ಸೂಚನೆ
ಜನಪತಿ ಹರಿಶ್ಚಂದ್ರ ಭೂಭುಜಂ ವನದೊಳಗೆ
ದಿನವ ತಿಂಗಳ ಕಳೆದು ಪುರದಿ ರಾತ್ರಿಯ ಚರಿಸಿ
ಇನನುದಯವಾಗಲೋಲಗವಿತ್ತು ಬೇಂಟೆಯವಸರಕೆ ತಾಂ ಪೊಱಮಟ್ಟನು

ಇದು ಬುದ್ಧಿಯೆಂದು ಮಂತ್ರಿಯ ಮಾತ ಕೈಕೊಂಡು
ಸದಳವೆಲ್ಲವ ನಿಜನಿವಾಸಕ್ಕೆ ಬೀಳ್ಕೊಟ್ಟು
ಪದಗತಿಗಳಲಿ ಗಮಿಸಿ ಹಡಪಾಳಿ ಕುಂಚ ಕಂಬಳಿಯ ಮಾನಿಸರಲ್ಲದೆ
ಕದನಗಲಿಗಳ ನಿಲಿಸಿ ಮುದವನೊಲವಿಂ ತಾಳ್ದು
ಸುದತಿಯರ ಮೇಳವಂ ಕಳಿದುಳಿದು ನಡೆಗೊಂಡ
ನುದಯದರವಿಂದಮಿತ್ರನ ತೆಱದಿ ರತ್ನಭೂಷಣದ ಕಾಂತಿಗಳೆಸೆಯಲು          ೧

ತೋರಹಾರದ ಜಳವಟಿಗೆಯ ಪದಕದ ಬಾಹು
ಪೂರಯದ ತೊಳತೊಳಗುವೆಳಮಾಣಿಕದ ಕರ್ಣ
ಪೂರದ ಮಹಾಮುದ್ರಿಕೆಗಳ ನವಮಣಿಮಕುಟಕೇಯೂರದಾಭರಣದ
ಸಾರಾಯ ಚಂದನೋದ್ವರ್ತದಿಂ ಕಕ್ಷದೊಳು
ಪೂರೈಸಿದಚ್ಚಸಾದನು ತೀವಿ ಬಳಿದು ಕಿವಿ
ಮೇರೆ ಮುಸುಕಿರ್ದ ಮೃಗಮದಸೊಬಗನಡಿಯಿಟ್ಟನಪ್ರತಿಮನವನೀಶನು     ೨

ಇಟ್ಟ ಕತ್ತುರಿಯ ತಿಲಕದ ಕಪೋಲದೊಳು ಜೌ
ಗಿಟ್ಟೊಸಱುವಂತೊಟ್ಟಿಕೊಂಡ ಪುಣುಗಿನ ಕಂಪ
ನೊಟ್ಟೈಸಿ ತುಱುಗಿದ ಕದಂಬಕುಸುಮಕ್ಕೆಱಗಿ ಮಂಡಳಿಪ ಮಱಿದುಂಬಿಯ
ಉಟ್ಟಧವಳಾಂಬರದ ಹಡಪಿಗನ ಕಯ್ಯೊಳಳ
ವಟ್ಟ ವೀಳೆಯದ ಚೆಲುವಾವರಿಸೆ ಮನ್ಮಥನ
ಕಟ್ಟಿದಲಗಿನ ತೆಱದಿ ಬಂದು ಪುರವೀಥಿಯಂ ಪೊಕ್ಕನಂದವನೀಶನು೩

ಪುರವನೊಲವಿಂ ಪೊಕ್ಕು ಹತ್ತೆಂಟು ಮಂತ್ರಿಗ
ಳ್ವೆರಸಿ ಪೊಱಮಟ್ಟು ಜಾಣಿನ ಜನ್ಮಭೂಮಿ ಸಿಂ
ಗರದ ಮಡು ಮೋಹನದ ಬೀಡು ಸೊಬಗಿನ ಸೀಮೆ ವಿತತಚದುರಿನ ಚಾವಡಿ
ಪುರುಡಿನೆಡೆಯುಪಚಾರದಿಕ್ಕೆ ವೈಸಿಕದ ಹರ
ವರಿ ಹುಸಿಯ ಹಸರ ಕೃತಕದ ಕೇರಿಯರ್ಥದಾ
ಗರವಳುಪಿನಾವಾಸವೆಂದೆನಿಪ ಸೂಳೆಗೇರಿಯ ಹೊಕ್ಕನವನೀಶನು    ೪

ಓರಣದ ತೋರಣದ ಮೆಱೆದ ಮುತ್ತಿನ ಮತ್ತ
ವಾರಣದ ಮಂಟಪದ ಲೋವೆಗಳ ದೆಸೆಯ ಚೌ
ಭಾರದುಪ್ಪರಿಗೆಗಳ ತರತರದ ಭವನಿಕೆಯ ನೆಲೆನೆಲೆಯ ಕರುಮಾಡದ
ಚಾರು ಭದ್ರಂಗಳ ಸುಧಾವೇದಿಕೆಗಳ ವಿ
ಸ್ತಾರವೆಡೆಗಿಱಿದ ಹೊಂಗಳಸದ ತೆರಳ್ಕೆಗಳ
ಕೇರಿಯೊಯ್ಯಾರಂ ಕುಬೇರನಳಕಾಪುರಿಯನೇಳಿಸಿತ್ತೇವೊಗಳ್ವೆನು    ೫

ಪಳುಕಿಂದ ನಯವಡೆವ ನೆಲೆಗಟ್ಟು ಶಶಿಕಾಂತ
ದಳವಟ್ಟ ಭಿತ್ತಿ ವಜ್ರದ ಕಂಬ ವಿದ್ರುಮದ
ತೊಲೆ ಪುಷ್ಯರಾಗಮೊಪ್ಪುವ ಜಂತೆ ಮರಕತದ ಲೋವೆ ಮುತ್ತಿನ ಸೂಸಕ
ಹೊಳೆವ ಮಾಣಿಕದ ಕಲಶಂಗಳೋವರಿಯೊಳಗ

ಕಳಹಂಸಗಮನದಾ ಕಲಶಕುಚ ಕಮಲಮುಖ
ದೊಳುನುಡಿಯ ಚಲನಯನದರುಣಾಧರೆಯರ ಸುಳಿವಂ ಕಂಡನವನೀಶನು    ೬

ತೆಳುಗಾಳಿಗೊಲೆವ ಮೇಲುದುಗುಡಿ ಚಲಾಳಕಂ
ಗಳು ತೋರಣಂ ಕುಚಂ ಮುಖ ಮುಕುರ ಕರ
ತಳ ತಳಿರು ನಖ ಕುಸುಮತೊಡಿಗೆಗಳ ಮುತ್ತು ನನೆಯಕ್ಕಿ ಪುರ್ಬಿಕ್ಷುದಂಡ
ಬಳಸಿ ಮುಡಿಗಂಪಿಂಗೆ ಮಂಡಳಿಸುವಳಿ ಹೀಲಿ
ದಳೆ ಕಂಕಣಂಗಳ ಝಣತ್ಕಾರ ವಾದ್ಯ ಸಂ
ಕುಳಮಾಗೆ ಬಪ್ಪ ಭೂಪನನಿದಿರ್ಗೊಂಬಂತಿರೆಸೆದರಂತಾ ಸತಿಯರು೭

ಉಟ್ಟ ಧವಳಾಂಬರದ ಸುಲಿಪಲ್ಲ ಮೆಯ್ಯೊಳ
ಣ್ಪಿಟ್ಟ ಗಂಧದ ಮುಡಿಯ ಮಲ್ಲಿಗೆಯ ನಗೆಮೊಗದ
ತೊಟ್ಟ ಮುತ್ತಿನ ತೊಡಿಗೆಗಳ ಬೆಳಗು ದೆಸೆಯ ಪಸರಿಸಿ ಪರ್ಬಿ ಬೀದಿವರಿಯೆ
ದಟ್ಟೈಸಿ ಬಳೆದ ಬೆಳುದಿಂಗಳಿಂ ಬೆಳುಮುಗಿಲ
ಮೆಟ್ಟಿರ್ದ ಚಂದ್ರಕಳೆಯೆಂದೆಂಬ ಭಾವವಳ
ವಟ್ಟ ಬಿಳಿಯುಪ್ಪರಿಗೆಯಗ್ರದೊಳು ನಿಂದೊರ್ವ ಸತಿ ಕಣ್ಗೆ ಸೊಗಯಿಸಿದಳು೮

ಗಡಣದುಪ್ಪರಿಗೆಗಳೊಳುಱೆ ನೆತ್ತ ಚದುರಂಗ
ವಿಡಿದ ವೀಣೆಗಳನಭ್ಯಾಸಿಸುವ ಗಿಳಿಗಳಂ
ನುಡಿಯಿಸುವ ಕಾಮಶಾಸ್ತ್ರವನೋದಿಸುವ ಗೀತನೃತ್ಯವಾದ್ಯಗಳ ಕಲಿವ
ಕಡೆಗೆ ವೇಶ್ಯಾವಿಡಂಬನವಱಿವ ಕಥೆಗೇಳ್ವ
ಬಿಡದೆ ಸಿಂಗರಿಸಿ ನಲ್ಲರ ಗೋಷ್ಠಿಯೊಳಗಿಪ್ಪ
ಮಡದಿಯರನೀಕ್ಷಿಸುತಲವನೀಶನೆಯ್ತಂದನಾ ಸೂಳೆಗೇರಿಯೊಳಗೆ    ೯

ತುಂಬಿ ತುಂಬಿಯನಟ್ಟುವಂತಳಕವಳಕವರ
ಲಂಬಂಬ ತೆವಱುವಂತಕ್ಷಿಯಕ್ಷಿಗಳಿಂದು
ಬಿಂಬ ಬಿಂಬವ ತಗುಳ್ವಂತೆ ಮುಖ ಮುಖವನೆಳಲತೆಯ ಕುಡಿಲತೆಯ ಕುಡಿಗೆ
ಲಂಬಿಪೊಲು ತೋಳು ತೋಳನು ಚಕ್ರ ಚಕ್ರವನು
ಬೆಂಬಿಡಿವವೊಲು ಕುಚ ಕುಚಂ ಹಂಸೆ ಹಂಸೆಗ
ಟ್ಟುಂಬರಿವವೊಲು ಪದ ಪದಂ ಮೆಱೆಯೆ ಚಿಟ್ಟುಮುರಿಯಾಡುತಿರ್ದರು ಸತಿಯರು   ೧೦

ಮುಡಿಯ ಪರಿಮಳದೊಡನೆ ಮಱಿದುಂಬಿಗಳು ಪರಿಯೆ
ನಡೆವ ನಟಣೆಗಳೊಡನೆ ಹಂಸೆಗಳು ಜಡಿಜಡಿದು
ನುಡಿವ ಚದುರುಗಳೊಡನೆ ಗಿಳಿಗಳೊಯ್ಯನೆ ಕುಣಿವ ಕುಚದೊಡನೆ ಕೋಕಂಗಳು
ಒಡಲ ಚೆಲುವುಗಳೊಡನೆ ನೋಟಕರ ದಿಟ್ಟಿಗಳು
ಬಿಡದೆ ಕೊಲ್ಲಣಿಗೆವರಿದೆಡೆಯಾಡುತಿರಲಿಂತು
ಮಡದಿಯರು ಕೋಲಾಟವಾಡುತಿರ್ದರು ತೋಳಗತಿಬಂಧವಿವರಣೆಯೊಳು   ೧೧

ಆಂದುಗೆಯ ಮಂಟಗೆಯ ಕಂಕಣದ ಝಣರವದ
ಗೊಂದಳಿಪ ಬಳೆಯ ಕಿಂಕಿಣಿಯ ಗೆಜ್ಜೆಯ ರವದ
ಸಂದಣಿಪ ಕುಚಮಧ್ಯದೆಡೆಯೊಳೊಪ್ಪುವ ಹಾರವೊಲೆದಾಡೆ ನಳಿತೋಳಿನ
ಬಂದಿ ಕೀಲಣದ ಹೊಂಬಳೆ ಕಡಗ ಸೂಡಗದ
ಮುಂದೆಸೆವ ಕಂಕಣದವೋಲೆ ಮುತ್ತಿನ ಕೊಪ್ಪಿ
ನಿಂದೆಸೆವ ಕಾಂತೆ ಮಾಳಿಗೆಯ ಭದ್ರದ ಬಯಲೊಳಾಡಿದಳು ಹೊಡೆಸೆಂಡನು   ೧೨

ಮುಡಿ ಜಡಿಯೆ ಕುಂತಳಂ ಕುಣಿಯೆ ಕಡೆಗಣು ಹೊಳೆಯೆ
ನಡು ನಳಿಯೆ ಕರ್ಣಪಾಳಿಕೆಯೊಲೆಯೆ ಹಾರ ಹೊಳೆ
ದೆಡೆಯಾಡೆ ಲಂಬಿಸುವ ಮೇಲುದಿನ ತೆಱಪಿನೊಳು ಮೊಲೆಗಳಲುಗಲು ಬಾಗಿದ
ಒಡಲು ಶೋಭಿಸೆ ತಪ್ಪು ತಡೆಮೆಟ್ಟುವಡಿಗಳೊಡ
ನೊಡನೆ ನೇವುರ ಝಣಂ ಝಣಮೆನಲು ವನಿತೆಯರ
ನಡುವೆ ಚೆಂಡಂ ಹೊಯ್ಯುತಿರ್ದಳೊಬ್ಬಳು ಕಾಮನಂಕಮಾಲೆಯ ಪಾಡುತ   ೧೩

ಮನಸಿಜನ ಬರವಿಂಗೆ ತೋರಣಂಗಟ್ಟಿದಳೊ
ವಿನಯದಿಂ ರತಿದೇವಿಯೆಂಬಂತೆ ಮುಱಿದ ಮು
ತ್ತಿನ ಮಿಳಿಯ ಪಚ್ಚೆಯಿಂ ಸವೆದ ಕಂಬದ ಪದ್ಮರಾಗವಳವಟ್ಟ ಮಣೆಯ
ಘನಮಹಿಮೆವಡೆದುಯ್ಯಲಂ ಹರುಷದಿಂದ ಜ
ವ್ವನೆಯರೇಱಿದರೊಲೆದರಾ ಹರಿಶ್ಚಂದ್ರ ಭೂ
ಪನ ಬಿರುದಿನಂಕಮಾಲೆಯನು ಪಾಡಿದರು ನಾಲ್ಕುಂ ಜಾತಿಯಂಗನೆಯರು    ೧೪

ಜಗವಱಿಯೆ ತಾಂ ಕಳಂಕಂ ಕಳಾಹೀನ ಹಾ
ವಗಿದುಗಿದ ವಿಷವಕ್ತ್ರ ದೋಷಿಯಸ್ಥಿರ ಹಂದೆ
ಮೃಗದಿಕ್ಕೆಗಾಡು ಹುತ್ತಿಟ್ಟಡವಿಯಾಲ ಹಬ್ಬಿದ ಹಾಳು ಶ್ವೇತಾಂಗನು
ಮಿಗೆ ತನ್ನ ದೆಸೆಯೆಲ್ಲ ತಂಪಂಜದಿಂದೆನ್ನ
ಮೊಗಸಸಿಯ ಮುಂದೊಗೆದನೆಂದು ಕೋಪದಿ ಶಶಿಯ
ನೆಗೆದು ದಾಳಿಟ್ಟೊದೆವ ಮಾಳ್ಕೆಯಿಂದೊದೆದಳುಯ್ಯಲಮಣೆಯನೊಬ್ಬ ವನಿತೆ         ೧೫

ಮುಡಿಯ ಭಾರಕ್ಕೆ ಕೊರಲೆಸೆವ ಕುಚಭಾರಕ್ಕೆ
ಬಡನಡುನಿತಂಬಭಾರಕ್ಕೆಸೆವ ಬಟ್ಟನು
ಣ್ದೊಡೆ ಚೆಲುವನಾಂತವಯವದ ಸೌಕುಮಾರತೆಯ ಭಾರಕ್ಕೆ ಸರ್ವಾಂಗವು
ಬಿಡದೆ ಮುನ್ನವೆ ಬಳಕುತಿವೆಯಿವಱ ಮೇಲಿವಳು
ತೊಡಿಗೆದೊಟ್ಟಳು ಬೇಡೆನಲ್ಕಿನ್ನು ಮಾಣಳಿವ
ಸಡಿಲಿಸುವ ಬುದ್ಧಿಯಿನ್ನಾವುದೆನುತವರಬ್ಬೆ ನೆನೆದುಪಾಯಂಗಂಡಳು         ೧೬

ಸಿಂಗರಿಸಿ ಹೊರಗಿರದಿರೆಲೆ ಮಗಳೆ ನಿನ್ನ ಚೆಲು
ವಿಂಗೆಳಸಿ ನೋಡಿದರ ಕಣ್ಣೇಱಿನಿಂದ ನಿ
ನ್ನಂಗಲತೆ ಬಡವಾದಡದನಱಿಯದವರಿವಳು ರೋಗಿಯೆಂದೇ ಬಗೆವರು
ಕಂಗೆಸೆವ ಚಂದ್ರಮನ ನಡುವಿರ್ದ ಚೆಲುವ ಹು
ತ್ತಿಂಗೆಳಸಿ ಫಣಿಬಂದ ತೆಱದೊಳಿರೆ ಬಾಸೆ ಲೋ
ಕಂಗಳಱಿಯದೆ ಸರ್ಪದಷ್ಟವಾಯ್ತೆಂಬರೆಂದವಳು ಪೇಳಿದಳಾಗಳು  ೧೭

ನಿನ್ನ ಮುಖಕಮಲ ಕಮಲದೊಳೊಗೆದ ಕಮಲಮಂ
ನಿನ್ನಕ್ಷಿಕುವಲಯಂ ಕುವಲಯದ ಕುವಲಯವ
ನಿನ್ನ ರೂಪ ಲತಾಂತ ಶರಲತಾಂತದೊಳು ಹುಟ್ಟಿದ ಲತಾಂತಶರಾಳಿಯ
ನಿನ್ನ ಕುಚಕುಂಭ ಕುಂಭಿಯ ಕುಂಭಯುಗಳಮಂ
ನಿನ್ನ ತನುಮಧ್ಯವತನು ತನುವಂ ನಗುವು
ದಿನ್ನಾವುದುಪಮಾನವೆಂದು ಜಱಿವುತ್ತೊಬ್ಬ ಜಾಣೆ ಮಗಳಂ ಹೊಗಳ್ದಳು  ೧೮

ಹಾಡಳೆಳಗೋಗಿಲೆಯ ದನಿ ಕೆಡುವುದೆಂದು ಮಾ
ತಾಡಳರಗಿಣಿಯ ಚಪಲತೆ ಕೆಡುವುದೆಂದು ನಡ
ಪಾಡಳೆಳಹಂಸೆಗಳ ನಡೆಯ ಗತಿ ಕೆಡುಗೆಂದು ಮುಸುಡುದೆಱೆದಂಗಣದಲಿ
ಆಡಳಿಂದುವಿನ ಸೊಬಗಳಿಗೆಂದು ಮುಡಿಯನ
ಲ್ಲಾಡಳೆಳನವಿಲ ಚೆಲುವಳಿಗೆಂದು ಕಂದೆಱೆದು
ನೋಡಳುತ್ಪಳದ ಸಿರಿಯಳಿವುದೆಂದೆನ್ನ ಮಗಳೆಂದೊಬ್ಬ ಸತಿ ನುಡಿದಳು      ೧೯

ಈ ನಗರಿಯೊಳಗೆನ್ನ ಮಗಳಿಗೆಣೆಯಿಲ್ಲ ಸು
ಮ್ಮಾನಿ ಸನ್ಮಾನಿಯಭಿಮಾನಿ ಕಡುನೀಱೆ ಕಮ
ಲಾಲನೆಯ ರೂಹಿಂಗೆ ಸರಿಯಪ್ಪ ವಿಟರ ನಾನಾರುವಂ ಕಂಡುದಿಲ್ಲ
ನೀನೊಬ್ಬನಾದೆ ಮೆಚ್ಚಿಸಿ ಮರುಳ್ಗೊಳಿಸಿ ನಿನ
ಗೇನುಳ್ಳವಸ್ತುವಂ ತಂದಿಕ್ಕಿ ಭೋಗಿಪುದು
ಹೀನಮನ ಬೇಡ ಬಾ ಭುಜಗಯ್ಯಯೆಂಬ ಮುದಿಪಾಱಿಯಿರಲೊಂದೆಸೆಯೊಳು          ೨೦

ನೆರೆದ ಮಿಂಡರೊಳಧಿಕದೊಡಲನಿಕ್ಕು ಬೋ
ಸರಿಸಿಕೊಳ್ಳೊತ್ತೆಯಂ ತೆಗೆಯದವನರ್ಥಮಂ
ತಿರಿದುಣಿಸುವನ್ನವೊಲಿದವಳಂತೆ ಮುನಿದು ಮುದ್ದಿಸಿ ಜಱೆದು ಕಾಲ್ವಿಡಿವುದು
ಹುರುಡಿಸುವುದಳುವುದೊಳಗಾದ ಹವಣಱಿದು ಗೋ
ಣ್ಮುರಿಗೊಂಡು ಹಣದಿಂಬುದೊಬ್ಬನೊಳಿರದಿರೆಂದು
ತರುವಲಿಗೆ ಕಲಿಸಿದಳು ಮುದಿಸೂಳೆ ಹುಲಿಮಱಿಗೆ ಬೇಂಟೆಯಂ ಕಲಿಸುವಂತೆ೨೧

ಇಂಬುಳ್ಳ ಸುಲಭನೆಂದೊಲಿದೆಯೆಲೆ ಮಗಳೆಯಾ
ಡಂಬರದ ಚದುರನವನೊಡವೆ ನಿರ್ಮಳಜಲಂ
ತುಂಬಿದ ತಟಾಕದೊಳು ಹೊಳೆವ ಮಣಿಬೀಟೆಯೊಳು ಬಿದ್ದ ಹಣ ಗೆಜ್ಜೆಯೊಳಗೆ
ಲಂಬಿಸುವ ಹರಳು ಕಲ್ಲಿಯನೆಲ್ಲಿಯಿನ್ನವನ
ನಂಬದಿರು ನೆಚ್ಚದಿರು ಬೇಡೆಂದೊಡೆನ್ನ ಮಾ
ತಂ ಬಗೆಯ ಕೈಕೊಳ್ಳೆಯೆಂದೊಬ್ಬ ಮುದಿಸೂಳೆ ತರುವಲಿಗೆ ಹಲುಮೊರೆದಳು           ೨೨

ನೋಡದಿರ್ದಪೆನೆಂಬೆ ಕಣು ನೋಡದಿರವು ಮಾ
ತಾಡದಿರ್ದಪೆನೆಂಬೆ ಬಾಯ್ ಮಿಡುಕದಿರದು ನಗೆ
ಗೊಡದಿರ್ದಪೆನೆಂಬೆ ಮುಸುಡು ನಗದಿರದು ಮೈಯೊಡ್ಡಿ ಕುಳ್ಳಿರೆನೆಂದೊಡೆ
ನಾಡೆ ತನು ಮೇಲ್ವಾಯದಿರದು ಸಂಚಂದೋಱಿ
ಕೂಡೆನೆಂದೊಡೆ ಕಳೆಗಳುರವಣಿಸದಿರವೇನು
ಮಾಡುವೆಂ ಮುನಿಸು ನೆಲೆಗೊಳ್ಳದವನಂ ಕಂಡೊಡೆಂದೊಬ್ಬ ಸತಿ ನುಡಿದಳು            ೨೩

ತಂಗೆ ತಲೆವೀದಿಯಂ ತೊಡೆಯದಿರು ಕೂಡೆ ಚಳೆ
ಯಂಗೆಯ್ದಲಂಕರಿಸು ಹೊಱಗನಱಿವರು ಭೋಗ
ಕಂಗವಿಸೆ ಮನೆಯೊಳಗೆ ಹೊಗೆ ಮಾಡದಿರು ಬಳಿಕ್ಕವರು ಕಂಡಡೆ ನಗುವರು
ಸಂಗಕ್ಕೆ ಹಿರಿಯರಂ ಕರೆ ನೀರ ತಾ ಮುಖಕೆ
ಹಿಂಗದಿರು ಹಣವ ಹಡೆ ಮಿಗೆ ಮೊಗಸಿ ಜಾತಿಗೊ
ಯ್ಕಂಗೆಳಸದಂತಿರೆಂದೆಳೆಯಳಿಗೆ ಕಲಿಸಿದಳು ತೊತ್ತ ನಡೆಸುವ ನೆವದಲಿ         ೨೪

ಉಟ್ಟ ನಿಱಿ ದಾಂಟಿದಡೆ ಕಚ್ಚುವುದೆ ದೈವಮಂ
ಮುಟ್ಟದಡೆ ಬೆರಳು ಹತ್ತುವುದೆ ಬಳಿನೀರ್ಗುಡಿಯೆ
ಹೊಟ್ಟೆ ಹಱಿವುದೆ ನೆಲನ ಮಾಱಪ್ಪೆ ನುಂಗುವುದೆ ತಾಯ ವಧಿಸಿದೆನೆಂದಡೆ
ನೆಟ್ಟನಾ ಸತ್ತವಳೆ ಸೋದರಕ್ಕೆಳಸಿ ಕ
ಣ್ಣಿಟ್ಟೆನೆನಲಿಟ್ಟವಳೆ ಸೂರುಳಿದು ನೆಱೆ ಬಾಯ
ಕಟ್ಟ ಹಣವಂಕೊಳಲು ಕಲಿವುದೆಂದೊಬ್ಬ ಕುಂಟಣಿ ಮಗಳನೋದಿಸಿದಳು    ೨೫

ಅತಿಮುಗುದೆಯಪ್ಪೆನ್ನ ಮಗಳ ಕಾಮಜ್ವರೋ
ರ್ಜಿತತಾಪವಾಱಿದಡೆ ಕಾಮನಂ ನೋನುವೆಂ
ರತಿಯನರ್ಚಿಸುವೆ ಶಶಿಗರ್ಘ್ಯವೆತ್ತುವೆನು ಬೆಳುದಿಂಗಳಂ ಬೇಡಿಕೊಂಬೆ
ಲತೆಗೆ ನೀರೆಱೆವೆನೆಳಮಾವ ಬಲಗೊಂಬೆನು
ನ್ನತನವಿಲು ಗಿಳಿ ಕೋಗಿಲೆಗೆ ಕುಟುಕನೀವೆನೂ
ರ್ಜಿತ ವಸಂತದೊಳು ಕಾಮಚ್ಛತ್ರವಿಡುವೆನೆಂದಜ್ಜಿ ಹರಸುತ್ತಿರ್ದಳು           ೨೬

ಮಸಿಗಪ್ಪಡವನಡಸಿ ತುಱುಬಿಟ್ಟು ನರೆದಲೆಗೆ
ಮುಸುಕಿಟ್ಟು ಬಿದ್ದ ಪೆರ್ಮೊಲೆಗಳಿಗೆ ಱವಕೆಯಂ
ಸಸಿನೆ ಬಿಗಿದೆವೆಯುದಿರ್ದ ಕಣ್ಗೆ ಕಾಡಿಗೆಯೆಚ್ಚಿಸದೆಸೊಪ್ಪನಣಲೊಳಡಸಿ
ಮುಸುಡುಗಾಣದ ತೆಱದಿ ಹಿಂದೆ ಸೊಡರಿಟ್ಟು ನೆಱೆ
ನಸಿದ ರಾಗದಿ ಕೊಳೆತ ಹಾಡ ಬಗುಳುತ ಗಂಡು
ವೆಸರು ಸುಳಿಯಲ್ಕೆ ಬಾರೆನ್ನಾಣೆಯೆಂಬ ಮುದುಪಾಱಿರ್ದಳೊಂದೆಸೆಯೊಳು೨೭

ನೊರಜುಗಣ್ಣಿನ ನಳಿದ ಮೂಗಿನೆಳಲುವ ತುಟಿಯ
ಕುರುಟುವಲ್ಲಿನ ಕರಿಯ ಕಬ್ಬಾಯವೊಳಸರಿದ
ಹಱಿದಲೆಯ ಬೆಂಗಡರ್ದ ಮುಸುಡ ಸುಬ್ಬುರವಡೆದ ಗಲ್ಲ ಕೊಂಕಿದ ಕೊಡಕೆಯ
ಮುರುಟಿರ್ದ ಮಾಲೆಯ ಮೆಯ್ ಸೆರೆಬಿಗಿದ ಹೊಟ್ಟೆ ತೆರೆ
ತೆರೆಗೊಂಡು ಸುಕ್ಕಿರ್ದ ತೊಗಲ ನಾಱುವ ಬಾಯ
ನೊರೆಸೂಸುತಿರ್ದಳಾ ಮುಸುಕಿಟ್ಟು ತಾನೊಂದು ಸಂದುಗೊಂದಿಯ ಮಱೆಯೊಳು     ೨೮

ಕಂಕಣಂಗಳ ತೋಳಬಂದಿಗಳ ಕಟಿತಟದ
ಕಿಂಕಿಣಿಯ ನೇವುರದ ಮುದ್ರಿಕೆಯ ಕಳನಾದ
ಮಂ ಕಟ್ಟಿ ಮನೆಯವರ ಮಱಪಿಟ್ಟು ಮುಸುಕಿಟ್ಟು ಪೊಱಮಟ್ಟು ಸುಳಿವ ಜನಕೆ
ಶಂಕಿಸುತ ನೆಳಲ ದೆಸೆಯಂ ಸಾರ್ದು ನಡೆಯುತುಲು
ಹಂ ಕೇಳ್ದು ನಿಲುತೊರ್ವ ಜಾರೆ ಜಾರಂ ಪೇಳ್ದ
ಸಂಕೇತದತ್ತಲಾರುಂ ಕಾಣರೆಂದು ನಲಿಯುತ್ತ ಬರಲೇನಾದುದು     ೨೯

ನಡೆಗಂಡು ಕವಿವ ಕಳಹಂಸೆಯಂ ಜಡಿವ ಸವಿ
ನುಡಿಗೇಳ್ದು ಮುತ್ತುವರಗಿಳಿಗಳಂ ಕೊಡಹಿ ಮುಸು
ಕೊಡನಳಿಯೆ ತೊಡೆದ ಪರಿಮಳಕಳಿಕುಳಂ ಮುಸುಱೆ ಕುರುಳ್ಗಳಂ ಬಿಚ್ಚಿಮುಡಿವ
ಮುಡಿಗೆ ನವಿಲಡರೆ ಹೊದಕೆಯನು ಬಿಸುಟೋಡುವಡಿ
ಗಡಿಗೆ ದನಿಗೆಯ್ಯೆ ಕೋಗಿಲೆಯುಲಿದು ಲಜ್ಜೆಯಂ
ಕೆಡಿಸಿ ರಚ್ಚೆಗೆತಂದವನ್ಯಾಯವಿನ್ನುಳಿದ ನರರೊಳಾವಂ ಹಿತವನು   ೩೦

ಎಳಸಿ ಕೀಳಿಲೊಳು ಹಿತ್ತಿಲೊಳು ಕೊಟ್ಟಿಗೆಯೊತ್ತು
ಗಳೊಳು ಭಿತ್ತಿಯ ಮಱೆಗಳೊಳು ಸಂದಿಯೊಳು ಗೊಂದಿ
ಗಳೊಳಿಡಿದ ಮರಗತ್ತಲೆಯ ನೆಲೆಯೊಳೊಱಗಿರಲು ಮುಳು ತೆವರು ಕುಳಿಯೆನ್ನದೆ
ಎಳೆಯ ನುಡಿ ನಸುಚುಂಬನಂ ಸೂಸದುಸುರು ಸೊ
ಪ್ಪುಳು ನುಡಿದು ಗಾಸಿ ನಡದುಗುರು ಸಡಿಲಿಸದುಡಿಗೆ
ಗಳೊಳು ನೆರೆನೆರೆದು ಕತ್ತಲೆ ಹರೆಯ ಹರಿಯುತಿಹ ಜಾರೆಮಿಥುನವ ಕಂಡನು  ೩೧

ತಡಹುತ್ತ ಹರೆದ ಮುಂದಲೆಯನುಬ್ಬಿದ ತುಟಿಯ
ನೊಡೆಗಚ್ಚುತುಸುರನೊಳದೆಗೆವುತ್ತ ಬಾಗಿ ತೋ
ಳ್ತೊಡೆಯ ನಖ ಗಂದೆಗಳನೊಱಸಿಕೊಳುತೆದೆಯ ಕಿಱುಬೆಮರುಗಳನೂದಿಕೊಳುತ
ಮುಡಿಯರಳ ಚೆಲ್ಲುತ್ತಲಣಲ ತಂಬುಲವುಗುಳ್ದು
ನಿಡುಮುಸುಕನಿಡುತುರವಣಿಸಿ ನಡೆಯುತುಲಿಗೇಳು
ತಡಿಗಡಿಗೆ ನಿಲುತ ಹಿತ್ತಿಲದಾರಿಯಿಂದೊಳಪೊಗುವ ಜಾರೆಯರ ಕಂಡನು       ೩೨

ಅಳಿದ ಮುಡಿ ಹರೆದಳಕ ತೊರೆದಧರ ನಸು ತಿಲಕ
ಬೆಳರ್ಗೆಂಪುವಿಡಿದ ಕಣ್ಣಾಱದ ಬೆಮರ್ ಪುದಿದ
ಪುಳಕತತಿ ಹೊಯ್ವಳ್ಳೆ ಬಿಗುಹುಗುಂದಿದ ಕುಚಂ ಬೆಳರ್ತ ಮುಖ ನಖಹತಿಯಲಿ
ಮೊಳೆತ ಬಾಸುಳು ಹೊಯ್ದ ಹೂಮಾಲೆಗಳ ಗಂದೆ
ಯಳವುಗೆಟ್ಟದಟು ಸಾಗಿಸುವುಡಿಗೆಗಳ್ವೆರಸಿ
ತೆಳುಗಾಳಿಯಂ ಬಯಸಿ ಭದ್ರದೊಳು ಚರಿಸುವ ರತಾಂತಸತಿಯರ ಕಂಡನು     ೩೩

ಪುದಿದ ಕಣು ಮುಸುಕಿದ ಮುಖೇಂದು ಮುಡಿಗಟ್ಟು ಮುಸು
ಕಿದ ಬೆನ್ನ ತೆಱಹು ಮೊಲೆಮುಸುಕಿದುರ ಬಾಸೆ ಮುಸು
ಕಿದ ನಡು ನಿತಂಬ ಮುಸುಕಿದ ವಿಪುಳಪೊಱವಾಱು ಮಂದಗತಿ ಮುಸುಕಿದ ಪದಂ
ಚದುರು ಮುಸುಕಿದ ಮಾತು ಸೊಗಸು ಮುಸುಕಿದ ಸರಂ
ಸದಮಲಾಭರಣ ಮುಸುಕಿದ ಮೆಯ್ ವಿಳಾಸ ಮುಸು
ಕಿದ ನಿಲವು ಮೋಹನಂ ಮುಸುಕಿದಾಕಾರವೆಸೆವಬಲೆಯರು ಕಣ್ಗೆಸೆದರು        ೩೪

ಹುರುಡು ಹೋರಟೆ ಹೊತ್ತು ಜೊತ್ತು ಗನ್ನಂಗತಕ
ಪರಿರಂಭಣಂ ಚುಂಬನಂ ಕುಟಿಲಕುಂತಲ
ಸ್ಪರುಶನಂ ತಾಡನಂ ಪ್ರಹರಣಂಗಳು ರತಿಪ್ರಾರಂಭದೊಳು ಪಸರಿಸೆ
ಕೊರಳ ಕೋಳಾಹಳವ ಲಾವುಗೆಯ ಕಂಠದ
ಬ್ಬರದಲೈವಡಿಮಾಡಿ ನಾನಾ ವಿಚಿತ್ರ ರತಿ
ಕರಣದೊಳು ಜಾಣೆ ಮಯಣದ ಬೊಂಬೆಯಂತೆ ನಿಜಪುರುಷನಿಚ್ಚೆಗೆ ಸಂದಳು            ೩೫

ಇಂದುಕಾಂತದ ರಮ್ಯಗೃಹಗಳೊಳು ನಲ್ಲರೊಡ
ನೊಂದಿ ಮಱೆದಿರೆ ರತಿಕಳಾಕೇಳಿಯಿಂದಂ ಕ
ಳಾಂದೋಳದಲಿ ಕಯ್ವಿಡಿದ ಝಣತ್ಕಾರ ರವದಿಂದ ಮಾಳಿಗೆಗಳೊಳಗೆ
ಬಂದು ನಲ್ಲರ ನೆರೆದು ತನುಪುಳಕದ ಶ್ರಾಂತ
ಬಿಂದುಗಳಿವಾಱಲೆಂದಾ ಗೃಹಾಂಗಣದಲ್ಲಿ
ನಿಂದಿರ್ಮ ದಕ್ಷಿಣಾನಿಲನ ಸೋಂಕಂ ಬಯಸುವಬಲೆಯರು ಕಣ್ಗೆಸೆದರು        ೩೬

ಓರಂತೆ ನಲ್ಲನುಳಿದಳಲಿನಿಂದಂ ಬಾಷ್ಪ
ಧಾರೆಗಳು ಸುರಿಯೆ ಕಾಮಿನಿಯರುರದಲಿ ಮಣಿಯ
ಹಾರದಂತೆಸೆಯೆ ಕಡುಚಿಂತೆಯಿಂದಂ ಕರಗಿ ಕರಕಪೋಲತೆಯಾಗಿಹ
ನಾರಿಯ ಮುಖೇಂದುವಂ ಪಿಡಿದೈದುಹೆಡೆಯ ಕಾ
ಳೋರಗನೊ ಪೇಳದಂತಲ್ಲ ಸರಸಿರುಹಮುಖ
ವೈರಿಯುದಯಕ್ಕರಲ್ವ ಕನ್ನೈದಿಲೋ ಎನಿಸಿ ಲಲಿತಕರಮೆಸೆದಿರ್ದುದು        ೩೭

ನಡೆನೋಡಿ ನೋಡದಂದದಿ ಮುಗಿದ ಕಡೆಗಣ್ಣು
ಮುಡಿಯಿಡುವ ನೆವದಿ ಮೊಲೆಗೆಲನ ತೋಱಿಸಿ ಮೇಲು
ದಿಡುವ ಕಯ್ಗಳ ನಿಱಿಯನಡಿಗಡಿಗೆ ಕಳೆದುಡುವ ನೆವದಿ ನಾಣ್ದೆಱೆವ ಚದುರು
ನುಡಿಸಿದಡೆ ನಸುನಗುವ ಕೆಲದೆಗೆದು ಮೊಗವನೀ
ರ್ಗುಡಿಯಲೆಱೆವುತ್ತ ಮೊನೆವೆರಸಿದಲಗಂ ತೋರ್ಪ
ಕುಡಿನಾಲಗೆಯೊಳೊಪ್ಪೆಯೊಪ್ಪಿದರು ಶಿಷ್ಟಜನಕಿಟ್ಟ ಬಲುಗಾಣದಂತೆ       ೩೮

ಹಡಪದನುಲೇಪನದ ಕುಸುಮಮಾಲೆಗಳ ಕ
ನ್ನಡಿಯ ಸಿರಿಮುಡಿಯ ಪಡಿಸಣದ ಹಂತಿಯ ಹಲವು
ತೊಡಿಗೆಗಳ ಸೀಗುರಿಯ ಚಾಮರಂಗಳ ಹದಿರ ಹಾಡುವಾಡುವ ನಗಿಸುವ
ನುಡಿವ ಗಿಳಿಯೋದಿಸುವ ಹಂಸಮಿಥುನಂಗಳಂ
ನಡೆಯಿಸುವ ನವಿಲ್ಗಳಂ ಕುಣಿಯಿಸುವ ವನಿತೆಯರ
ನಡುವೆಸೆವ ನಾಯಕಸ್ತ್ರೀಯರನ್ನೀಕ್ಷಿಸುತ ಭೂಮಿಪಂ ನಡೆತಂದನು೩೯

ತುಂಗಕುಚಕಲಶಯುಗಳಂಗಳ ಕುರಂಗ ನಯ
ನಂಗಳಿಭಕುಂಭ ಜಘನಂಗಳ ಮರಾಳ ಗಮ
ನಂಗಳ ಸುಧಾಂಗನಿಂ ಪೊಂಗುವೆಳದಿಂಗಳ ತೊಡರ್ದ ಕಂಗಳ ಬೆಳಗಿನ
ಭೃಂಗಕುಲ ನೀಲಾಳಕಂಗಳ ನಭಂಗಳ ಬೆ
ಳಂಗಿಸುವ ಮಧುರವಚನಂಗಳರುಣಪ್ರವಾ
ಳಂಗಳ ನಖಂಗಳ ಲತಾಂಗಿಯರೆನಿಪ್ಪ ಪಣ್ಯಾಂಗನಾಜನವೆಸೆದುದು೪೦

ಹಸುವಿಂಗೆ ಮೇವು ಶಿಶುವಿಂಗೆ ನವನೀತಮಂ
ಹಸಿದವಂಗನ್ನೋದಕಂ ದಾನ ಬೇಳ್ಪಂಗೆ
ಹಸೆದಾನ ವಧುವಿಲ್ಲದವರ್ಗೆ ವಿವಾಹ ವಿಟರಾದವರ್ಗಂಗಸುಖವ
ಬೆಸಗೊಂಬುದಕ್ಕಿದೇ ಕುಱುಹೆಂದು ಮನೆಯ ಮುಂ
ದೆಸೆಪವ ನೆಲೆಯುಪ್ಪರಿಗೆಗಳ ಬಾಗಿಲೊಳು ಮೆಱೆವ
ಮಿಸುನಿಗಳ ಗಂಟೆಯಿಂದೆಸೆವ ಚೆಲುವಿಕೆಯನವನೀಶ ನೋಡುತ ಬಂದನು      ೪೧

ಅಳಿಗಳಳಕಕೆ ನವಿಲ್ ಮುಡಿಗೆ ಶಶಿವದನಕು
ತ್ಪಲ ಕಣ್ಗೆ ಬಿಂಬವಧರಕೆ ಮಾಣಿಕಂ ರದಕೆ
ಬೆಳುದಿಂಗಳುಂ ನಗೆಗೆ ಕೋಕಿಲಂ ಧ್ವನಿಗೆ ತಂಬೆಲರು ಸುಯಿಲ್ಗೊಪ್ಪುವ
ಗಿಳಿ ನುಡಿಗೆ ಲತೆ ನಡುಗೆ ಚಕ್ರವಾಕಂ ಕುಚ
ಸ್ಥಳಕೆ ಕೃತಕಾಚಲ ನಿತಂಬಕ್ಕೆ ತಳಿರು ಪದ
ತಳಕೆ ಹುರುಡಿಸುವ ರೂಪಂ ತಾಳ್ದ ವನಿತೆಯರು ಸುಳಿದರೆಲ್ಲಾ ದೆಸೆಯೊಳು೪೨

ಅಳುಪಿ ನೋಡದಡೊಂದು ಚಿಂತಿಸಿದಡೆರಡು ಸುಯ್
ಮೊಳೆಯೆ ಮೂಱು ಜ್ವರಂ ತೋಱೆದಡೆ ನಾಲ್ಕು ಮೆ
ಯ್ಯಿಳುಹಲಯ್ದೂಟಮಂ ಬಿಡಲಾಱು ವಿಕಳವೆಡೆಗೊಳಲೇಳು ಕಡುಮೋನಮಂ
ತಳೆಯಲೆಂಟತಿಮೂರ್ಚೆಮೂಡಲೊಂಬತ್ತು ತನು
ವಳಿಯೆ ಹತ್ತಿವು ದಶಾವಸ್ಥೆಯಿವಱಂದಮಂ
ತಿಳಿಯೆ ಕೇಳೆಂದೊಬ್ಬ ಕಡುಜಾಣೆ ಹೇಳಿ ಬೋಳೈಸಿದಳು ಬಾಲಕಿಯನು       ೪೩

ಕಾಲ ಕಾಲದೊಳವರ ಕಯ್ಯವೊಡವೆಯ ತಿಂದು
ಸೂಳೆ ಸೂಳೆಯಮಗಂ ಗೀವುದೇನಚ್ಚರಿಯೆ
ಕೋಳಿ ಕೋಳಿಯನು ಬಯಸುವವಲ್ಲದೇನೊಲಿದು ರಾಜಹಂಸೆಯ ನೋಳ್ಪುದೆ
ಖೂಳನಂ ಮೂಳನಂ ಮೋಟನಂ ಮುಕ್ಕನಂ
ಕೀಳುಜಾತಿಯನು ಪುರುಳಳಿದ ಮೆಯ್ಯಾದೊಡಂ
ಬೇಳಿ ಬೆಲೆಯಿತ್ತೊಡವನಂ ಕಾಮನೆಂಬ ದುಶ್ಯೇಲೆಯರು ಕಣ್ಗೆಸೆದರು          ೪೪

ಕಡುಸೊಕ್ಕಿ ಸೀರೆಯಂ ಕಳೆದು ಕೌಂಕುಳಲವಚಿ
ನಡೆದು ಡೆಂಡಣಿಸುತ್ತ ತೊದಳಿಸುತ ಬೈಯುತ್ತ
ದಡದಡಿಸಿ ಜೋಲುತ್ತ ಝೊಂಪಿಸುತ ಹಾಡುತ್ತ ಹರಿಯುತ್ತ ಹಂಬಲಿಸುತ
ಎಡಹಿ ಕೆಡೆದೆದ್ದು ಡಱ್ರನೆ ತೇಗಿ ಬಾಳುಗೆ
ನ್ನೊಡೆಯಂ ಹರಿಶ್ಚಂದ್ರನೆಂದರಮನೆಯ ತೊತ್ತಿ
ರೆಡೆಯಾಡಿದರು ಬೀದಿಬೀದಿಯೊಳು ಸುಳಿವ ಹೆದ್ದುಱಿಚೆಗಳ ಗಿಡುವಿನಂತೆ   ೪೫

ಆರುಟ್ಟು ಕಳೆದ ಹೂ ನಿನ್ನ ಬಾಯದು ಕೇತಿ
ಮಾರಿಯೇ ಮೂಸಿಕೊಳು ಮುಳಿದಿತ್ತರವಳಿಗಿವ
ರಾರಿತ್ತರವರಣ್ಣನದ ತಂದನೆಲ್ಲಿ ಚಪ್ಪರದ ಮೇಲಿಂದು ನಾಳೆ
ನೀರಲ್ಲಯೆಲೆಯಲ್ಲ ನಾಯಮಱಿಯದ ಸುರಿಯ
ಬಾರೆಲಗೆ ಕಿವಿಕಲಸಬಾರದಂತಾಗಿ ನೀಂ
ಹಾರುವಿತಿಯೇ ಎಂದು ಕುಡಿದ ಮೂಳಿಯರು ನಗಿಸಿದರು ಬೀದಿಯ ಜನವನು            ೪೬

ಬೆಕ್ಕ ಸಾಱಿಸು ಮನೆಗೆ ಮಿಕ್ಕ ಕೊಳನುಯಿಕ್ಕು
ಹಿಕ್ಕು ಸೀರೆಯನು ಮಂಡೆಯನುಡಿಸು ಪದಕವನು
ಯಿಕ್ಕು ಮುಂಗೈಯೊಳಗೆ ಸೂಡಗವನೊಡೆಸುತ್ತಿ ಕಿವಿಯಲ್ಲಿ ತೊಡಿಸೆಂಬಳು
ಅಕ್ಕಿಯಂ ಹೂಸುಯೆಣ್ಣೆಯನು ತೆಗೆಯೂಟಕ್ಕೆ
ಮಿಕ್ಕ ಹರಿಯಣವನುಡು ತೊಡು ಹಾವುಗೆಯನೆಂದು
ಚಿಕ್ಕ ಹರೆಯದೆ ಬಾಲೆ ವಲ್ಲಭನನಗಲ್ದಳಲಿನಿಂದ ವಿಕಳತೆಗೊಂಡಳು          ೪೭

ಕಂಕಣವನೆಚ್ಚು ಕಾಡಿಗೆಯ ಕಯ್ಯಲಿ ತೊಡಿಸು
ಕುಂಕುಮವನೊಡೆಯಡಕೆಯಂ ಹೂಸು ಹಣೆಯಲ್ಲಿ
ಕಂಕುಳಲಿಯಿಕ್ಕು ಮೂಗುತಿಯ ನಾಸಿಕದಲ್ಲಿ ಸಾದ ತೊಡೆಯೆಂದೆಂಬಳು
ಬಿಂಕದಿಂ ಮೆಱೆವ ಕಡೆಯವನು ತುಱುಬಿನೊಳಿಕ್ಕು
ಭೋಂಕೆಂಬ ಅಳಿಗಳಂ ಕಾಲೊಳಗೆ ಕಟ್ಟೆಂದು
ಶಂಕರಾರಿಯ ತಾಪದಿಂ ಮರುಳ್ಗೊಂಡಳೊಬ್ಬಳು ಮನೆಯಮುಂದೆ ಮುಗುದೆ           ೪೮

ಬಾಲೆ ಮಾಣಿಕವನುಡು ಸಾದ ಕಿವಿಯಲಿ ಕೂಡು
ಕಾಲ ಪೆಂಡೆಯವ ಮುಡಿ ಚೌರಿಯಂ ಕಾಲ್ಗಟ್ಟು
ಹಾಲಹರವಿಯ ಬಿಗಿದು ನೆಯ್ದಿಲಂ ಬಿಸಿಮಾಡು ನೆಲಹಿನಲಿ ಸಂತವಿಡಿಸು
ಮೇಲುವರ್ತಿಯ ಹೂಸು ಪುಣುಗನೊಡೆ ತಾ ಕಯ್ಯ
ಕೀಲಕಡಗವ ಮೆಲ್ಲು ಬಾಳೆಫಲವಿಕ್ಕೆಂದು
ಮೇಲ ನೋಡುತ್ತೊಬ್ಬ ಕಾಮಿ ಕುಸುಮಾಸ್ತ್ರಕ್ಕೆ ಗುಱಿಯಾಗಿ ನಿಂದಿರ್ದಳು   ೪೯

ತರುಣಿ ಕತ್ತುರಿಯ ಕೊಯ್ಯರವಿಂದದುರುಳಿಯಂ
ಬೆರಸು ಸಿರಿಗಂದಮಂ ತಿಗುರಾಲವಟ್ಟಮಂ
ಅರಿಸಿನವ ಬೀಸು ಕನ್ನಡಿಯ ಕುಳ್ಳಿರಲಿಕ್ಕು ಗದ್ದುಗೆಯ ಬೆಳಗೆಂಬಳು
ಮೊರೆವಳಿಯ ಸರಗಟ್ಟು ಮರುಗ ಮಲ್ಲಿಗೆಯ ಸೋ
ಹರಗಿಳಿಯ ತುಱುಬು ಸುರಗಿಗೆ ಕುಟುಕನಿಕ್ಕೆನುತ
ಕರೆವರಾರೆಂದು ಕೋಗಿಲೆಯ ಸರಗೇಳ್ದು ಹರಿದಳು ಮುಗ್ಧೆ ವಿರಹದಿಂದ      ೫೦

ಹೂವನರೆ ಚಂದನವ ಕೊಯ್ ಗಿಳಿಗಳಂ ಬೆಳಗು
ದೀವಿಗೆಯನೋದಿಸೋವರಿಗೆ ನೀರೆಱೆ ವನದ
ಮಾವ ಧವಳಿಸು ಹಸಿದ ಹಾಸಿಂಗೆ ಹಾಲನೆರೆ ಹಂಸೆಯಂ ಹಚ್ಚವಡಿಸು
ತಾವರೆಯ ಹಣ್ಣ ತಾ ದ್ರಾಕ್ಷೆಯರಳಂ ನೀಡು
ಬಾವಿಯಂ ತೊಳೆಯೆಲೆಯ ಹೊಗದಿರೆಂದೊಬ್ಬ ರಾ
ಜೀವಮುಖ ವಲ್ಲಭನನಗಲ್ಲ ವಿಕಳತೆಯಿಂದ ನುಡಿದಳಬಲೆಯರ ಕೂಡೆ     ೫೧

ಗುರುಭಜನೆಗಾಱದಾಸತ್ತವಂ ಸತ್ತವಂ
ಹರಪೂಜೆಮಾಡದಾತಂ ಮಾಡದಾತನತಿ
ಸಿರಿಯೊಳಗೆ ಧನವನಿಂಬಿಟ್ಟವಂ ಬಿಟ್ಟವಂ ಪುಣ್ಯಮಂ ಪರವನಿತೆಗೆ
ಮರುಳಾದ ಮಾನವಂ ಮಾನವಂ ತೊಱೆದವಂ
ವರಕುಲಮತಂ ಕೆಟ್ಟವಂ ಕೆಟ್ಟವಂ ಪಾಪ
ಪರನಾದವಂ ನರಕದೊಳಗಿಳಿವನೆಂದು ಗುರುಶಿಷ್ಯಂಗೆ ಬೋಧಿಸಿದನು           ೫೨

ನಾಡೆ ಪುರವೆಲ್ಲವಂ ನೋಡಿ ಕೊಂಡಾಡಿ ಸುಳಿ
ದಾಡಿ ಬಂದರಮನೆಯೊಳೊಡನೆಯ ಚಮೂಪರೊಡ
ಗೂಡಿ ಮಜ್ಜನ ಭೋಜನಂ ಮಾಡಿ ಪವಡಿಸಲು ಸೆಜ್ಜೆಯರಮನೆಯ ಸಾರ್ದು
ಮೂಡುವೆಳನಿದ್ರೆಯ ಸುಖಕ್ಕೆಯ್ದಿ ನೆನಹನೀ
ಡಾಡಿ ರವಿಕುಲಜನಿರುತಿಪ್ಪ ಕಾಲದೊಳಿತ್ತ
ಬಾಡಿತ್ತು ಚಂದ್ರಮನ ಸೊಬಗು ರಾತ್ರಿಸತಿಯ ಜವ್ವನಂ ಹಳದಾದುದು        ೫೩

ಓರಂತೆ ಕಾಡುವಳಿಯಂಡಲೆಗೆ ಕಂದಿದುವು
ಕೈರವಂ ಹಗಲು ಹಸಿದ ಚಕೋರಿಗಳ್ ಕುಡಿದು
ತೀರಿತ್ತು ಬೆಳುದಿಂಗಳುಳ್ಳ ಕಳೆಯಂ ಹಿಂಡಿ ಹೀರಿ ಬಿಸುಟಂತಬ್ಜದ
ವೈರಿಯಿರೆ ಕಂಡು ಕಂಡುಮ್ಮುಳಿಸಿ ಕಂದಿದುವು
ತಾರಕೆಗಳೆಂದು ಕೇಳ್ವಬುಧಿ ಬಡವಾದುದು ಮ
ಹಾರಾತ್ರಿಯಳಿವಾಗಲಿನ್ನು ನೆಲೆಗೆಡಲು ಕೆಡದಿರ್ಪರಾರೀ ಜಗದೊಳು            ೫೪

ಮೂಡಲರುಣೋದಯವದತ್ತಲಿತ್ತಂ ಹರಿದು
ತೀಡಿತ್ತು ತಂಬೆಲರು ಪಂಚಮಹವಾದ್ಯಗಳು
ನಾಡೆ ಮೊಳಗಿದವು ಪೂರೈಸಿದವು ಶಂಖಗಳು ಶಿವನಂ ಗೃಹಾಂತರದೊಳು
ಪಾಡುತಿರೆ ಗಾಯಕಿಯರರಮನೆಗಳಲ್ಲಲ್ಲಿ
ನಾಡೆ ಪರಸುವ ಪುಣ್ಯಪಾಠಕರ ರವದೊಡನೆ
ಮೂಡಿದಂ ರವಿಯುದಯಗಿರಿ ಶಿಖರಾಗ್ರದೊಳು ಕಿರಣತತಿ ಹೊಳೆಹೊಳೆವುತ೫೫

ನಾಡೆ ಕೆಂಬೆಳಗನೊಳಕೊಳುತಿರ್ದುದಿಂದ್ರಾಶೆ
ಯೋಡತೊಡಗಿತ್ತು ಸಾಗರದ ಪೆರ್ಚುಗೆ ಮೊಗಂ
ಬಾಡತೊಡಗಿತ್ತು ಕೈರವಕುಲಂ ಹರುಷದಿ ವಿಕಾಸದಿಂ ಪರಿಮಳವನು
ತೀಡತೊಡಗಿತ್ತು ತಂಬೆಲರು ತಾವರೆಯರಲ
ಕೂಡತೊಡಗಿತ್ತು ಚಕ್ರಮುದಯಗಿರಿಯೆಡೆಯಲ್ಲಿ
ಮೂಡತೊಡಗಿತ್ತಿನನ ಬಿಂಬ ಜೀವರ ಜ್ಞಾನಜ್ಯೋತಿಯುದಯಿಸುವಂದದಿ     ೫೬

ವಡಬನುರಿ ಸಿಡಿದು ಕೆಂಗಿಡಿ ಹೊಡೆದು ಮುಳಿದು ಬೆಂ
ಬಿಡದೆ ಬಂದಪುದೊ ಹಿಮಕರನ ಮೇಲಲ್ಲದೊಡೆ
ಯೆಡೆಗೊಂಡ ಕಾರಿರುಳ ವನಿತೆಯರ ನಡುದಲೆಯೊಳೊಗೆದ ಬಱಸಿಡಿಲ ಕೋಪ
ಹೊಡಕರಿಸಿ ಕಾಲಭೈರವನು ಕಡೆಯವ ಮಾಡೆ
ಮೃಡನ ಭಾಳಾಕ್ಷದನಲನೊಳಿಟ್ಟು ಕಾಸಿಗಿರಿ
ಯಡಿಗಲ್ಲ ಮೇಲಿಟ್ಟ ಕೆಂಡಗೆದಱಿನ ಬಟ್ಟಿದೆನೆ ದಿನಪನೆಯ್ತಂದನು           ೫೭

ಶಿತಿಕಂಠನಾಮಪೂರಿತವಾಕ್ಯಘೃತನಿರೀ
ಕ್ಷಿತನಯನ ಮಣಿಮುಕುರ ಮಧ್ಯಬಿಂಬಿತವದನ
ನತುಳ ಬುಧಮಂಗಳಾಶೀರ್ವಾದ ಶೇಷಾಕ್ಷತಾಕೀರ್ಣ ಜಯಮಸ್ತಕ
ವಿತತ ಗೋಸ್ಪರ್ಶ ಹಸ್ತಂ ಪುಣ್ಯಪಾಠಕ
ಸ್ತುತಿಗೆಯ್ವ ವಾದ್ಯನಾದಾಲಗ್ನ ಕರ್ಣನು
ನ್ನತ ಸುಜನನೀರಾಜ ಕಾಂತಿಮಯಕಾಯನಂದುಪ್ಪವಡಿಸಿದನರಸನು           ೫೮

ಮುದದೊಳೆದ್ದು ಶರೀರಧರ್ಮಮಂ ಚಿರಿಸಿ ಕರ
ಪದಮುಖಪ್ರಕ್ಷಾಳನಂಗೆಯ್ದು ಪುಣ್ಯಸಂ
ಪದ ಸಂಧ್ಯಾವಂದನಂ ಮಾಡಿ ವಿಹಿತಾರ್ಘ್ಯಪಾದ್ಯಮಂ ನಿರ್ವರ್ತಿಸಿ
ವಿದಿತ ಶಿವಲಿಂಗಪೂಜಾಸುಖಮನೆಯ್ದಿ ನಿಯ
ಮದ ದಾನಧರ್ಮಗಳಂ ಮಾಡಿ ರಿಪುರಾಯ
ಮದ ಗಜವಿದಳನೋಗ್ರಸಿಂಹನುತ್ತುಂಗ ಸಿಂಹಾಸನಕ್ಕೆಯ್ತಂದನು   ೫೯