ಸೂಚನೆ
ಮುನಿ ಕೌಶಿಕಂಗಯೋಧ್ಯೆಯನಿತ್ತು ತಾನೀವ
ಧನಕೆ ತೆಱಕಾಱನಂ ಕೊಂಡು ಬಳಿವಿಡಿದ ಪುರ
ಜನವನುಱೆ ನಿಲಿಸಿ ಕಾನನಕೆ ನಡೆದಂ ಸತ್ಯನಿಧಿ ನೃಪಹರಿಶ್ಚಂದ್ರನು

ಬಾಡಿದ ಮೊಗಂ ಬಱತ ಬಾಯ್ ಸುರಿವ ನಯನಾಂಬು
ಪಾಡಳಿದ ಮತಿ ನೀಡಿ ಬೆಳೆದ ಸುಯ್ ದುಗುಡವ
ಕ್ಕಾಡುವಂಗಂ ನಿರೋಧಾಗ್ನಿಯಿಂ ಕುದಿದು ಮಱುಗುವ ಮನಂ ಮಾಸಿದ ಮುದಂ
ಕೂಡೆ ಬಂದಖಿಳಪರಿವಾರಮಂ ಸತಿಯರಂ
ನಾಡೆ ಚತುರಂಗಬಲಮಂ ಪುರಜನಂಗಳಂ
ನೋಡಿ ತೋಱಿಸಿಬೇಱೆವೇಱೊಪ್ಪುಗೊಡುತಿರ್ದನಾ ಧೈರ್ಯನಿಧಿ ಭೂಪನು           ೧

ಸಿರಿಮುಡಿಯ ಹಡಪದಾರತಿಯ ಸೀಗುರಿಯ ಚಾ
ಮರದ ಮಜ್ಜನದ ಹಂತಿಗಳ ಪಡಿಸಣದ ಸಿಂ
ಗರದ ಗಂಧದ ಯಕ್ಷಕರ್ದಮದ ಕನ್ನಡಿಯ ಬಿಜ್ಜಣದ ಸಮಕಟ್ಟಿನ
ಸರಸದ ವಿನೋದದ ವಿಳಾಸದ ವಿಚಾರದಾ
ಭರಣದೊಡ್ಡಿನ ಬಹುನಿಯೋಗಕಾತಿಯರೆನಿಪ
ತರುಣಿಯರನೊಪ್ಪಿಸಿದನಂದು ವಿಶ್ವಾಮಿತ್ರಮುನಿಗೆ ಸತ್ಯರ ದೇವನು          ೨

ಇದು ರತ್ನಭಂಡಾರವಿದು ಹೇಮಭಂಡಾರ
ವಿದು ಸುನಾಣೆಯ ವರ್ಗವಿದು ಪಟ್ಟಕರ್ಮಕುಲ
ವಿದು ಬೆಳ್ಳಿಯುಗ್ರಾಣವಿದು ಕಂಚಿನುಗ್ರಾಣವಿದು ಸರ್ವಶಸ್ತ್ರಶಾಲೆ
ಇದು ಹಸ್ತಿಸಂದೋಹವಿದು ತುರಗಸಂತಾನ
ವಿದು ವರೂಥಪ್ರಕರವಿದು ಪದಾತಿವ್ರಾತ
ವಿದ ನೋಡಿಕೋಯೆನುತ್ತೊಪ್ಪಿಸಿದನಾ ಮುನಿಗೆ ಭೂನಾಥಕಂದರ್ಪನು        ೩

ಹಿರಿಯ ಬಿರುದಿನ ಮುದ್ರೆಯಿದು ನಗರವಿದು ಪೂರ್ವ
ದರಮನೆಯಿದಖಿಳಪರಿವಾರವಿದು ಸಿವುಡಿಯಿದು
ಕರಣವಿದು ಮೇಲುಳ್ಳ ಸರ್ವಸ್ವವಿದು ನೋಡಿಕೋ ಮಹಾಪುರುಷ ಎಂದು
ವರಕೌಶಿಕಂಗೊಪ್ಪುಗೊಟ್ಟೆಲ್ಲ ಸಂದುದೇ
ಪರಿಣಾಮವೇ ಇನ್ನು ಹೋಹೆನೇ ಮುನಿನಾಥ
ಕರುಣಿಸಿದಿರೇ ಎಂದು ವೊಡೆವಂಟು ಹೋಹರಸನೊಡನೆದ್ದನಾ ಮುನಿಪನು  ೪

ಪೊಱಮಡುವ ಭೂಪಾಲನಂ ಕಂಡು ಕಂಗೆಟ್ಟು
ಮಱುಗಿ ಬಸುಱಂ ಹೊಸೆದು ಬಸವಳಿದು ಬಿಸುಸುಯ್ದು
ಮೊಱೆಯಿಟ್ಟು ಬಾಯ್ವಿಟ್ಟು ಕೈನೀಡಿ ಕರೆದು ಕಟ್ಟೊಱಲಿ ಸೈರಿಸಲಾಱದೆ
ನೆಱೆ ನಿನ್ನ ನಂಬಿ ನಚ್ಚಿರ್ದ ಪರಿವಾರಮಂ
ಮಱೆದೆಯೋ ತೊಱೆದೆಯೋ ಮಾಱಿದೆಯೊ ಪೇಳು ನೇ
ಸಱಗುಲಜ ಎಂದೆಂದು ನುಡಿನುಡಿದು ಮಿಡುಮಿಡನೆ ಮಿಡುಕಿತ್ತು ಪೌರಜನವು            ೫

ದಂತಿಯಿಂದಿಳಿದು ನಡೆದಱಿಯದವ ಬಱಿಗಾಲೊ
ಳೆಂತಡಿಯನಿಡುವೆ ಹಾಸಿನೊಳು ಪವಡಿಸುವಾತ
ನೆಂತು ಕಲುನೆಲದೊಳೊಱಗುವೆ ಸಿತಚ್ಛತ್ರ ತಂಪಿನೊಳು ಬಪ್ಪಾತ ನೀನು
ಎಂತು ಬಿಱುಬಿಸಿಲನಾನುವೆ ಪುರದೊಳಿಪ್ಪಾತ
ನೆಂತರಣ್ಯದೊಳಿಪ್ಪೆ ಜನವನಗಲ್ದಱಿಯದವ
ನೆಂತು ಪೇಳೇಕಾಕಿಯಾಗಿಪ್ಪೆ ಎಂದು ಮೊಱೆಯಿಟ್ಟುದು ಸಮಸ್ತಜನವು       ೬

ಹೊಱಗೆ ದಾನವ ಬೇಡಿದವರುಂಟೆ ಕೊಟ್ಟು ಬೇ
ಸಱದ ಮುಗುದರಸು ದೊರಕಿದನಲೇ ಎಂದು ಕ
ಟ್ಟಱೆಗಂಡಪಾಪಿ ನಿಷ್ಕರುಣಿ ನಿರ್ದಯ ಮೂರ್ಖ ನೀಚ ನೀರಸ ನಿರ್ಗುಣ
ನೆಱೆ ಕೊಂದೆ ನಂಬಿ ನಚ್ಚಿರ್ದರೆಮ್ಮೊಡಲೊಳ
ಳ್ಳಿಱಿವುತಿಪ್ಪಳಲ ಬೇಗೆಯ ಬೆಂಕಿಯುರಿ ನಿನ್ನ
ನಿಱಿಯದೇ ಹೇಳು ವಿಶ್ವಾಮೃತ್ಯುವಾದೆ ವಿಶ್ವಾಮಿತ್ರ ಎನುತಿರ್ದರು          ೭

ಜಡೆಗಳೆದು ಮಕುಟಮಂ ನಾರಸೀರೆಯನು ತೊಱೆ
ದುಡಿಗೆಯಂ ರುದ್ರಾಕ್ಷಮಾಲೆಯಂ ಕಳೆದು ಮಣಿ
ದೊಡಿಗೆಯಂ ಕಂದಮೂಲವನು ಬಿಟ್ಟೂಟಮಂ ದರ್ಭೆಯಂ ಬಿಟ್ಟಸಿಯನು
ಅಡವಿಯಂ ಬಿಟ್ಟು ನಗರಿಯ ಭಸಿತಮಂ ಬಿಟ್ಟು
ಕಡುಸುಗಂಧಂಗಳ ಜೀತೇಂದ್ರಿಯತ್ವವ ಬಿಟ್ಟು
ಮಡದಿಯರ ಜಗವಱಿಯೆ ಕೂಡಲು ವ್ರತಕ್ಕೆ ಮುಪ್ಪಾಯ್ತೆ ಮುಪ್ಪಿನೊಳೆಂದರು       ೮

ಮಲೆತು ಬೆನ್ನಟ್ಟುವ ಮಹಾರಿಷಡ್ವರ್ಗಮಂ
ಗೆಲಲಱಿಯದವನಾವ ಹಗೆಗಳಂ ಗೆಲುವೆ ನಿ
ನ್ನೊಳಗೆ ಕರಣವ ಸಂತವಿಡಲಱಿಯದವನಾವ ದೇಶಮಂ ಸಂತವಿಡುವೆ
ಸಲೆ ತಪಸ್ತೇಜದಿಂ ಪುರುಷಾರ್ಥಕೋಶಮಂ
ಬಳಸಲಱಿಯದನಾವ ತೇಜದಿಂ ಕೋಶಮಂ
ಬಳಸಿದಪೆ ಕಂಗೆಟ್ಟು ಕಡುಪಾಪಿ ಮೂರ್ಖ ಕೌಶಿಕ ಕೇಳು ಕೇಳೆಂದರು            ೯

ಪುರದ ಪುಣ್ಯಂ ಪುರುಷರೂಪಿಂದೆ ಪೋಗುತಿದೆ
ಪರಿಜನದ ಭಾಗ್ಯವಡವಿಗೆ ನಡೆಯುತಿದೆ ಸಪ್ತ
ಶರಧಿಪರಿವೃತಧರೆಯ ಸಿರಿಯ ಸೊಬಗಜ್ಞಾತವಾಸಕ್ಕೆ ಪೋಗುತಿದೆಕೋ
ಎರೆವ ದೀನಾನಾಥರಾನಂದವಡಗುತಿದೆ
ವರಮುನೀಂದ್ರರ ಯಾಗರಕ್ಷೆ ಬಲವಳಿಯುತಿದೆ
ನಿರುತವೆಂದೊಂದಾಗಿ ಬಂದು ಸಂದಿಸಿ ನಿಂದ ಮಂದಿ ನೆಱೆ ಮೊಱೆಯಿಟ್ಟುದು            ೧೦

ವಸುಧೆ ಬಾಯ್ವಿಡೆ ದೆಸೆಗಳಸವಳಿದು ಮಱುಗೆ ನಿ
ಟ್ಟಸಲಾಱದಂಬರಂ ಕಂಬನಿಯನುಗಳೆ ಶೋ
ಕಿಸುವ ಪರಿಜನದಳಲನಾಱಿಸುತ ಪಾಲಿಸುತ ಸರದೋಱಿ ಸಂತವಿಡುತ
ಮಸಗಿ ಪುರಮಂ ಮೀಱಿ ಹೋಗುತ್ತ ಹಿಂದೆ ಸಂ
ದಿಸಿ ಬಪ್ಪ ಕೌಶಿಕನ ಕಂಡು ನಿಂದವನೀಶ
ನೊಸೆದು ನಿಲಿಸುವ ಭರದೊಳೊಂದೆರಡು ಮಾತನಾಡಿದನದೇವಣ್ಣಿಸುವೆನು  ೧೧

ಹಿಂದೆ ರಾಜ್ಯಂಗೆಯ್ವ ಗರ್ವದಿಂ ಹೊಲತಿಯರ
ತಂದು ಕುಲಮಂ ಕೆಡಿಸಲಾಱದಳಲಿಂ ನಿಮ್ಮ
ನೊಂದೊಂದನೆಂದು ದಟ್ಟಸಿ ಜಱೆದು ಮಾಱುತ್ತರಂಗೊಟ್ಟು ಕೆಟ್ಟುನುಡಿದು
ನಿಂದೆಗೆಯ್ದೆನ್ಯಾಯಿ ಪಾಪಿ ಚಂಡಾಲನೆ
ನ್ನಿಂದಧಮರಿಲ್ಲಯ್ಯ ಸರ್ವಾಪರಾಧಿಯಾಂ
ತಂದೆ ಕರುಣಂಗೆಡದಿರೆಂದು ಮುನಿಯಂ ಬೇಡಿಕೊಂಡನು ಹರಿಶ್ಚಂದ್ರನು       ೧೨

ಮನದೊಳಗೆ ಮಱುಗದಿರಿ ಚಿಂತಿಸದಿರಳಲದಿರಿ
ಮುನಿಯದಿರಿ ನೋಯದಿರಿ ಧೃತಿಗೆಡದಿರೀಗಳೆರ
ಡನೆಯ ಶಿವನೆನಿಪ ಕೌಶಿಕನೊಡೆಯನಾದನಾತನ ಪಾದಪಂಕಜಕ್ಕೆ
ಎನಗೆ ಬೆಸಕೈವಂತೆ ಬೆಸಕೈವುದಂಜುವುದು
ವಿನಯಮಂ ನುಡಿವುದೋಲೈಸುತಿಹುದೆಂದು ಪರಿ
ಜನಕೆ ಕೈಮುಗಿದೆಯ್ದೆ ಬೇಡಿಕೊಂಡು ಧೈರ್ಯನಿಧಿ ಹರಿಶ್ಚಂದ್ರನೃಪನು       ೧೩

ಧರೆಗಧಿಕವೆನಿಪ ರವಿವಂಶದಿಕ್ಷ್ವಾಕು ಭೂ
ವರನು ಮೊದಲನ್ವಯಾಗತವಾಗಿ ಬಂದುದೀ
ಪರಿವಾರವೀ ದೇಶವೀ ನಗರವಿಂದುತನಕಾವೆಡರು ಬಡತನವನು
ನೆರೆದಱಿಯದಯ್ಯ ನೀವಿನ್ನಿದಂ ರಕ್ಷಿಪುದು
ಹೊರೆವುದಿನಿತಂ ಬೇಡಿ ಪಡೆದೆ ನಾ ನಿಮ್ಮಲ್ಲಿ
ಕರುಣಿಸೆನಗೆಂದು ಕೈಮುಗಿದು ಮುನಿಗಪ್ಪಯಿಸಿ ಕೊಟ್ಟನು ಹರಿಶ್ಚಂದ್ರನು  ೧೪

ಒಸೆದೀವ ತೆಱಕಾಱನಾರಾತನಂ ನಿಯಾ
ಮಿಸು ತಂದೆ ಎನೆ ತನ್ನ ಶಿಷ್ಯಾಳಿಯೊಳು ನೋಡಿ
ಹುಸಿಯಸೂಯಾ ನೀಚವೃತ್ತಿ ನಿರ್ದಾಕ್ಷಿಣ್ಯ ನಿಷ್ಕರುಣ ನೀತಿಗಳಲಿ
ಹೆಸರುಳ್ಳ ಹಿರಿಯ ನಕ್ಷತ್ರಕನೆನಿಪ್ಪ ಮಾ
ನಸನೆಕೆಕ್ಕಟ್ಟಿಗರೆದು ಕೈವಿಡಿದು ಕಿವಿಯೊಡ್ಡಿ
ವಸುಧಾಧಿಪತಿಯ ಬಳಿವಿಡಿದು ಕಳುಹಲು ಬುದ್ಧಿಗಲಿಸಿದನದೇವೊಗಳ್ವೆನು  ೧೫

ಕೊಡುವೊಡವೆ ಬರಲಿ ಬಾರದೆ ಕೆಡಲಿ ಕಾನನದ
ನಡುವೆ ತಗಹಿನಲಿರಿಸಿ ಕೆಲವುದಿನವುಪವಾಸ
ಬಡಿಸಿರ್ದು ಕೆಲವುದಿನ ದೇಹವನುವಲ್ಲೆಂದು ನೆವವೊಡ್ಡಿ ಕೆಲವುದಿವಸ
ನಡೆವಾಗ ದಾರಿದಪ್ಪಿಸಿ ತರುಹಿ ಕೆಲವುದಿನ
ಪಡಿಯ ಬೀಯಕ್ಕಾಣೆಯಿಟ್ಟಿಂತು ಕೆಲವುದಿನ
ಕೆಡಸಿ ನುಡಿದವಧಿಯಾಯ್ತೆಂದು ಧರೆಯಱಿಯೆ ನೃಪನಂ ಹುಸಿಕನೆನಿಸೆಂದನು ೧೬

ಕರುಣಿಸದಿರನುಗೊಡದಿರಗಲದಿರು ಅನುಸರಿಸ
ದಿರು ಬಟ್ಟೆಯೂಱಲೆಡೆಗೆಯ್ಯದಿರು ಕಡೆಗಾವ
ಪರಿಯೊಳಾವಾವ ನಿಗ್ರಹನಿರೋಧಾಯಾಸವಡಸುವಂದದಿ ಮಾಳ್ಪುದು
ಗುರುಭಕ್ತನಾದಡತಿಬುದ್ಧಿಯುಳ್ಳವನಾದ
ಡರಸನಂ ಕೆಡಿಸಿ ಹುಸಿತೋಱೆಂದಡೆನಗವಂ
ತೆರಳುವವನೇ ದೇವ ಎನೆ ನೆವಕೆ ನೀನಿರಾಂ ಬಂದು ಕಾಡುವೆನೆಂದನು ೧೭

ಬಿಸಿಲಾಗಿ ಬಿಱುಗಾಳಿಯಾಗಿ ಕಲುನೆಲನಾಗಿ
ವಿಷಮಾಗ್ನಿಯಾಗಿ ನಾನಾಕ್ರೂರಮೃಗವಾಗಿ
ಮಸಗಿ ಘೋರಾರಣ್ಯವಾಗಿ ಗರ್ಜಿಸಿ ಕವಿವ ಭೂತಬೇತಾಳರಾಗಿ
ಹಸಿವು ನೀರಡಿಕೆ ನಿದ್ರಾಲಸ್ಯವಾಗಿ ಸಂ
ದಿಸಿ ಹೋಗಿ ಹೊಕ್ಕಲ್ಲಿ ಹೊಕ್ಕು ಧಾವತಿಗೊಳಿಸಿ
ಹುಸಿಗೆ ಹೂಂಕೊಳಿಸುವೆಂ ಭೂಭುಜನನೆನ್ನಿಂದ ಬಲ್ಲಿದರದಾರೆಂದನು        ೧೮

ಬೇಱೊಬ್ಬನಲ್ಲೀತನೀ ಬಂದನಾಯಾಸ
ಕಾಱನತಿಗರುವನತಿಸುಖಿಯೇನನೆಂದುದಂ
ಮೀಱದೀವುದು ಧನವನರಸ ಹೋಗೆಂದ ಮುನಿವರನ ಚರಣಕ್ಕೆ ನಮಿಸಿ
ನೀಱೆ ಸತಿಸುತಮಂತ್ರಿವೆರಸಿ ರಿಪುಬಲಸೂಱೆ
ಕಾಱನೊಲವಿಂ ತಿರುಗಿ ನಡೆವಾಗ ಮಂದಿ ಬಾ
ಯಾಱುತ್ತ ಚೀಱುತ್ತ ಗೋಳಿಡುತ್ತಳುತೆದ್ದು ನಡೆದುದೇವಣ್ಣಿಸುವೆನು        ೧೯

ತಡೆಬಿಟ್ಟ ಕಂಬನಿಯ ಕೈಯಿಂದ ಮುಂಗಾಣ
ದೆಡಹುತ್ತ ತಾಗುತ್ತ ಬೀಳುತೇಳುತ್ತೊಱಲು
ತೊಡವರ್ಪ ಪರಿವಾರಮಂ ಕಂಡು ಕೈಯೆತ್ತಿ ಹೋ ಎಂದು ನಿಲಿಸಿ ನೃಪನು
ಕಡೆಗೆನ್ನ ಸತ್ಯಕ್ಕೆ ಹಿತವರಾದವರ್ಗಳಿ
ದ್ದೆಡೆಯೊಳಿದ್ದೆನ್ನ ಲೇಸಂ ಬಯಸುತಿಹುದು ಬಂ
ದಡೆ ತ್ರಿಶಂಕುನರೇಂದ್ರನಾಣೆಯೆನೆ ಮೀಱಿದೆವು ಬಂದಲ್ಲದಿರೆವೆಂದರು         ೨೦

ಇಂದುತನಕನೃತವಂಟದ ಸೂರ್ಯವಂಶಕ್ಕೆ
ಕುಂದ ಬಯಸುವರೆ ನಾನಳುಪುತಿರೆ ಕಂಡು ಬೇ
ಡೆಂದೆಂಬರಲ್ಲದಿಂತಳಲ್ವರೇ ಬಳಲ್ವರೇ ಬಳಿಸಂದು ಬಹೆನೆಂಬರೆ
ಒಂದೆಡೆಯೊಳಿರ್ದು ಸಾಲವನು ನಿರ್ಣೈಸಿ ಮುದ
ದಿಂದ ಕರಸುವೆನೆನ್ನ ಕೂಡಿದಂ ಬಂದವರು
ಹಿಂದಿರ್ದು ಮುನಿಗೆ ಬೆಸಕೆಯ್ಯುತಿರಿಯೆಂದರಸನೆಲ್ಲರ್ಗೆ ಕೈಮುಗಿದನು        ೨೧

ಎಲ್ಲಾ ಕಳಾನಷ್ಟನೆಂದೆನಿಸಿ ಹೋದಿರುಳ
ನಲ್ಲನೆಂದೆಯ್ತಪ್ಪನನ್ನಬರ ಹಸಿದಿರ್ದ
ವಲ್ಲದುಂಡವೆ ಬಿಸಿಲನೆಳೆಯ ಬೆಳುದಿಂಗಳಂ ಕುಡಿದಿಹ ಚಕೋರಂಗಳು
ನಿಲ್ಲದಿಂದೀಗರಸನೆಂದು ನಿಮ್ಮೊಡನೊಯ್ಯ
ಲ್ಲೊಲದಿರೆ ನೀಂ ಮರಳಿ ಬಪ್ಪಂದು ತನಕ ಕ
ಣ್ಣಲ್ಲಿಯೇ ಜೀವವನು ಪಿಡಿದಿಪ್ಪೆವನ್ಯರಂ ಸೇವಿಸುವುದಿಲ್ಲೆಂದರು           ೨೨

ಕಾಡಬೇಡಿನ್ನು ಚಲಬೇಡ ಕೋರಡಿಗತನ
ಬೇಡ ಮೂರ್ಖತ್ವ ಬೇಡೆಂದೆರಡು ಕೈಮುಗಿದು
ಬೇಡಿಕೊಂಡೆಂ ನಿಮ್ಮನೆನಲೊಡಂಬಟ್ಟು ಬೀಳ್ಕೊಂಡೆವಿಂದೆಮ್ಮೆ ಚಿಂತೆ
ಬೇಡ ನೀನೊಲಿದತ್ತ ಹೋಗೆನಲು ಸಂತಸಂ
ಮಾಡಿ ನಡೆಗೊಂಡ ಭೂಪನಗುಣಂಗಳನು ಕೊಂ
ಡಾಡುತ್ತ ಹಲುಬುತ್ತ ನೋಡುತಿರ್ದುದು ಜನಂ ದೃಷ್ಟಿ ಸೈವೆಱಗಾಗಲು     ೨೩

ಜನನಿ ಹಿಂಗಿದ ಶಿಶುಗೆ ಸಸಿ ಬಿಟ್ಟ ಕುಮುದಕ್ಕೆ
ದಿನನಾಥನುಳಿದ ಕಮಲಕ್ಕೆ ನೆಱೆ ಸಿರಿ ಸವೆದ
ಮನೆಗೆ ಜೀವಂ ತೊಲಗಿದೊಡಲಿಂದ ತೈಲವಿಂಗಿದ ದೀಪ್ತಿಗುದಕವಱತ
ಘನತಟಾಕಕ್ಕೆ ಫಲವಿಳುಹಿದ ಮರಕ್ಕೆ ನೆ
ಟ್ಟನೆ ಜೋಡಿಯಾದುದಾ ಪುರಜನಂ ಪರಿಜನಂ
ಜನಪತಿಹರಿಶ್ಚಂದ್ರನೆಲ್ಲವಂ ಮುನಿಗಿತ್ತರಣ್ಯಕ್ಕೆ ನಡೆವಾಗಲು      ೨೪

ಎಡೆವಿಡದೆ ದಾರಿಯಱುಹಲು ಮಂತ್ರಿ ಮುಂದೆಸುತ
ನಡೆದ ದೆಸೆಯೊಳು ನಿಜಾಂಗನೆ ಹಿಂದೆ ಬರೆ ಭೂಮಿ
ಯೊಡೆಯನೊಡವೆಗಳೊಡೆತನಂಗಳನೊಡಂಬಟ್ಟು ಮುನಿಗಿತ್ತ ಚಿಂತೆ ತನ್ನ
ಬಿಡೆ ದಕ್ಷಿಣವ ಬಿಟ್ಟು ದಕ್ಷಿಣಾರ್ಥಂಗಳಂ
ಕೊಡುವೆನೆಂಬುತ್ತರವನುತ್ತರಿಸಲುತ್ತರಂ
ಬಿಡಿದು ನಡೆದಂ ನೆರವನಾರುವಂ ಹಾರದಾ ಧೀರಕಾಂತಾರದೊಳಗೆ  ೨೫

ಎನ್ನ ಸತ್ಯನಿಮಿತ್ಯವಾಯಸಂಬಡಲೊಲ್ಲೆ
ನೆನ್ನನತಿಗಾಳಿ ಚಳಿ ಬಿಸಿಲು ಹಸಿವೆಂಬಿವಂ
ಮುನ್ನ ಕಂಡಱಿಯರೀ ಸ್ತ್ರೀಬಾಲರಿವರು ಮೆಟ್ಟಲು ಪಾದರಕ್ಷೆಯಿಲ್ಲ
ಬೆನ್ನ ಮುಸುಕಲು ಸೀರೆಯಿಲ್ಲೆಡೆಯ ಸಂಬಳಕೆ
ಹೊನ್ನಿಲ್ಲ ಹಸಿದೆವೆನಲೇನೆಂಬೆ ನಡೆಗೆಟ್ಟ
ಡಿನ್ನು ನಿಲುವೆಡೆಯಾವುದೆಂದು ಹಲವಂ ಚಿಂತಿಸುತ್ತ ನಡೆದಂ ಭೂಪನು       ೨೬

ಮುಗುದರಡವಿಯ ಗಿಡುಮರಂಗಳಂ ನೋಳ್ಪ ಖಗ
ಮೃಗವನೀಕ್ಷಿಸುವ ಶಬರಾಳಿಯಂ ಕಾಣ್ಬ ವಾ
ಸಿಗೆ ನಡೆವ ನಿಲುವ ಭೂಪನನೆಯ್ದಿಕೊಂಬ ಭರದಿಂ ಮೀಱಿ ಕಿಱುದೆಡೆಯನು
ಬಗೆಯದೆಂತಕ್ಕೆ ನಡೆಯಲು ಮೇಲೆ ಕವಿವ ಗಾ
ಳಿಗೆ ಬಿಸಿಲ ಬಿಸಿಗೆ ಹಸಿವಿಂಗೆ ತೃಷೆಯುಬ್ಬರದ
ಡಗೆಗೆ ಸೈರಿಸಲಾಱದನುಗೆಟ್ಟು ನಡೆಗೆಡಲು ತೊಡಗಿದರದೇವೊಗಳ್ವೆನು       ೨೭

ನಡೆಗೆಟ್ಟು ಹಿಂದುಳಿಯೆ ಪತಿ ಮುಳಿದಪಂ ಮೀಱಿ
ನಡೆವೆನೆನೆ ಕಾಲ್ ಕುಪ್ಪಳಿಸಿ ನೋಯುತಿವೆ ನೋವ
ನೊಡೆಮೆಟ್ಟಿದಡದಡನೆ ಪರಿವೆನೆಂಬಡೆ ಬೆಂದ ದೈವವಱೆವೊಱೆ ಹೊಱಿಸಿತು
ಮುಡಿ ಮೊಲೆ ನಿತಂಬ ಭಾರಕ್ಕೆ ತೊಡೆ ನಡು ಕೊರಳಂ
ಕಡಿವಂತಿರಾದಪ್ಪುದೇಗೆಯ್ವೆನೆಂದು ಸಿಡಿ
ಮಿಡಿಗೊಂಬ ಮಾನಿನಿಯ ಭರವನಾಲಿಸಿ ನಿಲುವನವನೀಶ ಮರನಡಿಯೊಳು   ೨೮

ಬಾಡಿದಧರಂ ಬಱತ ಬಾಯ್ ಕೆದಱಿದಳಕವ
ಕ್ಕಾಡುವ ಬೆಮರ್ ತೊನೆದು ಮಿಡಿವ ಮೊಲೆ ನಡುಬೆನ್ನ
ನೀಡಿಱಿವ ಮುಡಿ ಕೊರಗಿದಕ್ಷಿ ತೋಳಂ ತೂಗಿ ಬಾತ ಬೆರಳೊರಸಿ ಮಸೆದು
ಪಾಡಳಿದ ತೊಡೆ ಹಲವು ಹರಳೊತ್ತಿ ಬೊಕ್ಕೆಗಳು
ಮೂಡಿ ನಡೆಗೆಟ್ಟ ಮೆಲ್ಲಡಿಯ ನಿಜವನಿತೆಯಂ
ನೋಡಿ ಸುಱ್ರನೆ ಸುಯ್ದನಂದು ಸಪ್ತದ್ವೀಪಪತಿಹರಿಶ್ಚಂದ್ರನೃಪನು           ೨೯

ಸುತನನಡಿಗಡಿಗೆತ್ತಿಕೊಂಬ ನಡೆಗೆಡುವ ನಿಜ
ಸತಿಯನಡಿಗಡಿಗೆ ಬೋಳೈಪ ಬಳಲುವ ಚಮೂ
ಪತಿಯನಡಿಗಡಿಗೆ ಬಿಡದುಪಚರಿಪ ಚಿತ್ತದಾವೇಶದಗ್ರದ ಭರದಲಿ
ಅತಿಬಿಸಿಲು ಗಾಳಿ ಕಲು ಮುಳು ಕ್ಷುತ್ಪಿಪಾಸೆ ಜಾ
ಡ್ಯತೆಗಳೆಂಬಿಂತಿವಱ ಕಾಟದಿಂ ಮೊಳೆವ ಧಾ
ವತಿಯನಱಿಯದೆ ನಡೆದನಕಟಕಟ ಭೂಮಿಪಂ ಕಾಲಕ್ಕೆ ಕೈಮುಗಿಯುತ       ೩೦

ಭರದಿಂದ ನಡೆತಂದು ಕೂಡಿಕೊಂಡಂ ಮುನಿಯ
ತೆಱಕಾಱನಿಂದುವಂ ಬೆಂಬಿಡದ ರಾಹುವಿನ
ಪರಿಯೊಳಲ್ಲಿಂ ಹಿಂದೆ ಪಾಪಿಕೌಶಿಕನೆಂದಿನಿಂದ ನೂರ್ಮಡಿ ಬಿಸಿಲನು
ತರಣಿಗಿತ್ತನಿಲನಂ ನಿಲಿಸಿ ಮುಂಬಟ್ಟೆಯೊಳು
ಗಿರಿಗಳಂ ದರಿಗಳಂ ಕಮ್ಮರಿಗಳಂ ಘೋರ
ತರುಗಳಂ ಮೆಳೆಗಳಂ ಖಗಮೃಂಗಳನಂದು ನಿರ್ಮಿಸಿದನಾ ಮುನಿಪನು           ೩೧

ಬಟ್ಟೆಯಂ ತೊಡೆದು ಮುಂದೊಡ್ಡುಗಲ್ಲುಗಳನೊಡೆ
ದಿಟ್ಟು ನೆಲನಂ ಕಾಸಿ ತಳಿತ ನೆಳಲೊಳು ಮುಳ್ಳ
ನೊಟ್ಟಿ ಹಸಿವಂ ತೃಷೆಯನತಿಡಗೆಯನವನೀಶ್ವರನ ಕಳತ್ರಯಕೆ ತೋಱಿ
ದಿಟ್ಟವಾರಿಯೊಳುಳ್ಳ ನೀರೆಲ್ಲವಂ ಕೆಡಿಸಿ
ಮುಟ್ಟಿ ನಾನಾಕ್ರೂರಮೃಗವಾಗಿ ಬಂದಡ್ಡ
ಗಟ್ಟಿ ಗರ್ಜಿಸುತ ಮಾಯಾವೇಷದಿಂದೊಡನೆ ಬಂದ ವಿಶ್ವಾಮಿತ್ರನು            ೩೨

ಮೆಳೆಗಳೊಳು ಬಾಗಿ ಮರದೊಳು ಮುರಿದು ಮುರಿದಿಱುಬಿ
ನೊಳು ಸುತ್ತಿ ಕುತ್ತುಱೊಳು ಹಣುಗಿ ಮಿಗೆ ಬೆಳೆದಿಡುಕು
ಱೊಳು ಕುಸಿದು ಹೊದಱಿನೊಳು ನುಸುಳಿ ನಳುವಿನೊಳಡಗಿ ನಾಳಲೊಳುಪೊಕ್ಕುಪಿರಿಯ
ಕುಳಿಯೊಳೊರ್ಗುಡಿಸಿ ಡೊಂಗರನನೇಱಿ ಸರುವುಗಳೊ
ಳಿಳಿದದಟುಗೆಟ್ಟು ಬೆಂಡಾದ ಸುಖಿಗಳನುಗ್ರ
ದಳಲ ಬೇಸಱ ಬೇಗೆಗಿಚ್ಚು ವಿಶ್ವಾಮಿತ್ರಮುನಿಯನೆಯ್ದದೆ ಮಾಣದು        ೩೩

ಬಳಿವಿಡಿದು ಕೈಗೊಡುವರಿಲ್ಲ ಕಟ್ಟುರಿವಿಸಿಲು
ಸುಳಿಯಲೀಯದು ಕಾಸಿದೊಲೆಯಂತೆ ನೆಲ ಕಾಲ
ನಿಳುಹಲೀಯದು ಹೊದ್ದುವಡೆ ನೆಳಲು ಮುಳ್ಳುಮುತ್ತುಱೆ ದೈವ ಕಡೆಗಣಿಸಿದ
ಬಳಿಕಂದು ಜನನಾಥನಾಗಿಯುಂ ಜನಕೆ ಭೂ
ತಳನಾಥನಾಗಿಯುಂ ಭೂಮಿಗಕಟಕಟ ರವಿ
ಕುಲಜನಾಗಿಯು ರವಿಗೆ ತತ್ತ ಹೊತ್ತಿನೊಳನ್ಯನಾಗಿ ತೋಱಿದನರಸನು        ೩೪

ಬಸವಳಿಯುತುಸುರಲಮ್ಮದ ಪತಿಗೆ ಕೈಗೊಟ್ಟು
ಹಸಿದಳುವ ತನಯಂಗೆ ಹಣುಹಗಿನನಿತ್ತು ನಂ
ಬಿಸುತಿರಲು ಮಾರಿಯಂದದಿ ಬಂದು ತೆಱಕಾಱ ನನಗೆ ತಾ ಭೋಜನವನು
ಬಿಸಿಲು ಹೊಡೆದೊಡಲುರಿಯುತಿದೆಯೆಂದು ಜಱೆದು ದ
ಟ್ಟಿಸುತಡ್ಡಗೆಡೆದು ಕಾಲ್ವಿಡಿಯೆ ಬೇಡಿಲ್ಲಿ ಸಮ
ನಿಸುವುದೆಯೆನಲಿತ್ತು ಬಳಿಕ ಪೋಗೆಂದಾಣೆಯಿಟ್ಟ ನಟ್ಟಡವಿಯೊಳಗೆ          ೩೫

ತಂದುದಿಲ್ಲೂರು ದೊರಕಲು ಗಳಿಸಿ ತಂದೀವೆ
ನೆಂದೆಂಬನರಸನಿತ್ತಲ್ಲದಡಿಯಿಡಲೀಯೆ
ನೆಂದೆಂಬ ಮುನಿಪನಿಲ್ಲಿಲ್ಲವೆನೆ ಭೂಪನಿಂತಾಗಬೇಕೆಂಬ ಮೂರ್ಖ
ನಿಂದ ಮಧ್ಯಾಹ್ನಮೊದಲುರಿವ ಬಿಸಿಲೊಳು ಕಾದು
ಬೆಂದಱಿಯಮೇಲೆಲ್ಲರಂ ತಗೆದನಕಟ ರವಿ
ಬಂದಸ್ತಗಿರಿಮಸ್ತಕನ್ಯಸ್ತಹಸ್ತವಿಸ್ತರನಪ್ಪ ಕಾಲತನಕ      ೩೬

ಜಾರೆಯರು ನಲಿಯಲು ಗಣಿಕಾನಿಕರವೆಯ್ದೆ ಶೃಂ
ಗಾರದಿಂದೆಸೆಯುತ್ತ ಸಕಲಮೃಗವಿಕ್ಕೆಯಂ
ಸಾರೆ ಕೌಶಿಕನಿಕರದಾಸಱೋಸರಿಸೆ ಪೊಣರ್ವಕ್ಕಿಗಳ ಜಂಗುಜರಿಯೆ
ವಾರಿಜಂಗಳ ಬಿಟ್ಟು ತುಂಬಿಗಳು ಕನ್ನೆಯ್ದಿ
ಲೋರೆಯಂ ಪೊಗೆ ಜಗಕ್ಕೆಯ್ದೆ ತೆಳುಗತ್ತಲೆ ಚ
ಕೋರಿಗಳ ಮನನಲಿಯುತಿರೆ ತರಣಿ ಪಶ್ಚಿಮಪಯೋರಾಶಿಗೈತಂದನು         ೩೭

ಇಳೆಯಱಿಯಲೆನ್ನ ಕುಲದೊಳು ಪುಟ್ಟಿ ಸರ್ವಭೂ
ತಳಕೊಡೆಯನಾಗಿ ಮೂಲೋಕಮುದ್ರಿತ ಕೀರ್ತಿ
ಬಲವಂತನಾಗಿ ಹೆಚ್ಚಿದ ಹರಿಶ್ಚಂದ್ರನಂ ಕೌಶಿಕನ ಕಾಟದಿಂದ
ಬಳಸುವ ನಿರೋಧಮಂ ಕಾಣಲಾಱದೆ ಚಿಂತೆ
ಮೊಳೆತಡಗುವಂತೆ ಸೂರ್ಯಂ ಪಡುಗಡಲ ನಡುವಿ
ಗಿಳಿದನೆಲ್ಲಾ ದೇಶದುಮ್ಮಳಿಕೆ ಕವಿವಂತೆ ಕಾಳಗತ್ತಲೆ ಕವಿದುದು     ೩೮

ಭೂವರಂ ಚಿಂತಿಸುತ್ತೊಬ್ಬ ನಟ್ಟಡವಿಯೊಳ
ಗಾವೆಡೆಯೊಳೇಗೆಯ್ಯುತಿಪ್ಪನೋ ನೋಳ್ಪೆನೆಂ
ಬೀ ವಿಕಳದಿಂ ಗಗನ ಹಲಕೆಲವು ಕಂಗಳಂ ಪಡೆದುದೋ ಎಂಬಂದದಿಂ
ತೀವಿದುವು ನಕ್ಷತ್ರವವನಿಪನ ಸತಿಪುತ್ರ
ರಾವರಿಸುವೀ ತಮಕ್ಕಂಜುಗೆಂದುಱೆ ನಿಶಾ
ದೇವಿ ಹೊತ್ತಿಸಿದ ಹೆಜ್ಜೊಡರೋ ಇದೆಂದೆನಿಸಿ ಮೂಡಿತು ಶಶಿಬಿಂಬವು        ೩೯

ಮೂಡಿದ ಶಶಾಂಕಂಗೆ ಮಱೆಯಾಗಿ ಮೋಡಮಂ
ಮಾಡಿ ಕೌಶಿಕನು ಕತ್ತಲೆಗೆ ಕೈವೀಸೆ ನಡು
ಗಾಡೊಳಗೆ ಕಾಡಿಗೆಯ ಸೋನೆವಳೆ ಸುರಿದುದದಕಿನ್ನುಳಿದ ಬಡಬಗೆಗಳು
ಬೇಡ ತಾನುಂಟೆಂಬುದಂ ತನ್ನ ತಾ ಮುಟ್ಟಿ
ನೋಡಿ ಕಂಡಡೆ ಕಂಡನಲ್ಲದುರ್ವಿಯ ಮಾತ
ನಾಡದಿರೆನಿಪ್ಪಂತೆ ಕಾಳಗತ್ತಲೆ ಕವಿದು ಕಡಲಿಟ್ಟು ಮಡುಗಟ್ಟತು  ೪೦

ಲಲಿತನಗರದ ನಡುವಣರಮನೆಯ ಕರುಮಾಡ
ದೊಳಗೆ ಮಱಿಹಂಸೆದುಪ್ಪುಳ ಹಸೆಯ ಮೇಲೆ ದೆಸೆ
ಗಳ ಸಾಲಭಂಜಿಕೆಯ ಮಣಿವೆಳಗಿನೊಳು ಸುಖದ ಸುಗ್ಗಿಯಂ ಸವಿವರಸನು
ಬಳಸಿದಡವಿಯ ನಡುವೆ ಕವಿವ ಕತ್ತಲೆಯೊಳಗೆ
ಗುಳಿನೆಲನ ಮೊಳೆಗಲ್ಲ ಮುಳುವಸೆಯಮೇಲೆ ಹಸಿ
ದಳವಳಿದು ಹೊದೆಯಲಿಲ್ಲದ ಹೊಯ್ವ ಹಿಮವನಾಂತಿರ್ದನೇವಣ್ಣಿಸುವೆನು           ೪೧

ಎಡಬಲದ ತೊಡೆಯೊಳೊಱಗಿರ್ದ ಸತಿಸುತರನಡಿ
ಗಡಿಗೆ ತಡಹುತ್ತ ಮಂತ್ರಿಯ ಮಲಗಿಕೊಂಡು ನುಡಿ
ದಡೆ ದನಿಗೆ ಶರಭಶಾರ್ದೂಲವೆಯ್ತಂದು ಬಗಿವುವು ಬಳಿಕ್ಕಾನು ಮುನಿಗೆ
ಕೊಡುವೊಡವೆ ಸಲ್ಲದೊಡಸತ್ಯನಾದಪೆನೆಂಬ
ಕಡುಚಿಂತೆಯಂಜಿಕೆಯ ಬಲದಿಂದ ಸುಮ್ಮನಿಹ
ಪೊಡವೀಶ್ವರಂಗಿನ್ನು ಮೇಲೆ ಬಹ ಸಂಕಟವನಾವ ಜೀವರು ಕೇಳ್ವರು         ೪೨

ಕುಡಿಯಳ್ಳೆಯಂ ವೃಶ್ಚಿಕಂ ಮಿಡಿಯೆ ಮಿಡುಮಿಡನೆ
ಮಿಡುಕುವ ಬಲನನೆತ್ತಿ ನಂಬಿಸುತ್ತಿರೆ ಮಗ್ಗು
ಲೆಡೆಯೊಳಹಿ ಭುಸ್ಸೆನಲು ಹೆದಱಿ ಹಾ ಎಂದೊಱಲುವಂಗನೆಯ ದನಿವಳಿಯಲಿ
ನಡೆತಂದು ಹಱಿಮೂಲೆಗೊಂಬ ಹುಲಿ ಕರಡಿಯಂ
ಜಡಿವ ಹೂಂಕೃತಿಗರಣ್ಯದ ಭೂತಬೇತಾಳ
ವಡೆಸುತ್ತಿ ಮುತ್ತಿ ಬೊಬ್ಬಿಟ್ಟು ಝಂಕಿಸಿದುವಾ ಕೌಶಿಕನ ಪ್ರೇರಣೆಯೊಳು     ೪೩

ನಡನಡನೆ ನಡುಗಿ ಕಣ್ಮುಚ್ಚಿ ತನ್ನೊಡಲನುಱೆ
ಬಿಡದಪ್ಪಿಕೊಂಬ ಸತಿಸುತರ ನಂಬಿಸಿ ಬಲಂ
ಗೆಡದೆ ಶಂಕರ ವಿರೂಪಾಕ್ಷ ಶರಣೆಂಬುದೆಂದಡಿಗಡಿಗೆ ಬುದ್ಧಿಗೊಡುವ
ಪೊಡವೀಶ್ವರನ ಕೂಡೆ ತೆಱಕಾಱೆನೆಂದ ನೀ
ನಡವಿಗುಱಿಯಾಗಲೇಕಿವರ ನೋಯಿಸಲೇಕೆ
ಕಡುಮೂರ್ಖತನವ ಬಿಟ್ಟಿನ್ನಾದೊಡಂ ಮುನಿಪನೆಂದುದಂ ಮಾಡೆಂದನು     ೪೪

ಬಿಡು ಮಾಣಿದಾವ ನೋವಿಂದೆಲ್ಲರಳಿವ ಕಂ
ಡಡೆ ಕಾಬೆನಲ್ಲದನ್ಯಾಯದಿಂ ನಡೆದೆನ್ನ
ಹಡೆದ ಕುಲಮಂ ಕೆಡಿಸಲಾಪೆನೇ ಎಲೆ ಮರುಳೆ ನೀನೆನ್ನ ಮನದನುವನು
ಅಡಿಗಡಿಗೆ ತುಡುಕಿ ನೋಡದಿರೆಂದು ಭೂಪಾಲ
ನುಡುನಾಮನಂ ಜಡಿಯುತಿರಲು ಹೆಚ್ಚಿದ ರಾತ್ರೆ
ಕಡೆಗಂಡುದಂದುದಯಗಿರಿಯ ಮಸ್ತಕದ ಮೇಲರುಣಕಿರಣಂ ಕೆದಱಲು        ೪೫