೩೦. ವಿರಾಟಸೌರಾಷ್ಟ್ರವಧೂಟಿಕಾಲಿಕಾ
ಸಟಾವಚೂಡೀಕೃತಚಾರುವೀಟಿಕಮ್ |
ತ್ರಿಗರ್ತಪಾಠೀನವಿವರ್ತಲೋಚನಾ
ಪ್ರವರ್ತಿತಾರಾತ್ರಿಕಪಾತ್ರವರ್ತಿಕಮ್ ||

ವಿರಾಟದೇಶ, ಸೌರಾಷ್ಟ್ರದೇಶದ ಜಟಾಜೂಟಧಾರಿಗಳಾಗಿ ಅಲಂಕೃತರಾದ ಸ್ತ್ರೀಯರು ತಾಂಬೂಲವನ್ನು ಹಿಡಿದುಕೊಂಡಿದ್ದ ಸ್ತ್ರೀಯರ ಮೀನಿನ ಕಣ್ಣುಗಳಂತೆ ಚಂಚಲವಾದ ಕಣ್ಣುಳ್ಳ ತ್ರಿಗರ್ತದೇಶದ ಸ್ತ್ರೀಯರಿಂದ ಮಾಡಿದ ನೀರಾಂಜನ ದೀಪದಾರತಿಯ ಶೋಭೆಯಿಂದ

೩೧. ಅವಂತಿಕುಂತ್ಯಾಂಧ್ರಪುರಾಂಧ್ರಿಕಾಕರಾ
ನಂಬಂಧಿಸೌಗಂಧಿಕದಾಮದಂತುರಮ್ |
ವಿದರ್ಭಸುಭ್ರೂಕರಶಿಲ್ಪವೈದುಷೀ
ವಿಕಲ್ಪಜಲ್ಪಾಕಸಿತಾಭ್ರಗರ್ಭಕಮ್ ||

ಅವಂತಿ, ಕುಂತಿ, ಆಂಧ್ರ ಇತ್ಯಾದಿ ದೇಶಗಳ ಸ್ತ್ರೀಯರ ಕೈಗಳಿಂದ ಕಟ್ಟಲಾದ ಸುಗಂಧದಿಂದ ಕೂಡಿದ ಕಲ್ಹಾರ ಮಾಲೆಗಳಿಂದ, ವಿದರ್ಭದೇಶದ ಸ್ತ್ರೀಯರಿಂದ ಕಟ್ಟಲಾದ ಮತ್ತು ಬಿಳಿಯದಾದ ಅಭ್ರರ ಎಂಬ ವಿಶೇಷ ಲೋಹದಿಂದ ಮಾಡಲ್ಪಟ್ಟ ಶಿರೋಮಾಲೆಗಳಿಂದ ಶೋಭಿತವಾದ

೩೨. ಅಪಾರನೇಪಾಲನೃಪಾಲಬಾಲಿಕಾ
ಕಲಾಪಸಂಪಾದಿತಧೂಪನೈಪುಣ್ಯಮ್ |
ಅಲಕ್ಷಿ ಮಾಂಗಲ್ಯಮಯಂ ಕಿಲಾಖಿಲಂ
ಮಹೀಪತೇರ್ಮಂದಿರಮಿಂದಿರಾಸ್ಪದಮ್ ||

ಅಧಿಕವಾದ ನೇಪಾಲ ರಾಜಕುವರಿಯರ ಸಮೂಹದಿಂದ ಸಂಪಾದಿತವಾದ ಅಗರು ಧೂಪದಿಂದ ಉಂಟಾದ ಸುವಾಸನೆಯಿಂದ ಮಂಗಲಮಯವಾದ ಸಮಗ್ರರಾಜಸದನವು ಲಕ್ಷ್ಮೀ ನಿವಾಸದಂತೆ ಶೋಭಿಸುತ್ತಿತ್ತು.

೩೩. ಪರಾಕೃತೈರಮ್ಮದಪಾಟವಾನಕ
ಪ್ರಾಣಾದಪಾರೀಣದರೀಪ್ರತಿಶುತಾ |
ಹರಿಷ್ಕೃತಿ ಕ್ಷ್ಮಾಭರಮೇಷ ಇತ್ಯಮೀ
ಕುಲಾಚಲಾಃ ಕ್ಷೇಲನಮಾಚರನ್ನಿವ ||

ಮೇಘಗರ್ಜನೆಯಿಂದ ಉಂಟಾಗುವ ಶಬ್ದವಿಶೇಷವು ಪಟಹ ಭೇರಿಗಳ ನಿನಾದದಂತೆ ಪರಿಪೂರ್ಣವಾಗಿ ಪರ್ವತದ ಗುಹೆಗಳಲ್ಲಿ ಪ್ರತಿಧ್ವನಿಸುತ್ತಿತ್ತು. ಇದು ಮಹೇಂದ್ರ ಮಲಯ ಪರ್ವತಗಳೇ ಅಚ್ಯುತರಾಯನು ಭೂಭಾರವನ್ನು ಕಳೆಯುತ್ತಾನೆ ಎಂದು ಸಂತೋಷದಿಂದ ಸಿಂಹನಾದವನ್ನು ಮಾಡಿದಂತೆ ತೋರುತ್ತಿತ್ತು.

೩೪. ಸಮಂಚಿತಂ ಕಂಚುಕಿನಾಂ ಜಯಾರವೈಃ
ಸಹಾಪ್ತರಾಜನ್ಯಜನೇನ ಕೇನಚಿತ್ |
ಅಲಂಕೃತಂ ಸಾಂಗ ಇವಾಂಗಜಃ ಶನೈ
ರಸಾವಯಾಸೀದಭಿಷೇಕಮಂಟಪಮ್ ||

ಅಚ್ಯುತರಾಯನು ಕೆಲವು ಆಪ್ತ ರಾಜರೊಂದಿಗೆ ಮೂರ್ತಿಸ್ವರೂಪನಾದ ಮನ್ಮಥನಂತೆ ಕಂಚುಕಿಯ ಜಯಘೋಷಗಳಿಂದ ಶೋಭಿತನಾಗಿ ಅಲಂಕೃತಗೊಂಡ ಅಭಿಷೇಕ ಮಂಟಪಕ್ಕೆ ಮೆಲ್ಲ ಮೆಲ್ಲನೆ ನಡೆದುಬಂದನು.

೩೫. ಅನಾದಿ ನಾಂದೀಭಿರನರ್ದೀ ಮದ್ದಲೈ
ರರಾಣಿ ವೀಣಾಭಿರಭಾಣಿ ವೇಣುಭಿಃ |
ಅರೇಭಿ ಭೇರಿಭಿರಗರ್ಜಿ ಜರ್ಝರೈ
ರಗಾರಿ ಶೃಂಗೈ ಸಮಕಾಲಿ ಕಾಹಲೈಃ ||

ವಾದ್ಯವಿಶೇಷಗಳಿಂದ ನಾಂದಿಯಾಗಿ ಎಲ್ಲ ಕಡೆಯೂ ಮದ್ದಳೆ, ವೀಣೆ, ಕೊಳಲಿನ ನಾದದಿಂದ ತುಂಬಿರುವ, ರಣಭಯಂಕರ ರಣಭೇರಿಗಳಿಂದ, ದುಂದುಭಿಗಳಿಂದ ಜರ್ಝರಗಳಿಂದ ಗರ್ಜಿಸಲ್ಪಡುವ, ವಿಶೇಷವಾದ್ಯಗಳಿಂದ ಮೊಳಗುವ ವಿಭಿನ್ನ ರಣ ನಾದ ನಿನಾದಗಳಿಂದ ಆ ಮಂಟಪವು ತುಂಬಿತ್ತು.

೩೬. ಕೃತಾಭಿಷೇಕಃ ಕೃಪಯಾ ಪುರಾ ಹರೇಃ
ಎಷ ಸಾಮ್ರಾಜ್ಯಪದೇsಭ್ಯಪಿಚ್ಯತ |
ಶ್ಲಥಾಂಬುಲೇಶವ್ಯಪದೇಶತೋ ಮಹೀ
ತದಾಜನಿ ಸ್ವಿನ್ನತನುಸ್ತದಾದರಾತ್ ||

ವಿಷ್ಣುವಿನ ಅನುಗ್ರಹದಿಂದ ಮೊದಲು ಅಭಿಷಿಕ್ತನಾದ ಅಚ್ಯುತರಾಜನು ಚಕ್ರವರ್ತಿಸ್ಥಾನದಲ್ಲಿ ಅಭಿಷಿಕ್ತನಾದನು. ಪಟ್ಟಾಭಿಷೇಕ ಕಾಲದಲ್ಲಿ ಭೂಮಿಯು ಅಚ್ಯುತರಾಯನ ಮೇಲಿನ ನಿರ್ವ್ಯಾಜ್ಯ ಪ್ರೀತಿಯಿಂದ ಜಲಕಣಗಳನ್ನು ಸಿಂಪಡಿಸಿ ಸಾತ್ವಿಕಭಾವದಿಂದ ತೃಪ್ತಗೊಂಡಿತು.

೩೭. ಅಪಾಂಗಿತಪ್ರೆಂಖದಭೀಶುವಿಚಿಕಾ
ಕೃತಾವಲಂಬೈರಿವ ಗಂಧವಾರಿಭಿಃ |
ಕರಾಬ್ಜಸೌವರ್ಣಘಟಾಪವರ್ಜಿತೈ
ಸ್ತಂಭ್ಯಷಿಂಚತ್ತರ ಲೇಕ್ಷಣಾಜನಃ ||

ಸ್ತ್ರೀಯರ ಕುಡಿನೋಟದಿಂದ ಹರಡಿದ ಕಾಂತಿಯ ತರಂಗಗಳೆಂಬ ಹಗ್ಗದಿಂದ ಕಟ್ಟಲ್ಪಟ್ಟು, ಅವರ ಕರಕಮಲಗಳಲ್ಲಿ ತೋರುವ ಕನಕಕಲಶಗಳಿಂದ ಸುರಿಯಲ್ಪಟ್ಟ ಗಂಧದ ನೀರಿನಿಂದ ಅಚ್ಯುತರಾಯನಿಗೆ ಅಭಿಷೇಕವಾಯಿತು.

೩೮. ಕೃತಾಭಿಷೇಕಸ್ತುಲುವಕ್ಷಿತಿಕ್ಷಿತಾಂ
ಕುಲಾಗ್ರಣೀಃ ಕುಂಕುಮವಾರಿಧಾರಯಾ |
ಕರೀವ ಸಿಕ್ತೋ ಗಿರಿಧಾತುನಿರ್ಝರೈಃ
ಶಶೀವ ಸಾಯಂತನಸಂಧ್ಯಯಾರುಚತ್ ||

ತುಳುವ ರಾಜರುಗಳಲ್ಲಿ ಕುಲಶ್ರೇಷ್ಠನಾಗಿ ಅಚ್ಯುತರಾಯನು ಕುಂಕುಮಾದಿ ನೀರಿನಿಂದ ಅಭಿಷಿಕ್ತನಾಗಿ, ಗಿರಿಧಾತು ಸಂಯುಕ್ತ ನೀರಿನಿಂದ ತೋಯಿಸಲ್ಪಟ್ಟ ಮದಗಜದಂತೆ ಸಾಯಂಕಾಲದ ಸಂಧ್ಯಾರಾಗದಿಂದ ಪ್ರಭಾವಿತನಾದ ಚಂದ್ರನಂತೆ ಶೋಭಿಸಿದನು.

೩೯. ಅಲೋಕಿ ಲೋಕೈರ್ಹರಿಚಂದನೋದಕಂ
ವಿಜೃಂಭಿತಂ ಮಂಟಪವೇದಿಕಾಂಕಣೇ |
ನಿರೀಕ್ಷ್ಯ ಕಾಂತಂ ನೃಪಮಾಶಯಾದಮಾ
ನ್ಭುವೋsನುರಾಗೋ ಬಹಿರುದ್ಯತೋ ಯಥಾ ||

ಅಭಿಷೇಕಮಂಟಪದಲ್ಲಿ ಉಲ್ಲಾಸದಿಂದ ತೋರುವ, ರಕ್ತಚಂದನ ನೀರಿನಿಂದ ಅಭಿಷಿಕ್ತನಾದ ಅಚ್ಯುತರಾಯನನ್ನು ನೋಡಿ ಭೂಮಿಯ ನಾಯಿಕೆಯರಂತಿರುವ ಸ್ತ್ರೀಯರು ತಮ್ಮ ಹೃದಯಾಂತರಾಳದ ಅನುರಾಗವೇ ಮೂರ್ತರೂಪವಾಗಿರುವ ಹಾಗ ತಿಳಿದುಕೊಂಡರು.

೪೦. ಅಧಾರಯತ್ಪಾಂಡರಮಂಬರಂ ಕ್ಷಿತೇ
ರಧೀಶ್ವರಃ ಸ್ನಾನವಿಧೇರನಂತರಮ್ |
ಸಮಾಪ್ತವರ್ಷಸ್ನಪನೋ ಯಥಾ ಗಿರಿಃ
ಶರನ್ಮುಖೇ ಛನ್ನನಿತಂಬಮಂಬುದಮ್ ||

ಶರದೃತುವಿನ ಆರಂಭದಲ್ಲಿ ವರ್ಷಾಕಾಲದ ವೃಷ್ಟಿಸೇಚನದ ನಂತರ ಪರ್ವತದ ಮೇಲೆ ಹರಡಿರುವ ಬಿಳಿ ಮೋಡದ ಹಾಗೆ ಭೂಮಂಡಲದ ಒಡೆಯನಾದ ಅಚ್ಯುತರಾಯನು ಸ್ನಾನ ವಿಧಿಯ ನಂತರ ಅಭಿಷೇಕದ ವಿಧಿವಿಧಾನಗಳ ನಂತರ ಶುಭ್ರವಾದ ವಸ್ತ್ರವನ್ನು ಧರಿಸಿದನು.

೪೧. ಸಮಾಪ್ಯ ಸರ್ವಾಂ ಸಮನಂತರಕ್ರಿಯಾಂ
ನೃಪಾಸನಸ್ಥೋ ನೃಪತಿರ್ನಿರೈಕ್ಷ್ಯತ |
ಸುಮೇರುಸಂಗೀ ಸುರೇಂದ್ರಪಾದಪಃ
ಶ್ರೀಯಃ ಸಖೇವ ಶ್ರಿತಭಾನುಮಂಡಲಃ ||

ಎಲ್ಲ ವಿಧಿ ಕ್ರಿಯೆಗಳನ್ನು ಮಾಡಿ ಮುಗಿಸಿದ ನಂತರ ಸಿಂಹಾಸನದಲ್ಲಿ ಕುಳಿತ ಅಚ್ಯುತರಾಜನು ಮೇರು ಪರ್ವತದಲ್ಲಿರುವ ಕಲ್ಪವೃಕ್ಷದಂತೆ, ಸೂರ್ಯಬಿಂಬದಿಂದ ಸಹಿತವಾದ ಲಕ್ಷ್ಮೀಪತಿಯಾದ ನಾರಾಯಣನಂತೆ ಕಾಣಿಸಿಕೊಂಡನು.

೪೨. ಪ್ರಚಾಲಿತೋsಗ್ರೇ ಪರಿಚಾರಿಕಾಜನೈ
ರ್ನೃಪಸ್ಯ ನೀರಾಜನದೀಪಿಕೋತ್ಕರಃ |
ದಿಗಂತರಭ್ರಾಂತಿಮಿಷಾನ್ಟಿಷ್ಯತೋ
ದಧೌ ಪ್ರತಾಪಸ್ಯ ಪೂರ್ವರಂಗತಾಂ ||

ನೀರಾಂಜನದೀಪಗಳನ್ನು ಹಿಡಿದು ರಾಜನ ಮುಂದೆ ನಿಂತಿರುವ ಸೇವಕಿಯರ ಸಮೂಹದವರು ಅತ್ತಿತ್ತ ಓಡಾಡುವದರಿಂದ ದಿಗಂತಗಳಲ್ಲಿ ನರ್ತಿಸುವ ಅಚ್ಯುತರಾಯನ ಪ್ರತಾಪದ ಕಾಂತಿಯ ಮುನ್ಸೂಚನೆಯಂತೆ ತೋರುತ್ತಿದ್ದರು.

೪೩. ಅರಾಲಕೇಶಿಭಿರನಾಟಿ ಮೇದಿನೀ
ಸ್ವಯಂವರ ಪ್ರೇಯಸಿ ಶೋಭಿತೇ ಶ್ರೀಯಾ |
ವಲಾಹಕೇ ದರ್ಶಿತವಾರ್ಡ್ಯಿಕೋದಯೇ
ಕಿಂ ಶಿಖಿನ್ಯೋ ನಟನಂ ವಿವೃಣ್ವತೇ ||

ಭೂಮಿಯನ್ನು ವರಿಸಿ, ರಾಜಲಕ್ಷ್ಮಿಯಿಂದ ಶೋಭಿಸುತ್ತಿರುವ ರಾಜನನ್ನು ಹುಬ್ಬನ್ನು ಕೊಂಕಿಸುವ ಸ್ತ್ರೀಯರೂ ನರ್ತನ ಮಾಡಿದರು. ಹೇಗೆಂದರೆ ವರ್ಷಕಾಲದ ಮೋಡಗಳನ್ನು ನೋಡಿದ ಕೂಡಲೇ ಮಯೂರಗಳು ನರ್ತಿಸುತ್ತವೆಯೋ ಹಾಗೆ.

೪೪. ವಿನೀತಸಾಮಂತವಿಧೂತಚಾಮರ
ದ್ವಯಾನ್ವಿತೋಲಕ್ಷ್ಯತ ಧೂರ್ವಹಃ ಕ್ಷಿತೇ |
ತುಷಾರಶೈಲೋ ದೃಷದಾಹತಿದ್ವಿಧಾ
ಪನೀಪತನ್ನಾಕಧುನೀಪಯಾ ಇವ ||

ವಿನಯ ಸಂಪನ್ನನಾಗಿ ಸಾಮಂತ ರಾಜರುಗಳಿಂದ ಎಡಬಲಗಳಲ್ಲಿ ಚಾಮರವನ್ನು ಬೀಸಿಕೊಳ್ಳುತ್ತಿರುವ ಅಚ್ಯುತರಾಯನು, ಶಿಲೆಗಳ ಸಂಘರ್ಷದಿಂದ ದ್ವಿಭಾಗವಾಗಿ ಹರಿಯುವ ದೇವಗಂಗೆಗೆ, ಹಿಮವತ್ಪರ್ವತದಂತೆ ತೋರುತ್ತಿದ್ದನು.

೪೫. ಮನುಕ್ರಮೋ ರಕ್ಷತಿ ತತ್ಕುಲಕ್ಷಮಾ
ಪತೀನಿತೀವಾನುಜಿಧೃಕ್ಷಯಾ ಗತೌ |
ತಮೀಶಸೂರ್ಯಾವಿವ ಧಾರಿತೇ ಕಿಮ
ಪ್ಯರಾಜತಾಮಾತಪವಾರಣೇ ವಿಭೋಃ ||

ಮನುವಿನಿಂದ ಪರಿಪಾಲಿತವಾದ ರಾಜ್ಯಪಾಲನಾ ರೀತಿಯಿಂದಾಗಿ ಆ ವಂಶದ ರಾಜರುಗಳು ಅವರ್ಣನೀಯ ಸೌಖ್ಯದಿಂದ ಶೋಭಿಸುತ್ತಿದ್ದರು. ಅಲ್ಲಿ ಪರಂಪರೆಯ ಕೊಡೆ ಅವರೆಲ್ಲರನ್ನು ರಕ್ಷಿಸುವಂತೆ ಅಚ್ಯುತರಾಯನಿಗೆ ಹಿಡಿದ ಕೊಡೆಯು ಪ್ರಜೆಗಳನ್ನು ರಕ್ಷಿಸುವುದಕ್ಕಾಗಿಯೇ ಎನ್ನುವಂತೆ ತೋರುತ್ತಿತ್ತು. ಜಗತ್ತಿಗೆ ಅನುಗ್ರಹರೂಪಕರಾದ ಸೂರ್ಯಚಂದ್ರರ ಹಾಗೆ ಅದು ತೋರುತ್ತಿತ್ತು.

೪೬. ಕಲಿಂಗಭೂಮೇ ಕಮಿತಾ ಕಲಾಚಿಕಾಂ
ಮಣೀನಿಬದ್ಧಾಂ ಮಗಧೋsಸ್ಯ ಪಾದುಕಾಮ್ |
ಶಕಾಧಿಪಶ್ಚಾಮರಮಂಜರೀಮಧಾ
ತ್ಸ್ವಯಂ ಕೃಪಾಣೀಮಪಿ ಸಿಂಹಲೇಶ್ವರಃ ||

ಕಳಿಂಗಾಧಿಪನು ನೀಡಿದ ಮೊಣಕೈ ಮತ್ತು ಮಣಿಕಟ್ಟುಗಳ ಮುಂಭಾಗಗಳ ಆಭರಣಗಳನ್ನು, ರತ್ನಖಚಿತವಾದ ಪಾದುಕೆಗಳನ್ನು ಮಗಧರಾಜನಿಂದಲೂ ಶಕಾಧಿಪನಿಂದ ಸ್ತಬಕದಂತಿರುವ ಚಾಮರಗಳನ್ನು, ಸಿಂಹಲೇಶ್ವರನಿಂದ ಖಡ್ಗವನ್ನು ಅಚ್ಯುತರಾಯನು ಪಡೆದುಕೊಂಡನು.

೪೭. ಕ್ಷಮಾಭುಜಃ ಕಾಂಚನಪುಷ್ಟಮಗ್ರತಃ
ಪ್ರಕೀರ್ಯ ಭಕ್ತ್ಯಾ ಪ್ರತಿಪಾದಿತೋಪದಾಃ |
ವ್ಯನಂಸಿಷುರ್ವಂಶಮಣೀಂ ವಿಧೋಸ್ತ್ವರಾ
ವಿಘಟ್ಟಿತಾನ್ಯೋನ್ಯಕಿರೀಟಕೋಟಯಃ ||

ಸಾಮಂತರಾಜರೆಲ್ಲರೂ ರಾಜನ ಮುಂದೆ ಭಕ್ತಿಯಿಂದ ಸುವರ್ಣಪುಷ್ಪಗಳನ್ನು ಹರಡಿ, ಕೊಡಬೇಕಾದ ಕಪ್ಪಕಾಣಿಕೆಗಳನ್ನು ಕೊಡುತ್ತಿದ್ದರು. ತ್ವರೆಯಿಂದ ಕಾಣಿಕೆಗಳನ್ನು ಅರ್ಪಿಸುವಾಗ ರಾಜ ರಾಜರಲ್ಲಿ ಕಿರೀಟಗಳ ಮುಂಭಾಗಗಳು ಘರ್ಷಣೆಗೊಳಗಾಗುತ್ತಿದ್ದವು. ಇಂತಹ ಕಿರೀಟ ಹೊಂದಿದ ರಾಜರುಗಳು ಚಂದ್ರವಂಶೋತ್ಪನ್ನನಾದ ಅಚ್ಯುತರಾಯನಿಗೆ ನಮಿಸುತ್ತಿದ್ದರು.

೪೮. ಮಹತ್ತರೇ ಮಾನವಲೋಕಶಾಸಿತು
ರ್ಮನೋsನುಕೂಲಾ ಮಹಿಷಿಪದೇ ತದಾ |
ಕೃತಾಭಿಷೇಕಾ ಸಲಗಾಕ್ಷಿತೀಶಿತು
ರ್ವರಾತ್ಮಜಾಸೀದ್ವರ ದಾಂಬಿಕಾವಧೂಃ ||

ಅದೇ ಸಂದರ್ಭದಲ್ಲಿ ಸಲಗರಾಜನ ಶ್ರೇಷ್ಠಪುತ್ರಿಯಾದ ವರದಾಂಬಿಕೆಯು ಅಚ್ಯುತರಾಯನ ಮನೋನುಕೂಲಳಾಗಿ ಮಹತ್ತರವಾದ ಸ್ಥಾನದಲ್ಲಿ ಅಂದರೆ ಪಟ್ಟ ಮಹಿಷಿ ಸ್ಥಾನದಲ್ಲಿ ಅಭಿಷಿಕ್ತಳಾದಳು.

೪೯. ಪ್ರಸೂನಸೌಭಾಗ್ಯಪುಷಾ ಯಶೋಮಿಷಾ
ತ್ಪ್ರಜಾನುರಾಗ ಪ್ರಕಟೀಕ್ರಿಯಾರ್ಹಯಾ |
ಎಷ ಸಾಮ್ರಾಜ್ಯಪದಶ್ರೀಯಾರುಚ
ದ್ವಸಂತಲಕ್ಷ್ಮೇವ ವದಾನ್ಯಪಾದಪಃ ||

ಅಚ್ಯುತರಾಯನು ಕೀರ್ತಿಯ ನೆಪದಿಂದ ಕುಸುಮಗಳ ಸೌಭಾಗ್ಯವನ್ನು ಪೋಷಿಸುತ್ತಾನೆ. ಪ್ರಜೆಗಳಿಗೆ ಪ್ರೀತಿಯನ್ನು ವ್ಯಕ್ತಪಡಿಸಲು ಇವನೇ ಅರ್ಹನಾಗಿದ್ದಾನೆ. ಈ ಎಲ್ಲ ವಿಶೇಷಣಗಳಿಲ್ಲದೇ ಚಕ್ರವರ್ತಿಯಾಗಿ ಸಾಮ್ರಾಜ್ಯಲಕ್ಷ್ಮೀಯನ್ನು ಹೊಂದಿ ವಸಂತದಂತೆ ಶೋಭಿಸುತ್ತಿದ್ದನು.

೫೦. ಚಕಾರ ಯನ್ಮೇರುಮನಾದಿಯಮಃ ಪುಮಾನ್
ಸುವರ್ಣರೂಪಂ ಸುರಸಂಸದಾಂ ವಶೇ |
ಸುವರ್ಣಮೇರುಂ ಸ್ವಯಮಸ್ಯ ಸೇವಕೋ
ಮಹೀಸುರೇಭ್ಯೋದಿತ ಮಾನವೇಶ್ವರಃ ||

ಸುವರ್ಣಮಯವಾದ ಮೇರುಪರ್ವತವನ್ನು ದೇವವೃಂದಗಳ ವಶದಲ್ಲಿರುವಂತೆ ಮಾಡಿದ ಪರಮಪುರುಷ ಶ್ರೀಮನ್ನಾರಾಯಣನಂತೆ, ನಾರಾಯಣನ ಭಕ್ತನಾದ ಅಚ್ಯುತರಾಯನು ಮೇರುಪರ್ವತದಂತೆ ಅಭೂತಪೂರ್ವವಾಗಿ ಬ್ರಾಹ್ಮಣರಿಗೆ ಸುವರ್ಣವನ್ನು ದಾನಮಾಡಿದನು.

೫೧. ಫಲಂ ಯದಸ್ಯಾಃ ಪತಿಸೇವಯಾ ಪ್ರಭೋಃ
ಫಣೀಶಪರ್ಯಂಕಪದಾರ್ಚಯಾ ಯತ್ |
ಚಿರಾತ್ತದಾಸೀಚಿನ್ನವೆಂಕಟಾದ್ರಿರಿ
ತ್ಯಭಿಖ್ಯಯಾಕ್ಷ್ಣೋರಪಿ ದೀರ್ಘಮಾಯುಷಿ ||

ವರದಾಂಬಿಕೆಯ ಪತಿಸೇವೆಯ ಫಲವಾಗಿ ಹಾಗೂ ಅಚ್ಯುತರಾಯನ ಭಗವಂತನ ಸೇವೆಯ ಫಲವಾಗಿ ಕೆಲವು ಕಾಲದ ನಂತರ ಸುದೀರ್ಘ ನಯನಗಳನ್ನು ಹೊಂದಿದ ಮತ್ತು ದೀರ್ಘಾಯುಷಿಯಾದ ಚಿನ್ನವೆಂಕಟಾದ್ರಿ ಎಂಬ ಮಗನು ಜನಿಸಿದನು.

೫೨. ಅನೇನ ರಾಜ್ಞಾ ಚಿನವೆಂಕಟಾದ್ರಿರ
ಪ್ಯಯಯೋಜಿ ಲಕ್ಷ್ಮೀಂ ಯುವರಾಜಪೂರ್ವಿಕಾಮ್ |
ಕ್ಷಮಾಪತೌ ರಾಜ್ಯರಮಾ ಸಯೌವನ
ಕ್ರಮಾ ಕೌಮಾರಮಸಾವಸೂಚಯತ್ ||

ಅಚ್ಯುತರಾಯನು ಚಿನ್ನ ವೆಂಕಟಾದ್ರಿಗೂ ಕೂಡ ಯುವರಾಜ ಪದವಿಯೆಂಬ ಯೌವರಾಜ್ಯಲಕ್ಷ್ಮೀಯನ್ನು ಯೋಜಿಸಿದ ಮೇಲೆ ಈ ರಾಜ್ಯಲಕ್ಷ್ಮಿಯು ಅಚ್ಯುತರಾಜನಲ್ಲಿ ಯೌವನಾಭಿವೃದ್ದಿಯಿಂದ ಅಂದರೆ ಯುವರಾಜ ಸಂಬಂಧದಿಂದಾಗಿ ಕುಮಾರಿಯಾಗಿ ಕಂಗೊಳಿಸಿದಳು.

೫೩. ಯಥಾ ಜಯಂತೇನ ಪುರಂದರೋ ಯಥಾ
ನರೌಪವಾಹ್ಯೋ ನಲಕೊಬರೇಣ |
ಅರಾಜದವ್ಯಾಜಸುಹೃತ್ಸತಾಂ ತಥಾ
ಚಿರಾಯುಷಾ ಶ್ರೀಚಿನ್ನವೆಂಕಟಾದ್ರಿಣಾ ||

ಜಯಂತನೆಂಬ ತನ್ನ ಮಗನಿಂದ ಸೋಲಿಸಲ್ಪಟ್ಟ ಇಂದ್ರನಂತೆ, ನರವಾಹನ ಕುಬೇರನು ನಲಕೂಬರ ಎಂಬ ತನ್ನ ಮಗನಿಂದ ಸೋಲಿಸಲ್ಪಟ್ಟಿದ್ದನೋ ಹಾಗೆಯೇ ಸಜ್ಜನನಾದ, ಅಜಾತಶತ್ರುವೆನಿಸಿದ ಅಚ್ಯುತರಾಯನು ತನ್ನ ಮಗನಾದ ದೀರ್ಘಾಯುವಾದ ಚಿನ್ನ ವೆಂಕಟಾದ್ರಿಯಿಂದ ಸೋಲಿಸಲ್ಪಟ್ಟನು.

೫೪. ಅಭಿಮತಪಿಕವಾಣೀಪಂಚಮೈರಂಚಿತಶ್ರೀ
ರಪಿಚ ವರದಾಂಬಾವೀರುದಾಲಂಬಭೂತಃ |
ಪತಿರುಚದವನ್ಯಾಃ ಪ್ರಾಪ್ತಸಾಮ್ರಾಜ್ಯಲಕ್ಷ್ಯಾ
ಶತಮಖಪುರಶಾಖೀ ಚೈತ್ರಲಕ್ಷ್ಯಾಯಥೈವ ||

ಸತ್ಪುತ್ರನಿಂದ ಹಾಗೂ ವರದಾಂಬಾಳಂತಹ ಪಟ್ಟಮಹಿಷಿ ಎಂಬ ಬಳ್ಳಿಗೆ ಆಧಾರವಾಗಿ ಧರಣಿಪತಿಯಾದ ಅಚ್ಯುತರಾಯನು ಒಲಿದುಬಂದ ಚಕ್ರವರ್ತಿ ಸ್ಥಾನದಲ್ಲಿ ಇಂದ್ರನಗರಿಯ ವೃಕ್ಷವಾದ ಕಲ್ಪವೃಕ್ಷದಲ್ಲಿ ಪಂಚಮ ಸ್ವರದಿಂದ ಉಲಿಯುವ ಕೋಗಿಲೆಯಿಂದಾಗಿ ವಸಂತಲಕ್ಷ್ಮಿಯಿಂದೊಡಗೂಡಿದ ಚೈತ್ರದಂತೆ ವಿಲಾಸದಿಂದ ಇದ್ದನು.