ಸೂಚನೆ
ಭೂವರ ಹರಿಶ್ಚಂದ್ರನೃಪನ ಘನಸತ್ಯವಾ
ದೇವಸಭೆ ನಡುಗೆ ವಾಸಿಷ್ಠಮುನಿ ಕೌಶಿಕಂ
ಗಾವಗಂ ಕದನಮಂ ಬೆಳಸಿ ಪ್ರತಿಜ್ಞೆಯಂ ನುಡಿಸಿತೇವಣ್ಣಿಸುವೆನು

ಪರುಷವಂಗಣದ ಕಲು ಸುರಭಿ ಕಱಹಂ ಕಲ್ಪ
ತರು ವನಂ ಸ್ವರ್ಗ ನಿಜದೇಶವಮರಾವತಿಯೆ
ಪುರದುರ್ಗವಮರರಾಳ್ ಮೇರು ಕೇಳೀಶೈಲವಮೃತವೇ ಮನೆಯ ಬೀಯ
ವರರಂಭೆ ಸೂಳೆ ಶಚಿ ರಾಣಿಯೈರಾವತಂ
ಕರಿ ವಜ್ರವಾಯುಧಂ ನವನಿಧಿಯ ಭಂಡಾರ
ಹೊರೆವಾಳ್ದನಭವನೆಂದೆನಿಪ ದೇವೇಂದ್ರನೊಂದಿರುಳೋಲಗವನಿತ್ತನು        ೧

ತರದ ತಂಡದ ಗಡಣದೋರಣದ ವಂಗಡದ
ಪರಿವಿಡಿಯ ಸಾಲ ಸೇರುವೆಯ ಪರಿಪಂಕ್ತಿಗಳ
ಸುರರ ವಿದ್ಯಾಧರರ ಕಿನ್ನರರ ಖೇಚರರ ಗುಹ್ಯಕರ ಗಂಧರ್ವರ
ತುರಗವದನರ ಮಯೂರರ ಮಹೋರಗರ ಸಿ
ದ್ಧರ ಧರಾಚರರ ಗರುಡರ ಕಿಂಪುರುಷರ ಮು
ಖ್ಯರ ನಟ್ಟನಡುವೆ ಮಣಿಭದ್ರಾಸನದೊಳಿರ್ದನಿಂದ್ರನನಿಮಿಷಚಂದ್ರನು         ೨

ಹಿಂದೆಮುಂದೆಡಬಲನನೆಡೆಗೊಂಡ ಪಟುಭಟರ
ಗೊಂದಣದ ಮಕುಟದಿಡುಕುಱ ತಳಿತ ಕೈದುಗಳ
ಸಂದಣಿಯ ತುಱುಗಿ ತುಂಬಿದ ದೀವಿಗೆಯ ಸುಧಾಭಿತ್ತಿಯ ವಿಳಾಸಿನಿಯರ
ಹೊಂದೊಡಿಗೆಗದಿರ ನಗೆಗಂಗಳೊಳಗಂ ಪುಟ್ಟಿ
ಮಂದೈಸಿ ಬೆಳೆದ ಬೆಳತಿಗೆವೆಳಗಿನೊಳಗಿರ್ದ
ನಂದು ಗಿರಿದಳನ ದೋರ್ದಂಡಂ ಶಚೀಸತಿಯ ಗಂಡ ರಂಭೆಯ ಮಿಂಡನು       ೩

ಸನಕ ಕಶ್ಯಪ ಜಹ್ನು ಜಮದಗ್ನಿ ಭೃಗು ಸನಂ
ದನ ಕುತ್ಸ ವತ್ಸ ಶುಕನತ್ರಿ ವಾಲ್ಮೀಕಿ ಜೈ
ಮಿನಿ ಭರದ್ವಾಜ ರೋಮಜ ಭಗೀರಥ ಕುಶಾವರ್ತ ನಾರದ ಮರೀಚಿ
ಮನು ಮತಂಗ ವ್ಯಾಸ ಗರ್ಗ ಗೌತಮ ಸನಾ
ತನನಗಸ್ತ್ಯದಧೀಚಿ ಪೌಲಸ್ತ್ಯ ಮಾಂಡವ್ಯ
ಮುನಿಮುಖ್ಯರಿರ್ದರಮರಾವತಿಯ ಬಲ್ಲಹನ ಬಳಸಿನೊಡ್ಡೋಲಗದೊಳು ೪

ಒಡಲನಾವರಿಸಿದಂಗೋಪಾಂಗಸಂಕಳದ
ನಡುವೆ ನಯನದ್ವಯಂಗಳು ಸಲೆ ನವಗ್ರಹದ
ನಡುವೆ ಚಂದ್ರಾದಿತ್ಯರುರ್ವಿಯಂ ಪರ್ವಿ ಪಸರಿಸಿದ ನಾನಾ ನದಿಗಳ
ನಡುವೆ ಸುರುಚಿರ ಗಂಗೆತುಂಗಭದ್ರೆಗಳೊಪ್ಪ
ವಡೆದು ಮಹಿಮೆಯೊಳೆಸೆವ ತೆಱದಿ ಸುರಪನ ಸಭೆಯ
ನೆಡೆಗೊಂಡ ಮುನಿಕುಲದ ನಡುವಿರ್ದರಧಿಕ ವಿಶ್ವಾಮಿತ್ರ ವಾಸಿಷ್ಠರು          ೫

ಅಲಸದೆ ಸಮಸ್ತ ಭೂಮಂಡಲವನಾಳ್ವ ರವಿ
ಕುಲಜರಪ್ಪಿಕ್ಷಾಕುವಂಶದರಸುಗಳೊಳತಿ
ಬಲರೆನಿಸಿ ಮನವಚನಕಾಯದೊಳಗೊಮ್ಮೆಯಂ ಹುಸಿ ಹೊದ್ದದಂತೆ ನಡೆವ
ಕಲಿಗಳಾರಯ್ಯ ಹೇಳವರ ಪಾರಂಪರೆಗೆ
ಸಲೆ ಸಂದ ರಾಜಗುರು ನೀನಱಿಯದವರಿಲ್ಲ
ವೆಲೆ ಮುನಿಪ ಹೇಳೆಂದು ಹಲವು ಕಣ್ಣಾದವಂ ನುಡಿದನು ವಸಿಷ್ಠಮುನಿಗೆ    ೬

ಬೆಸಗೊಂಡಡಿಷ್ಟಾಕುವಂಶದೊಳಗಣ ಚತು
ರ್ದಶಭುವನಪತಿಗಳೊಳಗಿಂದುತನಕಾನಱಿಯೆ
ಹುಸಿ ಹೊದ್ದದವರಿಲ್ಲ ಹಿಂದಣರಸುಗಳನುದ್ಧರಿಸಲೆಂದವತರಿಸಿದ
ವಸುಧಾಧಿಪತಿ ಹರಿಶ್ಚಂದ್ರನಾತನ ಸತ್ಯ
ದೆಸಕಮಂ ಪೊಗಳಲೆನ್ನಳವೆ ಫಣಿಪತಿಗರಿದು
ಶಶಿಮೌಳಿಯಾಣೆಯೆನಲಾ ವಸಿಷ್ಠಂಗೆ ಕೋಪಿಸಿದ ವಿಶ್ವಾಮಿತ್ರನು  ೭

ತೀವಿದೊಡ್ಡೋಲಗದ ನಡುವೆ ತನ್ನಂ ಮೊದಲೊ
ಳೋವಿ ನುಡಿಸದ ಕೋಪವೊಂದಾ ವಸಿಷ್ಠಮುನಿ
ಯಾವುದಂ ಪೇಳ್ದಡದನಲ್ಲೆಂಬ ಭಾಷೆಯೆರಡಖಲಜೀವಾವಳಿಯಲಿ
ಭಾವಿಪಡೆ ಕುಂದನಲ್ಲದೆ ಲೇಸ ಕಾಣದಿಹ
ಭಾವ ಮುಪ್ಪುರಿಗೊಂಡು ಕುಡಿವರಿದು ಕಡುಗೋಪ
ವಾವರಿಸಿ ಕೌಶಿಕಂ ನಿಂದು ನಿಲ್ ನುಡಿಯಬೇಡೆಂದು ಜಱೆದಿಂತೆಂದನು          ೮

ಬೇಸಱದೆ ಕೇಳ್ವ ದೇವೇಂದ್ರನುಂಟೆಂದಿಂತು
ಹೇಸದಕಟಕಟ ಸೊರಹುವರೆ ವಾಸಿಷ್ಠಯೆನ
ಲಾ ಸೊರಹುವನೆಯಾತನಧಿಕನಲ್ಲವೆ ಹೇಳು ಮುನಿದ ಮೋಱೆಯೊಳೆಂದೆನೆ
ರಾಸಿ ಹೊನ್ನುಂಟಧಿಕನಹನೆನಲು ಹೊನ್ನಮಾ
ತೀ ಸಭೆಯೊಳೇಕೆ ಸತ್ಯನೆ ಹೇಳೆನಲು ಸತ್ಯ
ಲೇಶವಂತವನಾಳ್ವ ದೇಶದೊಳು ಕೇಳ್ದಱಿಯೆನೆಂದ ವಿಶ್ವಾಮಿತ್ರನು           ೯

ಶಿವನಱಿಯಲಾತನೆಂತುಂ ಸತ್ಯನವನಾಳ್ವ
ಭುವನದೊಳಗನೃತವನ್ಯಾಯವಾಲೀಢತ್ವ
ವವಿಚಾರ ದುರ್ನೀತಿ ದುಸ್ಸಂಗ ದುಸ್ಥಿತಿ ದುರಾಚಾರವಿಲ್ಲೆಂದೆನೆ
ತವೆ ಬೇರ ಬಲ್ಲವಂಗೆಲೆದೋಱಲೇಕೆ ನಿ
ನ್ನವನೀಶನಾಳ್ವ ನಾಡೆಯ್ದೆ ಮುನಿನಾಥ ನೋ
ಡುವಡೆನ್ನ ಕಾಲಾಟದೊಳಗಣರು ಪೇಳ್ವೆನದಱನುವ ಕೇಳಿನ್ನೆಂದನು           ೧೦

ನುತವಿಚಾರೋನ್ನತಂ ಕಾನನಂಗಳೊಳು ಪಶು
ಪತಿ ರತಿತ್ವಂ ಗೋಕುಲದೊಳು ಸ್ವರಾಗಸಂ
ತತಿ ಶುನಕಗೋಷ್ಠಿಯೊಳು ಚತುರದ್ವಿಜೋಪಚಾರಂ ದಂತಧಾವನದೊಳು
ವಿತತಧರ್ಮಶ್ರವಣವಂತ್ಯಕಾಲದೊಳಗಾ
ಶ್ರಿತಪರ್ವವಿಭವ ವೇಣುಗಳೊಳು ಸ್ವಸ್ಥತಾ
ಗತಿ ಮುಕ್ತರಾದವರೊಳಲ್ಲದಾ ನಾಡೊಳಿಲ್ಲೆಂದ ವಿಶ್ವಾಮಿತ್ರನು ೧೧

ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತೆಂಬ
ಕ್ಷೋಣಿಯಾಡುವ ಗಾದೆಯಂತೆ ವಿಶ್ವಾಮಿತ್ರ
ನೂಣೆಯವ ಹಿಡಿವ ವಾಸಿಷ್ಠಮುನಿ ಸತ್ಯವಂ ಕೊಂಡಾಡುವೆರಡಱಿಂದ
ಕ್ಷೋಣೀಶನೆನಿಸುವ ಹರಿಶ್ಚಂದ್ರಭೂಪಂಗೆ
ಪ್ರಾಣಪರಿಯಂತಲ್ಲದಪಮೃತ್ಯು ಸಾರ್ಗೆಂದು
ಕ್ಷೀಣಮಂ ತೋಱಿ ನುಡಿವಂದದಿಂ ಕೋಪದೊಳು ಜಂಬಮರ್ದನ ನುಡಿದನು ೧೨

ಏನನಾಂ ಬೆಸಗೊಂಡಡೇನನಾಡುವಿರಿಳೆಯ
ಭೂನಾಥರೊಳು ಸತ್ಯರಾರೆಂದು ಬೆಸಗೊಂಡ
ಡೀ ನಾಡ ಮಾತು ಮಾಱುತ್ತರವೆ ಮುನಿಗಳಿರ ಎಂದು ಸುರಪತಿ ನುಡಿಯಲು
ಏನೆಂದಡಂ ಹರಿಶ್ಚಂದ್ರನೇ ಸತ್ಯಸಂ
ಧಾನನೆಂದಾ ವಸಿಷ್ಠಂ ನುಡಿಯಲಲ್ಲ ನಿ
ಲ್ಲಾನಱಿಯಲಾ ನೃಪನಸತ್ಯನಂತವನ ಮಾತೀ ಸಭೆಯೊಳೇಕೆಂದನು           ೧೩

ಇಳೆ ತಳಕ್ಕಿಳಿದು ಶಶಿ ಬಿಸಿಯಾಗಿ ಮೇರುಗಿರಿ
ಚಳಿಸಿ ರವಿ ಕಂದಿ ಜಲನಿಧಿ ಬತ್ತಿ ಶಿಖಿ ಹಿಮಂ
ದಳೆದ ದಿನದೊಳು ಸತ್ಯನಿಧಿ ಹರಿಶ್ಚಂದ್ರರಾಯನ ವಾಕ್ಯದೊಳು ಹುಸಿಗಳು
ಮೊಳೆಯವಿದು ನಿರುತವಾನಱಿಯಲಾತನ ಸತ್ಯ
ದಳವನಱಿವೊಡೆ ನೊಸಲ ಕಣ್ಣುಳ್ಳನಾಗಬೇ
ಕುಳಿದವರಿಗಳವಡದು ನೀನೇ ಪರೀಕ್ಷಿಸುವೆ ಕೇಳೆಂದನಾ ಮುನಿಪನು  ೧೪

ಇಂತಿವಕೆವರ್ಪಂದುತನಕವಂ ಸ್ಥಿರನೆಯಾ
ದಂತಿರ್ಕೆ ಸತ್ಯಮಾತ್ರದೊಳಿಪ್ಪುದೇಂ ಸತ್ಯ
ವಂ ತಳೆದುದಕ್ಕೆ ಸಾಧನವಾಗಿ ಬಿಡಬೇಹುದುಂಟವಂ ಬಿಡದಿರ್ದಡೆ
ಎಂತು ಹೇಳೆಂದಡವನುಸುರೆನಲು ಲೋಭವಾ
ರ್ತಂ ತೀವ್ರಭೀತಿ ನಿಷ್ಕರುಣ ಮೂರ್ಖತ್ವ ಜಾ
ಡ್ಯಂ ತನಗೆ ಬಿಡಬೇಹುದಲ್ಲೆಂಬಡಲ್ಲೆಂದು ನುಡಿಯೆಂದನಾ ಮುನಿಪನು     ೧೫

ಕನಕದಲಿ ಕಂಪ ಮಾಣಿಕ್ಯದಲಿ ರಸವ ಮು
ತ್ತಿನಲಿ ಮೃದುವಂ ದೀಪ್ತಿಯಲಿ ತಂಪನಮಳಚಂ
ದನದಲಿ ಬಿಸುಪ ನವ್ಯಕುಸುಮಂಗಳಲಿ ದನಿಯನಱಸುವುದು ಸಾಹಿತ್ಯವೆ
ಘನವಾದಿಯೆಂದಾಂ ಪೊಗಳ್ದೊಡದಱೊಳಾ
ತನನೀಕ್ಷಿಸುವುದಲ್ಲದೀ ಗುಣವನಱಸುವರೆ
ಮುನಿಪ ಹೇಳೆಂದಡೀ ಗುಣವಿಲ್ಲದಿರ್ದಡಂತದು ಸತ್ಯವಲ್ಲೆಂದನು            ೧೬

ಮುನಿವರ್ಗೆ ಬೆಂಗೊಡದ ದೆಸೆಯೊಳತಿಲೋಭಿ ದು
ರ್ಜುನರ ಮಾತಂ ಕೇಳದೆಡೆಯೊಳತಿಮೂರ್ಖ ಪರ
ವನಿತೆಯರ ನೋಡುವೆಡೆಯೊಳು ಭೀತನೀಶಭಕ್ತಿಯನು ಬಯಸುವ ದೆಸೆಯೊಳು
ವಿನುತಾರ್ಥಿ ವಿಬುಧಜನದಾರ್ತಮಂ ಕೊಲುತ ಬ
ರ್ಪನಿತಱೊಳು ನಿಷ್ಕರುಣಿ ತನುಧರ್ಮಪಥದೊಳೊ
ಯ್ಯನೆ ನಡೆಯಲಾಱನದಱಿಂ ಜಾಡ್ಯಮಿದಱೊಳಲ್ಲದೆ ಬೇಱೆ ತಲೆದೋಱವು          ೧೭

ಎಸೆವ ಮಗ್ಗನಿಲ್ಲದಡೆ ನರಕವಹುದೆಂದು ಚಿಂ
ತಿಸಿ ವರುಣನಲಿ ವರಂಬಡೆಯಲಾತನ ಯಾಗ
ಪಶುವ ಮಾಡುವೆನೆಂದು ಮರಳೀವೆಯಾದಡೀವೆನು ಮಗನ ನಿನಗೆಂದೆನೆ
ಶಿಶುವಾದನೆಂಬುದಾದಡೆ ಸಾಕೆನಲ್ ಕೊಡಲು
ಹುಸಿದಡವಿಗಟ್ಟಿ ಬೈಚ್ಬಿಟ್ಟನೆಂಬುದನಿಂತು
ಎಸೆವ ವೇದಂಗಳೊಳು ಕೇಳಿ ಪೊಗಳುವಡರಿದು ನಿನ್ನ ಧೀವಶವೆಂದನು         ೧೮

ಹಿರಿದು ಹುಸಿಗಬುಧಿಪತಿ ಮುನಿದು ಮಾಡಿದ ಜಳೋ
ದರವ ಭಾವಿಸದೆ ಕಂಗೆಟ್ಟ ಜಾಡ್ಯಂ ಮಹಾ
ಧ್ವರಕೆ ಪಶುವಂ ಮಗನ ಮಾಡಲಾಱದೆ ಮೋಹದಿಂದಜೀಗರ್ತಮುನಿಯ
ವರಸುತ ಶುನಶ್ಶೇಪನಂ ತಂದು ಯಾಗವಿಧಿ
ಗರಿದು ಬೇಳಲ್ಕೆ ಮನದಂದ ಪಾತಕನು ಭೂ
ವರನನೇತಕ್ಕೆ ಹೇಸದೆ ಹೊಗಳ್ವೆಯೆಂದು ವಾಸಿಷ್ಠನಂ ಕೆಡೆನುಡಿದನು           ೧೯

ಹಲವು ಮಾತೇಕಾ ಹರಿಶ್ಚಂದ್ರ ಭೂನಾಥ
ನೊಳಗಸತ್ಯವನು ಕಾಣಿಸಲು ಬಲ್ಲರು ಧಾತ್ರಿ
ಯೊಳು ಮುನ್ನ ಹುಟ್ಟಿದವರಿಲ್ಲಿನ್ನು ಹುಟ್ಟುವರ ಕಾಣೆ ನಾನಿದ ಬಲ್ಲೆನು
ಉಳಿದವರ ಹವಣಾವುದೆಂದು ವಾಸಿಷ್ಠಮುನಿ
ಕುಲತಿಲಕನೆನಲು ವಿಶ್ವಾಮಿತ್ರ ಮನದೊಳತಿ
ಮುಳಿದು ನಿಲ್ಲಾಡದಿರು ಬಾಯಿ ಹಿರಿದುಂಟೆಂದೆನುತ್ತ ಮತ್ತಿಂತೆಂದನು        ೨೦

ವನಧಿಪರಿಯಂತ ಧರೆಗರಸುತನವದಱ ಮೇ
ಲನುವುಳ್ಳ ಶಿಷ್ಯನಾಗಿಹನು ನಿನಗತಿವಿಪುಳ
ಧನವನಾರಾಧಿಸುವನಂತಲ್ಲದಾತನಾರೈಕೆಯೊಳಗಿಪ್ಪೆ ನೀನು
ಎನಿತನಗ್ಗಳಸಿ ಬಣ್ಣಿಸಲೊಪ್ಪದಯ್ಯ ಹೇ
ಳೆನಲು ರಾಜಪ್ರತಿಗ್ರಹದ ಬಲದವನೆ ನಾ
ನೆನೆ ಮುನಿಯಬೇಡಾತ ಹುಸಿದನಾದಡೆ ನಿನ್ನನೇಗೆಯ್ಯಬಹುದೆಂದನು          ೨೧

ಶ್ರುತಿ ಮತ ಕುಲಾಚಾರ ಧರ್ಮಮಾರ್ಗಂ ಮಹಾ
ವ್ರತವನುಷ್ಠಾನ ಗುರುವಾಜ್ಞೆ ಲಿಂಗಾರ್ಚನೋ
ನ್ನತತಪಂ ಬ್ರಹ್ಮ ಕರ್ಮಂ ಬೆಳೆದ ಪುಣ್ಯವೊಳಗಾದವಂ ತೊಱೆದು ಕಳೆದು
ಸತಿಯನುಳಿದತಿದಿಗಂಬರನಾಗಿ ಮುಕ್ತಕೇ
ಶಿತನಾಗಿ ನರಕಪಾಲದೊಳು ಸುರಯೆಱೆದು ಕುಡಿ
ಯುತ ತೆಂಕಮುಖನಾಗಿ ಹೋಹೆಂ ಹರಿಶ್ಚಂದ್ರ ಮಱೆದು ಹುಸಿಯಂ ನುಡಿದಡೆ         ೨೨

ಧರೆ ಗಗನವಡಸಿ ಕಾದುವಡೆಡೆಯಲಿಹ ಚರಾ
ಚರವೆಲ್ಲಿ ಹೊಗಲಿ ಮುನಿದಖಿಳಮಂ ಸುಟ್ಟೊಸೆದು
ಮರಳಿ ಹುಟ್ಟಿಸಬಲ್ಲ ಮುನಿಗಳಿಬ್ಬರ ಶಾಂತಿ ಸವೆದ ಕದನದ ಮುಖದಲಿ
ಇರಬಾರದೇಳಬಾರದು ನುಡಿಯಬಾರದಂ
ತಿರಬಾರದಹುದೆನಲುಬಾರದಲ್ಲೆನಬಾರ
ದೆರಡಱ ನಿರೋಧದಿಂದೊಡ್ಡೋಲಗಂ ಚಿಂತೆ ಮುಸುಕಿ ಸೈವೆಱಗಾದುದು     ೨೩

ಒಂದಕ್ಕೆ ಹಿತನುಡಿಯೆ ಪಕ್ಷವೆಂದೆರಡುವಂ
ಹಿಂದುಗಳೆದಿರಲುಪೇಕ್ಷಿತನೆಂದು ಜಱೆದೊಡೆ
ಮ್ಮಿಂದಧಿಕನೇ ಎಂದುಹೊಗಳ್ದೊಡುಪಚಾರವೆಂದೆತ್ತಿದಡೆ ಧೂರ್ತನೆಂದು
ನೊಂದು ಶಾಪವನೀಯದಿರರೆಂದು ಸುರಪನಾ
ನಂದರಸವಱತು ಬೆಱಗಿನ ಮೊಗದೊಳಿರಲು ನಾ
ರಂದ ಧಟ್ಟಿಸುತೆದ್ದು ಕೊಡು ವಸಿಷ್ಟಂಗೆ ಭಾಷೆಯನು ಕೌಶಿಕ ಎಂದನು       ೨೪

ಧರೆಯೊಳು ಚತುರ್ಯುಗಂಗಳು ಮರಳಿ ಮರಳಿ ಸಾ
ವಿರ ಬಾರಿ ಬಂದಡಜಗೊಂದು ದಿನವಾ ದಿನದ
ಪರಿ ದಿನಂ ಮೂವತ್ತು ಬರಲೇಕಮಾಸವಾ ಮಾಸ ಹನ್ನೆರಡಾಗಲು
ವರುಷವಾ ವರುಷ ಶತವೆಂಬುದೀ ಸುರಪತಿಗೆ
ಪರಮಾಯುವೀತನೀರೇಳ್ಭವಂ ಬಪ್ಪನ್ನೆ
ವರ ದೇವಲೋಕಕ್ಕೆ ಬಾರೆಂ ಪ್ರತಿಜ್ಞೆಯೆನಗೆಂದ ವಿಶ್ವಾಮಿತ್ರನು      ೨೫

ಹೊಟ್ಟೆ ನೊಂದಡೆ ತುಱಬ ಕೊಯ್ವವನ ಪಶು ಕಱುವ
ಮೆಟ್ಟಿದಡೆ ಗೂಳಿಯಂ ಸದೆವವನ ಸೂಳೆ ಮೊಱೆ
ಯಿಟ್ಟಡೂರಗುಸೆಯಂ ಮುಱಿವವನ ನಗೆಯ ಕತೆಯಂ ಕಾಣಲಾದುದಿಂದು
ನೆಟ್ಟನೆ ಹರಿಶ್ಚಂದ್ರ ಹುಸಿಕನಾದಡೆ ಸಾವು
ಗೆಟ್ಟರಧಿನಾಥನೀರೇಳ್ಭವಂ ನೆಱೆ ಸತ್ತು
ಹುಟ್ಟುವನ್ನಬರ ಸ್ವರ್ಗಂಬುಗೆನೆನಿಪ್ಪ ಬಿರುದರಿದರಿದು ನಿನಗೆಂದನು         ೨೬

ಭಕ್ತಿ ಶಮೆ ದಮೆ ಯೋಗ ಯಾಗ ಶ್ರುತಿಮತಮಯ ವಿ
ರಕ್ತಿ ಘೋರವ್ರತ ತಪೋನಿಷ್ಠೆ ಜಪ ಗುಣಾ
ಸಕ್ತತೆ ಸ್ನಾನ ಮೌನ ಧ್ಯಾನವಾಚಾರ ಸತ್ಯತಪ ನಿತ್ಯ ನೇಮ
ಯುಕ್ತಿ ಶೈವಾಗಮಾವೇಶ ಲಿಂಗಾರ್ಚನಾ
ಸಕ್ತಿಯಿಂ ಬೆಳೆದ ಪುಣ್ಯದೊಳರ್ಧಮಂ ಸುಧಾ
ಭುಕ್ತರಱಿಯಲು ಕೊಡುವೆನಾ ಹರಿಶ್ಚಂದ್ರ ಹುಸಿಯಂ ನುಡಿಯದಿರಲೆಂದನು            ೨೭

ಎಂದು ಭೂವರನಂ ಪರೀಕ್ಷಿಸುವೆಯೆನ್ನ ಮನ
ಬಂದ ದಿನಮೆನಿತು ಸೂಳಾತನೀ ಧರೆಯೊಳಿ
ಪ್ಪಂದುತನಕಾವಾವ ಪರಿಯೊಳು ಸಹಸ್ರವಿಧದೊಳು ದಿಟವೆ ದಿಟವೆಂದೆನೆ
ಹಿಂದುಗಳೆಯಲದೇಕೆ ನಡೆಯೆನಲು ನೀನಾಡು
ವಂದವನುವಾಗಿರದೆನುತ್ತ ಕೌಶಿಕನಣಕ
ದಿಂದಾಡಲೆಮ್ಮ ಕೂಡಿನಿತಣಕವೇಕೆಂದು ವಾಸಿಷ್ಠಮುನಿ ನುಡಿದನು            ೨೮

ಇನಿತು ಮುಳಿಸಾವುದು ಹರಿಶ್ಚಂದ್ರ ಭೂಭೂಜನ
ಮನೆಗೀಗಳಿಂತು ನೀ ಹೋಗಿ ಕೌಶಿಕನು ನೆ
ಟ್ಟನೆ ನಿನ್ನನಂತಿಂತು ಕೆಡಿಸಿದಪ ನೀನಾವ ಪರಿಯಲೆಚ್ಚತ್ತಿರೆಂದು
ನೆನಸಿಕೊಡು ಹೋಗೆಂದಡಾನಾಡವವನೆ ಹೇ
ಳೆನಲೆನ್ನ ಗಾಸಿಗಾಱದೆ ನೃಪಂ ಹುಸಿನುಡಿಯೆ
ಮುನಿತನವನೀಡಾಡಿ ಹೋಹಂತಿರಾದಪುದು ಹೋಗಿ ನೀಂ ಹೇಳೆಂದನು        ೨೯

ತರಣಿ ತೇಜಂಗೆಡದಿರಗ್ನಿ ಬಿಸುಪಾಱದಿರು
ಸರಸಿರುಹವೈರಿ ತಂಪಂ ಬಿಡದಿರೆಲೆಲೆ ಮಂ
ದರವೆ ಚಲಿಸದಿರೆಂದು ಬೋಧಿಸಲದೇಕೆ ನಿಜವಳಿವವೇ ಸುಮ್ಮನಿರಲು
ವರಹರಿಶ್ಚಂದ್ರ ಸತ್ಯಂಗೆಡದಿರೆಂದು ಬೋ
ಸರಿಸುವಂತಾಗಿ ಹುಸಿಯುಂಟೆ ಕೊಂಡೆಯವೆಮಗೆ
ಹಿರಿಯತನ ಕೆಟ್ಟಿಂತು ನುಡಿಯಲಹುದೇಯೆಂದು ವಾಸಿಷ್ಠ ಮುನಿ ನುಡಿದನು            ೩೦

ಸಿಡಿಲು ಹೊಡೆವಡೆ ಹಿಡಿದ ಕೊಡೆ ಕಾವುದೇ ಮುನಿದು
ಪೊಡವಿ ನುಂಗುವಡೆ ಮನ ತಾಂಗುವುದೆ ಕವಿದು ಹೆ
ಗ್ಗಡಲುಕ್ಕಿ ಜಗವ ಮೊಗೆವಡೆ ಮೆಳೆಗಳಡ್ಡಬರವೇ ಹೇಳು ಮುನಿಪ ನಿನ್ನ
ಬಡಬೋಧೆಗೀಧೆಗಳು ರಕ್ಷಿಸುವುವಲ್ಲ ನಾಂ
ಕಡುಮುಳಿದ ಬಳಿಕಲೇಗುವವು ನೀ ಹೇಳದಿ
ರ್ದಡೆ ಮದನಹರನಾಣಿ ಹೋಗೆಂದು ಕೌಶಿಕಂ ನುಡಿದನು ವಸಿಷ್ಠಮುನಿಗೆ      ೩೧

ಕುಲವ ನಾಲಗೆಯಱುಹಿತೆಂಬ ನಾಣ್ಣುಡಿಗಿಂದು
ನೆಲೆಯಾಯ್ತಲಾ ಬ್ರಹ್ಮ ಋಷಿಯಾದಡೊಳಗು ನಿ
ರ್ಮಳವಪ್ಪುದಯ್ಯ ನೀಂ ರಾಜರ್ಷಿ ಕೋಪಿಸದೆ ಧಟ್ಟಿಸದೆ ಕೆಡೆನುಡಿಯದೆ
ನಿಲಲೆಂತು ಬಲ್ಲೆಯೆನಲೆನ್ನ ನೀನೀಗ ಹೆ
ಪ್ಪಳಿಸದಾಡಿದೆಯೆಂದಡಹುದಹುದು ನಿನ್ನಲಿಹ
ನೆಲೆಯಾಡಿತೆನೆ ಕೌಶಿಕಂ ಕುಪಿತನಾದನದನಾವ ಕವಿ ಬಣ್ಣಿಸುವನು   ೩೨

ನುಡಿಯುರಿಯನುಗಳೆ ಕಣ್ ಕಿಡಿಗೆದಱೆ ವದನ ಕೆಂ
ಪಡರೆ ನಿಟಿಲಂ ಬಿಸಿಯ ಬಿಂದುವಂ ತಳೆಯೆ ಕೈ
ನಡುಗೆ ಪುರ್ಬಲುಗೆ ಮಿಸುಪಧರ ಜಡಿಯೆ ಲಾಕುಳ ಹೊಗೆಯ ಕಾಲ್ ಕುಂಬಿಡೆ
ತೊಡೆದ ಭಸಿತಂ ಧೂಮವಿಡೆ ಮೆಯ್ಯ ರೋಮ ಕೌ
ಱಿಡೆ ಕಮಂಡುಲ ಜಲಂ ತೆಕ್ಕ ತೆಕ್ಕನೆ ಕುದಿಯೆ
ಮೃಡನ ಹಣೆಗಿಚ್ಚು ಮುನಿಯಾದಂತೆ ಕೌಶಿಕಂ ಮುನಿದನು ವಸಿಷ್ಠಮುನಿಗೆ   ೩೩

ನೋಡು ನೋಡಿಂದೆನ್ನ ರಾಜಋಷಿಯೆಂದು ಕೆ
ಟ್ಟಾಡಿತಕ್ಕಾ ಹರಿಶ್ಚಂದ್ರ ನನಸತ್ಯನಂ
ಮಾಡಿಸುವೆನಧಿಕಪ್ರತಿಜ್ಞೆಗಳನಾಂತ ನಿನ್ನಂ ವ್ರತಭ್ರಷ್ಟನೆನಿಸಿ
ಱೋಡಾಡಿ ಕಾಡುವೆನೆನುತ್ತೆದ್ದು ಸಾವನೀ
ಡಾಡಿದವರೊಡೆಯನೋಲಗದಿಂದ ಹೊಱವಂಟ
ನಾಡಂಬರದ ಸಿಡಿಲು ಗಜಱಿ ಗರ್ಜಿಸಿ ಮೇಘದಿಂದ ಪೊಱಮಡುವಂದದಿ      ೩೪

ನಡೆದು ತನ್ನಾಶ್ರಮಂಬೊಕ್ಕು ಹಲುಮೊರೆವುತ್ತ
ಪೊಡವೀಶನಂ ಭಂಗಿಸುವುದಕ್ಕುಪಾಯಮಂ
ಬಿಡದೆ ಕೌಶಿಕ ನೆನೆಯುತಿರಲತ್ತಲೆದ್ದವನಿಪಂಗೆ ಸೂಚಿಸದೆ ಪೋಗಿ
ಮೃಡಮೂರ್ತಿ ವಾಸಿಷ್ಠಮುನಿ ನಿಜತಪೋವನದ
ನಡುವೆ ಸುಖದಿಂದಿರೆ ಹರಿಶ್ಚಂದ್ರಭೂಭುಜಂ
ಜಡಧಿ ಮುದ್ರಿತ ವಸುಧೆಯೆಲ್ಲವಂ ಪಾಲಿಸುತ್ತಿರ್ದನೇವಣ್ಣಿಸುವೆನು          ೩೫