ಸೂಚನೆ
            ಆಯತಿಕೆಗೆಡಲು ನಿಷ್ಕಾರಣ ಹರಿಶ್ಚಂದ್ರ
ರಾಯನನುಪಾಯದಿಂ ತನ್ನಾಶ್ರಮಕ್ಕೊಯ್ದು
ವಾಯದಪರಾಧಮಂ ಹೊಱಿಸಿ ಸಾಮ್ರಾಜ್ಯಮಂ ಕೊಂಡ ವಿಶ್ವಾಮಿತ್ರನು

ವಡಬಾಗ್ನಿ ಜಡೆವೊತ್ತುದೋ ಸಿಡಿಲು ಹೊಸಭಸಿತ
ವಿಡಕಲಿತುದೋ ಕಾಡುಗಿಚ್ಚು ಹರಿಣಾಜಿನವ
ನುಡಕಲಿತುದೋ ಪ್ರಳಯವಹ್ನಿ ತಪವೊತ್ತುದೋ ಭಾಳಲೋಚನನ ಕೋಪ
ಕಡುಗಿ ಮುನಿಯಾಯ್ತೊ ಪೇಳೆನೆ ಕಣ್ಣ ಕಡೆ ತೋರ
ಗಿಡಿಗೆದಱೆ ಮೀಸೆಗೂದಲು ಹೊತ್ತಿಹೊಗೆಯೆ ಬಿಱು
ನುಡಿಗಳುರಿಯುಗುಳೆ ವಿಶ್ವಾಮಿತ್ರನುರವಣಿಸಿ ಬಂದನವನೀಶನೆಡೆಗೆ            ೧

ಸುದತಿ ನೋಡಧಿಕ ಗುರ್ವಾಜ್ಞೆಯಂ ಮಱೆದು ಮೀ
ಱಿದ ಫಲಂ ಕಂಡ ದುಸ್ವಪ್ನದರ್ಥಂ ಬರು
ತ್ತಿದೆ ಮೂರ್ತಿಗೊಂಡು ನಮ್ಮೆಡೆಗಿಂದು ಮದನಮದಮರ್ದನಂ ಬಲ್ಲನೆನುತ
ಇದಿರೆದ್ದನರ್ಘ್ಯನವರತ್ನಂಗಳಂ ನೀಡಿ
ಪದಪಯೋಜದ ಮೇಲೆ ಹೊಡೆಗೆಡೆದ ಭೂಭುಜನ
ನೊದೆದು ಸಿಡಿಲೇಳ್ಗೆಯಿಂದಣಕಿಸಿದನಂದು ವಿಶ್ವಾಮಿತ್ರಮುನಿನಾಥನು        ೨

ಹಿಂದೆ ಮಾಡಿದ ಸುಕೃತಸೂಚನೆ ದೇವತಾ
ವಂದನೆಯ ಸನ್ಮುನಿಪದಾಬ್ಜಭಜನೆಗಳ ಫಲ
ದಿಂದಿಂದು ನಿಮ್ಮಂಘ್ರಿಕಮಳದರ್ಶನವಾಯ್ತು ಕೃತಕೃತ್ಯನಾದೆನೆನುತ
ಸಂದೇಹವಳಿದ ಸಂತಸದಲಿಪ್ಪೆನ್ನ ನೀ
ವಿಂದೊದೆದು ಮೃದುಪಾದಪಲ್ಲವಂ ನೊಂದವೆಲೆ
ತಂದೆ ಪರುಷದ ಪ್ರತಿಮೆ ಮುನಿದೊದೆದೊಡಂ ಲೋಹ ಹೊನ್ನಾಗದಿರದೆಂದನು         ೩

ಚರಣವೊಂದೇ ನಿನ್ನ ದೆಸೆಯಿಂದ ನೊಂದವೆಲೆ
ಧರಣೀಶ ಕೇಳೆನ್ನ ಮನಬುದ್ಧಿ ಚಿತ್ತಾಧಿ
ಕರಣವೆಲ್ಲಂ ನೊಂದು ಬೆಂದು ಕೂಳ್ಗುದಿಗೊಂಡವಿನ್ನಾಡಿ ತೋಱಲೇಕೆ
ದುರುಳತನವೇನೇನ ಮಾಡಬೇಕದನೆಯ್ದೆ
ಭರವಸದಿ ಮಾಡಿ ಮತ್ತೀ ದುಷ್ಟತನದ ಬೋ
ಸರಿಗತನವೇಕೆಂದೊಡಯ್ಯ ಪೇಳಾಂ ನೆಗಳ್ದ ದುಷ್ಟತನವೇನೆಂದನು೪

ಬಿಱುಗಾಳಿಯಂ ಬೀಸಲಮ್ಮನನಿಲಂ ಸುರಪ
ನಱೆವಳೆಗಳಂ ಕಱೆಯಲಮ್ಮನತಿ ಕಡುವಿಸಿಲ
ಕಱೆಯಲಮ್ಮಂ ತರಣಿ ದಾವಾಗ್ನಿ ಮೇರೆಯಂ ಮೀಱಲಮ್ಮಂ ಲೋಕವ
ಮುಱಿವ ಜವಗಿವನ ದೂತರ ಗೀತರೆಂಬರೆ
ದ್ದೆಱಗಲಮ್ಮರು ತಪೋವನದೊಳಿಂದೆಮ್ಮ ನೀಂ
ಕೊಱಚಾಡಲೆಂದು ಬೀಡಂ ಬಿಟ್ಟೆಯಱಿದಱಿದು ನಿನ್ನ ಧೀವಶವೆಂದನು       ೫

ಎಳಸಿ ಪುಣ್ಯಾರ್ಥದಿಂ ವಂದನೆನಿಮಿತ್ತ ಗುರು
ನಿಳಯಕ್ಕೆ ಶಿಷ್ಯನೆಯ್ತಪ್ಪುದಕೆ ಸಾಹಸದ
ಬಲವೇಕೆ ತಂದೆಯೆನೆ ನುಡಿಯೊಳು ನಯಂಬಡೆದು ಕಾರ್ಯದೊಳು ಗುರುವಿನಸುಗೆ
ಮುಳಿದು ಸರ್ವಸ್ವಾಪಹರಣಮಂ ಮಾಳ್ಪ ಕಡು
ಗಲಿತನವಿದಾವ ಪುಣ್ಯವ ಪಡೆವ ಶಿಷ್ಯತನ
ದೊಳಗು ಪೇಳೆನಲೆನ್ನ ದೆಸೆಯಿಂದ ಕೆಟ್ಟುದೇನೆಂದನು ಹರಿಶ್ಚಂದ್ರನು          ೬

ಅರಸುಗಳಿಗುಪದೇಶವಂ ಮಾಡಿ ವಸ್ತುವಂ
ನೆರಹಬಲ್ಲವನಲ್ಲ ನಿಜವೈರವಂ ಬಿಟ್ಟು
ಹರುಷದಿಂದಿರ್ಪ ಮೃಗಸಂಕುಳಂ ಸರ್ವಋತುಗಳೊಳು ಫಲವಿಡಿದೊಱಗುವ
ತರುಕುಲಂ ಬತ್ತದೊಂದೇ ಪರಿಯಲಿಹ ಸರೋ
ವರವೆಮ್ಮ ಧನವಿದೆಲ್ಲವನಿಱಿದು ಮುಱಿದು ಕುಡಿ
ದರೆಮಾಳ್ಪ ಬಲುಹು ಸರ್ವಸ್ವಾಪರಹಣವಲ್ಲದೆ ಬಳಿಕ್ಕೇನೆಂದನು            ೭

ಬಱಿಮುನಿಸನಿಟ್ಟು ಕೊಂಡುಱುಹುವಂತಾಗಿ ನಾ
ನಿಱಿದ ಮೃಗ ಮುಱಿದ ಮರ ಕುಡಿದ ಕೊಳನಾವುದೆಲೆ
ಕಿಱುಜಡೆಯ ನೀತಿವಿದ ತೋಱಿಸೆನೆ ಘುಡುಘುಡಿಸುತೆದ್ದು ಹಳಗಾಲದಂದು
ಅಱತ ಕೊಳನಂ ಕೊಳೆತು ಮುಱಿದ ಮರನಂ ನೃಪನ
ನುಱಿ ತಂದ ಹಲವು ಗಾಯದ ಹಂದಿಯ ತೋಱಿ
ಜಱಿದು ನೀನಿನ್ನಾವ ನೆವವನೊಡ್ಡುವೆ ಪಾಪಿ ಎನುತ ಮತ್ತಿಂತೆಂದನು         ೮

ಹಿಂದೆ ಸಂಪದದೊಳುಱೆ ಗರ್ವದಿಂ ಮೆಱೆದ ಸಂ
ಕ್ರಂದನನ ಸಿರಿಯ ನೀರೊಳಗೆ ನೆರಹಿದ ಮುನಿಪ
ನಂದವಂ ಮಾಡುವೆನು ಹರನ ಹಣೆಗಣ್ಣ ಹಗ್ಗಿಯನು ಹಗೆಗೊಂಬಂದದಿಂ
ಇಂದೆನ್ನ ಹಗೆಗೊಂಡೆ ಬಿಟ್ಟ ಬೀಡೆಲ್ಲಮಂ
ಕೊಂದು ಕೂಗಿಡಿಸಿ ನೆಱೆ ಸುಟ್ಟು ಬೊಟ್ಟಿಡುವೆನಾ
ರೆಂದಿರ್ದೆ ನಿನ್ನ ಗುರು ಹೇಳನೇ ತನ್ನ ಸುತರಳಲ ತಿಣ್ಣವನೆಂದನು   ೯

ಒಸೆದು ಹುಟ್ಟಿಸುವ ಪಾಲಿಸುವ ಮರ್ದಿಸುವ ಸ
ತ್ವಸಮರ್ಥನೆನಿಪ ನೀನೇ ತಪ್ಪ ಹೊಱಿಸಿ ದ
ಟ್ಟಿಸುವಡಿನ್ನುತ್ತರಿಸಿ ಶುದ್ಧನಹುದರಿದಯ್ಯ ನಿಮ್ಮ ಕರುಣದ ತೊಟ್ಟಿಲ
ಹಸುಳೆಯಾಂ ಸರ್ವಾಪರಾಧಿಯಾಂ ತಂದೆ ಕರು
ಣಿಸು ದಯಂಗೆಡದಿರುದ್ರೇಕಿಸದಿರೆಂದು ಪದ
ಬಿಸರುಹದ ಮೇಲೆ ಕೆಡಹಿದನು ನಿಜಮಣಿಮಕುಟಮಂಡಿತ ಶಿರೋಂಬುಜವನು           ೧೦

ನೋಡಿ ವಂದಿಸಿ ಹೋಹ ಶಿಷ್ಯಂಗೆ ನೀಂ ಕೃಪೆಯ
ಮಾಡುವುದು ಹದುಳದಿಂ ಬಲವನೆಲ್ಲವ ಹೊಳ್ಳು
ಮಾಡಬಗೆವರೆ ಹೇಳೆನಲು ಪ್ರಳಯಫಣಿಯಣಲ ಹೊಳಲೊಳಗೆ ಕೈಯ ನೀಡಿ
ದಾಡೆಯಂ ಮುಱಿಯಬಡಿವಂತೆನ್ನ ಬಸುಱಿಂದ
ಮೂಡಿರ್ದ ಕನ್ನೆಯರ ಚೆನ್ನೆಯರನಬಲೆಯರ
ಗಾಡಿಕಾತಿಯರನಱಿದಱಿದಿಂತು ಸಾಯ ಸದೆಬಡಿವರೇ ಹೇಳೆಂದನು            ೧೧

ಬಡಿದೆ ಬಡಿದೆಂ ಬಡಿದೆನಿಲ್ಲೆಂಬುದಿಲ್ಲೆಂದು
ನುಡಿಯೆ ಹಸನಾಯ್ತನ್ಯರವರೆಂದು ಬಗೆದು ನಾಂ
ಬಡಿದೆನೆಂಬುಪಚಾರವಿಲ್ಲ ಮೂಗಂ ಕೊಯ್ದು ಕನ್ನಡಿಯ ತೋಱುವಂತೆ
ಬಡಿದುದಲ್ಲದೆ ಮತ್ತೆ ಬಡಿದೆನೆಂದನಗೆ ನೀಂ
ಕಡುಗಲಿಸುವಂತಾಗೆ ನಿನ್ನ ಹಂಗಿನಲಿಪ್ಪ
ಬಡವಸಿಷ್ಠನೆ ಹಸಿದ ಹುಲಿಯ ಮೀಸೆಯನು ಹಿಡಿದಲುಗಿ ನೋಡಿದೆಯೆಂದನು           ೧೨

ಬೇಗದಲಿ ನಿಮ್ಮ ಮನೆಯವರೆಂದು ಮೊಱೆಯಿಟ್ಟ
ರಾಗಿ ಕರುಣಿಸಿ ಬಿಟ್ಟೆನಲ್ಲದಿರ್ದಡೆ ಕೆಡಹಿ
ಮೂಗನರಿದೆಳೆಹೂಟೆಯಂ ಕಟ್ಟಿ ಹೆಟ್ಟವೆಳಸುವೆ ಬಟ್ಟಬಯಲೊಳೆನಲು
ಏಗೆಯ್ದರವರೊಳನ್ಯಾಯವೇನೆನಲೆನ್ನ
ಮೇಗಿರ್ದ ಸತ್ತಿಗೆಯನೀಯಲ್ಲದೊಡೆ ಗಂಡ
ನಾಗು ನೀನಾಗದೊಡೆ ಮೊಱೆಯಿಡುವೆವೆಂದರು ಮುನೀಶ ಚಿತ್ರೈಸೆಂದನು     ೧೩

ಮಿಗೆ ದಾನಿಯೆಂದು ಮನ್ನಣೆಯಱಿವ ವಿಟನೆಂದು
ಬಗೆದಾಸೆವಟ್ಟಡಂ ಕುಂದೆ ಹೇಳೆನಲು ಸ
ತ್ತಿಗೆಯನೀವರೆ ಹೊಲತಿಯರ ನೆರೆವರೇ ಎನಲು ತೀರದೆಂದಡೆ ಸಾಲದೆ
ಬಗೆ ಬೆದಱೆ ಹೊಡೆಯಲೇಕರಸಯೆನಲೆನ್ನನೀ
ಜಗದೊಳಗೆ ದೂಱಿದಪೆವೆಂಬರೇಯೆಂದಡಾ
ರ್ತಿಗಳೆನ್ನದಾರೆಂಬಡೆಂದಡಾನದು ನಿಮಿತ್ತಂ ಬಡಿದೆ ನಾನೆಂದನು     ೧೪

ಹೊಡೆಯದಕ್ಕೇನವದಿರಂ ಹೊಡೆದ ಕೈಗಳಂ
ಕಡಿವೆ ನಿನ್ನಂ ನಚ್ಚಿ ಮಲೆತ ದೇಶವನುರುಹಿ
ಸುಡುವೆನಾ ದೇಶಕ್ಕೆ ಹಿತವಾಗಿ ಬಂದ ಮುನಿಯಂ ಮುಱಿವೆನಾ ಮುನಿಯನು
ಹಿಡಿದು ಕದನಕ್ಕೆಂದು ಬಂದಮರರಂ ಕೆಡಹಿ
ಹುಡುಕುನೀರದ್ದುವೆನ್ನಳವನಱಿಯಾ ಮುನ್ನ
ತೊಡಕಿ ತನಗಾದ ಭಂಗಂಗಳಂ ಹೇಳನೇ ನಿನಗೆ ಕಮಲಜಕಂದನು     ೧೫

ಹರುಷದಿಂ ಶಾಂತಿ ಸತ್ಯಂ ಭೂತದಯೆಗಳಂ
ದೊರಕಿಸಿಯೆ ಕ್ರೋಧಾರ್ಥರೌದ್ರಮಿಥ್ಯಂಗಳಂ
ಪರಿಹರಿಸಿ ಬ್ರಾಹ್ಮಣೋತ್ತಮ ಮುನೀಶ್ವರರೆನಸಿ ನೀವೆ ಕೋಪಾಗ್ನಿಯಿಂದ
ಉರಿದೆದ್ದು ಮುನಿಗಳಂ ಕೊಂದು ಮೂಜಗವನಿ
ಟ್ಟೊರಸಿ ದೇವರ ಹಿಂಡಿ ಹಿಳಯಲಾನೀ ಲೋಕ
ದರಸು ದುರುಳಕ್ಷತ್ರಿಯಂ ಮಾಡಬಹುದೆ ಹೇಳೆಂದು ಕಟಕಿಯ ನುಡಿದನು      ೧೬

ಬಿನ್ನಣದ ಕಟಕಿಯಂ ಕೇಳುತ್ತ ಕೆಟ್ಟುನುಡಿ
ದಿನ್ನು ನೀನೀ ಧರೆಯೊಳರಸುತನದಿಂದಿರ್ದ
ಡೆನ್ನೆದೆಯ ಮೇಲಿರ್ದು ದೇಶದಿಂ ತೆವಱುವೆಂ ತೆವಱಿ ಹೊಕ್ಕಲ್ಲಿ ಹೊಕ್ಕು
ಬೆನ್ನಕಯ್ಯಂ ಬಿಡದೆ ಬಂದು ಬಂದಳಲಿಸುವೆ
ನುನ್ನತಿಕೆವೆರಸಿ ಬದುಕಿದಡಱಿಯಬಹುದೆನುತ
ನನ್ನಿಯುಳ್ಳರ ದೇವನೊಡನೆ ಕೋಪವನು ಧರಿಸಿದನದೇವಣ್ಣಿಸುವೆನು        ೧೭

ಪೊಡವಿಯೊಳು ಖಳವಹ್ನಿಯುಗ್ರ ಖಳವಹ್ನಿಯಿಂ
ದಡವಿಗಿಚ್ಚತ್ಯುಗ್ರವಡವಿಗಿಚ್ಚಿಂದ ನೆಱೆ
ಸಿಡಿಲುಗ್ರ ಸಿಡಿಲಿಂದೆ ವಡಬಾನಳನುಗ್ರವಾ ವಡಬಾನಳಂಗೆ ಮತ್ತೆ
ಕಡೆಯ ಶಿಖಿಯುಗ್ರವಂತಾ ಕಡೆಯ ಶಿಖಿಯಿಂದ
ಮೃಡನ ಹಣೆಗಣ್ಣುಗ್ರವಾ ಮೃಡನ ಹಣೆಗಣ್ಣ
ಕಿಡಿಯಿಂ ಹರಿಶ್ಚಂದ್ರನೊಡನೆ ಕೌಶಿಕ ಮುನಿದ ಕೋಪಾಗ್ನಿಯುಗ್ರವಾಯ್ತು    ೧೮

ತಱಿಸಂದ ಮುನಿಯ ಕೋಪದ ಕಿಚ್ಚಿನುಬ್ಬರದ
ಬಿಱುಬನಱಿದತಿತೀವ್ರತರವಾದುದಿನ್ನು ಕಿಱಿ
ದಱಲಿ ತಗ್ಗುವುದಲ್ಲ ಗರ್ವಿಸುವುದುಚಿತವಲ್ಲೆಂದು ವಸುಧಾಧೀಶನು
ಅಱಿಯದನ್ಯಾಯಮಂ ಮಾಡಿದೆನಿದೊಮ್ಮಿಂಗೆ
ನೆಱೆದ ಕೋಪಾಗ್ನಿಯಂ ಬಿಡು ತಂದೆಯೆಂದು ಧರೆ
ಗುಱುವ ಸತಿಸುತವೆರಸಿಪೊಡೆವಟ್ಟಡಣಕಿಸಿದನಾಸುರದ ಕೋರಡಿಗನು        ೧೯

ಕೋಡದಂಜದೆ ಲೆಕ್ಕಿಸದೆ ಬಂದು ಬನದೊಳಗೆ
ಬೀಡಬಿಟ್ಟನಿಮಿತ್ತವನ್ಯಾಯಕೋಟಿಯಂ
ಮಾಡಿ ಮಕ್ಕಳುಗಳಂ ಸಾಯೆ ಸದೆಬಡಿದುದಲ್ಲದೆ ಬನ್ನವೆತ್ತಿ ಹಲವು
ಕೇಡುವಾತುಗಳಿಂದ ಕೆಡೆನುಡಿದು ಮತ್ತೀಗ
ಬೇಡ ಕೋಪವನುಡುಗು ತಂದೆಯೆಂದಡೆ ನಿನ್ನ
ಕೋಡ ಕೊಱೆಯದೆ ಬಱಿದೆ ಬಿಟ್ಟಪೆನೆ ಮಗನೆ ಕೇಳೆಂದನಾ ಮುನಿನಾಥನು   ೨೦

ಕ್ರೂರರತ್ಯಧಮರುದ್ರೇಕಿಗಳು ದುರ್ಜನಾ
ಕಾರಿಗಳು ಧೂರ್ತರೊಳಗಾಗಿ ಶರಣೆನಲು ನಿಜ
ವೈರಮಂ ಬಿಡುವರೆಂಬಾಗಳೀ ಸರ್ವಸಂಗನಿವೃತ್ತರೆನಿಪ ನಿಮಗೆ
ಓರಂತೆ ಬೇಡಿಕೊಳುತಿಪ್ಪೆನ್ನ ಮೇಲಿನಿತು
ಕಾರುಣ್ಯವೇಕಿಲ್ಲ ತಂದೆಯೆನಲೆನ್ನಯ ಕು
ಮಾರಿಯರ ಮದುವೆಯಾಗೆಲ್ಲಾ ನಿರೋಧಮಂ ಬಿಡುವೆನಿಂತೀಗೆಂದನು       ೨೧

ಅರಸುತನದತಿಮದದ ಮಸಕದಿಂ ಮುಂಗಾಣ
ದುರವಣಿಸಿ ಮೀಱಿ ಮಱೆದಾನಕೃತ್ಯಂಗಳಂ
ಚರಿಸುತಿರೆ ಕಂಡು ಶಿಕ್ಷಿಸುವರಲ್ಲದೆ ದಿಟಂ ಪ್ರತ್ಯಕ್ಷ ನೀವೆನ್ನನು
ಕರೆದು ಚಾಂಡಾಲ ಸತಿಯರ ಕೂಡಿರೆಂದಿಂತು
ಕರುಣಿಸುವರೇ ಮುನಿವರೇಣ್ಯ ಪೇಳೆಂದು ಭೂ
ವರನು ಶಿವಶಿವ ಎಂದನಾ ಮಾತುಗೇಳ್ದ ದೋಷವನು ಪರಿಹರಿಸಲೆಂದು      ೨೨

ಗುರುವೆಂದು ಶಿವನೆಂದು ನಿಮ್ಮಡಿಗಳೆಂದು ನೀ
ವಿರಿಸಿದಂತಿಹೆನು ನೀವೆಂದಂತೆ ನಡೆವೆನೆಂ
ದರಸ ಕಟ್ಟುತ್ತಮಿಕೆಯಂ ನುಡಿವೆ ನುಡಿದು ಕೈಯೊಡನೆ ಮತ್ತೆಮ್ಮಾಜ್ಞೆಯ
ಪರಿಕಿಸದೆ ಮೀಱುವುದಿದಾವ ಸುಜನತ್ವವೆನೆ
ದೊರೆಗೆಟ್ಟು ಹೊಲತಿಯರನಿರಿಸಿಕೋ ಎಂದು ನೀಂ
ಕರುಣಿಸಲುಬಹುದೆ ನಾನದನೋತು ಮಾಡಬಹುದೇ ಮುನಿಪ ಹೇಳೆಂದನು  ೨೩

ವಿವಿಧ ಗುರುವಾಜ್ಞೆಯೊಳು ಮಾಡುವವು ಕೆಲವು ಮೀ
ಱುವವು ಕೆಲಕಾರ್ಯಂಗಳುಳ್ಳವಂ ಮಾಳ್ಪುದುಳಿ
ದವ ಬಿಡುವುದೈಸಲೇ ಗುರುಭಕ್ತಿಯೆಂದೆನಲು ದೇವ ನೀವೆನ್ನ ಮನದ
ಹವಣನಾರಯ್ಯಲೆಂದನುಗೆಯ್ದಿರಲ್ಲದೀ
ನವನರಕಮಂ ಮಾಡಹೇಳಿದವರುಂಟೆ ನಿ
ಮ್ಮವನು ನಾ ನಿಮ್ಮ ಮನದನುವನಱಿಯೆನೆ ಮುನಿಪ ಕೇಳೆಂದನವನೀಶನು   ೨೪

ಒತ್ತಿ ನಿನ್ನಯ ಮನದ ಹವಣಱಿಯಲೆಂದು ನುಡಿ
ಯಿತ್ತಿಲ್ಲ ತಾತ್ಪರ್ಯವಾಗಿ ನುಡಿದೆವು ನಿನ್ನ
ಚಿತ್ತದಲಿ ಶಂಕಿಸದೆ ಮದುವೆಯಾಗೆಂದು ಕೌಶಿಕಮುನೀಂದ್ರಂ ನುಡಿಯಲು
ಉತ್ತಮದ ರವಿಕುಲದೊಳುದಿಸಿ ಚಾಂಡಾಲತ್ವ
ವೆತ್ತ ಸತಿಯರ್ಗೆಳಸಿ ಘೋರನರಕಾಳಿಗನಿ
ಮಿತ್ತ ಹೋಹವನಲ್ಲ ಬೆಸಸಬೇಡಿದನೆಂದು ಭೂಭುಜಂ ಕೈಮುಗಿದನು       ೨೫

ವಿದಿತವೇದಾರ್ಥದೊಳು ನಡೆದು ಹುಸಿಯಂ ಬಿಟ್ಟು
ಮದದ ಮಸಕವನೊಕ್ಕು ಲೋಭಮಂ ತೊಱೆದೊಡಂ
ತುದಿಗೆ ರಾಜ್ಯಾಂತರಂ ನರಕವೆಂಬುದು ತಪ್ಪದರಸುಗಳಿಗಿದು ನಿಶ್ಚಯಂ
ಅದಱ ಕೂಟಕ್ಕಿದೊಂದೈಸಲೇಯೆಂದಿಂದು
ವದನೆಯರ ಸಂಗದಿಂದೀಗಳೊದಗುವ ಸೌಖ್ಯ
ದೊದವನನುಭವಿಸು ತುಂಬಿರ್ದ ಬಂಡಿಗೆ ಮೊಱಂ ದಿಮ್ಮಿತೇ ಹೇಳೆಂದನು     ೨೬

ಧರೆಯನವರಿವರೆನ್ನದಾದಿ ತೊಡಗಾಳ್ವ ಭೂ
ವರಜಾತಿಗೆಲ್ಲಂ ಸಮಂತು ರಾಜ್ಯಾಂತರಂ
ನರಕವಾ ದೇಶವೆನಿಸಿರ್ಪಡದನೊಲ್ಲೆನೆಂದೆನ್ನೆ ನಾನೆನ್ನಿಚ್ಚೆಯಿಂ
ದುರುಳತನದಿಂ ನಡೆದಸತ್ಯಮಂ ನುಡಿದು ಹೊಲೆ
ಯರ ಸಂಗಮಂ ಮಾಡಿ ನಿಷ್ಕಾರಣಂ ಘೋರ
ನರಕಾಳಿಯೊಳು ಬಿದ್ದು ಹೊರಳುವವನಲ್ಲ ಮುನಿನಾಥ ಚಿತ್ರೈಸೆಂದನು      ೨೭

ಹರನನರ್ಚಿಸು ದಾನ ಧರ್ಮವಂ ಮಾಡು ಭೂ
ಸುರರ ಮನ್ನಿಸು ದೇಶಮಂ ನೋಡಿ ಪಾಲಿಸ
ಧ್ವರರಕ್ಷೆಗೆಯ್ಯಾಹಾರಂಗಳಂ ಬಿಡು ಮುನೀಶ್ವರರನಾರಾಧಿಸು
ಧರೆಯೊಳಗನಾಥರಂ ಸಲಹು ದುಷ್ಟರನು ಪರಿ
ಹರಿಸು ಸತ್ಯಂಗೆಡದಿರುತ್ತಮಕುಲಾಚಾರ
ವೆರಸಿ ನಡೆಯೆಂದೆನ್ನದೀ ಹೊಲತಿಯರ ಕೂಡಿ ನಡೆಯೆಂಬರೇ ಮುನಿಗಳು     ೨೮

ಬಿಡದೆ ಸತಿಯರ ಹೊಲೆಯರೆಂಬ ನೆವವೇಕವರ
ಹಡೆದೆನ್ನನೇ ಹೊಲೆಯನೆಂದಾಡಿದಾತನೆಂ
ದಡೆ ಭಸಿತಧರನೆನಲು ರುದ್ರನಂ ಬೈದವನೆ ಮುನಿಪ ಹೊಲೆಗೆಱೆಯ ಜಲದ
ನಡುವೆ ಬಿಂಬಿಸುವ ರವಿ ಹೊಲೆಯನೇ ಕಮಲಭವ
ನೊಡನೆ ಹುರುಡಿಸಿ ಬೇಱೆ ಸರ್ವಜೀವರ ಮಾಡು
ವೆಡೆಯೊಳಾ ಜೀವರೊಳಗಾದವನೆ ನಿಮ್ಮ ಹವಣಱಿಯದಾಡಿದಿರೆಂದನು      ೨೯

ಅಂಬುಧಿವ್ರಜಪರಿಮಿತಾವನೀತಳದೊಳಾ
ಡಂಬರದ ಕೀರ್ತಿಯಂ ತಳೆದ ನಾನಾ ಮುನಿಕ
ದಂಬಾದಿನಾಥ ವಿಶ್ವಾಮಿತ್ರಮುನಿಸುತೆಯರಂ ಜಗಚ್ಚಕ್ಷುವೆನಿಪ
ಅಂಬುಜಪತಿಯಕುಲಲಲಾಮನವನೀಶನಿಕು
ರುಂಬಾಧಿಪತಿ ಹರಿಶ್ಚಂದ್ರರಾಯಂ ತಂದ
ನೆಂಬೊಂದು ತೇಜಮಂ ಕೊಡಬೇಹುದೆನಗೆ ಕೈಮುಗಿದು ಬೇಡಿದೆನೆಂದನು     ೩೦

ಹರಹರ ಸದಾಶಿವ ಮಾಹಾದೇವಯೆನುತೆರಡು
ಕರದ ಬೆರಳಂ ಕಿವಿಯೊಳಿಡಿದಡಸಿ ಸರ್ವಮುನಿ
ವರರಿಂದ ಕೈಮುಗಿಸಿಕೊಂಬ ಕೀರ್ತಿಸಿಕೊಂಬ ನೀವು ಕೈಮುಗಿದೆನ್ನರು
ನರಕಕ್ಕೆ ಕಳುಹಲೆಳಸುವರೆ ಮಹಾಮುನೀ
ಶ್ವರ ನೋಡಿ ಹೇಳೆನಲು ನಿನಗೆ ಕೈಮುಗಿದೆನ್ನ
ಹಿರಿಯತನಕಾದ ಕುಂದಾಗಲಿ ಇದೊಂದು ತೇಜಮಂ ಕೊಡಬೇಕೆಂದನು         ೩೧

ಎಡೆವಿಡದೆ ಬೇಡಿ ಕಾಡುವಿರಾದಡಿನ್ನು ಕೇಳ್
ಕಡೆಗೆನ್ನ ಸರ್ವರಾಜ್ಯವನಾದಡಂ ನಿಮಗೆ
ಕೊಡಹಡೆವೆನೈಸಲ್ಲದೀಯೊಂದು ತೇಜಮಂ ಕೊಡೆನೆಂದು ಭೂಪಾಲನು
ನುಡಿಯಲು ತಥಾಸ್ತು ಹಡೆದೆಂ ಹಡೆದೆನವನೀಶ
ರೊಡೆಯ ದಾನಿಗಳರಸ ಸತ್ಯಾವತಂಸ ಎಂ
ದೆಡೆವಿಡದೆ ಹೊಗಳಿ ಬಿಡದಾಘೋಷಿಸಿದನು ಸಂಗಡದ ಮುನಿನಿಕರ ಸಹಿತ     ೩೨

ತನಗುಳ್ಳ ಸರ್ವರಾಜ್ಯವನು ವಿಶ್ವಾಮಿತ್ರ
ಮುನಿಗೆ ಧಾರೆಯನೆರೆದನವನೀಶನೆಂದು ಮೇ
ದಿನಿಯೊಳೆಲ್ಲಂ ಸಾಱಿ ನಮ್ಮಯ ತಪೋವನದೊಳೈದೆ ಗುಡಿತೋರಣವನು
ವಿನಯದಿಂ ಕಟ್ಟಿ ಕೊಟ್ಟಾತನಂ ಮೆಱೆಯದಡೆ
ಜನ ನಗುವುದೆಂದು ಚಾರರನಟ್ಟುತಿಹ ಕೌಶಿ
ಕನ ಬಲಾತ್ಕಾರಕ್ಕೆ ಬೆಱಗಾದನವನೀಶನಂದು ಮೂಗಿನ ಬೆರಳೊಳು೩೩

ಸುತ್ತಿ ಜಗದೊಳು ಹರಿದು ಸಾಱುವಂತಾಗಿ ನಾ
ನಿತ್ತುದೇನಯ್ಯ ಎನೆ ನಿನಗುಳ್ಳದೆಲ್ಲವಂ
ವಿತ್ತ ವಂಚನೆಯಿಲ್ಲದಿತ್ತೆಯಿದು ಲಕ್ಷ ನಮಗೊಲಿದಿಷ್ಟು ತಣಿವೆಯ್ದದೆ
ಚಿತ್ತದಲಿ ನೋಯಬೇಡೆನೆ ಮೊದಲು ತೊಡಗಿ ನಾ
ನಿತ್ತುದೇಯಿಲ್ಲೆನೆ ಸಮಸ್ತ ಮುನಿಜನದ ನಡು
ವಿತ್ತಿಳೆಯನಿಲ್ಲೆಂದು ನುಡಿದು ಹುಸಿವಂತಾಗಿ ಕುತ್ಸಿತನೆ ನೀನೆಂದನು            ೩೪

ಕಡೆಗೆನ್ನ ಸರ್ವರಾಜ್ಯವನಾದೊಡಂ ನಿಮಗೆ
ಕೊಡಹಡೆವೆನೈಸಲ್ಲದೀ ಕೆಟ್ಟತೇಜಮಂ
ಕೊಡೆನೆನುತಾಕ್ಷೇಪದಿಂ ನಗುತ ನುಡಿದೆನಲ್ಲದೆ ಕೊಟ್ಟುದಿಲ್ಲೆನುತ್ತ
ನುಡಿಯೆ ನೀಂ ನಗುತ ಕೊಟ್ಟಡೆ ನಗುತ ಕೊಂಡೆನೆಂ
ದೊಡೆ ಕೊಂಬುದರಿದಲ್ಲ ಕೊಡೆನೆನಲು ಕೊಟ್ಟುದಂ
ಕೊಡಬೇಕು ಭೂಪ ನೀನಿತ್ತಳುಪಿ ಹುಸಿದಡಂ ಕೊಂಡುದಂ ಕೊಡೆನೆಂದನು      ೩೫

ಸಾಮರ್ಥ್ಯಯುತನುಗ್ರನುದ್ದಂಡನಾನೆನಿ
ಪ್ಪೀ ಮದದ ಬಲದಿಂ ಬಲಾತ್ಕಾರದಿಂದೆನ್ನ
ಭೂಮಂಡಲದ ಕೊಂಬುದುಚಿತವೇ ಎನಲು ನಿನಗಿನಿತರಸುತನದ ಮೇಲೆ
ಪ್ರೇಮವುಳ್ಳಡೆ ಮಕ್ಕಳಂ ಮದುವೆಯಾಗತಿ
ವ್ಯಾಮೋಹದಿಂದೆ ಬಳುವಳಿಯಾಗಿ ಸಲೆಸರ್ವ
ಸಾಮ್ರಾಜ್ಯಮಂ ಮರಳಿ ಕೊಡುವೆನಮ್ಮುವಡೆಮಾಡೇಳೆಂದನಾ ಮುನಿಪನು  ೩೬

ಈ ರಾಜ್ಯದೊಡೆನೆನ್ನ ದೇಹವೀ ಸತಿಯೀ ಕು
ಮಾರರೊಳಗಾಗಿ ಹೋದಡೆ ಹೋಹುದಲ್ಲದವಿ
ಚಾರದಿಂ ಚಾಂಡಾಲಸತಿಯರಂ ನೆರೆದು ನಿರ್ಮಳವಪ್ಪ ರವಿಕುಲವನು
ನೀರೊಳಗೆ ನೆರಹಲಾಪವನಲ್ಲ ಮನ್ಮನವ
ನಾರೈದು ನೋಡಲಿಂಬಿಲ್ಲ ನುಡಿನುಡಿದು ನಿ
ಷ್ಕಾರಣಂ ಲಘುಮಾಡಬೇಡ ಮುನಿನಾಥ ಕೈಮುಗಿದು ಬೇಡಿದೆನೆಂದನು      ೩೭

ತಳದ ಬೇರಂ ಬಲ್ಲವಂಗೆಲೆಯನಱುಪುವರೆ
ಹೊಲತಿಯರನಪ್ಪಿ ಕುಲಮಂ ಕೆಡಿಸಲಾಱೆನೆಂ
ದೆಲವೊ ಗಳಹುವೆ ನಿನ್ನ ಕುಲದ ಕುಂದಂ ಕೇಱಿ ತೂಱಿ ತೋಱಿಸುವೆನೆನಲು
ಮಲೆತೆನ್ನನೊಲಿದಂತೆ ನಿಂದಿಸಲ್ಕೆನ್ನ ಸ
ತ್ಕುಲದ ಕುಂದಂ ನೋಡ ನಿನಗಲ್ಲ ಮದನಹರ
ಜಲಜಸಂಭವರಗರಿದು ತತ್ತಡೆಲೆ ಮುನಿಪ ಕೇಳೆಂದನು ಹರಿಶ್ಚಂದ್ರನು          ೩೮

ಮುಳಿದು ವಾಸಿಷ್ಠಮುನಿ ಕೊಟ್ಟ ಶಾಪದೊಳು ಕುಲ
ವಳಿದು ರಾಜ್ಯಭ್ರಷ್ಟನಾಗಿ ಚಾಂಡಾಲತ್ವ
ವಳವಟ್ಟು ನಿಮ್ಮಯ್ಯನೆನಿಪ ತ್ರಿಶಂಕುವನು ನಾನಲ್ಲದುದ್ಧರಿಸಿದ
ಬಲವಂತರಾರುಳ್ಳಡುಸಿರೆನಲು ಶಾಪಮಂ
ಕಳೆದೆ ನಾನೆನ್ನಾಜ್ಞೆಯಂ ಮೀಱಿದೆನ್ನ ಮ
ಕ್ಕಳ ಮದುವೆಯಾದ ಹೊಲೆಯಂ ಕಳೆಯಲಾಱೆನೇ ಭೂಪಾಲ ಹೇಳೆಂದನು  ೩೯

ಪಾಪಮಂ ಮಾಡದಧ್ವರವ ತೊಡಗಿದ ಪಾಪ
ಲೇಪವುತ್ತರಿಸಬಂದುದು ನೀವು ಪೇಳ್ವುದಿದ
ಱೋಪಾದಿಯಲ್ಲನಾಮಿಕಸತಿಯರಂ ಕೂಡಿ ಚಾಂಡಾಲನಾಗಿ ಹೋಗು
ಭೂಪಾಲಯೆಂಬುದಿದು ನೀತಿಯೇ ನಾನಿದ
ಕ್ಕಾಪೆನೇ ಎನಲೆನ್ನ ಮಾತ ಮೀಱಿದೆ ನಿನ್ನ
ನೀಪೊತ್ತು ಚಾಂಡಾಲನಂ ಮಾಡದಿನ್ನು ಬಿಟ್ಟೆನೆ ನೋಡು ನೋಡೆಂದನು      ೪೦

ಪೊಡವಿ ಮುನಿವಡೆ ಬಯಲು ಬಡಿವಡುಸಿರೊಡಲನಿಱಿ
ವಡೆ ಕಱೆವ ಮೊಲೆಹಾಲನೀಂಟುವಡೆ ಬಿಡದಡುವ
ಮಡಕೆಯುಂಬಡೆ ಹರಸಿ ರಕ್ಷಿಸುವ ನೀವೆನಗೆ ಶಾಪವೀವಡೆ ಧಟ್ಟಸಿ
ನುಡಿದು ರಕ್ಷಿಸುವರಾರಾ ಮಾತದಂತಿರಲಿ
ಪೊಡವೀಶನನ್ಯಾಯಮಂ ಮಾಡಲೊಲ್ಲೆನೆಂ
ದಡೆ ಶಾಪ ಬಂದುದೆಂಬಪಕೀರ್ತಿ ಬಂದಡಂ ಬರಲಿ ಮುನಿ ಕೇಳೆಂದನು           ೪೧

ಸಂದ ಶಾಪನು ಜಗದಪಕೀರ್ತಿಯನು ಹೊಱುವೆ
ನೆಂದಾಗಳೇ ಹುಸಿಗೆ ಹೆಡ್ಡೈ ಸುವಾತನ
ಲ್ಲೆಂದಱಿಯಲಾಯ್ತನೃತಪುಟ್ಟದಿನಕುಲಕೆ ಕಲೆ ಮೊಳೆವಂತೆ ಮೊಳೆತೆ ನೀನು
ಇಂದೆನಗೆ ಕೊಟ್ಟ ದಾನದ ಭೂಮಿಗಳುಪುವುದು
ಕುಂದಲ್ಲ ನಿನ್ನ ಮಾತಂ ನಂಬುವೆಮ್ಮದೇ
ಕುಂದು ತಿರಿವರಿಗೇಕೆ ರಾಜ್ಯ ನಿನ್ನನುವ ನೋಡಿದೆವೈಸೆ ಕೇಳೆಂದನು೪೨

ಎನಗೆ ಜಗದಪಕೀರ್ತಿ ಪುಟ್ಟದನೃತಂ ಹೊದ್ದ
ದಿನಕುಲಕೆ ಕುಂದಿಲ್ಲ ನಿನಗೆ ರಾಜ್ಯದ ಮೇಲೆ
ಮನವಿನಿತು ಘನವಾದಡಿದೆಕೋ ಮನಃಪೂರ್ವಕಂ ಕೊಟ್ಟೆನೆಂದು ನುಡಿವ
ಜನಪತಿಯ ಧೈರ್ಯಕ್ಕೆ ಬೆಱಗಾಗಿ ತಲೆದೂಗಿ
ಮುನಿದಡಂ ಮುಟ್ಟಿ ನೋಯಿಸಿದಡಂ ತೆಕ್ಕನೀ
ತನನೆಂತು ಹುಸಿಯ ನುಡಿಸುವೆನೆಂದು ಚಿಂತಿಸುತ ನೆನೆದು ಮತ್ತಿಂತೆಂದನು     ೪೩

ಇಂತೆನ್ನ ಕಾಟಕ್ಕೆ ಬೇಸತ್ತು ನೀನೊಬ್ಬ
ನೆಂತಕ್ಕೆ ಕೊಟ್ಟೆನೆಂದಡೆ ಬಿಡೆನು ನೃಪ ನಿನ್ನ
ಕಾಂತೆ ಸುತ ಮಂತ್ರಿಗಳ ಮತ ಬೇಹುದವರುಗಳನೊಡಬಡಿಸು ಬೇಗವೆನಲು
ಭ್ರಾಂತಿಮುನಿ ನಾನೊಬ್ಬ ಸಾಲದೇ ಸ್ತ್ರೀಬಾಲ
ರೆಂತಾದಡಂ ನುಡಿವರವರಿಚ್ಛೆಯೇ ಎನ್ನ
ಸಂತಸದಿಂ ಕೋಯೆಂದಡದಱ ಮಾತಂ ಬಿಟ್ಟು ಧಾರೆಯಂ ತಾ ಎಂದನು       ೪೪

ಅಡವಿಯಂ ಮೊಗೆದು ಸುಡುವಗ್ನಿಗಾಪೋಶನದ
ಗೊಡವೆಯೇವುದು ಬಲಾತ್ಕಾರದಿಂ ಕೊಂಬಿರಾ
ದಡೆ ಧಾರೆಯೇಕಯ್ಯ ಧಾರೆಗೊಡದಡೆ ಮರಳಿ ನೀಂ ಬಿಡುವುದುಂಟೆ ಎನಲು
ಬಿಡುವೆನೆನ್ನಯ ಮಕ್ಕಳಂ ಮದುವೆಯಾಗೆಂದ
ದಡಗಡಿಗೆ ಕಟ್ಟಿನುಡಿಯಂ ನುಡಿಯುತಿರಬೇಡ
ಹಿಡಿಯೆಂದು ಸರ್ವಸಾಮ್ರಾಜ್ಯಮಂಮುನಿಗೆ ಧಾರೆಯನೆಱೆದನವನೀಶನು      ೪೫

ತಿರಿಗಿ ಮಂತ್ರಿಯ ವದನಮಂ ನೋಡುತರಸನಿರೆ
ಸರಸಿಜಾನನೆ ಚಂದ್ರಮತಿ ರಾಣಿಯರ ದೇವಿ
ಹರನೇಕಭಾವವೆನಿಸುವ ಕೌಶಿಕಂ ಬೇಡುತಿರಲು ಮಂತ್ರವ ಮಾಳ್ಪರೆ
ಹರುಷದಿಂ ಸರ್ವರಾಜ್ಯವನೀವುದರಸ ಎಂ
ದರಸಿ ನುಡಿಯಲು ಮನಂ ಶಂಕಿಸದೆ ಸಗ್ಗಳೆಯ
ಕರದಲೆತ್ತಿದನೆಱೆದ ಧಾರೆಯನು ಮುನಿವರಗೆ ಮುನಿವರರು ತಲೆದೂಗಲು    ೪೬

ಏನೇನನೆಱೆದೆ ಧಾರೆಯನೆನಲು ಚತುರಂಗ
ಸೇನೆಯಂ ಸಕಳಭಂಡಾರವಂ ನಿಜರಾಜ
ಧಾನಿಯಂ ಜಗದಾಣೆಘೋಷಣೆಯುಮಂ ಕಟಕವನು ಸಪ್ತದ್ವೀಪಂಗಳ
ಆನಂದದಿಂದಿತ್ತೆನಿನ್ನು ಸರ್ವಾನುಸಂ
ಧಾನಮಂ ಬಿಟ್ಟು ಕರುಣಿಸಿ ಹರಸುತಿಹುದೆಂದು
ಭೂನಾಥನೆಱಗಿ ಬೀಳ್ಕೊಂಡಡಣಕಿಸಿ ನಗುತ ಹೋಗಯ್ಯ ಹೋಗೆಂದನು      ೪೭

ಹರಣಮಂ ಬೇಡದುಳುಹಿದನು ಲೇಸಾಯ್ತು ಮುನಿ
ಕರುಣಿಸಿದನೆಂದು ತಲೆದಡವಿಕೊಳುತುತ್ಸವದೊ
ಳುರವಣಿಸಿ ರಥವೇಱಿ ನಡೆಗೊಳಲು ಬಂದುಹೋಗೊಂದು ನುಡಿವೇಳ್ವೆನೆಂದು
ಹುರುಡಿಗನು ಮತ್ತೆ ಕರೆಯಲು ಮರಳಿ ಬಂದು ಚ
ಚ್ಚರ ಬೆಸಸು ಬೆಸನಾವುದೆಂದು ಧೀರೋದಾತ್ತ
ನೆರಡು ಕೈಮುಗಿಯಲಾ ಮುನಿ ನುಡಿದ ಕಷ್ಟವನದಾವ ಜೀವರು ಕೇಳ್ವರು   ೪೮

ಎಳಸಿ ನೀನೆನಗೆ ಧಾರೆಯನೆಱೆದ ಸರ್ವಸ್ವ
ದೊಳಗಣವು ನಿನ್ನ ತೊಡಗೆಗಳವಂ ನೀಡೆನಲು
ಕಳೆದು ನೀಡಿದಡಿನ್ನು ಮಂತ್ರಿ ಸತಿ ಸುತರ ತೊಡಿಗೆಗಳ ನೀಡೀಗಳೆನಲು
ಕಳೆದು ಕೊಟ್ಟಡೆ ಮೇಲೆ ನೀವೆಲ್ಲರುಟ್ಟುಡಿಗೆ
ಗಳನು ನೀಡೆಂದಡವನೀವ ಪರಿಯಾವುದೆಂ
ದಳುಕಿ ಮನಗುಂದಿ ಚಿಂತಿಸುತ ಕೈಮುಗಿದಿರ್ಪ ಭೂಪನಂ ಕಂಡೆಂದನು          ೪೯

ಅವನಿಪರು ಮರುಳರೆಂಬುದು ತಪ್ಪದಿದಕುಪಾ
ಯವ ಕಾಣ್ಬುದರಿದೆ ನಾ ತೋಱಿದಪೆನೆಂದು ತ
ನ್ನವನೊಬ್ಬನುಟ್ಟ ಹಣ್ಣಱುವೆ ಸೀರೆಯನೀಸಿಕೊಂಡು ನಾಲ್ಕಾಗಿ ಸೀಳಿ
ಶಿವಶಿವ ಮಹಾದೇವ ಕರುಣವಿಲ್ಲದ ಪಾಪಿ
ಯವಿಚಾರದಿಂ ನೀಡೆ ನಾಚದೊಗಡಿಸದಳುಕ
ದವರೊಬ್ಬರೊಂದೊಂದನುಟ್ಟು ದಿವ್ಯಾಂಬರವನಿತ್ತಡಲಸದೆ ಕೊಂಡನು     ೫೦

ಮಿಸುಪ ಕಳೆಗಳನು ತೃಣಸಸಿ ಮುಖ್ಯ ಜೀವಿಗಳಿ
ಗೊಸೆದೊಸೆದು ದಾನವಿತ್ತಂಬರವನುಳಿದಮಳ
ಶಶಿಯಂತೆ ಸರ್ವತೊಡಗೆಗಳನಿತ್ತಂಬರವನುಳಿದುಱುವೆಯುಟ್ಟರಸನು
ಕುಸಿದು ಪೊಡೆಮಟ್ಟಿನ್ನು ಹೋಹೆನೈ ತಂದೆ ಸಂ
ತಸವೆ ನಿಮಗೆನಲಡ್ಡ ಮೋಱೆಯಳುದಾಸೀನ
ಮಸಕದಿಂ ಹೋಗೆಂದು ಹೋಗಬಿಟ್ಟಳುಪಿ ಮತ್ತಾ ಕೈಯಲೇ ಕರೆದನು        ೫೧

ಮನದೊಳಿರ್ದುದನೊಂದನಾಡಬೇಕಾಡಿದಡೆ
ಮುನಿಯಲೇ ಎನಲು ಮುನ್ನೇನನಾಡಿದಡೆ ನಾ
ಮುನಿದೆನೆಲೆತಂದೆ ಪೇಳೆನೆ ಬಹುಸುವರ್ಣಯಾಗವ ಮಾಡಿದಂದು ನೀನು
ಎನಗೆ ದಕ್ಷಿಣೆಯಿತ್ತ ಧನವನೀವುದು ದೇಶ
ವನು ಬಿಟ್ಟು ಹೋಹಾತನನ್ಯಸಾಲವನು ನೆ
ಟ್ಟನೆ ಹೊತ್ತು ಹೋಗಲಾಗದು ನಿಲಿಸಲಾಗದಿತ್ತಡಿಯನಿಡು ಬಳಿಕೆಂದನು     ೫೨

ಅನುಗೆಟ್ಟ ಮರುಳೆ ನೀನೆಂದಲ್ಪದಕ್ಷಿಣೆಯ
ಧನವೆನಿತು ನಿನ್ನ ಮನದಾರ್ತವೆನಿತಱೊಳಳಿವು
ದನಿತರ್ಥವದೆ ಮೊದಲ ಭಂಡಾರದೊಳಗೆ ನೀನಿನ್ನು ಬಳಲಿಸದಿರೆನಲು
ಕೊನೆವೆರಳನಲುಗಿ ತಲೆದೂಗಿ ಲೇಸೈ ನಿನ್ನ
ಮನಕೆ ಸರಿಯಿಲ್ಲ ಮಝಭಾಪು ಭಾಪರರೆ ನೆ
ಟ್ಟನೆ ಕೊಟ್ಟು ಕಾಳ್ಗೆಡೆದು ನುಡಿವ ನುಡಿ ಹಸನಾಯಿತೆಂದು ಘೂರ್ಮಿಸಿ ನಕ್ಕನು        ೫೩

ಕಡೆಗಣಿಸಿ ನಗಲೇಕೆ ತಂದೆಯೆನೆ ಧಾರೆಯಂ
ಕೊಡುವಾಗ ದಕ್ಷಿಣೆಯ ಧನವದಱೊಳದೆಯೆಂದು
ನುಡಿದುದುಂಟೇಯೆನಲು ಹೇಱನೊಪ್ಪಿಸಿದವಂಗೆಲ್ಲಿಯದು ಸುಂಕವೆನಲು
ಒಡಲಳಿದಡಂ ಸಾಲವಳಿಯದೆನಲೀ ಧರಣಿ
ಯೊಡೆತನಂ ಹೋದಡೇಂ ಸಾಲ ಹೋಹುದೆ ಮುನ್ನಿ
ನೊಡವೆಯಂ ಕೊಡು ಕೊಡದೊಡೆಲ್ಲವಂ ಮರಳಿ ಕೈಕೊಳು ಬಱಿದೆ ಬಿಡೆನೆಂದನು      ೫೪

ಜತ್ತಕನ ನುಡಿಗೆ ತೆಕ್ಕಿದನೆ ತೆರಳಿದನೆ ತಲೆ
ಗುತ್ತಿದನೆ ಸಡಿಫಡಿಲ್ಲಿಲ್ಲವಧಿಯಂ ಕೊಟ್ಟು
ಚಿತ್ತವಿಟ್ಟನುಸರಿಸಿ ಕೊಂಬಿರಾದಡೆ ತಂದು ನಿರ್ಣೈಸಿ ಕೊಡುವೆನೆನಲು
ಹತ್ತುದಿನವೆನಲು ಮುನಿಯಾಱೆನೆನಲರಸನಿ
ಪ್ಪತ್ತುದಿನವೆನಲು ಯತಿ ದೊರಕದೆನೆ ನೃಪತಿ ಮೂ
ವತ್ತುದಿನವೆನಲು ಋಷಿಯಾಗದೆನಲರಸ ನಾಲ್ವತ್ತೆಂಟು ದಿನವೆಂದನು          ೫೫

ಒಲ್ಲೆನೆಂದೆನ್ನೆ ನೀನಿತ್ತವಧಿ ಕಿಱಿದೀವ
ರಿಲ್ಲ ಧನವಂ ಗಳಿಸಿ ತಂದೀವೆನೆನಲು ದಿನ
ವಿಲ್ಲೊಬ್ಬ ತೆಱಕಾಱನಂ ಕೊಟ್ಟೊಡಾತಂಗೆ ನಿರ್ಣಯಿಸಿ ಕೊಡುವೆನೆನಲು
ಬಲ್ಲಿದನನೊಬ್ಬನಂ ಕೊಡುವೆನಾತಂಗೆ ಧನ
ವೆಲ್ಲವಂ ನಿರ್ಣಯಿಸಿ ಕೊಡುವಂತಿರೆನಗಿಲ್ಲಿ
ಹೊಲ್ಲಹಂ ಸೂರುಳು ಸೂರುಳಿಡು ಬೇಗ ಕಾಡದೆ ಕಳುಹಿದಪೆನೆಂದನು        ೫೬

ಶಿವಪೂಜೆಯಂ ಮಾಡದವನು ಗುರ್ವಾಜ್ಞೆಗೆ
ಟ್ಟವನು ಪರಸತಿಗಳಪುವವನು ಪರರಸುಗೆ ಮುಳಿ
ವವನು ತಾಯಂ ಬಗೆಯದವನು ತಂದೆಯನೊಲ್ಲದವನು ಪರನಿಂದೆಗೆಯ್ವ
ಅವನು ಇಟ್ಟಿಗೆಯ ಸುಟ್ಟವನು ಬೇಗೆಯನಿಕ್ಕು
ವವನಧಮರನು ಬೆರಸುವವನು ಕುಲಧರ್ಮಗೆ
ಟ್ಟವನಿಳಿವ ನರಕದೊಳಗಿಳಿವೆನವಧಿಗೆ ನಿಮ್ಮ ಧನವನೀಯದಡೆಂದನು         ೫೭

ಮೇಲಿನ್ನು ನಾನಾಳ್ವ ದೇಶದೊಳು ಬೇಡದಂ
ತೋಲೈಸದಂತೆ ಕೃಷಿವ್ಯವಸಾಯಮಂ ಮಾಡ
ದಾಲಯಂಗಟ್ಟರದೆಯವಧಿಯೊಳು ಹೊನ್ನ ನಿರ್ಣಯಿಸುವುದು ಬೇಗವೆನಲು
ಭೂಲೋಲನದಕೊಡಂಬಡಲು ಸಪ್ತದ್ವೀಪ
ಜಾಲವೆಲ್ಲೆನ್ನವವಱಿಂದ ಹೊಱಗಾವುದೆಂ
ದಾಲಿಸಲು ಹೇಮಕೂಟಂ ವಾರಣಾಸಿಗಳು ಹೊಱಗು ಮುನಿ ಕೇಳೆಂದನು      ೫೮

ಪ್ರಳಯಕ್ಕೆ ಹೊಱಗು ಕಲಿಕಾಲ ಹೊಗದಂತಕನ
ಸುಳಿವವಱೊಳಿಲ್ಲ ಕಾಮನ ಡಾವರಂ ಕೊಳ್ಳ
ದುಳಿದ ಮಾಯೆಯ ಮಾತು ಬೇಡ ಪಾಪಂಗಳಾಟಂ ನಾಟವನ್ಯಾಯದ
ಕಳೆಗೆ ತೆಕ್ಕವು ಮಾರಿಮೃತ್ಯುಗಿತ್ಯುಗಳ ಬಲೆ
ಗೊಳಗಾಗದಧಿಕಪುಣ್ಯದ ಬೀಡು ಮಂಗಳದ
ನಿಳಯ ಮುಕ್ತಿಯ ಮೂಲವೆನಿಸುವವು ಕಾಶಿ ಹಂಪೆಗಳು ಮುನಿ ಕೇಳೆಂದನು   ೫೯

ಅವಕೆ ವಿಶ್ವೇಶ್ವರ ವಿರೂಪಾಕ್ಷರೇ ಒಡೆಯ
ರವನಿಯೊಳಗಲ್ಲಿ ನಿನ್ನಾಜ್ಞೆಗಳು ಸಲ್ಲ ಬಱಿ
ಯ ವಿಚಾರ ಹೊಲ್ಲ ಹಂಪೆಗೆ ಹೋಹಡೆಡೆಯಿಲ್ಲ ಕಾಶೀಪುರವನೆ ಸಾರ್ದು
ನಿವಗೆ ಕೊಡುವರ್ಥಮಂ ಕೊಡುವೆನಿನ್ನಳಲಿಸದೆ
ಶಿವಮೂರ್ತಿ ಮುನಿನಾಥ ಕರುಣಿಸೆನೆ ಹೋಗು ವ
ಸ್ತುವ ಬೇಗ ಮಾಡೆಂದಡಡಿಗೆಱಗಿ ನಡೆದನಾ ಧೈರ್ಯನಿಧಿ ಭೂಪಾಲನು       ೬೦

ಬಿಟ್ಟು ಹೆದಱದೆ ಹೋಹ ನೃಪನ ಕಳೆಯಂ ಕಂಡು
ಕೆಟ್ಟೆನವನಿಯನೆಯ್ದೆ ಕೊಂಡಡಂತದನೊಡಂ
ಬಟ್ಟು ಶಪಥಕ್ಕೆ ಮೆಯ್ಗೊಟ್ಟನವನಲ್ಲಿ ಹುಸಿ ಹುಟ್ಟದಿನ್ನಕಟ ನಾನು
ನಟ್ಟು ಕೋಟಲೆಗೊಂಡನಂತಕಾಲಂ ತಪಂ
ಬಟ್ಟ ಪುಣ್ಯವನೀವೆನೆಂದೆನದು ಹೋದಡೊಳ
ಗಿಟ್ಟು ಕೊಂಬರೆ ಮುನಿಗಳೆನ್ನನೆಂದೋರಂತೆ ಮಱುಗಿದಂ ಮುನಿನಾಥನು      ೬೧

ಕಡೆಗೆ ಮೈಯೊಡ್ಡುವಡೆ ಪಂಚಾಗ್ನಿಯುಂಟು ತಲೆ
ಯಡಿಯಾಗಿ ನಿಲುವಡುಕ್ಕಿನ ಸೂಜಿಯುಂಟು ಮೆಲು
ವೊಡೆ ಲೋಹಚೂರ್ಣವುಂಟಧಿಕ ಘೋರವ್ರತಂಗಳೊಳು ದಂಡಿಪಡಾನುವ
ಒಡಲುಂಟು ಮಾಣದಂಗವಿಪ ಮನವುಂಟಿನ್ನು
ಕಡೆಗೆ ಫಲವೀವ ಶಿವನುಂಟದಕ್ಕಂಜೆನೆ
ನ್ನೊಡನೆ ವಾಸಿಷ್ಠಪ್ರತಿಜ್ಞೆ ಗೆಲಿದಪುದಿದಕ್ಕೆಂತೆಂದು ಚಿಂತಿಸಿದನು     ೬೨

ಕುಂದದೆ ವಸಿಷ್ಠನೊಳು ಮಲೆತು ಬೆಂಗೊಟ್ಟುಳ್ಳ
ಹೆಂದದ ತಪಃಫಲವ ಹೋಗಾಡಿದಾತನೀ
ಬಂದನೆಂದೆನ್ನನ್ನೆಲ್ಲಾ ಮುನೀಶ್ವರರು ನಗದಿರರೆಂದು ತನ್ನ ತಾನು
ಕೊಂದುಕೊಳಬಗೆದು ಮತ್ತೆಚ್ಚತ್ತು ಚಿತ್ತದಲಿ
ನೊಂದಡೇನಹುದಿದಕೆ ತಕ್ಕುದಂ ಕಾಣಬೇ
ಕೆಂದು ಚಿಂತಿಸಿ ನೋಡಿ ಮತ್ತೊಂದುಪಾಯಮಂ ಕಂಡನಾ ನಿಷ್ಕರಣನು         ೬೩

ಪುರದ ವಿಭವದ ಜನದ ಸಿರಿಯ ಕೇರಿಗಳ ವಿ
ಸ್ತರದ ಕೈಗೆಯ್ದು ದುರ್ಗದ ತನ್ನ ಹಿರಿ
ಯರಮನೆಯ ಕೇಳೀವನದ ಲತಾಗೃಹದ ದೀಹದ ಖಗಮೃಗಾವಳಿಗಳ
ವರಚಿತ್ರಶಾಲೆಗಳ ಧನಧಾನ್ಯಸಂಚಯದ
ಪರಮವನಿತೆಯರ ನಾನಾರತ್ನಕೋಶದು
ಬ್ಬರದ ಸೊಗಸಂ ಕಂಡು ಮನಮಱುಗದೇ ಪುರಕ್ಕೊಯ್ದು ನೋಡುವೆನೆಂದನು          ೬೪

ಧರಣೀಶ ಬಂದು ಹೋಗೊಂದು ಮಾತುಂಟೆಂದು
ಕರೆದು ನಿನ್ನಂ ನಂಬಿ ನಾನು ರಾಜ್ಯಂಗೆಯ್ವ
ಭರದೊಳಱಿಯದೆ ಹೋದಡೆಲೆ ಮರುಳೆ ನಿನಗೆಲ್ಲಿಯರಸುತನವೆಂದು ಮೀಱಿ
ಪುರದ ಬಾಗಿಲ ಬಲಿದು ಗವನಿಗೊಂಡಬ್ಬರಿಸಿ
ಪರಿಜನಂ ಕಲುಗುಂಡ ಕಱೆಯದಿರರೆನ್ನನೊ
ಯ್ದಿರಿಸಿ ಸರ್ವವನೊಪ್ಪುಗೊಟ್ಟು ಹೋಗೆಂದಡವನಿಪನದನೊಡಂಬಟ್ಟನು  ೬೫

ನಡೆ ರಥವನೇಱಿಕೊಳ್ಳೊಲ್ಲೆನೇಕೊಲ್ಲೆ ಪರ
ರೊಡವೆಯೆನಗಾಗದೇಕಾಗದಾನಿತ್ತೆನಿ
ತ್ತಡೆ ಕೊಳಲುಬಾರದೇಂಕಾರಣಂ ಬಾರದೆಮಗಂ ಪ್ರತಿಗ್ರಹ ಸಲ್ಲದು
ಕಡೆಗೆ ನಿನ್ನೊಡವೆಯಲ್ಲವೆಯಲ್ಲವೇಕಲ್ಲ
ಕೊಡದ ಮುನ್ನೆನ್ನೊಡವೆ ಕೊಟ್ಟ ಬಳಿಕೆನಗೆಲ್ಲಿ
ಯೊಡವೆಯೆಂದರರೆ ದಾನಿಗಳ ಬಲ್ಲಹನು ಮುನಿಯೊಡನೆ ಸೂಳ್ನುಡಿಗೊಟ್ಟನು        ೬೬

ಬೇಡಿಕೊಂಬೆಂ ಭೂಪ ಎನೆ ಬೇಡಬೇಡ ನಾ
ಮಾಡಿದುದನೆನ್ನ ಕಣ್ಣಾಱೆ ನೋಡುವೆನು ನೀ
ನಾಡಂಬರದೊಳು ರಥವೇಱು ಚತುರಂಗಬಲವೆರಸಿ ನಡೆ ತಂದೆ ಎನ್ನ
ಕಾಡಬೇಡವಧಿ ಕಿಱಿದೆಡೆ ದೂರ ಹೊತ್ತ ಹೋ
ಗಾಡದಿರ್ದೊಡೆ ತನ್ನನೊಯ್ದು ಮೇರುವಿನ ತುದಿ
ಗೋಡನೇಱಿಸಿದಾತ ನೀನೆಂದು ಮುನಿಪತಿಗೆ ಭೂಭುಜಂ ಕೈಮುಗಿದನು       ೬೭

ಅಕ್ಕಱಿಂದಲ್ಲ ನೀನೋಡಿ ಹೋದಹೆಯೆಂಬ
ಕಕ್ಕುಲಿತೆಗೇಱೆಂದೆನೈಸೆಯೆನೆ ಬಲುಗಾಹ
ನಿಕ್ಕಯ್ಯ ಎನೆ ಕಾಹಿನವರು ನಿನ್ನವರೆಂದಡವರು ಬೇಡಯ್ಯ ನಿನ್ನ
ಮಕ್ಕಳಹ ಮುನಿಗಳಂ ಬೆಸಸೆನಲು ಬೆಸಸಿ ಮುನಿ
ರಕ್ಕಸಂ ರಥವೇಱಿ ಚತುರಂಗಬಲವೆರಸಿ
ಮಿಕ್ಕು ನಡೆದಂ ಸರ್ವಸಂಭ್ರಮದ ಸಡಗರಂ ಮಿಗಲಯೋಧ್ಯಾಪುರಕ್ಕೆ           ೬೮

ಧರೆ ಬಿರಿಯಲಳ್ಳಿಱಿವನಂತನಿಸ್ಸಾಳದ
ಬ್ಬರವನಾಲಿಸಿ ಪುರದ ಕೇರಿಗಳನೊಪ್ಪೆ ಸಿಂ
ಗರಿಸಿ ಮನೆಮನೆಗಳೊಳು ಗುಡಿತೋರಣಂಗಳಂ ಸರದೆಗೆದು ಸಂಭ್ರಮದಲಿ
ಅರರೆ ಕೋಟಾಕೋಟಿ ಕರಿತುರಗರಥ ಪತ್ತಿ
ಪರಿಜನಂವೆರಸಿ ಮತ್ತಾ ಹರಿಶ್ಚಂದ್ರಭೂ
ವರನನಿದಿರ್ಗೊಳಲು ನಡೆದರು ಶಶಿಯನಿದಿರ್ಗೊಂಡು ಹೆಚ್ಚುವಂಭೋದಿಯಂತೆ         ೬೯

ಮುತ್ತಿದಣುಕುಗಳ ಮುಸುಕಿದ ಹಲವು ಝಲ್ಲರಿಗ
ಳೊತ್ತಿನೊಳು ತಳಿತ ಬೆಳುಗೊಡೆಗಳಿಡುಕುಱ ನೆಳಲ
ಕುತ್ತುಱೊಳು ಢಾಳಿಸುತ ಚಮರಿ ಸೀಗುರಿಗಳೊಗ್ಗಿನ ಕುಱುಹುವಿಡಿದು ನಡೆದು
ಎತ್ತಿದ ಮೊಗಂ ನಿಲುಕಿ ನೋಳ್ಪ ಕಂಗಳು ಮುಗಿದು
ಹೊತ್ತ ಕೈಯವಧಾರು ಜೀಯ ಎಂದೆಂಬ ನುಡಿ
ವೆತ್ತು ಹತ್ತಿರೆ ಬಂದು ಮುನಿಯ ಮೊಗಮಂ ಕಂಡು ಹೊತ್ತನಿನ್ನೇವೊಗಳ್ವೆನು            ೭೦

ನಸುನನೆಯನಪ್ಪಿದಳಿಕುಳದಂತೆ ಕಡುಹಸಿದು
ಕಸುಗಾಯನಗಿದ ಗಿಳಿಗಳ ಬಳಗದಂತೆ ನಿ
ಟ್ಟಿಸದೆ ವಿಷಮಂ ಸವಿದ ಶಿಶುವಿಸರದಂತೆ ಕೊಱಡಂ ಕರ್ದುಕಿ ಚಂಚು ನೊಂದು
ಕುಸಿದ ಪಿಕನಿಕರದಂತಾಸತ್ತು ಬೇಸತ್ತು
ಬಸವಳಿಯುತಂದು ಮುನಿಗಳೊಳಱಸಿದರು ಮಾ
ಮಸಕದಿಂ ಪುರಜನಂ ಭೂಪನಂ ಹೊಲಗೆಟ್ಟ ಕಱು ತಾಯನಱಸುವಂತೆ         ೭೧

ಹಗಲೊಗೆದ ಚಂದ್ರಕಳೆಯಂತೆ ಬಿಱುವೈಶಾಖ
ವಗಿದ ಬನದಂತೆ ಬಿಸಿಲೊಳು ಬಿಸುಟ ತಳಿರಂತೆ
ಮೊಗ ಕಂದಿ ಕಳೆಗುಂದಿಯಱುಗಪ್ಪಡವುಟ್ಟು ರಾಗವಳಿದೊಪ್ಪಗೆಟ್ಟು
ಮಗನರಸಿಮಂತ್ರಿಸಹಿತವನಿಪಂ ಹಿಂದೆ ದೇ
ಸಿಗನಂತೆ ಕೌಶಿಕನ ಕಾಹಿನೊಳು ಬರೆ ಕಂಡು
ಬಗೆ ಬೆದಱಿ ಹೊದ್ದಿ ಹೊಡೆವಟ್ಟು ಕಾಣಿಕೆಯ ಚಿತ್ತೈಸು ಭೂಭುಜ ಎಂದರು           ೭೨

ಎನಗರಸುತನ ಮಾದು ಹೋಗಿ ವಿಶ್ವಾಮಿತ್ರ
ಮುನಿಗಾದುದಾತನಂ ಕಂಡು ಕಾಣಿಕೆಯನಿ
ತ್ತನುದಿನಂ ಬೆಸಕೈವುದೆನಲೊಲ್ಲೆವೆನಲು ಬೋಧಿಸಿ ಬಲಾತ್ಕಾರದಿಂದ
ಜನವ ಕಾಣಿಸಿ ಕಾಣಿಕೆಯ ಕೊಡಿಸಿ ಹಿಂದುಗೊಂ
ಡಿನಕುಲಲಲಾಮನೆಯ್ತಂದು ಪುರಮಂ ಪೊಕ್ಕು
ಮನದೊಳುತ್ಸವದ ಹೆಚ್ಚುಗೆಯಳಿದು ನಿಂದ ಮಂದಿಯ ನೋಡುತಂ ನಡೆದನು         ೭೩

ಗೊಂದಣಂ ಮಿಗೆ ಹರಸಲೆಂದಾರತಿಯನೆತ್ತ
ಲೆಂದು ಸೇಸೆಯನಿಕ್ಕಲೆಂದಾರ್ತದಿಂ ನೋಡ
ಲೆಂದು ರೂಪಂ ಮೆಱೆಯಲೆಂದು ಸೊಬಗಂ ಸಾಱಲೆಂದು ನವರತ್ನವಿಡಿದು
ಹೊಂದೊಡಿಗೆಯಂ ತೋಱಲೆಂದು ಜನದಳವಱಿಯ
ಲೆಂದು ಬೀದಿಯೊಳು ಬಾಗಿಲೊಳು ಭದ್ರಂಗಳೊಳು
ನಿಂದ ಸತಿಯರು ಭೂಪನಿರವ ಕಂಡುರಿಹೊಯ್ದ ಹೂಗಣೆಗಳಂತಿರ್ದರು       ೭೪

ನೂಕಿ ನಡೆದರಮನೆಯ ಹೊಕ್ಕು ಸಿಂಹಾಸನ
ಕ್ಕಾ ಕೌಶಿಕಂ ಬಂದು ಭೂಭುಜನ ಕೈಯ ಪಿಡಿ
ದೀ ಕಟಕವೀ ಕೋಟೆಯೀ ಕರಿಗಳೀ ತುರಗವೀ ರಥಗಳೀ ಪರಿಜನ
ಈ ಕೋಶವೀ ಕಾಂತೆಯೀ ಕುವರನೀ ಮಂತ್ರಿ
ಯೀ ಕಾಮಿನೀಜನಂ ಮಱುಗದಂತರಸಾಗ
ಬೇಕಾದಡೆನ್ನ ಮಕ್ಕಳ ಮದುವೆಯಾಗು ಕಾಡದೆ ಬಿಟ್ಟು ಹೋಹೆನೆಂದ        ೭೫

ಹೆತ್ತ ತಾಯಂ ಮಾಱಿ ತೊತ್ತ ಕೊಂಬರೆ ಮೂಗ
ನಿತ್ತು ಕನ್ನಡಿಯ ನೋಡುವರೆ ಮಾಣಿಕದೊಡವ
ನೊತ್ತೆಯಿಟ್ಟೊಡೆದ ಗಾಜಂ ಹಿಡಿವರೇ ಕೋಪದಿಂ ಸತ್ತು ಮದುವೆಯಹರೆ
ಕತ್ತುರಿಯ ಸುಟ್ಟರಳ ಕುಱುಕಲನುಗೆಯ್ವರೇ
ಚಿತ್ರೈಸು ಹೊಲತಿಯರ ನೆರೆದು ನಾನೋವದಿ
ಪ್ಪತ್ತೊಂದು ತಲೆವೆರಸಿ ನರಕಕ್ಕೆ ಹೋಹೆನೇ ಮುನಿನಾಥ ಹೇಳೆಂದನು         ೭೬

ಒಲ್ಲದಿರಬೇಡ ಲೇಸೊಲ್ಲೆಯೇಕೊಲ್ಲೆಯೆ
ಮ್ಮಲ್ಲಿ ತಪ್ಪಿಲ್ಲಾದಡಿನ್ನು ನೀನೀಗ ನಿನ
ಗುಳ್ಳ ಪರಿವಾರಮಂ ಕರಸು ಬೇಗದಲಿಂತು ಚತುರಂಗಬಲಸೇನೆಯ
ಸಲ್ಲಲಿತ ದೇಶಕೋಶವನು ಕಟಕವನವ
ಕ್ಕುಳ್ಳ ಕುಲಕರಣ ದುರ್ಗಂ ಮುದ್ರೆ ಮೊದಲಾದು
ವೆಲ್ಲಮಂ ಬಿಡದೊಪ್ಪುಗೊಟ್ಟು ಹೋಗೇಳೆನಲು ಕರಸಿದಂ ಭೂನಾಥನು     ೭೭