ಶ್ರದ್ಧೆ ಮತ್ತು ನಿಷ್ಠೆಯ ಪ್ರತೀಕ:

೧೯೫೦ರಲ್ಲಿ ನನಗೆ ಡಾಕ್ಟರರ ಪರಿಚಯವಾಯಿತು. ಅವರು ಮಂಜೇಶ್ವರದಲ್ಲಿ ವೈದ್ಯವೃತ್ತಿಯನ್ನು ಪ್ರಾರಂಬಿಸಿದ್ದರು. ನಾನು ಮತ್ತು ಕಾಮ್ರೇಡ್ ಸದಾಶಿವ (ಅವರೀಗಿಲ್ಲ) ಸೋವಿಯತ್ ಯೂನಿಯನ್‌ನ ಪುಸ್ತಕಗಳನ್ನು ಮತ್ತು ನಮ್ಮ ಪಕ್ಷದ ವತಿಯಿಂದ ಪ್ರಕಟವಾದ ಪುಸ್ತಕಗಳನ್ನು ಮಾರಾಟ ಮಾಡುವುದರಲ್ಲಿ ನಿರತರಾಗಿದ್ದೆವು. ಕೇರಳದ ನೀಲೇಶ್ವರದ ತನಕವೂ ಪುಸ್ತಕಗಳನ್ನು ಹೊತ್ತುಕೊಂಡು ಹೋಗಿ ವಿತರಿಸುತ್ತಿದ್ದೆವು. ಕೆಲವು ಸಂದರ್ಭಗಳಲ್ಲಿ ಹಿಂತಿರುಗಿ ಬರುವಾಗ ಬಹಳ ತಡವಾದರೆ ಮಂಜೇಶ್ವರದಲ್ಲಿ ಡಾಕ್ಟರರ ಮನೆಗೆ ಹೋಗುತ್ತಿದ್ದೆವು. ನಾವು ಎಷ್ಟು ತಡವಾಗಿ ಹೋದರೂ ಅವರು ಮತ್ತವರ ಪತ್ನಿ ಶ್ರೀಮತಿ ಕಾಶಮ್ಮ ನಮಗೆ ಊಟದ ಏರ್ಪಾಡು ಮಾಡಿದ ಬಳಿಕವೇ ಚಾವಡಿಯಲ್ಲಿ ಮಲಗಲು ವ್ಯವಸ್ಥೆ ಮಾಡಿಕೊಡುತ್ತಿದ್ದರು. ನಾವು ಡಾಕ್ಟರರಿಗೆ ತುಂಬಾ ತೊಂದರೆ ನೀಡುತ್ತಿದ್ದೇವೆ ಎಂದು ಭಾವಿಸುತ್ತಿದ್ದರೂ ಡಾಕ್ಟರಿಗಾಗಲೀ ಅವರ ಸಹಧರ್ಮಿಣಿಗಾಗಲೀ ಕಿಂಚಿತ್ತೂ ಬೇಸರವಾಗುತ್ತಿರಲಿಲ್ಲ.ಇದೇ ಸಂದರ್ಭದಲ್ಲಿ ನಾನು ಮತ್ತು ಸದಾಶಿವರು ಮಂಗಳೂರಿನಲ್ಲಿ ಒಂದು ಪುಸ್ತಕದ ಅಂಗಡಿಯನ್ನು ತೆರೆಯಲು ಆಲೋಚಿಸಿದೆವು. ಇದಕ್ಕಾಗಿ ಡಾಕ್ಟರೊಡನೆ ಚರ್ಚಿಸಿದೆವು. ಚರ್ಚೆಯ ಬಳಿಕ ಒಂದು ಕಂಪೆನಿಯನ್ನು ಮಾಡುವ ಎಂದು ಡಾಕ್ಟರರು ಸಲಹೆ ನೀಡಿದರು. ಮಾತ್ರವಲ್ಲ ಈ ಕಂಪೆನಿಗೆ ಶೇರು ಬಂಡವಾಳವನ್ನು ನೀಡಿದರು. ಡಾ. ಶಾಸ್ತ್ರಿ, ಡಾ. ಸುಬ್ಬರಾವ್, ನಾನು ಮತ್ತು ಕಾಸರಗೋಡಿನ ಗೋವಿಂದನ್ ಈ ಕಂಪೆನಿಯ ನಿರ್ದೇಶಕರಾದೆವು. ಕಾಂ† ಸದಾಶಿವರು ಬದುಕಿದಷ್ಟು ಕಾಲ ಈ ಕಂಪೆನಿಯು ‘ನವಶಕ್ತಿ ಪಬ್ಲಿಕೇಶನ್ಸ್ (ರಿ.)’ ಎಂಬ ನಾಮಧೇಯದಲ್ಲಿ ಚೆನ್ನಾಗಿ ನಡೆಯಿತು. ಡಾಕ್ಟರರು ಇದನ್ನು ಸರಿಯಾಗಿ ನಡೆಸಿಕೊಂಡು ಹೋಗುವುದರಲ್ಲಿ ತುಂಬ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದರು. ಈ ಕಂಪೆನಿಯೇ ಇಂದಿನ ‘ನವಕರ್ನಾಟಕ ಕಂಪೆನಿ’ಗೆ ಬುನಾದಿಯಾಯಿತು.ಸುಮಾರು ೪೦ ವರ್ಷಗಳ ಹಿಂದೆ ಮಂಜೇಶ್ವರದಲ್ಲಿ ಒಂದು ರೈತ ಸಮ್ಮೇಳನ ನಡೆಯಿತು. ಅದಕ್ಕೆ ನನ್ನನ್ನು ಆಹ್ವಾನಿಸಿದ್ದರು. ಬಹಿರಂಗ ಸಮ್ಮೇಳನಕ್ಕೆ ಮುಂಚಿತವಾಗಿ ಕಡಂಬಾರಿ ನಿಂದ ರೈತರ ಮೆರವಣಿಗೆಯನ್ನು ವ್ಯವಸ್ಥೆ ಮಾಡಲಾಗಿತ್ತು. ಅಂದು ಡಾಕ್ಟರ್ ಸುಬ್ಬರಾವ್ ಅವರಿಗೆ ಕಾಲುನೋವು. ಕುಂಟುತ್ತಾ ಅತ್ತಿತ್ತ ಓಡಾಡುತ್ತಿದ್ದರು. ಆದರೂ ಸುಮಾರು ನಾಲ್ಕು ಮೈಲುಗಳಷ್ಟು ದೂರ ಮೆರವಣಿಗೆಯಲ್ಲಿ ಮುಂದಳದಲ್ಲಿ ನಿಂತು ಆವೇಶ ದಿಂದ ಘೋಷಣೆ ಕೂಗುತ್ತಾ ಸಾಗಿ ಬಂದ ಡಾಕ್ಟರರ ಹಠ ನಮ್ಮನ್ನು ರೋಮಾಂಚನಗೊಳಿಸಿತು. ಅವರ ದೃಢ ನಿರ್ಧಾರ, ಕರ್ತವ್ಯದ ಬಗೆಗಿನ ಕಾಳಜಿ, ಜನರ ಮಧ್ಯದಲ್ಲಿ ಇರಬೇಕೆಂಬ ಅವರ ಭಾವನೆ ನಮಗೆಲ್ಲ ಆಶ್ಚರ್ಯ ಹಾಗೂ ಉತ್ಸಾಹವನ್ನು ಉಂಟುಮಾಡುತ್ತಿತ್ತು.ಹೀಗೆ ಡಾಕ್ಟರರೊಬ್ಬ ಕರ್ಮಯೋಗಿ. ಕಮ್ಯುನಿಸ್ಟ್ ತತ್ವಗಳನ್ನು ಮನಗಂಡು ತನ್ನನ್ನು ತಾನೇ ಅದಕ್ಕೆ ಸಮರ್ಪಿಸಿಕೊಂಡ ಒಬ್ಬ ಮಹಾವ್ಯಕ್ತಿ. ಅವರಲ್ಲಿ ಸ್ವಾರ್ಥ ಎಂಬುದು ಲವಲೇಶವೂ ಇರಲಿಲ್ಲ. ಅವರು ಸ್ಥಾನಮಾನ, ಅಧಿಕಾರಗಳಿಗೆ ಎಂದಿಗೂ ಹಂಬಲಿಸಲಿಲ್ಲ. ತನ್ನ ಕೊನೆಯ ದಿನದ ತನಕ ತನ್ನ ಸರ್ವಸ್ವ ಪಕ್ಷಕ್ಕಾಗಿ ಎಂಬ ನಿಲುಮೆಯನ್ನು ಅನುಸರಿಸಿದರು. ಆಸ್ಪತ್ರೆಯಲ್ಲಿರುವಾಗ ನಾನು ಆಗಾಗ್ಗೆ ಡಾಕ್ಟರರನ್ನು ಕಾಣಲು ಹೋಗುತ್ತಿದ್ದೆ. ಹಿಂತಿರುಗುವ ಸಮಯದಲ್ಲಿ ಕೈಯೆತ್ತಿ ‘ಲಾಲ್ ಸಲಾಂ’ ನೀಡುವುದನ್ನು ನೋಡಿ ‘ಇವರು ನಿಜವಾಗಿಯೂ ಕಮ್ಯೂನಿಸ್ಟ್ ತತ್ವವನ್ನು ಮೈಗೂಡಿಸಿಕೊಂಡಿರುವ ಮಹಾ ಸಂಗಾತಿ’ ಎಂದು ನನ್ನ ಮನಸ್ಸು ಆಗಾಗ್ಗೆ ಹೇಳುತ್ತಿತ್ತು. ನಾನು ಬದುಕಿರುವಷ್ಟು ಕಾಲ ಡಾಕ್ಟರರೊಂದಿಗೆ ಕಳೆದ ದಿನಗಳನ್ನು, ಅವರು ಪಕ್ಷಕ್ಕಾಗಿ ಮಾಡಿದ ಕಾಯಕವನ್ನು ಮರೆಯಲಾರೆ.

ಪಿ.ಎಂ. ನಾರಾಯಣ ಮೂರ್ತಿಎಡ್ವಕೇಟ್, ಮಂಗಳೂರು

ಆರು ದಶಕಗಳ ಆತ್ಮೀಯ ಸಂಬಂಧ:

ನನಗೆ ಡಾ. ಎ. ಸುಬ್ಬರಾಯರ ಪರಿಚಯವಾದದ್ದು ೧೯೪೩ರಲ್ಲಿ. ಅಂದಿನಿಂದ ಬೆಳೆದು ಬಂದ ಆತ್ಮೀಯ ಸಂಬಂಧ ೧೪ ಸೆಪ್ಟೆಂಬರ್ ೨೦೦೩ರಂದು ಅವರು ಕೊನೆಯುಸಿರು ಎಳೆಯುವವರೆಗೂ ಮುಂದುವರಿಯಿತು. ಈ ಆರು ದಶಕಗಳ ನಿರಂತರ ಸಂಬಂಧ ಮತ್ತು ಕೇರಳದ ಉತ್ತರ ತುದಿಯ ಮಂಜೇಶ್ವರ ಕ್ಷೇತ್ರದಲ್ಲಿ ಅವರ ಮುಂದಾಳುತನದ ಆಂದೋಲನದಲ್ಲಿ ನನ್ನ ಭಾಗವಹಿಸುವಿಕೆ – ಇವು ನನ್ನ ಜೀವನದ ಮರೆಯಲಾಗದ ಅಧ್ಯಾಯಗಳು. ಈ ಸಂದರ್ಭದಲ್ಲಿ ನಾನು ಮಂಜೇಶ್ವರದ ದಿವಂಗತ ಕಾಮ್ರೇಡ್ ಎಂ. ರಾಮಪ್ಪ ಅವರನ್ನು ಸ್ಮರಿಸಲೇಬೇಕು. ಇವರೂ ನನಗೆ ಡಾ. ಸುಬ್ಬರಾಯರಂತೆ ಆತ್ಮೀಯರು. ಇವರಿಬ್ಬರೂ ಕಮ್ಯುನಿಸ್ಟ್ ಪಾರ್ಟಿಯ ನೇತಾರರಾಗಿ ಮಂಜೇಶ್ವರ ಪ್ರದೇಶದಲ್ಲಿ ಕಾರ್ಮಿಕರ ಮತ್ತು ರೈತರ ಚಳವಳಗಳನ್ನೂ, ಸಹಕಾರ ಹಾಗೂ ಸಾಂಸ್ಕೃತಿಕ ಆಂದೋಲನಗಳನ್ನೂ ಕಟ್ಟಿ ಬೆಳೆಸಿದರು. ಅವರು ಕಟ್ಟಿದ ಕಮ್ಯುನಿಸ್ಟ್ ಪಾರ್ಟಿಯ ಘಟಕಗಳ ಜಾಲ ಮಂಜೇಶ್ವರದಿಂದ ಅಡ್ಯನಡ್ಕ ಮತ್ತು ತಾಲಪಾಡಿಯಿಂದ ಅಂಗಡಿಮೊಗರು, ಎಣ್ಮಕಜೆವರೆಗೆ ವ್ಯಾಪಿಸಿತ್ತು. ಈ ಜಾಲದಲ್ಲಿ ಟೀಚರ್ಸ್‌, ವಿದ್ಯಾರ್ಥಿಗಳು ಮತ್ತು ಮಧ್ಯಮ ವರ್ಗದ ಜನರು ಸೇರಿಕೊಂಡಿದ್ದರು.ಡಾ. ಸುಬ್ಬರಾವ್ ಮಂಜೇಶ್ವರದಲ್ಲಿ ವೈದ್ಯ ವೃತ್ತಿಯಲ್ಲಿ ತೊಡಗಿದ್ದರು. ಅವರು ಕೊನೆಯವರೆಗೂ ಸ್ವಂತ ಕ್ಲಿನಿಕ್ ಅಥವಾ ಸ್ವಂತ ಮನೆ ಕಟ್ಟಲೇ ಇಲ್ಲ. ಅವರದು ಸರಳ ಜೀವನ. ತನ್ನ ಕಠಿಣ ದುಡಿಮೆಯಿಂದಲೇ ಐದು ಪುತ್ರರ ಹಾಗೂ ಇಬ್ಬರು ಪುತ್ರಿಯರ ಕುಟುಂಬ ನಿರ್ವಹಿಸಿ, ಮಕ್ಕಳಿಗೆಲ್ಲ ವಿದ್ಯಾಭ್ಯಾಸ ಕೊಡಿಸಿದರು. ತನ್ನ ಕಷ್ಟಗಳೇನಿದ್ದರೂ, ರೋಗಿಗಳ ಜೊತೆ ಕರುಣೆಯಿಂದ ವರ್ತಿಸಿದರು. ತಾನು ಕಟ್ಟಿ ಬೆಳೆಸಿದ ವೈದ್ಯಕೀಯ ಪ್ರಾಕ್ಟೀಸನ್ನು ಪೂರ್ಣ ಕಾಲದ ನಾಯಕನಾಗಲಿಕ್ಕಾಗಿ ತೊರೆದರು.ಕೊನೆಯ ಒಂದು ವರುಷ ಡಾ. ಸುಬ್ಬರಾವ್ ಮಂಗಳೂರಿನಲ್ಲಿ ತನ್ನ ಮಕ್ಕಳಾದ ಎ. ರಮೇಶ್ ರಾವ್ ಮತ್ತು ಪ್ರಭಾಕರ ರಾವ್ ಅವರೊಂದಿಗೆ ಇದ್ದರು. ಡಾ. ಸುಬ್ಬರಾಯರನ್ನು ಅವರ ಮಕ್ಕಳು ಜೋಪಾನವಾಗಿ ನೋಡಿಕೊಂಡರು. ಅಂತಿಮ ದಿನಗಳನ್ನು ಡಾ. ಸುಬ್ಬರಾವ್ ಆಸ್ಪತ್ರೆಯಲ್ಲಿ ಕಳೆಯಬೇಕಾಯಿತು. ಆಗ ನಾನು ಅವರನ್ನು ಕಾಣಲಿಕ್ಕಾಗಿ ಆಗಾಗ ಆಸ್ಪತ್ರೆಗೆ ಹೋಗುತ್ತಿದ್ದೆ. ಪ್ರತೀ ಸಲ ನಾನು ಬೀಳ್ಕೊಳ್ಳುವಾಗ ‘ಯಾವತ್ತೂ ಸಿ.ಪಿ.ಐ. ಪಾರ್ಟಿಯನ್ನು ಬೆಂಬಲಿಸಬೇಕು’ ಎಂಬುದನ್ನು ನೆನಪು ಮಾಡಲಿಕ್ಕಾಗಿ, ಡಾ. ಸುಬ್ಬರಾವ್ ತನ್ನ ಬಿಗಿದ ಮುಷ್ಟಿ ಮೇಲಕ್ಕೆತ್ತುತ್ತಿದ್ದರು.ಡಾ. ಸುಬ್ಬರಾವ್ ಮಂಜೇಶ್ವರ ೇತ್ರದ ಶಾಸಕರಾಗಿ ಗೆದ್ದು ಬಂದವರು. ಕೇರಳದಲ್ಲಿ ಇ.ಕೆ. ನಯನಾರ್ ಅವರು ಮುಖ್ಯಮಂತ್ರಿಯಾಗಿದ್ದ ಎಲ್.ಡಿ.ಎಫ್. ಮಂತ್ರಿಮಂಡಲದಲ್ಲಿ ನೀರಾವರಿ ಮಂತ್ರಿಯೂ ಆಗಿದ್ದವರು. ಮಂತ್ರಿಯಾಗಿದ್ದಾಗ ದಕ್ಷ ಹಾಗೂ ಪ್ರಾಮಾಣಿಕ ಮಂತ್ರಿಂಯೆಂದು ಹೆಸರು ಗಳಿಸಿದರು. ಸಾಮಾನ್ಯ ಜನರ ಹಿತಾಸಕ್ತಿಯ ರಕ್ಷಣೆಗಾಗಿ ಕೆಲಸ ಮಾಡಿದರು.

ಬಿ.ವಿ. ಕಕ್ಕಿಲ್ಲಾಯಮಾಜಿ ಶಾಸಕರು, ಕರ್ನಾಟಕದ ಕಮ್ಯುನಿಸ್ಟ್ ಮುಂದಾಳು

ರಾಜ್ಯಸಭೆಯಲ್ಲಿ ಡಾ. ಸುಬ್ಬರಾವ್:

ಡಾ. ಎ. ಸುಬ್ಬರಾವ್ ೧೯೫೮ರಿಂದ ೧೯೬೪ರ ವರೆಗೆ ರಾಜ್ಯಸಭೆಯ ಸದಸ್ಯರಾಗಿದ್ದರು. ಆರಾಧನಾಲಯಗಳನ್ನು ರಾಜಕೀಯ ಪ್ರಚಾರಕ್ಕಾಗಿ ಬಳಸುವುದನ್ನು ನಿಯಂತ್ರಿಸುವುದಕ್ಕಾಗಿ ಕಾ. ಭುಪೇಶ್ ಗುಪ್ತಾ ೧೯೬೦ರಲ್ಲಿ ಖಾಸಗಿ ಬಿಲ್ ಅನ್ನು ಮಂಡಿಸಿದ್ದರು. ಈ ಬಿಲ್‌ನ ಚರ್ಚೆಯ ಸಂದರ್ಭದಲ್ಲಿ ಡಾ. ಎ. ಸುಬ್ಬರಾವ್ ಎಲ್ಲರೂ ಬೆರಗಾಗುವಂತಹ ಭಾಷಣ ಮಾಡಿದರು. ಆ ಭಾಷಣದ ಕೆಲವು ಭಾಗಗಳು ಇಲ್ಲಿವೆ :ಸಪ್ಟಂಬರ್ ೨, ೧೯೬೦ಡಾ. ಸುಬ್ಬರಾವ್ : ಮಾನ್ಯ ಉಪಾಧ್ಯಕ್ಷರೇ, ಈ ಸಭೆಯ ಕೆಲವು ಗೌರವಾನ್ವಿತ ಸದಸ್ಯರ (ಬಿಲ್‌ನ ಬಗೆಗಿನ) ಭಾಷಣಗಳನ್ನು ಕೇಳಿ ನನಗೆ ವಿಷಾದವಾಗಿದೆ. ನನಗೆ ಆಶ್ಚರ್ಯವೂ ಆಗಿದೆ. ಅವರು ಪುನಃ ಪುನಃ ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆ ಬಗ್ಗೆ ಮಾತನಾಡಿದರು. ಆದರೆ ಅವರ ಅಭಿಪ್ರಾಯಗಳು ಹೇಗಿದ್ದವು?ಇಲ್ಲಿಯ ಚರ್ಚಾ ವಿಷಯವು ಆರಾಧನಾಲಯಗಳಲ್ಲಿ ರಾಜಕೀಯ ಪ್ರಚಾರಗಳನ್ನು ಮಾಡುವುದು ಮತ್ತು ಧಾರ್ಮಿಕ ನೇತಾರರು ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವುದು ಆಗಿದೆ. ಅಂದೊಮ್ಮೆ ರಾಷ್ಟ್ರೀಯ ಭಾವನೆಗಳ ಪರವಾಗಿ ಮತ್ತು ಜಾತೀಯತೆಗೆ ವಿರುದ್ಧವಾಗಿ ನನ್ನನ್ನು ತಯಾರು ಮಾಡಿದ ಸಂಘಟನೆಯ ಇಂದಿನ ನಾಯಕರ ಬಗ್ಗೆ ಆಲೋಚಿಸುವಾಗ ಚಿಂತೆಯಾಗುತ್ತದೆ. ಹೌದು, ನಾನು ಒಬ್ಬ ಕಾಂಗ್ರೆಸಿಗನಾಗಿದ್ದೆ. ಆ ಪಾರ್ಟಿಯ ಅನೇಕ ನಾಯಕರು ಜಾತೀಯತೆಗೆ ನೀರೆರೆದು ಪೋಷಿಸುವುದನ್ನು ನೋಡಿ, ಅವರ ಭಾಷಣಗಳನ್ನು ಕೇಳಿ ನನಗೆ ದುಃಖವಾಗುತ್ತದೆ. ಆದರೂ ಇಂತಹ ಕರಾಳ ರಾತ್ರಿಯಲ್ಲೂ ಕೆಲವು ಬೆಳ್ಳಿ ಗೆರೆಗಳಿವೆ. ಮಿ. ಅಕ್ಬರ್‌ರಿಗೆ ನನ್ನ ವಂದನೆಗಳು. ಶ್ರೀಯುತ ಸಿನ್ಹಾ ಕಮ್ಯುನಿಸ್ಟರನ್ನು ಸ್ವಲ್ಪ ತುರಿಸಲು ಪ್ರಯತ್ನಿಸಿದರೂ, ನಾನು ಅವರಿಗೆ ಆಭಾರಿಯಾಗಿದ್ದೇನೆ.ಯಾಕಾಗಿ ಸರ್, ಈ ಚರ್ಚೆಯಲ್ಲಿ ಆ ವಿಷಯಕ್ಕೆ ಸ್ವಲ್ಪವೂ ಸಂಬಂಧವಿಲ್ಲದ ಸಂಗತಿಗಳನ್ನು ತರುತ್ತಾರೆ? ಧಾರ್ಮಿಕತೆಯನ್ನು ರಾಜಕೀಯದಲ್ಲಿ ತುರುಕುವುದನ್ನು ತಡೆಯುವುದು ಈ ಬಿಲ್ಲಿನ ಉದ್ದೇಶ. ರಾಜಕೀಯಕ್ಕೆ ಜಾತಿ ಮತದ ಸೇರ್ಪಡೆಯನ್ನು ನೀವು ಆಶಿಸುತ್ತೀರಾ? ಅದು ಇಲ್ಲಿನ ಮುಖ್ಯ ಪ್ರಶ್ನೆ. ನಮ್ಮ ರಾಷ್ಟ್ರೀಯ ಐಕ್ಯತೆಯನ್ನು ಪುಡಿಗಟ್ಟಲು ಶ್ರಮಿಸುವ ಬಹಳ ದೊಡ್ಡ ಆಪತ್ತುಗಳಲ್ಲಿ ಒಂದು ಜಾತೀಯತೆ ಎಂದರೆ ನೀವು ಒಪ್ಪುವಿರೆಂದು ನಂಬುತ್ತೇನೆ. ಕೆಲವು ರಾಜಕೀಯ ನಾಯಕರು ಜಾತೀಯತೆಗೆ ಗಾಳಿ ಹಾಕಿ ಉರಿಸಲು ಪ್ರಯತ್ನಿಸುತ್ತಿದ್ದಾರೆ. ಜಾತಿ ಮತಗಳ ವಿಕಾರಗಳನ್ನು ಎದುರಿಗಿಟ್ಟು ಬಡ ಕೃಷಿಕರನ್ನು ಮತ್ತು ಕಾರ್ಮಿಕರನ್ನು ದಾರಿ ತಪ್ಪಿಸಲು ಒಂದು ಪ್ರತ್ಯೇಕ ರಾಜಕೀಯ ಪಾರ್ಟಿ ಪ್ರಯತ್ನಿಸುತ್ತಿದೆ. ಇಂದು ಅವರ ಬಾಣದ ಮೊನೆ ಕಮ್ಯೂನಿಸ್ಟ್ ಪಾರ್ಟಿಯ ಕಡೆಗಿದೆ. ಅದೀಗ ಪ್ರಶ್ನೆಯಲ್ಲ. ಇಂದು ಕಮ್ಯೂನಿಸ್ಟಿನ ಎದುರಾದರೆ ನಾಳೆ ಸೆಕ್ಯೂಲರಿಸಮಿನ ಎದುರಾಗಬಹುದು. ನಾಳಿದ್ದು ಸೋಷಿಯಲಿಸಂನ ಎದುರಾಗಬಹುದು. ಆದುದರಿಂದ ಯಾರಾದರೂ ಕಮ್ಯೂನಿಸಂನ ಎದುರು ಜಿಹಾದಿ ಮನೋಭಾವದಿಂದ ಈ ಬಿಲ್ಲನ್ನು ವಿರೋದಿಸುವಂತಾಗಬಾರದು. ಕಳೆದ ದಿನಗಳಲ್ಲಿ ಜಾತೀಯತೆ ನಮ್ಮ ನಾಡಿನಲ್ಲಿ ಎಂತಹ ಘಾತಕ ಕೃತ್ಯಗಳನ್ನು ಪ್ರೇರೇಪಿಸಿತ್ತು ಎಂದು ನಮಗೆ ತಿಳಿದಿದೆ. ಅಂತಹ ದುರಂತಗಳ ತೀವ್ರತೆ ಇನ್ನೂ ಮಸಕಾಗಿಲ್ಲ. ಧಾರ್ಮಿಕ ನೇತಾರರು ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಸ್ವಾರ್ಥಕ್ಕಾಗಿ ಜಾತೀಯತೆಯನ್ನು ಬಳಸಿದ್ದರಿಂದ ಎಂತಹ ದುಷ್ಪರಿಣಾಮವಾಗಿತ್ತು ಎಂಬುದನ್ನು ನಾವು ಮರೆತಿಲ್ಲ. ಎಲ್ಲಾ ಪ್ರಜಾಪ್ರಭುತ್ವ ತತ್ವಗಳನ್ನು ಗಾಳಿಯಲ್ಲಿ ತೂರಿ ಜಾತೀಯತೆಯನ್ನು ಮೇಲಕ್ಕೆತ್ತಲು ನಾವು ಬೆಂಬಲಿಸಬಹುದೇ? ಬಿಲ್ಲಿನ ವಿಷಯವನ್ನು ಬಿಟ್ಟು, ಆ ವಿಷಯದ ಪರಿದಿಯಲ್ಲಿರದ ಹಲವು ವಿಚಾರ ಗಳನ್ನು ಇಲ್ಲಿ ಕೇಳಿದ್ದೇವೆ. ಸೋವಿಯತ್ ರಷ್ಯದಲ್ಲಿ ಕಮ್ಯೂನಿಸ್ಟ್ ಪಾರ್ಟಿಯು ಧರ್ಮವನ್ನು ಹೊಡೆದು ಮೂಲೆಗುಂಪಾಗಿಸಿದೆಯಂತೆ. ಹಾಗಂತ ಮಿ. ಸಾಮ್ಯುವೆಲ್ ಮತ್ತು ಮಿ. ವಾಡಿಯಾ ಹೇಳುತ್ತಾರೆ. ರಷ್ಯದಲ್ಲಿ ಜಾತಿಮತಗಳನ್ನು ವಿರೋದಿಸಿದರೂ ಅದು ವಿಜಯಿ ಯಾಗಲಿಲ್ಲವಂತೆ. ಅಲ್ಲಿ ವಾಸ್ತವ ಏನು? ಅನೇಕ ಜನರು ಧರ್ಮವಿಶ್ವಾಸಿಗಳಾಗಿದ್ದಾರೆ. ತಪ್ಪದೆ ಚರ್ಚಿಗೆ ಹೋಗುತ್ತಾರೆ. ಕಮ್ಯೂನಿಸ್ಟ್ ಪಾರ್ಟಿ ಅಥವಾ ಸರಕಾರ ಇದನ್ನು ತಡೆಯುವುದಿಲ್ಲ. ಧರ್ಮವು ರಾಜಕೀಯದಲ್ಲಿ ಪ್ರವೇಶಿಸಬಾರದು ಎಂದು ಮಾತ್ರ ಅವರು ನಿರ್ಬಂದಿಸುತ್ತಾರೆ. ಈ ಬಿಲ್ಲು ವಿವೇಚನಾರಹಿತವಂತೆ. ಒಂದು ಪ್ರತ್ಯೇಕ ಧರ್ಮವನ್ನು ಮಾತ್ರ ಇದು ಗುರಿಯಾಗಿರಿಸಿದೆಯಂತೆ. ಅದಕ್ಕೆ ಕಾರಣವಿದೆ. ತಮಗೆ ಹಿತವಾಗುವ ರಾಜಕೀಯ ವಿಶ್ವಾಸಗಳನ್ನು ಒತ್ತಾಯಪೂರ್ವಕ ಜನರ ಮೇಲೆ ಹೊರಿಸುವ ಧರ್ಮ ಒಂದು ಮಾತ್ರ ಇದೆ. ಅದು ಕ್ರಿಶ್ಚಿಯನ್. ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಮುಸ್ಲಿಂ ಮಸೀದಿಗಳಲ್ಲೂ ರಾಜಕೀಯ ಪ್ರಚಾರ ನಡೆಯಿತು. ಮುಸ್ಲಿಂ ಲೀಗಿನ ರಾಜಕೀಯವನ್ನು ಹೇರುವ ಪ್ರಯತ್ನ ನಡೆಯಿತು. ಆದರೆ ಜಮಾತಿನ ಸದಸ್ಯರನ್ನು ತಮ್ಮ ದಾರಿಗೆ ತರಲು ರಾಜಕೀಯ ನೇತಾರರಿಗೆ ಸಾಧ್ಯವಾಗಲಿಲ್ಲ. ಇದನ್ನು ಮಾನ್ಯ ಸೇಠ್ ಅವರು ಸಹ ಒಪ್ಪಬಹುದು. ಜಮಾತಿನ ಒಂದು ವಿಭಾಗದ ಸದಸ್ಯರು ವಿರೋದಿಸಿದರೆ ಮೌಲವಿ ಸಾಹೇಬರಿಗೆ ತಮ್ಮ ಅಭಿಪ್ರಾಯವನ್ನು ಹೊರಿಸಲು ಸಾಧ್ಯವಿಲ್ಲ. ಯಾಕೆಂದರೆ ಮೌಲವಿ ಸಾಹೇಬರು ಸುಪ್ರೀಂ ಅಧಿಕಾರಿಯಲ್ಲ. ಇಸ್ಲಾಮಿನಲ್ಲಿ ಅವರು ಸರ್ವಾದಿಕಾರಿಯಲ್ಲ.ಆದರೆ ಕೆಥೊಲಿಕ್ ಸಭೆಯ ವ್ಯವಸ್ಥೆ ಅದಲ್ಲ. ಅಲ್ಲಿ ವಿಕಾರ್ ಮತ್ತು ಬಿಷಪರು ಸರ್ವಾದಿಕಾರಿಗಳು. ಅವರ ಮಾತು, ನಿಯಮವಾಗುತ್ತದೆ. ಅದನ್ನು ಪಾಲಿಸಲೇಬೇಕು. ರಾಜಕೀಯದ ವಿಷಯ ಬಿಡಿ. ಒಬ್ಬ ರೈತ ಜಮೀನಿಗೆ ಬೇಡಿಕೆ ಸಲ್ಲಿಸಿದರೆ ಅವನನ್ನು ಕಮ್ಯೂನಿಷ್ಟನೆಂದು ಹೆಸರಿಸಿ ಮತಭ್ರಷ್ಟನನ್ನಾಗಿ ಮಾಡಬಹುದು. ರೈತ ಸಂಘದ ಸದಸ್ಯನಾದರೆ ಸಾಕು, ಮತಭ್ರಷ್ಟನನ್ನಾಗಿ ಮಾಡಬಹುದು. ನಮ್ಮೂರಲ್ಲಿ ಹೀಗೆ ಮಾಡಿದ್ದಾರೆ. ಅವರಲ್ಲಿ ಫ್ಯೂಡಲಿಸ್ಟ್ ಚಿಂತನೆ ಇನ್ನೂ ಬಿಟ್ಟುಹೋಗಿಲ್ಲವೆಂದರೆ ಮಾನ್ಯ ಸದಸ್ಯರೂ ಒಪ್ಪುತ್ತಾರೆಂದು ಭಾವಿಸುತ್ತೇನೆ. ಕೃಷಿಕರು ಜಮೀನುದಾರರೆದುರು ಸ್ವರವೆತ್ತಿದರೆ ಅವರನ್ನು ಬಿಷಪ್ ಚರ್ಚಿಗೆ ಬರಲು ಬಿಡುವುದಿಲ್ಲ. ಇದು ಸಣ್ಣ ವಿಷಯವಲ್ಲ. ಪಂಚಾಯತ್ ಚುನಾವಣೆಗಳಲ್ಲಿ ಸಹ ಚರ್ಚ್ ಮಧ್ಯ ಪ್ರವೇಶಿಸುತ್ತದೆ. ಪಂಚಾಯತ್ ರಾಜ್‌ನ ಕಾಲ ಇದು. ಆದರೆ ಒಬ್ಬ ಬಿಷಪ್ ವೇದಿಕೆಯೇರಿ ಭಾಷಣ ಮಾಡುತ್ತಾರೆ – ಯಾರಿಗೆ ವೋಟು ನೀಡಬೇಕೆಂದು. ಅದನ್ನು ಅನುಸರಿಸಿದೆ ಇದ್ದರೆ ಚರ್ಚಿನಿಂದ ಹೊರಗೆ ಹಾಕುತ್ತಾರೆ. ಒಂದು ಪ್ರತ್ಯೇಕ ಪಾರ್ಟಿಗೆ ವೋಟು ಮಾಡಿದರೆ ಮತಭ್ರಷ್ಟನನ್ನಾಗಿ ಮಾಡುವ ಯಾವುದಾದರೂ ಬೇರೆ ಧರ್ಮವಿದೆಯೇ? ಟಿ. ಶ್ರೀನಿವಾಸನ್ (ನಡುವೆ ಮಾತಾಡಿದರು) : ಅದಕ್ಕೆ ಕಾರಣ ಬೇರೆ ಮತಗಳಲ್ಲಿ ಭ್ರಷ್ಟನನ್ನಾಗಿ ಮಾಡುವ ಕ್ರಮ ಇಲ್ಲದಿರುವುದು.ಡಾ. ಸುಬ್ಬರಾವ್ : ಬೇರೆ ಧರ್ಮಗಳಲ್ಲೂ ಮತಭ್ರಷ್ಟನನ್ನಾಗಿ ಮಾಡುವ ಕ್ರಮ ಇದೆ. ಒಬ್ಬ ಬ್ರಾಹ್ಮಣನನ್ನು ಮತಭ್ರಷ್ಟನನ್ನಾಗಿ ಮಾಡಲು ಹಿಂದು ಮತದಲ್ಲಿ ವ್ಯವಸ್ಥೆಯಿದೆ.ಶ್ರೀನಿವಾಸನ್ : ಭ್ರಷ್ಟನಾದವನು ಏನು ಮಾಡಬಹುದು?ಸುಬ್ಬರಾವ್ : ಹಿಂದೂ ಧರ್ಮದ ಆಚಾರಗಳನ್ನು ಪಾಲಿಸದಿದ್ದರೆ ಭ್ರಷ್ಟನನ್ನಾಗಿ ಮಾಡಬಹುದು. ಆದರೆ ಒಂದು ಪಾರ್ಟಿಗೆ ವೋಟು ಹಾಕದಿದ್ದರೆ ಭ್ರಷ್ಟನನ್ನಾಗಿ ಮಾಡುವಂತಿಲ್ಲ. ಇದಕ್ಕೆ ವಿರುದ್ಧವಾಗಿ ಕೆಥೋಲಿಕ್ ಸಭಾಧ್ಯಕ್ಷರು (ಬಿಷಪ್) ಹಾಗೆ ಮಾಡುತ್ತಾರೆ.ರಾಜಕೀಯ ಮಾತ್ರ ಹೇಳಿ ನಾವು ಚುನಾವಣೆಯಲ್ಲಿ ಸ್ಪರ್ದಿಸುವಾ. ಜಾತೀಯತೆ ಯನ್ನು ಮುಂದಿಡಬಾರದು. ಇಂದು ಅವರ ಗುರಿ ಕಮ್ಯೂನಿಸ್ಟರನ್ನು ಹೊಡೆದೋಡಿಸುವುದು. ಇವತ್ತು ಚರ್ಚ್ ಸೋಷಿಯಲಿಸಮನ್ನು ಅನುಮೋದಿಸಬಹುದು. ಆದರೆ ನೀವು ಜಾಗೃತರಾಗಿರಿ. ರಾಜಕೀಯದ ಅಂಗೀಕೃತ ಮೌಲ್ಯಗಳ ಎದುರು ನಾಳೆ ಇವರು ಕತ್ತಿ ಮಸೆಯುತ್ತಾರೆ. ೧೨ ಆಗಸ್ತು ೧೯೫೯, ಪ್ರಾಣಿಗಳಿಗೆ ಮನುಷ್ಯರ ಕ್ರೂರತೆ ತಡೆಯುವ ಬಿಲ್ಲಿನ ಚರ್ಚೆಯಲ್ಲಿ:ಪ್ರಾಣಿಗಳ ಪರವಾಗಿರುವ ಈ ಕಾಳಜಿ ಮನುಷ್ಯರ ವಿಷಯದಲ್ಲಿಯೂ ಇದ್ದರೆ ಎಷ್ಟು ಒಳ್ಳೆಯದಿತ್ತು! ನಮ್ಮ ನಾಡಿನ ಕೃಷಿಕರ ಮತ್ತು ಕಾರ್ಮಿಕರ ಸ್ಥಿತಿ ನೋಡಿದರೆ ಪ್ರಾಣಿಗಳ ಅವಸ್ಥೆ ಎಷ್ಟೋ ಉತ್ತಮ. ಪ್ರಾಣಿಗಳನ್ನು ಉಪವಾಸವಿರಿಸಿದರೆ ಅಪರಾಧ ಎನ್ನುತ್ತದೆ ಈ ಬಿಲ್. ಪ್ರತಿಯೊಂದು ಪ್ರಾಣಿಗೆ ಎಷ್ಟು ಆಹಾರ ಕೊಡಬೇಕೆಂದು ಬಿಲ್ಲಿನಲ್ಲಿ ಹೇಳಿದೆ. ಸಾಕುಪ್ರಾಣಿಗಳನ್ನು ಕಟ್ಟಿಹಾಕುವುದಕ್ಕೂ ಇದರಲ್ಲಿ ನಿಯಂತ್ರಣವಿದೆ. ಆದರೆ ಕಾನೂನಿನ ಪ್ರಕಾರ ಹೋರಾಟ ಮಾಡಿದ ಕಾರ್ಮಿಕರನ್ನು ದಿನಗಟ್ಟಲೆ ಸಂಕೋಲೆಯಲ್ಲಿಡಬಹುದು!

ವಿಧಾನಸಭೆಯಲ್ಲಿ ಡಾ. ಎ. ಸುಬ್ಬರಾವ್:

ಡಾ. ಎ. ಸುಬ್ಬರಾವ್ ೧೯೮೦ರಿಂದ ೧೯೮೭ರ ವರೆಗೆ ಕೇರಳ ವಿಧಾನಸಭೆಯ ಸದಸ್ಯರಾಗಿದ್ದರು. ೧೯೮೦-೮೨ರ ಅವಧಿಯಲ್ಲಿ ಅವರು ಮಂತ್ರಿಯಾಗಿದ್ದರು.ಅವರು ಪ್ರತಿನಿಧಿಸುತ್ತಿದ್ದ ಕೇರಳದ ಉತ್ತರ ತುದಿಯ ಮಂಜೇಶ್ವರ ಕ್ಷೇತ್ರದಲ್ಲಿ ಅಭಿವೃದ್ಧಿಯ ಸುಳಿವೇ ಇರಲಿಲ್ಲ. ಅದಲ್ಲದೆ ಕನ್ನಡ ಮಾತೃಭಾಷೆಯಾಗಿದ್ದರಿಂದ ಅವರು ಭಾಷಾ ಅಲ್ಪಸಂಖ್ಯಾತ ವರ್ಗದವರಾಗಿದ್ದರು. ಊಳಿಗಮಾನ್ಯ (ಫ್ಯೂಡಲಿಸಂ)ದ ಹಿಡಿತ ದಿಂದ ಬಡವರನ್ನು ಬಿಡುಗಡೆ ಮಾಡುವ ಏಕೈಕ ಉದ್ದೇಶವೇ ಅವರನ್ನು ವಿಧಾನಸಭೆಗೆ ಕರೆತಂದಿತು. ಕೇರಳದ ಉತ್ತರ ಭಾಗದ ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತು ಭಾಷಾ ಅಲ್ಪಸಂಖ್ಯಾತರ ನ್ಯಾಯಬದ್ಧ ಹಕ್ಕುಗಳ ರಕ್ಷಣೆಗಾಗಿ ಅವರು ವಿಧಾನಸಭೆಯಲ್ಲಿ ಧ್ವನಿಯೆತ್ತಲು ಆ ಪ್ರೇರಣಾಶಕ್ತಿಯೇ ಕಾರಣ. ಕಾಸರಗೋಡು ಜಿಲ್ಲೆಯ ರಚನೆಗಾಗಿ ಅವರು ಪಾರ್ಟಿಯ ಮುಖವಾಣಿಯಾಗಿದ್ದರು. ವಿಧಾನಸಭೆಯಲ್ಲಿ ಅವರ ಮುಖ್ಯ ಸಂವಾದಗಳನ್ನು ಈ ಮುಂದಿನ ಪುಟಗಳಲ್ಲಿ ದಾಖಲಿಸಲಾಗಿದೆ. ೬ ಜುಲೈ ೧೯೮೨ : ಚಂದ್ರಗಿರಿ ಸೇತುವೆಗೆ ಆಡಳಿತ ಮಂಜೂರಾತಿ ನೀಡಿದ್ದೀರಾ? ‘ಹೌದು’ ಎಂದಾದರೆ ಅದರ ವೆಚ್ಚ ಎಷ್ಟು? ಈ ಕಾಮಗಾರಿ ಯಾವಾಗ ಮುಗಿಯಲಿದೆ? ೧ ಜುಲೈ ೧೯೮೩ : ‘ಕಕ್ಕದಾವಿ ನೀರಾವರಿ ಪ್ರಾಜೆಕ್ಟಿ’ನ ಪರಿಷ್ಕೃತ ಅಧ್ಯಯನ ನಡೆಸಬೇಕೆಂದು ಆ ಪ್ರದೇಶದ ಜನರ ವಿನಂತಿಯ ಮೇರೆಗೆ, ಹಿಂದಿನ (ಕೇರಳ) ಸರಕಾರವು ಕೇಂದ್ರ ಸರಕಾರವನ್ನು ವಿನಂತಿಸಿತ್ತು. ಆದರೆ ಮಾನ್ಯ ಆಂತೋನಿ ಅವರ ಸರಕಾರವು, ಅಂತಹ ಅಧ್ಯಯನ ನಡೆಸದೆ, ಆ ಯೋಜನೆಯನ್ನು ಮಂಜೂರು ಮಾಡಿದೆ. ವೆಚ್ಚ – ಲಾಭ ಅನುಪಾತ ಎಲ್ಲವನ್ನೂ ಸಿದ್ಧಪಡಿಸಲಾಗಿದೆ. ಅದು ಈಗ ಯಾವ ಹಂತದಲ್ಲಿದೆ? ೩೦ ಜೂನ್ ೧೯೮೩ : ಕಳೆದ ತಿಂಗಳ ೨೭ನೇ ತಾರೀಖಿನಂದು ನೆರೆ ಮತ್ತು ಬಿರುಗಾಳಿಯಿಂದಾಗಿ ನನ್ನ ವಿಧಾನಸಭಾ ಕ್ಷೇತ್ರದ ಉದ್ಯಾವರ ಮತ್ತು ಪಾವೂರುಗಳಲ್ಲಿ ವ್ಯಾಪಕ ನಷ್ಟ ಹಾಗೂ ಹಾನಿಯಾಗಿದೆ. ೫೦ ಮನೆಗಳಿಗೆ ಪೂರ್ತಿ ಹಾನಿಯಾಗಿದೆ. ತೆಂಗಿನ ಮರಗಳೂ ವೀಳ್ಯದೆಲೆ ಬಳ್ಳಿಗಳೂ ಬಿದ್ದು ಹೋಗಿವೆ. ಅನೇಕರಿಗೆ ಗಾಯಗಳಾಗಿ ಸಂಕಟವಾಗಿದೆ. ಅಲ್ಲಿ ಪುನರ್ವಸತಿ ಕೆಲಸ ತಡವಾಗಬಾರದು. ಪೂರ್ತಿ ಹಾನಿಯಾದ ಮನೆಗಳಿಗೆ ಕೇವಲ ರೂಪಾ ೭೫೦ ಮತ್ತು ಭಾಗಶಃ ಹಾನಿಯಾದ ಮನೆಗಳಿಗೆ ರೂ. ೧೦೦-೨೦೦ ಪರಿಹಾರವನ್ನು ಸರಕಾರ ಮಂಜೂರು ಮಾಡಿದೆ. ಇದು ಏನೇನೂ ಸಾಲದು. ೨೫ ಮಾರ್ಚ್ ೧೯೮೫: ಕೆಲವು ಔಷದಿ ಅಂಗಡಿಗಳು (ಮೆಡಿಕಲ್ ಷಾಪ್ಸ್) ಸೂಕ್ತ ವಿದ್ಯಾರ್ಹತೆ ಇಲ್ಲದ ಕೆಲಸದವರನ್ನು ಔಷದಿಗಳ ಮಾರಾಟಕ್ಕಾಗಿ ನೇಮಿಸಿದ್ದಾರೆ. ಸರಕಾರಕ್ಕೆ ಈ ವಿಷಯ ತಿಳಿದಿದೆಯೇ? ಮಾರ್ಚ್ ೧೯೮೩ : ವಿದ್ಯುತ್ ಕೊರತೆಯ ಕಾರಣದಿಂದಾಗಿ ಉಷ್ಣ ವಿದ್ಯುತ್ ಸ್ಥಾವರಗಳನ್ನು ಯೋಜಿಸಲಾಗಿದೆಯೇ? ‘ಹೌದು’ ಎಂದಾದರೆ ಎಷ್ಟು? ಈ ವಿಷಯದಲ್ಲಿ ಕೇಂದ್ರ ಸರಕಾರದ ನಿಲುವು ಏನು? ೩ ಮಾರ್ಚ್ ೧೯೮೩ : ವಿತ್ತಸಚಿವರಾದ ಶ್ರೀ ಕೆ.ಎಂ. ಮಣಿ ‘‘ಆರ್ಥಿಕ ಪರಿಸ್ಥಿತಿ ಬಹಳ ಕೆಟ್ಟುಹೋಗಿದೆ’’ ಎನ್ನುತ್ತಾರೆ. ಸರಕಾರದ ತಪ್ಪು ನಿರ್ವಹಣೆ ಮತ್ತು ಅಸೂಕ್ತ ಚಟುವಟಿಕೆಗಳೇ ಇದಕ್ಕೆ ಕಾರಣ. ರೈತರಿಗೆ ಪಿಂಚಣಿ ಪಾವತಿಗೆ ಹಣವಿಲ್ಲ. ನಿರುದ್ಯೋಗ ಭತ್ತೆ ಪಾವತಿಸದೆ ಬಾಕಿ ಮಾಡಲಾಗಿದೆ. ಆದರೆ ಮಂತ್ರಿಗಳಿಗೆ ವೀಡಿಯೋ ಸೆಟ್‌ಗಳನ್ನು ಮತ್ತು ಲಕ್ಸುರಿ ಕಾರುಗಳನ್ನು ಖರೀದಿಸಲು ಸಾಕಷ್ಟು ಹಣವಿದೆ. ಡೆಲ್ಲಿಗೆ ಆನೆಗಳನ್ನು ಕಳಿಸಲು ಹಣ ಲಭ್ಯವಿದೆ. ರೆವಿನ್ಯೂ ಸಂಗ್ರಹ ಹೆಚ್ಚಿಸಲಿಕ್ಕಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ. ಆದರೆ ಅದ್ಯಾವ ಕ್ರಮಗಳೆಂದು ನಿರ್ದಿಷ್ಟವಾಗಿ ಹೇಳುವುದಿಲ್ಲ. ವಿತ್ತ ಸಚಿವರು, ರೆವಿನ್ಯೂ ಸಚಿವರು ಮತ್ತು ಎಕ್ಸೆ ಸ್ ಸಚಿವರ ನಡುವೆ ತೆರಿಗೆ ದರ ಇಳಿಸಲು ಸ್ಪರ್ಧೆ ನಡೆಯುತ್ತಿದೆ. ೩ ಮಾರ್ಚ್ ೧೯೮೩: ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಬಗ್ಗೆ ಚರ್ಚೆಈ ಸಂದರ್ಭದಲ್ಲಿ, ಭಾಷಾ ಅಲ್ಪಸಂಖ್ಯಾತರ ಬಗ್ಗೆ ಗಮನಸೆಳೆಯಲಿಕ್ಕಾಗಿ ಡಾ. ಸುಬ್ಬರಾವ್ ಕನ್ನಡದಲ್ಲಿ ಮಾತನಾಡಿದ್ದು ಹೀಗೆ :ಮಾನ್ಯ ಸ್ಪೀಕರ್, ಈ ಸರಕಾರ ಮತ್ತು ಈ ಸಭೆಯ ಅದಿಕೃತ ಭಾಷೆ ಮಲೆಯಾಳ. ಆದರೆ ಈ ಸರಕಾರ ತಮಿಳು ಮತ್ತು ಕನ್ನಡವನ್ನು ಭಾಷಾ ಅಲ್ಪಸಂಖ್ಯಾತರ ಭಾಷೆಗಳೆಂದು ಅಂಗೀಕರಿಸಿದೆ. ಆದ್ದರಿಂದ ಕನ್ನಡ ಭಾಷಾ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ನನಗೆ ಕನ್ನಡದಲ್ಲಿ ಮಾತನಾಡಲು ಅನುಕೂಲವಾಗುವಂತೆ, ತಕ್ಷಣ – ಭಾಷಾಂತರ ವ್ಯವಸ್ಥೆ ಮಾಡಬೇಕಾಗಿ ಸಭಾಧ್ಯಕ್ಷರನ್ನು ವಿನೀತನಾಗಿ ವಿನಂತಿಸುತ್ತೇನೆ. ೫ ಜುಲೈ ೧೯೮೨ : ನನಗೆ ಒಂದೇ ಒಂದು ವಿಷಯ ತಿಳಿಯಬೇಕಾಗಿದೆ. ಬಡ ಜನರಿಗಾಗಿ, ವಿಶೇಷವಾಗಿ ಕಾಸರಗೋಡಿನಂತಹ ಹಿಂದುಳಿದ ಪ್ರದೇಶದ ಅಲ್ಪಸಂಖ್ಯಾತ ಜನರಿಗಾಗಿ, ಈ ಸರಕಾರ ಏನು ಮಾಡಬೇಕೆಂದು ಯೋಚಿಸಿದೆ? ವಯನಾಡು ಮತ್ತು ಇಡುಕ್ಕಿಗಳಿಗಾಗಿ ಪ್ರಾದೇಶಿಕ ಅಭಿವೃದ್ಧಿ ಪ್ರಾದಿಕಾರಗಳನ್ನು ಸ್ಥಾಪಿಸಲಾಗುವುದೆಂದು ಅವರು ಹೇಳಿದ್ದಾರೆ. ಕಾಸರಗೋಡಿನ ವಿಷಯದಲ್ಲಿ ಏನು ಮಾಡುತ್ತಾರೆ? ತನ್ನ ಬಜೆಟ್ ಭಾಷಣದಲ್ಲಿ, ಹಣಕಾಸಿನ ಮಂತ್ರಿಗಳು ಇದರ ಬಗ್ಗೆ ಚಕಾರ ಎತ್ತದಿರುವುದು, ಈ ಸಮಸ್ಯೆಯ ಬಗ್ಗೆ ಸರಕಾರದ ಯೋಚನೆ ಏನೆಂದು ತೋರಿಸಿಕೊಟ್ಟಿದೆ.ಕಾಸರಗೋಡಿನ ಜನಸಂಖ್ಯೆಯ ದೊಡ್ಡ ಭಾಗ ಕನ್ನಡ ಅಲ್ಪಸಂಖ್ಯಾತ ಜನರು. ಈ ಸತ್ಯಾಂಶವನ್ನು ಎಲ್ಲ ಸರಕಾರಗಳೂ ಒಪ್ಪಿಕೊಂಡಿವೆ. ಅದಕ್ಕಾಗಿಯೇ ಅಚ್ಚುತ ಮೆನನ್ ಸರಕಾರ ಚಂದ್ರಭಾನು ಆಯೋಗವನ್ನು ನೇಮಿಸಿತು. ಆಯೋಗವು ಈ ಸಮಸ್ಯೆಯ ಸಮಗ್ರ ಅಧ್ಯಯನ ಮಾಡಿದೆ ಮತ್ತು ಸರಕಾರವು ಆಯೋಗದ ಶಿಫಾರಸ್‌ಗಳನ್ನು ಅಂಗೀಕರಿಸಿದೆ. ಆದರೆ ಶಿಫಾರಸ್‌ಗಳನ್ನು ಕಾರ್ಯಗತಗೊಳಿಸಲಿಕ್ಕಾಗಿ ಹೆಚ್ಚೇನನ್ನೂ ಮಾಡಿಲ್ಲ. ಎಲ್.ಡಿ.ಎಫ್. ಸರಕಾರವು ಕಾಸರಗೋಡು ಪ್ರದೇಶ ಅಭಿವೃದ್ಧಿ ಪ್ರಾದಿಕಾರ ಸ್ಥಾಪಿಸಿದೆ. ಆದರೆ, ಇದಕ್ಕಾಗಿ ತೆಗೆದಿರಿಸಿರುವ ಹಣದ ಮೊತ್ತ ತೀರಾ ಕಡಿಮೆ. ಅದೇನಿದ್ದರೂ ಇದೊಂದು ಉತ್ತಮ ಕ್ರಮ. ಈ ಪ್ರದೇಶದ ಶಾಸಕರ ಬಲವಾದ ಒತ್ತಾಯದಿಂದಾಗಿ, ಅಲ್ಲಿನ ಅಭಿವೃದ್ಧಿ ಅಡೆತಡೆಯಿಲ್ಲದೆ ಮುಂದುವರಿಯಲಿದೆ ಎಂದು ಬಜೆಟ್ ಚರ್ಚೆಗೆ ಉತ್ತರಿಸುವಾಗ ಮಂತ್ರಿಗಳು ಆಶ್ವಾಸನೆ ನೀಡಿದ್ದಾರೆ. ಅನಂತರ ಏನಾಯಿತು? ಭಾಷಾ ಅಲ್ಪಸಂಖ್ಯಾತರ ಸಮಸ್ಯೆ ಬಗ್ಗೆ ಇಲ್ಲಿನ (ಕಾಸರಗೋಡಿನ) ಬಹುಪಾಲು ಅಧಿಕಾರಿಗಳಿಗೆ ಕನ್ನಡ ಗೊತ್ತಿಲ್ಲ. ಶಿಕ್ಷಣ ಇಲಾಖೆಯಲ್ಲಿಯೂ ಇದೇ ಪರಿಸ್ಥಿತಿ. ಕನ್ನಡ ತಿಳಿದಿರುವ ಅಧಿಕಾರಿಗಳನ್ನು ಮಲೆಯಾಳ ಮಾತ್ರ ಮಾತನಾಡುವ ಜನರಿರುವ ಪ್ರದೇಶಗಳಗೆ ವರ್ಗಾಯಿಸಲಾಗುತ್ತಿದೆ. ಭಾಷಾ ಅಲ್ಪಸಂಖ್ಯಾತರನ್ನು ಶತ್ರುಗಳಂತೆ ನಡೆಸಿಕೊಳ್ಳುವಂತೆ ಕಾಣಿಸುತ್ತದೆ. ಈ ರೀತಿಯ ವರ್ತನೆ ಮುಂದುವರಿದರೆ, ಪ್ರತಿಭಟನೆಗಳಿಗೆ ಕಾರಣವಾದೀತೆಂದು ನಾನು ಎಚ್ಚರಿಸುತ್ತೇನೆ. ೨೮ ಜೂನ್ ೧೯೮೨ : ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶಗಳಾದ ಕಾಸರಗೋಡು ಮತ್ತು ಕಾಂಞಂಗಾಡ್‌ಗಳನ್ನು ವಿಶೇಷವಾಗಿ ಪರಿಗಣಿಸಬೇಕು ಮತ್ತು ಅವುಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಕಾರ್ಯಕ್ರಮಗಳನ್ನು ರೂಪಿಸಬೇಕು. ಅಲ್ಲಿ ಕನ್ನಡ ಭಾಷಾ ಅಲ್ಪಸಂಖ್ಯಾತರು ಇದ್ದಾರೆ.

ಮುಖ್ಯಮಂತ್ರಿಗೆ ಪ್ರಶ್ನೆಗಳು: ೧. ಹೊಸ ಜಿಲ್ಲೆಗಳ ರಚನೆಗೆ ಯಾವುದೇ ನಿರ್ದೇಶನ ನೀಡಲಾಗಿದೆಯೇ? ೨. ಹೌದು ಎಂದಾದರೆ, ಅವು ಯಾವ ಜಿಲ್ಲೆಗಳು? ೩. ಹೊಸ ಜಿಲ್ಲೆಗಳನ್ನು ರಚಿಸಲು ಪರಿಗಣಿಸುವ ಅಂಶಗಳು ಯಾವುವು?

ಮುಖ್ಯಮಂತ್ರಿ ಶ್ರೀ ಕೆ. ಕರುಣಾಕರನ್ ಅವರ ಉತ್ತರಗಳು: ೧. ಹೌದು, ಪಟ್ಟನಾಂತಿಟ್ಟು, ಮೂವಟ್ಟಪುಜಾ, ಕಾಸರಗೋಡು ಮತ್ತು ಅಡೂರು. ೨. ಪಟ್ಟನಾಂತಿಟ್ಟ ಜಿಲ್ಲೆ ರಚನೆಗಾಗಿ ವಿಶೇಷ ಅಧಿಕಾರಿಯನ್ನು ನೇಮಿಸಲಾಗಿದೆ. ೩. ಪರಿಗಣಿಸುವ ವಿಶೇಷ ಅಂಶಗಳಿಲ್ಲ. ಸಾಮಾನ್ಯವಾಗಿ ಭೌಗೋಲಿಕ ಅಂಶಗಳು, ಅಭಿವೃದ್ಧಿಯ ಅವಶ್ಯಕತೆಗಳು ಮತ್ತು ಆಡಳಿತ ಸೌಲಭ್ಯಗಳನ್ನು ಪರಿಗಣಿಸಲಾಗುತ್ತದೆ. ೧೨ ಆಗಸ್ಟ್ ೧೯೮೨ : ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್ ಎಂಬುದು ಸರಕಾರದ ಹೆಸರು. ಆದರೆ ಡೆಮಾಕ್ರೆಟಿಕ್ (ಪ್ರಜಾಸತ್ತಾತ್ಮಕ) ಮೌಲ್ಯಗಳನ್ನು ಅನುಸರಿಸುವುದೇ ಇಲ್ಲ. ವಿದ್ಯಾರ್ಥಿಗಳು ಪ್ರತಿಭಟನೆ ಆರಂಬಿಸಿದ್ದಾರೆ. ಸರಕಾರವು ಅದನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಕಾಲೇಜು ವಿದ್ಯಾರ್ಥಿಗಳೂ, ಸಿಬ್ಬಂದಿಗಳೂ ಪ್ರತಿಭಟಿಸುತ್ತಿದ್ದಾರೆ. ಆದರೆ ಸರಕಾರವು ಖಾಸಗಿ ಕಾಲೇಜುಗಳ ಮ್ಯಾನೇಜ್‌ಮೆಂಟನ್ನು ಬೆಂಬಲಿಸುತ್ತಿದೆ. ೪೦೦೦ ಶಿಕ್ಷಕರನ್ನೂ ಲೆಕ್ಚರರನ್ನೂ ವರ್ಗಾಯಿಸಲಾಗಿದೆ. ಒಬ್ಬರು ಟೀಚರನ್ನು ಒಂದೇ ವರುಷದಲ್ಲಿ ನಾಲ್ಕು ಸಲ ವರ್ಗಾಯಿಸಲಾಗಿದೆ. ವರ್ಗಾವಣೆಗೆ ಏನಾದರೂ ಪಾಲಿಸಿ ಇದೆಯೇ? ಭಾಷಾ ಅಲ್ಪಸಂಖ್ಯಾತರಿಗೆ ಅನೇಕ ಸಮಸ್ಯೆಗಳಿವೆ. ಕಾಸರಗೋಡು ಪ್ರದೇಶದಲ್ಲಿ ಅನೇಕ ಶಾಲೆಗಳಿಗೆ ಎಲ್.ಡಿ.ಎಫ್. ಸರಕಾರ ಪರವಾನಗಿ ನೀಡಿದೆ. ಆದರೆ ಈಗಿನ ಸರಕಾರ ಅವೆಲ್ಲವನ್ನೂ ನಿರ್ಲಕ್ಷಿಸುತ್ತಿದೆ. ಹಲವಾರು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗಿಲ್ಲ. ಕಾಸರಗೋಡಿಗೆ ಡಿ.ಇ.ಓ.ಗಳು ಬರುತ್ತಾ ಹೋಗುತ್ತಾ ಇದ್ದಾರೆ. ಒಂದೇ ವರುಷದಲ್ಲಿ ಆರು ಡಿ.ಇ.ಓ.ಗಳು! ಇಂತಹ ಪರಿಸ್ಥಿತಿಯಲ್ಲಿ ಆಡಳಿತ ನಡೆಸುವುದು ಹೇಗೆ?ಸರಕಾರಿ ಆದೇಶಗಳು ಮತ್ತು ಸುತ್ತೋಲೆಗಳು ಮಲೆಯಾಳ ಭಾಷೆಯಲ್ಲಿ ಮಾತ್ರ ಬರುತ್ತಿವೆ. ಅದು ಸಾಲದು. ಕನ್ನಡ ಶಾಲೆಗಳಿಗೆ ಮಲೆಯಾಳ ಭಾಷೆಯ ಜೊತೆಗೆ ಕನ್ನಡದಲ್ಲಿಯೂ ಸರಕಾರಿ ಆದೇಶಗಳನ್ನು ಕಳಿಸಬೇಕು. ೨೭ ಫೆಬ್ರವರಿ ೧೯೮೩ : ಭಾಷಾ ಅಲ್ಪಸಂಖ್ಯಾತರ ಹಿತ ರಕ್ಷಿಸಲು ಸರಕಾರ ಸೋತಿದೆ. ಮುಖ್ಯ ಸರಕಾರಿ ಆದೇಶಗಳನ್ನಾದರೂ ಕನ್ನಡದಲ್ಲಿಯೂ ಕಳಿಸಬಹುದಾಗಿತ್ತು. ಸರಕಾರದ ಒಂದೇ ಒಂದು ಕಾರ್ಯಕ್ರಮವನ್ನು ಅಲ್ಪಸಂಖ್ಯಾತರ ಭಾಷೆಯಲ್ಲಿ ಪ್ರಕಟಿಸಿಲ್ಲ. ಸರಕಾರದ ಯಾವುದೇ ಉನ್ನತ ಮಟ್ಟದ ಸಮಿತಿಯಲ್ಲಿ ಭಾಷಾ ಅಲ್ಪಸಂಖ್ಯಾತರ ಪ್ರತಿನಿಧಿ ಇಲ್ಲ. ೨೭ ಜುಲೈ ೧೯೮೩ : ತಿರುವನಂತಪುರದಲ್ಲಿ ಈಗಾಗಲೇ ಇರುವ ಕ್ರೀಡಾಶಾಲೆಯಲ್ಲದೆ, ಇನ್ನೂ ಎರಡು ಕ್ರೀಡಾಶಾಲೆಗಳನ್ನು ಸ್ಥಾಪಿಸುವ ಬಗ್ಗೆ ಬಜೆಟ್ ಸಮಿತಿ ಶಿಫಾರಸ್ ಮಾಡಿದೆ. ಇವುಗಳಲ್ಲಿ ಒಂದನ್ನಾದರೂ ಕಾಸರಗೋಡಿನಲ್ಲಿ ಆರಂಬಿಸಲು ಸಾಧ್ಯವಿಲ್ಲವೇ? ಶ್ರೀ ಟಿ.ಎಂ. ಜಾಕೋಬ್ ಅವರ ಉತ್ತರ : ಪ್ರಾದೇಶಿಕ ಸಮತೋಲನ ಪರಿಗಣಿಸಿ ಕ್ರೀಡಾಶಾಲೆಗಾಗಿ ಸ್ಥಳ ನಿರ್ಧರಿಸಬೇಕಾಗುತ್ತದೆ. ಆ ಸಂದರ್ಭದಲ್ಲಿ, ನಿಮ್ಮ ವಿನಂತಿ ಪರಿಗಣಿಸಲಾಗುವುದು. ೨೭ ಜುಲೈ ೧೯೮೩ : ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿಯೂ ರಕ್ತಬ್ಯಾಂಕ್ ಸೌಲಭ್ಯ ಇರಲೇಬೇಕು. ೪ ಜುಲೈ ೧೯೮೩ : ಕಾಸರಗೋಡು ತೀರಾ ಹಿಂದುಳಿದ ಪ್ರದೇಶ ಮತ್ತು ಅಲ್ಲಿನ ಬಹುಪಾಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳ ಜನರು ಕನ್ನಡ ಮಾತನಾಡುವವರು. ಆದ್ದರಿಂದ ಸರಕಾರದ ಎಲ್ಲ ಪ್ರಕಟಣೆಗಳು ಕನ್ನಡದಲ್ಲಿಯೂ ಇರಬೇಕು. ಮುಖ್ಯಮಂತ್ರಿ ಶ್ರೀ ಕೆ. ಕರುಣಾಕರನ್ ಅವರ ಉತ್ತರ : ಈ ವಿಷಯದಲ್ಲಿ ಈಗಾಗಲೇ ಸರಕಾರದ ಏರ್ಪಾಡು (ಪ್ರಾವಿಷನ್) ಇದೆ. ಆದರೆ ಭಾಷೆಗಳ ವಿಚಾರದಲ್ಲಿ ತೊಂದರೆಯಿದೆ. ಅನೇಕ ಜನರು ತುಳು ಮಾತನಾಡುತ್ತಿದ್ದು, ಆ ಭಾಷೆಗೆ ಲಿಪಿ ಇಲ್ಲ. ಆ ಪ್ರದೇಶದಲ್ಲಿ ಬಹಳ ಕಾಲ ಕಳೆದಿರುವ ನನಗೆ ಸಮಸ್ಯೆ ಗೊತ್ತಿದೆ.೮ ಮಾರ್ಚ್ ೧೯೮೩ : ಭಾಷಾ ಅಲ್ಪಸಂಖ್ಯಾತರ ಹಿತಕ್ಕಾಗಿ, ಮಂಜೇಶ್ವರದ ಉದ್ಯೋಗ ವಿನಿಮಯ ಕಚೇರಿಯನ್ನು ಪುನರಾರಂಬಿಸಲಾಗುವುದೇ? ಮಂತ್ರಿ ಕೆ. ಶಿವದಾಸನ್ ಅವರು ಜನಸಂಖ್ಯೆಯ ಆಧಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ತಯಾರಿದ್ದಾರೆ. ೧೦ ಮಾರ್ಚ್ ೧೯೮೩ : ಶಾಲಾ ಗ್ರಂಥಾಲಯಗಳಿಗಾಗಿ ಪುಸ್ತಕಗಳನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಕನ್ನಡ ಮತ್ತು ತಮಿಳು ತಿಳಿದಿರುವವರು ಯಾರಾದರೂ ಇದ್ದಾರಾ? ಮಂತ್ರಿ ಟಿ.ಎಂ. ಜಾಕೋಬ್ ಅವರ ಉತ್ತರ : ಈಗಿನ ಸಮಿತಿಯಲ್ಲಿ ಯಾರೂ ಇಲ್ಲ. ಈ ವಿಷಯವನ್ನು ಗಮನಿಸಲಾಗುವುದು. ೪ ಮಾರ್ಚ್ ೧೯೮೩ : ಮೂರು ಜಿಲ್ಲೆಗಳನ್ನು ಬರಪೀಡಿತ ಜಿಲ್ಲೆಗಳೆಂದು ಘೋಷಿಸಲಾಯಿತು. ಈ ಜಿಲ್ಲೆಗಳ ಹೊರಗಿನ ಕೆಲವು ತಾಲೂಕುಗಳನ್ನು ಇತ್ತೀಚೆಗೆ ಇದಕ್ಕೆ ಸೇರಿಸಲಾಯಿತು. ಅನಂತರ ಕೊಟ್ಟಾಯಂ ಜಿಲ್ಲೆಯನ್ನೂ ಸೇರಿಸಲಾಯಿತು. ಇದನ್ನೆಲ್ಲಾ ನಿರ್ಧರಿಸುವಾಗ ಪರಿಗಣಿಸುವ ಅಂಶ (ಕ್ರೈಟೀರಿಯಾ)ಗಳೇನು? ಕಾಸರಗೋಡಿನ ಕೆಲವು ಗ್ರಾಮಗಳನ್ನು ಬರಪೀಡಿತ ಪಟ್ಟಿಗೆ ಯಾಕೆ ಸೇರಿಸಿಲ್ಲ?