ನಮ್ಮ ದೇಶದಲ್ಲಿ ರಾಘವೇಂದ್ರ ಸ್ವಾಮಿಗಳ ಹೆಸರನ್ನು ಕೇಳದಿರುವವರು ಯಾರು ? ಊರು- ಊರಿನಲ್ಲಿ ಅವರ ಗುಡಿ, ಮನೆ- ಮನೆಯಲ್ಲಿ ಅವರ ಪಟ; ದಿನ-ದಿನವೂ ಅವರ ನೆನಪು.  ಅವರು ಕಣ್ಮರೆಯಾಗಿ ಮುನ್ನೂರು ವರ್ಷಗಳ ಮೇಲಾದರೂ ಜನ ಅವರನ್ನು ಮರೆತ್ತಿಲ್ಲ: ಅವರ ಆರಾಧನೆ ಇಂದಿಗೂ ವಿಜೃಂಭಣೆಯಿಂದಲೇ ನಡೆಯುತ್ತಿದೆ. “ತಿರುಪತಿ ತಿಮ್ಮಪ್ಪ, ಮಂಚಾಲೆ ರಾಘಪ್ಪ” ಎಂದು ಜನ ಸ್ಮರಿಸಿಕೊಳ್ಳುವಷ್ಟರವರೆಗೆ ಅವರ ಪ್ರಭಾವ ಮೂಡಿದೆ.

ರಾಘವೇಂದ್ರ ಸ್ವಾಮಿಗಳು, ಅವರ ಹೆಸರೇ ತಿಳಿಸುವಂತೆ, ಸ್ವಾಮಿಗಳು, ಎಂದರೆ ಸಂನಾಸಿಗಳು. ಮಧ್ವಾಚಾರ್ಯರ ಪರಂಪರೆಯಲ್ಲಿ ಬಂದು ದೊಡ್ಡ ಮಠವೊಂದರ ಒಡೆಯರಾಗಿದ್ದವರು, ಅವರ ಹಿರಿಮೆಯಿಂದ ಆ ಮಠಕ್ಕೆ ಮೊದಲಿದ್ದ ಹೆಸರು ಮರೆತುಹೋಗಿ, “ರಾಘವೇಂದ್ರ ಸ್ವಾಮಿಗಳ ಮಠ”ವೆಂದೇ ಜನರಲ್ಲಿ ಬಳಕೆಗೆ ಬಂದಿತು.  ಅವರು ತುಂಬ ಪ್ರತಿಭಾಶಾಲಿಗಳಾದ ಪಂಡೀತಗರು ; ಹತ್ತಾರು ಪ್ರೌಢ ಗ್ರಂಥಗಳನ್ನೂ ಬರೆದಿದ್ದಾರೆ. ಸಂಸ್ಕೃತದಲ್ಲಿ ಉತ್ತಮ ಕವಿಗಳು; ಕನ್ನಡದಲ್ಲಿ ದೇವರ ನಾಮಗಳನ್ನು ರಚಿಸಿದ್ದಾರೆ. ಎಲ್ಲರಿಂದಲೂ ಸನ್ಮಾನಿತರಾದ ಮಹಾಪುರುಷರು. ಮೇಲಾಗಿ ಅವರು ತಪಸ್ವಿಗಳು. ತಾವು ತಮ್ಮ ತಪಸ್ಸಿನಿಂದ ಪಡೆದುಕೊಂಡ ಶಕ್ತಿಯನ್ನು ಜನರ ಕಷ್ಟ ಕಾರ್ಪಣ್ಯಗಳನ್ನು ನೀಗಿಸುವುದರಲ್ಲಿಯೇ ವಿನಿಯೋಗಿಸಿದರು. ಅವರು ಬದುಕಿದ್ದಾಗ ನಡೆಸಿದ ಪವಾಡಗಳೂ ಮರೆಯಾದಂದಿನಿಂದ ಇಂದಿನವರೆಗೆ ನಡೆಸುತ್ತಿರುವ ಪವಾಡಗಳೂ ಅವರ ನೆನಪಿಗ ವಿಶಿಷ್ಟವಾದ ಕಳೆಯೊಂದನ್ನು ಒದಗಿಸಿವೆ. ಇದೇ ಅವರ ಬಾಳುವೆಯ ಮುಖ್ಯ ವಿವರವಾಗಿಯೂ ಪರಿಣಮಿಸಿದೆ.

ಬದುಕಿನ ಚಿಗುರು;

ಇವರ ಹಿರಿಯರು ವಿಜಯನಗರ ಸಾಮ್ರಾಜ್ಯದಲ್ಲಿದ್ದವರು. ವಿಜಯನಗರದ ಅರಸರಲ್ಲೆಲ್ಲ ಹೆಸರು ಪಡೆದ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ವೈಣಿಕರೆಂದು ಆದರಿಸಲ್ಪಟ್ಟಿದ್ದ ಗೌತಮ ಗೋತ್ರದ ಕೃಷ್ಣಾಭಟ್ಟರು ಈ ಹಿರಿಯರಲೊಬ್ಬರು.  ಸಂಸ್ಕೃತ ವಿದ್ಯಾಭ್ಯಾಸ ಮತ್ತು ವೀಣಾ ಸಾಧನೆ ಇವೆರಡೂ ಆ ಮನೆತನದಲ್ಲಿ ಹಿಂದಿನಿಂದ ಬಂದಿದ್ದವು.

ಆದರೆ ರಕ್ಕಸತಂಗಡಿ ಯುದ್ಧ ನಡೆದು ವಿಜಯನಗರ ಸಾಮ್ರಾಜ್ಯ ಮುರಿದು ಮಣ್ಣು ಗೂಡಿದಾಗ ಈ ಮನೆತನದ ವೈಣಿಕ ತಿಮ್ಮಣ್ಣ ಭಟ್ಟರು ಈ ದೇಶ ಬಿಟ್ಟು ಹೊರಡಬೇಕಾಯಿತು. ಅವರ ಗುರುಗಳು ಸುರೇಂದ್ರ ತೀರ್ಥರೆನ್ನುವವರು ಕುಂಭಕೋಣದಲ್ಲಿ ಮಠಾಧಿಪತಿ ಗಳಾಗಿದ್ದರು. ಭಟ್ಟರು ವಿಜಯನಗರ ಬಿಟ್ಟು ಈ ಗುರುಗಳಿದ್ದಲ್ಲಿಗೆ ಹೋಗಿ ಅವರ ಆಶ್ರಯವ್ನು ಪಡೆದರು. ಕುಂಭಕೋಣದಲ್ಲಿ ಗೋಪಿಕಾಂಬೆಯೆಂಬ ಹುಡುಗಿಯನ್ನು ಮದುವೆಯಾದರು. ಇವರಿಬ್ಬರದು ಅನುಕೂಲ ದಾಂಪತ್ಯವಾಯಿತು : ಗುರುಗಳ ಬಳಿಯೇ ಸುಖವಾಗಿದ್ದರು. ಆದರೆ ಬಹು ವರ್ಷಗಳಾದರೂ ಮಕ್ಕಳಾಗದೆ ಇದ್ದುದೊಂದು ದುಃಖಕ್ಕೆ ಕಾರಣವಾಯಿತು.

ಈ ಕೊರತೆಯನ್ನು ನೀಗಿಸಿಕೊಳ್ಳಲು ತಿರುಪತಿಗೆ ತೆರಳಿ ಅಲ್ಲಿ ವೆಂಕಟೇಶ್ವರನ ಸೇವೆ ಮಾಡುತ್ತ ಕೆಲವು ಕಾಲ ನಿಂತರು. ಆನಂತರ ತಿಮ್ಮಣ್ಣಭಟ್ಟರು ಹೆಂಡತಿಯೊಂದಿಗೆ ತುಂಡೀರಮಂಡಲಕ್ಕೆ ಬಂದರು. ಅಲ್ಲಿನ ಅರಸ ತಂಜಾವೂರಿನ ಚೆವ್ವಪ್ಪನಾಯಕ. ತಿಮ್ಮಣ್ಣಭಟ್ಟರನ್ನು ತನ್ನ ಆಸ್ಥಾನದಲ್ಲಿ ಇರಿಸಿಕೊಂಡನು. ಇಲ್ಲಿದ್ದಾಗ ತಿಮ್ಮಣ್ಣ ಭಟ್ಟರಿಗೆ ಇಬ್ಬರು ಮಕ್ಕಳಾದರು,ಒಂದು ಹೆಣ್ಣು, ಒಂದು ಗಂಡು, ಮಗಳ ಹೆಸರು ವೆಂಕಟಾಮಬ, ಮಗನ ಹೆಸರು ಗುರುರಾಜ.  ಕೆಲವು ವರ್ಷಗಳ ನಂತರ ಇನ್ನೊಬ್ಬ ಮಗ ಹುಟ್ಟಿದ. ಹುಟ್ಟಿದ ವರ್ಷ ಕ್ರಿಸ್ತಶಕ ೧೫೯೮ ಇರಬಹುದು. ಈ ಮಗು ತಿರುಪತಿಯ ದೇವರ ಅನುಗ್ರಹದಿಂದಲೇ ಹುಟ್ಟಿದವನೆಂದು ತಿಮ್ಮಣ್ಣ ಭಟ್ಟರಿಗೆ ಭಾಸವಾಗಿ ಅವನಿಗೆ ವೆಂಕಟನಾಥನೆಂದು ಹೆಸರಿಟ್ಟರು.  ಬೆಳೆದ ನಂತರ ವೆಂಕಟನಾಥನು ವೆಂಕಣ್ಣಭಟ್ಟರಾದರು.

ಈ ಮಗು ಹುಟ್ಟಿದ ಮೇಲೆ ತಿಮ್ಮಣ್ಣಭಟ್ಟರ ಜೀವನ ಸುಗಮವಾಗಿ ಸಾಗತೊಡಗಿತು. ಮಗಳಿಗೆ ಒಳ್ಳೆಯ ಕಡೆ ಮದುವೆಯಾಯಿತು. ಅಳಿಯ ಲಕ್ಷ್ಮೀ ನರಸಿಂಹಾಚಾರ್ಯರೆಂಬುವರು ಪ್ರತಿಭಾಶಾಲಿಗಳಾದ ಪಂಡಿತರು, ಅನುಕೂಲಸ್ಥರು.

ಸುಧೀಂದ್ರರ ಸನ್ನಿಧಿ :

೧೫೬೫ರಲ್ಲಿ ಸುಧೀಂದ್ರ ತೀರ್ಥರೆಂಬುವರು ಕುಂಭಕೋಣದಲ್ಲಿ ಮಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡರು.ಹೊಸ ಸ್ವಾಮಿಗಳು ಮಠದ ವಿಧ್ವಾಂಸರನ್ನೆಲ್ಲ ಮತ್ತೆ ಕಲೆ ಹಾಕಲು ತೊಡಗಿ ತಿಮ್ಮಣ್ಣಭಟ್ಟರಿಗೂ ಕರೆ ಕಳೂಹಿಸಿದರು.  ಸ್ವಾಮಿಗಳ ಅಣತಿಯನನು ಮೀರಲಾರದೆ ಭಟ್ಟರು ಸಂಸಾರದೊಡಗೂಡಿ ಕುಂಭಕೋಣಕ್ಕೆ ಹಿಂತಿರುಗಿದರು.  ಸುಧೀಂದ್ರ ತಿರ್ಥರು ಮೇಧಾವಿಗಳು, ತಪಸ್ವಿಗಳು. ತಿಮ್ಮಣ್ಣ ಭಟ್ಟರನ್ನು ಕರೆಸಿಕೊಂಡಾಗ ಅವರೊಂದಿಗೆ ಬಂದಿದ್ದ ಸಣ್ಣ ಹುಡುಗ ವೆಂಕಣ್ಣನನ್ನು ನೋಡಿದರು:  ನೋಡಿದೊಡನೆ ಈ ಹುಡುಗನಿಗೆ ಉಜ್ವಲವಾದ ಭವಿಷ್ಯವಿರುವುದನ್ನು ಅರಿತುಕೊಂಡರು. ಹುಡುಗನಿಗೆ ಬೇಗ ಉಪನಯನ ಮಾಡಬೇಕೆಂದೂ ಅವನಿಗೆ ತಾವೇ ಶಾಸ್ತ್ರಾಭ್ಯಾಸ ಮಾಡಿಸುವೆವೆಂದು ತಿಮ್ಮಣ್ಣಭಟ್ಟರಿಗೆ ತಿಳಿಸಿದರು.

ಆದರೆ ಅರಮನೆಯ ಅಶ್ರಯದಲ್ಲಿ ಸುಖವಾಗಿರುತ್ತಿದ್ದ ತಿಮ್ಮಣ್ಣಭಟ್ಟರಿಗೆ ಮಠದ ಆಸರೆ ನೆಮ್ಮದಿ ಎನಿಸಲಿಲ್ಲ. ಆ ಕಾಲಕ್ಕೆ ಈ ಮಠವು ಅಷ್ಟೇನೂ ಶ್ರೀಮಂತವಾಗಿರಲಿಲ್ಲ; ಮಠದ ಪಂಡಿತರನ್ನು ಚೆನ್ನಾಗಿ ನೋಡಿಕೊಳ್ಳುವ ಸೌಲಭ್ಯ ಸಾಲದಾಗಿದ್ದಿತ್ತು.  ಹೀಗಾಗಿ ತಿಮ್ಮಣ್ಣಭಟ್ಟರಿಗೆ ಬರ ಬರುತ್ತ ಬಡತನದ ಪರಿಚಯವಾಗತೊಡಗಿತು.

ಸ್ವಲ್ಪ ಕಾಲದಲ್ಲಿಯೇ ರೋಗಕ್ಕೆ ತುತ್ತಾಗಿ, ಯಾವ ಮದ್ದೂ ಒಗ್ಗದೆ ತೀರಿಕೊಂಡರು. ಮಗಳೀಗೇನೋ ಮದುವೆಯಾಗಿ ನೆಮ್ಮದಿಯಾಗಿದ್ದಳು ; ಗುರುರಾಜನ ಓದು ಇನ್ನೂ ಮುಗಿದಿರಲಿಲ್ಲ. ವೆಂಕಣ್ಣನಂತೂ ಇನ್ನು ಸಣ್ಣ ಹುಡುಗ, ಉಪನಯನವೂ ಆಗಿರಲಿಲ್ಲ. ಸಂಸಾರದ ಭಾರವೆಲ್ಲ ಏನೂ ಅರಿಯದ ಹೆಂಡತಿಯ ಮೇಲೆ ಬಿದ್ದಿತು. ಆದರೆ ಅಳಿಯ ಲಕ್ಷ್ಮೀನರಸಿಂಹಾಚಾರ್ಯರು ಆಪತ್ಕಾಲದಲ್ಲಿ  ಕೈ ಬಿಡಲಿಲ್ಲ. ತಾವೇ ದೊಡ್ಡ ಪಂಡಿತರಾಗಿದ್ದುದರಿಂದ ಗುರುರಾಜನವಿದ್ಯಾಬ್ಯಾಸ ತಮ್ಮಲ್ಲಿಯೇ ನಡೆಯುವ ಏರ್ಪಾಟು ಮಾಡಿಕೊಂಡರು. ವೆಂಕಣ್ಣನಿಗೆ ಇನ್ನೂ ಎಳೆಯ ವಯಸ್ಸಾದುದರಿಂದ ಬಾಲಪಾಠವನ್ನು ಮಠದಲ್ಲಿ ಒದಗಿಸಿಕೊಟ್ಟರು. ಕೆಲವು ವರ್ಷಗಳಲ್ಲಿಯೇ ಗುರುರಾಜನ ಓದು ಮುಗಿದು ಹಳ್ಳಿಯಲ್ಲಿಯೇ ಸಣ್ಣ ಉದ್ಯೋಗವೊಂದನ್ನು ಹಿಡಿದು. ತಮ್ಮ ವೆಂಕಣ್ಣನಿಗೆ ಉಪನಯನವನ್ನು ಮಾಡಿ, ಅವನ ಶಾಸ್ತ್ರಾಭ್ಯಾಸವು ಲಕ್ಷ್ಮೀನರಸಿಂಹಾಚಾರ್ಯರಲ್ಲಿಯೇ ನಡೆಯುವಂತೆ ವ್ಯವಸ್ಥೆ ಮಾಡಿದ.

ವೆಂಕಣ್ಣನಿಗೆ ವಿದ್ಯಾಭ್ಯಾಸ ತುಂಬ ಹಿಡಿಸಿತು. ಶಾಸ್ತ್ರಗ್ರಂಥಗಳನ್ನು ಓದುವುದರಲ್ಲಿ ಅವನಿಗೆ ಎಲ್ಲಿಲ್ಲದ ಆಸಕ್ತಿ.  ಬುದ್ಧಿಶಕ್ತಿಯೂ ಚುರುಕಾಗಿದ್ದರುದರಿಂದ ಬೇಗ ಹಲವಾರು ಶಾಸ್ತ್ರಭ್ಯಾಸಗಳು ಕೈವಶವಾದವು. ವ್ಯಾಕರಣ, ಸಾಹಿತ್ಯ, ತರ್ಕ, ವೇದಾಂತ  ಈ ಪ್ರಕಾರಗಳಲ್ಲಿ ಅವನ ಓದು ಕೊನೆ ಮುಟ್ಟಿತು.  ಭಾವಂದಿರೂ ಗುರುಗಳೂ ಆದ ಲಕ್ಷ್ಮಿ ನರಸಿಂಹಾಚಾರ್ಯರಿಗೆ ಹುಡುಗನ ಆಸಾಧಾರಣ ಪ್ರೌಢಿಮೆಯನ್ನು ಕಂಡು ಆಶ್ಚರ್ಯವಾಯತು,ಸಂತೊಷವೂ ಆಯಿತು.

ವೆಂಕಣ್ಣನ ಮನೆತನದಲ್ಲಿ ಬಂದಿದ್ದ ಸಂಗೀತವೂ ಮರೆಯಾಗಲಿಲ್ಲ. ವೆಂಕಣ್ಣ ವೀಣಾಭ್ಯಾಸವನ್ನೂ ಮುಂದುವರೆಸಿ, ಸೊಗಸಾದ ವೀಣೆ ನುಡಿಸುತ್ತಿದ್ದ. ಸಂಗೀತ ಶಾಸ್ತ್ರವನ್ನೂ ಕಲಿತು, ತಾನೇ ಆಗಾಗ ಕೃತಿಗಳನ್ನು ರಚಿಸುತ್ತಿದ್ದ. ವಿಧ್ಯಾಭ್ಯಾಸ ಸಂಸ್ಕೃತದಲ್ಲಿಯೇ ನಡೆಯಿತಾದರೂ ಮನೆ ಮಾತು ಕನ್ನಡವೇ. ದೊಡ್ಡವಾದ ಮೇಲೆ ಗ್ರಂಥರಚನೆ ಆರಂಭ ಮಾಡಿದಾಗ ಶಾಸ್ತ್ರಗ್ರಂಥಗಳನ್ನು ಸಂಸ್ಕೃತದಲ್ಲಿಯೇ ರಚಿಸಿದರು ಆದು ಆ ಕಾಲದ ವಾಡಿಕೆಯಾಗಿದ್ದಿತು. ಆದರೆ ಸಂಗೀತ ಕೃತಿಗಳನ್ನು ಕನ್ನಡದಲ್ಲಿಯೇ ರಚಿಸುತ್ತಿದ್ದರು. ಈ ಸಂಪ್ರದಾಯ ನರಹರಿ ತೀರ್ಥರ ಕಾಲದಿಂದ  ನಡೆದು ಬಂದಿದ್ದಿತು. ಹರಿದಾಸ ಸಾಹಿತ್ಯ ಆರಂಭವಾದುದು ಆ ಕಾಲದಿಂದಲೇ, ಸಂನ್ಯಾಸಿಗಳಾದರೂ, ಪಂಡಿತರಾದರೂ ಹಲವಾರು ಪ್ರೌಢ ಗ್ರಂಥಗಳನ್ನು ಸಂಸ್ಕೃತ ಭಾಷೆಯಲ್ಲಿ ರಚಿಸಿದರಾದರೂ ಕನ್ನಡದಲ್ಲಿ ದೇವರ ನಾಮಗಳನ್ನು ರಚಿಸುತ್ತಿದ್ದರು. ವೆಂಕಣ್ಣಭಟ್ಟರು ಕೂಡ  ಈ ದಾರಿಯಲ್ಲಿಯೆ ನಡೆದರು. ಆದರೆ ಅವರ ಶಾಸ್ತ್ರಗ್ರಂಥಗಳೆಲ್ಲ ಉಳಿದುಬಂದವು, ಪ್ರಸಿದ್ಧವಾದವು- ಒಂದನ್ನು ಬಿಟ್ಟು, ಅವರ ಕನ್ನಡ ಕೃತಿಗಳಲ್ಲಿ ಉಳಿದು ಬಮದಿರುವುದು “ಇಂದು ಎನಗೆ ಗೋವಿಂದ” ಅರಂಭವಾಗುವ ದೇವರನಾಮ ಒಂದೇ.

ವೆಂಕಣ್ಣಭಟ್ಟರು ವಿದ್ಯಾಭ್ಯಾಸ ಮುಗಿಸುವ ವೇಳೆಗೆ ಹರಯ ಮೂಡಿದ್ದಿತು . ಅದೇ ಊರಿನಲ್ಲಿರುತ್ತಿದ್ದ ಮತ್ತೊಬ್ಬ ವಿಧ್ವಾಂಸರ ಮಗಳು ಸರಸ್ವತಿಯೆಂಬ ಕನ್ಯೆಯೊಡನೆ ಮದುವೆ ವಿಜೃಂಭಣೆಯಿಂದ ಜರುಗಿತು.

ವೆಂಕಣ್ಣನಿಗೆ ಮದುವೆಯಾದ ನಂತರ ಸಂಸಾರದ ಜವಾಬ್ದಾರಿ ಹೆಗಲಿಗೆ ಬಿದ್ದಿತು. ವಿಧ್ವಾಂಸರಾದವರಿಗೆ ಹಳ್ಳಿಯಲ್ಲಿ ಏನು ಉದ್ಯೋಗ ದೊರಕೀತು ? ಲಕ್ಷ್ಮೀ ನರಸಿಂಹಾಚಾರ್ಯರಿಗೆ ಸ್ವಲ್ಪ ಭೂಮಿ-ಕಾಣಿ ಇದ್ದು, ಅದರಿಂದ ಬದುಕು ನಡೆಯುತ್ತಿದ್ದಿತು; ಗುರುರಾಜನಿಗೆ ಸಣ್ಣದೊಂದು ಉದ್ಯೋಗ ದೊರೆತು ಅದರಿಂದ ತಕ್ಕ ಮಟ್ಟಿಗೆ ಅನುಕೂಲ ಒದಗಿದ್ದಿತು. ವೆಂಕಣ್ಣಭಟ್ಟರಿಗೆ ಭೂಮಿ-ಕಾಣಿಯ ನೆರವೂ ಇರಲಿಲ್ಲ. ಉದ್ಯೋಗದ ಆಸರೆಯೂ ಇರಲಿಲ್ಲ. ಹೀಗಾಗಿ ತಮ್ಮ ತಂದೆಯನ್ನು ಬಗೆಬಗೆಯಾಗಿ ಕಾಡಿದ ಬಡತನ ಇವರ ಬೆನ್ನೂ ಹತ್ತಿತ್ತು.

ಹೊಸದಾಗಿ ಸಂಸಾರ ಹೂಡಿದುದರ ಮೊದಲ ಫಲ ಬಡತನದ ಬೇಗೆ ! ಮಠದಲ್ಲಿ, ಆಸ್ಥಾನದಲ್ಲಿ ವಿಧ್ವಂಆಸರಿಗೆ ತುಂಬ ಪುರಸ್ಕಾರವಿದ್ದ ಕಾಲ ಅದು ; ಹೀಗೆ ತಮಗೂ ಎಲ್ಲಿಯಾದರೂ ಪುರಸ್ಕಾರ ದೊರೆತೀತೆಂದು ವೆಂಕಣ್ಣಭಟ್ಟರು ನೀರೀಕ್ಷಿಸಿದ್ದರು. ಆದರೆ ಅನುಕೂಲವಾದ ಅವಕಾಶ ಯಾವುದೂ ಒದಗಿ ಬರಲಿಲ್ಲ. ತಾವಾಗಿ ಯಾರನ್ನೂ ಬೇಡಿಕೊಳ್ಳುವ ಪ್ರವೃತ್ತಿಯೂ ಅವರಿಗಿರಲಿಲ್ಲ. ಊಟ- ಉಡುಗೆಗೂ ಕಷ್ಟಪಡುತ್ತಾ ದಿನಗಳನ್ನು ಕಳೆಯಬೇಕಾಗಿ ಬಂದಿತು.

ಆದರೆ ಅವರ ಪುಣ್ಯದಿಂದ ಒಳ್ಳೆಯ ಹೆಂಡತಿ ದೊರೆತಿದ್ದಳು. ಇವರ ಕಷ್ಟ-ನಿಷ್ಠುರಗಳಲ್ಲಿ ಆಕೆ ಸಂತೋಷದಿಂದ, ಸಮಾಧಾನದಿಂದ, ಧೈರ್ಯದಿಂದ ಪಾಲ್ಗೊಳ್ಳುತ್ತಿದ್ದಳು. ಹೀಗಿರುವಾಗ  ಅವರಿಗೆ ಒಂದು ಗಂಡು ಮಗುವೂ ಆಯಿತು. ಲಕ್ಷ್ಮಿನಾರಾಯಣನೆಂದು ಮಗುವಿಗೆ ಹೆಸರಿಟ್ಟರು. ಬರಬರುತ್ತಾ ಬಡತನ ಹೆಚ್ಚಿ ಹೆಂಡತಿಗೆ ಹರಿದ ಸೀರೆಯೊಂದೇ ಉಡುಗೆ: ಗಂಡ ಉಡುತ್ತಿದ್ದುದು ಚಿಂಚಿ ಪಂಚೆ; ಮಗುವೇನೋ ಬತ್ತಲೆಯೇ ! ಊಟಕ್ಕಿಂತ ಉಪವಾಸವೇ ವಾಡಿಕೆಯಾಯಿತು. ಆಡುಗೆ ಮನೆಯ ಒಲೆ ಅನೇಕ ದಿನಗಳು ತಣ್ಣಗೇ ಇರುತ್ತಿದ್ದಿತು.   ಇಷ್ಟದರೂ ವೆಂಕಣ್ಣಭಟ್ಟರಿಗೆ ಯಾರನ್ನಾದರೂ ಶ್ರೀಮಂತರನ್ನು ಆಶ್ರಯಿಸಿ ಹೊಟ್ಟೆ ಹೊರೆದುಕೊಳ್ಳಬೇಕು, ಯಾವುದಾದರೂ ಲೌಕಿಕ ಉದ್ಯೋಗವನ್ನು ಹಿಡಿಯಬೇಕು, ಏನಾದರೂ ವ್ಯಾಪಾರ ಮಾಡಬೇಕು ಎನಿಸಲಿಲ್ಲ.ತಾವು ಇಷ್ಟದಿಂದ ಅಧ್ಯಯನ ಮಾಡಿದ ಶಾಸ್ತ್ರಗ್ರಂಥಗಳನ್ನು ನೋಡುವುದು, ಬಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಹೇಳುವುದು, ಪಾರಾಯಣ, ಪೂಜೆ, ಧ್ಯಾನ ಇಷ್ಟರಲ್ಲಿಯೇ ಅವರ ದಿನ ಕಳೆಯುತ್ತಿದ್ದಿತು. ಎಷ್ಟೇ ಕಷ್ಟ ಬಂದರೂ ದಂಪತಿಗಳ ನಗುಮುಖ ಕಳೆಗುಂದಲಿಲ್ಲ, ದೇವರಲ್ಲಿ ಅವರಿಗಿದ್ದ ಭಕ್ತ ಕಡಿಮೆಯಾಗಲಿಲ್ಲ; ವೈದಿಕ ಸಂಪ್ರದಾಯದಲ್ಲಿದ್ದ ಶ್ರದ್ಧೆ ಊನವಾಗಲಿಲ್ಲ.

ಸುಧೀಂದ್ರರ ಅನುಗ್ರಹ:

ಇವರು ಪಡುತ್ತಿದ್ದ ಬಡತನದ ಬವಣೆಯ ಸುದ್ಧಿ ಮಠವನ್ನೂ ಮುಟ್ಟಿತು. ಇಷ್ಟು ದೊಡ್ಡ ಪಂಡಿತರು ಹೀಗೆ ಕಷ್ಟಪಡುತ್ತಿದ್ದಾರೆಂದು ಸ್ವಾಮಿಗಳಿಗೆ ತಿಳಿದೊಡನೆ ಅವರಿಗೆ ಹೇಳಿ ಕಳುಹಿಸಿ ಅವರನ್ನು ಮಠದಲ್ಲಿಯೇ ಇರುವಂತೆ ಅಪ್ಪಣೆ ಮಾಡಿದರು.  ಆಗ ಸ್ವಾಮಿಗಳಾಗಿದ್ದ ಸುಧೀಂದ್ರ ತೀರ್ಥರು (೧೫೬೫-೧೬೨೩) ತಾವೇ ದೊಡ್ಡ ಪಂಡೀತರು: ವೇದಾಂತ, ಸಾಹಿತ್ಯ, ಅಲಂಕಾರ ಶಾಸ್ತ್ರಗಳಲ್ಲಿ ತುಂಬ ಗಟ್ಟಿಗರು. ಅವರು ಶಾಸ್ತ್ರಗ್ರಂಥಗಳನ್ನೂ ಕಾವ್ಯ ವ್ಯಾಖ್ಯಾನಗಳನ್ನೂ ಸಂಸ್ಕೃತ ನಾಟಕಗಳನ್ನೂ ರಚಿಸಿದ್ದಾರೆ. ಇಂಥವರು ಇನ್ನೊಬ್ಬ ಪಂಡಿತರ ಕಷ್ಟವನ್ನು ಅರಿತುಕೊಂಡುದು ಸಹಜವೇ.

ವೆಂಕಣ್ಣ ಭಟ್ಟರ ಸಂಸಾರ ಅಂದಿನಿಂದ ಮಠದ ಆಸರೆಯಿಂದ ನೆಮ್ಮದಿಯಾಗಿ ನಡೆಯತೊಡಗಿತು. ಭಟ್ಟರು ಸ್ವಾಮಿಗಳ ಬಳಿ ಹಲವಾರು ವೇದಾಂತ ಗ್ರಂಥಗಳನ್ನು ಓದತೊಡಗಿದರು; ಹಲವಾರು ಶಿಷ್ಯರಿಗೆ ತಾವು ಓದಿದ ಭಾಗಗಳನ್ನು ಕಲಿಸತೊಡಗಿದರು. ಇವರ ಶ್ರದ್ದೇ, ವಿನಯ, ಪಾಂಡಿತ್ಯ, ಶಿಕ್ಷಣಸಾಮಾರ್ಥ್ಯ, ಶೀಲ ಇವನ್ನು ಕಂಡು ಸ್ವಾಮಿಗಳು ಮನಸಾರೆ ಮೆಚ್ಚಿಕೊಂಡರು. ಶಾಸ್ತ್ರ ವಿಚಾರವಾಗಿ ಮಾತನಾಡುತ್ತಾ ಕುಳಿತರೆ ಇಬ್ಬರಿಗೂ ಹೊತ್ತೇ ತಿಳಿಯುತ್ತಿರಲಿಲ್ಲ. ಭಟ್ಟರು ಸ್ವಾಮಿಗಳ ಅಚ್ಚು ಮೆಚ್ಚಿನ ಶಿಷ್ಯರಾಗಿ ಬಿಟ್ಟರು. 

ವೆಂಕಣ್ಣ ಆಗ ತಾನೆ ಮಲಗಿದ್ದನು.

ವೆಂಕಣ್ಣ ಭಟ್ಟರು ಮಠದಲ್ಲಿದ್ದು, ಸುಧೀಂದ್ರ ತೀರ್ಥ ಸ್ವಾಮಿಗಳ ಬಳಿ ಓದುತ್ತಿದ್ದಾಗ ಅವರ ನಿಷ್ಠೆ೩ ಹೇಗಿದ್ದಿತ್ತೆಂಬುವುದು ಒಂದು ಪ್ರಸಂಗದಿಂದ ಸ್ಪಷ್ಟವಾಗುತ್ತದೆ.  ರಾತ್ರಿ ಉಳಿದವರೆಲ್ಲ ಮಲಗಿಕೊಂಡ ಮೇಲೂ ಮಧ್ಯರಾತ್ರಿ ಕಳೆದ ಮೇಲೂ ವೆಂಕಣ್ಣಭಟ್ಟರು ಹಣತೆಯ ದೀಪದಲ್ಲಿ ವೇದಾಂತ ಗ್ರಂಥಗಳನ್ನು ಓದುತ್ತಲ್ಲಿದ್ದರು.  ಒಂದು ರಾತ್ರಿ ಅವರು ಒಂದು ಗಂಟೆಯವರೆಗೂ ಓದುತ್ತಿದ್ದು, ಮಲಗಿಕೊಂಡಾಗ ಸುಧೀಂದ್ರ ತೀರ್ಥ ಸ್ವಾಮಿಗಳು ಅಲ್ಲಿಗೆ ಬಂದರು. ವೆಂಕಣ್ಣ ಆಗ ತಾನೇ ಮಲಗಿದುದು ಅವರಿಗೆ ತಿಳಿಯಿತು; ತೆರೆದ ಸುಧಾ ಗ್ರಂಥ ತೆರೆದಂತೆಯೇ ಇದ್ದಿತ್ತು, ಮೈಮೇಲೆ ಹರಿದುಹೋದ ಪಂಚೆ ಹೊದಿದ್ದು, ಸುಧಾ ಗ್ರಂಥವನ್ನು ಮುಚ್ಚಿ ವೆಂಕಣ್ಣ ಗುರುತು ಮಾಡಿಕೊಂಡಿದ್ದ ಟಿಪ್ಪಣಿಗಳ ಓಲೆಯನ್ನು ತಮ್ಮೊಂದಿಗೆ ತೆಗೆದುಕೊಂಡು ತಮ್ಮ ಕೋಣೆಗೆ ಹಿಂದುರುಗಿದರು.  ಬೆಳಗಾದ ಮೇಲೆ ಮಠದಲ್ಲೆಲ್ಲ ಗುಲ್ಲು. ಸ್ವಾಮಿಗಳ ಶಾಲು ವೆಂಕಣ್ಣ ಕದ್ದನೆಂದು ಕೆಲವರ ದೂರು; ವೆಂಕಣ್ಣನಿಗೆ ಇದು ತನ್ನ ಮೇಲೆ ಬಂದುದು ಹೇಗೆಂದು ದಿಗ್ಭ್ರಮೆ. ಕಡೆಗೆ ಸ್ವಾಮಿಗಳೆ ಎಲ್ಲರನ್ನೂ ಕರೆಸಿ ನಡೆದುದನ್ನು ವಿವರಿಸಿ, ವೆಂಕಣ್ಣನ ಟಿಪ್ಪಣಿಯನ್ನು ಓದಿ ಅವರ ಮೇಧಾಶಕ್ತಿಯನ್ನು ಕೊಂಡಾಡಿದರು.

ಮಠದ ಗೌರವದ ರಕ್ಷೆ :

ಸುಧೀಂದ್ರ ತೀರ್ಥ ಸ್ವಾಮಿಗಳ ಬಳಿ ವೆಂಕಣ್ಣಭಟ್ಟರು ನಿಂತದ್ದು ಇಬ್ಬರ ಭಾಗ್ಯೋದಯಕ್ಕೂ ನಾಂದಿಯಾಯಿತು. ಸುಧೀಂದ್ರ ತೀರ್ಥರು ಆ ಕಾಲಕ್ಕೆ ದಕ್ಷಿಣ ದೇಶದಲ್ಲೆಲ್ಲ ಸುಪ್ರಸಿದ್ಧರಾಗಿದ್ದರು.  ಆ ಕಾಲಕ್ಕೆ ದಕ್ಷಿಣ ದೇಶದಲ್ಲೆಲ್ಲ ಸುಪ್ರಸಿದ್ಧರಾಗಿದ್ದರು. ಹಲವಾರು ರಾಜರು ಇವರನ್ನು ಕರೆಸಿಕೊಳ್ಳುತ್ತಿದ್ದರು. ವಿಜಯನಗರದ ಅರಸ ಶ್ರೀರಂಗರಾಯ, ವೆಂಕಟಪತಿರಾಯ, ತಂಜಾವೂರಿನ ರಘುನಾಥ ನಾಯಕ ಇವರಿಗಂತು ಸುಧೀಂದ್ರರೆಂದರೆ ತುಂಬ ಭಕ್ತಿ. ತುಂಬ ಆದರ.  ಈ ರಾಜರು ಒಬ್ಬೊಬ್ಬರೂ ಸ್ವಾಮಿಗಳಿಗೆ ರತ್ನಾಭಿಷೇಕ ಮಾಡಿಸಿದ್ದರು.  ಹೀಗಾದುದರಿಂದ ಸ್ವಾಮಿಗಳು ಒಂದೆಡೆ ನಿಲ್ಲದೆ ಅಲ್ಲಲ್ಲಿ ಹೋಗಬೇಕಾಗಿ ಬರುತ್ತಿತ್ತು.  ಸ್ವಾಮಿಗಳು ಹೊರಟರೆಂದರೆ ಮಠವೇ ಹೊರಟಂತೆ: ಅದರಲ್ಲಿಯೂ ಪ್ರಮುಖರಾದ ಪಂಡಿತರು ಸ್ವಾಮಿಗಳೊಂದಿಗೆ ಇದ್ದೇ ಇರಬೇಕು. ಸುಧೀಂದ್ರ ತೀರ್ಥರು ಎಲ್ಲಿ ಹೋದರೂ ವೆಂಕಣ್ಣಭಟ್ಟರನ್ನು ಬಿಟ್ಟು ಇರುತ್ತಿರಲಿಲ್ಲ.

ಇದರಲ್ಲಿ ಇನ್ನೂ ಒಂದು ವಿಶೇಷ. ಸ್ವಾಮಿಗಳ ಸಂಚಾರವೆಂದರೆ ಊರೂರುಗಳಲ್ಲಿ ಪಂಡಿತರೆಲ್ಲ ನೆರೆಯುವರು; ಮತಧರ್ಮಗಳ ಬಗ್ಗೆ ಮಾತುಕತೆ ನಡೆಯುವುವು; ಶಾಸ್ತ್ರ ವಿಚಾರವಾಗಿ ಚರ್ಚೆಗಳು ಜರುಗುವುವು; ಇವೆಲ್ಲ ಸ್ವಾಮಿಗಳ ಎದುರೇ ನಡೆದು, ಸ್ವಾಮಿಗಳೂ ಅವರ ಮಠದ ಪಂಡಿತರೂ ಭಾಗವಹಿಸಬೇಕಾಗಿದ್ದಿತ್ತು. ಆದುದರಿಂದ ಮಠದ ಮುಖ್ಯ ಪಂಡೀತರುಗಳನ್ನು ಸ್ವಾಮಿಗಳು ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಿದ್ದರು. ಈ ಪಂಡಿತರು ಪ್ರಬಲರಾಗಿದ್ದರೆ ಮಠಕ್ಕೆ ತುಂಬ ಮರ್ಯಾದೆ ಒದಗುತ್ತಿದ್ದಿತ್ತು. ಎಲ್ಲೆಲ್ಲಿಯ ಪಂಡಿತರೂ ಗೌರವ ಸಲ್ಲಿಸುತ್ತಿದ್ದರು.  ವೆಂಕಣ್ಣಭಟ್ಟರಿಂದ ಸುಧೀಂದ್ರರ ಮಠದ ಕೀರ್ತಿ ಹೆಚ್ಚಿತು.  ವಾದಕ್ಕೆ ಬರುವವರಂತೂ ಅಂಜುತ್ತಿದ್ದರು.

ಒಮ್ಮೆ ಸುಧೀಂದ್ರ ತೀರ್ಥರು ತಮ್ಮ ಪರಿವಾರದೊಂದಿಗೆ ಪ್ರವಾಸ ಮಾಡುತ್ತ ತಮಿಳುನಾಡಿನ ಮನ್ನಾರು ಗುಡಿ ಎಂಬೂರಿಗೆ ಬಂದರು. ಆಗ ಅಲ್ಲಿ ಅದ್ವೈತ ಸಂಪ್ರದಾಯದ ಸಂನ್ಯಾಸಿಯೊಬ್ಬರು ತಂಗಿದ್ದರು.  ಅವರೊಂದಿಗೆ ವಾದ ಮಾಡಿ ಗೆದ್ದ ಪಂಡಿತನೇ ಇರಲಿಲ್ಲ. ಅವರು ಊರಿಗೆ ಬಂದರೆಂದರೆ ಇತರೆ ವಿದ್ವಾಂಸರು ಹೆದರಿ ಊರು ಬಿಟ್ಟು ಓಡುತ್ತಿದ್ದರು.  ಈ ಸಂನ್ಯಾಸಿಗು ಸುಧೀಂದ್ರ ತೀರ್ಥರಿಗೂ ವಾದ ನಡೆಯಿತು.  ವಾದ ಸಾಗುತ್ತ- ಸಾಗುತ್ತ, ಸುಧೀಂದ್ರ ತೀರ್ಥರಂತಹ ದೊಡ್ಡ ಪಂಡಿತರೂ ಕಳವಳಕ್ಕೀಡಾಗುವ ಪರಿಸ್ಥಿತಿ ಮುಟ್ಟಿತ್ತು. ಆಗ ಹತ್ತಿರವೇ ಇದ್ದ ವೆಂಕಣ್ಣಭಟ್ಟರು ತಮ್ಮ ಗುರುಗಳಾದ ಸುಧೀಂದ್ರರ ಪರವಾಗಿ ತಾವು ವಾದ ಮಾಡತೊಡಗಿದರು. ಒಂದೆರಡು ಗಂಟೆಗಳು ಕಳೆಯುವ ವೇಳೆಗೆ ವೆಂಕಣ್ಣಭಟ್ಟರ ಕೈ ಮೇಲಾಯಿತು. ಆವರೆಗೆ ಗುಡುಗುತ್ತಿದ್ದ ಸಂನ್ಯಾಸಿಗಳು ಈಗ ನಡುಗಲಾರಂಭಿಸಿದರು; ಅದೇ ಅವರು ಎದುರಿಸಿದ ಮೊಟ್ಟ ಮೊದಲ ಸೋಲು. ವೆಂಕಣ್ಣಭಟ್ಟರು ಸುಧೀಂದ್ರ ತೀರ್ಥರ, ಅವರ ಮಠದ ಮಾನವನ್ನು ಹೀಗೆ ಉಳಿಸಿದರು.  ಮೊದಲೇ ಪ್ರೀಯ ಶಿಷ್ಯರಾಗಿದ್ದ ಭಟ್ಟರ ಮೇಲೆ ಸ್ವಾಮಿಗಳ ವಿಶ್ವಾಸ ಇನ್ನೂ ಹೆಚ್ಚಿತು. ಸ್ವಾಮಿಗಳು ತುಂಬಿದ ಸಭೆಯಲ್ಲಿ ಅವರನ್ನು “ಮಹಾಭಾಷ್ಯಾಚಾರ್ಯ”ರೆಂದು ಕರೆದು ಗೌರವಿಸಿದರು.

ಇನ್ನೊಮ್ಮೆ ಸುಧೀಂದ್ರ ತೀರ್ಥರು ತಂಜಾವೂರಿಗೆ ಬಂದರು. ಅಲ್ಲಿನ ಅರಸ ರಘುನಾಥನಾಯಕ (೧೬೦೦-೧೬೩೪) ಇವರ ಶಿಷ್ಯ. ಸ್ವತಃ ದೊಡ್ಡ ಪಂಡಿತರೂ ಹೌದು; ಮತ್ತು ಆಸ್ಥಾನದ ತುಂಬ ಮಹಾಮಹಾ ಪಂಡಿತರೇ.  ಸುಧೀಂಧ್ರ ತೀರ್ಥರು ಅರಸನ ಕರೆಯುವಂತೆ ಅರಮನೆಗೆ ಬಂದಾಗ ಯಜ್ಞನಾರಾಯಣ ದೀಕಿಷತರು ಎಂಬ ಬಹು ದೊಡ್ಡ ವಿದ್ವಾಂಸರು ಅಲ್ಲಿದ್ದರು.  ಸುಧೀಂದ್ರರ ಪರಿವಾರದೊಂದಿಗೆ ಬಂದಿದ್ದ ವೆಂಕಣ್ಣಭಟ್ಟರನ್ನು ನೋಡಿ, ಅವರು  ,” ಭಟ್ಟರೇ, ವ್ಯಾಕರಣದಲ್ಲಿ ತಮಗೆ ಅದ್ಭುತ ಪಾಂಡಿತ್ಯವಿರುವುದನ್ನು ಕೇಳೀ ತುಂಬಾ ಸಂತೋಷಪಟ್ಟಿದ್ದೇನೆ. ತಮ್ಮ ಭೇಟಿಯಾಗುವ ಸುಯೋಗ ಇಂದು ಒದಗಿತು. ಕಾಕತಾಳೀಯ” ಎಂದರು. ಭಟ್ಟರು ದೀಕ್ಷಿತರನ್ನು “ಕಾಕತಾಳೀಯ ಎಂದರೇನು?” ಎಂದು ಕೇಳಿದರು.  ಸಾಮಾನ್ಯವಾಗಿ ಆಕಸ್ಮಿಕ ಎಂಬರ್ಥದಲ್ಲಿ ಈ ಮಾತನ್ನು ಬಳಸುತ್ತಾರೆ. ಕಾಗೆ ಬಮದು ತಾಳೆಯ ಮರದ ಮೇಲೆ ಕೂಡುವುದು, ಒಡನೆಯೇ ಹಣ್ಣು ಕೆಳಗೆ ಉದುರುವುದು; ಒಂದಕ್ಕೊಂದು ಸಂಬಂಧವಿಲ್ಲದಿದ್ದರೂ ಒಂದು ಇನ್ನೊಂದಕ್ಕೆ ಕಾರಣ ಎಂಬಂತೆ ತೋರುವುದು. ಆದರೆ ಭಟ್ಟರಿಗೂ ದೀಕ್ಷಿತರಿಗೂ ನಡುವೆ ದೊಡ್ಡದೊಂದುವಾದವೇ ನಡೆದು ಹೋಯಿತು. ಇದ್ದವರೆಲ್ಲ ಅವರಿಬ್ಬರ ಪ್ರತಿಭೆಯನ್ನು ಕಂಡು ಬೆರಗಾದರು.  ದೀಕ್ಷಿತರು ಭಟ್ಟರ ಪಾಂಡಿತ್ಯವನ್ನು ಮನಸಾರೆ ಬಾಯಿ ತುಂಬ ಹೊಗಳಿದರು.

ಧರ್ಮಕ್ಕೆ ತಲೆಬಾಗಿ ಬಾಳನ್ನು ನಡೆಸಿರಿ; ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.

ಸುಧೀಂದ್ರ ತೀರ್ಥರು ಮಠದ ಕಿರ್ತಿ ಹೀಗೆ ಹೆಚ್ಚಲು ಕಾರಣರಾದ ವೆಂಕಣ್ಣ ಭಟ್ಟರಿಗೆ ಸಂಪತ್ತು ಕೂಡಲು ಕಷ್ಟವಾಗಲಿಲ್ಲ.  ಹಿಂದಿನ ಬಡತನದ ಬೆಗೆಯೆಲ್ಲ ಮರೆತು ಹೋಗುವಂತೆ, ಈಗ ನೆಮ್ಮದಿಯ ಮನೆ ಅವರದ್ದಾಯಿತು. ಅವರ ಹೆಂಡತಿ ಸರಸ್ವತಿಗಂತೂ ಹಿಡಿಸಲಾರದಷ್ಟು ಸಂತೋಷ ; ತಮ್ಮ ಗಂಡನ ಪ್ರತಿಭೆ ಕಡೆಗೂ ಬೆಳಕಿಗೆ ಬಂದಿತೆಂದು ಸಮಾಧಾನ. ಗಂಡ-ಹೆಂಡತಿಯರಲ್ಲಿ ತುಂಬ ಅನ್ಯೋನ್ಯವಿದ್ದಿತು; ಪರಸ್ಪರವಾಗಿ ಪ್ರೀತಿ ಬೆಳೆದು ಬಂದಿದಿತ್ತು. ಒಬ್ಬರನ್ನಗಲಿ ಇನ್ನೊಬ್ಬರು ಹೆಚ್ಚು ಕಾಲ ಕಾಣದಿದ್ದರೆ ಕಾತರರಾಗುವಷ್ಟು ಒಲುಮೆ ಮೂಡಿದ್ದಿತು. ಹೀಗೆ ಸುಖವಾದ ಸಂಸಾರ ಸಾಗುತ್ತಿರುವಾಗ ಸರಸ್ವತಿಗೆ ದುಃಖವೊಂದು ಕಾದಿದ್ದಿತ್ತು.

ಸುಧೀಂದ್ರರ ನಿರ್ಧಾರ:

ಸುಧೀಂದ್ರ ತೀರ್ಥರಿಗೆ ವಯಸ್ಸಾಗುತ್ತ ಬಂದು ಸರಿಯಾದ ಉತ್ತರಾಧಿಕಾರಿಯೊಬ್ಬರನ್ನು ನೇಮಿಸಬೇಕೆಂಬ ಆಲೋಚನೆಯಲ್ಲಿದ್ದರು. ಮಠದ ಕೀರ್ತಿಯನ್ನು ಉಳಿಸಬಲ್ಲವರು ವೆಂಕಣ್ಣಭಟ್ಟರೊಬ್ಬರೇ ಎಂದು ಅವರು ನಿಶ್ಚಯಿಸಿ ಅವರಿಗೇ ಸಂನ್ಯಾಸ ಕೊಟ್ಟು ತಮ್ಮ ಪೀಠದಲ್ಲಿ ಕೂರಿಸಬೇಕೆಂದು ಮನಸ್ಸು ಮಾಢಿದರು.  ಆದರೆ  ಈ ವಿಚಾರವನ್ನು ಭಟ್ಟರಲ್ಲಿ ಎತ್ತಿದೊಡನೆ ಅವರು ಹೌಹಾರಿ, “ಮಹಾಸ್ವಾಮಿ, ನನಗೆ ಅಷ್ಟು ಯೋಗ್ಯತೆಯಲ್ಲಿದೆ? ನಾನೊಬ್ಬ ಸಾಮಾನ್ಯ ಗೃಹಸ್ಥ. ನನಗೆ ವೈರಾಗ್ಯವೂ ಇಲ್ಲ. ತಮ್ಮ ಪೀಠದಲ್ಲಿ ಕೂಡುವ ಪುಣ್ಯವೂ ಇಲ್ಲ! ಎಂದು ಬಿಟ್ಟರು.” ಮುಖ್ಯವಾದ ಕಾರಣ, ತಮ್ಮ ಹೆಂಡತಿಯ ಮೇಲೆ ಇಟ್ಟಿದ್ದ ಒಲುಮೆ, ಹೆಂಡತಿಯು ತಮ್ಮನ್ನೇ ನೆಚ್ಚಿಕೊಂಡಿದ್ದಾಳೆಂಬ ಅರಿವು.

ಸುಧೀಂದ್ರ ತೀರ್ಥರು ತಮ್ಮ ನಿರ್ಧಾರವನ್ನು ಕೈಬಿಡಲಿಲ್ಲ. ವೆಂಕಣ್ಣಭಟ್ಟರನ್ನು ಹತ್ತಿರ ಕೂರಿಸಿಕೊಂಡು ಒತ್ತಾಯ ಮಾಡಿದರು. ತಮ್ಮ ಗುರುಗಳ ಮಾತನ್ನು ಮೀರುವುದು ಹೇಗೆ ? ಅದು ಅಲ್ಲದೇ, ವಿದ್ಯಾ ಸಂಸ್ಥಾನವೆಂದು ಹೆಸರಾದ ಮಠವೊಂದರ ಒಡೆಯನಾಗುವ ಪುಣ್ಯ ಎಲ್ಲರಿಗೂ ಬರುತ್ತದೆಯೇ? ಮಧ್ವಾಚಾರ್ಯರು ತಮ್ಮ ಕೈಯಿಂದಲೇ ಪೂಜೆ ಮಾಡಿದ ಮೂರ್ತಿಗಳನ್ನು ತಾವು ಪೂಜೆ ಮಾಡುವಂತಹ ಅವಕಾಶ ಎಂಥ ಸೌಭಾಗ್ಯ? ವೆಂಕಣ್ಣಭಟ್ಟರ ಮನಸ್ಸು ಹೂಗುಟ್ಟಿತು. ಆದರೆ ಹೆಂಡತಿಯ ನೆನಪು ಬಂದೊಡನೆ ಹೃದಯ ಭಾರವಾಯಿತು. ಇಷ್ಟು ಪ್ರೀತಿಯ ಹೆಂಡತಿಯ ಕೈಬಿಟ್ಟು ಸಂನ್ಯಾಸಿಯಾಗುವುದು ಹೇಗೆ ? ಅವಳು ತಾನೇ ಹೇಗೆ ಸಹಿಸಿಯಾಳು ? ಇನ್ನೂ ಸಣ್ಣ ವಯಸ್ಸು ಅವಳಿಗೆ ; ಒಬ್ಬನೆ ಮಗ, ಇನ್ನೂ ಹುಡುಗ, ಉಪನಯನವೂ ಆಗಿಲ್ಲ.  ವೆಂಕಣ್ಣಭಟ್ಟರಿಗೆ ಏನು ಮಾಡುವುದೆಂದು ತಿಳಿಯದಾಯಿತು.

ಮಠಕ್ಕೆ ಬಂದರೆ ಸ್ವಾಮಿಗಳ ಒತ್ತಾಯ; ಮನೆಯಲ್ಲಿ ಹೆಂಡತಿಯ ಒಲುಮೆ. ಯಾವುದನ್ನು ಬಿಡುವುದು ? ಕಡೆಗೆ ಸ್ವಾಮಿಗಳ ಅಪ್ಪಣೆಗೆ ತಲೆಬಾಗುವುದೇ ಒಳಿತೆಂದು ತೀರ್ಮಾನಿಸಿದರು. ಆದರೆ ಹೆಂಡತಿಗೆ ಈ ನಿರ್ಧಾರವನ್ನು ತಿಳಿಸಲಿಲ್ಲ; ಆಕೆಗೆ ತಿಳಿದೊಡನೆ ಎಲ್ಲಿ ಎದೆಯೊಡೆದು ಸಾಯುವಳೋ ಎಂಬ ಹೆದರಿಕೆಯಿಂದ. ಈ ನಿರ್ಧಾರವನ್ನು ಕೇಳಿ ಸ್ವಾಮಿಗಳು ಸಂತೋಷಪಟ್ಟು, ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿದರು. ಭಟ್ಟರು ಸಂನ್ಯಾಸಿಯಾಗುವ ಮೊದಲೇ ಮಗನ ಉಪನಯನವನ್ನು ಮಾಡಬೇಕೆಂದು ಸೂಚಿಸಿ, ಅದು ಮಠದಲ್ಲಿಯೇ ವಿಜ್ರಂಭಣೆಯಿಂದ ನಡೆಯುವಂತೆ ಏರ್ಪಡಿಸಿದರು.

ರಾಘವೇಂದ್ರ ತೀರ್ಥರು :

ಕುಂಭಕೋಣದಲ್ಲೇ ಭಟ್ಟರ ಸಂನ್ಯಾಸ ಸ್ವೀಕಾರ ನಡೆಯುವುದಾದರೆ ಅವರ ಹೆಂಡತಿಯಿಂದ ಅಡ್ಡಿ ಬಂದೀತೆಂದು ಭಾವಿಸಿ, ಸುಧೀಂದ್ರ ತೀರ್ಥರು ಯಾತ್ರಾ ಪ್ರಸಂಗದಿಂದ ತಂಜಾವೂರಿಗೆ ಹೊರಟರು.  ಜೊತೆಯ ಪರಿವಾರದಲ್ಲಿ ಭಟ್ಟರೂ ಎಂದಿನಂತೆ ಹೊರಟರು. ಅಲ್ಲಿ ಅರಸ ರಘುನಾಥನಾಯಕನು ಸ್ವಾಮಿಗಳನ್ನೂ, ಪರಿವಾರದವರನ್ನೂ ಸ್ವಾಗತಿಸಿದ ಮೇಲೆ ಸ್ವಾಮಿಗಳು ಭಟ್ಟರ ಸಂನ್ಯಾಸ ಸ್ವೀಕಾರ ಅಲ್ಲಿ ನಡೆಯಬೇಕೆಂದು ಸೂಚಿಸಿದರು. ಅರಸನು ಸಂತೋಷದಿಂದ ಒಪ್ಪಿ ಸಂದರ್ಭಕ್ಕೆ ಅಗತ್ಯವಾದ ಎಲ್ಲಾ ಸಿದ್ಧತೆಗಳನ್ನು ತನ್ನ ಅರಮನೆಯಲ್ಲಿಯೇ ಮಾಡಿದನು. ಶಾಲೀವಾಹನ ಶಕೆ ೧೫೪೩ (ಎಂದರೆ ಕ್ರಿಸ್ತಾಬ್ದ ೧೬೨೧), ಫಾಲ್ಗುಣ ಮಾಸದ ಶುಕ್ಲಪಕ್ಷದ ಬೀದಿಗೆಯೆಂದು ವೆಂಕಣ್ಣಭಟ್ಟರು ಸಂಪ್ರದಾಯದಂತೆ, ಗುರುಗಳ ಸಮ್ಮುಖದಲ್ಲಿ ಗೃಹಸ್ಥಾಶ್ರಮವನ್ನ ಬಿಟ್ಟು ಸಂನ್ಯಾಸಾಶ್ರಮವನ್ನು ಸ್ವೀಕರಿಸಿದರು. ಆಗ ಅವರಿಗೆ ಇಪ್ಪತ್ತಮೂರು ವರ್ಷಗಳಷ್ಟೇ ವಯಸ್ಸು. ಗುರುಗಳು ಭಟ್ಟರಿಗೆ “ರಾಘವೇಂದ್ರತೀರ್ಥ” ಎಂಬ ಹೊಸ ಹೆಸರನ್ನು ಕೊಟ್ಟರು.  ಸಂನ್ಯಾಸಿಯಾಗುವ ಹಿಂದಿನ ಹಂತ ಮುಗಿದು ಹೊಸ ಹಂತ ಮೊದಲಾಯಿತೆಂದು ಸೂಚಿಸಲು ಹೊಸ ಹೆಸರನ್ನು ಪಡೆಯುವುದು ವಾಡಿಕೆ.

ಮಠದ ಎಲ್ಲ ಒಡೆತನವನ್ನೂ , ಹೊಣೆಯನ್ನೂ ಸುಧೀಂದ್ರರು ರಾಘವೇಂದ್ರ ತೀರ್ಥರಿಗೇ ವಹಿಸಿಕೊಟ್ಟು, ೧೬೨೩ರ ಸುಮಾರಿಗೆ ಪರಮಪದವನ್ನು ಸೇರಿದರು.

ರಾಘವೇಂದ್ರ ವಿಜಯ :

ಹೀಗೆ ತಂಜಾವೂರಿನಲ್ಲಿ ವೆಂಕಣ್ಣಭಟ್ಟರು ಸಂನ್ಯಾಸಿಗಳಾಗಿಬಿಟ್ಟರು. ಸುದ್ಧಿ ಕುಂಭ ಕೋಣವನ್ನು ಮುಟ್ಟಿದೊಡನೆ, ಅವರ ಹೆಂಡತಿ ಸರಸ್ವತಿ ದಿಗ್ಭ್ರಾಂತಳಾಗಿ, ಪ್ರಜ್ಞೆ ತಪ್ಪಿ ಕುಸಿದುಬಿದ್ದಳು. ಎಚ್ಚರವಾದಾಗ, ಏನು ಮಾಡುವುದೆಂದು ತೋಚದೆ, ಉಪಾಯಗಾಣದೆ, ದುಃಖವನ್ನು ಸೈರಿಸಿಕೊಳ್ಳಲಾರದೆ ಮನೆಯ ಹಿಂದಿದ್ದ ಬಾವಿಯಲ್ಲಿ ಬಿದ್ದು ಪ್ರಾಣ ಬಿಟ್ಟಳು ! ಹೀಗೆ ಸುಖ ಸಂಸಾರದ ಕನಸು ಕೊನೆಗೊಂಡಿತು.

ಈ ಕಡೆ, ರಾಘವೇಂಧ್ರ ತೀರ್ಥರು ತಮ್ಮ ಗುರುಗಳು ವಹಿಸಿದ ಮಠದ ಯಾಜಮಾನ್ಯವನ್ನು ಶ್ರದ್ಧೆಯಿಂದ ನಿರ್ವಹಿಸುತ್ತ ತಮ್ಮ ಅಧ್ಯಯನ, ಅಧ್ಯಾಪನಗಳನ್ನು ನಡೆಸುತ್ತ, ದೇವರ ಪೂಜೆ, ಪ್ರವಚನಗಳಲ್ಲಿ ಕಾಲ ಕಳೆಯುತ್ತಿದ್ದರು.  ತಮ್ಮ ಗುರುಗಳು ತುಂಗಾಭದ್ರಾ ತೀರದಲ್ಲಿ ಪರಮ ಪದವನ್ನು ಪಡೆದ ನಂತರ ಅವರಿಗೆ ಅಲ್ಲಿಯೇ ಬೃಂದಾವನವನ್ನು ಏರ್ಪಡಿಸಿ, ಅವರ ಆರಾಧನೆಯನ್ನು ವೈಭವದಿಂದ ನಡೆಯಿಸಿ ಕುಂಭಕೋಣಕ್ಕೆ ಹಿಂದಿರುಗಿದರು.

ರಾಘವೇಂದ್ರ ತೀರ್ಥರು ಮಠದ ಕಾರುಬಾರುಗಳನ್ನು ನೋಡಿಕೊಳ್ಳುತ್ತಾ ಕೆಲವು ಕಾಲ ಕುಂಭಕೋಣದಲ್ಲಿಯೇ ನೆಲೆಸಿದ್ದರು. ದಿನವೂ ಕಾವೇರಿ ಸ್ನಾನ, ಕುಂಭೇಶ್ವರನ ದರ್ಶನ, ಮಠದ ಮೂರ್ತಿಗಳ ಆರಾಧನೆ, ಅಧ್ಯಯನ, ಅಧ್ಯಾಪನ, ಪ್ರವಚನ, ಪಂಡಿತರೊಂದಿಗೆ ವಿಚಾರ ವಿನಿಮಯ, ತಪಶ್ಚರ್ಯೆ ಇವುಗಳಲ್ಲಿ ನಿರತರಾಗಿದ್ದರು.  ಉಳಿದ ಕಾಲದಲ್ಲಿ ಗ್ರಂಥ ರಚನೆ ಮಾಡತೊಡಗಿದರು. ಸಂನ್ಯಾಸಿಗಳಾಗುವ ಮೊದಲೇ ನಾರಾಯಣಪಂಡಿತಾಚಾರ್ಯರ “ಅಣುಮಧ್ವ ವಿಜಯ”ಕ್ಕೆ “ಗೂಢ ಪ್ರಕಾಶಿಕೆ”ಯೆಂಬ ವ್ಯಾಖ್ಯಾನವನ್ನು ಬರೆದಿದ್ದರು. ಈಗ ಮಾಧ್ವದರ್ಶನವನ್ನು ಸಮರ್ಥಿಸಲು ಸ್ಪಷ್ಟಪಡಿಸಲು ಹಲವು ಶಾಸ್ತ್ರಗ್ರಂಥಗಳನ್ನು ಬರೆದರು.

ಆಗ ದಕ್ಷಿಣ ದೇಶದಲ್ಲಿ ರಾಜಕೀಯ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಸಮರ್ಥರಾದ ರಘುನಾಥನಾಯಕ ತೀರಿಕೊಂಡಿದ್ದ. ನೆರೆ ರಾಜರು ತಂಜವೂರನ್ನು ಮುತ್ತಿ ತೊಂದರೆಗೀಡು ಮಾಡಿದರು. ಮಧುರೆ, ಬಿಜಾಪೂರ, ವೆಲ್ಲೂರಿನ ಒಡೆಯರು ರಾಜ ವಿಜಯ ರಾಘವನಾಯಕನನ್ನು ಸೋಲಿಸಿ ಕಷ್ಟವನ್ನು ಪಡೆದರು. ಈ ಧಾಳಿಯಿಂದಾಗಿ ಜನರ ನೆಮ್ಮದಿ ಕೆಟ್ಟಿತು; ಸಾಲುದುದಕ್ಕೆ ತಂಜಾವೂರು ಪ್ರಾಂತದಲ್ಲಿ ಬರಗಾಲವೂ ಬೆದರಿಸತೊಡಗಿತು. ಅರಸನಿಗೆ ಏನು ಮಾಡುವುದೆಂದು ತೋರದೆ ರಾಘವೇಂದ್ರ ಸ್ವಾಮಿಗಳ ಮೊರೆ ಹೊಕ್ಕನು. ಅವರು ಕುಂಭಕೋಣದಿಂದ ಹೊರಟು ತಂಜವೂರಿಗೆ ಬಂದರು.  ಅವರು ಬಂದೊಡನೆ ಮಳೆಯೂ ಸುರಿದು ಬರಗಾಲದ ಭಯ ದೂರ ಸರಿಯಿತು. ಅಲ್ಲಿಂದ ಅವರು ದಕ್ಷಣ ದೇಶದ ಯಾತ್ರೆಯನ್ನು ಕೈಗೊಂಡು ಅನಂತಶಯನದವರೆಗೂ ಹೋಗಿ ಮಧುರೆಗೆ ಬಂದರು. ಮಧುರೆಯ ಅರಸ ತಿರುಮಲನಾಯಕ (೧೬೨೩-೧೬೫೯) ಇವರನ್ನು ಗೌರವದಿಂದ ಎದುರುಗೊಂಡು, ಪಂಡಿತರ ಸಭೆಯೊಂದನ್ನು ನೆರೆಯಿಸಿ, ಅವರ ಪ್ರವಚನವನ್ನು ಏರ್ಪಡಿಸಿದ. ಅವನ ಆಸ್ಥಾನ ಪಂಡಿತರಲ್ಲಿ ಮೊದಲನೆಯವರೆನಿಸಿದ್ದ ಸುಪ್ರಸಿದ್ಧ ವಿಧ್ವಾಂಸರಾದ ನೀಲಕಂಠ ದೀಕ್ಷಿತರು ಭಾಟ್ಟ ಮೀಮಾಂಸಾ ಭಾಘದಲ್ಲಿ ಗಟ್ಟಿಗರು; ಅವರೊಂದಿಗೆ ವಾದದಲ್ಲಿ ತೊಡಗಿ ರಾಘವೇಂದ್ರ ಸ್ವಾಮಿಗಳು “ಭಾಟ್ಟ ಸಂಗ್ರಹ” ಎಂಬ ಮೀಮಾಂಸಾ ಗ್ರಂಥವನ್ನು ರಚಿಸಿದರು. ಈ ಪುಸ್ತಕದ ಪ್ರೌಢಿಮೆಗೆ ತಲೆದೂಗಿ ನೀಲಕಂಠ ದೀಕ್ಷಿತರು ಇದನ್ನು ಅಂಬಾರಿ ಆನೆಯ ಮೇಲಿರಿಸಿ ಊರಿನಲ್ಲೆಲ್ಲ ಮೆರವಣಿಗೆ ಮಾಡಿಸಿದರು!

ಅಲ್ಲಿಂದ ಸ್ವಾಮಿಗಳು ವೆಲ್ಲೂರಿಗೆ ಬಂದು, ಅಲ್ಲಿ ವಿಜಯನಗರದ ದೊರೆ ವೆಂಕಟಪತಿರಾಯನಿಂದ ಸತ್ಕರಿಸಲ್ಪಟ್ಟು, ಕೆಲವು ಪಂಡಿತರೊಂದಿಗೆ ವಾಗ್ವಾದ ಮಾಡಿ, ಗೆದ್ದು ಮುಂದೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊಕ್ಕರು. ಉಡುಪಿಯಲ್ಲಿ ಸ್ವಲ್ಪಕಾಲ ನೆಲೆಸಿ ಕೆಲವು  ಶಾಸ್ತ್ರ ಗ್ರಂಥಗಳನ್ನು ರಚಿಸಿದರು. “ನ್ಯಾಯ ಮುಕ್ತಾವಲಿ”, ತಂತ್ರ ದೀಪಿಕಾ” (ಇವೆರಡೂ ಬ್ರಹ್ಮಸೂತ್ರಗಳ ಮೇಲೆ ವ್ಯಾಖ್ಯಾನಗಳು) ಮತ್ತು “ಪರಿಮಳ” (ಜಯತೀರ್ಥರ “ನ್ಯಾಯಸುಧಾ” ವ್ಯಾಖ್ಯಾನ) ಇವನ್ನು ಇಲ್ಲಿಯೇ ಮುಗಿಸಿ , ಕೃಷ್ಣಮಠದಲ್ಲಿ ರಾಮನವಮಿ ಉತ್ಸವವನ್ನು ವಿಜೃಂಭಣೆಯಿಂದ ನಡೆಸಿದರು. ಅವರಿಗೆ ಉಡುಪಿಯ ಕೃಷ್ಣನ ಮೂರ್ತಿ ಬಲು ಸೊಗಸಿನ ಶಿಲ್ಪವೆನಿಸಿ, ಅದರ ಬಂಗಾರದ ಪ್ರತಿಕೃತಿಯೊಂದನ್ನು ಸಣ್ಣ ಪ್ರಮಾಣದಲ್ಲಿ ಮಾಡಿಸಿ ತಮ್ಮ ಪೂಜೆಗಿರಿಸಿಕೊಂಡರು. ಅದು ಈಗಲೂ ಮಠದಲ್ಲಿದೆ.

ಉಡುಪಿಯ ಯಾತ್ರೆ ಮುಗಿಸಿ ಸ್ವಾಮಿಗಳೂ ಮೈಸೂರು ದೇಶಕ್ಕೆ ಬಂದರು. ರಾಜರಾಗಿದ್ದ ದೊಡ್ಡ ದೇವರಾಜ ಒಡೆಯರು ಸ್ವಾಮಿಗಳನ್ನು ಸಂದರ್ಶಿಸಿದ್ದು ನಂಜನಗೂಡಿನಲ್ಲಿ. ರಾಜರು ಸ್ವಾಮಿಗಳನ್ನು ನಂಜನಗೂಡಿನಿಂದ ತಮ್ಮ ರಾಜಧಾನಿಯಾದ ಶ್ರೀರಂಗಪಟ್ಟಣಕ್ಕೆ ಮೆರವಣಿಗೆಯಲ್ಲಿ ಕರೆದೊಯ್ದು ಅರಮನೆಯಲ್ಲಿಯೇ ಪಾದ ಪೂಜೆ ಮಾಡಿದರು.

ರಾಘವೇಂದ್ರ ಅನುಗ್ರಹ:

ಅಲ್ಲಿಂದ ರಾಮನಾಥಪುರ ಮಾರ್ಗವಾಗಿ ಚಿತ್ರದುರ್ಗ, ಗದಗ, ಹುಬ್ಬಳ್ಳಿ, ಪಂಢರಪುರ, ಕೊಲ್ಲಾಪೂರ, ಬಿಜಾಪೂರ ,ಆಲೂರ ಈ ಪ್ರದೇಶಗಳಲ್ಲಿ ಸುತ್ತಾಡಿ, ರಾಯಚೂರು ಜಿಲ್ಲೆಯ ಮಾನ್ವಿಗೆ ಬಂದರು. ಹೋದೆಡೆಯಲ್ಲೆಲ್ಲ ದಿಗ್ವಿಜಯ, ಮುಸಲ್ಮಾನನಾದ ಸವಣೂರಿನ ನವಾಬ, ವೀರಶೈವ ಮತದ ಸಿರಸಂಗಿಯ ದೇಸಾಯಿ, ಬಿಜಾಪೂರದ ಸುಲ್ತಾನ ಇಮ್ಮಡಿ ಇಬ್ರಾಹಿಂ ಅದಿಲ್ ಷಾ ಮೊದಲಾದವರೆಲ್ಲರೂ ಸ್ವಾಮಿಗಳಲ್ಲಿ ಭಕ್ತಿಯಿಂದ ನಡೆದುಕೊಂಡರು.

ಸ್ವಾಮಿಗಳು ಗದುಗಿನಲ್ಲಿದ್ದಾಗ ಕೀರ್ತಗೇರಿ ಗ್ರಾಮದ ಒಡೆಯ ವೆಂಕಟದೇಶಾಯಿಯವರ ಮನೆಯಲ್ಲಿ ಪವಾಡವೊಂದು ನಡೆಯಬೇಕಾಯಿತು. ಅವನು ಸ್ವಾಮಿಗಳನ್ನು ಮನೆಗೆ ಭಿಕ್ಷೆಗೆ ಕರೆದಿದ್ದ; ಸಾವಿರಾರು ಜನ ನೆರೆದರು. ಅವರಿಗೆಲ್ಲ ಸಂಭ್ರಮದ ಅಡಿಗೆ ಸಿದ್ಧವಾಗುತ್ತಿತ್ತು. ದೇಸಾಯಿಯ ಸಣ್ಣಮಗ ಆಟವಾಡುತ್ತ, ಮಾವಿನ ಹಣ್ಣಿನ ರಸಾಯನ ಇರಿಸಿದ್ದ ದೊಡ್ಡ ಪಾತ್ರೆಯೊಳಗೆ ಜಾರಿಬಿದ್ದು ಮುಳುಗಿ ಪ್ರಾಣಬಿಟ್ಟ. ಸಂತೋಷ ಸಮಾರಂಭದಲ್ಲಿ ದೇಸಾಯಿಯ ಮನೆಯವರಿಗೆ ಹಿಡಿಸಲಾರದ ದುಃಖ. ಸುದ್ಧಿ ಸ್ವಾಮಿಗಳಿಗೆ ತಿಳಿದೊಡನೆ ಮಗುವಿನ ಕಳೇಬರವನ್ನು ತರಿಸಿಕೊಂಡರು:ಮಂತರ ಹೇಳಿ ನೀರನ್ನು ಅದರ ಮೇಲೆ ಚಿಮುಕಿಸಿದರು. ಮಗು ಎದ್ದು ಎದ್ದು ಓಡಿಯಾಡತೊಡಗಿತು. ದೇಸಾಯಿ ಸಂತೋಷದಿಂದ ತನ್ನ  ಗ್ರಾಮವನ್ನೇ ಸ್ವಾಮಿಗಳಿಗೆ ದಾನ ಮಾಡಿಬಿಟ್ಟ. ಹೀಗೆಯೇ ಹುಬ್ಬಳ್ಳಿಗೆ ಸ್ವಾಮಿಗಳು ಬಂದಿದ್ದಾಗ ಸವಣೂರಿನ ನವಾಬನ ದುಃಖವನ್ನು ನೋಡಲಾರದೆ ಸ್ವಾಮಿಗಳು ಮಗನನ್ನು ಬದುಕಿಸಿದರು.   ಕೃತಜ್ಞತೆಯಿಂದ ನವಾನು ಅವರಿಗೆ ಕೃಷ್ಣಪುರ  ಮತ್ತಿತರ ಗ್ರಾಮಗಳನ್ನು ದಾನ ಮಾಡಿದ.  ಅವರು ಮಾನ್ವಿಗೆ ಬಂದು ಅಲ್ಲಿನ ಅಂಜನೇಯನ ಗುಡಿಯಲ್ಲಿ ಚಾತುರ್ಮಾಸ್ಯ ಸಂಕಲ್ಪ ಮಾಡಿದಾಗ ಒಂದೂ ವಿಶೇಷ ನಡೆಯಿತು.

“ಭಕ್ತಿಯಿಂದ ತಂದಿದ್ದಾನೆ”

ಆ ದಿನ ಅವರು ಬೆಳಗಿನ ಪೂಜೆ ಮುಗಿಸಿ ಹೊರಗೆ ಬಂದಾಗ ಗುಡಿಯ ಗರುಡಗಂಬದ ಬಳಿ ಹೊಲೆಯನೊಬ್ಬ ನಿಂತಿದ್ದ. ಸ್ವಾಮಿಗಳು ಅವನನ್ನು ಮಾತನಾಡಿಸಲು ಅವನು, “ಸ್ವಾಮಿ, ನಾನು ಜಾತಿಯಲ್ಲಿ ತುಂಬ ಕೀಳಾದವನು, ಆದರೆ ತಾವು ಬಂದಿದ್ದೀರೆಂದು ಕೇಳೀ ತಮ್ಮನ್ನು ನೋಡಲು ಬಂದೆ. ದೇವರಿಗೆ ಏನಾದರೂ ಸೇವೆ ಮಾಡಬೇಕೆಂದಿದೆ” ಎಂದನು. ಸ್ವಾಮಿಗಳು, “ಅದಕ್ಕೇನಂತೆ, ನಾಳೆ ಪೂಜೆ ಹೊತ್ತಿಗೆ ಏನಾದರೂ ತಾ” ಎಂದರು. ಮರುದಿನ ಮುಂಜಾನೆ ಇವನು ಒಂದು ಹಿಡಿ ಸಾಸಿವೇ ಕಾಳುಗಳನ್ನು ತಂದು ದೇವರಿಗೆಂದು ಒಪ್ಪಿಸಿದ. ಅದು ಆಷಾಢ ಮಾಸವಾದುದರಿಂದ ಚಾತುರ್ಮಾಸ್ಯವ್ರತದಲ್ಲಿ ಅಡಿಗೆಗೆ, ನೈವೇದ್ಯಕ್ಕೆ ಸಾಸಿವೆ ಬರುವುದಿಲ್ಲ; ಮೇಲಾಗಿ ಕೀಳುಜಾತಿಯವನು ತಂದದ್ದು. ಮಠದವರು ಸಾಸಿವೆಯನ್ನು ಒಳಗೆ ತರಬಾರದೆಂದು ಹೇಳಿದರು.  ಆದರೆ ಸ್ವಾಮಿಗಳು, “ಎಲ್ಲಿಯಾದರೂ ಉಂಟೆ ?ಅವನು ಭಕ್ತಿಯಿಂದ ತಂದಿದ್ದಾನೆ. ಅದನ್ನು ದೇವರಿಗೆ ನಿವೇದನೆ ಮಾಡಿ ಈ ದಿನದ ಅಡಿಗೆಗೆ ಬಳಸಿ!” ಎಂದು ಅಪ್ಪಣೆ ಮಾಡಿಬಿಟ್ಟರು! ಈ ದಿನ ಬಿದರಹಳ್ಳಿ ಶ್ರೀನಿವಾಸಾಚಾರ್ಯರೆಂಬ ದೊಡ್ಡ ಪಂಡಿತರು ಸ್ವಾಮಿಗಳನ್ನು ನೋಡಲು ಬಂದಿದ್ದರು.  ಅವರು ತುಂಬಾ ಮಡಿವಂತರು. ಆ ದಿನ ಅಡುಗೆಯಲ್ಲಿ ಸಾಸಿವೆ ಬಳಸಿದ್ದಾರೆಂದು ತಿಳಿದು ಅಲ್ಲಿ ಊಟ ಮಾಡದೆ ಸ್ವಾಮಿಗಳಿಂದ ಮಂತ್ರಾಕ್ಷತೆ ಪಡೆದು ಹೊರಟು ಹೋದರು. ಮನೆಗೆ ಬಂದು ನೋಡಿದಾಗ ಮಂತ್ರಾಕ್ಷತೆಗಳು ಕಪ್ಪಾಗಿದ್ದವು. ತಾವು ಸ್ವಾಮಿಗಳಿಗೆ ಅಪಚಾರ ಮಾಡಿದುದು ಅರಿವಾಗಿ ಒಡನೆಯೇ ಮಠಕ್ಕೆ ಹಸಿದ ಹೊಟ್ಟೆಯಲ್ಲಿಯೇ ಹಿಂದಿರುಗಿ, ಕ್ಷಮೆ ಬೇಡಿ ಅಲ್ಲಿಯೇ  ಊಟ ಮಾಡಿದರು.

ಮುಂದೆ ಸ್ವಾಮಿಗಳು ಆದವಾನಿ ಪ್ರದೇಶಕ್ಕೆ ಬಂದರು.  ಅಲ್ಲಿ ಆಗ ಆಡಳಿತ ನಡೆಸುತ್ತಿದ್ದವನು ಸಿದ್ಧಿ ಮಸೂದ್ ಖಾನ್ ಎಂಬ ರಾಜ; ಬಿಜಾಪೂರ ಸುಲ್ತಾನನ ಆಶ್ರಿತ ಇವನು. ಇಲ್ಲಿ ವೆಂಕಣ್ಣ ಪಂತನೆಂಬುವನು ಮೊದಲು ಏನು ಅರಿಯದ, ದಿಕ್ಕಿಲ್ಲದ ಹುಡುಗನಾಗಿದ್ದು ಸ್ವಾಮಿಗಳ ಅನುಗ್ರಹದಿಂದ ಮೇಲೆ ಬಂದು ರಾಜ್ಯದ ಆಡಳಿತವನ್ನೆಲ್ಲ ಖಾನರ ಪರವಾಗಿ ನಡೆಸತೊಡಗಿದ: ಖಾನನ ಬಳಿ ಪ್ರಧಾನ ಪಂತವಾಗಿ ನೇಮಕಗೊಂಡ.

ಸ್ವಾಮಿಗಳು ಅಲ್ಲಿಂದ ಮುಂದುವರಿದು ಶ್ರೀಶೈಲ, ತಿರುಪತಿ, ಕಾಂಚೀಪುರ, ವೃದ್ಧಾಚಲ,ಶ್ರೀ ಮುಷ್ಣ ಮಾರ್ಗವಾಗಿ ಕುಂಭಕೋಣಕ್ಕೆ ಹಿಂದಿರುಗಿದರು. ಆದರೆ ಇವರು ಊರು ಬಿಟ್ಟು ಅನೇಕ ವರ್ಷಗಳ ತರುವಾಯ ಹಿಂದಿರುಗಿ ಬರುವ ವೇಳೆಗೆ ಕುಂಭಕೋಣದ ಪರಿಸ್ಥಿತಿ ಬದಲಾಯಿಸಿಬಿಟ್ಟಿದ್ದಿತು. ತಾವು ಮುಂದೆ ಅಲ್ಲಿ ನೆಲೆಸುವುದು ಕಷ್ಟವೆಂದು ಅವರಿಗೆ ತೋರಿತು. ತಮ್ಮ ಮಠದ ನೆಲೆಯನ್ನು ಬೇರೆ ಕಡೆ ಒಯ್ಯಬೇಕೆಂದು ನಿರ್ಧರಿಸಿದರು.

“ಕೊಡುವುದಿದ್ದರೆ-“

ಸ್ವಾಮಿಗಳು ಕುಂಭಕೋಣದಲ್ಲಿ ಮಠದ ವ್ಯವಹಾರವನ್ನೆಲ್ಲ ಕೊನೆಗಾಣಿಸಿ, ಇಡೀ ಮಠದೊಂದಿಗೆ ಮತ್ತೇ ಪ್ರವಾಸ ಹೊರಟರು.  ಇವರ ಆಶಯ ಆದವಾನಿಯ ಪಂತ ಪ್ರದಾನ ವೆಂಕಣ್ಣನ ಕಿವಿಯನ್ನು ಮುಟ್ಟಿದೊಡನೆ ಅವನು ಲಗುಬಗೆಯಿಂದ ತನ್ನ ಪ್ರಾಂತಕ್ಕೆ ಸ್ವಾಮಿಗಳು ದಯಮಾಡಿಸಬೇಕೆಂದು ಬೇಡಿಕೆಯನ್ನು ಸಲ್ಲಿಸಿದರು. ಅರಸನಾಗಿದ್ದ ಸಿದ್ಧಿ ಮಸೂದ ಖಾನನು ಸ್ವಾಮಿಗಳನ್ನು ಕರೆದುಕೊಂಡು ಬರಲು ತನ್ನ ಪ್ರಧಾನಿಯನ್ನು ಕಳುಹಿಸಿದ. ಸ್ವಾಮಿಗಳು ಒಪ್ಪಿ ಆದವಾನಿ ಕಡೆಗೆ ಹೊರಟರು. ಅವರು ಊರು ಮುಟ್ಟುತ್ತಲೇ ಸಿದ್ಧಿ ಮಸೂದ್ ಖಾನ ಮತ್ತು ಪ್ರಧಾನಿ ವೆಂಕಣ್ಣಪಂತ ಇಬ್ಬರೂ ಪರಿವಾರ, ಪುರಜನರೊಡಗೂಡಿ ಸ್ವಾಮಿಗಳಿಗೆ ಸಂಭ್ರಮದ ಸ್ವಾಗತ ಬಯಸಿದರು: ಬಂಗಾರದ ಪಲ್ಲಕ್ಕಿಯಲ್ಲಿ ಅವರನ್ನು ಕೂಡಿಸಿ ಊರಿನ ಮೆರವಣಿಗೆ ನಡೆಸಿದರು.

ಸ್ವಾಮಿಗಳಿಗೆ ಅದ್ದೂರಿಯ ಬಿಡಾರವನ್ನು ಏರ್ಪಡಿಸಿ ಅವರ ವಸತಿ, ಪೂಜೆ, ಪಾಠ, ಪ್ರವಚನಗಳಿಗೆ ಅಣಿ ಮಾಡಿಕೊಟ್ಟರು. ಮಠಕ್ಕೆ ಬಂದು ಸ್ವಾಮಿಗಳನ್ನು ಸಿದ್ಧಮಸೂದ್ ಖಾನ್ ಭೇಟಿ ಮಾಡಿ ಮಾತುಕತೆ ನಡೆಸಿದ.  ಸ್ವಾಮಿಗಳ ವಿಚಾರವಾಗಿ ಖಾನನಿಗೆ ಗೌರವ ಭಾವನೆ ಬೆಳೆಯಿತು. ತನ್ನ ಅರಮನೆಗೆ ಹಿಂದಿರುಗಿದ ಮೇಲೆ ಪ್ರಧಾನಿಯನ್ನು ಕರೆಸಿ, “ಪಂತರೇ, ನಿಮ್ಮ ಸ್ವಾಮಿಗಳಿಗೆ ಇನಾಂ ಗ್ರಾಮವೊಂದನ್ನು ದಾನ ಮಾಡಬೇಕೆಂದಿದ್ದೇನೆ. ಅವರ ಇಷ್ಟವನ್ನು ಅರಿತುಕೊಂಡು ಬನ್ನಿ” ಎಂದು ಹೇಳಿ ಕಳುಹಿಸಿದ.

ವೆಂಕಣ್ಣ ಪಂತನು ಸ್ವಾಮಿಗಳ ಬಳಿ ಈ ವಿಚಾರವನ್ನು ಪ್ರಸ್ಥಾಪಿಸಲು ಅವರು ತುಂಗಭಧ್ರಾನದಿಯ ದಂಡೆಯ ಮೇಲೆ ಮಂಚಾಲೆ ಎಂಬ ಗ್ರಾಮವನ್ನು ಕೊಡಬಹುದೆಂದು ಸೂಚಿಸಿದರು.  ಈ ಆಯ್ಕೆಯನ್ನು ಕೇಳಿ ಪಂತನಿಗೂ ಆಶ್ಚರ್ಯವಾಯಿತು. ಖಾನನಿಗೂ ಆಶ್ಚರ್ಯವಾಯಿತು.  ಮಂಚಾಲೆ ತೀರ ಕುಗ್ರಾಮ. ಬಂಜರು ಭೂಮಿ; ಅಲ್ಲಿ ಬೆಳೆಯುತ್ತಿದ್ದುದು ಕಳ್ಳಿ ಅಷ್ಟೆ. ಬೇರೆ ಯಾವುದಾದರೂ ಒಳ್ಳೆಯ, ಫಲವತ್ತಾದ , ಸಮೃದ್ಧವಾದ ಗ್ರಾಮವನ್ನು ಆರಿಸಿಕೊಳ್ಳಿರೆಂದು ಸ್ವಾಮಿಗಳನ್ನು ಪಂತರೂ ಖಾನನೂ ಬೇಡಿಕೊಂಡರು. ಸ್ವಾಮಿಗಳು, “ಕೊಡುವುದಿದ್ದರೆ ಮಂಚಾಲೆಯನ್ನು ಕೊಡಿ: ನಮಗೆ ಬೇರೆ ಏನೂ ಬೇಡ” ಎಂದು ಬಿಟ್ಟರು.

ಬೃಂದಾವನ ಪ್ರವೇಶ :

ಕಡೆಗೆ, ಮಂಚಾಲೆಯನ್ನು ರಾಘವೇಂದ್ರ ಸ್ವಾಮಿಗಳಿಗೆ ಕೊಡಲಾಯಿತು. ಸ್ವಾಮಿಗಳು ಈ ಗ್ರಾಮಕ್ಕೆ ಬಂದು ಅಲ್ಲಿ ವೆಂಕಟೇಶದೇವರ ಗುಡಿಯೊಂದನ್ನು ಕಟ್ಟಿಸಿ, ತಮ್ಮ ವಸತಿಯನ್ನೂ ಮಠದ ನೆಲೆಯನ್ನೂ ಏರ್ಪಡಿಸಿಕೊಂಡರು. ಅಲ್ಲಿನ ಗ್ರಾಮದೆವತೆಯಾದ ಮಂಚಾಲಮ್ಮನ ಗುಡಿಯ ಪಕ್ಕದಲ್ಲಿಯೇ ಗುಡಿಯೊಂದನ್ನು ಕಟ್ಟಿಸಬೇಕೆಂದು ಸ್ವಾಮಿಗಳು ವೆಂಕಣ್ಣ ಪಂತನಿಗೆ ತಿಳಿಸಿ,ತಾವು ಅಲ್ಲಿಯೇ ತಮ್ಮ ದೇಹವನ್ನಿಡುವ ಬಯಕೆಯನ್ನು ವ್ಯಕ್ತಪಡಿಸಿದರು.

ಈ ಬಯಕೆಯನ್ನು ತಿಳಿದು ಎಲ್ಲರೂ ಕಂಗಾಲಾದರು. ಏಕೆಂದರೆ ಸ್ವಾಮಿಗಳ ಸಂಪರ್ಕಕ್ಕೆ ಬಂದವರು ಯಾರೇ ಆಗಲಿ ಅವರ ಪ್ರಭಾವದೊಳಗೆ ಬಾರದೆಯಿರುತ್ತಿರಲಿಲ್ಲ; ಅವರು ಎಷ್ಟು ದೊಡ್ಡ ಪಂಡಿತರೋ ಅಷ್ಟೇ ಕರುಣಾಳುಗಳೂ. ಆದರೆ ಸ್ವಾಮಿಗಳ ಸಂಕಲ್ಪ ದೃಢವಾದುದೆಂದು ಎಲ್ಲರೂ ಬಲ್ಲರು. ಬೇರೆ ದಾರಿಗಣದೆ ವೆಂಕಣ್ಣ ಪಂಡಿತನು ಗುಡಿಯನ್ನು ಸಿದ್ಧಪಡಿಸಿದ.

ಶಾಲೀವಾಹನ ಶಕೆ ೧೫೬೩ (ಎಂದರೆ ಕ್ರಿಸ್ತಾಬ್ದ ೧೬೭೧) ವಿರೊಧಿಕೃತ್ ಸಂವತ್ಸರದ ಶ್ರಾವಣಮಾಸ ಕೃಷ್ಣಪಕ್ಷ, ಬೀದಿಗೆ, ಗುರುವಾರದ ದಿನ ತಾವು ಬೃಂದಾವನ ಪ್ರವೇಶ ಮಾಡುವುದಾಗಿ ಸ್ವಾಮಿಗಳು ಮೊದಲೇ ತಿಳಿಸಿದರು. ವೆಂಕಣ್ಣ ಎಂಬ ವಿಧ್ವಾಂಸರಿಗೆ ಸಂನ್ಯಸ ಕೊಡಿಸಿ ತಮ್ಮ ಉತ್ತರಾಧಿಕಾರಿಯೆಂದು ತಿಳಿಸಿದರು. ಇವರೇ ಯೋಗೀಂದ್ರ ತೀರ್ಥರೆಂದು ರಾಘವೇಂದ್ರ ಸ್ವಾಮಿಗಳ ಅನಂತರ ಅವರ ಪೀಠವನ್ನು ಏರಿದವರು.

ತಾವು ಮೊದಲೇ ಗೊತ್ತುಪಡಿಸಿಕೊಂಡಿದ್ದ ನಡುಹಗಲಿನ ವೇಳೆ ಸಮೀಪಿಸುತ್ತಿದ್ದಂತೆಯೇ ಸ್ವಾಮಿಗಳು ತಮ್ಮ ಅಹ್ನಿಕ ಮೊದಲಾದ ವಿಧಿಗಳನ್ನೆಲ್ಲ ಮುಗಿಸಿ ಮಂಚಾಲಮ್ಮನ ಗುಡಿಯ ಮಗ್ಗುಲಲ್ಲಿಯೇ ವೆಂಕಣ್ಣಪಂತ ಕಟ್ಟಿಸಿದ ಗುಡಿಗೆ ಬಂದು,ಗೊತ್ತಾದ ಸ್ಥಳದಲ್ಲಿ ಯೋಗಾಸನ ಧರಿಸಿ ಕುಳಿತರು. ಆ ವೇಳೆಗಾಗಲೇ ಊರವರು, ಪರ ಊರವರು, ಭಕ್ತರು, ಕುತೂಹಲಿಗಳು,ಪರಿವಾರದವರು, ಪರಿಚಾರಕರು, ಸಾವಿರ ಸಂಖ್ಯೆಯಲ್ಲಿ  ನೆರೆದಿದ್ದರು. ಸ್ವಾಮಿಗಳು ಒಮ್ಮೆ ಎಲ್ಲರನ್ನೂ ನೋಡಿ, ಅಶೀರ್ವದಿಸಿ, “ಇದೇ ನನ್ನ ಕಡೆಯ ನೋಟ.  ಗಟ್ಟಿಮುಟ್ಟಾಗಿರುವ ಈ ದೇಹದಿಂದಲೇ ಈಗ ಬೃಂದಾವನದಲ್ಲಿ ಆಢಗಿ  ಹೋಗುತ್ತಿದ್ದೇನೆ.  ಇನ್ನು ಮುಂದೆ ನೀವು ನನ್ನನ್ನು ಈ ದೇಹದಲ್ಲಿ ಕಾಣಲಾರಿರಿ. ಧರ್ಮಕ್ಕೆ ತಲೆಬಾಗಿ ಬಾಳನ್ನು ನಡೆಸಿರಿ;  ದೇವರು ನಿಮಗೆ ಒಳ್ಳೆಯದನ್ನು ಮಾಡಲಿ” ಎಂದು ಹೇಳಿದರು. ಎಲ್ಲರಿಗೂ ತೀರ್ಥ ,  ಪ್ರಸಾದ ಹಂಚಿದ ನಂತರ ಸ್ವಾಮಿಗಳು ತಮ್ಮ ಉತ್ತರಾಧಿಕಾರಿ ಯೋಗಿಂದ್ರರನ್ನೂ ತಮ್ಮ ಶಿಷ್ಯ ವೆಂಕಣ್ಣಪಂತನನ್ನೂ ಕರೆದು, “ನಮ್ಮ ಕಾಲ ಸಮೀಪಿಸುತ್ತಿದೆ. ನಾವಿನ್ನೂ  ಪ್ರಾಣಾಯಾಮ, ಧ್ಯಾನ, ಧಾರಣೆಗಳಲ್ಲಿ ತೊಡಗುತ್ತೇವೆ. ನೀವು ನಮ್ಮ ಮೈಸುತ್ತ ಬೃಂದಾವನವನ್ನು ಕಟ್ಟಲು ಆರಂಭಿಸಿ. ತಲೆಯ ಮಟ್ಟಕ್ಕೆ ಬಮದೊಡನೆ, ಸಾವಿರದ ಇನ್ನೂರು ಸುಲಿಗ್ರಾಮಗಳನ್ನು ತಲೆಯ ಮೇಲಿರಿಸಿ ಬೃಂದಾವನ್ನ್ನು ಮುಚ್ಚಿಬಿಡಿ” ಎಂದು ಸೂಚಿಸಿ ನಸುನಗುತ್ತಲೇ ಧ್ಯಾನ ಮಗ್ನರಾದರು. ಎಡಗೈಯಲ್ಲಿ ಕಮಂಡಲವಿದ್ದಿತು: ಬಲಗೈಯಲ್ಲಿ ಜಪಮಾಲೆಯಿದ್ದಿತು. ಜಪಮಾಲೆಯು ಮಾತ್ರ ಬೆರಳುಗಳ ಸಂದಿಯಿಂದ ಕೆಳಗಿಳಿದು ಮೇಲೇರುತ್ತಿದ್ದಿತು. ಉಳಿದಂತೆ ಶರೀರದಲ್ಲಿ ಯಾವ ಚಲನೆಯು ಇರಲಿಲ್ಲ. ನಡುಹಗಲಿಗೆ ಸರಿಯಾಗಿ ಜಪಮಾಲೆಯ ತಿರುಗಾಟವೂ ನಿಂತಿತು.  ಸ್ವಾಮಿಗಳು ಉಸಿರನ್ನು ಒಳಗೆ ಕಟ್ಟಿ, ಅಂತರ್ಯಾಮಿಯಲ್ಲಿ ಸೇರಿ ಹೋಗಿದ್ದರು.

ಒಡನೆಯೇ ಅವರು ಮೊದಲೇ ಹೇಳಿದಂತೆ ಅವರ ಶರೀರದ ಸುತ್ತ ಬೃಂದಾವನವನ್ನು ಕಲ್ಲು ಕಟ್ಟಡವಾಗಿ  ನಿರ್ಮಿಸಿದರು; ತಲೆಯ ಮೇಲ್ಬಾಗದಲ್ಲಿ ಸಾಲಿಗ್ರಾಮಗಳನ್ನಿರಿಸಿ ಮುಚ್ಚಿದರು. ಯೋಗೀಂಧ್ರರು ಗುರುಗಳ ಆರಾಧನೆಯನ್ನು ನಡೆಸಿದರು.

“ಸಾಕ್ಷೀ ಹಯಸ್ತ್ಯೋತ್ರಹಿ”:

ಗುರುಗಳ ಅಚ್ಚುಮೆಚ್ಚಿನ ಶಿಷ್ಯರಲ್ಲಿ ಅಪ್ಪಣ್ಣಾಚಾರ್ಯರೆಂಬುವವರೊಬ್ಬರು. ಗುರುಗಳ ಸಮಾಧಿಗೆ ಸೇರಿದಾಗ ಅವರು ಮಂಚಾಲೆಯಲ್ಲಿರದೆ ಸ್ವಲ್ಪ ದೂರದ ಹಳ್ಳಿಗೆ ಹೋಗಿದ್ದರು.  ಗುರುಗಳ ಬೃಂದಾವನ ಪ್ರವೇಶದ ಸುದ್ಧಿ ಕೇಳಿದೊಡನೆ ಓಡೋಡಿ ಬಂದರು. ಆದರೆ ಅವರು ಬೃಂದಾವನ ಸಮೀಪಿಸುವ ವೇಳೆಗೆ  ಬೃಂದಾವನದ ಮೇಲ್ಬಾಗದ ಶಿಲೆಯನ್ನು ಸ್ಥಾಪನೆ  ಮಾಡುತ್ತಿದ್ದರು.  ಅಪ್ಪಣಾಚಾರ್ಯರು ಬರುತ್ತಾ ದಾರಿಯುದ್ಧಕ್ಕೂ ತಾವೇ ರಚಿಸಿದ ರಾಘವೇಂದ್ರ ಸ್ತೊತ್ರವನ್ನು ಹೇಳಿಕೊಂಡು ಬಂದರು; ಅವರು ಬೃಂದಾವನ ಸಮೀಫಿಸಿದೊಡನೆ ಸ್ತ್ರೋತ್ರ ಮುಗಿದು ಕಡೆಯ ಪಾದವೊಂದು ಉಳಿದಿತ್ತು. ಆ ಪಾದವನ್ನು ಪೂರ್ಣಮಾಡಿ “ಸಾಕ್ಷೀ ಹಯಾಸ್ತ್ಯೋತ್ರಹಿ ” ಎಂಬ ಧ್ವನಿ ಬೃಂದಾವನದೊಳಗಿಂದ ಕೇಳಿ ಬಂದಿತು. ಸ್ವಾಮಿಗಳೇ ಅಪ್ಪಣಾಚಾರ್ಯರ ಸ್ತ್ರೋತ್ರವನ್ನು ಹೀಗೆ ಒಪ್ಪಿಸಿಕೊಂಡರು.

ಮಂತ್ರಾಲಯ ಪ್ರಭು:

ರಾಘವೇಂದ್ರ ಸ್ವಾಮಿಗಳು ಮರೆಯಾದ ರೀತಿ ಅಸಾಧಾರಣವಾಗಿದ್ದಿತ್ತು ಮುಪ್ಪು ಬಂದಡಡರಿ, ರೋಗ ಹಿಡಿದು, ತೀರಿಕೊಂಡು, ಕಳೇಬರವನ್ನು ಬಿಡುವುದು ಸಾಮಾನ್ಯವಲ್ಲವೇ? ಆದರೆ ರಾಘವೇಂದ್ರ ಸ್ವಾಮಿಗಳು ಹೀಗೆ ಮಾಡಲಿಲ್ಲ. ದೇಹವನ್ನು ಬಿಡುವ ನಿರ್ಧಾರವನ್ನು ತಾವೇ ಮಾಡಿ ಅದಕ್ಕೆ ತಕ್ಕವೇಳೆಯನ್ನೂ ತಾವೇ ನಿಶ್ಚಯಿಸಿ, ಯೋಗ ಪದ್ಧತಿಯಿಂದ ಮರೆಯಾದುದೇ ವಿಶೇಷ.  ಅವರ ದೇಹದಲ್ಲಿ  ಮುಪ್ಪಿನ ಬಾಧೆಯು ಇರಲಿಲ್ಲ. ಯಾವ ಕಾಯಿಲೆಯೂ ಇರಲಿಲ್ಲ. ತಮ್ಮ ಕೆಲಸ ಮುಗಿಯಿತೆಂದು ಕಂಡುಕೊಂಡು, ಎಲ್ಲರೆದುರು ನಗುನಗುತ್ತಾ ಧ್ಯಾನದಲ್ಲಿ ಕುಳಿತು ಬೃಂದಾವನವಾಗಿಬಿಟ್ಟರು!  ಅಂದಿನಿಂದ ಮಂಚಾಲೆ ಮಂತ್ರಾಲಯವೆಂದು ಪ್ರಸಿದ್ಧಯಾಯಿತು; ಯಾರೂ ಕಾಣದ ಕುಗ್ರಾಮ ದೇಶದಲ್ಲೆಲ್ಲ ಪ್ರಸಿದ್ಧ ಯಾತ್ರಾ ಸ್ಥಳವಾಯಿತು. ಸಶರೀರ ಬೃಂದಾವನ ಪ್ರವೇಶ ಮಾಡಿದ ರಾಘವೇಂದ್ರ ಸ್ವಾಮಿಗಳ ಸನ್ನಿಧಾನವು ಅಲ್ಲಿ ಏಳುನೂರು ವರ್ಷಗಳ ಕಾಲ ಇರುವುದೆಂಬ ನಂಬಿಕೆ ಇದೆ. ಈಗಲೂ ಭಾರತದ  ಮೂಲೆ-ಮೂಲೆಗಳಿಂದ ಸಾವಿರಾರು ಮಂದಿ ಭಕ್ತರು ಮಂತ್ರಾಲಯಕ್ಕೆ ಯಾತ್ರೆ ಕೈಗೊಳ್ಳುತ್ತಾರೆ.

ಹೈದರಾಬಾದಿನ ನಿಜಾಮನು ಬ್ರಿಟಿಷರಿಗೆ ಕೊಟ್ಟ ಪ್ರಾಂತಗಳನ್ನು ಕ್ರಿಸ್ತಶಕ ೧೮೦೦ರ ಸುಮಾರಿಗೆ ಆಳುತ್ತಿದ್ದ  ಸರ‍್ ಥಾಮಸ್ ಮನ್ರೋ ಮಂಚಾಲೆಗೆ ಬಂದಿದ್ದಾಗ ಈ ಬೃಂದಾವನದೊಳಗೆ ಸ್ವಾಮಿಗಳು  ಜೀವಂತವಾಗಿದ್ದುದನ್ನು ಕಂಡನೆಂದೂ ಸ್ವಾಮಿಗಳು ಅವನೊಡನೆ ಮಾತನಾಡಿದರೆಂದೂ ಪ್ರತೀತಿಯಿದೆ.

ರಾಘವೇಂದ್ರ ಸ್ವಾಮಿಗಳು ರಚಿಸಿದ ಹಾಡು :

ರಾಗ-ಭೈರವಿ      ತಾಳ- ಮಿಶ್ರಚಾಪು

ಇಂದು ಎನಗೆ ಗೋವಿಂದ, ನಿನ್ನಯ ಪಾದಾರ
ವಿಂದವ ತೋರೋ ಮುಕುಂದ || (ಪ_)
ಸುಂದರವನದನೆ ನಂದಗೋಪನ ಕಂದ
ಮಂದರೋದ್ಧಾರ ಆನಂದ ಇಂದಿರಾರಮಣ || (ಆಫ್)
ನೊಂದನೆನಯ್ಯ ಭವಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು
ಕಂದನೆಂದೆನ್ನ ಕುಂದುಗಳೆಣಿಸದೆ
ತಂದೆ ಕಾಯೊ ಕೃಷ್ಣ ಕಂದರ್ಪ ಜನಕನೆ || (೧)
ಮೂಢತನದಿ ಬಹು ಭಾರಜೀವಿ ನಾನಾಗಿ
ದೃಢಭಕುತಿಯನು ಮಾಡಲಿಲ್ಲವೋ ಹರಿಯೆ
ನೋಡಲಿಲ್ಲವೋ ನಿನ್ನ ಪಾಡಲಿಲ್ಲವೋ ಮಹಿಮೆ
ಗಾಡಿಗಾರ ಕೃಷ್ಣ ಬೇಡಿಕೊಂಬೇನೊ ನಿನ್ನ || (೨)
ಧಾರುಣಿಯೊಳು ಭೂಭಾರಜೀವ ನಾನಾಗಿ
ದಾರಿ ತಪ್ಪಿ ನಡೆದೆ ಸೇರಿದೆ ಕುಜನರ
ಆರು ಕಾಯುವರಿಲ್ಲ ಸೇರಿದೆ ನಿನಗಯ್ಯ
ಧೀರ ವೇಣುಗೋಪಾಲ ಪಾರುಗಾಣಿಸೋ
ಹರಿಯೆ || (೩)

ರಾಘವೇಂದ್ರ ಗುರುಗಳನ್ನು ಭಕ್ತರು,

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯ ಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೆ

ಎಂದು ಸ್ತುತಿಸುತ್ತಾರೆ.