ಸೂಚನೆ
ಧಾರುಣಿಯ ಜನದ ಹುಯ್ಯಲ ನಿಲಿಸಬೇಕೆಂದು
ಪಾರದಿಗೆ ಪೊಱಮಟ್ಟು ಮೃಗಪಕ್ಷಿಕುಲವ ಸಂ
ಹಾರಿಸುತ ಹೇಮಕೂಟದಿ ಗುರುವಿರೂಪಾಕ್ಷನಂ ಕಂಡನವನೀಶನು

ಲೀಲೆಯಿಂದೋಲಗಂಗೊಟ್ಟು ಜಯಲೋಲ ಭೂ
ಪಾಲಕಂ ಕರೆ ಕರೆ ಸಮಸ್ತ ಬೇಂಟೆಯ ಶಬರ
ಜಾಲಮಂ ಖಗಹೃದಯಶೂಲಮಂ ಮೃಗದ ಕಡೆಗಾಲಮಂ ಬೇಗವೆನಲು
ಮೇಲೆಮೇಲಾಕ್ರಮಿಸಿ ಕರಸೆ ನಿಟ್ಟಿಸುವ ಕ
ಣ್ಣಾಲಿ ಕತ್ತಲಿಸೆ ಕತ್ತಲೆಯ ತತ್ತಿಗಳಂತೆ
ಹೋಲಿಕೆಗೆ ಹೊಱಗಾಗಿ ಬರುತಿರ್ದರಮಮ ಕರ್ಕಶಬೇಡವಡೆಯೊಡೆಯರು    ೧

ಕಾರೊಡಲು ಮೇಗರ್ಡದ ಮೆಯ್ನವಿರು ಕೆಂಗಲಿಪ
ತೋರಗಣು ಕೆಮ್ಮಿಸೆ ಗುಜುಱುದಲೆ ಬಳೆದ ಕಾ
ಳೋರಗನನೇಳಿಸುವ ತೋಳ್ ನಾರಿ ಹೊಡೆದೊಡೆದ ಹುಣ್ಣು ಮೇಲಣ ಕೈಪೊಡೆ
ಪೇರುರಂ ಕಿಱಿಯ ನಡು ಕೊಬ್ಬಿದ ಪೆಗಲು ಪಿಡಿದ
ಕೂರಂಬು ದೀರ್ಘಧನುವೆರಸಿ ನೆರೆದುದು ಕಾನ
ನಾರಿಗಳೆನಿಪ್ಪ ಶಬರಾಧಿಪರು ಕರ್ಬೊಗೆಯ ಕಾಂತಿ ಸಭೆಯಂ ಮುಸುಕಲು     ೨

ಹೊಂಗಿ ಮಿಡುಕುವ ಮೀನಗುದಿಗಳಂ ಬೆಳೆದ ಸಾ
ರಂಗದೆಳವಱಿಯನೆರಳೆಯ ತೊಡೆಯನುಗ್ರಮಾ
ತಂಗದಂತಂಗಳಂ ಚಮರಿವಿಣಿಲಂ ಜೇನನಳಿಗೆಯಂ ಪೀಲಿವೊಱೆಯ
ಸಿಂಗದುಗುರಂ ವ್ಯಾಘ್ರಚರ್ಮಮಂ ಕ್ರೋಡಶಾ
ಬಂಗಳಂ ಪೂತಿಬೆಕ್ಕಂ ಹರಿಶ್ಚಂದ್ರರಾ
ಯಂಗೆ ಕಾಣಿಕೆಯನಿತ್ತಡಿಗೆಱಗುತಿರ್ದರಗ್ಗದ ಬೇಡವಡೆಯೊಡೆಯರು           ೩

ಹರನಂತೆ ಕಾನನಾಂತಕರದ್ರಿಯಂತೆ ಕುಧ
ರರು ದಿವಿಜರಂದದಿ ವಿಶೇಷಭುಕ್ತರು ಶೀತ
ಕರನಂತೆ ದೋಷಿಗಳು ಧರ್ಮನಂತವಿನಾಶರಿನನಂತಿರಪದಸ್ಥರು
ಹರಿಯಂತೆ ವನವಾಸಿಗಳು ದಶಗ್ರೀವನಂ
ತಿರಲನಿಮಿಷಾರಿಗಳು ಚಾರುಮಂಗಳನಂತೆ
ವರಕುಜಾತರುಗಳೆನಿಸುವ ಕಿರಾತರು ನೆರೆದರವನೀಶನೋಲಗದೊಳು           ೪

ಮದಹಸ್ತಿಯಿಱಿದ ಗಾಯಂಗಳ ವರಾಹನೆ
ತ್ತಿದ ಡೋಱುಗಳ ಮೃಗಾಧಿಪನುಗಿದು ಬಗಿದು ತೋ
ಡಿದ ಬಾದಣದ ಕರಡಿ ಕಾಱಿ ಬತ್ತಿದ ತೋಳ ಹುಲಿ ಹೊಯ್ದ ಜರಿದ ಹೆಗಲ
ಪಡೆದು ಕೋಣಂ ಹೊಯ್ದ ಹೋರಭೇರುಂಡನೆಱ
ಗಿದ ಗಂಟುಗಳ ಕಡವೆ ತುಳಿದ ಹೆಜ್ಜೆಗಳ ಚಿ
ಹ್ನದ ಬೇಡನಾಯಕರು ನೆರೆದರು ಹರಿಶ್ಚಂದ್ರಭೂನಾಥನೋಲಗದೊಳು      ೫

ಹರಿಣದಲ್ಲಣನೆಂಬ ಹುಲಿಬಾಕನೆಂಬ ಸೂ
ಕರಮೃತ್ಯುವೆಂಬ ಸಾರಂಗಮರ್ದನನೆಂಬ
ಮರೆಮಾರಿಯೆಂಬ ಕಾಳ್ಕೋಣಕಂಟಕನೆಂಬ ಭಲ್ಲೂಕಮಲ್ಲನೆಂಬ
ಕರಿಸಿಂಹನೆಂಬ ಸಿಂಹಪ್ರಕರಶರಭನೆಂ
ಬರಿಶರಭಭೇರುಂಡನೆಂದೆಂಬ ಪರಿಪರಿಯ
ಬಿರುದುಲಿವ ಬಾವುಲಿಯ ಕುನ್ನಿಗಳು ನೆರೆದವಂದವನೀಶನೋಲಗದೊಳು     ೬

ಕಡವೆಗತ್ಯಾಸ್ವಾದಿಯೆಂಬ ನರಿ ಮೊಲಗಳಿಗೆ
ದಡಿವೊಯಿಲನೆಂಬ ಕರಡಿಯ ಗಂಡನೆಂಬ ಬಿ
ಟ್ಟಡೆ ತೋಳಜಜ್ಝಾರನೆಂಬ ನರಿದಿನಿಹಿಯೆಂದೆಂಬ ಕುನ್ನಿಗಳನಾಯ್ದು
ಗಡಣದಿಂ ಬೇಡವಡೆಯೊಡೆಯರೆಲ್ಲರು ನೆರೆದು
ಪೊಡವಿಪತಿಯಾ ಹರಿಶ್ಚಂದ್ರರಾಯನ ಮುಂದೆ
ನಡೆ ಜೀಯ ತಡವೇಕೆ ಕಣ್ಗೆ ಹಬ್ಬವ ಮಾಡುವೆಡೆಯ ತೋಱುವೆವೆಂದರು    ೭

ತಡಿಕೆವಲೆ ತಟ್ಟಿವಲೆ ಹಾಸುವಲೆ ಬೀಸುವಲೆ
ಕೊಡತಿವಲೆ ಕೋಲುವಲೆ ತಳ್ಳಿವಲೆ ಬಳ್ಳಿವಲೆ
ತೊಡಕುವಲೆ ತೋಱುವಲೆ ತೊಟ್ಟಿವಲೆ ಗೂಟವಲೆ ಕಣ್ಣಿವಲೆ ಕಾಲುವಲೆಯ
ಸಿಡಿವವಲೆ ಸಿಲುಕುವಲೆ ಹಾಱುವಲೆ ಜಾಱುವಲೆ
ಬಡಿಗೆವಲೆ ಬಾಚುವಲೆ ಗಾಢವಲೆ ಗೂಢವಲೆ
ಮಡಿಕೆವಲೆ ಮಂದಸಿನವಲೆಯ ಹೊಱೆಗಳ ಬೇಡವಡೆ ನೆರೆದುದೇನೆಂಬೆನು     ೮

ತಡಿಕೆ ಗಳ ಬಲೆ ಗಾಣ ಕೂಳಿ ಬಿಲು ಸರಳು ನಾಯ್
ಗಿಡುಗ ನೆರೆಮಡ್ಡಿ ಬೆಳ್ಳಾರ್ಪಟಂ ತೋಱೆತ್ತು
ಹಿಡಿಯೆರಳೆ ಸಿಲುಕುಗಟ್ಟಿಗೆ ಬೀಸುಗಣ್ಣಿ ಗುಗ್ಗುರಿಯರಳು ಗೌಜು ಸುರಗಿ
ಕೊಡತಿ ಕರವತಿಗೆ ಕೂಳೆಕ್ಕವಡ ದಂಡೆ ಕಯ್
ಹೊಡೆಯಿಟ್ಟ ಗೂಡುಗಳು ಕತ್ತಿ ಬಡಿಕೋಲ್ ಕಲ್ಲಿ
ಹಿಡಿದ ಹುಲಿ ಶರಭ ಭೇರುಂಡ ಸಿಂಹಪ್ರಕರವೆರಸಿ ಬೇಡರು ನೆರೆದರು           ೯

ಸೇನೆ ನೆರೆಯಿತ್ತು ರಿಪುಕುಮುದಮಾರ್ತಾಂಡ ಪು
ಣ್ಯಾನೂನತುಂಡ ಬಲಭರಿತದೋರ್ದಂಡ ಭೂ
ಮಾನಿನಿಯ ಗಂಡ ವಿಜಯಾಂಗನೆಯ ಮಿಂಡ ರಣರಂಗಮುಖಕಾಲದಂಡ
ದಾನಿ ಚಿತ್ರೈಸೆಂಬ ಮಾತಿನೊಡನೆದ್ದು ಸು
ಮ್ಮಾನದಿಂ ಸತಿಸುತರ್ ಮಂತ್ರಿ ಸಹಿತಡಿಯಿಟ್ಟು
ಭಾನುಕುಲತಿಲಕಂ ಹರಿಶ್ಚಂದ್ರರಾಯನೇಱಿದನು ಮಣಿಮಯರಥವನು       ೧೦

ಒಱಲಿದವು ಬಿರುದ ಸಾಱುವ ಕಹಳೆ ಮೊರೆದು ಬೊ
ಬ್ಬಿಱಿದವೇಳೆಂಟು ಸಾಸಿರ ಶಂಖ ಪಂಚಮದ
ಹಱೆಗಳಱಚಿದವು ತಂಬಟದ ಕುಡುಹಾಡಲು ಕದಂಬ ಶಬ್ದದ ರವದಲಿ
ಮಱುಗಿದನು ಸುರನಾಥನಗ್ನಿ ಬಸವಳಿದ ಯಮ
ಬೆಱಗಾದ ನಿರುತಿ ಹಲುಗಚ್ಚಿದನು ವರುಣ ನಿ
ಬ್ಬೆಱಗಿನೊಳಗಿರ್ದ ಮಾರುತ ನಿಂದ ಧನದನಂಜಿದ ಶೂಲಿ ಭೀತಿವಡೆದ         ೧೧

ಬೇಗದಲಿ ಮನವೊದಗಲಾಱದತಿ ನಿರ್ಗಮದ
ಲಾಗಿಂಗೆ ಸಪ್ತವಾರಿಧಿ ನೆರೆಯುವವ ನಿಲಿಸು
ವಾಗ ವಸುಧೆಯ ಮೇಲೆ ನಿಲಲೊಲ್ಲೆವೆಂಬ ಸಂದೇಹಕೊಳಗಾದ ತುರಗ
ತಾಗುತ್ತ ಹಳಚುತೊಂದೊಂದ ಹಿಂದಿಕ್ಕಿ ಮೆಯ್
ಲಾಗಿನಲಿ ಕುಣಿವುತೋರಣವಾಗಿ ರಾವುತರು
ತೂಗಿ ನಿಲುಕಲು ಹೋಗಿ ತೆಗೆಯೆ ನೆಲೆಯೊಳಗಿಪ್ಪ ವಾಜಿ ಮೂಱಕ್ಷೋಹಿಣಿ   ೧೨

ಸಬಳ ಸೆಲ್ಲೆಹ ಕೊಂತ ಕಕ್ಕಡೆ ತ್ರಿಶೂಲವಾ
ಪ್ರಬಲಗದೆ ಸುರಗಿ ಚಕ್ರಂ ಮುದ್ಗರಂಗಳಾ
ಸಬುದದಿಂದೊಗೆದ ಕಿಡಿ ಗಜಗಲಿಸೆ ನೆರೆದ ಕಾಲಾಳು ಮೂಱರ್ಬುದವಿರೆ
ಶಬರಬಲ ಬೇಱೆ ಮೂಱಕ್ಷೋಣಿ ಬರಲು ಕಂ
ಡಬುಜಸಖಕುಲನ ಮನವುಬ್ಬಿ ಬೇಂಟೆಯ ನೋಳ್ಬ
ಸೊಬಗು ಘನವಾಯ್ತು ನೃಪನೆಂಬ ನಾಗರಿಕಂಗೆ ವಿಪಿನಮಾನಿನಿಯ ಮೇಲೆ    ೧೩

ಪೊಡವಿ ಜಡಿಯಲು ದೆಸೆಗಳುಬ್ಬಸಂಬಡೆ ಫಣಿಯ
ಹೆಡೆಕೊರಳೊಳಾಳೆ ಕೂರ್ಮನ ಬೆನ್ನು ತಗ್ಗಿ ಬಸು
ಱೆಡೆಯ ಹೊಗೆ ಬೊಬ್ಬೆಗೊಟ್ಟಬ್ಬರಿಸಿ ನಗರಿಯಿಂ ಹೊಱಗೆ ಹೊಱಬೀಡ ಬಿಟ್ಟು
ಘುಡುಘುಡಿಸಿ ರಥವನೊಲವಿಂ ನೂಂಕಿ ಬಲುಬೇಡ
ವಡೆ ಕಡಗಿ ಹರಕರಿಸಿ ನಡೆಯೆ ಕೈಮಿಕ್ಕು ಹೇ
ರಡವಿ ಗೋಳಿಡಲು ದಾಳಿಕ್ಕಿದಂ ನಿಜದೇಶಜನವನಧಿಕುಮುದಸಖನು          ೧೪

ಜಾಲವಾಲಂ ನೆಲ್ಲಿ ಕನ್ನೆಲಿ ಕಡವಡವ
ಹಾಲೆಯಂಕೋಲೆ ದಿಂಡಂ ತಂಡಸೆರನರಳಿ
ಬೇಲವರುಟಾಳ ಹಲಸೆಲವ ಕಿಱುನಂದಿ ಚಂದನ ಕಕ್ಕೆ ಬಿಕ್ಕೆ ತಱಿಯ
ಹೂಲಿ ಮಾಲಿನಿ ಬನ್ನಿ ಹೊನ್ನೆ ಸೊಗಡಗಿಲು ಕಿ
ತ್ತಾಳೆ ಹೆಬ್ಬಾಳೆಯೌದುಂಬರಂ ತುಂಬುರಿಂ
ಗಾಲಯವೆನಿಪ್ಪ ನಾನಾ ಭೂಜದೊಗ್ಗಿನಿಂ ಕಾನನಂ ಕಣ್ಗೆಸೆದುದು  ೧೫

ತಡಸು ಕೆಂದರಿ ತೆಂಗು ಸಂಗು ಕೇದಗೆ ಕದಳಿ
ಯೊಡವುವೊದವಿದ ನೆಲ್ಲಿ ಚಿಲ್ಲ ಬಿಲ್ವರ ರುದ್ರ
ನಡುವು ತಂಡಸು ತಪಸು ತಾರಿಕೆಂಗುಂ ತಿರುಳಿ ತಗ್ಗಿ ತುಗ್ಗಿಲು ತುಂಬುರ
ಬಿಡೆ ತೊಟ್ಟಿ ಹಾರಿವಾಳಂ ಹುಣಿಸೆ ಖರ್ಜೂರ
ಜಡಿದೊಱಗುತಿಹ ಮಾವು ಬೇವು ಮಂದಾರಂಗ
ಳಡಸಿ ತುಂಬಿದ ಚೆಲವು ಭೂಜಂಗಳಿಂದ ಮಿಗೆ ಕಾನನಂ ಕಣ್ಗೆಸೆದುದು           ೧೬

ಇರುಳುಲೇಪವ ಪಡೆದ ಕಾಳೋರಗನ ಮನೆಯೊ
ಮರಳಿ ವಡಬಾನಲಂ ಕೆರಳಿಯುಗುಳಿದ ಕಿಡಿಯೊ
ಸುರಗಿ ಕೌಮೋದಕಿಯ ಕೂರಲಗಿನಿಂ ಮೆಱೆವ ಧಾರೆಗಳ ಹೊಗರಿನೊಳಗೆ
ಹರಿದು ತ್ರಿಪುರವ ಸುಡುವ ಮದಹರನ ಬಾಣವೋ
ಕೆರಳಿದುರಿಯೊತ್ತುರಿವ ಕಜ್ಜಳದ ಬೆಟ್ಟವೋ
ಹರಿವ ಮಱಿದುಂಬಿಗಳ ಧಾಳಿಯೋ ಎಂದೆನಿಸಿ ಕಾನನಂ ಕಣ್ಗೆಸೆದುದು         ೧೭

ಸಲೆ ಶಿವಮಯಂ ಶಿವಮಯಂ ಶಿವಮಯಂ ಸಮು
ಜ್ವಲ ಶಿಖಿಮಯಂ ಶಿಖಿಮಯಂ ಶಿಖಿಮಯಂ ನಿರಾ
ಕುಲ ಶುಕಮಯಂ ಶುಕಮಯಂ ಶುಕಮಯಂ ಗಿರಿಯ ಸಾನುವಿಂದೊಸರ್ದು ಪರಿವ
ಜಲ ಹರಿಮಯಂ ಹರಿಮಯಂ ಹರಿಮಯಂ ಮೃಗಾ
ಕುಲ ಮಧುಮಯಂ ಮಧುಮಯಂ ಮಧುಮಯಂ ಶಬರ
ಬಲ ಬಾಣಮಯ ಬಾಣಮಯ ಬಾಣಮಯವಾಗಿ ಕಾನನಂ ಕಣ್ಗೆಸೆದುದು    ೧೮

ದೇವಸಭೆಯಂತೆ ಮುನಿಸಭೆಯಂತೆ ಸರ್ಪೋಪ
ಜೀವಿಯಂದದಿ ಕೌಶಿಕಾಧಿಷ್ಠಿತಂ ಪಾಂಡ
ವಾವಾಸದಂತೆ ಲೋಚನದಂತೆ ಬೆಳುದಿಂಗಳಂತರ್ಜುನಾಡಂಬರಂ
ಓವಿ ಸುರಸಭೆಯಂತೆ ಮದದಂತಿಯಂತೆ ಮೇ
ಘಾವಳಿಗಳಂತೆ ವೃಂದಾರಕೋನ್ನತವಾಗಿ
ಭಾವಿಸುವೊಡರಿದೆನಿಸಿತತಿಭೀಕರಾಕಾರದಿಂದ ಘೋರಾರಣ್ಯವು      ೧೯

ಉಗುರು ತುಪ್ಪುಳು ಕೊಳಗು ನೊರಜು ನೊರೆಗೆಸಱು ಸೊಗ
ಡುಗಳೆಂಬ ಹಲವು ಹಜ್ಜೆಯನಱಸಿ ತೊಳಲುವು
ಬ್ಬೆಗೆ ಬೇಡ ಬಲೆಯೊಡ್ಡಿ ತೋಹುಗೊಂಡೆರೆಗೆದಱಿ ಬೆಳ್ಳಾರ ಸುತ್ತಿ ಸರಿವ
ಬಿಗಿವ ಸಂಕಟ ಬೇಡ ಗಿಡುವೆಲ್ಲ ಮರನೆಲ್ಲ
ನಗವೆಲ್ಲ ಹೊಲನೆಲ್ಲ ನೆಲನೆಲ್ಲ ದೆಸೆಯೆಲ್ಲ
ಖಗಮೃಗದ ಮಯವಾದುದಿಱಿಯಲೆಸೆಯಲು ಕೆಡಪುವವರುಳ್ಳಡಹುದೆನಿಸಿತು         ೨೦

ಮಿಕ್ಕ ಸರುವಿಂಗೆ ದರುವಿಂಗೆ ಹಳ್ಳಕ್ಕೆ ಕೊ
ಳ್ಳಕ್ಕೆ ಗಿಡುವಿಂಗೆ ಮಡುವಿಂಗೆ ಬೆಟ್ಟಕ್ಕೆ ಘ
ಟ್ಟಕ್ಕೆ ಕುತ್ತುಱ ಕೋಣೆಯಿಡುಕುಱಿಂದಿಡಿದ ಮೆಳೆ ಮೆಳೆಗೆ ನಡುನಾಳಲಿಂಗೆ
ತೆಕ್ಕೆಗತ್ತಲೆಗೆ ಬೇಡರ ಪಡೆಗೆ ನಾನಾ ಮೃ
ಗಕ್ಕೆ ನಾನಾ ಧ್ವನಿಗೆ ನಾನಾ ಭಯಂಕರ
ಕಿಕ್ಕೆವನೆಯಾನೆಂದು ಬೊಬ್ಬಿಟ್ಟು ಪೇಳ್ವಂತೆ ಘೀಳಿಡುತ್ತಿರ್ದುದಡವಿ           ೨೧

ನಡೆವ ದನಿ ಹರಿವ ದನಿ ಕರೆವ ದನಿ ಬಿಲ್ಲ ಜೇ
ವೊಡೆವ ದನಿಯೆಸುವ ದನಿ ಬೈವ ದನಿ ಕೂಗಿ ಬೊ
ಬ್ಬಿಡುವ ದನಿಯಿಱಿವ ದನಿ ಮುಱಿವ ದನಿ ತಱಿವ ದನಿ ಬೇಗೆಯುರಿವ
ತುಡುಕು ದನಿ ತಿತ್ತಿರಿಯ ದನಿ ಹಱೆಯ ದನಿ ಸನ್ನೆ
ಗೊಡುವ ದನಿ ಖಗಮೃಗದ ಗರ್ಜನೆಯ ದನಿಯೊಱಲಿ
ಕೆಡೆವ ದನಿಗಳು ಬೆರಸಿ ಬೆಳೆಯೆ ಘೋರಾರಣ್ಯವತಿಭಯಂಕರವಾದುದು        ೨೨

ಹಿಡಿ ನವಿಲನಿಱಿ ಹುಲಿಯನಟ್ಟು ಮರೆವಿಂಡ ದರಿ
ಗೆಡಹು ಕರಿಯಂ ಱೊಪ್ಪವಿಡಿದ ಹಂದಿಗೆ ತಡವಿ
ಬಿಡು ನಾಯನೆಚ್ಚೆರಳೆಯಂ ಕಲ್ಲಲಿಕ್ಕು ಕೋಣನನು ಹೊಱಹೊಗಲೀಯದೆ
ಹೊಡೆಯುಡುವ ಮಱೆವಿಡಿದು ಕುತ್ತು ಕೊಳನನೋವ
ದಿಡು ಮೊಲನ ಮರಚು ಸಿಂಹದ ಹಲವು ಬಲೆಗೆದಱಿ
ನಡೆಗೆಡಿಸು ಹಕ್ಕಿಗಳನೆಂಬ ಬೇಡರ ಬೊಬ್ಬೆಯಿಂದಡವಿ ಘೀಳಿಟ್ಟುದು         ೨೩

ಹರೆದು ನಡೆ ಬಲೆಯ ಹಸರಿಸು ಹೆಜ್ಜೆಯಂ ನೋಡು
ಸರುಹ ಕಟ್ಟುಲುಹನಾಲಿಸು ಕುತ್ತುಱಂ ಸೋದಿ
ಸೆರೆಗೆದಱು ಬೆಳ್ಳಾರ ಬಿಗಿ ತೋಹಿನೊಳು ನಿಲ್ಲು ತಿಱಿಯಂಬ ಬಿಡು ನಾಯ್ಗಳ
ಕೊರಳ ಹಾಸದ ನೇಣ ಸಡಿಲವಿಡು ಸನ್ನೆಗೆಯ್
ಮರನೇಱು ಬಗೆ ಕುಣಿಗಳೊಳು ಕುನ್ನಿಯಂ ಹೊಗಿಸು
ಚರಿತವೆಂದೊಬ್ಬರೊಬ್ಬರನಾಡುವಬ್ಬರದ ಬೊಬ್ಬೆ ಹಬ್ಬಿತ್ತಡವಿಯ        ೨೪

ಎರೆಯ ಚೆಲ್ಲುಲುಹನಱಿ ಬಲೆಗೆದಱು ಹಜ್ಜೆವಿಡಿ
ಸರುಹ ಬಿಗಿ ತೋಹುಗೊಳು ತಡಿಕೆಗಟ್ಟಂಟುದೊಡೆ
ಹರಿದು ಹೊಗು ಬೆಳ್ಳಾರ ಬಿಗಿ ಹೊದೆಱ ಹೊದ್ದಿಸುದ್ದವನೇಱು ಸನ್ನೆದೋಱು
ಹರಿಯನಗೆ ಕಿಱುಯಂಬುವಿಡಿ ಬೇಗೆಯಿಡು ಗಾಳಿ
ವರೆಯಱಿದು ಹುಲಿಯ ಹಿಡಿ ಹಿಡಿಯೆರಲೆಯಂ ತೋಱು
ಚರಿತವೆಂದೊಬ್ಬರೊಬ್ಬರನಾಡುವಬ್ಬರದ ಬೊಬ್ಬೆ ಹಬ್ಬಿತ್ತಡವಿಯ        ೨೫

ಎರಳೆ ಸರಳಿಸಿ ಹೋದುದಿಲ್ಲಿ ಹಿಂಗಾಲೊದೆದು
ತೆರಳ್ದ ಮಣ್ಣಿದೆ ಸೊಕ್ಕಿದೆಕ್ಕಲಂಗಳು ಹೋದ
ವೆರಡು ಕಟವಾಯಿಂದ ಸುರಿದ ನೊರೆಯಿದೆ ಕರಡಿ ತಣಿದಾಡಿ ಹೋದುದಿಲ್ಲಿ
ನೆರೆದಿಱುಹೆಗಳ ಹೊರೆಯೊಳೊಡದ ಹುತ್ತಿದೆ ಹುಲಿಯು
ಮರೆಯನೆಳೆಯಿತ್ತಿಲ್ಲಿ ಬಿಸಿನೆತ್ತರಿದ್ದುದೆಂ
ದಿರದೆಱಗಿ ಹಜ್ಜೆಯಂನೋಡಿ ಬೆಂಬಳಿವಿಡಿದು ಹರಿವ ಲುಬ್ಧಕರೆಸೆದರು       ೨೬

ನೆಗೆದ ಮೊಗವಿಡಿದುಸುರು ಹುರಿಯೊಡೆದ ರೋಮ ನಸು
ಮುಗಿದ ಕಣ್ಣರೆಗಚ್ಚಿದೆಳಗಱುಕೆ ಮಱೆದ ಮೆಯ್
ಬಿಗುಹುಗೆಟ್ಟಳ್ಳೆ ಡೆಂಢಣಿಸುವಡಿಯಾಲಿಸುತೆಳಲ್ವ ಕಿವಿ ರಾಗರಸದ
ಸೊಗಸನಪ್ಪಿದ ಚಿತ್ತವಳ್ಳಿಱಿವ ಜನದ ಬೊ
ಬ್ಬೆಗೆ ಬೆದಱುತಿಪ್ಪ ಮನವೆರಸಿ ಮರಳಾಗಿ ಗೋ
ರಿಗೆ ಸಿಕ್ಕಿದೆರಳೆಗಳನಕಟಕಟ ನಿಷ್ಕುರುಣ ಲುಬ್ಧಕರು ಕೆಡೆಯೆಚ್ಚರು            ೨೭

ಧರೆಯ ಸರಳಿಸುವೆರಳೆ ಬಲುನಾಯ ಬಾಯಿಂದ
ಮುರುಚಿಕೊಂಡೋಡುವ ಮೊಲಂ ತೋಹುಕಾಱರಂ
ಹಱಿದೆಱಗಿ ಕೊಲುವ ಕೋಣಂ ಗುಳಿಗೆ ಬಾರದಳಲಿಸುವ ಕರಿ ನೆಱೆ ನಾಟದ
ಸರಳೊರಸಿ ಹೋಹ ಮರೆ ಹೊಕ್ಕ ಜಾಯಿಲನ ಕಿ
ಬ್ಬರಿಗೊಱೆವ ಹಂದಿ ಬಲೆಯಂ ಹುಗದ ಹಕ್ಕಿಯ
ಬ್ಬರವ ಕಂಡತಿನೊಂದು ಮೀಸೆಗಡಿದಾ ಬೇಡವಡೆಯೊಡೆಯನಿಂತೆಂದನು       ೨೮

ಎಡೆಗೊಡದು ಬೇಂಟೆ ದಿಗುಬಂಧನಂ ಮಾಡು ಕಾ
ಡೊಡೆಯನಂ ನೋನು ಸೊಕ್ಕಿನ ಧೂಪಮಂ ಬೀಸು
ನಡೆ ಕೋಣನೆಲುವನಾಯ್ವೆಂ ಮರೆಯ ಮೂಳೆಯಂ ಮುಱಿವೆನಳಲಿಸುವೆರಳೆಯ
ಅಡಗನುಗಿವೆನು ಸೊಕ್ಕಿದೆಕ್ಕಲನ ರಕ್ತಮಂ
ಕುಡಿವೆನಾರಣ್ಯವೆಲ್ಲಂ ದಣಿಯಬೇಕು ಬಿಡು
ಬಿಡೆನುತ್ತ ಶಬರಸಂಕುಳವುಲಿದು ಬೊಬ್ಬಿಟ್ಟು ನಡೆದರದನೇವೊಗಳ್ವೆನು      ೨೯

ಗೋರಿವೇಂಟೆಯನಾಡಿ ಭೂವರಂ ತಿರುಗಿ ಕಾಂ
ತಾರದೊಳು ಮೃಗವ ನೆಲೆಗೊಳಿಸಿ ಮೇಗಾಳಿಯಿಂ
ದೂರದಿಂ ತೋಱೆತ್ತನೊಡ್ಡಿ ಕಿಗ್ಗಾಳಿಯಿಂ ಬಂಡಿಯಿಂದಿಳುಹಿ ಹುಲಿಯ
ಹಾರಯಿಸಿ ತಲೆದಡವಿ ತೋಱಿ ಹಾಸವ ತಿವಿದು
ದೂರದಿಂ ಕಂಡು ಹಸರಿಸಿ ಹತ್ತಿ ಹಣುಗಿ ನೆಲ
ಕೋರಂತೆಯಡಗಿ ತನ್ನನುವಿನಳವಿಗೆ ಜುಣುಗಿ ನಡೆದು ಬಳಿಕೇಗೆಯ್ದುದು     ೩೦

ಕುಸಿದ ತಲೆ ಹಣುಗಿದೊಡಲರಳ್ವ ಬಾಯ್ ಸುಗಿದ ಕಿವಿ
ಯುಸುರಿಡದ ಮೂಗು ಮಱದೆವೆಯಿಕ್ಕದುರಿಗಣ್ಣು
ಬಸುಱೊಳಡಗಿದ ಬೆನ್ನು ನಿಮಿರ್ದ ಕೊರಳಡಿಗಡಿಗೆ ಗಜಬಜಿಸುತಿಹ ಮುಂದಡಿ
ಎಸೆಯೆ ಲಂಘಿಸಿ ನೆಲನನೊದೆದು ಪುಟನೆಗೆದು ಗ
ರ್ಜಿಸುತ ಬರೆ ಹೆದಱಿ ಕಂಗೆಟ್ಟು ಡೆಂಡಣಿಸಿ ಸರ
ಳಿಸುವ ಹರಿಣಂಗಳಂ ಮೋದಿ ಮುಱಿದಟ್ಟಿ ಕೆಡಹಿದವು ದೀಹದ ಹುಲಿಗಳು  ೩೧

ಕರಿಸೀಳ್ದ ಕೋಣನೆಱಗಿದ ಹಂದಿ ಸೆಳೆದ ಕೇ
ಸರಿ ಬಗಿದ ಹುಲಿ ಹೊಯ್ದ ಕರಡಿ ಕಾಱಿದ ಕಡವೆ
ಯುರೆತುಳಿದ ಸಾರಂಗವಿಱಿದ ಚಿತ್ರಕನಗಿದ ಎಯ್ಯೆಚ್ಚ ಖಡ್ಗಿಯಗಿದ
ಮರೆ ಕುತ್ತಿದೇಱುಗಳ ವೇದನೆಗೆ ಬಾಯ್ವಿಟ್ಟು
ನರಳುತೊಱುಲುವ ಕಿರಾತರನು ಮಲಗಿಸಿಕೊಂಡು
ಮರದ ತಣ್ಣೆಳಲ ತಂಪಿನೊಳು ಸಾಗಿಸುವ ಶಬರಿಯರ ನೋಡುತ ನಡೆದನು  ೩೨

ಓವಿ ಹೀಲಿಯನುಟ್ಟು ತಳಿರ ಮೇಲುದನುರಕೆ
ತೀವಿ ಗುಂಜಾಭರಣಮಂ ತೊಟ್ಟು ಕೇದಗೆಯ
ಹೂವಿನೆಸಳೋಲೆಯಂ ತಿರುಪಿ ಶಿಲೆಯೊರಳಿಕ್ಕಿ ದಂತದೊನಕೆಗಳಂನಾಂತು
ಸುವ್ವಿ ನಲ್ಲನೆ ಸುವ್ವಿ ಸುವ್ವಿ ಕಾನನವಿಜಯ
ಸುವ್ವಿ ಬಲುಬಿಲುಗಯ್ಯ ಸುವ್ವಿ ಮೃಗಕುಲಮಥನ
ಸುವ್ವಿಯೆಂದಲ್ಲಿಯ ಪುಳಿಂದಿಯರು ಪಾಡಿ ಚಳಿಸಿದರು ಬಿದಿರಕ್ಕಿಗಳನು       ೩೩

ಬಿದಿರಕ್ಕಿಯಂ ಕುದಿಸಿ ಮದಮೃಗದ ಮಾಂಸಮಂ
ಹದದೊಳಟ್ಟುಱೆ ತೊಳಸಿ ಸಂಭಾರಮನ್ನಿಕ್ಕಿ
ತುದಿವೆರಲಿನಿಂದುಪ್ಪ ಬಿದಿರಿ ಬೇಡರ ತಂಡವೋರಣಂಗಟ್ಟಿ ಕುಳಿತು
ಸದಮದದೊಳುಂಡು ತಾಂಬೂಲಂಗಳಂ ಕೊಂಡು
ಕದನಕರ್ಕಶ ಕಿರಾತರು ಮುಂದೆ ನಡೆಗೊಂಡು
ಬೆದಱಿ ಹೋಹೆರಳೆಗಳನಿಸುವ ಶಬರಿಯರ ನೋಡುತ್ತ ಭೂಪಾಲ ಬರಲು    ೩೪

ಹುಲಿಯ ಬೇಂಟೆಯನಾಡಿ ತಿರುಗಿ ನಡೆವಾಗ ಮುಂ
ದೆಲೆಲೆ ಗರ್ಜಿಸಿ ಕೆದಱಿ ಧೀಂಕಿಟ್ಟು ಮುಟ್ಟದತಿ
ಬಲಸಿಂಹಮಂ ಕಂಡು ಕಣ್ಮುಚ್ಚಿ ನೆಱೆ ತಗ್ಗಿ ಮುಗ್ಗಿ ತಲೆಗುತ್ತಿಕೊಂಡು
ನೆಲಕಾನೆ ಸುಂಡಿಲಂ ಹರಹಿ ಮೊಳಕಾಲಿಕ್ಕಿ
ಬಲವಳಿದು ಘೀಳಿಟ್ಟು ಬೆನ್ನುಡುಗಿ ಗೂಡುಗೊಂ
ಡುಲುಕಲಮ್ಮದೆ ಸುಕ್ಕಿ ಸುಗಿದು ಬೆಂಬಿದ್ದುವಾನೆಗಳು ಬಳಿಕೇವೊಗಳ್ವೆನು    ೩೫

ಮಡುವಿಡುವ ಮದಸಮುದ್ರದ ಸೊಗಡ ಸೊನೆಗೆ ತಲೆ
ಗೊಡಹಿ ಕೊಕ್ಕರಿಸಿ ಪೊಱಮಟ್ಟೋಲಗಂಗೊಟ್ಟು
ವಡಬವಹ್ನಿಗಳೊ ಎಂದೆನಿಪ ಕೆಂಗಣ್ಣಿನಿಂದುದಿರ್ವ ತೊಂಗಲ್ಗಿಡಿಗಳ
ಹೊಡೆಯೆ ಹೊತ್ತಿದ ದಂತಮಂ ಕರ್ಣತಾಳದಿಂ
ಕೊಡಹೆ ಭುಗಿಲೆಂದುರಿಯೆ ನೊಂದು ಸೈರಿಸದಡವಿ
ವಿಡಿದೋಡುತಿಹ ಗಜಂ ದಾವಾಗ್ನಿ ತನುವೊತ್ತು ಬೀದಿವರಿವಂತಿರ್ದುದು      ೩೬

ಬಿಡೆ ನಿಲುಕಿ ಹಬ್ಬಿದೊಡಲೆತ್ತಿದ ಕೊರಳ್ ಕೆದಱಿ
ಜಡಿವ ಕೇಸರ ನಟ್ಟ ಕಿವಿ ಬಿಟ್ಟ ಕಣ್ ನೆಗೆದ
ಕುಡಿವಾಲ ಬಾಗಿ ಮುಱಿದವುಡಿ ಕೆಡಹುವ ಮೊಗಂ ಬಿಗಿದು ಬಾದಣಗಂಡವ
ಒಡೆಕಾಱಿ ಹೀಱಿ ಹಿಂಡುವ ಕಂಠ ಮೊರೆವ ಮೂ
ಗಡಸಿ ಹೊಡೆದೆತ್ತಿ ತೋಡುವ ಮುಂದಣಡಿ ಕಯ್ಯ
ಕಡೆಯನೌಕಿದ ಹಿಂದಣಡಿ ಮಱೆಯೆ ಕರಿಗಳಂ ಕೆಡಹಿದುವು ಸಿಂಹಂಗಳು        ೩೭

ಸಿಂಗವೇಂಟೆಯನಾಡಿ ತಿರುಗಿ ರಿಪುಮಾತಂಗ
ಸಿಂಗನೆಯ್ತಪ್ಪಾಗ ಸಿಂಗರದ ನವವಿಷಾ
ಣಂಗಳುಗ್ರಂ ಕ್ರೋಡ ರೌದ್ರತರಮದಱ ಮದದನಿಯಿಂದಡರ್ದ ರುಚಿಯ
ಅಂಗರುಚಿ ಶರಭಬಲಮಂ ಬಲದ ವಾಜಿಕರ
ಣಂಗಳು ಲೋಹಿತಾಕ್ಷಿಗಳತುಳ ಭೂಧರ
ಶೃಂಗಮಂ ಪೃಥಳಕಂಧರಮೃಗಲುಲಾಯರಿತುಮಹಿಷೆಗಳ ನಡುವಿರ್ದುದು  ೩೮

ಮಿಕ್ಕು ಪಚ್ಚಳಕೆತ್ತಿ ಮೆಯ್ ನಿಮಿರಿ ಗುಱುಗುಱಿಸಿ
ಹೊಕ್ಕುಳಲ್ಲಾಡೆ ಮುಂಬದನ ನಸೆಗೊಸರ್ವ ನೊರೆ
ನಕ್ಕಿ ವಾಸಿಸಿ ಲೋಳೆ ಬೀಳೆ ಮೂಗಂ ಸುಗಿದು ನೆಗಪಿ ಪೇಚಕಕೆ ಮುಸುಡ
ಇಕ್ಕಿ ಕಿವಿಯೆಳಲೆ ಕಣ್ಣರೆಮುಚ್ಚಿ ನೆಗೆದು ಮೇ
ಲಿಕ್ಕಿ ದನಿಗೊಡುತ ಲಂಘಿಸುತ ಕಾಡೆಮ್ಮೆಗಳ
ತೆಕ್ಕೆಯೊಳು ಕೋಣನಿರೆ ಕಂಡು ಶಬರಿಯರು ಬೊಬ್ಬಿಕ್ಕೆ ಮಗುಳ್ದಾಲಿಸಿದರು೩೯

ದಿಟ್ಟಿಸುವ ಕಣು ನಟ್ಟ ಕಿವಿ ಮರಳ್ದ ಮುಸುಡು ಸುಱು
ಕಿಟ್ಟು ಗುಱುಗುಱಿಪ ಮೂಗಲುಗದಂಗಂ ನೆಲನ
ತಟ್ಟಿ ಬೆರಟುವ ಪದಂ ನೆಗೆದಳ್ಳೆ ಬೆಂಗಡರ್ದ ಬಾಲದಿಂ ರೌದ್ರಕೋಪ
ಹುಟ್ಟಿ ಕೋಡಂ ಜಡಿದು ತನುವ ಝಾಡಿಸಿ ಹಿಂಡ
ಬಿಟ್ಟು ಱೌಂಕಿಟ್ಟು ಹರಿಯಿತ್ತು ಕಾನನದೊಳಱೆ
ಯಟ್ಟಿತ್ತು ವನುದುರ್ಗಿಯೆಡೆಗೆ ಹರಿಯಿಡುವ ಮಹಿಷಾಸುರನನದು ಪೋಲ್ತುದು       ೪೦

ಕಡಗಿ ಕೈಕೊಂಡಟ್ಟಿ ಮುಟ್ಟಿಬರೆ ತಮ್ಮೊಳೊ
ಗ್ಗೊಡೆದು ಬಿಲುವೊಯ್ದು ತೆಗೆನೆಱೆದು ಕೂಕಿಱಿದು ಕೆಡೆ
ಕೆಡೆಯೆನುತ್ತೆಣ್ದೆಸೆಗಳಿಂದೆಚ್ಚ ಶಬರಿಯರ ಕೂರ್ಗಣೆಗಳೊಡಲನೊಡೆದು
ಅಡಸಿ ತುಱುಗಿರೆ ಹೆಚ್ಚಿದೆಯ್ಯಮೃಗದಂತಿರ್ದ
ನಿಡುಗೋಣನಂ ನೋಡುತವನಿಪಂ ಬರೆ ಮುಂದ
ಣಡವಿಯೊಳು ಸಾಳುವಂಗಳನು ಖಗವೇಂಟೆಗಾ ಲುಬ್ಧಕರು ಬಿಡುತಿರ್ದರು    ೪೧

ಮಱೆವಿಡಿದು ಶಬರನಿಕರಂ ಕೊರಳ ಗಹಗಹಿಕೆ
ಮೊಱೆಯೆ ಲಾವುಗೆ ಹರಡೆ ಗೌಜು ಟಿಟ್ಟಿಭ ಕುಕಿಲ
ತುಱುವೆಗಣ್ಣಂ ಹಂಸೆ ರಾಗಧರನೆಂಬ ಪಕ್ಷಿಗಳ ದನಿಯಿಂ ಕರೆಯಲು
ತುಱುಗಿ ನಭದೊಳು ಖಗಾನೀಕ ಮಂಡಳಿಸಲಿ
ಟ್ಟೊಱಲಿ ಕೆಡೆದುಳಿದೋಡುತಿಪ್ಪ ಪಕ್ಷಿಗಳಿಗಾ
ಲ್ದೆಱಕೆಗಳ ನೀವಿ ಸರಪಳಿ ಬಂದಿ ಟೊಪ್ಪರವನುಗಿಯೆ ಬಳಿಕೇಗೆಯ್ದುವು       ೪೨

ಕಾಗೆ ನವಿಲಿಬ್ಬಾಯ ಗುಬ್ಬಿ ಪಾರಿವ ಕೊಂಚೆ
ಗೂಗೆ ಕುಕಿಲಿಱಿವ ಗಂಟಿಗ ಕಿರುಬ ಗೊರವ ಗಿಳಿ
ಜಾಗರಿಗ ಹರಡೆ ಹಸುಬಂ ಹಿಸುಣ ಹೆಬ್ಬಕ್ಕಿ ಗಿಡುಗ ಹೊಱಸೊರೆವ ಶಕುನಿ
ಮೂಗನುರಿಗಣ್ಣ ಬೆಳ್ಳಕ್ಕಿ ವಲಿಯಂ ಚಿಟ್ಟಿ
ಜೂಗ ಹದ್ದೆಂಬಿವಂ ಸಾಳುವಂಗಳು ನೆಗೆದು
ತಾಗಿ ಹಡೆಹೊಡೆದಿಳೆಯೊಳಿಕ್ಕಿದಡೆ ಹಕ್ಕಿಗಳ ಮಳೆಗಱೆಯುವಂತಾದುದು     ೪೩

ಸಾಳುವನ ಬೇಂಟೆಯಂ ನೋಡಿ ನಡೆವಾಗಲಿಱಿ
ಗೂಳಿ ಹೆಗ್ಗೂಳಿ ಕಿಱುಗೂಳಿಯಿಂ ಮೂತೆಱದ
ಗಾಳಂಗಳಿಂ ಗೋರಿವಲೆಳಿಂ ಬಲೆಳಿಂ ಹಲಕೆಲವು ಜಾಲಂಗಳಿಂ
ನೀಳದಾರಂ ಬಿಗಿದ ಸಿಲುಕಂಬಿನಿಂ ಸೊಗಡು
ಗೂಳುಗಳ ಮದ್ದುಗಳ ಮಸಕದಿಂದಂ ನದಿ ನ
ದಾಳಿಯೊಳು ಮೀನ್ಗಳಂ ತವಿಸುತಿಹ ಬೇಡರಂ ನೋಡಿದಂ ಭೂನಾಥನು       ೪೪

ಕೊಱೆವ ಸೀಗುಡಿ ಗೆಂಡೆ ಕುಚ್ಚು ಹಣ್ಣಲು ಬಸಿಗ
ಗಿಱಿಲು ಬಂಗಡೆ ಹಾವು ಜಳಬಾಳೆ ಕುಕಿಲು ಹೆ
ಗ್ಗಱಿ ಗಣೆ ಮಣಿಗಣ್ಣ ತೂತು ತೆಂತಲು ಸಿಸಿಲು ಬೊಂಪು ಸವಿವಾಯ ಗೊದಳೆ
ಗಱಿಮೆಱೆವ ಕಾಗೆಂಡೆಯಯ್ಯರೆಗ ದೊಂಡಿ ಕೆಂ
ಗಱಿ ಹರಳು ಹಾರುವಂ ಹಿರಿಯ ಷಡುಸಕ್ಕರಿಗ
ನಿಱಿಲು ಹಂದೆಗನಾನೆಮೊಗನೆಂಬ ಪರಿಪರಿಯ ಮೀನ್ಗಳಂ ಗುದಿಗೆಯ್ದರು    ೪೫

ಬಿಳಿಚ ಚಿಪ್ಪಲು ಮಲಗು ಹೆಮ್ಮಲಗು ಬಿಳಿಯಾನೆ
ಮಳಲಿ ಕೂಡಿಲು ಚಕ್ರಗೆಂಡೆಯಾವೆಗ ನವಿಲು
ಯಿಳಿಯಂಬು ಕುಱಿದಲೆಗ ಹೆಮ್ಮೀನು ಕೆಮ್ಮೀನು ಮುಕ್ಕಣ್ಣನಾರೆ ನಿಱಿಲು
ಕುಳಿಚು ಸೂಜಿಗನಗಲು ಹೆಲ್ಲರಂ ಬಂಕುರು
ಹಳಲೆ ಕಪ್ಪೆಗಳೊಱಲೆ ಬೋಟೆ ಗಿಱಿಲುಗಳೆಂಬ
ಹೊಳೆವಳಿಯ ಮೀನ್ಗಳಂ ತಿವಿಸುತಿಹ ಬೇಡರಂ ನೋಡಿದಂ ಭೂಪಾಲನು     ೪೬

ಕೆದಱುವೀಲಿಯ ಚಲ್ಲಣದ ಸೊಕ್ಕಿದೆಕ್ಕಲನ
ತಿದಿಯೆಕ್ಕವಡದ ಗರುಡನ ಗಱಿಯ ತಲೆವಱಿಯ
ಮದಗಜನ ಮುತ್ತಿನೇಕಾವಳಿಯ ಹೊಮ್ಮಿಗಾಜಿನದ ಱವಕೆಯ ದಂತದ
ಹದವಿಲ್ಲ ಬೆನ್ನಬತ್ತಳಿಕೆಗಳ ಕೆಲದ ಚವ
ರದ ಗೊಂಡೆಯದೊಳೆಸೆವ ಜವ್ವನದ ಶಬರಿಯರು
ಪದೆದು ಕುಸಿದಡಸಿ ತೋಹುಗಳಲ್ಲಿ ಹರಿವ ಹುಲ್ಲೆಗಳನೆಸುತಿರ್ದರಂದು      ೪೭

ಮೃತ್ಯುವಗಿದುಳಿದಂತೆ ಬೇಡರಟ್ಟುಳಿಗಳೊಳು
ಕುತ್ತುಱೊಳಗಡಗಿರ್ದು ಬಳಿಕೆದ್ದು ತಮತಮ್ಮ
ಹೆತ್ತ ತಾಯ್ಗಳನಱಸುತತ್ತಲಿತ್ತಲು ಪರಿದು ಬಾಯ್ವಿಡುವ ಮೃಗಶಿಶುಗಳ
ಸುತ್ತಿ ಕಿಱುಮಱಿಗಾಣದೊಱಲಿ ಕೆಕ್ಕಳಿಸಿ ಕೊರ
ಳೆತ್ತಿ ಹೂಂಕರಿಸಿ ಗಿಡುಗಿಡುಗಳೊಳು ಹೊಕ್ಕು ಬಳ
ಲುತ್ತೊಱಲುತಿರ್ಪ ಬಾಣತಿಮೃಗವ ನೋಡುತ್ತ ಬರುತಿರ್ದನವನೀಶನು       ೪೮

ಕಂಟಣಿಸಿದಾ ಖಗವನೀ ಮೃಗವನೆಂತಕ್ಕೆ
ಬೇಂಟೆಯಾಡಿದನೆಂದು ಪೊಗಳಲೇವುದು ಗೋರಿ
ವೇಂಟೆ ಪಳಹರವೇಂಟೆ ಪಟವೇಂಟೆ ವಿದ್ಯಾಧರರ ಬೇಂಟೆ ಚಿತ್ರವೇಂಟೆ
ಅಂಟುಜಲವೇಂಟೆ ತೋಹಿನ ಬೇಂಟೆ ಘನಸೋಹು
ವೇಂಟೆಗಳೆನಿಪ್ಪ ಹೆಸರಂ ಹೊತ್ತು ಮಱೆಯುತಿ
ಪ್ಪೆಂಟು ತೆಱದುಚಿತವೇಂಟೆಯನಾಡಿದಂ ಹರಿಶ್ಚಂದ್ರವಸುಧಾಧೀಶನು         ೪೯

ಗಣ್ಯತರ ಗೌತಮಾರಣ್ಯದಲಿ ದಂಡಕಾ
ರಣ್ಯದಲಿ ಕ್ರೌಂಚಕಾರಣ್ಯದಲಿ ಭಯಗುಹಾ
ರಣ್ಯದಲಿ ನುತದಶಾರಣ್ಯದಲಿ ಘೋರಕಂಠೀರವಾರಣ್ಯದಲ್ಲಿ
ಪುಣ್ಯವಿಡಿದನಿಮಿಷಾರಣ್ಯದಲಿ ಮಾನುಷಾ
ರಣ್ಯದಲಿ ಬೇಂಟೆಯಾಡುತ್ತ ನಡೆತಂದಖಿಳ
ಪುಣ್ಯವೆಂದೆನಿಪ ಕಿಷ್ಕಿಂಧಾಚಳಕ್ಕೆ ಬಂದನು ಹರಿಶ್ಚಂದ್ರನೃಪನು     ೫೦

ಲೀಲೆಯಿಂ ಬಂದು ಕಾಣಿಕೆಯಿತ್ತು ಕಿಷ್ಕಿಂಧ
ಶೈಲದ ಮಹಾಮರ್ಕಟಾಧಿಪರ ನೋಡುತ್ತ
ಭೂಲೋಲನಿರಲಿತ್ತ ವಿಪಿನಕ್ಕೆ ಮುಂದೆ ಹರಿದಖಿಳ ಬೇಂಟೆಯ ಬೇಡರು
ಲಾಲಿಸದೆ ಹೊಕ್ಕು ದೀಹದ ಹಲವು ಶರಭ ಶಾ
ರ್ದೂಲ ಸಿಂಹಂಗಳಂ ಹಾಸಮಂ ತಿವಿದು ಮೃಗ
ಜಾಲಮಂ ತೋಱಿ ತಲೆದಡವಿ ಬಿಟ್ಟರು ಬಿಟ್ಟಡಟ್ಟಿ ಬಳಿಕೇಗೆಯ್ದುವು      ೫೧

ಉಕ್ಕಿನೆರಳೆಯನಾದೊಡಂ ಮುಱಿವ ಹುಲಿಗಬ್ಬ
ವಿಕ್ಕತೊಡಗಿದವಲ್ಲಿಯೆರಳೆಗಗ್ಗದ ಸಿಡಿಲ
ಸೆಕ್ಕೆಯಿಂ ಸವೆದಾನೆಗಳನಾದೊಡಂ ಸೀಳ್ವ ಸಿಂಹವಲ್ಲಿಪ್ಪಾನೆಗೆ
ತೆಕ್ಕತೊಡಗಿದುವು ಕಡೆಗಾಲದಗ್ನಿಯಲಿ ಕರು
ವಿಕ್ಕಿದುರಿಗೇಸರಿಯನಾದೊಡಂ ಸೀಳ್ವದಟು
ಮಿಕ್ಕ ಶರಭಂಗಳಾ ಕೇಸರಿಗೆ ನಡುಗತೊಡಗಿದುವು ಬೇಡರು ಬೆದಱಲು         ೫೨

ಉರಿ ಶೈತ್ಯವಾದಂತೆ ವಿಷವಮೃತವಾದಂತೆ
ತರಣಿ ತಂಪಾದಂತೆ ನೃಪನ ಬೇಂಟೆಯ ಬಿನದ
ದುರವಣೆಯನೊದವಿಸುವ ಹರಿವೈರಿ ಕರಿವೈರಿ ಹರಿಣವೈರಿಗಳು ಮೃಗವ
ಹರಿದಟ್ಟಿ ಪಿಡಿದಡಸಿ ಮೋದಿ ಮುಱಿಯದೆ ನಿಂದು
ಮರವಟ್ಟ ಕಾರಣವನಱಿಪಬೇಕೆಂದೆಯ್ದಿ
ಸರಸಿರುಹಸಖಕುಲಹರಿಶ್ಚಂದ್ರ ಭೂಪಂಗೆಪೇಳ್ದರಂತಾ ಬೇಡರು   ೫೩

ಚಿತ್ರತರವಾದುದಿಂದೀ ಕಾನನಂ ಮಹಾ
ಕ್ಷೇತ್ರದೊಳಗಣದಾಗದಿರದೆನುತ ಬರೆ ಮುಂದೆ
ಚಿತ್ರಕಾಯಾಜಿನದ ಸುಲಿಪಲ್ಲ ಭಸಿತದ ಜಟಾಭರದ ಮುನಿನಾಥನು
ಮಿತ್ರರೊಡಗೂಡಿ ಮಿತ್ರಪ್ರಕಾಶಂ ಲೋಕ
ಮಿತ್ರನಾತ್ಮಪವಿತ್ರ ಚರಿತವಾಕ್ಯಂ ಮರುತ
ಮಿತ್ರಕಾರ್ಯದ ಪರಿಕರಂಗಳಂ ಸವಕಟ್ಟುತಿರಲು ಭೂಪತಿ ಕಂಡನು೫೪

ನಾರಸೀರೆಯನೊಗೆವ ಜಡೆಗೆ ಸುಂಕಿಕ್ಕುವಾ
ದಾರಮಂ ಬಿಗಿವಕ್ಷಮಾಲೆಯ ಸರಗೆಯ್ವ
ಪೌರಾಣಮಂ ಕಲಿವ ಜಪಸಮಾಧಿಯೊಳಿಪ್ಪ ಮೌಂಜಿಮೇಖಲೆಗಟ್ಟುವ
ಸಾರಶಾಸ್ತ್ರವನಱಿವ ಕೃಷ್ಣಾಜಿನದ ಕಡೆಗೆ
ದಾರವಿಕ್ಕುವ ಕಂದಮೂಲ ಫಲಮಂ ತಪ್ಪ
ಚಾರುಮುನಿಪುತ್ರರ್ಗೆ ವಂದಿಸುತ ಬಂದಿದಿರೊಳೊಂದು ಕೊಳನಂ ಕಂಡನು      ೫೫

ಬಳಸಿದೆಳಲತೆಯ ತಂಪಿಂಗೆ ಕಂಪಿಂಗೆ ಕೆಂ
ದಳಿರಿಂಗೆ ಕರ್ಣಿಕೆಗಳೆಸೆವ ಕುಸುಮಕೆ ನವ್ಯ
ಫಳಕೆ ತುಂಬಿಗೆ ಗಿಳಿಗೆ ಕೋಗಿಲೆಗೆ ಕುಣಿವ ನವಿಲಿಂಗೆ ಹಂಸೆಯ ನಿಕರಕೆ
ಪುಳಿನಕ್ಕೆ ತಂಗಾಳಿಗೆಸೆವ ದೀಹದ ಮೃಗಾ
ವಳಿಗೆ ಬೆಱಗಾಗುತ್ತ ನಡೆತರುತ್ತರರೆ ಕ
ಣ್ಣಳವಿಯಲಿ ಕಂಡನಪ್ರತಿಮಯತಿರಾಯ ಪಶುಪತಿ ಶಿವನ ನುತಪ್ರಭೆಯನು  ೫೬

ಕಡುಹಿಮಂ ಕಡುವಿಸಿಲು ಕಡುಗಾಳಿಯಿಲ್ಲ ಮರ
ನಡಿಯ ನೆಳಲತ್ತಿತ್ತಲೊಲೆಯದನವರತ ಬೆಳೆ
ಯುಡುಗವೆಲ್ಲಾ ಭೂಜಲತೆಯೋಷಧಿಗಳು ಫಲವಿಡಿದೊಲೆದು ಜಡಿಯುತಿಹೆವು
ಬಿಡದೆ ಹುಲಿ ಹುಲ್ಲೆ ಹರಿ ಕರಿಯೆರಳೆ ಸೀಳ್ನಾಯ್ಗ
ಳೊಡನೆ ಮುಂಗುರಿ ಮೂಷಕಂ ನವಿಲು ನಾಗಂಗ
ಳಡಸಿ ನಿಜವೈರಮಂ ಮಱೆದಿಪ್ಪುವೆನೆ ಮುನಿಯ ಮಹಿಮೆಯಂ ಪೊಗಳ್ವರಾರು         ೫೭

ಈ ಮುನಿಯ ಚಾರಿತ್ರದೊಳು ಗಂಗೆ ಹುಟ್ಟದಿರ
ಳೀ ಮುನಿಯ ಶಾಂತಿಯೊಳು ಚಂದ್ರಮಂ ಜನಿಸದಿರ
ನೀ ಮುನಿಯ ವದನದೆ ದಯಾವನಧಿ ಸುರಕುಜಂ ಸುರಧೇನು ಪೊಣ್ಮದಿರವು
ಈ ಮುನಿಯ ಸವಿನುಡಿಯಿಂದಮೃತವೊಗೆಯದಿರ
ದೀ ಮುನಿಯ ಸುಳುಹಿನೊಳು ತಂಗಾಳಿ ಜನಿಸದಿರ
ದೀ ಮುನಿಂದ್ರ ಮುನಿಯ ವೇಷದೀಶ್ವರನಾಗದಿರನೆನುತ ನಡೆತಂದನು          ೫೮

ಸವಿದು ನೋಡುತ್ತಿರಲು ಕಣ್ಗೆ ಪೊಣ್ಮುವ ಪುಳಕ
ಬೆವರೊಗಲುವುಕ್ಕುವಾನಂದಾಶ್ರು ತಂಬೆಲರು
ಕವಿವ ಪರಿಣಾಮವಂ ಕಂಡು ತನ್ನೊಳಗೆ ತಾನೇ ಮೆಚ್ಚಿ ಬೆಱಗಾಗುತ
ಇವರ ಕಂಡೆನಗೀ ಸುಖಂ ಪುಟ್ಟಲೇಕಿವರು
ಶಿವನ ಸಮ್ಮುಖರಾಗದಿರರು ನೋಡುವೆನೆಂದು
ರವಿಕುಲಲಲಾಮಂ ಹರಿಶ್ಚಂದ್ರನಾ ಮುನೀಶ್ವರನೆಡೆಗೆ ಬರುತಿರ್ದನು          ೫೯

ಹೆಂದದಾನಂದದಿಂ ಬಂದು ವಂದಿಸಿ ಮುಂದೆ
ನಿಂದೆಂದಿನಂದದಿಂದಿಂದು ಮುದದಿಂದ ಮೃಗ
ವೃಂದದೊಳಗೊಂದುವಂ ಕೊಂದಿಕ್ಕದೆಮ್ಮ ಮೃಗವಿರ್ದುದಕೆ ಕಾರಣವನು
ತಂದೆ ಕುಂದದೆ ಕರುಣಿಸೆಂದು ವಂದಿಸಿ ಭೂಪ
ಕಂದರ್ಪನಿನಕುಲ ಹರಿಶ್ಚಂದ್ರ ಭೂನಾಥ
ನೆಂದಡಾ ಮುನಿನಾಥನಂದು ಮಾಱುತ್ತರಂಗುಡಲೆಂದು ತಱಿಸಂದನು          ೬೦

ನೆರೆದ ವೇದಂಗಳುಗ್ಗಡವುಪನಿಷತ್ತುಗಳ
ಗರವಟಿಗೆಯಣಿಮಾದಿಗಳ ಬೊಬ್ಬೆ ಧರ್ಮದ
ಬ್ಬರ ಘನಜ್ಞಾನ ಪ್ರಭಾದೀಪ್ತಿಗಳು ಹರಿಬ್ರಹ್ಮಾದಿ ಸುರರ ಕಾಹು
ಪುರುಷಾರ್ಥ ನಾಲ್ಕಱೊಳು ಸಲುಗೆ ಪುಣ್ಯದ ಪುಂಜ
ಸಿರಿಸರಸ್ವತಿಯರೆಡೆಯಾಟವೆಸೆದಿರೆ ಜಗ
ದ್ಗುರು ವಿರೂಪಾಕ್ಷನಿಲ್ಲಿಯೆ ಸುಖದೊಳಿಪ್ಪ ಪಂಪಾಕ್ಷೇತ್ರವಿದೆಯೆಂದನು    ೬೧

ಪುದಿದ ಭಕ್ತಿಜ್ಞಾನವೈರಾಗ್ಯಮುತ್ತಮಾಂ
ಗದ ಮಕುಟದಗ್ರದೊಳು ಹೊಳೆವ ಮಣಿಗಣದಂತೆ
ತುದಿ ತೋಱುತದೆ ನಿಂದು ನಿಲುಕಿ ನಿಟ್ಟಿಸಿ ನೋಡು ನೋಡು ಕಟ್ಟಿದಿರೊಳಿಪ್ಪ
ಅದು ಹೇಮಕೂಟ ಮತ್ತದು ಮತಂಗಾದ್ರಿ ಹೋ
ಗದು ಮಾಲ್ಯವಂತವಿಂತವಱ ಮಹಿಮೆಗಳನಾ
ಮದನಹರನೇ ಬಲ್ಲನೆಂದು ತೋಱಿದನು ಭೂನಾಥಂಗೆ ಮುನಿನಾಥನು       ೬೨

ನಿನಗೆ ಹೇಳುವುದೇನು ದೆಸೆದೆಸೆಯೊಳೊಂದು ಯೋ
ಜನ ಮೂಡ ಕಿನ್ನರೇಶಂ ತೆಂಕ ಜಂಬುಕೇ
ಶನು ಪಡುವ ಸೋಮನಾಥಂ ಬಡಗ ವಾಣಿಭದ್ರಂ ನಾಲ್ಕು ಬಾಗಿಲುಗಳು
ಇನಿತೆಡೆಯೊಳಿಡಿದಿಹ ಪ್ರಾಣಿಮಾತ್ರಾಳಿ ನೆ
ಟ್ಟನೆ ಗಣೇಶ್ವರ ರವಕೆ ಯಮದೂತರೊಳಗಾಗಿ
ಮುನಿಯಬಾರದು ಗುರುವಿರೂಪಾಕ್ಷನಾಜ್ಞೆ ಕೇಳೆಂದನಾ ಮುನಿನಾಥನು         ೬೩

ಬಿಡದೊಮ್ಮೆ ಕಂಡ ಜೀವರ ಭವವ್ರಜದ ಬೆಂ
ಬಡಿಗೆ ಪಾತಕದ ತೋಮೆಯ ಕತ್ತಿ ದುಷ್ಕರ್ಮ
ದೆಡೆಗೊರಳ ಕತ್ತರಿ ಸಮಸ್ತರೋಗಂಗಳೆಡೆಗೊಡ್ಡಿದಲಗ ಜ್ಞಾನದ
ನಡುದಲೆಯ ಗರಗಸಂ ಮಲೆವ ಮಾಯೆಯ ಬಸುಱ
ನೊಡೆಹೊಯ್ವ ಶೂಲವಿನ್ನುಳಿದ ದುರಿತವನುರುಹಿ
ಸುಡುವ ಕಿಚ್ಚೆಂದೆನಿಪ ತುಂಗಭದ್ರಾನದಿಯನವನೀಶ ನೋಡೆಂದನು೬೪

ನುಡಿದೆನ್ನ ಸಂಶಯದ ಸಾಲ ಸವಱಿದೆ ನಿನ್ನ
ಪಡೆದ ಪುಣ್ಯಾಧಿಕನ ಹೆಸರಾವುದಯ್ಯ ನುಡಿ
ನುಡಿಯೆಂದಡೆರಡನೆಯ ಪುರಮಥನಯೆನಿಸುವ ವಸಿಷ್ಠಮುನಿಪನ ಮೊಮ್ಮನು
ಬಿಡೆ ಪರಾಶರನು ನಾನೆನೆ ಹೆಚ್ಚಿ ಹಿಗ್ಗಿ ನಡೆ
ನಡೆ ತಂದೆ ಮದ್ಗುರುಗಳಡಿಗಳೆಡೆಗೆಂದು ಬಳಿ
ವಿಡಿದು ನಡೆತಂದು ಕಂಡನು ಮುಂದೆ ಮುನಿವರೇಣ್ಯನನವನಿಪವರೇಣ್ಯನು   ೬೫

ತಿಳಿಗೊಳನ ಬಳಸಿ ನಳನಳಿಸಿ ಬೆಳೆದೆಳಮಾವು
ಗಳ ತಳದ ಮಲ್ಲಿಕಾಮಂಟಪದ ತಣ್ಣೆಳಲ
ತೆಳುಗಾಳಿಯೊಳು ಪುಣ್ಯವಪ್ಪ ಪುಳಿನಸ್ಥಳದ ಮೇಲಶೋಕೆಯ ತರುವಿನ
ತಳಿರ ತೊಂಗಲ ಗದ್ದುಗೆಯೊಳೋಲಗಂಗೊಟ್ಟು
ಬಳಸಿ ಹಿಂದೆಡಬಲದೊಳಿಪ್ಪ ಮುನಿಗಳ ಕೂಡೆ
ನಲವಿನಿಂ ನುಡಿವ ಪಶುಪತಿಯಂತಿರಿರ್ದ ಮುನಿನಾಥ ಕಣ್ಗೆಸೆದಿರ್ದನು          ೬೬

ನೀತಿ ಬಲಿದುದೊ ಶಾಂತಿ ರೂಪಾಯ್ತೊ ಸದ್ಗುಣ
ವ್ರಾತವೇ ಮುನಿಯಾಯ್ತೊ ಮುಕ್ತಿ ಜಡೆವೊತ್ತುದೋ
ಭೂತಧಯೆ ವಲ್ಕಲಾಂಚಲವಾಂತುದೋ ಪುಣ್ಯವೆಳಸಿ ಭಸಿತವನಿಟ್ಟುದೋ
ನೂತನಶ್ರುತ್ಯರ್ಥ ನುಡಿಗಲಿತುದೋ ಘನ
ಸ್ವಾತಂತ್ರ‍್ಯವೃತ್ತಿ ಬೋಧಿಸತೊಡಗಿತೋ ಎಂಬ
ಚಾತುರ್ಯದಿಂದಿರ್ದ ಮುನಿನಾಥನಂ ಕಂಡು ಹರುಷದಿಂ ಭೂನಾಥನು          ೬೭

ಜ್ಞಾನವಾಚಾರವಾಗಮ ಧರ್ಮತತಿ ನುತ
ಧ್ಯಾನಾದಿ ಮೂರ್ತಿಗಳನೊಳಕೊಂಡು ತೋಱುವ ಚಿ
ದಾನಂದರೂಪನತ್ಯಧಿಕ ನಿಶ್ಚಿಂತಂ ನಿರಾವರಣ ನಿತ್ಯತೃಪ್ತ
ಮೋನದಾಸನದ ಮುದ್ರೆಯ ಹಂಗು ಹೊದ್ದದ ಪ
ರಾನಂದಮೂರ್ತಿ ನಿಜಗುರುರಾಜಯೆಂದು ಬಿಡ
ದಾನಂದ ವೇಷವೆಡೆಗೊಂಡು ನಡೆತಂದು ಪೊಗಳುತ್ತಿರ್ದ ಭೂನಾಥನು          ೬೮

ಸುರನರೋರಗನಮಿತಚರಣ ಜಯಜಯ ದಯಾ
ಭರಣ ಜಯಜಯ ಕೃಪಾವರಣ ಜಯಜಯ ಶಾಂತಿ
ಕಿರಣ ಜಯಜಯ ವಿಗತಮರಣ ಜಯಜಯ ದುರಿತಹರಣ ಜಯ ಜಯತು ಜಯತು
ಗುರುವೆ ಕುಲಗುರುವೆ ಘನಗುರುವೆ ಪರಗುರುವೆ ಮ
ದ್ಗುರುವೆ ಸದ್ಗುರುವೆ ಶರಣಾಗು ಶರಣಾಗೆಂದು
ಧರಣಿಪತಿ ಹರಹಿದನು ನಿಜತನುವನಾ ಮುನಿಯ ಚರಣಸರಸಿಜದೆಡೆಯೊಳು  ೬೯

ಬಗೆಮೀಱಿ ಲೋಚನದೊಳೊಗೆವ ಸುಖಜಲ ಮೆಯ್ಯೊ
ಳೊಗೆವ ಪುಳಕಂ ಕಯ್ಯೊಳೊಗೆವ ಕಂಪನ ನುಡಿಯೊ
ಳೊಗೆವ ತೊದಳಮಳಕದಪಿನೊಳೊಗೆವ ಬೆಮರು ಕಂಠದೊಳೊಗೆವ ಹೊಸಗದ್ಗದ
ಮಿಗೆ ಮೊಗದೊಳೊಗೆವ ನಸುನಗೆ ಘನಮನೋಮತಿಯೊ
ಳೊಗೆವ ಪರವಶವೆರಸಿ ಮೆಱೆವ ಭೂರಮಣನಂ
ಮೊಗವೆತ್ತಿ ಕುಳ್ಳಿರಿಸಿ ಮೆಯ್ದಡವಿ ಬೋಳೈಸಿ ಮುನಿನಾಥನಿಂತೆಂದನು         ೭೦

ನೀನೆತ್ತಲೀ ವಿಪಿನವೆತ್ತಲೀ ಬನಕೆ ನೀ
ನೇನು ಕಾರಣ ಬಂದೆಯೆಲೆ ಮಗನೆ ಹೇಳೆನಲು
ಭೂನಾಥನೆಂದ ಖಗಮೃಗದ ಕಾಟಕ್ಕೆ ಸೈರಿಸಲಾಱದವನೀಜನಂ
ಹಾನಿವೆತ್ತೊಱಲಿ ಮೊಱೆಯಿಡೆ ಕೇಳ್ದು ಬೇಂಟೆಯ ಸು
ಮಾನಕ್ಕೆ ಬಂದೆನೆಂದೆನೆ ತ್ರಿಕಾಲೋಚಿತ
ಜ್ಞಾನಿ ಮುನಿಯಱಿದನರಸನ ಮೇಲೆ ಕೌಶಿಕನ ಕಾಟವಡಿಯಿಟ್ಟನುವನು        ೭೧

ವಿಷಮವಿಶ್ವಾಮಿತ್ರಮುನಿ ಮುನಿದು ತಪ್ಪ ಸಾ
ಧಿಸಿದಪ್ಪನಱಿದಿರೆಂದಱುಪಬೇಕಱುಪಿದಡೆ
ಪಿಸುಣತ್ವವಱಿಪದಿರ್ದಡೆ ನೃಪನ ಕೇಡ ನಾನೋತುಪೇಕ್ಷಿಸಿದಾತನು
ಗಸಣಿಯಾಯ್ತೇಗೆಯ್ವೆನೆಂದು ಮನದೊಳಗೆ ಚಿಂ
ತಿಸಿ ಮನೆಗೆ ಬಂದ ಶಿಷ್ಯನನು ಬೋಧಿಸಲು ಕುಂ
ದೆಸೆಯದಿರದಿದ ಪೇಳದಂತೆ ಪೇಳ್ದೆನೆಂದು ನೆನೆದನಾ ಮುನಿನಾಥನು೭೨

ಎನ್ನನೊಲುವೊಡೆ ಕುಲಾಚಾರಮಂ ಬಿಡದಿರ್ಪ
ಡುನ್ನತಿಕೆ ಬೇಹಡುತ್ತಮಕೀರ್ತಿ ಕೆಡದಿಹಡೆ
ನನ್ನಿಯುಳಿವೊಡೆ ಮಗನೆ ಹೋಗದಿರು ಮಱೆದು ವಿಶ್ವಾಮಿತ್ರನಾಶ್ರಮಕ್ಕೆ
ಗನ್ನದಿಂ ಮಱಹಿಕ್ಕಿ ಕೊಂಡೊಯ್ದು ಬಳಿಕ ಮುನಿ
ಬನ್ನಬಡಿಸಿಯೆ ಕಾಡಿದಪನಱಿದಿರೆಂದು ಪೇ
ಳ್ದಿನ್ನೊಂದು ಚೋದ್ಯಮಂ ನೋಡು ಬಾಯೆಂದು ತಂದನು ವಿರೂಪಾಕ್ಷನೆಡೆಗೆ           ೭೩

ಧರಣಿಪತಿ ಗುರುವಸಿಷ್ಠಂಗೆ ಕೈಗೊಟ್ಟು ಬರೆ
ಸುರುಚಿರಮಹಾತುಂಗಭದ್ರೆಯೊಳಗುಳ್ಳ ಭಾ
ಸುರತೀರ್ಥಮಂ ತೋಱಲದಱೊಳು ಸ್ನಾನ ತರ್ಪಣ ಪಿಂಡ ಪಿತೃಕೃತ್ಯಮಂ
ಪಿರಿದು ಸಂತೋಷದಿಂ ಮಾಡುತಿರಲಾಪುರವ
ವಿರಚಿಸಿ ಮಹಾಗುಡಿಯ ತೋರಣವನೆತ್ತಿ ವಿ
ಪ್ರರು ವಿರೂಪಾಕ್ಷಪ್ರಸಾದಂ ಕೊಟ್ಟು ಹರಸಿದರು ಮಂಗಳರವದೊಳು         ೭೪

ಅತ್ರಿ ಭಾರದ್ವಾಜಗಸ್ತ್ಯಮುನಿ ಸನ್ನಿಭರು
ಮಿತ್ರಪ್ರಕಾಶರುನ್ನತ ಶೈವತೇಜರೀ
ಕ್ಷೇತ್ರದವರೇಯೆಂದಡಹುದು ನಿನ್ನಯ ಕುಲದ ಮೊದಲ ಭಾಸ್ಕರದರ್ತಿಯಿಂ
ಧಾತ್ರಿಯೊಳು ರಾಜಕುಲವೆರಸಲು ಪವಿತ್ರರೀ
ಕ್ಷೇತ್ರತ್ರಯಾವಾಸವಾಸಿಗಳೆನಲು ಕೇಳ್ದು
ಪಾತ್ರರಹರೇನು ಮಾಡುವರೆನುತ್ತುತ್ಸವಿಸಿ ಬಂದು ಪುರಮಂ ಪೊಕ್ಕನು       ೭೫

ನಿನ್ನಯ ಮನೋರಥವನೇನ ಹವಣಿಸಬಹುದು
ಹನ್ನೊಂದು ತೀರ್ಥವೀ ಮನ್ಮಥಸರೋವರದೊ
ಳುನ್ನತ ಮಹಾಸ್ಕಾಂದಪೌರಾಣ ಪ್ರೋಕ್ತ ಕಾಶಿಯೊಳು ಮಣಿಕರ್ಣಿಕೆಯೊಳು
ಧನ್ಯರಹರಿಲ್ಲಿಯವಗಾಹನಂ ರುದ್ರಪದ
ಸನ್ನಿಧಿಯ ಪಿಂಡ ಗಯೆಗಧಿಕವೆನೆ ಮೂಡಗಿರಿ
ಯನ್ನಡರಿ ನಡೆಯುತ್ತ ತೋಱಿದಂ ವಾಸಿಷ್ಠಮುನಿ ಸರ್ವತೀರ್ಥಗಳನು       ೭೬

ಹರಿವಿರಿಂಚಿಗಳು ಇಂದ್ರಾದಿ ದಿಕ್ಪಾಲರೀ
ಗಿರಿಯಲ್ಲಿ ತಪವಿರ್ದರಾ ಹೆಸರ ಲಿಂಗವಾ
ಸರಸಿಗಳು ಸುರನದಿಯು ತಾನೊಲಿದು ನೆಲಸಿದೆಡೆ ಪಾತಾಳಗಂಗೆಯೆಂದು
ಸುರಕುಲಂ ಮುನಿಕುಲಂ ಪಂಚಭೂತಂಗಳಿಂ
ಖರಕರಂ ಹಿಮಕರಂ ಯಜಮಾನವೆರಸಿ ಶಂ
ಬರಹರನನುರುಪಿದೆಡೆಯಂ ತೋಱಿ ನಮಿಸೆ ಪಂಪಾಬಿಕೆಯ ಕಾಣಿಸಿದನು     ೭೭

ವಂದನೆಯ ಮಾಡಿಯೀ ಮೂರ್ತಿ ಮಹಿಷಾಸುರನ
ಕೊಂದಂದವೆನಲು ಮಾರ್ಕಂಡೆಯ ಪುರಾಣದೊಳ
ಗೆಂದುದೀ ರುದ್ರಶಕ್ತಿಯ ಶಿರಸ್ಸೆನಲು ಪಾರ್ವತಿಯರಭಿಧಾನದಿಂ
ನಿಂದಳೀಯೆಡೆಯಲ್ಲಿ ಕಾಶಿಯ ವಿಶಾಲಾಕ್ಷಿ
ಯೆಂದು ಕಂಚಿಯಲಿ ಕಾಮಾಕ್ಷಿಯೆಂದೆಂಬ ಪೆಸ
ರಿಂದಲಂಬಿಕೆಯೆಂದು ಪೇಳೆ ನಮಿಸಲು ವಿರೂಪಾಕ್ಷನಂ ಕಾಣಿಸಿದನು೭೮

ತ್ರಾಹಿ ಮಾಂ ಜಗದುದಯರಕ್ಷ ಶಿಕ್ಷಾಧ್ಯಕ್ಷ
ತ್ರಾಹಿ ಮಾಂ ಶರಣಜನದಘಜ್ವಲಿತ ಭಾಳಾಕ್ಷ
ತ್ರಾಹಿ ಮಾಂ ಸಕಲ ಧರ್ಮಾಕಾರಮಯವೆನಿಪ ಪುಂಗವೇಂದ್ರಾಕ್ಷಪಕ್ಷ
ತ್ರಾಹಿ ಮಾಂ ಸುರಪಶಿಖಿ ಮರುತ ವಂದಿತ ಯಕ್ಷ
ತ್ರಾಹಿ ಮಾಂ ಭಕ್ತ ಕುಲವಾಂಛಿತದ ಸುರವೃಕ್ಷ
ತ್ರಾಹಿ ಮಾಂ ಶ್ರೀ ಗುರುವಿರೂಪಾಕ್ಷ ಶರಣೆನುತ್ತೆಱಗಿದಂ ಭೂನಾಥನು         ೭೯

ನೋಡಿ ಪರಮಾನಂದ ಮೂಡಿ ಸಂತಸದೊಳೋ
ಲಾಡಿ ಪುಳಕಸ್ವೇದ ತೊದಳು ಕಂಪನ ಮಱವೆ
ಗೂಡಿ ಮನದೊಳು ತನುವಿನೆಚ್ಚಱಿಂದುಬ್ಬಿ ಹಾರೈಸಿ ಹರುಷದ ಸುಖದಲಿ
ಹಾಡಿ ನಾನಾ ಸ್ನಪನ ಯಕ್ಷಕರ್ದಮ ಪುಷ್ಪ
ಗಾಡಿವಡೆಯಲು ಮಹಾರುದ್ರಾಭಿಷೇಚನದ
ಜೋಡಿಯಿಂ ಪಂಪಾಂಬಿಕಾಪತಿಯ ಪೂಜೆ ಮಾಡಿದ ಹರಿಶ್ಚಂದ್ರನೃಪನು      ೮೦

ಧೂಪಾರತಿಯ ಸಕಲವಾದ್ಯರವದೊಳು ಮಾಡಿ
ದಾಪೊತ್ತು ಸುರುಚಿರಸುಧಾನಿವೇದ್ಯವನಿತ್ತು
ಕಾಪಾಲಿಗೆಸೆವ ಕರ್ಪುರ ವೀಳೆಯಂಗೊಟ್ಟು ರತ್ನದಾರತಿಯನೆತ್ತಿ
ಶ್ರೀ ಪಾರ್ವತೀಪತಿಗೆ ಪ್ರೀತ್ಯರ್ಥವಾಗಿಯಾ
ಭೂಪನಲ್ಲಿಯ ದ್ವಿಜರ ಕರೆದಿಷ್ಟತುಷ್ಟಿಯಂ
ಬೇಪನಿತನಿತ್ತು ಮತ್ತಂ ಮನಂದಣಿಯದಾ ವಿಪ್ರತತಿಗಿಂತೆಂದನು      ೮೧

ಅಂಗ ವಂಗ ಕಳಿಂಗ ದೇಶಂಗಳೊಳು ನಿಮ್ಮ
ಕಂಗೆ ಸೊಗಸುವ ನಾಡ ಬೇಡಿ ನಾನೀವೆನೆನೆ
ತುಂಗಭದ್ರಾ ತೀರಮಂ ಬಿಟ್ಟು ಭೂಪ ನಾವೆಲ್ಲಿಗಂ ಬಾರೆವೆನಲು
ಗಂಗೆಯಿತ್ತಡಿಯ ಕರದ ಗ್ರಾಮ ವಿರೂಪಾಕ್ಷ
ಲಿಂಗ ಭೋಗಕ್ಕೆಂದು ಧಾರೆಶಾಸನವ ನೃಪ
ಪುಂಗವ ಹರಿಶ್ಚಂದ್ರರಾಯನೊಲಿದಿತ್ತು ವಿಪ್ರರಿಗೆ ಮತ್ತಿಂತೆಂದನು  ೮೨

ಗುರುವಿರೂಪಾಕ್ಷ ಸನ್ನಿಧಿಯೊಳೆನ್ನಂ ನೀವು
ಹರಸುವುದು ಶಿವಪೂಜೆಯಂ ಮಾಡಿಯಘವ ಸಂ
ಹರಿಸುವುದುಯೆಂದವರ್ಗೆ ಕೈಮುಗಿದು ಸುಖದಿಂ ಪ್ರಸಾದ ಪಾದೋದಕವನು
ಧರಿಸಿಯಾಲಿಂಗಕ್ಕೆ ಮತ್ತೆ ಮತ್ತೆಱಗಿಯಾ
ಪರಿತುಷ್ಟನಹ ನೃಪಗೆ ಮಂತ್ರಾಕ್ಷತೆಯನಿತ್ತು
ಖರಕರಕುಲದ ರಾಜ ವನಧಿ ವರ್ಧನ ಸುಧಾಕರನನಾಘೋಷಿಸಿದರು೮೩

ಇಂದಾನು ಕೃತಕೃತ್ಯನಾದೆನೆನ್ನಯ ಜನ್ಮ
ವಿಂದು ಸಾಫಲ್ಯವಾಯ್ತಖಿಳ ಜಗದಳಲುರಿಯ
ನಂದಿಸುವ ಪಾರದಿಯೆ ಸಂಸಾರವಾರುಧಿಯನುತ್ತರಿಪ ಗುರುಪಾದವ
ತಂದು ತೋಱಿತ್ತಲಾ ಶ್ರೀ ಗುರುವಿರೂಪಾಕ್ಷ
ತಂದೆಯಂ ಕಾಣಿಸಿತು ನಾಡಗಾದೆಯ ಬಿಟ್ಟಿ
ಯಿಂದ ಕಟಕವ ಕಂಡೆನೆಂಬುದೆನಗಾಯ್ತೆನುತ್ತೆಱಗಿದಂ ಭೂನಾಥನು  ೮೪