೩೪. ಪರಿತೋಷಣಂ ಯದಿಹ ಭಕ್ತನಿಧೇ
ಭವತಸ್ತದನ್ಯಮರುತಾಂ ಭವೇತ್ |
ದೃಢಮೂಲಸೇಕವಿಧಿರೇವ ತರೋ
ರ್ವಿಟಪೌಘಸೇಚನವಿಧಿರ್ನ ಕಥಮ್ ||

ಭಕ್ತರ ಅಭೀಷ್ಟದಾಯಕನೇ ಈ ಲೋಕದಲ್ಲಿ ನಿನ್ನ ಸಂತೋಷವೇ ಎಲ್ಲ ದೇವತೆಗಳ ಸಂತೋಷವಾಗಿರುತ್ತದೆ. ಹೇಗೆ ಮೂಲಬೇರಿಗೆ ನೀರನ್ನು ಸಿಂಪಡಿಸುವದರಿಂದ ಟೊಂಗೆಗಳಲ್ಲಿ ಸೇರುವದೋ ಹಾಗೆ.

೩೫. ದಯಿನೇ ಮುನೀಂದ್ರಹೃದಯೋದಯಿನೇ
ಹರಯೇ ಸುರಾಹಿತತಮೋಹರಯೇ |
ದರಿಣೇ ಪಯೋಧಿತನಯಾದರಿಣೇ
ಭವತೇ ನಮೋ ನಿಗಮಲೋಭವತೇ ||

ದಯಾಳುವೇ, ಮುನಿಗಳ ಹೃದಯದಲ್ಲಿ ಉದಯಿಸುವ ಅಸುರರೆಂಬ ತಮಸ್ಸನ್ನು ನಾಶಮಾಡುವ ಸೂರ್ಯನೇ, ಶಂಖವನ್ನು ಪಯೋಧಿತನಯಳ ಸೋದರತ್ವದಿಂದಾಗಿ ಆದರಿಸುವವನೇ, ವೇದಗಳಿಂದಾದ ಶುತಿಪ್ರಿಯನೇ ನಿನಗೆ ನಮಸ್ಕಾರ.

೩೬. ಸನಕಾದಿಯೋಗಿಶರಣಾಯ ನಮೋ
ಜಗತೀನಿವಾಸ ಜಠರಾಯ ನಮಃ |
ನಿಗಮಾಗಮಾಂತನಿಲಯಾಯ ನಮೋ
ನಲಿನೋತ್ಪಲೇಶನಯನಾಯ ನಮಃ ||

ಸನಕ ಮೊದಲಾದ ಯೋಗಿಗಳಿಂದ ವಂದ್ಯನಾದ ನಿನಗೆ ನಮಸ್ಕಾರ. ಲೋಕವನ್ನು ನಿನ್ನ ಜಠರವಾಗಿ ಹೊಂದಿರುವ ವಿರಾಟ್ ಪುರುಷನೇ ನಿನಗೆ ನಮಸ್ಕಾರ. ವೇದಶಾಸ್ತ್ರಗಳ ವಾಸಸ್ಥಾನವುಳ್ಳ ನಿನಗೆ ನಮಸ್ಕಾರ. ಕಮಲಗಳ ಉತ್ಪತ್ತಿಗೆ ಕಾರಣವಾಗುವ ಸೂರ್ಯಚಂದ್ರರನ್ನು ಕಣ್ಣುಗಳಾಗಿ ಹೊಂದಿರುವ ನಿನಗೆ ನಮಸ್ಕಾರ.

೩೭. ಮುಚುಕುಂದಮೋಕ್ಷದ ಮುಕುಂದ ಜಗ
ತ್ತ್ರಯಮೂಲಕಂದ ಮುನಿಬೃಂದನಿಧೇ |
ಇತಿ ತಂ ಸುಪರ್ಣರಥಮೇಷ ಭವಾ
ರ್ಣವಕರ್ಣಧಾರಮಭೀವರ್ಣೀತವಾನ್ ||

ಮುಚುಕುಂದನೆಂಬ ರಾಜನಿಗೆ ಮೋಕ್ಷದಾಯಕನಾದ ಮುಕುಂದನಾದ, ತ್ರೈಲೋಕಗಳಿಗೂ ಮೂಲಕಾರಣನಾದ, ಮುನಿಗಳಿಗೆ ನಿಧಿಯಾಗಿರುವ, ಗರುಡವಾಹನನಾದ, ಸಂಸಾರ ಸಮುದ್ರಕ್ಕೆ ನಾವೆಯಾದ ಆ ಭಗವಂತನಾದ ಶ್ರೀನಿವಾಸನನ್ನು ಅಚ್ಯುತರಾಯನು ಸ್ತುತಿಸಿದನು.

೩೮. ಮಹಿಮಸ್ತವಾಭಿನವಮಾಲ್ಯಭೃತೋ
ಮಧುಸೂದನಸ್ಯ ಮಕುಟಾದ್ಗಲೀತಾಮ್ |
ಸ್ರಜಮಗ್ರಹೀತ್ಸವಿನಯಂ ನೃಪತಿಃ
ಸಮರಶ್ರೀಯೋ ವರಣದಾಮಸಖೀಮ್ ||

ಅಚ್ಯುತರಾಯನು ನಳನಳಿಸುವ ಮಾಲೆಯನ್ನು ಧರಿಸಿರುವ ಭಗವಂತನಾದ ವಿಷ್ಣುವಿನ ಕಿರೀಟದಿಂದ ಬೀಳಲ್ಪಟ್ಟ ರಣಶ್ರೀಯ ವರಮಾಲೆಯನ್ನು ವಿನಯಪೂರ್ವಕವಾಗಿ ಸ್ವೀಕರಿಸಿದನು.

೩೯. ಅಸಹಾಯಮೌಕ್ತಿಕಮಹಾಭರಣೀ
ವಿಭುನಾರ್ಪಿತೇ ಕ್ವ ವಿನುಮೋ ಯದಿಮೇ |
ಅನಘೇ ಶ್ರುತಿದ್ವಯಮಭೂಷಯತಾಂ
ಅನಘೇ ಶ್ರುತಿ ಭೂಷಣಸ್ಯ ಸುಪರ್ವಮಣೇಃ ||

ಪ್ರಭುವಾದ ಅಚ್ಯುತರಾಯನಿಂದ ಅರ್ಪಿತವಾದ ಮುತ್ತಿನ ಕರ್ಣಾಭರಣವನ್ನು ಹೇಗೆ ಸ್ತುತಿಸೋಣ ನಿದೋಷವಾದ, ವೇದಾಭರಣಗಳೇ ಕರ್ಣಾಲಂಕಾರವಾಗಿ ಉಳ್ಳ, ದೇವತೆಗಳಿಗೆ ಸರ್ವಶ್ರೇಷ್ಠರತ್ನವಾಗಿರುವ, ಉನ್ನತವಾದ ಪರ್ವತದ ಮೇಲೆ ಬೆಳೆದ ಬಿದಿರಿನ ಉತ್ಪನ್ನವಾದ ಮುತ್ತಿನಿಂದ ಮಾಡಿದ ಕರ್ಣಾಭರಣವು ಭಗವಂತನಿಗೆ ಶುತಿಗಳಿಂದ ಸ್ತುತಿಸಲ್ಪಡುವಂತೆ ಅಲಂಕೃತವಾಯಿತು.

೪೦. ಉದಿತಾಬ್ಜಮುಲ್ಲಸಿತಚಕ್ರಮಸಾ
ವುದರಸ್ಥಸರ್ವಭುವನಾಭ್ಯುದಯಮ್ |
ಗುಹತೀರ್ಥಮತ್ರ ಕುರುತೇ ಸ್ಮಗಿರೌ
ನರಕಾಪಹಂ ನಲಿನನಾಭಮಿವ ||

ಅರಳಿರುವ ಕಮಲಗಳ | ಇನ್ನೊಂದರ್ಥದಲ್ಲಿ ಶಂಖವನ್ನು ಹೊಂದಿರುವ ಚಕ್ರವಾಕಗಳಿಂದ ಉಲ್ಲಸಿತವಾಗಿರುವ | ಇನ್ನೊಂದರ್ಥ ಚಕ್ರಾಯುಧವನ್ನು ಹೊಂದಿರುವ ಎಲ್ಲ ಲೋಕಗಳಿಗೂ ಮಧ್ಯದಲ್ಲಿದ್ದು ಅಭ್ಯುದಯ ಮಾಡುವ | ಇನ್ನೊಂದರ್ಥ ಜಠರದೊಳಗೆ ಇರುವ ಎಲ್ಲ ಲೋಕಗಳ ಅಭ್ಯುದಯಮಾಡುವ, ನರಕವನ್ನು ದೂರ ಮಾಡುವ ನರಕಾಸುರನನ್ನು ಕೊಂದ ಪದ್ಮನಾಭನು ನಿಂತು ಗುಹತೀರ್ಥವನ್ನು ಶೇಷಾದ್ರಿಯಲ್ಲಿ ಮಾಡಿದನು.

೪೧. ಮಹತಾ ಪ್ರಭಾಲಿವಲಯೇನ ಮಹಿ
ಪತಿನಾರ್ಪಿತೇನ ಫಣಿಶೈಲಪತಿಃ |
ಉಪರಿಶ್ರೀತೇಂದ್ರ ಧನುರುಲ್ಲಸಿತಂ
ಹರಿತಂ ವ್ಯಡಂಬಯದಿವಾಂಬುಮುಚಮ್ ||

ಶೇಷಾದ್ರಿನಾಥನು ಅಚ್ಯುತರಾಯನು ಕೊಟ್ಟಂತಹ ದೊಡ್ಡದಾದ ಪ್ರಭಾವಲಯಕ್ಕಿಂತ ಮೇಲಿರುವ ಇಂದ್ರಧನುಷ್ಯದಿಂದ ಶೋಭಿತವಾದ ನೀಲವರ್ಣದ ಮೇಘವನ್ನು ಅನುಸರಿಸಿದನು.

೪೨. ಶ್ರವಣೇ ಕಥಾಸ್ಯಮನನಂ ಮನ
ಶ್ಚರಣೇ ಶಿರಃ ಸ್ವಯಮಲಂಕುರುತಃ |
ಇತಿ ಕುಂಡಲಂ ಪದಕಮೇವ ಹರೇಃ
ಕಿಮಿಹಾರ್ಪಯನ್ಮಣಿಕಿರೀಟಮಪಿ ||

ಹರಿಯ ಕಥಾಚರಿತವು ಕಿವಿಗಳಿಗೆ ಭೂಷಣಪ್ರಾಯವಾಯಿತು. ಧಾನ್ಯ ಹೃದಯವನ್ನು ಅಲಂಕರಿಸಿತು. ಹರಿಪಾದಗಳು ತಲೆಯನ್ನು ಪವಿತ್ರಗೊಳಿಸಿದವು ಎಂದು ತಿಳಿದು ಅಚ್ಯುತರಾಯನು ವಿಷ್ಣುವಿಗೆ ಕರ್ಣಕುಂಡಲಗಳನ್ನು ಕಂಠಭೂಷಣವಾದ ಪದಕವನ್ನು ರತ್ನಖಚಿತ ಮುಕುಟವನ್ನು ಕೊಟ್ಟನಲ್ಲವೇ?

೪೩. ಅನುಲೇಪಮಾಲ್ಯವಸನಾಭರಣೈ
ರ್ಹರಿಮಂತರಂಧತಮಸೇಭಹರೀಮ್ |
ನ್ಯವಸದ್ಗಿರೌ ಪಂಚಕನ್ನಿಯಮಾ
ತ್ಕತಿ ಚಿದ್ದಿನಾನಿ ಕಮಿತಾ ಧರಣೇಃ ||

ಪೃಥಿವೀ ಪತಿಯು ಹೃದಯದಲ್ಲಿನ ಗಾಢಾಂಧಕಾರವು ಗಜಗಾತ್ರದಷ್ಟಾಗಿ ಭಯಂಕರವಾಗಿರಲು ಹರಿಯೆಂಬ ಸಿಂಹದಿಂದ ಪರಿಹರಿಸಿಕೊಳ್ಳುವದಕ್ಕಾಗಿ ಶ್ರೀನಿವಾಸನನ್ನು ಚಂದನ, ಮಾಲೆ, ವಸ್ತ್ರ, ಭೂಷಣಗಳಿಂದ ಸತತವಾಗಿ ಸೇವೆಗೈಯುತ್ತಲೇ ಕೆಲವು ದಿನಗಳವರೆಗೆ ಗಿರಿಯಲ್ಲಿ ನೆಲೆಸಿದ್ದನು.

೪೪. ಅವರುಹ್ಯ ವೆಂಕಟಗಿರೇಃ ಶಿಖರಾ
ದಧಿರುಹ್ಯ ವಾಹಮತಿಗಂಧವಹಮ್ |
ಗರೀಯಸೀಂ ಸಕಲಮುಕ್ತಿಕರೀ
ಮಪಿ ಕಾಲಹಸ್ತೀನಗರೀ ಮಗಮತ್ ||

ಅಚ್ಯುತರಾಯನು ವೆಂಕಟಗಿರಿಯ ಮೇಲಿಂದ ಇಳಿದು, ಗಾಳಿಯ ವೇಗಕ್ಕೆ ಸರಿಸಾಟಿಯಾದ ಅಶ್ವವನ್ನು ಏರಿ ಅತಿ ಶ್ರೇಷ್ಠವಾದ ಎಲ್ಲರಿಗೂ ಮುಕ್ತಿದಾಯಕವಾದ ಕಾಳಹಸ್ತಿ ಎಂಬ ಪಟ್ಟಣಕ್ಕೆ ಹೋದನು.

೪೫. ನಿಕಷಾ ಸುವರ್ಣಮುಖರೀಂ ಲಹರೀ
ಮುಖರೀಭವದ್ವಿತತತೀರದರೀಮ್ |
ಕೃತಧಾಮ ಧಾಮ ನಿಜನಾಮಪದಾ
ಂಕನಮಸೀಮಭೂಮ ನಮತಿ ಸ್ಮ ನೃಪಃ ||

ತರಂಗಗಳಿಂದ ಪ್ರವಾಹರೂಪವಾಗಿ ಶಬ್ದ ಮಾಡುತ್ತಿರುವ, ವಿಸ್ತೃತವಾದ ಸುವರ್ಣಮುಖವೆಂಬ ನದಿಯ ತೀರದಲ್ಲಿ ಸ್ಥಳಮಾಡಿಕೊಂಡು ತೇಜಸ್ಸಿನಿಂದ ಅಚ್ಯುತರಾಯನು ಅಚ್ಯುತವೆಂಬ ಶಬ್ದ ಚಿಹ್ನಿತವಾದ ಅಧಿಕಾರವ್ಯಾಪ್ತಿಗೆ ಒಳಪಟ್ಟ ವಿಸ್ತಾರವಾದ ಭೂಮಿಯ ಒಡೆಯನಾಗಿ ನಮಸ್ಕರಿಸಿದನು.

೪೬. ದ್ರವಿಣಾಧಿಪೇನ ದೃಢಸಖ್ಯವತಾ
ಭಿಕ್ಷುತಾಸ್ಯ ಸಮತಕ್ಷ್ಯತ ಯಾ |
ಅಪವಾರಿತೇಯಮುಪಹಾರಿತಯಾ
ನರಸಾತ್ಮಜೇನ ನವಸೀಮಭುವಾ ||

ಪರಶಿವನು ಭಿಕ್ಷುಕನಾದರೂ ಅತ್ಯಂತ ಆಪ್ತನಾದ ಕುಬೇರನಿಂದಲೂ ನಿವಾರಿಸಲಾಗದ ದಾರಿದ್ರ್ಯವನ್ನು ಅಚ್ಯುತರಾಯನು ಅತ್ಯಧಿಕವಾಗಿ ನಿವಾರಿಸಿದನು.

೪೭. ವಿನಮ್ಯ ಚಂದ್ರಶಕಲಾಭರಣಂ
ಶಿವಮಂಜನೇಭಗಿರಿಸಂಚರಣi |
ಅಭಿವಾಂಛಿತಾಮಪಿ ವಿರಿಂಚಿಮುಖೈ
ರ್ಹರಿಕಾಂಚಿನಾಮನಗರೀಮಗಮತ್ ||

ಅಚ್ಯುತರಾಯನು ಕಾಳಹಸ್ತಿ ಗಿರಿವಾಸದ ನಂತರ ಚಂದ್ರಕಲಾಭರಣವನ್ನು ಹೊಂದಿದ ಪಾರ್ವತಿ ಪತಿಯನ್ನು ನಮಸ್ಕರಿಸಿ ಬ್ರಹ್ಮಾದಿದೇವತೆಗಳಿಗೂ ಬೇಕಾಗಿರುವ ವಿಷ್ಣುಕಾಂಚಿ ಪಟ್ಟಣವನ್ನು ಕುರಿತು ಹೋದನು.

೪೮. ಅಭಿಜಾತವೈಧಹಯಮೇಧಮಖಾ
ಂತರಜಾತಮಾಧಿಹರಮಾನಮತಾಮ್ |
ಕುಮುದಾರವಿಂದಕುಲಬಂಧು ದೃಶಂ
ಸಮುದಾಯಮಂಬುಧಿಸುತಾಕ್ಷಿಮುದಾಮ್ ||

ಬ್ರಾಹ್ಮಣರಿಂದ ಯಥಾಸಾಂಗವಾಗಿ ನಿರ್ವಹಿಸಲ್ಪಟ್ಟ ಅಶ್ವಮೇಧಯಾಗದ ಮಧ್ಯದಲ್ಲಿ ಹುಟ್ಟಿದ ಅಗ್ನಿಯಾಗಿ ನಮಿಸುವ ಭಕ್ತರ ಮನೋವ್ಯಥೆಗಳನ್ನು ಪರಿಹರಿಸುವ, ಕುಮುದಾರವಿಂದಗಳ ಕುಲಬಂಧುಗಳಾದ ಚಂದ್ರ-ಸೂರ್ಯರೆಂಬ ಕಣ್ಣುಗಳನ್ನು ಲಕ್ಷ್ಮಿಯ ಸಂತೋಷಕ್ಕಾಗಿ ತೆರೆಯುವ.

೪೯. ಪರಿಚರ್ಯಯಾ ಪ್ರಣವಶೀರ್ಷಮಣಿಂ
ಪರಿತೋಷ್ಯ ಶಾರ್ಙ್ಗಣಮಮುಷ್ಯ ಪುರಃ |
ಅಧಿರೂಢ ಮೌಕ್ತಿಕ ತುಲಾಪುರಷೋs –
ಪ್ಯತುಲೋಜನಿಷ್ಟ ಸದಭೀಷ್ಟಕರಃ ||

ಚೂಡಾಮಣಿ ವರದರಾಜನನ್ನು ಸೇವೆಯಿಂದ ಸಂತೋಷ ಪಡಿಸಿ ಆ ವರದರಾಜನ ಮುಂದೆ ಮುತ್ತಿನ ತುಲಾಭಾರ ಮಾಡಿಸಿಕೊಂಡು, ಸಜ್ಜನರ ಮನೋರಥವನ್ನು ಪೂರ್ಣಗೊಳಿಸಿ ಎಲ್ಲರಿಗೂ ಯಥೇಚ್ಛ ದಾನ ಮಾಡಿ ಅತುಲನಾದನು (ತೂಗಲು ಸಾಧ್ಯವಿಲ್ಲದಂತಾದನು.)

೫೦. ಪಟಹೋರುಭಾಂಕರಣ ಮಂತ್ರವಶಾ
ದ್ಗಲಿತ ಸ್ವಗರ್ವಗರಲೋಷ್ಮಭರಾಃ |
ನಿಭೃತಾಃ ಕಿರಾತನಿಕರಾ ನೃಪತೇ
ರ್ನಿಹಿತೋಪದಾಶ್ಚರಣಯೋರ್ನ್ಯಪತನ್ ||

ಬೇಡ ಸಮೂಹದವರು ಭೇರಿಗಳ ಭಯಂಕರ ಶಬ್ದವನ್ನು ಕೇಳಿದೊಡನೆ ಗರುಡಮಂತ್ರದಿಂದ ದುರಹಂಕಾರಿಯಾದ ಸರ್ಪವು ವಿಷವನ್ನು ಕಕ್ಕುವಂತೆ ಮತ್ತು ಉಷ್ಣದ ಆಧಿಕ್ಯದಿಂದ ಹಿಂದೆ ಸರಿಯುವ ಹಾಗೆ ವಿನಯದಿಂದ ಕಾಣಿಕೆಗಳನ್ನು ಸಮರ್ಪಿಸಿ ಪಾದಕ್ಕೆರಗಿದರು.

೫೧. ಶಿಖಿಪಿಂಛಲಾಂಛಿತಶಿಖಂಡಭರೈಃ
ಶ್ರಿತಧನ್ವಭಿಃ ಸಿತವರಾಜಗುಣೈಃ
ವಿಶತಿ ಸ್ಮ ತೈರನುಗತೋ ವಿನಯಾ
ದಧಿಪೋ ನೃಣಾಮರುಣಶೈಲಪುರೀಮ್ ||

ನವಿಲುಗರಿಗಳನ್ನು ದಾರದಿಂದ ಕಟ್ಟಿಕೊಂಡು ಈಶ್ವರನ ಜಟಾಸಮೂಹದಂತೆ ತೋರುವ, ತಲೆಯ ಮೇಲೆ ಬಾಣಗಳನ್ನು ಪ್ರಯಾಸದಿಂದ ಹೊತ್ತುಕೊಂಡು ಒಯ್ಯುತ್ತಿರುವ ಕಿರಾತರುಗಳನ್ನು ಹಿಂಬಾಲಿಸುತ್ತ ಅಚ್ಯುತರಾಯನು ಅರಣಾಚಲನಗರವನ್ನು ಪ್ರವೇಶಿಸಿದನು.

೫೨. ಭಸಿತಾನುಲೇಪಭಜನೇನ ಜಟಾ
ಪಟಲಾರ್ಚಿಷಾಂ ಪರಿಶೀಲನಯಾ |
ಅವಿಕುಂಠಕಂಠರುಚಿಧೂಮ ತಯಾ
ಪ್ಯನಲಾತ್ಮತಾಮಭಿನಯಂತಮಿವ ||

ಭಸ್ಮವನ್ನು ಲೇಪಿಸಿಕೊಂಡಿದ್ದರಿಂದಲೂ, ಜಟಾಜೂಟಗಳು ಅಗ್ನಿಶಿಖೆಗಳಂತೆ ಹಳದಿವರ್ಣದವುಗಳಾಗಿ ಕಾಣುವದರಿಂದಲೂ, ಇವೆರಡರ ಅತ್ಯಂತ ಸಾಮಿಪ್ಯದಿಂದ ಕಂಠದಲ್ಲಿ ಧೂಮದಿಂದ ಶೋಭಿಸುವ ಅಗ್ನಿಸ್ವರೂಪಾತ್ಮಕವಾಗಿ ಕಾಣಬರುವ ಶಿವಲಿಂಗವಿದೆ. (ಅರುಣಾಚಲದಲ್ಲಿ ಅಗ್ನಿಮಯ ಶಿವಲಿಂಗವಿದೆ ಎಂಬುದು ಪ್ರತೀತಿ.)

೫೩. ವರಪಾಶಬಂಧನವಶಾದ್ವಶಿನಾ
ಮವಲಂಬಮಾನಮಧಿಹೃತ್ಸುಷಿರಮ್ |
ಅಭಿವೇಷ್ಟಿತಂ ಗಲಮಹೋಜತುನಾ
ಪ್ಯಬಿಮುದ್ರಿತಂ ತಮಮೃಷೋಕ್ತಿನಿಧಿಮ್ ||

ಜಿತೇಂದ್ರಿಯರಾದವರುಗಳು ಹೃದಯದ ಪೊಟರೆಯಲ್ಲಿ ಮಂಡಲಾಕಾರದಲ್ಲಿ ವ್ಯಾಪಿಸಿ ಮಂದ್ರಿತವಾಗಿರುವ ಸತ್ಯವಾಚಿಗಳಾದ ವೇದಗಳೆಂಬ ನಿಧಿಗಾಗಿ

೫೪. ಅರುಣಾಚಲೇಶಮಭಿವಂಧ್ಯ ಕಿಮ
ಪ್ಯವಧಾರ್ಯ ಕಾರ್ಯಮಥ ಹಸ್ತಗತಮ್ |
ತಿರಯನ್ನಗಾದ್ವಿಜಯತೂರ್ಯರವೈಃ
ಕಲಶೀಭವಾಧಿಕರಣಂ ಕಕುಭಮ್ ||

ಇಂತಹ ಅರುಣಗಿರಿಯ ನಾಯಕನಾದ ಪರಮೇಶ್ವರನಿಗೆ ನಮಸ್ಕರಿಸಿ ತನ್ನ ಉದ್ದೇಶಿತ ಕಾರ್ಯವನ್ನು ಬಹು ಪ್ರಕಾರಗಳಿಂದ ನಿಶ್ಚಯಿಸಿ ಅಗಸ್ತ್ಯರು ವಾಸಮಾಡಿಕೊಂಡಿರುವ ದಕ್ಷಿಣ ದಿಕ್ಕಿನೆಡೆಗೆ ಜಯಭೇರಿ ಧ್ವನಿಗಳಿಂದ ತುಂಬಿದ ಸೇನಾಸಾಗರದೊಂದಿಗೆ ಹೊರಟನು.

೫೫. ಕದಲೇಕ್ಷುಕೇರಕಲಮೈಃ ಸ್ವದೃಶೋ
ರ್ಜನಿತೋಪದಾನ್ ಜನಪದಾಭ್ಯುದಯಾನ್ |
ಅವಲೋಕಯತಿಶಯಾದವನೇಃ
ಕಮಿತಾ ಸಮಾಶ್ನುತ ಕವೇರಸುತಾಮ್ ||

ಬಾಳೆ, ಕಬ್ಬು, ತೆಂಗು, ಭತ್ತಗಳನ್ನೇ ತನ್ನ ಸ್ವಂತ ಉತ್ಪಾದನೆಗಳಾಗಿ ಉತ್ಪಾದಿಸಿ ಕಾಣಿಕೆಯಾಗಿ ಅರ್ಪಿಸುವ ದೇಶಗಳನ್ನು ನೋಡಿ ಕಾವೇರಿ ತೀರ ಪ್ರದೇಶವನ್ನು ಅಚ್ಯುತರಾಯನು ಪ್ರವೇಶಿಸಿದನು.

೫೬. ಘನನಾಲಿಕೇರಕದಲೀಬಕುಲ
ಕ್ರಮುಕಾಟವೀಜುಷಿ ತದೀಯತಟೇ |
ಪೃತನಾಂ ಮುಕುಂದನಮನಾಭಿಮನಾ
ನಿಖಿಲಾಂ ನ್ಯೆವೇಶಯದಯಂ ನೃಪತಿಃ ||

ಅಚ್ಯುತರಾಯನು ಶ್ರೀರಂಗನಾಥನಿಗೆ ಅಭಿವಂದಿಸಿ ಉತ್ಕಂಠಿತನಾಗಿ ಸಮಸ್ತ ಸೈನ್ಯದೊಂದಿಗೆ ನಿಬಿಡವಾದ ತೆಂಗು, ಬಾಳೆ, ಬಕುಲ, ಕೇಸರ, ಅಡಿಕೆ ಮರಗಳಿಂದ ಕೂಡಿದ ವನದಿಂದಾವೃತ್ತವಾದ ಕಾವೇರಿ ತೀರದಲ್ಲಿ ಬೀಡುಬಿಟ್ಟನು.

೫೭. ಪೃಥುನೀತಿಮಾರ್ಗಪಥಿಕಃ ಪೃತನಾ
ಪದವೀಶ್ರಮಾಪಹೃತಿ ತತ್ಪಯಸಿ |
ಕೃತಮಜ್ಜನಾದಿನಿಯಮಃ ಕ್ಷಿತಿಪೈಃ
ಸಹ ಕೈಶ್ಚಿದಾಶ್ನುತ ರಂಗಗೃಹಮ್ ||

ಮಹಾನ್ ನೀತಿಮಾರ್ಗಕಾರನಾದ ಅಚ್ಯುತರಾಯನು ಸೇನೆಯ ಮಾರ್ಗಾಯಾಸವನ್ನು ಪರಿಹರಿಸಲು ಕಾವೇರಿ ನದಿಯ ನೀರಿನಲ್ಲಿ ಸ್ನಾನಾದಿ ಕರ್ಮಗಳನ್ನು ಮಾಡಿ ಕೆಲವು ರಾಜರೊಂದಿಗೆ ಶ್ರೀರಂಗನಾಥ ದೇವಾಲಯವನ್ನು ಪ್ರವೇಶಿಸಿದನು.

೫೮. ಅಪಿ ಜಾಗರೂಕಮವನೇ ಜಗತಾ
ಮಧಿಭೋಗಿಭೋಗಮಜಹತ್ಸ್ವಪನಮ್ |
ಸಹಜಪ್ರಸಾದ ಮುಖಚಂದ್ರತಯಾ
ಪ್ರಥಯಂತಮಂತರಿವ ಭಕ್ತಮುದಮ್ ||

ಜಗತ್ತನ್ನು ಪಾಲಿಸಲು ಜಾಗರೂಕತೆಯಿಂದ ಇದ್ದಾಗಲೂ ಕೂಡ, ಶೇಷಶರೀರದಲ್ಲಿ ನಿದ್ರೆಯನ್ನು ಬಿಡದಿರುವ, ನೈಸರ್ಗಿಕ ಪ್ರಸನ್ನತೆಯನ್ನು ಹೊಂದಿದ ಮುಖವುಳ್ಳ ಭಕ್ತರ ವಿಷಯಕವಾದ ಸಂತೋಷವನ್ನು ಹೃದಯದಲ್ಲಿ ಪ್ರಕಟಿಸುತ್ತಿರುವ.

೫೯. ಸ್ವಪನಾನುಭೂತಿಸುಖಮೀಲಿತಯೋ
ರಪಿ ಚಕ್ಷುಕ್ಷೋರ ವಿರತೋಲ್ಲಸಿತೌ |
ಸ್ಫುಟಯಂತಮಿಂದು ಪುಟಕಿನ್ಯಧಿಪೌ
ಕರಸಂಗವದ್ದರರಥಾಂಗ ಮಿಷಾತ್ ||

ನಿದ್ರಾನುಭೂತಿ ಸುಖದಿಂದ ಕೂಡಿದ ಕಣ್ಣುಗಳಿಂದ, ಕೈಯಲ್ಲಿರುವ ಶಂಖಚಕ್ರಗಳ ನೆಪದಿಂದ ಚಂದ್ರ ಮತ್ತು ಕಮಲಿನಿಪತಿಯಾದ ಸೂರ್ಯರಿಬ್ಬರ ನಿತ್ಯೋದಯಗಳು ಸದಾ ಪ್ರಕಾಶಮಾನವಾಗಿ ಚೆನ್ನಾಗಿ ಬೆಳಗಲು ಕಾರಣವಾಗಿರುವ

೬೦. ಕಲಶಾಂಬುರಾಶಿದುಹಿತುಃ ಕರಯೋ
ರ್ನಿಜಪಾದಪಲ್ಲವಯುಗಾನ್ನಿಹಿತಾತ್ |
ಅಜಹದ್ವಿಲಾಸಕಮಲಾಂ ಕಮಲಾ
ಮಿವ ಕಲ್ಪಯಂತಮನಮತ್ಸ ಹರೀಮ್ ||

ಕ್ಷೀರಸಾಗರ ಪುತ್ರಿಯಾದ ಲಕ್ಷ್ಮಿಯ ಕೈಗಳಲ್ಲಿ ಪಾದಪದ್ಮಯುಗ್ಮಗಳನ್ನು ಇಟ್ಟಿರುವ, ಲಕ್ಷ್ಮಿಯನ್ನು ಬಿಡದೇ ಅವಳ ಮುಖಕಮಲದ ವಿಲಾಸಕ್ಕೆ ಕಾರಣನಾದ ರಂಗನಾಥನನ್ನು ಅಚ್ಯುತರಾಯನು ನಮಿಸಿದನು.

೬೧. ಮುಕುಲೀಕೃತೇನ ಮುಹುರುಲ್ಲಲನಾ
ಕಲಕಂಕಣಾರವಕಲಾಪವತಾ |
ಶಯಪದ್ಮಕೋರಕಯುಗೇನ ಶನೈ
ರಚಿತೋರುಪೀಡನವಿಧಿಂ ರಮಯಾ ||

ಲಕ್ಷ್ಮಿಯಿಂದ ಪ್ರತ್ಯೇಕವಾಗಿ ಮೇಲೆ ಕೆಳಗೆ ಇಡಲ್ಪಟ್ಟು ಮತ್ತೆ ಮತ್ತೆ ಆಚೀಚೆ ಚಲಿಸುವ, ಮಧುರವಾದ ಕೈ ಬಳೆಗಳ ಆಲಾಪದಿಂದ, ಕರಪದ್ಮಗಳೆಂಬ ಮೊಗ್ಗುಗಳಿಂದ ಮಂದ ಮಂದವಾಗಿ ಒತ್ತಲ್ಪಡುವ

೬೨. ಅಜಮವ್ಯಪಾಯಮಜರಂ ಜಗತಾ
ಮವನೈಕತಾನಮನಿದಾನಯಮ್ |
ಅಭಿವಂದ್ಯ ಕಾಮಫಲದಂ ಧರಣೀ
ರಧಿಭೂಃ ಸಮಾರಭತ ಗಂತುಮಿತಃ ||

ಹುಟ್ಟು ಇಲ್ಲದಿರುವ, ಸಾವಿಲ್ಲದಿರುವ, ಮುಪ್ಪಿಲ್ಲದಿರುವ, ಜಗತ್ತಿನ ರಕ್ಷಣೆಗಾಗಿ ಬದ್ಧವಾಗಿರುವ ಕೃಪಾಳುವಾದ ಅಭೀಷ್ಟದಾಯಕನಾದ ಭಗವಂತನಿಗೆ ನೇತಾರನಾದ ಅಚ್ಯುತರಾಯನು ನಮಸ್ಕರಿಸಿ ಹೊರಡಲನುವಾದನು.

೬೩. ನಲಿನೇಕ್ಷಣಾಂಶ ನರಪಾಲಮಣೇ
ಕ್ಷಿತಿಮಂಡಲೇ ತವ ಕಿಮಸ್ತಿ ಸಮಃ |
ಅಭಿಗಮ್ಯ ಎಷ ಹಿ ಮಯೈವ ವಿಭೋ
ರಣಕರ್ಮ ರಾಜತಿ ಚಾಸಮಯೋಃ ||

ಈ ಪದ್ಯದಲ್ಲಿ ಸಲಗರಾಜನ ಮಾತಿದೆ. ಹೇ ವಿಷ್ಣುಸಂಭೂತನಾದ ರಾಜನೇ, ರಾಜಶ್ರೇಷ್ಠನೇ, ಭೂಮಂಡಲದಲ್ಲಿ ನಿನ್ನ ಸಮರಾರಿಲ್ಲ. ಹೇ ಪ್ರಭು ಈ ಚೇರರಾಜನು ನಿಜವಾಗಿಯೂ ನನಗಾಗಿಯೇ ಹೊರತು ನಿನ್ನಗಲ್ಲ. ಎದುರಾಗಿ ಬರುವವನು ಅಸಮಬಲನು ಆಗಿದ್ದಾನೆ. ಹಾಗಾಗಿ ಅವನು ನಿನ್ನ ಎದುರಾಳಿ ಎನಿಸುವುದಿಲ್ಲ. ಯುದ್ಧವು ಸರಿ ಎನಿಸುವುದಿಲ್ಲ ಎಂದು ಅಚ್ಯುತರಾಯನಲ್ಲಿ ಬಿನ್ನವಿಸಿಕೊಳ್ಳುತ್ತಾನೆ.

೬೪. ಪ್ರೇಮ್ಲಃ ಪಾತ್ರೀಕುರುಷ್ವ ಪ್ರಿಯರಮಣ ಭುವಃ ಪ್ರೇಷಣಾದೇಷ ದೋರ್ಭ್ಯಾಂ
ನೇಷ್ಯೇ ಪ್ರೇಷ್ಯಂ ಹಿ ಗರ್ವಗ್ರಹಿಲಮಿಹ ಜವಾಚ್ಚೇಲ್ಲಪಂ ಚೇರಸೀಮ್ನಃ |
ಪ್ರಸ್ಥಾಪ್ಯೇತ್ಯುಕ್ತವಂತಂ ಸಲಗನೃಪಸುತಂ ಪದ್ಮನಾಭಾಂತ ರಂಗೇ
ರಂಗೇ ಭಕ್ತ್ಯುತರಂಗಃ ಕಠಿಚನ ದಿವಸಾನ್ಸ್ಥಾತುಮೈಚ್ಛನ್ಮಹೇಚ್ಛಃ ||

ಹೇ ಭೂಪತಿಯೇ ನೀನು ಸ್ನೇಹಾನುಪೂರ್ವಕವಾಗಿ ನನ್ನನ್ನು ಕಳುಹಿಸುತ್ತಿರುವದನ್ನು ಸಮರ್ಥವಾಗಿ ನಿಭಾಯಿಸಿ ನಿನ್ನ ವಿಶ್ವಾಸಕ್ಕೆ ಪಾತ್ರನಾಗುತ್ತಾನೆ. ನಾನು ಗರ್ವದಿಂದ ಕೂಡಿದ ಚೆಲ್ಲಪ್ಪರಾಜನನ್ನು ಚೇರ ಸೀಮೆಯಿಂದ ವೇಗವಾಗಿ ನಿನ್ನೆಡೆಗೆ ಹಿಡಿದು ತರುತ್ತೇನೆ. ಹೀಗೆ ಹೇಳಿದ ಸಲಗರಾಜಪುತ್ರನನ್ನು ತನ್ನ ಬದಲಾಗಿ ಕಳುಹಿಸಿ ಮಹಾನುಭಾವನಾದ ಅಚ್ಯುತರಾಯನು ಭಕ್ತಿಪೂರ್ಣವಾಗಿ ಶ್ರೀರಂಗನಾಥನ ಅಭೀಷ್ಟದಾಯಕವಾದ ಶ್ರೀರಂಗವೆಂಬ ಪ್ರದೇಶದಲ್ಲಿ ಕೆಲವು ದಿನಗಳವರೆಗೆ ಉಳಿಯಲು ಇಚ್ಛಿಸಿದನು.