನ್ನೆಗಂ ಬಗೆದೆನಾನಿಂದುತನಕಂ ಕಡೆಗೆ
ನಿನ್ನ ಗೊಡ್ಡಾಟವೇ ಹೊಲೆಯನಾದವನಿನ್ನು ಸತಿಗಿತಿಯ ಕೊಲೆಗೆ ಹೇಸಿ
ಬೆನ್ನೀವನೇ ಇದಂ ತೋಱಿ ಸಿಕ್ಕಿಸಬಂದ
ಗನ್ನಗತಕಕ್ಕೆ ಸೆಡೆವೆನೆ ಸಡಿಫಡೆನುತಾರ್ದು
ನನ್ನಿಕಾಱಂ ವಧುವನೆಲೆಲೆ ಶಿವಶಿವ ಮಹಾದೇವ ಹೊಡೆದಂ ಹೊಡೆದನು      ೧೮

ಹೊಡೆದ ಕಡುಗದ ಬಾಯ ಕಡೆಯ ಹೊಡೆಗಳನಾಂತು
ಮಡದಿಯೆಡೆಗೊರಳ ನಡುವಡಸಿ ಮೂಡಿದನು ಕೆಂ
ಜೆಡೆಯ ಶಶಿಕಳೆಯ ಸುರನದಿಯ ಬಿಸಿಗಣ್ಣ ಫಣಿಕುಂಡಲದ ಪಂಚಮುಖದ
ಎಡದ ಗಿರಿಜೆಯ ತಳಿದ ದಶಭುಜದ ಪುಲಿದೊಗಲಿ
ನುಡುಗೆಯ ಮಹಾವಿಷ್ಣುನಯನವೇಱಿಸಿದ ಮೆ
ಲ್ಲಡಿಯ ಕಾಶೀರಮಣ ವಿಶ್ವನಾಥಂ ಸುರರ ನೆರವಿ ಜಯಜಯ ಎನುತಿರೆ     ೧೯