ಸೂಚನೆ
ವಸುಧೆ ತಣಿಯಲು ಬಹುಸುವರ್ಣಯಾಗವ ಮಾಡಿ
ಹೊಸಬನವ ಹೊಕ್ಕು ಸುಖಮಂ ಸವಿದು ಮುನಿಯ ಕೈ
ಮಸಕದಿಂದೊಗೆದ ಖಗಮೃಗ ನಾಡ ಮೊರೆಯಿಡಿಸುತಿರ್ದುವೇವಣ್ಣಿಸುವೆನು

ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತೆಂಬ
ಕ್ಷೋಣಿಯಾಡುವ ಗಾದೆಯಂ ದಿಟಂ ಮಾಳ್ಪಂತೆ
ಹೂಣಿಸಿ ವಸಿಷ್ಠಂಗೆ ಕೌಶಿಕಂ ನುಡಿದ ಪತಿಜ್ಞೆಯಂ ಗೆಲುವೊಡಿನ್ನು
ಜಾಣಿಂ ಹರಿಶ್ಚಂದ್ರರಾಯನುನ್ನತಿಯಳಿವ
ಕಾಣಬೇಕೆಂದಖಿಳ ಸಾಮಾರ್ಥದ ಕಲಾಪ್ರ
ವೀಣನಂತಸ್ಥದೇಕಾಂತದೊಳು ಚಿಂತೆಯಿಂ ಭ್ರಾಂತಿಯೋಗದೊಳಿರ್ದನು        ೧

ಧರೆಯೊಳು ಹರಿಶ್ಚಂದ್ರನಂ ಹುಸಿಕನೆಂದೆನಿಪ
ಪರಿಯಾವುದೆಂದು ಚಿಂತಿಸಲೊಂದುಪಾಯಮಂ
ಕುರಿಸೆ ಕಂಡುಬ್ಬಿ ಭುಜವೊಯ್ದು ನಿಜವೈರದಂತಸ್ಥವಱಿಯದ ಮುನಿಗಳ
ಕರೆದು ನೀವಿಂತೀಗ ಹೋಗಿ ಭೂವರನನುಪ
ಚರಿಸಿ, ಬೋಧಿಸಿ, ಬಹುಸುವರ್ಣಯಾಗವನಾವ
ಪರಿಯೊಳಂ ಮಾಳ್ಪಮನಮಂಕಾಣ್ಬುದೆಂದು ಕಳುಹಿದನು ವಿಶ್ವಾಮಿತ್ರನು   ೨

ಕೌಶಿಕನ ಕುಟಿಲವಱಿಯದೆ ಹೋಗಿ ಮುನಿಗಳವ
ನೀಶಂಗೆ ಮಂಗಳಾಶೀರ್ವಾದಸೇಸೆಯಂ
ಸೂಸಲೇಂ ಕಾರ್ಯ ಬಿಜಯಂಗೆಯ್ದಿರೆನೆ ಸಕಲವೇದಪೌರಾಣಾಗಮ
ರಾಶಿಗಳೊಳೊಂದಧಿಕಧರ್ಮಮಂ ಕಂಡಱುಪ
ಲೋಸುಗಂ ಬಂದೆವೆನೆಲಾವುದೆನೆ ಮಾಳ್ಪ ವಿ
ಶ್ವಾಸಮಂ ನುಡಿಯೆ ಪೇಳ್ದಪೆವದಂ ಮಾಡದೊಡೆ ನುಡಿದು ಫಲವೇನೆಂದರು            ೩

ಮನವೊಸೆದು ಮಾಡುವಂತಾಗಿ ಗುರುವಾಸಿಷ್ಠ
ಮುನಿಯ ಪದಪಂಕೇಜದಾಣೆ ನಾಚದೆ ಪೇಳ್ವು
ದೆನೆ ಬಹುಸುವರ್ಣಯಾಗಂ ಯಾಗಕೋಟಾನುಕೋಟಿಕೋಟಿಗಳೊಳಧಿಕ
ನಿನಗಲ್ಲದಿನ್ನುಳಿದವರ್ಗಾಗದೆಂದಡದ
ಱನುವಾವುದೆನೆ ನೆರೆದ ಮುನಿಗಳತಿದೋಷ ನೆ
ಟ್ಟನೆ ನಿನಗೆ ಬಾರದಂದದಿ ಬೇಡಿದನಿತು ವಸ್ತುವನೀಯಬೇಕೆಂದರು೪

ಆ ವಿಮಳಮುನಿಗಳ ಹಿತೋಪದೇಶವನಾಂತು
ಭೂವರಂ ಸರ್ವಮುನಿವರ್ಗಮಂ ಬರಿಸಿ ನಾ
ನಾ ವೇದವಿಧಿವಿಹಿತ ಧರ್ಮಾಗಮಾರ್ಥದಿಂ ಯಾಗಮಂ ಮಾಡಿ ಬಳಿಕ
ಆವಾವ ಮುನಿಗಳಾವಾವ ಧನವಂ ಬೇಡ
ಲೋವಿ ಕೊಟ್ಟುಪಚರಿಸುತಿರೆ ಬಂದ ಸುಜನಮೃಗ
ಧೀವರಂ ಕಪಟಪಟು ಕೌಶಿಕಂ ವಾಸಿಷ್ಠಮುನಿ ಹೋದ ಹೊತ್ತನಱಿದು        ೫

ಇತ್ತಲಾ ಭೂಭುಜಂ ಸಕಲಮುನಿಗಳಿಗೆ ಮನ
ವೆತ್ತಿಕ್ಕಿ ನೆನೆದರ್ಥಮಂ ಕೊಡುತ್ತಿರಲಾ ಸು
ಚಿತ್ತಮನನಾಗಿ ಸಂತೋಷದಿಂ ಹರ್ಷಸಂಜನಿತಸಂಭ್ರದೊಳಿರಲು
ಅತ್ತ ವಿಶ್ವಾಮಿತ್ರಮುನಿಯಱಿಕೆಯಾಯ್ತೆಂದು
ಸುತ್ತಿದ ಪ್ರಪಂಚವೆಲ್ಲವ ಕೂಡಿಕೊಂಡು ನಲಿ
ಯುತ್ತ ನಟಿಸುತ್ತ ಹೊಡೆದಾಡಿ ಬಂದನು ಹರಿಶ್ಚಂದ್ರಭೂಪಾಲನೆಡೆಗೆ         ೬

ಹರಿದು ವಿಶ್ವಾಮಿತ್ರ ಮುನಿಗೆಱಗಿ ಚರಣಸರ
ಸಿರುಹಮಂ ತೊಳೆದು ನೆನೆದರ್ಥಮಂ ಬೆಸಸೆನಲು
ಪಿರಿಯ ಕರಿಯಂ ಮೆಟ್ಟಿ ಕವಡೆಯಂ ಮಿಡಿದೊಡೆನಿತುದ್ದಮಂ ಪೋಪುದದಱ
ಸರಿಯೆನಿಸಿ ಸುರಿದ ಹೊಸಹೊನ್ನರಾಸಿಯನೀವು
ದರಸಯೆಂದೆನೆ ಹಸಾದಂ ಕೊಟ್ಟೆನದನೀಗ
ಲಿರದೊಯ್ವುದೆನೆ ಬೇಡ ನಿನ್ನ ಮೇಲಿರಲಿ ಬೇಹಾಗ ತರಿಸುವೆನೆಂದನು        ೭

ಕೊಂಡ ಹೊಸ ಹೊನ್ನರಾಸಿಯನವನಿಪಾಲಕನ
ಭಂಡಾರದೊಳಗಿರಿಸಿ ತನ್ನಾಶ್ರಮವನೆಯ್ದೆ
ಚಂಡಕರನರುಣಕಿರಣಂ ಹೊಗುವ ಠಾವೆಲ್ಲವಂ ತೀವಿತವನ ಸತ್ಯ
ಪಂಡಿತರ ಮುಂದೆ ದೇವೇಂದ್ರನಿದಿರಲಿ ಮುನಿಯ
ಭಂಡನಂ ಮಾಳ್ಷೆ ಭೂಪತಿಯಲನೃತವನಿಲ್ಲಿ
ಕಂಡೆನಾದಡೆ ಕಾಣ್ಬ ತೆಱನಾವುದೆಂದು ಚಿಂತಿಸಿದ ವಿಶ್ವಾಮಿತ್ರನು    ೮

ಒಂದೆರಡು ಹಳ್ಳಿ ಹಿರಿಯೂರ ಮನ್ನಣೆಯ ಜನ
ವೆಂದಿಲ್ಲ ವನಧಿಪರ್ಯಂತ ವಸುಧೆಯ ವಿಪ್ರ
ವೃಂದ ಮೊದಲಷ್ಟಾದಶಪ್ರಜೆಯ ಸಂಕುಳಂ ಕಡೆಯೆನಲು ಸಲೆ ಸರ್ವರ
ಕುಂದೆಡರು ಬಡತನ ನಿರೋಧವಪಕೀರ್ತಿಗಳ
ನೆಂದುವುಂ ಕಾಣೆನೆಂದೆಂಬ ಬಿರುದಿನ ಹಾಹೆ
ಹೊಂದೊಡರೊಳಿಪ್ಪುದಾ ಭೂಭುಜಂಗೆಂಬಾಗಳೆನ್ನಱಿಕೆಯಾಯ್ತೆಂದನು     ೯

ಕರ್ಪುರವನುರುಹಿ ಕಿಚ್ಚಂ ಕಾಯ್ವನಂತೆ ಮಣಿ
ದರ್ಪಣವನೊಡೆಗುಟ್ಟಿ ಹಲ್ಲೆಯಂ ಮಾಳ್ಪಂತೆ
ಕೂರ್ಪ ತಾಯಂ ಮಾಱಿ ತೊತ್ತ ಕೊಂಬಂತೆ ಕೀಲಿಂಗ ದೇಗುಲವನಳಿವ
ದರ್ಪದಂತಖಿಳಧರಣಿಗೆ ಕಲ್ಪವೃಕ್ಷವೆನೆ
ತೋರ್ಪಾ ಹರಿಶ್ಚಂದ್ರರಾಯನುನ್ನತಿಯನಳಿ
ವಾರ್ಪುಳ್ಳದೊಂದು ದುರ್ಬುದ್ಧಿಯಂ ನೆನೆದನಾ ಸರ್ವಗುಣಸಂಪನ್ನನು        ೧೦

ಮುಳಿದು ಮೃಗಸಂಕುಳಂಗಳನು ಹುಟ್ಟಿಸಿ ನಾಡ
ಬೆಳೆಗಳಂ ಕೆಡಿಸಿ ಕೇಡಿಂಗೆ ಬೆಂಡಾಗಿ ಜನ
ವಳವಳಿದು ಬಾಯ್ವಿಟ್ಟು ದೂಱಿದಡೆ ಕೇಳ್ದು ಸೈರಿಸಲಾಱದಾ ಹುಯ್ಯಲ
ಬಿಳಿವಿಡಿದು ಬೇಂಟೆಗೆಯ್ತಂದ ಭೂಪಾಲಕನ
ನೆಳೆತಟಂ ಮಾಡಿ ತೆಗೆದೆನ್ನಾಶ್ರಮಕ್ಕೊಯ್ದು
ಬಳಿಕ ನೋಡುವೆನವನ ಸತ್ಯಗಿತ್ಯದ ಬಲುಹನೆಂದ ವಿಶ್ವಾಮಿತ್ರನು  ೧೧

ಅನುವುಳ್ಳ ಬುದ್ಧಿಯಂ ಕಂಡೆನೆಂದತಿಮೆಚ್ಚಿ
ತನಗೆ ತಾ ತೂಪಿಱಿದುಕೊಂಡು ಕಣ್ಮುಚ್ಚಿ ತ
ನ್ಮನದೊಳುತ್ಪತ್ತಿಮಂತ್ರದಿ ಮಂತ್ರಿಸಿದ ಜಲವನೊಸೆದು ದೆಸೆದೆಸೆಗೆ ತಳಿದು
ವಿನಯದಿಂ ನೋಡೆ ನೋಡಿದ ದಿಕ್ಕು ಧರಣಿ ತೆ
ಕ್ಕೆನೆ ತೀವಿ ನಿಂದ ನಾನಾಪಕ್ಷಿಮೃಗಕುಲಕೆ
ಕೊನೆವೆರಳನಲುಗಿ ತಲೆದೂಗಿ ಕೈವೀಸಿದಂ ದೇಶಮಂ ಗೋಳಿಡಸಲು            ೧೨

ಧರಣೀಶನಂ ಹುಸಿಕನೆನಿಸಿ ವಾಸಿಷ್ಠಮುನಿ
ವರನಂ ವ್ರತಭ್ರಷ್ಟನಂ ಮಾಡಿದಪೆನೆಂಬ
ಭರಕೆ ಬಲವಾದುದನುವಿಂಗೆ ತನುವಾಯ್ತುಪಾಯಕ್ಕೆ ದಾಯಂ ಮೊಳೆತುದು
ನಿರುತವೆಂದುಬ್ಬುತ್ತ ಕೊಬ್ಬುತ್ತ ಕೌಶಿಕಂ
ಹರಿದು ತನ್ನಯ ತಪೋವನದೊಳಿರುತಿರ್ಪ ಹೊ
ತ್ತರೆಯಾಯ್ತು ಮಾಗಿಯ ಮನೋಮುದ ವಸಂತಋತು ಬಹಸಮಯವಾದುದಂದು   ೧೩

ಎಳಮಾವುಗಳ ಬೀಡೆ ಹೂಳೆ ಕೋಗಿಲೆಯ ಕೊರ
ಲೊಳಗು ತೆಱಪಾಗೆ ಮಾಧವಿಗಳೆಲೆದಾಣ ಹೊ
ಪ್ಪಳಿಸೆ ತೆಂಕಣ ದಿಶಾಭಾಗದೊಳು ಗಾಳಿ ಹೊಡಕರಿಸೆ ಮನ್ಮಥಭೂಪನು
ತಿಳಿದು ಬಿಲುಬತ್ತಳಿಕೆಗಳನಱಸೆ ತೊಂಡಗಿಳಿ
ಗಳು ಚಂಚುವಂ ಮಸೆಯೆ ಮೂಡಿತ್ತು ಋತುಸಂಧಿ
ಯಳವು ಮೆಱೆಯಿತ್ತಿದೀಕಾಲವೆನಲುಳಿದ ಬಡಜಾಣರಿಗೆ ತಿಳಿಯಲರಿದು       ೧೪

ಪೊಸಮಾಗಿ ಮದವಾಱೆ ಮಾವಂಕುರಂದೋಱೆ
ಯಸುಕೆ ತಳಿರಂ ಹೇಱೆ ಲತೆ ನನೆಗಳಂ ಬೀಱೆ
ಕುಸುಮರಜವಂ ತೂಱೆ ತುಂಬಿ ಸುತ್ತಂ ಪಾಱೆ ತಂಗಾಳಿ ತಂಪ ಬೀಱೆ
ಶಶಿಗೆ ಕಳೆಯೇಱೆ ಕೋಕಿಲರವಂ ಮೀಱೆ ಕಾ
ಮಶರಂಗಳೂಱೆ ವಿರಹಿಗಳು ಬಾಯಾಱೆ ಮಾ
ಮಸಕದಿಂ ಬಂದುದು ವಸಂತಂ ವಿಯೋಗಿಹೃತ್ಕುಂತಂ ಸುಖಾಶ್ರಾಂತವು        ೧೫

ಬಳಸಿದ ವಸಂತಮಂ ಕಂಡು ವನಪಾಲನಾ
ಗಳೆ ಹರುಷದಿಂ ಹರಿದು ಹೋಗಿ ಹವಣಱಿದು ಭೂ
ತಳಪತಿ ಹರಿಶ್ಚಂದ್ರರಾಯನಂ ಕಂಡು ನಳನಳಿಪಶೋಕೆಯ ತರುವಿನ
ತಳಿರ ತೊಂಗಲುಗಳನು ನವ್ಯಕುಸುಮಸ್ತಬಕ
ಕುಳವ ಫಳಮಂಜರಿಯ ಮಾಲೆಯಂ ನೀಡಿ ಕುಸಿ
ದಿಳುಹಿದಂ ನಿಜಲಲಾಟಾಬ್ಜಮಂ ತೊಳತೊಳಗಿ ರಾಜಿಪಡಿದಾವರೆಯೊಳು    ೧೬

ಎಳಲತೆಯ ಲಾವಣ್ಯಲಹರಿ ಮಾವುಗಳ ಮಂ
ಗಳದ ಮಡು ಕೋಗಿಲೆಯ ಕೊರಳ ಪುಣ್ಯಂ ತುಂಬಿ
ಗಳ ನಾಸಿಕದ ನಲಿವು ನವಿಲ ನವನಾಟ್ಯರಂಗಂ ಜನದ ಸುಖದ ಸುಗ್ಗಿ
ಗಿಳಿವಿಂಡುಗಳ ಸವಿಯ ಸಾಮ್ರಾಜ್ಯ ಹಿಮಕರನ
ತಿಳಿದ ಬೆಳಗಿನ ಬೆಂಬಲಂ ರತೀಶ್ವರನ ಭುಜ
ಬಲ ವೀರಸಿರಿಯೆನಿಸಿ ಬಂದುದು ವಸಂತವವನೀಶ ಚಿತ್ರೈಸೆಂದನು   ೧೭

ಇವನ ಬರವಂ ಬಯಸುವಬುಜಬನದಂತೆ ನಂ
ದನವನಂ ನಿಮ್ಮ ಬರವಂ ಬಯಸುತದೆ ಸಕಲ
ಜನವನೊಡೆಗೊಂಡು ಬಂದೊಂದು ಮಾಸಂಬರಂ ಸಕಲಸುಖಸಾಮ್ರಾಜ್ಯವ
ಅನುಭವಿಸಬೇಕೆಂದಿನಂದದಿಂದರಸ ಕೇ
ಳೆನೆ ಪಟ್ಟದರಸಿ ಸುತ ಮಂತ್ರಿ ನಿಜ ಜನವೆರಸಿ
ಮನವೊಲಿದು ನಡೆದನಾಹಾ ಭಾಪು ಭೂಪರೂಪಿನ ಕುಸುಮಕೋದಂಡನು    ೧೮

ಹೊಡೆದವೈದಾರೇಳುಕೋಟಿ ನಿಸ್ಸಾಳಂಗ
ಳಡಸಿ ತುಡುಕಿದವು ತಂಬಟದ ಸೂಳಿನ ಲಗ್ಗ
ಯೆಡೆವಿಡದೆ ಚೀಱಿದವು ಕೋಟಿ ಹೆಗ್ಗಾಳೆಗಳು ಚಿನ್ನತಿತ್ತಿರಿ ಬೊಂಬುಳಿ
ಬಡಿಸಿಕೊಂಡವು ಧಣಂ ಧಣವೆನಿಪ ಮುದ್ದಳೆಯ
ಸಡಗರದ ಸಂಭ್ರಮದೊಳುಲಿವ ಜಯಘಂಟೆ ಬಂ
ದೊಡಗಲಿಸಿಯೊಱಲುತಿರ್ದವು ವೈರಿಕುಂಜರಮೃಗಾಧಿಪನ ಕಟ್ಟಿದಿರೊಳು    ೧೯

ಕಡಿತಲೆಯ ಕರಿಯ ಹರಿಗೆಯ ತುಳುವಪಡೆ ಕೂಡೆ
ಪಡಿತಳಿಸಿತೇಳುನಿರ್ಬುದ ಕಠಾರಿಯ ಖಡ್ಗ
ವಿಡಿದ ಕಾಲಾಳು ಮೂವತ್ತೆರಡು ಖರ್ವ ಡೆಂಕಣಿಯವರು ನೂಱುಕೋಟಿ
ಎಡೆವಿಡದೆ ಬಿಲ್ಲ ಮೋಹರಿಸಿತೈ ಪದ್ಮ ಹುಲು
ವಡೆಯ ಲೆಕ್ಕಿಸಲು ಬಾರದು ಹರಿಶ್ಚಂದ್ರ ನಿಂ
ದೊಡೆ ನಿಲುವ ಮಂಡಿಸಿದದೊಡನೆ ಮಂಡಿಸುವ ರಾವುತರೆಯ್ದೆ ಹೊಱವಂಟರು         ೨೦

ಹರಿಣನಂ ಹಳಿವ ಮಾರುತನನೇಳಿಸುವ ಹರಿ
ಸರಳನಣಕಿಸುವ ಮನದಿಂ ಮುಂದೆ ಲಂಘಿಸುವ
ಭರವೆಂತುಟೆನಲು ರವಿಮಂಡಲವನುಳಿದು ಚಂದ್ರನ ತೀವಿದಿರವು ಬಳಿಕ
ಶರಧಿಯೇಳಂ ಕಳಿದು ಮಂದರವನಡರಿ ಭೂ
ವರನ ಮುಂದಾಡುತಿಹ ಪೇರಣದಲೆಂಬ ಸಂ
ವರಣೆಗುಂಟಾದ ವಾಜಿಗಳೆಯ್ದೆ ಚಾರಿವರಿದಾಡಿದವು ಶತಕೋಟಿಯು          ೨೧

ಗಿರಿಯನೀಡಿಱಿವ ದಿಕ್ಕರಿಗಳಂ ಜಱೆವ ದೇ
ವರಪತಿಯ ಗಜದ ಕೋಡಂ ಮುಱಿವ ಸಂಭ್ರಮದ
ಕರಿಘಟೆಗಳೆಂಟುಕೋಟಿಯ ಮೇಲೆ ಮೂವತ್ತೆರಡುಲಕ್ಷವೇಱಿ ಬರಲು
ಧರೆಯದ್ದುದಾನೆಯಡಿಗಳಿಗೆ ವಾಸುಗಿ ತನ್ನ
ಶಿರಕೆ ಸಿವುಡಂ ಕೊಟ್ಟನೆಂತಾ ಮಹಾಹಸ್ತಿ
ಬರುತಿರ್ದುದರಸ ವನಕಾಗಿ ನಡೆಯಲು ರಥದ ಸಡಗರವನೇವೊಗಳ್ವೆನು       ೨೨

ಇನಕುಲನ ತೇರನಿಕ್ಕಲಿಸಿ ಬೆಂಬಳಿವಿಡಿದು
ಬನಕೆ ಬರುತಿಹ ರಥದಮೇಲೆ ಕ್ಷೀರಾಬ್ಧಿಯೊಳ
ಗನಿಲನೀಡಿಱಿಯಲಾ ನೊರೆಮಸಗಿ ತೆರೆಗಟ್ಟಿ ತೆರೆತೆರೆಯ ಹಿಂಡುಗೊಂಡು
ಮನವೇಗದಲ್ಲಿ ಗತಿಯಿಡುವಂತೆ ಬಲವೆಂಬ
ವನಧಿಯ ನಡುವೆ ತೆರಳಿ ನಡುಗೊಂಡನವನೀಶ
ನನಿಮಿಷರು ನೋಡಿ ಶಿರಮಂ ತೂಗಲುದ್ಯಾನವನಕೆಯ್ದಿ ಬರುತಿರ್ದನು        ೨೩

ಅರಸಿ ಮೃಗಧರಮತಿಯ ದಂಡಿಗೆಯನಿಕ್ಕಲಿಸಿ
ಬರುತಿರ್ದವೆಂಟುಸಾವಿರವಂದಣಂ ಕೂಡೆ
ಚರಣಗತಿಯಲಿ ಬಪ್ಪರಾ ಸರೋಜಾನನೆಯರೊಂಬತ್ತುಕೋಟಿ ಬರಲು
ಅರಲಬಾಣಂ ಹೊಲಬುಗೆಡುವ ಕಾನನವೊ ಹಿಮ
ಕರನ ಮನೆಗೊಲಿದು ದಾಳಿಯನಿಡುವ ದಳದುಳವೊ
ವರತಪೋಧನರ ನಿಷ್ಕಾಮನಿಧಿಯಂ ಕಳುವ ಚೋರರೆನಲೆಯ್ತಂದರು          ೨೪

ಕಂಗಳ ಬಱಂ ಹರಿದುಹೋಯ್ತು ನಾರಿಯರ ಲಸಿ
ತಾಂಗಮಂ ಕಂಡು ಗಂಡದ ಸುಗಂಧಕ್ಕೆ ಘ್ರಾ
ಣಂಗಳಱತಂ ತೀರ್ದುದವರೊಡನೆ ನುಡಿವ ಜೀವರ ಜಿಹ್ವೆ ಸುಖಿಯಾದುದು
ಹೆಂಗಳೊಲಿದಾಡಿ ಪಾಡುವ ರವವ ಕೇಳಿ ಕ
ರ್ಣಂಗಳಾರ್ತಂ ಹೋಯಿತಂತಾ ವಿಳಾಸದಿಂ
ಮಂಗಳಮಹೋತ್ಸಾಹದಿಂ ಚಂದ್ರಮತಿ ಬಂದು ನಂದನವನವ ಪೊಗುವಾಗಳು          ೨೫

ಬಳವೆತ್ತ ಮದನನರಮನೆ ವಸಂತನ ಬೀಡು
ಯೆಳಲತೆಗಳಿಕ್ಕೆ ನಾನಾಭೂಜದಾಗರಂ
ತಳಿರ ತಾಣಂ ಕುಸುಮಕುಲದ ನೆಲೆ ಫಳನಿಳಯ ಕೋಕಿಳಂಗಳ ಚಾವಡಿ
ಅಳಿಗಳಾಡುಂಬೊಲಂ ಗಿಳಿಗಳೋದುವ ಮಠಂ
ಮಲಯಾನಿಲನ ಜನ್ಮಭೂಮಿ ಪುಳಿನಾಕೀರ್ಣ
ಕೊಳನ ಹರವರಿ ನವಿಲೊ ನಂದನವೆನಿಪ್ಪ ಕೇಳೀವನಕ್ಕೆಯ್ತಂದನು   ೨೬

ವಿರಹಿಗಳ ಚಿತ್ತಮಂ ಸೀಳ್ವ ಕಾಮನ ಕಯ್ಯ
ಗರಗಸದ ಕಕ್ಕುಗಳೊ ಕಂತು ಹೊಡೆದಡೆ ಮುನೀ
ಶ್ವರ ಕಠಿಮನವಾಂತು ಧಾರೆಗಳು ಮುಱಿದಲಗುಗಳ ಮುಕ್ಕುಗಳ ಬಳಗವೊ
ಪರಿಮಳದ ಮುಳುವೇಲಿಯೋ ಎನಿಸಿ ಕಂಟಕೋ
ತ್ಕರಭರಿತಕೇತಕಿಗಳೊಪ್ಪಿದವು ಹೊಱಗೆ ಶಂ
ಕರವಿರೋಧಿಯನು ನಡುವಿರಿಸಲಮ್ಮದೆ ವನಂ ಪೊಱಮಡಿಸಿತೆಂಬಂದದಿ      ೨೭

ಹಂಗ ಮಗುಚುವೆನೆಂದು ಭೂಮಿ ಕೈನೀಡಿ ಮೇ
ಘಂಗಳಿಗೆ ಕೊಡುವಮೃತಕಲಶಸಂಕುಳವೊ ಗಗ
ನಾಂಗಣದೊಳುಱೆ ಸುಳಿವ ವಿದ್ಯಾಧರಾಳಿಗೆ ವಸಂತನಿಟ್ಟಱವಟಿಗೆಯೊ
ಇಂಗಡಲ ಬಿಡದೆ ಕಡೆವಂದು ಪುಟ್ಟಿದ ಪದಾ
ರ್ಥಂಗಳು ತಮತಮಗೆ ಕೊಂಡೊಯ್ಯುತಿರೆ ಭೂಲ
ತಾಂಗಿ ತೆಗೆದೆತ್ತಿಟ್ಟ ರಸರತ್ನವೋ ಎನಿಸಿ ಫಲಿತ ಚೆಂದೆಂಗೆಸೆದುವು   ೨೮

ಬಲವದಂಗಜನೆಂಬನೇತಱವನೆಂದು ವೆ
ಗ್ಗಳಿಸುವ ಜಿತೇಂದ್ರಿಯರು ನಿಷ್ಕಾಮಿಗಳು ವ್ರತಿಗ
ಳೊಳಗಾದವರ ಕುಸುಮಬಾಣನಂಡಲೆಯೊಳಳವಳಿವಂತೆ ಮಾಳ್ಪೆನೆಂದು
ಬಳಸಿ ಗುಂಡಿಗೆಗಳಡಸಿದ ಮಾಲೆ ರುದ್ರಾಕ್ಷೆ
ಗಳ ಬಳಗ ಚಕ್ರಚೀತ್ಕೃತಿ ಮದನಮಂತ್ರವೆನೆ
ಮುಳಿದು ವನದೇವಿಯರು ಜಪವನೆಣಿಸದೆ ಮಾಣರೆನಿಸಿ ಱಾಟಳ ಮೆಱೆದುವು            ೨೯

ಜನದ ಪಂಚೇಂದ್ರಿಯಂ ಸಾಗಿಸುವ ಮಾವತುಳ
ವನಿತೆಯರು ಸಲಹಿದೆಳಲತೆ ಸಕಲವಂದ್ಯರೆಂ
ದೆನಿಪಕಾರಣ ಮದನವಾಣಿಗಳು ಪರಸಿ ಮುತ್ತಿನ ಸೇಸೆಯಿಟ್ಟರೆನಿಸಿ
ನನೆಯ ಮಲ್ಲಿಗೆ ಮನೋರಾಗಮಯರೊಲಿದು ನೆ
ಟ್ಟನೆ ಪೊರೆದ ದಾಡಿಮಂ ವಸುಮತಿಯೆನಿಪ್ಪ ಕಾ
ಮಿನಿ ಬಲಂಗೊಟ್ಟ ಸಂಪಗೆಗಳೊಪ್ಪಂಬೆತ್ತು ಮೆಱೆದವಂತಾ ವನದೊಳು     ೩೦

ಹೃದಯದ ಕಳಂಕಿಲ್ಲದೋರಂತೆ ನಾರನು
ಟ್ಟುದಕಮಂ ಕುಡಿಕುಡಿದು ಮಳೆಗಾಳಿ ಬಿಸಿಲಿಗ
ಳ್ಕದೆ ವನದೊಳೊಂದೆಡೆಯೊಳಿರ್ದು ಕೊಂಬಾಸೆಯಿಲ್ಲದೆ ನೆಲಕೆ ಹೊಱೆಯಾಗದೆ
ಬದುಕಿ ತಲೆವಾಗಿ ಬೆಳೆದೊಂದೆಡೆಯೊಳಿರ್ದೆನಾ
ನುದಿತರಸಫಲವನಂತವ ಕಯ್ಯಮೇಲೆ ತಾ
ಳಿದೆನೆನ್ನ ನೋಡಿ ಮುನಿಕುಲವೆಂದು ಬುದ್ಧಿವೇಳ್ವಂತೆ ಕದಳಿಗಳೆಸೆದವು        ೩೧

ಮರುಗ ಮೊನೆ ನನೆದೋಱೆ ಸುರಗಿ ಜಾಜಿಯ ನನೆಗ
ಳರಳಿ ಪರಿಮಳದಲೆಸೆಯಲ್ಕೆ ಮುಡಿವಾಳ ತಾ
ಭರವಸದಿ ಸುತ್ತ ಚೆಲುವಿಂದಲುಂ ಪರಿವಿಡಿಯೆ ಕರಿಯಮಲ್ಲಿಗೆಯರಳಿನ
ನಿರುತ ನಿಜವಾಹಿನಿಗೆ ತವರುಮನೆಯೆಂಬಂದ
ದರಿದೆನಿಸುವಮರಾಸುರಾಳಿಗಳ ಮೋಹರದ
ಕರಿಮಕರನಕ್ರಾಳಿ ಪುಷ್ಪಭರಿತದೊಳೆಯ್ದೆ ಜಲವು ತಿಂತಿಣಿಗೆಯ್ದುದು          ೩೨

ಮಡಲಿಱಿದು ಹಬ್ಬಿ ಹರಕಲಿಸಿ ಬೆಳೆದೆಳಲತೆಗ
ಳಿಡುಕುಱಿಂ ತಳಿತು ಕೆದಱಿದ ಹೊದಱುಗೊನೆಗೊಂಬು
ವಿಡಿದ ಭೂಜಂಗಳಿಂ ತುಱುಗಿದೆಲೆವನೆಯೊಳೊಲೆದಾಡುವ ತಮಾಲಂಗಳಿಂ
ಜಡಿವ ಹೊಡೆಯೆತ್ತಿನೊಳು ತೂಗಿ ಬಾಗುವ ಸೋಗೆ
ಯೆಡೆಗೆಡೆಗಿಡಿದ ತೆಂಗು ಕೌಂಗಿನೊತ್ತೊತ್ತೆಯಿಂ
ಹೊಡಕರಿಸಿ ಬೆಳೆದ ಕತ್ತಲೆವೆಳಗ ಕನಸಿನೊಳು ಕಾಣೆನೆನಲೇವೋಗಳ್ವೆನು        ೩೩

ಮಿಸುಪಂಕುರಂ ಕೊನರು ಕೆಂದಳಿರು ಪಲ್ಲವಂ
ಹಸುರೆಲೆ ತಳಿರ್ಮುಗುಳು ನನೆಮೊಗ್ಗೆ ಕುಸುಮವಿಡಿ
ದೆಸೆವ ಮಿಡಿಗಾಯಿ ಹದಬಲಿದ ಕಾಯ್ ದೋರೆವಣ್ಣೆಂಬಿವಂ ಪಿಡಿದೊಱಗುವ
ಹೊಸಮಾವು ಜಂಬು ನಿಂಬಂ ಕದಳಿ ಕುರವಕಂ
ಮಿಸುಪಫಲದಾಸಾಳಿ ಬನ್ನಾಳಿ ಕೇರಹೂ
ಮುಸುಕಿರ್ದ ಹೇರೀಳೆ ಕಿತ್ತೀಳೆಯಿಂದೆ ಕೇಳೀವನಂ ಕಂಗೆಸೆದುದು      ೩೪

ಹೊಸಬನದೊಳಿಪ್ಪಬಲೆಯರ ತೊಡಿಗೆವೆಳಗು ಹೊಂ
ಬಿಸಿಲಂತಿರಲ್ ಕಂಡು ಕಮಲವರಳುವುವವರ
ನಸುನಗೆಯ ಬೆಳಗು ಬೆಳುದಿಂಗಳಂತಿರೆ ಕಂಡು ಕುಮುದವರಳುವುವಲ್ಲದೆ
ಶಶಿರವಿಗಳಾಟವಾ ಬನದೊಳಗೆ ಹೊಗದು ನಿ
ಟ್ಟಿಸಲು ರವಿ ಕಾಣದುದು ಕವಿ ಕಂಡನೆಂಬ ನುಡಿ
ಹುಸಿಯಲ್ಲ ಸುಕವಿ ಹಂಪೆಯ ರಾಘವಾಂಕನದಱಳವ ಬಣ್ಣಿಸಿದನಾಗಿ         ೩೫

ಗಿಳಿಗಳೋದುಗ್ಘಡಣೆ ಕೋಕಿಲ ರವಂ ಕಹಳೆ
ಫಳವಿಡಿದ ಪಲಸು ಮದ್ದಳೆಯು ಮೊರೆವಳಿಕುಳಂ
ಬಳಸಿ ತಾರಯಿಪ ಚಿಹಣಿಯರು ನೆಲಕೊಲೆವಶೋಕೆಯ ತಳಿರು ಹೊಸಜವನಿಕೆ
ಬೆಳುಮುಸುಕು ಕುಸುಮಲತೆಗಳು ಸತಿಯರೆಲೆಯುಲುಹು
ತಳದ ಕಂಸಾಳೆ ಮರನೊಲಹು ತಲೆದೊಂಕು ನೆಱೆ
ಕಳಿತ ಹಣ್ಣೆಲೆ ಮೆಚ್ಚೆನಲು ನವಿಲು ನರ್ತನಂಗೆಯ್ದವಂತಾ ವನದೊಳು        ೩೬

ಗಿಳಿಗಳರಗಿಳಿ ನವಿಲು ಸೋಗೆನವಿಲಾ ಕೊಳಂ
ತಿಳಿಗೊಳಂ ತುಂಬಿ ಮಱಿದುಂಬಿ ಮಾವಿಮ್ಮಾವು
ಪುಳಿನ ಶೀತಳಪುಳಿನ ತೆಂಗು ಚೆಂದೆಂಗು ಕೇದಗೆಯೆಲ್ಲ ಹೊಂಗೇದಗೆ
ಸುಳಿವೆಲರು ತಂಬೆಲರು ಕೋಕಿಲಂ ಮತ್ತಕೋ
ಕಿಲ ಪಲಸು ಬಕ್ಕೆವಲಸೀಳೆ ಕಿತ್ತೀಳೆಯು
ತ್ಪಲವೆಲ್ಲ ನೀಲೋತ್ಪಲಂ ಹಂಸೆ ರಾಜಹಂಸೆಗಳೆಸೆದವಾ ವನದೊಳು         ೩೭

ವನಲಕ್ಷಿ ತನ್ನ ವನದೇವಿಯರು ಸಹಿತ ಭೂ
ಪನ ಕಾಣುತಿದಿರೆದ್ದು ನಡೆದೆಱಗಿ ತಕ್ಕೈಸಿ
ವಿನಯದಿಂ ಕ್ಷೇಮಕುಶಲವನಾಡಿ ಕಾಲ್ಗೆಱೆದು ಮಂಗಳಾಸನವನಿತ್ತು
ವಿನುತ ಪಣ್‌ಫಲ ನಿಕರಮಂ ಕೊಟ್ಟು ಹರುಷಸಂ
ಜನಿತಸಂಭ್ರಮದೊಳುಪಚರಿಸಿದಳೆನಿಸಿ ನಂ
ದನವನಂ ಕಣ್ಗೆಸೆದುದಬುಜಸಖಕುಲಜನೊಳಪೊಗುವಾಗಳೇವೊಗಳ್ವೆನು     ೩೮

ಎಸೆವ ಲತೆಗಳು ಸತಿಯರಾ ಕುಸುಮವಿಸರ ಹೊಸ
ಮುಸುಕು ಫಲತತಿ ಕಳಸವೆಳದಳಿರ್ ಕನ್ನಡಿಗ
ಳಸಿಯಮರನತುಳ ಝಲ್ಲರಿಗಳುಲಿವರಗಿಳಿಗಳಬ್ಬರಂ ಡಿಂಡಿಮ ರವ
ಮಿಸುಪ ನನೆ ನೆನೆಯಕ್ಕಿ ಕೋಕಿಲ ರವಂ ಕಹಳೆ
ಮಸಗಿದಳಿಗಳ ಗೀತವೆನಲಿದಿರ್ಗೊಂಡರಂ
ದೊಸೆದು ವನದೇವತೆಯರುಚಿತೋಪಚಾರದಿಂ ನೃಪರೂಪಮನಸಿಜನನು     ೩೯

ಎಳೆಯ ಪಳುಕಿನ ಶಿಲೆಯೊಳಡಸಿ ಕಟ್ಟಿದ ಕಟ್ಟೆ
ಗಳಲಿ ದಂಡಾವಳಿಯ ಸೂಸಕದ ಪತ್ರತತಿ
ಗಳೊಳೋರಣಂಗೊಳಿಸಿ ಕೇವಣಿಸಿದಮಳ ನವರತ್ನಂಗಳೊಯ್ಯಾರದ
ತಳದೊಳೋವದೆ ಸುರಿದ ಕಿಱುಮುತ್ತುಗಳ ಮಳಲು
ಗಳ ತುಂಬಿ ತುಳುಕಾಡುವತುಲ ನಿರ್ಮಲ ಜಲಂ
ಗಳ ಮೇಲೆ ಬೆಳೆದ ನಾನಾ ಕಮಲ ಕೈರವದಲೆಸೆದವಲ್ಲಿಯ ಕೊಳಗಳು         ೪೦

ಬಸವಳಿದ ನೆಯ್ದಿಲಂ ಕಂಡು ನಗುವಂತರಳ್ವ
ಹೊಸಕಮಲಕುಟ್ಮಲದ ಕರ್ನಿಕೆಯ ಕೆಲದ ಕಿಱಿ
ಯೆಸಳಿಡುಕುಱಂ ಬಗಿದು ಕೇಸರದ ಕುತ್ತುಱೊಳು ನುಸುಳಿ ನುಸುಳಿ ಪರಾಗವ
ಮಿಸುಪ ರಜದೊಳು ಹೊರಳಿ ಬಳೆದ ಬಂಡೆಂಬ ಕೊ
ಳ್ಗೆಸಱೊಳಗೆ ಸಿಲ್ಕಿ ಜಿನುಗುವ ಮಱಿಗೆ ಸೌರಭ್ಯ
ರಸದ ಕುಟುಕಿತ್ತು ಸಾಗಿಸುವ ಬಾಣತಿದುಂಬಿ ಮೆಱೆದವಂತಾ ಕೊಳದೊಳು   ೪೧

ಎಸೆವ ವಿಷವುಂಟಾಗಿಯುಂ ವಿಷ ತಾನಲ್ಲ
ಹೊಸಕಮಲವುಂಟಾಗಿಯುಂ ಕಮಲವಿಲ್ಲ ನಿ
ಟ್ಟಿಸೆ ಕುಮುದವುಂಟಾಗಿಯುಂ ಕುಮದವಿಲ್ಲಲ್ಲಿ ಪ್ರತಿಕೂಲವುಂಟಾಗಿಯುಂ
ಹೆಸರಿಡಲು ಪ್ರತಿಕೂಲವಿಲ್ಲಲ್ಲಿ ಕಡೆಗೆ ಶೋ
ಧಿಸೆ ವಿಜಾತಿಗಳುಂಟೆನಲು ವಿಜಾತಿಗಳಿಲ್ಲ
ವಸುಧೆಗೆ ವಿಚಿತ್ರವೆಂದೊಂದೆರಡು ಘಳಿಗೆ ನೋಡಿದ ಕೊಳನನಾ ಭೂಪನು     ೪೨

ಬಿಸಕಂದದಂತೆ ತೋರ್ಪತಿವೃತ್ತದಿಂ ಪೂರ್ಣ
ರಸಭಾವದಿಂದಲಂಕಾರದಿಂ ಸೋಪಾನ
ವಿಸರದೊಳು ಕೇವಣಂಗೊಳಿಸಿದ ಪದಾರ್ಥದಿಂ ಕೇಳ್ದು ನೋಡಿದರೆ ಮನಕೆ
ಎಸೆವ ಪ್ರಸನ್ನಗಂಭೀರದಿಂ ನಲಿನಲಿದು
ದೆಸೆದೆಸೆಗಳಿಂ ಬಂದು ಪದವಿಡುವ ಕವಿಗಳಿಂ
ವಸುಧೆಗೆ ಮಹಾಕವಿಯ ತೆಱದೊಳಂತಲ್ಲಿಯ ಸರೋವರಂ ಕಣ್ಗೆಸೆದುದು    ೪೩

ತೊಳತೊಳಗಿ ಹೊಳೆವ ತಿಳಿಗೊಳನ ತಡಿವಿಡಿದಡಸಿ
ಫಳಭರದಿ ಜಡಿದೊಱಗುತಿರ್ಪ ನಾನಾ ಮರಂ
ಗಳ ತಳದ ತಣ್ಣೆಳಲೊಳೊದವಿ ನಳನಳಿಸಿ ಬೆಳೆದೆಳಲತೆಗಳಿಡುಕುಱುಗಳ
ಬಳಿಯ ತಂಪಿನ ತಡಿಯತಾಣದೊಳು ಭೂಪಕುಲ
ತಿಲಕನ ವಿನೋದ ವಿಭ್ರಮ ವಿಲಾಸಕ್ಕೆ ಮಂ
ಗಳಮಯವೆನಲ್ ಸವೆದ ಶೈತ್ಯಶಾಲೆಗಳನದನಾವ ಕವಿ ಬಣ್ಣಿಸುವನು         ೪೪

ಪಳುಕಿನ ನೆಲಂ ಮರುಗದೆಡೆವೆರಕೆಯೆಳಬಾಳ
ದೊಳುಭಿತ್ತಿ ಕರಿಯ ಕಬ್ಬಿನ ಜಂತೆ ಕೇತಕೀ
ದಳದ ಹೊಸಹೊದಿಕೆ ಚಂದನದ ಸಾರಣೆ ಪುಷ್ಪಸರದ ಕನ್ನಡಿ ಕಮಳದ
ಎಲೆಯಾಲವಟ್ಟಯೆಳದಳಿರ ಹಸೆ ಪನ್ನೀರ
ಚಳೆಯ ನೀರ್ವಾಸು ಹೊಂಬಾಳೆಗಳ ಚಮರಮು
ತ್ಪಲದ ಮೇಲ್ಕಟ್ಟು ಮುಡಿವಳದ ಸೀಗುರಿ ಮೆಱೆದವಾ ಶೈತ್ಯಶಾಲೆಯೊಳಗೆ            ೪೫

ಇದು ಮಾಗಿಯನು ಹೆತ್ತ ತಾಯ್ವನೆಯೊ ಮೇಣು ತಾ
ನಿದು ಶೀತಕರನಾಡಿ ಬಳೆದ ನಿಳಯವೊ ಮತ್ತ
ಮಿದು ವಸಂತನ ಶಸ್ತ್ರಶಾಲೆಯೋ ಇದು ಮಲಯಮಂದಮಾರುತನ ಮಟವೊ
ಇದು ಮದನನರಲಂಬು ಮಡಲಿಱಿದು ಹೊಡೆಗೆಡೆದ
ಸದನವೋ ಸಕಲಶೈತ್ಯಂಗಳಂಗಡಿಯೊ ಪೇ
ಳಿದು ಚಿತ್ರಮೆನಲೆಸೆದುದೊಂದು ತಂಪಿನ ಶಾಲೆಯದಿಕಶ್ರಮಾಕರ್ಷಣಂ         ೪೬

ಆ ಶೈತ್ಯಶಾಲೆಯರಮನೆಯ ಬಾಗಿಲ ಮುಂದೆ
ಭೂಸುದತಿವಲ್ಲಭ ಹರಿಶ್ಚಂದ್ರ ನಿಜರಾಣಿ
ವಾಸ ಸುತಸಹಿತಿಳಿದು ಮಂತ್ರಿ ಕೈಗೊಡೆ ರಾಯರೊಲಿದು ನೆಲನುಗ್ಘಡಿಸಲು
ಭಾಸುರಾಯತ ತಳಿರ ಕಾವಣದೊಳೊಲಿದು ಸಿಂ
ಹಾಸನದೊಳೊಡ್ಡೋಲಗಂಗೊಟ್ಟು ಕಿಱಿದು ಪೊ
ತ್ತಾ ಸಭಾಸ್ಥಳದೊಳಿರ್ದೆದ್ದು ಪೊಱಮಟ್ಟು ವನದೊಳು ವಿಹಾರಿಸಿದನಂದು            ೪೭

ವಾಸಂತ ಋತುಕಾಲ ಸಮಯ ಕುಸುಮವನಾ ವಿ
ಳಾಸಿನೀಜನ ತೊಡಿಗೆಯಂ ಮಾಡಿ ತಂದೊಲ್ದು
ಭೂಸುದತಿವಲ್ಲಭಂಗೀಯಲು ಶಿವಾರ್ಪಿತಂ ಮಾಡಿ ಹೂದೊಡಿಗೆದೊಟ್ಟು
ಆ ಸಮಯದೊಳು ಕುಸುಮಬಾಣನಂದದಿ ವನ ವಿ
ಲಾಸದಿಂ ಸಾಫಲ್ಯವೆನಿಪ ಮಧ್ಯಾಹ್ನದ ದಿ
ನೇಶನುಷ್ಣಾಂಶುವಿಂದಂ ಬಳಲಿ ಜಲಕೇಳಿಗೆಳಸಿದಂ ನರನಾಥನು     ೪೮

ಹೊಳೆವ ನವರತ್ನ ಸೋಪಾನಗಟ್ಟಿಂ ಮುನ್ನ
ಲಳವಟ್ಟ ಪನ್ನೀರ ಚಂದನದ ಕೊಗ್ಗೆಸಱಿ
ನೊಳಗೆ ರಂಜಿಪ ಕಮಳ ಕುಮುದ ಕಲ್ಹಾರ ಕನ್ನೆಯ್ದಿಲುಂ ಚೆನ್ನೆಯ್ದಿಲು
ತಿಳಿಗೊಳನ ತಂಬೆಲರ ತಳಿರ ಕಾವಣ ಬಾಳ
ದೊಳುಭಿತ್ತಿಯೊಳಗೆ ಮಂತಣಿಗೊಪ್ಪರಿಗೆ ಖೇಡ
ಕುಳಿಯ ನಿರ್ಮಲ ಜಲಂ ತುಂಬಿದಲ್ಲಿಗೆ ಬಂದನಬುಜಸಖಕುಲತಿಲಕನು        ೪೯

ತೊಟ್ಟ ಪೂದೊಡಿಗೆಯನಧಃಕರಿಸಿ ಬೆಮರಿ ಪೊಱ
ಮಟ್ಟ ಪನಿ ಪೊಸಮುತ್ತುದೊಡಿಗೆ ತೊಟ್ಟಂತಿರಳ
ವಟ್ಟ ಭಾವದ ವಿಲಾಸಿನಿಯರಂ ನಿಖಿಳ ರಾಣಿಯರನಂದವನೀಶನು
ಅಟ್ಟಿ ಹಿಡಿದಂಡೆಯಿಂ ಹೊಯ್ದು ತಿಱಿಚೆಯನೊತ್ತೆ
ಹೆಟ್ಟುಗೆಯರೆಲ್ಲ ಮೂದಲಿಸಿ ಮುಮ್ಮಳಿಗೊಂಡು
ನೆಟ್ಟೋಟದಿಂದೋಡುವವನಿಪನ ತಮ್ಮಾಣೆಯಿಟ್ಟು ನಿಲಿಸಿದರಾಗಳು        ೫೦

ನಳಿತೋಳ ಮೊದಲು ಹೊಗರಂ ಕಱೆಯೆ ಕಡೆಗಣ್ಣ
ಹೊಳಪು ಮಿಂಚಂ ಕೆದಱೆ ಮೊಲೆ ಮೆಯ್ಯನೊತ್ತರಿಸೆ
ಸೆಳೆನಡು ಬಳುಕೆ ಬಾಸೆ ದೆಸೆದೆಸೆಗೆ ಕೊಂಕೆ ಕಯ್ಯಂಡೆಗಳ ತೀವಿ ನೆಗಪಿ
ಮಲಯಜಂ ಸಾದುಕತ್ತುರಿ ಕುಂಕುಮದ ಮಿಶ್ರ
ಜಲಮಂ ಹರಿಶ್ಚಂದ್ರಭೂಭುಜನ ಮೇಲೊಬ್ಬ
ಳಳವಿಯೊಳು ನಿಂದು ಪೊಯ್ಯಲ್ಕವಳು ಬಂದ ಸದ್ಭಾವವನದೇವೊಗಳ್ವೆನು   ೫೧

ಅವನೀಶ ನೀನಖಿಳರಾಣಿಯರೊಳೋಕುಳಿಯ
ನೆವದಿಂದ ಪೊರ್ದಿ ಸೋಂಕಿನ ಸುಖಂಬಡೆಯಲಂ
ತವರ ಜೀರ್ಕೊಳವಿಗಳ ದೆಸೆ ನಿಮ್ಮ ದೆಸೆಯಿಂದಲೆಸುವ ಸಮರಸವೆಯ್ದವು
ಎವಗೆಂಬ ಮಾತಿಗೊಲ್ದೋವಿ ಮೆಚ್ಚಂ ಸಲಿಸಿ
ಯುವತಿಯರ ಕೈವೀಸಿ ಕಮಳಾಕರಕ್ಕೆಯ್ದಿ
ಸವೆಯದಾನಂದದಿ ಹರಿಶ್ಚಂದ್ರನರನಾಥನಾಡಿದ ಜಲಕ್ರೀಡೆಯ      ೫೨

ಸಂತ ಸುಖಮಂ ಸವಿದು ಸವಿದಶೋಕದ ತರುವಿ
ನಂತಸ್ಥಮಂ ಕೊಂಡು ಕಂಡು ಶೈತ್ಯಾಲಯದೊ
ಳಂತವರ ಕೂಡೆ ವಾಸಂತಮಾಸವ ಕಳಿದನುಳಿದ ಸುಖಸಂಭ್ರಮದಲಿ
ಕಂತುಮದಹರನ ಪೂಜಾಸುಖಕ್ಕೆಳಸಿ ತ
ನ್ನಂತಃಕರಣವೆಲ್ಲವನುವೊಂದುಗೂಡಿಕೊಂ
ಡಂತಲ್ಲಿ ಯುವತಿಯರ ಕೂಡೆ ಮನವೆಳಸಿ ಜಲಕ್ರೀಡೆಗುದ್ಯೋಗಿಸಿದನು      ೫೩

ನಳನಳಿಸುವಂಗಸಂಕುಳ ಸೌಕುಮಾರ್ಯದಿಂ
ಕೊಳನೊಳಗೆ ಹೊಕ್ಕು ಸತಿಯರ ಕೂಡೆ ಹರ್ಷದಿಂ
ಜಳಜಂತ್ರದಿಂದಾಡಿ ಮುಳುಗಾಡಿ ತುಳುಕಾಡಿ ತಿಳಿದಾಡಿ ತೀರದಾಡಿ
ಬಳಿಕ ಪೊಱಮಟ್ಟು ದಿವ್ಯಾಂಬರಂಗಳನುಟ್ಟು
ಎಳಲತೆಯ ತಡಿಯ ತಂಪಿನೊಳು ಕುಳ್ಳಿರ್ದು ಭೂ
ತಳಪತಿ ಶಿವಾರ್ಚನೆಯ ಪುಷ್ಪಾಪಚಯಕೆ ಮಾನಿನಿಯರ್ಗೆ ಬೆಸನಿತ್ತನು          ೫೪

ಇಡದ ಹಸುರಿಡದ ಕೌರಿಡದ ಬೆಳುಪಿಡದ ಕೆಂ
ಪಿಡದ ಬಿಸುಪಿಡದ ಚಿಪ್ಪರಳದೆಸಳೊಡೆಯದೊಳ
ಗುಡುಗಿರದ ಕುಡಿ ಮುರುಟಿ ಕೆಲಹಿಗ್ಗದೋರಂತೆ ಬಿಸಿಲು ನೆಳಲಾವರಿಸದ
ಅಡಿಗಳಿಂದಳಿ ತುಳಿಯದನಿಲನಲುಗಳ ಮಂಜು
ಹೊಡೆಯದೇಕಾಕಿಯಾಗಿರದನ್ಯಕುಸುಮದೊಳು
ತೊಡರದರೆಬಿರಿದರಲನಾಯ್ದಾಯ್ದು ತಿಱಿದರಂದೆವನಿಪನ ಶಿವಪೂಜೆಗೆ      ೫೫

ಬಳಸುವಳಿಕುಳದ ಕಣ್ಗಂ ನಾಸಿಕಕ್ಕೆ ಸಂ
ಚಳಿಪ ಸಂದೇಹಮಂ ಮಾಡುವ ಕದಂಬ ಪರಿ
ಮಳವಿಡಿದ ಕೈಗಳಿಂ ಪುಷ್ಪಸಂದೋಹಮಂ ಕಟ್ಟಿದರು ಕಾಮಿನಿಯರು
ಎಳಸಿ ನಕ್ಷತ್ರಮಂ ಸಾಗಿಸುವ ಚಂದ್ರಮನ
ಕಳೆಗಳಂತೊಪ್ಪಿ ನಾನಾ ಬಂಧವಿಡಿದಿಂಡೆ
ಗಳ ರಚನೆಯಿಂದಿತ್ತರಬಲೆಯರು ಭೂಪ ಮಕರಧ್ವಜನ ಶಿವಪೂಜೆಗೆ           ೫೬

ಹೊಳೆವ ಮುತ್ತಿನ ರಂಗವಾಲಿಗಳನಿಕ್ಕಿ ತಂ
ದೆಳದಳಿರ ಹಸೆಯ ಹಾಸಿನ ಮೇಲೆ ಕುಳ್ಳಿರಿಸಿ
ತೊಳೆದ ಹೊಂಗೊಡದೊಳಗ್ಗಣಿಗಳಂ ತುಂಬಿ ತಂದಿಳುಹಿದರು ಕಾಮಿನಿಯರು
ಮೊಳಗದಿವು ಪಂಚಮಾಸಬುದ ವಾದ್ಯಗಳು ಮಂ
ಗಳರವಂಬೆತ್ತಾಡಿ ಮಾಡಿ ದೀಪಾರತಿಗ
ಳೊಳಗೆ ಲಿಂಗಾರ್ಚನೆಯನೊಲವಿನಿಂದೋಜೆಯಿಂ ಮಾಡಿದಂ ರಾಜೇಂದ್ರನು   ೫೭

ಸಂತೋಷಮಂ ಸಲಹುವಂತೆ ಭಾಗ್ಯವನೋವು
ವಂತೆ ಸುಖಮಂ ಸಾಗಿಪಂತೆ ಮುಕ್ತಿಯನು ಹೊರೆ
ವಂತೆ ಮಂಗಳವ ಮನ್ನಿಸುವಂತೆ ಪುಣ್ಯಮಂ ಪುಟವಿಕ್ಕುವಂತೆ ತಳಿರ
ತಿಂತಿಣಿಯ ಶೈತ್ಯಶಾಲೆಯೊಳೀಶನಂ ಶಿವನ
ನಂತಕಾರಿಯನಭವನಂ ಚಿತ್ತದಾಸಱಳಿ
ವಂತೆ ಹಸ್ತದ ಹಸಂ ಹರಿವಂತೆ ಪೂಜಿಸಿದನೋಜೆಯಿಂ ರಾಜೇಂದ್ರನು           ೫೮

ಗಡಣವಿಡಿದೊಗ್ಗುವಿಡಿದೋರಣಂಬಿಡಿದು ತರ
ವಿಡಿದು ಸರಿಸಂಬಿಡಿದು ಸಾಲ್ವಿಡಿದು ಪರಿಪಂತಿ
ವಿಡಿದು ಕವಿಗಳ ಗಮಕಿಗಳ ವಾದಿಗಳ ವಾಗ್ಮಿಗಳ ಗಾಯಕಾಧೀಶರ
ಮಡದಿಯರ ಮನ್ನಣೆಯ ಮಾನಿಸರು ಮುಖ್ಯರೆನ
ಲೆಡೆಗೊಂಡ ಸಕಲ ಪರಿಜನವೆರಸಿ ಸವಿದು ಸಂ
ಗಡ ಹಸಲುಗೂಳುಂಡನಿನಕುಲಲಲಾಮರಿಪುವದನಸರಸಿಜಸೋಮನು         ೫೯

ಎಳಲತೆಯೊಳೊಮ್ಮೆ ಕೃತಕಾಚಲದೊಳೊಮ್ಮೆಪೂ
ಗೊಳನೆಡೆಯೊಳೊಮ್ಮೆ ಪುಳಿನಸ್ಥಳದೊಳೊಮ್ಮೆ ಕೆಂ
ದಳಿರ ಹಸೆಗಳೊಳೊಮ್ಮೆ ಶೈತ್ಯಶಾಲೆಯೊಳೊಮ್ಮೆ ಪುಷ್ಪಾಪಚಯದೊಳೊಮ್ಮೆ
ಬಲಕೇಶಿಗಳೊಳೊಮ್ಮೆ ಖಗವಿನೋದದೊಳೊಮ್ಮೆ
ಫಲರುಚಿಯೊಳೊಮ್ಮೆ ವಿದ್ಯಾಗೋಷ್ಠಿಗಳೊಳೊಮ್ಮೆ
ಕಳಿಯುತಂ ಪೊತ್ತನವನೀಶ್ವರಂ ವನದೊಳು ವಸಂತಸುಖಮಂ ಸವಿದನು      ೬೦

ಈವನಂ ಸತಿಯರಿಂ ನೋವನಂ ಕಾವನಿಂ
ಬೇವನಂ ವಿರಹದಿಂ ಸಾವನಂ ಸಂತವಿಸಿ
ಕಾವನಂ ನಿಗ್ರಹಂ ನೋವನಂ ಸುಖಮನೊಸೆದೀವನಂ ನಗುವುದೊಲಿದು
ಈವನಂ ಶುಕಪಿಕದ ಜೀವನಂ ಪಥಿಕಜನ
ಪಾವನಂ ಸೌಖ್ಸಸಂಜೀವನವೆನುತ್ತಲಂ
ದಾ ವನವನಾ ನೃಪಂ ಕೊಂಡಾಡುತೆಯ್ತರುತ್ತಿರಲಿದಿರಲೇಂವೊಗಳ್ವೆನು        ೬೧

ಯುವತಿಯರು ತಳಿವ ಪನ್ನೀರಮಂಜಿಂಗೆ ಬೀ
ಸುವ ಕಮಲದಳದಾಲವಟ್ಟದೆಲರಿಂಗೆ ಮುಡಿ
ಸುವ ನವ್ಯಕುಸುಮದಾಮಕ್ಕೆ ಪೂಸುವ ಚಂದನದ ಶೈತ್ಯಸೌರಭಕ್ಕೆ
ಸವೆಯದಾಡುವ ಗತಿಗೆ ನುಡಿವ ಚದುರಿಂಗೆ ಹಾ
ಡುವ ಸರಕೆ ಮಾಡುವುಪಚಾರಕ್ಕೆ ಮನವನಿ
ತ್ತವನಿಪಂ ಸುಖದೊಳಿರಲತ್ತ ನಾಡೊಳಗೆ ಕೌಶಿಕನ ಕಾಟಂ ಮೊಳೆತುದು        ೬೨

ಮೊಳೆವ ಬೀಜವನು ಕ್ರಿಮಿಕೀಟಕಂಗಳು ಸಸಿಯ
ನೆಳಹುಲ್ಲೆಗಳು ಹೊಡೆಯನೆರಳೆಗಳು ಸವಿದಂಟು
ಗಳನು ಮರೆಗಳು ತೆನೆಗಳಂ ಗಿಳಿ ನವಿಲು ಕೊಂಚೆ ಮೊದಲಾದ ಖಗತತಿಗಳು
ಉಳಿದ ಬೆಳೆಯಂ ನಕುಲಹೆಗ್ಗಣಂಗಳು ಕಾವ
ಬಳವಂತರೆಲ್ಲರಂ ಸರ್ಪಸಂತತಿ ತಿಂದು
ತಳಪಟಂ ಮಾಡಿ ನಾಡೆಲ್ಲಮಂ ಗೋಳಿಡಿಸುತಿರ್ದುವೇವಣ್ಣಿಸುವೆನು          ೬೩

ಬೆಳೆಯ ದೆಸೆಯಿಂತಾಯಿತುಳಿದ ತೋಟದ ಗೆಡ್ಡೆ
ಗೆಳಸು ಹಂದಿಗೆ ಹವಣು ಹಣ್ಣು ಕಾಯ್ ಕಬ್ಬುಗಳ
ನಳಿಲು ನಿಲಲೀಯವುದಕದೊಳಾವೆ ಮೀನ್ ಮೊಸಳೆಗಳ ಭಯಂ ಘನವಾದುದು
ಎಳಗಱುಗಳಂ ತೋಳನಾಕಳಂ ಹುಲಿ ಮೀಱಿ
ಸುಳಿವವರನಮ್ಮಾವು ಕರಡಿ ಕಾಳ್ಕೋಣಂಗ
ಳುಳಿಯಲೀಯದಿರೆ ನಾಡೆಯ್ದೆ ಬಾಯ್ವಿಟ್ಟು ದೂಱಲು ಹರಿದರವನಿಪತಿಗೆ  ೬೪

ಹಿಡಿದ ಹುಲುಬಾಯ ಮೊಱೆಗುಳಿದ ಕಣ್ ಬಱತಧರ
ನಡೆಗೆಟ್ಟ ಕಾಲ್ ಬೆನ್ನ ಹತ್ತಿದ ಬಸಿರ್ವೆರಸಿ
ತಡೆಯದವಿಧಾ ಎಂದು ಬಿಡದೆ ಮೊಱೆಯೋ ಎಂದು ಕಡಗಿ ಶಿವಧೋ ಎನುತ್ತ
ಅಡಸಿ ಬನವಂ ಸುತ್ತಿಮುತ್ತಿ ಗೋಳಿಡೆ ಕೇಳ್ದು
ನಡೆನೋಡಿದಾರಿದೆಲ್ಲಿಯದೂಳಿಗಂ ನಿಲಿಸು
ನುಡಿಸುವಂ ಕರೆಯೆಂದು ಭೂಪನಿನೆ ಜನವ ಪೊಗಿಸಿದರು ಕಂಬಿಯ ಕಲಿಗಳು   ೬೫

ಭೂಸುರರು ಮಂತ್ರಾಕ್ಷತೆಯನಿತ್ತು ಶಿವಭಕ್ತ
ರಾಸುರದಿ ಭಸಿತಮಂ ಕೊಟ್ಟುಳಿದ ಜನವೆಲ್ಲ
ಲೇಸೆನಿಪ ವಸ್ತುವಂ ಕಾಣಿಕೆಯನಿತ್ತಾಗ ಭೂಪ ಚಿತ್ತೈಸುಯೆಂದು
ದೇಶದೊಳಗಾದ ಖಗಮೃಗದ ಬಾಧೆಯನು ಧರ
ಣೀಶನೆನಿಸುವ ಹರಿಶ್ಚಂದ್ರರಾಯಂಗೆ ತ
ಮ್ಮಾಸಱಳಿವಂತೆ ಬಿನ್ನೈಸುತ್ತ ಕೈಮುಗಿಯುತಿರ್ದರೇವಣ್ಣಿಸುವೆನು           ೬೬

ಬಂದ ಪರಿಜನವೆಯ್ದೆ ಮೆಯ್ಯಿಕ್ಕಿ ಕೈಮುಗಿದು
ವೊಂದು ಬಿನ್ನಹವ ಚಿತ್ತೈಸು ಬಲ್ಲಹಯೆಂದು
ಹಿಂದಿನಿತು ಕಾಲ ನೀಂ ಸಪ್ತದ್ವೀಪವನಾಳುವಂದು ತೊಡಗೊಂದು ಭಯಮಂ
ಎಂದುವುಂ ಕಾಣೆವಾವೆಂದು ತಮತಮಗೆ ತಾ
ಮಂದಿ ಪೇಳುತ್ತಿರೆ ಹರಿಶ್ಚಂದ್ರಭೂನಾಥ
ನಂದು ಘೂರ್ಮಿಸುತ ಕೋಪಾಗ್ನಿರೂಪಾಗಿ ಹೇಳೆಂದು ತಾಂ ಬೆಸಗೊಂಡನು  ೬೭

ತರದ ಬಾಧೆಗಳಿಲ್ಲ ಬಿಟ್ಟಿಯೂಳಿಗವಿಲ್ಲ
ಪರನೃಪರ ಭಯವಿಲ್ಲ ಸಾಲದಂಡಲೆಯಿಲ್ಲ
ನೆರೆಯೂರ ಕದನವಿಲ್ಲೇನೆಂಬೆವದ್ಭುತವ ಖಗಮೃಗದ ಕಾಟದಿಂದ
ಧರೆಯೊಳಗೆ ಬೆಳಸಿಲ್ಲ ಬಿತ್ತಿಲ್ಲ ನೀರಿಲ್ಲ
ತರಹರಿಸಿ ಹದುಳವಿರಲಿಲ್ಲೆಮ್ಮ ದುಃಖಮಂ
ಪರಿಹರಿಸಬೇಕು ಚಿತ್ರೈಸು ಬಲ್ಲಹಯೆಂದು ಭೂಜನಂ ಮೊಱೆಯಿಟ್ಟುದು   ೬೮

ಅಂತವರ ಬಾಯ ಮೊಱೆಯಂ ನಿಲಿಸಿ ಕಯ್ಯ ಹು
ಲ್ಲಂ ತೆಗೆದು ಬಿಸುಟು ಧನಧಾನ್ಯಂಗಳಂ ಕೊಟ್ಟು
ಸಂತವಿಟ್ಟಂಜದಿರಿ ನಾಳೆ ಪೊಱಮಟ್ಟು ನಾಡೊಳಗುಳ್ಳ ಖಗಮೃಗವನು
ಅಂತಕನ ನಗರಕ್ಕೆ ಹೊಗಬಡಿವೆನೆಂದು ಭೂ
ಕಾಂತನೊಲವಿಂ ಕಳುಹಿ ಸಕಲ ಪರಿಜನ ಸಹಿತ
ಸಂತಸದ ಸುಖದ ಸುಗ್ಗಿಯ ಸೊಗಸನನುಭವಿಸುತಿರೆ ದಿವಂ ಕಡೆಗಂಡುದು     ೬೯

ಹೆಂದದಹಿವೃಂದಮಂ ಕೊಂದ ಕುಂದಂ ಕಳೆವೆ
ನೆಂದಬುಧಿಗಿಳಿವ ಸಿಡಿಲೋ ಮಮದ್ವೇಷಿ ಗಿರಿ
ನಂದನಂಗೆಡೆಗೊಟ್ಟಡಂಗಿಸಿದುದೆಂದು ಮುಳಿಸಿಂದ ಸುರಪತಿಯಿಟ್ಟಡೆ
ನಿಂದುರಿಯುತಬುಧಿಗೆಯ್ದುವ ವಜ್ರವೋ ನೀರ್ಗೆ
ಬಂದ ನೀರ್ಮೇಘಂಗಳೊಳು ಸಿಕ್ಕಿ ಹೋಗಿ ಮೇ
ಗಿಂದಲಿಳಿವೌರ್ವಾಗ್ನಿಯೋ ಎನಿಸಿ ಪಡುವಕಡಲಂ ಸಾರ್ದನಬುಜಸಖನು       ೭೦

ಮೊಳೆವ ಸಂಧ್ಯಾಂಗನೆಗಬುಧಿ ನಿವಾಳಿಸಲೆಂದು
ತಳೆದ ಮಾಣಿಕದ ಹೆಜ್ಜೊಡರೊ ದಿನರಾತ್ರಿಗಳ
ನಳೆದು ಹೊಲ ಮೇರೆಯಲಿ ನಡಲೆಂದು ವರುಣ ನಿಲಿಸಿದ ಹವಳದೊಂದು ಸಱಿಯೊ
ಬೆಳಗೆಂಬ ಲತೆಯೊಲೆದು ಕುಡಿ ಜಡಿದು ಕೆಂಪಡರ್ದ
ಕಳಿವಣ್ಣೊ ಪಡುವಣ ದಿಶಾಂಗನೆಯ ಮುಂದಲೆಯ
ತೊಳಪ ಚೂಡಾರತ್ನವೋ ಎನಿಸಿ ಕಡೆವಗಲ ರವಿ ಕಣ್ಗೆ ಸೊಗಸಿರ್ದನು         ೭೧

ನಡೆಯುಡುಗಿ ಮುಪ್ಪಾಗಿ ಕಾಂತಿ ಮಸುಳಿಸಿ ತೇಜ
ವುಡುಗಿ ಹುಟ್ಟಿದ ಠಾವನಗಲ್ದು ಬೇಱೊಂದೆಸೆಯ
ಕಡೆಯೊಳಳಿವಂತಾದುದೀಗ ಹಿಂದೆನ್ನ ಹೆಸರೆಂದಡೋಡುವ ಕತ್ತಲೆ
ಹೊಡಕರಿಸುತಿರ್ದುದೆನ್ನಾಳಿಕೆಗೆ ಶಶಿಯ ಮುಂ
ಗುಡಿ ಧಾಳಿ ಬರುತಿದೆಯಿದಂ ಕಂಡು ಜೀವಿಪೆ
ನ್ನೊಡಲಾಸೆಯೇಕೆಂದು ಲಜ್ಜೆಯಿಂದಿಳಿವಂತೆ ಬಿದ್ದನಿನನಬುಧಿಯೊಳಗೆ       ೭೨

ರವಿಯಿಳಿದ ಮಱುಕದಿಂ ರಾಗಿಸುವ ಗಗನ ಕಂ
ದುವ ಬೆಳಗು ಕಂಗೆಡುವ ಜನ ಕೊರಗುವಬುಜ ಹಿಂ
ಗುವ ಚಕ್ರ ನಡೆಗೆಡುವ ಗಾಳಿ ನೆಲೆಗೆಡುವಳಿಗಳುಱೆ ಗೂಡುಗೊಂಬ ಪಕ್ಷಿ
ಕವಿವ ಸಂತೋಷದಿಂ ಹೆಚ್ಚುವಂಬುಧಿ ನಗುವ
ಕುವಲಯಂ ನಲಿವ ಜಾರೆಯರೊಸರ್ವ ಪಳುಕು ಮೂ
ಡುವ ತಾರೆ ಬಿಲುವೊಯ್ವ ಮದನನುಬ್ಬುವ ಚಕೋರಾಳಿ ಸಂಜೆಯೊಳೆಸೆದುವು          ೭೩

ನೀರ ಬಿದ್ದಿನನಳಿದನೆಂದು ಬೆಳಗೆಂದೆಂಬ
ನಾರಿ ಚಿಂತಿಸಿ ಕಂದಿದಳೊ ಗಾಳಿಯೆಂಬ ಸುಕು
ಮಾರನಂ ಪಡೆದು ಸಂಧ್ಯಾವನಿತೆ ಹೊಲೆಮಿಂದು ಹೊದೆದ ಕರ್ಗಂಬಳಿಯಿದೊ
ಸೂರ‍್ಯಾಂಶುವೆಂಬ ಕಿಚ್ಚಂ ಕಾದು ಕೆಂಗಲಿಸಿ
ಚಾರು ಬೆಳಗಾಱಿ ಕಪ್ಪಾಯ್ತೊ ಹೇಳೆಂಬ ವಿ
ಸ್ತಾರದಿಂ ಕಾಳಗತ್ತಲೆಯೆಂಬ ಲತೆ ಹಬ್ಬಿ ಹೊಡಕರಿಸಿ ಮಡಲಿಱಿದುದು       ೭೪

ಮಿಕ್ಕು ಮಾಸುವ ಬೆಳಗು ಕೆಂಪಡರ್ವ ಮುಗಿಲು ತಲೆ
ಯಿಕ್ಕುವಬುಜಂ ನಗುವ ಕುಮುದ ನೆಲೆಗೆಡುವಬುಧಿ
ಹಕ್ಕೆಯಿಂದಗಲ್ವ ಚಕ್ರಂ ಹೂವನಱಸುವಳಿಯೊಂದೊಂದು ನೆಗೆವ ತಾರೆ
ಇಕ್ಕೆಗೆಯ್ದುವ ಮೃಗಂ ಮೊಳೆವ ಮಾರುತ ಕೋಟ
ರಕ್ಕೆ ಹಾಱುವ ಹಕ್ಕಿ ಬಿಲುವೊಯ್ವ ಮದನ ಕೂ
ಟಕ್ಕೆ ಬಯಸುವ ಚಕೋರಂ ನಲಿವ ಜಾರೆಯರು ಸಂಜೆಯೊಳು ರಂಜಿಸಿದರು   ೭೫

ಕಡಲೊಡೆಯನುಂ ಸುರಪನುಂ ಕಾದಲಿಬ್ಬರುಂ
ಪಿಡಿದ ಕೆಂಬರಿಗೆಗಳೊ ದಿನರಾತ್ರಿಯೊಂದನೊಂ
ದಡರ್ದೊತ್ತಿಕೊಳಲು ನಡೆಯಲು ಹೊಱಗೆ ಹೊಯ್ದ ಮಾಣಿಕದ ಗೂಡಾರಂಗಳೊ
ಕಡೆವಗಲ ರವಿಬಿಂಬವಿದಿರಲೊಪ್ಪುವ ಮೂಡ
ಗಡೆಯ ವನಧಿಯೊಳು ಬಿಂಬಿಸಿದುದೋ ಎನೆ ಕೆಂಪು
ವಿಡಿದಡಗುವಿನನುದಯಿಪಿಂದು ಸಲೆಮೂಡಲೊಪ್ಪಿದುವುಭಯ ದಿಙ್ಮುಖಗಳು         ೭೬

ಚಾರುಚಂದ್ರಿಕೆಯ ಬೀಜಂಗಳೋ ಚಂದ್ರಂ ಚ
ಕೋರಾವಳಿಗೆ ತಳಿದ ಕುಟುಕುಗಳೊ ಗಗನರಮ
ಣೀರುಚಿರ ಮಾಲಕವೊ ರವಿಹಯಾನನ ಫೇನಪುಂಜವೋ ದಿವಿಜನದಿಯ
ಕೈರವಂಗಳ ಕುಟ್ಮಳಾವಳಿಗಳೋ ಮಿಸುಪ
ತೋರಮಲ್ಲಿಗೆಯರಳಿನಿಂ ವಿಷ್ಣುಪದವನೊಲಿ
ದಾರಾಧಿಸಿದಳೋ ನಿಶಾನಾರಿಯೆನೆ ತರಳ ತಾರಾಳಿ ಕಣ್ಗೆಸೆದುದು    ೭೭

ನಿಶೆಯೆಂಬ ಗಜಮಂ ವಿದಾರಿಸಲು ಹರಿಪೂರ್ವ
ದಿಶೆಯದ್ರಿಶಿಖರದಿಂ ನೆಗೆಯಲು ಸುಧಾಕಿರಣ
ವಿಸರವೆಂದೆಂಬ ಕೇಸರಗೆದಱಿ ಗರ್ಜಿಸುತ ಸೀಳಲ್ಕೆ ಗಗನತಳಕೆ
ಪಸರಿಸಿದ ಮೌಕ್ತಿಕವೊ ಎಂಬಂತೆ ನಕ್ಷತ್ರ
ಮಸಮಸಗಿ ತೊಳಗುತಿರೆ ಮೂಡಿದಂ ಶಶಿ ನಾಲ್ಕು
ದೆಸೆಯ ದಿಗುಭಿತ್ತಿಯಂ ಧವಳಿಸುತೆ ಕಣ್ಗೆ ಮಂಗಳವಾಗಿ ಮೆಱೆಯುತಿರಲು   ೭೮

ಸೊಗಯಿಪ ಸುಧಾಬ್ಧಿ ಮೋಹದೊಳಿಂದು ಬಂದೆನ್ನ
ಮಗನು ದಟ್ಟಡಿಯಿಡುವ ರಾಜಾಂಗಣವಿದೆಂದು
ನೆಗೆವ ತೆರೆಯಿಂದ ಸಮ್ಮಾರ್ಜನೆಯ ಮಾಡಿ ಮಲ್ಲಿಗೆಯ ಪೂವಲಿಯ ಕೆದಱಿ
ಗಗನವನಲಂಕರಿಸಿದಳೊಯೆನಿಪ್ಪಂತೆ ದಿ
ಕ್ಕುಗಳ ಧವಳಿಸೆಯಮೃತಕಿರಣಮಂ ಕೆದಱಿ ತಾ
ರೆಗಳೊಡನೆ ಪೂರ್ವಗಿರಿಮಸ್ತಕದೊಳುದಯಿಸುವ ಮೃಗಧರಂ ಕಣ್ಗೆಸೆದುದು೭೯

ಮನಸಿಜನ ಬಡಿಗೋಲೊ ಶಿವನು ಸೂಡಿರ್ದ ಚಂ
ದ್ರನ ಭಾಗವೋ ರಾಹು ತೋಡಿ ತಿಂದುಳಿದ ಮಿ
ಕ್ಕನಿತೋ ವಿಯೋಗಿಗಳು ವಿರಹವಾರ್ಧಿಯೊಳು ಕೆಡೆವಾಗಳೊಱಗಿದ ಹಱುಗಲೊ
ಘನತರಾಕಾಶಕೇತನ ಕಯ್ಯ ಪಾತ್ರೆಯೋ
ವಿನುತ ಪಡುವಣ ದಿಶಾಂಗನೆಯ ಮುಂದಲೆಯ ಮು
ತ್ತಿನ ಹೆಱೆಯೊ ಎನಲರ್ಧಚಂದ್ರನಂ ಬಣ್ಣಿಸುವೊಡರಿದು ಕಾವ್ಯಂಗಳೊಳಗೆ   ೮೦

ಕುಸುಮಶರಮಂ ಮದನ ಮಸೆವ ಪಳುಕಿನದೊಂದು
ಹೊಸಸಾಣೆಯೋ ಗಗನವನಿತೆಯೆಚ್ಚಾಡಲ್ಕೆ
ಪಸರಿಸಿದ ನಕ್ಷತ್ರಗವಡಿಕೆಯೊಳಿಳುಹಿಟ್ಟುದೊಂದು ಬೆಳ್ಳಿಯ ಹಲ್ಲೆಯೊ
ಒಸೆದು ರತಿ ನಿಟ್ಟಿಸುವ ಕನ್ನಡಿಯೊ ಮನುಮಥನ
ಹೊಸಚಕ್ರವೋ ತಿಳಿದ ಬೆಳುಂದಿಂಗಳಂ ಖಚರ
ರೊಸೆದು ವಸುಧೆಗೆ ಸುರಿವ ಹೊಸಭಾಂಡವೋ ಎನಿಸಿ ಮೂಡಿತ್ತು ಶಶಿಬಿಂಬವು           ೮೧

ಬೆಳೆದ ಕತ್ತಲೆ ಮುತ್ತು ಹಣಿತುದೋ ಕುಮುದಿನಿಯ
ಕೆಳೆಯ ಬಹಡಮಳ ಸಂಧ್ಯಾವನಿತೆ ಭುವನಮಂ
ಮಳಯಜದಿ ಧವಳಿಸಿದಳೋ ರೂಹನಡಗಿಸಿ ದಿವಾಕರನ ಕಿರಣಂಗಳು
ಜಳಜಮಂ ನೋಡಬಂದುವೊ ಚಕೋರಿಗಳ ನಿ
ರ್ಮಳ ಹರುಷ ಬೆಳೆಯಿತೋಯೆಂದೆಂಬ ಸಂದೇಹ
ಕೊಳಗಾಗಿ ಚೌಪಟಂಬರಿದು ಪಸರಿಸಿತು ಬೆಳುದಿಂಗಳೆಲ್ಲಾ ದೆಸೆಯೊಳು        ೮೨

ಚೋರರ್ಗೆ ಭಯ ಚಕ್ರವಾಕಕ್ಕೆ ಕರುಣ ವರ
ನಾರೀಜನಕ್ಕೆ ಶೃಂಗಾರ ಕುಸುಮಶರಂಗೆ
ವೀರ ನಕ್ತಂಚರರ ರುಧಿರಪಾನಕ್ಕೆ ಬೀಭತ್ಸ ಜಲನಿಧಿಗದ್ಭುತ
ಕೈರವಕೆ ಹಾಸ್ಯ ವಿರಹಾಗ್ನಿಗತಿರೌದ್ರಂ ಚ
ಕೋರವ್ರಜಕೆ ಶಾಂತಿರಸದ ಪ್ರವಾಹಪ್ರ
ಪೂರವೆನೆ ನವರಸೋದಯಮಯವೆನಿಸಿದ ಹಿಮಕರನೆಸೆದಿರುತ್ತಿರ್ದನು         ೮೩

ಯತಿಯಾದಡಾವೃತಂ ತಮವೊದಗಿದಡೆ ಬಳಿಕ
ಪತಿತನೆನಿಪಂ ಪ್ರದೋಷಪ್ರಭುವೆಯೆನಿಪವೂ
ರ್ಜಿತ ಮನೋಯುಕ್ತಿ ತಾನೆಂದಂದು ದೋಷಕ್ಕೆ ಪೇಸಿ ತಾಂ ವಿರಕ್ತೆಯಾಗಿ
ಅತಿಪುಣ್ಯತರ ಚಂದ್ರಿಕಾಗಂಗೆಯೊಳು ನಿಶಾ
ಸತಿಯಂಬರಂ ಬೆರಸಿ ಮುಳುಗಿದವೊಲಾಗಿ ಪಿಂ
ಗಿತು ತಮಂ ಸಾಂದ್ರಚಂದ್ರಾತಪಂ ಪಸರಿಸಿತು ಕಣ್ಗೆ ಮಂಗಳವಾಗಲು          ೮೪

ಚಾರು ಚಂದ್ರೋಪಲದ ಕರಡಿಗೆಯೊಳಾ ನಿಶಾ
ನಾರಿ ನೀಲದ ಹಾರಮಂ ಬಯ್ಚಿದಳೊ ಅಂಧ
ಕಾರಾಬ್ಧಿಯಂ ಕುಡಿಯೆ ಪ್ರತಿಫಲಿಸಿ ತೋರ್ಪ ಕಾರ್ಷ್ಣಿಕೆಯೊ ಪೇಳೆಂದೆನಲ್ಕೆ
ತೋರ ಶಶಿಬಿಂಬದೊಳು ಕಱೆಯದೆಂಬಾತನವಿ
ಚಾರಿ ಕಱೆಯದೆ ಕಱೆಯುತಿದೆಯಲಾ ಧರೆಗಮೃತ
ಸಾರಮಂ ತಾನೆನಲು ಸೂರಿಗಳು ಬಣ್ಣಿಸೆ ಸುಧಾರೋಚಿ ಕಣ್ಗೆಸೆದುದು        ೮೫

ಇದು ಮೂಡಣಂಗನೆಯ ಸಿಂಧೂರ ತಿಲಕವೋ
ಇದು ಸುರಪನೋಲಗದವುಪ್ಪರಿಗೆಗಳಸವೋ
ಇದುವಿಂದ್ರನೇಱುವಾನೆಯ ಕೊರಲ ಗಂಟೆಯೋ ರಂಭೆಯೀಕ್ಷಿಪ ಮುಕುರವೊ
ಇದು ವಿರಹಿಗಳ ಹೃದಯದುರಿಯವುಕ್ಕಿನ ಗುಂಡೊ
ಇದು ರತಿಯಲಂಕಾರವಿಪ್ಪ ಬೆಳುಗರಡಿಗೆಯೊ
ಇದು ಜಾರಚೋರರೆಡೆಯಾಟ ಬೇಡೇಂದು ಯಮ ಪೊಡೆವ ಡಂಗುರವೆನಿಸಿತು            ೮೬

ಕಡಲ ಸಿಡಿವನಿಯೊ ಮೇಘಾವಳಿಯ ತತ್ತಿಗಳೊ
ಪೊಡವಿಯೊಡೆಯನ ನೋಳ್ಪ ಗಗನರಂಧ್ರವೊ ಅಲುಗ
ಗುಡದಂತೆ ಕೀಳಿಸಿದ ವಜ್ರಮೊಳೆಗಳೊ ನಭದ ಲತೆ ಹಬ್ಬಿಯೊಗೆದ ನನೆಯೊ
ಕಡುಹಸಿದವೆಂದು ಶಶಿಯೆಲ್ಲಾ ಚಕೋರಕ್ಕೆ
ಕೊಡುವ ಸವಿದುತ್ತುಗಳೊ ಸಿಡಿವ ಸೀರ್ಮುತ್ತುಗಳೊ
ತಡೆಯದೆ ವಿಚಾರಿಸೆನೆ ತಾರಾಳಿಯೆಸೆದುವಾ ಜಗದ ಜನ ನಲಿಯುತಿರಲು       ೮೭

ಕುಂದದಂದಿಂಗೆ ಬಂದು ಕಾಡುವ ರಾಹು
ವಿಂದ ನೊಂದಪೆನೆಂದುವುಂ ಬಾರದಂದದಿಂ
ದೊಂದುಪಾಯಂ ಮಾಳ್ಪೆನೆಂದು ತದ್ಬಿಂಬಕ್ಕೆ ನಡೆಗೋಂಟೆಯಿಕ್ಕಿಸಿದನೋ
ಸಂದ ಬೆಳುದಿಂಗಳೆಂಬಮೃತಾಂಬುನಿಧಿಯನಾ
ನಂದದಿಂದುತ್ತರಿಸಲೆಂದು ತಾನೊಲಿದೇಱಿ
ನಿಂದ ಹಱುಗೋಲಿದೆಂದೆನಿಸಿ ಶಶಿಮಂಡಲದ ಪರಿವೇಷವೆಸೆದಿರ್ದುದು          ೮೮

ತಿಳಿದ ಬೆಳತಿಗೆ ಬೆಳಗು ಬಳೆದ ಬೆಳುದಿಂಗಳಿಂ
ತಳಿತ ಕಳೆಗಳು ತೊಳಗುವಿಂದುವೆರಳೆಯನು ದೂ
ವಳಿಸುವಳವಂ ಕಂಡು ಹಿಗ್ಗಿ ಹಾರಯ್ಸಿ ಹಾಱುವ ಚಕೋರೀನಿಕರದ
ಬಳಸಿದಳಿಕುಳ ವಿಳಸಿತೋತ್ಪಳಾವಳಿಯ ನಳ
ನಳಿಸಿ ಸುಳಿವೆಳಗಾಳಿಯಂ ಹೆಚ್ಚಿದುದುತ್ಸವದಿ
ಬೆಳೆದಲೆವ ಬನವನೀಕ್ಷಿಸಿ ಮಂತ್ರಿ ಭೂಪಕುಲಪತಿಲಕನೊಡನಿಂತೆಂದನು         ೮೯

ಹಿಂಗದೊಡೆಯರು ನಾಳೆ ಬೇಂಟೆಯುತ್ಸವಕೆ ಬಿಜ
ಯಂಗೆಯ್ವಿರಾದೊಡೂರ್ವರೆಯ ನಾನಾ ಖಗಮೃ
ಗಂಗಳೆಲ್ಲವನಿಱಿದು ಜನದ ಹಸವಂ ಹರಿದು ರಾಜ್ಯದಳವಱಿದಲ್ಲದೆ
ಅಂಗವಿಸಬಾರದಿದು ನಿರುತ ವನಮಂ ಪೊಕ್ಕು
ತಿಂಗಳಾಯ್ತಿಂದು ನಗರಿಯೊಳು ರಾತ್ರಿಯ ವಿನೋ
ದಂಗಳಂ ನೋಡುವುದು ಲೇಸು ಭೂನಾಥ ಚಿತ್ರೈಸೆಂದ ಮಂತ್ರೀಶನು           ೯೦

ಇದು ದಿಟಂ ಮಂತ್ರಿ ಪೇಳ್ದಿಂತೀ ವನಕ್ರೀಡೆ
ಯೊದವು ತಿಂಗಳ ದಿವಸವಾಯ್ತು ಪೋಯ್ತಖಿಳ ಜೀ
ವದ ಬಾಧೆಯುಗ್ರಖಗಮೃಗವ ಮಾಣಿಸಬೇಕು ಜನದ ಹರುಷಂ ವಿಷಾದ
ಹೃದಯಸ್ಥವಹುದಿರುಳು ಪುರವ ಚರಿಸುವೆನೆಂದು
ಮುದದಿಂ ಪಸಾಯಮಂ ವನಪಾಲಕರ್ಗಿತ್ತು
ಸುದತಿಯರ ಅಂದಣಂ ಮುಂದೆ ನಡೆಯಲುವೇಳ್ದು ಪಿಂತೆ ತಾನೆಯ್ತಂದನು   ೯೧