ಸೂಚನೆ
ಕೂಡಿರ್ದ ಬೇಡರಂ ಕೆಡಹಿದಡೆ ಕೋಪಾಗ್ನಿ
ಮೂಡಿ ಬೆನ್ನಟ್ಟುವ ಹರಿಶ್ಚಂದ್ರನೃಪನ ಕೊಂ
ಡೋಡಿ ಬಂದಡಗಿತ್ತು ಕೌಶಿಕನ ಬನದೊಳಗೆ ಮಾಯಾವರಾಹನಂದು

ಗುರುವಸಿಷ್ಠಂಗೆಱಗಿ ನೇಮವಂ ಪಡೆದಖಿಳ
ಗುರುವಿರೂಪಾಕ್ಷಲಿಂಗವನು ಬೀಳ್ಕೊಂಡು ಭಾ
ಸುರವರೂಥವನೇಱಿ ಭೂಪಾಲಮಕರಧ್ವಜಂ ನಡೆಯೆ ತಡೆವೇಂಟೆಗೆ
ಪರಿಕರದ ಪರಿವಾರವನುವಾಗಿ ವಿಪಿನದೊಳು
ಹರೆದು ನಡೆಯಲ್ಕತ್ತಲಿತ್ತ ಕೌಶಿಕಮುನೀ
ಶ್ವರನೊಂದು ಮಾಯಾವರಾಹನಂ ಮಾಡಿ ಕಳುಹಿದನು ಭೂರಮಣನೆಡೆಗೆ   ೧

ಇಳೆಯೊಡೆಯನಿಂ ಮುಂದೆ ಹರಿದು ಮೃಗದಿಕ್ಕೆಯಂ
ತಿಳಿವ ಹಜ್ಜೆಯನಱಿವ ಬಲೆಯ ಹಸರಿಸುವ ಸೊ
ಪ್ಪುಳನಾಲಿಸುವ ಕುತ್ತುಱಂ ಶೋಧಿಸುವ ಸನ್ನೆಗೆಯ್ವ ಸರುಹಂ ಕಟ್ಟುವ
ಹೊಳೆಯ ಮೇಯಿಸುವ ತೋಹಂ ಬಿಗಿವ ಕುಳಿಕಪ್ಪ
ನಿಳಿವ ಬೇಗೆಯನಿಡುವ ಬೆಳ್ಳಾರ ಬಿಡುವ ಭುಜ
ಬಲಪುಳಿಂದಿರು ಕಂಡರದೊಂದು ಸೊಕ್ಕಿದೆಕ್ಕಲನ ನಡುನಾಳಲೊಳಗೆ            ೨

ಹೇರಿಟ್ಟಿಗಳ ಕಳೆದುಕೊಂಡು ಶಬರರ ಮೊತ್ತ
ವಾರಿ ಬೊಬ್ಬಿಱಿದು ಕುಕಿಲಿಱಿದು ತಮತಮಗೆ ನೆಱೆ
ವೀರಮಂ ನುಡಿವವರನಿನ್ನಱಿಯಬಹುದೆಂದು ಜಱೆದು ಪಡೆ ಮುಳಿದೆದ್ದುದು
ವಾರುಧಿಯ ಕುಡಿದು ವಡಬನ ಹಿಡಿದು ತಪ್ಪವರ
ಮೇರುವಂ ಕಿತ್ತು ವಾಸುಗಿಯನುಗಿವವರ ಮುಂದೆ
ಯಾರು ನಿಲಬಹುದೆಂಬ ಚತುರಂಗಬಲಕಿದಿರುವಾಯ್ದುದು ವರಾಹನಂದು  ೩

ಸಿಡಿಲ ಕಿಡಿಯಂತೆಸೆವ ಕಣ್ಣು ಬ್ರಹ್ಮಾಸ್ತ್ರದೆರ
ಡುಡಿಯನಿಱುಕಿದ ತೆಱದ ದಾಡೆ ವಜ್ರದ ಚಿಪ್ಪ
ನಿಡಿಕಿದರೆನಿಪ್ಪ ಕಿವಿ ಬಲನ ನೇಗಿಲ ಪೋಲ್ವ ತುಂಡ ಮೃತ್ಯುವಿನ ಕಯ್ಯ
ನಿಡಿಯ ನಾರಾಚದಗೆಯೆನಿಪ ಮೆಯ್‌ರೋಮತತಿ
ಕಡಗಿ ಕಾಲನ ಕೋಣನರರೆ ವಾರಾಹಮುಖ
ವಡೆದಿರದೆನಿಪ್ಪೊಡಲು ಮೆಱೆವ ಸೂಕರನಿರಲು ಕಂಡರಂತಾ ಬೇಡರು         ೪

ಕವಿಕವಿಯೆನುತ್ತ ಬೇಡರು ನಾಯ ಹಾಸಮಂ
ತಿವಿದು ಬಿಲುವೊಯ್ದು ತೆಗೆನೆಱೆದೆಂಟು ದೆಸೆಯಿಂದ
ತವತವಗೆ ಹೊಕ್ಕು ಮಿಕ್ಕೆಚ್ಚಡದನಾಲಿಸದೆ ಲೆಕ್ಕಿಸದೆ ಕೈಕೊಳ್ಳದೆ
ಬವರಿಸದೆ ಬಗೆಯದಿರುತಿರೆ ಕಂಡು ಮುಂಗುಡಿಯ
ತವಕಿಗರು ಹೇವರಿಸಿ ಹೊದ್ದಿ ಹೊಡೆ ಕುತ್ತು ಕೊಲು
ತಿವಿಯೆಂದು ಬೆರಸುತಿರೆ ಕಂಡು ಕಿಗ್ಗಣ್ಣಿಕ್ಕಿ ನೋಡಿತ್ತು ನಾಲ್ದೆಸೆಯನು       ೫

ಕೊಬ್ಬಿದಿಬ್ಬೆನ್ನ ಭರದಿಂದ ಬೆಟ್ಟವನಡರು
ತೊಬ್ಬುಳಿಯನೊಡೆದು ಘುಡುಘುಡಿಸಿ ಕುಡುದಾಡೆಯಂ
ನಿಬ್ಬರದಿ ಮಸೆದು ಕೊರಡಂ ಹೊಯ್ದು ಮಂದಗತಿಯಿಂ ಸೊಕ್ಕಿ ಮಲೆತುಕೊಳುತ
ಅಬ್ಬರವ ಕೇಳಿಯಾಲಿಸುತ ಸೊಪ್ಪಂ ಬೆದಕು
ತಿಬ್ಬಗಿಯ ಮಾಡಿ ತೃಣಮಂ ಶಕುನಪುಂ ನೋಡಿ
ಹೆಬ್ಬಂದಿ ವಿಪಿನದೊಳು ನಿಂದುದಾ ಶಬರರಿಗೆ ಮೃತ್ಯುತಾನೆಂಬಂದದಿ          ೬

ಎಲೆಲೆಲೆಲೆಲೇ ಹಂದಿಯನುವಾದುದುಬುಬುಬೆಂ
ದುಲಿದು ನಾಯ್ಗಳುವೆರಸಿ ಮುಕ್ಕುಱಿಕ್ಕಲು ಮೆಲ್ಲ
ನೊಲೆದುಬ್ಬಿ ಪುಟನೆಗೆದು ಗಜಱಿ ಗರ್ಜಿಸಿ ಪುಳಿಂದರ ಮೇಲೆ ಬವರಿದಿರುಗಿ
ಬಲವಂದು ಹೊಯ್ದು ಬೇಗಕ್ಕೆ ಬಿಱುಮಂದಿ ನಾ
ಳಲ ಹೊಱೆಗಳಂ ಕೊಚ್ಚಿದಂತೆಲ್ಲರೊಡಲ ಕಳ
ವಳಿಗೆಯ್ದು ಬೀದಿವರಿದೊಕ್ಕಲಿಕ್ಕಿತ್ತು ರಕ್ಕಸಮಿಗಂ ಕಾಡೊದಱಲು            ೭

ಅಡವಿ ನಡುಗಲು ದೆಸೆಗಳೊಡೆಯೆ ಘುಡುಘುಡಿಸುತ್ತ
ಲೊಡಸಾರ್ದು ಪಡೆಯ ಕೆಡಹುತ್ತ ಬರೆ ಕೋಪದಿಂ
ಹೊಡಕರಿಸಿ ತಡವಿಡದೆ ಕುಡುದಾಡೆಯಿಂ ಬೇಡವಡೆಯೊಡಲನೀಡಿಱಿವುತ
ಕಡಿವಡೆದ ಕಡಿಗಳೊಳು ಬಿಡದೆ ನಡೆಯಲು ಕಂಡು
ಕೆಡೆಕೆಡೆಯೆನುತ್ತ ಮೂದಲಿಸಿ ಮರಳಿದೊಡಡಗ
ಕಡಿ ಮಾರಿಗೆಱೆ ನೆತ್ತರಂ ಹೊದೆಸು ಚರ್ಮಮಂ ತೊಡು ಬೇಗ ಬಿಡು ಸರಳನು            ೮

ಕುನ್ನಿಗಳ ಕವಿಸು ಬೆನ್ನಡಗನುಱೆ ತಿನಿಸು ಚಲ
ವಿನ್ನು ಹೆಣಗಿಕ್ಕು ನಿನ್ನಳವಿನೊಳು ಹೊಕ್ಕು ತಿವಿ
ಮುನ್ನ ಹಂದಿಯ ಕರುಳ ತಿನು ತಿದಿಯ ಕಳೆ ಕೊರಳ ಕಡಿ ಕಾಲ ಸಂದ ಬಿಡಿದು
ಇನ್ನಬರ ಕಾಡಿತ್ತು ಚೆನ್ನಾಳ ಮಡುಹಿತ್ತು
ಬನ್ನಬಡಿಸಿದ ಸಿಟ್ಟ ಕಳವೆವೆಂದೆನುತ ಸಂ
ಪನ್ನ ಸಾಹಸಪುಳಿಂದರು ಜೋಡಿಯಿಂ ಕವಿದು ಹೊಕ್ಕು ಹಂದಿಯ ತಿವಿದರು  ೯

ಅಟ್ಟಿ ಮೃಗ ಗಜಱೆ ಕವಡಿಕೆಯ ರಾಸಿಯ ಕಲ್ಲು
ತಟ್ಟಿದಂತಾಗಿ ಚೆಲ್ಲಿದ ಶಬರಸಂಕುಲಂ
ಕಟ್ಟೋಡಿ ಮಗುಳ್ದು ಮೊಳಕಾಲಿಕ್ಕಿಯಂಡುಗೊಂಡುಸಿರ ಸಂತೈಸಿಕೊಳುತ
ಮುಟ್ಟುಗೊಂಡಿರದುರಿಯ ನೊರಜು ಕಾಡುವ ತೆಱದಿ
ನಿಟ್ಟೆಲುವ ಮುಱಿ ಕೊರಳ ಕೊಱೆ ಬರಿಯನಿಱಿ ಮಾಣ
ದಿಟ್ಟಿಯಿಂದಿಡುಕುವುದೆನುತ್ತುಲಿದು ನಾಲ್ದೆಸೆಗೆ ಕವಿದರಂತಾ ಬೇಡರು        ೧೦

ಹಳ್ಳದೊತ್ತಿನ ಹೊದಱ ಹೊಸಮೆಳೆಯ ಱೊಪ್ಪದಿಂ
ಘಳ್ಳಿಡುವ ನಾಯಿ ಸುತ್ತಲು ಪರಿಯೆ ಗಾಳಿವಿಡಿ
ದಳ್ಳಂಕಗೊಂಡು ಹೊಗಲ್ಬಾರದಿಟ್ಟೆಡೆಯೊಳೆಡಬಲನನಾರೈವುತ
ಸುಳ್ಳೆದ್ದ ಬಾಲ ಸಿಗುಱೆದ್ದ ರೋಮಂ ಕೆದಱಿ
ಮೆಳ್ಳಿಸುವ ಕಣ್ಣು ದಾಡೆಗಳಿಂದ ಕಿಡಿಯುದಿರೆ
ಹಿಳ್ಳೊಡೆದು ಹಿಂದೆ ಮರಳ್ದೆಕ್ಕಲಂ ಬೀದಿವರಿದುದು ಬೇಂಟೆಕಾಱರೊಳಗೆ     ೧೧

ಇಕ್ಕೆಲದ ಕುನ್ನಿಗಳು ಮಿಡುಕಲೀಯದೆ ಮೃಗದ
ಮುಕ್ಕುಱಿಕ್ಕಲು ಕೆಲಬಲನ ನೋಡಿ ದಾಡೆಯಿಂ
ಸೊಕ್ಕಿ ನಲಿಯುತ್ತಲುಬ್ಬುತ್ತ ಬರೆ ಶಬರಾಧಿಪರು ಕೆರಳಿ ಬೆಂಬತ್ತುತ
ಇಕ್ಕಿಕ್ಕು ಕಲ್ಲಲಿಟ್ಟಿಯಲಿಱಿಯೊ ಸಬಳದಿಂ
ಹೊಕ್ಕು ಮೊನೆಗಾಣಲಿಱಿ ದಾಡೆಯಂ ಮುಱಿಯಬಡಿ
ಯಿಕ್ಕೆಯಂ ಹೊಗಗುಡದಿರೆಕ್ಕಲನನೆನುತ ಬೊಬ್ಬಿಕ್ಕಿ ಸರಳಂ ಸುರಿದರು        ೧೨

ಕಣ್ಣನಿಱಿ ಕೇಸರವ ಸುಡು ಬಿಡದೆ ಖಂಡಮಂ
ಸಣ್ಣಗಡಿಯಲಿ ನಾಯಿ ಮೂಳೆಯಂ ಮೋದು ನೀಂ
ತಣ್ಣನೆ ತಣಿಯ ತಿನ್ನು ತೊಡೆಯಡಗನೆನುತಲಿಟ್ಟಿಯ ಕಲಿಗಳುರವಣಿಸಲು
ಬಣ್ಣಿಸಲದೇಕೆ ಹರಿ ಕರಿಗಳಿಗೆ ಕೆರಳಿ ಸೌ
ಪರ್ಣನಹಿಕುಲಕೆ ಮುನಿದೆಱಗಿ ಕೊಲುವಂತೆ ಮು
ಕ್ಕಣ್ಣ ಸಮವೆನಿಪ ವಿಶ್ವಾಮಿತ್ರ ಕಳುಹಿದ ವರಾಹ ಕೊಂದುದು ಪಡೆಯನು   ೧೩

ಬಸುಱ ಬಿಗಿಯುಗಿ ಕರುಳ ಸುಗಿ ಚರ್ಮಮಂ ಕೊರಳ
ಬೆಸುಗೆಯಂ ಬಿಡಿಸೆಲುವ ಮುಱಿ ಮೂಳೆಯಂ ಮೋದು
ಬಿಸಿನೆತ್ತರಂ ಕುಡಿಯೆನುತ್ತೆ ನಾಲ್ದೆಸೆಗಳಿಂದುಲಿದೆಸುತ ಮುಕ್ಕುಱಿಕ್ಕಿ
ಅಸಿಯನಣೆದಂಬುಗಳ ಟೊಣೆದುಲಿದು ಮುಱೆದು ಲೆ
ಕ್ಕಿಸದಿಟ್ಟಿಯಂ ಕಡಿದು ಮುಂಗಡಿಯ ನಾಯ್ಗಳಂ
ಕುಸುರಿದಱಿದಾ ಸಮೂಹವನೆಲ್ಲವಂ ನಾಲ್ಕುದೆಸೆಗೆ ಸೀಳ್ದಿಕ್ಕಿತಂದು          ೧೪

ಕಡುಗಿ ಕೈಕೊಂಡು ಬೊಬ್ಬಿಟ್ಟುಲಿವ ಲುಬ್ಧಕರ
ಎಡೆಗೆ ವುರವಣಿಸಿ ಹರಿದೆಯ್ದಿ ತೊತ್ತಳದುಳಿದು
ಕೆಡಹಿ ಸತ್ವದಿ ಬಂದ ಪಡೆಯ ನೆಱೆತಱಿದು ವೀರರ ಜಱೆದು ಕರುಳ ಹಱಿದು
ಕಡುಬಳಲಿ ಕಣ್ಣು ಕೆಂಪಡರಲುಸುರಿಕ್ಕಿ ಮೊಗ
ಜಡಿದು ಕಟವಾಯೊಸರ್ವ ನೊರೆ ತೇಂಕುವಳ್ಳೆಯಿಂ
ಬಿಡದಂಡುಗೊಂಡು ಮುಸುಡಂ ನೆಗಹಿ ಱೊಪ್ಪವಂ ಮಲಗಿ ಮತ್ತನುವಾದುದು        ೧೫

ಬಸುಱ ಬಾದಣಕೆ ಬಾಯ್ವಿಟ್ಟುದುಱದುಱನೊಗುವ
ಬಿಸಿನೆತ್ತರಂ ಕುಡಿದು ನಡುಬೆನ್ನ ಮೂಳೆಯಂ
ಸಸಿದು ಕಡಿಕಡಿದಗಿದು ಕರುಳ ಹಿಣಿಲಂ ಹಿಕ್ಕಿ ತಿಂದು ತೊಡೆಯಡಗನವುಡಿ
ಬೆಸೆದು ದಣ್ಣನೆ ದಣಿದು ತಲೆಯೊತ್ತಿ ಮೂಗರಳು
ತುಸುರಿಕ್ಕುತೊಲೆಯುತ್ತ ಮಲೆಯುತ್ತ ಕುತ್ತುಱಿಂ
ಗೊಸೆದು ಬರಲದಱೊಳಡಗಿರ್ದೊಬ್ಬ ಬೇಡ ನೋಡಿದುದನೇವಣ್ಣಿಸುವೆನು            ೧೬

ಬಿಟ್ಟ ತಲೆ ಗಿಡುಹಿಡಿದು ಕಳೆದುಡುಗೆ ಕಾಡ ಮುಳು
ನಟ್ಟು ಕುಂಟುವ ಪದಂ ಬೆನ್ನ ಬಿಗುಹಳಿದೆಳಲ್ವ
ಮೊಟ್ಟೆಗೂಳೆಡಹಿ ಕೆಡೆದೊಡೆದ ಮೊಳಕಾಲ್ ತೇಕುವಳ್ಳೆಗಳುವೆರಸೊಱಲುತ
ಕೆಟ್ಟೋಡುತಿರಲೊರ್ವನವನ ಕಂಡಿದಿರಡ್ಡ
ಗಟ್ಟಿ ಕೇಳಲು ಹುಹುಹು ಹುಲಿಯಲ್ಲ ಹಂದಿಯಱೆ
ಯಟ್ಟಿ ಬರುತಿರ್ದುದೆನೆಯೆಲ್ಲಿ ತೋಱೆನಲು ನೀವೇ ನೀವೇ ಅಱಸಿಕೊಂಬುದೆಂದ      ೧೭

ನಡುಗುವವಯವ ಬಿಕ್ಕುಪಾಱುವೆದೆ ಬಱತ ಬಾಯ್
ಸಿಡಿದರಳ್ವ ನಾಸಾಪುಟಂ ನಟ್ಟ ಕಣು ಬೆಮ
ರಿಡುವ ಮೊಗ ಬಿಟ್ಟೆಳಲ್ವ ಮಂಡೆ ನಿಟ್ಟೋಟದಿಂದೋಡುತ್ತಲೆಡಹಿ ಕೆಡೆದು
ಒಡೆದು ಮೊಣಕೈ ಕಾಲ್ಗಳತಿಭಯರಸವನೆಯ್ದೆ
ಯೆಡೆಗೊಂಡ ಚಿತ್ತದಿಂ ಹೊಱಗನಾಲಿಸದೆ ದುಡು
ದುಡನೋಡಿ ಬರುತಿರ್ಪ ಬೇಡನಾಕಾರಮಂ ನೋಡಿದಂ ರೂಢೀಶನು           ೧೮

ಹೆದಱೆದೆಯ ಬೇಡನಂ ಬೋಳೈಸಿ ನೃಪರೂಪ
ಮದನನಲ್ಲಿಗೆ ತಂದು ನುಡಿಸಿ ಕೇಳಲು ಪೇಳ್ವೆ
ಕುದಿಹವೇಕದಿದೆನ್ನದೆಲ್ಲಾ ಕಿರಾತಸಂಕುಲದ ಗುಱಿ ನೆಱೆದುದಿಂದು
ಹದುಳದಿಂದರಸ ಮನ್ನೆಯ ಗಂಡನಾಗು ಬೇ
ಗದೊಳೆಂದಡೇಂಕಾರಣಂ ಪೇಳೆನಲ್ಕೆ ಪೇ
ಳ್ವುದಕೆ ತೆಱಹಿಲ್ಲ ಹೋಗೆಂದಡವನೀಶನವನಂ ಜಱೆದು ಬೆಸಗೊಂಡನು     ೧೯

ಕಡುಗಲಿ ಹಿರಣ್ಯಾಕ್ಷನೆಂಬ ರಕ್ಕಸನ ಬೆ
ನ್ನಡಗನುಗಿದಂದಿನ ವರಾಹನೋ ಪುರಹರಂ
ಪೊಡೆಯೆ ತೋಳ್ ಪಱಿದ ಭೀಕರಗಜಾಸುರನೊ ಜಗದಳಲನಾಱಿಸುವೆನೆಂದು
ಕಡುಕೈದು ದುರ್ಗಿ ನಿರ್ಘಾತನಂಗೆಯ್ಯೆ ಕೋ
ಡುಡಿದ ಮಹಿಷಾಸುರನೊ ಎಂದೆಂಬ ಸಂದೇಹ
ಕೆಡೆಯಾದ ಸೊಕ್ಕಿದೆಕ್ಕಲನನೊಂದು ಕಂಡೆನರಸ ಚಿತ್ರೈಸೆಂದನು      ೨೦

ಕೊಬ್ಬಿ ಬೆಳೆದ ವರಾಹನಿರಲಾಗದೇ ಕಾಡೊ
ಳಬ್ಬರಿಸಿ ನುಡಿವೆಯದಱಿಂ ಬೇಡವಡೆಗೆ ಬ
ಪ್ಪುಬ್ಬಸವದೇನೋ ನೀನೋಡಿಹೋಹುದಕೆ ಕಾರಣವಾವುದೆಲ್ಲವೊ ಎನಲು
ಉಬ್ಬಿ ಮುಂಗುಡಿವರಿದು ಕಡುಕೈದ ಶಬರರೊಳ
ಗೊಬ್ಬರುಳಿಯದ ತೆಱದಿ ಕೊಂದಿಕ್ಕಿ ನಾಯ್ಗಳಂ
ಗಬ್ಬವಿಕ್ಕಿಸಿದ ರಕ್ಕಸವಂದಿ ತಾನೆ ಹೇಳಿತ್ತು ನಾನೇಕೆಂದನು            ೨೧

ಪಡೆಯೆಯ್ದೆ ಮಡಿಯತ್ತೆ ಮಡಿಯಿತ್ತು ನಾಯ್ ಕೂಡೆ
ಕೆಡೆದವೇ ಕೆಡೆದವಾ ಹಂದಿಯಿರ್ದಪುದೆಯದೆ
ಎಡೆಯೆನಿತು ಸಾರೆ ತೋಱಿಸಿದಪಾ ತೋಱಿದಪೆನೇಳ್ವೆವೇ ನಡೆಯಿಮೆನಲು
ಕಡುಮುಳಿದು ರಥವನುರವಣಿಸಿ ನೂಂಕುವ ಭೂಮಿ
ಯೊಡೆಯಂಗೆ ಭಾಷೆಯಂ ಕೊಟ್ಟು ನಾನಾ ಬೇಡ
ವಡೆಯೊಡೆಯರೆಯ್ದೆ ಕಂಡರು ಱೊಪ್ಪಮಂ ಮಲಗಿ ದಾಡೆಗಡಿವೆಕ್ಕಲನನು  ೨೨

ಎಲೆ ದೇವ ಶಬರಾರಿಯಿದೆ ನೋಡು ನೋಡು ಮ
ತ್ತೆಲೆ ದೇವ ಮಲೆವ ವೀರರ ಮಾರಿಯಿದೆ ನೋಡು
ಎಲೆ ದೇವ ಕುನ್ನಿಗಳ ಗುನ್ನವಂ ಕೊಂಬ ಸತ್ವಸಮರ್ಥ ಮೃತ್ಯುರೂಪು
ಎಲೆ ದೇವ ಕತ್ತಲೆಯ ಮೊತ್ತ ಹರಣಂಬಡೆದು
ದೆಲೆ ದೇವ ತರಣಿಕುಲ ನೀನು ಕೊಲುವೆಡೆಗೆ ತಾಂ
ಗೆಲುವೆನೆಂಬೀ ಭರದಿ ಹಂದಿಯಿದೆ ನೋಡೆನುತ್ತಿರ್ದರಂತಾ ಬೇಡರು೨೩

ಮುನ್ನ ಬೇಂಟೆಯ ಜೋಕೆಯಱಿದ ಬೇಡರು ಮಡಿದ
ಚನ್ನನಚ್ಚಿನ ನಾಯ್ಗಳಳಿದಳಲು ಬೆರಸಿ ಬೆಳೆ
ದಿನ್ನೇನೆನುತ್ತ ಹೇವರಿಸಿ ಮೂದಲಿಸಿ ತಮ್ಮೊಳಗೆ ಕೈವೊಯ್ದು ಹರಿದು
ಬೆನ್ನಡಗನಗಿ ಬಸುಱ ಬಗಿ ಕರುಳ ನುಗಿ ಕೆಡಹು
ತಿನ್ನು ತಿದಿಗಳ ಮೂಳೆಯಂ ಮುಱಿಯೆನುತ್ತ ಹೆ
ಗ್ಗುನ್ನಿಗಳ ತಲೆದಡವಿ ಹಾಸಮಂ ತಿವಿದು ಕವಿದರು ಬೇಡರೆಣ್ದೆಸೆಯೊಳು     ೨೪

ಕೂಡೆ ಬೇಡರ ಮೊತ್ತವುಲಿದು ಬೊಬ್ಬಿಕ್ಕಲದು
ದಾಡೆಗುಟ್ಟುತ್ತ ಧಿಕ್ಕರಿಸಿ ಕೆಕ್ಕರಿಸುತ್ತ
ಲೋಡುತ್ತ ಘುಡುಘುಡೆಂದುಲಿಯೆ ಬಱಸಿಡಿಲ ಬಳಗಂ ಮೊಳಗಿದಂತಾಗಲು
ಈಡಿಱಿದು ಶಬರಸಂಕುಳವ ಸೀಳುತ್ತಲತಿ
ಝಾಡಿಸುತ ಕದಳಿವನದೊಳು ಸೂನಿಗೆಯ ಬಂಡಿ
ಯೋಡಿದಂತಾಗೆ ಮರಳಿತ್ತು ಮಂದಿಯ ಕೆದಱಿ ಹಿಂದೆ ಮಗುಳ್ದಾಲಿಸುತ್ತ     ೨೫

ಮೃತ್ಯುರೂಪಿನ ಹಂದಿ ಕಾನನದೊಳೊಕ್ಕಲಿ
ಕ್ಕಿತ್ತು ನೆಱೆಸುತ್ತಿ ಬೆಂಬತ್ತಿ ತಲೆಯೆತ್ತಿ ಮನ
ವೆತ್ತಿಯುಲಿಯುತ್ತ ತಿರುಗುತ್ತಹರಿಯುತ್ತ ಬೆದಱುತ್ತೆಯ್ದೆ ಬಲವೆಲ್ಲವ
ಒತ್ತಿ ಸೀಳಿತ್ತು ಕೆರಳಿತ್ತು ಮುರಿಯಿತ್ತು ಹರಿ
ಯಿತ್ತು ಕೊಱೆಯಿತ್ತು ಕುಱುಕಿತ್ತು ದಣಿಯಿತ್ತು ನೋ
ಡಿತ್ತು ಕತ್ತಲೆಯಿನನ ನೋಡುವಂತಾ ಗುಣೋತ್ತಮನಂ ಬಳೋತ್ತಮನನು    ೨೬

ಮಸೆವ ದಾಡೆಯ ಕುಡಿಗಳಿಂದ ಕಿಡಿ ಸುರಿಯೆ ಘೂ
ರ್ಮಿಸುವ ಮೂಗಿಂದ ಕರ್ಬೊಗೆ ನೆಗೆಯೆ ಮುನಿದು ನಿ
ಟ್ಟಿಸುವ ಕೆಂಗಣ್ಣ ಕಡೆಯಿಂದ ದಳ್ಳುರಿ ಸೂಸೆ ಬಲಿದ ಕೊರಳೊಲೆದ ಮುಸುಡು
ಕುಸಿದ ತಲೆ ನೆಗೆದ ಬೆನ್ ನಟ್ಟ ರೋಮಾಳಿ ಮೆ
ಳ್ಳಿಸಿದ ಬಾಲಂ ರೌದ್ರಕೋಪಮಂ ಬೀಱೆ ಗ
ರ್ಜಿಸಿ ಬೀದಿವರಿದು ತೊತ್ತಳದುಳಿದು ಕೊಂದು ಕೂಗಿಡಿಸಿತ್ತು ಲುಬ್ಧಕರನು   ೨೭

ಇದ್ದ ಬೇಡರನೆಯ್ದೆ ಕೆಡಹಿದಡೆ ರಥದ ಮೇ
ಲಿದ್ದು ಕೋಪಾಟೋಪದಿಂದ ಕರತಳವ ಮಾ
ಱುದ್ದಿ ಕೋದಂಡಮಂ ಸೆಳೆದು ಶರಮೂಡಿಗೆಯ ಮಡಲಿಱಿದು ಕೈಹೊಡೆಯನು
ತಿದ್ದಿ ನಾರಿಯ ನೀವಿ ಮಿಡಿದು ಬಾಗಿದ ಕೊಪ್ಪಿ
ನಿದ್ದೆಸೆಯನಾರೈದು ನೆಱೆಮೃತ್ಯುದೇವತೆಗೆ
ಬಿದ್ದನಿಕ್ಕುವೆನೆಂದು ಭೂವಲ್ಲಭಂ ನುಡಿಯೆ ದಿಗುಪಾಲರಳವಳಿದರು         ೨೮

ಎಡೆಯಾದ ನೀಡಡಿ ಶರೀರದೊಡನತಿಬಾಗು
ವಡೆದೆಡದ ಮೆಯ್ ನೆಗೆದ ಬಲದ ಕಟಿ ನಾರಿಯಂ
ತುಡುಕಿ ಕರ್ಣದ ಕಡೆಗೆ ಸೆಳೆದ ಕೈ ತುದಿವೆರಳು ಕೂರ್ಗಣೆಯ ಮೊನೆಯ ಮೇಲೆ
ನಡೆದು ಗುಱಿಯಂ ಹೊತ್ತು ಕಡೆಗಣ್ಣು ಕೆಂಪೆಸೆಯೆ
ಬಿಡೆ ದೃಷ್ಟಿ ಮುಷ್ಟಿ ಶರಸಂಧಾನವನುವಾಗೆ
ಕೆಡೆಕೆಡೆಯೆನುತ್ತೆ ಕೂಕಿಱಿದೆಚ್ಚನಬುಜಸಖಕುಲವನಧಿಕುಮುದಸಖನು        ೨೯

ಗರಳಗೊರಳವನರಳ ಸರಳಂಗೆ ಮುನಿವಂತೆ
ಯಿರುಳ ತಿರುಳಿನ ಹೊರಳಿಗಾ ತರಣಿ ಕೆರಳ್ವಂತೆ
ಸರಳ ತೆರಳಿಕೆಗೆ ಮರಳಿತು ಕರುಳ ಸುರುಳಿಯೊಳು ಹೊರಳುತ್ತ ಬೀಳುತ್ತಲು
ಹುರುಳಳಿದುದುರವೊಡೆದು ಸರಳುರ್ಚೆ ನರಳುತ್ತ
ತೊರಳೆಯಡಸಲು ಮೂಗನರಳಿಸೆಚ್ಚಂಬ ಹೊ
ತ್ತುರುಳ್ವ ಕಂಬನಿಯಿಂದ ತರಳಚಿತ್ತದ ಹಂದಿ ಮರಳಿ ಕಾನನಕೆಯ್ದಿತು         ೩೦

ಪುದಿಯ ಗಿಡುವಿನೊಳು ಮಡುವಿನೊಳು ಬೆಟ್ಟದೊಳು ಘ
ಟ್ಟದೊಳು ಸರುವಿನೊಳು ದರುವಿನೊಳು ಹಳ್ಳದೊಳು ಕೊ
ಳ್ಳದೊಳು ಬೆಳೆದಿಱುಬಿನೊಳು ತುಱುಬಿನೊಳು ಸಂದಿಯೊಳು ಗೊಂದಿಯೊಳು ಹೊಕ್ಕುಮಿಕ್ಕು
ಇದಿರೊಳೊಡ್ಡಿದ ಮರಂ ಮುಱಿಯೆ ಮೆಳೆಯೊಡೆಯೆ ಮೃಗ
ಬೆದಱೆ ಕೆದಱೆ ಧರೆ ಕಳಿದೋಡುವೆಕ್ಕಲನನ
ಟ್ಟದನಬುಜಸಖಕುಲಲಲಾಮನರಿಭೂಪಾಲದರ್ಪಸರ್ಪಮಯೂರನು        ೩೧

ಅಂಬಿನಳವಿಗೆ ಸಿಲುಕುವಂತೆ ಸುರಗಿಯಲಿಱಿವ
ಡಿಂಬುಗೊಡುವಂತಳ್ಳೆಹೊಯ್ದು ಬಳಲ್ವಂತೆ ಸ
ತ್ವಂ ಬಾಡೆ ನಡುಗೆಟ್ಟು ನಿಲುವಂತೆ ಧರೆಯೊಳಾ ಬಿದ್ದುದೆಂಬಂತೆ ಹಲವ
ನಂಬಿಸುತ ಮೋಹಿಸುತ ಹೋಹ ಕಾಡೆಕ್ಕಲನ
ಬೆಂಬಳಿಯಲೊಂದೇ ವರೂಥದಿಂ ಭೂಪ ನಿಕು
ರಂಬದಲ್ಲಣ ಹರಿಶ್ಚಂದ್ರರಾಯಂ ಹರಿದನಾಯಾಸಮಂ ಬಗೆಯದೆ            ೩೨

ಧರೆಯೊಳಗೆ ಬೇಗದಿಂ ಹರಿಣನತ್ಯಧಿಕವಾ
ಹರಿಣನಿಂ ಮರುತನುದ್ದಂಡವಾ ಹರಿಣನಿಂ
ಮರುತನಿಂ ಸರಳಧಿಕತೀವ್ರತಾ ಹರಿಣನಿಂ ಮರುತನಿಂ ಸರಳಿನಿಂದ
ವರದೃಷ್ಟಿಯಧಿಕವಾ ಹರಿಣನಿಂ ಮರುತನಿಂ
ಸರಳಿನಿಂ ದೃಷ್ಟಿಯಿಂ ಮನವುಗ್ರಸತ್ವವಾ
ಹರಿಣನಿಂ ಮರುತನಿಂ ಸರಳಿನಿಂ ದೃಷ್ಟಿಯಿಂ ಮನದಿಂ ರಥಾಶ್ವ ಮಿಗಿಲು      ೩೩

ಬಳಿವಿಡಿದು ಬಳಿಚಿದಂಬಿಂ ಮುಂದೆ ಹರಿದು ವನ
ದೊಳಗಡಗಿ ಮಾಯವಾದೆಕ್ಕಲನನಲ್ಲಲ್ಲಿ
ಸುಳಿದಱಸಿ ಕಾಣದೆ ಮನಂ ನೊಂದು ಧೃತಿಯಡಗಿ ಡಗೆದೋಱಿ ಕಟ್ಟಾಸಱು
ಮೊಳೆತು ಬಾಯಾಱಿ ತನು ಬೆವರಿ ಮುಖ ಬಾಡಿ ರವಿ
ಕುಲಶಿರೋಮಣಿ ಹರಿಶ್ಚಂದ್ರರಾಯಂ ಕಂಡ
ನಳವಿಯೊಳು ನಾನಾ ವಿಶೇಷವಿಭವಂಬಡೆದ ಮಂಗಳತಪೋವನವನು           ೩೪

ತಳೆದ ಪದ್ಮಾಸನಂ ಸುಗಿದ ತೊಗಲಂಗದಿಂ
ಮೊಳೆತ ಹುತ್ತೊಳಗಱತ ಸುಯ್ ನವದ್ವಾರದಿಂ
ಬೆಳೆದ ಕುಜಲತೆ ನೆಲಕ್ಕೊಲೆವ ಡೋವಿಗೆ ದೇಹದೊಳಗೆಯ್ದೆ ಬೀದಿವರಿದು
ಸುಳಿವೊಱಲೆ ಫಣಿ ನಕುಲ ಮೂಷಕಂ ನೆಲನನೊಡೆ
ದಿಳಿವ ಜಡೆ ನಖಸಂಚವಳಿದ ನಿಟ್ಟೆಲು ದರ್ಪ
ವಳಿದವಯವಂ ಮೆಱೆವ ಘೋರತಪದಚಲಿತರನೀಕ್ಷಿಸಿದನವನೀಶನು           ೩೫

ಮಿಗೆ ವಾತಗುಲ್ಮಪರಿವೃತರಾಗಿಯುಂ ನಿರೋ
ಗಿಗಳು ಪರಸತಿಗತಿ ಪ್ರಿಯರಾಗಿಯುಂ ಸುಶೌ
ಚಿಗಳುಱೆ ಸ್ತ್ರೀನಿಕರಸರ್ವಾಂಗರಾಗಿಯುಂ ಬ್ರಹ್ಮಚಾರಿಗಳು ಜಗದ
ಬಗೆಯೆ ಕರ್ಣಾಂತಾಕ್ಷರಾಗಿಯುಂ ಸೂಕ್ಷ್ಮದೃ
ಷ್ಟಿಗಳು ಕುಲಗೋತ್ರಮಧ್ಯಸ್ಥಿತಿಗಳಾಗಿಯುಂ
ಸೊಗಯಿಪೇಕಾಕಿಗಳೆನಿಸಿ ಶಿವನನೊಲಿಸಿದ ಮುನೀಶ್ವರರು ಕಣ್ಗೆಸೆದರು        ೩೬

ಕಂದಮೂಲಂಗೀಳ್ವ ಪೂಗೊಯ್ವ ಕೃಷ್ಣಾಜಿ
ನಂದಳೆವ ರುದ್ರಾಕ್ಷೆಗೋವ ವಲ್ಕಲವಸನ
ವೃಂದಮಂ ತೊಳೆವ ಮಿಸುಪಾ ದಾರಮಂ ಬಿಗಿವ ಮೌಂಜಿಮೇಖಲೆಗಟ್ಟುವ
ಒಂದಿ ಭಸಿತವನಿಡುವ ಯಜ್ಞೋಪವೀತಮಂ
ಬಂಧಿಸುವ ಜಡೆಗೆ ಸುಂಕಿಡುವ ಸಮಿತಂ ತಪ್ಪ
ಹೆಂದದ ಮುನೀಶ್ವರಕುಮಾರರಂ ಕಂಡು ಕೈಮುಗಿದಂ ಹರಿಶ್ಚಂದ್ರನು         ೩೭

ಸಿಂಗದೊಡನೆಕ್ಕೆಗುಟ್ಟುವ ಕರಿಗಳಂ ಹುಲಿಯ
ಜಂಗುಳಿಯನೀಡಿಱಿವ ಹರಿಣಂಗಳಂ ಹಲವು
ಮುಂಗುರಿಯ ಮೇಲೆ ತಲೆಯಂ ನೀಡಿ ನವಿಲ ಮುದ್ದಾಡಿಸುವ ಸರ್ಪಂಗಳ
ಕಂಗೆಸೆವ ಸಾರಮೇಯಂಗಳೊಡನಾಡುವ ಕು
ರಂಗಶಿಶುವಂ ಕಾಡಬೆಕ್ಕನಟ್ಟುವ ಮೂಷ
ಕಂಗಳಂ ನೋಡಿ ಬೆಱಗಾಗುತಂ ನಡೆತಂದನರಿತಿಮಿರಕಮಲಸಖನು   ೩೮

ವಿದಿತವೆನೆ ವೇದಘೋಷದ ಪುರಾಣಪ್ರಸಂ
ಗದ ತರ್ಕತಂತ್ರಸಂವಾದದಾಗಮವಿಚಾ
ರದ ಸದೌಪನಿಷದರ್ಥಶ್ರವಣದಾ ಸ್ತವ ಸ್ತೋತ್ರಪಠನಪ್ರಕರದ
ಮೃದುವಾಕ್ಯ ಲಕ್ಷಣಾಲಾಪದ ಶಿವಾರ್ಚನಾಂ
ಗದ ಘಂಟಿಕಾರವದ ನಿತ್ಯಹೋಮಸ್ವಧಾಂ
ತ್ಯದ ಘನಸ್ವಾಹಾಂತ್ಯದಖಿಲ ಸಂಭ್ರಮಕೆ ಬೆಱಗಾದನು ಹರಿಶ್ಚಂದ್ರನು        ೩೯

ಫಳಭಾರದಿಂದೊಲೆದು ತೂಗಿ ಬಾಗುವ ಮರಂ
ಗಳ ಕೆಳಗೆ ತುಱುಗಿ ನಳನಳಿಸಿ ಬೆಳೆದೆಳಲತೆಯ
ತಳಿರ ತಿಳಿಗೊಳನ ಪುಳಿನಸ್ಥಳದ ಕಮಲಕೈರವದ ತನಿಗಂಪುವೆರಸಿ
ಸುಳಿವ ತಣ್ಣೆಲರ ತಂಪಂ ಕಂಡು ಮಂತ್ರಿ ಭೂ
ತಳನಾಥ ಬಿಡುವೊಡಿದು ಠಾವೆಂದು ಬಿನ್ನೈಸೆ
ಜಲಜಸಖಕುಲನಿಳಿದನಂದು ರಥಮಂ ಪಟ್ಟದಂಗನೆ ಕುಮಾರ ಸಹಿತ           ೪೦

ಬಸವಳಿದ ರಥತುರಂಗವೃಂದಮಂ ಬಿಟ್ಟು ಶೀ
ತಳವಾರಿಯಂ ತೋಱಿ ಮೆಯ್ದೊಳೆದು ಲಲಿತಶಾ
ಡ್ವಳವನೊಲವಿಂ ಕೊಯ್ದು ಮುಂದಿಟ್ಟು ಕಟ್ಟಿ ಪ್ರಧಾನ ನಟ್ಟಡವಿಯೊಳಗೆ
ಬಳಿವಿಡಿದು ಬಂದ ಕಟಕವನೆಯ್ದೆ ಬಿಡಿಸಿ ಭೂ
ತಳಪತಿಗೆ ಕೈಗೊಟ್ಟು ನಿರ್ಮಳಸರೋವರದೊ
ಳಿಳುಪಿ ಶಿಶಿರೋಪಚಾರಂಗಳಂ ಮಾಡಿದಂ ಡಗೆ ತೊಲಗಿ ವಿಶ್ರಮಿಸಲು          ೪೧

ಜಲಜದೆಳಎಲೆಗಳಿಂ ಮೊಗೆಮೊಗೆದು ತೆಗೆದು ನಿ
ರ್ಮಳ ಜಲವನೀಂಟಿ ಪುಳಿನಸ್ಥಳದ ಮೇಲೆ ಕೆಂ
ದಳಿರ ಹಸೆಯಂ ಹಾಸಿ ನೃಪರೂಪಚಂದ್ರಮಂ ಮಂತ್ರಿಸತಿಸುತರು ಸಹಿತ
ಮೊಳೆವ ಸುಖಮಂ ಸಾಗಿಸುತ್ತ ತಾಂಬೂಲಕರ
ತಳನಾಗಿ ನಲಿದೋಲಗಂಗೊಟ್ಟು ದೀಹದರ
ಗಿಳಿ ನವಿಲು ಹಂಸೆ ಕೋಕಿಲ ಪಾರಿವಂಗಳಂ ನೋಡಿ ಹರ್ಷಂದಳೆದನು           ೪೨

ಫನಪುಣ್ಯಮಯವೆನಿಪ್ಪೀ ತಪೋವನದೊಳಿಹ
ಮುನಿಯಾವನೋ ಮಹಾದೇವನೇ ಬಲ್ಲನಾ
ತನ ಶಾಂತಿಯಿಂದ ಶಶಿ ಚಾರಿತ್ರದಿಂ ಗಂಗೆ ವರತಪಸ್ತೇಜದಿಂದ
ದಿನಕರಂ ಸುಳಿವಿಂದ ತಂಗಾಳಿ ನುಡಿಯ ಮೋ
ಹನದಿಂದ ಸುಧೆಯುದಾರತ್ವದಿಂ ಸುರಕುಜಂ
ಜನಿಸದಿರವೆಂದು ಕೊಂಡಾಡುತಿರ್ದಂ ಹರಿಶ್ಚಂದ್ರನಾ ಮಂತ್ರಿಯೊಡನೆ          ೪೩

ಹೊಗಳುತ್ತ ಹಾರಯಿಸುತುಬ್ಬುತ್ತ ಕೊಬ್ಬುತ್ತ
ನಗುತ ನಲಿಯುತ್ತ ಹಾಡುತ್ತಾಡುತಾನಂದ
ವೊಗೆಯುತಿರಲೊಬ್ಬ ಮುನಿಯಂ ಕಂಡಿದಾವನಾಶ್ರವೆಂದು ಬೆಸಗೊಂಡಡೆ
ವಿಗಡವಿಶ್ವಾಮಿತ್ರಮುನಿಯ ಬನವೆನೆ ಸುಖಂ
ಸುಗಿದು ಪೊಯ್ವಡೆದಂತೆ ಹಾವಗಿದು ಬಿಟ್ಟಂತೆ
ಬಗೆ ಬೆದಱಿ ಗುರುವಾಜ್ಞೆಗೆಟ್ಟುದಿನ್ನೇಗೆಯ್ವೆನೆಂದನು ಹರಿಶ್ಚಂದ್ರನು         ೪೪

ಶಿವಪೂಜೆಗೆಯ್ದು ಯಾಗಂಗಳಂ ನಡೆಸಿ ಸ
ತ್ಯವ ನುಡಿದು ದಾನಧರ್ಮಂಗಳಂ ಮಾಡಿ ದೇ
ಶವನು ಪಾಲಿಸಿ ಕುಲಾಚಾರದಿಂ ನಡೆದಖಿಳ ಮುನಿಜನವನಾರಾಧಿಸಿ
ಅವಿಚಾರಮಂ ಬಿಟ್ಟು ನಾನಾ ಪುರಾಣ ಕಥ
ನವನು ತಿಳಿದಿಂದುತನಕೆಂತಕ್ಕೆ ಪಡೆದ ಪು
ಣ್ಯವನು ಕೆಡಿಸಿದೆನು ಗುರುವಾಜ್ಞೆಗೆಟ್ಟೆನ್ನಿಂದ ಪಾಪಿಗಳದಾರೆಂದನು            ೪೫

ಗುರು ಸದಾಶಿವನು ಗುರುಸತಿ ಗಿರಿಜೆ ಗುರುಸುತರು
ಕರಿವದನ ಷಣ್ಮುಖರು ಗುರುಸಖರು ವರಗಣೇ
ಶ್ವರರು ಗುರುಕುಲವೆಯ್ದೆ ಶಿವಕುಲಂ ಗುರು ನುಡಿದ ನುಡಿ ಶುದ್ಧಪಂಚಾಕ್ಷರಿ
ಗುರುಮತಂ ಶೈವಾಗಮವ್ರತಂ ಗುರುನಾಮ
ವರಶಿವಸ್ತೋತ್ರ ಗುರುತುಷ್ಟಿ ಶಿವತುಷ್ಟಿಯದು
ಪರವಿಲ್ಲೆನಿಪ್ಪಾತನೇಂ ಧನ್ಯನೋ ಮಹಾದೇವ ಗುರು ಶರಣೆಂದನು           ೪೬

ಆನು ಗುರುವಾಜ್ಞೆಯಂ ಮೀಱಿದುದಱಿಂದೆನಗೆ
ಹಾನಿ ಹೊಗದಿರದೆಂದಡೇಕೆ ಹೊಕ್ಕಪುದೆನಲು
ದಾನಿ ಗುರು ನೆನಹಿಂದ ಬಪ್ಪ ಪುಣ್ಯಂ ಮಱೆದಡೇಕೆ ಕೇಡಾಗದೆನಲು
ಜ್ಞಾನಕೃತದಿಂದೊಗೆದೊಡೊಲ್ಲೆನೆನಬಾರದ
ಜ್ಞಾನಕೃತಕಿಲ್ಲಪಜಯಗಳೆಂದೆನೆ ಗುಣಾ
ನೂನ ಮಱೆದುಱೆ ಮೆಟ್ಟಿದಡೆ ಮುಳ್ಳು ನೆಡದಿಹುದೆ ಹೇಳೆಂದನವನೀಶನು೪೭

ಮನದೊಳಗೆ ಮಱುಗುತಲ್ಲಿರ್ದು ವಿಶ್ವಾಮಿತ್ರ
ಮುನಿಯ ಕಾಟಕ್ಕೆ ಗುಱಿಯಾಗಿ ಗುರುವಾಜ್ಞೆಗೆ
ಟ್ಟನವಧಿಯ ಪತಿತನಪ್ಪುದಱಿಂದೆ ಹೋಹೆವೇಳರಸಯೆನೆ ಮಂತ್ರಿಗೆಂದ
ಬನಕೆ ಬಂದೆನಗೆ ನಮಿಸದೆ ಹೋದನೆಂದು ನೆ
ಟ್ಟನೆ ಶಪಿಸದಿರನೆನಲು ಶಪಿಸಿ ಮಾಡುವುದೇನು
ವಿನುತಗುರುವಾಜ್ಞೆಗೆಡದಿಪ್ಪುದೇ ಲೇಸು ಹೋಹುದೆ ಮಂತ್ರಿವೇಳೆಂದನು      ೪೮

ಎಳಸುವಬಲೆಯರ ನಡುವಿರ್ದತಿಜಿತೇಂದ್ರಿಯಾ
ಮಳನೆನಿಪುದರಿದಲ್ಲದಕಟ ನಿರ್ಜರಭೂಮಿ
ಯೊಳಗಿರ್ದು ನಾಂ ಜಿತೇಂದ್ರಿಯನೆಂಬುದೇನರಿದಸತ್ಯಮಂ ನುಡಿಯದಿಪ್ಪ
ಬಳವೆನಗೆ ಗುರುವಾಜ್ಞೆಯೈಸಲೀಯದೆ ನನಗೆ
ಮುಳಿದವರ ಮುಖದೊಳಹುದೆನಿಸದುಳಿದಂತೆ ನಿ
ಷ್ಫಲವಾವುದಿರ್ದಡಂ ಹೋದಡಂ ಕೇಡಾಗದಿರದು ನಿಶ್ಚಯವೆಂದನು          ೪೯

ಹೊಳೆವ ಮೇರುವ ಸುತ್ತಿ ಬೆಂಡಾದ ರವಿ ಚಂದ್ರ
ಕಳೆಯ ತೊಡೆಯೆಡೆಯೊಳೊಯ್ಯನೆ ಮಲಗುವಂತೆ ರವಿ
ಕುಲದ ರಾಯಂ ವರಾಹನ ಹಿಂದೆ ಸುತ್ತಿದಾಸಱಮೇಲೆ ಗುರುವಾಜ್ಞೆಯ
ಕಳೆದು ಕೌಶಿಕನಾಶ್ರಮಂಬೊಕ್ಕ ಚಿಂತೆಯಿಂ
ಮುಳುಗತ್ತ ನಿಜಸತಿಯ ತೋರದೊಡೆಗಳ ಮೇಲೆ
ಲಲಿತ ಮಣಿಮಕುಟಮಂಡಿತ ಮಸ್ತಕವನಿಳುಹಿ ಮಗ್ಗುಲಿಕ್ಕಿದನಾಗಳು         ೫೦

ಆ ಸಮಯದೊಳು ಕಣ್ಣಮುಂದೆಸೆವ ಸತಿಯ ನಿಡು
ಬಾಸೆ ಮೊಲೆ ಮುಡಿ ಮುಖದ ಮೋಹನಂ ತಳಿರ್ಗಳಿಂ
ಬೀಸಿ ಬಳಲ್ದಿರಿ ಜೀಯ ಬೊಪ್ಪಯ್ಯಯೆಂದೆಂಬ ಸುತನ ಸವಿನುಡಿ ಚರಣವ
ಓಸರಿಸದೊತ್ತುವ ಚಮೂಪನುಪಚರಿಯದಿಂ
ದಾಸಕಳಕುಸುಮದ ಸುಗಂಧಸುಖನಿಕರದ ಸು
ಧಾಸೂಕ್ತಿಗಳು ಸುಳಿವ ತಂಗಾಳಿಗಳು ಸೊಗಸವರಸಂಗೆ ಚಿಂತೆಯ ಕಯ್ಯೊಳು   ೫೧

ಸತಿ ಮಡಿಸಿ ನೀಡುವೆಲೆವಿಡಿದ ಕೈ ಬಸವಳಿದು
ದತಿಚಿಂತೆಯೊಳು ಮಱಿದ ತನು ಜೊಮ್ಮುವಿಡಿದ ಪು
ರ್ಬತಿಭಾರವಾಗಿ ಕಣ್ಮುಚ್ಚಿ ತೋಳ್ ತೊಡೆ ಮಿಡುಕೆ ಸುಯ್ ಸೂಸೆ ನಿದ್ರೆ ಕವಿದು
ವಿತತ ಸುಖದಿಂದಿರುತಿರಲ್ಕೆ ನಾನಾ ದುಃಖ
ಯುತಮಪ್ಪುದೊಂದು ಕನಸಂ ಕಂಡು ನೊಂದು ಭೂ
ಪತಿ ಬೆದಱಿದಂತೆ ಭೋಂಕೆನಲೆದ್ದು ಬೆಬ್ಬಳಿಸಿ ನಾಲ್ದೆಸೆಯನಾರಯ್ದನು     ೫೨

ನಾಡೆ ಕಂದಿದ ಮೊಗಂ ಬಱತ ಬಾಯ್ ಕೆಲಬಲನ
ನೋಡಿ ಬೆಚ್ಚುವ ದೃಷ್ಟಿ ಸೆರೆ ನೆಗೆದ ಗಂಟಲ
ಲ್ಲಾಡುವೆದೆ ಬಿಡೆ ನಡುಗುತಿಪ್ಪ ತೊಡೆ ಶಂಕಿಸುವ ಮೆಯ್ ಧರಾಪತಿಯ ಮೇಲೆ
ಕೂಡೆ ತೋಱಲು ಕಂಡು ತೂಪಿಱಿದು ಮುಂಗಯ್ಯ
ಸೂಡಗವನುಱೆ ನಿವಾಳಿಸಿ ಮುಖಕ್ಕೆಱೆದು ಕೊಂ
ಡಾಡಿ ಬೋಳೈಸಿ ವೀಳೆಯವಿತ್ತು ನುಡಿಸಿದಳು ರಾಣಿ ನಿಜವಲ್ಲಭನನು        ೫೩

ಧುರದೊಳರಿಭೂಭುಜರನಂಜಿಸುವ ನಡುಗಿಸುವ
ಕೊರಗಿಸುವ ಕೋಡಿಸುವ ಬಾಡಿಸುವ ಬಳುಕಿಸುವ
ಬಿರುದಂಕಮಲ್ಲನೀ ನಡುಗಲೇತಕ್ಕೆ ಹೇಳೆಂದು ಮೆಲ್ಲನೆ ನುಡಿಸಲು
ತರುಣಿ ಕೇಳೊಂದು ಕನಸಂ ಕಂಡೆನಾ ಕನಸು
ನಿರುತವೆಂದೇ ಕಣ್ಣ ತೆಱದೆ ನೀನಿಂತಿದಱ
ಪರಿಯಂ ವಿಚಾರಿಸೆಂದಾಡಿದವನೀಶ್ವರನ ನುಡಿಗೆ ಸತಿ ಹೂಂಕೊಂಡಳು         ೫೪

ಘುಡುಘುಡಿಸುತೊಬ್ಬ ಮುನಿ ಬಂದು ನಾನೋಲಗಂ
ಗೊಡುವ ಮಣಿಮಂಟಪದ ಕಂಭವೆಲ್ಲವನು ತಡೆ
ಗಡಿದು ಹೊಂಗಳಸಂಗಳಂ ಮಾಣದೊಡೆಬಡಿದು ನೆರೆದ ಸಭೆಯೊಳಗೆನ್ನನು
ಕೆಡಹಿ ಸಿಂಹಾಸನವನೊಯ್ವಾಗಳೆನ್ನೆದೆಯ
ನಡರ್ದೊಂದು ಕಾಗೆ ಕರೆದುದು ಬಳಿಕ್ಕಾಂ ಗಿರಿಯ
ನಡರ್ದು ಶಿಖರದೊಳೆಸೆವ ಮಣಿಗೃಹಂಬೊಕ್ಕೆನಿದಱಂತಸ್ಥವೇನೆಂದನು        ೫೫

ಇದಕಿನಿತು ದುಗುಡವೇಕಾ ಕುಪಿತಮುನಿಪನೆಂ
ಬುದು ಕೌಶಿಕಂ ಬಳಿಕ್ಕಿನ ವಿಗುರ್ಬಣೆಗಳೆಂ
ಬುದು ಮುನಿಯ ಗೊಡ್ಡಾಟದಿಂ ನಮಗೆ ಬಪ್ಪ ಕಿಱಿದಲ್ಪಸಂಕಟವಿದಕ್ಕೆ
ಹೆದಱದಿರ್ದಡೆ ಮುಂದೆ ಲೇಸುಂಟು ಪರ್ವತದ
ತುದಿಯೆ ಗೃಹಮಂ ಪೊಗುವೆನೆಂಬುದು ಮಹಾನೂನ
ಪದವಿ ತಪ್ಪದು ದಿಟಂ ಮಱುಗಬೇಡಿನ್ನೊಂದು ಮಾತ ಚಿತ್ರೈಸೆಂದಳು        ೫೬

ಬಗೆವಡೀ ಕನಸು ಗುರುವಾಜ್ಞೆಯಂ ಮೀಱಿತ
ಕ್ಕೊಗೆವ ಕೇಡಿಂಗೆ ಸೂಚನೆ ಮುನಿಯಬೇಡ ಮಂ
ತ್ರಿಗೆ ಮಗಂಗೆನಗೆ ರಾಜ್ಯಕ್ಕೆ ಚತುರಂಗಸೇನೆಗೆ ಸಕಲಭಂಡಾರಕೆ
ನಗರಕ್ಕೆ ಸರ್ವಪರಿವಾರಕ್ಕೆ ತೇಜದೇ
ಳ್ಗೆಗೆ ನಿನ್ನ ಹರಣಕ್ಕೆ ಕೇಡು ಬಂದಡೆ ಬರಲಿ
ಮಿಗೆ ಸತ್ಯಮಂ ಬಿಟ್ಟು ಕೆಡದಿರವನೀಶ ಕೈಮುಗಿದು ಬೇಡಿದೆನೆಂದಳು          ೫೭

ಏನನಂಗನೆ ನುಡಿದಳೇನನಾಲಿಸಿದೆನಿದ
ಕೇನು ಮಱುಮಾತಿನ್ನು ಮೇಲೆ ಮಾಡುವುದೇನು
ತಾನಾದೆನೆಲ್ಲಿಂದ ಬಂದೆನೆನ್ನೊಡನಿರ್ದರಾರು ನೆಲೆಯಾವುದೆಂದು
ಏನುಮಂ ಕಾಣದೋರಂತೆ ಮರವಟ್ಟು ದು
ಮ್ಮಾನವೊಡಲಂ ತೀವಿ ತುಳುಕಾಡುತಿರಲು ರಿಪು
ಭೂನಾಥ ಶರಧಿವಡಬಾನಲಂ ಮಱೆದು ಚಿಂತಾಚಿತ್ರನಿರುತಿರ್ದನು  ೫೮

ಬಿಡೆ ತಪೋವನವ ಕಾಣುತ್ತ ಕಡೆಗಣಿಸಿ ಹೋ
ದಡೆ ಕೇಳ್ದು ಮುನಿ ಮುನಿವನಲ್ಲದಿಂದಿನ ಹಗಲ
ಕಡೆತನಕ ನೋಡಿದೆವು ಕೌಶಿಕಮುನೀಶ್ವರಂಗರಸ ವಂದಿಸಿದನೆಂದು
ನುಡಿದು ನಡೆಗೊಂಬವೇಳೇಳೆಂದು ಮಂತ್ರಿ ತ
ನ್ನೊಡೆಯಂಗೆ ಬುದ್ಧಿವೇಳ್ದೆಬ್ಬಿಸುತ್ತಿರಲಿತ್ತ
ಪೊಡವೀಶನಂ ತಂದ ಹಂದಿ ಹರಿಯಿತ್ತು ಕೌಶಿಕನನುಷ್ಠಾನದೆಡೆಗೆ    ೫೯

ನಿಡುಸರದೊಳಿಳಿವುಸುರು ಹೊಯ್ವಳ್ಳೆ ಡೆಂಡೆಣಿಸು
ವಡಿ ಹನಿವ ಬೆಮರು ಮಱುಮೊನೆಗಂಡ ಬಾಣಂಗ
ಳೆಡೆಯಿಂದ ಸುರಿವ ಬಿಸಿನೆತ್ತರೇಱುಗಳ ವೇದನೆಗಾಱದರೆಮುಚ್ಚುವ
ಕಡೆಗಂಗಳರಳ್ವ ನಾಸಾಪುಟಂ ಬಲಿದ ನೊರೆ
ವಿಡಿದ ಕಟವಾಯ್ ಕುಸಿದ ತಲೆ ಸುಗಿದ ದರ್ಪ ಹುರಿ
ಯೊಡೆದ ರೋಮಂ ತೂಗಿ ತೊನೆದು ಮೆಯ್ಮಱೆವ ಹಂದಿಯನು ಕೌಶಿಕ ಕಂಡನು        ೬೦