ಸೂಚನೆ
ದೇಶವೆಲ್ಲವನನೃತ ಹೊದ್ದದಂದದಿ ಕೊಟ್ಟು
ಕಾಶಿಯ ನಿವಾಸದೊಳು ಸತಿಸುತರ ಮಾಱಿ ತಾಂ
ಹೇಸದೆಯನಾಮಿಕಂಗಾಳಾಗಿ ಋಣವನುತ್ತರಿಸಿದ ಹರಿಶ್ಚಂದ್ರನು

ಕೊಟ್ಟವಧಿಯಂ ನೆನೆದು ನೋಡಿ ಹವ್ವನೆ ಹಾಱಿ
ಮುಟ್ಟಿ ಬಂದುದು ದಿನಂ ಕೈಕೊಂಡ ತೆಱದವಂ
ಕಟ್ಟುಗ್ರನಭ್ಯಾಸದವರಿಲ್ಲ ಚಾಚಲಡಪಿಲ್ಲ ತಾನಭಿಮಾನವ
ಬಿಟ್ಟು ತಿರಿವವನಲ್ಲವೋಲೈಸಿ ನೆಱೆ ಲಜ್ಜೆ
ಗೆಟ್ಟು ಬೇಡುವಡಿಲ್ಲಿ ದೊರೆಯಿಲ್ಲ ಕೃಷಿಯಿಂದ
ಹುಟ್ಟಿಸುವೆನೆಂಬಡೆಡೆಯಿಲ್ಲವಿನ್ನೇಗೆಯ್ವೆನೆಂದು ಮಱಿದನರಸನು           ೧

ನೆನೆದ ಸುಖಮಂ ಕೊಡುವ ಸರ್ವರಾಜ್ಯವನು ಸ
ತ್ಯನಿಮಿತ್ತ ಬಿಟ್ಟು ನಡೆತಂದಡಾ ಸತ್ಯವಿಂ
ದಿನಲಿ ತಾ ಸೂಱೆವೋಯ್ತೆನ್ನಿಂದ ಪಾಪಿಗಳದಾರೆಂದು ಭೂನಾಥನು
ಮನನೊಂದು ಮತಿಯುಡುಗಿ ಧೃತಿಗೆಟ್ಟು ಮರವಟ್ಟು
ಕೊನರ್ವ ಕಂಬನಿಯ ಬಿಸುಸುಯ್ಯೆ ಕಪ್ಪಡದ ಮುಸು
ಕಿನ ಮೊಗದ ಮಱೆಯರಸನೊಡನಿರ್ದು ಜಱೆವ ಸಾಲಿಗನ ಬಿಱುನುಡಿಯೆಸೆದವು         ೨

ಏಗೆಯ್ವೆ ಚಿಂತಾಗ್ನಿಯುರಿಯ ಹೊಯ್ಲಿಂ ಕರಗಿ
ಹೋಗದಿರನೆಚ್ಚಱಿಸಬೇಕೆಂದು ಸತಿಯವಧಿ
ಮೇಗೆರಡು ಜಾವವಿದಱೊಳಗೆ ತಿದ್ದುವ ಬುದ್ಧಿಯಂ ಕಾಣಬೇಕಲ್ಲದೆ
ಮೂಗುವಟ್ಟಿರ್ದಡೇನಹುದೆಂದಡಿರದೆ ಬಳಿ
ಕೇಗೆಯ್ವೆ ಪೇಳೆನಲು ಸಾಲದೊಳು ಪೋದನಿತು
ಪೋಗಲೆಮ್ಮಿಬ್ಬರಂ ಮಾಱಿ ಬಳಿಕುಳಿದುದಂ ಕಾಣು ಭೂಭುಜ ಎಂದಳು     ೩

ಕಡುನಿರೋಧಂಗೊಳಿಸಿ ದೇಶದಿಂ ಪರದೇಶ
ಕೊಡವರಿಸಿತಲ್ಲದಾನಿರ್ದು ನಿಮ್ಮಂ ಮಾಱು
ಗೊಡಲಾಪೆನೇ ಎಂದಡೆಲೆ ಮರುಳೆ ಸರ್ವಕ್ಕೆ ಮೊದಲು ಸತಿಸುತರು ತನ್ನ
ಒಡಲು ಕಡೆ ನೇಮಕ್ಕೆ ಸತ್ಯಕ್ಕೆ ಬಂಧನ
ಕ್ಕೆಡೆಯಲಳುಪಲು ಶಿವ ಮನಂ ನೋಳ್ಪನೈ ಲಜ್ಜೆ
ಗೆಡದೆಮ್ಮ ಮಾಱು ಮತ್ತಾದುದಾಗಲಿ ಎಂದಡವನಿಪನೊಡಂಬಟ್ಟನು        ೪

ಪೊಡವಿಪಂ ಸತಿಸುತರ ತಲೆಗಳಲಿ ಹುಲುಗಟ್ಟಿ
ನಡೆನಡೆದು ಕೈವಿಡಿದು ಮುಂದೊಡ್ಡಿ ತೋಱುತಂ
ಗಡಿಗಳೊಳು ಬೀದಿಯೊಳು ಸಂಧಿಯೊಳು ಪುರದೊಳೋರಂತೆ ನಾಚಿಕೆಯನುಳಿದು
ತಡೆಯದೆ ಹರಿಶ್ಚಂದ್ರಭೂವರನ ತನಯನಂ
ಮಡದಿಯಂ ಮಾಱುಗೊಂಬಧಿಕರಿಲ್ಲಾ ಎಂದು
ನಿಡುಸರದೊಳೊಱಲಿ ಜನಕಱುಪುತ್ತ ತೊಳಲಿದಂ ಸತ್ಯನಿಧಿಭೂಪಾಲನು       ೫

ಅನಿಮಿತ್ತ ಮುನಿವ ಮುನಿಪನ ಬೆಸದೊಳಗ್ನಿ ವಿ
ಪ್ರನ ವೇಷದಿಂದ ಬಂದಾವಾವ ಸತಿಪುತ್ರ
ರೆನಿಬರವರೆಂದಡಿವರಿಬ್ಬರೆನಲಿವನಬಲನೀ ವನಿತೆ ಮುಪ್ಪಿನವಳು
ಮನೆಯೊಳಿನ್ನೊಳ್ಳಿದಹರಾರುಂಟು ತಾಯೆಂದ
ಡೆನಗುಳ್ಳರಿವರಯ್ಯ ಕೊಂಡೆನ್ನ ಸಾಕಿಕೊ
ಳ್ಳೆನೆ ಬೆಲೆಯ ಹೇಳೆನಗೆ ಲಾಗಾಗೆ ಹೊಂಗೊಡುವೆನೇಳೆಂಟು ದಿನಕೆಂದನು      ೬

ಇಂದು ಬೈಗಿಂದೊಳಗೆ ರಾಸಿ ಹೊನ್ನಂ ಕೊಡುವೆ
ನೆಂದು ಭಾಷೆಯನಿತ್ತೆನೀಯದಿರ್ದಡೆ ಹಾನಿ
ಬಂದಪುದು ಲಾಗನಱಸದೆ ನಿನ್ನ ಮನಕೆ ಬಂದನಿತರ್ಥಮಂ ಕರುಣಿಸು
ತಂದೆಯೆನೆ ವನಿತೆಗಿಪ್ಪತ್ತುಸಾವಿರವನೀ
ನಂದನಂಗಿಪ್ಪತ್ತುಸಾವಿರವನೀವೆನೆನೆ
ಬಂದುದೆನಿಸುವುದೆಮ್ಮೆ ತೆಱಕಾಱಗೆಂದೆನಲು ಬಂದುದೆನಿಸಿದನಾಗಳು           ೭

ಬಂದುದೇ ನಕ್ಷತ್ರನಾಮಮುನಿ ಎನಲೇನು
ಬಂದುದಾಂ ಬಂದ ದಿನ ಮೊದಲಿಂದುತನಕೆನ್ನ
ಹಿಂದುಳಿದ ಬತ್ತಾಯ ಬಂದುದೆನ್ನೊಡೆಯಂಗೆ ಕೊಡುವ ಹೊಸ ರಾಸಿ ಹೊನ್ನ
ತಂದೀಗ ಕೊಡು ಕೊಡದೊಡಿಲ್ಲೆನ್ನು ಹೋಗಬೇ
ಕೆಂದಡೀ ಹೊನ್ನ ಬತ್ತಾಯಕ್ಕೆ ತೆಱುವನ
ಲ್ಲೆಂದಡೀ ಮಧ್ಯಸ್ಥ ವಿಪ್ರ ಮೆಚ್ಚಲು ಕೊಂಬೆನವನೀಶ ಕೇಳೆಂದನು            ೮

ಈತನಿನಿತರ್ಥಮಂ ಕೊಂಬುದುಚಿತವೆ ಹೇಳು
ತಾತ ಪಕ್ಷೀಕರಿಸದೆಂದೆನಲು ನಾಲ್ಕೆರಡು
ಮಾತಂಗದುದ್ದದರ್ಥದ ಸಾಲವಂ ಬೇಡಬಂದವಂಗಿನಿತು ಘನವೇ
ಭೂತಳಾಧಿಪ ಮುನಿದು ಪೇಳೆನಿರ್ದುದನೆಂಬೆ
ನೀತಗಿದು ಮರಿಯಾದೆಯೆನೆ ಜಲವನುಳಿದಬುಜ
ಕಾ ತರಣಿ ಮುನಿವನೆನೆ ನೆಲೆಗೆಟ್ಟು ಬಂದವರ್ಗೆ ಮುನಿಯದವರಾರೆಂದನು     ೯

ವಿನಯದಿಂ ಕಂಡುದಂ ನುಡಿದಡೆನ್ನಂ ನಿನಗೆ
ಮುನಿದನೆಂದೆಂಬೆ ನೀಂ ಮುನಿದು ಮಾಡುವುದೇನು
ಜನಪ ಎಮ್ಮೊಡವೆಯಂ ಕೊಂಡೀಗ ಹೋಹೆವೆಂದೇಳೆಲೆಗೆ ಸವುಡಿದೊತ್ತೆ
ಮನೆಯ ಕೆಲಸಕ್ಕೆ ನಡೆ ಹುಲು ಹುಳ್ಳಿ ತರಲು ಕಾ
ನನಕೆ ಹೋಗೇಳೆಲವೊ ಚಿಣ್ಣ ಎಂದಕಟ ಮಾ
ನಿನಿಯಂ ಕುಮಾರನಂ ಜಱೆದನಾ ಕಪಟವಟುವೇಷಮಯದನಿಲಸಖನು       ೧೦

ಹೋಹೆನೇ ತಂದೆ ಬೊಪ್ಪಯ್ಯ ಎಂದೆಂದು ಕಡು
ನೇಹದಿಂದಪ್ಪಿ ಕರುಣಂದೋಱಿ ಕಂಬನಿಯ
ಕಾಹೊನಲೊಳದ್ದುವ ಕುಮಾರನಂ ಕಾಲ್ಗೆಱಗಿ ತಲೆವಾಗಿ ನಿಂದ ಸತಿಯ
ಬೇಹೊಡೆಯ ನಾನಿರಲು ಮಾಱಿದವನಂ ಕೇಳ್ವ
ಸಾಹಸವ ನೋಡೆಂದು ಕೆಡೆಹೊಯ್ದು ನೂಕಿ ನಿಜ
ಗೇಹಕ್ಕೆ ಜಱೆಯುತ್ತ ಕೊಂಡೊಯ್ದುನವನಿಪನ ಮನಮಱುಗಬೇಹುದೆಂದು ೧೧

ಧುರದೊಳಗೆ ಕಾದಿ ಜೂಜಾಡಿ ಸೋಲದೆ ಸವಿ
ಸ್ತರಮಪ್ಪ ಸಿರಿ ಹೋಯ್ತು ಪುರ ಹೋಯ್ತು ಧರೆ ಹೊಯ್ತು
ಪರಿವಾರ ಹೋಯ್ತು ನಿಷ್ಕಾರಣಂ ನಾರಿ ಹೋದಳು ಕುಮಾರಂ ಹೋದನು
ಉರಿಮಾರಿಯವಧಿ ಬಂದುದು ಋಣವನಿನ್ನಾವ
ಪರಿಯೊಳುತ್ತರಿಸಿ ಶುಚಿಯಹೆನು ದುಷ್ಟರ್ಮವಿ
ಟ್ಟೊರಸುತಿದೆ ಮೇಲೇನುಗತಿಯೆಂಬ ಭೂಪಂಗೆ ಮಂತ್ರೀಶನಿಂತೆಂದನು        ೧೨

ಸಂಗರದೊಳೀರೇಳುಲೋಕದರಸುಗಳ ಸ
ಪ್ತಾಂಗಮಂ ಕೊಂಬ ನಿನ್ನಂ ನುಡಿಯ ತೊಡಕಿನ ಬೆ
ಡಂಗಿನಿಂ ಸೋಲಿಸಿ ಸಮಸ್ತರಾಜ್ಯವನು ಬಡಮುನಿ ಕೊಂಡು ಮೇಲೆ ಋಣವ
ಹೊಂಗಿಸಿ ತಗುಳ್ವುದಿದು ದೈವಿಕಂ ದುಷ್ಕರ್ಮ
ದಂಗವಲ್ಲೀಶ್ವರ ಮನಂ ನೋಡಿದಪನು ಧೈ
ರ್ಯಂಗೆಡದೆ ನಡೆಯೆಂ ಲೇಸೋಡೆಯರಱಿಯದ ಬಿಟ್ಟಿಯಲ್ಲ ನಡೆನಡೆಯೆಂದನು      ೧೩

ಖಗವಂಶದಿಕ್ಷ್ವಾಕುಭೂವರನ ಪೀಳಿಗೆಯೊ
ಳೊಗೆದ ತ್ರಿಶಂಕು ವಸುಧಾಧಿನಾಯಕನ ಹೆ
ಮ್ಮಗ ಹರಿಶ್ಚಂದ್ರನಂ ಮಾಱುಗೊಂಡೋಲೈಸಿಕೊಂಬರಿಲ್ಲಾ ಎನುತ
ಬಗೆಬಗೆದು ಪುರದ ಕೇರಿಯ ಮನೆಯೊಳಡ್ಡ ಬೀ
ದಿಗಳ ಬೀದಿಯ ನಿಂದ ನೆರವಿಗಳ ಜನಮುಮಂ
ಮಿಗೆ ಕೇಳಿಸುತ್ತ ತೊಳಲಿದನು ಮಧ್ಯಾಹ್ನ ಮೊದಲಾಗಿ ಕಡೆಹಗಲು ತನಕ     ೧೪

ಒಡವೆಯಂ ಕೊಡುವ ಮಾತಂತಿರಲಿ ವಸ್ತುವಿನ
ಕಡೆಗೇಳ್ವರಿಲ್ಲ ಕೇಳದೆ ಮಾಣ್ದಡಂ ಕೂಡೆ
ನುಡಿವರಿಲ್ಲಂ ಹೊಸಬರೆಂದು ನೋಡುವರಿಲ್ಲ ಪೇಳ್ದಡಾಲಿಸುವರಿಲ್ಲ
ಕಡೆಯಲಿನ್ನರೆಜಾವದವಧಿಯಿದು ತಪ್ಪಿತಾ
ದೊಡೆ ಬಳಿಕ್ಕೇಸುಮಡಿಯಿತ್ತೊಡಂ ಮೂರ್ಖಮುನಿ
ಕೆಡೆನುಡಿವನೆನಲಿನ್ನು ಮಾಳ್ಪುದೇನೆಂದು ಬೀದಿಯೊಳು ಚಿಂತಿಸುವಾಗಳು     ೧೫

ಮಡದಿಯರನಿರಿಸಿಕೋ ಎಂದು ನಾಂ ಬೇಡಿಕೊಂ
ಡಡೆ ಮೀಱಿ ಹೊಲತಿಯರನೊಲ್ಲೆನೆಂಬಣ್ಣನ
ಕಡೆಗನಾಮಿಕನ ಕಿಂಕರನಾಗಿ ಸುಡುಗಾಡ ಕಾವಂತೆ ಮಾಳ್ಪೆನೆಂದು
ಕಡುಮೂರ್ಖ ಕೌಶಿಕಂ ಕಾಲನಂ ಕರೆದು ನೀಂ
ಬಿಡದನಾಮಿಕನಾಗಿ ಧನವನಿತ್ತರಸನಂ
ತಡೆಯೆಂದು ಮುನ್ನೊಂದು ತಿಂಗಳೆನೆ ಕಳುಹೆ ಬಂದಾ ಹೊತ್ತ ಹಾರಿರ್ದನು    ೧೬

ಪಿಡಿದ ಸಂಬಳಿಗೋಲು ಕಾರೊಡಲು ಕೆಂಗಣ್ಣು
ಕುಡಿದು ಕೊಬ್ಬಿದ ಬಸುಱು ದಡದಡಿಸಿ ತರಹರಿಸು
ವಡಿಯ ಕೆದಱಿದ ತಲೆಯನಡಸಿ ಸುತ್ತಿದ ಮುಪ್ಪುರಿಯ ಬಾರಿ ಕಡ್ಡಣಿಗೆಯ
ಬಿಡದೆ ಢಱ್ರನೆ ತೇಗಿ ನೆರವಿಯಂ ಬಯ್ವ ಬಿಱು
ನುಡಿಯ ಕಲಿವೀರಬಾಹುಕ ಬರುತ್ತಂ ಮಾಱು
ವೊಡೆ ಕೊಂಡು ಹೊಂಗೊಡುವೆ ನಾನೆಂದು ತನ್ನ ಹಡಪಿಗನಿಂದ ಕೇಳಿಸಿದನು  ೧೭

ಕೊಡುವಾತನಾರು ಬೆಲೆಯೇನು ಮಾಱಿಸಿಕೊಂಬ
ಪೊಡವೀಶನೆಂಬನಾರೋ ವೀರಬಾಹು ಕೇ
ಳ್ದಡೆ ಕೊಂಬನೀಗಳೆಂದೆನೆ ನೃಪಂ ಬೆಱಗಾಗಿ ಸೂರ್ಯವಂಶದಲಿ ಹುಟ್ಟಿ
ಮೃಡಮೂರ್ತಿ ವಾಸಿಷ್ಠಮುನಿಯ ಕಾರುಣ್ಯಮಂ
ಪಡೆದೆನ್ನನೀ ಹೊಲೆಯನಿರಿಸಿಕೊಂಡಪೆನೆಂದು
ನುಡಿವ ಬಲುಹಂ ನೋಡು ನೋಡೆಂದು ಕಡುಮುಳಿದು ಕೋಪಿಸಿದನವನೀಶನು          ೧೮

ನಡುಗದಂಜದೆ ಹೆದಱದೋಸರಿಸದಕಟಕಟ
ಕಡೆಯ ಹೊಲೆಯಂ ಮೇರೆದಪ್ಪಿ ಬಂದೆನ್ನ ತ
ನ್ನೊಡೆಯಂಗೆ ದಾಸನಾಗೀಗಳೆಂದೆಂಬುದಿದು ಕಾಲಗುಣವೋ ಎನ್ನನು
ಎಡೆಗೊಂಡ ಕರ್ಮಫಲವೋ ಕಡೆಗೆ ಮೆಣಸು ಹುಳಿ
ತಡೆ ಜೋಳದಿಂ ಕುಂದೆ ನೋಡು ನೋಡೆಂದು ಘುಡು
ಘುಡಿಸಿ ಕೋಪಾಟೋಪದಿಂ ಜಱಿದು ಝುಂಕಿಸಿದನವನಿಪನನಾಮಿಕನನು     ೧೯

ಕೇಳಿಬಂದಾರ ಜಱೆದಪೆಯೆನಲು ನಿನ್ನ ಹಡ
ಪಾಳಿಯನದೇಕೆನ್ನನಱಿದಱಿದನಾಮಿಕಂ
ಗಾಳಾದಪಾಯೆಂದು ನುಡಿದನಿಂತೆನಬಹುದೆ ಕೀಳುಮೇಲಂ ನೋಡದೆ
ಕೀಳಾರು ಮೇಲಾರು ಹದುಳಿಪ್ಪ ನಾನು ಚಾಂ
ಡಾಳನೋ ಹುಸಿಯ ಹೊಲೆಯಂ ಹೊಱುವ ನೀನು ಚಾಂ
ಡಾಳನೋ ಹೇಳೆಂದೊಡಾನೀಗ ಹುಸಿದುದೇನೆಂದನು ಹರಿಶ್ಚಂದ್ರನು           ೨೦

ಹೊನ್ನುಳ್ಳ ಧನಿಕರಾರಾದೊಡಂ ಕೊಂಬವರ್
ಬನ್ನಿಯೆನ್ನಂ ಮಾಱುಗುಡುವೆನೆಂದೆನೆ ದಿಟಂ
ನನ್ನಿಯುಳ್ಳವನೆಂದು ಬಗೆದು ಬೇಡಿದೆನುತ್ತಮದ್ವಿಜರು ಕೊಂಬುದೆಂದು
ಮುನ್ನ ನೀನಾಡಿತುಂಟೇ ಹೇಳು ಭೂಪಾಲ
ನಿನ್ನ ನುಡಿ ನಿನಗೆ ಹಗೆಯಾಯ್ತೆ ಕಂಡುದನಲ್ಲ
ದೆನ್ನೆನೀ ಹೊಲೆಹುಸಿಯ ಹೊಱುವವಂ ಹೊಲೆಯನಲ್ಲದೆ ಬಳಿಕ್ಕಾರೆಂದನು ೨೧

ದೊರೆಗೆಟ್ಟು ಹುಸಿದೊಡಂ ನರಕ ರಾಜ್ಯಾಂತರಂ
ನರಕವರಸುಗಳಿಗಾದೇಶವೆಂದೆನೆ ನರಕಿ
ನರಕಕ್ಕೆ ತೆಕ್ಕುವನೆ ನಿನ್ನೊಡನೆ ನುಡಿದು ದೋಷವ ಹೊಱುವನಲ್ಲೆನುತ್ತ
ತಿರುಗಿ ಹೋಗುತ್ತಿರಲು ಕಂಡು ಬೆಱಗಾಗಿ ಭಾ
ಪುರೆ ವಿಧಿಯ ಗೊಡ್ಡಾಟಕಳವೆ ಕೌಶಿಕಮುನೀ
ಶ್ವರ ಮೊದಲನಾಮಿಕಂ ಕಡೆ ಸಮಸ್ತರ ಮನಕೆ ಸತ್ಯನೆನಿಸುವೆನೆಂದನು           ೨೨

ವಿತ್ತವುಳ್ಳವರ್ಗಳೆನ್ನಂ ಕೊಂಬುದೆಂದು ನುಡಿ
ಯಿತ್ತು ದಿಟವಿನ್ನು ನಾನೊಗಡಿಸಿದೆನಾದಡನಿ
ಮಿತ್ತ ಹುಸಿ ಬಂದಪುದು ಅವಧಿಗೆಟ್ಟಡೆ ಹಿಂದೆ ಮುನಿಗೆ ನಾಂ ದಾನವಾಗಿ
ಇತ್ತ ರಾಜ್ಯಂ ನಿರರ್ಥಂಬೋಗಿ ಮೇಲೆ ಹುಸಿ
ಹೊತ್ತಪ್ಪುದದಱಿಂದ ಮುನ್ನವೆ ಅನಾಮಿಕನ
ಚಿತ್ತವಂ ಪಡೆವೆನೆಂದೋತು ಕರೆದಂ ವೀರಬಾಹುಕನನವನೀಶನು     ೨೩

ಮತ್ತೇಕೆ ಹುಸಿಯ ಹೊಲೆಹೊಱೆಕಾಱ ಕರೆದೆಯೆನೆ
ತೆತ್ತ ಸಾಲದ ಭರದೊಳಱಿಯದಾಡಿದ ನುಡಿಗೆ
ಹೊತ್ತ ಹುಸಿಯಳಿಯಬೇಕೆಂದೆನಲು ನಿನ್ನ ಕುಲವಳಿದಲ್ಲದಳಿಯದೆನಲು
ಚಿತ್ತೈಸಿ ಕೇಳಿನ್ನು ನಾಡ ಮದ್ದಂ ತಿಂದು
ಕುತ್ತ ಕೆಡದಿರಬಹುದೆ ಸಾಲವಳಿಯಲು ಧನವ
ನಿತ್ತು ರಕ್ಷಿಸು ಸಾಕು ರವಿಕುಲಕೆ ಕುಂದಿಂದು ಬಂದಡಂ ಬರಲೆಂದನು ೨೪

ನೂಱಾರು ಸಾವಿರವೆ ಸಾಲವೇನೆನೆ ಕರಿಯ
ನೇಱಿ ಮೇಲಕ್ಕೆ ಮಿಡಿದಡೆ ಕವಡೆ ಬಿಡೆ ಹಬ್ಬಿ
ಹಾಱಿದನಿತುದ್ದಕ್ಕೆ ಸುರಿದ ಹೊಸ ಹೊನ್ನರಾಶಿಯನೀಯಬೇಹುದೆನಲು
ಏಱಿದರ್ಥವನೀವೆ ನೀ ಮಾಳ್ಪುದೇನಾಡಿ
ತೋಱೆಂದಡಾವ ಹೊತ್ತಾವ ಕೆಲಸವನೀಯ
ಲಾಱೆನೆನ್ನದೆ ಮಾಳ್ಪೆನೆಂದಡೊಡವೆಯನೀವೆನೆಂದನಂತಾ ಧನಿಕನು ೨೫

ನುಡಿದೊಡವೆಯಂ ಕೊಡುವೆನೆಂದು ನುಡಿದಂದದಿಂ
ನಡೆವೆನೆಂದೊಬ್ಬರೊಬ್ಬರಿಗೆ ನಂಬುಗೆಯಿತ್ತು
ಒಡೆಯನಾದಂ ವೀರಬಾಹುವಾಳಾದನಿನಕುಲಹರಿಶ್ಚಂದ್ರನೃಪನು
ಹೆಡಗೆಹೆಡಗೆಗಳೊಳಡಿಗಡಿಗಡಕಿ ಹಸ್ತಿಯಂ
ಪಿಡಿದು ಕವಡೆಯ ಮಿಡಿದು ನಡೆನೋಡಿ ನೋಡಿ ತಂ
ದೆಡೆವಿಡದೆ ಸುರಿದನರ್ಥವನು ಕೌಶಿಕಮುನಿಯ ತೆಱಕಾಱ ತಲೆದೂಗಲು        ೨೬

ಕೊಡುವ ಕೊಂಬುವರಿಬ್ಬರುಂ ಬಿಡದೆ ನೋಳ್ಪಾಗ
ಳಡಸಿ ಬಲಗೊಂಬ ರವಿಶಶಿಗಳೋ ಅವರಿಬ್ಬ
ರೆಡೆಯೊಳೊಪ್ಪುವ ಮೇರುಗಿರಿಯೊ ಮೇಣಾರಾಶಿ ಹಿರಿಯತನಕೊಬ್ಬೊಬ್ಬರ
ಜಡಿದು ವಾದಿಸುವ ಹರಿಬೊಮ್ಮರೋ ಅಂತವರ
ನಡುವೆ ಮೂಡಿದ ಜೋತಿಲಿಂಗವೋ ಆ ರಾಶಿ
ತಡೆಯದೆ ವಿಚಾರಿಸೆಂಬಜ್ಞತಜ್ಞರ ಬಗೆಗೆ ಸಂಶಯಂ ಸರಿಯಾದುದು   ೨೭

ಇತ್ತವಧಿಗಿನ್ನೆರಡು ಗಳಿಗೆ ಹೊತ್ತಿದೆ ಮುನಿಪ
ಚಿತ್ತೈಸು ವಸ್ತುವಿದೆ ಸಂದುದೇ ನುಡಿದು ಹುಸಿ
ಯಿತ್ತಿಲ್ಲಲೇ ತಂದೆ ಆಯಸಂಬಡಿಸಿದೆನು ತಡೆದೆನಳಲಿಸಿದೆ ನಾನು
ಅತ್ಯಂತ ಮೂಢನೆನ್ನವಗುಣವನುಳಿದು ತ
ಮ್ಮುತ್ತಮಿಕೆಯಂ ಮೆಱೆದು ಕರುಣಿಸುವುದೆಂದೆಮ್ಮ
ಹೆತ್ತಯ್ಯ ಕೌಶಿಕಂಗೋವಿ ಬಿನ್ನೈಸೆಂದು ಭೂಭೂಜಂ ಕೈಮುಗಿದನು           ೨೮

ಇನ್ನೇಕೆ ನುಡಿದೆನ್ನ ನಾಚಿಸುವೆ ಭೂಪಾಲ
ನಿನ್ನಂತೆ ಸತ್ಯರುತ್ತಮರಧಿಕಧೀವಶಿಗ
ಳುನ್ನತಶಿವೈಕ್ಯರಿಳೆಯೊಳಗಿಲ್ಲ ನಿನ್ನಿಷ್ಟಸಿದ್ಧಿ ಕೈಸಾರಲೆಂದು
ತನ್ನ ಮನವುಕ್ಕಿ ಹಾರೈಸಿ ಹರುಷದಿ ಹರಸಿ
ಹೊನ್ನನಡಕಲು ಹೋದನತ್ತಲಿತ್ತಲು ನಡೆದು
ನನ್ನಿಕಾಱಂ ಪತಿಯ ಹಿಂದೆ ಹೊಲಗೇರಿಗೆಯ್ತಂದನಮರರು ನಲಿಯಲು        ೨೯

ಹೊಱಗೆ ಹಾಸಿದ ಹಸಿಯ ತೊಗಲ ಹೊದೆಯ ಮಾಣ
ದೊಱಲಿ ಕೂಗಿಡುವ ನಾನಾ ಪ್ರಾಣಿವರ್ಗಮಂ
ಕೊಱೆವ ಕೊಚ್ಚುವ ತಱಿವ ಮುಱಿವ ಕಾಸುವ ಕಡಿವ ಸೀಳ್ವ ಹರಹುವ ಹಿಂಡುವ
ಹಱಿಯದೊಣಗಿಲುಗರುಳ ಹಿಳಿಯ ತೋರಣದ ಚ
ಟ್ಟಿಱಿದ ಗೋಡೆಗಳ ರಕುತದೆ ಹೇಸಿಕೆಯನು ನೇ
ಸಱುಗುಲನ ಕಾಳಿಜಂ ಕಂಟಣಿಸಬೇಕೆಂದು ನೆರಹಿದಂ ನಿಳಯದೊಳಗೆ            ೩೦

ಹಲವೆಲುವಿನೆಕ್ಕೆಗಳ ಬಿಗಿದು ಬೀವಂ ನೆಯ್ದ
ನುಲಿಯ ಹಂದೊಗಲ ಹಾಸಿನೊಳು ಮಂಚಂ ಜಡಿಯೆ
ಹೊಲೆಯನೋಲಗವಿತ್ತು ನರಕಪಾಲದೊಳು ತೀವಿದ ಹಸಿಯ ಗೋಮಾಂಸವ
ಮೆಲುತ ಮದ್ಯವನೀಂಟುತಿರ್ಪಪತಿಯಿಂ ಮುಂದೆ
ನೆಲದಲ್ಲಿ ಕುಳ್ಳಿರ್ದ ರವಿಕುಲನ ಹೆಗಲಮೇ
ಲೆಲೆಲೆ ನೀಡಿದನು ಕಾಲಂ ಕಾಲನೊಂದೆರಡು ಕುಲಗಿರಿಯ ಭಾರವೆನಲು         ೩೧

ಏಳಬುಧಿಕಡೆಯಾದ ಸರ್ವರಾಜ್ಯಶ್ರೀಯ
ಮೇಳದೊಳು ವೀರಸಿರಿಯಂ ವಿಜಯಸಿರಿಗಳಂ
ತಾಳಲಾರ್ಪದಟುಳ್ಳ ಭುಜವನಾಮಿಕನ ಪದಭಾರಕ್ಕೆ ಬಸವಳಿವುದೇ
ಕಾಳಗದೊಳರಿನೃಪರ ಖಂಡಮಂ ರುಧಿರಮಂ
ಕಾಳಿಜವನಡಗನೊಳ್ಗರುಳ ಹಿಣಿಲಂ ಹೊಱುವ
ಬಾಳ ಪಡೆದಿಪ್ಪನೀ ಹೇಯಕ್ಕೆ ಹೇಸುವನೆ ಎನಿಸಿ ಲೆಕ್ಕಿಸದಿರ್ದನು    ೩೨

ಎಲವೊ ನೀ ದಿಟರಾಯನಾದಡಳುಕದೆ ಬಂದು
ನೆಲದಲ್ಲಿ ಕುಳ್ಳಿರ್ಪೆ ಸತ್ಕುಲಜನಾದಡಂ
ಹೊಲೆಯನಾದೆನ್ನ ಕಾಲಂ ಹೊಱುವೆ ಮುನಿಮತೋಚಿತ ಶಿವಾರ್ಚಕನಾದಡೆ
ಹೊಲಸಿನಟ್ಟುಳಿಗೆ ಕೊಕ್ಕರಿಸದಿಹೆ ರಾಜ್ಯಸಿರಿ
ತೊಲಗಿದಡೆ ಪೂರ್ವಗುಣವಳಿವುದೇ ಮುನ್ನ ಭವಿ
ನಿಳಯದೊಳು ತಲೆಮಟ್ಟು ದುಡಿದ ಗಾವದಿಯೈಸೆ ಭೂಪಾಲನಲ್ಲೆಂದನು   ೩೩

ಹಸುವನಳಿ ಹಾರುವನನಿಱಿ ಮಾತೆಪಿತರನಾ
ರ್ದಿಸು ಸುತನ ತಿವಿ ಸತಿಯ ಕೊಲು ಮಾರಿಗೊಱೆಗಟ್ಟು
ವಿಷವ ಕುಡಿ ಹಾವ ಹಿಡಿ ಹುಲಿಗೆ ಮಲೆ ದುಳ್ಳುರಿಯೊಳಡಗು ಹೋಗೆಂದೊಡೆಯನು
ಬೆಸಸಿದಡೆ ನಾನಾಱೆನೆನಬಾರದೆಂಬಾಗ
ಳಸವಸದೊಳಿವಕಲಸಿ ಸೆಡೆದೆನಾದಡೆ ಕೊಟ್ಟ
ಬೆಸನನಡಸುವೆನೆಂಬ ನುಡಿ ಸಡಿಲವಾಗದೇ ಹೇಳೆಂದನವನೀಶನು    ೩೪

ಏನನಾಂ ಬೆಸನಿತ್ತೊಡದ ಬಿಡದೆ ನಡುಸವಾ
ನೀನೆನಲು ನಡಸದಿರ್ದಡೆ ನೀನು ಕೊಟ್ಟೊಡವೆ
ದಾನವೇ ಬಗೆಯೆ ಕರಿ ಹೂಳುವನಿತರ್ಥಮಂ ಕೊಂಡು ಮಾಡದೆ ಮಾಣ್ದಡೆ
ಈ ನೆಲಂ ಹೊಱುವುದೇ ನಾಕೊಟ್ಟ ನಂಬುಗೆಗೆ
ಹಾನಿಯಾಗದೆ ಹೋಹುದೇಯೆನಲು ಸುಡುಗಾಡ
ನಾನಂದದಿಂ ಕಾದುಕೊಂಡಿರುತಿರೆಂದು ಬೆಸಸಿದನು ಮನದನುವಱಿಯಲು     ೩೫

ಸುಡುಗಾಡಕಾಹವೆಂದೇನದಱ ಪಂಥಮಂ
ನುಡಿದು ಪೇಳೆನೆ ಸುಡುವ ನೆಲದೆಱಿಗೆ ಹಾಗ ಹೆಣ
ದುಡುಗೆಯಂ ತಂದೆನಗೆ ಕೊಡುವುದಾ ತಲೆಯಕ್ಕಿಯಂ ನಿನ್ನ ಸಂಬಳಕ್ಕೆ
ಪಡಿಯಾಗಿ ಕೊಂಡುಂಬುದಳುಪದಿರು ಹುಸಿಯದಿರು
ಬಿಡದಿರೆಂದುಡುಗೊಱೆಯ ವೀಳೆಯದ ಕೂಡೆ ತಾ
ಪಿಡಿದ ಸಂಬಳಿಗೋಲ ಮುದ್ರೆಗೊಟ್ಟಂ ವನಧಿಮುದ್ರಿತಧರಾಧಿಪತಿಗೆ          ೩೬

ಹೆಸರ ಹೇಳುತ್ತ ಸಾಱಿತ್ತ ಮೈಗುಱುಹ ತೋ
ಱಿಸುತ ಪುರದೊಳಗೆಯ್ದೆ ಜನವಱಿಯೆ ಹಱೆಯ ಮೊಳ
ಗಿಸುತ ಮೆಱೆಯುತ್ತ ಹೋಗೇಳೆಂದು ಕಳುಪೆ ಪೊಱಮಟ್ಟನೆಲ್ಲವ ಮಾಡುತ
ನಸುಕುಸಿದ ದೇಹ ಕಂಕರಿಗೋಲನಿಱಿದು ಬಾ
ರಿಸುತ ಕೈವಿಡದೆ ಸಂಬಳಿ ಸಂಬಳೆಂದೆಂದು
ಕೊಸರುತಿಹ ಬಾಯ್ವೆರಸಿ ಬೀದಿಬೀದಿಯೊಳು ಸುಳಿದಂ ಸತ್ಯಸಂಪನ್ನನು      ೩೭

ಸುಡುಗಾಡಿನಧಿಕಾರಮುದ್ರೆ ಕಟ್ಟಾಣೆ ಚಾ
ವಡಿ ಹೆಣನ ತಲೆಯಕ್ಕಿ ನೆಲದೆಱೆಯ ಹಾಗ ಶವ
ದುಡಿಗೆಯೆನಗಾಯ್ತೆನ್ನ ಮಱಹಿಕ್ಕಿ ರಾತ್ರಿಯೊಳು ಸುಟ್ಟಿರಾದಡೆ ತೆಱೆಯನು
ಕೊಡದಿರ್ದಡೆನ್ನಾಣೆ ಪತಿವೀರಬಾಹುವಿನ
ಮಡದಿಯರ ಕಾಲಾಣೆ ಮೀಱಿದಡೆ ಕೆಡಹಿ ತಡೆ
ಗಡಿವೆನೆಂದೂರೊಳಗೆ ಸಾಱುತ್ತ ತೋಱುತ್ತ ರುದ್ರಭೂಮಿಗೆ ನಡೆದನು         ೩೮

ಎರಡನೆಯ ರುದ್ರನೆನಿಸುವ ವಸಿಷ್ಠನ ಶಿಷ್ಯ
ನರಿದೆನಿಪ ರುದ್ರಾರ್ಚಕಂ ಗಿರಿಜೆ ಗಣಕುಲಂ
ಬೆರಸು ರುದ್ರನನೆಳೆದು ತಂದು ಕೊಡಲಾರ್ಪ ಸತ್ಯಾಶ್ರಯಂ ತಾ ಕಾಶಿಯ
ಅರಸನಹ ರುದ್ರ ದರ್ಶನತುಷ್ಟನೆಂದೆನಿಪ
ಧರಣಿಪಂ ತಾನಿನ್ನು ರುದ್ರಭೂಮಿಯೊಳಲ್ಲ
ದಿರಲಾರ್ಪೆನೇ ಎಂದು ಧರೆಗೆ ಪೇಳ್ವೆಂದದಿಂ ರುದ್ರಭೂಮಿಗೆ ಬಂದನು          ೩೯

ಭುವನದೊಳು ಹುಸಿವವಂ ಹೊಲೆಯನವನಂ ಮುಟ್ಟು
ವವರೆಲ್ಲ ಹೊಲೆಯರೆಂಬಾಗಳಾರುವನು ಮು
ಟ್ಟುವುದಿಲ್ಲದಿಪ್ಪೆನೆನೆ ಸರ್ವಜನವೈರವದಱಿಂದ ನಾಂ ಹೊಲೆವೇಷದ
ನೆವವ ಹೊತ್ತಿರಲವಂ ಹೊಲೆಯನೆಂದೆಯ್ದೆ ಕಂ
ಡವರೆಲ್ಲ ತೊಲಗುವರಿದೇ ಬುದ್ಧಿಯೆಂದಾಗ
ರವಿಕುಲನನಾಮಿಕರ ಚೋಹಮಂ ತಳೆದನುತ್ತಮರಱಿದು ತಲೆದೂಗಲು      ೪೦

ಕಂಗೆ ಭಯವೆನೆ ಬೇವ ಹೆಣನ ಹಿಂಡುಗಳ ಮೂ
ಗಿಂಗೆ ಹಗೆಯೆನೆ ಕವಿವ ಕರ್ಬೊಗೆಯ ಕೌಱ ಕ
ರ್ಣಂಗಳಿಗಮಂಗಲಧ್ವನಿಗಳಂ ನೆರಪುವಬಲೆಯರ ಮಲ್ಲಾಮಲ್ಲಿಯ
ಹಿಂಗದೊತ್ತೊತ್ತೆಯಿಂ ಮೆಯ್ಯನೊತ್ತುವ ಜನದ
ಜಂಗುಳಿಯ ಕಾಲೂಱಲರಿದೆನಿಸಿ ನೆರೆದ ಹಲ
ವಂಗದಸ್ಥಿಗಳನಾರಯ್ಯುತ್ತ ಹೊಕ್ಕನಾ ಸುಡುಗಾಡನವನೀಶನು    ೪೧

ನಡೆದು ಹರಿಹರಿದು ಸುಡದಿರು ಸುಡುದಿರೆಲವೊ ಸು
ಟ್ಟಡೆ ನಿಮಗೆ ವೀರಬಾಹುಕನಾಣೆಯೆಂದು ಜಡಿ
ಜಡಿದು ನೆಲದೆಱೆಯ ಹಾಗವನುಟ್ಟ ಕಪ್ಪಡಂಗಳನು ತಲೆಯಕ್ಕಿಗಳನು
ಸುಡುಗಾಡೊಳಲ್ಲಲ್ಲಿಗೆಯ್ದಿ ಬೇಡುವ ಭರದೊ
ಳೆಡಹುತ್ತ ತಾಗುತ್ತಲೆಲುಗಳಂ ಮೆಟ್ಟಿ ತ
ನ್ನಡಿಗಳಳುಕಿತ್ತನಱಿಯದೆ ಹಾಸುಹೊಕ್ಕು ಹರಿದಾಡಿದಂ ಭೂಪಾಲನು       ೪೨

ಮತ್ತೆನಿಸಿದಾ ಕಾಡ ನಟ್ಟನಡುವಣ ದಡದ
ತುತ್ತತುದಿಯೊಳು ವಿಮಾನದ ಮರಂಗಳನು ಕಡೆ
ಹೊತ್ತಿ ಉರಿಕರಿಯಾದ ಕರಿಕೊಳ್ಳಿಗಳನಱಸಿ ತಂದು ಸಿದ್ದಿಗೆಯ ನುಲಿಯ
ಒತ್ತಿ ಬಿಗಬಿಗಿದು ಹಂಜರಿಸಿ ತವಗವನಿಕ್ಕಿ
ಮತ್ತೆ ಮೇಲೊಂದು ತಲೆಗುಡಿಸಿಲಂ ಕಟ್ಟಿ ಕಾ
ಯುತ್ತಿರ್ದನಿರುಳು ಹಗಲೆನ್ನದೊಡೆಯಂ ಬೆಸಸಿದಂತೆ ವಸುಧಾಧೀಶನು        ೪೩

ಮುಂದೆ ಜಾವದೊಳೆದ್ದು ಮಂತ್ರಿ ಗಂಗಾಂಬುವಂ
ಮಿಂದು ಕಾಶೀಪತಿಯನರ್ಚಿಸಿ ಮಹಾದೈನ್ಯ
ದಿಂದ ಕೈಮುಗಿದೆನ್ನಪತಿಗೆ ಬಂಧನ ಮೋಕ್ಷವಂ ಮಾಡಿ ಕರುಣಿಸೆಂದು
ಬಂದು ಭೂವರನ ಮೈ ಕೈ ಕಾಲನೊತ್ತಿ ಮತಿ
ಗುಂದದಿರಿ ಮನದೊಳುಮ್ಮಳಿಸದಿರಿ ಭೂಪಾಲ
ಹಿಂದ ನೆನೆಯದಿರಿ ಹರ ಕರುಣಿಸುವನೆಂದು ಬೋಧಿಸಿ ಸಾಗಿಸುತ್ತಿರ್ದನು        ೪೪

ಪಡಿಯಕ್ಕಿಯಂ ತಂದು ತನ್ನ ಮಂತ್ರಿಯ ಕೈಯ
ಕೊಡಲಾತನದನೊಂದು ವೃಷಭಂಗೆ ಮೇಯಲಿ
ತ್ತೊಡನೆ ಬಳಿವಿಡಿದದಱ ಗೋಮಯವನೆತ್ತಿತಂದೇಕಾಂತದಲ್ಲಿ ತೊಳೆದು
ಕಡೆಗೆ ಜೀರ್ಣಿಸದಕ್ಕಿಯಂ ತಂದು ಕೊಟ್ಟೊಡಾ
ಪೊಡವಿಪಂ ಲಿಂಗಾರ್ಪಿತಂ ಮಾಡಿ ಸವಿದು ಸವಿ
ದಡಿಗಡಿಗೆ ಗಂಗಾಂಬುವನ್ನೀಂಟಿ ಪರಿಣಮಿಸಿ ದಿನವ ಕಳಿಯುತ್ತಿರ್ದನು         ೪೫

ವರವಾರಣಾಸಿಮಧ್ಯವೆ ಲಾಳದೇಶವ
ಚ್ಚರಿಯ ಕಾಶೀಪುರವಯೋಧ್ಯೆ ಶ್ಮಶಾನಧರೆ
ಯರಮನೆ ಪ್ರೇತಗಾಹಿನ ತವಗ ಮಣಿಪೀಠ ಪರಿಣಾಮವಾರೋಗಣೆ
ಪರಮಧೃತಿ ಚತುರಂಗಸೇನೆ ಸಂಬಳಿಗೋಲು
ಕರವಾಳು ಸತ್ಯ ಭಂಡಾರ ಪತಿಯಾಜ್ಞೆ ಭಾ
ಸುರತರ ಕ್ಷತ್ರಧರ್ಮಂಗಳೆಂದೇ ಕಾಣುತಿರ್ದನು ಹರಿಶ್ಚಂದ್ರನು        ೪೬