ಸೂಚನೆ
ಭೂಪ ಸತ್ಕುಲದೀಪನೊಡನೆ ವಿಶ್ವಾಮಿತ್ರ
ಪಾಪಿ ಕೋಪಿಸಿ ಹೊಲತಿಯರನು ಪುಟ್ಟಿಸಿ ಕಳುಹ
ಭಾಪು ಸ್ಥಿರಂಜೀವ ಸತ್ತಿಗೆಯನೀಯಲ್ಲದಡೆ ಗಂಡನಾಗೆಂದರು

ಹಂದಿಯಂ ಕಾಣುಹ ತಡಂ ಕೋಪಗಿಚ್ಚು ಭುಗಿ
ಲೆಂದು ಜಪ ಜಾಱಿ ತಪ ತಗ್ಗಿ ಮತಿ ಗತವಾಗಿ
ಸಂದಯೋಗಂ ಹಿಂಗಿ ದಯೆ ದಾಟಿ ನೀತಿ ಬೀತಾನಂದಱತು ಹೋಗಿ
ಹಿಂದ ನೆನೆದುರಿದೆದ್ದು ಸಿಕ್ಕಿದನಲಾ ಭೂಪ
ನಿಂದು ನಾನಾಯ್ತು ತಾನಾಯ್ತು ಕೆಡಿಸದೆ ಮಾಣೆ
ನೆಂದು ಗರ್ಜಿಸುವ ಕೌಶಿಕನ ಹೂಂಕಾರದಿಂದೊಗೆದರಿಬ್ಬರು ಸತಿಯರು         ೧

ಮುನಿಗೆ ಹೊಲೆಯಾವುದತಿಕೋಪ ಬದ್ಧದ್ವೇಷ
ವನಿಮಿತ್ತವೈರವದಱಿಂದ ಹುಟ್ಟಿದರಾಗಿ
ವನಿತೆಯರು ಕಡೆಗೆ ಹೊಲತಿಯರಾಗಿ ಕೆಲಸಾರಿ ನಿಂದು ಬೆಸನಾವುದೆನಲು
ಜನಪತಿ ಹರಿಶ್ಚಂದ್ರ ಬಂದು ನಮ್ಮಯ ತಪೋ
ವನದೊಳೈದನೆ ಹೋಗಿ ಸರ್ವಬುದ್ಧಿಗಳೊಳಾ
ತನ ಮರುಳುಮಾಡುತಿರಿ ಹೋಗಿಯೆಂದಟ್ಟಿದಂ ದುರ್ಮಂತ್ರಬಲವಂತನು    ೨

ಹೊಸಕುಟಿಲಕುಂತಲದ ಚಂಚಲಾಕ್ಷಿಗಳ ಕ
ರ್ಕಶಕುಚದ ಶಿಥಿಲಮಧ್ಯದ ಲಘುಶ್ವಾಸದ
ತ್ಯಸಮರಾಗಾಧರದ ಗೂಢನಾಭಿಯ ಮೀಱಿ ಕೊಬ್ಬಿದ ನಿತಂಬಯುಗದ
ಅಸದಳದ ಜಡಗತಿಯ ಬೆಳುನಗೆಯ ವಕ್ರವಾ
ಕ್ಯಸಮೂಹದವಗುಣಂಗಳ ಸಂಗದಿಂ ಕುಲಂ
ಹಸಗೆಟ್ಟನಾಮಿಕೆಯರಾದರಲ್ಲದೆ ಸಂಗವಾರ ಕುಲಮಂ ಕೆಡಿಸದು  ೩

ಸಂದ ಕಾರಿರುಳ ಕನ್ನೆಯರು ಹಗಲಂ ನೋಡ
ಲೆಂದು ಬಂದರೊ ಸುರಾಸುರರಬುದಿಯಂ ಮಥಿಸು
ವಂದು ಹೊಸವಿಷದ ಹೊಗೆಯೊಯ್ದು ಕಗ್ಗನೆ ಕಂದಿ ಜಲದೇವಿಯರು ಮನದಲಿ
ನೊಂದು ಮಾನಿಸರಾದರೋ ಕಮಲಜಂ ನೀಲ
ದಿಂದ ಮಾಡಿದ ಸಾಲಭಂಜಿಕೆಗಳೊದವಿ ಜೀ
ವಂದಳೆದವೋ ಎನಿಪ್ಪಂದದಿಂ ಬಂದರಂಗನೆಯರವನೀಶನೆಡೆಗೆ       ೪

ಮಾಯದಬಲೆಯರು ಕಾಣುತ್ತ ಮಝ ಭಾಪಧಟ
ರಾಯ ರಾಯಝಳಪ್ಪ ರಾಯ ದಳವುಳಕಾಱ
ರಾಯ ಕಂಟಕರಾಯ ರಾಯಜಗಜಟ್ಟಿ ರಾಯದಲ್ಲಣ ರಾಯಕೋಳಾಹಳ
ರಾಯಭುಜಬಲಭೀಮ ರಾಯಮರ್ದನರಾಯ
ಜೀಯ ಸ್ಥಿರಂಜೀವಯೆಂದು ಕೀರ್ತಿಸಿ ಗಾಣ
ನಾಯಕಿಯರಂದು ದಂಡಿಗೆವಿಡಿದು ಪೊಡಮಟ್ಟು ಹಾಡಲುದ್ಯೋಗಿಸಿದರು  ೫

ಗತಿ ಗಮಕ ಗಹಗಹಿಕೆ ತಿರುಪು ಚಾಳೆಯ ಕೊಂಕು
ಜತಿ ಜೋಕೆ ಮಾರ್ಗವಣೆ ವಹಣಿ ತರಹರಿಕೆ ಕಂ
ಪಿತ ಹೊಂಪು ಬಾಗು ಡೊಕ್ಕರವಿವರ ಕಾಳಾಸ ಕಮ್ಮವಣೆ ಲೋಲಂಗಿತ
ನುತಶುದ್ಧಸಾಳಂಗಸಂಕೀರ್ಣಮಂ ಯಥೋ
ಚಿತ ತಾರಮಧುರ ಮಂದ್ರಂಗಳಿಂ ಹಾಡಿ ಭೂ
ಪತಿಯ ದುಗುಡವನು ತೊಳೆದರು ರಾಗರಸಲಹರಿಯಿಂದನಾಮಿಕ ಸತಿಯರು ೬

ಎಕ್ಕಲನ ಬಳಿವಿಡಿದು ಸುತ್ತಿದಾಸಱನು ಮುನಿ
ರಕ್ಕಸನ ಬನಕೆ ಬಂದಂಜಿಕೆಯನೆರಡನೆಯ
ಮುಕ್ಕಣ್ಣನೆನಿಪ ಗುರುವಾಜ್ಞೆಗೆಟ್ಟಳಲನಲ್ಲದೆ ಕನಸ ಕಂಡ ಭಯವ
ಮಿಕ್ಕು ಮಱೆವಂತಡಸಿ ಕವಿವ ಗತಿಗಳ ಸೊಗಸ
ನಕ್ಕಿಸದೆ ಸಮಯ ಸಮಯದ ಪಸಾಯಕ್ಕೆ ಮನ
ವುಕ್ಕಿ ಸರ್ವಾಭರಣಮಂ ಗಾಣರಾಣಿಯರಿಗಿತ್ತನು ಹರಿಶ್ಚಂದ್ರನು    ೭

ಬಡತನದ ಹೊತ್ತಾನೆ ದೊರಕಿ ಫಲವೇನು ನೀ
ರಡಸಿರ್ದ ಹೊತ್ತಾಜ್ಯ ದೊರಕಿ ಫಲವೇನು ರುಜೆ
ಯಡಸಿ ಕೆಡೆದಿಹ ಹೊತ್ತು ರಂಭೆ ದೊರಕೊಂಡಲ್ಲಿ ಫಲವೇನು ಸಾವ ಹೊತ್ತು
ಪೊಡವಿಯೊಡೆತನ ದೊರಕಿ ಫಲವೇನು ಕಡುವಿಸಿಲು
ಹೊಡೆದು ಬೆಂಡಾಗಿ ಬೀಳ್ವವಗೆ ನೀನೊಲಿದು ಮಣಿ
ದೊಡಿಗೆಗಳನಿತ್ತು ಫಲವೇನು ಭೂನಾಥ ಹೇಳೆನುತ ಮತ್ತಿಂತೆಂದರು            ೮

ಕಡಲೊಳಾಳ್ವಂಗೆ ತೆಪ್ಪವನು ದಾರಿದ್ರಂಗೆ
ಕಡವರವನತಿರೋಗಿಗಮೃತಮಂ ಕೊಟ್ಟಡವ
ರಡಿಗಡಿಗದಾವ ಹರುಷವನೆಯ್ದುತಿಪ್ಪರವರಂ ಪೋಲ್ವರೀ ಪೊತ್ತಿನ
ಸುಡುಸುಡನೆ ಸುಡುವ ಬಿಱುಬಿಸಿಲ ಸೆಕೆಯುಸುರ ಬಿಸಿ
ಹೊಡೆದುದುರಿಹೊತ್ತಿ ಬಾಯ್ಬತ್ತಿ ಡಗೆ ಸುತ್ತಿ ಸಾ
ವಡಸುತಿದೆ ನಿನ್ನ ಮುತ್ತಿನ  ಸತ್ತಿಗೆಯನಿತ್ತು ಸಲಹು ಭೂಭುಜಯೆಂದರು     ೯

ರವಿಕುಲದ ಪೀಳಿಗೆಯೊಳೊಗೆದ ರಾಯರ್ಗೆ ಪ
ಟ್ಟವ ಕಟ್ಟುವಂದಿದಿಲ್ಲದೊಡರಸುತನ ಸಲ್ಲ
ದವನಿಯೊಳು ಯುದ್ಧರಂಗದೊಳಿದಂ ಕಂಡ ಹಗೆಗಳು ನಿಲ್ಲರಿದಱ ಕೆಳಗೆ
ಕವಿದ ನೆಳಲೊಳಗಾವನಿರ್ದನಾತಂಗೆ ತಾಂ
ತವಿಲೆಡರು ಬಡತನ ನಿರೋಧವಪಕೀರ್ತಿಪರಿ
ಭವಭಯಂ ಹರೆವುದಿದನಱಿದಱಿದು ಸತ್ತಿಗೆಯ ಕೊಡಬಹುದೆ ಹೇಳೆಂದನು  ೧೦

ಕೊಡಬಾರದೊಡೆವೆಯಂ ಕೊಡುವುದರಿದೈಸೆ ಕೊಡು
ವೊಡವೆಗಳನಾರಾದಡಂ ಕೊಡರೆ ಹೇಳೆನಲು
ಬಿಡೆಬೇಡುವರ ಬಾಯಿ ಹಱಿವುದೇ ಬೇಡಿದುದನೀವ ದೊರೆಯಾವನೆನಲು
ಕೊಡರೆ ಮುನ್ನಿನ ಬಲಿ ದಧೀಚಿ ಶಿಬಿಗಳು ಬೇಡಿ
ದೊಡವೆಗಳನೆನಲದೇಂ ತ್ಯಾಗವೇ ದಾನಗುಣ
ವಿಡಿದೈಸಲೇ ಕೊಟ್ಟರೆನಲೊಂದು ದಾನವೆ ನೀನಿದಂ ಕೊಡಲೆಂದರು            ೧೧

ಪಾಡಿ ಮೆಚ್ಚಿಸಿದ ಕತದಿಂ ತ್ಯಾಗವಾಸತ್ತು
ಬೇಡಿದುದಱಿಂ ದಾನ ಹವಣಿನ ಪದಸ್ಥಿಕೆಯ
ಜೋಡಿಯುಂಟದಱೊಳುಪಕಾರ ಕೌಶಿಕನ ಹೆಸರಿಂಗಿತ್ತಡಾರಾಧನೆ
ಗಾಡಿಕಾತಿಯರಾಗಿ ವಿಟಲಕ್ಷಣಂ ಮನದ
ಪಾಡಱಿಯಲೆಂದೆವದಱಿಂ ಸಲುಗೆ ಶಂಕಿಸದೆ
ನೀಡಿದೊಡೆ ಕೀರ್ತಿ ಕರುಣಿಸಿ ಕೊಡಲುಪುಣ್ಯವೀ ಸತ್ತಿಗೆಯೊಳಹುದೆಂದರು     ೧೨

ಅನುನಯದೊಳೆಲ್ಲಮಂ ಕೊಡಬಹುದು ಬಿಡಬಹುದು
ಜನನಿಯಂ ಜನಕನಂ ನಲ್ಲಳಂ ದೈವಮಂ
ಮನವಾಱೆ ನಂಬಿ ನಚ್ಚಿರ್ದ ಪರಿವಾರಮಂ ಕೊಡುವ ಬಿಡುವತಿಕಲಿಗಳು
ಜನರೊಳಗೆ ಜನಿಸರೆಂದೆನಲು ನೀನೀಗ ಪೇ
ಳ್ದನಿತಱೊಳು ಬೇಡಿದಡೆ ಕೊಡಬೇಡ ಕೊಡೆಯನೀ
ಯೆನೆ ಲೋಭವೇಕರಸಯೆನಲಿದಲ್ಲದೆ ಬೇಱಿಮಾತೆಪಿತರಿಲ್ಲೆಂದನು          ೧೩

ಲೋಗರಿಗೆ ಕೊಡಬಾರದಾಗಿ ಸತಿ ವಂಶಗತ
ವಾಗಿ ಬಂದುಱಿಂದ ತಂದೆ ಪಟ್ಟವ ಕಟ್ಟು
ವಾಗಲರ್ಚಿಸಿಕೊಂಬುದಾಗೆ ದೈವಂ ನೆಳಲ ತಂಪನೊಸೆದೀವುದಾಗಿ
ಸಾಗಿಸುವ ತಾಯ್ ಧುರದೊಳರಿಗಳಂ ನಡುಗಿಸುವು
ದಾಗಿ ಚತುರಂಗಬಲವೆನಿಸಿತೀ ಛತ್ರವೆಂ
ಬಾಗಳಿದನಱಿದಱಿದು ಬೇಡುವರನತಿಮರುಳರೆನ್ನರೇ ಮೂಜಗದೊಳು      ೧೪

ಇಳೆಯೊಳಗೆ ಹೆಸರುಳ್ಳ ದಾನಿಯೆಂಬುದನು ಕೇ
ಳ್ದೆಳಸಿ ಕಟ್ಟಾಸೆವಟ್ಟೆಯ್ತಂದು ಬೇಡಿ ನಿ
ಷ್ಫಲವಾಗದಂತೆ ನಾವತಿಮಱುಗದಂತಳಲದಂತೆ ಬಿಸುಸುಯ್ಯದಂತೆ
ತಿಳಿದು ನೀನೆಮಗೆ ವಲ್ಲಭನಾಗಿ ಚಿತ್ತದು
ಮ್ಮಳಿಕೆಯಂ ಕಳೆ ಹರಿಶ್ಚಂದ್ರಭೂನಾಥಯೆಂ
ದಳವಳಿದು ಬಾಯ್ವಿಟ್ಟು ಕೈಮುಗಿದು ನುಡಿದರೊಲವಿಂದನಾಮಿಕ ಸತಿಯರು          ೧೫

ಲಲಿತವಸುಮತಿ ಹುಟ್ಟುವಂದು ಹುಟ್ಟಿದ ಸೂರ್ಯ
ಕುಲದ ರಾಯರ್ಗೆ ವಂಶದೊಳು ಕೀರ್ತಿಯೊಳು ಭುಜ
ಬಲದೊಳೊರೆದೊರೆಯೆನಿಸಿ ಕನ್ನಿಕೆಯರಂ ಕೊಡುವ ಭೂಪರಿಲ್ಲಿಂದುತನಕ
ಹೊಲತಿಯರು ಒಂದಾವು ಸತಿಯರಾದಪ್ಪೆವೆಂ
ಬುಲಿಹವೆಂಬುದು ಬಂದ ಕಾಲಗುಣವೋ ನಿಂದ
ನೆಲದ ಗುಣವೋ ನೋಡುನೋಡೆಂದು ಕಡುಮುಳಿದು ಕೋಪಿಸಿದನವನೀಶನು           ೧೬

ಪಾವನಕ್ಷೀರಮಂ ಕೊಡುವ ಕೆಚ್ಚಲ ಮಾಂಸ
ವಾವಲೇಸಿನಿದುಳ್ಳ ಮಧುವನೊಸೆದೀವ ನೊಳ
ವಾವಲೇಸಧಿಕ ಕಸ್ತೂರಿಯಂ ಕೊಡುವ ಮೃಗನಾಭಿ ತಾನಾವ ಲೇಸು
ದೇವರಿಗೆ ಸಲ್ಲವೇ ಉತ್ತಮಗುಣಂಗಳಿ
ರ್ದಾವ ಕುಂದಂ ಕಳೆಯಲಾಱವವನೀಶ ಕೇಳ್
ಭಾವಿಸುವೊಡಿಂದೆಮ್ಮ ರೂಪು ಜವ್ವನವಿರಲು ಕುಲದ ಮಾತೇಕೆಂದರು        ೧೭

ಅಕ್ಕಕ್ಕು ಬಚ್ಚಲುದಕಂ ತಿಳಿದಡಾರ ಮೀ
ಹಕ್ಕೆ ಯೋಗ್ಯಂ ನಾಯ್ಗೆ ಹಾಲುಳ್ಳಡಾವನೂ
ಟಕ್ಕೆ ಯೋಗ್ಯಂ ಪ್ರೇತವನದೊಳಗೆ ಬೆಳೆದ ಹೂವಾರ ಮುಡಿಹಕ್ಕೆ ಯೋಗ್ಯಂ
ಮಿಕ್ಕ ಹೊಲತಿಯರು ನೀವೆನೆ ನಿಮ್ಮ ಜವ್ವನದ
ಸೊಕ್ಕು ರೂಪಿನ ಗಾಡಿ ಜಾಣತನದೊಪ್ಪವೇ
ತಕ್ಕೆ ಯೋಗ್ಯಂ ರಮಿಸಿದವರುಂಟೆ ಶಿವಶಿವೀ ಮಾತು ತಾ ಹೊಲೆಯೆಂದನು   ೧೮

ಹಾಡನೊಲಿದಾಲಿಸಿದ ಕಿವಿಗೆ ಹೊಲೆಯಿಲ್ಲ ಮಾ
ತಾಡಿ ಹೊಗಳಿದ ಬಾಯ್ಗೆ ಹೊಲೆಯಿಲ್ಲ ರೂಪನೆಱೆ
ನೋಡಿದ ವಿಲೋಚನಕೆ ಹೊಲೆಯಿಲ್ಲ ಮೆಯ್‌ಮುಡಿಗಳಿಂ ಸುಳಿವ ತಂಗಾಳಿಯಿಂ
ತೀಡುವ ಸುಗಂಧಮಂ ವಾಸಿಸಿದ ನಾಸಿಕಕೆ
ನಾಡೆ ಹೊಲೆಯಿಲ್ಲ ಸೋಂಕಿಂಗೆ ಹೊಲೆಯುಂಟಾಯ್ತೆ
ಕೂಡಿರ್ದ ಪಂಚೇಂದ್ರಿಯಂಗಳೊಳು ನಾಲ್ಕಧಮವೊಂದಧಿಕವೇ ಎಂದರು      ೧೯

ಕಂಡಱಿವವೈಸಲೇ ನಯನೇಂದ್ರಿಯಂ ಘ್ರಾಣ
ಕೊಂಡಱಿವವೈಸಲೇ ವಾಸನೆಯ ಕರ್ಣಂಗ
ಳುಂಡಱಿವವೈಸಲೇ ಶಬ್ದಮಂ ದೂರದಿಂದಲ್ಲದವು ಮುಟ್ಟಲಿಲ್ಲ
ಭಂಡತನವೀ ಮಾತಿದಕ್ಕೆಯುಪಮಾನವೇ
ಕೆಂಡವನು ಮುಟ್ಟಿದಡೆ ಬೇವಂತೆ ಕೇಳ್ದಡಂ
ಕಂಡು ವಾಸಿಸಿದಡಂ ಬೆಂದವೇ ಕಾಳುಗೆಡೆಯದೆ ಹೋಗಿ ನೀವೆಂದನು            ೨೦

ಏಗೆಯ್ದಡಂ ಕುಲಜರಧಮಸತಿಯರ ನೋಡ
ಲಾಗದಱಿಯದೆ ಪಾಪದಿಂ ನೋಡಿದಡೆ ನುಡಿಸ
ಲಾಗದೆಂತಕ್ಕೆ ನುಡಿಸಿದಡೆ ಮನ್ನಿಸಲಾಗದನುಗೆಟ್ಟು ಮುನ್ನಿಸಿದಡೆ
ಮೇಗೇನುವಂ ಕರೆದು ಕೊಡಲಾಗದಿತ್ತಡವ
ರೇಗಯ್ಯಲೊಪ್ಪದೆನಗಿಂದು ನೀವಂಗನೆಯ
ರಾಗಿಪ್ಪೆವೆಂದಿರೈಸಲ್ಲದೊಡತಿಯರಪ್ಪೆವೆನಲು ತೀರದೆಯೆಂದನು ೨೧

ಶಾಪದಿಂದಾದ ದುಷ್ಕುಲಂ ಸತ್ಕುಲಜ
ಭೂಪ ನಿನ್ನಯ ಸಂಗದಿಂ ಶುದ್ಧವಪ್ಪುದೆಂ
ಬಾಪೇಕ್ಷೆಯಿಂ ಬಂದೆವೆನಲೊಡನೆ ನಿಮಗೋಸುಗೆನ್ನ ಕುಲಮಂ ಕೆಡಿಪೆನೆ
ಪಾಪಿಗಳ ಪಾಪಮಂ ತೊಳೆವ ಗಂಗೆಗೆ ಪಾಪ
ಲೇಪವುಂಟಾಯ್ತೆ ಹೇಳರಸಯೆನೆ ಕುಲಧರ್ಮ
ವೀಪಂಥವಲ್ಲ ಕೊಡವಾಲ ಕೆಡಿಸುವೊಡಾಮ್ಲವೆನಿತಾಗಬೇಕೆಂದನು           ೨೨

ಮಾತಿಂಗೆ ಮಾತುಗೊಡಲರಿದು ನಿನ್ನಯ ನುತ
ಖ್ಯಾತಿಗದಟಿಂಗೆ ರೂಪಿಂಗೆ ಸುರುಚಿರಗುಣ
ವ್ರಾತಕ್ಕೆ ಹರೆಯಕ್ಕೆ ಗರುವಿಕೆಗೆ ಮನಸಂದು ಮರುಳಾಗಿ ಮತಿಗೆಟ್ಟೆವು
ಓತು ಬಂದವರನುಪಚರಿಸದಿಪ್ಪುದು ನಿನಗೆ
ನೀತಿಯಲ್ಲೇಗೆಯ್ದಡಂ ಗಂಡನಾದಲ್ಲ
ದಾತುರಂ ಪೋಗದಿನ್ನೊಲಿದಂತೆ ಮಾಡು ನಿನ್ನಯ ಬೆನ್ನ ಬಿಡೆವೆಂದರು       ೨೩

ಬಳಿವಿಡಿದು ಬಂದು ಮಾಡುವುದೇನು ನಮ್ಮ ಬೆಂ
ಬಳಿಯಲೆನಿಬರು ಹೊಲೆಯರಿಲ್ಲೆಂದಡಹಗೆ ಬಿಡೆ
ವೆಳಸಿ ಮಚ್ಚಿಸಿ ಮರುಳ್ಗೊಳಿಸಿ ಮತ್ತೊಲ್ಲನವನಿಪನೆಂದು ಮೊಱೆಯಿಡುತ್ತ
ಇಳೆಯೊಳಗೆ ಸಾಱುತ್ತ ದೂಱುತ್ತ ಬಪ್ಪೆವೆನೆ
ಮುಳಿದು ಘುಡುಘುಡಿಸಿ ಕೋಪಾಟೋಪದಿಂ ಹಲ್ಲ
ಕಳೆ ಬಾಯ ಹರಿಯಕೊಯ್ ಹೊಡೆಹೊಡೆಯೆನುತ್ತೆದ್ದನುರವಣಿಸಿ ಭೂನಾಥನು        ೨೪

ತುಡುಕಿ ಚಮ್ಮಟಿಗೆಯಂ ಸೆಳೆದು ಪ್ರಧಾನ ಬಳಿ
ವಿಡಿದೇಳಲೊಬ್ಬರೊಬ್ಬರನು ಬೆನ್ನೊಡೆಯೆ ಮುಡಿ
ಹುಡಿಯೊಳಗೆ ಹೊರಳೆ ಹಲು ಬೀಳೆ ಬಾಯೊಡೆಯೆ ಮೆಯ್ ನೋಯೆ ಕಯ್ಯಳುಕೆ ಮೀಱಿ
ನಡೆದಲ್ಲಿ ನಡೆದು ಹೊಕ್ಕಲ್ಲಿ ಹೊಕ್ಕೋಡಿ ಹೋ
ದೆಡೆಗೆ ಬೆನ್ನಟ್ಟಿ ರುಧಿರಂ ಬಸಿಯೆ ಹೊಯ್ದು ಹೊಗ
ರುಡುಗಲರಸಂ ತಿರುಗಲತ್ತಲವರೊಱಲುತ್ತ ಹರಿದರಾ ಮುನಿಪನೆಡೆಗೆ         ೨೫

ಬಿಡುಮುಡಿಯ ಸುರಿವ ಕಂಬನಿವೊನಲ ಕಳೆದೆಳಲು
ವುಡುಗೆಗಳ ಬೆನ್ನೊಡೆದು ಹರಿವ ರಕುತದ ಹೊಯ್ವ
ಕುಡಿಯಳ್ಳೆಗಳ ಹರಿವ ಕಾಲುಗಳ ಮರಳಿ ನೋಡುವ ಹೆದಱುಗಣ್ಣ ತೃಣವ
ತುಡುಕಿ ನೆಗಹಿದ ಕಯ್ಯ ನಿಷ್ಕಾರಣಂ ನೃಪತಿ
ಹೊಡೆದನೆಲೆ ಕೌಶಿಕಮುನೀಂದ್ರ ಮೊಱೆಯೋ ಎಂಬ
ನಿಡುಸರದ ಮಡದಿಯರ ದನಿಯನಾಲಿಸಿ ಪರ್ಣಶಾಲೆಯಂ ಪೊಱಮಟ್ಟನು   ೨೬

ಆರ ಮನೆಯವರೆಂದು ಕೇಳ್ದಡೆರಡನೆಯ ಪುರ
ವೈರಿ ವಿಶ್ವಾಮಿತ್ರಮುನಿಯ ಮನೆಯವರೆಂದ
ಡಾ ರಾಯನೆದ್ದು ಕಯ್ಯಾಱೆ ಸದೆಬಡಿದನೆಮ್ಮಂ ನಿರಪರಾಧಿಗಳನು
ಕಾರುಣ್ಯ ಚಿತ್ತದಿಂ ಕಳುಹಿ ಕೊಲಿಸಿದೆ ತಂದೆ
ವೋರಂತೆ ಕೇಳೆಂದು ಪೇಳೆ ಕೇಳ್ದೆನ್ನಯ ಮ
ನೋರಥಂ ಕೈಸಾರ್ದುದಳಲಬೇಡೆಂದು ಕೋಪಾಟೋಪದಿಂ ಹರಿದನು         ೨೭