ಸೂಚನೆ
ದೇಶಾಧಿಪತಿ ಹರಿಶ್ಚಂದ್ರರಾಯನ ಸತ್ಯ
ವಾಸವನ ಸಭೆಯೊಳಗೆ ನೆಗಳ್ದ ಪ್ರಸಂಗದಿಂ
ಕೌಶಿಕ ವಸಿಷ್ಠಮುನಿಗಳಿಗೆ ಘನತರದ ಸಂವಾದಮಂ ಮಾಡಿತಂದು

ಶ್ರೀಪತಿಗೆ ಸೊಬಗನುಡುಪತಿಗೆ ಶಾಂತಿಯನು ವಾ
ಣೀಪತಿಗೆ ಚಾತುರ್ಯಮಂ ದಿವಸ್ಪತಿಗೆ ಪ್ರ
ತಾಪಮಂ ಸುರಪತಿಗೆ ಭೋಗಮಂ ರತಿಪತಿಗೆ ಮೂಲೋಕವಾವರಿಸುವ
ರೂಪಂ ಸರಿತ್ಪತಿಗೆ ಗಂಭೀರತೆಯನು ಸ್ವಾ
ಹಾಪತಿಗೆ ತೇಜಮಂ ಕೊಟ್ಟ ಗುರುಮೂರ್ತಿ ಪಂ
ಪಾಪತಿ ವಿರೂಪಾಕ್ಷನೆಮಗಿಷ್ಟಸಿದ್ಧಿಯಂ ಮಾಳ್ಕೆ ಸಂತೋಷದಿಂದ೧

ಜಡೆಯಿಡುಕುಱೆಡೆಯೆಡೆಯೊಳಡಿಯಿಡುವ ಕಡಲತಡಿ
ವಿಡುದುಡುಗಡಣದೊಡೆಯನೊಡಲೊಡಕು ನಡನಡುಗಿ
ಬಡಕರಿಸಿ ಮಿಡುಮಿಡುಕಲಡಿಗಡಿಗೆ ಜಡಿಜಡಿದು ಪಡಪಡಿಪ ನಡುನಯನದ
ಮಡುವಿಡುವ ಜಲಧಿಯಂ ಕಡೆವ ಕಡೆಯೊಳ್ ಮೂಡಿ
ಘುಡುಘುಡಿಸಿ ಪಡೆಯ ಪಡಲಿಡೆ ಕೆಡಪುವುದ ತುಡುಕಿ
ಪಿಡಿದೊಡನೆ ಪೊಸೆದು ಕೊರಳೆಡೆ ತೊಡೆದ ಹಂಪೆಯ ಮೃಡಂ ಬಿಡದೆ ಸಲಹುಗೆಮ್ಮ    ೨

ಸೋಮ ಸೋಮವಿಭೂಷ ಸುರರಾಜ ರಾಜರಿಪು
ಭೀಮ ಭೀಮಪೃಥುಲಭುಜಶಮನ ಶಮನ ಜಿತ
ಕಾಮ ಕಾಮವಿದೂರ ಗುಣಗಾತ್ರ ಗಾತ್ರ ಪಿಂಗಳಜಟಾರಾಮ ರಾಮ
ನಾಮನಾಮಯ ಗರಳಧರಧರ ಸ್ಥಿರಪುಣ್ಯ
ಧಾಮ ಧಾಮಪ್ರಬಲ ಬಲವಂತ ಶ್ರುತಿಸಕಲ
ಸಾಮ ಸಾಮಸ್ತುತ್ಯ ಪಂಪಾಧಿಪತಿ ವಿರೂಪಾಕ್ಷ ಕರುಣಿಸುವುದೆಮಗೆ            ೩

ನಿರುಪಮ ನಿರಾಲಂಬ ನಿತ್ಯ ನಿರ್ಭಯ ನಿರಾ
ವರಣ ನಿರ್ಮಾಯ ನಿರ್ಮಳ ನಿರ್ವಿಕಲ್ಪ ನಿಜ
ನಿರಸೂಯ ನಿಶ್ಚಿಂತ ನಿರ್ಲೇಪ ನಿರ್ಗುಣ ನಿರಾಧಾರ ನಿತ್ಯತೃಪ್ತ
ನಿರವದ್ಯ ನಿರ್ಭಿನ್ನ ನಿರ್ದ್ವಂದ್ವ ನಿರ್ದೋಷ
ನಿರಪೇಕ್ಷ ನಿಷ್ಕಾಮಿ ನಿಷ್ಕಳ ನಿರಾಕಾರ
ನಿರಜ ನಿರಹಂಕಾರ ನಿರ್ಮಳ ನಿರಾಳ ಪಂಪಾವಿರೂಪಾಕ್ಷ ಶರಣು      ೪

ನುತಕಾಯ ಜಿತಮಾಯ ಪುರಮಥನ ವರಕಥನ
ಧೃತಸೋಮ ಗತಕಾಮ ಚಿರಲಿಂಗ ವರಸಂಗ
ಶ್ರುತಿದೂರ ಮತಿಸಾರ ಗಿರಿಜೇಶ ಸ್ಮರನಾಶ ದುರಿತಹರ ಕರುಣಾಕರ
ಪ್ರತಿರಹಿತ ನುತವಿಹಿತ ಶರದಮಯ ಭರಿತಜಯ
ವಿತತಗಣ ಚತುರಗುಣ ಸುರರಾಜ ವರತೇಜ
ಸಿತಗಳನೆಯತಿಬಳನೆ ಶರಣಾಗು ಗುರುಮೂರ್ತಿ ಪಂಪಾಪುರಾಧೀಶ್ವರ          ೫

ತರುಣಶಶಿಮಲ್ಲಿಕಾಮಾಲೆ ಕೆಂಜೆಡೆದುಱುಬು
ವುರಿಗಣ್ಣು ಕತ್ತುರಿಯ ಬೊಟ್ಟು ಕಪಿಲಾಕ್ಷಿ ಸರ
ಸಿರುಹನಯನಂ ನಾಗಕುಂಡಲಂ ಪೊನ್ನೋಲೆಯೆಸೆವ ಕಱೆ ರನ್ನದಾಳಿ
ಸುರುಚಿರಸ್ಫಟಿಕಹಾರಂ ಹಾರಮಪ್ಪ ಕುಚ
ವರಪಯೋಧರಮಜಿನವಸನಂ ದುಕೂಲವಾ
ಕರಶೂಲಮಬುಜದೊಡರುಂ ನೇವುರಂ ಮೆಱೆವ ದೇವನೆಮ್ಮಂ ಸಲಹಲಿ      ೬

ವಾಣಿಯಱಿವಿನ ಬೆಳಗು ಮುಕುತಿವನಿತೆಯ ಮುಡಿಯ
ಮಾಣಿಕಂ ಸರ್ವಮಂತ್ರಾದಿ ಪಂಚಾಕ್ಷರಿಯ
ಪ್ರಾಣ ಮಂಗಳದ ಮನೆ ದೇವಲೋಕದ ಜನ್ಮ ಭೂಮಿ ತಾವರೆಗಣ್ಣನ
ರಾಣಿಯೆಸೆವೋಲೆವಾಗ್ಯಂ ಸರ್ವಸಿದ್ಧಿಗಳ
ತಾಣಂ ವಿರೂಪಾಕ್ಷನುನ್ನತೈಶ್ವರ‍್ಯದ
ಕ್ಷೋಣಿ ಪಂಪಾಂಬಿಕೆ ಮದೀಯಮತಿಗೀಗೆ ಪ್ರಸನ್ನತೆಯನುತ್ಸವದೊಳು       ೭

ಶ್ರೀಯುಮಾವರನಿಂದುಧರನಭಯಕರನುಗ್ರ
ಮಾಯಾಭಕ್ತ ಭವಹಾರಿ ಗಂಗಾಧಾರಿ
ವಾಯುಭುಗ್ಭೂಷನುತ್ತಮವೇಷನಘತಿಮಿರಪೂಷನತಿವಿಗತದೋಷ
ಸ್ವಾಯತಾಖಿಲ ಲೋಕನಾಯಕವ್ರಜಪುಣ್ಯ
ದಾಯಕಂ ಹರಿವಿರಿಂಚ್ಯಾದಿಪ್ರಮುಖದೇವ
ರಾಯ ಪಂಪಾವಿರೂಪಾಕ್ಷನೆಮಗೀಗೆ ಭಕ್ತಿ ಜ್ಞಾನಸಂಪದವನು         ೮

ಶ್ರೀವಿರೂಪಾಕ್ಷನೊಲು ನಿತ್ಯನಭಿನವಮಹಾ
ದೇವಂ ಜಿತೇಂದ್ರಿಯಂ ನಿಷ್ಕಾಮಿ ದೇಹಗುಣ
ವಾವರಿಸದಮಲ ನಿರ್ಲೇಪನಾರೂಢ ಲೌಕಿಕವಂಟದಪ್ರತಿಮನು
ಭೂವಂದಿತಂ ನಿತ್ಯತೃಪ್ತಂ ಸಮಸ್ತಮುಖ
ಜೀವಾನುಕಂಪಿಯೆಂದೆನಿಸಿ ರಾಜಿಪ ಸುಕೃತ
ಭಾವಿ ಹಂಪೆಯ ಶಂಕರಪ್ರಭು ಮದೀಯ ಮತಿಗೀಗೆ ಪ್ರಸನ್ನತೆಯನು           ೯

ಸಕಲಾಗಮಾಚಾರ್ಯನನಸೂಯನಪ್ರತಿಮ
ನಕಳಂಕನುತ್ತಮನನಂತವೇದಾರ್ಥ ಸಾ
ಧಕನವಿದ್ಯಾತೀತನಾನಂದಮಯನು ಶಾಪಾನುಗ್ರಹಾಧಿಕಾರಿ
ಪ್ರಕಟಿತ ಯಶೋಮಯಂ ಗುಪ್ತಲಿಂಗಪ್ರೇಮಿ
ಸುಕವಿ ಹಂಪೆಯ ಮಾದಿರಾಜನ ಜ್ಞಾನದೀ
ಪ್ತಿಕೆ ಕವಿವ ಮಾಯಾತಮಂಧವಳಿವಂತೆನ್ನ ಹೃದಯದೊಳು ಬೆಳಬೆಳಗುಗೆ    ೧೦

ಭವಭಕ್ತರಲ್ಲದೊಡೆ ಕೈಮುಗಿಯದುದು ತನ್ನ
ಯುವತಿಗಲ್ಲದೆ ಮನವನೆಳಸದುದು ಕಾಯದಿ
ಷ್ಟವ ಹಿಡಿಯದಿಹುದು ನಿಂದೆಯನಾಡದಿಹುದು ಪರದೈವವಂ ಬಗೆಯದಿಹುದು
ಶಿವಲಿಂಗಪೂಜೆಯನಜಸ್ರ ಹಿಂಗದುದು ಕಾ
ಮವಿಕಾರವಾದಿ ಷಡುವರ್ಗವಱಿಯದುದು ನೇ
ಮವಿದೆಂದು ನಡೆವ ಹಂಪೆಯ ಮಹಾದೇವ ಗುರುರಾಯ ರಕ್ಷಿಸುಗೆಮ್ಮನು    ೧೧

ಆ ಮಹಾದೇವರುದರದೊಳು ಗುರುಭಕ್ತಿ ನಿ
ಷ್ಕಾಮವಱಿವಾಚಾರ ನೀತಿ ದಯೆ ಜಂಗಮ
ಪ್ರೇಮ ಶಮೆ ದಮೆ ಶಾಂತಿ ದಾಂತಿ ಚಾತುರ್ಯ ಸತ್ಯವುದಾರವೇಕನಿಷ್ಠೆ
ಸಾಮರ್ಥ್ಯವೆಲ್ಲಾ ಕಲಾಪ್ರೌಢಿ ಸದ್ಗುಣ
ಸ್ತೋಮವೆಲ್ಲಂ ನೆರೆದು ರೂಪಾದುದೆನಿಸುವ ಮ
ಹಾಮಹಿಮ ಹಂಪೆಯ ಹರೀಶ್ವರನ ಮೂರ್ತಿ ನೆಲಸಿರ್ಕೆನ್ನ ಚಿತ್ತದೊಳಗೆ      ೧೨

ವೇದನಾಲ್ಕಱೊಳು ಹದಿನಾಱು ಶಾಸ್ತ್ರಂಗಳೊಳು
ವಾದಿಸುವ ಹದಿನೆಂಟು ಪೌರಾಣದೊಳು ಕೇಳ್ದು
ಶೋಧಿಸಿದೆ ತಿಳಿದೆ ತೂಗಿದೆನೊರೆದೆನಾನಯ್ಯ ಶ್ರೀಗುರುವಿರೂಪಾಕ್ಷನ
ಪಾದವೇ ದಿವ್ಯವಿದಱೊಳಗೊಂದು ಕುಂದಿಲ್ಲ
ಭೇದಿಸುವೊಡೀ ಕೃತಿಗೆ ಪ್ರತಿಯಿಲ್ಲ ಹಂಪೆಯ ಮ
ಹಾದೇವನಾತ್ಮಜನ ರಾಘವಾಂಕನ ಕಾವ್ಯ ತರ್ಕಿಗಿಕ್ಕಿದ ಮುಂಡಿಗೆ    ೧೩

ಮನವಚನಕಾಯದೊಳಗೊಮ್ಮೆಯು ಭಾಳಲೋ
ಚನನಲ್ಲದೆ ಪೊಗಳದುದ್ಫಟಯ್ಯನ ಮಯೂ
ರನ ಕಾಳಿದಾಸನ ಹಲಾಯುಧನ ಕೇಶಿರಾಜನ ಮಲುಹಣನ ಬಾಣನ
ವಿನುತ ಭೋಜನ ಭಲ್ಲಟನ ಭಾರವಿಯ ಪದವ
ನೆನೆದು ಬಲಗೊಂಡು ತೊಡಗಿದೆನೀ ಮಹಾಕೃತಿಯ
ನೆನಗೆ ನೆರವಾಗಿ ನಡೆಸುಗೆ ರಸಂಗೊಡುಗೆ ತಿದ್ದುಗೆ ಸುನಿರ್ವಿಘ್ನದಿಂದ           ೧೪

ಕೃತಿಗೆ ನಾಮಂ ಹರಿಶ್ಚಂದ್ರಚಾರಿತ್ರವೀ
ಕೃತಿಗೊಡೆಯನಮಳಪಂಪಾವಿರೂಪಾಕ್ಷನೀ
ಕೃತಿಗೆ ಪಾಲಕರು ಲೋಕದ ಭಕ್ತಜನವಿದಂ ಪೇಳ್ದಾತನಾರೆಂದೊಡೆ
ಚತುರಕವಿರಾಯ ಹಂಪೆಯ ಹರೀಶ್ವರನ ವರ
ಸುತನುಭಯಕವಿ ಕಮಲರವಿ ರಾಘವಾಂಕಪಂ
ಡಿತನೆಂದೊಡೀ ಕಥಾರಸದ ಲಹರಿಯನು ಬಣ್ಣಿಸದರಾರೀ ಜಗದೊಳು         ೧೫

ಪರರೊಡವೆಯಂ ಕೊಂಡು ಕೃತಿಯ ಪೇಳದ ಭಾಷೆ
ಪರರ ಕಾವ್ಯಾರ್ಥಗಳಂ ಛಿದ್ರಿಸದ ಭಾಷೆ
ಪರರ ದೈವವ ನುತಿಸದಿಪ್ಪ ಭಾಷೆ ಪರರ ಕ್ಲೇಶವೀಕ್ಷಿಸದ ಭಾಷೆ
ಪರರ ನಿಂದಿಸಿ ತನ್ನ ಹೊಗಳಿಕೊಳ್ಳದ ಭಾಷೆ
ಪರರ ವಧುವಂ ಕಂಡು ಮನವೆಳಸದಿಹ ಭಾಷೆ
ಪರರ ವಸ್ತುವ ತೃಣಕೆ ಸರಿಯೆಂಬ ಭಾಷೆಯಿದು ರಾಘವಾಂಕಗೆ ಸಂದುದು     ೧೬

ವಸುಧಾಧಿಪತಿ ಹರಿಶ್ಚಂದ್ರ ಘನಸತ್ಯನೆಂ
ದೊಸೆದು ವಾಸಿಷ್ಠನಿಂದ್ರಂಗೆನಲು ಕೌಶಿಕಂ
ಹುಸಿಮಾಳ್ಪೆನೆಂದು ಭಾಷೆಯನಿತ್ತು ಧರೆಗೆ ಬಂದವನಿಪನ ಸತಿಪುತ್ರರ
ಅಸುವಂತ್ಯವೆನೆ ನಿಗ್ರಹಂಮಾಡಿಯೊಪ್ಪದಿರೆ
ಶಶಿಮೌಳಿ ಶ್ರೀವಿಶ್ವನಾಥ ಭೂಪಂಗೆ ಕರು
ಣಿಸಿ ಸಕಲಸಾಮ್ರಾಜ್ಯವಿತ್ತಾತನಂ ಮೆಱೆದ ಕೃತಿ ಪುಣ್ಯದಾಕೃತಿಯಿದು         ೧೭

ಇದು ಕಥಾಬೀಜವೀ ಬೀಜಮಂ ಬಿತ್ತಿ ಬೆಳೆ
ಸಿದಪೆನೀ ಕಾವ್ಯವೃಕ್ಷವನಿದಕೆ ನಿಮ್ಮ ಪುಳ
ಕದ ಗೊಬ್ಬರವನು ತಳಿದಾನಂದಜಲವೆಱೆದು ಸಲಹಿ ಮಡಲಿಱೆದರ್ಥದ
ಹೊದಱ ನೆಳಲಂ ಸಾರ್ದು ತುದಿಮೊದಲ್ತನಕ ಹೇ
ಱಿದು ನವ್ಯಫಳರಸಂಗಳನು ಸವಿಸುವುದು ಲೋ
ಕದ ಶಿವಪದಾರ್ಚಕರು ಮಾನಿಗಳು ರಸಿಕರುತ್ತಮರು ಸುಕಲಾಪ್ರೌಢರು         ೧೮

ಚಿತ್ತದೊಳು ವಿಮಲರಸಭಾವಭರಿತಾರ್ಥಸಂ
ಪತ್ತು ಸಜ್ಜನರ ಪುಳಕಾಂಕುರಂಗಳನು ಹೊ
ತ್ತೆತ್ತಿಯಾನಂದಾಶ್ರುಬಿಂದುವ್ರಜಂಗಳಿಂ ಸಲಹಿ ಮಡಲಿಱಿದು ಬೆಳೆದು
ಮತ್ತೊಂದಱಭಿಲಾಷೆಯಂ ಮಱೆದು ಕಳೆದು ತ
ಮ್ಮತ್ತಲೆಱಗಿಸುವ ಶಿವಭಕ್ತಿವಲ್ಲರಿಯ ಹೊಸ
ಬಿತ್ತಿದೆಂದೆನಿಸುವ ಹರಿಶ್ಚಂದ್ರನೃಪಕಥಾವೃತ್ತಾಂತವೆಂತೆಂದೊಡೆ    ೧೯

ರಸದೊಳರ್ಥದೊಳು ಭಾವದೊಳಲಂಕಾರದೊಳು
ಪೊಸರೀತಿಯೊಳು ಬಂಧದೊಳು ಲಕ್ಷಣದೊಳು ಪದ
ವಿಸರದೊಳು ಕಾವ್ಯದೊಳು ತಪ್ಪುಳ್ಳಡಿದಱೊಳಗೆ ಪರರು ಕೈಯಿಕ್ಕದಂತೆ
ಸಸಿನೆ ಮಾಡುವುದು ತಿದ್ದುವುದು ಕೊಂಡಾಡಿ ಲಾ
ಲಿಸಿ ಕೇಳ್ವುದೆಲ್ಲಾ ಶಿವಾರ್ಚಕರು ನಾಂ ನಿಮ್ಮ
ಶಿಶುವೆನಗೆ ಕುಂದಿಲ್ಲವೇತಱಿಂದೆನಲೆನ್ನ ಭರಭಾರ ನಿಮ್ಮದಾಗಿ    ೨೦

ನುಡಿಲಕ್ಷಣಾರ್ಥ ರಸಭಾವಜ್ಞರೆನಿಸುವು
ಗ್ಗಡದ ಕವಿಗಳ ಕಾವ್ಯದಿದಿರಲೇಕೋ ತನ್ನ
ಜಡಮತಿಯೊಳೀಶನಂ ಬಣ್ಣಿಸುವನೆಂದೆನ್ನ ನಗಲಾಗದೇಕೆಂದೊಡೆ
ಬಡವರ ಮನೆಯ ಸೊಡರು ಕಂದುವುದೆ ಗುಡ್ಡಿಹಸು
ಬಿಡೆಕಱೆದ ಹಾಲು ಕಹಿಯಪ್ಪುದೇ ಎನ್ನ ಕೃತಿ
ಪೊಡವಿಯೊಳು ಸಲುವುದಿದಕೇಕೆ ಸಂಶಯವೆಲವೊ ನಂಬು ನೀಡಿದೆ ಕೈಯನು೨೧

ನೆರೆದು ನೆರದೀ ಕೃತಿಯೊಳುಳ್ಳ ಲೇಸುಗಳನಾ
ದರಿಸಬೇಡುಳ್ಳ ತಪ್ಪಂ ಹಿಡಿವುದೆಂದು ನಿ
ಷ್ಠುರದುರ್ಜನರ್ಗೆ ವಂದಿಸುವೆನೆನ್ನ ಜನಂ ನಗಲಾಗದೇಕೆಂದೊಡೆ
ವರಮುಕುರಮಂ ತೊಡೆವರಾರಂಗಳವನು ಬೋ
ಹರಿಪರಾರ್ಮಳಿನಾಂಬರವನೊಗೆವರಾರಿದಂ
ಪರಿಕಿಪೊಡೆ ಸುಜನರಂತಿರ್ದಡೀ ಕೃತಿಗವರು ಕುಂದುಗಾಣಿಸಲಱಿಯರು       ೨೨

ನಡೆವರೆಡಹದೆ ಕುಳಿತರೆಡಹುವರೆ ಕಾವ್ಯಮಂ
ನಡಸುವಾತಂ ರಸಾವೇಶ ಮಱಹಾಲಸ್ಯ
ವೆಡೆಗೊಳಲು ತಪ್ಪುಗಲ್ಲದೆ ಕಾವ್ಯಕರ್ತೃ ತಪ್ಪುವನೆವೊಂದೆರಡೆಡೆಯೊಳು
ಎಡೆವಾಯ್ದು ಬಂದ ತಪ್ಪಂ ಹಿಡಿದು ಸಾಧಿಸದೆ
ಕಡೆತನಕ ಬಂದ ಲೇಸಿಂಗೆ ತಲೆದೂಗೆ ತಲೆ
ಯೊಡೆವುದೇ ಬೇನೆಯಱಿಯದ ನೀರಸರನೇಕೆಪುಟ್ಟಿಸಿದನುಬುಜಭವನು       ೨೩

ವ್ಯಾಕರಣ ಪರಿಣತನಲಂಕಾರ ಪರಿಚಿತನ
ನೇಕರಸನಿಪುಣನಭಿಧಾನಪ್ರವೀಣನೆ
ಲ್ಲಾ ಕಲಾಕುಶಲನೆನಿಪಾತಂ ಕವೀಶನವನಿದಿರೊಳೇನುವನಱಿಯದ
ಕಾಕುದುರ್ಬೋಧಕಂ ಕವಿಯೆನಿಸೆ ಕುಂದೇ ಮ
ಹಾಕವಿಗೆ ಜಲಶಯನ ವಿಷ್ಣು ಹರಿಯೆನಿಸಿದೊಡೆ
ಭೇಕನುಂ ನೀರೊಳಗೆ ಹರಿಯೆನಿಸಿಕೊಂಡೊಡದ ಕೊಂದನೇ ಚಕ್ರಧರನು         ೨೪

ಕವಿಯಧಿಕನಿರ್ದೊಡೇಂ ಕೇಳ್ವರಿಲ್ಲದೊಡೆ ಗಾ
ನವಿನೋದಿಯಿರ್ದೊಡೇಂ ಜಾಣರಿಲ್ಲದೊಡೆ ಜಾ
ತಿವಿದಗ್ಧೆಯಿರ್ದೊಡೇಂ ಸುವಿಟರಿಲ್ಲದೊಡೆ ಪೊಸಪೂಮಾಲೆಯಿರ್ದೊಡೇನು
ತವೆ ಮುಡಿವರಿಲ್ಲದೊಡೆ ನಾನಾ ಕಳಾನ್ವಿತರ
ನಿವಹವಿದ್ದೇನಾ ಕಲಾಪ್ರೌಢರಿಲ್ಲದೊಡೆ
ಇವನೆಯ್ದೆ ಬಲ್ಲವನಪೂರ್ವ ಮೇಣುಳ್ಳಡವ ದೇವನಲ್ಲದೆ ಮನುಜನೆ       ೨೫

ಇಳೆಯೊಳೊಂದೂರೊಳೆಂತಕ್ಕೆ ಪುಣ್ಯಾಧೀನ
ದೊಳು ಸಮಂತೊಬ್ಬಿಬ್ಬರಂ ಮೆಚ್ಚಿಸುವವನಲ್ಲ
ತಿಳಿದು ಕೇಳದೊಡಱಿಯೆ ಕೇಳ್ದೆನ್ನ ಕಾವ್ಯಾರ್ಥಮಂ ಕಿವಿಯ ಸೆಱಗುಗಳಲಿ
ತಳೆದ ಕವಿಗಳ ಗಮಕಿಗಳ ವಾದಿಗಳ ವಾಗ್ಮಿ
ಗಳ ರಸಾವೇಶಿಗಳ ತಲೆದೂಗಿಸುವೆನೆಂದ
ಡುಳಿದ ದುರ್ಜನರು ಮೆಚ್ಚದೊಡೆಂತೆನಲ್ಕದಕೆ ಕೇಳು ಮೇಲುತ್ತರವನು       ೨೬

ರೋಗಿ ಹಳಿದೊಡೆ ಹಾಲು ಹುಳಿಯಪ್ಪುದೇ ಹಗಲ
ಗೂಗೆ ಕಾಣದೊಡೆ ರವಿ ಕಂದುವನೆ ಕಂಗುರುಡ
ನೇಗೈದುವುಂ ಕಾಣದೊಡೆ ಮುಕುರ ಕೆಡುವುದೇ ದುರ್ಜನರು ಮೆಚ್ಚದಿರಲು
ನಾಗಭೂಷಣನ ಕಾವ್ಯಂ ಕೆಡುವುದೇ ಮರುಳೆ
ಹೋಗಲಾ ಮಾತದೇಕಂತಿರಲಿ ಕಡೆತನಕ
ಮೇಗುತ್ತರೋತ್ತರವನೀವ ಭಾಷೆಗಳನವಧರಿಸುವುದು ಸಾಹಿತ್ಯರು೨೭

ಬಗೆವೆರಸಿ ಸಂದಷ್ಟವಾದಡಱಿಯೆಂ ಪರೋ
ಕ್ತಿಗಳರ್ಥಮಂ ಕಳುವುದಧಮತನವಱಿದಳುಪಿ
ತೆಗೆದೆನಾದೊಡೆ ಬಳಿಕವರ್ ಮಿಂದ ನೀರ್ಗೆ ಮುಡಿಯಿಂ ತೆಗೆದ ಪೂಮಾಲೆಗೆ
ಉಗುಳ್ದ ತಂಬುಲಕುಟ್ಟು ಕಳೆದ ಮೈಲಿಗೆಗೆ ಸವಿ
ದೊಗಡಿಸಿದ ಕೂಳ್ಗೆ ಕೈಯಾಂತವಂ ಬೇಱೆ ಸಂ
ದೆಗವಿಲ್ಲೆನಿಪ್ಪಾ ಪ್ರತಿಜ್ಞೆ ಹಂಪೆಯ ರಾಘವಾಂಕ ನಿನಗಲ್ಲದಹುದೇ            ೨೮

ಮುಂತೆ ಸರಿಯಿಲ್ಲೆಂದು ಪೊಗಳ್ದವರು ಪೊಱಮಟ್ಟ
ಪಿಂತವನ ಕವಿತೆಯೇನೆಂದು ನಿಂದಿಸಿ ತಮ್ಮ
ತೊಂತಗವಿತೆಯ ತೂಂಬನುರ್ಚಿ ನೆರೆದೂರುಗರ ನಡುವೆ ನಿಜನಿಳಯದೊಳಗೆ
ಮಂತಣಂಗೊಂಡು ಕಾಳ್ಗೆಡೆದೂಳ್ವ ಕವಿಯೆದೆಯ
ಕೊಂತ ಮೂಗಿನ ಕತ್ತಿಯಧಟಕವಿನಿಕರಚೌ
ದಂತ ಹಂಪೆಯ ರಾಘವಾಂಕಪಂಡಿತನುಭಯಕವಿ ಶರಭಭೇರುಂಡನು           ೨೯

ಗಿರಿಜಾವಿವಾಹಮುಪಮನ್ಯುಚರಿತಂ ಗಜಾ
ಸುರಮಥನ ದಕ್ಷಾಧ್ವರಂ ಕಾಲದಲನ ವಿಷ
ಹರಣ ಪಂಪಾಕ್ಷೇತ್ರ ಭಿಕ್ಷಾಟನಂ ಕಾಮದಹನ ಕಾಶೀವರ್ಣನಂ
ಪುರವಿಜಯಮಂಧಾಸುರಧ್ವಂಸನಂ ಜಲಂ
ಧರದಹನ ಕಾಳಿಕಾಕಾಂಡದೊಳಗಾದ ಶಂ
ಕರಲೀಲೆಗಳನು ಹಲವಿತಿಹಾಸಕಥನಮಂ ಪೇಳ್ವೆನೀ ಕಾವ್ಯದೊಳಗೆ  ೩೦

ಕೆಳೆತನದ ಬಂಧು ವಿಷಯದ ನಂಟುವೆಱಗುಗಳ
ಬಲದೊಳಾಂ ಕವಿಯೆಂದು ಕವಿರಾಯನೆಂದು ವೆ
ಗ್ಗಳಿಸಿ ಕಾಳ್ಗೆಡೆದಡದ ಸೈರಿಸುವೆನಲ್ಲದಾ ನಂಟನೀಡಾಡಿ ಮಲೆತು
ಬಳಿಕ ಕವಿಯೆಂದು ವೈಯಾಕರಣಿಯೆಂದು ವೆ
ಗ್ಗಳಿಸಿ ದನಿಗೈವ ದುಷ್ಕವಿಯ ಗರ್ವದ ಮೂಗ
ನಿಳುಹದಿರನುಭಯಕವಿಶರಭಭೇರುಂಡ ಹಂಪೆಯ ರಾಘವಂ ಸಭೆಯೊಳು      ೩೧

ಎನಿತು ಸಿರಿ ಸಾರ್ವಡಂ ಮಾಣ್ಬಡಂ ನಿತ್ಯತ್ವ
ವನುವಪ್ಪಡಂ ಸಾವಡಂ ಮೆಚ್ಚಿ ಹಂಪೆಯರ
ಸನ ಪೊಗಳ್ವ ನಾಲಗೆಯೊಳನ್ಯದೈವವ ಭವಿಗಳಂ ಕೀರ್ತಿಸಿದೆನಾದೊಡೆ
ಮನಸಿಜಾರಿಯ ಭಕ್ತನಲ್ಲ ತಾನೆನಿಪ ಬಿರು
ದಿನ ಕವಿಯೆನಿಪ್ಪ ಹಂಪೆಯ ರಾಘವಾಂಕನೊ
ಯ್ಯನೆ ಪೇಳ್ದನೆಂಬಾಗಳೀ ಕೃತಿಯನಾವ ಸಜ್ಜನರು ಕೊಂಡಾಡದಿಹರು        ೩೨

ಧರೆಯಱಿಯಲೀ ಕೃತಿಗೆ ಮೊದಲಾವುದೆನೆ ತರಳ
ತರ ತರಂಗಾವರ್ತ ಗರ್ತ ನೀಹಾರ ಶೀ
ಕರದ ನಿಕರಂ ಜರಠಕಮಠ ಪಾಠೀನಚಯ ಡಿಂಡೀರ ಪಿಂಡಷಂಡ
ಕರಿ ಮಕರ ನಕ್ರ ಶೈವಾಳ ವಿದ್ರುಮ ರತ್ನ
ವರಶಿಂಶುಮಾರ ಬುದ್ಬುದ ತಿಮಿ ತಿಮಿಂಗಿಳೋ
ತ್ಕರ ಜಳೂಕ ವ್ಯಾಳ ಕೋಳಾಹಳಧ್ವಾನವೆರಸಿ ಜಲನಿಧಿ ಮೆಱೆದುದು         ೩೩

ಆ ರುಚಿರವನಧಿಪರಿಯಂತ ವಸುಧಾಮಧ್ಯ
ಮೇರುವಿನ ದಕ್ಷಿಣಾಶೆಯೊಳು ಕಬ್ಬಿನ ಬಿಲ್ಲ
ವೀರನರಲಂಬಿನಾಡುಂಬೊಲಂ ಸಕಲಸುಖಸಂಪದದ ಜನ್ಮಭೂಮಿ
ಭಾರತಿಯ ನೆಲೆವೀಡು ಮಂಗಳಂಗಳ ನಿಜಾ
ಗಾರ ಲಕ್ಷ್ಮಿಯ ರಾಜಧಾನಿಯೆನಲೊಪ್ಪುವುದು
ಚಾರುತರ ಲಾಳದೇಶ ಪರಮಭಕ್ತಿಕೋಶಂ ಶ್ರುತಿಚಯಾದೇಶವು     ೩೪

ಆ ಲಾಳದೇಶ ಮಧ್ಯಸ್ಥಳದೊಳಧಟ ಭೂ
ಪಾಲವೆಸರಂತಳೆದ ಪಂಕೇಜಸಖಕುಲದ
ಪೀಳಿಗೆಯ ರಾಯರ್ಗೆ ವೀರಸಿರಿ ಸಲೆ ನಲಿದು ಕೈಗೆಯ್ದು ಜಯತವಗದ
ಮೇಲಿಟ್ಟ ರತ್ನ ಸಿಂಹಾಸನದ ಚೆಲುವಿನಿಂ
ತ್ರೈಲೋಕ್ಯದೊಳು ಪ್ರತಿವಿಹೀನವೆನಿಸಿರ್ಪ ಕೀ
ರ್ತ್ಯಾಳಾಪದಿಂದಯೋಧ್ಯಾಪುರದ ದುರ್ಗಮಿಂತೆಸೆದುದೇವಣ್ಣಿಸುವೆನು       ೩೫

ಕಾಲಭೈರವನ ಕದನದ ಕಳನೊ ಭೂಸತಿಯ
ಭಾಳಾಕ್ಷವೋ ಪ್ರಳಯಕಾಲದಗ್ಗದ ಸಿಡಿಲ
ಹೋಳೊ ರವಿಕುಲದ ವೈರಿಗಳ ಶುಭಕೀರ್ತಿಶಶಿಯಂ ಪಿಡಿವ ರಾಹುವಿಪ್ಪ
ಹೇಳಿಗೆಯೊ ರಿಪುವಿಪಿನದವ ಹರಿಶ್ಚಂದ್ರ ಭೂ
ಪಾಲನ ಪ್ರಬಳಪ್ರತಾಪಶರಧಿಯ ಸುಳಿಯೊ
ಹೇಳೆನಲಯೋಧ್ಯಾಪುರಂ ಮೆಱೆವುತಿರ್ದುದು ಭಯಂಕರಾಕಾರದಿಂದ          ೩೬

ಅಟ್ಟಣೆಯೊ ಸುರರ ನಗರಕ್ಕೆ ಧಾಳಿಡಲು ತಂ
ದಿಟ್ಟ ನಿಚ್ಚಣಿಗೆಗಳೊ ಕೊತ್ತಳವೊ ಗಗನದೊಳು
ಬಟ್ಟೆಯಂ ನಡೆದು ಬೆಂಡಾದ ಖಚರರು ಸಾರಲೆಂದಿಟ್ಟ ಭದ್ರಂಗಳೊ
ನಟ್ಟ ಡೆಂಕಣಿಗಳೊ ಹಗೆಗಳನು ದುರ್ಗವಱೆ
ಯಟ್ಟಲೆತ್ತಿದ ಹಲವು ಕೈಯೊ ಪರಿಖೆಯ ಪರ್ವಿ
ನೊಟ್ಟಜೆಯೊ ಪುರದ ಪರಿವೇಷವೋ ಎನಿಸಿತೆಂಬಾಗಳಿನ್ನೇವೊಗಳ್ವೆನು        ೩೭

ಸಲೆ ನಿಲೆ ದಿನೇಶವಂಶದ ಲಕ್ಷ್ಮಿನೆಲಸಿರ್ಪ
ಜಲಜದೆಸಳ್ಗಳೊ ವೈರಿಗಳ ಭಯಂಕರಬೀಜ
ಕುಲದಗೆಯ ಸಾಲೊ ನೆಱೆ ಮೇಲೆತ್ತಿಬರ್ಪ ರಿಪುರಾಯರಂ ಮೋದಿ ಮುಱಿದು
ಮೆಲಲೆಂದು ದುರ್ಗ ಬಾಯ್ದೆಱೆದೆಸೆವ ದಂತವೋ
ತಿಳಿಯಲರಿದೆನಲಯೋಧ್ಯಾಪುರದ ಕೋಂಟೆಯೊಳು
ತಳಿತ ರನ್ನದ ತೆನೆಯ ತೆಕ್ಕೆ ಮಿಕ್ಕೊಪ್ಪಿದವು ಮೇಘಮಂಡಲವ ಬಗಿದು       ೩೮

ಭರದೊಳಮರಾವತಿಯ ಸೊಬಗನಳಕಾಪುರಿಯ
ಸಿರಿಯ ಮಧುರಾಪುರದ ಮಂಗಳವ ಶೋಣಿತಾ
ಪುರದ ದರ್ಪವನು ಲಂಕಾಪುರದ ಜಸವ ಯಮಪುರದ ರೌದ್ರತ್ವದ
ಉರಗೇಂದ್ರಪುರದ ರಚನೆಗಳನಿಂದ್ರಪ್ರಸ್ಥ
ಪುರದ ಬಲವಂ ಹಿಳಿದು ಬಳಿದು ಕರುವಂ ಕಟ್ಟಿ
ಸರಸಿಜದ ಕಂದನೀ ಪುರವ ನೆಱೆಯದೆ ಮಾಣನೆನಿಸಿತಂತಾ ದುರ್ಗವು            ೩೯

ಸುರಪತಿಯ ಭೋಗವಹ್ನಿಯ ತೇಜವಂಧಕಾ
ಸುರನದಟು ನೈರುತಿಯ ಕಾಯ್ಪು ರತ್ನಾಕರೇ
ಶ್ವರನ ಗಂಭೀರವನಿಲನ ಬಲಂ ವಿತ್ತಪನ ಸಿರಿ ರುದ್ರನುಗ್ರತ್ವವು
ತರಣಿಯ ಪ್ರಭೆ ಧರೆಯ ಧೈರ್ಯ ಚಂದ್ರನ ಶಾಂತಿ
ವೆರಸಿ ರೂಪಾದುದೆನಿಸುವ ಹರಿಶ್ಚಂದ್ರಭೂ
ವರನಾ ಪುರಕ್ಕೊಡೆಯನರಿಶರಧಿವಡಬನಾರಾತಿಗಜಪಂಚಾಸ್ಯನು    ೪೦

ತನುರುಚಿಯ ಮುಂದೆ ದಿನಪನ ಕಾಂತಿ ಕಪ್ಪಕ
ಪ್ಪನೆ ಕೋಪದಿದಿರೊಳೂರ್ವಾನಳಂ ತಣ್ಣತ
ಣ್ಣನೆ ಕೊಡುವ ಕೈಯಿದಿರೊಳಮರತರು ಮೆಲ್ಲಮೆಲ್ಲನೆ ಮೋಹನವನಪ್ಪಿದ
ಘನರೂಪಿನಿದಿರೊಳಂಗಜರೂಪು ನೊಪ್ಪನೊ
ಪ್ಪನೆ ಗಭೀರತೆಯಿದಿರಲಂಬುನಿಧಿ ತೆಳ್ಳತೆ
ಳ್ಳನೆ ಶಾಂತಿಯಿದಿರ ಶಶಿ ಬೆಚ್ಚ ಬೆಚ್ಚನೆಯೆನೆ ಹರಿಶ್ಚಂದ್ರನೆಸೆದಿರ್ದನು         ೪೧

ಧರೆಯೊಳು ಹರಿಶ್ಚಂದ್ರಭೂಭುಜಂ ತನ್ನ ಸಾ
ರ್ದರ ಬೇಡಿದರ ಬಯಸಿದರ ಸೋಂಕಿದರ ಬೆರಸಿ
ದರನು ತನ್ನಂತೆ ಮಾಳ್ಪುನ್ನತಿಕೆಯಂ ಕಂಡು ನಾಚಿ ಸಿಗ್ಗಾಗಿ ಸೆಡೆದು
ಮರನಾಯ್ತು ಚಂದನಂ ಸ್ವರ್ಗಸ್ಥವಾಯ್ತು ಸುರ
ತರು ಮೂಗುವಟ್ಟುದಮರರ ಧೇನು ಕಲ್ಲಾಯ್ತು
ಪರುಷ ಕಟ್ಟನೆ ಕರಗಿತೆನೆ ಸಿದ್ಧರಸವಂದುಮೊದಲಾಗಿ ಮೂಜಗದೊಳು       ೪೨

ಪರಿಭವಿಸಿ ನಂದಿಸಿ ತಗುಳ್ದೊರಸಿ ಪೀರ್ದು ಧಿ
ಕ್ಕರಿಸಿ ಡೊಕ್ಕರಿಸಿ ಝಂಕಿಸಿ ಸುರಪನಗ್ನಿ ಯಮ
ನಿರುತಿ ವರುಣ ಮರುತ ಧನದನೀಶಾನ್ಯರೆಂಬವರ ಪವಿಶಕ್ತಿದಂಡ
ವರಕೊಂತ ಪಾಶಧ್ವಜಂ ಖಡ್ಗ ಶೂಲತತಿ
ವೆರಸಿ ಕರಿ ತಗರು ಕೋಣಂ ನರಂ ಮಕರ ಬೆ
ಳ್ಳೆರಲೆ ಹಯ ವೃಷಭಂಗಳಂ ಸೆಳೆದು ತಹನು ತತ್ತಡೆ ಹರಿಶ್ಚಂದ್ರ ನೃಪನು    ೪೩

ವರರೂಪಿನೊಳು ರತಿಗೆ ಹೊಣಕೆ ಸೌಭಾಗ್ಯದೊಳು
ಸಿರಿಗೆ ಹೊಯಿಕೈ ಜಾಣಿನೊಳು ವಾಣಿಗಿಮ್ಮಿಗಿಲು
ಚರಿತದೊಳು ಗಂಗೆಗಲಗಣಸು ಪತಿಭಕ್ತಿಯೊಳರುಂಧತಿಗೆ ಸರಿ ಜಸದೊಳು
ಪರಮರೋಹಿಣಿಗೆ ಹೆಗಲೆಣೆ ಪುಣ್ಯದೊಳು ಸ್ವಧಾ
ತರುಣಿಗೋರಗೆ ವಂದ್ಯತೆಯೊಳು ಗಾಯಿತ್ರಿಗೊರೆ
ದೊರೆಯೆನಿಸಿ ಮೆಱೆವಳು ಹರಿಶ್ಚಂದ್ರನೃಪನರಸಿ ಚಂದ್ರಮತಿ ಭೂತಳದೊಳು           ೪೪

ತೊಡರ್ವ ರಾಯರನೊರಸಿದಪೆನೆಂದು ನುಡಿನುಡಿದು
ನುಡಿಗಲಿತು ರಣದೊಳಾಂತವರ ಸರ್ವಸ್ವಮಂ
ಪಿಡಿಪಿಡಿದು ಪಿಡಿದು ನಿಂದಿರಕಲಿತು ಹಗೆಯ ಬಯ್ತಲೆಯ ಬಟ್ಟೆಯೊಳೊಮ್ಮೆಯು
ನಡೆನಡೆದು ನಡೆಗಲಿತು ರಿಪುಗಳಲಿ ಕಪ್ಪಮ
ಬಿಡಬಿಡದೆ ಕೊಂಡು ಕೊಂಡುಣಕಲಿತು ಕೀರ್ತಿಯೊಡ
ನೊಡನೆ ಪರಿಪರಿದು ಪರಿದಾಡ ಕಲಿತಂ ಲೋಹಿತಾಶ್ವನೆಂಬ ಕುಮಾರನು      ೪೫

ಪತಿಹಿತಂ ಪೌರಜನದುತ್ಸವಂ ದೇಶದು
ನ್ನತಿ ದುಷ್ಟರೆದೆಗಿಚ್ಚು ಶಿಷ್ಟರಾನಂದವತಿ
ಚತುರ ಚೌಷಷ್ಟಿಕಳೆ ಸಾಮಭೇದಾದಿಮಂತ್ರಾಳಾಪವೀಶಭಕ್ತಿ
ನುತವೀರವಿತರಣಗುಣಂ ಪುಣ್ಯನೀತಿ ಸಂ
ತತಿಗಳೆಲ್ಲಂ ನೆರೆದು ರೂಪಾದುದೆಂಬಂತೆ
ಮತಿವಂತ ಸತ್ಯಕೀರ್ತಿಯೆನಿಪ್ಪನೇಕಪ್ರಧಾನನಾ ಭೂಮಿಪತಿಗೆ        ೪೬

ಪೊಡವಿಯಂ ಬಗಿವ ಫಣಿಪನನುಗಿವ ಜಲಧಿಯಂ
ಕುಡಿವ ವಡಬನ ಹಿಡಿವ ಗಿರಿಗಳಂ ಪೋಳ್ವ ಹಗ
ಲೊಡೆಯನಂ ತೂಳ್ವ ಮೃತ್ಯುವನು ತುತ್ತುವ ದಿಶಾಧಿಪರ ಮುತ್ತುವ ಸಿಡಿಲನು
ಹುಡಿಗೈವ ದೆಸೆಯ ಮೂಲೆಯ ಕೊಯ್ವ ದಿಗ್ಗಜದ
ಕುಡುದಾಡೆಯಂ ಮುಱಿವ ನಕ್ಷತ್ರಮಂ ತಱಿವ
ಕಡುಗಲಿಗಳೆಂಬತ್ತು ಪದ್ಮನಾಯಕರುಳಿದ ಪಡೆಯನಿನ್ನಾರೆಣಿಪರು೪೭

ತ್ಯಾಗಕ್ಕೆ ಬುಧರು ತಣಿವವಧಿ ರಾಜ್ಯಕ್ಕೇಳು
ಸಾಗರದ ತಡಿಯವಧಿ ಭಕ್ತಿಗೀಶ್ವರನ ತಲೆ
ದೂಗಿಸುವುದವಧಿ ಕೀರ್ತ್ಯಂಗನೆಯ ಸುಳಿವಿಂಗೆ ಮೂಲೋಕವವಧಿ ವಿಪುಳ
ಭೋಗಕ್ಕೆ ಸರ್ವಸುಖವವಧಿ ವೀರಕ್ಕೆ ಭೂ
ಭಾಗದೊಳು ನಿಷ್ಕಂಟಕತ್ವವೇ ಅವಧಿ ತಾ
ನಾಗಿ ಪಿರಿಯರಸುತನಮಂ ಮಾಡುತಿರ್ದನು ಹರಿಶ್ಚಂದ್ರಭೂನಾಥನು          ೪೮

ಮಸುಳಿಸದ ತೇಜ ಮಾಸದ ಕೀರ್ತಿ ಕಲಿಹುಗದ
ಹೆಸರಿಂಗದೋಜೆ ಕೊರಗದ ದರ್ಪವುಗದ ಬಗೆ
ಹುಸಿಹುಗದ ನುಡಿ ಮಾಯೆ ಮುಸುಕದಱಿವಾಲಸ್ಯವಡಿಯಿಡದ ಪರಮಭಕ್ತಿ
ನಸುಲೋಭ ನಡದ ಸಿರಿ ಭೀತಿ ಬೆರಸದ ವೀರ
ದೆಸಕವಿದಿರೊಗೆಯದುನ್ನತಿ ಸಹಜವೆನಿಸಿ ರಾ
ಜಿಸುತಂ ಹರಿಶ್ಚಂದ್ರಭೂಭುಜಂ ಸುಖದೊಳಿರಲಿತ್ತಲಮರಾವತಿಯೊಳು       ೪೯