. ಉರ್ವಿಯೋಷಿಚ್ಚೇಲಮುತ್ತಂಸಿಪುಷ್ಪೋ
ದ್ಯಾನಂ ಶಂಭೋರಂಬುವಾಹೋದಪಾನಮ್ |
ಪಾಕಾರಾತೇಃ ಪಾದಪಾವಾಲಮೇಕಂ
ಗೋಷ್ಠಿನಂ ಯೋ ಘುಷ್ಯತೇ ದಿವ್ಯಗವ್ಯಾಃ ||

ಭೂಮಿತಾಯಿಗೆ ವಸ್ತ್ರವಾಗಿರುವ, ಶಿವನು ತಲೆಗೆ ಧರಿಸುವ ಹೂವಿನ ತೋಟ ಮೋಡಗಳಿಗೆ ಅರವಟ್ಟಿಗೆ, ಇಂದ್ರನ ಮರಗಳಿಗೆ ಪಾತಿ, ದೇವಲೋಕದ ಹಸು ಕಾಮಧೇನುವಿಗೆ ಕೊಟ್ಟಿಗೆ ಎಂದು ಈ ಸಮುದ್ರವನ್ನು ವರ್ಣಿಸುತ್ತಾರೆ.

. ಅಂಭೋವಾಹಾನರ್ಭಕಾನಂಕಭಾಜೋ
ಹಸ್ತೇನೋರ್ಮ್ಯಾ ಶಂಖಮಾವರ್ಜಯಂತೀ |
ಪ್ರಾಯಃ ಕ್ಷೀರಂ ಪಾಯಯತ್ಯೌರ್ವತಪ್ತಂ
ಗರ್ಜಾವ್ಯಾಜಾತ್ಕ್ರಂದತೋ ಯಸ್ಯವೇಲಾ ||

ಈ ಸಮುದ್ರದ ಎಲ್ಲೆಯು ಗುಡುಗಿನ ನೆವದಿಂದ ಅರಚುತ್ತಿರುವ ತನ್ನ ಮಡಿಲಿನಲ್ಲಿರುವ, ಮೋಡಗಳೆಂಬ ಮಕ್ಕಳಿಗೆ ಅಲೆಯೆಂಬ ಕೈಯಿಂದ ಶಂಖವನ್ನು ಬಗ್ಗಿಸಿ, ಔರ್ವಾಗ್ನಿಯಿಂದ ಕಾಯಿಸಿರುವ ಹಾಲನ್ನು ಕುಡಿಸುತ್ತಿದೆ.

. ಆಶಾಭಾಗಾನೀಷದಾಕ್ರಮ್ಯ ಭೂಯೋ
ವ್ಯಾವೃತ್ತಾನಾಂ ವ್ಯಾಜತೋ ವೀಚೀಕಾನಾಮ್ |
ವಿಶ್ವತ್ರಯ್ಯಾ ವಿಷ್ವಗಾಕ್ರಾಂತಿ ಹೇತೋ
ರ್ವಿದ್ಯಾಂ ವ್ಯಕ್ತಿಕರ್ತುಮಭ್ಯಸ್ಯತೀವ ||

ದಿಗ್ಭಾಗಗಳನ್ನು ಸ್ವಲ್ಪ ಆಕ್ರಮಿಸಿ ಮತ್ತೆ ಹಿಂದಿರುಗಿ ಬರುತ್ತಿರುವ ಅಲೆಗಳ ನೆಪದಿಂದಲೇ ಮೂರು ಲೋಕಗಳನ್ನು ಆಕ್ರಮಿಸುವದಕ್ಕಾಗಿ ಕಾರಣವಾದ ವಿದ್ಯೆಯನ್ನು ತೋರ್ಪಡಿಸಲು ಅಭ್ಯಾಸ ಮಾಡುತ್ತಿದೆಯೋ ಎನ್ನವಂತಿದೆ.

. ಯಸ್ಮಿನ್ಶೌರೇಯುಷೋ ಯೋಗನಿದ್ರಾಂ
ನಾಭೀನಾಲೀಕಾಗ್ರಧೊಲೀಷು ಕೇಲಿಮ್ |
ಮಂದಂ ಮಂದಂ ನಿಕ್ಕಣಾತ್ಕಿಂಕಿಣೀಕಾಃ
ಕುರ್ವಂತ್ಯಂಭೋಮಾನವಾನಾಂ ಕುಮಾರಾಃ ||

ಈ ಸಮುದ್ರದಲ್ಲಿ ಜಲಮಾನುಷರ ಮಕ್ಕಳು, ಯೋಗನಿದ್ರೆ ಮಾಡುವ ವಿಷ್ಣುವಿನ ನಾಭಿಕಮಲದ ಪರಾಗದಲ್ಲಿ ಮೆಲ್ಲಮೆಲ್ಲನೆ ತಮ್ಮ ಕುತ್ತಿಗೆಗೆ ಕಟ್ಟಿರುವ ಚಿಕ್ಕ ಘಂಟೆಗಳು ಸದ್ದು ಮಾಡುತ್ತಿರುವಾಗಲೇ ಆಟವಾಡುತ್ತಿದ್ದಾರೆ. (ತಮ್ಮ ಕುತ್ತಿಗೆಯಲ್ಲಿ ಕಟ್ಟಿರುವ ಚಿಕ್ಕ ಘಂಟೆಗಳಿಂದ ಸದ್ದು ಮಾಡುತ್ತಲೇ ಆಟವಾಡುತ್ತಿದ್ದಾರೆ)

. ಪಾಠೀನಾಕ್ಷ್ಯಃ ಪ್ರಾಯಶಃ ಪಾಶಪಾಣೇ
ರ್ಯಸ್ಯಾssವರ್ತೇ ಯತ್ನವರ್ಜಭ್ರಮೀಕೇ |
ವ್ಯಾವೃಣ್ವಾನಾಶ್ಚಕ್ರಡೋಲಾವಿಹಾರಂ
ಸಂಕ್ರೀಡಂತೇ ಸಾಕಮಾಲೀಜನೇನ ||

ಮೀನಿನಂತಹ ಕಣ್ಣುಗಳನ್ನುಳ್ಳ ಸ್ತ್ರೀಯರು ಈ ಸಮುದ್ರದ ಅಲೆಗಳ ಮೇಲೆ ಪ್ರಯತ್ನಪೂರ್ವಕವಾಗಿ ಸುಳಿಗಳಿಂದ ತಪ್ಪಿಸಿಕೊಳ್ಳುತ್ತಾ ಉಯ್ಯಾಲೆಯ ಆಟವನ್ನು ತೋರಿಸುವಂತೆ ಸಖಿಯರೊಡನೆ ತೇಲಾಡುತ್ತಾ ಆಟವಾಡುತ್ತಾರೆ.

. ಮೈನಾಕಾದ್ಯಾ ಯತ್ರ ಮೀನಾವಲೀನಾಂ
ಬಾಲಾಘಾತಾನ್ ವಜ್ರಪಾತಾನ್ ವಿಶಂಕ್ಯ |
ಆಕ್ರಂದತಃ ಸ್ವೈರಮಂತಸ್ರಪಂತೇ
ಪಶ್ಚಾದ್ದೃಷ್ಟ್ವಾ ಯಾದಸಾಂ ಚೇಷ್ಟಿತಾನಿ ||

ಈ ಸಮುದ್ರದಲ್ಲಿ ಮೈನಾಕನೇ ಮೊದಲಾದ ಪರ್ವತಗಳು ದೊಡ್ಡ ಮೀನುಗಳ ಬಾಲದ ಹೊಡೆತವನ್ನು ತಿಂದಾಗ ವಜ್ರಾಘಾತವಾಯಿತೆಂದು ತಿಳಿದು ಜೋರಾಗಿ ಕಿರುಚುತ್ತವೆ. ಅನಂತರ ಅದು ಜಲಜಂತುಗಳ ಚೇಷ್ಟೆ ಎಂದು ನೋಡಿ ತಮ್ಮಲ್ಲೇ ನಾಚಿಕೆಪಟ್ಟುಕೊಳ್ಳುತ್ತವೆ.

. ಅಂಭಃ ಕ್ರೀಡಾರಂಭಿಣೋ ದಿಙಮದೇಭಾ
ನಾಸೀದಂತೋ ಯತ್ರ ನಕ್ರಾ ಗ್ರಹಿತುಮ್ |
ವ್ಯಾವರ್ತಂತೇ ವೀಕ್ಷ್ಯ ಪಾಣೌ ರಥಾಂಗಂ
ಶಯ್ಯಾಭಾಜಶಶಾರ್ಙ್ಗಾಣಶಶಂಕಮಾನಾಃ ||

ಈ ಸಮುದ್ರದಲ್ಲಿ ದೊಡ್ಡ ಮೊಸಳೆಗಳು ನೀರಾಟಕ್ಕಾಗಿ ಬಂದ ದಿಗ್ಗಜಗಳನ್ನು ಹಿಡಿಯಲು ಹೋಗಿ ಅವುಗಳ ಸೊಂಡಿಲಿನಲ್ಲಿ ಚಕ್ರವನ್ನು ನೋಡಿ ಸಮುದ್ರದಲ್ಲಿ ಮಲಗಿರುವ ವಿಷ್ಣುವಿನ ಭಕ್ತರಿವರಾಗಿರಬಹುದು ಎಂದು ಸಂಬಂಧವನ್ನು ಶಂಕಿಸಿ ಆನೆಗಳನ್ನು ಹಿಡಿಯದೇ ಹಿಂದಿರುಗುತ್ತವೆ.

. ಆಸ್ಫಾಲ್ಯಾsಂತರ್ಬಿಂಬಿತಾದಿಂದುಕೋಣಾ
ದ್ವೀಚೀಮೌರ್ವಿಂ ವಿದ್ರುಮೇಷ್ವಾಸಭಾಜಮ್ |
ಫೇನಶ್ರೇಣೀತೂಲವಿಕ್ಷೇಪಪೂರ್ವಾ
ಶೌರೇಶಶಯ್ಯಾsನೇಹಸಾ ಶೋಧ್ಯತೇ ಯಃ ||

ಹವಳದ ಧನುಸ್ಸಿನಲ್ಲಿ ಕೂಡಿಸಿರುವ ಅಲೆಯೆಂಬ ಹುರಿಯನ್ನು ನೀರಿನಲ್ಲಿ ಪ್ರತಿಬಿಂಬಿತವಾದ ಚಂದ್ರನೆಂಬ ಕೋಣದಿಂದ (ಸಾಧನದಿಂದ) ಮೀಟಿ ನೊರೆಯ ರಾಶಿಯೆಂಬ ಹತ್ತಿಯನ್ನು ಹಾರಿಸುತ್ತಾ ಈ ಸಮುದ್ರವು ವಿಷ್ಣುವಿನ ಹಾಸಿಗೆಯನ್ನು ಶುದ್ಧಪಡಿಸುತ್ತಿದೆ.

. ಅಂಭೋವಾಹಾನಂಬು ಪಾತುಂ ಸಮೇತಾಮ್
ಶ್ವಂಪಾಪಾಶಾಲಂಬನಾಚ್ಚಾಲಯಿತ್ವಾ |
ನಾಳೀಕಾಕ್ಷಪ್ರಾಕ್ಕೃತಾನ್ನಾಟಯಂತೇ
ಮಾಥಕ್ರೀಡಾಂ ಯತ್ಪಯೋಮರ್ತ್ಯಡಿಂಭಾಃ ||

ಈ ಸಮುದ್ರದಲ್ಲಿ ಜಲಮಾನುಷರ ಮಕ್ಕಳು, ನೀರನ್ನು ಕುಡಿಯಲು ಬಂದ ಮೇಘಗಳನ್ನು ಮಿಂಚೆಂಬ ಹಗ್ಗದಿಂದ ಹಿಡಿದು ಅಲ್ಲಾಡಿಸಿ ಹಿಂದೆ ವಿಷ್ಣುವು ಮಾಡಿದ್ದ ಸಮುದ್ರಮಥನ ಕ್ರೀಡೆಯನ್ನು ನಟಿಸಿತೋರಿಸುತ್ತವೆ.

೧೦. ಮೇದಿನ್ಯಾಶ್ಚೇನ್ಮೇಖಲಾದಾಮಲೀಲಾ
ಮಾಬಿಭ್ರಾಣಸ್ಯಾಂಭಸಾಮಾಕರಸ್ಯ |
ಅಂಚದ್ರತ್ನಸ್ಯಾತ್ತಮೌಖರ್ಯಪೂರ್ತೇ
ರಂತಃ ಕೀಲಭ್ರಾಂತಿಮಾಸೂತ್ರಯಂತಮ್ ||

ಭೂಮಿಯ ಒಡ್ಯಾಣದಂತೆ ಶೋಭಿಸುವ, ರತ್ನಗಳನ್ನು ಹೊಂದಿರುವ ಈ ಸಮುದ್ರವನ್ನು ಪೋಷಿಸಲೋಸುಗ ಕಟ್ಟಿರುವ ಸೇತುವೆಯು ಒಳಗಿನ ಅಗಳಿಯೋ ಎಂಬ ಭ್ರಾಂತಿಯನ್ನು ಉಂಟುಮಾಡುತ್ತದೆ.

೧೧. ಪಾರಾವಾರಾsಪಾರಸೀಮೋಪಕಂಠೇ
ಪ್ರಾಪಯೇಶ್ಯಂ ಪಂಕ್ತಿಕಂಠಾಭಿಯಾತಿಮ್ |
ಊರ್ವಿಪುತ್ರ್ಯಾ ಯೋಜಯಿತ್ವಾಜಗತ್ಯಾ
ಮರ್ಥೋಪೇತಾಂ ಯಾಂತಮಾಲಿಪ್ರತೀತಿಮ್ ||

ಸಮುದ್ರದ ಅಪಾರವಾದ ಎಲ್ಲೆಯ ಸಮೀಪದಲ್ಲಿ ದಶಕಂಠನ ಮರಣಕ್ಕೆ ಕಾರಣನಾದ ರಾಮನನ್ನು ಒಯ್ದು ಆಮೇಲೆ ಭೂಮಿಸುತೆ ಸೀತೆಯ ಜೊತೆಗೆ ಅವನನ್ನು ಸೇರಿಸಿ ಈ ಜಗತ್ತಿನಲ್ಲಿ ಒಳ್ಳೆಯ ಸ್ನೇಹಿತನೆಂಬ ಪ್ರಸಿದ್ದಿಯನ್ನು ಈ ಸೇತುವೆ ಪಡೆದಿದೆ.

೧೨. ಆತ್ಮನ್ಯಾರಾದಂತರೀಯಾಯಮಾನೇ
ವಿಸ್ತಾರಸ್ಸ್ಯಾತ್ಕಿದೃಶೋ ವೇತಿ ವೇತ್ತುಮ್ |
ಉರ್ವ್ಯಾ ದುರ್ವಾರೋರ್ಮಿಕಾಕಂಕಣಾಂಕಂ
ಮನ್ಯೇ ನಿತಂ ಕೌತುಕಾನ್ಮಾನಹಸ್ತಮ್ ||

ನನ್ನೊಳಗೆ ಈ ಭೂಮಿ ಒಂದು ದ್ವೀಪದಂತಿದೆ. ಇದರ ವಿಸ್ತಾರ ಎಷ್ಟಿರಬಹುದು ಎಂದು ತಿಳಿಯಲು ಬಯಸಿ ಕೌತುಕದಿಂದ ಸಮುದ್ರವು ಅಳತೆಗಾಗಿ ಚಾಚಿದ ಅಲೆಗಳನ್ನು ಉಂಗುರವಾಗಿ ಹೊಂದಿರುವ ವಸ್ತುವೇ ಈ ಸೇತುವೆಯೆಂದು ತಿಳಿಯುತ್ತೇನೆ.

೧೩. ಮಂಕ್ತ್ವಾಮಾಯಾದಂಷ್ಟ್ರೀಣೋದಸ್ಯಮಾನಾಂ
ಮಧ್ಯೇ ಪಾಥಃ ಕ್ಷ್ಮಾಮಿವಾssವಿರ್ಭವಂತೀಮ್ |
ನೇತುರ್ಭೂಜಾಮಾತುರಿಷ್ಟಾನಿ ದಾತುಂ
ಸೇತುಂ ಸೀತಾಶ್ವಾಸಹೇತುಂ ಎತಿ ||

ಭೂಮಿಯ ಅಳಿಯನಾದ, ನಾಯಕನಾದ ರಾಮನಿಗೆ ಇಷ್ಟಾರ್ಥವನ್ನು ಕೊಡಲು ಒಳಗೆ ಮುಳುಗಿ ಮಾಯಾವರಾಹವು ಮೇಲಕ್ಕೆತ್ತಿದಾಗ ನೀರಿನ ಮಧ್ಯದಿಂದ ಮೇಲೆದ್ದು ಕಾಣಿಸುವ ಭೂಮಿಯಂತೆ ಆವಿರ್ಭವಿಸಿದ, ಹಾಗೂ ಸೀತೆಯ ಆಶ್ವಾಸನಕ್ಕೆ ಕಾರಣವಾದ ಸೇತುವೆಯನ್ನು ಅವನು ಹೋಗಿ ನೋಡಿದನು.

೧೪. ಭೂಯೋ ವ್ಯಾವರ್ತ್ಯಾಪಿ ಭೂಮ್ನಾ ಚಮೂನಾಂ
ಪಶ್ಚಾತ್ಕುರ್ವನ್ ಪಾಥಸಾಮೇಷರಾಶಿಮ್ |
ರಂಗಸ್ಥಾನಂ ರಾಜಸಂಸೇವಯಾsಗ್ರೇ
ವಲ್ಲಚ್ಚೇತಾಃ ವಾಸರೈಃ ಕೈಶ್ಟಿದಾಪ ||

ಅಲ್ಲಿಂದ ಹಿಂದಿರುಗಿ, ತನ್ನ ಸೈನ್ಯಗಳ ವೈಶ್ಯಾಲದಿಂದ ಸಮುದ್ರವನ್ನು ಹಿಂದಕ್ಕೆ ಹಾಕಿದ ಅವನು ರಾಜಸೇವೆಗಾಗಿ ಕಾತರಿಸಿದ ಮನಸ್ಸುಳ್ಳವನಾಗಿ ಕೆಲವೇ ದಿನಗಳಲ್ಲಿ ರಂಗಸ್ಥಾನಕ್ಕೆ ಬಂದನು.

೧೫. ಅಸಾದ್ಯೋರ್ವಿನಾಯಕಸ್ಯೌಪಕಾರ್ಯಾ
ಮಗ್ರದ್ವಾರೇ ಸೋsವರೂಹ್ಯೌಪವಾಹ್ಯಾ ತ್ |
ಔತ್ಸುಕ್ಯೇನಾತೀತಕಕ್ಷ್ಯಾ ವಿಶೇಷಸ್ತಂ
ಪ್ರಾಣಂಸೀತ್ತಸ್ಥಿವಾಂಸಂ ಸಭಾಯಾಮ್ ||

ರಾಜನ ಅರಮನೆಗೆ ಬಂದು ಮುಂದಿನ ಬಾಗಿಲಿನಲ್ಲಿ ಕುದುರೆಯಿಂದ ಇಳಿದು ಉತ್ಕಂಠತೆಯಿಂದ ಅನೇಕ ಕೊಠಡಿಗಳನ್ನು ದಾಟಿ ಸಭೆಯಲ್ಲಿದ್ದ ರಾಜನಿಗೆ ನಮಸ್ಕಾರ ಮಾಡಿದನು.

೧೬. ಕೇಚಿತ್ಸ್ವಾಮಿನ್ ಕೇರಲೇಶಪ್ರ ಯುಕ್ತಾ
ವರ್ತಂತೇ ಪ್ರಾಗ್ದ್ವಾರಿ ತೇ ಮಂತ್ರಿ ವೃದ್ಧಾಃ |
ಇತ್ಯುಕ್ವಾsಸಾವೇತದೀಯಾನುಮತ್ಯಾ
ತಸ್ಯಾಭ್ಯಾಶಂ ತಾನನೈಷೀತ್ಸಭಾಯಾಮ್ ||

ಪ್ರಭು, ಕೇರಳರಾಜನಿಂದ ಕಳುಹಿಸಲ್ಪಟ್ಟ ಕೆಲವರು ಮಂತ್ರಿವೃದ್ಧರು ಪೂರ್ವದ ದ್ವಾರದಲ್ಲಿ (ತಮ್ಮ ದರ್ಶನಕ್ಕಾಗಿ) ಬಂದು ನಿಂತಿದ್ದಾರೆ ಎಂದು ಹೇಳಿ ಅವನು ರಾಜನ ಅನುಮತಿಯಿಂದ ಆ ಮಂತ್ರಿವೃದ್ಧರನ್ನು ರಾಜನ ಬಳಿಗೆ ಕರೆದು ತಂದನು.

೧೭. ಕರ್ಣಾಯುಷ್ಯಸ್ಯಂದಿಭಿಃ ಕಾವ್ಯಬಂಧೈಃ
ಕಾಲಕ್ಷೇಪಂ ಕಲ್ಪಯಂತಂ ವೀಂದ್ರೈಃ |
ಪಾಣ್ಯಗ್ರೇಣ ಪ್ರಕ್ಕಣತ್ಪಾರಿಹಾರ್ಯಂ
ವೀಚೀಂ ಪಶ್ಚಾದ್ವಯಾಪೃತಾಮಾದದಾನಮ್ ||

ಕಿವಿಗಳಿಗೆ ಅಮೃತವನ್ನು ಸುರಿಸುವ ಕಾವ್ಯರಚನೆಗಳಿಂದ ರಾಜನು ಕವೀಂದ್ರರೊಡನೆ ಕಾಲವನ್ನು ಕಳೆಯುತ್ತಿದ್ದನು. ಹಿಂದೆ ಜಾರುತ್ತಿದ್ದ ಉತ್ತರೀಯವನ್ನು ಸದ್ದು ಮಾಡುತ್ತಿದ್ದ ಕೈ ಬಳೆಗಳಿಂದ ಕೂಡಿದ ಕೈಯಿಂದ ಮೇಲಕ್ಕೆತ್ತಿಕೊಳ್ಳುತ್ತಿದ್ದನು.

೧೮. ಚಂಚದ್ವಾಸಃ ಪಲ್ಲವಂ ಚಾಮರಾಣಾಂ
ಮಂದಸ್ಪಂದೈರ್ಮಾರುತಕ್ಷೀರಕಂದೈಃ |
ಪಾರಂಪರ್ಯಾತ್ಪ್ರಶ್ರಯಂ ವ್ಯಶ್ನುವಾನೈ
ರಜ್ಯತ್ಸ್ವಾಂತೈಃ ಸೇವಿತಂ ರಾಜವರ್ಗೈ ||

ಮೆಲ್ಲಗೆ ಬೀಸುತ್ತಿದ್ದ ಚಾಮರಗಳ ಗಾಳಿಯಿಂದ ರಾಜನ ಬಟ್ಟೆಯ ಅಂಚುಗಳು ಚಂಚಲವಾಗುತ್ತಿದ್ದುವು. ಪರಂಪರೆಯಿಂದ ವಿನಯವನ್ನು ಗಳಿಸಿದ್ದವರೂ, ಅನುರಕ್ತ ಹೃದಯದವರೂ ಆದ ಸಾಮಂತರಾಜರು ಅವನ ಸೇವೆಯನ್ನು ಮಾಡುತ್ತಿದ್ದರು.

೧೯. ದೇಯಾ ದೃಷ್ಟಿಃ ಪೂರ್ವಮನ್ನೇತಿಪಾತ್ರೇ
ತದಭೃತ್ಯೌಘೈರ್ದರ್ಶೀತಾನರ್ಘರತ್ನಮ್ |
ವ್ಯಾಚಕ್ಷಾಣಂ ವಿಶ್ರುತೈರ್ನಿತಿಮಾರ್ಗೈಃ
ಕೂಟಸ್ಥಾನಾಂ ಕ್ಷ್ಮಾಪತಿನಾಮಿವೈಕ್ಯಮ್ ||

ಆ ಸಾಮಂತರಾಜರ ಭೃತ್ಯರು ಅನರ್ಘ್ಯವಾದ ರತ್ನಗಳನ್ನು ತೋರಿಸಿ ಮೊದಲು ದೃಷ್ಟಿಹರಿಸಬೇಕು ಎನ್ನುತ್ತಿದ್ದರು. ರಾಜನು ಪ್ರಸಿದ್ಧವಾದ ನೀತಿಮಾರ್ಗಗಳಿಂದ ವಂಶದ ಆದಿಪುರುಷರೆನಿಸಿದ ರಾಜರ / ತನ್ನ ಪೂರ್ವಿಕರ ಐಕ್ಯವನ್ನು ವ್ಯಾಖ್ಯಾನಿಸುತ್ತಿದ್ದನು.

೨೦. ಔದಾರ್ಯೇಣಾsವೇದಯಂತಂ ಕಿಲೋರ್ವ್ಯಾ
ಮಾವಿರ್ಭಾವಾನ್ನಂದನಾನೋಕಹಾನಾಮ್ |
ವಿಶ್ವತ್ರಯ್ಯಾಂ ವ್ಯತ್ಯಯಾದ್ವೀರಲಕ್ಷ್ಯಾ
ವಿಭ್ರಾಮ್ಯಂತ್ಯಾ ವಿಶ್ರಮಸ್ಥಾನಮೇಕಮ್ ||

ರಾಜನು ತನ್ನ ಔದಾರ್ಯದಿಂದ ಭೂಲೋಕದಲ್ಲಿ ನಂದನವನದ ಕಲ್ಪವೃಕ್ಷದಂತೆ ಕಾಣಿಸುತ್ತಿದ್ದನು. ಮೂರುಲೋಕಗಳಲ್ಲಿ ಎಲ್ಲೂ ವಿಶ್ರಾಂತಿಯಿಲ್ಲದೆ ಅಲೆಯುತ್ತಿದ್ದ ವೀರಲಕ್ಷ್ಮಿಗೆ ಅವನೇ ಆಸರೆಯಾಗಿದ್ದನು.

೨೧. ಉಚ್ಚೈರ್ಭೂತಂ ರಾಶಿಮುಂಚ್ಛಾವಚಾನಾಂ
ಸೌಜನ್ಯೌಜಶಶೌರ್ಯಧೈರ್ಯಾದಿಮಾನಾಮ್ |
ಶಕ್ನೋತ್ಯೇಕೋ ನೇತಿ ಧರ್ತುಂ ಧರಿತ್ರೀಂ
ಸೃಷ್ಟಂ ಪ್ರಾಯಶಶೇಷಸಾಹಾಯ್ಯಹೇತೋಃ ||

ಅವನು ಸೌಜನ್ಯ, ಸಾಮರ್ಥ್ಯ, ಶೌರ್ಯ, ಧೈರ್ಯ ಮೊದಲಾದ ಅನೇಕ ರೀತಿಯ ಗುಣಗಳ ರಾಶಿಯಾಗಿದ್ದನು. ಆದಿಶೇಷನೊಬ್ಬನೇ ಈ ಭೂಮಿಯನ್ನು ಹೊರಲು ಅಸಮರ್ಥನೆಂದು ಅವನಿಗೆ ನೆರವನ್ನು ಕೊಡಲು ಪ್ರಾಯಶಃ ಈ ರಾಜನು ಹುಟ್ಟಿದಂತಿತ್ತು.

೨೨. ದತ್ವಾssಹಾರಾಂ ದೇವತಾಭ್ಯೋsವತೀರ್ಣಂ
ಕಾಲಾದಿಂದುಂ ಕ್ಷಾಲಿತಾಂತಃ ಕಲಂಕಮ್ |
ಸೌಶೀಲ್ಯಸ್ಯಾssಲಂಬನಂ ಸಾಂಪರಾಯಾ
ಚಾರ್ಯಂ ಶೌರ್ಯೌದಾರ್ಯಸಂಕೇತಗೇಹಮ್ ||

ಅವನು ದೇವತೆಗಳಿಗೆಲ್ಲ ಆಹಾರವನ್ನು ಕೊಟ್ಟು, ತನ್ನ ಕಳಂಕವನ್ನು ತೊಳೆದುಕೊಂಡು ಕಾಲಕ್ರಮದಲ್ಲಿ ಭೂಮಿಗಿಳಿದು ಬಂದ ಚಂದ್ರನೂ, ಸುಶೀಲತೆಗೆ ಆಲಂಬನನೂ, ಯುದ್ಧ ವಿದ್ಯೆಗೆ ಆಚಾರ್ಯನೂ, ಶೌರ್ಯ ಮತ್ತು ಔದಾರ್ಯವೆಂಬ ಗುಣಗಳಿಗೆ ಸಂಕೇತವಾಗಿದ್ದನು.

೨೩. ಸಾಕ್ಷಾತ್ಕಾರಂ ಶಾರದಾಯಾ ದಯಾಯಾ
ಜೀವನ್ಯಾಸಂ ಜನ್ಮಸಾಫಲ್ಯಮಕ್ಷ್ಣೋಃ |
ಆರಾದಾಲೋಕೈನಮೌತ್ಸುಕ್ಯಭುಜ
ಸ್ಸರ್ವೇ ಚೇರೋರ್ವೀಶಸಾಚಿವ್ಯಕಾರಾಃ ||

ಶಾರದೆಯ ದಯೆಯಿಂದ ಜೀವನ ಸಾಕ್ಷಾತ್ಕಾರ ಮಾಡಿಕೊಂಡು ಜನ್ಮಸಾರ್ಥಕ್ಯ ಮಾಡಿಕೊಂಡ ರಾಜನನ್ನು ಸಮೀಪದಿಂದ ನೋಡಿ ಚೇರರಾಜನ ಎಲ್ಲ ಸಚಿವರು ಉತ್ಸುಕರಾದರು.

೨೪. ಶಿಷ್ಟೈಃ ಕೈಶ್ಚಿತ್ಸೇವ್ಯಮಾನಂ ಸವಿದ್ಯಾ
ಮಾನಂ ಸಂಸ್ಥೆಮಾನಮಾನಂಸಿಷುಸ್ತೇ |
ಮರ್ತ್ಯಾಧೀಶೋ ಮಾನನಾಪೂರ್ವಮೇತಾನ್
ಸಂಪ್ರೇಕ್ಷ್ಯಾಗ್ರೇ ವೀಕ್ಷ್ಯ ಕ್ರೋಧರೂಕ್ಷಃ ||

ಸಜ್ಜನರಿಂದ ಸೇವಿತನಾದ, ವಿದ್ಯಾವಂತನಾದ, ಮಾನವಂತನಾದ ರಾಜನನ್ನು ಕೆಲವರು ವಂದಿಸಿದರು. ರಾಜನು ಅದರ ಪೂರ್ವಕವಾಗಿ ಅವರನ್ನು ನೋಡಿ ಎದುರಿಗಿದ್ದವನನ್ನು ನೋಡಿ ಕ್ರೋಧಗೊಂಡನು.

೨೫. ನೀತ್ಯಾ ದಂಡಂ ನೀಯತಾಂ ಕಂಚಿದೇವೇ
ತ್ಯುಕ್ತ್ವಾ ದುಷ್ಟಂ ಮಂತ್ರಿಹಸ್ತೇsತನಿಷ್ಟ |
ಆಕ್ರಮ್ಯ ತ್ವದ್ರಾಜ್ಯಮಾಜಾನಸಿದ್ಧಂ
ಸೀಮಾಲಂಘೀ ಶಿಕ್ಷಿತಶ್ಚೇರಭೂಪಃ ||

ನೀತಿಗೆ ಅನುಸಾರವಾಗಿ ದಂಡವನ್ನು ಕೊಡಬೇಕೆಂದು ಕಂಚಿರಾಜನಿಗೆ (ಪಾಂಡ್ಯರಾಜನಿಗೆ) ಹೇಳಿ ದುಷ್ಟನನ್ನು ಮಂತ್ರಿಯ ಕೈಗೆ ಒಪ್ಪಿಸಿದನು. ನಿನಗೆ ಜನ್ಮಸಿದ್ಧವಾಗಿದ್ದ ರಾಜ್ಯವನ್ನು ಆಕ್ರಮಿಸಿ ಎಲ್ಲೆಯನ್ನು ಮೀರಿದ ಚೇರರಾಜನನ್ನು ಶಿಕ್ಷಿಸಿದ್ದೇನೆ.

೨೬. ಪಾಹಿ ಕ್ಷೋಣೀಂ ಪ್ರಾಕ್ತನೀಮಿತ್ಯಭಾಣೀ
ತ್ಪಾಂಡ್ಯೋರ್ವೀಶಂ ಪಾಲಕೋ ನೀತಿಭಾಜಾಮ್ |
ರಾಜೀವಾಕ್ಷಸ್ಯಾಂಶರಾಜ್ಯೋಪಲಂಭಾ
ತ್ಸೇವಾ ಶ್ಲಾಘ್ಯಾ ಶ್ರೀಮದಂಘ್ರ್ಯೋರಥಾಪಿ ||

ಬಹುಶಃ ರಾಜ್ಯ ಸಿಕ್ಕಿದುದಕ್ಕಿಂತಲೂ ಶ್ರೀಹರಿಯ ಪಾದಗಳ ಸೇವೆಯೇ ಶ್ಲಾಘ್ಯವಾದುದು. ಆದರೂ ನಿನ್ನ ಆಜ್ಞೆಯು ಪೂಜ್ಯವಾದುದು ಎಂದು ಹೇಳಿ ಭಕ್ತಿಯಿಂದ ವಂದಿಸಿ ಪಾಂಡ್ಯಭೂಪನು ಹೊರಟನು.

೨೭. ಆರಾಧ್ಯಾ ತೇ ತಾವದಾಜ್ಞೇತಿ ಚೋಕ್ತ್ವಾ
ಭಕ್ತ್ಯಾ ನತ್ವಾ ಪ್ರಸ್ಥಿತಃ ಪಾಂಡ್ಯಭೂಪಃ |
ಪ್ರಸ್ಥಾನಾಯ ಶ್ರೀಪತೇರಭ್ಯನುಜ್ಞಾಂ
ಪ್ರಾಸ್ತುಂ ಪಾಂಡ್ಯಸ್ಥಾಪನಾಚಾರ್ಯ ಏಷಃ ||

ಆರಾಧ್ಯನಾದ ನಿನ್ನ ಆಜ್ಞೆಯಂತೆ ಎಂದು ನುಡಿದು ಭಕ್ತಿಯಿಂದ ನಮಸ್ಕರಿಸಿ ಪಾಂಡ್ಯಭೂಪನು ಹೊರಟನು. ಮುಂದಿನ ಚೈತ್ರಯಾತ್ರೆಗಾಗಿ ಪಾಂಡ್ಯಸ್ಥಾಪನಾಚಾರ್ಯನೆನಿಸಿ ಶ್ರೀಪತಿಯ ಅನುಗ್ರಹವನ್ನು ಪಡೆಯಲು

೨೮. ಪಾರೇ ಸಿಂಧೋಃ ಪ್ರಾಪ್ತಸಂವೇಶಮೀಶಂ
ಪದ್ಮಾಬಂಧುಂ ಪಾರ್ಥಿವೇಂದುಃ ಪ್ರಣಂತುಮ್ |
ಮೋಕ್ಷಾಗಾರಂ ಪ್ರಾವಿಶನ್ ಮೋಹದೂರಂ
ದೇವಾಗಾರಂ ದತ್ತನೇತ್ರೋಪಹಾರಮ್ ||

ಸಮುದ್ರದ ದಂಡೆಯಲ್ಲಿ ಶಯನಮಾಡಿದ ದೇವನಾದ, ಲಕ್ಷ್ಮೀಪತಿಯನ್ನು ನಮಸ್ಕರಿಸಲು ಮೋಕ್ಷಸ್ಥಾನವಾದ, ಮೋಹದೂರವಾದ, ನಯನ ಮನೋಹರವಾದ ದೇವಸ್ಥಾನವನ್ನು ರಾಜನು ಪ್ರವೇಶಿಸಿದನು.

೨೯. ಆನಂದೇನೋತ್ತಾಲಮಶ್ರಾಂತಸಂವಿ
ದ್ದೀಪಂ ಪ್ರಾದುರ್ಭಕ್ತಿ ಪುಷ್ಪೋಹಾರಮ್ |
ಲಾಸ್ಯೋದಗ್ರೇ ರಂಗಮೇತ್ಯಾಂತರಂಗೇ
ನೇತ್ರದ್ವಂದ್ವಂ ನಿರ್ನಿಮೇಷಂ ನೃಪೇಂದೋಃ ||

ರಂಗನಾಥನ ಬಳಿಗೆ ಹೋದಾಗ ನೃಪತಿಯ ಕಣ್ಣುಗಳು ಆನಂದದಿಂದ ತುಂಬಿದವು. ಅವನ ಬುದ್ದಿಯ ದೀಪವು ಸತತವಾಗಿ ಪ್ರಕಾಶಿಸಿತು. ಒಳಗೆ ಉಕ್ಕಿದ ಭಕ್ತಿಯನ್ನು ಹೂವಿನಂತೆ ಅವನು ಭಗವಂತನಿಗೆ ಸಮರ್ಪಿಸಿದನು. ಅವನ ಅಂತರಂಗವು ನಲಿವಿನಿಂದ ನಾಟ್ಯವಾಡಿತು. ಕಣ್ಣುಗಳು ಎವೆಯಿಕ್ಕದೇ ರಂಗನನ್ನು ನೋಡಿದುವು.

೩೦. ಅಂಕೇ ಪಾದಾವರ್ಷಯಿತ್ವಾ ರಮಾಯಾ
ವ್ಯಾಸಜ್ಯಾಂಗಂ ವ್ಯಾಕ್ರಿಯಾಭಾಜಿ ತಲ್ಪೇ |
ದತ್ವಾ ಪಾಣೀಂ ದಕ್ಷಿಣಂ ಮೌಲಿದೇಶೇ
ಪ್ರಾದುಸ್ಸ್ವಾಪಂ ಪಾಣಿಮನ್ಯಂ ಪ್ರಸಾರ್ಯ ||

ಲಕ್ಷ್ಮಿಯ ಮಡಿಲಿನಲ್ಲಿ ಪಾದಗಳನ್ನಿಟ್ಟು ಉದ್ದವಾಗಿರುವ ಸರ್ಪಾಶಯನದಲ್ಲಿ ತನ್ನ ಶರೀರವನ್ನು ನೀಡಿಕೊಂಡು ಬಲಗೈಯನ್ನು ತಲೆಗೆ ಆಲಂಬನವಾಗಿ ಇಟ್ಟುಕೊಂಡು, ಇನ್ನೊಂದು ಕೈಯನ್ನು ಉದ್ದಕ್ಕೆ ಚಾಚಿ ಮಲಗಿದ್ದ ಭಗವಂತನನ್ನು ರಾಜನು ನೋಡಿದನು.

೩೧. ವಾಸಶಶಯ್ಯಾಶೀ ವಿಷಶ್ವಾಸಧೂತಂ
ವಾರಂವಾರಂ ವಾರಯಂತೀಮರೋಜೇ |
ಲಕ್ಷ್ಮೀಂ ರಾಗಾದ್ವೈತರಂಗೈರಪಾಂಗೈರಾ
ಲೋಕ್ಯಾಂತರ್ಹಾಸಹೃಷ್ಯತ್ಕಪೋಲಮ್ ||

ಹಾಸಿಗೆಯಾಗಿದ್ದ ಆದಿಶೇಷನ ಉಸಿರಾಟದ ಗಾಳಿಯಿಂದ ಸರಿಯುತ್ತಿರುವ ಸೆರಗನ್ನು ಲಕ್ಷ್ಮಿಯು ಮತ್ತೆ ಮತ್ತೆ ತಡೆಯುತ್ತಿದ್ದಳು. ಅನುರಾಗದ ತರಂಗಗಳಿಂದ, ಕುಡಿನೋಟದಿಂದ ಅವಳನ್ನು ನೋಡಿ ಒಳಗೆ ಉಕ್ಕಿದ ನಗುವಿನಿಂದ ಶ್ರೀರಂಗನ ಕಪೋಲಗಳು ಉಬ್ಬುತ್ತಿದ್ದುವು.