ಸೂಚನೆ
ನಾಡೆ ವಿಶ್ವಾಮಿತ್ರಮುನಿಯ ಬೆಸದಿಂ ಬಂದು
ಕೂಡೆ ಮುತ್ತಿದ ದಾವಶಿಖಿಯನೆಂತಕ್ಕೆ ನೀ
ಗಾಡಿ ಪುಣ್ಯಾಧೀನದಿಂ ವಾರಣಾಸಿಯಂ ಹೊಕ್ಕನು ಹರಿಶ್ಚಂದ್ರನು

ನೋಡೆ ಹಳ್ಳದೊಳಿಳಿದು ಕರಚರಣಶುದ್ಧಿಯಂ
ಮಾಡಿ ಸಂಧ್ಯಾವಂದನಂಗೆಯ್ದು ತರುಣಶಶಿ
ಚೂಡನಡಿದಾವರೆಯನರ್ಚಿಸಿ ಗುರುಸ್ಮರಣೆವೆರಸಿ ಪ್ರಸಾದಫಲವ
ಸೂಡಿ ತನಯನನೆತ್ತಿಕೊಳುತ ಮಂತ್ರಿಯನು ಮಾ
ತಾಡಿಸುತ ಸತಿಯನೋವುತ್ತ ನಕ್ಷತ್ರಕನ
ಕೂಡುತ್ತರಂಗಡುತರಣ್ಯಮಂ ನೋಡುತ್ತ ನಡೆದ ಧೀರೋದಾರನು ೧

ಮಂದೈಪ ಬಿಸಿಲ ಬಿಸಿಯಿಂ ನೆತ್ತಿ ನೆಲನ ಬಿಸಿ
ಯಿಂದ ಕಾಲ್ ಕಡುಗಲಿಸಿ ಕವಿವ ಕಾದೆಲರ ಬಿಸಿ
ಯಿಂದ ದೇಹಂ ಕ್ಷುಧಾನಲನ ಬಿಸಿಯಿಂದೊಳಗು ತೃಷೆಯ ಬಿಸಿಯಿಂದ ಬಾಯಿ
ಬೆಂದು ಬಿರಿದರಳುತ್ತ ಸಾಯುತ್ತ ನೋಯುತ್ತ
ನಿಂದು ನಡೆದಳುಕುತ್ತ ಬಳುಕುತ್ತ ಬರಬರಲು
ಮುಂದೆ ಬಳಿಕೇವೊಗಳ್ವೆನಕಟ ನಿಷ್ಕರುಣಮುನಿ ನೆನೆದ ಕುಟಿಲದ ಕುಂದನು    ೨

ಹಿರಿಯ ದಂತಂಗಳುರಿವುತ್ತಾನೆಗಳು ಗಱಿಗ
ಳುರಿವುತ್ತ ಪಕ್ಷಿಗಳು ಬೆಳೆದ ಕಾಡುಗಳು ಬಿಡ
ದುರಿವುತ್ತ ಮೃಗತತಿಗಳುಟ್ಟ ಹೀಲಿಗಳುವುರಿವುತ್ತ ಶಬರಿಯರ ರೋಮ
ಉರಿವುತ್ತ ಕರಡಿಗಳು ಬೆನ್ನೊಳಿಳುಹಿದ ಚಮರ
ವುರಿವುತ್ತ ಬೇಡರೊಱಲುತ್ತ ಬಪ್ಪುದನಂ ಕಂ
ಡರಸನರಸಿಗೆ ತೋಱಿ ಮೀಱಿ ನಡೆವುತ್ತಿಪ್ಪ ಸಮಯದೊಳಗೇವೊಗಳ್ವೆನು  ೩

ವಿನುತ ವಿಶ್ವಾವಸುವಿನಾತ್ಮಭವ ಕೃತವೀರ್ಯ
ನೆನಿಪವನ ಕೈಯಿಂದ ಮಡಿದ ಭೃಗ್ವಾದಿಗಳ
ತನಯನೆನಿಪೊರ್ವ ಮುನಿಯುಗುಳ್ದ ಕೋಪಾಗ್ನಿ ಕಡಲಂ ಕುಡಿದು ಹಸಿವಡಗದೆ
ಮುನಿದು ಪೊಡವಿಯ ಸುಡುತ ನಡೆತಂದಪುದೊ ರುದ್ರ
ನನಿಮಿತ್ತ ಕಡೆಗಾಲದನಲಂಗೆ ಕೈವೀಸಿ
ದನೊ ಪೇಳಿದೇನೆಂದು ನೃಪನಂಜುತಿರಲು ದಾವಾನಳಂ ಕೈಕೊಂಡುದು        ೪

ಕುತ್ತುಱಾಗಿರ್ದ ಹೆಮ್ಮೆಳೆಗಳಂ ಸುಡುತ ಬಳ
ವೆತ್ತ ಬೆಟ್ಟವ ಸೀಳ್ದು ಸೆಕ್ಕೆಗಳೆವುತ್ತ ಪಳು
ವೆತ್ತ ನೆಲನಂ ಕರಿಕುವರಿಸುತ್ತ ಬೆಳೆದ ಮರದಿಡುಕುಱೊಳು ನಿಂದುರುಹುತ
ಹೊತ್ತುತ್ತ ಹೊಗೆಯುತ್ತ ಹಬ್ಬುತ್ತ ಹರಿದು ನೆಗೆ
ಯುತ್ತ ಗಗನವನು ತುಡುಕುತ್ತ ಮತ್ತಂತಡಸಿ
ಸುತ್ತ ಮುತ್ತಿತ್ತು ದಾವಾನಳನಸತ್ಯಕಾಂತಾರದಾವಾನಳನನು         ೫

ಭುಗಿಭುಗಿಲ್ ಭುಗಿಭುಗಿಲ್ ಛಿಳಿಛಿಳಿಲ್ ಛಿಟಿಛಿಟಿಲ್
ಧಗಧಗಿಲ್ ಧಗಧಗಿಲ್ ಘರಿಘರಿಲ್ ಘರಿಘರಿಲ್
ಧಗಧಗಂ ಧಗಧಗಂ ಧಗಧಗಿಲ್ ಛಿಮಿಛಿಮಿಲ್ ಛುರಿಛುರಿಲ್ ಛಟಛಟೆಂದು
ಒಗೆದು ಧಂಧಗಧಗಧಗಂ ಘಳುಘಳೆಂದುಬ್ಬಿ
ನೆಗೆದು ದಳ್ಳುರಿ ಬಳ್ಳಿವರಿದು ಕತ್ತಲಿಸಿ ಕ
ರ್ಬೊಗೆ ಮೀಱಿ ತೋಱಿ ಕೆಂಗಿಡಿಗೆದಱಿ ದಾವಾಗ್ನಿ ಮುತ್ತಿತ್ತು ನಾಲ್ದೆಸೆಯನು         ೬

ಹಿಂದೆ ರಿಪುರಾಯರೆಲ್ಲರ ಕೊಂದಡವರ ಕುಲ
ವೃಂದದಳಲುರಿ ನೆಗೆದು ಹೊತ್ತ ಹಾರಿರ್ದೀಗ
ಬಂದು ಮುತ್ತಿತ್ತೊ ಕೌಶಿಕನ ತೆಱಕಾಱನರ್ಥವನಿಂದು ಕೊಟ್ಟಲ್ಲದೆ
ಒಂದಡಿಯನಿಡಲೀಯೆನೆಂದುರಿಯ ಗೆಱೆಯನಾ
ರ್ಪಿಂದಿಟ್ಟನೋ ತನ್ನ ಕುಲದವನ ಕಾಯಬೇ
ಕೆಂದು ರವಿ ಕಿರಣಮಂ ಬಳಸಿದಪನೆನಿಸಿ ದಾವಾಗ್ನಿ ಸುತ್ತಂ ಮುತ್ತಿತು           ೭

ಹೆದಱಿ ಗಜಬಜಿಸಿ ಸತಿಸುತರ ಕೈವಿಡಿದು ನಿ
ಲ್ಲದೆ ಸಾರು ಮಾರಿ ಬಂದತ್ತು ನಡೆನಡೆಯೆಂದು
ಕದುಬಿ ಹರಿಹರಿದತ್ತಲಿತ್ತ ದಾರಿಯನಱಸುವನಿತಕೆಲ್ಲಾ ದೆಸೆಯನು
ಹೊದಸಿ ಕೈಕೊಂಡ ಬೇಗೆಯ ಬೇಗಮಂ ಕಂಡು
ಮದವಳಿದು ನಿಂದ ಭೂಪನ ಮೇಲೆ ಸಾಯಲಾ
ಱದೆ ನೊಂದು ಬೆಂದ ನಾನಾಖಗಮೃಗಂ ಕವಿದವೇನೆಂಬೆನದ್ಭುತವನು          ೮

ಹೆಡೆ ಬೇವ ಸರ್ಪ ಬರಿ ಬೇವ ಸಾರಂಗ ಕೊರ
ಳೆಡೆ ಬೇವ ಸಿಂಹ ತಲೆ ಬೇವ ಹುಲಿ ಕಿವಿ ಬೇವ
ಕಡವು ಕಾಲ್ಬೇವ ಮರೆ ತುಟಿ ಬೇವ ಜಂಬುಕ ವೃಕಂ ಬಸುಱ್ ಬೇವ ಶಶಕ
ತೊಡೆ ಬೇವ ಹುಲ್ಲೆ ಬಾಲಂ ಬೇವ ಕೋಣ ಹೆ
ದ್ದೊಡೆ ಬೇವ ಹಂದಿ ಪಚ್ಚಳ ಬೇವ ಸೀಳ್ನಾಯಿ
ಕಡಗಿ ಕಂಗೆಟ್ಟು ದೆಸೆಗೆಟ್ಟು ಕವಿದವು ಹರಿಶ್ಚಂದ್ರಭೂಪತಿಯ ಮೇಲೆ          ೯

ಕರಿಗೆ ತೊಲಗಿದಡೆ ಹುಲಿ ಮೊರೆವುದೋಸರಿಸಿದಡೆ
ಕರಡಿ ಕೆಲೆವುದು ಹಿಂಗಿದಡೆ ಸರ್ಪ ತುಡುಕುವುದು
ತಿರುಗಿದಡೆ ಸಿಂಹ ಗರ್ಜಿಪುದೊಲೆದಡೆಕ್ಕಲಂ ಟೊಣೆವುದೊಯ್ಯನೆ ಕಳಿದಡೆ
ಮರೆ ಹೊಯ್ವುದದನುಳಿದಡೆಮ್ಮೆಯೆಱಗುವುದು ಪರಿ
ಹರಿಸೆ ಸಾರಂಗವಿಱಿವುದು ಮುರಿಯೆ ಕೋಣನಿ
ಟ್ಟೊರಸುವುದು ಎನುತ ಬಾಯ್ವಿಟ್ಟು ಮಱುಗಿದ ಭೂಪ ಸತಿಸುತರ್ ಬೆಱಗಾಗಲು    ೧೦

ನೂಕಿ ಮೃಗದಿಕ್ಕೆಯಂ ಬಿಟ್ಟು ದಡವೇಱುತಾ
ಲೋಕಿಸುತ ಮುನ್ನಟ್ಟಿ ಮುಟ್ಟಿ ದೆಸೆದೆಸೆಯೊಳೇ
ಕಾಕಾರವಾದಗ್ನಿಯಂ ಕಂಡು ಗಗನದಮರರು ನೊಂದು ಬೆಂದು ಮಱುಗಿ
ಆ ಕವಿದುದಾವುರಿದುದಾ ನೆಗೆದುದಾ ಮೊಗೆದು
ದಾ ಕೊಂದುದೆಲೆಲೆ ಶಿವಶಿವ ಮಹಾದೇವ ಕರು
ಣಾಕರನೆ ರಕ್ಷಿಸು ಹರಿಶ್ಚಂದ್ರನೃಪನನೆನುತಭವಂಗೆ ಮೊಱೆಯಿಟ್ಟರು          ೧೧

ನಡುಗಿದನೆ ಬೆದಱಿದನೆ ತೆಕ್ಕಿದನೆ ತೆರಳಿದನೆ
ಸೆಡೆದನೇ ಪರಿವೇಷವಾದ ರವಿಯಂತೆ ಕಡು
ಗಡಲ ಕಡೆವಂದು ದಿವಿಜಾಸುರರ ಪಡೆಯ ಪಡಲಿಡೆ ಕೆಡಪಿ ಮೂಲೋಕವ
ಸುಡುವ ಹೊಸವಿಷದುರಿಯ ನಡುವಿರ್ದ ಮೃಡನಂತೆ
ಬಿಡದಡಸಿ ಸುರುಚಿರಜ್ಞಾನಪ್ರಭಾಳಿ ಕವಿ
ದಡಸಿ ಮುತ್ತಿರ್ದ ಪರಮಾತ್ಮನಂತಿರ್ದನವನಿಪನುರಿಯ ದಾಳಿಯೊಳಗೆ         ೧೨

ಮುಟ್ಟಿ ಕಾಶಿಯನು ಹೊಕ್ಕವನಲ್ಲ ಮುನಿರಿಣವ
ಕೊಟ್ಟಾತನಲ್ಲ ದಾನದ ಭೂಮಿಯಿಂದ ಪೊಱ
ಮಟ್ಟಾತನಲ್ಲಾಯು ತುಂಬಿ ಮಡಿದವನಲ್ಲ ಹೋಹಡಾನೊಬ್ಬನಸುವ
ಬಿಟ್ಟಾತನಲ್ಲ ನಿಜಸತಿಸುತರ್ ಮಂತ್ರಿ ಸಹ
ನಟ್ಟಡವಿಯೊಳಗೆ ದಳ್ಳುರಿಹೊಯ್ದು ದುರ್ಮರಣ
ವಟ್ಟು ಹೋಹಂತಾದುದೇ ಎಂದು ನೃಪತಿ ಮಱುಗುತ್ತ ಮತ್ತಿಂತೆಂದನು      ೧೩

ಧುರಮುಖದೊಳಂತಕನ ಹಸಿವಡಗೆ ಮಾರಿ ಕೆ
ಕ್ಕರಿಸೆ ಬಲುಮೃತ್ಯುವಿನ ಬಾಯ ಬಱನಳಿಯೆ ಭೀ
ಕರಭೂತಭೇತಾಳರುದುಗಲಿಸೆ ಖಡ್ಗವಾಯ್ದಣಿಯೆ ನಿಜಭುಜದ ತೀಂಟೆ
ಹರಿಯೆ ಹಗೆಗಳ ಕೊಂದು ಮುಕ್ತಿವನಿತೆಯ ಪಯೋ
ಧರದ ಮೇಲೊಱಗುವಂತಿಭಮಸ್ತಕದೊಳೊಱಗಿ
ಸುರಪಭೋಗಾಂತರವನೆಯ್ದದಿಂತುರಿಯೊಳಳಿವಂತಾದುದೇ ಎಂದನು         ೧೪

ಕಡಗಿ ಕರ್ಬೊಗೆ ಸುತ್ತಿ ದಳ್ಳುರಿಗಳಲೆದು ಕೆಂ
ಗಿಡಿಗೆದಱಿ ಕೆಂಡಂಗಳಡಸಿ ಸುಡೆ ಮಿಡುಮಿಡನೆ
ಮಿಡುಕಿ ಬಾಯ್ವಿಟ್ಟೊಱಲಿ ಕೆಡೆದೊಡಲು ಮಡಿದು ಕೈಕಾಲ್ ಬೆಂದುಸುಕ್ಕಿಸುಗಿದು
ಮಡದಿ ಸುತರಳಿವುದನು ಕಣ್ಣಾಱ ಕಂಡು ನಾಂ
ಕಡೆಯಲಳಿವುದಱಿಂದ ಮುನ್ನವೀ ಬೇಗೆಯೊಳ
ಗಡಗುವೆಂ ಹಿಡಿಯಬೇಡುಮ್ಮಳಿಸಬೇಡೆಂದು ಮಂತ್ರಿಗಾಡಿದನರಸನು          ೧೫

ಒಡೆಯನಳಿವಂ ಕಾಣ್ಬ ಪಾಪಿಯೆನ್ನಿಂದಾರು
ಕಡೆಯ ನರಕಿಗಳ ಬಳಿಕಳಿದಲ್ಲಿ ಫಲವಾವು
ದೊಡಲುವಿಡಿದಾನೊಮ್ಮೆ ಮಡಿಯದಿಹುದಿಲ್ಲಿಲ್ಲ ಮಡಿಯುತ್ತ ಪತಿಯ ಮುಂದೆ
ಮಡಿದೆನಾದಡೆ ಪುಣ್ಯಕೀರ್ತಿಯುಂಟಾಳ್ ಮುಂದೆ
ನಡೆದಲ್ಲದರಸು ನಡೆವನೆ ಕೆಟ್ಟನುಡಿಗಳಂ
ನುಡಿಯದಿರು ತಂದೆಯೆಂದಾ ಸತ್ಯಕೀರ್ತಿ ಭೂಪಾಲಂಗೆ ಕೈಮುಗಿದನು         ೧೬

ಉತ್ತಮಕುಲೀನನತ್ಯಧಿಕವಿಪ್ರಂ ವೇದ
ವೇತ್ತ ಸರ್ವಾಗಮಜ್ಞಂ ಶೈವನೆಲೆ ನರೆಯ
ಹೊತ್ತವನು ಮನೆಮಕ್ಕಳಂ ಬಿಟ್ಟು ಬೆಂಬಳಿಯ ನಂಬಿ ಬಂದವನು ನಿನ್ನ
ಮುತ್ತುವಗ್ನಿಗೆ ಮುಂದೆ ನೂಕಿ ನರಕಾಳಿಗನಿ
ಮಿತ್ತ ನಡೆದಖಿಳಜಗವಱಿಯಲಪಕೀರ್ತಿಯಂ
ಹೊತ್ತುಕೊಂಬವನಲ್ಲನೀಂ ಮುಂದೆ ಹೋದಡೆನ್ನಾಣೆಯೆಂದಂ ಭೂಪನು    ೧೭

ಭೋಗವಱಿಯದ ತರುಣನಂ ನಿಧಿಗೆ ಕೊಡೆ ತೃಪ್ತ
ನಾಗಿ ತನ್ನಂ ಕೊಡುವುದೆಂಬಾಗಳೆನ್ನನೀ
ಬೇಗೆಗಾಹುತಿಗೊಟ್ಟಡೆನ್ನಿಂದ ತಣಿದು ನಿಮ್ಮೆಲ್ಲರಂ ತಲೆಗಾವುದು
ಬೇಗ ಕಳುಹೆಂಬ ಸುತನಂ ನೋಡಿ ಸಾಮ್ರಾಜ್ಯ
ದಾಗನನುಭವಿಸಬೇಕಳಿಯಬೇಡೆನಲು ಭೂ
ಭಾಗದೊಡೆತನ ಕೌಶಿಕಂಗಾದುದಿನ್ನೇನನಾಳ್ವೆ ಭೂಭುಜ ಎಂದನು  ೧೮

ತವಕದಿಂದುತ್ತಾನಪಾದಭೂಪನ ಮಗಂ
ಧ್ರುವನು ಮಲತಾಯೆನಿಪ್ಪಾ ಸುರುಚಿ ಬಯ್ಯೆ ಹೇ
ವವ ತಾಳ್ದು ಶಿವನ ಮೆಚ್ಚಿಸಿ ಬೇಱೆ ಲೋಕವಂ ಪಡೆದು ಹದಿನಾಲ್ಕು ವಿಧದ
ಭುವನಾಳಿಗಾಧಾರವಾಗನೇ ಮಗನೆ ಬೇ
ಡುವೊಡೀವ ಶಿವನುಂಟು ಪಡೆವ ನೀನುಂಟು ರಾ
ಜ್ಯವನಾಳ್ವ ಭಾಗ್ಯವುಂಟಳಿಯಬೇಡೆಂದು ಭೂಪಂ ಸುತನ ಬೋಧಿಸಿದನು    ೧೯

ತೀದುದೇ ಮಾತು ದಳ್ಳುರಿ ಮಿಕ್ಕುಮೀಱಿ ಬರು
ತೀದುದೆನಗಿತ್ತಿರೇ ಬೆಸನ ನೀವರಸಯೆಂ
ದಾ ದಿವ್ಯಸತಿಗೆಂದನವನಿಪ ಹರಿಶ್ಚಂದ್ರನುಳ್ಳ ಘನಸಿರಿಸಂಪದ
ತೀದ ಕಡೆಯೊಳು ತನ್ನ ಸತಿಸುತರ ಕಾಯ್ದು ತಾಂ
ಹೋದನೆನಿಸದೆ ಪ್ರಾಣಭೀತಿಯಿಂ ಕಡೆಮುತ್ತಿ
ಬೀದಿವರಿವುರಿಗಬಲೆಯಂ ಕೊಟ್ಟನೆಂಬ ಕುಂದಂ ಹೊಱುವನಲ್ಲೆಂದನು        ೨೦

ಮುಳಿದು ಮೊಗೆದೆಲ್ಲರಂ ಕೊಲ್ಲದಿಂದೆನ್ನನೊ
ಬ್ಬಳನೆ ಕೊಂದಪುದೆ ಭೂಭುಜ ನಿಮ್ಮ ಕೂಡೆ ಸರಿ
ಯೊಳು ಜೀವವಂ ಬಿಡುವುದುಚಿತವಲ್ಲಿಂ ಬಳಿಕ ಬಿಡುವುದತ್ಯಧಮತನವು
ಎಳಸಿ ಮುತ್ತೈದೆತನದಲಿ ಮುಂದೆ ಹೋದಪೆಂ
ಕಳುಹಿಕೊಡಬೇಕೆಂದು ಮೈಯಿಕ್ಕಿ ಬೇಡಿಕೊಂ
ಡಳು ಗಂಡನಂ ಚಂದ್ರಮತಿ ಪತಿವ್ರತೆಯರಾನಂದನಿಧಿ ಲಲ್ಲೆಗಱೆದು           ೨೧

ಒಳಗುಕ್ಕುವಳಲ ಹಸರಿಸಿಕೊಳುತ ಹೋಗೆಂದು
ಕಳುಹಿದರಸಂಗೆಱಗಿ ಬೀಳ್ಕೊಳುತ್ತಿರೆ ಕಂಡು
ತಿಳಿದಿದೆಲ್ಲಿಗೆ ಹೋಹೆಯವ್ವ ನಿನ್ನೊಡನೆ ನಾಂಬಪ್ಪೆನೆಂದೆನುತ ನಿಱಿಯ
ಸೆಳೆದಪ್ಪಿ ಬಾಯ್ವಿಡುವ ಸುತನ ಮುಂಡಾಡಿ ಕಂ
ಗಳ ನೀರನೊರಸಿ ಬೇಗದಲಿ ಬಂದಪೆನು ವು
ಮ್ಮಳಿಸದಿರು ಕಂದಯೆಂದೆಂತಕ್ಕೆ ಸಂತೈಸಿ ಪತಿಯ ಕೂಡಿಂತೆಂದಳು ೨೨

ಒಸೆದು ಬೇಡಿತನಿತ್ತು ಸಲುಗೆಯಂ ಸಲಿಸಿ ಮ
ನ್ನಿಸುವ ಪತಿಯೆಂಬ ತೇಜದ ಬಲದಿ ಮಱೆದು ಲೆ
ಕ್ಕಿಸೆನಂಜೆನಿದಿರೇಳನೋಸರಿಸೆನಳುಕೆನೇಕಾಸನದೊಳಿರುತಿಪ್ಪೆನು
ಬೆಸಕ್ಕೆಯೆನುತ್ತರಂಗೊಡುವೆನೊಮ್ಮೊಮ್ಮೆ ದ
ಟ್ಟಿಸುವೆನೆನ್ನಪರಾಧಕೋಟಿಯಂ ಮಱೆದು ಕರು
ಣಿಸು ಭೂಮಿಪಾಲಯೆಂದಡಿಗೆಱಗಿ ಬೀಳ್ಕೊಂಡು ನಿಂದಳಾವುರಿಯಿದಿರೊಳು  ೨೩

ದೆಸೆಗಳಿಗೆ ನಮಿಸಿ ದೈವಕ್ಕೆಱಗಿ ರವಿಗೆ ವಂ
ದಿಸಿ ಕೋಟಿಭವಭವದೊಳೆನಗೀ ಹರಿಶ್ಚಂದ್ರ
ವಸುಧೇಶನೇ ಗಂಡನಾಗಲಿ ದಿಟಂ ಲೋಹಿತಾಶ್ವನೇ ಮಗನಾಗಲಿ
ವಸುಸತ್ಯಕೀರ್ತಿಯೇ ಮಂತ್ರಿಯಾಗಲಿ ತರುಣ
ಶಶಿಮೌಳಿಯೇ ದೈವವಾಗಲೆಮ್ಮಿಳೆಯ ಪಾ
ಲಿಸುವ ವಿಶ್ವಾಮಿತ್ರ ನಿತ್ಯನಾಗಲಿಯೆನುತ ಬೇಡಿಕೊಂಡಿಂತೆಂದಳು  ೨೪

ಪೊಡವೀಶ ಕೇಳುಭಯಕುಲಶುದ್ಧೆಯಲ್ಲದಿ
ರ್ದಡೆ ನಿನ್ನನಲ್ಲದನ್ಯರನು ಲೆಕ್ಕಿಸಿದೆನಾ
ದಡೆ ಹಿಂದೆ ನಿನಗೊಂದನಿಕ್ಕಿ ನಾನೊಂದನುಂಡಡೆ ಮೂಱು ಕರಣವಱಿಯೆ
ಮೃಡನಲ್ಲದನ್ಯದೈವಕ್ಕೆ ನಮಿಸಿದಡೆನ್ನ
ಹೊಡೆದು ಮುಕ್ಕುವುದು ದಾವಾಗ್ನಿ ಮೇಣಲ್ಲದಿ
ರ್ದಡೆ ಬಟ್ಟೆಗೊಟ್ಟಿಪುದು ಕೇಳೆಂದು ಬೊಬ್ಬೆಗೊಡುವಾ ಪೊಳ್ತನೇವೊಗಳ್ವೆನು          ೨೫

ತರುಣಿಯ ಮನಂ ಬೆದಱಬೇಕೆಂದು ನೆಗೆದು ದ
ಳ್ಳುರಿ ಗಗನಮಂ ತೀವಿ ಸುತ್ತಿ ಮುತ್ತಿರೆ ಕಂಡು
ಹರಿದು ಹೊಕ್ಕಳು ಹೊಕ್ಕಳೆಲೆಲೆ ಶಿವಶಿವ ಮಹಾದೇವ ಬಗೆಯದೆ ಹೊಕ್ಕಡೆ
ತರುಣಸೂರ್ಯಂ ಕತ್ತಲೆಯನೆ ಹೊಕ್ಕಂತಾಯ್ತು
ನೆರೆದ ಕೌಶಿಕನ ಕೃತಕಾಗ್ನಿ ಹರೆದೋಡಿ ಭಾ
ಪುರೆ ಬಟ್ಟೆಗೊಟ್ಟುದೆಂಬಾಗಳುತ್ತಮರ ಮುಂದಾವ ಠಕ್ಕಿರಲಾಪುದು          ೨೬

ಸುರರ ಹೂಮಳೆಯ ತಂಪಿಂ ನೆಲನ ಬಿಸಿಯಾಱಿ
ತುರಿಯ ನೆವದಿಂ ಸತಿಯ ಶುಚಿತನವನಱಿದು ಭೂ
ವರನಪ್ಪಿದಂ ಮಂತ್ರಿಯೆಱಗಿದಂ ಪುತ್ರ ನಲಿದಾಡಿದಂ ಸಂತಸದಲಿ
ಹರಕೃಪೆಯೊಳಗ್ನಿಭಯವೆಂತಕ್ಕಿದೊಮ್ಮಿಂಗೆ
ಪರಿಹರಿಸಿತುಗ್ರಮುನಿಗಿತ್ತವಧಿ ಸನಿಹವಾ
ಯ್ತಿರಬಾರದುರವಣಿಸಿ ನಡೆನಡೆಯೆನುತ್ತ ಹರಿತಂದು ವಿಂಧ್ಯವ ಕಳಿದರು      ೨೭

ಹಲವು ನಗರಂಗಳಂ ಹಲವರಣ್ಯಂಗಳಂ
ಹಲವು ಗಿರಿಗಳ ಕಳಿದು ನಡೆತರಲು ಮುಂದೆ ಶತ
ಕಲಿಮಲಕುಲಾಪಕರ್ಷಣೆಯಾನು ವಿಪುಳಪಾತಕಕೋಟಿಕೋಟಿಯೆಂಬ
ಜಲಜವನಚಂದ್ರಕಳೆಯಾನು ಭವಭಯಕುಧರ
ಕುಳಿಶಾಭಿಧಾನೆಯಾನೆಂದು ಧರೆಗಱುಪಲೆಂ
ದುಲಿವಂತೆ ಘುಳುಘುಳುಧ್ವಾನದಿಂದೆಸೆವ ಗಂಗಾನದಿ ವಿರಾಜಿಸಿದಳು          ೨೮

ಘುಳಘುಳಿಸಿ ಕವಿವ ತೆರೆಗಳು ಹಳಚಿ ಕುದಿವ ಮು
ಮ್ಮಳಿಗಡಲು ಮಱುಗಿ ಮಱಹಂ ಮೋದಿ ಮುರಿದಿಳಿವ
ಪೊಳೆವ ಸುಳಿಗಳ ಬಳಗಮಂ ಬಳಸಿ ಭೋರ್ಗರೆದು ಬೊಬ್ಬಿಡುವ ತಳ್ಳಿವೊನಲು
ಸೆಳೆದು ಕೈಯಿಂ ಹೊಯ್ಲ ಹೋರಟೆಯೊಳುಕ್ಕಿ ಮು
ಮ್ಮಳಿಪ ನೊರೆ ಬುದುಬುದವನೊಡೆಗಲಿಸಿ ಕದಡಿ ಕಂ
ಗಳವಟ್ಟ ಲಹರಿಗಳ ಲಗ್ಗೆಯಿಂದಸೆವ ನದಿಯೊಪ್ಪವನದೇವೊಗಳ್ವೆನು        ೨೯

ಬಿಡೆ ಕೇಳ್ದಡಘಹರಂ ನೆನೆಯೆ ಪುಣ್ಯೌಘನುಡಿ
ದಡೆ ಸರ್ವಸಿದ್ಧಿ ಕಂಡಡೆ ಜನ್ಮನಾಶ ಪೊಗ
ಳ್ದಡೆ ಸುರೇಂದ್ರತ್ವ ಸೋಂಕಿದಡೆ ಕಮಲಜಪದವಿ ಮಱೆದೊಮ್ಮೆ ಕುಡಿತಗೊಂಡು
ಕುಡಿದೆನಾದಡೆ ಮುಕ್ತಿಯವಗಾಹವಿರ್ದನಾ
ದಡೆ ಗಣೇಶತ್ವ ಸಾರ್ದಡೆ ಮಹಾರುದ್ರತ್ವ
ವಡೆವರೀ ಗಂಗೆಯಿಂದಾರಾದಡೆಂಬ ಮಹಿಮೆಗೆ ಸಾಕ್ಷಿವೇದಮತವು  ೩೦

ನವಭಂಗಭರಿತೆಯಾಗಿಯು ನತರ ಜನನಭಂ
ಗವನಳಿವಳತ್ಯಧೋಗಮನೆಯಾಗಿಯು ಮುಟ್ಟಿ
ದವರನೆಸೆವೂರ್ಧ್ವಗಮನರ ಮಾಳ್ಪಳಾವಗಂ ಪ್ರತಿಕೂಲೆಯೆಂದೆನಿಸಿಯು
ಸವಿದರ್ಗೆ ಪುಣ್ಯಾನುಕೂಲೆಯಪ್ಪಳು ಘನೋ
ದ್ಭವದ ವಿಷದೇಹಿಯಾಗಿಯು ಜನಕ್ಕಮೃತದೇ
ಹವನೀವಳಾಹಾ ವಿರುದ್ಧಸ್ವಭಾವೆ ಗಂಗಾನದಿ ಧರಾತಳದೊಳು    ೩೧

ಭವಭಯಾಂಬುಧಿಯನುತ್ತರಿಸುವಂತುತ್ತರಿಸಿ
ಯವಗಾಹಮಿರ್ದುಂ ಕೃತಾರ್ಥತೆಯನೆಯ್ದುತಿ
ಪ್ಪವರನೀಕ್ಷಿಸಿ ಗಂಗೆ ಹೆಚ್ಚಿದಳು ನರಕಿಗಳು ತನ್ನೊಳಗೆ ತೊಳೆದ ದೋಷ
ತವಿಲಾದುದಿಂದು ಪತಿಹಿತವೆಯಹ ಸುದತಿಯನೃ
ತವನಱಿಯದವನೀಶನುಭಯಕುಲಶುದ್ಧನಹ
ಕುವರನೀ ಸ್ವಾಮಿಹಿತವನಹ ಮಂತ್ರಿಯ ಸೋಂಕು ತನಗೆ ಕೈಸಾರ್ದುದೆಂದು  ೩೨

ಮರುಜೇವಣಿಯನು ಸವಿದಮೃತಮಂ ಕುಡಿದಂತೆ
ಸುರಕುಜವ ಸಾರ್ದು ಪರುಷವ ಮಲಗಿದಂತೆ ಗುರು
ಕರುಣವಂ ಪಡೆದು ಲಿಂಗವಂಪಿಡಿದಂತೆ ನೆನೆವವರ ದುರಿತಾರಣ್ಯವ
ಉರುಹಲು ಸಮರ್ಥೆಯಹ ಗಂಗೆಯೊಳು ಮಿಂದು ಭಾ
ಸುರವಾರಣಾಸಿಯಂ ಹೊಕ್ಕನುತ್ತಮನೃಪಂ
ಪರಮಪ್ರಸಾದದೊಲವಿಂದ ಸದ್ಭಕ್ತನುದರವನು ಪೊಗುವಂತಾಗಳು           ೩೩

ದುರಿತವಿಘಟನೆ ತೇಜದಿಂ ಸೂರ್ಯವೀಧಿಗಳು
ವರಕೀರ್ತಿ ಬೆಳುದಿಂಗಳಿಂ ಸೋಮವೀಧಿಗಳು
ತರವಿಡಿದು ಸಾಲ್ವಿಡಿದು ಸರಿಸವಿಡಿದೋರಣಂಬಿಡಿದು ಪರಿಪಂತಿವಿಡಿದು
ಭರಿತ ಹೊಂಗಳಸಂಗಳಿಂ ಸುಧಾಭಿತ್ತಿಗಳ
ಪರಿವಿಡಿಗಳಿಂದುಭಯ ವೀಧಿಗಳು ಮೆಱೆದವೀ
ಶ್ವರವಿಶ್ವಪತಿಯ ನಿಳಯದ ವಳಯಮಂ ಬಳಸಿ ತಳತಳಿಸಿ ಹೊಳೆಹೊಳೆವುತ ೩೪

ನಡೆಯೂಡೆ ಮದ್ದು ವಿಷವೊಡಲಿಂಗೆ ಹಿತವೆಂಬ
ನುಡಿಯಂತೆ ಸುಖವಿಲ್ಲ ಪುಣ್ಯವುಂಟುಳಿದ ಹಲ
ವೆಡೆಯ ಸುಕ್ಷೇತ್ರಂಗಳೊಳಗವಱ ಪರಿಯಲ್ಲ ಸುಖವುಂಟು ಪುಣ್ಯವುಂಟು
ಕುಡಿವ ಪಾದೋದಕಂ ಪನ್ನೀರ ಪಾನವಾ
ದಡೆ ಧರಿಸುವ ಪ್ರಸಾದಂ ಸುಧಾಪಿಂಡವಾ
ದಡೆ ಬಿಡುವರಾರೆನಿಪ್ಪಂತೆ ಜನದಿಹಪರಕೆ ಸೊಗಸು ಕಾಶೀಕ್ಷೇತ್ರವು  ೩೫

ಕ್ಷಾಮ ಡಾಮರ ಕಾಲಲೀಲೆ ಕರ್ಮಾಧರ್ಮ
ವಾಮಯಸ್ತೋಮ ಮಾಯೋಪಾಯ ಪಾಪ ತಾ
ಪಾಮೋದ ಮದನನ ಮದಂ ಭೂತಖ್ಯಾತಿಹುಗಲಾಱವಿಂತೀಗಳೆಂಬ
ಸಾಮರ್ಥ್ಯಮಂ ಹೇಱಿ ಮೀಱಿ ರುದ್ರಂಗೆ ವಿ
ಶ್ರಾಮಸ್ಥಲಾವಾಸವೆನಿಸಿ ರಾಜಿಸುವ ನಾ
ನಾ ಮಹಿಮೆಯಿಂದೆಸೆವ ಕಾಶಿಯ ವಿಶೇಷಮಂ ನೋಡುತರಸಂ ನಡೆದನು      ೩೬

ಬಗೆಯುತ್ತ ಬರಬರಲು ಮುಂದೆ ಮುಸುಕಿದ ಪತಾ
ಕೆಗಳ ತಣ್ಣೆಳಲ ತಂಪಿನ ನಡುವೆ ಕಾಣಲಾ
ಯ್ತಗಜಾಧಿಪತಿ ವಿಶ್ವಪತಿಯ ನಿಳಯದ ಕಳಸ ಕಣ್ಗೆ ಮಂಗಳವಾಗಲು
ಅಗಣಿತ ಸ್ವರ್ಗದೊಳು ಢಾಳಿಸುವ ಹಲವು ಚಮ
ರಿಗಳ ಮಧ್ಯದೊಳೋಲಗಂಗೊಟ್ಟು ಕುಳ್ಳಿರ್ದ
ವಿಗತಮುಕ್ತ್ಯಂಗನೆಯ ಮಸ್ತಕದ ಮಣಿಮಕುಟದಗ್ರವೋ ಎಂಬಂತಿರೆ           ೩೭

ಮದನಹರ ವಿಶ್ವಪತಿಗೆಣೆಯಪ್ಪ ದೈವವೀ
ಹದಿನಾಲ್ಕು ಲೋಕದೊಳಗಿಲ್ಲೆಂದು ಪೇಳಲೆ
ತ್ತಿದ ಹಸ್ತವೋ ಪಾತಕಂಗಳಂ ಮಾಡಿ ಬೆಂಗೊಟ್ಟೋಡಿಬಂದವರ್ಗಳ
ಹೆದಱಬೇಡೆಂದೆತ್ತಿದಭಯಹಸ್ತವೊ ಪುಣ್ಯ
ಪದವಿಗಳ ಬೇಹವರು ಬಹುದೆಂದು ಕರೆಯಲೆ
ತ್ತಿದ ಹಸ್ತವೋ ಎನಿಪ್ಪಂತೆ ಗಳೆಗಳ ಘನವ್ಯಾಸಹಸ್ತಂ ಮೆಱೆದುದು            ೩೮

ಮುಗಿಲ ಬಸುಱಂ ಬಗಿದು ನೆಗೆದೊಗೆದು ಮೀಱಿ ಮೆಱೆ
ವಗಣಿತವೃಷಧ್ವಜಂಗಳ ಸೂರ್ಯಕೋಟಿಯಂ
ತೆಗೆದವೆಂಬಂತೆ ಮಾರ್ಪೊಳೆವ ಹೊಂಗಳಸಂಗಳೆಸೆವ ಶಿವನಿಳಯಂಗಳ
ಸೊಗಸಿಗೆಡೆಯಾಡಿಯಾಡುತ ಪಾಡುತೆಯ್ತಪ್ಪ
ಪೊಗಳಿಪೊಡೆಮಡುವ ಬಲಗೊಂಬ ನೋಡುವ ನಲಿವ
ನಗುವ ನಾನಾಜನವನೊತ್ತರಿಸಿ ನಡೆತಂದು ವಿಶ್ವಪತಿಯಂ ಕಂಡನು ೩೯

ಜಯ ಜನಾರ್ದನ ವಂದ್ಯ ಜಯ ಜಲಜಭವ ಪೂಜ್ಯ
ಜಯ ಜಂಭರಿಪುನಾಥ ಜಯ ಪೂಜನಾತೀತ
ಜಯ ಜಾತವೇದಾಕ್ಷ ಜಯ ಜಾಹ್ನವೀಮಕುಟ ಜಯ ಜರಾಮರಣದೂರ
ಜಯಜಯ ಜಿತಾನಂಗ ಜಯಜಯ ಜಗತ್ರಾಣ
ಜಯಜಯ ಜಿನಾರಾತಿ ಜಯಜಯ ಜಯಾವರಣ
ಜಯಯೆಂದು ಪೊಗಳುತಿಹ ಜೋಕೆಯಿಂ ಮೆಱೆವ ಜಗದೀಶನಂ ನಿಟ್ಟಿಸಿದನು            ೪೦

ನೋಡಿ ಪರಮಾನಂದ ಮೂಡಿ ಸುಖರಸದೊಳೋ
ಲಾಡಿ ಕೀರ್ತಿಸಿ ಹರಸಿ ಹಾಡಿ ಸದ್ಭಕ್ತಿಯಿಂ
ಬೇಡಿ ಮನದೊಳಗೆ ಮಾತಾಡಿ ನೆಱೆ ಬಿನ್ನಹಂ ಮಾಡಿ ಪ್ರಸಾದಫಲವ
ಸೂಡಿ ಪರಿಣಾಮವಂ ಮಾಡಿ ದುಸ್ಥಿತಿಯನೀ
ಡಾಡಿ ಭವಜಲವನೀಸಾಡಿ ಬಲ್ಪಿಂ ಮನಂ
ಮೂಡಿ ಬೀಳ್ಕೊಂಡು ಸಂತಸದಿ ಮರಳಿದನುಳಿದ ಲಿಂಗಂಗಳಂ ನೋಡುತ      ೪೧

ಹಿಂದೆ ಪರ್ವತರ ನಾರದರ ಪ್ರಾಯಶ್ಚಿತ್ತ
ದಿಂದ ಹುಟ್ಟಿದ ಕದನದೊಳು ವಿಚಾರಿಸದೆ ಮುನಿ
ಸಿಂದ ಕಾಶೀಪುರಂ ನೆಱೆ ನರಕಭೂಮಿಯಾಗಲಿ ಎಂದು ಶಾಪವಿತ್ತ
ಕುಂದಿಂಗೆ ಹೇವರಿಸಿ ದುರ್ವಾಸಮುನಿ ತವಕ
ದಿಂದ ಚಂದ್ರಾವತಂಸನನುಪಾರ್ಚಿಸಿ ಭಕ್ತಿ
ಯಿಂದ ಪ್ರತಿಷ್ಠೆಗೆಯ್ದಿರ್ದ ಕಾಮೇಶನಂ ಕಂಡನು ಹರಿಶ್ಚಂದ್ರನು    ೪೨

ಅವಾವ ಪಾತಕಿಗಳಾದಡಂ ಕಾಶಿಯೊಳು
ಸಾವುದು ತಡಂ ಲಿಂಗವಹರೆಂದು ಪೇಳಲಂ
ದೋವಿ ಸನ್ಯಾಸಿಯೊಬ್ಬಂ ದೀವನರಸಿಯಂ ಹೋಗುತಿರ್ದೊಮ್ಮೆ ಬಂದ
ಗಾವಳಿಗೆ ಹೆದಱಿ ಱಂಜಣಿಗೆಯೊಳಗಡಗಲಾ
ದೀವನಱಿಯದೆ ಸುರಿದ ಸುರೆಯಿಂದ ಸತ್ತವಂ
ಭಾವಿಸಲು ಲಿಂಗವಾದ ವಿಭಾಂಡೇಶನಂ ಕಂಡನಂದವನೀಶನು        ೪೩

ಕಡೆಗಾಲದೊಳು ಜಗವ ಮೊಗೆದು ದಹಿಸುವ ಮೃಡನ
ನಡುಗಣ್ಣ ಬೆಂಕಿಯಿಂದೊಗೆದು ನೆಗೆದೆಯ್ದೆ ಘುಡು
ಘುಡಿಸಿ ವೀರೇಶ್ವರಂ ನೆರೆದ ದೇವರ ಹಿಂಡನಂಡೆಲೆದು ಮೊದಲಿಗರನು
ಹುಡಿಗುಟ್ಟೆ ಕಂಡು ಮದವಾಱಿ ಹವ್ವನೆ ಹಾಱಿ
ನಡುಗಿ ಶಿವನಿಲ್ಲದಧ್ವರವ ಮಾಡಿದ ದೋಷ
ವಡಗಬೇಕೆಂದು ದಕ್ಷಂ ಪ್ರತಿಷ್ಠಿಸಿದ ದಕ್ಷೇಶ್ವರನನೀಕ್ಷಿಸಿದನು          ೪೪

ಗಡಿಗೆಟ್ಟ ಲಿಂಗಂಗಳೊಪ್ಪಕ್ಕೆ ಭೋಗಂಗ
ಳಡಕಕ್ಕೆ ಮಂಗಳದ ಮಸಕಕ್ಕೆ ರಚನೆಗಳ
ಸಡಗರಕೆ ಬೆಱಗಾಗುತೆಲ್ಲಾ ನಿರೋಧಮಂ ಮಱೆದು ನೋಡುತ್ತರಸನು
ನಡೆಯುತಿರಲಿದಿರೆದ್ದು ಮಾರಿಯಂದದಿ ಬಂದು
ಕೊಡು ಹೊನ್ನನಿನ್ನು ತಳುವಿದಡೆನ್ನ ಪತಿಯೆನಗೆ
ಕಡುಮುಳಿವನೆಂದು ಜಱೆಯುತ್ತ ನಕ್ಷತ್ರಕಂ ತುಡುಕಿ ಸೆಱಗಂ ಪಿಡಿದನು         ೪೫

ತಪ್ಪದೀ ಪರಿಯೊಳೆಲ್ಲಾ ದೇವರಂ ನೋಡು
ತಿಪ್ಪೆನೆನಲೊಂದು ಮಾಸಂ ನೆಱೆಯದಿಲ್ಲಿಗೈ
ತಪ್ಪನ್ನೆಗಂ ಸೈರಿಸಿದೆನುನೀನೆನಗೆ ಕೊಟ್ಟವಧಿಯಿಂದಿನ ದಿನದಲಿ
ಒಪ್ಪೆ ಸಂದಪುದೀಗ ಕೊಡು ಹೊನ್ನನಲ್ಲದೊಡೆ
ಮುಪ್ಪಹುದು ನಿನ್ನ ಸತ್ಯಕ್ಕೆಂದು ನೂಕಿ ತಂ
ದುಪ್ಪರದ ಬಿಱುವಿಸಿಲ ಬೀದಿಯೊಳು ತಗೆದನವನನಿಬರಂ ನಿಷ್ಕರುಣನು      ೪೬