ಸೂಚನೆ
ಸುರಕುಲಂ ಹೊಗಳೆ ಮುನಿಕುಲವೆಯ್ದೆ ಕೊಂಡಾಡೆ
ಗುರುಕುಲಂ ಹರಸೆ ರವಿಕುಲವೆಯ್ದೆ ಹಾರಯಿಸೆ
ವರ ಹರಿಶ್ಚಂದ್ರಭೂಭುಜನಯೋಧ್ಯೆಯ ಪೊಕ್ಕು ಧರೆಯ ಪಾಲಿಸುತಿರ್ದನು

ಪುರಹರಂ ಕರುಣಿಸಿದ ಪುಣ್ಯವಾರ್ತೆಯ ಕೇಳ್ದು
ನೆರೆಯಿತದನೇನೆಂಬೆನಮಮ ಹರಹರ ಗಣೇ
ಶ್ವರರಷ್ಟಲೋಕೇಶರಷ್ಟಮೂರ್ತಿಗಳಷ್ಟವಸುಗಳು ನವಬ್ರಹ್ಮರು
ಸುರರು ಮುನಿವರರು ಖೇಚರರು ಯಕ್ಷರು ಮಯೂ
ರರು ಚರಾಚರರು ಗರುಡರು ಗುಹ್ಯಕರು ಸಿದ್ಧ
ರುರಗಮುಖ್ಯರು ದನುಜರೆಯ್ದೆ ನೆರೆಯಿತು ತಮ್ಮ ಪರಿವಾರಸಹಿತಲಾಗ     ೧

ಮುರಹರಂ ಬಂದನಬ್ಜಾಸನಂ ಬಂದನಮ
ರರ ವರಂ ಬಂದನಗಜಾಪಿತಂ ಬಂದನೀ
ಶ್ವರಸುತಂ ಬಂದನೀರಾಱು ರವಿಗಳು ಬಂದರಿಕ್ಷುಕೋದಂಡ ಬಂದ
ಸುರುಚಿರ ನವಗ್ರಹಂಗಳು ಬಂದರೆತ್ತಿದಾ
ತುರದೊಳವರಿವರೆನ್ನಲೇಕಿನ್ನು ಸರ್ವದೇ
ವರು ಬಂದರಪ್ರತಿಮದೇವಾಧಿದೇವ ಪಂಪಾವಿರೂಪಾಕ್ಷನೆಡೆಗೆ       ೨

ಕುಡಿದೌಷಧಂ ಬಾಯ್ಗೆ ನಿಗ್ರಹಂ ಮಾಡಿ ತಾ
ಳ್ದೊಡಲಿಂಗೆ ಸುಖವನೀವಂತೆ ಲೋಕದ ಕಣ್ಗೆ
ಕಡುಮುಳಿದರಂತೆ ತೋಱಿಸಿ ಸತ್ಯಶುದ್ಧವಪ್ಪನ್ನೆಗಂ ಕಾಡಿ ನೋಡಿ
ಕಡೆಯೊಳು ಹರಿಶ್ಚಂದ್ರರಾಯಂಗೆ ಗಣವೆರಸಿ
ಮೃಡನನೆಳತಂದಿತ್ತು ಕೀರ್ತಿಯಂ ಮೂಜಗದ
ಕಡೆಗೆ ಹರಿಹಿದ ಮುನಿವರೇಣ್ಯ ವಿಶ್ವಾಮಿತ್ರ ಬಂದನು ವಸಿಷ್ಠಸಹಿತ           ೩

ಅಂಬರದ ಸುರರು ಪೂಮಳೆಗಱೆಯೆ ತುಱುಗಿದ ಕ
ದಂಬವೆಡೆವಿಡದೆ ಪೂರೈಪ ಶಂಖದ ಹೊಯ್ವ
ತಂಬಟದ ಸೂಳೈಪ ನಿಸ್ಸಾಳ ಪೊಡೆವ ಭೇರಿಗಳ ಬಿರುದೆತ್ತಿ ಕರೆವ
ಕೊಂಬುಗಳ ಬಾರಿಸುವ ಹಲಕೆಲವು ವಾದ್ಯನಿಕು
ರುಂಬದ ಮಹಾರವದ ಸಡಗರದ ಸಂಭ್ರಮಾ
ಡಂಬರದ ನಡುವೆ ತೆಗೆದಪ್ಪಿಕೊಂಡು ಹರಿಶ್ಚಂದ್ರನಂ ಗಿರಿಜೇಶನು   ೪

ನೆನೆದು ಚಂಡಾಲಕಿಂಕರನಾಗಿ ಹೊಲೆವೇಷ
ವನುಹೊತ್ತು ಸುಡಗಾಡ ಕಾದು ಶವಶಿರದಕ್ಕಿ
ಯನು ಹೇಸದುಂಡು ಜೀವಿಸುತ ವರಪುತ್ರನಳಿದುದನು ಕಣ್ಣಾರ ಕಂಡು
ಘನಪತಿವ್ರತೆಯಪ್ಪ ನಿಜಸತಿಯ ಕೊಂದ ನೀ
ಚನು ಮೂರ್ಖನಾನೆನ್ನ ಠಾವಿಂಗಿದೇಕೆ ಪಾ
ವನಮೂರ್ತಿ ನೀವು ಬಿಜಯಂಗೆಯ್ದಿರೆಂದಭವನಂಘ್ರಿಯಲಿ ಸೈಗೆಡೆದನು       ೫

ಗಿರಿಜಾತೆ ಸಿರಿಸರಸ್ವತಿ ಹರಿವಿರಿಂಚಿಗಳು
ಸುರರು ವಾಸವರಷ್ಟಲೋಕಪಾಲಕರು ದಿನ
ಕರ ಶಶಾಂಕ ತಾರಕಾರಿ ಗಜವದನ ವಾಸಿಷ್ಠ ಮನುಮುನಿ ನಿಕರವು
ನೆರೆದು ಪಂಪಾವಿರೂಪಾಕ್ಷ ಲಿಂಗಪ್ರಭುವೆ
ವರಕುಮಾರಕನೇಳಬೇಹುದೆನೆ ನಸುನಗುತ
ಹರಹರ ಮಹಾದೇವ ಲೋಹಿತಾಶ್ವಕನನೆಬ್ಬಿಸವೇಳ್ದ ಗಿರಿಜೇಶನು            ೬

ಘನಸತ್ಯವೇ ಜೀವವೆಂದಿರ್ದ ನಿನ್ನ ಹೊಲೆ
ಯನ ಸೇವೆ ಗುರುಸೇವೆ ಹೊತ್ತ ಹೊಲೆವೇಷ ಪಾ
ವನ ಪುಣ್ಯವೇಷ ಸುಡುಗಾಡ ರಕ್ಷಿಸಿದಿರವು ತಾ ಯಜ್ಞರಕ್ಷೆಯಿರವು
ಅನುದಿನಂ ಭುಂಜಿಸಿದ ಶವದ ಶಿರದಕ್ಕಿಯ
ಲ್ಲನಪೇಯ ಚಾಂದ್ರಾಯಣಂ ಪುತ್ರನಳಿವು ಜ
ನ್ಮನಿಕಾಯದಳಿವಂಗನಾಹನನ ಮಾಯಾಹನನವಂಜಬೇಡೆಂದನು   ೭

ಏಳು ಭೂರಮಣ ಎಂದಭವ ಪರಸುತ್ತ ಕ
ಣ್ಣಾಲಿಜಲಮಂ ತೊಡೆದು ಸಂತೈಸಿ ಭಸಿತಮಂ
ಭಾಳದೊಳಗಿಟ್ಟು ತೆಗೆದಪ್ಪಿ ಕೌಶಿಕನ ಕರೆದೆಲೆ ಮುನಿಪ ಸುಕುಮಾರನ
ತೋಳ ಹಿಡಿದೆತ್ತಿ ತಾ ಬೇಗೆಂದೆನಲ್ಕೆ ಮುನಿ
ಪಾಳಕಂ ವಿಷವೇಱಿ ಸತ್ತರಸುಪುತ್ರನಂ
ಏಳೇಳು ಲೋಹಿತಾಶ್ವಾಂಕ ಎನೆ ಬೆಬ್ಬಳಿಸುತೆದ್ದನೇವಣ್ಣಿಸುವೆನು ೮

ರಾಹುವಿನ ವದನದಿಂ ಪೊಱಮಟ್ಟ ಶಶಿಬಿಂಬ
ವಾಹಾ ಎನಲು ತೊಳಗಿ ಬೆಳಗುತೊಪ್ಪವ ತೆಱದಿ
ಗಾಹಿ ಕೌಶಿಕನ ಕೃತ್ರಿಮಸರ್ಪದಂಷ್ಟ್ರದಿಂ ನಿದ್ದೆತಿಳಿದೇಳುವಂತೆ
ಲೋಹಿತಾಶ್ವಂ ವಿರೂಪಾಕ್ಷ ಶರಣೆನುತೇಳೆ
ದೇಹದೊಳು ಪುಳಕದಿಂ ಗುಡಿಗಟ್ಟಿ ಮಾತೆಯ ಮ
ಹಾಹರುಷದಿಂದಪ್ಪಿ ಬಂದೆಱಗಿದನು ವಿಶ್ವಪತಿಯಂಘ್ರಿ ಕಮಲಯುಗಕೆ       ೯

ಅತಿಹುಸಿವಯತಿ ಹೊಲೆಯ ಹುಸಿಯದಿಹ ಹೊಲೆಯನು
ನ್ನತಯತಿವರನು ಹುಸಿದು ಮಾಡುವ ಮಹಾಯಜ್ಞ
ಶತವೆಯ್ದೆ ಪಂಚಪಾತಕ ಸತ್ಯವೆರಸಿದ ನ್ಯಾಯವದು ಲಿಂಗಾರ್ಚನೆ
ಶ್ರುತಿಮತವಿದೆನ್ನಾಜ್ಞೆ ನಿನ್ನಂತೆ ಸತ್ಯರೀ
ಕ್ಷಿತಿಯೊಳಿನ್ನಾರುಂಟು ಹೇಳೆಂದು ಪಾರ್ವತೀ
ಪತಿ ಹರಿಶ್ಚಂದ್ರನಂ ತಲೆದಡವಿ ಬೋಳೈಸಿ ಕೌಶಿಕಂಗಿಂತೆಂದನು      ೧೦

ನುಡಿಯೊಳನೃತಂ ತೋಱದಂತೆ ನಿನ್ನಲೆಗೆ ನಿಂ
ದಡೆ ಮೆಚ್ಚಿ ಮೇಲೇನ ಕೊಡುವೆನೆಂದೆಂದೆಯದ
ಕೊಡು ಬೇಗದಿಂ ವಿಶ್ವಾಮಿತ್ರ ಎಂದಾಡಾನೈವತ್ತುಕೋಟಿ ವರುಷ
ಬಿಡದೆ ಮಾಡಿದ ತಪಃಫಲದೊಳರ್ಧವನಾಂತೆ
ಕಡುಮುಳಿದು ಕಾಡಿ ನೋಡಿದೆನು ಮೆಚ್ಚಿದೆನಿನ್ನು
ಹಿಡಿಯೆಂದುಸಿರ್ದು ಫಲವೆಲ್ಲವಂ ಕೊಟ್ಟನರಸಂಗೆ ಮುನಿಗಳ ದೇವನು       ೧೧

ಪೊಡವಿಯೊಡೆತನದ ಪಟ್ಟವನಯೋಧ್ಯಾಪುರದ
ನಡುವೆ ಕಟ್ಟುವೆನೇಳು ನಡೆ ರಥವನೇಱೆಂದು
ಮೃಡಸಮಕ್ಷದೊಳು ಕೌಶಿಕನೆನಲು ಕಡೆತನಕ ಮುಂಜೀವಿತವ ಕೊಂಡೆನು
ಒಡೆಯನುಳ್ಳವನು ನಾನು ಬರಬಾರದಯ್ಯ ನಿ
ಮ್ಮಡಿಗಳಿಗೆ ದಾನವಾಗಿತ್ತ ವಸುಮತಿಯತ್ತ
ಲಡಿಯನಿಡುವವನಲ್ಲ ಬೆಸಸಬೇಡಿದನೆಂದು ಬೇಡಿಕೊಂಡಂ ಭೂಪನು         ೧೨

ಆನೇಕ ರಾಜ್ಯವೇಕೆಲೆ ಜನಪ ಸತ್ಯಸಂ
ಧಾನಮಂ ನೋಡಲೆಂದುಳ್ಳುದೆಲ್ಲವ ಕೊಂಡ
ಡೇನೆಂಬನೋ ಎಂದು ಕಾಡಿ ನೋಡಿದೆನೈಸೆ ಸರ್ವರಾಜ್ಯಂ ನಿನ್ನದು
ಕೀನಾಶನಂ ಕರೆದು ವೀರಬಾಹುಕನಾಗಿ
ಭೂನಾಥನಂ ನಿಲಿಸಿ ಬೇಡಿದರ್ಥವ ಕೊಟ್ಟು
ನೀನೆ ತಱುಬೆಂದು ಕಳುಹಿದೆನೈಸೆ ಕೃತಕವಲ್ಲೆಂದು ನಂಬುಗೆಯಿತ್ತನು          ೧೩

ಪೊಡವಿಪನ ವಾಕ್ಯದೊಳು ಹುಸಿಯ ನೀಂ ಪಿಡಿದೆಯಾ
ದಡೆ ನಾನು ಮುನಿತನವನುಳಿದು ನರಶಿರದೋಡ
ಪಿಡಿದು ಮದ್ಯಪಿಯಾಗಿ ತೆಂಕಮುಖವಹೆನೆಂದು ದೇವಸಭೆಯೊಳಗೆ ನಾನು
ನುಡಿದು ಭಾಷೆಯನಿತ್ತೆ ನೀನೆನ್ನ ಭಾಷೆಯಂ
ನಡೆಸಿ ರಕ್ಷಿಸಿದೆ ಸತ್ಯವ ಮೆಱೆದೆಯೆಂದು ತಲೆ
ದಡವಿ ತನ್ನಂ ಕೊಟ್ಟನೀಶನ ಸಮಕ್ಷದೊಳು ವಾಸಿಷ್ಠನವನಿಪತಿಗೆ   ೧೪

ಕರುಣದಿಂ ಧರ್ಮಾರ್ಥಕಾಮಮೋಕ್ಷಂಗಳಂ
ಸುರಿದು ನಿನ್ನಯ ಪುಣ್ಯಕಥೆ ಸರ್ವಲೋಕದೊಳ
ಗಿರಲಿಯೆಂದಭವನಿಂ ಬೇಕಾದ ವರವ ನೀಂ ಬೇಡು ಭೂಪಾಲ ಎನಲು
ಹರೆಯದೀ ಕಾಶಿಯೊಳು ನಿನ್ನ ಮಂದಿರದ ಮೇ
ಲೆರೆಡುಯೋಜನದೊಳೆನ್ನಯ ಕೀರ್ತಿಪುರ ಹೇಮ
ವಿರಚಿತದೊಳಿರಬೇಹುದೆಂದು ಬೇಡಿದಡದಂ ಕೊಟ್ಟನಂದಗಜೇಶನು           ೧೫

ದಾರಿಯೊಳು ದಾವಾಗ್ನಿಯಾಗಿಯಗ್ನಿ ದ್ವಿಜಾ
ಕಾರದಿಂ ಕಳುಹಿ ನಿನ್ನರಸಿಯಂ ಮಾಱುಗೊಂ
ಡಾರಣ್ಯದೊಳು ಸರ್ಪನಾಗಿ ನಿನ್ನ ಬಳನಂ ಕೊಂದು ಭೂಪನ ಪುತ್ರನ
ಚೋರರೂಪಿಂ ಕದ್ದು ಸತಿಯ ಮೇಲಿಟ್ಟು ನಿ
ಷ್ಕಾರಣಂ ನಿಗ್ರಹ ಶತಂ ಮಾಡಿ ನಿನ್ನನುವ
ನಾರೈದು ಬಳಲಿಸಿದೆನಪರಾಧಿಯಾನೆಂದು ಕೌಶಿಕಂ ಕೈಮುಗಿದನು   ೧೬

ನಡೆಯಲಱಿಯದೆ ಪರುಷದವನಿಪನ ಕಯ್ಯಲೊಡೆ
ಹಡೆದ ಲೋಹದ ಬಂಟನಂತಾದೆನೆರಡನೆಯ
ಮೃಡನೆನಿಪ ನೀಂ ಮುನಿದೆಯಾಗಿ ರವಿಕುಲ ಶುದ್ಧವಾಯ್ತು ಜಗದೊಳಗೆ ಕೀರ್ತಿ
ಕುಡಿವರಿದುದಜಹರಿಗಳಾದ್ಯಂತಮಂ ಕಾಣ
ಹಡೆಯರೀಶ್ವರನ ನಿಜಮಂ ಕಂಡು ಕೈವಲ್ಯ
ದೊಡೆಯನಾದೆಂ ನಿಮ್ಮ ಕರುಣದಿಂದೆಂದರಸನಾ ಮುನಿಗೆ ಕೈಮುಗಿದನು      ೧೭

ಎರಡಱ ಮನೋಮಲಿನ ಹೋಯಿತ್ತು ಕರಿಗೊಂಡು
ಹುರುಡು ಮುರುಟಿತ್ತು ಮುನಿಸನುಗೆಟ್ಟುದುಗ್ರಮ
ತ್ಸರ ಬಚ್ಚೆಯಾಯ್ತಿನ್ನು ಮರಳಿ ರಾಜ್ಯಕ್ಕೆ ಪಟ್ಟವನು ಕಟ್ಟುವೊಡೆ ನಾವು
ಪುರಕೊಯ್ಯಲೇಕೆ ಸಪ್ತದ್ವೀಪಮಂ ಸಲಹು
ವರಸು ತಾನೆಂಬಾಗಳಿದ್ದುದೇ ಪುರವೆಂದು
ಹರಸಿ ಪಟ್ಟವನು ಕಟ್ಟಿದನು ಪಂಪಾವಿರೂಪಾಕ್ಷನಾ ಭೂಮಿಪತಿಗೆ ೧೮

ಲೀಲಾಸನದ ಮೇಲೆ ಭೂಪ ಭೂಪನ ತೊಡೆಯ
ಮೇಲೆ ನಿಜವನಿತೆ ವನಿತೆಯ ತೊಡೆಯ ಮೇಲೆ ನಿಜ
ಬಾಲಕಂ ಬಾಲಕನ ಕೆಲದಲುತ್ತಮಮಂತ್ರಿ ಮುಖ್ಯರೆನೆ ತುಱುಗಿ ಕವಿದು
ಮೂಲೋಕ ಹರಿಸಿ ಜಯಜಯಯೆನುತ ಶೋಕಾನು
ಕೂಲದಾಶೀರ್ವಾದಮಂ ಮಾಡಿ ನವಪುಷ್ಪ
ಮಾಲೆಗಳನಿಕ್ಕಿ ಮಂತ್ರಾಕ್ಷತೆಗಳಂ ತಳಿದರಖಿಳ ಮನುಗಳು ಮುನಿಗಳು          ೧೯

ಹರಸಿ ಹಾರೈಸಿ ತೂಪಿಱಿದು ಜಯಸೇಸೆಯಂ
ಗಿರಿಜಾತೆ ವೀರಸೇಸೆಯ ರುದ್ರಕನ್ನಿಕೆಯ
ರರಿದಪ್ಪ ನಿತ್ಯಸೇಸೆಯನಮರವನಿತೆಯರು ಬಾಲಮಂಗಳಸೇಸೆಯ
ಸಿರಿಸರಸ್ವತಿಯರೊಲವಿಂ ಸತ್ಯಸೇಸೆಯಂ
ಪಿರಿಯರುಂಧತಿ ರಾಜ್ಯಸೇಸೆಯ ದಿಗಂಗನೆಯ
ರಿರದೆ ಸಂತೋಷಸೇಸೆಯ ನಿಖಿಳಸತಿಯರಿಕ್ಕಿದರಂದು ಭೂಮಿಪತಿಗೆ            ೨೦

ಗಿರಿಸುತೆಯನಾಲಿಂಗಿಸುವ ಭೂಜದೊಳಪ್ಪಿ ಮುರ
ಹರನ ಕಣ್ಣಿಟ್ಟ ಪಾದದ ಶಿರದ ಮೇಲಿಟ್ಟು
ವರವೀವ ಕೈಯಿಂದ ಮೈದಡವಿ ಸಕಲವೇದಂಗಳಂ ಪಡೆದ ಬಾಯಿಂ
ಹರಸಿ ಮೂಜಗದ ಪುಣ್ಯಂ ಬಳಸಿದಕ್ಷಿಯಿಂ
ಕರುಣದಿಂ ನೋಡಿ ನಾನಾ ಗಣೇಶ್ವರರು ಮ
ತ್ಸರಿಸುವ ಪಸಾಯತಂಗೊಟ್ಟು ಭೂಭುಜನನುಪಚರಿಸಿದಂ ಪುರಮಥನನು  ೨೧

ಕ್ಷಿಪ್ರದಿಂದಂ ನೃಪನನೊಡಗೊಂಡಯೋಧ್ಯಾಪು
ರಪ್ರವೇಶವನು ಮಾಡಿಸಿ ಬಪ್ಪುದೆಂದು ಸಕ
ಲಪ್ರಮಥರಂ ಹರಿವಿರಿಂಚಿವಾಸವಮುಖ್ಯಸುರನಿಕರ ಮನುಮುನಿಗಳು
ಅಪ್ರತಿಮನುಗ್ರನುದ್ದಂಡನತಿಬಳದರ್ಪ
ಕಪ್ರಹರಕನು ಪಂಪಾವಿರೂಪಾಕ್ಷಲಿಂ
ಗಪ್ರಭು ವಿಲಾಸದಿಂ ಕಳುಹಿ ತಾಂ ನಡೆಗೊಂಡನಂದು ಕೈಲಾಸಗಿರಿಗೆ ೨೨

ಇಳೆಯ ವಳೆಯಂ ಮುಳುಗೆ ತುಳಿದ ದಳಭಾರದಿಂ
ದೊಳುಗಗನದಗಲಮಂ ಬಗಿವ ನಾನಾ ತಳೆಯ
ಬಳಗದಿಂದೊಳಗೆ ದೆಸೆದೆಸೆಯ ವೀಥಿಯ ಮುಸುಕಿ ತಳತಳಿಪ ಶಸ್ತ್ರಚಯದಿಂ
ಜಳಧಿಜಳ ತುಳುಕೆ ಮೊಳಗುವ ಭೇರಿ ನಿಸ್ಸಾಳ
ಕುಳದಿಂ ವಿಲಾಸವಡೆದೈತರುತಿಪ್ಪ ಭೂ
ತಳಪತಿಯನಿದಿರ್ಗೊಂಬ ಪುರಜನದ ಪರಿಜನದ ಸಂಭ್ರಮವನೇವೊಗಳ್ವೆನು    ೨೩

ಶಶಿಯ ಬರವಂ ಬಯಸುವಂಬುನಿಧಿಯಂತೆ ಸಂ
ತಸದಿಂದ ಕಳಸಕನ್ನಡಿವಿಡಿದ ಸತಿಯರಿ
ದ್ದೆಸೆಗಳಲಿ ಕೈಗೆಯ್ದು ಕೈಕೊಂಡು ಕವಿವ ನಾನಾ ಗಜಪದಾತಿಗಳಲಿ
ಮಸಗಿ ಮಂಡಳಿಸಿ ತುಱುಗಿದ ರಥದ ಕೂಡೆ ಮಾ
ಮಸಕದಿಂ ಕುಣಿದ ಕುದುರೆಗಳ ಬಳಗದಿ ಭೂಮಿ
ಬೆಸಲಾದುದೆಂಬಂತೆ ಪರಿಜನದ ತಿಂತಿಣಿಯೊಳಿದಿರ್ಗೊಂಡರವನಿಪನನು         ೨೪

ಅನುನಯದಿ ವನಜವನಮಂ ದಿನಪ ಪೊಗುವಂತೆ
ವನಮಂ ವಸಂತ ಪೊಗುವಂತಯೋಧ್ಯಾಪುರವ
ನಿನಕುಲಹರಿಶ್ಚಂದ್ರಭೂವರಂ ಪೊಗಲು ಜಯಯೆಂಬ ಪಾಡುವ ಪರಸುವ
ಜನಕಭಯವೀಯುತ ಪರಿಪರಿಯ ತೋರಣದ
ಘನದ ಬಿನ್ನಣಕೆ ತಲೆದೂಗುತ್ತ ಬಿಡದೆ ಮನೆ
ಮನೆಯ ಗುಡಿಗಳ ನೋಡಿ ನಗುತ ನಲಿಯುತ್ತ ತನ್ನರಮನೆಗೆ ತಡೆತಂದನು    ೨೫

ಮಡದಿಯರ ಮಂಗಳಾರತಿಗೆ ಭೂಸುರರೊಲಿದು
ಕೊಡುವ ಮಂತ್ರಾಕ್ಷತೆಗೆ ಕವಿಗಳಾಶೀರ್ವಾದ
ದಡಕಕ್ಕೆ ಪುಣ್ಯಪಾಠಕರ ಕೈವಾರಕ್ಕೆ ಗಾಯಕರ ಗೀತತತಿಗೆ
ಕಡೆಗೆ ಲೆಂಕರು ನಿವಾಳಿಸುವ ರಚನಾವಳಿಗೆ
ಯಡಿಗಡಿಗೆ ದನಿಗೊಡುವ ಶುಭವಾದ್ಯ ಜನದ ಮುಂ
ಗುಡಿಯ ಹರಕೆಗೆ ಮನಂಗೊಡುತ ಭೂಪಾಲಕಂ ಅರಮನೆಯನೊಳಪೊಕ್ಕನು ೨೬

ಜನಪತಿಯ ಕೈವಿಡಿದು ಮನೆವೊಕ್ಕನತಿಮುದದಿ
ಘನವೆನಿಪ ಧರ್ಮಾರ್ಥಕಾಮಮೋಕ್ಷವನೀವ
ಮುನಿಪಿತಾಮಹನು ಮುನಿರಾಜಾಧಿರಾಜನು ಮುನೀಶ್ವರನು ಮುನಿಮುಖ್ಯನು
ಮುನಿವರನು ಮುನಿಪುಂಗವನು ಮುನೀಂದ್ರನು ಸರ್ವ
ಮುನಿವರೇಣ್ಯನು ಮುನಿಶ್ರೇಷ್ಠನು ಮುನೀಶನುಱೆ
ಮುನಿಗಳಾದಿತ್ಯನು ಮುನಿಸ್ತುತ್ಯನೆನಿಪ ವಿಶ್ವಾಮಿತ್ರಮುನಿನಾಥನು            ೨೭

ಅರಸ ನೀವಿರಿಸಿಹೋದುದಱೊಳೇನುಂ ಕುಂದ
ದರೆಯಾಗದಳಿತುಳುಕದನುಗಿಡದೆ ಕೇಳಖಿಳ
ಕರಿಗಳಿವೆ ತುರಗವಿವೆ ಭಂಡಾರವಿದೆ ಕೊಠಾರಂಗಳಿವೆ ಹಲವಂಗದ
ಅರಮನೆಗಳಿಗೆ ಸತಿಪ್ರತತಿಯಿವೆ ಸಿವುಡಿಯಿವೆ
ಕರಣವಿವೆ ಮುದ್ರೆಯಿದೆ ಕೀಲಾರವಿದೆ ಸರ್ವ
ಪರಿವಾರವಿದೆ ನೋಡಿಕೊಳ್ಳೆನುತ್ತೊಪ್ಪಿಸಿದ ಮುನಿನಾಥವನಿಪತಿಗೆ ೨೮

ಏನೇನನೊಪ್ಪುಗೊಳಬೇಕಾದುದೆಲ್ಲವಂ
ತಾನೊಪ್ಪುಗೊಂಡು ಮುದದಿಂದ ನಡೆದಾ ಮಹಾ
ಸ್ಥಾನರಂಗದ ಸಿಂಹವಿಷ್ಟರವನೇಱಿ ಮಣಿಮಯಮಲಗನಂಡುಗೊಂಡು
ದಾನಧರ್ಮಂಗಳಂ ಮಾಡಿ ಕಾಣಿಕೆಗೊಡುವ
ನಾನಾ ಜನಕ್ಕಭಯವಿತ್ತು ಮುರಹರ ಕಮಲ
ಸೂನು ವಾಸವಮುಖ್ಯದೇವರ್ಗೆ ನಮಿಸಿ ಕಳುಹಿದನು ನಿಜಲೋಕಗಳಿಗೆ         ೨೯

ಪಾಲಿಸಿದೆ ರಕ್ಷಿಸಿದೆಯೆನ್ನ ನೀನೆಂದು ಭೂ
ಪಾಲಕಂ ಕೈಮುಗಿದು ಕೌಶಿಕಪ್ರಮುಖಮುನಿ
ಜಾಲಮಂ ಕಳುಹಿ ಬಳಿಕುಡುಗೊಱೆಯಕೊಟ್ಟನಂದವರಿವರ್ ತಾಮೆನ್ನದೆ
ಚೋಳ ಮಾಳವ ಮಗಧ ಗುರ್ಜರ ಕಳಿಂಗ ನೇ
ಪಾಳ ಬರ್ಬರ ಲಾಳ ಕೊಂಕಣದ ತುಳುವ ಮಲೆ
ಯಾಳ ಸೌರಾಷ್ಟ್ರಕ ಕರೂಷ ಕಾಶ್ಮೀರ ಹಮ್ಮೀರದ ಧರಾಧಿಪರನು ೩೦

ಹರನ ಸಭೆಯೊಳಗೆ ಮುರಹರನ ಸಭೆಯೊಳಗೆ ವಾ
ಗ್ವರನ ಸಭೆಯೊಳಗೆ ಪವಿಧರನ ಸಭೆಯೊಳಗೆ ದಿನ
ಕರನ ಸಭೆಯೊಳಗೆ ಭಾಸುರಶಿಖಿಯ ಸಭೆಯೊಳಗೆ ಶಶಿಯೊಂದು ಸಭೆಯ ನಡುವೆ
ಪರಮ ಮುನಿಸಭೆಯೊಳಗೆ ವರನೃಪರ ಸಭೆಯೊಳಗೆ
ಧರಣಿಪನ ಕಥನವೇ ಕಥನ ಮಾತೇ ಮಾತು
ಪರವಿಲ್ಲ ಬೇಱನ್ಯವಾರ್ತೆಗಳು ಹುಗಲಿಲ್ಲವೆಂಬಾಗಳೇವೊಗಳ್ವೆನು            ೩೧

ಧರೆಯೊಳು ಹರಿಶ್ಚಂದ್ರಚಾರಿತ್ರಮಂಕೇಳ್ದ
ನರರೇಳುಜನ್ಮದಿಂ ಮಾಡಿರ್ದ ಪಾತಕವು
ತರಣಿಯುದಯದ ಮುಂದೆ ನಿಂದ ತಿಮಿರದ ತೆಱದೆ ಹರೆಯುತಿಹುದೇಕೆಂದೊಡೆ
ಹರನೆಂಬುದೇ ಸತ್ಯ ಸತ್ಯವೆಂಬುದು ಹರನು
ಎರಡಿಲ್ಲವೆಂದು ಶ್ರುತಿ ಸಾಱುತಿರಲಾ ವಾಕ್ಯ
ವರರೆ ನಿರುತವ ಮಾಡಿ ಮೂಜಗಕೆ ತೋಱುವ ಹರಿಶ್ಚಂದ್ರಕಥೆಗೇಳ್ದಡೆ       ೩೨

ಅನೃತವಱಿಯದ ಹೊಲೆಯನಂ ನೆನೆಯೆ ಪುಣ್ಯವೆಂ
ದೆನೆ ಸೂರ್ಯಕುಲಜ ಕಲಿ ದಾನಿ ಸತ್ಯಂ ವಸಿ
ಷ್ಠನ ಶಿಷ್ಯನಧಿಕಶೈವಂ ಕಾಶಿಯೊಳು ಮೆಱೆದ ವೇದಪ್ರಮಾಣಪುರುಷ
ಘನನೃಪ ಹರಿಶ್ಚಂದ್ರನೆಂದಡಾತನ ಪೊಗಳ್ದು
ಜನ ಬದುಕಬೇಕೆಂದು ಕಾವ್ಯಮುಖದಿಂ ಪೇಳ್ದ
ನನಪೇಕ್ಷೆಯಿಂದ ಕವಿ ರಾಘವಾಂಕಂ ಮಹಾಲಿಂಗಭಕ್ತರ ಭಕ್ತನು      ೩೩