ಸೂಚನೆ
ಜನಪತಿ ಹರಿಶ್ಚಂದ್ರರಾಯನ ಕುಮಾರನಿಂ
ಧನಕೆ ಹೋದಲ್ಲಿ ಕಾಳೋರಗಂ ಪಿಡಿಯಲಾ
ಜನನಿ ಶೋಕಿಸಿದ ಮನದಳಲು ವಿಶ್ವಾಮಿತ್ರಮುನಿಯನೆಯ್ದದೆ ಮಾಣದು

ಒಡೆಯನಾಜ್ಞೆಯ ಸಲಿಸಿ ಪೊಡವಿಪಂ ನಡೆಯುತ್ತ
ಮೃಡಪದಧ್ಯಾನಾಮೃತವನೀಂಟಿ ತೇಗುತ್ತ
ಪಿಡಿದ ಚಿಂತೆಯನೆಲ್ಲವಂ ತೊಲಗಿಸುತ್ತಲತಿಪರಿಣಾಮಮಂ ಧರಿಸುತ
ಪೊಡವಿಯೊಳಗೆಯ್ದೆ ಸತ್ಯವ ಮೆಱೆದು ತೋಱುತ್ತ
ಸುಡುವ ಹೆಣಗಳ ಕಮಱುಗಳನು ಆರಯ್ಯುತ್ತ
ಬಿಡದೆ ನೆಲದೆಱೆಯಕ್ಕಿ ಕಪ್ಪಡವ ಕೊಂಡರಸ ದಿನವ ಕಳಿಯುತ್ತಿರ್ದನು         ೧

ಇಂತು ನೃಪನಿತ್ತ ದಿವಸಂ ಕಳಿಯುತಿರಲತ್ತ
ಲಂತವರನೊತ್ತಿಟ್ಟ ಮನೆಯನೇವೊಗಳ್ವೆನದು
ತಿಂತಿಣಿಯ ಸೂನೆಗಾಱರ ನಿಳಯ ರಕ್ಕಸಿಯ ಮಾಡಹಾವಿನ ಹೇಳಿಗೆ
ಅಂತಕನ ನಗರ ಮೃತ್ಯುವಿನ ಬಲುಬಾಣಸದ
ಹಂತಿ ಮಾರಿಯ ಮೂರಿಯಾಟದೆಡೆಯೆಂಬಾಗ
ಳೆಂತು ಜೀವಿಪರಕಟ ಮನೆಯವರ ದುರ್ಧರದೊಳವನಿಪನ ಸತಿಪುತ್ರರು         ೨

ಒಡೆಯನತಿಕೋಪಿ ಹೆಂಡತಿ ಮಹಾಮೂರ್ಖೆ ಮಗ
ಕಡುಧೂರ್ತ ಸೊಸೆಯಾದಡಧಿಕನಿಷ್ಠುರೆ ಮನೆಯ
ನಡೆವವರು ದುರ್ಜನರು ನೆರೆಮನೆಯವರು ಮಿಥ್ಯಾವಾದಿಗಳು ಪಶುಗಳಗಡು
ಅಡಿಗಡಿಗೆ ಕೋಪಿಸುವ ಸಾಯೆ ಸದೆಬಡಿವ ಕಾ
ಳ್ಗೆಡೆವ ಕರಕರಿಪೆ ಸೆಣಸುವ ತಪ್ಪ ಸಾಧಿಸುವ
ಕೆಡೆಯೊದೆವ ಮಾರಿಗಾಱಗೆ ಸತ್ತು ಹುಟ್ಟುತಿಹರವನಿಪನ ಸತಿಪುತ್ರರು          ೩

ಎಡೆವಿಡದೆ ಹಲವು ಸೂಳೊಡೆಯನರಮನೆಗೆ ನೀ
ರಡಕಿ ಕೊಟ್ಟನಿತು ಬತ್ತವ ಮಿದಿದು ಒಡಲಿಗೆ
ಯ್ದೆಡೆಯಿಕ್ಕಿದನಿತುಮಂ ಉಂಡು ಇರುಳುಂ ಹಗಲುಮೆನ್ನದೋರಂತೆ ಕುದಿವ
ಮಡದಿಯ ಕುಮಾರನುದಯದೊಳೆದ್ದು ಹೋಗಿ ಹೇ
ರಡವಿಯೊಳು ಹುಲುಹುಳ್ಳಿಯಂ ಕೊಂಡು ನಿಚ್ಚ ತ
ನ್ನೊಡನಾಡಿಗಳ್ವೆರಸಿ ಬೈಗೆ ಬಂದಿಂತು ಕಾಲವನು ಸವೆಯಿಸುತಿರ್ದನು         ೪

ಕಸ ನಡುಮನೆಯೊಳಿರಲು ಬೈವನೊಡೆಯಂ ಕಱೆವ
ಪಶುಗಳಗಡುಂ ಕಟ್ಟಹೋದಡೊದೆವುವು ಅವನ
ಸೊಸೆ ಬೆನ್ನನೊಱಸಲೆಂದಪ್ಪಳಿಸುವಳು ಗೃಹಸ್ಥನಪುತ್ರ ತನ್ನ ಕಾಲ
ಸಸಿನದಲಿ ತೊಳೆಯಳಿವಳೆಂದೊದೆವ ನೆರೆಮನೆಯ
ಪಿಸುಣರಾದವರಿವಳು ಕಳ್ಳೆಯೆಂದೆಯ್ದೆ ಘೂ
ರ್ಮಿಸುತೊಡತಿ ಸದೆವಳೆನೆ ಪುತ್ರಶೋಕವು ಕೂಡಿ ಸಂಧಿಸಿತ್ತೇವೊಗಳ್ವೆನು       ೫

ಓರಂತೆ ತಲ್ಲಣಿಸಿ ಹೆದಱಿ ಕಣ್ಗೆಟ್ಟೋಡ
ಬಾರದಿರಬಾರದುಱೆ ಸಾಯಬಾರದು ಬದುಕ
ಬಾರದೆಂಬಂತೆ ತನ್ನೊಡಲಿಂಗೆ ಬಪ್ಪ ದುಃಖಂಗಳಿಗೆ ಸಾಕ್ಷಿಯಾಗಿ
ಧಾರಿಣಿಯೊಳವನಿಪನ ಸತ್ಯ ಸಲಬೇಹುದೆಂ
ಬಾರಯ್ಕೆವಿಡಿದು ನಡೆಯುತ್ತಿಪ್ಪ ನಾರಿಯ ಕು
ಮಾರಂಗೆಬಂದ ಸಂಕಟದ ಸಂವರಣೆಯನದಾವ ಜೀವರು ಕೇಳ್ವರು  ೬

ಎಂದಿನಂತುದಯಕಾಲದೊಳೆದ್ದು ಹುಲುಹಳ್ಳಿ
ಗೆಂದರಣ್ಯಕ್ಕೆ ನಡೆದಲ್ಲಲ್ಲಿ ಹೋಗಿ ಹಲ
ವಂದದಡುಗಬ್ಬನಾಯ್ದೊಟ್ಟಿ ಹೊಱೆಗಟ್ಟಿ ಹೊತ್ತೋರಗೆಯ ಮಕ್ಕಳೊಡನೆ
ನಿಂದು ಮಧ್ಯಾಹ್ನದುರಿಬಿಸಿಲೊಳೆದೆ ಬಿರಿಯೆ ಜವ
ಗುಂದಿ ತಲೆಕುಸಿದು ನಡೆಗೆಟ್ಟು ಬಾಯಾಱಿ ಹಣೆ
ಯಿಂದ ಬೆಮರುಗೆ ನೆತ್ತಿ ಹೊತ್ತಿ ತೇಂಕುತ್ತ ಹರಿತಪ್ಪಾಗಳೇವೊಗಳ್ವೆನು        ೭

ಕೆಲದ ಮೆಳೆಯೊತ್ತಿನೊಳಗಿರ್ದ ಹುತ್ತಿನೊಳು ನಳ
ನಳಿಸಿ ಕೋಮಲತೆಯಿಂ ಕೊಬ್ಬಿ ಕೊನೆವಾಯ್ದು ಕಂ
ಗಳವಟ್ಟು ಬೆಳೆದೆಳೆಯ ದರ್ಭೆಯಂ ಕಂಡು ಹಾರಯಿಸಿ ನಾನಿದನೆಲ್ಲವ
ಗಳಗಳನೆ ಕೊಯ್ದು ಕೊಂಡೊಯ್ದಿತ್ತಡೆನ್ನೊಡೆಯ
ಮುಳಿಯದಿಹನಿದು ಹದಿಹನೆಂಬಾಸೆಯಿಂ ಹೊಱೆಯ
ನಿಳುಹಿ ಕುಡುಗೋಲ್ವಿಡಿದು ಸಾರ್ದನಸ್ತಾದ್ರಿಯಂ ಸಾರುತಿಹ ಸೂರ್ಯನಂತೆ೮

ಹೊದೆಗಡಿದು ಹತ್ತಿ ಹುತ್ತವ ಸುತ್ತಿದೆಳಹುಲ್ಲ
ಹೊದಱ ಹಿಡಿದಡಿಸಿ ಬಿಡದರಿದು ಸೆಳೆಯಲ್ ಕಯ್ಯ
ಹದರನೊಡೆಗಚ್ಚಿ ಜಡಿಯುತ್ತ ಭೋಂಕನೆ ಬಂದ ರೌದ್ರಸರ್ಪನನು ಕಂಡು
ಹೆದಱಿ ಹವ್ವನೆ ಹಾಱಿ ಹಾ ಎಂದು ಕೈಕಾಲ
ಕೆದಱಿ ಕೊರಳಡಿಯಾಗಿ ಕೆಡೆದನಕಟಕಟ ಮದ
ಮುದಿತ ರಾಹುಗ್ರಸ್ತವಾದ ತರುಣೇಂದುಬಿಂಬಂ ನೆಲಕೆ ಬೀಳ್ವಂದದೆ            ೯

ಹುತ್ತಿನಿಂ ಫಣಿವೆರಸಿ ಕೆಡೆಯೆ ಕಂಡೊಡನಿರ್ದ
ತತ್ತುಕಂಗಳು ಹೆದಱಿ ಬಿಟ್ಟೋಡಿ ಹೋದರೂ
ರತ್ತಲಿತ್ತಂ ತಾಯ್ಗೆ ಹಲುಬಿ ತಂದೆಯ ಕರೆದು ದೆಸೆದೆಸೆಗೆ ಬಾಯ ಬಿಟ್ಟು
ನೆತ್ತಿಗೇಱಿದ ವಿಷದ ಕೈಯಿಂದ ಮಡಿದನೀ
ಹೊತ್ತೆನ್ನ ಕುಲದ ಕುಡಿ ಮುರುಟಿತೆಂದುಮ್ಮಳಂ
ಬೆತ್ತು ಬೀಳದೆ ಮಾಣನೆಂಬಂತೆ ರವಿ ಬಿದ್ದನಂದು ಪಡುವಣ ಕಡಲೊಳು       ೧೦

ತನಯನೆಂದುಂ ಬಪ್ಪ ಹೊತ್ತಿಂಗೆ ಬಾರದಿರೆ
ಮನನೊಂದಿದೇಕೆ ತಳುವಿದನೆನ್ನ ಕಂದನೆಂ
ದೆನುತ ಸುಯ್ಯುತ್ತ ಮಱುಗುತ್ತ ಬಸುಱಂ ಹೊಸೆದು ಕೊನೆವೆರಳ ಮುರಿದುಕೊಳುತ
ತನುವ ಮಱೆದಡಿಗಡಿಗೆ ಹೊಱಗನಾಲಿಸಿ ಮತ್ತೆ
ಮನೆಯೊಡತಿಗಂಜಿ ಕೆಲಸವನು ಮಾಡುತ್ತಿಪ್ಪ
ವನಿತೆಗಾದಾಪತ್ತನಾಲಿಸದೆ ಕೆಟ್ಟು ದಟ್ಟಿಸುವರದನೇನೆಂಬೆನು       ೧೧

ಬಂದಿರನಲೇ ಎಂದು ಪೊಱಮಟ್ಟಡೋಡಿದಪ
ಳೆಂದೆಂಬರೊಯ್ಯನಳುತಿರಲಮಂಗಳಗಱೆದ
ಳೆಂದೆಂಬರೊಳಗೊಳಗೆ ಮಗನ ಗುಣಮಂ ಹಲುಬುತಿರಲು ಬೈದಪಳೆಂಬರು
ನಿಂದು ಬೆಱಗಾಗಿ ಮಱೆದಿರೆ ಕೆಲಸಗಳ್ಳೆಯಿವ
ಳೆಂದೆಂಬರೊಮ್ಮೊಮ್ಮೆ ಬಿಸುಸುಯ್ಯೆ ಬೇಸತ್ತ
ಳೆಂದೆಂಬರಂದು ಬೈವರು ಬೈದು ಬಡಿವರಾ ಮನೆಯವರು ಮಾನಿನಿಯನು    ೧೨

ಒಳಗುಡಿದ ನಾರಾಚದೇಱಿನಂದದಿ ಹೊಱಗ
ಬಳಸದೊಳಗೊಳಗೇಗುವಾವಗೆಯ ಶಿಖಿಯಂತೆ
ಕೆಳೆಗೊಂಡ ಹಗೆಗಳೊಳಗಣ ಮುಳಿಸಿದನಂದದಿಂ ಮನೆಯವರ ಮಾರಿಗಂಜಿ
ಬೆಳೆದು ಬಿರಿವೆದೆ ಬಿಕ್ಕುವಳ್ಳೆ ಕಣ್ಣೊಳಗೊಱೆತ
ಜಲ ಸೆರೆಗಳೊಡೆದುಬ್ಬಿ ಬಿಗಿದ ಗಂಟಲಿನ ಮು
ಕ್ಕುಳಿಸಿದಕ್ಕೆಗಳಸೆವ ಸತಿಯಳಲು ಸೀಗೆಯೊಳಗಣ ಬಾಳೆಗೆಣೆಯಾದುದು       ೧೩

ಊರಿವ ಬಿಸಿಲೊಳು ಹಸಿದು ಬಳಲಿ ಬಸವಳಿದು ಕೆಡೆ
ದಿರುತಿಪ್ಪನೋ ಎಂದು ಕೀಳಿಲೊಳು ಮಿಗೆ ಕಟ್ಟು
ತಿರೆ ಹಸುಗಳಿಱಿದು ಕೆಡೆದಿರುತಿಪ್ಪನೋ ಎಂದು ನೋಡುತ್ತ ಹುಲುಹುಳ್ಳಿಯು
ದೊರಕದಿರೆ ಮನೆಗೆ ಬರಲಂಜಿ ಹೊಱಹೊಱಗಾಡು
ತಿರುತಿಪ್ಪನೋ ಎಂದು ಬೀದಿಯೊಳು ನೋಡಿ ತಡ
ವರಿಸಿ ಕಾಣದೆ ಮಱುಗುತಳಲಿಂದ ಮನದೊಳಗೊಳಗೆ ಸತ್ತು ಹುಟ್ಟುತ್ತಿರ್ಪಳು          ೧೪

ಅಡವಿಯೊಳು ಹೊಲಬುಗೆಟ್ಟನೊ ಗಿಡುವಿನೊಳಗೆ ಹುಲಿ
ಹಿಡಿದುದೋ ಕಳ್ಳರೊಯ್ದರೊ ಭೂತಸಂಕುಲಂ
ಹೊಡೆದುವೋ ನೀರೊಳದ್ದನೊ ಮರದ ಕೊಂಬೇಱಿ ಬಿದ್ದನೋ ಫಣಿ ತಿಂದುದೊ
ಕಡುಹಸಿದು ನಡೆಗೆಟ್ಟು ನಿಂದನೋ ಎಂದಿಂತು
ಮಡದಿ ಹಲವಂ ಹಲುಬುತಂಗಣದೊಳಿರೆ ಹೊತ್ತಿ
ಹೊಡಕರಿಸಿದಳಲ ಕರ್ಬೊಗೆಯಂತೆ ಕವಿವ ಕತ್ತಲೆಯೊಳಗೆ ನಿಂದಿರ್ದಳು          ೧೫

ಉಟ್ಟಱುವೆಯಂ ಉರದ ಮೇಲಕ್ಕೆ ತೆಗೆಯುತ್ತ
ಬಿಟ್ಟ ಹಂಕಣಿದಲೆಯನಡಿಗಡಿಗೆ ತುಱಿಸುತ್ತ
ನಟ್ಟ ದಿಟ್ಟಯೊಳು ತನಯದ ಬರವ ನೋಡುತ್ತ ಕದಪಿನೊಳು ಕೈಯನಿಟ್ಟು
ಕೆಟ್ಟೆನಿನ್ನೇಗುವೆನು ಏನಮಾಡುವೆ ಮಗನ
ಬಟ್ಟೆಯಂ ನೋಡಿ ಬೆಱಗಾಗುವಿನಿತಕ್ಕೊಡತಿ
ಧಟ್ಟಸುವಳೆಂದು ಸಿಡಿಮಿಡಿಗೊಂಡು ಮಱುಗುತ್ತ ನಿಂದು ಸುಱ್ರನೆ ಸುಯ್ದಳು           ೧೬

ಬಂದರಂ ಲೋಹಿತಾಶ್ವಾ ಎಂದು ಬಟ್ಟೆಯೊಳು
ನಿಂದರಂ ಲೋಹಿತಾಶ್ವಾ ಎಂದು ಗಾಳಿ ಗಿಱು
ಕೆಂದಡಂ ಲೋಹಿತಾಶ್ವಾ ಎಂದು ಕರೆಕರೆದು ಬಿಡೆ ಬೀದಿಗಱುವಿನಂತೆ
ಮಂದಮತಿಯಾಗಿರ್ದ ಚಂದ್ರಮತಿಗೊಬ್ಬನೈ
ತಂದಿಂದು ಕೂಡೆ ಹೋಗಿರ್ದು ಕಂಡೆಂ ನಿನ್ನ
ಕಂದನೊಂದುಗ್ರಫಣಿ ತಿಂದು ಜೀವಂಗಳೆದನೆಂದು ಹೇಳಿದನಾಗಳು   ೧೭

ಏಕೆ ಕಚ್ಚಿತ್ತಾವ ಕಡೆಯಾವ ಹೊಲನಕ್ಕ
ಟಾ ಕುಮಾರಂ ಮಡಿದ ಠಾವೆನಿತುದೂರವೆನ
ಲೀ ಕಡೆಯೊಳೀ ಹೊಲದೊಳೀ ಮರದ ಕೆಲದ ಹುತ್ತಿನ ಹುಲ್ಲ ಕೊಯ್ಯೆ ಕೈಯ
ನೂಕಿ ಫಣಿಯಗಿಯೆ ಕೆಡೆದಂ ದೂರವಲ್ಲಲ್ಲ
ಬೇಕಾದಡೀಗ ಹೋಗಲ್ಲದಿರ್ದಡೆ ಬಳಿಕ
ನೇಕ ಭಲ್ಲುಕ ಜಂಬುಕಂ ಘೂಕವೃಕಗಳೆಳೆಯದೆ ಬಿಡವು ಕೇಳೆಂದನು            ೧೮

ನುಡಿಯಲರಿದೆನಿಸಿ ಮೇರೆಯ ಮೀಱುವಳಲನಳ
ವಡಿಸಿ ಬಂದೊಡೆಯನಡಿಗಳ ಮೇಲೆ ಕೆಡೆದು ಬಾ
ಯ್ವಿಡುತರಣ್ಯದೊಳೆನ್ನ ಮಗನುಗ್ರಕಾಳೋರಗಂ ಕಚ್ಚಿ ಮಡಿದನೆಂದು
ನುಡಿಯೆ ಲೇಸಾಯ್ತು ಮಡಿದಡೆ ಮಡಿದನೆಂದು ಕೆಡೆ
ನುಡಿಯೆ ಬಂಟರನು ಕೊಟ್ಟಱಸಿಸೈ ತಂದೆ ಎನೆ
ನಡುವಿರುಳು ಬಂಟರುಂಟೇ ನಿದ್ದೆಗೆಯ್ಯಬೇಕೇಳು ಕಾಡದಿರೆಂದನು೧೯

ನರಿಗಳೆಳೆಯದ ಮುನ್ನದಹಿಸಬೇಡವೆ ತಂದೆ
ಕರುಣಿಸೆನೆ ದುರ್ಮರಣವಟ್ಟ ಶೂದ್ರನನು ಸಂ
ಸ್ಕರಿಸುವವರಾವಲ್ಲವೆಂದೆನಲ್ಕಾನಾದಡಂ ಹೋಗಿ ಕಂಡು ಮಗನ
ಉರಿಗಿತ್ತು ಬಪ್ಪೆನೇ ಎನೆ ಕೆಲಸಮಂ ಬಿಟ್ಟು
ಹರಿಯದಿರ್ದುದನೆಯ್ದೆಗೆಯ್ದುಹೋಗೆನಲು ಚ
ಚ್ಚರದಿ ಮಾಡುವ ಕಜ್ಜವೆಲ್ಲವಂ ಮಾಡಿ ಹೊಱವಂಟಳೊಯ್ಯನೆ ಮನೆಯನು          ೨೦

ದಟ್ಟೈಸಿ ಮಡಲಿಱಿದ ಕಾಳದೊಳು ನಡುವಿರುಳು
ನಟ್ಟ ಮುಳ್ಳುಗಳನೆಡಹಿದ ಕಲ್ಲ ಹಾಯ್ದ ಮರ
ಮುಟ್ಟನೇಱಿದ ದಡನನಿಳಿದ ಕುಳಿಯಂ ಬಿದ್ದ ದರಿಗಳಂ ಹಿಡಿದ ಗಿಡುವ
ಬಿಟ್ಟ ತಲೆಯಂ ಬಿಚ್ಚಿದುಡುಗೆಯಂ ಮಱೆದು ಗೋ
ಳಿಟ್ಟು ಬಾಯ್ವಿಟ್ಟು ಮೊಱೆಯಿಡುತ ನಡೆತಂದು ಹುಲು
ವಟ್ಟೆಯೊಳು ಬೆಳೆದ ಹೆಮ್ಮರನ ಮಲಗಿಸಿ ನಿಂದ ಹುಳ್ಳಿಹೊಱೆಯಂ ಕಂಡಳು           ೨೧

ಈಯೆಡೆಯೊಳಿನ್ನಿರದೆ ಮಾಣನೆನುತಂ ಬಂದು
ತಾಯಿ ಮಗನೇ ಮಗನೆ ಮಗನೇ ಹರಿಶ್ಚಂದ್ರ
ರಾಯನ ಕುಮಾರ ಪೇಳಾವ ಠಾವೊಳಕೊಂಡುದಯ್ಯ ನೀನೆಲ್ಲಿರ್ದಪೆ
ಓಯೆಂಬುದೇನು ಕಂದಾ ಬಾಯ ಬಿಡದಿತ್ತ
ಬಾಯೆಂಬುದೇನು ತಂದೇ ಎನ್ನನೊಲ್ಲದಡೆ
ಸಾಯೆಂಬುದೇನುಸುರದಿರಲೇಕೆ ತರುಣ ಎಂದೊಱಲಿದಳು ಹಂಬಲಿಸುತ       ೨೨

ತೊರೆದ ತವಕದ ಮಱುಕದಿಂದತ್ತಲಿತ್ತ ಹರಿ
ಹರಿದು ಕಂಬನಿಯ ಕೈಯಿಂದ ಮುಂಗಾಣದಾ
ತುರದೊಳಲ್ಲಲ್ಲಿ ತಡವರಿಸಿ ಕೆಡೆದೆದ್ದು ಕಟ್ಟಳಲುರಿಯ ಸರದೊಳೊಱಲಿ
ಕರೆಯುತ್ತ ಹಳವಿಸುತ ಹಂಬಲಿಸಿ ಬಾಯ್ವಿಡುವ
ದೊರೆಗೆಡುತ ಮೊಱೆಯಿಡುತಲಳಲುತ್ತ ಬಳಲುತ್ತ
ಹರಹರ ಮಹಾದೇವ ಮಗನ ನುಂಗಿದ ಹುತ್ತಿನೆಡೆಗೆ ಬಂದಳು ಬಂದಳು        ೨೩

ವಿಷದ ಹೊಗೆ ಹೊಯ್ದು ಹಸುರಾದ ಮೈ ಮೀಱಿ ನೊರೆ
ಯೊಸರ್ವ ಗಲ್ಲಂ ಕಂದಿದುಗುರ್ಗಳರೆದೆಱೆದಗು
ರ್ವಿಸುವ ಕಣ್ ಹರಿದು ಹುಲುಹಿಡಿದ ಹರಹಿದ ಕೈಗಳುಂಬ ಹೊತ್ತುಣ ಹಡೆಯದೆ
ಹಸಿದು ಬೆಂಗಡರ್ದ ಬಸುಱಕಟಕಟ ಮಡಿದ ಗೋಣ್
ದೆಸೆಗುರುಳಿ ಹುಡಿಹೊಕ್ಕು ಬಱತ ಬಾಯ್ವೆರಸಂದು
ಬಸವಳಿದ ನಿಜಸುತನ ಕಂಡಳು ಹರಿಶ್ಚಂದ್ರನರಸಿ ಹುತ್ತಿನ ಮೊದಲೊಳು      ೨೪

ಕಂಡ ಕಾಣ್ಕೆಯೊಳು ಶಿವಶಿವ ನಿಂದ ನಿಲವಿನಲಿ
ದಿಂಡುಗೆಡೆದಳು ಮೇಲೆ ಹೊರಳಿದಳು ಬಿಗಿಯಪ್ಪಿ
ಕೊಂಡು ಹೊಟ್ಟೆಯನು ಹೊಸೆಹೊಸೆದು ಮೋಱೆಯ ಮೇಲೆ ಮೋಱೆಯಿಟ್ಟೋವದೊಱಲಿ
ಮುಂಡಾಡಿ ಮುದ್ದುಗೆಯ್ದೋರಂತೆ ಕರೆದು ಕರೆ
ದಂಡಲೆದು ಲಲ್ಲೆಗರೆದತ್ತತ್ತು ಬಲವಳಿದು
ಬೆಂಡಾಗಿ ಜೀವವಿಕ್ಕೆಂಬಾಸೆಯಿಂ ತೇಂಕುದಾಣಂಗಳಂ ಬಗೆದಳು      ೨೫

ಲಲನೆ ಮೂಗಿನೊಳುಸುರನಳ್ಳೆಯೊಳು ಹೊಯ್ಲನುಗು
ರೊಳು ರಜವನೆದೆಯೊಳಲ್ಲಾಟಮಂ ಕೈಯ ಮೊದ
ಳೊಳು ಮಿಡುಕನಂಗದೊಳು ನೋವನಕ್ಷಿಯೊಳು ಬೆಳ್ಪಂ ಭಾಳದೊಳು ಬೆಮರನು
ಲಲಿತಕಂಠದೊಳುಲುಕನಂಘ್ರಿಯೊಳು ಬಿಸಿಯನಂ
ಗುಲಿಗಳೊಳು ಚಿಟುಕನುಂಗಟದೊಳರುಣಾಂಬುವಂ
ಸಲೆ ನಾಲಗೆಯೊಳಿಂಪ ರೋಮದೊಳು ಬಲ್ಪನಾರಯ್ದು ಕಾಣದೆ ನೊಂದಳು೨೬

ಹಡೆದೊಡೆಲು ಹುಡಿಯಾಯ್ತು ಮಗನೆ ಮಗನುಂಟೆಂದು
ಕಡಗಿ ಹೆಚ್ಚುವ ಮನಂ ಹೊತ್ತಿ ಹೊಗೆಯಿತ್ತು ಬಿಡ
ದಡರಿ ನಿಟ್ಟಿಸಿ ನಲಿವ ದಿಟ್ಟಿ ಕೆಟ್ಟುವು ಸೋಂಕಿ ಪುಳಕಿಸುವ ಕರಣಂಗಳು
ಕಡಿವಡೆದುವೊಸೆದು ಹೆಸರ್ಗೊಳುತಿಪ್ಪ ನಾಲಗೆಯ
ಕುಡಿ ಮುರುಟಿತೊಮ್ಮೆಮ್ಮೆ ನುಡಿಯನಾಲಿಪ ಕಿವಿಯ
ಹಡಿಗೆತ್ತುದೆಲೆ ಕಂದ ಎಂದೆನುತ್ತಿಂದುಮುಖಿ ಮಱುಗಿ ಬಾಯ್ವಿಟ್ಟಳಂದು     ೨೭

ಸಿರಿ ಹೋದ ಮಱುಕವನು ನೆಲೆಗೆಟ್ಟ ಚಿಂತೆಯನು
ಪರದೇಶಮಂ ಹೊಕ್ಕ ನಾಚಿಕೆಯನಱಿಯದ
ನ್ಯರ ಮನೆಯ ತೊತ್ತಾದ ಭಂಗವನು ನಿಮ್ಮಯ್ಯಗಜ್ಞಾತವಾದಳಲನು
ನೆರೆದು ಮನೆಯವರೆಯ್ದೆ ಕರಕರಿಪ ದುಃಖವನು
ತರಳ ನಿನ್ನಂ ನೋಡಿ ಮಱೆದು ಪರಿಣಾಮಮಂ
ಧರಿಸುತಿಪ್ಪೆನ್ನ ಗೋಣಂ ಕೊಯ್ದೆ ಇನ್ನಾರ ನೋಡಿ ಮಱೆದಪೆನೆಂದಳು     ೨೮

ಅತಿಲಜ್ಜೆಗೆಟ್ಟನ್ಯರಾಳಾಗಿ ದುಡಿದು ಧಾ
ವತಿಗೊಂಡು ಧನವನಾರ್ಜಿಸಿ ಹರಿಶ್ಚಂದ್ರಭೂ
ಪತಿ ನಮ್ಮ ಬಿಡಿಸುವಾರ್ತದ ಮೋಹದಿಂ ಹಸಿವು ನಿದ್ದೆಯಂ ತೊಱೆದು ಬಂದು
ಸುತನ ಕರೆಯೆಂದಡೇನೆಂಬೆನಾವುದ ತೋಱಿ
ಪತಿಯ ಮಱುಕವನು ಮಱೆಯಿಸುವೆನುಗ್ರಾಹಿಗಾ
ಹುತಿಯಾದನೆಂದು ಪೇಳ್ವೆನೆ ಎನ್ನ ಕಂದ ಎಂದಿಂದುಮುಖಿ ಬಾಯ್ವಿಟ್ಟಳು   ೨೯

ಅರಮನೆಯ ಮಣಿಗೃಹದ ಸೆಜ್ಜೆಯೊಳು ರಿಪುನೃಪರ
ಕರಿದಂತದಿಂ ಕಡೆದ ಕಾಲ ಮಂಚದೊಳಿಟ್ಟ
ವರಹಂಸತೂಲತಲ್ಪದೊಳು ಮಣಿವೆಳಗಿನೊಳು ಸಾಗಿಸುವ ಜೋಗೈಸುವ
ತರುಣಿಯರ ನಡುವೆ ಪವಡಿಸುವ ಸುಕುಮಾರನೀ
ನರವರಿಸದೀ ಕಾಡೊಳಿರುತ ಕತ್ತಲೆಯೊಳಾ
ಸುರದ ಕಲುನೆಲದೊಳೊಬ್ಬನೆ ಪವಡಿಸುವುದುಚಿತವೇ ಎಂದು ಬಾಯ್ವಿಟ್ಟಳು          ೩೦

 

ಮಂದಾನಿಲ ರಗಳೆ

ಏವೆನು ಏವೆನು ಮಗನೇ ಮಗನೇ
ಸಾವೇಕಾಯಿತ್ತೆಲೆ ಚೆನ್ನಿಗನೇ
ಇಱಿದೆಯಲಾ ಎನ್ನನು ಸುಕುಮಾರಾ
ಕೊಱೆದೆಯಲಾ ಕೊರಳನು ಜಿತಮಾರಾ
ವನಿತೆಯನಾಱಡಿಗೊಂಡೆಯೊ ವಿಧಿಯೇ
ಎನಗೀ ಪರಿಯಲಿ ಮಡಿವುದವಧಿಯೇ
ಶಿರದಲಿ ಶಿವಲಿಖಿತವದೀ ಪರಿಯೇ
ಗರವರದಲ್ಲಿಯೆ ಒಱಗಿದೆ ಕಲಿಯೇ
ಎನಿತು ಸುತನ ವದನವ ನೆಱೆನೋಡಿ
ವನಿತೆ ಮಹಾದುಃಖದೊಳೊಡಗೂಡಿ
ಪುತ್ರಶೋಕದುರಿ ಭುಗಿಲೆನೆ ನೆಗೆದು
ಗಾತ್ರವನಡರೆ ಕೊರಳ ಸೆರೆ ಬಿಗಿದು
ಹೊಟ ಹೊಟನೊಡೆಯಲು ದುಃಖದಿ ಕಾಯ
ತುಟಿಯೆಂತೆಂತಲುಗುತ್ತಿರೆ ಬಾಯ
ತೆಱೆದೊಱಲಿದಳೊಱಲಿದಳೋರಂತೆ
ಮೊಱೆಯಿಟ್ಟಳು ಹೊರಳಿದಳಾ ಕಾಂತೆ
ವಿಧುಬಿಂಬಂ ರಾಹುವ ಪೋರ್ವಂತೆ
ವಧುವದನಂ ಸಿರಿಮುಡಿಯೋರಂತೆ
ಹುಡಿಯಾಗುತ್ತಿರೆ ಹೊರಳಿದಳಂದು
ಕಡುಶೋಕಾನಲನಿಂದುಱೆ ಬೆಂದು
ಉಕ್ಕುವಳಲ ಶಬ್ದಂ ಪೊಱಮಟ್ಟು
ಬಿಕ್ಕಿ ಬಿರಿದು ಹೊರಳುತ ಗೋಳಿಟ್ಟು
ಎತ್ತಣ ಬರಸಿಡಿಲೆಱಗಿತೊ ನಿನ್ನ
ಹುತ್ತಿದ ಹತ್ತಿರೆ ಒಱಗಿದೆ ಚೆನ್ನ
ಹಾವು ಹಿಡಿಯೆ ಹಾ ಎಂದೊಱಲಿದೆಯಾ
ಸಾವಾಗವ್ವಾ ಎಂದಳಲಿದೆಯಾ
ಅಯ್ಯಂಗಱಿಚಿಯಳುತ ನೀ ಕೆಡೆದಾ
ಕೈಯೆಡೆಗೆನ್ನನಿದಾರಿಗೆ ನುಡಿದಾ
ಮಟ ಮಂಟೆಯ ದೇಗುಲ ನಿನಗೆಂದು
ದಿಟದಿಂದೆನಗಿತ್ತೆಯೊ ನೀನಿಂದು
ಎಂಬ ನುಡಿಗೆಯಂಬರದಲಿ ಸುರರು
ಕಂಬನಿಯುಗಲಂದಾ ನಿರ್ಜರರು
ಹರನರಸಿಯು ಸಿರಿಯುಂ ಕೋಪಿಸುತ
ಸರಸತಿಯುಂ ರತಿಯುಂ ತಾಪಿಸುತ
ಸಾವಿತ್ರಿಯು ಗಾಯತ್ರಿಯರಳುತ
ಭಾವಿಸೆತ್ರೈಸಂಧ್ಯಾವಧುವಳುತ
ಪಾಪಿ ಕೌಶಿಕಂಗಂಜಿ ನಭದೊಳು
ಆಪೊಳ್ತಳಲುತ್ತಿರೆಯವನಿಯೊಳು
ಹೊರಳುತ್ತತ್ತಳು ಆತನ ಮಾತೆ
ಸರಳುರ್ಚಿದ ಮೃಗದೊಲು ವಿಖ್ಯಾತೆ
ರನ್ನದ ಕನ್ನಡಿ ಸಿಡಿದುದೊ ದೇವ
ಹೊನ್ನಕಳಸ ಕೆಡೆದೊಡೆದುದೊ ದೇವ
ಎನ್ನ ಕಡವರಂ ಸೂಱೆಹೋಯಿತೊ
ಹೊನ್ನಪ್ರತಿಮೆಯಸು ಹಾಱಿಹೋಯಿತೊ
ಸಾಹಿತ್ಯದ ಸಾಗರವಱೆಯಿತ್ತೊ
ಆಹಾರತುನಸ್ತಂಭ ಮುಱಿಯಿತ್ತೊ
ಇನವಂಶದ ಲತೆ ಕುಡಿ ಮುರುಟಿತ್ತೊ
ಜನಪನಿಟ್ಟ ಸುರತರು ಮುಱಿಯಿತ್ತೊ
ಕಾಲ ಕರುಣವಿಲ್ಲದೆ ನೀನೊಯ್ದೆ
ಬಾಲನನಗಲಿಸಿ ಕೊರಳಂ ಕೊಯ್ಯದೆ
ಆರಿಗೆನ್ನನಪ್ಪಯಿಸಿದೆ ಕಂದ
ಆರಯ್ಯದೆ ಹೋಹರೆ ಗುಣವೃಂದ
ದೇಶಿಗಿತ್ತಿ ತನ್ನೊಬ್ಬಳನಿರಿಸಿ
ಬೇಸಱಿಸಿಯೆ ಹೋಹರೆ ಹೇವರಿಸಿ
ಪಾಪಿಯಾದೆನೆಲೆ ಮಗನೇ ಮಗನೆ
ಆಪತ್ತಡಸಿತು ರಿಪುಕರಿಮೃಗನೆ
ಮಣಿಮಕುಟದ ಧರಿಸುವ ಶಿರದಲ್ಲಿ
ಒಣಹುಳ್ಳಿಯ ಧರಿಸಿದೆ ಭರದಲ್ಲಿ
ಬಾಳುವಿಡಿದು ಜಡಿದೊಪ್ಪುವ ಭುಜದಿಂ
ತಾಳಿದೆ ಕೊಡಲಿಯ ಕರದಲಿ ನಿಜದಿಂ
ಚಂದನ ವಸ್ತ್ರಾಭರಣವನುಳಿದು
ಒಂದಱುವೆಯನುಡಿಸಿತು ವಿಧಿ ಮುಳಿದು
ದೇವಾನ್ನವನಾರೋಗಿಪ ನೀನು
ಗೋವಳರುಂಬಂಬಲಿಯುಣಲಾನು
ಸೈರಿಸಲಾರದೆ ಬೆದಬೆದ ಬೆಂದು
ಧೈರಿಯದಿಂ ಪತಿಯಾಜ್ಞೆಗೆ ಸಂದು
ಏನೇನವಸ್ಥೆ ಬಂದಡೆಯಿಂಬಿಡಲು
ತಾನೇ ಬಂದುದು ಇಳೆ ನಾಂ ಬಿಡಲು
ಎಂತು ಸೈರಿಸಲು ಬಹುದೆಲೆ ದೇವ
ಕಂತುಹರನೆ ಕರುಣಿಸೆನಗೆ ಸಾವ
ಎನುತ ಸುತನ ಹಣೆಯೊಳು ಹಣೆವೆರಸಿ
ವನಿತೆ ಮಹಾದುಃಖವನುಱೆ ಧರಿಸಿ
ಆರ ಸಿರಿಯನೆಳೆಕೊಂಡೆನೊ ಮುನ್ನ
ಆರಳಲನು ಸೆಳೆಕೊಂಡೆನೊ ಮುನ್ನ
ಆರಿಕ್ಕಿದ ವನಮಂ ನಾಂ ಕಡಿದೆ
ಆರು ಸಲಹಿದೆಳಲತೆಗುಡಿಯುಡಿದೆ
ಆವನಮೃತಫಲವಳಲಿಸಿಕೊಂಡೆ
ಸಾವೆಯ್ದಿದ ಸುತನಳಿವಂ ಕಂಡೆ
ಅಲ್ಲದೊಡೀಯಳಲಪ್ಪುದೆ ತನಗೆ
ಇಲ್ಲಿ ವೃಥಾ ಸಾವಪ್ಪುದೆ ನಿನಗೆ
ಹೆತ್ತ ಹೊಟ್ಟೆಯುರಿಯುತ್ತಿದೆ ಮಗನೆ
ಎತ್ತಿದ ತೋಳನು ಕೆತ್ತಿದೆ ಮಗನೆ
ಹಾಡುವ ಬಾಯೊಳು ಮಣ್ಣನು ಹೊಯ್ದೆ
ನೋಡುವ ಕಣ್ಣೊಳು ಸುಣ್ಣವ ಹೊಯ್ದೆ
ಪಾಪಿಯೆನ್ನ ನೀನೊಮ್ಮೆಯು ನೋಡಾ
ಕೋಪವನುಳಿದೊಯ್ಯನೆ ಮಾತಾಡಾ
ಅಳಲದಿರವ್ವಾ ಎನ್ನಲೆ ಮಗನೆ
ಬಳಲಿದೆ ತಾಯೇ ಎನ್ನೆಲೆ ಮಗನೆ
ನಾನಿದ್ದಹೆನಂಜದಿರೆಂದೆನ್ನ
ಏನುವನುಮ್ಮಳಿಸದಿರೆಂದೆನ್ನ
ನುಡಿದಡೆ ಪಾಪವೆ ಹೆತ್ತವರೊಡನೆ
ಕಡುಮುಳಿಸೇ ಮಗನೇ ಎನ್ನೊಡನೆ
ತಂದೆತಾಯಿಗಗ್ನಿಯ ನೀ ಕುಡದೆ
ಮುಂದೆ ಹೋಗಲಹುದೇ ಮನಗುಡದೆ
ಇಕ್ಕಿದಗಲು ಹೊಲಸೇಳಲು ಬಿಟ್ಟು
ಮುಕ್ಕುಳಿಸಿದೆ ಜಲವಂ ಮರವಟ್ಟು
ಆರಿಗೆ ಪೇಳುವೆನೀ ಸಂಕಟಿಯ
ಆರಿನ್ನುಂಟು ಮಗನೆ ನೀನುಳಿಯ
ಹಂಸತೂಲತಲ್ಪವನೇಕೊಲ್ಲೆ
ವಂಶದ ನೃಪರ ಸಲಹಲೇಕೊಲ್ಲೆ
ಸುಪ್ರಭಾತಪಠನಧ್ಯಾನವನು
ವಿಪ್ರರ ಮಂತ್ರಾಶೀರ್ವಾದವನು
ಗಾನಾಮೃತ ಮಂಗಲಗೇಯವನು
ಗಾಣರಿಗರಿದೆನಿಸುವ ಠಾಯವನು
ಆಲಿಸಿ ಕೇಳೇಳೆಲೆ ಸುಕುಮಾರ
ಮೂಲೋಕದ ಜಾಣರಿಗತಿವೀರ
ಮಂಗಳಾರತಿಗೆ ಮನಗೊಡು ಮಗನೆ
ಲಿಂಗಪೂಜೆಗೆಡೆಯಾಯಿತು ಮಗನೆ
ಮುಖಪ್ರಕ್ಷಾಲನಕೇಳೊಲವಿಂದ
ಮಖರಕ್ಷಗೆ ಹೋಗೇಳೆಲೊ ಕಂದ
ಆಜ್ಯ ನಿರೀಕ್ಷಣೆಯನು ಮಾಡೇಳಾ
ಪೂಜ್ಯನಪ್ಪ ಶಿವನಂ ನೋಡೇಳಾ
ಕಪಿಲಾರ್ಚನೆ ಮಾಡೇಳೆಲೆ ತನುಜ
ತಪನರ್ಘ್ಯವ ಮಾಡಾತನ ಕುಲಜ
ನಿತ್ಯ ದಾನವೀಯದೆ ಇಹಗಿಹರೆ
ಅತ್ಯಧಿಕರ ಮನ್ನಿಸದಿಹಗಿಹರೆ
ಎಳಗನ ವೈಹಾಳಿಯ ಮಾಡೇಳೈ
ಕೆಳೆಯರ ಮೇಳಕೆ ಮನಗುಡಲೇಳೈ
ಮಲ್ಲರ ಕದನಕೆ ಕರೆದಹರೇಳಾ
ನಿಲ್ಲದೆ ಗರುಡಿಯ ಶ್ರಮಕಿದಿರೇಳಾ
ಹಲ್ಲಣಿಸಿದ ವಾರುವವಿದೆ ಮಗನೆ
ಮಲ್ಲಾಮಲ್ಲಿಯ ರಥವಿದೆ ಮಗನೆ
ಗಜಘಟೆ ಹಣ್ಣಿವೆಯೇಳೆಲೆ ಮಗನೆ
ನಿಜಪರಿವಾರಕೆ ಬೆಸಗೊಡು ಮಗನೆ
ಆವ ದಿಶಾಧಿಪರತ್ತ ನಡೆಯಲು
ಆವ ದಿಶಾಧಿಪರತ್ತ ನಡೆಯಲು
ಆವ ಹಗೆಯ ಸಪ್ತಾಂಗವ ಕೊಡಲು
ಬೆಸಸುವೊಡೇಳೇಳೆಲೆ ಸುಕುಮಾರ
ವಸುಧಾಜನದಾಪತ್ತು ನಿವಾರ
ಮಲ್ಲವೇಷ ಯುದ್ಧವ ನೋಡೇಳಾ
ಬಿಲ್ಲಾಳ್ಗಳ ಭಾಷೆಯ ಬರಸೇಳಾ
ದೇಶಾಧಿಪರೀಪರಿಯೊಱಗುವರೆ
ಆಶಾಧಿಪರಳುಕದೆ ಬೀಳುವರೆ
ನೆತ್ತರ ಕಡಲೊಳಗಿಭಕುಲ ಬೀಳೆ
ಮೊತ್ತದ ತುರಗಂಗಳು ಬೆಂಡೇಳೆ
ರಥತತಿ ವಾಜಿಯೊಳೈತರೆ ಕವಿದು
ಮಥನದಿ ದೇವಾಸುರರೊಳು ಹೊಯಿದು
ಮಣಿಮಕುಟದ ಭಟರಟ್ಟೆಗಳಾಡೆ
ತಣಿದು ಭೂತಸಂಕುಳ ಕುಣಿದಾಡೆ
ಮಾರಿಮೃತ್ಯುಗಳಿಗೋಕರ ಹುಟ್ಟೆ
ಕ್ರೂರಜವಂಗತಿಭೀಕರ ಹುಟ್ಟೆ
ರಿಪು ಬಲವಂ ಕೊಂದಳಿದಡೆ ತಪ್ಪೆ
ತಪನಮಂಡಲ ವಿಭೇದವನೊಪ್ಪೆ
ಸುರಪತಿಯರ್ಧಾಸನವನೇಱದೆ
ನರಪತಿ ವೀರಶ್ರೀಯಂ ಬೀಱದೆ
ಧರೆಯನ್ನಾಳ್ವ ಸಿರಿಯಂ ಕಳೆದಿಂದು
ಉರಗನ ವಿಷದಗ್ನಿಯೊಳುಱೆ ಬೆಂದು
ಅಡವಿಯೊಳೀಪರಿ ಕೆಡೆವರೆ ವೀರ
ಪೊವಿಯೊಡೆಯನಗ್ಗದ ಸುಕುಮಾರ
ಏನ ಮಾಡಿತನು ವಿಧಿ ಕಟ್ಟಿತನು
ಮಾನವರಳವೆಯಳಲ ಮುಟ್ಟಿತನು
ಆರಿಗಱುಪುವೆನು ಹೇಳಲೆ ಮಗನೆ
ಸಾರಿನ್ನಳದಿರೆನ್ನೆಲೆ ಮಗನೆ
ಎನ್ನನೊಯ್ಯಲೇಕೊಲ್ಲೆಯೊ ಮಗನೆ
ನಿನ್ನನಗಲಿಯಿರಲಾಪೆನೆ ಮಗನೆ
ಎನ್ನಗಿನ್ನೆಂತೋ ಶಿವನೇ ಶಿವನೆ
ತನಯನನೊಯ್ಯನೆ ಕೊಂದೆಯೊ ಜವನೆ
ಕರುಣಿಸು ಪಾಪಿಗೆ ಪಂಪಾಪತಿಯೆ
ಕರುಣಿಸನಾಥೆಗೆ ಕಾಶೀಪತಿಯೆ

ಇನ್ನಿನಿತಱಿಂದ ಮೇಲೆನ್ನೊಡೆಯನಱಸಿ ಬಂ
ದೆನ್ನನೊಯ್ದಡೆ ಬಳಿಕ ಸುಡಹಡೆಯನೆಂಬುದಂ
ತನ್ನಲ್ಲಿ ತಾನೆ ತಿಳಿದೆದ್ದು ಪುತ್ರನನೆತ್ತಿಕೊಂಡು ದೆಸೆದೆಸೆಗೆ ತಿರುಗಿ
ಮುನ್ನೆಲ್ಲರಂ ಸುಡುವ ಕಾಡಾವುದೆಂದು ನೋ
ಳ್ಪನ್ನೆಗಂ ಹಲವು ಕೆಲವುರಿಯ ಬೆಳಗಂ ಕಂಡು
ನನ್ನಿಕಾಱಂ ಕಾವ ಕಾಡತ್ತ ನಡೆವಾಗ ಬಟ್ಟೆಯೊಳದೇವೊಗಳ್ವೆನು    ೩೧

ಬಿಡುದಲೆಯ ಬಿಟ್ಟ ಬಾಯ್ಗಳ ಬಱತ ಬಸುಱ ಕಳೆ
ದುಡುಗೆಗಳ ಕೆಂಗಣ್ಣ ಕೋರೆದಾಡೆಗಳ ಕಡು
ನಿಡಿಯೊಡಲ ಬತ್ತಿದಂಗದ ಸುಗಿದ ತೊಗಲ ಸುಕ್ಕಿದ ಮೊಲೆಯ ಹೆಗಲ ಹೆಣನ
ಹಿಡಿದ ಕತ್ತಿಯ ಕಪಾಲದ ಭೂತವೇತಾಳ
ಪಡೆ ಸುತ್ತಿಮುತ್ತಿ ಬೊಬ್ಬಿಟ್ಟು ಝಂಕಿಸಿದವಾ
ಕಡುವಿರುಳು ಮಾನಿನಿಯ ಮನ ಬೆದಱಬೇಕೆಂದು ಕೌಶಿಕಪ್ರೇರಣೆಯೊಳು       ೩೨

ಹಸಿಯ ತೊಗಲುಡಿಗೆ ಹಿಂಡಿಲುಗರುಳ ಚಲ್ಲಣಂ
ಕುಸುರಿಗಂಡದ ತೊಂಗಲಸ್ಥಿಗಳ ತೊಡಿಗೆ ದ
ಟ್ಟಿಸಿದ ರಕ್ತದ ಭೂರಿಗಣ್ಣಾಲಿಗಳ ಸೊಡರು ಕಾಳಿಜದ ಸುರುಗುಗಡುಬು
ಸಸಿದು ಕೊಬ್ಬಿದ ಮಿದುಳ ರಾಸಿಗೂಳೆಸೆಯೆ ಮಾ
ಮಸಕದಿಂ ಕಾಮಾಕ್ಷಿ ಚಾಮುಂಡಿಯರ ಮುಂದೆ
ಹೊಸತನಿಕ್ಕುವ ಭೂತಭೇತಾಳರಾಡಿದರು ಕೌಶಿಕಪ್ರೇರಣೆಯೊಳು   ೩೩

ಕೆಡೆದ ಮುಂಡದ ಬಿಟ್ಟ ತಲೆಯ ಚೆಲ್ಲಿದ ಕರುಳ
ಪಡಲಿಟ್ಟ ಕಾಳಿಜದ ಮಿದುಳ ಕೊಳ್ಗೆಸಱ ಹೊನ
ಲಿಡುವ ರಕುತದ ಕೈಯೊಳಡಿಯಿಡಲು ಬಾರದೆಂಬಂತೆ ವಿಶ್ವಾಮಿತ್ರನು
ಅಡವಿಯೊಳಗೆಯ್ದೆ ನಾನಾ ಭಯಂಕರವ ಸಾ
ಲಿಡಲದನು ಪುತ್ರಶೋಕಗ್ರಹಾವಿಷ್ಟತೆಯ
ಕಡುಪಿನಿಂ ಲೆಕ್ಕಿಸದೆ ಬಂದು ಸುಡುಗಾಡೊಳಿಳುಹಿದಳು ತನಯನ ಶವವನು   ೩೪

ಗಳಗಳನೆ ಮುನ್ನ ಬೆಂದುಳಿದಿರ್ದ ಕರಿಗೊಳ್ಳಿ
ಗಳನೆಲ್ಲವಂ ಸಿದುಗಿ ತಂದೊಟ್ಟಿ ಮೇಲೆ ಮಂ
ಗಳಮಯ ಕುಮಾರನಂ ಪಟ್ಟಿರಿಸಿ ಕೆಲದೊಳುರಿವಗ್ನಿಯಂ ಪಿಡಿದು ನಿಂದು
ಬೆಳೆದಲ್ಲಿ ಬೆಳೆ ಹುಟ್ಟಿದಲ್ಲಿ ಹುಟ್ಟೆಂದು ನುಡಿ
ದಿಳುಹಲನುಗೆಯ್ದಿಳುಹಲಾಱದಳವಳಿದು ಬಾ
ಯಳಿದು ಮೊಱೆಯಿಟ್ಟೊಡಾ ದನಿಗೇಳ್ದು ನಿದ್ರೆತಿಳಿದೆದ್ದನಾ ಭೂಪಾಲನು   ೩೫

ನಟ್ಟಿರುಳು ಸುಡುಗಾಡೊಳೊಬ್ಬಳೋರಂತೆ ಬಾ
ಯ್ವಿಟ್ಟು ಹಲುಬುವ ವೀರನಾರಿಯಾವಳೊ ಮೀಱಿ
ಸುಟ್ಟೆಯಾದಡೆ ನಿನಗೆ ವೀರಬಾಹುಕನಾಣೆ ಕದ್ದು ಸುಡಬಂದೆ ನಿನ್ನ
ನಿಟ್ಟೆಲುವ ಮುಱಿವೆನೆಂದುರವಣಿಸಿ ಜಱೆಯುತ್ತ
ದಟ್ಟಿಸುತ ಬಂದು ಹಿಡಿದಿರ್ದ ಕಿಚ್ಚಂ ಕೆದಱಿ
ಮುಟ್ಟಿಗೆಯ ಮೇಲಿರ್ದ ಸುತನ ಹಿಂಗಾಲ್ವಿಡಿದು ಸೆಳೆದು ಬಿಸುಟಂ ಭೂಪನು            ೩೬

ಬಿಸುಡದಿರು ಬಿಸುಡದಿರು ಬೇಡಬೇಡಕಟಕಟ
ಹಸುಳೆ ನೊಂದಹನೆಂದು ಬೀಳ್ವವನನೆತ್ತಿ ತ
ಕ್ಕಿಸಿಕೊಂಡು ಕುಲವ ನೋಡದೆ ಬೇಡಿಕೊಂಬೆನಿವನೆನ್ನ ಮಗನಲ್ಲ ನಿನ್ನ
ಶಿಶುವಿನೋಪಾದಿ ಸುಡಲನುಮತವನಿತ್ತು ಕರು
ಣಿಸು ಕರುಣಿಯೆಂದೊಡೆಲೆ ಮರುಳೆ ಹೆಣನುಟ್ಟುದಂ
ಮಸಣಿವಾಡಗೆಯ ಹಾಗವನು ಕೊಟ್ಟಲ್ಲದೇನೆಂದಡಂ ಬಿಡೆನೆಂದನು           ೩೭

ಕೊಡಲೇನುವಿಲ್ಲವಿಂದೆನಗೆ ಲೋಗರ ಮನೆಯ
ಬಡದಾಸಿ ಕರುಣಿಸೆನೆ ನಿನ್ನ ಕೊರಳಿನೊಳಿರ್ದ
ಕಡುಚೆಲುವ ತಾಳಿಯದನ್ನಡವನಿರಿಸಿ ನೀ ಬಿಡಿಸಿಕೋ ಬಳಿಕವೆನಲು
ಮಡದಿ ಕರನೊಂದಕಟ ಪೊಡವಿಪತಿ ಮಡಿದ ಕೇ
ಡಡಸಿತಲ್ಲದೊಡೆನ್ನ ಗುಪ್ತಮಂಗಳಸೂತ್ರ
ದೆಡೆಯ ಹೊಳೆಹೊಳೆವೈದದಾಳಿಯನಿದಂ ಶ್ವಪಚನೆಂತು ಕಂಡಪನೆಂದಳು     ೩೮

ವಿಗತಸಪ್ತದ್ವೀಪಪತಿಯ ಬಸುಱಲಿ ಬಂದು
ಮಗನೆ ನಿನಗೊಮ್ಮೆಟ್ಟು ಸುಡುಗಾಡು ಹಗೆಯಾಯ್ತೆ
ಮಿಗೆ ಸಕಲಲೋಕದೊಳು ತನ್ನಾಣೆ ಸಲುವನ ಕುಮಾರನೆನಿಸುವ ನಿನ್ನನು
ಬಗೆಯದೀ ಚಂಡಾಲನಾಣೆಯಿಡುವಂತಾಯ್ತೆ
ಜಗದ ನವನಿಧಿಗೊಡೆಯನಾತ್ಮಭವನೆನಿಸಿ ಮು
ಟ್ಟಿಗೆಯ ಸುಂಕದ ಹಾಗವಿಲ್ಲಾಯ್ತೆ ಮಗನೆ ಎಂದಳಲಿದಳು ಹಂಬಲಿಸುತ    ೩೯

ವನಿತೆಯಳಲಂ ಕೇಳ್ದು ನಡುಗಿ ವಿಶ್ವಾಮಿತ್ರ
ಮುನಿಯೆನಗೆ ಮತ್ತೆ ಮಾಡಿದ ತೊಡಕಿದಾಗದಿರ
ದೆನುತ ಮನದೊಳು ಮಱುಗುತಾವ ಲೋಕದೊಳಾಣೆ ಸಲುವುದೆನಿಸುವ ಭೂಪನ
ತನಯನೀ ತರಳನೆಲೆ ತರುಣಿ ನೆಲದೆಱೆಯನಿ
ಕ್ಕೆನಲು ಕೊಡಲದಿಲ್ಲದಧಿಕರ ಪೆಸರ್ಗೊಳಲು ಬಿಡು
ವೆನೆ ಶೋಕಿಸುವ ಹೊತ್ತು ಹುಸಿದು ಶೋಕಿಸುವೊಡೇನಹುದೆಂದನವನೀಶನು೪೦

ಹಿಂದುಳಿದ ಸಂಪದವನೆಣಿಸುವುದು ಹುಸಿಯಲ್ಲ
ವಿಂದೀಗ ತೋಱೆಬಪ್ಪುದೆ ಹುಸಿಯದುಂಟೆ ತ
ಪ್ಪೆಂದಡದಕೇನಾತನಾರ ಮಗನಾವ ಪೆಸರಾವ ನಾಡರಸನೆನಲು
ಸಂದ ರವಿಕುಲತಿಲಕನೆನಿಪಾ ತ್ರಿಶಂಕುವಿನ
ನಂದನನಯೋಧ್ಯಾಧಿಪತಿ ಹರಿಶ್ಚಂದ್ರನೆನೆ
ನೊಂದಾತನಂಗನೆ ಕುಮಾರರೇನಾದರೆಲ್ಲಿರ್ದಪರು ಹೇಳೆಂದನು     ೪೧

ಪೊಡವೀಶ್ವರಂ ಹಿಂದೆ ಹರಸಿ ಹಾಳಂಬಟ್ಟು
ಹಡೆದ ಸುತನೀತನಾತನ ವನಿತೆ ನಾನೆನಲು
ಮಡಿದ ಕಾರಣವಾವುದೀ ತನಯನೆಂದಡೆಮ್ಮಿಬ್ಬರಂ ಮಾಱುಗೊಂಡ
ಒಡೆಯನರಮನೆಗೆ ಹುಲುಹುಳ್ಳಿಯಂ ತಪ್ಪೆನೆಂ
ದೆಡವಿಗೆಯ್ದಿದಡಲ್ಲಿ ಕಾಳೋರಗಂ ಕಚ್ಚಿ
ಮಡಿದನೀ ಕಂದನೀ ವಿಧಿಗೆ ಸೇರಿತು ಹರಿಶ್ಚಂದ್ರನಿರವೇನೆಂದಳು     ೪೨

ನುಡಿಯಲಱಿಯದೆ ಸಕಲರಾಜ್ಯಮಂ ಹೋಗಾಡಿ
ಕಡೆಗಧಿಕ ಋಣಿಯಾಗಿ ನೆಲೆಗೆಟ್ಟು ಮಂತ್ರಿವೆರ
ಸಡವಿಗುಱಿಯಾಗಿ ಕೈವಿಡಿದ ಸತಿಪುತ್ರರಂ ಮಾಱಿ ಸುಕ್ಷೇತ್ರದೊಳಗೆ
ಕಡೆಗೆ ಚಂಡಾಲಕಿಂಕರನಾಗಿ ದೋಷಕ್ಕೆ
ನಡುಗದೆ ಕುಲಾಚಾರಮಂ ಬಿಟ್ಟು ಜಗಕೆ ನಗೆ
ಗೆಡೆಯಾದ ಪಾತಕ ಹರಿಶ್ಚಂದ್ರನವನನೇನೆಂದು ನೆನೆದಪೆಯೆಂದನು  ೪೩

ಜಡೆವೊತ್ತಡಂ ಹಸಿಯ ತೊವಲುಟ್ಟಡಂ ನಾಡ
ಸುಡುಗಾಡಿನೊಳಗಿರ್ದಡಂ ನರಕಪಾಲಮಂ
ಪಿಡಿದಿರ್ದಡಂ ತಿರಿದುವಿಷವುಂಡಡಂ ಶವಶಿರೋಮಾಲೆಗಟ್ಟಿರ್ದಡಂ
ಕಡು ಮರುಳ್ಪಡೆಯ ಸಂಗಡ ಬತ್ತಲಿರ್ದಡಂ
ಮೃಡನಲ್ಲದಖಿಲಲೋಕಕ್ಕೊಡೆಯರಿಲ್ಲೆಂಬ
ನುಡಿಯಂತಿರೆನಗಾ ಹರಿಶ್ಚಂದ್ರನಲ್ಲದಿನ್ನಾರು ಗತಿಮತಿಯೆಂದಳು೪೪

ಉಱುವಬಲೆಯುಚಿತವಚನಂ ಕರ್ಣಪಥದಿನೊಳ
ಗೆಱಗಿ ಚಿತ್ತವನು ತೊತ್ತಳದುಳಿದು ಧೈರ್ಯ
ಬಱಿಕೆಯ್ದು ಕರಣಂಗಳಂ ಕದಡಿ ಹೆಮ್ಮೆಯಂ ಹಱಿದಳಲನೊದೆದೆಬ್ಬಿಸಿ
ಮಱುಕಮಂ ಮಸೆದು ಕಂಬನಿವೊನಲ ಕೋಡಿಯಂ
ಕೊಱೆದು ಮತಿಗತಿಮಾಯೆಯಂ ತೋಱಿ ಮೀಱಿ ನೇ
ಸಱುಗುಲಜನೋರಂತೆ ಸಿಗ್ಗಾಗಿ ತಾ ಮಾಡಿದಪರಾಧಮಂ ನೆನೆದನು            ೪೫

ಈ ಸತಿಯನೀ ಶುಚಿಯನೀ ಪತಿವ್ರತೆಯನಾ
ನೀಸು ಧಾವತಿಗೊಳಗುಮಾಡಿದೆನು ನೀಚದ್ವಿ
ಜೇಶಂಗೆ ಮಾಱಿ ಮಱೆದೀ ಸುತನನೀ ಸುಖಿಯನೀ ಸೊಬಗ ಸುಕುಮಾರನ
ಓಸರಿಸದುರಗ ಕೊಲುವಂತೆ ಮಾಡಿದೆನೆಂಬ
ಹೇಸಿಕೆಯ ವಾರಾಶಿ ತುಂಬಿ ತುಳುಕಾಡಿ ಹೊಱ
ಸೂಸುವಳಲಂ ನಿಲಿಸಿ ನಿಲಿಸಲಾಱದೆ ಮಗನ ಮೇಲೆ ದೊಪ್ಪನೆ ಕೆಡೆದನು       ೪೬

ತನಗೆ ಹೊಯ್ ಕೈಯಪ್ಪ ಭೂಭುಜರನೋಲೈಸಿ
ಧನವನಾರ್ಜಿಸಿ ತಂದು ಸೆಱೆಯ ಬಿಡಿಸುವನೆಮ್ಮ
ಜನಪನೆಂದಾನಿರಲು ಮಾದಿಗಂಗಾಳಾಗಿ ಸುಡುಗಾಡ ಕಾವ ಭಾಗ್ಯ
ನಿನಗಾಯ್ತೆ ಭೂಪಾಲ ಎಂದು ದುಃಖಕ್ಕೆ ಪು
ತ್ರನ ಶೋಕದುರಿಗೆ ತನು ಹೇವರಿಸಿ ವನಿತೆ ತಾ
ಮನನೊಂದು ಬೆಱಗಾಗಿ ಚಿಂತಿಸುತ ತೂಕದ ಕೋಲ ತೊಲೆಯಾದಳು           ೪೭

ಪ್ರಕಟರಾಜ್ಯಭ್ರಷ್ಟನಾಗಿ ಚಂಡಾಲ ಸೇ
ವಕನಾದ ಪಾಪಿಯಂ ನೀಚನನನೂನಪಾ
ತಕನೆನ್ನಂ ಪೋಲ್ತು ಕೆಡದೆ ನಿಮ್ಮಜ್ಜ ತ್ರಿಶಂಕುಭೂವರನಂದದಿ
ಸಕಲರಾಜ್ಯಕ್ಕೊಡೆಯನಾಗದಿರನೀ ಕುಮಾ
ರಕನೆಂಬ ನಂಬುಗೆಯಲಾನಿರಲು ಕಂದ ನೀ
ನಕಟ ನಿಷ್ಕಾರಣಂ ಮಡಿವರೇ ತಂದೆ ಎಂದಳಲತೊಡಗಿದನರಸನು   ೪೮

ಧರೆಗಧಿಕತರಮಪ್ಪ ವರಕಾಶಿಯಂ ಸಾರ್ದು
ಶರಣರೇನೆಂದುದಂ ಕೊಟ್ಟು ರಕ್ಷಿಸುವ ಶಶಿ
ಧರ ವಿಶ್ವಪತಿಯಂಘ್ರಿಕಮಳವನು ಭಕ್ತಿಯಿಂದೊಲಿದು ಪೂಜಿಸಿ ಮೆಚ್ಚಿಸಿ
ಪಿರಿಯ ಸಿರಿಗರಸಾಗಿ ಧರೆಯೊಳಗೆ ಮೆಱೆದು ದಿನ
ಕರಕುಲದ ನೃಪರ ಹೆಸರಂ ನಿಲಿಸಿ ಬಾಳದೀ
ಪರಿಯಲುರಗಂಗೆ ಸವಿದುತ್ತಾಗಿ ಹೋಹರೇ ಸುಕುಮಾರ ಹೇಳೆಂದನು         ೪೯

ಮುಂದೆ ನೀನಾಳಲಿಹ ಧರೆಯನನ್ಯರಿಗಿತ್ತ
ನೆಂದು ನುಡಿಸೆಯೊ ಮತ್ತದಲ್ಲದೆಮ್ಮಿಬ್ಬರಂ
ತಂದು ಲೋಗರಿಗೆ ಮಾಱಿದನೆಂದು ನುಡಿಸೆಯೊ ಚಾಂಡಾಲಸೇವೆಮಾಡಿ
ನಿಂದೆಯಿಲ್ಲದ ಸೂರ್ಯಕುಲಕೆ ಕುಂದಂ ತಂದ
ನೆಂದು ನುಡಿಸೆಯೊ ನುಡಿಯದಿಹ ಹದನನಱಿಪಬೇ
ಕೆಂದೊಱಲಿ ಬಾಯ್ವಿಟ್ಟು ಕರೆದು ಹಾರಿದನು ಸುತನಲ್ಲಿ ಮಾಱುತ್ತರವನು  ೫೦

ಅರಿರಾಯರೊಳು ಕಾದಿ ಮಡಿದಾತನಲ್ಲ ಮುನಿ
ವರರ ಯಾಗವ ಕಾಯ್ದು ಮಡಿದಾತನಲ್ಲ ದೇ
ವರಿಗೆ ಹಿತವಾಗಿ ಮಡಿದವನಲ್ಲ ಮಾಂಸದಾನವ ಬೇಡಿದರ್ಗೊಡಲನು
ಅರಿದರಿದು ಕೊಟ್ಟು ಮಡಿದವನಲ್ಲ ಹುಳ್ಳಿಯಂ
ತರಹೋಗಿ ಕಾಡೊಳಗೆ ಬಡಹಾವು ಕಚ್ಚಿ ಮುನಿ
ವರಿಗೆ ನಗೆಗೆಡೆಯಾಗಿ ನಿಷ್ಕಾರಣಂ ಮಡಿವರೇ ಕಂದ ಹೇಳೆಂದನು    ೫೧

ಮೇಗೆ ಮಗನರಸಾಗಬೇಕೆಂಬ ಮಱುಕದಿಂ
ಯಾಗಕ್ಕೆ ಸುತನನರಿದಿಕ್ಕಲಾಱದೆ ಲೋಭಿ
ಯಾಗಿ ಮುನಿಪುತ್ರನಂ ಮಾಱುಗೊಂಡಿತ್ತನೆಂಬಪಕೀರ್ತಿಯೇ ಉಳಿದುದು
ಲೋಗರ ಮಗನನನಿಕ್ಕಿ ನೆಲೆಯ ನೋಡಿದ ನಕಟ
ಸಾಗುದುರೆಗಡಕಿದನು ಹುಲ್ಲನೋವಿದ ಹುಣ್ಣ
ಕಾಗೆ ಕದುಕಿತ್ತೆಂದು ಸಂದ ಜನ ನಿಂದೆಗೆಯ್ವಂದವಾಯ್ತೆನಗೆಂದನು   ೫೨

ಸುರಪನ ಚರಂ ಚಿತ್ರವರ್ಮನಂದಧ್ವರದ
ತುರಗಮಂ ಕದ್ದು ಬರೆ ಹಿಂದಿಕ್ಕಿಕೊಂಡು ಪಿರಿ
ಯುರಗನೊಳು ಕಾದಿ ಕುದುರೆಯ ಕೊಂಡ ಸುಭಟನೀ ಹಾವಿಂಗೆ ಮೈಗೊಡುವರೆ
ಕರಮುನಿದು ವರುಣಾದಿ ದೇವರ್ಗೆ ಬಿಲುಗೊಂಡು
ಮರಣಮಂ ಗೆಲಿದಾತನೀ ಪರಿಯೊಳಳಿವರೇ
ಸಿರಿ ಹೋದದೊಡನೆ ಬಲುಹುಂ ಹೋಗಬೇಹುದೇ ಸುಕುಮಾರ ಹೇಳೆಂದನು            ೫೩

ಸುತನ ರೂಪಿನ ಕೊಬ್ಬನಂಗ ಸುಕುಮಾರತೋ
ನ್ನತೆಯ ಬಾಲ್ಯದ ಚೆಲುವನೆಲ್ಲಾ ಕಳಾಪ್ರವೀ
ಣತೆಯ ಗರುವಿಕೆಯ ಗಾಡಿಯ ಧೃತಿಯನೊಟ್ಟಜೆಯನಳವಟ್ಟನುಡಿಯ ಚದುರ
ನುತಲಕ್ಷಣಾವಳಿಯನಧಿಕಗುಣಗಣವನಾ
ಯತಿಗೆಟ್ಟು ನೆನೆದು ಶೋಕಿಪೆನೆಂಬಡಾಕಲ್ಪ
ಶತವೆಯ್ದದರಸ ದುಃಖವನು ಸಂತೈಸಿಕೊಂಡೆನ್ನನವಧರಿಸೆಂದಳು   ೫೪

ಪುದಿದಿರುಳು ಕಡೆಗಾಣ್ಬ ಕುಱುಹಾಗುತಿದೆ ಸೂರ್ಯ
ನುದಯಿಸಿದನಾದಡೆನ್ನವರೆನ್ನನಱಸಿ ತಳು
ವಿದಳೆಂದು ಕೊಲ್ಲದಿರರೀ ಕುಮಾರನನೀಗ ದಹಿಸಬೇಕರಸ ಎಂದು
ಸುದತಿ ನುಡಿಯಲು ನುಡಿದವನವನೀಶ ತೆಱೆಯನಿ
ಕ್ಕದೆ ಸುಡಲ್ಬಾರದುಳ್ಳಡೆ ಕೊಡಿಲ್ಲದಡೆ ಬೇ
ಗದಿ ಹೋಗಿ ನಿನ್ನೊಡೆಯನಂ ಬೇಡಿ ತಾ ತಾರದಿರೆ ಸುಡಲ್ಬೇಡೆಂದನು         ೫೫

ಒಡೆಯರೀವವರಲ್ಲೆನಲ್ ಬೇಡಿ ನೋಡು ಕೊಡ
ದಡೆ ಋಣಂಬಡು ಋಣಂ ಹುಟ್ಟದಿರ್ದಡೆ ಸುಡುವ
ಗೊಡವೆ ಬೇಡನ್ನೆಗಂ ಬಂದನಿತು ಬರಲೆಂದು ತರಳನುಟ್ಟುದನು ಕೊಂಡು
ಪೊಡವೀಶ್ವರಂ ತಿರುಗಿ ತನ್ನ ಕಾಪಿನ ಗುಡಿಗೆ
ನಡೆಗೊಂಡನತ್ತಲಿತ್ತಂ ಪುರಕೆ ಬರುತಿಪ್ಪ
ಮಡದಿಗೆಡೆವಟ್ಟೆಯೊಳು ಬಂದ ಸಂಕಷ್ಟವನಿನ್ನಾವ ಜೀವರು ಕೇಳ್ವರು       ೫೬

ಮುಂದೆ ಭೂಪನ ಸತಿಗುಪದ್ರವಂ ಮಾಡಬೇ
ಕೆಂದು ಕೌಶಿಕಮುನೀಂದ್ರಂ ನೆನೆದು ಚಿಂತಿಸು
ತ್ತೊಂದುಪಾಯಂಗಂಡು ಚೋರರಂ ಕೆಲಬರಂ ನಿರ್ಮಿಸುತವರ್ಗೆಂದನು
ಇಂದು ನೀವೀ ಪುರವನಾಳ್ವರಸನಣುಗನಂ
ಕೊಂದಾಕೆ ಬಪ್ಪ ಬಟ್ಟೆಯೊಳಿರಿಸಿ ಬನ್ನಿ ಹೋ
ಗೆಂದು ಬೆಸಸಲು ಯತಿಪನಾಜ್ಞೆಯಿಂದವದಿರೆಯ್ತಂದು ಪೊಳಲಂ ಸಾರ್ದರು    ೫೭